ಊಟಿಸುತ್ತಿದೆ

ಅನುವಾದಗಳು [21]

ಸಂಪಸಾದನೀಯ ಸುತ್ತ

ಸಾರಿಪುತ್ತನ ಸಿಂಹನಾದ

ಹೀಗೇ ಕೇಳಿದ್ದೇನೆ; ಒಮ್ಮೆ ಭಗವಾನರು ನಾಲಂದದ ಪಾವರಿಕನ ಆಮ್ರವನದಲ್ಲಿ ತಂಗಿದ್ದರು. ಆಗ ಆಯುಷ್ಮಂತನಾದ ಸಾರಿಪುತ್ತನು ಭಗವಾನರಲ್ಲಿಗೆ ಬಂದನು. ಭಗವಾನರಿಗೆ ನಮಸ್ಕರಿಸಿ ಒಂದುಕಡೆ ಕುಳಿತುಕೊಂಡನು. ಆಮೇಲೆ ಭಗವಾನರನ್ನು ಕುರಿತು ಆ ಸಾರಿಪುತ್ತನು ಇಂತೆಂದನು- “ಉತ್ಕೃಷ್ಟವಾದ ಜ್ಞಾನವನ್ನೂ ಶ್ರೇಷ್ಠವಾದ ಸಂಬೋಧಿಯನ್ನೂ ಪಡೆದಂಥ ಭಗವಾನರಿಗಿಂತ ಉತ್ತಮನಾದ ಸಮಣನಾಗಲೀ ಬ್ರಾಹ್ಮಣನಾಗಲೀ ಹಿಂದೆ ಇದ್ದಿರಲಿಲ್ಲ, ಮುಂದೆ ಇರುವುದಿಲ್ಲ, ಇಂದೂ ಇಲ್ಲ. ಭಗವಾನರಲ್ಲಿ ನಾನು ಇಷ್ಟು ವಿಶ್ವಾಸವನ್ನು ಹೊಂದಿದ್ದೇನೆ.”

“ಸಾರಿಪುತ್ತ, ಎಷ್ಟು ದೊಡ್ಡ ಮಾತನ್ನಾಡಿದೆ, ಎಷ್ಟು ಧೈರ್ಯವಾಗಿ ಹೇಳಿಬಿಟ್ಟೆ: ‘ನನಗೆ ಭಗವಾನರಲ್ಲಿ ತುಂಬ ವಿಶ್ವಾಸವಿದೆ. ಉತ್ಕಷ್ಟವಾದ ಜ್ಞಾನವನ್ನೂ, ಶ್ರೇಷ್ಠವಾದ ಸಂಬೋಧಿಯನ್ನೂ ಪಡೆದಂಥ ಭಗವಾನರಿಗಿಂತ ಉತ್ತಮನಾದ ಸಮಣನಾಗಲೀ, ಬ್ರಾಹ್ಮಣನಾಗಲೀ ಹಿಂದೆ ಇದ್ದಿರಲಿಲ್ಲ, ಮುಂದೆ ಇರುವುದಿಲ್ಲ, ಇಂದೂ ಇಲ್ಲ’ ಎಂಬ ಸಿಂಹನಾದವನ್ನು ಮಾಡಿಬಿಟ್ಟೆ; ಸಾರಿಪುತ್ರ, ಹಿಂದೆ ಆಗಿಹೋದ ಅರಹಂತ ಸಮ್ಮಾಸಂಬುದ್ಧರೆಲ್ಲರೂ ನಿನಗೆ ಗೊತ್ತಿರಬೇಕಷ್ಟೆ. ಆ ಭಗವಾನರ ಶೀಲವು ಹೀಗಿತ್ತು. ಅವರು ವಿವರಿಸಿದ ಧರ್ಮವು ಹೀಗಿತ್ತು. ಅವರ ಪಞ್ಞ ಈ ಬಗೆಯದಾಗಿತ್ತು. ಅವರು ಹೀಗೆ ಜೀವಿಸಿದರು. ಅವರು ಹೀಗೆ ವಿಮುಕ್ತಿಯನ್ನು ಪಡೆದರು ಎಂಬುದು ನಿನಗೆ ತಿಳಿದಿರಬೇಕಲ್ಲವೇ?

“ಇಲ್ಲ ಭಂತೆ.”

“ಸಾರಿಪುತ್ತ, ಮುಂದೆ ಬರುವ ಅರಹಂತ ಸಮ್ಮಾಸಂಬುದ್ಧರೆಲ್ಲರೂ ನಿನಗೆ ಗೊತ್ತಿರಬೇಕಷ್ಟೆ. ‘ಮುಂದೆ ಬರುವ ಆ ಭಗವಾನರ ಶೀಲವು ಹೀಗಿರುತ್ತದೆ. ಅವರ ಧರ್ಮವು ಹೀಗಿರುತ್ತದೆ... ಅವರ ಧಮ್ಮ ಇದು ಅವರ ಪಞ್ಞ... ಅವರು ಹೀಗೆ ನಡೆದುಕೊಳ್ಳುತ್ತಾರೆ. ಅವರು ಹೀಗೆ ವಿಮುಕ್ತಿಯನ್ನು ಪಡೆಯುತ್ತಾರೆ’ ಎಂಬುದು ಗೊತ್ತಿರಬೇಕಲ್ಲವೇ?

“ಇಲ್ಲ ಭಂತೆ.”

“ಹಾಗಾದರೆ ಸಾರಿಪುತ್ತ, ಹಿಂದೆ ಆಗಿಹೋದ ಮುಂದೆ ಆಗುವ ಮತ್ತು ಇಂದಿನ ಅರಹಂತರನ್ನೂ ಸಮ್ಮಾಸಂಬುದ್ಧರನ್ನೂ ತಿಳಿಯಬಲ್ಲ ಚೇತೋಪರಿಯ ಞಾಣವು ನಿನಗಿಲ್ಲ. ಹೀಗಿದ್ದರೂ ನೀನು ಎಂಥ ಧೈರ್ಯದ ಮಾತುಗಳನ್ನಡಿದೆ. ಎಷ್ಟು ದೊಡ್ಡ ಮಾತುಗಳನ್ನಡಿಬಿಟ್ಟೆ. ಎಂಥ ಸಿಂಹನಾದವನ್ನು ಮಾಡಿಬಿಟ್ಟೆ?”

“ಭಂತೆ, ಹಿಂದೆ ಆಗಿಹೋದ ಮುಂದೆ ಆಗುವ ಮತ್ತು ಈಗ ಇರುವ ಅರಹಂತರ ಬಗೆಗೆ ಚೇತೋಪರಿಯಾಯ ಞಾಣವು ನನಗಿಲ್ಲ. ನನಗೆ ಧಮ್ಮವನ್ನು ತಿಳಿದವರ ಬಗೆಗೆ ತಿಳಿವಳಿಕೆ ಇದೆ. ರಾಜನಾದವನು ನಗರದ ಸುತ್ತ ಇರುವ ಪ್ರಾಕಾರಕ್ಕೆ ಒಂದೇ ದ್ವಾರವನ್ನಿಟ್ಟು ತಿಳಿದವನೂ ವಿವೇಕಿಯೂ ಮೇಧಾವಿಯೂ ಆದ ದ್ವಾರಪಾಲಕನನ್ನಿಟ್ಟುರುತ್ತಾನಷ್ಟೆ. ಅವನು ತಿಳಿದವರನ್ನು ಮಾತ್ರ ಆ ದ್ವಾರದ ಮೂಲಕ ಒಳಗಡೆಗೆ ಬಿಡುತ್ತಾನೆ. ಅವನು ನಗರದ ಪ್ರಾಕಾರದ ಸುತ್ತ ಸಂಚರಿಸಿ ಅದರ ವಿವರಗಳನ್ನೆಲ್ಲಾ ತಿಳಿದು ಒಂದು ಬೆಕ್ಕು ನುಗ್ಗಬಲ್ಲ ಸಂದಿಯನ್ನೂ ಬಲ್ಲವನಾಗಿರುತ್ತಾನೆ. ಅದಕ್ಕಿಂತ ಚಿಕ್ಕದಾಗಿರುವ ಸಂದಿಯನ್ನು ಅವನು ನೋಡಬೇಕಾದುದಿಲ್ಲ. ಅವನು ಹೀಗೆಂದುಕೊಳ್ಳುತ್ತಾನಷ್ಟೆ- ‘ನಗರಕ್ಕೆ ಕಣ್ಣಿಗೆ ಕಾಣಬಲ್ಲ ಯಾವ ಪ್ರಾಣಿಯೇ ಬರಲಿ, ಅದು ಈ ಬಾಗಿಲಿನ ಮೂಲಕ ಮಾತ್ರ ಪ್ರವೇಶಿಸಬಲ್ಲದು ಅಥವಾ ನಿಷ್ಕ್ರಮಿಸಬಲ್ಲದು; ಆ ದ್ವಾರಪಾಲಕನಿಗೆ ಪ್ರಾಕಾರದ ಬಗೆಗೆ ಸ್ಪಷ್ಟವಾದ ತಿಳಿವಳಿಕೆ ಇರುವಂತೆ ಅರಿತವರ ಬಗೆಗೆ ನನ್ನ ತಿಳಿವಳಿಕೆ ಇದೆ. ಹಿಂದೆ ಆಗಿಹೋದ ಅರಹಂತರನ್ನೂ ಮತ್ತು ಸಮ್ಮಾ ಸಂಬುದ್ಧರನ್ನೂ ನಾನು ಅರಿತುಕೊಂಡಿದ್ದೇನೆ. ಅವರು ಪಂಚ ನೀವರಣಗಳನ್ನು ಕಳೆದುಕೊಂಡು ಪಞ್ಞದಿಂದ ಚಿತ್ತದಲ್ಲಿನ ಉಪಕ್ಲೇಶಗಳನ್ನು ನಿರ್ಬಲಗೊಳಿಸಿ ನಾಲ್ಕು ಸತಿಪಟ್ಠಾನಗಳಲ್ಲಿ ಚಿತ್ತವನ್ನು ನಿಲ್ಲಿಸಿ ಏಳು ಸಂಬೋಜ್ಝಂಗಗಳನ್ನು ಬೆಳೆಸಿಕೊಂಡು ಅನುತ್ತರವಾದ ಸಮ್ಮಾಸಂಬೋಧಿಯನ್ನು ಸಾಧಿಸಿರುತ್ತಾರೆ. ಈಗ ಅರಹಂತರೂ ಸಮ್ಮಾಸಂಬುದ್ಧರೂ ಆಗಿರುವ ಭಗವಾನರು ಪಂಚನೀವರಣಗಳನ್ನು ಕಳೆದುಕೊಂಡು ಪಞ್ಞಾದಿಂದ ಚಿತ್ತದ ಉಪಕ್ಲೇಶಗಳನ್ನು ದುರ್ಬಲಗೊಳಿಸಿ ನಾಲ್ಕು ಸತಿಪಟ್ಠಾನಗಳಲ್ಲಿ ಚಿತ್ತವನ್ನು ನಿಲ್ಲಿಸಿ ಏಳು ಬೋಜ್ಝಂಗಗಳನ್ನು ಬಳಸಿಕೊಂಡು ಅನುತ್ತರವಾದ ಸಮ್ಮಾಸಂಬೋಧಿಯನ್ನು ಸಾಧಿಸಿದ್ದಾರೆ.”

“ಭಂತೆ, ನಾನು ಒಮ್ಮೆ ಧಮ್ಮ ಶ್ರವಣಕ್ಕೋಸ್ಕರ ಭಗವಾನರಲ್ಲಿಗೆ ಬಂದೆ. ಭಗವಾನರು ಅನುತ್ತರವಾದ ಅತ್ಯಂತ ಶ್ರೇಷ್ಠವಾದ ಧಮ್ಮವನ್ನು ಬೋಧಿಸಿದರು. ಕೆಟ್ಟದು ಮತ್ತು ಒಳ್ಳೆಯ ಕೆಟ್ಟದಾವುದಿದೆ ಎಂಬುದನ್ನು ವಿವರಿಸಿದರು. ಭಗವಾನರು ಹೀಗೆ ಅನುತ್ತರವಾದ ಅತ್ಯಂತ ಶ್ರೇಷ್ಠವಾದ ಧಮ್ಮವನ್ನು ನನಗೆ ಬೋಧಿಸುತ್ತಿದ್ದಂತೆ ಕೆಟ್ಟದ್ದಾವುದು, ಒಳ್ಳೆಯದಾವುದು ಎಂಬುದನ್ನು ವಿವರಿಸುತ್ತಿದ್ದಂತೆ ಧಮ್ಮವನ್ನು ಅರಿಯಲು ಸಾಧ್ಯವಾಯಿತು. ‘ಸಮ್ಮಾಸಂಬುದ್ಧರಾದ ಭಗವಾನರು ಅವರ ಧಮ್ಮವನ್ನು ಚೆನ್ನಾಗಿ ವಿವರಿಸಿದ್ದಾರೆ. ಭಗವಾನರ ಶಿಷ್ಯರ ಸಂಘವು ಒಳ್ಳೆಯ ದಾರಿಯಲ್ಲಿ ಹೋಗುತ್ತದೆ’ ಎಂಬುದನ್ನು ಅರಿತೆ. ಧಮ್ಮದಲ್ಲಿ ವಿಶ್ವಾಸ ಬೆಳೆಯಿತು.

