ಪರಿವ್ರಾಜಕದ ಬಗ್ಗೆ
ಹೀಗೇ ಕೇಳಿದ್ದೇನೆ; ಒಮ್ಮೆ ಭಗವಾನರು ರಾಜಗೃಹ ಮತ್ತು ನಲಂದಗಳ ನಡುವಿನ ಮಾರ್ಗದಲ್ಲಿ ಹೋಗುತ್ತಿದ್ದರು. ಅವರ ಜೊತೆಯಲ್ಲಿ ಐನೂರು ಭಿಕ್ಷುಗಳಿಂದ ಕೂಡಿದ ಒಂದು ದೊಡ್ಡ ಭಿಕ್ಷು ಸಂಘವಿತ್ತು. ಅದೇ ರಾಜಗೃಹ ನಲಂದದ ಮಾರ್ಗದಲ್ಲಿ ಸುಪ್ಪಿಯ ಎಂಬ ಪರಿವ್ರಾಜಕನು ತನ್ನ ಆತ್ಮೀಯ ಶಿಷ್ಯನಾದ ಯುವಕ ಬ್ರಹ್ಮದತ್ತನೆಂಬುವನೊಂದಿಗೆ ಪ್ರಯಾಣ ಮಾಡುತ್ತಿದ್ದನು. ಆಗ ಪರಿವ್ರಾಜಕನಾದ ಸುಪ್ಪಿಯನು ಬುದ್ಧನನ್ನೂ, ಧಮ್ಮವನ್ನೂ, ಸಂಘವನ್ನೂ ಅನೇಕ ಪರಿಯಾಗಿ ಕೆಟ್ಟ ಮಾತುಗಳಿಂದ ವರ್ಣಿಸುತ್ತಿದ್ದನಂತೆ. ಆದರೆ ಪರಿವ್ರಾಜಕ ಸುಪ್ಪಿಯನ ಆತ್ಮೀಯ ಶಿಷ್ಯನಾದ ಯುವಕ ಬ್ರಹ್ಮದತ್ತನು ಅನೇಕ ಪರಿಯಿಂದ ಬುದ್ದನನ್ನೂ, ಧಮ್ಮವನ್ನೂ, ಸಂಘವನ್ನೂ ಸ್ತುತಿಸುತ್ತಿದ್ದನಂತೆ. ಹೀಗೆ ಆಚಾರ್ಯನೂ ಮತ್ತು ಅವನ ಆಪ್ತ ಶಿಷ್ಯನೂ ಪರಸ್ಪರ ವಿರೋಧಿಸುತ್ತಾ ದಿಟ ಸಟೆಗಳನ್ನು ನುಡಿಯುತ್ತಾ ಭಗವಾನರ ಮತ್ತು ಭಿಕ್ಷು ಸಂಘದ ಹಿಂದೆ ಹಿಂದೆ ಹೋಗುತ್ತಿದ್ದರು.
ಆಗ ಭಗವಾನರು ಅಂಬಲಟ್ಠಿಕದಲ್ಲಿನ ರಾಜನ ಛತ್ರಕ್ಕೆ ಏಕರಾತ್ರಿ ವಾಸಕೋಸ್ಕರ ಭಿಕ್ಷು ಸಂಘದೊಡನೆ ಹೋದರು. ಪರಿವ್ರಾಜಕನಾದ ಸುಪ್ಪಿಯನು ಕೂಡ ತನ್ನ ಆಪ್ತ ಶಿಷ್ಯನಾದ ಯುವಕನಾದ ಬ್ರಹ್ಮದತ್ತನೊಂದಿಗೆ ಏಕರಾತ್ರಿ ವಾಸಕೋಸ್ಕರ ಅಂಬಲಟ್ಠಿಕದಲ್ಲಿನ ರಾಜನ ಛತ್ರಕ್ಕೆ ಹೋದನು. ಅಲ್ಲಿಯೂ ಪರಿವ್ರಾಜಕನಾದ ಸುಪ್ಪಿಯನು ಬುದ್ಧನನ್ನೂ, ಧಮ್ಮವನ್ನೂ, ಸಂಘವನ್ನೂ, ಅನೇಕ ಪರಿಯಾಗಿ ಕೆಟ್ಟ ಮಾತುಗಳಿಂದ ವರ್ಣಿಸುತ್ತಿದ್ದನಂತೆ. ಆದರೆ ಪರಿವ್ರಾಜಕ ಸುಪ್ಪಿಯನ ಆತ್ಮೀಯ ಶಿಷ್ಯನಾದ ಯುವಕನಾದ ಬ್ರಹ್ಮದತ್ತನು ಬುದ್ಧನನ್ನೂ, ಧಮ್ಮವನ್ನೂ, ಸಂಘವನ್ನೂ, ಅನೇಕ ಪರಿಯಿಂದ ಸ್ತುತಿಸುತ್ತಿದ್ದನು. ಹೀಗೆ ಆಚಾರ್ಯ ಶಿಷ್ಯರಿಬ್ಬರೂ ಒಬ್ಬರನ್ನೊಬ್ಬರು ವಿರೋಧಿಸುತ್ತಾ ದಿಟ್ಟ ಸಟೆಗಳನ್ನಾಡುತ್ತಾ ಅಲ್ಲಿ ತಂಗಿದರು.
ರಾತ್ರಿ ಕಳೆದು ಬೆಳಗಾಗುವ ಮೊದಲೇ ಎದ್ದು ಬಹು ಸಂಖ್ಯೆಯಲ್ಲಿ ಒಟ್ಟಾಗಿ ಸೇರಿ ವೃತ್ತಾಕಾರದ ಮಂಟಪಕ್ಕೆ ಹೋಗಿ ಕುಳಿತ ಭಿಕ್ಷುಗಳ ನಡುವೆ ಈ ಚರ್ಚೆ ಉದ್ಭವಿಸಿತು: “ಆಶ್ಚರ್ಯ ಗೆಳೆಯರೆ, ಅದ್ಭುತ, ಎಲ್ಲವನ್ನೂ ತಿಳಿದವರೂ, ಎಲ್ಲವನ್ನೂ ಕಂಡವರೂ, ಅರಹಂತರೂ, ಸಮ್ಮಾಸಂಬುದ್ಧರೂ ಆದ ಭಗವಾನರು ಜೀವಿಗಳ ನಾನಾ ಬಗೆಯ ಮನೋವೃತ್ತಿಯನ್ನೂ ಬಲ್ಲವರಾಗಿದ್ದಾರಲ್ಲವೇ? ಪರಿವ್ರಾಜಕನಾದ ಈ ಸುಪ್ಪಿಯನು ಅನೇಕ ರೀತಿಯಲ್ಲಿ ಬುದ್ದನನ್ನೂ ಧಮ್ಮವನ್ನೂ ಸಂಘವನ್ನೂ ಕೆಟ್ಟ ಮಾತುಗಳಿಂದ ವರ್ಣಿಸಿದನು. ಆದರೆ ಪರಿವ್ರಾಜಕನ ಆಪ್ತ ಶಿಷ್ಯನಾದ ಯುವಕ ಬ್ರಹ್ಮದತ್ತನು ಅನೇಕ ಪರಿಯಿಂದ ಬುದ್ಧನನ್ನೂ, ಧಮ್ಮವನ್ನೂ, ಸಂಘವನ್ನೂ, ಸ್ತುತಿಸಿದನು. ಹೀಗೆ ಆಚಾರ್ಯನೂ ಅವನ ಆಪ್ತ ಶಿಷ್ಯನೂ ಪರಸ್ಪರ ವಿರೋಧಿಸುತ್ತಾ ದಿಟ್ಟ ಸಟೆಗಳನ್ನು ನುಡಿಯುತ್ತಾ ಭಗವಾನರ ಮತ್ತು ಭಿಕ್ಷು ಸಂಘದ ಹಿಂದೆ ಹಿಂದೆ ಹೋಗುತ್ತಿದ್ದರು.
ಆಗ ಭಿಕ್ಷುಗಳು ಚರ್ಚೆ ಮಾಡುತ್ತಿರುವುದನ್ನು ತಿಳಿದ ಭಗವಾನರು ಆ ಚಕ್ರಾಕಾರದ ಮಂಟಪವನ್ನು ಸಮೀಪಿಸಿದರು. ಹತ್ತಿರಕ್ಕೆ ಬಂದು ಅವರಿಗಾಗಿಯೇ ಸಿದ್ಧಪಡಿಸಿದ್ದ ಆಸನದಲ್ಲಿ ಕುಳಿತುಕೊಂಡರು. ಕುಳಿತುಕೊಂಡು ಭಿಕ್ಷುಗಳನ್ನು ಕುರಿತು ಹೀಗೆಂದರು: “ಭಿಕ್ಷುಗಳೇ, ಒಟ್ಟಾಗಿ ಸೇರಿ ಕುಳಿತುಕೊಂಡು ಯಾವುದನ್ನು ಕುರಿತು ಮಾತನಾಡುತ್ತಿದ್ದೀರಿ? ಯಾವ ವಿಷಯದ ಮೇಲೆ ಚರ್ಚೆ ಮಾಡುತ್ತಿದ್ದೀರಿ?” ಹೀಗೆ ಪ್ರಶ್ನಿಸಿದಾಗ ಭಿಕ್ಷುಗಳು ಭಗವಾನರಿಗೆ ಇಂತೆಂದರು: “ಭಂತೇ, ರಾತ್ರಿಯು ಕಳೆದು ಬೆಳಗಾಗುವ ಮೊದಲೇ ಎದ್ದು ಒಟ್ಟಾಗಿ ಸೇರಿ ಚಕ್ರಾಕಾರದ ಈ ಮಂಟಪದಲ್ಲಿ ಕುಳಿತಿರಲು ಈ ಚರ್ಚೆ ಉದ್ಭವಿಸಿತು: ‘ಆಶ್ಚರ್ಯ, ಗೆಳೆಯರೆ, ಆದ್ಭುತ, ಎಲ್ಲವನ್ನೂ ತಿಳಿದವರೂ, ಎಲ್ಲವನ್ನು ಕಂಡವರೂ, ಅರಹಂತರೂ, ಸಮ್ಮಾ ಸಂಬುದ್ಧರೂ ಆದ ಭಗವಾನರು ಜೀವಿಗಳ ನಾನಾ ಬಗೆಯ ಮನೋವೃತ್ತಿಗಳನ್ನು ಬಲ್ಲವರಾಗಿದ್ದಾರಲ್ಲವೆ! ಪರಿವ್ರಾಜಕನಾದ ಈ ಸುಪ್ಪಿಯನು ಅನೇಕ ರೀತಿಯಲ್ಲಿ ಬುದ್ಧನನ್ನೂ, ಧಮ್ಮವನ್ನೂ, ಸಂಘವನ್ನೂ, ಕೆಟ್ಟ ಮಾತುಗಳಿಂದ ವರ್ಣಿಸಿದನು. ಆದರೆ ಪರಿವ್ರಾಜಕನ ಆಪ್ತ ಶಿಷ್ಯನಾದ ಯುವಕ ಬ್ರಹ್ಮದತ್ತನು ಆನೇಕ ಪರಿಯಿಂದ ಬುದ್ಧನನ್ನೂ, ಧಮ್ಮವನ್ನೂ, ಸಂಘವನ್ನೂ, ಸ್ತುತಿಸಿದನು. ಹೀಗೆ ಆಚಾರ್ಯನೂ, ಅವನ ಆಪ್ತ ಶಿಷ್ಯನೂ ಪರಸ್ಪರ ವಿರೋಧಿಸುತ್ತಾ ದಿಟ ಸಟೆಗಳನ್ನು ನುಡಿಯುತ್ತಾ ಭಗವಾನರ ಮತ್ತು ಭಿಕ್ಷು ಸಂಘದ ಹಿಂದೆ ಹಿಂದೆ ಹೋಗುತ್ತಿದ್ದರು. ಈ ವಿಷಯವನ್ನು ಕುರಿತು ಚರ್ಚಿಸುತ್ತಿದ್ದಾಗ ಭಗವಾನರು ದಯಮಾಡಿದರು.”
“ಭಿಕ್ಷುಗಳೇ, ಪರರು ನನ್ನನ್ನು ತೆಗಳಬಹುದು, ಧಮ್ಮವನ್ನು ತೆಗಳಬಹುದು, ಸಂಘವನ್ನು ತೆಗಳಬಹುದು, ಆಗ ನಿಮಗೆ ಯಾವ ಆತಂಕವಾಗಲೀ, ದ್ವೇಷವಾಗಲೀ ನಿಮ್ಮ ಮನಸ್ಸಿನಲ್ಲಿ ಸಂಕಟವಾಗಲೀ ಆಗಬಾರದು. ಪರರು ನನ್ನನ್ನು ತೆಗಳಬಹುದು, ಧಮ್ಮವನ್ನು ತೆಗಳಬಹುದು, ಸಂಘವನ್ನು ತೆಗಳಬಹುದು, ಆಗ ನೀವು ಕುಪಿತರಾದರೆ, ಮನಸ್ಸಿನಲ್ಲಿ ನೊಂದುಕೊಂಡರೆ ನಿಮಗೆ ಅಪಾಯವಾಗುತ್ತದೆ. ಪರರು ನನ್ನನ್ನು ತೆಗಳಬಹದು, ಧಮ್ಮವನ್ನು ತೆಗಳಬಹುದು, ಸಂಘವನ್ನು ತೆಗಳಬಹುದು ಆಗ ನೀವು ಕುಪಿತರಾದರೆ ಮನಸ್ಸಿನಲ್ಲಿ ನೊಂದುಕೊಂಡರೆ ಅವರು ಹೇಳುವುದು ಒಳ್ಳೆಯ ಮಾತುಗಳೇ, ಕೆಟ್ಟ ಮಾತುಗಳೇ ಎಂಬುದನ್ನು ತಿಳಿಯಬಲ್ಲಿರಾ?” “ಇಲ್ಲ ಭಂತೆ.” “ಪರರು ನನ್ನನ್ನು ತೆಗಳಬಹದು ಅಥವಾ ಧಮ್ಮವನ್ನು ತೆಗಳಬಹುದು ಅಥವಾ ಸಂಘವನ್ನು ತೆಗಳಬಹುದು ಆಗ ನೀವು ಅವರು ಹೇಳುತ್ತಿರುವುದು ಸುಳ್ಳು ಎಂಬುದನ್ನು ವಿವರಿಸಿ ಹೇಳಬೇಕು. ಈ ಕಾರಣದಿಂದ ‘ಇದು ತಪ್ಪು, ಈ ಕಾರಣದಿಂದ ಇದು ಸುಳ್ಳು, ನಮ್ಮಲ್ಲಿ ಇದು ಇಲ್ಲ, ನಮ್ಮಲ್ಲಿ ಇದು ಕಾಣುವುದೇ ಇಲ್ಲ’ ಎಂದು ತಿಳಿಯಪಡಿಸಬೇಕು.”
“’ಪರರು ನನ್ನನ್ನು ಸ್ತುತಿಸಬಹುದು ಅಥವಾ ಧಮ್ಮವನ್ನು ಸ್ತುತಿಸಬಹುದು ಅಥವಾ ಸಂಘವನ್ನು ಸ್ತುತಿಸಬಹುದು. ಆಗ ನೀವು ಆನಂದ ಪಡಬಾರದು, ಸಂತೋಷ ಪಡಬಾರದು, ಸಂತೋಷದಿಂದ ಉಬ್ಬಬಾರದು. ಪರರು ನನ್ನನ್ನು ಸ್ತುತಿಸಬಹುದು ಅಥವಾ ಧಮ್ಮವನ್ನು ಸ್ತುತಿಸಬಹುದು ಅಥವಾ ಸಂಘವನ್ನು ಸ್ತುತಿಸಬಹುದು. ಆಗ ನೀವು ಆನಂದಪಟ್ಟರೆ, ಸಂತೋಷಪಟ್ಟರೆ, ಸಂತೋಷದಿಂದ ಉಬ್ಬಿದರೆ ಅದರಿಂದ ನಿಮಗೆ ಅಡಚಣೆಯಾಗುತ್ತದೆ. ಪರರು ನನ್ನನ್ನು ಸ್ತುತಿಸಬಹುದು ಅಥವಾ ಧಮ್ಮವನ್ನು ಸ್ತುತಿಸಬಹುದು ಅಥವಾ ಸಂಘವನ್ನು ಸ್ತುತಿಸಬಹುದು. ಆಗ ನೀವು ಅವರು ಹೇಳುತ್ತಿರುವುದರ ಸತ್ಯಾನುಸತ್ಯತೆಯನ್ನು ತಿಳಿಯಪಡಿಸಬೇಕು. ಈ ಕಾರಣದಿಂದ ಇದು ನಿಜ, ಈ ಕಾರಣದಿಂದ ಇದು ಸರಿ, ನಮ್ಮಲ್ಲಿ ಇದು ಇದೆ, ನಮ್ಮಲ್ಲಿ ಇದು ಕಂಡು ಬರುತ್ತದೆ ಎಂದು ತಿಳಿಯಪಡಿಸಬೇಕು.”
ಕಿರಿಯ ಶೀಲ
“ಭಿಕ್ಷುಗಳೇ, ಸಾಮಾನ್ಯನೊಬ್ಬನು ತಥಾಗತನನ್ನು ಸ್ತುತಿಸುವಾಗ ಅಲ್ಪವಾದ, ಮುಖ್ಯವಲ್ಲದ ಶೀಲಗಳನ್ನೇ ಸ್ತುತಿಸುತ್ತಾನೆ. ಭಿಕ್ಷುಗಳೇ, ಸಾಮಾನ್ಯನೊಬ್ಬನು ತಥಾಗತನನ್ನು ಸ್ತುತಿಸುವಾಗ ಅಲ್ಪವಾದ ಮತ್ತು ಮುಖ್ಯವಲ್ಲದ ಶೀಲಗಳನ್ನು ಹೇಗೆ ವರ್ಣಿಸುತ್ತಾನೆ?”
“ಪ್ರಾಣಿ ಹತ್ಯೆಯನ್ನು ತ್ಯಜಿಸಿರುವ ಸಮಣಗೋತಮರು ದಂಡವನ್ನು, ಶಸ್ತ್ರಗಳನ್ನು ಕೆಳಗಿರಿಸಿದ್ದಾರೆ; ದಯಾಪೂರಿತವಾದ ಮನಸ್ಸನ್ನುಳ್ಳವರಾಗಿಯೂ, ಸರ್ವಪ್ರಾಣಿ ಸರ್ವಭೂತಗಳಲ್ಲಿ ಅನುಕಂಪವುಳ್ಳವರಾಗಿಯೂ ಇದ್ದಾರೆ’ ಭಿಕ್ಷುಗಳೇ, ತಥಾಗತನನ್ನು ಸ್ತುತಿಸುವಾಗ ಸಾಮಾನ್ಯನೊಬ್ಬನು ಅವನನ್ನು ಹೀಗೆಂದು ವರ್ಣಿಸುತ್ತಾನೆ.
“ತನಗೆ ಸಲ್ಲದುದನ್ನು ತೆಗೆದುಕೊಳ್ಳುವುದನ್ನು ತ್ಯಜಿಸಿರುವ ಸಮಣಗೋತಮರು ಕೊಟ್ಟಿದ್ದನ್ನು ಮಾತ್ರ ತೆಗೆದುಕೊಳ್ಳುವಂಥವರೂ, ಕೊಟ್ಟ ದಾನವನ್ನು ಶ್ಲಾಘಿಸುವವರೂ, ಶುಚಿರ್ಭೂತರೂ ಆಗಿದ್ದಾರೆ’ - ಭಿಕ್ಷುಗಳೇ, ಸಾಮಾನ್ಯನೊಬ್ಬನು ತಥಾಗತನನ್ನು ಸ್ತುತಿಸುವಾಗ ಅವನನ್ನು ಹೀಗೆ ವರ್ಣಿಸುತ್ತಾನೆ.
“ಅಬ್ರಹ್ಮಚಾರ್ಯವನ್ನು ತೊರೆದಿರುವ ಸಮಣ ಗೋತಮರು ಬಹ್ಮಚಾರಿಯಾಗಿಯೂ ಅನಾಗರಿಕವಾದ ಲೈಂಗಿಕ ಜೀವನವನ್ನು ಸಂಪೂರ್ಣ ಬಿಟ್ಟವರೂ ಆಗಿದ್ದಾರೆ’. ಭಿಕ್ಷುಗಳೇ ಸಾಮಾನ್ಯನೊಬ್ಬನು ತಥಾಗತನನ್ನು ಸ್ತುತಿಸುವಾಗ ಅವನನ್ನು ಹೀಗೆಂದು ವರ್ಣಿಸುತ್ತಾನೆ.
“ಸುಳ್ಳು ಹೇಳುವುದನ್ನು ತ್ಯಜಿಸಿರುವ, ಸುಳ್ಳು ಹೇಳುವುದನ್ನೇ ತೊರೆದಿರುವ ಸಮಣಗೋತಮರು ಸತ್ಯ ಹೇಳುವವರೂ, ಸತ್ಯಸಂಧರೂ, ವಿಶ್ವಾಸಾರ್ಹರೂ ಲೋಕಕ್ಕೆ ಕೊಟ್ಟ ಮಾತಿಗೆ ತಪ್ಪದವರೂ ಆಗಿದ್ದಾರೆ’. ಭಿಕ್ಷುಗಳೇ, ಸಾಮಾನ್ಯನೊಬ್ಬನು ತಥಾಗತನನ್ನು ಸ್ತುತಿಸುವಾಗ ಅವನನ್ನು ಹೀಗೆ ವರ್ಣಿಸುತ್ತಾನೆ.
“ಚಾಡಿ ಮಾತುಗಳನ್ನಾಡುವುದನ್ನು ತ್ಯಜಿಸಿರುವ ಚಾಡಿ ಹೇಳುವುದನ್ನೇ ತೊರೆದಿರುವ ಸಮಣಗೋತಮರು ಇಲ್ಲಿ ಭೇದವನ್ನುಂಟುಮಾಡುವಂಥ ಇಲ್ಲಿ ಕೇಳಿದ ಮಾತುಗಳನ್ನು ಅಲ್ಲಿ ಹೇಳುವುದಿಲ್ಲ. ಅಲ್ಲಿ ಭೇದವನ್ನುಂಟುಮಾಡಬಲ್ಲ ಅಲ್ಲಿ ಕೇಳಿದ ಮಾತುಗಳನ್ನು ಇಲ್ಲಿ ಹೇಳುವುದಿಲ್ಲ. ಹೇಗೆ ಬೇರೆಯಾದವರನ್ನು ಒಂದುಗೂಡಿಸುವವರೂ ಒಟ್ಟಾಗಿರುವವರ ನಡುವೆ ಕೈಹಾಕಿದವರೂ, ಐಕ್ಯಮತ್ಯೆಯನ್ನು ಹೆಚ್ಚಿಸುವವರೂ ಐಕ್ಯಮತ್ಯೆಯನ್ನು ಪ್ರೀತಿಸುವವರೂ, ಐಕ್ಯಮತ್ಯೆಯಲ್ಲಿ ಅನಂದಿಸವವರೂ, ಐಕ್ಯಮತ್ಯೆಯನ್ನುಂಟು ಮಾಡುವ ಮಾತುಗಳನ್ನೇ ಆಡುವವರೂ ಆಗಿದ್ದಾರೆ’ - ಭಿಕ್ಷುಗಳೇ, ಸಾಮಾನ್ಯನೊಬ್ಬನು ತಥಾಗತನನ್ನು ಸ್ತುತಿಸುವಾಗ ಅವನನ್ನು ಹೀಗೆ ವರ್ಣಿಸುತ್ತಾನೆ.
“ಕಠಿಣವಾದ ಮಾತುಗಳನ್ನಾಡುವುದನ್ನು ತ್ಯಜಿಸಿರುವ ಕಠಿಣ ಮಾತುಗಳನ್ನಾಡುವುದನ್ನೇ ತೊರೆದಿರುವ ಸಮಣ ಗೋತಮರು ನಿಂದಾತೀತವಾದ ಮತ್ತು ಕರ್ಣಗಳಿಗೆ ಸುಖವನ್ನುಂಟುಮಾಡುವ, ಪ್ರೇಮಮಯವಾದ, ಹೃದಯಂಗಮವಾದ, ನಮ್ರವಾದ, ಬಹು ಜನಕ್ಕೆ ಸಂತೋಷವನ್ನುಂಟುಮಾಡುವ, ಬಹು ಜನರನ್ನು ಸ್ಪೂರ್ತಿಗೊಳಿಸುವ ನಿಜವಾದ ಮಾತುಗಳನ್ನೇ ಆಡುತ್ತಾರೆ’ - ಭಿಕ್ಷುಗಳೇ, ಸಾಮಾನ್ಯನೊಬ್ಬನು ತಥಾಗತವನ್ನು ಸ್ತುತ್ತಿಸುವಾಗ ಅವನನ್ನು ಹೀಗೆ ವರ್ಣಿಸುತ್ತಾನೆ.
“ಕಾಡು ಹರಟೆಯಲ್ಲಿ ತೊಡಗುವುದನ್ನು ಬಿಟ್ಟಿರುವ ಕಾಡುಹರಟೆಯಲ್ಲಿ ತೊಡಗುವುದನ್ನೇ ತೊರೆದಿರುವ ಸಮಣಗೋತಮರು ಕಾಲೋಚಿತವಾದ, ಇದ್ದುದನ್ನು ಇದ್ದಂತೆಯೇ ತಿಳಿಸುವಂಥ, ಅರ್ಥಪೂರ್ಣವಾದ ಧರ್ಮಕ್ಕೆ ಅನುಗುಣವಾದ, ವಿನಯಪೂರಿತವಾದ ಕಾಲ ದೇಶಕ್ಕನುಗುಣ ವಾಗಿದ್ದು ಅರ್ಥ ಸಹಿತವಾಗಿದ್ದು ಜನರು ಸರಿಯೆಂದು ಒಪ್ಪಿ ಕೊಳ್ಳುವಂಥ ಮಾತುಗಳನ್ನೇ ಆಡುತ್ತಾರೆ’- ಸಾಮಾನ್ಯನೊಬ್ಬನು ತಥಾಗತನನ್ನು ಸ್ತುತಿಸುವಾಗ ಅವನನ್ನು ಹೀಗೆ ವರ್ಣಿಸುತ್ತಾನೆ.
“’ಬೀಜವನ್ನಾಗಲೀ, ಗಿಡವನ್ನಾಗಲೀ ಹಾನಿ ಮಾಡುವುದನ್ನೇ ತೊರೆದಿರುವ ಸಮಣ ಗೋತಮರು... ಮಧ್ಯಾಹ್ನವಾದ ಮೇಲೆ ಏನನ್ನೂ ತೆಗೆದುಕೊಳ್ಳದೆ ರಾತ್ರಿಯ ಹೊತ್ತು ಉಪವಾಸವಿದ್ದು ದಿನಕ್ಕೊಂದು ಸಾರಿ ಮಾತ್ರ ಊಟ ಮಾಡುವ ಸಮಣ ಗೋತಮರು... ನೃತ್ಯ, ಗೀತ, ವಾದ್ಯ, ಮನೋರಂಜಕವಾದ ನೋಟಗಳು - ಇವುಗಳನ್ನು ಕೇಳುವುದು ಮತ್ತು ನೋಡುವುದನ್ನೇ ತೊರೆದಿರುವ ಸಮಣ ಗೋತಮರು... ಮಾಲೆ, ಗಂಧಲೇಪನ, ಅಲಂಕಾರ ವಸ್ತುಗಳು, ಒಡವೆಗಳು - ಇವುಗಳಿಂದ ದೇಹವನ್ನು ಅಲಂಕರಿಸಿಕೊಳ್ಳುವುದನ್ನೇ ತೊರೆದಿರುವ ಸಮಣ ಗೋತಮರು... ಎತ್ತರವಾದ ಅಥವಾ ತಗ್ಗಾಗಿರುವ ಐಷಾರಾಮಿ ಪೀಠ, ಹಾಸಿಗೆ ಮತ್ತು ಮಂಚಗಳನ್ನು ಉಪಯೋಗಿಸದಿರುವ ಸಮಣ ಗೋತಮರು... ಚಿನ್ನ, ಬೆಳ್ಳಿಗಳನ್ನು ಪರಿಗ್ರಹಿಸುವುದನ್ನೇ ತೊರೆದಿರುವ ಸಮಣ ಗೋತಮರು... ಬೇಯಿಸದಿರುವ ಆಹಾರ ಪದಾರ್ಥವನ್ನಾಗಲೀ, ಧಾನ್ಯವನ್ನಾಗಲೀ ಪರಿಗ್ರಹಿಸದ ಸಮಣಗೋತಮರು.... ಬೇಯಿಸದಿರುವ ಮಾಂಸವನ್ನು ಪರಿಗ್ರಹಿಸದ ಸಮಣ ಗೋತಮರು... ಸ್ತ್ರೀಯರು ಮತ್ತು ಕುಮಾರಿಯರನ್ನು ಪರಿಗ್ರಹಿಸದ ಸಮಣ ಗೋತಮರು... ದಾಸಿದಾಸರನ್ನು ಪರಿಗ್ರಹಿಸುವುದನ್ನೇ ತೊರೆದಿರುವ ಸಮಣ ಗೋತಮರು... ಆಡು ಕುರಿಗಳನ್ನು ಪರಿಗ್ರಹಿಸುವುದನ್ನೇ ತೊರೆದಿರುವ ಸಮಣ ಗೋತಮರು... ಕೋಳಿ ಹಂದಿಗಳನ್ನು ಪರಿಗ್ರಹಿಸುವುದನ್ನೇ ತೊರೆದಿರುವ ಸಮಣ ಗೋತಮರು... ಆನೆ, ದನ, ಕುದರೆಗಳನ್ನು ಪರಿಗ್ರಹಿಸುವುದನ್ನೇ ತೊರೆದಿರುವ ಸಮಣ ಗೋತಮರು... ಹೊಲ ಮನೆಗಳನ್ನು ಪರಿಗ್ರಹಿಸುವುದನ್ನೇ ತೊರೆದಿರುವ ಸಮಣ ಗೋತಮರು... ದೂತ ಅಥವಾ ಓಲೆಕಾರರಾಗಿ ಕೆಲಸ ಮಾಡುವುದನ್ನೇ ತೊರೆದಿರುವ ಸಮಣ ಗೋತಮರು... ಕ್ರಯ ವಿಕ್ರಯಗಳಲ್ಲಿ ತೊಡಗುವುದನ್ನೇ ತೊರೆದಿರುವ ಸಮಣ ಗೋತಮರು... ತೂಗುವುದರಲ್ಲಿ, ಅಳೆಯುವುದರಲ್ಲಿ, ನಾಣ್ಯ ವಿನಿಮಯದಲ್ಲಿ ವಂಚನೆ ಮಾಡುವುದನ್ನೇ ತೊರೆದಿರುವ ಸಮಣ ಗೋತಮರು... ಲಂಚ, ವಂಚನೆ, ಕಪಟ, ನಂಬಿಕೆ ದ್ರೋಹಗಳನ್ನು ಮಾಡುವುದನ್ನೇ ತೊರೆದಿರುವ ಸಮಣ ಗೋತಮರು... ಛೇದನ, ವಧೆ, ಬಂದನ, ದರೋಡೆ, ಇದ್ದಕ್ಕಿದ್ದಂತೆಯೇ ದಾರಿಹೋಕರ ಮೇಲೆರಗಿ ಕಿತ್ತಿಕೊಳ್ಳುವುದು-ಇವುಗಳನ್ನು ಮಾಡುವುದನ್ನೇ ತೊರೆದಿರುವ ಸಮಣ ಗೋತಮರು... ಭಿಕ್ಷುಗಳೇ, ಸಾಮಾನ್ಯನೊಬ್ಬನು ತಥಾಗತನನ್ನು ಸ್ತುತಿಸುವಾಗ ಅವನನ್ನು ಹೀಗೆ ವರ್ಣಿಸುತ್ತಾನೆ.
ಕಿರಿಯ ಶೀಲ ಮುಗಿಯಿತು.
ಮಧ್ಯಮ ಶೀಲ
“ಜನರು ಶ್ರದ್ದೆಯಿಂದ ನೀಡಿದ ಆಹಾರಗಳನ್ನು ತಿಂದು ಬದುಕುವ ಸಮಣ ಬ್ರಾಹ್ಮಣರಲ್ಲಿ ಕೆಲವರು ಬೀಜಗಳನ್ನೂ, ಗಿಡಗಳನ್ನೂ ನಾಶ ಮಾಡುವುದರಲ್ಲಿ ಅನುರಕ್ತರಾಗುತ್ತಾರೆ. ಈ ಐದು ವಿಧದ ಬೀಜಗಳನ್ನು ನಾಶಮಾಡುತ್ತಾರೆ:- ಬೇರಿನ ರೂಪದ ಬೀಜಗಳು, ಕಾಂಡರೂಪದ ಬೀಜಗಳು ಹಣ್ಣಿನ ರೂಪದ ಬೀಜಗಳು, ಕುಡಿಯ ರೂಪದ ಬೀಜಗಳು ಮತ್ತು ಕಾಳಿನ ರೂಪದ ಬೀಜಗಳು. ಸಮಣ ಗೋತಮರು ಯಾವ ರೂಪದ ಬೀಜಗಳೇ ಆಗಿರಲಿ ಅವನ್ನು ನಾಶ ಮಾಡುವುದನ್ನೇ ತೊರೆದಿದ್ದಾರೆ.” ಭಿಕ್ಷುಗಳೇ, ಸಾಮಾನ್ಯನೊಬ್ಬನು ತಥಾಗತನನ್ನು ಸ್ತುತಿಸುವ ಅವನನ್ನು ಹೀಗೆ ವರ್ಣಿಸುತ್ತಾನೆ.
“ಜನರು ಶ್ರದ್ದೆಯಿಂದ ನೀಡದ ಆಹಾರಗಳನ್ನು ತಿಂದು ಬದುಕುವ ಸಮಣ ಬ್ರಾಹ್ಮಣರಲ್ಲಿ ಕೆಲವರು ಅನೇಕ ಬಗೆಯ ಸಂಗ್ರಹಗಳಲ್ಲಿ ಅನುರಕ್ತರಾಗಿರುತ್ತಾರೆ. ವಿಧವಿಧದ ಅ ಸಂಗ್ರಹಗಳು ಯಾವುವೆಂದರೆ:- ಅನ್ನ ಸಂಗ್ರಹ, ಪಾನ ಸಂಗ್ರಹ, ವಸ್ತ್ರ ಸಂಗ್ರಹ, ಯಾನಗಳ ಸಂಗ್ರಹ, ಶಯನ (ವಿಧ ವಿಧದ ಹಾಸಿಗೆ ಮತ್ತು ಹಾಸಿಗೆ ಬಟ್ಟೆಗಳು) ಸಂಗ್ರಹ, ಗಂಧ ಸಂಗ್ರಹ, ಬೇಯದಿರುವ ಧ್ಯಾನ ಮತ್ತು ಹಣ್ಣು ತರಕಾರಿಗಳ ಸಂಗ್ರಹ, ಈ ಎಲ್ಲಾ ಬಗೆಯ ಸಂಗ್ರಹಗಳನ್ನು ಮಾಡುವುದನ್ನೇ ಸಮಣ ಗೋತಮರು ತೊರೆದಿದ್ದಾರೆ.” ಭಿಕ್ಷುಗಳೇ, ಸಾಮಾನ್ಯನೊಬ್ಬನು ತಥಾಗತನನ್ನು ವರ್ಣಿಸುವಾಗ ಅವನನ್ನು ಹೀಗೆ ವರ್ಣಿಸುತ್ತಾನೆ.
“ಜನರು ಶ್ರದ್ಧೆಯಿಂದ ನೀಡಿದ ಆಹಾರಗಳನ್ನು ತಿಂದು ಬದುಕುವ ಸಮಣ ಬ್ರಾಹ್ಮಣರಲ್ಲಿ ಕೆಲವರು ವಿವಿಧ ಬಗೆಯ ಮನರಂಜಕ ನೋಟಗಳಲ್ಲಿ ಅನುರಕ್ತರಾಗುತ್ತಾರೆ. ವಿಧ ವಿಧದ ಆ ಸಂಗ್ರಹಗಳು ಯಾವುವೆಂದರೆ - ನೃತ್ಯ, ಗೀತ, ವಾದ್ಯ ಸಂಗೀತ, ನಾಟಕ, ಬಯಲಾಟ, ಪ್ರಾಣಿಗಳ ಕೂಗುಗಳನ್ನು ಅನುಕರಿಸುವುದು ತಾಳ ಹಾಕುವುದು ಘಟ ವಾದ್ಯವನ್ನು ಬಾರಿಸುವುದು ಚಿತ್ರಗಳನ್ನು ಕೊರಿಯುವುದು ಗಣೆ ಹತ್ತಿ ವರಸೆಗಳನ್ನು ಮಾಡುವ ದೊಂಬರಾಟ, ಆನೆ ಕಾಳಗ ಕುದುರೆ ಕಾಳಗ ಕೋಣನ ಕಾಳಗ ಗೂಳಿ ಕಾಳಗ, ಆಡಿನ ಕಾಳಗ, ಟಗರು ಕಾಳಗ ಹುಂಜನ ಕಾಳಗ ಹಕ್ಕಿ ಕಾಳಗ ದೊಣ್ಣೆ ವರಸೆ, ಮುಷ್ಠಿ ಯುದ್ಧ ಕುಸ್ತಿ, ಯುದ್ಧ ಕುಶಲತೆ, ಬಲ ಪ್ರದರ್ಶನ ಸೈನ್ಯದ ಕವಾಯಿತು - ಇಂಥ ಮನರಂಜಕ ನೋಟಗಳನ್ನೇ ತೊರೆದಿರುವವರು ಸಮಣ ಗೋತಮರು.” ಭಿಕ್ಷುಗಳೇ, ಸಾಮಾನ್ಯನೊಬ್ಬನು ತಥಾಗತನನ್ನು ಸ್ತುತಿಸುವಾಗ ಅವನನ್ನು ಹೀಗೆ ವರ್ಣಿಸುತ್ತಾನೆ.
“ಜನರು ಶ್ರದ್ಧೆಯಿಂದ ನೀಡಿದ ಆಹಾರಗಳನ್ನು ತಿಂದು ಬದುಕುವ ಸಮಣ ಬ್ರಾಹ್ಮಣರಲ್ಲಿ ಕೆಲವರು ಎಚ್ಚರವನ್ನು ತಪ್ಪಿಸುವ ವಿಧ ವಿಧದ ಜೂಜುಗಳಲ್ಲಿ ತೊಡಗುತ್ತಾರೆ. ಅನೇಕ ಬಗೆಯ ಆ ಜೂಜುಗಳು ಯಾವುವೆಂದರೆ: ಎಂಟು ಮನೆ ಚೌಕದ ಆಟ ಮತ್ತು ಮನೆ ಚೌಕದ ಆಟ, ಆಕಾಶವನ್ನೇ ಹಾಸನ್ನಾಗಿ ಮಾಡಿಕೊಂಡು ಆಡುವ ಆಟ ಕುಪ್ಪಳಿಸುವ ಪಂದ್ಯ, ಪಗಡೆಯಾಟ ಚಿನ್ನಿದಾಂಡು ಹಸ್ತದಿಂದ ಮುದ್ರೆಯೊತ್ತುವುದು, ಚೆಂಡಾಟ ಪೀಪಿಯೂದುವ ಪಂದ್ಯ ಆಟದ ನೇಗಿಲಿನಿಂದ ಉಳುವ ಪಂದ್ಯ ಹಿಂಗಣ್ಣು ಮುಂಗಣ್ಣು ಹೊಡೆಯುವ ಪಂದ್ಯ, ಗಿರಗಟ್ಟಿ ಪಂದ್ಯ ಆಟದ ಕೊಳಗದ ಪಂದ್ಯ, ಆಟದ ರಥವನ್ನು ಓಡಿಸುವ ಪಂದ್ಯ, ಆಟದ ಬಿಲ್ಲಿನ ಪಂದ್ಯ ಅಕ್ಷರಗಳನ್ನು ಬಿಡಿಸುವ (ಚಕ್ರ ಬಂಧ ಸ್ಪರ್ಧೆ?) ಪಂದ್ಯ ಬೇರೆಯವರ ಮನಸ್ಸಿನಲ್ಲಾಗುವದನ್ನು ಹೇಳುವ ಪಂದ್ಯ ಬೇರೆಯವರ ದ್ವನಿಯನ್ನು ಅಣಕಿಸುವ ಪಂದ್ಯ ಇಂಥ ಎಚ್ಚರ ತಪ್ಪಿಸುವ ಎಲ್ಲ ಬಗೆಯ ಜೂಜುಗಳನ್ನು ಮಾಡುವುದನ್ನೇ ಸಮಣ ಗೋತಮರು ತೊರೆದಿದ್ದಾರೆ.” ಭಿಕ್ಷುಗಳೇ, ಸಾಮಾನ್ಯನೊಬ್ಬನು ತಥಾಗತನನ್ನು ಸ್ತುತಿಸುವಾಗ ಅವನನ್ನು ಹೀಗೆ ವರ್ಣಿಸುತ್ತಾನೆ.
