ಚಂಪಾ ಊರಿನ ಗೃಹಸ್ಥ ಬ್ರಾಹ್ಮಣ
ಹೀಗೆ ಕೇಳಿದ್ದೇನೆ. ಒಮ್ಮೆ ಭಗವಾನರು ಅಂಗದೇಶದಲ್ಲಿ ಸಂಚರಿಸುತ್ತಿದ್ದಾಗ ಐನೂರು ಭಿಕ್ಷುಗಳ ಒಂದು ದೊಡ್ಡ ಭಿಕ್ಷು ಸಂಘದೊಂದಿಗೆ ಚಂಪಾ ಎಂಬಲ್ಲಿಗೆ ಬಂದರು. ಅಲ್ಲಿ ಭಗವಾನರು ಚಂಪಾನಗರದ ಗಗ್ಗರಾಯ ಪುಷ್ಕರಣೆ ತೀರದಲ್ಲಿ ತಂಗಿದ್ದರಂತೆ. ಆ ಸಮಯದಲ್ಲಿ ಸೋಣದಂಡ ಎಂಬ ಬ್ರಾಹ್ಮಣನು ಚಂಪಾ ಪಟ್ಟಣದಲ್ಲಿ ವಾಸಿಸುತ್ತಿದ್ದನು. ಅದು ಜನ ಜಲ ಧ್ಯಾನ್ಯಗಳಿಂದಲೂ ಹುಲ್ಲುಗಾವಲುಗಳಿಂದಲೂ ಮರ ಗಿಡಗಳಿಂದಲೂ ತುಂಬಿತ್ತು. ಅರಮನೆಯ ವೆಚ್ಚಕ್ಕೋಸ್ಕರ ಇದ್ದ ಆ ಪಟ್ಟಣವು ಮಗಧದ ರಾಜ ಸೇನಿಯ ಬಿಂಬಸಾರನಿಂದ ಸೋಣದಂಡನಿಗೆ ದಾನವಾಗಿ ಕೊಡಲ್ಪಟ್ಟಿತ್ತು. ಅವನು ರಾಜನ ಎಲ್ಲ ಅದಿಕಾರಗಳನ್ನು ಹೊಂದಿದ್ದನು.
ಆಗ ಚಂಪಾನಗರದ ಬ್ರಾಹ್ಮಣ ಗೃಹಸ್ಥರು ಈ ಸುದ್ದಿಯನ್ನು ಕೇಳಿದರು. “ ಶಾಕ್ಯ ಕುಲವನ್ನು ತೊರೆದಿರುವ ಶಾಕ್ಯ ಪುತ್ರರಾದ ಸಮಣ ಗೋತಮರು ಅಂಗದೇಶದಲ್ಲಿ ಸಂಚರಿಸುತ್ತಾ ಐನೂರು ಭಿಕ್ಷುಗಳನ್ನೊಳಗೊಂಡ ಒಂದು ದೊಡ್ಡ ಭಿಕ್ಷು ಸಂಘದೊಂದಿಗೆ ಚಂಪಾನಗರಕ್ಕೆ ಬಂದು ಅಲ್ಲಿನ ಗಗ್ಗರಾಯ ಪುಷ್ಕರಣಿ ತೀರದಲ್ಲಿ ತಂಗಿದ್ದಾರೆ. ಭಗವಂತರಾದ ಗೋತಮರು ಎಲ್ಲೆಲ್ಲೂ ಹೀಗೆ ಒಳ್ಳೆಯ ಕೀರ್ತಿಯನ್ನು ಪಡೆದಿದ್ದಾರೆ’ ಭಗವಂತರಾದ ಅವರು ಅರಹಂತರು, ಸಮ್ಮಾಸಂಬುದ್ಧರೂ, ವಿಜ್ಜಾಚರಣ ಸಂಪನ್ನರು, ಸುಗತರು, ಲೋಕಗಳನ್ನೆಲ್ಲಾ ತಿಳಿದವರು, ಜನರಿಗೆ ದಾರಿ ತೋರಿಸುವವರಲ್ಲಿ ಅದ್ವಿತೀಯ ದೇವ ಮಾನವರಲ್ಲಿ ಶ್ರೇಷ್ಠರು, ಬುದ್ಧರು, ಭಗವಾನರು; ದೇವತೆಗಳು, ಮಾರರು, ಬ್ರಾಹ್ಮಣರು, ಸಮಣಬ್ರಾಹ್ಮಣರು, ಪ್ರಜೆಗಳು, ದೇವಮನುಷ್ಯರು ಇರುವ ಲೋಕವನ್ನು ತಾವೇ ಸ್ಪಷ್ಟವಾಗಿ ಅರಿತು ಪರರಿಗೂ ತಿಳಿಸಬಲ್ಲವರಾಗಿದ್ದಾರೆ. ಆದಿಯಲ್ಲೂ, ಮಧ್ಯದಲ್ಲೂ, ಕೊನೆಯಲ್ಲೂ ಕಲ್ಯಾಣವನ್ನುಂಟು ಮಾಡುವು ವಂಥದೂ, ಪರಿಪೂರ್ಣವಾದುದೂ, ಪರಿಶುದ್ಧವಾದುದೂ ಆದ ಬ್ರಹ್ಮಚರ್ಯವನ್ನು ಪ್ರಕಾಶ ಪಡೆಸುವಂಥದೂ ಆದ ಧಮ್ಮವನ್ನು ಬೋಧಿಸುತ್ತಾರೆ. ಅರಹಂತರಾದ ಅವರನ್ನು ದರ್ಶನ ಮಾಡುವುದು ಸಾಧುವಾದುದು.” ಆಮೇಲೆ ಚಂಪಾನಗರದ ಬ್ರಾಹ್ಮಣರು ತಮ್ಮ ಗೆಳೆಯೊಂದಿಗೆ ಆ ನಗರದಿಂದ ಗಗ್ಗರ ಪುಷ್ಕರಣೆಯ ಕಡೆಗೆ ಹೊರಟರು.
ಆ ಸಮಯದಲ್ಲಿ ಸೋಣದಂಡ ಬ್ರಾಹ್ಮಣನು ತನ್ನ ಮಧ್ಯಾಹ್ನದ ಊಟವಾದ ಮೇಲೆ ವಿಶ್ರಮಿಸಲು ತನ್ನ ಮಹಡಿಗೆ ಹೋದನು. ಚಂಪಾನಗರದ ಬ್ರಾಹ್ಮಣ ಗೃಹಸ್ಥರು ತಮ್ಮ ಗೆಳೆಯರೊಡಗೂಡಿ ಆ ನಗರದಿಂದ ಹೋಗುತ್ತಿದ್ದುದನ್ನು ಆ ಬ್ರಾಹ್ಮಣನು ನೋಡಿದನು. ತನ್ನ ಸೇವಕನನ್ನು ಕರೆದು “ಚಂಪಾನಗರದ ಬ್ರಾಹ್ಮಣರು ತಮ್ಮ ಗೆಳೆಯರೊಡಗೂಡಿ ನಗರದಿಂದ ಗಗ್ಗರ ಪುಷ್ಕರಣಿಯ ಕಡೆಗೆ ಹೋಗುವುದು ಏತಕ್ಕೆ?” ಎಂದು ಕೇಳಿದನು.
ಶಾಕ್ಯಕುಲವನ್ನು ತೊರೆದಿರುವ ಶಾಕ್ಯ ಪುತ್ರರಾದ ಸಮಣ ಗೋತಮರು ಅಂಗದೇಶದಲ್ಲಿ ಸಂಚರಿಸುತ್ತಾ ಐನೂರು ಭಿಕ್ಷುಗಳನ್ನೊಳಗೊಂಡ ಒಂದು ದೊಡ್ಡ ಭಿಕ್ಷು ಸಂಘದೊಂದಿಗೆ ಚಂಪಾನಗರಕ್ಕೆ ಬಂದು ಅಲ್ಲಿನ ಗಗ್ಗರ ಪುಷ್ಕರಣಿ ತೀರದಲ್ಲಿ ತಂಗಿದ್ದಾರೆ. ಭಗವಂತರಾದ ಗೋತಮರು ಎಲ್ಲೆಲ್ಲೂ ಹೀಗೆ ಒಳ್ಳೆಯ ಕೀರ್ತಿಯನ್ನು ಪಡೆದಿದ್ದಾರೆ. ‘ಭಗವಂತರಾದ ಅವರು ಅರಹಂತರು, ಸಮ್ಮಾ ಸಂಬುದ್ಧರು, ವಿಜ್ಜಾ ಚರಣ ಸಂಪನ್ನರು, ಸುಗತರು, ಲೋಕಗಳನ್ನೆಲ್ಲಾ ತಿಳಿದವರು, ಜನರಿಗೆ ದಾರಿ ತೋರಿಸುವವರಲ್ಲಿ ಅದ್ವಿತೀಯರಾದವರು, ದೇವ ಮಾನವರಲ್ಲಿ ಶ್ರೇಷ್ಠರು, ಬುದ್ಧರು, ಭಗವಾನರು,’ ಇಂಥ ಭಗವಂತ ಗೋತಮರ ದರ್ಶನಕ್ಕಾಗಿ ಹೋಗುತ್ತಿದ್ದಾರೆ.”
“ನೋಡು, ಚಂಪಾನಗರದ ಬ್ರಾಹಣ ಗೃಹಸ್ಥರಲ್ಲಿ ಹೋಗು, ಹೋಗಿ ಅವರಿಗೆ ಹೇಳು-‘ ಸೋಣದಂಡ ಬ್ರಾಹ್ಮಣನು ನಿಮಗೆ ಹೀಗೆ ಹೇಳಿಕಳಿಸಿದ್ದಾನೆ- ಪೂಜ್ಯರು ಸ್ವಲ್ಪ ಕಾಯಬೇಕು. ಸೋಣದಂಡ ಬ್ರಾಹ್ಮಣನೂ ಸಮಣ ಗೋತಮರ ದರ್ಶನಕ್ಕೆ ಬರುತ್ತಾನೆ.” “ಹಾಗೆಯೇ ಆಗಲಿ” ಎಂದು ಸೋಣದಂಡ ಬ್ರಾಹ್ಮಣನಿಗೆ ಹೇಳಿ ಆ ಸೇವಕನು ಬ್ರಾಹ್ಮಣ ಗೃಹಸ್ಥರಲ್ಲಿಗೆ ಹೋದನು. ಹೋಗಿ ಚಂಪಾ ನಗರದ ಬ್ರಾಹ್ಮಣರಿಗೆ “ಸೋಣದಂಡ ಬ್ರಾಹ್ಮಣನು ನಿಮಗೆ ಹೀಗೆ ಹೇಳಿಕಳಿಸಿದ್ದಾನೆ- ‘ಪೂಜ್ಯರು ಸ್ವಲ್ಪ ಕಾಯಬೇಕು. ಸೋಣದಂಡ ಬ್ರಾಹ್ಮಣನೂ ಸಮಣ ಗೋತಮನ ದರ್ಶನಕ್ಕೆ ಬರುತ್ತಾನೆ’” ಎಂದು ಹೇಳಿದನು.
ಸೋಣದಂಡನ ಗುಣಗಳ ಬಗ್ಗೆ
ಆ ಸಮಯದಲ್ಲಿ ಬೇರೆ ಬೇರೆ ರಾಜ್ಯದಿಂದ ಯಾವುದಾವುದೋ ಕೆಲಸಕ್ಕೋಸ್ಕರ ಐನೂರು ಬ್ರಾಹ್ಮಣರು ಚಂಪಾನಗರಕ್ಕೆ ಬಂದಿದ್ದರು. ಆ ಬ್ರಾಹ್ಮಣರು ‘ಸೋಣದಂಡ ಬ್ರಾಹ್ಮಣನು ಸಮಣ ಗೋತಮನ ದರ್ಶನಕ್ಕೆ ಹೋಗುತ್ತಿದ್ದಾನೆ’ ಎಂಬುದನ್ನು ಕೇಳಿದರು. ಆಮೇಲೆ ಅವರು ಸೋಣದಂಡ ಬ್ರಾಹ್ಮಣನಲ್ಲಿಗೆ ಬಂದರು. ಬಂದು ಅವನನ್ನು “ಸೋಣದಂಡ ಬ್ರಾಹ್ಮಣನು ಸಮಣ ಗೋತಮನ ದರ್ಶನಕ್ಕೆ ಹೋಗುವುದು ನಿಜವೇ?” ಎಂದು ಕೇಳಿದರು.
“ ಹೌದು ಸಮಣ ಗೋತಮರ ದರ್ಶನಕ್ಕೆ ನಾನು ಹೋಗುತ್ತಿದ್ದೇನೆ.”