ಕುಶಲ ಧಮ್ಮೋಪದೇಶ

“ಭಂತೆ, ಭಗವಾನರು ಕುಶಲವಾದ ಧಮ್ಮವನ್ನು ಬೋಧಿಸುತ್ತಾರೆ. ಬೋಧಿಸುವ ರೀತಿಯಲ್ಲಿ ಅವರನ್ನು ಮೀರಿಸುವವರು ಯಾರೂ ಇಲ್ಲ. ಅವರು ಬೋಧಿಸುವ ಕುಶಲವಾದ ಧಮ್ಮವು ಈ ಅಂಶಗಳನ್ನೊಳಗೊಂಡಿದೆ- ನಾಲ್ಕು ಸತಿಪಟ್ಠಾನಗಳು, ನಾಲ್ಕು ಸಮ್ಮಪ್ಪಧ್ಯಾನಗಳು, ನಾಲ್ಕು ಇದ್ಧಿಪಾದಗಳು, ಪಂಚೇಂದ್ರಿಯಗಳು, ಪಂಚಬಲಗಳು, ಏಳು ಬೋಜ್ಝಂಗಗಳು ಮತ್ತು ಅರಿಯ ಅಟ್ಠಂಗಮಗ್ಗ. ಭಿಕ್ಷುವಾದವನು ಇಲ್ಲಿಯೇ ಆಸವಗಳನ್ನು ಕಳೆದುಕೊಂಡು ಚೇತೋವಿಮುಕ್ತಿ ಪಞ್ಞವಿಮುಕ್ತಿಗಳನ್ನು ತಾನೇ ಸಾಧಿಸಿ ಉತ್ಕೃಷ್ಟವಾದ ಜ್ಞಾನವನ್ನು ಪಡೆದು ಧಮ್ಮ ಸಾಕ್ಷಾತ್ಕಾರ ಮಾಡಿಕೊಂಡು ಇರಬಲ್ಲ ರೀತಿಯನ್ನು ಭಗವಾನರು ಬೋಧಿಸುತ್ತಾರೆ. ಹೀಗೆ ಬೋಧಿಸುವ ರೀತಿಯಲ್ಲಿ ಅವರನ್ನು ಮೀರಿಸುವವರಾರೂ ಇಲ್ಲ. ಭಗವಾನರು ಎಲ್ಲವನ್ನೂ ತಿಳಿದವರಾಗಿದ್ದಾರೆ. ಅವರು ತಿಳಿಯಬೇಕಾದದು ಯಾವುದೂ ಉಳಿದಿಲ್ಲ. ಅವರಿಗಿಂತ ಹೆಚ್ಚಾಗಿ ಅರಿತಿರುವ ಬೇರೆ ಸಮಣನಾಗಲಿ, ಬ್ರಾಹ್ಮಣನಾಗಲೀ ಇಲ್ಲ. ಧಮ್ಮವು ಈ ರೀತಿಯಲ್ಲಿ ಕುಶಲವನ್ನುಂಟುಮಾಡುತ್ತದೆ.

ಆಯತನಗಳಿಗೆ ಸಂಬಂಧಿಸಿದಂತೆ ಧಮ್ಮೋಪದೇಶ

“ಭಂತೆ, ಆಯತನಗಳಿಗೆ ಸಂಬಂಧಿಸಿದ ಧಮ್ಮವನ್ನು ಭಗವಾನರು ಬೋಧಿಸುತ್ತಾರೆ. ಬೋಧಿಸುವ ರೀತಿಯಲ್ಲಿ ಅವರನ್ನು ಮೀರಿಸುವವರು ಯಾರೂ ಇಲ್ಲ. ಆರು ಆಂತರಿಕ ಮತ್ತು ಬಾಹ್ಯ ಆಯತನಗಳೆಲ್ಲವನ್ನೂ ಒಳಗೊಂಡ ಧಮ್ಮವನ್ನು ಅವರು ಬೋಧಿಸುತ್ತಾರೆ. ಆ ಆಯತನಗಳು ಯಾವುವೆಂದರೆ- ಚಕ್ಷು ಮತ್ತು ಅದು ತಿಳಿಯಬಲ್ಲ ರೂಪ, ಕೇಳಬಲ್ಲ ಶಕ್ತಿ ಮತ್ತು ಶಬ್ದ, ವಾಸನೆ ಮತ್ತು ಅದಕ್ಕೆ ಸಂಬಂಧಿಸಿದ ಗಂಧ, ನಾಲಿಗೆ ಮತ್ತು ಅದಕ್ಕೆ ಸಂಬಂಧಿಸಿದ ರಸ, ಕಾಯ ಮತ್ತು ಅದಕ್ಕೆ ಸಂಬಂಧಿಸಿದ ಸ್ಪರ್ಶ, ಮನಸ್ಸು ಮತ್ತು ಅದಕ್ಕೆ ಸಂಬಂಧಿಸಿದ ಧಮ್ಮ. ಭಗವಾನರು ಆಯತನಗಳಿಗೆ ಸಂಬಂಧಿಸಿದುದನ್ನು ಬೋಧಿಸುವ ರೀತಿಯು ಅನುತ್ತರವಾದುದು. ಭಗವಾನರು ಆಸವಗಳಿಗೆ ಸಂಬಂಧಿಸಿದ ಎಲ್ಲವನ್ನು ಅರಿತಿದ್ದಾರೆ. ಅವರು ಅರಿಯಬೇಕಾದದು ಯಾವುದೂ ಉಳಿದಿಲ್ಲ. ಅವರಿಗಿಂತ ಆಯತನಗಳಿಗೆ ಸಂಬಂಧಿಸಿದ ಅರಿವನ್ನು ಪಡೆದಿರುವ ಬೇರೆ ಸಮಣನಾಗಲೀ ಬ್ರಾಹ್ಮಣನಾಗಲೀ ಇಲ್ಲ.

ಗರ್ಭ ಪ್ರವೇಶಕ್ಕೆ ಸಂಬಂಧಿಸಿದಂತೆ ಧಮ್ಮೋಪದೇಶ

“ಮುಂದಿನ ಜನ್ಮಗಳಿಗೆ ಸಂಬಂಧಿಸಿದುದನ್ನು ಭಗವಾನರು ಬೋಧಿಸುತ್ತಾರೆ. ಇದನ್ನು ಬೋಧಿಸುವ ರೀತಿಯಲ್ಲಿ ಭಗವಾನರನ್ನು ಮೀರಿಸುವವರು ಯಾರೂ ಇಲ್ಲ. ಮುಂದಿನ ಜನ್ಮಗಳಿಗೆ ಸಂಬಂಧಿಸಿದ ನಾಲ್ಕುಬಗೆಯ ಜ್ಞಾನವಿದೆ- ಮಾತೃ ಗರ್ಭವನ್ನು ಹೇಗೆ ಪ್ರವೇಶಿಸುತ್ತಾರೆ ಎಂಬ ಜ್ಞಾನವಾಗಲೀ, ಅಲ್ಲಿ ಬೆಳೆದ ರೀತಿಯಾಗಲೀ, ಅಲ್ಲಿಂದ ಹೊರಬಂದ ರೀತಿಯಾಗಲೀ ಕೆಲವರಿಗಿರುವುದಿಲ್ಲ. ಇದು ಮೊದಲನೆಯ ಬಗೆಯ ಜ್ಞಾನ.

“ಕೆಲವರಿಗೆ ಮಾತೃ ಗರ್ಭವನ್ನು ಪ್ರವೇಶಿಸಿದ ರೀತಿಯೂ ಅಲ್ಲಿ ಬೆಳೆದ ರೀತಿಯೂ ಗೊತ್ತಿರುತ್ತದೆ. ಆದರೆ ಅದರಿಂದ ಹೊರಗೆ ಬಂದುದು ಗೊತ್ತಿರುವುದಿಲ್ಲ. ಇದು ಮೂರನೆಯ ಬಗೆಯ ಜ್ಞಾನ.

“ಕೆಲವರಿಗೆ ಮಾತೃ ಗರ್ಭವನ್ನು ಪ್ರವೇಶಿಸಿದುದೂ, ಅಲ್ಲಿ ಬೆಳೆದುದೂ, ಅಲ್ಲಿಂದ ಹೊರಗೆ ಬಂದುದೂ ಗೊತ್ತಿರುತ್ತದೆ. ಇದು ನಾಲ್ಕನೆಯ ಬಗೆಯ ಜ್ಞಾನ. ಮುಂದಿನ ಜನ್ಮಕ್ಕೆ ಸಂಬಂಧಿಸಿದ ಈ ಜ್ಞಾನವು ಅನುತ್ತರವಾದುದು.

ಅರಿವಿನ ವಿಧಾನಗಳ ಬೋಧನೆ

“ಚಿತ್ತಕ್ಕೆ ಸಂಬಂಧಿಸಿದ ಅರಿವಿನ ವಿಧಾನಗಳನ್ನು ಭಗವಾನರು ಬೋಧಿಸುತ್ತಾರೆ. ಬೋಧಿಸುವ ರೀತಿಯಲ್ಲಿ ಅವರನ್ನು ಮೀರಿಸುವವರು ಯಾರೂ ಇಲ್ಲ. ಚಿತ್ತಕ್ಕೆ ಸಂಬಂಧಿಸಿದ ಅರಿವು ನಾಲ್ಕು ಬಗೆಯದಾಗಿದೆ. ‘ನಿಮ್ಮ ಮನಸ್ಸು ಹೀಗಿದೆ. ನಿಮ್ಮ ಮನಸ್ಸಿನಲ್ಲಿ ಇರುವುದು ಹೀಗೆ. ನಿಮ್ಮ ಚಿತ್ತದ ಸ್ವಭಾವ ಇದು’ ಎಂದು ಕೆಲವರು ನಿಮಿತ್ತಗಳ ಸಹಾಯದಿಂದ ಇತರರ ಮನಸ್ಸಿನಲ್ಲಿರುವುದನ್ನು ಹೇಳುತ್ತಾರೆ. ಅವರು ಹೇಳುವುದೆಲ್ಲವೂ ಇಷ್ಟೇ ಆಗಿರುತ್ತದೆ. ಇದು ಮೊದಲನೆಯ ವಿಧ.

“ಮತ್ತೆ ಕೆಲವರು ಕೇವಲ ನಿಮಿತ್ತಗಳನ್ನು ನೋಡಿ ಮನಸ್ಸಿನಲ್ಲಿರುವುದನ್ನು ಹೇಳುವುದಿಲ್ಲ. ಮನುಷ್ಯರು, ಮನುಷ್ಯೇತರರು, ದೇವತೆಗಳು ಹೇಳುವುದನ್ನು ಕೇಳಿ ಇತರರ ಮನಸ್ಸಿನಲ್ಲಿರುವುದನ್ನು ಹೇಳುತ್ತಾರೆ. ‘ನಿಮ್ಮ ಮನಸ್ಸು ಹೀಗಿದೆ, ನಿಮ್ಮ ಮನಸ್ಸಿನಲ್ಲಿರುವುದು ಇದು, ನಿಮ್ಮ ಚಿತ್ತದ ಸ್ವಭಾವ ಇದು’ ಎಂದು ಹೇಳುತ್ತಾರೆ. ಅವರು ಹೇಳುವುದೆಲ್ಲವೂ ಇಷ್ಟೇ ಆಗಿರುತ್ತದೆ. ಇದು ಎರಡನೆಯ ವಿಧ.

“ಮತ್ತೆ ಕೆಲವರು ಕೇವಲ ನಿಮಿತ್ತವನ್ನು ನೋಡಿಯಾಗಲೀ ಅಥವಾ ಮನುಷ್ಯರು, ಮನುಷ್ಯೇತರರು, ದೇವತೆಗಳು ಹೇಳುವುದನ್ನು ಕೇಳಿಯಾಗಲೀ ಇತರರ ಮನಸ್ಸಿನಲ್ಲಿರುವುದನ್ನು ಹೇಳುವುದಿಲ್ಲ. ತರ್ಕಬದ್ಧವಾಗಿ ತೋರುವ ಶಬ್ದವನ್ನು ಕೇಳಿ ತಮ್ಮ ತರ್ಕ ಮತ್ತು ವಿಚಾರಗಳ ಬಲದಿಂದ ಇತರರ ಮನಸ್ಸಿನಲ್ಲಿರುವುದನ್ನು ವಿವರಿಸುತ್ತಾರೆ- ‘ನಿಮ್ಮ ಮನಸ್ಸು ಹೀಗಿದೆ, ನಿಮ್ಮ ಮನಸ್ಸಿನಲ್ಲಿರುವುದು, ನಿಮ್ಮ ಚಿತ್ತದ ಸ್ವಭಾವ ಇದು.’ ಅವರು ಹೇಳುವುದೆಲ್ಲವೂ ಇಷ್ಟೇ ಆಗಿರುತ್ತದೆ. ಇದು ಮೂರನೆಯ ವಿಧ.

