1. ಶ್ರಮಣರಲ್ಲಿ ಪರರ ವಾದ ಶೂನ್ಯ
ಹೀಗೆ ನಾನು ಕೇಳಿದ್ದೇನೆ. ಒಂದುಸಲ ಭಗವಾನರು ಶ್ರಾವಸ್ತಿಯ ಹತ್ತಿರದ ಅನಾಥಪಿಂಡಿಕರ ಜೇತವನದಲ್ಲಿನ ವಿಹಾರದಲ್ಲಿ ತಂಗಿದ್ದರು. ಅಲ್ಲಿ ಭಗವಾನರು ಭಿಕ್ಷುಗಳನ್ನು ಸಂಬೋಧಿಸಿದರು- “ಭಿಕ್ಷುಗಳೇ” ಎಂದು. “ಭದನ್ತರೇ” ಎಂದು ಭಿಕ್ಷುಗಳು ಉತ್ತರಿಸಿದರು. ಭಗವಾನರು ಹೀಗೆ ಹೇಳಿದರು-
“ಭಿಕ್ಷುಗಳೇ, ಈತ (ಮೊದಲನೇ) ಶ್ರಮಣನು (ಸೋತಾಪನ್ನ), ಈತ ಎರಡನೇ ಶ್ರಮಣನು (ಸಕದಾಗಾಮಿ), ಈತ ಮೂರನೇ ಶ್ರಮಣನು (ಅನಾಗಾಮಿ), ಈತ ನಾಲ್ಕನೇ ಶ್ರಮಣನು (ಅರಹಂತ) ಪರರ ವಾದಗಳು ಈ ಶ್ರವಣರಿಂದ ಯಾವತ್ತೂ ಕೊನೆಯಾಗುತ್ತದೆ. ಭಿಕ್ಷುಗಳೇ, ಹೀಗೆಯೇ ಸರಿಯಾಗಿ ಸಿಂಹಘರ್ಜನೆಯನ್ನು ಗರ್ಜಿಸಿ166
2. ಭಿಕ್ಷುಗಳೇ, ಇಂತಹ ಒಂದು ಸಂದರ್ಭವಿರಬಹುದು, ಅನ್ಯಸಂಪ್ರದಾಯದ ಪರಿವ್ರಾಜಕರು ಹೀಗೆ ಹೇಳಬಹುದು- “ಆಯುಷ್ಮಂತರೇ, ಯಾವ ಆಶ್ವಾಸನೆಯಿಂದ, ಯಾವ ಬಲದಿಂದ ನೀವು ಹೀಗೆ ಹೇಳುತ್ತೀರಿ? ಇಲ್ಲಿ (ಮೊದಲನೇ) ಶ್ರಮಣನು, ಇಲ್ಲಿ ಎರಡನೇ ಶ್ರಮಣನು, ಇಲ್ಲಿ ಮೂರನೇ ಶ್ರಮಣನು, ಇಲ್ಲಿ ನಾಲ್ಕನೇ ಶ್ರಮಣನು (ಇರುವಾಗ) ಪರರ ವಾದಗಳು ಈ ಶ್ರಮಣರಿಂದ ಯಾವತ್ತೂ ಕೊನೆಯಾಯಿತು’ ಎಂದು. ಭಿಕ್ಷುಗಳೇ, ಈ ರೀತಿ ಹೇಳುವ ಬೇರೆ ಸಂಪ್ರದಾಯದ ಪರಿವ್ರಾಜಕರಿಗೆ ಹೀಗೆ ಉತ್ತರಿಸಬೇಕು- “ಆಯುಷ್ಮಂತನೇ, ಭಗವಾನರು ತಿಳಿದವರೂ ಕಂಡವರೂ ಅರಹಂತರೂ ಆದ ಸಮ್ಯಕ್‍ಸಂಬುದ್ಧರಿಂದ ಉಪದೇಶಿತವಾದ ನಾಲ್ಕು ಧರ್ಮಗಳು ಯಾವುವಿವೆಯೋ ಅವನ್ನು ನಾವು ನಮ್ಮಲ್ಲಿಯೇ ಕಂಡುಕೊಂಡು ಹೀಗೆ ಹೇಳುತ್ತೇವೆ ‘ಇಲ್ಲಿಯೇ... ಎಂದು. ಯಾವುವು ಆ ನಾಲ್ಕು? ಆಯುಷ್ಮಂತನೇ, ನಮಗೆ ಶಾಸ್ತ (ಬುದ್ಧ)ರಲ್ಲಿ ಅಚಲವಾದ ಶ್ರದ್ಧೆಯಿದೆ, ಧರ್ಮದಲ್ಲಿ ಅಚಲವಾದ ಶ್ರದ್ಧೆಯಿದೆ, ಶೀಲಗಳಲ್ಲಿ ಪರಿಪೂರ್ಣತೆಯಿದೆ; ಸಹಧರ್ಮಚಾರಿಗಳು ಗೃಹಸ್ಥರಾಗಿರಲಿ ಸನ್ಯಾಸಿಗಳಾಗಿರಲಿ ಸ್ನೇಹಿತರು ಪ್ರೀತಿಪಾತ್ರರೂ ಆಗಿದ್ದಾರೆ; ಆಯುಷ್ಮಂತರೇ, ಇವೇ ನಾಲ್ಕು ಧರ್ಮಗಳು, ಭಗವಾನರು ತಿಳಿದವರೂ ಕಂಡವರೂ ಅರಹಂತರೂ ಆದ ಸಮ್ಯಕ್ ಸಂಬುದ್ಧರಿಂದ ಉಪದೇಶಿತವಾದವು, ಅವನ್ನು ನಾವು ನಮ್ಮಲ್ಲಿಯೇ ಕಂಡುಕೊಂಡು ಹೀಗೆ ಹೇಳುತ್ತೇವೆ. ಇಲ್ಲಿಯೇ... ಎಂದು.
