ಹೀಗೆ ಕೇಳಿದ್ದೇನೆ: ಒಮ್ಮೆ ಭಗವಾನರು ಕೋಸಲ ದೇಶದಲ್ಲಿ ಐನೂರು ಭಿಕ್ಷುಗಳ ದೊಡ್ಡ ಸಮೂಹದೊಂದಿಗೆ ಸಂಚರಿಸುತ್ತಾ ಮನಸಾಕಟ ಎಂಬ ಬ್ರಾಹ್ಮಣ ಗ್ರಾಮಕ್ಕೆ ಬಂದರು. ಅಲ್ಲಿ ಆ ಗ್ರಾಮದ ಉತ್ತರ ದಿಕ್ಕಿನಲ್ಲಿದ್ದ ಅಚಿರವತಿ ಎಂಬ ನದಿಯ ದಂಡೆಯಲ್ಲಿದ್ದ ಮಾವಿನ ತೋಪಿನಲ್ಲಿ ತಂಗಿದ್ದರು.
ಆ ಸಮಯದಲ್ಲಿ ಮನಸಾಕಟ ಗ್ರಾಮದಲ್ಲಿ ಪ್ರಸಿದ್ಧರೂ ಶ್ರೀಮಂತರೂ ಆದ ಅನೇಕ ಬ್ರಾಹ್ಮಣರು ವಾಸಿಸುತ್ತಿದ್ದರು. ಯಾರು ಯಾರೆಂದರೆ- ಚಂಕೀ ಬ್ರಾಹ್ಮಣ, ತಾರುಕ್ಖ ಬ್ರಾಹ್ಮಣ, ಪೋಕ್ಖರಸಾತಿ ಬ್ರಾಹ್ಮಣ, ಜಾಣುಸೋಣಿ ಬ್ರಾಹ್ಮಣ, ತೋದೆಯ್ಯ ಬ್ರಾಹ್ಮಣ ಮೊದಲಾದವರು.
ವಾಸೆಟ್ಠ ಮತ್ತು ಭಾರದ್ವಾಜ ಎಂಬ ಯುವಕರ ನಡುವೆ ಒಂದು ಚರ್ಚೆ ಹುಟ್ಟಿಕೊಂಡಿತು. ಅವರು ವಾಯು ಸೇವನೆಗಾಗಿ ಸಂಚರಿಸುತ್ತಿದ್ದರು. ಆಲೋಚನೆಯಲ್ಲಿ ತೊಡಗಿದ್ದರು. ಯಾವುದು ಸರಿಯಾದ ಮಾರ್ಗ ತಪ್ಪು ಮಾರ್ಗ ಯಾವುದು ಎಂಬುದು ಅವರ ಚರ್ಚೆಯ ವಿಷಯವಾಗಿತ್ತು. ಯುವಕ ವಾಸೆಟ್ಠನು ಹೀಗೆ ಹೇಳಿದನು.
“ಇದೊಂದೇ ಋಜು ಮಾರ್ಗ. ಬ್ರಹ್ಮನ ಹತ್ತಿರಕ್ಕೆ ಕೊಂಡೊಯ್ಯ ಬಹುದಾದ ನೇರವಾದ ಮಾರ್ಗ ಇದೊಂದೇ. ಪೋಕ್ಖರಸಾತಿ ಬ್ರಾಹ್ಮಣನು ವಿವರಿಸಿರುವುದು ಇದನ್ನೇ. “ಯುವಕ ಭಾರದ್ವಾಜನು ಅದನ್ನೊಪ್ಪದೆ ಹೀಗೆ ಹೇಳಿದನು. “ನನ್ನದೇ ಋಜು ಮಾರ್ಗ, ಈ ಮಾರ್ಗದಲ್ಲಿ ಹೋದರೆ ಮಾತ್ರ ಬ್ರಹ್ಮನ ಹತ್ತಿರಕ್ಕೆ ಹೋಗಬಹುದು. ಬ್ರಹ್ಮನ ಹತ್ತಿರಕ್ಕೆ ಕೊಂಡೋಯ್ಯಬಹುದಾದ ಮಾರ್ಗ ಇದೊಂದೇ. ಇದನ್ನೇ ತಾರುಕ್ಖ ಬ್ರಾಹ್ಮಣನು ಹೇಳಿರುವುದು.” ವಾಸೆಟ್ಠನು ಭಾರದ್ವಾಜನನ್ನಾಗಲೀ ಭಾರದ್ವಾಜನು ವಾಸೆಟ್ಠನನ್ನಾಗಲೀ ಒಪ್ಪಿಸುವುದಕ್ಕೆ ಆಗಲಿಲ್ಲ.
ಆಗ ವಾಸೆಟ್ಠನು ಭಾರದ್ವಾಜನನ್ನು ಕುರಿತು “ಭಾರದ್ವಾಜ, ಶಾಕ್ಯ ಕುಲವನ್ನು ತೊರೆದು ಪಬ್ಬಜಿತರಾಗಿರುವ ಶಾಕ್ಯಪುತ್ರರಾದ ಸಮಣ ಗೋತಮರು ಮನಸಾಕಟ ಗ್ರಾಮದ ಉತ್ತರದಲ್ಲಿರುವ ಅಚಿರವತಿ ನದಿಯ ದಂಡೆಯಲ್ಲಿರುವ ಆಮ್ರ ವನದಲ್ಲಿ ತಂಗಿದ್ದಾರೆ. ಭಗವಂತರಾದ ಗೋತಮರ ಕೀರ್ತಿಯು ಹೀಗೆ ಎಲ್ಲೆಲ್ಲೂ ಹರಡಿದೆ- ‘ಭಗವಂತರಾದ ಅವರು, ಅರಹಂತರು, ಸಮ್ಮಾಸಂಬುದ್ಧರು, ವಿಜ್ಜಾಚರಣ ಸಂಪನ್ನರು, ಸುಗತರು ಲೋಕಗಳನ್ನೆಲ್ಲಾ ತಿಳಿದವರು, ಜನರಿಗೆ ದಾರಿ ತೋರಿಸುವವರಲ್ಲಿ ಅದ್ವಿತೀಯರು, ದೇವಮಾನವರಲ್ಲಿ ಶ್ರೇಷ್ಠರು, ಬುದ್ಧರು, ಭಗವಾನರು.’ ಗೆಳೆಯ ಭಾರದ್ವಾಜ, ಅವರಲ್ಲಿಗೆ ಹೋಗೋಣ. ಹೋಗಿ ಅವರನ್ನು ಈ ಸಮಸ್ಯೆಯ ಬಗೆಗೆ ಕೇಳೋಣ. ಸಮಣ ಗೋತಮರು ಹೇಳಿದುದನ್ನು ಒಪ್ಪಿ ಕೊಳ್ಳೋಣ.” ಎಂದು ಹೇಳಿದನು.
“ಹಾಗೇಯೇ ಆಗಲಿ, ಗೆಳೆಯ” ಎಂದು ಭಾರದ್ವಾಜನು ವಾಸೆಟ್ಠನು ಹೇಳಿದುದಕ್ಕೆ ಒಪ್ಪಿಗೆ ಕೊಟ್ಟನು.
ಮಾರ್ಗ ಮತ್ತು ಮಾರ್ಗವಲ್ಲದರ ಬಗ್ಗೆ
ಆಮೇಲೆ ಯುವಕರಾದ ವಾಸೆಟ್ಠ ಭಾರದ್ವಾಜರು ಭಗವಾನರ ಬಳಿಗೆ ಹೋದರು. ಹೋಗಿ ಭಗವಾನರಿಗೆ ಕುಶಲ ಪ್ರಶ್ನೆ ಮಾಡಿ ಪ್ರಣಾಮ ಸಲ್ಲಿಸಿದರು. ಒಂದು ಕಡೆ ಕುಳಿತುಕೊಂಡರು. ಆಮೇಲೆ ವಾಸೆಟ್ಠನು ಭಗವಾನರನ್ನು ಕುರಿತು ಹೀಗೆಂದನು: “ಗೋತಮರೇ, ನಾವಿಬ್ಬರೂ ವಾಯು ಸೇವನೆಗಾಗಿ ಅಡ್ಡಾಡುತ್ತಿದ್ದಾಗ ಗಂಭೀರವಾದ ವಿಚಾರಗಳ ಚರ್ಚೆಯಲ್ಲಿ ತೊಡಗಿದೆವು. ‘ಸರಿಯಾದ ಮಾರ್ಗ ಯಾವುದು ಮತ್ತು ತಪ್ಪಾದ ಮಾರ್ಗ ಯಾವುದು.’ ಎಂಬ ಚರ್ಚೆಯಲ್ಲಿ ನಿರತರಾದೆವು. ನಾನು ಹೇಳಿದೆ: ‘ನನ್ನದೊಂದೇ ಋಜುಮಾರ್ಗ, ಬ್ರಹ್ಮನ ಹತ್ತಿರಕ್ಕೆ ಕೊಂಡೊಯ್ಯಬಹುದಾದ ಮಾರ್ಗ ನಾನು ಹೇಳುವುದೊಂದೇ ಆಗಿದೆ. ಪೋಕ್ಖರಸಾತಿ ಬ್ರಾಹ್ಮಣನು ಇದನ್ನೇ ಹೇಳುತ್ತಾನೆ.’ ಯುವಕ ಭಾರದ್ವಾಜನು ನನ್ನ ಮಾತನ್ನೊಪ್ಪದೆ ‘ನಾನು ಹೇಳುವುದು ಮಾತ್ರ ಋಜುಮಾರ್ಗ. ನಾನು ತಿಳಿಸುವ ಮಾರ್ಗ ಮಾತ್ರ ಬ್ರಹ್ಮನ ಹತ್ತಿರಕ್ಕೆ ಕೊಂಡೊಯ್ಯುತ್ತದೆ. ತಾರುಕ್ಖ ಬ್ರಾಹಣನೂ ಇದನ್ನೇ ಹೇಳುತ್ತಾನೆ’ ಎಂದು ಹೇಳಿದನು! ಗೋತಮ, ಹೀಗೆ ನಮ್ಮಲ್ಲಿ ಭಿನ್ನಾಭಿಪ್ರಾಯವಿದೆ. ವಿವಾದ ಹುಟ್ಟುಕೊಂಡಿದೆ. ಅನೇಕ ವಿಧದಲ್ಲಿ ವಾದ ಮಾಡುತ್ತಿದ್ದೇವೆ.”
“ವಾಸೆಟ್ಠ, ನೀನು ಹೀಗೆ ಹೇಳುತ್ತಿದ್ದೀಯಷ್ಟೆ- ‘ನನ್ನದೊಂದೇ ಋಜು ಮಾರ್ಗ; ನಾನು ತಿಳಿಸುವ ಮಾರ್ಗ ಮಾತ್ರ ಬ್ರಹ್ಮನ ಹತ್ತಿರಕ್ಕೆ ಕೊಂಡೊಯ್ಯತ್ತದೆ. ಪೋಕ್ಖರಸಾತಿ ಬ್ರಾಹ್ಮಣನು ಇದನ್ನೇ ಹೇಳುತ್ತಾನೆ.’ ಯುವಕ ಭಾರದ್ವಾಜನೂ ‘ನಾನು ಹೇಳುವುದೊಂದೇ ಋಜುಮಾರ್ಗ, ನಾನು ವಿವರಿಸುವ ಮಾರ್ಗವೊಂದು ಮಾತ್ರ ಬ್ರಹ್ಮನಲ್ಲಿಗೆ ಕೊಂಡೊಯ್ಯುತ್ತದೆ. ತಾರುಕ್ಖ ಬ್ರಾಹ್ಮಣನೂ ಇದನ್ನೇ ಹೇಳುತ್ತಾನೆ.’ ಎನ್ನುತ್ತಿದ್ದಾನೆ. ಆದುದರಿಂದ ವಾಸೆಟ್ಠ, ನಿಮ್ಮ ಭಿನ್ನಾಭಿಪ್ರಾಯ ಎಲ್ಲಿದೆ, ವಿವಾದ ಎಲ್ಲಿದೆ, ನಾನಾ ವಾದಗಳು ಎಲ್ಲಿವೆ?”