“ಮತ್ತೆ ಕೆಲವರು ಕೇವಲ ನಿಮಿತ್ತದ ಸಹಾಯದಿಂದಾಗಲೀ ಅಥವಾ ಇತರರು ನುಡಿದ ಮಾತುಗಳನ್ನು ಕೇಳಿಯಾಗಲೀ ಅಥವಾ ತರ್ಕ ವಿಚಾರಗಳ ಬಲದಿಂದಾಗಲೀ ಬೇರೆಯವರ ಮನಸ್ಸಿನಲ್ಲಿರುವುದನ್ನು ವಿವರಿಸುವುದಿಲ್ಲ.25 ತರ್ಕ ಮತ್ತು ವಿಚಾರಗಳನ್ನು ಮೀರಿದ ಸಮಾಧಿಯಲ್ಲಿ ಚಿತ್ತವನ್ನು ನಿಲ್ಲಿಸಿ ಅದರ ಮೂಲಕ ಇತರರ ಚಿತ್ತದಲ್ಲಿರುವುದನ್ನು ತಿಳಿಯಬಲ್ಲವರಾಗಿರುತ್ತಾರೆ. ‘ಈತನ ಮನಸ್ಸು ಯಾವ ಗುರಿಯನ್ನಿಟ್ಟುಕೊಂಡಿದೆಯೋ ಅದಕ್ಕೆ ತಕ್ಕಂಥ ತರ್ಕವನ್ನು ಅವನ ಚಿತ್ತವು ಹೊಂದಿದೆ’ ಎಂಬುದನ್ನು ತಿಳಿಯುತ್ತಾರೆ. ಅವರು ಹೇಳುವುದೆಲ್ಲವೂ ಇಷ್ಟೇ ಆಗಿರುತ್ತದೆ. ಇದು ನಾಲ್ಕನೆಯ ಬಗೆ.

ದರ್ಶನ ಸಮಾಪತ್ತಿ ಬಗೆಗಿನ ಧಮ್ಮದೇಸನ

“ಅರಿವಿನಿಂದ ಪಡೆಯುವ ಸ್ಥಿತಿಗೆ ಸಂಬಂಧಿಸಿದುದನ್ನು ಭಗವಾನರು ಬೋಧಿಸುತ್ತಾರೆ. ಬೋಧಿಸುವ ರೀತಿಯಲ್ಲಿ ಅವರನ್ನು ಮೀರಿಸುವವರಾರೂ ಇಲ್ಲ. ಅರಿವಿನಿಂದ ಪಡೆಯುವ ಸ್ಥಿತಿಯು ನಾಲ್ಕು ಬಗೆಯಾಗಿದೆ.

“ಒಬ್ಬ ಸಮಣನೋ ಬ್ರಾಹ್ಮಣನೋ ಶ್ರದ್ಧೆಯಿಂದ ಉತ್ಸಾಹದಿಂದ ನಿರಂತರ ಯತ್ನದಿಂದ ಸದಾ ಇರುವ ಎಚ್ಚರಿಕೆಯಿಂದ ಸಮ್ಯಕ್ ಮನಸ್ಸಿನ ಬಲದಿಂದ ಶಾಂತಚಿತ್ತನಾಗಿದ್ದುಕೊಂಡು ಚೇತೋಸಮಾಧಿಯಲ್ಲಿದ್ದು ಚಿಂತನಶೀಲನಾಗಿರುತ್ತಾನೆ. ಪಾದದಿಂದ ಹಿಡಿದು, ಕೇಶ ಮಸ್ತಕದವರೆಗೆ ಚರ್ಮದಿಂದ ಮುಚ್ಚಲ್ಪಟ್ಟ ಕಾಯವನ್ನು ಅದರ ನಿಜಸ್ವರೂಪದಲ್ಲಿಯೇ ಅರಿಯಬಲ್ಲವನಾಗಿರುತ್ತಾನೆ- ‘ಈ ಕಾಯದಲ್ಲಿ ತಲೆಯ ಕೂದಲು ಮೈಮೇಲಿನ ರೋಮ, ಉಗುರು, ಹಲ್ಲು, ತೊಗಲು ಮಾಂಸ, ಸ್ನಾಯು, ಮೂಳೆಯಲ್ಲಿನ ರಸ, ಮೂತ್ರಪಿಂಡ, ಹೃದಯ, ಪಿತ್ತಕೋಶ, ಪೊರೆ, ಪ್ಲೀಹ, ಶ್ವಾಸಕೋಶ, ಕರುಳು, ಕರುಳಿನ ಕೊನೆ, ಉದರ ಮಲ, ಪಿತ್ತ, ಶ್ಲೇಷ್ಮ, ಕೀವು, ರಕ್ತ, ಬೆವರು, ಕೊಬ್ಬು, ಕಣ್ಣೀರು, ದ್ರವರೂಪದ ಕೊಬ್ಬು, ಜೊಲ್ಲು, ಲೋಳೆ, ಕೀಲಿನ ದ್ರವ, ಮೂತ್ರ, ಇವೆಲ್ಲಾ ಇವೆ’. ಇದು ಅರಿವಿನಿಂದ ಪಡೆಯಬಹುದಾದ ಮೊದಲನೆಯ ಸ್ಥಿತಿ.

“ಭಂತೆ, ಒಬ್ಬ ಸಮಣನೋ ಬ್ರಾಹ್ಮಣನೋ ಶ್ರದ್ಧೆಯಿಂದ... ಚೇತೋಸಮಾಧಿಯಲ್ಲಿದ್ದು ಚಿಂತನಶೀಲನಾಗಿರುತ್ತಾನೆ. ಪಾದದಿಂದ ಹಿಡಿದು, ಕೇಶ ಮಸ್ತಕದವರೆಗೆ ಚರ್ಮದಿಂದ ಮುಚ್ಚಲ್ಪಟ್ಟ ಕಾಯವನ್ನು ಅದರ ನಿಜಸ್ವರೂಪದಲ್ಲಿಯೇ ಅರಿಯಬಲ್ಲವನಾಗಿರುತ್ತಾನೆ- ಈ ಕಾಯದಲ್ಲಿ ತಲೆಯ ಕೂದಲು, ಮೈಮೇಲಿನ ರೋಮ... ಕೀಲಿನ ದ್ರವ, ಮೂತ್ರ ಇವೆ. ಮನುಷ್ಯನ ಮೂಳೆ, ಚರ್ಮ, ಮಾಂಸ, ಮೂಳೆ ರಕ್ತಗಳನ್ನು ಕುರಿತು ಚಿಂತಿಸುತ್ತಾನೆ. ಸದಾ ಹರಿಯುತ್ತಿರುವ ಪ್ರವಾಹದಂತಿರುವ ಮನುಷ್ಯನ ವಿಞ್ಞಾಣದ ಅರಿವು ಅವನಿಗಿರುತ್ತದೆ. ಈ ಲೋಕ ಮತ್ತು ಪರಲೋಕಗಳೆರಡಕ್ಕೂ ಸಂಬಂಧಿಸಿದ ವಿಞ್ಞಾಣವನ್ನು ಕುರಿತು ಚಿಂತಿಸುತ್ತಾನೆ.26 ಇದು ಅರಿವಿನಿಂದ ಪಡೆಯಬಹುದಾದ ಮೂರನೆಯ ಸ್ಥಿತಿ.

“ಮತ್ತೆ ಒಬ್ಬ ಸಮಣನೋ ಬ್ರಾಹ್ಮಣನೋ ಶ್ರದ್ಧೆಯಿಂದ... ಚೇತೋಸಮಾಧಿಯಲ್ಲಿದ್ದು ಚಿಂತನಶೀಲನಾಗಿರುತ್ತಾನೆ. ಪಾದದಿಂದ ಹಿಡಿದು ಕೇಶಮಸ್ತಕದವರೆಗೆ ಚರ್ಮದಿಂದ ಮುಚ್ಚಲ್ಪಟ್ಟ ಕಾಯವನ್ನು ಅದರ ನಿಜಸ್ವರೂಪದಲ್ಲಿಯೇ ನೋಡಬಲ್ಲವನಾಗಿರುತ್ತಾನೆ- ‘ಈ ಕಾಯದಲ್ಲಿ ತಲೆಯ ಕೂದಲು ಮೈಮೇಲಿನ ರೋಮ... ಕೀಲಿನ ದ್ರವ ಮೂತ್ರ ಇವೆ. ಮನುಷ್ಯನ ಚರ್ಮ ಮಾಂಸ ರಕ್ತಗಳನ್ನು ಕುರಿತು ಚಿಂತಿಸುತ್ತಾನೆ. ಸದಾ ಹರಿಯುವ ಪ್ರವಾಹದಂತಿರುವ ಮನುಷ್ಯನ ವಿಞ್ಞಾಣವನ್ನು ಕುರಿತು ಚಿಂತಿಸುತ್ತಾನೆ. ಈ ಲೋಕ ಮತ್ತು ಪರಲೋಕಗಳೆರಡಕ್ಕೂ ಸಂಬಂಧಿಸಿದ ಆದರೆ ಅವಾವುದರಲ್ಲೂ ಇಲ್ಲದೆ ಹೋಗುವ ವಿಞ್ಞಾಣವನ್ನು (ಇದು ಅರಹಂತನ ವಿಞ್ಞಾಣ) ಅರಿಯುತ್ತಾನೆ. ಇದು ಅರಿವಿನಿಂದ ಪಡೆಯಬಹುದಾದ ನಾಲ್ಕನೆಯ ಸ್ಥಿತಿ.

ಮನುಷ್ಯ ಸ್ವಭಾವದ ಬಗೆಗಿನ ಬೋಧನೆ

“ಭಗವಾನರು ಮನುಷ್ಯರ ಸ್ವಭಾವವನ್ನು ತಿಳಿಯಬಲ್ಲ (ಪುಗ್ಗಲಪಞ್ಞತ್ತ) ಧಮ್ಮವನ್ನು ಬೋಧಿಸುತ್ತಾರೆ. ಬೋಧಿಸುವ ರೀತಿಯಲ್ಲಿ ಅವರನ್ನು ಮೀರಿಸುವವರು ಯಾರೂ ಇಲ್ಲ. ‘ಏಳುಬಗೆಯ ಜನರಿದ್ದಾರೆ- ಎರಡು ರೀತಿಯಲ್ಲಿಯೂ ಬಿಡುಗಡೆ ಹೊಂದಿದವರು. ಪಞ್ಞಾದ ಸಹಾಯದಿಂದ ಬಿಡುಗಡೆ ಹೊಂದಿದವರು ಕಾಯದ ಸ್ವಭಾವವನ್ನು ತಿಳಿದವರು ಸಮ್ಯಕ್ ದೃಷ್ಟಿಯನ್ನು ಪಡೆದಿರುವವರು ಶ್ರದ್ಧೆಯ ಸಹಾಯದಿಂದ ಬಿಡುಗಡೆಯನ್ನು ಹೊಂದಿರುವವರು ಧಮ್ಮವನ್ನು ಅನುಸರಿಸುವವರು ಶ್ರದ್ಧೆಯನ್ನು ಹೊಂದಿರುವವರು. ಈ ರೀತಿಯ ಮನುಷ್ಯರು ಸರ್ವಶ್ರೇಷ್ಠರು.

ಪಧಾನ (ಪ್ರಯತ್ನ) ಗಳ ಬಗ್ಗೆ ಬೋಧನೆ

“ಭಗವಾನರು ಪದಾನಗಳಿಗೆ ಸಂಬಂಧಿಸಿದ ಅಂದರೆ ಧ್ಯಾನದಿಂದ ಮುಟ್ಟಬಲ್ಲ ಸ್ಥಿತಿಗಳನ್ನು ಬೋಧಿಸುತ್ತಾರೆ. ಬೋಧನೆಯಲ್ಲಿ ಅವರನ್ನು ಮೀರಿಸುವವರು ಯಾರೂ ಇಲ್ಲ. ಏಳು ಬೋಜ್ಝಂಗಗಳಿವೆ. ಸತಿ ಸಂಬೋಜ್ಜಂಗ, ಧಮ್ಮವಿಜಯ ಸಂಬೋಜ್ಝಂಗ (ಧಮ್ಮವನ್ನು ಕೂಲಂಕುಷವಾಗಿ ಪರಿಶೀಲಿಸುವುದು), ವಿರಯ ಸಂಬೋಜ್ಝಂಗ, ಪೀತಿ ಸಂಬೋಜ್ಝಂಗ, ಪಸ್ಸದ್ಧಿ ಸಂಬೋಜ್ಝಂಗ, ಸಮಾಧಿ ಸಂಬೋಜ್ಝಂಗ ಮತ್ತು ಉಪೇಕ್ಖ ಸಂಬೋಜ್ಝಂಗ. ಸಂಬೋಜ್ಝಂಗಕ್ಕೆ ಸಂಬಂಧಿಸಿದ ಈ ಜಯ (ಪಧಾನ)ಕ್ಕಿಂತ ಶ್ರೇಷ್ಠವಾದ್ದಿಲ್ಲ.

