ಅಗ್ಗಞ್ಞ ಸುತ್ತ
ವಾಸೇಟ್ಠ ಭಾರದ್ವಾಜ
ಹೀಗೇ ಕೇಳಿದ್ದೇನೆ;17 ಒಮ್ಮೆ ಭಗವಾನರು ಸಾವತ್ಥಿಯ ಹತ್ತಿರದ ಪುಬ್ಬಾರಾಮದಲ್ಲಿ ಮಿಗಾರಮಾತೆಯು* ಕಟ್ಟಿಸಿದ್ದ ಪ್ರಾಸಾದದಲ್ಲಿ ತಂಗಿದ್ದರು. ಆ ಸಮಯದಲ್ಲಿ ವಾಸೆಟ್ಠ ಮತ್ತು ಭಾರದ್ವಾಜರು ಭಿಕ್ಷುಗಳಾಗಬೇಕೆಂಬ ಉದ್ದೇಶದಿಂದ ಭಿಕ್ಷುಗಳ ಜೊತೆಯಲ್ಲಿ ಸಾಧನೆ ಮಾಡುತ್ತಿದ್ದರು. ಒಂದು ಸಾಯಂಕಾಲದ ಸಮಯದಲ್ಲಿ ಭಗವಾನರು ಧ್ಯಾನದಿಂದೆದ್ದು ಪ್ರಾಸಾದದಿಂದ ಇಳಿದು ಆ ಪ್ರಾಸಾದದ ನೆರಳಿನಲ್ಲಿ ಅಡ್ಡಾಡುತ್ತಿದ್ದರು.
ಭಗವಾನರು ಸಾಯಂಕಾಲದ ಧ್ಯಾನದಿಂದೆದ್ದು ಪ್ರಾಸಾದದಿಂದ ಇಳಿದು ಹೊರಗಡೆ ಅದರ ನೆರಳಿನಲ್ಲಿ ಅಡ್ಡಾಡುತ್ತಿದ್ದುದನ್ನು ವಾಸೆಟ್ಠನು ನೋಡಿದನು. ನೋಡಿದ ಮೇಲೆ ಭಾರದ್ವಾಜನನ್ನು ಕುರಿತು ಇಂತೆಂದನು- “ಗೆಳೆಯ ಭಾರದ್ವಾಜ, ಭಗವಾನರು ಸಾಯಂಕಾಲದ ಧ್ಯಾನದಿಂದೆದ್ದು ಪ್ರಾಸಾದದಿಂದ ಇಳಿದು ಹೊರಗಡೆ ಪ್ರಾಸಾದದ ನೆರಳಿನಲ್ಲಿ ಅಡ್ಡಾಡುತ್ತಿದ್ದಾರೆ. ಅವರಲ್ಲಿಗೆ ಹೋಗೋಣ. ಗೆಳೆಯ, ಭಗವಾನರಿಂದಲೇ ಧಮ್ಮ ಕೇಳುವ ಸುಯೋಗ ನಮಗೆ ದೊರಕಬಹುದು.” “ಹಾಗೆಯೇ ಆಗಲಿ ಗೆಳೆಯ” ಎಂದು ಭಾರದ್ವಾಜನು ವಾಸೆಟ್ಠನಿಗೆ ಹೇಳಿದನು.
ಆಗ ವಾಸೆಟ್ಠ ಮತ್ತು ಭಾರದ್ವಾಜರು ಭಗವಾನರ ಬಳಿಗೆ ಹೋದರು. ಭಗವಾನರಿಗೆ ಅಭಿವಂದಿಸಿ ಅಡ್ಡಾಡುತ್ತಿದ್ದ ಅವರ ಹಿಂದೆಯೇ ಹೋದರು. ಆಗ ಭಗವಾನರು ವಾಸೆಟ್ಠನಿಗೆ “ವಾಸೆಟ್ಠ, ಬ್ರಾಹ್ಮಣರಾದ ನೀವು, ಬ್ರಾಹ್ಮಣ ಕುಲಕ್ಕೆ ಸೇರಿದ ನೀವು, ಮನೆಯನ್ನು ತೊರೆದು ಅನಗಾರಿಕರಾಗಿ ಪಬ್ಬಜಿತರಾಗಲು ಕಾರಣವೇನು? ಬ್ರಾಹ್ಮಣರು ನಿಮ್ಮನ್ನು ಕುಚೋದ್ಯ ಮಾಡುವುದಿಲ್ಲವೇ, ಮೂದಲಿಸುವುದಿಲ್ಲವೇ ?”
“ಭಂತೆ, ಬ್ರಾಹ್ಮಣರು ಕುಚೋದ್ಯ ಮಾಡದೆ ಮೂದಲಿಸದೆ ಇರುವುದುಂಟೆ? ಸಾಕಷ್ಟು ನಿಂದಿಸದಿರುವುದುಂಟೇ?”
“ವಾಸೆಟ್ಠ, ಬ್ರಾಹ್ಮಣರು ಯಾವ ಮಾತುಗಳಲ್ಲಿ ನಿಮ್ಮನ್ನು ಮೂದಲಿಸುತ್ತಾರೆ, ಪರಿಹಾಸ್ಯ ಮಾಡುತ್ತಾರೆ? ಹೇಗೆ ನೀವು ಅವರ ಅತಿನಿಂದೆಗೆ ಒಳಗಾಗಿದ್ದೀರಿ ?”
“ಭಂತೆ, ಬ್ರಾಹ್ಮಣರು ಹೀಗೆ ಹೇಳುತ್ತಾರೆ- ‘ಬ್ರಾಹ್ಮಣರೇ ಶ್ರೇಷ್ಠ ವರ್ಣಕ್ಕೆ ಸೇರಿದವರು, ಇತರರೆಲ್ಲ ಹೀನ ವರ್ಣದವರು. ಬ್ರಾಹ್ಮಣರು ಬೆಳ್ಳಗಿದ್ದಾರೆ, ಇತರರು ಕಪ್ಪು ಜನರು. ಬ್ರಾಹ್ಮಣರು ಮಾತ್ರ ಶುದ್ಧ ವಂಶದಲ್ಲಿ ಹುಟ್ಟಿದ್ದಾರೆ, ಇತರರು ಅಲ್ಲ. ಬ್ರಾಹ್ಮಣರು ಬ್ರಹ್ಮನ ಮುಖದಿಂದ ಹುಟ್ಟಿದವರಾಗಿ ಬ್ರಹ್ಮನಿಂದಲೇ ಹುಟ್ಟಿದವರಾಗಿ ಬ್ರಹ್ಮನಿಂದಲೇ ಸೃಷ್ಟಿಸಿದವರಾಗಿ ಬ್ರಹ್ಮನಿಗೆ ಉತ್ತರಾಧಿಕಾರಿಗಳಾಗಿದ್ದಾರೆ. ನೀನು ಶ್ರೇಷ್ಠ ವರ್ಣದವನಾಗಿದ್ದರೂ ಹೀನವರ್ಣದವರ ಜೊತೆಯಲ್ಲಿ ಸೇರಿಕೊಂಡು ತಲೆಯನ್ನು ಬೋಳಿಸಿಕೊಂಡು ಸಮಣನಾಗಿ ಕಪ್ಪು ಬಣ್ಣದ ಶೂದ್ರರಂತೆ ಸೇವಕರಂತೆ ಆಗಿದ್ದೀಯೆ. ಇದು ನಿನಗೆ ಸಾಧುವಾದುದಲ್ಲ, ನಿನಗೆ ತಕ್ಕುದಾದುದಲ್ಲ.’ ಹೀಗೆ ಭಂತೆ, ಬ್ರಾಹ್ಮಣರು ಪರಿಹಾಸ್ಯ ಮಾಡುತ್ತಾರೆ, ಅವಹೇಳನ ಮಾಡುತ್ತಾರೆ, ಸಾಕಷ್ಟು ನಿಂದಿಸುತ್ತಾರೆ. ಕುಚೋದ್ಯ ಮಾಡುತ್ತಾರೆ.”
“ವಾಸೆಟ್ಠ, ಬ್ರಾಹ್ಮಣರು ಹಾಗೆ ಹೇಳುವಾಗ ಹಿಂದಿನ ಸಂಗತಿಗಳನ್ನು ನೆನಪು ಮಾಡಿಕೊಳ್ಳಲಾರರು. ವಾಸೆಟ್ಠ, ಬ್ರಾಹ್ಮಣ ಪತ್ನಿಯರು ಅಂದರೆ ಬ್ರಾಹ್ಮಣಿಯರು ಗರ್ಭವತಿಯರಾಗಿ ಮಕ್ಕಳನ್ನು ಹೆರುವುದೂ ಪೋಷಿಸುವುದೂ ಎಲ್ಲರಿಗೂ ಗೊತ್ತು. ಹೀಗಿದ್ದರೂ ಯೋನಿಜರಾದ ಬ್ರಾಹ್ಮಣರು, ‘ಬ್ರಾಹ್ಮಣರೇ ಶ್ರೇಷ್ಠವರ್ಣದವರು, ಉಳಿದವರೆಲ್ಲರೂ ಹೀನವರ್ಣದವರು. ಬ್ರಾಹ್ಮಣರು ಬಿಳಿಯ ಬಣ್ಣದವರು, ಉಳಿದವರು ಕಪ್ಪು ಬಣ್ಣದವರು. ಬ್ರಾಹ್ಮಣರು ಮಾತ್ರ ಶುದ್ಧ ವಂಶದಲ್ಲಿ ಹುಟ್ಟಿದ್ದಾರೆ, ಬೇರೆಯವರು ಅಲ್ಲ. ಬ್ರಾಹ್ಮಣರು ಬ್ರಹ್ಮನ ಮುಖದಿಂದ ಹುಟ್ಟಿದ ಬ್ರಹ್ಮನ ಮಕ್ಕಳು. ಅವರು ಮಾತ್ರ ಬ್ರಹ್ಮನಿಂದ ನಿರ್ಮಾಣರಾದವರು, ಬ್ರಹ್ಮನ ಉತ್ತರಾಧಿಕಾರಿಗಳು ಎಂದುಕೊಳ್ಳುತ್ತಾರೆ. ಬ್ರಹ್ಮರನ್ನೇ ಅವರು ತಪ್ಪು ತಪ್ಪಾಗಿ ವಿವರಿಸಿ ಸುಳ್ಳು ಹೇಳಿಬಿಡುತ್ತಾರೆ *ಪುಣ್ಯವಲ್ಲದ್ದನ್ನು ಮಾಡುತ್ತಾರೆ.
ಚಾತುರ್ವರ್ಣಗಳ ಶುದ್ಧಿ
“ವಾಸೆಟ್ಠ, ಕ್ಷತ್ರಿಯ ಬ್ರಾಹ್ಮಣ ವೈಶ್ಯ ಶೂದ್ರ ಎಂಬ ನಾಲ್ಕು ವರ್ಣಗಳಿವೆ.18 ಕ್ಷತ್ರಿಯರು ಆಗಾಗ ಪ್ರಾಣಿಹಿಂಸೆ ಮಾಡುತ್ತಾರೆ. ಕಳ್ಳತನ ಮಾಡುತ್ತಾರೆ. ವ್ಯಭಿಚಾರದಲ್ಲಿ ತೊಡಗುತ್ತಾರೆ. ಸುಳ್ಳು ಚಾಡಿ, ನಿಂದೆಗಳಲ್ಲಿ ನಿರತರಾಗುತ್ತಾರೆ. ಕಾಡುಹರಟೆಯಲ್ಲಿ ಕಾಲ ವ್ಯರ್ಥಮಾಡುತ್ತಾರೆ. ದುರಾಸೆ ಹಿಂಸಾಬುದ್ಧಿಗಳಿಂದ ಕೂಡಿ ಮಿಥ್ಯಾದೃಷ್ಟಿಯುಳ್ಳವರಾಗಿರುತ್ತಾರೆ. ಈ ರೀತಿಯಲ್ಲಿ ಅಕುಶಲವಾದ ಅಕುಶಲವೆನ್ನಿಸಿಕೊಳ್ಳುವ ವರ್ಜಿಸಬೇಕಾದುದು ಎನ್ನಿಸಿಕೊಳ್ಳುವ ಪೋಷಿಸಬಾರದ ಅಸಾಧುವಾದ ಆರ್ಯರಿಗೆ ತಕ್ಕದಲ್ಲ ಎನ್ನಿಸಿಕೊಳ್ಳುವ ತಿಳಿದವರು ಖಂಡಿಸುವ ಗುಣಗಳು ಕೆಲವು ಕ್ಷತ್ರಿಯರಲ್ಲಿವೆ... ಕೆಲವು ಬ್ರಾಹ್ಮಣರಲ್ಲಿವೆ... ಕೆಲವು ವೈಶ್ಯರಲ್ಲಿವೆ... ವಾಸೆಟ್ಠ, ಪ್ರಾಣಿಹಿಂಸೆ ಮಾಡುವ ಕಳ್ಳತನ ಮಾಡುವ ವ್ಯಭಿಚಾರದಲ್ಲಿ ತೊಡಗುವ ಸುಳ್ಳು ಚಾಡಿ ನಿಂದೆಗಳಲ್ಲಿ ನಿರತರಾಗುವ ಕಾಡುಹರಟೆಯಲ್ಲಿ ಕಾಲ ವ್ಯರ್ಥಮಾಡುವ ಶೂದ್ರರೂ ಇದ್ದಾರೆ. ಅವರು ದುರಾಸೆ, ಹಿಂಸಾಬುದ್ಧಿ ಮಿಥ್ಯಾದೃಷ್ಟಿಗಳಿಂದ ಕೂಡಿರುತ್ತಾರೆ. ತಿಳಿದವರು ಖಂಡಿಸುವ ಗುಣಗಳು ಕೆಲವು ಶೂದ್ರರಲ್ಲಿವೆ.
