ಊಟಿಸುತ್ತಿದೆ

ಅನುವಾದಗಳು [21]

ಶುಭ ಸುತ್ತ

ಬ್ರಾಹ್ಮಣ ಯುವಕ ಶುಭನ ವಿಷಯ

ಹೀಗೆ ಕೇಳಿದ್ದೇನೆ: ಒಮ್ಮೆ ಆಯುಷ್ಮಂತನಾದ ಆನಂದನು ಸಾವತ್ಥಿಯ ಜೇತವನದಲ್ಲಿ ಅನಾಥ ಪಿಂಡಿಕನು ಕಟ್ಟಿಸಿದ ಆರಾಮದಲ್ಲಿ ತಂಗಿದ್ದನು. ಭಗವಾನರ ಪರಿನಿರ್ವಾಣವು ಕೆಲವು ದಿನಗಳ ಹಿಂದೆ ತಾನೇ ಆಗಿತ್ತು. ಆ ಸಮಯದಲ್ಲಿ ತೋದೆಯ್ಯ ಪುತ್ರನಾದ ಯುವಕ ಶುಭನು ಯಾವುದೋ ಕಾರ್ಯಕ್ಕಾಗಿ ಸಾವಸ್ಥಿಗೆ ಬಂದಿದ್ದನು.

ತೋದೆಯ್ಯ ಪುತ್ರನಾದ ಯುವಕ ಶುಭನು ಮತ್ತೊಬ್ಬ ಯುವಕನನ್ನು ಕರೆದು “ಇಲ್ಲಿ ಬಾ, ತರುಣ, ಸಮಣ ಆನಂದನಲ್ಲಿಗೆ ಹೋಗು. ಸಮಣ ಆನಂದನು ನೋವಿಲ್ಲದೆ, ರೋಗವಿಲ್ಲದೆ ಆರೋಗ್ಯ ಬಲಗಳಿಂದ ಕೂಡಿದವನಾಗಿ ಇರುವನೋ ವಿಚಾರಿಸು. ಆಮೇಲೆ ನಾನು ಹೀಗೆ ಕೇಳಿದೆನೆಂದು ಹೇಳು: ‘ನೋವಿಲ್ಲದೆ, ರೋಗವಿಲ್ಲದೆ ಸಮಣ ಆನಂದನು ಆರೋಗ್ಯ ಬಲಗಳನ್ನು ಹೊಂದಿದವನಾಗಿ ಇರುವನೇ ಎಂದು ತೋದೆಯ್ಯ ಪುತ್ರ ಶುಭನು ಕೇಳಿದ್ದಾನೆ’ ಎಂದು ಹೇಳಿ ‘ಪೂಜ್ಯನಾದ ಆನಂದನು ತೋದೆಯ್ಯ ಪುತ್ರನಾದ ಯುವಕ ಸುಭನಿರುವಲ್ಲಿ ದಯಮಾಡಿ’ ಎಂದು ಬಿನ್ನವಿಸಿಕೊ” ಎಂದು ತಿಳಿಸಿದನು.

“ಹಾಗೆಯೇ ಆಗಲಿ” ಎಂದು ಆ ಯುವಕನು ತೋದೆಯ್ಯಪುತ್ರ ಯುವಕ ಸುಭ ಹೇಳಿದಂತೆ ಆನಂದನಲ್ಲಿ ಹೋದನು. ಆಯುಷ್ಮಂತ ಆನಂದನಿಗೆ ಶುಭ ಹೇಳಿ ಕುಶಲ ಪ್ರಶ್ನೆ ಮಾಡಿ ನಮಸ್ಕರಿಸಿ ಒಂದು ಕಡೆ ಕುಳಿತುಕೊಂಡನು. ಆಮೇಲೆ ಆನಂದನನ್ನು ಕುರಿತು ಹೀಗೆಂದನು-“ತೋದೆಯ್ಯ ಪುತ್ರನಾದ ಯುವಕ ಶುಭನು ‘ಆಯುಷ್ಮಂತನಾದ ಆನಂದನು ನೋವಿಲ್ಲದೆ ರೋಗವಿಲ್ಲದೆ ಆರೋಗ್ಯವಂತನಾಗಿ ಬಲವುಳ್ಳವನಾಗಿ ಇರುವನೇ ವಿಚಾರಿಸಿ ಪೂಜ್ಯನಾದ ಆನಂದನು ತೋದೆಯ್ಯಪುತ್ರನಾದ ಯುವಕ ಶುಭನಲ್ಲಿಗೆ ದಯಮಾಡಿಸಬೇಕು’ ಎಂದು ಹೇಳಿ ಕಳುಹಿಸಿದ್ದಾನೆ.”-

ಹೀಗೆ ಹೇಳಿದ ಆ ಯುವಕನಿಗೆ ಆಯುಷ್ಮಂತ ಆನಂದನು “ತರುಣ, ಇದು ನನಗೆ ಅಕಾಲ. ಈ ಹೊತ್ತು ತಾನೇ ಔಷಧಿಯನ್ನು ತೆಗೆದುಕೊಂಡಿದ್ದೇನೆ. ಸಾಧ್ಯವಾದರೆ ನಾಳೆಯ ದಿನ ಅಲ್ಲಿಗೆ ಹೋಗೋಣ” ಎಂದು ಉತ್ತರವಿತ್ತನು.

“ಹಾಗೆಯೇ ಆಗಲಿ ಪೂಜ್ಯರೇ” ಎಂದು ಯುವಕನು ಆಯುಷ್ಮಂತ ಆನಂದನನ್ನು ಬೀಳ್ಕೊಂಡು ತೋದೆಯ್ಯ ಪುತ್ರ ಶುಭನಲ್ಲಿಗೆ ಹೋದನು. ಆಮೇಲೆ ಶುಭನನ್ನು ಕುರಿತು ಇಂತೆಂದನು: ‘ತೋದೆಯ್ಯ ಪುತ್ರನಾದ ಯುವಕ ಶುಭನು ಆಯುಷ್ಮಂತನಾದ ಆನಂದನು ನೋವಿಲ್ಲದೆ ರೋಗವಿಲ್ಲದೆ ಆರೋಗ್ಯವಂತನಾಗಿ ಬಲಶಾಲಿಯಾಗಿ ಇರುವನೇ ವಿಚಾರಿಸು. ಪೂಜ್ಯನಾದ ಆನಂದನು ತೋದೆಯ್ಯ ಪುತ್ರನಾದ ಶುಭನು ವಾಸಿಸುವಲ್ಲಿಗೆ ದಯಮಾಡಿಸಬೇಕು’ ಎಂದು ನೀನು ಹೇಳಿದಂತೆಯೇ ನಾವು ಆನಂದನನ್ನು ಭಿನ್ನವಿಸಿಕೊಂಡೆವು. ಅದಕ್ಕೆ ಸಮಣ ಆನಂದನು ‘ಇದು ನನಗೆ ಅಕಾಲ. ಈ ಹೊತ್ತು ತಾನೆ ಔಷಧಿಯನ್ನು ತೆಗೆದುಕೊಂಡಿದ್ದೇನೆ. ಸಾಧ್ಯವಾದರೆ ನಾಳೆ ಅಲ್ಲಿಗೆ ಹೋಗೋಣ’ ಎಂದು ಹೇಳಿದನು. ಗೆಳೆಯ, ಏನಿದ್ದರೂ ಪೂಜ್ಯನಾದ ಆನಂದನು ನಾಳೆ ಇಲ್ಲಿಗೆ ಬರಲು ಅವಕಾಶ ಮಾಡಿಕೊಳ್ಳಬಹುದು.”

ಆ ರಾತ್ರಿ ಕೆಳೆದು ಬೆಳಗಾದ ಮೇಲೆ ಆಯುಷ್ಮಂತನಾದ ಆನಂದನು ಚೀವರವನ್ನು ಧರಿಸಿ ಪಿಂಡಪಾತ್ರ್ರೆಯ ಸಮೇತ ಭಿಕ್ಷು ಚೇತಕನನ್ನು ಸಹಾಯಕನನ್ನಾಗಿ ಮಾಡಿಕೊಂಡು ತೋದೆಯ್ಯ ಪುತ್ರನಾದ ಯುವಕ ಸುಭನ ನಿವಾಸಕ್ಕೆ ಹೋದನು. ತನಗಾಗಿ ಪ್ರತ್ಯೇಕವಾಗಿ ಸಿದ್ಧಪಡಿಸಿದ ಆಸನದ ಮೇಲೆ ಕುಳಿತುಕೊಂಡನು. ಆಗ ತೋದೆಯ್ಯ ಪುತ್ರನಾದ ಯುವಕ ಶುಭನು ಆನಂದನು ಇದ್ದೆಡೆಗೆ ಬಂದನು. ಆನಂದನಿಗೆ ಶುಭ ಹೇಳಿ ಕುಶಲ ಪ್ರಶ್ನೆ ಮಾಡಿ ನಮಸ್ಕರ ಮಾಡಿ ಒಂದು ಕಡೆ ಕುಳಿತುಕೊಂಡನು. ಆಮೇಲೆ ಆ ಶುಭನು ಆನಂದನನ್ನು ಕುರಿತು “ಪೂಜ್ಯನಾದ ಆನಂದನು ಗೋತಮನಿಗೆ ಬಹುಕಾಲ ಆಪ್ತ ಶಿಷ್ಯನಾಗಿದ್ದನು. ಅವನ ಜೊತೆಯಲ್ಲಿಯೇ ಇದ್ದು ಅವನೊಂದಿಗೆ ಓಡಾಡುತ್ತಿದ್ದನಷ್ಟೆ. ಪೂಜ್ಯನಾದ ಆನಂದನು ಗೋತಮನು ಯಾವ ಧಮ್ಮಗಳನ್ನು ವಿವರಿಸಿದನೋ ಅವನ್ನು ತಿಳಿದಿದ್ದಾನೆ. ಯಾವುದನ್ನು ಜನತೆಗೆ ವಿವರಿಸಿದನೋ ಮನದಟ್ಟು ಮಾಡಿಕೊಟ್ಟನೋ ಅವರ ಹೃದಯದಲ್ಲಿ ಸ್ಥಾಪಿಸಿದನೋ ಅವನ್ನು ಆನಂದನು ತಿಳಿದಿದ್ದಾನೆ. ಪೂಜ್ಯ ಆನಂದ, ಪೂಜ್ಯನಾದ ಗೋತಮನು ಯಾವ ಧಮ್ಮಗಳನ್ನು ಪ್ರಶಂಸೆ ಮಾಡಿದನೋ ಜನತೆಗೆ ಯಾವುದನ್ನು ವಿವರಿಸಿದನೋ ಯಾವುದನ್ನು ಮನದಟ್ಟು ಮಾಡಿಕೊಟ್ಟನೋ ಯಾವುದನ್ನು ಅವರ ಹೃದಯದಲ್ಲಿ ಪ್ರತಿಷ್ಠಾಪಿಸಿದನೋ ಆ ಧರ್ಮಗಳಾವುವು?” ಎಂದು ಕೇಳಿದನು.

“ತರುಣ, ಭಗವಾನರು ಮೂರು ‘ಖಂದ’ ಗಳನ್ನು ಪ್ರಶಂಸೆ ಮಾಡಿದರು. ಜನತೆಗೆ ವಿವರಿಸಿ ಮನದಟ್ಟು ಮಾಡಿಕೊಟ್ಟು ಅವರ ಮನಸ್ಸಿನಲ್ಲಿ ಪ್ರತಿಷ್ಠಾಪಿಸಿದ ಆ ಮೂರು ಯಾವುವು? ಶ್ರೇಷ್ಠವಾದ ಸೀಲಕ್ಖಂದ, ಶ್ರೇಷ್ಠವಾದ ಸಮಾದಿಖಂದ ಮತ್ತು ಶ್ರೇಷ್ಠವಾದ ಪಞ್ಞಾಖಂದ ತರುಣ ಭಗವಾನರು ಈ ಮೂರು ಖಂದಗಳನ್ನು ಪ್ರಶಂಸೆ ಮಾಡಿದರು. ಜನತೆಗೆ ವಿವರಿಸಿ, ಅವರಿಗೆ ಮನದಟ್ಟು ಮಾಡಿ ಅವರ ಮನಸ್ಸಿನಲ್ಲಿ ಪ್ರತಿಷ್ಠಾಪಿಸಿದುದು ಇವುಗಳನ್ನೇ”.

ಶೀಲ ವರ್ಗ

“ಪೂಜ್ಯ ಆನಂದ, ಪೂಜ್ಯನಾದ ಗೋತಮನು ಪ್ರಶಂಸೆ ಮಾಡಿದ ಶ್ರೇಷ್ಠವಾದ ಸೀಲಕ್ಖಂದ ಯಾವುದು? ಜನತೆಗೆ ವಿವರಿಸಿ, ಅವರಿಗೆ ಮನದಟ್ಟು ಮಾಡಿ ಅವರಲ್ಲಿ ಪ್ರತಿಷ್ಠಾಪಿಸಿದದು ಯಾವುದು?”

“ತರುಣ, ಅರಹಂತರೂ, ಸಮ್ಮಾಸಂಬುದ್ದರೂ ವಿಜ್ಜಾಚರಣ ಸಂಪನ್ನರೂ ಸುಗತರೂ ಲೋಕಗಳನ್ನು ಬಲ್ಲವರೂ ಜನರನ್ನು ಸನ್ಮಾರ್ಗದಲ್ಲಿ ನಡೆಸುವವರಲ್ಲಿ ಅಗ್ರಗಣ್ಯರೂ ದೇವ ಮಾನವರಲ್ಲಿ ಶ್ರೇಷ್ಠರೂ ಬುದ್ಧರೂ ಭಗವಾನರೂ ಆದ ತಥಾಗತರು ಲೋಕದಲ್ಲಿ ಉದಿಸುತ್ತಾರೆ ದೇವತೆಗಳ ಮಾರರ ಬ್ರಹ್ಮರ ಸಮಣ ಬ್ರಾಹ್ಮಣರ ಪ್ರಜೆಗಳ ದೇವ ಮಾನವರ ಲೋಕಗಳನ್ನೆಲ್ಲಾ ತಾವೇ ಅರಿತವರಾಗಿ ಸತ್ಯ ಸಾಕ್ಷಾತ್ಕಾರ ಮಾಡಿಕೊಂಡು ಅದನ್ನು ವಿವರಿಸುತ್ತಾರೆ. ಆದಿಯಲ್ಲಿ ಮಧ್ಯದಲ್ಲಿ ಅಂತ್ಯದಲ್ಲಿ ಕಲ್ಯಾಣಕಾರಿ ಯಾದ ಆರ್ಥಪೂರ್ಣವಾದ ಸಾರ್ಥಕವಾದ ಪರಿಪೂರ್ಣವಾದ ಪರಿಶುದ್ಧವಾದ ಮತ್ತು ನಿರ್ಮಲವಾದ ಧರ್ಮವನ್ನು ಪ್ರಕಾಶಪಡಿಸುತ್ತಾರೆ.

“ಆಗ ಆ ಧರ್ಮವನ್ನು ಗೃಹಪತಿಯೋ, ಗೃಹಪತಿ ಪುತ್ರನೋ, ಬೇರೆಯವನೋ, ಕುಲೀನನೋ ಕೇಳುತ್ತಾನೆ. ಕೇಳಿದ ಮೇಲೆ ತಥಾಗತನಲ್ಲಿ ಶ್ರಧ್ದೆಯನ್ನು ಹೊಂದುತ್ತಾನೆ. ಆಮೇಲೆ ಮನಸ್ಸಿನಲ್ಲಿ ಹೀಗೆ ಅಂದುಕೊಳ್ಳುತ್ತಾನೆ- ‘ಲೋಕದ ಬದುಕು ಬಾದೆಯಿಂದ ತುಂಬಿದೆ, ಅದರಲ್ಲಿ ನಡೆಯಬೇಕಾದ ದಾರಿಯು ಧೂಳಿನಿಂದ ತುಂಬಿದೆ. ಪಬ್ಬಜ್ಜನಾದರೋ ಆಕಾಶದಂತೆ ನಿರ್ಭಂಧಿತ, ಪರಿಪೂರ್ಣವೂ ಪರಿಶುದ್ದವೂ ಶಂಖದಂತೆ ನಿರ್ಮಲವಾದುದೂ ಆದ ಬ್ರಹ್ಮಚರ್ಯವನ್ನು ಪಾಲಿಸುವುದು ಲೋಕಕ್ಕೆ ಬಂಧಿತನಾದವನಿಗೆ ಅತಿ ಕಷ್ಟವಾಗುತ್ತದೆ. ಆದರೂ ಕೂದಲೂ ಗಡ್ಡಗಳನ್ನು ಕಾಷಾಯ ವಸ್ತ್ರಗಳನ್ನು ಧರಿಸಿ ಮನೆಯನ್ನು ತೊರೆದು ಅನಗಾರಿಕನಾಗಿ ಪಬ್ಬಜಿತನಾಗುತ್ತೇನೆ.’

“ಆತನು ಸ್ವಲ್ಪ ಕಾಲದನಂತರ ಅಲ್ಪವಾದ ಮೋದ ಮಹತ್ತಾದುದೋ ಇದ್ದ ಆಸ್ತಿ ಎಲ್ಲವನ್ನೂ ತ್ಯಜಿಸಿ ಸ್ವಲ್ಪ ಸಂಖ್ಯೆಯಲ್ಲಿ ಅಥವ ಬಹು ಸಂಖ್ಯೆಯಲ್ಲಿ ಇದ್ದ ನೆಂಟರಿಷ್ಟರನ್ನು ತೊರೆದು ಕೂದಲು ಗಡ್ಡಗಳನ್ನು ತೆಗೆದು ಕಾಷಾಯ ವಸ್ತ್ರಗಳನ್ನು ಧರಿಸಿ ಮನೆಯನ್ನು ತೊರೆದು ಅನಗಾರಿಕನಾಗಿ ಪಬ್ಬಜಿತನಾಗುತ್ತಾನೆ.

