ಊಟಿಸುತ್ತಿದೆ

ಅನುವಾದಗಳು [24]

ಮಹಾಪದಾನ ಸುತ್ತ

ಪೂರ್ವಜನ್ಮಪ್ರತಿ ಸಂಯುಕ್ತ ಕಥೆ

ಹೀಗೇ ಕೇಳಿದ್ದೇನೆ; ಒಮ್ಮೆ ಭಗವಾನರು ಸಾವತ್ಥಿಯ ಜೇತವನದಲ್ಲಿದ್ದ ಕರೇರಿಕುಟಿಯಲ್ಲಿ ತಂಗಿದ್ದರು. ಆಗ ಬಹು ಸಂಖ್ಯೆಯ ಭಿಕ್ಷುಗಳು ಕರೇರಿಯಲ್ಲಿನ ಮಂಟಪದಲ್ಲಿ ಸೇರಿದ್ದರು. ಭಿಕ್ಷೆಯಿಂದ ತಂದ ಆಹಾರವನ್ನು ಊಟ ಮಾಡಿಯಾಗಿತ್ತು. ಹೀಗೆ ಒಂದುಕಡೆ ಸೇರಿ ಚರ್ಚೆ ಮಾಡುತ್ತಿದ್ದಾಗ ಒಂದು ವಿಷಯವು ಹುಟ್ಟಿಕೊಂಡಿತು: “ಇದು ಹಿಂದಿನ ಜನ್ಮದ ಕಥೆ; ಇದೇ ಹಿಂದಿನ ಜನ್ಮದ ಕಥೆ.”

ಭಗವಾನರು ಮನುಷ್ಯರು ಕೇಳಲು ಸಾಧ್ಯವಾಗದ ಪರಿಶುದ್ಧವಾದ ತಮ್ಮ ದಿವ್ಯ ಕರ್ಣದಿಂದ ಆ ಭಿಕ್ಷುಗಳು ಮಾಡುತ್ತಿದ್ದ ಚರ್ಚೆಯನ್ನು ಕೇಳಿದರು. ಅವರು ತಮ್ಮ ಆಸನದಿಂದ ಎದ್ದು ಕರೇರಿ ಮಂಟಪದ ಹತ್ತಿರಕ್ಕೆ ಬಂದರು. ಬಂದು ತಮಗಾಗಿ ಪ್ರತ್ಯೇಕವಾಗಿದ್ದ ಆಸನದಲ್ಲಿ ಕುಳಿತರು. ಕುಳಿತುಕೊಂಡ ಮೇಲೆ ಆ ಭಿಕ್ಷುಗಳನ್ನು ಕುರಿತು “ಭಿಕ್ಷುಗಳೇ, ನೀವೆಲ್ಲಾ ಸೇರಿಕೊಂಡು ಈಗ ಏನನ್ನು ಚರ್ಚಿಸುತ್ತಿದ್ದೀರಿ? ಯಾವುದು ನಿಮ್ಮ ಚರ್ಚೆಯ ವಿಷಯವಾಗಿದೆ?” ಎಂದು ಕೇಳಿದರು.

ಹೀಗೆ ಕೇಳಿದ ಭಗವಾನರಿಗೆ ಭಿಕ್ಷುಗಳು “ಭಂತೆ, ಭಿಕ್ಷೆಯಾದಮೇಲೆ ಕರೇರಿಮಂಡಲದಲ್ಲಿ ಒಟ್ಟಾಗಿ ಸೇರಿದೆವು. ಆಗ ನಮ್ಮ ಊಟವಾಗಿತ್ತು. ಒಟ್ಟಾಗಿ ಸೇರಿ ಚರ್ಚೆ ಮಾಡುತ್ತಿದ್ದಾಗ ಪೂರ್ವಜನ್ಮವನ್ನು ಕುರಿತ ವಿಷಯವು ಹುಟ್ಟಿಕೊಂಡಿತು. ‘ಇದು ಹಿಂದಿನ ಜನ್ಮಗಳ ಕಥೆ; ಇದೇ ಹಿಂದಿನ ಜನ್ಮಗಳ ಕಥೆ’ ಎಂಬುದೇ ನಮ್ಮ ಚರ್ಚೆಯ ವಿಷಯ ಆಗಿತ್ತು” ಎಂದು ಉತ್ತರವಿತ್ತರು.

“ಭಿಕ್ಷುಗಳೇ, ಪೂರ್ವಜನ್ಮಗಳ ಕಥೆಗಳನ್ನು ಕೇಳಲು ನೀವು ಇಚ್ಛಿಸುತ್ತೀರಾ?”

“ಪೂರ್ವಜನ್ಮಗಳ ಕಥೆಗಳನ್ನು ಕೇಳಲು ಈಗ ಕಾಲವು ಸರಿಯಾಗಿದೆ ಭಗವಾ; ಕಾಲವು ಸರಿಯಾಗಿದೆ ಸುಗತ. ಭಗವಂತನಿಂದ ಕೇಳಿದುದನ್ನು ನಾವು ನೆನಪಿನಲ್ಲಿಟ್ಟುಕೊಳ್ಳುತ್ತೇವೆ.”

“ಭಿಕ್ಷುಗಳೇ, ಕೇಳಿ, ಮನಸ್ಸಿಟ್ಟು ಕೇಳುವುದು ಒಳ್ಳೆಯದು, ಈಗ ಹೇಳುತ್ತೇನೆ.”

“ಭಂತೆ, ಹಾಗೆಯೇ ಆಗಲಿ” ಎಂದು ಆ ಭಿಕ್ಷುಗಳು ಭಗವಾನರಿಗೆ ಹೇಳಿದರು. ಭಗವಾನರು ಇಂತೆಂದರು:

“ಭಿಕ್ಷುಗಳೇ, ತೊಂಬತ್ತೊಂದು ಕಲ್ಪಗಳ ಹಿಂದೆ ಭಗವಂತನೂ ಅರಹಂತನೂ ಸಮ್ಮಾಸಂಬುದ್ಧನೂ ಆದ ವಿಪಸ್ಸಿಯು ಲೋಕದಲ್ಲಿ ಉದಿಸಿದನು. ಮೂವತ್ತೊಂದು ಕಲ್ಪಗಳ ಹಿಂದೆ ಭಗವಂತನೂ ಅರಹಂತನೂ ಸಮ್ಮಾಸಂಬುದ್ಧನೂ ಆದ ಸಿಖಿಯು ಲೋಕದಲ್ಲಿ ಹುಟ್ಟಿದನು. ಇಂದಿಗೆ ಮೂವತ್ತೊಂದನೆಯ ಹಿಂದಿನ ಕಲ್ಪದಲ್ಲಿ ಭಗವಂತನೂ ಅರಹಂತನೂ ಸಮ್ಮಾಸಂಬುದ್ಧನೂ ಆದ ವೆಸ್ಸಭೂ ಹುಟ್ಟಿದನು. ಭಿಕ್ಷುಗಳೇ, ಇದೇ ಶುಭ ಕಲ್ಪದಲ್ಲಿ, ಭಗವಂತನೂ ಅರಹಂತನೂ ಸಮ್ಮಾಸಂಬುದ್ಧನೂ ಆದ ಕಕುಸಂಧನು ಹುಟ್ಟಿದನು. ಇದೇ ಶುಭ ಕಲ್ಪದಲ್ಲಿ, ಭಿಕ್ಷುಗಳೇ, ಭಗವಂತನೂ ಅರಹಂತನೂ ಸಮ್ಮಾಸಂಬುದ್ಧನೂ ಆದ ಕೋಣಗಮನನು ಹುಟ್ಟಿದನು. ಇದೇ ಶುಭ ಕಲ್ಪದಲ್ಲಿ ಭಗವಂತನೂ ಅರಹಂತನೂ ಸಮ್ಮಾಸಂಬುದ್ಧನೂ ಆದ ಕಸ್ಸಪನು ಹುಟ್ಟಿದನು. ಈ ಶುಭಕಲ್ಪದಲ್ಲಿಯೇ ಈಗ ಭಗವಂತನೂ ಅರಹಂತನೂ ಸಮ್ಮಾಸಂಬುದ್ಧನೂ ಆದ ನಾನು ಹುಟ್ಟಿದ್ದೇನೆ.

“ಭಿಕ್ಷುಗಳೇ, ಭಗವಂತನೂ ಅರಹಂತನೂ ಸಮ್ಮಾಸಂಬುದ್ಧನೂ ಆದ ವಿಪಸ್ಸಿಯು ಕ್ಷತ್ರಿಯ ಕುಲದಲ್ಲಿ ಹುಟ್ಟಿದನು; ಕ್ಷತ್ರಿಯ ಜಾತಿಯವನಾದನು. ಭಗವಂತನೂ ಅರಹಂತನೂ ಸಮ್ಮಾಸಂಬುದ್ಧನೂ ಆದ ಸಿಖಿಯು ಕ್ಷತ್ರಿಯ ಕುಲದಲ್ಲಿ ಹುಟ್ಟಿದನು; ಕ್ಷತ್ರಿಯ ಜಾತಿಯವನಾದನು. ಭಗವಂತನೂ ಅರಹಂತನೂ ಸಮ್ಮಾಸಂಬುದ್ಧನೂ ಆದ ವೆಸ್ಸಭೂ ಕ್ಷತ್ರಿಯ ಕುಲದಲ್ಲಿ ಹುಟ್ಟಿದನು; ಕ್ಷತ್ರಿಯ ಜಾತಿಯವನಾದನು. ಭಗವಂತನೂ ಅರಹಂತನೂ ಸಮ್ಮಾಸಂಬುದ್ಧನೂ ಆದ ಕಕುಸಂಧ ಬ್ರಾಹ್ಮಣ ಕುಲದಲ್ಲಿ ಹುಟ್ಟಿದನು; ಬ್ರಾಹ್ಮಣ ಜಾತಿಯವನಾದನು. ಭಗವಂತನೂ ಅರಹಂತನೂ ಸಮ್ಮಾಸಂಬುದ್ಧನೂ ಆದ ಕೋಣಗಮನ ಬ್ರಾಹ್ಮಣ ಕುಲದಲ್ಲಿ ಹುಟ್ಟಿದನು; ಬ್ರಾಹ್ಮಣ ಜಾತಿಯವನಾದನು. ಭಗವಂತನೂ ಅರಹಂತನೂ ಸಮ್ಮಾಸಂಬುದ್ಧನೂ ಆದ ಕಸ್ಸಪನು ಬ್ರಾಹ್ಮಣ ಕುಲದಲ್ಲಿ ಹುಟ್ಟಿದನು; ಬ್ರಾಹ್ಮಣ ಜಾತಿಯವನಾದನು. ಭಗವಂತನೂ ಅರಹಂತನೂ ಸಮ್ಮಾಸಂಬುದ್ಧನೂ ಆದ ನಾನು ಇಂದು ಕ್ಷತ್ರಿಯ ಜಾತಿಯಲ್ಲಿ ಹುಟ್ಟಿದ್ದೇನೆ; ಕ್ಷತ್ರಿಯ ಜಾತಿಯವನಾಗಿದ್ದೇನೆ.

“ಭಿಕ್ಷುಗಳೇ, ಭಗವಂತನೂ ಅರಹಂತನೂ ಸಮ್ಮಾಸಂಬುದ್ಧನೂ ಆದ ವಿಪಸ್ಸಿಯು ಕೊಂಡಞ್ಞ ಗೋತ್ರದವನು. ಭಗವಂತನೂ ಅರಹಂತನೂ ಸಮ್ಮಾಸಂಬುದ್ಧನೂ ಆದ ಸಿಖಿ ಕೊಂಡಞ್ಞ ಗೋತ್ರದವನು. ಭಗವಂತನೂ ಅರಹಂತನೂ ಸಮ್ಮಾಸಂಬುದ್ಧನೂ ಆದ ವೆಸ್ಸಭೂ ಕೊಂಡಞ್ಞ ಗೋತ್ರದವನು. ಭಿಕ್ಷುಗಳೇ, ಭಗವಂತನೂ ಅರಹಂತನೂ ಸಮ್ಮಾಸಂಬುದ್ಧನೂ ಆದ ಕಕುಸಂಧ ಕಸ್ಸಪ ಗೋತ್ರದವನು. ಭಗವಂತನೂ ಅರಹಂತನೂ ಸಮ್ಮಾಸಂಬುದ್ಧನೂ ಆದ ಕೋಣಗಮನ ಕಸ್ಸಪ ಗೋತ್ರದವನು. ಭಗವಂತನೂ ಅರಹಂತನೂ ಸಮ್ಮಾಸಂಬುದ್ಧನೂ ಆದ ಕಸ್ಸಪ, ಕಸ್ಸಪ ಗೋತ್ರದವನು. ಇಂದು ಭಗವಂತನೂ ಅರಹಂತನೂ ಸಮ್ಮಾಸಂಬುದ್ಧನೂ ಆದ ನಾನು, ಭಿಕ್ಷುಗಳೇ, ಗೋತಮ ಗೋತ್ರದವನು.

“ಭಿಕ್ಷುಗಳೇ, ಭಗವಂತನೂ ಅರಹಂತನೂ ಸಮ್ಮಾಸಂಬುದ್ಧನೂ ಆದ ವಿಪಸ್ಸಿಯ ಆಯುಃಪ್ರಮಾಣವು ಎಂಬತ್ತು ಸಾವಿರ ವರ್ಷಗಳಾಗಿತ್ತು. ಭಗವಂತನೂ ಅರಹಂತನೂ ಸಮ್ಮಾಸಂಬುದ್ಧನೂ ಆದ ಸಿಖಿಯ ಆಯುಃಪ್ರಮಾಣವು ಎಪ್ಪತ್ತು ಸಾವಿರ ವರ್ಷಗಳಾಗಿತ್ತು. ಭಗವಂತನೂ ಅರಹಂತನೂ ಸಮ್ಮಾಸಂಬುದ್ಧನೂ ಆದ ವೆಸ್ಸಭೂ ಆಯುಃಪ್ರಮಾಣವು ಅರವತ್ತು ಸಾವಿರ ವರ್ಷಗಳಾಗಿತ್ತು. ಭಗವಂತನೂ ಅರಹಂತನೂ ಸಮ್ಮಾಸಂಬುದ್ಧನೂ ಆದ ಕಕುಸಂಧನ ಆಯುಃಪ್ರಮಾಣವು ನಲವತ್ತು ಸಾವಿರ ವರ್ಷಗಳಾಗಿತ್ತು. ಭಗವಂತನೂ ಅರಹಂತನೂ ಸಮ್ಮಾಸಂಬುದ್ಧನೂ ಆದ ಕೋಣಗಮನನ ಆಯುಃಪ್ರಮಾಣವು ಮೂವತ್ತು ಸಾವಿರ ವರ್ಷಗಳಾಗಿತ್ತು. ಭಗವಂತನೂ ಅರಹಂತನೂ ಸಮ್ಮಾಸಂಬುದ್ಧನೂ ಆದ ಕಸ್ಸಪನ ಆಯುಃಪ್ರಮಾಣವು ಇಪ್ಪತ್ತು ಸಾವಿರ ವರ್ಷಗಳಾಗಿತ್ತು. ಈ ಕಲ್ಪದವನಾದ ನನಗೆ ಆಯುಃಪ್ರಮಾಣವು ಬಹುಕಡಿಮೆ. ನೂರು ವರ್ಷಗಳಿಗಿಂತ ಸ್ವಲ್ಪ ಹೆಚ್ಚು ಕಡಿಮೆ ಬದುಕುವವರೂ ಚಿರಂಜೀವಿಗಳೆನ್ನಿಸಿಕೊಳ್ಳುತ್ತಾರೆ.

“ಭಿಕ್ಷುಗಳೇ, ಭಗವಂತನೂ ಅರಹಂತನೂ ಸಮ್ಮಾಸಂಬುದ್ಧನೂ ಆದ ವಿಪಸ್ಸಿಯು ಪಾಟಲಿಮರದ ಬುಡದಲ್ಲಿ ಸಂಬುದ್ಧನಾದನು. ಭಗವಂತನೂ ಅರಹಂತನೂ ಸಮ್ಮಾಸಂಬುದ್ಧನೂ ಆದ ಸಿಖಿಯು ಪುಂಡರೀಕ ಮರದ ಬುಡದಲ್ಲಿ ಸಂಬುದ್ಧನಾದನು. ಭಗವಂತನೂ ಅರಹಂತನೂ ಸಮ್ಮಾಸಂಬುದ್ಧನೂ ಆದ ವೆಸ್ಸಭೂ ಸಾಲ ಮರದ ಬುಡದಲ್ಲಿ ಸಂಬುದ್ಧನಾದನು. ಭಗವಂತನೂ ಅರಹಂತನೂ ಸಮ್ಮಾಸಂಬುದ್ಧನೂ ಆದ ಕಕುಸಂಧ ಸಿರೀಸ ಮರದ ಬುಡದಲ್ಲಿ ಸಂಬುದ್ಧನಾದನು. ಭಗವಂತನೂ ಅರಹಂತನೂ ಸಮ್ಮಾಸಂಬುದ್ಧನೂ ಆದ ಕೋಣಗಮನ ಔದಂಬರ ಮರದ ಬುಡದಲ್ಲಿ ಸಂಬುದ್ಧನಾದನು. ಭಗವಂತನೂ ಅರಹಂತನೂ ಸಮ್ಮಾಸಂಬುದ್ಧನೂ ಆದ ಕಸ್ಸಪನು ನಿಗ್ರೋಧ ಮರದ ಬುಡದಲ್ಲಿ ಸಂಬುದ್ಧನಾದನು. ಭಿಕ್ಷುಗಳೇ, ಇಂದು ಅರಹಂತನೂ ಸಮ್ಮಾಸಂಬುದ್ಧನೂ ಆದ ನಾನು ಅರಳಿಯ ಮರದ ಬುಡದಲ್ಲಿ ಬೋಧಿಯನ್ನು ಪಡೆದೆ.

ಭಿಕ್ಷುಗಳೇ, ಭಗವಂತನೂ ಅರಹಂತನೂ ಸಮ್ಮಾಸಂಬುದ್ಧನೂ ಆದ ವಿಪಸ್ಸಿಗೆ ಖಂಡ ಮತ್ತು ತಿಪ್ಪ ಎಂಬ ಶ್ರೇಷ್ಠರೂ ಸಚ್ಚಾರಿತ್ರ್ಯರೂ ಆದ ಇಬ್ಬರು ಆಪ್ತ ಶಿಷ್ಯರಿದ್ದರು. ಭಗವಂತನೂ ಅರಹಂತನೂ ಸಮ್ಮಾಸಂಬುದ್ಧನೂ ಆದ ಸಿಖಿಗೆ ಅಭಿಭೂ-ಸಂಭವ ಎಂಬ ಶ್ರೇಷ್ಠರೂ ಸಚ್ಚಾರಿತ್ರ್ಯರೂ ಆದ ಇಬ್ಬರು ಆಪ್ತ ಶಿಷ್ಯರಿದ್ದರು. ಭಗವಂತನೂ ಅರಹಂತನೂ ಸಮ್ಮಾಸಂಬುದ್ಧನೂ ಆದ ವೆಸ್ಸಭೂಗೆ ಸೋಣ-ಉತ್ತರ ಎಂಬ ಶ್ರೇಷ್ಠರೂ ಸಚ್ಚಾರಿತ್ರ್ಯರೂ ಆದ ಇಬ್ಬರು ಆಪ್ತ ಶಿಷ್ಯರಿದ್ದರು. ಭಗವಂತನೂ ಅರಹಂತನೂ ಸಮ್ಮಾಸಂಬುದ್ಧನೂ ಆದ ಕಕುಸಂಧನಿಗೆ ವಿಧುರ-ಸಂಜೀವ ಎಂಬ ಶ್ರೇಷ್ಠರೂ ಸಚ್ಚಾರಿತ್ರ್ಯರೂ ಆದ ಇಬ್ಬರು ಆಪ್ತ ಶಿಷ್ಯರಿದ್ದರು. ಭಗವಂತನೂ ಅರಹಂತನೂ ಸಮ್ಮಾಸಂಬುದ್ಧನೂ ಆದ ಕೋಣಗಮನನಿಗೆ ಭಿಯ್ಯೋಸ-ಉತ್ತರ ಎಂಬ ಶ್ರೇಷ್ಠರೂ ಸಚ್ಚಾರಿತ್ರ್ಯರೂ ಆದ ಇಬ್ಬರು ಆಪ್ತ ಶಿಷ್ಯರಿದ್ದರು. ಭಗವಂತನೂ ಅರಹಂತನೂ ಸಮ್ಮಾಸಂಬುದ್ಧನೂ ಆದ ಕಸ್ಸಪನಿಗೆ ತಿಸ್ಸ-ಭಾರದ್ವಾಜ ಎಂಬ ಶ್ರೇಷ್ಠರೂ ಸಚ್ಚಾರಿತ್ರ್ಯರೂ ಆದ ಇಬ್ಬರು ಆಪ್ತ ಶಿಷ್ಯರಿದ್ದರು. ಭಿಕ್ಷುಗಳೇ, ಇಂದು ನನಗೆ ಸಾರಿಪುತ್ತ-ಮೊಗ್ಗಲ್ಲಾನ ಎಂಬ ಶ್ರೇಷ್ಠರೂ ಸಚ್ಚಾರಿತ್ರ್ಯವುಳ್ಳವರೂ ಆದ ಯಮಳ ಶಿಷ್ಯರಿದ್ದಾರೆ.

“ಭಿಕ್ಷುಗಳೇ, ಭಗವಂತನೂ ಅರಹಂತನೂ ಸಮ್ಮಾಸಂಬುದ್ಧನೂ ಆದ ವಿಪಸ್ಸಿಗೆ ಒಟ್ಟೊಟ್ಟಾಗಿ ಸೇರುತ್ತಿದ್ದ ಶಿಷ್ಯರ ಮೂರು ಗುಂಪುಗಳಿದ್ದವು. ಒಂದು ಗುಂಪಿನಲ್ಲಿ ಒಟ್ಟಾಗಿ ಸೇರುತ್ತಿದ್ದ ಅರವತ್ತೆಂಟು ಲಕ್ಷ ಭಿಕ್ಷುಗಳಿದ್ದರು. ಇನ್ನೊಂದು ಗುಂಪಿನಲ್ಲಿ ಒಟ್ಟಾಗಿ ಸೇರುತ್ತಿದ್ದ ಒಂದು ಲಕ್ಷ ಭಿಕ್ಷುಗಳಿದ್ದರು. ಮತ್ತೊಂದು ಗುಂಪಿನಲ್ಲಿ ಒಟ್ಟಾಗಿ ಸೇರುತ್ತಿದ್ದ ಎಂಬತ್ತು ಸಾವಿರ ಭಿಕ್ಷುಗಳಿದ್ದರು. ಭಗವಂತನೂ ಅರಹಂತನೂ ಸಮ್ಮಾಸಂಬುದ್ಧನೂ ಆದ ವಿಪಸ್ಸಿಗೆ ಇದ್ದ ಈ ಮೂರು ಗುಂಪಿನ ಶಿಷ್ಯರೂ ಆಸವಗಳನ್ನು ನಾಶ ಮಾಡಿಕೊಂಡ ಖೀಣಾಸವರಾಗಿದ್ದರು.

“ಭಿಕ್ಷುಗಳೇ, ಭಗವಂತನೂ ಅರಹಂತನೂ ಸಮ್ಮಾಸಂಬುದ್ಧನೂ ಆದ ಸಿಖಿಗೆ ಒಟ್ಟೊಟ್ಟಾಗಿ ಸೇರುತ್ತಿದ್ದ ಶಿಷ್ಯರ ಮೂರು ಗುಂಪುಗಳಿದ್ದವು. ಒಂದು ಗುಂಪಿನಲ್ಲಿ ಒಟ್ಟಾಗಿ ಸೇರುತ್ತಿದ್ದ ಒಂದು ಲಕ್ಷ ಭಿಕ್ಷುಗಳಿದ್ದರು. ಎರಡನೆಯ ಗುಂಪಿನಲ್ಲಿ ಒಟ್ಟಾಗಿ ಸೇರುತ್ತಿದ್ದ ಎಂಬತ್ತು ಸಾವಿರ ಭಿಕ್ಷುಗಳಿದ್ದರು. ಮೂರನೆಯ ಗುಂಪಿನಲ್ಲಿ ಒಟ್ಟಾಗಿ ಸೇರುತ್ತಿದ್ದ ಎಪ್ಪತ್ತುಸಾವಿರ ಭಿಕ್ಷುಗಳಿದ್ದರು. ಭಗವಂತನೂ ಅರಹಂತನೂ ಸಮ್ಮಾಸಂಬುದ್ಧನೂ ಆದ ಸಿಖಿಗೆ ಇದ್ದ ಈ ಮೂರು ಗುಂಪಿನ ಶಿಷ್ಯರೂ ಆಸವಗಳನ್ನು ನಾಶಮಾಡಿಕೊಂಡ ಖೀಣಾಸವರಾಗಿದ್ದರು.

“ಭಿಕ್ಷುಗಳೇ, ಭಗವಂತನೂ ಅರಹಂತನೂ ಸಮ್ಮಾಸಂಬುದ್ಧನೂ ಆದ ವೆಸ್ಸಭೂಗೆ ಒಟ್ಟೊಟ್ಟಾಗಿ ಸೇರುತ್ತಿದ್ದ ಶಿಷ್ಯರ ಮೂರು ಗುಂಪುಗಳಿದ್ದವು. ಮೊದಲನೆಯ ಗುಂಪಿನಲ್ಲಿ ಒಟ್ಟಾಗಿ ಸೇರುತ್ತಿದ್ದ ಎಂಬತ್ತು ಸಾವಿರ ಭಿಕ್ಷುಗಳಿದ್ದರು. ಎರಡನೆಯ ಗುಂಪಿನಲ್ಲಿ ಒಟ್ಟಾಗಿ ಸೇರುತ್ತಿದ್ದ ಎಪ್ಪತ್ತು ಸಾವಿರ ಭಿಕ್ಷುಗಳಿದ್ದರು. ಮೂರನೆಯ ಗುಂಪಿನಲ್ಲಿ ಒಟ್ಟಾಗಿ ಸೇರುತ್ತಿದ್ದ ಅರವತ್ತು ಸಾವಿರ ಭಿಕ್ಷುಗಳಿದ್ದರು. ಭಗವಂತನೂ ಅರಹಂತನೂ ಸಮ್ಮಾಸಂಬುದ್ಧನೂ ಆದ ವೆಸ್ಸಭೂಗೆ ಇದ್ದ ಈ ಮೂರು ಗುಂಪಿನ ಶಿಷ್ಯರೂ ಆಸವಗಳನ್ನು ನಾಶಮಾಡಿಕೊಂಡ ಖೀಣಾಸವರಾಗಿದ್ದರು.

“ಭಿಕ್ಷುಗಳೇ, ಭಗವಂತನೂ ಅರಹಂತನೂ ಸಮ್ಮಾಸಂಬುದ್ಧನೂ ಆದ ಕಕುಸಂಧನಿಗೆ ಶಿಷ್ಯರ ಒಂದೇ ಗುಂಪಿದ್ದಿತು. ಇದರಲ್ಲಿ ನಲವತ್ತು ಸಾವಿರ ಭಿಕ್ಷುಗಳಿದ್ದರು. ಭಗವಂತನೂ ಅರಹಂತನೂ ಸಮ್ಮಾಸಂಬುದ್ಧನೂ ಆದ ಕಕುಸಂಧನಿಗೆ ಇದ್ದ ಈ ಗುಂಪಿನ ಶಿಷ್ಯರೂ ಆಸವಗಳನ್ನು ನಾಶಮಾಡಿಕೊಂಡ ಖೀಣಾಸವರಾಗಿದ್ದರು.

“ಭಿಕ್ಷುಗಳೇ, ಭಗವಂತನೂ ಅರಹಂತನೂ ಸಮ್ಮಾಸಂಬುದ್ಧನೂ ಆದ ಕೋಣಾಗಮನನಿಗೆ ಶಿಷ್ಯರ ಒಂದೇ ಗುಂಪಿದ್ದಿತು. ಇದರಲ್ಲಿ ಮೂವತ್ತು ಸಾವಿರ ಭಿಕ್ಷುಗಳಿದ್ದರು. ಭಗವಂತನೂ ಅರಹಂತನೂ ಸಮ್ಮಾಸಂಬುದ್ಧನೂ ಆದ ಕೋಣಾಗಮನನಿಗೆ ಇದ್ದ ಈ ಗುಂಪಿನ ಶಿಷ್ಯರೂ ಆಸವಗಳನ್ನು ನಾಶಮಾಡಿಕೊಂಡ ಖೀಣಾಸವರಾಗಿದ್ದರು.

“ಭಿಕ್ಷುಗಳೇ, ಭಗವಂತನೂ ಅರಹಂತನೂ ಸಮ್ಮಾಸಂಬುದ್ಧನೂ ಆದ ಕಸ್ಸಪನಿಗೆ ಶಿಷ್ಯರ ಒಂದೇ ಗುಂಪಿದ್ದಿತು. ಇದರಲ್ಲಿ ಇಪತ್ತು ಸಾವಿರ ಭಿಕ್ಷುಗಳಿದ್ದರು. ಭಗವಂತನೂ ಅರಹಂತನೂ ಸಮ್ಮಾಸಂಬುದ್ಧನೂ ಆದ ಕಸ್ಸಪನಿಗೆ ಇದ್ದ ಈ ಗುಂಪಿನ ಶಿಷ್ಯರೂ ಆಸವಗಳನ್ನು ನಾಶಮಾಡಿಕೊಂಡ ಖೀಣಾಸವರಾಗಿದ್ದರು.

“ಭಿಕ್ಷುಗಳೇ, ನನಗೆ ಒಂದು ಸಾವಿರದ ಇನ್ನೂರೈವತ್ತು ಭಿಕ್ಷುಗಳ ಒಂದು ಗುಂಪಿದೆ. ಇವರೆಲ್ಲರೂ ಆಸವಗಳನ್ನು ನಾಶಮಾಡಿಕೊಂಡ ಖೀಣಾಸವರಾಗಿದ್ದರು.

“ಭಿಕ್ಷುಗಳೇ, ಭಗವಂತನೂ ಅರಹಂತನೂ ಸಮ್ಮಾಸಂಬುದ್ಧನೂ ಆದ ವಿಪಸ್ಸಿಗೆ ಅಸೋಕ ಎಂಬ ಭಿಕ್ಷುವು ಅಗ್ರ ಆಪ್ತ ಶಿಷ್ಯನಾಗಿದ್ದನು. ಭಗವಂತನೂ ಅರಹಂತನೂ ಸಮ್ಮಾಸಂಬುದ್ಧನೂ ಆದ ಸಿಖಿಗೆ ಖೇಮಂಕರ ಎಂಬ ಭಿಕ್ಷುವು ಅಗ್ರ ಆಪ್ತ ಶಿಷ್ಯನಾಗಿದ್ದನು. ಭಗವಂತನೂ ಅರಹಂತನೂ ಸಮ್ಮಾಸಂಬುದ್ಧನೂ ಆದ ವೆಸ್ಸಭೂಗೆ ಉಪಸಂತ ಎಂಬ ಭಿಕ್ಷುವು ಅಗ್ರ ಆಪ್ತ ಶಿಷ್ಯನಾಗಿದ್ದನು. ಭಗವಂತನೂ ಅರಹಂತನೂ ಸಮ್ಮಾಸಂಬುದ್ಧನೂ ಆದ ಕಕುಸಂಧನಿಗೆ ಬುದ್ಧಿಜ ಎಂಬ ಭಿಕ್ಷುವು ಅಗ್ರ ಆಪ್ತ ಶಿಷ್ಯನಾಗಿದ್ದನು. ಭಗವಂತನೂ ಅರಹಂತನೂ ಸಮ್ಮಾಸಂಬುದ್ಧನೂ ಆದ ಕೋಣಾಗಮನನಿಗೆ ಸೊತ್ಥಿಜ ಎಂಬ ಭಿಕ್ಷುವು ಅಗ್ರ ಆಪ್ತ ಶಿಷ್ಯನಾಗಿದ್ದನು. ಭಗವಂತನೂ ಅರಹಂತನೂ ಸಮ್ಮಾಸಂಬುದ್ಧನೂ ಆದ ಕಸ್ಸಪನಿಗೆ ಸಬ್ಬಮಿತ್ತ ಎಂಬ ಭಿಕ್ಷುವು ಅಗ್ರ ಆಪ್ತ ಶಿಷ್ಯನಾಗಿದ್ದನು. ಭಿಕ್ಷುಗಳೇ, ನನಗೆ ಈಗ ಆನಂದನು ಅಗ್ರ ಆಪ್ತ ಶಿಷ್ಯನಾಗಿದ್ದಾನೆ.

“ಭಿಕ್ಷುಗಳೇ, ಭಗವಂತನೂ ಅರಹಂತನೂ ಸಮ್ಮಾಸಂಬುದ್ಧನೂ ಆದ ವಿಪಸ್ಸಿಗೆ ಬಂಧುಮಾ ಎನ್ನುವ ರಾಜನೇ ತಂದೆ, ಬಂಧುಮತೀ ದೇವಿಯೇ ತಾಯಿ. ಬಂಧುಮತಿ ಎಂಬ ನಗರವು ಬಂಧುಮಾ ರಾಜನಿಗೆ ರಾಜಧಾನಿಯಾಗಿತ್ತು.

“ಭಿಕ್ಷುಗಳೇ, ಭಗವಂತನೂ ಅರಹಂತನೂ ಸಮ್ಮಾಸಂಬುದ್ಧನೂ ಆದ ಸಿಖಿಗೆ ಅರುಣ ಎನ್ನುವ ರಾಜನೇ ತಂದೆ, ವಿಭಾವತಿ ದೇವಿಯೇ ತಾಯಿ. ಅವರಿಗೆ ಅರುಣವತೀ ನಗರವು ಅರುಣ ರಾಜನಿಗೆ ರಾಜಧಾನಿಯಾಗಿತ್ತು.

“ಭಿಕ್ಷುಗಳೇ, ಭಗವಂತನೂ ಅರಹಂತನೂ ಸಮ್ಮಾಸಂಬುದ್ಧನೂ ಆದ ವೆಸ್ಸಭೂಗೆ ಸುಪ್ಪತಿತ ಎನ್ನುವ ರಾಜನೇ ತಂದೆ, ವಸ್ಸವತಿ ದೇವಿಯೇ ತಾಯಿ. ಅವರಿಗೆ ಮನೋರಮ ನಗರವು ಸುಪ್ಪತಿತ ರಾಜನಿಗೆ ರಾಜಧಾನಿಯಾಗಿತ್ತು.