“ಪ್ರಾಣಿಹಿಂಸೆಯನ್ನು ತೊರೆದು ಕಳ್ಳತನವನ್ನು ಬಿಟ್ಟು ವ್ಯಭಿಚಾರದಲ್ಲಿ ತೊಡಗದೆ ಸುಳ್ಳು ಚಾಡಿ ಹೇಳುವುದನ್ನು ವರ್ಜಿಸಿ ಕಠಿಣವಾದ ಮಾತುಗಳನ್ನಾಗಲೀ, ಕೆಲಸಕ್ಕೆ ಬಾರದ ಮಾತುಗಳನ್ನಾಗಲಿ ಆಡದೆ ದುರಾಶೆ ಹಿಂಸಾಬುದ್ಧಿಗಳನ್ನು ತೊರೆದು ಸಮ್ಯಕ್ ದೃಷ್ಟಿಯನ್ನು ಹೊಂದಿರುವ ಕೆಲವು ಕ್ಷತ್ರಿಯರಿರುತ್ತಾರೆ. ಕುಶಲವಾದ ಕುಶಲವೆನ್ನಿಸಿಕೊಂಡಿರುವ ವರ್ಜಿಸಬಾರದ್ದೆನ್ನಿಸಿಕೊಂಡಿರುವ ಪೋಷಿಸಬೇಕಾದದ್ದೆಂದು ಅಂಗೀಕೃತವಾಗಿರುವ ಶುದ್ಧವಾದ ಶುದ್ಧವೆನಿಸಿ ಕೊಂಡಿರುವವರು ಅನುಸರಿಸುವ ಧಮ್ಮಗಳಲ್ಲಿ ನಿರತರಾದ ಕ್ಷತ್ರಿಯರಿದ್ದಾರೆ... ಬ್ರಾಹ್ಮಣರಿದ್ದಾರೆ... ವೈಶ್ಯರಿದ್ದಾರೆ... ಪ್ರಾಣಿಹತ್ಯೆಯಲ್ಲಿ ತೊಡಗದ ಶೂದ್ರರಿದ್ದಾರೆ... ಕುಶಲವಾದ ಕುಶಲವೆನ್ನಿಸಿಕೊಂಡಿರುವ ವರ್ಜಿಸಬಾರದ ವರ್ಜಿಸಬಾರದ್ದೆನ್ನಿಸಿಕೊಂಡಿರುವ ಪೋಷಿಸಬೇಕಾದ ಪೋಷಿಸಬೇಕಾದದ್ದೆಂದು ಗಣಿಸಲಾದ ಆರ್ಯರು ಮಾಡಬೇಕಾದ ಆರ್ಯರು ಮಾಡಬೇಕಾದದ್ದು ಎನ್ನಿಸಿಕೊಂಡಿರುವ ಶುದ್ಧವಾದ ಶುದ್ಧವೆನ್ನಿಸಿಕೊಂಡಿರುವ ತಿಳಿದವರು ಅನುಸರಿಸುವ ಧಮ್ಮಗಳಲ್ಲಿ ನಿರತರಾದ ಶೂದ್ರರಿದ್ದಾರೆ.
“ವಾಸೆಟ್ಠ, ಹೀಗೆ ಚಾತುವರ್ಣದವರಲ್ಲಿ ಎರಡೂ ಬಗೆಯ ಒಳ್ಳೆಯ ಮತ್ತು ಕೆಟ್ಟ ಧರ್ಮಗಳಲ್ಲಿ ನಿರತರಾಗಿರುವ ಜನರಿರುವಾಗ ತಿಳಿದವರು ಬ್ರಾಹ್ಮಣರು ಹೇಳುವುದನ್ನು ಒಪ್ಪುವುದಕ್ಕಾಗುವುದಿಲ್ಲ. ಬ್ರಾಹ್ಮಣನೇ ಶ್ರೇಷ್ಠ ವರ್ಣದವನು, ಬೇರೆಯವರು ಹೀನ ವರ್ಣದವರು. ಬ್ರಾಹ್ಮಣರು ಬಿಳಿಯ ಬಣ್ಣದವರು, ಬೇರೆಯವರು ಕಪ್ಪು ಜನರು, ಬ್ರಾಹ್ಮಣರು ಮಾತ್ರ ಶುದ್ಧ ವಂಶದಲ್ಲಿ ಹುಟ್ಟಿದ್ದಾರೆ, ಬೇರೆಯವರು ಅಲ್ಲ, ಬ್ರಾಹ್ಮಣರು ಬ್ರಹ್ಮನ ಪುತ್ರರು, ಅವನ ಮುಖದಲ್ಲಿ ಹುಟ್ಟಿದವರು, ಬ್ರಹ್ಮನಿಂದಲೇ ಹುಟ್ಟಿದವರು, ಬ್ರಹ್ಮನಿಂದಲೇ ಸೃಷ್ಟಿಯಾದವರು ಎಂಬ ಬ್ರಾಹ್ಮಣರ ಮಾತುಗಳನ್ನು ತಿಳಿದವರು ಒಪ್ಪುವುದಿಲ್ಲ. ಇದಕ್ಕೆ ಕಾರಣವೇನು? ವಾಸೆಟ್ಠ, ಈ ರೀತಿಯಲ್ಲಿ ಚತುರ್ವರ್ಣಗಳಲ್ಲಿ ಯಾವುದರಲ್ಲೇ ಹುಟ್ಟಿರಲಿ, ಭಿಕ್ಷುವಾದವನು ಅರಹಂತನಾದವನು ಆಸವಗಳೆಲ್ಲವನ್ನೂ ಕಳೆದುಕೊಂಡಿರುವವನು ಮಾಡಬೇಕಾದುದೆಲ್ಲವನ್ನೂ ಮಾಡಿರುವವನು ತನ್ನ ಮೇಲಿರುವ ಭಾರವನ್ನು ನೀಗಿಕೊಂಡಿರುವವನು ಶ್ರೇಷ್ಠವಾದದ್ದನ್ನು ಸಾಧಿಸಿರುವವನು ಭವಗಳ ಸಂಕೋಲೆಯನ್ನು ಕತ್ತರಿಸಿ ಹಾಕಿರುವವನು ಸಮ್ಯಕ್ ಜ್ಞಾನದ ಫಲವಾಗಿ ವಿಮುಕ್ತಿಯನ್ನು ಸಾಧಿಸಿರುವವನು ಅಗ್ರನೆಂದೆನ್ನಿಸಿಕೊಳ್ಳುತ್ತಾನೆ. ಅವನನ್ನು ಧರ್ಮವು ಹಾಗೆಯೇ ಪರಿಗಣಿಸುತ್ತದೆ. ಅಧರ್ಮವು ಅವನ ಶ್ರೇಷ್ಠತೆಗೆ ಕಾರಣವಲ್ಲ. ಧರ್ಮವೇ ಈ ಲೋಕದಲ್ಲಿ ಶ್ರೇಷ್ಠವಾದುದು. ಮುಂದಿನ ಜನ್ಮಗಳಲ್ಲಿಯೂ ಅದೇ ಶ್ರೇಷ್ಠವಾದದ್ದು.
“ವಾಸೆಟ್ಠ, ಈ ಲೋಕದಲ್ಲಿಯೂ ಮುಂದಿನ ಜನ್ಮದಲ್ಲಿಯೂ ಧರ್ಮವೇ ಶ್ರೇಷ್ಠವೆಂಬುದಕ್ಕೆ ಈ ಕಾರಣವಿದೆ.
“ಕೋಸಲದಲ್ಲಿ ಪಸೇನದಿ ರಾಜನು ಸಮಣ ಗೋತಮನು ಶಾಕ್ಯಕುಲದವನು ಅದನ್ನು ತ್ಯಜಿಸಿರುವವನು ಎಂಬುದನ್ನು ಅರಿತಿದ್ದಾನೆ. ಆ ರಾಜನಿಗೆ ಶಾಕ್ಯರು ತನ್ನ ಸಾಮಂತರು ಎಂಬುದು ಗೊತ್ತಿದೆ. ಶಾಕ್ಯರು ಪಸೇನದಿಗೆ ವಿಧೇಯರು, ಅವನಿಗೆ ನಮಸ್ಕರಿಸುತ್ತಾರೆ. ಹಿರಿಯರಲ್ಲಿ ನಡೆದುಕೊಳ್ಳಬೇಕಾದ ರೀತಿಯಲ್ಲಿಯೇ ನಡೆದುಕೊಳ್ಳುತ್ತಾರೆ. ಹೀಗೆ ಪಸೇನದಿ ರಾಜನಿಗೆ ವಿಧೇಯರಾಗಿ ನಡೆದುಕೊಂಡರೂ ಆ ರಾಜನೇ ತಥಾಗತನಿಗೆ ವಿಧೇಯತೆಯಿಂದ ನಡೆದುಕೊಳ್ಳುತ್ತಾನೆ, ಅಭಿವಂದಿಸುತ್ತಾನೆ. ತಥಾಗತ ಬಂದಾಗ ಎದ್ದುನಿಲ್ಲುತ್ತಾನೆ. ಅವನಿಗೆ ಕೈಮುಗಿದು ನಮಸ್ಕರಿಸುತ್ತಾನೆ. ಹಿರಿಯರಿಗೆ ತೋರಿಸುವ ಗೌರವವನ್ನು ತೋರಿಸುತ್ತಾನೆ. ‘ಸಮಣ ಗೋತಮನ ಜನ್ಮವು ಶ್ರೇಷ್ಠವಾದದ್ದು, ನನ್ನದಲ್ಲ. ಅವರು ಸಮರ್ಥರು, ನಾನು ಸಮರ್ಥನಲ್ಲ. ಸಮಣ ಗೋತಮರು ತೇಜಸ್ವಿ, ನಾನು ಅಲ್ಲ. ಸಮಣ ಗೋತಮರು ಮಹಾಶಕ್ತರು, ನಾನು ಅಲ್ಲ’ ಎಂಬುದಾಗಿ ಆ ರಾಜನು ಹೇಳಿದ್ದಾನೆ. ಧರ್ಮವನ್ನು ಭಕ್ತಿಯಿಂದ ಕಂಡು ಅದನ್ನು ಗೌರವಿಸಿ, ಅದನ್ನು ಪೂಜಿಸಿ ಅದಕ್ಕೆ ಮಾನ್ಯ ಮಾಡಿ ಅದು ಪವಿತ್ರವಾದುದೆಂದು ಭಾವಿಸಿ ನನಗೆ ವಿಧೇಯನಾಗಿ ನಡೆದುಕೊಳ್ಳುತ್ತಾನೆ, ಅಭಿವಂದಿಸುತ್ತಾನೆ. ನಾನು ಹೋದಾಗ ಎದ್ದು ನಿಲ್ಲುತ್ತಾನೆ. ಕೈ ಜೋಡಿಸಿ ನಮಸ್ಕರಿಸುತ್ತಾನೆ. ಹಿರಿಯರಿಗೆ ಸಲ್ಲಬೇಕಾದ ಗೌರವವನ್ನು ತೋರಿಸುತ್ತಾನೆ. ವಾಸೆಟ್ಠ, ಧಮ್ಮವು ಈ ಲೋಕದಲ್ಲಿಯೂ ಮುಂದೆಯೂ ಶ್ರೇಷ್ಠವಾದದ್ದೆಂಬುದನ್ನು ಈ ಉದಾಹರಣೆಯಿಂದ ತಿಳಿ.
“ವಾಸೆಟ್ಠ, ನಾನಾ ಮನೆತನಗಳಿಗೆ ಸೇರಿದ ನಾನಾ ಹೆಸರನ್ನುಳ್ಳ, ನಾನಾ ಗೋತ್ರಗಳಿಗೆ ಸೇರಿದ, ನಾನಾ ಕುಲಗಳಿಗೆ ಸೇರಿದ ನೀವು ಮನೆಯನ್ನು ತೊರೆದು ಅನಗಾರಿಕರಾಗಿ ಪಬ್ಬಜಿತರಾಗಿದ್ದೀರಿ. ‘ನೀವು ಯಾರು?’ ಎಂದು ಯಾರಾದರೂ ನಿಮ್ಮನ್ನು ಕೇಳಿದರೆ ‘ನಾವು ಶಾಕ್ಯಪುತ್ರರಾದ (ಅಂದರೆ ಶಾಕ್ಯಮುನಿಯ ಶಿಷ್ಯರಾದ) ಸಮಣರು’ ಎಂದು ಉತ್ತರಕೊಡಿ. ವಾಸೆಟ್ಠ, ತಥಾಗತನದಲ್ಲಿ ಶ್ರದ್ಧೆಯಿಟ್ಟು ಆ ಶ್ರದ್ಧೆಯನ್ನು ಮನಸ್ಸಿನಲ್ಲಿ ಕಾಪಾಡಿಕೊಂಡವನು ಸಮಣನಿಂದಾಗಲೀ, ಬ್ರಾಹ್ಮಣನಿಂದಾಗಲಿ, ದೇವನಿಂದಾಗಲೀ, ಮಾರನಿಂದಾಗಲೀ, ಬ್ರಹ್ಮನಿಂದಾಗಲೀ ಅಥವಾ ಲೋಕದಲ್ಲಿನ ಮತ್ತಾರಿಂದಲಾಗಲೀ ತನ್ನ ಶ್ರದ್ಧೆಯನ್ನು ಕಳೆದುಕೊಳ್ಳುವುದಿಲ್ಲ. ಅವನು ಹೀಗೆ ಹೇಳುತ್ತಾನೆ- ‘ನಾನು ಭಗವಾನರ ಪುತ್ರ, ಅವರ ಮುಖದಿಂದಲೇ ಹುಟ್ಟಿದವನು, ಧರ್ಮದಿಂದ ಹುಟ್ಟಿದವನು. ಧರ್ಮದಿಂದ ನಿರ್ಮಿಸಲ್ಪಟ್ಟವನು. ಧರ್ಮಕ್ಕೆ ನಾನು ಉತ್ತರಾಧಿಕಾರಿ. ಹೀಗೆ ಹೇಳಲು ಕಾರಣವೇನು, ವಾಸೆಟ್ಠ? ತಥಾಗತನ ವರ್ಣನೆಯೇ ಹೀಗಿದೆ. ಅವನು ಧರ್ಮಕಾಯ ಬ್ರಹ್ಮಕಾಯ* ಧರ್ಮದಿಂದ ಬೆಳೆದವನು, ಬ್ರಹ್ಮನಿಂದ ಬೆಳೆದವನು. ಆದರೆ ಬ್ರಾಹ್ಮಣರು ಬೇರೆಯವರ ವಿಷಯದಲ್ಲಿ ಅಪಾರ್ಥ ಬರುವಂತೆ ಸುಳ್ಳು ಹೇಳಿ ಬಹುವಾದ ಅಪುಣ್ಯವನ್ನೇ ಗಳಿಸುತ್ತಾರೆ.
