ಹೀಗೇ ಕೇಳಿದ್ದೇನೆ; ಒಮ್ಮೆ ಭಗವಾನರು ಮಲ್ಲರಿಗೆ ಸೇರಿದ ಪ್ರದೇಶದಲ್ಲಿ ಸಂಚರಿಸುತ್ತ ಅವರಿಗೆ ಸೇರಿದ ಪಾವಾ ನಗರಕ್ಕೆ ಬಂದರು. ಅವರ ಜೊತೆಯಲ್ಲಿ ಐನೂರು ಭಿಕ್ಷುಗಳ ಒಂದು ದೊಡ್ಡ ಸಂಘವಿತ್ತು. ಆ ನಗರದ ಕಮ್ಮಾರಚುಂದನ ಆಮ್ರವನದಲ್ಲಿ ತಂಗಿದ್ದರು.
ಉಬ್ಬತಕರ ಹೊಸ ಸಭಾಭವನ
ಆಗ ಸಮಣರೂ ಬ್ರಾಹ್ಮಣರೂ ಅಥವಾ ಇತರ ಮನುಷ್ಯರೂ ಇರಬಹುದಾದ ಉಬ್ಬಿತಕವೆಂಬ ಹೆಸರಿನ ಮಲ್ಲರ ಹೊಸ ಸಭಾ ಭವನವು ನಿರ್ಮಿತವಾಗಿ ಬಹುಕಾಲವಾಗಿರಲಿಲ್ಲ. ಆಗ ಪಾವೆಯ ಮಲ್ಲರು ಈ ಸುದ್ದಿಯನ್ನು ಕೇಳಿದರು- ‘ಐನೂರು ಭಿಕ್ಷುಗಳನ್ನೊಳಗೊಂಡ ಒಂದು ದೊಡ್ಡ ಭಿಕ್ಷುಗಳ ಸಮೂಹದೊಡನೆ ಭಗವಾನರು ಮಲ್ಲರ ರಾಜ್ಯದಲ್ಲಿ ಸಂಚರಿಸುತ್ತಾ ಪಾವೆಗೆ ಬಂದಿದ್ದಾರೆ. ಕಮ್ಮಾರನಾದ ಚುಂದನಿಗೆ ಸೇರಿದ ಆಮ್ರವನದಲ್ಲಿ ತಂಗಿದ್ದಾರೆ’. ಪಾವೆಯ ಆ ಮಲ್ಲರು ಭಗವಾನರ ಬಳಿಗೆ ಹೋದರು. ಭಗವಾನರಿಗೆ ಅಭಿವಂದಿಸಿ ಒಂದುಕಡೆ ಕುಳಿತುಕೊಂಡರು. ಆಮೇಲೆ ಭಗವಾನರನ್ನು ಕುರಿತು ಇತೆಂದರು: “ಸಮಣರೂ ಬ್ರಾಹ್ಮಣರೂ ಮನುಷ್ಯರೂ ಇರಬಹುದಾದ ಉಬ್ಭಿತಕ ಹೆಸರಿನ ಹೊಸ ಸಭಾ ಭವನವು ನಿರ್ಮಿತವಾಗಿ ಬಹುಕಾಲವಾಗಿಲ್ಲ. ತಾವು ಮೊದಲಿಗರಾಗಿ ಅದನ್ನು ಪ್ರವೇಶಿಸಿ ಉಳಿದುಕೊಳ್ಳಬೇಕು. ತಾವು ಮೊದಲು ಉಳಿದುಕೊಂಡರೆ ಪಾವೆಯ ಮಲ್ಲರಿಗೆ ತುಂಬ ಸಂತೋಷವಾಗುತ್ತದೆ. ಅವರಿಗೆ ಬಹು ದೀರ್ಘಕಾಲ ಹಿತಸುಖಗಳು ಉಂಟಾಗುತ್ತವೆ”. ಭಗವಾನರು ತಮ್ಮ ಮೌನದ ಮೂಲಕ ತಮ್ಮ ಒಪ್ಪಿಗೆಯನ್ನು ಕೊಟ್ಟರು.
ಭಗವಾನರು ಅಲ್ಲಿರುವುದಕ್ಕೆ ಒಪ್ಪಿಗೆಯನ್ನು ಕೊಟ್ಟಿರುವುದು ತಿಳಿದಮೇಲೆ ಪಾವೆಯ ಮಲ್ಲರು ಅಲ್ಲಿಂದೆದ್ದು ಭಗವಾನರಿಗೆ ನಮಸ್ಕರಿಸಿ ಪ್ರದಕ್ಷಿಣೆಯನ್ನು ಮಾಡಿ ಅಲ್ಲಿಂದ ನಿಷ್ಕ್ರಮಿಸಿ ಸಭಾಭವನದ ಕಡೆಗೆ ಹೊರಟರು. ಅಲ್ಲಿ ಇಡೀ ಸಭಾಭವನಕ್ಕೆ ರತ್ನಗಂಬಳಿಯನ್ನು ಹರಡಿ ಭಗವಾನರ ಆಸನವನ್ನು ಸಿದ್ಧಗೊಳಿಸಿ ನೀರಿನ ಪಾತ್ರೆಯನ್ನಿಟ್ಟು ಎಣ್ಣೆಯ ದೀಪವನ್ನು ಸರಿಪಡಿಸಿ ಭಗವಾನರ ಬಳಿಗೆ ಮತ್ತೆ ಬಂದರು. ಭಗವಾನರಿಗೆ ಅಭಿವಂದಿಸಿ ಒಂದುಕಡೆ ನಿಂತುಕೊಂಡರು. ಆಮೇಲೆ ಭಗವಾನರನ್ನು ಕುರಿತು ಇಂತೆಂದರು- “ಇದೇ ಸಭಾ ಭವನದಲ್ಲಿ ಆಸನವನ್ನು ಹರಡಿದ್ದೇವೆ. ನೀರಿನ ಪಾತ್ರೆಯನ್ನು ಇಟ್ಟಿದ್ದೇವೆ. ಭಗವಾನರಿಗೆ ಉಚಿತ ತೋರಿದಂತೆ ಮಾಡಬಹುದು.”
ಭಗವಾನರು ತಮ್ಮ ಪಿಂಡಪಾತ್ರೆ ಚೀವರಗಳ ಸಮೇತ ಭಿಕ್ಷು ಸಂಘದೊಡನೆ ಆ ಸಭಾ ಭವನದ ಕಡೆಗೆ ಹೊರಟರು. ತಮ್ಮ ಕಾಲುಗಳನ್ನು ತೊಳೆದುಕೊಂಡು ಸಭಾಭವನವನ್ನು ಪ್ರವೇಶಿಸಿ ಮಧ್ಯದ ಕಂಬದ ಬಳಿ ಪೂರ್ವಾಭಿಮುಖವಾಗಿ ಕುಳಿತರು. ಭಿಕ್ಷುಗಳು ತಮ್ಮ ಪಾದಗಳನ್ನು ತೊಳೆದುಕೊಂಡು ಸಭಾಭವನವನ್ನು ಪ್ರವೇಶಿಸಿ ಪಶ್ಚಿಮದ ಗೋಡೆಯನ್ನೊರಗಿಕೊಂಡು ಪೂರ್ವಾಭಿಮುಖವಾಗಿ ಕುಳಿತರು. ಪಾವೆಯ ಮಲ್ಲರು ತಾವೂ ತಮ್ಮ ಕಾಲುಗಳನ್ನು ತೊಳೆದುಕೊಂಡು ಸಭಾಭವನವನ್ನು ಪ್ರವೇಶಿಸಿ ಪೂರ್ವ ದಿಕ್ಕಿಗಿರುವ ಗೋಡೆಯನ್ನೊರಗಿಕೊಂಡು ಭಗವಾನರ ಎದುರಿಗೆ ಪಶ್ಚಿಮಾಭಿಮುಖವಾಗಿ ಕುಳಿತರು. ಅವರು ಪಾವೆಯ ಮಲ್ಲರಿಗೆ ರಾತ್ರಿ ಬಹುಹೊತ್ತು ಧಮ್ಮವನ್ನು ಬೋಧಿಸಿ ಅವರನ್ನು ತೃಪ್ತಿಗೊಳಿಸಿದರು, ಆನಂದಗೊಳಿಸಿದರು, ಸ್ಫೂರ್ತಿಗೊಳಿಸಿದರು, ಉತ್ತೇಜನಗೊಳಿಸಿದರು. “ವಾಸೆಟ್ಠರೇ, ರಾತ್ರಿಯು ಎಷ್ಟು ಸುಂದರವಾಗಿದೆ! ನಿಮಗೆ ಎಷ್ಟು ಕಾಲವಾಗಿದೆ ಎಂಬುದು ತಿಳಿದಿರಬೇಕಲ್ಲವೇ?” “ಹೌದು ಭಂತೆ, ಕಾಲವಾಗಿದೆ” ಎಂದು ಭಗವಾನರಿಗೆ ಪ್ರತ್ಯುತ್ತರವಿತ್ತು, ತಮ್ಮ ಆಸನದಿಂದೆದ್ದು ಭಗವಾನರನ್ನು ಅಭಿವಂದಿಸಿ ಪ್ರದಕ್ಷಿಣೆ ಮಾಡಿ ಅವರನ್ನು ಬೀಳ್ಕೊಂಡರು.
ಪಾವೆಯ ಮಲ್ಲರು ಹೊರಟು ಹೋದಮೇಲೆ ಸ್ವಲ್ಪಕಾಲದವರೆಗೆ ಭಿಕ್ಷು ಸಂಘವೆಲ್ಲಾ ಮೌನವಾಗಿ ಕುಳಿತಿರುವುದನ್ನು ನೋಡಿ ಆಯುಷ್ಮಂತನಾದ ಸಾರಿಪುತ್ತನನ್ನು ಕುರಿತು ಇಂತೆಂದರು: “ಸಾರಿಪುತ್ತ, ಭಿಕ್ಷು ಸಂಘಕ್ಕೆ ಆಲಸಿಕೆಯಾಗಲೀ ಬೇಸರವಾಗಲೀ ಇಲ್ಲ. ಭಿಕ್ಷು ಸಂಘಕ್ಕೆ ನೀನೇ ಧಮ್ಮವನ್ನು ಬೋಧಿಸು. ನನ್ನ ಬೆನ್ನು ನೋಯುತ್ತಿದೆ, ನಾನು ಹಾಗೆಯೇ ಒರಗಿಕೊಳ್ಳುತ್ತೇನೆ”. “ಭಂತೆ, ಹಾಗೆಯೇ ಆಗಲಿ” ಎಂದು ಆತನು ಭಗವಾನರಿಗೆ ಹೇಳಿದನು. ಆಮೇಲೆ ಭಗವಾನರು ತಮ್ಮ ಬಟ್ಟೆಯನ್ನು ನಾಲ್ಕು ಪದರಗಳನ್ನಾಗಿ ಮಾಡಿ ಹಾಸಿಕೊಂಡು ಬಲ ಮಗ್ಗುಲಿನಲ್ಲಿ ತಮ್ಮ ಒಂದು ಕಾಲನ್ನು ಪದರಗಳನ್ನಾಗಿ ಮಾಡಿ ಹಾಸಿಕೊಂಡು ಬಲ ಮಗ್ಗುಲಿನಲ್ಲಿ ತಮ್ಮ ಒಂದು ಕಾಲನ್ನು ಮತ್ತೊಂದರ ಮೇಲೆ ಇಟ್ಟುಕೊಂಡು ಸಿಂಹವು ಮಲಗಿದಂತೆ ಮಲಗಿದರು. ಮನಸ್ಸು ಜಾಗೃತವಾಗಿತ್ತು. ಎಷ್ಟು ಹೊತ್ತಿಗೆ ಏಳಬೇಕೆಂದು ಮನಸ್ಸು ಮಾಡಿಕೊಂಡರು.
ನಿಗಂಠರಲ್ಲಿ ಭಿನ್ನತೆ
ಆಗ ನಿಗಂಠ ನಾಟಪುತ್ತನು ಪಾವೆಯಲ್ಲಿ ಕಾಲವಾಗಿದ್ದನು. ಆತನು ಕಾಲವಾದ ನಂತರ ಅವನ ಶಿಷ್ಯರು ಇಬ್ಭಾಗವಾಗಿ ಕಲಹ ವಿವಾದಗಳಲ್ಲಿ ನಿರತರಾಗಿ ಪರಸ್ಪರ ದೂಷಿಸಿಕೊಂಡು ಇರುತ್ತಿದ್ದರು- “ನಿನಗೆ ಈ ಧಮ್ಮ ವಿನಯಗಳು ಗೊತ್ತಿಲ್ಲ. ನನಗಾದರೋ ಇವು ಗೊತ್ತು. ನಿನಗೆ ಧಮ್ಮ ವಿನಯಗಳು ಏನೇನೂ ಗೊತ್ತಿಲ್ಲ! ನೀನು ಮಿಥ್ಯಾದೃಷ್ಟಿಯುಳ್ಳವನು, ನಾನಾದರೋ ಸಮ್ಯಕ್ ದೃಷ್ಟಿಯುಳ್ಳವನು. ನಾನು ತಿಳಿದವನು, ನೀನು ತಿಳಿಯದವನು. ಮೊದಲು ಹೇಳಬೇಕಾದುದನ್ನು ಆಮೇಲೆ ಹೇಳುತ್ತೀಯೆ, ಆಮೇಲೆ ಹೇಳಬೇಕಾದುದನ್ನು ಮೊದಲೇ ಹೇಳಿಬಿಡುತ್ತೀಯೆ. ನಿನ್ನ ವ್ಯಾಖ್ಯಾನವೆಲ್ಲವೂ ತಲೆಕೆಳಗಾಗಿ ಹೋಗಿದೆ. ನಿನ್ನ ವಾದವನ್ನು ಎದುರಿಸಿದ್ದೇನೆ. ನೀನು ಸೋತು ಹೋಗಿದ್ದೀಯೆ. ನಿನ್ನ ವಾದವನ್ನು ಬಿಟ್ಟುಬಿಡು. ಇಲ್ಲದೆ ಹೋದಲ್ಲಿ ವಾದದಿಂದ ನಿವೃತ್ತನಾಗು.” ನಿಗಂಠ ನಾಟಪುತ್ತನ ಶಿಷ್ಯರು ಕೊಲ್ಲಲೂ ಹೇಸುತ್ತಿರಲಿಲ್ಲ. ನಿಗಂಠ ನಾಟಪುತ್ತನ ಬಿಳಿಯ ಬಟ್ಟೆಯ ಗೃಹಸ್ಥ ಶಿಷ್ಯರು ಆ ಶಿಷ್ಯರ ಬಗೆಗೆ ಜಿಗುಪ್ಸೆಗೊಂಡರು, ಖೇದಗೊಂಡರು, ಕೋಪಗೊಂಡರು. ಸಂಬುದ್ಧನಲ್ಲದವನಿಂದ ಬೋಧಿತವಾದ ಆ ಧರ್ಮ ವಿನಯಗಳು ತುಂಬ ಕೆಟ್ಟದ್ದಾಗಿದ್ದುವು. ಸಮರ್ಪಕವಾಗಿ ವಿವರವಾಗಿರಲಿಲ್ಲ. ಒಳ್ಳೆಯ ಗುರಿಗೆ ಕೊಂಡೊಯ್ಯುತ್ತಿರಲಿಲ್ಲ. ಶಾಂತಿಯನ್ನು ಕೊಡುವಂಥದಾಗಿರಲಿಲ್ಲ. ರಕ್ಷಣೆಯನ್ನು ಕೊಡುವಂಥದಾಗಿಲ್ಲ.
ಆಗ ಆಯುಷ್ಮಂತನದ ಸಾರಿಪುತ್ತನು ಭಿಕ್ಷು ಸಂಘವನ್ನು ಉದ್ದೇಶಿಸಿ ಹೀಗೆ ಹೇಳಿದನು: “ಗೆಳೆಯರೆ, ನಿಗಂಠನಾಟಪುತ್ತನು ಕಾಲವಾಗಿ ಹೋಗಿದ್ದಾನೆ. ಅವನು ಕಾಲವಾದನಂತರ ಅವನ ಶಿಷ್ಯರು ಇಬ್ಭಾಗವಾಗಿ ರಕ್ಷಣೆಯನ್ನು ಕೊಡುವಂಥದಾಗಿಲ್ಲ.
“ಗೆಳೆಯರೇ, ಸಮ್ಮಾಸಂಬುದ್ಧನಲ್ಲದವನಿಂದ ಬೋಧಿತವಾದ ಧಮ್ಮ ವಿನಯಗಳು ಚೆನ್ನಾಗಿ ವಿವರಿಸಲ್ಪಟ್ಟಿಲ್ಲ. ಒಳ್ಳೆಯ ಗುರಿಯ ಕಡೆ ಕೊಂಡೊಯ್ಯುವಂಥದಲ್ಲ, ಶಾಂತಿಯನ್ನು ಕೊಡುವಂಥವಲ್ಲ, ಸಮ್ಮಾಸಂಬುದ್ಧರಾದ ಭಗವಾನರ ಧಮ್ಮವಾದರೋ ಚೆನ್ನಾಗಿ ವಿವರಿಸಲ್ಪಟ್ಟಿದೆ. ಒಳ್ಳೆಯ ಗುರಿಯನ್ನು ಮುಟ್ಟಿಸುತ್ತದೆ, ಶಾಂತಿಯನ್ನು ಕೊಡುತ್ತದೆ. ಇದನ್ನು ಎಲ್ಲರೂ ಒಟ್ಟಾಗಿ ಪಠಿಸಬೇಕು. ಬಹುಜನ ಸುಖಕ್ಕಾಗಿ ಬಹುಜನ ಹಿತಕ್ಕಾಗಿ ಲೋಕದ ಮೇಲಿನ ಅನುಕಂಪೆಯಿಂದ ದೇವತೆಗಳ ಮನುಷ್ಯರ ಸುಖ ಹಿತಗಳಿಗಾಗಿ ಬೋಧಿತವಾಗಿರುವ ಈ ಧಮ್ಮದ ಬಗೆಗೆ ವಿವಾದ ಬೇಡವೇ ಬೇಡ. ಶ್ರೇಷ್ಠವಾದ ಈ ಜೀವನವು ಬಹುಕಾಲ ಉಳಿಯುವಂತಾಗುವಂತೆ ಒಟ್ಟಿಗೆ ಪಠಿಸಿ. ಗೆಳೆಯರೇ, ಸಮ್ಮಾಸಂಬುದ್ಧರಿಂದ ಬೋಧಿಸಲ್ಪಟ್ಟು ಒಳ್ಳೆಯ ದಾರಿಯಲ್ಲಿ ತೆಗೆದುಕೊಂಡು ಹೋಗಿ ಒಳ್ಳೆಯ ಗುರಿಯನ್ನು ಮುಟ್ಟಿಸುವಂಥ ಶಾಂತಿಯನ್ನು ಕೊಡುವಂಥ ಭಗವಾನರ ಈ ಧಮ್ಮವು ನಮಗೆ ಬೋಧಿತವಾಗಿರುವುದ ಹೇಗೆ? ವಾದ ವಿವಾದಗಳಲ್ಲಿ ಸಿಕ್ಕಿಸದ ಬಹುಜನರ ಹಿತ ಸುಖಗಳಿಗಾಗಿ ದೇವತೆಗಳ ಮತ್ತು ಮನುಷ್ಯರ ಹಿತಕ್ಕಾಗಿ ಲೋಕದ ಮೇಲಿನ ಅನುಕಂಪೆಯಿಂದ ಬೋಧಿತವಾಗಿರುವ ಈ ಧಮ್ಮವನ್ನು ಒಟ್ಟಾಗಿ ಪಠಿಸುವುದು ಹೇಗೆ?
ಒಂದಂಶದವುಗಳು
“ಸಮ್ಮಾಸಂಬುದ್ಧರೂ ಅರಹಂತರೂ ಆದ ಭಗವಾನರೇ ಅರಿತುಕೊಂಡಿರುವ ವಿವಾದಾತೀತವಾದ ಬಹುಜನ ಹಿತ ಸುಖಗಳಿಗಾಗಿ ದೇವತೆಗಳ ಮತ್ತು ಮನುಷ್ಯರ ಸುಖ ಹಿತಗಳಿಗಾಗಿ ಲೋಕದ ಮೇಲಿನ ಅನುಕಂಪೆಯಿಂದ ಅರುಹಿರುವ ಈ ಧಮ್ಮವನ್ನು ಎಲ್ಲರೂ ಒಟ್ಟಿಗೆ ಪಠಿಸಬೇಕು. ಧರ್ಮವು ಒಂದು ಅಂಶದಿಂದ ಕೂಡಿದೆ ಎಂದು ಹೇಳುತ್ತಾರೆ. ಆ ಒಂದಂಶ ಯಾವುದು? ಎಲ್ಲ ಜೀವಿಗಳೂ ಆಹಾರವನ್ನೇ ಅವಲಂಬಿಸಿವೆ. ಎಲ್ಲ ಜೀವಿಗಳೂ ಸಂಖಾರದಿಂದ ಕೂಡಿವೆ. ಈ ಧರ್ಮವನ್ನು ಭಗವಾನರು ಅರಿತಿದ್ದಾರೆ, ಕಂಡಿದಾರೆ. ವಿವಾದವಿರಬಾರದ ಶ್ರೇಷ್ಠವಾದ ಜೀವನವು ಬಹುಕಾಲ ಉಳಿಯುವಂತೆ ಬಹುಜನ ಸುಖ ಹಿತಗಳಿಗಾಗಿ ದೇವತೆಗಳ ಮತ್ತು ಮನುಷ್ಯರ ಸುಖ ಹಿತಗಳಿಗಾಗಿ ಸಮ್ಮಾಸಂಬುದ್ಧರು ಅರುಹಿರುವ ಈ ಧಮ್ಮವನ್ನು ಎಲ್ಲರೂ ಒಟ್ಟಿಗೆ ಪಠಿಸಬೇಕು.
ಎರಡಂಶದವುಗಳು
“ಧರ್ಮವು ಎರಡರಿಂದಾಗಿದೆ ಎಂಬುದನ್ನು ಸಮ್ಮಾಸಂಬುದ್ಧರೂ ಅರಹಂತರೂ ಆದ ಭಗವಾನರು ತಾವೇ ಅರಿತಿದ್ದಾರೆ, ಕಂಡಿದ್ದಾರೆ. ವಿವಾದಾತೀತವಾದ ಶ್ರೇಷ್ಠವಾದ ಜೀವನವು ಬಹುಕಾಲ ಉಳಿಯುವಂತೆ ಬಹುಜನರ ಸುಖಕ್ಕಾಗಿ ಬಹುಜನರ ಹಿತಕ್ಕಾಗಿ ದೇವತೆಗಳ ಮತ್ತು ಮನುಷ್ಯರ ಸುಖ ಮತ್ತು ಹಿತಕ್ಕಾಗಿ ಲೋಕಾನುಕಂಪೆಯಿಂದ ಭಗವಾನರು ಅರುಹಿರುವ ಧಮ್ಮವನ್ನು ಎಲ್ಲರೂ ಪಠಿಸಬೇಕು. ಆ ಎರಡು ಯಾವುವು?
“ನಾಮ ಮತ್ತು ರೂಪ. ಅವಿಜ್ಜಾ ಮತ್ತು ಭವತಣ್ಹಾ. ಭವದಿಟ್ಠಿ ಮತ್ತು ಇತರರು ತನ್ನಲ್ಲಿಟ್ಟಿರುವ ವಿಶ್ವಾಸ. ಹ್ರೀ ಮತ್ತು ವಿವೇಚನೆ ನಮ್ರತೆ ಇಲ್ಲದಿರುವುದು ಮತ್ತು ಪಾಪಿಗಳ ಸಂಗ, ನಮ್ರತೆ ಮತ್ತು ಸತ್ಸಂಗ. ಮಾಡಬಾರದುದರ ಬಗೆಗಿರುವ ಜ್ಞಾನ ಮತ್ತು ಅವುಗಳನ್ನು ಮಾಡದಿರುವ ಕೌಸಲ್ಯ. ಸಾಧಿಸಬೇಕಾದುದರ ಬಗೆಗೆ ಇರುವ ಜ್ಞಾನ ಮತ್ತು ಅವುಗಳನ್ನು ಪಡೆಯುವ ಕೌಶಲ್ಯ. ಧಾತುಗಳ ಬಗೆಗಿರುವ ಜ್ಞಾನ ಮತ್ತು ಅವುಗಳನ್ನು ತಿಳಿಯಬೇಕೆಂಬ ಮನಸ್ಸು. ಆಯತನ ಬಗೆಗಳಿಗಿರಬೇಕಾದ ಜ್ಞಾನ ಮತ್ತು ಪಟಿಚ್ಚ ಸಮುಪ್ಪಾದದ ಬಗೆಗಿರುವ ಜ್ಞಾನ. ಕಾರಣಗಳ ಬಗೆಗಿರಬೇಕಾದ ಜ್ಞಾನ, ಕಾರಣಾತೀತವಾದುದರ ಬಗೆಗಿನ ಜ್ಞಾನ. ಅರ್ಜದ ಮತ್ತು ಲಜ್ಜೆ. ಸಹಿಷ್ಣುತೆ ಮತ್ತು ವಿನಯ. ಮಾರ್ದವತೆ ಮತ್ತು ನಮ್ರತೆ. ಹಿಂಸಾಭಾವನೆಯಿಲ್ಲದಿರುವುದು ಮತ್ತು ಪ್ರೇಮದಿಂದ ಕೂಡಿರುವುದು. ಮರವು ಮತ್ತು ದಡ್ಡತನ. ಸ್ಮೃತಿ ಮತ್ತು ವಿವೇಕ, ಇಂದ್ರಿಯ ಲೋಲುಪತೆ ಮತ್ತು ಹೊಟ್ಟೆಬಾಕತನ. ಇಂದ್ರಿಯಗಳ ರಕ್ಷಣೆ ಮತ್ತು ಊಟದಲ್ಲಿ ಮಿತಿ. ವಿವೇಚನಾ ಸಾಮರ್ಥ್ಯ ಮತ್ತು ಬೆಳೆಯಬಲ್ಲ ಸಾಮರ್ಥ್ಯ. ಸ್ಮೃತಿ ಬಲ ಮತ್ತು ಸಮಾಧಿ ಬಲ. ಸಮತ ಮತ್ತು ವಿಪಸ್ಸನ. ಮನಸ್ಸಿನ ಸಮತೆಗೆ ಇರಬೇಕಾದ ಕಾರಣಗಳು ಮತ್ತು ಮನಸ್ಸು ವಿಷಯಗಳನ್ನು ಗ್ರಹಿಸಲು ಬೇಕಾದ ಕಾರಣಗಳು. ಗ್ರಹಣಶಕ್ತಿ ಮತ್ತು ಸಮಸ್ಥಿತಿ. ಶೀಲ ಭ್ರಷ್ಟತೆ ಮತ್ತು ದೃಷ್ಟಿಪಥನ. ಶೀಲ ಸಾಧನೆ ಮತ್ತು ಒಳ್ಳೆಯ ದೃಷ್ಟಿ. ಶೀಲ ಶುದ್ಧಿ ಮತ್ತು ದೃಷ್ಟಿ ಶುದ್ಧಿ. ದೃಷ್ಟಿ ಶುದ್ಧಿ ಮತ್ತು ನಂಬಿಕೆಗೆ ತಕ್ಕಂತೆ ನಡೆಯಲು ಮಾಡಬೇಕಾದ ಹೋರಾಟ, ತಳಮಳಗೊಳ್ಳುತ್ತಿರುವ ಕಾರಣಗಳ ಉಪಶಮನಕ್ಕೆ ಆಗಬೇಕಾದ ಪ್ರಯತ್ನ ಮತ್ತು ಸಾಧನೆ. ಸಾಧಿಸುದುದರ ಬಗೆಗೆ ಅಸಂತುಷ್ಟಿ ಮತ್ತು ಸಾಧಿಸಿದುದನ್ನು ಎಚ್ಚರಿಕೆಯಿಂದ ಉಳಿಸಿಕೊಳ್ಳುವ ಕೌಶಲ್ಯ. ವಿದ್ಯೆ ಮತ್ತು ವಿಮುಕ್ತಿ (ವಿಜ್ಜಾ ಮತ್ತು ವಿಮುಕ್ತಿ). ನಿರ್ಮೂಗೊಳಿಸಬೇಕಾದುದರ ಬಗೆಗೆ ಜ್ಞಾನ ಮತ್ತು ಅವುಗಳ ಅನುತ್ಪತ್ತಿಯ ಜ್ಞಾನ.
“ಈ ಎರಡು ಅಂಶಗಳಿಂದ ಕೂಡಿರುವ ಧಮ್ಮವನ್ನು ತಾವೇ ಅರಿತು ಕಂಡು ಅರಹಂತರೂ ಸಮ್ಮಾಸಂಬುದ್ಧರೂ ಆದ ಭಗವಾನರು ಸ್ಪಷ್ಟವಾಗಿ ಬೋಧಿಸಿದ್ದಾರೆ. ಇದನ್ನು ಎಲ್ಲರೂ ಒಟ್ಟಾಗಿ ಪಠಿಸಬೇಕು. ಬಹುಜನ ಹಿತಕ್ಕಾಗಿ ಬಹುಜನ ಸುಖಕ್ಕಾಗಿ ಲೋಕದ ಮೇಲಿನ ಅನುಕಂಪೆಯಿಂದ ದೇವತೆಗಳ ಸುಖಕ್ಕಾಗಿ ಹಿತಕ್ಕಾಗಿ ಬೋಧಿತವಾಗಿರುವ ಧಮ್ಮದ ಬಗೆಗೆ ವಿವಾದ ಬೇಡವೇ ಬೇಡ. ಶ್ರೇಷ್ಠವಾದ ಜೀವನವು ಬಹುಕಾಲ ಉಳಿಯಲು ಇದನ್ನು ಒಟ್ಟಿಗೆ ಪಠಿಸಿ.
ಮೂರಂಶದವುಗಳು
“ಗೆಳೆಯರೇ, ಧರ್ಮವು ಮೂರರಿಂದಾಗಿದೆ ಎಂಬುದನ್ನು ಸಮ್ಮಾಸಂಬುದ್ಧರೂ ಅರಹಂತರೂ ಆದ ಭಗವಾನರು ತಾವೇ ಅರಿತಿದ್ದಾರೆ, ಕಂಡಿದ್ದಾರೆ. ವಿವಾದಾತೀತವಾದ... ಸುಖಕ್ಕಾಗಿ... ಎಲ್ಲರೂ ಒಟ್ಟಿಗೇ ಪಠಿಸಬೇಕು. ಆ ಮೂರು ಯಾವುವು?