“ಭಿಕ್ಷುಗಳೇ, ಭಗವಂತನೂ ಅರಹಂತನೂ ಸಮ್ಮಾಸಂಬುದ್ಧನೂ ಆದ ಕಕುಸಂಧನಿಗೆ ಅಗ್ಗದತ್ತನು ತಂದೆಯಾಗಿಯೂ ವಿಸಾಖಳು ತಾಯಿಯಾಗಿರೂ ಇದ್ದರು. ಅವರು ಬ್ರಾಹ್ಮಣರು. ಆಗ ಖೇಮ ಎಂಬುವನು ರಾಜನಾಗಿದ್ದನು. ಖೇಮವತೀ ಪಟ್ಟಣವು ಅವನಿಗೆ ರಾಜಧಾನಿಯಾಗಿತ್ತು.

“ಭಿಕ್ಷುಗಳೇ, ಭಗವಂತನೂ ಅರಹಂತನೂ ಸಮ್ಮಾಸಂಬುದ್ಧನೂ ಆದ ಕೋಣಗಮನನ ತಂದೆ ಯಜ್ಞದತ್ತ ಮತ್ತು ತಾಯಿ ಉತ್ತರಾ ಎಂಬ ಬ್ರಾಹ್ಮಣ ಬ್ರಾಹ್ಮಣಿಯರು. ಆಗ ಸೋಭ ಎಂಬುವನು ರಾಜನಾಗಿದ್ದನು. ಅವನಿಗೆ ಸೋಭವತೀ ನಗರವು ರಾಜಧಾನಿಯಾಗಿದ್ದಿತು.

“ಭಿಕ್ಷುಗಳೇ, ಭಗವಂತನೂ ಅರಹಂತನೂ ಸಮ್ಮಾಸಂಬುದ್ಧನೂ ಆದ ಕಸ್ಸಪನಿಗೆ ಬ್ರಹ್ಮದತ್ತ ಮತ್ತು ಧನವತೀ ಎಂಬುವರು ತಂದೆ-ತಾಯಿಗಳಾಗಿದ್ದರು. ಅವರು ಬ್ರಾಹ್ಮಣರು. ಆ ಕಾಲದಲ್ಲಿ ಕಿಕೀ ಎಂಬ ರಾಜನು ಆಳುತ್ತಿದ್ದನು. ಅವನಿಗೆ ವಾರಾಣಸಿ ನಗರವು ರಾಜಧಾನಿಯಾಗಿತ್ತು.

“ಭಿಕ್ಷುಗಳೇ, ನನಗೆ ಸುದ್ಧೋಧನ ರಾಜನು ತಂದೆ. ಮಾಯಾದೇವಿಯು ತಾಯಿ. ಕಪಿಲವತ್ಥುವೇ ರಾಜಧಾನಿ.”

ಭಗವಾನರು ಹೀಗೆ ಹೇಳಿದರು. ಹೀಗೆ ಹೇಳಿ ಆಸನದಿಂದೆದ್ದು ವಿಹಾರಕ್ಕೆ ಹೋದರು.

ಭಗವಾನರು ಸ್ಥಳವನ್ನು ಬಿಟ್ಟ ಸ್ವಲ್ಪ ಹೊತ್ತಿನಲ್ಲಿಯೇ ಭಿಕ್ಷುಗಳಲ್ಲಿ ಒಂದು ಚರ್ಚೆ ಆರಂಭವಾಯಿತು. “ಆಶ್ಚರ್ಯ ! ಗೆಳೆಯರೇ, ಅದ್ಭುತ ! ಗೆಳೆಯರೇ, ಮಹಾಶಕ್ತರೂ ಮಹಾನುಭಾವರೂ ಆದ ತಥಾಗತರು ಪರಿನಿರ್ವಾಣವನ್ನು ಪಡೆದ ಪಂಚನೀವರಣಗಳನ್ನು ಕಳೆದುಕೊಂಡು ತಡೆಗಳೆಲ್ಲವನ್ನೂ ದಾಟಿದ ಸಂಸಾರ ಚಕ್ರದಿಂದ ಬಿಡುಗಡೆಯಾದ ಮತ್ತು ಎಲ್ಲ ದುಃಖಗಳನ್ನೂ ನಿರ್ಮೂಲ ಮಾಡಿಕೊಂಡ ಹಿಂದಿನ ಬುದ್ಧರನ್ನು ನೆನಪಿಗೆ ತಂದುಕೊಳ್ಳಬಲ್ಲರು. ಅವರ ಜಾತಿ ಅವರ ಹೆಸರು ಅವರ ಗೋತ್ರ ಅವರ ಆಯುಃಪ್ರಮಾಣ ಅವರ ಶಿಷ್ಯ ಯಮಳರು ಒಟ್ಟಿಗೆ ಸೇರುತ್ತಿದ್ದ ಅವರ ಇತರ ಶಿಷ್ಯರು - ಇವೆಲ್ಲವನ್ನೂ ಜ್ಞಾಪಕದಲ್ಲಿಟ್ಟುಕೊಂಡಿದ್ದಾರೆ. ಆ ಭಗವಂತರು ಹುಟ್ಟಿದ್ದು ಹೀಗೆ, ಅವರ ಹೆಸರು ಇದು, ಅವರ ಗೋತ್ರ ಇದು, ಅವನ ಶೀಲ ಇದು, ಅವರ ಧರ್ಮಗಳು ಇವು, ಅವರ ಪಞ್ಞಾ ಇದು, ಅವರು ಜೀವಿಸಿದ್ದು ಹೀಗೆ, ಅವರು ಮುಕ್ತಿ ಪಡೆದದ್ದು ಹೀಗೆ ಎಂಬುದನ್ನು ಹೇಳುತ್ತಾರೆ.

“ಗೆಳೆಯರೇ, ತಥಾಗತನಿಗೆ ಅವನೇ ಅರಿತುಕೊಂಡ ಧಮ್ಮಧಾತುವಿನಿಂದಾಗಿ, ಪರಿನಿರ್ವಾಣವನ್ನು ಪಡೆದ ಪಂಚನೀವರಣಗಳನ್ನು ತೊಡೆದುಹಾಕಿದ ಅಡಚಣೆಗಳನ್ನು ದಾಟಿದ ಸಂಸಾರ ಚಕ್ರದಿಂದ ಬಿಡಿಸಿಕೊಂಡ ಎಲ್ಲ ದುಃಖಗಳನ್ನೂ ನಾಶಮಾಡಿಕೊಂಡ ಹಿಂದಿನ ಬುದ್ಧರೆಲ್ಲರನ್ನೂ ನೆನಪಿಗೆ ತಂದುಕೊಳ್ಳಲು ಸಾಧ್ಯವಾಯಿತಲ್ಲವೇ! ಅವರ ಜಾತಿ, ಅವರ ಹೆಸರು, ಅವರ ಗೋತ್ರ, ಅವರ ಶಿಷ್ಯರು ಇವೆಲ್ಲವನ್ನೂ ಜ್ಞಾಪಿಸಿಕೊಂಡ ಆ ಭಗವಂತರು ಹುಟ್ಟಿದ್ದು ಹೀಗೆ, ಅವರ ಹೆಸರು ಇದು, ಅವರ ಪಞ್ಞಾ ಇದು, ಅವರು ಜೀವಿಸಿದ್ದು ಹೀಗೆ. ಅವರು ಮುಕ್ತಿ ಪಡೆದಿದ್ದು ಹೀಗೆ’ ಎಂದು ಧಮ್ಮಧಾತೂವಿನಿಂದಾಗಿ ಹೇಳಬಲ್ಲವರಾದರಲ್ಲವೆ ! ದೇವತೆಗಳು ತಥಾಗತನಿಗೆ ಇಂಥ ಜ್ಞಾನವನ್ನು ಕೊಟ್ಟಿರುವರಲ್ಲವೆ!”

ಆ ಭಿಕ್ಷುಗಳ ಚರ್ಚೆಯ ವಿಷಯ ಇದಾಗಿತ್ತಷ್ಟೆ. ಆಗ ಸಾಯಂಕಾಲವಾಗಿತ್ತು. ಆಗ ಭಗವಾನರು ಧ್ಯಾನದಿಂದೆದ್ದು, ಕರೇರಿ ಮಂಟಪದ ಕಡೆಗೆ ಬಂದರು. ಬಂದು ಅವರಿಗಾಗಿ ಪ್ರತ್ಯೇಕವಾಗಿ ಇದ್ದ ಆಸನದಲ್ಲಿ ಕುಳಿತರು. ಕುಳಿತುಕೊಂಡ ಮೇಲೆ ಭಗವಾನರು ಭಿಕ್ಷುಗಳನ್ನು ಕುರಿತು ಇಂತೆಂದರು: “ಭಿಕ್ಷುಗಳೇ, ಇಲ್ಲಿ ಕುಳಿತಿರುವ ನೀವು ಯಾವುದನ್ನು ಚರ್ಚಿಸುತ್ತಿದ್ದೀರಿ? ನಿಮ್ಮ ಚರ್ಚೆಯ ವಿಷಯ ಏನು?”

ಹೀಗೆ ಕೇಳಿದ ಭಗವಾನರಿಗೆ ಆ ಭಿಕ್ಷುಗಳು- “ಭಗವಾನರು ಇಲ್ಲಿಂದ ಹೋದ ಸ್ವಲ್ಪಹೊತ್ತಿನಲ್ಲಿಯೇ ನಮ್ಮಲ್ಲಿ ಒಂದು ಚರ್ಚೆ ಹುಟ್ಟಿಕೊಂಡಿತು- ‘ಆಶ್ಚರ್ಯ! ಗಳೆಯರೆ, ಅದ್ಭುತ! ಗೆಳೆಯರೆ, ಮಹಾಶಕ್ತರೂ ಮಹಾನುಭಾವರೂ ಆದ ತಥಾಗತರು ಪರಿನಿರ್ವಾಣವನ್ನು ಪಡೆದ ಪಂಚನೀವರಣಗಳನ್ನು ಕಳೆದುಕೊಂಡು ತಡೆಗಳೆಲ್ಲವನ್ನೂ ದಾಟಿದ ಸಂಸಾರ ಚಕ್ರದಿಂದ ಬಿಡುಗಡೆಯಾದ ಮತ್ತು ಎಲ್ಲ ದುಃಖಗಳನ್ನೂ ನಾಶಮಾಡಿಕೊಂಡ ಹಿಂದಿನ ಬುದ್ಧರನ್ನು ನೆನಪಿಗೆ ತಂದುಕೊಳ್ಳಬಲ್ಲರು. ಅವರ ಜಾತಿ ಅವರ ಹೆಸರು ಅವರ ಗೋತ್ರ ಅವರ ಆಯುಃಪ್ರಮಾಣ ಅವರ ಶಿಷ್ಯ ಯಮಳರು ಒಟ್ಟಿಗೆ ಸೇರುತ್ತಿದ್ದ ಅವರ ಇತರ ಶಿಷ್ಯರು- ಇವೆಲ್ಲವನ್ನೂ ಜ್ಞಾಪಕದಲ್ಲಿಟ್ಟುಕೊಂಡಿದ್ದಾರೆ. ಆ ಭಗವಂತರು ಹುಟ್ಟಿದ್ದು ಹೀಗೆ ಅವರ ಹೆಸರು ಇದು ಅವರ ಗೋತ್ರ ಇದು ಅವರ ಶೀಲ ಇದು ಅವರ ಧರ್ಮ ಇದು ಪಞ್ಞಾ ಇದು ಅವರು ಜೀವಿಸಿದ್ದು ಹೀಗೆ ಅವರು ಮುಕ್ತಿ ಪಡೆದದ್ದು ಹೀಗೆ ಎಂಬುದನ್ನು ಹೇಳುತ್ತಾರೆ. ಗೆಳೆಯರೇ, ಧಮ್ಮಧಾತುವಿನಿಂದಾಗಿ ಹೇಳಬಲ್ಲವರಾಗಿರುವರಲ್ಲವೇ! ದೇವತೆಗಳು ತಥಾಗತನಿಗೆ ಇಂಥ ಜ್ಞಾನವನ್ನು ಕೊಟ್ಟಿರುವರಲ್ಲವೇ?’ ಎಂಬುದಾಗಿ ಮಾತನಾಡಿಕೊಳ್ಳುತ್ತಿದ್ದೆವು.”

“ಭಿಕ್ಷುಗಳೇ, ತಥಾಗತನೇ ಸಾಧಿಸಿದ ಧಮ್ಮಧಾತುವಿನಿಂದಲೇ ತಥಾಗತನಿಗೆ ಪರಿನಿರ್ವಾಣವನ್ನು ಪಡೆದ ಪಂಚನೀವರಣಗಳನ್ನು ಕಳೆದುಕೊಂಡ ತಡೆಗಳೆಲ್ಲವನ್ನೂ ದಾಟಿದ ಸಂಸಾರ ಚಕ್ರದಿಂದ ಬಿಡಿಸಿಕೊಂಡ ದುಃಖಗಳೆಲ್ಲವನ್ನೂ ಗೆದ್ದ ಹಿಂದಿನ ಬುದ್ಧರನ್ನು ನೆನಪಿಗೆ ತಂದುಕೊಳ್ಳಲು ಸಾಧ್ಯವಾಯಿತು. ಅವರ ಜಾತಿ ಅವರ ಹೆಸರು ಅವರ ಗೋತ್ರ ಅವರ ಆಯುಃಪ್ರಮಾಣ ಅವರ ಶಿಷ್ಯ ಯಮಳರು ಒಟ್ಟಿಗೆ ಸೇರುತ್ತಿದ್ದ ಭಿಕ್ಷುಗಳ ಸಂಖ್ಯೆ- ಇವೆಲ್ಲವನ್ನೂ ಜ್ಞಾಪಿಸಿಕೊಳ್ಳಬಲ್ಲವರಾದರು. ಅವರು ಹುಟ್ಟಿದ್ದು ಹೀಗೆ, ಅವರ ಹೆಸರು ಇದು, ಅವರ ಗೋತ್ರ ಇದು, ಅವರ ಶೀಲಗಳು ಇವು, ಅವರ ಧರ್ಮಗಳು ಇವು, ಅವರ ಪಞ್ಞಾ ಇದು, ಅವರು ಜೀವಿಸಿದ್ದು ಹೀಗೆ, ಅವರು ಮುಕ್ತಿ ಪಡೆದಿದ್ದು ಹೀಗೆ ಎಂಬುದನ್ನು ನೆನಪಿಗೆ ತಂದುಕೊಳ್ಳಬಲ್ಲವರಾದರು. ದೇವತೆಗಳೂ ಅವರಿಗೆ ಈ ಜ್ಞಾನವನ್ನು ಕೊಟ್ಟರು.

“ಭಿಕ್ಷುಗಳೇ, ಹಿಂದಿನ ಬುದ್ಧರ ಧರ್ಮಕಥೆಯನ್ನು ಕೇಳಲು ನಿಮಗೆ ಇಚ್ಛೆ ಇದೆಯೇ ?”

“ಭಗವಾನರೇ, ಇದು ಸಕಾಲವಾಗಿದೆ, ಕೇಳಲು ಇದು ಸಕಾಲವಾಗಿದೆ ಸುಗತರೇ.”

“ಭಿಕ್ಷುಗಳೇ, ಕೇಳಿ, ಮನಸ್ಸಿಟ್ಟು ಕೇಳುವುದು ಸಾಧುವಾದುದು, ಹೇಳುತ್ತೇನೆ.”

“ಹಾಗೆಯೇ ಆಗಲಿ ಭಂತೆ” ಎಂದು ಆ ಭಿಕ್ಷುಗಳು ಭಗವಾನರಿಗೆ ಹೇಳಿದರು. ಭಗವಾನರು ಹೀಗೆಂದರು-

“ಭಿಕ್ಷುಗಳೇ, ಇಂದಿಗೆ ತೊಂಬತ್ತೊಂದು ಕಲ್ಪಗಳ ಹಿಂದೆ ಭಗವಂತನೂ ಅರಹಂತನೂ ಸಮ್ಮಾಸಂಬುದ್ಧನೂ ಆದ ವಿಪಸ್ಸಿಯು ಲೋಕದಲ್ಲಿ ಹುಟ್ಟಿದನು. ಆತನು ಹುಟ್ಟಿದ್ದು ಕ್ಷತ್ರಿಯ ಕುಲದಲ್ಲಿ. ಆತನದು ಕೊಡಞ್ಞ ಗೋತ್ರವಾಗಿತ್ತು. ಆತನ ಆಯುಃಪ್ರಮಾಣವು ಎಂಬತ್ತು ಸಾವಿರ ವರ್ಷಗಳಷ್ಟಾಗಿತ್ತು. ಪಾಟಿಲ ಮರದ ಕೆಳಗೆ ವಿಪಸ್ಸಿಯು ಸಮ್ಮಾಸಂಬುದ್ಧನಾದನು. ಖಂಡ ಮತ್ತು ತಿಸ್ಸ ಎಂಬುವರು ಅವನ ಶಿಷ್ಯ ಯಮಳರಾಗಿದ್ದರು. ಮೂರು ಗುಂಪಿನ ಶಿಷ್ಯರು ಆತನಿಗಿದ್ದರು. ಒಂದು ಗುಂಪಿನಲ್ಲಿ ಅರವತ್ತೆಂಟು ಲಕ್ಷ ಭಿಕ್ಷುಗಳಿದ್ದರು. ಅವರೆಲ್ಲರೂ ಒಟ್ಟಾಗಿ ಸೇರುತ್ತಿದ್ದರು. ಹಾಗೆಯೇ ಮತ್ತೆರಡು ಗುಂಪುಗಳಿದ್ದವು. ಎರಡನೆಯ ಗುಂಪಿನಲ್ಲಿ ಒಟ್ಟಾಗಿ ಸೇರುತ್ತಿದ್ದ ಒಂದು ಲಕ್ಷ ಶಿಷ್ಯರೂ, ಮೂರನೆಯ ಗುಂಪಿನಲ್ಲಿ ಎಂಬತ್ತು ಸಾವಿರ ಭಿಕ್ಷುಗಳೂ ಇರುತ್ತಿದ್ದರು. ಅವರೆಲ್ಲರೂ ಖೀಣಾಸವರಾಗಿದ್ದರು. ಆತನಿಗೆ ಅಸೋಕ ಎಂಬ ಅಗ್ರ ಆಪ್ತ ಶಿಷ್ಯನಿದ್ದನು. ಭಿಕ್ಷುಗಳೇ, ವಿಪಸ್ಸಿಗೆ ಬಂಧುಮಾ ರಾಜನೇ ತಂದೆ; ಬಂಧಮತೀ ದೇವಿಯು ತಾಯಿ, ಬಂಧಮತೀ ನಗರವು ಬಂಧುಮಾ ರಾಜನ ರಾಜಧಾನಿಯಾಗಿತ್ತು.

ಭೋಧಿಸತ್ವ ಧರ್ಮವು

“ಭಿಕ್ಷುಗಳೇ, ವಿಪಸ್ಸಿ ಬೋಧಿಸತ್ವನು ತುಸಿತಾ ದೇವಲೋಕದಿಂದ ಇಳಿದು ತಾಯಿಯ ಹೊಟ್ಟೆಯನ್ನು ಹೊಕ್ಕನು. ಆಗ ಅವನ ಚಿತ್ತವು ಪೂರ್ಣ ಎಚ್ಚರಗೊಂಡಿತ್ತು. ಇದು ಧರ್ಮದ ಒಂದು ನಿಯಮ.

“ಇದೂ ಧರ್ಮದ ನಿಯಮವೇ. ತುಸಿತಾ ದೇವಲೋಕದಿಂದ ಇಳಿದು ತಾಯಿಯ ಬಸಿರನ್ನು ಬೋಧಿಸತ್ವನು ಹೊಕ್ಕಾಗ ದೇವತೆಗಳೂ ಮಾರರೂ ಬ್ರಹ್ಮರೂ ಸಮಣ ಬ್ರಾಹ್ಮಣರೂ ಪ್ರಜೆಗಳೂ ದೇವಮನುಷ್ಯರೂ ಇರುವ ಎಲ್ಲ ಲೋಕಗಳೂ ಅಸಾಧಾರಣವಾದ ಕಾಂತಿಯಿಂದ ಬೆಳಗುತ್ತವೆ. ಅದು ಎಲ್ಲ ದೇವತೆಗಳ ಮತ್ತು ಅವರಿಗೆ ಶ್ರೇಷ್ಠರಾದ ಇತರ ದೇವತೆಗಳ ಕಾಂತಿಯನ್ನು ಮೀರಿರುತ್ತದೆ. ಮಹಾನುಭಾವರೂ ಮಹಾಶಕ್ತರೂ ಆದ ಚಂದ್ರ ಸೂರ್ಯರ ಪ್ರಭೆಯೂ ಹೋಗಲಾರದಷ್ಟು ಅಂಧಕಾರದಿಂದ ಆವೃತವಾದ ಲೋಕಗಳೂ ಅವುಗಳ ನಡುವೆ ಇರುವ ಇತರ ಪ್ರದೇಶಗಳೂ ಆ ಕಾಂತಿಯಿಂದ ಬೆಳಗುತ್ತವೆ. ಯಾವ ಜೀವಿಗಳು ಇಲ್ಲಿ ಹುಟ್ಟುತ್ತವೆಯೋ ಅವು ತಮ್ಮ ಕಾಂತಿಯಿಂದ ಪರಸ್ಪರ ತಿಳಿದುಕೊಳ್ಳಬಲ್ಲವರಾಗುತ್ತವೆ. ಇಲ್ಲಿ ಇತರ ಜೀವಿಗಳೂ ಇವೆ ಎಂದು ಅವು ಅರಿತುಕೊಳ್ಳುತ್ತವೆ. ಆಗ ದಶಸಹಸ್ರ ಲೋಕ ಧಾತುಗಳು ಕಂಪಿಸುತ್ತವೆ, ಅದರುತ್ತವೆ ಮತ್ತು ನಡುಗುತ್ತವೆ. ದೇವತೆಗಳ ಮತ್ತು ಅವರ ನಾಯಕರ ಕಾಂತಿಯನ್ನು ಮೀರಿರುವ ಕಾಂತಿಯು ಲೋಕದಲ್ಲಿ ಹುಟ್ಟುತ್ತದೆ. ಇದೂ ಧರ್ಮದ ಒಂದು ನಿಯಮ.

“ಭಿಕ್ಷುಗಳೇ, ಇದು ಧರ್ಮದ ಒಂದು ನಿಯಮ. ಬೋಧಿಸತ್ವನು ಮಾತೃ ಗರ್ಭವನ್ನು ಪ್ರವೇಶಿಸುವಾಗ ನಾಲ್ಕು ಜನ ದೇವಪುತ್ರರು ಅವನನ್ನು ರಕ್ಷಿಸಲು ನಾಲ್ಕು ದಿಕ್ಕುಗಳಿಗೂ ಹೋಗುತ್ತಾರೆ. ‘ಮನುಷ್ಯರಾಗಲೀ ಮನುಷ್ಯೇತರಾಗಲೀ ಬೋಧಿಸತ್ವನನ್ನು ಅವನ ತಾಯಿಯನ್ನೂ ನೋಯಿಸಬಾರದು’ ಎಂದು ಸಾರುತ್ತಾರೆ.

“ಭಿಕ್ಷುಗಳೇ, ಇದೂ ಒಂದು ನಿಯಮ. ಬೋಧಿಸತ್ವನು ತಾಯಿಯ ಬಸಿರನ್ನು ಹೊಕ್ಕಾಗ ಅವನ ತಾಯಿಯು ಪಂಚಶೀಲಗಳನ್ನು ಪರಿಪಾಲಿಸುವ ಶೀಲವತಿಯಾಗಿರುತ್ತಾಳೆ. ಆಕೆ ಪ್ರಾಣಿಯತ್ಯೆಯನ್ನು ಮಾಡುವುದಿಲ್ಲ. ತನಗೆ ಸಲ್ಲದುದನ್ನು ತೆಗೆದುಕೊಳ್ಳುವುದಿಲ್ಲ. ನಿಂದ್ಯವಾದ ಕಾಮದಲ್ಲಿ ತೊಡಗುವುದಿಲ್ಲ. ಸುಳ್ಳು ಹೇಳುವುದಿಲ್ಲ, ಸುರೆ, ಮದ್ಯ ಮುಂತಾದವನ್ನು ಸೇವಿಸುವುದಿಲ್ಲ.

“ಇದೊಂದು ಧರ್ಮದ ನಿಯಮ. ಬೋಧಿಸತ್ವನು ತಾಯಿಯ ಬಸಿರನ್ನು ಹೊಕ್ಕಾಗ ಗಂಡಸರ ಬಯಕೆಯೇ ಆಕೆಯ ಮನಸ್ಸಿನಲ್ಲಿ ಹುಟ್ಟುವುದಿಲ್ಲ. ಗಂಡಸೊಬ್ಬನು ಆಕೆಯಲ್ಲಿ ಎಷ್ಟೇ ಆಸಕ್ತಿಯನ್ನು ತೋರಿಸಲಿ ಆಕೆ ಶೀಲಗಳನ್ನು ಅತಿಕ್ರಮಿಸುವುದಿಲ್ಲ. ಇದೊಂದು ಧರ್ಮದ ನಿಯಮ.

“ಭಿಕ್ಷುಗಳೇ, ಇದೂ ಧರ್ಮದ ಒಂದು ನಿಯಮ. ಬೋಧಿಸತ್ವನು ತಾಯಿಯ ಬಸಿರನ್ನು ಹೊಕ್ಕಾಗ ಬೋಧಿಸತ್ವನ ತಾಯಿಯು ಪಂಚಕಾಮ ಗುಣಗಳಿಂದ ಕೂಡಿದವಳಾಗಿ ಅವುಗಳಿಂದ ಆವೃತಳಾಗಿ ಅವುಗಳಿಂದ ಶುಶ್ರೂಷೆ ಮಾಡಿಸಿಕೊಳ್ಳುವವಳಾಗುತ್ತಾಳೆ. ಇದೊಂದು ಧರ್ಮದ ನಿಯಮ.

“ಇದೂ ಧರ್ಮದ ಒಂದು ನಿಯಮ. ಭಿಕ್ಷುಗಳೇ, ಬೋಧಿಸತ್ವನು ಮಾತೃ ಗರ್ಭವನ್ನು ಪ್ರವೇಶಿಸಿದಾಗ ಆಕೆಗೆ ಯಾವ ಬಾಧೆಯೂ ಉಂಟಾಗುವುದಿಲ್ಲ. ಬೋಧಿಸತ್ವನ ತಾಯಿಯು ಸುಖವಾಗಿರುತ್ತಾಳೆ. ದೇಹದಲ್ಲಿ ಯಾವ ನೋವೂ ಇರುವುದಿಲ್ಲ. ಆಗ ಆಕೆಯು ತನ್ನ ಹೊಟ್ಟೆಯಲ್ಲಿರುವ ಬೋಧಿಸತ್ವನು ಎಲ್ಲ ಅಂಗಗಳನ್ನೂ ಎಲ್ಲ ಇಂದ್ರಿಯಗಳನ್ನೂ ಹೊಂದಿರುವುದನ್ನು ನೋಡುತ್ತಾಳೆ. ಭಿಕ್ಷುಗಳೇ, ಎಂಟು ಅಂಶಗಳನ್ನು ಹೊಂದಿರುವ ಅತಿ ಕೌಶಲ್ಯದಿಂದ ಸಾಣೆ ಹಿಡಿದಿರುವ ಪರಿಶುದ್ಧವಾದ ನೀರಿನಿಂದ ಆಗಿರುವ ಪಾರದರ್ಶಕವಾದ ಕಶ್ಮಲರಹಿತವಾದ ಸರ್ವಸುಂದರವಾದ ಶ್ರೇಷ್ಠ ಜಾತಿಯ ವೇಲೂರಿಯ ಮಣಿಯಂತೆ ಬೋಧಿಸತ್ವನು ತಾಯಿಯ ಹೊಟ್ಟೆಯಲ್ಲಿರುತ್ತಾನೆ. ಅಂಥ ಮಣಿಯೊಂದನ್ನು ನೀಲಿ ಅಥವಾ ಕೇಸರಿ ಅಥವಾ ಕೆಂಪು ಅಥವಾ ಹಳದಿಯ ನೂಲಿನಲ್ಲಿ ಪೋಣಿಸಿದಾಗ ಅದನ್ನು ಕಣ್ಣಿರುವವನೊಬ್ಬನು ಕೈಗೆ ತೆಗೆದುಕೊಂಡಾಗ ನೂಲಿನ ಬಣ್ಣವನ್ನು ಸ್ಪಷ್ಟವಾಗಿ ನೋಡಬಲ್ಲಂತೆ ಬೋಧಿಸತ್ವನ ತಾಯಿಯು ಆತನು ಆಕೆಯ ಹೊಟ್ಟೆಯನ್ನು ಹೊಕ್ಕಾಗ ಸರ್ವಸುಂದರವಾಗಿರುವ ಬೋಧಿಸತ್ವನು ತನ್ನ ಹೊಟ್ಟಿಯಲ್ಲಿರುವುದನ್ನು ನೋಡಬಲ್ಲವಳಾಗಿರುತ್ತಾಳೆ. ಯಾವ ಬಾಧೆಯು ಇಲ್ಲದೆ ರೋಗರಹಿತಳಾಗಿರುತ್ತಾಳೆ. ಇದೊಂದು ಧರ್ಮ ನಿಯಮ.

“ಇದೊಂದು ಧರ್ಮ, ಭಿಕ್ಷುಗಳೇ, ಬೋಧಿಸತ್ವನು ಹುಟ್ಟಿದ ಏಳನೆಯ ದಿನದಲ್ಲಿ ಅವನ ತಾಯಿಯು ಕಾಲವಾಗುತ್ತಾಳೆ. ತುಸಿತ ಸ್ವಗದಲ್ಲಿ ಹುಟ್ಟುತ್ತಾಳೆ. ಇದೊಂದು ಧರ್ಮದ ನಿಯಮ.

“ಇದೊಂದು ಧರ್ಮ ನಿಯಮ, ಭಿಕ್ಷುಗಳೇ, ಬೇರೆ ಹೆಂಗಸರು ಒಂಬತ್ತು ಅಥವಾ ಹತ್ತು ತಿಂಗಳಲ್ಲಿ ಹೆತ್ತರೆ ಬೋಧಿಸತ್ವನ ತಾಯಿಯು ಹತ್ತು ತಿಂಗಳ ನಂತರವೇ ಬೋಧಿಸತ್ವನನ್ನು ಪ್ರಸವಿಸುತ್ತಾಳೆ. ಇದೊಂದು ಧರ್ಮ ನಿಯಮ.

“ಭಿಕ್ಷುಗಳೇ, ಇದೂ ಒಂದು ಧರ್ಮ ನಿಯಮ. ಬೇರೆ ಹೆಂಗಸರು ಕುಳಿತಿರುವಾಗ ಅಥವಾ ಒರಗಿಕೊಂಡಾಗ ಹೆರುವಂತೆ ಬೋಧಿಸತ್ವನ ತಾಯಿಯು ಹೆರುವುದಿಲ್ಲ. ಆಕೆಯು ನಿಂತುಕೊಂಡಿರುವಾಗ ಬೋಧಿಸತ್ವನು ಜನಿಸುತ್ತಾನೆ. ಇದೊಂದು ಧರ್ಮ ನಿಯಮ.

“ಭಿಕ್ಷುಗಳೇ, ಇದೂ ಒಂದು ಧರ್ಮ ನಿಯಮ. ಬೋಧಿಸತ್ವನು ಮಾತೃ ಗರ್ಭದಿಂದ ಹೊರಗೆ ಬಂದಾಗ ಮೊದಲು ದೇವತೆಗಳು ಅವನನ್ನು ಹಿಡಿದುಕೊಳ್ಳುತ್ತಾರೆ, ಆಮೇಲೆ ಮನುಷ್ಯರು. ಇದೊಂದು ಧರ್ಮ ನಿಯಮ.

“ಭಿಕ್ಷುಗಳೇ, ಇದೂ ಒಂದು ಧರ್ಮ ನಿಯಮ. ಬೋಧಿಸತ್ವನು ಮಾತೃ ಗರ್ಭದಿಂದ ಹೊರಬಂದು ಭೂಮಿಯನ್ನು ಮುಟ್ಟುವುದಕ್ಕೆ ಮುಂಚೆಯೇ ನಾಲ್ಕು ದೇವಪುತ್ರರು ಅವನನ್ನು ಹಿಡಿದುಕೊಂಡು ಅವನ ತಾಯಿಗೆ ತೋರಿಸುತ್ತಾರೆ. ‘ದೇವಿ ಆನಂದಪಡು, ಮಹಾಶಕ್ತನೊಬ್ಬನು ನಿನ್ನ ಮಗನಾಗಿ ಹುಟ್ಟಿದ್ದಾನೆ’ ಎಂದು ಹೊಗಳುತ್ತಾರೆ. ಇದೊಂದು ಧರ್ಮ ನಿಯಮ.

“ಇದೊಂದು ಧರ್ಮ ನಿಯಮ. ಭಿಕ್ಷುಗಳೇ, ಬೋಧಿಸತ್ವನು ಮಾತೃಗರ್ಭದಿಂದ ಹೊರಬಿದ್ದಾಗ ಅವನ ಮೈಮೇಲೆ ಯಾವ ಕಶ್ಮಲವೂ ಇರುವುದಿಲ್ಲ. ದ್ರವರೂಪದ ಕಶ್ಮಲದಿಂದಾಗಲೀ, ಲೋಳೆಯ ರೂಪದ ಕಶ್ಮಲದಿಂದಾಗಲೀ, ರಕ್ತದಿಂದಾಗಲೀ ಆತನ ದೇಹವು ಅಶುಚಿಯಾಗಿರುವುದಿಲ್ಲ. ಶ್ರೇಷ್ಠವಾದ ರತ್ನವೊಂದನ್ನು ಅದನ್ನು ಸುತ್ತಿದಾಗ ಆ ಬಟ್ಟೆಯಾಗಲೀ, ರತ್ನವಾಗಲೀ, ಮಲಿನವಾಗುವುದಿಲ್ಲ. ಇದಕ್ಕೇನು ಕಾರಣ? ಇವೆರಡೂ ಶುದ್ಧವಾಗಿವೆ. ಇದರಂತೆಯೇ ಶುಚಿಯಾಗಿಯೇ ಮಾತೃಗರ್ಭದಿಂದ ಹೊರಬರುತ್ತಾನೆ. ದ್ರವರೂಪದ ಕಶ್ಮಲದಿಂದಾಗಲೀ ಲೋಳೆಯ ರೂಪದ ಕಶ್ಮಲದಿಂದಾಗಲೀ ರಕ್ತದ ರೂಪದ ಕಶ್ಮಲದಿಂದಾಗಲೀ ಅಥವಾ ಮತ್ತಾವ ಕಶ್ಮಲದಿಂದಾಗಲೀ ಆತನ ದೇಹವು ಅಶುಚಿಯಾಗಿರುವುದಿಲ್ಲ. ಆತನು ಶುದ್ಧನಾಗಿಯೇ ಇರುತ್ತಾನೆ. ಇದೊಂದು ಧರ್ಮ ನಿಯಮ.