“ವಾಸೆಟ್ಠ, ಒಂದು ಕಾಲ ಬಂದಿತು. ಬಹು ವರ್ಷಗಳ ನಂತರ ಈ ಲೋಕವು ನಾಶವಾಯಿತು. ನಾಶವಾಗುತ್ತಿರುವ ಲೋಕದಲ್ಲಿ ಜೀವಿಗಳು ಅಭಸ್ಸರ ದೇವತೆಗಳಾಗಿ ಹುಟ್ಟಿದರು. ಅವು ಮನೋಮಯ ಜೀವಿಗಳಾಗಿ ಪ್ರೀತಿಯನ್ನೇ ಅಹಾರವನ್ನಾಗಿ ಮಾಡಿಕೊಂಡು ಸ್ವಯಂಪ್ರಭೆಯುಳ್ಳವುಗಳಾಗಿ ಕಾಂತಿಯಿಂದ ಪ್ರಕಾಶಿಸುತ್ತಾ ಅಂತರಿಕ್ಷದಲ್ಲಿ ಚಲಿಸುತ್ತ ಬಹುಕಾಲ ಇದ್ದುವು.
“ವಾಸೆಟ್ಠ, ಮತ್ತೊಂದು ಕಾಲ ಒಂದಿತ್ತು. ಬಹುವರ್ಷಗಳ ನಂತರ ಈ ಲೋಕವು ಸೃಷ್ಟಿಯಾಯಿತು. ಸೃಷ್ಟಿಯಾಗುತ್ತಿದ್ದ ಲೋಕದಲ್ಲಿ ಜೀವಿಗಳು ಅಭಸ್ಸರ ಕಾಯವನ್ನು ತ್ಯಜಿಸಿ ಈ ಕಡೆ ಬಂದುವು. ಅವು ಮನೋಮಯಗಳಾಗಿ ಪ್ರೀತಿಯನ್ನೇ ಆಹಾರವನ್ನಾಗಿ ಮಾಡಿಕೊಂಡು ಸ್ವಯಂಪ್ರಭೆಯುಳ್ಳವುಗಳಾಗಿ ಅಂತರಿಕ್ಷದಲ್ಲಿ ಚಲಿಸುತ್ತಾ ಕಾಂತಿಯಿಂದ ಪ್ರಕಾಶಿಸುತ್ತಾ ಇದ್ದುವು.
ಪೃಥ್ವಿರಸದ ಉದಯ
“ವಾಸೆಟ್ಠ, ಆ ಕಾಲದಲ್ಲಿ ಇಡೀ ಲೋಕವೆಲ್ಲಾ ಒಂದೇ ಆಗಿ ಕಣ್ಣು ಕುರುಡಾಗುವಷ್ಟು ಅಂಧಕಾರದಲ್ಲಿಯೇ ಮುಳುಗಿತ್ತು. ಆಗ ಚಂದ್ರ-ಸೂರ್ಯರಾಗಲೀ, ನಕ್ಷತ್ರ ತಾರಾಮಂಡಲಗಳಾಗಲೀ, ರಾತ್ರಿ ಹಗಲುಗಳಾಗಲೀ, ಪಕ್ಷ ಮಾಸಗಳಾಗಲೀ ಗೊತ್ತಾಗುತ್ತಲೇ ಇರಲಿಲ್ಲ. ಋತು ಸಂವತ್ಸರಗಳ ಭೇದವೂ ತಿಳಿಯುತ್ತಿರಲಿಲ್ಲ. ಜೀವಿಗಳು ಜೀವಗಳೆಂಬುದಾಗಿ ಮಾತ್ರ ತಿಳಿಯುತ್ತಿದ್ದ ಕಾಲವದು.19 ಅವೆಲ್ಲವೂ ಒಂದೇ ಎಂದು ತೋರುತ್ತಿದ್ದ ಸಮಯ ಅದು. ಬಹುಕಾಲವಾದ ಮೇಲೆ ಆ ಜೀವಿಗಳಿಗೆ ನೀರಿನಿಂದ ಪೃಥ್ವೀರಸವು ದೊರೆಯಿತು. ಕುದಿಸಿದ ಹಾಲಿನ ಮೇಲೆ ಅದು ಆರುತ್ತಿರುವಾಗ ಕೆನೆಗಟ್ಟುವಂತೆ ಪೃಥ್ವಿಯು ತೋರುತ್ತಿತ್ತು. ಪೃಥ್ವಿಯು ವರ್ಣಗಂಧರಸಗಳಿಂದ ಕೂಡಿತ್ತು. ತುಪ್ಪ ಅಥವಾ ಬೆಣ್ಣೆಯ ಬಣ್ಣದಿಂದ ಕೂಡಿರುವಂತೆಯೇ ಪೃಥ್ವಿಯೂ ವರ್ಣದಿಂದ ಕೂಡಿತ್ತು. ಶುದ್ಧವಾದ ಜೇನುತುಪ್ಪವು ಮಧುರವಾಗಿರುವಂತೆ ಪೃಥ್ವಿಯಲ್ಲಿನ ವಸ್ತುಗಳು ರಸಪೂರಿತವಾಗಿದ್ದುವು. ಏತಕ್ಕೆ?’ ಆಮೇಲೆ ಪೃಥ್ವೀರಸವನ್ನು ಚೀಪಿ ಅದರ ರುಚಿಯನ್ನು ನೋಡಿತು. ಹೀಗೆ ರುಚಿ ನೋಡಿದ ಮೇಲೆ ಅದರಲ್ಲಿ ತಣ್ಹಾ ಹುಟ್ಟಿತು. ಬೇರೆ ಜೀವಿಗಳು ಇದನ್ನು ನೋಡಿ ತಾವೂ ಪೃಥ್ವಿಯ ಆಗ ಲೋಭದಿಂದ ಕೂಡಿರುವ ಜೀವಿಯೊಂದು ಹೀಗೆಂದುಕೊಂಡಿತು; ‘ಹೀಗಾಗಿರುವುದು ರುಚಿಯನ್ನು ನೋಡಿದುವು. ಅವುಗಳಲ್ಲಿಯೂ ತಣ್ಹಾ ಹುಟ್ಟಿತು.
ಚಂದ್ರ ಸೂರ್ಯರಾದಿಗಳ ಉದಯ
“ಆಮೇಲೆ ಜೀವಿಗಳು ತಮ್ಮ ಹಸ್ತಗಳಿಂದ ಪೃಥ್ವೀರಸವನ್ನು ಬಾಚಿಕೊಂಡು ತಿನ್ನುವುದಕ್ಕೆ ಆರಂಭಿಸಿದುವು. ಹೀಗೆ ಬಾಚಿಕೊಂಡು ತಿನ್ನುವುದಕ್ಕೆ ಆರಂಭಿಸಿದ ಮೇಲೆ ಅವುಗಳ ಸ್ವಯಂಪ್ರಭೆಯು ಮಾಯವಾಯಿತು. ಆಮೇಲೆ ಚಂದ್ರ ಸೂರ್ಯರು ಕಾಣಿಸಿಕೊಂಡರು. ಚಂದ್ರ ಸೂರ್ಯರು ಕಾಣಿಸಿಕೊಂಡಮೇಲೆ ನಕ್ಷತ್ರಗಳೂ ತಾರಾ ಮಂಡಲಗಳೂ ಕಾಣಿಸಿಕೊಂಡವು. ದಿನಾರಾತ್ರಿಗಳು ಕಾಣಿಸಿಕೊಂಡವು. ಪಕ್ಷ ಮಾಸಗಳೂ, ಋತು ಸಂವತ್ಸರಗಳೂ ಸ್ಪಷ್ಟವಾದವು. ಹೀಗೆ ವಾಸೆಟ್ಠ, ಲೋಕವು ಪುನಃ ಸೃಷ್ಟಿಯಾಯಿತು.
“ವಾಸೆಟ್ಠ, ಪೃಥ್ವಿರಸದ ರುಚಿಯನ್ನು ನೋಡಿ ಅದನ್ನು ತಿಂದ ಜೀವಿಗಳು ಅದನ್ನೇ ಆಹಾರವನ್ನಾಗಿ ಮಾಡಿಕೊಂಡು ಬಹುಕಾಲ ಜೀವಿಸಿದುವು. ಪೃಥ್ವೀರಸದ ರುಚಿಯನ್ನು ನೋಡಿ ಅದನ್ನು ಹೇಗೆ ಹೇಗೆ ಭಕ್ಷಿಸಿದುವೋ ಹಾಗೆ ಹಾಗೆ ಆ ಜೀವಿಗಳು, ಕಾಯಗಳು ಘನೀಭೂತವಾದವು.20 ಅವುಗಳ ಬಣ್ಣಗಳು ಬೇರೆ ಬೇರೆಯಾಗುತ್ತಾ ಹೋದುವು. ಕೆಲವು ಜೀವಿಗಳು ಒಳ್ಳೆಯ ಬಣ್ಣವನ್ನೂ ಕೆಲವು ಜೀವಿಗಳು ಕೆಟ್ಟ ಬಣ್ಣವನ್ನೂ ಪಡೆದುವು. ಒಳ್ಳೆಯ ಬಣ್ಣವುಳ್ಳ ಜೀವಿಗಳು ಕೆಟ್ಟ ಬಣ್ಣವುಳ್ಳ ಜೀವಿಗಳನ್ನು ಅವಹೇಳನ ಮಾಡಿದುವು. ‘ನಾವು ಒಳ್ಳೆಯ ಬಣ್ಣವನ್ನು ಹೊಂದಿದ್ದೇವೆ, ಕೆಟ್ಟ ಬಣ್ಣವಿರುವ ಬೇರೆಯವರಿಗಿಂತ ನಾವು ಉತ್ತಮರು’. ಒಳ್ಳೆಯ ಬಣ್ಣವಿರುವ ಆ ಜೀವಿಗಳು ತಮ್ಮ ಬಣ್ಣದ ದೆಸೆಯಿಂದ ಅತಿ ದುರಭಿಮಾನವನ್ನು ಹೊಂದಿದ್ದರಿಂದ ಪೃಥ್ವೀರಸವು ಆರಿಹೋಯಿತು. ಪೃಥ್ವೀ ರಸವು ಆರಿಹೋಗಿರುವುದನ್ನು ತಿಳಿದ ಆ ಜೀವಿಗಳು ಒಟ್ಟಿಗೆ ಸೇರಿದುವು. ಹೀಗೆ ಒಟ್ಟಿಗೆ ಸೇರಿದಮೇಲೆ ‘ರಸವು ಹೋಯಿತಲ್ಲ, ರಸವು ಹೋಯಿತಲ್ಲಾ’ ಎಂದು ಪರಿತಪಿಸಿದುವು. ಈಗಿನ ಮನುಷ್ಯರು ಒಳ್ಳೆಯ ರುಚಿಯನ್ನು ನೋಡಿ ‘ಆಹಾ, ಎಂಥ ರಸ, ಎಂಥ ರಸ’ ಎಂದುಕೊಳ್ಳುವಂತೆ ಅವೂ ಅಂದುಕೊಂಡವು. ಹೀಗೆ ಬಹು ಹಿಂದೆಯೇ ಆದ ಸೃಷ್ಟಿಯನ್ನು ಜೀವಿಗಳು ನೆನಪಿಗೆ ತಂದುಕೊಳ್ಳುತ್ತವೆ. ಆದರೆ ಸೃಷ್ಟಿಯ ಅರ್ಥವನ್ನು ಅವು ತಿಳಿಯಲಾರವು.