“ ಸೋಣದಂಡನು ಸಮಣ ಗೋತಮನ ದರ್ಶನಕ್ಕೆ ಹೋಗಬಾರದು. ಹಾಗೆ ಮಾಡುವುದು ಸೋಣದಂಡ ಬ್ರಾಹ್ಮಣನಿಗೆ ತಕ್ಕುದಲ್ಲ. ಅವನು ಸಮಣ ಗೋತಮನ ದರ್ಶನಕ್ಕೆ ಹೋದರೆ, ಸೋಣದಂಡನ ಯಶಸ್ಸು ಹಾಳಾಗುತ್ತದೆ, ಸಮಣ ಗೋತಮನ ಯಶಸ್ಸು ಬಹುವಾಗಿ ಬೆಳೆಯುತ್ತದೆ. ಸೋಣದಂಡನ ಯಶಸ್ಸು ಹಾಳಾಗಿ ಸಮಣ ಗೋತಮನ ಯಶಸ್ಸು ಬಹುವಾಗಿ ಬೆಳೆಯುವುದರಿಂದ ಸೋಣದಂಡನು ಸಮಣ ಗೋತಮನನ್ನು ನೋಡಲು ಹೋಗುವುದು ತಕ್ಕುದಲ್ಲ ಎಂದು ನಾವು ಹೇಳುವುದಕ್ಕೆ ಕಾರಣ. ಸಮಣ ಗೋತಮನೇ ಸೋಣದಂಡನ ದರ್ಶನಕ್ಕೆ ಬರುವುದು ಸರಿಯಾದುದು.
“ಸೋಣದಂಡನು ತಂದೆ ತಾಯಿಗಳೆರಡು ಕಡೆಗಳಿಂದಲೂ ಒಳ್ಳೆಯ ವಂಶದವನಾಗಿದ್ದಾನೆ. ಏಳು ತಲೆಗಳಿಂದಲೂ ಶುದ್ಧವಾದ ಯಾವ ಕಳಂಕವೂ ಕೆಟ್ಟ ಹೆಸರೂ ಇಲ್ಲದಿರುವ ವಂಶದಲ್ಲಿ ಹುಟ್ಟಿದವನಾಗಿದ್ದಾನೆ. ತಂದೆ ತಾಯಿಗಳೆರಡು ಕಡೆಗಳಿಂದಲೂ ಒಳ್ಳೆಯದಾಗಿರುವ, ಏಳು ತಲೆಗಳಿಂದಲೂ ಶುದ್ದವಾದ ಕಳಂಕ ರಹಿತವಾದ, ಕೆಟ್ಟ ಹೆಸರಿಲ್ಲದ ವಂಶದಲ್ಲಿ ಹುಟ್ಟಿರುವ ಸೋಣದಂಡನು ಸಮಣ ಗೋತಮನ ದರ್ಶನಕ್ಕೆ ಹೋಗುವುದು ತಕ್ಕುದಲ್ಲ, ಸಮಣ ಗೋತಮನು ಸೋಣದಂಡನ ದರ್ಶನಕ್ಕೆ ಬರುವುದು ಸರಿಯಾದುದು.
“ತುಂಬಾ ಉಚ್ಛ್ರಾಯ ಹೊಂದುತ್ತಿರುವ ಮಹಾಧನಿಕ, ಮಹಾ ಭೋಗಿಯೂ ಆಗಿರುವ ಸೋಣದಂಡನು ಮಂತ್ರಗಳನ್ನು ಪಠಿಸುವವನೂ, ಮಂತ್ರಗಳನ್ನು ತಿಳಿದವನೂ, ಮೂರು ವೇದಗಳ ಅಕ್ಷರಗಳಲ್ಲಿ ಅಲ್ಪವಾದ ಭೇದವಾದರೂ ಅದನ್ನು ತಿಳಿಯಬಲ್ಲವನೂ, ಐದನೆಯ ಇತಿಹಾಸವನ್ನು ತಿಳಿದವನೂ, ಪದಗಳನ್ನು ಸರಿಯಾಗಿ ಬಳಸಬಲ್ಲವನೂ, ವೆಯ್ಯಾಕರಣಿಯೂ, ಲೋಕಾಯತ ಮಹಾಪುರಷರ ಲಕ್ಷಣಗಳನ್ನು ತಿಳಿದಿರುವವನೂ, ಆಗಿರುವ ಸೋಣದಂಡನು... ರೂಪವಂತನು, ನೋಡಿದಾಗ ಸಂತೋಷವನ್ನುಂಟುಮಾಡುವವನು, ವಿಶ್ವಾಸವನ್ನುಂಟುಮಾಡುವವನು, ಉತ್ಕೃಷ್ಟವಾದ ಬಣ್ಣವನ್ನು ಹೊಂದಿರುವವನೂ, ಬ್ರಹ್ಮವರ್ಣವನ್ನು ಪಡೆದಿರುವವನೂ, ಬ್ರಹ್ಮವರ್ಚಸ್ಸನ್ನು ಹೊಂದಿರುವವನೂ, ನೋಡಲು ಗಂಭೀರವಂತನೂ ಆಗಿರುವ ಸೋಣದಂಡನು... ಶೀಲವಂತನೂ, ಶೀಲವನ್ನು ವೃದ್ಧಿಸಿಕೊಳ್ಳುತ್ತಿರುವವನೂ, ಶೀಲವನ್ನು ವೃದ್ಧಿಸಿಕೊಳ್ಳುವ ಜ್ಞಾನವನ್ನು ಪಡೆದಿರುವವನೂ ಆಗಿರುವ ಸೋಣದಂಡನು... ಕಲ್ಯಾಣವಾದುದನ್ನು ಹೇಳುವವನೂ, ಕಲ್ಯಾಣವಾದ ಮಾತುಗಳನ್ನು ಹಿತವಾಗುವಂತೆ ಹೇಳುವವನೂ ಹೇಳಬೇಕಾದುದನ್ನು ಸ್ಪಷ್ಟವಾಗಿ ಹೇಳಬಲ್ಲವನೂ, ತೊದಲು ಮಾತನಾಡ ದವನೂ ಹೇಳಬೇಕಾದ ವಿಷಯದ ಅರ್ಥವನ್ನು ಸ್ಪಷ್ಟಪಡಿಸಬಲ್ಲವನೂ ಆಗಿರುವ ಸೋಣದಂಡನು- ಬಹು ಜನರಿಗೆ ಆಚಾರ್ಯ ಪ್ರಾಚಾರ್ಯ ನಾಗಿರುವವನೂ, ಮೂನ್ನೂರು ಯುವಕರಿಗೆ ಮಂತ್ರಗಳನ್ನು ಹೇಳುವುದನ್ನು ಭೋಧಿಸಿದವನೂ, ಮಂತ್ರಗಳನ್ನು ಅವುಗಳ ಅರ್ಥವನ್ನು ತಿಳಿಯಲು ನಾನಾ ಕಡೆಗಳಿಂದ ನಾನಾ ಜನಪದಗಳಿಂದ ಬ್ರಾಹ್ಮಣರು ಹುಡುಕಿಕೊಂಡು ಬರುವಷ್ಟು ಪ್ರಸಿದ್ಧವಾದವನೂ ಆದ ಸೋಣದಂಡನು - ವಯಸ್ಸಾದವನೂ, ವೃದ್ಧನೂ, ಬಹಳ ವರ್ಷಗಳನ್ನು ಕಳೆದವನೂ, ತುಂಬ ಕಾಲದಿಂದ ಇರುವವನೂ, ಬಹಳ ದಿನಗಳನ್ನು ನೋಡಿದವನೂ, ಆಗಿರುವ ಸೋಣದಂಡನು ತರುಣನೂ ತರುಣಪಬ್ಬಜಿತನೂ ಆಗಿರುವ ಸಮಣ ಗೋತಮನ- ಮಗಧದ ರಾಜ ಬಿಂಬಸಾರನಿಂದ ಸತ್ಕಾರವನ್ನೂ ಗೌರವವನ್ನೂ ಮಾನ್ಯತೆಯನ್ನೂ ಪಡೆದಿರುವವನೂ ಅವನಿಂದ ಪೂಜಿಸಿಕೊಳ್ಳುವವನೂ ಅವನಿಂದ ನಮಸ್ಕಾರ ಮಾಡಿಸಿಕೊಳ್ಳುವವನೂ ಆಗಿರುವ ಸೋಣದಂಡನು ಬ್ರಾಹ್ಮಣ ಪೋಕ್ಖರಸಾತಿಯಿಂದ ಗೌರವವನ್ನೂ, ಮಾನ್ಯತೆಯನ್ನು ಪಡೆದಿರುವ ಅವನಿಂದ ಪೂಜಿಸಿಕೊಳ್ಳುತ್ತಿರುವ ಅವನಿಂದ ನಮಸ್ಕಾರ ಮಾಡಿಸಿಕೊಳ್ಳುತ್ತಿರುವ ಸೋಣದಂಡನು - ಜನ, ಜಲ, ಧಾನ್ಯಗಳಿಂದಲೂ ಹುಲ್ಲಿಗಾವಲುಗಳಿಂದಲೂ ಮರಗಿಡಗಳಿಂದಲೂ ತುಂಬಿರುವ ರಾಜನ ಸ್ವಂತ ವೆಚ್ಚಕ್ಕೋಸ್ಕರವೇ ಇರುವ ಚಂಪಾನಗರವನ್ನು ಮಗಧದ ರಾಜ ಸೇನಿಯ ಬಿಂಬಸಾರನಿಂದ ದಾನವಾಗಿ ಪಡೆದು ಅಲ್ಲಿಯೇ ವಾಸವಾಗಿದ್ದು ಅದರ ಮೇಲೆ ರಾಜನಷ್ಟೇ ಅಧಿಕಾರ ಉಳ್ಳವನಾಗಿರುವ ಸೋಣದಂಡನು ಗೋತಮನ ದರ್ಶನಕ್ಕೆ ಹೋಗುವುದು ತಕ್ಕುದಲ್ಲ; ಸಮಣನಾದ ಗೋತಮನು ಸೋಣದಂಡನ ದರ್ಶನಕ್ಕೆ ಬರುವುದು ಸರಿಯಾದುದು.”
ಬುದ್ಧರ ಗುಣಗಳ ಬಗ್ಗೆ
ಹೀಗೆ ಹೇಳಿದುದನ್ನು ಕೇಳಿದ ಬ್ರಾಹ್ಮಣ ಸೋಣದಂಡನು ಅವರನ್ನು ಕುರಿತು ಇಂತೆಂದೆನು- “ನಾನು ಹೇಳುವುದನ್ನು ಕೇಳಿ ಸಮಣ ಗೋತಮರ ದರ್ಶನಕ್ಕೆ ನಾನೇ ಹೋಗುವುದೇ ಉಚಿತವಾದುದು; ಗೋತಮರು ನಮ್ಮ ದರ್ಶನಕ್ಕೆ ನಮ್ಮ ಹತ್ತಿರಕ್ಕೆ ಬರುವುದು ಸರಿಯಲ್ಲ. ಸಮಣ ಗೋತಮರು ತಂದೆ ತಾಯಿಗಳೆರಡು ಕಡೆಗಳಿಂದಲೂ ಒಳ್ಳೆಯ ವಂಶಕ್ಕೆ ಸೇರಿದವರು. ಏಳು ತಲೆಗಳಿಂದಲೂ ಶುದ್ಧವಾಗಿರುವ ಕಳಂಕರಿಹಿತವಾದ ಯಾವ ಕೆಟ್ಟ ಹೆಸರೂ ಇಲ್ಲದ ವಂಶದಲ್ಲಿಯೇ ಹುಟ್ಟಿದ್ದಾರೆ. ತಂದೆ ತಾಯಿಗಳೆರಡು ಕಡೆಗಳಿಂದಲೂ ಒಳ್ಳೆಯ ವಂಶಕ್ಕೆ ಸೇರಿದ, ಏಳು ತಲೆಗಳಿಂದಲೂ ಶುದ್ಧವಾದ ಕಳಂಕರಹಿತವಾದ, ಯಾವ ಕೆಟ್ಟ ಹೆಸರು ಇಲ್ಲದವರ ಉದರದಲ್ಲಿ ಹುಟ್ಟಿರುವ ಸಮಣ ನಮ್ಮ ದರ್ಶನಕ್ಕೆ ಬರುವುದು ಸರಿಯಲ್ಲ; ನಾನೇ ಭಗವಂತ ಗೋತಮರ ದರ್ಶನಕ್ಕೆ ಹೋಗುವುದು ಸರಿಯಾದುದು.