“ಅಕುಶಲದ ಮೂಲಗಳು ಮೂರು- ಲೋಭ, ಮೋಹ ಮತ್ತು ದ್ವೇಷ. ಕುಶಲದ ಮೂಲಗಳು ಮೂರು- ಅಲೋಭ, ಅಮೋಹ ಮತ್ತು ಅದ್ವೇಷ. ಕೆಟ್ಟ ನಡವಳಿಕೆಗಳು ಆಗುವುದು ಮೂರರಿಂದ- ಕಾಯದಿಂದ, ಮಾತಿನಿಂದ, ಮನಸ್ಸಿನಿಂದ. ಒಳ್ಳೆಯ ನಡವಳಿಕೆಗಳು ಮೂರರಿಂದ- ಕಾಯದಿಂದ, ಮಾತಿನಿಂದ, ಮನಸ್ಸಿನಿಂದ. ಕೆಟ್ಟ ಭಾವನೆಗಳು ಮೂರು ಬಗೆಯವು- ಕಾಮ ಭಾವನೆ, ದ್ವೇಷ ಭಾವನೆ ಮತ್ತು ಹಿಂಸಾ ಭಾವನೆ. ಒಳ್ಳೆಯ ಭಾವನೆಗಳು ಮೂರು ಬಗೆಯವು- ನೇಕ್ಖಮ್ಮ, ಮೈತ್ರಿ ಮತ್ತು ಅಹಿಂಸಾಭಾವನೆ. ಕೆಟ್ಟ ಸಂಕಲ್ಪಗಳು ಮೂರು ಬಗೆಯವು- ಕಾಮ ಸಂಕಲ್ಪ, ದ್ವೇಷ ಸಂಕಲ್ಪ, ಹಿಂಸಿಸಬೇಕೆಂಬ ಸಂಕಲ್ಪ. ಒಳ್ಳೆಯ ಸಂಕಲ್ಪಗಳು ಮೂರು- ನೇಕ್ಖಮ್ಮ ಸಂಕಲ್ಪ, ಮೈತ್ರಿ ಸಂಕಲ್ಪ ಮತ್ತು ಹಿಂಸೆಯಿಂದ ದೂರವಾಗಿರಬೇಕೆಂಬ ಸಂಕಲ್ಪ. ಅಕುಶಲವಾದ ತಿಳಿವಳಿಕೆಗಳು ಮೂರು- ಕಾಮದಿಂದ ಕೂಡಿದ ತಿಳಿವಳಿಕೆ, ದ್ವೇಷದಿಂದ ಕೂಡಿದ ತಿಳಿವಳಿಕೆ, ಹಿಂಸೆಯಿಂದ ಕೂಡಿದ ತಿಳಿವಳಿಕೆ. ಒಳ್ಳೆಯ ತಿಳಿವಳಿಕೆಗಳು ಮೂರು- ನೇಕ್ಖಮ್ಮದ ಬಗೆಗಿನ ತಿಳಿವಳಿಕೆ, ಮೈತ್ರಿಯಿಂದ ಕೂಡಿದ ತಿಳಿವಳಿಕೆ ಮತ್ತು ಮೋಹದಿಂದ ಕೂಡಿದ ತಿಳಿವಳಿಕೆ. ಅಕುಶಲ ಧಾತುಗಳು ಮೂರು- ಕಾಮಧಾತು, ದ್ವೇಷ ಧಾತು, ಹಿಂಸಾ ಧಾತು. ಕುಶಲಧಾತುಗಳು ಮೂರು- ನೇಕ್ಖಮ್ಮ ಧಾತು, ಮೈತ್ರಿ ಧಾತು, ಅಹಿಂಸಾಧಾತು. ಬೇರೆ ಮೂರು ಧಾತುಗಳು- ಕಾಮಧಾತು, ರೂಪಧಾತು, ಅರೂಪಧಾತು ಮತ್ತೆ ಮೂರು ಧಾತುಗಳು- ರೂಪಧಾತು, ಅರೂಪಧಾತು, ನಿರೋಧ ಧಾತು. ಇನ್ನೂ ಮೂರು ಧಾತುಗಳು- ಹೀನ ಧಾತು, ಮಧ್ಯಮ ಧಾತು, ಶ್ರೇಷ್ಠ ಧಾತು. ತಣ್ಹಾಗಳು ಮೂರು- ಕಾಮ ತಣ್ಹಾ, ಭವ ತಣ್ಹಾ, ವಿಭವ ತಣ್ಹಾ. ಇನ್ನೂ ಮೂರು ತಣ್ಹಾಗಳು ಕಾಮ ತಣ್ಹಾ, ರೂಪತಣ್ಹಾ, ಅರೂಪ ತಣ್ಹಾ. ಮತ್ತೂ ಮೂರು ತಣ್ಹಾಗಳು - ರೂಪತಣ್ಹಾ, ಅರೂಪ ತಣ್ಹಾ, ನಿರೋಧ ತಣ್ಹಾ. ಮೂರು ಸಂಕೋಲೆಗಳು- ಸಕ್ಕಾಯದಿಟಿ (ಕಾಯವೇ ನಿಜ ಎಂಬ ನಂಬಿಕೆ), ಸಂಶಯ ಪಡುತ್ತಿರುವುದು, ಪೂಜೆ ವ್ರತಗಳಲ್ಲಿ ನಂಬಿಕೆಯಿಟ್ಟು ಅವುಗಳ ಆಚರಣೆಯಿಂದ ಸತ್ಯ ಸಾಕ್ಷಾತ್ಕಾರವಾಗುತ್ತದೆಂಬ ನಂಬಿಕೆ. ಆಸವಗಳು ಮೂರು- ಕಾಮಾಸವ, ಭವಾಸವ, ಅವಿಜ್ಜಾಸವ. ಭವಗಳು ಮೂರು- ಕಾಮಭವ, ರೂಪಭವ, ಅರೂಪಭವ. ಮೂರು ಹಂಬಲಗಳು- ಇಂದ್ರಿಯ ಸುಖಪಡಬೇಕೆಂಬ ಹಂಬಲ, ಬದುಕಬೇಕೆಂಬ ಹಂಬಲ, ಶ್ರೇಷ್ಠವಾದ ಜೀವನವನ್ನು ನಡೆಸಬೇಕೆಂಬ ಹಂಬಲ. ವಿಧಗಳು ಮೂರು- ನಾನು ಉತ್ತಮನೆಂಬುದು, ನಾನು ನಿನಗೆ ಸಮನೆಂಬುದು, ನಾನು ಹೀನನೆಂಬುದು. ಮೂರು ಕಾಲಗಳು- ಹಿಂದೆ ಆಗಿಹೋದದ್ದು, ಮುಂದೆ ಬರುವುದು ಮತ್ತು ಇಂದಿನದು. ಅಂತ್ಯಗಳು ಮೂರು- ಕಾಯದ ಅಂತ್ಯ, ಅದರ ಉತ್ಪತ್ತಿಯ ಅಂತ್ಯ, ಅದರ ನಿರೋಧದ ಅಂತ್ಯ. ವೇದನೆಗಳು ಮೂರು- ಸುಖವೇದನೆ, ದುಃಖವೇದನೆ, ದುಃಖವೂ ಅಲ್ಲದ ಸುಖವೂ ಅಲ್ಲದ ವೇದನೆ. ದುಃಖದ ಬಗೆಗಳು ಮೂರು- ಜೀವನದಲ್ಲಿ ಅನಿವಾರ್ಯವಾಗಿರುವ ಕೊರತೆ, ಪಞ್ಞಾದಲ್ಲಿ ಅನಿವಾರ್ಯವಾಗಿ ಕೂಡಿಕೊಂಡಿರುವ ದುಃಖ ಪರಿವರ್ತನ ಹೊಂದುತ್ತಿರುವುದರಿಂದ ಬರುವ ದುಃಖ. ರಾಶಿಗಳು ಮೂರು- ಮಿಥ್ಯಾ ಕರ್ಮಗಳಿಂದ ಅನಿವಾರ್ಯವಾಗಿ ಬರುವ ಫಲಗಳು,49 ಸಮ್ಯಕ್ ಕರ್ಮಗಳಿಂದ ಉಂಟಾಗುವ ಫಲಗಳು,50 ಯಾವ ಫಲವೂ ಉಂಟಾಗದಂಥ ಕರ್ಮಗಳು. ಮೂರು ಬಗೆಯ ಸಂದೇಹಗಳು- ಬುದ್ಧಿಗೆ ಏನೇನೂ ಗೋಚರವಾಗದೆ ಉಳಿಯುವ ಸಂದೇಹಗಳು- ಹಿಂದೆ ಆಗಿ ಹೋದುದರ ಬಗೆಗೆ ಸಂದೇಹಗಳು, ಮುಂದೆ ಆಗಬಹುದಾದರ ಬಗೆಗಿರುವ ಕುತೂಹಲ, ಇಂದಿನದರ ಬಗೆಗೆ ಇರುವ ಸಂದೇಹಗಳು. ತಥಾಗತನಾದವನು ರಕ್ಷಿಸಿಕೊಳ್ಳಬೇಕಾದುದರ ಅವಶ್ಯಕತೆ ಇರದ ಮೂರು ಆಚರಣೆಗಳಿವೆ- ತಥಾಗತನ ಪರಿಶುದ್ಧವಾದ ಕಾಯದಿಂದ ಆಗುವ ಕರ್ಮಗಳು ಅಂದರೆ ತಥಾಗತನಿಂದ ಎಂದೂ ಆಗದ ಕಾಯ ದುಷ್ಕರ್ಮಗಳು ಒಂದನೆಯದು. ‘ಬೇರಾರೂ ಇದನ್ನು ತಿಳಿಯಬಾರದು’ ಎಂಬ ಭಾವನೆ ಅವನಿಗೆ ಇರುವುದೇ ಇಲ್ಲ. ತಥಾಗತನ ಪರಿಶುದ್ಧವಾದ ವಚನದಿಂದ ಆಗುವ ಕರ್ಮಗಳು. ಅಂದರೆ ತಥಾಗತನಿಂದ ಎಂದೂ ವಚೀ ದುಷ್ಕರ್ಮಗಳು ಆಗುವುದಿಲ್ಲ. ತಥಾಗತನ ಪರಿಶುದ್ಧವಾದ ಮನಸ್ಸಿನಿಂದ ಆಗುವ ಕರ್ಮಗಳು ಅಂದರೆ ತಥಾಗತನಿಂದ ಎಂದೂ ಮನೋ ದುಷ್ಕರ್ಮಗಳು ಆಗುವುದೇ ಇಲ್ಲ. ಯಾವ ಸಂದರ್ಭದಲ್ಲಿಯೂ ‘ಬೇರಾರೂ ಇದನ್ನು ತಿಳಿಯಬಾರದು’ ಎಂಬ ಭಾವನೆ ಅವನಿಗೆ ಬರುವುದೇ ಇಲ್ಲ. ಮೂರು ಬಗೆಯ ಅಡ್ಡಿಗಳು- ರಾಗ, ದ್ವೇಷ ಮತ್ತು ಮೋಹದಿಂದಾಗುವ ಅಡ್ಡಿಗಳು. ಮೂರು ಬಗೆಯ ಅಗ್ನಿಗಳು- ರಾಗಾಗ್ನಿ, ದ್ವೇಷಾಗ್ನಿ, ಮೋಹಾಗ್ನಿ. ಇನ್ನೂ ಮೂರು ಬಗೆಯ ಅಗ್ನಿಗಳು- ಪೂಜಿಸಿಕೊಳ್ಳಬೇಕೆಂಬ ಅಗ್ನಿ, ಗೃಹಪತಿಯಾದವನಿಗೆ ಇರುವ ಅಗ್ನಿ, ದಕ್ಷಿಣೆಯನ್ನು ಪಡೆಯಬೇಕೆಂಬ ಅಗ್ನಿ. ಮೂರು ಬಗೆಯ ರೂಪ ಸಂಗ್ರಹಗಳು- ಪ್ರತಿಬಂಧಿಸುವ ರೂಪ, ಪ್ರತಿಬಂಧಿಸುವ ಆದರೆ ಕಾಣದಿರುವ ರೂಪ, ಪ್ರತಿಬಂಧನವನ್ನು ಮಾಡದ ಮತ್ತು ಕಾಣದಿರುವ ರೂಪ. ಮೂರು ಬಗೆಯ ಗಡಣಗಳು- ಪುಣ್ಯಗಳ ಗಡಣ, ಅಪುಣ್ಯಗಳ ಗಡಣ, ಯಾವ ಚಲನೆಯನ್ನು ಉಂಟುಮಾಡದ (ರೂಪ ಲೋಕದಲ್ಲಿ ಹುಟ್ಟದಂತೆ ಇರುವ ಸ್ಥಿತಿಗಳು) ಗಡಣ. ಮೂರು ಬಗೆಯ ಮನುಷ್ಯರು- ಕಲಿಯುತ್ತಿರುವವನು, ಕಲಿತವು, ಕಲಿಯುತ್ತಿರುವವನೂ ಅಲ್ಲದ ಕಲಿತವನೂ ಅಲ್ಲದ ಮನುಷ್ಯ. ಮೂರು ಬಗೆಯ ಹಿರಿಯರು- ಹುಟ್ಟಿನಿಂದ ಹಿರಿಯನಾಗಿರುವನು, ಧರ್ಮಾಚರಣೆಯಿಂದ ದೊಡ್ಡವನಾಗಿರುವವನು, ಜನರ ಒಪ್ಪಿಗೆಯಿಂದ ದೊಡ್ಡವನಾಗಿರುವವನು. ಪುಣ್ಯ ಕಾರ್ಯದ ಆಧಾರಗಳು ಮೂರು- ದಾನದ ಆಧಾರ, ಶೀಲದ ಆಧಾರ, ಧ್ಯಾನದ ಆಧಾರ. ಚ್ಯುತಿಯ ಕಾರಣಗಳು ಮೂರು- ಕೆಟ್ಟುದನ್ನು ನೋಡುವುದು, ಕೆಟ್ಟುದನ್ನು ಕೇಳುವುದು, ಸಂದೇಹಪೂರಿತವಾದವುಗಳು. ಕಾಮದ ಉತ್ಪತ್ತಿಗಳು ಮೂರು- ಕೆಲವರ ಕಾಮಗಳು ವಸ್ತುಗಳಿಗೆ ಬಂಧಿತವಾಗಿರುತ್ತಿವೆ. ಅವು ಅವರು ಅಂಥ ವಸ್ತುಗಳ ಪರವಶವಾಗಿರುತ್ತಾರೆ. ಈ ಬಗೆಯ ಮನುಷ್ಯರೂ ದೇವತೆಗಳೂ ಇರುತ್ತಾರೆ. ಕಾಮದ ಉತ್ಪತ್ತಿಗೆ ವಶವಾಗಿರುವಂಥವರಲ್ಲಿ ಇವರು ಮೊದಲನೆಯ ಬಗೆ. ತಾವೇ ನಿರ್ಮಿಸಿಕೊಂಡ ವಸ್ತುಗಳಿಗೆ ಕೆಲವರು ಬಂಧಿತರಾಗಿರುತ್ತಾರೆ. ಹೀಗೆ ತಾವೇ ನಿರ್ಮಿಸಿಕೊಂಡ ವಸ್ತುಗಳಿಗೆ ವಶರಾಗುವಂಥವರು ದೇವತೆಗಳು. ಇವರು ಎರಡನೆಯ ಬಗೆಯ ಕಾಮಕ್ಕೆ ವಶರಾಗಿರುತ್ತಾರೆ. ಬೇರೆಯವರನ್ನು ನಿರ್ಮಿಸಬೇಕೆಂಬ ಕಾಮದಿಂದ ಕೆಲವರು ಬಂಧಿತರಾಗಿರುತ್ತಾರೆ. ಈ ಕಾಮಕ್ಕೆ ವಶರಾಗುವವರು ದೇವತೆಗಳು. ಇವರು ಮೂರನೆಯ ಬಗೆಯ ಕಾಮಕ್ಕೆ ವಶರಾಗಿರುತ್ತಾರೆ. ಒಳ್ಳೆಯ ಪುನರ್ಜನ್ಮಗಳು ಮೂರು ಬಗೆಯವು. ತಾವೇ ಉತ್ಪತ್ತಿ ಮಾಡಿದ ಲೋಕದಲ್ಲಿ ಕೆಲವರಿರುತ್ತಾರೆ. ಇವರು ಬ್ರಹ್ಮಕಾಯರು. ಇದು ಮೊದಲನೆಯ ಸುಖಜನ್ಮ ಸುಖದಿಂದ ಕೂಡಿರುವ ಸುಖದಲ್ಲಿಯೇ ಮುಳುಗಿರುವ ಸುಖದಿಂದ ಪರಿವೃತರಾದ ಯಾವುದನ್ನು ಪೂರ್ಣ ಸುಖವೆನ್ನುತ್ತೇವೋ ಅದನ್ನು ಹೊಂದಿರುವ ದೇವತೆಗಳಿದ್ದಾರೆ. ಅವರು ಅಭಸ್ಸಾರ ದೇವತೆಗಳು. ಅವರು ಆಗಾಗ “ಎಂಥ ಸುಖ ಎಷ್ಟು ಸುಖ” ಎಂದು ಉದ್ಗಾರ ಮಾಡುತ್ತಿರುತ್ತಾರೆ. ಇದು ಎರಡನೆಯ ಬಗೆಯ ಸುಖ ಜನ್ಮ. ಸುಖದಿಂದ ಕೂಡಿರುವ ಸುಖದಲ್ಲಿಯೇ ಮುಳುಗಿರುವ ಸುಖದಿಂದ ಪರಿವೃತರಾದ ಯಾವುದನ್ನು ಪರಿಪೂರ್ಣ ಸುಖವೆಂದು ಹೇಳುತ್ತೇವೆಯೋ ಅದನ್ನು ಪಡೆದಿರುವ ದೇವತೆಗಳಿದ್ದಾರೆ. ಅವರು ಅತಿ ಸುಖವನ್ನೇ ಅನುಭವಿಸುತ್ತಿರುತ್ತಾರೆ. ಅವರೇ ಸುಭ ಕಿಣ್ಹ ದೇವತೆಗಳು. ಇವರದು ಮೂರನೆ ಬಗೆಯ ಸುಖಜನ್ಮ. ಪಞ್ಞಾವು ಮೂರು ಬಗೆಯದು- ಕಲಿಯುತ್ತಿರುವವನು ಹೊಂದಿರುವ ಪಞ್ಞಾ, ಕಲಿತವನು ಪಡೆದಿರುವ ಪಞ್ಞಾ, ಹಿಂದೆ ಕಲಿಯದನೂ ಈಗಲೂ ಕಲಿಯುತ್ತಿಲ್ಲದವನೂ ಹೊಂದಿರುವ ಪಞ್ಞಾ. ಮತ್ತೆ ಮೂರು ಬಗೆಯ ಪಞ್ಞಾಗಳಿವೆ- ಚಿಂತನೆಯಿಂದ ಬರುವ ಪಞ್ಞಾ, ಕೇಳಿ ತಿಳಿಯುವುದರಿಂದ ಬರುವ ಪಞ್ಞಾ ಮತ್ತು ಧ್ಯಾನದಿಂದ ಬರುವ ಪಞ್ಞಾ, ಮೂರು ಬಗೆಯ ಆಯುಧಗಳಿವೆ- ಕೇಳಿ ತಿಳಿಯುವ ಆಯುಧ, ಏಕಾಂತವೆಂಬ ಆಯುಧ, ಪಞ್ಞಾವೆಂಬ ಆಯುಧ. ಮೂರು ಇಂದ್ರಿಯಗಳು- ಗೊತ್ತಿಲ್ಲದಿರುವುದನ್ನು ತಿಳಿಯುವುದಕ್ಕೆ ತಕ್ಕದಾದ ಇಂದ್ರಿಯ, ತಿಳಿದುಕೊಂಡಿರುವ ಇಂದ್ರಿಯ, ಚೆನ್ನಾಗಿ ತಿಳಿದಿರುವ ಇಂದ್ರಿ. ಮೂರು ಬಗೆಯ ಚಕ್ಷುಗಿವೆ- ಮಾಂಸ ಚಕ್ಷು, ದಿವ್ಯ ಚಕ್ಷು, ‘ತಞ್ಞಾ’ ಚಕ್ಷು. ಮೂರು ಬಗೆಯ ಶಿಕ್ಷಣಗಳಿವೆ- ಉನ್ನತಶೀಲ, ಉನ್ನತವಾದ ಚಿತ್ತ, ಉನ್ನತವಾದ ಪಞ್ಞಾಗಳ ವಿದ್ಯೆ. ಧ್ಯಾನಗಳು ಮೂರು- ಕಾಯವನ್ನು ಕುರಿತ ಧ್ಯಾನ, ಚಿತ್ತವನ್ನು ಕುರಿತ ಧ್ಯಾನ, ಪಞ್ಞಾವನ್ನು ಕುರಿತ ಧ್ಯಾನ. ಅತ್ಯುತ್ಕೃಷ್ಟವಾದವುಗಳು ಮೂರು- ಅನುತ್ತರವಾದ ದರ್ಶನ, ಅನುತ್ತರವಾದ ಮಾರ್ಗ, ಅನುತ್ತರವಾದ ವಿಮುಕ್ತಿ. ಮೂರು ವಿಧವಾದ ಸಮಾಧಿಗಳು- ತರ್ಕ ಮತ್ತು ವಿಚಾರಗಳಿಂದ ಕೂಡಿದ ಸಮಾಧಿ, ತರ್ಕವನ್ನು ಮೀರಿದ ಆದರೆ ವಿಚಾರದಿಂದ ಕೂಡಿದ ಸಮಾಧಿ, ತರ್ಕ ಮತ್ತು ವಿಚಾರಗಳನ್ನು ಮೀರಿದ ಸಮಾಧಿ. ಮತ್ತೆ ಮೂರು ವಿಧದ ಸಮಾಧಿಗಳು- ಶೂನ್ಯವನ್ನು ಅರಿಯಬಲ್ಲ ಸಮಾಧಿ, ನಿಮಿತ್ತವೇ ಇಲ್ಲದಿರುವ ಸ್ಥಿತಿಯನ್ನು ಅರಿಯಬಲ್ಲ ಸಮಾಧಿ, ದುರಾಶೆಗಳನ್ನು ಅಂತ್ಯಗೊಳಿಸಬಲ್ಲ ಸಮಾಧಿ. ಮೂರು ಶುಚಿಗಳು- ಕಾಯ ಶುಚಿತ್ವ, ವಾಚಾ ಶುಚಿತ್ವ, ಮನೋ ಶುಚಿತ್ವ. ಮೂರು ಬಗೆಯ ಮೌನ ಸ್ಥಿತಿಗಳು- ಕಾಯಾ, ವಾಚಾ, ಮನಸಾ. ಮೂರು ಬಗೆಯ ಕೌಶಲ್ಯಗಳು- ಮುಂದೆ ಮುಂದೆ ಹೋಗುವ ಕೌಶಲ್ಯ, ಅಪಾಯವನ್ನು ತಪ್ಪಿಸಿಕೊಳ್ಳುವ ಕೌಶಲ್ಯ, ಉಪಾಯ ಕೌಶಲ್ಯ. ಮೂರು ಮದಗಳು- ಆರೋಗ್ಯ ಮದ, ಯೌವನ ಮದ ಮತ್ತು ಸ್ಥಾನ ಮದ. ಮೂರುವಿಧದ ಅಧಿಪತ್ಯಗಳು- ತನ್ನನ್ನು ತಾನೇ ಆಳಿಕೊಳ್ಳುವುದು, ಲೋಕವನ್ನಾಳುವುದು, ಧರ್ಮವನ್ನು ಚೆನ್ನಾಗಿ ತಿಳಿದು ಪಾಲಿಸುವುದು. ಮೂರು ಬಗೆಯ ಚರ್ಚಾ ವಸ್ತುಗಳು- ಹಿಂದಾದುದಕ್ಕೆ ಸಂಬಂಧಿಸಿದ ಅಥವಾ ಹೇಗೆ ಆರಂಭವಾಯಿತು ಎಂದು ವ್ಯಾಖ್ಯಾನ ಮಾಡುವುದಕ್ಕೆ ಬೇಕಾದ ವಸ್ತು- ‘ಹೀಗಿತ್ತು, ಹೀಗಾಯಿತು’ ಎಂದು ಹೇಳುವಂಥದು, ಇದು ಒಂದನೆಯದು. ಮುಂದೆ ಆಗುವ ಅಥವಾ ಮುಂದಿನದರ ಆರಂಭ ಹೀಗೆ ಎಂದು ವ್ಯಾಖ್ಯಾನ ಮಾಡುವುದಕ್ಕೆ ಬೇಕಾದ ವಸ್ತು. ‘ಹೀಗಾಗುತ್ತದೆ ಹೀಗಿರುತ್ತದೆ’ ಎಂದು ಹೇಳುವಂಥದು ಇದು ಎರಡನೆಯದು. ಇಂದು ಇರುವುದಕ್ಕೆ ಅಥವಾ ಇಂದಿನ ಆರಂಭ ಹೇಗೆ ಎಂಬುದನ್ನು ವ್ಯಾಖ್ಯಾನ ಮಾಡುವುದಕ್ಕೆ ಬೇಕಾದ ವಸ್ತು- ‘ಹೀಗಿದೆ ಹೀಗಾಗುತ್ತದೆ’ ಎಂದು ಹೇಳುವಂಥದು. ಮೂರು ವಿದ್ಯೆಗಳು- ಹಿಂದಿನ ಜನ್ಮಗಳ ಜ್ಞಾನ, ಜೀವಿಗಳ ಹುಟ್ಟು ಸಾವುಗಳ ಜ್ಞಾನ, ಆಸವಗಳನ್ನು ನಾಶಮಾಡುವ ಜ್ಞಾನ. ಮೂರು ಬಗೆಯ ವಿಹಾರಗಳು- ದಿವ್ಯ ವಿಹಾರ, ಬ್ರಹ್ಮವಿಹಾರ, ಆರ್ಯ ವಿಹಾರ. ಮೂರು ಬಗೆಯ ಪವಾಡಗಳು- ಶುದ್ಧಿ ಶಕ್ತಿಯಿಂದಾಗುವ ಪವಾಡ, ಮನಸ್ಸಿನಲ್ಲಿರುವುದನ್ನು ತಿಳಿಯಬಲ್ಲ ಪವಾಡ, ಅನುಶಾಸನವೆಂಬ ಪವಾಡ.
“ಗೆಳೆಯರೇ, ಈ ಮೂರರ ಗಡಣಗಳನ್ನು ಅರಹಂತರೂ ಸಮ್ಮಾಸಂಬುದ್ಧರೂ ಆದ ಭಗವಾನರು ಅರಿತಿದ್ದಾರೆ, ಕಂಡಿದ್ದಾರೆ. ಇವನ್ನು ಸ್ಪಷ್ಟವಾಗಿ ವಿವರಿಸಿದ್ದಾರೆ. ಇವೆಲ್ಲವನ್ನು ಒಟ್ಟಿಗೆ ಹಾಡಬೇಕು... ದೇವತೆಗಳ ಮತ್ತು ಮನುಷ್ಯರ ಹಿತಕ್ಕಾಗಿ ಸುಖಕ್ಕಾಗಿ... ಎಲ್ಲರೂ ಒಟ್ಟಿಗೆ ಪಠಿಸಬೇಕು.
ನಾಲ್ಕರ ಧರ್ಮಗಳು
“ಗೆಳೆಯರೆ, ಧರ್ಮವು ನಾಲ್ಕರಿಂದ ಆಗಿದೆ ಎಂಬುದನ್ನು ಸಮ್ಮಾಸಂಬುದ್ಧರೂ ಅರಹಂತರೂ ಆದ ಭಗವಾನರು ತಾವೇ ಅರಿತಿದ್ದಾರೆ, ಕಂಡಿದ್ದಾರೆ, ಇದನ್ನು ಸ್ಪಷ್ಟಪಡಿಸಿದ್ದಾರೆ. ವಿವಾದಾತೀತವಾದ... ದೇವತೆಗಳ ಮತ್ತು ಮನುಷ್ಯರ ಹಿತಕ್ಕಾಗಿ ಸುಖಕ್ಕಾಗಿ... ಎಲ್ಲರೂ ಒಟ್ಟಿಗೇ ಪಠಿಸಬೇಕು.
“ಸತಿಪಟ್ಠಾನಗಳು ನಾಲ್ಕು- ಭಿಕ್ಷುವೊಬ್ಬನು ಲೋಕದ ಮೇಲಿನ ವ್ಯಾಮೋಹ ಮತ್ತು ಅದಕ್ಕಂಟಿರುವ ದೋಮನಸ್ಸನ್ನು ವರ್ಜಿಸಿ ಸದಾ ಎಚ್ಚರದಿಂದಿದ್ದು, ಕಾಯವನ್ನು ಅದರ ನಿಜಸ್ವರೂಪದಲ್ಲಿಯೇ ನೋಡುತ್ತಾನೆ. ವೇದನೆಯನ್ನು ಅದರ ನಿಜಸ್ವರೂಪದಲ್ಲಿ... ಚಿತ್ತವನ್ನು ಅದರ ನಿಜಸ್ವರೂಪದಲ್ಲಿ... ಲೋಕದ ಮೇಲಿನ ಮತ್ತು ಅದಕ್ಕಂಟಿರುವ ದೋಮನಸ್ಸನ್ನು ವರ್ಜಿಸಿ ಸದಾ ಎಚ್ಚರದಿಂದಿರುವ ಭಿಕ್ಷುವು ಧಮ್ಮವನ್ನು ಅದರ ನಿಜ ಸ್ವರೂಪದಲ್ಲಿಯೇ ನೋಡುತ್ತಾನೆ.
“ಇದ್ಧಿಪಧಾನಗಳು ನಾಲ್ಕು. ಪಾಪಪೂರಿತವಾಗಿರುವ ಮತ್ತು ಅಕುಶಲದಿಂದ ಕೂಡಿರುವ ಭಾವನೆಗಳು, ಇನ್ನೂ ಉದಯಿಸದಿದ್ದಾಗ ಅದು ಉದಯಿಸಿದಂತೆ ಮಾಡುವ ಯತ್ನ ಮೊದಲನೆಯದು. ಅಕುಶಲವಾದ ಪಾಪ ಭಾವನೆಗಳು ಉದಯಿಸಿದಾಗ ಅದನ್ನು ನಿರ್ಮೂಲ ಮಾಡುವ ಯತ್ನ ಎರಡನೆಯದು. ಕುಶಲವಾದ ಭಾವನೆಗಳು ಉದಯಿಸದಿರುವಾಗ ಅವು ಉದಯಿಸುವಂತೆ ಮಾಡುವುದ ಮೂರನೆಯ ಯತ್ನ. ಉದಯಿಸಿದ ಕುಶಲವಾದ ಭಾವನೆಗಳು ಉಳಿಯುವಂತೆ ಮಾಡಿ ಅವು ಮತ್ತೆ ಮತ್ತೆ ಬೆಳೆಯುವಂತೆ ನೋಡಿಕೊಂಡು ಅವು ಪರಿಪೂರ್ಣವಾಗುವಂತೆ ಸಾಧನೆ ಮಾಡುವುದು ನಾಲ್ಕನೆಯ ಯತ್ನ. ಹೀಗೆ ಇಚ್ಛಾಶಕ್ತಿಯು ಹುಟ್ಟುವಂತೆ ಮಾಡಿ ಯತ್ನಶೀಲನಾಗಿ ಯಾವ ಸಂಶಯವೂ ಉಳಿಯದಂತೆ ಚಿತ್ತವನ್ನು ಶಕ್ತಿಯುತವನ್ನಾಗಿ ಮಾಡುವಂಥ ಸಾಧನೆಗಳು ಇದ್ಧಿಪಧಾನಗಳು.
“ನಾಲ್ಕು ಇದ್ಧಿಪಾದಗಳು. ಭಿಕ್ಷುವಾದವನು ಛಂದ ಸಮಾಧಿಯನ್ನು ಹೊಂದಬಲ್ಲವರಾಗಿರುತ್ತಾರೆ. ಇದು ಒಂದು ಇದ್ಧಿಪಾದ. ಚಿತ್ತ ಸಮಾಧಿಯನ್ನು ಪಡೆಯಬಲ್ಲವರಾಗಿರುತ್ತಾರೆ. ವಿರಯ ಸಮಾಧಿಯನ್ನು ಪಡೆಯಬಲ್ಲವರಾಗಿರುತ್ತಾರೆ. ಇವು ಮತ್ತೆರಡು ಇದ್ಧಿಪಾದಗಳು. (ವೀಮಂಸ ಸಮಾಧಿಯನ್ನು ಪಡೆಯಬಲ್ಲವ ರಾಗಿರುತ್ತಾರೆ. ಇದು ನಾಲ್ಕನೆಯದು.
“ನಾಲ್ಕು ಧ್ಯಾನಗಳು- ಭಿಕ್ಷುವಾದವನು ಕಾಮಗಳಿಂದ ಕೂಡಿರುವ ಅಕುಶಲವಾದ ಭಾವನೆಗಳನ್ನು ದೂರಮಾಡಿ ತರ್ಕ ವಿಚಾರಗಳಿಂದ ಕೂಡಿದ ವಿವೇಕದಿಂದಿರುವ ಪ್ರೀತಿಸುಖಗಳನ್ನೊಳಗೊಂಡ ಪ್ರಥಮ ಧ್ಯಾನದಲ್ಲಿರುತ್ತಾನೆ. ತರ್ಕ ವಿಚಾರಗಳನ್ನು ಉಪಶಮನ ಮಾಡಿಕೊಂಡು ಅವುಗಳನ್ನು ಮೀರಿದ ಸ್ಥಿತಿಯನ್ನು ಮುಟ್ಟಿ ಚಿತ್ತದ ಏಕಾಗ್ರತೆಯನ್ನು ಗಳಿಸಿ ಸಮಾಧಿಯಿಂದ ಬರುವ ಪ್ರೀತಿ ಸುಖಗಳನ್ನುಳ್ಳ ದ್ವಿತೀಯ ಧ್ಯಾನದಲ್ಲಿರುತ್ತಾನೆ. ಪ್ರೀತಿ, ವೈರಾಗ್ಯ, ಉಪೇಕ್ಷ ಭಾವನೆಗಳನ್ನು ಹೊಂದಿ ಸ್ಮೃತಿಯನ್ನು ಕಳೆದುಕೊಳ್ಳದೆ ಆರ್ಯರಾದವರು ಯಾವುದನ್ನು ಉಪೇಕ್ಷಾ ಭಾವನೆಯುಳ್ಳ ಸ್ಮೃತಿವಂತನ ಸುಖ ಎಂದು ಹೇಳುತ್ತಾರೋ ಅದನ್ನು ಅನುಭವಿಸುತ್ತಾ ತೃತೀಯ ಧ್ಯಾನದಲ್ಲಿರುತ್ತಾರೆ; ಸುಖದುಃಖಗಳೆರಡರಿಂದಲೂ ದೂರವಾಗಿ ಹಿಂದಿನ ಸೋಮನಸ್ಸು ದೋಮಸ್ಸುಗಳೆರಡನ್ನೂ ನಾಶಗೊಳಿಸಿ ಅದುಃಖ ಅಸುಖ ಉಪೇಕ್ಷಾ ಭಾವನೆಗಳಿಂದ ಕೂಡಿದ ಮತ್ತು ಪರಿಶುದ್ಧವಾದ ಸ್ಮೃತಿಯನ್ನು ಹೊಂದಿ ಚತುರ್ಥ ಧ್ಯಾನದಲ್ಲಿರುತ್ತಾನೆ.
ಸಮಾಧಿ ಭಾವನೆಗಳು ನಾಲ್ಕು- ಬೆಳೆಸಿಕೊಂಡಾಗ ಸುಖದಿಂದಿರಲು ಅನುಕೂಲವಾದ ದೃಷ್ಟಿಯನ್ನು ಕೊಡುವ ಸಮಾಧಿ ಭಾವನೆ ಮೊದಲನೆಯದು. ಬೆಳೆಸಿಕೊಂಡಾಗ ಞಾಣದಸ್ಸನವನ್ನು ನೀಡಬಲ್ಲ ಸಮಾಧಿ ಭಾವನೆಯು ಎರಡನೆಯದು. ಬೆಳೆಸಿಕೊಂಡಾಗ ಸ್ಮೃತಿಯನ್ನೂ ಎಚ್ಚರಿಕೆಯನ್ನು ಕೊಡಬಲ್ಲ ಸಮಾಧಿ ಭಾವನೆಯು ಮೂರನೆಯದು. ಬೆಳೆಸಿಕೊಂಡಾಗ ಆಸವಗಳ ಕ್ಷಯವನ್ನು ಸಾಧಿಸಬಲ್ಲ ಸಾಮರ್ಥ್ಯವನ್ನು ಕೊಡುವುದು ನಾಲ್ಕನೆಯ ಸಮಾಧಿ ಭಾವನೆ.
“ಬೆಳೆಸಿಕೊಂಡಾಗ ಸುಖದಿಂದಿರಲು ಅನುಕೂಲವಾದ ದೃಷ್ಟಿಯನ್ನು ಕೊಡುವ ಸಮಾಧಿ ಭಾವನೆಯು ಯಾವುದು? ಗೆಳೆಯರೇ, ಭಿಕ್ಷುವಾದವನು ಕಾಮಗಳಿಂದ ಕೂಡಿರುವ ಅಕುಶಲವಾದ ಭಾವನೆಗಳನ್ನು ದೂರಮಾಡಿ ಚತುರ್ಥ ಧ್ಯಾನದಲ್ಲಿರುವುದು. ಬೆಳೆಸಿಕೊಂಡಾಗ ಸುಖದಿಂದಿರಲು ಅನುಕೂಲವಾದ ದೃಷ್ಟಿಯನ್ನು ಕೊಡುವ ಸಮಾಧಿ ಭಾವನೆ ಇದು.
“ಬೆಳೆಸಿಕೊಂಡಾಗ ಞ್ಞಾಣದಸ್ಸನವನ್ನು ನೀಡಬಲ್ಲ ಸಮಾದಿ ಭಾವನೆ ಯಾವುದು? ಗೆಳೆಯರೇ, ಭಿಕ್ಷುವಾದವನು ಹಗಲನ್ನೂ ಹಗಲಿನಲ್ಲಿರುವುದನ್ನೂ ಅರಿಯುವುದಷ್ಟೇ ಅಲ್ಲದೆ ಹಗಲಿನಂತೆ ರಾತ್ರಿಯಲ್ಲಿಯೂ, ರಾತ್ರಿಯಂತೆ ಹಗಲಿನಲ್ಲಿಯೂ ಸಾಧಾರಣ ಕಣ್ಣಿಗೆ ಕಾಣಿಸದ ವಿಶೇಷತೆಯನ್ನು ನೋಡಬಲ್ಲವನಾಗಿರುತ್ತಾನೆ. ಅಂಥ ಮನೋ ಸಾಮರ್ಥ್ಯವು ಅವನಿಗಿರುತ್ತದೆ. ಹೀಗೆ ಶುದ್ಧವಾದ ಭಾವನೆಗಳಿಂದ ಜ್ಯೋತಿರ್ಮಯವಾಗಿರುವ ಚಿತ್ತವನ್ನು ಪಡೆಯುತ್ತಾನೆ. ಬೆಳೆಸಿಕೊಂಡಾಗ ಞ್ಞಾಣದಸ್ಸನವನ್ನು ನೀಡಬಲ್ಲ ಸಮಾಧಿ ಭಾವನೆ ಇದು.
“ಬೆಳೆಸಿಕೊಂಡಾಗ ಸ್ಮೃತಿಯನ್ನೂ ಎಚ್ಚರಿಕೆಯನ್ನೂ ಕೊಡುವ ಸಮಾಧಿ ಭಾವನೆಯು ಯಾವುದು? ಗೆಳೆಯರೇ, ವೇದನೆಗಳು ಉದಯವನ್ನೂ, ಅವುಗಳು ಇರುವುದನ್ನೂ, ಅವುಗಳು ಹೊರಟು ಹೋಗುವುದನ್ನೂ ತಿಳಿಯುವುದು. ಸಞ್ಞಾಗಳ ಉದಯವನ್ನೂ, ಅವುಗಳು ಇರುವುದನ್ನೂ, ಅವುಗಳು ಹೊರಟು ಹೋಗುವುದನ್ನೂ ತಿಳಿಯುವುದು. ತರ್ಕ ಉದಯವನ್ನೂ, ಅವುಗಳು ಇರುವುದನ್ನೂ, ಅವುಗಳು ಹೊರಟು ಹೋಗುವುದನ್ನೂ ತಿಳಿಯುವುದು. ಗೆಳೆಯರೆ, ಬೆಳಸಿಕೊಂಡಾಗ ಸ್ಮೃತಿಯನ್ನು ಎಚ್ಚರಿಕೆಯನ್ನು ಕೊಡುವ ಸಮಾಧಿ ಭಾವನೆ ಇದು.
“ಬೆಳೆಸಿಕೊಂಡಾಗ ಆಸವಗಳ ಕ್ಷಯವನ್ನು ಸಾದಿಸಬಲ್ಲ ಸಮಾಧಿ ಭಾವನೆಯು ಯಾವುದು? ಗೆಳೆಯರೆ, ಭಿಕ್ಷುವಾದವನು ಪಂಚ ಉಪಾದಾನ ಖಂಧಗಳ ಉದಯ ವಿನಾಶಗಳನ್ನು ಅರಿಯಬಲ್ಲವನಾಗಿರುತ್ತಾನೆ. ಇದು ರೂಪ, ಇದು ರೂಪದ ಉದಯ, ಇದು ರೂಪದ ವಿನಾಶ, ಇದು ವೇದನೆ... ಇದು ವಿಞ್ಞಾಣ. ಇದು ವಿಞ್ಞಾಣದ ಉದಯ, ಇದು ವಿಞ್ಞಾಣದ ವಿನಾಶ ಎಂಬುದನ್ನು ಅರಿಯಬಲ್ಲವನಾಗಿರುತ್ತಾನೆ. ಬೆಳೆಸಿಕೊಂಡಾಗ ಆಸವಗಳ ಕ್ಷಯವನ್ನು ಸಾಧಿಸಬಲ್ಲ ಸಾಮರ್ಥ್ಯವನ್ನು ನೀಡಬಲ್ಲ ಸಮಾಧಿ ಭಾವನೆ ಇದು.
“ನಾಲ್ಕು ಬ್ರಹ್ಮವಿಹಾರಗಳು- ಭಿಕ್ಷುವಾದವನು ಮೈತ್ರಿ ಭಾವನೆಯಿಂದ ಕೂಡಿದವನಾಗಿ ಅದನ್ನು ಒಂದು ದಿಕ್ಕಿನಲ್ಲಿ ಹರಿಸುತ್ತಾನೆ. ಈ ಮೈತ್ರಿ ಭಾವನೆಯನ್ನು ಊರ್ಧ್ವ ಅಧೋ ದಿಕ್ಕುಗಳಲ್ಲಿ ಲೋಕದಲ್ಲೆಲ್ಲಾ ಹರಿಸುತ್ತಾನೆ. ಈ ಭಾವನೆಯಾದರೋ ಹಿಂಸಾ ಭಾವನೆಯಿಂದಾಗಲೀ, ವೈರ ಭಾವನೆಯಿಂದಲಾಗಲೀ ಲವಲೇಶವೂ ಕಲುಷಿತವಾಗಿರುವುದಿಲ್ಲ. ವಿಪುಲವಾಗಿರುವ ಮಹತ್ ಪರಿಣಾಮದದ್ದಾಗಿರುವ ಆ ಮೈತ್ರಿ ಭಾವನೆಯು ತಿರ್ಯಕ್ ಮುಂತಾದ ಎಲ್ಲ ಲೋಕಗಳ ಎಲ್ಲ ಕಡೆಗಳಲ್ಲಿಯೂ ವ್ಯಾಪಿಸಿರುತ್ತವೆ. ಇದೊಂದು ದೈವೀ ವಿಹಾರ. ಕರುಣೆಯಿಂದ ಕೂಡಿದ... ಮುದಿತದಿಂದ ಕೂಡಿದ... ಉಪೇಕ್ಷ ಭಾವನೆಯಿಂದ ಕೂಡಿದ ಭಿಕ್ಷುವು ವಿಪುಲವಾಗಿರುವ ಮಹತ್ಪ್ರಮಾಣದ ವೈರ ಹಿಂಸಾಭಾವನಾರಹಿತವಾದ ಆ ಭಾವನೆಯನ್ನು ನಾಲ್ಕು ದಿಕ್ಕುಗಳಲ್ಲಿಯೂ ಊರ್ಧ್ವ ಅಧೋ ದಿಸೆಗಳಲ್ಲಿಯೂ ತಿರ್ಯಕ್ ಲೋಕದಲ್ಲಿಯೂ ಎಲ್ಲೆಲ್ಲಿಯೂ ವ್ಯಾಪಿಸಿಬಿಡುತ್ತಾನೆ. ಕರುಣೆ ಮುದಿತ ಉಪೇಕ್ಷ ಭಾವನೆಗಳು ಇತರ ದೈವೀ ವಿಹಾರಗಳು.
“ನಾಲ್ಕು ಅರೂಪಗಳು- ಭಿಕ್ಷುವೊಬ್ಬನು ರೂಪಗಳನ್ನು ತಿಳಿಯಬಲ್ಲ. ಎಲ್ಲ ಸ್ಥಿತಿಗಳನ್ನೂ ದಾಟಿ ಅಡ್ಡಿಬರುವ ಎಲ್ಲ ಭಾವನೆಗಳನ್ನೂ ನಾಶಮಾಡಿ ನಾನಾ ವಿಧವಾಗಿ ತೋರವ ಬಾವನೆಗಳನ್ನು ಗಣನೆಗೆ ತೆಗೆದುಕೊಳ್ಳದೆ ‘ಆಕಾಶವು ಅನಂತವಾಗಿದೆ’ ಎಂಬ ಭಾವನೆಯಿಂದ ಆಕಾಸಾನಂಚಾಯತನದಲ್ಲಿರುತ್ತಾರೆ. ಈ ಆಕಾಸಾನಂಚಾಯ ತನವನು ಹಾದು ‘ವಿಞ್ಞಾಣವು ಅನಂತವಾಗಿದೆ’ ಎಂಬ ಭಾವನೆಯಿಂದ ವಿಞ್ಞಾಣಂಚಾಯತನದಲ್ಲಿರುತ್ತಾರೆ. ಈ ವಿಞ್ಞಾಣಂಚಾಯತನವನ್ನು ದಾಟಿ ‘ಏನೂ ಇಲ್ಲ’ ಎಂಬ ಅಕಿಂಚಞ್ಞಾಯತನದಲ್ಲಿರುತ್ತಾನೆ. ಅಕಿಂಚಞ್ಞಾಯತನವನ್ನು ದಾಟಿ ನೇವಸಞ್ಞಾನಾಸಞ್ಞಾಯತನ (ಇಲ್ಲ, ಇಲ್ಲದೆಯೂ ಇಲ್ಲ ಎಂಬ ಸ್ಥಿತಿ) ದಲ್ಲಿರುತ್ತಾನೆ.
“ನಡವಳಿಕೆಯ ಆಧಾರಗಳು ನಾಲ್ಕು- ಭಿಕ್ಷುವೊಬ್ಬನು ಒಂದರಲ್ಲಿ ನಿರತನಾಗಬೇಕು, ಎರಡನೆಯದನ್ನು ಸಹಿಸಿಕೊಳ್ಳಬೇಕು, ಮೂರನೆಯದನ್ನು ವರ್ಜಿಸಬೇಕು, ನಾಲ್ಕನೆಯದನ್ನು ದಮಿಸಬೇಕು.
“ನಾಲ್ಕು ಆರ್ಯವಂಶಗಳು- ಭಿಕ್ಷುವೊಬ್ಬನು ತನಗಿರುವ ಚೀವರಗಳಷ್ಟರಿಂದಲೇ ಸಂತೃಪ್ತಿಯನ್ನು ಪಡೆಯುತ್ತಾನೆ. ಇದು ಒಳ್ಳೆಯದೆಂದು ಇತರರಿಗೂ ಬಣ್ಣಿಸುತ್ತಾನೆ. ವಾಮಮಾರ್ಗವನ್ನು ಹಿಡಿದು ಹೆಚ್ಚಿನ ಚೀವರಗಳನ್ನು ಪಡೆಯಲು ಯತ್ನಿಸುವುದಿಲ್ಲ. ಚೀವರವು ಲಭಿಸದಿದ್ದರೆ ಅದಕ್ಕಾಗಿ ಪರಿತಪಿಸುವುದಿಲ್ಲ. ಚೀವರವು ಲಭಿಸಿದರೆ ಅದರ ಬಗೆಗೆ ಲೋಭವನ್ನು ಬಳಸಿಕೊಳ್ಳುವುದಿಲ್ಲ. ಚೀವರವು ಲಭಿಸಿದರೆ ಅದರ ಬಗೆಗೆ ಲೋಭವನ್ನು ಬಳಸಿಕೊಳ್ಳುವುದಿಲ್ಲ. ಅದರ ಬಗೆಗೆ ಮೋಹವನ್ನು ಬಳಸಿಕೊಳ್ಳುವುದಿಲ್ಲ. ಅತಿಯಾದ ಸಂತೋಷವನ್ನುಪಡುವುದಿಲ್ಲ. ಬಹು ಎಚ್ಚರಿಕೆಯಿಂದ ಧರಿಸುತ್ತಾನೆ. ಚೀವರಗಳು ಬೇಕೆಂಬ ಆಸೆಯಿಂದ ಬರಬಹುದಾದ ಅಪಾಯವನ್ನು ತಿಳಿದವನಾಗಿ ಯಾವ ಉದ್ದೇಶಕ್ಕಾಗಿ ಅದನ್ನು ಧರಿಸುತ್ತಿದ್ದೇನೆಂದು ಅರಿತವನಾಗಿರುತ್ತಾನೆ. ಈ ಬಗೆಯ ಸಂತುಷ್ಟಿಯನ್ನು ಪಡೆದವನಾದುದರಿಂದ ಅವನು ಇತರರನ್ನು ತುಚ್ಛವಾಗಿ ಕಾಣುವುದಿಲ್ಲ, ತಾನೂ ದುರಭಿಮಾನಿಯಾಗುವುದಿಲ್ಲ. ಹೀಗೆ ದಕ್ಷನಾದ ಆಲಸ್ಯವಿಲ್ಲದವನಾದ ಸ್ಮೃತಿವಂತನಾದ ಭಿಕ್ಷುವನ್ನು ಪೂರ್ಣನಾದವನು ಅಗ್ರನಾದವನು ಆರ್ಯ ವಂಶದವನು ಎಂದು ಕರೆಯುತ್ತಾರೆ. ಭಿಕ್ಷುವೊಬ್ಬನು ತನಗಿರುವ ಪಿಂಡ ಪಾತ್ರೆಗಳಿಂದಲೇ ಸಂತೃಪ್ತಿಯನ್ನು ಪಡೆಯುತ್ತಾನೆ. ಇದು ಒಳ್ಳೆಯದೆಂದು ಇತರರಿಗೂ ಬಣ್ಣಿಸುತ್ತಾನೆ. ವಾಮಮಾರ್ಗವನ್ನು ಹಿಡಿದು ಹೆಚ್ಚಿನ ಪಿಂಡಪಾತ್ರೆಗಳನ್ನು ಪಡೆಯಲು ಪ್ರಯತ್ನಿಸುವುದಿಲ್ಲ. ಪಿಂಡಪಾತ್ರೆಯು ದೊರೆಯದಿದ್ದರೆ ಪರಿತಪಿಸುವುದಿಲ್ಲ. ಅದು ದೊರಕಿದರೆ ಅದರ ಮೇಲೆ ಲೋಭವನ್ನು ಬೆಳೆಸಿಕೊಳ್ಳುವುದಿಲ್ಲ. ಮೋಹವನ್ನು ಬೆಳೆಸಿಕೊಳ್ಳುವುದಿಲ್ಲ. ಅತಿಯಾದ ಸಂತೋಷವನ್ನು ಪಡುವುದಿಲ್ಲ. ಬಹು ಎಚ್ಚರಿಕೆಯಿಂದ ಅದನ್ನು ಉಪಯೋಗಿಸುತ್ತಾನೆ. ಪಿಂಡಪಾತ್ರೆಯ ಬಯಕೆಯಿಂದ ಆಗಬಹುದಾದ ಅಪಾಯವನ್ನು ತಿಳಿದವನಾಗಿ ಯಾವ ಉದ್ದೇಶದಿಂದ ಅದನ್ನು ಉಪಯೋಗಿಸುತ್ತಿದ್ದೇನೆಂದು ಅರಿತವನಾಗಿರುತ್ತಾನೆ. ಈ ಬಗೆಯ ಸಂತುಷ್ಟಿಯನ್ನು ಪಡೆದವನಾದುದರಿಂದ ಇತರರನ್ನು ತುಚ್ಛವಾಗಿ ಕಾಣುವುದಿಲ್ಲ, ತಾನೂ ದುರಭಿಮಾನಿಯಾಗುವುದಿಲ್ಲ. ಹೀಗೆ ದಕ್ಷನಾದ ಆಲಸ್ಯವಿಲ್ಲದವನಾದ ಸ್ಮೃತಿವಂತನಾದ ಭಿಕ್ಷುವನ್ನು ಪರಿಪೂರ್ಣನಾದವನು ಅಗ್ರನಾದವನು ಆರ್ಯವಂಶದವನು ಎಂದು ಕರೆಯುತ್ತಾರೆ.
“ಭಿಕ್ಷುವೊಬ್ಬನು ತನಗಿರುವ ನಿವಾಸದಿಂದಲೇ ಸಂತುಷ್ಟಿ ಪಡೆಯುತ್ತಾನೆ. ಇದು ಒಳ್ಳೆಯದೆಂದು ಇತರರಿಗೂ ಬಣ್ಣಿಸುತ್ತಾನೆ. ವಾಮಮಾರ್ಗದಿಂದ ಹೆಚ್ಚಿನ ನಿವಾಸವನ್ನು ಪಡೆಯಲು ಯತ್ನಿಸುವುದಿಲ್ಲ. ಅದು ಸಿಗದಿದ್ದರೆ ಪರಿತಪಿಸುವುದಿಲ್ಲ. ದೊರಕಿದರೆ ಅದರ ಮೇಲೆ ಲೋಭವನ್ನು ಬೆಳೆಸಿಕೊಳ್ಳುವುದಿಲ್ಲ, ಮೋಹವನ್ನು ಬೆಳೆಸಿಕೊಳ್ಳುವುದಿಲ್ಲ, ಅದರಿಂದ ಅತಿಯಾದ ಸಂತೋಷವನ್ನು ಪಡುವುದಿಲ್ಲ. ಅದರಿಂದಾಗುವ ಅಪಾಯವನ್ನು ತಿಳಿದವನಾಗಿ ಯಾವ ಉದ್ದೇಶದಿಂದ ಅದನ್ನು ಉಪಯೋಗಿಸುತ್ತಿದ್ದೇನೆಂದು ಅರಿತವನಾಗಿರುತ್ತಾನೆ. ಈ ಬಗೆಯ ಸಂತುಷ್ಟಿಯನ್ನು ಪಡೆದವನಾದುದರಿಂದ ಇತರರನ್ನು ತುಚ್ಛವಾಗಿ ಕಾಣುವುದಿಲ್ಲ. ತಾನೂ ದುರಭಿಮಾನಿಯಾಗುವುದಿಲ್ಲ. ಹೀಗೆ ದಕ್ಷನಾದ ಆಲಸ್ಯವಿಲ್ಲದವನಾದ ಸ್ಮೃತಿವಂತನಾದ ಭಿಕ್ಷುವನ್ನು ಪರಿಪೂರ್ಣನಾದವನು ಅಗ್ರನಾದವನು ಆರ್ಯವಂಶದವನು ಎಂದು ಕರೆಯುತ್ತಾರೆ.
