..............................
ಹೀಗೇ ಕೇಳಿದ್ದೇನೆ; ಒಮ್ಮೆ ಭಗವಾನರು ಶಾಕ್ಯರ ರಾಜ್ಯದಲ್ಲಿನ ವೇಧಞ್ಞ31 ಎಂಬ ಶಾಕ್ಯರಿಗೆ ಸೇರಿದ ಆಮ್ರವನದಲ್ಲಿದ್ದ ಪ್ರಾಸಾದದಲ್ಲಿ32 ತಂಗಿದ್ದರು. ಆಗ ನಿಗಂಠನಾಟಪುತ್ತನು ಪಾವಾ ನಗರದಲ್ಲಿ ಕಾಲವಾಗಿದ್ದನು.33 ಅವನು ಕಾಲವಾದ ಮೇಲೆ ಇತರ ನಿಗಂಠರು ಜಗಳವಾಡಿಕೊಂಡು ಹೊಡೆದಾಡಿಕೊಂಡು ಎರಡು ಗುಂಪಾಗಿ ಹೋದರು. ಪರಸ್ಪರ ವಿವಾದಗಳಲ್ಲಿ ತೊಡಗಿ ಪರಸ್ಪರ ದೂಷಿಸಿಕೊಂಡು ಕಾಲ ಹಾಕುತ್ತಿದ್ದರು. “ನಿನಗೆ ಧಮ್ಮ ವಿನಯಗಳು ಗೊತ್ತಿಲ್ಲ, ನನಗೆ ಧಮ್ಮ ವಿನಯಗಳು ಗೊತ್ತಿವೆ. ನಿನಗೆ ಧಮ್ಮವಿನಯಗಳು ಗೊತ್ತಿಲ್ಲದಿರುವುದು ಯಾವ ಕಾರಣದಿಂದ? ನೀನು ಮಿಥ್ಯಾದೃಷ್ಟಿಯುಳ್ಳವನು, ನಾನಾದರೋ ಸಮ್ಯಕ್ ದೃಷ್ಟಿಯುಳ್ಳವನು. ನಾನು ಕಲಿತಿರುವವನು, ನೀನಾದರೋ ಏನನ್ನೂ ಕಲಿತಿಲ್ಲ. ಮೊದಲು ಹೇಳಬೇಕಾದುದನ್ನು ಕೊನೆಯಲ್ಲಿ ಹೇಳುತ್ತೀಯೆ, ಕೊನೆಯಲ್ಲಿ ಹೇಳಬೇಕಾದ್ದನ್ನು ಮೊದಲೇ ಹೇಳಿಬಿಡುತ್ತೀಯೆ. ನೀನು ಮಾಡುತ್ತಿದ್ದ ವ್ಯಾಖ್ಯಾನವೆಲ್ಲವೂ ತಲೆಕೆಳಕಾಗಿ ಹೋಗಿದೆ. ನಿನ್ನ ವಾದವೂ ಮುಗಿದು ಹೋಯಿತು. ನೀನು ಸೋತು ಹೋಗಿದ್ದೀಯೆ, ವಾದವನ್ನು ಬಿಡು. ನೀನು ಸಿಕ್ಕಿಕೊಂಡಿರುವ ಇಕ್ಕಟ್ಟಿನಿಂದ ತಪ್ಪಿಸಿಕೋ” ಎಂದು ಒಬ್ಬರನ್ನೊಬ್ಬರು ಮೂದಲಿಸುತ್ತಿದ್ದರು. ನಿಗಂಠರು ಪರಸ್ಪರ ಕೊಲೆ ಮಾಡುವವರಂತೆ ತೋರುತ್ತಿದ್ದರು. ನಾಟಪುತ್ತನ ಶಿಷ್ಯರಾದ ಬಿಳಿ ಬಟ್ಟೆಯ ಗೃಹಸ್ಥ ಶಿಷ್ಯರು ಆತನ ಪಂಥಕ್ಕೆ ಸೇರಿದ ಸಂನ್ಯಾಸಿ ಶಿಷ್ಯರ ಬಗೆಗೆ ಜುಗುಪ್ಸೆಗೊಂಡರು. ಅಸಹ್ಯಪಟ್ಟುಕೊಂಡರು, ಕೋಪಗೊಂಡರು, ಧಮ್ಮ ವಿನಯಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳದ ಅವರಿಗೆ (ಗುರುವು) ಅವನ್ನು ಸರಿಯಾಗಿ ವಿವರಿಸಿರಲಿಲ್ಲ. ಸರಿಯಾದ ದಾರಿಯಲ್ಲಿ ಕೊಂಡೊಯ್ಯುವಂಥದಾಗಿರಲಿಲ್ಲ. ಸಮ್ಮಾಸಂಬುದ್ಧರು ವಿವರಿಸಿದುದಕ್ಕೆ ತೀರಾ ಬೇರೆಯಾಗಿರುವ ಧಮ್ಮವು ಅವರಿಗೆ ಶಾಂತಿಯನ್ನು ಕೊಡುವಂಥದಾಗಿರಲಿಲ್ಲ.
ಆಗ ಸಮಣನಾಗಬೇಕೆಂಬ ಉದ್ದೇಶದಿಂದ ಸಾಧನೆ ಮಾಡುತ್ತಿದ್ದ ಚುಂದನು ಪಾವಾದಲ್ಲಿ ಮಳೆಗಾಲವನ್ನು ಕಳೆದು (ವರ್ಷಾವಾಸವನ್ನು ಮಾಡಿ) ಸಾಮಗಾಮದಲ್ಲಿ ತಂಗಿದ ಆಯುಷ್ಮಂತನಾದ ಆನಂದನ ಬಳಿಗೆ ಬಂದನು. ಅವನಿಗೆ ಅಭಿವಂದಿಸಿ ಒಂದುಕಡೆ ಕುಳಿತುಕೊಂಡನು. ಆಮೇಲೆ ಆನಂದನನ್ನು ಕುರಿತು ಇಂತೆಂದನು- “ಭಂತೆ, ನಾಟಪುತ್ತ, ನಿಗಂಠನು ಪಾವಾದಲ್ಲಿ ಕಾಲವಾಗಿ ಹೋಗಿದ್ದಾನೆ. ಆತನ ಮರಣಾನಂತರ ಅವನ ಶಿಷ್ಯರು ಎರಡು ಗುಂಪಾಗಿ ಹೋಗಿದ್ದಾರೆ... ತೀರಾ ಬೇರೆಯಾಗಿರುವ ಧಮ್ಮವು ಅವರಿಗೆ ಶಾಂತಿಯನ್ನು ಕೊಂಡುವಂಥದ್ದಾಗಿಲ್ಲ.
ಸಮಣೋದ್ದೇಸ ಚುಂದನು ಹೇಳಿದುದನ್ನು ಕೇಳಿದ ಆನಂದನು ಹೀಗೆ ಪ್ರತ್ಯುತ್ತರವಿತ್ತನು. “ಗೆಳೆಯ ಚುಂದ, ಈ ವಿಷಯವು ಭಗವಾನರ ಗಮನಕ್ಕೆ ತರಲು ತಕ್ಕುದ್ದಾಗಿದೆ. ಭಗವಾನರ ಬಳಿಗೆ ಹೋಗೋಣ, ಭಗವಾನರಿಗೆ ವಿವರಿಸೋಣ” ಚುಂದನು “ಹಾಗೆಯೇ ಆಗಲಿ ಭಂತೆ” ಎಂದು ಹೇಳಿದನು.
ಆನಂತರ ಆಯುಷ್ಮಂತನಾದ ಆನಂದನೂ ಸಮಣೋದ್ದೇಸ ಚುಂದನೂ ಭಗವಾನರ ಬಳಿಗೆ ಹೋದರು. ಅವರಿಗೆ ನಮಸ್ಕರಿಸಿ ಒಂದುಕಡೆ ಕುಳಿತುಕೊಂಡರು. ಆಮೇಲೆ ಆನಂದನು ಭಗವಾನರಿಗೆ ಹೀಗೆ ಹೇಳಿದನು- “ಭಂತೆ, ಈ ಸಮಣೋದ್ದೇಸ ಚುಂದನು ನಿಗಂಠನಾಟಪುತ್ತನು ಪಾವಾದಲ್ಲಿ ಕಾಲವಾಗಿ ಹೋಗಿದ್ದಾನೆ. ಆತನ ಮರಣಾ ನಂತರ ಅವನ ಶಿಷ್ಯರು ಇಬ್ಭಾಗವಾಗಿದ್ದಾರೆ... ತೀರಾ ಬೇರೆಯಾಗಿರುವ ಧಮ್ಮವು ಅವರಿಗೆ ಶಾಂತಿಯನ್ನು ಕೊಡುವಂಥದ್ದಾಗಿಲ್ಲ.”
ಸಮ್ಮಾಸಂಬುದ್ಧನಲ್ಲದವನ ಧಮ್ಮ ವಿನಯಗಳು
“ಚುಂದ, ಸಮ್ಮಾಸಂಬುದ್ಧನಾದವನಿಂದ ವಿವರಿಸಲ್ಪಡದಿರುವ ಧಮ್ಮ ವಿನಯಗಳು ಸರಿಯಾದ ದಾರಿಯಲ್ಲಿ ಕೊಂಡೊಯ್ಯಲಾರವು, ಶಾಂತಿಯನ್ನು ಕೊಡಲಾರವು. ಅವರಿಗೆ ಧಮ್ಮ ವಿನಯಗಳು ಸರಿಯಾಗಿ ವಿವರಿಸಲ್ಪಟ್ಟಿರುವುದಿಲ್ಲ. ಇಲ್ಲೊಬ್ಬ ಸಮ್ಯಕ್ ಸಂಬುದ್ಧನಲ್ಲದ ಗುರು ಇದ್ದಾನೆ ಎನ್ನು. ಅವನಿಂದ ಪ್ರತಿಪಾದಿಸಲ್ಪಡುವ ಧರ್ಮವು ಸರಿಯಾದ ದಾರಿಯಲ್ಲಿ ಕೊಂಡೊಯ್ಯುವುದಿಲ್ಲ, ಸರಿಯಾಗಿ ವಿವರಿಸಲ್ಪಡುವುದೂ ಇಲ್ಲ, ಶಾಂತಿಯನ್ನೂ ನೀಡುವುದಿಲ್ಲ. ಸರಿಯಾಗಿ ಆಚರಿಸಲ್ಪಡುವುದೂ ಇಲ್ಲ. ಆ ಧಮ್ಮವನ್ನನುಸರಿಸುವ ಶಿಷ್ಯನು ಅದರ ಎಲ್ಲಾ ಅಂಶಗಳನ್ನೂ ಪಾಲಿಸುವುದಿಲ್ಲ, ಅದು ತೋರಿಸಿದ ಮಾರ್ಗದಲ್ಲಿ ಹೋಗುವುದಿಲ್ಲ. ಆ ಧರ್ಮದಂತೆ ನಡೆದುಕೊಳ್ಳುವುದಿಲ್ಲ. ಧರ್ಮದಿಂದ ದೂರವಾಗಿಯೇ ಉಳಿದಿರುತ್ತಾನೆ. ಅವನಿಗೆ ಮತ್ತೊಬ್ಬನು ಹೀಗೆ ಹೇಳಬಹುದು- ‘ಗೆಳೆಯ, ನೀನು ಧರ್ಮವನ್ನು ತಿಳಿದುಕೊಳ್ಳುವ ಅವಕಾಶವನ್ನು ಪಡೆದುಕೊಂಡಿರುವೆ. ಆದರೆ ನಿನ್ನ ಗುರು ಸಮ್ಮಾಸಂಬುದ್ಧನಲ್ಲ. ಅವನು ಧರ್ಮವನ್ನು ಸರಿಯಾಗಿ ವಿವರಿಸಿಲ್ಲ. ನೀನು ಅವನ ಧರ್ಮವನ್ನು ಸರಿಯಾಗಿ ಪಾಲಿಸುವುದಿಲ್ಲ. ಅದು ಸರಿಯಾದ ದಾರಿಯಲ್ಲಿ ಗುರಿಗೆ ಕೊಂಡೊಯ್ಯುವುದಿಲ್ಲ. ಅದು ಶಾಂತಿಯನ್ನು ಕೊಡಲಾರದು. ನೀನು ಅದನ್ನು ಸರಿಯಾಗಿ ಆಚರಿಸುತ್ತಿಲ್ಲ. ಅದರ ಎಲ್ಲ ಅಂಶಗಳನ್ನು ಪಾಲಿಸುತ್ತಿಲ್ಲ. ಆ ಧರ್ಮದಂತೆ ನಡೆದುಕೊಳ್ಳುತ್ತಿಲ್ಲ. ಧರ್ಮದಿಂದ ದೂರವಾಗಿಯೇ ಉಳಿದಿದ್ದೀಯೆ.’ ಚುಂದ, ಗುರುವೂ ಅವನು ಪ್ರತಿಪಾದಿಸುವ ಧರ್ಮವೂ ಕೆಟ್ಟುದ್ದಾಗಿದೆ. ಅವನ ಶಿಷ್ಯನಾದರೋ ಪ್ರಶಂಸಾರ್ಹನಾಗಿದ್ದಾನೆ. ಚುಂದ, ಶಿಷ್ಯನಿಗೆ ಒಬ್ಬನು ಹೀಗೆ ಹೇಳಬಹುದು- ‘ಆಯುಷ್ಮಂತ, ನಿನ್ನ ಗುರುವಿನಿಂದ ಬೋಧಿತವಾಗಿರುವ, ವಿವರಿಸಲ್ಪಟ್ಟಿರುವ ಧರ್ಮದಂತೆಯೇ ನಡೆದುಕೋ”. ಇತರರನ್ನು ಪ್ರೇರೇಪಿಸುವ ಇತರರಿಂದ ಪ್ರೇರೇಪಿಸಲ್ಪಡುವ ಪ್ರೇರಣೆಗೊಂಡು ಅವರಂತೆ ನಡೆದುಕೊಳ್ಳುವ ಎಲ್ಲರೂ ಪುಣ್ಯವಲ್ಲದುದನ್ನೇ ಮಾಡುತ್ತಾರೆ. ಇದಕ್ಕೇನು ಕಾರಣ? ಚುಂದ, ಅದರ ಧಮ್ಮ ವಿನಯಗಳ ವಿವರಣೆ ಸರಿಯಾಗಿ ಆಗಿರುವುದಿಲ್ಲ. ಅವು ಸರಿಯಾದ ಗುರಿಗೆ ಕೊಂಡೊಯ್ಯುವುದಿಲ್ಲ. ಅಂಥವರ ಧರ್ಮವು ಸರಿಯಾದ ದಾರಿಯಲ್ಲಿ ಕೊಂಡೊಯ್ಯಲಾರದು. ಶಾಂತಿಯನ್ನು ತರಲಾರದು. ಆ ಧರ್ಮವು ಸಮ್ಮಾಸಂಬುದ್ಧರು ಬೋಧಿಸುವ ಧಮ್ಮವಾಗಿರುವುದಿಲ್ಲ.
“ಚುಂದ, ಇಲ್ಲೊಬ್ಬ ಸಮ್ಮಾಸಂಬುದ್ಧನಲ್ಲದ ಗುರು ಇದ್ದಾನೆ ಎನ್ನು. ಅವನಿಂದ ಪ್ರತಿಪಾದಿಸಲ್ಪಡುವ ಧರ್ಮವು ಸರಿಯಾದ ದಾರಿಯಲ್ಲಿ ಕೊಂಡೊಯ್ಯುವುದಿಲ್ಲ. ಶಾಂತಿಯನ್ನು ನೀಡುವುದಿಲ್ಲ. ಇದನ್ನು ಪರಿಗಣಿಸು. ಅಧರ್ಮವನ್ನನುಸರಿಸುವವನು ಅದರ ಎಲ್ಲ ಅಂಶಗಳನ್ನೂ ಪಾಲಿಸುತ್ತಾನೆ. ಅದು ತೋರಿಸುವ ದಾರಿಯಲ್ಲಿ ಹೋಗುತ್ತಾನೆ. ಆ ಧರ್ಮದಂತೆ ನಡೆದುಕೊಳ್ಳುತ್ತಾನೆ. ಅವನು ಆ ಧರ್ಮದಿಂದ ದೂರವಾಗುವುದಿಲ್ಲ. ಅವನಿಗೆ ಇನ್ನೊಬ್ಬ ಹೀಗೆ ಹೇಳಬಹುದು- ‘ಗೆಳೆಯ, ನೀನು ಅನುಸರಿಸುತ್ತಿರುವ ಧರ್ಮದಿಂದ ನಿನಗೆ ಲಾಭವಾಗುತ್ತಿಲ್ಲ. ನಿನಗೆ ಸರಿಯಾದ ಅವಕಾಶವು ದೊರೆತಿಲ್ಲ. ನಿನ್ನ ಗುರು ಸಮ್ಮಾಸಂಬುದ್ಧನಲ್ಲ. ಧರ್ಮವು ಸರಿಯಾಗಿ ವಿವರಿಸಲ್ಪಟ್ಟಿಲ್ಲ. ಅದರಂತೆ ನಡೆದುಕೊಳ್ಳುವವರಿಲ್ಲ. ಅವನ ಧರ್ಮವು ಸರಿಯಾದ ದಾರಿಯಲ್ಲಿ ಕೊಂಡೊಯ್ಯುವುದಿಲ್ಲ. ಶಾಂತಿಯನ್ನು ತರುವುದಿಲ್ಲ. ಸಮ್ಮಾಸಂಬುದ್ಧನಲ್ಲದವನಿಂದ ಪ್ರತಿಪಾದಿತವಾಗಿರುವ ಧರ್ಮದಂತೆ ನೀನು ಚಾಚುತಪ್ಪದೆ ನಡೆದುಕೊಳ್ಳುತ್ತಿದ್ದೀಯೆ. ಅದು ತೋರಿಸುವ ದಾರಿಯಲ್ಲಿಯೇ ಹೋಗುತ್ತಿದ್ದೀಯೆ. ಅದನ್ನು ಅನುಸರಿಸುತ್ತಿದ್ದೀಯೆ. ಆ ಧರ್ಮದಿಂದ ದೂರವಾಗಿಲ್ಲ. ಚುಂದ, ಇಂಥ ಗುರುವೂ ಅವನು ಪ್ರತಿಪಾದಿಸುವ ಧರ್ಮವೂ ನಿಂದಾರ್ಹವಾಗಿವೆ. ಅಂಥ ಶಿಷ್ಯನು ಪ್ರಶಂಸಾರ್ಹನಲ್ಲ. ಚುಂದ, ಅಂಥ ಶಿಷ್ಯನಿಗೆ ಮತ್ತೊಬ್ಬನು ಹೀಗೆ ಹೇಳಬಹುದು- ‘ಆಯುಷ್ಮಂತ, ನೀನು ಗುರು ಹೇಳಿದ ಮಾರ್ಗದಲ್ಲಿ ಹೋಗುತ್ತಿದ್ದೀಯೆ. ಗುರುವು ಹೇಳಿದುದನ್ನು ಆರಾಧಿಸುತ್ತಿದ್ದೀಯೆ?’ ಯಾರು ಹೀಗೆ ಪ್ರಶಂಸಿಸುತ್ತಾರೋ ಯಾರನ್ನು ಪ್ರಶಂಸಿಸುತ್ತಾರೋ ಯಾರು ಪ್ರಶಂಸನೆಗೊಳಗಾಗಿ ಮತ್ತಷ್ಟು ಉತ್ಸಾಹಗೊಳ್ಳುತ್ತಾರೋ ಅವರೆಲ್ಲರೂ ಪುಣ್ಯವಲ್ಲದುದನ್ನೇ ಮಾಡುತ್ತಾರೆ. ಕಾರಣವೇನು? ಚುಂದ, ಅವರ ಧಮ್ಮ ವಿನಯಗಳು ಸರಿಯಗಿ ವಿವರಿಸಲ್ಪಟ್ಟಿಲ್ಲ. ಸರಿಯಾದ ಗುರಿಯನ್ನು ಮುಟ್ಟಿಸುವುದಿಲ್ಲ. ಶಾಂತಿಯನ್ನು ಕೊಡುವುದಿಲ್ಲ. ಸಮ್ಮಾಸಂಬುದ್ಧನಿಂದ ಪ್ರತಿಪಾದಿತವಾಗಿಲ್ಲ.