“ಜನರು ಶ್ರದ್ಧೆಯಿಂದ ನೀಡಿದ ಆಹಾರಗಳನ್ನು ತಿಂದು ಬದುಕುವ ಸಮಣ ಬ್ರಾಹ್ಮಣರಲ್ಲಿ ಕೆಲವರು ಎತ್ತರವಾದ ಮತ್ತು ಐಷಾರಾಮಿ ಪೀಠಗಳು ಮತ್ತು ಹಾಸಿಗೆಗಗಳನ್ನು ಉಪಯೋಗಿಸುವುದರಲ್ಲಿ ಕಾಲ ಕಳೆಯುತ್ತಾರೆ. ವಿವಿಧ ಬಗೆಯ ಪೀಠಗಳು ಮತ್ತು ಹಾಸಿಗೆಗಳು ಯಾವುವೆಂದರೆ - ಮೃದುವಾದ ಮಣಿ ಪಲ್ಲಂಕ ಬಗೆ ಬಗೆಯ ವೃಷಭಾಸನಗಳು ಜಮಖಾನೆಗಳು ಸುಂದರವಾದ ಮಗ್ಗಲು ಹಾಸಿಗೆಗಳು ಬಣ್ಣ ಬಣ್ಣದ ಮೆತ್ತಗಳು ಬೆಲೆಯುಳ್ಳ ಬಿಳಿ ಬಣ್ಣದ ದುಪ್ಪಟಿಗಳು ಎರಡೂ ಕಡೆ ಗರಿಗಳಿಂದ ತುಂಬಿರುವ ಮೆತ್ತೆಗಳು ಒಂದೇ ಕಡೆ ಗರಿಗಳಿಂದ ತುಂಬಿರುವ ಮೆತ್ತೆಗಳು ಚಿನ್ನದ ಜರತಾರಿಯ ಹೊದಿಕೆಗಳು ಬೆಳ್ಳಿಯ ಜರತಾರಿಯ ಹೊದಿಕೆಗಳು ರತ್ನಗಂಬಳಿಗಳು ಆನೆಯ ಚಿತ್ರ ಕುದುರೆಯ ಚಿತ್ರ ರಥದ ಚಿತ್ರ - ಇವುಗಳನ್ನುಳ್ಳ ಹೊದಿಕೆಗಳು. ಬಣ್ಣ ಬಣ್ಣದ ಸಾರಂಗದ ಚಿತ್ರವನ್ನುಳ್ಳ ಹೊದಿಕೆಗಳು ಜಿಂಕೆಯ ಚರ್ಮದಿಂದ ಮಾಡಿರುವ ಅಸನಗಳು ಅಂಚಿನಲ್ಲಿ ಕುಚ್ಚಿರುವ ಮಗ್ಗಲು ಹಾಸಿಗೆಗಳು ಕೆಂಪು ಬಣ್ಣದ ದಿಂಬುಬಳಿರುವ ದಿವಾನುಗಳು. ಇಂಥ ಎತ್ತರವಾದ ಮತ್ತು ಮೃದುವಾದ ಪೀಠಗಳನ್ನಾಗಲೀ ಹಾಸಿಗೆಗಳನ್ನಾಗಲೀ ಸಮಣ ಗೋತಮರು ಉಪಯೋಗಿಸುವುದನ್ನೇ ತೊರೆದಿದ್ದಾರೆ.” ಭಿಕ್ಷುಗಳೇ, ಸಾಮಾನ್ಯನೊಬ್ಬನು ತಥಾಗತನನ್ನು ಸ್ತುತಿಸುವಾಗ ಅವನನ್ನು ಹೀಗೆ ವರ್ಣಿಸುತ್ತಾನೆ.
“ಜನರು ಶ್ರದ್ಧೆಯಿಂದ ನೀಡಿದ ಆಹಾರಗಳನ್ನು ತಿಂದು ಬದುಕುವ ಸಮಣ ಬ್ರಾಹ್ಮಣರಲ್ಲಿ ಕೆಲವರು ಸುಂದರವಾದ ವಸ್ತುಗಳಿಂದ ತಮ್ಮನ್ನು ಅಲಂಕರಿಸಿಕೊಳ್ಳುವುದರಲ್ಲಿ ಕಾಲ ಕಳೆಯುತ್ತಾರೆ. ವಿವಿಧ ಬಗೆಯ ಅಲಂಕಾರ ವಸ್ತುಗಳಾವುವೆಂದರೆ - ಮೈಗೆ ಹಚ್ಚಿಕೊಳ್ಳುವ ಸುವಾಸನೆಯ ಚೂರ್ಣಗಳು ಮೈಗೆ ಹಚ್ಚಿಕೊಳ್ಳುವ ಸುವಾಸನೆಯ ತೈಲಗಳು ಮೈ ತೊಳೆಯಲು ಉಪಯೋಗಿಸುವ ಸುವಾಸನೆಯ ನೀರುಗಳು ದೇಹ ಕಾಂತಿಯನ್ನು ಹೆಚ್ಚಿಸುವ ತೈಲಗಳು ಚಿತ್ರಗನ್ನಡಿಗಳು ಅಂಜನಗಳು ಸುವಾಸನೆಯ ಮಾಲೆಗಳು ಗಂಧಗಳು ಮುಖಚೂರ್ಣ ಮುಖಲೇಪನ ತೋಡ, ಜಡೆ ಬಿಲ್ಲೆ ಅಂದಚಂದವಾದ ಬೆತ್ತ ಅಲಂಕಾರದಿಂದ ಕೂಡಿದ ಚೀಲಗಳು, ಅಲಂಕೃತವಾದ ಕತ್ತಿಯ ಒರೆಗಳು, ಸುಂದರವಾದ ಛತ್ರಿ, ಕಸೂತಿ ಕೆಲಸ ಮಾಡಿದ ಜೋಡಗಳು, ಉಷ್ಣೀಶಗಳು, ರತ್ನ ಖಚಿತ ಕಿರೀಟಗಳು, ಚಾಮರಗಳು, ಬೆಲೆಯುಳ್ಳ ಶ್ವೇತವಸ್ತುಗಳು, ಇಂಥ ಅಲಂಕಾರ ವಸ್ತುಗಳಾವುವನ್ನು ಸಮಣ ಗೋತಮರು ಉಪಯೋಗಿಸುವುದನ್ನೇ ತೊರೆದಿದ್ದಾರೆ.” ಭಿಕ್ಷುಗಳೇ, ಸಾಮಾನ್ಯನೊಬ್ಬನು ತಥಾಗತನನ್ನು ಸ್ತುತಿಸುವಾಗ ಅವನನ್ನು ಹೀಗೆ ವರ್ಣಿಸುತ್ತಾನೆ.
“, ಜನರು ಶ್ರದ್ಧೆಯಿಂದ ನೀಡಿದ ಆಹಾರಗಳನ್ನು ತಿಂದು ಬದುಕುವ ಸಮಣ ಬ್ರಾಹ್ಮಣರಲ್ಲಿ ಕೆಲವರು ನೀಚಕಥೆಗಳನ್ನು ಹೇಳುವುದರಲ್ಲಿ ಮತ್ತು ಕೇಳುವುದರಲ್ಲಿ ಅನುರಕ್ತರಾಗುತ್ತಾರೆ. ಅಂಥ ನೀಚಕಥೆಗಳು ಯಾವುವೆಂದರೆ: ರಾಜಕಥೆ, ಚೋರಕಥೆ, ಮಹಾ ಮಂತ್ರಿಗಳ ಕಥೆ, ಸೈನ್ಯಗಳ ಕಥೆ, ಭಯವನ್ನು ಹುಟ್ಟಿಸುವ ಕಥೆ, ಯುದ್ಧ ಕಥೆ, ಅನ್ನಕ್ಕೆ ಸಂಬಂಧಿಸಿದ ಕಥೆ, ಪಾನಕ್ಕೆ ಸಂಬಂಧಿಸಿದ ಕಥೆ, ಬಟ್ಟೆಗಳಿಗೆ ಸಂಬಂಧಿಸಿದ ಕಥೆ, ಗಂಧಗಳಿಗೆ ಸಂಬಂಧಿಸಿದ ಕಥೆ, ನೆಂಟರಿಗೆ ಸಂಬಂಧಿಸಿದ ಕಥೆ, ಯಾನಗಳಿಗೆ ಸಂಬಂಧಿಸಿದ ಕಥೆ, ಹಳ್ಳಿಗಳ ಕಥೆ, ಪಟ್ಟಣಗಳ ಕಥೆ, ನಗರಗಳ ಕಥೆ, ಜನಪದ ಕಥೆ, ಸ್ತ್ರೀಯರಿಗೆ ಸಂಬಂಧಿಸಿದ ಕಥೆ, ಪುರುಷರಿಗೆ ಸಂಬಂಧಿಸಿದ ಕಥೆ, ಶೂರರ ಕಥೆ, ಬೀದಿಯ ಮಾತು, ಬಾವಿಯ ಬಳಿಯ ಮಾತುಕಥೆ, ಸತ್ತು ಪ್ರೇತಗಳಾಗಿರುವವ ಕಥೆ, ತಮಗೆ ಏನೇನೂ ಸಂಬಂಧಿಸಿದವರ ಕಥೆ, ಲೌಕಿಕ ವಿಚಾರಗಳು, ಸಮುದ್ರಯಾನವನ್ನು ಕುರಿತ ಕಥೆ, ಆಗು-ಹೋಗುಗಳ ಕುರಿತ ವಿಚಾರ, ಇಂಥ ನೀಚಕಥೆಗಳನ್ನು ಕೇಳುವುದರಲ್ಲಾಗಲೀ ಹೇಳುವುದರಲ್ಲಾಗಲೀ ಸಮಣ ಗೋತಮರು ತೊಡಗುವುದನ್ನೇ ತೊರೆದಿದ್ದಾರೆ.” ಭಿಕ್ಷುಗಳೇ, ಸಮಾನ್ಯನೊಬ್ಬನು ತಥಾಗತನನ್ನು ಸ್ತುತಿಸುವಾಗ ಅವನನ್ನು ಹೀಗೆ ವರ್ಣಿಸುತ್ತಾನೆ.
18 “ಜನರು ಶ್ರದ್ಧೆಯಿಂದ ನೀಡಿದ ಆಹಾರಗಳನ್ನು ತಿಂದು ಬದುಕುವ ಸಮಣ ಬ್ರಾಹ್ಮಣರಲ್ಲಿ ಕೆಲವರು ವಾದ ವಿವಾದಗಳಲ್ಲಿ ಅನುರುಕ್ತರಾಗುತ್ತಾರೆ. ಅಂಥ ವಾದ ವಿವಾದಗಳು ಹೇಗಿರುತ್ತವೆಂದರೆ- ನಿನಗೆ ಧಮ್ಮ ವಿನಯಗಳು ತಿಳಿಯದು, ನಾನು ಈ ಧಮ್ಮ ವಿನಯಗಳನ್ನು ತಿಳಿದುಕೊಂಡಿದ್ದೇನೆ. ಮಿಥ್ಯಾ ಪಥದಲ್ಲಿ ಹೋಗುತ್ತಿರುವ ನಿನಗೆ ಧಮ್ಮ ವಿನಯಗಳು ಹೇಗೆ ತಿಳಿದಾವು? ನಾನು ಸರಿಯಾದ ದಾರಿಯಲ್ಲಿ ಹೋಗುತ್ತಿರುವವನು. ನನ್ನ ನಿಲುವು ಸರಿ. ನಿನ್ನ ನಿಲುವು ಸರಿಯಲ್ಲ ಮೊದಲು ಹೇಳ ಬೇಕಾದುದನ್ನು ನೀನು ಆಮೇಲೆ ಹೇಳುತ್ತೀಯೆ. ಆಮೇಲೆ ಹೇಳಬೇಕಾದುದನ್ನು ಮೊದಲೇ ಹೇಳು ಬಿಡುತ್ತೀಯೆ. ನಿನ್ನದು ವಕ್ರವಾದ ಮಾರ್ಗ ಮತ್ತು ವಿರುದ್ಧವಾದ ವಾದದಲ್ಲಿ ಆರೋಪಿತನಾಗಿದ್ದು ನೀನು ನಿಗ್ರಹಿತನಾಗಿದ್ದೀಯೆ. ನೀನು ಸಿಕ್ಕಿಕೊಂಡಿರುವ ಇಕ್ಕಟ್ಟನಿಂದ ತಪ್ಪಿಸಿಕೋ. ಸರಿಯಾಗಿ ಹೇಳುವುದನ್ನು ಅಥವಾ ಇದ್ದುದನ್ನು ಇದ್ದಹಾಗೆ ಹೇಳುವವನಾಗು. ಇಂಥ ವಾದ ವಿವಾದಗಳಲ್ಲಿ ಸಮಣ ಗೋತಮರು ತೊಡಗುವುದನ್ನೇ ತೊರೆದಿದ್ದಾರೆ. ಭಿಕ್ಷುಗಳೇ, ಸಾಮಾನ್ಯನೊಬ್ಬನು ತಥಾಗತನನ್ನು ಸ್ತುತಿಸುವಾಗ ಅವನನ್ನು ಹೀಗೆ ವರ್ಣಿಸುತ್ತಾನೆ.
“ಜನರು ಶ್ರದ್ಧೆಯಿಂದ ನೀಡಿದ ಆಹಾರಗಳನ್ನು ತಿಂದು ಬದುಕುವ ಸಮಣ ಬ್ರಾಹ್ಮಣರಲ್ಲಿ ಕೆಲವರು ದೂತರೆ ಅಥವಾ ಓಲೆಕಾರರ ಕೆಲಸದಲ್ಲಿ ಅನುರಕ್ತರಾಗುತ್ತಾರೆ. ಅಂಥ ಕೆಲಸಗಳು ಹೇಗಿರುತ್ತವೆಂದರೆ - ರಾಜನ, ರಾಜನ ಮಂತ್ರಿಯ, ಕ್ಷತ್ರಿಯರ, ಬ್ರಾಹ್ಮಣರ, ಗೃಹಸ್ಥರ, ರಾಜಕುಮಾರರ ಅಪ್ಪಣೆಯ ಮಾತುಗಳನ್ನು ಪಾಲಿಸುವುದಾಗಿರುತ್ತವೆ. ಇಲ್ಲಿ ಹೋಗು ಅಲ್ಲಿ ಹೋಗು, ಇದನ್ನು ಅಲ್ಲಿಗೆ ತೆಗೆದುಕೊಂಡು ಹೋಗು, ಅದನ್ನು ತಾ ಎಂದಾಗ ಅವನ್ನು ಪಾಲಿಸುವ ಕೆಲಸವಾಗಿರುತ್ತವೆ. ಇಂಥ ದೂತರ ಅಥವಾ ಓಲೆಕಾರರ ಕೆಲಸವನ್ನು ಸಮಣ ಗೋತಮರು ಮಾಡುವುದನ್ನೇ ತೊರೆದಿದ್ದಾರೆ.” ಭಿಕ್ಷುಗಳೇ, ಸಾಮಾನ್ಯನೊಬ್ಬನು ತಥಾಗತನನ್ನು ಸ್ತುತಿಸುವಾಗ ಅವನನ್ನು ಹೀಗೆ ವರ್ಣಿಸುತ್ತಾನೆ.
“ಜನರು ಶ್ರದ್ದೆಯಿಂದ ನೀಡಿದ ಆಹಾರಗಳನ್ನು ತಿಂದು ಬದುಕುವ ಸಮಣ ಬ್ರಾಹ್ಮಣರಲ್ಲಿ ಕೆಲವರು ಕುಹಕಿಗಳಾಗಿರುತ್ತಾರೆ, ಬಾಯಲ್ಲಿ ಒಳ್ಳೆಯ ಮಾತನ್ನೇ ಆಡುತ್ತಿರುತ್ತಾರೆ, ನಿಮಿತ್ತಗಳನ್ನು ಶಕುನಗಳನ್ನು ಅರ್ಥ ಮಾಡುವವರಾಗಿರುತ್ತಾರೆ, ಲಾಭದಿಂದ ಮತ್ತಷ್ಟು ಲಾಭವನ್ನು ಗಳಿಸುವವರಾಗಿರುತ್ತಾರೆ. ಇಂಥ ಕುಹಕತನ ಮತ್ತು ವಂಚನೆಗಳನ್ನು ಮಾಡುವುದನ್ನೇ ತೊರೆದಿರುವ ಸಮಣ ಗೋತಮರು.” - ಭಿಕ್ಷುಗಳೇ, ಸಾಮಾನ್ಯನೊಬ್ಬನು ತಥಾಗತನನ್ನು ಸ್ತುತಿಸುವಾಗ ಅವನನ್ನು ಹೀಗೆ ವರ್ಣಿಸುತ್ತಾನೆ.
ಇಲ್ಲಿಗೆ ಮಧ್ಯಮ ಶೀಲ ಮುಗಿಯಿತು.
ಮಹಾಶೀಲ
“ಜನರು ಶ್ರದ್ಧೆಯಿಂದ ನೀಡಿದ ಆಹಾರಗಳನ್ನು ತಿಂದು ಬದುಕುವ ಸಮಣ ಬ್ರಾಹ್ಮಣರಲ್ಲಿ ಕೆಲವರು ಬಗೆ ಬಗೆಯ ನೀಚ ವಿದ್ಯೆಗಳಿಂದ ಹಣವನ್ನು ಗಳಿಸಿ ಮಿಥ್ಯಾ ಜೀವನವನ್ನು ನಡೆಸುತ್ತಾರೆ. ಆ ನೀಚ ವಿದ್ಯೆಗಳಾವುವೆಂದರೆ: ಅಂಗ ರಚನೆಯನ್ನು ನೋಡಿ ಭವಿಷ್ಯ ಹೇಳುವುದು, ನಿಮಿತ್ತಗಳ ಅರ್ಥವನ್ನು ವಿವರಿಸುವುದು, ಅಸಾಧಾರಣ ಘಟನೆಗಳ ಅರ್ಥವನ್ನು ವಿವರಿಸುವುದು, ಸ್ವಪ್ನಗಳ ಅರ್ಥವನ್ನು ವಿವರಿಸುವುದು, ಕೈ ನೋಡುವುದು, ಇಲಿಗಳು ಕಚ್ಚಿದಾಗ ಆಗುವ ಆಕೃತಿಗಳನ್ನು ನೋಡಿ ಭವಿಷ್ಯ ಹೇಳುವುದು, ಅಗ್ನಿ ಹೋಮವನ್ನು ಮಾಡಿಸುವುದು, ದರ್ಭೆ ಹೋಮವನ್ನು ಮಾಡಿಸುವುದು, ಹೊಟ್ಟಿನ ಹೋಮವನ್ನು ಮಾಡಿಸುವುದು, ನುಚ್ಚಕ್ಕಿಯ ಹೋಮವನ್ನು ಮಾಡಿಸುವುದು, ಅಕ್ಕಿಯ ಹೋಮವನ್ನು ಮಾಡಿಸುವುದು, ತುಪ್ಪದ ಹೋಮವನ್ನು ಮಾಡಿಸುವುದು, ಎಣ್ಣೆಯ ಹೋಮವನ್ನು ಮಾಡಿಸುವುದು, ಮುಖ ಹೋಮವನ್ನು ಮಾಡಿಸುವುದು, ಮನುಷ್ಯನ ರಕ್ತದಿಂದ ಹೋಮ ಮಾಡಿಸುವುದು, ಲಾಭ ನಷ್ಟವಾಗುವುದನ್ನು ಕುರಿತು ಭವಿಷ್ಯ ಹೇಳುವುದು, ಮನೆಯ ಸನ್ನಿವೇಶ ಅಥವಾ ಅದರ ಕಟ್ಟಡದ ಶೈಲಿಯಿಂದ ಆಗಬಹುದಾದ ನಷ್ಟಗಳನ್ನು ಕುರಿತು ಭವಿಷ್ಯ ಹೇಳುವುದು, ಹೊಲ ಗದ್ದೆಗಳ ಬೇಸಾಯದಿಂದ ಆಗಬಹುದಾದ ಲಾಭ ನಷ್ಟವನ್ನು ಕುರಿತು ಭವಿಷ್ಯ ಹೇಳುವುದು, ಮಂಡಲಗಳನ್ನು ರಚಿಸುವುದು, ಭೂತಗಳನ್ನು ಓಡಿಸುತ್ತೇವೆಂದು ಹೇಳುವುದು, ಭೂಮಿಯಲ್ಲಿರುವ ನಿಧಿಯನ್ನು ತೆಗೆದು ಕೊಡುತ್ತೇವೆಂದು ಹೇಳುವುದು, ಹಾವಾಡಿಸುವುದು, ವಿಷ ಹಾಕುವ ವಿದ್ಯೆಯನ್ನು ಹೇಳಿಕೊಡುವುದು, (ಅಥವಾ ಮಾಡುವುದು) ಚೇಳುಗಳಿಂದ ಶತ್ರುಗಳನ್ನು ಕಡಿಸುವ ವಿದ್ಯೆಯನ್ನು ಹೇಳಿಕೊಡುವುದು, ಶತ್ರುಗಳನ್ನು ಇಲಿಗಳಿಂದ ಕಡಿಸುವ ವಿದ್ಯೆಯನ್ನು ಹೇಳಿಕೊಡುವುದು, ಕಾಗೆಗಳ ಸಹಾಯದಿಂದ ಭವಿಷ್ಯ ಹೇಳುವುದು, ಹಕ್ಕಿಗಳ ಸಹಾಯದಿಂದ ಭವಿಷ್ಯ ಹೇಳುವುದು, ನಕ್ಷತ್ರ ಗ್ರಹಗಳ ಚಲನೆಯಿಂದ ಭವಿಷ್ಯ ಹೇಳುವುದು, ಶರಗಳನ್ನು ಬಳಸುವ ವಿದ್ಯೆಯನ್ನು ಹೇಳಿ ಕೊಡುವುದು, ಮೃಗಗಳ ಕೂಗುಗಳನ್ನು ಅರ್ಥಮಾಡುವುದು. ಇಂಥ ನೀಚ ವಿದ್ಯೆಗಳ ಮಿಥ್ಯಾ ಜೀವನವನ್ನು ಸಮಣ ಗೋತಮರು ನಡೆಸುವುದನ್ನೇ ತೊರೆದಿದ್ದಾರೆ.” ಭಿಕ್ಷುಗಳೇ, ಸಾಮಾನ್ಯನೊಬ್ಬನು ತಥಾಗತನನ್ನು ಸ್ತುತಿಸುವಾಗ ಅವನನ್ನು ಹೀಗೆ ವರ್ಣಿಸುತ್ತಾನೆ.
“ಜನರು ಶ್ರದ್ಧೆಯಿಂದ ನೀಡಿದ ಆಹಾರಗಳನ್ನು ತಿಂದು ಬದುಕುವ ಸಮಣ ಬ್ರಾಹ್ಮಣರಲ್ಲಿ ಕೆಲವರು ಬಗೆ ಬಗೆಯ ನೀಚ ವಿದ್ಯೆಗಳಿಂದ ಹಣವನ್ನು ಗಳಿಸಿ ಮಿಥ್ಯಾ ಜೀವನವನ್ನು ನಡೆಸುತ್ತಾರೆ. ಆ ನೀಚ ವಿದ್ಯೆಗಳು ಯಾವುವೆಂದರೆ: ಮಣಿ ಲಕ್ಷಣ, ವಸ್ತ್ರ ಲಕ್ಷಣ, ದಂಡಲಕ್ಷಣ, ಶಸ್ತ್ರ ಲಕ್ಷಣ, ಆಸ್ತ್ರಗಳ (ಉದ್ದವಾದ ಕತ್ತಿಗಳು) ಲಕ್ಷಣ, ಬಾಣಗಳ ಲಕ್ಷಣ, ಬಿಲ್ಲ್ಲುಗಳ ಲಕ್ಷಣ, ಆಯುಧ ಲಕ್ಷಣ, ಸ್ತ್ರೀ ಲಕ್ಷಣ, ಪುರುಷ ಲಕ್ಷಣ, ಕುಮಾರ ಲಕ್ಷಣ, ಕುಮಾರೀ ಲಕ್ಷಣ, ದಾಸ ಲಕ್ಷಣ, ದಾಸಿ ಲಕ್ಷಣ, ಹಸ್ತಿ ಲಕ್ಷಣ, ಅಶ್ವ ಲಕ್ಷಣ ಮಹಿಷ ಲಕ್ಷಣ, ವೃಷಭ ಲಕ್ಷಣ, ಅಜಲಕ್ಷಣ, ಕುರಿಗಳ ಲಕ್ಷಣ, ಹುಂಜಗಳ ಲಕ್ಷಣ, ಕವುಜುಗಹಕ್ಕಿ ಲಕ್ಷಣ, ಉಡಗಳ ಲಕ್ಷಣ, ಓತಿಕೇತ ಲಕ್ಷಣ ಆಮೆಗಳ ಲಕ್ಷಣ ಇತರ ಮೃಗಗಳ ಲಕ್ಷಣಗಳನ್ನು ವಿವರಿಸುವುದನ್ನು, ಇಂಥ ನೀಚ ವಿದ್ಯೆಗಳ ಮಿಥ್ಯಾ ಜೀವನವನ್ನು ಸಮಣ ಗೋತಮರು ನಡೆಸುವುದನ್ನೇ ತೊರೆದಿದ್ದಾರೆ”. ಭಿಕ್ಷುಗಳೇ, ಸಾಮಾನ್ಯನೊಬ್ಬನು ತಥಾಗತನನ್ನು ವರ್ಣಿಸುವಾಗ ಅವರನ್ನು ಹೀಗೆ ವರ್ಣಿಸುತ್ತಾನೆ.
“ಜನರು ಶ್ರದ್ಧೆಯಿಂದ ನೀಡಿದ ಆಹಾರಗಳನ್ನು ತಿಂದು ಬದಕುವ ಸಮಣ ಬ್ರಾಹ್ಮಣರಲ್ಲಿ ಕೆಲವರು ಬಗೆ ಬಗೆಯ ನೀಚ ವಿದ್ಯೆಗಳಿಂದ ಹಣವನ್ನು ಗಳಿಸಿ ಮಿಥ್ಯಾ ಜೀವನವನ್ನು ನಡೆಸುತ್ತಾರೆ. ಆ ನೀಚ ವಿದ್ಯೆಗಳು ಯಾವುವೆಂದರೆ: ರಾಜನು ದಂಡು ತೆಗೆದುಕೊಂಡು ಹೋಗುತ್ತಾನೆ, ರಾಜನು ಯುದ್ದದಿಂದ ಹಿಂತಿರುಗುತ್ತಾನೆ, ರಾಜನು ದಂಡೆತ್ತಿ ಹೋದಾಗ ಹೊರಗಿನ ರಾಜನು ಹಿಮ್ಮೆಟ್ಟುತ್ತಾನೆ, ಹೊರಗಿನ ರಾಜನು ಮುತ್ತಿಗೆ ಹಾಕಿದಂತೆ ನಮ್ಮ ರಾಜನು ಹಿಮ್ಮೆಟ್ಟುತ್ತಾನೆ, ನಮ್ಮ ರಾಜನು ಗೆಲ್ಲುತ್ತಾನೆ ಹೊರಗಿನ ರಾಜನು ಪರಾಜಯವನ್ನು ಹೊಂದುತ್ತಾನೆ, ಹೊರಗಿನ ರಾಜನು ಜಯವನ್ನು ಹೊಂದುತ್ತಾನೆ ನಮ್ಮ ರಾಜನು ಪರಾಜಯವನ್ನು ಅನುಭವಿಸುತ್ತಾನೆ, ಇವನಿಗೆ ಜಯ ಲಭಿಸುತ್ತದೆ ಇವನಿಗೆ ಪರಾಜಯ ಉಂಟಾಗುತ್ತದೆ ಎಂದು ಮುಂದಾಗುವ ಘಟನೆಗಳನ್ನು ಹೇಳುವುದು. ಇಂಥ ನೀಚ ವಿದ್ಯೆಗಳ ಮಿಥ್ಯಾ ಜೀವನವನ್ನು ಸಮಣ ಗೋತಮರು ನಡೆಸುವುದನ್ನೇ ತೊರೆದಿದ್ದಾರೆ”. ಭಿಕ್ಷುಗಳೇ ಸಾಮಾನ್ಯನೊಬ್ಬನು ತಥಾಗತನನ್ನು ಸ್ತುತಿಸುವಾಗ ಅವನನ್ನು ಹೀಗೆ ವರ್ಣಿಸುತ್ತಾನೆ.
“ಜನರು ಶ್ರದ್ದೆಯಿಂದ ನೀಡಿದ ಆಹಾರಗಳನ್ನು ತಿಂದು ಬದುಕುವ ಸಮಣ ಬ್ರಾಹ್ಮಣರಲ್ಲಿ ಕೆಲವರು ಬಗೆ ಬಗೆಯ ನೀಚ ವಿದ್ಯೆಗಳಿಂದ ಹಣವನ್ನು ಗಳಿಸಿ ಮಿಥ್ಯಾ ಜೀವನವನ್ನು ನಡೆಸುತ್ತಾರೆ. ಆ ನೀಚ ವಿದ್ಯೆಗಳು ಯಾವುವೆಂದರೆ: ಚಂದ್ರ ಗ್ರಹಣವಾಗುತ್ತದೆ, ಸೂರ್ಯಗ್ರಹಣವಾಗುತ್ತದೆ, ನಕ್ಷತ್ರ ಗ್ರಹಣವಾಗುತ್ತದೆ, ಚಂದ್ರ ಸೂರ್ಯರ ಚಲನೆಯು ಕ್ರಮವಾಗಿ ಆಗುತ್ತದೆ, ಚಂದ್ರ ಸೂರ್ಯರ ಚಲನೆಯಲ್ಲಿ ಕ್ರಮ ತಪ್ಪುತ್ತದೆ, ನಕ್ಷತ್ರಗಳ ಚಲನೆಯು ಕ್ರಮವಾಗಿ ಆಗುತ್ತದೆ, ನಕ್ಷತ್ರಗಳ ಚಲನೆಯಲ್ಲಿ ಕ್ರಮ ತಪ್ಪುತ್ತದೆ, ಉಲ್ಕಾಪಾತವಾಗುತ್ತದೆ, ಸಂಕ್ರಾಂತಿ ವೃತ್ತವು ಪ್ರಜ್ವಲಗೊಳ್ಳುತ್ತದೆ, ಭೂಕಂಪವಾಗುತ್ತದೆ, ದೇವದುಂದುಭಿ ಮೊಳಗುತ್ತದೆ, ಚಂದ್ರ ಸೂರ್ಯ ನಕ್ಷತ್ರಗಳು ಒಟ್ಟಿಗೇ ಮುಳುಗುತ್ತವೆ, ಅವುಗಳ ಕಾಂತಿಯು ಹೆಚ್ಚುತ್ತದೆ ಇಲ್ಲವೇ ಕಡಿಮೆಯಾಗುತ್ತದೆ, ಚಂದ್ರ ಗ್ರಹಣದ ಫಲ ಇದು, ಸೂರ್ಯಗ್ರಹಣದ ಫಲ ಇದು, ನಕ್ಷತ್ರ ಗ್ರಹಣದ ಫಲ ಇದು, ಚಂದ್ರ-ಸೂರ್ಯರ ಕ್ರಮ ಚಲನೆಯ ಫಲ ಇದು, ಚಂದ್ರ ಸೂರ್ಯರ ಚಲನೆಯ ಕ್ರಮ ತಪ್ಪುವುದರಿಂದಾಗುವ ಫಲ ಇದು, ನಕ್ಷತ್ರಗಳ ಕ್ರಮ ಚಲನೆಯ ಫಲ ಇದು, ನಕ್ಷತ್ರಗಳ ಅಕ್ರಮ ಚಲನೆಯ ಫಲ ಇದು, ಉಲ್ಕಾಪಾತಗಳಿಂದುಂಟಾಗುವ ಫಲ ಇದು, ಸಂಕ್ರಾಂತಿ ವೃತ್ತವು ಪ್ರಜ್ವಲಿಸುವುದರಿಂದಾಗುವ ಫಲ ಇದು, ಭೂಕಂಪದಿಂದಾಗುವ ಫಲ ಇದು, ದೇವದುಂದುಭಿಗಳು ಮೊಳಗುವುದರಿಂದಾಗುವ ಫಲ ಇದು, ಚಂದ್ರ ಸೂರ್ಯ ನಕ್ಷತ್ರಗಳು ಒಟ್ಟಿಗೆ ಸೇರಿ ಒಟ್ಟಿಗೇ ಮುಳುಗಿ ಅವುಗಳ ಕಾಂತಿಯಲ್ಲಿ ಹೆಚ್ಚು ಕಡಿಮೆಯಾದಾಗ ಆಗುವ ಫಲ ಇದು ಎಂದು ಆಕಾಶದಲ್ಲಾಗುವ ಘಟನೆಗಳನ್ನು ಹೇಳುವುದು, ಇಂಥ ನೀಚ ವಿದ್ಯೆಗಳ ಮಿಥ್ಯಾ ಜೀವನವನ್ನು ಸಮಣ ಗೋತಮರು ನಡೆಸುವುದನ್ನೇ ತೊರೆದಿದ್ದಾರೆ”. ಭಿಕ್ಷುಗಳೇ, ಸಾಮಾನ್ಯನೊಬ್ಬನು ತಥಾಗತನನ್ನು ಸ್ತುತಿಸುವಾಗ ಆವನನ್ನು ಹೀಗೆ ವರ್ಣಿಸುತ್ತಾನೆ.
“ಜನರು ಶ್ರದ್ಧೆಯಿಂದ ನೀಡಿದ ಆಹಾರಗಳನ್ನು ತಿಂದು ಬದುಕುವ ಸಮಣ ಬ್ರಾಹ್ಮಣರಲ್ಲಿ ಕೆಲವರು ಈ ಬಗೆಯ ನೀಚ ವಿದ್ಯೆಗಳಿಂದ ಹಣವನ್ನು ಗಳಿಸಿ ಮಿಥ್ಯಾ ಜೀವನವನ್ನು ನಡೆಸುತ್ತಾರೆ. ಆ ನೀಚ ವಿದ್ಯೆಗಳು ಯಾವುವೆಂದರೆ: ಸುವೃಷ್ಟಿಯಾಗುತ್ತದೆ, ದುರ್ವೃಷ್ಟಿಯಾಗುತ್ತದೆ, ಸುಭಿಕ್ಷ ಉಂಟಾಗುತ್ತದೆ, ದುರ್ಭಿಕ್ಷ ಬರುತ್ತದೆ, ಕ್ಷೇಮ ಉಂಟಾಗುತ್ತದೆ, ಭಯ ಉಂಟಾಗುತ್ತದೆ, ರೋಗವು ಬರುತ್ತದೆ, ಆರೋಗ್ಯ ಉಂಟಾಗುತ್ತದೆ ಎಂದು ಭವಿಷ್ಯ ನುಡಿಯುವುದು. ಮುದ್ರೆ ಗಣನೆಗಳನ್ನು ಉಪಯೋಗಿಸಿಕೊಂಡು ಮುಂದಾಗುವುದನ್ನು ಹೇಳುವುದು, ಲೋಕಕ್ಕೆ ಸಂಬಂಧಿಸಿದ ಕಾವ್ಯ-ಕತೆಗಳನ್ನು ಕಟ್ಟುವುದು. ಇಂಥ ನೀಚ ವಿದ್ಯೆಗಳ ಮಿಥ್ಯಾ ಜೀವನವನ್ನು ಸಮಣ ಗೋತಮರು ನಡೆಸುವುದನ್ನೇ ತೊರೆದಿದ್ದಾರೆ”. ಭಿಕ್ಷುಗಳೇ, ಸಾಮಾನ್ಯನೊಬ್ಬನು ತಥಾಗತನನ್ನು ಸ್ತುತಿಸುವಾಗ ಅವನನ್ನು ಹೀಗೆ ವರ್ಣಿಸುತ್ತಾನೆ.
“ಜನರು ಶ್ರದ್ಧೆಯಿಂದ ನೀಡಿದ ಆಹಾರಗಳನ್ನು ತಿಂದು ಬದುಕುವ ಸಮಣ ಬ್ರಾಹ್ಮಣರಲ್ಲಿ ಕೆಲವರು ಈ ಬಗೆಯ ನೀಚ ವಿದ್ಯೆಗಳಿಂದ ಹಣವನ್ನು ಗಳಿಸಿ ಮಿಥ್ಯಾ ಜೀವನವನ್ನು ನಡೆಸುತ್ತಾರೆ. ಆ ನೀಚ ವಿದ್ಯೆಗಳು ಯಾವುವೆಂದರೆ: ಮದುವೆಯ ನಿಶ್ಚಿತಾರ್ಥ ಮಾಡುವುದು, ವಿವಾಹವನ್ನು ಮಾಡಿಸುವುದು, ಲಗ್ನ ಕಟ್ಟುವುದು, ದಾಂಪತ್ಯ ವಿಚ್ಛೇದನವನ್ನು ಮಾಡಿಸುವುದು, ಹಣವನ್ನು ಕೂಡಿಡುವುದು, ಬಂಡವಾಳ ಹೂಡುವುದು, ಶುಭವಾಗಲು ಮಂತ್ರಗಳನ್ನು ಹೇಳುವುದು, ಕೆಟ್ಟದಾಗುವುದಕ್ಕೆ ಮಂತ್ರಗಳನ್ನು ಹೇಳುವುದು, ಗರ್ಭವು ನಿಲ್ಲದಂತೆ ಮಾಡುವುದು, ನಾಲಿಗೆಯನ್ನು ಕಟ್ಟಿಸುವುದು, ದವಡೆಯ ಚಲನೆಯನ್ನು ನಿಲ್ಲಿಸುವುದು, ಕೈಗಳು ಚಲಿಸದಂತೆ ಮಾಡುವುದು, ದವಡೆಯು ಕೆಲಸ ಮಾಡದಂತೆ ಅದನ್ನು ಸದಾ ಚಲಿಸುವಂತೆ ಮಾಡುವುದು, ಕಿವುಡನ್ನುಂಟುಮಾಡುವುದು, ಕನ್ನಡಿಯನ್ನು ನೋಡಿ ಪ್ರಶ್ನೆಗೆ ಉತ್ತರ ಹೇಳುವುದು, ಕುಮಾರಿಯ ಮೇಲೆ ದೆವ್ವ ಬರುವಂತೆ ಮಾಡಿ ಆಕೆಯಿಂದ ಪ್ರಶ್ನೆಗೆ ಉತ್ತರ ಹೇಳಿಸುವುದು, ಒಬ್ಬನ ಮೈಮೇಲೆ ದೇವತೆಯೊಂದು ಬರುವಂತೆ ಮಾಡಿ ಅವನ ಮೂಲಕ ಪ್ರಶ್ನೆಗೆ ಉತ್ತರ ಹೇಳಿಸುವುದು, ಸೂರ್ಯ ದೇವತೆಯು ಮೈ ಮೇಲೆ ಬರುವಂತೆ ಮಾಡುವುದು, ಬಾಯಿಯಿಂದ ಬೆಂಕಿಯುಗುಳುವುದು, ಸಿರಿಯು ಬರುವಂತೆ ಮಾಡುವುದು. ಇಂಥ ನೀಚ ವಿದ್ಯೆಗಳ ಮಿಥ್ಯಾ ಜೀವನವನ್ನು ಸಮಣ ಗೋತಮರು ನಡೆಸುವುದನ್ನೇ ತೊರೆದಿದ್ದಾರೆ”. ಭಿಕ್ಷುಗಳೇ, ಸಾಮಾನ್ಯನೊಬ್ಬನು ತಥಾಗತನ್ನು ಸ್ತುತಿಸುವಾಗ ಅವನನ್ನು ಹೀಗೆ ವರ್ಣಿಸುತ್ತಾನೆ.
