ಹೀಗೆ ಕೇಳಿದ್ದೇನೆ: ಒಮ್ಮೆ ಭಗವಾನರು ಕುರು ಪ್ರದೇಶದಲ್ಲಿನ ಕಮ್ಮಸಧಮ್ಮ ಎಂಬ ಕುರುಗಳಿಗೆ ಸೇರಿದ ಪಟ್ಟಣದಲ್ಲಿ ತಂಗಿದ್ದರು. ಆಗ ಭಿಕ್ಷುಗಳನ್ನು “ಭಿಕ್ಷುಗಳೇ” ಎಂದು ಸಂಬೋಧಿಸಿದರು. “ಭದಂತೆ” ಎಂದು ಅವರು ಉತ್ತರವಿತ್ತರು. ಆಗ ಭಗವಾನರು ಇಂತೆಂದರು-
ಉದ್ದೇಶ
“ಭಿಕ್ಷುಗಳೇ, ಜೀವಗಳೆಲ್ಲವನ್ನೂ ಪರಿಶುದ್ಧಗೊಳಿಸುವ ಶೋಕ-ಸಂಕಟಗಳನ್ನು ಪರಿಹರಿಸುವ ದುಃಖದೋಮಸ್ಸುಗಳನ್ನು ನಾಶಮಾಡಬಲ್ಲ ಜ್ಞಾನವನ್ನು ಪಡೆಯಬಲ್ಲ ನಿಬ್ಬಾನ ಸಾಕ್ಷಾತ್ಕಾರಕ್ಕೆ ಸಹಾಯಕವಾಗುವ ಇರುವ ಮಾರ್ಗ ಒಂದೇ ಒಂದು. ಅದೆಂದರೆ ‘ನಾಲ್ಕು ಸತಿಪಟ್ಠಾನ.’
“ಆ ನಾಲ್ಕು ಯಾವುವು? ಭಿಕ್ಷುಗಳೇ, ಲೋಕದ ಮೇಲಿನ ವ್ಯಾಮೋಹ ಮತ್ತು ಅದಕ್ಕಂಟಿರುವ ದೋಮನಸ್ಸನ್ನು ವರ್ಜಿಸಿ ಸದಾ ಎಚ್ಚರದಿಂದಿರುವ ಶ್ರದ್ಧಾವಂತ ಭಿಕ್ಷುವು ಈ ಕಾಯವನ್ನು ಅದರ ನಿಜ ಸ್ವರೂಪದಲ್ಲಿಯೇ ನೋಡುತ್ತಾನೆ. ವೇದನೆಯನ್ನು ಅದರ ನಿಜಸ್ವರೂಪದಲ್ಲಿಯೇ ನೋಡುತ್ತಾನೆ. ಚಿತ್ತವನ್ನು ಅದರ ನಿಜಸ್ವರೂಪದಲ್ಲಿಯೇ ಕಾಣುತ್ತಾನೆ. ಧಮ್ಮವನ್ನು ಅದರ ನಿಜಸ್ವರೂಪದಲ್ಲಿಯೇ ನೋಡುತ್ತಾನೆ.
ಉದ್ದೇಶ ಮುಗಿಯಿತು
ಕಾಯಾನುಪಸ್ಸನ ಆನಾಪಾನ ಪರ್ವ
“ಭಿಕ್ಷುಗಳು, ಕಾಯವನ್ನು ಅದರ ನಿಜಸ್ವರೂಪದಲ್ಲಿ ನೋಡುವುದು ಹೇಗೆ? ಭಿಕ್ಷುವು ಅರಣ್ಯದಲ್ಲಿಯೋ ಮರದ ಬುಡದಲ್ಲಿಯೋ ಯಾರೂ ಇಲ್ಲದ ಬಯಲಿನಲ್ಲಿಯೋ ಪದ್ಮಾಸನದಲ್ಲಿ ಕುಳಿತು ದೇಹವನ್ನು ನೆಟ್ಟಗೆ ಮಾಡಿಕೊಂಡು ಮನಸ್ಸನ್ನು ಏಕಾಗ್ರತೆಯಲ್ಲಿ ನಿಲ್ಲಿಸುತ್ತಾನೆ. ಅವನು ಉಸಿರಾಡುವಾಗ ಅದರ ಮೇಲೆಯೇ ಮನಸ್ಸಿಟ್ಟಿರುತ್ತಾನೆ. ನಿಧಾನವಾಗಿ ವಾಯುವನ್ನು ಒಳಕ್ಕೆ ತೆಗೆದುಕೊಳ್ಳುವಾಗ ತಾನು ನಿಧಾನವಾಗಿಯೇ ಉಚ್ಛ್ವಾಸ ಮಾಡುತ್ತಿದ್ದೇನೆಂದು ತಿಳಿದಿರುತ್ತಾನೆ. ಬೇಗ ಬೇಗ ವಾಯುವನ್ನು ಒಳಕ್ಕೆ ತೆಗೆದುಕೊಳ್ಳುವಾಗ ತಾನು ಬೇಗ ಬೇಗ ಉಚ್ಛ್ವಾಸ ಮಾಡುತ್ತಿದ್ದೇನೆಂದು ತಿಳಿದಿರುತ್ತಾನೆ. ಬೇಗ ಬೇಗ ವಾಯುವನ್ನು ಬಿಡುವಾಗ ಬೇಗ ಬೇಗ ನಿಶ್ವಾಸ ಮಾಡುತ್ತಿದ್ದೇನೆಂದು ತಿಳಿದಿರುತ್ತಾನೆ. ಕಾಯವೆಲ್ಲದರ ಮೇಲೆ ಸಂಪೂರ್ಣ ಗಮನವಿಟ್ಟು ಉಚ್ಛ್ವಾಸ ಮಾಡುತ್ತಾ ಸಾಧನೆ ಮಾಡುತ್ತಾನೆ. ಕಾಯವೆಲ್ಲದರ ಮೇಲೆ ಸಂಪೂರ್ಣ ಗಮನವಿಟ್ಟು ನಿಶ್ವಾಸ ಮಾಡುತ್ತಾ ಸಾಧನೆ ಮಾಡುತ್ತಾನೆ. ಕಾಯದ ಕಾರ್ಯವನ್ನು ಸಾಂತ್ವನಗೊಳಿಸಿ ಉಚ್ಛ್ವಾಸ ಮಾಡುತ್ತಾ ಸಾಧನೆ ಮಾಡುತ್ತಾನೆ. ಕಾಯದ ಕಾರ್ಯವನ್ನು ಸಾಂತ್ವನಗೊಳಿಸಿ ನಿಶ್ವಾಸ ಮಾಡುತ್ತಾ ಸಾಧನೆ ಮಾಡುತ್ತಾನೆ. (ಅಂದರೆ ಉಚ್ಛ್ವಾಸ-ನಿಶ್ವಾಸಗಳು ಸಮಾಧಾನವಾಗಿರುತ್ತವೆ). ಭಿಕ್ಷುವು ಅದರ ಮೇಲೆ ಸಂಪೂರ್ಣ ಮನಸ್ಸಿಟ್ಟಿರುತ್ತಾನೆ.
“ದಕ್ಷನಾದ ಬಿಲ್ಲು ಮಾಡುವವನೋ ಅಥವಾ ಅವನ ಶಿಷ್ಯನೋ ಹೆಚ್ಚಾಗಿ ಬಿಲ್ಲಿನ ಸರಳನ್ನು ಬಗ್ಗಿಸಿದಾಗ ತಾನು ಹೆಚ್ಚಾಗಿ ಬಗ್ಗಿಸುತ್ತಿದ್ದೇನೆಂಬ ಅರಿವನ್ನು ಹೊಂದಿರುವಂತೆ ಅಥವಾ ಬಿಲ್ಲಿನ ಸರಳನ್ನು ಸ್ವಲ್ಪವಾಗಿ ಬಗ್ಗಿಸಿದಾಗ ತಾನು ಸ್ವಲ್ಪ ಮಾತ್ರ ಬಗ್ಗಿಸುತ್ತಿದ್ದೇನೆಂಬ ಅರಿವನ್ನು ಹೊಂದಿರುವಂತೆ ಉಚ್ಛ್ವಾಸ-ನಿಶ್ವಾಸಗಳನ್ನು ಬೇಗ ಬೇಗ ಅಥವಾ ನಿಧಾನವಾಗಿ ಮಾಡುವಾಗ ಭಿಕ್ಷುವು ಆ ಉಚ್ಛ್ವಾಸ-ನಿಶ್ವಾಸಗಳ ಬಗೆಗೆ ಸಂಪೂರ್ಣ ಗಮನವಿಟ್ಟಿರುತ್ತಾನೆ. ಕಾಯವೆಲ್ಲದರ ಮೇಲೆ ಸಂಪೂರ್ಣ ಗಮನವಿಟ್ಟು ಉಚ್ಛ್ವಾಸ-ನಿಶ್ವಾಸವನ್ನು ಮಾಡುತ್ತಾ ಸಾಧನೆ ಮಾಡುತ್ತಾನೆ. ಕಾಯದ ಕಾರ್ಯ ಸಾಂತ್ವನಗೊಳಿಸಿ ಉಚ್ಛ್ವಾಸ-ನಿಶ್ವಾಸಗಳನ್ನು ಮಾಡುತ್ತ ಸಾದನೆ ಮಾಡುತ್ತಾನೆ. ಕಾಯದೊಳಗೆ ನಡೆಯುವ ಕಾರ್ಯಗಳ ಮೇಲೆ ಮನಸ್ಸಿಟ್ಟಿರುತ್ತಾನೆ. ಕಾಯದ ಒಳಗು-ಹೊರಗಿನ ಮೇಲೆ ಮನಸ್ಸಿಟ್ಟಿರುತ್ತಾನೆ. ಕಾಯದ ಬೆಳವಣಿಗೆ ಮತ್ತು ಕ್ಷಯಗಳ ಬಗೆಗೆ ಮನಸ್ಸಿಟ್ಟಿರುತ್ತಾನೆ. ಕಾಯದ ಮೇಲೆಯೇ ಅವನ ಚಿತ್ತವಿದ್ದು ಅದರ ಭಾವನೆಯಿಂದಲೇ ತುಂಬಿರುತ್ತದೆ. ಲೋಕಕ್ಕೆ ಯಾವ ರೀತಿಯಲ್ಲಿಯೂ ಅಂಟಿಕೊಳ್ಳದೆ ಅಂಥ ಭಿಕ್ಷುವು ಕಾಯವನ್ನು ಅದರ ನಿಜ ಸ್ವರೂಪದಲ್ಲಿ ನೋಡುತ್ತಾನೆ.
ಆನಪಾನ ಪರ್ವ ಮುಗಿಯಿತು
ಕಾಯಾನುಪಸ್ಸನ ಇರಿಯಾಪಥ ಪರ್ವ
“ಮತ್ತೆ ಭಿಕ್ಷುಗಳೇ, ಅಂಥ ಭಿಕ್ಷುವು ನಡೆಯುವಾಗ ನಡೆಯುತ್ತಿದ್ದೇನೆಂಬ ಅರಿವನ್ನು ಹೊಂದಿರುತ್ತಾನೆ. ನಿಂತಿರುವಾಗ ತಾನು ನಿಂತಿರುವೆನೆಂಬ ಅರಿವನ್ನು ಹೊಂದಿರುತ್ತಾನೆ. ಕುಳಿತಿರುವಾಗ ತಾನು ಕುಳಿತಿದ್ದೇನೆಂಬ ಅರಿವನ್ನು ಹೊಂದಿರುತ್ತಾನೆ. ಮಲಗಿರುವಾಗ ತಾನು ಮಲಗಿರುವೆನೆಂಬ ಅರಿವನ್ನು ಹೊಂದಿರುತ್ತಾನೆ. ಕಾಯವು ಹೇಗೆ ಹೇಗೆ ವರ್ತಿಸುತ್ತದೋ ಅದನ್ನು ಹಾಗೆ ಹಾಗೆಯೇ ನೋಡಬಲ್ಲವನಾಗುತ್ತಾನೆ. ಹೀಗೆ ಕಾಯದ ಒಳಗೆ ನಡೆಯುವ ಕಾರ್ಯಗಳ ಮೇಲೆ ಮನಸ್ಸನ್ನಿಟ್ಟಿರುತ್ತಾನೆ. ಕಾಯದ ಹೊರಗಿನ ವರ್ತನೆಯ ಮೇಲೆ ಮನಸ್ಸಿಟ್ಟಿರುತ್ತಾನೆ. ಕಾಯದ ಒಳಗು ಹೊರಗಿನ ವರ್ತನೆಗಳ ಮೇಲೆ ಮನಸ್ಸಿಟ್ಟಿರುತ್ತಾನೆ. ಕಾಯದ ಬೆಳವಣಿಗೆ ಕ್ಷಯಗಳ ಮೇಲೆ ಮನಸ್ಸಿಟ್ಟಿರುತ್ತಾನೆ. ಕಾಯದ ಮೇಲೆಯೇ ಅವನ ಚಿತ್ತವಿದ್ದು ಅದು ಆ ಭಾವನೆಯಿಂದಲೇ ತುಂಬಿರುತ್ತದೆ. ಸರಿಯಾದ ಜ್ಞಾನ ಪಡೆಯಲು ಮನಸ್ಸಿನ ಏಕಾಗ್ರತೆಯನ್ನು ಗಳಿಸಲು ಸರ್ವಸ್ವತಂತ್ರ ಮನಸ್ಕನಾಗಿರುತ್ತಾನೆ. ಹೀಗೆ ಕಾಯದ ನಿಜಸ್ವರೂಪವನ್ನು ಅರಿಯಬಲ್ಲವನಾಗಿರುತ್ತಾನೆ.
ಇರಿಯಾಪಥ ಪರ್ವ ಮುಗಿಯಿತು
ಕಾಯಾನುಪಸ್ಸನ ಸಂಪಜಾನ ಪರ್ವ
“ಮತ್ತೆ ಅಲ್ಲಿಂದಿಲ್ಲಿಗೆ ನಡೆಯುವಾಗ ಅಂಥ ಭಿಕ್ಷುವು ಸದಾ ಜಾಗೃತನಾಗಿರುವ ಸ್ವಭಾವವನ್ನು ಸಾಧಿಸುತ್ತಾನೆ. ಅತ್ತಿತ್ತ ನೋಡುವಾಗ, ಕೈಕಾಲುಗಳನ್ನು ಆಡಿಸುವಾಗ, ಒಳ ಉಡುಗೆಯನ್ನು ಉಡುವಾಗ, ಹೊರ ಉಡುಗೆಯನ್ನು ಹಾಕಿಕೊಳ್ಳುವಾಗ, ತಿನ್ನುವಾಗ, ಕುಡಿಯುವಾಗ, ಅಗಿಯುವಾಗ, ರುಚಿಯನ್ನು ನೋಡುವಾಗ, ಎಚ್ಚರಿಕೆಯನ್ನು ಸಾಧಿಸುತ್ತಾನೆ. ಜಲಮಲಗಳನ್ನು ವಿಸರ್ಜಿಸುವಾಗ, ನಡೆಯುವಾಗ, ನಿಲ್ಲುವಾಗ, ಕುಳಿತುಕೊಳ್ಳುವಾಗ, ಮಲಗುವಾಗ ಎಚ್ಚರಗೊಳ್ಳುವಾಗ ಮಾತನಾಡುವಾಗ ಮೌನದಿಂದಿರುವಾಗ ಎಚ್ಚರಿಕೆಯನ್ನು ಸಾಧಿಸುತ್ತಾನೆ.
ಸಂಪಜಾನ ಪರ್ವ ಮುಗಿಯಿತು
ಕಾಯಾನುಪಸ್ಸನ ಪ್ರತಿಕೂಲಮನಸಿಕಾರ ಪರ್ವ
“ಮತ್ತೆ ಅಂಥ ಭಿಕ್ಷುವು ಪಾದತಲದಿಂದ, ಚರ್ಮದಿಂದ ಮುಚ್ಚಲ್ಪಟ್ಟ ಕಾಯವು ನಾನಾವಿಧವಾದ ಅಶುಚಿಯಾದ ಅಂಗಗಳಿಂದಾಗಿದೆ ಎಂದು ಈ ರೀತಿ ಚಿಂತನೆ ಮಾಡುತ್ತಾನೆ- ‘ಈ ಕಾಯದಲ್ಲಿ ತಲೆಯ ಕೂದಲು, ಮೈಮೇಲಿನ ರೋಮ, ಉಗುರು, ಹಲ್ಲು, ತೊಗಲು, ಮಾಂಸ, ಸ್ನಾಯು, ಮೂಳೆ, ಮೂಳೆಯಲ್ಲಿನ ರಸ, ಮೂತ್ರಪಿಂಡ, ಹೃದಯ ಪಿತ್ತಕೋಶ, ಪೊರೆ, ಪ್ಲೀಹ, ಶ್ವಾಸಕೋಶ, ಕರುಳು, ಕರುಳಿನ ಕೊನೆ, ಗಂಟಲು, ಮಲಶ್ಲೇಷ್ಮ, ಕೀವು, ರಕ್ತ, ಬೆವರು, ಕೊಬ್ಬು, ಕಣ್ಣೀರು, ದ್ರವರೂಪದ ಕೊಬ್ಬು, ಜೊಲ್ಲು, ಲೋಳೆ, ಕೀಲಿನದ್ರವ ಮತ್ತು ಮೂತ್ರಗಳಿಂದ ಆಗಿದೆ.
