ಮೂವತ್ತೆರಡು ಮಹಾಪುರುಷ ಲಕ್ಷಣಗಳು
ಹೀಗೇ ಕೇಳಿದ್ದೇನೆ;37 ಒಮ್ಮೆ ಭಗವಾನರು ಸಾವತ್ಥಿಯ ಹತ್ತಿರದ ಜೇತವನದಲ್ಲಿ ಅನಾಥಪಿಂಡಿಕನ ಆರಾಮದಲ್ಲಿ ತಂಗಿದ್ದರು. ಆಗ ಅವರು “ಭಿಕ್ಷುಗಳೇ” ಎಂದು ಅವರನ್ನು ಸಂಬೋಧಿಸಿದರು. ಅವರು “ಭದಂತೇ” ಎಂದು ಉತ್ತರವಿತ್ತರು. ಆಮೇಲೆ ಭಗವಾನರು ಅವರನ್ನು ಕುರಿತು ಇಂತೆಂದರು:
“ಭಿಕ್ಷುಗಳೇ, ಮಹಾಪುರುಷನದವನಿಗೆ38 ಮೂವತ್ತೆರಡು ಲಕ್ಷಣಗಳಿರುತ್ತವೆ. ಈ ಮಹಾಪುರುಷ ಲಕ್ಷಣಗಳಿರುವವನು ಎರಡರಲ್ಲಿ ಒಂದಾಗುತ್ತಾನೆ. ಅವನು ಮನೆಯಲ್ಲಿಯೇ ಉಳಿದುಕೊಂಡರೆ ಧಾರ್ಮಿಕನೂ ಧರ್ಮರಾಜನೂ ನಾಲ್ಕು ದಿಕ್ಕುಗಳವರೆಗೆ ಹಬ್ಬಿರುವ ಭೂಮಿಯನ್ನು ಜಯಿಸಿದವನೂ ಜನಪದಗಳನ್ನು ರಕ್ಷಿಸುವವನೂ ಸಪ್ತರತ್ನಗಳನ್ನು ಪಡೆದಿರುವ ಚಕ್ರವತಿಯೂ ಆಗುತ್ತಾನೆ. ಆ ಸಪ್ತರತ್ನಗಳು ಯಾವುವೆಂದರೆ ಚಕ್ರರತ್ನ, ಹಸ್ತಿರತ್ನ, ಅಶ್ವರತ್ನ, ಮಣಿರತ್ನ, ಸ್ತ್ರೀರತ್ನ, ಗೃಹಪತಿ ರತ್ನ ಮತ್ತು ನಾಯಕರತ್ನ. ಶೂರರೂ ವೀರರೂ ಪರಸೇನೆಗಳನ್ನು ಮರ್ದಿಸುವವರೂ ಆದ ಸಹಸ್ರಕ್ಕೂ ಮೀರಿದ ಪುತ್ರರು ಅವನಿಗಿರುತ್ತಾರೆ. ದಂಡಶಸ್ತ್ರಗಳಾವುವೂ ಇಲ್ಲದೆ ಸಾಗರ ಪರ್ಯಂತವಿರುವ ಈ ಪೃಥ್ವಿಯನ್ನು ಧರ್ಮದಿಂದಲೇ ಜಯಿಸಿ ಧರ್ಮ ಚಕ್ರವರ್ತಿಯಾಗಿ ಅವನು ವಿರಾಜಿಸುತ್ತಾನೆ. ಹಾಗಲ್ಲದೆ ಅವನು ಮನೆಯನ್ನು ತೊರೆದು ಪಬ್ಬಜಿತನಾದರೆ ಅರಹಂತನೂ ಸಮ್ಮಾಸಂಬುದ್ಧನೂ ಆಗಿ ಲೋಕದಲ್ಲಿನ ಅಜ್ಞಾನವನ್ನು ತೊಡೆದುಹಾಕುತ್ತಾನೆ. ಆತನು ಇವೆರಡಲ್ಲದೆ ಮತ್ತಾವುದೂ ಆಗುವುದಿಲ್ಲ.
“ಮನೆಯಲ್ಲಿಯೇ ಉಳಿದುಕೊಂಡರೆ... ಚಕ್ರವತಿಯಾಗುವ ಅಥವಾ ಮನೆಯನ್ನು ತೊರೆದು ಪಬ್ಬಜಿತನಾದರೆ ಲೋಕದಲ್ಲಿನ ಅಜ್ಞಾನವನ್ನು ತೊಡೆಯಬಲ್ಲ ಅರಹಂತ ಸಮ್ಮಾಸಂಬುದ್ಧನಾಗುವ ಮಹಾಪುರುಷನ ಮೂವತ್ತೆರಡು ಲಕ್ಷಣಗಳಾವುವು, ಭಿಕ್ಷುಗಳೇ?
“ಮಹಾಪುರುಷನ ಪಾದವು ಒಂದೇ ಸಮನಾಗಿರುತ್ತದೆ* ಕಾಲನ್ನು ನೆಲದಲ್ಲಿಟ್ಟಾಗ ಸಂದು ಬಿಡದ ಪಾದವು ಯಾವನಿಗಿರುತ್ತದೋ ಅವನು ಮಹಾಪುರುಷನಾಗುತ್ತಾನೆ.
“ಮಹಾಪುರುಷನಾದವನ ಅಂಗಾಲಿನಲ್ಲಿ ಸಾವಿರ ಅರೆಗಳೂ ಅವಕ್ಕೆ ತಕ್ಕದಾದ ನೇಮಿ ನಾಭಿಗಳೂ ಇರುವ ಎಲ್ಲ ರೀತಿಯಲ್ಲಿಯೂ ಪರಿಪೂರ್ಣವಾದ ಚಕ್ರವಿರುತ್ತದೆ. ಇದು ಮಹಾಪುರುಷ ಲಕ್ಷಣಗಳಲ್ಲಿ ಒಂದು.
“ಮಹಾಪುರುಷನು ಚಾಚಿದ ಹಿಮ್ಮಡಿಯನ್ನು ಪಡೆದಿರುತ್ತಾನೆ... ಮಹಾಪುರುಷನಿಗೆ ಉದ್ದವಾದ ಬೆರಳುಗಳಿರುತ್ತವೆ...39 ಮಹಾಪುರುಷನಿಗೆ ಮೃದುವಾದ ನೇರವಾಗಿರುವ ಹಸ್ತಪಾದಗಳಿರುತ್ತವೆ... ಅವನ ಹಸ್ತ ಪಾದಗಳು ಬಲೆಯಂತಿರುತ್ತವೆ... ಅವನ ಹಿಮ್ಮಡಿಯು ಶಂಖಾಕೃತಿಯಂತಿರುತ್ತದೆ.
“ಅವನ ಕಾಲುಗಳು ಜಿಂಕೆಯ ಕಾಲುಗಳಂತಿರುತ್ತವೆ... ಅವನು ನಿಂತಾಗ ಅವನ ಎರಡು ಕೈಗಳೂ ಅವನ ಮಂಡಿಗಳನ್ನು ಸೋಕುತ್ತವೆ... ಅವನ ಗುಹ್ಯವಸ್ತುವು ಕೋಶದಿಂದ ಆವೃತವಾಗಿರುತ್ತದೆ... ಅವನ ಮೈ ಬಣ್ಣವು ಕಂಚಿನ ಬಣ್ಣವಾಗಿರುತ್ತದೆ. ಅವನ ಚರ್ಮವು ಮೃದುವಾಗಿದ್ದು, ದೂಳು ಅಂಟಿಕೊಳ್ಳದಷ್ಟು ನಯವಾಗಿರುತ್ತದೆ... ಅವನ ಚರ್ಮದ ಮೇಲಿನ ರೋಮ ಕೂಪಗಳಲ್ಲಿ ಒಂದೊಂದೇ ಕೂದಲಿರುತ್ತದೆ... ಅವನ ಮೈ ಮೇಲಿನ ಕೂದಲು ಮೇಲ್ಮುಖವಾಗಿದ್ದು ಕಣ್ಣು ಕಪ್ಪಿನಂತೆ ನೀಲಿ ಮಿಶ್ರಿತವಾದ ಕಪ್ಪು ಬಣ್ಣವನ್ನು ಹೊಂದಿದ್ದು ಬಲಗಡೆಗೆ ಬಗ್ಗಿರುತ್ತದೆ... ಅವನ ದೇಹವು ಬ್ರಹ್ಮಲೋಕದವರಂತೆ ನೆಟ್ಟಗಿರುತ್ತದೆ... ಕುಮಾರನ ಮೈಮೇಲೆ ಏಳು ಉಬ್ಬುಗಳಿರುತ್ತವೆ. ಅವನ ದೇಹದ ಪೂರ್ವ ಭಾಗವು (ಸೊಂಟ ಕತ್ತುಗಳು) ಸಿಂಹದ ದೇಹದಂತೆ ಇರುತ್ತದೆ... ಅವನ ಭುಜಗಳ ನಡುವೆ ಯಾವ ತಗ್ಗೂ ಇರುವುದಿಲ್ಲ... ಆಲದ ಮರದಂತೆ ಅವನ ಅಂಗಾಂಗಗಳು ಸಮ ಪ್ರಮಾಣದಲ್ಲಿರುತ್ತವೆ... ಅವನ ದೇಹವು ಅವನ (ತೋಳಿನ) ಮಾರಿನ ಉದ್ದದಷ್ಟೇ ಇರುತ್ತದೆ... ಅವನ ಮಾರಿನ ಉದ್ದವು ಅವನ ಎತ್ತರದಷ್ಟಿರುತ್ತದೆ... ಅವನ ಎದೆಯು ಅವನ ದೇಹಕ್ಕೆ ಹೊಂದುವ ಪ್ರಮಾಣದಲ್ಲಿರುತ್ತದೆ... ಅವನ ಅಭಿರುಚಿಯು ಶ್ರೇಷ್ಠವಾದದ್ದಾಗಿರುತ್ತದೆ. ಕುಮಾರನ ದವಡೆಯು ಸಿಂಹದ ದವಡೆಯಂತಿರುತ್ತದೆ... ಅವನಿಗೆ ನಲವತ್ತು ಹಲ್ಲುಗಳಿರುತ್ತವೆ... ಅವನ ಅಭಿರುಚಿಯು ಶ್ರೇಷ್ಠವಾದದ್ದಾಗಿರುತ್ತದೆ. ಕುಮಾರನ ದವಡೆಯು ಸಿಂಹದ ದವಡೆಯಂತಿರುತ್ತದೆ... ಅವನಿಗೆ ನಲವತ್ತು ಹಲ್ಲುಗಳಿರುತ್ತವೆ... ಅವನ ಹಲ್ಲಿನ ಸಾಲು ಸಮಮಟ್ಟದಲ್ಲಿರುತ್ತದೆ... ಅವನ ಹಲ್ಲುಗಳ ನಡುವೆ ಸಂದಿರುವುದಿಲ್ಲ. ಅವನ ಹಲ್ಲುಗಳು ಹೊಳೆಯುತ್ತಿರುತ್ತವೆ... ಅವನ ನಾಲಿಕೆಯು ಉದ್ದವಾಗಿರುತ್ತದೆ... ಕೋಗಿಲೆಯ ಸ್ವರದಂತೆ ಅವನ ಧ್ವನಿಯು ಇಂಪಾಗಿರುತ್ತದೆ... ಅವನ ಕಣ್ಣು ನೀಲಿಯ ಬಣ್ಣದವಾಗಿರುತ್ತದೆ. ಅವನ ರೆಪ್ಪೆಗೂದಲು ಹಸುವಿನ ರೆಪ್ಪೆಗೂದಲಿನಂತೆ ಉದ್ದವಾಗಿರುತ್ತದೆ... ಕಣ್ಣಿನ ಹುಬ್ಬುಗಳ ನಡುವೆ ಮೃದುವಾದ ಮತ್ತು ಅರಳೆಯಂತೆ ಬಿಳುಪಾಗಿರುವ ಒಂದು ಉಬ್ಬಿರುತ್ತದೆ...
“ಮತ್ತೆ ಭಿಕ್ಷುಗಳೇ, ಮಹಾಪುರುಷನ ಶಿರವು ರಾಜನಿಗೆ ಮಾಡಿಸಿದ ಕಿರೀಟದಂತೆ ದುಂಡಾಗಿರುತ್ತದೆ.
“ಈ ಲಕ್ಷಣಗಳು ಮಹಾಪುರುಷನ ಲಕ್ಷಣಗಳಾಗಿವೆ.
“ಭಿಕ್ಷುಗಳೇ, ಈ ಮೂವತ್ತೆರಡು ಮಹಾಪುರುಷ ಲಕ್ಷಣಗಳನ್ನು ಹೊಂದಿರುವವನು ಮನೆಯಲ್ಲೇ ಉಳಿದುಕೊಂಡರೆ ರಾಜ ಚಕ್ರವರ್ತಿಯಾಗುತ್ತಾನೆ... ಮನೆಯನ್ನು ತೊರೆದು ಪರಿಬ್ಬಾಜಕನಾದರೆ ಲೋಕದ ಅಜ್ಞಾನವನ್ನು ತೊಡೆಯಬಲ್ಲ ಅರಹಂತ ಸಮ್ಮಾಸಂಬುದ್ಧನಾಗುತ್ತಾನೆ. ಅವನು ಬೇರೆ ಯಾವುದೂ ಆಗುವುದಿಲ್ಲ.
“ಈ ಮೂವತ್ತೆರಡು ಲಕ್ಷಣಗಳನ್ನು ಇತರರು ನೋಡುತ್ತಾರೆ. ಆದರೆ ಈ ಕರ್ಮವನ್ನು ಮಾಡಿದಾಗ ಈ ಲಕ್ಷಣವು ಲಭಿಸುತ್ತದೆ ಎಂಬುದು ಅವರಿಗೆ ಗೊತ್ತಿರುವುದಿಲ್ಲ.
(1) ಸಮತಲಪಾದದ ಲಕ್ಷಣ
“ತಥಾಗತನಾದವನು ತನ್ನ ಭವಾವಳಿಯ ಜನ್ಮವೊಂದರಲ್ಲಿ ಮನುಷ್ಯನಗಿ ಹುಟ್ಟಿ ಅಸಾಧಾರಣವಾದ ರೀತಿಯಲ್ಲಿ ಕುಶಲ ಕರ್ಮಗಳನ್ನು ಮಾಡುವುದರಲ್ಲಿ ನಿರತನಾಗಿರುತ್ತಾನೆ. ಕಾಯಾ ವಾಚಾ ಮನಸಾ ಪರಿಶುದ್ಧನಾಗಿರುತ್ತಾನೆ. ವಿಪುಲವಾಗಿ ದಾನ ಮಾಡುತ್ತಿರುತ್ತಾನೆ. ಶೀಲಗಳನ್ನು ಪಾಲಿಸುತ್ತಿರುತ್ತಾನೆ. ಉಪೋಸಥದ ನಿಯಮಗಳನ್ನು ತಪ್ಪದೇ ಪಾಲಿಸುತ್ತಿರುತ್ತಾನೆ. ತಾಯಿ ತಂದೆಯರನ್ನೂ ಸಮಣರನ್ನೂ ಶ್ರೇಷ್ಠವಾದ ಜೀವನವನ್ನು ನಡೆಸುತ್ತಿದ್ದವರನ್ನೂ ಕುಲದಲ್ಲಿ ಹಿರಿಯರಾದವರನ್ನೂ ಸೇರಿಸುತ್ತಿರುತ್ತಾನೆ. ಕುಶಲವಾದ ಧರ್ಮಗಳನ್ನು ಇತರ ರೀತಿಯಲ್ಲಿಯೂ ಅನುಸರಿಸುತ್ತಿರುತ್ತಾನೆ. ಹೀಗೆ ವಿಪುಲವಾದ ಸತ್ಕರ್ಮಗಳನ್ನು ನಿರಂತರವಾಗಿ ಮಾಡಿದ ನಂತರ ಕಾಯದಿಂದ ಬೇರೆಯಾಗಿ ಮರಣ ಹೊಂದಿದ ಮೇಲೆ ಸ್ವರ್ಗಲೋಕದಲ್ಲಿ ಹುಟ್ಟುತ್ತಾನೆ. ಅಲ್ಲಿ ಇತರ ದೇವತೆಗಳಿಗಿಂತ ಈ ಹತ್ತು ಸಂಪತ್ತನ್ನು ಹೊಂದಿರುತ್ತಾನೆ. ಅವು ಯಾವುವೆಂದರೆ: ದೀರ್ಘಾಯಸ್ಸು, ದಿವ್ಯವರ್ಣ, ಅತುಳವಾದ ಸುಖ, ಅತುಳವಾದ ಯಶಸ್ಸು, ಅತುಳವಾದ ಐಶ್ವರ್ಯ, ದಿವ್ಯರೂಪ, ಅತುಳವಾದ ಶ್ರದ್ಧೆ, ಸುವಾಸನೆಯನ್ನು ಬೀರುವ ದೇಹ, ದಿವ್ಯವಾದ ರುಚಿ ಮತ್ತು ಅದ್ವಿತೀಯವಾದ ಸ್ಪರ್ಶ ಸಾಮರ್ಥ್ಯ. ಈ ಲೋಕವನ್ನು ಬಿಟ್ಟು ಇಲ್ಲಿಗ ಬಂದಾಗ ಮಹಾಪುರುಷ ಲಕ್ಷಣಗಳಲ್ಲಿ ಒಂದಾದ ಸಮತಲದ ಪಾದವನ್ನು ಪಡೆಯುತ್ತಾನೆ. ಅವನು ತನ್ನ ಪಾದವನ್ನು ನೆಲದಮೇಲೆ ಇಟ್ಟಾಗ ಇಡೀ ಪಾದವು ನೆಲವನ್ನು ಸ್ಪರ್ಶಿಸುತ್ತದೆ.
“ಈ ಲಕ್ಷಣವನ್ನು ಪಡೆದ ಆತನು ಗೃಹಸ್ಥನಾಗಿದ್ದರೆ ಧಾರ್ಮಿಕನಾಗಿ ಧರ್ಮರಾಜನಾಗಿ ಚಕ್ರವರ್ತಿಯಾಗಿ ಚತುರ್ದಿಕ್ಕುಗಳನ್ನು ಜಯಿಸುತ್ತಾನೆ. ಜನಪದ ರಕ್ಷಕನಾಗಿ, ಸಪ್ತರತ್ನಗಳನ್ನು ಪಡೆಯುತ್ತಾನೆ. ಚಕ್ರರತ್ನ, ಹಸ್ತಿರತ್ನ, ಅಶ್ವರತ್ನ, ಮಣಿರತ್ನ, ಸ್ತ್ರೀರತ್ನ, ಗೃಹಪತಿ ರತ್ನ ಮತ್ತು ನಾಯಕರತ್ನ. ಶೂರರೂ ವೀರರೂ ಪರಸೇನೆಗಳನ್ನು ಮರ್ದಿಸುವವರೂ ಆದ ಸಹಸ್ರಕ್ಕೂ ಮೀರಿದ ಪುತ್ರರು ಅವನಿಗಿರುತ್ತಾರೆ. ಸಾಗರಪರ್ಯಂತ ಹರಡಿರುವ ಈ ಪೃಥ್ವಿಯನ್ನು ಆಳುತ್ತಾನೆ. ಆ ಪೃಥ್ವಿಯಾದರೋ ಬಂಜರು ಪ್ರದೇಶಗಳನ್ನು ಒಳಗೊಂಡಿರುವುದಿಲ್ಲ. ಅದು ಕ್ಷೇಮದಿಂದಿರುತ್ತದೆ, ಮಂಗಳದಿಂದ ಕೂಡಿರುತ್ತದೆ. ಹಳ್ಳ ಕೊಳ್ಳಗಳಿಲ್ಲದೆ ಕಳ್ಳಕಾಕರಿಲ್ಲದೆ ಇರುತ್ತದೆ. ಶಕ್ತಿವಂತರಿಂದ ಕೂಡಿರುತ್ತದೆ. ಸಂಪದ್ಯುಕ್ತವಾಗಿರುತ್ತದೆ. ಅದನ್ನು ದಂಡ ಶಸ್ತ್ರಗಳಿಲ್ಲದೆ ಗೆಲ್ಲುತ್ತಾನೆ. ರಾಜನಾಗಿ ಏನನ್ನು ಪಡೆಯುತ್ತಾನೆ? ಯಾವ ಮನುಷ್ಯನೂ ಅವನನ್ನು ಗೆಲ್ಲಲಾಗುವುದಿಲ್ಲ. ಯಾವನೂ ದ್ವೇಷದಿಂದ ಅವನಿಗೆ ಅಡ್ಡಿಯಾಗಲಾರ.