“ಜನರು ಶ್ರದ್ಧೆಯಿಂದ ನೀಡಿದ ಆಹಾರಗಳನ್ನು ತಿಂದು ಬದುಕುವ ಸಮಣ ಬ್ರಾಹ್ಮಣರಲ್ಲಿ ಕೆಲವರು ನೀಚ ವಿದ್ಯೆಗಳಿಂದ ಹಣವನ್ನು ಗಳಿಸಿ ಮಿಥ್ಯಾ ಜೀವನವನ್ನು ನಡೆಸುತ್ತಾರೆ. ಆ ನೀಚ ವಿದ್ಯೆಗಳು ಯಾವುವೆಂದರೆ: ಶಾಂತಿ ಕರ್ಮಗಳನ್ನು ಮಾಡಿಸುವುದು, ದೇವತೆಗಳನ್ನೊಲಿಸಲು ಪೂಜೆಗಳನ್ನು ಮಾಡಿಸುವುದು, ಭೂತಗಳನ್ನೊಲಿಸಿಕೊಳ್ಳಲು ಪೂಜೆಗಳನ್ನು ಮಾಡಿಸುವುದು, ನೆಲದಲ್ಲಿ ಹೂತಿರುವ ನಿಧಿಯನ್ನು ತೆಗೆಯಲು ಪೂಜೆಯನ್ನು ಮಾಡಿಸುವುದು, ಪುರುಷತ್ವವನ್ನು ವೃದ್ಧಿಗೊಳಿಸುವುದು ಮತ್ತು ನಾಶಪಡಿಸುವುದು, ಭೂಮಿಪೂಜೆ ಮತ್ತು ಗೃಹ ಪ್ರವೇಶ ಮಾಡಿಸುವುದು, ರೋಗಗಳು ವಾಸಿಯಾಗಲು ಕರ್ಮ ಮಾಡಿಸುವುದು, ಆಚಮನ ಮಾಡಿಸುವುದು, ವಾಂತಿಯನ್ನು ಮಾಡಿಸುವುದು, ಸ್ನಾನ ಮಾಡಿಸುವುದು, ಅವಿಯ ಸ್ನಾನ ಮಾಡಿಸುವುದು, ವಮನವನ್ನು1 ಮಾಡಿಸುವುದು, ಭೇದಿಗೆ ಔಷಧಿ ಕೊಡುವುದು, ಕಫವು ಹೊರಗೆ ಬರುವಂತೆ ಮಾಡುವುದು, ಹೊಟ್ಟೆ ನೋವಿಗೆ ಮದ್ದು ಕೊಡುವುದು, ತಲೆನೋವಿಗೆ ಮದ್ದು ಕೊಡುವುದು, ಕಿವಿಗೆ ಉಪಯೋಗಿಸುವ ತೈಲವನ್ನು ಮಾಡುವುದು, ಕಣ್ಣು ತಂಪಾಗುವಂತೆ ಮದ್ದನ್ನು ಕೊಡುವುದು, ಮೂಗಿಗೆ ಮದ್ದನ್ನು ಕೊಡುವುದು, ಅಂಜನ ಮತ್ತು ವಿಶೇಷ ರೀತಿಯ ಅಂಜನಗಳನ್ನು ಮಾಡುವುದು, ಕಣ್ಣಿನ ಪೊರೆಯನ್ನು ತೆಗೆಯುವುದು, ಶಸ್ತ್ರಕ್ರಿಯೆಯನ್ನು ಮಾಡುವುದು, ಶಲ್ಯವನ್ನು ಉಪಯೋಗಿಸಿ ಚಿಕಿತ್ಸೆ ಮಾಡುವುದು, (ಪ್ರಾಯಶಃ ಕಾಲು ತೆಗೆಯುವುದು) ಮಕ್ಕಳ ರೋಗಗಳನ್ನು ವಾಸಿ ಮಾಡುವುದು, ಔಷಧಿಗಳನ್ನು ತಯಾರಿಸುವುದು, ಹೊಸ ಹೊಸ ಔಷಧಿಗಳನ್ನು ತಯಾರಿಸುವುದು, ಹೊಸ ಹೊಸ ಪ್ರಯೋಗಗಳನ್ನು ಮಾಡುವುದು. ಇಂಥ ನೀಚ ವಿದ್ಯೆಗಳ ಮಿಥ್ಯಾ ಜೀವನವನ್ನು ಸಮಣಗೋತಮರು ನಡೆಸುವುದನ್ನೇ ತೊರೆದಿದ್ದಾರೆ”. ಭಿಕ್ಷುಗಳೇ, ಸಾಮಾನ್ಯೊಬ್ಬನು ತಥಾಗತನನ್ನು ಸ್ತುತಿಸುವಾಗ ಅವನನ್ನು ಹೀಗೆ ವರ್ಣಿಸುತ್ತಾನೆ.
ಮಹಾಶೀಲ ಮುಗಿಯಿತು.
ಪೂರ್ವಕಾಲದ ಬಗ್ಗೆ
“ಭಿಕ್ಷುಗಳೇ, ಗಂಭೀರವೂ, ಕಷ್ಟಪಟ್ಟು ಅರಿತುಕೊಳ್ಳಬೇಕಾದುದೂ, ಕಷ್ಟಪಟ್ಟು ಪಡೆದು ಅನುಭವಿಸಬೇಕಾದುದೂ, ಶಾಂತಿಯನ್ನು ತರುವಂಥದೂ, ನೈಪುಣ್ಯ ಪೂರಿತವಾದುದೂ, ತರ್ಕಕ್ಕೆ ಮೀರಿದುದೂ, ಜಾಣರು ತಿಳಿಯಬೇಕಾದುದೂ, ತಥಾಗತನು ಸ್ವಪ್ರಯತ್ನದಿಂದ ಅರಿತು ಅನುಭವಿಸಿ ಪಡೆದು, ಪ್ರಕಾಶಪಡಿಸಿರುವಂಥದೂ ತಥಾಗತನನ್ನು ಸ್ತುತಿಸುವಾಗ ಮಾಡುವ ನಿಜವಾದ ವರ್ಣನೆಯಾಗಿರುವಂಥದೂ ಆದ ಧರ್ಮಗಳಿವೆ. ಗಂಭೀರವೂ, ಕಷ್ಟಪಟ್ಟು ಅರಿತುಕೊಳ್ಳಬೇದುದೂ, ಕಷ್ಟಪಟ್ಟು ಪಡೆದು ಅನುಭವಿಸಬೇಕಾದುದೂ, ಶಾಂತಿಯನ್ನು ತರುವಂಥದೂ, ತರ್ಕವನ್ನು ಮೀರಿದುದೂ, ನೈಪುಣ್ಯಪೂರಿತವಾದುದೂ, ಜಾಣರು ತಿಳಿಯಬೇಕಾದುದೂ, ತಥಾಗತನು ಸ್ವಪ್ರಯತ್ನದಿಂದ ತಿಳಿದು ಪ್ರಕಾಶಪಡಿಸಿರುವಂಥದೂ ತಥಾಗತನನ್ನು ಸ್ತುತಿಸುವಾಗ ಮಾಡುವ ನಿಜವಾದ ವರ್ಣನೆಯೇ ಆಗಿರುವಂಥದೂ ಆದ ಆ ಧರ್ಮಗಳಾವುವು?
“ಭಿಕ್ಷುಗಳೇ, ಪ್ರಪ್ರಥಮ ಕಲ್ಪದ ಬಗೆಗೆ ಪೂರ್ವ ವಿಶ್ವಾಸವುಳ್ಳವರಾಗಿ ಅದರ ಆರಂಭವನ್ನು ಅನೇಕ ವಾದಗಳ ಚೌಕಟ್ಟಿನಲ್ಲಿ ಹದಿನೆಂಟು ಆಧಾರಗಳಿಂದ ವಿವರಿಸುವ ಕೆಲವು ಸಮಣ ಬ್ರಾಹ್ಮಣರಿದ್ದಾರೆ. ಆ ಸಮಣ ಬ್ರಾಹ್ಮಣರು ಯಾವುದನ್ನು ಅವಲಂಬಿಸಿ ಪ್ರಪ್ರಥಮ ಕಲ್ಪದ ಬಗೆಗೆ ಪೂರ್ವದೃಷ್ಟಿಯನ್ನು ಅನೇಕ ವಾದಗಳ ಚೌಕಟ್ಟಿನಲ್ಲಿ ಯಾವ ಹದಿನೆಂಟು ಆಧಾರಗಳ ಮೇಲೆ ವಿವರಿಸುತ್ತಾರೆ?
ಶಾಶ್ವತ ವಾದ
“ಭಿಕ್ಷುಗಳೇ, ಶಾಶ್ವತವಾದಿಗಳಾದ ಕೆಲವು ಸಮಣ ಬ್ರಾಹ್ಮಣರು ನಾಲ್ಕು ಆಧಾರಗಳಿಂದ ಆತ್ಮದ ಮತ್ತು ಲೋಕದ ಶಾಶ್ವತತೆಯನ್ನು ವಿವರಿಸುತ್ತಾರೆ. ಆ ಸಮಣ ಬ್ರಾಹ್ಮಣರು. ಆತ್ಮವು ಶಾಶ್ವತ ಮತ್ತು ಲೋಕವು ಶಾಶ್ವತ ಎಂಬ ಶಾಶ್ವತವಾದವನ್ನು ಹೇಗೆ ಯಾವ ನಾಲ್ಕು ಆಧಾರಗಳಿಂದ ವಿವರಿಸುತ್ತಾರೆ?
ದಿಟ್ಠಿ-1 : 31. “ಭಿಕ್ಷುಗಳೇ, ಇಲ್ಲಿ ಒಬ್ಬ ಸಮಣನೋ ಅಥವಾ ಬ್ರಾಹ್ಮಣನೋ ಅತಿಶ್ರಮದಿಂದ ನಿರಂತರ ಯತ್ನದಿಂದ ದಿನ ದಿನದ ಅಭ್ಯಾಸದಿಂದ ಯಾವಾಗಲೂ ಎಚ್ಚರದಿಂದಿರುವವನಾಗಿ, ಸರಿಯಾದ ಮನಸ್ಸುಳ್ಳವನಾಗಿ, ಶಾಂತಚಿತ್ತನಾಗಿ, ಚೇತೋ ಸಮಾಧಿಯಲ್ಲಿದ್ದು, ಉದಯಿಸಿದ ಕ್ಲೇಷಗಳು ಇಲ್ಲದೆ ಚಿಂತನೆ ಮಾಡುತ್ತಾ ತನ್ನ ಅನೇಕ ಹಿಂದಿನ ಜನ್ಮಗಳ ವಿವರಗಳನ್ನು ನೆನಪಿಗೆ ತಂದುಕೊಳ್ಳಬಲ್ಲವನಾಗಿರುತ್ತಾನೆ. ಹೇಗೆಂದರೆ- ಒಂದು, ಎರಡು ಮೂರು, ನಾಲ್ಕು, ಐದು, ಹತ್ತು, ಇಪ್ಪತ್ತು, ಮೂವತ್ತು, ನಲವತ್ತು, ಐವತ್ತು, ನೂರು ಸಾವಿರ, ನೂರು ಸಾವಿರ ಅನೇಕ ಸಾವಿರ, ಅನೇಕ ಲಕ್ಷ ಜನ್ಮಗಳನ್ನು ನೆನಸಿಕೊಂಡು ‘ಅಲ್ಲಿ ಆ ಹೆಸರಿನಲ್ಲಿ ಆ ಗೋತ್ರದಲ್ಲಿ ಆ ವರ್ಣದಲ್ಲಿ ಹುಟ್ಟಿ ಆ ಆಹಾರವನ್ನು ತಿಂದು ಆ ಸುಖದು:ಖಗಳನ್ನು ಅನುಭವಿಸಿ ಅಷ್ಟು ವರ್ಷಗಳು ಬದುಕಿದೆ. ಅಲ್ಲಿಂದ ಚ್ಯುತನಾಗಿ ಮತ್ತಲ್ಲಿ ಹುಟ್ಟಿದೆ. ಅಲ್ಲಿ ಆ ಹೆಸರಿನಲ್ಲಿ, ಆ ಗೋತ್ರದಲ್ಲಿ ಆ ವರ್ಣದಲ್ಲಿ ಹುಟ್ಟಿದ ನಾನು ಆ ಆಹಾರವನ್ನು ತಿಂದು ಆ ಸುಖದು;ಖಗಳನ್ನು ಅನುಭವಿಸಿ ಅಷ್ಟು ವರ್ಷಗಳು ಬದುಕಿ ಇಂಥ ಕಡೆ ಹುಟ್ಟಿದೆ.’ ಹೀಗೆ ಅನೇಕ ವಿವರಗಳಿರುವ ಎಲ್ಲ ಅಂಶಗಳನ್ನು ಆತ ನೆನಪಿಗೆ ತಂದುಕೊಳ್ಳುತ್ತಾನೆ. ಅವನು ಹೀಗೆ ಅಂದುಕೊಳ್ಳುತ್ತಾನೆ-‘ಆತ್ಮವೂ ಶಾಶ್ವತ, ಲೋಕವೂ ಶಾಶ್ವತ, ಪರ್ವತದಂತೆ ಸ್ಥಿರ; ಗೋಪುರದಂತೆ ಭದ್ರ; ಜೀವಿಗಳು ಅಲ್ಲಿಂದಿಲ್ಲಿಗೆ ಚಲಿಸುತ್ತವೆ; ಓಡಾಡುತ್ತವೆ; ಬೀಳುತ್ತವೆ; ಮತ್ತು ಹುಟ್ಟುತ್ತವೆ ಇದು ಹೇಗೆ? ಅತಿಶ್ರಮದಿಂದ, ನಿರಂತರ ಯತ್ನದಿಂದ, ದಿನದಿನದ ಅಭ್ಯಾಸದಿಂದ, ಯಾವಾಗಲೂ ಎಚ್ಚರದಿಂದಿರುವವನಾಗಿ, ಸರಿಯಾದ ಮನಸ್ಸುಳ್ಳವನಾಗಿ, ಶಾಂತಚಿತ್ತನಾಗಿ, ಚೇತೋ ಸಮಾಧಿಯಲ್ಲಿದ್ದು, ಅನೇಕ ಜನ್ಮಗಳ ವಿವರಗಳನ್ನು ನೆನಪಿಗೆ ತಂದುಕೊಳ್ಳುವವನಾಗಿದ್ದೇನೆ. ಹೇಗೆಂದರೆ- ಒಂದು ಎರಡು ಮೂರು ನಾಲ್ಕು ಐದು ಹತ್ತು ಇಪ್ಪತ್ತು ಮೂವತ್ತು ನಲವತ್ತು ಐವತ್ತು ನೂರು ಸಾವಿರ ನೂರು ಸಾವಿರ ಅನೇಕ ಸಾವಿರ ಅನೇಕ ಲಕ್ಷ ಜನ್ಮಗಳನ್ನು ಜ್ಞಾಪಿಸಿಕೊಳ್ಳುತ್ತೇನೆ. ಅಲ್ಲಿ ಆ ಹೆಸರಿನಲ್ಲಿ ಆ ಗೋತ್ರದಲ್ಲಿ ಆ ವರ್ಣದಲ್ಲಿ ಹುಟ್ಟಿ ಆ ಆಹಾರವನ್ನು ತಿಂದು ಅಷ್ಟು ವರ್ಷಗಳು ಬದುಕಿ, ಅಲ್ಲಿಂದ ಚ್ಯುತನಾಗಿ ಅಲ್ಲಿ ಹುಟ್ಟಿದೆ. ಆ ಹೆಸರಿನಲ್ಲಿ ಆ ಗೋತ್ರದಲ್ಲಿ ಹುಟ್ಟಿ ಆ ಆಹಾರವನ್ನು ತಿಂದು, ಆ ಸುಖದುಃಖಗಳನ್ನು ಅನುಭವಿಸಿ, ಅಷ್ಟು ವರ್ಷಗಳು ಬದುಕಿ, ಅಲ್ಲಿಂದ ಚ್ಯುತನಾಗಿ ಇಲ್ಲಿ ಹುಟ್ಟಿದೆ. ಹೀಗೆ ಹಿಂದಿನ ಜನ್ಮಗಳ ಎಲ್ಲ ಅಂಶಗಳನ್ನು,ಎಲ್ಲ ವಿವರಗಳನ್ನೂ ಜ್ಞಾಪಿಸಿಕೊಳ್ಳಬಲ್ಲೆ. ಇವುಗಳಿಂದ ನನಗೆ ಆತ್ಮವೂ ಶಾಶ್ವತ ಲೋಕವೂ ಶಾಶ್ವತ; ಪರ್ವತದಂತೆ ಸ್ಥಿರ; ಗೋಪುರದಂತೆ ಭದ್ರ; ಅಲ್ಲಿಂದಿಲ್ಲಿಗೆ ಚಲಿಸಿ ಓಡಾಡುವ ಜೀವಿಗಳು ಅಲ್ಲಿ ಬಿದ್ದು ಇಲ್ಲಿ ಹುಟ್ಟುತ್ತವೆ ಎಂಬುದು ಗೊತ್ತಾಗಿದೆ. ಆದುದರಿಂದ ಆತ್ಮ ಮತ್ತು ಲೋಕಗಳು ಶಾಶ್ವತ’ ಭಿಕ್ಷುಗಳೇ, ಶಾಶ್ವತವಾದಿಗಳಾದ ಸಮಣ ಬ್ರಾಹ್ಮಣರು ಆತ್ಮ ಮತ್ತು ಲೋಕದ ಶಾಶ್ವತತೆಯನ್ನೂ ಅದರ ಆರಂಭವನ್ನು ವಿವರಿಸಲು ಕೊಡುವ ಮೊದಲನೆ ಆಧಾರವು ಇದು.
ದಿಟ್ಠಿ-2 : 32. “ಭಿಕ್ಷುಗಳೇ, ಆತ್ಮವೂ ಶಾಶ್ವತ ಲೋಕವೂ ಶಾಶ್ವತ. ಅವುಗಳ ಆರಂಭ ಹೇಗೆ ಎಂಬುದನ್ನು ವಿವರಿಸಲು ಶಾಶ್ವತವಾದಿಗಳಾದ ಸಮಣ ಬ್ರಾಹ್ಮಣರು ಕೊಡುವ ಎರಡನೆಯ ಆದಾರವು ಯಾವುದು? ಭಿಕ್ಷುಗಳೇ, ಒಬ್ಬ ಸಮಣನೋ ಬ್ರಾಹ್ಮಣನೋ ಅತಿಶ್ರಮದಿಂದ ನಿರಂತರ ಯತ್ನದಿಂದ ದಿನ ದಿನದ ಅಭ್ಯಾಸದಿಂದ ಯಾವಾಗಲೂ ಎಚ್ಚರದಿಂದಿರುವನಾಗಿ, ಸರಿಯಾದ ಮನಸ್ಸುಳ್ಳವವನಾಗಿ, ಶಾಂತಚಿತ್ತನಾಗಿ, ಚೇತೋ ಸಮಾಧಿಯಲ್ಲಿದ್ದು, ಚಿಂತನೆ ಮಾಡುತ್ತಾ ತನ್ನ ಅನೇಕ ಹಿಂದಿನ ಜನ್ಮಗಳ ವಿವರಗಳನ್ನು ನೆನಪಿಗೆ ತಂದುಕೊಳ್ಳಬಲ್ಲವನಾಗಿರುತ್ತಾನೆ. ಹೇಗೆಂದರೆ ಒಂದು, ಎರಡು, ಮೂರು, ನಾಲ್ಕು ಐದು, ಹತ್ತು ಸಂವಟ್ಟವಿವಿಟ್ಟಗಳನ್ನು2 ನೆನಪಿಗೆ ತಂದುಕೊಳ್ಳುತ್ತಾನೆ. ಅಲ್ಲಿ ಆ ಹೆಸರಿನಲ್ಲಿ ಆ ಗೋತ್ರದಲ್ಲಿ ಆ ವರ್ಣದಲ್ಲಿ ಹುಟ್ಟಿ ಆ ಆಹಾರವನ್ನು ತಿಂದು ಆ ಸುಖದು:ಖಗಳನ್ನು ಅನುಭವಿಸಿ ಅಷ್ಟು ವರ್ಷಗಳು ಬದುಕಿದೆ. ಅಲ್ಲಿಂದ ಚ್ಯುತನಾಗಿ ಮತ್ತಲ್ಲಿ ಹುಟ್ಟಿದೆ. ಆಲ್ಲಿ ಆ ಹೆಸರಿನಲ್ಲಿ ಆ ಗೋತ್ರದಲ್ಲಿ ಆ ವರ್ಣದಲ್ಲಿ ಹುಟ್ಟಿ ಆ ಆಹಾರವನ್ನು ತಿಂದು ಆ ಸುಖದು:ಖಗಳನ್ನು ಅನುಭವಿಸಿ ಅಷ್ಟು ವರ್ಷಗಳು ಬದುಕಿದೆ. ಅಲ್ಲಿಂದ ಚ್ಯುತನಾಗಿ ಇಲ್ಲಿ ಹುಟ್ಟಿದೆ. ಹೀಗೆ ಅನೇಕ ವಿವರಗಳಿರುವ ಹಿಂದಿನ ಜನ್ಮಗಳ ಎಲ್ಲಾ ಅಂಶಗಳನ್ನು ಆತ ನೆನಪಿಗೆ ತಂದುಕೊಳ್ಳುತ್ತಾನೆ. ಅವನು ಹೀಗೆ ಅಂದು ಕೊಳ್ಳುತ್ತಾನೆ - ‘ಆತ್ಮವು ಶಾಶ್ವ್ವತ ಲೋಕವು ಶಾಶ್ವತ ಪರ್ವತದಂತೆ ಸ್ಥಿರ, ಗೋಪುರದಂತೆ ಭದ್ರ, ಜೀವಿಗಳು ಅಲ್ಲಿಂದಲ್ಲಿಗೆ ಚಲಿಸುತ್ತವೆ, ಹೋರಾಡುತ್ತವೆ, ಬೀಳುತ್ತವೆ ಮತ್ತೆ ಹುಟ್ಟುತ್ತವೆ, ಇದು ಹೇಗೆ? ಅತಿ ಶ್ರಮದಿಂದ ನಿರಂತರ ಯತ್ನದಿಂದ ದಿನದಿನದ ಅಭ್ಯಾಸದಿಂದ ಯಾವಾಗಲೂ ಎಚ್ಚರದಿಂದಿರುವವನಾಗಿ ಸರಿಯಾದ ಮನಸ್ಸುವುಳ್ಳವವನಾಗಿ, ಶಾಂತ ಚಿಂತನಾಗಿ ಚಿತೋ ಸಮಾಧಿಯಲ್ಲಿದ್ದು, ಅನೇಕ ಹಿಂದಿನ ಜನ್ಮಗಳನ್ನು ನೆನಪಿಗೆ ನಾನು ತಂದುಕೊಳ್ಳುತ್ತೇನೆ. ಹೀಗೆಂದರೆ- ಒಂದು, ಎರಡು, ಮೂರು, ನಾಲ್ಕು ಐದು, ಹತ್ತು ಸಂವಟ್ಟವಿವಿಟ್ಟಗಳನ್ನು ನೆನಪಿಗೆ ಜ್ಞಾಪಿಸಿಕೊಳ್ಳುತ್ತೇನೆ. ಅಲ್ಲಿ ಆ ಹೆಸರಿನಲ್ಲಿ, ಆ ಗೋತ್ರದಲ್ಲಿ ಆ ವರ್ಣದಲ್ಲಿ ಹುಟ್ಟಿ ಆ ಆಹಾರವನ್ನು ತಿಂದು ಅಲ್ಲಿಂದ ಚ್ಯುತನಾಗಿ ಮತ್ತೆ ಇಲ್ಲಿ ಹುಟ್ಟಿದೆ. ಅಲ್ಲಿ ಆ ಗೋತ್ರದಲ್ಲಿ ಆ ವರ್ಣದಲ್ಲಿ ಹುಟ್ಟಿ ಆ ಆಹಾರವನ್ನು ತಿಂದು ಆ ಸುಖದುಃಖಗಳನ್ನು ಅನುಭವಿಸಿ ಅಷ್ಟು ವರ್ಷಗಳು ಬದುಕಿದೆ. ಅಲ್ಲಿಂದ ಚ್ಯುತನಾಗಿ ಇಲ್ಲಿ ಹುಟ್ಟಿದೆ. ಹೀಗೆ ಹಿಂದಿನ ಎಲ್ಲಾ ಅಂಶಗಳನ್ನು ಎಲ್ಲಾ ವಿವರಗಳನ್ನು ಜ್ಞಾಪಿಸಿಕೊಳ್ಳಬಲ್ಲೆ. ಇವುಗಳಿಂದ ನನಗೆ ಆತ್ಮವು ಶಾಶ್ವತ ಲೋಕವು ಶಾಶ್ವತ, ಪರ್ವತದಂತೆ ಸ್ಥಿರ, ಗೋಪುರದಂತೆ ಭದ್ರ. ಅಲ್ಲಿಂದಿಲ್ಲಿಗೆ ಚಲಿಸಿ ಹೋಡಾಡುವ ಜೀವಿಗಳು ಅಲ್ಲಿ ಬಿದ್ದು, ಇಲ್ಲಿ ಹುಟ್ಟುತ್ತವೆ ಎಂಬುವುದು ಗೊತ್ತಾಗಿದೆ. ಆದುದರಿಂದ ಆತ್ಮವು ಶಾಶ್ವತ ಲೋಕವು ಶಾಶ್ವತ’ ಭಿಕ್ಷುಗಳೇ ಶಾಶ್ವತವಾದಿಗಳಾದ ಕೆಲವು ಸಮಣ ಬ್ರಾಹ್ಮಣರು ಆತ್ಮದ ಮತ್ತು ಲೋಕದ ಶಾಶ್ವತತೆಯನ್ನು ಅವುಗಳ ಆರಂಭವನ್ನು ವಿವರಿಸಲು ಕೊಡುವ ಎರಡನೆಯ ಆಧಾರವು ಇದು.
ದಿಟ್ಠಿ-3 : 33. “ಭಿಕ್ಷುಗಳೇ, ಆತ್ಮವು ಶಾಶ್ವತ, ಲೋಕವು ಶಾಶ್ವತ ಅವುಗಳ ಆರಂಭ ಹೇಗೆ ಎಂಬುದನ್ನು ವಿವರಿಸಲು ಶಾಶ್ವತವಾದಿಗಳಾದ ಸಮಣ ಬ್ರಾಹ್ಮಣರು ಕೊಡುವ ಮೂರನೇಯ ಆಧಾರವು ಯಾವುದು. ಭಿಕ್ಷುಗಳೇ, ಒಬ್ಬ ಸಮಣನೋ, ಬ್ರಾಹ್ಮಣನೊ ಅತಿ ಶ್ರಮದಿಂದ ನಿರಂತರ ಯತ್ನದಿಂದ, ದಿನದಿನದ ಅಭ್ಯಾಸದಿಂದ ಯಾವಾಗಲೂ ಎಚ್ಚರದಿಂದರುವನಾಗಿ ಸರಿಯಾದ ಮನಸ್ಸುವುಳ್ಳವನಾಗಿ, ಶಾಂತ ಚಿತ್ತನಾಗಿ, ಚೇತೋ ಸಮಾಧಿಯಲ್ಲಿದ್ದು, ಚಿಂತನೆ ಮಾಡುತ್ತಾ ತನ್ನ ಹಿಂದಿನ ಜನ್ಮಗಳನ್ನು ನೆನಪಿಗೆ ತಂದುಕೊಳ್ಳಬಲ್ಲವನಾಗಿರುತ್ತಾನೆ. ಹೇಗೆಂದರೆ, ಹತ್ತು, ಇಪ್ಪತ್ತು, ಮೂವತ್ತು, ನಲವತ್ತು, ಜನನ-ಮರಣ ಚಕ್ರಗಳನ್ನು ನೆನಪಿಗೆ ತಂದುಕೊಳ್ಳುತ್ತಾನೆ. ‘ಅಲ್ಲಿ ಆ ಹೆಸರಿನಲ್ಲಿ, ಆ ವರ್ಣದಲ್ಲಿ ಹುಟ್ಟಿ ಆ ಆಹಾರವನ್ನು ತಿಂದು ಆ ಸುಖದು:ಖಗಳನ್ನು ಅನುಭವಿಸಿ ಅಷ್ಟು ವರ್ಷಗಳು ಬದುಕಿದೆ. ಅಲ್ಲಿಂದ ಚ್ಯುತನಾಗಿ ಮತ್ತೆ ಅಲ್ಲಿ ಹುಟ್ಟಿದೆ. ಅಲ್ಲಿ ಆ ಹೆಸರಿನಲ್ಲಿ, ಆ ಗೋತ್ರದಲ್ಲಿ ಆ ವರ್ಣದಲ್ಲಿ ಹುಟ್ಟಿ ಆ ಆಹಾರವನ್ನು ತಿಂದು ಆ ಸುಖದುಃಖಗಳನ್ನು ಅನುಭವಿಸಿ ಅಷ್ಟು ವರ್ಷಗಳು ಬದುಕಿ ಇಲ್ಲಿ ಹುಟ್ಟಿದೆ’. ಹೀಗೆ ಅನೇಕ ವಿವರಗಳಿರುವ ಹಿಂದಿನ ಜನ್ಮಗಳ ಎಲ್ಲಾ ಅಂಶಗಳನ್ನು ನೆನಪಿಗೆ ತಂದುಕೊಳ್ಳುತ್ತಾನೆ. ಅವನು ಹೀಗೆ ಅಂದುಕೊಳ್ಳುತ್ತಾನೆ- ‘ಆತ್ಮವು ಶಾಶ್ವತ, ಲೋಕವು ಶಾಶ್ವತ, ಪರ್ವತದಂತೆ ಸ್ಥಿರ, ಗೋಪುರದಂತೆ ಭದ್ರ, ಜೀವಿಗಳು ಅಲ್ಲಿಂದಿಲ್ಲಿಗೆ ಚಲಿಸುತ್ತವೆ, ಹೋರಾಡುತ್ತವೆ, ಬೀಳುತ್ತವೆ ಮತ್ತೆ ಹುಟ್ಟುತ್ತವೆ. ಇದು ಹೇಗೆ? ಅತಿ ಶ್ರಮದಿಂದ ನಿರಂತರ ಯತ್ನದಿಂದ ದಿನದಿನದ ಅಭ್ಯಾಸದಿಂದ ಯಾವಾಗಲೂ ಎಚ್ಚರದಿಂದಿರುವವನಾಗಿ ಸರಿಯಾದ ಮನಸ್ಸುಳ್ಳವನಾಗಿ ಶಾಂತ ಚಿತ್ತನಾಗಿ ಚೇತೋ ಸಮಾದಿಯಲ್ಲಿದ್ದು, ಅನೇಕ ಹಿಂದಿನ ಜನ್ಮಗಳನ್ನು ನೆನಪಿಗೆ ತಂದುಕೊಳ್ಳುತ್ತೇನೆ. ಹೇಗೆಂದರೆ- ಹತ್ತು, ಇಪ್ಪತ್ತು, ಮುವತ್ತು, ನಲವತ್ತು ಜನನ-ಮರಣ ಚಕ್ರಗಳನ್ನು ನೆನಪಿಗೆ ತಂದುಕೊಳ್ಳುತ್ತಾನೆ. ಅಲ್ಲಿ ಆ ಹೆಸರಿನಲ್ಲಿ, ಆ ಗೋತ್ರದಲ್ಲಿ ಆ ವರ್ಣದಲ್ಲಿ ಹುಟ್ಟಿ ಆ ಆಹಾರವನ್ನು ತಿಂದು ಆ ಸುಖದು:ಖಗಳನ್ನು ಅನುಭವಿಸಿ ಅಷ್ಟು ವರ್ಷಗಳು ಬದುಕಿದೆ. ಅಲ್ಲಿಂದ ಚ್ಯುತನಾಗಿ ಮತ್ತೆ ಅಲ್ಲಿ ಹುಟ್ಟಿದೆ. ಅಲ್ಲಿ ಆ ಹೆಸರಿನಲ್ಲಿ, ಆ ಗೋತ್ರದಲ್ಲಿ ಆ ವರ್ಣದಲ್ಲಿ ಹುಟ್ಟಿ ಆ ಆಹಾರವನ್ನು ತಿಂದು ಆ ಸುಖದು:ಖಗಳನ್ನು ಅನುಭವಿಸಿ ಅಷ್ಟು ವರ್ಷ ಬದುಕಿದೆ. ಅಲ್ಲಿಂದ ಚ್ಯುತನಾಗಿ ಇಲ್ಲಿ ಹುಟ್ಟಿದೆ. ಹೀಗೆ ಅನೇಕ ವಿವರಗಳಿರುವ ಹಿಂದಿನ ಜನ್ಮಗಳನ್ನು ನೆನೆಪಿಗೆ ತಂದುಕೊಳ್ಳುತ್ತೇನೆ. ಇವುಗಳಿಂದ ನನಗೆ ಆತ್ಮವು ಶಾಶ್ವತ, ಲೋಕವು ಶಾಶ್ವತ; ಪರ್ವತದಂತೆ ಸ್ಥಿರ ಗೋಪುರದಂತೆ ಭದ್ರ, ಅಲ್ಲಿಂದಿಲ್ಲಿಗೆ ಚಲಿಸಿ ಹೋರಾಡುವ ಜೀವಿಗಳು ಅಲ್ಲಿ ಬಿದ್ದು ಇಲ್ಲಿ ಹುಟ್ಟುತ್ತವೆ ಎಂಬುದು ಗೊತ್ತಾಗಿದೆ.” ಭಿಕ್ಷುಗಳೇ, ಶಾಶ್ವತವಾದಿಗಳಾದ ಕೆಲವು ಸಮಣ ಬ್ರಾಹ್ಮಣರು ಆತ್ಮದ ಮತ್ತು ಲೋಕದ ಶಾಶ್ವತತೆಯನ್ನು ಅವುಗಳ ಆರಂಭವನ್ನು ವಿವರಿಸಲು ಕೊಡುವ ಮೂರನೆಯ ಆಧಾರವು ಇದು.
ದಿಟ್ಠಿ-4 : 34. “ಭಿಕ್ಷುಗಳೇ, ಆತ್ಮವು ಶಾಶ್ವತ, ಲೋಕವು ಶಾಶ್ವತ ಅವುಗಳ ಆರಂಭ ಹೇಗೆ ಎಂಬುವುದನ್ನು ವಿವರಿಸಲು ಶಾಶ್ವತವಾದಿಗಳಾದ ಸಮಣ ಬ್ರಾಹ್ಮಣರು ಕೊಡುವ ನಾಲ್ಕನೆಯ ಆಧಾರವು ಯಾವುದು? ಭಿಕ್ಷುಗಳೇ, ಒಬ್ಬ ಸಮಣನೋ, ಬ್ರಾಹ್ಮಣನೋ ತರ್ಕವಾದಿಯೋ, ಮೀಮಾಂಸಿಯೋ ಆಗಿರುತ್ತಾನೆ. ಅವನು ತರ್ಕ ಮತ್ತು ಮೀಮಾಂಸಗಳನ್ನೇ ಅನುಸರಿಸಿ ತಾನೇ ಈ ನಿರ್ಧಾರಕ್ಕೆ ಬರುತ್ತಾನೆ- ‘ಆತ್ಮವೂ ಶಾಶ್ವತ, ಲೋಕವೂ ಶಾಶ್ವತ, ಪರ್ವತದಂತೆ ಸ್ಥಿರ, ಗೋಪುರದಂತೆ ಭದ್ರ, ಜೀವಿಗಳು ಅಲ್ಲಿಂದಿಲ್ಲಿಗೆ ಚಲಿಸುತ್ತವೆ, ಓಡಾಡುತ್ತವೆ, ಬೀಳುತ್ತವೆ ಮತ್ತೆ ಹುಟ್ಟುತ್ತವೆ ಹೀಗೆ ಅವು ಶಾಶ್ವತವೇ’ ಭಿಕ್ಷುಗಳೇ, ಶಾಶ್ವತವಾದಿಗಳಾದ ಕೆಲವು ಸಮಣ ಬ್ರಾಹ್ಮಣರು ಆತ್ಮದ ಮತ್ತು ಲೋಕದ ಶಾಶ್ವತತೆಯನ್ನು ಅವುಗಳ ಆರಂಭವನ್ನು ವಿವರಿಸಲು ಕೊಡುವ ನಾಲ್ಕನೆಯ ಆಧಾರವು ಇದು.
“ಆತ್ಮವೂ ಶಾಶ್ವತ, ಲೋಕವೂ ಶಾಶ್ವತ ಎಂಬುದನ್ನು ವಿವರಿಸಲು ಶಾಶ್ವತವಾದಿಗಳಾದ ಕೆಲವು ಸಮಣ ಬ್ರಾಹ್ಮಣರು ಕೊಡುವ ನಾಲ್ಕು ಆಧಾರಗಳು ಇವು. ಭಿಕ್ಷುಗಳೇ, ಆತ್ಮವೂ ಶಾಶ್ವತ, ಲೋಕವೂ ಶಾಶ್ವತ ಎಂದು ಹೇಳುವ ಶಾಶ್ವತವಾದಿಗಳಾದ ಸಮಣ ಬ್ರಾಹ್ಮಣರು ಯಾರೇ ಇರಲಿ ಅವರು ತಮ್ಮ ವಾದವನ್ನು ವಿವರಿಸಲು ಕೊಡುವ ಆಧಾರಗಳು ಈ ನಾಲ್ಕು ಮಾತ್ರ ಅಥವ ಇವುಗಳಲೊಂದು ಮಾತ್ರ, ಇವನ್ನು ಬಿಟ್ಟು ಯಾವುದು ಇಲ್ಲ.”
“ಭಿಕ್ಷುಗಳೇ, ಹಿಂದೆ ಹೇಳಿರುವುದೆಲ್ಲವನ್ನೂ ತಥಾಗತನು ಸ್ವಷ್ಟವಾಗಿ ಅರಿತ್ತಿದ್ದಾನೆ. ‘ಈ ರೀತಿ ಗ್ರಹಿಸಿ ಈ ರೀತಿ ಅರ್ಥ ಮಾಡಿಕೊಂಡಿರುವ ಮಿಥ್ಯಾದೃಷ್ಠಿಯುಳ್ಳವರು ಪುನರ್ ಜನ್ಮಕ್ಕೆ ಕಾರಣವಾದ ಸ್ಥಿತಿಯನ್ನು ಪಡೆಯುತ್ತಾರೆ’ ಎಂಬುವುದೂ ತಥಾಗತನಿಗೆ ಸ್ವಷ್ಟವಾಗಿ ಗೊತ್ತಿದೆ. ಅದನ್ನು ಮೀರಿದ ಸತ್ಯಗಳು ಅವನಿಗೆ ಗೊತ್ತು. ಆದರೆ, ಅವನು ಇವಾವುದಕ್ಕೂ ಅಂಟಿಕೊಳ್ಳುವುದಿಲ್ಲ. ಇದಕ್ಕೆ ಅಂಟಿಕೊಳ್ಳದ ಅವನು ತಾನೇ ಬಿಡುಗಡೆಯ ಬಗೆಯನ್ನು ಅರಿತ್ತಿದ್ದಾನೆ. ಸಂವೇದನೆಗಳನ್ನು ಅವುಗಳು ಹುಟ್ಟುವ ಮತ್ತು ನಶಿಸುವ ಕಾರಣಗಳನ್ನು, ಅವುಗಳ ರುಚಿಯನ್ನು, ಅವುಗಳ ಅಪಾಯವನ್ನು, ಅವುಗಳನ್ನು ತ್ಯಜಿಸುವುದನ್ನು ಯಥಾಪ್ರಕಾರವಾಗಿ ತಿಳಿದಿರುವ ತಥಾಗತನು ಅವುಗಳಿಂದ ಮುಕ್ತನಾಗಿದ್ದಾನೆ.
“ಭಿಕ್ಷುಗಳೇ, ತಥಾಗತನನ್ನು ಸುತ್ತಿಸುವಾಗ ಜನರು ಗಂಭೀರವೂ ಕಷ್ಟಪಟ್ಟು ಅರಿತುಕೊಳ್ಳಬೇಕಾದುದೂ, ಕಷ್ಟಪಟ್ಟು ಪಡೆದು ಅನುಭವಿಸಬೇಕಾದುದೂ, ಶಾಂತಿಯನ್ನು ತರುವಂಥದೂ, ನೈಪುಣ್ಯಪೂರಿತವಾದುದೂ, ತರ್ಕವನ್ನು ಮೀರಿದುದೂ, ಜಾಣರು ತಿಳಿಯಬೇಕಾದುದೂ. ತಥಾಗತನು ಸ್ವಪ್ರಯತ್ನದಿಂದ ಅರಿತು ಅನುಭವಿಸಿ ಪ್ರಕಾಶಪಡಿಸಿರುವಂತದೂ ಆದ ಧರ್ಮದ ವರ್ಣನೆಯನ್ನೇ ಮಾಡುತ್ತಾರೆ.
ಸೂತ್ರದ ಪ್ರಥಮ ಭಾಗ.
ಒಂದೇರೀತಿಯ ಶಾಶ್ವತವಾದ
“ಭಿಕ್ಷುಗಳೇ, ಆತ್ಮ ಮತ್ತು ಲೋಕದ ಶಾಶ್ವತತೆ ಮತ್ತು ಆಶಾಶ್ವತೆಗಳನ್ನು ನಾಲ್ಕು ಆಧಾರಗಳಿಂದ ವಿವರಿಸುವ ಕೆಲವು ಸಮಣ ಬ್ರಾಹ್ಮಣರಿದ್ದಾರೆ. ಆತ್ಮದ ಮತ್ತು ಲೋಕದ ಶಾಶ್ವತೆಗಳು ಮತ್ತು ಆಶಾಶ್ವತೆಗಳು ಯಾವುದನ್ನು ಅವಲಂಬಿಸಿವೆ, ಅವುಗಳ ಆರಂಭ ಹೇಗೆ ಎಂಬುದನ್ನು ವಿವರಿಸಲು ಆ ಸಮಣ ಬ್ರಾಹ್ಮಣರು ಕೊಡುವ ನಾಲ್ಕು ಆಧಾರಗಳು ಯಾವುವು?
“ಭಿಕ್ಷುಗಳೇ, ಬಹು ಕಾಲದ ಮೇಲೆ ಈ ಲೋಕವು ವಿಲೀನವಾಗುವ ಸಮಯವು ಬರುತ್ತದೆ. ವಿಲೀನವಾಗುತ್ತಿರುವ ಈ ಲೋಕದ ಜೀವಿಗಳು ‘ಆಭಸ್ಸರ’ ಎಂಬ ಬ್ರಹ್ಮಲೋಕದಲ್ಲಿ ಮರುಹುಟ್ಟುತ್ತವೆ. ಅವು ತಮ್ಮ ಲೋಕದಲ್ಲಿ ಮನೋಮಯಿಗಳಾಗಿ (ರೂಪರಹಿತರಾಗಿ) ಆನಂದ ಎಂಬ ಆಹಾರದಿಂದಲೇ ಬದುಕಬಲ್ಲ ಸ್ವಯಂ ಪ್ರತಿಭೆಯುಳ್ಳ ಅಂತರಿಕ್ಷದಲ್ಲಿ ಸಂಚರಿಸಬಲ್ಲ ಸುಭಗ (ಅದೃಷ್ಟವಂತ) ಜೀವಿಗಳಾಗಿರುತ್ತವೆ. ಅವು ಅದೇ ಸ್ಥಿತಿಯಲ್ಲಿಯೇ ಬಹು ಕಾಲದವರೆಗೆ ಇರುತ್ತವೆ.