“ಹೀಗೆ ಪಬ್ಬಜಿತನಾಗಿ ಸಮಣನು ಪಾಲಿಸಬೇಕಾದ ಎಲ್ಲ ನಿಯಮಗಳನ್ನೂ ಪಾಲಿಸಿ ಆಚಾರ ಸಂಪನ್ನವಾಗಿ ವರ್ಜಿಸಬೇಕಾದವುಗಳಲ್ಲಿ ಅಣು ಮಾತ್ರವಾದುದಕ್ಕೂ ಭಯಪಡುತ್ತಾನೆ. ನಿಯಮಗಳೆಲ್ಲವನ್ನೂ ಕಲಿತು ಪಾಲಿಸುತ್ತಾನೆ. ಕುಶಲವಾದ ಕಾಯ ಕರ್ಮ ಮತು ವಾಚೀಕರ್ಮಗಳನ್ನೇ ಮಾಡುತ್ತಾನೆ. ಪರಿಶುದ್ಧ ಜೀವಿಯಾಗಿ ಶೀಲಸಂಪನ್ನನನಾಗಿ ಇಂದ್ರಿಯ ದ್ವಾರಗಳನ್ನು ರಕ್ಷಿಸಿಕೊಂಡು ಸ್ಮೃತಿವಂತನಾಗಿ ಒಳ್ಳೆಯ ಮನಸ್ಸುಳ್ಳವನಾಗಿ ಸಂತುಷ್ಟನಾಗಿ ಇರುತ್ತಾನೆ.

‘ತರುಣ, ಭಿಕ್ಷುವಾದವನು ಶೀಲ ಸಂಪನ್ನನಾಗುವುದು ಹೇಗೆ? ತರುಣ, ಭಿಕ್ಷುವು ಪ್ರಾಣಿ ಹತ್ಯೆಯನ್ನು ತೊರೆದು ಪ್ರಾಣಿ ಹಿಂಸೆಯನ್ನೇ ಮಾಡುವುದೇ ಇಲ್ಲ. ದಂಡ ಶಸ್ತ್ರಗಳಾವುವನ್ನು ಹಿಡಿಯುವುದಿಲ್ಲ. ಎಚ್ಚರವುಳ್ಳ ವನಾಗಿರುತ್ತಾನೆ. ಎಲ್ಲ ಪ್ರಾಣಿ ಭೂತಗಳಲ್ಲಿಯೂ ಅನುಕಂಪವುಳ್ಳವನಾಗಿ ಅವುಗಳಿಗೆ ಹಿತವನ್ನೇ ಮಾಡುವ ದಯಾವಂತನಾಗಿರುತ್ತಾನೆ. ಅವನ ಶೀಲದ ಒಂದು ಭಾಗ ಇದು.

“ಕೊಡದಿದ್ದುದನ್ನು ತೆಗೆದುಕೊಳ್ಳದ ಆ ಭಿಕ್ಷುವು ಕೊಟ್ಟಿದ್ದನ್ನು ಮಾತ್ರ ತೆಗೆದುಕೊಂಡು ಇತರರು ಕೊಟ್ಟಿದ್ದನ್ನ ಶ್ಲಾಘಿಸುತ್ತಾ ಶುಚಿರ್ಭೂತನಾಗಿ ಇರುತ್ತಾನೆ. ಅವನ ಶೀಲದ ಒಂದು ಭಾಗ ಇದು.

“ಕೌಟುಂಬಿಕ ಜೀವನವನ್ನು ತೊರೆದು ಸಾಮಾನ್ಯ ಜನರು ನಿರತರಾಗಿರುವ ಮೈಥುನ ಜೀವನವನ್ನು ತ್ಯಜಿಸಿರುವ ಭಿಕ್ಷುವು ಪವಿತ್ರವಾದ ಜೀವನವನ್ನು ನಡೆಸುತ್ತಾನೆ. ಅವನ ಶೀಲದ ಒಂದು ಭಾಗ ಇದು.

“ ಸಟೆಯಾಡುವುದನ್ನು ತೊರೆದು ಸಟೆಯನ್ನೆಂದೂ ನುಡಿಯದ ಭಿಕ್ಷುವು ಸತ್ಯವಾದಿಯಾಗಿ ಸತ್ಯಸಂಧನಾಗಿ ನಂಬಿಕೆಯನ್ನುಳಿಸಿಕೊಂಡಿರುವವನಾಗಿ ವಿಶ್ವಾಸಾರ್ಹನಾಗಿ ಲೋಕಕ್ಕೆ ಕೊಟ್ಟ ಮಾತನ್ನು ಉಳಿಸಿಕೊಂಡಿರುತ್ತಾನೆ. ಅವನ ಶೀಲದ ಒಂದು ಭಾಗ ಇದು.

“ಚಾಡಿ ನುಡಿಯುವುದನ್ನು ತೊರೆದು ಎಂದಿಗೂ ಚಾಡಿಯನ್ನು ಆಡದೆ ಇರುವ ಭಿಕ್ಷುವು ಇಲ್ಲಿ ಕೇಳಿದುದನ್ನು ಅಲ್ಲಿ ಹೇಳಿ ಇಲ್ಲಿ ಒಡಕನ್ನುಂಟುಮಾಡುವುದಿಲ್ಲ. ಅಲ್ಲಿ ಕೇಳಿದ ಮಾತನ್ನು ಇಲ್ಲಿ ಹೇಳಿ ಅಲ್ಲಿ ಒಡಕನ್ನುಂಟು ಮಾಡುವುದಿಲ್ಲ. ಬೇರೆಯಾದವರನ್ನು ಒಂದುಗೋಡಿಸುವವನೂ ಒಟ್ಟಾಗಿರುವವರ ನಡುವೆ ಕೈಹಾಕದವನೂ ಸಮಗ್ರತೆಯನ್ನುಂಟುಮಾಡುವವನೂ ಸಮಗ್ರತೆಯಲ್ಲಿ ಆನಂದಪಡುವವನೂ ಸಮಗ್ರತೆಯನ್ನುಂಟುಮಾಡುವ ಮಾತುಗಳನ್ನೆ ಆಡುವವನೂ ಆಗಿರುತ್ತಾನೆ. ಅವನ ಶೀಲದ ಒಂದು ಭಾಗ ಇದು.

“ ಕಠಿಣ ಮಾತುಗಳನ್ನಾಡುವುದನ್ನು ತೊರೆದು ಕಠಿಣವಾದ ಮಾತುಗಳನ್ನು ಎಂದೂ ಆಡದ ಭಿಕ್ಷುವು ಯಾವುದು ನಿಂದಾತೀತವಾಗಿರುತ್ತದೆಯೋ ಕರ್ಣಕ್ಕೆ ಸುಖವನ್ನುಂಟುಮಾಡುತ್ತದೆಯೋ ಪ್ರೇಮಮಯವಾಗಿರುತ್ತದೋ ಹೃದಯಂಗಮ ವಾಗಿರುತ್ತದೋ ಮೃದುವಾಗಿರುತ್ತದೆಯೋ ಬಹುಜನಕ್ಕೆ ಸಂತೋಷವನ್ನುಂಟುಮಾಡುತ್ತದೆಯೋ ಬಹುಜನಕ್ಕೆ ಸ್ಫೂರ್ತಿಯನ್ನು ಕೊಡುತ್ತದೆಯೋ ಅಂಥ ನಿಜವನ್ನೇ ನುಡಿಯುತ್ತಾನೆ. ಅವನ ಶೀಲಗಳ ಒಂದು ಭಾಗ ಇದು.

“ಜೀವವುಳ್ಳ ಬೀಜಕ್ಕಾಗಲೀ ಗಿಡಕ್ಕಾಗಲೀ ಅಪಾಯವುಂಟು ಮಾಡುವುದನ್ನು ಭಿಕ್ಷುವು ತೊರೆದಿರುತ್ತಾನೆ.... ರಾತ್ರಿಯ ಊಟವನ್ನು ಬಿಟ್ಟು ಮಧ್ಯಾಹ್ನದ ಮೇಲೆ ಊಟ ಮಾಡದೆ ಒಂದೇ ಹೊತ್ತು ಊಟ ಮಾಡುವವನಾಗಿರುತ್ತಾನೆ.... ನೃತ್ಯ ಗೀತ ವಾದ್ಯಗಳನ್ನು ಕೇಳುವುದನ್ನೂ ಕಣ್ಣಿಗೆ ರಂಜನೆಯನ್ನುಂಟು ಮಾಡುವ ನೋಟಗಳನ್ನು ನೋಡುವುದನ್ನೂ ತೊರೆದಿರುತ್ತಾನೆ.... ಮಾಲೆಯನ್ನು ಹಾಕಿಕೊಳ್ಳುವುದನ್ನೂ ಗಂಧವನ್ನು ಹಚ್ಚಿಕೊಳ್ಳುವುದನ್ನೂ ಒಡವೆಗಳಿಂದ ಅಲಂಕರಿಸಿಕೊಳ್ಳುವುದನ್ನೂ ತೊರೆದಿರುತ್ತಾನೆ.... ಚಿನ್ನ ಬೆಳ್ಳಿಗಳನ್ನು ಪರಿಗ್ರಹಿಸುವುದನ್ನು ಬಿಟ್ಟಿರುತ್ತಾನೆ.... ಬೇಯದಿರುವ ಧ್ಯಾನ್ಯದ ಪರಿಗ್ರಹಣವನ್ನು ತೊರೆದಿರುತ್ತಾನೆ.... ಆಡು-ಕುರಿಗಳನ್ನು ಪರಿಗ್ರಹಿಸುವುದನ್ನು ತೊರಿದಿರುತ್ತಾನೆ. ಕೋಳಿ ಹಂದಿಗಳ ಪರಿಗ್ರಹಣವನ್ನು ತೊರೆದಿರುತ್ತಾನೆ.... ಆನೆ, ಹಸು, ಕುದುರೆ, ಹೇಸರಗತ್ತೆಗಳ ಪರಿಗ್ರಹಣವನ್ನು ತೊರೆದಿರುತಾನೆ.. ಹೊಲ ಗದ್ದೆಗಳನ್ನು ಪರಿಗ್ರಹಿಸುವುದನ್ನು ತೊರೆದಿರುತ್ತಾನೆ.... ದೂತನಾಗಿ ಅಥವ ಓಲೆಕಾರನಾಗಿ ನಿಯೋಗ ಹೋಗುವುದನ್ನು ತೊರೆದಿರುತ್ತಾನೆ.. ಹೊಲ ಗದ್ದೆಗಳನ್ನು ಪರಿಗ್ರಹಿಸುವುದನ್ನು ತೊರೆದಿರುತ್ತಾನೆ.... ದೂತನಾಗಿ ಅಥವ ಓಲೆಕಾರನಾಗಿ ನಿಯೋಗ ಹೋಗುವುದನ್ನು ತೊರೆದಿರುತ್ತಾನೆ.... ಕ್ರಯವಿಕ್ರಯಗಳಲ್ಲಿ ತೊಡಗುವುದನ್ನು ಬಿಟ್ಟಿರುತ್ತಾನೆ.... ತೂಗುವುದರಲ್ಲಿಯಾಗಲೀ ಆಳೆಯುವುದರಲ್ಲಾಗಲೀ ಹಣಹೊಡುವುದರಲ್ಲಾಗಲೀ ಮೋಸ ಮಾಡುವುದನ್ನು ತೊರೆದಿರುತ್ತಾನೆ.. ಲಂಚ ಕೊಡುವುದರಲ್ಲಾಗಲೀ ತೆಗೆದುಕೊಳ್ಳುವುದಲ್ಲಾಗಲೀ ವಂಚನೆಯಲ್ಲಾಗಲೀ ಮೋಸ ಮಾಡುವುದರಲ್ಲಾಗಲೀ ತೊಡಗುವುದಿಲ್ಲ.... ಛೇದನೇ ವಧೆ ಬಂಧನ ದಾರಿಕಾದು ಕೊಳ್ಳೆ ಹೊಡೆಯುವುದು ಇದ್ದಕ್ಕಿದ್ದಂತೆ ಮೇಲೆ ಬಿದ್ದು ದೋಚಿಕೊಳ್ಳುವುದು ಮುಂತಾದುವುಗಳಲ್ಲಿ ತೊಡಗುವುದಿಲ್ಲ. ಅವನ ಶೀಲಗಳ ಒಂದು ಭಾಗ ಇದು.

“ತರುಣ, ಶೀಲಗಳನ್ನು ಹೀಗೆ ರಕ್ಷಿಸಿಕೊಂಡ ಶೀಲ ಸಂಪನ್ನನಾದ ಆ ಭಿಕ್ಷುವಿಗೆ ಯಾವ ಕಡೆಯಿಂದಲೂ ಭಯವಿರುವುದಿಲ್ಲ. ತರುಣ, ಮೂರ್ಧಾಭಿಷೇಕ ಮಾಡಿಕೊಂಡ ಶತೃಗಳನ್ನು ದಮನ ಮಾಡಿರುವ ಕ್ಷತ್ರಿಯನಿಗೆ ಯಾವ ಕಡೆಯಿಂದಲೂ ಭಯವಿಲ್ಲದಿರುವಂತೆ ಶೀಲ ಸಂಪನ್ನನಾದ ಆ ಭಿಕ್ಷುವಿನ ಶೀಲಕ್ಕೆ ಯಾವ ಕಡೆಯಿಂದಲೂ ಭಯವಿರುವುದಿಲ್ಲ. ಶ್ರೇಷ್ಠವಾದ ಶೀಲ ಸಮೂಹವನ್ನು ಪಡೆದುಕೊಂಡಿರುವ ಅವನು ಯಾವ ಕುಂದೂ ಇಲ್ಲದ ಸುಖವನ್ನನುಭವಿಸುತ್ತಾನೆ. ತರುಣ, ಭಿಕ್ಷುವು ಹೀಗೆ ಶೀಲ ಸಂಪನ್ನನಾಗುತ್ತಾನೆ.

“ತರುಣ, ಭಗವಾನರು ಶ್ರೇಷ್ಠವಾದ ಸೀಲಕ್ಖಂದವೆಂದು ಪ್ರಶಂಸಿಸಿರುವುದು ಇದನ್ನೇ ಇದನ್ನು ಜನತೆಗೆ ವಿವರಿಸಿ, ಮನದಟ್ಟು ಮಾಡಿ ಅವರ ಹೃದಯಲ್ಲಿ ಪ್ರತಿಷ್ಠಾಪಿಸಿದ್ದಾರೆ.ಇಷ್ಟೇ ಅಲ್ಲದೆ ಮುಂದೆ ಮಾಡಬೇಕಾದದ್ದೂ ಇನ್ನೂ ಇದೆ.”

“ಪೂಜ್ಯ ಆನಂದ, ಆಶ್ಚರ್ಯ! ಆನಂದ ಅದ್ಭುತ! ಪೂಜ್ಯ ಆನಂದ, ಶ್ರೇಷ್ಠವಾದ ಸೀಲಕ್ಖಂದವು ಪರಿಪೂರ್ಣವಾಗಿದೆ, ಅಪರಿಪೂರ್ಣವಾಗಿಲ್ಲ.

“ಆನಂದ, ಶ್ರೇಷ್ಠವಾದ ಪರಿಪೂರ್ಣವಾದ ಸೀಲಕ್ಖಂದವನ್ನು ಬೇರೆ ಯಾವ ಸಮಣ ಬ್ರಾಹ್ಮಣರಲ್ಲಿಯೂ ನಾನು ನೋಡುವುದಿಲ್ಲ. ಶ್ರೇಷ್ಠವಾದ ಪರಿಪೂರ್ಣ ವಾದ ಸೀಲಕ್ಖಂದವನ್ನು ಪಾಲಿಸಬಲ್ಲ ಇತರ ಸಮಣ ಬ್ರಾಹ್ಮಣರು ಯಾರಿರುವರೋ ಅವರು ‘ಇಷ್ಟೇ ಸಾಕು: ಇಷ್ಟನ್ನು ನಾವು ಪಾಲಿಸಿದ್ದೇವೆ; ಸಾಮಣ್ಯತ್ವವನ್ನು ಸಾಧಿಸಲು ಇನ್ನೇನನ್ನೂ ಮಾಡಬೇಕಾಗಿಲ್ಲ, ಮಾಡಬೇಕಾದದ್ದು ಇನ್ನೇನೂ ಇಲ್ಲ’ ಎಂದೇ ತಿಳಿದಿದ್ದಾರೆ. ಆದರೆ, ಆನಂದ, ‘ಮುಂದೆ ಮಾಡಬೇಕಾದದ್ದು ಇನ್ನು ಇದೆ’ ಎಂದು ನೀನು ಹೇಳುತ್ತಿದ್ದೀಯೆ.