3. “ಭಿಕ್ಷುಗಳೇ, ಇಂತಹ ಒಂದು ಸಂದರ್ಭವಿರಬಹುದು, ಅನ್ಯ ಸಂಪ್ರದಾಯದ ಪರಿವ್ರಾಜಕರು ಹೀಗೆ ಹೇಳಬಹುದು- ‘ಆಯುಷ್ಮಂತರೇ, ಯಾರು ನಮ್ಮ ಶಾಸ್ತರೋ ಆ ಶಾಸ್ತರ ಮೇಲೆ ನಮಗೆ ಅಚಲವಾದ ಶ್ರದ್ಧೆಯದೆ, ಯಾವುದು ನಮ್ಮ ಧರ್ಮವೋ ಆ ಧರ್ಮದ ಮೇಲೆ ನಮಗೆ ಅಚಲವಾದ ಶ್ರದ್ಧೆಯಿದೆ, ಯಾವುವು ನಮ್ಮ ಶೀಲಗಳೋ ಆ ಶೀಲಗಳಲ್ಲಿ ನಮಗೆ ಪರಿಪೂರ್ಣತೆಯಿದೆ. ನಮಗೂ ಕೂಡ ಸಹಧರ್ಮಚಾರಿಗಳು-ಗೃಹಸ್ಥರು ಮತ್ತು ಸನ್ಯಾಸಿಗಳು-ಸ್ನೇಹಿತರೂ ಪ್ರೀತಿಪಾತ್ರರೂ ಆಗಿದ್ದಾರೆ. ಆಯುಷ್ಮಂತರೇ, ಇದರಲ್ಲಿ ನಮಗೂ ನಿಮಗೂ ಏನು ವಿಶೇಷವಾದದ್ದು, ಏನು ಹೆಚ್ಚಳ, ಏನು ವ್ಯತ್ಯಾಸ?’ ಎಂದು.
“ಭಿಕ್ಷುಗಳೇ, ಹೀಗೆ ಹೇಳುವ ಬೇರೆ ಸಂಪ್ರದಾಯದ ಪರಿವ್ರಾಜಕರಿಗೆ ಈ ರೀತಿ ಉತ್ತರಿಸಬೇಕು- ‘ಆಯುಷ್ಮಂತರೇ, ಹಾಗಾದರೆ ಗುರಿಯು ಒಂದೆಯೋ ಅಥವಾ ಗುರಿಗಳು ಅನೇಕವೋ?’ ಎಂದು.
“ಭಿಕ್ಷುಗಳೇ, ಸರಿಯಾಗಿ ಉತ್ತರಿಸುವಾಗ ಬೇರೆ ಸಂಪ್ರದಾಯದ ಪರಿವ್ರಾಜಕರು ಹೀಗೆ ಹೇಳಿಯಾರು- ‘ಆಯುಷ್ಮಂತರೇ, ಒಂದೇ ಗುರಿ, ಅನೇಕ ಗುರಿಗಳಿಲ್ಲ’ ಎಂದು.167
“ಮತ್ತೆ ಆಯುಷ್ಮಂತರೇ, ಆ ಗುರಿ ರಾಗಸಹಿತರಾದವರಿಗೋ ಅಥವಾ ರಾಗರಹಿರಾದವರಿಗೋ?’ ಎಂದು. ಭಿಕ್ಷುಗಳೇ, ಸರಿಯಾಗಿ ಉತ್ತರಿಸುವಾಗ ಬೇರೆ ಸಂಪ್ರದಾಯದ ಪರಿವ್ರಾಜಕರು ಹೀಗೆ ಹೇಳಿಯಾರು- ‘ಆಯುಷ್ಮಂತರೇ, ಆ ಗುರಿ ರಾಗರಹಿತರಾದವರಿಗೆ, ಆ ಗುರಿ ರಾಗಸಹಿತರಾದವರಿಗಲ್ಲ’ ಎಂದು.
“ಆಯುಷ್ಮಂತರೇ, ಆ ಗುರಿ ದ್ವೇಷ ಸಹಿತರಾದವರಿಗೋ ಅಥವಾ ದ್ವೇಷರಹಿತರಾದವರಿಗೋ?’ ಎಂದು. ಭಿಕ್ಷುಗಳೇ, ಸರಿಯಾಗಿ ಉತ್ತರಿಸುವಾಗ ಬೇರೆ ಸಂಪ್ರದಾಯದ ಪರಿವ್ರಾಜಕರು ಹೀಗೆ ಹೇಳಿಯಾರು- ‘ಆಯುಷ್ಮಂತರೇ, ಆ ಗುರಿ ದ್ವೇಷರಹಿರಾದವರಿಗೆ, ಆ ಗುರಿ ದ್ವೇಷಸಹಿತರಾದವರಿಗಲ್ಲ’ ಎಂದು.
“ಆಯುಷ್ಮಂತರೇ, ಆ ಗುರಿ ಮೋಹ ಸಹಿತರಾದವರಿಗೋ ಅಥವಾ ಮೋಹರಹಿತರಾದವರಿಗೋ?’ ಎಂದು. ಭಿಕ್ಷುಗಳೇ, ಸರಿಯಾಗಿ ಉತ್ತರಿಸುವಾಗ ಬೇರೆ ಸಂಪ್ರದಾಯದ ಪರಿವ್ರಾಜಕರು ಹೀಗೆ ಹೇಳಿಯಾರು- ‘ಆಯುಷ್ಮಂತರೇ, ಆ ಗುರಿ ಮೋಹರಹಿತರಾದವರಿಗೆ, ಆ ಗುರಿ ಮೋಹಸಹಿತರಾದವರಿಗಲ್ಲ’ ಎಂದು.
“ಆಯುಷ್ಮಂತರೇ, ಆ ಗುರಿ ತೃಷ್ಣಾಸಹಿತರಾದವರಿಗೋ ಅಥವಾ ತೃಷ್ಣಾರಹಿತರಾದವರಿಗೋ?’ ಎಂದು ಭಿಕ್ಷುಗಳೇ, ಸರಿಯಾಗಿ ಉತ್ತರಿಸುವಾಗ ಬೇರೆ ಸಂಪ್ರದಾಯದ ಪರಿವ್ರಾಜಕರು ಹೀಗೆ ಹೇಳಿಯಾರು- ‘ಆಯುಷ್ಮಂತರೇ, ಆ ಗುರಿ ತೃಷ್ಣಾರಹಿತರಾದವರಿಗೆ, ಆ ಗುರಿ ತೃಷ್ಣಾಸಹಿತರಾದವರಿಗಲ್ಲ’ ಎಂದು.