“ಎರಡು ಕಡೆಯೂ ಬಾಯಿಯಿರುವ ಚೀಲವೊಂದರಲ್ಲಿ ಬಿದಿರು, ಅಕ್ಕಿ, ಭತ್ತ, ಹೆಸರು, ಹುರುಳಿ, ಎಳ್ಳು, ಅಕ್ಕಿ ಮುಂತಾದ ಬಗೆಬಗೆಯ ಧಾನ್ಯಗಳಿದ್ದರೆ ಅದನ್ನು ಬಿಚ್ಚಿದಾಗ ನಿರ್ದೋಷ ದೃಷ್ಟಿಯಿರುವವನು ಇದು ಬಿದಿರು ಅಕ್ಕಿ, ಇದು ಭತ್ತ, ಇದು ಹೆಸರು, ಇದು ಹುರುಳಿ, ಇದು ಎಳ್ಳು, ಇದು ಅಕ್ಕಿ ಎಂದು ನಾನಾಬಗೆಯ ಧಾನ್ಯಗಳನ್ನು ಗುರುತಿಸುವಂತೆ ಆ ಅಶುಭಗಳನ್ನು ಕುರಿತು ಚಿಂತನೆ ಮಾಡುತ್ತಾನೆ. ಆ ಭಿಕ್ಷುವು ಪಾದಲತದಿಂದ ಕೂದಲು ತಲೆಯವರೆಗೆ ತೊಗಲಿನಿಂದ ಮುಚ್ಚಲ್ಪಟ್ಟಿರುವ ಈ ಕಾಯವು ಅಶುಚಿಯಾದ ಕೂದಲು ರೋಮ ಉಗುರು... ಮೂತ್ರ ಮುಂತಾದ ಅಂಗಗಳಿಂದ ಆಗಿದೆ ಎಂದು ತಿಳಿಯುತ್ತಾನೆ. ಕಾಯದೊಳಗೆ ನಡೆಯುವ ಕಾರ್ಯಗಳ... ಕಾಯವನ್ನು ಅದರ ನಿಜಸ್ವರೂಪದಲ್ಲಿ ನೋಡಬಲ್ಲವನಾಗುತ್ತಾನೆ.
ಪ್ರತಿಕೂಲಮನಸಿಕಾರ ಪರ್ವ ಮುಗಿಯಿತು
ಕಾಯಾನುಪಸ್ಸನ ಧಾತುಮನಸಿಕಾರ ಪರ್ವ
“ಮತ್ತೆ ಅಂಥ ಭಿಕ್ಷುವು ಈ ಕಾಯವು ಎಲ್ಲಿದ್ದರೂ ಯಾವರೀತಿಯಲ್ಲಿ ಮುಗಿದು ಹೋದರೂ ‘ಇದರಲ್ಲಿ ಪೃಥ್ವಿ ಆಪ ತೇಜಸ್ ವಾಯು ಧಾತುಗಳಿವೆ’ ಎಂಬ ಚಿಂತನೆ ಮಾಡುತ್ತಾನೆ. ಗೋವನ್ನು ಕತ್ತರಿಸಿ ಅದರ ಅಂಗಗಳನ್ನು ವಿಂಗಡಿಸಿ ನಾಲ್ಕು ದಾರಿಗಳು ಸಂಧಿಸಿದ ಕಡೆ ಕುಳಿತುಕೊಂಡು ಅಂಗಗಳನ್ನು ಮಾರಲು ತೋರಿಸುವ ಕಟುಕ ಅಥವಾ ಅವನ ಬಳಿಯ ಕೆಲಸದವನಂತೆ ಚಿಂತನೆ ಮಾಡುವ ಭಿಕ್ಷುವು ಈ ಕಾಯವು ಯಾವ ರೂಪದಲ್ಲಿಯೇ ಇರಲಿ, ಹೇಗೇ ಮುಗಿದು ಹೋಗಲಿ ಅದು ಪೃಥ್ವಿ ಆಪ ತೇಜಸ್ ವಾಯು ಧಾತುಗಳಿಂದಲೇ ಆಗಿದೆ ಎಂಬುದನ್ನು ಕಾಣುತ್ತಾನೆ.
ಧಾತುಮನಸಿಕಾರ ಪರ್ವ ಮುಗಿಯಿತು
ಕಾಯಾನುಪಸ್ಸನ ನವಸಿವಥಿಕ ಪರ್ವ
“ಸತ್ತನಂತರ ಒಂದು ಎರಡು ಅಥವಾ ಮೂರು ದಿನಗಳಾದ ಮೇಲೆ ಊದು ಹೋಗಿ ನೀಲಿ ಬಣ್ಣಕ್ಕೆ ತಿರುಗಿ ಕೊಳೆತು ಸ್ಮಶಾನದ ಒಂದುಕಡೆ ಬಿದ್ದಿರುವ ಹೆಣವನ್ನು ನೋಡಿ ಆ ಹೆಣವನ್ನು ತನ್ನದೆಂದೇ ಭಾವಿಸಿಕೊಂಡು ‘ನನ್ನ ದೇಹವೂ ಇದರಂತೆಯೇ ಆಗುತ್ತದೆ, ಇದಕ್ಕಿಂತ ಬೇರೆಯಾಗುವುದೇ ಇಲ್ಲ’ ಎಂದು ಚಿಂತನೆ ಮಾಡುತ್ತಾನೆ. ಕಾಯದೊಳಗೆ ನಡೆಯುವ ಕಾರ್ಯಗಳನ್ನು... ಅದರ ನಿಜಸ್ವರೂಪದಲ್ಲಿ ನೋಡಬಲ್ಲವನಾಗುತ್ತಾನೆ.
“ಸ್ಮಶಾನದಲ್ಲಿ ಬಿಸಾಡಿದ ಹೆಣವೊಂದನ್ನು ಕಾಗೆಗಳೂ, ಗಿಡಗಗಳೂ, ಹದ್ದುಗಳೂ, ನಾಯಿಗಳೂ, ನರಿಗಳೂ, ನಾನಾಬಗೆಯ ಹುಳುಗಳೂ ತಿಂದುಹಾಕುವಂತೆ ತನ್ನ ಹೆಣವನ್ನೂ, ನಾಯಿ, ನರಿ ಮುಂತಾದವು ತಿಂದುಹಾಕುತ್ತವೆ ಎಂದು ಭಾವಿಸಿಕೊಂಡು ‘ನನ್ನ ಕಾಯವೂ ಇದರಂತೆಯೇ ಆಗುತ್ತದೆ, ಇದಕ್ಕಿಂತ ಬೇರೆಯಾಗುವುದೇ ಇಲ್ಲ’ ಎಂದು ಚಿಂತನೆ ಮಾಡುತ್ತಾನೆ. ಕಾಯದೊಳಗೆ ನಡೆಯುವ ಕಾರ್ಯಗಳನ್ನು... ಅದರ ನಿಜಸ್ವರೂಪದಲ್ಲಿ ನೋಡಬಲ್ಲವನಾಗುತ್ತಾನೆ.
“ಮತ್ತೆ ಅಂಥ ಭಿಕ್ಷುವು ಸ್ಮಶಾನದಲ್ಲಿ ಬಿಸಾಡಿದ ಮೇಲೆ ಸ್ನಾಯುಗಳಿಂದ ಮಾತ್ರ ಬಂಧಿತವಾಗಿದ್ದು, ಕೇವಲ ಅಸ್ಥಿಪಂಜರವಾಗಿ ಉಳಿದುಕೊಂಡು ಅಲ್ಲಲ್ಲಿ ಮಾಂಸವು ಅಂಟಿಕೊಂಡಿರುವ ಹೆಣವನ್ನು ನೋಡಿ ಅದು ತನ್ನದೆಂದು ಭಾವಿಸಿಕೊಂಡು... ಸ್ಮಶಾನದಲ್ಲಿ ಬಿಸಾಡಿದ ಮೇಲೆ ಕೇವಲ ಅಸ್ಥಿಪಂಜರವಾಗಿ ಉಳಿದು (ಏನೇನೂ ಮಾಂಸವಿರದ) ಹೆಣವನ್ನು ನೋಡಿ ಅದನ್ನು ತನ್ನದೆಂದೇ ಭಾವಿಸಿಕೊಂಡು... ಮಾಂಸ ರಕ್ತಗಳಾವುವೂ ಇಲ್ಲದ ಹೆಣವನ್ನು ನೋಡಿ ಅದನ್ನು ತನ್ನದೆಂದೇ ಭಾವಿಸಿಕೊಂಡು.... ಮತ್ತೆ ಸ್ಮಶಾನದಲ್ಲಿ ಬಿಸಾಡಿದ ಹೆಣವೊಂದು ಕೇವಲ ಮೂಳೆಯಾಗಿ ಅದರ ಚೂರುಗಳು ಬೇರೆ ಬೇರೆ ಕಡೆ ಚಲ್ಲಾಪಿಲ್ಲಿಯಾಗಿ ಬಿದ್ದಿದ್ದಾಗ ಅವನ್ನು ನೋಡಿ ಇಲ್ಲಿ ಕೈ ಮೂಳೆಯಿದೆ, ಇಲ್ಲಿ ಕಾಲಿನ ಮೂಳೆಯಿದೆ, ಇಲಿ ಮೊಣಕಾಲಿನ ಮೂಳೆ ಇದೆ, ಸೊಂಟದ ಮೂಳೆ, ತೊಡೆ ಸಂದಿನ ಮೂಳೆ, ಬೆನ್ನು ಮೂಳೆ, ತಲೆಬುರುಡೆಗಳು ಇಲ್ಲಿಲ್ಲಿವೆ ಎಂಬುದನ್ನು ಕಂಡು ತನ್ನ ಮೂಳೆಗಳಿಗೂ ಇದೇ ಗತಿ ಬರುತ್ತದೆಂದು ಭಾವಿಸಿಕೊಂಡು ‘ನನ್ನ ಕಾಯವೂ ಇದರಂತೆ ಆಗುತ್ತದೆ, ಇದಕ್ಕಿಂತ ಬೇರೆಯಾಗುವುದೇ ಇಲ್ಲ’ ಎಂದು ಚಿಂತನೆ ಮಾಡುತ್ತಾನೆ. ಕಾಯದೊಳಗಿನ ಕಾರ್ಯಗಳನ್ನು... ಅದರ ನಿಜಸ್ವರೂಪದಲ್ಲಿ ನೋಡಬಲ್ಲವನಾಗುತ್ತಾನೆ.
“ಮತ್ತೆ ಅಂಥ ಭಿಕ್ಷುವು ಸ್ಮಶಾನದಲ್ಲಿ ಬಿಸಾಡಿದ ಹೆಣವೊಂದು ಶಂಖದಷ್ಟು ಬಿಳಿಯ ಬಣ್ಣದ ಮೂಳೆಯಾಗಿ... ಒಂದು ವರ್ಷದಷ್ಟು ಹಳೆಯದಾಗಿ ಮೂಳೆರಾಶಿಯಾಗಿ... ಪುಡಿಪುಡಿಯಾಗಿ ಅಸ್ಥಿಚೂರ್ಣದ ರಾಶಿಯಾಗಿರುವುದನ್ನು ನೋಡಿ ಅದು ತನ್ನದೆಂದೇ ಭಾವಿಸಿಕೊಂಡು ‘ನನ್ನ ದೇಹವೂ ಇದರಂತೆಯೇ ಆಗುತ್ತದೆ, ಇದಕ್ಕಿಂತ ಬೇರೆಯದಾಗುವುದೇ ಇಲ್ಲ’ ಎಂದು ಚಿಂತನೆ ಮಾಡುತ್ತಾನೆ. ಹೀಗೆ ಕಾಯದ ಒಳಗಡೆ ನಡೆಯುವ ಕಾರ್ಯಗಳ ಮೇಲೆ ಮನಸ್ಸನ್ನಿಟ್ಟಿರುತ್ತಾನೆ. ಕಾಯದ ಹೊರಗಿನ ವರ್ತನೆಯ ಮೇಲೆ ಮನಸ್ಸನ್ನಿಟ್ಟಿರುತ್ತಾನೆ. ಕಾಯದ ಒಳಗು ಹೊರಗಿನ ವರ್ತನೆಗಳ ಮೇಲೆ ಮನಸ್ಸಿಟ್ಟಿರುತ್ತಾನೆ. ಕಾಯದ ಬೆಳವಣಿಗೆಯ ಮೇಲೆ ಮನಸ್ಸನ್ನಿಟ್ಟಿರುತ್ತಾನೆ. ಕಾಯದ ಕ್ಷಯದ ಮೇಲೆ ಮನಸ್ಸನ್ನಿಟ್ಟಿರುತ್ತಾನೆ. ಕಾಯದ ಕ್ಷಯ ಬೆಳವಣಿಗೆಗಳ ಮೇಲೆ ಮನಸ್ಸನ್ನಿಟ್ಟಿರುತ್ತಾನೆ, ಕಾಯದ ಮೇಲೆಯೇ ಅವನ ಚಿತ್ತವಿದ್ದು, ಅದು ಈ ಭಾವನೆಯಿಂದಲೇ ತುಂಬಿರುತ್ತದೆ. ಸರಿಯಾದ ಜ್ಞಾನ ಪಡೆಯಲು ಏಕಾಗ್ರತೆಯನ್ನು ಗಳಿಸಲು ಅನಿರ್ಬಂಧ ಮನಸ್ಸಿನವನಾಗುತ್ತನೆ. ಲೋಕದಲ್ಲಿನ ಯಾವುದಕ್ಕೂ ಅಂಟಿಕೊಳ್ಳದಿರುವವನಗುತ್ತಾನೆ. ಹೀಗೆ ಕಾಯದ ನಿಜಸ್ವರೂಪವನ್ನು ಅರಿಯಬಲ್ಲವನಾಗುತ್ತಾನೆ.
ನವಸಿವಥಿಕ ಪರ್ವ ಮುಗಿಯಿತು
ಚುದ್ದಸ ಕಾಯಾನುಪಸ್ಸನ ಮುಗಿಯಿತು
ವೇದನಾನುಪಸ್ಸನಾ
“ಭಿಕ್ಷುವು ವೇದನೆಯ ಸ್ವಭಾವವನ್ನು ಅರಿಯಲು ವೇದನೆಯನ್ನು ಕುರಿತು ಹೇಗೆ ಚಿಂತನೆ ಮಾಡುತ್ತಾನೆ?
“ಸುಖ ವೇದನೆಯನ್ನು ಅನುಭವಿಸುವಾಗ ತಾನು ಅನುಭವಿಸುತ್ತಿರುವುದು ಸುಖವೇದನೆ ಎಂದು ಅರಿಯುತ್ತಾನೆ. ದುಃಖವೇದನೆಯನ್ನು ಅನುಭವಿಸುವಾಗ ತಾನು ಅನುಭವಿಸುತ್ತಿರುವುದು ದುಃಖವೇದನೆ ಎಂದು ಅರಿಯುತ್ತಾನೆ. ಅದುಃಖ ಅಸುಖ ವೇದನೆಯನ್ನು ಅನುಭವಿಸುತ್ತಿರುವಾಗ ತಾನು ಅನುಭವಿಸುತ್ತಿರುವ ವೇದನೆಯು ದುಃಖವೇದನೆಯೂ ಅಲ್ಲ, ಅಸುಖ ವೇದನೆಯೂ ಅಲ್ಲ ಎಂಬುದನ್ನು ಅರಿತಿರುತ್ತಾನೆ. ಸಾಂಸಾರಿಕ ಸುಖ ವೇದನೆಯನ್ನು ಅನುಭವಿಸುತ್ತಿರುವಾಗ ತಾನು ಅನುಭವಿಸುತ್ತಿರುವುದು ಲೌಕಿಕಸುಖ ವೇದನೆ ಎಂಬುದನ್ನು ಅರಿತಿರುತ್ತಾನೆ. ಅಲೌಕಿಕ ಸುಖ ವೇದನೆಯನ್ನು ಅನುಭವಿಸುತ್ತಿರುವಾಗ ತಾನು ಅನುಭವಿಸುತ್ತಿರುವುದು ಅಲೌಕಿಕ ಸುಖ ವೇದನೆ ಎಂಬುದನ್ನು ಅರಿತಿರುತ್ತಾನೆ ಅಲೌಕಿಕ ದುಃಖ ವೇದನೆಯನ್ನು ಅನುಭವಿಸುವಾಗ ತಾನು ಅನುಭವಿಸುತ್ತಿರುವುದು ಅಲೌಕಿಕ ದುಃಖ ವೇದನೆ ಎಂಬುದನ್ನು ಅರಿತಿರುತ್ತಾನೆ. ಲೋಕಕ್ಕೆ ಸಂಬಂಧಿಸಿದ ದುಃಖವೂ ಅಲ್ಲದ ಸುಖವೂ ಅಲ್ಲದ ವೇದನೆಯನ್ನು ಅನುಭವಿಸುವಾಗ ತಾನು ಅನುಭವಿಸುತ್ತಿರುವುದು ಲೌಕಿಕವಾದ ದುಃಖವೂ ಅಲ್ಲದ, ಸುಖವೂ ಅಲ್ಲದ ವೇದನೆ ಎಂದು ಅರಿಯುತ್ತಾನೆ. ಅಲೌಕಿಕವಾದ ದುಃಖವೂ ಅಲ್ಲದ, ಸುಖವೂ ಅಲ್ಲದ ವೇದನೆಯನ್ನು ಅನುಭವಿಸುವಾಗ ತಾನು ಅನುಭವಿಸುತ್ತಿರುವುದು ಅಲೌಕಿಕವಾದ ದುಃಖವೂ ಅಲ್ಲದ, ಸುಖವೂ ಅಲ್ಲದ ವೇದನೆ ಎಂಬುದನ್ನು ಅರಿಯುತ್ತಾನೆ.