ಸಮ್ಮಾಸಂಬುದ್ಧನ ಧಮ್ಮ ವಿನಯಗಳು
“ಚುಂದ, ಸಮ್ಮಾಸಂಬುದ್ಧನೊಬ್ಬನು ಇಲ್ಲಿದ್ದಾನೆನ್ನು. ಅವನ ಧಮ್ಮವು ಚೆನ್ನಾಗಿ ವಿವರಿಸಲ್ಪಟ್ಟಿದೆ, ಚೆನ್ನಾಗಿ ಹೇಳಲ್ಪಟ್ಟಿದೆ. ಒಳ್ಳೆಯ ಮಾರ್ಗದಲ್ಲಿ ಕೊಂಡೊಯ್ಯುತ್ತಿದೆ. ಶಾಂತಿಯನ್ನು ತರುತ್ತದೆ. ಸಮ್ಮಾಸಂಬುದ್ಧನಿಂದಲೇ ಪ್ರತಿಪಾದಿತವಾಗಿದೆ. ಆದರೆ ಶಿಷ್ಯನು ಆ ಧಮ್ಮವನ್ನು ಸರಿಯಾಗಿ ಅರಿಯುವುದಿಲ್ಲ. ಅದನ್ನು ಚಾಚುತಪ್ಪದಂತೆ ಪಾಲಿಸುವುದಿಲ್ಲ. ಅದು ತೋರಿಸುವ ದಾರಿಯಲ್ಲಿ ನಡೆಯುವುದಿಲ್ಲ. ಅದರ ಹೊರಗೇ ಉಳಿದಿರುತ್ತಾನೆ. ಅವನಿಗೆ ಮತ್ತೊಬ್ಬನು ಹೀಗೆ ಹೇಳಬಹುದು- ‘ಗೆಳೆಯ, ನೀನು ನಿನ್ನ ಗುರುವಿನ ಧಮ್ಮದಿಂದ ಲಾಭ ಪಡೆದುಕೊಂಡಿಲ್ಲ. ಅವಕಾಶವನ್ನು ಕಳೆದುಕೊಂಡುಬಿಟ್ಟೆ. ನಿನ್ನ ಗುರುವಾದರೋ ಸಮ್ಮಾಸಂಬುದ್ಧನೇ ಆಗಿದ್ದಾನೆ. ಅವನಿಂದ ಧಮ್ಮವು ಚೆನ್ನಾಗಿ ವಿವರಿಸಲ್ಪಟ್ಟಿದೆ. ಅದು ಒಳ್ಳೆಯ ಮಾರ್ಗದಲ್ಲಿ ಕೊಂಡೊಯ್ಯುತ್ತದೆ. ನೀನು ಆ ಧಮ್ಮವನ್ನು ಅರಿತು ಅದನ್ನು ಚಾಚುತಪ್ಪದೆ ಪಾಲಿಸುತ್ತಿಲ್ಲ. ಅದು ತೋರಿಸುವ ದಾರಿಯಲ್ಲಿ ಹೋಗುತ್ತಿಲ್ಲ. ಅದನ್ನು ಅನುಸರಿಸುತ್ತಿಲ್ಲ. ನೀನು ಧಮ್ಮದ ಹೊರಗೆ ಉಳಿದುಬಿಟ್ಟಿದ್ದೀಯೇ.’ ಹೀಗೆ ಗುರು ಮತ್ತು ಧಮ್ಮಗಳ ಪ್ರಶಂಸೆಯಗುತ್ತದೆ. ಶಿಷ್ಯನ ತೆಗಳಿಕೆಯಾಗುತ್ತದೆ. ಇಂಥ ಶಿಷ್ಯನಿಗೆ ಮತ್ತೊಬ್ಬನು ಹೀಗೆ ಹೇಳಬಹುದು- ‘ಆಯುಷ್ಮಂತ, ನಿನ್ನ ಗುರುವಿನಿಂದ ಪ್ರತಿಪಾದಿತವಾದ ಧಮ್ಮವು ಶಾಂತಿಯನ್ನು ತರುತ್ತದೆ.
“ಚುಂದ, ಇಲ್ಲಿ ಸಮ್ಮಾಸಂಬುದ್ಧನೊಬ್ಬನಿದ್ದಾನೆ ಎನ್ನು. ಧಮ್ಮವು ಅವನಿಂದ ಚೆನ್ನಾಗಿ ವಿವರಿಸಲ್ಪಟ್ಟಿದೆ. ಅದು ಒಳ್ಳೆಯ ಗುರಿಗೆ ಕೊಂಡೊಯ್ಯುತ್ತದೆ. ಶಾಂತಿಯನ್ನು ತರುತ್ತದೆ. ಆ ಧಮ್ಮವನ್ನು ತಿಳಿದ ಶಿಷ್ಯನೊಬ್ಬನು ಚಾಚುತಪ್ಪದೆ ಪಾಲಿಸುತ್ತಾನೆ. ಅದು ತೋರಿಸುವ ಮಾರ್ಗದಲ್ಲಿಯೇ ಹೋಗುತ್ತಾನೆ. ಆ ಧಮ್ಮದ ಹೊರಗುಳಿಯುವುದಿಲ್ಲ. ಅಂಥವನಿಗೆ ಮತ್ತೊಬ್ಬನು ಹೀಗೆ ಹೇಳಬಹುದು. ‘ಓ ಗೆಳೆಯ, ನೀನು ಧಮ್ಮದಿಂದ ಒಳ್ಳೆಯ ಲಾಭವನ್ನು ಪಡೆದಿರುವೆ. ಒಳ್ಳೆಯ ಅವಕಾಶವನ್ನು ಹೊಂದಿರುವೆ. ನಿನ್ನ ಗುರುವು ಸಮ್ಮಾಸಂಬುದ್ಧ. ಧಮ್ಮವು ಚೆನ್ನಾಗಿ ವಿವರಿಸಲ್ಪಟ್ಟಿದೆ. ಒಳ್ಳೆಯ ಗುರಿಗೆ ಕೊಂಡೊಯ್ಯುತ್ತದೆ. ಶಾಂತಿಯನ್ನು ಕೊಡುತ್ತದೆ. ಅದನ್ನು ಕುರಿತು ಚಾಚುತಪ್ಪದೆ ಪಾಲಿಸುತ್ತಿರುವೆ. ಅದು ತೋರಿಸಿರುವ ದಾರಿಯಲ್ಲಿ ನಡೆ, ಅದನ್ನು ಅನುಸರಿಸು. ಧಮ್ಮದ ಹೊರಗುಳಿಯಬೇಡ! ಹೀಗೆ ಗುರುವೂ, ಧಮ್ಮವೂ ಪ್ರಶಂಸೆಗೊಳ್ಳುತ್ತದೆ. ಶಿಷ್ಯನೂ ಪ್ರಶಂಸೆಯನ್ನು ಪಡೆಯುತ್ತಾನೆ. ಚುಂದ, ಅಂಥ ಶಿಷ್ಯನಿಗೆ ಮತ್ತೊಬ್ಬನು ಹೀಗೆ ಹೇಳುತ್ತಾನೆ- ‘ಆಯುಷ್ಮಂತ, ನೀನು ಧಮ್ಮವನ್ನು ತಿಳಿದು ಅದರ ಮಾರ್ಗದಲ್ಲಿಯೇ ಹೋಗುತ್ತಿದ್ದೀಯೆ’ ಹೀಗೆ ಪ್ರಶಂಸೆ ಮಾಡುವವನೂ, ಪ್ರಶಂಸೆ ಮಾಡಿಸಿಕೊಂಡವನೂ ಪ್ರಶಂಸೆ ಮಾಡಿಸಿಕೊಂಡು ಮತ್ತಷ್ಟು ಉತ್ಸಾಹದಿಂದ ಒಳ್ಳೆಯ ಮಾರ್ಗದಲ್ಲಿಯೇ ಹೋಗುವವನೂ ಬಹು ಪುಣ್ಯವನ್ನು ಗಳಿಸುತ್ತಾರೆ. ಇದಕ್ಕೇನು ಕಾರಣ? ಚುಂದ, ಈ ಧಮ್ಮ ವಿನಯಗಳು ಚೆನ್ನಾಗಿ ಪ್ರತಿಪಾದಿತವಾಗಿದೆ, ಚೆನ್ನಾಗಿ ವಿವರಿಸಲ್ಪಟ್ಟಿವೆ. ಒಳ್ಳೆಯ ಗುರಿಗೆ ಕೊಂಡೊಯ್ಯುತ್ತವೆ. ಸಮ್ಮಾಸಂಬುದ್ಧರಿಂದ ವಿವರಿಸಲ್ಪಟ್ಟಿರುವ ಈ ಧಮ್ಮವು ಶಾಂತಿಯನ್ನು ತರುತ್ತದೆ.
ಶಿಷ್ಯನಿಗೆ ಅನುತಾಪವಾಗುವುದು
“ಚುಂದ, ಈ ಲೋಕದಲ್ಲಿ ಸಮ್ಮಾಸಂಬುದ್ಧನಾದ ಅರಹಂತನು ಉದಿಸುತ್ತಾನೆನ್ನು. ಧಮ್ಮವು ಅವನಿಂದ ಚೆನ್ನಾಗಿ ವಿವರಿಸಲ್ಪಟ್ಟಿರುತ್ತದೆ. ಆ ಧಮ್ಮವು ಒಳ್ಳೆಯ ಗುರಿಯನ್ನು ಮುಟ್ಟಿಸುತ್ತದೆ. ಶಾಂತಿಯನ್ನು ತರುತ್ತದೆ. ಅಂಥ ಸದ್ಧಮ್ಮವನ್ನು ಶಿಷ್ಯರು ತಿಳಿಯದೆ, ಬ್ರಹ್ಮಚರ್ಯವನು ಪಾಲಿಸದೆ ಎಲ್ಲ ಅಂಶಗಳನ್ನು ತಿಳಿಯದೆ ಹೋದರೆ ಅದಕ್ಕೆ ಕಾರಣ ಗುರುವು ತಾನು ಮರಣ ಹೊಂದುವ ಮುನ್ನ ದೇವತೆಗಳಿಗೂ ಮನುಷ್ಯರಿಗೂ ಧಮ್ಮವನ್ನು ವಿವರಿಸದಿರುವುದೇ ಕಾರಣವಾಗಿರುತ್ತದೆ. ಚುಂದ, ಅಂಥ ಗುರುವು ಕಾಲವಾದಾಗ ಶಿಷ್ಯರಿಗೆ ತುಂಬ ಅನುತಾಪವಾಗುತ್ತದೆ. ಇದಕ್ಕೇನು ಕಾರಣ? ‘ಈ ಲೋಕದಲ್ಲಿ ಸಮ್ಮಾಸಂಬುದ್ಧನಾದ ಗುರುವು ಹುಟ್ಟಿದ್ದ ಆ ಅರಹಂತನು ಹುಟ್ಟಿದ್ದು ನಮಗೋಸ್ಕರ. ಚೆನ್ನಾಗಿ ವಿವರಿಸಲ್ಪಟ್ಟಿರುವ ಒಳ್ಳೆಯ ಗುರಿಗೆ ಕೊಂಡೊಯ್ಯುವ ಶಾಂತಿಯನ್ನು ಕೊಡುವ ಧಮ್ಮವನ್ನು ಆ ಸಮ್ಮಾಸಂಬುದ್ಧನು ತಿಳಿಸಿದ. ಆ ಸದ್ಧಮ್ಮವನ್ನು ನಾವು ಚೆನ್ನಾಗಿ ಅರಿಯಲಿಲ್ಲ. ದೇವತೆಗಳಿಗೂ ಮನುಷ್ಯರಿಗೂ ಧಮ್ಮದ ಎಲ್ಲ ಅಂಶಗಳನ್ನೂ ಪ್ರಕಾಶಪಡಿಸುವ ಮೊದಲೇ ಗುರುವು ಮರಣ ಹೊಂದಿದ.’ ಹೀಗೆ ಚುಂದ, ಗುರುವಿನ ಮರಣದಿಂದ ಶಿಷ್ಯರಿಗೆ ಅನುತಾಪವುಂಟಾಗುತ್ತದೆ.
ಶಿಷ್ಯನಿಗೆ ಅನುತಾಪವಾಗುವುದು
“ಚುಂದ, ಲೋಕದಲ್ಲಿ ಸಮ್ಮಾಸಂಬುದ್ಧನಾದ ಅರಹಂತನೊಬ್ಬನು ಉದಿಸುತ್ತಾನೆನ್ನು. ಧಮ್ಮವು ಅವನಿಂದ ಚೆನ್ನಾಗಿ ವಿವರಿಸಲ್ಪಡುತ್ತದೆ. ಆ ಧಮ್ಮವು ಒಳ್ಳೆಯ ಗುರಿಯನ್ನು ಮುಟ್ಟಿಸುತ್ತದೆ. ಶಾಂತಿಯನ್ನು ತರುತ್ತದೆ. ಅಂಥ ಧಮ್ಮವನ್ನು ಶಿಷ್ಯರು ಸರಿಯಾಗಿ ತಿಳಿದುಕೊಂಡು ಬ್ರಹ್ಮಚರ್ಯವನ್ನು ಪಾಲಿಸಿ ಧಮ್ಮದ ಎಲ್ಲ ಅಂಶಗಳನ್ನು ಅರಿತುಕೊಂಡರೆ ಅದಕ್ಕೆ ಕಾರಣ ಗುರುವು ತಾನು ಮರಣ ಹೊಂದುವ ಮುನ್ನ ದೇವತೆಗಳಿಗೂ ಮನುಷ್ಯರಿಗೂ ವಿವರಿಸಿರುವುದೇ ಆಗಿರುತ್ತದೆ. ಚುಂದ, ಅಂಥ ಗುರುವು ಕಾಲವಾದಾಗ ಶಿಷ್ಯರಿಗೆ ಅನುತಾಪವಾಗುವುದಿಲ್ಲ, ಕಾರಣವೇನು? ‘ಲೋಕದಲ್ಲಿ ಸಮ್ಮಾಸಂಬುದ್ಧ ಹುಟ್ಟಿ ಧಮ್ಮವನ್ನು ಚೆನ್ನಾಗಿ ವಿವರಿಸಿದ್ದಾನೆ. ಒಳ್ಳೆಯ ಗುರಿಗೆ ಕೊಂಡೊಯ್ಯುವ ಶಾಂತಿಯನ್ನು ಕೊಡುವ ಧಮ್ಮವನ್ನು ಆ ಸಮ್ಮಾಸಂಬುದ್ಧನು ತಿಳಿಸಿದ್ದಾನೆ. ಸದ್ಧರ್ಮವನ್ನು ನಾವು ಅರಿತಿದ್ದೇವೆ. ದೇವತೆಗಳಿಗೂ ಮನುಷ್ಯರಿಗೂ ಧಮ್ಮದ ಎಲ್ಲ ಅಂಶಗಳನ್ನೂ ಮರಣ ಹೊಂದುವ ಮೊದಲೇ ಪ್ರಕಾಶಪಡಿಸಿದ್ದಾನೆ.’ ಹೀಗೆ ಅವರು ತಿಳಿಯುತ್ತಾರೆ. ಚುಂದ, ಗುರುವಿನ ಮರಣಕ್ಕಾಗಿ ಆ ಶಿಷ್ಯರು ಅನುತಾಪಪಡುವುದಿಲ್ಲ.
ಅಪರಿಪೂರ್ಣ ಬ್ರಹ್ಮಚರಿಯ
“ಚುಂದ, ಎಲ್ಲರೀತಿಯಲ್ಲಿಯೂ ಸಮರ್ಪಕವಾದ ಶ್ರೇಷ್ಠವಾದ ಮಾರ್ಗ ಇದ್ದರೂ, ಅದನ್ನು ವಿವರಿಸಬಲ್ಲ ಹಿರಿಯ ಗುರುವಾಗಲೀ ಬಹುದಿನಗಳ ಹಿಂದೆಯೇ ಮನೆಯನ್ನು ತೊರೆದ ಪಬ್ಬಜಿತನಾಗಲೀ ವಯಸ್ಸಾದ ಅನುಭವಸ್ಥನಾಗಲೀ ಇಲ್ಲದೆ ಹೋದರೆ ಆ ಮಾರ್ಗವು ಪರಿಪೂರ್ಣವಾಗಿರುವುದಿಲ್ಲ.