ಭೂಮಿಯ ಹೊದಿಕೆ ಪ್ರಾತುರ್ಭವಿಸಿದುದು
“ವಾಸೆಟ್ಠ, ಪೃಥ್ವೀರಸವು ಆರಿಹೋದ ಮೇಲೆ ಆ ಜೀವಿಗಳಿಗೆ ಭೂಮಿಯ ಹೊದಿಕೆಯು ಕಾಣಿಸಿಕೊಂಡಿತು. ಮಳೆಗಾಲದಲ್ಲಿ ನಾಯಿಕೊಡೆಗಳು ಕಾಣಿಸಿಕೊಳ್ಳುವಂತೆ ಭೂಮಿಯ ಹೊದಿಕೆಯು ಕಾಣಿಸಿಕೊಂಡಿತು. ಅದು ರಸ ವರ್ಣ ಗಂಧಗಳಿಂದ ಕೂಡಿದ್ದುವು. ತುಪ್ಪ ಅಥವಾ ಬೆಣ್ಣೆಯು ಒಳ್ಳೆಯ ಬಣ್ಣವನ್ನು ಹೊಂದಿರುವಂತೆ ಅದಕ್ಕೂ ಒಳ್ಳೆಯ ಬಣ್ಣವಿತ್ತು. ಪರಿಶುದ್ಧವಾದ ಜೇನುತುಪ್ಪಕ್ಕಿರುವಂತೆ ಅದಕ್ಕೂ ಒಳ್ಳೆಯ ಬಣ್ಣವಿತ್ತು.
“ಆನಂತರ ವಾಸೆಟ್ಠ, ಜೀವಿಗಳು ಭೂಮಿಯ ಹೊದಿಕೆಯ ಮೇಲಿರುವುದನ್ನು ಭುಂಜಿಸುವುದಕ್ಕೆ ಆರಂಭಿಸಿದುವು. ರುಚಿ ನೋಡಿದ ಆ ಜೀವಿಗಳು ಅದನ್ನು ಭಕ್ಷಿಸಿಕೊಂಡು ಬಹುಕಾಲ ಬದುಕಿದುವು. ಜೀವಿಗಳು ಭೂಮಿಯ ಹೊದಿಕೆಯಲ್ಲಿರುವ ಪದಾರ್ಥಗಳ ರುಚಿ ನೋಡಿ ಭಕ್ಷಿಸಿಕೊಂಡು ಹೇಗೆ ಹೇಗೆ ಬಹುಕಾಲ ಬದುಕಿದುವೋ ಹಾಗೆ ಹಾಗೆ ಆ ಜೀವಿಗಳ ಕಾಯಗಳು ಘನೀಭೂತವಾದುವು. ಅವುಗಳ ಬಣ್ಣಗಳು ಬೇರೆ ಬೇರೆಯಾದುವು. ಕೆಲವು ಜೀವಿಗಳು ಒಳ್ಳೆಯ ಬಣ್ಣವನ್ನು ಹೊಂದಿದುವು, ಕೆಲವು ಜೀವಿಗಳು ಕೆಟ್ಟ ಬಣ್ಣವನ್ನು ಹೊಂದಿದುವು. ಒಳ್ಳೆಯ ಬಣ್ಣವನ್ನು ಹೊಂದಿರುವ ಜೀವಿಗಳು ಕೆಟ್ಟ ಬಣ್ಣವನ್ನು ಹೊಂದಿರುವ ಜೀವಿಗಳನ್ನು ಅವಹೇಳನ ಮಾಡಿದುವು. ‘ನಮಗೆ ಒಳ್ಳೆಯ ಬಣ್ಣವಿದೆ, ಕೆಟ್ಟ ಬಣ್ಣವಿರುವುದಕ್ಕಿಂತ ನಮ್ಮದು ಉತ್ತಮವಾದುದು’. ಒಳ್ಳೆಯ ಬಣ್ಣವಿರುವ ಆ ಜೀವಿಗಳು ತಮ್ಮ ಬಣ್ಣದ ದೆಸೆಯಿಂದ ದುರಭಿಮಾನವನ್ನು ಹೊಂದಿದ್ದರಿಂದ ಭೂಮಿಯ ಹೊದಿಕೆಯು ಮಾಯವಾಯಿತು.
ಲತೆಗಳ ಪ್ರಾತುರ್ಭಾವ
“ಭೂಮಿಯ ಹೊದಿಕೆಯು ಅದೃಶ್ಯವಾದ ಮೇಲೆ ಲತೆಗಳು ಕಾಣಿಸಿಕೊಂಡುವು. ಮಳೆಗಾಲದಲ್ಲಿ ಬಿದಿರ ಕಳಿಲು (ಬಿದಿರಿನ ಮೊಳಕೆಗಳು) ಕಾಣಿಸಿಕೊಳ್ಳುವಂತೆ ಲತೆಗಳು ಕಾಣಿಸಿಕೊಂಡವು. ಅವಕ್ಕೆ ಗಂಧ ರಸ ವರ್ಣಗಳಿದ್ದುವು. ತುಪ್ಪ ಅಥವಾ ಬೆಣ್ಣೆಯ ಒಳ್ಳೆಯ ಬಣ್ಣವನ್ನು ಹೊಂದಿರುವಂತೆ ಅವಕ್ಕೆ ಒಳ್ಳೆಯ ಬಣ್ಣವಿತ್ತು. ಪರಿಶುದ್ಧವಾದ ಜೇನುತುಪ್ಪಕ್ಕಿರುವಂತೆ ಅವಕ್ಕೂ ಒಳ್ಳೆಯ ಬಣ್ಣವಿತ್ತು.
“ಆನಂತರ ಜೀವಿಗಳು ಲತೆಗಳನ್ನು ತಿನ್ನುವುದಕ್ಕೆ ಆರಂಭಿಸಿದುವು. ಅವನ್ನು ಭಕ್ಷಿಸಿ ಬಹುಕಾಲ ಬದುಕಿದುವು. ಲತೆಗಳನ್ನು ಭಕ್ಷಿಸಿಕೊಂಡು ಹೇಗೆ ಹೇಗೆ ಬಹುಕಾಲ ಬದುಕುತ್ತಿದ್ದವೋ ಹಾಗೆ ಹಾಗೆ ಆ ಜೀವಿಗಳು ಘನೀಭೂತವಾದುವು. ಬೇರೆ ಬೇರೆ ಬಣ್ಣಗಳನ್ನು ಪಡೆದುವು. ಕೆಲವು ಜೀವಿಗಳು ಒಳ್ಳೆಯ ಬಣ್ಣವನ್ನೂ ಕೆಲವು ಜೀವಿಗಳು ಕೆಟ್ಟ ಬಣ್ಣವನ್ನೂ ಪಡೆದುವು. ಒಳ್ಳೆಯ ಬಣ್ಣವನ್ನು ಹೊಂದಿದ್ದ ಜೀವಿಗಳು ಕೆಟ್ಟ ಬಣ್ಣವಿದ್ದ ಜೀವಿಗಳನ್ನು ಅವಹೇಳನ ಮಾಡಿದುವು. ‘ನಾವು ವರ್ಣವಂತರಾಗಿದ್ದೇನೆ, ದುರ್ಬಣ್ಣವನ್ನು ಹೊಂದಿರುವವರಿಗಿಂತ ನಾವು ಉತ್ತಮರು’ ಎಂದು ಹೇಳಿಕೊಂಡುವು. ಒಳ್ಳೆಯ ಬಣ್ಣವಿರುವ ಆ ಜೀವಿಗಳು ತಮ್ಮ ಬಣ್ಣದ ದೆಸೆಯಿಂದ ದುರಭಿಮಾನವನ್ನು ಹೊಂದಿದ್ದರಿಂದ ಲತೆಗಳು ನಾಶವಾಗಿ ಹೋದುವು. ಲತೆಗಳು ನಾಶವಾದ ಮೇಲೆ ಜೀವಿಗಳು ಒಟ್ಟಿಗೆ ಸೇರಿದುವು. ‘ಏನಾಗಿ ಹೋಯಿತು, ಲತೆಗಳು ಇಲ್ಲವಾಯಿತಲ್ಲಾ’ ಎಂದು ಪರಿತಪಿಸಿದುವು. ಇಂದಿರುವ ಜನರು ಯಾವುದಾದರೂ ದುಗುಡದಿಂದ ಕೂಡಿದ್ದಾಗ ‘ಏನಾಗಿ ಹೋಯಿತು, ನಮಗಿದ್ದುದು ಹೋಯಿತಲ್ಲಾ’ ಎಂದು ಪರಿತಪಿಸುವಂತೆ ಆ ಜೀವಿಗಳು ಪರಿತಪಿಸುತ್ತಿದ್ದುವು. ಹೀಗೆ ಸೃಷ್ಟಿಯನ್ನು ಆ ಜೀವಿಗಳು ನೆನಪಿಗೆ ತಂದುಕೊಳ್ಳುತ್ತವೆ. ಆದರೆ ಅದರ ಅರ್ಥವನ್ನು ತಿಳಿಯಲಾರವು.
ಅನ್ನಕ್ಕೆ ಸಿದ್ಧವಾದ ಅಕ್ಕಿಯ ಪ್ರಾತುರ್ಭಾವ
“ಆನಂತರ, ವಾಸೆಟ್ಠ, ಲತೆಗಳು ನಾಶವಾದ ಮೇಲೆ ಶುದ್ಧವೂ ಸುಗಂಧಪೂರಿತವೂ ಹೊಟ್ಟಿಲ್ಲದುದೂ, ನುಚ್ಚಾಗದುದೂ ಆದ ಉತ್ತಮವಾದ ಅಕ್ಕಿಯು ಬಯಲಿನಲ್ಲಿ ಹುಟ್ಟಿತು.21 ಅದು ಬಲಿತು ಹೊಮ್ಮುತ್ತಿತ್ತು. ಸಾಯಂಕಾಲದ ಸಮಯದಲ್ಲಿ ಅದನ್ನು ತೆಗೆದುಕೊಂಡು ಹೋದರೆ ಮಾರನೆಯ ಪ್ರಾತಃಕಾಲ ಮತ್ತೆ ಹುಟ್ಟುವಂಥ ಅಕ್ಕಿ ಅದು. ಪ್ರಾತಃಕಾಲ ತೆಗೆದರೆ ಆ ಸಾಯಂಕಾಲವೇ ಅದು ಹುಟ್ಟುತ್ತಿತ್ತು. ಹೀಗೆ ಎಲ್ಲ ಕಾಲಗಳಲ್ಲಿಯೂ ಅದು ಬೆಳೆಯುತ್ತಿತ್ತು, ದೊರಕುತ್ತಿತ್ತು. ಇಂಥ ಅಕ್ಕಿಯನ್ನುಂಡು ಜೀವಿಗಳು ಬಹುಕಾಲ ಬದುಕಿದುವು.
ಹೆಣ್ಣು ಗಂಡುಗಳ ಪ್ರಾತುರ್ಭಾವ
“ಜೀವಿಗಳು ಬಯಲಿನಲ್ಲಿ ತಾನೇ ಹುಟ್ಟಿದ ಅಕ್ಕಿಯನ್ನು ಹೇಗೆ ಹೇಗೆ ತಂದು ಬಹುಕಾಲ ಬದುಕುತ್ತಿದ್ದವೋ ಹಾಗೆ ಹಾಗೆ ಅವರ ಶರೀರವು ಘನಾಕಾರಗಳನ್ನು ಹೊಂದಿದುವು. ಅವು ಬೇರೆ ಬೇರೆ ಬಣ್ಣವನ್ನು ಪಡೆದುವು. ಸ್ತ್ರೀ ಅಂಗಗಳನ್ನುಳ್ಳ ಸ್ತ್ರೀ ಜೀವಿಗಳೂ ಪುರುಷ ಲಿಂಗವನ್ನುಳ್ಳ ಪುರುಷ ಜೀವಿಗಳೂ ಹುಟ್ಟಿಕೊಂಡವು.22 ಸ್ತ್ರೀಯು ಪುರುಷನನ್ನೂ, ಪುರುಷನು ಸ್ತ್ರೀಯನ್ನೂ ಸದಾ ಮನಸ್ಸಿಗೆ ತಂದುಕೊಳ್ಳುತ್ತಿದ್ದರು. ಪರಸ್ಪರ ಹೀಗೆ ಬಯಸುತ್ತಿದ್ದ ಅವರಲ್ಲಿ ರಾಗವು ಉದಿಸಿತು. ಕಾಯದಲ್ಲಿ ಕಾಮಾಗ್ನಿ ಅಂಕುರಿಸಿತು. ಹೀಗೆ ಕಾಮಾಗ್ನಿ ಹುಟ್ಟಿಕೊಂಡ ಮೇಲೆ ಮೈಥುನ ಭಾವನೆಯು ಅವರಲ್ಲಿ ಪ್ರಜ್ವಲಿಸಿತು.23
“ವಾಸೆಟ್ಠ, ಆ ಸಮಯದಲ್ಲಿ ತಮ್ಮಲ್ಲಿ ಉದಿಸಿದ ಭಾವನೆಯನ್ನು ತಿಳಿದು ಕೆಲವು ಜೀವಿಗಳು ಮರಳನ್ನೂ, ಕೆಲವು ಬೂದಿಯನ್ನೂ ಕೆಲವು ಸಗಣಿಯನ್ನೂ ತಮ್ಮ ಮೇಲೆ ಸುರಿದುಕೊಂಡು ‘ಅಶುಚಿಯಾದುದೇ ನಾಶವಾಗು, ಅಶುಚಿಯಾದುದೇ ನಾಶವಾಗು, ಒಂದು ಜೀವಿಯು ಮತ್ತೊಂದಕ್ಕೆ ಹೀಗೆ ಮಾಡುವುದು ಸರಿಯೇ’ ಎಂದು ಕೂಗಿಕೊಂಡವು. ಇಂದು ಜನಪದದಲ್ಲಿರುವ ಒಂದು ಹೆಣ್ಣನ್ನು ಅನ್ಯನು ಎಳೆದುಕೊಂಡು ಹೋಗುವಾಗ ಅಲ್ಲಿಯ ಜನರಲ್ಲಿ ಕೆಲವರು ಅವನ ಮೇಲೆ ಮರಳನ್ನೂ ಕೆಲವರು ಬೂದಿಯನ್ನೂ ಕೆಲವರು ಸಗಣಿಯನ್ನೂ ಎಸೆಯುವಂತೆ (ಆ ಜೀವಿಗಳು ತಮ್ಮ ಮೇಲೆಯೇ ಮರಳು ಬೂದಿ ಸಗಣಿಯನ್ನು ಸುರಿದುಕೊಂಡವು). ಹೀಗೆ ಹಿಂದೆ ಸೃಷ್ಟಿಯಾದ ರೀತಿಯನ್ನು ಜೀವಿಗಳು ನೆನಪಿಗೆ ತಂದುಕೊಳ್ಳುತ್ತಾರೆ. ಆದರೆ ಅರ್ಥವನ್ನು ತಿಳಿಯಲಾರರು.