ವೇದನಾನುಪಸ್ಸನಾ ಮುಗಿಯಿತು
ಚಿತ್ತಾನುಪಸ್ಸನಾ
“ಹೀಗೆ ಅಂತರ್ವೇದನೆಗಳನ್ನು ಕುರಿತು ಚಿಂತನೆ ಮಾಡುತ್ತಾ ಅದರ ಸ್ವಭಾವವನ್ನು ಅರಿಯುತ್ತಾನೆ. ಬಹಿರ್ವೇದನೆಗಳನ್ನು ಕುರಿತು ಚಿಂತನೆ ಮಾಡುತ್ತಾ ಅವುಗಳ ಸ್ವಭಾವವನ್ನು ಅರಿಯುತ್ತಾನೆ. ಅಂತರ್ಬಹಿರ ವೇದನೆಗಳನ್ನು ಕುರಿತು ಚಿಂತನೆ ಮಾಡುತ್ತಾ ಅವುಗಳ ಸ್ವಭಾವವನ್ನು ಅರಿಯುತ್ತಾನೆ. ವೇದನೆಗಳ ಉದಯವನ್ನು ಕುರಿತು ಚಿಂತನೆ ಮಾಡುತ್ತಾ, ವೇದನೆಗಳ ಉದಯದ ಕಾರಣವನ್ನು, ಸ್ವಭಾವವನ್ನೂ ಅರಿಯುತ್ತಾನೆ. ವೇದನೆಗಳ ಕ್ಷಯವನ್ನು ಕುರಿತು ಚಿಂತನೆ ಮಾಡುತ್ತಾ, ವೇದನೆಗಳ ಸ್ವಭಾವವನ್ನು ಅರಿಯುತ್ತಾನೆ. ವೇದನೆಗಳ ಉದಯ ವ್ಯಯಗಳನ್ನು ಕುರಿತು ಚಿಂತಿಸುತ್ತಾ ವೇದನೆಗಳ ಸ್ವಭಾವವನ್ನು ಅರಿಯುತ್ತಾನೆ. ‘ವೇದನೆಗಳು, ಇವೆ, ಅವುಗಳ ಸ್ವಭಾವ ಇದು’ ಎಂಬುದನ್ನು ಅರಿಯುತ್ತಾನೆ. ಸರಿಯಾದ ಜ್ಞಾನವನ್ನು ಗಳಿಸಲು ಏಕಾಗ್ರತೆಯನ್ನು ಪಡೆಯಲು ಲೋಕದ ಯಾವ ಅಂಶಕ್ಕೂ ಅಂಟಿಕೊಳ್ಳದೆ ಅನಿರ್ಬಂಧ ಮನಸ್ಸಿನವನಾಗುತ್ತಾನೆ. ಹೀಗೆ ಭಿಕ್ಷುವು ವೇದನೆಯನ್ನು ಕುರಿತು ಚಿಂತನೆ ಮಾಡಿ ಅದರ ಸ್ವಭಾವವನ್ನು ಅರಿಯುತ್ತಾನೆ.
ಚಿತ್ತಾನುಪಸ್ಸನಾ ಮುಗಿಯಿತು
ಧಮ್ಮಾನುಪಸ್ಸನ ನೀವರಣ ಪರ್ವ
“ಭಿಕ್ಷುವು ಚಿತ್ತದ ಸ್ವಭಾವವನ್ನು ಅರಿಯಲು ಚಿತ್ತವನ್ನು ಕುರಿತು ಹೇಗೆ ಚಿಂತನೆ ಮಾಡುತ್ತಾನೆ?
“ರಾಗದಿಂದ ಕೂಡಿದ ಚಿತ್ತವನ್ನು ರಾಗದಿಂದ ಕೂಡಿದ ಚಿತ್ತವೆಂದು ಅರಿಯುತ್ತಾನೆ. ರಾಗರಹಿತವಾದ ಚಿತ್ತವನ್ನು ರಾಗರಹಿತವಾದ ಚಿತ್ತವೆಂದು ಅರಿಯುತ್ತಾನೆ. ದ್ವೇಷ ಸಹಿತವದ ಚಿತ್ತವನ್ನು ದ್ವೇಷ ಸಹಿತವಾದ ಚಿತ್ತವೆಂದು ಅರಿಯುತ್ತಾನೆ. ದ್ವೇಷರಹಿತವಾದ ಚಿತ್ತವನ್ನು ದ್ವೇಷರಹಿತವಾದ ಚಿತ್ತವೆಂದು ಅರಿಯುತ್ತಾನೆ. ಮೋಸಹಿತವಾದ ಚಿತ್ತವನ್ನು ಮೋಹಸಹಿತವಾದ ಚಿತ್ತವೆಂದು ಅರಿಯುತ್ತಾನೆ. ಮೋಹರಹಿತವಾದ ಚಿತ್ತವನ್ನು ಮೋಹರಹಿತವಾದ ಚಿತ್ತವೆಂದು ಅರಿಯುತ್ತಾನೆ. ಕುಗ್ಗಿದ ಚಿತ್ತವನ್ನು ಕುಗ್ಗಿರುವ ಚಿತ್ತವೆಂದೇ ಅರಿಯುತ್ತಾನೆ. ಚಂಚಲವಾದ ಚಿತ್ತವನ್ನು ಚಂಚಲವಾದ ಚಿತ್ತವೆಂದು ಅರಿಯುತ್ತಾನೆ. ಬೆಳೆದಿರುವ ಚಿತ್ತವನ್ನು ಬೆಳೆದ ಚಿತ್ತವೆಂದು ಅರಿಯುತ್ತಾನೆ. ಬೆಳೆದಿರುವ ಕುಂದು ಹೋಗಿರುವ ಚಿತ್ತವನ್ನು ಕಮರಿ ಹೋಗಿರುವ ಚಿತ್ತವೆಂದು ಅರಿಯುತ್ತಾನೆ. ಗೆಲ್ಲಬಹುದಾದ ಚಿತ್ತವನ್ನು ಗೆಲ್ಲಬಹುದಾದ ಚಿತ್ತವೆಂದು ಅರಿಯುತ್ತಾನೆ. ತಲ್ಲಣಿಸುತ್ತಿರುವ ಚಿತ್ತವನ್ನು ತಲ್ಲಣಿಸುತ್ತಿರುವ ಚಿತ್ತವೆಂದು ಅರಿಯುತ್ತಾನೆ. ಮುಕ್ತಚಿತ್ತವನ್ನು ಮುಕ್ತಚಿತ್ತವೆಂದು ಅರಿಯುತ್ತಾನೆ. ಮುಕ್ತವಾಗಿರದ ಚಿತ್ತವನ್ನು ಅಮುಕ್ತ ಚಿತ್ತವೆಂದು ಅರಿಯುತ್ತಾನೆ. ಹೀಗೆ ಚಿತ್ತದ ಅಂತರ್ ಸ್ವಭಾವವನ್ನು ಅರಿಯುತ್ತನೆ. ಚಿತ್ತದ ಬಹಿರ್ಸ್ವಭಾವವನ್ನು ಕುರಿತು ಚಿಂತನೆ ಮಾಡುತ್ತಾ ಅದರ ಸ್ವಭಾವವನ್ನು ಅರಿಯುತ್ತಾನೆ. ಅಂತಃಸ್ವಭಾವ ಬಹಿರ್ಸ್ವಭಾವವನ್ನು ಕುರಿತು ಚಿಂತನೆ ಮಾಡುತ್ತಾ ಚಿತ್ತದ ಸ್ವಭಾವವನ್ನರಿಯುತ್ತಾನೆ. ಚಿತ್ತದಲ್ಲಿ ಉದಯಿಸುವವುಗಳನ್ನು ಕುರಿತು ಚಿಂತನೆ ಮಾಡುತ್ತಾ ಚಿತ್ತದ ಸ್ವಭಾವವನ್ನರಿಯುತ್ತಾನೆ. ಚಿತ್ತದಲ್ಲಿ ಕ್ಷಯಿಸುವವುಗಳನ್ನು ಕುರಿತು ಚಿಂತಿಸುತ್ತಾ ಚಿತ್ತದ ಸ್ವಭಾವವನ್ನು ಅರಿಯುತ್ತಾನೆ. ಚಿತ್ತದಲ್ಲಿ ಉದಯಿಸಿ ವ್ಯಯವಾಗುವವುಗಳನ್ನು ಕುರಿತು ಚಿಂತನೆ ಮಾಡುತ್ತಾ ಚಿತ್ತದ ಸ್ವಭಾವವನ್ನರಿಯುತ್ತಾನೆ. ಇದು ಚಿತ್ತ, ಅದರ ಸ್ವಭಾವ ಹೀಗೆ ಎಂಬುದನ್ನು ಅರಿಯುತ್ತಾನೆ. ಜ್ಞಾನವನ್ನು ಗಳಿಸಲು ಏಕಾಗ್ರತೆ ಪಡೆಯಲು ಲೋಕದ ಯಾವ ಅಂಶಕ್ಕೂ ಅಂಟಿಕೊಳ್ಳದೆ ಅನಿರ್ಬಂಧಿತ ಮನಸ್ಸಿನವನಾಗುತ್ತಾನೆ. ಹೀಗೆ ಭಿಕ್ಷುವು ಚಿತ್ತವನ್ನು ಕುರಿತು ಚಿಂತನೆ ಮಾಡಿ ಅದರ ಸ್ವಭಾವವನ್ನು ಅರಿಯುತ್ತಾನೆ.
“ಭಿಕ್ಷುವು ಧಮ್ಮವನ್ನು ಅರಿಯಲು ಧಮ್ಮವನ್ನು ಕುರಿತು ಹೀಗೆ ಚಿಂತನೆ ಮಾಡುತ್ತಾನೆ?
“ಭಿಕ್ಷುವು ಪಂಚನೀವರಣಗಳನ್ನು ಕುರಿತು ಚಿಂತನೆಮಾಡಿ ಧರ್ಮವನ್ನು ಅರಿಯುತ್ತಾನೆ. ಧರ್ಮವನ್ನು ಅರಿಯಲು ಪಂಚನೀವರಣಗಳನ್ನು ಕುರಿತು ಹೀಗೆ ಚಿಂತನೆ ಮಾಡುತ್ತಾನೆ? ಕಾಮದ ಗುಣವು ಇದ್ದಾಗ ತನ್ನಲ್ಲಿ ಕಾಮದ ಗುಣವು ಇದೆ ಎಂಬುದನ್ನು ಅರಿಯುತ್ತಾನೆ. ತನ್ನೊಳಗೆ ಕಾಮಗುಣವು ಇಲ್ಲದಾಗ ತನ್ನೊಳಗೆ ಕಾಮಗುಣವು ಇಲ್ಲ ಎಂಬುದನ್ನು ಅರಿಯುತ್ತಾನೆ. ಇಲ್ಲದ ಕಾಮಗಳು ಉದಯಿಸಿದಾಗ ಅವು ಉದಯಿಸಿದುದನ್ನು ಅರಿಯುತ್ತಾನೆ. ಉದಯಿಸಿದ ಕಾಮಗಳು ಅಳಿಯುವಾಗ ಅದರ ಅಳಿವನ್ನು ಕಾಣುತ್ತಾನೆ. ಅಳಿದ ಕಾಮಗಳು ಮುಂದೆ ಉದಯಿಸದಿರುವುದು ಏಕೆ ಎಂಬುದನ್ನು ಕಾಣುತ್ತಾನೆ.
“ತನ್ನೊಳಗೆ ಹಿಂಸಾಬುದ್ಧಿ ಇದ್ದಾಗ ತನ್ನಲ್ಲಿ ಹಿಂಸಾಬುದ್ಧಿ ಇದೆ ಎಂಬುದನ್ನು ಅರಿಯುತ್ತಾನೆ. ತನ್ನೊಳಗೆ ಹಿಂಸಾಬುದ್ಧಿ ಇಲ್ಲದಾಗ ತನ್ನಲ್ಲಿ ಹಿಂಸಾಬುದ್ಧಿ ಇಲ್ಲ ಎಂಬುದನ್ನು ಅರಿಯುತ್ತಾನೆ. ಇಲ್ಲದಿರುವ ಹಿಂಸಾಬುದ್ಧಿಯು ಹೇಗೆ ಉದಯಿಸಿತು ಎಂಬುದನ್ನು ಕಾಣುತ್ತಾನೆ. ಉದಯಿಸಿದ ಹಿಂಸಾಬುದ್ಧಿ ಅಳಿಯುವುದನ್ನು ಕಾಣುತ್ತಾನೆ. ಅಳಿದ ಹಿಂಸಾಬುದ್ಧಿಯು ಉದಯಿಸದಿರುವುದು ಏಕೆ ಎಂಬುದನ್ನು ಅರಿಯುತ್ತಾನೆ.
“ಭಿಕ್ಷುವು ತನ್ನೊಳಗೆ ಆಲಸಿಕೆ ಇದ್ದಾಗ ತನ್ನಲ್ಲಿ ಆಲಸಿಕೆ ಎಂಬುದನ್ನು ಅರಿಯುತ್ತಾನೆ- ತನ್ನಲ್ಲಿ ಆಲಸಿಕೆ ಇಲ್ಲದಿದ್ದಾಗ ತನ್ನಲ್ಲಿ ಆಲಸಿಕೆ ಉದಯಿಸಿತು ಎಂಬುದನ್ನು ಕಾಣುತ್ತಾನೆ. ಉದಯಿಸಿದ ಆಲಸಿಕೆಯು ಹೇಗೆ ಅಳಿಯುವವು ಎಂಬುದನ್ನು ಕಾಣುತ್ತಾನೆ. ಅಳಿದ ಆಲಸಿಕೆಯು ಉದಯಿಸದಿರುವುದು ಏಕೆ ಎಂಬುದನ್ನು ಅರಿಯುತ್ತಾನೆ.
“ಭಿಕ್ಷುವು ತನ್ನೊಳಗೆ ಚಿಂತೆ ಪಶ್ಚಾತ್ತಾಪಗಳು ಇದ್ದಾಗ ತನ್ನಲ್ಲಿ ಚಿಂತೆ ಪಶ್ಚಾತ್ತಾಪಗಳು ಇವೆ ಎಂಬುದನ್ನು ಅರಿಯುತ್ತಾನೆ. ತನ್ನೊಳಗೆ ಚಿಂತೆ ಪಶ್ಚಾತ್ತಾಪಗಳು ಇಲ್ಲದಾಗ ತನ್ನಲ್ಲಿ ಚಿಂತೆ ಪಶ್ಚಾತ್ತಾಪಗಳು ಇಲ್ಲ ಎಂಬುದನ್ನು ಅರಿಯುತ್ತಾನೆ. ಇಲ್ಲದಿದ್ದ ಚಿಂತೆ ಪಶ್ಚಾತ್ತಾಪಗಳು ಹೇಗೆ ಉದಯಿಸಿದವು ಎಂಬುದನ್ನು ಕಾಣುತ್ತಾನೆ. ಉದಯಿಸಿದ ಚಿಂತೆ ಪಶ್ಚಾತ್ತಾಪಗಳು ಹೇಗೆ ಅಳಿಯುತ್ತವೆ ಎಂಬುದನ್ನು ಅರಿಯುತ್ತಾನೆ. ಅಳಿದ ಆಲಸಿಕೆಯು ಮತ್ತೆ ಉದಯಿಸದಿರುವುದು ಏಕೆ ಎಂಬುದನ್ನು ಅರಿಯುತ್ತಾನೆ.
“ಭಿಕ್ಷುವು ತನ್ನೊಳಗೆ ಸಂದೇಹವು ಇದ್ದಾಗ ತನ್ನಲ್ಲಿ ಸಂದೇಹವಿದೆ ಎಂಬುದನ್ನು ಅರಿಯುತ್ತಾನೆ. ಸಂದೇಹವು ಇಲ್ಲದಿದ್ದಾಗ ತನ್ನಲ್ಲಿ ಸಂದೇಹವಿಲ್ಲ ಎಂಬುದನ್ನು ಅರಿಯುತ್ತಾನೆ. ಇಲ್ಲದಿದ್ದ ಸಂಶಯವು ಹೇಗೆ ಹುಟ್ಟಿಕೊಂಡಿತು ಎಂಬುದನ್ನು ಅರಿಯುತ್ತಾನೆ. ಹುಟ್ಟಿಕೊಂಡ ಸಂಶಯವು ಹೇಗೆ ಅಳಿಯಿತು ಎಂಬುದನ್ನು ಅರಿಯುತ್ತಾನೆ. ಅಳಿದ ಸಂಶಯವು ಮತ್ತೆ ಹೇಗೆ ಹುಟ್ಟಿಕೊಳ್ಳುವುದಿಲ್ಲ ಎಂಬುದನ್ನು ಅರಿಯುತ್ತಾನೆ.
“ಹೀಗೆ ಭಿಕ್ಷುವು ಒಳಮನಸ್ಸನ್ನು ಕುರಿತು ಚಿಂತನೆ ಮಾಡುತ್ತಾನೆ. ಭಿಕ್ಷುವು ಹೊರಮನಸ್ಸನ್ನು ಕುರಿತು ಚಿಂತನೆ ಮಾಡುತ್ತಾನೆ- ಮನಸ್ಸಿನ ಒಳಗು-ಹೊರಗುಗಳನ್ನು ಕುರಿತು ಚಿಂತನೆ ಮಾಡುತ್ತಾ ಧಮ್ಮವನ್ನು ಅರಿಯುತ್ತಾನೆ. ಧಮ್ಮವು ಉದಯಿಸುವುದನ್ನು ಕುರಿತು ಚಿಂತನೆ ಮಾಡುತ್ತಾನೆ. ಧಮ್ಮದ ಕ್ಷಯವನ್ನು ಕುರಿತು ಚಿಂತನೆ ಮಾಡುತ್ತಾನೆ. ಧಮ್ಮದ ಉದಯ ವ್ಯಯಗಳನ್ನು ಕುರಿತು ಚಿಂತನೆ ಮಾಡುತ್ತಾನೆ. ಧಮ್ಮವೆಂದರೆ ಇವೇ ಎಂಬುದನ್ನು ಅರಿಯುತ್ತಾನೆ. ಜ್ಞಾನವನ್ನು ಗಳಿಸಲು ಏಕಾಗ್ರತೆಯನ್ನು ಪಡೆಯಲು ಲೋಕದ ಯಾವ ಅಂಶಕ್ಕೂ ಅಂಟಿಕೊಳ್ಳದೆ ಅನಿರ್ಬಂಧ ಮನಸ್ಸಿನವನಾಗುತ್ತಾನೆ. ಹೀಗೆ ಪಂಚನೀವರಣಗಳನ್ನು ಕುರಿತು ಚಿಂತೆ ಮಾಡುತ್ತಾ ಧಮ್ಮವನ್ನು ಅರಿಯುವವನಾಗುತ್ತಾನೆ.