“ಆಯುಷ್ಮಂತರೇ, ಆ ಗುರಿ ಉಪಾದಾನ (ಅಂಟಿಕೊಳ್ಳುವಿಕೆ) ಸಹಿತರಾದವರಿಗೋ ಅಥವಾ ಉಪಾದಾನರಹಿತರಿಗೋ?’ ಎಂದು.
ಭಿಕ್ಷುಗಳೇ, ಸರಿಯಾಗಿ ಉತ್ತರಿಸುವಾಗ ಬೇರೆ ಸಂಪ್ರದಾಯದ ಪರಿವ್ರಾಜಕರು ಹೀಗೆ ಹೇಳಿಯಾರು- ‘ಆಯುಷ್ಮಂತರೇ, ಆ ಗುರಿ ಉಪಾದಾನರಹಿತರಾದವರಿಗೆ, ಆ ಗುರಿ ಉಪಾದಾನಸಹಿತರಾದವರಿಗಲ್ಲ’ ಎಂದು.
“ಆಯುಷ್ಮಂತರೇ, ಆ ಗುರಿ (ನಿರ್ವಾಣ) ದರ್ಶನವಿರುವವನಿಗೋ ಅಥವಾ (ನಿರ್ವಾಣ) ದರ್ಶನವಿಲ್ಲದವನಿಗೋ?’ ಎಂದು. ಭಿಕ್ಷುಗಳೇ, ಸರಿಯಾಗಿ ಉತ್ತರಿಸುವಾಗ ಬೇರೆ ಸಂಪ್ರದಾಯದ ಪರಿವ್ರಾಜಕರು ಹೀಗೆ ಹೇಳಿಯಾರು- ‘ಆಯುಷ್ಮಂತರೇ, ಆ ಗುರಿ (ನಿರ್ವಾಣ) ದರ್ಶನವಿರುವವನಿಗೆ, ಆ ಗುರಿ (ನಿರ್ವಾಣ) ದರ್ಶನ ಇಲ್ಲದಿರುವವನಿಗಲ್ಲ’ ಎಂದು.
“ಆಯುಷ್ಮಂತರೇ, ಆ ಗುರಿ ಒಲವು-ಓಲುಗಳುಳ್ಳವನಿಗೋ ಅಥವಾ ಒಲವು-ಓಲುಗಳಿಲ್ಲದವನಿಗೋ’168 ಎಂದು. ಭಿಕ್ಷುಗಳೇ, ಸರಿಯಾಗಿ ಉತ್ತರಿಸುವಾಗ ಬೇರೆ ಸಂಪ್ರದಾಯದ ಪರಿವ್ರಾಜಕರು ಹೀಗೆ ಹೇಳಿಯಾರು-’ಆಯುಷ್ಮಂತರೇ, ಆ ಗುರಿ ಒಲವು-ಓಲುಗಳು ಇಲ್ಲದವರಿಗೆ, ಆ ಗುರಿ ಒಲವು-ಓಲುಗಳು ಉಳ್ಳವರಿಗೆ ಅಲ್ಲ’ ಎಂದು.
“ಆಯುಷ್ಮಂತರೇ, ಆ ಗುರಿ ಪ್ರಪಂಚದಲ್ಲಿ ಸುಖಪಡುವವನಿಗೋ ಪ್ರಪಂಚದಲ್ಲಿ ರತಿಯುಳ್ಳವನಿಗೋ ಅಥವಾ ನಿಷ್ಪ್ರಪಂಚ (ಅಲೌಕಿಕ) ಸುಖದವನಿಗೋ ನಿಷ್ಪ್ರಪಂಚ ರತಿಯವನಿಗೋ?’ ಎಂದು. ಭಿಕ್ಷುಗಳೇ ಸರಿಯಾಗಿ ಉತ್ತರಿಸುವಾಗ ಬೇರೆ ಸಂಪ್ರದಾಯದ ಪರಿವ್ರಾಜಕರು ಹೀಗೆ ಹೇಳಿಯಾರು- ‘ಆಯುಷ್ಮಂತರೇ, ಆ ಗುರಿ ನಿಷ್ಪ್ರಪಂಚ ಸುಖದವರಿಗೆ, ನಿಷ್ಪ್ರಪಂಚ ರತಿಯವರಿಗೆ ಪ್ರಪಂಚದಲ್ಲಿ ಸುಖಪಡುವವರಿಗಲ್ಲ, ಪ್ರಪಂಚದಲ್ಲಿ ರತಿಯುಳ್ಳವರಿಗಲ್ಲ’168 ಎಂದು.
2. ರಾಗ-ದ್ವೇಷ-ಮೋಹ ರಹಿತರು ಯಾರು ?