ಸಮಾಧಿ ವರ್ಗ

“ಹಾಗಾದರೆ, ಆನಂದ ಪೂಜ್ಯರಾದ ಗೋತಮನು ಪ್ರಶಂಸಿಸಿರುವ ಶ್ರೇಷ್ಠರಾದ ಸಮಾಧಿಕ್ಖಂದ ಯಾವುದು? ಯಾವುದನ್ನು ಜನತೆಗೆ ವಿವರಿಸಿ ಮನದಟ್ಟು ಮಾಡಿ ಅವರ ಹೃದಯದಲ್ಲಿ ಪ್ರತಿಷ್ಠಾಪಿಸಿದ್ದಾರೆ?”

“ತರುಣ, ಭಿಕ್ಷುವು ತನ್ನ ಇಂದ್ರಿಯ ದ್ವಾರಗಳನ್ನು ಹೇಗೆ ರಕ್ಷಿಸಿಕೊಳ್ಳುತ್ತಾನೆ? ಚಕ್ಷುವಿನಿಂದ ರೂಪವನ್ನು ನೋಡುವ ಭಿಕ್ಷುವು ಅದರ ಸ್ಥೂಲ ಸ್ವಭಾವವನ್ನಾಗಲೀ ಅದರ ವಿವರಗಳನ್ನಾಗಲೀ ಗ್ರಹಿಸುವ ಬಯಕೆಯನ್ನೇ ಪಡೆಯುವುದಿಲ್ಲ. ಚಕ್ಷಿಂದ್ರಿಯವು ಸಂಯಮರಹಿತವಾಗದಂತೆ ಕಾಮಗಳಿಗೆ ಸಿಕ್ಕದಂತೆ ದ್ವೇಷಪೂರಿತವಾಗದಂತೆ ಪಾಪಪೂರಿತವಾದ ಅಕುಶಲ ಸ್ಥಿತಿಗಳನ್ನು ಪಡೆಯದಂತೆ ಸಂಯಮವನ್ನು ಪಾಲಿಸಿಕೊಂಡು ಆ ಇಂದ್ರಿಯವನ್ನು ರಕ್ಷಿಸಿಕೊಳ್ಳುತ್ತಾನೆ. ಹಾಗೆಯೇ ಕರ್ಣದಿಂದ ಶಬ್ದವನ್ನು ಕೇಳಿದ ಮೂಗಿನಿಂದ ಗಂಧವನ್ನು ತಿಳಿದ - ನಾಲಿಗೆಯಿಂದ ರಸವನ್ನು ತಿಳಿದ - ಕಾಯದಿಂದ ಸ್ಪರ್ಶವನ್ನನುಭವಿಸದ - ಮನಸ್ಸಿನಿಂದ ಧರ್ಮವನ್ನು ತಿಳಿದ ಭಿಕ್ಷುವು ಅದರ(ಅಂದರೆ ಮನಸ್ಸಿನ ಬಯಕೆ-ದುಸ್ಥಿತಿ) ಸ್ಥೂಲ ಸ್ವಭಾವವನ್ನಾಗಲೀ ವಿವರಗಳನ್ನಾಗಲೀ ಗ್ರಹಿಸುವ ಬಯಕೆಯನ್ನೆ ಪಡೆಯುವುದಿಲ್ಲ. ಮನೇಂದ್ರಿಯವು ಸಂಯಮರಹಿತವಾದಾಗ ಕಾಮಗಳಿಗೆ ಒಳಗಾದಾಗ ದ್ವೇಷಭಾವನೆಗೊಳಗಾದಾಗ ಪಾಪವೂ ಅಕುಶಲವಾದದೂ ಆದ ಭಾವನೆಗಳಿಂದ ಕೂಡಿದಾಗ ಆತನು ಸಂಯಮಿಯಾಗಿ ಚಕ್ಷಿಂದ್ರಿಯವನ್ನು ರಕ್ಷಿಸಿಕೊಳ್ಳುತ್ತಾನೆ. ಕಿವಿಯಿಂದ ಕೇಳಿದಾಗ - ಮೂಗಿನಿಂದ ಮೂಸಿದಾಗ- ನಾಲಿಗೆಯಿಂದ ರುಚಿ ನೋಡಿದಾಗ-ಕಾಯದಿಂದ ಸ್ವರ್ಶಿಸಿದಾಗ-ಮನಸ್ಸಿನಿಂದ ಭಾವನೆಗಳನ್ನು ಪಡೆದಾಗ - ಶ್ರೇಷ್ಠವಾದ ಇಂದ್ರಿಯ ಸಂಯಮವನ್ನು ಸಾಧಿಸಿರುವ ಅವನು ಕುಂದಿಲ್ಲದ ಕಸ್ಮಲವಿಲ್ಲದ ಸುಖವನ್ನನುಭವಿಸುತ್ತಾನೆ. ಮಹಾರಾಜ, ಆ ಭಿಕ್ಷವು ಹೀಗೆ ತನ್ನ ಇಂದ್ರಿಯಗಳನ್ನು ರಕ್ಷಿಸಿಕೊಳ್ಳುತ್ತಾನೆ.

“ತರುಣ, ಭಿಕ್ಷುವು ಸತಿ(ಸ್ಮೃತಿ) ಸಂಪನ್ನನೂ ತನ್ನ ಮೇಲೆ ಸಂಪೂರ್ಣ ಹತೋಟಿ ಇಟ್ಟುಕೊಳ್ಳವವನೂ ಹೇಗೆ ಆಗುತ್ತಾನೆ? ಮುಂದಕ್ಕೆ ಹೋಗುವಾಗ, ಹಿಂದಕ್ಕೆ ಬರುವಾಗ ಪೂರ್ಣ ಎಚ್ಚರವುಳ್ಳವನಾಗಿರುತ್ತಾನೆ. ಮುಂದೆ ನೋಡುವಾಗ ಅಥವಾ ಸುತ್ತಲೂ ನೋಡುವಾಗ ಪೂರ್ಣ ಎಚ್ಚರವುಳ್ಳವನಾಗಿರುತ್ತಾನೆ. ಕೈಯನ್ನು ಮುಂದಕ್ಕೆ ಚಾಚುವಾಗ ಅಥವಾ ಹಿಂದಕ್ಕೆ ಎಳೆದುಕೊಳ್ಳುವಾಗ ಪೂರ್ಣ ಎಚ್ಚರವುಳ್ಳವನಾಗಿರುತ್ತಾನೆ. ಉಣ್ಣುವಾಗ ಬಟ್ಟೆಯನ್ನು ಹಾಕಿಕೊಳ್ಳುವಾಗ ಪೂರ್ಣ ಎಚ್ಚರವುಳ್ಳವನಾಗಿರುತ್ತಾನೆ. ಅಗಿಯುವಾಗ ಕುಡಿಯುವಾಗ ತಿನ್ನುವಾಗ ಮಲಗುವಾಗ ಪೂರ್ಣ ಎಚ್ಚರವುಳ್ಳವನಾಗಿರುತ್ತಾನೆ. ನಡೆಯುವಾಗ ನಿಂತಾಗ ಕುಳಿತಾಗ ಕೇಳುವಾಗ ಹೇಳುವಾಗ ಮಾತನಾಡುವಾಗ ಎಚ್ಚರಿಕೆ ಮೌನದಿಂದಿರುವಾಗ ಭಿಕ್ಷುವು ಪೂರ್ಣ ಎಚ್ಚರವುಳ್ಳವನಾಗಿರುತ್ತಾನೆ. ತರುಣ, ಭಿಕ್ಷುವು ಹೀಗೆ ಸ್ಮೃತಿ ಸಂಪನ್ನನಾಗಿ ತನ್ನ ಮೇಲೆ ಹತೋಟಿಹೊಂದುವವನು (ಸಮನ್ನಾಗತೋ) ಆಗುತ್ತಾನೆ.

“ತರುಣ, ಭಿಕ್ಷುವು ಹೇಗೆ ಸಂತುಷ್ಟಿ ಪಡೆದವನಾಗುತ್ತಾನೆ? ದೇಹವನ್ನು ಮುಚ್ಚಿಕೊಳ್ಳುವಷ್ಟು ಮಾತ್ರ ಚೀವರವನ್ನು ಪಡೆಯುವುದರಿಂದ ಹಸಿವನ್ನು ಪರಿಹರಿಸಿಕೊಳ್ಳಬೇಕಾದ ಪಿಂಡ ಪಾತ್ರೆಯನ್ನು ಹೊಂದಿರುವುದರಿಂದ ಭಿಕ್ಷುವು ಸಂತೃಷ್ಟನಾಗುತ್ತಾನೆ. ತರುಣ, ಹಾರುವಾಗ ಒಂದು ಪಕ್ಷಿಗೆ ರೆಕ್ಕೆಗಳು ಅವಶ್ಯಕವಾಗಿರುವಂತೆ ಭಿಕ್ಷುವು ಹೋದ ಕಡೆಗಳಲ್ಲೆಲ್ಲಾ ಅವುಗಳ ಸಮೇತ ಹೋಗುತ್ತಾನೆ. ಹೀಗೆ ತರುಣ, ಮೈಯನ್ನು ಮುಚ್ಚಿಕೊಳ್ಳಲು ಚೀವರವನ್ನು ಹಸಿವನ್ನು ನೀಗಿಸಿಕೊಳ್ಳಲು ಪಿಂಡಪಾತ್ರೆಯನ್ನು ಹೋದ ಕಡೆಗಳಿಗೆ ತೆಗೆದುಕೊಂಡು ಹೋಗಿ ಭಿಕ್ಷುವು ಅಷ್ಟರಿಂದಲೇ ತೃಪ್ತನಾಗಿ ಸಂತುಷ್ಟಿಯನ್ನು ಪಡೆಯುತ್ತಾನೆ.

“ಈ ರೀತಿಯಲ್ಲಿ ಶೀಲಕ್ಖಂದಗಳನ್ನು ಸಂಪಾದಿಸಿಕೊಂಡು ಈ ಬಗೆಯಲ್ಲಿ ಶ್ರೇಷ್ಠವಾದ ಇಂದ್ರಿಯ ಸಂಯಮ ಸಾಧಿಸಿಕೊಂಡು ಹೀಗೆ ಶ್ರೇಷ್ಠವಾದ ಸ್ಮೃತಿಯನ್ನು ಹೊಂದಿದವನಾಗಿ ಈ ರೀತಿಯಲ್ಲಿ ಉತ್ತಮವಾದ ಸಂತುಷ್ಟಿಯನ್ನು ಪಡೆದವನಾಗಿ ಅರಣ್ಯವನ್ನೋ ವೃಕ್ಷ ಮೂಲವನ್ನೋ ಪರ್ವತವನ್ನೋ ಕಂದರವನ್ನೋ ಗಿರಿಗುಹೆಯನ್ನೋ, ಸ್ಮಶಾನವನ್ನೋ ಬಯಲಿನಲ್ಲಿರುವ ಹುಲ್ಲಿನ ರಾಶಿಯನ್ನೇ ಎಲೆಗಳ ರಾಶಿಯನ್ನೇ ತನ್ನ ವಾಸಕ್ಕಾಗಿ ಆರಿಸಿಕೊಳ್ಳುತ್ತಾನೆ. ಪಿಂಡಪಾತ್ರೆಯೊಂದಿಗೆ ಭಿಕ್ಷಾಟನೆಗೆ ಹೋಗಿ ಹಿಂತಿರುಗಿ ಭಿಕ್ಷಾನ್ನವನ್ನು ತಿಂದು ಆಸನದ ಮೇಲೆ ನೆಟ್ಟಗೆ ಕುಳಿತುಕೊಳ್ಳುತ್ತಾನೆ. ಮನಸ್ಸಿನ ಮೇಲೆ ಸಂಪೂರ್ಣ ಹತೋಟಿಯನ್ನಿಟ್ಟುಕೊಂಡು ಸ್ಮೃತಿವಂತನಾಗಿರುತ್ತಾನೆ.

ಲೋಕದ ಮೇಲಿನ ಕಾಮವನ್ನು ತೊರೆದ ಅವನು ತನ್ನ ಚಿತ್ತವನ್ನು ಶುದ್ಧಗೊಳಿಸಿಕೊಳ್ಳುತ್ತಾನೆ. ಆಶಾರಹಿತವಾದ ಚಿತ್ತವನ್ನು ಪಡೆಯುತ್ತಾನೆ. ನೋವನ್ನುಂಟುಮಾಡುವ ಬಯಕೆಯನ್ನು ತೊರೆದ ಅವನು ಸರ್ವ ಪ್ರಾಣಿಗಳ ಹಿತಾನುಕಂಪಿಯಾಗಿ ಹಿಂಸೆ ಮಾಡುವ ಸ್ವಭಾವದಿಂದ ಮುಕ್ತವಾದ ಚಿತ್ತವನ್ನು ಪಡೆದು ಹಿಂಸಾಪ್ರವೃತ್ತಿ ಇಲ್ಲದಂತೆ ಮನಸ್ಸನ್ನು ಪರಿಶುದ್ಧಗೊಳಿಸಿಕೊಳ್ಳುತ್ತಾನೆ. ಜಡಸ್ವಭಾವವನ್ನು ತೊರೆದು ಬೆಳಕನ್ನು ಕಂಡವನಾಗಿ ಸ್ಮೃತಿ ಸಂಪನ್ನನಾಗಿ ಜಡತೆಯಿಂದ ಮುಕ್ತವಾದ ಚಿತ್ತವನ್ನು ಪಡೆದು ಜಡಸ್ವಭಾವವಿಲ್ಲದಂತೆ ಮನಸ್ಸನ್ನು ಪರಿಶುದ್ಧಗೊಳಿಸಿಕೊಳ್ಳುತ್ತಾನೆ. ಕಳವಳ ಚಿಂತೆಗಳನ್ನು ತೊರೆದು ಉಪಶಮನ ಮಾಡಿದ ಚಿತ್ತವನ್ನು ಪಡೆದು ಚಿಂತೆ ಕೊರಗುಗಳಿಲ್ಳದಂತೆ ಮನಸ್ಸನ್ನು ಪರಿಶುದ್ಧಗೊಳಿಸಿಕೊಳ್ಳುತ್ತಾನೆ. ಸಂದೇಹಸ್ವಭಾವವನ್ನು ತೊರೆದು ಸಂದೇಹಗಳೆಲ್ಲವನ್ನೂ ನಿವಾರಿಸಿಕೊಂಡು ಯಾವುದು ಕುಶಲವಾದ ಧರ್ಮ ಎಂಬುದರ ಬಗೆಗೆ ಯಾವ ಸಂಶಯವೂ ಇಲ್ಲದವನಾಗಿ ಸಂಶಯ ಸ್ವಭಾವವಿಲ್ಲದಂತೆ ಮನಸ್ಸನ್ನು ಪರಿಶುದ್ದಗೊಳಿಸಿಕೊಳ್ಳುತ್ತಾನೆ.

“ತರುಣ, ಸಾಲವನ್ನು ತೆಗೆದುಕೊಂಡವನೊಬ್ಬನು ತನ್ನ ಕೆಲಸದಲ್ಲಿ ತೊಡಗಿ ಆ ಸಾಲವನ್ನು ಬಂಡವಾಳ ಮಾಡಿಕೊಂಡು ಊರಿಂದೂರಿಗೆ ತಿರುಗಿ ವ್ಯಾಪಾರ ಮಾಡಿ ಆ ಸಾಲವನ್ನು ತೀರಿಸಿ ತನ್ನ ಸಂಸಾರಕ್ಕೆ ಬೇಕಾದಷ್ಟು ಹಣ ಸಂಪಾದಿಸಬಹುದಲ್ಲವೇ? ಆಗ ಅವನು ಹೀಗೆಂದುಕೊಳ್ಳಬಹುದು- ‘ಹಿಂದೆ ನಾನು ಸಾಲವನ್ನು ಮಾಡಿ ಆ ಸಾಲವನ್ನು ಬಂಡವಾಳ ಮಾಡಿಕೊಂಡು ಊರಿಂದೂರಿಗೆ ಹೋಗಿ ವ್ಯಾಪಾರ ಮಾಡಿದೆ. ಸಾಲವನ್ನು ತೀರಿಸಿ ಸಂಸಾರವನ್ನು ಸಾಕುವಷ್ಟು ಹಣ ಸಂಪಾದಿಸಿದೆ’. ಹೀಗೆಂದುಕೊಳ್ಳುವ ಅವನು ತನ್ನ ಲಾಭವನ್ನು ನೆನೆದುಕೊಂಡು ಸಂತೋಷಪಡುತ್ತಾನೆ, ಸಂತೋಷದಿಂದ ಕೂಡಿದ ಮನಸ್ಸನ್ನು ಹೊಂದಿರುತ್ತಾನೆ.