ನೀವರಣ ಪರ್ವ ಮುಗಿಯಿತು
ಧಮ್ಮಾನುಪಸ್ಸನ ಖಂಧ ಪರ್ವ
“ಭಿಕ್ಷುವು ಪಂಚ ಉಪಾದಾನ ಖಂದಗಳನ್ನು ಕುರಿತು ಚಿಂತನೆ ಮಾಡುತ್ತಾ ಧಮ್ಮವನ್ನು ಅರಿಯುತ್ತಾನೆ. ಧಮ್ಮವನ್ನು ಅರಿಯಲು ಉಪಾದಾನ ಖಂದಗಳನ್ನು ಹೇಗೆ ಚಿಂತನೆ ಮಾಡುತ್ತಾನೆ? ಭಿಕ್ಷುವು ‘ಇದು ರೂಪ, ಇದು ರೂಪದ ಉದಯ, ಇದು ರೂಪದ ನಾಶ, ಇದು ವೇದನೆ, ಇದು ವೇದನೆಯ ಉದಯ, ಇದು ವೇದನೆಯ ನಾಶ, ಇದು ಸಞ್ಞಾ, ಇದು ಸಞ್ಞಾದ ಉದಯ, ಇದು ಸಞ್ಞಾದ ನಾಶ, ಇದು ಸಂಖಾರ, ಇದು ಸಂಖಾರದ ಉದಯ, ಇದು ಸಂಖಾರದ ನಾಶ, ಇದು ವಿಞ್ಞಾನ, ಇದು ವಿಞ್ಞಾಣದ ಉದಯ, ಇದು ವಿಞ್ಞಾಣದ ನಾಶ ಎಂದು ಧಮ್ಮದ ಒಳಗನ್ನು ಕುರಿತು ಚಿಂತನೆ ಮಾಡುತ್ತಾ ಧಮ್ಮವನ್ನು ಅರಿಯುತ್ತಾನೆ. ಹೊರ ಧಮ್ಮವನ್ನು ಕುರಿತು ಚಿಂತನೆ ಮಾಡುತ್ತ ಧಮ್ಮವನ್ನು ಅರಿಯುತ್ತಾನೆ. ಧಮ್ಮದ ಉದಯವನ್ನು ಕುರಿತು ಚಿಂತನೆ ಮಾಡುತ್ತಾನೆ. ಧಮ್ಮದ ಕ್ಷಯವನ್ನು ಕುರಿತು ಚಿಂತನೆ ಮಾಡುತ್ತಾನೆ. ಧಮ್ಮದ ಉದಯ ಕ್ಷಯಗಳನ್ನು ಕುರಿತು ಚಿಂತನೆ ಮಾಡುತ್ತಾನೆ’. ಧಮ್ಮವೆಂದರೇ ಇದೇ ಎಂಬುದನ್ನು ಅರಿಯುತ್ತಾನೆ. ಜ್ಞಾನವನ್ನು ಗಳಿಸಲು ಏಕಾಗ್ರತೆಯನ್ನು ಪಡೆಯಲು ಲೋಕದ ಯಾವ ಅಂಶಕ್ಕೂ ಅಂಟಿಕೊಳ್ಳದೆ ಅನಿರ್ಬಂಧ ಮನಸ್ಸಿನವನಾಗುತ್ತಾನೆ. ಹೀಗೆ ಉಪಾದಾನ ಖಂದಗಳನ್ನು ಕುರಿತು ಚಿಂತನೆ ಮಾಡುತ್ತಾ ಧಮ್ಮವನ್ನು ಅರಿಯುತ್ತಾನೆ.
ಖಂಧ ಪರ್ವ ಮುಗಿಯಿತು
ಧಮ್ಮಾನುಪಸ್ಸನ ಆಯತನ ಪರ್ವ
“ಮತ್ತೆ ಭಿಕ್ಷುವು ಆರು ಅಂತರಾಯತನಗಳನ್ನೂ ಆರು ಬಹರಾಯತನಗಳನ್ನೂ ಕುರಿತು ಚಿಂತನೆ ಮಾಡುತ್ತಾನೆ. ಧಮ್ಮವನ್ನು ಅರಿಯಲು ಆಯತನಗಳನ್ನು ಕುರಿತು ಹೇಗೆ ಚಿಂತನೆ ಮಾಡುತ್ತಾನೆ?
“ಭಿಕ್ಷುವು ಕಣ್ಣು ಹೇಗಿದೆ ಎಂಬುದನ್ನು ಅರಿತಿರುತ್ತಾನೆ. ರೂಪಗಳನ್ನು ಅರಿತಿರುತ್ತಾನೆ. ಎರಡರ ಪರಸ್ಪರಾವಲಂಬದಿಂದ ಉಂಟಾಗುವ ಸಂಕೋಲೆಯನ್ನು ಅರಿಯುತ್ತಾನೆ. ಇಲ್ಲದಿದ್ದ ಬಂಧನವು ಹೇಗೆ ಉಂಟಾಗುತ್ತದೆ ಎಂಬುದನ್ನು ಅರಿಯುತ್ತಾನೆ. ಕತ್ತರಿಸಿಕೊಂಡ ಸಂಕೋಲೆಯು ಮತ್ತೆ ಹೇಗೆ ಅವನನ್ನು ಬಂಧಿಸುವುದಿಲ್ಲ ಎಂಬುದನ್ನು ಅರಿಯುತ್ತಾನೆ. ಉಂಟಾದ ಬಂಧನವನ್ನು ಕತ್ತರಿಸಿಕೊಳ್ಳುವುದು ಹೇಗೆ ಎಂಬುದನ್ನು ಅರಿಯುತ್ತಾನೆ.
“ಕಿವಿಯು ಹೇಗಿದೆ ಎಂಬುದನ್ನು ಅವನು ಅರಿಯುತ್ತಾನೆ, ಶಬ್ದವನ್ನು ಅರಿತಿರುತ್ತಾನೆ. ಇವೆರಡರ ಪರಸ್ಪರಾವಲಂಬನದಿಂದ ಸಂಕೋಲೆಯನ್ನು ಅರಿತಿರುತ್ತಾನೆ. ಇಲ್ಲದಿದ್ದ ಸಂಕೋಲೆಯು ಹೇಗೆ ಉಂಟಾಗುತ್ತದೆ ಎಂಬುದನ್ನು ಅರಿತಿರುತ್ತಾನೆ. ಉಂಟಾದ ಸಂಕೋಲೆಯನ್ನು ಕತ್ತರಿಸಿಕೊಳ್ಳುವ ಬಗೆಯನ್ನು ಅರಿಯುತ್ತಾನೆ. ಕತ್ತರಿಸಿಕೊಂಡ ಸಂಕೋಲೆಯು ಮತ್ತೊಮ್ಮೆ ಹೇಗೆ ಉಂಟಾಗುವುದಿಲ್ಲ ಎಂಬುದನ್ನು ಅರಿಯುತ್ತಾನೆ.
“ಘ್ರಾಣೇಂದ್ರಿಯವು (ಮೂಗು) ಹೇಗಿದೆ ಎಂಬುದನು ತಿಳಿಯುತ್ತಾನೆ. ವಾಸನೆಗಳನ್ನು ತಿಳಿಯುತ್ತಾನೆ. ಇವೆರಡರ ಪರಸ್ಪರಾವಲಂಬನದಿಂದ ಬಂಧನವು ಹೇಗೆ ಉಂಟಾಗುತ್ತದೆ ಎಂಬುದನ್ನು ತಿಳಿಯುತ್ತಾನೆ. ಇಲ್ಲದಿದ್ದ ಸಂಕೋಲೆಯು ಹೇಗೆ ಉಂಟಾಗುತ್ತದೆ ಎಂಬುದನ್ನು ತಿಳಿಯುತ್ತಾನೆ. ಕತ್ತರಿಸಿಕೊಂಡ ಸಂಕೋಲೆಯು ಮತ್ತೆ ಹೇಗೆ ಬಂಧಿಸುವುದಿಲ್ಲ ಎಂಬುದನ್ನು ಅರಿಯುತ್ತಾನೆ.
“ಜಿಹ್ವೆಯು (ನಾಲಿಗೆ) ಹೇಗಿದೆ ಎಂಬುದನ್ನು ತಿಳಿಯುತ್ತಾನೆ. ರುಚಿಗಳನ್ನು ತಿಳಿಯುತ್ತಾನೆ. ಇವೆರಡರ ಪರಸ್ಪರಾವಲಂಬನದಿಂದ ಸಂಕೋಲೆಯು ಹೇಗೆ ಉಂಟಾಗುತ್ತದೆ ಎಂಬುದನ್ನು ಅರಿಯುತ್ತಾನೆ. ಇಲ್ಲದಿದ್ದ ಸಂಕೋಲೆಯು ಹೇಗೆ ಹುಟ್ಟಿಕೊಂಡಿತು ಎಂಬುದನ್ನು ಅರಿಯುತ್ತಾನೆ. ಹುಟ್ಟಿಕೊಂಡ ಸಂಕೋಲೆಯನ್ನು ಕತ್ತರಿಸಿಕೊಳ್ಳುವ ಬಗೆಯನ್ನು ಅರಿಯುತ್ತಾನೆ. ಹೀಗೆ ಕತ್ತರಿಸಿಕೊಂಡ ಸಂಕೋಲೆಯು ಮತ್ತೆ ಹೇಗೆ ಬಂಧಿಸುವುದಿಲ್ಲ ಎಂಬುದನ್ನು ಅರಿಯುತ್ತಾನೆ.
“ಕಾಯದ ಸ್ವಭಾವವನ್ನು ಅರಿಯುತ್ತಾನೆ. ಸ್ಪರ್ಶಗಳನ್ನು ಅರಿಯುತ್ತಾನೆ. ಇವೆರಡರ ಪರಸ್ಪರಾವಲಂಬನದಿಂದ ಸಂಕೋಲೆಯು ಹೇಗೆ ಉಂಟಾಗುತ್ತದೆ ಎಂಬುದನ್ನು ಅರಿಯುತ್ತಾನೆ. ಇಲ್ಲದಿದ್ದ ಸಂಕೋಲೆಯು ಹೇಗೆ ಹುಟ್ಟಿಕೊಂಡಿತು ಎಂಬುದನ್ನು ಅರಿಯುತ್ತಾನೆ. ಇಲ್ಲದಿದ್ದ ಸಂಕೋಲೆಯು ಹೇಗೆ ಹುಟ್ಟಿಕೊಂಡಿತು ಎಂಬುದನ್ನು ಅರಿಯುತ್ತಾನೆ. ಹುಟ್ಟಿಕೊಂಡ ಸಂಕೋಲೆಯನ್ನು ಕತ್ತರಿಸಿಕೊಳ್ಳುವ ಬಗೆಯನ್ನು ಅರಿಯುತ್ತಾನೆ. ಹೀಗೆ ಕತ್ತರಿಸಿಕೊಂಡ ಸಂಕೋಲೆಯು ಮತ್ತೆ ಹೇಗೆ ಬಂಧಿಸುವುದಿಲ್ಲ ಎಂಬುದನ್ನು ಅರಿಯುತ್ತಾನೆ.
“ಕಾಯದ ಸ್ವಭಾವವನ್ನು ಅರಿಯುತ್ತಾನೆ, ಸ್ಪರ್ಶಗಳನ್ನು ಅರಿಯುತ್ತಾನೆ. ಇವೆರಡರ ಪರಸ್ಪರಾವಲಂಬನದಿಂದ ಸಂಕೋಲೆಯು ಹೇಗೆ ಉಂಟಾಗುತ್ತದೆ ಎಂಬುದನ್ನು ಅರಿಯುತ್ತಾನೆ. ಇಲ್ಲದಿದ್ದ ಸಂಕೋಲೆಯು ಹೇಗೆ ಹುಟ್ಟಿಕೊಂಡಿತು ಎಂಬುದನ್ನು ಅರಿಯುತ್ತಾನೆ. ಹುಟ್ಟಿಕೊಂಡ ಸಂಕೋಲೆಯನ್ನು ಕತ್ತರಿಸಿಕೊಳ್ಳುವ ಬಗೆಯನ್ನು ಅರಿಯುತ್ತಾನೆ. ಹೀಗೆ ಕತ್ತರಿಸಿಕೊಂಡ ಸಂಕೋಲೆಯು ಮತ್ತೆ ಹೇಗೆ ಬಂಧಿಸುವುದಿಲ್ಲ ಎಂಬುದನ್ನು ಅರಿಯುತ್ತಾನೆ.
“ಮನಸ್ಸಿನ ಸ್ವಭಾವವನ್ನು ಅರಿಯುತ್ತಾನೆ. ಧಮ್ಮಗಳನ್ನು ಅರಿಯುತ್ತಾನೆ. ಇವೆರಡರ ಪರಸ್ಪರಾವಲಂಬನದಿಂದ ಸಂಕೋಲೆಯು ಹೇಗೆ ಉಂಟಾಗುತ್ತದೆ ಎಂಬುದನ್ನು ಅರಿಯುತ್ತಾನೆ. ಇಲ್ಲದಿದ್ದ ಸಂಕೋಲೆಯು ಹೇಗೆ ಹುಟ್ಟಿಕೊಂಡಿತು ಎಂಬುದನ್ನು ಅರಿಯುತ್ತಾನೆ. ಹುಟ್ಟಿಕೊಂಡ ಸಂಕೋಲೆಯನ್ನು ಕತ್ತರಿಸಿಕೊಳ್ಳುವ ಬಗೆಯನ್ನು ಅರಿಯುತ್ತಾನೆ. ಹೀಗೆ ಕತ್ತರಿಸಿಕೊಂಡ ಸಂಕೋಲೆಯು ಮತ್ತೆ ಹೇಗೆ ಬಂಧಿಸುವುದಿಲ್ಲ ಎಂಬುದನ್ನು ಅರಿಯುತ್ತಾನೆ.
“ಹೀಗೆ ಭಿಕ್ಷುವು ಧಮ್ಮಗಳ ಒಳಗನ್ನು ಕುರಿತು ಚಿಂತನೆ ಮಾಡುತ್ತಾ ಅದನ್ನು ಅರಿಯುತ್ತಾನೆ. ಧಮ್ಮದ ಹೊರಗನ್ನು ಕುರಿತು ಚಿಂತನೆ ಮಾಡುತ್ತಾ ಅದನ್ನು ಅರಿಯುತ್ತಾನೆ. ಧಮ್ಮಗಳ ಒಳಗು ಹೊರಗುಗಳನ್ನು ಕುರಿತು ಚಿಂತನೆ ಮಾಡುತ್ತಾ ಅವನ್ನು ಅರಿಯುತ್ತಾನೆ. ಧಮ್ಮಗಳ ಉದಯವನ್ನು ಕುರಿತು ಚಿಂತನೆ ಮಾಡುತ್ತಾನೆ. ಧಮ್ಮದ ಕ್ಷಯವನ್ನು ಕುರಿತು ಚಿಂತನೆ ಮಾಡುತ್ತಾನೆ. ಧಮ್ಮದ ಉದಯ ಕ್ಷಯವನ್ನು ಕುರಿತು ಚಿಂತನೆ ಮಾಡುತ್ತಾನೆ. ‘ಧಮ್ಮಗಳೆಂದರೆ ಇವೇ’ ಎಂದು ತಿಳಿಯುತ್ತಾನೆ. ಜ್ಞಾನವನ್ನು ಗಳಿಸಲು ಏಕಾಗ್ರತೆಯನ್ನು ಪಡೆಯಲು ಲೋಕದ ಯಾವ ಅಂಶಕ್ಕೂ ಅಂಟಿಕೊಳ್ಳದೆ ಅನಿರ್ಬಂಧ ಮನಸ್ಸಿನವನಾಗುತ್ತಾನೆ. ಹೀಗೆ ಮನಸ್ಸಿನಲ್ಲಾಗುವ ಪರಿಣಾಮಗಳನ್ನು ಕುರಿತು ಚಿಂತನೆ ಮಾಡುತ್ತಾ ಧಮ್ಮವನ್ನು ಅರಿಯುತ್ತಾನೆ.
ಆಯತನ ಪರ್ವ ಮುಗಿಯಿತು
ಧಮ್ಮಾನುಪಸ್ಸನ ಭೋಜ್ಝಂಗ ಪರ್ವ
“ಮತ್ತೆ ಭಿಕ್ಷುವು ಸಪ್ತ ಬೋಜ್ಝಂಗಗಳನ್ನು ಕುರಿತು ಚಿಂತನೆ ಮಾಡುತ್ತಾನೆ. ಧಮ್ಮವನ್ನು ಅರಿಯಲು ಸಪ್ತ ಬೋಜ್ಝಂಗಗಳನ್ನು ಕುರಿತು ಹೇಗೆ ಚಿಂತನೆ ಮಾಡುತ್ತಾನೆ?
ಅವನು ಸತಿಯನ್ನು ಹೊಂದಿದ್ದರೆ ತಾನು ಎಚ್ಚರದಿಂದಿರಬಲ್ಲ ಸತಿಸಂಬೋಜ್ಝವನ್ನು ಹೊಂದಿದ್ದೇನೆ ಎಂದು ತಿಳಿಯುತ್ತಾನೆ. ಅವನಲ್ಲಿ ಸತಿಯಿಲ್ಲದಿದ್ದರೆ ತಾನು ಎಚ್ಚರದಿಂದಿರಬಲ್ಲ ಸಂಬೋಜ್ಝಂಗವನ್ನು ಹೊಂದಿಲ್ಲ ಎಂಬುದನ್ನು ಅರಿಯುತ್ತಾನೆ. ಇಲ್ಲದಿದ್ದ ಸತಿಸಂಬೋಜ್ಝವು ಹುಟ್ಟಿಕೊಂಡಾಗ ಅದು ಹೇಗೆ ಬಂದಿತು ಎಂಬುದನ್ನು ಅರಿಯುತ್ತಾನೆ. ಹುಟ್ಟಿಕೊಂಡ ಸತಿಬೋಜ್ಝಂಗವು ಪರಿಪೂರ್ಣವಾಗಬೇಕಾದರೆ ಅದು ಹೇಗೆ ಬೆಳೆಯಬೇಕು ಎಂಬುದನ್ನು ಅರಿಯುತ್ತಾನೆ.