“ಗೋತಮರೆ, ಸರಿಯಾದ ಮಾರ್ಗ ಮತ್ತು ತಪ್ಪಾದ ಮಾರ್ಗ ಇವುಗಳ ಬಗೆಗೆ ನಮ್ಮ ವಿವಾದವಿದೆ. ಅದ್ಧರಿಯಾ ಬ್ರಾಹ್ಮಣ, ತಿತ್ತಿರಿಯಾ ಬ್ರಾಹ್ಮಣ, ಛಂದೋಕ ಬ್ರಾಹ್ಮಣ, ಬಹ್ಯಾರಿಜ್ಝ ಬ್ರಾಹ್ಮಣ ಇವರೆಲ್ಲರೂ ನಾನಾ ವಿಧದ ಮಾರ್ಗಗಳನ್ನು ವಿವರಿಸುತ್ತಾರೆ. ಹಾಗಾದರೆ ಅವೆಲ್ಲವೂ ಬ್ರಹ್ಮನ ಹತ್ತಿರಕ್ಕೆ ಕೊಂಡೊಯ್ಯುವ ಮಾರ್ಗಗಳೇ ಆಗಿವೆಯೇ? ಗ್ರಾಮಗಳಿಗೂ, ಪಟ್ಟಣಗಳಿಗೂ ದೂರದ ದೇಶಗಳಿಂದ ಬರಲು ನಾನಾ ಮಾರ್ಗಗಳಿರುತ್ತವೆ. ಇವುಗಳೆಲ್ಲವೂ ಗ್ರಾಮ ಪಟ್ಟಣಗಳಿಗೆ ಕೊಂಡೊಯ್ಯುತ್ತವೆ. ಇದರಂತೆಯೇ ಗೋತಮ, ಅದ್ಧರಿಯಾ ಬ್ರಾಹ್ಮಣ, ತಿತ್ತಿರಿಯಾ ಬ್ರಾಹ್ಮಣ, ಛಂದೋಕ ಬ್ರಾಹ್ಮಣ ಜಹ್ಯಾರಿಜ್ಝ ಬ್ರಾಹ್ಮಣರು ವಿವರಿಸುವ ನಾನಾ ಮಾರ್ಗಗಳೆಲ್ಲವೂ ಬ್ರಹ್ಮನ ಬಳಿಗೆ ಕೊಂಡೊಯ್ಯುತ್ತವೆಯೇ?”
ಬ್ರಾಹ್ಮಣ ಯುವಕ ವಾಸೆಟ್ಠನ ಅನುಸರಣೆ
“ವಾಸೆಟ್ಠ, ಕೊಂಡೊಯ್ಯುತ್ತವೆ ಎಂದು ಹೇಳುತ್ತೀಯಾ?” “ಕೊಂಡೊಯ್ಯುತ್ತವೇ ಎಂದು ಹೇಳುತ್ತೇನೆ.”
“ಖಂಡಿತವಾಗಿಯೂ ಕೊಂಡೊಯ್ಯುತ್ತವೆ ಎಂದು ಹೇಳುತ್ತೀಯಾ?”
“ಖಂಡಿತವಾಗಿಯೂ ಕೊಂಡೊಯ್ಯುತ್ತವೆ ಎಂದು ಹೇಳುತ್ತೇನೆ, ಗೋತಮ.”
“ವಾಸೆಟ್ಠ, ಮೂರು ವೇದಗಳಲ್ಲಿ ಪಂಡಿತರಾದವರಲ್ಲಿ ಯಾವನಾದರೂ ಒಬ್ಬ ಬ್ರಾಹ್ಮಣ, ಬ್ರಹ್ಮನನ್ನು ತನ್ನ ಕಣ್ಣಿನಿಂದಲೇ ನೋಡಿದಾನೆಯೇ?”
“ಖಂಡಿತವಾಗಿಯೂ ಇಲ್ಲ, ಗೋತಮ.”
“ವಾಸೆಟ್ಠ, ಮೂರು ವೇದಗಳನ್ನು ತಿಳಿದ ಬ್ರಾಹ್ಮಣರಲ್ಲಿ ಆಚಾರ್ಯರಲ್ಲಿ ಯಾರಾದರೋಬ್ಬನು ಬ್ರಹ್ಮನನ್ನು ನೋಡಿದ್ದಾನೆಯೇ? “ಇಲ್ಲ, ಗೋತಮರೆ.”
“ಹೋಗಲಿ, ವಾಸೆಟ್ಠ, ಮೂರು ವೇದಗಳನ್ನು ತಿಳಿದ ಬ್ರಾಹ್ಮಣರಲ್ಲಿ ಆಚಾರ್ಯ-ಪ್ರಾಚಾರ್ಯಲ್ಲೊಬ್ಬನು ಬ್ರಹ್ಮನನ್ನು ತನ್ನಕಣ್ಣಿನಿಂದ ನೋಡಿದ್ದಾನೆಯೇ?” “ಇಲ್ಲ, ಗೋತಮ”
“ವಾಸೆಟ್ಠ, ಹಿಂದಿನ ಕಾಲದ ಋಷಿಗಳಾಗಲೀ ಮಂತ್ರದಾತಾರರಾಗಲೀ ಮಂತ್ರಗಳನ್ನು ರಚಿಸಿದವರಾಗಲೀ ಮೂರು ವೇದಗಳನ್ನು ಅರಿತ ಬ್ರಾಹಣರಾಗಲೀ, ಹಿಂದಿನ ಋಷಿಗಳಾದ ಅಟ್ಠಕ, ವಾಮಕ, ನಾಮದೇವ, ವೆಸ್ವಾಮಿತ್ತ, ಯಮತಗ್ಗಿ, ಅಂಗೀರಸ, ಭಾರದ್ವಾಜ, ವಾಸಿಟ್ಠ, ಕಸ್ಸಪ, ಭಗು ಮುಂತಾದವರಂತೆಯೇ ಮೂರು ವೇದಗಳನ್ನು ತಿಳಿದು ಗಾಯನ ಮಾಡುವವರೂ ಮಂತ್ರಗಳನ್ನು ಹೇಳುವವರೂ ವಾಚಿಸುವವರೂ ಪುನ: ಪುನ: ಪಠಿಸುವವರೂ ಪುನ: ಪುನ: ವಾಚಿಸುವವರೂ ಆದ ಇಂದಿನ ಬ್ರಾಹ್ಮಣರಾಗಲೀ ‘ ಬ್ರಹ್ಮನು ಎಲ್ಲಿದ್ದಾನೆ ಎಲ್ಲಿಂದ ಬಂದಿದ್ದಾನೆ, ಹೇಗಿದ್ದಾನೆ ಎಂಬುದು ನಮಗೆ ಗೊತ್ತಿದೆ, ನಾವು ಅವನನ್ನು ನೋಡಿದ್ದೇವೆ’ ಎಂದು ಹೇಳಿರುವರೆ?”
“ಹಾಗೆ ಹೇಳಿಲ್ಲ. ಗೋತಮರೆ”
“ವಾಸೆಟ್ಠ, ಹಾಗಾದರೆ ಮೂರು ವೇದಗಳನ್ನು ಬ್ರಾಹ್ಮಣರಲ್ಲಿ ಯಾವನಾದರೊಬ್ಬ ಸಾಧಾರಣ ಬ್ರಾಹ್ಮಣನಾಗಲೀ ಅವರ ಯಾರಾದರೊಬ್ಬ ಆಚಾರ್ಯನಾಗಲೀ, ಅವರ ಯಾರೊದರೊಬ್ಬ ಆಚಾರ್ಯರ ಪ್ರಾಚಾರ್ಯನಾಗಲೀ ಅಥವಾ ಅವರ ಹಿಂದಿನ ಏಳು ತಲೆಯವರಲ್ಲಿ ಯಾರೊಬ್ಬರಾಗಲೀ ಬ್ರಹ್ಮನನ್ನು ತಮ್ಮ ಕಣ್ಣಿನಿಂದ ನೋಡಿಲ್ಲ. ಹಿಂದಿನ ಕಾಲದ ಋಷಿಗಳಾಗಲೀ, ಮಂತ್ರಗಳನ್ನು ರಚಿಸಿದವರಾಗಲೀ, ಮಂತ್ರ ಪ್ರವರ್ತಕರಾಗಲೀ, ಹಿಂದಿನ ಋಷಿಗಳಾದ ಅಟ್ಠಿಕ, ವಾಮಕ, ನಾಮದೇವ, ವೆಸ್ಸಾಮಿತ್ತ, ಯಮತಗ್ಗಿ, ಅಂಗೀರಸ, ಭಾರದ್ವಾಜ, ವಾಸೆಟ್ಠ, ಕಸ್ಸಪ, ಭಗು ಮುಂತಾದವರೆಂತೆಯೇ ಗಾಯನ ಮಾಡುವವರೂ ವಾಚಿಸುವವರೂ ಪುನಃ ಪುನಃ ವಾಚಿಸುವವರೂ ಪುನಃ ಪುನಃ ಪಠಿಸುವವರೂ ಇಂದಿನ ಬ್ರಾಹ್ಮಣರಾಗಲೀ ‘ಬ್ರಹ್ಮ ಎಲ್ಲಿದ್ದಾನೆ ಎಲ್ಲಿಂದ ಬಂದಿದ್ದಾನೆ ಹೇಗಿದ್ದಾನೆ ಎಂಬುದು ನಮಗೆ ಗೊತ್ತಿದೆ. ಅವನನ್ನು ನಾವು ನೋಡಿದ್ದೇವೆ’ ಎಂದು ಹೇಳಿಲ್ಲ. ಆದರೂ ಮೂರು ವೇದಗಳನ್ನು ತಿಳಿದ ಬ್ರಾಹ್ಮಣರು ‘ಯಾವುದನ್ನು ತಿಳಿದಿಲ್ಲವೋ ಯಾವುದನ್ನು ನೋಡಿಲ್ಲವೋ ಆ ಬ್ರಹ್ಮನ ಬಳಿಗೆ ಕೊಂಡೊಯ್ಯುವ ಮಾರ್ಗವು ನಮಗೆ ಗೊತ್ತಿದೆ. ಅದೊಂದೇ ಋಜು ಮಾರ್ಗ. ಅದರಲ್ಲಿ ಹೋದರೆ ಬ್ರಹ್ಮನ ಬಳಿಗೆ ಹೋಗಬಹುದು’ ಎಂದು ಹೇಳುತ್ತಾರಲ್ಲವೇ?
“ವಾಸೆಟ್ಠ, ಮೂರು ವೇದಗಳನ್ನು ತಿಳಿದಿರುವ ಬ್ರಾಹಣರು ನುಡಿಯುವ ಈ ಮಾತುಗಳು ಮೌಢ್ಯವೆಂದು ನೀನು ತಿಳಿದಿದ್ದೀಯಷ್ಟೆ?”
“ಹೌದು, ಗೋತಮರೆ, ಮೂರು ವೇದ ಕಲಿತಿರುವ ಬ್ರಾಹ್ಮಣರು ನುಡಿಯುವ ಈ ಮಾತುಗಳು ಮೂರ್ಖರ ಮಾತುಗಳೇ ಆಗಿದೆ.”
“ವಾಸೆಟ್ಠ,ಸರಿಯಾಗಿಹೇಳಿದೆ.‘ಯಾವುದನ್ನು ಅರಿತಿಲ್ಲವೋ ಯಾವುದನ್ನು ನೋಡಿಲ್ಲವೋ ಅಂಥವನ ಬಳಿಗೆ ಹೋಗುವ ಮಾರ್ಗವನ್ನು ತಿಳಿಸುತ್ತೇವೆ’ ಎಂದು ಬ್ರಾಹ್ಮಣರು ಹೇಳುತ್ತಾರೆ. ‘ ಇದೊಂದೇ ಋಜು ಮಾರ್ಗ. ಈ ಮಾರ್ಗದಲ್ಲಿ ನಡೆಯುವುದರಿಂದ ಬ್ರಹ್ಮನ ಬಳಿಗೆ ಹೋಗಬಹುದು’ ಎಂಬ ಮಾತು ಸರಿಯಾದುದೇ ಇಲ್ಲ.