“ತರುಣ, ತೀವ್ರ ಕಾಯಿಲೆಗೊಳಗಾದವನೊಬ್ಬನು ಬಾಧೆಪಡುತ್ತಾ ದುಃಖಿತನಾಗಿರಬಹುದು. ಅವನ ಶರೀರವು ದುರ್ಬಲವಾಗಿ ಅವನು ತಿಂದ ಅನ್ನವೂ ಜೀರ್ಣವಾಗದಿರಬಹುದು. ಸ್ವಲ್ಪ ಕಾಲದ ನಂತರ ಅವನು ಬಾಧೆಯಿಂದ ಮುಕ್ತನಾಗಿ ತಿಂದ ಅನ್ನವನ್ನು ಜೀರ್ಣಿಸಿಕೊಳ್ಳುವವನಾಗಿ ಮತ್ತೆ ಬಲವನ್ನು ಪಡೆಯುತ್ತಾನೆನ್ನು. ಆಗ ಅವನು ಹೀಗೆಂದುಕೊಳ್ಳುತ್ತಾನಲ್ಲವೇ? ‘ನಾನು ಹಿಂದೆ ತೀವ್ರವಾದ ಕಾಯಿಲೆಯಿಂದ ಬಾಧೆಪಡುತ್ತಾ ದುಃಖಿಯಾಗಿದ್ದೆ. ನಾನು ತಿಂದ ಅನ್ನವು ಜೀರ್ಣವಾಗುತ್ತಿರಲಿಲ್ಲ, ಶರೀರದಲ್ಲಿ ಬಲವಿರಲಿಲ್ಲ. ಆ ಬಾಧೆಯಿಂದ ಮುಕ್ತನಾಗಿದ್ದೇನೆ, ಅನ್ನವು ಜೀರ್ಣವಾಗುತ್ತಿದೆ. ನಾನು ಈಗ ಬಲಶಾಲಿಯಾಗಿದ್ದೇನೆ.’ ಹೀಗೆಂದುಕೊಳ್ಳುವ ಅವನು ತನಗಾದ ಲಾಭವನ್ನು ನೆನೆದು ಸಂತೋಷಪಡುತ್ತಾನೆ, ಸುಮನಸ್ಕನಾಗುತ್ತಾನೆ.

“ತರುಣ, ಬಂಧನ ಗೃಹದಲ್ಲಿ ಬಂಧಿಯಾದವನೊಬ್ಬನಿದ್ದನೆನ್ನು. ಸ್ವಲ್ಪಕಾಲದ ನಂತರ ಅವನಿಗೆ ಬಂಧನ ಗೃಹದಿಂದ ಬಿಡುಗಡೆಯಾಗುತ್ತದೆ ಎನ್ನು. ಅವನ ಆಸ್ತಿಗೆ ಯಾವ ನಷ್ಟವೂ ಆಗಿರುವುದಿಲ್ಲ. ಆಗ ಭಯ ಅಭದ್ರತೆಗಳಿಂದ ಅವನು ಮುಕ್ತನಾಗಿರುತ್ತಾನೆ ಅವನು ಹೀಗೆಂದುಕೊಳ್ಳುತ್ತಾನೆ- ‘ಹಿಂದೆ ನಾನು ಬಂಧನಗೃಹದಲ್ಲಿ ಬಂಧಿಯಾಗಿದ್ದೆ. ಈಗ ಆ ಬಂಧನ ಗೃಹದಿಂದ ಬಿಡುಗಡೆಯಾಗಿದೆ. ಅಭದ್ರತೆ ಭಯಗಳಿಂದ ಮುಕ್ತನಾಗಿದ್ದೇನೆ. ನನ್ನ ಸೊತ್ತಿಗೆ ಏನೂ ನಷ್ಟವಾಗಿಲ್ಲ.’ ಹೀಗೆಂದುಕೊಳ್ಳುವ ಅವನು ತನಗಾದ ಲಾಭವನ್ನು ನೆನೆದು ಸಂತೋಷಪಡುತ್ತಾನೆ, ಸುಮನಸ್ಕನಾಗುತ್ತಾನೆ.

“ತರುಣ, ಇಷ್ಟಬಂದ ಕಡೆಗೆ ಹೋಗುವ ಸ್ವಾತಂತ್ರ್ಯವನ್ನು ಕಳೆದುಕೊಂಡು ಪರಾಧೀನನಾಗಿರುವ ದಾಸನೊಬ್ಬನಿದ್ದಾನೆ ಎನ್ನು. ಸ್ವಲ್ಪಕಾಲದ ನಂತರ ಅವನು ದಾಸ್ಯದಿಂದ ಮುಕ್ತನಾಗಿ ಪರಾಧೀನತೆಯಿಂದ ಬಿಡುಗಡೆ ಹೊಂದಿ ಬೇಕೆಂದ ಕಡೆಗೆ ಹೋಗಬಲ್ಲ ಸ್ವಾತಂತ್ರ್ಯವನ್ನು ಪಡೆಯುತ್ತಾನೆ ಎನ್ನು. ಆಗ ಅವನು ಹೀಗೆಂದುಕೊಳ್ಳ ಬಹುದಲ್ಲವೇ?- ‘ಈ ಹಿಂದೆ ನಾನು ಇಷ್ಟ ಬಂದ ಕಡೆಗೆ ಹೋಗುವ ಸ್ವಾತಂತ್ರ್ಯವಿಲ್ಲದ, ಪರಾಧೀನನಾದ ದಾಸನಾಗಿದ್ದೆ. ಈಗ ದಾಸ್ಯದಿಂದ ಮುಕ್ತನಾಗಿ ಪರಾಧೀನತೆಯಿಂದ ಬಿಡುಗಡೆ ಹೊಂದಿ ಬೇಕೆಂದ ಕಡೆಗೆ ಹೋಗಬಲ್ಲ ಸ್ವಾತಂತ್ರ್ಯವನ್ನು ಪಡೆದಿದ್ದೇನೆ.’ ಹೀಗೆಂದುಕೊಳ್ಳುವವನು ತನಗಾದ ಲಾಭವನ್ನು ಪಡೆದು ಸಂತೋಷಪಡುತ್ತಾನೆ, ಸುಮನಸ್ಕನಾಗುತ್ತಾನೆ.

“ತರುಣ, ಧನಿಕನೂ ಆಸ್ತಿವಂತನೂ ಆದವನೊಬ್ಬನು ಅನ್ನ ಸಿಕ್ಕದ ಭಯಪೂರಿತವಾದ ಮರಳುಗಾಡಿನ ದಾರಿಯಲ್ಲಿ ಸಿಕ್ಕಿಕೊಳ್ಳುತ್ತಾನೆನ್ನು. ಸ್ವಲ್ಪ ಸಮಯದ ನಂತರ ಅವನು ಆ ಮರಳುಗಾಡನ್ನು ದಾಟಿ ಭಯರಹಿತವಾದ ಭದ್ರತೆಯಿಂದ ಕೂಡಿದ ಗ್ರಾಮಕ್ಕೆ ಕೊಂಡೊಯ್ಯಬಲ್ಲ ದಾರಿಗೆ ಬರುತ್ತಾನೆನ್ನು. ಆಗ ಅವನು ಹೀಗೆಂದುಕೊಳ್ಳಬಹುದು-‘ಧನಿಕನೂ ಆಸ್ತಿವಂತನೂ ಆದ ನಾನು ಹಿಂದೆ ಅನ್ನ ಸಿಕ್ಕದ, ಭಯಪೂರಿತವಾದ ಮರಳುಗಾಡಿನ ದಾರಿಯೊಂದರಲ್ಲಿ ಸಿಕ್ಕಿಕೊಂಡಿದೆ. ಈಗ ಆ ಮರಳುಗಾಡನ್ನು ದಾಟಿ ಭಯರಹಿತವಾದ ಭದ್ರತೆಯಿಂದ ಕೂಡಿದ ಗ್ರಾಮಕ್ಕೆ ಕೊಂಡೊಯ್ಯುವ ದಾರಿಯಲ್ಲಿದ್ದೇನೆ’. ಹೀಗೆಂದುಕೊಳ್ಳುವ ಅವನು ತನಗಾದ ಲಾಭವನ್ನು ಪಡೆದು ಸಂತೊಷಪಡುತ್ತಾನೆ, ಸುಮನಸ್ಕನಾಗುತ್ತಾನೆ.

“ತರುಣ, ಸಾಲಗಾರನೊಬ್ಬನು, ರೋಗಿಯೊಬ್ಬನು, ಬಂಧಿಯೊಬ್ಬನು, ದಾಸನೊಬ್ಬನು ಮರಳುಗಾಡಿನ ಮಾರ್ಗದಲ್ಲಿ ಸಿಕ್ಕಕೊಂಡವನೊಬ್ಬನು ಇರುವಂತಹ ಸ್ಥಿತಿಯಲ್ಲಿಯೇ ತಾನೂ ಇದ್ದೇನೆಂದು ಈ ಐದು ನೀವರಣೆಗಳ (ತಡೆ)ನ್ನು ಅನುಭವಿಸುತ್ತಿರುವ ಭಿಕ್ಷುವೊಬ್ಬನು ತಿಳಿದುಕೊಳ್ಳುತ್ತಾನೆ.

“ತರುಣ, ಹಣವನ್ನು ಗಳಿಸಿದ ಆರೋಗ್ಯವನ್ನು ಪಡೆದ ಬಂಧನದಿಂದ ಮುಕ್ತವಾದ ಸ್ವಾತಂತ್ರ್ಯವನ್ನು ಪಡೆದ ಭದ್ರತೆಯಿರುವ ಪ್ರದೇಶದಲ್ಲಿರುವ ಮನುಷ್ಯನಂತೆ ತಾನು ಇದ್ದೇನೆಂದು ಐದು ನೀವರಣಗಳನ್ನು ಕಳೆದುಕೊಂಡ ಭಿಕ್ಷುವು ಭಾವಿಸುತ್ತಾನೆ.

“ಪಂಚನೀವರಣೆಗಳನ್ನು ಕಳೆದುಕೊಂಡಿರುವುದನ್ನು ತಿಳಿದವನಿಗೆ ಪ್ರಮೋದ ಉಂಟಾಗುತ್ತದೆ. ಪ್ರಮೋದದಿಂದ ಆನಂದ ಹುಟ್ಟುತ್ತದೆ, ಆನಂದ ಮನಸ್ಸನ್ನು ಪಡೆದಿರುವವನ ಶರೀರವು ಸ್ವಸ್ಥವಾಗಿರುತ್ತದೆ. ಸ್ವಸ್ಥವಾಗಿರುವ ಶರೀರವನ್ನು ಪಡೆದಿರುವವನಿಗೆ ಸುಖ ಉಂಟಾಗುತ್ತದೆ. ಸುಖದಿಂದಿರುವವನ ಚಿತ್ತವು ಸಮಾಧಿಯನ್ನು ಪಡೆಯಬಲ್ಲದು.

“ಆತನು ಕಾಮಗಳಿಂದ ಅಕುಸಲ ಭಾವನೆಗಳಿಂದ ದೂರನಾಗಿ ಸುತರ್ಕ ಸುವಿಚಾರಗಳಿಂದ ಕೂಡಿದ ವಿವೇಕದಿಂದ ಹುಟ್ಟುವ ಆನಂದ ಸುಖದ ಪ್ರಥಮ ಧ್ಯಾನದಲ್ಲಿರುತ್ತಾನೆ. ಈ ರೀತಿಯಲ್ಲಿ ಅವನು ತನ್ನ ಕಾಯವನ್ನು ವಿವೇಕದಿಂದ ಹುಟ್ಟುವ ಆನಂದ ಸುಖದಿಂದ ಲೇಪಿಸಿಬಿಡುತ್ತಾನೆ. ಅದರಲ್ಲಿಯೇ ಲೀನವಾಗುತ್ತಾನೆ. ವಿವೇಕದಿಂದ ಹುಟ್ಟುವ ಆನಂದ ಸುಖದಿಂದ ಸಂಪೂರ್ಣವಾಗಿ ಅವೃತವಾಗದ ಯಾವ ಒಂದು ಅಂಗವೂ ಅವನ ಕಾಯದಲ್ಲಿರುವುದಿಲ್ಲ.

“ತರುಣ, ದಕ್ಷನಾದ ಸ್ನಾನ ಮಾಡಿಸುವವನೋ ಅಥವಾ ಅವನ ಅಪ್ತ ಶಿಷ್ಯನೋ ಅಥವಾ ಕಂಚಿನ ಭರಣಿಯನ್ನು ಹಿಡಿದಿರುವವನೋ ಸ್ನಾನಚೂರ್ಣವನ್ನು ನೀರಿನಿಂದ ಕಲಿಸಿ ಅದನ್ನು ಉಂಡೆ ಮಾಡಿ ಸ್ವಲ್ಪವೂ ಬಿಡದಂತೆ ಸ್ನಾನವನ್ನು ಮಾಡಿಸುವ ಕಂಚಿನ ಭರಣಿಯ ಎರಡೂ ಕಡೆ ಲೇಪಿಸಿ ಅದರ ತೂತನ್ನೆಲ್ಲವನ್ನು ಮುಚ್ಚುವಂತೆಯೇ ಆ ಭಿಕ್ಷುವು ವಿವೇಕದಿಂದ ಹುಟ್ಟುವ ಆನಂದ ಸುಖದಿಂದ ತನ್ನ ಕಾಯವನ್ನು ಲೇಪಿಸಿಬಿಡುತ್ತಾನೆ. ಅದರಲ್ಲಿ ಲೀನವಾಗುತ್ತಾನೆ. ಕಾಯದಿಂದ ಹುಟ್ಟುವ ಆನಂದ ಸುಖದಿಂದ ಸಂಪೂರ್ಣವಾಗಿ ಅವೃತವಾಗದ ಯಾವ ಒಂದು ಅಂಗವೂ ಅವನ ಕಾಯದಲ್ಲಿರುವುದಿಲ್ಲ. ತರುಣ, ಸಮಣನಾಗುವುದರಿಂದ ಈ ಲೋಕದಲ್ಲಿಯೇ ದೊರಕುವ ಸ್ವಷ್ಟವಾದ ಫಲವು ಇದು. ಸಮಾಧಿಯಲ್ಲಿನ ಒಂದು ಅಂಶ ಇದು.

“ತರುಣ, ಆ ಭಿಕ್ಷುವು ತರ್ಕ ಮತ್ತು ವಿಚಾರಗಳನ್ನೂ ದಾಟಿ ಕಾಮಗಳನ್ನು ಉಪಶಮನ ಮಾಡಿದ ಚಿತ್ತವನ್ನು ಸಂಪಾದಿಸಿಕೊಂಡು ಸಮಾಧಿಯಿಂದ ಹುಟ್ಟುವ ಮತ್ತು ತರ್ಕ ವಿಚಾರಗಳನ್ನು ಮೀರಿದ ದ್ವಿತೀಯ ಧ್ಯಾನದಲ್ಲಿರುತ್ತಾನೆ. ಆಗ ಅವನ ಚಿತ್ತವು, ಏಕಾಗ್ರತೆಯಿಂದ ಕೂಡಿರುತ್ತದೆ; ಶಾಂತಿಯಿಂದಿರುತ್ತದೆ. ಈ ರೀತಿಯಲ್ಲಿ ಅವನು ಸಮಾಧಿಯಿಂದ ಹುಟ್ಟುವ ಆನಂದ ಸುಖದಿಂದ ತನ್ನ ಕಾಯವನ್ನು ಲೇಪಿಸಿ ಬಿಡುತ್ತಾನೆ. ಅದರಲ್ಲಿಯೇ ಲೀನವಾಗುತ್ತಾನೆ. ಸಮಾಧಿಯಿಂದ ಹುಟ್ಟುವ ಆನಂದ ಸುಖದಿಂದ ಸಂಪೂರ್ಣವಾಗಿ ಅವೃತವಾಗದ ಯಾವ ಅಂಗವೂ ಅವನ ಕಾಯದಲ್ಲಿರುವುದಿಲ್ಲ.

“ತರುಣ, ಆಳವಾದ ಒಂದು ಸರೋವರವಿದ್ದು, ಅದರಡಿಯಲ್ಲಿಯೇ ಒಂದು ಚಿಲುಮೆಯಿರುತ್ತದೆನ್ನು. ಅದಕ್ಕೆ ಪೂರ್ವದಿಕ್ಕಿನಿಂದಾಗಲೀ ದಕ್ಷಿಣದಿಕ್ಕಿನಿಂದಾಗಲೀ ಪಶ್ಚಿಮದಿಕ್ಕಿನಿಂದಾಗಲೀ ಉತ್ತರದಿಕ್ಕಿನಿಂದಾಗಲೀ ಅಥವಾ ದೇವತೆಗಳು ಕಾಲಕಾಲಕ್ಕೆ ಹುಯ್ಯಸಬೇಕಾದ ಮಳೆಯಿಂದಾಗಲೀ ನೀರು ಬರುವುದಿಲ್ಲ. ಕೇವಲ ಅಡಿಯಲ್ಲಿರುವ ಚಿಲುಮೆಯಿಂದಲೇ ಅದಕ್ಕೆ ನೀರು ಬಂದು ಸ್ವಲ್ಪ ಭಾಗವೂ ಬಿಡದಂತೆ ತಂಪಾದ ತಿಳಿನೀರಿನಿಂದ ಆ ಸರಸ್ಸೆಲ್ಲವನ್ನೂ ತುಂಬಿರುತ್ತದೆಯಷ್ಟೆ. ಅದರಂತೆಯೇ ಆ ಭಿಕ್ಷುವಿನ ಕಾಯವು ಸಮಾಧಿಯಿಂದ ಹುಟ್ಟುವ ಆನಂದ ಸುಖದಿಂದ ವ್ಯಾಪಕಗೊಂಡಿರುತ್ತದೆ ತುಂಬಿರುತ್ತದೆ. ಸಮಾಧಿಯಿಂದ ಹುಟ್ಟುವ ಆನಂದ ಸುಖದಿಂದ ಅವೃತವಾಗದ ಯಾವು ಅಂಗವೂ ಅವನ ಕಾಯದಲ್ಲಿರುವುದಿಲ್ಲ. ತರುಣ, ಸಮಣನಾಗವುದರಿಂದ ದೊರಕುವ ಸ್ಪಷ್ಟವಾದ ಫಲವು ಇದು. ಸಮಾಧಿಯಲ್ಲಿನ ಒಂದು ಅಂಶ ಇದು.