“ಎಲ್ಲ ರೀತಿಯಲ್ಲಿಯೂ ಸಮರ್ಪಕವಾದ ಶ್ರೇಷ್ಠವಾದ ಮಾರ್ಗ ಇದ್ದು ಅವನ್ನೂ ವಿವರಿಸಬಲ್ಲ ಹಿರಿಯ ಗುರು ಬಹುದಿನಗಳ ಹಿಂದೆಯೇ ಮನೆಯನ್ನು ತೊರೆದ ಪಬ್ಬಜಿತ ವಯಸ್ಸಾದ ಅನುಭವಸ್ಥ ಇದ್ದರೆ ಆ ಮಾರ್ಗವು ಪರಿಪೂರ್ಣವಾಗಿರುತ್ತದೆ.
“ಎಲ್ಲ ರೀತಿಯಲ್ಲಿಯೂ ಸಮರ್ಪಕವಾದ, ಶ್ರೇಷ್ಠವಾದ ಮಾರ್ಗ ಇದ್ದು, ಅದನ್ನು ವಿವರಿಸಬಲ್ಲ ಹಿರಿಯ ಗುರು ಬಹುದಿನದ ಹಿಂದೆಯೇ ಮನೆಯನ್ನು ತೊರೆದ ಪಬ್ಬಜಿತ ವಯಸ್ಸಾದ ಅನುಭವಸ್ಥ ಇರುತ್ತಾನೆನ್ನು. ಆದರೆ ಅದನ್ನು ಪಾಲಿಸುವ ಹಿರಿಯ ಭಿಕ್ಷುಗಳೂ ಮತ್ತು ಶಿಷ್ಯರೂ ಇರುವುದಿಲ್ಲ. ವಿವೇಕಿಗಳೂ ವಿನೀತರೂ ವಿಶಾರದರೂ ಗುರಿಯನ್ನು ಮುಟ್ಟಿದವರೂ ಸದ್ಧಮ್ಮವನ್ನು ಅರಿತವರೂ ಆದ ಅನುಯಾಯಿಗಳಿರುವುದಿಲ್ಲ. ಇತರರಿಗೆ ಧಮ್ಮವನ್ನು ವಿವರಿಸಬಲ್ಲ ನಿಗ್ರಹಿಸಬೇಕಾದ ಇತರ ವಾದಗಳನ್ನು ನಿಗ್ರಹಿಸಬಲ್ಲ ಮತ್ತು ಧಮ್ಮವನ್ನು ಬೋಧಿಸಬಲ್ಲ ಶಿಷ್ಯರಿರುವುದಿಲ್ಲ. ಹೀಗಿದ್ದರೆ, ಇಂಥ ಪದ್ಧತಿಯು ಅಪರಿಪೂರ್ಣವಾದುದು.
“ಚುಂದ, ಎಲ್ಲ ವಿಧದಲ್ಲಿಯೂ ಪರಿಪೂರ್ಣವಾದ ಶ್ರೇಷ್ಠವಾದ ಮಾರ್ಗ ಇದ್ದು ಅದನ್ನು ವಿವರಿಸಬಲ್ಲ ಹಿರಿಯ ಗುರು ಬಹುದಿನದ ಹಿಂದೆಯೇ ಮನೆಯನ್ನು ತೊರೆದ ವಯಸ್ಸಾದ ಅನುಭವಸ್ಥ ಅದರಲ್ಲಿರಬಹುದು. ಆದರೆ ಅದನ್ನು ಪಾಲಿಸಬಲ್ಲ ಹಿರಿಯ ಭಿಕ್ಷು ಶಿಷ್ಯರೂ ಇದ್ದು, ಅವರು ವಿವೇಕಿಗಳೂ, ವಿನೀತರೂ, ವಿಶಾರದರೂ, ಗುರಿಯನ್ನು ಮುಟ್ಟಿದವರೂ, ಸದ್ಧರ್ಮವನ್ನು ಅರಿತವರೂ, ನಿಗ್ರಹಿಸಬೇಕಾದ ಇತರ ವಾದಗಳನ್ನು ನಿಗ್ರಹಿಸಬಲ್ಲವರೂ, ಧರ್ಮವನ್ನು ಬೋಧಿಸಬಲ್ಲವರೂ ಆಗಿದ್ದರೆ ಆ ಮಾರ್ಗವು ಪರಿಪೂರ್ಣವಾಗಿರುತ್ತದೆ.
“ಎಲ್ಲರೀತಿಯಲ್ಲಿಯೂ ಶ್ರೇಷ್ಠವಾದ ಮಾರ್ಗ ಇದೆ ಎನ್ನೋಣ. ಹಿರಿಯ ಗುರುವೂ ಬಹುದಿನದ ಹಿಂದೆಯೇ ಪಬ್ಬಜಿತನಾದವನೂ, ವಯಸ್ಸಾದ ಅನುಭವಸ್ಥನೂ ಅದರಲ್ಲಿರಬಹುದು. ಅದನ್ನು ಪಾಲಿಸುವ ಹಿರಿಯ ಭಿಕ್ಷು ಶಿಷ್ಯರೂ ಇರಬಹುದು. ಅವರು ವಿವೇಕಿಗಳೂ, ವಿನೀತರೂ, ವಿಶಾರದರೂ, ಗುರಿಯನ್ನು ಮುಟ್ಟಿದವರೂ, ಸದ್ಧರ್ಮವನ್ನು ಅರಿತವರೂ ಆಗಿರಬಹುದು. ಇತರರಿಗೆ ಧರ್ಮವನ್ನು ವಿವರಿಸಬಲ್ಲ ಮತ್ತು ನಿಗ್ರಹಿಸಲೇಬೇಕಾದ ಇತರ ವಾದಗಳನ್ನು ನಿಗ್ರಹಿಸಬಲ್ಲವರು ಅವರಾಗಿರಬಹುದು. ಆದರೆ ಮಧ್ಯಮವರ್ಗದ ಭಿಕ್ಷುಗಳೂ ಶಿಷ್ಯರೂ ಇರುವುದಿಲ್ಲ... ಮಧ್ಯಮ ವರ್ಗದ ಭಿಕ್ಷು ಶಿಷ್ಯರು ಇದ್ದರೂ ಹೊಸ ಭಿಕ್ಷು ಶಿಷ್ಯರು ಇರುವುದಿಲ್ಲ... ಹೊಸ ಭಿಕ್ಷು ಶಿಷ್ಯರು ಇದ್ದರೂ ಹಿರಿಯರಾದ ಭಿಕ್ಷುಣಿ ಶಿಷ್ಯೆಯರು ಇರುವುದಿಲ್ಲ... ಹಿರಿಯ ಭಿಕ್ಷುಣಿ ಶಿಷ್ಯೆಯರಿದ್ದರೂ ಮಧ್ಯಮ ವರ್ಗದ ಶಿಷ್ಯೆಯರಿರುವುದಿಲ್ಲ... ಮಧ್ಯಮ ವರ್ಗದ ಭಿಕ್ಷುಣಿ ಶಿಷ್ಯೆಯರಿದ್ದರೂ ಹೊಸ ಭಿಕ್ಷುಣಿ ಶಿಷ್ಯೆಯರು ಇರುವುದಿಲ್ಲ... ಹೊಸದಾಗಿ ಸೇರಿಕೊಂಡ ಭಿಕ್ಷುಣಿ ಶಿಷ್ಯೆಯರಿದ್ದರೂ ಬಿಳಿಯ ಬಟ್ಟೆಗಳನ್ನುಡುವ ಬ್ರಹ್ಮಚರ್ಯವನ್ನು ಗೌರವಿಸುವ ಗೃಹಸ್ಥ ಉಪಾಸಕ ಶಿಷ್ಯರಿರುವುದಿಲ್ಲ... ಬಿಳಿಯ ಬಟ್ಟೆಗಳನ್ನುಡುವ ಬ್ರಹ್ಮಚರ್ಯವನ್ನು ಗೌರವಿಸುವ ಉಪಾಸಕ ಶಿಷ್ಯರಿದ್ದರೂ ಎಲ್ಲ ಸುಖಗಳನ್ನೂ ಅನುಭವಿಸುತ್ತಿರುವ (ಅಂದರೆ ಶ್ರೀಮಂತ) ಉಪಾಸಕರಿರುವುದಿಲ್ಲ... ಶ್ರೀಮಂತರಾದ ಗೃಹಸ್ಥ ಉಪಾಸಕರಿದ್ದರೂ ಬಿಳಿಯ ಬಟ್ಟೆಯನ್ನುಡುವ ಬ್ರಹ್ಮಚರ್ಯವನ್ನು ಗೌರವಿಸುವ ಗೃಹಿಣಿ ಉಪಸಿಕೆಯರು ಇರುವುದಿಲ್ಲ... ಬಿಳಿಯ ಬಟ್ಟೆಯನ್ನುಡುವ ಬ್ರಹ್ಮಚರ್ಯವನ್ನು ಗೌರವಿಸುವ ಶ್ರೀಮಂತ ಗೃಹಿಣಿ ಉಪಾಸಿಕೆಯರು ಇದ್ದರೂ ಆ ಪದ್ಧತಿಯು ಯಶಸ್ವಿಯಾಗಿಲ್ಲದಿದ್ದರೆ, ಏಳಿಗೆ ಹೊಂದುತ್ತಾ ಇರದಿದ್ದರೆ, ಎಲ್ಲ ಜನರಲ್ಲಿಯೂ ಪ್ರಸಾರವಾಗಿರದಿದ್ದರೆ, ದೇವತೆಗಳಿಗೂ ಮನುಷ್ಯರಿಗೂ ಅರ್ಥವಾಗುವ ರೀತಿಯಲ್ಲಿ ವಿವರಿಸದಿದ್ದರೆ, ಅದರಲ್ಲಿ ಜನರು ಪ್ರಯೋಜನ ಕಾಣದಿದ್ದರೆ ಅದು ಅಪರಿಪೂರ್ಣವಾದ ಮಾರ್ಗವೇ ಆಗಿರುತ್ತದೆ.
“ಚುಂದ, ಎಲ್ಲರೀತಿಯಲ್ಲಿಯೂ ಶ್ರೇಷ್ಠವಾದ ಮಾರ್ಗವಿದ್ದು, ಅದನ್ನು ವಿವರಿಸಬಲ್ಲ ಹಿರಿಯ ಗುರು ಬಹುದಿನಗಳ ಹಿಂದೆಯೇ ಪಬ್ಬಜಿತನಾದ ಹಿರಿಯ ವಯಸ್ಸಾದ ಅನುಭವಸ್ಥರಿದ್ದು, ಅವನ್ನು ಪಾಲಿಸುವ ಥೇರರೂ ಭಿಕ್ಷು ಶಿಷ್ಯರೂ ಇದ್ದು, ಅವರು ವಿವೇಕಿಗಳೂ, ವಿನೀತರೂ, ವಿಶಾರದರೂ ಗುರಿಯನ್ನು ಮುಟ್ಟಿದವರೂ ಸದ್ಧರ್ಮವನ್ನು ಅರಿತವರೂ ನಿಗ್ರಹಿಸಬೇಕಾದ ಇತರ ಧರ್ಮಗಳನ್ನು ನಿಗ್ರಹಿಸಬಲ್ಲವರೂ, ಧರ್ಮವನ್ನು ವಿವರಿಸಬಲ್ಲವರೂ ಆಗಿದ್ದರೆ... ಮಧ್ಯಮ ವರ್ಗದ ಭಿಕ್ಷು ಶಿಷ್ಯರಿದ್ದರೆ... ಹೊಸದಾಗಿ ಸೇರಿಕೊಳ್ಳುವ ಭಿಕ್ಷು ಶಿಷ್ಯರಿದ್ದರೆ... ಹಿರಿಯರಾದ ಭಿಕ್ಷುಣಿ ಶಿಷ್ಯೆಯರಿದ್ದರೆ... ಮಧ್ಯಮವರ್ಗದ ಭಿಕ್ಷುಣಿ ಶಿಷ್ಯೆಯರಿದ್ದರೆ... ಹೊಸದಾಗಿ ಸೇರಿಕೊಳ್ಳುವ ಭಿಕ್ಷುಣಿ ಶಿಷ್ಯೆಯರಿದ್ದರೆ... ಬಿಳಿಯ ಬಟ್ಟೆಯನ್ನುಡುವ ಬ್ರಹ್ಮಚರ್ಯವನ್ನು ಗೌರವಿಸುವ ಉಪಾಸಕ ಶಿಷ್ಯರಿದ್ದರೆ... ಬಿಳಿಯ ಬಟ್ಟೆಯನ್ನುಡುವ ಮತ್ತು ಬ್ರಹ್ಮಚರ್ಯವನ್ನು ಗೌರವಿಸುವ ಗೃಹಿಣಿ ಶಿಷ್ಯಯರಿದ್ದರೆ... ಶ್ರೀಮಂತ ಗೃಹಿಣಿ ಉಪಾಸಿಕೆಯರಿದ್ದರೆ... ಎಲ್ಲರಲ್ಲಿಯೂ ಪ್ರಸಾರವಾಗಿ ಸಾಮಾನ್ಯ ಜನರಿಗೆ ತಿಳಿಯುವಂಥದ್ದಾಗಿದ್ದರೆ ದೇವತೆಗಳಲ್ಲಿಯೂ, ಮನುಷ್ಯರಿಗೂ ಪ್ರಿಯರಾಗಿದ್ದರೆ ಜನರು ಅದರಲ್ಲಿ ಪ್ರಯೋಜನವನ್ನು ಕಂಡರೆ ಆ ಮಾರ್ಗವು ಪರಿಪೂರ್ಣವಾಗಿರುತ್ತದೆ.
“ಚುಂದ, ಈಗ ಈ ಲೋಕದಲ್ಲಿ ಸಮ್ಮಾಸಂಬುದ್ಧನೂ, ಅರಹಂತನೂ ಆಗಿ ಹುಟ್ಟಿದ್ದೇನೆ. ನಾನು ಬೋಧಿಸಿರುವ ಧಮ್ಮವು ಚೆನ್ನಾಗಿ ವಿವರಿಸಲ್ಪಟ್ಟಿದೆ. ಒಳ್ಳೆಯ ಗುರಿಯನ್ನು ಮುಟ್ಟಿಸುತ್ತದೆ. ಶಾಂತಿಯನ್ನು ತರುತ್ತದೆ. ನನ್ನ ಶಿಷ್ಯರು ಈ ಧಮ್ಮವನ್ನು ಚೆನ್ನಾಗಿ ಅರಿತಿದ್ದಾರೆ. ಶ್ರೇಷ್ಠವಾದ ಮತ್ತು ಪರಿಪೂರ್ಣವಾದ ಆ ಮಾರ್ಗವನ್ನು ಅವರು ಸರಿಯಾಗಿ ಅರ್ಥ ಮಾಡಿಕೊಂಡಿದ್ದಾರೆ. ದೇವತೆಗಳಿಗೆ ಮತ್ತು ಮನುಷ್ಯರಿಗೆ ಅದನ್ನು ಅರ್ಥೈಸಲಾಗಿದೆ. ಈಗ ನಾನು ಹಿರಿಯ ಗುರುವೂ ಬಹುದಿನಗಳಿಂದ ಪಬ್ಬಜಿತನಾದವನೂ ವಯಸ್ಸಾದ ಅನುಭವಸ್ಥನೂ ಆಗಿದ್ದೇನೆ.
“ಚುಂದ, ಈಗ ಹಿರಿಯರಾದ ಭಿಕ್ಷುಗಳು ಶಿಷ್ಯರಾಗಿದ್ದಾರೆ. ಅವರು ವಿವೇಕಿಗಳೂ, ವಿನೀತರೂ, ವಿಶಾರದರೂ, ಗುರಿಯನ್ನು ಮುಟ್ಟಿದವರೂ (ಅರಹಂತರೂ) ಈ ಸದ್ಧರ್ಮವನ್ನು ಅರಿತವರೂ ಆಗಿದ್ದಾರೆ. ಬೇರೆ ವಾದಗಳನ್ನು ತಮ್ಮ ಧಮ್ಮದಿಂದ ನಿಗ್ರಹಿಸಬಲ್ಲವರೂ ಆಗಿದ್ದಾರೆ. ಧಮ್ಮವನ್ನು ಚೆನ್ನಾಗಿ ಬೋಧಿಸಬಲ್ಲವರಾಗಿದ್ದಾರೆ. ಈಗ ಮಧ್ಯಮ ವರ್ಗದ ಭಿಕ್ಷು ಶಿಷ್ಯರಿದ್ದಾರೆ... ಈಗ ಹೊಸದಾಗಿ ಸೇರಿಕೊಳ್ಳುತ್ತಿರುವ ಭಿಕ್ಷು ಶಿಷ್ಯರಿದ್ದಾರೆ... ಈಗ ಹಿರಿಯರಾದ ಭಿಕ್ಷುಣಿ ಶಿಷ್ಯೆಯರಿದ್ದಾರೆ... ಈಗ ಮಧ್ಯಮ ವರ್ಗದ ಭಿಕ್ಷುಣಿ ಶಿಷ್ಯೆಯರಿದ್ದಾರೆ... ಈಗ ಹೊಸದಾಗಿ ಸೇರಿಕೊಳ್ಳುತ್ತಿರುವ ಭಿಕ್ಷುಣಿ ಶಿಷ್ಯೆಯರಿದ್ದಾರೆ... ಈಗ ಬಿಳಿ ಬಿಟ್ಟೆಯನ್ನುಡುವ ಶ್ರೇಷ್ಠವಾದ ಮಾರ್ಗದಲ್ಲಿ ಹೋಗುತ್ತಿರುವ ಗೃಹಸ್ಥ ಶಿಷ್ಯರಿದ್ದಾರೆ... ಶ್ರೀಮಂತ ಶಿಷ್ಯರಿದ್ದಾರೆ... ಬಿಳಿಯ ಬಟ್ಟೆಯನ್ನುಡುವ ಶ್ರೀಮಂತ ಗೃಹಸ್ಥ ಭಿಕ್ಷುಣಿ ಶಿಷ್ಯೆಯರಿದ್ದಾರೆ... ಬಿಳಿಯ ಬಟ್ಟೆಯನ್ನುಡುವ ಮತ್ತು ಶ್ರೇಷ್ಠವಾದ ಮಾರ್ಗದಲ್ಲಿ ಹೋಗುತ್ತಿರುವ ಗೃಹಿಣಿ ಉಪಾಸಿಕೆಯರಿದ್ದಾರೆ... ಬಿಳಿಯ ಬಟ್ಟೆಯನ್ನುಡುವ ಶ್ರೀಮಂತ ಉಪಾಸಿಕೆಯರಿದ್ದಾರೆ... ಈ ಶ್ರೇಷ್ಠವಾದ ಧರ್ಮವು ಪ್ರಸರಿಸುತ್ತಿದೆ, ವಿಸ್ತಾರವಾಗುತ್ತಿದೆ. ಏಳಿಗೆಯನ್ನು ಹೊಂದುತ್ತಿದೆ. ಸಾಮಾನ್ಯ ಜನರಿಗೂ ಪ್ರಿಯವಾಗುತ್ತಿದೆ. ದೇವತೆಗಳಿಗೆ ಮತ್ತು ಮನುಷ್ಯರಿಗೆ ಅರ್ಥವಾಗುವಂತೆ ವಿವರಿಸಲ್ಪಟ್ಟಿದೆ.