“ವಾಸೆಟ್ಠ, ಬರೀ ಕುರುಡರ ಸಾಲಿನಲ್ಲಿ ಮೊದಲಲ್ಲಿರುವವನೇ ಆಗಲಿ, ಮಧ್ಯದಲ್ಲಿರುವವನೇ ಆಗಲಿ, ಕೊನೆಯಲ್ಲಿರುವವನೇ ಆಗಲಿ, ಏನನ್ನು ನೋಡಲಾರ. ಈ ಕುರುಡರ ಸಾಲಿನಲ್ಲಿರುವಂತೆ ಮೂರು ವೇದಗಳನ್ನು ಕಲಿತ ಬ್ರಾಹ್ಮಣರ ಮೊದಲಿಗನಾಗಲೀ, ಮಧ್ಯದವನಾಗಲೀ, ಕೊನೆಯವನಾಗಲೀ ಏನನ್ನೂ ಕಾಣಲಾರ. ಆದುದರಿಂದ ಮೂರು ವೇದಗಳನ್ನು ಅರಿತಿರುವ ಬ್ರಾಹ್ಮಣರ ಮಾತುಗಳು ಹಾಸ್ಯಾಸ್ಪದವಾದಂಥವು, ಅರ್ಥವಿಲ್ಲದವು, ಹುರುಳಿಲ್ಲದವು, ತುಚ್ಛವಾದುವೇ ಆಗಿವೆ.
“ಇತರರಂತೆ ತ್ರಿವೇದಿ ಬ್ರಾಹ್ಮಣರೂ ಚಂದ್ರ ಸೂರ್ಯರರನ್ನು ನೋಡುತ್ತಾರೆಯಷ್ಟೆ? ಅವರು ಚಂದ್ರ ಸೂರ್ಯರು ಹುಟ್ಟುವ ಅಥವಾ ಮುಳುಗುವ ಕಡೆ ತಿರುಗಿಕೊಂಡು ಅವರಿಗೆ ನಮಸ್ಕರಿಸಿ ಪ್ರಜ್ವಲಿಸುತ್ತಿರುವ ಅವರನ್ನು ಪ್ರಾರ್ಥಿಸುತ್ತಾರೆಯಷ್ಟೆ; ಸ್ತುತಿಸುತ್ತಾರೆಯಷ್ಟೆ, ಪೂಜಿಸುತ್ತಾರೆಯಷ್ಟೆ?”
“ನಿಜ, ಗೋತಮರೆ, ಇತರರಂತೆಯೇ ಮೂರು ವೇದಗಳನ್ನು ತಿಳಿದ ಬ್ರಾಹ್ಮಣರು ಚಂದ್ರ ಸೂರ್ಯರನ್ನು ನೋಡುತ್ತಾರೆ. ಚಂದ್ರ ಸೂರ್ಯರು ಹುಟ್ಟುವ ಕಡೆ ಮುಖ ಮಾಡಿಕೊಂಡು ಅವರಿಗೆ ನಮಸ್ಕರಿಸಿ ಪ್ರಜ್ವಲಿಸುತ್ತಿರುವ ಅವರನ್ನು ಪ್ರಾರ್ಥಿಸುತ್ತಾರೆ, ಸ್ತುತಿಸುತ್ತಾರೆ, ಪೂಜಿಸುತ್ತಾರೆ.”
“ವಾಸೆಟ್ಠ, ಇತರ ಜನರಂತೆ ಚಂದ್ರ ಸೂರ್ಯರನ್ನು ನೋಡುವ ಬ್ರಾಹ್ಮಣರು ಅವರು ಹುಟ್ಟುವ ಅಥವಾ ಮುಳುಗುವ ಕಡೆ ಮುಖ ಮಾಡಿಕೊಂಡು ಪ್ರಜ್ವಲಿಸುತ್ತಿರುವ ಅವರಿಗೆ ನಮಸ್ಕಾರ ಮಾಡಿಕೊಂಡು ಪ್ರಾರ್ಥಿಸುತ್ತಾ ಸ್ತುತಿಸುತ್ತಾ ಪೂಜಿಸುತ್ತಾ ‘ ಚಂದ್ರ ಸೂರ್ಯರ ಬಳಿಗೆ ಹೋಗುವ ಮಾರ್ಗವು ಇದೊಂದು ಮಾತ್ರ. ಇದು ಋಜು ಮಾರ್ಗ; ಇದು ಚಂದ್ರ ಸೂರ್ಯರ ಬಳಿಗೆ ಕೊಂಡೊಯ್ಯವ ಮಾರ್ಗ’ ಎಂದು ಹೇಳುವುದನ್ನು ಕೇಳಿರುವಿಯಾ?”
“ಇಲ್ಲ, ಗೋತಮರೆ”
“ಆದುದರಿಂದ ವಾಸೆಟ್ಠ, ಇತರ ಜನರಂತೆ ಚಂದ್ರ ಸೂರ್ಯರನ್ನು ನೋಡುವ ಅವರು ಹುಟ್ಟುವ ಅಥವಾ ಮುಳುಗವ ಕಡೆ ಮುಖ ಮಾಡಿಕೊಂಡು ಅವರಿಗೆ ನಮಸ್ಕರಿಸಿ ಪ್ರಾರ್ಥಿಸುವ ಸ್ತುತಿಸುವ ಪೂಜಿಸುವ ತ್ರಿವೇದಿ ಬ್ರಾಹ್ಮಣರು ‘ ಇದು ಚಂದ್ರ ಸೂರ್ಯರ ಬಳಿಗೆ ಕೊಂಡೊಯ್ಯವ ಮಾರ್ಗ,ಈ ಮಾರ್ಗ ಋಜುವಾದುದು. ಈ ಮಾರ್ಗದಲ್ಲಿ ಹೋದರೆ ಚಂದ್ರ ಸೂರ್ಯರ ಬಳಿಗೆ ಹೋಗಬಹುದು’ ಎಂದು ಹೇಳುವುದಕ್ಕಾಗುವುದಿಲ್ಲ.
“ಹೀಗೆಯೇ, ತಮ್ಮ ಕಣ್ಣಿನಿಂದಲೇ ಬ್ರಹ್ಮನನ್ನು ನೋಡಿಲ್ಲದ ಮೂರು ವೇದಗಳನ್ನು ಬಲ್ಲ ಬಾಹ್ಮಣರಾಗಲೀ, ಅವರ ಆಚಾರ್ಯರಾಗಲೀ, ಅವರ ಆಚರ್ಯರ ಪ್ರಾಚಾರ್ಯರಿಗಲೀ, ಮೂರು ವೇದಗಳನ್ನು ತಿಳಿದವರ, ಹಿಂದಿನ ಏಳು ತಲೆಮಾರಿನವರಾಗಲೀ, ಹಿಂದಿನ ಕಾಲದ ಋಷಿಗಳಾಗಲೀ, ಮಂತ್ರವನ್ನು ರಚಿಸಿದವರಾಗಲೀ, ಮಂತ್ರ ಪ್ರವರ್ತಕರಾಗಲೀ, ಹಿಂದಿನ ಅಟ್ಠಕ, ವಾಮಕ, ನಾಮದೇವ, ವೆಸ್ಸಾಮಿತ್ತ, ಯಮತಗ್ಗಿ, ಅಂಗೀರಸ, ಭಾರದ್ವಾಜ, ಕಸ್ಸಪ, ಭುಗುಗಳಂತೆಯೆ ಗಾಯನ ಮಾಡುವವರೂ ವಾಚಿಸುವವರೂ ಪುನಃ ಪುನಃ ಪಠಿಸುವರೂ ಮೂರು ವೇದಗಳನ್ನು ತಿಳಿದವರು ಆದ ಇಂದಿನ ಬ್ರಾಹ್ಮಣರಾಗಲೀ; ‘ಬ್ರಹ್ಮನು ಎಲ್ಲಿದ್ದಾನೆ, ಎಲ್ಲಿಂದ ಬಂದಿದ್ದಾನೆ ಮತ್ತು ಹೇಗಿದ್ದಾನೆ ಎಂಬುದು ನಮಗೆ ಗೊತ್ತಿದೆ, ಅವನನ್ನು ನೋಡಿದ್ದೇವೆ’ ಎಂದು ಹೇಳುವುದಿಲ್ಲ. ಆದರೂ ಮೂರು ವೇದಗಳನ್ನು ಅರಿತ ಬ್ರಾಹ್ಮಣರು ಹೀಗೆ ಹೇಳುತ್ತಾರೆ: ‘ಯಾರನ್ನು ಅರಿಯೆವೋ ಯಾರನ್ನು ನೋಡಿಲ್ಲವೋ ಅವರ ಬಳಿಗೆ ಹೊಗುವ ಮಾರ್ಗವನ್ನು ತಿಳಿಸಬಲ್ಲೆವು- ಇದು ಋಜು ಮಾರ್ಗ, ಇದು ಬ್ರಹ್ಮನ ಬಳಿಗೆ ಕೊಂಡೊಯ್ಯುತ್ತವೆ. ಈ ಮಾರ್ಗದಲ್ಲಿ ಹೋದಾಗ ಬ್ರಹ್ಮನ ಬಳಿಗೆ ಹೊಗಬಹುದು.”
“ವಾಸೆಟ್ಠ, ತ್ರಿವೇದಿ ಬ್ರಾಹ್ಮಣರು ನುಡಿಯುವ ಇಂಥ ಮಾತುಗಳು ಮೂರ್ಖರ ಮಾತುಗಳೇ ಆಗಿವೆಯಷ್ಟೆ?”
“ಹೌದು, ಗೋತಮ, ತ್ರಿವೇದಿ ಬ್ರಾಹ್ಮಣರು ನುಡಿಯುವ ಇಂಥ ಮಾತುಗಳು ಮೂರ್ಖರ ಮಾತುಗಳೇ ಆಗಿವೆ.”
“ಸರಿಯಾಗಿ ಹೇಳಿದೆ ವಾಸೆಟ್ಠ, ‘ಯಾರನ್ನು ಅರಿತಿಲ್ಲವೋ ಯಾರನ್ನು ನೊಡಿಲ್ಲವೋ ಅಂಥವನ ಬಳಿಗೆ ಹೋಗುವ ಮಾರ್ಗವನ್ನು ತಿಳಿಸುತ್ತೇವೆ’ ಎಂದು ತ್ರಿವೇದಿ ಬ್ರಾಹ್ಮಣರು ಹೇಳುತ್ತಾರೆ. ‘ಇದೊಂದೇ ಋಜುಮಾರ್ಗ, ಈ ಮಾರ್ಗದಲ್ಲಿ ನಡೆಯುವುದರಿಂದ ಮಾತ್ರ ಬ್ರಹ್ಮನ ಬಳಿಗೆ ಹೋಗಬಹುದು’ ಎಂಬ ಮಾತು ಸರಿಯಾದುದಲ್ಲ.”
ಜನಪದ ಕಲ್ಯಾಣಿಯ ಉಪಮೆ
“ವಾಸೆಟ್ಠ, ಒಬ್ಬನು ಈ ಜನಪದದಲ್ಲಿರುವ ಜನಪದ ಕಲ್ಯಾಣಿಯ ಮೇಲೆ ಬಯಕೆಯಾಗಿದೆ. ಅವಳನ್ನು ಕಾಮಿಸುತ್ತಿದ್ದೇನೆ’ ಎಂದು ಹೇಳುತ್ತಾನೆನ್ನು. ಆಗ ಇತರರು ಹೀಗೆ ಕೇಳಬಹುದು: ‘ ಅಯ್ಯಾ ಮನುಷ್ಯ, ನೀನು ಯಾವ ಜನಪದ ಕಲ್ಯಾಣಿಯ ಮೇಲೆ ಇಚ್ಛೆಪಟ್ಟು ಕಾಮಿಸುತ್ತಿರುವೆಯೋ ಅವಳು ಕ್ಷತ್ರಿಯಳೋ, ಬ್ರಾಹ್ಮಣಿಯಳೋ, ವೈಶ್ಯಳೋ ಅಥವಾ ಶೂದ್ರಳೋ ಎಂಬುದು ನಿನಗೆ ಗೊತ್ತಿದೆಯೆ?’
‘ನನಗೆ ಗೊತ್ತಿಲ್ಲ’ ಎಂದು ಅವನು ಹೇಳುತ್ತಾನೆನ್ನು.
“ಆಗ ಅವರು ಹೀಗೆ ಹೇಳಬಹುದು-‘ಅಯ್ಯಾ ಮನುಷ್ಯ, ನೀನು ಬಯಸಿ ಕಾಮಿಸುತ್ತಿರುವ ಜನಪದ ಕಲ್ಯಾಣಿಯು ಯಾವ ಹೆಸರಿನವಳು ಯಾವ ಗೋತ್ರದವಳು ಅವಳು ಎತ್ತರವಾಗಿದ್ದಾಳೆಯೇ, ಮಧ್ಯ ಪ್ರಮಾಣದವಳೋ, ಕುಳ್ಳಾಗಿದ್ದಾಳೆಯೋ, ಹಳ್ಳಿಯವಳೋ, ಪಟ್ಟಣದವಳೋ, ನಗರದವಳೋ ನಿನಗೆ ತಿಳಿದಿದೆಯೇ?”
“ಇದಕ್ಕೆ ಅವನು ‘ಇಲ್ಲ’ ಎಂದು ಹೇಳುತ್ತಾನೆನ್ನು.
“ಆಗ ಇತರರು ‘ಅಯ್ಯಾ ಮನುಷ್ಯ, ಯಾರು ನಿನಗೆ ಗೊತ್ತಿಲ್ಲವೋ ಯಾರನ್ನು ನೀನು ನೋಡಿಲ್ಲವೋ ಆಕೆಯನ್ನು ಬಯಸಿ ಕಾಮಿಸುತ್ತಿರುವೆಯಾ?’ ಅವನು ‘ಹೌದು’ ಎನ್ನುತ್ತಾನೆನ್ನು.
“ವಾಸೆಟ್ಟ, ಹೀಗೆ ಹೇಳುವವನ ಮಾತುಗಳು ಮೂರ್ಖನ ಮಾತುಗಳಲ್ಲವೇ?’
“ಹೌದು, ಗೋತಮ, ಹಾಗೆ ಹೇಳುವವನು ಮೂರ್ಖನ ಮಾತುಗಳೇ ಆಗಿವೆ.”
“ಇದರಂತೆಯೇ, ವಾಸೆಟ್ಠ, ಮೂರು ವೇದಗಳನ್ನು ಅರಿತಿರುವ ಬ್ರಾಹ್ಮಣರಾಗಲೀ ಅವರ ಆಚಾರ್ಯರಾಗಲೀ, ಅವರ ಆಚಾರ ಪ್ರಾಚಾರ್ಯ ರಾಗಲೀ, ಅವರ ಹಿಂದಿನ ಏಳು ತಲೆಮಾರಿನವರಾಗಲೀ, ಬ್ರಹ್ಮನನ್ನು ತಮ್ಮ ಕಣ್ಣಿನಿಂದ ನೋಡಿಲ್ಲ. ಹಿಂದಿನ ಕಾಲದ ಋಷಿಗಳಾಗಲೀ ಮಂತ್ರಗಳನ್ನು ರಚಿಸದವರಾಗಲೀ, ಮಂತ್ರ ಪ್ರವರ್ತಕರಾಗಲೀ ಅಥವಾ ಅಟ್ಟಕ, ವಾಮಕ, ವಾಮದೇವ, ವೆಸ್ಸಾಮಿತ್ತ, ಯಮತಗ್ಗಿ, ಅಂಗಿರಸ, ಭಾರದ್ವಾಜ, ವೇಸಟ್ಠ, ಕಸ್ಸಪ, ಭಗು ಮುಂತಾದ ಪೂರ್ವದ ಋಷಿಗಳಂತೆಯೇ, ಮಂತ್ರಗಳನ್ನು ಗಾಯನ ಮಾಡುವ ವಾಚನ ಮಾಡುವ ಪುನ: ಪುನ: ಪಠಿಸುವ ಪುನ: ಪುನ: ವಾಚನ ಮಾಡುವ ಇಂದಿನ ಬ್ರಾಹ್ಮಣರಾಗಲಿ ಹೀಗೇ ಹೇಳುವುದಿಲ್ಲ. ‘ ಬ್ರಹ್ಮ ಎಲ್ಲಿದ್ದಾನೆ? ಎಲ್ಲಿಂದ ಬಂದಿದ್ದಾನೆ ಹೇಗಿದ್ದಾನೆ ಎಂಬುದು ನಮಗೆ ಗೊತ್ತು, ನಾವು ಅವನನ್ನು ನೋಡಿದ್ದೇವೆ.’ ಆದರೂ ಆ ತ್ರಿವೇದಿ ಬ್ರಾಹ್ಮಣರು ‘ ಯಾರನ್ನು ನಾವು ತಿಳಿಯವೋ, ಯಾರನ್ನು ನಾವು ನೋಡಿಲ್ಲವೋ ಅವನ ಬಳಿಗೆ ಹೋಗುವ ಮಾರ್ಗವನ್ನು ತಿಳಿಸಬಲ್ಲೆವು. ಇದೊಂದೇ ಋಜುಮಾರ್ಗ. ಬ್ರಹ್ಮನ ಬಳಿಗೆ ಕೊಂಡೊಯ್ಯುವ ಮಾರ್ಗ ಇದೊಂದೇ. ಈ ಮಾರ್ಗದಲ್ಲಿ ನಡೆದರೆ ಬ್ರಹ್ಮನ ಬಳಿಗೆ ಹೊಗಬಹುದು ಎಂದು ಹೇಳುತ್ತಾರೆ.
“ವಾಸೆಟ್ಠ, ಮೂರು ವೇದಗಳನ್ನು ಅರಿತಿರುವ ಬ್ರಾಹ್ಮಣರ ಇಂಥ ಮಾತುಗಳು ಮೂರ್ಖರ ಮಾತುಗಳೆಂದು ನಿನಗೆ ತಿಳಿಯುವುದಷ್ಟೆ?” “ಹೌದು, ಗೋತಮ, ಮೂರು ವೇದಗಳನ್ನು ಅರಿತಿರುವ ಬ್ರಾಹ್ಮಣರ ಇಂಥ ಮಾತುಗಳು ಮೂರ್ಖರ ಮಾತುಗಳೇ ಆಗಿವೆ.“ “ಸರಿಯಾಗಿ ಹೇಳಿದೆ, ವಾಸೆಟ್ಠ, ‘ಯಾರನ್ನು ಅರಿತಿಲ್ಲವೊ, ಯಾರನ್ನು ನೋಡಿಲ್ಲವೋ ಅಂಥವನ ಬಳಿಗೆ ಹೋಗುವ ಮಾರ್ಗವನ್ನು ತಿಳಿಸುತ್ತೇವೆ’ ಎಂದು ಬ್ರಾಹ್ಮಣರು ಹೇಳುತ್ತಾರೆ. ‘ಇದೊಂದೇ ಋಜುಮಾರ್ಗ. ಈ ಮಾರ್ಗದಲ್ಲಿ ನಡೆಯುವುದರಿಂದ ಮಾತ್ರ ಬ್ರಹ್ಮನ ಬಳಿಗೆ ಹೊಗಬಹುದು’ ಎಂಬ ಅವರ ಮಾತುಗಳು ಸರಿಯಾದುದೇ ಅಲ್ಲ.”
ಏಣಿಯ ಉಪಮೆ
“ವಾಸೆಟ್ಠ, ನಾಲ್ಕು ದೊಡ್ಡ ಬೀದಿಗಳು ಸೇರುವ ಕಡೆಯಲ್ಲಿ ಒಬ್ಬನು ಒಂದು ಮಹಡಿಗೆ ಹೋಗಲು ಮೆಟ್ಟಲುಗಳನ್ನು ಕಟ್ಟಿಸುತ್ತಿದ್ದಾನೆ ಎನ್ನು. ಆಗ ಇನ್ನೊಬ್ಬನು ಅವನನ್ನು ಹೀಗೆ ಕೇಳಬಹುದು. ‘ ಆಯ್ಯಾ ಮನುಷ್ಯ, ಯಾವ ಕಡೆ ಇರುವ ಮಹಡಿ ಮನೆಗೆ ಅಂದರೆ ಪೂರ್ವದಲ್ಲಿರುವ ದಕ್ಷಿಣದಲ್ಲಿರುವ ಪಶ್ಚಿಮದಲ್ಲಿರುವ ಅಥವಾ ಉತ್ತರದಲ್ಲಿರುವ ಮನೆಗೆ- ನೀನು ಮೆಟ್ಟಲುಗಳನ್ನು ಕಟ್ಟಿಸುತ್ತಿದ್ದೀಯೆ ಎಂಬುದು ನಿನಗೆ ಗೊತ್ತಿದೆಯೇ?’ ಇದಕ್ಕೆ ಅವನು ‘ಇಲ್ಲ’ ಎಂದು ಹೇಳುತ್ತಾನೆನ್ನು. ಆಗ ಅವನು ಹೀಗೆ ಕೇಳಬಹುದು- ‘ ಅಯ್ಯಾ ಮನುಷ್ಯ, ಯಾವ ಪ್ರಾಸಾದಕ್ಕೆ ಹತ್ತಿ ಹೋಗಲು ನೀನು ಮೆಟ್ಟಲುಗಳನ್ನು ಕಟ್ಟಿಸುತ್ತಿದ್ದೀಯೋ ಅದನ್ನು ನೀನು ನೋಡಿಲ್ಲವೆನ್ನು.’ ಅದಕ್ಕೆ ಅವನು ‘ಹೌದು’ ಎನ್ನುತ್ತಾನೆನ್ನು.
“ವಾಸೆಟ್ಠ, ಅಂಥ ಮನುಷ್ಯನ ಮಾತು ಮೂರ್ಖನ ಮಾತುಗಳಾಗಿವೆ ಎಂಬುದನ್ನು ನೀನು ತಿಳಿಯುವೆಯಷ್ಟೆ.”
“ಅಂಥವನ ಮಾತುಗಳು ಮೂರ್ಖನ ಮಾತುಗಳೇ ಆಗಿವೆ, ಗೋತಮರೆ.”
“ಇದರಂತೆಯೇ, ವಾಸೆಟ್ಠ, ಮೂರು ವೇದಗಳನ್ನು ಅರಿತಿರುವ ಬ್ರಾಹ್ಮಣರಾಗಲೀ-ಅವರ ಆಚಾರ್ಯರಾಗಲೀ, ಅವರ ಆಚಾರ್ಯರ ಪ್ರಾಚಾರ್ಯ ರಾಗಲೀ, ಅವರ ಹಿಂದಿನ ಏಳು ತಲೆಮಾರಿನವರಾಗಲೀ, ಬ್ರಹ್ಮನನ್ನು ತಮ್ಮ ಕಣ್ಣಿನಿಂದ ನೋಡಿಲ್ಲ. ಹಿಂದಿನ ಕಾಲದ ಋಷಿಗಳಾಗಲೀ ಮಂತ್ರಗಳನ್ನು ರಚಿಸಿದವರಾಗಲೀ, ಮಂತ್ರ ಪ್ರವರ್ತಕರಾಗಲೀ ಅಥವಾ ಅಟ್ಟಕ, ವಾಮಕ, ವಾಮದೇವ, ವೆಸ್ಸಾಮಿತ್ತ, ಯಮತಗ್ಗಿ, ಅಂಗಿರಸ, ಭಾರದ್ವಾಜ, ವೇಸಟ್ಠ, ಕಸ್ಸಪ, ಭಗು ಮುಂತಾದ ಪೂರ್ವದ ಋಷಿಗಳಂತೆಯೇ, ಮಂತ್ರಗಳನ್ನು ಗಾಯನ ಮಾಡುವ ವಾಚನ ಮಾಡುವ ಪುನ: ಪುನ: ಪಠಿಸುವ ಪುನ: ಪುನ: ವಾಚನ ಮಾಡುವ ಇಂದಿನ ಬ್ರಾಹ್ಮಣರಾಗಲಿ ಹೀಗೇ ಹೇಳುವುದಿಲ್ಲ: ‘ ಬ್ರಹ್ಮ ಎಲ್ಲಿದ್ದಾನೆ? ಎಲ್ಲಿಂದ ಬಂದಿದ್ದಾನೆ ಹೇಗಿದ್ದಾನೆ ಎಂಬುದು ನಮಗೆ ಗೊತ್ತು, ಅವನನ್ನು ನಾವು ನೋಡಿದ್ದೇವೆ.’ ಆದರೂ ಆ ತ್ರಿವೇದಿ ಬ್ರಾಹ್ಮಣರು ‘ಯಾರನ್ನು ನಾವು ತಿಳಿಯವೋ, ಯಾರನ್ನು ನಾವು ನೋಡಿಲ್ಲವೋ ಅವನ ಬಳಿಗೆ ಹೋಗುವ ಮಾರ್ಗವನ್ನು ತಿಳಿಸಬಲ್ಲೆವು. ಇದೊಂದೇ ಋಜುಮಾರ್ಗ. ಬ್ರಹ್ಮನ ಬಳಿಗೆ ಕೊಂಡೊಯ್ಯುವ ಮಾರ್ಗ ಇದೊಂದೇ. ಈ ಮಾರ್ಗದಲ್ಲಿ ನಡೆದರೆ ಬ್ರಹ್ಮನ ಬಳಿಗೆ ಹೊಗಬಲ್ಲೆವು.’ ಎಂದು ಹೇಳುತ್ತಾರೆ.