ಮೈಥುನ ಧಮ್ಮ ಸಮಾಚಾರ
“ವಾಸೆಟ್ಠ, ಆ ಕಾಲದಲ್ಲಿ ಯಾವುದು ಧಮ್ಮಸಮ್ಮತವಾಗಿರಲಿಲ್ಲವೋ ಅದು ಇಂದು ಧರ್ಮಸಮ್ಮತವಾಗಿ ಹೋಗಿದೆ. ಆ ಕಾಲದಲ್ಲಿ ಮೈಥುನ ಭಾವನೆಯುಳ್ಳ ಜೀವಿಗಳು ಗ್ರಾಮವನ್ನಾಗಲೀ, ಪಟ್ಟಣವನ್ನಾಗಲೀ ತಿಂಗಳಿಗೊಮ್ಮೆ ಅಥವಾ ಎರಡು ತಿಂಗಳಿಗೊಮ್ಮೆ ಪ್ರವೇಶಿಸುವುದಕ್ಕೂ ಆಗುತ್ತಿರಲಿಲ್ಲ. ಅಧರ್ಮದಲ್ಲಿ ನಿರತರಾದ ಆ ಜೀವಿಗಳು ಬಹುಬೇಗನೆ ನಿಂದೆಗೊಳಗಾಗುತ್ತಿದ್ದವು. ತಮ್ಮ ಅಧರ್ಮವನ್ನು ಮುಚ್ಚಿಕೊಳ್ಳುವುದಕ್ಕೋಸ್ಕರ ಮನೆಯನ್ನು ಮಾಡಿಕೊಳ್ಳಲು ಉಪಕ್ರಮಿಸಿದುವು. ವಾಸೆಟ್ಠ, ಆಲಸ್ಯದಿಂದ ಕೂಡಿದ ಒಂದು ಜೀವಿಯು ಹೀಗೆಂದುಕೊಂಡಿತು- ‘ಸಾಯಂಕಾಲದ ಊಟಕ್ಕೆ ಸಾಯಂಕಾಲ ಅಥವಾ ಬೆಳಗಿನ ಊಟಕ್ಕೆ ಬೆಳಗ್ಗೆ ಏತಕ್ಕೆ ನಾವು ಅಕ್ಕಿಯನ್ನು ತರಬೇಕು? ಏಕೆ ಆಯಾಸಪಡಬೇಕು? ಎರಡು ಹೊತ್ತಿಗೆ ಸಾಕಗುವಷ್ಟು ಅಕ್ಕಿಯನ್ನು ಒಮ್ಮೆಯೇ ಏಕೆ ತರಬಾರದು?
“ಸಾಯಂಕಾಲ ಮತ್ತು ಬೆಳಗಿನ ಊಟಕ್ಕೆರಡಕ್ಕೂ ಒಮ್ಮೆಗೇ ಅಕ್ಕಿಯನ್ನು ಆ ಜೀವಿಯು ತಂದುಕೊಂಡಿತು. ಆಗ ಮತ್ತೊಬ್ಬ ಜೀವಿಯು ಮೊದಲನೆಯ ಜೀವಿಯ ಸಮೀಪಕ್ಕೆ ಹೋಯಿತು. ಅದಕ್ಕೆ ಹೀಗೆಂದಿತು: ‘ಗೆಳೆಯ, ಅಕ್ಕಿಯನ್ನು ಸಂಗ್ರಹಿಸಲು ಹೊರಡೋಣ ಬಾ’. ‘ಗೆಳೆಯ ನಾನು ಸಾಯಂಕಾಲ ಮತ್ತು ಬೆಳಗಿನ ಊಟಗಳೆರಡಕ್ಕೂ ಸಾಕಾಗುವಷ್ಟು ಅಕ್ಕಿಯನ್ನು ತಂದಿದ್ದೇನೆ.’
“ಆಗ ವಾಸೆಟ್ಠ, ಆ ಜೀವಿಯು ತನ್ನ ಗೆಳೆಯನನ್ನೇ ಅನುಸರಿಸಿ ಎರಡು ದಿನಕ್ಕೆ ಬೇಕಾಗುವಷ್ಟು ಅಕ್ಕಿಯನ್ನು ತಂದುಬಿಟ್ಟಿತು. ‘ನಾನು ಮಾಡಿದುದು ಸರಿಯಾಯಿತು’ ಎಂದುಕೊಂಡಿತು. ಮತ್ತೊಂದು ಜೀವಿಯು ಈ ಎರಡನೆಯ ಜೀವಿಯ ಬಳಿಗೆ ಬಂದಿತು. ಅದಕ್ಕೆ ಹೀಗೆ ಹೇಳಿತು- ‘ಅಕ್ಕಿಯನ್ನು ತರಲು ಹೋಗೋಣ ಬಾ.’ ‘ಗೆಳೆಯ, ನಾನೀಗಲೇ ಎರಡು ದಿನಕ್ಕಾಗುವಷ್ಟು ಅಕ್ಕಿಯನ್ನು ತಂದುಬಿಟ್ಟಿದ್ದೇನೆ, ಇಷ್ಟು ಸಾಕು.’
“ಈ ಜೀವಿಯು ಎರಡನೆಯ ಜೀವಿಯನ್ನೇ ಅನುಸರಿಸಿ ನಾಲ್ಕು ದಿನಕ್ಕೆ ಸಾಕಾಗುವಷ್ಟು ಅಕ್ಕಿಯನ್ನು ತಂದಿತು. ‘ನಾನು ಮಾಡಿದುದು ಸರಿಯಾಯಿತು’ ಎಂದುಕೊಂಡಿತು. ಆಗ ಮತ್ತೊಂದು ಜೀವಿಯು ಈ ಮೂರನೆಯ ಜೀವಿಯ ಬಳಿಗೆ ಬಂದಿತು. ‘ಅಕ್ಕಿಯನ್ನು ತರಲು ಹೋಗೋಣ ಬಾ’ ಎಂದಿತು. ‘ಗೆಳೆಯ ನಾನೀಗಾಗಲೇ ನಾಲ್ಕು ದಿನಕ್ಕೆ ಸಾಕಾಗುವಷ್ಟು ಅಕ್ಕಿಯನ್ನು ತಂದಿದ್ದೇನೆ ಸಾಕು’ ಎಂದಿತು.
“ಆಗ ಈ ಜೀವಿಯು ಮೂರನೆಯ ಜೀವಿಯನ್ನು ಅನುಸರಿಸಿ ಎಂಟು ದಿನಕ್ಕಾಗುವಷ್ಟು ಅಕ್ಕಿಯನ್ನು ತಂದುಬಿಟ್ಟಿತು. ‘ನಾನು ಮಾಡಿದುದು ಸರಿಯಾಯಿತು’ ಎಂದುಕೊಂಡಿತು. ಹೀಗೆ ಅಕ್ಕಿಯನ್ನು ಜೀವಿಗಳು ಸಂಗ್ರಹ ಮಾಡುತ್ತಾ ಹೋದರೆ ಅಕ್ಕಿಯ ಮೇಲೆ ಹೊಟ್ಟು ಬೆಳೆಯಲು ಆರಂಭವಾಯಿತು. ಅಕ್ಕಿಯು ಚೂರು ಚೂರಾಗಲು ಆರಂಭವಾಯಿತು. ಪೈರಿನಿಂದ ಧಾನ್ಯವನ್ನು ತೆಗೆದಮೇಲೆ ಅದು ಮತ್ತೆ ಬೆಳೆಯಲಿಲ್ಲ. ಸದಾ ಬೆಳೆಯುವುದಕ್ಕೆ ಬದಲು ಒಂದು ಬೆಳೆಗೂ ಮತ್ತೊಂದು ಬೆಳೆಗೂ ಕಾಲದ ಅಂತರ ಹೆಚ್ಚಿತು. ಭತ್ತದ ಕೂಳೆಗಳು ಹಾಗೆಯೇ ನಿಂತವು.
ಅಕ್ಕಿ ವಿಭಾಗ ಮಾಡಿಕೊಳ್ಳುವುದು
“ವಾಸೆಟ್ಠ, ಆಗ ಜೀವಿಗಳು ಒಟ್ಟಿಗೆ ಸೇರಿದುವು. ‘ಪಾಪ ಧರ್ಮಗಳು ಜೀವಿಗಳಲ್ಲಿ ಹುಟ್ಟಿಕೊಂಡಿವೆಯಲ್ಲಾ...’ ಎಂದು ಪರಿತಪಿಸಿದುವು. ‘ಹಿಂದೆ ನಾವು ಕೇವಲ ಮನೋಮಯಗಳಾಗಿ ಪ್ರೀತಿಯನ್ನೇ ಆಹಾರವನ್ನಾಗಿ ಮಾಡಿಕೊಂಡು ಸ್ವಯಂಪ್ರಭೆಯುಳ್ಳವುಗಳಾಗಿ ಅಂತರಿಕ್ಷದಲ್ಲಿಯೇ ಓಡಾಡುತ್ತಿದ್ದೆವು. ಒಳ್ಳೆಯದನ್ನನುಭವಿಸುತ್ತಾ ಬಹುಕಾಲ ಬದುಕಿದೆವು. ಬಹುಕಾಲದ ನಂತರ ನಮಗಾಗಿ ನೀರಿನಿಂದ ಪೃಥ್ವೀ ರಸವು ಮೇಲಕ್ಕೆ ಬಂತು. ಅದು ವರ್ಣ ಗಂಧ ರಸಗಳಿಂದ ತುಂಬಿಕೊಂಡಿತ್ತು. ನಾವು ಆ ಪೃಥ್ವೀರಸವನ್ನು ಕೈಗಳಿಂದ ತೆಗೆದುಕೊಂಡು ಭುಂಜಿಸುವುದಕ್ಕೆ ಉಪಕ್ರಮಿಸಿದೆವು. ಹೀಗೆ ನಾವು ಭಕ್ಷಿಸುವುದಕ್ಕೆ ಆರಂಭಿಸಿದ ಮೇಲೆ ನಮ್ಮ ಸ್ವಯಂಪ್ರಭೆಯು ಮಾಯವಾಯಿತು. ಆಗ ನಕ್ಷತ್ರಗಳೂ ತಾರಾಮಂಡಲಗಳೂ ಹುಟ್ಟಿದುವು. ಆಮೇಲೆ ಹಗಲು ರಾತ್ರಿಗಳುಂಟಾದುವು. ಹಗಲು ರಾತ್ರಿಗಳು ಹುಟ್ಟಿದ ಮೇಲೆ ಪಕ್ಷ ಮಾಸಗಳುಂಟಾದುವು. ಆಮೇಲೆ ಋತು ಸಂವತ್ಸರಗಳುಂಟಾದುವು. ನಾವು ಪೃಥ್ವೀರಸವನ್ನೇ ಭುಂಜಿಸಿಕೊಂಡು ಆ ಆಹಾರದಿಂದಲೇ ಬಹುಕಾಲ ಬದುಕಿದೆವು. ಪಾಪಪೂರಿತವೂ ಅಕುಶಲವಾದವೂ ಆದ ಭಾವನೆಗಳು ಹುಟ್ಟಿಕೊಂಡಂತೆ ಪೃಥ್ವೀರಸವು ಆರಿಹೋಯಿತು. ಭೂಮಿಯ ಹೊದಿಕೆಯು ಹುಟ್ಟಿತು. ಅದು ರಸವರ್ಣಗಂಧಗಳಿಂದ ತುಂಬಿಕೊಂಡಿತ್ತು. ನಾವು ಭೂಮಿಯ ಹೊದಿಕೆಯನ್ನೇ ತಿನ್ನಲು ಆರಂಭಿಸಿದೆವು. ನಾವು ಅವನ್ನೇ ಭುಂಜಿಸಿಕೊಂಡು ಬಹುಕಾಲ ಬದುಕಿದೆವು. ಪಾಪಪೂರಿತವೂ ಅಕುಶಲವೂ ಆದ ಭಾವನೆಗಳು ಹುಟ್ಟಿದುವು. ಆಮೇಲೆ ಭೂಮಿಯ ಹೊದಿಕೆಯು ಮಾಯವಾಯಿತು. ಭೂಮಿಯ ಹೊದಿಕೆಯು ಮಾಯವಾದ ಮೇಲೆ ಲತೆಗಳು ಹುಟ್ಟಿಕೊಂಡವು. ನಾವು ಅದನ್ನು ಭುಂಜಿಸಿಕೊಂಡು ಬಹುಕಾಲ ಬದುಕಿದೆವು. ಅವು ವರ್ಣ ಗಂಧ ರಸಗಳಿಂದ ತುಂಬಿಕೊಂಡಿದ್ದವು. ನಾವು ಅದನ್ನು ಭುಂಜಿಸಲು ಉಪಕ್ರಮಿಸಿದೆವು. ಅದನ್ನು ಭುಂಜಿಸಿಕೊಂಡು ಬಹುಕಾಲ ಬದುಕಿದೆವು. ಆಗ ಪಾಪಪೂರಿತವೂ ಅಕುಶಲವಾದವೂ ಆದ ಭಾವನೆಗಳು ಹುಟ್ಟಿಕೊಂಡವು. ಆಗ ಲತೆಗಳು ಅದೃಶ್ಯವಾದುವು. ಲತೆಗಳು ಇಲ್ಲವಾದ ಮೇಲೆ ಬಯಲಿನಲ್ಲಿ ಹೊಟ್ಟಿಲ್ಲದ ನುಚ್ಚಾಗದ ಪರಿಶುದ್ಧವಾದ ಬಿಳಿಯ ಬಣ್ಣದ ಸುವಾಸನೆಯ ಅಕ್ಕಿಯ ಪೈರು ಹುಟ್ಟಿತು. ಸಾಯಂಕಾಲದ ಊಟಕ್ಕೆ ಅದನ್ನು ತರುತ್ತಿದ್ದೆವು. ಆದರೆ ಮಾರನೆಯ ಪ್ರಾತಃಕಾಲ ಮೊದಲಿನಂತೆಯೇ ಅಕ್ಕಿ ಹುಟ್ಟುತ್ತಿತ್ತು. ಪ್ರಾತಃಕಾಲದ ಊಟಕ್ಕೆ ಅಕ್ಕಿಯನ್ನು ತಂದರೆ ಸಾಯಂಕಾಲದ ಹೊತ್ತಿಗೆ ಮೊದಲಿನಂತೆಯೇ ಅಕ್ಕಿಯು ಹುಟ್ಟುತ್ತಿತ್ತು. ಮೊದಲನೆಯ ಬೆಳೆಗೂ ಎರಡನೆಯ ಬೆಳೆಗೂ ಕಾಲದ ಅಂತರವೇ ಇರುತ್ತಿರಲಿಲ್ಲ. (ಅಕ್ಕಿಯು ಒಂದೇ ಸಮನೆ ಬೆಳೆಯುತ್ತಿತ್ತು). ಬಯಲಿನಲ್ಲಿ ಬೆಳೆಯುತ್ತಿದ್ದ ಆ ಅಕ್ಕಿಯನ್ನು ತಿಂದು ಬಹುಕಾಲ ಬದುಕಿದೆವು. ಆಗ ನಮ್ಮಲ್ಲಿ ಪಾಪಪೂರಿತವೂ ಅಕುಶಲವೂ ಆದ ಭಾವನೆಗಳು ಹುಟ್ಟಿಕೊಂಡವು. ಆಗ ಅಕ್ಕಿಯ ಮೇಲೆ ಹೊಟ್ಟು ಬೆಳೆಯಿತು. ಅದು ನುಚ್ಚಾಗುತ್ತಿತ್ತು. ಆ ಅಕ್ಕಿಯನ್ನು ಪೈರಿನಿಂದ ತೆಗೆದ ನಂತರ ಮತ್ತೆ ಅದು ಬೆಳೆಯುತ್ತಿರಲಿಲ್ಲ. ಒಂದು ಬೆಳೆಗೂ ಮತ್ತೊಂದು ಬೆಳೆಗೂ ಕಾಲದ ಅಂತರವಿರುತ್ತಿತ್ತು. ಅಕ್ಕಿಯ ಪೈರಿನ ಕೂಳೆಗಳು ಹಾಗೆಯೇ ಉಳಿದುಕೊಂಡುವು. ಆಗ ‘ಅಕ್ಕಿಯನ್ನು ಭಾಗಮಾಡಿಕೊಳ್ಳೋಣ ಬನ್ನಿ, ಗದ್ದೆಗಳ ಗಡಿಗಳನ್ನು ಸರಿಯಾಗಿ ನಿರ್ಧರಿಸೋಣ ಎಂದು ಹೇಳಿಕೊಂಡೆವು.’
“ವಾಸೆಟ್ಠ, ಜೀವಿಗಳು ಆಮೇಲೆ ಅಕ್ಕಿಯನ್ನೂ ಅಕ್ಕಿ ಬೆಳೆಯುವ ಗದ್ದೆಯನ್ನೂ ಭಾಗ ಮಾಡಿಕೊಂಡವು. ಗಡಿಗಳನ್ನು ಏರ್ಪಡಿಸಿಕೊಂಡವು. ಆಗ ಆಲಸ್ಯದಿಂದ ಕೂಡಿದ ಒಂದು ಜೀವಿಯು ತನ್ನ ಭಾಗಕ್ಕೆ ಸೇರಿದ್ದ ಗದ್ದೆಯ ಜೊತೆಗೆ ಇನ್ನೊಂದು ಜೀವಿಯ ಭಾಗವನ್ನು ಸೇರಿಸಿಕೊಂಡುಬಿಟ್ಟಿತು. ಹೀಗೆ ತನಗೆ ಸೇರದುದನ್ನು ತೆಗೆದುಕೊಂಡುಬಿಟ್ಟಿತು. ಕಳ್ಳತನ ಮಾಡಿತು. ಕದ್ದಿದ್ದನ್ನು ಉಪಯೋಗಿಸಿಕೊಂಡುಬಿಟ್ಟಿತು. ಇತರರು ಆ ಜೀವಿಯನ್ನು ಹಿಡಿದರು. ಆಮೇಲೆ ಅದನ್ನು ಕುರಿತು ‘ಓ ಪಾಪಿ, ನಿನ್ನ ಭಾಗವನ್ನೂ ತೆಗೆದುಕೊಂಡು ಬೇರೆಯವರ ಭಾಗವನ್ನು ಸೇರಿಸಿಕೊಂಡು ಕಳ್ಳತನ ಮಾಡಿಬಿಟ್ಟೆ. ಮತ್ತೆ ಇಂಥ ಕೆಲಸವನ್ನು ಮಾಡಬೇಡ’ ಎಂದು ಎಚ್ಚರಿಸಿದುವು. ‘ಇಲ್ಲ ಹಾಗೆ ಮಾಡುವುದಿಲ್ಲ’ ಎಂದು ಆ ಜೀವಿಯು ಇತರ ಜೀವಿಗಳಿಗೆ ಪ್ರತ್ಯುತ್ತರವನ್ನು ಹೇಳಿತು. ಆದರೆ ಎರಡನೆಯಸಾರಿ ಆ ಜೀವಿಯು ತನ್ನ ಭಾಗಕ್ಕೆ ಸೇರಿದ... ಮೂರನೆಯಸಾರಿ ಆ ಜೀವಿಯು ತನ್ನ ಭಾಗಕ್ಕೆ ಸೇರಿದ ಗದ್ದೆಯ ಜೊತೆಗೆ ಮತ್ತೊಬ್ಬರ ಗದ್ದೆಯನ್ನೂ ಸೇರಿಸಿಕೊಂಡು ಕಳ್ಳತನ ಮಾಡಿತು. ಆ ಜೀವಿಯನ್ನು ಬೇರೆ ಜೀವಿಗಳು ಹಿಡಿದುವು. ಹಿಡಿದಮೇಲೆ ಅದನ್ನು ಕುರಿತು- ‘ಓ ಪಾಪಿ, ನಿನ್ನ ಭಾಗವನ್ನು ತೆಗೆದುಕೊಂಡಾದ ಮೇಲೆ ಬೇರೆಯವರ ಭಾಗವನ್ನು ಸೇರಿಸಿಕೊಂಡು ಕಳ್ಳತನ ಮಾಡಿದ್ದೀಯೆ. ಮತ್ತೆ ಇಂಥ ಕೆಲಸವನ್ನು ಮಾಡಬೇಡ’ ಎಂದು ಹೇಳಿದುವು. ಆಮೇಲೆ ಕೆಲವು ಕೈಯಿಂದ ಅದನ್ನು ಥಳಿಸಿದುವು. ಕೆಲವು ಕೋಲಿನಿಂದ ಹೊಡೆದುವು. ಕೆಲವು ದೊಣ್ಣೆಯಿಂದ ಹೊಡೆದುವು.
“ಹೀಗೆ ವಾಸೆಟ್ಠ, ಕಳ್ಳತನ ಮೊದಲಾಯಿತು, ನಿಂದೆ ಮಾಡಲಾಯಿತು, ಸುಳ್ಳು ಹೇಳುವುದು ಆರಂಭವಾಯಿತು, ಶಿಕ್ಷೆ ಕೊಡುವುದು ಆರಂಭವಾಯಿತು.
ಮಹಾಜನ ಸಮ್ಮತನಾದ ರಾಜ
“ವಾಸೆಟ್ಠ, ಜೀವಿಗಳೆಲ್ಲವೂ ಒಂದುಕಡೆ ಸೇರಿದುವು. ಆನಂತರ ಹೀಗೆಂದುಕೊಂಡುವು. ‘ನಮ್ಮಲ್ಲಿ ಪಾಪ ಭಾವನೆಗಳು ಹುಟ್ಟಿವೆ. ಅವು (ನಮ್ಮ ನಡತೆಯಿಂದ) ಚೆನ್ನಾಗಿ ಕಾಣಿಸಿಕೊಂಡಿವೆ. ಕಳ್ಳತನ, ನಿಂದೆ, ಸುಳ್ಳು, ಶಿಕ್ಷೆ, ನಮ್ಮಲ್ಲಿ ಸಾಮಾನ್ಯವಾಗಿ ಹೋಗಿವೆ. ಯಾವುದರ ಬಗೆಗೆ ಅಸಹನೆಯಿರಬೇಕೋ ಅದರ ಬಗೆಗೆ ಅಸಹನೆಯಿರುವ, ಯಾವುದನ್ನು ನಿಂದಿಸಬೇಕೋ ಅದನ್ನು ನಿಂದಿಸಬಲ್ಲ, ದೇಶಭ್ರಷ್ಟನಾಗಿ ಮಾಡಬೇಕಾದವನನ್ನು ಹೊರಗೆ ಹಾಕಬಲ್ಲ ಒಂದು ಜೀವಿಯನ್ನು ನಾವು ಆರಿಸಿಕೊಳ್ಳುವುದು ಒಳ್ಳೆಯದು. ಅವನಿಗೆ ನಮ್ಮಲ್ಲಿರುವ ಅಕ್ಕಿಯ ಒಂದು ಭಾಗವನ್ನು ಕೊಡೋಣ’.
“ವಾಸೆಟ್ಠ, ಜೀವಿಗಳು ಬಹು ಸುಂದರವಾಗಿರುವ ನೋಡಿದಾಗ ಸಂತೋಷನ್ನುಂಟುಮಾಡುವ ಪ್ರಸನ್ನನಾಗಿರುವ ಮಹಾಶಕ್ತಿವಂತನಾದ ಒಂದು ಜೀವಿಯ ಬಳಿಗೆ ಹೋದವು. ‘ಗೆಳೆಯ, ಅಸಹನೆ ಇರಬೇಕಾದುದುರ ಬಗೆ ಅಸಹನೆಯನ್ನು ತೋರು, ನಿಂದಿಸಬೇಕಾದುದನ್ನು ನಿಂದಿಸು, ಹೊರಗೆ ಹಾಕಬೇಕಾದ ಜೀವಿಯನ್ನು ಹೊರಗೆ ಹಾಕು. ನಮ್ಮಲ್ಲಿರುವ ಅಕ್ಕಿಯ ಒಂದು ಭಾಗವನ್ನು ಕೊಡುತ್ತೇವೆ’ ಎಂದುವು. ‘ಹಾಗೆಯೇ ಆಗಲಿ’ ಎಂದು ಆ ಜೀವಿಯು ಹೇಳಿತು. ಅಸಹನೆಯನ್ನು ತೋರಿಸಬೇಕಾದುದರ ಬಗೆಗೆ ಅಸಹನೆಯನ್ನು ತೋರಿಸಿತು, ನಿಂದಿಸಬೇಕಾದುದನ್ನು ನಿಂದಿಸಿತು, ಹೊರಗೆ ಹಾಕಬೇಕಾದುದನ್ನು ಹೊರಗೆ ಹಾಕಿತು. ಜೀವಿಗಳು ಅದಕ್ಕೆ ಅಕ್ಕಿಯ ಭಾಗವನ್ನು ಸಲ್ಲಿಸಿದುವು.