“ಇದೊಂದು ನಿಯಮ. ಭಿಕ್ಷಗಳೇ, ಬೋಧಿಸತ್ವನು ತಾಯಿಯ ಬಸಿರಿಂದ ಈಚೆಗೆ ಬಂದಾಗ ಎರಡು ಉದಕ ಧಾರೆಗಳು ಆಕಾಶದಿಂದ ಇಳಿಯುತ್ತವೆ. ಅದರಲ್ಲಿ ಒಂದು ಶೀತೋದಕ ಧಾರೆ. ಮತ್ತೊಂದು ಉಷ್ಣೋದಕ ಧಾರೆ. ಇವು ಬೋಧಿಸತ್ವನನ್ನು ಮತ್ತು ಆತನ ತಾಯಿಯನ್ನು ತೊಳೆಯುತ್ತವೆ. ಇದೊಂದು ಧರ್ಮ ನಿಯಮ.

“ಭಿಕ್ಷುಗಳೇ, ಇದೊಂದು ಧರ್ಮ ನಿಯಮ. ಬೋಧಿಸತ್ವನು ತಾಯಿಯ ಉದರದಿಂದ ಹೊರಬಂದ ಕೂಡಲೇ ನಿಂತುಕೊಳ್ಳುತ್ತಾನೆ; ಉತ್ತರ ದಿಕ್ಕಿನಲ್ಲಿ ಏಳು ಹೆಜ್ಜೆಗಳನ್ನಿಡುತ್ತಾನೆ. ಆಗ ಶ್ವೇತಛತ್ರವೊಂದು ಆತನ ಶಿರದ ಮೇಲಿರುತ್ತದೆ. ಎಲ್ಲಾ ದಿಕ್ಕುಗಳಲ್ಲಿಯೂ ಈ ರೀತಿ ಘೋಷಿಸುತ್ತಾನೆ: ‘ಲೋಕಕ್ಕೆ ನಾನು ಅಗ್ರನಾಗಿದ್ದೇನೆ, ಲೋಕಕ್ಕೆ ಜ್ಯೇಷ್ಠನಾಗಿದ್ದೇನೆ, ಲೋಕಕ್ಕೆ ಶ್ರೇಷ್ಠನಾಗಿದ್ದೇನೆ, ಇದೇ ನನ್ನ ಕೊನೆಯ ಜನ್ಮ, ಇನ್ನುಮುಂದೆ ನನಗೆ ಹುಟ್ಟೇ ಇಲ್ಲ’. ಇದೊಂದು ಧರ್ಮ ನಿಯಮ.

“ಭಿಕ್ಷುಗಳೇ, ಇದೊಂದು ಧರ್ಮ ನಿಯಮ. ಬೋಧಿಸತ್ವನು ಮಾತೃ ಗರ್ಭದಿಂದ ಹೊರಬಿದ್ದಾಗ ದೇವಲೋಕ, ಮಾರಲೋಕ, ಬ್ರಹ್ಮಲೋಕಗಳೂ, ಸಮಣಬ್ರಾಹ್ಮಣರೂ, ಮನುಷ್ಯರೂ, ದೇವಮನುಷ್ಯರೂ ಇರುವ ಎಲ್ಲ ಲೋಕಗಳೂ ಪಡೆಯುವ ಅಪೂರ್ವವಾದ ಬೆಳಕೊಂದು ಹುಟ್ಟುತ್ತದೆ. ದೇವತೆಗಳ ಮತ್ತು ಅವರಿಗಿಂತ ಶ್ರೇಷ್ಠರಾದ ದೇವತೆಗಳ ಕಾಂತಿಗಿಂತ ಆ ಜ್ಯೋತಿಯು ಪ್ರಕಾಶಮಾನವಾಗಿರುತ್ತದೆ. ಮಹಾನುಭಾವರೂ, ಮಹಾಶಕ್ತರೂ ಆದ ಚಂದ್ರ ಸೂರ್ಯರ ಪ್ರಭೆಯು ಹೋಗಲಾರದಷ್ಟು ಅಂಧಕಾರದಿಂದ ಆವೃತವಾಗಿರುವ ಲೋಕಗಳು ಅವುಗಳ ನಡುವಿರುವ ಆಧಾರರಹಿತವಾದ ಇತರ ಪ್ರದೇಶಗಳೂ ಆ ಕಾಂತಿಯಿಂದ ಬೆಳಗುತ್ತವೆ. ಆ ಪ್ರಭೆಯಿಂದ ಆ ಲೋಕದಲ್ಲಿರುವ ಇತರ ಜೀವಿಗಳು ಒಬ್ಬರನ್ನೊಬ್ಬರು ತಿಳಿದುಕೊಳ್ಳಬಲ್ಲವರಾಗುತ್ತವೆ. ‘ಇಲ್ಲಿ ಇತರ ಜೀವಿಗಳೂ ಇವೆ’ ಎಂದು ಅರಿತುಕೊಳ್ಳುತ್ತವೆ. ದಶಸಹಸ್ರ ಲೋಕಧಾತುಗಲು ಕಂಪಿಸುತ್ತವೆ; ನಡುಗುತ್ತವೆ, ಅದರುತ್ತವೆ. ದೇವತೆಗಳ ಮತ್ತು ಅವರಿಗಿಂತ ಶ್ರೇಷ್ಠರಾದ ಇತರ ದೇವತೆಗಳ ಕಾಂತಿಯನ್ನು ಮೀರಿದ ಇಂಥ ಕಾಂತಿಯೊಂದು ಲೋಕದಲ್ಲಿ ಹುಟ್ಟುತ್ತದೆ. ಇದೊಂದು ಧರ್ಮ ನಿಯಮ.

ಮೂವತ್ತೆರಡು ಮಹಾಪುರುಷ ಲಕ್ಷಣಗಳು

“ಭಿಕ್ಷುಗಳೇ, ವಿಪಸ್ಸಿ ಕುಮಾರನು ಹುಟ್ಟಿದ ಮೇಲೆ ಬಂಧುಮತಿಯ ರಾಜನಿಗೆ ಆ ಸುದ್ದಿಯನ್ನು ತಿಳಿಸಿದರು. ‘ದೇವ, ಮಗನೊಬ್ಬನು ಹುಟ್ಟಿದ್ದಾನೆ. ಅವನನ್ನು ನೀವು ನೋಡಿ’ ಎಂದು ಹೇಳಿದರು. ಬಂಧುಮಾ ರಾಜನು ವಿಪ್ಸಿಕುಮಾರನನ್ನು ನೋಡಿದನು. ನೋಡಿ ಬ್ರಾಹ್ಮಣರನ್ನು ಕರೆಸಿ ಮಗುವಿನ ಭವಿಷ್ಯವನ್ನು ಕೇಳಿದನು. ಪೂಜ್ಯರೇ, ‘ಕುಮಾರನನ್ನು ನೋಡಿ ಭವಿಷ್ಯವನ್ನು ಹೇಳಿ’. ಆ ಬ್ರಾಹ್ಮಣರು ಕುಮಾರನನ್ನು ನೋಡಿ ಬಂಧುಮತಿಯ ರಾಜನಿಗೆ ಹೀಗೆ ಹೇಳಿದರು. ‘ದೇವ, ತಮಗೆ ಸಂತೋಷವಾಗಲಿ, ಮಹಾಶಕ್ತನು ಮಗನಾಗಿ ಹುಟ್ಟಿದ್ದಾನೆ. ಮಹಾರಾಜ, ಅಂಥ ಮಗನು ಹುಟ್ಟಿದ ಕುಲವು ಭಾಗ್ಯವಂತ ಕುಲವಾಗಿದೆ. ತಾವು ಅದೃಷ್ಟವಂತರು. ದೇವ, ಈ ಕುಮಾರನಲ್ಲಿ ಮೂವತ್ತೆರಡು ಮಹಾಪುರುಷ ಲಕ್ಷಣಗಳಿವೆ. ಅಂಥ ಮಹಾಪುರುಷನ ಭವಿಷ್ಯವು ಈ ಎರಡರಲ್ಲಿ ಒಂದಾಗಿರುತ್ತದೆ. ಅವನು ಗೃಹಸ್ಥನಾಗಿ ಉಳಿದುಕೊಂಡರೆ ಧಾರ್ಮಿಕನೂ ಧರ್ಮರಾಜನೂ ಸಪ್ತರತ್ನಗಳನ್ನು ಹೊಂದುವ ಚಕ್ರವರ್ತಿಯೂ, ನಾಲ್ಕು ದಿಕ್ಕುಗಳ ಒಡೆಯನೂ ಜನಪದಗಲನ್ನು ರಕ್ಷಿಸಬಲ್ಲ ವೀರನು ವಿಜಯಿಯೂ ಆಗುತ್ತಾನೆ. ಅವನ ವಶಕ್ಕೆ ಬರುವ ಸಪ್ತರತ್ನಗಳಾವುವೆಂದರೆ- ಚಕ್ರರತ್ನ, ಹಸ್ತಿರತ್ನ, ಅಶ್ವರತ್ನ, ಮಣಿರತ್ನ, ಸ್ತ್ರೀರತ್ನ, ಗೃಹಪತಿರತ್ನ ಮತ್ತು ಜ್ಯೇಷ್ಠಪುತ್ರರತ್ನ. ಶೂರರೂ, ವೀರರೂ, ಪರಸೇನೆಗಳನ್ನು ಮರ್ದಿಸುವವರೂ ಆದ ಸಹಸ್ರಕ್ಕೂ ಮೀರಿದ ಮಕ್ಕಳು ಅವನಿಗೆ ಹುಟ್ಟುತ್ತಾರೆ. ದಂಡಶಸ್ತ್ರಗಳಾವುವೂ ಇಲ್ಲದೆ ಕೇವಲ ಧರ್ಮದಿಂದಲೇ ಸಾಗರ ಪರ್ಯಂತವಿರುವ ಈ ಪೃಥ್ವಿಯ ಚಕ್ರವರ್ತಿಯಾಗಿ ವಿರಾಜಿಸುತ್ತಾನೆ. ಹಾಗಲ್ಲದೆ ಅವನು ಗೃಹತ್ಯಾಗ ಮಾಡಿ ಪಬ್ಬಜಿತನಾದರೆ ಲೋಕದಲ್ಲಿರುವ ಅಜ್ಞಾನವನ್ನು ತೊಡೆಯಬಲ್ಲ ಅರಹಂತನೂ ಸಮ್ಮಾಸಂಬುದ್ಧನೂ ಆಗುತ್ತಾನೆ.’

‘ದೇವಕುಮಾರನಿಗಿರುವ ಮೂವತ್ತೆರಡು ಮಹಾಪುರುಷ ಲಕ್ಷಣಗಳಾವುವು? ಯಾವ ಮಹಾಪುರುಷ ಲಕ್ಷಣಗಳಿರುವವನು ಎರಡರಲ್ಲಿ ಒಂದಾಗಿರುತ್ತದೆ? ಅವನು ಗೃಹಸ್ಥನಾಗಿ ಉಳಿದುಕೊಂಡರೆ ಧಾರ್ಮಿಕನೂ ಧರ್ಮರಾಜನೂ ಸಪ್ತರತ್ನಗಳನ್ನು ಹೊಂದುವ ಚಕ್ರವರ್ತಿಯೂ, ನಾಲ್ಕು ದಿಕ್ಕುಗಳ ಒಡೆಯನೂ ಜನಪದಗಳನ್ನು ರಕ್ಷಿಸಬಲ್ಲ ವೀರನು ವಿಜಯಿಯೂ ಆಗುತ್ತಾನೆ. ಅವನ ವಶಕ್ಕೆ ಬರುವ ಸಪ್ತರತ್ನಗಳಾವುವೆಂದರೆ- ಚಕ್ರರತ್ನ, ಹಸ್ತಿರತ್ನ, ಅಶ್ವರತ್ನ, ಮಣಿರತ್ನ, ಸ್ತ್ರೀರತ್ನ, ಗೃಹಪತಿರತ್ನ ಮತ್ತು ಜ್ಯೇಷ್ಠಪುತ್ರರತ್ನ. ಶೂರರೂ, ವೀರರೂ, ಪರಸೇನೆಗಳನ್ನು ಮರ್ದಿಸುವವರೂ ಆದ ಸಹಸ್ರಕ್ಕೂ ಮೀರಿದ ಮಕ್ಕಳು ಅವನಿಗೆ ಹುಟ್ಟುತ್ತಾರೆ. ದಂಡಶಸ್ತ್ರಗಳಾವುವೂ ಇಲ್ಲದೆ ಕೇವಲ ಧರ್ಮದಿಂದಲೇ ಸಾಗರ ಪರ್ಯಂತವಿರುವ ಈ ಪೃಥ್ವಿಯ ಚಕ್ರವರ್ತಿಯಾಗಿ ವಿರಾಜಿಸುತ್ತಾನೆ. ಹಾಗಲ್ಲದೆ ಅವನು ಗೃಹತ್ಯಾಗ ಮಾಡಿ ಪಬ್ಬಜಿತನಾದರೆ ಲೋಕದಲ್ಲಿರುವ ಅಜ್ಞಾನವನ್ನು ತೊಡೆಯಬಲ್ಲ ಅರಹಂತನೂ ಸಮ್ಮಾಸಂಬುದ್ಧನೂ ಆಗುತ್ತಾನೆ. ಅರಹಂತನೂ, ಸಮ್ಮಾಸಂಬುದ್ಧನೂ ಆಗುತ್ತಾನೆ?’

‘ದೇವ, ಕುಮಾರನ ಪಾದವು ಒಂದೇ ಸಮತಲದ್ದಾಗಿರುತ್ತದೆ. (ಪಾದವನ್ನು ನೆಲದಲ್ಲಿಟ್ಟಾಗ ಸಂದು ಬಿಡದಂತೆ ಇಡೀ ಪಾದವು ನೆಲದ ಮೇಲಿರುತ್ತದೆ). ಇದೊಂದು ಮಹಾಪುರುಷ ಲಕ್ಷಣ. ಕುಮಾರನ ಅಂಗಾಲುಗಳಲ್ಲಿ ಚಕ್ರಗಳಿರುತ್ತವೆ. ಅದಕ್ಕೆ ಸಾವಿರ ಅರೆಕಾಲುಗಳಿದ್ದು ನೇಮಿನಾಭಗಳಿಂದ ಚಕ್ರಗಳಿರುತ್ತವೆ. ಅದಕ್ಕೆ ಸಾವಿರ ಅರೆಕಾಲುಗಳಿದ್ದು ನೇಮಿನಾಭಗಳಿಂದ (ಗುಂಬ, ಪಟ್ಟಿ) ಕೂಡಿ ಸರ್ವಸುಂದರವಾಗಿರುತ್ತದೆ. ಇಂಥ ಅಂಗಾಲುಗಳಿರುವುದು ಮಹಾಪುರುಷ ಲಕ್ಷಣಗಳಲ್ಲಿ ಒಂದು.

ಕುಮಾರನಿಗೆ ಚಾಚಿದ ಹಿಮ್ಮಡಿ ಇರುತ್ತದೆ....

ಕುಮಾರನ ಬೆರಳುಗಳು ತುಂಬ ಉದ್ದವಾಗಿರುತ್ತವೆ...

ಕುಮಾರನ ಕೈಕಾಲುಗಲು ಮೃದುವಾಗಿರುತ್ತವೆ...

ದೇವ, ಕುಮಾರನ ಪಾದ ಮತ್ತು ಹಸ್ತಗಳು ಬಲೆಯಂತೆ ಇರುತ್ತವೆ (ಬಲೆಯ ಕಣ್ಣುಗಳಂತೆ ಕೈಕಾಲು ಬೆರಳುಗಳು ನೆಟ್ಟಗಿರುತ್ತವೆ)...

ಕುಮಾರನ ಪಾದವು ಶಂಖದಂತಿರುತ್ತದೆ....

ಕುಮಾರನ ಕಾಲುಗಳು ಜಿಂಕೆಯ ಕಾಲುಗಳಂತಿರುತ್ತವೆ....

ದೇವ, ಕುಮಾರನು ನೆಟ್ಟಗೆ ನಿಂತುಕೊಂಡಾಗ ಅವನ ಎರಡು ಕೈಗಳೂ ಅವನ ಮಂಡಿಗಳನ್ನು ಮುಟ್ಟುತ್ತವೆ....

ಕುಮಾರನ ಗುಹ್ಯವಸ್ತುವು ಕೋಶದಿಂದ ಆವೃತವಾಗಿರುತ್ತದೆ....

ಕುಮಾರನದು ಕಂಚಿನ ಬಣ್ಣದಂತೆ ಒಳ್ಳೆಯ ಬಣ್ಣವಾಗಿದೆ....

ಹೀಗೆ ಕುಮಾರನು ಸೂಕ್ಷ್ಮವಾಗಿರುತ್ತಾನೆ....

ಅವನ ಚರ್ಮವು ಅತಿ ಸೂಕ್ಷ್ಮವಾಗಿರುವುದರಿಂದ ಯಾವ ಧೂಳೂ ಮೈಗೆ ಅಂಟಿಕೊಳ್ಳುವುದಿಲ್ಲ. ದೇವ, ಅವನ ದೇಹದ ಮೇಲಿರುವ ಲೋಪವು ಕೂಪಗಳಲ್ಲಿ ಒಂದೊಂದೇ ಕೂದಲಿರುತ್ತದೆ....

ಕುಮಾರನ ಕೂದಲೆಲ್ಲವೂ ಮೇಲ್ಮುಖವಾಗಿ ಬಗ್ಗಿರುತ್ತವೆ; ಮತ್ತು ಹಾಗೆ ಮೇಲ್ಮುಖವಾಗಿ ಬಗ್ಗಿರುವ ಕೂದಲು ಕಣ್ಣುಕಪ್ಪಿನಂತೆ ನೀಲಿಮಿಶ್ರಿತವಾದ ಕಪ್ಪಿನ ಬಣ್ಣವನ್ನು ಹೊಂದಿದ್ದು ಬಲಗಡೆಗೆ ಬಗ್ಗಿದೆ.... ಕುಮಾರನು ಬ್ರಹ್ಮಲೋಕದಲ್ಲಿನ ಜನರಂತೆ ನೆಟ್ಟಗೆ ನಿಲ್ಲುವ ದೇಹಕಟ್ಟನ್ನು ಹೊಂದಿದ್ದಾನೆ....

ಕುಮಾರನ ಮೈಮೇಲೆ ಏಳು ಉಬ್ಬುಗಳಿವೆ....

ಕುಮಾರ ಮುಂಭಾಗದ ಅರ್ಧ ಕಾಯವು ಸಿಂಹದ ಕಾಯದಂತಿದೆ....

ಕುಮಾರನ ಎರಡು ಭುಜಗಳ ನಡುವೆ ಯಾವ ತಗ್ಗೂ ಇಲ್ಲ....

ದೇವ, ಆಲದಮರದ ಸಮತೆಯಂತೆ ಕುಮಾರನ ದೇಹವಿದೆ. ಅವನ ಎತ್ತರವು ಅವನ ತೋಳಿನ ಮಾಡಿನಷ್ಟೇ ಇದೆ....

ಕುಮಾರನ ಎದೆಯು ದೇಹಕ್ಕೆ ಹೊಂದುವ ಪ್ರಮಾಣದಲ್ಲಿದೆ....

ದೇವ, ಕುಮಾರನ ಅಭಿರುಚಿಯು ಪರಿಶುದ್ಧವಾದುದಾಗಿದೆ....

ಕುಮಾರನ ದವಡೆಯು ಸಿಂಹದ ದವಡೆಯಂತಿದೆ....

ಕುಮಾರನಿಗೆ ನಲವತ್ತು ಹಲ್ಲುಗಳಿವೆ....

ಕುಮಾರನ ಹಲ್ಲುಗಳೆಲ್ಲವೂ ಒಂದೇ ಮಟ್ಟದ ಸಾಲುಗಳಲ್ಲಿವೆ....

ಕುಮಾರನ ಹಲ್ಲುಗಳ ನಡುವೆ ಸಂದುಗಳಿಲ್ಲ. ಕುಮಾರನ ಹಲ್ಲುಗಳು ಮೊಸಳೆಯ ಹಲ್ಲುಗಳಂತಿವೆ....

ಕುಮಾರನ ನಾಲಿಗೆಯು ದೊಡ್ಡದು.....

ಕುಮಾರನ ಧ್ವನಿಯು ಕೋಗಿಲೆಯ ಧ್ವನಿಯಂತೆ ಬ್ರಹ್ಮಸ್ವರವಾಗಿದೆ. ಕುಮಾರನ ಕಣ್ಣುಗಳು ಕಡುನೀಲ ಬಣ್ಣವನ್ನು ಹೊಂದಿದೆ....

ಕುಮಾರನ ರೆಪ್ಪೆಗೂದಲು ಹಸುವಿನ ರೆಪ್ಪೆಗೂದಲನ್ನು ಹೋಲುತ್ತದೆ....

ದೇವ, ಕುಮಾರನ ರೆಪ್ಪೆಗಳ ನಡುವಿರುವ ಕೂದಲು ಮೃದೂವೂ ಅಲ್ಲ, ಒರಟಾಗಿಯೂ ಇಲ್ಲ, ಅದು ಕಶ್ಮಲರಹಿತವಾಗಿದೆ. ಮಹಾಪುರುಷ ಲಕ್ಷಣವೂ ಕುಮಾರನಲ್ಲಿದೆ.

‘ದೇವ, ಕುಮಾರನ ಶಿರವು ಕಿರೀಟವು ಸರಿಯಾಗಿ ಕೂರುವಂತೆ ಸಮಪ್ರಮಾಣದಲ್ಲಿದೆ. ಇಂಥ ಶಿರವೂ ಕುಮಾರನಿಗಿರುವ ಮಹಾಪುರುಷ ಲಕ್ಷಣಗಳಲ್ಲಿ ಒಂದು. ಹುಬ್ಬುಗಳ ನಡುವೆ ಬಿಳಿಯ ಕೂದಲಿನಿಂದ ಕೂಡಿದ ಒಂದು ಹುಬ್ಬಿದೆ. ಇದು ಮಹಾಪುರುಷ ಲಕ್ಷಣಗಳಲ್ಲಿ ಒಂದು.

‘ದೇವ, ಈ ಮಹಾಪುರುಷ ಲಕ್ಷಣಗಳನ್ನು ಹೊಂದಿರುವ ಕುಮಾರನು ಈ ಎರಡರಲ್ಲಿ ಒಂದಾಗುತ್ತಾನೆ. ಅವನು ಗೃಹಸ್ಥನಾಗಿಯೇ ಉಳಿದುಕೊಂಡರೆ ಧಾರ್ಮಿಕನೂ, ನಾಲ್ಕು ದಿಕ್ಕಗಳ ಒಡೆಯನೂ, ಜನಪದಗಳನ್ನು ರಕ್ಷಿಸುವವನೂ, ಸಪ್ತರತ್ನಗಳನ್ನು ಪಡೆದಿರುವವನೂ ಧರ್ಮರಾಜನೂ ಆದ ಚಕ್ರವರ್ತಿ ರಾಜನಾಗುತ್ತಾನೆ. ಆ ಸಪ್ತರತ್ನಗಳು ಯಾವುವೆಂದರೆ- ಚಕ್ರರತ್ನ, ಹಸ್ತಿರತ್ನ, ಅಶ್ವರತ್ನ, ಮಣಿರತ್ನ, ಸ್ತ್ರೀರತ್ನ, ಗೃಹಪತಿರತ್ನ ಮತ್ತು ಜ್ಯೇಷ್ಠರತ್ನ. ಅವನಿಗೆ ಶೂರರೂ ವೀರರೂ ಪರಸೇನೆಗಳನ್ನು ಮರ್ದಿಸುವವರೂ ಆದ ಸಾವಿರಕ್ಕಿಂತ ಹೆಚ್ಚಿನ ಸಂಖ್ಯೆಯ ಮಕ್ಕಳಿರುತ್ತಾರೆ. ಆತನು ಸಾಗರ ಪರ್ಯಂತವಿರುವ ಈ ಪೃಥ್ವಿಯನ್ನು ದಂಡಶಕ್ತಿಗಳಿಲ್ಲದೆ ಕೇವಲ ಧರ್ಮದಿಂದ ಜಯಿಸುತ್ತಾನೆ. ಹಾಗಲ್ಲದೆ ಮನೆಯನ್ನು ತೊರೆದು ಪಬ್ಬಜಿತನಾದರೆ, ಲೋಕದಲ್ಲಿನ ಅಜ್ಞಾನವನ್ನು ನಿವಾರಿಸಬಲ್ಲ ಅರಹಂತನೂ ಸಮ್ಮಾಸಂಬುದ್ಧನೂ ಆಗುತ್ತಾನೆ.’

ವಿಪಸ್ಸೀಸಮಞ್ಞಾ

“ಭಿಕ್ಷುಗಳೇ, ಬಂಧುಮಾ ರಾಜನು ಭವಿಷ್ಯವನ್ನು ಹೇಳಿದ ಬ್ರಾಹ್ಮಣರಿಗೆ ಅನೇಕ ವಸ್ತ್ರಗಳನ್ನು ಕೊಟ್ಟು ಅವರ ಬಯಕೆಗಳನ್ನೆಲ್ಲಾ ಪೂರೈಸಿದನು. ಆ ರಾಜನು ವಿಪಸ್ಸಿ ಕುಮಾರನ ಪೋಷಣೆಗೆ ದಾದಿಯರನ್ನು ನೇಮಿಸಿದನು. ಹಾಲನ್ನು ಕುಡಿಸಲು ಕೆಲವರನ್ನೂ, ಸ್ನಾನ ಮಾಡಿಸಲು ಬೇರೆ ಕೆಲವರನ್ನೂ, ಎತ್ತಿಕೊಳ್ಳಲು ಕೆಲವರನ್ನೂ ನೇಮಿಸಿದನು. ಕುಮಾರನಿಗೆ ಉಷ್ಠವೂ ಆಗಬಾರದು ಶೀತವೂ ಆಗಬಾರದು, ಕಸಕಡ್ಡಿಗಳಾಗಲೀ, ಧೂಳಾಗಲೀ, ಹಿಮವಾಗಲೀ ಅವನಿಗೆ ಕಾಯಿಲೆಯನ್ನುಂಟುಮಾಡಬಾರದು ಎಂದು ವಿಧಿಸಿದ್ದರಿಂದ ರಾತ್ರಿ-ಹಗಲು ಅವನ ಮೇಲೆ ಛತ್ರಿಯನ್ನು ಹಿಡಿಯಲಾಗುತ್ತಿತ್ತು. ಭಿಕ್ಷುಗಳೇ, ವಿಪಸ್ಸಿ ಕುಮಾರನು ಬಹುಜನಗಳ ಮುದ್ದಿಗೆ ಪಾತ್ರನಾಗಿದ್ದನು. ಪದ್ಮ, ನೀಲಕಮಲ ಅಥವಾ ಶ್ವೇತಕಮಲಗಳು ಎಲ್ಲ ಜನರಿಗೆ ಪ್ರಿಯವಾಗಿರುವಂತೆ ವಿಪಸ್ಸಿಯು ಬಹು ಜನರಿಗೆ ಪ್ರಿಯನಾಗಿದ್ದನು. ಒಬ್ಬರ ತೊಡೆಯಿಂದ ಮತ್ತೊಬ್ಬರ ತೊಡೆಗೆ ಮಗು ಸಾಗುತ್ತಿತ್ತು.

“ಭಿಕ್ಷುಗಳೇ, ವಿಪಸ್ಸಿ ಕುಮಾರನು ಮಂಜು ಸ್ವರವುಳ್ಳವನು, ಇಂಪಾದ ಸ್ವರವನ್ನು ಪಡೆದಿರುವವನೂ, ಮಧುರಸ್ವರವಿರುವವನೂ ಆಗಿದ್ದನು. ಹಿಮವತ್ಪರ್ವತದ ಕರವೀಕ ಪಕ್ಷಿಯ ಧ್ವನಿಯಂತೆ ಅವನದು ಮಂಜುಸ್ವರವೂ, ಮಧುರಸ್ವರವೂ, ಇಂಪಾದುದೂ ಆಗಿತ್ತು. ವಿಪಸ್ಸಿ ಕುಮಾರನ ಸತ್ಕರ್ಮವು ವಿಪಕ ಹೊಂದಿದ್ದರಿಂದ ಅವನಿಗೆ ದಿವ್ಯ ಚಕ್ಷುವಿತ್ತು. ಆದ್ದರಿಂದ ಹಗಲು-ರಾತ್ರಿಗಳೆರಡು ಕಾಲದಲ್ಲೂ ಎಲ್ಲಾ ದಿಕ್ಕುಗಳಲ್ಲೂ ಒಂದು ಯೋಜನದಷ್ಟು ದೂರ ನೋಡಬಲ್ಲವನಾಗಿದ್ದನು.

“ಭಿಕ್ಷುಗಳೇ, ವಿಪಸ್ಸಿ ಕುಮಾರನು ತಾವತಿಂಸ ದೇವತೆಗಳಂತೆ ಅನಿಮಿಷನಾಗಿದ್ದನು. ಕುಮಾರು ಅನಿಮಿಷ ನಯನಗಳಿಂದ ನೋಡುತ್ತಾನೆ. ಅವನು ವಿಪಸ್ಸಿ (ಅಂದರೆ ನೋಡಬಲ್ಲವನು, ನೋಡಬಲ್ಲವನು) ಎಂದು ಜನರು ಹೇಳುತ್ತಿದ್ದುದರಿಂದ ಅವನ ಹೆಸರು ವಿಪಸ್ಸಿ ಎಂದಾಯಿತು.

“ಭಿಕ್ಷುಗಳೇ, ಆಗ ಬಂಧುಮಾ ರಾಜನು ತನ್ನ ತೊಡೆಯ ಮೇಲೆ ವಿಪಸ್ಸಿ ಕುಮಾರನನ್ನು ಕುಳ್ಳಿರಿಸಿಕೊಂಡು ಅನುಶಾಸನ ಮಾಡುತ್ತಿದ್ದನು. ಕುಮಾರನನ್ನು ತೊಡೆಯಮೇಲೆ ಕುಳ್ಳಿರಿಸಿಕೊಂಡು (ಕಲಹಗಳನ್ನ) ನ್ಯಾಯವಾಗಿ ತೀರ್ಮಾನಿಸುತ್ತಿದ್ದನು. ಕುಮಾರನನ್ನು ಕುಳ್ಳಿರಿಸಿಕೊಂಡೇ ನ್ಯಾಯವಾದ ತೀರ್ಮಾನಗಳನ್ನು ಮಾಡುತ್ತಿದ್ದುದರಿಂದ ‘ವಿಪಸ್ಸಿ, ವಿಪಸ್ಸಿ’ ಎಂಬ ಮಾತು ಹೆಚ್ಚಾಗಿ ಕೇಳಿಬರುತ್ತಿತ್ತು. ಹೀಗಾಗಿ ರಾಜಕುಮಾರನ ಹೆಸರು ವಿಪಸ್ಸಿಯೇ ಆಯಿತು.

“ಬಂಧುಮಾ ರಾಜನು ವಿಪಸ್ಸಿ ಕುಮಾರನಿಗಾಗಿ ಮೂರು ಪ್ರಾಸಾದಗಳನ್ನು ಕಟ್ಟಿಸಿದನು. ಮಳೆಗಾಲಕ್ಕೆ ಒಂದು, ಚಳಿಗಾಲಕ್ಕೆ ಒಂದು, ಬೇಸಿಗೆಗೆ ಒಂದು. ಪಂಚಕಾಮ ಗುಣಗಳಿಗೆ ತಕ್ಕಂತೆ ಆ ಪ್ರಾಸಾದಗಳು ಇದ್ದುವು. ವಿಪಸ್ಸಿ ರಾಜಕುಮಾರನು ಮಳೆಗಾಲದ ಪ್ರಾಸಾದದಲ್ಲಿ ನಾಲ್ಕು ತಿಂಗಳಷ್ಟು ಕಾಲ ಉಳಿಯುತ್ತಿದ್ದನು.

“ಭಿಕ್ಷುಗಳೇ, ವಿಪಸ್ಸಿ ಕುಮಾರನು ಮಳೆಗಾಲದ ಪ್ರಾಸಾದದಲ್ಲಿ ಅನೇಕ ದಾದಿಯರಿಂದ ನಾಲ್ಕು ತಿಂಗಳಷ್ಟು ಕಾಲ ಪರಿಚಾರಿಕೆಯನ್ನು ಮಾಡಿಸಿಕೊಳ್ಳುತ್ತಿದ್ದಾಗ ಒಂದು ಸಾರಿಯಾದರೂ ಕೆಳಗಿಳಿದು ಬರುತ್ತಿರಲಿಲ್ಲ.

ಮೊದಲನೆಯ ಪಠಣ ಭಾಗ

ಜೀರ್ಣವಾದ ಪುರುಷ

“ಭಿಕ್ಷುಗಳೇ, ಬಹು ವರ್ಷಗಳ ನಂತರ ಅನೇಕ ಶತವರ್ಷಗಳ ನಂತರ ಅನೇಕ ಸಹಸ್ರ ವರ್ಷಗಳ ನಂತರ ವಿಪಸ್ಸಿ ಕುಮಾರನು ಸಾರಥಿಯನ್ನು ಕರೆದನು- ‘ಸತ್ಪುರುಷನಾದ ಸಾರಥಿಯೇ, ಒಳ್ಳೆಯ ವಾಹನಗಳನ್ನು ಸಿದ್ಧಪಡಿಸು, ಸುಂದರವಾದ ಸ್ಥಳಗಳನ್ನು ನೋಡಬೇಕೆನ್ನಿಸುತ್ತದೆ, ಉದ್ಯಾನಕ್ಕೆ ಹೋಗೋಣ’ ಎಂದನು. ‘ಹಾಗೆಯೇ ಆಗಲಿ ದೇವ’ ಎಂದು ವಿಪಸ್ಸಿ ಕುಮಾರನಿಗೆ ಹೇಳಿ ಸಾರಥಿಯು ಒಳ್ಳೆಯ ಯಾನಗಳನ್ನು ಸಿದ್ಧಪಡಿಸಿದನು. ಆಮೇಲೆ ವಿಪಸ್ಸಿ ಕುಮಾರನನ್ನು ಕುರಿತು ಇಂತೆಂದನು: ‘ದೇವ, ವಾಹನಗಳು ಸಿದ್ಧವಾಗಿವೆ. ತಮಗೆ ಸರಿತೋರಿದಂತೆ ಮಾಡಬಹುದು’ ಆಮೇಲೆ ಭಿಕ್ಷುಗಳೇ, ವಿಪಸ್ಸಿಯು ಒಂದು ಉತ್ತಮವಾದ ವಾಹನವನ್ನೇರಿ ಉದ್ಯಾನವನಕ್ಕೆ ಹೋದನು.