” ವಾಸೆಟ್ಠ, ಮೂರು ವೇದಗಳನ್ನು ಅರಿತಿರುವ ಬ್ರಾಹ್ಮಣರ ಇಂಥ ಮಾತುಗಳು ಮೂರ್ಖರ ಮಾತುಗಳೆಂದು ನಿನಗೆ ತಿಳಿಯುವುದಷ್ಟೆ?”
“ಹೌದು, ಗೋತಮ, ಮೂರು ವೇದಗಳನ್ನು ತಿಳಿದಿರುವ ಬ್ರಾಹ್ಮಣರ ಇಂಥ ಮಾತುಗಳು ಮೂರ್ಖರ ಮಾತುಗಳು ಮೂರ್ಖರ ಮಾತುಗಳೇ ಆಗಿವೆ.”
“ಸರಿಯಾಗಿ ಹೇಳಿದೆ, ವಾಸೆಟ್ಠ, ‘ಯಾರನ್ನು ಅರಿತಿಲ್ಲವೊ, ಯಾರನ್ನು ನೋಡಿಲ್ಲವೋ ಅಂಥವನ ಬಳಿಗೆ ಹೋಗುವ ಮಾರ್ಗವನ್ನು ತಿಳಿಸುತ್ತೇವೆ. ಇದೊಂದೇ ಋಜುಮಾರ್ಗ. ಈ ಮಾರ್ಗದಲ್ಲಿ ನಡೆಯುವುದರಿಂದ ಮಾತ್ರ ಬ್ರಹ್ಮನ ಬಳಿಗೆ ಹೊಗಬಹುದು ಎನ್ನುವುದು ಸರಿಯಾದುದೇ ಅಲ್ಲ.”
ಅಚಿರಾವತಿ ನದಿಯ ಉಪಮೆ
“ವಾಸೆಟ್ಠ, ಈ ಅಚಿರವತಿ ನದಿಯು ಉಕ್ಕಿ ಮೇಲೆ ಹರಿಯುತ್ತಿದೆ ಎನ್ನು. ಆಗ ಒಬ್ಬನು ನದೀ ದಡಕ್ಕೆ ಬಂದು ಮತ್ತೊಂದು ದಡಕ್ಕೆ ಹೋಗಲು ಬಯಸುತ್ತಾನೆನ್ನು . ದಡದಲ್ಲಿ ನಿಂತು ಎದುರು ತೀರವನ್ನು ಕುರಿತು ‘ ಆ ಕಡೆಯ ತೀರವೇ ಈ ಕಡೆ ಬಾ. ಈ ಕಡೆ ಬಾ’ ಎಂದು ಕರೆಯುತ್ತಾನೆನ್ನು.
“ಆಗ, ವಾಸೆಟ್ಠ, ಅಚಿರವತಿಯ ಮತ್ತೊಂದು ತೀರವು ಆ ಮನುಷ್ಯನು ಕರೆಯುವುದರಿಂದ ಯಾಚಿಸುವುದರಿಂದ ಪ್ರಾರ್ಥಿಸುವುದರಿಂದ ಸ್ತುತಿಸು ವುದರಿಂದ ಈ ಕಡೆಗೆ ಬರುತ್ತದೆಯೆ?”
“ಇಲ್ಲ ಗೋತಮರೇ.”
“ವಾಸೆಟ್ಠ, ಇದರಂತೆಯೇ ಬ್ರಾಹ್ಮಣರ ಧರ್ಮ ಯಾವುದಿದೆಯೋ ಅದನ್ನು ತೊರೆದು ಅಬ್ರಾಹ್ಮಣ ಧರ್ಮ ಯಾವುದಿದೆಯೋ ಅದನ್ನು ಆಚರಿಸುತ್ತಾ ಇರುವ ತ್ರಿವೇದಿ ಬ್ರಾಹ್ಮಣರು ಇಂದ್ರನನ್ನಾಗಲೀ, ಸೋಮನನ್ನಾಗಲೀ, ವರುಣನ್ನಾಗಲೀ, ಈಸಾನನಾಗಲೀ, ಪಜಾಪತಿಯನ್ನಾಗಲೀ, ಬ್ರಹ್ಮನನ್ನಾಗಲೀ, ಮಹಿಂದ್ರನನ್ನಾಗಲೀ, ಯಮನನ್ನಾಗಲಿ ಆವಾಹನವನ್ನು ಮಾಡುತ್ತಾರೆನ್ನು.
“ವಾಸೆಟ್ಠ, ಬ್ರಾಹ್ಮಣ ಧರ್ಮವನ್ನು ತೊರೆದು ಅಬ್ರಾಹ್ಮಣ ಧರ್ಮವನ್ನು ಆಚರಿಸುತ್ತಿರುವ ಆ ತ್ರಿವೇದಿ ಬ್ರಾಹ್ಮಣರು ಆವಾಹನ ಮಾಡುವುದರಿಂದಾಗಲೀ ಯಾಚಿಸುವುದರಿಂದಾಗಲೀ, ಪ್ರಾರ್ಥಿಸುವುದರಿಂದಾಗಲೀ ಸ್ತುತಿಸವಿದರಿಂದಾಲೀ ಮರಣಹೊಂದಿದ ಮೇಲೆ ಕಾಯವನ್ನು ಬಿಟ್ಟು ಬ್ರಹ್ಮನ ಬಳಿ ಸಾರುತ್ತಾರೆ ಎನ್ನುವುದು ಸರಿಯಾದುದಲ್ಲ.
“ವಾಸೆಟ್ಠ, ಈ ಅಚರವತಿ ನದಿಯು ಉಕ್ಕೇರಿ ದಡದ ಮೇಲೆ ಹರಿಯುತ್ತಿದೆ ಎನ್ನು. ಆಗ ಒಬ್ಬನು ನದೀ ದಡಕ್ಕೆ ಬಂದು ಎದುರು ದಡಕ್ಕೆ ಹೋಗಬಯಸುತ್ತಾನೆನ್ನು. ಈ ತೀರದಲ್ಲಿರುವ ಅವನ ಬಾಹುಗಳನ್ನು ಬಿಗಿಯಾಗಿ ಹಿಂದಕ್ಕೆ ಕಟ್ಟಿದ್ದಾರೆನ್ನು.
“ವಾಸೆಟ್ಠ, ಆ ಮನುಷ್ಯನು ಅಚಿರವತಿಯ ಈ ತೀರದಿಂದ ಎದುರು ತೀರಕ್ಕೆ ಹೋಗಬಲ್ಲನೇ?”
“ಇಲ್ಲ, ಗೋತಮರೆ.”
‘ಇದರಂತೆಯೆ, ವಾಸೆಟ್ಠ, ಆರ್ಯರ ವಿನಯದಲ್ಲಿ ಸಂಕೋಲೆ ಎಂದು ಮತ್ತು ಬಂದನವೆಂದು ಕರೆಯುವ ಐದು ಕಾಮ ಗುಣಗಳಿವೆ. ಆ ಐದು ಯಾವುವು? ಚಕ್ಷುವಿಞ್ಞಾಣ ದಿಂದ ತಿಳಿಯಬಲ್ಲ ಇಷ್ಟಪೂರಿತವಾದ ಮನವೊಪ್ಪುವ ಮನಸ್ಸಿಗೆ ಸಂತೋಷ ಕೊಡುವ ಪ್ರಿಯವನ್ನುಂಟುಮಾಡುವ ಕಾಮಪೂರಿತವಾದ ರಂಜನಿಯವಾದ ರೂಪ; ಸೋತ ವಿಞ್ಞಾಣ ದಿಂದ ತಿಳಿಯಬಲ್ಲ.... ಶಬ್ದ, ಘನ ವಿಞ್ಞಾಣ ದಿಂದ ತಿಳಿಯಬಲ್ಲ.... ಗಂಧ ವಾಸನೆ, ಜಿಹ್ವ ವಿಞ್ಞಾಣ ದಿಂದ ತಿಳಿಯಬಲ್ಲ.... ರುಚಿ ಮತ್ತು ಕಾಯ ವಿಞ್ಞಾಣ ದಿಂದ ತಿಳಿಯಬಲ್ಲ ಇಷ್ಟ ಪೂರಿತವಾದ ಮನವೊಪ್ಪುವ ಮನಸ್ಸಿಗೆ ಸಂತೋಷ ಕೊಡುವ ಪ್ರಿಯವನ್ನುಂಟುಮಾಡುವ ಕಾಮ ಪೂರಿತವಾದ ರಂಜನೀಯವಾದ ಸ್ವರ್ಶ.
“ವಾಸೆಟ್ಠ, ಆರ್ಯರ ವಿನಯದಲ್ಲಿ ಸಂಕೋಲೆ ಮತ್ತು ಬಂಧನ ಎಂದು ಕರೆಯುವ ಐದು ಕಾಮ ಗುಣಗಳು ಇವೇ. ವಾಸೆಟ್ಠ, ತ್ರಿವೇದಿ ಬ್ರಾಹ್ಮಣರು ಈ ಐದು ಕಾಮಗುಣಗಳಿಗೆ ಅಂಟಿಕೊಳ್ಳುತ್ತಾರೆ. ಇವುಗಳಿಂದ ಆಕರ್ಷಿತರಾಗುತ್ತಾರೆ. ಅವುಗಳಿಂದ ಆಗುವ ಅಪಾಯಗಳನ್ನು ನೋಡಲಾಗದವರಾಗುತ್ತಾರೆ: ಇವುಗಳನ್ನು ನೆಚ್ಚಬಾರದು ಎಂಬುದನ್ನು ತಿಳಿಯದವರಾಗಿರುತ್ತಾರೆ. ಆದುದರಿಂದ ಇವುಗಳಲ್ಲಿ ಮಹದಾನಂದಪಡುತ್ತಾರೆ. ವಾಸೆಟ್ಠ ಬ್ರಾಹ್ಮಣ ಧರ್ಮವನ್ನು ತೊರೆದು, ಆಬ್ರಾಹ್ಮಣ ಧರ್ಮವನ್ನು ಆಚರಿಸುತ್ತಿರುವ ತ್ರಿವೇದಿ ಬ್ರಾಹ್ಮಣರು ಐದು ಕಾಮ ಗುಣಗಳಿಗೆ ಅಂಟಿಕೊಂಡು ಅವುಗಳಿಂದ ಆಕರ್ಷಿತರಾಗಿ ಅವುಗಳಿಂದ ಆಗುವ ಅಪಾಯಗಳನ್ನು ಅರಿಯದವರಾಗಿ, ಅವುಗಳನ್ನು ನೆಚ್ಚಬಾರದು ಎಂಬುದನ್ನು ತಿಳಿಯದವರಾಗಿ ಅವುಗಳಲ್ಲಿ ಮಹಾದಾನಂದ ಪಡುತ್ತಾ ಕಾಮ ಸಂಕೋಲೆ ಮತ್ತು ಬಂಧನಸ್ಕಂದ ಬಂಧಿತರಾಗಿದ್ದರು, ಮರಣರಾದ ಮೇಲೆ ಕಾಮದಿಂದ ಬೇರೆಯಾಗಿ ಬ್ರಹ್ಮನ ಬಳಿಗೆ ಹೊಗುವರೆಂಬುದು ಸರಿಯಾದುದಲ್ಲ.