“ಮಹಾಜನ ಸಮ್ಮತವಾದ ಆ ಜೀವಿಯು ‘ಮಹಾಸಮ್ಮತ ಮಹಾಸಮ್ಮತ’ ಎನ್ನಿಸಿಕೊಂಡನು. ‘ಮಹಾ ಸಮ್ಮತ’24 ಪದವು ಮೊದಲನೆಯದಾಯಿತು. ಕ್ಷೇತ್ರಕ್ಕೆ ಅಧಿಪತಿಯಾದವನು ‘ಕ್ಷತ್ರಿಯ ಕ್ಷತ್ರಿಯ’ ಎನ್ನಿಸಿಕೊಂಡನು. ಹೀಗೆ ಎರಡನೆಯ ಪದವು ಹುಟ್ಟಿತು. ಧರ್ಮದ ನಡವಳಿಕೆಯಿಂದ ಆತನು ಇತರರಿಗೆ ರಂಜನೆಯನ್ನುಂಟು ಮಾಡಿದನು. ಆದುದರಿಂದ ಆತನು ರಾಜನೆನ್ನಿಸಿಕೊಂಡನು. ‘ರಾಜ’ ಎಂಬ ಮೂರನೆಯ ಪದವು ಹುಟ್ಟಿತು. ಹೀಗೆ ವಾಸೆಟ್ಠ, ಆದಿಯಿಂದ ಪುರಾತನ ಕಾಲದಿಂದ ಕ್ಷತ್ರಿಯ ಪದದ ಪ್ರಚಾರವಾಯಿತು. ಕ್ಷತ್ರಿಯ ಮಂಡಲಕ್ಕೆ ಇದೇ ಮೂಲ, ಬೇರೆ ಯಾವುದೂ ಮೂಲವಲ್ಲ. ಇದೇ ಕಾರಣ ಮತ್ತಾವುದೂ ಕಾರಣವಲ್ಲ. ಹೀಗಾಗಿದ್ದುದ್ದು ನಿಯಮದಂತೆ ನಿಯಮವನ್ನು ಮೀರಿ ಇದು ಉಂಟಾಗಲಿಲ್ಲ. ಜನಗಳಿಗೆ ಧಮ್ಮವೇ ಶ್ರೇಷ್ಠವಾದದ್ದು, ಈ ಲೋಕ ಮತ್ತು ಮುಂದಿನ ಲೋಕಗಳಿಗೂ ಶ್ರೇಷ್ಠವಾದದ್ದು.
ಬ್ರಾಹ್ಮಣ ಮಂಡಲ
“ಆಗ ವಾಸೆಟ್ಠ, ಕೆಲವು ಜೀವಿಗಳಿಗೆ ಹೀಗೆನ್ನಿಸಿತು- ‘ನಮ್ಮಲ್ಲಿ ಪಾಪ ಭಾವನೆಗಳು ಹುಟ್ಟಿವೆ. ಅವು ಚೆನ್ನಾಗಿ ಕಾಣಿಸಿಕೊಂಡಿವೆ. ಕಳ್ಳತನ, ನಿಂದೆ, ಸುಳ್ಳು ನಮ್ಮಲ್ಲಿ ಸಮಾನ್ಯವಾಗಿ ಹೋಗಿವೆ. ಶಿಕ್ಷೆ ಬಹಿಷ್ಕಾರಗಳು ಸಾಮಾನ್ಯವಾಗಿದೆ. ನಾವು ಅಕುಶಲವಾದ ಭಾವನೆಗಳನ್ನು ತೊರೆಯೋಣ’ ಹೀಗೆಂದುಕೊಂಡು ಅವರು ಅಕುಶಲವಾದ ಪಾಪ ಭಾವನೆಗಳನ್ನು ತೊರೆದರು. ಆಗ ವಾಸೆಟ್ಠ, ‘ಬ್ರಾಹ್ಮಣ, ಬ್ರಾಹ್ಮಣ’ ಎಂಬ ಪದ ಹುಟ್ಟಿತು. ಇದು ಪ್ರಥಮ ಪದವಾಯಿತು. ಅವರು ಅರಣ್ಯದಲ್ಲಿ ಪರ್ಣಕುಟಿಗಳನ್ನು ಮಾಡಿಕೊಂಡು ಅಲ್ಲಿ ಧ್ಯಾನ ಮಾಡಲು ಉಪಕ್ರಮಿಸಿದರು, ಕೆಂಡವು ಆರಿಹೋಯಿತು, ಹೊಗೆಯು ಇಲ್ಲವಾಯಿತು. ಒಳಕಲ್ಲು ಒನಕೆಗಳು ಬಿದ್ದುಹೋದುವು. ಸಾಯಂಕಾಲಕ್ಕೆ ಬೇಕಾದ ಧಾನ್ಯವನ್ನು ಸಾಯಂಕಾಲದಲ್ಲಿಯೂ, ಪ್ರಾತಃಕಾಲಕ್ಕೆ ಬೇಕಾದುದನ್ನು ಪ್ರಾತಃಕಾಲವೂ ಗ್ರಾಮ ಪಟ್ಟಣ ರಾಜಧಾನಿಗಳಿಂದ ಸಂಗ್ರಹಿಸುತ್ತಿದ್ದರು. ಹೀಗೆ ಸಂಗ್ರಹಿಸಿದ ಮೇಲೆ ಮತ್ತೆ ಪರ್ಣಕುಟಿಗೆ ತಿರುಗಿ ಧ್ಯಾನಾಸಕ್ತರಾಗುತ್ತಾರೆ ಎಂದು ಜನರು ಅರಿತರು. ಧ್ಯಾನಶೀಲರಾದ ಅವರಿಗೆ ‘ಧ್ಯಾನಿ ಧ್ಯಾನಿ’ ಎಂಬ ಹೆಸರಾಯಿತು. ಹೀಗೆ ಎರಡನೆಯ ಪದವು ಹುಟ್ಟಿತು. ಆ ಜೀವಿಗಳಲ್ಲಿ ಕೆಲವಕ್ಕೆ ಅರಣ್ಯ ಪರ್ಣಕುಟಿಯಲ್ಲಿ ವಾಸಿಸಿ ಧ್ಯಾನ ಮಾಡುವುದು ಅಸಾಧ್ಯವೆಂದು ಕಂಡುಬಂತು. ಅವು ಗ್ರಾಮ ಪಟ್ಟಣಗಳ ಸಮೀಪದಲ್ಲಿ ನೆಲೆಸಿ ಗ್ರಂಥ ರಚನೆಯಲ್ಲಿ* ತೊಡಗಿದರು. ಇದನ್ನು ತಿಳಿದ ಜನಗಳು ಹೀಗೆಂದುಕೊಂಡರು- ‘ಈ ಜೀವಿಗಳು ಅರಣ್ಯದ ಪರ್ಣಕುಟಿಯಲ್ಲಿ ಉಳಿದುಕೊಂಡು ಧ್ಯಾನಮಾಡಲಾರರು. ಗ್ರಾಮ ಪಟ್ಟಣಗಳ ಸಮೀಪದಲ್ಲಿ ನೆಲೆಸಿ ಗ್ರಂಥ ರಚನೆಯಲ್ಲಿ ತೊಡಗಿದ್ದಾರೆ. ಅವರು ಧ್ಯಾನ ಮಾಡಲಾರರು. ಧ್ಯಾನ ಮಾಡಲಾರದ ಈ ಜೀವಿಗಳು ‘ಅಜ್ಝಾಯಿಕರು, ಅಜ್ಝಾಯಿಕರು’ ಎಂಬ ಹೆಸರನ್ನು ಪಡೆದರು. ಹೀಗೆ ಮೂರನೆಯ ಪದವು ಹುಟ್ಟಿತು. ಆ ಕಾಲದಲ್ಲಿ ಅವರು ಹೀನ ಮನುಷ್ಯರೆಂದೇ ಪರಿಗಣಿಸಲ್ಪಟ್ಟಿದ್ದರು. ಈಗಾದರೋ ಅವರೂ ಶ್ರೇಷ್ಠರೆಂದು ಪರಿಗಣಿಸಲ್ಪಟ್ಟಿದ್ದಾರೆ. ವಾಸೆಟ್ಠ, ಹೀಗೆ ಆದಿಕಾಲದಿಂದ ಪುರಾತನ ಕಾಲದಿಂದ ಬ್ರಾಹ್ಮಣ ಪದವು ಪ್ರಚಾರವಾಯಿತು. ಬ್ರಾಹ್ಮಣ ಮಂಡಲಕ್ಕೆ ಇದೇ ಮೂಲ ಬೇರೆ ಯಾವುದೂ ಅಲ್ಲ. ಹೀಗಾದದ್ದು ಒಂದು ನಿಯಮದಂತೆ, ಬೇರೆ ಯಾವುದರಿಂದಲೂ ಅಲ್ಲ. ನಿಯಮವನ್ನು ಮೀರಿ ಇದು ಆಗಲಿಲ್ಲ.
ಜನಗಳಿಗೆ ಧರ್ಮವೇ ಶ್ರೇಷ್ಠವಾದದ್ದು. ಈ ಲೋಕ ಮತ್ತು ಮುಂದಿನ ಲೋಕಗಳಿಗೂ ಧರ್ಮವೇ ಶ್ರೇಷ್ಠವಾದದ್ದು.
ವೈಶ್ಯ ಮಂಡಲ
“ಆ ಜೀವಿಗಳಲ್ಲಿ ಕೆಲವು ಮೈಥುನವು ತಪ್ಪಲ್ಲ ಎಂದುಕೊಂಡವು. ಗೃಹಸ್ಥ ಜೀವನವನ್ನು ಅನುಸರಿಸಿದ್ದವು. ಬೇರೆ ಬೇರೆ ವೃತ್ತಿಗಳಲ್ಲಿ ತೊಡಗಿದವು. ಹೀಗೆ ಗೃಹಸ್ಥ ಜೀವನದಲ್ಲಿದ್ದುಕೊಂಡು ವೃತ್ತಿಗಳಲ್ಲಿ ತೊಡಗಿದ ಜೀವಿಗಳು ‘ವೈಶ್ಯರು, ವೈಶ್ಯರು’ ಎನ್ನಿಸಿಕೊಂಡವು. ಈ ಪದವು ಹುಟ್ಟಿಕೊಂಡಿತು. ವೈಶ್ಯ ಮಂಡಲಕ್ಕೆ ಇದೇ ಮೂಲ. ಬೇರೆ ಯಾವುದೂ ಅಲ್ಲ. ಆದಿಕಾಲದಿಂದ ಪುರಾತನ ಕಾಲದಿಂದ ವೈಶ್ಯಪದವು ಪ್ರಚಾರವಾಯಿತು. ಹೀಗಾಗಿರುವುದು ಒಂದು ನಿಯಮದಂತೆ ಬೇರೆ ಯಾವುದರಿಂದಲೂ ಅಲ್ಲ. ನಿಯಮವನ್ನು ಮೀರಿ ಆದದ್ದಲ್ಲ. ಜನಗಳಿಗೆ ಧರ್ಮವೇ ಶ್ರೇಷ್ಠವಾದದ್ದು. ಈ ಲೋಕ ಮತ್ತು ಮುಂದಿನ ಲೋಕಗಳಿಗೂ ಧರ್ಮವೇ ಶ್ರೇಷ್ಠವಾದದ್ದು.
ಶೂದ್ರ ಮಂಡಲ
“ವಾಸೆಟ್ಠ, ಇನ್ನುಳಿದ ಜೀವಿಗಳು ಕ್ಷುದ್ರವಾದ ಬೇಟೆಯಲ್ಲಿ ನಿರತವಾದವು. ಹೀಗೆ ಕ್ಷುದ್ರವಾದ ಬೇಟೆಯಲ್ಲಿ ನಿರತರಾದ ಜೀವಿಗಳು ‘ಶೂದ್ರ ಶೂದ್ರ’ ಎನ್ನಿಸಿಕೊಂಡವು. ಹೀಗೆ ಈ ಪದವು ಹುಟ್ಟಿಕೊಂಡಿತು. ಶೂದ್ರ ಮಂಡಲಕ್ಕೂ ಇದೇ ಮೂಲ, ಮತ್ತಾವುದೂ ಅಲ್ಲ. ಆದಿಕಾಲದಿಂದ ಪುರಾತನ ಕಾಲದಿಂದ ಶೂದ್ರ ಪದವು ಪ್ರಚಾರವಾಯಿತು. ಹೀಗಾಗಿರುವುದು ಒಂದು ನಿಯಮದಂತೆ, ಬೇರೆ ಯಾವುದರಿಂದಲೂ ಅಲ್ಲ, ನಿಯಮವನ್ನು ಮೀರಿ ಆದದ್ದಲ್ಲ. ಜನಗಳಿಗೆ ಧರ್ಮವೇ ಶ್ರೇಷ್ಠವಾದದ್ದು, ಈ ಲೋಕ ಮುಂದಿನ ಲೋಕಕ್ಕೆ ಧರ್ಮವೇ ಶ್ರೇಷ್ಠವಾದದ್ದು.
“ವಾಸೆಟ್ಠ, ಮುಂದೊಂದು ಸಮಯದಲ್ಲಿ ಯಾವನೋ ಒಬ್ಬ ಕ್ಷತ್ರಿಯನು ತನ್ನ ವೃತ್ತಿಯು ನಿಂದನೀಯವಾದದ್ದು ಎಂಬುದನ್ನು ತಿಳಿದು ಮನೆಯನ್ನು ತೊರೆದು ಅನಗಾರಿಕನಾಗಿ ‘ಸಮಣನಾಗುತ್ತೇನೆ’ ಎಂದು ನಿಶ್ಚಯಿಸಿಕೊಂಡು ಪಬ್ಬಜಿತನಾದನು. ಯಾವನೋ ಒಬ್ಬ ಬ್ರಾಹ್ಮಣನು... ಯಾವನೋ ಒಬ್ಬ ವೈಶ್ಯನು... ಒಬ್ಬ ಶೂದ್ರನು ತನ್ನ ವೃತ್ತಿಯು ನಿಂದನೀಯವಾದದ್ದು ಎಂಬುದನ್ನು ತಿಳಿದು ಮನೆಯನ್ನು ತೊರೆದು ಅನಗಾರಿಕನಾಗಿ ಸಮಣನಾಗುತ್ತೇನೆ ಎಂದು ನಿಶ್ಚಯಿಸಿಕೊಂಡು ಪಬ್ಬಜಿತನಾದನು. ಹೀಗೆ ವಾಸೆಟ್ಠ, ಜೀವಿಗಳ ನಾಲ್ಕು ಮಂಡಲಗಳಿಂದ ಸಮಣ ಮಂಡಲವು ಹುಟ್ಟಿಕೊಂಡಿತು, ಇನ್ನಾವುದರಿಂದಲೂ ಅಲ್ಲ, ನಿಯಮವನ್ನು ಮೀರಿ ಆದದ್ದಲ್ಲ. ಜನಗಳಿಗೆ ಧರ್ಮವೇ ಶ್ರೇಷ್ಠವಾದದ್ದು. ಈ ಲೋಕ ಮತ್ತು ಮುಂದಿನ ಲೋಕಗಳಿಗೂ ಧರ್ಮವೇ ಶ್ರೇಷ್ಠವಾದದ್ದು.
ದುಶ್ಚರಿತಾದಿ ವಿಚಾರಗಳು
“ವಾಸೆಟ್ಠ, ಕಾಯಾ ವಾಚಾ ಮನಸಾ ದುರಾಚಾರದಲ್ಲಿ ನಿರತನಾದ ಕ್ಷತ್ರಿಯನು ಮಿಥ್ಯಾದೃಷ್ಟಿಯನ್ನು ಹೊಂದಿದ್ದು ಮಿಥ್ಯಾ ದೃಷ್ಟಿಯ ಫಲವಾಗಿ ಮಿಥ್ಯಾ ಕರ್ಮಗಳಲ್ಲಿ ನಿರತನಾಗಿ ಆ ಕಾರಣದಿಂದ ಕಾಯದಿಂದ ಬೇರೆಯಾಗಿ ಮರಣ ಹೊಂದಿದ ಮೇಲೆ ಅಪಾಯ ದುರ್ಗತಿ ವಿನಿಪಾತ ನಿರಯಗಳಲ್ಲಿ ಹುಟ್ಟುತ್ತಾನೆ. ಕಾಯಾ ವಾಚಾ ಮನಸಾ... ಬ್ರಾಹ್ಮಣನು ವೈಶ್ಯನು... ಕಾಯಾ ವಾಚಾ ಮನಸಾ... ಶೂದ್ರನು... ಸಮಣನಾದವನು ಕಾಯಾ ವಾಚಾ ಮನಸಾ ದುರಾಚಾರದಲ್ಲಿ ನಿರತನಾಗಿ ಮಿಥ್ಯಾದೃಷ್ಟಿಯನ್ನು ಹೊಂದಿದ್ದು ಅದರ ಫಲವಾಗಿ ಮಿಥ್ಯಾ ಕರ್ಮಗಳಲ್ಲಿ ತೊಡಗಿ ಆ ಕಾರಣದಿಂದ ಕಾಯದಿಂದ ಬೇರೆಯಾಗಿ ಮರಣ ಹೊಂದಿದ ಮೇಲೆ ಅಪಾಯ ದುರ್ಗತಿ ವಿನಿಪಾತ ನಿರಯದಲ್ಲಿ ಹುಟ್ಟುತ್ತಾನೆ.
“ವಾಸೆಟ್ಠ, ಕಾಯಾ ವಾಚಾ ಮನಸಾ ಸದಾಚಾರದಲ್ಲಿ ನಿರತನಾದ ಕ್ಷತ್ರಿಯನು ಸಮ್ಯಕ್ ದೃಷ್ಟಿಯನ್ನು ಹೊಂದಿದ್ದು, ಸಮ್ಯಕ್ ದೃಷ್ಟಿಯ ಫಲವಾಗಿ ಸತ್ಕಾರ್ಯಗಳನ್ನು ಮಾಡಿ ಆ ಕಾರಣದಿಂದ ಕಾಯದಿಂದ ಬೇರೆಯಾಗಿ ಮರಣ ಹೊಂದಿದ ಮೇಲೆ ಸುಗತಿ ಸ್ವರ್ಗ ಲೋಕಗಳಲ್ಲಿ ಹುಟ್ಟುತ್ತಾನೆ. ಕಾಯಾ ವಾಚಾ ಮನಸಾ ಬ್ರಾಹ್ಮಣನು ಕಾಯಾ ವಾಚಾ ಮನಸಾ... ವೈಶ್ಯನು... ಕಾಯಾ ವಾಚಾ ಮನಸಾ... ಶೂದ್ರನು... ಹಾಗೆಯೇ ಸಮಣನಾದವನು ಕಾಯಾ ವಾಚಾ ಮನಸಾ ಸಾದಾಚಾರವನ್ನು ಮಾಡುತ್ತಾ ಸಮ್ಯಕ್ ದೃಷ್ಟಿಯನ್ನು ಹೊಂದಿದ್ದು ಸಮ್ಯಕ್ ದೃಷ್ಟಿಯ ಫಲವಾಗಿ ಸತ್ಕಾರ್ಯಗಳಲ್ಲಿ ಮಾಡುತ್ತಿದ್ದರೆ ಆ ಕಾರಣದಿಂದ ಕಾಯದಿಂದ ಬೇರೆಯಾಗಿ ಮರಣ ಹೊಂದಿದ ಮೇಲೆ ಸುಗತಿ ಸ್ವರ್ಗ ಲೋಕಗಳಲ್ಲಿ ಹುಟ್ಟುತ್ತಾನೆ.
“ವಾಸೆಟ್ಠ ಕಾಯಾ ವಾಚಾ ಮನಸಾ ದುರಾಚಾರ ಸದಾಚಾರಗಳೆರಡರಲ್ಲೂ ನಿರತನಾದ ಕ್ಷತ್ರಿಯನು ಮಿಶ್ರ ದೃಷ್ಟಿಯನ್ನು ಹೊಂದಿದ್ದು, ಮಿಶ್ರ ದೃಷ್ಟಿಯ ಫಲವಾಗಿ ದುಷ್ಕರ್ಮ ಸತ್ಕರ್ಮಗಳೆರಡನ್ನೂ ಮಾಡುತ್ತಾ ಆ ಕಾರಣದಿಂದ ಕಾಯದಿಂದ ಬೇರೆಯಾಗಿ ಮರಣ ಹೊಂದಿದ ಮೇಲೆ ಸುಖ ದುಃಖಗಳೆರಡನ್ನೂ ಅನುಭವಿಸುತ್ತಾನೆ. ಕಾಯಾ ವಾಚಾ ಮನಸಾ... ಬ್ರಾಹ್ಮಣನು... ಕಾಯಾ ವಾಚಾ ಮನಸಾ... ವೈಶ್ಯನು... ಶೂದ್ರನು... ಕಾಯಾ ವಾಚಾ ಮನಸಾ ದುರಾಚಾರ ಸದಾಚಾರಗಳೆರಡರಲ್ಲೂ ಸಮಣನು ಮಿಶ್ರ ದೃಷ್ಟಿಯನ್ನು ಹೊಂದಿದ್ದರೆ ಮಿಶ್ರ ದೃಷ್ಟಿಯ ಫಲವಾಗಿ ದುಷ್ಕರ್ಮ ಸತ್ಕರ್ಮಗಳೆರಡನ್ನು ಮಾಡುತ್ತಾ ಆ ಕಾರಣದಿಂದ ಕಾಯದಿಂದ ಬೇರೆಯಾಗಿ ಮರಣ ಹೊಂದಿದ ಮೇಲೆ ಸುಖ ದುಃಖಗಳೆರಡನ್ನೂ ಅನುಭವಿಸುತ್ತಾನೆ.
ಬೋಧಿಪಕ್ಖಿಯ ಬೆಳವಣಿಗೆ (ಬೋಧಿಯೆಡೆಗೆ ಕೊಂಡೊಯ್ಯುವ ಗುಣಗಳು)
“ಕಾಯದ ಮೇಲೆ ಸಂಯಮವನ್ನಿಟ್ಟುಕೊಂಡಿರುವ ಮಾತಿನಲ್ಲಿ ಸಂಯಮದಿಂದಿರುವ ಮನಸ್ಸಿನಲ್ಲಿ ಸಂಯಮವನ್ನು ಸಾಧಿಸಿರುವ ಕ್ಷತ್ರಿಯನು ಸಪ್ತಬೋಧಿ ಪಕ್ಖಿಯಗಳನ್ನು ಪಾಲಿಸಿದರೆ ಪರಿನಿಬ್ಬಾನವನ್ನು ಸಾಧಿಸಬಲ್ಲ ಧಮ್ಮವನ್ನು ಅರಿಯುತ್ತಾನೆ. ಕಾಯದ ಮೇಲೆ... ಬ್ರಾಹ್ಮಣನು... ಕಾಯದ ಮೇಲೆ... ವೈಶನು... ಕಾಯದ ಮೇಲೆ... ಬ್ರಾಹ್ಮಣನು... ಕಾಯದ ಮೇಲೆ... ವೈಶ್ಯನು... ಕಾಯದ ಮೇಲೆ... ಶೂದ್ರನು... ಕಾಯದ ಮೇಲೆ ಸಂಯಮವನ್ನಿಟ್ಟುಕೊಂಡಿರುವ ಮಾತಿನಲ್ಲಿ ಸಂಯಮದಿಂದಿರುವ ಮನಸ್ಸಿನಲ್ಲಿ ಸಂಯಮವನ್ನು ಸಾಧಿಸಿರುವ ಸಮಣನು ಸಪ್ತಬೋಧಿ ಪಕ್ಖಿಯಗಳನ್ನು ಪಾಲಿಸಿದರೆ ಪರಿನಿಬ್ಬಾನವನ್ನು ಸಾಧಿಸಬಲ್ಲ ಧಮ್ಮವನ್ನು ಅರಿಯುತ್ತಾನೆ.
“ವಾಸೆಟ್ಠ, ಚತುವರ್ಣದಲ್ಲಿ ಯಾವ ವರ್ಣದವನೇ ಆಗಿರಲಿ, ಭಿಕ್ಷುವಾಗಿ ಅರಹಂತನಾಗಿ ಖೀಣಾಸವನಾಗಿ ಮಾಡಬೇಕಾದದ್ದೆಲ್ಲವನ್ನೂ ಮಾಡಿದವನಾಗಿ (ಸಂಸಾರ) ಭಾರವನ್ನು ಇಳಿಸಿಕೊಂಡವನಗಿ ತನ್ನ ಬಿಡುಗಡೆಯನ್ನು ತಾನೇ ಸಾಧಿಸಿದವನಾಗಿ ಭವಸಂಕೋಲೆಯನ್ನು ಕತ್ತರಿಸಿದವನಾಗಿ ತಾನು ಪಡೆದಿರುವ ಜ್ಞಾನದ ಫಲವಾಗಿ ವಿಮುಕ್ತಿಯನ್ನು ಪಡೆದವನು ಅಗ್ರನೆನ್ನಿಸಿಕೊಳ್ಳುತ್ತಾನೆ. ಇದು ಧಮ್ಮಕ್ಕೆ ಅನುಗುಣವಾದದ್ದು. ಧಮ್ಮವಲ್ಲದ್ದಕ್ಕೆ ಸೇರಿಲ್ಲ. ಜನಗಳಿಗೆ ಧಮ್ಮವೇ ಶ್ರೇಷ್ಠವಾದದ್ದು.
“ವಾಸೆಟ್ಠ, ಬ್ರಹ್ಮ ಸನಂಕುಮಾರನು ಈ ಗಾಥೆಯನ್ನು ಹೇಳಿದ್ದಾನೆ:
“ಜನಗಳಲ್ಲುತ್ತಮನು ಕ್ಷತ್ರಿಯನು, ಗೋತ್ರಗಳಿಂದವನು
ಶ್ರೇಷ್ಠ, ವಿಜ್ಜಾಚರಣ ಸಂಪನ್ನನಾದವನು ದೇವ ಮಾನವರೂಳೆಗೆಲ್ಲ ಶ್ರೇಷ್ಠನು.”
“ವಾಸೆಟ್ಠ, ಬ್ರಹ್ಮ ಸನಂಕುಮಾರನು ಒಳ್ಳೆಯದನ್ನೇ ಮಾಡುತ್ತಾನೆ, ಕೆಟ್ಟದನ್ನೆಂದೂ ಮಾಡುವುದಿಲ್ಲ. ಇದೊಂದು ಸುಭಾಷಿತ, ಕೆಟ್ಟ ಮಾತಲ್ಲ. ಅರ್ಥಪೂರ್ಣವಾದದ್ದು, ಅರ್ಥರಹಿತವಾದದ್ದಲ್ಲ. ಇದಕ್ಕೆ ನನ್ನ ಅನುಮತಿ ಇದೆ. ನಾನೂ ಹೀಗೆಯೇ ಹೇಳುತ್ತೇನೆ.
“ಜನಗಳಲ್ಲುತ್ತಮನು ಕ್ಷತ್ರಿಯನು, ಗೋತ್ರಗಳಿಂದವನು ಶ್ರೇಷ್ಠ, ವಿಜ್ಜಾಚರಣ ಸಂಪನ್ನನಾದವನು ದೇವಮಾನವರೊಳಗೆಲ್ಲಾ ಶ್ರೇಷ್ಠನು.”
ಭಗವಾನರು ಹೀಗೆ ಹೇಳಿದರು. ಭಗವಾನರ ಮಾತಿನಿಂದ ವಾಸೆಟ್ಠ ಭಾರದ್ವಾಜರು ಸಂತೋಷಪಟ್ಟರು. ಆನಂದಿತರಾದರು.
ಇಲ್ಲಿಗೆ ಅಗ್ಗಞ್ಞ ಸುತ್ತ ಮುಗಿಯಿತು.
ಅಗ್ಗಞ್ಞ ಸುತ್ತ