ಊಟಿಸುತ್ತಿದೆ

ಅನುವಾದಗಳು [23]

ಆಟಾನಾಟಿಯ ಸುತ್ತ

ಮೊದಲ ಭಾಗದ ಪಠಣೆ

ಹೀಗೇ ಕೇಳಿದ್ದೇನೆ;41 ಒಮ್ಮೆ ಭಗವಾನರು ರಾಜಗಹದ ಹತ್ತಿರುವಿರುವ ಗಿಜ್ಝಕೂಟ ಪರ್ವತದಲ್ಲಿ ತಂಗಿದ್ದರು. ಆ ಸಮಯದಲ್ಲಿ ನಾಲ್ಕು ಮಹಾರಾಜ ದೇವತೆಗಳು ಯಕ್ಷ ಸೇನೆ, ಬಹುದೊಡ್ಡ ಗಂಧರ್ವ ಸೇನೆ ಮತ್ತು ಬಹುದೊಡ್ಡ ಕುಂಭಂಡ ಸೇನೆ, ಬಹುದೊಡ್ಡ ನಾಗಸೇನೆಗಳೊಂದಿಗೆ ಭಗವಾನರ ಬಳಿಗೆ ಬಂದರು. ಬರುವಾಗ ನಾಲ್ಕು ದಿಕ್ಕುಗಳಲ್ಲಿಯೂ ರಕ್ಷಣೆಯನ್ನೊದಗಿಸಿ, ನಾಲ್ಕು ದಿಕ್ಕುಗಳಲ್ಲಿಯೂ ಕಾವಲುಗಳನ್ನು ಸ್ಥಾಪಿಸಿ, ನಾಲ್ಕು ಕಡೆಗಳಲ್ಲಿಯೂ ಪಡೆಗಳನ್ನಿಟ್ಟು ಇಡೀ ಗಿಜ್ಝಕೂಟ ಪರ್ವತವನ್ನು ತಮ್ಮ ಕಾಂತಿಯಿಂದ ಬೆಳಗಿಸಿದರು. ಆಗ ರಾತ್ರಿ ಬಹಳ ಹೊತ್ತಾಗಿತ್ತು. ಭಗವಾನರಿಗೆ ಅಭಿನಂದಿಸಿ ಒಂದುಕಡೆ ಕುಳಿತುಕೊಂಡರು. ಕೆಲವು ಯಕ್ಷರು ಭಗವಾನರಿಗೆ ಅಭಿವಂದಿಸಿ ಒಂದುಕಡೆ ಕುಳಿತುಕೊಂಡರು. ಕೆಲವರು ಭಗವಾನರಿಗೆ ಕುಶಲವನ್ನು ಹೇಳಿ ಒಂದುಕಡೆ ಕುಳಿತುಕೊಂಡರು. ಕೆಲವರು ಅಂಜಲೀಬದ್ಧರಾಗಿ ಭಗವಾನರಿಗೆ ಪ್ರಣಾಮ ಮಾಡಿ ಒಂದುಕಡೆ ಕುಳಿತುಕೊಂಡರು. ಕೆಲವರು ತಮ್ಮ ನಾಮ ಗೋತ್ರವನ್ನು ಹೇಳಿಕೊಂಡು ಒಂದುಕಡೆ ಕುಳಿತುಕೊಂಡರು. ಕೆಲವರು ಸುಮ್ಮನೆ ಒಂದುಕಡೆ ಕುಳಿತುಕೊಂಡರು.

ಒಂದುಕಡೆ ಕುಳಿತುಕೊಂಡಿದ್ದ ವೆಸ್ಸವಣ್ಣ42 ಮಹಾರಾಜ ದೇವತೆಯು ಭಗವಾನರನ್ನು ಕುರಿತು ಇಂತೆಂದನು- “ಭಂತೆ, ಭಗವಾನರಲ್ಲಿ ನಂಬಿಕೆಯಿಂದ ಕೆಲವರು ಹಿರಿಯ ಯಕ್ಷರಿದ್ದಾರೆ. ಕೆಲವು ಹಿರಿಯ ಯಕ್ಷ ದೇವತೆಗಳು ಭಗವಾನರಲ್ಲಿ ವಿಶ್ವಾಸವನ್ನಿಟ್ಟಿದ್ದಾರೆ. ಭಗವಾನರಲ್ಲಿ ನಂಬಿಕೆಯಿಲ್ಲದ ಕೆಲವು ಮಧ್ಯಮ ವರ್ಗದ ಯಕ್ಷರಿದ್ದಾರೆ. ಕೆಲವು ಮಧ್ಯಮ ವರ್ಗದ ಯಕ್ಷರು ಭಗವಾನರಲ್ಲಿ ನಂಬಿಕೆಯನ್ನಿಟ್ಟಿದ್ದಾರೆ. ಭಂತೆ, ಭಗವಾನರಲ್ಲಿ ನಂಬಿಕೆಯನ್ನಿಡದ ಕೆಲವು ಕೆಳಗಿನ ದರ್ಜೆಯ ಯಕ್ಷರೂ ಭಗವಾನರಲ್ಲಿ ನಂಬಿಕೆಯುಳ್ಳ ಕೆಳಗಿನ ದರ್ಜೆಯ ಯಕ್ಷರೂ ಇದ್ದಾರೆ. ಅನೇಕ ಯಕ್ಷರು ಬಹುವೇಳೆ ಭಗವಾನರಲ್ಲಿ ನಂಬಿಕೆಯನ್ನಿಟ್ಟಿರುವುದಿಲ್ಲ. ಇದಕ್ಕೇನು ಕಾರಣ? ಭಗವಾನರು ಪ್ರಾಣಿ ಹಿಂಸೆಯನ್ನು ಮಾಡಬಾರದೆಂದು ಬೋಧಿಸುತ್ತಾರೆ. ನೀಡದುದನ್ನು ತೆಗೆದುಕೊಳ್ಳಬಾರದೆಂದು ಬೋಧಿಸುತ್ತಾರೆ. ಅಕ್ರಮವಾದ ಲೈಂಗಿಕ ಸಂಬಂಧವನ್ನು ಹೊಂದಿರಬಾರದೆಂದು ಬೋಧಿಸುತ್ತಾರೆ. ಸುಳ್ಳು ಹೇಳಬಾರದೆಂದು ಬೋಧಿಸುತ್ತಾರೆ. ಮತಿ ಭ್ರಮಣೆಯನ್ನುಂಟು ಮಾಡುವ ಸುರೆ ಮದ್ಯಗಳನ್ನು ಸೇವಿಸಬಾರದೆಂದು ಬೋಧಿಸುತ್ತಾರೆ. ಆದರೆ ಭಂತೆ, ಯಕ್ಷರು ಪ್ರಾಣಿಹಿಂಸೆಯನ್ನು ಮಾಡುವುದನ್ನಾಗಲೀ, ಕೊಡದುದನ್ನು ತೆಗೆದುಕೊಳ್ಳದಿರುವುದನ್ನಾಗಲೀ, ಅಕ್ರಮವಾದ ಲೈಂಗಿಕ ಸಂಬಂಧವಿಟ್ಟುಕೊಳ್ಳುವುದನ್ನಾಗಲೀ, ಸುಳ್ಳು ಹೇಳುವುದನ್ನಾಗಲೀ, ಮತಿಭ್ರಮಣೆಯನ್ನುಂಟು ಮಾಡುವ ಸುರೆ ಮದ್ಯಗಳ ಸೇವನೆಯನ್ನಾಗಲೀ, ಬಹು ಸಮಯ ಬಿಟ್ಟಿರುವುದಿಲ್ಲ. ಅವರಿಗೆ ಹೀಗೆ ಬಿಟ್ಟಿರುವುದು ಅಪ್ರಿಯವಾಗಿರುತ್ತದೆ, ಅದು ಅವರಿಗೆ ಒಪ್ಪಿಗೆಯಾಗುವುದಿಲ್ಲ. ಅರಣ್ಯ ವನಗಳಲ್ಲಿ ಜನರಿಲ್ಲದ ಕಡೆ ಭಗವಾನರ ಶಿಷ್ಯರು ಇರುತ್ತಾರೆ. ಸದ್ದು ಗದ್ದಲವಿಲ್ಲದ ಕಡೆಗಳಲ್ಲಿ ಗಾಳಿ ಮಾತ್ರ ಬೀಸುವೆಡೆಗಳಲ್ಲಿ, ಮನುಷ್ಯರಿಗೆ ಗೊತ್ತಿಲ್ಲದಿರುವೆಡೆಗಳಲ್ಲಿ ಧ್ಯಾನಕ್ಕೆ ಅನುಕೂಲವಾದ ಕಡೆಗಳಲ್ಲಿ ಅವರಿರುತ್ತಾರೆ. ಅಲ್ಲಿ ವಾಸಿಸುವ ಹಿರಿಯ ಯಕ್ಷರನೇಕರಿಗೆ ಭಗವಾನರ ಮಾತಿನಲ್ಲಿ ನಂಬಿಕೆ ಇರುವುದಿಲ್ಲ. ಅವರಿಗೆ ನಂಬಿಕೆಯನ್ನುಂಟುಮಾಡಲು ಭಗವಾನರು ಭಿಕ್ಷುಗಳಿಗೂ, ಭಿಕ್ಷುಣಿಯರಿಗೂ, ಉಪಾಸಕರಿಗೂ, ಉಪಾಸಿಕೆಯರಿಗೂ ರಕ್ಷಣೆ ಕೊಡಬಲ್ಲ ನಿಂದೆಯಿಂದ ದೂರವಿಡಬಲ್ಲ ಅವರಿಗೆ ಭದ್ರತೆಯನ್ನುಂಟು ಮಾಡಬಲ್ಲ ಆಟಾನಾಟಿಯ ಸುತ್ತವನ್ನು ತಿಳಿಸಬೇಕು.” ಭಗವಾನರು ಮೌನದ ಮೂಲಕ ಇದನ್ನು ಒಪ್ಪಿಕೊಂಡರು.43

ಭಗವಾನರು ಒಪ್ಪಿಗೆ ಕೊಟ್ಟಿರುವುದನ್ನು ತಿಳಿದ ವೆಸ್ಸವಣ್ಣ ಮಹಾರಾಜನು ಭಗವಾನರಿಗೆ ರಕ್ಷಣೆಯನ್ನು ಕೊಡುವ ಈ ಆಟಾನಾಟಿಯ ಸುತ್ತವನ್ನು ಹೇಳಿದನು-

“ಒಳಗಣ್ಣನ್ನು ಪಡೆದ ಶ್ರೀಮಂತ ವಿಪಸ್ಸಿಗೆ44 ನಮಸ್ಕಾರ. ಸರ್ವಭೂತಗಳಲ್ಲಿಯೂ ಅನುಕಂಪವನ್ನಿಟ್ಟಿದ್ದ ಸಿಖಿಗೆ ನಮಸ್ಕಾರ.

“ಪರಿಶುದ್ಧವಾದ ತಪಸ್ವಿಯಾದ ವೆಸ್ಸಭೂಗೆ ನಮಸ್ಕಾರ. ಮಾರಸೇನೆಯನ್ನು ಮರ್ದಿಸಿದ ಕಕುಸಂಧನಿಗೆ ನಮಸ್ಕಾರ.

“ಪರಿಶುದ್ಧವಾದ ಮತಿಯನ್ನುಳ್ಳ ಶ್ರೇಷ್ಠನಾದ ಕೋಣಾಗಮನನಿಗೆ ನಮಸ್ಕಾರ. ಎಲ್ಲ ನೋವುಗಳಿಂದಲೂ ಮುಕ್ತನಾದ ಕಸ್ಸಪನಿಗೆ ನಮಸ್ಕಾರ. ಎಲ್ಲ ದುಃಖವನ್ನು ಪರಿಹರಿಸಬಲ್ಲ ಧಮ್ಮವನ್ನು ಬೋಧಿಸಿರುವ ಶಾಕ್ಯಪುತ್ರ ಅಂಗೀರಸನಿಗೆ ನಮಸ್ಕಾರ.