“ಚುಂದ, ಲೋಕದಲ್ಲಿ ನನ್ನಂತೆ ಯಶಸ್ಸನ್ನು ಜನಮಾನ್ಯತೆಯನ್ನು ಪಡೆದಿರುವ ಮತ್ತೊಬ್ಬ ಗುರುವು ನಾನು ಕಾಣೆ. ಈಗ ಸಂಘ ಮತ್ತು ಶಿಷ್ಯರ ಗಡಣ ಲೋಕದಲ್ಲಿದೆ. ಇವುಗಳಷ್ಟು ಯಶಸ್ಸನ್ನೂ, ಜನಮಾನ್ಯತೆಯನ್ನೂ ಪಡೆದಿರುವ ಬೇರೆ ಭಿಕ್ಷು ಸಂಘವನ್ನು ನಾನು ಕಾಣೆ. ಎಲ್ಲರೀತಿಯಲ್ಲಿಯೂ ಪರಿಪೂರ್ಣವಾದ ಸರ್ವರೀತಿಯಲ್ಲಿಯೂ ಯಶಸ್ವಿಯಾದ ಯಾವುದೇ ಕೊರತೆಯೂ ಇಲ್ಲದ ಅನಾವಶ್ಯಕವಾವುದನ್ನೂ ಒಳಗೊಂಡಿಲ್ಲದ ಸರಿಯಾಗಿ ವಿವರಿಸಲ್ಪಟ್ಟಿರುವ ಎಲ್ಲರಿಗೂ ಅರ್ಥವಾಗಿರುವಂತೆ ಬೋಧಿಸಲ್ಪಟ್ಟಿರುವ ಶ್ರೇಷ್ಠವಾದ ಮಾರ್ಗ ಇದು ಎಂದು ಯಾರಾದರೂ ಯಾವುದನ್ನಾದರೂ ಸ್ತುತಿಸಿದರೆ ಅದು ಈ ಮಾರ್ಗವೇ ಆಗಿರುತ್ತದೆ.
“ಚುಂದ, ರಾಮಪುತ್ತನಾದ34 ಉದ್ದಕನು ಹೀಗೆ ಹೇಳುತ್ತಿದ್ದನು- ‘ನೋಡುತ್ತಾನೆ, ಆದರೆ ನೋಡಬಲ್ಲವ ನಾಗಿರುವುದಿಲ್ಲ. ಯಾವುದನ್ನು ನೋಡಿದಾಗ ಅವನು ನೋಡದಂತಿರುತ್ತಾನೆ? ಕೂರಸಿ ನೋಡುತ್ತಾನೆ. ಆದರೆ ಅದರ ಅಲಿಗಿನ ತುದಿಯನ್ನು ನೋಡಲರ’. ಚುಂದ, ಇದಕ್ಕೆ ‘ಅವನು ನೋಡುತ್ತಾನೆ, ಆದರೆ ನೋಡಬಲ್ಲವನಾಗಿಲ್ಲ’ ಎಂದು ಹೇಳುತ್ತಾರೆ. ಹೀನನೂ, ಅನಾಗರಿಕನೂ, ಅನಾರ್ಯನೂ, ಕಡಿಮೆ ತಿಳಿವಳಿಕೆಯುಳ್ಳವನೂ ಆದವನು ಹರಿತವಾದ ಕತ್ತಿಯನ್ನು ಕುರಿತು ಹೇಳುತ್ತಿದ್ದ ಮಾತು ಇವು. ಚುಂದ, ‘ತಿಳಿದವನು ನೋಡುತ್ತಾನೆ, ಆದರೆ ನೋಡಬಲ್ಲವನಾಗಿರುವುದಿಲ್ಲ’ ಎಂದು ಹೇಳುವಾಗ ಯಾವ ಅರ್ಥದಲ್ಲಿ ಆ ಮಾತುಗಳನ್ನು ಬಳಸುತ್ತಾನೆ? ಎಲ್ಲರೀತಿಯಲ್ಲಿಯೂ ಪರಿಪೂರ್ಣವಾದ ಸರ್ವರೀತಿಯಲ್ಲಿಯೂ ಯಶಸ್ವಿಯಾದ ಯಾವ ಕೊರತೆಯೂ ಇಲ್ಲದ ಅನಾವಶ್ಯಕವಾದುದಾವುದನ್ನೂ ಒಳಗೊಂಡಿಲ್ಲದ ಸರಿಯಾಗಿ ವಿವರಿಸಲ್ಪಟ್ಟಿರುವ ಧಮ್ಮವನ್ನು ನೋಡುತ್ತಾನೆ. ಇದಕ್ಕಿಂತ ಬೇರೆ ರೀತಿಯಲ್ಲಿ ನೋಡುವುದಿಲ್ಲ. ಇದು ಪರಿಶುದ್ಧವಾದ ತಿಳಿವಳಿಕೆ. ಯಾವುದು ಪರಿಪೂರ್ಣವಾದುದೋ ಅದನ್ನ ವಕ್ರದೃಷ್ಟಿಯಿಂದ ನೋಡುವವನು ನೋಡಿದರೂ ನೋಡದವನಾಗಿರುತ್ತಾನೆ. ಈ ಅರ್ಥದಲ್ಲಿ ನೋಡುತ್ತಾನೆ. ಆದರೆ ನೋಡಬಲ್ಲವನಾಗಿರುವುದಿಲ್ಲ ಎಂದು ಹೇಳುತ್ತಾನೆ. ಎಲ್ಲರೀತಿಯಲ್ಲಿಯೂ ಯಶಸ್ವಿಯಾದ ಯಾವ ಕೊರತೆಯೂ ಇಲ್ಲದ ಅನಾವಶ್ಯಕವಾದುದಾವುದನ್ನೂ ಒಳಗೊಂಡಿಲ್ಲದ ಸರಿಯಾಗಿ ವಿವರಿಸಲ್ಪಟ್ಟಿರುವ ಎಲ್ಲರಿಗೂ ಅರ್ಥವಾಗಿರುವಂತೆ ಬೋಧಿಸಲ್ಪಟ್ಟಿರುವ ಶ್ರೇಷ್ಠವಾದ ಮಾರ್ಗ ಇದು ಎಂದು ಜನರು ಸ್ತುತಿಸುವುದು ಈ ಧರ್ಮವನ್ನೇ.
ಸಂಗಾಯಯನ (ಜೊತೆಗೂಡಿ ಪಾಠಮಾಡುವ) ಮಾಡತಕ್ಕಂತಹ ಧಮ್ಮ
“ಚುಂದ, ಬಹುಜನ ಹಿತಕ್ಕಾಗಿ ಲೋಕದ ಮೇಲಿನ ಅನುಕಂಪೆಯಿಂದ ದೇವಮನುಷ್ಯರ ಸುಖಕ್ಕಾಗಿ, ನಾನು ಉತ್ಕೃಷ್ಟವಾದ ಜ್ಞಾನವನ್ನು ಪಡೆದು ಬೋಧಿಸಿರುವ ಧಮ್ಮವು ನಿಮ್ಮೆಲ್ಲರಿಗೂ ಅರ್ಥಸಹಿತ ಟೀಕೆಸಹಿತ ವಿವರಿಸಲ್ಪಟ್ಟಿದೆ. ಅದರ ಬಗೆಗೆ ವಿವಾದ ಬೇಡ. ಈ ಧಮ್ಮದ ವಿವರಗಳನ್ನು ನೀವೆಲ್ಲರು ಸೇರಿ ಬಹುಕಾಲ ಇರುವಂತೆ ಮಾಡಿ. ನಾನು ಹೀಗೆ ಹೇಳಲು ಕಾರಣವೇನು? ಈ ಧಮ್ಮವು ನಾಲ್ಕು ಸತಿಪಟ್ಠಾನಗಳನ್ನೂ, ನಾಲ್ಕು ಸಮ್ಮಪ್ಪಧಾನಗಳನ್ನೂ, ನಾಲ್ಕು ಇದ್ಧಿಪಾದಗಳನ್ನು, ಪಂಚೇಂದ್ರಿಯಗಳನ್ನೂ, ಪಂಚಬಲಗಳನ್ನೂ, ಏಳು ಬೋಜ್ಝಂಗಗಳನ್ನೂ, ಅರಿಯ ಅಟ್ಠಂಗ ಮಗ್ಗವನ್ನೂ ಒಳಗೊಂಡಿದೆ.
“ಧಮ್ಮದ ಈ ಅಂಶಗಳನ್ನು ನೀವು ಒಟ್ಟಿಗೆ ಸೇರಿ ಮನನ ಮಾಡಬೇಕು. ಇದನ್ನು ಅರ್ಥಸಹಿತ, ಟೀಕೆಸಹಿತ, ವಿವರಿಸಿದ್ದೇನೆ. ಉತ್ಕೃಷ್ಟ ಜ್ಞಾನವನ್ನು ಪಡೆದು ಬಹುಜನ ಹಿತಕ್ಕಾಗಿ ಬಹುಜನ ಸುಖಕ್ಕಾಗಿ ಲೋಕದ ಮೇಲಿನ ಅನುಕಂಪೆಯಿಂದ ದೇವ ಮನುಷ್ಯರ ಸುಖ ಹಿತಗಳಿಗಾಗಿ ನಾನು ಬೋಧಿಸಿದ್ದೇನೆ. ನೀವು ಅದು ಬಹುದಿನ ಉಳಿಯುವಂತೆ ಮಾಡಿ.
ಸರಿಯಾಗಿ ಅರ್ಥೈಸುವ ವಿಧಿ
“ಚುಂದ, ನೀವೆಲ್ಲರೂ ಒಟ್ಟಿಗೆ ಕಲೆತು ಯಾವ ವಿವಾದವೂ ಇಲ್ಲದೆ ಪರಸ್ಪರ ಒಳ್ಳೆಯ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾಗ ನಿಮ್ಮೊಂದಿಗೆ ಸಾಧನೆ ಮಾಡುತ್ತಿರುವನೊಬ್ಬನು ಸಂಘಕ್ಕೆ ಧಮ್ಮದ ಒಂದು ವಿಷಯವನ್ನು ಹೇಳಬಹುದು. ನಿಮಗೆ ಹೀಗೆ ಹೇಳುತ್ತಾನೆನ್ನೋಣ- ‘ಆಯುಷ್ಮಂತರೇ ಹೀಗೆ ಅರ್ಥ ಮಾಡುವುದು ತಪ್ಪು, ಈ ಟೀಕೆಯೂ ಸರಿಯಲ್ಲ’. ಆಗ ಅವನನ್ನು ಅಭಿನಂದಿಸಲೂಬಾರದು, ನಿಂದಿಸಲೂಬಾರದು. ಅಭಿನಂದಿಸದೆ, ನಿಂದಿಸದೆ ಅವನಿಗೆ ಹೀಗೆ ಹೇಳಬೇಕು- ‘ಗೆಳೆಯ, ಈ ಅರ್ಥಕ್ಕೆ, ಈ ಟೀಕೆಗಳು ಹೇಗೆ ಹೊಂದಿಕೊಳ್ಳುತ್ತದೆ, ಅಥವಾ ಈ ಟೀಕೆಗಳಿಗೆ ಈ ಅರ್ಥವು ಹೇಗೆ ಹೊಂದಿಕೊಳ್ಳುತ್ತದೆ?’ ಅವನಿಗೆ ಹೀಗೆ ಉತ್ತರ ಕೊಡಬೇಕು- ‘ಗೆಳೆಯ, ಈ ಅರ್ಥಕ್ಕೆ ಹೊಂದಿಕೊಳ್ಳುವ ಟೀಕೆಗಳು ಇವು.’ ಅವನನ್ನು ದೂರ ಮಾಡಲು ಬಾರದು ದೂಷಿಸಲೂ ಬಾರದು. ದೂರೀಕರಿಸದೆ ದೂಷಿಸದೆ ಅರ್ಥವನ್ನೂ ಟೀಕೆಯನ್ನೂ ಅವನಿಗೆ ತಿಳಿಸಬೇಕು.
“ಮತ್ತೆ ಚುಂದ, ನಿಮ್ಮೊಂದಿಗೆ ಸಾಧನೆ ಮಾಡುತ್ತಿರುವ ಮತ್ತೊಬ್ಬನು ಧಮ್ಮವನ್ನು ಕುರಿತು ನಿಮಗೆ ಹೀಗೆ ಹೇಳಬಹುದು- ‘ಇದರ ಅರ್ಥವು ಹೀಗೆ, ನೀವು ತಪ್ಪಾಗಿ ಅರ್ಥ ಮಾಡಿಕೊಂಡಿದ್ದೀರಿ. ಆದರೆ ಟೀಕೆಯನ್ನು ಸರಿಯಾಗಿ ತಿಳಿದುಕೊಂಡಿದ್ದೀರಿ’. ಅವನನ್ನು ಅಭಿನಂದಿಸಲೂಬಾರದು ನಿಂದಿಸಲೂಬಾರದು. ಅಭಿನಂದಿಸದೆ ನಿಂದಿಸದೆ ಈ ಮಾತನ್ನು ಹೇಳಬೇಕು- ‘ಈ ಟೀಕೆಗಳಿಗೆ ಗೆಳೆಯ, ಈ ಅರ್ಥವು ಹೇಗೆ ಹೊಂದಿಕೊಳ್ಳುತ್ತದೆ?’ ಆಗ ಅವನು ಹೀಗೆ ಹೇಳಬಹುದು- ‘ಈ ಟೀಕೆಗಳಿಗೆ ಹೊಂದಿಕೊಳ್ಳುವ ಅರ್ಥ ಇದೊಂದೇ’. ಅವನನ್ನು ದೂರೀಕರಿಸಲೂ ಬಾರದು ದೂಷಿಸಲೂ ಬಾರದು. ದೂರೀಕರಿಸದೆ ದೂಷಿಸದೆ ಅರ್ಥವನ್ನು ವಿವರಿಸಬೇಕು.
“ಚುಂದ, ನಿಮ್ಮೊಂದಿಗೆ ಸಾಧನೆ ಮಾಡುತ್ತಿರುವ ಮತ್ತೊಬ್ಬನು ಧಮ್ಮವನ್ನು ಕುರಿತು ಹೀಗೆ ಹೇಳಬಹುದು- ‘ಗೆಳೆಯ, ನೀವು ಸರಿಯಾಗಿ ಅರ್ಥ ಮಾಡಿಕೊಂಡಿದ್ದೀರಿ, ಆದರೆ ತಪ್ಪಾಗಿ ಟೀಕೆ ಮಾಡುತ್ತಿದ್ದೀರಿ’. ಅವನನ್ನು ಅಭಿನಂದಿಸಬಾರದು ನಿಂದಿಸಬಾರದು. ಅಭಿನಂದಿಸದೆ ನಿಂದಿಸದೆ ಈ ಮಾತನ್ನು ಹೇಳಬೇಕು- ‘ಗೆಳೆಯ, ಈ ಅರ್ಥಕ್ಕೆ ಈ ಟೀಕೆಗಳು ಹೇಗೆ ಹೊಂದಿಕೊಳ್ಳುತ್ತವೆ?’ ಅವನಿಗೆ ಹೀಗೆ ಹೇಳಬೇಕು- ‘ಈ ಅರ್ಥಕ್ಕೆ ಹೊಂದಿಕೊಳ್ಳುವ ಟೀಕೆಗಳು ಇವು.’ ಅವನನ್ನು ದೂರೀಕರಿಸಬಾರದು ದೂಷಿಸಲೂಬಾರದು. ದೂರೀಕರಿಸದೆ ದೂಷಿಸದೆ ಟೀಕೆಯನ್ನು ವಿವರಿಸುವುದು ಒಳ್ಳೆಯದು.
