ಊಟಿಸುತ್ತಿದೆ

ಅನುವಾದಗಳು [32]

ಸಿಂಹನಾದ ದೀರ್ಘ ಸುತ್ತ

1. ಸುನಕ್ಖತ್ತನಿಗೆ ಭಗವಾನರಲ್ಲಿ ಧರ್ಮದ ನಂಬಿಕೆಯಾಗಿಲ್ಲ

ಹೀಗೆ ನಾನು ಕೇಳಿದ್ದೇನೆ. ಒಂದುಸಲ ಭಗವಾನರು ವೇಸಾಲಿಯ ನಗರದ ಹೊರಗೆ ಪಶ್ಚಿಮಪುರದ ಹತ್ತಿರದ ವನದಲ್ಲಿ (ತೋಪಿನಲ್ಲಿ) ತಂಗಿದ್ದರು. ಆ ಸಮಯದಲ್ಲಿ ಸುನಕ್ಖತ್ತನೆಂಬ ಲಿಚ್ಛವಿಪುತ್ರ, ಇತ್ತೀಚೆಗೆ ಈ ಧರ್ಮವಿನಯದಿಂದ ಹೊರ ಹೋಗಿದ್ದನು.176 ಅವನು ವೇಸಾಲಿಯ ಪರಿಷತ್ತಿನಲ್ಲಿ ಈ ಮಾತನ್ನು ಹೇಳುತ್ತಿದ್ದನು- “ಶ್ರಮಣ ಗೋತಮರಿಗೆ ಮನುಷ್ಯಾತೀತವಾದ ಆರ‍್ಯಯೋಗ್ಯವಾದ ಲೋಕೋತ್ತರ ಜ್ಞಾನ ದರ್ಶನ ಇಲ್ಲ.178 ಶ್ರಮಣ ಗೋತಮರು ತರ್ಕದಿಂದ ತಟ್ಟಿಮಾಡಿದ ತಮ್ಮದೇ ಆದ ಆಲೋಚನೆಯನ್ನನುಸರಿಸಿ ತಮಗೆ ತೋರಿದಂತೆ ಉಪದೇಶಿಸುತ್ತಾರೆ. ಯಾರ ಉಪಯೋಗಕ್ಕಾಗಿ ಈ ಧರ್ಮ ಉಪದೇಶಿತವಾಗಿದೆಯೋ ಅವನು (ಇದನ್ನು) ಸರಿಯಾಗಿ ಅಭ್ಯಾಸ ಮಾಡಿದರೆ ಖಂಡಿತವಾಗಿಯು ದುಃಖ ನಾಶಕ್ಕೆ ಒಯ್ಯಲ್ಪಡುತ್ತಾನೆ179 ಎಂದು.

ಆಗಲೇ ಆಯುಷ್ಮಂತ ಸಾರಿಪುತ್ತನು ಪೂರ್ವಾಹ್ನ ಸಮಯದಲ್ಲಿ ಕಾಷಾಯ ವಸ್ತ್ರವನ್ನು ಧರಿಸಿ ಮೇಲು ಹೊದಿಕೆ ಭಿಕ್ಷಾಪಾತ್ರೆಯನ್ನು ತೆಗೆದುಕೊಂಡು ವೇಸಾಲಿಗೆ ಭಿಕ್ಷಕ್ಕಾಗಿ ಪ್ರವೇಶಿಸಿದರು. ಆಯುಷ್ಮಂತರಾದ ಸಾರಿಪುತ್ತರು, ಲಿಚ್ಛವಿಪುತ್ರ ಸುನಕ್ಖತ್ತನು ವೇಸಾಲಿಯ ಪರಿಷತ್ತಿನಲ್ಲಿ ಹೀಗೆ ಹೇಳುವುದನ್ನು ಕೇಳಿದ್ದರು. “ಶ್ರಮಣ ಗೋತಮರಿಗೆ ಮನುಷ್ಯಾತೀತವಾದ ಆರ‍್ಯಯೋಗ್ಯವಾದ ಲೋಕೋತ್ತರ ಜ್ಞಾನ ದರ್ಶನ ಇಲ್ಲ. ಶ್ರಮಣ ಗೋತಮರು ತರ್ಕದಿಂದ ತಟ್ಟಿಮಾಡಿದ ತಮ್ಮದೇ ಆದ ಆಲೋಚನೆಯನ್ನನುಸರಿಸಿ ತಮಗೆ ತೋರಿದಂತೆ ಉಪದೇಶಿಸುತ್ತಾರೆ. ಯಾರ ಉಪಯೋಗಕ್ಕಾಗಿ ಈ ಧರ್ಮ ಉಪದೇಶಿತವಾಗಿದೆಯೋ ಅವನು (ಇದನ್ನು) ಸರಿಯಾಗಿ ಅಭ್ಯಾಸ ಮಾಡಿದರೆ ಖಂಡಿತವಾಗಿಯೂ ದುಃಖ ನಾಶಕ್ಕೆ ಒಯ್ಯಲ್ಪಡುತ್ತಾನೆ” ಎಂದು.