“ಲೋಕದ ಬಾಧೆಗಳಿಂದ ದೂರರಾಗಿ ಸತ್ಯವನ್ನು ತಿಳಿದ ಮೃದುಭಾಷಿಗಳಾದ ಶ್ರೇಷ್ಠರಾದ ಪರಿಶುದ್ಧರಾದವರಿಂದ ನಮಸ್ಕರಿಸಿಕೊಳ್ಳುವ, ಸಮರ್ಥನಾದ ಪರಿಶುದ್ಧನಾದ ದೇವತೆಗಳ ಮತ್ತು ಮನುಷ್ಯರ ಹಿತವನ್ನು ಸಾಧಿಸುವ ವಿಜ್ಜಾಚರಣ ಸಂಪನ್ನನಾದ ಗೌತಮನಿಗೆ ನಮಸ್ಕಾರ.

“ಆದಿತ್ಯರ ಗುಂಪಿನನಾದ ಹುಟ್ಟುತ್ತಿರುವಾಗಲೇ ಅತಿಯಾದ ತೇಜಸ್ಸನ್ನುಳ್ಳ ರಾತ್ರಿಯನ್ನು ಹೋಗಲಾಡಿಸುವ ಸೂರ್ಯನನ್ನು ನೋಡಿ ಇದು ಹಗಲು ಎಂದು ಹೇಳುತ್ತಾನೆ.

“ಗಂಭೀರವಾಗಿರುವ ನೀರಿನ ಆಗರವೇ ಆಗಿರುವ ಸಮುದ್ರವನ್ನು ನೋಡಿ ಇದು ನೀರಿನ ಆಗರವೇ ಆಗಿದೆ ಎಂದು ಹೇಳುತ್ತಾರೆ.

“ಜನರು ಸುತ್ತ ನೋಡಿ ಇದು ಪೂರ್ವ ಎಂದು ಹೇಳುತ್ತಾರೆ. ಇದನ್ನು ಯಶಸ್ವಿಯಾದ ಒಬ್ಬ ಮಹಾರಾಜನು ಪರಿಪಾಲಿಸುತ್ತಿದ್ದಾನೆ.

“ಅವನು ಗಂಧರ್ವರ ಅಧಿಪತಿಯಾದ ಧತರಟ್ಠ. ಈ ದೇವತೆ ಗಂಧರ್ವರ ನೃತ್ಯ ಗೀತೆಗಳ ಆನಂದವನ್ನು ಅನುಭವಿಸುತ್ತಾ ಪೂರ್ವ ದಿಕ್ಕಿನಲ್ಲಿರುತ್ತಾನೆ.

“ಬಹುಸಂಖ್ಯೆಯ ಪುತ್ರರಿರುವವನು ಅವನು. ಇಂದ್ರ ಎಂಬ ಹೆಸರಿನಿಂದ ಅವರೆಲ್ಲರನ್ನು ಕರೆಯುತ್ತಾನೆ. ಅವರ ಸಂಖ್ಯೆಯು ತೊಂಬತ್ತು. ಅವರೆಲ್ಲರೂ ಮಹಾಬಲರು.

“ಅವರೆಲ್ಲರೂ ಬುದ್ಧನನ್ನು ನೋಡಿ ‘ಪುರುಷ ಶ್ರೇಷ್ಠನೇ, ನಮಸ್ಕಾರ, ಪುರುಷೋತ್ತಮನೇ ನಮಸ್ಕಾರ, ದೇವತೆಗಳಿಂದ ನಮಸ್ಕರಿಸಿಕೊಳ್ಳುವ ನಿನಗೆ ನಮಸ್ಕಾರ’ ಎಂದು ವಂದಿಸುತ್ತಾರೆ.

“ಯಾವಾಗಲೂ ಕುಶಲವನ್ನೇ ಮಾಡುವ ಜಿನನಾದವನನ್ನು ವಂದಿಸುತ್ತೀರಾ? ಎಂದು ಕೇಳುತ್ತಾರೆ. ಅದುದರಿಂದ ಈಗಲೇ ವಂದಿಸುತ್ತೇವೆ. ವಿಜ್ಜಾಚರಣನಾದ ನಿನ್ನನ್ನು ವಂದಿಸುತ್ತೇವೆ.

“ಚಾಡಿಯನ್ನು ಹೇಳಿ, ಕೊಲೆಗಳನ್ನು ಮಾಡಿ, ಮಾಂಸದಿಂದಲೇ ಬದುಕಿ, ಕಳ್ಳರಾಗಿ, ಮೋಸಗಾರರಾಗಿ, ದರೋಡೆಕೋರರಾಗಿ, ಬದುಕಿದ ಜನರು ಪ್ರೇತರಾಗುತ್ತಾರೆ.45 ಅವರು ವಾಸಿಸುವುದು ದಕ್ಷಿಣ ದಿಕ್ಕಿನಲ್ಲಿ. ಅದನ್ನು ಯಶಸ್ವಿಯಾಗಿ ಪಾಲಿಸುತ್ತಿರುವ ಮಹಾರಾಜನು ಕುಂಭಂಡರ ಅಧಿಪತಿ. ಅವನು ಕುಂಭಂಡ ದೇವತೆಗಳ ನೃತ್ಯ ಗೀತೆಗಳಿಂದ ಸಂತೋಷಪಡುತ್ತಾನೆ. ಅವನೇ ವೇರುಳ್ಹ.

“ಅವನು ಬಹು ಪುತ್ರವಂತ. ಅವರಿಗೆಲ್ಲಾ ಒಂದೇ ಹೆಸರು. ಅದು ಇಂದ. ಅವರ ಸಂಖ್ಯೆ ತೊಂಬತ್ತು. ಅವರೆಲ್ಲಾ ಮಹಾಬಲರು.

“ಅವರೆಲ್ಲರೂ ಆದಿತ್ಯ ಬಂಧುವಾದ ಬುದ್ಧನನ್ನು ನೋಡಿ ದೂರದಿಂದಲೇ ನಮಸ್ಕರಿಸುತ್ತಾರೆ. ಅವರೆಲ್ಲರೂ ಸಮರ್ಥನೂ ಶಕ್ತಿವಂತನು ಆದವನನ್ನು ಹೀಗೆ ಸ್ತುತಿಸುತ್ತಾರೆ:

“ಪುರುಷ ಶ್ರೇಷ್ಠನಿಗೆ ನಮಸ್ಕಾರ, ಪುರುಷೋತ್ತಮನಿಗೆ ನಮಸ್ಕಾರ. ದೇವತೆಗಳೇ ನಿನಗೆ ನಮಸ್ಕಾರ ಮಾಡುತ್ತಾರೆ. ‘ಯಾವಾಗಲೂ ಕುಶಲವಾದುದನ್ನೇ ಮಾಡುವ ಜಿನನನ್ನು ವಂದಿಸುತ್ತೀರಾ’ ಎಂದು ಕೇಳುತ್ತಾರೆ. ಆದುದರಿಂದ ನಾವೂ ಈಗಲೇ ನಮಸ್ಕರಿಸುತ್ತೇವೆ.

“ಜಿನನಾದ ಗೋತಮನನ್ನು ವಂದಿಸುತ್ತೇವೆ. ವಿಜ್ಜಾಚರಣ ಸಂಪನ್ನನಾದ ಗೋತಮನನ್ನು ವಂದಿಸುತ್ತೇವೆ.

“ಮಹತ್ತನ್ನುಳ್ಳ ಆದಿತ್ಯರ ಗುಂಪಿನವರಾದ ಮುಳುಗುತ್ತಿರುವಾಗ ಬೆಳಕು ಸರಿದಂತೆ ಮಾಡುವ ಸೂರ್ಯನನ್ನು ನೋಡಿ ಇದು ರಾತ್ರಿ ಎಂದು ಹೇಳುತ್ತಾರೆ.

“ಗಂಭೀರವಾದ ನೀರಿನ ಆಗರವೇ ಆಗಿರುವ ಸಮುದ್ರವನ್ನು ನೋಡಿ ಇದು ನೀರಿನ ಆಗರ’ ಎಂದು ಜನರು ಹೇಳುತ್ತಾರೆ.

“ಇದು ಪಶ್ಚಿಮ ದಿಕ್ಕು ಎಂದು ಜನರು ಹೇಳುವ ದಿಕ್ಕಿನಲ್ಲಿ ಯಶಸ್ವಿಯಾದ ಮಹಾರಾಜನು ಆಳುತ್ತಿದ್ದಾನೆ. ವಿರೂಪಕ್ಖನೆಂಬ ಅವನು ನಾಗರ ಅಧಿಪತಿಯಾಗಿದ್ದಾನೆ. ನಾಗರ ನೃತ್ಯ ಗೀತೆಗಳಿಂದ ಅವನು ಸಂತೋಷಪಡುತ್ತಾನೆ.

“ಅವನು ಬಹುಪುತ್ರವಂತ, ತೊಂಬತ್ತು ಸಂಖ್ಯೆಯ ಅವರಿಗೆಲ್ಲಾ ಒಂದೇ ಹೆಸರಿದೆ. ಅದು ಇಂದ. ಅವರೆಲ್ಲರೂ ಮಹಾಬಲರೇ.

“ಆದಿತ್ಯ ಬಂಧುವಾದ ಬುದ್ಧನನ್ನು ನೋಡಿ ಮಹತ್ತನ್ನು ಹೊಂದಿರುವವನೂ ಸಮರ್ಥನೂ ಆದ ಆತನನ್ನು ದೂರದಿಂದ ಸ್ತುತಿಸುತ್ತಾರೆ. ‘ಪುರುಷ ಶ್ರೇಷ್ಠನಿಗೆ ನಮಸ್ಕಾರ, ಪುರುಷೋತ್ತಮನಿಗೆ ನಮಸ್ಕಾರ, ದೇವತೆಗಳಿಂದ ವಂದಿಸಿಕೊಳ್ಳುವವನಿಗೆ ನಮಸ್ಕಾರ. ‘ಯಾವಾಗಲೂ ಕುಶಲವನ್ನೇ ಮಾಡುವ ಆ ಜಿನನನ್ನು ವಂದಿಸುತ್ತೀರಾ?’ ಎಂದು ಕೇಳುತ್ತಾರೆ. ಆದುದರಿಂದ ಈಗಲೇ ಜಿನನನ್ನು ವಂದಿಸುತ್ತೇವೆ. ವಿಜ್ಜಾಚರಣನಾದ ಬುದ್ಧನನ್ನು ವಂದಿಸುತ್ತೇವೆ.

“ಉತ್ತರ ಕುರುವಿನಲ್ಲಿ ಸುಂದರವಾದ ಮಹಾನೇರು ಪರ್ವತವಿದೆ. ಅಲ್ಲಿರುವ ಜನರೆಲ್ಲಾ ಅಪರಿಗ್ರಹರು. ತಮ್ಮದಾವುದೂ ಇಲ್ಲ ಎಂದು ತಿಳಿದುಕೊಂಡಿರುವವರು.46 ಅಲ್ಲಿ ಬೀಜವನ್ನು ಬಿತ್ತುವುದಿಲ್ಲ, ಭೂಮಿಯನ್ನು ಉಳುವುದಿಲ್ಲ. ಗಿಡದಲ್ಲಿಯೇ ಪಕ್ವವಾದ ನೆಲ್ಲನ್ನು ಅವರು ತಿನ್ನುತ್ತಾರೆ.