“ಅವನು ಮನೆಯನ್ನು ತೊರೆದು ಅನಗಾರಿಕನಾದರೆ ಲೋಕದಲ್ಲಿನ ಅಜ್ಞಾನವನ್ನು ತೊಡೆಯುವ ಅರಹಂತ ಸಮ್ಮಾಸಂಬುದ್ಧನಾಗುತ್ತಾನೆ. ಬುದ್ಧನಾಗಿ ಅವನು ಏನನ್ನು ಗಳಿಸುತ್ತಾನೆ? ಒಳಗಿನ ಅಥವಾ ಹೊರಗಿನ ಯಾವ ಶತ್ರುವೂ ಅವನಿಗೆ ಅಡ್ಡಿಯಾಗಲಾರ. ರಾಗವಾಗಲೀ, ದ್ವೇಷವಾಗಲೀ, ಮೋಹವಾಗಲೀ ಅವನಿಗೆ ಅಡ್ಡಿಯಾಗದು, ಸಮಣನಾಗಲೀ, ಬ್ರಾಹ್ಮಣನಾಗಲೀ, ದೇವನಾಗಲೀ, ಮಾರನಾಗಲೀ, ಬ್ರಹ್ಮನಾಗಲೀ ಈ ಲೋಕದಲ್ಲಿನ ಮತ್ತಾರಾಗಲೀ ಅವನಿಗೆ ಅಡ್ಡಿಯಾಗಲಾರರು”. ಹೀಗೆಂದು ಭಗವಾನರು ಹೇಳಿದರು, ಮತ್ತೆ ಇಂತೆಂದರು:
*“ಸತ್ಯಧರ್ಮ ದಮ ಸಂಯಮ ಶೀಲ ಉಪೋಸಥ ದಾನ, ಅಹಿಂಸೆ ಪಾಶವೀ ಬಲವರ್ಜನೆ ಇವುಗಳಿಂದ ಕೂಡಿ ಪರಿಶುದ್ಧವಾದ ದಾರಿಯಲ್ಲಿ ಆತ ಹೋಗುತ್ತಾನೆ. ಈ ಕರ್ಮಗಳನ್ನು ರಾತ್ರಿ ಹಗಲುಗಳೆನ್ನದೆ ಮಾಡುತ್ತಾ ಸುಖದಿಂದಿರುತ್ತಾನೆ. ಸ್ವರ್ಗ ಲೋಕದಿಂದ ಆತ ಇಲ್ಲಿಗೆ ಬಂದು ಇಲ್ಲಿ ಹುಟ್ಟಿದಾಗ ಭೂಮಿಯ ಮೇಲೆ ಹೆಜ್ಜೆಯನ್ನಿಟ್ಟಾಗ ಅದು ಪೂರ್ಣವಾಗಿ ನೆಲವನ್ನು ಸ್ಪರ್ಶಿಸುವಂಥ ಸಮತಲ ಪಾದಗಳನ್ನು ಪಡೆದಿರುತ್ತಾನೆ. ವ್ಯಾಖ್ಯಾನಕಾರರು ಒಂದೆಡೆ ಸೇರಿ ‘ಸಮತಲ ಪಾದಗಳನ್ನುಳ್ಳ ಈತನನ್ನು ಯಾರೂ ಜಯಿಸಲಾರರು’ ಎಂಬ ನಿರ್ಧಾರಕ್ಕೆ ಬರುತ್ತಾರೆ. ಅವನು ಮನೆಯಲ್ಲೇ ಉಳಿದುಕೊಂಡರೆ ಈ ಸ್ಥಿತಿಯಲ್ಲಿರುತ್ತಾನೆ. ಯಾವ ಶತ್ರುವೂ ಎದುರಿಸಲಾರದಷ್ಟು ಸಮರ್ಥನಾಗಿರುತ್ತಾನೆ. ಯಾವ ಮನುಷ್ಯನೂ ಅವನನ್ನು ಜಯಿಸಲಾರ, ಇದು ಕರ್ಮದ ಫಲವೇ ಆಗಿರುತ್ತದೆ. ಮನೆಯನ್ನು ತೊರೆದು ಪಬ್ಬಜಿತನಾದರೆ ವಿಚಕ್ಷಣನಾಗಿ ಮತ್ತೊಮ್ಮೆ ಇಲ್ಲಿಗೆ ಬರದವನಾಗಿ (ಅಂದರೆ ಅದೇ ಕೊನೆಯ ಜನ್ಮ) ಶ್ರೇಷ್ಠನೂ, ನರೋತ್ತಮನಾಗುತ್ತಾನೆ. ಇದೊಂದು ನಿಯಮ ಆಗಿದೆ. ಗೃಹಸ್ಥನಾದರೂ ಅವನು ಈ ಲಕ್ಷಣವನ್ನು ಹೊಂದಿರುತ್ತಾನೆ.
(2) ಪಾದತಲದಲ್ಲಿನ ಚಕ್ರಗಳ ಲಕ್ಷಣ
“ತಥಾಗತನಾದವನು ತನ್ನ ಭವಾವಳಿಯ ಜನ್ಮವೊಂದರಲ್ಲಿ ಮನುಷ್ಯನಾಗಿ ಹುಟ್ಟಿ ಬಹುಜನರಿಗೆ ಸುಖ ಕೊಟ್ಟಿರುತ್ತಾನೆ. ಇತರರ ಭಯ ಭೀತಿಗಳನ್ನು ತೊಲಗಿಸಿರುತ್ತಾನೆ, ಧರ್ಮವನ್ನು ರಕ್ಷಿಸುತ್ತಾನೆ ಮತ್ತು ಬೆಳೆಸಿರುತ್ತಾನೆ, ದಾನವನ್ನು ಕೊಟ್ಟಿರುತ್ತಾನೆ. ಹೀಗೆ ಸತ್ಕರ್ಮಗಳನ್ನು ವಿಪುಲವಾಗಿ ಮಾಡಿದ ನಂತರ ಕಾಯದಿಂದ ಬೇರೆಯಾಗಿ ಮರಣ ಹೊಂದಿದ ಮೇಲೆ ಸ್ವರ್ಗಲೋಕದಲ್ಲಿ ಹುಟ್ಟುತ್ತಾನೆ... ಅಲ್ಲಿಂದ ಈ ಲೋಕಕ್ಕೆ ಬಂದಮೇಲೆ ಅವನು ಸಹಸ್ರ ಅರೆಗಳು ಮತ್ತು ನೇಮಿನಾಭಿಗಳನ್ನುಳ್ಳ ಚಕ್ರಗಳಿರುವ ಅಂಗಾಲನ್ನು ಹೊಂದಿರುತ್ತಾನೆ. ಆ ಚಕ್ರಗಳು ಎಲ್ಲರೀತಿಯಲ್ಲಿಯೂ ಪರಿಪೂರ್ಣವಾಗಿರುತ್ತವೆ.
“ಈ ಲಕ್ಷಣವನ್ನು ಪಡೆದ ಆತನು ಗೃಹಸ್ಥನಾಗಿ ಮನೆಯಲ್ಲಿಯೇ ಉಳಿದುಕೊಂಡರೆ ಚಕ್ರವರ್ತಿ ರಾಜನಾಗುತ್ತಾನೆ... ಆ ರಾಜನಿಗೆ ಏನು ಸಿಗುತ್ತದೆ? ಕಾಲಾಳುಗಳಿರುವ ಮಹಾಪರಿವಾರವನ್ನು ಹೊಂದಿರುತ್ತಾನೆ. ಬಹು ಜನಗಳಿಂದ ಆವೃತನಾಗಿರುತ್ತಾನೆ. ಸಾಧಾರಣ ಜನರೂ ಬ್ರಾಹ್ಮಣ ಗೃಹಪತಿಗಳೂ ಪಟ್ಟಣ ಮತ್ತು ನಗರವಾಸಿಗಳೂ ಅಮಾತ್ಯರೂ ಶ್ರೀಮಂತರೂ ಅಂಗರಕ್ಷಕರೂ ಬಲಶಾಲಿಗಳೂ ಆತನನ್ನು ಮುತ್ತಿರುತ್ತಾರೆ. ಅವನು ಮನೆಯನ್ನು ತೊರೆದು ಪಬ್ಬಜಿತನಾದರೆ ಅರಹಂತನು ಲೋಕದಲ್ಲಿನ ಅಜ್ಞಾನವನ್ನು ತೊಲಗಿಸಬಲ್ಲ ಅರಹಂತನೂ ಸಮ್ಮಾಸಂಬುದ್ಧನೂ ಆಗುತ್ತಾನೆ. ಸಮ್ಮಾಸಂಬುದ್ಧನಾಗಿ ಏನನ್ನು ಹೊಂದುತ್ತಾನೆ? ಅವನಿಗೆ ಮಹಾ ಪರಿವಾರವಿರುತ್ತದೆ. ಅವನ ಶಿಷ್ಯರ ಸಂಖ್ಯೆಯು ಬಹು ದೊಡ್ಡದಾಗಿರುತ್ತದೆ. ಭಿಕ್ಷು ಭಿಕ್ಷುಣಿಯರೂ ಉಪಾಸಕ ಉಪಾಸಿಕೆಯರೂ ದೇವತೆಗಳೂ ಮನುಷ್ಯರೂ ಅಸುರರೂ ನಾಗರರೂ ಗಂಧರ್ವರೂ ಅವನನ್ನು ಮುತ್ತಿಕೊಂಡಿರುತ್ತಾರೆ. ಬುದ್ಧನಾಗಿ ಇಷ್ಟನ್ನು ಪಡೆಯುತ್ತಾನೆ.”
ಇದನ್ನು ಕುರಿತ ಗಾಥೆಗಳು ಹೀಗಿವೆ:
“ಹಿಂದಿನ ಒಂದು ಜನ್ಮದಲ್ಲಿ ತಥಾಗತನು ಮನುಷ್ಯನಾಗಿ ಹುಟ್ಟಿ ಬಹುಜನರ ಸುಖಕ್ಕೆ ಕಾರಣನಾದನು. ಭಯ ಭೀತಿಗಳನ್ನು ಅವರಿಂದ ತೊಲಗಿಸಿದನು. ಧಮ್ಮವನ್ನು ರಕ್ಷಿಸಿ ಪೋಷಿಸಿದನು. ಈ ಕರ್ಮದ ಫಲವಾಗಿ ಉತ್ತಮ ಲೋಕದಲ್ಲಿ ಹುಟ್ಟಿ ಹರ್ಷ ಸುಖಗಳನ್ನು ಪಡೆದನು. ಅಲ್ಲಿಂದ ಚ್ಯುತನಾಗಿ ಇಲ್ಲಿಗೆ ಬಂದಮೇಲೆ ಪಾದಗಳಲ್ಲಿ ಚಕ್ರಗಳನ್ನುಳ್ಳ ಮನುಷ್ಯನಾಗಿ ಹುಟ್ಟಿದನು. ಆ ಚಕ್ರಕ್ಕೆ ಸಾವಿರ ಅರೆಗಳಿದ್ದುವು. ನೇಮಿ ನಾಭಿಗಳನ್ನೊಳಗೊಂಡಿತ್ತು. ಆಗ ಪುಣ್ಯ ಲಕ್ಷಣಗಳ ಅರ್ಥವನ್ನು ವಿವರಿಸಬಲ್ಲವರು ಒಟ್ಟಿಗೆ ಸೇರಿ ‘ನೂರು ಪುಣ್ಯ ಲಕ್ಷಣಗಳಿರುವ ಮಗುವನ್ನು ನೋಡಿ; ಅವನು ಪಬ್ಬಜಿತನಾಗದೆ ಹೋದರೆ ಅವನ ಸುತ್ತ ಶತ್ರುಗಳನ್ನು ಮರ್ದಿಸಬಲ್ಲ ಪರಿವಾರವಿರುತ್ತದೆ. ಅವನು ಚಕ್ರವರ್ತಿಯಾಗಿ ಪೃಥ್ವಿಯನ್ನು ಆಳುತ್ತಾನೆ, ಕ್ಷತ್ರಿಯರು ಅವನ ಅನುವರ್ತಿಗಳಾಗುತ್ತಾರೆ. ಆತನೇನಾದರೂ ಪಬ್ಬಜಿತನಾದರೆ ಮಹಾ ಯಶಸ್ವಿಯಾಗುತ್ತಾನೆ. ಒಳ್ಳೆಯ ಪರಿವಾರ ಅವನಿಗಿರುತ್ತದೆ. ನೇಕ್ಖಮ್ಮವನ್ನು ಪಾಲಿಸಿ ಅದರಲ್ಲಿಯೇ ಆನಂದ ಪಡೆದು ದೇವತೆಗಳಿಂದ ಮನುಷ್ಯರಿಂದ ರಾಕ್ಷಸರಿಂದ ಅಸುರರಿಂದ ಗಂಧರ್ವರಿಂದ ನಾಗರರಿಂದ ಸಕ್ಕರಿಂದ ಪಕ್ಷಿಗಳಿಂದ ಚತುಷ್ಪಾದಿಗಳಿಂದ ಪೂಜಿಸಿಕೊಳ್ಳುವವನಾಗುತ್ತಾನೆ. ಅನುತ್ತರವಾದ ಮಹಾ ಯಶಶ್ವಿಯಾಗುತ್ತಾನೆ. ಒಳ್ಳೆಯ ಪರಿವಾರವನ್ನು ಹೊಂದಿರುತ್ತಾನೆ’ ಎಂದು ಹೇಳಿದರು.
(3-5) ಚಾಚಿದ ಹಿಮ್ಮಡಿ ಮುಂತಾದ ಲಕ್ಷಣಗಳು
“ತಥಾಗತನಾದವನು ತನ್ನ ಭವಾವಳಿಯ ಜನ್ಮವೊಂದರಲ್ಲಿ ಮನುಷ್ಯನಾಗಿ ಹುಟ್ಟಿ, ಪ್ರಾಣಿಹಿಂಸೆಯನ್ನು ತೊರೆದು ಪ್ರಾಣಿಹಿಂಸೆ ಮಾಡುವ ಪ್ರವೃತ್ತಿಯನ್ನೇ ವರ್ಜಿಸಿ, ಶಸ್ತ್ರದಂಡಗಳನ್ನೆಂದೂ ಉಪಯೋಗಿಸದೆ ಲಜ್ಜೆ ದಯೆಗಳಿಂದ ಕೂಡಿದವನಾಗಿ ಎಲ್ಲ ಪ್ರಾಣಿಗಳಲ್ಲಿಯೂ ಅನುಕಂಪಿಯಾಗಿರುತ್ತಾನೆ. ಅವನು ತನ್ನ ವಿಪುಲವಾದ ಸತ್ಕರ್ಮದ ದೆಸೆಯಿಂದ ಕಾಯದಿಂದ ಬೇರೆಯಾಗಿ ಮರಣ ಹೊಂದಿದ ಮೇಲೆ... ಅಲ್ಲಿಂದ ಈ ಲೋಕಕ್ಕೆ ಬಂದಮೇಲೆ ಮೂರು ಮಹಾಪುರುಷ ಲಕ್ಷಣಗಳನ್ನು ಪಡೆಯುತ್ತಾನೆ. ಚಾಚಿದ ಹಿಮ್ಮಡಿಯನ್ನು ಹೊಂದಿರುತ್ತಾನೆ. ಅವನ ಬೆರಳುಗಳು ಉದ್ದವಾಗಿರುತ್ತವೆ. ಅವನಿಗೆ ಸೊಟ್ಟಾಗಿಲ್ಲದ ಹಸ್ತ ಪಾದಗಳಿರುತ್ತವೆ.”
“ಈ ಮೂರು ಮಹಾಪುರುಷ ಲಕ್ಷಣಗಳನ್ನು ಹೊಂದಿರುವವನು ಮನೆಯಲ್ಲಿ ಉಳಿದರೆ ಚಕ್ರವರ್ತಿ ರಾಜನಾಗುತ್ತಾನೆ. ರಾಜನಾಗಿ ಏನನ್ನು ಪಡೆಯುತ್ತಾನೆ? ಅವನು ದೀರ್ಘಾಯುಷ್ಯೆಯಾಗಿರುತ್ತಾನೆ. ಬಹುದಿನ ಬದುಕುತ್ತಾನೆ. ತಾರುಣ್ಯದಲ್ಲಿ ಅಥವಾ ಮಧ್ಯ ವಯಸ್ಸಿನಲ್ಲಿ ಅವನನ್ನು ಕೊಲ್ಲಲು ಯಾವ ಮನುಷ್ಯನಿಂದಲೂ ಆಗುವುದಿಲ್ಲ. ರಾಜನಾಗಿ ಇಷ್ಟನ್ನು ಪಡೆಯುತ್ತಾನೆ. ಬುದ್ಧನಾಗಿ ಏನನ್ನು ಪಡೆಯುತ್ತಾನೆ? ದೀರ್ಘಾಯಸ್ಸುಳ್ಳವ ನಾಗಿರುತ್ತಾನೆ. ಬಹುದಿನ ಬದುಕುತ್ತಾನೆ. ಅವನನ್ನು ಮಧ್ಯ ಆಯಸ್ಸಿನಲ್ಲಿ ಕೊಲ್ಲಲು ಯಾವ ಸಮಣನಿಂದಾಗಲೀ ಯಾವ ಬ್ರಾಹ್ಮಣನಿಂದಾಗಲೀ, ಯಾವ ದೇವನಿಂದಾಗಲೀ, ಯಾವ ಮಾರನಿಂದಾಗಲೀ, ಯಾವ ಬ್ರಹ್ಮನಿಂದಾಗಲೀ ಅಥವಾ ಲೋಕದಲ್ಲಿನ ಮತ್ತಾರಿಂದಲಾಗಲೀ ಸಾಧ್ಯವಾಗುವುದಿಲ್ಲ. ಬುದ್ಧನಾಗಿ ಇಷ್ಟನ್ನು ಪಡೆಯುತ್ತಾನೆ” ಭಗವಾನರು ಹೀಗೆ ಹೇಳಿದರು.
ಇದನ್ನು ಕುರಿತ ಗಾಥೆಗಳು ಹೀಗಿವೆ:
“ಜೀವಿಗಳಿಗಿರುವ ಮರಣ ಭಯವನ್ನು ಅರಿತ ತಥಾಗತನು ಪ್ರಾಣಿ ಹತ್ಯೆಯನ್ನು ಸಂಪೂರ್ಣವಾಗಿ ತೊರೆದಿದ್ದನು. ಆ ಶುದ್ಧ ಚಾರಿತ್ರ್ಯದಿಂದ ಮತ್ತು ಸುಕರ್ಮದ ಫಲವಾಗಿ ಆತನು ಸ್ವರ್ಗಲೋಕಕ್ಕೆ ಹೋದನು. ಅಲ್ಲಿಂದ ಈ ಲೋಕಕ್ಕೆ ಬಂದು ಮನುಷ್ಯನಾಗಿ ಹುಟ್ಟಿದನು. ಅವನಿಗೆ ಮೂರು ಮಹಾಪುರುಷ ಲಕ್ಷಣಗಳಿದ್ದುವು. ಉದ್ದವಾದ ಹಿಮ್ಮಡಿಗಳುಳ್ಳ ಪಾದಗಳು ಅವನಿಗಿದ್ದುವು” ಬ್ರಹ್ಮನಿಗಿರುವಂತೆ ಅವನ ದೇಹವು ನೆಟ್ಟಗಿತ್ತು. ಅವನ ಕೈಕಾಲುಗಳು ಸುಂದರವಾಗಿದ್ದುವು ಮತ್ತು ನೇರವಾಗಿದ್ದುವು. ಅವನ ಬೆರಳುಗಳೂ ಹಸ್ತವೂ ಮೃದುವಾಗಿದ್ದುವು. ಈ ಮೂರು ಲಕ್ಷಣಗಳನ್ನು ನೋಡಿ ಕುಮಾರನು ದೀರ್ಘಾಯುಷ್ಯವುಳ್ಳವನಾಗಿರುತ್ತಾನೆ ಎಂದು ತಿಳಿದವರು ಹೇಳಿದರು. ಅವನು ಮನೆಯನ್ನು ತೊರೆದು ಪಬ್ಬಜಿತನಾದರೆ ಅವನು ಇನ್ನೂ ಹೆಚ್ಚು ಆಯುಸ್ಸುಳ್ಳವನಾಗುತ್ತಾನೆ. ಈ ದೀರ್ಘಾಯುಸ್ಸಿನಲ್ಲಿ ಆತನು ಋದ್ಧಿ ಶಕ್ತಿಯನ್ನು ಪಡೆಯುವಷ್ಟು ಸಾಧನೆ ಮಾಡುತ್ತಾನೆ. ಹೀಗೆ ಈ ಮೂರು ಲಕ್ಷಣಗಳು ದೀರ್ಘಾಯುಸ್ಸಿನ ಲಕ್ಷಣಗಳೇ ಆಗಿವೆ.”