4. ಭಿಕ್ಷುಗಳೇ, ಮಿಥ್ಯಾದೃಷ್ಟಿಗಳು ಇವೆರಡು. ಭವ (ಲೋಕದಲ್ಲಿ ಇರಬೇಕೆನ್ನುವ) ದೃಷ್ಟಿ ಮತ್ತು ವಿಭವ (ನಾಸ್ತಿಕವಾದ) ದೃಷ್ಟಿ. ಭಿಕ್ಷುಗಳೇ, ಭವದೃಷ್ಟಿಗೆ ಒರಗಿರುವವರು, ಭವದೃಷ್ಟಿಯನ್ನು ಅಳವಡಿಸಿಕೊಂಡವರು. ಭವದೃಷ್ಟಿಯನ್ನು ಒಪ್ಪಿಕೊಂಡ ಶ್ರಮಣರು ಅಥವಾ ಬ್ರಾಹ್ಮಣರು ಯಾರೋ ಅವರು ವಿಭವ ದೃಷ್ಟಿಗೆ ವಿರೋಧವುಳ್ಳವರು. ಭಿಕ್ಷುಗಳೇ, ವಿಭವ ದೃಷ್ಟಿಗೆ ಒರಗಿರುವವರು, ವಿಭವದೃಷ್ಟಿಯನ್ನು ಅಳವಡಿಸಿಕೊಂಡವರು, ವಿಭವದೃಷ್ಟಿಯನ್ನು ಒಪ್ಪಿಕೊಂಡ ಶ್ರಮಣರು ಅಥವಾ ಬ್ರಾಹ್ಮಣರು ಯಾರೋ ಅವರು ಭವದೃಷ್ಟಿಗೆ ವಿರೋಧವುಳ್ಳವರು.170 ಭಿಕ್ಷುಗಳೇ, ಯಾವ ಶ್ರಮಣರು ಅಥವಾ ಬ್ರಾಹ್ಮಣರು ಈ ಎರಡು ಮಿಥ್ಯಾದೃಷ್ಟಿಗಳ ಉತ್ಪತ್ತಿ ಮತ್ತು ಅಸ್ತಮಾನಗಳನ್ನು ಹಾಗೂ ಆಸ್ವಾದವನ್ನು ಮತ್ತು ಅಪಾಯವನ್ನು ಹಾಗೂ ಅದರಿಂದ ತಪ್ಪಿಸಿಕೊಳ್ಳುವುದನ್ನೂ, ಇರುವುದನ್ನು ಇದ್ದಂತೆ ಪ್ರಜ್ಞಾಪೂರ್ವಕವಾಗಿ ಅರಿಯುವುದಿಲ್ಲವೋ171 ಅವರೇ ರಾಗ ಸಹಿತರು, ಅವರೇ ದ್ವೇಷ ಸಹಿತರು, ಅವರೇ ಮೋಹ ಸಹಿತರು, ಅವರೇ ತೃಷ್ಣಾ ಸಹಿತರು, ಅವರೇ ಉಪಾದಾನ ಸಹಿತರು, ಅವರೇ ದರ್ಶನ ರಹಿತರು, ಅವರೇ ಒಲವು-ಓಲುಗಳುಳ್ಳವರು, ಅವರೇ ಪ್ರಪಂಚದಲ್ಲೇ ಸುಖಪಡುವವರು, ಅವರೇ ಪ್ರಪಂಚದಲ್ಲಿ ಆಸಕ್ತಿಯುಳ್ಳವರು; ಅವರು ಹುಟ್ಟು, ಮುಪ್ಪು, ಸಾವು, ಶೋಕ, ಗೋಳಾಟ, ದುಃಖ-ದುಮ್ಮಾನ ಆತಂಕಗಳಿಂದ ಬಿಡುಗಡೆ ಹೊಂದುವುದಿಲ್ಲ. ದುಃಖದಿಂದ ಬಿಡುಗಡೆ ಹೊಂದುವುದಿಲ್ಲ’ ಎಂದು ಹೇಳುತ್ತೇನೆ. ಭಿಕ್ಷುಗಳೇ, ಯಾವ ಶ್ರಮಣರು ಅಥವಾ ಬ್ರಾಹ್ಮಣರು ಈ ಎರಡೂ ಮಿಥ್ಯಾದೃಷ್ಟಿಗಳ ಉತ್ಪತ್ತಿ ಮತ್ತು ಅಸ್ತಮಾನ ಹಾಗೂ ಆಸ್ವಾದ ಮತ್ತು ಅಪಾಯ ಹಾಗೂ ತಪ್ಪಿಸಿಕೊಳ್ಳುವಿಕೆಗಳನ್ನು, ಇರುವುದನ್ನು ಇದ್ದಂತೆ ಪ್ರಜ್ಞಾಪೂರ್ವಕವಾಗಿ ಅರಿಯುತ್ತಾರೋ ‘ಅವರೇ ರಾಗ ರಹಿತರು, ಅವರೇ ದ್ವೇಷ ರಹಿತರು, ಅವರೇ ಮೋಹ ರಹಿತರು, ಅವರೇ ತೃಷ್ಣಾ ರಹಿತರು, ಅವರೇ ಉಪಾದಾನರಹಿತರು, ಅವರೇ ದರ್ಶನಸಹಿತರು, ಒಲವು_ಓಲುಗಳಿಲ್ಲದವರು, ಅವರೇ ನಿಷ್ಪ್ರಪಂಚ ಸುಖಿಗಳು, ಅವರೆ ನಿಷ್ಪ್ರಪಂಚಕರು; ಅವರು ಹುಟ್ಟು, ಮುಪ್ಪು, ಸಾವು, ಶೋಕ, ಗೋಳಾಟ, ದುಃಖ-ದುಮ್ಮಾನ, ಆತಂಕಗಳಿಂದ ಬಿಡುಗಡೆ ಹೊಂದಿದವರು, ದುಃಖದಿಂದ ಬಿಡುಗಡೆ ಹೊಂದಿದವರು’ ಎಂದು ಹೇಳುತ್ತೇನೆ.
3. ಶ್ರದ್ಧೆಯ ಹಾದಿ ತಪ್ಪುವುದು ಯಾವುದರಿಂದ ?