ಮಾರ್ಗದ ಬಗ್ಗೆ ಧಮ್ಮದೇಸನ

“ಭಗವಾನರು ಮಾರ್ಗಕ್ಕೆ ಸಂಬಂಧಿಸಿದುದನ್ನು ಬೋಧಿಸುತ್ತಾರೆ. ಬೋಧನೆಯಲ್ಲಿ ಅವರನ್ನು ಮೀರಿಸುವವರು ಯಾರೂ ಇಲ್ಲ. ಮಾರ್ಗಗಳು ನಾಲ್ಕು ಬಗೆಯವಾಗಿವೆ. ಅಡ್ಡಿಗಳಿರುವ ದುಃಖವನ್ನು ಅರಿಯುವ ಮಾರ್ಗ, ತಡೆಗಳಿಲ್ಲದ ದುಃಖವನ್ನು ಅರಿಯುವ ಮಾರ್ಗ, ತಡೆಗಳಿಂದ ಕೂಡಿದ ಸುಖವನ್ನು ಅರಿಯುವ ಮಾರ್ಗ, ತಡೆಗಳಿಲ್ಲದ ಸುಖವನ್ನು ಅರಿಯುವ ಮಾರ್ಗ, ದುಃಖವನ್ನರಿಯುವ ಯಾವ ಮಾರ್ಗದಲ್ಲಿ ಅಡೆತಡೆಗಳಿವೆಯೋ ಆ ಮಾರ್ಗವು ಎರಡು ರೀತಿಯಲ್ಲಿ ಹೀನವಾಗಿದೆ ಎಂದು ಹೇಳುತ್ತಾರೆ. ಅದು ದುಃಖಕ್ಕೆ ಕೊಂಡೊಯ್ಯುತ್ತದೆ ಮತ್ತು ಅಡ್ಡಿ ತಡೆಗಳನ್ನೊಳಗೊಂಡಿದೆ. ದುಃಖವನ್ನರಿಯುವ ಯಾವ ಮಾರ್ಗವು ಅಡೆ-ತಡೆಗಳಿಲ್ಲದೆ ನಯವಾಗಿದೆಯೋ ಅದು ಹೀನವಾಗಿದೆ ಎಂದು ಪರಿಗಣಿತವಾಗಿದೆ. ಏಕೆಂದರೆ ಅದು ದುಃಖಕ್ಕೆ ಕೊಂಡೊಯ್ಯುತ್ತದೆ. ಸುಖವನ್ನರಿಯಬಲ್ಲ ಯಾವ ಮಾರ್ಗದಲ್ಲಿ ಅಡ್ಡಿ ತಡೆಗಳಿವೆಯೋ ಅದು ಹೀನವಾದದ್ದು ಎಂದು ಹೇಳುತ್ತಾರೆ. ಏಕೆಂದರೆ ಅದು ಅಡ್ಡಿ ತಡೆಗಳನ್ನೊಳಗೊಂಡಿರುತ್ತದೆ. ಸುಖವನ್ನರಿಯಬಲ್ಲ ಯಾವ ಮಾರ್ಗವು ನಯವಾಗಿದೆಯೋ ಅದು ಎರಡು ರೀತಿಯಲ್ಲಿ ಶ್ರೇಷ್ಠವಾದದ್ದು ಎಂದು ಹೇಳುತ್ತಾರೆ. ಏಕೆಂದರೆ ಅದು ಸುಖಕ್ಕೆ ಕೊಂಡೊಯ್ಯುತ್ತದೆ ಮತ್ತು ಮಾರ್ಗದಲ್ಲಿ ಅಡ್ಡಿ ತಡೆಗಳಿರುವುದಿಲ್ಲ, ಮಾರ್ಗದಲ್ಲಿ ಇದು ಅತಿಶ್ರೇಷ್ಠವಾದದ್ದು.

ಮಾತನಾಡುವ ಬಗ್ಗೆ ಧಮ್ಮೋಪದೇಶ

“ಭಗವಾನರು ಮಾತನಾಡುವಾಗ ನಡೆದುಕೊಳ್ಳಬೇಕಾದ ರೀತಿಯನ್ನು ಬೋಧಿಸುತ್ತಾರೆ. ಬೋಧನೆಯಲ್ಲಿ ಅವರನ್ನು ಮೀರಿಸುವವರಿಲ್ಲ. ಜಯವನ್ನು ಬಯಸುವವನು ಸುಳ್ಳನ್ನೊಳಗೊಂಡ ಯಾವ ಮಾತನ್ನೂ ಆಡಬಾರದು. ಒಗ್ಗಟ್ಟನ್ನು ಒಡೆಯುವ ಯಾವ ಮಾತನ್ನೂ ಆಡಬಾರದು. ಚಾಡಿ ಮಾತನ್ನಾಡುವುದನ್ನೂ ಆಡಬಾರದು. ಕ್ರೋಧವನ್ನುಂಟು ಮಾಡುವ ಮಾತನ್ನು ಆಡಬಾರದು ಎಂದು ಬೋಧಿಸುತ್ತಾನೆ. ಕಾಲಕ್ಕೆ ಅನುಗುಣವಾಗಿ ತೂಕದ ಮಾತುಗಳನ್ನಾಡಬೇಕು, ಒಳ್ಳೆಯ ಮಾತನ್ನೇ ಆಡಬೇಕು ಎಂದು ಬೋಧಿಸುತ್ತಾರೆ. ಈ ರೀತಿಯ ಬೋಧನೆಯು ಅತಿಶ್ರೇಷ್ಠವಾದದ್ದು.

“ಮನುಷ್ಯನಾದವನು ಶೀಲವಂತನಾಗಿ ಹೇಗೆ ನಡೆದುಕೊಳ್ಳಬೇಕೆಂಬುದನ್ನು ಭಗವಾನರು ಬೋಧಿಸುತ್ತಾರೆ. ಬೋಧನೆಯಲ್ಲಿ ಅವರನ್ನು ಮೀರಿಸುವವರಿಲ್ಲ. ಮನುಷ್ಯನು ಶ್ರದ್ಧಾವಂತನಾಗಿರಬೇಕು, ಕುಹಕಿಯಾಗಿರಬಾರದು, ಸೋಮಾರಿಯಾಗಿರಬಾರದು. ನಿಮಿತ್ತವನ್ನು ಹೇಳದವನಾಗಿರಬೇಕು. ಭೂತ ಪ್ರೇತಗಳನ್ನು ಓಡಿಸುವ ಕಾರ್ಯದಲ್ಲಿ ತೊಡಗಿರಬಾರದು. ಲಾಭಕೋರನಾಗಿರಬಾರದು, ಇಂದ್ರಿಯ ದ್ವಾರಗಳನ್ನು ರಕ್ಷಿಸುವವನಾಗಿರಬೇಕು. ಊಟದ ಮಿತಿಯನ್ನು ತಿಳಿದವನಾಗಿರಬೇಕು. ಸ್ನೇಹವನ್ನು ಕುದುರಿಸುವವನಾಗಿರಬೇಕು, ಜಾಗರೂಕನಾಗಿರಬೇಕು, ಧ್ಯಾನಿಯಾಗಿರಬೇಕು, ಸ್ಮೃತಿವಂತನಾಗಿರಬೇಕು, ಕಲ್ಯಾಣವನ್ನುಂಟುಮಾಡುವ ಮಾತನ್ನೇ ಆಡುವವನಾಗಿರಬೇಕು. ಒಳ್ಳೆಯ ಮಾರ್ಗದಲ್ಲಿಯೇ ಹೋಗುವವನಾಗಿರಬೇಕು. ಧೃತಿವಂತನಾಗಿರಬೇಕು, ಮತಿವಂತನಾಗಿರಬೇಕು. ಕಾಮಗಳಲ್ಲಿ ತೊಡಗುವವನಾಗಿರಬೇಕು, ಎಚ್ಚರಿಕೆಯಿಂದಿರುವವನಾಗಿರಬೇಕು. ವಿವೇಕಿಯಾಗಿರಬೇಕು. ಹೀಗೆ ಶೀಲವಂತನಾದ ಮನುಷ್ಯನು ಅತಿಶ್ರೇಷ್ಠನಾಗುತ್ತಾನೆ.

ಅನುಶಾಸನ ವಿಧಾನಗಳ ಬಗ್ಗೆ ಧಮ್ಮೋಪದೇಶ

“ಭಗವಾನರು ಅನುಶಾಸನವನ್ನು ಕುರಿತ ಧಮ್ಮವನ್ನು ಬೋಧಿಸುತ್ತಾರೆ. ಬೋಧನೆಯಲ್ಲಿ ಅವರನ್ನು ಮೀರಿಸುವವರಿಲ್ಲ. ಅನುಶಾಸನ ವಿಧಗಳು ಈ ನಾಲ್ಕು. ತನಗೆ ಹೇಳಿಕೊಟ್ಟಿದ್ದನ್ನು ಸರಿಯಾಗಿ ಪಾಲಿಸಿ ಮೂರು ಸಂಯೋಜನೆಗಳನ್ನು ಕತ್ತರಿಸಿಕೊಂಡು ಸೋತಾಪನ್ನನಾಗುವುದು. ಅಂಥವನು ಕೆಳಗಿನ ಸ್ಥಿತಿಗೆ ಹೋಗಲಾರ. ಸಂಬೋಧಿಯನ್ನು ಪಡೆಯುತ್ತಾನೆ. ಭಗವಾನರು ತಮ್ಮ ಧ್ಯಾನದಿಂದಲೇ ಈ ಸತ್ಯವನ್ನು ತಿಳಿದಿದ್ದಾರೆ. ಭಗವಾನರು ತಮ್ಮ ಧ್ಯಾನದಿಂದ ಮತ್ತೊಂದು ಸತ್ಯವನ್ನು ಕಾಣುತ್ತಾರೆ. ‘ಈ ಮನುಷ್ಯನು ಹೇಳಿಕೊಟ್ಟಿದ್ದನ್ನು ಸರಿಯಾಗಿ ಪಾಲಿಸಿ ಮೂರು ಸಂಯೋಜನೆಗಳನ್ನು ಕತ್ತರಿಸಿಕೊಂಡು ರಾಗ, ಮೋಹ, ದ್ವೇಷಗಳನ್ನು ಇಂಗಿಸಿಕೊಂಡು ಸಕದಾಗಾಮಿಯಾಗುತ್ತಾನೆ. ದೇವಲೋಕಕ್ಕೆ ಹೋಗಿ ದುಃಖವನ್ನು ಅಂತ್ಯಗೋಲಿಸುತ್ತಾನೆ’. ಭಗವಾನರು ತಮ್ಮ ಧ್ಯಾನಬಲದಿಂದ ಈ ವಿಷಯವನ್ನು ಅರಿಯುತ್ತಾರೆ. ‘ಹೇಳಿಕೊಟ್ಟಿದ್ದನ್ನು ಸರಿಯಾಗಿ ಅನುಸರಿಸಿದ ಈ ಮನುಷ್ಯನು ಐದು ಸಂಯೋಜನೆಗಳನ್ನು ಕತ್ತರಿಸಿಕೊಂಡು ಓಪಪಾತಿಕನಾಗುತ್ತಾನೆ. ಈ ಲೋಕಕ್ಕೆ ಮತ್ತೊಮ್ಮೆ ಬರುವುದಿಲ್ಲ. ಪರಿನಿಬ್ಬಾತಿಕನಾಗುತ್ತಾನೆ. ಈ ಲೋಕಕ್ಕೆ ಮತ್ತೊಮ್ಮೆ ಬರುವುದಿಲ್ಲ. ಪರಿನಿಬ್ಬಾನವನ್ನು ಪಡೆಯುತ್ತಾನೆ’. ಮತ್ತೆ ಭಗವಾನರು ತಮ್ಮ ಧ್ಯಾನಬಲದಿಂದ ಇದನ್ನು ಅರಿತಿರುತ್ತಾರೆ- ‘ಈ ಮನುಷ್ಯನು ಹೇಳಿಕೊಟ್ಟಿದ್ದನ್ನು ಸರಿಯಾಗಿ ಪಾಲಿಸಿ ಆಸವಗಳನ್ನು ನಾಶಮಾಡಿಕೊಂಡು ಚೇತೋವಿಮುಕ್ತಿ, ಪಞ್ಞಾವಿಮುಕ್ತಿಯನ್ನು ಪಡೆದು ಉತ್ಕೃಷ್ಟ ಜ್ಞಾನವನ್ನು ತಮ್ಮ ಪ್ರಯತ್ನದಿಂದಲೇ ಪಡೆದು ಪರಮ ಸತ್ಯವನ್ನು ಸಾಕ್ಷಾತ್ಕಾರ ಮಾಡಿಕೊಂಡಿರುತ್ತಾನೆ’. ಅನುಶಾಸನವು ಹೀಗೆ ಅತ್ಯುತ್ಕೃಷ್ಟವಾದುದಾಗಿದೆ.