‘ವಾಸೆಟ್ಠ ಈ ಅಚಿರವತಿ ನದಿಯು ಉಕ್ಕಿ ದಡದ ಮೇಲೆ ಹರಿಯುತ್ತಿದೆಯನ್ನು ಆಗ ಒಬ್ಬ ಮನುಷ್ಯನು ಅದರ ತೀರಕ್ಕೆ ಬಂದು ಆ ಕಡೆಯ ದಡಕ್ಕೆ ಹೋಗಲು ಬಯಸುತ್ತಾನೆನ್ನು. ಅವನು ಈ ತೀರದಲ್ಲಿ ತನ್ನ ಮುಖವನ್ನೆಲ್ಲಾ ಮುಚ್ಚಿಕೊಂಡು, ನಿದ್ರೆ ಹೋಗುತ್ತಾನೆನ್ನು. ವಾಸೆಟ್ಠ, ಆ ಮನುಷ್ಯನು ಅಚಿರವತಿ ನದಿಯ ಒಂದು ತೀರದಿಂದ ಮತ್ತೊಂದು ತೀರಕ್ಕೆ ಹೋಗಬಲ್ಲನೇ?” “ಇಲ್ಲ ಗೋತಮರೆ.”
“ಇದರಂತೆಯೇ ವಾಸೆಟ್ಠ, ಆರ್ಯರ ವಿನಯದಲ್ಲಿ ಆವರಣಗಳು, ನೀವರಣಗಳು, ಆಡಚಣೆಗಳು ಮತ್ತು ತೊಡಕುಗಳು ಎಂದು ಕರೆಯಲ್ಪಡುವ ಐದು ನೀವರಣಗಳಿವೆ.16 ಆ ಐದು ಯಾವುವು? ಕಾಮಚ್ಛಂದ ನೀವರಣ, ಬ್ಯಾಪಾದ ನೀವರಣ, ಥೀನಮಿದ್ದ ನೀವರಣ, ಉದ್ಧಚ್ಚ ಕುಕ್ಕುಚ್ಚ ನಿವರಣ ಮತ್ತು ವಿಚಿಕಿಚ್ಚ ನೀವರಣ. ವಾಸೆಟ್ಠ, ಆರ್ಯರ ವಿನಯದಲ್ಲಿ ಅವರಣಗಳು- ನೀವರಣಗಳು, ಅಡಚಣೆಗಳು ಮತ್ತು ತೊಡಕುಗಳು ಎಂದು ಕರೆಯಲಾಗುವ ಪಂಚ ನೀವರಣಗಳು ಇವೇ.
“ವಾಸೆಟ್ಠ, ತ್ರಿವೇದಿ, ಬ್ರಾಹ್ಮಣರು, ಈ ಪಂಚನೀವರಣಗಳಿಂದ ಆವೃತರಾಗುತ್ತಾರೆ. ಅಡ್ಡಿಗಳಿಗೆ ಒಳಗಾಗುತ್ತಾರೆ. ಅಡಚಣೆಗಳಿಗೆ ಒಳಗಾಗುತ್ತಾರೆ. ತೊಡಕುಗಳಲ್ಲಿ ಸಿಕ್ಕಿಕೊಳ್ಳುತ್ತಾರೆ. ಬ್ರಾಹ್ಮಣ ಧರ್ಮವನ್ನು ತೊರೆದು ಅಬ್ರಾಹ್ಮಣ ಧರ್ಮದಲ್ಲಿ ನಿರತರಾಗುವ ತ್ರಿವೇದಿ ಬ್ರಾಹ್ಮಣರು ಪಂಚನೀವರಣಗಳಿಂದ ಆವೃತರಾಗಿ ಅಡ್ಡಿ ಅಡಚಣೆಗಳಿಂದ ಆವೃತರಾಗಿ ತೊಡಕಿನಲ್ಲಿ ಸಿಕ್ಕಿಕೊಂಡಿರುವುದರಿಂದ ಮರಣವಾದ ಮೇಲೆ ಕಾಯದಿಂದ ಬೇರೆಯಾಗಿ ಬ್ರಹ್ಮನ ಬಳಿಗೆ ಹೋಗುತ್ತಾರೆ ಎಂಬುದು ಸರಿಯಾದುದಲ್ಲ.
ನಿರ್ಣಾಯಕ ವಿಷಯಗಳು
“ವಾಸೆಟ್ಠ, ಬ್ರಾಹ್ಮಣರೂ, ವೃದ್ಧರೂ, ವಯಸ್ಸಾದ ಜ್ಞಾನಿಗಳೂ, ಆಚಾರ್ಯ ಪ್ರಾಚಾರ್ಯರೂ, ಬ್ರಹ್ಮನನ್ನು (ಸ್ತ್ರೀ ಮತ್ತು ಸಂಪತ್ತನ್ನು) ಪರಿಗ್ರಹಿಸುವವನನ್ನು ಏನೆಂದು ಹೇಳುತ್ತಾರೆ, ಪರಿಗ್ರಹಿಸಿದವನೆಂದು ಹೇಳುತ್ತಾರೋ?”
“ಗೋತಮರೆ, ಪ್ರರಿಗ್ರಹಿಸದವನು.”
“ಅವನ ಚಿತ್ತವು ವೈರದಿಂದ ಕೂಡಿರುತ್ತದೋ ಅಥವಾ ವೈರದಿಂದ ದೂರವಾಗಿರುತ್ತದೋ?”
“ವೈರದಿಂದ ದೂರವಾಗಿರುತ್ತದೆ, ಗೋತಮರೆ.”
“ಅವನ ಚಿತ್ತವು ದ್ವೇಷದಿಂದ ಕೂಡಿರುತ್ತದೋ ಅಥವಾ ದ್ವೇಷದಿಂದ ದೂರವಾಗಿರುತ್ತದೋ?”
“ದ್ವೇಷದಿಂದ ದೂರವಾಗಿರುತ್ತದೆ, ಗೋತಮರೆ.”
“ಅವನ ಚಿತ್ತವು ಕ್ಲೇಶದಿಂದ ಕೂಡಿರುತ್ತದೋ ಅಥವಾ ಕ್ಲೇಶದಿಂದ ದೂರವಾಗಿರುತ್ತದೋ?”
“ಕ್ಲೇಶದಿಂದ ದೂರವಾಗಿರುತ್ತದೆ, ಗೋತಮರೆ.”
“ಅವನು ತನ್ನ ಮೇಲೆ ಪೂರ್ಣ ಹತೋಟಿಯನ್ನು ಹೊಂದಿರುವವನೋ, ಹತೋಟಿಯನ್ನು ಹೊಂದಿರುವುದಿಲ್ಲವೋ?”
“ಅವನು ಹತೋಟಿಯನ್ನು ಹೊಂದಿರುವನು, ಗೋತಮರೆ.”
“ವಾಸೆಟ್ಠ, ತ್ರಿವೇದಿ ಬ್ರಾಹ್ಮಣರು ಪರಿಗ್ರಹಿಸುವವರೋ ಅಥವಾ ಪರಿಗ್ರಹಿಸದವರೋ?”
“ಪರಿಗ್ರಹಿಸಿದವರು, ಗೋತಮರೆ.”
“ಅವರ ಚಿತ್ತವು ವೈರದಿಂದ ಕೂಡಿರುತ್ತದೋ ಅಥವಾ ವೈರದಿಂದ ದೂರವಾಗಿರುತ್ತದೋ?”
“ದ್ವೇಷದಿಂದ ಕೂಡಿರುತ್ತದೆ, ಗೋತಮರೆ.”
“ಅವರ ಚಿತ್ತವು ಕ್ಲೇಶದಿಂದ ಕೂಡಿರುತ್ತದೋ ಅಥವಾ ಕ್ಲೇಶದಿಮದ ದೂರವಾಗಿರುತ್ತದೋ?”
“ಕ್ಲೇಶದಿಂದ ಕೂಡಿರುತ್ತದೆ, ಗೋತಮರೆ.”
“ಅವನು ತನ್ನ ಮೇಲೆ ಸಂಪೂರ್ಣ ಹತೋಟಿವುಳ್ಳವನಾಗಿರುತ್ತಾನೋ ಅಥವಾ ಇಲ್ಲವೋ?”
“ಸಂಪೂರ್ಣ ಹತೋಟಿ ಇರುವುದಿಲ್ಲ, ಗೋತಮರೆ.”
“ಹೀಗೆ ವಾಸೆಟ್ಠ, ತ್ರಿವೇದಿ ಬ್ರಾಹ್ಮಣರು ಸಪರಿಗ್ರಹರು ಆಗಿದ್ದಾರೆ. ಬ್ರಹ್ಮನು ಅಪರಿಗ್ರಹನಾಗಿದ್ದಾನೆ. ಸಪರಿಗ್ರಹರಾದ ಬ್ರಾಹಣರೂ ಅಪರಿಗ್ರಹನಾದ ಬ್ರಹ್ಮನು ಒಟ್ಟಿಗೆ ಇದ್ದು ಒಮ್ಮನಸ್ಸಿನವರಾಗಿರುತ್ತಾರೋ?”
“ಇಲ್ಲ, ಗೋತಮರೆ.”
“ಸರಿಯಾಗಿ ಹೇಳಿದೆ, ವಾಸೆಟ್ಠ, ಸಪರಿಗ್ರಹರಾದ ತ್ರಿವೇದಿ ಬ್ರಾಹ್ಮಣರು ಮರಣ ಹೊಂದಿದ ಮೇಲೆ ಕಾಯದಿಂದ ಬೇರೆಯಾಗಿ ಅಪರಿ ಗ್ರಹನಾದ ಬ್ರಹ್ಮನೊಟ್ಟಿಗೆ ಇರುತ್ತಾರೆ ಎನ್ನುವುದು ಸರಿಯಾದುದಲ್ಲ.
“ ಇದೇ ರೀತಿಯಲ್ಲಿ ವಾಸೆಟ್ಠ. ಸವೈರಿಚಿತ್ತರಾದ ಬ್ರಾಹ್ಮಣರೂ ಅವೈರಿ ಚಿತ್ತನಾದ ಬ್ರಹ್ಮನೂ.... ದ್ವೇಷದಿಂದ ಕೂಡಿರುವ ಬ್ರಾಹ್ಮಣರೂ ದ್ವೇಷವಿಲ್ಲದಿರುವ ಚಿತ್ತವನ್ನು ಪಡೆದಿರುವ ಬ್ರಹ್ಮನೂ ಕ್ಲೇಶಪೂರಿತವಾದ ಚಿತ್ತವನ್ನು ಪಡೆದಿರುವ ಬ್ರಾಹ್ಮಣರೂ ಕ್ಲೇಶರಹಿತವಾದ ಚಿತ್ತವನ್ನು ಹೊಂದಿರುವ ಬ್ರಹ್ಮನೂ, ತಮ್ಮ ಮೇಲೆ ಸಂಪೂರ್ಣ ಹತೋಟಿ ಇರದ ಬ್ರಾಹ್ಮಣರೂ ಸಂಪೂರ್ಣ ಹತೋಟಿಯನ್ನು ಹೊಂದಿರುವ ಬ್ರಹ್ಮನೂ ಒಂದೇ ಮನಸ್ಸಿನಿಂದ ಒಟ್ಟಿಗೆ ಇರುತ್ತಾರೆಯೆ?”