“ತನ್ನಲ್ಲಿ ಸತ್ಯವನ್ನು ತಿಳಿಯಬೇಕೆಂಬ ವಿಚಾರಶೀಲತೆಯ (ಅಂದರೆ ಧಮ್ಮವಿಚಯ) ಸಂಬೋಜ್ಝಂಗವು ಇದ್ದಾಗ ತನ್ನಲ್ಲಿ ಆ ಬೋಜ್ಝಂಗವಿದೆ ಎಂದು ತಿಳಿಯುತ್ತಾನೆ. ಆ ಬೋಜ್ಝಂಗವು ಇಲ್ಲದಿದ್ದಾಗ ತನ್ನಲ್ಲಿ ಆ ಬೋಜ್ಝಂಗವಿಲ್ಲ ಎಂಬುದನ್ನು ಅರಿಯುತ್ತಾನೆ. ಇಲ್ಲದಿದ್ದ ಧಮ್ಮವಿಚಯ ಸಂಬೋಜ್ಝಂಗವು ಹುಟ್ಟಿಕೊಂಡಾಗ ಅದು ಹೇಗೆ ಬಂದಿತು ಎಂಬುದನ್ನು ಅರಿಯುತ್ತಾನೆ. ಇಲ್ಲದ ಧಮ್ಮವಿಚಯ ಸಂಬೋಜ್ಝಂಗವು ಹುಟ್ಟಿಕೊಂಡಾಗ ಅದು ಪರಿಪೂರ್ಣವಾಗಬೇಕಾದರೆ ಅದು ಹೇಗೆ ಹೇಗೆ ಬೆಳೆಯಬೇಕು ಎಂಬುದನ್ನು ಅರಿಯುತ್ತಾನೆ.
“ಸಂಬೋಧಿಯನ್ನು ಪಡೆಯಲು ಬೇಕಾದ ಯತ್ನಶೀಲತೆ (ವಿರಿಯ)ಯು ಸಂಬೋಜ್ಝಂಗವು ಇದ್ದಾಗ ತನ್ನಲ್ಲಿ ಆ ಬೋಜ್ಝಂಗವಿದೆ ಎಂದು ಅರಿಯುತ್ತಾನೆ. ಆ ಸಂಬೋಜ್ಝಂಗವು ಇಲ್ಲದಿದ್ದಾಗ ತನ್ನಲ್ಲಿ ಅದು ಇಲ್ಲ ಎಂದು ಅರಿಯುತ್ತಾನೆ. ಇಲ್ಲದಿದ್ದ ವಿರಿಯ ಸಂಬೋಜ್ಝಂಗವು ಹುಟ್ಟಿಕೊಂಡಾಗ ಅದು ಹೇಗೆ ಬಂದಿತು ಎಂಬುದನ್ನು ಅರಿಯುತ್ತಾನೆ. ಇಲ್ಲದಿದ್ದ ವಿರಿಯ ಸಂಬೋಜ್ಝಂಗವು ಹುಟ್ಟಿಕೊಂಡಾಗ ಅದು ಪರಿಪೂರ್ಣವಾಗಬೇಕಾದರೆ ಅದು ಹೇಗೆ ಬೆಳೆಯಬೇಕು ಎಂಬುದನ್ನು ಅರಿಯುತ್ತಾನೆ.
“ತನ್ನಲ್ಲಿ ಪ್ರೀತಿ ಸಂಬೋಜ್ಝಂಗವು ಇದ್ದಾಗ ತನ್ನಲ್ಲಿ ಅದು ಇದೆ ಎಂದು ಅರಿಯುತ್ತಾನೆ. ತನ್ನಲ್ಲಿ ಆ ಬೋಜ್ಝಂಗವು ಇಲ್ಲದಿದ್ದಾಗ ಅದು ಇಲ್ಲ ಎಂದು ಅರಿಯುತ್ತಾನೆ. ಇಲ್ಲದಿದ್ದ ಪ್ರೀತಿ ಸಂಬೋಜ್ಝಂಗವು ಹುಟ್ಟಿಕೊಂಡಾಗ ಅದರ ಉತ್ಪನ್ನವನ್ನು ಅರಿಯುತ್ತಾನೆ. ಹುಟ್ಟಿಕೊಂಡ ಸಂಬೋಜ್ಝಂಗವು ಪರಿಪೂರ್ಣವಾಗಬೇಕಾದರೆ ಅದು ಹೇಗೆ ಬೆಳೆಯಬೇಕು ಎಂಬುದನ್ನು ಅರಿಯುತ್ತಾನೆ.
“ತನ್ನಲ್ಲಿ ಮನಸ್ಸು ಶಾಂತಿಯಿಂದಿರುವ ಸಂಬೋಜ್ಝಂಗವು ಇರುವಾಗ (ಪಸ್ಸದ್ಧಿ ಸಂಬೋಜ್ಝಂಗ) ತನ್ನಲ್ಲಿ ಆ ಬೋಜ್ಝಂಗವಿದೆ ಎಂಬುದನ್ನು ಅರಿಯುತ್ತಾನೆ. ತನ್ನಲ್ಲಿ ಪಸ್ಸದ್ಧಿ ಸಂಬೋಜ್ಝಂಗವು ಇಲ್ಲದಾಗ ತನ್ನಲ್ಲಿ ಅದು ಇಲ್ಲವೆಂದು ಅರಿಯುತ್ತಾನೆ. ಇಲ್ಲದಿದ್ದ ಪಸ್ಸದ್ಧಿ ಸಂಬೋಜ್ಝಂಗವು ಹುಟ್ಟಿಕೊಂಡಾಗ ಅದರ ಉತ್ಪನ್ನವನ್ನು ಅರಿಯುತ್ತಾನೆ. ಹುಟ್ಟಿಕೊಂಡ ಸಂಬೋಜ್ಝಂಗವು ಪರಿಪೂರ್ಣವಾಗಬೇಕಾದರೆ ಅದು ಹೇಗೆ ಬೆಳೆಯಬೇಕು ಎಂಬುದನ್ನು ಅರಿಯುತ್ತಾನೆ.
“ತನ್ನಲ್ಲಿ ಸಮಾಧಿ ಸಂಬೋಜ್ಝಂಗವು ಇರುವಾಗ ತನ್ನಲ್ಲಿ ಅದು ಇದೆ ಎಂಬುದನ್ನು ಅರಿಯುತ್ತಾನೆ. ತನ್ನಲ್ಲಿ ಆ ಬೋಜ್ಝಂಗವು ಇಲ್ಲದಿದ್ದಾಗ ತನ್ನಲ್ಲಿ ಅದು ಇಲ್ಲ ಎಂಬುದನ್ನು ಅರಿಯುತ್ತಾನೆ. ಇಲ್ಲದಿದ್ದ ಸಮಾಧಿ ಸಂಬೋಜ್ಝಂಗವು ಹುಟ್ಟಿಕೊಂಡಾಗ ಅದರ ಉತ್ಪನ್ನವನ್ನು ಅರಿಯುತ್ತಾನೆ. ಉತ್ಪನ್ನವಾದ ಸಮಾಧಿ ಸಂಬೋಜ್ಝಂಗವು ಪರಿಪೂರ್ಣವಾಗಬೇಕಾದರೆ ಅದು ಹೇಗೆ ಬೆಳೆಯಬೇಕು ಎಂಬುದನ್ನು ಅರಿಯುತ್ತಾನೆ.
“ತನ್ನಲ್ಲಿ ಉಪೇಕ್ಖ ಸಂಬೋಜ್ಝಂಗವು ಇರುವಾಗ ತನ್ನಲ್ಲಿ ಅದು ಇದೆ ಎಂಬುದನ್ನು ಅರಿಯುತ್ತಾನೆ. ತನ್ನಲ್ಲಿ ಅದು ಇಲ್ಲದಾಗ ಅದು ತನ್ನಲ್ಲಿ ಇಲ್ಲ ಎಂಬುದನ್ನು ಅರಿಯುತ್ತಾನೆ. ಇಲ್ಲದ ಉಪೇಕ್ಖ ಸಂಬೋಜ್ಝಂಗವು ಹುಟ್ಟಿಕೊಂಡಾಗ ಅದರ ಉತ್ಪನ್ನವನ್ನು ಅರಿಯುತ್ತಾನೆ. ಉತ್ಪನ್ನವಾದ ಉಪೇಕ್ಖ ಸಂಬೋಜ್ಝಂಗವು ಪರಿರ್ಪೂವಾಗಬೇಕಾದರೆ ಅದು ಹೇಗೆ ಬೆಳೆಯಬೇಕು ಎಂಬುದನ್ನು ಅರಿಯುತ್ತಾನೆ.
“ಹೀಗೆ ಭಿಕ್ಷುವು ಧಮ್ಮಗಳನ ಒಳಗನ್ನು ಕುರಿತು ಚಿಂತನೆ ಮಾಡುತ್ತಾ ಅವನ್ನು ಅರಿಯುತ್ತಾನೆ. ಧಮ್ಮಗಳ ಹೊರಗನ್ನು ಕುರಿತು ಚಿಂತನೆ ಮಾಡುತ್ತಾ ಅವನ್ನು ಅರಿಯುತ್ತಾನೆ. ಧಮ್ಮಗಳ ಒಳಗು ಹೊರಗುಗಳನ್ನು ಕುರಿತು ಚಿಂತನೆ ಮಾಡುತ್ತಾ ಅವನ್ನು ಅರಿಯುತ್ತಾನೆ. ಧಮ್ಮಗಳ ಉದಯವನ್ನು ಕುರಿತು ಚಿಂತನೆ ಮಾಡುತ್ತಾನೆ. ಧಮ್ಮಗಳ ಕ್ಷಯವನ್ನು ಕುರಿತು ಚಿಂತನೆ ಮಾಡುತ್ತಾನೆ. ಧಮ್ಮದ ಉದಯ ಕ್ಷಯಗಳನ್ನು ಕುರಿತು ಚಿಂತನೆ ಮಾಡುತ್ತಾನೆ. ‘ಧಮ್ಮಗಳೆಂದರೆ ಇವೇ’ ಎಂಬುದನ್ನು ಅರಿಯುತ್ತಾನೆ. ಜ್ಞಾನವನ್ನು ಗಳಿಸಲು ಏಕಾಗ್ರತೆಯನ್ನು ಪಡೆಯಲು ಲೋಕದ ಯಾವ ಅಂಶಕ್ಕೂ ಅಂಟಿಕೊಳ್ಳದೆ ಅನಿರ್ಬಂಧ ಮನಸ್ಸಿನವನಾಗುತ್ತಾನೆ. ಹೀಗೆ ಮನಸ್ಸಿನಲ್ಲಾಗುವ ಪರಿಣಾಮಗಳನ್ನು ಕುರಿತು ಚಿಂತನೆ ಮಾಡುತ್ತ ಧಮ್ಮವನ್ನು ಅರಿಯುತ್ತಾನೆ.
ಭೋಜ್ಝಂಗ ಪರ್ವ ಪ್ರಥಮ ಪಠಣ ಮುಗಿಯಿತು
ಧಮ್ಮಾನುಪಸ್ಸನ ಸತ್ಯ ಪರ್ವ
“ಮತ್ತೆ ಭಿಕ್ಷುವು ಚತುರಾರ್ಯ ಸತ್ಯಗಳನ್ನು ಕುರಿತು ಚಿಂತನೆ ಮಾಡುತ್ತಾನೆ. ಧಮ್ಮವನ್ನು ಅರಿಯಲು ಚತುರಾರ್ಯಸತ್ಯಗಳನ್ನು ಕುರಿತು ಹೇಗೆ ಧ್ಯಾನ ಮಾಡುತ್ತಾನೆ? ದುಃಖ ಹೀಗಿರುತ್ತದೆ, ದುಃಖದ ಉದಯವು ಇದರಿಂದ ಆಗುತ್ತದೆ. ದುಃಖದ ನಿರೋಧವು ಹೀಗೆ, ದುಃಖ ನಿರೋಧವನ್ನು ಸಾಧಿಸುವ ಮಾರ್ಗವು ಇದು ಎಂಬುದನ್ನು ಸ್ಪಷ್ಟವಾಗಿ ಅರಿಯುತ್ತಾನೆ.
ಪ್ರಥಮ ಪಠಣ ಮುಗಿಯಿತು
ದುಃಖಸತ್ಯ ನಿರ್ದೇಶನ
“ದುಃಖ ಸತ್ಯವು ಹೇಗಿರುತ್ತದೆ? ಭಿಕ್ಷುಗಳೇ, ಹುಟ್ಟು ದುಃಖ, ಜರೆಯು ದುಃಖ, ವ್ಯಾಧಿಯ ದುಃಖ, ಮರಣವು ದುಃಖ, ಶೋಕ ಪ್ರಲಾಪ ನೋವು ದೋಮನಸ್ಸು ಹತಾಶೆಗಳು ದುಃಖ, ಅಪ್ರಿಯವಾದುದರ ಜೊತೆಗಿರುವದು ದುಃಖ ಪ್ರಿಯವಾದುದರಿಂದ ದೂರವಿರುಉದು ದುಃಖ, ಇಚ್ಛಿಸಿದುದು ಲಭಿಸದಿರುವುದು ದುಃಖ ಒಟ್ಟಿನಲ್ಲಿ ಪಂಚ ಉಪಾದಾನ ಖಂಡಗಳು ದುಃಖ.
“ಹುಟ್ಟುವುದು ಎಂದರೆ ಏನು? ಭಿಕ್ಷುಗಳೇ, ಬೇರೆ ಬೇರೆ ಜೀವಿಗಳು ಬೇರೆ ಬೇರೆ ಜನ್ಮಗಳನ್ನು ಹೊಂದುವುದು ಖಂದಗಳನ್ನು ಹೊಂದಿ ಕಾಣಿಸಿಕೊಳ್ಳುವುದು, ಆಯತನಗಳನ್ನು ಹೊಂದಿರುವುದು- ಇವನ್ನು ಹುಟ್ಟುವುದು ಎನ್ನುತ್ತಾರೆ.
“ಜರಾ ಎಂದರೆ ಏನು ? ಭಿಕ್ಷುಗಳೇ, ಜೀವಿಗಳು ಬೇರೆ ಬೇರೆ ಕಾಯಗಳನ್ನು ಹೊಂದಿರುವಾಗ ಜೀರ್ಣವಾಗಿ ಕೂದಲು ನರೆತುಹೋಗಿ ದೇಹ ಸುಕ್ಕು ಹಿಡಿದು ಆಯಸ್ಸು ಕ್ಷೀಣಿಸುತ್ತಾ ಹೋಗಿ ಇಂದ್ರಿಯಗಳು ನಿಷ್ಕ್ರಿಯವಾಗುತ್ತಾ ಹೋಗುವುದು- ಇವನ್ನು ಜರೆ ಎನ್ನುತ್ತಾರೆ.
“ಮರಣವೆಂದರೆ ಏನು ಭಿಕ್ಷುಗಳೇ? ಜೀವಿಗಳು ಬೇರೆ ಬೇರೆ ಕಾಯಗಳಿಂದ ಚ್ಯುತಿಹೊಂದಿ, ಅವನ್ನು ತ್ಯಜಿಸಿ ಅವುಗಳಿಂದ ಬೇರೆಯಾಗಿ, ಅಲ್ಲಿಂದ ಅದೃಶ್ಯವಾಗಿ, ಮೃತ್ಯವಶವಾಗುವುದು, ಮರಣ ಹೊಂದುವುದು, ಕಾಲವಾಗುವುದು, ಖಂದಗಳಿಂದ ಬೇರೆಯಾಗುವುದು, ಕಳೇಬರವನ್ನು ಬಿಟ್ಟು ಹೋಗುವುದು- ಇವನ್ನು ಮರಣ ಎನ್ನುತ್ತಾರೆ.
“ಶೋಕ ಎಂದರೆ ಏನು ಭಿಕ್ಷುಗಳೇ? ವಿವಿಧ ನಷ್ಟಗಳಿಂದ ಉಂಟಾಗುವ ಮನೋಸ್ಥಿತಿಗಳು. ಆ ಭಾವನೆಯಲ್ಲಿಯೇ ಇರುವುದು ಒಳಗಿನ ಶೋಕ, ಒಳಗಿನ ಪರಿಶೋಕ- ಇವನ್ನು ಶೋಕವೆಂದು ಹೇಳುತ್ತಾರೆ.
“ಪ್ರಲಾಪ ಎಂದರೆ ಏನು ಭಿಕ್ಷುಗಳೆ? ವಿವಿಧ ನಷ್ಟಗಳಿಂದ ಉಂಟಾಗುವ ಮನೋಸ್ಥಿತಿ ಅವುಗಳಿಂದ ಬರುವ ಗೋಳು ಸಂಕಟ, ಗೋಳು, ಶೋಕ, ಸಂಕಟಗಳಿಂದ ಕೂಡಿರುವ ಸ್ಥಿತಿ- ಇವನ್ನು ಪ್ರಲಾಪವೆನ್ನುತ್ತಾರೆ.
“ನೋವು ಎಂದರೆ ಏನು? ದೇಹಕ್ಕೆ ಉಂಟಾಗುವ ನೋವು, ದೇಹಕ್ಕೆ ಆಗುವ ಅಹಿತವಾದ ವೇದನೆ, ದೇಹಕ್ಕೆ ಇತರ ವಸ್ತುಗಳಿಮದ ಆಗುವ ನೋವು- ಇವನ್ನು ನೋವು ಅಥವಾ ಬಾಧೆ ಎನ್ನುತ್ತಾರೆ.
“ದೋಮನಸ್ಸು ಎಂದರೆ ಏನು ಭಿಕ್ಷುಗಳೇ? ಮನಸ್ಸಿಗೆ ಉಂಟಾಗುವ ನೋವು ಮತ್ತು ಮನಸ್ಸಿಗೆ ಉಂಟಾಗುವ ಅಹಿತವಾದ ಭಾವನೆ. ಇತರ ವಸ್ತುಗಳಿಂದ ಮತ್ತು ಭಾವನೆಗಳಿಂದ ಮನಸ್ಸಿಗೆ ಉಂಟಾಗುವ ನೋವು ಮತ್ತು ಅಹಿತವಾದ ಸ್ಥಿತಿ- ಇವುಗಳನ್ನು ದೋಮನಸ್ಸು ಎನ್ನುತ್ತಾರೆ.