“ಅಲ್ಲಿ ಬೆಳೆಯುವ ಅಕ್ಕಿಯಾದರೋ ನುಚ್ಚಾಗಿರುವುದಿಲ್ಲ. ಸುಗಂಧಪೂರಿತವಾಗಿರುತ್ತದೆ. ಹೊಟ್ಟೇ ಇರುವುದಿಲ್ಲ. ಅದನ್ನು ಒಲೆಯ ಮೇಲೆ ಇಟ್ಟು ಬೇಯಿಸಿ ಜನರು ತಿನ್ನುತ್ತಾರೆ.

“ಹಸುಗಳನ್ನೂ ಇತರ ಪ್ರಾಣಿಗಳನ್ನೂ ಅವರು ವಾಹನ ಮಾಡಿಕೊಳ್ಳುತ್ತಾರೆ. ಒಂದು ಪ್ರಾಣಿಯ ಮೇಲೆ ಒಬ್ಬರೇ ಕೂರುತ್ತಾರೆ. ಅವರ ಸ್ತ್ರೀಯರೂ ಕುಮಾರರೂ ಕುಮಾರಿಯರೂ ಇದೇ ವಾಹನದ ಮೇಲೆ ಎಲ್ಲಕಡೆಗೂ ಹೋಗುತ್ತಾರೆ. ಅವರೆಲ್ಲರೂ ರಾಜನ ಭಂಟರಾಗಿರುತ್ತಾರೆ.

“ಆನೆ ಕುದುರೆ ಮುಂತಾದ ದಿವ್ಯವಾದ ವಾಹನಗಳೂ ಪಲ್ಲಕ್ಕಿಗಳೂ ಯಶಸ್ವಿಯಾದ ಆ ಮಹಾರಾಜನಿಗೂ ಅವನ ಸೇವಕರಿಗೂ ಇರುತ್ತವೆ. ಅವನಿಗೆ ನಗರಗಳಿರುತ್ತವೆ. ಅವೆಲ್ಲವನ್ನು ಅಂತರಿಕ್ಷದಲ್ಲಿಯೇ ಕಟ್ಟಿರುತ್ತಾರೆ. ಅವುಗಳ ಹೆಸರು ಆಟಾನಾಟ ಕುಸುನಾಟ ಪರಕುಸೀನಾಟ ಮತ್ತು ನಾಟಪುರಿಯ. ಉತ್ತರದಲ್ಲಿ ಕಸಿವಂತನಗರವೂ ಜನೋಘರು ನವನ ಪುತಿಯ ಅಂಬರ ಅಂಬರಾವತಿಯ47 ಎಂಬ ನಗರಗಳೂ ಅವನಿಗೆ ಸೇರಿರುತ್ತದೆ. ಅಳಕಮಂದವು ಅವನ ರಾಜಧಾನಿಯಾಗಿರುತ್ತದೆ.

“ಕುವೇರ ಮಹಾರಾಜನಿಗೆ ವಿಸಣ ಎಂಬುದು ರಾಜಧಾನಿಯಾಗಿರುತ್ತದೆ. ಆದದುರಿಂದ ಅವನಿಗೆ ವೆಸ್ಸವಣ್ಣನೆಂದು ಹೆಸರು ಬಂದಿದೆ.

“ತತೋಲ ತತ್ತಲಾ ತತೋತಲ ಓಜಸಿ ತೇಜಸಿ ತತೋಜಸಿ ರಾಜಸೂರ ಅರಿಟ್ಠನೇಮಿ ಎಂಬುವರು ಅವನ ದೂತರಾಗಿದ್ದು ಅವನ ಕೀರ್ತಿಯನ್ನು ಎಲ್ಲಕಡೆಗೂ ಹರಡುತ್ತಾರೆ.

“ಧರಣೀ ಎಂಬ ಹೊಳೆಯು ಅಲ್ಲಿ ಹರಿಯುತ್ತದೆ. ಅವುಗಳ ಮೇಲೆ ಮಳೆಯು ಸಕಾಲದಲ್ಲಿ ಬೀಳುತ್ತದೆ. ಅಲ್ಲಿ ಸಾಲವತೀ ಎಂಬ ಸಭಾಭವನವಿರುತ್ತದೆ.

“ಯಕ್ಷಕರು ಆ ಭವನದಲ್ಲಿ ಸೇರುತ್ತಾರೆ. ಅದರ ಹತ್ತಿರ ಸದಾ ಫಲವನ್ನು ಬಿಡುವ ಮರಗಳಿರುತ್ತವೆ. ಮಯೂರ ಕ್ರೌಂಚ ಕೋಕಿಲ ಮುಂತಾದ ಪಕ್ಷಿಗಳ ಮಧುರ ಸ್ವರದಿಂದ ಆ ಪ್ರದೇಶವು ಕೂಡಿರುತ್ತದೆ.

“ಅಲ್ಲಿ ಜೀವ ಎಂಬ ಪಕ್ಷಿಯು ‘ಚೆನ್ನಾಗಿ ಬಾಳಿ’ ಎಂದು ಕೂಗಿಕೊಳ್ಳುತ್ತಿರುತ್ತದೆ. ಕುಕ್ಕುಲಕ ಕುಳಿರಕ ಮೊಕ್ಖರ ಸಾಕಶುಕ ಸಾಳಿಕ ದಂಡ ಮಾಣವಿಕೆ ಪಕ್ಷಿಗಳ ಸ್ವರದಿಂದ ಕುವೇರನ ರಾಜಧಾನಿಯು ಸದಾ ಶೋಭಿಸುತ್ತಿರುತ್ತದೆ. ಸುಂದರವಾದ ಕೊಳವು ಆ ರಾಜಧಾನಿಗಿರುತ್ತದೆ.

“ಇದೇ ಉತ್ತರ ದಿಕ್ಕು ಎಂದು ಯಾವುದನ್ನು ಜನರು ಕರೆಯುತ್ತಾರೋ ಅದನ್ನು ಆ ಯಶಸ್ವಿಯಾಗದ ಮಹಾರಾಜರು ಪಾಲಿಸುತ್ತಿರುತ್ತಾನೆ. ಯಕ್ಷರ ಅಧಿಪತಿಯಾದ ಕುವೇರ ರಾಜನು ಯಕ್ಷರ ನೃತ್ಯಗೀತೆಗಳಿಂದ ಸಂತೋಷಪಡುತ್ತಿರುತ್ತಾನೆ.

“ಬಹುಪುತ್ರವಂತನಾದ ಅವನಿಗೆ ತೊಂಬತ್ತು ಮಕ್ಕಳಿರುತ್ತಾರೆ. ಅವರಿಗೆಲ್ಲಾ ಇಂದ ಎಂಬ ಒಂದೇ ಹೆಸರಿರುತ್ತದೆ. ಅವರೆಲ್ಲರೂ ಮಹಾಬಲರೇ ಆಗಿರುತ್ತಾರೆ.

“ಸಮರ್ಥನೂ ಶ್ರೇಷ್ಠನೂ ಆದ ಆದಿತ್ಯ ಬಂಧು ಬುದ್ಧನನ್ನು ಅವರು ನೋಡಿ ದೂರದಿಂದ ಅವನಿಗೆ ನಮಸ್ಕರಿಸುತ್ತಾರೆ.

“ಪುರುಷ ಶ್ರೇಷ್ಠನಿಗೆ ನಮಸ್ಕಾರ, ಪುರುಷೋತ್ತಮನಿಗೆ ನಮಸ್ಕಾರ, ದೇವತೆಗಳಿಂದ ವಂದಿಸಿಕೊಳ್ಳುವವನಿಗೆ ನಮಸ್ಕಾರ’ ಎಂದು ವಂದಿಸುತ್ತಾರೆ. ‘ಯಾವಾಗಲೂ ಕುಶಲವನ್ನೇ ಮಾಡುವ ಜಿನನಿಗೆ ನೀವು ನಮಸ್ಕರಿಸುತ್ತೀರಾ?’ ಎಂದು ನಮ್ಮನ್ನು ಕೇಳುತ್ತಾರೆ. ಆದುದರಿಂದ ಈಗಲೇ ಜಿನನಾದ ಗೋತಮನಿಗೆ ವಂದಿಸುತ್ತೇವೆ. ವಿಜ್ಜಾಚರಣ ಸಂಪನ್ನನಾದ ಗೋತಮ ಬುದ್ಧನಿಗೆ ವಂದಿಸುತ್ತೇವೆ.

“ಪೂಜ್ಯರೇ, ಭಿಕ್ಷುಗಳ ಭಿಕ್ಷುಣಿಯರ ಉಪಾಸಕರ ಉಪಾಸಿಕೆಯರ ರಕ್ಷಣೆಯು ಈ ಆಟಾನಾಟಿಯ ಸುತ್ತವೇ ಆಗಿದೆ. ಇದು ಅವರೆಲ್ಲರಿಗೂ ಭದ್ರತೆ ರಕ್ಷಣೆ ಕೊಡುತ್ತದೆ. ಕೇಡನ್ನು ತಪ್ಪಿಸುತ್ತದೆ.

“ಪೂಜ್ಯರೇ, ಇದನ್ನು ಚೆನ್ನಾಗಿ ಕಂಠಪಾಠ ಮಾಡಿ ಅರ್ಥವನ್ನು ಗ್ರಹಿಸುವ ಭಿಕ್ಷು ಅಥವಾ ಭಿಕ್ಷುಣಿ, ಉಪಾಸಕ ಅಥವಾ ಉಪಾಸಿಕೆಯು ಸಮರ್ಥರಾಗುತ್ತಾರೆ. ಅವರಾರನ್ನೂ ದೇವತೆಯಾಗಲೀ, ಯಕ್ಷನೇ ಆಗಲೀ, ಯಕ್ಷಿಯೇ ಆಗಲೀ, ಯಕ್ಷ ಪ್ರೇತವೇ ಆಗಲೀ, ಯಕ್ಷಿಯ ಪ್ರೇತವೇ ಆಗಲೀ, ಯಕ್ಷ ಪ್ರಮುಖನಾಗಲೀ, ಅಧಿಕಾರೀ ಯಕ್ಷನಾಗಲೀ, ಭಂಟ ಯಕ್ಷನಾಗಲೀ, ಗಂಧರ್ವನಾಗಲೀ, ಗಂಧರ್ವೆಯಾಗಲೀ, ಗಂಧರ್ವ ಪ್ರೇತವೇ ಆಗಲೀ, ಗಂಧರ್ವೆಯ ಪ್ರೇತವೇ ಆಗಲೀ, ಗಂಧರ್ವ ಪ್ರಮುಖನಾಗಲೀ, ಅಧಿಕಾರೀ ಗಂಧರ್ವನಾಗಲೀ, ಸೇವಕ ಗಂಧರ್ವನಾಗಲೀ, ಕುಂಭಂಡನಾಗಲೀ, ಭಂಟ ಕುಂಭಂಡನಾಗಲೀ, ನಾಗನಾಗಲೀ, ನಾಗಿಣಿಯಾಗಲೀ, ನಾಗಪ್ರೇತನಾಗಲೀ, ನಾಗಿಣಿ ಪ್ರೇತವಾಗಲೀ, ನಾಗ ಪ್ರಮುಖನಾಗಲೀ, ಅಧಿಕಾರಿ ನಾಗನಾಗಲೀ, ಭಂಟ ನಾಗನಾಗಲೀ, ಪೀಡಿಸುವುದಿಲ್ಲ. ಹೋಗುತ್ತಿರುವವರ ಕುಳಿತಿರುವವರ ಮಲಗಿರುವವರ ಬಳಿಗೆ ಕೆಟ್ಟ ಮನಸ್ಸಿನಿಂದ ಹೋಗುವುದಿಲ್ಲ. ಹಾಗೆ ಹೋದರೆ, ಪೂಜ್ಯರೇ, ಅಂಥ ದೇವತೆಯು ಗ್ರಾಮದಲ್ಲಾಗಲೀ, ಪಟ್ಟಣದಲ್ಲಾಗಲೀ ಸತ್ಕಾರವನ್ನಾಗಲೀ, ಗೌರವವನ್ನಾಗಲೀ ಪಡೆಯುವುದಿಲ್ಲ. ಅಂಥ ದೇವತೆಯು ಅಳಕ ಮಂದರಾದ ರಾಜಧಾನಿಯಲ್ಲಿ ಇರುವುದಕ್ಕೆ ಮನೆಯನ್ನಾಗಲೀ, ವಾಸಿಸುವುದಕ್ಕೆ ಬೇರೊಂದೆಡೆಯನ್ನಾಗಲೀ ಪಡೆಯುವುದಿಲ್ಲ. ಪೂಜ್ಯರೇ, ಅಂಥ ದೇವತೆಯು ಯಕ್ಷರ ಸಭೆಗೆ ಹೋಗಲಾರ. ಅಂಥವನಿಗೆ ವಿವಾಹ ಸಂಬಂಧ ಸಿಕ್ಕುವುದಿಲ್ಲ, ಅಂಥ ದೇವತೆಯು ತಮ್ಮನ್ನು ತಾವೇ ನಿಂದಿಸಿಕೊಳ್ಳುವವರಾಗುತ್ತಾರೆ. ಅಂಥ ದೇವತೆಯನ್ನು ಬರೀ ಪಾತ್ರೆಯನ್ನು ಬಗ್ಗಿಸುವಂತೆ ಬಗ್ಗಿಸಿಬಿಡುತ್ತಾರೆ. ಅವನ ತಲೆಯನ್ನು ಒಡೆದು ಏಳು ಸೀಳು ಮಾಡಿಬಿಡುತ್ತಾರೆ.