“ಇಲ್ಲ ಗೋತಮರೆ”.
“ಸರಿಯಾಗಿ ಹೇಳಿದೆ, ವಾಸೆಟ್ಠ. ತಮ್ಮ ಮೇಲೆ ಸಂಪೂರ್ಣ ಹತೋಟಿಯಿಲ್ಲದ ತ್ರಿವೇದಿ ಬ್ರಾಹ್ಮಣರು ಮರಣವಾದ ಮೇಲೆ ಕಾಯದಿಂದ ಬೇರೆಯಾಗಿ ತನ್ನ ಮೇಲೆ ಸಂಪೂರ್ಣ ಹತೋಟಿಯಿರುವ ಬ್ರಹ್ಮನೊಂದಿಗೆ ಒಮ್ಮನಸ್ಸ್ಸಿನಿಂದ ಒಟ್ಟಿಗೆ ಇರುತ್ತಾರೆ ಎನ್ನುವುದು ಸರಿಯಲ್ಲ.
“ವಾಸೆಟ್ಠ, ತ್ರಿವೇದಿ ಬ್ರಾಹ್ಮಣರು ತಾವು ಸುಖಕರವಾದ ಸ್ಥಿತಿಯಲ್ಲಿ ಇದ್ದೇವೆಂಬ ಭ್ರಮೆಯಿಂದ ಕುಳಿತಿದ್ದಾಗಲೇ ಕುಸಿಯುತ್ತಾ ಹೊಗುತ್ತಾರೆ. ಕುಸಿಯುತ್ತಾ ಹೋದಂತೆ ಹತಾಶರಾಗುತ್ತಾರೆ. ಆದುದರಿಂದ ಅವರ ವೇದ ವಿದ್ಯೆಯನ್ನು ಒಂದು ನೀರಿಲ್ಲದ ಮರಳುಗಾಡು, ದಾರಿಯಿಲ್ಲದ ಕಗ್ಗಾಡು, ಆತ್ಮನಾಶಕ ಎಂದು ಕರೆಯುತ್ತಾರೆ.”
ಹೀಗೆ ಹೇಳಿದ ಭಗವಾನರಿಗೆ ಯುವಕ ವಾಸೆಟ್ಠನು ‘ಸಮಣ ಗೋತಮರಿಗೆ ಬ್ರಹ್ಮನ ಬಳಿಗೆ ಹೊಗುವ ದಾರಿಯು ಗೊತ್ತಿದೆ ಎಂದು ಕೇಳಿದ್ದೇನೆ” ಎಂದನು.
“ವಾಸೆಟ್ಠ, ಮನಸಾಕಟ ಗ್ರಾಮವು ಇಲ್ಲಿಗೆ ಹತ್ತಿರವಿದೆ, ದೂರವಿಲ್ಲ ಎಂಬುದು ನಿನಗೆ ಗೊತ್ತ್ತಿದೆಯಷ್ಟೆ?”
“ಗೋತಮ, ಹೌದು ಮನಸಾಕಟ ಗ್ರಾಮವು ಹತ್ತಿರದಲ್ಲಿಯೇ ಇದೆ. ದೂರದಲ್ಲಿ ಇಲ್ಲ.”
‘ವಾಸೆಟ್ಠ, ಇಲ್ಲಿಯೇ ಹುಟ್ಟಿ ಬೆಳದ ಒಬ್ಬ ಮನುಷ್ಯನಿದ್ದಾನೆ ಎನ್ನು, ಅವನನ್ನು ಅಲ್ಲಿ ಎಂದೂ ವಾಸಿಸದ ಜನರು ಆ ಗ್ರಾಮದ ದಾರಿಯನ್ನು ಕೇಳುತ್ತಾರೆ ಎನ್ನು, ಆಗ ವಾಸೆಟ್ಠ, ಆ ಗ್ರಾಮದಲ್ಲಿಯೇ ಹುಟ್ಟಿಬೆಳದ ಆ ಮನುಷ್ಯನಿಗೆ ಗ್ರಾಮದ ದಾರಿಯನ್ನು ತೋರಿಸಲು ಏನಾದರೂ ಕಷ್ಟವಾಗುತ್ತದೆಯೇ, ಅದರ ಬಗೆಗೆ ಸಂದೇಹವಿರುತ್ತದೆಯೇ?
“ಇಲ್ಲ ಗೋತಮರೆ.” “ಇದಕ್ಕೆ ಕಾರಣವೇನು?”
“ಗೋತಮರೆ, ಆ ಮನುಷ್ಯನು ಮನಸಾಕಟ ಗ್ರಾಮದಲ್ಲಿಯೇ ಹುಟ್ಟಿ ಬೆಳೆದಿದ್ದಾನೆ. ಅವನಿಗೆ ಮನಸಾಕಟ ಗ್ರಾಮದ ಎಲ್ಲಾ ಮಾರ್ಗಗಳೂ ಗೊತ್ತಿರುತ್ತವೆ.”
“ವಾಸೆಟ್ಠ, ಮನಸಾಕಟ ಗ್ರಾಮದಲ್ಲಿಯೇ ಹುಟ್ಟಿ ಬೆಳೆದ ಆ ಮನುಷ್ಯನಿಗೆ ಮನಸಾಕಟದ ಗ್ರಾಮದ ಮಾರ್ಗದ ಬಗೆಗೆ ಸಂದೇಹವಿಲ್ಲದಿರುವಂತೆ ತಥಾಗತನಿಗೆ ಬ್ರಹ್ಮ ಲೋಕದ ಬಗೆಗಾಗಲೀ, ಬ್ರಹ್ಮ ಲೋಕಕ್ಕೆ ಹೋಗುವ ಮಾರ್ಗದ ಬಗೆಗೆ ಆಗಲೀ, ಸಂದೇಹವಿರುವುದಿಲ್ಲ. ಆ ಮಾರ್ಗವನ್ನು ತೋರಿಸಲು ಅವನಿಗೆ ಕಷ್ಟವಾಗುವುದಿಲ್ಲ. ವಾಸೆಟ್ಠ, ಬ್ರಹ್ಮನು ನನಗೆ ಗೊತ್ತಿದ್ದಾನೆ. ಬ್ರಹ್ಮಲೋಕವೂ ಅದಕ್ಕೆ ಹೊಗುವ ಮಾರ್ಗವೂ ನನಗೆ ಸ್ಪಷ್ಟವಾಗಿ ಗೊತ್ತಿದೆ. ಆ ಮಾರ್ಗದಲ್ಲಿ ಹೋಗಿ ಬ್ರಹ್ಮಲೋಕದಲ್ಲಿಯೇ ಸೇರಿ ಇರುವವರೂ ನನಗೆ ಗೊತ್ತು.”
ಹೀಗೆ ಹೇಳಿದ ಭಗವಾನರಿಗೆ ಯುವಕ ವಾಸೆಟ್ಠನು ಏನು ಹೇಳಿದನೆಂದರೆ: “ಸಮಣ ಗೋತಮರು ಬ್ರಹ್ಮ ಲೋಕಕ್ಕೆ ಹೋಗುವ ಮಾರ್ಗವನ್ನು ತಿಳಿಸಬಲ್ಲರು ಎಂದು ಕೇಳಿದ್ದೇನೆ. ಗೋತಮರು ಬ್ರಹ್ಮನ ಬಳಿಗೆ ಹೋಗುವ ಮಾರ್ಗವನ್ನು ತಿಳಿಸುವುದು ಉಚಿತವಾದುದು. ಗೋತಮರು ಬ್ರಾಹ್ಮಣ ವರ್ಗಕ್ಕೆ ಸೇರಿದ ನನ್ನನ್ನು ರಕ್ಷಿಸುವಂತಾಗಲಿ.”
“ವಾಸೆಟ್ಠ ಕೇಳು. ನಾನು ಹೇಳುವುದನ್ನು ಮನಸ್ಸಿಟ್ಟು ಕೇಳು”
“ಹಾಗೆಯೇ ಆಗಲಿ” ಎಂದು ಯುವಕ ವಾಸೆಟ್ಠನು ಭಗವಾನರಿಗೆ ಹೇಳಿದನು.
ಬ್ರಹ್ಮಲೋಕ ಮಾರ್ಗದ ಉಪದೇಶ
ಆಗ ಭಗವಾನರು ಇಂತೆಂದರು.[ಸಾಮಞ್ಞ ಫಲ ಸುತ್ತದ 41 ನೆಯ ಪ್ಯಾರದಿಂದ 76 ನೆಯ ಪ್ಯಾರದವರಿಗೆ ಓದಿಕೊಳ್ಳಬೇಕು].
“ಪಂಚ ನೀವರಣಗಳನ್ನು ಕಳೆದುಕೊಂಡಿರುವವನಲ್ಲಿ ಪ್ರಮೋದವು ಉಂಟಾಗುತ್ತದೆ. ಪ್ರಮೋದದಿಂದ ಆನಂದ ಹುಟ್ಟುತ್ತದೆ. ಆನಂದದ ಮನಸ್ಸನ್ನು ಹೊಂದಿರುವ ಅವನ ಕಾಯವು ಸ್ವಸ್ಥವಾಗುತ್ತದೆ. ಸ್ವಸ್ಥವಾಗಿರುವ ಶರೀರವನ್ನು ಪಡೆದಿರುವವರಿಗೆ ಸುಖ ಉಂಟಾಗುತ್ತದೆ ಸುಖದಿಂದಿರುವವನ ಚಿತ್ತವು ಸಮಾಧಿಯನ್ನು ಪಡೆಯಬಲ್ಲದು.
‘ಆತನು ಒಂದು ದಿಕ್ಕಿನ ಕಡೆಗೆ ತನ್ನ ಮೈತ್ರಿ ಪೂರ್ಣವಾದ ಚಿತ್ತವನ್ನು ತಿರುಗಿಸಿ ಅದನ್ನೇಲ್ಲಾ ಅದು ಆವರಿಸುವಂತೆ ಮಾಡುತ್ತಾನೆ. ಎರಡನೆಯ ದಿಕ್ಕಿಗೆ ಮೂರನೆಯ ದಿಕ್ಕಿಗೆ ನಾಲ್ಕನೆಯ ದಿಕ್ಕಿಗೆ ಊರ್ಧ್ವ ಅಧೊ ತಿರ್ಯಕ್ ಮುಂತಾದ ಎಲ್ಲಾ ಲೋಕಗಳ ಕಡೆಗೆ ತನ್ನ ಚಿತ್ತವನ್ನು ತಿರುಗಿಸಿ ಅದನ್ನೆಲ್ಲಾ ತನ್ನ ಮೈತ್ರಿ ಚಿತ್ತದಿಂದ ಆವರಿಸಿಬಿಡುತ್ತಾನೆ. ಎಲ್ಲರನ್ನೆಲ್ಲ, ಎಲ್ಲವುಗಳೆನ್ನೆಲ್ಲಾ ಅವನ ಮೈತ್ರಿ ಚಿತ್ತವು ಆವರಿಸಿ ವಿಪುಲವಾದ ಮಹತ್ತಾದ ಮಹತ್ ಪ್ರಮಾಣದ (ತನ್ನ) ಅವೈರದಿಂದ, ಅದ್ವೇಷದಿಂದ ಲೋಕಗಳನ್ನು ತುಂಬಿಬಿಡುತ್ತದೆ.
‘ಶಕ್ತಿಯುತನಾದವನ ಶಂಖ ಧ್ವನಿಯು ನಾಲ್ಕು ದಿಕ್ಕುಗಳಲ್ಲಿ ಮೊಳಗುವಂತೆ, ವಾಸೆಟ್ಠ, ಆ ಭಿಕ್ಷುವು ತನ್ನ ಪರಿಶುದ್ಧವಾದ ಚಿತ್ತದಿಂದ ಯಾವುದಕ್ಕೆ ಆಕಾರವಿದೆಯೋ ಯಾವುದಕ್ಕೆ ಜೀವವಿದೆಯೋ ಅವಾವುದನ್ನೂ ಬಿಡದಂತೆ ಎಲ್ಲವನ್ನೂ ಮೈತ್ರಿಯಿಂದ ತುಂಬಿ ಬಿಡುತ್ತಾನೆ. ವಾಸೆಟ್ಠ, ಬ್ರಹ್ಮನ ಬಳಿಗೆ ಹೋಗುವ ಮಾರ್ಗವು ಇದು.