“ಹತಾಶೆ ಎಂದರೆ ಏನು ಭಿಕ್ಷುಗಳೇ? ಯಾವಾವುದೋ ನಷ್ಟಗಳಿಂದ ಮನಸ್ಸಿಗೆ ಆಗುವ ಅನೇಕ ವಿಧದ ನಿರಾಶೆ, ಹತಾಶೆ, ನಿರುತ್ಸಾಹ, ಖಿನ್ನತೆ ಇವುಗಳನ್ನು ಹತಾಶೆ ಎನ್ನುತ್ತಾರೆ.
“ಅಪ್ರಿಯವಾದುದರ ಸಂಗ ಎಂದರೆ ಏನು ಭಿಕ್ಷುಗಳೇ? ಬೇಡವಾದ ಇಷ್ಟವಿಲ್ಲದ ಸಂತೋಷವನ್ನುಂಟುಮಾಡದ ರೂಪ, ಶಬ್ದ, ಗಂಧ, ರಸಸ್ಪರ್ಶಗಳು ಅನರ್ಥ, ಅಹಿತ, ಅಸಂತೋಷ ಪರಿಣಾಮಗಳನ್ನುಂಟು ಮಾಡಿ ಕ್ಷೇಮವನ್ನುಂಟುಮಾಡದ ಭಾವಗಿರುವುದು- ಇದನ್ನು ‘ಅಪ್ರಿಯವಾದುದರ ಸಂಗದಿಂದ ಬರುವ ದುಃಖವೆನ್ನುತ್ತಾರೆ.’
“ಪ್ರಿಯವಾದುದ್ದರ ವಿಯೋಗದಿಂದ ಬರುವ ದುಃಖ ಎಂದರೇನು? ಬೇಕಾದ ಇಷ್ಟಪಡುವ ಸಂತೋಷವನ್ನುಂಟುಮಾಡುವ ರೂಪಶಬ್ದ, ಗಂಧ, ರಸ ಸ್ಪರ್ಶ ಮತ್ತು ಹಿತವಾದ ಸಂತೋಷಪೂರಿತವಾದ ಭಾವನೆಗಳು ದೂರವಾಗುವುದು. ಅವುಗಳಿಗೆ ಕಾರಣರಾದ ತಾಯಿ-ತಂದೆ, ಸೋದರ-ಸೋದರಿಯರು, ಮಿತ್ರರು, ಸಂಗಾತಿಗಳು ಹತ್ತಿರದ ನೆಂಟರು ವಿಯೋಗವಾದಾಗ ಭಾವನೆ ಯಾವುದಿದೆಯೋ ಅದನ್ನು ಪ್ರಿಯವಾದದ್ದು ಉಂಟಾಗದಿದ್ದಾಗ ಬರುವ ದುಃಖ ಎನ್ನುತ್ತಾರೆ.
“ಇಚ್ಛಿಸಿದುದು ದೊರಕದಿದ್ದಾಗ ಬರುವ ದುಃಖ ಎಂದರೇನು? ಹುಟ್ಟುವ ಜೀವಿಗಳಿಗೆಲ್ಲ ಈ ಭಾವನೆಯು ಇರುತ್ತದೆ- ‘ನಾವು ಹುಟ್ಟಿದಿದ್ದರೆ ಚೆನ್ನಾಗಿರುತ್ತಿತ್ತು. ನಮಗೆ ಮುಂದೆ ಹುಟ್ಟೇ ಇಲ್ಲದಿದ್ದರೆ ಚೆನ್ನಾಗಿರುತ್ತದೆ’. ಹೀಗೆ ಇಚ್ಛಿಸಿದ ಮಾತ್ರಕ್ಕೆ ಹುಟ್ಟು ತಪ್ಪುವುದಿಲ್ಲ. ಇಚ್ಛಿಸುವುದು ದೊರೆಯದಿದ್ದಾಗ ಬರುವ ಭಾವನೆಯು ದುಃಖ ಜರೆಗೆ ಒಳಗಾದ ಎಲ್ಲ ಜೀವಿಗಳಿಗೂ ಈ ಭಾವನೆಯು ಬರುತ್ತದೆ: ‘ನಮಗೆ ಜರೆಯೇ ಬಂದಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು. ನಾವು ಜರಾಧಮ್ಮಕ್ಕೆ ಒಳಗಾಗಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು’. ಹೀಗೆಂದು ಇಚ್ಛಿಸಿದ ಮಾತ್ರಕ್ಕೆ ಜರೆಯು ತಪ್ಪುವುದಿಲ್ಲ. ಹೀಗೆ ಇಚ್ಛಿಸಿದುದು ದೊರೆಯದಿದ್ದಾಗ ಬರುವ ಭಾವನೆಯು ದುಃಖ ವ್ಯಾಧಿಗೆ ಒಳಗಾದ ಎಲ್ಲ ಜೀವಿಗಳಿಗೂ ಈ ಇಚ್ಛೆ ಬರುತ್ತದೆ- ‘ವ್ಯಾಧಿಯೇ ಬರದಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು, ವ್ಯಾಧಿ ಧಮ್ಮಕ್ಕೆ ಒಳಗಾಗದಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು’. ಹೀಗೆ ಇಚ್ಛಿಸಿದ ಮಾತ್ರಕ್ಕೇ ವ್ಯಾಧಿಯು ತಪ್ಪುವುದಿಲ್ಲ. ಇಚ್ಛಿಸಿದುದು ದೊರೆಯದಿದ್ದಾಗ ಬರುವ ಭಾವನೆಯು ದುಃಖ ಮರಣಕ್ಕೆ ಒಳಗಾಗುವ ಎಲ್ಲ ಜೀವಿಗಳಿಗೂ ಈ ಇಚ್ಛೆ ಬರುತ್ತದೆ- ‘ಮರಣವೇ ಬರದಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು. ಮರಣ ಧಮ್ಮಕ್ಕೆ ಒಳಗಾಗದಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು’. ಹೀಗೆ ಇಚ್ಛಿಸಿದ ಮಾತ್ರಕ್ಕೇ ಮರಣವು ತಪ್ಪುವುದಿಲ್ಲ. ಇಚ್ಛಿಸಿದುದು ದೊರೆಯದಿದ್ದಾಗ ಬರುವ ಭಾವನೆಯು ದುಃಖ ಶೋಕ ಪ್ರಲಾಪ ನೋವು ದೋಮನಸ್ಸು ಹತಾಶೆ ಇವುಗಳನ್ನು ತಪ್ಪಿಸಿಕೊಳ್ಳಲಾರದ ಎಲ್ಲ ಜೀವಿಗಳಿಗೂ ಈ ಇಚ್ಛೆ ಬರುತ್ತದೆ. “ಶೋಕ ಪ್ರಲಾಪ ನೋವು ದೋಮನಸ್ಸುಗಳು ಉಂಟಾಗದೇ ಇದ್ದರೆ ಎಷ್ಟು ಚೆನ್ನಾಗಿರುತ್ತದೆ- ಇವುಗಳ ನಿಯಮಕ್ಕೆ ಒಳಗಾಗದಿದ್ದರೆ ಎಷ್ಟು ಚೆನ್ನಾಗಿರುತ್ತದೆ”. ಹೀಗೆ ಇಚ್ಛಿಸಿದ ಮಾತ್ರಕ್ಕೇ ಶೋಕ ಪ್ರಲಾಪ ನೋವು ದೋಮನಸ್ಸು ಹತಾಶೆಗಳು ತಪ್ಪುವುದಿಲ್ಲ. ಹೀಗೆ ಇಚ್ಛಿಸಿದುದು ದೊರೆಯದಿದ್ದಾಗ ಬರುವ ಭಾವನೆಯೇ ದುಃಖ.
“ಉಪಾದಾನ ಖಂದಗಳನ್ನು ಸಂಕ್ಷಿಪ್ತವಾಗಿ ಹೇಗೆ ಹೇಳಬಹುದು? ರೂಪುಪಾದಾನ ಖಂದ, ವೇದನಾನುಪಾದಾನ ಖಂದ, ಸಞ್ಞಾನುಪಾದಾನ ಖಂದ, ಸಂಖಾರಾನುಪದಾನ ಖಂದ, ವಿಞ್ಞಾಣಾನುಪಾದಾನ ಖಂದ. ಇವೇ ಉಪಾದಾನ ಖಂದ. ಸಂಕ್ಷಿಪ್ತವಾಗಿ ಹೇಳಬಹುದಾದ ಉಪಾದಾನ ಖಂದಗಳು. ಇವನ್ನು ದುಃಖದ ಆರ್ಯಸತ್ಯ ಎಂದು ಕರೆಯುತ್ತಾರೆ.
ಸಮುದಯ ಸತ್ಯ ನಿರ್ದೇಶನ
“ಭಿಕ್ಷುಗಳೇ, ದುಃಖಸಮುದಯ ಆರ್ಯ ಸತ್ಯವೆಂದರೇನು? ಪುನರ್ಜನ್ಮಗಳನ್ನೂ, ಭೋಗ ಭಾವನೆಗಳನ್ನು ತರುವ ಬಯಕೆಗಳೂ ಅಲ್ಲೊಮ್ಮೆ ಸಂತೋಷವನ್ನುಂಟುಮಾಡುವ ಬಯಕೆಗಳೂ ತಣ್ಹಾ ಎನಿಸಿಕೊಳ್ಳುತ್ತವೆ. ಅವು ಕಾಮತಣ್ಹಾ ಭವತಣ್ಹಾ ಮತ್ತು ವಿಭವ ತಣ್ಹಾ ಎನಿಸಿಕೊಳ್ಳುತ್ತವೆ.
“ಭಿಕ್ಷುಗಳೇ, ಎಲ್ಲಿ ಈ ತಣ್ಹಾವು ಹುಟ್ಟಿಕೊಳ್ಳುತ್ತದೆ, ಯಾವುದು ಅದು, ಹುಟ್ಟಿಕೊಳ್ಳುವುದಕ್ಕೆ ತಕ್ಕ ಸ್ಥಾನವಾಗಿದೆ? ಲೋಕದಲ್ಲಿರುವ ಪ್ರಿಯವಾದ ಮತ್ತು ಸಂತೋಷನ್ನುಂಟುಮಾಡುವವುಗಳೇ. ತಣ್ಹಾ ಹುಟ್ಟಿಕೊಳ್ಳುವುದಕ್ಕೂ ತಕ್ಕ ಸ್ಥಾನವಾಗಿದೆ, ಅದು ಅಲ್ಲಿ ಹುಟ್ಟುತ್ತದೆ.
“ಲೋಕದಲ್ಲಿರುವ ಪ್ರಿಯವಾದ ಮತ್ತು ಸಂತೋಷನ್ನುಂಟುಮಾಡುವವುಗಳು ಯಾವುವು? ಲೋಕದಲ್ಲಿ ಚಕ್ಷುವು ಪ್ರಿಯವಾದ ಮತ್ತು ಸಂತೋಷವನ್ನುಂಟುಮಾಡುವ ವಸ್ತುವಾಗಿದೆ. ಇದರಲ್ಲಿ ತಣ್ಹಾವು ಹುಟ್ಟಿಕೊಳ್ಳುತ್ತದೆ. ಇದು ತಣ್ಹಾ ಹುಟ್ಟುವುದಕ್ಕೆ ತಕ್ಕ ಸ್ಥಾನವಾಗಿದೆ... ಲೋಕದಲ್ಲಿ ಕಿವಿಯು... ಲೋಕದಲ್ಲಿ ಘ್ರಾಣೇಂದ್ರಿಯವು... ಲೋಕದಲ್ಲಿ ಜಿಹ್ವೆಯು... ಲೋಕದಲ್ಲಿ ಕಾಯವು... ಲೋಕದಲ್ಲಿ ಮನವು... ಪ್ರಿಯವಾದದೂ ಸಂತೋಷವನ್ನುಂಟುಮಾಡುವುದೂ ಆಗಿದೆ. ತಣ್ಹಾವು ಇದರಲ್ಲಿ ಹುಟ್ಟುತ್ತದೆ, ತಣ್ಹಾವು ಹುಟ್ಟಿಕೊಳ್ಳಲು ಅದಕ್ಕೆ ತಕ್ಕ ಸ್ಥಾನವಾಗಿದೆ.
“ಲೋಕದಲ್ಲಿ ರೂಪವು... ಲೋಕದಲ್ಲಿ ಶಬ್ದವು... ಲೋಕದಲ್ಲಿ ಗಂಧವು... ಲೋಕದಲ್ಲಿ ರಸವು... ಲೋಕದಲ್ಲಿ ಸ್ಪರ್ಶವು... ಮನವು ಲೋಕದಲ್ಲಿ ಪ್ರಿಯವಾದುದಕ್ಕೆ ಸಂತೋಷವನ್ನುಂಟುಮಾಡುವುದಕ್ಕೆ ಅಂಟಿಕೊಳ್ಳುವ ಸ್ವಭಾವವನ್ನು ಹೊಂದಿರುತ್ತದೆ. ತಣ್ಹಾವು ಇದರಲ್ಲಿ ಹುಟ್ಟುತ್ತದೆ. ತಣ್ಹಾವು ಹುಟ್ಟುವುದಕ್ಕೆ ತಕ್ಕ ಸ್ಥಾನವಾಗಿದೆ. ‘ಲೋಕದಲ್ಲಿ ಚಕ್ಷುವಿಞ್ಞಾಣವು... ಘ್ರಾಣವಿಞ್ಞಾಣವು... ಶ್ರೋತವಿಞ್ಞಾಣವು... ಜಿಹ್ವಾ ವಿಞ್ಞಾಣವು... ಕಾಯ ವಿಞ್ಞಾಣವು... ಮನೋ ವಿಞ್ಞಾಣವು ಲೋಕದಲ್ಲಿ ಪ್ರಿಯವಾದುದೂ ಸಂತೋಷವನ್ನುಂಟುಮಾಡುವುದೂ ಆಗಿದೆ. ತಣ್ಹಾವು ಇದರಲ್ಲಿ ಹುಟ್ಟುತ್ತದೆ, ಇದು ತಣ್ಹಾವು ಹುಟ್ಟುವುದಕ್ಕೆ ತಕ್ಕ ಸ್ಥಾನವಾಗಿದೆ.
“ಲೋಕದಲ್ಲಿ ಚಕ್ಷು ಸಂಸ್ಪರ್ಶವು... ಶ್ರೋತ ಸಂಸ್ಪರ್ಶವು... ಘ್ರಾಣ ಸಂಸ್ಪರ್ಶವು... ಜಿಹ್ವಾ ಸಂಸ್ಪರ್ಶವು... ಲೋಕದಲ್ಲಿ ಕಾಯ ಸಂಸ್ಪರ್ಶವು... ಲೋಕದಲ್ಲಿ ಮನೋ ಸಂಸ್ಪರ್ಶವು ಪ್ರಿಯವಾದುದೂ ಸಂತೋಷವನ್ನುಂಟು ಮಾಡುವುದೂ ಆಗಿದೆ. ತಣ್ಹಾವು ಇದರಲ್ಲಿ ಹುಟ್ಟುತ್ತದೆ. ತಣ್ಹಾವು ಹುಟ್ಟುವುದಕ್ಕೆ ಇದು ಸ್ಥಾನವಾಗಿದೆ.
“ಚಕ್ಷು ಸಂಸ್ಪರ್ಶದಿಂದ ಹುಟ್ಟುವ ವೇದನೆಯು... ಶ್ರೋತ ಸಂಸ್ಪರ್ಶದಿಂದ ಹುಟ್ಟುವ ವೇದನೆಯು ಘ್ರಾಣ ಸಂಸ್ಪರ್ಶದಿಂದ ಹುಟ್ಟುವ ವೇದನೆಯು, ಜಿಹ್ವಾ ಸಂಸ್ಪರ್ಶದಿಂದ ಹುಟ್ಟುವ ವೇದನೆಯು... ಕಾಯ ಸಂಸ್ಪರ್ಶದಿಂದ ಹುಟ್ಟುವ ವೇದನೆಯು... ಮನೋಸಂಸ್ಪರ್ಶದಿಂದ ಹುಟ್ಟುವ ವೇದನೆಯು ಲೋಕದಲ್ಲಿ ಪ್ರಿಯವಾದುದೂ, ಸಂತೋಷನ್ನುಂಟುಮಾಡುವುದೂ ಆಗಿರುತ್ತದೆ. ತಣ್ಹಾವು ಇದರಲ್ಲಿ ಹುಟ್ಟುತ್ತದೆ. ತಣ್ಹಾವು ಹುಟ್ಟುವುದಕ್ಕೆ ಇದು ತಕ್ಕ ಸ್ಥಾನವಾಗಿದೆ.
“ರೂಪಸಞ್ಞಾವು... ಶಬ್ದ ಸಞ್ಞಾವು... ಗಂಧ ಸಞ್ಞಾವು... ರಸ ಸಞ್ಞಾವು... ಸ್ಪರ್ಶ ಸಞ್ಞಾವು... ಮನಸ್ಸು ತಿಳಿಯುವಂಥದು. ಲೋಕದಲ್ಲಿ ಪ್ರಿಯವನ್ನೂ, ಸಂತೋಷವನ್ನೂ ಉಂಟುಮಾಡುತ್ತದೆ. ತಣ್ಹಾವು ಇದರಲ್ಲಿ ಹುಟ್ಟುತ್ತದೆ. ತಣ್ಹಾವು ಹುಟ್ಟುವುದಕ್ಕೆ ತಕ್ಕ ಸ್ಥಾನವಾಗಿದೆ.
“ರೂಪವನ್ನು ನೋಡುವ ಇಚ್ಛಾ ಸಾಮರ್ಥ್ಯವು... ಶಬ್ದವನ್ನು ಕೇಳುವ ಇಚ್ಛಾ ಸಾಮರ್ಥ್ಯವು... ಗಂಧವನ್ನು ತಿಳಿಯುವ ಇಚ್ಛಾ ಸಾಮರ್ಥ್ಯವು... ರುಚಿಯನ್ನು ತಿಳಿಯಬಲ್ಲ ಇಚ್ಛಾ ಸಾಮರ್ಥ್ಯವು... ಸ್ಪರ್ಶವನ್ನು ತಿಳಿಯುವ ಇಚ್ಛಾ ಸಾಮರ್ಥ್ಯವು... ಭಾವನೆಗಳನ್ನು ಅರಿಯಬಲ್ಲ ಸಾಮರ್ಥ್ಯವು ಲೋಕದಲ್ಲಿ ಪ್ರಿಯವಾದುದೂ ಸಂತೋಷವನ್ನುಂಟುಮಾಡುವುದೂ ಆಗಿದೆ. ತಣ್ಹಾವು ಇದರಲ್ಲಿ ಹುಟ್ಟುತ್ತದೆ. ತಣ್ಹಾವು ಹುಟ್ಟುವುದಕ್ಕೆ ಇದು ತಕ್ಕ ಸ್ಥಾನವಾಗಿದೆ.