“ಗೆಳೆಯರೆ, ಭಿಕ್ಷುವೊಬ್ಬನು ಯಾವುದನ್ನು ತೊರೆಯಬೇಕು, ಯಾವುದನ್ನು ಬೆಳೆಸಿಕೊಳ್ಳಬೇಕು ಎಂಬುದನ್ನು ತಿಳಿದು ಅದರಂತೆ ಮಾಡಿ ಅದರ ಫಲವಾಗಿ ಸಂತೋಷವನ್ನು ಪಡೆಯುತ್ತಾನೆ. ಇತರರನ್ನು ತುಚ್ಛವಾಗಿ ಕಾಣುವುದಿಲ್ಲ. ತಾನೂ ದುರಭಿಮಾನಿಯಾಗುವುದಿಲ್ಲ. ಹೀಗೆ ದಕ್ಷನಾದ ಆಲಸ್ಯವಿಲ್ಲದವನಾದ ಸ್ಮೃತಿವಂತನಾದ ಭಿಕ್ಷುವನ್ನು ಪರಿಪೂರ್ಣನಾದವನು ಅಗ್ರನಾದವನು ಆರ್ಯವಂಶದವನು ಎಂದು ಕರೆಯುತ್ತಾರೆ.
“ಪ್ರಯತ್ನಗಳು ನಾಲ್ಕು- ಸಂಯಮ, ವರ್ಜನ, ಧ್ಯಾನ ಮತ್ತು ರಕ್ಷಣೆ. ಸಂಯಮಕ್ಕಾಗಿ ಮಾಡುವ ಪ್ರಯತ್ನ ಹೇಗಿರುತ್ತದೆ? ಗೆಳೆಯರೆ, ಭಿಕ್ಷುವು ಕಣ್ಣಿನಿಂದ ರೂಪವನ್ನು ನೋಡಿದಾಗ ಅದರ ಬಗೆಗೆ ಸ್ಥೂಲವಾದ ಆಸೆಯನ್ನಾಗಲೀ, ಅತಿಯಾದ ವ್ಯಾಮೋಹವನ್ನಾಗಲೀ ಬೆಳೆಸಿಕೊಳ್ಳುವುದಿಲ್ಲ. ರೂಪದ ಬಗೆಗೆ ಅಸಂಯಮಿಯಾಗಿ ಅದರಲ್ಲಿ ಆನಂದ ಪಡುವುದಾದರೆ ವೈರಭಾವನೆಯೂ ಪಾಪ ಬುದ್ಧಿಯೂ ಅಕುಶಲಭಾವನೆಯೂ ಅವನಲ್ಲಿ ಹೊಕ್ಕಿಬಿಡಬಹುದು. ಆದುದರಿಂದ ಸರಿಯಾದ ಕ್ರಮವನ್ನನುಸರಿಸಿ ಚಕ್ಷು ಇಂದ್ರಿಯವನ್ನು ರಕ್ಷಿಸಿಕೊಳ್ಳುತ್ತಾನೆ. ಚಕ್ಷು ಇಂದ್ರಿಯದ ಬಗೆಗೆ ಸಂಯಮದಿಂದಿರುತ್ತಾನೆ. ಕಿವಿಯಿಂದ ಶಬ್ದವನ್ನು ಕೇಳಿದಾಗ... ಮೂಗಿನಿಂದ ವಾಸನೆಯನ್ನು ತಿಳಿದಾಗ... ನಾಲಿಗೆಯಿಂದ ರುಚಿಯನ್ನು ನೋಡಿದಾಗ... ಕಾಯದಿಂದ ಸ್ಪರ್ಶವನ್ನು ಅನುಭವಿಸಿದಾಗ... ಮನಸ್ಸಿನಿಂದ ವಿಚಾರಗಳನ್ನು ಪಡೆದಾಗ ಅದರ ಬಗೆಗೆ ಸ್ಥೂಲ ರೂಪದ ಆಸೆಯನ್ನಾಗಲೀ, ಅತಿಯಾದ ವ್ಯಾಮೋಹವನ್ನಾಗಲೀ ಬೆಳೆಸಿಕೊಳ್ಳುವುದಿಲ್ಲ. ಭಾವನೆಗಳ ಬಗೆಗೆ ಅಸಂಯಮಿಯಾಗಿ ಅವುಗಳಲ್ಲಿ ಆನಂದಪಡುವುದಾದರೆ ವೈರಭಾವನೆಯೂ ಪಾಪಬುದ್ಧಿಯೂ ಅಕುಶಲ ಭಾವನೆಯೂ ಅವನಲ್ಲಿ ಹೊಕ್ಕಿಬಿಡಬಹುದು. ಆದುದರಿಂದ ಸರಿಯಾದ ಕ್ರಮವನ್ನನುಸರಿಸಿ ಮನೇಂದ್ರಿಯವನ್ನು ರಕ್ಷಿಸಿಕೊಳ್ಳುತ್ತಾನೆ. ಅದರ ಬಗೆಗೆ ಸಂಯಮದಿಂದಿರುತ್ತಾನೆ.
“ಬಿಡಬೇಕಾದವುಗಳನ್ನು ವರ್ಜಿಸುವುದಕ್ಕೆ ಮಾಡಬೇಕಾದ ಯತ್ನ ಹೇಗಿರುತ್ತದೆ? ಕಾಮಭಾವನೆಯು ಹುಟ್ಟಿಕೊಂಡಾಗ ಅದನ್ನು ಸಹಿಸುವುದಿಲ್ಲ, ಅದನ್ನು ದೂರ ಮಾಡುತ್ತಾನೆ, ದಮಿಸುತ್ತಾನೆ. ಅಂತ್ಯಗೊಳಿಸಿ ಅದು ಇಲ್ಲದಂತೆ ಮಾಡುತ್ತಾನೆ. ವೈರಭಾವನೆಯು ಹುಟ್ಟಿಕೊಂಡಾಗ... ಹಿಂಸಾಭಾವನೆಯು ಹುಟ್ಟಿಕೊಂಡಾಗ ಪಾಪ ಭಾವನೆಯಾಗಲಿ, ಅಕುಶಲ ಭಾವನೆಯಾಗಲೀ ಹುಟ್ಟಿಕೊಂಡಾಗ ಅದನ್ನು ಸಹಿಸುವುದಿಲ್ಲ. ಅದನ್ನು ದೂರ ಮಾಡುತ್ತಾನೆ, ದಮಿಸುತ್ತಾನೆ. ಅಂತ್ಯಗೊಳಿಸಿ ಅದು ಇಲ್ಲದಂತೆ ಮಾಡುತ್ತಾನೆ. ಇದನ್ನು ವರ್ಜನೆಗೆ ಸಂಬಂಧಿಸಿದ ಯತ್ನ ಎಂದು ಕರೆಯುತ್ತಾರೆ.
“ಧ್ಯಾನಕ್ಕೆ ಸಂಬಂಧಿಸಿದ ಯತ್ನವು ಹೇಗಿರುತ್ತದೆ? ಗೆಳೆಯರೆ, ಭಿಕ್ಷುವೊಬ್ಬನು ವಿವೇಕ ವೈರಾಗ್ಯ ದುಃಖ ನಿರೋಧ ಮತ್ತು ನಿಬ್ಬಾನ ಸಾಧನೆಗೆ ಬೇಕಾದ ತ್ಯಾಗ ಇವುಗಳನ್ನೇ ಆಧಾರವಾಗುಳ್ಳ ಏಳು ಬೋಜ್ಝಂಗಗಳನ್ನು ಬೆಳೆಸಿಕೊಳ್ಳುತ್ತಾನೆ. ಸತಿ ಸಂಬೋಜ್ಝಂಗ, ಧಮ್ಮ ವಿಚಯ ಸಂಬೋಜ್ಝಂಗ, ವಿರಯ ಸಂಬೋಜ್ಝಂಗ, ಪೀತಿ ಸಂಬೋಜ್ಝಂಗ, ಪಸ್ಸದಿ ಸಂಬೋಜ್ಝಂಗ, ಸಮಾಧಿ ಸಂಬೋಜ್ಝಂಗ, ಉಪೇಕ್ಖಾ ಸಂಬೋಜ್ಝಂಗಗಳನ್ನು ಬೆಳೆಸಿಕೊಳ್ಳುತ್ತಾನೆ. ಇವು ಪ್ರತಿಯೊಂದಕ್ಕೂ ವಿವೇಕ ವೈರಾಗ್ಯ ದುಃಖ ನಿರೋಧ ಮತ್ತು ನಿಬ್ಬಾನ ಸಾಧನೆಗೆ ಬೇಕಾದ ತ್ಯಾಗ ಇವುಗಳೇ ಆಧಾರಗಳಾಗಿವೆ.
“ರಕ್ಷಣೆಗಾಗಿ ಮಾಡುವ ಯತ್ನವು ಹೇಗಿರುತ್ತದೆ? ಭದ್ರತೆಯನ್ನು ನೀಡಬಲ್ಲ ಸಮಾಧಿಯು ಚಿತ್ತದಲ್ಲಿ ಉತ್ಪನ್ನವಾದಾಗ ಅದು ಆ ಸ್ಥಿತಿಯಲ್ಲಿ ಉಳಿಯುವಂತೆ ರಕ್ಷಿಸಿಕೊಳ್ಳುತ್ತಾನೆ. ಸತ್ತಮೇಲೆ ಶರೀರವು ಊದಿಕೊಂಡು ನೀಲಿ ಬಣ್ಣಕ್ಕೆ ತಿರುಗಿ ಕೊಳೆತು ಹುಳು ಹಿಡಿದು ಅದರ ಮೂಳೆಯು ಛಿದ್ರ ಛಿದ್ರವಾಗುವ ಅಶುಭ ಧ್ಯಾನದಲ್ಲಿ ತೊಡಗಿ ಭದ್ರತೆಯನ್ನು ನೀಡಬಲ್ಲ ಸಮಾಧಿಯನ್ನು ರಕ್ಷಿಸಿಕೊಳ್ಳುತ್ತಾನೆ. ಇದನ್ನು ರಕ್ಷಣೆಗಾಗಿ ಮಾಡುವ ಯತ್ನ ಎಂದು ಕರೆಯುತ್ತಾರೆ.
“ಜ್ಞಾನಗಳು ನಾಲ್ಕು- ಧಮ್ಮದ ಜ್ಞಾನ, ಅದನ್ನು ಪಾಲಿಸುವುದರ ಬಗೆಗಿನ ಜ್ಞಾನ, ಇತರರ ಮನಸ್ಸಿನಲ್ಲಿರುವುದನ್ನು ತಿಳಿಯುವ ಸಾಮರ್ಥ್ಯದ ಜ್ಞಾನ ಮತ್ತು ವ್ಯಾವಹಾರಿಕ ಜ್ಞಾನ.
“ಮತ್ತೆ ನಾಲ್ಕು ಬಗೆಯ ಜ್ಞಾನಗಳಿವೆ- ದುಃಖ, ದುಃಖ ಸಮುದಯ, ದುಃಖ ನಿರೋಧ, ದುಃಖ ನಿರೋಧಗಾಮಿನಿ ಪಟಿಪದ. ಈ ಆರ್ಯ ಸತ್ಯಗಳ ಜ್ಞಾನ.
“ಸೋತಾಪನ್ನತೆಯ ಅಂಶಗಳು ನಾಲ್ಕು- ಸತ್ಪುರುಷರ ಸಂಗ, ಸದ್ಧರ್ಮ ಶ್ರವಣ, ಧಮ್ಮದ ಮನನ, ಧಮ್ಮ ಮತ್ತು ಅನುಧಮ್ಮಗಳ ಪಾಲನೆ.
“ಸೋತಾಪನ್ನನಿಗೆ ಇರಬೇಕಾದ ಅಂಶಗಳು ನಾಲ್ಕು- ಉತ್ತಮ ಶಿಷ್ಯನು, ಬುದ್ಧರ ಬಗೆಗೆ ಅಚಲವಾದ ವಿಶ್ವಾಸವನ್ನು ಹೊಂದಿರುತ್ತಾನೆ- ‘ಭಗವಾನರು ಸಮ್ಮಾಸಂಬುದ್ಧರೂ ವಿಜ್ಜಾಚರಣ ಸಂಪನ್ನರೂ, ಸುಗತರೂ ಲೋಕಕ್ಕೆ ಶ್ರೇಷ್ಠರೂ ಜನರೆಲ್ಲರಿಗೆ ಅನುತ್ತರವಾದ ಸಾರಥಿಯೂ ದೇವತೆಗಳ ಮತ್ತು ಮನುಷ್ಯರ ಗುರುವೂ, ಬುದ್ಧರೂ ಭಗವಾನರೂ ಆಗಿದ್ದಾರೆ’ ಎಂದು ನಂಬಿರುತ್ತಾನೆ. ಧಮ್ಮದ ಬಗೆಗೆ ಅಚಲವಾದ ವಿಶ್ವಾಸವನ್ನು ಹೊಂದಿರುತ್ತಾನೆ- ‘ಧಮ್ಮವು ಭಗವಾನರಿಂದ ಸ್ಪಷ್ಟವಾಗಿ ವಿವರಿಸಲ್ಪಟ್ಟಿದೆ. ಒಳ್ಳೆಯ ದೃಷ್ಟಿಯನ್ನು ಕೊಡುತ್ತದೆ. ಎಲ್ಲ ಕಾಲದಲ್ಲಿಯೂ ಒಳ್ಳೆಯದನ್ನು ಮಾಡುತ್ತದೆ. ತಾವೇ ಪರೀಕ್ಷಿಸಿಕೊಳ್ಳುವಂಥದ್ದಾಗಿದೆ. ಒಳ್ಳೆಯ ಮಾರ್ಗದಲ್ಲಿ ಕೊಂಡೊಯ್ಯುತ್ತದೆ. ಜಾಣರಾದವರು ತಾವೇ ತಿಳಿದು ಅನುಭವಿಸುವಂಥದ್ದಾಗಿದೆ’ ಎಂದು ನಂಬಿರುತ್ತಾನೆ. ಸಂಘದ ಬಗೆಗೆ ಅಚಲವಾದ ವಿಶ್ವಾಸವನ್ನು ಹೊಂದಿರುತ್ತಾನೆ- ‘ಭಗವಾನರ ಶಿಷ್ಯ ಸಂಘವು ಸನ್ಮಾರ್ಗದಲ್ಲಿ ಹೋಗುತ್ತಿದೆ, ಭಗವಾನರ ಶಿಷ್ಯ ಸಂಘವು ನೇರವಾದ ದಾರಿಯಲ್ಲಿ ಹೋಗುತ್ತಿದೆ, ನ್ಯಾಯವಾದ ಮಾರ್ಗದಲ್ಲಿ ಭಗವಾನರ ಶಿಷ್ಯ ಸಂಘವು ಸಾಗುತ್ತಿದೆ, ಕ್ರಮಬದ್ಧವಾದ ನಡವಳಿಕೆ ಭಗವಾನರ ಶಿಷ್ಯ ಸಂಘದ್ದಾಗಿದೆ. ಎಂಟು ಬಗೆಯ ಶ್ರೇಷ್ಠ ಮಾನವರನ್ನುಳ್ಳ ನಾಲ್ಕು ಜೊತೆಯನ್ನು ಭಗವಾನರ ಸಂಘವು ಒಳಗೊಂಡಿದೆ. ಗೌರವಕ್ಕೂ ಪೂಜೆಗೂ ದಕ್ಷಿಣೆಗೂ ನಮಸ್ಕಾರಕ್ಕೂ ಅದು ಅರ್ಹವಾಗಿದೆ. ಲೋಕದ ಶ್ರೇಷ್ಠ ಪುಣ್ಯಕ್ಷೇತ್ರವೇ ಅದು’ ಎಂದು ನಂಬಿರುತ್ತಾನೆ. ಶ್ರೇಷ್ಠವಾದ ಈ ಶೀಲಗಳನ್ನು ಹೊಂದಿ ಅಖಂಡವಾದ ಛಿದ್ರವಾಗಿಲ್ಲದ ಸಾಮರ್ಥ್ಯದಿಂದ ಕೂಡಿರುವ ಯಾವ ಕುಂದೂ ಇಲ್ಲದೆ ಬಿಡುಗಡೆ ಹೊಂದಿದವನಾಗಿ ವಿವೇಕಿಗಳ ಪ್ರಶಂಸೆ ಪಡೆದವನಾಗಿ ಸಮಾಧಿಯನ್ನು ಪಡೆದಿರುವವನು ಆ ಸೋತಾಪನ್ನನಾಗಿರುತ್ತಾನೆ.
“ಶ್ರಾವಣ್ಯದಿಂದ ಬರುವ ಫಲಗಳು ನಾಲ್ಕು- ಸೋತಾಪನ್ನನಾಗುವ ಫಲ, ಸಕದಾಗಾಮಿಯಾಗುವ ಫಲ, ಅನಾಗಾಮಿಯಾಗುವ ಫಲ, ಅರಹಂತನಾಗುವ ಫಲ.
“ಧಾತುಗಳು ನಾಲ್ಕು- ಪೃಥ್ವಿ, ಆಪಸ್, ತೇಜಸ್, ವಾಯು.
“ಆಹಾರಗಳು ನಾಲ್ಕು- ದೇಹಕ್ಕೆ ಬೇಕಾಗಿರುವ ಸ್ಥೂಲವಾಗಿ ಕಾಣುವ ಅಥವಾ ಸೂಕ್ಷ್ಮವಾಗಿ ತೋರುವ ಆಹಾರ, ಇದು ಮೊದಲನೆಯದು. ಎರಡನೆದು ಫಸ್ಸ (ಸ್ಪರ್ಶ), ಮೂರನೆಯದು ಮನಸ್ಸಿನ ಚೇತನ, ನಾಲ್ಕನೆಯದು ವಿಞ್ಞಾಣ.
“ವಿಞ್ಞಾಣದ ಸ್ಥಿತಿಗಳು ನಾಲ್ಕು- ರೂಪವು ಒಂದು ಸ್ಥಿತಿಯನ್ನು ಮುಟ್ಟುತ್ತದೆ. ಆಗ ಇದೇ ಸ್ಥಿತಿಯಲ್ಲಿ ಉಳಿದುಕೊಳ್ಳುವ ಸ್ವಭಾವವನ್ನು ಹೊಂದಿರುತ್ತದೆ. ಆಮೇಲೆ ಅದು ವಿಚಾರಕ್ಕೆ ವಸ್ತುವಾಗಿ ಅದಕ್ಕೆ ಆಧಾರವಾಗಿ ಸಂತೋಷದ ನೆಲೆಯಾಗಿ ಬೆಳೆಯುತ್ತದೆ. ಬಹುವಾಗಿ ವಿಪುಲವಾಗಿ ವೃದ್ಧಿ ಹೊಂದುತ್ತದೆ. ವೇದನೆಯು... ಸಞ್ಞಾವು... ಸಂಖಾರವು ಒಂದು ಸ್ಥಿತಿಯನ್ನು ಮುಟ್ಟಿದಾಗ ಅದೇ ಸ್ಥಿತಿಯಲ್ಲಿ ಉಳಿದುಕೊಳ್ಳುವ ಸ್ವಭಾವವನ್ನು ಹೊಂದಿರುತ್ತದೆ. ಆಮೇಲೆ ಅದು ವಿಚಾರಕ್ಕೆ ವಸ್ತುವಾಗಿ ಅದಕ್ಕೆ ಆಧಾರವಾಗಿ ಸಂತೋಷದ ನೆಲೆಯಾಗಿ ಬೆಳೆಯುತ್ತದೆ, ಬಹುವಾಗಿ ವಿಪುಲವಾಗಿ ವೃದ್ಧಿ ಹೊಂದುತ್ತದೆ.
“ತಪ್ಪು ದಾರಿಗಳು ನಾಲ್ಕು- ರಾಗದಿಂದ ತುಂಬಿರುವಂಥದು, ಮೋಹದಿಂದ ತುಂಬಿರುವಂಥದು, ದ್ವೇಷದಿಂದ ತುಂಬಿರುವಂಥದು, ಭಯದಿಂದ ತುಂಬಿರುವಂಥದು.
“ತಣ್ಹಾದ ಉತ್ಪತ್ತಿಯ ಕಾರಣಗಳು ನಾಲ್ಕು- ಚೀವರದ ಕಾರಣದಿಂದ ಭಿಕ್ಷುವಿನಲ್ಲಿ ತಣ್ಹಾ ಉದಿಸಬಹುದು. ಪಿಂಡಪಾತ್ರೆಯ ಕಾರಣದಿಂದ ತಣ್ಹಾ ಉದಿಸಬಹುದು. ಉಳಿಯುವ ಬೀಡಿನ ಕಾರಣದಿಂದ ತಣ್ಹಾ ಉದಿಸಬಹುದು. ಎಣ್ಣೆ ತುಪ್ಪ ಜೇನುತುಪ್ಪ ಮುಂತಾದವುಗಳ ಕಾರಣದಿಂದ ತಣ್ಹಾ ಉದಿಸಬಹುದು.
“ನಾಲ್ಕು ಪ್ರಗತಿಯ ಹಾದಿಗಳು - ಪ್ರಗತಿಯು ಕಷ್ಟದಾಯಕವಾಗಿರುವುದು ಮತ್ತು ಉನ್ನತ ಜ್ಞಾನವು ಕಡಿಮೆ ಮಟ್ಟದಲ್ಲಿರುವುದು, ಇದು ಒಂದನೆಯದು. ಪ್ರಗತಿಯು ಕಷ್ಟವಾಗಿರುವುದು, ಆದರೆ ಉನ್ನತ ಜ್ಞಾನವು ತೀಕ್ಷ್ಣವಾಗಿರುವುದು, ಇದು ಎರಡನೆಯದು. ಪ್ರಗತಿಯು ಸುಲಭವಾಗಿರುವುದು, ಆದರೆ ಉನ್ನತ ಜ್ಞಾನವು ಕಡಿಮೆ ಮಟ್ಟದಲ್ಲಿರುವುದು, ಇದು ಮೂರನೆಯದು. ಪ್ರಗತಿಯು ಸುಲಭವಾಗಿರುವುದು ಮತ್ತು ಉನ್ನತ ಜ್ಞಾನವು ತೀಕ್ಷ್ಣವಾಗಿರುವುದು, ಇದು ನಾಲ್ಕನೆಯದು.
“ಪ್ರಗತಿಯ ಮಾರ್ಗಗಳು ಇನ್ನೂ ನಾಲ್ಕು ಇವೆ- ತಾಳ್ಮೆಯನ್ನು ಬಿಟ್ಟು ಮಾಡುವ ಸಾಧನೆ, ತಾಳ್ಮೆಯಿಂದ ಮಾಡುವ ಸಾಧನೆ, ದಯೆಯ ಮೂಲಕ ಮಾಡುವ ಸಾಧನೆ, ಕ್ಷಮೆಯ ಮೂಲಕ ಮಾಡುವ ಸಾಧನೆ.
“ಧಮ್ಮದ ಹಾದಿಗಳು ನಾಲ್ಕು- ಕಾಮಗಳಿಂದ ದೂರವಾಗಿರುವುದು, ವೈರವಿಲ್ಲದಿರುವುದು, ಸ್ಮೃತಿಯಿಂದ ಕೂಡಿರುವುದು, ಸಮಾಧಿಯನ್ನು ಸಾಧಿಸವುದು.
“ಧಮ್ಮವನ್ನು ತಿಳಿಯಲು ಮಾಡುವ ಸಾಧನೆಗಳು ನಾಲ್ಕು. ಇಂದಿನ ದುಃಖ ಮತ್ತು ಮುಂದೆ ಫಲಿಸುವ ದುಃಖದ ಅರಿವಿನ ಸಾಧನೆ. ಇಂದಿನ ದುಃಖ ಮತ್ತು ಮುಂದೆ ಫಲಿಸುವ ಸುಖದ ಅರಿವಿನ ಸಾಧನೆ, ಇಂದಿನ ಸುಖ ಮತ್ತು ಮುಂದೆ ಫಲಿಸುವ ಸುಖದ ಅರಿವಿನ ಸಾಧನೆ.
“ಧಮ್ಮಕ್ಖಂಧಗಳು ನಾಲ್ಕು- ಸೀಲಕ್ಖಂಧ, ಸಮಾಧಿಕ್ಖಂಧ, ಪಞ್ಞಾಕ್ಖಂಧ, ವಿಮುತ್ತಿಕ್ಖಂಧ.
“ಬಲಗಳು ನಾಲ್ಕು- ವಿರಯ ಬಲ, ಸತಿ ಬಲ, ಸಮಾಧಿ ಬಲ, ಪಞ್ಞಾ ಬಲ.
“ಮಾಡಬೇಕಾದ ನಿರ್ಧಾರಗಳು ನಾಲ್ಕು- ಪಞ್ಞಾವನ್ನು ಪಡೆಯುವುದು, ಸತ್ಯವನ್ನು ಅರಿಯುವುದು, ತ್ಯಾಗವನ್ನು ಮಾಡುವುದು, ಉಪಶಮನ ಮಾಡಿಕೊಳ್ಳುವುದು.
“ಪ್ರಶ್ನೆಗೆ ಕೊಡುವ ಉತ್ತರಗಳ ವಿಧ ನಾಲ್ಕು- ಸ್ಪಷ್ಟವಾದ ಉತ್ತರ, ವಿಚಾಪೂರಿತವಾದ ಉತ್ತರ, ಪ್ರತಿ ಪ್ರಶ್ನೆಯ ರೂಪಕವಾಗಿ ಕೊಡುವ ಉತ್ತರ, ತಕ್ಷಣವೇ ನೀಡದ ಉತ್ತರ.
“ನಾಲ್ಕು ಕರ್ಮಗಳು- ವಿಪಾಕ ಹೊಂದಿ ಕೆಟ್ಟ ಫಲ ಕೊಡುವ ದುಷ್ಕರ್ಮ, ವಿಪಾಕ ಹೊಂದಿ ಒಳ್ಳೆಯ ಫಲಿತಾಂಶವನ್ನು ಕೊಡುವ ಸತ್ಕರ್ಮ, ವಿಪಾಕ ಹೊಂದಿ ಒಳ್ಳೆಯ ಮತ್ತು ಕೆಟ್ಟ ಫಲ ಕೊಡು ಸತ್ಕರ್ಮ ದುಷ್ಕರ್ಮಗಳು, ವಿಪಾಕ ಹೊಂದಿ ಕೆಟ್ಟುದೂ ಅಲ್ಲದ ಒಳ್ಳೆಯದು ಅಲ್ಲದ ಫಲ ಕೊಡುವ ಕೆಟ್ಟುದೂ ಅಲ್ಲದ ಒಳ್ಳೆಯದೂ ಅಲ್ಲದ ಕರ್ಮಗಳು.
“ಸಾಕ್ಷಾತ್ಕಾರ ಮಾಡಿಕೊಳ್ಳಬೇಕಾದ ಧರ್ಮಗಳು ನಾಲ್ಕು- ಹಿಂದಿನ ಜನ್ಮಗಳ ನೆನಪು, ಜೀವಿಗಳು ಕೆಳಗೆ ಬಿದ್ದು ಮುಂದೆ ಪಡೆಯುವ ಜನ್ಮಗಳನ್ನು ನೋಡಬಲ್ಲ ಚಕ್ಷುಗಳು, ಕಾಯದೊಂದಿಗಿರುವಾಗಲೇ ಪಡೆಯಬಲ್ಲ ಎಂಟು ವಿಮೋಕ್ಖಗಳು, ಪಞ್ಞಾದ ಮೂಲಕ ಸಾಕ್ಷಾತ್ಕಾರ ಮಾಡಿಕೊಳ್ಳಬೇಕಾದ ಆಸವಕ್ಷಯ.
“ನಾಲ್ಕು ವಿಧವಾದ ಪ್ರವಾಹಗಳು- ಕಾಮ, ಭವ, ದಿಟ್ಠಿ, ಅವಿಜ್ಜಾ (ಬಂಧನಗಳು) ನಾಲ್ಕು- ಕಾಮ, ಭವ, ದಿಟ್ಠಿ, ಅವಿಜ್ಜಾ.
“ಬಂಧನಗಳಿಂದ ಬಿಡುಗಡೆಯ ವಿಧಗಳು ನಾಲ್ಕು. ಕಾಮಬಂಧನದಿಂದ ಬಿಡುಗಡೆ, ಭವ ಬಂಧನದಿಂದ ಬಿಡುಗಡೆ, ಮಿಥ್ಯಾದೃಷ್ಟಿಯ ಬಂಧನದಿಂದ ಬಿಡುಗಡೆ, ಅವಿಜ್ಜಾದಿಂದ ಬಿಡುಗಡೆ.
“ಗಂಟುಗಳು ನಾಲ್ಕು - ಕಾಮದಿಂದ ಕೂಡಿರುವುದು, ವೈರಭಾವನೆಯಿಂದ ತುಂಬಿರುವುದು, ವ್ರತನಿಯಮಗಳಲ್ಲಿ ನಂಬಿಕೆಯನ್ನಿಟ್ಟಿರುವುದು, ಅಂಧ ವಿಶ್ವಾಸಗಳನ್ನು ಸಮರ್ಥಿಸುವುದು.
“ಉಪಾದಾನಗಳು ನಾಲ್ಕು- ಕಾಮುಪಾದಾನ, ದಿಟ್ಠುಪಾದಾನ, ಸೀಲಬ್ಬತುಪಾದಾನ, ಅತ್ತವಾದುಪಾದಾನ.
“ನಾಲ್ಕು ರೀತಿಯ ಹುಟ್ಟುವಿಕೆ - ಮೊಟ್ಟೆಯಿಂದ ಹುಟ್ಟುವುದು, ಗರ್ಭದಲ್ಲಿ ಬೆಳೆದು ಅಲ್ಲಿಂದ ಹುಟ್ಟುವುದು; ಜೌಗಿನಲ್ಲಿ (ಬೆವರಿನಲ್ಲಿ) ಹುಟ್ಟುವುದು, ಓಪಪಾತಿಕವಾಗಿ ಹುಟ್ಟುವುದು.
“ಮುಂದಿನ ಜನ್ಮದ ಗರ್ಭದ ವಿಧಗಳು ನಾಲ್ಕು- ಯಾವ ಅರಿವೂ ಇಲ್ಲದೆ ಮಾತೃ ಗರ್ಭವನ್ನು ಪ್ರವೇಸಿಸುವುದು, ಯಾವ ಅರಿವೂ ಇಲ್ಲದೆ ಅಲ್ಲಿ ಬೆಳೆಯುವುದು, ಯಾವ ಅರಿವೂ ಇಲ್ಲದೆ ಅಲ್ಲಿಂದ ನಿಷ್ಕ್ರಮಿಸುವುದು. ಇದು ಗರ್ಭದ ಬಗೆಗೆ ಇರುವ ಒಂದನೆಯ ಅರಿವು. ಮಾತೃ ಗರ್ಭವನ್ನು ಪ್ರವೇಸಿಸುವಾಗ ಅರಿವನ್ನು ಹೊಂದಿರುವುದು, ಆದರೆ ಅಲ್ಲಿ ಬೆಳೆಯುವಾಗ ಮತ್ತು ಅಲ್ಲಿಂದ ನಿಷ್ಕ್ರಮಿಸುವಾಗ ಯಾವ ಅರಿವೂ ಇಲ್ಲದಿರುವುದು. ಇದು ಗರ್ಭದ ಬಗೆಗಿರುವ ಎರಡನೆಯ ವಿಧದ ಅರಿವು. ಮಾತೃ ಗರ್ಭವನ್ನು ಪ್ರವೇಶಿಸುವಾಗಲೂ ಅಲ್ಲಿ ಬೆಳೆಯುವಾಗಲೂ ಅರಿವನ್ನು ಹೊಂದಿರುವುದು. ಆದರೆ ನಿಷ್ಕ್ರಮಿಸುವಾಗ ಅರಿವಿಲ್ಲದಿರುವುದು ಇದು ಮೂರನೆಯ ವಿಧದ ಅರಿವು ಮಾತೃ ಗರ್ಭವನ್ನು ಹೋಗುವಾಗಲು ಅಲ್ಲಿ ಬೆಳೆಯುವಾಗಲೂ ಅಲ್ಲಿಂದ ನಿಷ್ಕ್ರಮಿಸುವಾಗಲೂ ಅರಿವಿನಿಂದಲೇ ಇರುವುದು. ಇದು ಗರ್ಭದ ಬಗೆಗಿನ ಇರುವ ನಾಲ್ಕನೆಯ ಅರಿವು.
“ಮತ್ತೊಂದು ಜನ್ಮವನ್ನು ಪಡೆಯುವ ಮಾರ್ಗಗಳು ನಾಲ್ಕು- ನಮ್ಮ ಇಚ್ಛಾಬಲ ಮತ್ತು ಕ್ರಿಯಾಶೀಲತೆ ಅದಕ್ಕೆ ಕಾರಣವಾಗಬೇಕು, ಬೇರೆಯವರದಲ್ಲ. ಇದೊಂದು ಮಾರ್ಗ. ಬೇರೆಯವರ ಇಚ್ಛಾಬಲದಿಂದ ನಮಗೆ ಪುನರ್ಜನ್ಮ ಉಂಟಾಗುತ್ತದೆ. ಇದರಲ್ಲಿ ನಮ್ಮದೇನೂ ಇರುವುದಿಲ್ಲ* ಇದು ಎರಡನೆಯ ಮಾರ್ಗ. ನಮ್ಮ ಇಚ್ಛಾ ಬಲದಿಂದಲೂ, ಇತರರ ಬಲದಿಂದಲೂ ನಮ್ಮ ಪುನರ್ಜನ್ಮವಾಗುತ್ತದೆ, ಇದು ಮೂರನೆಯ ಮಾರ್ಗ. ನಮ್ಮ ಪುನರ್ಜನ್ಮವು ನಮ್ಮ ಇಚ್ಛಾಬಲದಿಂದಲೂ ಆಗುವುದಿಲ್ಲ, ಬೇರೆಯವರ ಇಚ್ಛಾ ಬಲದಿಂದಲೂ ಆಗುವುದಿಲ್ಲ, ಇದು ನಾಲ್ಕನೆಯ ಮಾರ್ಗ.
“ಕಳಂಕವೇ ಇಲ್ಲದ ದಕ್ಷಿಣೆಯ ವಿಧಗಳು ನಾಲ್ಕು- ಕೊಡುವವನ ಮನಸ್ಸು ಶುದ್ಧವಾಗಿರುತ್ತದೆ. ಆದರೆ ಪರಿಗ್ರಹಿಸುವವನದಲ್ಲ, ಇದೊಂದು ಬಗೆ. ಕೊಡುವವನ ಮನಸ್ಸು ಶುದ್ಧವಾಗಿರುವುದಿಲ್ಲ, ದಕ್ಷಿಣೆಯನ್ನು ಪರಿಗ್ರಹಿಸುವವನ ಮನಸ್ಸು ಶುದ್ಧವಾಗಿರುತ್ತದೆ. ಇದು ಎರಡನೆಯ ಬಗೆ. ದಕ್ಷಿಣೆಯನ್ನು ಕೊಡುವವನ ಮನಸ್ಸೂ ಶುದ್ಧವಾಗಿರುವುದಿಲ್ಲ. ಪರಿಗ್ರಹಿಸುವವನ ಮನಸ್ಸೂ ಶುದ್ಧವಾಗಿರುವುದಿಲ್ಲ, ಇದು ಮೂರನೆಯ ಬಗೆ. ದಕ್ಷಿಣೆಯನ್ನು ನೀಡುವವನ ಮನಸ್ಸೂ ಪರಿಗ್ರಹಿಸುವವನ ಮನಸ್ಸೂ ಎರಡೂ ಶುದ್ಧವಾಗಿರುತ್ತದೆ, ಇದು ನಾಲ್ಕನೆಯ ಬಗೆ.
“ಪುಣ್ಯ ಸಂಗ್ರಹದ ಆಧಾರಗಳು ನಾಲ್ಕು- ದಾನ, ಪ್ರಿಯ ವಚನ, ಉತ್ತಮವಾದ ನಡತೆ, ಸಮಾನಭಾವನೆ.
“ಅನಾರ್ಯವಾದ ಮಾತುಗಳು ನಾಲ್ಕು- ಸುಳ್ಳು ಹೇಳುವುದು, ಚಾಡಿ ಹೇಳುವುದು, ಮನನೋಯುವಂತೆ ಮಾತನಾಡುವದು, ಕಾಡುಹರಟೆ.
“ಆರ್ಯರಿಗೆ ತಕ್ಕುದಾದ ಮಾತುಗಳು ನಾಲ್ಕು- ಸುಳ್ಳು ಹೇಳದಿರುವುದು, ಚಾಡಿ ಹೇಳದಿರುವುದು, ಮನನೋಯುವಂತೆ ಮಾತನಾಡದಿರುವುದು, ಕಾಡುಹರಟೆಯಲ್ಲಿ ತೊಡಗದಿರುವುದು.
“ನಾಲ್ಕು ವಿಧದ ಅನಾರ್ಯವಾದ ಮಾತುಗಳು- ನೋಡದುದನ್ನು ನೋಡಿದಂತೆ ಹೇಳುವುದು, ಕೇಳದುದನ್ನು ಕೇಳಿದಂತೆ ಹೇಳುವುದು, ವಿಚಾರ ಮಾಡದುದನ್ನು ವಿಚಾರ ಮಾಡಿದಂತೆ ಹೇಳುವುದು, ತಿಳಿಯದುದನ್ನು ತಿಳಿದಂತೆ ಹೇಳುವುದು.
“ಆರ್ಯರಿಗೆ ತಕ್ಕುದಾದ ಮಾತುಗಳು ಇನ್ನೂ ನಾಲ್ಕು ವಿಧವಾಗಿವೆ- ನೋಡದಿದ್ದುದನ್ನು ನೋಡಿಲ್ಲವೆಂದು ಹೇಳುವುದು, ಕೇಳದುದನ್ನು ಕೇಳಿಲ್ಲವೆಂದು ಹೇಳುವುದು, ವಿಚಾರ ಮಾಡದಿದ್ದುದನ್ನು ವಿಚಾರ ಮಾಡಿಲ್ಲವೆಂದು ಹೇಳುವುದು, ತಿಳಿಯದುದನ್ನು ತಿಳಿದಿಲ್ಲವೆಂದು ಹೇಳುವುದು.
“ಅನಾರ್ಯದ ಮಾತುಗಳು ಮತ್ತೂ ನಾಲ್ಕು ವಿಧವಾಗಿವೆ- ನೋಡಿದರೂ ನೋಡಲಿಲ್ಲವೆಂದು ಹೇಳುವುದು, ಕೇಳಿದರೂ ಕೇಳಲಿಲ್ಲವೆಂದು ಹೇಳುವುದು, ವಿಚಾರ ಮಾಡಿದ್ದರೂ ವಿಚಾರ ಮಾಡಲಿಲ್ಲವೆಂದು ಹೇಳುವುದು, ತಿಳಿದಿದ್ದರೂ ತಿಳಿದಿಲ್ಲವೆಂದು ಹೇಳುವುದು.
“ಆರ್ಯರಿಗೆ ತಕ್ಕುದಾದ ಮಾತುಗಳು ಇನ್ನೂ ನಾಲ್ಕು ವಿಧವಾಗಿವೆ- ನೋಡಿದುದನ್ನು ನೋಡಿದಂತೆ ಹೇಳುವುದು, ಕೇಳಿದ್ದನ್ನು ಕೇಳಿದಂತೆ ಹೇಳುವುದು, ವಿಚಾರ ಮಾಡಿದ್ದನ್ನು ಮಾತ್ರ ವಿಚಾರ ಮಾಡಿದಂತೆ ಹೇಳುವುದು, ತಿಳಿದುದನ್ನು ಮಾತ್ರ ತಿಳಿದಂತೆ ಹೇಳುವುದು.
“ನಾಲ್ಕು ವಿಧದ ಮನುಷ್ಯರಿದ್ದಾರೆ- ಕೆಲವರು ತಮ್ಮನ್ನೇ ದಂಡಿಸಿಕೊಂಡು ತನ್ನ ದಂಡನೆಯಲ್ಲಿ ಅನುರಕ್ತನಾಗಿರುತ್ತಾನೆ. ಇವರೊಂದು ಬಗೆ. ಕೆಲವರು ಪರರನ್ನು ದಂಡಿಸುತ್ತಾರೆ. ಪರರನ್ನು ಹಿಂಸಿಸುವುದರಲ್ಲೇ ಅನುರಕ್ತರಾಗಿರುತ್ತಾರೆ. ಇವರೊಂದು ಬಗೆ. ಕೆಲವರು ತಮ್ಮನ್ನೂ ದಂಡಿಸಿಕೊಳ್ಳುತ್ತಾನೆ, ಪರರನ್ನೂ ದಂಡಿಸುತ್ತಾರೆ. ತಮ್ಮ ದಂಡನೆಯಲ್ಲೂ ಪರರ ದಂಡನೆಯಲ್ಲೂ ನಿರತರಾಗಿರುತ್ತಾರೆ. ಇವರು ಮೂರನೆಯ ಬಗೆ. ಕೆಲವರು ತಮ್ಮನ್ನೂ ದಂಡಿಸಿಕೊಳ್ಳದೆ ಪರರನ್ನೂ ದಂಡಿಸದೆ ಇವೆರಡರಲ್ಲೂ ಅನುರಕ್ತರಾಗದೆ ಇರುತ್ತಾರೆ. ತನ್ನನ್ನೂ ದಂಡಿಸಿಕೊಳ್ಳದೆ ಪರರನ್ನೂ ದಂಡಿಸೆ ಇರುವವನು ಬಯಕೆಗಳಿಂದ ದೂರನಾಗಿ ಎಲ್ಲ ಪಾಪಗಳಿಂದ ನಿವೃತ್ತನಾಗಿ ಶಾಂತಿಯನ್ನು ಪಡೆದವನಾಗಿ ಸುಖವನ್ನನುಭವಿಸುತ್ತಾನೆ, ಬ್ರಹ್ಮನಂತೆ ಬದುಕುತ್ತಾನೆ.
“ಮತ್ತೆ ನಾಲ್ಕು ವಿಧದ ಜನರಿದ್ದಾರೆ- ಕೆಲವರು ತಮ್ಮ ಹಿತಕ್ಕಾಗಿಯೇ ಒಳ್ಳೆಯ ಮಾರ್ಗದಲ್ಲಿ ನಡೆಯುತ್ತಾರೆ. ಇನ್ನೂ ಕೆಲವರು ಪರರ ಹಿತಕ್ಕಾಗಿಯೇ ಒಳ್ಳೆಯ ಮಾರ್ಗದಲ್ಲಿ ನಡೆಯುತ್ತಾರೆ. ಕೆಲವರು ತಮ್ಮ ಹಿತಕ್ಕಾಗಿಯಾಗಲೀ ಪರಹಿತಕ್ಕಾಗಿಯಾಗಲೀ ಏನನ್ನೂ ಮಾಡುವುದಿಲ್ಲ. ನಾಲ್ಕನೆಯ ಬಗೆಯ ಜನರು ತಮ್ಮ ಹಿತಕ್ಕಾಗಿಯೂ ಪರಹಿತಕ್ಕಾಗಿಯೂ ಒಳ್ಳೆಯ ಮಾರ್ಗದಲ್ಲಿ ಹೋಗುತ್ತಾರೆ.