“ಭಿಕ್ಷುಗಳೇ, ಉದ್ಯಾನವನಕ್ಕೆ ಹೋಗುವಾಗ ವಿಪಸ್ಸಿಯು ಚಾವಣಿಯಂತೆ ಬಗ್ಗೆ ಹೋಗಿರುವ, ಜರ್ಜರವಾದ, ದೊಣ್ಣೆಯನ್ನು ಊರಿಕೊಂಡು ನಡೆಯುವ ಹಾಗೆ ನಡೆಯುವಾಗ ತತ್ತರಿಸುವ ಯೌವ್ವನವನ್ನೆಲ್ಲಾ ಕಳೆದುಕೊಂಡು ನರಳುತ್ತಿದ್ದ ಒಬ್ಬ ಮುದುಕನನ್ನು ನೋಡಿದನು. ‘ಓ ಸಾರಥಿ, ಈ ಮನುಷ್ಯನು ಏನು ಮಾಡಿದ್ದಾನೆ? ಅವನ ಕೂದಲು ಬೇರೆಯವರ ಕೂದಲಿನಂತಿಲ್ಲ. ಅವನ ದೇಹವು ಬೇರೆಯವರ ದೇಹದಂತಿಲ್ಲ’ ಎಂದು ಕೇಳಿದನು.

‘ಅವನು ಮುದುಕ, ದೇವ’.

‘ಅವನನ್ನು ಏಕೆ ಮುದುಕನೆನ್ನುತ್ತಾರೆ?’

‘ಅವನು ಬಹುದಿವಸ ಬದುಕುವುದಿಲ್ಲ, ಆದದುರಿಂದ ಅವನನ್ನು ಮುದುಕನೆನ್ನುತ್ತಾರೆ’.

‘ಸಾರಥಿ, ನನಗೂ ಜರೆ ಬರುತ್ತದೆಯೇ ?’

‘ದೇವ, ನಿಮಗೂ, ನಮಗೂ ಎಲ್ಲರಿಗೂ ಜರೆ ಬಂದೇ ಬರುತ್ತದೆ.’

‘ಓ ಸಾರಥಿ, ಉದ್ಯಾನವನ್ನು ನೋಡಿದುದು ಸಾಕು, ಅಂತಃಪುರಕ್ಕೆ ಹಿಂದಿರುಗು.’

‘ಹಾಗೆಯೇ ಆಗಲಿ ದೇವ’ ಎಂದು ಸಾರಥಿಯು ವಿಪಸ್ಸಿಕುಮಾರನಿಗೆ ಹೇಳಿ ಅಂತಃಪುರಕ್ಕೆ ವಾಹನವನ್ನು ಹಿಂದಿರುಗಿಸಿದರು. ಭಿಕ್ಷುಗಳೇ, ಅಂತಃಪುರಕ್ಕೆ ಹೋದ ವಿಪಸ್ಸಿಕುಮಾರನು ದುಃಖಿಯಾದನು; ಸಂಕಟಪಟ್ಟನು. ‘ಹುಟ್ಟು ಒಂದು ಹೊರೆ, ಹುಟ್ಟಿದವನು ಜರೆಯನ್ನು ಅನುಭವಿಸಲೇ ಬೇಕು’ ಎಂದುಕೊಂಡನು.

“ಆಮೇಲೆ ಭಿಕ್ಷುಗಳೇ, ಬಂಧುಮಾ ಮಹಾರಾಜನು ಸಾರಥಿಯನ್ನು ಕರೆಸಿದನು. ‘ಸಾರಥಿ ಕುಮಾರನು ಉದ್ಯಾನದಲ್ಲಿ ಹೇಗೆ ಸುಖಿಸಿದನು, ಅಲ್ಲಿ ಹೇಗೆ ಸಂತೋಷಪಟ್ಟನು ?’

‘ದೇವ, ಕುಮಾರನು ಉದ್ಯಾನದಲ್ಲಿ ಸುಖಿಸಲಿಲ್ಲ, ಅಲ್ಲಿ ಸಂತೋಷಪಡಲಿಲ್ಲ.’

‘ಸಾರಥಿ, ಉದ್ಯಾನಕ್ಕೆ ಹೋದ ಕುಮಾರನು ಏನನ್ನು ನೋಡಿದನು ?’

‘ಉದ್ಯಾನಕ್ಕೆ ಹೋಗುವಾಗ ಕುಮಾರನು ಚಾವಣಿಯಂತೆ ಬಗ್ಗಿಹೋಗಿರುವ ಜರ್ಜರವಾದ, ದೊಣ್ಣೆಯನ್ನು ಊರಿಕೊಂಡು ನಡೆಯುವ ಹಾಗೆ ನಡೆಯುವಾಗ ಕತ್ತರಿಸುವ ಯೌವನವನ್ನು ಕಳೆದುಕೊಂಡು ನರಳುವ ಒಬ್ಬ ಮುದುಕನನ್ನು ನೋಡಿದನು. ನೋಡಿ, ನನ್ನನ್ನು ಹೀಗೆ ಕೇಳಿದನು: ‘ಸಾರಥಿ, ಈ ಮನುಷ್ಯನು ಏತಕ್ಕೆ ಹೀಗಿದ್ದಾನೆ? ಅವನ ಕೂದಲು ಬೇರೆಯವರ ಕೂದಲಿನಂತಿಲ್ಲ. ಅವನ ದೇಹವು ಬೇರೆಯವರ ದೇಹದಂತಿಲ್ಲ.’

‘ಅವನು ಮುದುಕ ದೇವ.’

‘ಅವನನ್ನು ಏಕೆ ಮುದುಕನೆನ್ನುತ್ತಾರೆ ?’

‘ಅವನು ಬಹುದಿವಸ ಬದುಕುವುದಿಲ್ಲ, ಆದುದರಿಂದ ಅವನನ್ನು ಮುದುಕನೆನ್ನುತ್ತಾರೆ.’

‘ಸಾರಥಿ, ನನಗೂ ಜರೆ ಬರುತ್ತದೆಯೇ ?’

‘ದೇವ, ನಿಮಗೂ, ನಮಗೂ ಎಲ್ಲರಿಗೂ ಜರೆ ಬಂದೇ ಬರುತ್ತದೆ.’

‘ಓ ಸಾರಥಿ, ಉದ್ಯಾನವಕ್ಕೆ ಬಂದುದು ಇಷ್ಟಕ್ಕೇ ಸಾಕು, ಅಂತಃಪುರಕ್ಕೆ ಹಿಂದಿರುಗು.’

‘ಹಾಗೆಯೇ ಆಗಲಿ ದೇವ’ ಎಂದು ಸಾರಥಿಯು ವಿಪಸ್ಸಿಕುಮಾರನಿಗೆ ಹೇಳಿ ಅಂತಃಪುರಕ್ಕೆ ವಾಹನವನ್ನು ಹಿಂದಿರುಗಿಸಿದರು. ಭಿಕ್ಷುಗಳೇ, ಅಂತಃಪುರಕ್ಕೆ ಹೋದ ವಿಪಸ್ಸಿಕುಮಾರನು ದುಃಖಿಯಾದನು; ಸಂಕಟಪಟ್ಟನು. ‘ಹುಟ್ಟು ಒಂದು ಹೊರೆ, ಹುಟ್ಟಿದವನು ಜರೆಯನ್ನು ಅನುಭವಿಸಲೇ ಬೇಕು’ ಎಂದುಕೊಂಡನು.

ವ್ಯಾಧಿಗೊಂಡ ಪುರುಷ

“ಭಿಕ್ಷುಗಳೇ, ಬಂಧುಮಾ ರಾಜನಿಗೆ ಹೀಗನ್ನಿಸಿತು. ‘ವಿಪಸ್ಸಿಕುಮಾರನು ರಾಜ್ಯವಾಳುವುದು ತಪ್ಪುವುದು ಬೇಡ. ಅವನು ಮನೆಯನ್ನು ತೊರೆದು ಪಬ್ಬಜ್ಜನಾಗುವುದು ಬೇಡ. ಭವಿಷ್ಯ ಹೇಳಿದ ಬ್ರಾಹ್ಮಣರ ಮಾತು ನಿಜವಾಗುವುದು ಬೇಡ. ಬಂಧುಮಾ ರಾಜನು ವಿಪಸ್ಸಿಕುಮಾರನ ತುಂಬ ಸಂತೋಷವಾಗಿರುವಂತೆ ಅವನಿಗೆ ಪಂಚಕಾಮ ಗುಣಗಳು ದೊರಕುವಂತೆ ಮಾಡಿದನು. ‘ವಿಪಸ್ಸಿಕುಮರನು ರಾಜ್ಯವನ್ನಾಳಲಿ, ಕುಮಾರನು ಮನೆಯನ್ನು ತೊರೆದು ಪಬ್ಬಜ್ಜನಾಗುವುದು ಬೇಡ. ಭವಿಷ್ಯ ಹೇಳಿದ ಬ್ರಾಹ್ಮಣರ ಮಾತು ಸುಳ್ಳಾಗಲಿ’ ಎಂದು ಹಾರೈಸಿಕೊಂಡನು.

“ಭಿಕ್ಷುಗಳೇ, ವಿಪಸ್ಸಿ ಕುಮಾರನು ಪಂಚಕಾಮಗುಣಗಳಲ್ಲಿ ತಲ್ಲೀನಾಗಿ ಹೋದನು. ಆದರೂ, ಭಿಕ್ಷುಗಳೇ, ವಿಪಸ್ಸಿ ಕುಮಾರನು ಬಹುವರ್ಷಗಳ ನಂತರ....

ಭಿಕ್ಷುಗಳೇ, ವಿಪಸ್ಸಿಕುಮಾರನು ಉದ್ಯಾನ ಭೂಮಿಗೆ ಹೋಗುವಾಗ ತುಂಬಾ ನರಳುತ್ತಿದ್ದ, ತನ್ನ ಮೂತ್ರದಲ್ಲಿಯೇ ಬಿದ್ದು ಒದ್ದಾಡುತ್ತಿದ್ದ ಒಬ್ಬ ರೋಗಿಯನ್ನು ನೋಡಿದನು. ಅವನನ್ನು ಕೆಲವರು ಎತ್ತುತ್ತಿದ್ದರು ಮತ್ತೆ ಕೆಲವರು ಅವನನ್ನು ಎತ್ತಿ ತೊಳೆದು ಉಪಚರಿಸುತ್ತಿದ್ದರು. ಅದನ್ನು ನೋಡಿದ ಮೇಲೆ ಕುಮಾರನು ಸಾರಥಿಯನ್ನು ಕರೆದನು: ‘ಓ ಸಾರಥಿ, ಈ ಮನುಷ್ಯನು ಏನು ಮಾಡುತ್ತಿದ್ದಾನೆ? ಅವನ ಕಣ್ಣುಗಳು ಬೇರೆಯವರ ಕಣ್ಣುಗಳಂತಿಲ್ಲ. ಅವನ ತಲೆಯೂ ಬೇರೆಯವರ ತಲೆಯಂತೆ ಇಲ್ಲ.’

‘ಅವನೊಬ್ಬ ರೋಗಿ ದೇವ.’

‘ಅವನನ್ನು ರೋಗಿ ಎಂದು ಹೇಳಲು ಕಾರಣವೇನು?’

‘ಅವನು ಮತ್ತೆ ಆರೋಗ್ಯವನ್ನು ಪಡೆಯುವುದು ಕಷ್ಟ.’

‘ಸಾರಥಿ, ನಾನೂ ರೋಗಿಯಾಗುತ್ತೇನೆಯೇ? ರೋಗದಿಂದ ನಾನು ಬಿಡಿಸಿಕೊಳ್ಳಬಲ್ಲೆನೆ?’

‘ನೀವೂ, ನಾವೂ, ಎಲ್ಲರೂ ವ್ಯಾಧಿ ಧರ್ಮಕ್ಕೆ ಒಳಗಾಗಿದ್ದೇವೆ, ಅದರಿಂದ ಬಿಡಿಸಿಕೊಳ್ಳಲು ಸಾಧ್ಯವಿಲ್ಲ.’

‘ಸಾರಥಿ, ಉದ್ಯಾನವನ್ನು ನೋಡಿದ್ದು ಸಾಕಾಯಿತು. ಅಂತಃಪುರಕ್ಕೆ ಹಿಂದಿರುಗು.’

‘ಹಾಗೆಯೇ ಆಗಲಿ ದೇವ’ ಎಂದು, ಭಿಕ್ಷುಗಳೇ, ವಿಪಸ್ಸಿಕುಮಾರನನ್ನು ಆ ಸಾರಥಿಯು ಅಂತಃಪುರಕ್ಕೆ ಹಿಂದಕ್ಕೆ ಕರೆದುಕೊಂಡು ಹೋದನು.

‘ಆಮೇಲೆ, ಅಂತಃಪುರಕ್ಕೆ ಹೋದ ವಿಪಸ್ಸಿಕುಮಾರನು ದುಃಖಿಯಾದನು, ದುಗುಡಗೊಂಡನು. ‘ಹುಟ್ಟು ಒಂದು ಹೊರೆ’ ಹುಟ್ಟಿದವನಿಗೆ ಜರೆಯು ಬರುತ್ತದೆ; ವ್ಯಾಧಿಯೂ ಬರುತ್ತದೆ.’

“ಬಂಧುಮಾ ರಾಜನು ಸಾರಥಿಯನ್ನು ಕರೆದು ಹೀಗೆಂದನು- ‘ಸಾರಥಿ ಕುಮಾರನು ಉದ್ಯಾನದಲ್ಲಿ ಹೇಗೆ ಸುಖಿಸಿದನು, ಹೇಗೆ ಸಂತೋಷಪಟ್ಟನು ?’

‘ದೇವ, ಕುಮಾರನು ಉದ್ಯಾನದಲ್ಲಿ ಸುಖಿಸಲಿಲ್ಲ; ದೇವ, ಅವನು ಅಲ್ಲಿ ಸಂತೋಷಪಡಲಿಲ್ಲ.’

‘ಸಾರಥಿ, ಉದ್ಯಾನವನಕ್ಕೆ ಹೋಗುವಾಗ ಕುಮಾರನು ಏನನ್ನು ನೋಡಿದನು ?’

‘ದೇವ, ಕುಮಾರನು ಉದ್ಯಾನ ಭೂಮಿಗೆ ಹೋಗುವಾಗ ತುಂಬಾ ನರಳುತ್ತಿದ್ದ, ತನ್ನ ಮೂತ್ರದಲ್ಲಿಯೇ ಬಿದ್ದು ಒದ್ದಾಡುತ್ತಿದ್ದ ಒಬ್ಬ ರೋಗಿಯನ್ನು ನೋಡಿದನು. ಅವನನ್ನು ಕೆಲವರು ಎತ್ತುತ್ತಿದ್ದರು ಮತ್ತೆ ಕೆಲವರು ಅವನನ್ನು ಎತ್ತಿ ತೊಳೆದು ಉಪಚರಿಸುತ್ತಿದ್ದರು. ಅದನ್ನು ನೋಡಿದ ಮೇಲೆ ಕುಮಾರನು ‘ಸಾರಥಿ, ಎಲ್ಲರ ಕಣ್ಣಿನಂಥ ಕಣ್ಣಿಲ್ಲದ ಎಲ್ಲರ ತಲೆಯಂಥ ತಲೆಯಿಲ್ಲದ ಈ ಮನುಷ್ಯನಾರು?’

‘ದೇವ, ಅವನೊಬ್ಬ ರೋಗಿ.’

‘ಅವನನ್ನು ರೋಗಿ ಎಂದು ಹೇಳಲು ಕಾರಣವೇನು?’

‘ಅವನು ಮತ್ತೆ ಆರೋಗ್ಯವನ್ನು ಪಡೆಯುವುದು ಕಷ್ಟ.’

‘ಸಾರಥಿ, ನಾನೂ ರೋಗಿಯಾಗುತ್ತೇನೆಯೇ? ರೋಗದಿಂದ ನಾನು ಬಿಡಿಸಿಕೊಳ್ಳಬಲ್ಲೆನೆ?’

‘ನೀವೂ, ನಾವೂ, ಎಲ್ಲರೂ ವ್ಯಾಧಿ ಧರ್ಮಕ್ಕೆ ಒಳಗಾಗಿದ್ದೇವೆ, ಅದರಿಂದ ಬಿಡಿಸಿಕೊಳ್ಳಲು ಸಾಧ್ಯವಿಲ್ಲ.’

‘ಸಾರಥಿ, ಉದ್ಯಾನವನ್ನು ನೋಡಿದ್ದು ಸಾಕಾಯಿತು. ಅಂತಃಪುರಕ್ಕೆ ಹಿಂದಿರುಗು.’

‘ಹಾಗೆಯೇ ಆಗಲಿ ದೇವ’

“ಹೀಗೆ ಹೇಳಿ ವಿಪಸ್ಸಿ ಕುಮಾರನು ಅಂತಃಪುರಕ್ಕೆ ಹಿಂದಿರುಗಿ ಹೋದನು. ಅಲ್ಲಿಗೆ ಹೋದಮೇಲೆ ದುಃಖಿಯಾದನು, ದುಗುಡಗೊಂಡನು, ‘ಹುಟ್ಟು ಒಂದು ಹೊರೆ, ಹುಟ್ಟಿದವನು ವ್ಯಾಧಿಯನ್ನೂ ಅನುಭವಿಸಬೇಕು’ ಎಂದುಕೊಂಡನು.

ಕಾಲಕ್ಕೆ ಒಳಗಾಗುವ ಪುರುಷ

“ಭಿಕ್ಷುಗಳೇ, ಆಗ ಬಂಧುಮಾ ರಾಜನಿಗೆ ಹೀಗನ್ನಿಸಿತು- ‘ವಿಪಸ್ಸಿ ಕುಮಾರನು ರಾಜ್ಯವನ್ನಾಳದಿರುವುದು ಬೇಡ. ವಿಪಸ್ಸಿ ಕುಮಾರನು ಮನೆಯನ್ನು ತೊರೆದು ಪಬ್ಬಜ್ಜನಾಗುವುದು ಬೇಡ. ಭವಿಷ್ಯವನ್ನು ಹೇಳಿದ ಬ್ರಾಹ್ಮಣರ ಮಾತು ನಿಜವಾಗುವುದು ಬೇಡ’ ಹೀಗೆಂದುಕೊಂಡ ರಾಜನು ವಿಪಸ್ಸಿ ಕುಮಾರನಿಗೆ ಅತಿಯಾದ ಸಂತೋಷವನ್ನುಂಟು ಮಾಡುವಂತೆ ಅವನು ಪಂಚ ಕಾಮಗುಣಗಳಲ್ಲಿ ಮುಳುಗಿ ಹೋಗುವಂಥ ವ್ಯವಸ್ಥೆಯನ್ನು ಮಾಡಿದನು. ‘ಕುಮಾರನು ರಾಜ್ಯವನ್ನಾಳಲಿ, ವಿಪಸ್ಸಿಕುಮಾರನು ಮನೆಯನ್ನು ತೊರೆದು ಪಬ್ಬಜ್ಜನಾಗದಿರಲಿ. ಭವಿಷ್ಯವನ್ನು ಹೇಳಿದ ಬ್ರಾಹ್ಮಣರ ಮಾತು ಸುಳ್ಳಾಗಲಿ’ ಎಂದುಕೊಂಡನು. ವಿಪಸ್ಸಿಕುಮಾರನು ಪಂಚಕಾಮಗುಣಗಳಲ್ಲಿ ತಲ್ಲೀನನಾದನು. ಆದರೂ ಭಿಕ್ಷುಗಳೇ, ವಿಪಸ್ಸಿ ಕುಮಾರನು ಬಹು ವರ್ಷಗಳ ನಂತರ...

“ಭಿಕ್ಷುಗಳೇ, ವಿಪಸ್ಸಿ ಕುಮಾರನು ಉದ್ಯಾನವನಕ್ಕೆ ಹೋಗುತ್ತಿದ್ದಾಗ ನಾನಾರೀತಿಯ ವಸ್ತ್ರಗಳನ್ನು ಧರಿಸಿಕೊಂಡು ಚಿತೆಯನ್ನು ಸಿದ್ಧಪಡಿಸುತ್ತಿದ್ದ ಜನರ ಗುಂಪನ್ನು ನೋಡಿದನು. ಇದನ್ನು ನೋಡಿದ ಅವನು ಸಾರಥಿಯನ್ನು ಕರೆದು ‘ನಾನಾರೀತಿಯ ವಸ್ತ್ರಗಳನ್ನು ಧರಿಸಿಕೊಂಡಿರುವ ಈ ಜನರ ಗುಂಪು ಏನನ್ನು ಮಾಡುತ್ತಿದೆ?’ ಎಂದು ಕೇಳಿದನು.

‘ಯಾರೋ ಒಬ್ಬನು ಕಾಲವಾಗಿದ್ದಾನೆ, ದೇವ.’

‘ಸಾರಥಿ, ಕಾಲವಾಗಿರುವವನ ಹತ್ತಿರಕ್ಕೆ ರಥವನ್ನು ಬಿಡು.’

‘ಹಾಗೆಯೇ ಆಗಲಿ ದೇವ’ ಎಂದು ಸಾರಥಿಯು ವಿಪಸ್ಸಿ ಕುಮಾರನಿಗೆ ಹೇಳಿ ಆ ಕಾಲವಾದವನ ಹತ್ತಿರಕ್ಕೆ ರಥವನ್ನು ಬಿಟ್ಟನು. ಶವವನ್ನು ನೋಡಿ ‘ಕಾಲವದನು’ ಎಂದರೆ ಏನು ಸಾರಥಿ?’

‘ದೇವ (ಮುಂದೆ) ಆತನನ್ನು ತಾಯಿಯಾಗಲೀ, ತಂದೆಯಾಗಲೀ, ನೆಂಟರಿಷ್ಟರಾಗಲೀ, ಬೇರೆಯವರಾಗಲೀ ನೋಡಲಾರರು. ಆತನೂ ತಾಯಿಯನ್ನಾಗಲೀ, ತಂದೆಯನ್ನಾಗಲೀ, ನೆಂಟರಿಷ್ಟರನ್ನಾಗಲೀ, ಇತರರನ್ನಾಗಲೀ ನೋಡಲಾರ!’

‘ಓ ಸಾರಥಿ, ನಾನೂ ಮರಣ ಧರ್ಮಕ್ಕೆ ಒಳಗಾಗಿರುವೆನೇ? ನನ್ನ ತಾಯಿ-ತಂದೆಯರಾರೂ ನನ್ನನ್ನು ನೋಡಲಾರರೆ? ನೆಂಟರಿಷ್ಟರೂ ನೋಡಲಾರರೇ? ನಾನೂ ತಾಯಿ-ತಂದೆಯರನ್ನಾಗಲೀ, ನೆಂಟರಿಷ್ಟರನ್ನಾಗಲೀ ನೋಡಲಾಗುವುದಿಲ್ಲವೇ?’

‘ದೇವ, ನೀವೂ ನಾವೂ ಎಲ್ಲರೂ ಮರಣ ಧರ್ಮಕ್ಕೆ ವಶರಾಗಿದ್ದೇವೆ. ತಂದೆ-ತಾಯಿಯರಾಗಲೀ, ನೆಂಟರಿಷ್ಟರಾಗಲೀ ನಿಮ್ಮನ್ನು ನೋಡಲಾರರು. ತಂದೆ-ತಾಯಿಯರನ್ನಾಗಲೀ ನೀವು ನೋಡಲಾರಿರಿ.’

‘ಸಾರಥಿ, ಉದ್ಯಾನ ಭೂಮಿಗೆ ಬಂದುದು ಸಾಕು, ಅಂತಃಪುರಕ್ಕೆ ಹಿಂದಿರುಗು.’

‘ಹಾಗೆಯೇ ಆಗಲಿ ದೇವ’ ಎಂದು ಹೇಳಿ ಆ ಸಾರಥಿಯು ವಿಪಸ್ಸಿ ಕುಮಾರನಿಗೆ ಹೇಳಿ ಅವನನ್ನು ಅಂತಃಪುರಕ್ಕೆ ಕರೆದುಕೊಂಡು ಹೋದನು. ಭಿಕ್ಷುಗಳೇ, ಅಂತಃಪುರಕ್ಕೆ ಹೋದ ವಿಪಸ್ಸಿ ಕುಮಾರನು ದುಃಖಿಯಾದನು, ದುಗುಡಗೊಂಡನು. ‘ಹುಟ್ಟು ಒಂದು ಹೊರೆ, ಹುಟ್ಟಿದವನಿಗೆ ಜರೆಯು ಬರುತ್ತದೆ, ವ್ಯಾಧಿಯು ಬರುತ್ತದೆ, ಮರಣವೂ ಬರುತ್ತದೆ!’

“ಆಮೇಲೆ ಭಿಕ್ಷುಗಳೇ, ಬಂಧುಮಾ ರಾಜನು ಸಾರಥಿಯನ್ನು ಕರೆಸಿ ‘ಸಾರಥಿ, ಉದ್ಯಾನವನದಲ್ಲಿ ಕುಮಾರನು ಹೇಗೆ ಸುಖಿಸಿದನು? ಹೇಗೆ ಸಂತೋಷಪಟ್ಟನು?’ ಎಂದು ಕೇಳಿದನು. ‘ದೇವ, ಕುಮಾರನು ಉದ್ಯಾನವನದಲ್ಲಿ ಸುಖಿಸಲಿಲ್ಲ. ದೇವ, ಅವನು ಅಲ್ಲಿ ಸಂತೋಷಪಡಲಿಲ್ಲ.’

‘ಸಾರಥಿ, ಉದ್ಯಾನವನಕ್ಕೆ ಹೋಗುವಾಗ ಕುಮಾರನು ಏನನ್ನು ನೋಡಿದನು?’

‘ದೇವ, ಉದ್ಯಾನವನಕ್ಕೆ ಹೋಗುವಾಗ ಕುಮಾರನು ನಾನಾರೀತಿಯ ವಸ್ತ್ರಗಳನ್ನು ಧರಿಸಿಕೊಂಡು ಚಿತೆಯನ್ನು ಸಿದ್ಧಪಡಿಸುತ್ತಿದ್ದ ಜನರ ಗುಂಪನ್ನು ನೋಡಿದನು. ಇದನ್ನು ನೋಡಿದ ಅವನು ‘ಸಾರಥಿ, ನಾನಾರೀತಿಯ ವಸ್ತ್ರಗಳನ್ನು ಧರಿಸಿಕೊಂಡಿರುವ ಈ ಜನರ ಗುಂಪು ಏನನ್ನು ಮಾಡುತ್ತಿದೆ?’ ಎಂದು ಕೇಳಿದನು.

‘ಯಾರೋ ಒಬ್ಬನು ಕಾಲವಾಗಿದ್ದಾನೆ, ದೇವ.’

‘ಸಾರಥಿ, ಕಾಲವಾಗಿರುವವನ ಹತ್ತಿರಕ್ಕೆ ರಥವನ್ನು ಬಿಡು.’

‘ಹಾಗೆಯೇ ಆಗಲಿ ದೇವ’ ಎಂದು ಸಾರಥಿಯು ಕುಮಾರನು ಹೇಳಿದಂತೆ ಕಾಲವಾದವನ ಹತ್ತಿರಕ್ಕೆ ರಥವನ್ನು ಬಿಟ್ಟನು. ಶವವನ್ನು ನೋಡಿ ‘ಕಾಲವದನು ಎಂದರೆ ಏನರ್ಥ?’ ಎಂದು ಕೇಳಿದನು.

‘ದೇವ ಆತನನ್ನು ತಾಯಿಯಾಗಲೀ, ತಂದೆಯಾಗಲೀ, ನೆಂಟರಿಷ್ಟರಾಗಲೀ, ಬೇರೆಯವರಾಗಲೀ ನೋಡಲಾರರು. ಆತನೂ ತಾಯಿಯನ್ನಾಗಲೀ, ತಂದೆಯನ್ನಾಗಲೀ, ನೆಂಟರಿಷ್ಟರನ್ನಾಗಲೀ, ಇತರರನ್ನಾಗಲೀ ನೋಡಲಾರ!’

‘ಓ ಸಾರಥಿ, ನಾನೂ ಮರಣ ಧರ್ಮಕ್ಕೆ ಒಳಗಾಗಿರುವೆನೇ? ನನ್ನ ತಾಯಿ-ತಂದೆಯರಾರೂ ನನ್ನನ್ನು ನೋಡಲಾರರೆ? ನೆಂಟರಿಷ್ಟರೂ ನೋಡಲಾರರೇ? ನಾನೂ ತಾಯಿ-ತಂದೆಯರನ್ನಾಗಲೀ, ನೆಂಟರಿಷ್ಟರನ್ನಾಗಲೀ ನೋಡಲಾಗುವುದಿಲ್ಲವೇ?’

‘ದೇವ, ನೀವೂ ನಾವೂ ಎಲ್ಲರೂ ಮರಣ ಧರ್ಮಕ್ಕೆ ವಶರಾಗಿದ್ದೇವೆ. ತಂದೆ-ತಾಯಿಯರಾಗಲೀ, ನೆಂಟರಿಷ್ಟರಾಗಲೀ ನಿಮ್ಮನ್ನು ನೋಡಲಾರರು. ತಂದೆ-ತಾಯಿಯರನ್ನಾಗಲೀ ನೀವು ನೋಡಲಾರಿರಿ.’

‘ಸಾರಥಿ, ಉದ್ಯಾನವನಕ್ಕೆ ಬಂದುದು ಸಾಕು, ಅಂತಃಪುರಕ್ಕೆ ಹಿಂದಿರುಗು.’

‘ಹಾಗೆಯೇ ಅಗಲಿ ದೇವ’ ಎಂದು ಸಾರಥಿಯು ಹೇಳಿ ಅವನನ್ನು ಅಂತಃಪುರಕ್ಕೆ ಕರೆದುಕೊಂಡು ಹೋದನು. ಅಂತಃಪುರಕ್ಕೆ ಹೋದ ಕುಮಾರನು ದುಃಖಿಯಾದನು, ದುಗುಡಗೊಂಡನು. ‘ಹುಟ್ಟು ಒಂದು ಹೊರೆ, ಹುಟ್ಟಿದವನಿಗೆ ಜರೆ ಬರುತ್ತದೆ, ವ್ಯಾಧಿ ಬರುತ್ತದೆ, ಮರಣವೂ ಬರುತ್ತದೆ ಎಂದುಕೊಂಡನು’.

ಪಬ್ಬಜಿತ

“ಆಗ ಬಂಧುಮಾ ರಾಜನು ಹೀಗೆಂದುಕೊಂಡನು. ಭಿಕ್ಷುಗಳೇ, ವಿಪಸ್ಸಿ ಕುಮಾರನು ರಾಜ್ಯವಾಳದಿರುವುದು ಬೇಡ, ವಿಪಸ್ಸಿ ಕುಮಾರನು ಮನೆಯನ್ನು ತೊರೆದು ಪಬ್ಬಜನಾಗುವುದು ಬೇಡ. ಭವಿಷ್ಯವನ್ನು ಹೇಳಿದ ಬ್ರಾಹ್ಮಣರ ಮಾತು ನಿಜವಾಗುವುದು ಬೇಡ. ಹೀಗೆಂದುಕೊಂಡ ಬಂಧುಮಾ ರಾಜನು ವಿಪಸ್ಸಿ ಕುಮಾರನಿಗೆ ಅತಿಯಾದ ಸಂತೋಷವನ್ನುಂಟುಮಾಡುವಂತೆ ಅವನು ಪಂಚ ಕಾಮಗುಣಗಳಲ್ಲಿ ಮುಳುಗಿ ಹೋಗುವಂಥ ವ್ಯವಸ್ಥೆಯನ್ನು ಮಾಡಿದನು. ‘ವಿಪಸ್ಸಿ ಕುಮಾರನು ರಾಜ್ಯವನ್ನಾಳಲಿ, ವಿಪಸ್ಸಿ ಕುಮಾರನು ಮನೆಯನ್ನು ತೊರೆದು ಪಬ್ಬಜ್ಜನಾಗದಿರಲಿ, ಭವಿಷ್ಯವನ್ನು ಹೇಳಿದ ಬ್ರಾಹ್ಮಣರ ಮಾತು ಸುಳ್ಳಾಗಲಿ’ ಎಂದುಕೊಂಡನು.

“ಆಮೇಲೆ ಭಿಕ್ಷುಗಳೇ, ವಿಪಸ್ಸಿ ಕುಮಾರನು ಪಂಚ ಕಾಮಗುಣಗಳಲ್ಲಿ ತಲ್ಲೀನನಾದನು. ವಿಪಸ್ಸಿ ಕುಮಾರನು ಬಹು ವರ್ಷಗಳ ನಂತರ ಅನೇಕ ಶತಮಾನಗಳ ನಂತರ ಅನೇಕ ಸಹಸ್ರ ವರ್ಷಗಳ ನಂತರ ಸಾರಥಿಯನ್ನು ಕರೆದನು- ‘ಒಳ್ಳೊಳ್ಳೆಯ ವಾಹನಗಳನ್ನು ಸಿದ್ಧಪಡಿಸು, ಸುಂದರವಾದ ಸ್ಥಳವನ್ನು ನೋಡಲು ಉದ್ಯಾನವನಕ್ಕೆ ಹೋಗೋಣ’. ‘ಹಾಗೆಯೇ ಆಗಲಿ ದೇವ’ ಎಂದು ವಿಪಸ್ಸಿ ಕುಮಾರನಿಗೆ ಹೇಳಿ ಆತನು ಒಳ್ಳೊಳ್ಳೆಯ ವಾಹನಗಳನ್ನು ಸಿದ್ಧಪಡಿಸಿದನು. ಆಮೇಲೆ ‘ವಾಹನಗಳು ಸಿದ್ಧವಾಗಿವೆ; ತಮಗೆ ತೋರಿದಂತೆ ಮಾಡಬಹುದು’ ಎಂದು ವಿಪಸ್ಸಿ ಕುಮಾರನಿಗೆ ಹೇಳಿದನು. ಆಮೇಲೆ ವಿಪಸ್ಸಿ ಕುಮಾರನು ಒಂದು ಒಳ್ಳೆಯ ವಾಹನವನ್ನೇರಿ ಉದ್ಯಾನ ಭೂಮಿಗೆ ಹೋದನು.

“ಭಿಕ್ಷುಗಳೇ, ವಿಪಸ್ಸಿ ಕುಮಾರನು ಉದ್ಯಾನವನಕ್ಕೆ ಹೋಗುವಾಗ ಶಿರೋಮುಂಡನವನ್ನು ಮಾಡಿಸಿಕೊಂಡು ಕಾಷಾಯ ವಸ್ತ್ರಗಳನ್ನು ಧರಿಸಿಕೊಂಡಿದ್ದ ಒಬ್ಬ ಪಬ್ಬಜಿತನನ್ನು ನೋಡಿದನು. ನೋಡಿದ ಮೇಲೆ ಸಾರಥಿಯನ್ನು ಕುರಿತು ಹೀಗೆಂದನು: ‘ಈ ಮನುಷ್ಯನು ಯಾರು? ಅವನ ತಲೆ ಮತ್ತು ಬಟ್ಟೆಗು ಅನ್ಯರ ತಲೆ ಮತ್ತು ಬಟ್ಟೆಗಳಂತಿಲ್ಲವಲ್ಲ?’