“ರೂಪವನ್ನು ನೋಡಬೇಕೆಂಬ ತೀವ್ರ ಬಯಕೆಯು ಶಬ್ದವನ್ನು ಕೇಳಬೇಕೆಂಬ ತೀವ್ರ ಬಯಕೆಯೂ... ಬಂಧವನ್ನು ಅನುಭವಿಸಬೇಕೆಂಬ ತೀವ್ರ ಬಯಕೆಯು.... ರಸವನ್ನು ಅನುಭವಿಸಬೇಕೆಂಬ ತೀವ್ರ ಬಯಕೆಯು... ಲೋಕದಲ್ಲಿ ಪ್ರಿಯವಾದ ಭಾವನೆಗಳನ್ನು ಹೊಂದಿರಬೇಕೆಂಬ ತೀವ್ರ ಬಯಕೆಯು ಸಂತೋಷನ್ನುಂಟುಮಾಡುತ್ತದೆ. ತಣ್ಹಾವು ಇದರಲ್ಲಿ ಹುಟ್ಟುತ್ತದೆ. ತಣ್ಹಾವು ಹುಟ್ಟುವುದಕ್ಕೆ ಇದು ತಕ್ಕ ಸ್ಥಾನವಾಗಿದೆ.
“ರೂಪದ ತಿಳಿವಳಿಕೆ (ವಿತಕ್ಕ)... ಶಬ್ದದ ತಿಳಿವಳಿಕೆ (ವಿತಕ್ಕ)... ಗಂಧದ ತಿಳಿವಳಿಕೆ... ರಸದ ತಿಳಿವಳಿಕೆ... ಸ್ಪರ್ಶದ ತಿಳಿವಳಿಕೆ... ಭಾವನೆಗಳ ತಿಳಿವಳಿಕೆ... ಪ್ರಿಯವಾದ ಸಂತೋಷವನ್ನುಂಟುಮಾಡುವಂಥದೂ ಆಗಿದೆ. ತಣ್ಹಾವು ಇದರಲ್ಲಿ ಹುಟ್ಟುತ್ತದೆ. ತಣ್ಹಾವು ಹುಟ್ಟುವುದಕ್ಕೆ ಇದು ತಕ್ಕ ಸ್ಥಾನವಾಗಿದೆ.
“ರೂಪವನ್ನು ಕುರಿತು ವಿಚಾರ ಮಾಡುವುದು... ಶಬ್ದವನ್ನು ಕುರಿತು ವಿಚಾರ ಮಾಡುವುದು... ಗಂಧವನ್ನು ಕುರಿತು ವಿಚಾರ ಮಾಡುವುದು... ರಸವನ್ನು ಕುರಿತು ವಿಚಾರ ಮಾಡುವುದು... ಮನಸ್ಸಿನ ಸ್ವಭಾವವನ್ನು ಕುರಿತು ವಿಚಾರ ಮಾಡುವುದು... ಲೋಕದಲ್ಲಿ ಪ್ರಿಯವಾದುದೂ, ಸಂತೋಷವನ್ನುಂಟುಮಾಡುವುದೂ ಆಗಿದೆ. ತಣ್ಹಾವು ಇದರಲ್ಲಿ ಹುಟ್ಟುತ್ತದೆ. ತಣ್ಹಾವು ಹುಟ್ಟುವುದಕ್ಕೆ ಇದು ತಕ್ಕ ಸ್ಥಾನವಾಗಿದೆ. ಭಿಕ್ಷುಗಳೇ, ಇದನ್ನು ದುಃಖ ಸಮುದಯ ಆರ್ಯಸತ್ಯವೆಂದು ಕರೆಯುತ್ತಾರೆ.
ನಿರೋಧ ಸತ್ಯ ನಿರ್ದೇಶನ
“ಭಿಕ್ಷುಗಳೇ, ದುಃಖ ನಿರೋಧ ಆರ್ಯ ಸತ್ಯವೆಂದರೇನು? ತಣ್ಹಾವನ್ನು ಏನೂ ಉಳಿಯದಂತೆ ಕಿತ್ತುಹಾಕುವುದು, ಅದನ್ನು ಸಂಪೂರ್ಣವಾಗಿ ವರ್ಜಿಸುವುದು, ಅದನ್ನು ತ್ಯಜಿಸುವುದು, ಅದರಿಂದ ಸಂಪೂರ್ಣವಾಗಿ ಬಿಡುಗಡೆಯಾಗುವುದು. ಅದಕ್ಕೆ ನೆಲೆಯಿಲ್ಲದಂತೆ ಮಾಡುವುದು ನಿರೋಧ. ಈ ತಣ್ಹಾವನ್ನು ಸಂಪೂರ್ಣವಾಗಿ ಮತ್ತೆ ಹುಟ್ಟದಂತೆ ಮಾಡುವುದು ನಿರೋಧ. ಅಂದರೆ ಇದರ ನಿರೋಧವು ಎಲ್ಲಿದೆ? ಲೋಕದಲ್ಲಿ ಪ್ರಿಯವಾದುದನ್ನೂ ಸಂತೋಷವನ್ನುಂಟು ಮಾಡುವುದನ್ನೂ ಸಂಪೂರ್ಣವಾಗಿ ವರ್ಜಿಸುವುದರಲ್ಲಿ ನಿರೋಧ ಇದೆ; ತಣ್ಹಾವು ಮತ್ತೆ ಹುಟ್ಟದಂತೆ ಮಾಡುವುದರಲ್ಲಿದೆ.
“ಲೋಕದಲ್ಲಿ ಯಾವುವು ಪ್ರಿಯವನ್ನೂ, ಸಂತೋಷನ್ನೂ ಉಂಟುಮಾಡುತ್ತವೆ? ಚಕ್ಷುವು ಪ್ರಿಯವನ್ನು ಮತ್ತು ಸಂತೋಷವನ್ನು ಉಂಟುಮಾಡುತ್ತದೆ. ಈ ತಣ್ಹಾವನ್ನು ವರ್ಜಿಸುವುದು ಮತ್ತೆ ಹುಟ್ಟದಂತೆ ಮಾಡುವುದು ನಿರೋಧ. ಶ್ರೋತೃವು ಲೋಕದಲ್ಲಿ ಪ್ರಿಯವನ್ನೂ ಮತ್ತು ಸಂತೋಷವನ್ನು ಉಂಟುಮಾಡುತ್ತದೆ. ಈ ತಣ್ಹಾವನ್ನು ವರ್ಜಿಸುವುದು ಮತ್ತೆ ಹುಟ್ಟದಂತೆ ಮಾಡುವುದೂ ನಿರೋಧ. ಘ್ರಾಣೇಂದ್ರಿಯವು ಲೋಕದಲ್ಲಿ... ಜಿಹ್ವೆಯು ಲೋಕದಲ್ಲಿ... ಮನವು ಲೋಕದಲ್ಲಿ... ಕಾಯವು ಲೋಕದಲ್ಲಿ ಪ್ರಿಯವಾದುದೂ ಸಂತೋಷವನ್ನುಂಟುಮಾಡುವಂಥದೂ ಆಗಿದೆ. ಈ ತಣ್ಹಾವನ್ನು ವರ್ಜಿಸುವುದೂ ಮತ್ತೆ ಹುಟ್ಟದಂತೆ ಮಾಡುವುದೂ ನಿರೋಧ.
“ಲೋಕದಲ್ಲಿ ರೂಪವು... ಲೋಕದಲ್ಲಿ ಶಬ್ದವು... ಲೋಕದಲ್ಲಿ ಗಂಧವು... ಲೋಕದಲ್ಲಿ ರಸವು... ಲೋಕದಲ್ಲಿ ಸ್ಪರ್ಶವು... ಲೋಕದಲ್ಲಿ ಮನವು... ಲೋಕದಲ್ಲಿ ಪ್ರಿಯವಾದುದಕ್ಕೆ ಸಂತೋಷವನ್ನುಂಟು ಮಾಡುವುದಕ್ಕೆ ಅಂಟಿಕೊಳ್ಳುವ ಸ್ವಭಾವವನ್ನು ಹೊಂದಿರುತ್ತದೆ. ಈ ತಣ್ಹಾವನ್ನು ವರ್ಜಿಸುವುದೂ ಮತ್ತೆ ಹುಟ್ಟದಂತೆ ಮಾಡುವುದೂ ನಿರೋಧ.
“ಲೋಕದಲ್ಲಿ ಚಕ್ಷುವಿಞ್ಞಾಣವು... ಲೋಕದಲ್ಲಿ ಶ್ರೋತವಿಞ್ಞಾಣವು... ಲೋಕದಲ್ಲಿ ಘಾಣವಿಞ್ಞಾಣವು... ಲೋಕದಲ್ಲಿ ಜಿಹ್ವಾ ವಿಞ್ಞಾಣವು... ಲೋಕದಲ್ಲಿ ಕಾಯ ವಿಞ್ಞಾಣವು... ಲೋಕದಲ್ಲಿ ಮನೋವಿಞ್ಞಾಣವು ಪ್ರಿಯವಾದುದೂ ಸಂತೋಷವನ್ನುಂಟುಮಾಡುವಂಥದೂ ಆಗಿದೆ. ಈ ತಣ್ಹಾವನ್ನು ವರ್ಜಿಸುವುದೂ ಮತ್ತೆ ಹುಟ್ಟದಂತೆ ಮಾಡುವುದೂ ನಿರೋಧ. “ಲೋಕದಲ್ಲಿ ಚಕ್ಷು ಸಂಸ್ಪರ್ಶವು... ಶ್ರೋತ ಸಂಸ್ಪರ್ಶವು... ಜಿಹ್ವಾ ಸಂಸ್ಪರ್ಶವು... ಕಾಯಸಂಸ್ಪರ್ಶವು... ಮನೋ ಸಂಸ್ಪರ್ಶವು... ಲೋಕದಲ್ಲಿ ಪ್ರಿಯವಾದುದೂ ಸಂತೋಷವನ್ನುಂಟು ಮಾಡುವಂಥದೂ ಆಗಿದೆ. ಈ ತಣ್ಹಾವನ್ನು ವರ್ಜಿಸುವುದೂ ಮತ್ತೆ ಹುಟ್ಟದಂತೆ ಮಾಡುವುದೂ ನಿರೋಧ.
“ಚಕ್ಷು ಸಂಸ್ಪರ್ಶದಿಂದ ಹುಟ್ಟುವ ವೇದನೆಯು... ಶ್ರೋತ ಸಂಸ್ಪರ್ಶದಿಂದ ಹುಟ್ಟುವ ವೇದನೆಯು... ಘ್ರಾಣ ಸಂಸ್ಪರ್ಶದಿಂದ ಹುಟ್ಟುವ ವೇದನೆಯು... ಜಿಹ್ವಾ ಸಂಸ್ಪರ್ಶದಿಂದ ಹುಟ್ಟುವ ವೇದನೆಯು... ಕಾಯ ಸಂಸ್ಪರ್ಶದಿಂದ ಹುಟ್ಟುವ ವೇದನೆಯು... ಮನೋ ಸಂಸ್ಪರ್ಶದಿಂದ ಹುಟ್ಟುವ ವೇದನೆಯು ಲೋಕದಲ್ಲಿ ಪ್ರಿಯವಾದುದೂ ಸಂತೋಷವನ್ನುಂಟು ಮಾಡುವಂಥದೂ ಆಗಿದೆ. ಈ ತಣ್ಹಾವನ್ನು ವರ್ಜಿಸುವುದೂ ಮತ್ತೆ ಹುಟ್ಟದಂತೆ ಮಾಡುವುದೂ ನಿರೋಧ.
“ರೂಪದ ಸಞ್ಞಾವು... ಶಬ್ದದ ಸಞ್ಞಾವು... ಗಂಧ ಸಞ್ಞಾವು... ರಸಸಞ್ಞಾವು... ಸರ್ಶಸಞ್ಞಾವು... ಮನಸ್ಸು ತಿಳಿಯುವಂಥದು ಪ್ರಿಯವನ್ನು ಸಂತೋಷವನ್ನುಂಟುಮಾಡುವುದೂ ಆಗಿದೆ. ಈ ತಣ್ಹಾವನ್ನು ವರ್ಜಿಸುವುದೂ ಮತ್ತೆ ಹುಟ್ಟದಂತೆ ಮಾಡುವುದೂ ನಿರೋದ.
“ರೂಪವನ್ನು ನೋಡುವ ಇಚ್ಛಾಸಾಮರ್ಥ್ಯವು... ಶಬ್ದವನ್ನು ಕೇಳುವ ಇಚ್ಛಾಸಾಮರ್ಥ್ಯವು... ರುಚಿಯನ್ನು ತಿಳಿಯುವ ಇಚ್ಛಾ ಸಾಮರ್ಥ್ಯವು... ಸ್ಪರ್ಶವನ್ನು ತಿಳಿಯುವ ಇಚ್ಛಾ ಸಾಮರ್ಥ್ಯವು... ಭಾವನೆಗಳನ್ನು ಅರಿಯಬಲ್ಲ ಸಾಮರ್ಥ್ಯವು ಲೋಕದಲ್ಲಿ ಪ್ರಿಯವಾದುದೂ ಸಂತೋಷನ್ನುಂಟುಮಾಡುವಂಥದೂ ಆಗಿದೆ. ಈ ತಣ್ಹಾವನ್ನು ವರ್ಜಿಸುವುದೂ ಮತ್ತೆ ಹುಟ್ಟದಂತೆ ಮಾಡುವುದೂ ನಿರೋಧ.
“ರೂಪವನ್ನು ನೋಡಬೇಕೆಂಬ ತೀವ್ರ ಬಯಕೆಯು... ಶಬ್ದವನ್ನು ಕೇಳಬೇಕೆಂಬ ತೀವ್ರ ಬಯಕೆಯು ಗಂಧವನ್ನು ಅನುಭವಿಸಬೇಕೆಂಬ ತೀವ್ರ ಬಯಕೆಯು... ರಸವನ್ನು ಅನುಭವಿಸಬೇಕೆಂಬ ತೀವ್ರ ಬಯಕೆಯು... ಲೋಕದಲ್ಲಿ ಪ್ರಿಯವಾದ ಭಾವನೆಗಳನ್ನು ತಿಳಿಯಬೇಕೆಂಬ ತೀವ್ರ ಬಯಕೆಯು ಸಂತೋಷವನ್ನುಂಟುಮಾಡುತ್ತದೆ. ಈ ತಣ್ಹಾವನ್ನೂ ವರ್ಜಿಸುವುದೂ ಮತ್ತೆ ಹುಟ್ಟದಂತೆ ಮಾಡುವುದೂ ನಿರೋಧ.
“ರೂಪದ ತಿಳಿವಳಿಕೆ (ವಿತಕ್ಕ)... ಶಬ್ದದ ತಿಳಿವಳಿಕೆ... ಗಂಧದ ತಿಳಿವಳಿಕೆ... ರಸದ ತಿಳಿವಳಿಕೆ... ಸ್ಪರ್ಶದ ತಿಳಿವಳಿಕೆ... ಭಾವನೆಗಳ ತಿಳಿವಳಿಕೆ ಪ್ರಿಯವಾದುದೂ ಸಂತೋಷವನ್ನುಂಟುಮಾಡುವಂಥದೂ ಆಗಿದೆ. ಈ ತಣ್ಹಾವನ್ನು ವರ್ಜಿಸುವುದೂ ಮತ್ತೆ ಹುಟ್ಟದಂತೆ ಮಾಡುವುದೂ ನಿರೋಧ.
“ರೂಪವನ್ನು ಕುರಿತು ವಿಚಾರ ಮಾಡುವುದು... ಶಬ್ದವನ್ನು ಕುರಿತು ವಿಚಾರ ಮಾಡುವುದು... ಗಂಧವನ್ನು ಕುರಿತು ವಿಚಾರ ಮಾಡುವುದು... ರಸವನ್ನು ಕುರಿತು ವಿಚಾರ ಮಾಡುವುದು... ಸ್ಪರ್ಶವನ್ನು ಕುರಿತು ವಿಚಾರ ಮಾಡುವುದು... ಮನಸ್ಸಿನ ಸ್ವಭಾವವನ್ನು ಕುರಿತು ವಿಚಾರ ಮಾಡುವುದು... ಲೋಕದಲ್ಲಿ ಪ್ರಿಯವಾದುದೂ... ಸಂತೋಷವನ್ನುಂಟುಮಾಡುವಂಥದೂ ಆಗಿದೆ. ಈ ತಣ್ಹಾವನ್ನು ವರ್ಜಿಸುವುದೂ ಮತ್ತೆ ಹುಟ್ಟದಂತೆ ಮಾಡುವುದೂ ನಿರೋಧ. ಭಿಕ್ಷುಗಳೇ, ಇದೇ ದುಃಖ ನಿರೋಧ ಆರ್ಯಸತ್ಯ.
ಮಾರ್ಗ ಸತ್ಯ ನಿರ್ದೇಶನ
“ಭಿಕ್ಷುಗಳೇ, ‘ದುಃಖ ನಿರೋಧ ಸ್ಥಿತಿಗೆ ಕೊಂಡೊಯ್ಯುವ ಮಾರ್ಗ’ ಎಂದರೇನು? ಆರ್ಯ ಅಷ್ಠಾಂಗ ಮಾರ್ಗವೇ ಅದು. ಆರ್ಯ ಅಷ್ಠಾಂಗ ಮಾರ್ಗವೆಂದರೆ- ‘ಸಮ್ಮಾದಿಟ್ಠಿ, ಸಮ್ಮಾಸಂಕಪ್ಪ, ಸಮ್ಮಾವಾಚಾ, ಸಮ್ಮಾಕಮ್ಮಂತ, ಸಮ್ಮಾಜೀವ, ಸಮ್ಮಾವಾಯಾಮ, ಸಮ್ಮಾಸತಿ ಮತ್ತು ಸಮ್ಮಾಸಮಾಧಿ.