“ಪೂಜ್ಯರೇ, ಚಂಡರೂ, ರುದ್ರರೂ, ಹಿಂಸಿಸುವವರೂ ಆದ ಕೆಟ್ಟ ದೇವತೆಗಳಿದ್ದಾರೆ. ಅವರು ಮಹಾರಾಜ ದೇವತೆಗಳಿಗಾಗಲೀ, ಅವರ ಅಧಿಕಾರಿಗಳಿಗಾಗಲೀ ಅಥವಾ ಮಹಾರಾಜ ದೇವತೆಗಳ ಭಂಟರಿಗಾಗಲೀ ವಿಧೇಯರಾಗಿರುವುದಿಲ್ಲ. ಅವರು ಮಹಾರಾಜನ ದೇವತೆಗಳ ವಿರೋಧಿಗಳಾದ ದಂಗೆಕೋರರೇ ಆಗಿರುತ್ತಾರೆ. ಮಗಧದ ರಾಜನು ಜಯಿಸಿದ ಮಹಾ ಚೋರರಂತೆ ಅವರಿರುತ್ತಾರೆ. ಆ ಚೋರರು ಮಗಧದ ರಾಜನ ಅಥವಾ ಅವನ ಅಧಿಕಾರಿಗಳ ಅಥವಾ ಅವನ ಭಂಟರ ಆಜ್ಞೆಯನ್ನು ಧಿಕ್ಕರಿಸುವಂತೆ ಆ ಕೆಟ್ಟ ದೇವತೆಗಳೂ ಚಂಡರೂ ರುದ್ರರು ಹಿಂಸಿಕರೂ ಆಗಿ ಮಹಾರಾಜ ದೇವತೆಗಳ ಅಥವಾ ಅವರ ಅಧಿಕಾರಿ ದೇವತೆಗಳ ಅಥವಾ ಅವರ ಭಂತರ ಮಾತನ್ನು ಧಿಕ್ಕರಿಸುತ್ತಾರೆ. ಇವರೇ ಮಹಾರಾಜನ ವಿರುದ್ಧವಿರುವ ದಂಗೆಕೋರರು. ಪೂಜ್ಯರೇ, ಯಾವನಾದರೋ ಯಕ್ಷನಾಗಲೀ... ಯಕ್ಷಿಯಾಗಲೀ... ಗಂಧರ್ವನಾಗಲೀ... ಗಂಧರ್ವೆಯಾಗಲೀ... ಕುಂಭಂಡನಾಗಲೀ... ಕುಂಭಂಡೆಯಾಗಲೀ... ನಾಗನಾಗಲೀ ನಾಗಿಣಿಯಾಗಲೀ, ನಾಗಪ್ರೇತವೇ ಆಗಲಿ, ನಾಗಿಣಿ ಪ್ರೇತವೇ ಆಗಲಿ, ಅಧಿಕಾರಿ ನಾಗನಾಗಲೀ, ಭಂಟನಾಗನಾಗಲೀ, ದುಷ್ಟ ಭಾವನೆಯಿಂದ ನಡೆಯುತ್ತಿರುವ ಕುಳಿತಿರುವ ಮಲಗಿರುವ ಭಿಕ್ಷುವನ್ನಾಗಲೀ, ಭಿಕ್ಷುಣಿಯನ್ನಾಗಲೀ, ಉಪಾಸಕ ಉಪಾಸಿಕೆಯನ್ನಾಗಲೀ, ದುಷ್ಟ ಭಾವನೆಯಿಂದ ಸಮೀಪಿಸಿದರೆ ಹಾಗೆ ಪೀಡಿಸಲ್ಪಟ್ಟವರು ಯಕ್ಷ ಪ್ರಮುಖನಿಗೋ, ಸೇನಾಪತಿಗೋ ಮಹಾ ಸೇನಾಪತಿಗೋ ಅಬ್ಬರಿಸಬೇಕು, ಅರಿಚಿಕೊಳ್ಳಬೇಕು, ಕಿರಿಚಿಕೊಳ್ಳಬೇಕು- ‘ಈ ಯಕ್ಷನು ನನ್ನನ್ನು ಹಿಡಿದುಕೊಂಡಿದ್ದಾನೆ, ಈ ಯಕ್ಷನು ಬಾಧಿಸುತ್ತಿದ್ದಾನೆ, ಈ ಯಕ್ಷನು ಪೀಡಿಡುತ್ತಿದ್ದಾನೆ, ಈ ಯಕ್ಷನು ನೋಯಿಸುತ್ತಿದ್ದಾನೆ, ಈ ಯಕ್ಷನು ಹಿಂಸಿಸುತ್ತಿದ್ದಾನೆ, ಈ ಯಕ್ಷನು ಅತಿ ಹಿಂಸೆಯನ್ನು ಕೊಡುತ್ತಿದ್ದಾನೆ, ಇವನು ನನ್ನನ್ನು ಬಿಡುತ್ತಿಲ್ಲ’.

“ಯಕ್ಷ ಪ್ರಮುಖರೂ ಸೇನಾಪತಿಗಳೂ ಮಹಾಸೇನಾಪತಿಗಳೂ ಯಾರು ?

“ಇಂದ ಸೋಮ ವರುಣ ಭಾರದ್ವಾಜ ಪಜಾಪಿತ ಚಂದನ ಕಾಮಸೆಟ್ಠ ಕಿನ್ನ ಘಂಡು ನಿಘಂಡು ಪನಾದ ಓಪಮಞ್ಞಂ ದೇವಸುತ ಮಾತಲಿ ಚಿತ್ತ ಸೇನ ಗಂಧಬ್ಬ ನಳರಾಜ ಜನೇಸಬಿ ಸಾತಗಿರಿ ಹೇಮವತ ಪುಣ್ಣಕ ಕರತಿಯ ಗುಳ ಸಿವಕ ಮಾಚಲಿಂದಜ ವೇಸ್ಸಮಿತ್ತ ಯುಗಂಧರ ಗೋಪಾಲ ಸುಪ್ಪ ರೋಧ ಹಿರಿನೇತ್ತಿ ಮಂದಿಯ ಸಂಚಾಲ ಚಂಡ ಅಳವಕ ಪಜ್ಜುನ್ನು ಸಮನ ಸುಮುಖ ದಧಿಮಖ ಮಣಿ ಮಣಿವರ ದೀಘ ಸೇರೀಸಕ - ಇವರೆಲ್ಲರೂ ಯಕ್ಷ ಪ್ರಮುಖರು ಸೇನಾಪತಿಗಳು ಮಹಾಸೇನಾಪತಿಗಳು. ಇವನ್ನು ಕುರಿತು ಅಬ್ಬರಿಸಬೇಕು, ಕಿರಿಚಿಕೊಳ್ಳಬೇಕು ಅರಿಚಿಕೊಳ್ಳಬೇಕು- ‘ಈ ಯಕ್ಷನು ನನ್ನನ್ನು ಹಿಡಿದುಕೊಂಡಿದ್ದಾನೆ, ಈ ಯಕ್ಷನು ಬಾಧಿಸುತ್ತಿದ್ದಾನೆ, ಈ ಯಕ್ಷನು ಪೀಡಿಸುತ್ತಿದ್ದಾನೆ, ಈ ಯಕ್ಷನು ನೋಯಿಸುತ್ತಿದ್ದಾನೆ, ಈ ಯಕ್ಷನು ಹಿಂಸಿಸುತ್ತಿದ್ದಾನೆ, ಈ ಯಕ್ಷನು ಅತಿ ಹಿಂಸೆಯನ್ನು ಕೊಡುತ್ತಿದ್ದಾನೆ, ಇವನು ನನ್ನನ್ನು ಬಿಡುತ್ತಿಲ್ಲ’.

“ಪೂಜ್ಯರೇ, ಈ ಆಟಾನಾಟಿಯ ಸುತ್ತವು ಭಿಕ್ಷುಗಳ ಭಿಕ್ಷುಣಿಯರ ಉಪಾಸಕರ ಉಪಾಸಿಕೆಯರ ರಕ್ಷಣೆಯಾಗಿದೆ. ಅವರಿಗೆ ಭದ್ರತೆ ರಕ್ಷಣೆಗಳನ್ನು ಕೊಡುತ್ತದೆ, ಕೇಡನ್ನು ತಪ್ಪಿಸುತ್ತದೆ. ಪೂಜ್ಯರೇ, ನಾವಿನ್ನು ಹೋಗುತ್ತೇವೆ, ಮಾಡಲು ಬಹಳ ಕೆಲಸವಿದೆ.”

“ನಿಮಗೆ ಸೂಕ್ತ ತೋರಿದಂತೆ ಮಾಡಬಹುದು.”

ಆನಂತರ ಆ ನಾಲ್ಕು ಮಹಾರಾಜ ದೇವತೆಗಳು ತಮ್ಮ ಆಸನಗಳಿಂದ ಎದ್ದು ಭಗವಾನರಿಗೆ ಅಭಿವಂದಿಸಿ ಪ್ರದಕ್ಷಿಣೆ ಮಾಡಿ ಅಲ್ಲಿಂದ ಅಂತರ್ಧಾನರಾದರು. ಹಾಗೆಯೇ ಕೆಲವು ಯಕ್ಷರೂ ತಮ್ಮ ಆಸನಗಳಿಂದ ಎದ್ದು ಭಗವಾನರಿಗೆ ಅಭಿವಂದಿಸಿ ಪ್ರದಕ್ಷಿಣೆ ಮಾಡಿ ಅಂತರ್ಧಾನರಾದರು. ಮತ್ತೆ ಕೆಲವು ಯಕ್ಷರು ಭಗವಾನರಿಗೆ ಕುಶಲ ಹೇಳಿ ಅಂತರ್ಧಾನರಾದರು. ಮತ್ತೆ ಕೆಲವರು ಅಂಜಲೀಬದ್ಧರಾಗಿ ಪ್ರಣಾಮವನ್ನು ಮಾಡಿ, ಅಲ್ಲಿಂದ ಅಂತರ್ಧಾನರಾದರು. ಮತ್ತೆ ಕೆಲವರು ತಮ್ಮ ಹೆಸರು, ಗೋತ್ರಗಳನ್ನು ಹೇಳಿ ಅಲ್ಲಿಂದ ಅಂತರ್ಧಾನರಾದರು. ಮತ್ತೆ ಕೆಲವರು ಮೌನದಿಂದಲೇ ಅಂತರ್ಧಾನರಾಗಿ ಹೋದರು.