‘ವಾಸೆಟ್ಠ, ಭಿಕ್ಷುವು ಒಂದು ದಿಕ್ಕಿನ ಕಡೆಗೆ ತನ್ನ ಕರುಣಾಪೂರತವಾದ ಚಿತ್ತವನ್ನು.... ಒಂದು ದಿಕ್ಕಿಗೆ ಮುದಿತಪೂರತವಾದ ಚಿತ್ತವನ್ನು.. ಒಂದು ದಿಕ್ಕಿಗೆ ಉಪೇಕ್ಖಪೂರತವಾದ ಚಿತ್ತವನ್ನು ತಿರುಗಿಸಿ ಅದನ್ನೆಲ್ಲಾ ಅವರಿಸುವಂತೆ ಮಾಡುತ್ತಾನೆ. ಎರಡನೆಯ ದಿಕ್ಕಿಗೆ ಮೂರನೆಯ ದಿಕ್ಕಿಗೆ ನಾಲ್ಕನೆಯ ದಿಕ್ಕಿಗೆ ಊರ್ಧ್ವ ಅಧೋ ತಿರ್ಯಕ್ ಮುಂತಾದ ಎಲ್ಲಾ ಲೋಕಗಳ ಕಡೆಗೆ ತನ್ನ ಚಿತ್ತವನ್ನು ತಿರುಗಿಸಿ ಅದನ್ನೆಲ್ಲಾ ತನ್ನ ಉಪೇಕ್ಖದಿಂದ ಅವರಿಸಿ ಬಿಡುತ್ತಾನೆ. ಎಲ್ಲರನ್ನೆಲ್ಲಾ, ಎಲ್ಲವುಗಳೆನ್ನೆಲ್ಲಾ ಅವನ ಉಪೇಕ್ಖಪೂರಿತವಾದ ಚಿತ್ತವು ಆವರಿಸಿ ವಿಪುಲವಾದ ಮಹತ್ತಾದ ಮಹತ್ ಪ್ರಮಾಣದ ಅವೈರದಿಂದ ಅದ್ವೇಷದಿಂದ ಲೋಕವನ್ನೆಲ್ಲಾ ತುಂಬಿ ಬಿಡುತ್ತದೆ. ವಾಸೆಟ್ಠ, ಬಲಶಾಲಿಯಾದವನೊಬ್ಬನ ಶಂಖ ಧ್ವನಿಯು ನಾಲ್ಕು ದಿಕ್ಕುಗಳಲ್ಲಿ ಮೊಳಗುವಂತೆ, ಆ ಭಿಕ್ಷುವು ತನ್ನ ಪರಿಶುದ್ಧವಾದ ಚಿತ್ತದಿಂದ ಯಾವುದಕ್ಕೆ ಆಕಾರವಿದೆಯೋ ಯಾವುದಕ್ಕೆ ಜೀವವಿದೆಯೋ ಅವಾವುದನ್ನೂ ಬಿಡದಂತೆ ಎಲ್ಲವನ್ನೂ ಉಪೇಕ್ಖದಿಂದ ತುಂಬಿಬಿಡುತ್ತಾನೆ. ವಾಸೆಟ್ಠ, ಬ್ರಹ್ಮನ ಬಳಿಗೆ ಹೋಗುವ ಮಾರ್ಗವು ಇದು.
“ಇಂತಹ ಚಿತ್ತವನ್ನು ಪಡೆದಿರುವ ಭಿಕ್ಷುವು ಸಪರಿಗ್ರಹನೋ ಅಪರಿಗ್ರಹನೋ?”
“ಅಪರಿಗೃಹನಾಗಿದ್ದಾನೆ, ಗೋತಮರೆ.”
“ಅವನ ಚಿತ್ತವು ವೈರದಿಂದ ಕೂಡಿರುತ್ತದೋ ಅಥವಾ ವೈರರಹಿತವಾಗಿರುತ್ತದೋ?”
“ವೈರರಹಿತವಾಗಿರುತ್ತದೆ, ಗೋತಮರೆ.”
“ಅವನ ಚಿತ್ತವು ದ್ವೇಷದಿಂದ ಕೂಡಿರುತ್ತದೋ ಅಥವಾ ದ್ವೇಷರಹಿತವಾಗಿರುತ್ತದೋ?”
“ದ್ವೇಷರಹಿತವಾಗಿರುತ್ತದೆ, ಗೋತಮರೆ.”
“ಅವನ ಚಿತ್ತವು ಕ್ಲೇಶಪೂರಿತವಾಗಿರುತ್ತದೋ, ಅಥವಾ ಕ್ಲೇಶ ರಹಿತವಾಗಿರುತ್ತದೋ?”
“ಕ್ಲೇಶರಹಿತವಾಗಿರುತ್ತದೆ, ಗೋತಮರೆ.”
“ಅಂಥ ಭಿಕ್ಷುವು ತನ್ನ ಮೇಲೆ ಸಂಪೂರ್ಣ ಹತೋಟಿಯನ್ನು ಹೊಂದಿರುವವನೋ ಸಂಪೂರ್ಣ ಹತೋಟಿಯನ್ನು ಹೊಂದಿರುವುದಿಲ್ಲವೋ? “ಹೊಂದಿರುತ್ತಾನೆ, ಗೋತಮರೆ.”
“ವಾಸೆಟ್ಠ, ಅಂಥ ಭಿಕ್ಷು ಅಪರಿಗ್ರಹನಾಗಿರುತ್ತಾನೆ, ಬ್ರಹ್ಮನೂ ಅಪರಿಗ್ರಹನಾಗಿರುತ್ತಾನೆ. ಅಪರಿಗ್ರಹನಾದ ಭಿಕ್ಷುವೂ, ಅಪರಿಗ್ರಹನಾದ ಬ್ರಹ್ಮನೂ ಒಟ್ಟಿಗೆ ಒಮ್ಮನಸ್ಸಿನಿಂದ ಇರಲು ಸಾಧ್ಯ ತಾನೆ?” “ಸಾಧ್ಯ, ಗೋತಮರೆ.”
“ಸರಿಯಾಗಿ ಹೇಳಿದೆ, ವಾಸೆಟ್ಠ. ಅಂಥ ಅಪರಿಗ್ರಹಿಯಾದ ಭಿಕ್ಷುವು ಮರಣ ಹೊಂದಿದ ಮೇಲೆ ಕಾಯದಿಂದ ಬೇರೆಯಾಗಿ, ಅಪರಿಗ್ರಹನಾದ ಬ್ರಹ್ಮನ ಬಳಿಗೆ ಹೋಗಿ ಇರುತ್ತಾನೆ ಎಂದು ಹೇಳುವುದು ಸರಿಯಾದುದು.
“ವಾಸೆಟ್ಠ, ಅವೇರ ಚಿತ್ತವನ್ನು ಪಡೆದಿರುವ ಭಿಕ್ಷುವೂ ಅವೇರ ಚಿತ್ತವನ್ನು ಪಡೆದಿರುವ ಬ್ರಹ್ಮನೂ.... ದ್ವೇಷ ರಹಿತವಾದ ಚಿತ್ತವನ್ನು ಪಡೆದಿರುವ ಭಿಕ್ಷುವೂ ದ್ವೇಷರಹಿತ ಚಿತ್ತವನ್ನು ಪಡೆದಿರುವ ಬ್ರಹ್ಮನೂ.... ಕ್ಲೇಶರಹಿತವಾದ ಚಿತ್ತವನ್ನು ಪಡೆದಿರುವ ಭಿಕ್ಷುವೂ ಕ್ಲೇಶರಹಿತವಾದ ಚಿತ್ತವನ್ನು ಪಡೆದಿರುವ ಬ್ರಹ್ಮನೂ.... ತನ್ನ ಮೇಲೆ ಸಂಪೂರ್ಣವಾದ ಹತೋಟಿಯನ್ನು ಹೊಂದಿರುವ ಭಿಕ್ಷುವು, ತನ್ನ ಮೇಲೆ ಸಂಪೂರ್ಣ ಹತೋಟಿಯನ್ನು ಹೊಂದಿರುವ ಬ್ರಹ್ಮನೂ ಒಟ್ಟಿಗೆ ಒಮ್ಮನಸ್ಸಿನಿಂದ ಇರಲು ಸಾಧ್ಯ ತಾನೆ?”
“ಸಾಧ್ಯ, ಗೋತಮರೆ.”
“ಸರಿಯಾಗಿ ಹೇಳಿದೆ, ವಾಸೆಟ್ಠ, ತನ್ನ ಮೇಲೆ ಸಂಪೂರ್ಣ ಹತ್ತೋಟಿಯನ್ನು ಹೊಂದಿರುವ ಆ ಭಿಕ್ಷುವು ಮರಣ ಹೊಂದಿದ ಮೇಲೆ ಕಾಯದಿಂದ ಬೇರೆಯಾಗಿ ತನ್ನ ಮೇಲೆ ಸಂಪೂರ್ಣವಾದ ಹತೋಟಿಯನ್ನು ಹೊಂದಿರುವ ಬ್ರಹ್ಮನ ಬಳಿಗೆ ಹೋಗುತ್ತಾನೆ ಎನ್ನುವುದು ಸರಿಯಾದುದು.
ಇದನ್ನು ಕೇಳಿದ ಯುವಕರಾದ ವಾಸೆಟ್ಠ ಭಾರದ್ವಾಜರು ಭಗವಾನರನ್ನು ಕುರಿತು ಹೀಗೆಂದರು. “ಎಷ್ಟು ಉತ್ಕೃಷ್ಟವಾಗಿದೆ ಗೋತಮ, ತಮ್ಮ ಮಾತು ಎಷ್ಟು ಉತ್ಕೃಷ್ಟ! ತಲೆಕೆಳಗಾಗಿ ಬಿದ್ದಿರುವುದನ್ನು ನೆಟ್ಟಗೆ ನಿಲ್ಲಿಸುವವನಂತೆ, ಆಡಗಿರುವುದನ್ನು ಹೊರಗೆಳೆದು ತೋರಿಸುವವನಂತೆ, ದಾರಿತಪ್ಪಿದವನಿಗೆ ಮಾರ್ಗವನ್ನು ತೋರಿಸುವವನಂತೆ, ಕತ್ತಲೆಯಲ್ಲಿ ಇರುವವನಿಗೆ ಪಂಜನ್ನು ಹಿಡಿಯುವವನಂತೆ ಕಣ್ಣಿರುವವನು ರೂಪಗಳನ್ನು ನೊಡಲು ಸಾಧ್ಯವಾದಂತೆ ಗೋತಮರು ಅನೇಕ ಪರಿಯಲ್ಲಿ ಧರ್ಮವನ್ನು ಪ್ರಕಾಶಗೊಳಿಸಿದ್ದಾರೆ. ನಾವು ಭಗವಂತನಾದ ಗೋತಮರಿಗೆ ಶರಣು ಹೋಗುತ್ತೇನೆ, ಧರ್ಮಕ್ಕೆ ಶರಣು ಹೋಗುತ್ತೇನೆ; ಭಿಕ್ಷು ಸಂಘಕ್ಕೆ ಶರಣು ಹೋಗುತ್ತೆವೆ. ಈ ದಿನದಿಂದಲೇ ನಮ್ಮನ್ನು ಉಪಾಸಕರನ್ನಾಗಿ ಸ್ವೀಕರಿಸಿ; ನಮ್ಮ ಜೀವವಿರುವವರೆಗೂ ಶರಣಾಗತರಾಗಿ ಇರುತ್ತೇವೆ.”
ಇಲ್ಲಿಗೆ ತೇವಿಜ್ಜ ಸುತ್ತ ಮುಗಿಯಿತು.
ಟಿಪ್ಪಣಿಗಳು [3]
English
Deutsch
Việt Ngữ