“ಇನ್ನೂ ನಾಲ್ಕು ಬಗೆಯ ಜನರಿದ್ದಾರೆ- ಕತ್ತಲಿನಲ್ಲಿಯೇ ಇದ್ದು ಕತ್ತಲಿನಲ್ಲಿಯೇ ಉಳಿಯುವವರು, ಕತ್ತಲಿನಲ್ಲಿದ್ದರೂ ಬೆಳಕಿನ ಕಡೆಗೆ ಹೋಗುವವರು, ಬೆಳಕಿನಲ್ಲಿದ್ದು ಕತ್ತಲಿರುವ ಕಡೆಗೆ ಹೋಗುವವರು ಬೆಳಕಿನಲ್ಲಿದ್ದು ಬೆಳಕಿನ ಕಡೆಗೆ ಹೋಗುವವರು.
“ಇನ್ನೂ ನಾಲ್ಕು ಬಗೆಯ ಜನರಿದ್ದಾರೆ- ಅಚಲರಾದ ಸಮಣರು, ಸಮಣ ಪದುಮರು, ಸಮಣ ಪುಂಡರೀಕರು* ಯಾವ ಕುಂದೂ ಇಲ್ಲದ ಸಮಣರು.**
“ಧಮ್ಮವು ಈ ನಾಲ್ಕರಿಂದ ಆಗಿವೆ ಎಂಬುದನ್ನು ಸಮ್ಮಾಸಂಬುದ್ಧರೂ ಅರಹಂತರೂ ಆದ ಭಗವಾನರು ತಾವೇ ಅರಿತಿದ್ದಾರೆ, ಕಂಡಿದ್ದಾರೆ, ಇದನ್ನು ಸ್ಪಷ್ಟಪಡಿಸಿದ್ದಾರೆ. ವಿವಾದೀತವಾದ... ದೇವತೆಗಳ ಮತ್ತು ಮನುಷ್ಯರ ಹಿತಕ್ಕಾಗಿ ಸುಖಕ್ಕಾಗಿ ಇದನ್ನು ಎಲ್ಲರೂ ಒಟ್ಟಿಗೆ ಪಠಿಸಬೇಕು.
ಐದರ ಧರ್ಮಗಳು
“ಧರ್ಮವು ಐದರಿಂದ ಆಗಿದೆ ಎಂಬುದನ್ನು ಸಮ್ಮಾಸಂಬುದ್ಧರೂ ಅರಹಂತರೂ ಆದ ಭಗವಾನರು ತಾವೇ ಅರಿತಿದ್ದಾರೆ, ಕಂಡಿದ್ದಾರೆ, ಇದನ್ನು ಸ್ಪಷ್ಟಪಡಿಸಿದ್ದಾರೆ. ವಿವಾದಾತೀತವಾದ... ದೇವತೆಗಳ ಮತ್ತು ಮನುಷ್ಯರ ಹಿತಕ್ಕಾಗಿ ಸುಖಕ್ಕಾಗಿ.... ಎಲ್ಲರೂ ಒಟ್ಟಿಗೆ ಪಠಿಸಬೇಕು. ಐದು ಯಾವುವು ?
“ಖಂಧಗಳು ಐದು- ರೂಪಕ್ಖಂಧ, ವೇದನಾಕ್ಖಂಧ, ಸಞ್ಞಾಖಂಧ, ಸಂಖಾರಕ್ಖಂಧ, ವಿಞ್ಞಾಣಕ್ಖಂಧ.
“ಉಪಾದಾನ ಖಂಧಗಳು ಐದು- ರೂಪೂಪದಾನಕ್ಖಂಧ, ವೇದನೂಪಪದಾನಕ್ಖಂಧ, ಸಞ್ಞಾನುಪಪದಾನಕ್ಖಂಧ, ಸಂಖಾರೂಪಪದಾನಕ್ಖಂಧ, ವಿಞ್ಞಾಣೂಪಪದಾನಕ್ಖಂಧ.
“ಕಾಮಗುಣಗಳು ಐದು- ಚಕ್ಷುವಿನಿಂದ ಅರಿಯಬಲ್ಲ ಕಣ್ಣಿಗೆ ಇಷ್ಟವಾಗಿರುವ ಅಪೇಕ್ಷಣೀಯವಾಗಿರುವ ರಮ್ಯವಾಗಿರುವ ರಂಜನೀಯವಾಗಿರುವ ಕಾಮಗಳನ್ನು ಉದ್ರೇಕಿಸುವ ರೂಪಗಳು, ಕಿವಿಯಿಂದ ತಿಳಿಯಲ್ಲ ಶಬ್ದಗಳು... ಮೂಗಿನಿಂದ ತಿಳಿಯಬಲ್ಲ ವಾಸನೆಗಳು... ನಾಲಿಗೆಯಿಂದ ತಿಳಿಯಬಲ್ಲ ರುಚಿಗಳು... ಕಾಯದಿಂದ ಇಷ್ಟವಾಗಿರುವ ಅಪೇಕ್ಷಣೀಯವಾಗಿರುವ ರಮ್ಯವಾಗಿರುವ ಪ್ರಿಯವಾಗಿರುವ ರಂಜನೀಯವಾಗಿರುವ ಕಾಮಗಳನ್ನು ಉದ್ರೇಕಿಸುವ ಸ್ಪರ್ಶಗಳು.
“ಮುಂದಿನ ಗತಿಗಳು ಐದು- ನಿರಯ, ತಿರ್ಯಕ್ ಲೋಕ, ಪ್ರೇತ ಲೋಕ, ಮನುಷ್ಯ ಲೋಕ, ದೇವಲೋಕ- ಇವುಗಳಲ್ಲಿ ಹುಟ್ಟುವುದು.
“ಮಾತ್ಸರ್ಯಗಳು ಐದು ಬಗೆ- ನಿವಾಸಗಳ ಬಗೆಗೆ ಬರುವ ಮಾತ್ಸರ್ಯ, ಕುಲದ ಬಗೆಗೆ ಬರುವ ಮಾತ್ಸರ್ಯ, ಸಂಪತ್ತಿನ ಬಗೆಗೆ ಬರುವ ಮಾತ್ಸರ್ಯ, ಬಣ್ಣದ ಬಗೆಗೆ ಬರುವ ಮಾತ್ಸರ್ಯ, ಧರ್ಮದ ಬಗೆಗೆ ಬರುವ ಮಾತ್ಸರ್ಯ.
“ನೀವರಣಗಳು ಐದು- ಬಯಕೆಗಳಿಂದ ತುಂಬಿರುವುದು, ವೈರಭಾವನೆ, ಆಲಸ್ಯ ಮತ್ತು ಜಡತೆ, ಚಿಂತೆ ಮತ್ತು ಕಳವಳ, ಸಂದೇಹ.
“ಕೆಳಗಿನ ಲೋಕಗಳಿಗೆ ಬಂಧಿಸುವ ಸಂಕೋಲೆಗಳು ಐದು- ಕಾಯವೇ ನಿಜ ಎಂಬ ನಂಬಿಕೆಯಿಂದ ನಾನು ನನ್ನದು ಎಂಬ ಭಾವನೆಯನ್ನು ಹೊಂದಿರುವುದು, ಸಂದೇಹ ಕೂಡಿರುವುದು, ನಿಯಮ ವ್ರತಗಳು ಮೂಲಕ ಬಿಡುಗಡೆಯಾಗುತ್ತದೆಂಬ ನಂಬಿಕೆ, ಕಾಮಗಳಿಂದ ಕೂಡಿರುವುದು, ವೈರಭಾವನೆಯಿಂದ ಕೂಡಿರುವುದು.
“ಮೇಲಿನ ಲೋಕಗಳಿಗೆ ಬಂಧಿಸುವ ಸಂಕೋಲೆಗಳು ಐದು- ರೂಪ ಲೋಕದಲ್ಲಿ ಹುಟ್ಟಬೇಕೆಂಬ ಆಸೆಯಿರುವುದು, ಅರೂಪ ಲೋಕದಲ್ಲಿ ಹುಟ್ಟಬೇಕೆಂಬ ಆಸೆಯಿರುವುದು, ದುರಭಿಮಾನ, ಚಿಂತೆ, ಅವಿದ್ಯೆ.
“ಶೀಲಗಳು ಐದು- ಪ್ರಾಣಿಹಿಂಸೆಯನ್ನು ಮಾಡದಿರುವುದು, ತನಗೆ ಸೇರದುದನ್ನು ತೆಗೆದುಕೊಳ್ಳದಿರುವುದು, ಸಮಾಜ ಒಪ್ಪದ ಲೈಂಗಿಕ ಸಂಬಂಧವನ್ನಿಟ್ಟುಕೊಳ್ಳದಿರುವುದು, ಸುಳ್ಳಾಡದಿರುವುದು, ಬುದ್ಧಿ ಭ್ರಮಣೆಯನ್ನುಂಟುಮಾಡುವ ಸುರೆ ಮದ್ಯಗಳನ್ನು ಸೇವಿಸದಿರುವುದು.
“ಅಸಾಧ್ಯವಾದವುಗಳು ಐದು- ಆಸವಗಳನ್ನು ಕಳೆದುಕೊಂಡ ಭಿಕ್ಷುವು ಇಚ್ಛಾಪೂರ್ವಕವಾಗಿ ಪ್ರಾಣ ತೆಗೆಯುವುದು ಅಸಾದ್ಯ. ಅಂಥ ಭಿಕ್ಷುವು ತನಗೆ ಸೇರದುದನ್ನು ತೆಗೆದುಕೊಳ್ಳುವುದಾಗಲೀ, ಮೈಥುನದಲ್ಲಿ ತೊಡಗುವುದಾಗಲೀ, ತಿಳಿದೂ ತಿಳಿದೂ ಸುಳ್ಳು ಹೇಳುವುದಾಗಲೀ, ಅನಗಾರಿಕನಾಗುವ ಮುಂದೆ ಇದ್ದಂತೆ ಭೋಗಗಳಲ್ಲಿ ತೊಡಗುವುದಾಗಲೀ ಸಾಧ್ಯವೇ ಇಲ್ಲ.
“ನಷ್ಟಗಳು ಐದು- ನೆಂಟರಿಷ್ಟರನ್ನು ಕಳೆದುಕೊಳ್ಳುವುದು, ಆಸ್ತಿಯನ್ನು ಕಳೆದುಕೊಳ್ಳುವುದು, ಆರೋಗ್ಯವನ್ನು ಕಳೆದುಕೊಳ್ಳುವುದು, ಶೀಲವನ್ನು ಕಳೆದುಕೊಳ್ಳುವುದು, ಒಳ್ಳೆಯ ದೃಷ್ಟಿಯನ್ನು ಕಳೆದುಕೊಳ್ಳುವುದು, ಬಂಧುಗಳ ನಷ್ಟದಿಂದಾಗಲೀ ಸಂಪತ್ತನ್ನು ಕಳೆದುಕೊಳ್ಳುವುದರಿಂದಾಗಲೀ ಆರೋಗ್ಯ ನಷ್ಟದಿಂದಾಗಲೀ, ಕಾಯದಿಂದ ಬೇರೆಯಾಗಿ ಮರಣ ಹೊಂದಿದ ಲೋಕದಲ್ಲಿ ಹುಟ್ಟುವುದಿಲ್ಲ. ಆದರೆ ಶೀಲ ನಷ್ಟದಿಂದ ಅಥವಾ ಒಳ್ಳೆಯ ದೃಷ್ಟಿ ನಾಶದಿಂದ ಜೀವಿಗಳ ಕಾಯದಿಂದ ಬೇರೆಯಾಗಿ ಮರಣ ಹೊಂದಿದ ಮೇಲೆ ಅಪಾಯ ದುರ್ಗತಿವಿನಿಪಾತ ನಿರಯ ಮುಂತಾದ ಕೆಟ್ಟ ಲೋಕಗಳಲ್ಲಿ ಹುಟ್ಟುತ್ತಾರೆ.
“ಸಂಪತ್ತುಗಳು ಐದು ಬಗೆಯಾಗಿವೆ- ಬಂಧುಗಳು, ಆಸ್ತಿ, ಆರೋಗ್ಯ, ಶೀಲ ಮತ್ತು ಒಳ್ಳೆಯ ದೃಷ್ಟಿ. ಬಂಧುಗಳನ್ನು ಪಡೆದಿರುವುದರಿಂದಾಗಲೀ, ಆಸ್ತಿಯನ್ನು ಹೊಂದಿರುವುದರಿಂದಾಗಲೀ ಅಥವಾ ಆರೋಗ್ಯವನ್ನು ಹೊಂದಿರುವುದರಿಂದಾಗಲೀ, ಜೀವಿಗಳು ಕಾಯದಿಂದ ಬೇರೆಯಾಗಿ ಮರಣ ಹೊಂದಿದ ಮೇಲೆ ಸ್ವರ್ಗ ಲೋಕದಲ್ಲಿ ಹುಟ್ಟುವುದಿಲ್ಲ. ಶೀಲವಂತನಾಗಿರುವುದರಿಂದ ಒಳ್ಳೆಯ ದೃಷ್ಟಿಯನ್ನು ಹೊಂದಿರುವುದರಿಮದ ಕಾಯದಿಂದ ಬೇರೆಯಾಗಿ ಮರಣ ಹೊಂದಿದ ಮೇಲೆ ಸ್ವರ್ಗಲೋಕದಲ್ಲಿ ಹುಟ್ಟುತ್ತಾರೆ.
“ದುಶ್ಶೀಲನಾದ ಶೀಲಭ್ರಷ್ಟನಿಗೆ ಇರುವ ಅಪಾಯಗಳು ಐದು- ಶೀಲವನ್ನು ಕಳೆದುಕೊಂಡ ದುಶ್ಶೀಲನು ಎಚ್ಚರಿಕೆಯನ್ನು ಕಳೆದುಕೊಳ್ಳುತ್ತಾನೆ, ಕೆಲಸ ಮಾಡದ ಆಲಸಿಯಾಗಿರುತ್ತಾನೆ. ಇದರಿಂದ ಅವನಿಗಿರುವ ಸಂಪತ್ತು ಹಾಳಾಗುತ್ತದೆ. ಇದು ಮೊದಲನೆಯ ಅಪಾಯ. ಶೀಲಭ್ರಷ್ಟನಾದವನು ದುಷ್ಕೀರ್ತಿಯು ಎಲ್ಲೆಲ್ಲಿಯೂ ಹರಡುತ್ತದೆ. ಇದು ಎರಡನೆಯ ಅಪಾಯ. ದುಶ್ಶೀಲನಾದವನು ಯಜ್ಞ ಮಾಡುವವರ ಸಮೂಹಕ್ಕಾಗಲೀ, ಗೃಹಪತಿಗಳನ್ನಾಗಲೀ, ಸಮಣರ ಸಮೂಹವನ್ನಾಗಲೀ, ಸಮೀಪಿಸಿದಾಗ ತಿಳಿವಳಿಕೆಯಿಲ್ಲದ ಮಂಕನೆನ್ನಿಸಿಕೊಳ್ಳುತ್ತಾನೆ. ಇದು ಮೂರನೆಯ ಅಪಾಯ. ಶೀಲವನ್ನು ಕಳೆದುಕೊಂಡವನು ಒದ್ದಾಡಿಕೊಂಡು ಸಾಯುತ್ತಾನೆ. ಇದು ನಾಲ್ಕನೆಯ ಅಪಾಯ. ಶೀಲಭ್ರಷ್ಟನಾದವನು ಕಾಯದಿಂದ ಬೇರೆಯಾಗಿ ಮರಣ ಹೊಂದಿದ ಮೇಲೆ ಅಪಾಯ ದುರ್ಗತಿ ವಿನಿಪಾತ ನಿರಯ ಲೋಕಗಳಲ್ಲಿ ಹುಟ್ಟುತ್ತಾನೆ. ಇದು ಐದನೆಯ ಅಪಾಯ.
“ಶೀಲ ಸಂಪನ್ನನಾದವನು ಪಡೆಯುವ ಅನುಕೂಲಗಳು ಐದು- ಮೇಲೆ ಸ್ವರ್ಗ ಶೀಲವಂತನು ಎಚ್ಚರಿಕೆಯುಳ್ಳವನಾಗಿರುವುದರಿಂದ ಮಹತ್ತಾದ ಸಂಪತ್ತನ್ನು ಪಡೆಯುತ್ತಾನೆ, ಇದು ಮೊದಲನೆಯ ಅನುಕೂಲ. ಶೀಲವಂತನ ಸತ್ಕೀರ್ತಿಯು ಎಲ್ಲಕಡೆಯೂ ಪ್ರಸಾರವಾಗುತ್ತದೆ, ಇದು ಎರಡನೆಯ ಅನುಕೂಲ. ಶೀಲಸಂಪನ್ನನು ಯಜ್ಞ ಮಾಡುವವರ ಕ್ಷತ್ರಿಯರ ಬ್ರಾಹ್ಮಣರ ಗೃಹಪತಿಗಳ ಸಮಣರ ಸಮೂಹದಲ್ಲಿದ್ದಾಗ ಅವನು ವಿಚಲಿತನಾಗದೆ ತನ್ನಲ್ಲಿ ವಿಶ್ವಾಸವನ್ನು ಹೊಂದಿರುತ್ತಾನೆ, ಇದು ಮೂರನೆಯ ಅನುಕೂಲ. ಶೀಲಸಂಪನ್ನನು ಸಮಾಧಾನದಿಂದ ಶಾಂತಚಿತ್ತನಾಗಿ ಸಾಯುತ್ತಾನೆ, ಇದು ನಾಲ್ಕನೆಯ ಅನುಕೂಲ. ಶೀಲವಂತನು ಕಾಯದಿಂದ ಬೇರೆಯಾಗಿ ಮರಣ ಹೊಂದಿದಮೇಲೆ ಸ್ವರ್ಗ ಲೋಕದಲ್ಲಿ ಹುಟ್ಟುತ್ತಾನೆ, ಇದು ಐದನೆಯ ಅನುಕೂಲ.
“ಇತರರಿಗೆ ಬುದ್ಧಿ ಹೇಳುವ ಭಿಕ್ಷುವು ಐದು ಅಂಶಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು. ‘ಹೇಳಬೇಕಾದುದನ್ನು ಸಕಾಲದಲ್ಲಿಯೇ ಹೇಳುತ್ತೇನೆ, ಅಕಾಲದಲ್ಲಲ್ಲ. ಸತ್ಯವಾದುದನ್ನು ಹೇಳುತ್ತೇನೆ, ಅಸತ್ಯವಾದದ್ದನ್ನಲ್ಲ. ಮೃದುವಾಗಿ ಹೇಳುತ್ತೇನೆ, ಕಠಿಣವಾಗಿಯಲ್ಲ. ಅರ್ಥವತ್ತಾದುದನ್ನು ಹೇಳುತ್ತೇನೆ, ಅರ್ಥಶೂನ್ಯವಾದದ್ದನ್ನಲ್ಲ. ಮೈತ್ರಿಯಿಂದ ಹೇಳುತ್ತೇನೆ, ದ್ವೇಷದಿಂದಲ್ಲ ಎಂದುಕೊಳ್ಳಬೇಕು. ಪರರಿಗೆ ಬುದ್ಧಿ ಹೇಳುವವನು ಈ ಐದು ಅಂಶಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.
“ಸಾಧನೆಯ ಅಂಶಗಳು ಐದು. ಭಿಕ್ಷುವಾದವನು ಶ್ರದ್ಧಾವಂತನಾಗಿ ತಥಾಗತನ ಬೋಧಿಯಲ್ಲಿ ವಿಶ್ವಾಸವನ್ನಿಟ್ಟಿರುತ್ತಾನೆ- ‘ಭಗವಾನರು ಅರಹಂತರೂ ಸಮ್ಮಾಸಂಬುದ್ಧರೂ ವಿಜ್ಜಾಚರಣ ಸಂಪನ್ನರೂ ಸುಗತರೂ ಲೋಕಗಳನ್ನು ಬಲ್ಲವರೂ ಮನುಷ್ಯರಿಗೆ ಶ್ರೇಷ್ಠರಾದ ಮಾರ್ಗದರ್ಶಕರೂ ದೇವತೆಗ ಮತ್ತು ಮನುಷ್ಯರ ಗುರುವೂ ಬುದ್ಧರೂ ಆಗಿದ್ದಾರೆ’ ಎಂಬ ವಿಶ್ವಾಸವನ್ನು ಹೊಂದಿರುತ್ತಾರೆ. ಅವನು ಆರೋಗ್ಯವಂತನೂ ಉತ್ತಮವಾದ ಜೀರ್ಣಶಕ್ತಿಯುಳ್ಳವನೂ ಹೆಚ್ಚು ಉಷ್ಣತೆಯಾಗಲೀ ಅತಿಯಾದ ಶೀತವಾಗಲೀ ಇರದ ಸಾಧನೆಗೆ ಅನುಕೂಲವಾದ ಮಧ್ಯಮ ಸ್ಥಿತಿಯುಳ್ಳವನೂ ಆಗಿರುತ್ತಾನೆ. ಕಪಟಿಯಾಗಲೀ, ಮಾಯಾವಿಯಾಗಲೀ ಆಗಿರದ ಅವನು ಗುರುವಿಗೂ ತಿಳಿದವರಿಗೂ ಪರಿಶುದ್ಧವಾದ ಜೀವನವನ್ನು ನಡೆಸುವವರಿಗೂ ತಾನು ಎಂಥವನು ಎಂಬುದನ್ನು ತೋರಿಸಿಕೊಳ್ಳುವವನಾಗಿರುತ್ತಾನೆ. ಅಕುಶಲವಾದುದನ್ನು ವಜಿಸಿ ಕುಶಲವಾದುದನ್ನು ಗಳಿಸುವ ಯತ್ನಶೀಲನಾಗಿರುತ್ತಾನೆ. ಮತ್ತು ಯತ್ನವನ್ನು ಎಂದೂ ಕಡಿಮೆ ಮಾಡದೆ ಕುಶಲವಾದವುಗಳು ತನ್ನ ಮನಸ್ಸಿನಲ್ಲಿ ಉಳಿಯುವಂತೆ ಎಚ್ಚರನಾಗಿರುತ್ತಾನೆ. ಐದನೆಯದಾಗಿ ಉದಯ ವ್ಯಯಗಳನ್ನು ಅರಿಯುವಂಥ ಪಞ್ಞಾವನ್ನು ಹೊಂದಿದವನಾಗಿ ಉತ್ಕೃಷ್ಟವಾದ ದುಃಖ ಕ್ಷಯದ ಮಾರ್ಗವನ್ನು ತಿಳಿದವನಾಗಿರುತ್ತಾನೆ.
“ಶುದ್ಧ ನಿವಾಸಗಳು51 ಐದು- ಅವಿಹ,52 ಅತಪ್ಪ, ಸುದಸ್ಸ, ಸುದಸ್ಸೀ, ಅಕನಿಟ್ಠಾ.
“ಆನಾಗಾಮಿಗಳು ಐದು ಬಗೆ- ಮಧ್ಯ ವಯಸ್ಸಿನಲ್ಲಿ ಪರಿನಿಬ್ಬಾಣವನ್ನು ಪಡೆಯುವವನು, ಮಧ್ಯ ವಯಸ್ಸಾದ ಮೇಲೆ ನಿಬ್ಬಾಣವನ್ನು ಪಡೆಯುವವನು. ಕಷ್ಟವೇನೂ ಇಲ್ಲದೆ ನಿಬ್ಬಾಣವನ್ನು ಪಡೆಯುವವನು ಕಷ್ಟಪಟ್ಟು ನಿಬ್ಬಾಣವನ್ನು ಪಡೆಯುವವನು. ಮೇಲಿನ ಸ್ಥಿತಿಯನ್ನು ಪಡೆಯಲು ಸಾಧನೆ ಮಾಡಿ ಅಕನಿಟ್ಠ ಲೋಕದಲ್ಲಿ ಹುಟ್ಟುವವನು.
ಬಂಜರು ಸ್ಥಿತಿಗಳು ಐದು- ಗುರುವಿನಲ್ಲಿ ಶಂಕೆ ಸಂಶಯಗಳನ್ನು ಹೊಂದಿ ಯಾವ ನಿರ್ಧಾರಕ್ಕೆ ಬರದ ಅತೃಪ್ತನಾಗಿರುವವನ ಸ್ಥಿತಿ. ಗುರುವಿನಲ್ಲಿ ಶಂಕೆ ಸಂಶಯಗಳನ್ನು ಹೊಂದಿ ಯಾವ ನಿರ್ಧಾರಕ್ಕೂ ಬರದ ಈ ಭಿಕ್ಷುವು ಶ್ರದ್ಧೆ ಸತತ ಯತ್ನದಿಂದ ಕೂಡಿರುವ ನಿರತ ಸಾಧನೆಯ ಕಡೆಗೆ ಅವನ ಮನಸ್ಸು ವಾಲಿರುವುದಿಲ್ಲ. ಇದು ಮೊದಲನೆಯ ಬಂಜರು ಸ್ಥಿತಿ. ಭಿಕ್ಷುವು ಧಮ್ಮದಲ್ಲಿ ಶಂಕೆ ಸಂದೇಹಗಳನ್ನು ಹೊಂದಿ... ಸಂಘದಲ್ಲಿ ಶಂಕೆ ಸಂದೇಹಗಳನ್ನು ಹೊಂದಿ... ತನ್ನ ಶಿಕ್ಷಣದಲ್ಲಿ ಸಂಶಯ ಶಂಕೆಗಳನ್ನು ಹೊಂದಿ... ತನ್ನ ಜೊತೆಯ ಸಾಧಕರಲ್ಲಿ ಕೋಪಗೊಂಡು ಕಾತುರತೆಯಿಂದ ಕೂಡಿದವನಾಗಿ ಅವರಲ್ಲಿ ಕ್ಷುದ್ರಗೊಂಡವನಾಗಿರುತ್ತಾನೆ. ಅವನ ಚಿತ್ತವು ಶ್ರದ್ಧೆ, ಸತತ ಯತ್ನ, ನಿರತ ಸಾಧನೆಯ ಕಡೆಗೆ ವಾಲಿರುವುದಿಲ್ಲ. ಇದು ಐದನೆಯ ಬಂಜರು ಸ್ಥಿತಿ.
“ಚಿತ್ತ ಬಂಧನಗಳು ಐದು- ಕಾಮ ರಾಗದಿಂದ ತುಂಬಿರುವ ಪ್ರೇಮಗಳಿಂದ ಆವೃತವಾಗಿರುವ, ಪಿಪಾಸೆ ಜ್ವರ ತಣ್ಹಾಗಳಿಂದ ತುಂಬಿರುವ ಭಿಕ್ಷುವಿನ ಚಿತ್ತವು ಶ್ರದ್ಧೆ ಸತತ ಯತ್ನ ನಿರತ ಸಾಧನೆಯ ಕಡೆಗೆ ವಾಲಿರುವುದಿಲ್ಲ. ಇದು ಚಿತ್ತದ ಮೊದಲನೆಯ ಬಂಧನ. ಕಾಯದ* ಮೇಲೆ ಅತಿ ವ್ಯಾಮೋಹವಿರುವ... ರೂಪದ ಮೇಲೆ ಅತಿ ವ್ಯಾಮೋಹವಿರುವ... ಹೊಟ್ಟೆ ತುಂಬ ಉಂಡು ಹೊರಳಿ ನಿದ್ದೆ ಮಾಡುತ್ತಾ, ಸೋಮಾರಿತನವನ್ನು ಬೆಳೆಸಿಕೊಂಡು ಯತ್ನಶೀಲನಾಗದ ಭಿಕ್ಷುವಿನ... ಯಾವುದಾದರೂ ಒಂದು ದೇವ ಕಾಯವನ್ನು ತಡೆಯುವ ಬಯಕೆಯಿಂದ ಉತ್ಕೃಷ್ಟವಾದ ಪರಿಶುದ್ಧ ಜೀವನವನ್ನು ನಡೆಸುತ್ತಿರುವ ಭಿಕ್ಷುವು- ಈ ನಿಯಮ ಈ ವ್ರತ ಈ ತಪಸ್ಸು ಈ ಪರಿಶುದ್ಧ ಜೀವನಗಳಿಂದ ದೇವತೆಯೋ ದೇವೋತ್ತಮೋ ಆಗುತ್ತೇನೆ ಎಂದುಕೊಂಡಾಗ ಅವನ ಚಿತ್ತವು ಶ್ರದ್ಧೆ ಸತತ ಯತ್ನ ನಿರತ ಸಾಧನೆಯ ಕಡೆಗೆ ವಾಲಿರುವುದಿಲ್ಲ. ಇದು ಐದನೆಯ ಚಿತ್ತಬಂಧನ.
“ಇಂದ್ರಿಯಗಳು ಐದು- ಚಕ್ಷು, ಶ್ರೋತ, ಘ್ರಾಣ, ಜಿಹ್ವೆ, ಕಾಯ.
“ಇಂದ್ರಿಯಗಳು ಇನ್ನೂ ಐದಿವೆ- ಸುಖೇಂದ್ರಿಯ, ದುಃಖೇಂದ್ರಿಯ, ಸೋಮನಸ್ಸೇಂದ್ರಿಯ, ದೋಮನಸ್ಸೇಂದ್ರಿಯ, ಉಪೇಕ್ಖೇಂದ್ರಿಯ.
“ಇಂದ್ರಿಯಗಳು ಮತ್ತೂ ಐದಿವೆ- ಶ್ರದ್ಧೆ, ವೀರ್ಯ, ಸ್ಮೃತಿ, ಸಮಾಧಿ, ಪಞ್ಞಾ.
“ಬಿಡುಗಡೆಯ ಕಡೆಗೊಯ್ಯುವ ಧಾತುಗಳು ಐದು- ಕಾಮಗಳನ್ನು ಕುರಿತು ಚಿಂತಿಸುವಾಗ ಭಿಕ್ಷುವಿನ ಚಿತ್ತವು ಕಾಮಗಳ ಕಡೆಗೆ ಹಾರುವುದಿಲ್ಲ. ಅವುಗಳಿಂದ ಸಂತೋಷಪಡುವುದಿಲ್ಲ. ಸಂತುಷ್ಟಿಯನ್ನು ಪಡೆಯುವುದಿಲ್ಲ. ಅವುಗಳಿಗೆ ಅಂಟಿಕೊಳ್ಳುವುದಿಲ್ಲ. ಆದರೆ ನೇಕ್ಖಮ್ಮವನ್ನು ಕುರಿತು ಚಿಂತಿಸುವಾಗ ಚಿತ್ತವು ಅದರಲ್ಲೇ ನಿಂತಿರುತ್ತದೆ. ಅದರಲ್ಲಿ ಸಂತೋಷಿಸುತ್ತದೆ, ಸಂತುಷ್ಟಿಯನ್ನು ಪಡೆಯುತ್ತದೆ, ಅದನ್ನು ಬಿಡದೆ ಅಪ್ಪಿಕೊಂಡಿರುತ್ತದೆ, ಒಳ್ಳೆಯ ರೀತಿಯಲ್ಲಿ ಬೆಳೆಯುತ್ತದೆ, ಮೇಲಕ್ಕೆ ಏರುತ್ತದೆ, ಬಿಡುಗಡೆಯನ್ನು ಹೊಂದುತ್ತದೆ, ಕಾಮಗಳಿಂದ ದೂರವಾಗಿರುತ್ತದೆ. ಯಾವ ಆಸವಗಳು ಕಷ್ಟಗಳು ಜ್ವರಗಳು ಕಾಮವನ್ನು ಅವಲಂಬಿಸಿ ಹುಟ್ಟಿಕೊಳ್ಳುತ್ತವೆಯೋ ಅವುಗಳಿಂದ ಮುಕ್ತನಾದವನು ಅಂಥ ವೇದನೆಗಳಿಂದ ಬಾಧಿತನಾಗುವುದಿಲ್ಲ. ಇದನ್ನು ಕಾಮಗಳ ಬಿಡುಗಡೆ ಎನ್ನುತ್ತಾರೆ.
“ವ್ಯಾಪಾದವನ್ನು ಕುರಿತು ಚಿಂತಿಸುವಾಗ ಭಿಕ್ಷುವಿನ ಚಿತ್ತವು ವ್ಯಾಪಾದದ ಕಡೆಗೆ ಹಾರುವುದಿಲ್ಲ. ಅದರಿಂದ ಸಂತೋಷಪಡುವುದಿಲ್ಲ. ಅದರಿಂದ ಸಂತುಷ್ಟಿ ಪಡೆಯುವುದಿಲ್ಲ. ಅದಕ್ಕೆ ಅಂಟಿಕೊಳ್ಳುವುದಿಲ್ಲ. ಆದರೆ ಅವ್ಯಾಪಾದವನ್ನು ಕುರಿತು ಚಿಂತಿಸುವಾಗ ಚಿತ್ತವು ಅದರಲ್ಲೇ ನಿಂತಿರುತ್ತದೆ. ಅದರಲ್ಲಿ ಸಂತೋಷಿಸುತ್ತದೆ. ಸಂತುಷ್ಟಿಯನ್ನು ಪಡೆಯುತ್ತದೆ. ಅದನ್ನು ಬಿಡದೆ ಅಪ್ಪಿಕೊಂಡಿರುತ್ತದೆ. ಅವನ ಚಿತ್ತವು ಒಳ್ಳೆಯ ಮಾರ್ಗದಲ್ಲಿ ಚಲಿಸುತ್ತಿರುತ್ತದೆ. ಒಳ್ಳೆಯ ರೀತಿ ಬೆಳೆಯುತ್ತದೆ, ಮೇಲಕ್ಕೆ ಏರುತ್ತದೆ, ಬಿಡುಗಡೆಯನ್ನು ಹೊಂದುತ್ತದೆ. ವ್ಯಾಪಾದದಿಂದ ದೂರವಾಗಿರುತ್ತದೆ. ಯಾವ ಆಸವಗಳೂ ಕಷ್ಟಗಳೂ ಜ್ವರಗಳೂ ವ್ಯಾಪಾದವನ್ನು ಅವಲಂಬಿಸಿ ಹುಟ್ಟಿಕೊಳ್ಳುತ್ತವೆಯೋ ಅವುಗಳಿಂದ ಮುಕ್ತನಾದವನು ಅಂಥ ವೇದನೆಗಳಿಂದ ಬಾಧಿತನಾಗುವುದಿಲ್ಲ. ಇದನ್ನು ವ್ಯಾಪಾದದಿಂದಾಗುವ ಬಿಡುಗಡೆ ಎನ್ನುತ್ತಾರೆ.
“ಹಿಂಸೆಯನ್ನು ಕುರಿತು ಚಿಂತಿಸುವಾಗ ಭಿಕ್ಷುವಿನ ಚಿತ್ತವು ಹಿಂಸೆಯ ಕಡೆ ಹಾರುವುದಿಲ್ಲ. ಅದರಿಂದ ಸಂತೋಷಪಡುವುದಿಲ್ಲ. ಆದರೆ ಅಹಿಂಸೆಯನ್ನು ಕುರಿತು ಚಿಂತಿಸುವಾಗ ಚಿತ್ತವು ಅದರಲ್ಲೇ ನಿಂತಿರುತ್ತದೆ. ಅದರಲ್ಲೇ ಸಂತೋಷಿಸುತ್ತದೆ, ಸಂತುಷ್ಟಿಯನ್ನು ಪಡೆಯುತ್ತದೆ. ಅದನ್ನು ಬಿಡದೆ ಅಪ್ಪಿಕೊಂಡಿರುತ್ತದೆ. ಅವನ ಚಿತ್ತವು ಒಳ್ಳೆಯ ಮಾರ್ಗದಲ್ಲಿ ಚಲಿಸುತ್ತಿರುತ್ತದೆ. ಒಳ್ಳೆಯ ರೀತಿಯಲ್ಲಿ ಬೆಳೆಯುತ್ತದೆ. ಮೇಲಕ್ಕೆ ಏರುತ್ತದೆ. ಬಿಡುಗಡೆಯನ್ನು ಪಡೆಯುತ್ತದೆ. ಹಿಂಸೆಯಿಂದ ದೂರವಾಗಿರುತ್ತದೆ. ಯಾವ ಆಸವಗಳೂ ಕಷ್ಟಗಳೂ ಜ್ವರಗಳೂ ಹಿಂಸೆಯಿಂದ ಹುಟ್ಟುತ್ತವೆಯೋ ಅವುಗಳಿಂದ ಮುಕ್ತನಾದವನು ಅಂಥ ವೇದನೆಯಿಂದ ಬಾಧಿತನಾಗುವುದಿಲ್ಲ. ಇದನ್ನು ಹಿಂಸಾಭಾವನೆಯಿಂದ ಬಿಡುಗಡೆ ಎನ್ನುತ್ತಾರೆ.
“ರೂಪವನ್ನು ಕುರಿತು ಚಿಂತಿಸುವಾಗ ಭಿಕ್ಷುವಿನ ಚಿತ್ತವು ರೂಪದ ಕಡೆಗೆ ಹಾರುವುದಿಲ್ಲ. ಅದರಿಂದ ಸಂತೋಷಪಡುವುದಿಲ್ಲ ಅದರಿಂದ ಸಂತುಷ್ಟಿ ಪಡೆಯುವುದಿಲ್ಲ. ಅದಕ್ಕೆ ಅಂಟಿಕೊಳ್ಳುವುದಿಲ್ಲ. ಆದರೆ ಅರೂಪವನ್ನು ಕುರಿತು ಚಿಂತಿಸುವಾಗ ಚಿತ್ತವು ಅದರಲ್ಲೇ ನಿಂತಿರುತ್ತದೆ. ಅದರಲ್ಲಿ ಸಂತೋಷಿಸುತ್ತದೆ. ಸಂತುಷ್ಟಿಯನ್ನು ಪಡೆಯುತ್ತದೆ. ಅದನ್ನು ಬಿಡದೆ ಅಪ್ಪಿಕೊಂಡಿರುತ್ತದೆ. ಅವನ ಚಿತ್ತವು ಒಳ್ಳೆಯ ಮಾರ್ಗದಲ್ಲಿ ಚಲಿಸುತ್ತಿರುತ್ತದೆ. ಒಳ್ಳೆಯ ರೀತಿ ಬೆಳೆಯುತ್ತದೆ. ಮೇಲಕ್ಕೆ ಏರುತ್ತದೆ. ಬಿಡುಗಡೆಯನ್ನು ಹೊಂದುತ್ತದೆ. ರೂಪದ ಮೇಲಿನ ಆಸೆಯಿಂದ ದೂರವಾಗಿರುತ್ತದೆ. ಯಾವ ಆಸವಗಳೂ ಕಷ್ಟಗಳು ಜ್ವರಗಳೂ ರೂಪವನ್ನವಲಂಬಿಸಿ ಹುಟ್ಟಿಕೊಳ್ಳುತ್ತವೆಯೋ ಮುಕ್ತನಾದವನು ಅವುಗಳ ವೇದನೆಯಿಂದ ಬಾಧಿತನಾಗುವುದಿಲ್ಲ. ಇದನ್ನು ರೂಪದ ಮೇಲಿನ ಆಸೆಯಿಂದ ಬಿಡುಗಡೆ ಎನ್ನುತ್ತಾರೆ.
“ಕಾಯವನ್ನು ಕುರಿತು ಚಿಂತಿಸುವಾಗ ಭಿಕ್ಷುವಿನ ಚಿತ್ತವು ಕಾಯದ ಕಡೆಗೆ ಹಾರುವುದಿಲ್ಲ. ಅದರಿಂದ ಸಂತೋಷಪಡುವುದಿಲ್ಲ. ಅದರಿಂದ ಸಂತುಷ್ಟಿಪಡೆಯುವುದಿಲ್ಲ. ಅದಕ್ಕೆ ಅಂಟಿಕೊಳ್ಳುವುದಿಲ್ಲ. ಆದರೆ ಕಾಯ ನಿರೋಧವನ್ನು ಕುರಿತು ಚಿಂತಿಸುವಾಗ ಚಿತ್ತವು ಅದರಲ್ಲೇ ನಿಂತಿರುತ್ತದೆ. ಅದರಲ್ಲಿ ಸಂತೋಷಿಸುತ್ತದೆ. ಸಂತುಷ್ಟಿಯನ್ನು ಪಡೆಯುತ್ತದೆ. ಅದನ್ನು ಬಿಡದೆ ಅಪ್ಪಿಕೊಂಡಿರುತ್ತದೆ. ಅವನ ಚಿತ್ತವು ಒಳ್ಳೆಯ ಮಾರ್ಗದಲ್ಲಿ ಚಲಿಸುತ್ತಿರುತ್ತದೆ. ಒಳ್ಳೆಯ ರೀತಿಯಲ್ಲಿ ಬೆಳೆಯುತ್ತದೆ. ಮೇಲಕ್ಕೆ ಏರಿ ಕಾಯವೇ ನಿಜವೆಂಬ ಭಾವನೆಯಿಂದ ಮುಕ್ತವಾಗಿರುತ್ತದೆ. ಯಾವ ಆಸವಗಳೂ ಕಷ್ಟಗಳೂ ಜ್ವರಗಳೂ ಕಾಯವನ್ನವಲಂಬಿಸಿ ಹುಟ್ಟಿಕೊಳ್ಳುತ್ತವೆಯೋ ಅವುಗಳಿಂದ ಮುಕ್ತನಾದವನು ಅವುಗಳ ವೇದನೆಯಿಂದ ಬಾಧಿತನಾಗುವುದಿಲ್ಲ. ಇದನ್ನು ಸಕ್ಕಾಯ ಭಾವನೆಯಿಂದ ಬಿಡುಗಡೆ ಎನ್ನುತ್ತಾರೆ.
“ವಿಮುತ್ತಿಯ ನೆಲೆಗಳು ಐದು- ಭಿಕ್ಷುವಿನ ಗುರುವೋ ಅಥವಾ ಹಿರಿಯನಾದ ಜೊತೆಯ ಬ್ರಹ್ಮಚಾರಿಯೋ ಧಮ್ಮವನ್ನು ಬೋಧಿಸುತ್ತಾನೆ. ಅಂಥವನು ಬೋಧಿಸುತ್ತಿದ್ದಂತೆಯೇ ಭಿಕ್ಷುವು ಧಮ್ಮವನ್ನೂ ಅರ್ಥವನ್ನೂ ಅರಿತುಕೊಳ್ಳುತ್ತಾನೆ. ಅದರಿಂದ ಅವನಲ್ಲಿ ಪ್ರಮೋದವು ಹುಟ್ಟಿಕೊಳ್ಳುತ್ತದೆ. ಅದರಿಂದ ಪ್ರೀತಿಯು ಹುಟ್ಟಿಕೊಳ್ಳುತ್ತದೆ. ಪ್ರೀತಿಯ ಮನಸ್ಸಿನಿಂದ ಕಾಯವು ಶಾಂತವಾಗುತ್ತವೆ. ಶಾಂತವಾದ ಕಾಯದಿಂದ ಸುಖದ ಅನುಭವವಾಗುತ್ತದೆ, ಸುಖದಿಂದಿರುವ ಚಿತ್ತವು ಸಮಾಧಿಯನ್ನು ಅನುಭವಿಸುತ್ತದೆ. ಇದು ಮೊದಲನೆಯ ವಿಮುಕ್ತಿ ನೆಲೆ.