ಎರಡನೇ ಭಾಗದ ಪಠಣೆ

ಆ ರಾತ್ರಿಯಾದ ಬಳಿಕ ಭಗವಾನರು ಭಿಕ್ಷು ಸಂಘವನ್ನು ಕುರಿತು ಇಂತೆಂದರು- “ಭಿಕ್ಷುಗಳೇ, ಈ ರಾತ್ರಿ ನಾಲ್ಕು ಮಹಾರಾಜ ದೇವತೆಗಳು ಬಹುದೊಡ್ಡ ಯಕ್ಷರ ಗುಂಪು, ಬಹುದೊಡ್ಡ ಗಂಧರ್ವರ ಗುಂಪು, ಬಹುದೊಡ್ಡ ಕುಂಭಂಡರ ಗುಂಪು, ಬಹುದೊಡ್ಡ ನಾಗರ ಗುಂಪುಗಳೊಂದಿಗೆ ನನ್ನಲ್ಲಿಗೆ ಬಂದರು. ಬರುವಾಗ ನಾಲ್ಕು ದಿಕ್ಕುಗಳಿಗೂ ರಕ್ಷಣೆಯನ್ನೊದಗಿಸಿ, ನಾಲ್ಕು ದಿಕ್ಕುಗಳಲ್ಲಿಯೂ ಕಾವಲುಗಳನ್ನಿಟ್ಟು, ನಾಲ್ಕು ದಿಕ್ಕುಗಳಲ್ಲಿಯೂ ಪಡೆಗಳನ್ನಿಟ್ಟು ಇಡೀ ಗಿಜ್ಝಕೂಟವನ್ನು ತಮ್ಮ ಕಾಂತಿಯಿಂದ ಬೆಳಗಿಸಿದರು. ಕೆಲವರು ಅಭಿವಂದಿಸಿ ಒಂದುಕಡೆ ಕುಳಿತುಕೊಂಡರು. ಕೆಲವು ಯಕ್ಷರು ನನಗೆ ಕುಶಲವನ್ನು ಹೇಳಿ ಒಂದುಕಡೆ ಕುಳಿತುಕೊಂಡರು. ಕೆಲವರು ಅಂಜಲೀ ಬದ್ಧರಾಗಿ ನನಗೆ ಪ್ರಣಾಮ ಮಾಡಿ ಒಂದುಕಡೆ ಕುಳಿತುಕೊಂಡರು. ಕೆಲವರು ತಮ್ಮ ಹೆಸರು ಗೋತ್ರಗಳನ್ನು ಹೇಳಿಕೊಂಡು ಒಂದುಕಡೆ ಕುಳಿತುಕೊಂಡರು. ಕೆಲವರು ಏನನ್ನೂ ಹೇಳದೆ ಸುಮ್ಮನೆ ಕುಳಿತುಕೊಂಡರು.

“ಭಿಕ್ಷುಗಳೇ, ಹೀಗೆ ಒಂದುಕಡೆ ಕುಳಿತುಕೊಂಡ ವೇಸವಣ್ಣ ಮಹಾರಾಜನು ನನ್ನನ್ನು ಕುರಿತು ಇಂತೆಂದನು- ‘ಭಂತೆ, ಭಗವಾನರಲ್ಲಿ ನಂಬಿಕೆಯಿರುವ ಕೆಲವು ಹಿರಿಯ ಯಕ್ಷರಿದ್ದಾರೆ.... ಭಗವಾನರಲ್ಲಿ ನಂಬಿಕೆಯಿಟ್ಟಿರುವ ಕೆಳಗಿನ ವರ್ಗದ ಭಿಕ್ಷುಗಳೂ ಇದ್ದಾರೆ. ಯಕ್ಷರು ಅನೇಕ ವೇಳೆ ಭಗವಾನರಲ್ಲಿ ವಿಶ್ವಾಸವನ್ನಿಟ್ಟಿರುವುದಿಲ್ಲ. ಇದಕ್ಕೇನು ಕಾರಣ? ಭಗವಾನರು ಪ್ರಾಣಿ ಹಿಂಸೆಯನ್ನು ಮಾಡಬಾರದೆಂದು ಬೋಧಿಸುತ್ತಾರೆ. ನೀಡದುದನ್ನು ತೆಗೆದುಕೊಳ್ಳಬಾರದೆಂದು ಬೋಧಿಸುತ್ತಾರೆ. ಅಕ್ರಮವಾದ ಲೈಂಗಿಕ ಸಂಬಂಧವನ್ನು ಹೊಂದಿರಬಾರದೆಂದು ಬೋಧಿಸುತ್ತಾರೆ. ಸುಳ್ಳು ಹೇಳಬಾರದೆಂದು ಬೋಧಿಸುತ್ತಾರೆ. ಮತಿ ಭ್ರಮಣೆಯನ್ನುಂಟು ಮಾಡುವ ಸುರೆ ಮದ್ಯಗಳನ್ನು ಸೇವಿಸಬಾರದೆಂದು ಬೋಧಿಸುತ್ತಾರೆ. ಆದರೆ ಭಂತೆ, ಯಕ್ಷರು ಪ್ರಾಣಿಹಿಂಸೆಯನ್ನು ಮಾಡುವುದನ್ನಾಗಲೀ, ಕೊಡದುದನ್ನು ತೆಗೆದುಕೊಳ್ಳದಿರುವುದನ್ನಾಗಲೀ, ಅಕ್ರಮವಾದ ಲೈಂಗಿಕ ಸಂಬಂಧವಿಟ್ಟುಕೊಳ್ಳುವುದನ್ನಾಗಲೀ, ಸುಳ್ಳು ಹೇಳುವುದನ್ನಾಗಲೀ, ಮತಿಭ್ರಮಣೆಯನ್ನುಂಟು ಮಾಡುವ ಸುರೆ ಮದ್ಯಗಳ ಸೇವನೆಯನ್ನಾಗಲೀ, ಬಹು ಸಮಯ ಬಿಟ್ಟಿರುವುದಿಲ್ಲ. ಅವರಿಗೆ ಹೀಗೆ ಬಿಟ್ಟಿರುವುದು ಅಪ್ರಿಯವಾಗಿರುತ್ತದೆ, ಅದು ಅವರಿಗೆ ಒಪ್ಪಿಗೆಯಾಗುವುದಿಲ್ಲ. ಅರಣ್ಯ ವನಗಳಲ್ಲಿ ಜನರಿಲ್ಲದ ಕಡೆ ಭಗವಾನರ ಶಿಷ್ಯರು ಇರುತ್ತಾರೆ. ಸದ್ದು ಗದ್ದಲವಿಲ್ಲದ ಕಡೆಗಳಲ್ಲಿ ಗಾಳಿ ಮಾತ್ರ ಬೀಸುವೆಡೆಗಳಲ್ಲಿ, ಮನುಷ್ಯರಿಗೆ ಗೊತ್ತಿಲ್ಲದಿರುವೆಡೆಗಳಲ್ಲಿ ಧ್ಯಾನಕ್ಕೆ ಅನುಕೂಲವಾದ ಕಡೆಗಳಲ್ಲಿ ಅವರಿರುತ್ತಾರೆ. ಅಲ್ಲಿ ವಾಸಿಸುವ ಹಿರಿಯ ಯಕ್ಷರನೇಕರಿಗೆ ಭಗವಾನರ ಮಾತಿನಲ್ಲಿ ನಂಬಿಕೆ ಇರುವುದಿಲ್ಲ. ಅವರಿಗೆ ನಂಬಿಕೆಯನ್ನುಂಟುಮಾಡಲು ಭಗವಾನರು ಭಿಕ್ಷುಗಳಿಗೂ, ಭಿಕ್ಷುಣಿಯರಿಗೂ, ಉಪಾಸಕರಿಗೂ, ಉಪಾಸಿಕೆಯರಿಗೂ ರಕ್ಷಣೆ ಕೊಡಬಲ್ಲ ನಿಂದೆಯಿಂದ ದೂರವಿಡಬಲ್ಲ ಅವರಿಗೆ ಭದ್ರತೆಯನ್ನುಂಟು ಮಾಡಬಲ್ಲ ಆಟಾನಾಟಿಯ ಸುತ್ತವನ್ನು ತಿಳಿದುಕೊಳ್ಳಬೇಕು!’ ಭಿಕ್ಷುಗಳೇ, ಅದಕ್ಕೆ ನಾನು ಒಪ್ಪಿದೆ. ನಾನು ಒಪ್ಪಿದುದನ್ನು ತಿಳಿದು ವೇಸ್ಸವಣ್ಣ ಮಹಾರಾಜನು ರಕ್ಷಣೆಯನ್ನು ಕೊಡುವ ಆಟಾನಾಟಿಯ ಸುತ್ತವನ್ನು ಹೇಳಿದನು.

“ಒಳಗಣ್ಣನ್ನು ಪಡೆದ ಶ್ರೀಮಂತ ವಿಪಸ್ಸಿಗೆ ನಮಸ್ಕಾರ. ಸರ್ವಭೂತಗಳಲ್ಲಿಯೂ ಅನುಕಂಪವನ್ನಿಟ್ಟಿದ್ದ ಸಿಖಿಗೆ ನಮಸ್ಕಾರ.

“ಪರಿಶುದ್ಧವಾದ ತಪಸ್ವಿಯಾದ ವೆಸ್ಸಭೂಗೆ ನಮಸ್ಕಾರ. ಮಾರಸೇನೆಯನ್ನು ಮರ್ದಿಸಿದ ಕಕುಸಂಧನಿಗೆ ನಮಸ್ಕಾರ.

“ಪರಿಶುದ್ಧವಾದ ಮತಿಯನ್ನುಳ್ಳ ಶ್ರೇಷ್ಠನಾದ ಕೋಣಗಮನನಿಗೆ ನಮಸ್ಕಾರ. ಎಲ್ಲ ನೋವುಗಳಿಂದಲೂ ಮುಕ್ತನಾದ ಕಸ್ಸಪನಿಗೆ ನಮಸ್ಕಾರ. ಎಲ್ಲ ದುಃಖವನ್ನು ಪರಿಹರಿಸಬಲ್ಲ ಧಮ್ಮವನ್ನು ಬೋಧಿಸಿರುವ ಶಾಕ್ಯಪುತ್ರ ಅಂಗೀರಸನಿಗೆ ನಮಸ್ಕಾರ.

“ಲೋಕದ ಬಾಧೆಗಳಿಂದ ದೂರರಾಗಿ ಸತ್ಯವನ್ನು ತಿಳಿದ ಮೃದುಭಾಷಿಗಳಾದ ಶ್ರೇಷ್ಠರಾದ ಪರಿಶುದ್ಧರಾದವರಿಂದ ನಮಸ್ಕರಿಸಿಕೊಳ್ಳುವ, ಸಮರ್ಥನಾದ ಪರಿಶುದ್ಧನಾದ ದೇವತೆಗಳ ಮತ್ತು ಮನುಷ್ಯರ ಹಿತವನ್ನು ಸಾಧಿಸುವ ವಿಜ್ಜಾಚರಣ ಸಂಪನ್ನನಾದ ಗೌತಮನಿಗೆ ನಮಸ್ಕಾರ.

“ಆದಿತ್ಯರ ಗುಂಪಿನವನಾದ ಹುಟ್ಟುತ್ತಿರುವಾಗಲೇ ಅತಿಯಾದ ತೇಜಸ್ಸನ್ನುಳ್ಳ ರಾತ್ರಿಯನ್ನು ಹೋಗಲಾಡಿಸುವ ಸೂರ್ಯನನ್ನು ನೋಡಿ ಇದು ಹಗಲು ಎಂದು ಹೇಳುತ್ತಾನೆ.