“ತರುಣ, ಅಷ್ಟೇ ಅಲ್ಲದೆ ಆ ಭಿಕ್ಷುವು ಪ್ರೀತಿರಾಗಗಳಿಂದ ದೂರವಾದ ಉಪೇಕ್ಖದಿಂದ ಕೂಡಿದ ಸ್ಮೃತಿಯನ್ನೇ ಪಡೆದಿದ್ದು ಕಾಯದಲ್ಲಿ ಸುಖವನ್ನು ಅನುಭವಿಸುತ್ತಿದ್ದು ಯಾವುದನ್ನು ಆರ್ಯರು‘ ಉಪೇಕ್ಖವನ್ನು ಸಾಧಿಸಿರುವವನೂ ಸ್ಮೃತಿವಂತನೂ ಪಡೆದಿರುವ ಸುಖ’ ಎನ್ನುತ್ತಾರೋ ಆ ತೃತೀಯ ಧ್ಯಾನ ದಲ್ಲಿರುತ್ತಾನೆ. ಈ ರೀತಿಯಲ್ಲಿ ಅವನ ಕಾಯವು ಆನಂದವನ್ನು ಮೀರಿದ ಸುಖದಿಂದ ಆವೃತವಾಗಿರುತ್ತದೆ, ತುಂಬಿರುತ್ತದೆ. ಆನಂದವನ್ನು ಮೀರಿದ ಸುಖದಿಂದ ಅವೃತವಾಗದ ಯಾವ ಅಂಗವೂ ಅವನ ಕಾಯದಲ್ಲಿರುವುದಿಲ್ಲ.

“ತರುಣ, ನೀರಿನಲ್ಲಿ ಹುಟ್ಟಿ ನೀರಿನಲ್ಲಿ ಬೆಳೆಯುವ ನೀರಿನಲ್ಲಿಯೇ ಇರುವ ಬಿಳಿ ಅಥವಾ ನೀಲಿ ಅಥವಾ ಕೆಂಪು ಬಣ್ಣದ ಪದ್ಮದ ಬೇರು ದಂಟುಗಳೆಲ್ಲವೂ ತಂಪಾದ ಆ ನೀರಿನಿಂದಲೇ ಆವೃತವಾಗಿ ಅದರಿಂದಲೇ ತುಂಬಿರುತ್ತದಷ್ಟೆ. ಅವುಗಳ ಪ್ರತಿಯೊಂದು ಭಾಗವೂ ನೀರಿನಿಂದ ಸಂಪೂರ್ಣವಾಗಿ ತುಂಬಿರುತ್ತದೆ. ಅದರಂತೆಯೇ ತರುಣ, ಆ ಭಿಕ್ಷುವಿನ ಕಾಯವು ಆನಂದವನ್ನು ಮೀರಿದ ಸುಖದಿಂದ ಅವೃತವಾಗಿರುತ್ತದೆ, ತುಂಬಿರುತ್ತದೆ. ಆನಂದವನ್ನು ಮೀರಿದ ಸುಖದಿಂದ ತುಂಬಿರುವ ಯಾವ ಅಂಗವೂ ಅವನ ಕಾಯದಲ್ಲಿರುವುದಿಲ್ಲ. ತರುಣ, ಸಮಣನಾಗುವುದರಿಂದ ಈ ಲೋಕದಲ್ಲಿಯೇ ಪಡೆಯುವ ಸ್ಪಷ್ಟವಾದ ಫಲವು ಇದು. ಸಮಾಧಿಯಲ್ಲಿನ ಒಂದು ಅಂಶ ಇದು.

“ಅಷ್ಟೇ ಅಲ್ಲದೆ ತರುಣ, ಆ ಭಿಕ್ಷುವು ಸುಖದುಃಖಗಳನ್ನು ಗೆದ್ದು ಮೊದಲು ಅನುಭವಿಸದ ಸುಮನಸ್ಸು ದುರ್ಮನಸ್ಸುಗಳನ್ನು ದೂರ ಮಾಡಿ ಸುಖದು:ಖಗಳನ್ನು ಮೀರಿದ ಪರಿಶುದ್ಧವಾದ ಉಪೇಕ್ಖ ಮನಸ್ಸನ್ನು ಪಡೆದು ಸ್ಮೃತಿವಂತನಾಗಿ ನಾಲ್ಕನೆಯ ಧ್ಯಾನದಲ್ಲಿರುತ್ತಾನೆ. ಪರಿಶುದ್ದವಾದ ಮನಸ್ಸಿನಿಂದ ಶಾಂತನಾಗಿ ಅವನು ಕುಳಿತುಕೊಳ್ಳುತ್ತಾನೆ. ಪರಿಶುದ್ಧತೆಯಿಂದ ಮತ್ತು ಶಾಂತಿಯಿಂದ ಅವೃತವಾಗದ ಯಾವ ಅಂಗವೂ ಅವನ ಕಾಯದಲ್ಲಿರುವುದಿಲ್ಲ.

“ತರುಣ, ಬಿಳಿಯ ಬಟ್ಟೆಯಿಂದ ದೇಹವೆಲ್ಲವನ್ನು ಮುಚ್ಚಿಕೊಂಡು ಕುಳಿತಿರುವವನನ್ನು ಯಾವ ಅಂಗವೂ ಬಟ್ಟೆಯಿಲ್ಲದಿರುವುದಿಲ್ಲದಷ್ಟೆ. ಅದರಂತೆಯೇ, ತರುಣ, ಭಿಕ್ಷುವು ಪರಿಶುದ್ಧವಾದ ಮನಸ್ಸಿನಿಂದ ಶಾಂತಿಯಿಂದ ಅವೃತನಾಗಿ ಕುಳಿತಿರುತ್ತಾನೆ. ಪರಿಶುದ್ಧತೆಯಿಂದ ಮತ್ತು ಶಾಂತತೆಯಿಂದ ಅವೃತವಾಗದ ಯಾವ ಅಂಗವೂ ಅವನ ಕಾಯದಲ್ಲಿರುವುದಿಲ್ಲ. ಸಮಣನಾಗುವುದರಿಂದ ಈ ಲೋಕದಲ್ಲಿಯೇ ಪಡೆಯುವ ಸ್ವಷ್ಟವಾದ ಫಲವು ಇದು, ಸಮಾಧಿಯಲ್ಲಿನ ಒಂದು ಅಂಶ ಇದು.

‘ತರುಣ, ಭಗವಾನರು ಪ್ರಶಂಸಿಸಿರುವ ಶ್ರೇಷ್ಠವಾದ ಸಮಾಧಿಕ್ಖಂದವು ಇದೇ ಆಗಿದೆ. ಜನತೆಗೆ ಇದನ್ನು ವಿವರಿಸಿದ್ದಾರೆ. ಅವರಿಗೆ ಮನದಟ್ಟು ಮಾಡಿಕೊಟ್ಟಿದ್ದಾರೆ. ಅವರ ಹೃದಯದಲ್ಲಿ ಪ್ರತಿಷ್ಠಾಪಿಸಿದ್ದಾರೆ. ಆದರೆ ಇದನ್ನು ಸಾಧಿಸಿದ ಮೇಲೆ ಮಾಡಬೇಕಾದದ್ದು ಇನ್ನು ಇದೆ.

“ಪೂಜ್ಯ ಆನಂದ, ಆಶ್ಚರ್ಯ ಪೂಜ್ಯ ಆನಂದ, ಅದ್ಭುತ, ಆನಂದ, ಶ್ರೇಷ್ಠವಾದ ಸಮಾಧಿಕ್ಖಂದವು ಪರಿಪೂರ್ಣವಾಗಿದೆ, ಅಪರಿಪೂರ್ಣವಾಗಿಲ್ಲ. ಹೀಗೆ ಪರಿಪೂರ್ಣವಾದ ಸಮಾಧಿಕ್ಖಂದವನ್ನು ಸಾಧಿಸಿರುವ ಬೇರಾವ ಸಮಣ ಬ್ರಾಹ್ಮಣರಲ್ಲಿಯೂ ನಾನು ಕಾಣುವುದಿಲ್ಲ. ಶ್ರೇಷ್ಟವಾದ ಪರಿಪೂರ್ಣವಾದ ಸಮಾಧಿಕ್ಖಂದವನ್ನು ಸಾಧಿಸಿರುವ ಇತರೆ ಸಮಣ ಬ್ರಾಹ್ಮಣರು ಯಾರಿರುವರೋ ಅವರು ‘ಇಷ್ಟೇ ಸಾಕು, ಇಷ್ಟನ್ನು ನಾವು ಪಾಲಿಸಿದ್ದೇವೆ ಶ್ರಾಮಣ್ಯತ್ವವನ್ನು ಸಾಧಿಸಲು ಇನ್ನೇನನ್ನೂ ನಾವೂ ಮಾಡಬೇಕಾಗಿಲ್ಲ. ಮಾಡಬೇಕಾದದ್ದು ಇನ್ನೇನು ಇಲ್ಲ’ ಎಂದೇ ತಿಳಿದಿದ್ದಾರೆ. ಆದರೆ, ಆನಂದ, ‘ ಮುಂದೆ ಮಾಡಬೇಕಾದದ್ದು ಇನ್ನು ಇದೆ ಎಂದು ಹೇಳುತ್ತಿದ್ದೀಯೆ.

ಅನುಭವ ಜ್ಞಾನದ ವರ್ಗ

“ಹಾಗಾದರೆ, ಆನಂದ, ಪೂಜ್ಯನಾದ ಗೋತಮನು ಪ್ರಶಂಸಿಸಿರುವ ಶ್ರೇಷ್ಠವಾದ ಪಞ್ಞಾಕ್ಖಂದ ಯಾವುದು? ಯಾವುದನ್ನು ಜನತೆಗೆ ವಿವರಿಸಿ, ಅವರಿಗೆ ಮನದಟ್ಟು ಮಾಡಿಸಿ ಅವರ ಹೃದಯದಲ್ಲಿ ಪ್ರತಿಷ್ಠಾಪಿಸಿದ್ದಾರೆ?”

“ಶಾಂತವಾದ ಪರಿಶುದ್ಧವಾದ ತಿಳಿಯಾದ ಸಂಸ್ಕಾರಗೊಳಿಸಿದ ಕ್ಲೇಶಗಳಿಂದ ದೂರವಾದ ಮೃದುವಾದ ಕಾರ್ಯನಿರತವಾಗಬಲ್ಲ ದೃಢವಾದ ಚಂಚಲಗೊಳ್ಳದ ಚಿತ್ತವನ್ನು ಪಡೆದಿರುವ ಆತನು ತನ್ನ ಚಿತ್ತವನ್ನು ಜ್ಞಾನದರ್ಶನದ ಕಡೆಗೆ ತಿರುಗಿಸುತ್ತಾನೆ. ಆತನಿಗೆ ಈ ತಿಳಿವಳಿಕೆ ಬರುತ್ತದೆ- ‘ಈ ನನ್ನ ಕಾಯವು ನಾಲ್ಕು ಮಹಾಭೂತಗಳಿಂದ ಮಾಡಲ್ಪಟ್ಟ ರೂಪವನ್ನು ಪಡೆದಿದೆ. ಮಾತಾಪಿತೃಗಳಿಂದ ಹುಟ್ಟಿದೆ. ಅನ್ನ ಸೂಪರಸಗಳಿಂದ ಪ್ರತಿ ಕ್ಷಣದಲ್ಲಿಯೂ ನವೀನತೆಯನ್ನು ಹೊಂದುತ್ತಿರುತ್ತದೆ. ಅಳಿದು ಹೋಗವ ಸವೆದುಹೋಗುವ ಚೂರುಚೂರಾಗುವ ಸ್ವಭಾವವನ್ನುಳ್ಳದ್ದಾಗಿದೆ. ನನ್ನ ವಿಞ್ಞಾನವು (ಅರಿವಿನ ಉಚ್ಚ ಸ್ಥಿತಿ) ಪ್ರತಿಬಂಧೀತವಾಗಿ ಈ ಕಾಯಕ್ಕೆಅಂಟಿಕೊಂಡಿದೆ.

“ತರುಣ, ಕಣ್ಣುಳ್ಳ ಶುಭ್ರವಾದ ಎಂಟು ಮುಖಗಳನ್ನು ಚೆನ್ನಾಗಿ ಸಾಣೆಹಿಡಿದ ಪಾರದರ್ಶಕವಾದ ಯಾವ ಕುಂದೂ ಇಲ್ಲದ ಎಲ್ಲಾ ಬಗೆಯ ಚೆಲುವನ್ನು ಪಡೆದಿರುವ ಜಾತಿ ವೈಢೂರ್ಯ ಮಣಿಯನ್ನು ನೀಲಿಯದೋ, ಮಾಸಲು ಹಳದಿಯದೋ, ಕೆಂಪಾದುದೋ, ಬಿಳಿಯದೋ ಅಥವಾ ಹಳದಿಯದೋ ಆದ ದಾರದಲ್ಲಿ ಪೋಣಿಸಿದಾಗ ಅದನ್ನು ಕೈಯಲ್ಲಿ ಹಿಡಿದುಕೊಂಡ ಕಣ್ಣಿದ್ದವನೊಬ್ಬನು ಅವು ಒಂದಕ್ಕೊಂದು ಅಂಟಿಕೊಂಡಿರುವುದನ್ನು ನೋಡುವಂತೆ ವಿಞ್ಞಾನವು ಕಾಯಕ್ಕೆ ಅಂಟಿಕೊಂಡಿರುವುದನ್ನು ನೋಡುತ್ತಾನೆ. ಶಾಂತವಾದ, ಪರಿಶುದ್ಧವಾದ, ತಿಳಿಯಾದ, ಕ್ಲೇಷಗಳನ್ನು ದೂರಮಾಡಿದ ಮೃದುವಾದ, ದೃಢವಾದ ಕಾರ್ಯನಿರತವಾದ ಚಂಚಲಗೊಳ್ಳದ ಚಿತ್ತವನ್ನು ಪಡೆದಿರುವ ಭಿಕ್ಷುವು ಜ್ಞಾನದರ್ಶನದ ಕಡೆಗೆ ಚಿತ್ತವನ್ನು ತಿರುಗಿಸುತ್ತಾನೆ. ಆಗ ಈ ಅರಿವನ್ನು ಪಡೆಯುತ್ತಾನೆ- ‘ಈ ನನ್ನ ಕಾಯವು ನಾಲ್ಕು ಭೂತಗಳಿಂದ ಮಾಡಲ್ಪಟ್ಟ ರೂಪವನ್ನು ಪಡೆದಿದೆ. ಮಾತಾ ಪಿತೃಗಳಿಂದ ಹುಟ್ಟಿದೆ. ಅನ್ನ ಸೂಪರಸಗಳಿಂದ ಪ್ರತಿಕ್ಷಣದಲ್ಲಿಯೂ ನವೀನತೆ ಯನ್ನು ಹೊಂದುತ್ತಿರುತ್ತದೆ. ಅಳಿದು ಹೋಗುವ ಇಂಗಿ ಹೋಗುವ ಚೂರು ಚೂರಾಗುವ ಸ್ವಭಾವವುಳ್ಳದ್ದಾಗಿದೆ. ನನ್ನ ವಿಞ್ಞಾನವು ಪ್ರತಿಬಂಧಿತವಾಗಿ ಅದನ್ನೇ ಅವಲಂಬಿಸಿದೆ; ಮಹಾರಾಜ ಸಮಣನಾಗುವುದರಿಂದ ಈ ಲೋಕದಲ್ಲಿಯೇ ಪಡೆಯುವ ಫಲವು ಇದು. ಪಞ್ಞಾದಲ್ಲಿನ ಒಂದುಕಡೆ ಅಂಶ ಇದು.

“ಶಾಂತವಾದ ಪರಿಶುದ್ಧವಾದ ತಿಳಿಯಾದ ಸಂಸ್ಕಾರಗೊಳಿಸಿದ ಕ್ಲೇಶಗಳಿಂದ ದೂರವಾದ ಮೃದುವಾದ ಕಾರ್ಯನಿರತವಾದ ದೃಢವಾದ ಚಂಚಲಗೊಳ್ಳದ ಚಿತ್ತವನ್ನು ಪಡೆದಿರುವ ಆತನು ಮನೋಕಾಯದ ಕಡೆಗೆ ತನ್ನ ಚಿತ್ತವನ್ನು ತಿರುಗಿಸುತ್ತಾನೆ. ಈ ಕಾಯದಲ್ಲಿಯೇ ಇದ್ದು ಎಲ್ಲ ಅಂಗಗಳೂ ಇರುವ ಮನೋಮಯ ರೂಪವನ್ನು ಹೊಂದಿರುವ ಮತ್ತೊಂದು ಕಾಯವನ್ನು ನೆನಪಿಗೆ ತಂದುಕೊಳ್ಳುತ್ತಾನೆ.