“ಇನ್ನೊಂದು ಸಮಯದಲ್ಲಿ ಭಿಕ್ಷುವಿನ ಗುರುವಾಗಲೀ, ಅಥವಾ ಅವನ ಜೊತೆಯ ಹಿರಿಯ ಬ್ರಹ್ಮಚಾರಿಯಾಗಲೀ ಧಮ್ಮವನ್ನು ಬೋಧಿಸುವುದಿಲ್ಲ. ಭಿಕ್ಷುವು ತಾನೇ ಧಮ್ಮವನ್ನು ಅರಿತು ಕಂಠಪಾಠ ಮಾಡಿದ ಧಮ್ಮವನ್ನು ಇತರರಿಗೆ ವಿವರಿಸುತ್ತಾನೆ... ತಾನು ಅರಿತು ಕಂಠಪಾಠ ಮಾಡಿದ ಧಮ್ಮವನ್ನು ವಿಸ್ತಾರವಾಗಿ ಪಠಿಸುತ್ತಾನೆ... ತಾನು ಅರಿತು ಕಂಠಪಾಠ ಮಾಡಿದ ಧಮ್ಮವನ್ನು ಮಂಥಿಸುತ್ತಾನೆ, ತರ್ಕಪೂರಿತವಾಗಿ ವಿಚಾರ ಮಾಡುತ್ತಾನೆ... ಸಮಾದಿಯ ಬಗೆಗೆ ಬರಬಹುದಾದ ಒಂದು ಸೂಚನೆಯನ್ನು ಚೆನ್ನಾಗಿ ಗ್ರಹಿಸಿ ಪಞ್ಞಾವನ್ನು ಪಡೆದು ಧಮ್ಮವನ್ನು ತನ್ನದನ್ನಾಗಿ ಮಾಡಿಕೊಳ್ಳುತ್ತಾನೆ. ಹೀಗೆ ಮಾಡುವುದರಿಂದ ಧಮ್ಮವನ್ನು ಅದರ ಅರ್ಥವನ್ನೂ ಅರಿತುಕೊಳ್ಳುತ್ತಾನೆ. ಇದರಿಂದ ಅವನಲ್ಲಿ ಪ್ರಮೋದವು ಹುಟ್ಟಿಕೊಳ್ಳುತ್ತದೆ. ಅದರಿಂದ ಪ್ರೀತಿಯು ಹುಟ್ಟುತ್ತದೆ. ಪ್ರೀತಿಯ ಮನಸ್ಸಿನಿಂದ ಕಾಯವು ಶಾಂತವಾಗುತ್ತದೆ. ಶಾಂತವಾದ ಕಾಯದಿಂದ ಸುಖದ ಅನುಭವವಾಗುತ್ತದೆ. ಸುಖದಿಂದಿರುವ ಚಿತ್ತವು ಸಮಾಧಿಯನ್ನು ಅನುಭವಿಸುತ್ತದೆ. ಇದು ಐದನೆಯ ನೆಲೆ.
“ವಿಮುತ್ತಿಯು ಪಕ್ವವಾಗವುದಕ್ಕೆ ಬೇಕಾದ ಅರಿವುಗಳು ಐದು- ಅನಿಚ್ಚದ ಅರಿವು, ದುಃಖದಲ್ಲಿರುವ ಅನತ್ತದ ಅರಿವು, ವರ್ಜಿಸಬೇಕಾದವುಗಳ ಅರಿವು, ವೈರಾಗ್ಯದ ಅರಿವು.
“ಗೆಳೆಯರೇ, ಧರ್ಮವು ಐದರಿಂದ ಆಗಿದೆ ಎಂಬುದನ್ನು ಸಮ್ಮಾಸಂಬುದ್ಧರೂ ಅರಹಂತರೂ ಆದ ಭಗವಾನರು ತಾವೇ ಅರಿತಿದ್ದಾರೆ, ಕಂಡಿದ್ದಾರೆ, ಇದನ್ನು ಸ್ಪಷ್ಟಪಡಿಸಿದ್ದಾರೆ. ವಿವಾದಾತೀತವಾದ... ದೇವತೆಗಳ ಮತ್ತು ಮನುಷ್ಯರ ಹಿತಕ್ಕಾಗಿ ಸುಖಕ್ಕಾಗಿ ಎಲ್ಲರೂ ಒಟ್ಟಿಗೆ ಪಠಿಸಬೇಕು.
ಆರರ ಧರ್ಮಗಳು
“ಗೆಳೆಯರೆ, ಧರ್ಮವು ಆರರಿಂದ ಆಗಿದೆ ಎಂಬುದನ್ನು ಸಮ್ಮಾಸಂಬುದ್ಧರೂ ಅರಹಂತರೂ ಆದ ಭಗವಾನರು ತಾವೇ ಅರಿತಿದ್ದಾರೆ, ಕಂಡಿದ್ದಾರೆ, ಇದನ್ನು ಸ್ಪಷ್ಟಪಡಿಸಿದ್ದರೆ. ವಿವಾದಾತೀತವಾದ... ದೇವತೆಗಳ ಮತ್ತು ಮನುಷ್ಯರ ಹಿತಕ್ಕಾಗಿ ಸುಖಕ್ಕಾಗಿ... ಎಲ್ಲರೂ ಒಟ್ಟಿಗೆ ಪಠಿಸಬೇಕು. ಅವು ಯಾವುವು ?
“ತನ್ನಲ್ಲೇ ಇರುವ ಅನುಭವದ ನೆಲೆಗಳು ಆರು- ಚಕ್ಷು, ಶ್ರೋತ, ಘ್ರಾಣ, ಜಿಹ್ವೆ, ಕಾಯ, ಮನಸ್ಸು.
“ತನ್ನ ಹೊರಗಿರುವ ಅನುಭವದ ನೆಲೆಗಳು ಆರು- ರೂಪ, ಶಬ್ದ, ಗಂಧ, ರಸ, ಸ್ವರ್ಶ, ಧರ್ಮ.
“ವಿಞ್ಞಾಣ ಕಾಯಗಳು ಆರು- ಚಕ್ಷು ವಿಞ್ಞಾಣ, ಶ್ರೋತ ವಿಞ್ಞಾಣ, ಘ್ರಾಣ ವಿಞ್ಞಾಣ, ಜಿಹ್ವಾ ವಿಞ್ಞಾಣ, ಕಾಯ ವಿಞ್ಞಾಣ, ಮನೋ ವಿಞ್ಞಾಣ.
“ಪಸ್ಸ ಕಾಯಗಳು ಆರು- ಚಕ್ಷು ಸಂಫಸ್ಸ, ಶ್ರೋತ ಸಂಫಸ್ಸ, ಘ್ರಾಣ ಸಂಫಸ್ಸ, ಜಿಹ್ವಾ ಸಂಫಸ್ಸ, ಕಾಯ ಸಂಫಸ್ಸ, ಮನೋ ಸಂಫಸ್ಸ.
“ವೇದನಾ ಕಾಯಗಳು ಆರು- ಚಕ್ಷು ಸಂಸ್ಪರ್ಶದಿಂದ ಹುಟ್ಟುವ ವೇದನೆ, ಶ್ರೋತ ಸಂಸ್ಪರ್ಶದಿಂದ ಹುಟ್ಟುವ ವೇದನೆ, ಘ್ರಾಣ ಸಂಸ್ಪರ್ಶದಿಂದ ಹುಟ್ಟುವ ವೇದನೆ, ಜಿಹ್ವಾ ಸಂಸ್ಪರ್ಶದಿಂದ ಹುಟ್ಟುವ ವೇದನೆ, ಕಾಯ ಸಂಸ್ಪರ್ಶದಿಂದ ಹುಟ್ಟುವ ವೇದನೆ, ಮನೋ ಸಂಸ್ಪರ್ಶದಿಂದ ಹುಟ್ಟುವ ವೇದನೆ.
“ಸಞ್ಞಾ ಕಾಯಗಳು ಆರು- ರೂಪದ ಅರಿವು, ಶಬ್ದದ ಅರಿವು, ವಾಸನೆಯ ಅರಿವು, ರುಚಿಯ ಅರಿವು, ಸ್ಪರ್ಶದ ಅರಿವು, ಧರ್ಮದ ಅರಿವು.
“ಸಂಚೇತನ ಕಾಯಗಳು ಆರು- ರೂಪ, ಶಬ್ದ, ಗಂಧ, ರಸ, ಸ್ಪರ್ಶ ಮತ್ತು ಧರ್ಮ.
“ಆರು ತಣ್ಹಾ ಕಾಯಗಳು- ರೂಪ ತಣ್ಹಾ, ಶಬ್ದ ತಣ್ಹಾ, ಘ್ರಾಣ ತಣ್ಹಾ, ರಸ ತಣ್ಹಾ, ಸ್ಪರ್ಶ ತಣ್ಹಾ, ಧರ್ಮ ತಣ್ಹಾ.
“ಅಗೌರವಗಳು ಆರು ಬಗೆ- ಭಿಕ್ಷುವು ಗುರುವಿನ ಬಗೆಗೆ ಅಗೌರವದಿಂದ ಅವಿಧೇಯತೆಯಿಂದ ನಡೆದುಕೊಳ್ಳುವುದು, ಧಮ್ಮದ ಬಗೆಗೆ ಅಗೌರವದಿಂದ ಅವಿಧೇಯತೆಯಿಂದ ನಡೆದುಕೊಳ್ಳುವುದು, ಸಂಘದ ಬಗೆಗೆ ಅಗೌರವದಿಂದ ಅವಿಧೇಯತೆಯಿಂದ ನಡೆದುಕೊಳ್ಳುವುದು, ಶಿಕ್ಷಣದ ಬಗೆಗೆ ಅಗೌರವದಿಂದ ನಡೆದುಕೊಳ್ಳುವುದು, ಎಚ್ಚರಿಕೆಯನ್ನು ಅಸಡ್ಡೆ ಮಾಡುವುದು, ತನ್ನ ಸಂಗತಿಗಳನ್ನೇ ನಿರ್ಲಕ್ಷಿಸುವುದು.
“ಗೌರವಗಳು ಆರು ಬಗೆ- ಭಿಕ್ಷುವು ಗುರುವಿನ ಬಗೆಗೆ ಗೌರವದಿಂದ ವಿಧೇಯತೆಯಿಂದ ನಡೆದುಕೊಳ್ಳುವುದು, ಧಮ್ಮದ ಬಗೆಗೆ ಗೌರವದಿಂದ ವಿಧೇಯತೆಯಿಂದ ನಡೆದುಕೊಳ್ಳುವುದು, ಸಂಘದ ಬಗೆಗೆ ಗೌರವದಿಂದ ವಿಧೇಯತೆಯಿಂದ ನಡೆದುಕೊಳ್ಳುವುದು, ಶಿಕ್ಷಣದ ಬಗೆಗೆ ಗೌರವದಿಂದ ನಡೆದುಕೊಳ್ಳುವುದು, ಎಚ್ಚರಿಕೆಯನ್ನು ಕಾಪಾಡಿಕೊಳ್ಳುವುದು.
“ಸೋಮನಸ್ಸಿನಿಂದ ಮಾಡುವ ವಿಚಾರಗಳು ಆರು- ಚಕ್ಷುವಿನಿಂದ ರೂಪವನ್ನು ನೋಡಿ ಸೋಮನಸ್ಸಿನಿಂದ ಅದನ್ನು ವಿಚಾರ ಮಾಡುವುದು; ಕಿವಿಯಿಂದ ಶಬ್ದವನ್ನು ಕೇಳಿ... ಮೂಗಿನಿಂದ ವಾಸನೆಯನ್ನು ತಿಳಿದು... ನಾಲಿಗೆಯಿಂದ ರುಚಿಯನ್ನು ನೋಡಿ... ಕಾಯದಿಂದ ಸ್ಪರ್ಶವನ್ನು ಅನುಭವಿಸಿ... ಮನಸ್ಸಿನಿಂದ ಧರ್ಮವನ್ನು ತಿಳಿದು ಸೋಮನಸ್ಸಿನಿಂದ ಅದನ್ನು ವಿಚಾರ ಮಾಡುವುದು.
“ದೋಮನಸ್ಸಿನಿಂದ ಮಾಡುವ ವಿಚಾರಗಳು ಆರು- ಚಕ್ಷುವಿನಿಂದ ರೂಪವನ್ನು ನೋಡಿ ದೋಮನಸ್ಸಿನಿಂದ ಅದನ್ನು ವಿಚಾರ ಮಾಡುವುದು; ಕಿವಿಯಿಂದ ಶಬ್ದವನ್ನು ಕೇಳಿ... ಮೂಗಿನಿಂದ ವಾಸನೆಯನ್ನು ತಿಳಿದು... ನಾಲಿಗೆಯಿಂದ ರುಚಿಯನ್ನು ನೋಡಿ... ಕಾಯದಿಂದ ಸ್ಪರ್ಶವನ್ನು ಅನುಭವಿಸಿ... ಮನಸ್ಸಿನಿಂದ ಧರ್ಮವನ್ನು ತಿಳಿದು ದೋಮನಸ್ಸಿನಿಂದ ಅದನ್ನು ವಿಚಾರ ಮಾಡುವುದು.
“ಉಪೇಕ್ಷಾ ಭಾವದಿಂದ ಮಾಡುವ ವಿಚಾರಗಳು ಆರು- ಚಕ್ಷುವಿನಿಂದ ರೂಪವನ್ನು ನೋಡಿ ಉಪೇಕ್ಷಾ ಭಾವದಿಂದ ವಿಚಾರ ಮಾಡುವುದು, ಕಿವಿಯಿಂದ ಶಬ್ದವನ್ನು ಕೇಳಿ... ಮೂಗಿನಿಂದ ವಾಸನೆಯನ್ನು ತಿಳಿದು... ನಾಲಿಗೆಯಿಂದ ರುಚಿಯನ್ನು ನೋಡಿ... ಕಾಯದಿಂದ ಸ್ಪರ್ಶವನ್ನು ತಿಳಿದು, ಮನಸ್ಸಿನಿಂದ ಧರ್ಮವನ್ನು ತಿಳಿದು ಉಪೇಕ್ಷಾ ಭಾವದಿಂದ ವಿಚಾರ ಮಾಡುವುದು.
“ಸೋದರತೆಯಿಂದ ಬಾಳುವುದು ಆರು ರೀತಿಯಲ್ಲಿ- ಭಿಕ್ಷು ಒಬ್ಬನಿಗೆ ಅವನ ಜೊತೆಯ ಬ್ರಹ್ಮಚಾರಿಯು ಒಳ್ಳೆಯ ಕಾರ್ಯವನ್ನು ಎಲ್ಲರಿಗೂ ಗೊತ್ತಾಗುವಂತೆಯೋ, ರಹಸ್ಯವಾಗಿಯೋ ಮಾಡಿದಾಗ ಅದು ಪ್ರಿಯವಾಗಿಯೂ ಗೌರವಕ್ಕೆ ಅರ್ಹವಾದುದಾಗಿಯೂ ಮೈತ್ರಿಗೆ ಸಹಾಯಕವಾಗಿಯೂ ವಿವಾದಕ್ಕೆ ಎಡೆಕೊಡದುದಾಗಿಯೂ ಇರುತ್ತದೆ. ಐಕ್ಯಮತ್ಯಕ್ಕೆ ಬಾಳುವ ರೀತಿಗಳಲ್ಲಿ ಒಂದಾಗಿರುತ್ತದೆ.
“ಭಿಕ್ಷು ಒಬ್ಬನಿಗೆ ಅವನ ಜೊತೆಯ ಬ್ರಹ್ಮಚಾರಿಯು ಬಹಿರಂಗವಾಗಿಯೋ, ರಹಸ್ಯವಾಗಿಯೋ ಒಳ್ಳೆಯ ಮಾತುಗಳನ್ನು ಹೇಳಿದಾಗ...
“ಭಿಕ್ಷುವೊಬ್ಬನಿಗೆ ಅವನ ಜೊತೆಯ ಬ್ರಹ್ಮಚಾರಿಯು ಬಹಿರಂಗವಾಗಿಯೋ, ರಹಸ್ಯವಾಗಿಯೋ ಒಳ್ಳೆಯ ಭಾವನೆಯನ್ನು ತೋರಿಸಿದಾಗ... ಐಕ್ಯಮತ್ಯಕ್ಕೆ ಸಹಾಯಕವಾಗಿಯೂ ಇರುತ್ತದೆ. ಇದು ಸೋದರತೆಯಿಂದ ಬಾಳುವ ರೀತಿಗಳಲ್ಲಿ ಒಂದು.
“ಭಿಕ್ಷುವೊಬ್ಬನು ಧರ್ಮಕ್ಕೆ ಅನುಗುಣವಾದ ದಾನವನ್ನು ಪಡೆದಾಗ ಶೀಲವಂತರಾದ ಜೊತೆಯ ಬ್ರಹ್ಮಚಾರಿಗಳಲ್ಲಿ ಅಂಥ ದಾನವನ್ನು ಹಂಚಿಕೊಂಡಾಗ ಅವನಲ್ಲಿರುವುದೆಲ್ಲಾ - ಪಿಂಡಪಾತ್ರೆಯೂ ಕೂಡ - ಎಲ್ಲರ ಸಾಮಾನ್ಯ ವಸ್ತುವದಾಗ ಅದು... ಐಕ್ಯಮತ್ಯಕ್ಕೆ ಸಹಾಯಕವಾಗಿಯೂ ಇರುತ್ತದೆ. ಇದು ಸೋದರತೆಯಿಂದ ಬಾಳುವ ರೀತಿಗಳಲ್ಲಿ ಒಂದು.
“ಭಿಕ್ಷುವು ತನ್ನ ಜೊತೆಯ ಬ್ರಹ್ಮಚಾರಿಗಳೊಂದಿಗೆ ಸದಾ ನಿರಂತರವಾಗಿ ಶ್ರದ್ಧೆಯಿಂದ ಅಕುಶಲ ಕರ್ಮಗಳಿಂದ ದೂರನಾಗಿ ಬಲ್ಲವರು ಪ್ರಶಂಸಿಸುವಂತೆ ಕುಂದಿಲ್ಲದ ಸಮಾಧಿಗೆ ಅನುಕೂಲವಾಗುವ ರೀತಿಯಲ್ಲಿ ಶೀಲವಂತನಾಗಿ ಬಾಳಿದಾಗ ಅಂಥ ಸಹಜೀವನವು... ಐಕ್ಯಮತ್ಯಕ್ಕೆ ಸಹಾಯಕವಾಗಿಯೂ ಇರುತ್ತದೆ. ಇದು ಸೋದರತೆಯಿಂದ ಬಾಳುವ ರೀತಿಗಳಲ್ಲಿ ಒಂದು.
“ಭಿಕ್ಷುವು ತನ್ನ ಜೊತೆಯ ಬ್ರಹ್ಮಚಾರಿಗಳೊಂದಿಗೆ ಒಳ್ಳೆಯ ಗುರಿಗೆ ಕೊಂಡೊಯ್ಯುವ, ದುಃಖ ಕ್ಷಯಕ್ಕೆ ಕಾರಣವಾದ, ಒಳ್ಳೆಯ ದೃಷ್ಟಿಯನ್ನು ಹೊಂದಿ ಬಹಿರಂಗವಾಗಿಯೋ ಯಾರಿಗೂ ಕಾಣದಂತೆಯೋ ವಾಸಿಸಿದಾಗ, ಅಂಥ ಸಹಜೀವನವು... ಐಕ್ಯಮತ್ಯಕ್ಕೆ ಸಹಾಯಕವಾಗಿಯೂ ಇರುತ್ತದೆ. ಇದು ಸೋದರತೆಯಿಂದ ಬಾಳುವ ರೀತಿಗಳಲ್ಲಿ ಒಂದು.
“ವಿವಾದದ ಮೂಲಗಳು ಆರು- ಭಿಕ್ಷುವು ಕ್ರೋಧ ಮಾತ್ಸರ್ಯಗಳನ್ನು ಹೊಂದಿದವನಾಗಿದ್ದರೆ ತನ್ನ ಗುರುವಿನ ಬಗೆಗೆ ಅಗೌರವದಿಂದ ನಡೆದುಕೊಳ್ಳುತ್ತಾನೆ. ಗುರುವನ್ನು ಅವಿಧೇಯತೆಯಿಂದ ಧಿಕ್ಕರಿಸುತ್ತಾನೆ. ಧಮ್ಮದ ಬಗೆಗೆ ಅಗೌರವದಿಂದಿರುತ್ತಾನೆ, ಅದನ್ನು ಧಿಕ್ಕರಿಸುತ್ತಾನೆ. ಸಂಘದ ಬಗೆಗೆ ಅಗೌರವದಿಂದ ನಡೆದುಕೊಳ್ಳುತ್ತಾನೆ. ಅದನ್ನು ಧಿಕ್ಕರಿಸುತ್ತಾನೆ, ಶಿಕ್ಷಣವನ್ನು ನಿರ್ಲಕ್ಷಿಸುತ್ತಾನೆ. ಹೀಗೆ ಗುರು ಧಮ್ಮ ಸಂಘಗಳ ಬಗೆಗೆ ಅಗೌರವದಿಂದ ನಡೆದುಕೊಂಡು ಶಿಕ್ಷಣದ ಫಲವನ್ನು ಪಡೆಯದಿದ್ದಾಗ ಸಂಘದಲ್ಲಿ ವಿವಾದ ಹುಟ್ಟುವುದಕ್ಕೆ ಕಾರಣನಾಗುತ್ತಾನೆ. ವಿವಾದದಿಂದ ದೇವತೆಗಳಿಗೆ ಮತ್ತು ಮನುಷ್ಯರಿಗೆ ಮತ್ತು ಬಹುಜನಗಳಿಗೆ ಅಹಿತ ಮತ್ತು ಅಸುಖ ಉಂಟಾಗುತ್ತದೆ. ಗೆಳೆಯರೆ, ನಿಮ್ಮೊಳಗಾಗಲೀ ಹೊರಗಾಗಲೀ, ಈ ವಿವಾದ ಮೂಲವನ್ನು ನೋಡಿದರೆ ಪಾಪೂರಿತವಾದ ಅದನ್ನು ವರ್ಜಿಸಲು ಪ್ರಯತ್ನಿಸಿ ನಿಮ್ಮೊಳಗಾಗಲೀ ಹೊರಗಾಗಲೀ ಅಂಥ ಪಾಪಪೂರಿತವಾದ ವಿವಾದ ಮೂಲವನ್ನು ನೋಡದಿದ್ದರೆ ಅದು ಮುಂದೆ ನಿಮ್ಮ ಹತ್ತಿರ ಬರದಂತೆ ಬೆಳೆಯದಂತೆ ನೋಡಿಕೊಳ್ಳಿ. ಹೀಗೆ ಪಾಪಪೂರಿತವಾದ ವಿವಾದ ಮೂಲವನ್ನು ವರ್ಜಿಸಬೇಕು, ಹತ್ತಿರ ಬರದಂತೆ ನೋಡಿಕೊಳ್ಳಬೇಕು.
“ಭಿಕ್ಷುವು ಬೇರೆಯವರು ಮಾಡಿದ ಸತ್ಕಾರ್ಯಗಳನ್ನು ಮುಚ್ಚಿಕೊಂಡರೆ... ಈಷ್ರ್ಯೆ ಮತ್ತು ಮಾತ್ಸರ್ಯಗಳನ್ನುಳ್ಳವನಾದರೆ... ಕಪಟಿ ಮತ್ತು ಮಾಯಾವಿಯಾದರೆ... ಪಾಪಿಷ್ಠನೂ ಮಿಥ್ಯಾದೃಷ್ಟಿಯುಳ್ಳವನೂ ಆದರೆ... ತನ್ನ ನಂಬಿಕೆಗಳಿಗೆ ಅಂಟಿಕೊಂಡು ಭದ್ರವಾಗಿ ಕಚ್ಚಿಕೊಂಡು ಅವನ್ನು ಬಿಡದವನಾದರೆ ಗುರುವನ್ನು ಅವಿಧೇಯತೆಯಿಂದ ಧಿಕ್ಕರಿಸುತ್ತಾನೆ. ಸಂಘದ ಬಗೆಗೆ ಅಗೌರವದಿಂದ ನಡೆದುಕೊಳ್ಳುತ್ತಾನೆ. ಶಿಕ್ಷಣವನ್ನು ನಿರ್ಲಕ್ಷಿಸುತ್ತಾನೆ. ಹೀಗೆ ಗುರು ಧಮ್ಮ ಸಂಘಗಳ ಬಗೆಗೆ ಅಗೌರವದಿಂದ ನಡೆದುಕೊಂಡು ಶಿಕ್ಷಣದ ಫಲವನ್ನು ಪಡೆಯದಿದ್ದಾಗ ಸಂಘದಲ್ಲಿ ವಿವಾದ ಹುಟ್ಟುವುದಕ್ಕೆ ಕಾರಣನಾಗುತ್ತಾನೆ. ವಿವಾದದಿಂದ ದೇವತೆಗಳಿಗೆ ಮತ್ತು ಮನುಷ್ಯರಿಗೆ ಮತ್ತು ಬಹುಜನಗಳಿಗೆ ಅಹಿತ ಮತ್ತು ಅಸುಖ ಉಂಟಾಗುತ್ತವೆ. ಗೆಳೆಯರೆ, ನಿಮ್ಮೊಳಗಾಗಲೀ, ಹೊರಗಾಗಲೀ, ಈ ವಿವಾದ ಮೂಲವನ್ನು ನೋಡಿದರೆ ಅದನ್ನು ವರ್ಜಿಸಲು ಪ್ರಯತ್ನಿಸಿ. ನಿಮ್ಮೊಳಗಾಗಲೀ, ಹೊರಗಾಗಲೀ ಅಂಥ ಪಾಪಪೂರಿತವಾದ ವಿವಾದ ಮೂಲವನ್ನು ನೋಡದಿದ್ದರೆ ಅದು ಮುಂದೆ ನಿಮ್ಮ ಹತ್ತಿರ ಬರದಂತೆ ನೋಡಿಕೊಳ್ಳಿ. ಹೀಗೆ ಪಾಪಪೂರಿತವಾದ ವಿವಾದ ಮೂಲವನ್ನು ವರ್ಜಿಸಬೇಕು, ಹತ್ತಿರ ಬರದಂತೆ ನೋಡಿಕೊಳ್ಳಬೇಕು.
“ಧಾತುಗಳು ಆರು- ಪೃಥ್ವಿ, ಆಪಸ್ಸ, ತೇಜಸ್, ವಾಯು, ಆಕಾಶ, ವಿಞ್ಞಾಣ.
“ಬಿಡುಗಡೆಯ ಕಡೆಗೊಯ್ಯುವ ಧಾತುಗಳು ಆರು - ಒಬ್ಬ ಭಿಕ್ಷುವು ಹೀಗೆಂದುಕೊಳ್ಳಬಹುದು- ‘ಮೈತ್ರಿ ಭಾವನೆಯಿಂದ ನನ್ನ ಚಿತ್ತದ ಮುಕ್ತಿಯನ್ನು ಸಾಧಿಸಿದ್ದೇನೆ, ಅದನ್ನು ಬೆಳೆಸಿಕೊಂಡಿದ್ದೇನೆ, ಬಹುಪಾಲು ಹೆಚ್ಚಿಸಿಕೊಂಡಿದ್ದೇನೆ, ಅದನ್ನು ಯಾನವನ್ನಾಗಿ ಮಾಡಿಕೊಂಡಿದ್ದೇನೆ, ಆಧಾರವನ್ನಾಗಿ ಮಾಡಿಕೊಂಡಿದ್ದೇನೆ, ಅದನ್ನು ರಕ್ಷಿಸಿಕೊಂಡಿದ್ದೇನೆ, ಹೊರಗೆ ತಂದು ಎಲ್ಲಕಡೆಗೂ ಹರಿಸಿಬಿಟ್ಟಿದ್ದೇನೆ. ಆದರೂ ವೈರಭಾವನೆಯು ನನ್ನ ಚಿತ್ತದಲ್ಲಿ ನಿಂತೇಬಿಟ್ಟಿದೆ’. ಅವನಿಗೆ ಹೀಗೆಂದು ಹೇಳಬೇಕು- ‘ಹಾಗಲ್ಲ, ಹಾಗೆ ಹೇಳಬಾರದು. ಭಗವಾನರು ಹೇಳಿದುದನ್ನು ಹಾಗೆ ಅಪಾರ್ಥ ಮಾಡಿಕೊಳ್ಳಬಾರದು, ಹಾಗೆ ಮಾಡುವುದು ಒಳ್ಳೆಯದಲ್ಲ. ಭಗವಾನರು ಹಾಗೆ ಹೇಳಿಲ್ಲ. ಮೈತ್ರಿಯಿಂದ ಚಿತ್ತವಿಮುಕ್ತಿಯಾಗುತ್ತದೆ. ಅದನ್ನು ಬೆಳೆಸಿಕೊಂಡು ಬಹುಪಾಲು ಹೆಚ್ಚಿಸಿಕೊಂಡು ಅದನ್ನು ಯಾನವನ್ನಾಗಿ ಮಾಡಿಕೊಂಡು ಆಧಾರವನ್ನಾಗಿ ಮಾಡಿಕೊಂಡು ಅದನ್ನು ರಕ್ಷಿಸಿಕೊಂಡು ಹೊರಗಡೆ ಎಲ್ಲಕಡೆಗೂ ಪ್ರಸರಿಸಿದಾಗ ಚಿತ್ತದಲ್ಲಿ ವೈರಭಾವನೆ ನಿಲ್ಲಲು ಸಾಧ್ಯವಿಲ್ಲ. ಅಂಥ ಸ್ಥಿತಿ ಇರುವುದೇ ಇಲ್ಲ. ವೈರ ಭಾವನೆಯಿಂದ ಬಿಡುಗಡೆ ಹೊಂದುವುದೇ ಮೈತ್ರಿಯಿಂದ ಸಾಧಿಸುವ ಚಿತ್ತವಿಮುಕ್ತಿ.’
“ಒಬ್ಬ ಭಿಕ್ಷುವು ಹೀಗೆಂದುಕೊಳ್ಳಬಹುದು- ‘ಕರುಣಾಭಾವನೆಯಿಂದ ಚಿತ್ತವಿಮುಕ್ತಿಯನ್ನು ಸಾಧಿಸಿದ್ದೇನೆ. ಅದನ್ನು ಬೆಳೆಸಿಕೊಂಡಿದ್ದೇನೆ. ಬಹುಪಾಲು ಹೆಚ್ಚಿಸಿಕೊಂಡಿದ್ದೇನೆ. ಅದನ್ನು ಯಾನವನ್ನಾಗಿ ಮಾಡಿಕೊಂಡಿದ್ದೇನೆ. ಆಧಾರವನ್ನಾಗಿ ಮಾಡಿಕೊಂಡಿದ್ದೇನೆ, ರಕ್ಷಿಸಿಕೊಂಡಿದ್ದೇನೆ. ಅದನ್ನು ಹೊರಗೆ ತಂದು ಎಲ್ಲಕಡೆಗೂ ಹರಿಸಿದ್ದೇನೆ. ಆದರೂ ಹಿಂಸಾ ಭಾವನೆಯು ನನ್ನ ಚಿತ್ತದಲ್ಲಿ ಉಳಿದುಕೊಂಡೇ ಇದೆ.’ ಅವನಿಗೆ ಹೀಗೆ ಹೇಳಬೇಕು, ‘ಹಾಗಲ್ಲ, ಹಾಗೆ ಹೇಳಬಾರದು. ಭಗವಾನರು ಹೇಳಿದುದನ್ನು ಹಾಗೆ ಅಪಾರ್ಥ ಮಾಡಿಕೊಳ್ಳಬಾರದು. ಹಾಗೆ ಮಾಡುವುದು ಒಳ್ಳೆಯದಲ್ಲ. ಭಗವಾನರು ಹಾಗೆ ಹೇಳಿಲ್ಲ. ಕರುಣಾಭಾವನೆಯನ್ನು ಬೆಳೆಸಿಕೊಂಡಾಗ ಬಹುಪಾಲು ಹೆಚ್ಚು ಮಾಡಿಕೊಂಡಾಗ ಯಾನವನ್ನಾಗಿ ಮಾಡಿಕೊಂಡು ಆಧಾರವನ್ನಾಗಿ ಮಾಡಿಕೊಂಡು ಅದನ್ನು ರಕ್ಷಿಸಿಕೊಂಡು ಹೊರಗೆ ತಂದು ಪ್ರಸರಿಸಿದಾಗ ಚಿತ್ತದಲ್ಲಿ ಹಿಂಸಾಭಾವನೆ ನಿಲ್ಲಲು ಸಾಧ್ಯವಿಲ್ಲ. ಅಂಥ ಸ್ಥಿತಿ ಇರುವುದೇ ಇಲ್ಲ. ಹಿಂಸಾಭಾವನೆಯಿಂದ ಬಿಡುಗಡೆಯಾಗುವುದೇ ಕರುಣೆಯ ಮೂಲಕ ಆಗುವ ಚಿತ್ತವಿಮುಕ್ತಿ.’
“ಒಬ್ಬ ಭಿಕ್ಷುವು ಹೀಗೆಂದುಕೊಳ್ಳಬಹುದು- ‘ಮುದಿತಾ ಭಾವನೆಯಿಂದ ಚಿತ್ತವಿಮುಕ್ತಿಯನ್ನು ಸಾಧಿಸಿದ್ದೇನೆ. ಅದನ್ನು ಬೆಳೆಸಿಕೊಂಡಿದ್ದೇನೆ, ಬಹುಪಾಲು ಹೆಚ್ಚಿಸಿಕೊಂಡಿದ್ದೇನೆ, ಯಾನವನ್ನಾಗಿ ಮಾಡಿಕೊಂಡಿದ್ದೇನೆ, ಆಧಾರವನ್ನಾಗಿ ಮಾಡಿಕೊಂಡಿದ್ದೇನೆ, ರಕ್ಷಿಸಿಕೊಂಡಿದ್ದೇನೆ, ಹೊರಗೆ ತಂದು ಎಲ್ಲಕಡೆಗೂ ಹರಿಸಿದ್ದೇನೆ. ಆದರೂ ನನ್ನ ಚಿತ್ತದಲ್ಲಿ ಜಿಗುಪ್ಸೆಯು ಉಳಿದುಕೊಂಡು ಬಿಟ್ಟಿದೆ’. ಅವನಿಗೆ ಹೀಗೆ ಹೇಳಬೇಕು- ‘ಹಾಗಲ್ಲ, ಹಾಗೆ ಹೇಳಬಾರದು, ಭಗವಾನರು ಹೇಳಿದುದನ್ನು ತಪ್ಪರ್ಥ ಮಾಡಿಕೊಳ್ಳಬಾರದು. ಹಾಗೆ ಮಾಡುವುದು ಒಳ್ಳೆಯದಲ್ಲ. ಭಗವಾನರು ಹಾಗೆ ಹೇಳಿಲ್ಲ. ಮುದಿತಾ ಭಾವನೆಯನ್ನು ಬೆಳೆಸಿಕೊಂಡಾಗ ಬಹುಪಾಲು ಹೆಚ್ಚು ಮಾಡಿಕೊಂಡಾಗ ಯಾನವನ್ನಾಗಿ ಮಾಡಿಕೊಂಡು ಆಧಾರವನ್ನಾಗಿ ಮಾಡಿಕೊಂಡು ಅದನ್ನು ರಕ್ಷಿಸಿಕೊಂಡು ಹೊರಗೆ ತಂದು ಪ್ರಸರಿಸಿದಾಗ ಚಿತ್ತದಲ್ಲಿ ಜಿಗುಪ್ಸೆಯು ಉಳಿದುಕೊಳ್ಳುವುದು ಸಾಧ್ಯವಿಲ್ಲ. ಅಂಥ ಸ್ಥಿತಿ ಇರುವುದೇ ಇಲ್ಲ, ಜಿಗುಪ್ಸೆಯಿಂದ ಬಿಡುಗಡೆಯಾಗುವುದೇ ಮುದಿತಾದ ಮೂಲಕ ಆಗುವ ಚಿತ್ತವಿಮುಕ್ತಿ.’
“ಒಬ್ಬ ಭಿಕ್ಷುವು ಹೀಗೆ ಹೇಳಬಹುದು- ‘ಉಪೇಕ್ಷಾ ಭಾವನೆಯನ್ನು ಬೆಳೆಸಿಕೊಂಡು ಚಿತ್ತವಿಮುಕ್ತಿಯನ್ನು ಸಾಧಿಸಿದ್ದೇನೆ. ಅದನ್ನು ಬಹುಪಾಲು ಹೆಚ್ಚಿಸಿಕೊಂಡಿದ್ದೇನೆ, ಯಾನವನ್ನಾಗಿ ಮಾಡಿಕೊಂಡಿದ್ದೇನೆ, ಆಧಾರವನ್ನಾಗಿ ಮಾಡಿಕೊಂಡಿದ್ದೇನೆ, ರಕ್ಷಿಸಿಕೊಂಡಿದ್ದೇನೆ. ಹೊರಗೆ ತಂದು ಎಲ್ಲಕಡೆಗೂ ಪ್ರಸರಿಸಿದ್ದೇನೆ. ಆದರೂ ನನ್ನ ಚಿತ್ತದಲ್ಲಿ ರಾಗವು ಉಳಿದುಕೊಂಡೇ ಇದೆ.’ ಅವನಿಗೆ ಹೀಗೆ ಹೇಳಬೇಕು- ‘ಹಾಗಲ್ಲ, ಹಾಗೆ ಹೇಳಬಾರದು. ಭಗವಾನರು ಹೇಳಿದುದನ್ನು ಹಾಗೆ ಅಪಾರ್ಥ ಮಾಡಿಕೊಳ್ಳಬಾರದು. ಹಾಗೆ ಮಾಡುವುದು ಸಾಧುವಲ್ಲ. ಭಗವಾನರು ಹಾಗೆ ಹೇಳಿಲ್ಲ. ಉಪೇಕ್ಖಾ ಭಾವನೆಯನ್ನು ಚಿತ್ತದಲ್ಲಿ ಬೆಳೆಸಿಕೊಂಡಾಗ ಬಹುಪಾಲು ಹೆಚ್ಚು ಮಾಡಿಕೊಂಡಾಗ ಯಾನವನ್ನಾಗಿ ಮಾಡಿಕೊಂಡು ಅದನ್ನು ರಕ್ಷಿಸಿಕೊಂಡು ಹೊರಗೆ ತಂದು ಪ್ರಸರಿಸಿದಾಗ ಚಿತ್ತದಲ್ಲಿ ರಾಗವು ಉಳಿಯುವುದೇ ಇಲ್ಲ. ಅಂಥ ಸ್ಥಿತಿ ಇರುವುದೇ ಇಲ್ಲ. ರಾಗದಿಂದ ಬಿಡುಗಡೆಯಾಗುವುದೇ ಉಪೇಕ್ಷಾದ ಮೂಲಕ ಆಗುವ ಚಿತ್ತವಿಮುಕ್ತಿ.’
“ಒಬ್ಬ ಭಿಕ್ಷುವು ಹೀಗೆಂದು ಹೇಳಬಹುದು- ‘ಚಿತ್ತವಿಮುಕ್ತಿಗಾಗಿ ಅನಿಮಿತ್ತ ಭಾವನೆಯನ್ನು ಬೆಳೆಸಿಕೊಂಡಿದ್ದೇನೆ, ಬಹುಪಾಲು ಹೆಚ್ಚು ಮಾಡಿಕೊಂಡಿದ್ದೇನೆ, ಯಾನವನ್ನಾಗಿಯೂ, ಆಧಾರವನ್ನಾಗಿಯೂ ಮಾಡಿಕೊಂಡಿದ್ದೇನೆ, ರಕ್ಷಿಸಿಕೊಂಡಿದ್ದೇನೆ, ಹೊರಗೆ ತಂದು ಎಲ್ಲಕಡೆಗೂ ಹರಿಸಿದ್ದೇನೆ. ಆದರೂ ನಿಮಿತ್ತವನ್ನೇ ಅನುಸರಿಸುವ ಚಿತ್ತಪ್ರವೃತ್ತಿ ಇದೆ.’ ಅವನಿಗೆ ಹೀಗೆ ಹೇಳಬೇಕು- ‘ಹಾಗಲ್ಲ, ಹಾಗೆ ಹೇಳಬಾರದು. ಭಗವಾನರು ಹೇಳಿದುದನ್ನು ತಪ್ಪರ್ಥ ಮಾಡಿಕೊಳ್ಳಬಾರದು. ಹಾಗೆ ಮಾಡುವುದು ಒಳ್ಳೆಯದಲ್ಲ. ಭಗವಾನರು ಹಾಗೆ ಹೇಳಿಲ್ಲ. ಚಿತ್ತವಿಮುಕ್ತಿಗಾಗಿ ಅನಿಮಿತ್ತ ಭಾವನೆಯನ್ನು ಬೆಳೆಸಿಕೊಂಡಾಗ ಬಹುಪಾಲು ಹೆಚ್ಚಿಸಿಕೊಂಡಾಗ ಯಾನವನ್ನಾಗಿ ಮಾಡಿಕೊಂಡಾಗ ಆಧಾರವನ್ನಾಗಿ ಮಾಡಿಕೊಂಡಾಗ ಅದನ್ನು ರಕ್ಷಿಸಿಕೊಂಡು ಹೊರಗೆ ತಂದು ಪ್ರಸರಿಸಿದಾಗ ಚಿತ್ತದಲ್ಲಿ ನಿಮಿತ್ತವನ್ನು ಅನುಸರಿಸುವ ಚಿತ್ತ ಪ್ರವೃತ್ತಿಯು ಇರುವುದಿಲ್ಲ. ಅಂಥ ಸ್ಥಿತಿ ಇರುವುದೇ ಇಲ್ಲ. ಎಲ್ಲ ನಿಮಿತ್ತಗಳಿಂದಲೂ ಬಿಡುಗಡೆಯಾಗುವುದೇ ಅನಿಮಿತ್ತ ಭಾವನೆಯ ಮೂಲಕ ಸಾಧಿಸುವ ಚಿತ್ತವಿಮುಕ್ತಿ.’