‘ದೇವ, ಅವನೊಬ್ಬ ಪಬ್ಬಜಿತ.’

‘ಪಬ್ಬಜಿತ ಎಂದರೆ ಏನು ಸಾರಥಿ ?’

‘ದೇವ, ಪಬ್ಬಜಿತನಾದವನು ಧರ್ಮವನ್ನು ಆಚರಿಸುತ್ತಾನೆ, ಒಳ್ಳೆಯದನ್ನು ಮಾಡುತ್ತಾನೆ, ಕುಶಲವಾದುದನ್ನು ಆಚರಿಸುತ್ತಾನೆ, ಪುಣ್ಯವಾದುದನ್ನೇ ಮಾಡುತ್ತಾನೆ, ಅಹಿಂಸೆಯನ್ನು ಆಚರಿಸುತ್ತಾನೆ, ಅವನು ಭೂತಾನುಕಂಪಿಯಾಗಿರುತ್ತಾನೆ.’

‘ಸಾರಥಿ, ಪಬ್ಬಜಿತನಾಗುವುದು ಲೇಸು; ಧರ್ಮವನ್ನು ಆಚರಿಸುವುದೂ, ಒಳ್ಳೆಯದನ್ನು ಮಾಡುವುದೂ, ಕುಶಲವಾದುದನ್ನು ಆಚರಿಸುವುದೂ, ಪುಣ್ಯವಾದುದನ್ನು ಮಾಡುವುದೂ, ಅಹಿಂಸೆಯನ್ನು ಆಚರಿಸುವುದು, ಭೂತಾನುಕಂಪಿಯಾಗಿರುವುದೂ ಲೇಸಾದುದು. ಪಬ್ಬಜಿತನಾದ ಅವನ ಹತ್ತಿರಕ್ಕೆ ರಥವನ್ನು ತೆಗೆದುಕೊಂಡು ಹೋಗು.’

‘ಹಾಗೆಯೇ ಆಗಲಿ ದೇವ’ ಎಂದು ಸಾರಥಿಯು ವಿಪಸ್ಸಿ ಕುಮಾರನಿಗೆ ಹೇಳಿ ರಥವನ್ನು ಪಬ್ಬಜಿತನ ಹತ್ತಿರಕ್ಕೆ ತೆಗೆದುಕೊಂಡು ಹೋದನು. ಆಗ ವಿಪಸ್ಸಿ ಕುಮಾರನು ಆ ಪಬ್ಬಜಿತನಿಗೆ ಹೀಗೆ ಕೇಳಿದನು: ‘ನೀನು ಏನನ್ನು ಮಾಡಿಕೊಂಡಿರುವೆ? ಮಹಾಶಯ, ನಿನ್ನ ಶಿರವಾಗಲೀ, ನಿನ್ನ ವಸ್ತ್ರವಾಗಲೀ ಬೇರೆಯವರ ಶಿರ ಮತ್ತು ವಸ್ತ್ರಗಳಂತಿಲ್ಲವಲ್ಲ?’

‘ದೇವ, ನಾನೊಬ್ಬ ಪಬ್ಬಜಿತ.’

‘ಪಬ್ಬಜಿತ ಎಂದರೆ ಏನು ಮಹಾಶಯ ?’

‘ಧರ್ಮವನ್ನು ಆಚರಿಸುವುದೂ, ಒಳ್ಳೆಯದನ್ನು ಮಾಡುವುದೂ, ಕುಶಲವಾದುದನ್ನು ಆಚರಿಸುವುದೂ, ಪುಣ್ಯವನ್ನು ಮಾಡುವುದೂ ಅಹಿಂಸೆಯನ್ನು ಪಾಲಿಸುವುದೂ, ಭೂತಾನುಕಂಪಿಯಾಗಿರುವುದೂ, ಪಬ್ಬಜಿತನಾದವನು ಮಾಡಬೇಕಾದುದು. ನಾನು ಅಂಥ ಪಬ್ಬಜಿತನಾಗಿದ್ದೇನೆ !’

‘ಮಹಾಶಯ, ನಿನ್ನ ಆಚರಣೆ ತುಂಬಾ ಲೇಸಾದುದು.’

ಬೋಧಿಸತ್ವ ಪಬ್ಬಜಿತನು

“ಭಿಕ್ಷುಗಳೇ, ಆಗ ವಿಪಸ್ಸಿ ಕುಮಾರನು ಸಾರಥಿಯನ್ನು ಕರೆದನು. ‘ಸಾರಥಿ, ರಥವನ್ನು ಅಂತಃಪುರಕ್ಕೆ ತೆಗೆದುಕೊಂಡು ಹೋಗು. ನಾನು ಇಲ್ಲಿಯೇ ಗಡ್ಡ ಕೂದಲುಗಳನ್ನು ತೆಗದುಬಿಡುತ್ತೇನೆ. ಕಾಷಾಯ ವಸ್ತ್ರಗಳನ್ನು ಹಾಕಿಕೊಳ್ಳುತ್ತೇನೆ. ಮನೆಯನ್ನು ತೊರೆದು ಅನಗಾರಿಕನಾಗಿ ಪಬ್ಬಜನಾಗುತ್ತನೆ’. ‘ಹಾಗೆಯೇ ಆಗಲಿ ದೇವ’ ಎಂದು ಸಾರಥಿಯು ವಿಪಸ್ಸಿ ಕುಮಾರನಿಗೆ ಹೇಳಿ ರಥವನ್ನು ಅಂತಃಪುರಕ್ಕೆ ಕೊಂಡೊಯ್ದನು. ವಿಪಸ್ಸಿ ಕುಮಾರನು ಅಲ್ಲಿಯೇ ಗಡ್ಡ ಕೂದಲುಗಳನ್ನು ಕತ್ತರಿಸಿ ಹಾಕಿ ಕಾಷಾಯ ವಸ್ತ್ರಗಳನ್ನು ಧರಿಸಿ ಪಬ್ಬಜನಾದನು.

ಮಹಾಜನರು ಪಬ್ಬಜ್ಜವನ್ನು ಅನುಸರಿಸುವುದು

“ಭಿಕ್ಷುಗಳೇ, ಆಗ ಬಂಧುಮತಿ ರಾಜಧಾನಿಯಲ್ಲಿದ್ದ ಎಂಭತ್ತನಾಲ್ಕು ಸಾವಿರ ಜನರು ವಿಪಸ್ಸಿ ಕುಮಾರನು ಪಬ್ಬಜಿತನಾದ ಸುದ್ದಿಯನ್ನು ಕೇಳಿದರು. ಅವನು ಗಡ್ಡ ಕೂದಲುಗಳನ್ನು ತೆಗೆದು ಕಾಷಾಯ ವಸ್ತ್ರವನ್ನು ಧರಿಸಿ ಪಬ್ಬಜಿತನಾಗಿದ್ದಾನೆ ಎಂಬುದನ್ನು ತಿಳಿದುಕೊಂಡು, ‘ಧರ್ಮ ವಿನಯಗಳನ್ನು ಅರಿಯುವುದು ಸಾಧಾರಣವಾದುದಲ್ಲ; ಪಬ್ಬಜನಾಗುವುದು ಸಾಧಾರಣವಲ್ಲ; ವಿಪಸ್ಸಿ ಕುಮಾರನು ಪಬ್ಬಜಿತನಾಗಿರುವುದು ವಿಶೇಷ. ಅವನು ಗಡ್ಡ ಕೂದಲುಗಳನ್ನು ತೆಗೆದು ಕಾಷಾಯ ವಸ್ತ್ರಗಳನ್ನು ಧರಿಸಿ ಮನೆಯನ್ನು ತೊರೆದು ಪಬ್ಬಜಿತನಾಗಿರುವಂತೆ ನಾವೂ ಆಗೋಣ’ ಎಂದುಕೊಂಡರು.

“ಭಿಕ್ಷುಗಳೇ, ಆಮೇಲೆ ಆ ಎಂಭತ್ತನಾಲ್ಕು ಸಾವಿರ ಪ್ರಜೆಗಳು ತಮ್ಮ ಗಡ್ಡ ಕೂದಲುಗಳನ್ನು ತೆಗೆದು ಕಾಷಾಯ ವಸ್ತ್ರವನ್ನು ಧರಿಸಿ ವಿಪಸ್ಸಿ ಬೋಧಿಸತ್ವನನ್ನು ಅನುಸರಿಸಿದರು; ಪಬ್ಬಜಿತರಾದರು. ವಿಪಸ್ಸಿ ಬೋಧಿಸತ್ವನು ಆ ಜನರಿಂದ ಪರಿವೃತನಾಗಿ ಗ್ರಾಮ ಪಟ್ಟಣ ಜನಪದ ಮತ್ತು ರಾಜಧಾನಿಗಳಲ್ಲಿ ಸಂಚರಿಸುವವನಾದನು.

“ಭಿಕ್ಷುಗಳೇ, ವಿಪಸ್ಸಿ ಬೋಧಿಸತ್ವನು ತಾನೊಬ್ಬನೇ ಕುಳಿತುಕೊಂಡು ಧ್ಯಾನ ಮಾಡುತ್ತಿರುವಾಗ ಒಂದು ವಿಚಾರವು ಅವನ ಚಿತ್ತದಲ್ಲಿ ಉದಿಸಿತು. ‘ಅನೇಕ ಮಂದಿಯೊಂದಿಗೆ ಇರುವುದು ಸರಿಯಲ್ಲ. ಜನರಿಂದ ದೂರವಾಗಿ ಏಕಾಕಿಯಾಗಿರುವುದೇ ಸರಿ’. ಕೆಲವು ಕಾಲದ ಮೇಲೆ ವಿಪಸ್ಸಿಯು ಮಂದಿಯಿಂದ ದೂರನಾಗಿ ತಾನೊಬ್ಬನೇ ಇರುತ್ತಿದ್ದನು. ಉಳಿದ ಎಂಬತ್ತುನಾಲ್ಕು ಸಾವಿರ ಪಬ್ಬಜಿತರು ಹೊರಟುಹೋದರು. ವಿಪಸ್ಸಿ ಬೋಧಿಸತ್ವನು ಬೇರೆ ಮಾರ್ಗದಲ್ಲಿ ತಾನೊಬ್ಬನೇ ಹೋದನು.

ಬೋಧಿಸತ್ವನ ಅಭಿನಿವಾಸ

“ಭಿಕ್ಷುಗಳೇ, ಬೋಧಿಸತ್ವ ವಿಪಸ್ಸಿಯು ಬೋಧಿಯನ್ನು ಪಡೆದ ವೃಕ್ಷದ ಬುಡದಲ್ಲಿ ತಾನೊಬ್ಬನೇ ಕುಳಿತು ಧ್ಯಾನಿಸುತ್ತಿದ್ದಾಗ ಅವನ ಚಿತ್ತದಲ್ಲಿ ಒಂದು ವಿಚಾರ ಹುಟ್ಟಿತು- ‘ಲೋಕವು ನೋವಿನಲ್ಲಿ ಸಿಕ್ಕಿಕೊಂಡಿದೆ, ಜೀವಿಯು ಹುಟ್ಟುತ್ತದೆ. ಯೌವ್ವನವನ್ನು ಕಳೆದುಕೊಳ್ಳುತ್ತವೆ, ಸಾಯುತ್ತದೆ, ತಮ್ಮ ಸ್ಥಾನದಿಂದ ಚ್ಯುತಿ ಹೊಂದುತ್ತವೆ, ಮತ್ತೆ ಹುಟ್ಟುತ್ತವೆ. ಜರಾಮರಣದ ನಿವಾರಣೆಯನ್ನೂ ದುಃಖ ನಿರ್ಮೂಲವನ್ನೂ ಜೀವಿಯು ತಿಳಿಯದು. ದುಃಖ ನಿರ್ಮೂಲವನ್ನು ಈ ಜರಾಮರಣದ ನಿವಾರಣೆಯನ್ನೂ ಎಂದು ವಿವರಿಸಲು ಸಾಧ್ಯವಾಗುತ್ತದೆ?’

“ಆಗ ಬೋಧಿಸತ್ವನಿಗೆ ಹೀಗೆನ್ನಿಸಿತು- ‘ಜರಾಮರಣದ ಸ್ಮೃತಿಯು ಎಲ್ಲಿಂದ ಉಂಟಾಗುತ್ತದೆ? ಯಾವುದನ್ನು ಅದು ಅವಲಂಬಿಸಿದೆ?’ ಯೋಚನೆಯಲ್ಲಿ ತಲ್ಲೀನನಾದ ಬೋಧಿಸತ್ವನಿಗೆ ಒಂದು ಪ್ರಜ್ಞೆ ಹುಟ್ಟಿತು- ‘ಹುಟ್ಟಿನಿಂದ ಜರಾಮರಣದ ಸ್ಮೃತಿಯು ಬರುತ್ತದೆ, ಜರಾಮರಣವು ಹುಟ್ಟನ್ನು ಅವಲಂಬಿಸಿದೆ.’

“ಆಮೇಲೆ ಬೋಧಿಸತ್ವನಿಗೆ ಹೀಗನ್ನಿಸಿತು- ‘ಹುಟ್ಟಿನ ಸ್ಮೃತಿಯು ಎಲ್ಲಿಂದ ಬರುತ್ತದೆ? ಯಾವುದನ್ನು ಅದು ಅವಲಂಬಿಸಿದೆ?’ ವಿಪಸ್ಸಿ ಬೋಧಿಸತ್ವನಿಗೆ ಈ ಪ್ರಜ್ಞೆ ಹುಟ್ಟಿತು- ‘ಭವದಿಂದ ಹುಟ್ಟಿನ ಸ್ಮೃತಿಯು ಬರುತ್ತಿದೆ. ಹುಟ್ಟು ಭವವನ್ನು ಅವಲಂಬಿಸಿದೆ.’

“ಆಮೇಲೆ ವಿಪಸ್ಸಿ ಬೋಧಿಸತ್ವನಿಗೆ ಹೀಗನ್ನಿಸಿತು- ‘ಭವದ ಸ್ಮೃತಿಯು ಎಲ್ಲಿಂದ ಬರುತ್ತದೆ? ಭವವು ಯಾವುದನ್ನು ಅವಲಂಬಿಸಿದೆ?’ ಆಗ ಬೋಧಿಸತ್ವನಿಗೆ ಈ ಪ್ರಜ್ಞೆ ಹುಟ್ಟಿತು. ‘ಉಪಾದಾನದಿಂದ ಭವದ ಸ್ಮೃತಿ ಬರುತ್ತದೆ; ಭವವು ಉಪಾದಾನವನ್ನು ಅವಲಂಬಿಸಿದೆ.’

“ಆಮೇಲೆ ವಿಪಸ್ಸಿ ಬೋಧಿಸತ್ವನಿಗೆ ಹೀಗನ್ನಿಸಿತು- ‘ಉಪಾದಾನದ ಸ್ಮೃತಿಯು ಎಲ್ಲಿಂದ ಬರುತ್ತದೆ? ಉಪಾದಾನವು ಯಾವುದನ್ನು ಅವಲಂಬಿಸಿದೆ?’ ಆಗ ಬೋಧಿಸತ್ವನಿಗೆ ಈ ಪ್ರಜ್ಞೆ ಹುಟ್ಟಿತು. ‘ತಣ್ಹಾದಿಂದ ಉಪಾದಾನ ಸ್ಮೃತಿಯು ಬರುತ್ತದೆ- ‘ಉಪಾದಾನವು ತಣ್ಹಾವನ್ನು ಅವಲಂಬಿಸಿದೆ.’ ಆಮೇಲೆ ವಿಪಸ್ಸಿ ಬೋಧಿಸತ್ವನಿಗೆ ಹೀಗನ್ನಿಸಿತು- ‘ತಣ್ಹಾದ ಸ್ಮೃತಿಯು ಎಲ್ಲಿಂದ ಬರುತ್ತದೆ? ತಣ್ಹಾವು ಯಾವುದನ್ನು ಅವಲಂಬಿಸಿದೆ? ವೇದನದಿಂದ ತಣ್ಹಾದ ಸ್ಮೃತಿ ಬರುತ್ತದೆ, ತಣ್ಹಾವು ವೇದನೆಯನ್ನು ಅವಲಂಬಿಸಿದೆ.’

“ಆಮೇಲೆ ಭಿಕ್ಷುಗಳೇ, ವಿಪಸ್ಸಿ ಬೋಧಿಸತ್ವನಿಗೆ ಹೀಗನ್ನಿಸಿತು- ‘ವೇದನೆಯ ಸ್ಮೃತಿಯು ಎಲ್ಲಿಂದ ಬರುತ್ತದೆ? ವೇದನೆಯು ಯಾವುದನ್ನು ಅವಲಂಬಿಸಿದೆ?’ ಆಗ ಬೋಧಿಸತ್ವನಿಗೆ ಈ ಪ್ರಜ್ಞೆ ಹುಟ್ಟಿತು- ‘ವೇದನೆಯ ಸ್ಮೃತಿಯು ಫಸ್ಸದಿಂದ ಬರುತ್ತದೆ. ವೇದನೆಯು ಫಸ್ಸವನ್ನು ಅವಲಂಬಿಸಿದೆ.’

“ಆಮೇಲೆ ವಿಪಸ್ಸಿ ಬೋಧಿಸತ್ವನಿಗೆ ಹೀಗನ್ನಿಸಿತು- ‘ಫಸ್ಸದ ಸ್ಮೃತಿಯು ಯಾವುದರಿಂದ ಬರುತ್ತದೆ? ಫಸ್ಸವು ಯಾವುದನ್ನು ಅವಲಂಬಿಸಿದೆ?’ ಆಗ ವಿಪಸ್ಸಿ ಬೊಧಿಸತ್ವನಿಗೆ ಈ ಪ್ರಜ್ಞೆ ಹುಟ್ಟಿತು- ‘ಸಲಾಯತನದಿಂದ ಫಸ್ಸದ ಸ್ಮೃತಿ ಬರುತ್ತದೆ, ಫಸ್ಸವು ಸಲಾಯತನವನ್ನು ಅವಲಂಬಿಸಿದೆ.’

“ಆಮೇಲೆ ಬೋಧಿಸತ್ವನಿಗೆ ಹೀಗನ್ನಿಸಿತು- ‘ಸಲಾಯನದ ಸ್ಮೃತಿಯು ಯಾವುದರಿಂದ ಬರುತ್ತದೆ? ಸಲಾಯತನವು ಯಾವುದನ್ನು ಅವಲಂಬಿಸಿದೆ?’ ಆಗ ಬೋಧಿಸತ್ವನಿಗೆ ಈ ಪ್ರಜ್ಞೆ ಹುಟ್ಟಿತು- ‘ನಾಮರೂಪದಿಮದ ಸಲಾಯತನ ಸ್ಮೃತಿಯು ಬರುತ್ತದೆ. ಸಲಾಯತನವು ನಾಮರೂಪವನ್ನು ಅವಲಂಬಿಸಿದೆ.’

“ಆಮೇಲೆ ಭಿಕ್ಷುಗಳೇ, ವಿಪಸ್ಸಿ ಬೋಧಿಸತ್ವನಿಗೆ ಹೀಗನ್ನಿಸಿತು- ‘ನಾಮರೂಪದ ಸ್ಮೃತಿಯು ಯಾವುದರಿಂದ ಬರುತ್ತದೆ? ನಾಮರೂಪವು ಯಾವುದನ್ನು ಅವಲಂಬಿಸಿದೆ?’ ಆಗ ಬೋಧಿಸತ್ವನಿಗೆ ಈ ಪ್ರಜ್ಞೆ ಹುಟ್ಟಿತು- ‘ವಿಞ್ಞಾಣದಿಂದ ನಾಮರೂಪದ ಸ್ಮೃತಿ ಬರುತ್ತದೆ, ನಾಮರೂಪವು ವಿಞ್ಞಾಣವನ್ನು ಅವಲಂಬಿಸಿದೆ.’

“ಆಮೇಲೆ ವಿಪಸ್ಸಿಗೆ ಈ ವಿಚಾರ ಬಂದಿತು ‘ವಿಞ್ಞಾಣದ ಸ್ಮೃತಿಯು ಯಾವುದರಿಂದ ಬರುತ್ತದೆ? ವಿಞ್ಞಾಣವು ಯಾವುದನ್ನು ಅವಲಂಬಿಸಿದೆ?’ ಆಗ ವಿಪಸ್ಸಿಗೆ ಈ ಪ್ರಜ್ಞೆ ಹುಟ್ಟಿತು- ‘ನಾಮರೂಪದ ಸ್ಮೃತಿಯು ವಿಞ್ಞಾಣದಿಂದ ಬರುತ್ತದೆ, ವಿಞ್ಞಾಣವು ನಾಮರೂಪವನ್ನವಲಂಬಿಸಿದೆ.’

“ಭಿಕ್ಷುಗಳೇ, ವಿಪಸ್ಸಿ ಬೋಧಿಸತ್ವನು ಹೀಗೆಂದು ಆಲೋಚಿಸಿದನು- ‘ಈ ವಿಞ್ಞಾಣವು ನಾಮರೂಪವನ್ನು ಬಿಟ್ಟುಹೋಗುವುದಿಲ್ಲ. ಅದಕ್ಕೆ ಹೊಂದಿಕೊಂಡೇ ಇರುತ್ತದೆ. ಎಲ್ಲಿಯವರೆಗೆ ಹುಟ್ಟು, ಮುಪ್ಪು, ಸಾವು, ಚ್ಯುತಿ ಮತ್ತೆ ಹುಟ್ಟು ಇರುತ್ತವೆಯೋ ಅಲ್ಲಿಯವರೆಗೆ ವಿಞ್ಞಾಣವು ನಾಮರೂಪವನ್ನೂ ನಾಮರೂಪವು ವಿಞ್ಞಾಣವನ್ನೂ ಸಳಾಯತನವು ನಾಮರೂಪವನ್ನೂ, ಫಸ್ಸವು ಸಳಾಯತನವನ್ನೂ, ವೇದನೆಯು ಫಸ್ಸವನ್ನೂ, ತಣ್ಹಾವು ವೇದನೆಯನ್ನೂ, ಉಪಾದಾನವು ತಣ್ಹಾವನ್ನೂ ಭವವು ಉಪಾದಾನವನ್ನೂ ಹುಟ್ಟು ಭವವನ್ನೂ ಮುಪ್ಪು ಮರಣಗಳನ್ನು ಹುಟ್ಟನ್ನೂ ಅವಲಂಬಿಸಿರುತ್ತವೆ. ಶೋಕ ಪಶ್ಚಾತ್ತಾಪ ದುಃಖ ಹತಾಶೆಗಳು ಹುಟ್ಟುತ್ತವೆ, ದುಃಖಸ್ಕಂಧದ ಹುಟ್ಟು ಇದೇ ಆಗಿದೆ.’

‘ಸಮುದಯ, ಸಮುದಯ’ ಎಂಬುದರ ಅರಿವು ಉಂಟಾದಾಗ ವಿಪಸ್ಸಿ ಬೋಧಿಸತ್ವನಿಗೆ ಹಿಂದೆ ಇಲ್ಲದಿದ್ದ ಧರ್ಮಚಕ್ಷು ಹುಟ್ಟಿಕೊಂಡಿತು, ಜ್ಞಾನವು ಬಂದಿತು, ವಿಞ್ಞಾಣ ಲಭಿಸಿತು, ವಿದ್ಯೆಯು ಬಂದಿತು, ಬೆಳಕು ಉದಿಸಿತು.

“ಆಗ ಭಿಕ್ಷುಗಳೇ, ವಿಪಸ್ಸಿ ಕುಮಾರನು ಹೀಗೆಂದುಕೊಂಡನು- ‘ಜರಾಮರಣದ ಸ್ಮೃತಿಯು ಯಾವುದರಿಂದ ಆಗುತ್ತದೆ? ಜರಾ ಮರಣದ ನಿರ್ಮೂಲವು ಹೇಗೆ?’ ಆಗ ಅವನಿಗೆ ಈ ಪ್ರಜ್ಞೆ ಹುಟ್ಟಿತು. ‘ಹುಟ್ಟಿನ ಸ್ಮೃತಿ ಇಲ್ಲದಿದ್ದಾಗ ಜರಾಮರಣವಿರುವುದಿಲ್ಲ. ಹುಟ್ಟಿನ ನಿರ್ಮೂಲವೇ ಜರಾಮರಣದ ನಿರ್ಮೂಲವಾಗಿದೆ.’ ಆಮೇಲೆ ಅವನಿಗೆ ಹೀಗನ್ನಿಸಿತು- ‘ಹುಟ್ಟಿನ ಸ್ಮೃತಿಯು ಯಾವುದರಿಂದ ಬರುತ್ತದೆ? ಹುಟ್ಟಿನ ನಿರ್ಮೂಲವು ಹೇಗೆ? ಭವದ ಸ್ಮೃತಿಯಲ್ಲದಿದ್ದಾಗ ಹುಟ್ಟು ಇರುವುದಿಲ್ಲ. ಭವದ ನಿರ್ಮೂಲವೇ ಹುಟ್ಟಿನ ನಿರ್ಮೂಲವೂ ಆಗಿದೆ.’

“ಆಮೇಲೆ ಭಿಕ್ಷುಗಳೇ, ವಿಪಸ್ಸಿ ಬೋಧಿಸತ್ವನಿಗೆ ಹೀಗನ್ನಿಸಿತು- ‘ಭವದ ಸ್ಮೃತಿಯು ಯಾವುದರಿಂದ ಆಗುತ್ತದೆ? ಭವದ ನಿರೋಧ ಹೇಗೆ?’ ಆಗ ಅವನಿಗೆ ಈ ಪ್ರಜ್ಞೆ ಹುಟ್ಟಿತು- ‘ಉಪಾದಾನದ ಸ್ಮೃತಿಯಿಲ್ಲದಿದ್ದಾಗ ಭವವು ಇರುವುದಿಲ್ಲ. ಉಪಾದಾನದ ನಿರ್ಮೂಲವೇ ಭವದ ನಿರ್ಮೂಲವಾಗಿದೆ’. ಆಮೇಲೆ ವಿಪಸ್ಸಿ ಕುಮಾರನಿಗೆ ಹೀಗನ್ನಿಸಿತು- ‘ಉಪಾದಾನದ ಸ್ಮೃತಿಯು ಯಾವುದರಿಂದ ಆಗುತ್ತದೆ? ಉಪಾದಾನದ ನಿರೋಧವು ಹೇಗೆ?’ ಆಗ ಅವನಿಗೆ ಈ ಪ್ರಜ್ಞೆ ಹುಟ್ಟಿತು- ‘ತಣ್ಹಾದ ಸ್ಮೃತಿ ಇಲ್ಲದಿದ್ದಾಗ ಉಪಾದಾನವು ಇರುವುದಿಲ್ಲ. ತಣ್ಹಾ ನಿರೋಧವೇ ಉಪಾದಾನದ ನಿರೋಧವಾಗಿದೆ.

“ಆಮೇಲೆ ಭಿಕ್ಷುಗಳೇ, ವಿಪಸ್ಸಿ ಬೋಧಿಸತ್ವನಿಗೆ ಹೀಗನ್ನಿಸಿತು- ‘ಯಾವ ಸ್ಮೃತಿ ಇಲ್ಲದಿದ್ದಾಗ ತಣ್ಹಾವು ಇರುವುದಿಲ್ಲ? ತಣ್ಹಾ ನಿರೋಧವು ಹೇಗೆ?’ ಆಗ ಅವನಿಗೆ ಈ ಪ್ರಜ್ಞೆ ಹುಟ್ಟಿತು- ‘ವೇದನೆಯ ಸ್ಮೃತಿ ಇಲ್ಲದಿದ್ದಾಗ ತಣ್ಹಾ ಇರುವುದಿಲ್ಲ. ವೇದನೆಯ ನಿರ್ಮೂಲವೇ ತಣ್ಹಾದ ನಿರ್ಮೂಲವಾಗಿದೆ.’

“ಆಮೇಲೆ ಭಿಕ್ಷುಗಳೇ, ವಿಪಸ್ಸಿ ಬೋಧಿಸತ್ವನಿಗೆ ಹೀಗನ್ನಿಸಿತು- ‘ಯಾವುದರ ಸ್ಮೃತಿ ಇಲ್ಲದಿದ್ದಾಗ ವೇದನೆ ಇರುವುದಿಲ್ಲ? ವೇದನೆಯ ನಿರ್ಮೂಲ ಹೇಗೆ?’ ಆಗ ಅವನಿಗೆ ಈ ಪ್ರಜ್ಞೆ ಹುಟ್ಟಿತು. ‘ಫಸ್ಸದ ಸ್ಮೃತಿ ಇಲ್ಲದಿದ್ದಾಗ ವೇದನೆ ಇರುವುದಿಲ್ಲ, ಫಸ್ಸದ ನಿರ್ಮೂಲವೇ ವೇದನೆಯ ನಿರ್ಮೂಲವಾಗಿದೆ.’

“ಆಮೇಲೆ ವಿಪಸ್ಸಿ ಬೋಧಿಸತ್ವನಿಗೆ ಹೀಗನ್ನಿಸಿತು- ‘ಯಾವುದರ ಸ್ಮೃತಿ ಇಲ್ಲದಿದ್ದಾಗ ಫಸ್ಸ ಇರುವುದಿಲ್ಲ? ಫಸ್ಸದ ನಿರೋಧ ಹೇಗೆ?’ ಭಿಕ್ಷುಗಳೇ, ಆಗ ವಿಪಸ್ಸಿಗೆ ಈ ಪ್ರಜ್ಞೆ ಹುಟ್ಟಿತು ‘ಸಳಾಯತನದ ಸ್ಮೃತಿ ಇಲ್ಲದಿದ್ದಾಗ ಫಸ್ಸ ಇರುವುದಿಲ್ಲ. ಸಳಾಯತನದ ನಿರೋಧವೇ ಫಸ್ಸದ ನಿರೋಧ ಆಗಿದೆ.’

“ಆಮೇಲೆ ಭಿಕ್ಷುಗಳೇ, ವಿಪಸ್ಸಿ ಬೋಧಿಸತ್ವನು ಹೀಗೆ ಯೋಚಿಸಿದನು- ‘ಯಾವುದರ ಸ್ಮೃತಿ ಇಲ್ಲದಿದ್ದಾಗ ಸಳಾಯತನ ಇರುವುದಿಲ್ಲ? ಸಳಾಯತನದ ನಿರ್ಮೂಲ ಹೇಗೆ?’ ಆಗ ವಿಪಸ್ಸಿಗೆ ಈ ಪ್ರಜ್ಞೆ ಹುಟ್ಟಿತು- ‘ನಾಮರೂಪದ ಸ್ಮೃತಿ ಇಲ್ಲದಿದ್ದಾಗ ಸಳಾಯತನ ಇರುವುದಿಲ್ಲ. ನಾಮರೂಪದ ನಿರ್ಮೂಲವೇ ಸಳಾಯತನದ ನಿರೋಧ ಆಗಿದೆ.’

“ಆಮೇಲೆ ಭಿಕ್ಷುಗಳೇ, ವಿಪಸ್ಸಿಯು ಹೀಗೆ ಯೋಚಿಸಿದನು- ಯಾವುದರ ಸ್ಮೃತಿ ಇಲ್ಲದಿದ್ದಾಗ ನಾಮರೂಪ ಇರುವುದಿಲ್ಲ. ನಾಮರುಪದ ನಿರೋಧ ಹೇಗೆ?’ ಆಗ ವಿಪಸ್ಸಿಗೆ ಈ ಪ್ರಜ್ಞೆ ಹುಟ್ಟಿತು. ‘ವಿಞ್ಞಾಣದ ಸ್ಮೃತಿ ಇಲ್ಲದಿದ್ದಾಗ ನಾಮರೂಪ ಇರುವುದಿಲ್ಲ. ವಿಞ್ಞಾಣದ ನಿರೋಧವೇ ನಾಮರೂಪದ ನಿರೋಧವಾಗಿದೆ.’

“ಆಮೇಲೆ ಭಿಕ್ಷುಗಳೇ, ವಿಪಸ್ಸಿ ಬೋಧಿಸತ್ವನು ಹೀಗೆ ಯೋಚಿಸಿದನು- ‘ಯಾವುದರ ಸ್ಮೃತಿ ಇಲ್ಲದಿದ್ದಾಗ ವಿಞ್ಞಾಣ ಇರುವುದಿಲ್ಲ? ವಿಞ್ಞಾಣದ ನಿರೋಧ ಹೇಗೆ?’ ಆಗ ಭಿಕ್ಷುಗಳೇ, ವಿಪಸ್ಸಿ ಬೋಧಿಸತ್ವನು ಆಲೋಚನೆಯಲ್ಲಿ ತಲ್ಲೀನನಾಗಿದ್ದಾಗ ಈ ಪ್ರಜ್ಞೆ ಹುಟ್ಟಿತು- ‘ನಾಮರೂಪದ ಸ್ಮೃತಿ ಇಲ್ಲದಿದ್ದಾಗ ವಿಞ್ಞಾಣ ಇರುವುದಿಲ್ಲ. ನಾಮರೂಪದ ನಿರೋಧವೇ ವಿಞ್ಞಾಣದ ನಿರೋಧ ಆಗಿದೆ.’

“ಭಿಕ್ಷುಗಳೇ, ವಿಪಸ್ಸಿ ಬೋಧಿಸತ್ವನು ‘ನಾನು ಸಂಬೋಧಿಯನ್ನು ಪಡೆಯಲು ಯಾವ ಮಾರ್ಗದಲ್ಲಿ ಹೋಗಬೇಕೋ ಅದನ್ನು ಅರಿತುಕೊಂಡಿದ್ದೇನೆ. ಅದು ಹೀಗಿದೆ- ‘ನಾಮರೂಪದ ನಿರ್ಮೂಲವೇ ವಿಞ್ಞಾಣದ ನಿರ್ಮೂಲ ಆಗಿದೆ. ವಿಞ್ಞಾಣದ ನಿರ್ಮೂಲವೇ ನಾಮರೂಪದ ನಿರ್ಮೂಲ ಆಗಿದೆ. ನಾಮರೂಪದ ನಿರ್ಮೂಲವೇ ಸಳಾಯತನದ ನಿರ್ಮೂಲ ಆಗಿದೆ. ಸಳಾಯತನದ ನಿರ್ಮೂಲವೇ ಫಸ್ಸದ ನಿರ್ಮೂಲ ಆಗಿದೆ. ಫಸ್ಸದ ನಿರ್ಮೂಲವೇ ವೇದನೆಯ ನಿರ್ಮೂಲ ಆಗಿದೆ. ವೇದನೆಯ ನಿರ್ಮೂಲವೇ ತಣ್ಹಾದ ನಿರ್ಮೂಲ ಆಗಿದೆ. ತಣ್ಹಾದ ನಿರ್ಮೂಲವೇ ಉಪಾದಾನದ ನಿರ್ಮೂಲ ಆಗಿದೆ. ಉಪಾದಾನದ ನಿರ್ಮೂಲವೇ ಭವದ ನಿರ್ಮೂಲ ಆಗಿದೆ. ಭವದ ನಿರ್ಮೂಲವೇ ಹುಟ್ಟಿನ ನಿರ್ಮೂಲ ಆಗಿದೆ. ಹುಟ್ಟಿನ ನಿರೋಧವೇ ಮುಪ್ಪು, ಸಾವು, ಶೋಕ, ಪಶ್ಚಾತ್ತಾಪ, ನಿರಾಶೆಗಳ ಅಳಿವು ಆಗಿದೆ. ಹೀಗೆ ದುಃಖಸ್ಕಂಧದ ನಿರೋಧ ಆಗುತ್ತದೆ.’