“ಗಂಭೀರವಾಗಿರುವ ನೀರಿನ ಆಗರವೇ ಆಗಿರುವ ಸಮುದ್ರವನ್ನು ನೋಡಿ ಇದು ನೀರಿನ ಆಗರವೇ ಆಗಿದೆ ಎಂದು ಹೇಳುತ್ತಾರೆ.

“ಜನರು ಸುತ್ತ ನೋಡಿ ಇದು ಪೂರ್ವ ಎಂದು ಹೇಳುತ್ತಾರೆ. ಇದನ್ನು ಯಶಸ್ವಿಯಾದ ಒಬ್ಬ ಮಹಾರಾಜನು ಪರಿಪಾಲಿಸುತ್ತಿದ್ದಾನೆ.

“ಅವನು ಗಂಧರ್ವರ ಅಧಿಪತಿಯಾದ ಧತರಟ್ಠ. ಈ ದೇವತೆ ಗಂಧರ್ವರ ನೃತ್ಯ ಗೀತೆಗಳ ಆನಂದವನ್ನು ಅನುಭವಿಸುತ್ತಾ ಪೂರ್ವ ದಿಕ್ಕಿನಲ್ಲಿರುತ್ತಾನೆ.

“ಬಹುಸಂಖ್ಯೆಯ ಪುತ್ರರಿರುವವನು ಅವನು. ಇಂದ್ರ ಎಂಬ ಹೆಸರಿನಿಂದ ಅವರೆಲ್ಲರನ್ನು ಕರೆಯುತ್ತಾನೆ. ಅವರ ಸಂಖ್ಯೆಯು ತೊಂಬತ್ತು. ಅವರೆಲ್ಲರೂ ಮಹಾಬಲರು.

“ಅವರೆಲ್ಲರೂ ಬುದ್ಧನನ್ನು ನೋಡಿ ‘ಪುರುಷ ಶ್ರೇಷ್ಠನೇ, ನಮಸ್ಕಾರ, ಪುರುಷೋತ್ತಮನೇ ನಮಸ್ಕಾರ, ದೇವತೆಗಳಿಂದ ನಮಸ್ಕರಿಸಿಕೊಳ್ಳುವ ನಿನಗೆ ನಮಸ್ಕಾರ’ ಎಂದು ವಂದಿಸುತ್ತಾರೆ.

“ಯಾವಾಗಲೂ ಕುಶಲವನ್ನೇ ಮಾಡುವ ಜಿನನಾದವನನ್ನು ವಂದಿಸುತ್ತೀರಾ? ಎಂದು ಕೇಳುತ್ತಾರೆ. ಅದುದರಿಂದ ಈಗಲೇ ವಂದಿಸುತ್ತೇವೆ. ವಿಜ್ಜಾಚರಣನಾದ ನಿನ್ನನ್ನು ವಂದಿಸುತ್ತೇವೆ.

“ಚಾಡಿಯನ್ನು ಹೇಳಿ, ಕೊಲೆಗಳನ್ನು ಮಾಡಿ, ಮಾಂಸದಿಂದಲೇ ಬದುಕಿ, ಕಳ್ಳರಾಗಿ, ಮೋಸಗಾರರಾಗಿ, ದರೋಡೆಕೋರರಾಗಿ, ಬದುಕಿದ ಜನರು ಪ್ರೇತರಾಗುತ್ತಾರೆ. ಅವರು ವಾಸಿಸುವುದು ದಕ್ಷಿಣ ದಿಕ್ಕಿನಲ್ಲಿ. ಅದನ್ನು ಯಶಸ್ವಿಯಾಗಿ ಪಾಲಿಸುತ್ತಿರುವ ಮಹಾರಾಜನು ಕುಂಭಂಡರ ಅಧಿಪತಿ. ಅವನು ಕುಂಭಂಡ ದೇವತೆಗಳ ನೃತ್ಯ ಗೀತೆಗಳಿಂದ ಸಂತೋಷಪಡುತ್ತಾನೆ. ಅವನೇ ವೇರುಳ್ಹ.

“ಅವನು ಬಹು ಪುತ್ರವಂತ. ಅವರಿಗೆಲ್ಲಾ ಒಂದೇ ಹೆಸರು. ಅದು ಇಂದ. ಅವರ ಸಂಖ್ಯೆ ತೊಂಬತ್ತು. ಅವರೆಲ್ಲಾ ಮಹಾಬಲರು.

“ಅವರೆಲ್ಲರೂ ಆದಿತ್ಯ ಬಂಧುವಾದ ಬುದ್ಧನನ್ನು ನೋಡಿ ದೂರದಿಂದಲೇ ನಮಸ್ಕರಿಸುತ್ತಾರೆ. ಅವರೆಲ್ಲರೂ ಸಮರ್ಥನೂ ಶಕ್ತಿವಂತನು ಆದವನನ್ನು ಹೀಗೆ ಸ್ತುತಿಸುತ್ತಾರೆ:

“ಪುರುಷ ಶ್ರೇಷ್ಠನಿಗೆ ನಮಸ್ಕಾರ, ಪುರುಷೋತ್ತಮನಿಗೆ ನಮಸ್ಕಾರ. ದೇವತೆಗಳೇ ನಿನಗೆ ನಮಸ್ಕಾರ ಮಾಡುತ್ತಾರೆ. ‘ಯಾವಾಗಲೂ ಕುಶಲವಾದುದನ್ನೇ ಮಾಡುವ ಜಿನನನ್ನು ವಂದಿಸುತ್ತೀರಾ’ ಎಂದು ಕೇಳುತ್ತಾರೆ. ಆದುದರಿಂದ ನಾವೂ ಈಗಲೇ ನಮಸ್ಕರಿಸುತ್ತೇವೆ.

“ಜಿನನಾದ ಗೋತಮನನ್ನು ವಂದಿಸುತ್ತೇವೆ. ವಿಜ್ಜಾಚರಣ ಸಂಪನ್ನನಾದ ಗೋತಮನನ್ನು ವಂದಿಸುತ್ತೇವೆ.

“ಮಹತ್ತನ್ನುಳ್ಳ ಆದಿತ್ಯರ ಗುಂಪಿನವರಾದ ಮುಳುಗುತ್ತಿರುವಾಗ ಬೆಳಕು ಸರಿದಂತೆ ಮಾಡುವ ಸೂರ್ಯನನ್ನು ನೋಡಿ ಇದು ರಾತ್ರಿ ಎಂದು ಹೇಳುತ್ತಾರೆ.

“ಗಂಭೀರವಾದ ನೀರಿನ ಆಗರವೇ ಆಗಿರುವ ಸಮುದ್ರವನ್ನು ನೋಡಿ ಇದು ನೀರಿನ ಆಗರ’ ಎಂದು ಜನರು ಹೇಳುತ್ತಾರೆ.

“ಇದು ಪಶ್ಚಿಮ ದಿಕ್ಕು ಎಂದು ಜನರು ಹೇಳುವ ದಿಕ್ಕಿನಲ್ಲಿ ಯಶಸ್ವಿಯಾದ ಮಹಾರಾಜನು ಆಳುತ್ತಿದ್ದಾನೆ. ವಿರೂಪಕ್ಖನೆಂಬ ಅವನು ನಾಗರ ಅಧಿಪತಿಯಾಗಿದ್ದಾನೆ. ನಾಗರ ನೃತ್ಯ ಗೀತೆಗಳಿಂದ ಅವನು ಸಂತೋಷಪಡುತ್ತಾನೆ.

“ಅವನು ಬಹುಪುತ್ರವಂತ, ತೊಂಬತ್ತು ಸಂಖ್ಯೆಯ ಅವರಿಗೆಲ್ಲಾ ಒಂದೇ ಹೆಸರಿದೆ. ಅದು ಇಂದ. ಅವರೆಲ್ಲರೂ ಮಹಾಬಲರೇ.

“ಆದಿತ್ಯ ಬಂಧುವಾದ ಬುದ್ಧನನ್ನು ನೋಡಿ ಮಹತ್ತನ್ನು ಹೊಂದಿರುವವನೂ ಸಮರ್ಥನೂ ಆದ ಆತನನ್ನು ದೂರದಿಂದ ಸ್ತುತಿಸುತ್ತಾರೆ. ‘ಪುರುಷ ಶ್ರೇಷ್ಠನಿಗೆ ನಮಸ್ಕಾರ, ಪುರುಷೋತ್ತಮನಿಗೆ ನಮಸ್ಕಾರ, ದೇವತೆಗಳಿಂದ ವಂದಿಸಿಕೊಳ್ಳುವವನಿಗೆ ನಮಸ್ಕಾರ. ‘ಯಾವಾಗಲೂ ಕುಶಲವನ್ನೇ ಮಾಡುವ ಆ ಜಿನನನ್ನು ವಂದಿಸುತ್ತೀರಾ?’ ಎಂದು ಕೇಳುತ್ತಾರೆ. ಆದುದರಿಂದ ಈಗಲೇ ಜಿನನನ್ನು ವಂದಿಸುತ್ತೇವೆ. ವಿಜ್ಜಾಚರಣನಾದ ಬುದ್ಧನನ್ನು ವಂದಿಸುತ್ತೇವೆ.

“ಉತ್ತರ ಕುರುವಿನಲ್ಲಿ ಸುಂದರವಾದ ಮಹಾನೇರು ಪರ್ವತವಿದೆ. ಅಲ್ಲಿರುವ ಜನರೆಲ್ಲಾ ಅಪರಿಗ್ರಹರು. ತಮ್ಮದಾವುದೂ ಇಲ್ಲ ಎಂದು ತಿಳಿದುಕೊಂಡಿರುವವರು. ಅಲ್ಲಿ ಬೀಜವನ್ನು ಬಿತ್ತುವುದಿಲ್ಲ, ಭೂಮಿಯನ್ನು ಉಳುವುದಿಲ್ಲ. ಗಿಡದಲ್ಲಿಯೇ ಪಕ್ವವಾದ ನೆಲ್ಲನ್ನು ಅವರು ತಿನ್ನುತ್ತಾರೆ.

“ಅಲ್ಲಿ ಬೆಳೆಯುವ ಅಕ್ಕಿಯಾದರೋ ನುಚ್ಚಾಗಿರುವುದಿಲ್ಲ. ಸುಗಂಧಪೂರಿತವಾಗಿರುತ್ತದೆ. ಹೊಟ್ಟೇ ಇರುವುದಿಲ್ಲ. ಅದನ್ನು ಒಲೆಯ ಮೇಲೆ ಇಟ್ಟು ಬೇಯಿಸಿ ಜನರು ತಿನ್ನುತ್ತಾರೆ.

“ಹಸುಗಳನ್ನೂ ಇತರ ಪ್ರಾಣಿಗಳನ್ನೂ ಅವರು ವಾಹನ ಮಾಡಿಕೊಳ್ಳುತ್ತಾರೆ. ಒಂದು ಪ್ರಾಣಿಯ ಮೇಲೆ ಒಬ್ಬರೇ ಕೂರುತ್ತಾರೆ. ಅವರ ಸ್ತ್ರೀಯರೂ ಕುಮಾರರೂ ಕುಮಾರಿಯರೂ ಇದೇ ವಾಹನದ ಮೇಲೆ ಎಲ್ಲಕಡೆಗೂ ಹೋಗುತ್ತಾರೆ. ಅವರೆಲ್ಲರೂ ರಾಜನ ಭಂಟರಾಗಿರುತ್ತಾರೆ.