(6) ಏಳು ಉಬ್ಬುಗಳ ಲಕ್ಷಣ
“ತಥಾಗತನಾದವನು ಹಿಂದಿನ ಭವಾವಳಿಯ ಜನ್ಮವೊಂದರಲ್ಲಿ ಮನುಷ್ಯನಾಗಿ ಹುಟ್ಟಿ ಶ್ರೇಷ್ಠ ದಾನಿಯಾಗಿರುತ್ತಾನೆ. ರುಚಿಯಾದ ಮತ್ತು ಶುಚಿಯಾದ ಖಾದ್ಯ ಪದಾರ್ಥಗಳನ್ನೂ ಭೋಜ್ಯ ಪದಾರ್ಥಗಳನ್ನೂ ಆತ ದಾನ ಮಾಡುತ್ತಾನೆ. ಪಾನೀಯಗಳನ್ನು ದಾನ ಮಾಡುತ್ತಾನೆ. ಅಲ್ಲಿಂದ ಚ್ಯುತನಾಗಿ ಇಲ್ಲಿ ಹುಟ್ಟಿದಮೇಲೆ ಈ ಮಹಾಪುರುಷ ಲಕ್ಷಣಗಳನ್ನು ಹೊಂದಿರುತ್ತಾನೆ. ಏಳು ಉಬ್ಬುಗಳು ಅವನಿಗಿರುತ್ತವೆ. ಆ ಏಳು ಯಾವುವೆಂದರೆ- ಎರಡು ಹಸ್ತಗಳಲ್ಲಿಯೂ ಎರಡು ಉಬ್ಬುಗಳಿರುತ್ತವೆ. ಎರಡು ಪಾದಗಳಲ್ಲಿಯೂ ಎರಡು ಉಬ್ಬುಗಳಿರುತ್ತವೆ. ಎರಡು ಭುಜಗಳ ಮೇಲೂ ಎರಡು ಉಬ್ಬುಗಳಿರುತ್ತವೆ. ಹೊಟ್ಟೆಯ ಮೇಲೆ ಒಂದು ಉಬ್ಬಿರುತ್ತದೆ.
“ಈ ಲಕ್ಷಣಗಳಿರುವವನು ಮನೆಯಲ್ಲೇ ಉಳಿದುಕೊಂಡರೆ ಚಕ್ರವರ್ತಿ ರಾಜನಾಗುತ್ತಾನೆ... ರಾಜನಾಗಿ ಏನನ್ನು ಪಡೆಯುತ್ತಾನೆ? ಅವನಿಗೆ ರುಚಿಯಾದ ಶುಚಿಯಾದ ಖಾದ್ಯಗಳೂ ಭೋಜ್ಯಗಳೂ ಲಭಿಸುತ್ತವೆ. ಪಾನೀಯಗಳು ದೊರೆಯುತ್ತವೆ. ರಾಜನಿಗೆ ಇಷ್ಟು ದೊರೆಯುತ್ತವೆ... ಬುದ್ಧನಾಗಿ ಏನನ್ನು ಪಡೆಯುತ್ತಾನೆ? ರುಚಿಯಾದ ಶುಚಿಯಾದ ಖಾದ್ಯಗಳೂ ಭೋಜ್ಯಗಳೂ ಪಾನೀಯಗಳೂ ಅವನಿಗೆ ದೊರಕುತ್ತವೆ. ಬುದ್ಧನಿಗೆ ಇಷ್ಟು ದೊರೆಯುತ್ತವೆ” ಭಗವಾನರು ಇಷ್ಟನ್ನು ಹೇಳಿದರು.
ಇದನ್ನು ಕುರಿತ ಗಾಥೆಗಳು ಇಂತಿವೆ :
“ಉತ್ತಮವಾದ ರಸಪೂರ್ಣವಾದ ಖಾದ್ಯ ಭೋಜ್ಯಗಳನ್ನು ನೀಡುವ ದಾನಿಯಾಗಿ ಸತ್ಕರ್ಮವನ್ನು ಮಾಡಿದುದರಿಂದ ಬಹುಕಾಲ ಆತನ ಆನಂದ ಸಂತೋಷ ಗಳಿಂದಿರುತ್ತಾನೆ. ಇಲ್ಲಿ ಹುಟ್ಟಿದ ಮೇಲೆ ಹಸ್ತಪಾದಗಳಲ್ಲಿ ಮತ್ತೆ ಭುಜಗಳ ಮೇಲೆ ಉಬ್ಬು ಪಡೆದವನಾಗಿ ಉತ್ತಮವಾದ ಖಾದ್ಯ ಭೋಜ್ಯಗಳನ್ನು ಪಡೆಯುತ್ತಾನೆ. ಅವನು ಮನೆಯನ್ನು ತೊರೆದು ಸಂಸಾರ ಬಂಧನದಿಂದ ಮುಕ್ತನಾಗಿ ಪಬ್ಬಜಿತನಾದರೆ ಹಾಗೆಯೇ ಉತ್ತಮವಾದ ಖಾದ್ಯ ಭೋಜ್ಯಗಳನ್ನು ಪಡೆಯುತ್ತಾನೆ. ಹೀಗೆಂದು ಲಕ್ಷಣಗಳನ್ನು ತಿಳಿದವರು ಹೇಳುತ್ತಾರೆ.”
(7-8) ಮೆದುವಾದ ಕರಚರಣ ಲಕ್ಷಣಗಳು
“ತಥಾಗತನಾದವನು ತನ್ನ ಭವಾವಳಿಯ ಜನ್ಮವೊಂದರಲ್ಲಿ ಮನುಷ್ಯನಾಗಿ ಹುಟ್ಟಿ, ದಾನವನ್ನು ಮಾಡುವುದರಿಂದ ಪ್ರಿಯ ವಚನಗಳನ್ನಾಡುವುದರಿಂದ ಸನ್ಮಾರ್ಗದಲ್ಲಿಯೇ ನಡೆಯುವುದರಿಂದ ಎಲ್ಲ ಜೀವಿಗಳನ್ನೂ ಒಂದೇ ಬಗೆಯಲ್ಲಿ ಕಾಣುವುದರಿಂದ (ಈ ನಾಲ್ಕು ರೀತಿಯಲ್ಲಿ) ಜನಪ್ರಿಯನಾಗುತ್ತಾನೆ... ಈ ಸತ್ಕರ್ಮದಿಂದ ಇಲ್ಲಿ ಹುಟ್ಟಿದ ಮೇಲೆ ಮೃದುವಾದ ಹಸ್ತಪಾದಗಳನ್ನೂ ಮತ್ತು ಬಲೆಯಂತಿರುವ ಹಸ್ತವನ್ನೂ ಪಡೆಯುತ್ತಾನೆ. ಇವು ಮಹಾಪುರುಷ ಲಕ್ಷಣಗಳು.
“ಈ ಮಹಾಪುರುಷ ಲಕ್ಷಣಗಳಿರುವವನು ಮನೆಯಲ್ಲಿಯೇ ಉಳಿದುಕೊಂಡರೆ ಚಕ್ರವರ್ತಿ ರಾಜನಾಗುತ್ತಾನೆ. ರಾಜನಾಗಿ ಏನನ್ನು ಪಡೆಯುತ್ತಾನೆ? ಹಿತವನ್ನು ಬಯಸುವ ಪರಿಹಾರ ಅವನಿಗಿರುತ್ತದೆ. ಬ್ರಾಹ್ಮಣ ಗೃಹಪತಿಗಳೂ ಪಟ್ಟಣ ಗ್ರಾಮದಲ್ಲಿ ವಾಸಿಸುವ ಮಹಾಮಾತ್ಯ ಗಣಕರೂ ಅಂಗರಕ್ಷಕರೂ ದ್ವಾರಪಾಲಕರೂ ಅಮಾತ್ಯರೂ ಆಸ್ಥಾನಿಕರೂ ಸಾಮಂತ ರಾಜರೂ ಯುವಕರೂ ಅವನ ಪರಿಜನರಾಗಿರುತ್ತಾರೆ. ಅವನ ನಂಬಿಕೆಗೆ ಅರ್ಹರಾಗಿರುತ್ತಾರೆ. ಬುದ್ಧನಾಗಿ ಅವನು ಏನನ್ನು ಪಡೆಯುತ್ತಾನೆ? ಅವನ ಹಿತವನ್ನು ಕಾಯುವ ಪರಿಜನರು ಅವನಿಗಿರುತ್ತಾನೆ. ಒಳ್ಳೆಯ ಭಿಕ್ಷುಗಳ ಭಿಕ್ಷುಣಿಯರ ಉಪಾಸಕರ ಉಪಾಸಿಕೆಯರ ದೇವತೆಗಳ ಮನುಷ್ಯರ ಅಸುರರ ನಾಗರ ಗಂಧರ್ವರ ಪರಿವಾರ ಅವನಿಗಿರುತ್ತದೆ. ಬುದ್ಧನಾಗಿ ಇಷ್ಟನ್ನು ಪಡೆಯುತ್ತಾನೆ”. ಭಗವಾನರು ಇಷ್ಟನ್ನು ಹೇಳಿದರು.
ಇದನ್ನು ಕುರಿತ ಗಾಥೆಗಳು ಹೀಗಿವೆ :
“ನಾಲ್ಕು ಬಗೆಯ ಸದಾಚಾರಗಳನ್ನು ದಾನ ಮಾಡುವುದು ಸನ್ನಡತೆ ಪ್ರಿಯ ವಚನವನ್ನಾಡುವುದು ಮತ್ತು ಎಲ್ಲ ಜೀವಿಗಳನ್ನು ಒಂದೇ ಸಮನಾಗಿ ನೋಡುವುದು- ಅನುಸರಿಸಿ ಬಹುಜನಗಳಿಗೆ ಪ್ರಿಯನಾಗಿ ಶ್ರೇಷ್ಠ ಗುಣಗಳನ್ನು ಹೊಂದಿದ್ದು, ತಥಾಗತನು ಸ್ವರ್ಗಕ್ಕೆ ಹೋಗುತ್ತಾನೆ. ಅಲ್ಲಿಂದ ಚ್ಯುತನಾಗಿ ಇಲ್ಲಿ ಹುಟ್ಟಿದ ಮೇಲೆ (ಮೃದುವಾದ) ಕರಚರಣಗಳನ್ನೂ ಪಡೆಯುತ್ತಾನೆ. ಬಲೆಯಂತಿರುವ ಕೈ ಅವನಿಗಿರುತ್ತದೆ. ನೋಡಲು ಬಹು ಸುಂದರವಾಗಿರುವ ಕೈ. ಈ ಮಗುವು ಇಂಥ ಅಂಗಸೌಷ್ಟವವನ್ನು ಹೊಂದಿರುತ್ತಾನೆ. ಅವನು ರಾಜನಾದರೆ ವಿಧೇಯರಾದ ಪರಿಜನರು ಅವನಿಗಿರುತ್ತಾರೆ. ಈ ಪೃಥ್ವಿಯಲ್ಲಿರುವ ಒಳ್ಳೆಯದೆಲ್ಲವೂ ಅವನ ಪ್ರಭಾವಕ್ಕೊಳಗಾಗಿರುತ್ತವೆ. ಪ್ರಿಯವಾದುದನ್ನೇ ಹೇಳುವವನಾದ ಅವನು ಇತರರ ಹಿತ ಸುಖಗಳಿಗಾಗಿ ಶ್ರಮಿಸುತ್ತಾನೆ. ಇಂಥ ಸದ್ಗುಣಿಯಾಗಿ ನಡೆದುಕೊಳ್ಳುತ್ತಾನೆ. ಎಲ್ಲ ಕಾಮಗಳನ್ನು ತೊರೆದು ಎಲ್ಲ ಭೋಗಗಳನ್ನು ವರ್ಜಿಸಿ ತನ್ನನ್ನೇ ಜಯಿಸಿಕೊಂಡ ಜಿನನಾದರೆ ಜನರಿಗೆ ಧಮ್ಮವನ್ನು ವಿವರಿಸಬಲ್ಲವನಾಗುತ್ತಾನೆ. ಅದನ್ನು ಕೇಳಿದವರು ಆನಂದಾಶ್ರುಪೂರಿತರಾಗುತ್ತಾರೆ. ಅವನನ್ನು ಅನುಸರಿಸುತ್ತಾರೆ. ಧಮ್ಮವನ್ನು ಚಾಚುತಪ್ಪದೆ ಪಾಲಿಸುತ್ತಾರೆ.”
(9-10) ಶಂಖದಂತಿರುವ ಪಾದ ಮತ್ತು ಮೇಲ್ಮುಖವಾದ ರೋಮಗಳು
“ತಥಾಗತನು ತನ್ನ ಭವಾವಳಿಯ ಜನ್ಮವೊಂದರಲ್ಲಿ ಮನುಷ್ಯನಾಗಿ ಹುಟ್ಟಿ ಅರ್ಥಪೂರ್ಣವಾದ ಧರ್ಮಕ್ಕೆ ಅನುಗುಣವಾದ ಶಾಂತಿಯನ್ನು ತರುವ ಮಾತುಗಳನ್ನೇ ಆಡುತ್ತಾ ಬಹುಜನರಿಗೆ ಒಳ್ಳೆಯದನ್ನು ಬೋಧಿಸುತ್ತಾ ಪ್ರಾಣಿಗಳ ಹಿತ ಸುಖಗಳಿಗಾಗಿ ಧರ್ಮದಿಂದಲೇ ನಡೆದುಕೊಳ್ಳುತ್ತಾ ಬದುಕುತ್ತಾನೆ. ಆ ಸತ್ಕರ್ಮದ ಫಲವಾಗಿ ಸ್ವರ್ಗದಲ್ಲಿ ಹುಟ್ಟುತ್ತಾನೆ... ಅಲ್ಲಿಂದ ಚ್ಯುತನಾಗಿ ಇಲ್ಲಿ ಹುಟ್ಟಿದ ಮೇಲೆ ಈ ಎರಡು ಮಹಾಪುರುಷ ಲಕ್ಷಣಗಳನ್ನು ಹೊಂದಿರುತ್ತಾನೆ. ಅವನ ಕಾಲುಗಳು ಶಂಖದಂತಿರುತ್ತವೆ. ಮೈಮೇಲಿನ ರೋಮವು ಮೇಲ್ಮುಖವಾಗಿರುತ್ತವೆ.
“ಈ ಲಕ್ಷಣಗಳನ್ನು ಪಡೆದಿರುವವನು ಮನೆಯಲ್ಲಿಯೇ ಉಳಿಯುವವನಾದರೆ ಚಕ್ರವರ್ತಿ ರಾಜನಾಗುತ್ತಾನೆ... ರಾಜನಾಗಿ ಆತನು ಏನನ್ನು ಪಡೆಯುತ್ತಾನೆ? ಅವನು ಎಲ್ಲರಿಗೂ ಅಗ್ರನಾಗಿರುತ್ತಾನೆ, ಪ್ರಮುಖನಾಗಿರುತ್ತಾನೆ, ಉತ್ತಮನಾಗಿರುತ್ತಾನೆ. ಸಂಪತ್ತಿನಲ್ಲಿ ಎಲ್ಲರನ್ನೂ ಮೀರಿಸುತ್ತಾನೆ. ರಾಜನಾಗಿ ಇಷ್ಟನ್ನೂ ಪಡೆದಿರುತ್ತಾನೆ... ಬುದ್ಧನಾಗಿ ಏನನ್ನು ಪಡೆಯುತ್ತಾನೆ? ಅವನು ಎಲ್ಲರಿಗೂ ಅಗ್ರನಾಗಿರುತ್ತಾನೆ, ಪ್ರಮುಖನಾಗಿರುತ್ತಾನೆ, ಉತ್ತಮನಾಗಿರುತ್ತಾನೆ. ಎಲ್ಲ ಜೀವಿಗಳಿಗೂ ಅತಿ ಶ್ರೇಷ್ಠನಾಗಿ ಪ್ರಭಾವಶಾಲಿಯಾಗಿರುತ್ತಾನೆ. ಬುದ್ಧನಾಗಿ ಇಷ್ಟನ್ನು ಪಡೆಯುತ್ತಾನೆ”. ಹೀಗೆ ಭಗವಾನರು ಹೇಳಿದರು.
ಇದನ್ನು ಕುರಿತ ಗಾಥೆಗಳು ಹೀಗಿವೆ :
“ಬಹುಜನರಿಗೆ ಅರ್ಥಪೂರ್ಣವಾದುದನ್ನು ಮತ್ತು ಧರ್ಮಪೂರ್ಣವಾದುದನ್ನು ಬೋಧಿಸಿ ಪ್ರಾಣಿಗಳಿಗೆ ಹಿತವಾದುದನ್ನು ಮಾಡುತ್ತಾ ಸುಖಿಗಳನ್ನಾಗಿ ಮಾಡುತ್ತಾ ಧರ್ಮವನ್ನನುಸರಿಸುತ್ತಾನೆ. ಅದು ಅವನ ಯಾಗವಾಗಿರುತ್ತದೆ. ಮಾತ್ಸರ್ಯವನ್ನು ಸಂಪೂರ್ಣವಾಗಿ ವರ್ಜಿಸಿರುತ್ತಾನೆ. ಈ ರೀತಿಯ ಸತ್ಕರ್ಮದಿಂದ ಸ್ವರ್ಗಕ್ಕೆ ಹೋಗಿ ಆನಂದದಿಂದಿರುತ್ತಾನೆ. ಇಲ್ಲಿಗೆ ಬಂದಮೇಲೆ ಉತ್ತಮವಾದ ಮತ್ತು ಶ್ರೇಷ್ಠವಾದ ಎರಡು ಲಕ್ಷಣಗಳನ್ನು ಹೊಂದಿರುತ್ತಾನೆ. ಅವನ ಮೈಮೇಲಿನ ರೋಮಗಳು ಮೇಲ್ಮುಖವಾಗಿ ಬಗ್ಗಿರುತ್ತವೆ. ಅವನು ನಿಂತಾಗ ಮಾಂಸ ರಕ್ತಗಳಿಂದ ಕೂಡಿದ ಅವನ ಪಾದಗಳು ನೋಡಲು ಬಹು ಅಂದವಾಗಿರುತ್ತವೆ. ಆತನು ಮನೆಯಲ್ಲಿಯೇ ಉಳಿಯುವವನಾದರೆ ಈ ಲೋಕದ ಬಹು ಸಂಪತ್ತುಳ್ಳವನಾಗಿರುತ್ತಾನೆ. ಇಡೀ ಜಂಬೂ ದ್ವೀಪದಲ್ಲಿ ಅವನನ್ನು ಮೀರಿಸುವ ಸಿರಿವಂತರು ಯಾರೂ ಇರುವುದಿಲ್ಲ. ಅವನು ಪಬ್ಬಜ್ಜನಾದರೆ ಎಲ್ಲ ಪ್ರಾಣಿಗಳಿಗೂ ಅಗ್ರಗಣ್ಯನಾಗಿರುತ್ತಾನೆ. ಅವನಿಗಿಂತ ಉತ್ತಮರು ಯಾವ ಲೋಕದಲ್ಲಿಯೂ ಇರುವುದಿಲ್ಲ; ಅವನನ್ನು ಜಯಿಸುವವರೂ ಯಾರೂ ಇರುವುದಿಲ್ಲ.”