ವಿಮುಕ್ತಿ ಕುರಿತ ಜ್ಞಾನ ಬೋಧೆ

“ಭಗವಾನರು ಒಬ್ಬ ವ್ಯಕ್ತಿಯು ಸಾಧಿಸಬಹುದಾದ ವಿಮುಕ್ತಿಯನ್ನು ಕುರಿತ ಜ್ಞಾನವನ್ನೊಳಗೊಂಡ ಧಮ್ಮವನ್ನು ಬೋಧಿಸುತ್ತಾರೆ. ಅವರು ಬೋಧಿಸುವ ಕ್ರಮವು ಅತ್ಯುತ್ಕೃಷ್ಟವಾದುದು. ತಮ್ಮ ಧ್ಯಾನದ ಬಲದಿಂದ ಭಗವಾನರು ಇದನ್ನು ಅರಿತಿರುತ್ತಾರೆ. ‘ಈ ಮನುಷ್ಯನು ಮೂರು ಸಂಯೋಜನೆಗಳನ್ನು ಕತ್ತರಿಸಿಕೊಂಡು ಸೋತಾಪನ್ನನಾಗುತ್ತಾನೆ’. ಅವನು ಕೆಳಗಿನ ಸ್ಥಿತಿಗೆ ಇಳಿಯಲಾರದ ಸಂಬೋಧಿಯನ್ನು ಪಡೆಯುತ್ತಾನೆ. ಇದೊಂದು ಬಗೆಯ ವಿಮುಕ್ತಿ ! ಭಗವಾನರು ತಮ್ಮ ಧ್ಯಾನದ ಬಲದಿಂದ ಇದನ್ನು ಅರಿತಿರುತ್ತಾರೆ- ‘ಈ ಮನುಷ್ಯನು ಮೂರು ಸಂಯೋಜನೆಗಳನ್ನು ಕತ್ತರಿಸಿಕೊಂಡು ರಾಗ, ಮೋಹ, ದ್ವೇಷಗಳನ್ನು ಇಂಗಿಸಿಕೊಂಡು ಸಕದಾಗಾಮಿ ಯಾಗುತ್ತಾನೆ. ದೇವಲೋಕಕ್ಕೆ ಹೋಗಿ ದುಃಖವನ್ನು ಅಂತ್ಯಗೊಳಿಸುತ್ತಾನೆ. ಇದು ಎರಡನೆಯ ಬಗೆಯ ವಿಮುಕ್ತಿ. ಭಗವಾನರು ತಮ್ಮ ಧ್ಯಾನಬಲದಿಂದ ಈ ಸಂಗತಿಯನ್ನು ಅರಿತಿರುತ್ತಾರೆ- ‘ಈ ಮನುಷ್ಯನು ಐದು ಸಂಯೋಜನೆಗಳನ್ನು ಕತ್ತರಿಸಿಕೊಂಡು ಓಪಪಾತಿಕನಾಗಿ ಮತ್ತೊಮ್ಮೆ ಈ ಲೋಕಕ್ಕೆ ಬರದ ಪರಿನಿಬ್ಬಾನವನ್ನು ಹೊಂದುತ್ತಾನೆ’. ಇದು ಮೂರನೆಯ ಬಗೆಯ ವಿಮುಕ್ತಿ. ಭಗವಾನರು ತಮ್ಮ ಧ್ಯಾನದ ಬಲದಿಂದ ಈ ವಿಷಯವನ್ನು ಅರಿತಿರುತ್ತಾರೆ- ‘ಈ ಮನುಷ್ಯನು ಆಸವಗಳನ್ನು ನಾಶಮಾಡಿಕೊಂಡು ಚೇತೋವಿಮುಕ್ತಿ ಪಞ್ಞಾವಿಮುಕ್ತಿಯನ್ನು ಪಡೆದು ಉತ್ಕೃಷ್ಟವಾದ ಜ್ಞಾನವನ್ನು ಹೊಂದಿ ಪರಮಸತ್ಯವನ್ನು ಸಾಕ್ಷಾತ್ಕಾರ ಮಾಡಿಕೊಂಡಿರುತ್ತಾನೆ’. ಇದು ನಾಲ್ಕನೆಯ ಬಗೆಯ ವಿಮುಕ್ತಿ. ಹೀಗೆ ಒಬ್ಬ ವ್ಯಕ್ತಿಯು ಸಾಧಿಸಬಹುದಾದ ವಿಮುಕ್ತಿಯ ಬಗೆಯ ಜ್ಞಾನವು ಅತಿ ಶ್ರೇಷ್ಠವಾದುದಾಗಿದೆ.

ಶಾಶ್ವತವಾದವನ್ನು ತೋರಿಸುವ ಬಗ್ಗೆ ಧಮ್ಮೋಪದೇಶ

“ಭಗವಾನರು ಶಾಶ್ವತವಾದವನ್ನು ಕುರಿತು ಧಮ್ಮವನ್ನು ಬೋಧಿಸುತ್ತಾರೆ. ಅವರು ಬೋಧಿಸುವ ರೀತಿಯು ಅನುತ್ತರವಾದುದು, ಶಾಶ್ವತವಾದವು ಮೂರು ರೀತಿಯದು.

“ಒಬ್ಬ ಸಮಣನೋ ಬ್ರಾಹ್ಮಣನೋ ತನ್ನ ಶ್ರದ್ಧೆಯಿಂದ... ಚೇತೋಸಮಾಧಿಯಲ್ಲಿದ್ದು ಧ್ಯಾನಶೀಲನಾಗಿರುತ್ತಾನೆ. ಹಿಂದಿನ ಅನೇಕ ಜನ್ಮಗಳನ್ನು ನೆನಪು ಮಾಡಿಕೊಳ್ಳುತ್ತಾನೆ. ತನ್ನ ಹಿಂದಿನ ಜನ್ಮವನ್ನು, ಹಿಂದಿನ ಎರಡು ಜನ್ಮಗಳನ್ನು, ಮೂರು ಜನ್ಮಗಳನ್ನು, ನಾಲ್ಕು ಜನ್ಮಗಳನ್ನು, ಐದು ಜನ್ಮಗಳನ್ನು, ಹತ್ತು ಜನ್ಮಗಳನ್ನು, ಇಪ್ಪತ್ತು ಜನ್ಮಗಳನ್ನು, ಮೂವತ್ತು ಜನ್ಮಗಳನ್ನು, ನಲವತ್ತು ಜನ್ಮಗಳನ್ನು, ಐವತ್ತು ಜನ್ಮಗಳನ್ನು, ಅನೇಕ ಸಹಸ್ರ ಜನ್ಮಗಳನ್ನು ಅನೇಕ ಶತಸಹಸ್ರ ಜನ್ಮಗಳನ್ನು ನೆನಪಿಗೆ ತಂದುಕೊಳ್ಳುತ್ತಾನೆ- ‘ಅಲ್ಲಿ ಹುಟ್ಟಿದೆ, ಆಗ ಆ ಹೆಸರಿತ್ತು, ಆ ಗೋತ್ರದಲ್ಲಿ ಆ ವರ್ಣದಲ್ಲಿ ಹುಟ್ಟಿ ಆ ಆಹಾರವನ್ನು ತಿಂದು ಆ ಸುಖದುಃಖಗಳನ್ನು ಅನುಭವಿಸಿ ಅಷ್ಟು ವರ್ಷ ಬದುಕಿ ಅಲ್ಲಿಂದ ಚ್ಯುತನಾಗಿ ಇಲ್ಲಿ ಹುಟ್ಟಿದೆ’. ಹೀಗೆ ಹಿಂದಿನ ಜನ್ಮಗಳ ವಿವರಗಳನ್ನು ನೆನಪಿಗೆ ತಂದುಕೊಳ್ಳುತ್ತಾನೆ. ಅವನು ಇದರಿಂದ ಹೀಗೆಂದುಕೊಳ್ಳುತ್ತಾನೆ- ‘ಹಿಂದೆ ಆದದ್ದು ನನಗೆ ಗೊತ್ತಿದೆ. ಹಿಂದಿನ ಸಂವಟ್ಟ ಮತ್ತು ವಿವಟ್ಟಗಳು ನನಗೆ ಗೊತ್ತು. ಆತ್ಮ ಮತ್ತು ಲೋಕಗಳು ಶಾಶ್ವತವಾಗಿವೆ. ಆತ್ಮದಲ್ಲಾಗಲೀ, ಲೋಕದಲ್ಲಾಗಲೀ ಯಾವುದೂ ಹೊಸದಿಲ್ಲ. ಆತ್ಮ ಮತ್ತು ಲೋಕಗಳು ಗೋಪುರದಂತೆ ಭದ್ರ. ಅಲ್ಲಿ ಬಿದ್ದು ಇಲ್ಲಿ ಏಳುವ ಜೀವಿಗಳು ಚ್ಯುತವಾಗುತ್ತವೆ ಮತ್ತೆ ಹುಟ್ಟುತ್ತವೆ. ಹೀಗೆ ಆತ್ಮ ಲೋಕಗಳು ಶಾಶ್ವತವಾಗಿವೆ’ ಇದು ಪ್ರಥಮ ಶಾಶ್ವತವಾದ.

ಒಬ್ಬ ಸಮಣನೋ ಬ್ರಾಹ್ಮಣನೋ ತನ್ನ ಶ್ರದ್ಧೆಯಿಂದ... ಚೇತೋಸಮಾಧಿಯಲ್ಲಿದ್ದು ಧ್ಯಾನಶೀಲನಾಗಿರುತ್ತಾನೆ. ಹಿಂದಿನ ಜನ್ಮಗಳನ್ನು ವಿವರಣೆಗಳೊಂದಿಗೆ ನೆನಪಿಗೆ ತಂದುಕೊಳ್ಳುವವನಾಗಿರುತ್ತಾನೆ. ಹಿಂದಿನ ಸಂವಟ್ಟವಿವಟ್ಟವನ್ನು ಎರಡು ಸಂವಟ್ಟವಿವಟ್ಟಗಳನ್ನು, ಮೂರು ಸಂವಟ್ಟವಿವಟ್ಟಗಳನ್ನು, ನಾಲ್ಕು ಸಂವಟ್ಟವಿವಟ್ಟಗಳನ್ನು, ಐದು ಸಂವಟ್ಟವಿವಟ್ಟಗಳನ್ನು, ಹತ್ತು ಸಂವಟ್ಟವಿವಟ್ಟಗಳನ್ನು ನೆನಪಿಗೆ ತಂದುಕೊಳ್ಳುತ್ತಾನೆ- ‘ಅಲ್ಲಿ ಹುಟ್ಟಿದೆ, ಆಗ ನನಗೆ ಆ ಹೆಸರಿತ್ತು. ಆ ಗೋತ್ರದಲ್ಲಿ, ಆ ವರ್ಣದಲ್ಲಿ ಹುಟ್ಟಿ ಆ ಆಹಾರವನ್ನು ತಿಂದು ಆ ಸುಖದುಃಖಗಳನ್ನು ಅನುಭವಿಸಿ ಅಷ್ಟು ವರ್ಷ ಬದುಕಿ ಅಲ್ಲಿಂದ ಚ್ಯುತನಾಗಿ ಇಲ್ಲಿ ಹುಟ್ಟಿದೆ. ಆಮೇಲೆ ಈ ಹೆಸರಿನಲ್ಲಿ ಈ ಗೋತ್ರದಲ್ಲಿ ಈ ವರ್ಣದಲ್ಲಿ ಹುಟ್ಟಿ ಇಂತಿಂಥ ಆಹಾರವನ್ನು ತಿಂದು ಈ ಸುಖದುಃಖಗಳನ್ನು ಅನುಭವಿಸಿ ಅಲ್ಲಿಂದ ಚ್ಯುತನಗಿ ಇಲ್ಲಿ ಹುಟ್ಟಿದ್ದೇನೆ’. ಹೀಗೆ ಅನೇಕ ಜನ್ಮಗಳ ಎಲ್ಲ ವಿವರಗಳನ್ನು ನೆನಪಿಗೆ ತಂದುಕೊಳ್ಳುತ್ತಾನೆ. ಆಗ ಅವನು ಹೀಗೆಂದುಕೊಳ್ಳುತ್ತಾನೆ- ‘ಹಿಂದೆ ಆಗಿಹೋದ ಸಂವಟ್ಟ ಮತ್ತು ವಿವಟ್ಟಗಳು ನನಗೆ ಗೊತ್ತಿವೆ. ಮುಂದೆ ಬರುವ ಸಂವಟ್ಟಿ ವಿವಟ್ಟಿಗಳ ವಿವರಗಳೂ ನನಗೆ ತಿಳಿಯದು. ಲೋಕ ಮತ್ತು ಆತ್ಮಗಳು ಶಾಶ್ವತವಾಗಿವೆ. ಆತ್ಮ ಮತ್ತು ಲೋಕಗಳ ಸ್ಥಿರ ಮತ್ತು ಗೋಪುರದಂತೆ ಭದ್ರ. ಆತ್ಮದಲ್ಲಾಗಲೀ, ಲೋಕದಲ್ಲಾಗಲೀ ಯಾವುದೂ ಹೊಸದಿಲ್ಲ. ಇಲ್ಲಿ ಎದ್ದು, ಅಲ್ಲಿ ಏಳುವ ಜೀವಿಗಳು ಚ್ಯುತವಾಗುತ್ತವೆ; ಮತ್ತೆ ಹುಟ್ಟುತ್ತವೆ. ಹೀಗೆ ಎಲ್ಲವೂ ಶಾಶ್ವತವಾಗಿವೆ. ಇದು ಭಂತೆ, ಎರಡನೆಯ ಶಾಶ್ವತವಾದ.