ಆಗಲೇ ಆಯುಷ್ಮಂತ ಸಾರಿಪುತ್ತನು ವೇಸಾಲಿಯಲ್ಲಿ ಭಿಕ್ಷೆಗಾಗಿ ಓಡಾಡಿ ಭಿಕ್ಷಾನ್ನ ಸೇವಿಸಿದ ನಂತರ ಭಿಕ್ಷಾಟನೆಯಿಂದ ಹಿಂತಿರುಗಿದ ಮೇಲೆ ಭಗವಾನರಿದ್ದಲ್ಲಿಗೆ ಹೋದನು. ಹತ್ತಿರ ಹೋಗಿ ಭಗವಾನರಿಗೆ ನಮಸ್ಕರಿಸಿ ಒಂದುಕಡೆ ಕುಳಿತನು, ಒಂದುಕಡೆ ಕುಳಿತೇ ಇದ್ದ ಆಯುಷ್ಮಂತ ಸಾರಿಪುತ್ತನು ಭಗವಾನರಿಗೆ ಇದನ್ನು ಹೇಳಿದನು- “ಭಂತೇ, ಲಿಚ್ಛವಿಪುತ್ರ ಸುನಕ್ಖತ್ತನು ಇತ್ತೀಚೆಗೆ ಧರ್ಮವಿನಯದಿಂದ ಹೊರಹೋಗಿದ್ದನು. ಅವನು ವೇಸಾಲಿಯ ಪರಿಷತ್ತಿನಲ್ಲಿ ಈ ಮಾತನ್ನು ಆಡುತ್ತಾನೆ- ಶ್ರಮಣ ಗೋತಮರಿಗೆ ಮನುಷ್ಯಾತೀತವಾದ ಆರ‍್ಯಯೋಗ್ಯವಾದ ಲೋಕೋತ್ತರ ಜ್ಞಾನ ದರ್ಶನ ಇಲ್ಲ... (ಇದನ್ನು) ಸರಿಯಾಗಿ ಅಭ್ಯಾಸ ಮಾಡಿದರೆ ಖಂಡಿತವಾಗಿಯೂ ದುಃಖನಾಶಕ್ಕೆ ಒಯ್ಯಲ್ಪಡುತ್ತಾನೆ” ಎಂದು.

2. “ಸಾರಿಪುತ್ತ, ಇವನು ಕ್ರೋಧಗೊಂಡವನು, ಸುನಕ್ಖತ್ತನು ಮೂರ್ಖ ಮನುಷ್ಯ. ಕೋಪದಿಂದಲೇ ಈ ಮಾತು ಹೇಳಲಾಗಿದೆ. ಸಾರಿಪುತ್ರ ‘ಬೈಗಳನ್ನು ನುಡಿಯುತ್ತೇನೆ’ ಎಂದು ಮೂರ್ಖ ಮನುಷ್ಯ ಸುನಕ್ಖತ್ತನು ತಥಾಗತರ ಬಣ್ಣನೆಯನ್ನೇ ಹೇಳುತ್ತಿದ್ದಾನೆ, ಸಾರಿಪುತ್ರ, ಯಾರು ತಥಾಗತನ ಬಗ್ಗೆ ಹೀಗೆ ಹೇಳುತ್ತಾರೋ- ‘ಯಾರ ಉಪಯೋಗಕ್ಕಾಗಿ ಈ ಧರ್ಮ ಉಪದೇಶಿತವಾಗಿದೆಯೋ ಅವನು ಸರಿಯಾಗಿ ಅಭ್ಯಾಸ ಮಾಡಿದರೆ ಖಂಡಿತವಾಗಿಯೂ ದುಃಖನಾಶಕ್ಕೆ ಒಯ್ಯಲ್ಪಡುತ್ತಾನೆ’ ಎಂಬುದು ಬಣ್ಣನೆಯೆ.