(11) ಜಿಂಕೆ ಕಾಲುಗಳಂಥ ಲಕ್ಷಣ
“ತಥಾಗತನು ತನ್ನ ಭವಾವಳಿಯ ಜನ್ಮವೊಂದರಲ್ಲಿ ಮನುಷ್ಯನಾಗಿ ಹುಟ್ಟಿ ಕರಕುಶಲತೆ ವಿದ್ಯೆ ಸನ್ನಡತೆ ಸತ್ಕರ್ಮಗಳಲ್ಲಿ ಪರಿಪೂರ್ಣನಾದನು. ಆಗ ಅವನು ಹೀಗೆಂದುಕೊಂಡನು- ‘ನಾನು ಸರಿಯಾದುದನ್ನು ಅತಿ ಕ್ಷಿಪ್ರವಾಗಿಯೇ ಕಲಿಯಬೇಕು, ಕ್ಷಿಪ್ರವಾಗಿ ಅರಿಯಬೇಕು, ಕಷ್ಟವನ್ನು ಬಹುಕಾಲ ಅನುಭವಿಸಬಾರದು’. ಅದಕ್ಕನುಗುಣವಾಗಿ ವಿಪುಲವಾಗಿ ಸತ್ಕರ್ಮವನ್ನು ಮಾಡಿದನು... ಅದರ ಫಲವಾಗಿ ಇಲ್ಲಿಗೆ ಬಂದಮೇಲೆ ಒಂದು ಮಹಾಪುರುಷ ಲಕ್ಷಣವನ್ನು ಪಡೆದನು. ಜಿಂಕೆಗಿರುವಂಥ ಕಾಲುಗಳು.
“ಈ ಲಕ್ಷಣವನ್ನು ಪಡೆದಿರುವವನು ಮನೆಯಲ್ಲಿಯೇ ಉಳಿಯುವವನಾದರೆ ಚಕ್ರವರ್ತಿ ರಾಜನಾಗುತ್ತಾನೆ. ರಾಜನಾಗಿ ಏನನ್ನು ಪಡೆಯುತ್ತಾನೆ? ರಾಜನಿಗಿರಬೇಕಾದ ಸಂಪತ್ತನ್ನೂ, ಪರಿವಾರವನ್ನೂ, ಮತ್ತಿತರ ಪರಿಕರಗಳನ್ನು ವಸ್ತುಗಳನ್ನೂ ಆತನು ಬೇಗನೆ ಪಡೆಯುತ್ತಾನೆ. ಬುದ್ಧನಾಗಿ ಏನನ್ನು ಪಡೆಯುತ್ತಾನೆ? ಸಮಣನಿಗಿರಬೇಕಾದ ಶಿಷ್ಯರನ್ನೂ, ವಸ್ತುಗಳನ್ನೂ, ಅನುಕೂಲಗಳನ್ನೂ ಬಹುಬೇಗ ಪಡೆಯುತ್ತಾನೆ. ಬುದ್ಧನಾದ ಅವನಿಗೆ ಇವಿಷ್ಟೂ ಲಭಿಸುತ್ತವೆ.” ಹೀಗೆಂದು ಭಗವಾನರು ಹೇಳಿದರು.
ಇದನ್ನು ಕುರಿತ ಗಾಥೆಗಳು ಹೀಗಿವೆ :
“ವಿದ್ಯೆ ಆಚರಣೆ ಕರಕುಶಲತೆಗಳಲ್ಲಿ ಪರಿಣಿತನಾಗಿ ಸರಿಯಾದುದನ್ನೇ ಮಾಡಬೇಕೆಂಬುದನ್ನು ಅರಿಯಲು ಇಚ್ಛಿಸಿ ಯಾರಿಗೂ ಯಾವ ಬಗೆಯಾದ ನೋವೂ ಆಗದಂತೆ ಕುಶಲ ಯಾವುದು ಎಂಬುದನ್ನು ಕಲಿಯಲು ಹೆಚ್ಚು ಕಾಲವನ್ನೂ ತೆಗೆದುಕೊಳ್ಳಲಿಲ್ಲ. ಕಲಿತು ಅದಕ್ಕೆ ಅನುಗುಣವಾದ ಕರ್ಮವನ್ನೇ ಮಾಡಿದುದರಿಂದ ಬಹು ಸುಂದರವಾದ ಕೈಕಾಲುಗಳನ್ನು ಪಡೆಯುತ್ತಾರೆ. ಮೇಲಕ್ಕೆ ಬಗ್ಗಿರುವ ಮೈ ರೋಮವು ಅವನಿಗಿರುತ್ತದೆ. ಜಿಂಕೆಗಿರುವಂಥ ಕಾಲುಗಳನ್ನುಳ್ಳ ಆತನು ಅವನು ತನ್ನ ಯೌವನದಲ್ಲಿಯೇ ಗೃಹತ್ಯಾಗ ಮಾಡದೆ ಹೋದರೆ ಬೇಗನೆ ಸಂಪತ್ತನ್ನು ಗಳಿಸುತ್ತಾನೆ. ಅವನು ಪಬ್ಬಜಿತನಾದರೆ ನೇಕ್ಖಮ್ಮ ಛಂದಗಳನ್ನು ಗಳಿಸಿ ವಿಚಕ್ಷಣವಾಗಿ ಬುದ್ಧನಾದವನು ಗಳಿಸಬೇಕಾದುದೆಲ್ಲವನ್ನೂ ಬೇಗನೆ ಗಳಿಸುತ್ತಾನೆ.”
(12) ಚರ್ಮದ ಬಣ್ಣದ ಲಕ್ಷಣ
“ತಥಾಗತನು ತನ್ನ ಭವಾವಳಿಯ ಜನ್ಮವೊಂದರಲ್ಲಿ ಮನುಷ್ಯನಾಗಿ ಹುಟ್ಟಿ ಸಮಣನನ್ನೋ ಅಥವಾ ಬ್ರಾಹ್ಮಣನನ್ನೋ ಸಮೀಪಿಸಿ ಅವರನ್ನು (ಸತ್ಯವನ್ನು ಅರಿಯಬೇಕೆಂಬ ಉದ್ದೇಶದಿಂದ) ಹೀಗೆ ಪ್ರಶ್ನಿಸುವವನಾಗುತ್ತಾನೆ. ‘ಭಂತೆ, ಕುಶಲ ಯಾವುವು, ಅಕುಶಲವು ಯಾವುದು, ಯಾವುದನ್ನು ವರ್ಜಿಸಬೇಕು, ಯಾವುದನ್ನು ವರ್ಜಿಸಬಾರದು, ಯಾರನ್ನು ಸೇವಿಸಬೇಕು, ಯಾರನ್ನು ಸೇವಿಸಬಾರದು, ಯಾವುದನ್ನು ಮಾಡುವುದರಿಂದ ನನಗೆ ಅಹಿತವೂ, ದುಃಖವೂ ಆಗುತ್ತದೆ. ಯಾವುದನ್ನು ಮಾಡುವುದರಿಂದ ಸುಖವೂ ಹಿತವೂ ಆಗುತ್ತದೆ?’ ಹೀಗೆ ಸತ್ಕಾರ್ಯದಲ್ಲಿ ನಿರತನಾದರೆ ಅದರ ಫಲವಾಗಿ- ಅಲ್ಲಿಂದ ಚ್ಯುತನಾಗಿ ಇಲ್ಲಿಗೆ ಬಂದಾಗ ಅವನಿಗೆ ಈ ಮಹಾಪುರುಷ ಲಕ್ಷಣವಿರುತ್ತದೆ. ಅವನ ಚರ್ಮವು ಯಾವ ಧೂಳೂ ಕೂರದಷ್ಟು ನಯವಾಗಿರುತ್ತದೆ.
‘ಈ ಲಕ್ಷಣವನ್ನು ಪಡೆದಿರುವವನು ಮನೆಯಲ್ಲಿಯೇ ಉಳಿದರೆ ಚಕ್ರವರ್ತಿ ರಾಜನಾಗುತ್ತಾನೆ. ರಾಜನಾಗಿ ಏನನ್ನು ಪಡೆಯುತ್ತಾನೆ? ಅವನು ಮಹಾಪ್ರಾಜ್ಞನಾಗುತ್ತಾನೆ. ಪ್ರಜ್ಞೆಯಲ್ಲಿ ಮತ್ತು ಐಶ್ವರ್ಯದಲ್ಲಿ ಅವನಿಗೆ ಸಮಾನರಾದವರಾಗಲೀ, ಅವನನ್ನು ಮೀರಿಸಿದವರಾಗಲೀ ಯಾರೂ ಇರುವುದಿಲ್ಲ. ಆತನು ಇಂಥ ಸಿರಿವಂತನಾಗಿರುತ್ತಾನೆ. ಇಂಥ ಪ್ರಜ್ಞಾವಂತನಾಗಿರುತ್ತಾನೆ... ಬುದ್ಧನಾಗಿ ಏನನ್ನು ಪಡೆಯುತ್ತಾನೆ? ಅವನು ಮಹಾಪ್ರಾಜ್ಞನಾಗುತ್ತಾನೆ. ಅನೇಕ ವಿಷಯಗಳಲ್ಲಿ ಅವನು ಪರಿಣಿತನಾಗಿರುತ್ತಾನೆ. ಹರ್ಷವೆಂದರೇನು, ಶೀಘ್ರ ಗ್ರಹಣವೆಂಬುದರ ಅರ್ಥ ಏನು, ಉಚಿತಾನುಚಿತ ಯಾವುದು, ಕೆಟ್ಟದು ಯಾವುದು ಎಂಬುದರ ಬಗೆಗೆ ಸರಿಯಾದ ಜ್ಞಾನ ಅವನಿಗಿರುತ್ತದೆ. ಇಂಥ ಜ್ಞಾನದಲ್ಲಿ ಅವನನ್ನು ಮೀರಿಸಿದವರಾರೂ ಯಾವ ಜೀವಿಯೂ ಇರುವುದಿಲ್ಲ. ಬುದ್ಧನಾಗಿ ಇಷ್ಟನ್ನು ಹೊಂದಿರುತ್ತಾನೆ”. ಹೀಗೆಂದು ಭಗವಾನರು ಹೇಳಿದರು.
ಇದನ್ನು ಕುರಿತ ಗಾಥೆಗಳು ಹೀಗಿವೆ :
“ಹಿಂದಿನ ಜನ್ಮದಲ್ಲಿ ಸುಜ್ಞಾನವನ್ನು ಪಡೆಯಲು ಪಬ್ಬಜಿತರನ್ನು ಪ್ರಶ್ನಿಸುವವ ನಾಗಿರುತ್ತಾನೆ. ಅವರಿಂದ ಕಲಿಯಲು ಮತ್ತು ಪ್ರಶ್ನಿಸಲು ಕಾತುರನಾಗಿರುತ್ತಾನೆ. ಈ ಸತ್ಕರ್ಮದಿಂದ ಮನುಷ್ಯನಾಗಿ ಹುಟ್ಟಿ ತುಂಬ ನಯವಾದ ಚರ್ಮವನ್ನು ಪಡೆದಿರುವವನಾಗಿರುತ್ತಾನೆ. ಈ ಲಕ್ಷಣವನ್ನು ಪಡೆದಿರುವವನು ಒಳ್ಳೆಯದನ್ನು ತಿಳಿಯಬಲ್ಲವನೂ, ನೋಡಬಲ್ಲವನೂ ಆಗುತ್ತಾನೆ. ಚಕ್ರವರ್ತಿಯಾಗಿ ಪೃಥ್ವಿಯನ್ನು ಆಳುತ್ತಾನೆ. ಹೀಗೆ ಪಬ್ಬಜಿತನಾದರೆ ಹೇಳಿದುದೆಲ್ಲವನ್ನು ಗ್ರಹಿಸುವುದರಲ್ಲಿ ಅವನಿಗೆ ಸಮಾನರಾಗಲೀ ಇರುವುದಿಲ್ಲ. ಅವನನ್ನು ಮೀರಿಸುವವರು ಯಾರೂ ಇರುವುದಿಲ್ಲ. ಅವನು ಪಬ್ಬಜಿತನಾದರೆ ನೇಕ್ಖಮ್ಮ ಛಂದಗಳನ್ನು ಗಳಿಸಿ ವಿಚಕ್ಷಣನಾಗಿ ಅನುತ್ತರವಾದ ಮತ್ತು ಶ್ರೇಷ್ಠವಾದ ಪ್ರಜ್ಞೆಯನ್ನು ಪಡೆಯುತ್ತಾನೆ, ಬೋಧಿಯನ್ನು ಗಳಿಸುತ್ತಾನೆ. ಅತಿ ಸಮರ್ಥವಾದ ಮನೋಬಲ ಅವನದಾಗಿರುತ್ತದೆ.”
(13) ಸುವರ್ಣ ವರ್ಣ ಲಕ್ಷಣ
“ತಥಾಗತನಾದವನು ತನ್ನ ಭವಾವಳಿಯ ಜನ್ಮವೊಂದರಲ್ಲಿ ಮನುಷ್ಯನಾಗಿ ಹುಟ್ಟಿ ಕ್ರೋಧವನ್ನು ತೊರೆದು ಶಾಂತಚಿತ್ತನಾಗಿ ಎಷ್ಟೇ ನಿಂದೆಗೆ ಒಳಗಾದರೂ ಯಾರನ್ನೂ ನಿಂದಿಸದೆ ಕೋಪ ದ್ವೇಷ ಹಿಂಸಾ ಭಾವನೆಗಳನ್ನು ತಾಳದೆ ಸಂತಾಪಗೊಳ್ಳದೆ ಉದಾತ್ತ ದಾನಿಯಾಗಿ ಮೃದುವಾದ ಹೊದಿಕೆಗಳನ್ನೂ ಮೇಲಂಗಿಗಳನ್ನೂ ಹತ್ತಿ ರೇಷ್ಮೆ ಉಣ್ಣೆಗಳ ಮೃದುವಾದ ಉಡುಪುಗಳನ್ನೂ ದಾನ ಮಾಡುತ್ತಾನೆ. ಆ ಸತ್ಕರ್ಮದ ಫಲವಾಗಿ... ಇಲ್ಲಿಗೆ ಬಂದಾಗ ಈ ಮಹಾಪುರುಷ ಲಕ್ಷಣಗಳನ್ನು ಪಡೆಯುತ್ತಾನೆ- ಕಂಚಿಗಿರುವಂಥ ಸುವರ್ಣ. ಈ ಲಕ್ಷಣವನ್ನು ಪಡೆದಿರುವವನು ಮನೆಯಲ್ಲಿಯೇ ವಾಸಿಸುವವನಾದರೆ ಚಕ್ರವರ್ತಿ ರಾಜನಾಗುತ್ತಾನೆ. ಏನನ್ನು ಪಡೆಯುತ್ತಾನೆ? ಮೃದುವಾದ ಮತ್ತು ಸೂಕ್ಷ್ಮವಾದ ಹತ್ತಿ ರೇಷ್ಮೆ ಉಣ್ಣೆಗಳ ಹೊದಿಕೆಗಳನ್ನೂ ಮೇಲಂಗಿಗಳನ್ನೂ ಆತನು ಪಡೆಯುತ್ತಾನೆ. ರಾಜನಾಗಿ ಇಷ್ಟನ್ನು ಹೊಂದಿರುತ್ತಾನೆ... ಬುದ್ಧನಾಗಿ ಆತನು ಏನನ್ನು ಪಡೆಯುತ್ತಾನೆ? ಮೃದುವಾದ ಮತ್ತು ಸೂಕ್ಷ್ಮವಾದ ಹತ್ತಿ ರೇಷ್ಮೆ ಉಣ್ಣೆಯ ಹೊದಿಕೆಗಳು ಮೇಲಂಗಿಗಳೂ ಅವನಿಗಿರುತ್ತವೆ. ಬುದ್ಧನಾಗಿ ಅವನು ಇಷ್ಟನ್ನು ಪಡೆಯುತ್ತಾನೆ”. ಹೀಗೆಂದು ಭಗವಾನರು ಹೇಳಿದರು.
ಅದಕ್ಕೆ ಸಂಬಂಧಿಸಿದ ಗಾಥೆಗಳು ಹೀಗಿವೆ :
“ದೇವತೆಗಳು ಭೂಮಿಯ ಮೇಲೆ ಮಳೆಯನ್ನು ಸುರಿಸುವಂತೆ ಅಕ್ರೋಧವಾದ ಮನಸ್ಸುಳ್ಳವನಾದ ಅವನು ಮೃದುವಾದ ವಸ್ತ್ರಗಳನ್ನೂ, ಅಂಗಿಗಳನ್ನೂ, ಹಿಂದಿನ ಜನ್ಮದಲ್ಲಿ ಹೇರಳವಾಗಿ ದಾನ ಮಾಡಿದನು. ಹೀಗೆ ಮಾಡಿದುದರಿಂದ ಆ ಸುಕೃತ್ಯಗಳ ಫಲವಾಗಿ ದಿವ್ಯವಾದ ಲೋಕದಲ್ಲಿ ಹುಟ್ಟಿದನು. ಅನಂತರ ಇಲ್ಲಿ ಹುಟ್ಟಿದಾಗ ಅವನ ದೇಹವು ಇಂದ್ರನ ಬಣ್ಣವನ್ನು ಮೀರಿಸಿದ ಕನಕ ವರ್ಣವನ್ನು ಪಡೆಯಿತು. ಅಂಥವನು ಪಬ್ಬಜಿತನಾಗದೆ ಮನೆಯಲ್ಲಿಯೇ ಉಳಿದರೆ ಭೂಮಿಯನ್ನೇ ಆಳುತ್ತಾನೆ. ಶ್ರೇಷ್ಠವಾದ ಯಾವರೀತಿಯ ಕೊಳೆಯೂ ಇಲ್ಲದ ಮೃದುವಾದ ವಸ್ತ್ರ ಅಂಗಿಗಳನ್ನು ಸಪ್ತರತ್ನಗಳ ಸಮೇತ ಪಡೆಯುತ್ತಾನೆ. ಆತನು ಅನಗಾರಿಕನಾದರೆ ತನ್ನ ಪೂರ್ವ ಸತ್ಕರ್ಮಗಳ ಫಲವಾಗಿ ಉತ್ತಮವಾದ ಹೊದಿಕೆಗಳನ್ನೂ, ವಸ್ತ್ರಗಳನ್ನೂ ಪಡೆಯುತ್ತಾನೆ. ಸತ್ಕರ್ಮ ಮಾಡಿದುದಕ್ಕೆ ಎಂದೂ ಫಲವಿಲ್ಲದೆ ಇರುವುದಿಲ್ಲ.”
(14) ಗುಹ್ಯವಸ್ತುವು ಕೋಶದಿಂದಾವೃತವಾದ ಲಕ್ಷಣ
“ತಥಾಗತನು ತನ್ನ ಭವಾವಳಿಯ ಹಿಂದಿನ ಜನ್ಮವೊಂದರಲ್ಲಿ ಮನುಷ್ಯನಾಗಿ ಹುಟ್ಟಿ ಬಹುಕಾಲದ ಹಿಂದೆಯೇ ಬೇರೆ ಬೇರೆಯಾಗಿದ್ದ ಜಾತಿಗಳನ್ನೂ ಮಿತ್ರರನ್ನೂ ಒಂದುಗೂಡಿಸುತ್ತಾನೆ. ಮಾತೆಯರನ್ನು ಪುತ್ರರೊಂದಿಗೆ ಒಟ್ಟುಗೂಡಿಸುತ್ತಾನೆ, ಪುತ್ರರನ್ನು ಮಾತೆಯರೊಂದಿಗೆ, ಪಿತರನ್ನು ಪುತ್ರರೊಂದಿಗೆ, ಪುತ್ರರನ್ನು ಪಿತರೊಂದಿಗೆ, ಸಹೋದರಿಯರನ್ನು ಸಹೋದರರೊಂದಿಗೆ, ಸಹೋದರರನ್ನು ಸಹೋದರಿಯರೊಂದಿಗೆ ಒಟ್ಟುಗೂಡಿಸಿ ಅವರು ಸಂತೋಷದಿಂದ ಇರುವಂತೆ ಮಾಡುತ್ತಾನೆ. ಈ ಸತ್ಕರ್ಮವು ಅವನಿಂದಾದುದರ ಫಲವಾಗಿ... ಅವನು ಅಲ್ಲಿಂದ ಚ್ಯುತನಾಗಿ ಇಲ್ಲಿ ಹುಟ್ಟಿದಾಗ ಈ ಮಹಾಪುರುಷ ಲಕ್ಷಣವನ್ನು ಹೊಂದಿರುತ್ತಾನೆ. ಅವನ ಗುಹ್ಯವಸ್ತುವು ಕೋಶದಿಂದ ಆವೃತವಾಗಿರುತ್ತದೆ.