“ಚುಂದ, ನಿಮ್ಮೊಂದಿಗೆ ಸಾಧನೆ ಮಾಡುತ್ತಿರುವ ಮಗದೊಬ್ಬನು ಹೀಗೆ ಹೇಳಬಹುದು- ‘ಗಳೆಯರೆ, ನೀವು ಅರ್ಥವನ್ನು ಸರಿಯಾಗಿ ಗ್ರಹಿಸಿದ್ದೀರಿ, ಟೀಕೆಯನ್ನು ಸರಿಯಾಗಿ ತಿಳಿದುಕೊಂಡಿದ್ದೀರಿ’. ಹಾಗೆ ಹೇಳುವುದು ಸರಿಯಾದದ್ದರಿಂದ ಅವನನ್ನು ಅಭಿನಂದಿಸಬೇಕು, ಅವನು ಹೇಳುವುದನ್ನು ಒಪ್ಪಿಕೊಳ್ಳಬೇಕು. ಹೀಗೆ ಹೇಳಿದವನನ್ನು ಒಪ್ಪಿಕೊಳ್ಳಬೇಕು, ಹೀಗೆ ಹೇಳಿದವನನ್ನು ಒಪ್ಪಿ ಅಭಿನಂದಿಸಿ ಈ ಮಾತನ್ನು ಹೇಳಬೇಕು- ‘ಗೆಳೆಯ, ನಿನ್ನಿಂದ ನಮಗೆ ಲಾಭವಾಗಿದೆ. ಒಳ್ಳೆಯದನ್ನು ಪಡೆದಿದ್ದೇವೆ. ನೀನು ಅರ್ಥವನ್ನೂ, ಟೀಕೆಯನ್ನೂ ಚೆನ್ನಾಗಿ ಅರಿತಿದ್ದೀಯೆ, ನಿನ್ನನ್ನು ಕಾಣುವ ಸದಾವಕಾಶ ನಮಗೆ ಸಿಕ್ಕಿದೆ.’
ನಾಲ್ಕು ಅವಶ್ಯಕತೆಗಳನ್ನು ಅರಿತುಕೊಳ್ಳುವುದು
“ಚುಂದ, ಇಲ್ಲಿಯೇ ಈಗಲೇ ಆಸವಗಳನ್ನು ಸಂಯಮಗೊಳಿಸಬಲ್ಲ ಸದ್ಧಮ್ಮವನ್ನು ನಾನು ಬೋಧಿಸುತ್ತಿದ್ದೇನೆ. ಮುಂದಿನ ಜನ್ಮಗಳಲ್ಲಿ ಆಸವಗಳಿಲ್ಲದಂತೆ ಮಾಡಬಲ್ಲ ಧಮ್ಮವನ್ನು ಮಾತ್ರ ನಾನು ಬೋಧಿಸುವುದಿಲ್ಲ. ಇಲ್ಲಿಯೂ ಆಸವಗಳನ್ನು ಸಂಯಮಗೊಳಿಸಬಲ್ಲ ಧಮ್ಮವನ್ನು ಬೋಧಿಸುತ್ತೇನೆ. ಆದುದರಿಂದ ಚುಂದ, ಯಾವ ಬಟ್ಟೆಗಳು ಯೋಗ್ಯವೆಂದು ನಾನು ಪರಿಗಣಿಸಿದ್ದೇನೋ ಅದಷ್ಟೇ ನಿಮಗೆ ಸಾಕು. ಶೀತೋಷ್ಣಗಳಿಂದ ನಿಮ್ಮನ್ನು ಕಾಪಾಡಿಕೊಳ್ಳಲು ಅಷ್ಟು ಸಾಕು. ಸೊಳ್ಳೆ ನೊಣಗಿಂದ ಗಾಳಿ ಬಿಸಿಲುಗಳಿಂದ ವಿಷ ಸರ್ಪಗಳಿಂದ ರಕ್ಷಿಸಿಕೊಳ್ಳಲು ಅಷ್ಟು ಸಾಕು. ನಿಮ್ಮ ಮಾನವನ್ನು ಕಾಪಾಡಿಕೊಳ್ಳುವಷ್ಟು ಕೌಪೀನ ನಿಮ್ಮಲ್ಲಿದ್ದರೆ ಸಾಕು. ನಿಮ್ಮ ದೇಹವನ್ನು ರಕ್ಷಿಸಿಕೊಳ್ಳು ಅಷ್ಟು ಸಾಕು. ನೀನು ಜೀವದಿಂದಿರಲು ಅಷ್ಟೇ ಸಾಕು. ನೀವು ಬ್ರಹ್ಮಚರ್ಯವನ್ನು ಕಾಪಾಡಿಕೊಳ್ಳಲು ಅಷ್ಟು ಸಾಕು. ‘ಹಿಂದಿನ ವೇದನೆಗಳನ್ನು ದಮಿಸುತ್ತೇನೆ, ಹೊಸ ವೇದನೆಗಳು ಹುಟ್ಟಿಕೊಳ್ಳದಂತೆ ನೋಡಿಕೊಳ್ಳುತ್ತೇನೆ. ಯಾವ ನಿಂದೆಗೂ ಒಳಗಾಗದೆ ನಾನಿರುತ್ತೇನೆ’ ಎಂದು ನೀವು ಮನಸ್ಸು ಮಾಡಿ.
“ನಾನು ಯಾವ ನಿವಾಸ ಸರಿಯೆಂದು ಪರಿಗಣಿಸಿದ್ದೇನೋ ಅಷ್ಟು ಸಾಕು. ಶೀತೋಷ್ಣಗಳಿಂದ ವಿಷ ಸರ್ಪಗಳಿಂದ ಸೊಳ್ಳೆ ನೊಣಗಳಿಂದ ಗಾಳಿ ಬಿಸಿಲುಗಳಿಂದ ವಾಯುಗುಣದ ಪರಿಣಾಮದಿಂದ ನಿಮ್ಮನ್ನು ಕಾಪಾಡಿಕೊಳ್ಳುಷ್ಟು ನಿವಾಸ ನಿಮಗೆ ಸಾಕು. ಏಕಾಂತದಲ್ಲಿರಲು ಅನುಕೂಲವಾಗುವಂಥ ನಿವಾಸ ಸಾಕು. ಯಾವ ಔಷಧಿ ಮತ್ತು ಪರಿಕರಗಳು ನನಗೆ ಸರಿಯಾದುದೆಂದು ಪರಿಗಣಿತವಾಗಿವೆಯೋ ಅಷ್ಟೇ ಸಾಕು. ಉಂಟಾಗಬಹುದಾದ ಬಾಧೆಗಳಿಂದ ನಿಮ್ಮನ್ನು ದೂರವಿಡಲು ವೇದನೆಗಳಿಂದ ನಿಮ್ಮನ್ನು ದೂರವಿಡಲು ನಿಮ್ಮ ಆರೋಗ್ಯವನ್ನು ರಕ್ಷಿಸಿಕೊಳ್ಳು ಅಷ್ಟು ಸಾಕು.
ಸುಖದಲ್ಲಿ ತಲ್ಲೀನರಾಗುವುದು
“ಚುಂದ, ಬೇರೆ ಸಂಪ್ರದಾಯಕ್ಕೆ ಸೇರಿದ ಪರಿಬ್ಬಾಜಕರು ಹೀಗೆ ಹೇಳಬಹುದು- ‘ಶಾಕ್ಯಪುತ್ತನ ಸಮಣರು (ಭಗವಾನ ಗೋತಮರ ಶಿಷ್ಯರು) ಸುಖದಲ್ಲಿಯೇ ತಲ್ಲೀನರಾಗಿರುತ್ತಾರೆ’. ಹೀಗೆ ಹೇಳುವ ಅವರಿಗೆ ನಮ್ಮ ಉತ್ತರ ಇಂತಿರಲಿ- ‘ಸುಖದಲ್ಲಿ ತಲ್ಲೀನರಾಗುವುದು ಎಂದರೆ ಏನು? ಅದು ಅನೇಕ ವಿಧವಾಗಿರುತ್ತದೆ, ನಾನಾ ಪ್ರಕಾರವಾಗಿರುತ್ತದೆ.
“ಅನಾಗರೀಕರೂ ಕೆಟ್ಟವರೂ ಅನಾರ್ಯರೂ ನಾಲ್ಕು ರೀತಿಯ ಸುಖದಲ್ಲಿ ತಲ್ಲೀನರಾಗಿರುತ್ತಾರೆ. ಅಂಥ ಸುಖವು ಅನರ್ಥಕಾರಿಯೂ ತ್ಯಾಗ ವೈರಾಗ್ಯಗಳಿಗೆ ಅನುಕೂಲವಲ್ಲದುದೂ ದುಃಖ ನಿರೋಧಕ್ಕೆ ಸಹಾಯಕವಲ್ಲದುದೂ, ಶಾಂತಿಯನ್ನು ತರದಿರುವಂಥದೂ, ಶ್ರೇಷ್ಠವಾದ ಜ್ಞಾನವನ್ನು ಪಡೆಯಲು ಸಹಾಯಕವಲ್ಲದುದೂ, ಬೋಧಿ ನಿಬ್ಬಾಣಗಳನ್ನು ಪಡೆಯಲು ಅಡ್ಡಿಯನ್ನುಂಟುಮಾಡುವುದೂ ಆಗಿರುತ್ತದೆ. ಆ ನಾಲ್ಕು ವಿಧಗಳು ಯಾವುವು?
“ಪ್ರಾಣಿಗಳ ವಧೆಯನ್ನು ಮಾಡುತ್ತಾ ಮಾಡುತ್ತಾ ಇರುವ ಮೂರ್ಖನೊಬ್ಬನು ಅದರಲ್ಲಿಯೇ ಸುಖ ಕಾಣುತ್ತಾನೆ. ನಾಲ್ಕು ವಿಧದಲ್ಲಿ ಇದು ಮೊದಲನೆಯದು. ತನಗೆ ಸೇರದುದನ್ನು ದೋಚುತ್ತಾ ಇನ್ನೊಬ್ಬ ಮೂರ್ಖನು ಅದರಲ್ಲಿ ಸುಖ ಕಾಣುತ್ತಾನೆ. ಇದು ಎರಡನೆಯ ಬಗೆ. ಸುಳ್ಳು ಹೇಳುವುದನ್ನೇ ಅಭ್ಯಾಸ ಮಾಡಿಕೊಂಡ ಮೂರನೆಯ ಬಗೆಯ ಮೂರ್ಖನು ಸುಳ್ಳು ಹೇಳುವುದರಲ್ಲಿಯೇ ಸುಖ ಕಾಣುತ್ತಾನೆ. ಪಂಚಕಾಮ ಗುಣಗಳಲ್ಲಿ ತಲ್ಲೀನನಾದ ಮಗದೊಬ್ಬ ಮೂರ್ಖನು ಅವುಗಳಲ್ಲಿಯೇ ತಲ್ಲೀನನಾಗಿ ಅದರಲ್ಲಿಯೇ ಸುಖಕಾಣುತ್ತಾನೆ. ಇದು ನಾಲ್ಕನೆಯ ಬಗೆಯ ಸುಖ. ಅನಾಗರೀಕರೂ, ಕೆಟ್ಟವರೂ, ಅನಾರ್ಯರೂ ಆದವರು ತಲ್ಲೀನರಾಗುವ ಸುಖದ ನಾಲ್ಕು ಬಗೆಗಳು ಇವು. ಈ ಸುಖವು ಅನರ್ಥಕಾರಿ ತ್ಯಾಗ ವೈರಾಗ್ಯ ನಿಬ್ಬಾನಗಲಿಗೆ ಅನುಕೂಲವಲ್ಲದುದೂ, ಶಾಂತಿಯನ್ನು ತರದಿರುವುದೂ, ಶ್ರೇಷ್ಠವಾದ ಜ್ಞಾನ ಬೋಧಿ ಮತ್ತು ನಿಬ್ಬಾಣಗಳನ್ನು ಪಡೆಯಲು ಸಹಾಯಕಲ್ಲದುದೂ ಆಗಿದೆ.
“ಅನ್ಯ ಸಂಪ್ರದಾಯಗಳಿಗೆ ಸೇರಿದ ಪರಿಬ್ಬಾಜಕರೂ ಹೀಗೆ ಹೇಳಬಹುದು- ‘ಶಾಕ್ಯಪುತ್ರನ ಸಮಣರು ತಲ್ಲೀನರಾಗಿರುವುದು ಈ ಬಗೆಯ ಸುಖಗಳಲ್ಲಿಯೇ?’ ಅವರಿಗೆ ನೀವು ‘ಇಲ್ಲ’ ಎಂದು ಹೇಳಬೇಕು. ‘ನೀವು ಹೇಳುತ್ತಿರುವುದು ಸರಿಯಲ್ಲ. ಇಲ್ಲದುದನ್ನು ಹೇಳಿ ನೀವು ನಿಂದೆ ಮಾಡುತ್ತಿದ್ದೀರಿ.’
“ತ್ಯಾಗ, ವೈರಾಗ್ಯ, ನಿಬ್ಬಾನಗಳಿಗೆ ಅನುಕೂಲವಾದ ದುಃಖ ನಿರೋಧಕ್ಕೆ ಸಹಾಯಕವಾದ ಶಾಂತಿಯನ್ನು ತರುವ ಶ್ರೇಷ್ಠವಾದ ಜ್ಞಾನ ಮತ್ತು ಬೋಧಿಗಳನ್ನು ಪಡೆಯುವುದಕ್ಕೆ ಸಹಾಯಕವಾದ ಸುಖದ ನಾಲ್ಕು ವಿಧಗಳಿವೆ. ಆ ನಾಲ್ಕು ಯಾವುವು?
“ಭಿಕ್ಷುವೊಬ್ಬನು ಅಕುಶಲವಾದ ಕಾಮಗಳನ್ನು ತೊರೆದು ತರ್ಕ ವಿಚಾರಗಳಿಂದ ಕೂಡಿದ ವಿವೇಕದಿಂದ ಹುಟ್ಟುವ ಪ್ರೀತಿ ಸುಖವನ್ನು ಪಡೆದು ಪ್ರಥಮ ಧ್ಯಾನದಲ್ಲಿ ತೊಡಗುತ್ತಾನೆ. ಇದು ಭಿಕ್ಷುವು ತಲ್ಲೀನನಾಗುವ ಸುಖದ ಮೊದಲನೆಯ ವಿಧ. ತರ್ಕ ವಿಚಾರಗಳನ್ನು ಶಮನ ಮಾಡಿ... ದ್ವಿತೀಯ ಧ್ಯಾನದಲ್ಲಿ ತೊಡಗುತ್ತಾನೆ. ಇದು ಭಿಕ್ಷುವು ತಲ್ಲೀನನಾಗುವ ಸುಖದ ಎರಡನೆಯ ವಿಧ. ಚುಂದ, ಪ್ರೀತಿಯಿಂದ ಕೂಡಿದ, ಆದರೆ ರಾಗವಿಲ್ಲದ... ತೃತೀಯ ಧ್ಯಾನದಲ್ಲಿ ವಿಹರಿಸುತ್ತಾನೆ. ಇದು ಭಿಕ್ಷುವು ತಲ್ಲೀನನಾಗುವ ಸುಖದ ಮೂರನೆಯ ವಿಧ. ಚುಂದ, ಸುಖ ದುಃಖಗಳಿಂದ ದೂರವಾದ... ಚತುರ್ಥ ಧ್ಯಾನದಲ್ಲಿ ವಿಹರಿಸುತ್ತಾನೆ. ಇದು ಭಿಕ್ಷುವು ತಲ್ಲೀನನಾಗುವ ಸುಖದ ನಾಲ್ಕನೆಯ ವಿಧ.
“ತ್ಯಾಗ, ವೈರಾಗ್ಯ, ನಿಬ್ಬಾನಗಳಿಗೆ ಅನುಕೂಲವಾದ ದುಃಖ ನಿರೋಧಕ್ಕೆ ಸಹಾಯಕವಾದ ಶಾಂತಿಯನ್ನು ತರುವ ಶ್ರೇಷ್ಠವಾದ ಜ್ಞಾನ ಮತ್ತು ಬೋಧಗಳನ್ನು ಪಡೆಯುವುದಕ್ಕೆ ಸಹಾಯಕವಾದ ಸುಖದ ನಾಲ್ಕು ವಿಧಗಳು ಇವೇ ಚುಂದ.
“ಬೇರೆ ಸಂಪ್ರದಾಯಗಳಿಗೆ ಸೇರಿದ ಪರಿಬ್ಬಾಜಕರು ಹೀಗೆ ಹೇಳಬಹುದು, ಚುಂದ- ‘ಶಾಕ್ಯ ಪುತ್ರನ ಸಮಣರು ತಲ್ಲೀನರಾಗುವ ಸುಖದ ನಾಲ್ಕು ಬಗೆಗಳು ಇವು’. ಅವರಿಗೆ ನೀವು ‘ಹೌದು’ ಎಂದು ಹೇಳಬೇಕು. ಅವರು ನಿಮಗೆ ನಿಜವನ್ನೇ ಹೇಳುತ್ತಾರೆ. ಅವರು ಇಲ್ಲದುದನ್ನು ಹೇಳುವುದಿಲ್ಲ, ನಿಂದಿಸುವುದಿಲ್ಲ.