“ತರುಣ, ಮುಂಜಹುಲ್ಲನ್ನು ಅದರ ಹೊದಿಕೆಯನ್ನು ಬಿಡಿಸಿಕೊಳ್ಳವವನೊಬ್ಬನು ‘ಇದು ಮುಂಜಹುಲ್ಲು, ಇದು ಅದರ ಹೊದಿಕೆ, ಮುಂಜುಹುಲ್ಲೇ ಬೇರೆ ಅದರ ಹೊದಿಕೆಯೇ ಬೇರೆ, ಮುಂಜಹುಲ್ಲಿನಿಂದ ಹೊದಿಕೆಯ ಬೇರ್ಪಡಿಸಲಾಗಿದೆ’ ಎಂದು ತಿಳಿದುಕೊಳ್ಳುವಂತೆ ಅಥವಾ ಕೋಶದಲ್ಲಿನ ಕತ್ತಿಯನ್ನು ತೆಗೆಯುವವನೊಬ್ಬನು ‘ಇದು ಕತ್ತಿ, ಇದು ಕೋಶ ಕತ್ತಿಯೇ ಬೇರೆ, ಕೋಶವೆ ಬೇರೆ, ಕೋಶದಿಂದ ಕತ್ತಿಯನ್ನು ತೆಗೆಯಲಾಗಿದೆ. ಎಂದು ತಿಳಿದುಕೊಳ್ಳುವಂತೆ ಅಥವಾ ಪೊರೆಯನ್ನು ಹಾವಿನಿಂದ ತೆಗೆಯುವವನೊಬ್ಬನು ‘ಇದು ಹಾವು, ಇದು ಅದರ ಪೊರೆ, ಹಾವು ಬೇರೆ, ಅದರ ಪೊರೆಯೇ ಬೇರೆ, ಹಾವಿನಿಂದ ಪೊರೆಯನ್ನು ಬೇರ್ಪಡಿಸಲಾಗಿದೆ’ ಎಂದು ತಿಳಿದುಕೊಳ್ಳುವಂತೆ ಶಾಂತವಾದ ಪರಿಶುದ್ಧವಾದ ತಿಳಿಯಾದ ಕ್ಲೇಶಗಳಿಂದ ದೂರವಾದ ಮೃದುವಾದ ಕಾರ್ಯನಿರತವಾದ ದೃಢವಾದ ಚಂಚಲಗೊಳ್ಳದ ಚಿತ್ತವನ್ನು ಪಡೆದಿರುವ ಭಿಕ್ಷುವು ಮನೋಮಯ ಕಾಯದ ಕಡೆಗೆ ತನ್ನ ಚಿತ್ತವನ್ನು ತಿರುಗಿಸುತ್ತಾನೆ. ಆತನು ಈ ಕಾಯದಲ್ಲಿಯೇ ಇದ್ದು ಎಲ್ಲ ಅಂಗಗಳೂ ಇರುವ ಮನೋಮಯ ರೂಪವನ್ನು ಹೊಂದಿರುವ ಮನೋಮಯ ಕಾಯವನ್ನು ನೆನಪಿಗೆ ತಂದುಕೊಳ್ಳುತ್ತಾನೆ. ತರುಣ, ಸಮಣನಾಗುವುದರಿಂದ ಈ ಲೋಕದಲ್ಲಿಯೇ ಪಡೆಯುವ ಫಲವು ಇದು. ಪಞ್ಞಾದಲ್ಲಿನ ಒಂದುಕಡೆ ಅಂಶ ಇದು.

“ಶಾಂತವಾದ ಪರಿಶುದ್ಧವಾದ ತಿಳಿಯಾದ ಸಂಸ್ಕಾರಗೊಳಿಸಿದ ಕ್ಲೇಶಗಳಿಂದ ದೂರವಾದ ಮೃದುವಾದ ಕಾರ್ಯನಿರತವಾದ ದೃಢವಾದ ಚಂಚಲಗೊಳ್ಳದ ಚಿತ್ತವನ್ನು ಪಡೆದಿರುವ ಆತನು ಋದ್ಧಿ ಶಕ್ತಿಗಳನ್ನು ಪಡೆಯಲು ಚಿತ್ತವನ್ನು ಅಣಿಗೊಳಿಸುತ್ತಾನೆ. ಆತನ್ನು ಅನೇಕ ರೀತಿಯ ಋದ್ಧಿಶಕ್ತಿ (ಅಲೌಕಿಕ ಶಕ್ತಿ) ಯನ್ನು ಪಡೆಯುತ್ತಾನೆ. ಒಂದೇ ಆಗಿರುವ ಆತನ್ನು ಬಹುವಾಗುತ್ತಾನೆ. ಬಹು ಆದಮೇಲೆ ಆತನು ಒಂದೇ ಆಕಾಶದಲ್ಲಿ ತೂರಿ ಹೋಗುವವನಂತೆ ಆಗುತ್ತಾನೆ. ಕಣ್ಣಿಗೆ ಕಾಣಿಸಿಕೊಳ್ಳುತ್ತಾನೆ. ಅದೃಶ್ಯನೂ ಆಗುತ್ತಾನೆ. ಗೋಡೆಯನ್ನೂ ಪ್ರಕಾರವನ್ನೂ ಪರ್ವತವನ್ನು ಸುಲಭವಾಗಿ ದಾಟಿ ಆ ಕಡೆ ಹೋಗಿಬಿಡುತ್ತಾನೆ. ನೀರಿನಲ್ಲಿ ಮುಳುಗಿ ಏಳುವಂತೆ ನೆಲದಲ್ಲಿಯೂ ಮುಳಗಿ ಏಳುತ್ತಾನೆ. ಭೂಮಿಯ ಮೇಲೆ ನಡೆಯುವಂತೆಯೇ ನೀರಿನ ಮೇಲೆಯೂ ನಡೆಯುತ್ತಾನೆ. ಮಂಡಿಯನ್ನು ಮಡಿಸಿಕೊಂಡೇ ಪಕ್ಷಿಯು ಹಾರುವಂತೆ ಆಕಾಶದಲ್ಲಿ ಚಲಿಸಬಲ್ಲವನಾಗುತ್ತಾನೆ. ಮಹಾನುಭಾವರೂ ಮಹಾಬಲಶಾಲಿಗಳೂ ಆದ ಚಂದ್ರ ಸೂರ್ಯರನ್ನು ಹಿಡಿಯಬಲ್ಲವನಾಗುತ್ತಾನೆ. ತನ್ನ ಕಾಯದೊಂದಿಗೆ ಬ್ರಹ್ಮಲೋಕಕ್ಕೂ ಹೋಗಬಲ್ಲವನಾಗಿರುತ್ತಾನೆ.

“ತರುಣ, ದಕ್ಷನಾದ ಕುಂಬಾರನೋ ಅವನ ಆಪ್ತ ಶಿಷ್ಯನೋ ಚೆನ್ನಾಗಿ ಕಲೆಸಿದ ಜೇಡಿ ಮಣ್ಣಿನಿಂದ ಯಾವ ಆಕೃತಿಯನ್ನು ಬೇಕಾದರೂ ಮಾಡುವಂತೆ ದಕ್ಷನಾದ ದಂತದ ಕೆಲಸಗಾರನೋ ಆತನ ಆಪ್ತ ಶಿಷ್ಯನೋ ಒಳ್ಳೆಯ ದಂತದಿಂದ ಯಾವ ಆಕೃತಿಯನ್ನು ಬೇಕಾದರೂ ಮಾಡುವಂತೆ ದಕ್ಷನಾದ ಅಕ್ಕಸಾಲಿಯೋ ಆತನ ಆಪ್ತ ಶಿಷ್ಯನೋ ಒಳ್ಳೆಯ ಚಿನ್ನದಿಂದ ಯಾವ ಒಡವೆಯನ್ನು ಬೇಕಾದರೂ ಮಾಡುವಂತೆ ಶಾಂತವಾದ ಪರಿಶುದ್ಧವಾದ, ತಿಳಿಯಾದ, ಸಂಸ್ಕಾರಗೊಳಿಸಿದ, ಕ್ಲೇಷಗಳಿಂದ ದೂರವಾದ, ಮೃದುವಾದ, ಕಾರ್ಯನಿರತವಾದ, ದೃಢವಾದ, ಚಂಚಲಗೊಳ್ಳದ ಚಿತ್ತವನ್ನು ಪಡೆದಿರುವ ಆ ಭಿಕ್ಷುವು ಋದ್ಧಿಶಕ್ತಿಯನ್ನು ಪಡೆಯುವುದಕ್ಕೆ ಚಿತ್ತವನ್ನು ಅಣಿಗೊಳಿಸುತ್ತಾನೆ. ಮೇಲೆ ಹೇಳಿದ ಅನೇಕ ರೀತಿಯ ಋದ್ಧಿ ಶಕ್ತಿಯನ್ನು ಪಡೆಯುತ್ತಾನೆ. ತರುಣ, ಸಮಣನಾಗುವುದರಿಂದ ಈ ಲೋಕದಲ್ಲಿಯೇ ಪಡೆಯುವ ಫಲ ಇದು. ಪಞ್ಞಾದಲ್ಲಿನ ಒಂದು ಅಂಶ ಇದು.

“ಶಾಂತವಾದ ಪರಿಶುದ್ಧವಾದ ತಿಳಿಯಾದ ಸಂಸ್ಕಾರಗೊಳಿಸಿದ ಕ್ಲೇಶಗಳಿಂದ ದೂರವಾದ ಮೃದುವಾದ ಕಾರ್ಯನಿರತವಾದ ದೃಢವಾದ ಚಂಚಲಗೊಳ್ಳದ ಚಿತ್ತವನ್ನು ಪಡೆದಿರುವ ಆತನು ದಿವ್ಯವಾದ ಕಿವಿಯನ್ನು ಪಡೆಯಲು ಚಿತ್ತವನ್ನು ಅಣಿಗೊಳಿಸುತ್ತಾನೆ. ಮನುಷ್ಯರೆ ಕಿವಿಗಳನ್ನೆಲ್ಲಾ ಮೀರಿಸಿದ ಅತಿಶುದ್ಧವಾದ ದಿವ್ಯ ಕರ್ಣದಿಂದ ಆತನು ಮನುಷ್ಯರು ಕೇಳಲಾಗದ ದೂರದ ಅಥವ ಹತ್ತಿರದ ಶಬ್ದಗಳೆರಡನ್ನೂ ಕೇಳಬಲ್ಲವನಾಗಿರುತ್ತಾನೆ.

“ತರುಣ, ಹೆದ್ದಾರಿಯಲ್ಲಿ ಪ್ರಯಾಣ ಮಾಡುತ್ತಿರುವವನೊಬ್ಬನು ಭೇರಿಶಬ್ದವನ್ನಾಗಲೀ ಮೃದಂಗ ಶಬ್ದವನ್ನಾಗಲೀ ಶಂಖದ ಶಬ್ದ ವನ್ನಾಗಲೀ ದಿಂಡಿಮ ಶಬ್ದವನ್ನಾಗಲೀ ಪಣವ ಶಬ್ದವನ್ನಾಗಲೀ ಕೇಳಿ ಇದು ಬೇರಿಶಬ್ದ, ಇದು ಮೃದಂಗಶಬ್ದ, ಇದು ಶಂಖ ಶಬ್ದ, ಇದು ಪಣವ ಶಬ್ದ, ಇದು ಡಿಂಡಿಮ ಶಬ್ದ’ ಎಂದು ತಿಳಿಯುವಂತೆ ಶಾಂತವಾದ ಪರಿಶುದ್ಧವಾದ ತಿಳಿಯಾದ ಸಂಸ್ಕಾರಗೊಳಿಸಿದ ಕ್ಲೇಶಗಳಿಂದ ದೂರವಾದ ಮೃದುವಾದ ಕಾರ್ಯನಿರತವಾದ ದೃಢವಾದ ಚಂಚಲಗೊಳ್ಳದ ಚಿತ್ತವನ್ನು ಪಡೆದಿರುವ ಭಿಕ್ಷುವು ಅತಿಶುದ್ಧವಾದ ಸಾಧಾರಣ ಮನುಷ್ಯರು ಕೇಳಲಾಗದ ದೂರದ ಅಥವಾ ಹತ್ತಿರದ ಶಬ್ದಗಳೆರಡನ್ನೂ ಕೇಳಬಲ್ಲವನ್ನಾಗಿರುತ್ತಾನೆ. ತರುಣ, ಸಮಣನಾಗು ವುದರಿಂದ ಈ ಲೋಕದಲ್ಲಿಯೇ ಪಡೆಯಬಲ್ಲ ಸ್ಪಷ್ಟವಾದ ಫಲ ಇದು. ಪಞ್ಞಾದಲ್ಲಿನ ಒಂದು ಅಂಶ ಇದು.

“ಶಾಂತವಾದ ಪರಿಶುದ್ಧವಾದ ತಿಳಿಯದ ಸಂಸ್ಕಾರಗೊಳಿಸಿದ ಕ್ಲೇಶಗಳಿಂದ ದೂರವಾದ ಮೃದುವಾದ ಕಾರ್ಯನಿರತವಾದ ದೃಢವಾದ ಚಂಚಲಗೊಳ್ಳದ ಚಿತ್ತವನ್ನು ಪಡೆದಿರುವ ಆತನು ಚೇತೋಪರಿಯ ಜ್ಞಾನದ ಕಡೆಗೆ ಚಿತ್ತವನ್ನು ತಿರುಗಿಸುತ್ತಾನೆ. ಆತನು ಇತರ ಜೀವಿಗಳ ಮತ್ತು ಇತರ ಮನುಷ್ಯರ ಚಿತ್ತಗಳನ್ನು ಅರಿಯಬಲ್ಲವನಾಗಿರುತ್ತಾನೆ. ರಾಗಪೂರಿತವಾದ ಚಿತ್ತವನ್ನು ರಾಗಪೂರಿತವಾದ ಚಿತ್ತವೆಂದು, ರಾಗರಹಿತವಾದ ಚಿತ್ತವನ್ನು ರಾಗರಹಿತವಾದ ಚಿತ್ತವೆಂದೂ, ದ್ವೇಷಪೂರಿತವಾದ ಚಿತ್ತವನ್ನು ದ್ವೇಷಪೂರಿತ ಚಿತ್ತವೆಂದು, ದ್ವೇಷರಹಿತವಾದ ಚಿತ್ತವನ್ನು ದ್ವೇಷರಹಿತ ಚಿತ್ತವೆಂದೂ, ಮೋಹದಿಂದ ಕೂಡಿದ ಚಿತ್ತವನ್ನು ಮೋಹಪೂರಿತ ಚಿತ್ತವೆಂದೂ, ಮೋಹರಹಿತವಾದ ಚಿತ್ತವನ್ನು ಮೋಹರಹಿತವಾದ ಚಿತ್ತವೆಂದು, ಸಂಖಿತ್ತ ಚಿತ್ತವನ್ನು (ಗಮನವಿಡಬಲ್ಲ ಚಿತ್ತ) ಸಂಖಿತ್ತ ಚಿತ್ತವೆಂದೂ, ವಿಕ್ಖಿತ ಚಿತ್ತವನ್ನು (ಚಂಚಲಚಿತ್ತ) ಚಂಚಲ ಚಿತ್ತವೆಂದೂ, ವಿಶಾಲವಾದ ಚಿತ್ತವನ್ನು ವಿಶಾಲವಾದ ಚಿತ್ತವೆಂದೂ, ಸಂಕುಚಿತ ಚಿತ್ತವನ್ನು ಸಂಕುಚಿತ ಚಿತ್ತವೆಂದೂ (ನೀಚ ಚಿತ್ತ), ಸಉತ್ತರ ಚಿತ್ತವನ್ನು ಸಉತ್ತರ ಚಿತ್ತವೆಂದು, ಅನುತ್ತರ ಚಿತ್ತವನ್ನು ಅನುತ್ತರ ಚಿತ್ತ (ಉದಾತ್ತ ಚಿತ್ತ, ಶ್ರೇಷ್ಠವಾದ ಚಿತ್ತ)ವೆಂದೂ, ಶಾಂತವಾದ ಚಿತ್ತವನ್ನೂ ಶಾಂತಚಿತ್ತವೆಂದೂ, ತಲ್ಲಣಿಸುತ್ತಿರುವ ಚಿತ್ತವನ್ನು ತಲ್ಲಣಿಸುತ್ತಿರುವ ಚಿತ್ತವೆಂದೂ, ವಿಮುಕ್ತ ಚಿತ್ತವನ್ನು ವಿಮುಕ್ತ ಚಿತ್ತವೆಂದು, ಅವಿಮುಕ್ತ ಚಿತ್ತವನ್ನು ಅವಿಮುಕ್ತ ಚಿತ್ತವೆಂದು ತಿಳಿಯುತ್ತಾನೆ.

“ತರುಣ, ಸ್ತ್ರೀಯರು ಪುರುಷರು ಚೂಟಿಯಾದ ಯುವಕರು ಶುಭ್ರವಾದ ಕನ್ನಡಿಯಲ್ಲೋ ತಿಳಿನೀರಿರುವ ಉದಕ ಪಾತ್ರೆಯಲ್ಲೋ ತಮ್ಮ ಮುಖವನ್ನು ನೋಡಿಕೊಂಡಾಗ ಅದರ ಮೇಲೆ ಗುಳ್ಳೆ ಇದೆಯೋ ಇಲ್ಲವೋ ಎಂಬುದನ್ನು ತಿಳಿಯುವಂತೆ ಶಾಂತವಾದ ಪರಿಶುದ್ಧವಾದ ತಿಳಿಯಾದ ಸಂಸ್ಕಾರಗೊಳಿಸಿದ ಕ್ಲೇಶಗಳಿಂದ ದೂರವಾದ ಮೃದುವಾದ ಕಾರ್ಯ ನಿರತವಾದ ದೃಢವಾದ ಚಂಚಲಗೊಳ್ಳದ ಚಿತ್ತವನ್ನು ಪಡೆದಿರುವ ಭಿಕ್ಷುವು ಚೇತೋಪರಿಯ ಜ್ಞಾನದಿಂದ ಇತರ ಜೀವಿಗಳ ಚಿತ್ತವನ್ನೂ ಇತರ ಮನುಷ್ಯರ ಚಿತ್ತವನ್ನೂ ಅರಿಯಬಲ್ಲವನಾಗುತ್ತಾನೆ. ತರುಣ, ಸಮಣನಾಗುವುದರಿಂದ ಈ ಲೋಕದಲ್ಲಿಯೇ ಪಡೆಯಬಲ್ಲ ಸ್ಪಷ್ಟವಾದ ಫಲ ಇದು. ಪಞ್ಞಾದಲ್ಲಿನ ಒಂದು ಅಂಶ ಇದು.