“ಈ ಲಕ್ಷಣವನ್ನು ಹೊಂದಿರುವವನು ಮನೆಯಲ್ಲಿಯೇ ಉಳಿದರೆ ಚಕ್ರವತಿ ರಾಜನಾಗುತ್ತಾನೆ... ರಾಜನಾಗಿ ಏನನ್ನು ಪಡೆಯುತ್ತಾನೆ? ಶೂರರೂ ವೀರರೂ ಪರಸೇನೆಗಳನ್ನು ಮರ್ದಿಸಬಲ್ಲವರೂ ಆದ ಒಂದು ಸಾವಿರಕ್ಕೂ ಮೀರಿದ ಪುತ್ರರನ್ನು ಪಡೆಯುತ್ತಾನೆ. ರಾಜನಾಗಿ ಇಷ್ಟನ್ನು ಗಳಿಸುತ್ತಾನೆ... ಬುದ್ಧನಾಗಿ ಏನನ್ನು ಪಡೆಯುತ್ತಾನೆ? ಶೂರರೂ ವೀರರೂ ಪರಸೇನೆಗಳನ್ನು ಮರ್ದಿಸುವವರೂ ಆದ ಅನೇಕ ಸಹಸ್ರ ಪುತ್ರರನ್ನು ಆತ ಪಡೆಯುತ್ತಾನೆ”* ಭಗವಾನರು ಇಷ್ಟನ್ನು ಹೇಳಿದರು.
ಇದನ್ನು ಕುರಿತ ಗಾಥೆಗಳು ಹೀಗಿವೆ :
“ಹಿಂದಿನ ಜನ್ಮದಲ್ಲಿ ಬಹುಕಾಲದಿಂದ ಬೇರೆ ಬೇರೆಯಾಗಿದ್ದ ಜ್ಞಾತಿಗಳನ್ನೂ ಮಿತ್ರರನ್ನೂ ಒಟ್ಟುಗೂಡಿಸಿ ಅವರಿಗೆ ಸಂತೋಷನ್ನುಂಟುಮಾಡುವವನು ಆ ಸತ್ಕರ್ಮದ ಫಲವಾಗಿ ದಿವ್ಯ ಲೋಕಕ್ಕೆ ಹೋಗಿ ಸುಖ ಹರ್ಷ ಆನಂದಗಳನ್ನು ಅನುಭವಿಸುತ್ತಾನೆ. ಅಲ್ಲಿಂದ ಈ ಲೋಕಕ್ಕೆ ಬಂದಾಗ ಅವನ ಗುಹ್ಯವಸ್ತುವು ಕೋಶದಿಂದ ಮುಚ್ಚಲ್ಪಟ್ಟಿರುತ್ತದೆ. ಅವನು ಮನೆಯಲ್ಲಿಯೇ ಉಳಿದರೆ ಶೂರರೂ ವೀರರೂ ಶತ್ರುಗಳನ್ನು ಗೆಲ್ಲುವವರೂ ಆದ ಸಾವಿರಕ್ಕೂ ಮೀರಿದ ಪುತ್ರರನ್ನು ಆತನು ಪಡೆಯುತ್ತಾನೆ. ಅವನ ಮನೆಯಲ್ಲಿ ಯಾವಾಗಲೂ ಪ್ರಿಯವಾದುದನ್ನೇ ಹೇಳುವ ಜನರೇ ಇರುತ್ತಾರೆ. ಅವನು ಪಬ್ಬಜಿತನಾದರೆ ಅವನ ಮಾತನ್ನು ಕೇಳುವ ಸಮರ್ಥರಾದ ಶಿಷ್ಯರು ಬಹುಸಂಖ್ಯೆಯಲ್ಲಿರುತ್ತಾರೆ. ಮನೆಯಲ್ಲಿಯೇ ಉಳಿಯುವ ಗೃಹಸ್ಥನಾಗಲೀ, ಪಬ್ಬಜಿತನಾಗಲೀ ಆ ಲಕ್ಷಣವು ಈ ಫಲವನ್ನೇ ತರುತ್ತದೆ.”
(15-16) ಸಮಪ್ರಮಾಣದ ಅಂಗಗಳು
“ತಥಾಗತನು ತನ್ನ ಭವಾವಳಿಯ ಹಿಂದಿನ ಜನ್ಮವೊಂದರಲ್ಲಿ ಮನುಷ್ಯನಾಗಿ ಹುಟ್ಟಿ ಎಲ್ಲ ಜನರನ್ನೂ ಒಂದೇ ಸಮವಾಗಿ ಕಂಡು ಎಲ್ಲರನ್ನೂ ಒಂದೇ ದೃಷ್ಟಿಯಿಂದ ನೋಡಿ ಮನುಷ್ಯ ಸ್ವಭಾವವನ್ನು ತಿಳಿದು ಒಬ್ಬೊಬ್ಬನಲ್ಲಿರುವ ವಿಶೇಷತೆಯನ್ನು ಕಂಡು ‘ಇವನು ಇದಕ್ಕೆ ಅರ್ಹನಾಗಿದ್ದಾನೆ’. ಇವನು ಅದಕ್ಕೆ ಅರ್ಹನಾಗಿದ್ದಾನೆ ಎಂಬುದನ್ನು ಅರಿತವನಾಗುತ್ತಾನೆ. ಹೀಗೆ ಅವನು ವಿವಿಧ ಪುರುಷರಲ್ಲಿರುವ ವಿಶಿಷ್ಟ ಗುಣಗಳನ್ನು ಅರಿತವನಾಗಿರುತ್ತಾನೆ. ಈ ಸತ್ಕರ್ಮದಿಂದ... ಅಲ್ಲಿಂದ ಚ್ಯುತನಾಗಿ ಇಲ್ಲಿಗೆ ಬಂದಮೇಲೆ ಈ ಎರಡು ಮಹಾಪುರುಷ ಲಕ್ಷಣಗಳನ್ನು ಪಡೆಯುತ್ತಾನೆ. ಆಲದ ಮರದಂತೆ ಅವನ ದೇಹವು ಸಮ ಪ್ರಮಾಣದ ಅಂಗಗಳನ್ನು ಹೊಂದಿರುತ್ತದೆ, ಅವನು ನೆಟ್ಟಗೆ ನಿಂತಾಗ ಅವನ ಕೈಗಳು ಅವನ ಮಂಡಿಗಳನ್ನು ಸೋಕುತ್ತವೆ.
“ಈ ಎರಡು ಲಕ್ಷಣಗಳನ್ನು ಹೊಂದಿರುವವನು ಮನೆಯಲ್ಲಿಯೇ ಉಳಿದುಕೊಂಡರೆ ಚಕ್ರವರ್ತಿ ರಾಜನಾಗುತ್ತಾನೆ... ರಾಜನಾಗಿ ಏನನ್ನು ಪಡೆಯುತ್ತಾನೆ? ಹರ್ಷದಿಂದಲೇ ಇರುತ್ತಾನೆ. ಮಹಾ ಧನವಂತನಾಗಿರುತ್ತಾನೆ, ಮಹಾ ಭಾಗ್ಯವನ್ನು ಹೊಂದಿರುತ್ತಾನೆ. ಅತಿಹೆಚ್ಚಿನ ಚಿನ್ನ-ಬೆಳ್ಳಿಯನ್ನು ವಸ್ತು ಉಪಕರಣಗಳನ್ನೂ ಧನ ಧಾನ್ಯವನ್ನೂ ಯಾವಾಗಲೂ ತುಂಬಿರುವ ಕೋಶಾಗಾರವನ್ನೂ ಅವನು ಪಡೆದಿರುತ್ತಾನೆ. ಅವನು ಬುದ್ಧನಾದರೆ ಏನನ್ನು ಪಡೆಯುತ್ತಾನೆ? ಅವನು ಹರ್ಷದಿಂದಿರುತ್ತಾನೆ. ಭಿಕ್ಷುವಿಗೆ ಬೇಕಾಗಿರುವ ಧನವನ್ನು ಸಂಪತ್ತನ್ನೂ ಅವನು ಪಡೆದಿರುತ್ತಾನೆ. ಅವನಿಗೆ ಬೇಕಾದ ಧನವೆಂದರೆ- ಶ್ರದ್ಧೆ, ಶೀಲ, ಉತ್ತಮನಾದವನಿಗೆ ಇರಬೇಕಾದ ನಾಚಿಕೆ, ಭಯ, ವಿದ್ವತ್ತು, ವಿವೇಚನೆ, ತ್ಯಾಗ- ಬುದ್ಧನಾಗಿ ಅವನು ಪಡೆಯುವುದು ಇಷ್ಟನ್ನು.” ಹೀಗೆ ಭಗವಾನರು ನುಡಿದರು.
ಇದಕ್ಕೆ ಸಂಬಂಧಿಸಿದ ಗಾಥೆಗಳ ಅರ್ಥ ಹೀಗಿದೆ :
“ಮನುಷ್ಯರೆಲ್ಲರನ್ನೂ ಒಂದೇಬಗೆಯಿಂದ ಕಂಡು ಮನುಷ್ಯರ ಗುಣ ವಿಶೇಷಗಳನ್ನು ತೂಗಿ ನೋಡಿ ಅವರಿಗೆ ಹಿತ ಯಾವುದು ಎಂಬುದನ್ನು ಅರಿಯುವವನು ಮತ್ತು ಯಾರು ಯಾರು ಯಾವುದಕ್ಕೆ ಅರ್ಹರು ಎಂಬುದನ್ನು ತಿಳಿಯುವವನು ಭೂಮಿಯ ಮೇಲೆ ನಿಂತಾಗ ಮಂಡಿಯನ್ನು ತಾಗುವ ಕೈಗಳನ್ನು ಪಡೆಯುತ್ತಾನೆ. ಒಂದು ಮಹಾ ವೃಕ್ಷದಂತೆ ಅವನ ಎತ್ತರ ಗಾತ್ರಗಳು ವಿಶೇಷವಾಗಿರುತ್ತವೆ. ಇವೆಲ್ಲವೂ ಅವನ ಕರ್ಮ ವಿಪಾಕದಿಂದ ಆದ ಫಲಗಳು, ಎಲ್ಲ ಕ್ಷಣಗಳನ್ನು ನೋಡಿ ಅದರ ಅರ್ಥವನ್ನು ಸರಿಯಾಗಿ ವಿವರಿಸಬಲ್ಲ ನಿಪುಣರು ಅವನು ಶಿಶುವಾಗಿರುವಾಗಲೇ ಎಲ್ಲ ಲೌಕಿಕ ಸಂಪತ್ತನ್ನು ಹೊಂದಿರುತ್ತಾನೆ ಎಂದು ಹೇಳಿರುತ್ತಾರೆ. ಅವನು ರಾಜನಾಗಿ ಎಲ್ಲ ಸಂಪತ್ತನ್ನು ಪಡೆಯುತ್ತಾನೆ. ಅವನು ಅಂಥ ಸಂಪತ್ತೆಲ್ಲವನ್ನು ತ್ಯಜಿಸುವವನಾದರೆ ಅನುತ್ತರವಾದ ಮತ್ತು ಬಹು ಉತ್ತಮವಾದ ಭಾಗ್ಯವನ್ನೇ ಗಳಿಸುತ್ತಾನೆ.”
(17-19) ಸಿಂಹದ ಕತ್ತು ಸೊಂಟ ಮುಂತಾದ ಲಕ್ಷಣಗಳು
“ತಥಾಗತನು ತನ್ನ ಭವಾವಳಿಯ ಹಿಂದಿನ ಜನ್ಮವೊಂದರಲ್ಲಿ ಮನುಷ್ಯನಾಗಿ ಹುಟ್ಟಿ ಬಹುಜನರ ಲೇಸನ್ನು ಬಯಸುತ್ತಾನೆ. ಬಹುಜನರ ಹಿತವನ್ನು ಬಯಸುತ್ತಾನೆ. ಅವರಿಗೆ ಸೌಕರ್ಯಗಳೊದಗಲಿ ಎಂದು ಆಶಿಸುತ್ತಾನೆ. ಅವರ ಯೋಗಕ್ಷೇಮವನ್ನು ಬಯಸುತ್ತಾನೆ- ಶ್ರದ್ಧೆ, ಶೀಲ, ವಿವೇಚನೆ, ತ್ಯಾಗ, ಧರ್ಮಬುದ್ಧಿ ಅವರಲ್ಲಿ ಬೆಳೆಯಲಿ. ಧನ ಧಾನ್ಯ, ಭೂಸಂಪತ್ತು, ಪಶುಸಂಪತ್ತು ಅವರಿಗೆ ವರ್ಧಿಸಲಿ, ಅವರಿಗೆ ಒಳ್ಳೆಯ ಪತ್ನಿಪುತ್ರರು ದಾಸ ಕರ್ಮಚಾರಿಗಳು ಬಂಧುಗಳು ಮಿತ್ರರು, ಜ್ಞಾನಿಗಳು ಮತ್ತು ನೆಂಟರು ದೊರಕಲಿ ಎಂದು ಹಾರೈಸುತ್ತಾನೆ. ಈ ಸತ್ಕರ್ಮದ ಫಲದಿಂದ... ಅಲ್ಲಿ ಚ್ಯುತನಾಗಿ ಇಲ್ಲಿಗೆ ಬಂದಮೇಲೆ ಈ ಮೂರು ಮಹಾಪುರುಷ ಲಕ್ಷಣಗಳನ್ನು ಹೊಂದಿರುತ್ತಾನೆ. ಅವನ ದೇಹದ ಕತ್ತು ಸೊಂಟಗಳು ಸಿಂಹದ ಕತ್ತು ಸೊಂಟದಂತೆ ಇರುತ್ತವೆ. ಅವನ ಭುಜಗಳ ನಡುವೆ ಯಾವ ತಗ್ಗೂ ಇರುವುದಿಲ್ಲ. ಅವನ ಎದೆಯು ಉಬ್ಬಾಗಿರುತ್ತದೆ.
“ಈ ಮೂರು ಲಕ್ಷಣಗಳನ್ನುಳ್ಳವನು ಮನೆಯಲ್ಲಿಯೇ ಉಳಿದುಕೊಂಡರೆ ಚಕ್ರವತಿ ರಾಜನಾಗುತ್ತಾನೆ... ರಾಜನಾಗಿ ಏನನ್ನು ಪಡೆಯುತ್ತಾನೆ? ಅವನಿಗೆ ಎಂದೂ ಸೋಲಿರುವುದಿಲ್ಲ. ಅವನ ಧನ ಧಾನ್ಯ ಭೂಮಿ ವಸ್ತ್ರ ಪಶುಬಲಗಳು ಎಂದೂ ಕುಂದುವುದಿಲ್ಲ. ಅವನ ಪತ್ನೀ ಪುತ್ರರು ದಾಸ ಕರ್ಮಚಾರಿಗಳು ಜ್ಞಾತಿ ಮಿತ್ರರು ಹತ್ತಿರದ ಮತ್ತು ದೂರದ ನೆಂಟರು ಎಂದೆಂದೂ ಅವನಿಗೆ ಹಿತರಾಗಿಯೇ ಇರುತ್ತಾರೆ. ಅವನ ಸಕಲ ಸಂಪತ್ತು ಎಂದೂ ಕ್ಷೀಣಿಸುವುದಿಲ್ಲ... ಬುದ್ಧನಾಗಿ ಏನನ್ನು ಪಡೆಯುತ್ತಾನೆ? ಅವನ ಧರ್ಮಬುದ್ಧಿಯು ಎಂದೂ ಕ್ಷೀಣವಾಗುವುದಿಲ್ಲ, ಅವನ ಶೀಲ ಶ್ರದ್ಧೆಗಳಿಗೆ ಎಂದೂ ಹಾನಿ ತಟ್ಟದು. ಅವನ ವಿವೇಚನೆ, ತ್ಯಾಗ, ಪಞ್ಞಾಗಳು ಹಾಳಾಗುವುದೇ ಇಲ್ಲ. ಅವನ ಯಾವ ಸಂಪತ್ತೂ ಕ್ಷೀಣಿಸುವುದಿಲ್ಲ. ಬುದ್ಧನಾಗಿ ಇಷ್ಟನ್ನು ಪಡೆಯುತ್ತಾನೆ.” ಹೀಗೆ ಭಗವಾನರು ಹೇಳಿದರು.
ಇದಕ್ಕೆ ಸಂಬಂಧಿಸಿದ ಗಾಥೆಗಳ ಅರ್ಥ ಹೀಗಿದೆ :
“ಪರರಿಗೆ ಯಾವ ಹಾನಿಯಾಗುವುದೂ ಬೇಡ ಎಂದು ಇಚ್ಛಿಸುವವನಿಗೆ ಶ್ರದ್ಧೆ ಶೀಲ ವಿವೇಚನೆಗಳು ವೃದ್ಧಿ ಹೊಂದುತ್ತವೆ. ಪರರ ತ್ಯಾಗ ಧರ್ಮ ಬುದ್ಧಿ ಧನ ಧಾನ್ಯ ಭೂಮಿಗಳಿಗೆ ಎಂದೂ ಹಾನಿಯಾಗದಿರಲಿ. ಅವರ ಪಶು ಸಂಪತ್ತಿಗೆ ಯಾವ ಕೆಟ್ಟದೂ ಆಗದಿರಲಿ, ಅವರ ಪತ್ನಿ ಪುತ್ರರು ಬಂಧು ಮಿತ್ರರು, ಜ್ಞಾತಿಗಳು ಅನುಕೂಲರಾಗಿಯೇ ಇರಲಿ, ಅವರ ಸುಖ ಬಲ ಮತ್ತು ತೇಜಸ್ಸು ವರ್ಧಿಸಲಿ ಎಂದು ಮನಃಪೂರ್ವಕವಾಗಿ ಹಾರೈಸುವವನು ಮಹಾಪುರುಷನ ಲಕ್ಷಣಗಳನ್ನು ಪಡೆಯುತ್ತಾನೆ. ಸಿಂಹಕ್ಕಿರುವಂಥ ಸೊಂಟ ಕತ್ತುಗಳು ಅವನಿಗಿರುತ್ತವೆ. ಅವನ ಭುಜಗಳ ನಡುವೆ ಯಾವ ತಗ್ಗೂ ಇರುವುದಿಲ್ಲ. ಅವನ ಎದೆಯು ಉಬ್ಬಾಗಿರುತ್ತದೆ. ಹಿಂದಿನ ಜನ್ಮದಲ್ಲಿ ಮಾಡಿದ ಸತ್ಕರ್ಮದಿಂದ ಅವನು ಮಹಾಪುರುಷ ಲಕ್ಷಣಗಳನ್ನು ಪಡೆಯುತ್ತಾನೆ. ಈ ಲಕ್ಷಣವನ್ನು ಹೊಂದಿರುವವನ ಸಂಪತ್ತು ಎಂದೂ ಕುಂದುವುದಿಲ್ಲ. ಅವನು ಮನೆಯಲ್ಲಿಯೇ ಉಳಿದರೆ ಅವನ ಧನ ಧಾನ್ಯಗಳು ವೃದ್ಧಿಸುತ್ತವೆ. ಅವನ ಪತ್ನಿಪುತ್ರರು ಅನುಕೂಲರಾಗಿರುತ್ತಾರೆ. ಅವನ ಪಶು ಸಂಪತ್ತು ಹೇರಳವಾಗಿರುತ್ತವೆ. ಅವನು ಪಬ್ಬಜಿತನಾಗಿ ಎಲ್ಲವನ್ನೂ ತ್ಯಜಿಸಿದವನಾದರೆ ಕಳೆಗುಂದದ ಅನುತ್ತರ ಬೋಧಿ ಸಂಪತ್ತು ಅವನದಾಗುತ್ತದೆ.”