ಸುಖದಲ್ಲಿ ತಲ್ಲೀನರಾಗಿರುವವರಿಗೆ ಫಲಗಳು
“ಬೇರೆ ಸಂಪ್ರದಾಯಗಳಿಗೆ ಸೇರಿದ ಪರಿಬ್ಬಾಜಕರು ಹೀಗೆ ಹೇಳಬಹುದು- ‘ಗೆಳೆಯ, ಈ ನಾಲ್ಕು ವಿಧದ ಸುಖದಲ್ಲಿ ತಲ್ಲೀನರಾಗುವವರು ಪಡೆಯುವ ಫಲಗಳು ಯಾವುವು? ನಿರೀಕ್ಷಿಸುವ ಅನುಕೂಲಗಳಾವುವು?’ ಅಂಥ ಪರಿಬ್ಬಾಜಕರಿಗೆ ನೀವು ಹೀಗೆ ಹೇಳಬೇಕು- ‘ಮೇಲೆ ಹೇಳಿದ ನಾಲ್ಕು ವಿಧದ ಸುಖದಲ್ಲಿ ತಲ್ಲೀನರಾಗಿರುವವರು ನಾಲ್ಕು ಫಲಗಳನ್ನೂ, ನಾಲ್ಕು ಅನುಕೂಲತೆಗಳನ್ನೂ ಪಡೆಯುತ್ತಾರೆ. ಅವು ಯಾವುವು? ಅಂಥ ಭಿಕ್ಷುವು ಮೂರು ಸಂಯೋಜನೆಗಳನ್ನು ಕತ್ತರಿಸಿಕೊಂಡು ಸೋತಾಪನ್ನನಾಗುತ್ತಾನೆ. ಮತ್ತೊಮ್ಮೆ ಕೆಳಗಿನ ಸ್ಥಿತಿಗಳಿಗೆ ಇಳಿಯದವನಾಗಿ ಸಂಬೋಧಿಯನ್ನು ಪಡೆಯಬಲ್ಲ ಹಾದಿಯಲ್ಲಿರುತ್ತಾನೆ. ಇದು ಆತನು ಪಡೆಯುವ ಮೊದಲನೆಯ ಫಲ, ಮೊದಲನೆಯ ಅನುಕೂಲ. ಅಂಥ ಭಿಕ್ಷುವು ಮೂರು ಸಂಯೋಜನೆಗಳನ್ನು ಕತ್ತರಿಸಿಕೊಂಡು ರಾಗ-ದ್ವೇಷ-ಮೋಹಗಳನ್ನು ಬಹುಮಟ್ಟಿಗೆ ಕಡಿಮೆ ಮಾಡಿಕೊಂಡು ಸಕದಾಗಾಮಿಯಾಗುತ್ತಾನೆ. ಈ ಲೋಕಕ್ಕೆ ಒಂದುಸಾರಿ ಮಾತ್ರ ಬಂದು ದುಃಖವನ್ನು ಅಂತ್ಯಗೊಳಿಸುತ್ತಾನೆ. ಇದು ಅಂಥವನು ಪಡೆಯುವ ಎರಡನೆಯ ಫಲ ಮತ್ತು ಎರಡನೆಯ ಅನುಕೂಲ. ಗೆಳೆಯ, ಅಂಥ ಭಿಕ್ಷುವು ಐದು ಸಂಯೋಜನೆಗಳನ್ನು ಕತ್ತರಿಸಿಕೊಂಡು ಓಪಪಾತಿಕನಾಗುತ್ತಾನೆ. ಅವನು ಯೋನಿಜನಲ್ಲ! ಅವನು ಈ ಲೋಕಕ್ಕೆ ಬರುವುದೇ ಇಲ್ಲ. ಅವನು ಪರಿನಿಬ್ಬಾನದ ಹಾದಿಯಲ್ಲಿ ಇರುತ್ತಾನೆ. ಅಂಥ ಭಿಕ್ಷುವು ಪಡೆಯುವ ಮೂರನೆಯ ಫಲ ಇದು, ಮೂರನೆಯ ಅನುಕೂಲ. ಅಂಥ ಭಿಕ್ಷುವು ಎಲ್ಲ ಆಸವಗಳನ್ನೂ ಕಳೆದುಕೊಂಡು ಚೇತೋವಿಮುಕ್ತಿ, ಪಞ್ಞಾವಿಮುಕ್ತಿಗಳನ್ನು ಪಡೆದು ಅತಿ ಶ್ರೇಷ್ಠವಾದ ಜ್ಞಾನವನ್ನು ತಾನೇ ಸಾಕ್ಷತ್ಕರಿಸಿಕೊಂಡು ಆ ಸ್ಥಿತಿಯಲ್ಲಿಯೇ ಇರುತ್ತಾನೆ. ಇದು ಅವನು ಪಡೆಯುವ ನಾಲ್ಕನೆಯ ಫಲ, ನಾಲ್ಕನೆಯ ಅನುಕೂಲ. ನಾಲ್ಕು ವಿಧದ ಸುಖವನ್ನು ಪಡೆದಿರುವವನು ಅನುಭವಿಸುವ ನಾಲ್ಕು ಫಲಗಳು ನಾಲ್ಕು ಅನುಕೂಲಗಳು ಇವೇ!
“ಅನ್ಯ ಸಂಪ್ರದಾಯಗಿಗೆ ಸೇರಿದ ಪರಿಬ್ಬಾಜಕರು ಹೀಗೆ ಹೇಳಬಹುದು ಚುಂದ; ‘ಶಾಕ್ಯಪುತ್ರನ ಸಮಣರು ತಮ್ಮ ಧರ್ಮವನ್ನೇ ಸರಿಯಾಗಿ ವಿವರಿಸಲಾರರು.’ ಅಂಥ ಪರಿಬ್ಬಾಜಕರಿಗೆ ಹೀಗೆ ಹೇಳಬೇಕು- ‘ಗೆಳೆಯ, ತಿಳಿದವರೂ ಕಂಡವರೂ ಅರಹಂತರೂ ಸಮ್ಮಾಸಂಬುದ್ಧರೂ ಆದ ಭಗವಾನರು ತಮ್ಮ ಶಿಷ್ಯರಿಗೆ ಧರ್ಮವನ್ನು ಬಹುಚೆನ್ನಾಗಿ ಬೋಧಿಸಿದ್ದಾರೆ. ಜೀವವಿರುವವರೆಗೂ ಆ ಶಿಷ್ಯರೂ ಧರ್ಮವನ್ನು ಅತಿಕ್ರಮಿಸುವುದಿಲ್ಲ. ಗೆಳೆಯ, ಇಂದ್ರಕೀಲವು ಅಚಲವಾಗಿರುವಂತೆ ಅಥವಾ ಆಳವಾಗಿ ಹೂಳಲ್ಪಟ್ಟ ಕಬ್ಬಿಣದ ಸ್ತಂಭವೊಂದು ಅಚಲವಾಗಿರುವಂತೆ ಅವರ ಧಮ್ಮವು ಅಚಲವಾಗಿದೆ. ತಿಳಿದವರೂ ಕಂಡವರೂ ಅರಹಂತರೂ ಸಮ್ಮಾಸಂಬುದ್ಧರೂ ಆದ ಭಗವಾನರಿಂದ ಬೋಧಿತವಾಗಿರುವ ಧಮ್ಮವು ಅವರ ಶಿಷ್ಯರಿಂದ ಅವರ ಜೀವವಿರುವವರೆಗೂ ಪಾಲಿಸಲ್ಪಡುತ್ತದೆ. ಖೀಣಾಸವನಾದ ಅರಹಂತನಾದ ಮಾಡಬೇಕಾದ್ದೆಲ್ಲವನ್ನೂ ಮಾಡಿ ಮುಗಿಸಿ ಭಾರವನ್ನು ಇಳಿಸಿಕೊಂಡಿರುವ ಸಿದ್ಧಿಯನ್ನು ಪಡೆದಿರುವ ಹುಟ್ಟು ಸಾವುಗಳ ಸಂಕೋಲೆಯನ್ನು ಕತ್ತರಿಸಿಕೊಂಡಿರುವ ವಿಮುಕ್ತಿಯನ್ನು ಪಡೆದಿರುವ ಭಿಕ್ಷುವು ಅಡ್ಡದಾರಿ ಹಿಡಿಯಲಾರ. ಕೆಳಕಂಡ ಈ ಒಂಬತ್ತು ಗುಣಗಳು ಅವನಲ್ಲಿರುವುದಿಲ್ಲ. ಖೀಣಾಸವನಾದ ಆ ಭಿಕ್ಷುವು ಜೀವಿಗಳನ್ನು ಕೊಲ್ಲಲಾರ. ಕೊಲ್ಲಬೇಕೆಂಬ ಭಾವನೆಯನ್ನು ತಾಳಲಾರ. ಎರಡನೆಯದಾಗಿ ತನಗೆ ಸೇರದುದನ್ನು ಬಯಸುವುದಿಲ್ಲ, ತೆಗೆದುಕೊಳ್ಳುವುದಿಲ್ಲ. ಮೂರನೆಯದಾಗಿ ಅವನು ಮೈಥುನದಲ್ಲಿ ತೊಡಗುವುದೇ ಇಲ್ಲ. ನಾಲ್ಕನೆಯದಾಗಿ ಸುಳ್ಳಾದುದನ್ನು ಅಂಥ ಭಿಕ್ಷುವು ನುಡಿಯಲಾರ. ಐದನೆಯದಾಗಿ ಗೃಹಸ್ಥನಾಗಿದ್ದಾಗ ನಿಧಿಯನ್ನು ಪಡೆದು ಅದನ್ನು ವಿವಿಧ ಕಾಮಗಳಿಗಾಗಿ ಬಳಸಿಕೊಳ್ಳುತ್ತಿದ್ದಂತೆ ಆತ ನಿಧಿಯನ್ನು ಬಳಸಿಕೊಳ್ಳಲಾರ. ಆರನೆಯದಾಗಿ ಆತನು ಪಕ್ಷಪಾತದಿಂದ ಕೂಡಿರಲಾರ. ರಾಗವನ್ನು ಹೊಂದಿರಲಾರ. ಏಳನೆಯದಾಗಿ ಅಂಥ ಭಿಕ್ಷುವು ಮೋಹದಿಂದ ಕೂಡಿರಲಾರ. ಒಂಬತ್ತನೆಯದಾಗಿ ಖೀಣಾಸವನಾದ ಆ ಭಿಕ್ಷುವು ಭಯದಿಂದ ಇರಲಾರ. ಖೀಣಾಸವನಾದ ಅರಹಂತನಾದ ಮಾಡಬೇಕಾದ್ದೆಲ್ಲವನ್ನೂ ಮಾಡಿ ಮುಗಿಸಿರುವ ಭಾರವನ್ನು ಇಳಿಸಿಕೊಂಡಿರುವ ಸಿದ್ಧಿಯನ್ನು ಪಡೆದಿರುವ ಹುಟ್ಟು ಸಾವುಗಳ ಸಂಕೋಲೆಯನ್ನು ಕತ್ತರಿಸಿಕೊಂಡಿರುವ ವಿಮುಕ್ತಿಯನ್ನು ಪಡೆದಿರುವ ಆ ಭಿಕ್ಷುವು ಅಡ್ಡದಾರಿ ಹಿಡಿದು ಈ ಒಂಬತ್ತು ಮನೋಧರ್ಮಗಳನ್ನು ಹೊಂದಿರಲಾರ, ಅಕರ್ಮಗಳನ್ನು ಮಾಡಲಾರ.
ಜ್ಞಾನದ ವಿವರಣೆ
“ಅನ್ಯ ಸಂಪ್ರದಾಯಗಳಿಗೆ ಸೇರಿದ ಪರಿಬ್ಬಾಜಕರು ಹೀಗೆ ಹೇಳಬಹುದು ಚುಂದ- ‘ಸಮಣ ಗೋತಮನು ಹಿಂದೆ ಆದದ್ದೆಲ್ಲವನ್ನೂ ಸರಿಯಾಗಿಯೇ ಹೇಳಬಲ್ಲ. ಅಂಥ ಞಾಣದಸ್ಸನವು ಅವನಿಗಿದೆ. ಆದರೆ ಮುಂದಾಗುವುದರ ಞಾಣದಸ್ಸನ ಅವನಿಗಿದೆಯೇ?’ ಆ ಅನ್ಯ ಸಂಪ್ರದಾಯಕ್ಕೆ ಸೇರಿದ ಪರಿಬ್ಬಾಜಕರು ಮೂರ್ಖರಂತೆ ಒಂದನ್ನು ಕುರಿತ ಞಾಣದಸ್ಸನವನ್ನು ಮತ್ತೊಂದಕ್ಕೆ ಅನ್ವಯಿಸಿಕೊಂಡುಬಿಡುತ್ತಾರೆ. ಅಂಥ ತಪ್ಪು ತಿಳಿವಳಿಕೆ ಅವರದು. ತಥಾಗತನಿಗೆ ಹಿಂದಿನ ಜನ್ಮಗಳ ತಿಳಿವಳಿಕೆ ಇದೆ. ಆತನು ಇಚ್ಛೆಪಟ್ಟಿದ್ದೆಲ್ಲವನ್ನೂ ನೆನಪಿಗೆ ತಂದುಕೊಳ್ಳಬಲ್ಲ. ಮುಂದಾಗುವುದರ ಜ್ಞಾನವೂ ಆತನಲ್ಲಿ ಉದಿಸಿದೆ- ‘ಇದೇ ಕೊನೆಯ ಜನ್ಮ, ಇನ್ನುಮುಂದೆ ನನಗೆ ಹುಟ್ಟೇ ಇಲ್ಲ’. ಚುಂದ, ಅನರ್ಥದಿಂದ ಕೂಡಿದ ನಿಜವಲ್ಲದ ಹಿಂದಿನದನ್ನು ತಥಾಗತನು ವಿವರಿಸುವುದಿಲ್ಲ. ಯಾವುದು ನಿಜವಾಗಿಯೂ ನಡೆಯಿತೋ ಅದು ಅನರ್ಥಕಾರಿಯಾಗಿದ್ದರೆ ಅದನ್ನು ತಥಾಗತನು ವಿವರಿಸುವುದಿಲ್ಲ. ಯಾವುದು ಹಿಂದೆ ನಡೆಯಿತೋ, ಯಾವುದು ಅರ್ಥಪೂರ್ಣವಾಗಿದೆಯೋ ಅದನ್ನು ಎಲ್ಲ ಕಾಲಗಳಲ್ಲಿ ಏನಾಯಿತೆಂಬುದನ್ನು ತಿಳಿದ ತಥಾಗತನು ವಿವರಿಸುತ್ತಾನೆ. ಮುಂದೆ ಆಗದಿರುವುದನ್ನೂ ಅನರ್ಥಕಾರಿಯಾದುದನ್ನು ತಥಾಗತನು ವಿವರಿಸುವುದಿಲ್ಲ. ‘ಏನಾಗುತ್ತದೆಂಬುದನ್ನು ತಿಳಿದ ತಥಾಗತನು ವಿವರಿಸುತ್ತಾನೆ.’ ಚುಂದ, ಇಂದು ಯಾವುದು ನಿಜವಲ್ಲವೋ ಅನರ್ಥಕಾರಿಯೋ ಅದನ್ನ ತಥಾಗತನು ಹೇಳುವುದಿಲ್ಲ. ಇಂದು ನಿಜವಾದದ್ದಾದರೂ ಯಾವುದು ಅನರ್ಥಕಾರಿಯಾಗಿದೆಯೋ ಅದನ್ನು ತಥಾಗತನು ವಿವರಿಸುವುದಿಲ್ಲ. ಇಂದು ಯಾವುದು ನಿಜವಾದುದೋ ಅರ್ಥಪೂರ್ಣವಾದುದೋ ಅದನ್ನು ಕಾಲಜ್ಞಾನಿಯಾದ ತಥಾಗತನು ವಿವರಿಸುತ್ತಾನೆ.
“ಹೀಗೆ ಚುಂದ, ಹಿಂದಾದುದನ್ನೂ ಮುಂದಾಗುವುದನ್ನೂ ಇಂದು ಆಗುತ್ತಿರುವುದನ್ನೂ ತಿಳಿದ ತಥಾಗತನು ತಾನು ಹೇಳಬೇಕಾದುದನ್ನು ಸಕಾಲದಲ್ಲಿ ಹೇಳುತ್ತಾನೆ. ನಿಜವಾದುದನ್ನು ಹೇಳುತ್ತಾನೆ. ಅರ್ಥಪೂರ್ಣವಾದುದನ್ನು ಹೇಳುತ್ತಾನೆ. ಆದುದರಿಂದಲೇ ಅವನನ್ನು ‘ತಥಾಗತ’* ಎಂದು ಹೇಳುತ್ತಾರೆ. ದೇವತೆಗಳ ಮಾರರ ಬ್ರಹ್ಮರ ಸಮಣ ಬ್ರಾಹ್ಮಣರ ಸಾಮಾನ್ಯ ಪ್ರಜೆಗಳ ಲೋಕದಲ್ಲಿ ಏನನ್ನು ತಿಳಿಯಬಹುದೋ ಕೇಳಿ ಅರಿಯಬಹುದೋ ಮನನ ಮಾಡಿ ತಿಳಿಯಬಹುದೋ ವಿಚಾರದಿಂದ ಅರಿಯಬಹುದೋ ಮನಸ್ಸಿನಿಂದ ತಿಳಿಯಬಹುದೋ ಅದೆಲ್ಲವನ್ನು ಆತನು ಅರಿತಿದ್ದಾನೆ. ಆದುದರಿಂದ ಅವನನ್ನು ‘ತಥಾಗತ’ ಎಂದು ಕರೆಯುತ್ತಾರೆ. ಅನುತ್ತರವಾದ ಸಂಬೋಧಿ ಪಡೆದ ರಾತ್ರಿಯಿಂದ ಮರು ಹುಟ್ಟಿಲ್ಲದ ನಿಬ್ಬಾನವನ್ನು ಪಡೆಯುವವರಿಗೆ ಆತ ಹೇಳಿದ್ದೆಲ್ಲವೂ ಬೋಧಿಸಿದ್ದೆಲ್ಲವೂ ಚರ್ಚಿಸಿದ್ದೆಲ್ಲವೂ ನಿಜವೇ ಆಗಿದೆ. ನಿಜವಲ್ಲದ್ದು ಯಾವುದೂ ಇಲ್ಲ. ಆದುದರಿಂದಲೇ ಆತನನ್ನು ‘ತಥಾಗತ’ ಎಂದು ಕರೆಯುತ್ತಾರೆ. ಚುಂದ, ನುಡಿದಂತೆ ನಡೆಯುವವನು, ನಡೆದಂತೆ ನುಡಿಯುವವನು ಅವನು. ಆದುದರಿಂದ ಆತನನ್ನು ತಥಾಗತನೆಂದು ಕರೆಯುತ್ತಾರೆ. ದೇವತೆಗಳ ಮಾರರ ಬ್ರಹ್ಮರ ಸಮಣ ಬ್ರಾಹ್ಮಣರ ಸಾಮಾನ್ಯ ಪ್ರಜೆಗಳ ಲೋಕದಲ್ಲಿ ತಥಾಗತನನ್ನು ಮೀರಿಸುವವರು ಯಾರೂ ಇಲ್ಲ. ಯಾರಿಂದಲೂ ಅವನನ್ನು ಜಯಿಸಲು ಸಾಧ್ಯವಿಲ್ಲ. ಆದುದರಿಂದ ಅವನು ‘ತಥಾಗತ’ ಎನಿಸಿಕೊಂಡಿದ್ದಾನೆ.