“ಸಮ್ಮಾದಿಟ್ಠಿ ಎಂದರೆ ಏನು ಭಿಕ್ಷುಗಳೇ? ದುಃಖದ ಬಗೆಗಿನ ಜ್ಞಾನ, ದುಃಖ ಸಮುದಯದ ಬಗೆಗಿನ ಜ್ಞಾನ, ದುಃಖ ನಿರೋಧದ ಬಗೆಗಿನ ಜ್ಞಾನ, ದುಃಖವನ್ನು ಸಂಪೂರ್ಣವಾಗಿ ನಾಶಮಾಡುವ ಸಾಧನೆಯ ಬಗೆಗಿನ ಜ್ಞಾನ. ಭಿಕ್ಷುಗಳೇ, ಇದನ್ನು ಸಮ್ಮಾದಿಟ್ಠಿ ಎನ್ನುತ್ತಾರೆ.
“ಸಮ್ಮಾಸಂಕಪ್ಪ ಎಂದರೇನು ಭಿಕ್ಷುಗಳೇ? ಎಲ್ಲ ಬಗೆಯ ಕಾಮಗಳಿಂದ ದೂರವಾಗಿರಬೇಕೆಂಬ ಸಂಕಲ್ಪ, ಎಲ್ಲಬಗೆಯ ವೈರದಿಂದ ದೂರವಾಗಿರಬೇಕೆಂಬ ಸಂಕಲ್ಪ, ಎಲ್ಲಬಗೆಯ ಹಿಂಸೆಯಿಂದ ದೂರವಾಗಿರಬೇಕೆಂಬ ಸಂಕಲ್ಪ. ಭಿಕ್ಷುಗಳೇ, ಇವನ್ನು ಸಮ್ಮಾಸಂಕಪ್ಪ ಎನ್ನುತ್ತಾರೆ.
“ಸಮ್ಮಾವಾಚ ಎಂದರೇನು ಭಿಕ್ಷುಗಳೇ? ಸುಳ್ಳನ್ನಾಡದಿರುವುದು, ಚಾಡಿಯನ್ನು ಹೇಳದಿರುವುದು. ನಿಂದೆಯ ಮಾತುಗಳನ್ನು ನುಡಿಯದಿರುವುದು, ನಿರರ್ಥಕವಾದ ಗೊಡ್ಡು ಹರಟೆಯಲ್ಲಿ ತೊಡಗದಿರುವುದು. ಭಿಕ್ಷುಗಳೇ, ಇದನ್ನು ಸಮ್ಮಾವಾಚಾ ಎನ್ನುತ್ತಾರೆ
“ಸಮ್ಮಾಕಮ್ಮಂತ ಎಂದರೇನು ಭಿಕ್ಷುಗಳೇ? ಕೊಲ್ಲದಿರುವುದು, ತನಗೆ ಸೇರದುದನ್ನು ತೆಗೆದುಕೊಳ್ಳದಿರುವುದು, ಸಮಾಜ ಒಪ್ಪದ ಲೈಂಗಿಕ ಸಂಬಂಧವನ್ನಿಟ್ಟುಕೊಳ್ಳದಿರುವುದು. ಭಿಕ್ಷುಗಳೇ, ಇದನ್ನು ಸಮ್ಮಾಕಮ್ಮಂತ ಎನ್ನುತ್ತಾರೆ.
“ಸಮ್ಮಾಜೀವ ಎಂದರೇನು ಭಿಕ್ಷುಗಳೇ? ಶ್ರೇಷ್ಠವಾದ ಉಪಾಸಕನು ಮಿಥ್ಯಾಜೀವನವನ್ನು ತೊರೆದು ನಿರ್ದುಷ್ಟವಾದ ಕಾಯಕಗಳಿಂದ ತನ್ನ ಉಪಜೀವನವನ್ನು ಗಳಿಸುವುದನ್ನು ಸಮ್ಮಾಜೀವ ಎನ್ನುತ್ತಾರೆ ಭಿಕ್ಷುಗಳೇ.
“ಸಮ್ಮಾವಾಯಾಮ ಎಂದರೇನು ಭಿಕ್ಷುಗಳೇ? ಭಿಕ್ಷುವು ಇನ್ನೂ ಹುಟ್ಟದಿರುವ ಪಾಪಯುತವಾದ ಅಕುಶಲವಾದ ಭಾವನೆಗಳು ಉದಯಿಸದಂತೆ ತನ್ನ ಮನಸ್ಸನ್ನು ದೃಢವಾಗಿಟ್ಟುಕೊಳ್ಳುವುದು, ಅವುಗಳು ಹುಟ್ಟದಂತೆ ಪ್ರಯತ್ನಿಸುವುದು. ತನ್ನ ಚಿತ್ತವು ಆ ಸ್ಥಿತಿಯಲ್ಲಿರುವಂತೆ ನೋಡಿಕೊಳ್ಳುವುದು ಮತ್ತು ಸಾಧನೆ ಮಾಡುವುದು. ಹುಟ್ಟಿಕೊಂಡ ಪಾಪಯುತ ಅಕುಶಲವಾದ ಭಾವನೆಗಳನ್ನು ವರ್ಜಿಸುವುದು. ಆ ಸ್ಥಿತಿಯಲ್ಲಿರುವಂತೆ ತನ್ನ ಮನಸ್ಸನ್ನು ದೃಢವಾಗಿಟ್ಟುಕೊಳ್ಳುವುದು, ಅವು ಮೊಳೆಯದಂತೆ ಪ್ರಯತ್ನಿಸುವುದು, ತನ್ನ ಚಿತ್ತವು ಅದೇ ದಿಶೆಯಲ್ಲಿರುವಂತೆ ನೋಡಿಕೊಳ್ಳುವುದು ಮತ್ತು ಸಾಧನೆ ಮಾಡುವುದು. ಇನ್ನೂ ಹುಟ್ಟದಿರುವ ಕುಶಲ ಭಾವನೆಗಳು ಉದಯಿಸುವಂತೆ ಪ್ರಯತ್ನಿಸುವುದು. ದೃಢಸಾಧನೆ ಮಾಡುವುದು ಮತ್ತು ತನ್ನ ಚಿತ್ತವನ್ನು ಆ ದಿಕ್ಕಿನಲ್ಲಿಯೇ ಹರಿಸುತ್ತಿರುವುದು, ಉದಯಿಸಿದ ಕುಶಲ ಭಾವನೆಗಳು ಉಳಿಯವಂತೆ ನೋಡಿಕೊಳ್ಳುವುದು, ಅವುಗಳನ್ನು ಅಲಕ್ಷಿಸದಿರುವುದು. ಅವು ಪರಿಪೂರ್ಣವಾಗಿ ಬೆಳೆಯುವಂತೆ ಪ್ರಯತ್ನಿಸುವುದು, ದೃಢಸಾಧನೆ ಮಾಡುವುದು ಮತ್ತು ಚಿತ್ತವು ಆ ಸ್ಥಿತಿಯಲ್ಲಿಯೇ ಉಳಿಯುವಂತೆ ನೋಡಿಕೊಳ್ಳುವುದು. ಭಿಕ್ಷುಗಳೇ, ಇದನ್ನು ಸಮ್ಮಾವಾಯಾಮ ಎನ್ನುತ್ತಾರೆ.
“ಸಮ್ಮಾಸತಿ ಎಂದರೇನು, ಭಿಕ್ಷುಗಳೇ? ಕಾಯವನ್ನು ಅದರ ನಿಜಸ್ಥಿತಿಯಲ್ಲಿಯೇ ನೋಡಬಲ್ಲ ಚಿಂತನೆಯನ್ನು ಮಾಡುವುದು, ದೃಢಮನಸ್ಸಿನಿಂದಿರುವುದು, ಲೋಕಕಾಮನೆಗಳನ್ನು ಕ್ರೋಧ ಭಾವನೆಗಳನ್ನೂ ದೂರಮಾಡಿ ಎಚ್ಚರದಿಂದಿರುವುದು, ವೇದನೆಗಳ ನಿಜಸ್ವಭಾವವನ್ನು ತಿಳಿದು ಚಿಂತನೆಯನ್ನು ಮಾಡುವುದು, ದೃಢಮನಸ್ಸಿನಿಂದಿರುವುದು, ಲೋಕಕಾಮನೆಗಳನ್ನು ಕ್ರೋಧ ಭಾವನೆಗಳನ್ನೂ ವರ್ಜಿಸುವುದು ಮತ್ತು ಎಚ್ಚರದಿಂದಿರುವುದು ಚಿತ್ತದ ನಿಜಸ್ವಭಾವವನ್ನು ಅರಿಯಲು ಚಿಂತನೆ ಮಾಡುವುದು. ದೃಢವಾಗಿರುವುದು, ಲೋಕದ ಕಾಮನೆಗಳನ್ನೂ ಕ್ರೋಧ ಭಾವನೆಗಳನ್ನೂ ವರ್ಜಿಸುವುದು ಮತ್ತೆ ಎಚ್ಚರದಿಂದಿರುವುದು ಮನಸ್ಸಿನ ನಿಜಸ್ವರೂಪವನ್ನರಿಯಲು ಚಿಂತನೆ ಮಾಡುವುದು, ದೃಢವಾಗಿರುವುದು ಲೋಕದ ಕಾಮನೆಗಳನ್ನೂ, ಕ್ರೋಧ ಭಾವನೆಗಳನ್ನೂ ವರ್ಜಿಸುವುದು ಮತ್ತು ಎಚ್ಚರದಿಂದಿರುವುದು. ಭಿಕ್ಷುಗಳೇ, ಇದನ್ನು ಸಮ್ಮಾಸತಿ ಎನ್ನುತ್ತಾರೆ.
“ಭಿಕ್ಷುಗಳೇ, ಸಮ್ಮಾಸಮಾಧಿ ಎಂದರೇನು? ಭಿಕ್ಷುವು ಕಾಮಗಳಿಂದ ದೂರನಾಗಿ ಅಕುಶಲ ಭಾವನೆಗಳಿಂದ ದೂರನಾಗಿ ವಿಚಾರ ವಿತರ್ಕಗಳಿರುವ ವಿವೇಕದಿಂದ ಹುಟ್ಟುವ ಪ್ರೀತಿ-ಸುಖವನ್ನು ಪಡೆದು ವಿಹರಿಸುವ ಪ್ರಥಮ ಧ್ಯಾನ. ಭಿಕ್ಷುವು ತರ್ಕವಿಚಾರಗಳನ್ನು ಮೀರಿದ ಚಿತ್ತೈಕಾಗ್ರತೆಯನ್ನು ಪಡೆದು ಚಿತ್ತಶಾಂತಿಯನ್ನು ಸಾಧಿಸಿ ಆ ಸಮಾಧಿಯಿಂದ ಹುಟ್ಟಿದ ಪ್ರೀತಿ ಸುಖವನ್ನು ಪಡೆದು ವಿಹರಿಸುವ ದ್ವಿತೀಯ ಧ್ಯಾನ. ಪ್ರೀತಿ ರಾಗಗಳನ್ನು ಸಂಪೂರ್ಣವಾಗಿ ಆರಿಹೋದ ಸ್ಥಿತಿಯಲ್ಲಿ ತನ್ನ ಚಿತ್ತವನ್ನು ನಿಲ್ಲಿಸಿ ಕಾಯಸುಕವನ್ನು ಅನುಭವಿಸುತ್ತಾ ತಿಳಿದವರು ಯಾವುದನ್ನು ಉಪೇಕ್ಖ ಭಾವನೆಯಲ್ಲಿ ವಿಹರಿಸುವುದು ಎಂದು ಹೇಳುತ್ತಾರೋ ಅದರಲ್ಲಿ ವಿಹರಿಸುತ್ತಾ ಜಾಗ್ರತೆಯಿಂದಿರುವ ತೃತೀಯ ಧ್ಯಾನ. ಹಿಂದಿದ್ದ ಸೋಮನಸ್ಸು, ದೋಮನಸ್ಸುಗಳೆರಡನ್ನೂ ನಾಶಮಾಡಿ ಸುಖದುಃಖಗಳೆರಡನ್ನೂ ದೂರಮಾಡಿ ಅದುಃಖ ಅಸುಖ ಉಪೇಕ್ಷೆಗಳಿಂದ ಕೂಡಿದ ಪರಿಶುದ್ಧವಾದ ಚಿತ್ತವನ್ನು ಸಾಧಿಸಿ ಭಿಕ್ಷುವು ವಿಹರಿಸುವ ಚತುರ್ಥಧ್ಯಾನ. ಭಿಕ್ಷುಗಳೇ, ಇದನ್ನು ಸಮ್ಮಾಸಮಾಧಿ ಎನ್ನುತ್ತಾರೆ.
“ದುಃಖವನ್ನು ನಿರೋಧ ಸ್ಥಿತಿಗೆ ಕೊಂಡೊಯ್ಯುವ ಮಾರ್ಗಸತ್ಯ ಎಂದರೆ ಇದೇ.
ಸತ್ಯಪರ್ವ ಮುಗಿಯಿತು
ಧಮ್ಮಾನುಪಸ್ಸನ ಮುಗಿಯಿತು
ಭಿಕ್ಷುಗಳೇ, ಯಾವನು ಏಳು ವರ್ಷಗಳಷ್ಟು ಸಾದನೆ ಮಾಡಿ ಈ ನಾಲ್ಕು ಸತಿಪಟ್ಠಾನಗಳನ್ನು ಬೆಳೆಸಿಕೊಳ್ಳುತ್ತಾನೋ ಅವನು ಎರಡರಲ್ಲಿ ಒಂದು ಫಲವನ್ನು ಪಡೆಯುತ್ತಾನೆ- ಧಮ್ಮದ ಅರಿವು ಅಥವಾ ಅನಾಗಾಮಿ ಸ್ಥಿತಿ. ಇವುಗಳಿಗಿಂತ ಕಡಿಮೆಯಾದ ಫಲವಿರುವುದಿಲ್ಲ.
“ಭಿಕ್ಷುಗಳೇ, ಏಳುವರ್ಷವಿರಲಿ, ಆರುವರ್ಷಗಳಷ್ಟು ಸಾಧನೆಮಾಡಿ ಯಾವನು ಈ ನಾಲ್ಕು ಸತಿಪಟ್ಠಾನಗಳನ್ನು ಬೆಳೆಸಿಕೊಳ್ಳುತ್ತಾನೋ... ಐದು ವರ್ಷಗಳಷ್ಟು... ನಾಲ್ಕು ವರ್ಷಗಳಷ್ಟು... ಮೂರು ವರ್ಷಗಳಷ್ಟು... ಎರಡು ವರ್ಷಗಳಷ್ಟು... ಒಂದು ವರ್ಷ... ಏಳು ತಿಂಗಳಷ್ಟು... ಆರು ತಿಂಗಳಷ್ಟು... ಐದು ತಿಂಗಳಷ್ಟು... ನಾಲ್ಕು ತಿಂಗಳಷ್ಟು... ಮೂರು ತಿಂಗಳಷ್ಟು... ಎರಡು ತಿಂಗಳಷ್ಟು... ಒಂದು ತಿಂಗಳಷ್ಟು... ಅರ್ಧಮಾಸದಷ್ಟು... ಅರ್ಧಮಾಸವಿರಲಿ, ಯಾವನು ಒಂದು ವಾರದಷ್ಟು ಸಾಧನೆ ಮಾಡಿ ಈ ನಾಲ್ಕು ಸತಿಪಟ್ಠಾನಗಳನ್ನು ಬೆಳೆಸಿಕೊಳ್ಳುತ್ತಾನೋ, ಅದನ್ನು ಈ ಎರಡರಲ್ಲಿ ಒಂದು ಸ್ಥಿತಿಯನ್ನು ಪಡೆಯುತ್ತಾನೆ- ಧಮ್ಮದ ಅರಿವು ಅಥವಾ ಅಷ್ಟಿಷ್ಟು ಕಶ್ಮಲಗಳಿದ್ದರೆ ಅನಾಗಾಮಿ ಸ್ಥಿತಿ ಇವುಗಳಿಗಿಂತ ಕಡಿಮೆಯಾದ ಫಲವಿರುವುದಿಲ್ಲ.
“ಈ ಕಾರಣಗಳಿಂದ ಜೀವಿಗಳು ಪರಿಶುದ್ಧತೆಯನ್ನು ಸಾಧಿಸಬೇಕಾದರೆ ಅನುಸರಿಸಬೇಕಾದ ಮಾರ್ಗ ಇದೊಂದೇ ಆಗಿದೆ. ಶೋಕ ಸಂಕಟಗಳನ್ನು ಜಯಿಸಬಲ್ಲ, ದುಃಖ ದೋಮನಸ್ಸುಗಳನ್ನು ನಾಶಮಾಡಬಲ್ಲ, ಜ್ಞಾನವನ್ನು ಹೊಂದಬಲ್ಲ, ನಿಬ್ಬಾನವನ್ನು ಸಾದಿಸಬಲ್ಲ ಮಾರ್ಗವೆಂದರೆ ಇದೊಂದೇ. ಇದೇ ನಾಲ್ಕು ಸತಿಪಟ್ಠಾನಗಳು. ಇದರ ವಿವರಣೆ ಹೀಗಿದೆ.”
ಭಗವಾನರು ಇಂತು ಬೋಧಿಸಿದರು. ಭಗವಾನರ ಮಾತುಗಳಿಂದ ಆ ಭಿಕ್ಷುಗಳು ಆನಂದವನ್ನೂ, ಸಂತೋಷವನ್ನೂ ಹೊಂದಿದರು.
ಇಲ್ಲಿಗೆ ಮಹಾಸತಿಪಟ್ಠಾನ ಸುತ್ತ ಮುಗಿಯಿತು.
ಟಿಪ್ಪಣಿಗಳು [2]
English
Việt Ngữ