(20) ರಸ ಹೀರುವ ಲಕ್ಷಣ
“ತಥಾಗತನು ತನ್ನ ಭವಾವಳಿಯ ಹಿಂದಿನ ಜನ್ಮವೊಂದರಲ್ಲಿ ಮನುಷ್ಯನಾಗಿ ಹುಟ್ಟಿ, ದಂಡ ಶಸ್ತ್ರಗಳಿಂದ ಯಾವ ಪ್ರಾಣಿಯನ್ನು ನೋಯಿಸದೆ ಜೀವಿಗಳಲ್ಲಿ ಯಾವ ವೈರ ಭಾವವೂ ಇಲ್ಲದವನಾಗಿರುತ್ತಾನೆ. ಈ ಸತ್ಕರ್ಮದ ಫಲದಿಂದ... ಅಲ್ಲಿಂದ ಚ್ಯುತನಾಗಿ ಇಲ್ಲಿಗೆ ಬಂದಮೇಲೆ ಈ ಮಹಾಪುರುಷ ಲಕ್ಷಣವನ್ನು ಹೊಂದಿರುತ್ತಾನೆ. ಅವನ ಅಭಿರುಚಿಯು ಶ್ರೇಷ್ಠವಾಗಿರುತ್ತದೆ. ಅವನು ನುಂಗಿದ ಆಹಾರವು ನಾಲಿಗೆಗಷ್ಟೇ ರುಚಿಕೊಡದೆ ರುಚಿಯನ್ನು ಸಾಗಿಸುವ ಎಲ್ಲ ನರಗಳಲ್ಲಿಯೂ ಹರಿದು ಎಲ್ಲ ಅಂಗಗಳಿಗೂ ರುಚಿ ಕೊಡುತ್ತದೆ.
“ಈ ಲಕ್ಷಣವನ್ನು ಪಡೆದಿರುವವನು ಮನೆಯಲ್ಲಿಯೇ ಉಳಿಯುವವನಾದರೆ ಚಕ್ರವರ್ತಿ ರಾಜನಾಗುತ್ತಾನೆ, ರಾಜನಾಗಿ ಏನನ್ನು ಮಾಡುತ್ತಾನೆ? ಅವನು ಯಾವ ಬಾಧೆಯನ್ನೂ ಅನುಭವಿಸುವುದಿಲ್ಲ. ಅವನಿಗೆ ಬರುವ ವ್ಯಾಧಿಯು ಬಹು ಅಲ್ಪವಾಗಿರುತ್ತದೆ. ಅವನ ಜೀರ್ಣಶಕ್ತಿಯು ಚೆನ್ನಾಗಿರುತ್ತದೆ. ಶೀತೋಷ್ಣಗಳು ಅವನನ್ನು ಹೆಚ್ಚಾಗಿ ಬಾಧಿಸುವುದಿಲ್ಲ. ರಾಜನಾಗಿ ಇಷ್ಟನ್ನು ಪಡೆಯುತ್ತಾನೆ. ಬುದ್ಧನಾಗಿ ಏನನ್ನು ಪಡೆಯುತ್ತಾನೆ? ಅವನಿಗೆ ಬರುವ ರೋಗಗಳು ಅಲ್ಪವಾಗಿರುತ್ತವೆ. ಹೆಚ್ಚಿನ ಬಾಧೆಯಿಂದ ಅವನು ಪೀಡಿತನಾಗುವುದಿಲ್ಲ. ಅವನ ಜೀರ್ಣಶಕ್ತಿಯು ಉತ್ತಮವಾಗಿದ್ದು, ಉಷ್ಣ ಶೀತಗಳು ಅವನನ್ನು ಹೆಚ್ಚಾಗಿ ಪೀಡಿಸುವುದಿಲ್ಲ. ಬುದ್ಧನಾಗಿ ಇಷ್ಟನ್ನು ಪಡೆಯುತ್ತಾನೆ”. ಹೀಗೆಂದು ಭಗವಾನರು ಹೇಳಿದರು.
ಇದಕ್ಕೆ ಸಂಬಂಧಿಸಿದ ಗಾಥೆಗಳ ಅರ್ಥ ಇದು :
“ಪ್ರಾಣಿಗಳಿಗೆ ನೋವನ್ನುಂಟುಮಾಡದೆ ದೊಣ್ಣೆ, ಶಸ್ತ್ರಗಳಿಂದ ಯಾವ ಪ್ರಾಣಿಯನ್ನೂ ಕೊಲ್ಲದೆ ಯಾರಿಗೂ ಪೀಡೆ ಕೊಡದವನು ಒಳ್ಳೆಯ ಲೋಕದಲ್ಲಿ ಹುಟ್ಟಿ ಆನಂದದಿಂದಲೂ ಸೌಖ್ಯದಿಂದಲೂ ಇರುತ್ತಾನೆ. ಇಲ್ಲಿಗೆ ಬಂದಮೇಲೆ ಶ್ರೇಷ್ಠವಾದ ಅಭಿರುಚಿಯನ್ನು ಹೊಂದಿರುವ ಅವನು ತಿಂದ ಅನ್ನವು ನಾಲಿಗೆಗಷ್ಟೇ ಅಲ್ಲದೆ ಎಲ್ಲ ಅಂಗಗಳಿಗೂ ರುಚಿ ಕೊಡುತ್ತದೆ. ಅಂಥ ಮನುಷ್ಯನು ಹೇರಳವಾದ ಸುಖ ಪಡೆಯುತ್ತಾನೆ ಎಂದು ನಿಪುಣರೂ ವಿಚಕ್ಷಣರೂ ಹೇಳುತ್ತಾರೆ. ಅವನು ಮನೆಯಲ್ಲಿಯೇ ಉಳಿಯುವ ಗೃಹಸ್ಥನಾಗಲೀ ಮನೆಯನ್ನು ತೊರೆದ ಪಬ್ಬಜಿತನೇ ಆಗಲೀ ಈ ಲಕ್ಷಣದಿಂದ ಇಂಥ ಸೌಖ್ಯವನ್ನು ಪಡೆಯುತ್ತಾನೆ.”
(21-22) ಅಭಿನೀಲನೇತ್ರ ಲಕ್ಷಣ
“ತಥಾಗತನು ತನ್ನ ಭವಾವಳಿಯ ಹಿಂದಿನ ಜನ್ಮವೊಂದರಲ್ಲಿ ಮನುಷ್ಯನಾಗಿ ಹುಟ್ಟಿ ವ್ಯಂಗ್ಯವಾಗಿ ನೋಡದೆ ವಿಚಲ ದೃಷ್ಟಿಯವನಾಗದೆ ವಕ್ರವಾಗಿ ಮಾತನಾಡದೆ ಬಹುಜನರನ್ನು ಪ್ರೀತಿಯಿಂದಲೆ ನೋಡುವವನಾಗಿರುತ್ತಾನೆ. ಈ ಸತ್ಕರ್ಮದ ಫಲವಾಗಿ ಅಲ್ಲಿಂದ ಇಲ್ಲಿಗೆ ಬಂದಮೇಲೆ ಈ ಎರಡು ಮಹಾಪುರುಷ ಲಕ್ಷಣಗಳನ್ನು ಪಡೆಯುತ್ತಾನೆ- ಉತ್ತಮವಾದ ನೀಲಿ ಬಣ್ಣದ ಕಣ್ಣುಗಳು ಮತ್ತು ಹಸುವಿನ ಕಣ್ಣಿಗಿರುವಂಥ ರೆಪ್ಪೆಗೂದಲು. ಈ ಲಕ್ಷಣಗಳನ್ನು ಪಡೆದಿರುವವನು ಮನೆಯಲ್ಲಿಯೇ ಉಳಿದರೆ ಚಕ್ರವರ್ತಿ ರಾಜನಾಗುತ್ತಾನೆ... ರಾಜನಾಗಿ ಏನನ್ನು ಪಡೆಯುತ್ತಾನೆ? ಅವನನ್ನು ನೋಡಿದಾಗ ಜನರು ಸಂತೋಷಪಡುತ್ತಾರೆ. ಬಹುಜನರಿಗೆ ಪ್ರಿಯನಾಗಿರುತ್ತಾನೆ. ಬ್ರಾಹ್ಮಣ ಗೃಹಪತಿಗಳಿಗೆ ಪಟ್ಟಣ ಗ್ರಾಮಗಳಲ್ಲಿನ ಜನರಿಗೆ ಲೆಕ್ಕಿಗ ಮಹಾಮಾತ್ಯರಿಗೆ ದ್ವಾರ ರಕ್ಷಕರಿಗೆ ಅಮಾತ್ಯರಿಗೆ ಪರಿವಾರದ ಮುಖ್ಯಸ್ಥರಿಗೆ ಸಾಮಂತ ರಾಜರಿಗೆ ಯುವಜನರಿಗೆ ಪ್ರಿಯನಾಗಿರುತ್ತಾನೆ. ರಾಜನಾಗಿ ಇಷ್ಟನ್ನು ಪಡೆಯುತ್ತಾನೆ... ಬುದ್ಧನಾಗಿ ಏನನ್ನು ಪಡೆಯುತ್ತಾನೆ? ಜನರು ಅವನನ್ನು ನೋಡಿದಾಗ ಸಂತೋಷಪಡುತ್ತಾರೆ. ಭಿಕ್ಷುಗಳಿಗೆ ಭಿಕ್ಷುಣಿಯರಿಗೆ ಉಪಾಸಕರಿಗೆ ಉಪಾಸಿಕೆಯರಿಗೆ ದೇವತೆಗಳಿಗೆ ಮನುಷ್ಯರಿಗೆ ಅಸುರರಿಗೆ ನಾಗರಿಕರಿಗೆ ಗಂಧರ್ವರಿಗೆ ಅವನು ಪ್ರಿಯದರ್ಶನನಾಗಿರುತ್ತಾನೆ. ಬುದ್ಧನಾಗಿ ಇಷ್ಟನ್ನು ಪಡೆಯುತ್ತಾನೆ.” ಹೀಗೆಂದು ಭಗವಾನರು ಹೇಳಿದರು.
ಇದಕ್ಕೆ ಸಂಬಂಧಿಸಿದ ಗಾಥೆಯ ಅರ್ಥ :
“ವಕ್ರದೃಷ್ಟಿಯಿಂದ ನೋಡದೆ ವಿಚಲ ದೃಷ್ಟಿಯವನಾಗದೆ ವ್ಯಂಗ್ಯವಾಗಿ ಮಾತನಾಡದೆ ಎಲ್ಲರನ್ನೂ ಪ್ರೀತಿಯಿಂದಲೇ ನೋಡುತ್ತಾನೆ. ಅವನ ನಡೆ ನೇರ, ನುಡಿ ನೇರ. ಈ ಸತ್ಕರ್ಮ ಫಲದಿಂದ ಆನಂದವನ್ನನುಭವಿಸುತ್ತಾನೆ. ಇಲ್ಲಿ ಹುಟ್ಟಿದ ಮೇಲೆ ಹಸುವಿಗಿರುವಂಥ ರೆಪ್ಪೆಗೂದಲನ್ನೂ ಉತ್ತಮವಾದ ನೀಲಿಬಣ್ಣದ ನೇತ್ರಗಳನ್ನೂ ಹೊಂದಿ ನೋಡಿದಾಗ ಸಂತೋಷ ಕೊಡುವವನಾಗಿರುತ್ತಾನೆ. ಲಕ್ಷಣಗಳ ಅರ್ಥವನ್ನು ತಿಳಿದ ನಿಪುಣರೂ ಕೋವಿದರೂ ಅಷ್ಟು ಸುಂದರವಾದ ಮತ್ತು ಸೂಕ್ಷ್ಮವಾದ ಕಣ್ಣುಗಳನ್ನುಳ್ಳವನು ಜನರಿಗೆ ಪ್ರಿಯನಾಗಿರುತ್ತಾನೆ ಎಂದು ನಿರ್ದಿಷ್ಟವಾಗಿ ಹೇಳುತ್ತಾರೆ. ಅವನು ಮನೆಯಲ್ಲಿಯೇ ಉಳಿದರೆ ಬಹುಜನಪ್ರಿಯನಾಗುತ್ತಾನೆ. ಅವನು ಮನೆಯಲ್ಲಿ ಉಳಿಯದೆ ಸಮಣನಾದರೆ ಬಹುಜನರ ಶೋಕವನ್ನು ನಾಶಮಾಡಬಲ್ಲ ಜನಪ್ರಿಯನಾಗುತ್ತಾನೆ.”
(23) ಕಿರೀಟದಂತಿರುವ ದುಂಡಾದ ಶಿರಸ್ಸಿನ ಲಕ್ಷಣ
“ತಥಾಗತನು ತನ್ನ ಭವಾವಳಿಯ ಪೂರ್ವಜನ್ಮವೊಂದರಲ್ಲಿ ಮನುಷ್ಯನಾಗಿದ್ದಾಗ ಬಹುಜನರಿಗೆ ನಾಯಕನಾಗಿದ್ದನು. ಕಾಯಾ ವಾಚಾ ಮನಸಾ ಕುಶಲವಾದುದನ್ನೇ ಮಾಡುವುದರಲ್ಲಿ ಪ್ರಮುಖನಾಗಿದ್ದನು. ದಾನ ಮಾಡುವುದರಲ್ಲಿ ಶೀಲವನ್ನು ಪಾಲಿಸುವುದರಲ್ಲಿ ಉಪೋಸಥದ ದಿನಗಳನ್ನು ಆಚರಿಸುವುದರಲ್ಲಿ ಪ್ರಮುಖನಾಗಿದ್ದನು. ಮಾತಾಪಿತೃಗಳನ್ನು ಸೇವಿಸುತ್ತಿದ್ದನು. ಸಮಣ ಬ್ರಾಹ್ಮಣರನ್ನೂ ಕುಲದ ಹಿರಿಯರನ್ನೂ ಗೌರವಿಸುತ್ತಿದ್ದನು. ಇತರ ಕುಶಲ ಧರ್ಮಗಳನ್ನು ಚಾಚುತಪ್ಪದೆ ಪಾಲಿಸುತ್ತಿದ್ದನು. ಇಂಥ ಸತ್ಕರ್ಮದ ಫಲವಾಗಿ ಅಲ್ಲಿಂದ ಚ್ಯುತನಾಗಿ ಇಲ್ಲಿಗೆ ಬಂದಮೇಲೆ ಈ ಮಹಾಪುರುಷ ಲಕ್ಷಣವನ್ನು ಹೊಂದಿದ್ದನು. ರಾಜನ ಕಿರೀಟದಂತಿರುವ ದುಂಡಾದ ತಲೆ.
“ಈ ಲಕ್ಷಣವನ್ನು ಹೊಂದಿರುವವನು ಮನೆಯಲ್ಲಿಯೇ ಉಳಿದರೆ ಚಕ್ರವರ್ತಿ ರಾಜನಾಗುತ್ತಾನೆ... ರಾಜನಾಗಿ ಏನನ್ನು ಪಡೆಯುತ್ತಾನೆ? ಬಹುಸಂಖ್ಯೆಯ ಜನರ ಗೌರವಾದರಗಳಿಗೆ ಪಾತ್ರನಾಗುತ್ತಾನೆ. ಬ್ರಾಹ್ಮಣ್ಯ ಗೃಹಪತಿಗಳ ಪಟ್ಟಣ ಗ್ರಾಮಗಳಲ್ಲಿ ವಾಸಿಸುವವರ ಲೆಕ್ಕಿಗರ ಮಹಾಮಾತ್ಯರ ಅಂಗರಕ್ಷಕರ ದ್ವಾರಪಾಲಕರ ಅಮಾತ್ಯರ ಸಾಮಂತರಾಜರ ಯುವಕರ ಭಕ್ತಿಗೆ ಪಾತ್ರನಾಗಿರುತ್ತಾನೆ... ಬುದ್ಧನಾಗಿ ಏನನ್ನು ಪಡೆಯುತ್ತಾನೆ? ಬಹುಜನರ ಗೌರವಾದರಗಳಿಗೆ ಪಾತ್ರನಾಗುತ್ತಾನೆ. ಭಿಕ್ಷುಗಳ ಭಿಕ್ಷುಣಿಯರ ಉಪಾಸಕರ ಉಪಾಸಿಕೆಯರ ದೇವತೆಗಳ ಮನುಷ್ಯರ ಅಸುರರ ನಾಗರ ಗಂಧರ್ವರ ಗೌರವಾದರಗಳಿಗೆ ಪಾತ್ರನಾಗುತ್ತಾನೆ.” ಹೀಗೆಂದು ಭಗವಾನರು ಹೇಳಿದರು.
ಇದನ್ನು ಕುರಿತ ಗಾಥೆಯ ಅರ್ಥ ಹೀಗಿದೆ :
“ಆತನು ಸನ್ಮಾರ್ಗದಲ್ಲಿ ಹೋಗುವವರ ಮತ್ತು ಧರ್ಮದಲ್ಲಿಯೇ ನಿರತರಾದವರ ನಾಯಕನಾಗಿದ್ದನು. ಈ ಸತ್ಕರ್ಮ ಫಲವಾಗಿ ಸ್ವರ್ಗದಲ್ಲಿ ಹುಟ್ಟಿದನು. ಇಂಥ ಸನ್ನಡತೆಯ ಫಲವಾಗಿ ರಾಜನ ಕಿರೀಟದಂತಿರುವ ದುಂಡಾದ ಶಿರಸ್ಸನ್ನು ಪಡೆದನು. ಲಕ್ಷಣಗಳು ಅರ್ಥವನ್ನು ತಿಳಿದು ವಿವರಿಸಬಲ್ಲವರು ಆ ಲಕ್ಷಣವನ್ನು ಹೊಂದಿರುವವನು ಜನನಾಯಕನಾಗುತ್ತಾನೆ ಎಂದು ಹೇಳಿದರು. ಹಿಂದಿನ ಜನ್ಮದಲ್ಲಿ ಜನರು ಹೇಗೆ ಅವನನ್ನು ಪೂಜಿಸುತ್ತಿದ್ದರೋ ಈಗಲೂ ಜನರ ಭಕ್ತಿಗೆ ಪಾತ್ರನಾಗುತ್ತಾನೆ ಎಂದು ನುಡಿದರು. ಕ್ಷತ್ರಿಯನಾಗಿ ಹುಟ್ಟಿದರೆ ಭೂಮಿಗೆ ಒಡೆಯನಾಗಿ ಬಹುಜನರಿಗೆ ಪ್ರಿಯನಾಗುತ್ತಾನೆ. ಪಬ್ಬಜಿತನೇನಾದರೂ ಆದರೆ ಧಮ್ಮವನ್ನು ಅರಿತು ಅದರಂತೆ ನಡೆಯುವ ಅವನನ್ನು ಬಹುಜನರು ಅನುಸರಿಸಿ ಗೌರವಿಸುತ್ತಾರೆ.”
(24-25) ಒಂದೊಂದು ರಂಧ್ರದಲ್ಲಿ ಒಂದೇ ಕೂದಲು
“ತಥಾಗತನು ತನ್ನ ಭವಾವಳಿಯ ಹಿಂದಿನ ಜನ್ಮವೊಂದರಲ್ಲಿ ಮನುಷ್ಯನಾಗಿದ್ದಾಗ ಸುಳ್ಳನ್ನು ತ್ಯಜಿಸಿ ಸುಳ್ಳನ್ನು ಎಂದೂ ನುಡಿಯದೆ ಸತ್ಯವಾದಿಯೂ ಸತ್ಯಸಂಧನೂ ನಂಬಿಕೆಗೆ ಅರ್ಹನಾದವನೂ ಕೊಟ್ಟ ಮಾತನ್ನು ಉಳಿಸಿಕೊಳ್ಳುವವನೂ ಆಗಿದ್ದನು. ಈ ಸತ್ಕರ್ಮದ ಫಲವಾಗಿ... ಅಲ್ಲಿಂದ ಚ್ಯುತನಾಗಿ ಇಲ್ಲಿಗೆ ಬಂದಮೇಲೆ ಈ ಎರಡು ಮಹಾಪುರುಷ ಲಕ್ಷಣಗಳನ್ನು ಹೊಂದಿರುತ್ತಾನೆ- ಒಂದೊಂದು ರಂಧ್ರದಲ್ಲಿ ಒಂದೇ ಕೂದಲಿರುವುದು ಮತ್ತು ಮೇಲ್ಮುಖವಾಗಿ ಬಗ್ಗಿರುವ ಮೈ ಕೂದಲಿರುವುದು; ಎರಡನೆಯದಾಗಿ ಎರಡು ಹುಬ್ಬುಗಳ ನಡುವೆ ಮೃದುವಾಗಿರುವ ಬಿಳಿಯ ಕೂದಲಿನ ಉಬ್ಬಿರುವುದು.