5. “ಭಿಕ್ಷುಗಳೇ, ಉಪಾದಾನಗಳು ಈ ನಾಲ್ಕು. ನಾಲ್ಕು ಯಾವುವು? ಕಾಮ ಉಪಾದಾನ, (ಮಿಥ್ಯಾ) ದೃಷ್ಟಿ ಉಪಾದಾನ, ಕಂದಾಚಾರ ಉಪಾದಾನ, ಆತ್ಮವಾದ ಉಪಾದಾನ. ಭಿಕ್ಷುಗಳೇ, ಎಲ್ಲಾ ವಿಧದ ಉಪಾದಾನಗಳನ್ನೂ ಪರಿಪೂರ್ಣವಾಗಿ ತಿಳಿದಿದ್ದೇವೆಂದು ಹೇಳಿಕೊಳ್ಳುವ ಕೆಲವು ಶ್ರಮಣ ಬ್ರಾಹ್ಮಣರು ಇದ್ಧಾರೆ. ಅವರು ಸರಿಯಾಗಿ ಎಲ್ಲಾ ಉಪಾದಾನಗಳ ಪರಿಪೂರ್ಣ ಜ್ಞಾನವನ್ನು ತೋರುವುದಿಲ್ಲ- ‘ಕಾಮ ಉಪಾದಾನದ ಪೂರ್ಣ ತಿಳಿವನ್ನು ತೋರುತ್ತಾರೆ, (ಮಿಥ್ಯಾ) ದೃಷ್ಟಿ ಉಪಾದಾನದ ಪೂರ್ಣ ತಿಳಿವನ್ನು ತೋರುವುದಿಲ್ಲ, ಕಂದಾಚಾರ ಉಪಾದಾನದ ಪೂರ್ಣ ತಿಳಿವನ್ನು ತೋರುವುದಿಲ್ಲ, ಆತ್ಮವಾದ ಉಪಾದಾನದ ಪೂರ್ಣ ತಿಳಿವನ್ನು ತೋರುವುದಿಲ್ಲ.172 ಅದಕ್ಕೇನು ಕಾರಣ? ಆ ಪೂಜ್ಯ ಶ್ರಮಣ ಬ್ರಾಹ್ಮಣರು ಈ ಮೂರು ಕಾರಣಗಳನ್ನು ಇರುವುದನ್ನು ಇದ್ದಂತೆ ಪ್ರಜ್ಞಾಪೂರ್ವಕವಾಗಿ ತೋರುವುದಿಲ್ಲ. ಆದ್ದರಿಂದ ಆ ಪೂಜ್ಯ ಶ್ರಮಣ ಬ್ರಾಹ್ಮಣರು ಎಲ್ಲಾ ಉಪಾದಾನಗಳನ್ನೂ ಪರಿಪೂರ್ಣವಾಗಿ ತಿಳಿದಿದ್ದೇವೆಂದು ಹೇಳಿಕೊಳ್ಳುತ್ತಾರೆ; ಅವರು ಎಲ್ಲಾ ಉಪಾದಾನಗಳ ಪರಿಪೂರ್ಣ ತಿಳಿವನ್ನು ಸರಿಯಾಗಿ ತೋರುವುದಿಲ್ಲ. ‘ಕಾಮ ಉಪಾದಾನದ ಪೂರ್ಣ ತಿಳಿವನ್ನು ತೋರುತ್ತಾರೆ, (ಮಿಥ್ಯಾ) ದೃಷ್ಟಿ ಉಪಾದಾನದ ಪೂರ್ಣ ತಿಳಿವನ್ನು ತೋರುವುದಿಲ್ಲ. ಕಂದಾಚಾರ ಉಪಾದಾನದ ಪೂರ್ಣ ತಿಳಿವನ್ನು ತೋರುವುದಿಲ್ಲ, ಆತ್ಮವಾದದ ಪೂರ್ಣ ತಿಳಿವನ್ನು ತೋರುವುದಿಲ್ಲ.
“ಭಿಕ್ಷುಗಳೇ, ಎಲ್ಲಾ ವಿಧದ ಉಪಾದಾನಗಳನ್ನು ಪರಿಪೂರ್ಣವಗಿ ತಿಳಿದಿದ್ದೇವೆಂದು ಹೇಳಿಕೊಳ್ಳುವ ಕೆಲವು ಶ್ರಮಣ ಬ್ರಾಹ್ಮಣರು ಇದ್ದಾರೆ. ಅವರು ಸರಿಯಾಗಿ ಎಲ್ಲಾ ಉಪಾದಾನಗಳ ಪರಿಪೂರ್ಣ ಜ್ಞಾನವನ್ನು ತೋರುವುದಿಲ್ಲ. ‘ಕಾಮ ಉಪಾದಾನದ ಪೂರ್ಣ ತಿಳಿವನ್ನು ತೋರುತ್ತಾರೆ, (ಮಿಥ್ಯಾ) ದೃಷ್ಟಿ ಉಪಾದಾನದ ಪೂರ್ಣ ತಿಳಿವನ್ನು ತೋರುತ್ತಾರೆ, ಕಂದಾಚಾರ ಉಪಾದಾನದ ಪೂರ್ಣ ತಿಳಿವನ್ನು ತೋರುವುದಿಲ್ಲ, ಆತ್ಮವಾದ ಉಪಾದಾನದ ಪೂರ್ಣ ತಿಳಿವನ್ನು ತೋರುವುದಿಲ್ಲ. ಅದಕ್ಕೇನು ಕಾರಣ? ಆ ಪೂಜ್ಯ ಶ್ರಮಣ ಬ್ರಾಹ್ಮಣರು ಈ ಎರಡು ಕಾರಣಗಳನ್ನು ಇರುವುದು ಇದ್ದಂತೆ ಪ್ರಜ್ಞಾಪೂರ್ವಕವಾಗಿ ತೋರುವುದಿಲ್ಲ. ಆದ್ದರಿಂದ ಆ ಪೂಜ್ಯ ಶ್ರಮಣ ಬ್ರಾಹ್ಮಣರು ಎಲ್ಲಾ ಉಪಾದಾನಗಳನ್ನೂ ಪೂರ್ಣವಾಗಿ ತಿಳಿದಿದ್ದೇವೆಂದು ಹೇಳಿಕೊಳ್ಳುತ್ತಾರೆ; ಅವರು ಎಲ್ಲಾ ಉಪಾದಾನಗಳ ಪೂರ್ಣ ತಿಳಿವನ್ನು ಸರಿಯಾಗಿ ತೋರುವುದಿಲ್ಲ. ‘ಕಾಮ ಉಪಾದಾನದ ಪೂರ್ಣ ತಿಳಿವನ್ನು ತೋರುತ್ತಾರೆ, (ಮಿಥ್ಯಾ) ದೃಷ್ಟಿ ಉಪಾದಾನದ ಪೂರ್ಣ ತಿಳಿವನ್ನು ತೋರುತ್ತಾರೆ, ಕಂದಾಚಾರ ಉಪಾದಾನದ ಪೂರ್ಣ ತಿಳಿವನ್ನು ತೋರುವುದಿಲ್ಲ, ಆತ್ಮವಾದದ ಉಪಾದಾನದ ಪೂರ್ಣ ತಿಳಿವನ್ನು ತೋರುವುದಿಲ್ಲ.