“ಸಾರಿಪುತ್ತ, ಈ ಮೂರ್ಖ ಮನುಷ್ಯ ಸುನಕ್ಖತ್ತನಿಗೆ ನನ್ನಲ್ಲಿ ಈ ರೀತಿಯಾಗಿ ಯಥಾರ್ಥವಾದ ಧರ್ಮದ ಪ್ರಕಾರ ನಂಬಿಕೆ ಬರುವುದಿಲ್ಲ - ‘ಆ ಭಗವಾನರು ನಿಜವಾಗಿಯೂ ಅರಹಂತರು, ಸಮ್ಯಕ್‍ಸಂಬುದ್ಧರು, ವಿದ್ಯಾಚರಣ ಸಂಪನ್ನರು, ಸುಗತರು, ಲೋಕವಿದರು, ಪಳಗಿಸಲು ಯೋಗ್ಯರಾದವರಿಗೆ ಎಣೆಯಿಲ್ಲದ ಸಾರಥಿ, ದೇವ-ಮನುಷ್ಯರಿಗೆ ಶಾಸ್ತ, ಬುದ್ಧರು ಭಗವಂತರು’180 ಎಂದು.

“ಸಾರಿಪುತ್ರ, ಈ ಮೂರ್ಖ ಮನುಷ್ಯ ಸುನಕ್ಖತ್ತನಿಗೆ ನನ್ನಲ್ಲಿ ಈ ರೀತಿಯಾಗಿ ಧರ್ಮದ ಪ್ರಕಾರ ನಂಬಿಕೆ ಬರುವುದಿಲ್ಲ - ‘ಭಗವಾನರು ನಿಜವಾಗಿಯೂ ಅನೇಕ ವಿಧವಾದ ಸಿದ್ಧಿಗಳನ್ನು ಪ್ರತ್ಯಕ್ಷವಾಗಿ ಅನುಭವಿಸುತ್ತಾರೆ. ಒಬ್ಬರಾಗಿ ಅನೇಕರಾಗುತ್ತಾರೆ, ಅನೇಕರಾಗಿಯೂ ಒಬ್ಬರಾಗುತ್ತಾರೆ; ಕಾಣಬರುತ್ತಾರೆ, ಮರೆಯಾಗುತ್ತಾರೆ; ಗೋಡೆಗಳನ್ನೂ, ದುರ್ಗಗಳ ಪ್ರಾಕಾರಗಳನ್ನೂ, ಪರ್ವತಗಳನ್ನೂ ತಡೆಯಿಲ್ಲದೆ ಹಾದುಹೋಗುತ್ತಾರೆ. ಹೇಗೆಂದರೆ ಆಕಾಶದಲ್ಲಿ ಹೋದಂತೆ; ಪೃಥ್ವಿಯೊಳಗೆ ಮುಳುಗಿ ಮೇಲೇಳುತ್ತಾರೆ. ಹೇಗೆಂದರೆ ನೀರೊಳಗೆ ಹೋಗಿ ಏಳುವಂತೆ, ಭೇಧಿಸದೆ ನೀರಿನ ಮೇಲೆ ನಡೆದಾಡುತ್ತಾರೆ, ಹೇಗೆಂದರೆ ನೆಲದ ಮೇಲೆ ನಡೆದಾಡಿದಂತೆ, ಆಕಾಶದಲ್ಲಿ ಆಸನಬದ್ಧರಾಗಿ ಹಾರುತ್ತಾರೆ, ಹೇಗೆಂದರೆ ರೆಕ್ಕೆಯುಳ್ಳ ಹಕ್ಕಿಯಂತೆ, ತನ್ನ ಕೈಗಳಿಂದ ಈ ಮಹಾನುಭಾವರಾದ ಮಹಾಸಿದ್ಧಿಸಂಪನ್ನರಾದ ಚಂದ್ರ ಸೂರ್ಯರನ್ನು ಮುಟ್ಟುತ್ತಾರೆ, ಸವರುತ್ತಾರೆ, ಬ್ರಹ್ಮಲೋಕದವರೆಗಿನದನ್ನೂ ತಮ್ಮ ಕಾಯದ ವಶದಲ್ಲಿಟ್ಟುಕೊಳ್ಳುತ್ತಾರೆ’ ಎಂದು.