“ದೊಡ್ಡದಾದ ಬಂಧು ವರ್ಗವನ್ನು ತೊರೆದು ಪಬ್ಬಜಿತರಾದ ಸಮಣ ಗೋತಮರು - ಭೂಮಿಯಲ್ಲಿರುವ ಮತ್ತು ಭಂಡಾರದಲ್ಲಿ ಇರುವ ಚಿನ್ನವನ್ನೂ ಹಣವನ್ನೂ ತೊರೆದು ಪಬ್ಬಜಿತರಾದ ಸಮಣಗೋತಮರು .. ತಲೆಯಲ್ಲಿ ಒಂದು ಬಿಳಿಯ ಕೂದಲೂ ಇಲ್ಲದ ಯುವಕರಾಗಿದ್ದಾಗಲೇ ಸುಂದರವಾದ ಯೌವನವಿರುವಾಗಲೇ ಮನೆಯನ್ನು ತೊರೆದು ಪಬ್ಬಜಿತರಾದ ಸಮಣ ಗೋತಮರು.. ತಂದೆ ತಾಯಿಗಳು ಅಶ್ರುಮುಖರಾಗಿ ಅಳುತ್ತಿರುವಾಗ ಕೂದಲು ಗಡ್ಡಗಳನ್ನೂ ತೆಗೆದು, ಕಾಷಾಯವಸ್ತ್ರವನ್ನು ಧರಿಸಿಕೊಂಡು ಮನೆಯನ್ನು ತೊರೆದು ಪಬ್ಬಜಿತರಾದ ಸಮಣ ಗೋತಮರು.... ರೂಪವಂತರೂ, ನೋಡುವಾಗ ಸಂತೋಷವನ್ನುಂಟು ಮಾಡುವವರೂ, ವಿಶ್ವಾಸವನ್ನುಂಟು ಮಾಡುವವರೂ, ಉತ್ಕೃಷ್ಟವಾದ ಬಣ್ಣವನ್ನು ಹೊಂದಿರುವವರೂ, ಬ್ರಹ್ಮನ ವರ್ಣವನ್ನು ಪಡೆದಿರುವವರೂ, ಬ್ರಹ್ಮನ ವರ್ಚಸ್ಸನ್ನುಳ್ಳುವರೂ, ನೋಡಲು ಗಂಭೀರವಂತರೂ ಆಗಿರುವ ಸಮಣಗೋತಮರು ಶೀಲವಂತರೂ, ಶೀಲವನ್ನು ವೃದ್ಧಿಸಿಕೊಳ್ಳುತ್ತಿರುವವರೂ, ಶೀಲವನ್ನು ವೃದ್ಧಿಸುವ ಜ್ಞಾನವನ್ನು ಪಡೆದಿರುವವರೂ ಆಗಿರುವ ಸಮಣ ಗೋತಮರು.. ಕಲ್ಯಾಣವಾದುದನ್ನು ಹೇಳುವವರೂ, ಕಲ್ಯಾಣವಾದ ಮಾತುಗಳನ್ನು ಹಿತವಾಗುವಂತೆ ಹೇಳುವವರೂ, ಹೇಳ ಬೇಕಾದುದನ್ನು ಸ್ಪಷ್ಟವಾಗಿ ಹೇಳುವವರೂ ತೊದಲು ಮಾತಡನಾಡದವರೂ ಹೇಳಬೇಕಾದ ವಿಷಯದ ಅರ್ಥವನ್ನು ಸ್ಪಷ್ಟಪಡಿಸಬಲ್ಲವರೂ ಆಗಿರುವ ಸಮಣಗೋತಮರು ಬಹು ಜನರಿಗೆ ಆಚಾರ್ಯ ಪ್ರಾಚಾರ್ಯರೂ ಆಗಿರುವ ಸಮಣಗೋತಮರು.... ಕಾಮರಾಗಗಳಿಲ್ಲದವರೂ ಚಾಪಲ್ಯಗಳನ್ನು ಗೆದ್ದವರೂ ಆಗಿರುವ ಸಮಣಗೋತಮರು ಕರ್ಮವಾದಿಗಳೂ ಕ್ರಿಯವಾದಿಗಳು ಬ್ರಾಹಣರಿಗೆ ಮತ್ತು ಪ್ರಜೆಗಳಿಗೆ ನಿಷ್ಪಾಪವಾಗಿರುವುದನ್ನು ಹೇಳುವವರೂ ಆಗಿರುವ ಸಮಣ ಗೋತಮರು ಉಚ್ಛಕುಲವಾದ ಪ್ರಾಚೀನ ಕ್ಷತ್ರಿಯಕುಲವನ್ನು ತೊರೆದಿರುವ ಸಮಣಗೋತಮರು.... ಏಳ್ಗೆ ಹೊಂದುತ್ತಿರುವುದೂ ಮಹಾಧನವುಳ್ಳದ್ದೂ ಮಹಾಭೋಗವನ್ನು ಅನುಭವಿಸುತ್ತಿರುವುದೂ ಆದ ಕುಲವನ್ನು ತೊರೆದಿರುವ ಸಮಣ ಗೋತಮರು ಸಂದೇಹಗಳನ್ನು ಪರಿಹರಿಸಿಕೊಳ್ಳಲು ಮೂಲೆ ಮೂಲೆಗಳಲ್ಲಿರುವ ರಾಷ್ಟ್ರಗಳಿಂದಲೂ ಜನಪದ ಗಳಿಂದಲೂ ಜನರು ಹುಡುಕಿ ಕೊಂಡು ಬರುವಷ್ಟು ಪ್ರಖ್ಯಾತರೂ ಆಗಿರುವ ಸಮಣಗೋತಮರು.... ಅನೇಕ ದೇವತೆಗಳೂ ಸಹಸ್ರಾರು ಜೀವಿಗಳು ಯಾರನ್ನು ಶರಣು ಹೋಗುತ್ತಾರೋ ಆ ಸಮಣಗೋತಮರು.... ಅರಹಂತರು, ಸಮ್ಮಾಸಂಬುದ್ಧರು, ವಿಜ್ಜಾಚರಣ ಸಂಪನ್ನರು, ಸುಗತರು, ಲೋಕಗಳನ್ನೆಲ್ಲಾ ತಿಳಿದವರು, ಜನರಿಗೆ ದಾರಿ ತೋರಿಸುವವರಲ್ಲಿ ಅದ್ವ್ವಿತೀಯರೂ, ದೇವಮಾನವರಲ್ಲಿ ಶ್ರೇಷ್ಠರು, ಬುದ್ಧರು, ಭಗವಾನರು ಎಂಬ ಒಳ್ಳೆಯ ಕೀರ್ತಿಯನ್ನು ಪಡೆದಿರುವ ಸಮಣಗೋತಮರು.. ಮೂವತ್ತೆರಡು ಮಹಾಪುರಷ ಲಕ್ಷಣಗಳನ್ನು ಹೊಂದಿರುವ ಸಮಣಗೋತಮರು.. ಎಲ್ಲರನ್ನು ಸ್ವಾಗತಿಸು ವವರೂ, ಎಲ್ಲರಿಗೂ ಹೊಂದಿಕೊಳ್ಳುವಂಥವರೂ, ಎಲ್ಲರನ್ನೂ ಸಮಾಧಾನ ಗೊಳಿಸಬಲ್ಲವರೂ, ಪ್ರತಿಷ್ಠೆಯನ್ನು ಬಿಟ್ಟವರೂ, ಉದಾತ್ತವಾದುದರ ಕಡೆ ಗಮನವಿಡುವವರೂ, ನೇರವಾಗಿ ಹೇಳುವವರೂ ಆಗಿರುವ ಸಮಣ ಗೋತಮರು.... ನಾಲ್ಕು ಬಗೆಯ ಜನರಿಂದ ಗೌರವವನ್ನು, ಮಾನ್ಯತೆಯನ್ನು ಪಡೆದವರು, ನಾಲ್ಕು ಬಗೆಯ ಜನರಿಂದಲೂ ಪೂಜೆಗೊಳ್ಳುವವರೂ ಆಗಿರುವ ಸಮಣಗೋತಮರು.... ಬಹು ದೇವತೆಗಳಿಗೂ, ಮನುಷ್ಯರಿಗೂ ವಿಶ್ವಸನೀಯ ರಾಗಿರುವುದು ಸಮಣಗೋತಮರು.... ಯಾರು ವಾಸಿಸುವ ಗ್ರಾಮ ಪಟ್ಟಣಗಳಲ್ಲಿ ಮನುಷ್ಯರಿಂದ ಮನುಷ್ಯರಿಗೆ ಬಾಧೆಯಾಗುವುದಿಲ್ಲವೊ ಅಂಥ ಸಮಣ ಗೋತಮರು.... (ಅನೇಕ) ಸಂಘಗಳಿಗೂ, ಗಣಗಳಿಗೂ, ಗಣಾಚಾರ್ಯರಿಗೂ, ಬೇರೆ ಬೇರೆ ವಾದಗಳಿಗೆ ಪ್ರಥಮರಾದವರಲ್ಲಿ ಅಗ್ರಗಣ್ಯರೂ ಆಗಿರುವ ಸಮಣಗೋತಮರು.... ಹೇಗೋ ಹೇಗೋ ಯಶಸ್ಸನ್ನು ಗಳಿಸಿಕೊಂಡ ಸಮಣ ಬ್ರಾಹ್ಮಣರಂತಲ್ಲದೆ ಅನುತ್ತರವಾದ ವಿಜ್ಜಾಚರಣ ಸಂಪನ್ನತೆಯಿಂದಲೇ ಯಶಸ್ಸನ್ನು ಗಳಿಸಿರುವ ಸಮಣಗೋತಮರು.... ಹೆಂಡತಿ ಮಕ್ಕಳು ಪ್ರಜೆಗಳು ಮಂತ್ರಿಗಳೊಂದಿಗೆ ಮಗಧದ ರಾಜ ಸೇನೆಯ ಬಿಂಬಸಾರನು ಯಾರನ್ನು ಶರಣುಹೋಗುವನೋ ಆ ಸಮಣಗೋತಮರು.... ಪತ್ನಿಯರು, ಪುತ್ರರು, ಪ್ರಜೆಗಳು ಮತ್ತು ಮಂತ್ರಿಗಳಿಂದ ಕೂಡಿದ ಕೋಸಲದ ರಾಜ ಪಸೇನದಿಯು ಯಾರನ್ನು ಶರಣು ಹೋಗುವನೋ ಆ ಸಮಣಗೋತಮರು.... ಪತ್ನಿಯರು, ಪುತ್ರರು, ಪರಿವಾರದವರು ಮತ್ತು ಗೆಳೆಯರೊಂದಿಗೆ ಪೋಕ್ಖರಸಾತಿ ಬ್ರಾಹ್ಮಣನು ಯಾರನ್ನು ಶರಣುಹೋಗುವನೋ ಆ ಸಮಣಗೋತಮರು.... ಮಗಧದ ರಾಜ ಸೇನಿಯ ಬಿಂಬಸಾರನಿಂದ ಸತ್ಕಾರವನ್ನೂ ಗೌರವವನ್ನೂ, ಮಾನ್ಯತೆಯನ್ನೂ ಪಡೆದು ಅವನಿಂದ ಪೂಜಿಸಿಕೊಂಡು ನಮಸ್ಕಾರ ಮಾಡಿಸಿಕೊಳ್ಳುವ ಸಮಣಗೋತಮರು.... ಕೋಸಲದ ರಾಜ ಪಸೇನದಿಯಿಂದ ಸತ್ಕಾರವನ್ನೂ ಗೌರವವನ್ನೂ ಮಾನ್ಯತೆಯನ್ನೂ ಪಡೆದು ಅವನಿಂದ ಪೂಜಿಸಿಕೊಂಡು ನಮಸ್ಕಾರ ಮಾಡಿಸಿಕೊಳ್ಳುವ ಸಮಣಗೋತಮರು.... ಬ್ರಾಹ್ಮಣನಾದ ಪೋಕ್ಖರ ಸಾತಿಯಿಂದ ಸತ್ಕಾರವನ್ನೂ, ಗೌರವವನ್ನೂ, ಮಾನ್ಯತೆಯನ್ನೂ ಪಡೆದು ಅವನಿಂದ ಪೂಜಿಸಿಕೊಂಡು ನಮಸ್ಕಾರ ಮಾಡಿಸಿಕೊಳ್ಳುವ ಸಮಣ ಗೋತಮರು.... ಇಂಥ ಸಮಣಗೋತಮರು ಗಗ್ಗರ ಪುಷ್ಕರಣಿ ತೀರದಲ್ಲಿ ತಂಗಿದ್ದಾರೆ. ಯಾವ ಸಮಣ ಬ್ರಾಹ್ಮಣರೇ ನಮ್ಮ ಗ್ರಾಮ ಕ್ಷೇತ್ರಕ್ಕೆ ಬರಲಿ, ಅವರು ನಮ್ಮ ಅತಿಥಿಗಳು, ಅತಿಥಿಗಳನ್ನು ನಾವು ಸತ್ಕರಿಸಬೇಕು ಗೌರವಿಸಬೇಕು ಅವರಿಗೆ ಮಾನ್ಯತೆ ಮಾಡಬೇಕು. ಪೂಜಿಸಬೇಕು ಮತ್ತು ನಮ್ಮಸ್ಕರಿಸಬೇಕು. ಸಮಣ ಗೋತಮರು ಚಂಪಾ ನಗರಕ್ಕೆ ಬಂದು ಅದರಲ್ಲಿನ ಗಗ್ಗರ ಪುಷ್ಕರಣಿ ತೀರದಲ್ಲಿ ವಿಹರಿಸುತ್ತಿರುವುದರಿಂದ ಅವರು ನಮ್ಮ ಅತಿಥಿಗಳೇ ಆಗಿದ್ದಾರೆ. ಇಂಥ ಅತಿಥಿಗಳನ್ನು ನಾವು ಸತ್ಕರಿಸಿ ಗೌರವಿಸಿ, ಮಾನ್ಯತೆ ಮಾಡಿ ಪೂಜಿಸಿ, ಗೌರವಿಸಲೇ ಬೇಕು. ಈ ಕಾರಣಗಳಿಂದ ಗೋತಮರು ನಮ್ಮನ್ನು ನೊಡುವುದಕ್ಕೆ ಬರುವುದು ಸರಿಯಲ್ಲ. ನಾವೇ ಅವರ ದರ್ಶನಕ್ಕೆ ಹೋಗವುದು ಸರಿಯಾದುದು. ಇಲ್ಲಿಯವರೆಗೆ ಹೇಳಲಾಗಿರುವುದು ಆ ಗೋತಮರ ಕೆಲವು ಸದ್ಗುಣಗಳನ್ನು ಮಾತ್ರ; ಗೋತಮರು ಸದ್ಗುಣಗಳು ಅಷ್ಟು ಮಾತ್ರವೇ ಅಲ್ಲ. ಅವರ ಸದ್ಗುಣಗಳು ಅಳತೆಗೆ ಮೀರಿದವು.”