“ಮತ್ತೆ ಭಂತೆ, ಒಬ್ಬ ಸಮಣನೋ ಬ್ರಾಹ್ಮಣನೋ ತನ್ನ ಶ್ರದ್ಧೆಯಿಂದ... ಚೇತೋಸಮಾಧಿಯಲ್ಲಿದ್ದು ಧ್ಯಾನಶೀಲನಾಗಿರುತ್ತಾನೆ. ಹಿಂದಿನ ಜನ್ಮಗಳನ್ನು ವಿವರಗಳೊಂದಿಗೆ ನೆನಪಿಗೆ ತಂದುಕೊಳ್ಳುತ್ತಾನೆ. ಹಿಂದಿನ ಹತ್ತು ಸಂವಟ್ಟವಿವಟ್ಟಗಳನ್ನು, ಇಪ್ಪತ್ತು ಸಂವಟ್ಟವಿವಟ್ಟಗಳನ್ನು ನೆನಪಿಗೆ ತಂದುಕೊಳ್ಳುತ್ತಾನೆ. ‘ಅಲ್ಲಿ ಹುಟ್ಟಿದೆ, ಆಗ ನನಗೆ ಆ ಹೆಸರಿತ್ತು. ಆ ಗೋತ್ರದಲ್ಲಿ, ಆ ವರ್ಣದಲ್ಲಿ ಹುಟ್ಟಿ ಆ ಆಹಾರವನ್ನು ತಿಂದು ಆ ಸುಖದುಃಖಗಳನ್ನು ಅನುಭವಿಸಿ ಅಲ್ಲಿಂದ ಚ್ಯುತನಾಗಿ ಮತ್ತಲ್ಲಿ ಹುಟ್ಟಿದೆ. ಆ ಹೆಸರಿನಲ್ಲಿ ಆ ಗೋತ್ರದಲ್ಲಿ ಆ ವರ್ಣದಲ್ಲಿ ಹುಟ್ಟಿ ಇಂತಿಂಥ ಆಹಾರವನ್ನು ತಿಂದು ಆ ಸುಖದುಃಖಗಳನ್ನು ಅನುಭವಿಸಿ ಅಲ್ಲಿಂದ ಚ್ಯುತನಾಗಿ ಇಲ್ಲಿ ಹುಟ್ಟಿದ್ದೇನೆ’. ಹೀಗೆ ಅನೇಕ ಜನ್ಮಗಳ ಎಲ್ಲ ವಿವರಗಳನ್ನು ನೆನಪಿಗೆ ತಂದುಕೊಳ್ಳುತ್ತಾನೆ. ಆಗ ಅವನು ಹೀಗೆಂದುಕೊಳ್ಳುತ್ತಾನೆ. ‘ಹಿಂದಿನ ಸಂವಟ್ಟವಿವಟ್ಟಗಳು ನನಗೆ ಗೊತ್ತಿದೆ, ಲೋಕ ಮತ್ತು ಆತ್ಮಗಳು ಶಾಶ್ವತವಾಗಿವೆ. ಜೀವಿಗಳು ಅಲ್ಲಿಂದ ಧಾವಿಸಿ ಎಲ್ಲೆಲ್ಲಿಯೋ ಓಡಾಡಿ ಇಲ್ಲಿ ಹುಟ್ಟಿವೆ. ಲೋಕ ಮತ್ತು ಆತ್ಮಗಳ ಸ್ಥಿರ ಮತ್ತು ಗೋಪುರದಂತೆ ಭದ್ರ’. ಇದು ಮೂರನೆಯ ಶಾಶ್ವತವಾದ. ಈ ಶಾಶ್ವತವಾದಗಳನ್ನು ವಿವರಿಸುವ ಅನುತ್ತರವಾಗಿದೆ.

ಹಿಂದಿನ ಜನ್ಮಗಳ ಸ್ಮರಣೆ ಬಗೆಗಿನ ಧಮ್ಮೋಪದೇಶ

“ಭಗವಾನರು ಪೂರ್ವಜನ್ಮಗಳ ಬಗೆಗಿರುವ ಜ್ಞಾನವನ್ನು ವಿವರಿಸುವ ರೀತಿಯು ಅನುತ್ತರವಾದುದು. ಒಬ್ಬ ಸಮಣನೋ, ಬ್ರಾಹ್ಮಣನೋ ತನ್ನ ಶ್ರದ್ಧೆಯಿಂದ... ಚೇತೋಸಮಾಧಿಯಲ್ಲಿದ್ದು, ಧ್ಯಾನಶೀಲಾಗಿರುತ್ತಾನೆ. ತನ್ನ ಹಿಂದಿನ ಜನ್ಮಗಳನ್ನು ಎಲ್ಲ ವಿವರಗಳೊಂದಿಗೆ ನೆನಪಿಗೆ ತಂದುಕೊಳ್ಳುತ್ತಾನೆ. ತನ್ನ ಹಿಂದಿನ ಒಂದು ಜನ್ಮವನ್ನು, ಎರಡು, ಮೂರು, ನಾಲ್ಕು, ಐದು, ಹತ್ತು, ಇಪ್ಪತ್ತು, ಮೂವತ್ತು, ನಲವತ್ತು, ಐವತ್ತು, ನೂರು, ಸಾವಿರ ಜನ್ಮಗಳನ್ನು ಎಲ್ಲ ವಿವರಗಳೊಂದಿಗೆ ನೆನಪಿಗೆ ತಂದುಕೊಳ್ಳುತ್ತಾನೆ. ಅನೇಕ ಸಂವಟ್ಟ ಕಲ್ಪಗಳನ್ನೂ, ವಿವಟ್ಟ ಕಲ್ಪಗಳನ್ನೂ, ಅನೇಕ ಸಂವಟ್ಟವಿವಟ್ಟ ಕಲ್ಪಗಳನ್ನೂ ನೆನಪಿಗೆ ತಂದುಕೊಳ್ಳುತ್ತಾನೆ- ‘ಅಲ್ಲಿ ಹುಟಿದೆ, ಆಗ ನನಗೆ ಆ ಹೆಸರಿತ್ತು. ಆ ವರ್ಣದಲ್ಲಿ, ಆ ಗೋತ್ರದಲ್ಲಿ ಹುಟ್ಟಿ ಆ ಆಹಾರವನ್ನು ತಿಂದು ಆ ಸುಖ-ದುಃಖಗಳನ್ನು ಅನುಭವಿಸಿ ಅಲ್ಲಿಂದ ಚ್ಯುತನಾಗಿ, ಮತ್ತಲ್ಲಿ ಹುಟ್ಟಿದೆ. ಅಲ್ಲಿ ನನಗೆ ಆ ಹೆಸರಿತ್ತು. ಆ ಗೋತ್ರದಲ್ಲಿ, ಆ ವರ್ಣದಲ್ಲಿ ಹುಟ್ಟಿ ಇಂತಿಂಥ ಆಹಾರವನ್ನು ತಿಂದು ಇಂತಿಂಥ ಸುಖಗಳನ್ನು ಅನುಭವಿಸಿ ಅಷ್ಟು ವರ್ಷ ಬದುಕಿ ಅಲ್ಲಿಂದ ಚ್ಯುತನಾಗಿ ಇಲ್ಲಿ ಹುಟ್ಟಿದ್ದೇನೆ’. ಅನೇಕ ಜನ್ಮಗಳ ಎಲ್ಲ ವಿವರಗಳನ್ನೂ ಹೀಗೆ ನೆನಪಿಗೆ ತಂದುಕೊಳ್ಳುತ್ತಾನೆ. ಲೆಕ್ಕ ಮಾಡುವುದಕ್ಕೆ ಅಸಾಧ್ಯವಾಗಿರುವಷ್ಟು ಆಯಸ್ಸನ್ನು ಹೊಂದಿರುವ ದೇವತೆಗಳಿರುತ್ತಾರೆ. ರೂಪವುಳ್ಳ, ಸತ್ವಗಳಾಗಿಯೋ ಕಾಯವೇ ಇಲ್ಲದ ಅರೂಪ ಸ್ಥಿತಿಯಲ್ಲಿರುವ ಸತ್ವಗಳಾಗಿಯೋ ಅರಿವನ್ನು ಹೊಂದಿರುವ ಸತ್ವಗಳಾಗಿಯೋ ಅರಿವನ್ನು ಹೊಂದಿರದ ಸತ್ವಗಳಾಗಿಯೋ ಅಥವಾ ಅರಿವೂ ಇಲ್ಲದ, ಅರಿವಿಲ್ಲದೆಯೊ (ನೇವಸಞ್ಞಾನಾಸಞ್ಞಾ) ಇರದ ಸತ್ವಗಳಾಗಿಯೋ ಹಿಂದೆ ಹುಟ್ಟಿದ್ದರೂ ಆ ಹಿಂದಿನ ಎಲ್ಲ ಜನ್ಮಗಳನ್ನೂ ಎಲ್ಲ ವಿವರಗಳೊಂದಿಗೆ ನೆನಪಿಗೆ ತಂದುಕೊಳ್ಳುತ್ತಾನೆ. ಹೀಗೆ ಹಿಂದಿನ ಜನ್ಮದ ಬಗೆಗಿರುವ ಜ್ಞಾನವನ್ನು ವಿವರಿಸುವ ರೀತಿಯು ಅನುತ್ತರವಾಗಿದೆ.

ಸಾವು-ಹುಟ್ಟುಗಳ ಬಗೆಗಿನ ಜ್ಞಾನ ದರ್ಶನ

“ಜೀವಿಗಳು ಚ್ಯುತವಾಗಿ ಮತ್ತು ಹುಟ್ಟುವುದರ ಬಗೆಗಿರುವ ಜ್ಞಾನವನ್ನು ಭಗವಾನರು ವಿವರಿಸುವ ರೀತಿಯು ಅನುತ್ತರವಾಗಿದೆ. ಒಬ್ಬ ಸಮಣನೋ, ಬ್ರಾಹ್ಮಣನೋ ತನ್ನ ಶ್ರದ್ಧೆಯಿಂದ... ಚೇತೋಸಮಾಧಿಯಲ್ಲಿದ್ದು, ಧ್ಯಾನಶೀಲನಾಗಿರುತ್ತಾನೆ. ದಿವ್ಯವಾದ ಚಕ್ಷುವಿನಿಂದ ಮನುಷ್ಯರಿಗೆ ಕಾಣದಿರುವ ಜೀವಿಗಳ ಹುಟ್ಟು-ಸಾವುಗಳನ್ನು ನೋಡುತ್ತಾನೆ. ಹೀನಸ್ಥಿತಿಯಲ್ಲಿರುವ ಅಥವಾ ಉತ್ತಮ ಸ್ಥಿತಿಯಲ್ಲಿರುವ ಅಥವಾ ಒಳ್ಳೆಯ ಬಣ್ಣವಿರುವ ಅಥವಾ ದುರ್ಬಣ್ಣವನ್ನು ಹೊಂದಿರುವ ಒಳ್ಳೆಯ ಗತಿಯನ್ನು ಸೇರುವ ದುರ್ಗತಿಯನ್ನು ಪಡೆಯುವ ಜೀವಿಗಳನ್ನು ನೋಡುತ್ತಾನೆ. ‘ಕಾಯಾ ವಾಚಾ ಮನಸಾ ದುರಾಚಾರವನ್ನು ಮಾಡಿ ಆರ್ಯರಾದರವರನ್ನು ಅವಹೇಳನ ಮಾಡಿ ಮಿಥ್ಯಾದೃಷ್ಟಿಯನ್ನು ಹೊಂದಿದ್ದು, ಮಿಥ್ಯಾದೃಷ್ಟಿಯ ಫಲವಾಗಿ ಮಾಡುವ ಅಕುಶಲ ಕರ್ಮಗಳ ದೆಸೆಯಿಂದ ಮಾಡುವ ಅಕುಶಲ ಕರ್ಮಗಳ ದೆಸೆಯಿಂದ ಕಾಯದಿಂದ ಬೇರೆಯಾಗಿ ಮರಣ ಹೊಂದಿದ ಮೇಲೆ ಜೀವಿಗಳು ಅಪಾಯ ದುಗ್ಗತಿ ವಿನಿಪಾತ ನಿರಯ ಲೋಕಗಳಲ್ಲಿ ಹುಟ್ಟುತ್ತವೆ. ಕಾಯಾ ವಾಚಾ ಮನಸಾ ಸದಾಚಾರರಾಗಿ ಆರ್ಯರಾದವರನ್ನು ನಿಂದಿಸದೆ ಸಮ್ಯಕ್ ದೃಷ್ಟಿಯನ್ನು ಹೊಂದಿದ್ದು, ಸಮ್ಯಕ್ ದೃಷ್ಟಿಯ ಫಲವಾಗಿ ಮಾಡುವ ಕುಶಲ ಧರ್ಮಗಳ ದೆಸೆಯಿಂದ ಕಾಯದಿಂದ ಬೇರೆಯಾಗಿ ಮರಣ ಹೊಂದಿದ ಮೇಲೆ ಜೀವಿಗಳು ಸುಗತಿ ಸ್ವರ್ಗಲೋಕಗಳಲ್ಲಿ ಹುಟ್ಟುತ್ತವೆ’. ಹೀಗೆ ಪರಿಶುದ್ಧವಾದ ದಿವ್ಯವಾದ ಚಕ್ಷುವಿನಿಂದ ಮನುಷ್ಯನಿಗೆ ಸಾಧ್ಯವಾಗದ ಜೀವಿಗಳ ಹುಟ್ಟು ಸಾವುಗಳನ್ನು ನೋಡಬಲ್ಲವನಾಗುತ್ತಾನೆ. ಹೀನ ಸ್ಥಿತಿಯಲ್ಲಿರುವ ಅಥವಾ ಶ್ರೇಷ್ಠವಾದ ಸ್ಥಾನದಲ್ಲಿರುವ ಒಳ್ಳೆಯ ಬಣ್ಣವನ್ನು ಪಡೆದು ಅಥವಾ ಕೆಟ್ಟ ಬಣ್ಣವನ್ನೇ ಹೊಂದಿರುವ ಸುಗತಿ ಅಥವಾ ದುರ್ಗತಿಯನ್ನು ಸೇರುವ ಜೀವಿಗಳನ್ನು ನೋಡುತ್ತಾರೆ. ಭಗವಾನರು ಜೀವಿಗಳ ಹುಟ್ಟು-ಸಾವುಗಳ ಪರಿಯನ್ನು ಅರಿತಿದ್ದಾರೆ. ಅವರು ವಿವರಿಸುವ ರೀತಿಯು ಅನುತ್ತರವಾದುದು.