ವ್ಯಕ್ತಪಡಿಸದಿರುವ ಸಂಗತಿಗಳು
“ಅನ್ಯ ಸಂಪ್ರದಾಯಗಳಿಗೆ ಸೇರಿದ ಪರಿಬ್ಬಾಜಕರು ಚುಂದ, ಹೀಗೆ ಹೇಳಬಹುದು- ‘ಗೆಳೆಯ, ಮರಣವಾದ ಮೇಲೆ ತಥಾಗತನು ಇರುತ್ತಾನೆಯೇ, ಇದೊಂದು ಮಾತ್ರ ನಿಜವೇ. ಮಿಕ್ಕಿದ್ದೆಲ್ಲವೂ ಮೌಢ್ಯವೇ?’ ಹೀಗೆ ಹೇಳುವ ಇತರ ಸಂಪ್ರದಾಯಸ್ಥರಿಗೆ ನೀವು ಈ ರೀತಿಯಲ್ಲಿ ಉತ್ತರಿಸಬೇಕು. ‘ಗೆಳೆಯ, ಮರಣವಾದ ಮೇಲೆ ತಥಾಗತನಿರುತ್ತಾನೆ, ಇದೊಂದೇ ಸತ್ಯ ಮಿಕ್ಕಿದ್ದೆಲ್ಲವೂ ಮೌಢ್ಯ’ ಎಂದು ಆತನು ಹೇಳುವುದಿಲ್ಲ.
“ಅನ್ಯ ಸಂಪ್ರದಾಯದವರು ‘ಮರಣವಾದ ಮೇಲೆ ತಥಾಗತನಿರುವುದಿಲ್ಲವೇ ಗೆಳೆಯ, ಇದೊಂದು ಮಾತ್ರ ಸತ್ಯವೇ, ಮಿಕ್ಕಿದ್ದೆಲ್ಲವೂ ಮೌಢ್ಯವೇ’ ಎಂದು ಹೇಳಬಹುದು. ಅಂಥ ಪರಿಬ್ಬಾಜಕರಿಗೆ ಈ ಉತ್ತರವನ್ನು ಕೊಡಿ. ‘ಗೆಳೆಯ, ಮರಣವಾದ ಮೇಲೆ ತಥಾಗತನಿರುವುದಿಲ್ಲ, ಇದೊಂದು ಮಾತ್ರ ನಿಜ ಮಿಕ್ಕಿದ್ದೆಲ್ಲವೂ ಮೌಢ್ಯ ಎಂದು ತಥಾಗತನು ಹೇಳುವುದಿಲ್ಲ.’
“ಅನ್ಯ ಸಂಪ್ರದಾಯಕ್ಕೆ ಸೇರಿದ ಪರಿಬ್ಬಾಜಕರು ಹೀಗೆ ಕೇಳಬಹುದು- ‘ಮರಣವಾದ ಮೇಲೆ ಇರುವುದೂ ಉಂಟು, ಇಲ್ಲದಿರುವುದೂ ಉಂಟು, ಇದೊಂದೇ ನಿಜವೇ, ಮಿಕ್ಕಿದ್ದೆಲ್ಲವೂ ಮೌಢ್ಯವೇ?’ ಆ ಅನ್ಯ ಸಂಪ್ರದಾಯದವರಿಗೆ ನಿಮ್ಮ ಉತ್ತರ ಹೀಗಿರಬೇಕು- ‘ಮರಣವಾದ ಮೇಲೆ ತಥಾಗತನು ಇರುವುದೂ ಉಂಟು, ಇಲ್ಲದಿರುವುದೂ ಉಂಟು. ಇದು ಮಟ್ಟಿಗೆ ನಿಜ, ಮಿಕ್ಕಿದ್ದೆಲ್ಲವೂ ಮೌಢ್ಯ’ ಎಂದು ತಥಾಗತನು ಹೇಳುವುದಿಲ್ಲ.’
“ಅನ್ಯ ಸಂಪ್ರದಾಯಕ್ಕೆ ಸೇರಿದ ಪರಿಬ್ಬಾಜಕರು ಹೀಗೆ ಕೇಳಬಹುದು- ‘ಮರಣವಾದ ಮೇಲೆ ತಥಾಗತನು ಇರುವುದಿಲ್ಲ, ಇಲ್ಲದೆ ಇರುವುದೂ ಇಲ್ಲ, ಇದೊಂದೇ ನಿಜವೇ, ಮಿಕ್ಕಿದ್ದೆಲ್ಲವೂ ಮೌಢ್ಯವೇ?’. ಆಗ ನಿಮ್ಮ ಉತ್ತರ ಹೀಗಿರಬೇಕು ಚುಂದ. ‘ಗೆಳೆಯ, ಮರಣವಾದ ಮೇಲೆ ತಥಾಗತನು ಇರುವುದಿಲ್ಲ, ಇಲ್ಲದೇ ಇರುವುದೂ ಇಲ್ಲ. ಇದೊಂದೇ ನಿಜ, ಮಿಕ್ಕಿದ್ದೆಲ್ಲವೂ ಮೌಢ್ಯ’ ಎಂದು ತಥಾಗತನು ಹೇಳುವುದಿಲ್ಲ.
“ಅನ್ಯ ಸಂಪ್ರದಾಯಕ್ಕೆ ಸೇರಿದ ಪರಿಬ್ಬಾಜಕರು ಹೀಗೆ ಕೇಳಬಹುದು- ‘ಗೆಳೆಯ, ಸಮಣ ಗೋತಮನು ಏತಕ್ಕೆ ಇದನ್ನು ವಿವರಿಸುವುದಿಲ್ಲ?’ ಹೀಗೆ ಕೇಳುವ ಅನ್ಯ ಸಂಪ್ರದಾಯದ ಪರಿಬ್ಬಾಜಕರಿಗೆ ಹೀಗೆ ಹೇಳಿ- ‘ಗೆಳೆಯ, ಯಾವುದು ಅರ್ಥಪೂರ್ಣವಲ್ಲವೋ, ಯಾವುದು ಧಮ್ಮಕ್ಕೆ ಅನುಗುಣವಾಗಿಲ್ಲವೋ, ಯಾವುದು ಶ್ರೇಷ್ಠವಾದ ಜೀವನಕ್ಕೆ ಸಂಬಂಧಿಸಿಲ್ಲವೋ ಸತ್ಯವಾದದ್ದಲ್ಲವೋ, ವೈರಾಗ್ಯಕ್ಕೆ ಸಹಾಯಕವಲ್ಲವೋ, ದುಃಖ ನಿರೋಧಕ್ಕೆ ಅನುಕೂಲವಲ್ಲವೋ ಶಾಂತಿಯನ್ನು ತರುವುದಿಲ್ಲವೋ ಅದನ್ನು ಭಗವಂತನು ವಿವರಿಸುವುದಿಲ್ಲ.
ವ್ಯಕ್ತಪಡಿಸಿರುವ ಸಂಗತಿಗಳು
“ಅನ್ಯ ಸಂಪ್ರದಾಯಕ್ಕೆ ಸೇರಿದ ಪರಿಬ್ಬಾಜಕರು ನಿಮ್ಮನ್ನು ‘ಗೆಳೆಯ, ಗೋತಮನು ವಿವರಿಸುವುದು ಯಾವುದನ್ನು?’ ಎಂದು ಕೇಳಿದಾಗ ಅವರಿಗೆ- ‘ಇದು ದುಃಖ, ಇದು ದುಃಖ ಸಮುದಯ, ಇದು ದುಃಖ ನಿರೋಧ, ಇದು ದುಃಖ ನಿರೋಧಕ್ಕಿರುವ ಮಾರ್ಗ ಎಂಬುದನ್ನು ಭಗವಂತನು ವಿವರಿಸುತ್ತಾನೆ’ ಎಂದು ಉತ್ತರ ಕೊಡಿ.
“ಅನ್ಯ ಸಂಪ್ರದಾಯದ ಪರಿಬ್ಬಾಜಕರು ಮತ್ತೆ ನಿಮ್ಮನ್ನು ಹೀಗೆ ಕೇಳಬಹುದು- ‘ಸಮಣ ಗೋತಮನು ಏತಕ್ಕೆ ಇವುಗಳನ್ನು ವಿವರಿಸುತ್ತಾನೆ?’ ಇದಕ್ಕೆ ನೀವು ‘ಏಕೆಂದರೆ, ಅವು ಅರ್ಥಪೂರ್ಣವಾಗಿವೆ, ಧಮ್ಮಕ್ಕೆ ಅನುಗುಣವಾಗಿವೆ, ಸತ್ಯವಾಗಿವೆ, ಶ್ರೇಷ್ಠವಾದ ಜೀವನಕ್ಕೆ ಸಂಬಂಧಿಸಿವೆ, ವೈರಾಗ್ಯ ದುಃಖ ನಿರೋಧಕ್ಕೆ ಸಹಾಯಕವಾಗಿವೆ, ಶಾಂತಿಯನ್ನು ಕೊಡುತ್ತವೆ, ಶ್ರೇಷ್ಠವಾದ ಜ್ಞಾನದ ಅಂಶಗಳಾಗಿವೆ, ಸಂಬೋಧಿ ನಿಬ್ಬಾನಗಳಿಗೆ ಸಂಬಂಧಿಸಿವೆ, ಆದುದರಿಂದ ಭಗವಂತನು ವಿವರಿಸುತ್ತಾನೆ’ ಎಂದು ಉತ್ತರ ಕೊಡಿ.
ಹಿಂದಿನದರ ಬಗ್ಗೆ ಇರುವ ತಪ್ಪು ದೃಷ್ಟಿಗಳು
“ಚುಂದ, ಹಿಂದಾದುದಕ್ಕೆ ಸಂಬಂಧಿಸಿದುದರಲ್ಲಿ ಯಾವುದನ್ನು ವಿವರಿಸಬಹುದೋ, ಅದನ್ನು ನಿನಗೆ ವಿವರಿಸಿದ್ದೇನೆ. ನಿನಗೆ ಹಿಂದಿನದನ್ನು ಕುರಿತು ಯಾವುದನ್ನು ವಿವರಿಸಬಾರದೋ ನಾನು ಯಾವುದನ್ನು ವಿವರಿಸುವುದಿಲ್ಲವೋ ಅದು ಯಾವುದು? ಹಾಗೆಯೇ ಮುಂದಾಗುವುದನ್ನು ಕುರಿತು ಯಾವುದನ್ನು ವಿವರಿಸುವುದಿಲ್ಲವೋ ಅದು ಯಾವುದು?
‘ಆತ್ಮವೂ ಲೋಕವೂ ಶಾಶ್ವತ, ಇದೊಂದೇ ಸತ್ಯ, ಮಿಕ್ಕಿದ್ದೆಲ್ಲವೂ ಮೌಢ್ಯ’ ಎಂದು ವಾದಿಸುವ ಮತ್ತು ಆ ನಂಬಿಕೆಯನ್ನು ಹೊಂದಿರುವ ಸಮಣರೂ, ಬ್ರಾಹ್ಮಣರೂ ಇದ್ದಾರೆ. ‘ಆತ್ಮವೂ ಲೋಕವೂ ಅಶಾಶ್ವತ’ ಎಂಬ ನಂಬಿಕೆಯನ್ನು ಹೊಂದಿರುವ ಮತ್ತು ಹಾಗೆ ವಾದಿಸುವ ಸಮಣ ಬ್ರಾಹ್ಮಣರೂ ಇದ್ದಾರೆ. ‘ಆತ್ಮ ಮತ್ತು ಲೋಕಗಳು ಶಾಶ್ವತವಾಗಿರುವುದೂ ಉಂಟು, ಅವು ಅಶಾಶ್ವತವಾಗಿರುವುದೂ ಉಂಟು’ ಎಂಬ ದೃಷ್ಟಿಯನ್ನು ಹೊಂದಿರುವ ಮತ್ತೆ ಹಾಗೆ ವಾದಿಸುವ ಸಮಣ ಬ್ರಾಹ್ಮಣರೂ ಇದ್ದಾರೆ. ‘ಆತ್ಮ ಮತ್ತು ಲೋಕಗಳು ಶಾಶ್ವತವಾಗಿಯೂ ಇಲ್ಲ, ಅಶಾಶ್ವತವೂ ಅಲ್ಲ’ ಎಂಬ ದೃಷ್ಟಿಯನ್ನು ಹೊಂದಿರುವ ಮತ್ತು ಹಾಗೆ ವಾದಿಸುವ ಸಮಣ ಬ್ರಾಹ್ಮಣರಿದ್ದಾರೆ. ‘ಆತ್ಮ ಮತ್ತು ಲೋಕಗಳು ನಮ್ಮಿಂದಲೇ ಆಗಿವೆ’ ಎಂಬ ದೃಷ್ಟಿಯನ್ನು ಹೊಂದಿರುವ ಮತ್ತು ಹಾಗೆ ವಾದಿಸುವ ಸಮಣರೂ ಬ್ರಾಹ್ಮಣರೂ ಇದ್ದಾರೆ. ‘ಆತ್ಮ ಮತ್ತು ಲೋಕಗಳು ಬೇರೆಯವರಿಂದ ಆಗಿವೆ’... ‘ಆತ್ಮ ಮತ್ತು ಲೋಕಗಳು ನಮ್ಮಿಂದಲೂ ಆಗಿವೆ, ಪರರಿಂದಲೂ ಆಗಿವೆ.’ ‘ಲೋಕ ಮತ್ತು ಆತ್ಮಗಳು ನಮ್ಮಿಂದಲೂ ಆಗಿಲ್ಲ. ಪರರಿಂದಲೂ ಆಗಿಲ್ಲ. ಅವು ಇದ್ದಕ್ಕಿದ್ದಂತೆಯೇ ಹುಟ್ಟಿಕೊಂಡಿವೆ’ ಎಂದು ನಂಬಿರುವ ಮತ್ತು ಹಾಗೆ ವಾದಿಸುವ ಸಮಣ ಬ್ರಾಹ್ಮಣರಿದ್ದಾರೆ. ಅವರು ತಾವು ಹೇಳುವುದೇ ಸತ್ಯ, ಮಿಕ್ಕಿದ್ದೆಲ್ಲವೂ ಮೌಢ್ಯ ಎಂದೇ ಹೇಳುತ್ತಾರೆ. ‘ಸುಖ ದುಃಖಗಳು ಶಾಶ್ವತ... ಸುಖ ದುಃಖಗಳು ಅಶಾಶ್ವತ. ಸುಖದುಃಖಗಳು ಶಾಶ್ವತವೂ ಹೌದು, ಅಶಾಶ್ವತವೂ ಹೌದು... ಸುಖ ದುಃಖಗಳು ಶಾಶ್ವತವೂ ಅಲ್ಲ, ಅಶಾಶ್ವತವೂ ಅಲ್ಲ... ಸುಖದುಃಖಗಳು ನಮ್ಮಿಂದಲೇ ಆಗಿವೆ... ಸುಖದುಃಖಗಳ ಬೇರೆಯವರಿಂದ ಆಗತ್ತವೆ... ಸುಖದುಃಖಗಳು ನಮ್ಮಿಂದಲೂ ಆಗಿವೆ, ಪರರಿಂದಲೂ ಆಗಿವೆ... ಸುಖದುಃಖಗಳು ನಮ್ಮಿಂದಲೂ ಆಗಿಲ್ಲ ಬೇರೆಯವರಿಂದಲೂ ಆಗಿಲ್ಲ, ಅವು ಇದ್ದಕ್ಕಿಂದ್ದಂತೆಯೇ ಹುಟ್ಟಿಕೊಳ್ಳುತ್ತವೆ. ಇದೊಂದೇ ಸತ್ಯ, ಮಿಕ್ಕಿದ್ದೆಲ್ಲವೂ ಮೌಢ್ಯ’ ಎಂದು ಹೇಳುವ ಮತ್ತು ಅದನ್ನು ನಂಬಿರುವ ಸಮಣ ಬ್ರಾಹ್ಮಣರಿದ್ದಾರೆ.
“ಚುಂದ, ಆತ್ಮವೂ ಶಾಶ್ವತ ಲೋಕವೂ ಶಾಶ್ವತ, ಇದೊಂದೇ ಸತ್ಯ, ಮಿಕ್ಕಿದ್ದೆಲ್ಲವೂ ಮೌಢ್ಯ” ಎಂದು ವಾದಿಸುವ ಮತ್ತು ನಂಬಿಕೆಯುಳ್ಳ ಸಮಣ ಬ್ರಾಹ್ಮಣರನ್ನು ‘ಗೆಳೆಯ, ಆತ್ಮವೂ ಶಾಶ್ವತ, ಲೋಕವೂ ಶಾಶ್ವತ ಎಂದು ನೀವು ಹೇಳುತ್ತೀರೇನು?’ ಎಂದು ಕೇಳುತ್ತೇನೆ. ಅದಕ್ಕೆ ಅವರು ‘ಹೌದು, ಇದೊಂದೇ ಸತ್ಯ, ಮಿಕ್ಕಿದ್ದೆಲ್ಲವೂ ಮೌಢ್ಯ’ ಎಂದು ಹೇಳಬಹುದು. ಅದನ್ನು ನಾನು ಒಪ್ಪುವುದಿಲ್ಲ. ಹೀಗೆ ಹೇಳಲು ಕಾರಣವೇನು? ಇದನ್ನೊಪ್ಪದೆ ಇತರ ನಂಬಿಕೆಗಳನ್ನು ಹೊಂದಿರುವ ಜನರಿದ್ದಾರೆ. ಜೊತೆಗೆ ನಾನು ಯಾವುದನ್ನು ಅರಿತಿದ್ದೇನೋ ಅದಕ್ಕೆ ಈ ನಂಬಿಕೆಯು ಸಮ ಸಮವಾಗಿದೆ ಎಂದೂ ನನಗನ್ನಿಸುವುದಿಲ್ಲ. ಇದಕ್ಕಿಂತಲೂ ಶ್ರೇಷ್ಠವಾದುದಂತೂ ಅಲ್ಲ. ಉತ್ಕೃಷ್ಟ ಪಞ್ಞಾದ ಮೂಲಕ ನಾನು ಪಡೆದಿರುವ ಅರಿವೇ ಅತಿ ಶ್ರೇಷ್ಠವಾದುದು.