‘ನಿರೋಧ, ನಿರೋಧ’ ಎಂಬುದರ ಅರಿವು ಉಂಟಾದಾಗ ವಿಪಸ್ಸಿ ಬೋಧಿಸತ್ವನಿಗೆ ಹಿಂದೆ ಇಲ್ಲದಿದ್ದ ಧರ್ಮಚಕ್ಷು ಉದಯಿಸಿತು. ಜ್ಞಾನವು ಬಂದಿತು, ತಣ್ಹಾವು ಲಭಿಸಿತು, ವಿದ್ಯೆಯು ಬಂದಿತು, ಬೆಳಕು ಉದಿಸಿತು.

“ಭಿಕ್ಷುಗಳೇ, ವಿಪಸ್ಸಿ ಬೋಧಿಸತ್ವನು ಸ್ವಲ್ಪ ಸಮಯದ ನಂತರ ಪಂಚ ಉಪಾದಾನ ಖಂಡಗಳ ಉದಯವ್ಯಯಗಳನ್ನು ನೋಡಬಲ್ಲವನಾದನು. ‘ಇದು ರೂಪ, ಇದು ರೂಪದ ಉದಯ, ಇದು ರೂಪದ ನಾಶ, ಇದು ವೇದನೆ, ಇದು ವೇದನೆಯ ಸಮುದಯ, ಇದು ವೇದನೆಯ ನಾಶ, ಇದು ಸಞ್ಞಾ, ಇದು ಸಞ್ಞಾದ ಸಮುದಯ, ಇದು ಸಞ್ಞಾದ ಸಮುದಯ, ಇದು ಸಞ್ಞಾದ ನಾಶ, ಇದು ಸಂಖಾರ, ಇದು ಸಂಖಾರದ ಸಮುದಯ, ಇದು ಸಂಖಾರದ ನಾಶ, ಇದು ವಿಞ್ಞಾಣ, ಇದು ವಿಞ್ಞಾಣದ ಸಮುದಯ, ಇದು ವಿಞ್ಞಾಣದ ನಾಶ. ಈ ಪಂಚ ಉಪಾದಾನ ಖಂದಗಳ ಉದಯವ್ಯಯಗಳಲ್ಲಿ ತಲ್ಲೀನನಾದ ವಿಪಸ್ಸಿ ಬೋಧಿಸತ್ವನಿಗೆ ಸ್ವಲ್ಪಹೊತ್ತಿನಲ್ಲಿಯೇ ಅವನ ಚಿತ್ತವು ಆಸವಗಳಿಂದ ಬಿಡುಗಡೆ ಹೊಂದಿತು.

ದ್ವೀತೀಯ ಪಠಣ ಭಾಗ

ಬ್ರಹ್ಮಯಾಚನೆ ಕಥೆ

“ಭಿಕ್ಷುಗಳೇ, ಭಗವಂತನೂ ಅರಹಂತನೂ ಸಮ್ಮಾಸಂಬುದ್ಧನೂ ಆದ ವಿಪಸ್ಸಿಗೆ ಹೀಗನ್ನಿಸಿತು- ‘ನಾನು ಈ ಧರ್ಮವನ್ನು ಲೋಕಕ್ಕೆ ತಿಳಿಸಬೇಕೆ? ಗಂಭೀರವೂ ಕಷ್ಟಪಟ್ಟು ಅರಿಯಬೇಕಾದುದೂ ಕಷ್ಟಪಟ್ಟು ಪಡೆದು ಅನುಭವಿಸಬೇಕಾದುದೂ ಶಾಂತಿಯನ್ನು ತರುವಂಥದೂ ಶ್ರೇಷ್ಠವಾದುದೂ ತರ್ಕವನ್ನು ಮೀರಿದುದೂ ನೈಪುಣ್ಯಪೂರಿತವಾದರೂ ಜಾಣರೂ ತಿಳಿಯಬೇಕಾದುದೂ ಆದ ಧರ್ಮವನ್ನು ಅರಿತುಕೊಂಡಿದ್ದೇನೆ. ಜನಗಳಾದರೋ ಭೋಗದಲ್ಲಿಯೇ ರಮಿಸುತ್ತಾರೆ. ಭೋಗದಲ್ಲಿ ನಿರತರಾಗಿರುತ್ತಾರೆ, ಅದರಿಂದ ತುಂಬ ಸಂತೋಷಪಡುತ್ತಾರೆ. ಈ ಪಟಿಚ್ಛಾ ಸಮುಪ್ಪಾದ ತತ್ವವು ಭೋಗದಲ್ಲಿ ರಮಿಸುವ, ಭೋಗದಲ್ಲಿ ನಿರತರಾದ, ಭೋಗದಿಂದ ತುಂಬ ಸಂತೋಷಪಡುವ ಜನರಿಗೆ ಕಷ್ಟವಾಗುತ್ತದೆ. ಸಂಖಾರಗಳನ್ನು ಶಾಂತಗೊಳಿಸುವ ಹುಟ್ಟಿನ ಎಲ್ಲ ಕಾರಣಗಳನ್ನೂ ನಿರ್ಮೂಲಗೊಳಿಸುವ ತಣ್ಹಾವನ್ನು ನಶಿಸುವ ರಾಗವನ್ನು ಇಲ್ಲದಂತೆ ಮಾಡುವ ನಿಬ್ಬಾಣವನ್ನು ತರುವ ಈ ತತ್ವವು ತಿಳಿಯಲು ಕಷ್ಟವಾದುದಾಗಿದೆ. ನಾನೇನಾದರು ಈ ಧರ್ಮವನ್ನು ಬೋಧಿಸಿದರೆ ಇತರರ ನನ್ನನು ಅರ್ಥ ಮಾಡಿಕೊಳ್ಳದಿರಬಹುದು; ಅದು ನನಗೆ ಬೇಸರವನ್ನುಂಟುಮಾಡುತ್ತದೆ, ನೋವನ್ನುಂಟುಮಾಡುತ್ತದೆ.’

“ಭಿಕ್ಷುಗಳೇ, ಭಗವಂತನೂ ಅರಹಂತನೂ ಸಮ್ಮಾಸಂಬುದ್ಧನೂ ಆದ ವಿಪಸ್ಸಿಗೆ ಆ ಕೂಡಲೇ ಹಿಂದೆ ಎಂದೂ ಕೇಳದಿದ್ದ ಒಂದು ಗಾಥೆಯು ಹೊಳೆಯಿತು:

‘ಲೋಕ ಬಂಧನವ ದಾಟಿರುವ ನಾನು |

ರಾಗದ್ವೇಷಗಳ ಜಯಿಸಿರುವೆ ದಿಟವು ||

ತಿಳಿಬೆಳಕ ಪರಿಯಿರುವ ಬೋಧಿ ಧಮ್ಮವದು |

ಎನ್ನ ಹೃದಯದೊಳೀಗ ಹೊಳೆಯುತಿಹುದು ||

ಗಾಢಾಂಧಕಾರದೊಳು ಮುಳುಗಿರುವ ಜನತೆಯದು |

ರಾಗಸಾಗರದ ಗಡಿಯಾಚೆ ನಿಂತಿರುವ |

ಗಂಭೀರ ನಿಪುಣರ ದುರ್ಲಭ್ಯವಾಗಿರುವ ಈ ಧಮ್ಮವನೆಂತು ಅರಿಯುವುರು ?’ ||

“ಹೀಗೆ ವಿಪಸ್ಸಿ ಬುದ್ಧನು ಧಮ್ಮವನ್ನು ಲೋಕ್ಕಕ್ಕೆ ಪ್ರಕಟಿಸಲು ಮನಸ್ಸು ಮಾಡದೆ ಹಿಂಜರಿಯುತ್ತಿದ್ದನು.

“ಆಮೇಲೆ, ಭಿಕ್ಷುಗಳೇ, ಬ್ರಹ್ಮನೊಬ್ಬನು ಭಗವಂತನಾದ ಅರಹಂತನೂ ಸಮ್ಮಾಸಂಬುದ್ಧನೂ ಆದ ವಿಪಸ್ಸಿಯ ಚಿತ್ರದಲ್ಲಿದ್ದುದನ್ನು ತಿಳಿದವನಾಗಿ ಹೀಗೆಂದುಕೊಂಡನು- ‘ಲೋಕವು ನಾಶವಾಗಿ ಹೋಗುತ್ತದೆ, ಲೋಕವು ವಿನಾಶವಾಗುತ್ತದೆ’. ವಿಪಸ್ಸಿ ಸಮ್ಮಾಸಂಬುದ್ಧನ ಚಿತ್ತವು ಧಮ್ಮವನ್ನು ಬೋಧಿಸುವ ಕಡೆಗಿಲ್ಲ. ಆಗ ಮಹಾಬ್ರಹ್ಮನು ಬಲಶಾಲಿಯಾದವನೊಬ್ಬನು ತನ್ನ ತೋಳನ್ನು ಮಡಿಸಿಕೊಳ್ಳುವಷ್ಟು ಕ್ಷಿಪ್ರವಾಗಿ ತನ್ನ ಬ್ರಹ್ಮಲೋಕದಿಂದ ವಿಪಸ್ಸಿ ಭಗವಂತನಲ್ಲಿಗೆ ಬಂದನು. ಅನಂತರ ಆತನು ತನ್ನ ಹೊರ ಬಟ್ಟೆಯನ್ನು ಸರಿಪಡಿಸಿಕೊಂಡು ಬಲಮಂಡಿಯನ್ನೂರಿಕೊಂಡು ಅಂಜಲೀಬದ್ಧವಾಗಿ ವಿಪಸ್ಸಿ ಭಗವಂತನಲ್ಲಿ ಹೀಗೆ ವಿನಂತಿ ಮಾಡಿಕೊಂಡನು. ‘ಭಗವಂತನು ಧಮ್ಮವನ್ನು ಬೋಧಿಸಲಿ, ಸುಗತನು ಧಮ್ಮವನ್ನು ಬೋಧಿಸಲಿ, ಸ್ಪಷ್ಟವಾದ ದೃಷ್ಟಿಯನ್ನು ಹೊಂದಿರುವ ಜೀವಿಗಳು ಇವೆ; ಧಮ್ಮದ ಅರಿವಿಲ್ಲದೆ ಅವು ನಾಶವಾಗಿ ಹೋಗುತ್ತವೆ. ಅವು ಧಮ್ಮವನ್ನು ತಿಳಿಯುವಂತಾಗಲಿ.’

“ಹೀಗೆ ಹೇಳಿದ ಮಹಾಬ್ರಹ್ಮನಿಗೆ ವಿಪಸ್ಸಿ ಭಗವಂತನು ‘ಬ್ರಹ್ಮ, ಧಮ್ಮವನ್ನು ಬೋಧಿಸಬೇಕೆಂದು ನನಗೂ ಅನ್ನಿಸಿತು. ಗಂಭೀರವೂ, ಅರಿಯಲು ಕಷ್ಟವಾದರೂ ಕಷ್ಟಪಟ್ಟು ಅರಿತು ಅನುಭವಿಸಬೇಕಾದುದೂ, ಶಾಂತಿಯನ್ನು ಕೊಡುವಂಥದೂ, ಶ್ರೇಷ್ಠವಾದುದೂ ತರ್ಕವನ್ನು ಮೀರಿದುದೂ ನೈಪುಣ್ಯಪೂರಿತವಾದುದೂ, ಜಾಣರು ಅರಿಯಬೇಕಾದುದೂ ಆದ ಧರ್ಮವು ಲೋಕಾತೀತವಾಗಿದೆ. ಭೋಗದಲ್ಲಿಯೇ ರಮಿಸುವ ಭೋಗದಲ್ಲಿಯೇ ನಿರತರಾದ ಭೋಗದಲ್ಲಿಯೇ ಅತೀ ಸಂತೋಷವನ್ನು ಪಡುವ ಜನರಿಗೆ ಈ ಪಟಿಚ್ಚಾ ಸಮುಪ್ಪಾದ ತತ್ವವನ್ನು ಅರಿಯಲು ಕಷ್ಟವಾಗುತ್ತದೆ. ಸಂಖಾರಗಳೆಲ್ಲವನ್ನೂ ಶಾಂತಗೊಳಿಸುವ ಹುಟ್ಟಿನ ಎಲ್ಲ ಕಾರಣಗಳನ್ನೂ ನಿರ್ಮೂಲಗೊಳಿಸುವ ತಣ್ಹಾವನ್ನು ನಾಶಮಾಡುವ ರಾಗವನ್ನು ಇಲ್ಲದಂತೆ ಮಾಡುವ ನಿಬ್ಬಾಣವನ್ನು ತರುವ ಈ ತತ್ವವು ಅರಿಯಲು ಕಷ್ಟವಾದುದು. ನಾವೇನಾದರೂ ಈ ಧಮ್ಮವನ್ನು ಬೋಧಿಸಿದರೆ ಇತರರು ನನ್ನನ್ನು ಅರ್ಥಮಾಡಿಕೊಳ್ಳದಿರಬಹುದು; ಇದು ನನಗೆ ಬೇಸರವನ್ನುಂಟುಮಾಡುತ್ತದೆ, ನೋವನ್ನುಂಟುಮಾಡುತ್ತದೆ. ಹಿಂದೆಯೂ ಕೇಳದಿದ್ದ ಒಂದು ಗಾಥೆಯು ನನ್ನ ಚಿತ್ತದಲ್ಲಿ ಇದ್ದಕ್ಕಿದ್ದಂತೆಯೇ ಹೊಳೆಯಿತು:

ಲೋಕ ಬಂಧನವ ದಾಟಿರುವ ನಾನು

ರಾಗದ್ವೇಷಗಳ ಜಯಿಸಿರುವೆ, ದಿಟವು

ತಿಳಿಬೆಳಕ ಪರಿಯಿರುವ ಬೋಧಿ ಧಮ್ಮವದು

ಎನ್ನ ಹೃದಯದೊಳೀಗ ಹೊಳೆಯುತಿಹುದು.

ಗಾಢಾಂಧಕಾರದೊಳು ಮುಳುಗಿರುವ ಜನತೆಯದು

ರಾಗ ಸಾಗರದ ಗಡಿಯಾಚೆ ನಿಂತಿರುವ

ಗಂಭೀರ ನಿಪುಣತರ ದುರ್ಲಭ್ಯವೆನಿಸಿರುವ ಈ ಧಮ್ಮವನೆಂತು ಅರಿಯುವರು?

ಬ್ರಹ್ಮ ಹೀಗೆ ನನ್ನ ಚಿತ್ತವು ಧಮ್ಮವನ್ನು ಬೋಧಿಸುವ ಕಡೆಗೆ ವಾಲಲಿಲ್ಲ !

“ಭಿಕ್ಷುಗಳೇ, ಎರಡನೆಯ ಸಾರಿ ಆ ಬ್ರಹ್ಮನು.... ಮೂರನೆಯ ಸಾರಿ ಆ ಬ್ರಹ್ಮನು ಭಗವಂತನೂ ಅರಹಂತನೂ ಸಮ್ಮಾಸಂಬುದ್ಧನೂ ಆದ ವಿಪಸ್ಸಿಗೆ ಹೀಗೆ ಹೇಳಿದನು- ‘ಭಗವಂತನು ಧಮ್ಮವನ್ನು ಬೋಧಿಸಲಿ, ಸುಗತನು ಧಮ್ಮವನ್ನು ಬೋಧಿಸಲಿ, ಸ್ಪಷ್ಟವಾದ ದೃಷ್ಟಿಯನ್ನು ಹೊಂದಿರುವ ಜೀವಿಗಳು ಇವೆ. ಧಮ್ಮದ ಅರಿವಿಲ್ಲದೆ ಅವು ನಾಶವಾಗಿ ಹೋಗುತ್ತವೆ. ಅವುಗಳು ಧಮ್ಮವನ್ನು ತಿಳಿಯುವಂತಾಗಲಿ.’

“ಭಿಕ್ಷುಗಳೇ, ಆಮೇಲೆ ವಿಪಸ್ಸಿ ಬುದ್ಧನು ಬ್ರಹ್ಮನಿಗೆ ಜೀವಿಗಳಲ್ಲಿರುವ ಕರುಣೆಯನ್ನು ತಿಳಿದವನಾಗಿ ಲೋಕವನ್ನು ಬುದ್ಧ ಚಕ್ಷುವಿನಿಂದ ನೋಡಿದನು. ವಿಪಸ್ಸಿ ಬುದ್ಧನು ಅತ್ಯಲ್ಪ ಕಶ್ಮಲದಿಂದ ಕೂಡಿದ ದೃಷ್ಟಿಯಿರುವವರನ್ನೂ, ಕಶ್ಮಲದಿಂದ ತುಂಬಿರುವ ದೃಷ್ಟಿಯಿರುವವರನ್ನೂ, ಚುರುಕಾದ ಇಂದ್ರಿಯ ಉಳ್ಳವರನ್ನೂ, ಮಂದವಾದ ಇಂದ್ರಿಯ ಉಳ್ಳವರನ್ನೂ, ಒಳ್ಳೆಯದನ್ನು ಮಾಡಬಲ್ಲವರನ್ನೂ ಕೆಟ್ಟುದನ್ನೇ ಮಾಡುವವರನ್ನೂ ಹೇಳಿದುದನ್ನು ಕೇಳುವವರನ್ನೂ ಹೇಳಿದುದನ್ನು ಧಿಕ್ಕರಿಸುವವರನ್ನೂ ಪರಲೋಕದಲ್ಲಿ ಹುಟ್ಟುವುದರ ಅಪಾಯವನ್ನು ತಿಳಿದವರನ್ನೂ ಅದರ ಭಯವಿಲ್ಲದವರನ್ನೂ ನೋಡಿದನು. ನೀರಿನಲ್ಲಿ ಹುಟ್ಟಿ ನೀರಿನಲ್ಲಿ ಬೆಳೆದು ಮೇಲಕ್ಕೆ ಬರಲಾರದೆ ನೀರಿನೊಳಗೆ ಕೊಳೆತು ಹೋಗುವ ನೀಲಿ ಕೆಂಪು ಬಿಳಿ ತಾವರೆಗಳು ಕೆಲವಿರುವಂತೆ, ನೀರಿನಲ್ಲಿ ಹುಟ್ಟಿ, ನೀರಿನಲ್ಲಿ ಬೆಳೆದು ನೀರಿನ ಮಟ್ಟಕ್ಕಷ್ಟೇ ನಿಲ್ಲುವ ನೀಲಿ, ಕೆಂಪು, ಬಿಳಿ ತಾವರೆಗಳು ಕೆಲವಿರುವಂತೆ, ನೀರಿನಲ್ಲಿ ಹುಟ್ಟಿ ನೀರಿನಲ್ಲಿ ಬೆಳೆದು ನೀರಿನಿಂದ ಹೊರಗೆ ಬರಬಲ್ಲ ನೀಲಿ, ಕೆಂಪು, ಬಿಳಿ ತಾವರೆಗಳು ಕೆಲವಿರುವಂತೆ ಅತ್ಯಲ್ಪ ದೋಷವಿರುವ ದೃಷ್ಟಿಯಿರುವವರನ್ನೂ ದೋಷದಿಂದ ತುಂಬಿರುವ ದೃಷ್ಟಿಯಿರುವವರನ್ನೂ ಚುರುಕಾದ ಇಂದ್ರಿಯ ಉಳ್ಳವರನ್ನೂ ಮಂದವಾದ ಇಂದ್ರಿಯ ಉಳ್ಳವರನ್ನೂ, ಒಳ್ಳೆಯದನ್ನು ಮಾಡಬಲ್ಲವರನ್ನೂ, ಕೆಟ್ಟುದನ್ನೇ ಮಾಡುವವರನ್ನೂ, ಹೇಳಿದುದನ್ನು ಕೇಳುವವರನ್ನೂ, ಹೇಳಿದುದನ್ನು ಧಿಕ್ಕರಿಸುವವರನ್ನೂ, ಪರಲೋಕದಲ್ಲಿ ಹುಟ್ಟುವುದರ ಅಪಾಯವನ್ನು ತಿಳಿದವರನ್ನೂ ಅದರ ಭಯವಿಲ್ಲದವರನ್ನೂ ನೋಡಿದನು.

“ಭಿಕ್ಷುಗಳೇ, ಭಗವಂತನಾದ ವಿಪಸ್ಸಿಯು ಚಿತ್ತದಲ್ಲಿರುವುದನ್ನು ತನ್ನ ಚೇತೋಪರಿಯ ಜ್ಞಾನದಿಂದ ತಿಳಿದವನಾದ ಮಹಾಬ್ರಹ್ಮನು ಅರಹಂತನನ್ನು ಕುರಿತು ಹೀಗೆಂದನು-

‘ಗಿರಿಯ ತುದಿಯೊಳಿರುವ ಕಗ್ಗಲ್ಲ ಮೇಲ್ನಿಂತು |

ನೆಲದಿ ಚಲಿಸುವ ಜನರ ನೋಳ್ಪ ನರನಂತೆ |

ಏರಿ ಮೇಲೇರಿ ನೀ ನೋಡುತಿರುವೆ |

ಓ ಸುಮೇಧನೆ, ಅರಹ, ಎಲ್ಲ ಜೀವಿಗಳನು ||

ಶೋಕದೊಳು ಮುಳುಗಿರುವ ಜಾತಿ ಜರೆ ಜಗ್ಗುತಿಹ |

ಜನತೆಯನೆ ನೀನೋಳ್ಪೆ ಶೋಕವರ್ಜಿತನಾದ ಪರಮ ಗುರುವೆ |

ಓ ವೀರ, ನೀ ಏಳು, ಸಂಗ್ರಾಮ ವಿಜೇತ |

ಲೋಕದೊಳು ಚಲಿಸು ದೊರೆ, ನಿನಗಿಲ್ಲ ಬಂಧನವು |

ಧಮ್ಮವನು ತಿಳಿಸು ಪ್ರಭು, ಅರಿವು ಮೂಡಲಿ ಜಗದಿ ||

“ಆಮೇಲೆ ಭಿಕ್ಷುಗಳೇ, ವಿಪಸ್ಸಿ ಭಗವಂತನು ಆ ಮಹಾಬ್ರಹ್ಮನಿಗೆ ಈ ಗಾಥೆಯನ್ನು ಹೇಳಿದನು-

“ತೆರೆದಿಹುದು ನೋಡಾ ಅಮೃತತ್ವದ ದ್ವಾರ |

ಧಮ್ಮವನು ಕೇಳಿದವ ವರ್ಜಿಸಲಿ ಅಧರ್ಮವನು |

ಶ್ರೇಷ್ಠವಹ ಧಮ್ಮವನು ನಾ ತಿಳಿಪೆ |

ಮನುಜರಿಗೆ ಬ್ರಹ್ಮರಿಗೆ ಎದೆಗೆಡದೆ ಕುಗ್ಗದೆಯೆ ||

“ಅನಂತರ, ಮಹಾಬ್ರಹ್ಮನು ‘ವಿಪಸ್ಸಿ ಭಗವಂತನಿಂದ ಆಗುವ ಲೋಕೋಪದೇಶಕ್ಕೆ ನಾನು ಕಾರಣನಾಗಿದ್ದೇನೆ’ ಎಂದುಕೊಂಡು ಆತನಿಗೆ ಪ್ರದಕ್ಷಿಣೆ ಮಾಡಿ, ನಮಸ್ಕರಿಸಿ ಅಂತರ್ಧಾನನಾದನು.

ಅಗ್ರಶ್ರಾವಕ ಯುಗ

“ಭಿಕ್ಷುಗಳೇ, ಆಗ ವಿಪಸ್ಸಿ ಭಗವಂತನಿಗೆ ಹೀಗನ್ನಿಸಿತು- ‘ನಾನು ಧಮ್ಮವನ್ನು ಮೊದಲು ಯಾರಿಗೆ ಬೋಧಿಸಲಿ. ಈ ಧರ್ಮವನ್ನು ಕ್ಷಿಪ್ರವಾಗಿ ಯಾರು ತಿಳಿಯಬಲ್ಲರು? ರಾಜಪುತ್ರನಾದ ಖಂಡನೂ ಪುರೋಹಿತ ಪುತ್ರನಾದ ತಿಸ್ಸನೂ, ಬಂಧುಮತಿ ರಾಜಧಾನಿಯಲ್ಲಿ ವಾಸಿಸುತ್ತಿದ್ದಾರೆ. ಅವರು ಪಂಡಿತರು, ಯಾವ ಅಂಧ ವಿಶ್ವಾಸವೂ ಇಲ್ಲದವರು, ಮೇಧಾವಿಗಳು, ದೃಷ್ಟಿಯಲ್ಲಿ ಯಾವ ದೋಷವನ್ನೂ ಹೊಂದಿಲ್ಲದವರು. ಅವರಿಬ್ಬರಿಗೂ ಧಮ್ಮವನ್ನು ಬೋಧಿಸಬಹುದು. ಈ ಧಮ್ಮವನ್ನು ಬಹುಬೇಗನೆ ತಿಳಿದುಕೊಳ್ಳುತ್ತಾರೆ.’

“ಆನಂತರ, ಭಿಕ್ಷುಗಳೇ, ಬಲಶಾಲಿಯಾದವನೊಬ್ಬನು ಮಡಿಸಿರುವ ತನ್ನ ತೋಳನ್ನು ಚಾಚುವಷ್ಟು ಕ್ಷಿಪ್ರಕಾಲದಲ್ಲಿ ಅಥವಾ ಚಾಚಿರುವ ತೋಳನ್ನು ಮಡಿಸಿಕೊಳ್ಳುವಷ್ಟು ಕ್ಷಿಪ್ರಕಾಲದಲ್ಲಿ ಬೋಧಿವೃಕ್ಷದ ಬುಡದಿಂದ ಬಂಧುಮತಿ ರಾಜಧಾನಿಯಲ್ಲಿರುವ ಮಿಗಾದಾಯಕ್ಕೆ (ಮೃಗವನ) ಬಂದನು. ಅಲ್ಲಿದ್ದ ವನಪಾಲಕನನ್ನು ಕರೆದು ‘ಬಂಧುಮತಿ ರಾಜಧಾನಿಗೆ ಹೋಗಿ ರಾಜಪುತ್ರನಾದ ಖಂಡನಿಗೂ, ಪುರೋಹಿತ ಪುತ್ರನಾದ ತಿಸ್ಸನಿಗೂ ಹೀಗೆ ತಿಳಿಸು- ಭಗವಂತನೂ ಅರಹಂತನು ಸಮ್ಮಾಸಂಬುದ್ಧನೂ ಆದ ವಿಪಸ್ಸಿಯು ರಾಜಧಾನಿಯ ಮೃಗವನದಲ್ಲಿ ತಂಗಿದ್ದಾನೆ. ನಿಮ್ಮಿಬ್ಬರನ್ನೂ ನೋಡಲಕೇಪಕ್ಷಿಸುತ್ತಾನೆ.’ ಆ ವನಪಾಲಕನು ‘ಹಾಗೆಯೇ ಆಗಲಿ’ ಎಂದು ಹೇಳಿ ಬಂಧುಮತಿ ಪಟ್ಟಣಕ್ಕೆ ಹೋಗಿ ಖಂಡ ತಿಸ್ಸರಿಗೆ ಭಗವಂತ ವಿಪಸ್ಸಿಯು ಹೇಳಿದುದನ್ನು ತಿಳಿಸಿದನು.

“ಆಮೇಲೆ, ಖಂಡ ತಿಸ್ಸರು ಒಳ್ಳೆಯ ವಾಹನಗಳನ್ನೇರಿ ರಾಜಧಾನಿಯಿಂದ ಹೊರಟರು. ಮೃಗವನಕ್ಕೆ ಬಂದರು. ಎಲ್ಲಿಯವರೆಗೆ ವಾಹನದಲ್ಲಿ ಹೋಗಬಹುದೋ ಅಷ್ಟು ದೂರ ಅದರಲ್ಲಿ ಹೋಗಿ ಆಮೇಲೆ ಅದರಿಂದಿಳಿದು ನಡೆದುಕೊಂಡು ವಿಪಸ್ಸಿ ಬುದ್ಧನಲ್ಲಿಗೆ ಹೋದರು. ಅವನಿಗೆ ಅಭಿವಂದಿಸಿ ಅವರಿಬ್ಬರೂ ಒಂದುಕಡೆ ಕುಳಿತುಕೊಂಡನು.

“ಆಮೇಲೆ ವಿಪಸ್ಸಿ ಭಗವಂತನು ಅನುಕ್ರಮವಾಗಿ ತತ್ವವನ್ನು ವಿವರಿಸಿದನು. ದಾನಕಥೆ, ಶೀಲಕಥೆ, ಸ್ವರ್ಗಕಥೆ; ಕಾಮಗಳ ಅಪಾಯ, ಕ್ಲೇಶಗಳಿಂದ ಬರುವ ಪ್ರತಿಷ್ಠೆ, ಸತ್ಕರ್ಮದಿಂದಾಗುವ ಲಾಭ- ಇವುಗಳೆಲ್ಲವನ್ನೂ ವಿವರಿಸಿದನು. ಕಲ್ಲಚಿತ್ತ, ಮುದುಚಿತ್ತ, ಉದಗ್ಗಚಿತ್ತ, ಪಸನ್ನಚಿತ್ತವನ್ನು ಹೊಂದಿರುವ ಬುದ್ಧರಿಂದ ಮಾತ್ರ ಸಾಧ್ಯವಾಗುವ ಧಮ್ಮವನ್ನು ಪ್ರಕಾಶಪಡಿಸಿದನು. ದುಃಖ, ಸಮುದಯ, ನಿರೋಧ ಮತ್ತು ಮಾರ್ಗಗಳನ್ನು ವಿವರಿಸಿದನು. ಯಾವ ಕೊಳೆಯೂ ಇಲ್ಲದ ಶುದ್ಧವಾಗಿರುವ ವಸ್ತ್ರವೊಂದು ಬಣ್ಣವನ್ನು ಬೇಗನೆ ಹೀರಿಕೊಳ್ಳುವಂತೆ ಆ ಖಂಡ-ತಿಸ್ಸರು ಕುಳಿತಂತೆಯೇ ಮನಸ್ಸಿನ ಎಲ್ಲ ಕಶ್ಮಲಗಳನ್ನು ಕಳೆದುಕೊಂಡರು.

ಧರ್ಮಚಕ್ಷು ಅವರಲ್ಲಿ ಉದಯಿಸಿತು. ‘ಹುಟ್ಟುವುದೆಲ್ಲವೂ ಅಳಿಯಲೇ ಬೇಕು’ ಎಂಬ ಸತ್ಯ ಸ್ಪಷ್ಟವಾಯಿತು. ದೃಷ್ಟಿ ಧರ್ಮವನ್ನು ತಿಳಿದವರಾಗಿ ಧರ್ಮವನ್ನು ಜಯಿಸಿದವರಾಗಿ ಧರ್ಮವನ್ನು ಅರಿತವರಾಗಿ ಧರ್ಮದ ಆಳ-ಅಗಲಗಳನ್ನು ನೋಡಿದವರಾಗಿ ಸಂಶಯಗಳೆಲ್ಲವನ್ನೂ ದಾಟಿದವರಾಗಿ ಭ್ರಮೆಯನ್ನು ದೂರ ಮಾಡಿದವರಾಗಿ, ವಿಶ್ವಾಸವನ್ನು ಗಳಿಸಿದವರಾಗಿ ಭಗವಂತನ ಧಮ್ಮವೊಂದನ್ನೇ ಅವಲಂಬಿಸಿದವರಾಗಿ ವಿಪಸ್ಸಿ ಸಮ್ಮಾಸಂಬುದ್ಧನಿಗೆ ಹೀಗೆಂದರು- ‘ಎಷ್ಟು ಉತ್ಕೃಷ್ಟ ಭಂತೆ, ಎಷ್ಟು ಉತ್ಕೃಷ್ಟವಾಗಿದೆ, ತಲೆಕೆಳಗಾಗಿ ಬಿದ್ದಿರುವುದನ್ನು ನೆಟ್ಟಗೆ ನಿಲ್ಲಿಸುವವನಂತೆ, ಮುಚ್ಚಿಹೋಗಿರುವುದನ್ನು ತೆರೆದು ತೋರಿಸುವವನಂತೆ, ಅಂಧಕಾರದಲ್ಲಿರುವವನಿಗೆ ದೀಪ ಹಿಡಿಯುವವನಂತೆ ಕಣ್ಣಿರುವವನು ರೂಪಗಳನ್ನು ನೋಡಲು ಸಾಧ್ಯವಾಗುವಂತೆ ಭಗವಂತರಾದ ತಾವು ಅನೇಕ ಪರಿಯಲ್ಲಿ ಧಮ್ಮವನ್ನು ಪ್ರಕಾಶಪಡಿಸಿದ್ದೀರಿ. ಭಂತೆ, ನಾವು ಭಗವಂತನಿಗೆ ಶರಣು ಹೋಗುತ್ತೇವೆ, ಧಮ್ಮಕ್ಕೆ ಶರಣು ಹೋಗುತ್ತೇವೆ. ನಮ್ಮನ್ನು ಪಬ್ಬಜ್ಜರನ್ನಾಗಿ ಮಾಡಿ ನಾವು ಉಪಸಂಪದವನ್ನು ಪಡೆಯುವಂತಾಗಲಿ.’