ದಿಟ್ಠಿ-5 : 40. “ಭಿಕ್ಷುಗಳೇ, ಬಹು ಕಾಲದ ಮೇಲೆ ಈ ಲೋಕವು ವಿಕಾಸಗೊಳ್ಳುವ ಸಮಯ ಬರುತ್ತದೆ. ವಿಲೀನವಾಗುತ್ತಿರುವ ಆ ಲೋಕದಲ್ಲಿ ಶೂನ್ಯ ರೂಪದ ಬ್ರಹ್ಮ ವಿಮಾನವು ಹುಟ್ಟಿಕೊಳ್ಳುತ್ತದೆ. ಆಗ ಒಂದು ಜೀವಿಯು ಆಯುಸ್ಸು ಮುಗಿದಿದ್ದರಿಂದಲೋ, ಪುಣ್ಯವು ಮುಗಿದಿದ್ದರಿಂದಲೋ ಆಭಸ್ಸರ ಸ್ಥಿತಿಯಿಂದ ಪತನಹೊಂದಿ ಶೂನ್ಯ ರೂಪದ ಬ್ರಹ್ಮ ವಿಮಾನದಲ್ಲಿಯೇ ಹುಟ್ಟುತ್ತದೆ. ಅದು ಅಲ್ಲಿ ಮನೋಮಯವಾಗಿ ಆನಂದವೆಂಬ ಆಹಾರದಿಂದಲೇ ಬದುಕಿ ಸ್ವಯಂಪ್ರಭೆಯಿಂದ ಕೂಡಿ ಅಂತರಿಕ್ಷದಲ್ಲಿಯೇ ಚಲಿಸಿ ಸುಭಗ ಜೀವಿಯಾಗಿ ಬಹುಕಾಲ ಇರುತ್ತದೆ.
“ಭಿಕ್ಷುಗಳೇ, ಅಲ್ಲಿ ದೀರ್ಘಕಾಲ ಇರುವಾಗ ಅದರಲ್ಲಿ ಒಂದು ಅತೃಪ್ತಿಯು ಹುಟ್ಟಿಕೊಳ್ಳುತ್ತದೆ. ‘ಬೇರೆ ಜೀವಿಗಳು ಈ ಕಡೆಗೆ ಬರಲಿ’ ಎಂಬ ಬಯಕೆ ಬರುತ್ತದೆ. ಆಗ ಆಭಸ್ಸರ ಜೀವಿಗಳ ರೂಪದಲ್ಲಿರುವ ಜೀವಿಗಳು ಅಯಸ್ಸು ಮುಗಿದಿದ್ದರಿಂದಲೋ ಪುಣ್ಯವು ಮುಗಿದಿದ್ದರಿಂದಲೋ ಆ ಸ್ಥಿತಿಯಿಂದ ಪತನ ಹೊಂದಿ ಮೊದಲನೆಯ ಜೀವಿಯ ಸಹಚರರಾಗಿ ಬ್ರಹ್ಮ ವಿಮಾನದಲ್ಲಿ ಹುಟ್ಟುತ್ತವೆ. ಅವು ಮನೋಮಯಿಗಳಾಗಿ ಆನಂದ ಎಂಬ ಆಹಾರದಿಂದಲೇ ಬದಕಬಲ್ಲ ಸ್ವಯಂ ಪ್ರಭೇಯುಳ್ಳ ಅಂತರಿಕ್ಷದಲ್ಲಿಯೇ ಚಲಿಸಬಲ್ಲ ಸುಭಗ ಜೀವಿಗಳಾಗಿರುತ್ತವೆ. ದೀರ್ಘಕಾಲ ಅದೇ ಸ್ಥಿತಿಯಲ್ಲಿರುತ್ತವೆ.
“ಭಿಕ್ಷುಗಳೇ, ಮೊದಲು ಅಲ್ಲಿ ಹುಟ್ಟಿದ ಜೀವಿಯು ಹೀಗೆ ಭಾವಿಸಿಕೊಳ್ಳುತ್ತದೆ.- ನಾನು ಬ್ರಹ್ಮ: ಮಹಾ ಬ್ರಹ್ಮ: ಎಲ್ಲವನ್ನೂ ನೋಡಬಲ್ಲೆನು.; ಎಲ್ಲಕ್ಕೂ ಒಡೆಯ; ಎಲ್ಲಾ ಶಕ್ತಿಯನ್ನೂ ಹೊಂದಿರುವವ; ಈಶ್ವರ; ಕರ್ತ; ನಿರ್ಮಾಣ ಮಾಡಬಲ್ಲವ; ಎಲ್ಲಕ್ಕೂ ಶ್ರೇಷ್ಠನಾದವ; ಎಲ್ಲವನ್ನೂ ಗೆಲ್ಲಬಲ್ಲವ; ಎಲ್ಲವನ್ನೂ ವಶಪಡಿಸಿಕೊಳ್ಳಬಲ್ಲವ; ಎಲ್ಲರಿಗೂ ಪಿತ; ಈ ಜೀವಿಗಳೆಲ್ಲವೂ ನನ್ನಿಂದಲೇ ಆಗಿವೆ. ಹೀಗೆನ್ನಲು ಕಾರಣವೇನು? ಹಿಂದೊಮ್ಮೆ ನನಗೆ ಹೀಗೆನ್ನಿಸಿತು- ‘ ಎಲ್ಲಾ ಜೀವಿಗಳೂ ಇಲ್ಲಿಗೆ ಬರಲಿ. ನನ್ನ ಇಚ್ಚೆಯಂತೆ ಈ ಎಲ್ಲಾ ಜೀವಿಗಳೂ ಇಲ್ಲಿಗೆ ಬಂದಿವೆ.
“ಆಮೇಲೆ ಹುಟ್ಟಿದ ಜೀವಿಗಳು ಹೀಗೆ ಭಾವಿಸುತ್ತವೆ- ‘ಈತನೇ ಬ್ರಹ್ಮ; ಮಹಾ ಬ್ರಹ್ಮ; ಎಲ್ಲವನ್ನೂ ನೋಡಬಲ್ಲವನು ಎಲ್ಲಕ್ಕೂ ಒಡೆಯ; ಎಲ್ಲಾ ಶಕ್ತಿಯನ್ನೂ ಹೊಂದಿರುವವ; ಈಶ್ವರ; ಕರ್ತ; ನಿರ್ಮಾಣ ಮಾಡಬಲ್ಲವ; ಎಲ್ಲಕ್ಕೂ ಶ್ರೇಷ್ಠನಾದವ; ಎಲ್ಲವನ್ನೂ ಗೆಲ್ಲಬಲ್ಲವ; ಎಲ್ಲವನ್ನೂ ವಶಪಡಿಸಿಕೊಳ್ಳಬಲ್ಲವ; ಎಲ್ಲರಿಗೂ ಪಿತ; ನಾವೆಲ್ಲವೂ ಈ ಬ್ರಹ್ಮನಿಂದಲೇ ಆಗಿದ್ದೇವೆ; ಹೀಗೆನ್ನಲು ಕಾರಣವೇನು? ಈತ ನಮಗಿಂತ ಮೊದಲೇ ಇದ್ದವನು. ನಾವಾದರೋ ಆಮೇಲೆ ಹುಟ್ಟಿದವರು!
“ಭಿಕ್ಷುಗಳೇ, ಮೊದಲು ಹುಟ್ಟಿದ ಜೀವಿಯು ದೀರ್ಘವಾದ ಆಯಸ್ಸುಳ್ಳವನು ವರ್ಣವಂತ ಮತ್ತು ಮಾಹ ಶಕ್ತ. ಆಮೇಲೆ ಹುಟ್ಟಿದ ಜೀವಿಗಳು ಅಲ್ಪಾಯುಗಳು ದುರ್ವರ್ಣವುಳ್ಳವರು ಮತ್ತು ಅಲ್ಪವಾದ ಶಕ್ತಿಯುಳ್ಳವರು.
ದಿಟ್ಠಿ-6 : 44. “ಭಿಕ್ಷುಗಳೇ, ಈ ಸ್ಥಿತಿಯಲ್ಲಿರುವಾಗ ಬೇರೊಂದು ಜೀವಿಯು ಪತನಹೊಂದಿ ಇಲ್ಲಿ (ಮನುಷ್ಯ ಲೋಕಕ್ಕೆ) ಬರುತ್ತಾನೆ. ಇಲ್ಲಿಗೆ ಒಂದು ಗೃಹಸ್ಥ ಜೀವನವನ್ನು ನಡೆಸಿ ಅನಗಾರಿಕನಾಗಿ ಮನೆಯನ್ನು ತೊರೆಯುತ್ತಾನೆ. ಅತಿಶ್ರಮದಿಂದ ನಿರಂತರ ಯತ್ನದಿಂದ ದಿನ ದಿನದ ಅಭ್ಯಾಸದಿಂದ ಯಾವಾಗಲೂ ಎಚ್ಚರದಿಂದಿರುವವನಾಗಿ ಸರಿಯಾದ ಮನಸ್ಸುಳ್ಳವನಾಗಿ ಶಾಂತಚಿತ್ತನಾಗಿ ಚೇತೋಸಮಾಧಿಯಲ್ಲಿದ್ದು ಚಿಂತನೆ ಮಾಡುತ್ತ ಹಿಂದಿನ ಜನ್ಮವೊಂದನ್ನು ಮಾತ್ರ ನೆನಸಿಕೊಳ್ಳುವವನಾಗಿರುತ್ತಾನೆ. ಅದಕ್ಕಿಂತಲೂ ಇನ್ನೂ ಹಿಂದಿನ ಜನ್ಮಗಳನ್ನು ನೆನಪಿಗೆ ತಂದುಕೊಳ್ಳಲಾರ.
“ಅವನು ಹೀಗೆ ಅಂದು ಕೊಳ್ಳುತ್ತಾನೆ.- ‘ಇವನೇ ಬ್ರಹ್ಮನಾಗಿದ್ದಾನೆ ಮಹಾಬ್ರಹ್ಮನಾಗಿದ್ದಾನೆ; ಎಲ್ಲವನ್ನೂ ನೊಡಬಲ್ಲವನಾಗಿದ್ದಾನೆ; ಎಲ್ಲಕ್ಕೂ ಒಡೆಯನಾಗಿದ್ದಾನೆ; ಎಲ್ಲಾ ಶಕ್ತಿಯನ್ನು ಪಡೆದಿದ್ದಾನೆ; ಇವನೇ ಈಶ್ವರ ಕರ್ತ ನಿರ್ಮಾಣಮಾಡುವವನು ಶ್ರೇಷ್ಠನಾದವನು ಎಲ್ಲವನ್ನು ಗೆದ್ದವನು ಎಲ್ಲವನ್ನು ವಶಪಡಿಸಿಕೊಂಡಿರುವವನು ಎಲ್ಲರಿಗೂ ಪಿತನಾಗಿರುವವನು ಎಲ್ಲಕ್ಕೂ ಕಾರಣನಾಗಿರುವ ಬ್ರಹ್ಮ; ಈತನು ನಿತ್ಯ ಧೃವ ಶಾಶ್ವತವಾದವನು. ಯಾವ ಪರಿಣಾಮವನ್ನು ಹೊಂದದವನು ಎಂದೆಂದೂ ಒಂದೇ ಸ್ಥಿತಿಯಲ್ಲಿರುವವನು. ನಾವು ಆ ಬ್ರಹ್ಮನಿಂದ ಸೃಷ್ಟಿಸಿದವರಾಗಿದ್ದೇವೆ. ನಾವು ಅನಿತ್ಯರು ಅಧೃವರು ಅಲ್ಪಾಯುಗಳು ಸಾಯುವವರು ಇಲ್ಲಿಗೆ ಬಂದಿರುವವರು. ಭಿಕ್ಷುಗಳೇ, ಕೆಲವು ಶಾಶ್ವತ ಕೆಲವು ಅಶಾಶ್ವತ ಎಂದು ಆತ್ಮ ಮತ್ತು ಲೋಕದ ಶಾಶ್ವತತೆಗಳನ್ನು ಅವುಗಳ ಆರಂಭವನ್ನು ವಿವರಿಸುವ ಸಮಣ ಬ್ರಾಹ್ಮಣರು ಕೊಡುವ ಮೊದಲನೆಯ ಆಧಾರವು ಇದು.
“ಭಿಕ್ಷುಗಳೇ, ಆತ್ಮದ ಮತ್ತು ಲೋಕದ ಶಾಶ್ವತತೆ ಮತ್ತು ಆಶಾಶ್ವತತೆಗಳನ್ನೂ ಅವುಗಳ ಆರಂಭ ಹೇಗೆ ಎಂಬುದನ್ನೂ ವಿವರಿಸಲು ಕೆಲವು ಶಾಶ್ವತ ಮತ್ತು ಕೆಲವು ಆಶಾಶ್ವತ ಎಂದು ವಾದಿಸುವ ಸಮಣ ಬ್ರಾಹ್ಮಣರು ಕೊಡುವ ಎರಡನೆಯ ಆಧಾರವು ಯಾವುದು? ಖಿಡ್ಡಾಪದೋಸಿಕಾ (ಇಂದ್ರಿಯ ಭೋಗಗಳಲ್ಲಿ ತಲ್ಲೀನರಾಗಿರುವ) ಎಂಬ ಹೆಸರಿನ ದೇವತೆಗಳಿದ್ದಾರೆ. ಅವರು ಬಹುಕಾಲ ಹರ್ಷಭೋಗಗಳಲ್ಲಿ ನಿರತರಾಗಿರುತ್ತಾರೆ. ಅವರು ಬಹುಕಾಲ ಹರ್ಷಭೋಗಗಳಲ್ಲಿ ನಿರತರಾಗಿದ್ದಾಗ ಸ್ಮೃತಿಯನ್ನು ಕಳೆದುಕೊಳ್ಳುತ್ತಾರೆ. ಸ್ಮೃತಿಯನ್ನು ಕಳೆದುಕೊಂಡ ಆ ದೇವತೆಗಳು ಆ ಸ್ಥಿತಿಯಿಂದ ಪತನ ಹೊಂದುತ್ತಾರೆ.
“ಭಿಕ್ಷುಗಳೇ, ಹೀಗೆ ಪತನಹೊಂದಿದ ಜೀವಿಯೊಂದು ಇಲ್ಲಿಗೆ ಬರುತ್ತಾನೆ. ಇಲ್ಲಿಗೆ ಬಂದು ಗೃಹಸ್ಥ ಜೀವನವನ್ನು ನಡೆಸಿ ಅನಗಾರಿಕನಾಗಿ ಮನೆಯನ್ನು ತೊರೆಯುತ್ತಾನೆ. ಅವನು ಅತಿಶ್ರಮದಿಂದ ನಿರಂತರ ಯತ್ನದಿಂದ ಯಾವಾಗಲೂ ಎಚ್ಚರದಿಂದಿರುವವನಾಗಿ ಸರಿಯಾದ ಮನಸ್ಸುಳ್ಳವನಾಗಿ ಶಾಂತಚಿತ್ತನಾಗಿ ಚೇತೋ ಸಮಾಧಿಯಲ್ಲಿದ್ದು ಚಿಂತನೆ ಮಾಡುತ್ತಾ ಹಿಂದಿನ ಒಂದು ಜನ್ಮವನ್ನು ಮಾತ್ರ ನೆನಪಿಸಿಕೊಳ್ಳುವವನಾಗಿರುತ್ತಾನೆ. ಅದಕ್ಕಿಂತಲೂ ಇನ್ನೂ ಹಿಂದಿನ ಜನ್ಮಗಳನ್ನು ನೆನಪಿಗೆ ತಂದುಕೊಳ್ಳಲಾರ-‘ಯಾವ ದೇವತೆಗಳು ಖಿಡ್ಡಪದೋಸಿಕರಲ್ಲವೋ ಅವರು ಹರ್ಷಭೋಗಗಳಲ್ಲಿ ಎಂದೂ ನಿರತರಾಗುವುದಿಲ್ಲ. ಹರ್ಷಬೋಗಗಳಲ್ಲಿ ನಿರತರಾಗದ ಅವರು ಒಂದು ಜನ್ಮವನ್ನು ಮಾತ್ರ ನೆನಪಿಸಿಕೊಳ್ಳುವವನಾಗಿರುತ್ತಾನೆ. ಅದಕ್ಕಿಂತಲೂ ಇನ್ನೂ ಹಿಂದಿನ ಸ್ಮೃತಿಯನ್ನು ಕಳೆದುಕೊಳ್ಳದಿರುವುದರಿಂದ ತಾವಿರುವ ಆ ಸ್ಥಿತಿಯಿಂದ ಪತನ ಹೊಂದುವುದಿಲ್ಲ. ನಿತ್ಯರು ಧೃವರೂ ಪರಿಣಾಮ ಹೊಂದದವರೂ ಆದ ಅವರು ಶಾಶ್ವತರಾಗಿಯೇ ಇರುತ್ತಾರೆ. ಖಿಡ್ಡಪದೋಸಿಕರಾದ ನಾವಾದರೋ ಬಹುಕಾಲ ಹರ್ಷಭೋಗಗಳಲ್ಲಿಯೇ ನಿರತರಾಗಿ ಸ್ಮೃತಿಯನ್ನು ಕಳೆದುಕೊಳ್ಳುತ್ತೇವೆ.
ಸ್ಮೃತಿಯನ್ನು ಕಳೆದುಕೊಂಡ ನಾವು ಆ ಸ್ಥಿತಿಯಿಂದ ಪತನ ಹೊಂದುತ್ತೇವೆ. ನಾವು ಇಲ್ಲಿಗೆ ಬಂದಿದ್ದೇವೆ, ಅನಿತ್ಯರೂ, ಅಧೃವರೂ ಅಲ್ಪಾಯುಗಳು ಪತನ ಹೊಂದುವವರೂ ಆಗಿಬಿಡುತ್ತೇವೆ. ಭಿಕ್ಷುಗಳೇ, ಕೆಲವು ಶಾಶ್ವತ ಕೆಲವು ಅಶಾಶ್ವತ ಎಂದು ಆತ್ಮ ಮತ್ತು ಲೋಕಗಳ ಶಾಶ್ವತತೆ ಮತ್ತು ಆಶಾಶ್ವತತೆಗಳನ್ನು ಅವುಗಳ ಆರಂಭವನ್ನು ವಿವರಿಸಲು ಅಂಥ ಸಮಣ ಬ್ರಾಹ್ಮಣರು ಕೊಡುವ ಎರಡನೆಯ ಆಧಾರವು ಇದು.
ದಿಟ್ಠಿ-7 : 47. “ಭಿಕ್ಷುಗಳೇ, ಆತ್ಮದ ಮತ್ತು ಲೋಕದ ಶಾಶ್ವತತೆ ಮತ್ತು ಆಶಾಶ್ವತತೆಗಳನ್ನೂ ಅವುಗಳ ಆರಂಭ ಹೇಗೆ ಎಂಬುದನ್ನೂ ವಿವರಿಸಲು ಕೆಲವು ಶಾಶ್ವತ ಕೆಲವು ಆಶಾಶ್ವತ ಎಂದು ವಾದಿಸುವ ಸಮಣ ಬ್ರಾಹ್ಮಣರು ಕೊಡುವ ಮೂರನೆಯ ಆಧಾರವು ಯಾವುದು? ಮನೋಪದೋಸಿಕಾ (ವಿಷಯಲಂಪಟ) ಎಂಬ ಹೆಸರಿನ ದೇವತೆಗಳಿದ್ದಾರೆ. ಅವರು ಬಹುಕಾಲ ಪರಸ್ಪರ ಅಸೂಯೆಯಲ್ಲಿ ತೊಡಗುತ್ತಾರೆ. ಅವರು ಬಹುಕಾಲ ಪರಸ್ಪರ ಅಸೂಯೆಯಲ್ಲಿ ತೊಡಗುವುದರಿಂದ ತಮ್ಮ ಚಿತ್ತವನ್ನು ಮಲಿನ ಮಾಡಿಕೊಳ್ಳುತ್ತಾರೆ. ಪ್ರದೂಷಿತ ಚಿತ್ತವನ್ನು ಹೊಂದಿದ ಅವರು ದಣಿದ ದೇಹ ಮತ್ತು ದಣಿದ ಚಿತ್ತವುಳ್ಳವರಾಗುತ್ತಾರೆ. ಈ ದೇವತೆಗಳು ಆ ಸ್ಥಿತಿಯಿಂದ ಪತನ ಹೊಂದುತ್ತಾರೆ.
“ಭಿಕ್ಷುಗಳೇ, ಹೀಗೆ ಪತನ ಹೊಂದಿನ ಜೀವಿಯೊಂದು ಇಲ್ಲಿಗೆ ಬರುತ್ತಾನೆ. ಇಲ್ಲಿಗೆ ಬಂದು ಗೃಹಸ್ಥ ಜೀವನವನ್ನು ನಡೆಸಿ ಅನಗಾರಿಕನಾಗಿ ಮನೆಯನ್ನು ತೊರೆಯುತ್ತಾನೆ. ಅವನು ಅತಿಶ್ರಮದಿಂದ ನಿರಂತರ ಯತ್ನದಿಂದ ಯಾವಾಗಲೂ ಎಚ್ಚರದಿಂದಿರುವವನಾಗಿ ಸರಿಯಾದ ಮನಸ್ಸುಳ್ಳವನಾಗಿ ಶಾಂತಚಿತ್ತನಾಗಿ ಚೇತೋ ಸಮಾಧಿಯಲ್ಲಿದ್ದು ಚಿಂತನೆ ಮಾಡುತ್ತಾ ಹಿಂದಿನ ಒಂದು ಜನ್ಮವನ್ನು ನೆನಸಿಕೊಳ್ಳುವವನಾಗಿರುತ್ತಾನೆ. ಅದಕ್ಕಿಂತಲೂ ಹಿಂದಿನ ಜನ್ಮಗಳನ್ನು ಅವನು ನೆನಪಿಗೆ ತಂದುಕೊಳ್ಳಲಾರ. ಅವನು ಹೀಗೆ ಅಂದುಕೊಳ್ಳುತ್ತಾನೆ. ಭಿಕ್ಷುಗಳೇ, ‘ಯಾವ ಮನೋಪದೋಸಿಕ (ವಿಷಯಲಂಪಟ) ದೇವತೆಗಳು ಬಹುಕಾಲ ಪರಸ್ಪರ ಅಸೂಯೆಯಲ್ಲಿ ನಿರತರಾಗುವುದಿಲ್ಲವೋ ಅವರ ಚಿತ್ತಗಳು ಮಲಿನವಾಗುವುದಿಲ್ಲ. ಅವರು ಅಪ್ರದೂಷಿತವಾದ ಚಿತ್ತವನ್ನು ಹೊಂದಿರುವ ಅವರು ದೇಹವಾಗಲೀ ಚಿತ್ತವಾಗಲೀ ದಣಿಯುವುದಿಲ್ಲ. ಆ ದೇವತೆಗಳು ತಮ್ಮ ಸ್ಥಿತಿಯಿಂದ ಪತನ ಹೊಂದುವುದಿಲ್ಲ. ನಿತ್ಯರೂ ಧೃವರೂ ಪರಿಣಾಮವನ್ನು ಹೊಂದದವರೂ ಆದ ಅವರು ಶಾಶ್ವತವಾಗಿಯೇ ಉಳಿಯುತ್ತಾರೆ. ಆದರೆ ಬಹುಕಾಲ ಪರಸ್ಪರ ಅಸೂಯೆಯಲ್ಲಿ ತೊಡಗಿದ ಮನೋಪದೋಸಿಕರಾದ ನಾವು ಆ ಸ್ಥಿತಿಯಿಂದ ಪತನ ಹೊಂದುತ್ತೇವೆ. ಬಹುಕಾಲ ಪರಸ್ಪರ ಅಸೂಯೆಯಲ್ಲಿ ತೊಡಗಿದ ನಾವು ನಮ್ಮ ಚಿತ್ತವನ್ನು ಮಲಿನ ಮಾಡಿಕೊಳ್ಳುತ್ತೇವೆ. ಪ್ರದೂಷಿತ ಚಿತ್ತವನ್ನು ಹೊಂದಿರುವ ನಮ್ಮ ದೇಹವೂ ಚಿತ್ತವೂ ದಣಿಯುತ್ತದೆ. ಆ ವಿಷಯಲಂಪಟ ಸ್ಥಿತಿಯಿಂದ ಪತನ ಹೊಂದಿದ ನಾವು ಇಲ್ಲಿಗೆ ಬಂದು ಅನಿತ್ಯರೂ ಅಧೃವರೂ ಅಲ್ಪಾಯುಗಳು ಪತನ ಹೊಂದುವವರೂ ಆಗಿ ಬಿಡುತ್ತೇವೆ. ಕೆಲವು ಶಾಶ್ವತ ಕೆಲವು ಆಶಾಶ್ವತ ಎಂದು ಆತ್ಮ ಮತ್ತು ಲೋಕಗಳ ಶಾಶ್ವತತೆ ಮತ್ತು ಆಶಾಶ್ವತತೆಗಳನ್ನು ವಿವರಿಸಲು ಅಂಥ ಸಮಣ ಬ್ರಾಹ್ಮಣರು ಕೊಡುವ ಮೂರನೆಯ ಆಧಾರವು ಇದು.
ದಿಟ್ಠಿ-8 : 49. “ಭಿಕ್ಷುಗಳೇ, ಆತ್ಮದ ಮತ್ತು ಲೋಕದ ಶಾಶ್ವತತೆ ಆಶಾಶ್ವತತೆಗಳನ್ನೂ ಅವುಗಳ ಆರಂಭ ಹೇಗೆ ಎಂಬುದನ್ನೂ ವಿವರಿಸಲು ಕೆಲವು ಶಾಶ್ವತ ಮತ್ತು ಕೆಲವು ಆಶಾಶ್ವತ ಎಂದು ವಾದಿಸುವ ಸಮಣ ಬ್ರಾಹ್ಮಣರು ಕೊಡುವ ನಾಲ್ಕನೆಯ ಆಧಾರವು ಯಾವುದು? ಒಬ್ಬ ಸಮಣನೋ ಬ್ರಾಹಣನೋ ತರ್ಕಿಯೋ ಮೀಮಾಂಸಿಯೋ ಆಗಿರುತ್ತಾನೆ. ತರ್ಕ ಮತ್ತು ಮೀಮಾಂಸವನ್ನು ಅನುಸರಿಸಿ ತನ್ನದೇ ಮಾರ್ಗವನ್ನು ಹಿಡಿದು ಹೀಗೆ ಅಂದುಕೊಳ್ಳುತ್ತಾನೆ- ‘ಯಾವುದನ್ನು ಕಣ್ಣು ಕಿವಿ ಮೂಗು ನಾಲಿಗೆ ಶರೀರ ಎಂದು ಹೇಳುತ್ತೇವೆಯೋ ಅದೇ ಆತ್ಮ ಅಂದುಕೊಂಡರೆ ಅದು ಅನಿತ್ಯವಾದುದು ಅಧೃವವಾದುದು ಆಶಾಶ್ವತವಾದುದು ಪರಿಣಾಮ ಹೊಂದುವಂಥದು. ಯಾವುದನ್ನು ಚಿತ್ತ ಮನಸ್ಸು ವಿಜ್ಞಾನ ಎಂದು ಹೇಳುತ್ತೇವೆಯೋ ಅದೇ ಆತ್ಮ ಅಂದುಕೊಂಡರೆ ಅದು ನಿತ್ಯವಾದುದು ಧೃವವಾದುದು ಶಾಶ್ವತವಾದುದು ಪರಿಣಾಮವನ್ನು ಹೊಂದದಿರುವಂಥದು.’ ಭಿಕ್ಷುಗಳೇ, ಕೆಲವು ಶಾಶ್ವತ ಕೆಲವು ಆಶಾಶ್ವತ ಎಂದು ಆತ್ಮ ಮತ್ತು ಲೋಕಗಳ ಶಾಶ್ವತತೆಗಳನ್ನೂ ಅವುಗಳ ಆಗಮನ ಮತ್ತು ಆರಂಭವನ್ನೂ ವಿವರಿಸಲು ಅಂಥ ಸಮಣ ಬ್ರಾಹ್ಮಣರು ಕೊಡುವ ನಾಲ್ಕನೆಯ ಆಧಾರವು ಇದು.
“ಭಿಕ್ಷುಗಳೇ, ಆತ್ಮದ ಮತ್ತು ಲೋಕದ ಶಾಶ್ವತತೆ ಆಶಾಶ್ವತತೆಗಳನ್ನು ವಿವರಿಸಲು ಕೆಲವು ಶಾಶ್ವತ ಮತ್ತೆ ಕೆಲವು ಆಶಾಶ್ವತ ಎಂದು ವಾದಿಸುವ ಸಮಣ ಬ್ರಾಹ್ಮಣರು ಕೊಡುವ ನಾಲ್ಕು ಆಧಾರಗಳು, ಇವು. ಆತ್ಮದ ಮತ್ತು ಲೋಕದ ಶಾಶ್ವತತೆ ಆ ಸಮಣ ಬ್ರಾಹ್ಮಣರು ಯಾರೇ ಇರಲಿ ಅವರು ತಮ್ಮ ವಾದವನ್ನು ವಿವರಿಸಲು ಕೊಡುವ ಆಧಾರಗಳು ಈ ನಾಲ್ಕು ಮಾತ್ರ. ಅಥವಾ ಇವುಗಳಲ್ಲೊಂದು ಮಾತ್ರ. ಇವನ್ನು ಬಿಟ್ಟು ಮತ್ತಾವುದು ಇಲ್ಲ.
“ಭಿಕ್ಷುಗಳೇ, ತಥಾಗತನಿಗೆ ಹಿಂದೆ ಹೇಳಿರುವುದೆಲ್ಲಾ ಚೆನ್ನಾಗಿ ಗೊತ್ತಿದೆ. ‘ಈ ರೀತಿ ಗ್ರಹಿಸಿ ಈ ರೀತಿ ಆರ್ಥ ಮಾಡಿಕೊಂಡಿರುವ ಮಿಥ್ಯಾ ದೃಷ್ಟಿಯುಳ್ಳವರು ಪುನರ್ ಜನ್ಮಕ್ಕೆ ಕಾರಣವಾದ ಸ್ಥಿತಿಯನ್ನು ಪಡೆಯುತ್ತಾರೆ ಎಂಬುದೂ ತಥಾಗತನಿಗೆ ಸ್ಪಷ್ಟವಾಗಿ ಗೊತ್ತಿದೆ. ಇವನ್ನು ಮೀರಿದ ಸತ್ಯಗಳೂ ಅವನಿಗೆ ಗೊತ್ತು. ಆದರೆ ಅವನು ಇವಾವುದಕ್ಕೂ ಅಂಟಿಕೊಳ್ಳುವುದಿಲ್ಲ. ಇವಕ್ಕೆ ಅಂಟಿಕೊಳ್ಳದ ಅವನು ತಾನೇ ಬಿಡುಗಡೆಯ ಬಗೆಯನ್ನೂ ಅರಿತಿದ್ದಾನೆ. ಸಂವೇದನೆಗಳನ್ನೂ ಅವುಗಳು ಹುಟ್ಟುವ ಕಾರಣವನ್ನೂ ಅವುಗಳ ರುಚಿಯನ್ನೂ ಅವುಗಳ ಅಪಾಯವನ್ನೂ ಅವುಗಳನ್ನು ತ್ಯಜಿಸುವುದನ್ನೂ ಚೆನ್ನಾಗಿ ಅರಿತಿದ್ದಾನೆ.
“ಭಿಕ್ಷುಗಳೇ, ತಥಾಗತನನ್ನು ಸ್ತುತಿಸುವಾಗ ಜನರು ಗಂಭೀರವೂ ಕಷ್ಟಪಟ್ಟು ಅರಿತುಕೊಳ್ಳಬೇಕಾದುದೂ ಕಷ್ಟಪಟ್ಟು ಪಡೆದು ಅನುಭವಿಸಬೇಕಾದುದೂ ಶಾಂತಿಯನ್ನು ತರುವಂಥದೂ ನೈಪುಣ್ಯಪೂರಿತವಾದುದೂ ತರ್ಕವನ್ನು ಮೀರಿದುದೂ ಜಾಣರು ತಿಳಿಯಬೇಕಾದುದೂ ತಥಾಗತನು ಸ್ವಪ್ರಯತ್ನದಿಂದ ಅರಿತು ಅನುಭವಿಸಿ ಪ್ರಕಾಶ ಪಡಿಸುವಂಥದೂ ಆದ ಧರ್ಮದ ವರ್ಣನೆಯನ್ನೇ ಮಾಡುತ್ತಾರೆ.
ಅಂತಾನಂತವಾದ
“ಭಿಕ್ಷುಗಳೇ, ಲೋಕಕ್ಕೆ ಅಂತ್ಯವಿದೆ, ಅದು ಅನಂತವೂ ಆಗಿದೆ ಎಂಬುದನ್ನು ನಾಲ್ಕು ಆಧಾರಗಳಿಂದ ವಿವರಿಸುವ ಕೆಲವು ಸಮಣ ಬ್ರಾಹ್ಮಣರಿದ್ದಾರೆ. ಲೋಕಕ್ಕೆ ಅಂತ್ಯವಿದೆ. ಅದು ಅನಂತವೂ ಆಗಿದೆ, ಮತ್ತು ಅಂತ್ಯ-ಅನಂತತೆಗಳು ಯಾವುದನ್ನು ಅವಲಂಬಿಸಿವೆ ಎಂಬುದನ್ನು ವಿವರಿಸುವ ಆ ಸಮಣ ಬ್ರಾಹ್ಮಣರು ಕೊಡುವ ನಾಲ್ಕು ಆಧಾರಗಳು ಯಾವುವು?
ದಿಟ್ಠಿ-9 : 54. “ಭಿಕ್ಷುಗಳೇ, ಇಲ್ಲಿಯ ಒಬ್ಬ ಸಮಣನೋ ಬ್ರಾಹಣನೋ ಅತಿಶ್ರಮದಿಂದ ನಿರಂತರ ಯತ್ನದಿಂದ ಅನುದಿನದ ಅಭ್ಯಾಸದಿಂದ ಯಾವಾಗಲೂ ಎಚ್ಚರದಿಂದಿರುವವನಾಗಿ ಸರಿಯಾದ ಮನಸ್ಸುಳ್ಳವನಾಗಿ ಚೇತೋ ಸಮಾಧಿಯಲ್ಲಿದ್ದು ಚಿಂತನೆ ಮಾಡುತ್ತಾ ಅಂತ್ಯವು ಕಂಡುಬರುವ ಲೋಕವನ್ನು ನೋಡುವವನಾಗಿರುತ್ತಾನೆ. ಅವನು ಹೀಗೆ ಅಂದುಕೊಳ್ಳುತ್ತಾನೆ.- ‘ಈ ಲೋಕವು ಒಂದು ಗಡಿಯಿಂದ ಪರಿವೃತವಾಗಿದೆ. ಇದು ಹೇಗೆ? ಅತಿಶ್ರಮದಿಂದ ನಿರಂತರ ಯತ್ನದಿಂದ ಅನುದಿನದ ಅಭ್ಯಾಸದಿಂದ ಯಾವಗಲೂ ಎಚ್ಚರದಿಂದಿರುವವನಾಗಿ ಸರಿಯಾದ ಮನಸ್ಸುಳ್ಳವನಾಗಿ ಚೇತೋ ಸಮಾದಿಯಲ್ಲಿದ್ದು ಲೋಕಕ್ಕೆ ಅಂತ್ಯವಿರುವುದನ್ನು ಕಾಣಬಲ್ಲವನಾಗಿದ್ದೇನೆ. ಇದರಿಂದ ನನಗೆ ಈ ಲೋಕವು ಒಂದು ಗಡಿಯಿಂದ ಪರಿವೃತವಾಗಿದೆ ಎಂಬುದನ್ನು ತಿಳಿದಿದ್ದೇನೆ.’ ಅಂತ್ಯ-ಅನಂತತೆಗಳಲ್ಲಿ ಯಾವುದನ್ನು ಅವಲಂಬಿಸಿವೆ ಎಂಬುದನ್ನು ವಿವರಿಸಲು ಕೊಡುವ ಮೊದಲನೆಯ ಆಧಾರವು ಇದು.
ದಿಟ್ಠಿ-10 : 55. “ಭಿಕ್ಷುಗಳೇ ಲೋಕಕ್ಕೆ ಅಂತ್ಯವುಂಟು ಅಥವ ಅಂತ್ಯವಿಲ್ಲ ಎಂಬ ವಾದವನ್ನು ಮತ್ತು ಅಂತ್ಯ-ಅನಂತತೆಗಳು ಯಾವುದನ್ನು ಅವಲಂಬಿಸಿವೆ ಎಂಬುದನ್ನು ವಿವರಿಸಲು ಸಮಣ ಬ್ರಾಹ್ಮಣರು ಕೊಡುವ ಎರಡನೆಯ ಆಧಾರವು ಯಾವುದು? ಇಲ್ಲಿಯ ಒಬ್ಬ ಸಮಣನೋ ಬ್ರಾಹ್ಮಣನೋ ಅತಿಶ್ರಮದಿಂದ ನಿರಂತರ ಯತ್ನದಿಂದ ಅನುದಿನದ ಅಭ್ಯಾಸದಿಂದ ಯಾವಾಗಲೂ ಎಚ್ಚರದಿಂದಿರುವವನಾಗಿ ಸರಿಯಾದ ಮನಸ್ಸುಳ್ಳವನಾಗಿ ಚೇತೋ ಸಮಾಧಿಯಲ್ಲಿದ್ದು ಚಿಂತನೆ ಮಾಡುತ್ತಾ ಲೋಕವು ಅನಂತವಾಗಿದೆ ಎಂಬುದನ್ನು ಕಾಣುವವನಾಗುತ್ತಾನೆ. ಅವನು ಹೀಗೆ ಅಂದುಕೊಳ್ಳುತ್ತಾನೆ-‘ಅನಂತವಾಗಿರುವ ಈ ಲೋಕಕ್ಕೆ ಗಡಿಯಿಲ್ಲ. ಲೋಕಕ್ಕೆ ಗಡಿಯುಂಟು ಎಂದು ಹೇಳುವ ಯಾವ ಬ್ರಾಹ್ಮಣರು ಯಾರು ಇದ್ದಾರೋ ಅವರು ಹೇಳುವುದು ಸುಳ್ಳು. ಇದು ಹೇಗೆ? ನಾನು ಅತಿಶ್ರಮದಿಂದ ನಿರಂತರ ಯತ್ನದಿಂದ ಅನುದಿನದ ಅಭ್ಯಾಸದಿಂದ ಯಾವಾಗಲು ಎಚ್ಚರದಿಂದಿರುವವನಾಗಿ ಸರಿಯಾದ ಮನಸ್ಸುಳ್ಳವನಾಗಿ ಚೇತೋ ಸಮಾಧಿಯಲ್ಲಿದ್ದು ಲೋಕದ ಅನಂತತೆಯನ್ನು ಕಾಣಬಲ್ಲವನಾಗಿದ್ದೇನೆ. ಅನಂತವಾಗಿರುವ ಈ ಲೋಕಕ್ಕೆ ಗಡಿಯಿಲ್ಲ ಎಂಬುದು ನನಗೆ ಗೊತ್ತಾಗಿದೆ, ಲೋಕದ ಅಂತ್ಯ-ಅನಂತತೆಗಳನ್ನೂ ಅವು ಯಾವುದನ್ನು ಅವಲಂಬಿಸಿವೆ ಎಂಬುದನ್ನು ವಿವರಿಸಲು ಅಂಥ ಸಮಣ ಬ್ರಾಹ್ಮಣರು ಕೊಡುವ ಎರಡನೆಯ ಆಧಾರವು ಇದು.