ಹೀಗೆ ಹೇಳಿದ ಸೋಣದಂಡ ಬ್ರಾಹ್ಮಣನನ್ನು ಕುರಿತು ಆ ಬ್ರಾಹ್ಮಣರು ಹೀಗೆಂದರು: “ಸೋಣದಂಡ ಬ್ರಾಹ್ಮಣನು ಸಮಣ ಗೋತಮರನ್ನು ಇಷ್ಟು ಬಗೆಯಾಗಿ ವರ್ಣಿಸಿದ್ದಾನೆ. ಇಂಥ ಗೋತಮರು ನೂರು ಯೋಜನದಷ್ಟು ದೂರದಲ್ಲಿ ವಾಸಿಸುತ್ತಿದ್ದರೂ ಶ್ರದ್ದೆಯುಳ್ಳವರೂ ಅವರ ದರ್ಶನಕ್ಕೆ ಬುತ್ತಿಯನ್ನು ಕಟ್ಟಿಕೊಂಡಾದರೂ ಹೋಗಬೇಕು.”
“ಹಾಗಾದರೆ ಎಲ್ಲರೂ ಸಮಣ ಗೋತಮರ ದರ್ಶನಕ್ಕೆ ಹೋಗೋಣ.”
ಸೋಣದಂಡನ ಚಿಂತನೆಗಳು
ಆಮೇಲೆ ಸೋಣದಂಡ ಬ್ರಾಹ್ಮಣನು ದೊಡ್ಡ ಬ್ರಾಹ್ಮಣ ಸಮೂಹದೊಂದಿಗೆ ಗಗ್ಗರ ಪುಷ್ಕರಿಣಿ ತೀರಕ್ಕೆ ಹೊರಟನು. ಸೋಣದಂಡ ಬ್ರಾಹ್ಮಣನು ದಾರಿಯಲ್ಲಿನ ಒಂದು ಚಿಕ್ಕ ಕಾಡಿನಲ್ಲಿ ಹೋಗುತ್ತಿದ್ದನು. ಆಗ ಅವನ ಚಿತ್ತವು ಹಿಂಜರಿಯಿತು; “ನಾನು ಸಮಣ ಗೋತಮರಿಗೆ ಯಾವುದಾದರೂ ಪ್ರಶ್ನೆಯನ್ನು ಹಾಕಿದರೆ ಅವರು ‘ಬ್ರಾಹ್ಮಣ’ ಪ್ರಶ್ನೆಯನ್ನು ಹೀಗೆ ಕೇಳಬಾರದು. ಅದನ್ನು ಕೇಳಬೇಕಾದದ್ದು ಹೀಗೆ’ ಎಂದು ಹೇಳಬಹುದು. ಆದರಿಂದ ನನ್ನೊಂದಗಿದ್ದವರು ನನ್ನಲ್ಲಿ ತಿರಸ್ಕಾರಗೊಳ್ಳಬಹುದು: ಸೋಣದಂಡ ಬ್ರಾಹ್ಮಣನು ಏನು ತಿಳಿಯದ ಮೂರ್ಖ. ಸಮಣ ಗೋತಮರನ್ನು ಸರಿಯಾಗಿ ಪ್ರಶ್ನಿಸಲೂ ಬರುವುದಿಲ್ಲ;’ ಯಾರಲ್ಲಿ ಜನರು ತಿರಸ್ಕಾರ ಭಾವನೆಯನ್ನು ತಾಳುತ್ತಾರೋ ಅವರ ಯಶಸ್ಸು ಹಾಳಾಗುತ್ತದೆ. ಯಾರ ಯಶಸ್ಸು ಹಾಳಾಗುತ್ತದೆಯೋ ಅವನ ಆದಾಯವು ಕಡಿಮೆಯಾಗುತ್ತದೆ. ಯಶಸ್ಸನ್ನು ಹಾಳುಮಾಡಿಕೊಂಡು ನಾವು ಆದಾಯವನ್ನು ಕಳೆದುಕೊಳ್ಳಬೇಕಾಗುತ್ತದೆ. ಸಮಣ ಗೋತಮರು ನನ್ನನ್ನೇ ಕೇಳಿದರೆ ನನ್ನ ವಿವರಣೆ ಅವರಿಗೆ ಹಿಡಿಸದಿರಬಹುದು. ಆ ಸಂದರ್ಭದಲ್ಲಿ ಸಮಣ ಗೋತಮರು ನನ್ನನ್ನು ಕುರಿತು ಹೀಗೆ ಹೇಳಬಹುದು ‘ಬ್ರಾಹ್ಮಣ’ ಪ್ರಶ್ನೆಗೆ ಹೀಗೆ ಉತ್ತರ ಕೊಡಬಾರದು. ಬ್ರಾಹ್ಮಣ, ಅದಕ್ಕೆ ವಿವರಣೆ ಕೊಡಬೇಕಾದದ್ದು ಹೀಗೆ.’ ಆಗ ನನ್ನೊಂದಿಗರು ನನ್ನಲ್ಲಿ ತಿರಸ್ಕಾರಗೊಂಡು ‘ಸೋಣದಂಡ ಬ್ರಾಹ್ಮಣನು ಏನು ತಿಳಿಯದ ಮೂರ್ಖ. ಸಮಣ ಗೋತಮರ ಪ್ರಶ್ನೆಗೆ ಅವರು ಒಪ್ಪುವಂತೆ ವಿವರಣೆಯನ್ನು ಕೊಡುವುದಕ್ಕೆ ಬರುವುದಿಲ್ಲ.’ ಎಂದು ಭಾವಿಸಿಕೊಳ್ಳಬಹುದು. ಯಾರಲ್ಲಿ ಜನರಿಗೆ ಈ ತಿರಸ್ಕಾರ ಹುಟ್ಟುತ್ತದೆಯೋ ಅವರ ಯಶಸ್ಸು ಹಾಳಾಗುತ್ತದೆ. ಯಾರ ಯಶಸ್ಸು ಹಾಳಾಗುತ್ತದೆಯೋ ಅವನ ಆದಾಯವೂ ಕಡಿಮೆಯಾಗುತ್ತದೆ. ಯಶಸ್ಸನ್ನು ಕಳೆದುಕೊಂಡು ನಾವು ಆದಾಯವನ್ನೂ ಕಳೆದುಕೊಳ್ಳುತ್ತೇವೆ. ಸಮಣ ಗೌತಮರ ಸಮೀಪಕ್ಕೆ ಬಂದಿರುವ ನಾನು ಅವರನ್ನು ನೋಡದೆ ಹಿಂದಿರುಗಿದರೆ ನನ್ನೊಂದಿಗಿರುವ ಈ ಜನರು ನನ್ನಲ್ಲಿ ತಿರಸ್ಕಾರಗೊಂಡು ‘ಸೋಣದಂಡ ಬ್ರಾಹ್ಮಣನು ದುರಭಿಮಾನಿ ಮಾತ್ರ ಆಗಿದ್ದಾನೆ; ಆದರೆ ಭೀತಿಗೊಂಡವನಾಗಿದ್ದಾನೆ; ಸಮಣ ಗೋತಮರ ದರ್ಶನಕ್ಕಾಗಿ ಬಂದವನು ಅವರನ್ನು ನೋಡುವುದಿಲ್ಲ; ಇಷ್ಟು ಸಮೀಪಕ್ಕೆ ಬಂದವನು ಅವರನ್ನು ನೋಡದೆ ಹಿಂತಿರುಗುತ್ತಿದ್ದಾನೆಯಲ್ಲಾ, ಇದು ಹೇಗೆ? ಎಂದು ಭಾವಿಸಿಕೊಳ್ಳಬಹುದು. ಯಾರಲ್ಲಿ ಜನರಿಗೆ ಈ ತಿರಸ್ಕಾರ ಭಾವನೆ ಹುಟ್ಟುತ್ತದೆಯೋ ಅವನ ಯಶಸ್ಸು ಹಾಳಾಗುತ್ತದೆ. ಯಾರ ಯಶಸ್ಸು ಹಾಳಾಗುತ್ತದೆಯೋ ಅವನ ಆದಾಯವೂ ಕಡಿಮೆಯಾಗುತ್ತದೆ. ಯಶಸ್ಸನ್ನು ಕಳೆದುಕೊಂಡ ನಾವು ಆದಾಯವನ್ನು ಕಳೆದುಕೊಳ್ಳುತ್ತವೆ.”
ಆಮೇಲೆ ಸೋಣದಂಡ ಬ್ರಾಹ್ಮಣನು ಭಗವಾನರನ್ನು ಸಮೀಪಿಸಿದನು; ಅವರ ಸನಿಹಕ್ಕೆ ಬಂದನು. ಸನಿಹಕ್ಕೆ ಬಂದು ಉಚಿತವಾದ ರೀತಿಯಲ್ಲಿ ಅವರಿಗೆ ಗೌರವ ತೋರಿಸಿ ಒಂದು ಕಡೆ ಕುಳಿತನು. ಹಾಗೆಯೇ ಚಂಪಾನಗರದ ಬ್ರಾಹ್ಮಣ ಗೃಹಸ್ಥರಲ್ಲಿ ಕೆಲವರು ಭಗವಾನರಿಗೆ ಅಭಿವಂದಿಸಿ ಒಂದು ಕಡೆ ಕುಳಿತು ಕೊಂಡರು; ಮತ್ತೆ ಕೆಲವರು ಭಗವಾನರಿಗೆ ಯಾವರೀತಿ ಮರ್ಯಾದೆ ತೋರಿಸಬೇಕೋ ಹಾಗೆ ಮರ್ಯಾದೆಯನ್ನು ಮಾಡಿ ಒಂದು ಕಡೆ ಕುಳಿತುಕೊಂಡರು; ಇನ್ನು ಕೆಲವರೂ ಭಗವಂತರಿಗೆ ಅಂಜಲೀಬದ್ಧರಾಗಿ ಪ್ರಣಾಮ ಮಾಡಿ ಮತ್ತೊಂದು ಕಡೆ ಕುಳಿತುಕೊಂಡರು; ಮತ್ತೆ ಕೆಲವರು ತಮ್ಮ ಗೋತ್ರದ ಹೆಸರನ್ನೂ ತಮ್ಮ ಹೆಸರನ್ನೂ ಹೇಳಿ ಒಂದು ಕಡೆ ಕುಳಿತು ಕೊಂಡರು; ಉಳಿದವರು ಮೌನವಾಗಿ ಇನ್ನೊಂದು ಕಡೆ ಕುಳಿತುಕೊಂಡರು.