“ಭಿಕ್ಷುಗಳೇ, ರಾಜಪುತ್ರನಾದ ಖಂಡನೂ ಪುರೋಹಿತ ಪುತ್ರನಾದ ತಿಸ್ಸನೂ ಪಬ್ಬಜರಾದರು. ಉಪಸಂಪದವನ್ನು ಪಡೆದರು. ವಿಪಸ್ಸಿ ಭಗವಂತನು ಅವರಿಬ್ಬರಿಗೂ ಧಮ್ಮವನ್ನು ವಿವರಿಸಿದನು. ಅವರನ್ನು ಸ್ಪೂರ್ತಿಗೊಳಿಸಿದನು; ಉದ್ದೀಪನಗೊಳಿಸಿದನು; ಅವರಿಗೆ ಸಂತೋಷವನ್ನುಂಟುಮಾಡಿದನು. ಸಂಖಾರಗಳ ಅಪಾಯವನ್ನೂ, ಕ್ಲೇಶಗಳ ವ್ಯರ್ಥತೆಯನ್ನೂ ಸತ್ಕರ್ಮದ ಲಾಭವನ್ನೂ ವಿವರಿಸಿದನು. ಭಗವಂತನಾದ ವಿಪಸ್ಸಿಯಿಂದ ವಿವರಿಸಲ್ಪಟ್ಟ ಧಮ್ಮದಿಂದ ಸ್ಫೂರ್ತಿಗೊಂಡ ಸಂತೋಷಗೊಂಡ ಸಂತೃಪ್ತಗೊಂಡ ಆ ಇಬ್ಬರ ಚಿತ್ತಗಳು ಬಹುಬೇಗನೆ ಆಸವಗಳಿಂದ ದೂರವಾದುವು.

ಮಹಾಜನರು ಪಬ್ಬಜ್ಜ ಸ್ವೀಕರಿಸುವುದು

“ಭಿಕ್ಷುಗಳೇ, ಬಂಧುಮತಿ ರಾಜಧಾನಿಯಲ್ಲಿದ್ದ ಎಂಭತ್ತು ನಾಲ್ಕು ಸಾವಿರ ಜನರು ಈ ಸುದ್ದಿಯನ್ನು ಕೇಳಿದರು. ‘ಭಗವಂತನೂ ಅರಹಂತನೂ ಸಮ್ಮಾಸಂಬುದ್ಧನೂ ಆದ ವಿಪಸ್ಸಿಯು ರಾಜಧಾನಿಗೆ ಬಂದು ಮಿಗಾದಾಯದಲ್ಲಿ ಉಳಿದುಕೊಂಡಿದ್ದಾನೆ. ರಾಜಪುತ್ರನಾದ ಖಂಡನೂ, ಪುರೋಹಿತ ಪುತ್ರನಾದ ತಿಸ್ಸನೂ ವಿಪಸ್ಸಿ ಭಗವಂತನಿಂದ ಸ್ಫೂರ್ತಿ ಹೊಂದಿದವರಾಗಿ ಗಡ್ಡ ಕೂದಲುಗಳನ್ನು ತೆಗೆದು ಕಾಷಾಯವಸ್ತ್ರವನ್ನು ಧರಿಸಿ ಮನೆಯನ್ನು ತೊರೆದು ಪಬ್ಬಜಿತರಾಗಿದ್ದಾರೆ’. ಹೀಗೆ ಕೇಳಿದ ಅವರು ‘ಧಮ್ಮ ವಿನಯಗಳೂ ಸಾಮಾನ್ಯವಾದುವಲ್ಲ, ಪಬ್ಬಜ್ಜರಾಗುವುದು ಸಾಮಾನ್ಯವಾದುದಲ್ಲ. ರಾಜಪುತ್ರನಾದ ಖಂಡನೂ, ಪುರೋಹಿತ ಪುತ್ರನಾದ ತಿಸ್ಸನೂ ಗಡ್ಡ ಕೂದಲುಗಳನ್ನು ತೆಗೆದು ಕಾಷಾಯವಸ್ತ್ರವನ್ನು ಧರಿಸಿ ಮನೆಯನ್ನು ತೊರೆದು ಪಬ್ಬಜಿತರಾಗಿದ್ದಾರೆ. ನಾವೂ ಹಾಗೆಯೇ ಮಾಡಬಹುದಲ್ಲವೇ?’ ಆಮೇಲೆ ಆ ಎಂಭತ್ತನಾಲ್ಕು ಸಾವಿರ ಜನರ ಗುಂಪು ಬಂಧುಮತಿಯನ್ನು ಬಿಟ್ಟು ಮೃಗವನದಲ್ಲಿದ್ದ ವಿಪಸ್ಸಿ ಭಗವಂತನ ಸಮೀಪಕ್ಕೆ ಬಂದರು. ಅವನಿಗೆ ಅಭಿವಂದಿಸಿ ಒಂದುಕಡೆ ಕುಳಿತುಕೊಂಡರು.

“ಅರಹಂತನಾದ ವಿಪಸ್ಸಿಯು ಅವರಿಗೆ ಅನುಕ್ರಮವಾಗಿ ತತ್ವವನ್ನು ವಿವರಿಸಿದನು. ದಾನಕಥೆ, ಶೀಲಕಥೆ, ಸ್ವರ್ಗಕಥೆ, ಕಾಮಗಳಿಂದ ಬರುವ ಅಪಾಯ, ಕ್ಲೇಶಗಳಿಂದ ಬರುವ ಪ್ರತಿಷ್ಠೆ, ಸತ್ಕರ್ಮದಿಂದಾಗುವ ಲಾಭ ಇವೆಲ್ಲವನ್ನೂ ವಿವರಿಸಿದನು. ಕಲ್ಲಚಿತ್ತ, ಮುದುಚಿತ್ತ, ಉದಗ್ಗಚಿತ್ತ, ಪ್ರಸನ್ನಚಿತ್ತವನ್ನು ಪಡೆದಿರುವ ಬುದ್ಧರಿಂದ ಮಾತ್ರ ಸಾಧ್ಯವಾಗುವ ಧಮ್ಮವನ್ನು ಪ್ರಕಾಶಪಡಿಸಿದನು. ದುಃಖ, ಸಮುದಯ, ನಿರೋಧ ಮತ್ತು ಮಾರ್ಗಗಳನ್ನು ವಿವರಿಸಿದನು. ಯಾವ ಕೊಳೆಯೂ ಇಲ್ಲದ ಶುದ್ಧವಾದ ವಸ್ತ್ರವೊಂದು ಬಣ್ಣವನ್ನು ಹೀರಿಕೊಳ್ಳುವಂತೆ ಆ ಎಂಬತ್ತು ನಾಲ್ಕು ಸಾವಿರ ಜನರು ಕುಳಿತಂತೆಯೇ ಮನಸ್ಸಿನ ಕಶ್ಮಲಗಳನ್ನು ಕಳೆದುಕೊಂಡರು. ಧರ್ಮಚಕ್ಷು ಅವರಲ್ಲಿ ಉದಯಿಸಿತು. ‘ಹುಟ್ಟುವುದೆಲ್ಲವೂ ಅಳಿಯಲೇಬೇಕು’ ಎಂಬ ಸತ್ಯ ಸ್ಪಷ್ಟವಾಯಿತು. ಧರ್ಮವನ್ನು ತಿಳಿದವರಾಗಿ ಧರ್ಮವನ್ನು ಜಯಿಸಿದವರಾಗಿ ಧರ್ಮವನ್ನು ಅರಿತವರಾಗಿ ಧರ್ಮದ ಆಳ-ಅಗಲಗಳನ್ನು ನೋಡಿದವರಾಗಿ ಸಂಶಯಗಳೆಲ್ಲವನ್ನೂ ದಾಟಿದವರಾಗಿ ಭ್ರಮೆಯನ್ನು ದೂರ ಮಾಡಿದವರಾಗಿ ವಿಶ್ವಾಸವನ್ನು ಗಳಿಸಿದವರಾಗಿ ಭಗವಂತನ ಧಮ್ಮವೊಂದನ್ನೇ ಅವಲಂಬಿಸಿದವರಾಗಿ ವಿಪಸ್ಸಿ ಸಂಬುದ್ಧನಿಗೆ ಹೀಗೆಂದರು- ‘ಎಷ್ಟು ಉತ್ಕೃಷ್ಟ ಭಂತೆ, ಎಷ್ಟು ಉತ್ಕೃಷ್ಟವಾಗಿದೆ, ತಲೆಕೆಳಗಾಗಿ ಬಿದ್ದಿರುವುದನ್ನು ನೆಟ್ಟಗೆ ನಿಲ್ಲಿಸುವವನಂತೆ, ಮುಚ್ಚಿಹೋಗಿರುವುದನ್ನು ತೆರೆದು ತೋರಿಸುವವನಂತೆ, ಅಂಧಕಾರದಲ್ಲಿರುವವನಿಗೆ ದೀಪ ಹಿಡಿಯುವವನಂತೆ ಕಣ್ಣಿರುವವನು ರೂಪಗಳನ್ನು ನೋಡಲು ಸಾಧ್ಯವಾಗುವಂತೆ ಭಗವಂತರಾದ ತಾವು ಅನೇಕ ಪರಿಯಲ್ಲಿ ಧಮ್ಮವನ್ನು ಪ್ರಕಾಶಪಡಿಸಿದ್ದೀರಿ. ಭಂತೆ, ನಾವು ಭಗವಂತನಿಗೆ ಶರಣು ಹೋಗುತ್ತೇವೆ, ಧಮ್ಮಕ್ಕೆ ಶರಣು ಹೋಗುತ್ತೇವೆ. ನಮ್ಮನ್ನು ಪಬ್ಬಜ್ಜರನ್ನಾಗಿ ಮಾಡಿ ನಾವು ಉಪಸಂಪದವನ್ನು ಪಡೆಯುವಂತಾಗಲಿ.’

“ಭಿಕ್ಷುಗಳೇ, ಆ ಎಂಬತ್ತುನಾಲ್ಕು ಸಾವಿರ ಜನರು ಪಬ್ಬಜ್ಜರಾದರು. ಉಪಸಂಪದವನ್ನು ಪಡೆದರು. ವಿಪಸ್ಸಿ ಭಗವಂತನು ಅವರಿಗೆ ಧಮ್ಮವನ್ನು ವಿವರಿಸಿ ಅವರನ್ನು ಸ್ಫೂರ್ತಿಗೊಳಿಸಿದನು. ಉದ್ದೀಪನಗೊಳಿಸಿದನು. ಅವರಿಗೆ ಸಂತೋಷವನ್ನುಂಟುಮಾಡಿದನು. ಸಂಖಾರಗಳ ಅಪಾಯವನ್ನೂ ಕ್ಲೇಶಗಳ ವ್ಯರ್ಥತೆಯನ್ನೂ ನೇಕ್ಖಮ್ಮದ ಲಾಭವನ್ನೂ ವಿವರಿಸಿದನು. ಭಗವಂತನಾದ ವಿಪಸ್ಸಿಯಿಂದ ವಿವರಿಸಲ್ಪಟ್ಟ ಧಮ್ಮದಿಂದ ಸ್ಫೂರ್ತಿಗೊಂಡ, ಸಂತೋಷಗೊಂಡ ಅವರ ಚಿತ್ತಗಳು ಬಹುಬೇಗನೆ ಆಸವಗಳಿಂದ ದೂರವಾದುವು.

ಪೂರ್ವ ಪಬ್ಬಜಿತರಿಂದ ಧಮ್ಮವನ್ನು ಕೇಳುವುದು

“ಭಿಕ್ಷುಗಳೇ, ಮತ್ತೆ ಎಂಭತ್ತು ನಾಲ್ಕು ಸಾವಿರ ಪಬ್ಬಜಿತರು ಹಿಂದಿನ ಪಬ್ಬಜಿತರಿಂದ ಈ ಮಾತುಗಳನ್ನು ಕೇಳಿದರು- ‘ವಿಪಸ್ಸಿ ಭಗವಾನರು ಬಂಧುಮತಿ ರಾಜಧಾನಿಯ ಮೃಗವನದಲ್ಲಿ ತಂಗಿದ್ದಾನೆ, ಧರ್ಮವನ್ನು ಬೋಧಿಸುತ್ತಾನೆ’. ಅವರೆಲ್ಲರೂ ವಿಪಸ್ಸಿ ಬುದ್ಧನ ಸಮೀಪಕ್ಕೆ ಹೋದರು. ಸಮ್ಮಾಸಂಬುದ್ಧನಾದ ವಿಪಸ್ಸಿಗೆ ಅಭಿವಂದಿಸಿ ಒಂದುಕಡೆ ಕುಳಿತುಕೊಂಡರು.

“ವಿಪಸ್ಸಿ ಬುದ್ಧನು ಅನುಕ್ರಮವಾಗಿ ತತ್ವವನ್ನು ವಿವರಿಸಿದನು- ದಾನಕಥೆ, ಸ್ವರ್ಗಕಥೆ, ಕಾಮಗಳಿಂದಾಗುವ ಅಪಾಯ, ಕ್ಲೇಶಗಳಿಮದ ಬರುವ ಪ್ರತಿಷ್ಠೆ, ಸತ್ಕರ್ಮದಿಂದಾಗುವ ಲಾಭ, ಇವೆಲ್ಲವನ್ನೂ ವಿವರಿಸಿದನು. ಕಲ್ಲಚಿತ್ತ, ಮುದುಚಿತ್ತ, ಉದಗ್ಗಚಿತ್ತ, ಪ್ರಸನ್ನಚಿತ್ತವನ್ನು ಹೊಂದಿ, ಬುದ್ಧರಿಂದ ಮಾತ್ರ ಸಾಧ್ಯವಾಗುವ ಧಮ್ಮವನ್ನು ಪ್ರಕಾಶಪಡಿಸಿದನು. ದುಃಖ, ಸಮುದಯ ನಿರೋಧ ಮತ್ತು ಮಾರ್ಗಗಳನ್ನು ವಿವರಿಸಿದನು. ಯಾವ ಕೊಳೆಯೂ ಇಲ್ಲದ ಶುದ್ಧವಾದ ವಸ್ತ್ರವೊಂದು ಬಣ್ಣವನ್ನು ಹೀರಿಕೊಳ್ಳುವಂತೆ ಆ ಎಂಬತ್ತು ನಾಲ್ಕು ಸಾವಿರ ಪಬ್ಬಜಿತರು ಕುಳಿತಲ್ಲಿಯೇ ಮನಸ್ಸಿನ ಕಶ್ಮಲಗಳನ್ನು ಕಳೆದುಕೊಂಡರು. ಧರ್ಮಚಕ್ಷು ಅವರಲ್ಲಿ ಉದಯಿಸಿತು. ‘ಹುಟ್ಟುವುದೆಲ್ಲವೂ ಅಳಿಯಬೇಕು’ ಎಂಬ ಸತ್ಯ ಸ್ಪಷ್ಟವಾಯಿತು. ಧಮ್ಮವನ್ನು ತಿಳಿದವರಾಗಿ ಧಮ್ಮವನ್ನು ಜಯಿಸಿದವರಾಗಿ ಧಮ್ಮವನ್ನು ಅರಿತವರಾಗಿ ಧಮ್ಮದ ಆಳ-ಅಗಲಗಳನ್ನು ನೋಡಿದವರಾಗಿ, ಸಂಶಯಗಳೆಲ್ಲವನ್ನು ದಾಟಿದವರಾಗಿ, ಭ್ರಮೆಯನ್ನು ದೂರಮಾಡಿದವರಾಗಿ, ವಿಶ್ವಾಸವನ್ನು ಗಳಿಸಿದವರಾಗಿ ಭಗವಂತನ ಧಮ್ಮವೊಂದನ್ನೇ ಅವಲಂಬಿಸಿದವರಾಗಿ ವಿಪಸ್ಸಿ ಸಂಬುದ್ಧನಿಗೆ ಹೀಗೆಂದರು: ‘ಎಷ್ಟು ಉತ್ಕೃಷ್ಟ ಭಂತೆ, ಎಷ್ಟು ಉತ್ಕೃಷ್ಟವಾಗಿದೆ, ತಲೆಕೆಳಗಾಗಿ ಬಿದ್ದಿರುವುದನ್ನು ನೆಟ್ಟಗೆ ನಿಲ್ಲಿಸುವವನಂತೆ, ಮುಚ್ಚಿಹೋಗಿರುವುದನ್ನು ತೆರೆದು ತೋರಿಸುವವನಂತೆ, ಅಂಧಕಾರದಲ್ಲಿರುವವನಿಗೆ ದೀಪ ಹಿಡಿಯುವವನಂತೆ ಕಣ್ಣಿರುವವನು ರೂಪಗಳನ್ನು ನೋಡಲು ಸಾಧ್ಯವಾಗುವಂತೆ ಭಗವಂತರಾದ ತಾವು ಅನೇಕ ಪರಿಯಲ್ಲಿ ಧಮ್ಮವನ್ನು ಪ್ರಕಾಶಪಡಿಸಿದ್ದೀರಿ. ಭಂತೆ, ನಾವು ಭಗವಂತನಿಗೆ ಶರಣು ಹೋಗುತ್ತೇವೆ, ಧಮ್ಮಕ್ಕೆ ಶರಣು ಹೋಗುತ್ತೇವೆ. ನಮ್ಮನ್ನು ಪಬ್ಬಜ್ಜರನ್ನಾಗಿ ಮಾಡಿ ನಾವು ಉಪಸಂಪದವನ್ನು ಪಡೆಯುವಂತಾಗಲಿ.’

“ಭಿಕ್ಷುಗಳೇ, ಆ ಎಂಬತ್ತು ನಾಲ್ಕು ಸಾವಿರ ಪಬ್ಬಜಿತರು ವಿಪಸ್ಸಿ ಭಗವಂತನಿಂದ ಉಪಸಂಪದವನ್ನು ಪಡೆದರು. ವಿಪಸ್ಸಿ ಭಗವಂತನು ಅವರಿಗೆ ಧರ್ಮವನ್ನು ವಿವರಿಸಿ ಅವರನ್ನು ಸ್ಫೂರ್ತಿಗೊಳಿಸಿದನು, ಉದ್ದೀಪನಗೊಳಿಸಿದನು, ಅವರಿಗೆ ಸಂತೋಷವನ್ನುಂಟುಮಾಡಿದನು. ಸಂಖಾರಗಳ ಅಪಾಯವನ್ನೂ ಕ್ಲೇಶಗಳ ವ್ಯರ್ಥತೆಯನ್ನೂ ಸತ್ಕರ್ಮದ ಲಾಭವನ್ನೂ ವಿವರಿಸಿದನು. ಭಗವಂತನಾದ ವಿಪಸ್ಸಿಯಿಂದ ವಿವರಿಸಲ್ಪಟ್ಟ ಧಮ್ಮದಿಂದ ಸ್ಫೂರ್ತಿಗೊಂಡ, ಸಂತೋಷಗೊಂಡ ಅವರ ಚಿತ್ತಗಳು ಬಹುಬೇಗನೆ ಆಸವಗಳಿಂದ ದೂರವಾದುವು.

ಚಲನಶೀಲರಾಗುವ ಭಿಕ್ಷುಗಳು

“ಭಿಕ್ಷುಗಳೇ, ಆ ಸಮಯದಲ್ಲಿ ಬಂಧುಮತಿ ರಾಜಧಾನಿಯಲ್ಲಿ ಅರವತ್ತೆಂಟು ಲಕ್ಷ ಭಿಕ್ಷುಗಳ ಮಹಾಭಿಕ್ಷು ಸಂಘವೊಂದು ಇತ್ತು. ವಿಪಸ್ಸಿ ಭಗವಂತನು ಏಕಾಂತದಲ್ಲಿ ಧ್ಯಾನಮಾಡುತ್ತಿದ್ದಾಗ ಆತನ ಚಿತ್ತದಲ್ಲಿ ಒಂದು ವಿಚಾರ ಹುಟ್ಟಿತು- ‘ಈಗ ಬಂಧುಮತಿ ರಾಜಧಾನಿಯಲ್ಲಿ ಅರವತ್ತೆಂಟು ಲಕ್ಷ ಭಿಕ್ಷುಗಳಿರುವ ಒಂದು ಮಹಾಭಿಕ್ಷು ಸಂಘವಿದೆ. ಅವರಿಗೆ ಹೀಗೆ ಹೇಳಬಹುದು- ‘ಭಿಕ್ಷುಗಳೇ, ಬಹುಜನರ ಹಿತಕ್ಕಾಗಿ ಬಹುಜನರ ಸುಖಕ್ಕಾಗಿ ಲೋಕಾನುಕಂಪಪೂರಿತವಾಗಿ ದೇವ ಮನುಷ್ಯರ ಸುಖಕ್ಕಾಗಿ ಹಿತಕ್ಕಾಗಿ ಒಂದುಕಡೆಯಿಂದ ಮತ್ತೊಂದು ಕಡೆಗೆ ಹೋಗಿ. ಒಬ್ಬರೇ ಹೋಗುವುದು ಬೇಡ. ಇಬ್ಬರು ಜೊತೆ ಜೊತೆಯಲ್ಲಿ ಹೋಗಿ. ಆದಿಯಲ್ಲಿ ಕಲ್ಯಾಣವನ್ನುಂಟುಮಾಡುವ, ಮಧ್ಯದಲ್ಲಿ ಕಲ್ಯಾಣವನ್ನುಂಟುಮಾಡುವ, ಅಂತ್ಯದಲ್ಲಿ ಕಲ್ಯಾಣವನ್ನುಂಟುಮಾಡುವ ಅರ್ಥಪೂರ್ಣವಾದ ಸತ್ವಪೂರ್ಣವಾದ ಎಲ್ಲ ರೀತಿಯಲ್ಲಿಯೂ ಪರಿಪೂರ್ಣವಾದ, ಪರಿಶುದ್ಧವಾದ, ಬ್ರಹ್ಮಚರ್ಯವನ್ನು ಪ್ರಕಾಶಪಡಿಸಿ ಅತ್ಯಲ್ಪವಾದ ದೋಷದಿಂದ ಕೂಡಿದ ದೃಷ್ಟಿಯನ್ನುಳ್ಳ ಜೀವಿಗಳಿವೆ. ಧರ್ಮದ ಅರಿವಿಲ್ಲದೆ ಅವು ಹಾಗೆಯೇ ಸತ್ತುಹೋಗಬಹುದು. ಅಂಥವು ಧಮ್ಮವನ್ನು ಅರಿಯಲಿ. ಪಾತಿಮೋಕ್ಖವನ್ನು ತಿಳಿಯಲು ಬಂಧುಮತಿ ರಾಜಧಾನಿಗೆ ಆರಾರು ವರ್ಷಗಳಿಗೊಮ್ಮೆ ಪಾತಿಮೋಕ್ಖವನ್ನು ಪಠಿಸಲು ಬನ್ನಿ.

“ಆಗ ಭಿಕ್ಷುಗಳೇ, ವಿಪಸ್ಸಿ ಭಗವಂತನ ಚಿತ್ತದಲ್ಲಿದ್ದುದನ್ನು ಮಹಾಬ್ರಹ್ಮನೊಬ್ಬನು ತನ್ನ ಚೇತೋಪರಿಯಾಯ ಞಾಣದಿಂದ ತಿಳಿದವನಾದನು. ಬಲಶಾಲಿಯಾದವನೊಬ್ಬನು ಮಡಿಸಿಕೊಂಡಿರುವ ತನ್ನ ತೋಳನ್ನು ಚಾಚುವಷ್ಟು ಕ್ಷಿಪ್ರಕಾಲದಲ್ಲಿ ಅಥವಾ ಚಾಚಿರುವ ತೋಳನ್ನು ಮಡಿಸಿಕೊಳ್ಳುವಷ್ಟು ಕ್ಷಿಪ್ರಕಾಲದಲ್ಲಿ ಬ್ರಹ್ಮಲೋಕದಿಂದ ಅಂತರ್ಧಾನವಾಗಿ ವಿಪಸ್ಸಿ ಭಗವಾನರಲ್ಲಿಗೆ ಬಂದನು. ಆಮೇಲೆ ಹೊದೆದುಕೊಂಡ ಬಟ್ಟೆಯನ್ನು ಸರಿಪಡಿಸಿಕೊಂಡು ವಿಪಸ್ಸಿ ಭಗವಂತನಿಗೆ ಕೈಮುಗಿದು ನಮಸ್ಕರಿಸಿ ಆತನನ್ನು ಕುರಿತು ಹೀಗೆಂದನು- ‘ಭಗವಾ, ಹಾಗೆಯೇ ಆಗಲಿ, ಸುಗತ ಹಾಗೆಯೇ ಆಗಲಿ. ಬಂಧುಮತಿ ರಾಜಧಾನಿಯಲ್ಲಿರುವ ಮಹಾಭಿಕ್ಷು ಸಂಘಕ್ಕೆ ನೀವು ಅಂದುಕೊಂಡಿರುವಂತೆ ಆದೇಶವನ್ನು ಕೊಡಿ. ‘ಬಹುಜನರ ಹಿತಕ್ಕಾಗಿ ಬಹುಜನರ ಸುಖಕ್ಕಾಗಿ ಲೋಕಾನುಕಂಪಪೂರಿತವಾಗಿ ದೇವ ಮನುಷ್ಯರ ಹಿತಕ್ಕಾಗಿ ಸುಖಕ್ಕಾಗಿ ಒಂದುಕಡೆಯಿಂದ ಮತ್ತೊಂದು ಕಡೆಗೆ ಚಲಿಸಿ ಒಬ್ಬರೇ ಹೋಗುವುದು ಬೇಡ. ಒಟ್ಟಿಗೆ ಇಬ್ಬಿಬ್ಬರು ಹೋಗಿ. ಆದಿಯಲ್ಲಿ ಕಲ್ಯಾಣವನ್ನುಂಟುಮಾಡುವ, ಮಧ್ಯದಲ್ಲಿ ಕಲ್ಯಾಣವನ್ನುಂಟುಮಾಡುವ, ಕೊನೆಯಲ್ಲಿ ಕಲ್ಯಾಣವನ್ನುಂಟುಮಾಡುವ ಅರ್ಥಪೂರ್ಣವಾದ ಸತ್ವಪೂರ್ಣವಾದ ಎಲ್ಲ ರೀತಿಯಲ್ಲಿಯೂ ಪರಿಪೂರ್ಣವಾದ ಪರಿಶುದ್ಧವಾದ ಬ್ರಹ್ಮಚರ್ಯವನ್ನು ಪ್ರಕಾಶಪಡಿಸಿ ಅತ್ಯಲ್ಪವಾದ ದೋಷದಿಂದ ಕೂಡಿರುವ ದೃಷ್ಟಿಯನ್ನುಳ್ಳ ಜೀವಿಗಳಿವೆ. ಧರ್ಮವನ್ನು ತಿಳಿಯದೆ ಅವು ಹಾಗೆಯೇ ಸತ್ತುಹೋಗಬಹುದು. ಅಂಥವು ಧಮ್ಮವನ್ನು ಅರಿಯಲಿ. ಭಂತೆ, ಭಿಕ್ಷುಗಳು ಆರಾರು ವರ್ಷಗಳಿಗೊಮ್ಮೆ ಬಂಧುಮತಿ ರಾಜಧಾನಿಗೆ ಬಂದು ಪಾತಿಮೋಕ್ಖವನ್ನು ಪಠಿಸುವಂತೆ ನಾವೂ ಪಠಿಸುತ್ತೇವೆ.’ ಹೀಗೆ ಹೇಳಿದ ಮೇಲೆ ವಿಪಸ್ಸಿ ಭಗವಂತನಿಗೆ ಆ ಮಹಾಬ್ರಹ್ಮನು ಅಭಿವಂದಿಸಿ ಪ್ರದಕ್ಷಿಣೆಯನ್ನು ಮಾಡಿ ಕೂಡಲೇ ಅಂತರ್ಧಾನನಾದನು.

“ಆಮೇಲೆ ಭಿಕ್ಷುಗಳೇ, ಭಗವಂತನಾದ ವಿಪಸ್ಸಿಯು ಸಾಯಂಕಾಲ ಸಮಯದಲ್ಲಿ ತನ್ನ ಏಕಾಂತ ಧ್ಯಾನದಿಂದೆದ್ದು ಭಿಕ್ಷುಗಳ ಹತ್ತಿರಕ್ಕೆ ಹೋಗಿ ಅವರನ್ನು ಕರೆದನು- ‘ಭಿಕ್ಷುಗಳೇ, ನಾನು ಏಕಾಂತ ಧ್ಯಾನದಲ್ಲಿ ಮಗ್ನನಾಗಿದ್ದಾಗ ನನ್ನ ಚಿತ್ತದಲ್ಲಿ ಒಂದು ವಿಚಾರ ಉದಿಸಿತು. ಅರವತ್ತೆರಡು ಲಕ್ಷ ಭಿಕ್ಷುಗಳ ಒಂದು ದೊಡ್ಡ ಭಿಕ್ಷು ಸಂಘವು ಬಂಧುಮತಿ ರಾಜಧಾನಿಯಲ್ಲಿ ಇದೆ. ಅವರಿಗೆ ‘ಭಿಕ್ಷುಗಳೇ, ಬಹುಜನ ಹಿತಕ್ಕಾಗಿ, ಬಹುಜನ ಸುಖಕ್ಕಾಗಿ ಲೋಕಾನುಕಂಪಪೂರಿತರಾಗಿ ದೇವ ಮನುಷ್ಯರ ಹಿತಕ್ಕಾಗಿ ಸುಖಕ್ಕಾಗಿ ಒಂದುಕಡೆಯಿಂದ ಮತ್ತೊಂದು ಕಡೆಗೆ ಚಲಿಸಿ. ಒಬ್ಬರೇ ಹೋಗುವುದು ಬೇಡ, ಒಟ್ಟಿಗೆ ಇಬ್ಬಿಬ್ಬರು ಹೋಗಿ. ಆದಿಯಲ್ಲಿ, ಮಧ್ಯದಲ್ಲಿ, ಅಂತ್ಯದಲ್ಲಿ ಕಲ್ಯಾಣವನ್ನುಂಟುಮಾಡುವ ಧರ್ಮವನ್ನು ತಿಳಿಸಿ. ಅರ್ಥಪೂರ್ಣವಾದ ಸತ್ವಪೂರ್ಣವಾದ ಎಲ್ಲರೀತಿಯಲ್ಲಿಯೂ ಪರಿಪೂರ್ಣವಾದ ಪರಿಶುದ್ಧವಾದ ಬ್ರಹ್ಮಚರ್ಯವನ್ನು ಪ್ರಕಾಶಪಡಿಸಿ. ಅತ್ಯಲ್ಪವಾದ ದೋಷದಿಮದ ಕೂಡಿರುವ ದೃಷ್ಟಿಯನ್ನುಳ್ಳ ಜೀವಿಗಳಿವೆ. ಧರ್ಮವನ್ನು ತಿಳಿಯದೆ ಅವು ಹಾಗೆಯೇ ಸತ್ತುಹೋಗಬಹುದು. ಅಂಥವು ಧರ್ಮವನ್ನು ಅರಿಯಲಿ. ಆರಾರು ವರ್ಷಗಳಿಗೊಮ್ಮೆ ಬಂಧುಮತಿ ರಾಜಧಾನಿಗೆ ಬಂದು ಪಾತಿಮೋಕ್ಖವನ್ನು ಪಠಿಸಿ’ ಎಂಬ ಆದೇಶವನ್ನು ಕೊಡಬೇಕೆಂದಿದ್ದೇನೆ ಎಂದು ಹೇಳಿದನು.

“ಭಿಕ್ಷುಗಳೇ, ನನ್ನ ಚಿತ್ತದಲ್ಲಿದ್ದುದನ್ನು ಮಹಾಬ್ರಾಹ್ಮಣನೊಬ್ಬನು ತನ್ನ ಚೇತೋ ಪರಿಯಾಯ ಞಾಣದಿಂದ ತಿಳಿದವನಾದನು. ಬಲಶಾಲಿಯಾದವನೊಬ್ಬನು ಮಡಿಸಿಕೊಂಡಿರುವ ತೋಳನ್ನು ಚಾಚುವಷ್ಟು ಕ್ಷಿಪ್ರಕಾಲದಲ್ಲಿ ಅಥವಾ ಚಾಚಿರುವ ತೋಳನ್ನು ಮಡಿಸಿಕೊಳ್ಳುವಷ್ಟು ಕ್ಷಿಪ್ರಕಾಲದಲ್ಲಿ ಬ್ರಹ್ಮಲೋಕದಿಂದ ಅಂತರ್ಧಾನನಾಗಿ ನನ್ನ ಹತ್ತಿರಕ್ಕೆ ಬಂದನು. ತಾನು ಹೊದೆದುಕೊಂಡಿದ್ದ ಬಟ್ಟೆಯನ್ನು ಸರಿಪಡಿಸಿಕೊಂಡು ಕೈಮುಗಿದು ನಮಸ್ಕರಿಸಿ ನನ್ನನ್ನು ಕುರಿತು ಹೀಗೆಂದನು- ‘ಭಗವಾ, ಹಾಗೆಯೇ ಆಗಲಿ. ಸುಗತ, ಹಾಗೆಯೇ ಆಗಲಿ. ಈಗ ಬಂಧುಮತಿ ರಾಜಧಾನಿಯಲ್ಲಿ ಅರವತ್ತೆಂಟು ಲಕ್ಷ ಭಿಕ್ಷುಗಳಿರುವ ಒಂದು ಮಹಾಭಿಕ್ಷು ಸಂಘವಿದೆ. ಬಹುಜನ ಹಿತಕ್ಕಾಗಿ ಬಹುಜನ ಸುಖಕ್ಕಾಗಿ ಲೋಕಾನುಕಂಪಪೂರಿತವಾಗಿ ದೇವಮಾನವರ ಹಿತಕ್ಕಾಗಿ ಸುಖಕ್ಕಾಗಿ ಒಂದುಕಡೆಯಿಂದ ಮತ್ತೊಂದು ಕಡೆಗೆ ಚಲಿಸಿ; ಒಬ್ಬೊಬ್ಬರೇ ಹೋಗುವುದು ಬೇಡ; ಇಬ್ಬಿಬ್ಬರು ಒಟ್ಟಿಗೆ ಹೋಗಿ.... ಧಮ್ಮವನ್ನು ತಿಳಿಸಿ.... ಅತ್ಯಲ್ಪವಾದ ದೋಷವನ್ನುಳ್ಳ ಜೀವಿಗಳಿವೆ. ಧಮ್ಮವನ್ನು ತಿಳಿಯದೆ ಅವು ಹಾಗೆಯೇ ಸತ್ತುಹೋಗಬಹುದು. ಅವು ಧಮ್ಮವನ್ನು ಅರಿಯಲಿ, ಆರಾರು ವರ್ಷಗಳಿಗೊಮ್ಮೆ ಭಿಕ್ಷುಗಳು ಬಂಧುಮತಿ ರಾಜಧಾನಿಗೆ ಬಂದು ಪಾತಿಮೋಕ್ಖವನ್ನು ಪಠಿಸಿ ಎಂಬ ಆದೇಶವನ್ನು ಭಿಕ್ಷುಗಳು ಅರಿಯಲಿ’ ಆಮೇಲೆ ನನಗೆ ಅಭಿವಂದಿಸಿ ಪ್ರದಕ್ಷಿಣೆ ಮಾಡಿ ಅಲ್ಲಿಂದ ಅಂತರ್ಧಾನನಾದನು.