ದಿಟ್ಠಿ-11 : 56. “ಭೀಕ್ಷುಗಳೇ, ಲೋಕಕ್ಕೆ ಅಂತ್ಯವುಂಟು ಅಥವಾ ಅಂತ್ಯವಿಲ್ಲ ಎಂಬ ವಾದವನ್ನೂ ಮತ್ತು ಅಂತ್ಯ-ಅನಂತತೆಗಳು ಯಾವುದನ್ನು ಅವಲಂಬಿಸಿವೆ ಎಂಬುದನ್ನೂ ವಿವರಿಸಲು ಸಮಣ ಬ್ರಾಹ್ಮಣರು ಕೊಡುವ ಮೂರನೆಯ ಆಧಾರವು ಯಾವುದು? ಇಲ್ಲಿಯ ಒಬ್ಬ ಸಮಣನೋ ಬ್ರಾಹ್ಮಣನೋ ಅತಿಶ್ರಮದಿಂದ ನಿರಂತರ ಯತ್ನದಿಂದ ಅನುದಿನದ ಅಭ್ಯಾಸದಿಂದ ಯಾವಾಗಲೂ ಎಚ್ಚರದಿಂದಿರುವವನಾಗಿ ಸರಿಯಾದ ಮನಸ್ಸುಳ್ಳವನಾಗಿ ಚೇತೋ ಸಮಾಧಿಯಲ್ಲಿದ್ದು ಚಿಂತನೆ ಮಾಡುತ್ತಾ ಅಂತ್ಯವಿರುವುದೆಂದು ಕಾಣಿಸುವ ಊರ್ಧ್ವ ಅಧೊಲೋಕಗಳನ್ನೂ ಅನಂತವೆಂದು ತೋರಿಸಿಕೊಳ್ಳುವ ತಿರ್ಯಕ್ ಲೋಕವನ್ನೂ ನೊಡಬಲ್ಲವನಾಗಿರುತ್ತಾನೆ. ಅವನು ಹೀಗೆ ಅಂದುಕೊಳ್ಳುತ್ತಾನೆ- ‘ಈ ಲೋಕವು ಒಂದು ಗಡಿಯಿಂದ ಪರಿವೃತವಾಗಿದೆ ಎಂದು ಹೇಳುವ ಸಮಣ ಬ್ರಾಹ್ಮಣರು ಯಾರಿದ್ದಾರೋ ಅವರು ಹೇಳುವುದು ಹುಸಿ. ಅನಂತವೆಂದು ತೋರುವ ಲೋಕಕ್ಕೆ ಗಡಿಯಿಲ್ಲ ಎಂದು ಹೇಳುವ ಸಮಣ ಬ್ರಾಹ್ಮಣರು ಯಾರಿದ್ದಾರೋ ಅವರು ಹೇಳುವುದು ಹುಸಿ. ಇದು ಹೇಗೆ? ನಾನು ಅತಿ ಶ್ರಮದಿಂದ ನಿರಂತರ ಯತ್ನದಿಂದ ಅನುದಿನದ ಅಭ್ಯಾಸದಿಂದ ಯಾವಾಗಲೂ ಎಚ್ಚರದಿಂದರುವವನಾಗಿ ಸರಿಯಾದ ಮನಸ್ಸುಳ್ಳವನಾಗಿ ಚೇತೋ ಸಮಾಧಿಯಲ್ಲಿದ್ದು ಅಂತ್ಯವಿರುವುದೆಂದು ತೋರುವ ಊರ್ಧ್ವ ಅಧೋ ಲೋಕಗಳನ್ನೂ ಅನಂತವೆಂದು ತೋರುವ ತಿರ್ಯಕ್ ಲೋಕವನ್ನೂ ನೋಡಬಲ್ಲವನಾಗಿದ್ದೇನೆ. ಇದರಿಂದ ಈ ಲೋಕಕ್ಕೆ ಅಂತ್ಯವೂ ಉಂಟು ಅದು ಅನಂತವೂ ಆಗಿದೆ ಎಂದು ನನಗೆ ಗೊತ್ತಾಗಿದೆ.’ ಲೋಕದ ಅಂತ್ಯ-ಅನಂತತೆಗಳನ್ನು ಅವು ಯಾವುದನ್ನು ಅವಲಂಬಿಸಿವೆ ಎಂಬುದನ್ನು ವಿವರಿಸಲು ಅಂಥ ಸಮಣ ಬ್ರಾಹ್ಮಣರು ಕೊಡವ ಮೂರನೆಯ ಆಧಾರವು ಇದು.
ದಿಟ್ಠಿ-12 : 57. “ಭಿಕ್ಷುಗಳೇ, ಲೋಕಕ್ಕೆ ಅಂತ್ಯವಿದೆ ಅಥವಾ ಅಂತ್ಯವಿಲ್ಲ ಎಂಬ ವಾದವನ್ನು ಮತ್ತು ಅಂತ್ಯ-ಅನಂತತೆಗಳು ಯಾವುದನ್ನು ಅವಲಂಬಿಸಿವೆ ಎಂಬುದನ್ನು ವಿವರಿಸಲು ಸಮಣ ಬ್ರಾಹ್ಮಣರು ಕೊಡುವ ನಾಲ್ಕನೆಯ ಆಧಾರವು ಯಾವುದು? ಒಬ್ಬ ಸಮಣನೋ ಬ್ರಾಹ್ಮಣನೋ ತಾರ್ಕಿಕನೋ ಮೀಮಾಂಸಕಾರನೋ ಆಗಿರುತ್ತಾನೆ. ಅವನು ತರ್ಕ ಮತ್ತು ಮೀಮಾಂಸವನ್ನು ಅನುಸರಿಸಿ ತನ್ನದೇ ಮಾರ್ಗವನ್ನೇ ಹಿಡಿದು ಹೀಗೆ ಅಂದುಕೊಳ್ಳುತ್ತಾನೆ- ‘ಅಂತ್ಯವಿರುವುದೆಂದು ಕಾಣುವ ಈ ಲೋಕಕ್ಕೆ ಗಡಿಯುಂಟು ಎಂದು ಹೇಳುವ ಸಮಣ ಬ್ರಾಹ್ಮಣರಿದ್ದಾರೋ ಅವರು ಹೇಳುವುದು ಹುಸಿ. ಅನಂತವೆಂದು ಕಾಣುವ ಈ ಲೋಕಕ್ಕೆ ಗಡಿಯಿಲ್ಲ ಎಂದು ಹೇಳುವ ಬ್ರಾಹ್ಮಣರು ಯಾರಿದ್ದಾರೋ ಅವರು ಹೇಳುವುದೂ ಹುಸಿ. ಈ ಲೋಕಕ್ಕೆ ಅಂತ್ಯವಿದೆ ಮತ್ತು ಅನಂತವೂ ಆಗಿದೆ ಎಂದು ಹೇಳುವುದೂ ಸುಳ್ಳು. ಈ ಲೋಕಕ್ಕೆ ಅಂತ್ಯವೂ ಇಲ್ಲ ಅದು ಅನಂತವೂ ಆಗಿಲ್ಲ. ಭಿಕ್ಷುಗಳೇ, ಲೋಕದ ಅಂತ್ಯತೆ -ಅನಂತ್ಯತೆಗಳನ್ನು ಅವು ಯಾವುದನ್ನು ಅವಲಂಬಿಸಿವೆ ಎಂಬುದನ್ನು ವಿವರಿಸಲು ಅಂಥ ಸಮಣ ಬ್ರಾಹ್ಮಣರು ಕೊಡುವ ನಾಲ್ಕನೆಯ ಆಧಾರವು ಇದು.
“ಭಿಕ್ಷುಗಳೇ, ಲೋಕಕ್ಕೆ ಅಂತ್ಯವುಂಟು ಅಥವಾ ಅಂತ್ಯವಿಲ್ಲ ಎಂಬ ಅಂತಾನಂತವಾದಕ್ಕೆ ಸಮಣ ಬ್ರಾಹ್ಮಣರು ಕೊಡುವ ನಾಲ್ಕು ಆಧಾರಗಳು ಇವು. ಭಿಕ್ಷುಗಳೇ, ಲೋಕಕ್ಕೆ ಅಂತ್ಯವಿದೆ ಅಥವಾ ಅಂತ್ಯವಿಲ್ಲ ಎಂದು ವಾದಿಸುವ ಸಮಣ ಬ್ರಾಹ್ಮಣರು ಯಾರೇ ಇರಲಿ ಅವರು ತಮ್ಮ ವಾದವನ್ನು ಸಮರ್ಥಿಸಲು ಕೊಡುವ ಆಧಾರಗಳು ಈ ನಾಲ್ಕು ಮಾತ್ರ. ಅಥವಾ ಇವುಗಳಲ್ಲೊಂದು ಮಾತ್ರ, ಮತ್ತಾವುದು ಅಲ್ಲ.
“ಭಿಕ್ಷುಗಳೇ, ತಥಾಗತನಿಗೆ ಹಿಂದೆ ಹೇಳಿರುವುದೆಲ್ಲಾ ಚೆನ್ನಾಗಿ ಗೊತ್ತಿದೆ. ಈ ರೀತಿ ಗ್ರಹಿಸಿ ಈ ರೀತಿ ಅರ್ಥ ಮಾಡಿಕೊಂಡಿರುವ ಮಿಥ್ಯಾ ದೃಷ್ಟಿಯುಳ್ಳವರು ಪುನರ್ ಜನ್ಮಕ್ಕೆ ಕಾರಣವಾದ ಸ್ಥಿತಿಯನ್ನು ಪಡೆಯುತ್ತಾರೆ ಎಂಬುದೂ ತಥಾಗತನಿಗೆ ಸ್ಪಷ್ಟವಾಗಿ ಗೊತ್ತಿದೆ. ಇವನ್ನು ಮೀರಿದ ಸತ್ಯಗಳೂ ಅವನಿಗೆ ಗೊತ್ತು. ಆದರೆ ಅವನು ಇವಾವುದಕ್ಕೂ ಅಂಟಿಕೊಳ್ಲುವುದಿಲ್ಲ. ಇವುಗಳಿಗೆ ಅಂಟಿಕೊಳ್ಳದ ಅವನು ತಾನೇ ಬಿಡುಗಡೆಯ ಬಗೆಯನ್ನು ಅರಿತಿದ್ದಾನೆ. ಸಂವೇದನೆಗಳನ್ನು ಅವುಗಳು ಹುಟ್ಟುವ ಕಾರಣವನ್ನೂ ಅವುಗಳ ರುಚಿಯನ್ನೂ ಅವುಗಳ ಅಪಾಯವನ್ನೂ ಅವುಗಳನ್ನು ತ್ಯಜಿಸುವುದನ್ನೂ ಚೆನ್ನಾಗಿ ಅರಿತಿದ್ದಾನೆ.
“ಭಿಕ್ಷುಗಳೇ, ತಥಾಗತನನ್ನು ಸ್ತುತಿಸುವಾಗ ಜನರು ಗಂಭೀರವೂ ಕಷ್ಟಪಟ್ಟು ಅರಿತುಕೊಳ್ಳಬೇಕಾದುದು ಕಷ್ಟಪಟ್ಟು ಪಡೆದು ಅನುಭಿಸಬೇಕಾದುದೂ ಶಾಂತಿಯನ್ನು ತರುವಂಥದೂ ತರ್ಕವನ್ನು ಮೀರಿದುದೂ ನೈಪುಣ್ಯ ಪೂರಿತವಾದುದೂ ಜಾಣರು ತಿಳಿಯಬೇಕಾದುದೂ ತಥಾಗತನು ಸ್ವಪ್ರಯತ್ನದಿಂದ ಅರಿತು ಅನುಭವಿಸಿ ಪ್ರಕಾಶ ಪಡಿಸಿರುವಂಥದೂ ಆದ ಧರ್ಮದ ವರ್ಣನೆಯನ್ನು ಮಾಡುತ್ತಾರೆ.
ಅಡ್ಡಗೋಡೆ ಮೇಲೆ ಕುಳಿತವರಂತೆ ವಾದಿಸುವವರು
“ಶಾಂತಿ ಭಿಕ್ಷುಗಳೇ, ‘ಅದೂ ಸರಿ, ಇದೂ ಸರಿ’ ಎಂದು ವಾದಿಸುವ ಅಮರವಿಕ್ಕೇಪಿಕಾ ಎಂಬ ಸಮಣ ಬ್ರಾಹ್ಮಣರಿದ್ದಾರೆ. ಪ್ರಶ್ನೆಗಳನ್ನು ಹಾಕಿದಾಗ ಬುದ್ಧಿವಂತಿಕೆಯ ಮಾತುಗಳನ್ನಾಡಿ ಮೀನು ನುಣುಚಿಕೊಳ್ಳುವಂತೆ ನುಣುಚಿಕೊಳ್ಳುತ್ತಾರೆ. ಮತ್ತು ತಮ್ಮ ವಾದಕ್ಕೆ ನಾಲ್ಕು ಆಧಾರಗಳನ್ನು ಕೊಡುತ್ತಾರೆ. ಪ್ರಶ್ನೆಗಳನ್ನು ಹಾಕಿದಾಗ ‘ಅದೂ ಸರಿ, ಇದೂ ಸರಿ’ ಎಂದು ಬುದ್ಧಿವಂತಿಕೆಯ ಮಾತುಗಳನ್ನಾಡಿ ನುಣುಚಿಕೊಳ್ಳುವ ಆ ಬ್ರಾಹ್ಮಣರು ತಮ್ಮ ಇಬ್ಬಂದಿ ವಾದಕ್ಕೆ ಕೊಡುವ ನಾಲ್ಕು ಆಧಾರಗಳು ಯಾವುವು?
ದಿಟ್ಠಿ-13 : 62. “ಭಿಕ್ಷುಗಳೇ, ಇದು ನಿಜವಾಗಿ ಕುಶಲವಾದದ್ದು, ಇದು ನಿಜವಾಗಿ ಅಕುಶಲವಾದದ್ದು ಎಂಬುದನ್ನು ತಿಳಿಯಲಾರದ ಒಬ್ಬ ಸಮಣನೋ ಬ್ರಾಹ್ಮಣನೋ ಹೀಗೆ ಅಂದುಕೊಳ್ಳುತ್ತಾನೆ- ‘ಇದು ಕುಶಲವಾದದು ಇದು ಅಕುಶಲವಾದುದು ಎಂಬ ಇದರ ನಿಜಸ್ವಭಾವವನ್ನು ನಾನು ತಿಳಿಯಲಾರೆ, ನಿಜವಾಗಿಯೂ ಇದು ಕುಶಲವಾದದ್ದು ನಿಜವಾಗಿಯೂ ಇದು ಅಕುಶಲವಾದದ್ದು ಎಂದು ನಾನು ವಿವರಿಸಿದರೆ ಸುಳ್ಳು ಹೇಳಿದಂತಾಗುತ್ತದೆ. ಸುಳ್ಳು ಹೇಳಿದಿದುಕ್ಕಾಗಿ ನಾಚಿಕೆಯುಂಟಾಗಿ ಅದರಿಂದ ಕೋಪ ಹುಟ್ಟಿಕೊಳ್ಳುತ್ತದೆ. ಹೀಗೆ ಕೋಪಗೊಳ್ಳುವುದರಿಂದ ಅಪಾಯ ಉಂಟಾಗುತ್ತದೆ’ ಸುಳ್ಳು ಹೇಳುವುದರಿಂದ ಆಗಬಹುದಾದ ಭಯದಿಂದ ಸುಳ್ಳು ಹೇಳಲು ಇಷ್ಟವಿಲ್ಲದಿದ್ದರಿಂದ ಆತ ಪ್ರಶ್ನೆಗಳನ್ನು ಹಾಕಿದಾಗ ನುಣುಚಿಕೊಳ್ಳುವ ಮಾತುಗಳನ್ನಾಡುತ್ತಾನೆ-‘ಇದು ನನಗೆ ಒಪ್ಪಿಗೆಯಾಗದು. ಅದು ನನಗೆ ಒಪ್ಪಿಗೆಯಾಗದು; ಬೇರೆಯದೂ ನನಗೆ ಒಪ್ಪಿಗೆಯಾಗದು. ಇದನ್ನೂ ನಿರಾಕರಿಸುವುದಿಲ್ಲ; ನಾನು ಅದನ್ನೂ ನಿರಾಕರಿಸುವುದಿಲ್ಲ’ ಭಿಕ್ಷುಗಳೇ, ಪ್ರಶ್ನೆಗಳನ್ನು ಹಾಕಿದಾಗ ಅದೂ ಸರಿ, ಇದೂ ಸರಿ, ಎಂದು ಚತುರತೆಯ ಮಾತುಗಳನ್ನಾಡಿ ನುಣುಚಿಕೊಳ್ಳುವ ಅಮರ ವಿಕ್ಖೇಪಿಕರಾದ ಸಮಣಬ್ರಾಹ್ಮಣರು ತಮ್ಮ ಅಮರವಿಕ್ಖೇಪವಾದಕ್ಕೆ ಕೊಡುವ ಮೊದಲನೆಯ ಆಧಾರವು ಇದು.
ದಿಟ್ಠಿ-14 : 63. “ಭಿಕ್ಷುಗಳೇ, ಪ್ರಶ್ನೆಗಳನ್ನು ಹಾಕಿದಾಗ ‘ ಅದೂ ಸರಿ, ಇದೂ ಸರಿ, ಎಂದು ಬುದ್ಧಿವಂತಿಕೆಯ ಮಾತುಗಳನ್ನಾಡಿ ನುಣುಚಿಕೊಳ್ಳುವ ಅಮರವಿಕ್ಕೇಪಿಕಾ ಸಮಣಬ್ರಾಹ್ಮಣರು ತಮ್ಮ ಇಬ್ಬಂದಿ ವಾದಕ್ಕೆ ಕೊಡುವ ಎರಡನೆಯ ಆಧಾರವು ಯಾವುದು?
“ಭಿಕ್ಷುಗಳೇ, ಇದು ನಿಜವಾಗಿಯೂ ಕುಶಲವಾದದ್ದು ಇದು ನಿಜವಾಗಿಯೂ ಅಕುಶಲವಾದದ್ದು ಎಂಬುದನ್ನು ತಿಳಿಯಲಾರದ ಸಮಣನೋ ಬ್ರಾಹ್ಮಣನೋ ಹೀಗೆ ಅಂದುಕೊಳ್ಳುತ್ತಾನೆ-‘ಇದು ಕುಶಲವಾದದ್ದು ಇದು ಅಕುಶಲವಾದದ್ದು ಎಂಬ ಇದರ ನಿಜಸ್ವಭಾವವನ್ನು ನಾನು ತಿಳಿಯಲಾರೆ ನಿಜವಾಗಿಯೂ ಇದು ಕುಶಲವಾದದ್ದು ನಿಜವಾಗಿಯೂ ಇದು ಅಕುಶಲವಾದದ್ದು ಎಂದು ನಾನು ವಿವರಿಸಿದರೆ ಅದರಿಂದ ನನಗೆ ಉದ್ರೇಕವೋ ರಾಗವೋ ದ್ವೇಷವೋ ಉಂಟಾಗುತ್ತದೆ. ಉದ್ರೇಕವೋ ರಾಗವೋ ದ್ವೇಷವೋ ನಾನು ಭೀತಿಗೊಳಗಾಗುತ್ತೇನೆ. ನನಗೆ ಭೀತಿಯುಂಟಾದಾಗ ಕೋಪ ಹುಟ್ಟಿಕೊಳ್ಳುತ್ತದೆ. ಇದರಿಂದ ಅಪಾಯ ಒದಗುತ್ತದೆ.’ ಭೀತಿಗೊಳಗಾದ ಆತ ಪ್ರಶ್ನೆಗಳನ್ನು ಹಾಕಿದಾಗ ಚತುರತೆಯಿಂದ ಕೂಡಿದ ಮಾತುಗಳ ನ್ನಾಡುತ್ತಾನೆ ಇದು ಕುಶಲವಾದದ್ದು ಅಲ್ಲ ಇದು ಅಕುಶಲವಾದದ್ದು ಅಲ್ಲ ಎಂಬುದನ್ನು ತೋರಿಸುತ್ತಾನೆ-‘ಇದು ನನಗೆ ಒಪ್ಪಿಗೆಯಾಗದು. ಅದು ನನಗೆ ಒಪ್ಪಿಗೆಯಾಗದು. ಬೇರೆಯದೂ ನನಗೆ ಒಪ್ಪಿಗೆಯಾಗದು. ಇದನ್ನು ನಿರಾಕರಿಸುವುದಿಲ್ಲ. ನಾನು ಅದನ್ನು ನಿರಾಕರಿಸುವುದಿಲ್ಲ.’ ಭಿಕ್ಷುಗಳೇ, ಪ್ರಶ್ನೆಗಳನ್ನು ಹಾಕಿದಾಗ ‘ ಅದೂ ಸರಿ ಇದೂ ಸರಿ’ ಎಂದು ಚತುರತೆಯ ಮಾತುಗಳನ್ನಾಡಿ ನುಣುಚಿಕೊಳ್ಳುವ ಅಮರವಿಕ್ಖೇಪಿಕರಾದ ಸುಮಣ ಬ್ರಾಹ್ಮಣರು ತಮ್ಮ ಅಮರವಿಕ್ಖೇಪವಾದಕ್ಕೆ ಕೊಡುವ ಎರಡನೆಯ ಆಧಾರವು ಇದು.
ದಿಟ್ಠಿ-15 : 64. “ಭಿಕ್ಷುಗಳೇ, ಪ್ರಶ್ನೆಗಳನ್ನು ಹಾಕಿದಾಗ ಅದೂ ಸರಿ, ಇದೂ ಸರಿ, ಎಂದು ಬುದ್ದಿವಂತಿಕೆಯ ಮಾತುಗಳನ್ನಾಡಿ ನುಣುಚಿಕೊಳ್ಳುವ ಅಮರವಿಕ್ಖೇಪಿಕರಾದ ಸಮಣ ಬ್ರಾಹ್ಮಣರು ತಮ್ಮ ಇಬ್ಬಂದಿವಾದಕ್ಕೆ ಕೊಡುವ ಮೂರನೆ ಆಧಾರವು ಯಾವುದು? ಭಿಕ್ಷುಗಳೇ, ಇದು ನಿಜವಾಗಿಯೂ ಕುಶಲವಾದದ್ದು ಇದು ನಿಜವಾಗಿಯು ಅಕುಶಲವಾದದ್ದು ಎಂಬುದನ್ನು ತಿಳಿಯದ ಸಮಣನೋ ಬ್ರಾಹ್ಮಣನೋ ಹೀಗೆ ಅಂದುಕೊಳ್ಳುತ್ತಾನೆ- ‘ಇದು ಕುಶಲವಾದದ್ದು, ಇದು ಅಕುಶಲವಾದದ್ದು ಎಂಬ ಇದರ ನಿಜಸ್ವಭಾವವನ್ನು ನಾನು ತಿಳಿಯಲಾರೆ. ಇದು ನಿಜವಾಗಿಯೂ ಕುಶಲವಾದದ್ದು ಇದು ನಿಜವಾಗಿಯೂ ಅಕುಶಲವಾದದ್ದು ಎಂದು ನಾನು ವಿವರಿಸಿದರೆ ಪಂಡಿತರೂ ನಿಪುಣರೂ ಬೇರೆಯವರೊಂದಿಗೆ ಚೆನ್ನಾಗಿ ವಾದ ಮಾಡಬಲ್ಲವರೂ ಮಾತುಗಳನ್ನು ಬಿಡಿಸಿ ಬಿಡಿಸಿ ಚತುರತೆಯಿಂದ ವಾದಿಸುವವರೂ ತಮ್ಮದೇ ಸರಿ ಎಂದು ಸಾಧಿಸುವವರೂ ನನ್ನನ್ನು ಎದುರಿಸಿ ಅಡ್ಡ ಪ್ರಶ್ನೆ ಮರು ಪ್ರಶ್ನೆಗಳನ್ನು ಹಾಕಿ ನನ್ನಿಂದ ವಿವರಣೆಗಳನ್ನು ಕೇಳಬಹುದು. ಹಾಗೆ ನನ್ನನ್ನು ಎದುರಿಸಿ ಅಡ್ಡ ಪ್ರಶ್ನೆಗಳನ್ನು ಹಾಕಿ ವಿವರಣೆಯನ್ನು ಕೇಳುವವರು ನಾನು ಹೇಳುವುದನ್ನು ಒಪ್ಪದಿರಬಹುದು. ಅವರು ಒಪ್ಪದಿದ್ದಾಗ ನನಗೆ ಕೋಪ ಬರುತ್ತದೆ. ನನಗೆ ಕೋಪ ಬಂದರೆ ಅಪಾಯ ಉಂಟಾಗುತ್ತದೆ. ವಾದ ಮಾಡಲು ಬರುವುದಿಲ್ಲವೆಂಬ ಭಯದಿಂದ ವಾದ ಮಾಡಲು ಇಷ್ಟಪಡದೆ “ಇದು ಕುಶಲವೂ ಅಲ್ಲ, ಇದು ಅಕುಶಲವೂ ಅಲ್ಲ” ಎಂದು ಆತ ವಿವರಿಸುತ್ತಾನೆ. ಪ್ರಶ್ನೆಗಳನ್ನೂ ಹಾಕಿದಾಗ, ಚತುರತೆಯ ಮಾತುಗಳನ್ನಾಡಿ ನುಣಚಿಕೊಳುತ್ತಾನೆ. ಇದು ನನಗೆ ಒಪ್ಪಿಗೆಯಾಗದು ಅದು ನನಗೆ ಒಪ್ಪಿಗೆಯಾಗದು ಬೇರೆಯದೂ ಒಪ್ಪಿಗೆಯಾಗದು. ಇದನ್ನು ನಿರಾಕರಿಸುವುದಿಲ್ಲ. ನಾನು ಅದನ್ನೂ ನಿರಾಕರಿಸುವುದಿಲ್ಲ.’ ಭಿಕ್ಷುಗಳೇ, ಪ್ರಶ್ನೆಗಳನ್ನು ಹಾಕಿದಾಗ ಅದೂ ಸರಿ ಇದೂ ಸರಿ ಎಂದು ಚತುರತೆಯ ಮಾತುಗಳನ್ನಾಡಿ ನುಣುಚಿಕೊಳ್ಳುವ ಅಮರವಿಕ್ಖೇಪಿಕರಾದ ಸಮಣ ಬ್ರಾಹ್ಮಣರು ತಮ್ಮ ಅಮರವಿಕ್ಖೇಪವಾದಕ್ಕೆ ಕೊಡುವ ಮೂರನೆಯ ಆಧಾರವು ಇದು.
ದಿಟ್ಠಿ-16 : 65. “ಭಿಕ್ಷುಗಳೇ ಪ್ರಶ್ನೆಗಳನ್ನು ಹಾಕಿದಾಗ ಅದು ಸರಿ ಇದೂ ಸರಿ ಎಂದು ನುಣುಚಿಕೊಳ್ಳುವ ಮಾತುಗಳನ್ನಾಡುವ ಅಮರವಿಕ್ಖೇಪಿಕರಾದ ಸಮಣ ಬ್ರಾಹ್ಮಣರು ತಮ್ಮ ಇಬ್ಬಂದಿ ವಾದಕ್ಕೆ ಕೊಡುವ ನಾಲ್ಕನೆಯ ಆಧಾರವು ಯಾವುದು? ಭಿಕ್ಷುಗಳೇ, ಮಂದ ಬುದ್ಧಿಯವನು, ಮಂಕನೂ ಆದಂಥ ಸಮಣನೋ ಬ್ರಾಹ್ಮಣನೋ ಪ್ರಶ್ನೆಗಳನ್ನು ಹಾಕಿದಾಗ ನುಣುಚಿಕೊಳ್ಳುವ ಮಾತುಗಳನ್ನೇ ಆಡುತ್ತಾನೆ. ‘ಪರಲೋಕವಿದೆಯೋ ಎಂದು ನನ್ನನ್ನು ನೀನು ಕೇಳಿದರೆ ನನಗೆ ಹೀಗೆ ತೋರಿದೆ: ನಾನು ಪರಲೋಕವಿದೆ ಎಂದು ಹೇಳುತ್ತೇನೆ. ಆದರೆ ಇದು ನನಗೆ ಒಪ್ಪಿಗೆಯಾಗದು. ಅದೂ ನನಗೆ ಒಪ್ಪಿಗೆಯಾಗದು ಬೇರೆಯದೂ ಒಪ್ಪಿಗೆಯಾಗದು ಇದನ್ನೂ ನಿರಾಕರಿಸುವುದಿಲ್ಲ ಅದನ್ನೂ ನಿರಾಕರಿಸುವುದಿಲ್ಲ. ಪರಲೋಕವಿಲ್ಲ ಎಂದು.... ಪರಲೋಕವಿದೆ ಮತ್ತು ಪರಲೋಕವಿಲ್ಲ ಎಂದು.... ಪರಲೋಕವಿಲ್ಲ ಮತ್ತು ಪರಲೋಕವಿಲ್ಲದೆಯು ಇಲ್ಲ.... ಯಾವ ಕಾರಣವೂ ಇಲ್ಲದೆ ಹುಟ್ಟುವ ಜೀವಿಗಳಿದ್ದಾರೆಯೇ.... ಯಾವ ಕಾರಣವೂ ಇಲ್ಲದೆ ಹುಟ್ಟುವ ಜೀವಿಗಳು ಇಲ್ಲವೇ.... ಯಾವ ಕಾರಣವೂ ಇಲ್ಲದೆ ಹುಟ್ಟುವ ಜೀವಿಗಳು ಯಾವ ಕಾರಣವೂ ಇಲ್ಲದೆ ಹುಟ್ಟುವ ಜೀವಿಗೆ ಎರಡು ಬಗೆಯೂ ಇವೆಯೇ.... ಯಾವ ಕಾರಣವೂ ಇಲ್ಲದೆ ಹುಟ್ಟುವ ಜೀವಿಗಳು ಇಲ್ಲ ಯಾವ ಕಾರಣವೂ ಇಲ್ಲದೆ ಹುಟ್ಟುವ ಜೀವಿಗಳಿಲ್ಲದೆಯೂ ಇಲ್ಲ.... ಕರ್ಮಗಳ ಫಲ ಉಂಟೆ.... ಕರ್ಮಗಳು ಫಲ ಹೊಂದುವುದಿಲ್ಲವೋ... ಕರ್ಮಗಳು ಫಲ ಹೊಂದುವುದೂ ಉಂಟು, ಫಲ ಹೊಂದದೇ ಇರುವುದೂ ಉಂಟು.... ಕರ್ಮಗಳು ಫಲ ಹೊಂದುವುದೂ ಇಲ್ಲ, ಫಲ ಹೊಂದದೇ ಇಲ್ಲ.... ಮರಣ ಹೊಂದಿದ ಮೇಲೆ ತಥಾಗತನು ಇರುತ್ತಾನೆಯೇ.... ಮರಣಹೊಂದಿದ ಮೇಲೆ ತಥಾಗತನು ಇರುವುದಿಲ್ಲವೇ.... ಮರಣ ಹೊಂದಿದ ಮೇಲೆ ತಥಾಗತನು ಇರುವುದು ಇಲ್ಲದಿರುವುದೂ ಎರಡೂ ಉಂಟೆ.... ಮರಣ ಹೊಂದಿದ ಮೇಲೆ ತಥಾಗತನು ಇರುವುದೂ ಇಲ್ಲದಿರುವುದೂ ಇಲ್ಲ ಎಂಬ ಎರಡು ಸ್ಥಿತಿಯೂ ಉಂಟೇ ಎಂದು ಕೇಳಿದರೆ ನನಗೆ ಹಾಗೆ ತೋರಿದರೆ ಮರಣ ಹೊಂದಿದ ಮೇಲೆ ತಥಾಗತನು ಇರುವುದಿಲ್ಲ ಅವನು ಇಲ್ಲದೆಯೂ ಇಲ್ಲ ಎಂದು ವಿವರಿಸಿ ಬಿಡುತ್ತೇನೆ. ಇದು ನನಗೆ ಒಪ್ಪಿಗೆಯಾಗದು. ಅದೂ ನನಗೆ ಒಪ್ಪಿಗೆಯಾಗದು. ಬೇರೆಯದೂ ಒಪ್ಪಿಗೆಯಾಗದು. ಇದನ್ನು ನಿರಾಕರಿಸುವುದಿಲ್ಲ ಅದನ್ನು ನಿರಾಕರಿಸುವುದಿಲ್ಲ.’ ಭಿಕ್ಷುಗಳೇ, ಪ್ರಶ್ನೆಗಳನ್ನು ಹಾಕಿದಾಗ ‘ ಇದೂ ಸರಿ ಅದೂ ಸರಿ’ ಎಂಬ ಮಾತುಗಳನ್ನಾಡುವ ಅಮರವಿಕ್ಖೇಪಿಕರಾದ ಸಮಣ ಬ್ರಾಹ್ಮಣರು ತಮ್ಮ ಇಬ್ಬಂದಿ ವಾದಕ್ಕೆ ಕೊಡುವ ನಾಲ್ಕನೆಯ ಆಧಾರವು ಇದು.
“ಭಿಕ್ಷುಗಳೇ, ಪ್ರಶ್ನೆಗಳನ್ನು ಹಾಕಿದಾಗ ‘ಅದೂ ಸರಿ ಇದೂ ಸರಿ’ ಎಂದು ಬುದ್ದಿವಂತಿಕೆಯ ಮಾತುಗಳನ್ನಾಡಿ ನುಣುಚಿಕೊಳ್ಳುವ ಅಮರವಿಕ್ಖೇಪಿಕರಾದ ಸಮಣ ಬ್ರಾಹ್ಮಣರು ತಮ್ಮ ವಾದಕ್ಕೆ ಕೊಡುವ ನಾಲ್ಕು ಆಧಾರಗಳು ಇವು. ಭಿಕ್ಷುಗಳೇ, ಪ್ರಶ್ನೆಗಳನ್ನು ಹಾಕಿದಾಗ ‘ಅದೂ ಸರಿ ಇದೂ ಸರಿ’ ಎಂದು ಬುದ್ದಿವಂತಿಕೆಯಿಂದ ಮಾತುಗಳನ್ನಾಡಿ ನುಣುಚಿಕೊಳ್ಳುವ ಅಮರವಿಕ್ಖೇಪಿಕರಾದ ಸಮಣ ಬ್ರಾಹ್ಮಣರು ಅವರು ಯಾರೇ ಆಗಿರಲಿ ಅವರು ತಮ್ಮ ವಾದವನ್ನು ಸಮರ್ಥಿಸಲು ಕೊಡುವ ಆಧಾರಗಳು ಈ ನಾಲ್ಕು ಮಾತ್ರ ಅಥವಾ ಇವುಗಳಲೊಂದು ಮಾತ್ರ ಮತ್ತಾವುದೂ ಇಲ್ಲ. “ಭಿಕ್ಷುಗಳೇ, ತಥಾಗತನಿಗೆ ಹಿಂದೆ ಹೇಳಿರುವುದೆಲ್ಲಾ ಚೆನ್ನಾಗಿ ಗೊತ್ತಿದೆ. ಈ ರೀತಿ ಗ್ರಹಿಸಿ, ಈ ರೀತಿ ಅರ್ಥಮಾಡಿ ಕೊಂಡಿರುವ ಮಿಥ್ಯಾ ದೃಷ್ಠಿಯುಳ್ಳವರು ಪುನರ್ ಜನ್ಮಕ್ಕೆ ಕಾರಣವಾದ ಸ್ಥಿತಿಯನ್ನು ಪಡೆಯುತ್ತಾರೆ ಎಂಬುದೂ ತಥಾಗತನಿಗೆ ಸ್ಪಷ್ಟವಾಗಿ ಗೊತ್ತಿದೆ. ಇವನು ಮೀರಿದ ಸತ್ಯಗಳು ಅವನಿಗೆ ಗೊತ್ತು. ಆದರೆ ಅವನು ಇವಾವುದಕ್ಕೂ ಅಂಟಿಕೊಳ್ಳುವುದಿಲ್ಲ. ಇವಕ್ಕೆ ಅಂಟಿಕೊಳ್ಳದ ಅವನು ತಾನೇ ಬಿಡುಗಡೆಯ ಮಾರ್ಗವನ್ನು ಅರಿತಿದ್ದಾನೆ. ಸಂವೇದನೆಗಳನ್ನೂ ಅವುಗಳು ಹುಟ್ಟುವ ಕಾರಣವನ್ನೂ ಅವುಗಳ ರುಚಿಯನ್ನೂ ಅವುಗಳ ಅಪಾಯವನ್ನೂ ಅವುಗಳನ್ನು ತ್ಯಜಿಸುವುದನ್ನೂ ಚೆನ್ನಾಗಿ ಅರಿತಿದ್ದಾನೆ. ‘ಭಿಕ್ಷುಗಳೇ, ತಥಾಗತನನ್ನು ಸ್ತುತಿಸುವಾಗ ಜನರು ಗಂಭೀರವೂ ಕಷ್ಟಪಟ್ಟು ಅರಿತುಕೊಳ್ಳಬೇಕಾದುದೂ ಕಷ್ಟಪಟ್ಟು ಪಡೆದು ಅನುಭವಿಸಬೇಕಾದುದೂ ಶಾಂತಿಯನ್ನು ತರುವಂಥದೂ ತರ್ಕವನ್ನು ಮೀರಿದುದೂ ನೈಪುಣ್ಯಪೂರಿತವಾದುದೂ ಜಾಣರು ತಿಳಿಯ ಬೇಕಾದುದೂ ತಥಾಗತನು ಸ್ವಪ್ರಯತ್ನದಿಂದ ಅರಿತು ಅನುಭಿವಿಸಿ ಪ್ರಕಾಶಪಡಿಸಿರುವಂಥದೂ ಆದ ಧರ್ಮದ ವರ್ಣನೆಯನ್ನೇ ಮಾಡುತ್ತಾರೆ.
ಕಾರ್ಯಕಾರಣಗಳಿಲ್ಲದೆ ಉದ್ಭವವಾಗಿದೆ ಎಂದು ವಾದಿಸುವವರು
ಭಿಕ್ಷುಗಳೇ ಆತ್ಮವೂ ಲೋಕವು ಇದ್ದಕ್ಕಿದ್ದಂತೆಯೇ ಉದ್ಭವಿಸಿದವು ಎಂಬ ವಾದವನ್ನು ಎರಡು ಆಧಾರಗಳಿಂದ ವಿವರಿಸುವ ಅಧಿಚ್ಚಸಮುಪನ್ನಿಕಾರೆಂಬ ಸಮಣ ಬ್ರಾಹ್ಮಣರಿದ್ದಾರೆ. ಆತ್ಮವೂ ಲೋಕವೂ ಇದ್ದಕ್ಕಿದಂತೆಯೇ ಉದ್ಭವಿಸಿದುವು ಎಂಬ ವಾದಕ್ಕೆ ಆ ಸಮಣ ಬ್ರಾಹ್ಮಣರು ಕೊಡುವ ಎರಡು ಆಧಾರಗಳು ಯಾವುದು?
ದಿಟ್ಠಿ-17 : 68. “ಭಿಕ್ಷುಗಳೇ, ಆಸಞ್ಞುಸತ್ತಾ ಎಂಬ ದೇವತೆಗಳಿದ್ದಾರೆ. ಈ ದೇವತೆಗಳು ಯಾವುದನ್ನು ಅರಿಯಲಾರರು. ಆದರೆ ಅವರಲ್ಲಿ ಅರಿಯುವ ಶಕ್ತಿ ಉದ್ಭವಿಸಿದ ಕೂಡಲೇ ಆ ಸ್ಥಿತಿಯಿಂದ ಪತನ ಹೊಂದುತ್ತಾರೆ. ಆ ಸ್ಥಿತಿಯಿಂದ ಚ್ಯುತಿ ಹೊಂದಿದ ಅಂಥ ಒಂದು ಜೀವಿಯು ಇಲ್ಲಿಗೆ ಬರುತ್ತಾನೆ. ಇಲ್ಲಿಗೆ ಬಂದು ಗೃಹಸ್ಥ ಜೀವನವನ್ನು ನಡೆಸಿ ಅನಗಾರಿಕನಾಗಿ ಮನೆಯನ್ನು ತೊರೆಯುತ್ತಾನೆ. ಅವನು ಅತಿಶ್ರಮದಿಂದ ನಿರಂತರ ಯತ್ನದಿಂದ ದಿನದಿನದ ಅಭ್ಯಾಸದಿಂದ ಯಾವಗಲೂ ಎಚ್ಚರದಿಂದಿರುವವನಾಗಿ ಸರಿಯಾದ ಮನಸ್ಸುಳ್ಳವನಾಗಿ ಶಾಂತಚಿತ್ತನಾಗಿ ಚೇತೋಸಮಾಧಿಯಲ್ಲಿದ್ದು ಚಿಂತನೆ ಮಾಡುತ್ತಾ ಹಿಂದಿನ ಸ್ಥಿತಿಯನ್ನು ಮಾತ್ರ (ಅಂದರೆ ಅರಿಯುವ ಶಕ್ತಿಯು ಬಂದ ಮೇಲಿನ ಸ್ಥಿತಿಯನ್ನು ಮಾತ್ರ ಸ್ಮರಿಸಿಕೊಳ್ಳುತ್ತಾನೆ. ಅದಕ್ಕೂ ಹಿಂದಿನ ಸ್ಥಿತಿಯನ್ನು ಸ್ಮರಿಸಿಕೊಳ್ಳಲಾರ. ಅವನಿಗೆ ಹೀಗನ್ನಿಸುತ್ತದೆ- ಆತ್ಮವೂ ಲೋಕವೂ ಇದ್ದಕ್ಕಿದ್ದಂತೆಯೇ ಉದ್ಭವಿಸಿತು. ಇದು ಹೇಗೆ? ನಾನು ಹಿಂದೆ (ಅರಿಯುವ ಶಕ್ತಿಯು ಬರುವ ಮೊದಲು) ಇರಲಿಲ್ಲ. ಹಿಂದೆ ಇರದಿದ್ದ ನಾನು ಈಗ ಇದ್ದೇನೆ; ಆತ್ಮವೂ ಲೋಕವು ಇದ್ದಕ್ಕಿದ್ದಂತೆಯೇ ಉದ್ಭವಿಸಿದವು ಎಂದು ವಾದಿಸುವ ಸಮಣ ಬ್ರಾಹ್ಮಣರು ತಮ್ಮ ಅಧಿಚ್ಚಸಮುಪ್ಪನ್ನವಾದಕ್ಕೆ ಕೊಡುವ ಮೊದಲನೆಯ ಆಧಾರವು ಇದು.