“ಶಾಂತವಾದ ಪರಿಶುದ್ಧವಾದ ತಿಳಿಯಾದ ಸಂಸ್ಕಾರಗೊಳಿಸಿದ ಕ್ಲೇಶಗಳಿಂದ ದೂರವಾದ ಮೃದುವಾದ ಕಾರ್ಯನಿರತವಾದ ದೃಢವಾದ ಚಂಚಲಗೊಳ್ಳದ ಚಿತ್ತವನ್ನು ಪಡೆದಿರುವಂಥವನು ತನ್ನ ಹಿಂದಿನ ಜನ್ಮಗಳನ್ನು ನೆನಸಿಕೊಳ್ಳಬಲ್ಲ ಜ್ಞಾನದ ಕಡೆಗೆ ತನ್ನ ಚಿತ್ತವನ್ನು ತಿರುಗಿಸುತ್ತಾನೆ. ಆತನು ತನ್ನ ಹಿಂದಿನ ಅನೇಕ ಜನ್ಮಗಳನ್ನು ನೆನಸಿಕೊಳ್ಳುತ್ತಾನೆ. ಉದಾಹರಣೆಗೆ:- ಒಂದು ಜನ್ಮವನ್ನು, ಎರಡು ಜನ್ಮಗಳನ್ನು, ಮೂರು ಜನ್ಮಗಳನ್ನು, ನಾಲ್ಕು ಜನ್ಮಗಳನ್ನು, ಐದು ಜನ್ಮಗಳನ್ನು, ಹತ್ತು ಜನ್ಮಗಳನ್ನು, ಇಪ್ಪತ್ತು ಜನ್ಮಗಳನ್ನು, ಮೂವತ್ತು ಜನ್ಮಗಳನ್ನು ನಲವತ್ತು ಜನ್ಮಗಳನ್ನು, ಐವತ್ತು ಜನ್ಮಗಳನ್ನು, ನೂರು ಜನ್ಮಗಳನ್ನು, ಸಾವಿರ ಜನ್ಮಗಳನ್ನು, ಲಕ್ಷ ಜನ್ಮಗಳನ್ನು, ಅಂತೆಯೇ ಅನೇಕ ಸಂವಟ್ಟಿ ಕಲ್ಪಗಳನ್ನು ಅನೇಕ ವಿವಟ್ಟ ಕಲ್ಪಗಳನೂ, ಅನೇಕ ಸಂವಟ್ಟ ವಿವಟ್ಟ ಕಲ್ಪಗಳನ್ನೂ ಆತ ಜ್ಞಾಪಿಸಿಕೊಳ್ಳಬಲ್ಳವನಾಗುತ್ತಾನೆ. ‘ಅಲ್ಲಿ ಆ ಹೆಸರಿನಲ್ಲಿ ಆ ಗೋತ್ರದಲ್ಲಿ ಆ ವರ್ಣದಲ್ಲಿ ಹುಟ್ಟಿ ಇಂತಿಂಥ ಆಹಾರವನ್ನು ತಿಂದು ಇಂತಿಂಥ ಸುಖದು:ಖಗಳನ್ನನುಭವಿಸಿ ಇಷ್ಟು ಆಯಸ್ಸಿನವರೆಗೆ ಬದುಕಿದ್ದು ಆ ಜನ್ಮಗಳಾದ ಮೇಲೆ ಮತ್ತಲ್ಲಿ ಹುಟ್ಟಿದೆ. ಆ ಹೆಸರಿನಲ್ಲಿ, ಆ ಗೋತ್ರದಲ್ಲಿ, ಆ ವರ್ಣದಲ್ಲಿ ಹುಟ್ಟಿ ಇಂತಿಂಥ ಆಹಾರವನ್ನು ತಿಂದು ಇಂತಿಂಥ ಸುಖದು:ಖಗಳನ್ನನುಭವಿಸಿ ಇಷ್ಟು ಆಯಸ್ಸಿನವರೆಗೆ ಬದುಕಿದ್ದು ಇಲ್ಲಿ ಹುಟ್ಟಿದೆ.’ ಹೀಗೆ ಅನೇಕ ಹಿಂದಿನ ಜನ್ಮಗಳನ್ನು ಎಲ್ಲ ವಿವರಗಳೊಂದಿಗೆ ಸ್ಮರಿಸಿ ಕೊಳ್ಳಬಲ್ಲವನಾಗಿರುತ್ತಾನೆ.

“ತರುಣ, ತನ್ನ ಗ್ರಾಮದಿಂದ ಬೇರೊಂದು ಗ್ರಾಮಕ್ಕೆ ಹೋಗಿ ಆ ಗ್ರಾಮದಿಂದ ಮತ್ತೊಂದು ಗ್ರಾಮಕ್ಕೆ ಹೋಗಿ ಅಲ್ಲಿಂದ ತನ್ನ ಗ್ರಾಮಕ್ಕೆ ಹಿಂತಿರುಗಿದವನೊಬ್ಬನು’ ನನ್ನ ಗ್ರಾಮದಿಂದ ಈ ಗ್ರಾಮಕ್ಕೆ ಬಂದೆ, ಅಲ್ಲಿ ಹೀಗೆ ನಿಂತೆ, ಹೀಗೆ ಕುಳಿತೆ, ಹೀಗೆ ಮಾತನಾಡಿದೆ, ಹೀಗೆ ಮೌನದಿಂದಿದ್ದೆ. ಆ ಗ್ರಾಮದಿಂದ ಈ ಗ್ರಾಮಕ್ಕೆ ಬಂದೆ, ಅಲ್ಲಿ ಹೀಗೆ ನಿಂತೆ, ಹೀಗೆ ಕುಳಿತೆ, ಹೀಗೆ ಮಾಡನಾಡಿದೆ, ಹೀಗೆ ಮೌನದಿಂದಿದ್ದೆ, ಆ ಗ್ರಾಮದಿಂದ ಮತ್ತೊಮ್ಮೆ ನನ್ನ ಗ್ರಾಮಕ್ಕೆ ಬಂದೆ’ ಎಂದು ಸ್ಪಷ್ಟವಾಗಿ ಹೇಳಬಲ್ಲವನಂತೆ ಶಾಂತವಾದ ಪರಿಶುದ್ದವಾದ ತಿಳಿಯಾದ ಸಂಸ್ಕಾರಗೊಂಡ ಕ್ಲೇಶರಹಿತವಾದ ಮೃದುವಾದ ಕಾರ್ಯನಿರತವಾದ ದೃಢವಾದ ಚಂಚಲಗೊಳ್ಳದ ಚಿತ್ತವನ್ನು ಪಡೆದಿರುವ ಭಿಕ್ಷುವು ಹಿಂದೆ ತಿಳಿಸಿದ ರೀತಿಯಲ್ಲೇ ತನ್ನ ಅನೇಕ ಹಿಂದಿನ ಜನ್ಮಗಳನ್ನು ನೆನಸಿಕೊಳ್ಳುತ್ತಾನೆ. ತರುಣ, ಸಮಣನಾಗುವುದರಿಂದ ಈ ಲೋಕದಲ್ಲಿಯೇ ಪಡೆಯಬಲ್ಲ ಸ್ಪಷ್ಟವಾದ ಫಲ ಇದು. ಪಞ್ಞಾದಲ್ಲಿನ ಒಂದು ಅಂಶ ಇದು.

“ಶಾಂತವಾದ ಪರಿಶುದ್ಧವಾದ ತಿಳಿಯಾದ ಸಂಸ್ಕಾರಗೊಳಿಸಿದ ಕ್ಲೇಶಗಳಿಂದ ದೂರವಾದ ಮೃದುವಾದ ಕಾರ್ಯನಿರತವಾದ ದೃಢವಾದ ಚಂಚಲಗೊಳ್ಳದ ಚಿತ್ತವನ್ನು ಪಡೆದಿರುವ ಆತನು ಜೀವಿಗಳ ‘ಚುತೂಪ್ಪಾತ’ (ಅವನತಿ-ಉನ್ನತಿ) ಜ್ಞಾನದ ಕಡೆಗೆ ಚಿತ್ತವನ್ನು ತಿರುಗಿಸುತ್ತಾನೆ. ಆತನು ಅತಿಶುದ್ಧವಾದ ಸಾಧಾರಣ ಮನಷ್ಯನಿಗಿಲ್ಲದ ದಿವ್ಯ ಚಕ್ಷುವಿನಿಂದ ಅವನತಿಯನ್ನು ಹೊಂದಬಲ್ಲ ಅಥವಾ ಉನ್ನತಿಯನ್ನು ಪಡೆಯಬಲ್ಲ ಹೀನವಾದ ಅಥವಾ ಶ್ರೇಷ್ಠವಾದ ಸುವರ್ಣಪೂರಿತವಾದ ಅಥವಾ ದುರ್ವರ್ಣದಿಂದ ಕೂಡಿದ ಸುಗತಿಯನ್ನು ಹೊಂದುವ ಅಥವಾ ದುರ್ಗತಿಯನ್ನು ಪಡೆಯುವ ಜೀವಿಗಳನ್ನು ನೋಡಬಲ್ಲವನಾಗಿರುತ್ತಾನೆ. ಜೀವಿಗಳು ತಮ್ಮ ತಮ್ಮ ಕರ್ಮಗಳಿಗೆ ತಕ್ಕಂತೆ ಅವನತಿ ಹೊಂದುವುದನ್ನೋ ಉನ್ನತಿ ಪಡೆಯುವುದನ್ನೋ ಅರಿಯ ಬಲ್ಲವನಾಗಿರುತ್ತಾನೆ.

‘ಕಾಯ ವಾಚಾ ಮನಸಾ ದುಶ್ಚರಿತರಾದ ಆರ್ಯನಿಂದಕರಾದ ಮಿಥ್ಯಾ ದೃಷ್ಟಿಯುಳ್ಳ ಮಿಥ್ಯಾದೃಷ್ಟಿಯಿಂದ ಉತ್ಪನ್ನವಾಗುವ ಕರ್ಮಗಳನ್ನು ಮಾಡುವ ಈ ಜೀವಿಗಳು (ಮರಣಾನಂತರ) ಕಾಯವನ್ನು ತೊರೆದು ಅಪಾಯದಿಂದ ಕೂಡಿದುದು ಸಂಕಟದಿಂದ ಕೂಡಿದುದೂ ಆದ ನಿರಯದಲ್ಲಿ ಹುಟ್ಟುತ್ತಾರೆ. ದುರ್ಗತಿ ಪಡೆಯುತ್ತಾರೆ. ಆದರೆ ಕಾಯ ವಾಚಾ ಮನಸಾ ಸುಚರಿತರಾದ ಆರ್ಯನಿಂದಕರಲ್ಲದ ಸಮ್ಯಕ್ ದೃಷ್ಟಿಯುಳ್ಳ ಸಮ್ಯಕ್ ದೃಷ್ಟಿಯಿಂದ ಉತ್ಪನ್ನವಾಗುವ ಕರ್ಮಗಳನ್ನು ಮಾಡುವ ಈ ಜೀವಿಗಳು ಮರಣಾ ನಂತರ ಕಾಯವನ್ನು ತೊರೆದು ಸ್ವರ್ಗಲೋಕದಲ್ಲಿ ಹುಟ್ಟುತ್ತಾರೆ; ಸುಗತಿ ಹೊಂದುತ್ತಾರೆ.’ ಹೀಗೆ ಅತಿಶುದ್ಧವಾದ ಸಾಧಾರಣ ಮನುಷ್ಯರಿಗೆ ದೊರೆಯದ ದಿವ್ಯ ಚಕ್ಷುವಿನಿಂದ ಅವನತಿಯನ್ನು ಹೊಂದಬಲ್ಲ ಅಥವಾ ಉನ್ನತಿಯನ್ನು ಪಡೆಯಬಲ್ಲ ಹೀನವಾದ ಅಥವಾ ಶ್ರೇಷ್ಠವಾದ ಸುವರ್ಣಪೂರಿತವಾದ ಅಥವಾ ದುರ್ವರ್ಣದಿಂದ ಕೂಡಿದ ಸುಗತಿಯನ್ನು ಹೊಂದುವ ಅಥವಾ ದುರ್ಗತಿಯನ್ನು ಪಡೆಯಬಲ್ಲ ಜೀವಿಗಳನ್ನು ನೋಡಬಲ್ಲವನಾಗಿರುತ್ತಾನೆ. ಜೀವಿಗಳು ತಮ್ಮ ತಮ್ಮ ಕರ್ಮಗಳಿಗೆ ತಕ್ಕಂತೆ ಅವನತಿ ಹೊಂದುವುದನ್ನೋ ಉನ್ನತಿ ಪಡೆಯುವದನ್ನೋ ಅರಿಯಬಲ್ಲವನಾಗಿರುತ್ತಾನೆ.

“ತರುಣ, ನಾಲ್ಕು ಬೀದಿಗಳು ಸೇರುವ ಚೌಕದ ಮಧ್ಯೆ ಒಂದು ಪ್ರಾಸಾದವಿದೆ ಎನ್ನು. ಅದರ ಉಪ್ಪರಿಗೆಯ ಮೇಲೆ ನಿಂತಿರುವವನೊಬ್ಬನು ಬೀದಿಯಲ್ಲಿರುವ ಯಾವುದಾದರೊಂದು ಮನೆಗೆ ಹೋಗುವವರನ್ನು ಅದರ ಒಳಗಿಂದ ಬರುವವರನ್ನು ಅಥವಾ ಬೀದಿಯಲ್ಲಿ ಸಂಚರಿಸುವವರನ್ನು ಅಥವಾ ಚೌಕದಲ್ಲಿ ಕುಳಿತಿರುವವರನ್ನು ತನ್ನ ಕಣ್ನಿನಿಂದ ನೊಡಬಹುದಷ್ಟೆ, ಆಗ ಅವನು ಹೀಗೆ ತಿಳಿಯುತ್ತಾನೆ-‘ ಇವರು ಮನೆಯೊಳಗೆ ಹೋಗುತ್ತಾರೆ. ಇವರು ಮನೆಯಿಂದ ಬರುತ್ತಾರೆ. ಇವರು ಬೀದಿಯಲ್ಲಿ ಸಂಚರಿಸುತ್ತಾರೆ. ಇವರು ಚೌಕದ ಮಧ್ಯದಲ್ಲಿ ಕುಳಿತ್ತಿದ್ದಾರೆ. ಇವನಂತೆ, ತರುಣ, ಶಾಂತವಾದ ಪರಿಶುದ್ದವಾದ ತಿಳಿಯಾದ ಸಂಸ್ಕಾರಗೊಳಿಸಿದ ಕ್ಲೇಶಗಳಿಂದ ದೂರವಾದ ಮೃದುವಾದ ಕಾರ್ಯನಿರತವಾದ ದೃಢವಾದ ಚಂಚಲಗೊಳ್ಳದ ಚಿತ್ತವಿರುವ ಭಿಕ್ಷುವು ಜೀವಿಗಳ ಅವನತಿ ಉನ್ನತಿ ಜ್ಞಾನದ ಕಡೆಗೆ ತನ್ನ ಚಿತ್ತವನ್ನು ತಿರುಗಿಸುತ್ತಾನೆ. ಅವನು ಅತಿ ಶುದ್ಧವಾದ ಸಾಧಾರಣ ಮನುಷ್ಯರಿಗಿಲ್ಲದ ದಿವ್ಯ ಚಕ್ಷುವಿನಿಂದ ಅವನತಿಯನ್ನು ಪಡೆಯಬಲ್ಲ ಅಥವಾ ಉನ್ನತಿಯನ್ನು ಹೊಂದಬಲ್ಲ, ಹೀನವಾದ ಅಥವಾ ಶ್ರೇಷ್ಟವಾದ, ಸುವರ್ಣ ಪೂರಿತವಾದ ಅಥವಾ ದುರ್ವರ್ಣದಿಂದ ಸುಗತಿಯನ್ನು ಹೊಂದಬಲ್ಲ ಅಥವಾ ದುರ್ಗತಿಯನ್ನು ಪಡೆಯಬಲ್ಲ ಜೀವಿಗಳನ್ನು ನೋಡಬಲ್ಲವನಾಗಿರುತ್ತಾನೆ. ಜೀವಿಗಳು ತಮ್ಮ ಕರ್ಮಗಳಿಗೆ ತಕ್ಕಂತೆ ಅವನತಿ ಹೊಂದುವುದನ್ನೋ ಉನ್ನತಿ ಪಡೆಯುವುದನ್ನೋ ನೊಡಬಲ್ಲವನಾಗಿರುತ್ತಾನೆ. ‘ಈ ಕಾಯ ವಾಚಾ ಮನಸಾ ದುಶ್ಚರಿತರಾದ ಆರ್ಯನಿಂದಕರಾದ ಮಿಥ್ಯಾ ದೃಷ್ಟಿಯುಳ್ಳ ಮಿಥ್ಯಾದೃಷ್ಟಿಯಿಂದ ಉತ್ಪನ್ನವಾಗುವ ಕರ್ಮಗಳನ್ನು ಮಾಡುವ ಈ ಜೀವಿಗಳು ಮರಣಾನಂತರ ಕಾಯದಿಂದ ಬೇರೆಯಾಗಿ ಅಪಾಯದಿಂದ ಕೂಡಿದುದೂ ಸಂಕಟದಿಂದ ಕೂಡಿದುದೂ ಆದ ನಿರಯದಲ್ಲಿ ಹುಟ್ಟುತ್ತಾರೆ. ದುರ್ಗತಿ ಪಡೆಯುತ್ತಾರೆ. ಆದರೆ ಕಾಯಾ ವಾಚಾ ಮನಸಾ ಸುಚರಿತರಾದ ಆರ್ಯನಿಂದಕರಲ್ಲದ ಸಮ್ಯಕ್ ದೃಷ್ಟಿಯುಳ್ಳ ಸಮ್ಯಕ್ ದೃಷ್ಟಿಯಿಂದ ಹುಟ್ಟುವ ಕರ್ಮಗಳನ್ನು ಮಾಡುವ ಈ ಜೀವಿಗಳು ಮರಣಾನಂತರ ಕಾಯವನ್ನು ತೊರೆದು ಸ್ವರ್ಗಲೋಕದಲ್ಲಿ ಹುಟ್ಟುತ್ತಾರೆ; ಸುಗತಿ ಹೊಂದುತ್ತಾರೆ’. ಹೀಗೆ ಅತಿ ಶುದ್ದವಾದ ಸಾಧಾರಣ ಮನುಷ್ಯರಿಗಿಲ್ಲದ ದಿವ್ಯ ಚಕ್ಷುವಿನಿಂದ ಆ ಭಿಕ್ಷುವು ಅವನತಿಯನ್ನು ಹೊಂದಬಲ್ಲ ಅಥವ ಉನ್ನತಿಯನ್ನು ಪಡೆಯಬಲ್ಲ, ಹೀನವಾದ ಅಥವಾ ಶ್ರೇಷ್ಟವಾದ, ಸುವರ್ಣಪೂರಿತವಾದ ಅಥವಾ ದುರ್ವರ್ಣದಿಂದ ಕೂಡಿದ ಸುಗತಿಯನ್ನು ಹೊಂದಬಲ್ಲ ಆಥವಾ ದುರ್ಗತಿಯನ್ನು ಪಡೆಯಬಲ್ಲ ಜೀವಿಗಳನ್ನು ನೋಡಬಲ್ಲವನಾಗಿರುತ್ತಾನೆ. ಜೀವಿಗಳು ತಮ್ಮ ತಮ್ಮ ಕರ್ಮಗಳಿಗೆ ತಕ್ಕಂತೆ ಅವನತಿ ಹೊಂದುವುದನ್ನೋ ಉನ್ನತಿ ಪಡೆಯುವುದನ್ನೋ ಅರಿಯ ಬಲ್ಲವನಾಗಿರುತ್ತಾನೆ. ತರುಣ, ಸಮಣವಾಗುವುದರಿಂದ ಈ ಲೋಕದಲ್ಲಿಯೇ ದೊರೆಯುವ ಸ್ಪಷ್ಠವಾದ ಫಲ ಇದು. ಪಞ್ಞಾದಲ್ಲಿನ ಒಂದು ಅಂಶ ಇದು.