“ಈ ಲಕ್ಷಣಗಳನ್ನುಳ್ಳವನು ಮನೆಯಲ್ಲಿಯೇ ಉಳಿದರೆ ಚಕ್ರವರ್ತಿ ರಾಜನಾಗುತ್ತಾನೆ. ರಾಜನಾಗಿ ಏನನ್ನು ಪಡೆಯುತ್ತಾನೆ? ಅನೇಕಾನೇಕ ಸಂಖ್ಯೆಯ ಜನರು ಅವನು ಹೇಳಿದಂತೆ ಕೇಳುತ್ತಾರೆ. ಬ್ರಾಹ್ಮಣ ಗೃಹಪತಿಗಳು ಪಟ್ಟಣ ಗ್ರಾಮಗಳಲ್ಲಿ ವಾಸಿಸುವವರು ಲೆಕ್ಕಿಗ ಮಹಾಮಾತ್ಯರು ಅಂಗರಕ್ಷಕರು ದ್ವಾರಪಾಲಕರು ಅಮಾತ್ಯರು ಪರಿಜನರು ಸಾಮಂತರಾಜರು ಯುವಕರು ಅವನಿಗೆ ವಿಧೇಯರಾಗಿರುತ್ತಾರೆ... ಬುದ್ಧನಾಗಿ ಏನನ್ನು ಪಡೆಯುತ್ತಾನೆ? ಅನೇಕಾನೇಕ ಜನರ ಭಕ್ತಿಗೆ ಪಾತ್ರನಾಗುತ್ತಾನೆ. ಭಿಕ್ಷುಗಳು ಭಿಕ್ಷುಣಿಯರು ಉಪಾಸಕರು ಉಪಾಸಿಕೆಯರು ದೇವತೆಗಳು ಮನುಷ್ಯರು ಅಸುರರು ನಾಗರು ಗಂಧರ್ವರು ಅವನನ್ನು ಅನುಸರಿಸುತ್ತಾರೆ. ಬುದ್ಧನಾಗಿ ಇಷ್ಟನ್ನು ಪಡೆಯುತ್ತಾನೆ.” ಹೀಗೆಂದು ಭಗವಾನರು ಹೇಳಿದರು.
ಇದಕ್ಕೆ ಸಂಬಂಧಿಸಿದ ಗಾಥೆಗಳು :
“ಕೊಟ್ಟ ವಚನಕ್ಕೆ ತಪ್ಪದೆ ಸುಳ್ಳಾಡುವುದನ್ನು ವರ್ಜಿಸಿ ಯಾರಿಗೂ ನೋವನ್ನುಂಟುಮಾಡುವಂಥ ಮಾತುಗಳನ್ನಾಡದೆ ಇದ್ದುದರ ಹಿಂದಿನ ಜನ್ಮದ ಸತ್ಕರ್ಮದ ಫಲವಾಗಿ ಹುಬ್ಬುಗಳ ನಡುವೆ ಮೃದುವಾದ ಉಬ್ಬನ್ನು ಪಡೆದನು. ಅವನ ಮೈಯಿನ ಒಂದೊಂದೂ ರೋಮಕೂಪದಲ್ಲಿಯೂ ಒಂದೊಂದೇ ಕೂದಲಿತ್ತು. ಲಕ್ಷಣಗಳನ್ನು ತಿಳಿದು ಅದರ ಅರ್ಥವನ್ನು ವಿವರಿಸಬಲ್ಲ ಜ್ಞಾನಿಗಳು ಹಾಗೆ ಹುಬ್ಬು ಮತ್ತು ರೋಮಗಳನ್ನುಳ್ಳವನು ಬಹುಸಂಖ್ಯೆಯ ಜನರನ್ನು ಅನುವರ್ತಿಗಳನ್ನಾಗಿ ಪಡೆಯುತ್ತಾನೆಂದು ಹೇಳಿದರು. ಅವನು ಗೃಹಸ್ಥನಾದರೂ ಅವನಿಗೆ ಬಹುಜನ ಶಿಷ್ಯರಿರುತ್ತಾರೆ. ಪಬ್ಬಜಿತನಾಗಿ ಶ್ರೇಷ್ಠನಾದ ಬುದ್ಧನಾದರೂ ಅವನಿಗೆ ಬಹುಜನ ಶಿಷ್ಯರೇ ಇರುತ್ತಾರೆ.”
(26-27) ಸಂದಿರದ ನಲವತ್ತು ಹಲ್ಲುಗಳ ಲಕ್ಷಣ
“ತಥಾಗತನು ಹಿಂದಿನ ಜನ್ಮವೊಂದರಲ್ಲಿ ಮನುಷ್ಯನಾಗಿ ಹುಟ್ಟಿ, ಚಾಡಿ ಹೇಳುವ ಸ್ವಭಾವವನ್ನು ವರ್ಜಿಸಿ ಯಾವೊಂದು ಚಾಡಿಯ ಮಾತನ್ನು ಆಡದೆ ಇಲ್ಲಿ ಕೇಳಿದ್ದನ್ನು ಅಲ್ಲಿ ಹೇಳಿ ಇಲ್ಲಿ ಭೇದವನ್ನುಂಟುಮಾಡದೆ ಇಲ್ಲಿ ಕೇಳಿದ್ದನ್ನು ಇಲ್ಲಿ ಹೇಳಿ ಅಲ್ಲಿ ಭೇದವನ್ನುಂಟುಮಾಡದೆ ಅನೈಕಮತ್ಯದಿಂದಿದ್ದವರನ್ನು ಒಂದುಗೂಡಿಸಿ, ಒಟ್ಟಾಗಿರುವವರಲ್ಲಿ ಸ್ನೇಹವನ್ನು ಕುದುರಿಸಿ ಐಕ್ಯಮತ್ಯವನ್ನು ಕಂಡು ಸಂತೋಷಪಟ್ಟು ಆನಂದಿಸಿ ಐಕ್ಯಮತ್ಯವನ್ನುಂಟು ಮಾಡುವ ಮಾತನ್ನೇ ಆಡುತ್ತಿದ್ದನು. ಈ ಸತ್ಕರ್ಮದ ದೆಸೆಯಿಂದ... ಅಲ್ಲಿಂದ ಚ್ಯುತನಾಗಿ ಇಲ್ಲಿಗೆ ಬಂದಮೇಲೆ ಎರಡು ಮಹಾಪುರುಷ ಲಕ್ಷಣವನ್ನು ಪಡೆದನು. ಒಂದನೆಯದು ನಲವತ್ತು ಹಲ್ಲುಗಳು, ಎರಡನೆಯದು ಮಧ್ಯ ಸಂದಿರದ ಹಲ್ಲುಗಳು.
“ಈ ಲಕ್ಷಣಗಳಿಂದ ಕೂಡಿದ ಮನೆಯಲ್ಲಿಯೇ ಉಳಿಯುವವನಾದರೆ ಚಕ್ರವರ್ತಿ ರಾಜನಾಗುತ್ತಾನೆ... ರಾಜನಾಗಿ ಏನನ್ನು ಪಡೆಯುತ್ತಾನೆ? ಎಂದೆಂದೂ ಒಗ್ಗಟ್ಟಾಗಿರುವ ಹಿಂಬಾಲಕರು ಅವನಿಗಿರುತ್ತಾರೆ. ಅವನ ರಾಜ್ಯದಲ್ಲಿಯ ಬ್ರಾಹ್ಮಣ ಗೃಹಸ್ಥರೂ ಪಟ್ಟಣ ಮತ್ತು ಗ್ರಾಮಗಳಲ್ಲಿ ವಾಸಿಸುವವರೂ ಲೆಕ್ಕಿಗ ಮಹಾಮಾತ್ಯರು ಅಂಗರಕ್ಷಕರೂ ದ್ವಾರಪಾಲಕರೂ ಅಮಾತ್ಯರೂ ಅವನ ಆಸ್ಥಾನದವರೂ ಯುವಕ ಅನುಯಾಯಿಗಳೂ ಐಕ್ಯಮತ್ಯದಿಂದಲೇ ಇರುತ್ತಾರೆ. ರಾಜನಾಗಿ ಇಷ್ಟನ್ನು ಪಡೆಯುತ್ತಾನೆ... ಬುದ್ಧನಾಗಿ ಏನನ್ನು ಪಡೆಯುತ್ತಾನೆ? ಐಕ್ಯಮತ್ಯದಿಂದಲೇ ಇರುವ ಶಿಷ್ಯರು ಅವನಿಗಿರುತ್ತಾರೆ. ಭಿಕ್ಷು ಭಿಕ್ಷುಣಿ ಉಪಾಸಕ ಉಪಾಸಿಕ ಶಿಷ್ಯ ಶಿಷ್ಯೆಯರೂ ಅವನನ್ನನುಸರಿಸುವ ದೇವತೆಗಳೂ ಮನುಷ್ಯರೂ ಅಸುರರೂ ನಾಗರೂ ಗಂಧರ್ವರೂ ಯಾವಾಗಲು ಐಕ್ಯಮತ್ಯದಿಂದಲೇ ಇರುತ್ತಾರೆ. ಬುದ್ಧನಾಗಿ ಇಷ್ಟನ್ನು ಪಡೆಯುತ್ತಾನೆ.”
ಇದಕ್ಕೆ ಸಂಬಂಧಿಸಿದ ಗಾಥೆಗಳ ಅರ್ಥ ಹೀಗಿದೆ :
“ಐಕ್ಯಮತ್ಯದಿಂದಿರುವವರಲ್ಲಿ ಭೇದವು ಬೆಳೆಯುವಂಥ ಮಾತುಗಳನ್ನಾಡದೆ ಕಲಹವನ್ನು ಬಳಸುವಂಥದಾವುದನ್ನೂ ಮಾಡದೆ ಒಗ್ಗಟ್ಟಾಗಿರುವವರಲ್ಲಿ ಒಡಕು ಹುಟ್ಟುವಂಥ ಮಾತನ್ನಾಡದೆ ಒಳ್ಳೆಯ ಮಾತನ್ನೇ ಆಡುವವನಾಗಿರುತ್ತಾನೆ. ಅನೈಕ್ಯಮತ್ಯ ದಿಂದಿರುವವರಲ್ಲಿ ಒಗ್ಗಟ್ಟು ಬೆಳೆಯುವಂಥ ಮಾತುಗಳನ್ನೇ ಆಡುತ್ತಾನೆ. ಕಲಹವಾಡುವವರಲ್ಲಿ ಮತ್ತೆ ಒಗ್ಗಟ್ಟನ್ನುಂಟು ಮಾಡಿ ಆನಂದಿಸುತ್ತಾನೆ, ಸಂತೋಷಪಡುತ್ತಾನೆ. ಈ ಸತ್ಕರ್ಮವು ವಿಪಾಕ ಹೊಂದಿ ಅವನು ಒಳ್ಳೆಯ ಲೋಕದಲ್ಲಿ ಹುಟ್ಟುತ್ತಾನೆ. ಅಲ್ಲಿ ಸಂತೋಷದಿಂದಿರುತ್ತಾನೆ. ಇಲ್ಲಿ ಹುಟ್ಟಿದ ಮೇಲೆ ನಡುವೆ ಸಂದು ಇರದ ನಲವತ್ತು ಹಲ್ಲುಗಳನ್ನು ಪಡೆಯುತ್ತಾನೆ. ಅವನು ಭೂಪತಿಯಾದರೆ ಐಕ್ಯಮತ್ಯದಿಂದಿರುವ ಪರಿವಾರವನ್ನು ಹೊಂದಿರುತ್ತಾನೆ. ಸಮಣನಾದರೆ ಯಾವ ಕುಂದೂ ಇರದ ಭಕ್ತಿಯಲ್ಲಿ ಅಚಲರಾದ ಶಿಷ್ಯ ಸಮೂಹವು ಅವನಿಗಿರುತ್ತದೆ.”
(28-29) ಉದ್ದ ನಾಲಗೆ ಮತ್ತು ಕೋಗಿಲೆ ಕಂಠದ ಲಕ್ಷಣಗಳು
“ತಥಾಗತನು ತನ್ನ ಭವಾವಳಿಯ ಹಿಂದಿನ ಜನ್ಮವೊಂದರಲ್ಲಿ ಮನುಷ್ಯನಾಗಿ ಹುಟ್ಟಿ ಕಠಿಣವಾದ ಮಾತುಗಳನ್ನಾಡುವ ಸ್ವಭಾವವನ್ನು ವರ್ಜಿಸಿ ಎಂದೂ ಯಾವ ಕಠಿಣ ಮಾತನ್ನೂ ಆಡದೆ ಯಾವುವು ಕರ್ಣಗಳಿಗೆ ಸುಖವನ್ನುಂಟುಮಾಡುತ್ತವೋ ಪ್ರೇಮಪೂರಿತವಾಗಿವೆಯೋ ಹೃದಯಂಗಮವಾಗಿವೆಯೋ ಮೃದುವಾಗಿವೆಯೋ ಜನರಿಗೆ ಸಂತೋಷನ್ನುಂಟುಮಾಡುತ್ತವೆಯೋ ಜನರಿಗೆ ಪ್ರಿಯವಾಗಿವೆಯೋ ಅಂಥ ಮಾತುಗಳನ್ನೇ ಆಡಿರುತ್ತಾನೆ. ಈ ಸತ್ಕರ್ಮದ ದೆಸೆಯಿಂದ... ಅಲ್ಲಿಂದ ಚ್ಯುತನಾಗಿ ಇಲ್ಲಿಗೆ ಬಂದಮೇಲೆ ಎರಡು ಮಹಾಪುರುಷ ಲಕ್ಷಣಗಳನ್ನು ಪಡೆಯುತ್ತಾನೆ- ಉದ್ದವಾದ ನಾಲಿಗೆ ಕೋಗಿಲೆಗಿರುವಂಥ ಕಂಠ.
“ಈ ಲಕ್ಷಣಗಳನ್ನು ಹೊಂದಿರುವವನು ಮನೆಯಲ್ಲಿಯೇ ಉಳಿಯುವವನಾದರೆ ಚಕ್ರವರ್ತಿ ರಾಜನಾಗುತ್ತಾನೆ. ರಾಜನಾಗಿ ಏನನ್ನು ಪಡೆಯುತ್ತಾನೆ? ಕೇಳಿದವರು ವಿಧೇಯತೆಯಿಂದ ನಡೆದುಕೊಳ್ಳುವಂತೆ ಮಾಡಬಲ್ಲ ಧ್ವನಿಯು ಅವನದಾಗಿರುತ್ತದೆ. ಬ್ರಾಹ್ಮಣ ಗೃಹಸ್ಥರು ಪಟ್ಟಣ ಗ್ರಾಮಗಳಲ್ಲಿ ವಾಸಿಸುವವರು ಲೆಕ್ಕಿಗರು ಮಹಾಮಾತ್ಯರು ಅಂಗರಕ್ಷಕರು ದ್ವಾರಪಾಲಕರು ಅಮಾತ್ಯರು ಆಸ್ಥಾನದವರು ಸಾಮಂತರಾಜರು ಮತ್ತು ಯುವಜನರು ವಿಧೇಯತೆಯಿಂದ ನಡೆದುಕೊಳ್ಳುವಂಥ ಧ್ವನಿಯು ಅವನದಾಗಿರುತ್ತದೆ. ರಾಜನಾಗಿ ಇಷ್ಟನ್ನು ಪಡೆಯುತ್ತಾನೆ... ಬುದ್ಧನಾಗಿ ಏನನ್ನು ಗಳಿಸುತ್ತಾನೆ? ಭಿಕ್ಷುಗಳು ಭಿಕ್ಷುಣಿಯರು ಉಪಾಸಕರು ಉಪಾಸಿಕೆಯರು ದೇವತೆಗಳು ಮನುಷ್ಯರು ನಾಗರು ಮತ್ತು ಗಂಧರ್ವರು ಗೌರವದಿಂದ ಪಾಲಿಸುವಂಥ ಧ್ವನಿಯು ಅವನದಾಗಿರುತ್ತದೆ. ಬುದ್ಧನಾಗಿ ಇಷ್ಟನ್ನು ಪಡೆಯುತ್ತಾನೆ.”
ಇದಕ್ಕೆ ಸಂಬಂಧಿಸಿದ ಗಾಥೆಗಳ ಅರ್ಥ ಇದು :
“ನಿದ್ರೆಯಿಂದ ಕೂಡಿದ ವಾದಗ್ರಸ್ತವಾಗಿರುವ ನೋವನ್ನುಂಟುಮಾಡುವ ಒರಟಾದ ಎದೆಗಿರಿಯುವ ಯಾತನೆಯನ್ನುಂಟು ಮಾಡುವ ಕಠಿಣವಾದ ಜನಗಳನ್ನು ಮರ್ದಿಸಬಲ್ಲ ಮಾತುಗಳನ್ನಾಡದೆ ಮಧುರವಾದ ಹಿತವನ್ನುಂಟುಮಾಡುವ ಸಂತೋಷನ್ನುಂಟು ಮಾಡುವ ಮಾತುಗಳನ್ನೇ ಆಡಿರುತ್ತಾನೆ. ಮನುಷ್ಯರಿಗೆ ಪ್ರಿಯವಾದ ಹೃದಯಂಗಮವಾದ ಕರ್ಣಗಳಿಗೆ ಸುಖ ಕೊಡುವ ಮಾತುಗಳನ್ನೇ ಆಡಿ ಆ ಪುಣ್ಯ ಬಲದಿಂದ ಸ್ವರ್ಗದಲ್ಲಿ ಹುಟ್ಟಿ ಒಳ್ಳೆಯದನ್ನೇ ಅನುಭವಿಸುತ್ತಾನೆ. ಇಲ್ಲಿಗೆ ಬಂದಮೇಲೆ ಅಂಥ ಒಳ್ಳೆಯ ಮಾತುಗಳ ಫಲವಾಗಿ ಇಂಪಾದ ಸ್ವರವನ್ನು ಪಡೆಯುತ್ತಾನೆ. ದೊಡ್ಡದಾದ ನಾಲಿಗೆಯನ್ನು ಹೊಂದಿರುತ್ತಾನೆ. ಕೇಳಿದವರು ವಿಧೇಯತೆಯಿಂದ ನಡೆದುಕೊಳ್ಳುವಂತೆ ಮಾಡುವ ಧ್ವನಿಯು ಅವನದಾಗಿರುತ್ತದೆ. ಅವನು ಗೃಹಸ್ಥನಾಗಿರಲಿ, ಪಬ್ಬಜಿತನಾಗಿರಲಿ ಅವನು ಹೇಳಿದುದನ್ನು ಜನರು ಅನುಸರಿಸುತ್ತಾರೆ. ಅಂಥ ಗಂಭೀರ ಧ್ವನಿಯು ಅವನದಾಗಿರುತ್ತದೆ.
(30) ಸಿಂಹದಂಥ ದವಡೆಯ ಲಕ್ಷಣ
“ತಥಾಗತನು ತನ್ನ ಭವಾವಳಿಯ ಹಿಂದಿನ ಜನ್ಮವೊಂದರಲ್ಲಿ ಮನುಷ್ಯನಾಗಿ ಹುಟ್ಟಿ, ಕೆಲಸಕ್ಕೆ ಬಾರದ ಕಾಡುಹರಟೆಯಲ್ಲಿ ತೊಡಗುವ ಪ್ರವೃತ್ತಿಯನ್ನು ತ್ಯಜಿಸಿ ಸಂದರ್ಭಕ್ಕೆ ತಕ್ಕ ಮಾತನ್ನೇ ಆಡುತ್ತಿದ್ದನು. ನಡೆದದ್ದನ್ನೇ ಹೇಳುತ್ತಿದ್ದನು. ಅರ್ಥಪೂರ್ಣವಾದ ಧರ್ಮಕ್ಕೆ ಅನುಗುಣವಾದ ವಿನಯಪೂರಿತವಾದ ಕೇಳಿದವರು ಮರೆಯಬಾರದಂಥ ಮಾತುಗಳನ್ನು ಆಡುತ್ತಿದ್ದನು. ಅರ್ಥಸಹಿತವಾದ ಕಾಲ ದೇಶಗಳಿಗೆ ಉಚಿತವಾದ, ಎರಡರ್ಥ ಬರದ ಮಾತುಗಳನ್ನೇ ಆಡುತ್ತಿದ್ದನು. ಈ ಸತ್ಕರ್ಮದ ಫಲವಾಗಿ... ಅಲ್ಲಿಂದ ಚ್ಯುತನಾಗಿ ಇಲ್ಲಿಗೆ ಬಂದಮೇಲೆ ಈ ಮಹಾಪುರುಷ ಲಕ್ಷಣವನ್ನು ಪಡೆದನು- ಅವನ ದವಡೆಯು ಸಿಂಹದ ದವಡೆಯಂತಿತ್ತು.