ದಿಟ್ಠಿ-18 : 69. “ಭಿಕ್ಷುಗಳೇ, ಆತ್ಮವೂ ಲೋಕವೂ ಇದ್ದಕ್ಕಿದ್ದಂತೆಯೇ ಉದ್ಬವಿಸಿದುವು ಎಂಬ ಅಧಿಚ್ಚಸಮುಪ್ಪನ್ನ ವಾದಕ್ಕೆ ಸಮಣ ಬ್ರಾಹ್ಮಣರು ಕೊಡುವ ಎರಡನೆಯ ಆಧಾರವು ಯಾವುದು? ಒಬ್ಬ ಸಮಣನೋ ಬ್ರಾಹ್ಮಣನೋ ತಾರ್ಕಿಕನೋ ಮೀಮಾಂಸಕಾರನೋ ಆಗಿರುತ್ತಾನೆ. ಅವನು ತರ್ಕವನ್ನೋ ಮೀಮಾಂಸವನ್ನೋ ಅನುಸರಿಸಿ ತನ್ನದೇ ಮಾರ್ಗವನ್ನು ಹಿಡಿದು ಹೀಗೆ ಅಂದುಕೊಳ್ಳುತ್ತಾನೆ- ‘ಆತ್ಮವೂ ಲೋಕವೂ ಇದ್ದಕ್ಕಿದ್ದಂತೆಯೇ ಉದ್ಭವಿಸಿವೆ.’ ಭಿಕ್ಷುಗಳೇ, ಆತ್ಮವೂ ಲೋಕವೂ ಇದ್ದಕ್ಕಿದ್ದಂತೆಯೇ ಉದ್ಭವಿಸಿದುವು ಎಂದು ವಾದಿಸುವ ಸಮಣ ಬ್ರಾಹ್ಮಣರು ತಮ್ಮ ಅಧಿಚ್ಚಸಮುಪ್ಪನ್ನ ವಾದಕ್ಕೆ ಕೊಡುವ ಎರಡನೆಯ ಆಧಾರವು ಇದು.
70 “ಭಿಕ್ಷುಗಳೇ, ಆತ್ಮವೂ ಲೋಕವೂ ಇದ್ದಕ್ಕಿದ್ದಂತೆಯೇ ಉದ್ಬವಿಸಿದುವು ಎಂದು ವಾದಿಸುವ ಅಧಿಚ್ಚಸಮುಪ್ಪನ್ನಿಕ ಬ್ರಾಹ್ಮಣರು ತಮ್ಮ ವಾದವನ್ನು ಈ ಎರಡು ಆಧಾರಗಳಿಂದ ವಿವರಿಸುತ್ತಾರೆ. ಆತ್ಮವೂ ಲೋಕವೂ ಇದ್ದಕ್ಕಿದ್ದಂತೆಯೇ ಉದ್ಬವಿಸಿದುವು ಎಂದು ವಾದಿಸುವ ಅಧಿಚ್ಚಸಮುಪ್ಪನ್ನಿಕರಾದ ಬ್ರಾಹ್ಮಣರು ಯಾರೇ ಆಗಿರಲಿ ಅವರು ತಮ್ಮ ವಾದವನ್ನು ಸಮರ್ಥಿಸಲು ಕೊಡುವ ಆಧಾರಗಳು ಈ ಎರಡು ಮಾತ್ರ ಅಥವಾ ಇವುಗಳಲ್ಲೊಂದು ಮಾತ್ರ, ಮತ್ತಾವುದೂ ಇಲ್ಲ. “ಭಿಕ್ಷುಗಳೇ, ತಥಾಗತನಿಗೆ ಹಿಂದೆ ಹೇಳಿರುವುದೆಲ್ಲಾ ಚೆನ್ನಾಗಿ ಗೊತ್ತಿದೆ. ಈ ರೀತಿ ಗ್ರಹಿಸಿ ಈ ರೀತಿ ಅರ್ಥ ಮಾಡಕೊಂಡಿರುವ ಮಿಥ್ಯಾ ದೃಷ್ಠಿಯುಳ್ಳವರು ಪುನರ್ ಜನ್ಮಕ್ಕೆ ಕಾರಣವಾದ ಸ್ಥಿತಿಯನ್ನು ಪಡೆಯುತ್ತಾರೆ ಎಂಬುದೂ ತಥಾಗತನಿಗೆ ಸ್ಪಷ್ಟವಾಗಿ ಗೊತ್ತಿದೆ. ಇವನ್ನೂ ಮೀರಿದ ಸತ್ಯಗಳು ತಥಾಗತನಿಗೆ ಗೊತ್ತು. ಆದರೆ ಅವನು ಇವಾವುದಕ್ಕೂ ಅಂಟಿಕೊಳ್ಳುವುದಿಲ್ಲ. ಇವಕ್ಕೆ ಅಂಟಿಕೊಳ್ಳದ ಅವನು ತಾನೇ ಬಿಡುಗಡೆಯ ಮಾರ್ಗವನ್ನು ಅರಿತಿದ್ದಾನೆ. ಸಂವೇದನೆಗಳನ್ನೂ ಅವುಗಳು ಹುಟ್ಟುವ ಕಾರಣವನ್ನೂ ಅವುಗಳ ರುಚಿಯನ್ನೂ ಅವುಗಳ ಅಪಾಯವನ್ನೂ ಅವುಗಳನ್ನು ತ್ಯಜಿಸುವುದನ್ನೂ ಚೆನ್ನಾಗಿ ಅರಿತ್ತಿದ್ದಾನೆ. “ಭಿಕ್ಷುಗಳೇ, ತಥಾಗತನನ್ನು ಸ್ತುತಿಸುವಾಗ ಜನರು ಗಂಭೀರವೂ ಕಷ್ಟ ಪಟ್ಟು ಅರಿತುಕೊಳ್ಳಬೇಕಾದುದೂ ಕಷ್ಟಪಟ್ಟು ಪಡೆದು ಅನುಭವಿಸಬೇಕಾದುದೂ ಶಾಂತಿಯನ್ನು ತರುವಂಥದೂ ತರ್ಕವನ್ನು ಮೀರಿದುದೂ ನೈಪುಣ್ಯಪೂರಿತವಾದುದೂ ಜಾಣರು ತಿಳಿಯಬೇಕಾದುದೂ ತಥಾಗತನು ಸ್ವಪ್ರಯತ್ನದಿಂದ ಅರಿತು ಪ್ರಕಾಶಪಡಿಸಿರುವಂಥದೂ ಆದ ಧರ್ಮದ ವರ್ಣನೆಯನ್ನೇ ಮಾಡುತ್ತಾರೆ.
“ಭಿಕ್ಷುಗಳೇ, ಪ್ರಪ್ರಥಮ ಕಲ್ಪದ ಬಗೆಗೆ ಪೂರ್ವ ವಿಶ್ವಾಸ ಉಳ್ಳವರಾಗಿ ಅದರ ಆರಂಭವನ್ನು ಅನೇಕ ವಾದಗಳ ಚೌಕಟ್ಟಿನಲ್ಲಿ ವಿವರಿಸುವ ಸಮಣ ಬ್ರಾಹ್ಮಣರು ತಮ್ಮ ವಾದಗಳಿಗೆ ಕೊಡುವ ಆಧಾರಗಳು ಈ ಹದಿನೆಂಟು. ಭಿಕ್ಷುಗಳೇ ಪ್ರಪ್ರಥಮ ಕಲ್ಪದ ಬಗೆಗೆ ಪೂರ್ವ ವಿಶ್ವಾಸ ಉಳ್ಳವರಾಗಿ ಅದು ಹೇಗೆ ಆರಂಭವಾಯಿತು ಎಂಬುದನ್ನು ಅನೇಕ ವಾದಗಳ ಚೌಕಟ್ಟಿನಲ್ಲಿ ವಿವರಿಸುವ ಯಾವ ಸಮಣ ಬ್ರಾಹ್ಮಣರೇ ಇರಲಿ ಅವರು ಕೊಡುವ ಆಧಾರಗಳು ಈ ಹದಿನೆಂಟು ಮಾತ್ರ. ಅಥವಾ ಇವುಗಳಲ್ಲೊಂದು ಮಾತ್ರ. ಮತ್ತಾವುದೂ ಇಲ್ಲ.
“ಭಿಕ್ಷುಗಳೇ, ತಥಾಗತನಿಗೆ ಹಿಂದೆ ಹೇಳಿರುವುದೆಲ್ಲಾ ಚೆನ್ನಾಗಿ ಗೊತ್ತಿದೆ. ಈ ರೀತಿ ಗ್ರಹಿಸಿ ಈ ರೀತಿ ಅರ್ಥ ಮಾಡಿಕೊಂಡಿರುವ ಮಿಥ್ಯಾ ದೃಷ್ಟಿಯುಳ್ಳವರು ಪುನರ್ಜನ್ಮಕ್ಕೆ ಕಾರಣವಾದ ಸ್ಥಿತಿಯನ್ನು ಪಡೆಯುತ್ತಾರೆ’ ಎಂಬುದೂ ತಥಾಗತನಿಗೆ ಸ್ವಷ್ಟವಾಗಿ ಗೊತ್ತಿದೆ. ಇವನ್ನು ಮೀರಿದ ಸತ್ಯಗಳೂ ತಥಾಗತನಿಗೆ ಗೊತ್ತು. ಆದರೆ ಅವನು ಇವಾವುದಕ್ಕೂ ಅಂಟಿಕೊಳ್ಳುವುದಿಲ್ಲ. ಇವಕ್ಕೆ ಅಂಟಿಕೊಳ್ಳದ ಅವನು ತಾನೇ ಬಿಡುಗಡೆಯ ಮಾರ್ಗವನ್ನು ಅರಿತಿದ್ದಾನೆ. ಸಂವೇದನೆಗಳನ್ನೂ ಅವುಗಳು ಹುಟ್ಟುವ ಕಾರಣವನ್ನೂ ಅವುಗಳ ರುಚಿಯನ್ನೂ ಅವುಗಳ ಅಪಾಯವನ್ನು ಅವುಗಳನ್ನು ತ್ಯಜಿಸುವುದನ್ನೂ ಚೆನ್ನಾಗಿ ಅರಿತಿದ್ದಾನೆ.
“ಭಿಕ್ಷುಗಳೇ, ತಥಾಗತನನ್ನು ಸ್ತುತಿಸುವಾಗ ಜನರು ಗಂಭೀರವೂ ಕಷ್ಟ ಪಟ್ಟು ಅರಿತುಕೊಳ್ಳಬೇಕಾದುದೂ ಕಷ್ಟಪಟ್ಟು ಪಡೆದು ಅನುಭವಿಸಬೇಕಾದುದೂ ಶಾಂತಿಯನ್ನು ತರುವಂಥದೂ ತರ್ಕವನ್ನು ಮೀರಿದುದೂ ನೈಪುಣ್ಯಪೂರಿತವಾದುದೂ ಜಾಣರು ತಿಳಿಯಬೇಕಾದುದೂ ತಥಾಗತನು ಸ್ವಪ್ರಯತ್ನದಿಂದ ಅರಿತು ಪ್ರಕಾಶಪಡಿಸಿರುವಂಥದೂ ಆದ ಧರ್ಮದ ವರ್ಣನೆಯನ್ನೇ ಮಾಡುತ್ತಾರೆ.
ಸೂತ್ರದ ಎರಡನೆಯ ಭಾಗ
ಭವಿಷ್ಯ ಕಾಲದ ಬಗ್ಗೆ
“ಭಿಕ್ಷುಗಳೇ, ಮುಂದಿನ (ಅಪರ) ಕಲ್ಪಗಳ ಬಗಗೆ ಪೂರ್ವ ವಿಶ್ವಾಸ ಉಳ್ಳವರಾಗಿರುವ ಸಮಣ ಬ್ರಾಹ್ಮಣರು ಅನೇಕ ವಾದಗಳ ಚೌಕಟ್ಟಿನಲ್ಲಿ ಅದರ ಆರಂಭವನ್ನು ವಿವರಿಸಲು ನಲವತ್ತನಾಲ್ಕು ಆಧಾರಗಳನ್ನು ಕೊಡುತ್ತಾರೆ. “ಅಪರ ಕಲ್ಪಗಳ ಬಗೆಗೆ ಪೂರ್ವ ವಿಶ್ವಾಸ ಉಳ್ಳವರಾಗಿರುವ ಆ ಸಮಣ ಬ್ರಾಹ್ಮಣರು ಅಪರ ಕಲ್ಪಗಳ ಆರಂಭವನ್ನು ವಿವರಿಸಲು ಕೊಡುವ ನಲವತ್ತನಾಲ್ಕು ಆಧಾರಗಳು ಯಾವುವು?
ಸಞ್ಞಾ ಅಥವಾ ಗ್ರಹಿಕೆಯು ಅಮರವೆಂದು ವಾದಿಸುವವರು
ಭಿಕ್ಷುಗಳೇ, ಸತ್ತ ಮೇಲೆಯೂ ಸ್ಥಿತಿಯಿದ್ದು ಆ ಸ್ಥಿತಿಯಲ್ಲಿರುವ ಆತ್ಮವು ಅರಿಯುವ ಶಕ್ತಿಯನ್ನು ಪಡೆದಿರುತ್ತದೆ. ಸತ್ತ ಮೇಲೆಯೂ ಆರಿಯುವ ಶಕ್ತಿಯನ್ನು ಪಡೆದಿರುವ ಆತ್ಮ ವಿದೆಯೆಂದು ನಂಬಿರುವ ಉದ್ಧಮಾತನಿಕಾ ಸಞ್ಞೀವಾದಾರೆನ್ನಿಸಿಕೊಂಡಿರುವ ಆ ಸಮಣ ಬ್ರಾಹ್ಮಣರು ತಮ್ಮ ವಾದಕ್ಕೆ ಹದಿನಾರು ಆಧಾರಗಳನ್ನು ಕೊಡುತ್ತಾರೆ. ಉದ್ಧಮಾಘಾತನಿಕಾ ಸಞ್ಞೀವಾದಿಗಳಾದ ಆ ಸಮಣ ಬ್ರಾಹ್ಮಣರು ತಮ್ಮ ವಾದಕ್ಕೆ ಕೊಡುವ ಹದಿನಾರು ಆಧಾರಗಳಾವುವು?
ದಿಟ್ಠಿ-19 ರಿಂದ 34 : 76. “1ಸತ್ತ ಮೇಲೆಯೂ ಉಳಿಯುವ ಮತ್ತು ಗ್ರಹಿಸುವ ಶಕ್ತಿಯನ್ನು ಪಡೆದಿರುವ ಆತ್ಮವು ರೂಪವನ್ನು ಹೊಂದಿರುತ್ತದೆ’ ಎಂದು ಆ ಸಮಣ ಬ್ರಾಹ್ಮಣರೂ ವಿವರಿಸುತ್ತಾರೆ. 2ಸತ್ತ ಮೇಲೆಯೂ ಉಳಿಯುವ ಮತ್ತು ಗ್ರಹಿಸುವ ಶಕ್ತಿಯನ್ನು ಪಡೆದಿರುವ ಆತ್ಮವು ಅರೂಪಿಯಾಗಿರುತ್ತದೆ ಎಂದೂ ಆ ಸಮಣಬ್ರಾಹ್ಮಣರು ವಿವರಿಸುತ್ತಾರೆ. 3ಸತ್ತಮೇಲೆಯೂ ಉಳಿಯುವ ಮತ್ತು ಗ್ರಹಿಸುವ ಶಕ್ತಿಯನ್ನು ಪಡೆದಿರುವ ಆತ್ಮವು ರೂಪಿಯೂ ಆಗಿರುತ್ತದೆ ಅರೂಪಿಯೂ ಆಗಿರುತ್ತದೆ.... 4ಸತ್ತ ಮೇಲೆಯು ಉಳಿಯುವ ಮತ್ತು ಗ್ರಹಿಸುವ ಶಕ್ತಿಯನ್ನು ಪಡೆದಿರುವ ಆತ್ಮವು ರೂಪಿಯೂ ಆಗಿರುವುದಿಲ್ಲ ಆರೂಪಿಯೂ ಆಗಿರುವುದಿಲ್ಲ.... 5ಸತ್ತಮೇಲೆಯು ಉಳಿಯುವ ಮತ್ತು ಗ್ರಹಿಸುವ ಶಕ್ತಿಯನ್ನು ಪಡೆದಿರುವ ಆತ್ಮಕ್ಕೆ ಅಂತ್ಯವಿರುತ್ತದೆ.... 6ಸತ್ತಮೇಲೆಯೂ ಉಳಿಯುವ ಮತ್ತು ಗ್ರಹಿಸುವ ಶಕ್ತಿಯನ್ನು ಪಡೆದಿರುವ ಆತ್ಮಕ್ಕೆ ಅಂತ್ಯವಿರುವುದಿಲ್ಲ.... 7ಸತ್ತಮೇಲೆಯು ಉಳಿಯುವ ಮತ್ತು ಗ್ರಹಿಸುವ ಶಕ್ತಿಯನ್ನು ಪಡೆದಿರುವ ಆತ್ಮಕ್ಕೆ ಅಂತ್ಯವೂ ಇರುತ್ತದೆ ಮತ್ತು ಅದು ಅನಂತವೂ ಆಗಿರುತ್ತದೆ.... 8ಆತ್ಮಕ್ಕೆ ಅಂತ್ಯವು ಇರುವುದಿಲ್ಲ ಮತ್ತು ಅನಂತವು ಆಗಿರುವುದಿಲ್ಲ. ಸತ್ತಮೇಲೆಯು ಉಳಿಯುವ ಮತ್ತು ಗ್ರಹಿಸುವ ಶಕ್ತಿಯನ್ನು ಪಡೆದಿರುವ ಆತ್ಮವು ಒಂದೇ ಬಗೆಯ ಅರಿವನ್ನು ಹೊಂದಿರುತ್ತದೆ.... 9ಸತ್ತಮೇಲೆಯು ಉಳಿಯುವ ಮತ್ತು ಗ್ರಹಿಸುವ ಶಕ್ತಿಯನ್ನು ಪಡೆದಿರುವ ಆತ್ಮ ನಾನಾ ಬಗೆಯ ಅರಿವನ್ನು ಹೊಂದಿರುತ್ತದೆ.... 10ಸತ್ತಮೇಲೆಯು ಉಳಿಯುವ ಮತ್ತು ಗ್ರಹಿಸುವ ಶಕ್ತಿಯನ್ನು ಪಡೆದಿರುವ ಆತ್ಮವು ಮಿತವಾದ ಅರಿವನ್ನು ಹೊಂದಿರುತ್ತದೆ.... 11ಸತ್ತಮೇಲೆಯು ಉಳಿಯುವ ಮತ್ತು ಗ್ರಹಿಸುವ ಶಕ್ತಿಯನ್ನು ಪಡೆದಿರುವ ಆತ್ಮವು ಅಮಿತವಾದ ಅರಿವನ್ನು ಹೊಂದಿರುತ್ತದೆ. 12ಸತ್ತಮೇಲೆಯು ಉಳಿಯುವ ಮತ್ತು ಗ್ರಹಿಸುವ ಶಕ್ತಿಯನ್ನು ಪಡೆದಿರುವ ಆತ್ಮವು ಸದಾ ಸುಖಿಯಾಗಿರುತ್ತದೆ.... 13ಸತ್ತಮೇಲೆಯು ಉಳಿಯುವ ಮತ್ತು ಗ್ರಹಿಸುವ ಶಕ್ತಿಯನ್ನು ಪಡೆದಿರುವ ಆತ್ಮವು ಸದಾ ದುಃಖಿಯಾಗಿರುತ್ತದೆ.... 14ಸತ್ತಮೇಲೆಯು ಉಳಿಯುವ ಮತ್ತು ಗ್ರಹಿಸುವ ಶಕ್ತಿಯನ್ನು ಪಡೆದಿರುವ ಆತ್ಮಕ್ಕೆ ಸುಖ ದುಃಖಗಳೆರಡೂ ಇರುತ್ತವೆ.... 15ಸತ್ತಮೇಲೆಯು ಉಳಿಯುವ ಮತ್ತು ಗ್ರಹಿಸುವ ಶಕ್ತಿಯನ್ನು ಪಡೆದಿರುವ ಆತ್ಮಕ್ಕೆ ಸುಖದುಃಖಗಳೆರಡೂ ಇರುವುದಿಲ್ಲ’ ಎಂದು ಆ ಸಮಣ ಬ್ರಾಹ್ಮಣರು ವಿವರಿಸುತ್ತಾರೆ.
“ಭಿಕ್ಷುಗಳೇ, ಸತ್ತಮೇಲೆಯು ಆತ್ಮವು ಉಳಿದು ಅರಿಯುವ ಶಕ್ತಿಯನ್ನು ಪಡೆದಿರುತ್ತದೆ ಎಂದು ಹೇಳುವ ಉದ್ಧಮಾಘಾತನಿಕಾ ಸಞ್ಞೀವಾದಿಗಳಾದ ಸಮಣ ಬ್ರಾಹ್ಮಣರು ತಮ್ಮ ವಾದವನ್ನು ವಿವರಿಸಲು ಈ ಹದಿನಾರು ವಾದಗಳನ್ನು ಕೊಡುತ್ತಾರೆ. ಸತ್ತಮೇಲೆಯು ಆತ್ಮವು ಉಳಿದು ಅರಿಯುವ ಶಕ್ತಿಯನ್ನು ಪಡೆದಿರುತ್ತದೆ ಎಂದು ವಾದಿಸುವ ಉದ್ಧಮಾಘಾತನಿಕಾ ಸಞ್ಞೀವಾದಿಗಳಾದ ಸಮಣ ಬ್ರಾಹ್ಮಣರು ಯಾರೇ ಇರಲಿ ಅವರು ತಮ್ಮ ವಾದಕ್ಕೆ ಕೊಡುವ ಆಧಾರಗಳು ಈ ಹದಿನಾರು ಮಾತ್ರ. ಅಥವಾ ಇವುಗಳಲ್ಲೊಂದು ಮಾತ್ರ. ಬೇರೆ ಯಾವುದೂ ಇಲ್ಲ. “ಭಿಕ್ಷುಗಳೇ, ತಥಾಗತನಿಗೆ ಹಿಂದೆ ಹೇಳಿರುವುದೆಲ್ಲಾ ಚೆನ್ನಾಗಿ ಗೊತ್ತಿದೆ. ಧರ್ಮದ ವರ್ಣನೆಯನ್ನೇ ಮಾಡುತ್ತಾರೆ.
ಸಞ್ಞಾ ಅಥವಾ ಗ್ರಹಿಕೆಯು ಅಮರವಲ್ಲ ಎಂದು ವಾದಿಸುವವರು
“ಭಿಕ್ಷುಗಳೇ, ಸತ್ತಮೇಲೆಯು ಉಳಿಯುವ ಆತ್ಮಕ್ಕೆ ಅರಿಯುವ ಶಕ್ತಿ ಇರುವುದಿಲ್ಲ ಎಂದು ವಾದಿಸುವ ಉದ್ಧಮಾಘಾತನಿಕಾ ಸಞ್ಞೀವಾದೀ ಎಂಬ ಸಮಣ ಬ್ರಾಹ್ಮಣರು ಕೆಲವರಿದ್ದಾರೆ. ಆ ಸಮಣ ಬ್ರಾಹ್ಮಣರು ತಮ್ಮ ವಾದವನ್ನು 8 ಆಧಾರಗಳಿಂದ ವಿವರಿಸುತ್ತಾರೆ. ಉದ್ಧಮಾಘಾತನಿಕಾ ಅಸಞ್ಞೀವಾದಿಗಳಾದ ಆ ಸಮಣ ಬ್ರಾಹ್ಮಣರು ತಮ್ಮ ವಾದಕ್ಕೆ ಕೊಡುವ ಎಂಟು ಆಧಾರಗಳಾವುವು?
ದಿಟ್ಠಿ-35 ರಿಂದ 42 : 79. “ಸತ್ತಮೇಲೆಯು ಉಳಿಯುವ ಆದರೆ ಅರಿಯುವ ಶಕ್ತಿ ಇಲ್ಲದಿರುವ ಆತ್ಮವು ರೂಪವನ್ನು ಹೊಂದಿರುತ್ತದೆ’ ಎಂದು ಆ ಸಮಣ ಬ್ರಾಹ್ಮಣರು ವಿವರಿಸುತ್ತಾರೆ. ಸತ್ತಮೇಲೆಯು ಉಳಿಯುವ ಆದರೆ ಅರಿಯುವ ಶಕ್ತಿಯನ್ನು ಪಡೆಯದಿರುವ ಆತ್ಮವು ಆರೂಪಿಯಾಗಿರುತ್ತದೆ’ ಎಂದು ಆ ಸಮಣ ಬ್ರಾಹ್ಮಣರು ವಿವರಿಸುತ್ತಾರೆ. ‘ಸತ್ತಮೇಲೆಯು ಉಳಿಯುವ ಆದರೆ ಅರಿಯುವ ಶಕ್ತಿ ಇಲ್ಲದಿರುವ ಆತ್ಮವು ರೂಪಿಯೂ ಆಗಿರುತ್ತದೆ ಆರೂಪಿಯೂ ಆಗಿರುತ್ತದೆ.... ‘ಸತ್ತಮೇಲೆಯು ಉಳಿಯುವ ಆದರೆ ಅರಿಯುವ ಶಕ್ತಿ ಇಲ್ಲದಿರುವ ಆತ್ಮವು ರೂಪಿಯೂ ಆಗಿರುವುದಿಲ್ಲ ಆರೂಪಿಯೂ ಆಗಿರುವುದಿಲ್ಲ.... ‘ಸತ್ತಮೇಲೆಯೂ ಉಳಿದು ಅರಿಯುವ ಶಕ್ತಿ ಇಲ್ಲದಿರುವ ಆತ್ಮಕ್ಕೆ ಅಂತ್ಯವಿರುತ್ತದೆ.... ‘ಸತ್ತಮೇಲೆಯೂ ಉಳಿದು ಅರಿಯುವ ಶಕ್ತಿ ಇಲ್ಲದ ಆತ್ಮಕ್ಕೆ ಅಂತ್ಯವಿರುವುದಿಲ್ಲ.... ‘ಸತ್ತಮೇಲೆಯು ಉಳಿಯುವ ಆದರೆ ಅರಿಯುವ ಶಕ್ತಿ ಇಲ್ಲದ ಆತ್ಮಕ್ಕೆ ಅಂತ್ಯವು ಇರುತ್ತದೆ ಮತ್ತು ಅದು ಅನಂತವೂ ಆಗಿರುತ್ತದೆ... ‘ಸತ್ತಮೇಲೆಯು ಉಳಿದು ಅರಿಯುವ ಶಕ್ತಿ ಇಲ್ಲದ ಆತ್ಮವು ಅನಂತವೂ ಆಗಿರುವುದಿಲ್ಲ. ಅದಕ್ಕೆ ಅಂತ್ಯವೂ ಇರುವುದಿಲ್ಲ. ಎಂದು ಆ ಸಮಣ ಬ್ರಾಹ್ಮಣರು ವಿವರಿಸುತ್ತಾರೆ.
“ಭಿಕ್ಷುಗಳೇ, ‘ಸತ್ತಮೇಲೆಯೂ ಉಳಿಯುವ ಆತ್ಮಕ್ಕೆ ಅರಿಯುವ ಶಕ್ತಿ ಇರುವುದಿಲ್ಲ ಎಂದು ಹೇಳುವ ಉದ್ಧಮಾಘಾತನಿಕಾ ಅಸಞ್ಞೀವಾದಿಗಳಾದ ಸಮಣ ಬ್ರಾಹ್ಮಣರು ತಮ್ಮ ವಾದವನ್ನು ವಿವರಿಸಲು ಈ ಎಂಟು ಅಧಾರಗಳನ್ನು ಕೊಡುತ್ತಾರೆ. ಸತ್ತಮೇಲೆಯು ಉಳಿಯುವ ಆತ್ಮಕ್ಕೆ ಅರಿಯುವ ಶಕ್ತಿ ಇರುವುದಿಲ್ಲ ಎಂದು ಹೇಳುವ ಉದ್ಧಮಾಘಾತನಿಕಾ ಅಸಞ್ಞೀವಾದಿಗಳಾದ ಸಮಣ ಬ್ರಾಹ್ಮಣರು ಯಾರೇ ಇರಲಿ ಅವರು ತಮ್ಮ ವಾದಕ್ಕೆ ಕೊಡುವ ಆಧಾರಗಳು ಈ ಎಂಟು ಮಾತ್ರ. ಅಥವಾ ಇವುಗಳಲ್ಲೊಂದು ಮಾತ್ರ. “ಭಿಕ್ಷುಗಳೇ, ತಥಾಗತನಿಗೆ ಹಿಂದೆ ಹೇಳಿರುವುದೆಲ್ಲಾ ಚೆನ್ನಾಗಿ ಗೊತ್ತಿದೆ.... ಧರ್ಮದ ವರ್ಣನೆಯನ್ನೇ ಮಾಡುತ್ತಾರೆ.
ಸಞ್ಞಾ ಅಥವಾ ಗ್ರಹಿಕೆಯು ಅಮರವು ಮತ್ತು ಅಮರವಲ್ಲ ಎಂದು ವಾದಿಸುವವರು
“ಭಿಕ್ಷುಗಳೇ, ‘ಸತ್ತಮೇಲೆಯೂ ಆತ್ಮವಿರುತ್ತದೆ ಆದರೆ ಅದಕ್ಕೆ ಅರಿಯುವ ಶಕ್ತಿ ಇರುವುದಿಲ್ಲ ಅರಿಯುವ ಶಕ್ತಿ ಇಲ್ಲದೆಯೂ ಇರುವುದಿಲ್ಲ ಎಂದು ವಾದಿಸುವ ಉದ್ಧಮಾಘಾತನಿಕಾ ನೇವಸಞ್ಞೆನಾಸಞ್ಞೀವಾದಿಗಳೆಂಬ ಕೆಲವು ಸಮಣ ಬ್ರಾಹ್ಮಣರು ಇದ್ದಾರೆ. ಆ ಸಮಣ ಬ್ರಾಹ್ಮಣರು ತಮ್ಮ ಉದ್ಧಮಾಘಾತನಿಕಾ ವಾದವನ್ನು ಎಂಟು ಅಧಾರಗಳಿಂದ ಕೊಡುತ್ತಾರೆ. ಉದ್ಧಮಾಘಾತನಿಕಾ ನೇವಸಞ್ಞೆನಾಸಞ್ಞೀವಾದಿಗಳಾದ ಆ ಸಮಣ ಬ್ರಾಹ್ಮಣರು ತಮ್ಮ ವಾದಕ್ಕೆ ಕೊಡುವ ಎಂಟು ಆಧಾರಗಳಾವುವು?.
ದಿಟ್ಠಿ-43 ರಿಂದ 50 : 82. “‘ಸತ್ತಮೇಲೆಯು ಉಳಿದು ಗ್ರಹಿಸುವ ಶಕ್ತಿಯೂ ಮತ್ತು ಗ್ರಹಿಸದೆ ಇರುವುದು, ಇವೆರಡೂ ಇಲ್ಲದೆ ಇರುವ ಆತ್ಮವು ರೂಪವನ್ನು ಹೊಂದಿರುತ್ತದೆ’ ಎಂದು ಆ ಸಮಣ ಬ್ರಾಹ್ಮಣರು ವಿವರಿಸುತ್ತಾರೆ. ‘ಸತ್ತಮೇಲೆಯು ಉಳಿದು ಗ್ರಹಿಸುವ ಶಕ್ತಿಯೂ ಇಲ್ಲದೆ ಇರುವ ಆತ್ಮವು ಅರೂಪಿಯಾಗಿರುತ್ತದೆ’ ಎಂದು ಆ ಸಮಣ ಬ್ರಾಹ್ಮಣರು ವಿವರಿಸುತ್ತಾರೆ.... ರೂಪಿಯೂ ಆಗಿರುತ್ತದೆ ಆರೂಪಿಯೂ ಆಗಿರುತ್ತದೆ.... ರೂಪಿಯೂ ಆಗಿರುವುದಿಲ್ಲ ಆರೂಪಿಯೂ ಆಗಿರುವುದಿಲ್ಲ.... ಆತ್ಮಕ್ಕೆ ಅಂತ್ಯವಿರುತ್ತದೆ ಅಂತ್ಯವಿರುವುದಿಲ್ಲ.... ಅಂತ್ಯವು ಇರುತ್ತದೆ ಅನಂತವೂ ಆಗಿರುತ್ತದೆ.... ಆತ್ಮವು ಅನಂತವೂ ಆಗಿರುವುದಿಲ್ಲ ಅದಕ್ಕೆ ಅಂತ್ಯವೂ ಇರುವುದಿಲ್ಲ’ ಎಂದು ಆ ಸಮಣ ಬ್ರಾಹ್ಮಣರು ವಿವರಿಸುತ್ತಾರೆ.
ಭಿಕ್ಷುಗಳೇ, ‘ಸತ್ತಮೇಲೆಯೂ ಆತ್ಮವಿರುತ್ತದೆ ಆದರೆ ಅದಕ್ಕೆ ಗ್ರಹಿಸುವ ಶಕ್ತಿಯೂ ಇರುವುದಿಲ್ಲ ಗ್ರಹಿಸುವ ಶಕ್ತಿ ಇಲ್ಲದೆಯೂ ಇರುವುದಿಲ್ಲ ಎಂದು ವಾದಿಸುವ ಉದ್ಧಮಾಘಾತನಿಕಾ ಸಞ್ಞೀವಾದಿಗಳಾದ ಸಮಣ ಬ್ರಾಹ್ಮಣರು ತಮ್ಮ ವಾದವನ್ನು ವಿವರಿಸಲು ಎಂಟು ಅಧಾರಗಳನ್ನು ಕೊಡುತ್ತಾರೆ. ಉದ್ಧಮಾಘಾತನಿಕಾ ನೇವಸಞ್ಞೆನಾ ಸಞ್ಞೀವಾದಿಗಳಾದ ಸಮಣ ಬ್ರಾಹ್ಮಣರು ಯಾರೇ ಇರಲು ಅವರು ತಮ್ಮ ವಾದಕ್ಕೆ ಕೊಡುವ ಆಧಾರಗಳು ಈ ಎಂಟು ಮಾತ್ರ. ಅಥವಾ ಇವುಗಳಲ್ಲೊಂದು ಮಾತ್ರ. ಬೇರಾವುದೂ ಇಲ್ಲ. “ಭಿಕ್ಷುಗಳೇ, ತಥಾಗತನಿಗೆ ಹಿಂದೆ ಹೇಳಿರುವುದೆಲ್ಲಾ ಗೊತ್ತಿದೆ.... ಧರ್ಮದ ವರ್ಣನೆಯನ್ನೇ ಮಾಡುತ್ತಾರೆ.
ಅಶಾಶ್ವತವಾದಿಗಳು
“ಶಾಂತಿ ಭಿಕ್ಷುಗಳೇ, ಎಚ್ಚರದಿಂದಿರುವ ಜೀವಿಯೊಂದು ಛಿದ್ರ ಛಿದ್ರವಾಗಿ ವಿನಾಶವಾಗಿ ವಿಭಾಗವಾಗುತ್ತವೆ ಎಂದು ಏಳು ಆಧಾರಗಳಿಂದ ವಿವರಿಸುವ ಉಚ್ಛೇದವಾದಿಗಳೆಂಬ ಕೆಲವು ಸಮಣ ಬ್ರಾಹ್ಮಣರಿದ್ದಾರೆ. ಆ ಸಮಣ ಬ್ರಾಹ್ಮಣರು ಜೀವಿಯೊಂದು ಛಿದ್ರ ಛಿದ್ರವಾಗಿ ವಿನಾಶ ಹೊಂದಿ ವಿಭಾಗವಾಗುತ್ತವೆ ಎಂಬ ಉಚ್ಚೇದ ವಾದಕ್ಕೆ ಕೊಡುವ ಏಳು ಆಧಾರಗಳು ಯಾವುವು?
ದಿಟ್ಠಿ-51 : 85. “ಇಲ್ಲಿ ಭಿಕ್ಷುಗಳೇ, ಅಂಥ ಒಬ್ಬ ಸಮಣನೋ ಬ್ರಾಹ್ಮಣನೋ ಈ ಬಗೆಯ ದೃಷ್ಠಿಯನ್ನು ಹೊಂದಿ ಈ ರೀತಿ ವಾದಿಸುತ್ತಾನೆ- ತಾಯಿ ತಂದೆಯರಿಂದ ಹುಟ್ಟುವ ಈ ಆತ್ಮವು ರೂಪವುಳ್ಳದ್ದಾಗಿ ನಾಲ್ಕು ಮಹಾ ಭೂತಗಳಿಂದ ಮಾಡಲ್ಪಟ್ಟುದಾಗಿದೆ. ಮರಣಾನಂತರ ದೇಹವು ಛಿದ್ರ ಛಿದ್ರವಾಗಿ ವಿಭಾಗಹೊಂದಿ ವಿನಾಶವಾಗಿ ಇಲ್ಲವಾಗುತ್ತದೆ. ಈ ಕಾರಣದಿಂದ ಆತ್ಮವೂ ಛಿದ್ರ ಛಿದ್ರವಾಗಿ ಬಿಡುತ್ತದೆ’, ಹೀಗೆ ಅವರು ಜೀವಿಯು ಛಿದ್ರ ಛಿದ್ರವಾಗಿ ವಿಭಾಗ ಹೊಂದಿ ವಿನಾಶವಾಗುತ್ತದೆ ಎಂದು ವಿವರಿಸುತ್ತಾರೆ.
ದಿಟ್ಠಿ-52 : 86. “ಅವನಿಗೆ ಮತ್ತೊಬ್ಬನು ಹೀಗೆ ಹೇಳುತ್ತಾನೆ; ‘ನೀನು ಆತ್ಮವಿದೆ ಎಂದು ಹೇಳುತ್ತಿಯೇ. ನಾನು ಅದನ್ನು ನಿರಾಕರಿಸುವುದಿಲ್ಲ. ಆತ್ಮವು ಸಂಪೂರ್ಣವಾಗಿ ಛಿದ್ರ ಛಿದ್ರವಾಗುತ್ತದೆ.(ಜೊತೆಗೆ) ಮತ್ತೊಂದು ಆತ್ಮವು ದಿವ್ಯ ರೂಪಿಯಾಗಿ ಕಾಮ ಲೋಕದಲ್ಲಿ ಆಹಾರವನ್ನು ಭಕ್ಷಿಸಿಕೊಂಡು ಇರುತ್ತದೆ. ಇದನ್ನು ನೀನು ತಿಳಿದಿಲ್ಲ, ನೋಡುತ್ತಿಲ್ಲ. ಆದರೆ ನಾನು ತಿಳಿದಿದ್ದೇನೆ, ನೋಡುತ್ತಿದ್ದೇನೆ. ಗೆಳೆಯ, ಆ ದೇಹವು ಮರಣಾನಂತರ ಛಿದ್ರ ಛಿದ್ರವಾಗಿ ವಿನಾಶವಾಗಿ ಇಲ್ಲವಾಗುತ್ತದೆ’. ಹೀಗೆ ಅವರು ಜೀವಿಯು ಛಿದ್ರ ಛಿದ್ರವಾಗಿ ವಿಭಾಗವಾಗಿ ವಿನಾಶವಾಗುತ್ತದೆ ಎಂದು ವಿವರಿಸುತ್ತಾರೆ.
ದಿಟ್ಠಿ-53 : 87. “ಅವನಿಗೆ ಮತ್ತೊಬ್ಬನು ಹೀಗೆ ಹೇಳುತ್ತಾನೆ- ‘ನೀನು ಆತ್ಮವಿದೆ ಎಂದು ಹೇಳುತ್ತೀಯೆ, ನಾನು ಅದನ್ನು ನಿರಾಕರಿಸುವುದಿಲ್ಲ. ಈ ಆತ್ಮವು ಛಿದ್ರ ಛಿದ್ರವಾಗುತ್ತದೆ(ಜೊತೆಗೆ) ಮತ್ತೊಂದು ಆತ್ಮವು ದಿವ್ಯ ರೂಪಿಯಾಗಿ ಎಲ್ಲ ಅಂಗಗಳನ್ನೂ ಎಲ್ಲ ಇಂದ್ರಿಯಗಳನ್ನೂ ಪಡೆದು ಮನೋಲೋಕದಲ್ಲಿರುತ್ತದೆ. ಇದನ್ನು ನೀನು ತಿಳಿದಿಲ್ಲ, ನೋಡುತ್ತಿಲ್ಲ ಆದರೆ ನಾನು ತಿಳಿದಿದ್ದೇನೆ; ನೋಡುತ್ತೇದ್ದೇನೆ. ಗೆಳೆಯ, ಆ ದೇಹವು ಮರಣಾನಂತರ ಛಿದ್ರ ಛಿದ್ರವಾಗಿ ವಿನಾಶವಾಗಿ ಇಲ್ಲವಾಗುತ್ತದೆ ಇದರಿಂದ ಈ ಆತ್ಮವು ಛಿದ್ರ ಛಿದ್ರವಾಗಿ ಬಿಡುತ್ತದೆ’. ಹೀಗೆ ಅವರು ಜೀವಿಯು ಛಿದ್ರಿ ಛಿದ್ರವಾಗಿ ವಿಭಾಗವಾಗಿ ವಿನಾಶವಾಗುತ್ತದೆ ಎಂದು ವಿವರಿಸುತ್ತಾರೆ.