ಅಲ್ಲಿ ಕುಳಿತುಕೊಂಡಾಗಲೂ ಸೋಣದಂಡ ಬ್ರಾಹ್ಮಣನು ಮೊದಲಿ ನಂತೆಯೇ ಹಿಂಜರಿಯುತ್ತಿದ್ದನು. “ನಾನು ಸಮಣ ಗೋತಮರಿಗೆ ಯಾವುದಾದರೂ ಪ್ರಶ್ನೆಯನ್ನು ಹಾಕಿದರೆ ಅವರು ‘ಬ್ರಾಹ್ಮಣ’ ಪ್ರಶ್ನೆಯನ್ನು ಹೀಗೆ ಕೇಳಬಾರದು. ಅದನ್ನು ಕೇಳಬೇಕಾದದ್ದು ಹೀಗೆ’ ಎಂದು ಹೇಳಬಹುದು ಅದರಿಂದ ನನ್ನೊಂದಿಗಿದ್ದವರು ನನ್ನಲ್ಲಿ ತಿರಸ್ಕಾರಗೊಳ್ಳಬಹುದು. ‘ಸೋಣದಂಡ ಬ್ರಾಹ್ಮಣನು ಏನು ತಿಳಿಯದ ಮೂರ್ಖ.ಸಮಣ ಗೋತಮರನ್ನು ಸರಿಯಾಗಿ ಪ್ರಶ್ನಿಸಲು ಬರುವುದಿಲ್ಲ.’ ಎಂದು ಭಾವಿಸಬಹುದು. ಯಾರಲ್ಲಿ ಜನರಿಗೆ ಈ ತಿರಸ್ಕಾರ ಭಾವನೆಯನ್ನು ತಾಳುತ್ತಾರೋ ಅವರ ಯಶಸ್ಸು ಹಾಳಾಗುತ್ತದೆ ಯಾರ ಯಶಸ್ಸು ಹಾಳಾಗುತ್ತದೆಯೋ ಅವರ ಆದಾಯವೂ ಕಡಿಮೆಯಾಗುತ್ತದೆ. ಯಶಸ್ಸನ್ನು ಹಾಳುಮಾಡಿಕೊಂಡು ನಾವು ಆದಾಯವನ್ನೂ ಕಳೆದುಕೊಳ್ಳಬೇಕಾಗುತ್ತದೆ. ಸಮಣ ಗೋತಮರು ನನ್ನನ್ನೇ ಕೇಳಿದರೆ ನನ್ನ ವಿವರಣೇ ಅವರಿಗೆ ಹಿಡಿಸದಿರಬಹುದು. ಆ ಸಂದರ್ಭದಲ್ಲಿ ಸಮಣ ಗೋತಮರು ನನ್ನನ್ನು ಕುರಿತು ಹೀಗೇ ಹೇಳಬಹುದು. ಬ್ರಾಹ್ಮಣ, ಪ್ರಶ್ನೆಗೆ ಹೀಗೆ ಉತ್ತರ ಕೊಡಬಾರದು. ಬ್ರಾಹ್ಮಣ, ಅದಕ್ಕೆ ವಿವರಣೆ ಕೊಡಬೇಕಾದದ್ದು ಹೀಗೆ’ ಆಗ ನನ್ನೊಂದಿಗರು ನನ್ನಲ್ಲಿ ತಿರಸ್ಕಾರಗೊಂಡು ‘ಸೋಣದಂಡ ಬ್ರಾಹ್ಮಣನು ಏನು ತಿಳಿಯದ ಮೂರ್ಖ. ಸಮಣ ಗೋತಮರ ಪ್ರಶ್ನೆಗೆ ಅವರು ಒಪ್ಪುವಂತೆ ವಿವರಣೆಯನ್ನು ಕೊಡಲು ಬರುವುದಿಲ್ಲ.’ ಎಂದು ಭಾವಿಸಬಹುದು. ಯಾರಲ್ಲಿ ಜನರಿಗೆ ಈ ತಿರಸ್ಕಾರ ಭಾವನೆ ಹುಟ್ಟುತ್ತದೆಯೋ ಅವರ ಯಶಸ್ಸು ಹಾಳಾಗುತ್ತದೆ. ಯಾರ ಯಶಸ್ಸು ಹಾಳಾಗುತ್ತದೆಯೋ ಅವನ ಆದಾಯವೂ ಕಡಿಮೆಯಾಗುತ್ತದೆ. ಯಶಸ್ಸನ್ನು ಕಳೆದುಕೊಂಡ ನಾವು ಆದಾಯವನ್ನು ಕಳೆದುಕೊಳ್ಳುತ್ತವೆ. ಸಮಣ ಗೋತಮರು ನಾನು ಆಚಾರ್ಯರಿಂದ ಕಲಿತಿರುವ ಮೂರು ವೇದಗಳನ್ನು ಕುರಿತು ಪ್ರಶ್ನೆಗಳನ್ನು ಕೇಳಬಹುದಲ್ಲವೇ? ಆಗ ಅವರ ಚಿತ್ತವು ಒಪ್ಪುವಂತೆ ಪ್ರಶ್ನೆಗೆ ಉತ್ತರವನ್ನು ಹೇಳುತ್ತೇನೆ.
ಬ್ರಾಹ್ಮಣರ ಕಲ್ಪನೆಗಳು
ಆಗ ಭಗವಾನರು ಸೋಣದಂಡ ಬ್ರಾಹ್ಮಣನ ಚಿತ್ತದಲ್ಲಿ ಉಂಟಾದ ಶಂಕೆಯನ್ನು ತಿಳಿದವರಾಗಿ ಹೀಗೆಂದುಕೊಂಡರು: “ಈ ಸೋಣದಂಡನು ಮಾನಸಿಕವಾಗಿ ನೋವನ್ನನುಭವಿಸುತ್ತಿದ್ದಾನೆ. ಸೋಣದಂಡ ಬ್ರಾಹ್ಮಣನನ್ನು ಅವನು ಆಚಾರ್ಯರಿಂದ ಕಲಿತಿರುವ ಮೂರು ವೇದಗಳ ಮೇಲೆಯೇ ಪ್ರಶ್ನೆ ಹಾಕುತ್ತೇನೆ.” ಆಮೇಲೆ ಸೋಣದಂಡ ಬ್ರಾಹ್ಮಣನನ್ನು ಹೀಗೆ ಕೇಳಿದರು: “ಬ್ರಾಹ್ಮಣ, ಬ್ರಾಹ್ಮಣರಾದವರು ಯಾವುದನ್ನು ಪಡೆದಿರಲೇಬೇಕೆಂದು ಬ್ರಾಹ್ಮಣರು ಹೇಳುತ್ತಾರೆ? ಬ್ರಾಹ್ಮಣರಲ್ಲಿ ಇರಬೇಕಾದುದನ್ನು ಯಾವು ಸುಳ್ಳೂ ಇರದಂತೆ ವಿವರಿಸುವಾಗ ಯಾವುದಿರಬೇಕೆಂದು ಹೇಳುತ್ತಾರೆ?”
ಸೋಣದಂಡ ಬ್ರಾಹ್ಮಣನು ಹೀಗೆಂದುಕೊಂಡನು: “ನಾನು ಯಾವುದನ್ನು ಇಚ್ಚಿಸಿದ್ದೆನೋ ಯಾವುದನ್ನು ಮನಸ್ಸಿನಲ್ಲಿಟ್ಟುಕೊಂಡಿದ್ದೆನೋ ಯಾವುದನ್ನು ಬಹುವಾಗಿ ಬಯಸಿದ್ದೆನೋ ಯಾವುದನ್ನು ಹೆಚ್ಚಾಗಿ ನಂಬಿಕೊಂಡಿದ್ದೆನೋ ಅದೇ ಪ್ರಶ್ನೆ ಬಂದಿದೆ: ಪ್ರಶ್ನೆ ಯಾವುದೆಂದರೆ- ‘ಸಮಣಗೋತಮರು ನಾನು ಆಚಾರ್ಯರಿಂದ ಕಲಿತ ಮೂರು ವೇದಗಳನ್ನು ಕುರಿತು ಪ್ರಶ್ನೆಗಳನ್ನು ಕೇಳಬಹುದು. ಆಗ ಅವರ ಮನಸ್ಸು ಒಪ್ಪುವಂತೆ ಉತ್ತರ ಹೇಳುತ್ತೇನೆ’. ಅದರಂತೆ ಸಮಣಗೋತಮರು ಆಚಾರ್ಯರಿಂದ ಕಲಿತ ಮೂರು ವೇದಗಳನ್ನು ಕುರಿತೇ ಪ್ರಶ್ನೆಯನ್ನು ಕೇಳಿದ್ದಾರೆ. ನನ್ನ ವಿವರಣೆಯಿಂದ ಅವರ ಮನಸ್ಸು ಒಪ್ಪುವಂತೆ ಮಾಡುತ್ತೇನೆ.”
ಆಗ ಸೋಣದಂಡ ಬ್ರಾಹ್ಮಣನು ಸರಿಯಾಗಿ ನಿಂತು ತನ್ನೊಂದಿಗೆ ಬಂದಿದ್ದವರನ್ನು ಚೆನ್ನಾಗಿ ನೋಡಿ ಭಗವಾನರನ್ನು ಕುರಿತು ಹೀಗೆಂದರು: “ಗೋತಮ, ಐದು ಅಂಶಗಳನ್ನು ಹೊಂದಿರುವವನನ್ನು ಬ್ರಾಹ್ಮಣನೆಂದು ಬ್ರಾಹ್ಮಣರು ಕರೆಯುತ್ತಾರೆ. ಬ್ರಾಹ್ಮಣರಲ್ಲಿ ಇರಬೇಕಾದ ಈ ಅಂಶಗಳನ್ನು ವಿವರಿಸುವಾಗ ಯಾವ ಸುಳ್ಳ್ಳು ಇರುವುದಿಲ್ಲ. ಈ ಐದು ಅಂಶಗಳು ಯಾವುವು? ಗೋತಮ, ತಾಯಿ ತಂದೆಗಳೆರಡು ಕಡೆಗಳಿಂದಲೂ ಒಳ್ಳೆಯ ವಂಶದವನಾಗಿರಬೇಕು, ಏಳು ತಲೆಗಳಿಂದಲೂ ಶುದ್ಧವಾದ ಕಳಂಕ ರಹಿತವಾದ ಯಾವ ಕೆಟ್ಟ ಹೆಸರೂ ಇಲ್ಲದವರ ಉದರದಲ್ಲಿ ಜನಿಸಿದವನಾಗಿರಬೇಕು. ಮಂತ್ರಗಳನ್ನು ತಿಳಿದವನೂ ಮಂತ್ರಗಳನ್ನು ಪಠಿಸುವವನೂ ಆಗಿದ್ದು, ಮೂರು ವೇದಗಳನ್ನೂ ಅದರ ಅಕ್ಷರಗಳಲ್ಲಿ ಅಲ್ಪವಾದ ಭೇದವಿದ್ದರೂ ಅದನ್ನು ತಿಳಿದವನೂ, ಐದು ಇತಿಹಾಸಗಳನ್ನು ಬಲ್ಲವನೂ, ಪದಗಳನ್ನು ಸರಿಯಾಗಿ ಬಳಸಬಲ್ಲವನೂ, ವೆಯ್ಯಾಕರಣಿಯೂ, ಲೋಕಾಯುತ ಮಹಾಪುರಷರ ಲಕ್ಷಣಗಳನ್ನು ತಿಳಿದುರುವವನೂ ಆಗಿರಬೇಕು. ರೂಪವಂತನೂ, ನೋಡಿದಾಗ ಸಂತೋಷವನ್ನುಂಟುಮಾಡುವವನೂ, ವಿಶ್ವಾಸವನ್ನುಂಟುಮಾಡುವವನೂ, ಉತ್ಕೃಷ್ಟವಾದ ಬಣ್ಣವನ್ನು ಹೊಂದಿರುವವನು, ಬ್ರಹ್ಮನ ವರ್ಣವನ್ನು ಪಡೆದಿರುವವನೂ, ಬಹ್ಮನ ವರ್ಚಸ್ಸನ್ನು ಹೊಂದಿರುವವನೂ ನೋಡಲು ಗಂಭೀರವಂತನೂ ಆಗಿರಬೇಕು; ಶೀಲವಂತನೂ, ಶೀಲವನ್ನು ವೃದ್ಧಿಸಿಕೊಳ್ಳು ತ್ತಿರುವವನೂ ಆಗಿರಬೇಕು; ಪಂಡಿತನೂ, ಮೇದಾವಿಯೂ, ದರ್ವಿಯನ್ನು ಹಿಡಿಯುವವರಲ್ಲಿ ಪ್ರಥಮನೂ (ಅಥವಾ ದ್ವಿತೀಯನೂ) ಆಗಿರಬೇಕು. ಗೋತಮ, ಈ ಐದು ಅಂಶಗಳನ್ನುಳ್ಳವನನ್ನು ಬ್ರಾಹ್ಮಣರೆಂದು ಬ್ರಾಹ್ಮಣರು ಕರೆಯುತ್ತಾರೆ. ಬ್ರಾಹ್ಮಣರಲ್ಲಿರಬೇಕಾದ ಈ ಅಂಶಗಳನ್ನು ಹೀಗೆ ವಿವರಿಸುವುದಾದರೆ ಅದರಲ್ಲಿ ಸುಳ್ಳಿರುವುದಿಲ್ಲ.”