“ಒಬ್ಬ ಭಿಕ್ಷುವು ಹೀಗೆ ಹೇಳಬಹುದು- ‘ನಾನು ಇದ್ದೇನೆ ಎಂಬ ಭಾವನೆಯು ನನ್ನಿಂದ ಹೊರಟುಹೋಗಿದೆ. ಈ ನಾನು ಇದ್ದೇನೆ ಎಂಬ ಭಾವನೆಯನ್ನು ನಾನು ಗಣಿಸುವುದೇ ಇಲ್ಲ. ಆದರೂ ನನ್ನಲ್ಲಿ ಸಂಶಯಗಳೂ ಯಾವುದು ಸರಿ, ಯಾವುದು ಸರಿಯಲ್ಲ ಎಂಬ ವಿಚಾರವೂ ಉಳಿದುಕೊಂಡೇ ಇವೆ.’ ಅವನಿಗೆ ‘ಹಾಗಲ್ಲ, ಹಾಗೆ ಹೇಳಬಾರದು, ಭಗವಾನರು ಹೇಳಿದುದನ್ನು ತಪ್ಪರ್ಥಮಾಡಿಕೊಳ್ಳಬಾರದು. ಹಾಗೆ ಮಾಡುವುದು ಒಳ್ಳೆಯದಲ್ಲ. ಭಗವಾನರು ಹಾಗೆ ಹೇಳಿಲ್ಲ. ನಾನು ಇದ್ದೇನೆ ಎಂಬ ಭಾವನೆಯು ನಮ್ಮಿಂದ ಹೊರಟು ಹೋದಾಗ ಇದ್ದೇನೆ ಎಂಬುದು ಗಣನೆಗೆ ಬರುವುದಿಲ್ಲ. ಆಗ ಸಂಶಯಗಳಾಗಲೀ ಯಾವುದು ಸರಿ ಯಾವುದು ಸರಿಯಲ್ಲ ವಿಚಾರವಾಗಲೀ ಉಳಿಯುವುದಿಲ್ಲ. ಅಂಥ ಸ್ಥಿತಿ ಇರುವುದು ಸಾಧ್ಯವೇ ಇಲ್ಲ. ಸಂಶಯಗಳೂ ಯಾವುದು ಸರಿ ಯಾವುದು ಸರಿಯಲ್ಲ. ವಿಚಾರಗಳೂ ಚಿತ್ತದಲ್ಲಿಲ್ಲದಿದ್ದಾಗಲೇ ಇದ್ದೇನೆ’ ಎಂಬ ಭಾವನೆಯಿಂದ ಬಿಡುಗಡೆಯಾಗುತ್ತದೆ.
“ಅನುತ್ತರವಾದ ಅನುಭವಗಳು ಆರು - ಅನುತ್ತರವಾದ ದರ್ಶನ, ಅನುತ್ತರವಾದ ಶ್ರವಣ, ಅನುತ್ತರವಾದ ಲಾಭ, ಅನುತ್ತರವಾದ ಶಿಕ್ಷಣ, ಅನುತ್ತರವಾದ ಪರಿಚಾರಿಕೆ, ಅನುತ್ತರವಾದ ನೆನಪು.
“ಸ್ಮರಣೆಗಳು ಆರು ಬುದ್ಧಾನುಸತಿ, ಧಮ್ಮಾನುಸತಿ, ಸಂಘಾನುಸತಿ, ಶೀಲಾನುಸತಿ, ತ್ಯಾಗಾನುಸತಿ, ದೇವತಾನುಸತಿ.
ನಿರಂತರ ಮನೋವಿಹಾರಗಳು ಆರು- ಗೆಳೆಯರೇ, ಭಿಕ್ಷುವು ಚಕ್ಷುವಿನಿಂದ ರೂಪವನ್ನು ನೋಡಿದಾಗ ಸಂತೋಷವನ್ನು ವ್ಯಕ್ತಪಡಿಸುವುದಿಲ್ಲ. ಜಿಗುಪ್ಸೆಯೂ ಅವನಲ್ಲಿ ಉಂಟಾಗುವುದಿಲ್ಲ. ಅದರಿಂದ ಅವನ ಪ್ರಜ್ಞೆಯು ಮತ್ತು ಅರಿವು- ಇವುಗಳಲ್ಲಿ ವ್ಯತ್ಯಾಸವಾಗವುದಿಲ್ಲ. ಹಾಗೆಯೇ ಕಿವಿಯಿಂದ ಕೇಳಿದಾಗ, ಮೂಗಿನಿಂದ ವಾಸನೆ ತಿಳಿದಾಗ, ಜಿಹ್ವೆಯಿಂದ ರುಚಿಯನ್ನು ನೋಡಿದಾಗ, ಸ್ಪರ್ಶಿಸಿದಾಗ, ಮನೋವಿಕಾರಗೊಳ್ಳುವುದು ಆಗುವುದಿಲ್ಲ.
“ಅನುವಂಶೀಯತೆಗಳು ಆರು - ಅನನುಕೂಲವಾದ ಸನ್ನಿವೇಶಗಳಲ್ಲಿ ಹುಟ್ಟಿದ ಕೆಲವರು ದುಷ್ಟ ಜೀವನವನ್ನು ನಡೆಸುತ್ತಾರೆ. ಅನನುಕೂಲವಾದ ಸನ್ನಿವೇಶಗಳಲ್ಲಿ ಹುಟ್ಟಿದರೂ ಕೆಲವರೂ ಒಳ್ಳೆಯ ಜೀವನವನ್ನು ನಡೆಸುತ್ತಾರೆ. ಕೆಟ್ಟ ಸನ್ನಿವೇಶದಲ್ಲಿ ಹುಟ್ಟಿದರೂ ಕೆಲವರು ಕೆಟ್ಟದಲ್ಲದ ಒಳ್ಳೆಯದನ್ನೂ ಮೀರಿದ ನಿಬ್ಬಾನವನ್ನು ಸಾಧಿಸುತ್ತಾರೆ. ಒಳ್ಳೆಯ ಸನ್ನಿವೇಶಗಳಲ್ಲಿ ಹುಟ್ಟಿದ ಕೆಲವರು ಒಳ್ಳೆಯ ಜೀವನವನ್ನು ನಡೆಸುತ್ತಾರೆ. ಒಳ್ಳೆಯ ಸನ್ನಿವೇಶಗಳನ್ನು ಹುಟ್ಟಿದರೂ ಕೆಲವರು ದುಷ್ಟ ಜೀವನವನ್ನು ನಡೆಸುತ್ತಾರೆ. ಒಳ್ಳೆಯ ಸನ್ನಿವೇಶಗಳಲ್ಲಿ ಹುಟ್ಟಿದ ಮತ್ತೆ ಕೆಲವರು ಕೆಟ್ಟುದಲ್ಲದ ಒಳ್ಳೆಯದನ್ನು ಮೀರಿದ ನಿಬ್ಬಾನವನ್ನು ಸಾಧಿಸುತ್ತಾರೆ.
“ನಿಬ್ಬಾನಕ್ಕೆ ಅನುಕೂಲವಾದ ಮನೋಸ್ಥಿತಿಗಳು ಆರು - ಅನಿಚ್ಚದ ಅರಿವು, ಅನಿಚ್ಚದ ಜೊತೆಗಿರುವ ದುಃಖದ ಅರಿವು, ದುಃಖದ ಜೊತೆಗಿರುವ ಅನತ್ತದ ಅರಿವು, ವರ್ಜಿಸಬೇಕಾದವುಗಳ ಅರಿವು, ವೈರಾಗ್ಯದ ಅರಿವು, ದುಃಖ ನಿರೋಧದ ಅರಿವು.
“ಸಮ್ಮಾಸಂಬುದ್ಧರೂ ಅರಹಂತರೂ ಆದ ಭಗವಾನರು ಧರ್ಮವು ಆರರಿಂದ ಆಗಿದೆ ಎಂಬುದನ್ನು ಅರಿತಿದ್ದಾರೆ, ಕಂಡಿದ್ದಾರೆ, ಇದನ್ನು ಸ್ಪಷ್ಟಪಡಿಸಿದ್ದಾರೆ. ವಿವಾದಾತೀತವಾದ... ದೇವತೆಗಳ ಮತ್ತು ಮನುಷ್ಯರ ಹಿತಕ್ಕಾಗಿ ಸುಖಕ್ಕಾಗಿ... ಎಲ್ಲರೂ ಒಟ್ಟಿಗೆ ಪಠಿಸಬೇಕು.
ಏಳರ ಧರ್ಮಗಳು
“ಗೆಳೆಯರೆ, ಧರ್ಮವು ಏಳರಿಂದ ಆಗಿವೆ ಎಂಬುದನ್ನು ಸಮ್ಮಾಸಂಬುದ್ಧರೂ ಅರಹಂತರೂ ಆದ ಭಗವಾನರು ತಾವೇ ಅರಿತಿದ್ದಾರೆ, ಕಂಡಿದ್ದಾರೆ, ಇದನ್ನು ಸ್ಪಷ್ಟಪಡಿಸಿದ್ದಾರೆ. ವಿವಾದಾತೀತವಾದ... ದೇವತೆಗಳ ಮತ್ತು ಮನುಷ್ಯರ ಹಿತಕ್ಕಾಗಿ ಸುಖಕ್ಕಾಗಿ ಎಲ್ಲರೂ ಒಟ್ಟಿಗೆ ಪಠಿಸಬೇಕು. ಏಳು ಯಾವುವು ?
“ಶ್ರೇಷ್ಠವಾದ ಧನವು ಏಳು - ಶ್ರದ್ಧೆ, ಶೀಲ, ನೈತಿಕವಾದ ನಾಚಿಕೆ ಮತ್ತು ಭಯ, ವಿದ್ವತ್ತು, ತ್ಯಾಗ, ಪಞ್ಞಾ.
“ಬೊಜ್ಝಂಗಗಳು ಏಳು - ಸತಿ, ಧಮ್ಮವಿಚಯ, ಪೀತಿ, ಯತ್ನ, ಸಮಾಧಿ, ಉಪೇಕ್ಖಾ...
“ಸಮಾಧಿಯ ಪರಿಕರಗಳು ಏಳು - ಸಮ್ಮಾದಿಟ್ಠಿ, ಸಮ್ಮಾಸಂಕಪ್ಪ, ಸಮ್ಮಾವಾಚಾ, ಸಮ್ಮಾ ಕಮ್ಮಾಂತ, ಸಮ್ಮಾಜೀವ, ಸಮ್ಮಾವಾಯಾಮ, ಸಮ್ಮಾಸತಿ.
“ಅಧರ್ಮಗಳು ಏಳು - ಅಶ್ರದ್ಧೆ, ನಾಚಿಕೆ ಇಲ್ಲದಿರುವುದು, ಭಯ ಇಲ್ಲದಿರುವುದು, ಎಚ್ಚರಿಕೆ ಇಲ್ಲದಿರುವುದು, ತಿಳಿವಳಿಕೆ ಇಲ್ಲದಿರುವುದು, ಸ್ಪಷ್ಟ ವಿಚಾರವಿಲ್ಲದಿರುವುದು, ಪಞ್ಞಾ ಇಲ್ಲದಿರುವುದು.
“ಸದ್ಧರ್ಮಗಳು ಏಳು - ಶ್ರದ್ಧೆ, ನಾಚಿಕೆ, ಭಯ, ಪಾಂಡಿತ್ಯ, ತನ್ನ ಬಗೆಗೆ ಇರಬೇಕಾದ ತಿಳಿವಳಿಕೆ, ಮನಸ್ಸಿನ ಸಮತೋಲನೆ ಮತ್ತು ಪಞ್ಞಾ.
“ಸತ್ಪುರುಷರಿಗಿರಬೇಕಾದ ಗುಣಗಳು ಏಳು - ಧಮ್ಮದ ತಿಳಿವಳಿಕೆ, ಯಾವುದು ಒಳ್ಳೆಯದು ಎಂಬುದರ ತಿಳಿವಳಿಕೆ, ತನ್ನ ಬಗೆಗಿರಬೇಕಾದ ತಿಳಿವಳಿಕೆ, ಕಾಲೋಚಿತವಾದುದರ ಬಗೆಗೆ ಇರಬೇಕಾದ ತಿಳಿವಳಿಕೆ, ಜನರ ಗುಂಪುಗಳ ಬಗೆಗೆ ತಿಳಿವಳಿಕೆ, ವ್ಯಕ್ತಿಯ ವೈಶಿಷ್ಟ್ಯತೆಯ ತಿಳಿವಳಿಕೆ.
“ಅರಹಂತನ ಜೀವನದ ಆಧಾರಗಳು ಏಳು - ಭಿಕ್ಷುವಾದವನು ತಾನು ಪಡೆಯಬೇಕಾದ ಶಿಕ್ಷಣದ ಬಗೆಗೆ ಆತುರದಿಂದಿರುತ್ತಾನೆ. ಕಲಿಯಬೇಕಾದುದನ್ನು ಇಷ್ಪಪೂರ್ತಿಯಾಗಿ ಕಲಿಯುತ್ತಾನೆ. ಧಮ್ಮವನ್ನು ತಿಳಿಯಲು ಆತುರದಿಂದಿರುತ್ತಾನೆ. ಮುಂದೊಂದು ಧಮ್ಮದಿಂದ ದೂರನಾಗುವುದಿಲ್ಲ. ಭಿಕ್ಷುವು ಅನುಸರಿಸಬೇಕಾದ ನಿಯಮಗಳ ಬಗೆಗೆ ತಿಳಿವಳಿಕೆ ಇರುತ್ತದೆ. ಅಲ್ಲಿಂದ ದೂರ ಸರಿಯುವುದಿಲ್ಲ. ಏಕಾಂತ ವಾಸಮಾಡಲು ಅಪೇಕ್ಷಿಸುತ್ತಾನೆ. ಯತ್ನಶೀಲನಾಗಿರುತ್ತಾನೆ. ಸ್ಮೃತಿವಂತನಾಗಿರುತ್ತಾನೆ. ಸರಿಯಾದ ದೃಷ್ಟಿಯನ್ನು ಹೊಂದಿರುತ್ತಾನೆ. ಮುಂದೆ ಆ ದೃಷ್ಟಿಯು ಆರಿಹೋಗದಂತೆ ನೋಡಿಕೊಳ್ಳುತ್ತಾನೆ.
“ಅರಿವುಗಳು ಏಳು - ಅನಿಚ್ಚದ ಬಗೆಗೆ ತಿಳಿವಳಿಕೆ, ಅನತ್ತದ ಅರಿವು, ಅಶುಭದ ಅರಿವು, ಅಪಾಯಗಳ ಅರಿವು, ವರ್ಜಿಸಬೇಕಾದುದರ ಬಗೆಗೆ ಅರಿವು, ವೈರಾಗ್ಯದ ಬಗೆಗೆ ಅರಿವು, ದುಃಖ ನಿರೋಧದ ಅರಿವು.
“ಬಲಗಳು ಏಳು - ಶ್ರದ್ಧೆ, ವೀರ್ಯ, ನಾಚಿಕೆ, ಭಯ, ಸ್ಮೃತಿ, ಸಮಾಧಿ, ಪಞ್ಞಾ.
“ವಿಞ್ಞಾಣದ ಸ್ಥಿತಿಗಳು ಏಳು - ನಾನಾ ಕಾಯಗಳನ್ನೂ ನಾನಾರೀತಿಯ ಅರಿವುಗಳನ್ನೂ ಹೊಂದಿರುವ ಸತ್ವಗಳು ಇವೆ. ಇವುಗಳ ಬಗೆಗಿನ ಜ್ಞಾನವಿರುವುದು ಎಂದರೆ ಮನುಷ್ಯರು ಇವರು, ಇವರು ದೇವತೆಗಳು, ಇವರು ಕೀಳು ಜನ್ಮಗಳಲ್ಲಿ ಹುಟ್ಟುವವರು ಎಂಬುದರ ಜ್ಞಾನ, ಅದು ವಿಞ್ಞಾಣದ ಪ್ರಥಮ ಸ್ಥಿತಿ.
“ನಾನಾ ಕಾಯಗಳನ್ನೂ ಒಂದೇ ಬಗೆಯ ಅರಿವನ್ನೂ ಹೊಂದಿರುವ ಜೀವಿಗಳಿವೆ. ಯಾವುವೆಂದರೆ- ದೇವತೆಗಳು, ಬ್ರಹ್ಮಕಾಯಕರು, ಪ್ರಥಮ ಧ್ಯಾನದ ಫಲವಾಗಿ ಹುಟ್ಟಿದವರು. ಇವರ ಬಗೆಗಿನ ಜ್ಞಾನ. ಇದು ವಿಞ್ಞಾಣದ ಎರಡನೆಯ ಸ್ಥಿತಿ.
“ಒಂದೇ ಬಗೆಯ ಕಾಯವನ್ನೂ ನಾನಾಬಗೆಯ ಅರಿವನ್ನೂ ಹೊಂದಿರುವ ಜೀವಿಗಳು ಇವೆ. ಅವು ಅಭಸ್ಸರ ದೇವತೆಗಳು. ಇವುಗಳ ಜ್ಞಾನ. ಇದು ವಿಞ್ಞಾಣದ ಮೂರನೆಯ ಸ್ಥಿತಿ.
“ಒಂದೇ ಬಗೆಯ ಕಾಯವನ್ನು ಒಂದೇ ಬಗೆಯ ಅರಿವನ್ನೂ ಹೊಂದಿರುವ ಜೀವಿಗಳಿವೆ. ಅವೇ ಸುಭಕಿಣ್ಹ ದೇವತೆಗಳು. ಇವುಗಳ ಜ್ಞಾನ. ಇದು ನಾಲ್ಕನೆಯ ಬಗೆಯ ವಿಞ್ಞಾಣದ ಸ್ಥಿತಿ.
“ಎಲ್ಲಬಗೆಯ ರೂಪದ ಅರಿವುಗಳನ್ನೂ ಮೀರಿ ಕ್ರೋಧ ಭಾವನೆಗಳನ್ನು ನಾಶಮಾಡಿಕೊಂಡು ವಿವಿಧರೀತಿಯ ಜೀವಿಗಳ ಬಗೆಗಿನ ಅರಿವನ್ನು ದಾಟಿ ಆಕಾಶವು ಅನಂತವಾಗಿದೆ’ ಎಂಬ ಅರಿವಿನಿಂದ ಅಕಾಸಾನಂಚಾಯತನದಲ್ಲಿರುವ ಜೀವಿಗಳಿದ್ದಾರೆ. ಇವರ ಬಗೆಗಿನ ಜ್ಞಾನ. ಇದು ಐದನೆಯ ವಿಞ್ಞಾಣದ ಸ್ಥಿತಿ.
“ಆಕಾಸಾನಂಚಾಯತನವನ್ನು ದಾಟಿ ‘ವಿಞ್ಞಾಣವು ಅನಂತ’ ಎಂಬ ಅರಿವಿನಿಂದ ವಿಞ್ಞಾಣಂಚಾಯತನದಲ್ಲಿರುವ ಜೀವಿಗಳಿದ್ದಾರೆ. ಇವುಗಳ ಜ್ಞಾನ. ಇದು ವಿಞ್ಞಾಣದ ಆರನೆಯ ಸ್ಥಿತಿ.
“ಎಲ್ಲಬಗೆಯ ವಿಞ್ಞಾಣಂಚಾಯತನವನ್ನೂ ದಾಟಿ ‘ಏನೂ ಇಲ್ಲ’ ಎಂಬ ಅರಿವಿನಿಂದ ಇರುವ ಅಕಿಂಚಾಞ್ಞಾಯತನ, ಏಳನೆಯ ಸ್ಥಿತಿ.
“ದಕ್ಷಿಣೆಗೆ ಅರ್ಹರಾದವರು ಏಳು ಬಗೆಯ ಜನ- ಎರಡು ರೀತಿಯಲ್ಲಿ ಮುಕ್ತರಾದವರು (ಉಭತೋ ಭಾಗ ವಿಮುಕ್ತ), ಪಞ್ಞ ವಿಮುಕ್ತರು, ಕಾಯದ ಬಗೆಗೆ ಸತ್ಯವನ್ನು ತಿಳಿದವರು, ಒಳ್ಳೆಯ ದೃಷ್ಟಿಯನ್ನು ಪಡೆದವರು, ಶ್ರದ್ಧೆಯ ಮೂಲಕ ವಿಮುಕ್ತರಾದವರು, ಧಮ್ಮವನ್ನು ಪಾಲಿಸುವವರು, ಶ್ರದ್ಧೆಯನ್ನು ಬಿಡದವರು.
“ಒಲವುಗಳು ಏಳು - ಕಾಮ ಮತ್ತು ರಾಗಗಳ ಕಡೆಗೆ ವಾಲಿರುವುದು, ವೈರಭಾವನೆಯ ಕಡೆಗೆ ವಾಲಿರುವುದು, ಮಿಥ್ಯಾದೃಷ್ಟಿಯ ಕಡೆಗೆ ವಾಲಿರುವುದು, ಸಂಶಯದ ಕಡೆಗೆ ವಾಲಿರುವುದು, ದುರಭಿಮಾನದ ಕಡೆಗೆ ವಾಲಿರುವುದು, ಒಳ್ಳೆಯ ಜನ್ಮವನ್ನು ಪಡೆಯಬೇಕೆಂಬ ಒಲವಿರುವುದು, ಅವಿದ್ಯೆಯ ಕಡೆಗೆ ಮನಸ್ಸು ಬಾಗಿರುವುದು.
“ಸಂಕೋಲೆಗಳು ಏಳು - ಹೇಳಿದುದನ್ನೆಲ್ಲಾ ನಂಬಿ ಅನುಸರಿಸಿಕೊಂಡು ಹೋಗುವುದು. ವೈರ ಭಾವನೆಯಿಂದ ಕೂಡಿರುವುದು, ಮಿಥ್ಯಾ ದೃಷ್ಟಿಯಿಂದ ಕೂಡಿರುವುದು, ಸಂಶಯಗಳಿಂದ ಕೂಡಿರುವುದು, ದುರಭಿಮಾನದಿಂದ ಕೂಡಿರುವುದು, ಮುಂದೆ ಒಳ್ಳೆಯ ಜನ್ಮವನ್ನು ಪಡೆಯಬೇಕೆಂಬ ಬಯಕೆಯಿಂದಿರುವುದು, ಅವಿದ್ಯೆಯಿಂದ ಬಂಧಿತನಾಗಿರುವುದು.
“ವಿವಾದವೆದ್ದಾಗ ಅದನ್ನು ಶಮನ ಮಾಡಬೇಕಾದ ರೀತಿಗಳು ಏಳು- ವಿವಾದವೆದ್ದಾಗ ಅದರಲ್ಲಿ ತೊಡಗಿದವರ ಎದುರಿನಲ್ಲಿಯೇ ಉಪಶಮನ ಮಾಡಬೇಕು, ಏನನ್ನು ಮಾಡಬೇಕೆಂಬುದನ್ನು ಅರಿತು ಅದನ್ನು ಮರೆಯದೆ ವಿವಾದವನ್ನು ಉಪಶಮನ ಮಾಡಬೇಕು. ಮನಸ್ಸಿನಲ್ಲಿಲ್ಲದವರನ್ನೂ ಮನಸ್ಸಿಗೆ ತೆಗೆದುಕೊಂಡು ಉಪಶಮನ ಮಾಡಬೇಕು, ತಪ್ಪೊಪ್ಪಿಕೊಂಡಾಗ ಆ ಸಮಯದಲ್ಲಿ ಒಪ್ಪಿದಂತೆ ಕಾರ್ಯವನ್ನು ಮಾಡಬೇಕು, ಸಭೆಯು ಒಪ್ಪಿದನ್ನು ಕಾರ್ಯವನ್ನು ಮಾಡಬೇಕು. ಸಭೆಯು ಒಪ್ಪಿದ್ದನ್ನು ಕಾರ್ಯಗೊಳಿಸಬೇಕು, ಹಟ ಹಿಡಿದವರ ವಿರುದ್ಧ ಇತರರ ನಿರ್ಧಾರದಂತೆ ಕಾರ್ಯಕ್ರಮ ತೆಗೆದುಕೊಳ್ಳಬೇಕು. ಹುಲ್ಲು ಭೂಮಿಯನ್ನು ಮುಚ್ಚಿಕೊಂಡಿರುವಂತೆ ವಿವಾದವು ಹೊಗೆಯಾಡುತ್ತದಲೇ ಇದ್ದರೆ ಅದು ನಿರ್ಧಾರವಾಗುವ ರೀತಿಯಲ್ಲಿ ಕ್ರಮವನ್ನು ತೆಗೆದುಕೊಳ್ಳಬೇಕು.
“ಧರ್ಮವು ಏಳರಿಂದ ಆಗಿದೆ ಎಂಬುದನ್ನು ಸಮ್ಮಾಸಂಬುದ್ಧರೂ ಅರಹಂತರೂ ಆದ ಭಗವಾನರು ಅರಿತಿದ್ದಾರೆ, ಕಂಡಿದ್ದಾರೆ, ತಾವೇ ಸ್ಪಷ್ಟಪಡಿಸಿದ್ದಾರೆ. ಇವೇ ಆ ಏಳು. ವಿವಾದಾತೀತವಾದ ದೇವತೆಗಳ ಮತ್ತು ಮನುಷ್ಯರ ಹಿತಕ್ಕಾಗಿ... ಎಲ್ಲರೂ ಒಟ್ಟಾಗಿ ಪಠಿಸಬೇಕು.
ದ್ವೀತೀಯ ಪಠಣ ಭಾಗ ಮುಗಿಯಿತು.
ಎಂಟರ ಧರ್ಮಗಳು
“ಧಮ್ಮವು ಎಂಟರಿಂದ ಆಗಿದೆ ಎಂಬುದನ್ನು ಸಮ್ಮಾಸಂಬುದ್ಧರೂ ಅರಹಂತರೂ ಆದ ಭಗವಾನರು ಅರಿತಿದ್ದಾರೆ, ಕಂಡಿದ್ದಾರೆ, ತಾವೇ ಸ್ಪಷ್ಟಪಡಿಸಿದ್ದಾರೆ. ವಿವಾದಾತೀತವಾದ, ದೇವತೆಗಳ ಮತ್ತು ಮನುಷ್ಯರ ಹಿತಕ್ಕಾಗಿ... ಎಲ್ಲರೂ ಒಟ್ಟಾಗಿ ಪಠಿಸಬೇಕು. ಆ ಎಂಟು ಯಾವುವು?
“ಮಿಥ್ಯೆಗಳು ಎಂಟು - ಮಿಚ್ಛಾದಿಟ್ಠಿ, ಮಿಚ್ಛಾಸಂಕಪ್ಪ, ಮಿಚ್ಛಾವಾಚಾ, ಮಿಚ್ಛಾಕಮ್ಮಂತ, ಮಿಚ್ಛಾಜೀವ, ಮಿಚ್ಛಾವಾಯಾಮ, ಮಿಚ್ಛಾಸತಿ ಮತ್ತು ಮಿಚ್ಛಾಸಮಾಧಿ.
“ಸಮ್ಯಕ್ ಅಂಗಗಳು ಎಂಟು - ಸಮ್ಮಾದಿಟ್ಠಿ, ಸಮ್ಮಾಸಂಕಪ್ಪ, ಸಮ್ಮಾವಾಚಾ, ಸಮ್ಮಾಕಮ್ಮಂತ, ಸಮ್ಮಾಜೀವ, ಸಮ್ಮಾವಾಯಾಮ, ಸಮ್ಮಾಸತಿ ಮತ್ತು ಸಮ್ಮಾಸಮಾಧಿ.
“ದಕ್ಷಿಣೆಗೆ ಅರ್ಹರಾದ ಜನರು ಎಂಟು ಬಗೆ - ಸೋತಾಪನ್ನ ಮತ್ತು ಸೋತಾಪನ್ನ ಫಲವನ್ನು ಸಾಕ್ಷಾತ್ಕರಿಸಿಕೊಳ್ಳುವ ದಾರಿಯಲ್ಲಿರುವವನು. ಸಕದಾಗಾಮಿ ಮತ್ತು ಸಕದಾಗಾಮಿ ಫಲವನ್ನು ಸಾಕ್ಷಾತ್ಕರಿಸಿಕೊಳ್ಳುವ ಪಥದಲ್ಲಿರುವವನು. ಅನಾಗಾಮಿ ಮತ್ತು ಅನಾಗಾಮಿ ಫಲವನ್ನು ಸಾಕ್ಷಾತ್ಕರಿಸಿಕೊಳ್ಳುವ ಪಥದಲ್ಲಿರುವವನು. ಅರಹಂತ ಅರಹಂತ ಫಲವನ್ನು ಸಾಕ್ಷಾತ್ಕರಿಸಿಕೊಳ್ಳುವ ಪಥದಲ್ಲಿರುವವನು.
“ಆಲಸ್ಯದ ರೀತಿಗಳು ಎಂಟು - ಒಬ್ಬ ಭಿಕ್ಷುವಿಗೆ ಮಾಡಬೇಕಾದ ಕರ್ತವ್ಯವಿರುತ್ತದೆ, ಅವನು ಹೀಗೆಂದುಕೊಳ್ಳುತ್ತಾನೆ. ‘ನಾನು ಮಾಡಬೇಕಾದ ಕರ್ತವ್ಯವೊಂದಿದೆಯಷ್ಟೆ. ಅದನ್ನು ಮಾಡಿದರೆ ನನಗೆ ಆಯಾಸವಾಗುತ್ತದೆ. ಆದುದರಿಂದ ಮಲಗಿಬಿಡುತ್ತೇನೆ’ ಹೀಗೆಂದುಕೊಂಡು ಮಲಗಿಬಿಡುತ್ತಾನೆ. ಕರ್ತವ್ಯವನ್ನು ಪೂರೈಸುವುದಕ್ಕಾಗಿ ಮಾಡಬೇಕಾದ ಪ್ರಯತ್ನವನ್ನು ಮಾಡುವುದಿಲ್ಲ. ಸೇರಬೇಕಾದ ಗುರಿಯನ್ನು ಸೇರುವುದಿಲ್ಲ. ಸಾಕ್ಷಾತ್ಕರಿಸಿಕೊಳ್ಳಬೇಕದುದನ್ನು ಸಾಕ್ಷಾತ್ಕರಿಸಿಕೊಳ್ಳುವುದಿಲ್ಲ. ಇದು ಆಲಸ್ಯದ ಒಂದನೆಯ ರೀತಿ.
“ಭಿಕ್ಷುವಿಗೆ ಮಾಡಬೇಕಾದ ಕರ್ತವ್ಯವನ್ನು ಮಾಡುತ್ತಿದ್ದಾನೆ ಎನ್ನೋಣ. ಅವನು ಹೀಗೆಂದುಕೊಳ್ಳುತ್ತಾನೆ- ‘ನಾನು ಕೆಲಸವನ್ನು ಮಾಡುತ್ತಿದ್ದೇನೆ. ಹೀಗೆ ಮಾಡುತ್ತಿರುವುದರಿಂದ ನನಗೆ ಆಯಾಸವಾಗುತ್ತಿದೆ, ಆದುದರಿಂದ ಮಲಗಿಬಿಡುತ್ತೇನೆ’ ಹೀಗೆಂದುಕೊಂಡು ಮಲಗಿಬಿಡುತ್ತಾನೆ. ಮಾಡಬೇಕಾದ ಪ್ರಯತ್ನವನ್ನು ಮಾಡುವುದಿಲ್ಲ... ಇದು ಆಲಸ್ಯದ ಎರಡನೆಯ ರೀತಿ.
“ಭಿಕ್ಷುವು ನಡೆಯಬೇಕಾದ ಹಾದಿಯಿರುತ್ತದೆ. ಅವನು ಹೀಗೆಂದುಕೊಳ್ಳುತ್ತಾನೆ- ‘ನಾನು ಹೋಗಬೇಕಾದ ಮಾರ್ಗವಿದೆ. ನಾನು ಆ ಹಾದಿಯಲ್ಲಿ ಹೋದರೆ ಆಯಾಸವಾಗುತ್ತದೆ, ಆದುದರಿಂದ ಮಲಗಿಬಿಡುತ್ತೇನೆ’ ಹೀಗೆಂದುಕೊಂಡು ಮಲಗಿಬಿಡುತ್ತಾನೆ. ಮಾಡಬೇಕಾದ ಪ್ರಯತ್ನವನ್ನು ಮಾಡುವುದಿಲ್ಲ... ಇದು ಆಲಸ್ಯದ ಮೂರನೆಯ ರೀತಿ.
“ಭಿಕ್ಷುವು ಹೋಗಬೇಕಾದ ದಾರಿಯಲ್ಲಿ ಹೋಗುತ್ತಿದ್ದಾನೆ. ಅವನು ಹೀಗೆಂದುಕೊಳ್ಳುತ್ತಾನೆ- ‘ನಾನು ಹೋಗಬೇಕಾದ ಮಾರ್ಗದಲ್ಲಿ ಹೋಗುತ್ತಿದ್ದೇನೆ. ಹೀಗೆ ಹೋಗುತ್ತಿರುವುದರಿಂದ ನನಗೆ ಆಯಾಸವಾಗುತ್ತಿದೆ, ಆದುದರಿಂದ ಮಲಗಿಬಿಡುತ್ತೇನೆ’. ಹೀಗೆಂದುಕೊಂಡು ಮಲಗಿಬಿಡುತ್ತಾನೆ. ಮಾಡಬೇಕಾದ ಪ್ರಯತ್ನವನ್ನು ಮಾಡುವುದಿಲ್ಲ, ಆಲಸ್ಯದ ನಾಲ್ಕನೆಯ ರೀತಿ.
“ಭಿಕ್ಷುವು ಗ್ರಾಮ ಮತ್ತು ಪಟ್ಟಣಗಳಲ್ಲಿ ಸುತ್ತಿದಾಗ ಅತಿ ಉತ್ತಮವಾದ ಆಹಾರವಾಗಲೀ ಅಥವಾ ಸಾಧಾರಣವಾದ ಆಹಾರವಾಗಲೀ ಲಭಿಸುವುದಿಲ್ಲ. ಆಗ ಅವನು ಹೀಗೆಂದುಕೊಳ್ಳುತ್ತಾನೆ. ‘ಆಹಾರಕ್ಕಾಗಿ ಗ್ರಾಮ ಪಟ್ಟಣಗಳನ್ನು ಸುತ್ತಿದರೂ ಅತ್ಯುತ್ತಮವಾದ ಆಹಾರವಾಗಲೀ ಸಾಧಾರಣವಾದ ಆಹಾರವಾಗಲೀ ಸಿಗಲಿಲ್ಲ. ಈ ದೇಹವು ಸೋತುಹೋಗಿದೆ, ಏನು ಮಾಡುವುದಕ್ಕೂ ಆಗುವುದಿಲ್ಲ’. ಹೀಗೆಂದುಕೊಂಡು ಮಲಗಿಬಿಡುತ್ತಾನೆ. ತಾನು ಮಾಡಬೇಕಾದ ಯತ್ನವನ್ನು ಮಾಡುವುದಿಲ್ಲ - ಇದು ಆಲಸ್ಯದ ಐದನೆಯ ರೀತಿ.
“ಭಿಕ್ಷುವು ಗ್ರಾಮ ಮತ್ತು ಪಟ್ಟಣಗಳಲ್ಲಿ ಸುತ್ತಿ ಉತ್ತಮವಾದ ಅಥವಾ ಸಾಧಾರಣವಾದ ಆಹಾರವನ್ನು ಪಡೆಯುತ್ತಾನೆ. ಆಮೇಲೆ ಹೀಗೆಂದುಕೊಳ್ಳುತ್ತಾನೆ- ‘ನಾನು ಗ್ರಾಮವನ್ನು, ಪಟ್ಟಣವನ್ನು ಸುತ್ತಿದ್ದೇನೆ. ಉತ್ತಮವಾದ ಮತ್ತು ಸಾಧಾರಣವಾದ ಆಹಾರವು ಸಿಕ್ಕಿದೆ, ಈಗ ಹೊಟ್ಟೆಯು ಭಾರವಾಗಿದೆ, ಕೆಲಸ ಮಾಡದಂತೆ ಆಗಿದೆ, ಮಲಗಿಬಿಡುತ್ತೇನೆ’ ಎಂದುಕೊಂಡು ಮಲಗಿಬಿಡುತ್ತಾನೆ. ತಾನು ಮಾಡಬೇಕಾದ ಯತ್ನವನ್ನು ಮಾಡುವುದಿಲ್ಲ - ಇದು ಆಲಸ್ಯದ ಆರನೆಯ ಆಧಾರ.
“ಭಿಕ್ಷುವಿಗೆ ಒಂದು ಸಣ್ಣ ಖಾಯಿಲೆ ಬರುತ್ತದೆ. ಆಗ ಹೀಗೆಂದುಕೊಳ್ಳುತ್ತಾನೆ: ‘ನನಗೆ ಮೈ ಸರಿಯಾಗಿಲ್ಲ, ಖಾಯಿಲೆಯೇನೋ ಸಣ್ಣದು, ಮಲಗುವುದೇ ಸರಿ, ಮಲಗಿಬಿಡುತ್ತೇನೆ’ ಹೀಗೆಂದುಕೊಂಡು ಮಲಗಿಬಿಡುತ್ತಾನೆ. ಮಾಡಬೇಕಾದ ಪ್ರಯತ್ನವನ್ನು ಮಾಡುವುದಿಲ್ಲ - ಇದು ಆಲಸ್ಯದ ಏಳನೆಯ ರೀತಿ.
“ಭಿಕ್ಷುವು ಖಾಯಿಲೆಯಿಂದ ಗುಣ ಹೊಂದುತ್ತಾನೆ. ‘ಖಾಯಿಲೆಯಿಂದ ಈಗತಾನೆ ಎದ್ದಿದ್ದೇನೆ. ದೇಹವು ತುಂಬ ದುರ್ಬಲವಾಗಿದೆ, ಕೆಲಸ ಮಾಡುವುದಕ್ಕಾಗಿಲ್ಲ, ಮಲಗಿಬಿಡುತ್ತೇನೆ’ ಹೀಗೆಂದುಕೊಂಡು ಮಲಗಿಬಿಡುತ್ತಾನೆ. ಮಾಡಬೇಕಾದ ಪ್ರಯತ್ನವನ್ನು ಮಾಡುವುದಿಲ್ಲ. ಸೇರಬೇಕಾದ ಗುರಿಯನ್ನು ಸೇರುವುದಿಲ್ಲ. ಸಾಕ್ಷಾತ್ಕರಿಸಿಕೊಳ್ಳ ಬೇಕಾದುದನ್ನು ಸಾಕ್ಷಾತ್ಕರಿಸಿಕೊಳ್ಳುವುದಿಲ್ಲ. ಇದು ಆಲಸ್ಯದ ಎಂಟನೆಯ ರೀತಿ.
“ಸಾಧನೆಯ ಆರಂಭದ ರೀತಿಗಳು ಎಂಟು - ಭಿಕ್ಷುವಿಗೆ ಮಾಡಬೇಕಾದ ಕರ್ತವ್ಯವಿರುತ್ತದೆ. ಅವನು ಹೀಗೆಂದುಕೊಳ್ಳುತ್ತಾನೆ- ‘ನಾನು ಮಾಡಬೇಕಾದ ಕರ್ತವ್ಯವಿದೆ. ಬುದ್ಧ ಶಾಸನವನ್ನು ಅರಿಯಲು ನಾನು ಮಾಡಬೇಕಾದುದು ಸುಲಭವಾದದ್ದಲ್ಲ. ಆದರೂ ನಾನು ಅವಶ್ಯಕವಾದ ಯತ್ನವನ್ನು ಮಾಡಿಯೇ ಮಾಡುತ್ತೇನೆ, ಇನ್ನೂ ಸೇರದಿರುವ ಗುರಿಯನ್ನು ಮುಟ್ಟಿಯೇ ಮುಟ್ಟುತ್ತೇನೆ. ಸಾಕ್ಷಾತ್ಕಾರವಾಗದಿರುವುದನ್ನು ಸಾಕ್ಷಾತ್ಕರಿಸಿಕೊಳ್ಳುತ್ತೇನೆ’. ಹೀಗೆ ತನ್ನ ಕರ್ತವ್ಯವನ್ನು ಪೂರೈಸುವುದಕ್ಕೆ ಗುರಿಯನ್ನು ಮುಟ್ಟುವುದಕ್ಕೆ ಸತ್ಯವನ್ನು ಸಾಕ್ಷಾತ್ಕರಿಸಿಕೊಳ್ಳುವುದಕ್ಕೆ ಆರಂಭಿಸುತ್ತಾನೆ. ಮಾಡಬೇಕಾದ ಪ್ರಯತ್ನವನ್ನು ಮಾಡುತ್ತಾನೆ. ಇದು ಆರಂಭದ ಮೊದಲನೆಯ ರೀತಿ.
“ಭಿಕ್ಷುವು ಮಾಡಬೇಕಾದುದನ್ನು ಮಾಡುತ್ತಿದ್ದಾನೆ. ಅವನು ಹೀಗೆಂದುಕೊಳ್ಳುತ್ತಾನೆ. ‘ನಾನು ಕೆಲಸವನ್ನು ಮಾಡುತ್ತಿದ್ದೇನೆ. ಬುದ್ಧ ಶಾಸನವನ್ನು ಅರಿಯಲು ಮಾಡಬೇಕಾದ ಸಾಧನೆಯು ನನ್ನಿಂದ ಆಗುತ್ತಿಲ್ಲ. ಬೇಕಾದ ಯತ್ನವನ್ನು ಮಾಡುತ್ತೇನೆ’ ಹೀಗೆಂದುಕೊಂಡು ಮಾಡಬೇಕಾದ ಯತ್ನವನ್ನು ಮಾಡುತ್ತಾನೆ. ಇದು ಆರಂಭದ ಎರಡನೆಯ ರೀತಿ.
“ಭಿಕ್ಷುವು ಹೋಗಬೇಕಾದ ಮಾರ್ಗವೊಂದಿರುತ್ತದೆ. ಅವನು ಹೀಗೆಂದುಕೊಳ್ಳುತ್ತಾನೆ - ‘ನಾನು ಹೋಗಬೇಕಾದ ಮಾರ್ಗವಿದೆ. ನಾನು ಹೋಗಬೇಕಾದ ಮಾರ್ಗವು ಸುಲಭವಾದದ್ದಲ್ಲ. ಬುದ್ಧ ಶಾಸನವನ್ನು ಅರಿಯುವುದು ಸುಲಭವಲ್ಲ. ಆದರೂ ಮಾಡಬೇಕಾದ ಯತ್ನವನ್ನು ಮಾಡುತ್ತೇನೆ’. ಹೀಗೆಂದುಕೊಂಡು ಮಾಡಬೇಕಾದ ಯತ್ನವನ್ನು ಮಾಡುತ್ತಾನೆ. ಇದು ಆರಂಭದ ಮೂರನೆಯ ರೀತಿ.
“ಭಿಕ್ಷುವು ಮಾರ್ಗವೊಂದರಲ್ಲಿ ಹೋಗುತ್ತಿರುತ್ತಾನೆ. ಅವನು ಹೀಗೆಂದುಕೊಳ್ಳುತ್ತಾನೆ- ‘ನಾನು ಈ ಮಾರ್ಗದಲ್ಲಿ ನಡೆಯುತ್ತಿದ್ದೇನೆ, ಆದರೆ ನಾನು ಹೀಗೆ ನಡೆಯುತ್ತಿರುವ ಕಾರಣವಾಗಿ ಬುದ್ಧಶಾಸನವನ್ನು ಅರಿಯಲು ಸಾಕಷ್ಟು ಪ್ರಯತ್ನಿಸಲಿಲ್ಲ, ಆದ್ದರಿಂದ ಪ್ರಯತ್ನ ಮಾಡುತ್ತೇನೆ’. ಹೀಗೆಂದುಕೊಂಡು ಮಾಡಬೇಕಾದ ಯತ್ನವನ್ನು ಮಾಡುತ್ತಾನೆ. ಇದು ಆರಂಭದ ನಾಲ್ಕನೆಯ ರೀತಿ.