“ಚುಂದ, ಆತ್ಮ ಮತ್ತು ಲೋಕಗಳು ಅಶಾಶ್ವತ, ಆತ್ಮ ಮತ್ತು ಲೋಕಗಳು ಶಾಶ್ವತವೂ ಆಗಿವೆ, ಅಶಾಶ್ವತವೂ ಹೌದು. ಆತ್ಮ ಮತ್ತು ಲೋಕಗಳು ಶಾಶ್ವತವೂ ಅಲ್ಲ, ಅಶಾಶ್ವತವೂ ಅಲ್ಲ. ಆತ್ಮ ಮತ್ತು ಲೋಕಗಳು ನಮ್ಮಿಂದಲೇ ಆಗಿವೆ... ಆತ್ಮ ಮತ್ತು ಲೋಕಗಳು ಪರರಿಂದ ಆಗಿವೆ... ಆತ್ಮ ಮತ್ತು ಲೋಕಗಳು ನಮ್ಮಿಂದಲೇ ಆಗಿವೆ... ಆತ್ಮ ಮತ್ತು ಲೋಕಗಳು ಪರರಿಂದ ಆಗಿವೆ... ಆತ್ಮ ಮತ್ತು ಲೋಕಗಳು ನಮ್ಮಿಂದಲೂ ಆಗಿವೆ, ಪರರಿಂದಲೂ ಆಗಿವೆ... ಆತ್ಮ ಮತ್ತು ಲೋಕಗಳು ನಮ್ಮಿಂದಲೂ ಆಗಿಲ್ಲ, ಪರರಿಂದಲೂ ಆಗಿಲ್ಲ, ಇದ್ದಕ್ಕಿದ್ದಂತೆಯೇ ಹುಟ್ಟಿಕೊಂಡಿವೆ... ಸುಖದುಃಖಗಳು ಶಾಶ್ವತ... ಸುಖ ದುಃಖಗಳು ಅಶಾಶ್ವತ... ಸುಖದುಃಖಗಳು ಶಾಶ್ವತವೂ ಆಗಿವೆ, ಅಶಾಶ್ವತವೂ ಆಗಿವೆ... ಸುಖದುಃಖಗಳು ಶಾಶ್ವತವೂ ಅಲ್ಲ, ಅಶಾಶ್ವತವೂ ಅಲ್ಲ... ಸುಖದುಃಖಗಳಿಗೆ ನಾವೇ ಕಾರಣ... ಸುಖ ದುಃಖಗಳಿಗೆ ಪರರು ಕಾರಣ... ಸುಖ ದುಃಖಗಳಿಗೆ ನಾವು ಕಾರಣರಲ್ಲ, ಪರರೂ ಕಾರಣರಲ್ಲ, ಅವು ಇದ್ದಕ್ಕಿದ್ದಂತೆಯೇ ಬರುತ್ತವೆ ಎಂದು ನಂಬಿರುವ ಮತ್ತು ವಾದಿಸುವ ಸಮಣ ಬ್ರಾಹ್ಮಣರಲ್ಲಿಗೆ ಹೋಗಿ ‘ಗೆಳೆಯ, ನೀನು ಹೀಗೆ ಹೇಳುವುದು ನಿಜವೇ?’ ಎಂದು ಕೇಳುತ್ತೇನೆ. ಆತನು ‘ಹೌದು, ನಾನು ಹೇಳುವದೊಂದೇ ಸತ್ಯ, ಮಿಕ್ಕಿದ್ದೆಲ್ಲವೂ ಮೌಢ್ಯ’ ಎಂದು ಹೇಳಬಹುದು. ಅದನ್ನು ನಾನು ಒಪ್ಪುವುದಿಲ್ಲ, ಇದಕ್ಕೇನು ಕಾರಣ? ಬೇರೆ ನಂಬಿಕೆಯುಳ್ಳ ಜನರಿದ್ದಾರೆ, ನಾನು ಯಾವುದನ್ನು ಅರಿತಿದ್ದೆನೋ ಅದಕ್ಕೆ ಈ ನಂಬಿಕೆಗಳು ಸಮಸಮವಾಗಿಯೂ ಇಲ್ಲ, ಶ್ರೇಷ್ಠವಾಗಿರುವ ಮಾತಂತಿರಲಿ, ಪಞ್ಞಾದ ಮೂಲಕ ನಾನು ಅರಿತಿರುವುದರ ವಿವರಣೆಯೇ ಎಲ್ಲಕ್ಕಿಂತ ಶ್ರೇಷ್ಠವಾದುದು. ಹಿಂದಿನದನ್ನು ಕುರಿತು ನಾನು ವಿವರಿಸುವುದು ಇಷ್ಟನ್ನು. ಯಾವುದನ್ನು ವಿವರಿಸಬಾರದೋ, ನಾನು ಯಾವುದನ್ನು ವಿವರಿಸುವುದಿಲ್ಲವೋ ಅದು ಯಾವುದು?
ಮುಂದಿನದರ ಬಗ್ಗೆ ತಪ್ಪು ದೃಷ್ಟಿಗಳು
“ಮುಂದಿನದನ್ನು ಕುರಿತು ಯಾವ ನಂಬಿಕೆಗಳನ್ನು ನಿಮಗೆ ವಿವರಿಸಬಾರದು ಮತ್ತು ವಿವರಿಸುವುದಿಲ್ಲ?’ ‘ಆತ್ಮವು ರೂಪಿಯಾಗಿದೆ, ಮರಣವಾದ ಮೇಲೆ ಅದಕ್ಕೆ ರೋಗವಿರುವುದಿಲ್ಲ’ ಎಂದು ನಂಬಿರುವ ಮತ್ತೆ ಹಾಗೆ ವಾದಿಸುವ ಸಮಣ ಬ್ರಾಹ್ಮಣರಿದ್ದಾರೆ. ಅವರು ‘ಇದೊಂದೇ ಸತ್ಯ, ಮಿಕ್ಕಿದ್ದೆಲ್ಲವೂ ಮೌಢ್ಯ’ ಎಂದು ಹೇಳುತ್ತಾರೆ. ‘ಆತ್ಮವು ಅರೂಪಿ, ಇದೊಂದೇ ಸತ್ಯ, ಮಿಕ್ಕಿದ್ದೆಲ್ಲವೂ ಮೌಢ್ಯ’ ಎಂದು ನಂಬಿರುವ ಮತ್ತು ವಾದಿಸುವ ಸಮಣ ಬ್ರಾಹ್ಮಣರಿದ್ದಾರೆ. ‘ಆತ್ಮವೂ ರೂಪಿಯೂ ಆಗಿದೆ, ಅರೂಪಿಯೂ ಆಗಿದೆ... ಆತ್ಮವು ರೂಪಿಯೂ ಅಲ್ಲ, ಅರೂಪಿಯೂ ಅಲ್ಲ... ಆತ್ಮಕ್ಕೆ ಅರಿವಿದೆ... ಆತ್ಮಕ್ಕೆ ಅರಿವಿರುವುದಿಲ್ಲ... ಆತ್ಮಕ್ಕೆ ಅರಿವೂ ಇಲ್ಲ; ಅದು ಅರಿವಿಲ್ಲದೆಯೂ ಇರುವುದಿಲ್ಲ... ಮರಣವಾದ ಮೇಲೆ ಆತ್ಮವು ಛಿದ್ರವಾಗುತ್ತದೆ, ನಾಶವಾಗುತ್ತದೆ. ಅದು ಇರುವುದೇ ಇಲ್ಲ, ನಾವು ಹೇಳುವುದೊಂದೇ ಸತ್ಯ, ಮಿಕ್ಕಿದ್ದೆಲ್ಲವೂ ಮೌಢ್ಯ’ ಎಂದು ನಂಬಿರುವ ಮತ್ತು ವಾದಿಸುವ ಸಮಣ ಬ್ರಾಹ್ಮಣರಿದ್ದಾರೆ. ಚುಂದ, ಆತ್ಮವು ರೂಪಿಯಾಗಿದೆ, ಮರಣವಾದ ಮೇಲೆ ಅದಕ್ಕೆ ರೋಗವಿರುವುದಿಲ್ಲ’ ಎಂದು ನಂಬಿರುವ ಮತ್ತೆ ಸಮಣ ಬ್ರಾಹ್ಮಣರಲ್ಲಿಗೆ ನಾನು ಹೋಗುತ್ತೇನೆ. ‘ಗೆಳೆಯ, ಆತ್ಮವು ರೂಪಿಯಾಗಿದೆ ಮರಣವಾದ ಮೇಲೆ ಅದಕ್ಕೆ ರೂಪವಿರುವುದಿಲ್ಲ ಎಂದು ನೀನು ಹೇಳುತ್ತೀಯೇನು?’ ಎಂದು ಕೇಳುತ್ತೇನೆ. ಅವನು ‘ಹೌದು, ಇದೊಂದೇ ಸತ್ಯ, ಮಿಕ್ಕಿದ್ದೆಲ್ಲವೂ ಮೌಢ್ಯ’ ಎಂದು ಹೇಳಬಹುದು. ಅದನ್ನು ನಾನು ಒಪ್ಪುವುದಿಲ್ಲ. ಏತಕ್ಕೆ? ಬೇರೆ ನಂಬಿಕೆಯುಳ್ಳಂಥ ಜನರಿದ್ದಾರೆ. (ಜೊತೆಗೆ) ನಾನು ಯಾವುದನ್ನು ಅರಿತಿದ್ದೇನೋ ಅದಕ್ಕೆ ಈ ವಾದವು ಸಮ ಸಮವಾಗಿಯೂ ಇಲ್ಲ, ಉತ್ತಮವಾಗಿರುವುದರ ಮಾತಂತಿರಲಿ. ನನ್ನ ವಿವರಣೆಯೇ ಎಲ್ಲಕ್ಕಿಂತ ಶ್ರೇಷ್ಠವಾದದ್ದು.
“ಆತ್ಮವು ಅರೂಪಿ... ಆತ್ಮವು ರೂಪಿಯೂ ಆಗಿದೆ, ಅರೂಪಿಯೂ ಆಗಿದೆ... ಆತ್ಮವೂ ರೂಪಿಯೂ ಅಲ್ಲ... ಅರೂಪಿಯೂ ಅಲ್ಲ, ಆತ್ಮಕ್ಕೆ ಅರಿವಿದೆ. ಆತ್ಮಕ್ಕೆ ಅರಿವಿಲ್ಲ. ಅದಕ್ಕೆ ಅರಿವಿಲ್ಲದೆಯೂ ಇಲ್ಲ. ಮರಣವಾದ ಮೇಲೆ ಆತ್ಮವು ಛಿದ್ರ ಛಿದ್ರವಾಗುತ್ತದೆ, ನಾಶವಾಗುತ್ತದೆ, ಅದು ಇರುವುದೇ ಇಲ್ಲ. ನಾವು ಹೇಳುವುದೊಂದೇ ಸತ್ಯ, ಮಿಕ್ಕಿದ್ದೆಲ್ಲವೂ ಮೌಢ್ಯ’ ಎಂದು ನಂಬಿರುವ ಮತ್ತು ವಾದಿಸುವ ಬ್ರಾಹ್ಮಣರಲ್ಲಿಗೆ ಹೋಗುತ್ತೇನೆ. ‘ಗೆಳೆಯ’ ನೀವು ಹಾಗೆ ಹೇಳುವುದು ನಿಜವೇ? ಎಂದು ಕೇಳುತ್ತೇನೆ. ‘ಗೆಳೆಯ, ನೀವು ಹಾಗೆ ಹೇಳುವುದು ನಿಜವೇ?’ ಎಂದು ಕೇಳುತ್ತೇನೆ. ‘ಹೌದು, ನಾನು ಹೇಳುವುದೊಂದೇ ಸತ್ಯ, ಮಿಕ್ಕಿದ್ದೆಲ್ಲವೂ ಮೌಢ್ಯ ಎಂದು ಹೇಳಬಹುದು. ಅದನ್ನು ನಾನು ಒಪ್ಪುವುದಿಲ್ಲ. ಏಕೆಂದರೆ ಬೇರೆ ನಂಬಿಕೆಯುಳ್ಳ ಜನರಿದ್ದಾರೆ. (ಜೊತೆಗೆ) ನಾನು ಯಾವುದನ್ನು ಅರಿತಿದ್ದೇನೋ ಅದಕ್ಕೆ ಈ ವಾದಗಳು ಸಮಸಮವಾಗಿಯೂ ಇಲ್ಲ. ಉತ್ತಮವಾಗಿರುವ ಮಾತಂತಿರಲಿ, ನನ್ನ ವಿವರಣೆಯೇ ಎಲ್ಲಕ್ಕಿಂತ ಶ್ರೇಷ್ಠವಾದದ್ದು. ಮುಂದಿನದನ್ನು ಕುರಿತುದರ ಬಗೆಗೆ ನಾನು ವಿವರಿಸುವುದು ಇಷ್ಟನ್ನು. ಯಾವುದನ್ನು ವಿವರಿಸಬೇಕೋ ಅದನ್ನು ವಿವರಿಸಿದ್ದೇನೆ. ಯಾವುದನ್ನು ನಾನು ವಿವರಿಸಬಾರದೋ, ನಾನು ವಿವರಿಸುವುದಿಲ್ಲವೋ ಅದು ಯಾವುದು? (ವಿವರಿಸದಿರುವುದು ಯಾವುದೆಂದರೆ ನಿಬ್ಬಾನಕ್ಕೆ ಸಹಾಯಕ ವಾಗಿಲ್ಲದಿರುವುದನ್ನು.)
“ಹಿಂದಿನದನ್ನು ಕುರಿತ ಈ ನಂಬಿಕೆಗಳನ್ನೂ ಮುಂದಿನದನ್ನು ಕುರಿತ ಈ ನಂಬಿಕೆಗಳನ್ನೂ ವರ್ಜಿಸಿ ಈ ದೃಷ್ಟಿಗಳನ್ನು ಮೀರಿರುವ ನಾಲ್ಕು ಸತಿಪಟ್ಠಾನಗಳನ್ನು ನಾನು ಬೋಧಿಸುತ್ತೇನೆ, ವಿವರಿಸುತ್ತೇನೆ. ಆ ನಾಲ್ಕು ಯಾವುವು? ಚುಂದ, ಭಿಕ್ಷುವೊಬ್ಬನು ಶ್ರದ್ಧೆಯಿಂದ ತನ್ನ ಮೇಲೆ ಸಂಪೂರ್ಣ ಹತೋಟಿಯುಳ್ಳವನಾಗಿ ಬಹು ಎಚ್ಚರಿಕೆಯಿಂದ ಲೋಕಕ್ಕೆ ಸಂಬಂಧಿಸುದುದೆಲ್ಲವನ್ನೂ ತೊರೆದು ದೋಮನಸ್ಸನ್ನು ಜಯಿಸಿ ಕಾಯವನ್ನು ಕುರಿತು ಧ್ಯಾನ ಮಾಡುತ್ತಾನೆ... ವೇದನೆಯನ್ನು ಕುರಿತು ಧ್ಯಾನ ಮಾಡುತ್ತಾನೆ... ಚಿತ್ತವನ್ನು ಕುರಿತು ಧ್ಯಾನ ಮಾಡುತ್ತಾನೆ... ಶ್ರದ್ಧಾಪೂರ್ಣವಾಗಿ ತನ್ನ ಮೇಲೆ ಸಂಪೂರ್ಣ ಹತೋಟಿಯುಳ್ಳವನಾಗಿ ಎಚ್ಚರವುಳ್ಳವನಾಗಿ ಲೋಕಕ್ಕೆ ಸಂಬಂಧಿಸುದೆಲ್ಲವನ್ನೂ ತೊರೆದುದೋ ಮನಸ್ಸನ್ನು ಜಯಿಸಿ ಧಮ್ಮವನ್ನು ಕುರಿತು ಧ್ಯಾನ ಮಾಡುತ್ತಾನೆ. ಹಿಂದಿನದಕ್ಕೆ ಸಂಬಂಧಿಸಿದ ಮತ್ತು ಮುಂದಿನದಕ್ಕೆ ಸಂಬಂಧಿಸಿದ ನಂಬಿಕೆ ದೂರವಾಗಿ ಅವನ್ನು ಮೀರಿರುವ ಜ್ಞಾನ ಇದು. ಈ ನಾಲ್ಕು ಸತಿಪಟ್ಠಾನಗಳನ್ನು ಬೋಧಿಸಿದ್ದೇನೆ, ವಿವರಿಸಿದ್ದೇನೆ.”
ಆ ಸಮಯದಲ್ಲಿ ಆಯುಷ್ಮಂತನಾದ ಉಪವಣನು ಭಗವಾನರ ಹಿಂದೆ ನಿಂತು ಅವರಿಗೆ ಬೀಸಣಿಗೆಯಿಂದ ಬೀಸುತ್ತಿದ್ದನು. ಅವನು ಭಗವಾನರನ್ನು ಕುರಿತು ಇಂತೆಂದನು- “ಆಶ್ಚರ್ಯ, ಭಂತೆ ಅದ್ಭುತ! ಧಮ್ಮವನ್ನು ಕುರಿತ ವಿವರಣೆಯು ಎಷ್ಟು ಸೊಗಸಾಗಿದೆ! ಎಷ್ಟು ಪ್ರಸನ್ನತೆಯನ್ನು ತರುತ್ತದೆ! ಧಮ್ಮದ ಈ ವಿವರಣೆಯನ್ನು ಏನೆಂದು ಕರೆಯೋಣ?”
“ಇದನ್ನು ‘ಪಾಸಾದಿಕ’ ಪ್ರಸನ್ನತೆಯಿಂದ ಕೂಡಿದುದು, ಸಂತೋಷವನ್ನುಂಟುಮಾಡುವಂಥದು) ಎಂದು ಗ್ರಹಿಸಿ ಹಾಗೆಯೇ ಕರೆಯಿರಿ.”
ಭಗವಾನರು ಹೀಗೆ ಹೇಳಿದರು. ಆನಂದಗೊಂಡ ಉಪವಣನು ಭಗವಾನರಿಗೆ ಅಭಿವಂದಿಸಿದನು.
ಇಲ್ಲಿಗೆ ಪಾಸಾದಿಕ ಸುತ್ತ ಮುಗಿಯಿತು.
ಟಿಪ್ಪಣಿಗಳು [2]
English
Việt Ngữ