“ಈ ಲಕ್ಷಣವನ್ನು ಪಡೆದವನು ಮನೆಯಲ್ಲಿಯೇ ವಾಸಿಸುವವನಾದರೆ ಚಕ್ರವರ್ತಿ ರಾಜನಾಗಿ ಹುಟ್ಟುತ್ತಾನೆ. ರಾಜನಾಗಿ ಏನನ್ನು ಪಡೆಯುತ್ತಾನೆ ? ಮನುಷ್ಯರಿಂದಾಗಲೀ ಶತ್ರುಗಳಿಂದಾಗಲೀ ಮಿತ್ರರಲ್ಲದವರಿಂದಾಗಲೀ ಅವನನ್ನು ಸೋಲಿಸುವುದಕ್ಕಾಗುವುದಿಲ್ಲ. ರಾಜನಾಗಿ ಇಷ್ಟನ್ನು ಪಡೆಯುತ್ತಾನೆ... ಬುದ್ಧನಾಗಿ ಏನನ್ನು ಪಡೆಯುತ್ತಾನೆ? ಒಳಗಿನ ಹೊರಗಿನ ಶತ್ರುಗಳಿಂದಾಗಲೀ, ಗೆಳೆಯರಲ್ಲದವರಿಂದಾಗಲೀ ಅವನನ್ನು ಸೋಲಿಸುವುದಕ್ಕಾಗುವುದಿಲ್ಲ. ರಾಗ ಮೋಹ ದ್ವೇಷಗಳನ್ನು ಅವನು ಜಯಿಸಿರುತ್ತಾನೆ. ಸಮಣನಾಗಲೀ ಬ್ರಾಹ್ಮಣನಾಗಲೀ ದೇವನಾಗಲೀ ಮಾರನಾಗಲೀ ಬ್ರಹ್ಮನಾಗಲೀ ಲೋಕದಲ್ಲಿನ ಮತ್ತಾರೇ ಆಗಲಿ ಅವನನ್ನು ಜಯಿಸಲಾರರು. ಬುದ್ಧನಾಗಿ ಇಷ್ಟನ್ನು ಪಡೆಯುತ್ತಾನೆ”. ಹೀಗೆಂದು ಭಗವಾನರು ಹೇಳಿದರು.
ಇದಕ್ಕೆ ಸಂಬಂಧಿಸಿದ ಗಾಥೆಗಳ ಅರ್ಥ ಹೀಗಿದೆ :
“ಕೆಲಸಕ್ಕೆ ಬಾರದ ಬಾಲ ಭಾಷೆಯು ಅವನದಾಗಿರಲಿಲ್ಲ. ಅಸ್ಪಷ್ಟವಾದ ವಿಚಾರವಾಗಲೀ ಮಾತುಗಳಾಗಲೀ ಅವನಿಂದ ಬರುತ್ತಿರಲಿಲ್ಲ. ಹಿತವಲ್ಲದ ಮಾತುಗಳನ್ನಾಡದೆ ಬಹುಜನರ ಸುಖ ಹಿತಗಳನ್ನುಂಟುಮಾಡುವ ಮಾತುಗಳನ್ನೇ ಆಡುತ್ತಿದ್ದನು. ಈ ಸತ್ಕರ್ಮದ ಫಲವಾಗಿ ಆತನು ದಿವ್ಯ ಮಾತುಗಳನ್ನೇ ಆಡುತ್ತಿದ್ದನು. ಈ ಸತ್ಕರ್ಮದ ಫಲವಾಗಿ ಆತನು ದಿವ್ಯ ಲೋಕದಲ್ಲಿ ಹುಟ್ಟಿದನು. ಈ ಸತ್ಕರ್ಮದ ವಿಪಾಕದಿಂದ ಅಲ್ಲಿಯೂ ಸುಖವನ್ನನುಭವಿಸಿದನು. ಅಲ್ಲಿಂದ ಚ್ಯುತನಾಗಿ ಈ ಲೋಕಕ್ಕೆ ಬಂದಮೇಲೆ ಎರಡು ಜೊತೆ ಕಾಲುಳ್ಳವುಗಳೊಡೆಯನಿಗೆ (ಸಿಂಹಕ್ಕೆ) ಇರುವಂಥ ದವಡೆಯನ್ನು ಪಡೆದನು. ಅಂಥವನು ರಾಜನಾದರೆ ಮನುಜರೆಲ್ಲರಿಗೆ ಮನುಜರೊಡೆಯರಿಗೆ ಮಹಾನುಭಾವರಿಗೆ ದೇವತೆಗಳ ನಗರಕ್ಕೆ ಅಧಿಪತಿಯಾದ ದೇವತೆಗಳೊಡೆಯ ಇಂದ್ರನಂತೆ ಒಡೆಯನಾಗಿರುತ್ತಾನೆ. ಗಂಧರ್ವರಾಗಲೀ ಅಸುರರಾಗಲೀ ಯಕ್ಷರಾಗಲೀ ಸಕ್ಕನಾಗಲೀ ಸುರರಾಗಲೀ ಅವನನ್ನು ಜಯಿಸಲಾರರು. ಅವನು ಹೀಗಿರುತ್ತಾನೆ. ಅವನು ಇದನ್ನು ಸಾಧಿಸುತ್ತಾನೆ. ಈ ದಿಸೆಯಲ್ಲಿ ಮತ್ತು ಇತರ ದಿಸೆಗಳಲ್ಲಿ ಅವನ ಜಯ ಹೀಗಿರುತ್ತದೆ.”
(31-32) ಸಮದನ್ತಪಂಕ್ತಿ ಲಕ್ಷಣ
“ತಥಾಗತನು ತನ್ನ ಭವಾವಳಿಯ ಹಿಂದಿನ ಜನ್ಮವೊಂದರಲ್ಲಿ ಮನುಷ್ಯನಾಗಿ ಹುಟ್ಟಿ ತನ್ನ ಜೀವನಕ್ಕಾಗಿ ಯಾವ ಕೆಟ್ಟ ಕಸುಬನ್ನೂ ಹಿಡಿಯಲಿಲ್ಲ. ಒಳ್ಳೆಯ ವೃತ್ತಿಯಿಂದಲೇ ತನ್ನ ಜೀವನವನ್ನು ನಡೆಸಿದನು. ತೂಕ ಮಾಡುವುದರಲ್ಲಿ ಅಳಿಯುವುದರಲ್ಲಿ ಮೋಸ ಮಾಡಲಿಲ್ಲ. ಲಂಚ ಪಡೆಯಲಿಲ್ಲ. ವಂಚನೆ ಕಪಟ ಕೃತ್ಯಗಳನ್ನು ಮಾಡಲಿಲ್ಲ. ಅಂಗವಿಚ್ಛೇದನ ವಧೆ ಬಂಧನ ದರೋಡೆ ಕಳ್ಳತನ ಮುಂತಾದ ಹಿಂಸೆಗಳಲ್ಲಿ ತೊಡಗಲಿಲ್ಲ. ಈ ಸತ್ಕರ್ಮಗಳನ್ನು ಬಹು ವಿಪುಲವಾಗಿ ಮಾಡಿದನು. ಇದರಿಂದ ಕಾಯದಿಂದ ಬೇರೆಯಾಗಿ ಮರಣ ಹೊಂದಿದ ಮೇಲೆ ಸ್ವರ್ಗಲೋಕದಲ್ಲಿ ಹುಟ್ಟಿದನು. ಅಲ್ಲಿ ಇತರ ದೇವತೆಗಳಿಗಿಂತ ಹತ್ತು ಸಂಪತ್ತುಗಳನ್ನು ಹೇರಳವಾಗಿ ಪಡೆದನು- ಅವು ಯಾವುವೆಂದರೆ ದೀರ್ಘಾಯಸ್ಸು, ದಿವ್ಯ ವರ್ಣ, ಅತುಳ ಸುಖ, ಅತುಳ ಯಶಸ್ಸು, ಅತುಳವಾದ ಐಶ್ವರ್ಯ, ದಿವ್ಯವಾದ ರೂಪವು, ಅತುಳವಾದ ಶ್ರದ್ಧೆ, ಸುವಾಸನೆಯನ್ನು ಬೀರುವ ದೇಹ, ದಿವ್ಯವಾದ ರುಚಿ, ಉತ್ತಮವಾದ ಸ್ಪರ್ಶ ಸಾಮರ್ಥ್ಯ. ಅಲ್ಲಿಂದ ಚ್ಯುತನಾಗಿ ಇಲ್ಲಿ ಹುಟ್ಟಿದ ಮೇಲೆ ಈ ಎರಡು ಮಹಾಪುರುಷ ಲಕ್ಷಣಗಳನ್ನು ಪಡೆದನು- ಒಂದೇ ಸಮಮಟ್ಟದಲ್ಲಿರುವ ಹಲ್ಲು ಮತ್ತು ಹೊಳೆಯುತ್ತಿರುವ ಹಲ್ಲು.
“ಈ ಲಕ್ಷಣವನ್ನು ಪಡೆದಿರುವವನು ಮನೆಯಲ್ಲಿಯೇ ಉಳಿಯುವವನಾದರೆ ಚಕ್ರವರ್ತಿ ರಾಜನಾಗುತ್ತಾನೆ. ಅವನು ಧಾರ್ಮಿಕನೂ ಧರ್ಮರಾಜನು ನಾಲ್ಕು ದಿಕ್ಕುಗಳನ್ನು ಗೆದ್ದವನೂ ಜನಪದಗಳ ರಕ್ಷಕನೂ ಸಪ್ತ ರತ್ನಗಳನ್ನು ಹೊಂದಿರುವವನೂ ಆಗುತ್ತಾನೆ. ಅವು ಯಾವುವೆಂದರೆ ಚಕ್ರರತ್ನ, ಹಸ್ತಿರತ್ನ, ಅಶ್ವರತ್ನ, ಮಣಿರತ್ನ, ಸ್ತ್ರೀರತ್ನ, ಗೃಹಪತಿ ರತ್ನ ಮತ್ತು ಪರಿಣಾಯಕರತ್ನ. ಶೂರರೂ ವೀರರೂ ಪರಸೇನೆಗಳನ್ನು ಮರ್ದಿಸುವವರೂ ಆದ ಸಹಸ್ರಕ್ಕೂ ಮೀರಿದ ಪುತ್ರರು ಅವನಿಗಿರುತ್ತಾರೆ. ಸಾಗರ ಪರ್ಯಂತವಿರುವ ಈ ಪೃಥ್ವಿಯನ್ನು ಆಳುತ್ತಾನೆ. ಆ ಪೃಥ್ವಿಯು ಬಂಜರು ನೆಲದಿಂದ ಕೂಡಿರುವುದಿಲ್ಲ, ಹಳ್ಳಕೊಳ್ಳಗಳಿಂದಿರುವುದಿಲ್ಲ. ಅದು ಅತಿ ಫಲವತ್ತಾಗಿರುತ್ತದೆ. ಸಂಪದ್ಯುಕ್ತವಾಗಿರುತ್ತದೆ. ಕ್ಷೇಮ ಭದ್ರತೆಗಳು ಅವನ ರಾಜ್ಯದಲ್ಲಿರುತ್ತವೆ. ಯಾವ ಕೊರತೆಯೂ ಇಲ್ಲದ ಅತಿ ಮಂಗಳದಿಂದ ಕೂಡಿರುತ್ತದೆ. ಕಳ್ಳಕಾಕರ ಕಾಟವಿಲ್ಲದ ಆ ರಾಜ್ಯವನ್ನು ಯಾವ ಶಸ್ತ್ರವೂ ಯಾವ ದಂಡವೂ ಇಲ್ಲದೆ ಕೇವಲ ಧಮ್ಮದ ಮೂಲಕವೇ ಸ್ಥಾಪಿಸುತ್ತಾನೆ. ರಾಜನಾಗಿ ಏನನ್ನು ಪಡೆಯುತ್ತಾನೆ? ಅವನ ಪರಿವಾರವು ಸುಚ್ಚಾರಿತ್ರ್ಯವುಳ್ಳದ್ದಾಗಿರುತ್ತದೆ. ಬ್ರಾಹ್ಮಣ ಗೃಹಪತಿಗಳ ಪಟ್ಟಣ ಹಳ್ಳಿಗರ ಲೆಕ್ಕಿಗ ಮಹಾಮಾತ್ಯರ ಅಂಗರಕ್ಷಕರ ದ್ವಾರಪಾಲಕರ ಅಮಾತ್ಯರ ಸಾಮಂತರಾಜರ ಮತ್ತು ಯುವಕರ ಪರಿವಾರವು ಶುದ್ಧವಾಗಿರುತ್ತದೆ. ರಾಜನಾಗಿ ಇಷ್ಟನ್ನು ಪಡೆಯುತ್ತಾನೆ.
“ಅವನು ಮನೆಯನ್ನು ತೊರೆದು ಪಬ್ಬಜಿತನಾದರೆ ಲೋಕದಲ್ಲಿ ಸಮ್ಮಾಸಂಬುದ್ಧನಾದ ಅರಹಂತನಾಗುತ್ತಾನೆ. ಲೋಕವನ್ನು ಆವರಿಸಿರುವ ಅಜ್ಞಾನದ ತೆರೆಯನ್ನು ತೆಗೆದುಹಾಕುತ್ತಾನೆ. ಬುದ್ಧನಾಗಿ ಏನನ್ನು ಪಡೆಯುತ್ತಾನೆ? ಭಿಕ್ಷು ಭಿಕ್ಷುಣಿಯರ ಉಪಾಸಕ ಉಪಾಸಿಕೆಯರ ಶುದ್ಧ ಪರಿವಾರ ಅವನಿಗಿರುತ್ತದೆ. ದೇವತೆಗಳು ಮನುಷ್ಯರು ಅಸುರರು ನಾಗರು ಗಂಧರ್ವರು ಅವನನ್ನು ಅನುಸರಿಸುತ್ತಾರೆ. ಅವರೆಲ್ಲಾ ಚಿತ್ತ ಪರಿಶುದ್ಧರಾಗಿರುತ್ತಾರೆ. ಬುದ್ಧನಾಗಿ ಇಷ್ಟನ್ನು ಪಡೆಯುತ್ತಾನೆ”. ಹೀಗೆಂದು ಭಗವಾನರು ಹೇಳಿದರು.
ಇದಕ್ಕೆ ಸಂಬಂಧಿಸಿದ ಗಾಥೆಯ ಅರ್ಥ ಹೀಗಿದೆ :
“ದುರ್ವೃತ್ತಿಯಿಂದುಂಟಾಗುವ ಮಿಥ್ಯಾ ಜೀವನವನ್ನು ವರ್ಜಿಸಿ ಪರಿಶುದ್ಧವಾದ ಧರ್ಮ ಜೀವನವನ್ನು ನಡೆಸಿ ಅಹಿತವನ್ನುಂಟುಮಾಡುವ ಎಲ್ಲ ಪ್ರವೃತ್ತಿಗಳನ್ನೂ ತ್ಯಜಿಸಿ ಬಹುಜನರ ಹಿತಕ್ಕಾಗಿ ಶ್ರಮಿಸಿದನು. ನಿಪುಣರೂ ಅರಿತವರೂ ಪ್ರಶಂಸಿಸುವ ಸತ್ಕರ್ಮಗಳನ್ನು ಮಾಡಿ ಅವುಗಳ ಸುಖಫಲವನ್ನು ಸ್ವರ್ಗದಲ್ಲಿ ಅನುಭವಿಸಿದನು. ದೇವತೆಗಳ ಪುರದಲ್ಲಿ ದೊರೆಯುವ ಹರ್ಷ ಸುಖಗಳನ್ನು ಆತನು ಅನುಭವಿಸಿದನು. ಅಲ್ಲಿಂದ ಚ್ಯುತನಾದ ಮೇಲೆ ಉಳಿದ ಸುಕೃತ್ಯಗಳು ವಿಪಾಕಹೊಂದಿ ಮನುಷ್ಯನಾಗಿ ಹುಟ್ಟಿದ ಮೇಲೆ ಹೊಳೆಯುವ ಮತ್ತು ಸಮಮಟ್ಟದಲ್ಲಿರುವ ದಂತಪಂಕ್ತಿಗಳನ್ನು ಪಡೆಯುತ್ತಾನೆ. ಪಕ್ಷಿಯೊಂದರ ಗರಿಯಂತೆ ಅವು ಶೋಭಿಸುತ್ತಿರುತ್ತವೆ. ಆಗ ಈ ಲಕ್ಷಣಗಳನ್ನು ಹೊಂದಿರುವವನಿಗೆ ಪರಿಶುದ್ಧ ಜನರ ಪರಿವಾರವಿತ್ತವೆ. ಅವನು ರಾಜನಾದರೆ ಶುದ್ಧ ಮನಸ್ಕರಾದ ಒಂದು ದೊಡ್ಡ ಪರಿವಾರವನ್ನೇ ಹೊಂದಿ, ಈ ಭೂಮಿಯನ್ನು ಆಳುತ್ತಾನೆ. ಜನರಿಗೆ ಯಾವ ಹಿಂಸೆಯೂ ಅವನಿಂದಾಗುವುದಿಲ್ಲ. ಬಹುಜನರಿಗೆ ಹಿತವನ್ನು ಮತ್ತು ಸುಖವನ್ನುಂಟುಮಾಡುತ್ತಾನೆ. ಅವನು ಪಬ್ಬಜಿತನಾದರೆ ಯಾವ ಪಾಪವನ್ನೂ ಮಾಡದೆ ಯಾವ ಕಶ್ಮಲವೂ ಅಂಟಿಕೊಳ್ಳದವನಾಗಿ ಆವರಿಸಿರುವ ಅಜ್ಞಾನದ ಹೊದಿಕೆಯನ್ನು ತೆಗೆದುಹಾಕುತ್ತಾನೆ. ಬಾಧೆಗಳನ್ನು ಕಳೆದುಕೊಂಡ ಆತನು ಈ ಲೋಕವನ್ನು ಪರಲೋಕವನ್ನು ತಿಳಿಯಬಲ್ಲವನಾಗುತ್ತಾನೆ. ಅನೇಕಾನೇಕ ಗೃಹಸ್ಥರೂ, ಪಬ್ಬಜಿತರೂ ಆತನು ಬೋಧಿಸಿದುದನ್ನು ಕೇಳಿ ತಮ್ಮಲ್ಲಿನ ಅಶುಚಿಯನ್ನು ತಮ್ಮಿಂದಾಗುವ ಪಾಪವನ್ನು ವರ್ಜಿಸಿಬಿಡುತ್ತಾರೆ. ಅವನ ಸುತ್ತ ಶುಚಿವಂತರೂ ಕಶ್ಮಲ ಕ್ಲೇಶ ಕೊಳೆ ಕಲೆಗಳನ್ನು ಕಳೆದುಕೊಂಡವರೂ ಆದವರು ಇರುತ್ತಾರೆ.”
ಭಗವಾನರು ಹೀಗೆಂದು ನುಡಿದರು. ಭಗವಾನರ ನುಡಿಯನ್ನು ಕೇಳಿದ ಆ ಭಿಕ್ಷುಗಳು ಆನಂದಗೊಂಡರು, ಸಂತೋಷಪಟ್ಟರು.
ಇಲ್ಲಿಗೆ ಲಕ್ಖಣ ಸುತ್ತ ಮುಗಿಯಿತು.
ಟಿಪ್ಪಣಿಗಳು [2]
English
Việt Ngữ