“ಬ್ರಾಹ್ಮಣ, ಈ ಐದು ಅಂಶಗಳಲ್ಲಿ ಒಂದನ್ನು ಬಿಟ್ಟು ಉಳಿದ ನಾಲ್ಕು ಅಂಶಗಳಿರುವ ಯಾವನಾದರೂ ಒಬ್ಬನನ್ನು ಬ್ರಾಹ್ಮಣನೆಂದು ಕರೆಯಬಹುದೇ? ಆಗ ಬ್ರಾಹ್ಮಣನಲ್ಲಿರಬೇಕದಾದುದನ್ನು ಯಾವ ಸುಳ್ಳೂ ಇರದಂತೆ ವಿವರಿಸಬಹುದೇ?”
“ಸಾಧ್ಯ, ಗೋತಮ; ಇವುಗಳಲ್ಲಿ ಬಣ್ಣವನ್ನು ಬಿಟ್ಟುಬಿಡಬಹುದು ವರ್ಣವು ಏನನ್ನು ತಾನೇ ಮಾಡುತ್ತದೆ? ಗೋತಮ, ತಾಯಿತಂದೆಗಳೆರಡು ಕಡೆಗಳಿಂದಲೂ ಒಳ್ಳೆಯ ವಂಶದವನಾಗಿ ಏಳು ತಲೆಗಳಿಂದಲೂ ಶುದ್ಧವಾದ ಕಳಂಕರಹಿತವಾದ ಯಾವ ಕೆಟ್ಟ ಹೆಸರೂ ಇಲ್ಲದವರ ಉದರದಲ್ಲಿ ಜನಿಸಿರುವುದು, ಮಂತ್ರಗಳನ್ನು ತಿಳಿದವನೂ ಮಂತ್ರಗಳನ್ನು ಪಠಿಸುವವನೂ ಆಗಿದ್ದು, ಮೂರು ವೇದಗಳನ್ನೂ ಅದರ ಅಕ್ಷರಗಳಲ್ಲಿ ಅಲ್ಪವಾದ ಭೇದವಿದ್ದರೂ ಅದನ್ನು ತಿಳಿಯುವವನೂ, ಐದು ಇತಿಹಾಸಗಳನ್ನು ಬಲ್ಲವನೂ, ಪದಗಳನ್ನು ಸರಿಯಾಗಿ ಬಳಸಬಲ್ಲವನೂ, ವೆಯ್ಯಾಕರಣಿಯೂ, ಲೋಕಾಯತ ಮಹಾ ಪುರುಷರ ಲಕ್ಷಣಗಳನ್ನು ತಿಳಿದಿರುವವನೂ ಆಗಿರುವುದು; ಶೀಲವಂತನೂ ಶೀಲವನ್ನು ವೃದ್ಧಿಸಿಕೊಳ್ಳುತ್ತಿರುವವನೂ ಶೀಲವನ್ನು ವೃದ್ಧಿಸುವ ಜ್ಞಾನವನ್ನು ಪಡೆದಿರುವವನೂ ಆಗಿರುವುದು; ಪಂಡಿತನೂ, ಮೇಧಾವಿಯೂ ದರ್ಭೆಯನ್ನು ಹಿಡಿಯುವುದರಲ್ಲಿ ಪ್ರಥಮನೂ (ಅಥವಾ ದ್ವಿತೀಯನೂ) ಆಗಿರುವುದು- ಈ ನಾಲ್ಕು ಅಂಶಗಳನ್ನು ಪಡೆದಿರುವವನನ್ನು ಬ್ರಾಹ್ಮಣನೆಂದು ಬ್ರಾಹ್ಮಣರು ಕರೆಯುತ್ತಾರೆ. ಬ್ರಾಹ್ಮಣನಲ್ಲಿ ಇರಬೇಕಾದುದನ್ನು ಹೀಗೇ ವರ್ಣಿಸುವಾಗ ಯಾವ ಸುಳ್ಳೂ ಇರುವುದಿಲ್ಲ.”
“ಬ್ರಾಹ್ಮಣ, ಈ ನಾಲ್ಕು ಅಂಶಗಳಲ್ಲಿ ಒಂದನ್ನು ಬಿಟ್ಟು ಉಳಿದ ಮುರು ಅಂಶಗಳಿರುವ ಯಾವನಾದರೂ ಒಬ್ಬನನ್ನು ಬ್ರಾಹ್ಮಣನೆಂದು ಕರೆಯಬಹುದೆ? ಆಗ ಬ್ರಾಹ್ಮಣನಲ್ಲಿ ಇರಬೇಕಾದುದೆಲ್ಲವನ್ನೂ ಯಾವ ಸುಳ್ಳೂ ಇರದಂತೆ ವಿವರಿಸಬಹುದೆ?”
“ಸಾಧ್ಯ, ಗೋತಮ; ನಾಲ್ಕು ಅಂಶಗಳಲ್ಲಿ ಮಂತ್ರವನ್ನು ಬಿಟ್ಟುಬಿಡಬಹದು. ಮಂತ್ರವು ಏನನ್ನು ತಾನೇ ಮಾಡಬಲ್ಲದು? ತಾಯಿ ತಂದೆಗಳೆರಡು ಕಡೆಗಳಿಂದಲೂ ಒಳ್ಳೆಯ ವಂಶದವನಾಗಿದ್ದು ಏಳು ತಲೆಗಳಿಂದಲೂ ಶುದ್ಧವಾದ ಕಳಂಕ ರಹಿತವಾದ ಯಾವ ಕೆಟ್ಟ ಹೆಸರೂ ಇಲ್ಲದವರ ಉದರದಲ್ಲಿ ಜನಿಸಿರುವುದು; ಶೀಲವಂತನೂ, ಶೀಲವನ್ನು ವೃದ್ಧಿಸಿಕೊಳ್ಳುತ್ತಿರುವವನೂ ಶೀಲವನ್ನು ವೃದ್ದಿಸುವ ಜ್ಞಾನವನ್ನು ಪಡೆದಿರುವವನೂ ಆಗಿರುವುದು, ಪಂಡಿತನೂ, ಮೇಧಾವಿಯೂ ದರ್ಬೆಯನ್ನು ಹಿಡಿಯುವುದರಲ್ಲಿ ಪ್ರಥಮನೂ (ಅಥವಾ ದ್ವಿತೀಯನೂ) ಆಗಿರುವುದು- ಈ ಮೂರು ಅಂಶಗಳನ್ನು ಪಡೆದಿರುವವನನ್ನು ಬ್ರಾಹ್ಮಣನೆಂದು ಬ್ರಾಹ್ಮಣರು ಕರೆಯುತ್ತಾರೆ. ಬ್ರಾಹ್ಮಣನಲ್ಲಿ ಇರಬೇಕಾದುದನ್ನು ಹೀಗೇ ವರ್ಣಿಸುವಾಗ ಯಾವ ಸುಳ್ಳೂ ಇರುವುದಿಲ್ಲ.”
“ಬ್ರಾಹ್ಮಣ, ಈ ಮೂರು ಅಂಶಗಳಲ್ಲಿ ಒಂದನ್ನು ಬಿಟ್ಟು ಉಳಿದ ಎರಡು ಅಂಶಗಳನ್ನು ಹೊಂದಿರುವ ಯಾವನಾದರೂ ಒಬ್ಬನನ್ನು ಬ್ರಾಹ್ಮಣನೆಂದು ಕರೆಯುಬಹುದೆ? ಆಗ ಬ್ರಾಹ್ಮಣನಲ್ಲಿರಬೇಕಾದುದನ್ನು ಯಾವ ಸುಳ್ಳೂ ಇರದಂತೆ ವಿವರಿಸಬಹುದೇ?”
“ಸಾಧ್ಯ, ಗೋತಮ; ಮೂರು ಅಂಗಗಳಲ್ಲಿ ಜಾತಿಯನ್ನು ಬಿಟ್ಟು ಬಿಡಬಹುದು. ಜಾತಿಯು ಏನನ್ನು ತಾನೇ ಮಾಡಬಲ್ಲದು. ಶೀಲವಂತನೂ ಶೀಲವನ್ನು ವೃದ್ಧಿಸಿಕೊಳ್ಳುತ್ತಿರುವವನೂ, ಶೀಲವನ್ನು ವೃದ್ಧೀಸುವ ಜ್ಞಾನವನ್ನು ಪಡೆದಿರುವವನೂ ಆಗಿರುವುದು, ಪಂಡಿತನೂ, ಮೇಧಾವಿಯು ದರ್ಬೆಯನ್ನು ಹಿಡಿಯುವುದರಲ್ಲಿ ಪ್ರಥಮ(ಅಥವಾ ದ್ವಿತೀಯ) ಆಗಿರುವುದು- ಈ ಎರಡು ಅಂಗಗಳನ್ನು ಪಡೆದಿರುವವನು ಬ್ರಾಹ್ಮಣನೆಂದು ಬ್ರಾಹ್ಮಣರು ಕರೆಯುತ್ತಾರೆ. ಬ್ರಾಹ್ಮಣರಲ್ಲಿರಬೇಕಾದುದನ್ನು ಹೀಗೆ ವರ್ಣಿಸುವಾಗ ಯಾವ ಸುಳ್ಳೂ ಇರುವುದಿಲ್ಲ.
ಹೀಗೇ ಹೇಳಿದ ಸೋಣದಂಡ ಬ್ರಾಹ್ಮಣನನ್ನು ಕುರಿತು ಆ ಬ್ರಾಹ್ಮಣರು ಹೀಗೆಂದರು-“ಸೋಣದಂಡನು ಹೀಗೆ ಹೇಳಬಾರದು; ಸೋಣದಂಡನು ಹೀಗೆ ಹೇಳಬಾರದು. ಸೋಣದಂಡನು ನಮ್ಮ ಬಣ್ಣವನ್ನು, ನಮ್ಮ ಮಂತ್ರಗಳನ್ನೂ ನಮ್ಮ ಜಾತಿಯನ್ನೂ ಜರಿಯುತ್ತಿದ್ದಾನೆ. ಸೋಣದಂಡನು ಸಮಣಗೋತಮರ ವಾದವನ್ನೇ ಅನುಸರಿಸುತ್ತಿದ್ದಾನೆ.”
ಆಗ ಭಗವಾನರು ಬ್ರಾಹ್ಮಣರಿಗೆ ಹೀಗೆ ಹೇಳಿದರು- “ಬ್ರಾಹ್ಮಣರಾದ ನಿಮಗೆ-‘ಸೋಣದಂಡ ಬ್ರಾಹ್ಮಣನು ತಿಳಿದವನಲ್ಲ. ಅಕಲ್ಯಾಣವಾದ ಮಾತುಗಳನ್ನು ಆಡುವವನು, ದುರ್ಪ್ರಜ್ಞೆಯುಳ್ಳವನು, ಸೋಣದಂಡ ಬ್ರಾಹ್ಮಣನು ಸಮಣ ಗೋತಮನ ಜೊತೆಯಲ್ಲಿ ಪ್ರತಿ ಮಾತನಾಡಲಾರದವನಾಗಿದ್ದಾನೆಂದು’ ಅನ್ನಿಸಿದರೆ ಸೋಣದಂಡನು ಸುಮ್ಮನೆ ಇರಲಿ. ನೀವೇ ನನ್ನ ಜೊತೆಯಲ್ಲಿ ವಾದಿಸಬಹುದು. ಬ್ರಾಹ್ಮಣರಾದ ನಿಮಗೆ- ‘ಸೋಣದಂಡ ಬ್ರಾಹ್ಮಣನು ಬಹುಶ್ರುತನು, ಕಲ್ಯಾಣವಾದ ಮಾತುಗಳನ್ನಾಡುವವನು, ಪಂಡಿತನು, ಸಮಣ ಗೋತಮನ ಜೊತೆಯಲ್ಲಿ ವಾದ ಮಾಡಬಲ್ಲವನೆಂದು’ ಅನ್ನಿಸಿದರೆ ನೀವು ಸುಮ್ಮನೆ ಇರಿ. ಸೋಣದಂಡನು ನನ್ನೊಂದಿಗೆ ವಾದಿಸುತ್ತಾನೆ.”