“ಭಿಕ್ಷುವು ಆಹಾರಕ್ಕಾಗಿ ಗ್ರಾಮ ಅಥವಾ ಪಟ್ಟಣಗಳಲ್ಲಿ ಸುತ್ತುತ್ತಾನೆ. ಅತಿ ಉತ್ತಮವಾದ ಆಹಾರವಾಗಲೀ, ಸಾಧಾರಣವಾದ ಆಹಾರವಾಗಲೀ ಅವನಿಗೆ ಸಿಗುವುದಿಲ್ಲ. ಆಗ ಅವನು ಹೀಗೆಂದುಕೊಳ್ಳುತ್ತಾನೆ- ‘ನಾನು ಗ್ರಾಮವನ್ನೂ, ಪಟ್ಟಣವನ್ನೂ ಸುತ್ತಿದ್ದೇನೆ. ಉತ್ತಮವಾದ ಆಹಾರವಾಗಲೀ ಸಾಧಾರಣವಾದ ಆಹಾರವಾಗಲೀ ನನಗೆ ಸಿಕ್ಕಿಲ್ಲ. ಆಹಾರ ಸಿಗದಿದ್ದುದರಿಂದ ನನ್ನ ದೇಹವು ಹಗುರವಾಗಿಯೇ ಇದೆ. ಕೆಲಸ ಮಾಡಲು ತಕ್ಕುದಾಗಿದೆ.’ ಹೀಗೆಂದುಕೊಂಡು ಮಾಡಬೇಕಾದ ಯತ್ನವನ್ನು ಮಾಡುತ್ತಾನೆ. ಇದು ಆರಂಭದ ಐದನೆಯ ರೀತಿ.
“ಭಿಕ್ಷುವು ಪಟ್ಟಣವನ್ನೋ ಗ್ರಾಮವನ್ನೋ ಸುತ್ತಿದಾಗ ಉತ್ತಮವಾದ ಅಥವಾ ಸಾಧಾರಣವಾದ ಆಹಾರವು ಅವನಿಗೆ ಲಭಿಸುತ್ತದೆ. ಆಗ ಅವನು ಹೀಗೆಂದುಕೊಳ್ಳುತ್ತಾನೆ- ‘ನಾನು ಪಟ್ಟಣ ಗ್ರಾಮಗಳನ್ನು ಸುತ್ತಿದಾಗ ಉತ್ತಮವಾದ ಮತ್ತು ಸಾಧಾರಣವಾದ ಆಹಾರವು ಸಿಕ್ಕಿದೆ. ಇದರಿಂದ ಶರೀರವು ಬಲಗೊಂಡಿದೆ. ಕೆಲಸ ಮಾಡಲು ಶಕ್ತಿಯುತವಾಗಿದೆ’ ಹೀಗೆಂದುಕೊಂಡು ಮಾಡಬೇಕಾದ ಯತ್ನವನ್ನು ಮಾಡುತ್ತಾನೆ. ಇದು ಆರಂಭದ ಆರನೆಯ ರೀತಿ.
“ಭಿಕ್ಷುವೊಬ್ಬನಿಗೆ ಸಣ್ಣ ಖಾಯಿಲೆ ಬರುತ್ತದೆ. ಆಗ ಅವನು ಹೀಗೆಂದುಕೊಳ್ಳುತ್ತಾನೆ- ‘ನನಗೆ ಬಂದಿರುವ ಖಾಯಿಲೆ ಅಲ್ಪವಾದದ್ದು, ಈ ಖಾಯಿಲೆಯು ಉಲ್ಬಣವಾಗಬಹುದು. ಆದುದರಿಂದ ಮಾಡಬೇಕಾದುದನ್ನು ಈಗಲೇ ಮಾಡುತ್ತೇನೆ’ ಹೀಗೆಂದುಕೊಂಡು ಮಾಡಬೇಕಾದುದನ್ನು ಮಾಡುತ್ತಾನೆ. ಇದು ಆರಂಭದ ಏಳನೆಯರೀತಿ.
“ಭಿಕ್ಷುವೊಬ್ಬನು ಖಾಯಿಲೆಯಿಂದ ಎದ್ದು ಬಹಳ ಕಾಲವಾಗಿಲ್ಲ. ಆಗ ಅವನು ಹೀಗೆಂದುಕೊಳ್ಳುತ್ತಾನೆ- ‘ನನ್ನ ಖಾಯಿಲೆ ಈಗ ಗುಣವಾಗಿದೆ. ಮತ್ತೊಮ್ಮೆ ಖಾಯಿಲೆ ಬರಲು ಸಾಧ್ಯ. ಆದುದರಿಂದ ಈಗಲೆ ಮಾಡಬೇಕಾದುದನ್ನು ಆರಂಭಿಸುತ್ತೇನೆ. ಗುರಿಯನ್ನು ಮುಟ್ಟಲು ಯತ್ನಿಸುತ್ತೇನೆ. ಸತ್ಯ ಸಾಕ್ಷಾತ್ಕಾರ ಮಾಡಿಕೊಳ್ಳುವುದಕ್ಕೆ ಬೇಕಾದುದನ್ನು ಆರಂಭಿಸುತ್ತೇನೆ’ ಎಂದುಕೊಂಡು ತನ್ನ ಕರ್ತವ್ಯವನ್ನು ಪೂರೈಸುವುದಕ್ಕೆ ಗುರಿಯನ್ನು ಮುಟ್ಟುವುದಕ್ಕೆ ಸತ್ಯವನ್ನು ಸಾಕ್ಷಾತ್ಕರಿಸಿಕೊಳ್ಳುವುದಕ್ಕೆ ಯತ್ನಿಸುತ್ತಾನೆ. ಇದು ಆರಂಭದ ಎಂಟನೆಯ ರೀತಿ.
“ದಾನದ ರೀತಿಗಳು ಎಂಟು- ಕೇಳಿದಾಗ ಕೊಡುವುದು, ಭಯದಿಂದ ಕೊಡುವುದು, ‘ನನಗೆ ಕೊಟ್ಟಿದ್ದಾನೆ’ ಎಂದುಕೊಂಡು ಹಿಂತಿರುಗಿ ಕೊಡುವುದು, ‘ನನಗೆ ಮುಂದೆ ಕೊಡುತ್ತಾನೆ’ ಎಂದುಕೊಂಡು ಕೊಡುವುದು, ‘ದಾನ ಮಾಡುವುದು ಒಳ್ಳೆಯದು’ ಎಂದುಕೊಂಡು ಕೊಡುವುದು. ನಾನು ಅಡಿಗೆ ಮಾಡುತ್ತಿದ್ದೇನೆ, ಇವನು ಮಾಡುತ್ತಿಲ್ಲ. ಅಡಿಗೆ ಮಾಡಿದವರು ಮಾಡದವನಿಗೆ ದಾನ ಮಾಡುವುದು ಉಚಿತವಾದುದು ಎಂದುಕೊಂಡು ದಾನ ಮಾಡುವುದು. ‘ದಾನ ಮಾಡುವುದರಿಂದ ಕೀರ್ತಿಯು ಹರಡುತ್ತದೆ’ ಎಂದುಕೊಂಡು ದಾನ ಮಾಡುವುದು. ‘ಚಿತ್ತವು ಸಂತೋಷಗೊಳ್ಳುತ್ತದೆ, ತೃಪ್ತಿಪಡುತ್ತದೆ’ ಎಂದುಕೊಂಡು ದಾನ ಮಾಡುವುದು.
“ದಾನ ಮಾಡುವುದರಿಂದ ಉಂಟಾಗುವ ಪುನರ್ಜನ್ಮಗಳು ಎಂಟು- ಒಬ್ಬನು ಸಮಣನಿಗೋ ಬ್ರಾಹ್ಮಣನಿಗೋ ಅನ್ನವನ್ನೋ ಪಾನೀಯವನ್ನೋ ವಸ್ತ್ರವನ್ನೋ ವಾಹನವನ್ನೋ ಮಾಲೆ ಗಂಧಲೇಪನವನ್ನೋ ಹಾಸಿಗೆಯನ್ನೋ ವಾಸಕ್ಕೆ ಬೇಕಾದ ಮನೆಯನ್ನೋ ದೀಪವನ್ನೋ ದಾನ ಮಾಡಿದಾಗ ಮುಂದಿನ ಜನ್ಮಗಳಲ್ಲಿ ಅದನ್ನೇ ಪಡೆಯುತ್ತಾನೆ. ಅವನು ಪಂಚಕಾಮಗಳ ಸಂಪತ್ತನ್ನುಳ್ಳ ಕ್ಷತ್ರಿಯ ಪ್ರಮುಖರನ್ನೂ ಬ್ರಾಹ್ಮಣ ಪ್ರಮುಖರನ್ನೂ ಗೃಹಪತಿ ಪ್ರಮುಖರನ್ನೂ ನೋಡುತ್ತಾನೆ. ಆಗ ಅವನಿಗೆ ಹೀಗನ್ನಿಸುತ್ತದೆ. ‘ಕಾಯದಿಂದ ಬೇರೆಯಾಗಿ ಮರಣ ಹೊಂದಿದ ಮೇಲೆ ಪಂಚಕಾಮಗಳ ಸಂಪತ್ತನ್ನುಳ್ಳ ಕ್ಷತ್ರಿಯ ಪ್ರಮುಖರನ್ನೂ ಬ್ರಾಹ್ಮಣ ಪ್ರಮುಖರನ್ನೂ ಗೃಹಪತಿ ಪ್ರಮುಖರನ್ನೂ ನೋಡುತ್ತಾನೆ. ಆಗ ಅವನಿಗೆ ಹೀಗನ್ನಿಸುತ್ತದೆ. ‘ಕಾಯದಿಂದ ಬೇರೆಯಾಗಿ ಮರಣಹೊಂದಿದ ಮೇಲೆ ಪಂಚಕಾಮಗಳನ್ನು ಅನುಭವಿಸಲು ಬೇಕಾದ ಸಂಪತ್ತನ್ನುಳ್ಳ ಕ್ಷತ್ರಿಯ ಪ್ರಮುಖನೋ ಬ್ರಾಹ್ಮಣ ಪ್ರಮುಖನೋ ಗೃಹಪತಿಯ ಪ್ರಮುಖನೋ ಆಗಿ ಹುಟ್ಟಬಹುದು’. ಹೀಗೆ ಅವನ ಚಿತ್ತದಲ್ಲಿ ಒಂದು ಭಾವನೆ ಹುಟ್ಟುತ್ತದೆ. ಭದ್ರವಾಗಿ ನಿಲ್ಲುತ್ತದೆ ಮತ್ತು ಬೆಳೆಯುತ್ತದೆ. ಇಂಥ ಚಿತ್ತವು ಕೆಳಮಟ್ಟದ್ದು. ಆದ್ದರಿಂದ ಬಿಡುಗಡೆ ಪಡೆದ ಮೇಲೆ ಅದನ್ನು ಮತ್ತಷ್ಟು ಬೆಳೆಸದಿದ್ದರೆ ಮೊದಲಿನ ಸ್ಥಿತಿಯಲ್ಲೇ ಹುಟ್ಟುವುದಕ್ಕೆ ಸಹಾಯವಾಗಿರುತ್ತದೆ.* ಅಂಥವನನ್ನೂ ಸುಶೀಲನೆಂದು ಕರೆಯುತ್ತೇನೆ. ಶೀಲವಂತನ ಚಿತ್ತವು ಶುದ್ಧವಾಗಿರುವುದರಿಂದ ಜಯ ಪಡೆಯುತ್ತದೆ.
“ಒಬ್ಬನು ಬ್ರಾಹ್ಮಣನಿಗೋ ಸಮಣನಿಗೋ... ಹಾಸಿಗೆಯನ್ನೋ ವಾಸದ ಮನೆಯನ್ನೋ, ದೀಪವನ್ನೋ ದಾನ ಮಾಡಿದಾಗ. ಅದನ್ನು ಮುಂದಿನ ಜನ್ಮದಲ್ಲಿ ಪಡೆಯುತ್ತಾನೆ. ಅವನು ಹೀಗೆಂದುಕೊಳ್ಳುತ್ತಾನೆ- ‘ಮಹಾರಾಜ, ಚತುಷ್ಟಯರು ದೀರ್ಘಾಯುಗಳೂ, ವರ್ಣವಂತರೂ ಬಹುಸುಖಿಗಳು ಆಗಿದ್ದಾರೆ. ಕಾಯದಿಂದ ಬೇರೆಯಾಗಿ ಮರಣಹೊಂದಿದ ಮೇಲೆ ಮಹಾರಾಜ ಚತುಷ್ಟಯರ ಜೊತೆಯವನಾಗಿ ಹುಟ್ಟಬಹುದು’. ಹೀಗೆ ಅವನ ಚಿತ್ತದಲ್ಲಿ ಒಂದು ಭಾವನೆ ಹುಟ್ಟುತ್ತದೆ. ಭದ್ರವಾಗಿ ನಿಲ್ಲುತ್ತದೆ, ಬೆಳೆಯುತ್ತದೆ. ಇಂಥ ಚಿತ್ತವು ಕೆಳಮಟ್ಟದ್ದು. ಅದರಿಂದ ಬಿಡುಗಡೆಯಾದ ಮೇಲೆ ಅದನ್ನು ಮತ್ತಷ್ಟು ಬೆಳೆಸದಿದ್ದರೆ ಅವನು ಮೊದಲ ಸ್ಥಿತಿಯಲ್ಲಿ ಹುಟ್ಟುವುದಕ್ಕೆ ಸಹಾಯಕವಾಗುತ್ತದೆ. ಅಂಥವನನ್ನು ಸುಶೀಲನೆಂದು ಕರೆಯುತ್ತೇನೆ. ಶೀಲವಂತನ ಚಿತ್ತವು ಶುದ್ಧವಾದುದರಿಂದ ಜಯ ಪಡೆಯುತ್ತದೆ.
“ಒಬ್ಬನು ಸಮಣನಿಗೋ ಬ್ರಾಹ್ಮಣನಿಗೋ ಅನ್ನವನ್ನೋ ಪಾನೀಯವನ್ನೋ... ಹಾಸಿಗೆಯನ್ನೋ ನಿವಾಸವನ್ನೋ ದೀಪವನ್ನೋ ದಾನ ಮಾಡುತ್ತಾನೆ. ಮುಂದಿನ ಜನ್ಮಗಳಲ್ಲಿ ಅದನ್ನು ಪಡೆಯುತ್ತಾನೆ. ಅವನು ಹೀಗೆಂದುಕೊಳ್ಳುತ್ತಾನೆ- ‘ತಾವತಿಂಸ ದೇವತೆಗಳು... ಯಾವ ದೇವತೆಗಳು... ತುಸಿತ ದೇವತೆಗಳು... ನಿಮ್ಮಾನರತಿ ದೇವತೆಗಳು... ಪರಿನಿನಿಮ್ಮಿತವಸವತ್ತಿ ದೇವತೆಗಳು ದೀರ್ಘಾಯುಗಳೂ ವರ್ಣವಂತರೂ ಬಹು ಸುಖಿಗಳೂ ಆಗಿದ್ದಾರೆ. ಕಾಯದಿಂದ ಬೇರೆಯಾಗಿ ಮರಣ ಹೊಂದಿದ ಮೇಲೆ ಪರಿನಿಮ್ಮಿತವಸವತ್ತಿ ದೇವತೆಗಳ ಜೊತೆಯವನಾಗಿ ಹುಟ್ಟುಬಹುದು. ಹೀಗೆ ಅವನ ಚಿತ್ತದಲ್ಲಿ ಒಂದು ಭಾವನೆ ಹುಟ್ಟುತ್ತದೆ, ಭದ್ರವಾಗಿ ನಿಲ್ಲುತ್ತದೆ, ಬೆಳೆಯುತ್ತದೆ. ಇಂಥ ಚಿತ್ತವು ಹೀನವಾದದ್ದು. ಅದರಿಂದ ಬಿಡುಗಡೆಯಾದ ಮೇಲೆಯೂ ಅದನ್ನು ಮತ್ತಷ್ಟು ಬೆಳೆಸದಿದ್ದರೆ ಅವನು ಮೊದಲ ಸ್ಥಿತಿಯಲ್ಲಿ ಹುಟ್ಟುವುದಕ್ಕೆ ಸಹಾಯಕವಾಗುತ್ತದೆ. ಅವನನ್ನು ಶೀಲವಂತನೆಂದು ಕರೆಯುತ್ತೇನೆ. ಶೀಲವಂತನ ಚಿತ್ತವು ಶುದ್ಧವಾಗಿರುವುದರಿಂದ ಯಶಸ್ಸನ್ನು ಪಡೆಯುತ್ತದೆ.
“ಒಬ್ಬನು ಸಮಣನಿಗೋ ಬ್ರಾಹ್ಮಣನಿಗೋ ಅನ್ನವನ್ನೋ ಪಾನೀಯವನ್ನೋ ವಸ್ತ್ರವನ್ನೋ ವಾಹನವನ್ನೋ ಮಾಲೆಯನ್ನೋ ಗಂಧವನ್ನೋ ಲೇಪನವನ್ನೋ ಹಾಸಿಗೆಯನ್ನೋ ವಾಸಕ್ಕೆ ಬೇಕಾದ ಮನೆಯನ್ನೋ ದೀಪವನ್ನೋ ದಾನ ಮಾಡುತ್ತಾನೆ. ಮುಂದಿನ ಜನ್ಮಗಳಲ್ಲಿ ಹಿಂದಕ್ಕೆ ಪಡೆಯುತ್ತಾನೆ. ಅವನು ಹೀಗೆಂದುಕೊಳ್ಳುತ್ತಾನೆ- ‘ಬ್ರಹ್ಮಕಾಯಿಕ ದೇವತೆಗಳು ದೀರ್ಘಾಯುಗಳೂ ವರ್ಣವಂತರೂ ಬಹುಸುಖಿಗಳೂ ಆಗಿದ್ದಾರೆ. ಕಾಯದಿಂದ ಬೇರೆಯಾಗಿ ಮರಣ ಹೊಂದಿದ ಮೇಲೆ ನಾನು ಬ್ರಹ್ಮಕಾಯಿಕರ ಜೊತೆಯವನಾಗಿ ಹುಟ್ಟಬಹುದು’. ಹೀಗೆ ಅವನ ಚಿತ್ತದಲ್ಲಿ ಒಂದು ಭಾವನೆ ಹುಟ್ಟುತ್ತದೆ, ಭದ್ರವಾಗಿ ನಿಲ್ಲುತ್ತದೆ, ಬೆಳೆಯುತ್ತದೆ. ಇಂಥ ಚಿತ್ತವು ಹೀನವಾದದ್ದು. ಅದರಿಂದ ಬಿಡುಗಡೆಯಾದ ಮೇಲೆಯೂ ಅದನ್ನು ಮತ್ತಷ್ಟು ಬೆಳೆಸದಿದ್ದರೆ ಆ ಲೋಕದಲ್ಲಿ ಹುಟ್ಟುವುದಕ್ಕೆ ಸಹಾಯಕವಾಗುತ್ತದೆ. ಅಂಥವನನ್ನು ಶೀಲವಂತನೆಂದು ಕರೆಯುತ್ತೇನೆ.53 ಶೀಲವಂತ ಚಿತ್ತವು ರಾಗದಿಂದ ಬಿಡುಗಡೆಯಾಗಿರುವುದರಿಂದ ಜಯ ಪಡೆಯತ್ತದೆ.
“ಕೂಟಗಳು ಎಂಟು- ಕ್ಷತ್ರಿಯರ ಕೂಟ, ಬ್ರಾಹ್ಮಣರ ಕೂಟ, ಗೃಹಸ್ಥರ ಕೂಟ, ಸಮಣರ ಕೂಟ, ಮಹಾರಾಜ ಚತುಷ್ಟಯರ ಕೂಟ, ತಾವತಿಂಸ ದೇವತೆಗಳ ಕೂಟ, ಮಾರರ ಕೂಟ, ಬ್ರಹ್ಮರ ಕೂಟ.
“ಲೋಕ ಧರ್ಮಗಳು ಎಂಟು- ಲೋಭ ಮತ್ತು ಅಲೋಭ, ಯಶಸ್ಸು ಮತ್ತು ಅಪಯಶಸ್ಸು, ನಿಂದೆ ಮತ್ತು ಪ್ರಶಂಸೆ, ಸುಖ ಮತ್ತು ದುಃಖ.
“ಉತ್ಕೃಷ್ಟ ಸ್ಥಾನಗಳು ಎಂಟು- ರೂಪಸಞ್ಞಿಯಾದವನೊಬ್ಬನು ತನ್ನಿಂದ ಹೊರಗಿರುವ ರೂಪಗಳನ್ನು ನೋಡುತ್ತಾನೆ. ಅತಿ ಚಿಕ್ಕದಾಗಿರುವ ಸುವರ್ಣ ಅಥವಾ ದುರ್ವರ್ಣವಾಗಿರುವುದನ್ನು ನೋಡುತ್ತಾನೆ. ‘ಮಹತ್ತರ ಸ್ಥಾನವನ್ನು ನಾನು ನೋಡುತ್ತೇನೆ, ಅದನ್ನು ತಿಳಿದಿದ್ದೇನೆ’ ಎಂದು ಹೇಳುತ್ತಾನೆ. ಇದು ಒಂದನೆಯ ಉತ್ಕೃಷ್ಟ ಸ್ಥಾನ.
“ರೂಪಸಞ್ಞಿಯಾದವನೊಬ್ಬನು ತನ್ನಿಂದ ಹೊರಗಿರುವ ದೊಡ್ಡವಾದ ರೂಪಗಳನ್ನು ಮತ್ತು ಸುವರ್ಣ ಅಥವಾ ದುರ್ವರ್ಣದ ರೂಪಗಳನ್ನು ನೋಡುತ್ತಾನೆ. ಈ ಮಹತ್ತರ ಸ್ಥಾನವನ್ನು ಏರಿ ‘ನಾನು ಅರಿತಿದ್ದೇನೆ, ಅವನ್ನು ನೋಡುತ್ತಿದ್ದೇನೆ’ ಎಂದು ಹೇಳಬಲ್ಲವನಾಗುತ್ತಾನೆ. ಇದು ಎರಡನೆಯ ಉತ್ಕೃಷ್ಟ ಸ್ಥಾನ.
“ಅರೂಪಸಞ್ಞಿಯಾದವನೊಬ್ಬನು ತನ್ನಿಂದ ಹೊರಗಿರುವ ಚಿಕ್ಕ ರೂಪಗಳನ್ನು ನೋಡುತ್ತಾನೆ. ಅವು ಮಹತ್ತರ ಸ್ಥಾನವನ್ನು ಏರಿ ಅರಿತಿದ್ದೇನೆ, ಕಾಣುತ್ತಿದ್ದೇನೆ ಎನ್ನುತ್ತಾನೆ. ಇದು ಮುರನೆಯ ಉತ್ಕೃಷ್ಟ ಸ್ಥಾನ.
“ಅರೂಪಸಞ್ಞಿಯಾದವನೊಬ್ಬನು ತನ್ನಿಂದ ಹೊರಗಿರುವ ದೊಡ್ಡ ರೂಪಗಳನ್ನು ನೋಡುತ್ತಾನೆ. ಅವು ಸುವರ್ಣ ಅಥವಾ ದುರ್ವರ್ಣವಾಗಿರುವುದನ್ನು ನೋಡುತ್ತಾನೆ. ‘ಈ ಮಹತ್ತರ ಸ್ಥಾನವನ್ನು ಏರಿ ಅರಿತಿದ್ದೇನೆ, ಕಾಣುತ್ತಿದ್ದೇನೆ’ ಎನ್ನುತ್ತಾನೆ. ಇದು ನಾಲ್ಕನೆಯ ಉತ್ಕೃಷ್ಟ ಸ್ಥಾನ.
“ಅರೂಪಸಜ್ಞಿಯಾದವನೊಬ್ಬನು ತನ್ನಿಂದ ಹೊರಗಿರುವ ನೀಲಿಯ ನೀಲಿ ಬಣ್ಣದ ನೀಲಿಯಾಗಿ ತೋರುವ ನೀಲಿಯಾಗಿ ಪ್ರಕಾಶಿಸುವುದನ್ನು ನೋಡುತ್ತಾನೆ. ನೀಲಿಯಾದ ನೀಲಿ ಬಣ್ಣದ ನೀಲಿಯಾಗಿ ತೋರುವ ಉಮಾ ಪುಷ್ಪದಂತೆ ಅಥವಾ ನೀಲಿಯಾದ ನೀಲಿ ಬಣ್ಣದ ನೀಲಿಯಾಗಿ ತೋರುವ ನೀಲಿಯಿಂದ ಪ್ರಕಾಶಿಸುವ ಎರಡು ಕಡೆಯೂ ನೀಲಿಯಿಂದಲೇ ಕೂಡಿರುವ ವಾರಣಾಸಿಯ ವಸ್ತ್ರದಂತೆ ಇರುವ ನೀಲಿಯಾದವುಗಳನ್ನು ಅರೂಪಿಸಜ್ಞಿ ನೋಡುತ್ತಾನೆ. ಈ ಮಹತ್ತರ ಸ್ಥಾನವನ್ನು ಏರಿ ‘ನಾನು ಅರಿತಿದ್ದೇನೆ, ನೋಡುತ್ತಿದ್ದೇನೆ’ ಎಂದು ಹೇಳಬಲ್ಲವನಾಗುತ್ತಾನೆ, ಇದು ಐದನೆಯ ಉತ್ಕೃಷ್ಟ ಸ್ಥಾನ.
“ಅರೂಪಸಜ್ಞಿಯಾದವನೊಬ್ಬನು ತನ್ನಿಂದ ಹೊರಗಿರುವ ಹಳದಿಯ ಹಳದಿ ಬಣ್ಣದ ಹಳದಿಯಾಗಿ ತೋರುವ ಹಳದಿಯಿಂದ ಪ್ರಕಾಶಿಸುವವುಗಳನ್ನು ನೋಡುತ್ತಾನೆ. ಹಳದಿಯಾದ ಹಳದಿಬಣ್ಣದ ಹಳದಿಯಾಗಿ ತೋರುವ ಹಳದಿಯಿಂದ ಪ್ರಕಾಶಿಸುವ ಕಣ್ಣಿಕಾರ ಪುಷ್ಪದಂತೆ ಅಥವಾ ಹಳದಿಯಾದ ಹಳದಿ ಬಣ್ಣದ ಹಳದಿ ಬಣ್ಣವಾಗಿ ತೋರುವ ಹಳದಿ ಬಣ್ಣದಿಂದ ಪ್ರಕಾಶಿಸುವ ಎರಡೂ ಕಡೆಯಲ್ಲೂ ಹಳದಿಯಿಂದಲೇ ಕೂಡಿರುವ ವಾರಣಾಸಿಯ ವಸ್ತ್ರದಂತೆ ಇರುವ ಹಳದಿಯಾದವುಗಳನ್ನು ಅರೂಪಸಜ್ಞಿಯು ನೋಡುತ್ತಾನೆ. ‘ಈ ಮಹತ್ತರ ಸ್ಥಾನವನ್ನು ಏರಿ ನಾನು ಅರಿತಿದ್ದೇನೆ, ನೋಡುತ್ತಿದ್ದೇನೆ’ ಎಂದು ಹೇಳಬಲ್ಲವನಾಗುತ್ತಾನೆ. ಇದು ಆರನೆಯ ಉತ್ಕೃಷ್ಟಸ್ಥಾನ.
“ಅರೂಪಸಜ್ಞಿಯಾದವನೊಬ್ಬನು ತನ್ನಿಂದ ಹೊರಗಿರುವ ಕೆಂಪಾದ ಕೆಂಪು ಬಣ್ಣದ ಕೆಂಪಾಗಿ ತೋರುವ ಕೆಂಪಿನಿಂದ ಪ್ರಕಾಶಿಸುವುದನ್ನು ನೋಡುತ್ತಾನೆ. ಕೆಂಪಾದ ಕೆಂಪು ಬಣ್ಣದ ಕೆಂಪಾಗಿ ತೋರುವ ಕೆಂಪಿನಿಂದ ಪ್ರಕಾಶಿಸುವ ಬಂಧು ಜೀವಕ ಪುಷ್ಪದಂತೆ ಅಥವಾ ಕೆಂಪಾದ ಕೆಂಪು ಬಣ್ಣದ ಕೆಂಪು ಬಣ್ಣವಾಗಿ ತೋರುವ ಕೆಂಪು ಬಣ್ಣದಿಂದ ಪ್ರಕಾಶಿಸುವ ಎರಡು ಕಡೆಯಲ್ಲೂ ಕೆಂಪಿನಿಂದ ಕೂಡಿರುವ ವಾರಣಾಸಿಯ ವಸ್ತ್ರದಂತೆ ಇರುವ ಕೆಂಪಾದವುಗಳನ್ನು ಅರೂಪಸಞ್ಞಿಯು ನೋಡುತ್ತಾನೆ. ‘ಈ ಮಹತ್ತರ ಸ್ಥಾನವನ್ನು ಏರಿ ಅರಿತಿದ್ದೇನೆ, ನೋಡುತ್ತಿದ್ದೇನೆ’ ಎಂದು ಹೇಳಬಲ್ಲವನಾಗುತ್ತಾನೆ. ಇದು ಏಳನೆಯ ಉತ್ಕೃಷ್ಟ ಸ್ಥಾನ.
“ಅರೂಪಸಞ್ಞಿಯಾದವನೊಬ್ಬನು ತನ್ನಿಂದ ಹೊರಗಿರುವ ಬಿಳಿಯ ಬಿಳಿ ಬಣ್ಣದ ಬಿಳಿಯಾಗಿ ತೋರುವ ಬಿಳಿಯಿಂದ ಪ್ರಕಾಶಿಸುವುವುಗಳನ್ನು ನೋಡುತ್ತಾನೆ. ಬೆಳ್ಳಗಿರುವ ಬಿಳುಪಿನಿಂದ ಕೂಡಿರುವ ಬೆಳ್ಳಗೆ ಕಾಣುವ ಬೆಳ್ಳಿಯಂತೆ ಪ್ರಕಾಶಿಸುವ ಮುಂಜಾನೆಯ ನಕ್ಷತ್ರದಂತೆ ಅಥವಾ ಬಿಳಿಯ ಬಿಳಿ ಬಣ್ಣದ ಬೆಳ್ಳಗೆ ಕಾಣುವ ಬೆಳ್ಳಗೆ ಹೊಳೆಯುವ ಎರಡು ಕಡೆಯೂ ಬಿಳಿಯದೇ ಆಗಿರುವ ವಾರಣಾಸಿಯ ವಸ್ತ್ರದಂತೆ ಬೆಳ್ಳಗಿರುವುವುಗಳನ್ನು ಅರೂಪಸಞ್ಞಿಯು ನೋಡುತ್ತಾನೆ. ‘ಈ ಮಹತ್ತರ ಸ್ಥಾನವನ್ನು ಏರಿ ಅರಿತಿದ್ದೇನೆ, ನೋಡುತ್ತಿದ್ದೆನೆ’ ಎಂದು ಹೇಳಬಲ್ಲವನಾಗುತ್ತಾನೆ. ಇದು ಎಂಟನೆಯ ಉತ್ಕೃಷ್ಟ ಸ್ಥಾನ.
“ವಿಮೋಕ್ಖಗಳು ಎಂಟು. ರೂಪಿಯು ಹೊರಗಿನ ರೂಪಗಳನ್ನು ನೋಡುತ್ತಾನೆ, ಇದು ಪ್ರಥಮ ವಿಮೋಕ್ಖ.
“ಅರೂಪಸಞ್ಞಿಯು ತನ್ನ ಹೊರಗಿನ ರೂಪಗಳನ್ನು ನೋಡುತ್ತಾನೆ, ಇದು ದ್ವೀತಿಯ ವಿಮೋಕ್ಖ.
“ರೂಪಸಞ್ಞಿಯ ಸ್ಥಾನವನ್ನು ಮೀರಿ, ಇಂದ್ರಿಯಗಳಿಂದಾಗುವ ಪ್ರತಿಕ್ರಿಯೆಗಳನ್ನೆಲ್ಲಾ ನಾಶ ಮಾಡಿಕೊಂಡು ನಾನಾ ರೀತಿಯಾಗಿ ತೋರುವ ಅರಿವನ್ನು ಮೀರಿ, ಆಕಾಶವು ಅನಂತವಾಗಿದೆ’ ಎಂಬ ಆಕಾಸಾನಂಚಾಯತನದಲ್ಲಿ ಇರುತ್ತಾನೆ. ಇದು ಚತುರ್ಥವು ವಿಮೋಕ್ಖ.
“ಆಕಾಸಾನಂಚಾಯತನವೆಲ್ಲವನ್ನೂ ಮೀರಿ ‘ವಿಞ್ಞಾಣವು ಅನಂತವಾಗಿದೆ’ ಎಂಬ ವಿಞ್ಞಾನಂಚಾಯತನದಲ್ಲಿ ಇರುತ್ತಾನೆ. ಇದು ಪಂಚಮ ವಿಮೋಕ್ಖ.
“ವಿಞ್ಞಾನಂಚಾಯತನವೆಲ್ಲವನ್ನೂ ಮೀರಿ ‘ಏನೂ ಇಲ್ಲ’ ಎಂಬ ಅಕಿಂಚಞ್ಞಾಯತನದಲ್ಲಿ ಇರುತ್ತಾನೆ. ಇದು ಷಷ್ಠಿ ವಿಮೋಕ್ಖ.
“ಅಕಿಂಚಞ್ಞಾಯತನವೆಲ್ಲವನ್ನೂ ಮೀರಿ ‘ಅರಿವು ಇಲ್ಲ, ಅರಿವು ಇಲ್ಲದೆಯೂ ಇಲ್ಲ’ ಎಂಬ ನೇವಸಞ್ಞಾನಾಸಞ್ಞಾಯತನದಲ್ಲಿ ಇರುತ್ತಾನೆ, ಇದು ಸಪ್ತಮ ವಿಮೋಕ್ಖ.
“ನೇವಸಞ್ಞಾ ನಾಸಞ್ಞಾಯತನವೆಲ್ಲವನ್ನೂ ಮೀರಿ ಅರಿವು ಇಲ್ಲದ ವೇದನೆಯು ಇಲ್ಲದ ಸ್ಥಿತಿಯಲ್ಲಿರುತ್ತಾನೆ. ಇದು ಅಷ್ಟಮ ವಿಮೋಕ್ಖ.
“ಧಮ್ಮವು ಎಂಟರಿಂದ ಆಗಿದೆ ಎಂಬುದನ್ನು ಸಮ್ಮಾಸಂಬುದ್ಧರೂ ಅರಹಂತರೂ ಆದ ಭಗವಾನರು ಅರಿತಿದ್ದಾರೆ, ಕಂಡಿದ್ದಾರೆ, ಅದನ್ನು ಸ್ಪಷ್ಟಪಡಿಸಿದ್ದಾರೆ. ವಿವಾದಾತೀತವಾದ ದೇವತೆಗಳ ಮತ್ತು ಮನುಷ್ಯರ ಹಿತಕ್ಕಾಗಿ... ಎಲ್ಲರೂ ಒಟ್ಟಾಗಿ ಪಠಿಸಬೇಕು.
ಒಂಭತ್ತರ ಧರ್ಮಗಳು
“ಧರ್ಮವು ಒಂಬತ್ತರಿಂದ ಆಗಿದೆ ಎಂಬುದನನು ಸಮ್ಮಾಸಂಬುದ್ಧರೂ ಅರಹಂತರೂ ಆದ ಭಗವಾನರು ಅರಿತಿದ್ದಾರೆ, ಕಂಡಿದ್ದಾರೆ. ಅದನ್ನು ಸ್ಪಷ್ಟಪಡಿಸಿದ್ದಾರೆ. ವಿವಾದಾತೀತವಾದ... ದೇವತೆಗಳ ಮತ್ತು ಮನುಷ್ಯರ ಹಿತಕ್ಕಾಗಿ... ಎಲ್ಲರೂ ಒಟ್ಟಾಗಿ ಪಠಿಸಬೇಕು, ಆ ಒಂಬತ್ತು ಯಾವುವು?
“ಕಲಹದ ಆಧಾರಗಳು ಒಂಬತ್ತು ‘ನನಗೆ ಅನರ್ಥವನ್ನು ಮಾಡಿದ್ದಾರೆ’ ಎಂಬುದು ಕಲಹವನ್ನುಂಟುಮಾಡುತ್ತವೆ. ‘ನನಗೆ ಅನರ್ಥವನ್ನು ಮಾಡುತ್ತಾನೆ’ ಎನ್ನುವುದು ಕಲಹವನ್ನುಂಟುಮಾಡುತ್ತದೆ. ‘ಮುಂದೆ ನನಗೆ ಅನರ್ಥವನ್ನು ಮಾಡುತ್ತಾನೆ’ ಎನ್ನುವುದು ಕಲಹವನ್ನುಂಟುಮಾಡುತ್ತದೆ. ‘ನನಗೆ ಪ್ರಿಯರಾದವರಿಗೆ ಅನರ್ಥವನ್ನು ಮಾಡಿದ್ದಾನೆ’... ‘ನನಗೆ ಪ್ರಿಯರಾದವರಿಗೆ ಅನರ್ಥವನ್ನು ಮಾಡುತ್ತಾನೆ’. ‘ನನಗೆ ಅಪ್ರಿಯರಾದವರಿಗೆ ಒಳ್ಳೆಯನ್ನು ಮಾಡಿದ್ದಾನೆ’... ‘ನನಗೆ ಅಪ್ರಿಯರಾದವರಿಗೆ ಒಳ್ಳೆಯದನ್ನು ಮಾಡುತ್ತಾನೆ’... ‘ನನಗೆ ಅಪ್ರಿಯರಾದವರಿಗೆ ಮುಂದೆ ಒಳ್ಳೆಯದನ್ನು ಮಾಡುತ್ತಾನೆ’ ಎನ್ನುವುದೂ ಕಲಹವನ್ನುಂಟುಮಾಡುತ್ತವೆ.
“ಕಲಹವನ್ನು ತಪ್ಪಿಸುವ ರೀತಿಗಳು ಒಂಬತ್ತು- ‘ನನಗೆ ಅನರ್ಥವನ್ನು ಮಾಡಿದ್ದಾನೆ, ಅದಕ್ಕಾಗಿ ಕಲಹವಾಡಿದರೆ ನನಗಾಲೀ ಅವನಿಗಾಗಲೀ ಯಾವ ಲಾಭವೂ ಇಲ್ಲ’ ಎಂಬ ಭಾವನೆಯು ಕಲಹವನ್ನು ತಪ್ಪಿಸುತ್ತದೆ. ‘ನನಗೆ ಅನರ್ಥವನ್ನುಂಟುಮಾಡುತ್ತಾನೆ, ಮುಂದೆ ನನಗೆ ಅನರ್ಥವನ್ನು ಮಾಡುತ್ತಾನೆ’... ‘ನನಗೆ ಪ್ರಿಯರಾದವರಿಗೆ ಅನರ್ಥವನ್ನು ಮಾಡಿದ್ದಾನೆ’... ‘ನನಗೆ ಪ್ರಿಯರಾದವರಿಗೆ ಅನರ್ಥವನ್ನು ಮಾಡುತ್ತಾನೆ’... ‘ನನಗೆ ಪ್ರಿಯರಾದವರಿಗೆ ಅನರ್ಥವನ್ನು ಮುಂದೆ ಮಾಡುತ್ತಾನೆ’... ‘ನನಗೆ ಅಪ್ರಿಯರಾದವರಿಗೆ ಒಳ್ಳೆಯದನ್ನು ಮಾಡಿದ್ದಾನೆ’... ‘ನನಗೆ ಅಪ್ರಿಯರಾದವರಿಗೆ ಒಳ್ಳೆಯದನ್ನು ಮಾಡುತ್ತಾನೆ. ಆದರೆ ಅದಕ್ಕಾಗಿ ಕಲಹವಾಡಿದರೆ ನನಗಾಗಲೀ ಅವನಿಗಾಗಲೀ ಯಾವ ಲಾಭವೂ ಇಲ್ಲ’ ಎಂಬ ಭಾವನೆಯು ಕಲಹವನ್ನು ತಪ್ಪಿಸುತ್ತದೆ.
“ಜೀವಿಗಳ ನಿವಾಸಗಳು ಒಂಬತ್ತು. ನಾನಾ ಕಾಯಗಳನ್ನೂ ನಾನಾ ರೀತಿಯ ಅರಿವನ್ನೂ ಹೊಂದಿರುವ ಜೀವಿಗಳು, ಅಂದರೆ ಮನುಷ್ಯರು, ದೇವತೆಗಳು, ನಿಪಾತಕ್ಕೆ ಹೋಗಿರುವವರು ಇರುವ ನಿವಾಸ. ಇದು ಜೀವಿಗಳ ಒಂದನೆಯ ನಿವಾಸ.
“ನಾನಾ ಕಾಯಗಳನ್ನೂ ಒಂದೇಬಗೆಯ ಅರಿವನ್ನೂ ಹೊಂದಿರುವ ಜೀವಿಗಳು, ಅಂದರೆ ಕೆಲವು ದೇವತೆಗಳು, ಬ್ರಹ್ಮಕಾಯಕರು ಪ್ರಥಮ ಧ್ಯಾನದ ಫಲವಾಗಿ ಹುಟ್ಟುವವರು ಇವರ ನಿವಾಸ. ಇದು ಜೀವಿಗಳ ಎರಡನೆಯ ನಿವಾಸ.
“ಒಂದೇಬಗೆಯ ಕಾಯವನ್ನೂ ನಾನಾಬಗೆಯ ಅರಿವನ್ನೂ ಹೊಂದಿರುವ ಜೀವಿಗಳ ಎಂದರೆ ಆಭಸ್ಸರಾ ದೇವತೆಗಳ ನಿವಾಸ. ಇದು ಜೀವಿಗಳ ಮೂರನೆಯ ನಿವಾಸ.
“ಒಂದೇಬಗೆಯ ಕಾಯವನ್ನೂ ಒಂದೇ ಬಗೆಯ ಅರಿವನ್ನೂ ಹೊಂದಿರುವ ಜೀವಿಗಳ, ಅಂದರೆ ಸುಭಕಿಣ್ಹ ದೇವತೆಗಳ ನಿವಾಸ. ಇದು ಜೀವಿಗಳ ನಾಲ್ಕನೆಯ ನಿವಾಸ.
“ಅರಿವನ್ನೂ ವೇದನೆಯನ್ನೂ ಮೀರಿದ ಜೀವಿಗಳ ಅಂದರೆ ಅಸಞ್ಞಾಸತ್ತಗಳ ನಿವಾಸ. ಇದು ಜೀವಿಗಳ ಐದನೆಯ ನಿವಾಸ.
“ಎಲ್ಲಬಗೆಯ ರೂಪ ಅರಿವುಗಳನ್ನು ಮೀರಿ ಕ್ರೋಧ ಭಾವನೆಗಳನ್ನು ನಾಶ ಮಾಡಿಕೊಂಡು ವಿವಿಧರೀತಿಯ ಜೀವಿಗಳ ಬಗೆಗಿನ ಅರಿವನ್ನೂ ಮೀರಿ ‘ಆಕಾಶವು ಅನಂತವಾಗಿದೆ’ ಎಂಬ ಆಕಾಸಾನಂಚಾಯತನದಲ್ಲಿರುವವನ ನಿವಾಸ. ಇದು ಜೀವಿಗಳ ಆರನೆಯ ನಿವಾಸ.