“ಆನೆ ಕುದುರೆ ಮುಂತಾದ ದಿವ್ಯವಾದ ವಾಹನಗಳೂ ಪಲ್ಲಕ್ಕಿಗಳೂ ಯಶಸ್ವಿಯಾದ ಆ ಮಹಾರಾಜನಿಗೂ ಅವನ ಸೇವಕರಿಗೂ ಇರುತ್ತವೆ. ಅವನಿಗೆ ನಗರಗಳಿರುತ್ತವೆ. ಅವೆಲ್ಲವನ್ನು ಅಂತರಿಕ್ಷದಲ್ಲಿಯೇ ಕಟ್ಟಿರುತ್ತಾರೆ. ಅವುಗಳ ಹೆಸರು ಆಟಾನಾಟ ಕುಸುನಾಟ ಪರಕುಸೀನಾಟ ಮತ್ತು ನಾಟಪುರಿಯ. ಉತ್ತರದಲ್ಲಿ ಕಸಿವಂತನಗರವೂ ಜನೋಘರು ನವನ ಪುತಿಯ ಅಂಬರ ಅಂಬರಾವತಿಯ ಎಂಬ ನಗರಗಳೂ ಅವನಿಗೆ ಸೇರಿರುತ್ತದೆ. ಅಳಕಮಂದವು ಅವನ ರಾಜಧಾನಿಯಾಗಿರುತ್ತದೆ.

“ಕುವೇರ ಮಹಾರಾಜನಿಗೆ ವಿಸಣ ಎಂಬುದು ರಾಜಧಾನಿಯಾಗಿರುತ್ತದೆ. ಆದದುರಿಂದ ಅವನಿಗೆ ವೆಸ್ಸವಣ್ಣನೆಂದು ಹೆಸರು ಬಂದಿದೆ.

“ತತೋಲ ತತ್ತಲಾ ತತೋತಲ ಓಜಸಿ ತೇಜಸಿ ತತೋಜಸಿ ರಾಜಸೂರ ಅರಿಟ್ಠನೇಮಿ ಎಂಬುವರು ಅವನ ದೂತರಾಗಿದ್ದು ಅವನ ಕೀರ್ತಿಯನ್ನು ಎಲ್ಲಕಡೆಗೂ ಹರಡುತ್ತಾರೆ.

“ಧರಣೀ ಎಂಬ ಹೊಳೆಯು ಅಲ್ಲಿ ಹರಿಯುತ್ತದೆ. ಅವುಗಳ ಮೇಲೆ ಮಳೆಯು ಸಕಾಲದಲ್ಲಿ ಬೀಳುತ್ತದೆ. ಅಲ್ಲಿ ಸಾಲವತೀ ಎಂಬ ಸಭಾಭವನವಿರುತ್ತದೆ.

“ಯಕ್ಷಕರು ಆ ಭವನದಲ್ಲಿ ಸೇರುತ್ತಾರೆ. ಅದರ ಹತ್ತಿರ ಸದಾ ಫಲವನ್ನು ಬಿಡುವ ಮರಗಳಿರುತ್ತವೆ. ಮಯೂರ ಕ್ರೌಂಚ ಕೋಕಿಲ ಮುಂತಾದ ಪಕ್ಷಿಗಳ ಮಧುರ ಸ್ವರದಿಂದ ಆ ಪ್ರದೇಶವು ಕೂಡಿರುತ್ತದೆ.

“ಅಲ್ಲಿ ಜೀವ ಎಂಬ ಪಕ್ಷಿಯು ‘ಚೆನ್ನಾಗಿ ಬಾಳಿ’ ಎಂದು ಕೂಗಿಕೊಳ್ಳುತ್ತಿರುತ್ತದೆ. ಕುಕ್ಕುಲಕ ಕುಳಿರಕ ಮೊಕ್ಖರ ಸಾಕಶುಕ ಸಾಳಿಕ ದಂಡ ಮಾಣವಿಕೆ ಪಕ್ಷಿಗಳ ಸ್ವರದಿಂದ ಕುವೇರನ ರಾಜಧಾನಿಯು ಸದಾ ಶೋಭಿಸುತ್ತಿರುತ್ತದೆ. ಸುಂದರವಾದ ಕೊಳವು ಆ ರಾಜಧಾನಿಗಿರುತ್ತದೆ.

“ಇದೇ ಉತ್ತರ ದಿಕ್ಕು ಎಂದು ಯಾವುದನ್ನು ಜನರು ಕರೆಯುತ್ತಾರೋ ಅದನ್ನು ಆ ಯಶಸ್ವಿಯಾಗದ ಮಹಾರಾಜರು ಪಾಲಿಸುತ್ತಿರುತ್ತಾನೆ. ಯಕ್ಷರ ಅಧಿಪತಿಯಾದ ಕುವೇರ ರಾಜನು ಯಕ್ಷರ ನೃತ್ಯಗೀತೆಗಳಿಮದ ಸಂತೋಷಪಡುತ್ತಿರುತ್ತಾನೆ.

“ಬಹುಪುತ್ರವಂತನಾದ ಅವನಿಗೆ ತೊಂಬತ್ತು ಮಕ್ಕಳಿರುತ್ತಾರೆ. ಅವರಿಗೆಲ್ಲಾ ಇಂದ ಎಂಬ ಒಂದೇ ಹೆಸರಿರುತ್ತದೆ. ಅವರೆಲ್ಲರೂ ಮಹಾಬಲರೇ ಆಗಿರುತ್ತಾರೆ.

“ಸಮರ್ಥನೂ ಶ್ರೇಷ್ಠನೂ ಆದ ಆದಿತ್ಯ ಬಂಧು ಬುದ್ಧನನ್ನು ಅವರು ನೋಡಿ ದೂರದಿಂದ ಅವನಿಗೆ ನಮಸ್ಕರಿಸುತ್ತಾರೆ.

“ಪುರುಷ ಶ್ರೇಷ್ಠನಿಗೆ ನಮಸ್ಕಾರ, ಪುರುಷೋತ್ತಮನಿಗೆ ನಮಸ್ಕಾರ, ದೇವತೆಗಳಿಂದ ವಂದಿಸಿಕೊಳ್ಳುವವನಿಗೆ ನಮಸ್ಕಾರ’ ಎಂದು ವಂದಿಸುತ್ತಾರೆ. ‘ಯಾವಾಗಲೂ ಕುಶಲವನ್ನೇ ಮಾಡುವ ಜಿನನಿಗೆ ನೀವು ನಮಸ್ಕರಿಸುತ್ತೀರಾ?’ ಎಂದು ನಮ್ಮನ್ನು ಕೇಳುತ್ತಾರೆ. ಆದುದರಿಂದ ಈಗಲೇ ಜಿನನಾದ ಗೋತಮನಿಗೆ ವಂದಿಸುತ್ತೇವೆ. ವಿಜ್ಜಾಚರಣ ಸಂಪನ್ನನಾದ ಗೋತಮ ಬುದ್ಧನಿಗೆ ವಂದಿಸುತ್ತೇವೆ.

“ಪೂಜ್ಯರೇ, ಭಿಕ್ಷುಗಳ ಭಿಕ್ಷುಣಿಯರ ಉಪಾಸಕರ ಉಪಾಸಿಕೆಯರ ರಕ್ಷಣೆಯು ಈ ಆಟಾನಾಟಿಯ ಸುತ್ತವೇ ಆಗಿದೆ. ಇದು ಅವರೆಲ್ಲರಿಗೂ ಭದ್ರತೆ ರಕ್ಷಣೆ ಕೊಡುತ್ತದೆ. ಕೇಡನ್ನು ತಪ್ಪಿಸುತ್ತದೆ.

“ಪೂಜ್ಯರೇ, ಇದನ್ನು ಚೆನ್ನಾಗಿ ಕಂಠಪಾಠ ಮಾಡಿ ಅರ್ಥವನ್ನು ಗ್ರಹಿಸುವ ಭಿಕ್ಷು ಅಥವಾ ಭಿಕ್ಷುಣಿ, ಉಪಾಸಕ ಅಥವಾ ಉಪಾಸಿಕೆಯು ಸಮರ್ಥರಾಗುತ್ತಾರೆ. ಅವರಾರನ್ನೂ ದೇವತೆಯಾಗಲೀ, ಯಕ್ಷನೇ ಆಗಲೀ, ಯಕ್ಷಿಯೇ ಆಗಲೀ, ಯಕ್ಷ ಪ್ರೇತವೇ ಆಗಲೀ, ಯಕ್ಷಿಯ ಪ್ರೇತವೇ ಆಗಲೀ, ಯಕ್ಷ ಪ್ರಮುಖನಾಗಲೀ, ಅಧಿಕಾರೀ ಯಕ್ಷನಾಗಲೀ, ಭಂಟ ಯಕ್ಷನಾಗಲೀ, ಗಂಧರ್ವನಾಗಲೀ, ಗಂಧರ್ವೆಯಾಗಲೀ, ಗಂಧರ್ವ ಪ್ರೇತವೇ ಆಗಲೀ, ಗಂಧರ್ವೆಯ ಪ್ರೇತವೇ ಆಗಲೀ, ಗಂಧರ್ವ ಪ್ರಮುಖನಾಗಲೀ, ಅಧಿಕಾರೀ ಗಂಧರ್ವನಾಗಲೀ, ಸೇವಕ ಗಂಧರ್ವನಾಗಲೀ, ಕುಂಭಂಡನಗಲೀ, ಭಂಟ ಕುಂಭಂಡನಾಗಲೀ, ನಾಗನಾಗಲೀ, ನಾಗಿಣಿಯಾಗಲೀ, ನಾಗಪ್ರೇತನಾಗಲೀ, ನಾಗಿಣಿ ಪ್ರೇತವಾಗಲೀ, ನಾಗ ಪ್ರಮುಖನಾಗಲೀ, ಅಧಿಕಾರಿ ನಾಗನಾಗಲೀ, ಭಂಟ ನಾಗನಾಗಲೀ, ಪೀಡಿಸುವುದಿಲ್ಲ. ಹೋಗುತ್ತಿರುವವರ ಕುಳಿತಿರುವವರ ಮಲಗಿರುವವರ ಬಳಿಗೆ ಕೆಟ್ಟ ಮನಸ್ಸಿನಿಂದ ಹೋಗುವುದಿಲ್ಲ. ಹಾಗೆ ಹೋದರೆ, ಪೂಜ್ಯರೇ, ಅಂಥ ದೇವತೆಯು ಗ್ರಾಮದಲ್ಲಾಗಲೀ, ಪಟ್ಟಣದಲ್ಲಾಗಲೀ ಸತ್ಕಾರವನ್ನಾಗಲೀ, ಗೌರವವನ್ನಾಗಲೀ ಪಡೆಯುವುದಿಲ್ಲ. ಅಂಥ ದೇವತೆಯು ಅಳಕ ಮಂದರಾದ ರಾಜಧಾನಿಯಲ್ಲಿ ಇರುವುದಕ್ಕೆ ಮನೆಯನ್ನಾಗಲೀ, ವಾಸಿಸುವುದಕ್ಕೆ ಬೇರೊಂದೆಡೆಯನ್ನಾಗಲೀ ಪಡೆಯುವುದಿಲ್ಲ. ಪೂಜ್ಯರೇ, ಅಂಥ ದೇವತೆಯು ಯಕ್ಷರ ಸಭೆಗೆ ಹೋಗಲಾರ. ಅಂಥವನಿಗೆ ವಿವಾಹ ಸಂಬಂಧ ಸಿಕ್ಕುವುದಿಲ್ಲ, ಅಂಥ ದೇವತೆಯು ತಮ್ಮನ್ನು ತಾವೇ ನಿಂದಿಸಿಕೊಳ್ಳುವವರಾಗುತ್ತಾರೆ. ಅಂಥ ದೇವತೆಯನ್ನು ಬರೀ ಪಾತ್ರೆಯನ್ನು ಬಗ್ಗಿಸುವಂತೆ ಬಗ್ಗಿಸಿಬಿಡುತ್ತಾರೆ. ಅವನ ತಲೆಯನ್ನು ಒಡೆದು ಏಳು ಸೀಳು ಮಾಡಿಬಿಡುತ್ತಾರೆ.