ಹೀಗೆ ಹೇಳಿದ ಭಗವಾನರನ್ನು ಕುರಿತು ಸೋಣದಂಡ ಬ್ರಾಹ್ಮಣನು ಹೀಗೆಂದನು-“ ಗೋತಮರು ಸುಮ್ಮನಿರಲಿ, ಮೌನವಾಗಿರಲಿ, ನಾನೇ ಸಹಧರ್ಮೀಯರೊಂದಿಗೆ ವಾದಿಸುತ್ತೇನೆ.” ಆಮೇಲೆ ಸೋಣದಂಡನು ಬ್ರಾಹ್ಮಣರನ್ನು ಕುರಿತು “ಹಿರಿಯರಾದವರು ಹೀಗೆ ಹೇಳುವುದು ಬೇಡ. ಹಿರಿಯರಾದವರು ಹೀಗೆ ಹೇಳುವುದು ಬೇಡ- ‘ ಸೋಣದಂಡನು ಬಣ್ಣವನ್ನು ಜರಿಯುತ್ತಾನೆ; ಮಂತ್ರವನ್ನು ಜರಿಯುತ್ತಾನೆ, ಜಾತಿಯನ್ನು ಜರಿಯುತ್ತಾನೆ, ಸೋಣದಂಡನು ಗೋತಮನ ವಾದವನ್ನು ಅನುಸರಿಸುತ್ತಾನೆ’ ಎಂದು. ನಾನು ಬಣ್ಣವನ್ನಾಗಲೀ, ಮಂತ್ರವನ್ನಾಗಲೀ, ಜಾತಿಯನ್ನಾಗಲೀ ಜರಿಯುತ್ತಿಲ್ಲ.’ ಎಂದನು.
ಆ ಸಮಯದಲ್ಲಿ ಸೋಣದಂಡ ಬ್ರಾಹ್ಮಣನ ಸೋದರಿಯ ಮಗನು ಆ ಜನರ ಮಧ್ಯದಲ್ಲಿ ಕುಳಿತಿದ್ದನು. ಅವನ ಹೆಸರು ಅಂಗಕ. ಅವನು ಯುವಕ. ಆಗ ಸೋಣದಂಡನು ಆ ಬ್ರಾಹ್ಮಣರನ್ನು “ನನ್ನ ತಂಗಿಯ ಮಗನಾದ ಯುವಕ ಅಂಗಕನನ್ನು ಹಿರಿಯರಾದ ನೀವು ನೋಡುತ್ತಿರುವಿರಾ?” “ಹೌದು”.
“ಯುವಕ ಅಂಗಕನು ರೂಪವಂತನೂ ನೋಡಿದಾಗ ಸಂತೋಷವನ್ನುಂಟುಮಾಡುವವನೂ ವಿಶ್ವಾಸವನ್ನುಂಟು ಮಾಡುವವನೂ ಉತ್ಕೃಷ್ಠವಾದ ಬಣ್ಣವನ್ನು ಹೊಂದಿರುವವನೂ ಬ್ರಹ್ಮನ ವರ್ಣವನ್ನು ಪಡೆದಿರುವವನೂ, ಬ್ರಹ್ಮನ ವರ್ಚಸ್ಸನ್ನು ಹೊಂದಿರುವವನೂ ನೋಡಲು ಗಂಭೀರವಂತನೂ ಆಗಿದ್ದಾನೆ. ಇಲ್ಲಿರುವವರಲ್ಲಿ ಸಮಣ ಗೋತಮರ ಹೊರತು ಯಾರು ಬಣ್ಣದಲ್ಲಿ ಅವನಿಗೆ ಸಮನಾಗಿಲ್ಲ. ಯುವಕ ಅಂಗಕನು ಮಂತ್ರಗಳನ್ನು ತಿಳಿದವನೂ ಮಂತ್ರಗಳನ್ನು ಪಠಿಸುವವನೂ ಆಗಿದ್ದು, ಮೂರು ವೇದಗಳನ್ನೂ ಅವುಗಳ ಅಕ್ಷರಗಳಲ್ಲಿ ಅಲ್ಪವಾದ ಭೇದವಾದರೂ ಅದನ್ನು ತಿಳಿಯುವವನೂ, ಐದು ಇತಿಹಾಸಗಳನ್ನು ಬಲ್ಲವನೂ, ಪದಗಳನ್ನು ಸರಿಯಾಗಿ ಬಳಸಬಲ್ಲವನೂ, ವೆಯ್ಯಾಕರನೀಯೂ, ಲೋಕಾಯತ ಮಹಾಪುರಷರ ಲಕ್ಷಣಗಳನ್ನು ತಿಳಿದಿರುವವನು ಆಗಿದ್ದಾನೆ. ನಾನೇ ಅವನಿಗೆ ಮಂತ್ರಗಳನ್ನು ಹೇಳಿಕೊಟ್ಟಿದ್ದೇನೆ ಯುವಕ ಅಂಗಕನು ತಾಯಿತಂದೆಗಳೆರಡು ಕಡೆಗಳಿಂದಲೂ ಒಳ್ಳೆಯ ವಂಶದವನಾಗಿದ್ದು, ಏಳು ತಲೆಗಳಿಂದಲೂ ಶುದ್ಧವಾದ, ಕಳಂಕರಹಿತವಾದ, ಯಾವ ಕೆಟ್ಟ ಹೆಸರೂ ಇಲ್ಲದವರ ಉದರದಲ್ಲಿ ಹುಟ್ಟಿದವನಾಗಿದ್ದಾನೆ. ಅವನ ಮಾತಾ ಪಿತೃಗಳು ನನಗೇ ಗೊತ್ತು. ಈ ಯುವಕ ಅಂಗಕನು ಪ್ರಾಣಿಹತ್ಯೆಯನ್ನು ಮಾಡಿದರೆ, ಕೊಡದಿದ್ದುದನ್ನು (ತನಗೆ ಸೇರಿಲ್ಲದುದನ್ನು) ತೆಗೆದು ಕೊಂಡರೆ ಪರನಾರಿಯ ಹತ್ತಿರಕ್ಕೆ ಹೋದರೆ ಸುಳ್ಳನ್ನು ಹೇಳಬಹುದು. ಮದ್ಯಪಾನವನ್ನು ಮಾಡಿದರೆ, ಬಣ್ಣವನ್ನಾಗಲೀ, ಮಂತ್ರವಾಗಲೀ, ಜಾತಿಯಾಗಲೀ, ಏನನ್ನು ತಾನೇ ಮಾಡುತ್ತದೆ? ಶೀಲವಂತ ಶೀಲವನ್ನು ವೃದ್ಧಿಸಿಕೊಳ್ಳುತ್ತಿರುವವನೂ, ಶೀಲವನ್ನು ವೃದ್ಧಿಸುವ ಜ್ಞಾನವನ್ನು ಪಡೆದಿರುವವವನೂ ಆಗಿದ್ದು ಪಂಡಿತನೂ, ಮೇಧಾವಿಯೂ,ದರ್ಬೆಯನ್ನು ಹಿಡಿಯುವುದರಲ್ಲಿ ಪ್ರಥಮನೋ ದ್ವಿತೀಯನೋ ಆಗಿದ್ದು ಈ ಎರಡು ಅಂಶಗಳಿರುವವನನ್ನು ಮಾತ್ರ ಬ್ರಾಹ್ಮಣರು ಬ್ರಾಹ್ಮಣನೆಂದು ಕರೆಯುತ್ತಾರೆ. ಬ್ರಾಹ್ಮಣನಲ್ಲಿರ ಬೇಕಾದುದನ್ನು ಹೀಗೆ ವರ್ಣಿಸುವಾಗ ಯಾವ ಸುಳ್ಳು ಇರುವುದಿಲ್ಲ.
ಶೀಲ ಮತ್ತು ಅನುಭವ ಜ್ಞಾನಗಳ ಬಗ್ಗೆ
“ಬ್ರಾಹ್ಮಣ, ಈ ಎರಡು ಅಂಗಗಳಲ್ಲಿ ಒಂದನ್ನು ಬಿಟ್ಟು ಒಂದೇ ಅಂಶವನ್ನು ಹೊಂದಿರುವವನನ್ನು ಬ್ರಾಹ್ಮಣನೆಂದು ಕರೆಯುಬಹುದೆ? ಆಗ ಬ್ರಾಹ್ಮಣನಲ್ಲಿರಬೇಕಾದುದನ್ನು ಯಾವ ಸುಳ್ಳೂ ಇರದಂತೆ ವಿವರಿಸಬಹುದೇ?”
“ಸಾಧ್ಯವಿಲ್ಲ, ಗೋತಮರೆ. ಶೀಲವು ಪಞ್ಞಾ(ಪ್ರಜ್ಞೆ)ಯನ್ನು ಶುದ್ಧಗೊಳಿಸುತ್ತದೆ. ಪಞ್ಞವು ಶೀಲವನ್ನು ಶುದ್ದಗೊಳಿಸುತ್ತದೆ. ಶೀಲವಿದ್ದ ಕಡೆ ಪ್ರಜ್ಞೆ ಇರುತ್ತದೆ. ಪ್ರಜ್ಞೆ ಇದ್ದ ಕಡೆ ಶೀಲವಿರುತ್ತದೆ. ಶೀಲವಂತನು ಪಞ್ಞವನ್ನೂ ಹೊಂದಿರುತ್ತಾನೆ. ಪಞ್ಞವಂತನು ಶೀಲವನ್ನು ಪಡೆದಿರುತ್ತಾನೆ. ಲೋಕದಲ್ಲಿ ಶೀಲ ಪಞ್ಞಗಳಿಗೆ ಅಗ್ರತೆ ಇದೆ. ಇದು ಹೇಗೆಂದರೆ, ಗೋತಮ, ಹಸ್ತವನ್ನು ಹಸ್ತದಿಂದ ತೊಳೆದುಕೊಳ್ಳುವಂತೆ, ಪಾದವನ್ನು ಪಾದದಿಂದ ತೊಳೆದುಕೊಳ್ಳುವಂತೆ ಶೀಲವು ಪಞ್ಞಾವನ್ನೂ, ಪಞ್ಞವು ಶೀಲವನ್ನೂ ಶುದ್ಧಿಕರಿಸುತ್ತವೆ. ಎಲ್ಲಿ ಶೀಲವಿದೆಯೋ ಅಲ್ಲಿ ಪಞ್ಞ ಇರುತ್ತದೆ. ಎಲ್ಲಿ ಪಞ್ಞ ಇರುತ್ತದೆಯೋ ಅಲ್ಲಿ ಶೀಲ ಇರುತ್ತದೆ. ಶೀಲವಂತನು ಪಞ್ಞವನ್ನೂ ಹೊಂದಿರುತ್ತಾನೆ. ಪಞ್ಞವಂತನು ಶೀಲವನ್ನು ಪಡೆದಿರುತ್ತಾನೆ. ಲೋಕದಲ್ಲಿ ಶೀಲ ಪಞ್ಞಗಳಿಗೆ ಅಗ್ರತೆ ಇದೆ.”
“ಅದು ಸರಿ, ಬ್ರಾಹ್ಮಣ, ಅದು ಸರಿ. ಬ್ರಾಹ್ಮಣ ಶೀಲವು ಪಞ್ಞವನ್ನೂ, ಪಞ್ಞವು ಶೀಲವನ್ನೂ ಶುದ್ದಗೊಳಿಸುತ್ತವೆ. ಎಲ್ಲಿ ಶೀಲವಿದೆಯೋ, ಅಲ್ಲಿ ಪ್ರಞ್ಞ ಇರುತ್ತದೆ. ಎಲ್ಲಿ ಪಞ್ಞ ಇರುತ್ತದೆಯೋ ಅಲ್ಲಿ ಶೀಲ ಇರುತ್ತದೆ. ಲೋಕದಲ್ಲಿ ಶೀಲ ಪಞ್ಞಗಳಿಗೆ ಅಗ್ರತೆ ಇದೆ. ಹೇಗೆಂದರೆ, ಬ್ರಾಹ್ಮಣ ಹಸ್ತದಿಂದ ಹಸ್ತವನ್ನು ತೊಳೆದುಕೊಳ್ಳುವಂತೆ, ಪಾದದಿಂದ ಪಾದವನ್ನು ತೊಳೆದುಕೊಳ್ಳುವಂತೆ, ಶೀಲವು ಪಞ್ಞವನ್ನೂ, ಪಞ್ಞವು ಶೀಲವನ್ನೂ ಶುದ್ಧಿಗೊಳಿಸುತ್ತವೆ. ಎಲ್ಲಿ ಶೀಲವಿದೆಯೋ ಅಲ್ಲಿ ಪಞ್ಞ ಇರುತ್ತದೆ. ಎಲ್ಲಿ ಪಞ್ಞ ಇರುತ್ತದೆಯೋ ಅಲ್ಲಿ ಶೀಲ ಇರುತ್ತದೆ. ಶೀಲವಂತನ ಪಞ್ಞವನ್ನು ಹೊಂದಿರುತ್ತಾನೆ. ಪಞ್ಞವಂತನು ಶೀಲವನ್ನು ಪಡೆದಿರುತ್ತಾನೆ. ಲೋಕದಲ್ಲಿ ಶೀಲ ಪಞ್ಞಗಳಿಗೆ ಅಗ್ರತೆ ಇದೆ.”