ದಿಟ್ಠಿ-54 : 88. “ಅವನಿಗೆ ಮತ್ತೊಬ್ಬನು ಹೀಗೆ ಹೇಳುತ್ತಾನೆ- ‘ನೀನು ಆತ್ಮವಿದೆ ಎಂದು ಹೇಳುತ್ತಿಯೇ, ನಾನು ಅದನ್ನು ನಿರಾಕರಿಸುವುದಿಲ್ಲ. ಈ ಆತ್ಮವು ಛಿದ್ರ ಛಿದ್ರವಾಗುತ್ತದೆ. (ಜೊತೆಗೆ) ಮತ್ತೊಂದು ಆತ್ಮವು ರೂಪ ಲೋಕವನ್ನು ಜಯಿಸಿ ಕೋಪವನ್ನು ನಿಗ್ರಹಿಸಿ ಇಂದ್ರಿಯಗಳಿಂದ ಬರುವ ಅಜ್ಞಾನವನ್ನು ನಾಶಮಾಡಿ ನಾನಾ ಬಗೆಯ ಅಪೂರ್ಣ ಜ್ಞಾನವನ್ನು ಮೀರಿ ಆಕಾಶವು ಅನಂತವಾಗಿದೆ ಎಂಬುದನ್ನು ಧ್ಯಾನ ಮಾಡುವುದರಿಂದ ಆಕಾಶದಲ್ಲೇ ಹುಟ್ಟುತ್ತದೆ. ಇದನ್ನು ನೀನು ತಿಳಿದಿಲ್ಲ, ನೋಡುತ್ತಿಲ್ಲ. ಆದರೆ, ನಾನು ತಿಳಿದಿದ್ದೇನೆ, ನೋಡುತ್ತಿದ್ದೇನೆ. ಗೆಳೆಯ, ಮರಣನಂತರ ಆ ದೇಹವು ಛಿದ್ರ ಛಿದ್ರವಾಗಿ ವಿನಾಶವಾಗಿ ಇಲ್ಲವಾಗುತ್ತದೆ. ಹೀಗೆ ಆತ್ಮವು ಛಿದ್ರ ಛಿದ್ರವಾಗಿ ಬಿಡುತ್ತದೆ’. ಹೀಗೆ ಅವರು ಜೀವಿಯು ಛಿದ್ರ ಛಿದ್ರವಾಗಿ ವಿಭಾಗವಾಗಿ ವಿನಾಶವಾಗುತ್ತದೆ ಎಂದು ವಿವರಿಸುತ್ತಾರೆ.
ದಿಟ್ಠಿ-55 : 89. “ಅವನಿಗೆ ಮತ್ತೊಬ್ಬನು ಹೀಗೆ ಹೇಳುತ್ತಾನೆ- ‘ನೀನು ಆತ್ಮವಿದೆ ಎಂದು ಹೇಳುತ್ತಿಯೇ, ನಾನು ಅದನ್ನು ನಿರಾಕರಿಸುವುದಿಲ್ಲ. ಈ ಆತ್ಮವು ಛಿದ್ರ ಛಿದ್ರವಾಗುತ್ತದೆ. (ಜೊತೆಗೆ) ಮತ್ತೊಂದು ಆತ್ಮವು ಆಕಾಶ ಲೋಕವನ್ನು ಜಯಿಸಿ ವಿಜ್ಞಾನವು ಅನಂತವಾಗಿದೆ ಎಂದು ದ್ಯಾನ ಮಾಡಿ ವಿಜ್ಞಾನ ಲೋಕದಲ್ಲಿ ಹುಟ್ಟುತ್ತದೆ. ಇದನ್ನು ನೀನು ತಿಳಿದಿಲ್ಲ, ನೋಡುತ್ತಿಲ್ಲ. ಆದರೆ, ನಾನು ತಿಳಿದಿದ್ದೇನೆ, ನೋಡುತ್ತಿದ್ದೇನೆ. ಗೆಳೆಯ, ಮರಣ ನಂತರ ಆ ದೇಹವು ಛಿದ್ರ ಛಿದ್ರವಾಗಿ ವಿನಾಶವಾಗಿ ಇಲ್ಲವಾಗುತ್ತದೆ. ಇದರಿಂದ ಈ ಆತ್ಮವು ಛಿದ್ರ ಛಿದ್ರವಾಗಿ ಬಿಡುತ್ತದೆ’. ಹೀಗೆ ಅವರು ಜೀವಿಯು ಛಿದ್ರ ಛಿದ್ರವಾಗಿ ವಿಭಾಗವಾಗಿ ವಿನಾಶವಾಗುತ್ತದೆ ಎಂದು ವಿವರಿಸುತ್ತಾರೆ.
ದಿಟ್ಠಿ-56 : 90. “ಅವನಿಗೆ ಮತ್ತೊಬ್ಬನು ಹೀಗೆ ಹೇಳುತ್ತಾನೆ- ‘ನೀನು ಆತ್ಮವಿದೆ ಎಂದು ಹೇಳುತ್ತಿಯೇ, ನಾನು ಅದನ್ನು ನಿರಾಕರಿಸುವುದಿಲ್ಲ, ನಿಜವಾಗಿಯೂ ಈ ಆತ್ಮವು ಛಿದ್ರ ಛಿದ್ರವಾಗುತ್ತದೆ. (ಜೊತೆಗೆ) ಮತ್ತೊಂದು ಆತ್ಮವು ವಿಜ್ಞಾನ ಲೋಕವನ್ನು ಜಯಿಸಿ ಯಾವುದೂ ಇಲ್ಲ ಎಂಬ ಗ್ರಹಿಕೆಯೊಂದಿಗೆ ಆಕಿಞ್ಚಾಯತನ ಎಂಬ ಲೋಕದಲ್ಲಿ ಹುಟ್ಟುತ್ತದೆ. ಇದನ್ನು ನೀನು ತಿಳಿದಿಲ್ಲ, ನೋಡುತ್ತಿಲ್ಲ. ಆದರೆ, ನಾನು ತಿಳಿದಿದ್ದೇನೆ, ನೋಡುತ್ತಿದ್ದೇನೆ. ಗೆಳೆಯ, ಮರಣಾನಂತರ ಆ ದೇಹವು ಛಿದ್ರ ಛಿದ್ರವಾಗಿ ವಿನಾಶವಾಗಿ ಇಲ್ಲವಾಗುತ್ತದೆ. ಇದರಿಂದ ಈ ಆತ್ಮವು ಛಿದ್ರ ಛಿದ್ರವಾಗಿಬಿಡುತ್ತದೆ. ಹೀಗೆ ಅವರು ಜೀವಿಯು ಛಿದ್ರ ಛಿದ್ರವಾಗಿ ವಿಭಾಗವಾಗಿ ವಿನಾಶವಾಗುತ್ತದೆ ಎಂದು ವಿವರಿಸುತ್ತಾರೆ.
ದಿಟ್ಠಿ-57 : 91. “ಅವನಿಗೆ ಮತ್ತೊಬ್ಬನು ಹೀಗೆ ಹೇಳುತ್ತಾನೆ- ‘ನೀನು ಆತ್ಮವಿದೆ ಎಂದು ಹೇಳುತ್ತಿಯೇ, ನಾನು ಅದನ್ನು ನಿರಾಕರಿಸುವುದಿಲ್ಲ. ನಿಜವಾಗಿಯೂ ಈ ಆತ್ಮವು ಛಿದ್ರ ಛಿದ್ರವಾಗುತ್ತದೆ. (ಜೊತೆಗೆ) ಬೇರೊಂದು ಆತ್ಮವು ಅಕಿಞ್ಚಾಯತನ ಲೋಕವನ್ನು ಜಯಿಸಿ ನೇವಸಞ್ಞಾನಾ ಸಞ್ಞಯತನ ಎಂಬ ಲೋಕದಲ್ಲಿ ಹುಟ್ಟುತ್ತದೆ. ಆ ಲೋಕದಲ್ಲಿದ್ದಾಗ ಆತ್ಮಕ್ಕೆ ಗ್ರಹಿಕೆ ಇರುವುದಿಲ್ಲ, ಅದಕ್ಕೆ ಗ್ರಹಿಕೆಯಿಲ್ಲದೆಯೂ ಇರುವುದಿಲ್ಲ. ಇದೇ ಶಾಂತಿ ಇದೇ ಪರಮ ಶ್ರೇಷ್ಠವಾದದ್ದು ಎಂಬ ಭಾವನೆ ಅದಕ್ಕಿರುತ್ತದೆ, ಇದನ್ನು ನೀನು ತಿಳಿದಿಲ್ಲ, ನೋಡುತ್ತಿಲ್ಲ. ಆದರೆ ನಾನು ತಿಳಿದಿದ್ದೇನೆ, ನೋಡುತ್ತಿದ್ದೇನೆ. ಗೆಳೆಯ, ಮರಣಾನಂತರ ಆ ದೇಹವು ಛಿದ್ರ ಛಿದ್ರವಾಗಿ ವಿನಾಶವಾಗಿ ಇಲ್ಲವಾಗುತ್ತದೆ. ಇದರಿಂದ ಆತ್ಮವು ಛಿದ್ರ ಛಿದ್ರವಾಗಿಬಿಡುತ್ತದೆ; ಹೀಗೆ ಅವರು ಜೀವಿಯು ಛಿದ್ರ ಛಿದ್ರವಾಗಿ ವಿಭಾಗವಾಗಿ ವಿನಾಶವಾಗುತ್ತದೆ. ಎಂದು ವಿವರಿಸುತ್ತಾರೆ.
ಭಿಕ್ಷುಗಳೇ, ಎಚ್ಚರದಿಂದಿರುವ ಜೀವಿಯೊಂದು ಛಿದ್ರ ಛಿದ್ರವಾಗಿ ವಿನಾಶವಾಗಿ ವಿಭಾಗವಾಗುತ್ತಿದೆ ಎಂದು ವಾದಿಸುವ ಉಚ್ಛೇದವಾದಿಗಳಾದ ಸಮಣ ಬ್ರಾಹ್ಮಣರು ತಮ್ಮ ವಾದವನ್ನು ವಿವರಿಸಲು ಈ ಏಳು ಆಧಾರಗಳನ್ನು ಕೊಡುತ್ತಾರೆ. ಉಚ್ಛೇದವಾದಿಗಳು ತಮ್ಮ ವಾದಕ್ಕೆ ಕೊಡುವ ಆಧಾರಗಳು ಈ ಏಳು ಮಾತ್ರ ಅಥವ ಇವುಗಳಲ್ಲೊಂದು ಮಾತ್ರ, ಬೇರಾವುದು ಇಲ್ಲ. “ಭಿಕ್ಷುಗಳೇ, ತಥಾಗತನಿಗೆ ಹಿಂದೆ ಹೇಳಿರುವುದೆಲ್ಲ ಗೊತ್ತಿದೆ, ಧರ್ಮದ ವರ್ಣನೆಯನ್ನೇ ಮಾಡುತ್ತಾರೆ.
ಮಿಥ್ಯಾದೃಷ್ಟಿಯುಳ್ಳ ನಿಬ್ಬಾಣವಾದಿಗಳು
“ಶಾಂತಿ ಭಿಕ್ಷುಗಳೇ, ಜೀವಿಯೊಂದು ಈ ಲೋಕದಲ್ಲಿಯೇ ನಿಬ್ಬಾನವನ್ನು ಪಡೆಯಬಹುದೆಂದು ಐದು ಆಧಾರಗಳಿಂದ ವಿವರಿಸುವ ದಿಟ್ಟ, ಧರ್ಮ, ನಿಬ್ಬಾಣವಾದಿಗಳೆಂಬ ಕೆಲವು ಸಮಣ ಬ್ರಾಹ್ಮಣರಿದ್ದಾರೆ. ಆ ಸಮಣ ಬ್ರಾಹ್ಮಣರು ಜೀವಿಯು ಈ ಲೋಕದಲ್ಲಿಯೇ ನಿಬ್ಬಾಣವನ್ನು ಪಡೆಯಬಹುದು ಎಂಬ ವಾದಕ್ಕೆ ಕೊಡುವ ಐದು ಆಧಾರಗಳು ಯಾವುದು?
ದಿಟ್ಠಿ-58 : 94. “ಭಿಕ್ಷುಗಳೇ, ಅಂಥ ಒಬ್ಬ ಸಮಣನೋ, ಬ್ರಾಹ್ಮಣನೋ ಈ ಬಗೆಯ ದೃಷ್ಟಿಯನ್ನು ಹೊಂದಿ ಈ ರೀತಿ ವಾದಿಸುತ್ತಾನೆ- ಗೆಳೆಯ, ಪಂಚಕಾಮ ಗುಣಗಳಿಂದ ಕೂಡಿರುವ ಆತ್ಮವು ಅವುಗಳಿಗೆ ವಶವಾಗಿ ಅವುಗಳಲ್ಲಿಯೇ ತೃಪ್ತಿ ಪಡುತ್ತವೆ, ಆದುದರಿಂದ ಈ ಆತ್ಮವು ಈ ಲೋಕದಲ್ಲಿಯೇ ನಿಬ್ಬಾಣವನ್ನು ಸಾಧಿಸಿದ್ದೇನೆ ಎಂಬುದಾಗಿ ತಿಳಿಯುತ್ತದೆ. ಜೀವಿಯು ಈ ಲೋಕದಲ್ಲಿಯೇ ನಿಬ್ಬಾಣವನ್ನು ಪಡೆಯಬಹುದು ಎಂಬ ಪರಮ ದಿಟ್ಟ ನಿಬ್ಬಾಣ ವಾದವನ್ನು ಹೀಗೆ ಅವರು ವಿವರಿಸುತ್ತಾರೆ.
ದಿಟ್ಠಿ-59 : 95. “ಅವನಿಗೆ ಮತ್ತೊಬ್ಬನು ಹೀಗೆ ಹೇಳುತ್ತಾನೆ... ನೀನು ಆತ್ಮವಿದೆ ಎಂದು ಹೇಳುತ್ತಿಯೇ, ನಾನು ಅದನ್ನು ನಿರಾಕರಿಸುವುದಿಲ್ಲ’. ಈ ಆತ್ಮವು ನಿಜವಾಗಿಯೂ ಈ ಲೋಕದಲ್ಲಿಯೇ ನಿಬ್ಬಾಣ ವನ್ನು ಪಡೆಯುತ್ತದೆ. ಇದು ಹೇಗೆ? ಕಾಮವು ಅನಿತ್ಯವಾದುದ್ದು, ದು:ಖದಿಂದ ಕೂಡಿದುದು, ಪರಿಣಾಮ ಹೊಂದುವಂತದ್ದು. ಪರಿಣಾಮ ಹೊಂದುವ ಸ್ವಬಾವವುಳ್ಳದಾದ್ದರಿಂದ ಅದರಲ್ಲಿ ಶೋಕ, ಪ್ರಲಾಪ, ದು:ಖ ದ್ವೇಷಗಳು ಹುಟ್ಟಿಕೊಳ್ಳುತ್ತವೆ. ಗೆಳೆಯ, ಆ ಆತ್ಮವು ಕಾಮಗಳಿಂದ ದೂರವಾಗಬಲ್ಲದು. ಹೀಗೆ ದೂರವಾಗಿ ಅಕುಶಲ ಭಾವದಿಂದ ಬಿಡುಗಡೆಯಾಗಿ ಸುತರ್ಕ, ಸುವಿಚಾರ, ಸುವಿವೇಕ, ಆನಂದ ಸುಖಗಳನ್ನು ಹೊಂದಿ ಪ್ರಥಮ ಧ್ಯಾನದಲ್ಲಿ ವಿವರಿಸುತ್ತದೆ. ಅಂಥ ಆತ್ಮವು ಈ ಲೋಕದಲ್ಲಿಯೇ ನಿಬ್ಬಾಣವನ್ನು ಪಡೆಯಬಹುದು ಎಂಬ, ಪರಮ ದಿಟ್ಟ ಧಮ್ಮ ನಿಬ್ಬಾಣಭಾವವನ್ನು ಹೊಂದಿರುತ್ತದೆ”- ಹೀಗೆ ಪರಮ ದಿಟ್ಟ ಧಮ್ಮ ನಿಬ್ಬಾಣ ವಾದವನ್ನು ಹೀಗೆ ಅವರು ವಿವರಿಸುತ್ತಾರೆ.
ದಿಟ್ಠಿ-60 : 96. “ಅವನಿಗೆ ಮತ್ತೊಬ್ಬನು ಹೀಗೆ ಹೇಳುತ್ತಾನೆ- ‘ನೀನು ಆತ್ಮವಿದೆ ಎಂದು ಹೇಳುತ್ತಿಯೇ, ನಾನು ಅದನ್ನು ನಿರಾಕರಿಸುವುದಿಲ್ಲ’. ಈ ಆತ್ಮವು ನಿಜವಾಗಿಯೂ ಈ ಲೋಕದಲ್ಲಿಯೇ ನಿಬ್ಬಾಣವನ್ನು ಪಡೆಯುತ್ತದೆ. ಇದು ಹೇಗೆ? ಅದು ತರ್ಕ ವಿಚಾರಗಳನ್ನು ಹೊಂದಿದ್ದರೂ ಸೂಕ್ಷ್ಮವಾದುದ್ದನ್ನು ತಿಳಿಯಲಾರದು, ಅನುಭವಿಸಲಾರದು. ಗೆಳೆಯ, ಆ ಆತ್ಮವು ತರ್ಕ ಮತ್ತು ವಿಚಾರ ಶಮನ ಮಾಡಿ ಏಕಾಗ್ರತೆಯನ್ನು ಪಡೆದು ಅವಿತರ್ಕ, ಅವಿಚಾರ ಮತ್ತು ಸಮಾಧಿಯಿಂದ ಜನಿಸಿದ ಆನಂದ ಸುಖವನ್ನು ಹೊಂದಿ ದ್ವಿತೀಯ ಧ್ಯಾನದಲ್ಲಿ ವಿವರಿಸುತ್ತದೆ. ಅಂತಹ ಆತ್ಮವು ಈ ಲೋಕದಲ್ಲಿಯೇ ನಿಬ್ಬಾಣವನ್ನು ಪಡೆಯಬಹುದು ಎಂಬ ಪರಮ ದಿಟ್ಟ ಧಮ್ಮ ನಿಬ್ಬಾಣ ಭಾವವನ್ನು ಹೊಂದಿರುತ್ತದೆ”. ಪರಮದಿಟ್ಟ ನಿಬ್ಬಾಣ ವಾದವನ್ನು ಅವರು ಹೀಗೆ ವಿವರಿಸುತ್ತಾರೆ.
ದಿಟ್ಠಿ-61 : 97. “ಅವನಿಗೆ ಮತ್ತೊಬ್ಬನು ಹೀಗೆ ಹೇಳುತ್ತಾನೆ- ‘ನೀನು ಆತ್ಮವಿದೆ ಎಂದು ಹೇಳುತ್ತೀಯೆ, ನಾನು ಅದನ್ನು ನಿರಾಕರಿಸುವುದಿಲ್ಲ. ಈ ಆತ್ಮವು ನಿಜವಾಗಿಯೂ ಈ ಲೋಕದಲ್ಲಿಯೇ ನಿಬ್ಬಾಣವನ್ನು ಪಡೆಯುತ್ತದೆ. ಇದು ಹೇಗೆ?-ಅದು ಪ್ರೀತಿಯಿಂದ ಕೂಡಿ ಭಾವಾತಿರೇಕಕ್ಕೊಳಗಾದುದರಿಂದ ಸೂಕ್ಷ್ಮವಾದುದನ್ನು ತಿಳಿಯಲಾರದು. ಗೆಳೆಯ, ಆ ಆತ್ಮವು ಆನಂದವನ್ನು ಹೊಂದಿ ರಾಗರಹಿತವಾಗಿ ಉಪೇಕ್ಷೆಯಲ್ಲಿ ವಿಹರಿಸುತ್ತದೆ. ಸ್ಮೃತಿಯಿಂದ ಕೂಡಿ ಅದರ ಸುಖವನ್ನು ಪೂರ್ಣವಾಗಿ ಅನುಭವಿಸುತ್ತದೆ. ಯಾವುದನ್ನು ಅರ್ಹರು ಉಪೇಕ್ಷಾಭಾವ ಸ್ಮೃತಿವಂತಿಕೆ ಸುಖವಿಹಾರ ಎಂದು ಹೇಳುವರೋ ಆ ತೃತೀಯ ಧ್ಯಾನದಲ್ಲಿ ವಿಹರಿಸುತ್ತದೆ. ಅಂಥ ಆತ್ಮವು ಈ ಲೋಕದಲ್ಲಿಯೇ ನಿಬ್ಬಾಣವನ್ನು ಪಡೆಯಬಹುದು ಎಂಬ ಪರಮದಿಟ್ಠ ಧಮ್ಮನಿಬ್ಬಾಣ ಭಾವವನ್ನು ಹೊಂದಿರುತ್ತದೆ’-ಪರಮದಿಟ್ಠ ನಿಬ್ಬಾಣ ವಾದವನ್ನು ಅವರು ಹೀಗೆ ವಿವರಿಸುತ್ತಾರೆ.
ದಿಟ್ಠಿ-62 : 98. “ಅವನಿಗೆ ಮತ್ತೊಬ್ಬನು ಹೀಗೆ ಹೇಳುತ್ತಾನೆ- ‘ನೀನು ಆತ್ಮವಿದೆ ಎಂದು ಹೇಳುತ್ತೀಯೆ, ನಾನು ಅದನ್ನು ನಿರಾಕರಿಸುವುದಿಲ್ಲ. ಈ ಆತ್ಮವು ನಿಜವಾಗಿಯೂ ಈ ಲೋಕದಲ್ಲಿಯೇ ನಿಬ್ಬಾಣವನ್ನು ಪಡೆಯುತ್ತದೆ. ಇದು ಹೇಗೆ?- ಈ ಆತ್ಮವು ಸುಖವನ್ನು ಅನುಭವಿಸತ್ತಿದ್ದು ಅದರಲ್ಲಿಯೇ ಮುಳಗಿದ್ದರು ಸೂಕ್ಷ್ಮವಾದದ್ದನ್ನು ತಿಳಿಯಲಾರದು. ಗೆಳೆಯ, ಆ ಆತ್ಮವು ಸುಖ ದು:ಖಗಳನ್ನು ಹಿಂದಿನ ಸುಖ-ದುಃಖಗಳ ಸ್ಥಿತಿಯನ್ನು ನಾಶಗೊಳಿಸಿ ಆದುಃಖ ಆಸುಖ ಉಪೇಕ್ಷ ಭಾವನೆಗಳಿಂದ ಪರಿಶುದ್ದವಾದ ಮನಸ್ಸನ್ನು ಹೊಂದಿದ್ದು ಚತುರ್ಥ ಧ್ಯಾನದಲ್ಲಿ ವಿವರಿಸುತ್ತದೆ. ಅಂಥ ಆತ್ಮವು ಈಲೋಕದಲ್ಲಿಯೇ ನಿಬ್ಬಾಣವನ್ನು ಪಡೆಯಬಹುದು ಎಂಬ ಪರಮದಿಟ್ಠ ಧಮ್ಮ ನಿಬ್ಬಾಣ ಭಾವವನ್ನು ಹೊಂದಿರುತ್ತದೆ”- ಪರಮದಿಟ್ಠಿ ನಿಬ್ಬಾಣ ವಾದವನ್ನು ಅವರು ಹೀಗೆ ವಿವರಿಸುತ್ತಾರೆ.
“ಭಿಕ್ಷುಗಳೇ, ಜೀವಿಯೊಂದು ಈ ಲೋಕದಲ್ಲಿಯೇ ಪಡೆಯಬಹುದು ಎಂದು ವಾದಿಸುವ ದಿಟ್ಠ ಧಮ್ಮ ನಿಬ್ಬಾಣ ವಾದಿಗಳಾದ ಸಮಣ ಬ್ರಾಹ್ಮಣರು ತಮ್ಮ ವಾದವನ್ನು ವಿವರಿಸಲು ಈ ಐದು ಆಧಾರಗಳನ್ನು ಕೊಡುತ್ತಾರೆ. ಪರಮದಿಟ್ಠಧಮ್ಮನಿಬ್ಬಾಣವಾದಿಗಳಾದ ಸಮಣ ಬ್ರಾಹ್ಮಣರು ಯಾರೇ ಇರಲಿ ಅವರು ತಮ್ಮ ವಾದಕ್ಕೆ ಕೊಡುವ ಆಧಾರಗಳು ಐದು ಮಾತ್ರ ಅಥವ ಇವುಗಳಲ್ಲೊಂದು ಮಾತ್ರ, ಬೇರಾವುದು ಇಲ್ಲ. “ಭಿಕ್ಷುಗಳೇ, ತಥಾಗತನಿಗೆ ಹಿಂದೆ ಹೇಳಿರುವುದೆಲ್ಲ ಗೊತ್ತಿದೆ.... ಧಮ್ಮದ ವರ್ಣನೆಯನ್ನೇ ಮಾಡುತ್ತಾರೆ.
“ಭಿಕ್ಷುಗಳೇ, ಮುಂದಿನ ಕಲ್ಪಗಳ ಬಗೆಗೆ ಪೂರ್ವ ವಿಶ್ವಾಸವುಳ್ಳವರಾಗಿ ಆನೇಕ ವಾದಗಳ ಚೌಕಟ್ಟಿನಲ್ಲಿ ಅದರ ಆರಂಭವನ್ನು ವಿವರಿಸುವ ಅಪರಂತಕಪ್ಪಕರೆನ್ನಿಸಿಕೊಳ್ಳುವ ಆ ಸಮಣ ಬ್ರಾಹ್ಮಣರು ತಮ್ಮ ವಾದವನ್ನು ವಿವರಿಸಲು ಈ ನಲವತ್ತು ನಾಲ್ಕು ಆಧಾರಗಳನ್ನು ಕೊಡುತ್ತಾರೆ. ಮುಂದಿನ ಕಲ್ಪಗಳ ಆರಂಭವನ್ನು ಅನೇಕ ವಾದಗಳ ಚೌಕಟ್ಟಿನಲ್ಲಿ ವಿವರಿಸುವ ಅಪರಂತಕಪ್ಪಿಕರಾದ ಸಮಣ ಬ್ರಾಹ್ಮಣರು ಯಾರೇ ಇರಲಿ ತಮ್ಮ ನಿಲುವಿಗೆ ಕೊಡುವ ಆಧಾರಗಳು ಈ ನಲವತ್ತು ನಾಲ್ಕು ಮಾತ್ರ ಅಥವ ಇವುಗಳಲ್ಲೊಂದು ಮಾತ್ರ. ಬೇರಾವುದು ಇಲ್ಲ. “ಭಿಕ್ಷುಗಳೇ, ತಥಾಗತನಿಗೆ ಹಿಂದೆ ಹೇಳಿರುವುದೆಲ್ಲ ಗೊತ್ತಿದೆ. ಧಮ್ಮದ ವರ್ಣನೆಯನ್ನೆ ಮಾಡುತ್ತಾರೆ.
ಭಿಕ್ಷುಗಳೇ, ಹಿಂದೆ ಆಗಿ ಹೋದ ಕಲ್ಪಗಳ ಬಗೆಗೆ ಮುಂದೆ ಆಗುವ ಕಲ್ಪಗಳ ಬಗೆಗೆ ಹಿಂದೆ ಆಗಿ ಹೋದ ಮತ್ತು ಮುಂದೆ ಆಗುವ ಎರಡೂ ಬಗೆಯ ಕಲ್ಪಗಳ ಬಗೆಗೆ ಪೂರ್ವ ವಿಶ್ವಾಸ ಉಳ್ಳವರಾಗಿ ಹಿಂದೆ ಆಗಿ ಹೋದದ್ದನ್ನು ಮತ್ತೆ ಮುಂದೆ ಆಗುವುದನ್ನು ಆ ಸಮಣ ಬ್ರಾಹ್ಮಣರು ಈ ಅರವತ್ತೆರಡು ಆಧಾರಗಳಿಂದ ವಿವರಿಸುತ್ತಾರೆ.
“ ಭಿಕ್ಷುಗಳೇ, ಹಿಂದೆ ಆಗಿ ಹೋದ ಕಲ್ಪಗಳ ಬಗೆಗೆ ಮುಂದೆ ಆಗುವ ಕಲ್ಪಗಳ ಬಗೆಗೆ ಮತ್ತು ಹಿಂದೆ ಆಗಿ ಹೋದ ಮುಂದೆ ಆಗುವ ಎರಡೂ ಕಲ್ಪಗಳ ಬಗೆಗೆ ಪೂರ್ವ ವಿಶ್ವಾಸ ಉಳ್ಳವರಾಗಿ ಹಿಂದೆ ಆಗಿ ಹೋದದ್ದನ್ನು ಮತ್ತೆ ಮುಂದೆ ಆಗುವುದನ್ನು ಅನೇಕ ವಾದಗಳ ಚೌಕಟ್ಟಿನಲ್ಲಿ ವಿವರಿಸುವ ಸಮಣ ಬ್ರಾಹ್ಮಣರು ಯಾರೇ ಇರಲಿ ಅವರು ತಮ್ಮ ನಿಲುವಿಗೆ ಕೊಡುವ ಆಧಾರಗಳು ಈ ಅರವತ್ತೆರಡು ಮಾತ್ರ ಅಥವಾ ಇವುಗಳಲ್ಲೊಂದು ಮಾತ್ರ. ಮತ್ತಾವುದು ಇಲ್ಲ.
“ಭಿಕ್ಷುಗಳೇ, ತಥಾಗತನಿಗೆ ಹಿಂದೆ ಹೇಳಿರುವುದೆಲ್ಲ ಚೆನ್ನಾಗಿ ಗೊತ್ತಿದೆ. ಈ ರೀತಿ ಗ್ರಹಿಸಿ ಈ ರೀತಿ ಅರ್ಥ ಮಾಡಿಕೊಂಡಿರುವ ಮಿಥ್ಯಾದೃಷ್ಠಿಯುಳ್ಳವರು ಪುನರ್ಜನ್ಮಕ್ಕೆ ಕಾರಣವಾದ ಸ್ಥಿತಿಯನ್ನು ಪಡೆಯುತ್ತಾರೆ. ಎಂಬುದು ತಥಾಗತನಿಗೆ ಸ್ಪಷ್ಟವಾಗಿ ಗೊತ್ತಿದೆ. ಇದನ್ನು ಮೀರಿದ ಸತ್ಯಗಳೂ ತಥಾಗತನಿಗೆ ಗೊತ್ತು. ಆದರೆ ಅವನು ಇದಾವುದಕ್ಕೂ ಅಂಟಿಕೊಳ್ಳುವುದಿಲ್ಲ. ಇವಕ್ಕೆ ಅಂಟಿಕೊಳ್ಳದ ಅವನು ತಾನೇ ಬಿಡುಗಡೆಯ ಮಾರ್ಗವನ್ನು ಅರಿತಿದ್ದಾನೆ. ವೇದನೆಗಳನ್ನೂ ಅವುಗಳು ಹುಟ್ಟುವ ಕಾರಣವನ್ನೂ ಅವುಗಳ ರುಚಿಯನ್ನೂ ಅವುಗಳ ಅಪಾಯವನ್ನೂ ಅವುಗಳನ್ನು ತ್ಯಜಿಸುವುದನ್ನೂ ಚೆನ್ನಾಗಿ ಅರಿತಿದ್ದಾನೆ.
“ಭಿಕ್ಷುಗಳೇ, ತಥಾಗತನನ್ನು ಸ್ತುತಿಸುವಾಗ ಜನರು ಗಂಭೀರವೂ ಕಷ್ಟಪಟ್ಟು ಅರಿತುಕೊಳ್ಳಬೇಕಾದುದೂ ಕಷ್ಟಪಟ್ಟು ಪಡೆದು ಅನುಭವಿಸಬೇಕಾದುದೂ ಶಾಂತಿಯನ್ನು ತರುವಂಥದೂ ತರ್ಕವನ್ನು ಮೀರಿದುದೂ ನೈಪುಣ್ಯಪೂರಿತವಾದುದೂ ಜಾಣರು ತಿಳಿಯಬೇಕಾದುದೂ ತಥಾಗನು ಸ್ವಪ್ರಯತ್ನದಿಂದ ಅರಿತು, ಪ್ರಕಾಶ ಪಡಿಸಿರುವಂಥದೂ ಆದ ಧರ್ಮದ ವರ್ಣನೆಯನ್ನೇ ಮಾಡುತ್ತಾರೆ.
ಮಿಥ್ಯಾದೃಷ್ಟಿ ಮತ್ತು ತಳಮಳಗೊಂಡ ಮನಸ್ಸಿನಿಂದ ವಾದಿಸುವವರು
ದಿಟ್ಠಿ-1 ರಿಂದ 4 : 105. “ಭಿಕ್ಷುಗಳೇ, ಆತ್ಮವೂ ಶಾಶ್ವತ ಲೋಕವೂ ಶಾಶ್ವತ ಎಂಬ ಶಾಶ್ವತವಾದವನ್ನು ನಾಲ್ಕು ಆಧಾರಗಳಿಂದ ವಿವರಿಸುವ ಸಮಣ ಬ್ರಾಹ್ಮಣರು ಯಾರಿದ್ದಾರೋ ಅವರು ಕುರುಡು ನಂಬಿಕೆ ಮತ್ತು ತೃಷ್ಣೆಗಳಿಂದ ಕೂಡಿದವರಾಗಿರುತ್ತಾರೆ. ಅವರ ಮನಸ್ಸು ತಳಮಳದಿಂದ ಕೂಡಿರುತ್ತದೆ. ಅಂಥವರು (ಸತ್ಯವನ್ನು) ತಿಳಿಯಲಾರರು ನೋಡಲಾರರು.
ದಿಟ್ಠಿ-5 ರಿಂದ 8 : 106. “ಭಿಕ್ಷುಗಳೇ, ಆತ್ಮ ಮತ್ತು ಲೋಕಗಳಲ್ಲಿ ಕೆಲವು ಶಾಶ್ವತ ಕೆಲವು ಅಶಾಶ್ವತ ಎಂಬ, ‘ಏಕಚ್ಚಸಸ್ಸತ’ (ಶಾಶ್ವತ ಒಂದೇ ಮತ್ತು ಅಶಾಶ್ವತ ಒಂದೇ) ವಾದವನ್ನು ನಾಲ್ಕು ಆಧಾರಗಳಿಂದ ವಿವರಿಸುವ ಸಮಣ ಬ್ರಾಹ್ಮಣರು ಯಾರಿದ್ದಾರೋ ಅವರು ಕುರುಡು ನಂಬಿಕೆ ಮತ್ತು ತೃಷ್ಣೆಗಳಿಂದ ಕೂಡಿರುತ್ತಾರೆ. ಅವರ ಮನಸ್ಸು ತಳಮಳದಿಂದ ಕೂಡಿರುತ್ತದೆ. ಅಂಥವರು ಸತ್ಯವನ್ನು ತಿಳಿಯಲಾರರು ನೋಡಲಾರರು.
ದಿಟ್ಠಿ-9 ರಿಂದ 12 : 107. “ಭಿಕ್ಷುಗಳೇ, ಲೋಕದ ಅಂತ್ಯತೆ ಮತ್ತು ಅನಂತತೆಗಳನ್ನು ನಾಲ್ಕು ಆಧಾರಗಳಿಂದ ವಿವರಿಸುವ ಸಮಣ ಬ್ರಾಹ್ಮಣರು ಯಾರಿದ್ದಾರೋ ಅವರು ಕುರುಡು ನಂಬಿಕೆ ಮತ್ತು ತೃಷ್ಣೆಗಳಿಂದ ಕೂಡಿರುತ್ತಾರೆ. ಅವರ ಮನಸ್ಸು ತಳಮಳದಿಂದ ಕೂಡಿರುತ್ತದೆ. ಅಂಥವರು ಸತ್ಯವನ್ನು ತಿಳಿಯಲಾರರು, ನೋಡಲಾರರು.
ದಿಟ್ಠಿ-13 ರಿಂದ 16 : 108. “ಭಿಕ್ಷುಗಳೇ, ಅಲ್ಲಲ್ಲಿ ಪ್ರಶ್ನೆಗಳನ್ನು ಹಾಕಿದಾಗ ಚತುರತೆಯಿಂದ , ಅದೂ ಸರಿ ಇದೂ ಸರಿ’ ಎಂದು ಹೇಳಿ ನುಣಚಿಕೊಳ್ಳವ ಅಮರ ವಿಕ್ಖೇಪಿಕಾವಾದವನ್ನು ನಾಲ್ಕು ಆಧಾರಗಳಿಂದ ವಿವರಿಸುವ ಸಮಣ ಬ್ರಾಹ್ಮಣರು ಯಾರಿದ್ದಾರೋ ಅವರು ಕುರುಡು ನಂಬಿಕೆ ಮತ್ತು ತೃಷ್ಣೆಗಳಿಂದ ಕೂಡಿರುತ್ತಾರೆ. ಅವರ ಮನಸ್ಸು ತಳಮಳದಿಂದ ಕೂಡಿರುತ್ತದೆ. ಅಂಥವರು ಸತ್ಯವನ್ನು ತಿಳಿಯಲಾರರು ನೋಡಲಾರರು.
ದಿಟ್ಠಿ-17 ರಿಂದ 18 : 109. “ಭಿಕ್ಷುಗಳೇ, ಆತ್ಮವೂ ಲೋಕವೂ ಇದ್ದಕ್ಕಿದ್ದಂತೆಯೇ ಉದ್ಭವಿಸಿದವು ಎಂಬ ಅಧಿಚ್ಚಸಮುಪ್ಪನ್ನವಾದವನ್ನು ಎರಡು ಆಧಾರಗಳಿಂದ ವಿವರಿಸುವ ಸಮಣ ಬ್ರಾಹ್ಮಣರು ಯಾರಿರುವರೋ ಅವರು ಕುರುಡು ನಂಬಿಕೆ ಮತ್ತು ತೃಷ್ಣೆಗಳಿಂದ ಕೂಡಿರುತ್ತಾರೆ. ಅವರ ಮನಸ್ಸು ತಳಮಳದಿಂದ ಕೂಡಿರುತ್ತದೆ. ಅಂಥವರು ಸತ್ಯವನ್ನು ತಿಳಿಯಲಾರರು ನೋಡಲಾರರು.
ದಿಟ್ಠಿ-1 ರಿಂದ 18 : 110. “ಭಿಕ್ಷುಗಳೇ, ಪೂರ್ವಕಲ್ಪಗಳ ಬಗೆಗೆ ಪೂರ್ವ ವಿಶ್ವಾಸ ಉಳ್ಳವರಾಗಿ ಅನೇಕವಾದಗಳ ಚೌಕಟ್ಟಿನಲ್ಲಿ ಪೂರ್ವದ ಆರಂಭವನ್ನು ಹದಿನೆಂಟು ಆಧಾರಗಳಿಂದ ವಿವರಿಸುವ ಸಮಣ ಬ್ರಾಹ್ಮಣರು ಯಾರಿರುವರೋ ಅವರು ಕುರುಡುನಂಬಿಕೆ ಮತ್ತು ತೃಷ್ಣೆಗಳಿಂದ ಕೂಡಿರುತ್ತಾರೆ. ಅವರ ಮನಸ್ಸು ತಳಮಳದಿಂದ ಕೂಡಿರುತ್ತದೆ. ಅಂಥವರು ಸತ್ಯವನ್ನು ತಿಳಿಯಲಾರರು ನೋಡಲಾರರು.
ದಿಟ್ಠಿ-19 ರಿಂದ 34 : 111. “ಭಿಕ್ಷುಗಳೇ, ಸತ್ತ ಮೇಲೆಯೂ ಆತ್ಮವು ಇರುತ್ತದೆ. ಅದು ಅರಿವನ್ನು ಪಡೆದಿರುತ್ತದೆ ಎಂಬ ಉದ್ಧಮಾಘಾತನವಾದವನ್ನು ಹದಿನಾರು ಆಧಾರಗಳಿಂದ ವಿವರಿಸುವ ಸಮಣ ಬ್ರಾಹ್ಮಣರು ಯಾರಿರುವರೋ ಅವರು ಕರುಡು ನಂಬಿಕೆ ಮತ್ತು ತೃಷ್ಣೆಗಳಿಂದ ಕೂಡಿರುತ್ತಾರೆ. ಅವರ ಮನಸ್ಸು ತಳಮಳದಿಂದ ಕೂಡಿರುತ್ತದೆ. ಆಂಥವರು ಸತ್ಯವನ್ನು ತಿಳಿಯಲಾರರು ನೋಡಲಾರರು.
ದಿಟ್ಠಿ-35 ರಿಂದ 42 : 112. “ಭಿಕ್ಷುಗಳೇ, ಸತ್ತ ಮೇಲೆಯೂ ಆತ್ಮವು ಇರುತ್ತದೆ. ಅದರೆ, ಅದಕ್ಕೆ ಅರಿವಿರುವುದಿಲ್ಲ ಎಂಬ (ಎರಡನೆಯ ಬಗೆಯ) ಉದ್ಧಮಾಘಾತನವಾದವನ್ನು ಎಂಟು ಆಧಾರಗಳಿಂದ ವಿವರಿಸುವ ಸಮಣ ಬ್ರಾಹ್ಮಣರು ಯಾರಿರುವರೋ ಅವರು ಕರುಡು ನಂಬಿಕೆ ಮತ್ತು ತೃಷ್ಣೆಗಳಿಂದ ಕೂಡಿರುತ್ತಾರೆ. ಅವರ ಮನಸ್ಸು ತಳಮಳದಿಂದ ಕೂಡಿರುತ್ತದೆ. ಆಂಥವರು ಸತ್ಯವನ್ನು ತಿಳಿಯಲಾರರು ನೋಡಲಾರರು.