ಋದ್ಧಿಶಕ್ತಿ ವಿಧಗಳ ಬಗ್ಗೆ ಧಮ್ಮೋಪದೇಶ

“ಭಗವಾನರು ಋದ್ಧಿಶಕ್ತಿಯ ವಿಧಗಳನ್ನು ವಿವರಿಸುವ ರೀತಿಯು ಅನುತ್ತರವಾಗಿದೆ. ಋದ್ಧಿಶಕ್ತಿಯು ಎರಡು ವಿಧವಾಗಿದೆ. ಶ್ರೇಷ್ಠವಲ್ಲದ ಮತ್ತು ಆಸವಗಳಿಂದ ಕೂಡಿದ ಶಕ್ತಿ; ಶ್ರೇಷ್ಠವಾದ ಮತ್ತು ಆಸವರಹಿತವಾದ ಋದ್ಧಿಶಕ್ತಿ. ಆಸವಗಳಿಂದ ಕೂಡಿರುವ ಮತ್ತು ಶ್ರೇಷ್ಠವಾದ ಋದ್ಧಿಶಕ್ತಿಗಳು ಯಾವುವು? ಒಬ್ಬ ಸಮಣನೋ ಬ್ರಾಹ್ಮಣನೋ ತನ್ನ ಶ್ರದ್ಧೆಯಿಂದ ಚೇತೋಸಮಾಧಿಯಲ್ಲಿದ್ದು ಧ್ಯಾನಶೀಲನಾಗಿ ಅನೇಕರೀತಿಯ ಋದ್ಧಿಶಕ್ತಿಗಳನ್ನು ಪಡೆಯುತ್ತಾನೆ, ಒಬ್ಬನು ಅನೇಕವಾಗುತ್ತಾನೆ. ಅನೇಕವಾಗಿದ್ದವನು ಒಬ್ಬನೇ ಆಗುತ್ತಾನೆ. ಕಣ್ಣಿಗೆ ಕಾಣುತ್ತಿದ್ದವನು ಇದ್ದಕ್ಕಿದ್ದಂತೆ ಅದೃಶ್ಯನಾಗುತ್ತಾನೆ. ಗಾಳಿಯಲ್ಲಿ ನುಗ್ಗುವಂತೆ ಗೋಡೆಯೊಳಗೆ ತೂರಿಕೊಂಡು ಗೋಡೆಯ ಇನ್ನೊಂದು ಕಡೆಗೆ ಹೋಗುತ್ತಾನೆ. ಹಾಗೆಯೇ ಪರ್ವತದೊಳಗೆ ತೂರಿ ಹೋಗುತ್ತಾನೆ. ಕೋಟೆಯ ಗೋಡೆಯೊಳಗೆ ತೂರಿ ಹೋಗುತ್ತಾನೆ. ನೀರಿನಲ್ಲಿ ಮುಳುಗುವಂತೆ ಭೂಮಿಯಲ್ಲಿ ಮುಳುಗುತ್ತಾನೆ. ಪೃಥ್ವಿಯ ಮೇಲೆ ನಡೆಯುವಂತೆ ನೀರಿನ ಮೇಲೆ ನಡೆಯುತ್ತಾನೆ. ಪಕ್ಷಿಗಳು ಆಕಾಶದಲ್ಲಿ ಹಾರುವಂತೆ ಗಾಳಿಯಲ್ಲಿ ಕಾಲು ಮಡಚಿಕೊಂಡು ಚಲಿಸುತ್ತಾನೆ. ಮಹಾಶಕ್ತರೂ ಮಹಾನುಭಾವರೂ ಆದ ಚಂದ್ರ ಸೂರ್ಯರನ್ನು ಕೈಯಿಂದ ಮುಟ್ಟಬಲ್ಲವನಾಗಿರುತ್ತಾನೆ. ಬ್ರಹ್ಮಲೋಕಕ್ಕೆ ಕಾಯ ಸಮೇತ ಹೋಗಬಲ್ಲವನಾಗಿರುತ್ತಾನೆ. ಆದರೆ ಆಸಗಳಿಂದ ಕೂಡಿದ ಈ ಋದ್ಧಿಶಕ್ತಿಯು ಶ್ರೇಷ್ಠವಾದದ್ದಲ್ಲ.

“ಶ್ರೇಷ್ಠವಾದ ಆಸವರಹಿತವಾದ ಋದ್ಧಿಶಕ್ತಿಯು ಹೇಗಿರುತ್ತದೆ? ಭಿಕ್ಷುವಾದವನು ಜುಗುಪ್ಸೆ ಪಡಬೇಕಾದ ಸನ್ನಿವೇಶದಲ್ಲಿ ಯಾವ ಜುಗುಪ್ಸೆಯೂ ಇಲ್ಲದೆ ಇರುತ್ತಾನೆ. ಕೇವಲ ತನ್ನ ಹಾರೈಕೆಯಿಂದಲೇ ಈ ಶಕ್ತಿಯನ್ನು ಸಂಪಾದಿಸಿರುತ್ತಾನೆ. ಅವನು ಜುಗುಪ್ಸೆ ಪಡಬೇಕಾಗಿಲ್ಲದ ಸನ್ನಿವೇಶದಲ್ಲಿ ಜುಗುಪ್ಸೆಯಿಂದಿರುತ್ತೇನೆ ಎಂದುಕೊಂಡರೆ ಅವನು ಅದೇ ಭಾವನೆಯಿಂದಿರುತ್ತಾನೆ. ಜಿಗುಪ್ಸೆಯನ್ನುಂಟುಮಾಡುವ ಮತ್ತು ಜುಗುಪ್ಸೆಯನ್ನುಂಟುಮಾಡದ (ಎರಡೂ ರೀತಿಯ ಪರಿಣಾಮವನ್ನುಂಟುಮಾಡಬಲ್ಲ) ಸನ್ನಿವೇಶದಲ್ಲಿ ‘ನಾನು ಈಗ ಜುಗುಪ್ಸೆಯಿಂದ ಇರುವುದಿಲ್ಲ’ ಎಂದುಕೊಂಡರೆ ಅದೇ ಭಾವನೆಯಿಂದ ಕೂಡಿರುತ್ತಾನೆ. ಜುಗುಪ್ಸೆಯನ್ನುಂಟುಮಾಡುವ ಮತ್ತು ಜುಗುಪ್ಸೆಯನ್ನುಂಟು ಮಾಡದ ಸನ್ನಿವೇಶದಲ್ಲಿ ‘ಜುಗುಪ್ಸೆಯಿಂದಿರುತ್ತೇನೆ’ ಎಂದುಕೊಂಡರೆ ಅದೇ ಭಾವನೆಯಲ್ಲಿರುತ್ತಾರೆ. ‘ಜುಗುಪ್ಸೆ ಮಾಡದ ಸನ್ನಿವೇಶವಿದ್ದಲ್ಲಿ, ಆ ಭಾವನೆಯನ್ನು ವರ್ಜಿಸಿ ಉಪೇಕ್ಷೆಯಿಂದಿರುತ್ತೇನೆ, ಸ್ಮೃತಿಯನ್ನು ಕಳೆದುಕೊಳ್ಳುವುದಿಲ್ಲ’ ಎಂದುಕೊಂಡರೆ ಅವನು ಅದೇರೀತಿಯಲ್ಲಿರುತ್ತಾನೆ, ಸ್ಮೃತಿವಂತನಾಗಿರುತ್ತಾನೆ. ಇಂಥ ಆಸವರಹಿತವಾದ ಋದ್ಧಿಶಕ್ತಿಯನ್ನು ಶ್ರೇಷ್ಠವಾದ ಋದ್ಧಿಶಕ್ತಿ ಎನ್ನುತ್ತಾರೆ. ಋದ್ಧಿಶಕ್ತಿಯನ್ನು ಭಗವಾನರು ವಿವರಿಸುವ ರೀತಿಯು ಅನುತ್ತರವಾದದ್ದು. ಭಗವಾನರು ಎಲ್ಲವನ್ನೂ ತಿಳಿದಿದ್ದಾರೆ. ಭಗವಾನರು ಯಾವುದನ್ನು ಅರಿತಿದ್ದಾರೋ ಅದಕ್ಕಿಂತ ಶ್ರೇಷ್ಠವಾದದ್ದು ಯಾವುದೂ ಇಲ್ಲ. ಬೇರೆ ಸಮಣ ಬ್ರಾಹ್ಮಣನೂ ಭಗವಾನರು ಅರಿತಿರುವುದಕ್ಕಿಂತ ಉತ್ತಮವಾದುದನ್ನು ಅರಿತಿಲ್ಲ. ಇವು ಋದ್ಧಿಶಕ್ತಿಯ ವಿಧಗಳು.

ಶಾಸ್ತರ ಇತರ ಗುಣಗಳ ದರ್ಶನ

“ಕುಲಪುತ್ರನಾದವನು ಶ್ರದ್ಧೆಯಿಂದ ಸತತ ಯತ್ನದಿಂದ, (ಮನುಷ್ಯನಾದವನು ತನ್ನ ಉತ್ಸಾಹ ಪರಾಕ್ರಮ ಯತ್ನ ಸಾಧನೆಗಳಿಂದ) ಯಾವುದನ್ನು ಸಾಧಿಸಬಹುದೋ ಅದನ್ನು ಭಗವಾನರು ಪಡೆದಿದ್ದಾರೆ. ಸಾಮಾನ್ಯ ಜನರು ನಿರತರಾಗುವಂತೆ ಹೀನವೂ ಕೆಲಸಕ್ಕೆ ಬಾರದದೂ, ಶ್ರೇಷ್ಠರಾದವರಿಗೆ ತಕ್ಕುದಲ್ಲದ್ದೂ ಅನರ್ಥಕಾರಿಯೂ ಆದ ಕಾಮಗಳಲ್ಲಿ ಭಗವಾನರು ನಿರತರಾಗುವುದಿಲ್ಲ.29 ಹಾಗೆಯೇ ದುಃಖಕ್ಕೆಳೆದುಕೊಂಡು ಹೋಗುವ ಅನರ್ಥಕಾರಿಯಾದ ದೇಹದಂಡನೆಯಲ್ಲೂ ನಿರತರಾಗುವುದಿಲ್ಲ. ಭಗವಾನರು ಕೇವಲ ತಮ್ಮ ಇಚ್ಛಾಸಾಮರ್ಥ್ಯದಿಂದ ಸಾಧಾರಣ ಸ್ಥಿತಿಯಲ್ಲಿರುವವರು ಅರಿಯಲಾಗದ ನಾಲ್ಕು ಧ್ಯಾನಗಳಿಂದ ಮಾತ್ರ ಪಡೆಯಬಹುದಾದ ಪರಮ ಸುಖವನ್ನು ಸಾಧಿಸಿದ್ದಾರೆ.30

ದೃಢಪಡಿಸಿಕೊಳ್ಳುವಿಕೆ

“ಯಾವನಾದರೊಬ್ಬ ಹೀಗೆ ಕೇಳಬಹುದು- ‘ಗೆಳೆಯ, ಸಾರಿಪುತ್ತ, ಭಗವಾನರಿಗಿಂತ ಶ್ರೇಷ್ಠರಾದ, ಸಂಬೋಧಿಯನ್ನು ಪಡೆದ ಸಮಣನಾಗಲೀ ಬ್ರಾಹ್ಮಣನಾಗಲೀ ಹಿಂದೆ ಇದ್ದನೇ?’ ಎಂದು. ಆಗ ನಾನು ‘ಇಲ್ಲ’ ಎಂದೇ ಉತ್ತರಿಸುತ್ತೇನೆ. ‘ಸಾರಿಪುತ್ತ, ಭಗವಾನರಿಗಿಂತ ಶ್ರೇಷ್ಠನಾದ ಸಂಬೋಧಿಯನ್ನು ಪಡೆದ ಸಮಣನಾಗಲೀ, ಬ್ರಾಹ್ಮಣನಾಗಲೀ ಮುಂದೆ ಹುಟ್ಟುತ್ತಾನೆಯೇ?’ ಎಂದು ಯಾರಾದರೂ ಕೇಳಿದರೆ ‘ಇಲ್ಲ’ ಎಂದೇ ಉತ್ತರಿಸುತ್ತೇನೆ. ‘ಗೆಳೆಯ, ಸಾರಿಪುತ್ತ, ಭಗವಾನರಿಗಿಂತ ಶ್ರೇಷ್ಠನಾದ ಸಂಬೋಧಿಯನ್ನು ಪಡೆದ ಸಮಣನಾಗಲೀ ಬ್ರಾಹ್ಮಣನಾಗಲೀ ಇಂದು ಇದ್ದಾನೆಯೇ?’ ಎಂದು ಯಾರಾದರೂ ಕೇಳಿದರೆ ‘ಇಲ್ಲ’ ಎಂದೇ ಉತ್ತರಿಸುತ್ತೇನೆ.