“ಬ್ರಾಹ್ಮಣ, ಶೀಲವೆಂದರೆ ಏನು? ಪಞ್ಞ ಎಂದರೆ ಏನು?”
“ಗೋತಮ, ನಾವು ಅಷ್ಟಷ್ಟು ಮಾತ್ರ ಅರ್ಥಮಾಡಿಕೊಂಡಿದ್ದೇವೆ. ಭಗವಂತ ಗೋತಮರು ಅದರ ಅರ್ಥವನ್ನು ವಿವರಿಸಿ ಹೇಳುವುದು ಸಾಧುವಾದುದು.”
“ಬ್ರಾಹ್ಮಣ, ಮನಸ್ಸಿಟ್ಟು ಕೇಳು. ವಿವರಿಸುತ್ತೇನೆ.”
“ಹಾಗೆಯೇ ಆಗಲಿ” ಎಂದು ಸೋಣದಂಡ ಬ್ರಾಹ್ಮಣನು ಭಗವಾನರಿಗೆ ಭಿನ್ನವಿಸಿಕೊಂಡನು.
ಭಗವಾನರು ಹೀಗೆ ವಿವರಿಸಿದರು:
“ತಥಾಗತರು ಲೋಕದಲ್ಲಿ ಅರಹಂತರಾಗಿ ಉದಯಿಸುತ್ತಾರೆ.” [ಸಾಮಞ್ಞಫಲಸುತ್ತದೆ 40 ನೆಯ ಪ್ಯಾರದಿಂದ].... ಬ್ರಾಹ್ಮಣ, ಒಬ್ಬ ಭಿಕ್ಷುವು ಹೀಗೆ ಶೀಲಸಂಪನ್ನನಾಗುತ್ತಾನೆ” [63ನೆಯ ಪ್ಯಾರದವರೆಗೆ] [ಪುನಃ 77 ನೆಯ ಪ್ಯಾರಾದಿಂದ]... [100ನೆಯ ಪ್ಯಾರದ ‘ ವಿಮುಕ್ತ ಜ್ಞಾನ ಬರುತ್ತದೆ’ ವರೆಗೆ].
ಇದೇ, ಬ್ರಾಹ್ಮಣ, ಪಞ್ಞ”.
ಸೋಣದಂಡ ಧರ್ಮವನ್ನು ಅರಿತು ಉಪಾಸಕನಾಗುವುದು
ಹೀಗೆ ಹೇಳಿದ ಭಗವಾನರಿಗೆ ಸೋಣದಂಡನೂ ಇಂತೆಂದನು- ಗೋತಮ, ಬಹು ಚೆನ್ನಾಗಿದೆ, ಗೋತಮ ಬಹು ಚೆನ್ನಾಗಿದೆ. ಗೋತಮ ಕೆಳಗೆ ಬಿದ್ದಿರುವುದನ್ನು ಎತ್ತಿ ನಿಲ್ಲಿಸಿದಂತೆ, ಅಡಗಿರುವುದನ್ನು ಬಯಲು ಮಾಡುವಂತೆ, ದಾರಿತಪ್ಪಿದವನಿಗೆ ಸರಿಯಾದ ದಾರಿಯನ್ನು ತೋರಿಸುವಂತೆ ಕತ್ತಲೆಯಲ್ಲಿ ಸಿಕ್ಕಿಕೊಂಡಿರುವವನಿಗೆ ದೀಪ ಹಿಡಿದಂತೆ, ಕಣ್ಣಿರುವವನು ರೂಪಗಳನ್ನು ನೋಡುವಂತೆ ಅನೇಕ ಪರಿಯಲ್ಲಿ ಧಮ್ಮವು ಪ್ರಕಾಶವಾಗಿದೆ. ನಾನು ಗೋತಮರಿಗೆ ಶರಣು ಹೋಗುತ್ತೇನೆ. ಧಮ್ಮಕ್ಕೂ, ಭಿಕ್ಖು ಸಂಘಕ್ಕೂ ಶರಣು ಹೋಗುತ್ತೆನೆ. ಈ ದಿನದಿಂದ ನನ್ನ ಪ್ರಾಣವಿರುವವರೆಗೂ ಗೋತಮರು ಶರಣಾಗತನಾದ ನನ್ನನ್ನು ಉಪಾಸಕನನ್ನಾಗಿ ಸ್ವೀಕರಿಸಲಿ. ನಾಳೆಯ ದಿನ ಗೋತಮರು ಭಿಕ್ಷುಸಂಘದೊಂದಿಗೆ ನನ್ನ ಮನೆಯಲ್ಲಿ ಆಹಾರವನ್ನು ಸ್ವೀಕರಿಸಲಿ.” ಭಗವಾನರು ಮೌನದಿಂದ ಅಹ್ವಾನವನ್ನು ಸ್ವೀಕರಿಸಿದರು.
ಭಗವಾನರಿಗೆ ಆಹ್ವಾನವನ್ನು ಕೊಟ್ಟ ಮೇಲೆ ಸೋಣದಂಡ ಬ್ರಾಹ್ಮಣನು ಆಸನದಿಂದ ಎದ್ದು ಅವರಿಗೆ ನಮಸ್ಕರಿಸಿ ಪ್ರದಕ್ಷಿಣೆ ಮಾಡಿ ಅಲ್ಲಿಂದ ಹೋದನು. ಆ ರಾತ್ರಿ ಕಳೆದ ನಂತರ ತನ್ನ ಮನೆಯಲ್ಲಿ ಖಾದ್ಯ ಪದಾರ್ಥಗಳನ್ನೂ ಅನ್ನ ಮೇಲೋಗರಗಳನ್ನೂ ಮಾಡಿಸಿ ಭಗವಾನರಲ್ಲಿಗೆ ಸರಿಯಾದ ಕಾಲಕ್ಕೆ ಹೋದನು: “ಗೋತಮ, ಊಟವು ಸಿದ್ದವಾಗಿದೆ;” ಪೂರ್ವಾಹ್ನ ಸಮಯವಾಗಿತ್ತು. ಆಗ ಭಗವಾನರು ಪಾತ್ರ ಚೀವರಗಳನ್ನು ತೆಗೆದುಕೊಂಡು ಭಿಕ್ಷು ಸಂಘದೊಂದಿಗೆ ಸೋಣದಂಡನ ನಿವಾಸಕ್ಕೆ ಹೋದರು. ಅಲ್ಲಿ ತಮಗಾಗಿ ಪ್ರತ್ಯೇಕವಾಗಿ ಸಿದ್ಧಪಡಿಸಿದ್ದ ಆಸನದಲ್ಲಿ ಕುಳಿತರು. ಸೋಣದಂಡ ಬ್ರಾಹ್ಮಣನು ಬುದ್ಧನಿಗೂ ಭಿಕ್ಷು ಸಂಘಕ್ಕೂ ಉತ್ತಮವಾದ ಖಾದ್ಯ ಪದಾರ್ಥಗಳನ್ನೂ, ಅನ್ನ ಮೇಲೋಗರಗಳನ್ನೂ ಅವರಿಗೆ ತೃಪ್ತಿಯಾಗುವಷ್ಟು ಆರ್ಪಿಸಿದನು.
ಊಟವನ್ನು ಮುಗಿಸಿದ ಭಗವಾನರು ತಮ್ಮ ಕೈ ಮತ್ತು ಪಾತ್ರ್ರೆಗಳನ್ನು ತೊಳೆದುಕೊಂಡರು. ಆಮೇಲೆ ಸೋಣದಂಡನು ಅವರ ಪಕ್ಕದಲ್ಲಿಯೇ ಎತ್ತರವಾಗಿಲ್ಲದ ಒಂದು ಆಸನದ ಮೇಲೆ ಕುಳಿತನು. ಒಂದು ಕಡೆ ಕುಳಿತುಕೊಂಡ ಮೇಲೆ ಸೋಣದಂಡನು ಭಗವಾನರಿಗೆ ಹೀಗೆ ಹೇಳಿದನು: “ ಗೋತಮ, ನಾನು ಜನರ ನಡುವೆ ಇದ್ದಾಗ ಆಸನದಿಂದ ಎದ್ದು ನಮಸ್ಕರಿಸಿದರೆ, ಆ ಜನರು ನನ್ನನ್ನು ಹಳಿಯುತ್ತಾರೆ. ಯಾರನ್ನು ಜನರು ಹಳಿಯುತ್ತಾರೋ ಅವನ ಯಶಸ್ಸು ಕಡಿಮೆಯಾಗುತ್ತದೆ. ಯಾರ ಯಶಸ್ಸು ಹಾಳಾಗುತ್ತದೆಯೋ ಅವನ. ಆದಾಯವೂ ಕಡಿಮೆಯಾಗುತ್ತದೆ. ಯಶಸ್ಸನ್ನು ಕಳೆದುಕೊಂಡ ನಮಗೆ ಆದಾಯವು ಕಡಿಮೆಯಾಗುತ್ತದೆ. ನಾನು ಜನರ ನಡುವೆ ಇದ್ದಾಗ ನನ್ನ ಕೈ ಜೋಡಿಸಿದರೆ, ಗೋತಮರಿಗೆ ಎದ್ದು ಗೌರವ ತೋರಿಸಿದನೆಂದೇ ತಿಳಿಯಬೇಕು. ಜನರ ನಡುವಿದ್ದಾಗ ನಾನು ನನ್ನ ಶಿರ ವಸ್ತ್ರವನ್ನು ತೆಗೆದರೆ ತಲೆಬಾಗಿ ನಮಸ್ಕರಿಸಿದನೆಂದೇ ತಿಳಿಯಬೇಕು. ನಾನು ಯಾವುದಾದರೂ ಯಾನದಲ್ಲಿದ್ದಾಗ ಅದರಿಂದ ಇಳಿದು ಭಗವಾನರಿಗೆ ನಮಸ್ಕರಿಸಿದರೆ ಜನರು ನನ್ನನ್ನು ಹಳಿಯುತ್ತಾರೆ. ಯಾರನ್ನು ಜನರು ಹಳಿಯುತ್ತಾರೆಯೋ ಅವನ ಯಶಸ್ಸು ಕುಂದುತ್ತದೆ.; ಯಾರ ಯಶಸ್ಸು ಕುಂದುತ್ತದೋ ಅವರ ಆದಾಯವು ಕಡಿಮೆಯಾಗುತ್ತದೆ. ಯಶಸ್ಸನ್ನು ಕಳೆದುಕೊಂಡ ನಮಗೆ ಆಧಾಯವು ಕಡಿಮೆಯಾಗುತ್ತದೆ. ಯಾನದಲ್ಲಿದ್ದಾಗ ನಾನು ಚಾಟಿಯ ಕೋಲನ್ನು ಕೆಳಗೆ ಮಾಡಿದರೆ ನಾನು ಯಾನದಿಂದ ಇಳಿದೆನೆಂದೇ ಗೋತಮರು ಭಾವಿಸಬೇಕು. ಯಾನದಲ್ಲಿದ್ದಾಗ ನಾನು ಛತ್ರಿಯನ್ನು ಕೆಳಗೆ ಮಾಡಿದರೆ ತಲೆಬಾಗಿ ನಮಸ್ಕರಿಸಿದೆನೆಂದೇ “ ಗೋತಮರು ಭಾವಿಸಬೇಕು.”
ಆಮೇಲೆ ಭಗವಾನರು ಸೋಣದಂಡ ಬ್ರಾಹ್ಮಣನಿಗೆ ಧಮ್ಮವನ್ನು ಬೋಧಿಸಿ ಅವನನ್ನು ತೃಪ್ತಿಗೊಳಿಸಿ ಉತ್ತೇಜಿಸಿ ಸಂತೋಷಪಡಿಸಿದರು. ಅನಂತರ ಆಸನದಿಂದ ಎದ್ದು ಹೋದರು.
ಇಲ್ಲಿಗೆ ಸೋಣದಂಡ ಸುತ್ತ ಮುಗಿಯಿತು.
ಟಿಪ್ಪಣಿಗಳು [3]
English
Deutsch
Việt Ngữ