“ಪೂಜ್ಯರೇ, ಚಂಡರೂ, ರುದ್ರರೂ, ಹಿಂಸಿಸುವವರೂ ಆದ ಕೆಟ್ಟ ದೇವತೆಗಳಿದ್ದಾರೆ. ಅವರು ಮಹಾರಾಜ ದೇವತೆಗಳಿಗಾಗಲೀ, ಅವರ ಅಧಿಕಾರಿಗಳಿಗಾಗಲೀ ಅಥವಾ ಮಹಾರಾಜ ದೇವತೆಗಳ ಭಂಟರಿಗಾಗಲೀ ವಿಧೇಯರಾಗಿರುವುದಿಲ್ಲ. ಅವರು ಮಹಾರಾಜನ ದೇವತೆಗಳ ವಿರೋಧಿಗಳಾದ ದಂಗೆಕೋರರೇ ಆಗಿರುತ್ತಾರೆ. ಮಗಧದ ರಾಜನು ಜಯಿಸಿದ ಮಹಾ ಚೋರರಂತೆ ಅವರಿರುತ್ತಾರೆ. ಆ ಚೋರರು ಮಗಧದ ರಾಜನ ಅಥವಾ ಅವನ ಅಧಿಕಾರಿಗಳ ಅಥವಾ ಅವನ ಭಂಟರ ಆಜ್ಞೆಯನ್ನು ಧಿಕ್ಕರಿಸುವಂತೆ ಆ ಕೆಟ್ಟ ದೇವತೆಗಳೂ ಚಂಡರೂ ರುದ್ರರು ಹಿಂಸಿಕರೂ ಆಗಿ ಮಹಾರಾಜ ದೇವತೆಗಳ ಅಥವಾ ಅವರ ಅಧಿಕಾರಿ ದೇವತೆಗಳ ಅಥವಾ ಅವರ ಭಂಟರ ಮಾತನ್ನು ಧಿಕ್ಕರಿಸುತ್ತಾರೆ. ಇವರೇ ಮಹಾರಾಜನ ವಿರುದ್ಧವಿರುವ ದಂಗೆಕೋರರು. ಪೂಜ್ಯರೇ, ಯಾವನಾದರೋ ಯಕ್ಷನಾಗಲೀ... ಯಕ್ಷಿಯಾಗಲೀ... ಗಂಧರ್ವನಾಗಲೀ... ಗಂಧರ್ವೆಯಾಗಲೀ... ಕುಂಭಂಡನಾಗಲೀ... ಕುಂಭಂಡೆಯಾಗಲೀ... ನಾಗನಾಗಲೀ ನಾಗಿಣಿಯಾಗಲೀ, ನಾಗಪ್ರೇತವೇ ಆಗಲಿ, ನಾಗಿಣಿ ಪ್ರೇತವೇ ಆಗಲಿ, ಅಧಿಕಾರಿ ನಾಗನಾಗಲೀ, ಭಂಟನಾಗನಾಗಲೀ, ದುಷ್ಟ ಭಾವನೆಯಿಂದ ನಡೆಯುತ್ತಿರುವ ಕುಳಿತಿರುವ ಮಲಗಿರುವ ಭಿಕ್ಷುವನ್ನಾಗಲೀ, ಭಿಕ್ಷುಣಿಯನ್ನಾಗಲೀ, ಉಪಾಸಕ ಉಪಾಸಿಕೆಯನ್ನಾಗಲೀ, ದುಷ್ಟ ಭಾವನೆಯಿಂದ ಸಮೀಪಿಸಿದರೆ ಹಾಗೆ ಪೀಡಿಸಲ್ಪಟ್ಟವರು ಯಕ್ಷ ಪ್ರಮುಖನಿಗೋ, ಸೇನಾಪತಿಗೋ ಮಹಾ ಸೇನಾಪತಿಗೋ ಅಬ್ಬರಿಸಬೇಕು, ಅರಿಚಿಕೊಳ್ಳಬೇಕು, ಕಿರಿಚಿಕೊಳ್ಳಬೇಕು- ‘ಈ ಯಕ್ಷನು ನನ್ನನ್ನು ಹಿಡಿದುಕೊಂಡಿದ್ದಾನೆ, ಈ ಯಕ್ಷನು ಬಾಧಿಸುತ್ತಿದ್ದಾನೆ, ಈ ಯಕ್ಷನು ಪೀಡಿಸುತ್ತಿದ್ದಾನೆ, ಈ ಯಕ್ಷನು ನೋಯಿಸುತ್ತಿದ್ದಾನೆ, ಈ ಯಕ್ಷನು ಹಿಂಸಿಸುತ್ತಿದ್ದಾನೆ, ಈ ಯಕ್ಷನು ಅತಿ ಹಿಂಸೆಯನ್ನು ಕೊಡುತ್ತಿದ್ದಾನೆ, ಇವನು ನನ್ನನ್ನು ಬಿಡುತ್ತಿಲ್ಲ’.

“ಯಕ್ಷ ಪ್ರಮುಖರೂ ಸೇನಾಪತಿಗಳೂ ಮಹಾಸೇನಾಪತಿಗಳೂ ಯಾರು ?

“ಇಂದ ಸೋಮ ವರುಣ ಭಾರದ್ವಾಜ ಪಜಾಪಿತ ಚಂದನ ಕಾಮಸೆಟ್ಠ ಕಿನ್ನ ಘಂಡು ನಿಘಂಡು ಪನಾದ ಓಪಮಞ್ಞಂ ದೇವಸುತ ಮಾತಲಿ ಚಿತ್ತ ಸೇನ ಗಂಧಬ್ಬ ನಳರಾಜ ಜನೇಸಬಿ ಸಾತಗಿರಿ ಹೇಮವತ ಪುಣ್ಣಕ ಕರತಿಯ ಗುಳ ಸಿವಕ ಮಾಚಲಿಂದಜ ವೇಸ್ಸಮಿತ್ತ ಯುಗಂಧರ ಗೋಪಾಲ ಸುಪ್ಪ ರೋಧ ಹಿರಿನೇತ್ತಿ ಮಂದಿಯ ಸಂಚಾಲ ಚಂಡ ಅಳವಕ ಪಜ್ಜುನ್ನು ಸಮನ ಸುಮುಖ ದಧಿಮಖ ಮಣಿ ಮಣಿವರ ದೀಘ ಸೇರೀಸಕ48 - ಇವರೆಲ್ಲರೂ ಯಕ್ಷ ಪ್ರಮುಖರು ಸೇನಾಪತಿಗಳು ಮಹಾಸೇನಾಪತಿಗಳು. ಇವನ್ನು ಕುರಿತು ಅಬ್ಬರಿಸಬೇಕು, ಕಿರಿಚಿಕೊಳ್ಳಬೇಕು ಅರಿಚಿಕೊಳ್ಳಬೇಕು- ‘ಈ ಯಕ್ಷನು ನನ್ನನ್ನು ಹಿಡಿದುಕೊಂಡಿದ್ದಾನೆ, ಈ ಯಕ್ಷನು ಬಾಧಿಸುತ್ತಿದ್ದಾನೆ, ಈ ಯಕ್ಷನು ಪೀಡಿಸುತ್ತಿದ್ದಾನೆ, ಈ ಯಕ್ಷನು ನೋಯಿಸುತ್ತಿದ್ದಾನೆ, ಈ ಯಕ್ಷನು ಹಿಂಸಿಸುತ್ತಿದ್ದಾನೆ, ಈ ಯಕ್ಷನು ಅತಿ ಹಿಂಸೆಯನ್ನು ಕೊಡುತ್ತಿದ್ದಾನೆ, ಇವನು ನನ್ನನ್ನು ಬಿಡುತ್ತಿಲ್ಲ’.

“ಪೂಜ್ಯರೇ, ಈ ಆಟಾನಾಟಿಯ ಸುತ್ತವು ಭಿಕ್ಷುಗಳ ಭಿಕ್ಷುಣಿಯರ ಉಪಾಸಕರ ಉಪಾಸಿಕೆಯರ ರಕ್ಷಣೆಯಾಗಿದೆ. ಅವರಿಗೆ ಭದ್ರತೆ ರಕ್ಷಣೆಗಳನ್ನು ಕೊಡುತ್ತದೆ, ಕೇಡನ್ನು ತಪ್ಪಿಸುತ್ತದೆ. ಪೂಜ್ಯರೇ, ನಾವಿನ್ನು ಹೋಗುತ್ತೇವೆ, ಮಾಡಲು ಬಹಳ ಕೆಲಸವಿದೆ.”

“ನಿಮಗೆ ಸೂಕ್ತ ತೋರಿದಂತೆ ಮಾಡಬಹುದು.”

“ಆನಂತರ ಆ ನಾಲ್ಕು ಮಹಾರಾಜ ದೇವತೆಗಳು ತಮ್ಮ ಆಸನಗಳಿಂದ ಎದ್ದು ನನ್ನನ್ನು ಅಭಿವಂದಿಸಿ ಪ್ರದಕ್ಷಿಣೆ ಮಾಡಿ ಅಂತರ್ಧಾನರಾದರು. ಹಾಗೆಯೇ ಕೆಲವು ಯಕ್ಷರೂ ತಮ್ಮ ಆಸನಗಳಿಂದ ಎದ್ದು ನನಗೆ ಅಭಿವಂದಿಸಿ ಪ್ರದಕ್ಷಿಣೆ ಮಾಡಿ ಅಂತರ್ಧಾನರಾದರು. ಕೆಲವು ಯಕ್ಷರು ನನಗೆ ಕುಶಲ ಹೇಳಿ ಅಂತರ್ಧಾನರಾದರು. ಕೆಲವರು ಅಂಜಲೀಬದ್ಧರಾಗಿ ಪ್ರಣಾಮ ಮಾಡಿ ಅಂತರ್ಧಾನರಾದರು. ಮತ್ತೆ ಕೆಲವರು ನಾಮಗೋತ್ರಗಳನ್ನು ಹೇಳಿ ಅಂತರ್ಧಾನರಾದರು. ಇನ್ನೂ ಕೆಲವರು ಮೌನರಾಗಿಯೇ ಅಂತರ್ಧಾನರಾದರು.

“ಭಿಕ್ಷುಗಳೇ, ಆಟಾನಾಟಿಯ ರಕ್ಷಣಾ ಸುತ್ತವನ್ನು ಚೆನ್ನಾಗಿ ಗ್ರಹಿಸಿರಿ, ಅದನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಿ, ಮನಸ್ಸಿನಲ್ಲಿ ನಿಲ್ಲುವಂತೆ ಕಂಠಪಾಠ ಮಾಡಿ. ಅರ್ಥವತ್ತಾದ ಈ ಆಟಾನಾಟಿಯ ಸುತ್ತವು ಭಿಕ್ಷುಗಳಿಗೂ ಭಿಕ್ಷುಣಿಯರಿಗೂ ಉಪಾಸಕರಿಗೂ ಉಪಾಸಿಕೆಯರಿಗೂ ರಕ್ಷಣೆಯನ್ನು ಕೊಡುತ್ತದೆ. ಭದ್ರತೆಯನ್ನು ಕೊಡುತ್ತದೆ. ಕೇಡಿನಿಂದ ಪಾರುಮಾಡುತ್ತದೆ.

ಹೀಗೆ ಭಗವಾನರು ಹೇಳಿದರು. ಭಗವಾನರ ಮಾತಿನಿಂದ ಆನಂದ ಹೊಂದಿದ ಭಿಕ್ಷುಗಳು ಸಂತುಷ್ಟರಾದರು.

ಇಲ್ಲಿಗೆ ಆಟಾನಾಟಿಯ ಸುತ್ತ ಮುಗಿಯಿತು.

ಟಿಪ್ಪಣಿಗಳು [2]