“ಬಹುಜನ ಹಿತಕ್ಕಾಗಿ, ಬಹುಜನ ಸುಖಕ್ಕಾಗಿ ಲೋಕಾನುಕಂಪಪೂರಿತರಾಗಿ ದೇವಮಾನವರ ಹಿತಕ್ಕಾಗಿ, ಸುಖಕ್ಕಾಗಿ ಒಂದುಕಡೆಯಿಂದ ಮತ್ತೊಂದು ಕಡೆಗೆ ಚಲಿಸಿ. ಒಬ್ಬರೇ ಹೋಗುವುದು ಬೇಡ, ಒಟ್ಟಿಗೆ ಇಬ್ಬಿಬ್ಬರು ಹೋಗಿ. ಆದಿಯಲ್ಲಿ, ಮಧ್ಯದಲ್ಲಿ, ಅಂತ್ಯದಲ್ಲಿ ಕಲ್ಯಾಣವನ್ನುಂಟುಮಾಡುವ ಧರ್ಮವನ್ನು ತಿಳಿಸಿ. ಅರ್ಥಪೂರ್ಣವಾದ, ಸತ್ವಪೂರ್ಣವಾದ ಎಲ್ಲ ರೀತಿಯಲ್ಲಿಯೂ ಪರಿಪೂರ್ಣವಾದ, ಪರಿಶುದ್ಧವಾದ ಬ್ರಹ್ಮಚರ್ಯವನ್ನು ಪ್ರಕಾಶಪಡಿಸಿ ಅತ್ಯಲ್ಪ ದೋಷವನ್ನುಳ್ಳ ದೃಷ್ಟಿಯಿರುವ ಜೀವಿಗಳಿವೆ. ಧರ್ಮವನ್ನು ತಿಳಿಯದೆ ಅವು ಸತ್ತುಹೋಗುತ್ತವೆ. ಅವು ಧರ್ಮವನ್ನು ತಿಳಿಯಲಿ. ಆರಾರು ವರ್ಷಗಳಿಗೊಮ್ಮೆ ಪಾತಿಮೋಕ್ಖವನ್ನು ಪಠಿಸಲು ಬಂಧುಮತಿ ರಾಜಧಾನಿಗೆ ಬನ್ನಿ ಎಂಬ ಆದೇಶವನ್ನು ಕೊಡುತ್ತೇನೆ!’ (ಎಂದು ವಿಪಸ್ಸಿಯು ಹೇಳಿದನು). ಆ ದಿನವೇ ಭಿಕ್ಷುಗಳು ಜನಪದಗಳಿಗೆ ಹೊರಟುಬಿಟ್ಟರು.

“ಆ ಸಮಯದಲ್ಲಿ ಜಂಬೂದ್ವೀಪದಲ್ಲಿ ಎಂಭತ್ತುನಾಲ್ಕುಸಾವಿರ ಆವಾಸ (ಭಿಕ್ಷುಗಳು ಉಳಿದುಕೊಳ್ಳುವ ಸ್ಥಳಗಳು) ಇದ್ದುವು. ಒಂದು ವರ್ಷ ಮುಗಿಯುತ್ತಾ ಬಂದಾಗ ದೇವತೆಗಳು ಶ್ರದ್ಧಾವಂತರಿಗೆ ‘ಓ ಜನರೇ, ಒಂದು ವರ್ಷ ಮುಗಿಯುತ್ತಾ ಬಂತು. ಇನ್ನು ಐದು ವರ್ಷಗಳು ಮಾತ್ರ ಉಳಿದಿವೆ. ಐದು ವರ್ಷಗಳ ನಂತರ ಬಂಧುಮತಿ ರಾಜಧಾನಿಗೆ ಹೋಗಿ ಪಾತಿಮೋಕ್ಖವನ್ನು ಪಠಿಸೋಣ’ ಎಂದು ಹೇಳಿದುವು. ಎರಡು ವರ್ಷಗಳು ಮುಗಿಯುತ್ತಾ ಬಂದಿವೆ... ಮೂರು ವರ್ಷಗಳು ಮುಗಿಯುತ್ತಾ ಬಂದಿವೆ... ನಾಲ್ಕು ವರ್ಷಗಳು ಮುಗಿಯುತ್ತಾ ಬಂದಿವೆ... ಐದು ವರ್ಷಗಳು ಮುಗಿಯುತ್ತಾ ಬಂದಾಗ ದೇವತೆಗಳು, ‘ಓ ಜನರೇ, ಐದು ವರ್ಷಗಳು ಮುಗಿಯುತ್ತಾ ಬಂದಿವೆ, ಇನ್ನು ಒಂದು ವರ್ಷ ಮಾತ್ರ ಉಳಿದಿದೆ; ಒಂದು ವರ್ಷದ ನಂತರ ಪಾತಿಮೋಕ್ಖವನ್ನು ಪಠಿಸಲು ಬಂಧುಮತಿಗೆ ಹೋಗಲೇಬೇಕು’ ಎಂದು ಹೇಳಿದುವು. ಆರು ವರ್ಷಗಳು ಮುಗಿಯುತ್ತಾ ಬಂದಾಗ ದೇವತೆಗಳು ಆ ಶ್ರದ್ಧಾವಂತ ಮನುಷ್ಯರಿಗೆ ಹೀಗೆ ಹೇಳಿದುವು: ‘ಓ ಗೆಳೆಯರೆ, ಆರು ವರ್ಷಗಳು ಮುಗಿಯುತ್ತಾ ಬಂದಿವೆ. ಪಾತಿಮೋಕ್ಖವನ್ನು ಪಠಿಸಲು ಬಂಧುಮತಿ ರಾಜಧಾನಿಗೆ ಹೋಗಲು ತಕ್ಕ ಸಮಯವಾಗಿದೆ. ಆಮೇಲೆ ಭಿಕ್ಷುಗಳೇ, ಕೆಲವು ಭಿಕ್ಷುಗಳು ತಮ್ಮ ಬುದ್ಧಿಶಕ್ತಿಯಿಂದಲೂ, ಕೆಲವು ಭಿಕ್ಷುಗಳು ದೇವತೆಗಳ ಬುದ್ಧಿಶಕ್ತಿಯ ಸಹಾಯದಿಂದಲೂ ಪಾತಿಮೋಕ್ಖವನ್ನು ಪಠಿಸಲು ಬಂಧುಮತಿ ರಾಜಧಾನಿಗೆ ಬಂದರು.

“ಅಲ್ಲಿ ಭಿಕ್ಷುಗಳೇ, ವಿಪಸ್ಸಿ ಭಗವಂತನು ಭಿಕ್ಷು ಸಂಘಗಳನ್ನು ಕುರಿತು ಪಾತಿಮೋಕ್ಖವನ್ನು ಕುರಿತು ಹೀಗೆ ಹೇಳಿದನು:

‘ಸಹನೆ ತಪಗಳು ಕ್ಷಮೆಯು ಪರಮ ನಿಬ್ಬಾಣ ಇದುವೆ ಮಂಗಳಕರವು,

ಬಾಳಿನೊಳು ದಿಟವು ಬುದ್ಧರೆಲ್ಲರು ಈ ನಿಜವ ಸಾರುತಿಹರು

ಪರರ ಬಾಧಿಪ ನರನು ಪಡೆಯನಾ ಪಬ್ಬಜವ

ಸಮಣನಲ್ಲವು ಪರರ ನೋಯಿಸುವ ನರನು

ಪಾಪವೆಲ್ಲ ತ್ಯಜಿಸು, ಕುಶಲವನೆ ಮಾಡು

ಚಿತ್ತಶುದ್ಧಿಯ ಗಳಿಸು ಇದು ಬುದ್ಧರನುಶಾಸನವು-

ಕೆಡುನುಡಿಯು ಬರದಿರಲಿ ನಿನ್ನ ನಾಲಿಗೆಯಿಂದ

ಕೈಯತ್ತದಿರು ನೀ ಜೀವಿಗಳ ಮೇಲೆ

ಪಾತಿಮೋಕ್ಖದಿ ನಡೆದು ಸಂಯಮವ ನೀ ಗಳಿಸು

ಎಚ್ಚರಿಕೆಯಿರಲಿ ಉಣಿಸು ತಿಣಿಸುಗಳಲ್ಲಿ

ಮಲಗು ಏಕಾಕಿಯಾಗಿ, ಒಂಟಿ ಬಾಳನು ಬಾಳು

ಚಿತ್ತೋನ್ನತಿಯ ಪಡೆ ಭಿಕ್ಷು, ಯೋಗದಲಿ ತೊಡಗು

ಬುದ್ಧರೆಲ್ಲರ ಬೋಧನೆಯ ತಿರುಳಿದುವೆ ಗೆಳೆಯ.

ದೇವತೆಗಳನ್ನು ಕುರಿತು ಆಲೋಚಿಸಿದ್ದು

“ಭಿಕ್ಷುಗಳೇ, ಒಂದು ಕಾಲದಲ್ಲಿ ಉಕ್ಖಟ್ಠದ ಬಳಿಯಲ್ಲಿರುವ ಸುಭಗವನದಲ್ಲಿದ್ದ ಮಹಾಸಾಲ ವೃಕ್ಷದ ಬುಡದಲ್ಲಿದ್ದೆ. ನಾನು ಏಕಾಂತದಲ್ಲಿದ್ದು ಧ್ಯಾನ ಮಾಡುತ್ತಿದ್ದಾಗ ಚಿತ್ತದಲ್ಲಿ ಒಂದು ವಿಚಾರ ಉದಯಿಸಿತು. ‘ಬಹುಕಾಲದಿಂದ ಸುಲಭರೂಪಿ ಜೀವಿಯಿರುವ ಕಡೆಗೆ ಹೋಗಿಲ್ಲ. ಶುದ್ಧವಾಸಿ ದೇವತೆಗಳೊಂದಿಗೆ ವಾಸಿಸಿಲ್ಲ. ಅವರಲ್ಲಿಗೆ ಹೋಗಬಹುದಲ್ಲವೆ?’ ಬಲಶಾಲಿಯಾದವನೊಬ್ಬನು ಮಡಿಸಿಕೊಂಡಿರುವ ತೋಳನ್ನು ಚಾಚಲು ಬೇಕಾದಷ್ಟು ಕ್ಷಿಪ್ರಕಾಲದಲ್ಲಿ ಅಥವಾ ಚಾಚಿರುವ ತೋಳನ್ನು ಮಡಿಸಿಕೊಳ್ಳುವಷ್ಟು ಕ್ಷಿಪ್ರಕಾಲದಲ್ಲಿ ಉಕ್ಖಟ್ಠದ ಬಳಿಯ ಸುಭಗವನದಲ್ಲಿ ಮಹಾ ಸಾಲವೃಕ್ಷದ ಬುಡದಿಂದ ಅವಹ ಲೋಕದಲ್ಲಿದ್ದ ಅನೇಕ ಶತ ದೇವತೆಗಳ ಬಳಿಗೆ ಹೋದೆ. ಆ ಲೋಕದಲ್ಲಿದ್ದ ಅನೇಕ ಶತದೇವತೆಗಳು ಅನೇಕ ಸಹಸ್ರ ದೇವತೆಗಳು ನನ್ನ ಬಳಿಗೆ ಬಂದರು. ನನಗೆ ಅಭಿವಂದಿಸಿ ಒಂದುಕಡೆ ನಿಂತುಕೊಂಡರು. ಒಂದುಕಡೆ ಕುಳಿತುಕೊಂಡಮೇಲೆ ಆ ದೇವತೆಗಳು ಹೀಗೆಂದರು- ‘ಗೆಳೆಯ, ಇಂದಿಗೆ ತೊಂಬತ್ತೊಂದು ಕಲ್ಪಗಳ ಹಿಂದೆ ಭಗವಂತನಾದ ವಿಪಸ್ಸಿಯು ಲೋಕದಲ್ಲಿ ಉದಯಿಸಿದನು. ಅವನು ಹುಟ್ಟಿದ್ದು ಕ್ಷತ್ರಿಯ ಕುಲದಲ್ಲಿ, ಕೊಂಡಞ ಗೋತ್ರದಲ್ಲಿ. ಅವನ ಆಯಸ್ಸು ಎಂಭತ್ತು ಸಾವಿರ ವರ್ಷಗಳಾಗಿತ್ತು. ಆತ ಸಮ್ಮಾಸಂಬುದ್ಧವಾದುದು ಪಾಟಲಿ ಮರದ ಅಡಿಯಲ್ಲಿ. ಅವನ ಅಗ್ರಶಿಷ್ಯರು ಖಂಡ ಮತ್ತು ತಿಸ್ಸ ಎಂಬುವರು. ಅವನಿಗೆ ಒಟ್ಟಿಗೆ ಸೇರುತ್ತಿದ್ದ ಮೂರು ಶಿಷ್ಯರ ಗುಂಪುಗಳಿದ್ದುವು. ಒಂದು ಗುಂಪಿನಲ್ಲಿ ಅರವತ್ತೆಂಟು ಲಕ್ಷ ಶಿಷ್ಯರೂ ಎರಡನೆಯ ಗುಂಪಿನಲ್ಲಿ ಒಂದು ಲಕ್ಷ ಶಿಷ್ಯರು ಮತ್ತೊಂದು ಗುಂಪಿನಲ್ಲಿ ಎಂಭತ್ತು ಸಾವಿರ ಶಿಷ್ಯರೂ ಇದ್ದರು. ಗೆಳೆಯ, ಅವರೆಲ್ಲರೂ ಖೀಣಾಸವರಾಗಿದ್ದರು. ಆತನಿಗೆ ಅಶೋಕನೆಂಬ ಆಪ್ತ ಶಿಷ್ಯನಿದ್ದನು. ಆತನ ತಂದೆ-ತಾಯಿಗಳು ಬಂಧುಮಾ ಎಂಬ ರಾಜ ಮತ್ತು ಬಂಧುಮತಿ ಎಂಬ ರಾಣಿ. ಬಂಧುಮಾ ರಾಜನಿಗೆ ಬಂಧುಮತಿ ಎಂಬ ನಗರವು ರಾಜಧಾನಿಯಾಗಿತ್ತು. ವಿಪಸ್ಸಿ ಭಗವಂತನು ರಾಜಧಾನಿಯನ್ನು ತೊರದದ್ದು ಹೀಗೆ, ಪಬ್ಬಜ್ಜನಾದುದು ಈ ರೀತಿಯಲ್ಲಿ, ತಪಸ್ಸು ಮಾಡಿದ್ದು ಈ ಪರಿಯಲ್ಲಿ, ಸಂಬೋಧಿಯನ್ನು ಪಡೆದಿದ್ದು ಧಮ್ಮಚಕ್ಕ ಪ್ರವರ್ತನ ಮಾಡಿದ್ದು ಹೀಗೆ. ನಾವು ವಿಪಸ್ಸಿಯನ್ನು ಅನುಸರಿಸಿ ಬ್ರಹ್ಮಚರ್ಯವನ್ನು ಪಾಲಿಸಿ ಕಾಮಚ್ಛಂದನ್ನು ದೂರಮಾಡಿ ಇಲ್ಲಿ ಹುಟ್ಟಿದ್ದೇವೆ.

“ಭಿಕ್ಷುಗಳೇ, ಅನೇಕ ಸಹಸ್ರ ದೇವತೆಗಳೂ ಅನೇಕ ಲಕ್ಷ ದೇವತೆಗಳೂ ನನ್ನ ಬಳಿಗೆ ಬಂದರು. ಆಮೇಲೆ ಒಂದುಕಡೆ ನಿಂತುಕೊಂಡರು. ಅನಂತರ ನನ್ನನ್ನು ಕುರಿತು ಹೀಗೆಂದರು: ‘ಈ ಭದ್ರ ಕಲ್ಪದಲ್ಲಿ ಗೆಳೆಯ, ಭಗವಾನರು ಲೋಕದಲ್ಲಿ ಉದಿಸಿದ್ದಾರೆ. ಭಗವಂತನು ಕ್ಷತ್ರಿಯ ಕುಲದಲ್ಲಿ ಗೋತಮ ಗೋತ್ರದಲ್ಲಿ ಹುಟ್ಟಿದ್ದಾರೆ. ಭಗವಾನರ ಕಾಲದಲ್ಲಿ ಆಯುಃಪ್ರಮಾಣವು ಕಡಿಮೆ ಹೆಚ್ಚು-ಕಡಿಮೆ ನೂರು ವರ್ಷ ಬದುಕುವವರೇ ಚಿರಂಜೀವಿಗಳೆನ್ನಿಸಿಕೊಳ್ಳುತ್ತಾರೆ. ಭಗವಾನರು ಅರಳೀ ಮರದಡಿಯಲ್ಲಿ ಸಂಬೋಧಿಯನ್ನು ಪಡೆದಿದ್ದಾರೆ. ಸಾರಿಪುತ್ತ, ಮೊಗ್ಗಲ್ಲಾನರು ಭಗವಾನರ ಶಿಷ್ಯರಾಗಿದ್ದಾರೆ. ಸಾವಿರದಿನ್ನೂರೈವತ್ತು ಶಿಷ್ಯರಿದ್ದಾರೆ. ಅವರು ಒಟ್ಟಿಗೆ ಸೇರುತ್ತಾರೆ. ಅವರೆಲ್ಲರೂ ಖೀಣಾಸವರೇ ಆಗಿದ್ದಾರೆ. ಆನಂದನು ಭಗವಾನರ ಶಿಷ್ಯನಾಗಿದ್ದಾನೆ. ಸುದ್ಧೋದನ ರಾಜ ಮತ್ತು ಮಾಯಾದೇವಿಯರು ತಂದೆ-ತಾಯಿಗಳು. ಕಪಿಲವತ್ಥು ನಗರವು ಸುದ್ಧೋದನನ ರಾಜಧಾನಿಯಾಗಿದೆ. ಭಗವಾನರ ನಿಷ್ಕ್ರಮಣವು ಹೀಗಾಗಿದೆ, ಅವರು ಪಬ್ಬಜ್ಜರಾದುದು ಹೀಗೆ, ಅವರ ತಪಸ್ಸು ಹೀಗೆ, ಅವರು ಬೋಧಿಯನ್ನು ಪಡೆದದ್ದು ಹೀಗೆ. ಅವರು ಧರ್ಮಚಕ್ರವನ್ನು ಚಲಿಸಿದ ರೀತಿ ಇದು. ಇಲ್ಲಿಯೇ ನಾವೂ ಭಗವಾನರನ್ನು ಅನುಸರಿಸಿ ಬ್ರಹ್ಮಚರ್ಯವನ್ನು ಆಚರಿಸಿ ಕಾಮಗಳೆಲ್ಲವನ್ನೂ ಕಾಮಚ್ಛಂದವನ್ನೂ ದೂರಮಾಡಿ ಇಲ್ಲಿ ಉದಿಸಿದ್ದೇವೆ’!

“ಭಿಕ್ಷುಗಳೇ, ಆಮೇಲೆ ಅವಿಹ ದೇವತೆಗಳೊಂದಿಗೆ ಆತಪ್ಪ ದೇವತೆಗಳ ಬಳಿಗೆ ಹೋದೆ.... ಆಮೇಲೆ ಅವಿಹ ದೇವತೆಗಳನ್ನೂ ಆತಪ್ಪ ದೇವತೆಗಳನ್ನೂ ಕೂಡಿಕೊಂಡು ಸುದಸ್ಸ ದೇವತೆಗಳ ಬಳಿಗೆ ಹೋದೆ. ಅನಂತರ ಅವಿಹ ದೇವತೆಗಳನ್ನೂ ಅತಪ್ಪ ದೇವತೆಗಳನ್ನೂ ಸುದಸ್ಸ ದೇವತೆಗಳನ್ನೂ ಸೇರಿಕೊಂಡು ಸುದಸ್ಸೀ ದೇವತೆಗಳ ಬಳಿಗೆ ಹೋದೆ. ಆಮೇಲೆ ಅವರೆಲ್ಲರ ಜೊತೆಗೆ ಅಕನಿಟ್ಠ ದೇವತೆಗಳ ಬಳಿಗೆ ಹೋದೆ. ಅಲ್ಲಿ ಅನೇಕ ಸಾವಿರ ದೇವತೆಗಳೂ ಅನೇಕ ಲಕ್ಷ ದೇವತೆಗಳೂ ನನ್ನ ಬಳಿಗೆ ಬಂದರು. ನನಗೆ ಅಭಿವಂದಿಸಿ ನಿಂತುಕೊಂಡರು. ಆ ದೇವತೆಗಳು ನನ್ನನ್ನು ಕುರಿತು ಹೀಗೆಂದರು- ‘ಗೆಳೆಯ, ಇಂದಿಗೆ ತೊಂಬತ್ತೊಂದು ಕಲ್ಪಗಳ ಹಿಂದೆ ಭಗವಂತನಾದ ವಿಪಸ್ಸಿಯು ಲೋಕದಲ್ಲಿ ಉದಯಿಸಿದನು. ಅವನು ಹುಟ್ಟಿದ್ದು ಕ್ಷತ್ರಿಯ ಕುಲದಲ್ಲಿ, ಕೊಂಡಞ ಗೋತ್ರದಲ್ಲಿ. ಅವನ ಆಯಸ್ಸು ಎಂಭತ್ತು ಸಾವಿರ ವರ್ಷಗಳಾಗಿತ್ತು. ಆತ ಸಮ್ಮಾಸಂಬುದ್ಧವಾದುದು ಪಾಟಲಿ ಮರದ ಅಡಿಯಲ್ಲಿ. ಅವನ ಅಗ್ರಶಿಷ್ಯರು ಖಂಡ ಮತ್ತು ತಿಸ್ಸ ಎಂಬುವರು. ಅವನಿಗೆ ಒಟ್ಟಿಗೆ ಸೇರುತ್ತಿದ್ದ ಮೂರು ಶಿಷ್ಯರ ಗುಂಪುಗಳಿದ್ದುವು. ಒಂದು ಗುಂಪಿನಲ್ಲಿ ಅರವತ್ತೆಂಟು ಲಕ್ಷ ಶಿಷ್ಯರೂ ಎರಡನೆಯ ಗುಂಪಿನಲ್ಲಿ ಒಂದು ಲಕ್ಷ ಶಿಷ್ಯರು ಮತ್ತೊಂದು ಗುಂಪಿನಲ್ಲಿ ಎಂಭತ್ತು ಸಾವಿರ ಶಿಷ್ಯರೂ ಇದ್ದರು. ಗೆಳೆಯ, ಅವರೆಲ್ಲರೂ ಖೀಣಾಸವರಾಗಿದ್ದರು. ಆತನಿಗೆ ಅಶೋಕನೆಂಬ ಆಪ್ತ ಶಿಷ್ಯನಿದ್ದನು. ಆತನ ತಂದೆ-ತಾಯಿಗಳು ಬಂಧುಮಾ ಎಂಬ ರಾಜ ಮತ್ತು ಬಂಧುಮತಿ ಎಂಬ ರಾಣಿ. ಬಂಧುಮಾ ರಾಜನಿಗೆ ಬಂಧುಮತಿ ಎಂಬ ನಗರವು ರಾಜಧಾನಿಯಾಗಿತ್ತು. ವಿಪಸ್ಸಿ ಭಗವಂತನು ರಾಜಧಾನಿಯನ್ನು ತೊರದದ್ದು ಹೀಗೆ, ಪಬ್ಬಜ್ಜನಾದುದು ಈ ರೀತಿಯಲ್ಲಿ, ತಪಸ್ಸು ಮಾಡಿದ್ದು ಈ ಪರಿಯಲ್ಲಿ, ಸಂಬೋಧಿಯನ್ನು ಪಡೆದಿದ್ದು ಧಮ್ಮಚಕ್ಕ ಪ್ರವರ್ತನ ಮಾಡಿದ್ದು ಹೀಗೆ. ನಾವು ವಿಪಸ್ಸಿಯನ್ನು ಅನುಸರಿಸಿ ಬ್ರಹ್ಮಚರ್ಯವನ್ನು ಪಾಲಿಸಿ ಕಾಮಚ್ಛಂದನ್ನು ದೂರಮಾಡಿ ಇಲ್ಲಿ ಉದಯಿಸಿದೆವು.’

“ಭಿಕ್ಷುಗಳೇ, ಅನಂತರ ಅನೇಕ ಸಾವಿರ ದೇವತೆಗಳೂ ಅನೇಕ ಲಕ್ಷ ದೇವತೆಗಳು ನನ್ನ ಬಳಿಗೆ ಬಂದರು. ನನಗೆ ಅಭಿವಂದಿಸಿ ಒಂದುಕಡೆ ನಿಂತುಕೊಂಡರು. ಆಮೇಲೆ ನನ್ನನ್ನು ಕುರಿತು ಹೀಗೆಂದರು- ‘ಮೂವತ್ತೊಂದು ಕಲ್ಪಗಳ ಹಿಂದೆ ಸಿಖಿಯೂ ಅದೇ ಮೂವತ್ತೊಂದನೆಯ ಕಲ್ಪದಲ್ಲಿ ವೇಸ್ಸಭೂ ಭಗವಂತನೂ ಅದೇ ಶುಭ ಕಲ್ಪದಲ್ಲಿ ಕಕುಸಂಧನೂ, ಕೋಣಗಮನೂ ಕಸ್ಸಪನೂ.... ವಿಪಸ್ಸಿ, ಸಿಖಿ, ಕಕುಸಂಧ, ಕೋಣಗಮನ, ಕಸ್ಸಪ ಇವರುಗಳನ್ನನುಸರಿಸಿ ಬ್ರಹ್ಮಚರ್ಯವನ್ನು ಆಚರಿಸಿ ಕಾಮಚ್ಛಂದವನ್ನು ದೂರಮಾಡಿ ಇಲ್ಲಿ ಉದಯಿಸಿದೆವು.’

“ಭಿಕ್ಷುಗಳೇ, ಅನೇಕ ಸಾವಿರ ದೇವತೆಗಲು ಅನೇಕ ಲಕ್ಷ ದೇವತೆಗಲೂ ನನ್ನಲ್ಲಿಗೆ ಬಂದರು. ಒಂದುಕಡೆ ನಿಂತುಕೊಂಡರು. ಆಮೇಲೆ ನನ್ನನ್ನು ಕುರಿತು ಹೀಗೆಂದರು- ಈ ಭದ್ರಕಲ್ಪದಲ್ಲಿ ಅರಹಂತರಾದ ಗೋತಮರು ಲೋಕದಲ್ಲಿ ಇಂದು ಉದಯಿಸಿದ್ದಾರೆ. ಕ್ಷತ್ರಿಯ ಕುಲದಲ್ಲಿ ಗೋತಮ ಗೋತ್ರದಲ್ಲಿ ಅವರು ಹುಟ್ಟಿದ್ದಾರೆ. ಭಗವಾನರ ಕಾಲದಲ್ಲಿ ಆಯುಃಪ್ರಮಾಣವು ಕಡಿಮೆ. ಹೆಚ್ಚು ಕಡಿಮೆ ನೂರು ವರ್ಷ ಬದುಕುವವರೇ ಚಿರಂಜೀವಿಗಳೆನ್ನಿಸಿಕೊಳ್ಳುತ್ತಾರೆ. ಭಗವಾನರು ಅರಳೀ ಮರದಡಿಯಲ್ಲಿ ಸಂಬೋಧಿಯನ್ನು ಪಡೆದವರಾಗಿದ್ದಾರೆ. ಅವರಿಗೆ ಸಾರಿಪುತ್ತ, ಮೊಗ್ಗಲ್ಲಾನರು ಯಮಳ ಶಿಷ್ಯರಾಗಿದ್ದಾರೆ. ಭಗವಾನರಿಗೆ ಒಟ್ಟಿಗೆ ಸೇರುವ ಸಾವಿರದ ಇನ್ನೂರೈವತ್ತು ಶಿಷ್ಯರನ್ನುಳ್ಳ ಭಿಕ್ಷು ಸಂಘವಿದೆ. ಅವರೆಲ್ಲರೂ ಖೀಣಾಸವರಾಗಿದ್ದಾರೆ. ಆನಂದನು ಭಗವಾನರ ಮುಖ್ಯ ಆಪ್ತ ಶಿಷ್ಯನಾಗಿದ್ದಾನೆ. ಸುದ್ಧೋದನ ರಾಜನು ತಂದೆಯೂ ಮಾಯಾದೇವಿಯು ತಾಯಿಯು ಆಗಿದ್ದಾರೆ. ಕಪಿಲವತ್ಥು ನಗರವು ರಾಜನ ರಾಜಧಾನಿಯಾಗಿದೆ. ಭಗವಾನರ ಅಭಿನಿಷ್ಕ್ರಮಣವು ಹೀಗಾಯಿತು, ಅವರು ಪಬ್ಬಜ್ಜರಾದುದು ಹೀಗೆ, ಅವರ ತಪಸ್ಸು ಹೀಗಿದ್ದಿತು, ಅವರು ಬೋಧಿಯನ್ನು ಪಡೆದದ್ದು ಹೀಗೆ, ಅವರು ಧರ್ಮಪ್ರಸಾರವನ್ನು ಆರಂಭ ಮಾಡಿದ್ದು ಹೀಗೆ. ನಾವು ಭಗವಾನರನ್ನು ಅನುಸರಿಸಿ ಬ್ರಹ್ಮಚರ್ಯವನ್ನು ಆಚರಿಸಿ ಕಾಮಚ್ಛಂದವನ್ನು ದೂರಮಾಡಿ ಇಲ್ಲಿ ಹುಟ್ಟಿದ್ದೇವೆ.’

“ಭಿಕ್ಷುಗಳೇ, ತಥಾಗತನು ಧಮ್ಮಧಾತುವನ್ನು ಸ್ಪಷ್ಟವಾಗಿ ತಿಳಿದವನಾಗಿ ಹಿಂದಿನ ಬುದ್ಧರನ್ನೂ ಅವರ ಪರಿನಿರ್ವಾಣವನ್ನೂ ಅವರು ಪ್ರಪಂಚದ ಬಂಧನವನ್ನು ಕಡಿದುಕೊಂಡ ಬಗೆಯನ್ನೂ ಅಡ್ಡಿ-ಆತಂಕಗಳನ್ನು ಕತ್ತರಿಸಿದ ರೀತಿಯನ್ನೂ ಭವಚಕ್ರವನ್ನೂ ದಾಟಿದ ರೀತಿಯನ್ನೂ ಅರಿತವನಾಗಿದ್ದಾನೆ. ಎಲ್ಲ ದುಃಖಗಳನ್ನೂ ಗೆದ್ದವನಾಗಿ ಅವರ ಹುಟ್ಟುಗಳನ್ನು, ಅವರ ಹಿಂದಿನ ಹೆಸರುಗಳನ್ನು, ಅವರ ಹಿಂದಿನ ಗೊತ್ರಗಳನ್ನೂ, ಅವರ ಆಯುಃಪ್ರಮಾಣಗಳನ್ನೂ ಅವರ ಯಮಳ ಶಿಷ್ಯರನ್ನೂ ಒಟ್ಟಾಗಿ ಸೇರುತ್ತಿದ್ದ ಅವರ ಶಿಷ್ಯರನ್ನೂ ನೆನಪಿಗೆ ತಂದುಕೊಳ್ಳಬಲ್ಲವನಾಗಿದ್ದಾನೆ. ಅವರ ಜನ್ಮವು ಹೀಗೆ, ಅವರ ಹೆಸರು ಹೀಗಿದ್ದಿತು; ಅವರ ಗೋತ್ರಗಳು ಇವು. ಅವರ ಶೀಲವು ಇದು, ಅವರ ಧಮ್ಮವು ಇದು, ಅವರ ಪಞ್ಞಾವು ಇದು, ಅವರು ತಂಗಿದ್ದು ಇಂತಿಂಥ ಕಡೆಗಳಲ್ಲಿ, ಅವರ ವಿಮುಕ್ತಿಯು ಹೀಗಿತ್ತು ಎಂದು ಎಲ್ಲ ಭಗವಂತಹ ವಿವರಗಳನ್ನು ತಿಳಿದವನಾಗಿದ್ದಾನೆ.

“ದೇವತೆಗಳು, ತಥಾಗತನಿಗೆ ಹೀಗೆ ಬಿನ್ನವಿಸಿಕೊಂಡರು- ‘ಪರಿನಿರ್ವಾಣವನ್ನು ಸಾಧಿಸಿದ ಪ್ರಪಂಚದ ಬಂಧವನ್ನು ಕಡಿದುಕೊಂಡ ಅಡ್ಡಿ-ಆತಂಕಗಳನ್ನು ಕತ್ತರಿಸಿ ಹಾಕಿದ ಭವಚಕ್ರವನ್ನು ದಾಟಿದ ಎಲ್ಲ ದುಃಖಗಳನ್ನೂ ಗೆದ್ದ ಹಿಂದಿನ ಬುದ್ಧರನ್ನೂ, ಅವರ ಜನ್ಮಗಳನ್ನೂ, ಅವರ ಹೆಸರುಗಳನ್ನೂ, ಗೋತ್ರಗಳನ್ನೂ ಆಯುಃಪ್ರಮಾಣವನ್ನೂ ಅವರ ಯಮಳ ಶಿಷ್ಯರನ್ನೂ ಒಟ್ಟಿಗೆ ಸೇರುತ್ತಿದ್ದ ಶಿಷ್ಯ ಸಮೂಹಗಳನ್ನೂ ತಥಾಗತನು ಸ್ಮರಿಸಿಕೊಳ್ಳಬಲ್ಲವನಾಗಿದ್ದಾನೆ. ಅವರ ಹುಟ್ಟು ಹೀಗೆ, ಅವರ ಹೆಸರುಗಳು ಇವು, ಅವರ ಗೋತ್ರಗಳು ಇವು, ಅವರ ಶೀಲವು ಇದು, ಅವರ ಧಮ್ಮವು ಇದು, ಅವರ ಪಞ್ಞಾವು ಇದು, ಅವರು ತಂಗಿದು ಇಂತಿಂಥ ಕಡೆ, ಅವರು ಮುಕ್ತಿ ಪಡೆದ ರೀತಿಯು ಇದು ಎಂದು ಆ ಭಗವಾನರುಗಳನ್ನು ತಥಾಗತನು ಜ್ಞಾಪಿಸಿಕೊಳ್ಳಬಲ್ಲವನಾಗಿದ್ದಾನೆ.”

ಭಗವಾನರು ಹೀಗೆ ಹೇಳಿದರು, ಭಿಕ್ಷುಗಳು ಭಗವಾನರು ಹೇಳಿದುದನ್ನು ಕೇಳಿ ಸಂತೋಷಗೊಂಡರು, ಆನಂದಪಟ್ಟರು.

ಇಲ್ಲಿಗೆ ಮಹಾಪದಾನ ಮೊದಲನೇ ಸುತ್ತ ಮುಗಿಯಿತು.

ಟಿಪ್ಪಣಿಗಳು [3]