ದಿಟ್ಠಿ-43 ರಿಂದ 50 : 113. “ಭಿಕ್ಷುಗಳೇ, ಸತ್ತ ಮೇಲೆಯೂ ಆತ್ಮವು ಇರುತ್ತದೆ. ಅದರೆ, ಅದಕ್ಕೆ ಅರಿವಿರುವುದಿಲ್ಲ. ಅರಿವಿಲ್ಲದೆಯೂ ಇರುವುದಿಲ್ಲ. ಎಂಬ ಮೂರನೆಯ ಬಗೆಯ ಉದ್ಧಮಾಘಾತನವಾದವನ್ನು ಎಂಟು ಆಧಾರಗಳಿಂದ ವಿವರಿಸುವ ಸಮಣ ಬ್ರಾಹ್ಮಣರು ಯಾರಿರುವರೋ ಅವರು ಕುರುಡು ನಂಬಿಕೆ ಮತ್ತು ತೃಷ್ಣೆಗಳಿಂದ ಕೂಡಿರುತ್ತಾರೆ. ಅವರ ಮನಸ್ಸು ತಳಮಳದಿಂದ ಕೂಡಿರುತ್ತದೆ. ಆಂಥವರು ಸತ್ಯವನ್ನು ತಿಳಿಯಲಾರರು ನೋಡಲಾರರು.
ದಿಟ್ಠಿ-51 ರಿಂದ 57 : 114. “ಬಿಕ್ಷುಗಳೇ, ಸ್ಮೃತಿಯುಳ್ಳ ಜೀವಿಗಳು ಛಿದ್ರ ಛಿದ್ರವಾಗಿ ವಿಭಾಗವಾಗಿ ವಿನಾಶ ಹೊಂದುತ್ತವೆ ಎಂಬ ಉಚ್ಛೇದವಾದವನ್ನು ಏಳು ಆಧಾರಗಳಿಂದ ವಿವರಿಸುವ ಸಮಣ ಬ್ರಾಹ್ಮಣರು ಯಾರಿರುವರೋ ಅವರು ಕುರುಡು ನಂಬಿಕೆ ಮತ್ತು ತೃಷ್ಣೆಗಳಿಂದ ಕೂಡಿರುತ್ತಾರೆ. ಅವರ ಮನಸ್ಸು ತಳಮಳದಿಂದ ಕೂಡಿರುತ್ತದೆ. ಅಂಥವರು ಸತ್ಯವನ್ನು ತಿಳಿಯಲಾರರು ನೋಡಲಾರರು.
ದಿಟ್ಠಿ-58 ರಿಂದ 62 : 115. “ಭಿಕ್ಷುಗಳೇ, ಈ ಲೋಕದಲ್ಲಿಯೇ ನಿಬ್ಬಾಣವನ್ನು ಪಡೆಯಬಹುದು ಎಂಬ ದಿಟ್ಠಧಮ್ಮನಿಬ್ಬಾಣವನ್ನು ಐದು ಆಧಾರಗಳಿಂದ ವಿವರಿಸುವ ಸಮಣ ಬ್ರಾಹ್ಮಣರು ಯಾರಿರುವರೋ ಅವರು ಕುರುಡು ನಂಬಿಕೆ ಮತ್ತು ತೃಷ್ಣೆಗಳಿಂದ ಕೂಡಿರುತ್ತಾರೆ. ಅವರ ಮನಸ್ಸು ತಳಮಳದಿಂದ ಕೂಡಿರುತ್ತದೆ. ಆಂಥವರು ಸತ್ಯವನ್ನು ತಿಳಿಯಲಾರರು ನೋಡಲಾರರು.
ದಿಟ್ಠಿ-19 ರಿಂದ 62 : 116. “ಭಿಕ್ಷುಗಳೇ, ಅಪರಕಲ್ಪಗಳ ಬಗೆಗೆ ಪೂರ್ವ ವಿಶ್ವಾಸ ಉಳ್ಳವರಾಗಿ ಅನೇಕ ವಾದಗಳ ಚೌಕಟ್ಟಿನಲ್ಲಿ ಅಪರಕಲ್ಪಗಳ ಆರಂಭವನ್ನು ನಲವತ್ತನಾಲ್ಕು ಆಧಾರಗಳಿಂದ ವಿವರಿಸುವ ಸಮಣ ಬ್ರಾಹ್ಮಣರು ಯಾರಿರುವರೋ ಅವರು ಕರುಡು ನಂಬಿಕೆ ಮತ್ತು ತೃಷ್ಣೆಗಳಿಂದ ಕೂಡಿರುತ್ತಾರೆ. ಅವರ ಮನಸ್ಸು ತಳಮಳದಿಂದ ಕೂಡಿರುತ್ತದೆ. ಆಂಥವರು ಸತ್ಯವನ್ನು ತಿಳಿಯಲಾರರು ನೋಡಲಾರರು.
ದಿಟ್ಠಿ-1 ರಿಂದ 62 : 117. “ಭಿಕ್ಷುಗಳೇ, ಪೂರ್ವಕಲ್ಪಗಳ ಬಗೆಗೆ ಅಪರಕಲ್ಪಗಳ ಬಗೆಗೆ ಪೂರ್ವ ಅಪರ ಎರಡೂ ಕಲ್ಪಗಳ ಬಗೆಗೆ ಪೂರ್ವ ವಿಶ್ವಾಸವುಳ್ಳವರಾಗಿ ಅನೇಕವಾದಗಳ ಚೌಕಟ್ಟಿನಲ್ಲಿ ಪೂರ್ವ ಅಪರ ಕಲ್ಪಗಳ ಆರಂಭವನ್ನು ಅರವತ್ತೆರಡು ಆಧಾರಗಳಿಂದ ವಿವರಿಸುವ ಸಮಣ ಬ್ರಾಹ್ಮಣರು ಯಾರಿರುವರೋ ಅವರು ಕರುಡು ನಂಬಿಕೆ ಮತ್ತು ತೃಷ್ಣೆಗಳಿಂದ ಕೂಡಿರುತ್ತಾರೆ. ಅವರ ಮನಸ್ಸು ತಳಮಳದಿಂದ ಕೂಡಿರುತ್ತದೆ. ಆಂಥವರು ಸತ್ಯವನ್ನು ತಿಳಿಯಲಾರರು ನೋಡಲಾರರು.
ಸಮಯಕ್ಕೆ ತಕ್ಕಂತೆ ಸ್ಪರ್ಶ ಕಾರಣಗಳ ಬಗ್ಗೆ ವಾದಿಸುವವರು
“ಭಿಕ್ಷುಗಳೇ, ಆತ್ಮವು ಶಾಶ್ವತ ಲೋಕವೂ ಶಾಶ್ವತ ಎಂಬ ಶಾಶ್ವತವಾದವನ್ನು ನಾಲ್ಕು ಆಧಾರಗಳಿಂದ ವಿವರಿಸುವ ಸಮಣ ಬ್ರಾಹ್ಮಣರು ಯಾರಿರುವರೋ ಅವರ ವಾದವೂ ಮೇಲ್ನೋಟದಿಂದ ಮಾತ್ರ ಕಂಡುಬಂದ ಕಾಣ್ಕೆಯಾಗಿದೆ.
“ಭಿಕ್ಷುಗಳೇ, ಆತ್ಮ ಮತ್ತು ಲೋಕಗಳಲ್ಲಿ ಕೆಲವು ಶಾಶ್ವತ ಕೆಲವು ಅಶಾಶ್ವತ ಎಂಬ ಏಕಚ್ಚಸಸ್ಸತವಾದವನ್ನು ನಾಲ್ಕು ಆಧಾರಗಳಿಂದ ವಿವರಿಸುವ ಸಮಣಬ್ರಾಹ್ಮಣರು ಯಾರಿರುವರೋ ಅವರ ವಾದವು ಮೇಲ್ನೋಟದಿಂದ ಮಾತ್ರ ಕಂಡು ಬಂದ ಕಾಣ್ಕೆಯಾಗಿದೆ.
“ಭಿಕ್ಷುಗಳೇ, ಲೋಕದ ಅಂತ್ಯತೆ ಮತ್ತು ಅನಂತತೆಗಳನ್ನು ನಾಲ್ಕು ಆಧಾರಗಳಿಂದ ವಿವರಿಸುವ ಸಮಣಬ್ರಾಹ್ಮಣರು ಯಾರಿರುವರೋ ಅವರ ವಾದವು ಮೇಲ್ನೋಟದಿಂದ ಮಾತ್ರ ಕಂಡು ಬಂದ ಕಾಣ್ಕೆಯಾಗಿದೆ.
“ಭಿಕ್ಷುಗಳೇ, ಅಲ್ಲಲ್ಲಿ ಪ್ರಶ್ನೆಗಳನ್ನು ಹಾಕಿದಾಗ ‘ ಅದೂ ಸರಿ ಇದೂ ಸರಿ’ ಎಂದು ಹೇಳಿ ನುಣುಚಿಕೊಳ್ಳುವ ಅಮರವಿಕ್ಕೇಪಿಕಾವಾದವನ್ನು ನಾಲ್ಕು ಆಧಾರಗಳಿಂದ ವಿವರಿಸುವ ಸಮಣಬ್ರಾಹ್ಮಣರು ಯಾರಿರುವರೋ ಅವರ ವಾದವು ಮೇಲ್ನೋಟದಿಂದ ಮಾತ್ರ ಕಂಡು ಬಂದ ಕಾಣ್ಕೆಯಾಗಿದೆ.
“ ಭಿಕ್ಷುಗಳೇ, ಲೋಕವು ಆತ್ಮವೂ ಇದ್ದಕ್ಕಿದ್ದಂತೆಯೇ ಉದ್ಭವಿಸಿದವು ಎಂಬ ಅಧಿಚ್ಚಸಮುಪ್ಪನ್ನ ವಾದವನ್ನು ಎರಡು ಆಧಾರಗಳಿಂದ ವಿವರಿಸುವ ಸಮಣಬ್ರಾಹ್ಮಣರು ಯಾರಿರುವರೋ ಅವರ ವಾದವು ಮೇಲ್ನೋಟದಿಂದ ಮಾತ್ರ ಕಂಡು ಬಂದ ಕಾಣ್ಕೆಯಾಗಿದೆ.
“ಭಿಕ್ಷುಗಳೇ, ಪೂರ್ವಕಲ್ಪಗಳ ಬಗೆಗೆ ಪೂರ್ವ ವಿಶ್ವಾಸ ಉಳ್ಳವರಾಗಿ ಅನೇಕ ವಾದಗಳ ಚೌಕಟ್ಟಿನಲ್ಲಿ ಪೂರ್ವದ ಆರಂಭವನ್ನು ಹದಿನೆಂಟು ಆಧಾರಗಳಿಂದ ವಿವರಿಸುವ ಸಮಣಬ್ರಾಹ್ಮಣರು ಯಾರಿರುವರೋ ಅವರ ವಾದವು ಮೇಲ್ನೋಟದಿಂದ ಮಾತ್ರ ಕಂಡು ಬಂದ ಕಾಣ್ಕೆಯಾಗಿದೆ.
“ಭಿಕ್ಷುಗಳೇ, ಸತ್ತ ಮೇಲೆಯೂ ಆತ್ಮ ಇರುತ್ತದೆ, ಅದು ಅರಿವನ್ನು ಪಡೆದಿರುತ್ತದೆ ಎಂಬ ಉದ್ಧಮಾಘಾತನ ವಾದವನ್ನು ಹದಿನಾರು ಆಧಾರಗಳಿಂದ ವಿವರಿಸುವ ಸಮಣಬ್ರಾಹ್ಮಣರು ಯಾರಿರುವರೋ ಅವರ ವಾದವು ಮೇಲ್ನೋಟದಿಂದ ಮಾತ್ರ ಕಂಡು ಬಂದ ಕಾಣ್ಕೆಯಾಗಿದೆ.
“ಭಿಕ್ಷುಗಳೇ, ಸತ್ತ ಮೇಲೆಯೂ ಆತ್ಮ ಇರುತ್ತದೆ, ಆದರೆ, ಅದಕ್ಕೆ ಅರಿವಿರುವುದಿಲ್ಲ ಎಂಬ ಎರಡನೆಯ ಬಗೆಯ ಉದ್ಧಮಾಘಾತನ ವಾದವನ್ನು ಎಂಟು ಆಧಾರಗಳಿಂದ ವಿವರಿಸುವ ಸಮಣಬ್ರಾಹ್ಮಣರು ಯಾರಿರುವರೋ ಅವರ ವಾದವು ಮೇಲ್ನೋಟದಿಂದ ಮಾತ್ರ ಕಂಡು ಬಂದ ಕಾಣ್ಕೆಯಾಗಿದೆ.
“ಭಿಕ್ಷುಗಳೇ, ಸತ್ತ ಮೇಲೆಯೂ ಆತ್ಮ ಇರುತ್ತದೆ, ಆದರೆ, ಅದಕ್ಕೆ ಅರಿವಿರುವುದಿಲ್ಲ ಅರಿವಿಲ್ಲದೆಯೂ ಇರುವುದಿಲ್ಲ ಎಂಬ ಮೂರನೆಯ ಬಗೆಯ ಉದ್ಧಮಾಘಾತನವಾದವನ್ನು ಎಂಟು ಆಧಾರಗಳಿಂದ ವಿವರಿಸುವ ಸಮಣಬ್ರಾಹ್ಮಣರು ಯಾರಿರುವರೋ ಅವರ ವಾದವು ಮೇಲ್ನೋಟದಿಂದ ಮಾತ್ರ ಕಂಡು ಬಂದ ಕಾಣ್ಕೆಯಾಗಿದೆ.
“ಭಿಕ್ಷುಗಳೇ, ಸ್ಮೃತಿಯುಳ್ಳ ಜೀವಿಗಳು ಛಿದ್ರ ಛಿದ್ರವಾಗಿ ವಿಭಾಗವಾಗಿ ವಿನಾಶ ಹೊಂದುತ್ತವೆ ಎಂಬ ಉಚ್ಛೇದವಾದವನ್ನು ಏಳು ಆಧಾರಗಳಿಂದ ವಿವರಿಸುವ ಸಮಣಬ್ರಾಹ್ಮಣರು ಯಾರಿರುವರೋ ಅವರ ವಾದವು ಮೇಲ್ನೋಟದಿಂದ ಮಾತ್ರ ಕಂಡು ಬಂದ ಕಾಣ್ಕೆಯಾಗಿದೆ.
“ಭಿಕ್ಷುಗಳೇ, ಈ ಲೋಕದಲ್ಲಿಯೇ ನಿಬ್ಬಾಣವನ್ನು ಪಡೆಯಬಹುದು ಎಂಬ ದಿಟ್ಠಧಮ್ಮ ನಿಬ್ಬಾಣವಾದವನ್ನು ಐದು ಆಧಾರಗಳಿಂದ ವಿವರಿಸುವ ಸಮಣಬ್ರಾಹ್ಮಣರು ಯಾರಿರುವರೋ ಅವರ ವಾದವು ಮೇಲ್ನೋಟದಿಂದ ಮಾತ್ರ ಕಂಡು ಬಂದ ಕಾಣ್ಕೆಯಾಗಿದೆ.
“ಭಿಕ್ಷುಗಳೇ, ಅಪರಕಲ್ಪಗಳ ಬಗೆಗೆ ಪೂರ್ವವಿಶ್ವಾಸ ಉಳ್ಳವರಾಗಿ ಅನೇಕ ವಾದಗಳ ಚೌಕಟ್ಟಿನಲ್ಲಿ ಅಪರಕಲ್ಪಗಳ ಆರಂಭವನ್ನು ನಲವತ್ತನಾಲ್ಕು ಆಧಾರಗಳಿಂದ ವಿವರಿಸುವ ಸಮಣ ಬ್ರಾಹ್ಮಣರು ಯಾರಿರುವರೋ ಅವರ ವಾದವು ಮೇಲ್ನೋಟದಿಂದ ಮಾತ್ರ ಕಂಡು ಬಂದ ಕಾಣ್ಕೆಯಾಗಿದೆ.
“ಭಿಕ್ಷುಗಳೇ, ಪೂರ್ವಕಲ್ಪಗಳ ಬಗೆಗೆ ಅಪರಕಲ್ಪಗಳ ಬಗೆಗೆ ಪೂರ್ವ-ಅಪರ ಎರಡೂ ಕಲ್ಪಗಳ ಬಗೆಗೆ ಪೂರ್ವವಿಶ್ವಾಸ ಉಳ್ಳವರಾಗಿ ಅನೇಕ ವಾದಗಳ ಚೌಕಟ್ಟಿನಲ್ಲಿ ಪೂರ್ವ-ಅಪರ ಕಲ್ಪಗಳ ಆರಂಭವನ್ನು ಅರವತ್ತೆರಡು ಆಧಾರಗಳಿಂದ ವಿವರಿಸುವ ಸಮಣ ಬ್ರಾಹ್ಮಣರು ಯಾರಿರುವರೋ ಅವರ ವಾದವು ಮೇಲ್ನೋಟದಿಂದ ಮಾತ್ರ ಕಂಡು ಬಂದ ಕಾಣ್ಕೆಯಾಗಿದೆ.
ಇಂತಹ ಒಂದು ನೆಲೆ ಇರುವುದಿಲ್ಲ
“ಭಿಕ್ಷುಗಳೇ, ಆತ್ಮವೂ ಶಾಶ್ವತ ಲೋಕವು ಶಾಶ್ವತ ಎಂಬ ಶಾಶ್ವತವಾದವನ್ನು ನಾಲ್ಕು ಆಧಾರಗಳಿಂದ ವಿವರಿಸುವ ಸಮಣಬ್ರಾಹ್ಮಣರು ತಮ್ಮ ವಾದದ ಒಂದಂಶವನ್ನು ಮಾತ್ರ ತಿಳಿದುಕೊಂಡಿರುತ್ತಾರೆ.
“ಭಿಕ್ಷುಗಳೇ, ಆತ್ಮ ಮತ್ತು ಲೋಕಗಳಲ್ಲಿ ಕೆಲವು ಶಾಶ್ವತ ಕೆಲವು ಅಶಾಶ್ವ್ವತ ಎಂಬ ಎಕಚ್ಚಸಸ್ಸತ ಮತ್ತು ಏಕಚ್ಚ ಅಸ್ಸತಿಕಾವಾದವನ್ನು ನಾಲ್ಕು ಆಧಾರಗಳಿಂದ ವಿವರಿಸುವ ಸಮಣಬ್ರಾಹ್ಮಣರು ತಮ್ಮ ವಾದದ ಒಂದಂಶವನ್ನು ಮಾತ್ರ ಅನುಭವದಿಂದ ತಿಳಿದುಕೊಂಡಿರುತ್ತಾರೆ.
“ಭಿಕ್ಷುಗಳೇ, ಲೋಕದ ಅಂತ್ಯತೆ ಮತ್ತು ಅನಂತತೆಗಳನ್ನು ನಾಲ್ಕು ಆಧಾರಗಳಿಂದ ವಿವರಿಸುವ ಸಮಣಬ್ರಾಹ್ಮಣರು ತಮ್ಮ ವಾದದ ಒಂದಂಶವನ್ನು ಮಾತ್ರ ಅನುಭವದಿಂದ ತಿಳಿದುಕೊಂಡಿರುತ್ತಾರೆ.
“ಭಿಕ್ಷುಗಳೇ, ಅಲ್ಲಲ್ಲಿ ಪ್ರಶ್ನೆಗಳನ್ನು ಹಾಕಿದಾಗ ‘ ಅದೂ ಸರಿ ಇದೂ ಸರಿ’ ಎಂದು ಹೇಳಿ ನುಣುಚಿಕೊಳ್ಳುವ ಅಮರವಿಕ್ಖೇಪಿಕಾ ವಾದವನ್ನು ನಾಲ್ಕು ಆಧಾರಗಳಿಂದ ವಿವರಿಸುವ ಸಮಣಬ್ರಾಹ್ಮಣರು ತಮ್ಮ ವಾದದ ಒಂದಂಶವನ್ನು ಮಾತ್ರ ತಿಳಿದುಕೊಂಡಿರುತ್ತಾರೆ.
“ಭಿಕ್ಷುಗಳೇ, ಲೋಕವೂ ಆತ್ಮವೂ ಇದ್ದಕ್ಕಿದ್ದಂತೆಯೇ ಉದ್ಭವಿಸಿದವು ಎಂಬ ಅಧಿಚ್ಚ ಸಮುಪ್ಪನ್ನವಾದವನ್ನು ಎರಡು ಆಧಾರಗಳಿಂದ ವಿವರಿಸುವ ಸಮಣಬ್ರಾಹ್ಮಣರು ತಮ್ಮ ವಾದದ ಒಂದಂಶವನ್ನು ಮಾತ್ರ ತಿಳಿದು ಕೊಂಡಿರುತ್ತಾರೆ.
“ಭಿಕ್ಷುಗಳೇ, ಪೂರ್ವಕಲ್ಪಗಳ ಬಗೆಗೆ ಪೂರ್ವ ವಿಶ್ವಾಸ ಉಳ್ಳವರಾಗಿ ಅನೇಕ ವಾದಗಳ ಚೌಕಟ್ಟಿನಲ್ಲಿ ಪೂರ್ವದ ಆರಂಭವನ್ನು ಹದಿನೆಂಟು ಆಧಾರಗಳಿಂದ ವಿವರಿಸುವ ಸಮಣಬ್ರಾಹ್ಮಣರು ತಮ್ಮ ವಾದದ ಒಂದಂಶವನ್ನು ಮಾತ್ರ ತಿಳಿದು ಕೊಂಡಿರುತ್ತಾರೆ.
“ಭಿಕ್ಷುಗಳೇ, ಸತ್ತಮೇಲೆಯೂ ಆತ್ಮವಿರುತ್ತದೆ, ಅದು ಅರಿವನ್ನು ಪಡೆದಿರುತ್ತದೆ ಎಂಬ ಉದ್ಧಮಾಘಾತನವನ್ನು ಹದಿನಾರು ಆಧಾರಗಳಿಂದ ವಿವರಿಸುವ ಸಮಣಬ್ರಾಹ್ಮಣರು ತಮ್ಮ ವಾದದ ಒಂದಂಶವನ್ನು ಮಾತ್ರ ತಿಳಿದುಕೊಂಡಿರುತ್ತಾರೆ.
“ಭಿಕ್ಷುಗಳೇ, ಸತ್ತಮೇಲೆಯೂ ಆತ್ಮವಿರುತ್ತದೆ, ಅದಕ್ಕೆ ಅರಿವಿರುವುದಿಲ್ಲ ಎಂಬ ಎರಡನೆಯ ಬಗೆಯ ಉದ್ಧಮಾಘಾತನವಾದವನ್ನು ಎಂಟು ಆಧಾರಗಳಿಂದ ವಿವರಿಸುವ ಸಮಣ ಬ್ರಾಹ್ಮಣರು ತಮ್ಮ ವಾದದ ಒಂದಂಶವನ್ನು ಮಾತ್ರ ತಿಳಿದುಕೊಂಡಿರುತ್ತಾರೆ.
“ಭಿಕ್ಷುಗಳೇ, ಸತ್ತಮೇಲೆಯೂ ಆತ್ಮವಿರುತ್ತದೆ, ಅದಕ್ಕೆ ಅರಿವಿರುವುದಿಲ್ಲ, ಆದರೆ ಆದಕ್ಕೆ ಅರಿವಿಲ್ಲದೆಯೂ ಇರುವುದಿಲ್ಲ ಎಂಬ ಮೂರನೆಯ ಬಗೆಯ ಉದ್ಧಮಾಘಾತನವಾದವನ್ನು ಎಂಟು ಆಧಾರಗಳಿಂದ ವಿವರಿಸುವ ಸಮಣಬ್ರಾಹ್ಮಣರು ತಮ್ಮ ವಾದದ ಒಂದಂಶವನ್ನು ಮಾತ್ರ ತಿಳಿದುಕೊಂಡಿರುತ್ತಾರೆ.
“ಭಿಕ್ಷುಗಳೇ, ಸ್ಮೃತಿಯುಳ್ಳ ಜೀವಿಗಳು ಛಿದ್ರ ಛಿದ್ರವಾಗಿ ವಿಭಾಗವಾಗಿ ವಿನಾಶ ಹೊಂದುತ್ತವೆ ಎಂಬ ಉಚ್ಚೇದವಾದವನ್ನು ಏಳು ಆಧಾರಗಳಿಂದ ವಿವರಿಸುವ ಸಮಣಬ್ರಾಹ್ಮಣರು ತಮ್ಮ ವಾದದ ಒಂದಂಶವನ್ನು ಮಾತ್ರ ತಿಳಿದುಕೊಂಡಿರುತ್ತಾರೆ.
“ಭಿಕ್ಷುಗಳೇ, ಈ ಲೋಕದಲ್ಲಿಯೇ ನಿಬ್ಬಾಣವನ್ನು ಪಡೆಯಬಹುದು ಎಂಬ ದಿಟ್ಠಧಮ್ಮ ನಿಬ್ಬಾಣವಾದವನ್ನು ಐದು ಆಧಾರಗಳಿಂದ ವಿವರಿಸುವ ಸಮಣಬ್ರಾಹ್ಮಣರು ತಮ್ಮ ವಾದದ ಒಂದಂಶವನ್ನು ಮಾತ್ರ ತಿಳಿದು ಕೊಂಡಿರುತ್ತಾರೆ.
“ಭಿಕ್ಷುಗಳೇ, ಅಪರಕಲ್ಪಗಳ ಬಗೆಗೆ ಪೂರ್ವ ವಿಶ್ವಾಸ ಉಳ್ಳವರಾಗಿ ಅನೇಕ ವಾದಗಳ ಚೌಕಟ್ಟಿನಲ್ಲಿ ಅಪರಕಲ್ಪಗಳ ಆರಂಭವನ್ನು ನಲವತ್ತನಾಲ್ಕು ಆಧಾರಗಳಿಂದ ವಿವರಿಸುವ ಸಮಣಬ್ರಾಹ್ಮಣರು ತಮ್ಮ ವಾದದ ಒಂದಂಶವನ್ನು ಮಾತ್ರ ತಿಳಿದುಕೊಂಡಿರುತ್ತಾರೆ.
“ ಭಿಕ್ಷುಗಳೇ, ಪೂರ್ವಕಲ್ಪಗಳ ಬಗೆಗೆ ಅಪರಕಲ್ಪಗಳ ಬಗೆಗೆ ಪೂರ್ವ-ಅಪರ ಎರಡೂ ಕಲ್ಪಗಳ ಬಗೆಗೆ ಪೂರ್ವವಿಶ್ವಾಸ ಉಳ್ಳವರಾಗಿ ಅನೇಕ ವಾದಗಳ ಚೌಕಟ್ಟಿನಲ್ಲಿ ಪೂರ್ವ-ಅಪರ ಕಲ್ಪಗಳ ಆರಂಭವನ್ನು ಅರವತ್ತೆರಡು ಆಧಾರಗಳಿಂದ ವಿವರಿಸುವ ಸಮಣ ಬ್ರಾಹ್ಮಣರು ತಮ್ಮ ವಾದದ ಒಂದಂಶವನ್ನು ಮಾತ್ರ ತಿಳಿದುಕೊಂಡಿರುತಾರೆ.
ಮಿಥ್ಯಾದೃಷ್ಟಿಗಳ ವೃತ್ತಾಂತದಲ್ಲಿರುವವರ ಮಾತು
“ಭಿಕ್ಷುಗಳೇ, ಆತ್ಮವು ಶಾಶ್ವತ ಲೋಕವೂ ಶಾಶ್ವತ ಎಂಬ ಶಾಶ್ವತವಾದವನ್ನು ನಾಲ್ಕು ಆಧಾರಗಳಿಂದ ವಿವರಿಸುವ ಸಮಣ ಬ್ರಾಹ್ಮಣರೂ ಆತ್ಮ ಮತ್ತು ಲೋಕಗಳಲ್ಲಿ ಕೆಲವು ಶಾಶ್ವತ ಮತ್ತು ಕೆಲವು ಅಶಾಶ್ವತ ಎಂಬ ಏಕಚ್ಚ ಸಸ್ಸತವಾದವನ್ನು ನಾಲ್ಕು ಆಧಾರಗಳಿಂದ ವಿವರಿಸುವ ಸಮಣ ಬ್ರಾಹ್ಮಣರೂ ಲೋಕದ ಅಂತ್ಯತೆ ಮತ್ತು ಅನಂತತೆಗಳನ್ನು ನಾಲ್ಕು ಆಧಾರಗಳಿಂದ ವಿವರಿಸುವ ಸಮಣ ಬ್ರಾಹ್ಮಣರು ಅಮರವಿಕ್ಖೇಪಿಕ ಸಮಣಬ್ರಾಹ್ಮಣರು ಅಭಿಚ್ಚಸಮುಪನ್ನಿಕ ಸಮಣಬ್ರಾಹ್ಮಣರೂ ಪುಬ್ಬಂತಕಪ್ಪಿಕ ಸಮಣಬ್ರಾಹ್ಮಣರು ಉದ್ದಮಾಘಾತನಿಕ ಸಮಣಬ್ರಾಹ್ಮಣರು, ಸತ್ತಮೇಲೆ ಆತ್ಮವಿರುತ್ತದೆ. ಆದರೆ ಅದಕ್ಕೆ ಅರಿವಿರುವುದಿಲ್ಲ ಎಂಬ ಎರಡನೆಯ ಬಗೆಯ ಉದ್ದಮಾಘಾತನಿಕ, ಸಮಣಬ್ರಾಹ್ಮಣರು, ಸತ್ತಮೇಲೆ ಆತ್ಮವಿರುತ್ತದೆ. ಆದರೆ ಅದಕ್ಕೆ ಅರಿವಿರುವುದಿಲ್ಲ, ಅರಿವಿಲ್ಲದಿರುವುದಿಲ್ಲ ಎಂಬ ಮೂರನೆಯ ಉದ್ದಮಾಘತನಿಕ, ಸಮಣಬ್ರಾಹ್ಮಣರು, ಉಚ್ಚೇದವಾದಿ ಸಮಣ ಬ್ರಾಹ್ಮಣರೂ ದಿಟ್ಠಧಮ್ಮ ನಿಬ್ಬಾಣವಾದಿ ಸಮಣ ಬ್ರಾಹ್ಮಣರೂ ಅಪರಂತಕಪ್ಪಿಕ ಸಮಣ ಬ್ರಾಹ್ಮಣರೂ ಪೂರ್ವ ಕಲ್ಪಗಳ ಬಗೆಗೆ ಅಪರ ಕಲ್ಪಗಳ ಬಗೆಗೆ ಪೂರ್ವ-ಅಪರ ಎರಡೂ ಕಲ್ಪಗಳ ಬಗೆಗೆ ಪೂರ್ವ ವಿಶ್ವಾಸವುಳ್ಳವರಾಗಿ ಅನೇಕ ವಾದಗಳ ಚೌಕಟ್ಟಿನಲ್ಲಿ ಪೂರ್ವ-ಅಪರ ಕಲ್ಪಗಳ ಆರಂಭವನ್ನು ಅರವತ್ತೆರಡು ಆಧಾರಗಳಿಂದ ಸಮಣ ಬ್ರಾಹ್ಮಣರೂ ಆರು ಸ್ಪರ್ಶ ಇಂದ್ರಿಯಗಳಿಂದ ಅಗಾಧವಾಗಿ ತಿಳಿಯುತ್ತಾರೆ. ವೇದನೆಗಳನ್ನು ಅವಲಂಬಿಸಿ ತಣ್ಹಾವು ತಣ್ಹಾವನ್ನು ಅವಲಂಬಿಸಿ ಉಪಾದಾನವು ಉಪಾದಾನವನ್ನು ಅವಲಂಬಿಸಿ ಭವವೂ ಭವವನ್ನು ಅವಲಂಬಿಸಿ ಜನ್ಮ ಪುನರ್ ಜನ್ಮಗಳು ಅವರಿಗೆ ಉಂಟಾಗುತ್ತವೆ. ಜನ್ಮ ಪುನರ್‍ಜನ್ಮಗಳ ದೆಸೆಯಿಂದ ಜರ (ಮುಪ್ಪು) ಮರಣ, ಶೋಕ-ಪ್ರಲಾಪ, ದುಃಖ ನಿರಾಶೆಗಳು ಹುಟ್ಟುತ್ತವೆ.
ಸೃಷ್ಠಿಯ ಬಗ್ಗೆ ಮಾತುಗಳು
“ಭಿಕ್ಷುಗಳೇ, ಸ್ವರ್ಶಾಯತನಗಳ ಮೂಲವನ್ನೂ, ಅವುಗಳಿಂದ ಬಿಡುಗಡೆಯಾಗುವ ಬಗೆಯನ್ನೂ, ಅವುಗಳ ರುಚಿಯನ್ನೂ, ಅವುಗಳ ಅಪಾಯವನ್ನು ಚೆನ್ನಾಗಿ ಅರಿತಿರುವ ಭಿಕ್ಷುವೊಬ್ಬನು ಮೇಲೆ ಹೇಳಿದ ಎಲ್ಲಾ ವಾದಗಳಿಗೂ ಮೀರಿದುದನ್ನು ಯಥಾವತ್ತಾಗಿ ತಿಳಿದಿರುತ್ತಾನೆ.
“ಬಿಕ್ಷುಗಳೇ, ಯಾವ ಸಮಣ ಬ್ರಾಹ್ಮಣರು ಪೂರ್ವ ಕಲ್ಪಗಳ ಅಪರಕಲ್ಪಗಳ ಪೂರ್ವ-ಅಪರ ಎರಡೂ ಕಲ್ಪಗಳ ಬಗೆಗೆ ಪೂರ್ವ ವಿಶ್ವಾಸ ಉಳ್ಳವರಾಗಿ ಅನೇಕ ವಾದಗಳ ಚೌಕಟ್ಟಿನಲ್ಲಿ ಪೂರ್ವ-ಅಪರ ಕಲ್ಪಗಳ ಆರಂಭವನ್ನು ಅರವತ್ತೆರಡು ಆಧಾರಗಳಿಂದ ವಿವರಿಸುವರೋ ಆ ಸಮಣಬ್ರಾಹ್ಮಣರು ಈ ಅರವತ್ತೆರಡು ಕಣ್ಣುಗಳನ್ನುಳ್ಳ ಬಲೆಯಲ್ಲಿ ಸಿಕ್ಕಿಕೊಂಡು ಒದ್ದಾಡುತ್ತಾರೆ.
“ದಕ್ಷನಾದ ಮೀನುಗಾರನೊಬ್ಬನು ಹೊಂಡ ಒಂದರಲ್ಲಿ ತನ್ನ ಬಲೆಯನ್ನು ಹರಡಿದಾಗ ಹೀಗೆ ಭಾವಿಸುತ್ತಾನಲ್ಲವೇ- ‘ಈ ನೀರಿನಲ್ಲಿರುವ ಪ್ರಾಣಿಗಳೆಲ್ಲವೂ ಬಲೆಯಲ್ಲಿ ಸಿಕ್ಕಿಕೊಳ್ಳುತ್ತವೆ. ಬಲೆಗೆ ಸಿಕ್ಕಕೊಂಡ ಪ್ರಾಣಿಗಳು ಅಲ್ಲಿಯೇ ಒದ್ದಾಡುತ್ತವೆ.’ ಹಾಗೆಯೇ ಪೂರ್ವ ಕಲ್ಪಗಳ ಬಗೆಗೆ ಅಪರ ಕಲ್ಪಗಳ ಬಗೆಗೆ ಪೂರ್ವ-ಅಪರಕಲ್ಪಗಳ ಬಗೆಗೆ ಪೂರ್ವ ವಿಶ್ವಾಸ ಉಳ್ಳವರಾಗಿ ಪೂರ್ವ-ಅಪರಕಲ್ಪಗಳ ಆರಂಭವನ್ನು ಅರವತ್ತೆರಡು ಆಧಾರಗಳಿಂದ ವಿವರಿಸುವ ಸಮಣಬ್ರಾಹ್ಮಣರೆಲ್ಲರೂ ಅರವತ್ತೆರಡು ಕಣ್ಣುಗಳನ್ನುಳ್ಳ ಈ ವಾದಗಳ ಬಲೆಯಲ್ಲಿ ಸಿಕ್ಕಿಕೊಂಡು ಬಿಡುತ್ತಾರೆ. ಅಲ್ಲಿಯೇ ಉಳಿದುಕೊಂಡು ಒದ್ದಾಡುತ್ತಾರೆ.
“ಭಿಕ್ಷುಗಳೇ, ತಥಾಗತನ ಇಂದಿನ ಶರೀರವು ಹುಟ್ಟು ಸಾವುಗಳನ್ನು ಕಳೆದುಕೊಂಡಿರುವ ಸ್ಥಿತಿಯಲ್ಲಿದೆ, ದೇವತೆಗಳೂ ಮನುಷ್ಯರೂ ಈ ಕಾಯ(ಶರೀರ) ವಿರುವವರೆಗೆ ಮಾತ್ರ ಅವನನ್ನು ನೋಡುತ್ತಾರೆ. ಕಾಯವು ಬಿದ್ದು ಹೋದಮೇಲೆ ಹುಟ್ಟು ಸಾವುಗಳನ್ನು ಕತ್ತರಿಸಿಕೊಂಡಿರುವ ಅವನನ್ನು ದೇವತೆಗಳೂ ಮನುಷ್ಯರೂ ನೋಡುವುದಕ್ಕಾಗುವುದಿಲ್ಲ.
“ಭಿಕ್ಷುಗಳೇ, ಮಾವಿನ ಮರದ ಕೊಂಬೆಯೊಂದನ್ನು ಕತ್ತರಿಸಿ ಹಾಕಿದಾಗ ಅದರಲ್ಲಿರುವ ಕಾಯಿಗಳೆಲ್ಲವೂ ಉದುರಿಹೋಗುವುದಷ್ಟೆ. ಹಾಗೆಯೇ ಹುಟ್ಟು ಸಾವುಗಳಿಗೆ ಕಾರಣವಾದದ್ದನ್ನು ಕತ್ತರಿಸಿಹಾಕಿಕೊಂಡಿರುವ ತಥಾಗತನ ಕಾಯವೂ ಇದೆ. ದೇವತೆಗಳೂ ಮನುಷ್ಯರೂ ಈ ಕಾಯವಿರುವವರಿಗೆ ಮಾತ್ರ ಅವನನ್ನು ನೋಡುತ್ತಾರೆ. ಕಾಯವು ಬಿದ್ದು ಹೋದಮೇಲೆ ಹುಟ್ಟು ಸಾವುಗಳನ್ನು ಕತ್ತರಿಸಿಕೊಂಡಿರುವ ಅವನನ್ನು ದೇವತೆಗಳೂ ಮನುಷ್ಯರೂ ನೋಡುವುದಕ್ಕಾಗುವುದಿಲ್ಲ”.
ಹೀಗೆ ಹೇಳಿದ ಭಗವಂತನನ್ನು ಕುರಿತು ಅಯುಷ್ಮಂತನಾದ ಆನಂದನು ಇಂತೆಂದನು- “ಆಶ್ಚರ್ಯ ಭಂತೇ, ಅದ್ಭುತ ಭಂತೇ, ಧರ್ಮವನ್ನು ಕುರಿತ ಈ ಪ್ರವಚನಕ್ಕೆ ಯಾವ ಹೆಸರನ್ನು ಕೊಡಬಹುದು?”
“ಆನಂದ, ಧರ್ಮದ ಈ ಪ್ರವಚನವನ್ನು ಅರ್ಥ ಜಾಲವೆಂದು ಕರೆಯಬಹುದು; ಧರ್ಮ ಜಾಲವೆಂದು ಕರೆಯಬಹುದು; ಬ್ರಹ್ಮ ಜಾಲವೆಂದು ಕರೆಯಬಹುದು; ದೃಷ್ಟಿ ಜಾಲವೆಂದು ಕರೆಯಬಹುದು. ಸಂಗ್ರಾಮದ ಅನುತ್ತರ ವಿಜಯವೆಂದು ಕರೆಯಬಹುದು.”
ಭಗವಾನರು ಹೀಗೆ ಹೇಳಿದರು. ಪುನೀತರಾದ ಭಿಕ್ಷುಗಳು ಭಗವಾನರ ಮಾತುಗಳಿಗಾಗಿ ಅವರನ್ನು ಅಭಿನಂದಿಸಿದರು. ಈ ವಿವರಣೆಯಿಂದ ಹತ್ತು ಸಹಸ್ಸ ಲೋಕಧಾತುಗಳು ಶಾಂತಗೊಂಡವು.
ಇಲ್ಲಿಗೆ ಬ್ರಹ್ಮಜಾಲ ಸುತ್ತ ಮುಗಿಯಿತು
ಟಿಪ್ಪಣಿಗಳು [4]
English
Deutsch
Việt Ngữ