“ಭಿಕ್ಷುಗಳೇ, ಎಲ್ಲಾ ವಿಧದ ಉಪಾದಾನಗಳನ್ನು ಪರಿಪೂರ್ಣವಾಗಿ ತಿಳಿದಿದ್ದೇವೆಂದು ಹೇಳಿಕೊಳ್ಳುವ ಕೆಲವು ಶ್ರಮಣ ಬ್ರಾಹ್ಮಣರು ಇದ್ದಾರೆ. ಅವರು ಸರಿಯಾಗಿ ಎಲ್ಲಾ ಉಪಾದಾನಗಳ ಪರಿಪೂರ್ಣ ಜ್ಞಾನವನ್ನು ತೋರುವುದಿಲ್ಲ- ಕಾಮ ಉಪಾದಾನದ ಪೂರ್ಣ ತಿಳಿವನ್ನು ತೋರುತ್ತಾರೆ, (ಮಿಥ್ಯಾ) ದೃಷ್ಟಿ ಉಪಾದಾನದ ಪೂರ್ಣ ತಿಳಿವನ್ನು ತೋರುತ್ತಾರೆ, ಕಂದಾಚಾರ ಉಪಾದಾನದ ಪೂರ್ಣ ತಿಳಿವನ್ನು ತೋರುತ್ತಾರೆ, ಆತ್ಮವಾದ ಉಪಾದಾನದ ಪೂರ್ಣ ತಿಳಿವನ್ನು ತೋರುವುದಿಲ್ಲ. ಅದಕ್ಕೇನು ಕಾರಣ? ಆ ಪೂಜ್ಯ ಶ್ರಮಣ ಬ್ರಾಹ್ಮಣರು ಈ ಒಂದು ಕಾರಣವನ್ನು ಇರುವುದನ್ನು ಇದ್ದಂತೆ ಪ್ರಜ್ಞಾಪೂರ್ವಕವಾಗಿ ಅರಿಯುವುದಿಲ್ಲ. ಆದ್ದರಿಂದ ಆ ಪೂಜ್ಯ ಶ್ರಮಣ ಬ್ರಾಹ್ಮಣರು ಎಲ್ಲಾ ಉಪಾದಾನಗಳನ್ನು ಪರಿಪೂರ್ಣವಾಗಿ ತಿಳಿದಿದ್ದೇವೆಂದು ಹೇಳಿಕೊಳ್ಳುತ್ತಾರೆ; ಅವರು ಎಲ್ಲಾ ಉಪಾದಾನಗಳ ಪರಿಪೂರ್ಣ ತಿಳಿವನ್ನು ಸರಿಯಾಗಿ ತೋರುವುದಿಲ್ಲ- ‘ಕಾಮ ಉಪಾದಾನದ ತಿಳಿವನ್ನು ತೋರುತ್ತಾರೆ, (ಮಿಥ್ಯಾ) ದೃಷ್ಟಿ ಉಪಾದಾನದ ತಿಳಿವನ್ನು ತೋರುತ್ತಾರೆ, ಆತ್ಮವಾದದ ಉಪಾದಾನದ ಪೂರ್ಣ ತಿಳಿವನ್ನು ತೋರುವುದಿಲ್ಲ.173
“ಭಿಕ್ಷುಗಳೇ ಇಂತಹ ಧರ್ಮವಿನಯ (ತತ್ವ ಮತ್ತು ಅನುಷ್ಠಾನ) ವಿಷಯವಾಗಿ ಇಂತಹ ಶಾಸ್ತರಲ್ಲಿ ಅಚಲ ಶ್ರದ್ಧೆಯುಳ್ಳವರು ಯಾರೋ ಅವರು ಸರಿಯಾದ ದಾರಿಯನ್ನು ಪಡೆದವರು ಎಂದು ಹೇಳಲಾಗುವುದಿಲ್ಲ; ಯಾರು ಧರ್ಮದಲ್ಲಿ ಅಚಲ ಶ್ರದ್ಧೆಯುಳ್ಳವರೋ ಅವರು ಸರಿಯಾದ ದಾರಿಯನ್ನು ಪಡೆದವರು ಎಂದು ಹೇಳಲಾಗುವುದಿಲ್ಲ. ಯಾರು ಶೀಲಗಳನ್ನು ಪೂರ್ಣತೆಗೊಳಿಸಿದವರೋ ಅವರು ಸರಿಯಾದ ದಾರಿಯನ್ನು ಪಡೆದವರು ಎಂದು ಹೇಳಲಾಗುವುದಿಲ್ಲ; ಯಾರು ಸಹಧರ್ಮಿಗಳಲ್ಲಿ ಸ್ನೇಹ-ಪ್ರೀತಿ ಪಾತ್ರವನ್ನುಳ್ಳವರೋ ಅವರು ಸರಿಯಾದ ದಾರಿಯನ್ನು ಪಡೆದವರು ಎಂದು ಹೇಳಲಾಗುವುದಿಲ್ಲ, ಅದಕ್ಕೇನು ಕಾರಣ? ಭಿಕ್ಷುಗಳೇ, ಅದು ಹೀಗೆಯೇ ಇರುತ್ತದೆ. ಏನೆಂದರೆ, ಅದು ತಪ್ಪಾಗಿ ಹೇಳಿದ್ದು, ಧರ್ಮವಿನಯದಲ್ಲಿ ತಪ್ಪಾಗಿ ತಿಳಿಸಿದ್ದು, ಉನ್ನತಿಗೆ ನೇರವಾಗಿ ಒಯ್ಯದ್ದು, ಪರಮ ಶಾಂತಿಗೆ ಒಯ್ಯದ್ದು ಸಮ್ಯಕ್ ಸಂಬುದ್ಧರಲ್ಲದವರಿಂದ ತಿಳಿದದ್ದು.