“ಯಾವನಾದರೂ ಒಬ್ಬ ಹೀಗೆ ಕೇಳಬಹುದು- ‘ಭಗವಾನರಂತೆಯೇ ಸಂಬೋಧಿಯನ್ನು ಪಡೆದ ಅವರಿಗೆ ಸರಿಸಮರಾದ ಬೇರೆ ಸಮಣ ಬ್ರಾಹ್ಮಣರು ಹಿಂದೆ ಇದ್ದರೆ?’ ಎಂದು ಕೇಳಬಹುದು. ಆಗ ‘ಇದ್ದರು’ ಎಂದು ಉತ್ತರಿಸುತ್ತೇನೆ. ‘ಗೆಳೆಯ ಸಾರಿಪುತ್ತ, ಭಗವಾನರಂತೆ ಸಂಬೋಧಿಯನ್ನು ಪಡೆದ ಅವರಿಗೆ ಸಮಸಮರಾದ ಬೇರೆ ಸಮಣ ಬ್ರಾಹ್ಮಣರು ಮುಂದೆ ಹುಟ್ಟುತ್ತಾರೆಯೇ?’ ಎಂದು ಯಾರಾದರೂ ಕೇಳಿದಾಗ ‘ಹುಟ್ಟುತ್ತಾರೆ’ ಎಂದು ಉತ್ತರಿಸುತ್ತೇನೆ. ಯಾರಾದರೂ ‘ಗೆಳೆಯ ಸಾರಿಪುತ್ತ, ಭಗವಾನರಂತೆ ಸಂಬೋಧಿಯನ್ನು ಪಡೆದ ಅವರಿಗೆ ಸರಿಸಮರಾದ ಬೇರೆ ಸಮಣರೂ ಬ್ರಾಹ್ಮಣರೂ ಇಂದು ಇದ್ದಾರೆಯೇ?’ ಎಂದು ಕೇಳಿದರೆ ‘ಇಲ್ಲ’ ಎಂದು ಉತ್ತರಿಸುತ್ತೇನೆ.

“ಯಾರಾದರೂ ನನ್ನನ್ನು ‘ಆಯುಷ್ಮಂತ ಸಾರಿಪುತ್ತ, ಒಬ್ಬರ ಪರಮಶ್ರೇಷ್ಠತೆಯನ್ನು ಮಾತ್ರ ಒಪ್ಪಿಕೊಳ್ಳುತ್ತೀಯೆ. ಮತ್ತೊಬ್ಬರದನ್ನು ಒಪ್ಪಿಕೊಳ್ಳುವುದಿಲ್ಲ ಏತಕ್ಕೆ?’ ಎಂದು ಕೇಳಿದರೆ ನಾನು ಹೀಗೆ ವಿವರಿಸುತ್ತೇನೆ; ‘ಗೆಳೆಯ, ಭಗವಾನರಂತೆ ಸಂಬೋಧಿಯನ್ನು ಪಡೆದ ಅವರಿಗೆ ಸರಿಸಮರಾದ ಅರಹಂತರು ಹಿಂದೆ ಇದ್ದರು ಎಂಬುದನ್ನು ಭಗವಾನರಿಂದಲೇ ಕೇಳಿದ್ದೇನೆ, ತಿಳಿದುಕೊಂಡಿದ್ದೇನೆ. ಭಗವಾನರಂತೆ ಸಂಬೋಧಿಯನ್ನು ಪಡೆದ ಅವರಿಗೆ ಸರಿಸಮರಾದ ಅರಹಂತರು ಮುಂದೆ ಹುಟ್ಟುತ್ತಾರೆ ಎಂಬುದನ್ನು ಭಗವಾನರಿಂದಲೇ ಕೇಳಿದ್ದೇನೆ, ತಿಳಿದುಕೊಂಡಿದ್ದೇನೆ. ಒಂದು ಲೋಕಧಾತುವಿನಲ್ಲಿ ಒಮ್ಮೆ ಮಾತ್ರ ಅರಹಂತರು ಹುಟ್ಟುತ್ತಾರೆ. ಆ ಲೋಕಧಾತುವಿನಲ್ಲಿ ಎಂದೂ ಇಬ್ಬರು ಅರಹಂತರು ಇರುವುದಕ್ಕೆ ಸಾಧ್ಯವಿಲ್ಲ ಎಂಬುದನ್ನು ಭಗವಾನರಿಂದಲೇ ಕೇಳಿದ್ದೇನೆ.”

“ಭಂತೆ, ನನ್ನ ವಿವರಣೆಯು ಭಗವಾನರು ವಿವರಿಸುವ ರೀತಿಯಲ್ಲಿಯೇ ಇದೆಯೇ? ಧಮ್ಮದ ಎಲ್ಲ ವಿವರಗಳನ್ನು ಭಗವಾನರಂತೆಯೇ ತಿಳಿಸುತ್ತೇನೆಯೇ ಅಥವಾ ಭಗವಾನರ ಧಮ್ಮವನ್ನು ತಪ್ಪು ತಪ್ಪಾಗಿ ವಿವರಿಸುತ್ತೇನೆಯೇ? ಯಾವನಾದರೂ ಸಹಧರ್ಮಿ ನನ್ನ ವಿವರಣೆಯಲ್ಲಿ ತಪ್ಪನ್ನು ಕಾಣಬಲ್ಲನೇ?”

“ಸಾರಿಪುತ್ತ, ನಿನ್ನನ್ನು ಕೇಳಿದವರಿಗೆ ನೀನು ವಿವರಿಸುವ ರೀತಿಯು ನನ್ನ ವಿವರಣೆಯಂತೆಯೇ ಇದೆ. ನೀನು ವಿವರಿಸುವ ರೀತಯಲ್ಲಿ ತಪ್ಪಿಲ್ಲ. ಯಾವ ಸಹಧಮ್ಮಿಕನೂ ವಾದಗಳಲ್ಲಿ ನಿರತನಾದವನೂ ತಪ್ಪನ್ನು ಕಾಣಲು ಸಾಧ್ಯವಿಲ್ಲ.”

ಆಶ್ಚರ್ಯ ಅದ್ಭುತ !

ಇದನ್ನು ಕೇಳಿದ ಆಯುಷ್ಮಂತ ಉದಯಿಯು ಇಂತೆಂದನು- “ಭಂತೆ ಆಶ್ಚರ್ಯ, ಭಂತೆ ಅದ್ಭುತ! ಮಹಾನುಭಾವರೂ ಮಹಾಸಮರ್ಥರೂ ಆದ ಭಗವಾನರು ತಮ್ಮ ಬಗೆಗೆ ತಾವೇ ಪ್ರಶಂಸೆ ಮಾಡಿಕೊಳ್ಳದಿರುವುದು ಅದ್ಭುತವಾದುದು. ಸಂತೃಪ್ತರೂ, ಶಾಂತರೂ, ನಿರ್ಲಿಪ್ತರೂ ಆದ ಅವರ ದರ್ಶನವೇ ಅದ್ಭುತವಾದುದು. ಇತರ ಧರ್ಮಗಳನ್ನು ಅನುಸರಿಸುವ ಪರಿಬ್ಬಾಜಕರು ಇವುಗಳಲ್ಲಿ ಒಂದು ಅಂಶವನ್ನು ಅರ್ಥಮಾಡಿಕೊಂಡು ಅನುಸರಿಸಿದರೆ, ಅವರು ಯಶಸ್ವಿಗಳೇ ಆಗುತ್ತಾರೆ. ಸಂತೃಪ್ತರೂ, ಶಾಂತರೂ, ನಿರ್ಲಿಪ್ತರೂ ಆದ ಅವರ ದರ್ಶನವೇ ಅದ್ಭುತವಾದದ್ದು. ಮಹಾನುಭಾವರೂ ಮಹಾಸಮರ್ಥರೂ ಆದ ಭಗವಾನರು ತಮ್ಮ ಪ್ರಶಂಸೆಯನ್ನು ಮಾಡಿಕೊಳ್ಳದಿರುವುದು ಅದ್ಭುತವಾದದ್ದು.”

“ಉದಯಿ, ಸಂತೃಪ್ತರೂ ಶಾಂತರೂ ನಿರ್ಲಿಪ್ತರೂ ಆದ ತಥಾಗತರನ್ನು ನೋಡುತ್ತಿರುವೆಯಷ್ಟೆ. ಮಹಾನುಭಾವರೂ, ಮಹಾಸಮರ್ಥರೂ ಆದ ತಥಾಗತನು ತನ್ನನ್ನು ತಾನೇ ಪ್ರಶಂಶಿಸಿಕೊಳ್ಳುವುದಿಲ್ಲ. ಉದಯಿ, ಅನ್ಯ ಧಮ್ಮಗಳನ್ನನುಸರಿಸುವ ಪರಿಬ್ಬಾಜಕರು ಇವುಗಳಲ್ಲಿ ಒಂದು ಅಂಶವನ್ನು ಅರ್ಥಮಾಡಿಕೊಂಡು ಅನುಸರಿಸಿದರೂ ಅವರು ಯಶಸ್ವಿಗಳೇ ಆಗುತ್ತಾರೆ. ಮಹಾನುಭಾವರೂ ಮಹಾಸಮರ್ಥರೂ ಆದ ತಥಾಗತನು ಆತ್ಮಪ್ರಶಂಸೆಯನ್ನು ಮಾಡಿಕೊಳ್ಳದೆ ನಿರ್ಲಿಪ್ತನೂ, ಶಾಂತನೂ ಸಂತೃಪ್ತನೂ ಆಗಿರುವುದನ್ನು ಗಮನಿಸು.”

ಮತ್ತೆ ಭಗವಾನರು ಆಯುಷ್ಮಂತನಾದ ಸಾರಿಪುತ್ತನಿಗೆ ಇಂತೆಂದರು- “ಸಾರಿಪುತ್ತ, ಭಿಕ್ಷುಗಳಿಗೆ, ಭಿಕ್ಷುಣಿಯರಿಗೆ, ಉಪಾಸಕರಿಗೆ, ಉಪಾಸಿಕರಿಗೆ ಈ ಧಮ್ಮವನ್ನು ಆಗಿಂದಾಗ ಬೋಧಿಸು. ಸಾರಿಪುತ್ತ, ತಥಾಗತನ ಬಗೆಗೆ ಶಂಕೆಯನ್ನಿಟ್ಟುಕೊಂಡಿರುವ ಅಥವಾ ಅವನನ್ನು ತಪ್ಪಾಗಿ ಅರ್ಥಮಾಡಿಕೊಂಡಿರುವ ಮೂಢನೊಬ್ಬನು ಈ ಧಮ್ಮವನ್ನು ಕೇಳಿದಾಗ ತಥಾಗತನ ಬಗೆಗಿರುವ ಶಂಕೆಯನ್ನೂ ಅವನ ಬಗೆಗಿರುವ ಅಪಾರ್ಥವನ್ನೂ ಬಿಡುತ್ತಾನೆ”.

ಆಯುಷ್ಮಂತನಾದ ಸಾರಿಪುತ್ತನು ಭಗವಾನರ ಸಮ್ಮುಖದಲ್ಲಿಯೇ ಪ್ರಸನ್ನತೆಯನ್ನುಂಟುಮಾಡುವ ಇಷ್ಟೆಲ್ಲವನ್ನೂ ಹೇಳಿದನು. ಆದುದರಿಂದ ಈ ಸುತ್ತಕ್ಕೆ ‘ಪ್ರಸನ್ನತೆಯನ್ನುಂಟುಮಾಡುವ ಮಾತುಗಳು’ ಅಥವಾ ‘ಸಂಪಸಾದನೀಯ ಸುತ್ತ’ ಎಂದೇ ಹೆಸರಾಯಿತು.

ಇಲ್ಲಿಗೆ ಸಂಪಸಾದನೀಯ ಸುತ್ತ ಮುಗಿಯಿತು.

ಟಿಪ್ಪಣಿಗಳು [2]