“ಶಾಂತವಾದ ಪರಿಶುದ್ಧವಾದ ತಿಳಿಯಾದ ಸಂಸ್ಕಾರಗೊಳಿಸಿದ ಕ್ಲೇಶಗಳಿಂದ ದೂರವಾದ ಮೃದುವಾದ ಕರ್ಮನಿರತವಾದ ಸದೃಢವಾದ ಚಂಚಲಗೊಳ್ಳದ ಚಿತ್ತವಿರುವಾತನು ಆಸವಗಳ ಕ್ಷಯ ಜ್ಞಾನದ ಕಡೆಗೆ ತನ್ನ ಚಿತ್ತವನ್ನು ತಿರುಗಿಸುತ್ತಾನೆ. ಆತನು ‘ಇದು ದು:ಖ; ಎಂದು ಅದರ ಯಥಾಸ್ಥಿತಿಯನ್ನು ತಿಳಿಯಬಲ್ಲ. ‘ಇದು ದು:ಖ ಸಮುದಯ’ ಎಂದು ಅದರ ಸ್ಥಿತಿಯನ್ನು ತಿಳಿಯಬಲ್ಲ, ‘ಇದು ದು:ಖ ನಿರೋಧ’ ಎಂದು ಅದರ ಯಥಾಸ್ಥಿತಿಯನ್ನು ತಿಳಿಯಬಲ್ಲ, ‘ಇದು ದು:ಖ ನಿರೋಧಗಾಮಿನಿ ಪಟಿಪದ’ ಎಂಬ ಅದರ ಯಥಾಸ್ಥಿತಿಯನ್ನು ತಿಳಿಯಬಲ್ಲ. ‘ಇದು ಆಸವ’ ಎಂದು ಅದರ ಯಥಾಸ್ಥಿತಿಯನ್ನು ತಿಳಿಯಬಲ್ಲ. ‘ಇದು ಆಸವ ಸಮುದಯ’ ಎಂದು ಅದರ ಯಥಾಸ್ಥಿತಿಯನ್ನು ತಿಳಿಯಬಲ್ಲ. ‘ಇದು ಆಸವ ನಿರೋಧ’ ಎಂದು ಅದರ ಯಥಾಸ್ಥಿತಿಯನ್ನು ತಿಳಿಯಬಲ್ಲ. ‘ಇದು ಆಸವ ನಿರೋಧ ಗಾಮಿನಿ ಪಟಿಪದ’ ಎಂದು ಅದರ ಯಥಾಸ್ಥಿತಿಯನ್ನು ತಿಳಿಯಬಲ್ಲ. ಹೀಗೆ ಸ್ಪಷ್ಟವಾದ ತಿಳಿವಳಿಕೆಯಿರುವ ಆತನ ಚಿತ್ತವು ಕಾಮಾಸವದಿಂದ ಬಿಡುಗಡೆಯಾಗಿರುತ್ತದೆ; ಭವಾಸವದಿಂದ ಬಿಡುಗಡೆಯಾಗಿರುತ್ತದೆ; ಅವಿಜ್ಜಾಸವದಿಂದ ಬಿಡುಗಡೆಯಾಗಿರುತ್ತದೆ ವಿಮುಕ್ತನಾದ ಅವನಲ್ಲಿ ವಿಮುಕ್ತಮತಿಜ್ಞಾನವು ಹುಟ್ಟುತ್ತದೆ. ‘ಹುಟ್ಟುವಿಕೆಯು ನಾಶವಾಗಿದೆ. ಬ್ರಹ್ಮಚರ್ಯವು ಪರಿಪಾಲಿಸಲ್ಪಟ್ಟಿದೆ. ಮಾಡಬೇಕಾದದ್ದನ್ನು ಮಾಡಲಾಗಿದೆ. ಇನ್ನು ಮಾಡಬೇಕಾದ್ದು ಏನೂ ಇಲ್ಲ ಇನ್ನು ಮೇಲೆ ಪುನರ್ಜನ್ಮವಿಲ್ಲ ಎಂಬುದು ತಿಳಿದುಕೊಳ್ಳುತ್ತಾನೆ.

“ತರುಣ, ಪರ್ವತ ಮಾರ್ಗವೊಂದರಲ್ಲಿ ಶುದ್ಧವಾದ ತಿಳಿಯಾದ ಸ್ಫಟಿಕದಂತಿರುವ ನೀರಿನ ಸರೋವರವಿದೆ ಎನ್ನು. ಅದರೆ ತೀರದಲ್ಲಿ ನಿಂತವನೊಬ್ಬನು ಕಣ್ಣಿನಿಂದ ಸಿಂಪಿಗಳನ್ನು ಚಿಪ್ಪುಗಳನ್ನು ಮರಳು ಬೆಣಚು ಕಲ್ಲುಗಳನ್ನು ಚಲಿಸುತ್ತಿರುವ ಅಥವಾ ಹಾಗೆಯೇ ನಿಂತಿರುವ ಮೀನುಗಳ ಗುಂಪನ್ನೂ ನೋಡಬಹುದಷ್ಟೆ. ‘ಈ ಸರೋವರದಲ್ಲಿ ಶುದ್ದವಾದ ತಿಳಿಯಾದ ಸ್ಫಟಕದಂತಿರುವ ನೀರಿದೆ, ಇದರಲ್ಲಿ ಸಿಂಪಿಗಳೂ ಚಿಪ್ಫುಗಳು ಮರಳು ಬೆಣಚುಕಲ್ಲುಗಳು ಚಲಿಸುತ್ತಿರುವ ಮತ್ತು ಹಾಗೆಯೇ ನಿಂತಿರುವ ಮೀನುಗಳ ಸಮೂಹಗಳೂ ಇವೆ’ ಎಂಬುದು ಗೊತ್ತಾಗುತ್ತದೆ. ಇವನಂತೆಯೇ ತರುಣ, ಶಾಂತವಾದ ಪರಿಶುದ್ದವಾದ ತಿಳಿಯಾದ ಸಂಸ್ಕಾರಗೊಳಿಸಿದ ಕ್ಲೇಶಗಳಿಂದ ದೂರವಾದ ಮೃದುವಾದ ಕರ್ಮನಿರತವಾದ ದೃಢವಾದ ಚಂಚಲವಿಲ್ಲದ ಚಿತ್ತವುಳ್ಳ ಭಿಕ್ಷುವು ತನ್ನ ಚಿತ್ತವನ್ನು ಅಸವಗಳ ಕ್ಖಯ ಜ್ಞಾನದ ಕಡೆಗೆ ತಿರುಗಿಸುತ್ತಾನೆ. ಆತನು ‘ಇದು ದು:ಖ’ ಎಂದು ಅದರ ಸ್ಥಿತಿಯನ್ನು ತಿಳಿಯುತ್ತಾನೆ. ‘ಇದು ದು:ಖ ಸಮುದಯ’ ಎಂದು ಅದರ ಯಥಾ ಸ್ಥಿತಿಯನ್ನು ತಿಳಿಯುತ್ತಾನೆ. ‘ಇದು ದು:ಖ ನಿರೋಧ’ ಎಂದು ಅದರ ಯಥಾಸ್ಥಿತಿಯನ್ನು ತಿಳಿಯುತ್ತಾನೆ. ‘ಇದು ದುಃಖ ನಿರೋದಗಾಮಿನಿ ಪಟಿಪದ’ ಎಂದು ಅದರ ಯಥಾಸ್ಥಿತಿಯನ್ನು ತಿಳಿಯುತ್ತಾನೆ. ‘ಇದು ಆಸವ’ ಎಂದು ಅದರ ಯಥಾಸ್ಥಿತಿಯನ್ನು ತಿಳಿಯುತ್ತಾನೆ. ‘ಇದು ಆಸವ ಸಮುದಯ’ ಎಂದು ಅದರ ಯಥಾಸ್ಥಿತಿಯನ್ನು ತಿಳಿಯುತ್ತಾನೆ. ಇದು ಆಸವ ನಿರೋಧ ಎಂದು ಅದರ ಯಥಾಸ್ಥಿತಿಯನ್ನು ತಿಳಿಯುತ್ತಾನೆ, ಇದು ‘ಆಸವ ನಿರೋಧಗಮಿನಿ ಪಟಿಪದ’ ಎಂದು ಅದರ ಯಥಾಸ್ಥಿತಿಯನ್ನು ತಿಳಿಯುತ್ತಾನೆ. ಹೀಗೆ ಸ್ಪಷ್ಟವಾದ ತಿಳಿವಳಿಕೆಯಿಂದ ಆತನ ಚಿತ್ತವು ಕಾಮಾಸವದಿಂದ ಬಿಡುಗಡೆಯಾಗಿರುತ್ತದೆ; ಭವಾಸವದಿಂದ ಬಿಡುಗಡೆಯಾಗಿರುತ್ತದೆ; ಅವಿಜ್ಝಾಸವದಿಂದ ಬಿಡುಗಡೆಯಾಗಿರುತ್ತದೆ. ವಿಮುಕ್ತನಾದ ಅವನಲ್ಲಿ ವಿಮುಕ್ತಮತಿ ಜ್ಞಾನವು ಹುಟ್ಟುತ್ತದೆ. ಹುಟ್ಟುವಿಕೆಯೇ ಕ್ಷೀಣವಾಗಿದೆ, ಬ್ರಹ್ಮಚರ್ಯವು ಪರಿಪಾಲಿಸಲ್ಪಟ್ಟಿದೆ, ಮಾಡಬೇಕಾದದ್ದನ್ನು ಮಾಡಲಾಗಿದೆ, ಇನ್ನುಮುಂದೆ ಪರವಿಲ್ಲ ಎಂಬುದನ್ನು ತಿಳಿಯುತ್ತಾನೆ. ತರುಣ, ಸಮಣ ನಾಗವುದರಿಂದ ಈ ಲೋಕದಲ್ಲಿಯೇ ದೊರೆಯುವ ಸ್ಪಷ್ಟವಾದ ಫಲವು ಇದು. ಪಞ್ಞಾದಲ್ಲಿನ ಒಂದು ಅಂಶ ಇದು. ಸಮಣನಾಗುವುದರಿಂದ ಈ ಲೋಕದಲ್ಲಿಯೇ ದೊರೆಯುವ ಫಲಗಳಲ್ಲಿ ಇದಕ್ಕಿಂತಲೂ ಉನ್ನತಕರವಾದದ್ದು ಶುಚಿಕರವಾದದ್ದು ಬೇರೊಂದಿಲ್ಲ.

“ತರುಣ ಭಗವಾನರು ಪ್ರಶಂಸಿಸಿರುವ ಶ್ರೇಷ್ಠವಾದ ಪಞ್ಞಾಕ್ಖಂದವು ಇದೇ ಅಗಿದೆ. ಜನತೆಗೆ ಇದನ್ನು ವಿವರಿಸಿದ್ದಾರೆ. ಅವರಿಗೆ ಮನದಟ್ಟು ಮಾಡಿಕೊಟ್ಟಿದ್ದಾರೆ. ಅವರ ಹೃದಯದಲ್ಲಿ ಪ್ರತಿಷ್ಠಾಪಿಸಿದ್ದಾರೆ. ಇದನ್ನು ಸಾಧಿಸಿದ ಮೇಲೆ ಮಾಡಬೇಕಾದದ್ದು ಏನು ಇಲ್ಲ.”

“ಆಶ್ಚರ್ಯ, ಆನಂದ, ಅದ್ಭುತ, ಆನಂದ. ಆನಂದ, ಶ್ರೇಷ್ಟವಾದ ಈ ಪಞ್ಞಾಕ್ಖಂದವು ಪರಿಪೂರ್ಣವಾಗಿದೆ. ಅಪರಿಪೂರ್ಣವಾಗಿಲ್ಲ. ಆನಂದ ಪರಿಪೂರ್ಣ ವಾದ ಮತ್ತು ಶ್ರೇಷ್ಠವಾದ ಈ ಪಞ್ಞಾಕ್ಖಂದವನ್ನು ಸಾಧಿಸಿರುವ ಬೇರಾವ ಸಮಣ ಬ್ರಾಹ್ಮಣರನ್ನು ನಾನು ಕಾಣೆ. ಇದನ್ನು ಸಾಧಿಸಿದ ಮೇಲೆ ಮಾಡಬೇಕಾದದ್ದು ಏನೂ ಇಲ್ಲ. ಎಷ್ಟು ಸೊಗಸು. ಆನಂದ, ನಿನ್ನ ಮಾತುಗಳು ಎಷ್ಟು ಸೊಗಸು! ತಲೆಕೆಳಗಾಗಿರುವುದನ್ನು ನೆಟ್ಟಗೆ ನಿಲ್ಲಿಸುವಂತೆ, ಅಡಗಿರು ವುದನ್ನು ತೆಗೆದು ತೋರಿಸುವಂತೆ, ದಾರಿ ತಪ್ಪಿದವನಿಗೆ ದಾರಿ ತೋರಿಸುವವನಂತೆ, ಕತ್ತಲಲ್ಲಿ ಸಿಕ್ಕಿರುವವನಿಗೆ ದೀಪ. ಹಿಡಿಯುವವನಂತೆ, ಕಣ್ಣಿರುವವನು ತನ್ನ ಕಣ್ಣಿನಿಂದ ರೂಪವನ್ನು ನೋಡಲು ಅನುಕೂಲವಾಗುವಂತೆ ದೀಪ ಹಿಡಿಯುವವನಂತೆ ಪೂಜ್ಯನಾದ ಆನಂದನಿಂದ ಅನೇಕ ಪರಿಯಲ್ಲಿ ಧಮ್ಮವು ಪ್ರಕಾಶಗೊಂಡಿದೆ. ಆನಂದ, ಗೋತಮ ಭಗವಾನರಿಗೂ ಧಮ್ಮಕ್ಕೂ, ಭಿಕ್ಷು ಸಂಘಕ್ಕೂ ಶರಣ ಹೋಗುತ್ತೇನೆ. ಶರಣು ಹೋಗಿರುವ ನನ್ನನ್ನು ಪ್ರಾಣವಿರುವ ವರೆಗೂ ಪೂಜ್ಯ ಆನಂದನು ಉಪಾಸಕನನ್ನಾಗಿ ಸ್ವೀಕರಿಸಬೇಕು.“

ಇಲ್ಲಿಗೆ ಶುಭ ಸುತ್ತ ಮುಗಿಯಿತು.

ಟಿಪ್ಪಣಿಗಳು [3]