“ಆಕಾಸಾನಂಚಾಯತನವೆಲ್ಲವನ್ನೂ ದಾಟಿ ‘ವಿಞ್ಞಾಣವು ಅನಂತವಾಗಿದೆ’ ಎಂಬ ವಿಞ್ಞಾಣಂಚಾಯತನ ದಲ್ಲಿರುವವನ ನಿವಾಸ. ಇದು ಜೀವಿಗಳ ಏಳನೆಯ ನಿವಾಸ.
“ವಿಞ್ಞಾಣಂಚಾಯತನವೆಲ್ಲವನ್ನೂ ದಾಟಿ ‘ಏನೂ ಇಲ್ಲ’ ಎಂಬ ಅಕಿಂಚಞ್ಞಾಯತನದಲ್ಲಿರುತ್ತಾನೆ. ಇವನ ನಿವಾಸವು ಜೀವಿಗಳ ಎಂಟನೆಯ ನಿವಾಸ.
“ಅಕಿಂಚಞ್ಞಾಯತನವೆಲ್ಲಕ್ಕೂ ಮೇಲಿರುವ ನೇವಸಞ್ಞಾನಾಸಞ್ಞಾಯತನದಲ್ಲಿರುತ್ತಾನೆ. ಇವನದು ಜೀವಿಗಳ ಒಂಬತ್ತನೆಯ ನಿವಾಸ.
“ಬ್ರಹ್ಮಚರ್ಯವನ್ನು ಪಾಲಿಸುತ್ತಿರುವಾಗ ಮಧ್ಯೆ ಮಧ್ಯೆ ಬರುವ ಅಸಮಯಗಳು ಒಂಬತ್ತು. ತಥಾಗತನು ಲೋಕದಲ್ಲಿ ಹುಟ್ಟಿ ಅರಹಂತನೂ ಸಮ್ಮಾಸಂಬುದ್ಧನೂ ಆಗಿ ಎಲ್ಲ ಕೆಟ್ಟ ಭಾವನೆಗಳನ್ನೂ ಉಪಶಮನ ಮಾಡಿ ಪರಿನಿಬ್ಬಾಣದ ಕಡೆಗೂ ಶೋಧಿಯ ಕಡೆಗೂ ಕೊಂಡೊಯ್ಯುವ ಧಮ್ಮವನ್ನು ಬೋಧಿಸುತ್ತಾನೆ. ಆದರೂ ನಿರಯದಲ್ಲಿ ಹುಟ್ಟುವ ಮನುಷ್ಯರುಂಟು. ಇದು ಬ್ರಹ್ಮಚರ್ಯವನ್ನು ಪಾಲಿಸುತ್ತಿರುವಾಗ ಬರುವ ಮೊದಲನೆಯ ಅಸಮಯ, ಅಸಂದರ್ಭ.
‘....ತಿರ್ಯಕ್ ಲೋಕದಲ್ಲಿ ಹುಟ್ಟುವ ಮನುಷ್ಯರುಂಟು. ಇದು ಬ್ರಹ್ಮಚರ್ಯವನ್ನು ಪಾಲಿಸುತ್ತಿರುವಾಗ ಬರುವ ಎರಡನೆಯ ಅಸಮಯ, ಅಸಂದರ್ಭ.
“....ಪ್ರೇತ ಲೋಕದಲ್ಲಿ ಹುಟ್ಟುವ ಮನುಷ್ಯರುಂಟು. ಇದು ಬ್ರಹ್ಮಚರ್ಯವನ್ನು ಪಾಲಿಸುತ್ತಿರುವಾಗ ಬರುವ ಮೂರನೆಯ ಅಸಮಯ ಅಸಂದರ್ಭ.
“...ಅಸುರಕಾಯರಾಗಿ ಹುಟ್ಟುವ ಮನುಷ್ಯರುಂಟು. ಬ್ರಹ್ಮಚರ್ಯವನ್ನು ಪಾಲಿಸುತ್ತಿರುವಾಗ ಬರುವ ನಾಲ್ಕನೆಯ ಅಸಮಯ ಅಸಂದರ್ಭ ಇದು.
“....ದೀರ್ಘಾಯುಗಳಾದ ಸುರಕಾಯರಾಗಿ ಇನ್ನೊಂದು ಲೋಕದಲ್ಲಿ ಹುಟ್ಟುವ ಮನುಷ್ಯರುಂಟು. ಇದು ಬ್ರಹ್ಮಚರ್ಯವನ್ನು ಪಾಲಿಸುತ್ತಿರುವಾಗ ಬರುವ ಐದನೆಯ ಅಸಮಯ ಅಸಂದರ್ಭ.
“ಭಿಕ್ಷುಗಳಾಗಲೀ, ಭಿಕ್ಷುಣಿಯರಾಗಲೀ, ಉಪಾಸಕರಾಗಲೀ, ಉಪಾಸಿಕೆಯರಾಗಲೀ ಎಲ್ಲಿ ಇರುವುದಿಲ್ಲವೋ ಅಲ್ಲಿ ತಿಳಿವಳಿಕೆಯಿಲ್ಲದ ದಡ್ಡರಾದ ನಾಗರಿಕತೆಯ ಹೊರಗಿರುವ ಜನಪದಗಳಲ್ಲಿ ಹುಟ್ಟುವ ಮನುಷ್ಯರುಂಟು. ಬ್ರಹ್ಮಚರ್ಯವನ್ನು ಪಾಲಿಸುತ್ತಿರುವಾಗ ಬರುವ ಆರನೆಯ ಅಸಮಯ, ಅಸಂದರ್ಭ.
“....ದಾನವೆಂಬುದೂ ಇಲ್ಲಿ ನಿಯಮವಾಗಲೀ ಗೌರವಕ್ಕೆ ಪಾತ್ರವಾದದ್ದಾಗಲೀ ಇಲ್ಲ. ಸುಖ ದುಃಖಗಳಿಗೆ ಕಾರಣವಾದ ಕರ್ಮದ ಫಲದ ವಿಪಾಕವೂ ಇಲ್ಲ, ಈ ಲೋಕವು ಇಲ್ಲ, ಪರಲೋಕವೂ ಇಲ್ಲ. ತಾಯಿಯೂ ಇಲ್ಲ, ತಂದೆಯೂ ಇಲ್ಲ, ತಂದೆತಾಯಿಗಳಿಂದಲೇ ಹುಟ್ಟಿದ (ಶ್ರೇಷ್ಠ) ಜೀವಿಗಳೂ ಇಲ್ಲ. ಈ ಲೋಕವನ್ನು ಮತ್ತು ಪರಲೋಕವನ್ನು ಅರಿತು ತಾವೇ ಅತ್ಯುತ್ಕೃಷ್ಟವಾದ ಸತ್ಯವನ್ನು ಸಾಕ್ಷಾತ್ಕರಿಸಿಕೊಂಡು ಪರಿಪೂರ್ಣವಾದ ಸನ್ಮಾರ್ಗವನ್ನು ತೋರಿಸಬಲ್ಲ ಸಮಣ ಬ್ರಾಹ್ಮಣರೂ ಇಲ್ಲ’ ಎಂಬ ಮಿಥ್ಯಾದೃಷ್ಟಿಯುಳ್ಳ ವಿಪರೀತ ದೃಷ್ಟಿಯ ಮಧ್ಯಮ ಗುಣದ ಜನರಲ್ಲಿ ಹುಟ್ಟುವ ಮನುಷ್ಯರುಂಟು. ಇದು ಬ್ರಹ್ಮಚರ್ಯವನ್ನು ಪಾಲಿಸುತ್ತಿರುವಾಗ ಬರುವ ಏಳನೆಯ ಅಸಮಯ ಅಸಂದರ್ಭ.54
“....ದುಷ್ಟ ಬುದ್ಧಿಯವರಾದ ಮೂರ್ಖರಾದ ಮೂಗರಾದ ಒಳ್ಳೆಯ ಅಥವಾ ಕೆಟ್ಟುದಾದ ಮಾತುಗಳು ಯಾವುವು ಎಂಬುದನ್ನು ತಿಳಿಯದ ಮಧ್ಯಮ ಗುಣದ ಜನರಲ್ಲಿ ಹುಟ್ಟುವ ಮನುಷ್ಯರುಂಟು. ಇದು ಬ್ರಹ್ಮಚರ್ಯವನ್ನು ಪಾಲಿಸುತ್ತಿರುವಾಗ ಬರುವ ಎಂಟನೆಯ ಅಸಮಯ ಅಸಂದರ್ಭ.
“ಲೋಕದಲ್ಲಿ ತಥಾಗತರು ಹುಟ್ಟುವುದಿಲ್ಲ. ಅರಹಂತನೂ ಸಮ್ಮಾಸಂಬುದ್ಧರನೂ ಆಗುವವರಿರುವುದಿಲ್ಲ. ಎಲ್ಲ ಕೆಟ್ಟ ಭಾವನೆಗಳನ್ನು ಉಪಶಮನ ಮಾಡಿ ಪರಿನಿಬ್ಬಾನದ ಕಡೆಗೂ ಬೋಧಿಯ ಕಡೆಗೂ ಕೊಂಡೊಯ್ಯುವ ಧಮ್ಮವನ್ನು ಬೋಧಿಸುವವರಿರುವುದಿಲ್ಲ. (ಹೀಗಿರುವುದರಿಂದ) ಜ್ಞಾಪಕವನ್ನೂ ಪಡೆದವರೂ ತಿಳಿವಳಿಕೆಯುಳ್ಳವರೂ ಕಿವುಡಮೂಗರಾಗಿರದವರೂ ಯಾವುದು ಒಳ್ಳೆಯ ಮಾತು ಯಾವುದು ಕೆಟ್ಟ ಮಾತು ಎಂಬುದನ್ನು ತಿಳಿದವರೂ ಆದ ಜನರು ಹುಟ್ಟಿದರೂ ಅವರು ಮಧ್ಯಮ ಗುಣದವರೇ ಆಗಿರುತ್ತಾರೆ. ಬ್ರಹ್ಮಚರ್ಯವನ್ನು ಪಾಲಿಸುತ್ತಿರುವಾಗ ಬರುವ ಒಂಬತ್ತನೆಯ ಸಂದರ್ಭ ಇದು.
“ಅನುಕ್ರಮವಾಗಿ ಬರುವ ಸ್ಥಿತಿಗಳು ಒಂಬತ್ತು - ಕಾಮವನ್ನೂ ಅಕುಶಲವಾದ ಭಾವನೆಗಳನ್ನೂ ದೂರ ಮಾಡಿ ತರ್ಕ ಮತ್ತು ವಿಚಾರಗಳಿಂದ ಕೂಡಿದ ವಿವೇಕದಿಂದ ಹುಟ್ಟುವ ಪ್ರೀತಿ ಸುಖದಲ್ಲಿ ವಿಹರಿಸುತ್ತಾ ಪ್ರಥಮ ಧ್ಯಾನದಲ್ಲಿರುತ್ತಾನೆ, ತರ್ಕವನ್ನೂ ವಿಚಾರವನ್ನೂ ಉಪಶಮನ ಮಾಡಿ... ದ್ವಿತೀಯ ಧ್ಯಾನದಲ್ಲಿರುತ್ತಾನೆ... ಪ್ರೀತಿ ಮತ್ತು ವೈರಾಗ್ಯದಿಮದ ಕೂಡಿದ... ತೃತೀಯ ಧ್ಯಾನದಲ್ಲಿರುತ್ತಾನೆ. ಸುಖವನ್ನು ವರ್ಜಿಸಿ... ಚತುರ್ಥ ಧ್ಯಾನದಲ್ಲಿರುತ್ತಾನೆ. ಎಲ್ಲಬಗೆಯ ರೂಪದ ಬಗೆಗಿರುವ ಅರಿವುಗಳನ್ನು ಮೀರಿ... ಆಕಾಸನಂಚಾಯತನದಲ್ಲಿ ವಿಹರಿಸುತ್ತಾನೆ. ಆಕಾಸಾನಂಚಾಯತನದ ಎಲ್ಲೆಯನ್ನು ದಾಟಿ ‘ವಿಞ್ಞಾಣವು ಅನಂತವಾಗಿದೆ’ ಎಂಬ ವಿಞ್ಞಾಣಂಚಾಯತನದಲ್ಲಿ ವಿಹರಿಸುತ್ತಾನೆ. ವಿಞ್ಞಾಣಂಚಾಯತನ್ನೂ ದಾಟಿ ‘ಏನೂ ಇಲ್ಲ’ ಎಂಬ ಅಕಿಂಚಞ್ಞಾಯತನದಲ್ಲಿ ವಿಹರಿಸುತ್ತಾನೆ. ಅಕಿಂಚಞ್ಞಾಯತನದ ಎಲ್ಲೆಯನ್ನೂ ದಾಟಿ ‘ಅರಿವೂ ಇಲ್ಲ; ಅರಿವಿಲ್ಲದೆಯೂ ಇಲ್ಲ’ ಎಂಬ ನೇವಸಞ್ಞಾನಾಸಞ್ಞಾಯತನದಲ್ಲಿ ವಿಹರಿಸುತ್ತಾನೆ. ನೇವಸಞ್ಞಾನಾಸಞ್ಞಾಯತನವನ್ನೂ ದಾಟಿ ಅರಿವು ವೇದನೆಗಳಿಲ್ಲದ ಸ್ಥಿತಿಯಲ್ಲಿರುತ್ತಾನೆ.
“ಧ್ಯಾನಗಳಿಂದ ಆಗುವ ನಿರೋಧಗಳು ಒಂಬತ್ತು- ಪ್ರಥಮ ಧ್ಯಾನದಿಂದ ಕಾಮದ ಬಗೆಗಿರುವ ಅರಿವು ನಾಶವಾಗುತ್ತದೆ. ದ್ವಿತೀಯ ಧ್ಯಾನದಿಂದ ತರ್ಕ ವಿಚಾರಗಳು ನಾಶವಾಗುತ್ತದೆ. ಮೂರನೆಯ ಧ್ಯಾನದಿಂದ ಪ್ರೀತಿಯು ಇಂಗಿಹೋಗುತ್ತದೆ. ಚತುರ್ಥ ಧ್ಯಾನದಿಂದ ಉಸಿರಾಟ ನಿಲ್ಲುತ್ತದೆ. ಆಕಾಸಾನಂಚಾಯತನದಲ್ಲಿರುವುದರಿಂದ ರೂಪದ ಬಗೆಗಿನ ಅರಿವು ಅಳಿಸಿ ಹೋಗುತ್ತದೆ. ವಿಞ್ಞಾಣಂಚಾಯತನದಲ್ಲಿರುವುದರಿಂದ ಆಕಾಸಾನಂಚಾಯತನದ ಅರಿವು ಅಳಿದು ಹೋಗುತ್ತದೆ. ಅಕಿಂಚಞ್ಞಾಯತನದಲ್ಲಿರುವುದರಿಂದ ವಿಞ್ಞಾಣಂಚಾಯತನದ ಅಇರವು ಅಳಿದು ಹೋಗುತ್ತದೆ. ನೇವಸಞ್ಞಾಯತನದ ಅರಿವು ಅಳಿದು ಹೋಗುತ್ತದೆ, ಅರಿವು ವೇದನೆಗಳಿಲ್ಲದ ಸ್ಥಿತಿಯನ್ನು ಮುಟ್ಟಿದ್ದಾಗ ಅರಿವಿನ ಮತ್ತು ವೇದನೆಗಳಿಂದಾಗಬಹುದಾದ ಅಡ್ಡಿಗಳೂ ನಾಶವಾಗುತ್ತವೆ.
“ಧರ್ಮವು ಈ ಒಂಬತ್ತರಿಂದ ಆಗಿದೆ ಎಂಬುದನ್ನು ಅರಹಂತರೂ ಸಮ್ಮಾಸಂಬುದ್ಧರೂ ಆದ ಭಗವಾನರು ಅರಿತಿದ್ದಾರೆ, ಕಂಡಿದ್ದಾರೆ, ಅದನ್ನು ಸ್ಪಷ್ಟಪಡಿಸಿದ್ದಾರೆ. ವಿವಾದಾತೀತವಾದ... ದೇವತೆಗಳ ಮತ್ತು ಮನುಷ್ಯರ ಹಿತಕ್ಕಾಗಿ ಎಲ್ಲರೂ ಒಟ್ಟಾಗಿ ಪಠಿಸಬೇಕು.
ಹತ್ತರ ಧರ್ಮಗಳು
“ಧರ್ಮವು ಹತ್ತರಿಂದ ಆಗಿದೆ ಎಂಬುದನ್ನೂ ಅರಹಂತರೂ ಸಮ್ಮಾಸಂಬುದ್ಧರೂ ಆದ ಭಗವಾನರು ಅರಿತಿದ್ದಾರೆ, ಕಂಡಿದ್ದಾರೆ, ಅದನ್ನು ಸ್ಪಷ್ಟಪಡಿಸಿದ್ದಾರೆ. ವಿವಾದಾತೀತವಾದ... ದೇವತೆಗಳ ಮತ್ತು ಮನುಷ್ಯರ ಹಿತಕ್ಕಾಗಿ ಎಲ್ಲರೂ ಒಟ್ಟಾಗಿ ಪಠಿಸಬೇಕು. ಹತ್ತು ಯಾವುವು?
“ರಕ್ಷಿಸಬಲ್ಲ ಧರ್ಮಗಳು ಹತ್ತು. ಭಿಕ್ಷುವು ಶೀಲವಂತನಾಗಿ ಸಂಯಮಶಾಲಿಯಾಗಿ ಪಾತಿಮೋಕ್ಖದ ನಿಯಮಗಳನ್ನು ಪಾಲಿಸುತ್ತಾ ಆಚಾರಸಂಪನ್ನನಾಗಿರುತ್ತಾನೆ. ವರ್ಜಿಸಬೇಕಾದುದು ಅಣುಮಾತ್ರವಿದ್ದರೂ ಅದಕ್ಕೆ ಭಯಪಡುತ್ತಾನೆ. ನಿಯಮಗಳನ್ನು ಪಾಲಿಸುತ್ತಾ ಅವುಗಳನ್ನು ಅರ್ಥಮಾಡಿಕೊಳ್ಳುತ್ತಾನೆ. ಶೀಲವಂತನಾದ ಭಿಕ್ಷುವು ಪಾಲಿಸುವ ಈ ಧರ್ಮವು ಅವನನ್ನು ರಕ್ಷಿಸುತ್ತದೆ.
“ಭಿಕ್ಷುವು ಬಹುಶ್ರುತನಾಗಿದ್ದು, ಹೇಳಿದ್ದನ್ನು ಗ್ರಹಿಸಿ ಅದನ್ನು ನೆನಪಿನಲ್ಲಿಟ್ಟುಕೊಂಡಿರುತ್ತಾನೆ. ಯಾವ ಧರ್ಮವು ಆದಿಯಲ್ಲೂ ಮಧ್ಯದಲ್ಲೂ ಅಂತ್ಯದಲ್ಲೂ ಕಲ್ಯಾಣವನ್ನುಂಟು ಮಾಡುತ್ತದೆಯೋ ಅರ್ಥ ವ್ಯಾಖ್ಯಾನಗಳಿಂದ ಪರಿಪೂರ್ಣವಾಗಿದೆಯೋ ಪರಿಶುದ್ಧವಾಗಿದೆಯೋ ಅದನ್ನು ಚೆನ್ನಾಗಿ ತಿಳಿದುಕೊಂಡು ಮತ್ತೆ ಮತ್ತೆ ಪಠಿಸಿ ಅರ್ಥ ಮಾಡಿಕೊಂಡು ಮಂಥನ ಮಾಡುತ್ತಾ ಸಮ್ಯಕ್ ದೃಷ್ಟಿಯಿಂದ ಅದನ್ನು ಸಾಕ್ಷಾತ್ಕರಿಸಿಕೊಳ್ಳುತ್ತಾನೆ. ಬಹುಶ್ರುತನಾದ ಭಿಕ್ಷುವು ಪಾಲಿಸುವ ಈ ಧರ್ಮವು ಅವನನ್ನು ರಕ್ಷಿಸುತ್ತದೆ.
“ಭಿಕ್ಷುವು ಒಳ್ಳೆಯವರಿಗೆ ಮಿತ್ರನಾಗಿಯೂ ಸಹಾಯ ಮಾಡುವವನಾಗಿಯೂ ಆತ್ಮೀಯನಾಗಿಯೂ ಇರುತ್ತಾನೆ. ಈ ಧರ್ಮವು ಅವನನ್ನು ರಕ್ಷಿಸುತ್ತದೆ.
“ಭಿಕ್ಷುವು ಒಳ್ಳೆಯ ಮಾತನ್ನಾಡುವವನೂ ವಿನಯವಂತನೂ, ಪ್ರೀತಿಯನ್ನು ಗಳಿಸುವವನೂ ತಾಳ್ಮೆಯುಳ್ಳವನೂ ಧರ್ಮವನ್ನು ಮೀರಿದಾಗ (ಸಂಘವು) ಕೊಡುವ ಬುದ್ಧಿವಾದವನ್ನು ಮನಃಪೂರ್ವಕವಾಗಿ ಸ್ವೀಕರಿಸುವವನೂ ಆಗಿರುತ್ತಾನೆ. ಒಳ್ಳೆಯ ಮಾತನ್ನೇ ಆಡುವ ಇಂಥ ಭಿಕ್ಷುವು ಪಾಲಿಸುವ ಧರ್ಮವು ಅವನನ್ನು ರಕ್ಷಿಸುತ್ತದೆ.
“ತನ್ನ ಜೊತೆಯ ಸಾಧಕರಲ್ಲಿ ಹಿರಿಯರಾದವರಿಗೆ ಸೇವೆ ಮಾಡಬೇಕಾದಾಗ ಭಿಕ್ಷುವು ದಕ್ಷತೆಯಿಂದ ಯಾವ ಆಲಸ್ಯವನ್ನೂ ತೋರಿಸದೆ ಕ್ರಿಯಾಶೀಲನಾಗಿ ಮಾಡಬೇಕಾದುದನ್ನು ಕುರಿತು ಚೆನ್ನಾಗಿ ವಿಚಾರಮಾಡಿ ತನ್ನ ಕರ್ತವ್ಯವನ್ನು ಪೂರ್ಣಗೊಳಿಸುತ್ತಾನೆ. ಸಾಧಕರಲ್ಲಿ ಹಿರಿಯರಾದವರಿಗೆ ಸೇವೆ ಮಾಡಬೇಕಾದಾಗ ದಕ್ಷತೆಯಿಂದ ಅವರನ್ನು ಸೇರಿಸುವ ಧರ್ಮವು ಅವನನ್ನು ರಕ್ಷಿಸುತ್ತದೆ.
“ಧರ್ಮವನ್ನು ಪ್ರೀತಿಸುವ ಆ ಭಿಕ್ಷುವು ಉನ್ನತ ಧರ್ಮವನ್ನು ಅರ್ಥಮಾಡಿಕೊಳ್ಳುತ್ತಾನೆ. ವಿನಯವನ್ನು ಪ್ರಾಮಾಣಿಕವಾಗಿ ಅನುಸರಿಸುತ್ತಾನೆ. ಧರ್ಮವನ್ನು ಪ್ರೀತಿಸುವ ಆ ಭಿಕ್ಷುವನ್ನು ಧರ್ಮವು ರಕ್ಷಿಸುತ್ತದೆ.
“ಭಿಕ್ಷುವು ತನ್ನಲ್ಲಿರುವ ಚೀವರ, ಪಿಂಡಪಾತ್ರೆ, ನಿವಾಸ, ಖಾಯಿಲೆ ಬಿದ್ದಾಗ ಬೇಕಾಗುವ ಮದ್ದು. ಈ ಪರಿಕರಗಳಿಂದಲೇ ಸಂತುಷ್ಟಿಯನ್ನು ಹೊಂದುತ್ತಾನೆ. ಸಂತುಷ್ಟಿಯನ್ನು ಹೊಂದಿರುವ ಭಿಕ್ಷುವು ಪಾಲಿಸುವ ಧರ್ಮವು ಅವನನ್ನು ರಕ್ಷಿಸುತ್ತದೆ.
“ಭಿಕ್ಷುವು ಸ್ಮೃತಿವಂತನಾಗಿ ಹಿಂದೆ ಮಾಡಿದ ಕೆಲಸಗಳನ್ನೂ ಆಡಿದ ಮಾತುಗಳನ್ನೂ ಚಾಚುತಪ್ಪದೇ ನಿನಪಿಗೆ ತಂದುಕೊಳ್ಳುವವನೂ ಆಗಿರುತ್ತಾನೆ. ಸ್ಮೃತಿವಂತನಾದ ಭಿಕ್ಷುವು ಪಾಲಿಸುವ ಧರ್ಮವು ಅವನನ್ನು ರಕ್ಷಿಸುತ್ತದೆ.
“ಭಿಕ್ಷುವು ಪಞ್ಞಾವನ್ನು ಪಡೆದವನಾಗಿ ಉದಯಾಸ್ತಗಳನ್ನು ಪಞ್ಞಾದ ಮೂಲಕ ನೋಡುವವನಾಗಿ ಬಾಧೆಗಳೆಲ್ಲವನ್ನೂ ನಾಶಮಾಡಬಲ್ಲ ಶ್ರೇಷ್ಠವಾದ ದುಃಖ ಕ್ಷಯ ಮಾರ್ಗವನ್ನು ಅರಿತಿರುತ್ತಾನೆ. ಪಞ್ಞಾವನ್ನು ಪಡೆದ ಭಿಕ್ಷುವು ಪಾಲಿಸುವ ಧರ್ಮವು ಅವನನ್ನು ರಕ್ಷಿಸುತ್ತದೆ.
“ಕಸಿಣಾಯತನಗಳು ಹತ್ತು - ಪೃಥ್ವಿಯು ಒಂದು ಆಯತನ. ಇದು ಊರ್ಧ್ವ ಅಧೋ ಮತ್ತೆ ನಾಲ್ಕು ದಿಕ್ಕಿನಲ್ಲಿಯೂ ವಿಸ್ತರಿಸಿದೆ, ಅಳತೆಗೆ ಮೀರಿದೆ. ಆಪಸ್ ತೇಜಸ್ ವಾಯು ನೀಲಿ ಹಳದಿ ಕೆಂಪು ಬಿಳಿ ಆಕಾಶ ವಿಞ್ಞಾಣ - ಇವೆಲ್ಲವೂ ಒಂದೊಂದು ಆಯತನವಾಗಿದ್ದು, ಊರ್ಧ್ವ ಅಧೋ ಮತ್ತಿತರ ನಾಲ್ಕು ದಿಕ್ಕುಗಳಲ್ಲಿ ಸಮನಾಗಿ ವಿಸ್ತರಿಸಿದೆ, ಅಳತೆ ಮೀರಿವೆ.
“ಅಕುಶಲ ಕರ್ಮ ಪಥಗಳು ಹತ್ತು - ಪ್ರಾಣಿ ಹಿಂಸೆ, ಕಳವು (ತನಗೆ ಸೇರದುದನ್ನು ತೆಗೆದುಕೊಳ್ಳುವುದು), ಆಕ್ಷೇಪಣೀಯವಾದ ಲೈಂಗಿಕ ಸಂಬಂಧ, ಸುಳ್ಳು ಹೇಳುವುದು, ಚಾಡಿ ಹೇಳುವುದು, ಕಠಿಣವಾಗಿ ಮಾತನಾಡುವುದು, ಕಾಡುಹರಟೆಯಲ್ಲಿ ತೊಡಗುವುದು, ಕಾಮಗಳಲ್ಲೇ ಲೀನನಾಗಿರುವುದು, ವೈರಭಾವನೆಯಿಂದ ಕೂಡಿರುವುದು, ಮಿಥ್ಯಾದೃಷ್ಟಿಯನ್ನು ಹೊಂದಿರುವುದು.
“ಕುಶಲ ಕರ್ಮ ಪಥಗಳು ಹತ್ತು - ಪ್ರಾಣಿಹಿಂಸೆಯನ್ನು ವರ್ಜಿಸುವುದು, ಕಳುವನ್ನು ಮಾಡದಿರುವುದು, ಆಕ್ಷೇಪಣೀಯವಾದ ಲೈಂಗಿಕ ವ್ಯವಹಾರದಲ್ಲಿ ತೊಡಗದಿರುವುದು, ಸುಳ್ಳು ಹೇಳದಿರುವುದು, ಚಾಡಿ ಹೇಳದಿರುವುದು, ಕಠಿಣವಾಗಿ ಮಾತನಾಡದಿರುವುದು, ಕಾಡುಹರಟೆಯಲ್ಲಿ ತೊಡಗಿರುವುದು, ಕಾಮ ಭಾವನೆಗಳಿಂದ ದೂರವಾಗಿರುವುದು, ವೈರಭಾವನೆಯಿಂದ ದೂರವಾಗಿರುವುಉದ, ಸಮ್ಯಕ್ ದೃಷ್ಟಿಯನ್ನು ಹೊಂದಿರುವುದು.
“ಶ್ರೇಷ್ಠವಾದ ನಡತೆಗಳು ಹತ್ತು - ಐದು ಅಂಶಗಳನ್ನು ವರ್ಜಿಸುವುದು. ಆರು ಅಂಶಗಳನ್ನು ಪಡೆಯುವುದು, ಒಂದರಿಂದ ರಕ್ಷಿತನಾಗುವುದು, ನಾಲ್ಕನ್ನು ಪಾಲಿಸುವುದು, ಬೇರೆ ನಂಬಿಕೆಗಳನ್ನು ವರ್ಜಿಸಿ ಒಂದೇ ಸತ್ಯವನ್ನು ಪಾಲಿಸುವುದು.55 ಹಂಬಲಗಳನ್ನು ದೂರ ಮಾಡುವುದು, ಸ್ಪಷ್ಟವಾಗಿ ವಿಚಾರ ಮಾಡುವುದು, ಸದಾ ಕ್ರಿಯಾಶೀಲವಾಗಿರುವ ಶರೀರವನ್ನು ಹೊಂದಿರುವುದು. ವಿಮುಕ್ತವಾದ ಚಿತ್ತವನ್ನು ಹೊಂದಿರುವುದು ಮತ್ತು ವಿಮುಕ್ತವಾದ ಪಞ್ಞಾವನ್ನು ಹೊಂದಿರುವುದು (ವಿಮುಕ್ತ ಚಿತ್ತ ಮತ್ತು ವಿಮುಕ್ತ ಪಞ್ಞಾಗಳನ್ನು ಹೊಂದಿರುವುದು).
“ಐದು ಅಂಶಗಳನ್ನು ವರ್ಜಿಸುವುದು ಹೇಗೆ? ಕಾಮಭಾವನೆಗಳ ವರ್ಜನೆ, ವೈರ ಭಾವನೆ ವರ್ಜನೆ, ಆಲಸಿಕೆ ಜಡತೆಗಳ ವರ್ಜನೆ, ಚಿಂತೆ ಕಳವಳಗಳ ವರ್ಜನೆ, ಸಂದೇಹಗಳ ವರ್ಜನೆ - ಐದು ಅಂಶಗಳನ್ನು ವರ್ಜಿಸುವುದು ಹೀಗೆ.
“ಆರು ಅಂಶಗಳನ್ನು ಹೊಂದುವುದು ಹೇಗೆ? ರೂಪವನ್ನು ಕಣ್ಣಿನಿಂದ ನೋಡಿದ ಭಿಕ್ಷುವು ಸಂತೋಷವನ್ನು ಪಡದೆ ಹತಾಶನೂ ಆಗದೆ ಉಪೇಕ್ಷತಾ ಭಾವನೆಯಿಂದ ಕೂಡಿದ್ದು ಎಚ್ಚರಿಕೆಯಿಂದಿರುವುದು, ಶಬ್ದವನ್ನು ಕೇಳಿ... ಮನಸ್ಸಿನಿಂದ ಭಾವನೆಗಳನ್ನು ತಿಳಿದು ಸಂತೋಷವನ್ನೂ ಪಡದೆ ಹತಾಶನೂ ಆಗದೆ ಉಪೇಕ್ಷತಾ ಭಾವನೆಯಿಂದಿದ್ದು, ಎಚ್ಚರಿಕೆಯಿಂದ ಕೂಡಿರುವುದು. ಆರು ಅಂಶಗಳನ್ನು ಹೊಂದಿರುವುದು ಹೀಗೆ.
“ಒಂದರಿಂದ ರಕ್ಷಿತವಾಗುವುದು ಹೇಗೆ? ಸ್ಮೃತಿ ಚಿತ್ತದಿಂದ ಅವನು ರಕ್ಷಿತವಾಗುತ್ತಾನೆ.
“ನಾಲ್ಕನ್ನು ಪಾಲಿಸುವುದು ಹೇಗೆ? ಯಾವುದನ್ನು ಏಕಪ್ರಕಾರ ಅನುಸರಿಸಬೇಕು, ಯಾವುದನ್ನು ಸಹಿಸಬೇಕು, ಯಾವುದನ್ನು ಬಿಡಬೇಕು, ಯಾವುದನ್ನು ಪರಿವರ್ಜಿಸಬೇಕು (ಸಂಪೂರ್ಣವಾಗಿ ತ್ಯಜಿಸಬೇಕು) ಎಂಬುದರ ಅರಿವಿರುವುದು.
“ಬೇರೆಲ್ಲವನ್ನೂ ವರ್ಜಿಸಿ ಒಂದೇ ಸತ್ಯವನ್ನು ಪಾಲಿಸುವುದು ಹೇಗೆ? ಅರಿಯುವ ಭಿಕ್ಷುಗಳು ಮತ್ತು ಬ್ರಾಹ್ಮಣರು ಪ್ರತ್ಯೇಕ ಪ್ರತ್ಯೇಕವಾಗಿ ಹೊಂದಿರುವ ಎಲ್ಲ ಅಂಧ ವಿಶ್ವಾಸಗಳನ್ನೂ ಚಿತ್ತದಿಂದ ಎಲ್ಲ ಮಾಡಿಕೊಳ್ಳುವುದು, ತೊರೆಯುವುದು, ಮುಕ್ತಮಾಡಿಕೊಳ್ಳುವುದು, ವರ್ಜಿಸುವುದು ಮತ್ತು ಸಂಪೂರ್ಣವಾಗಿ ತ್ಯಜಿಸುವುದು. ಬೇರೆಲ್ಲವನ್ನೂ ತ್ಯಜಿಸಿ ಒಂದೇ ಸತ್ಯವನ್ನು ಪಾಲಿಸುವುದು ಹೀಗೆ.
“ಹಂಬಲಗಳನ್ನು ದೂರ ಮಾಡುವುದು ಹೇಗೆ? ಕಾಮಗಳಿಗಾಗಿ ಹಂಬಲಿಸುವುದು, ಒಳ್ಳೆಯ ಜನ್ಮಕ್ಕಾಗಿ ಹಂಬಲಿಸುವುದು (ಭವಕ್ಕಾಗಿ ಹಂಬಲಿಸುವುದು) ಒಳ್ಳೆಯ ಜೀವನದಲ್ಲಿ ಫಲ ಪಡೆಯಬೇಕೆಂದು ಹಂಬಲಿಸುವುದು- ಇವುಗಳೆಲ್ಲವನ್ನು ದೂರ ಮಾಡುವುದು.
“ಸ್ಪಷ್ಟವಾಗಿ ವಿಚಾರ ಮಾಡುವುದು ಹೇಗೆ? ಕಾಮದಲ್ಲೇ ತೊಡಗಬೇಕೆಂಬ, ವೈರವನ್ನು ಸಾಧಿಸಲೇಬೇಕೆಂಬ, ಹಿಂಸಿಸಲೇಬೇಕೆಂಬ ಪ್ರವೃತ್ತಿಯನ್ನೇ ಬಿಡುವುದು. ಬಿಡುಗಡೆಯಾದ ಇಂಥ ಚಿತ್ತದಿಂದ ಮಾಡುವ ವಿಚಾರ ಸ್ಪಷ್ಟವಿಚಾರ.
“ಕ್ರಿಯಾಶೀಲವಾದ ಶರೀರವನ್ನು ಪಡೆಯುವುದು ಹೇಗೆ? ಸುಖ ದುಃಖಗಳೆಲ್ಲವನ್ನು ವರ್ಜಿಸಿ ಹಿಂದಿನ ಸೋಮನಸ್ಸಿನ ದೋಮನಸ್ಸಿನ ಸ್ಥಿತಿಗಳನ್ನು ನಾಶಮಾಡಿಕೊಂಡು ಅದುಃಖ ಅಸುಖಗಳ ಉಪೇಕ್ಷಾಭಾವನೆಯಿಂದಿರುವ ಮತ್ತು ಎಚ್ಚರಿಕೆಯಿಂದ ಕೂಡಿರುವ ಚತುರ್ಥ ಧ್ಯಾನದಲ್ಲಿ ವಿಹರಿಸುವುದು, ಕ್ರಿಯಾಶೀಲವಾದ ಶರೀರವನ್ನು ಪಡೆಯುವುದೆಂದರೆ ಈ ಸ್ಥಿತಿಯನ್ನು ಸಾಧಿಸುವುದು.
“ವಿಮುಕ್ತವಾದ ಚಿತ್ತವನ್ನು ಪಡೆಯುವುದು ಹೇಗೆ? ರಾಗ ಮೋಹ ದ್ವೇಷಗಳಿಂದ ಬಿಡುಗಡೆ ಹೊಂದುವುದು. ವಿಮುಕ್ತವಾದ ಚಿತ್ತವನ್ನು ಪಡೆಯುವುದು ಹೀಗೆ. ವಿಮುಕ್ತವಾದ ಪಞ್ಞಾವನ್ನು ಪಡೆಯುವುದು ಹೇಗೆ? ‘ರಾಗವು ನನ್ನಿಂದ ಹೊರಟು ಹೋಗಿದೆ, ಅದರ ಮೂಲವೇ ನಾಶವಾಗಿದೆ, ಕತ್ತರಿಸದ ಮೆಲೆ ಉಳಿಯುವ ತಾಲವೃಕ್ಷದಂತಾಗಿದೆ, ಇಲ್ಲದಾಗಿದೆ, ಮುಂದೆ ಬೆಳೆಯುವುದೇ ಇಲ್ಲ’ ಎಂಬುದನ್ನು ತಿಳಿದಿರುತ್ತಾನೆ. ‘ಮೋಹವು ನನ್ನಿಂದ ಹೊರಟು ಹೋಗಿದೆ, ಅದರ ಮೂಲವೇ ನಾಶವಾಗಿದೆ. ಕಡಿದು ಹಾಕಿದಮೇಲೆ ಉಳಿಯುವ ತಾಲವೃಕ್ಷದ ಮೋಟಿನಂತಾಗಿದೆ’ ಎಂಬುದನ್ನು ತಿಳಿದಿರುತ್ತಾನೆ. ಭಿಕ್ಷುವು ಹೀಗೆ ವಿಮುಕ್ತ ಪಞ್ಞಾವನ್ನು ಪಡೆಯುತ್ತಾನೆ.
“ಅಸೇಕ್ಖನ ಮನೋಧರ್ಮಗಳು ಹತ್ತು. ಅಸೇಕ್ಖನು ಸಮ್ಮಾದಿಟ್ಠಿಯುಳ್ಳವನಾಗಿರುತ್ತಾನೆ. ಅವನು ಸಮ್ಮಾಸಂಕಪ್ಪವನ್ನು ಮಾಡಿರುವವನೂ ಸಮ್ಮಾವಾಚಾವನ್ನೇ ನುಡಿಯುವವನೂ ಸಮ್ಮಾಕಮ್ಮಾಂತಗಳನ್ನೇ ಮಾಡುವವನೂ ಸಮ್ಮಾಜೀವನವನ್ನೇ ನಡೆಸುವವನೂ ಸಮ್ಮಾ ವಾಯಾಮವನ್ನು ಮಾಡುತ್ತಿರುವವನೂ ಸಮ್ಮಾಸತಿಯನ್ನು ಹೊಂದಿರುವವನೂ ಸಮ್ಮಾ ಸಮಾಧಿಯನ್ನು ಸಾಧಿಸಿರುವವನೂ ಆಗಿರುತ್ತಾನೆ. ಜೊತೆಗೆ ಅವನು ಸಮ್ಯಕ್ ಜ್ಞಾನವನ್ನೂ (ಸಮ್ಮಾಞ್ಞಾಣ) ಸಮ್ಯಕ್ ವಿಮುಕ್ತಿಯನ್ನು ಪಡೆದಿರುತ್ತಾನೆ.
“ಧರ್ಮವು ಹತ್ತರಿಂದ ಆಗಿದೆ ಎಂಬುದನ್ನು ಅರಹಂತರೂ ಸಮ್ಮಾಸಂಬುದ್ಧರೂ ಆದ ಭಗವಾನರು ಅರಿತಿದ್ದಾರೆ, ಕಂಡಿದ್ದಾರೆ, ಅದನ್ನು ಸ್ಪಷ್ಟಪಡಿಸಿದ್ದಾರೆ. ವಿವಾದಾತೀತವಾದ ಶ್ರೇಷ್ಠವಾದ ಜೀವನವು ಬಹುಕಾಲ ಉಳಿಯಲು ಬಹುಜನರ ಹಿತಕ್ಕಾಗಿ ಬಹುಜನರ ಸುಖಕ್ಕಾಗಿ ದೇವತೆಗಳ ಮತ್ತು ಮನುಷ್ಯರ ಹಿತಕ್ಕಾಗಿ ಸುಖಕ್ಕಾಗಿ ಲೋಕದ ಮೇಲಿನ ಅನುಕಂಪೆಯಿಂದ ಭಗವಾನರು ಬೋಧಿಸಿರುವ ಈ ಧಮ್ಮವನ್ನು ಎಲ್ಲರೂ ಒಟ್ಟಿಗೇ ಪಠಿಸಬೇಕು.”
ಭಗವಾನರು ಎದ್ದಮೇಲೆ ಆಯುಷ್ಮಂತನಾದ ಸಾರಿಪುತ್ರನನ್ನು ಕುರಿತು ಹೀಗೆಂದರು- “ಎಷ್ಟು ಚೆಂದ, ಸಾರಿಪುತ್ತ, ಎಷ್ಟು ಚೆನ್ನಾಗಿದೆ. ಭಿಕ್ಷುಗಳು ಒಟ್ಟಿಗೆ ಸೇರಿ ಪಠಿಸುವಂತೆ ನೀನು ಬಹು ಚೆನ್ನಾಗಿ ಹೇಳಿದೆ”. ಆಯುಷ್ಮಂತ ಸಾರಿಪುತ್ತನ ಈ ಮಾತುಗಳಿಗೆ ಗುರು (ಭಗವಾನರು) ಒಪ್ಪಿಗೆ ಕೊಟ್ಟರು. ಆಯುಷ್ಮಂತನಾದ ಸಾರಿಪುತ್ತನ ಮಾತುಗಳಿಂದ ಭಿಕ್ಷುಗಳು ಸಂತೋಷರಾದರು, ಆನಂದಪಟ್ಟರು.
ಇಲ್ಲಿಗೆ ಸಂಗೀತಿ ಸುತ್ತ ಮುಗಿಯಿತು.
ಟಿಪ್ಪಣಿಗಳು [2]
English
Việt Ngữ