4. ಶ್ರದ್ಧೆಯ ಹಾದಿ ಸರಿಯಾಗುವುದು ಯಾವುದರಿಂದ
6. “ಭಿಕ್ಷುಗಳೇ, ತಥಾಗತನು ಅರಹಂತನು, ಸಮ್ಯಕ್ ಸಂಬುದ್ಧನು, ಎಲ್ಲಾ ಉಪಾದಾನಗಳ ಪೂರ್ಣ ಜ್ಞಾನವನ್ನು ಪ್ರಜ್ಞಾಪೂರ್ವಕವಾಗಿ ಅರಿತವನು, ಎಲ್ಲಾ ಉಪಾದಾನಗಳ ಪೂರ್ಣ ತಿಳಿವನ್ನು ಸರಿಯಾಗಿ ತೋರುತ್ತಾನೆ- ‘ಕಾಮ ಉಪಾದಾನದ ತಿಳಿವನ್ನು ತೋರುತ್ತಾನೆ, (ಮಿಥ್ಯಾ) ದೃಷ್ಟಿ ಉಪಾದಾನದ ತಿಳಿವನ್ನು ತೋರುತ್ತಾನೆ, ಕಂದಾಚಾರ ಉಪಾದಾನದ ತಿಳಿವನ್ನು ತೋರುತ್ತಾನೆ, ಆತ್ಮವಾದದ ಉಪಾದಾನದ ತಿಳಿವನ್ನು ತೋರುತ್ತಾನೆ.174
“ಭಿಕ್ಷುಗಳೇ, ಇಂತಹ ಧರ್ಮವಿನಯದಲ್ಲಿ ಮತ್ತು ಇಂತಹ ಶಾಸ್ತರಲ್ಲಿ ಅಚಲ ಶ್ರದ್ಧೆಯುಳ್ಳವರು ಯಾರೋ ಅವರು ಸರಿಯಾದ ದಾರಿಯನ್ನು ಪಡೆದವರು ಎಂದು ಹೇಳಲಾಗುತ್ತದೆ; ಯಾರು ಧರ್ಮದಲ್ಲಿ ಅಚಲ ಶ್ರದ್ಧೆಯುಳ್ಳವರೋ ಅವರು ಸರಿಯಾದ ದಾರಿಯನ್ನು ಪಡೆದವರು ಎಂದು ಹೇಳಲಾಗುತ್ತದೆ, ಯಾರು ಶೀಲಗಳನ್ನು ಪೂರ್ಣಗೊಳಿಸಿದವರೋ ಅವರು ಸರಿಯಾದ ದಾರಿಯನ್ನು ಪಡೆದವರು ಎಂದು ಹೇಳಲಾಗುತ್ತದೆ; ಯಾರು ಸಹಧರ್ಮಿಗಳ ಸ್ನೇಹ-ಪ್ರೀತಿಗೆ ಪಾತ್ರರೋ ಅವರು ಸರಿಯಾದ ದಾರಿಯನ್ನು ಪಡೆದವರು ಎಂದು ಹೇಳಲಾಗುತ್ತದೆ, ಅದಕ್ಕೇನು ಕಾರಣ? ಭಿಕ್ಷುಗಳೇ, ಅದು ಹೀಗೆಯೇ ಇರುತ್ತದೆ. ಏನೆಂದರೆ, ಅದು ಸರಿಯಾಗಿ ಹೇಳಿದ್ದು, ಧರ್ಮ ವಿನಯದಲ್ಲಿ ಸರಿಯಾಗಿ ಹೇಳಿದ್ದು, ಉನ್ನತಿಗೆ ನೇರವಾಗಿ ಒಯ್ಯುವಂತಹದ್ದು, ಪರಮಶಾಂತಿಗೆ ಒಯ್ಯುವಂತಹದ್ದು, ಸಮ್ಯಕ್ ಸಂಬುದ್ಧರು ತಿಳಿಸಿದ್ದು.
5. ಅವಿದ್ಯೆಯು ನಶಿಸುವುದರಿಂದ ಅರಹಂತರಾಗುತ್ತಾರೆ
7. “ಮತ್ತೆ ಭಿಕ್ಷುಗಳೇ, ಈ ನಾಲ್ಕು ಉಪಾದಾನಗಳ ಮೂಲ ಯಾವುದು, ಕಾರಣ ಯಾವುದು, ಹುಟ್ಟು ಯಾವುದು, ಉತ್ಪತ್ತಿ ಯಾವುದು? ಈ ನಾಲ್ಕು ಉಪಾದಾನಗಳು ತೃಷ್ಣಾ ಮೂಲವಾದವು, ತೃಷ್ಣಾ ಕಾರಣವಾದವು, ತೃಷ್ಣಾದಿಂದಲೇ ಹುಟ್ಟಿದವು, ತೃಷ್ಣಾದಿಂದಲೇ ಉತ್ಪತ್ತಿಯಾದವು.175 ಮತ್ತೆ ಭಿಕ್ಷುಗಳೇ, ಈ ತೃಷ್ಣಾದ ಮೂಲ ಯಾವುದು, ಕಾರಣ ಯಾವುದು, ಹುಟ್ಟು ಯಾವುದು, ಉತ್ಪತ್ತಿ ಯಾವುದು? ತೃಷ್ಣಾಕ್ಕೆ ವೇದನೆಯೇ ಮೂಲವಾದುದು, ವೇದನೆಯೇ ಕಾರಣ, ವೇದನೆಯಿಂದ ಹುಟ್ಟುತ್ತದೆ, ವೇದನೆಯಿಂದ ಉತ್ಪತ್ತಿಯಾಗುತ್ತದೆ. ಮತ್ತೆ ಭಿಕ್ಷುಗಳೇ, ವೇದನೆಗೆ ಮೂಲ ಯಾವುದು, ಕಾರಣ ಯಾವುದು, ಹುಟ್ಟು ಯಾವುದು, ಉತ್ಪತ್ತಿ ಯಾವುದು? ವೇದನೆಗೆ ಸ್ಪರ್ಶವೇ ಮೂಲ, ಸ್ಪರ್ಶವೇ ಕಾರಣ, ಸ್ಪರ್ಶದಿಂದ ಹುಟ್ಟುತ್ತದೆ, ಸ್ಪರ್ಶದಿಂದ ಉತ್ಪನ್ನವಾಗುತ್ತದೆ. ಮತ್ತೆ ಭಿಕ್ಷುಗಳೇ, ಸ್ಪರ್ಶದ ಮೂಲ ಯಾವುದು, ಕಾರಣ ಯಾವುದು, ಹುಟ್ಟು ಯಾವುದು, ಉತ್ಪತ್ತಿ ಯಾವುದು? ಸ್ಪರ್ಶಕ್ಕೆ ಆರು ಆಯತನಗಳೇ ಮೂಲ, ಆರು ಆಯತನಗಳೇ ಕಾರಣ, ಆರು ಆಯತನಗಳಿಂದ ಹುಟ್ಟುತ್ತದೆ, ಆರು ಆಯತನಗಳಿಂದ ಉತ್ಪನ್ನವಾಗುತ್ತದೆ. ಮತ್ತೆ ಭಿಕ್ಷುಗಳೇ, ಆರು ಆಯತನಗಳ ಮೂಲ ಯಾವುದು, ಕಾರಣ ಯಾವುದು, ಹುಟ್ಟು ಯಾವುದು, ಉತ್ಪತ್ತಿ ಯಾವುದು? ಆರು ಆಯತನಗಳಿಗೆ ನಾಮರೂಪಗಳೇ ಮೂಲ, ನಾಮರೂಪಗಳೇ ಕಾರಣ, ನಾಮರೂಪಗಳಿಂದ ಹುಟ್ಟುತ್ತವೆ, ನಾಮರೂಪಗಳಿಂದ ಉತ್ಪನ್ನವಾಗುತ್ತವೆ. ಮತ್ತೆ ಭಿಕ್ಷುಗಳೇ, ನಾಮರೂಪದ ಮೂಲ ಯಾವುದು, ಕಾರಣ ಯಾವುದು, ಹುಟ್ಟು ಯಾವುದು, ಉತ್ಪತ್ತಿ ಯಾವುದು? ನಾಮರೂಪಗಳಿಗೆ ವಿಜ್ಞಾನವೇ ಮೂಲ, ವಿಜ್ಞಾನವೇ ಕಾರಣ, ವಿಜ್ಞಾನದಿಂದ ಹುಟ್ಟುತ್ತದೆ, ವಿಜ್ಞಾನದಿಂದ ಉತ್ಪನ್ನವಾಗುತ್ತದೆ. ಮತ್ತೆ ಭಿಕ್ಷುಗಳೇ, ವಿಜ್ಞಾನದ ಮೂಲ ಯಾವುದು, ಕಾರಣ ಯಾವುದು, ಹುಟ್ಟು ಯಾವುದು, ಉತ್ಪತ್ತಿ ಯಾವುದು? ವಿಜ್ಞಾನಕ್ಕೆ ಸಂಸ್ಕಾರವೇ ಮೂಲ, ಸಂಸ್ಕಾರವೇ ಕಾರಣ, ಸಂಸ್ಕಾರದಿಂದ ಹುಟ್ಟುತ್ತದೆ, ಸಂಸ್ಕಾರದಿಂದ ಉತ್ಪನ್ನವಾಗುತ್ತದೆ. ಮತ್ತೆ ಭಿಕ್ಷುಗಳೇ, ಸಂಸ್ಕಾರಕ್ಕೆ ಮೂಲ ಯಾವುದು, ಕಾರಣ ಯಾವುದು, ಹುಟ್ಟು ಯಾವುದು, ಉತ್ಪತ್ತಿ ಯಾವುದು? ಸಂಸ್ಕಾರಕ್ಕೆ ಅವಿದ್ಯೆಯೇ ಮೂಲ, ಅವಿದ್ಯೆಯೇ ಕಾರಣ, ಅವಿದ್ಯೆಯಿಂದ ಹುಟ್ಟುತ್ತದೆ, ಅವಿದ್ಯೆಯಿಂದ ಉತ್ಪನ್ನವಾಗುತ್ತದೆ.
“ಭಿಕ್ಷುಗಳೇ, ಯಾವಾಗ ಭಿಕ್ಷುವಿನಲ್ಲಿರುವ ಅವಿದ್ಯೆ ನಾಶವಾಗುತ್ತದೆ ಮತ್ತು (ವಿಜ್ಜೆ=ವಿದ್ಯೆ) ಲೋಕೋತ್ತರ ಜ್ಞಾನ ಉತ್ಪನ್ನವಾಗುತ್ತದೆ, ಆಗ ಅವನು ಅವಿದ್ಯೆ ನಶಿಸಿ ಹೋದ್ದರಿಂದ ಲೋಕೋತ್ತರ ಜ್ಞಾನದ ಉತ್ಪತ್ತಿಯಿಂದ, ಕಾಮ ಉಪಾದಾನಕ್ಕೆ ಅಂಟಿಕೊಳ್ಳುವುದೇ ಇಲ್ಲ. (ಮಿಥ್ಯಾ) ದೃಷ್ಟಿ ಉಪಾದಾನಕ್ಕೆ ಅಂಟಿಕೊಳ್ಳುವುದೇ ಇಲ್ಲ, ಕಂದಾಚಾರ ಉಪಾದಾನಕ್ಕೆ ಅಂಟಿಕೊಳ್ಳುವುದೇ ಇಲ್ಲ. ಆತ್ಮವಾದ ಉಪಾದಾನಕ್ಕೆ ಅಂಟಿಕೊಳ್ಳುವುದೇ ಇಲ್ಲ.176 ಉಪಾದಿಯಿಲ್ಲದ್ದರಿಂದ ಪರಿತಪಿಸುವುದೇ ಇಲ್ಲ, ಪರಿತಪಿಸದೇ ಇರುವುದರಿಂದ ಪ್ರತ್ಯಕ್ಷವಾಗಿಯೇ ಪರಿನಿರ್ವಾಣ ಹೊಂದುತ್ತಾನೆ. ‘ಜನ್ಮವು ಕೊನೆಗೊಂಡಿತು, ಬ್ರಹ್ಮಚರ್ಯವು ಪರಿಪೂರ್ಣವಾಯಿತು, ಮಾಡಬೇಕಾದ್ದನ್ನು ಮಾಡಿದ್ದಾಯಿತು, ಸಾಧಿಸಬೇಕಾದ್ದು ಇನ್ನೇನು ಉಳಿದಿಲ್ಲ’ ಎಂದು ಪ್ರಜ್ಞಾಪೂರ್ವಕವಾಗಿ ಅರಿಯುತ್ತಾನೆ.
ಭಗವಾನರು ಹೀಗೆ ನುಡಿದರು. ಸ್ಪೂರ್ತಿ ಪಡೆದ ಭಿಕ್ಷುಗಳು ಭಗವಾನರ ನುಡಿಗೆ ಆನಂದಗೊಂಡರು.
ಟಿಪ್ಪಣಿಗಳು [5]
English
Việt Ngữ