“ಸಾರಿಪುತ್ತ, ಈ ಮೂರ್ಖ ಮನುಷ್ಯ ಸುನಕ್ಖತ್ತನಿಗೆ ನನ್ನಲ್ಲಿ ಈ ರೀತಿಯಾಗಿ ಧರ್ಮದ ಪ್ರಕಾರ ನಂಬಿಕೆ ಬರುವುದಿಲ್ಲ- ‘ಆ ಭಗವಾನರು ಮಾನವಾತೀತವಾದ ವಿಶುದ್ಧವಾದ ದಿವ್ಯ ಶ್ರೋತ್ರದಿಂದ ಎರಡು ಬಗೆಯ ಶಬ್ದಗಳನ್ನು (ಎಂದರೆ) ದಿವ್ಯವಾದ ಮತ್ತು ಮಾನುಷವಾದ ಹಾಗೂ ದೂರದಲ್ಲಿರುವ ಮತ್ತು ಹತ್ತರದಲ್ಲಿರುವ ಶಬ್ದಗಳನ್ನು ಕೇಳಿಸಿಕೊಳ್ಳುತ್ತಾರೆ’ ಎಂದು.

“ಸಾರಿಪುತ್ತ, ಈ ಮೂರ್ಖ ಮನುಷ್ಯ ಸುನಕ್ಖತ್ತನಿಗೆ ನನ್ನಲ್ಲಿ ಈ ರೀತಿಯಾಗಿ ಧರ್ಮದ ಪ್ರಕಾರ ನಂಬಿಕೆ ಬರುವುದಿಲ್ಲ- ‘ಆ ಭಗವಾನರು ನಿಜವಾಗಿಯೂ ಬೇರೆ ಜೀವಿಗಳ ಬೇರೆ ವ್ಯಕ್ತಿಗಳ ಮನಸ್ಸುಗಳನ್ನು ತಮ್ಮ ಚಿತ್ತದಿಂದ ಆವರಿಸಿಕೊಂಡು ಅರಿಯುತ್ತಾರೆ- ಚಿತ್ತವು ರಾಗದಿಂದ ತುಂಬಿದ್ದರೆ ಚಿತ್ತವು ರಾಗದಿಂದ ತುಂಬಿದೆ ಎಂದು ಅರಿಯುತ್ತಾರೆ, ಚಿತ್ತವು ರಾಗವನ್ನು ನೀಗಿದ್ದರೆ ಚಿತ್ತವು ರಾಗವನ್ನು ನೀಗಿದೆ ಎಂದು ಅರಿಯುತ್ತಾರೆ; ಚಿತ್ತವು ದ್ವೇಷದಿಂದ ತುಂಬಿದ್ದರೆ ಚಿತ್ತವು ದ್ವೇಷದಿಂದ ತುಂಬಿದೆ ಎಂದು ಅರಿಯುತ್ತಾರೆ, ಚಿತ್ತವು ದ್ವೇಷವನ್ನು ನೀಗಿದ್ದರೆ ಚಿತ್ತವು ದ್ವೇಷವನ್ನು ನೀಗಿದೆ ಎಂದು ಅರಿಯುತ್ತಾರೆ; ಚಿತ್ತವು ಮೋಹದಿಂದ ತುಂಬಿದ್ದರೆ ಚಿತ್ತವು ಮೋಹದಿಂದ ತುಂಬಿದೆ ಎಂದು ಅರಿಯುತ್ತಾರೆ, ಚಿತ್ತವು ಮೋಹವನ್ನು ನೀಗಿದ್ದರೆ ಚಿತ್ತವು ಮೋಹವನ್ನು ನೀಗಿದೆ ಎಂದು ಅರಿಯುತ್ತಾರೆ; ಕುಗ್ಗಿರುವ ಚಿತ್ತವನ್ನು ಕುಗ್ಗಿರುವ ಚಿತ್ತವೆಂದು ಅರಿಯುತ್ತಾರೆ, ಚದುರಿದ ಚಿತ್ತವನ್ನು ಚದುರಿದ ಚಿತ್ತವೆಂದು ಅರಿಯುತ್ತಾರೆ; ಹಿರಿಮೆವೆತ್ತ ಚಿತ್ತವನ್ನು ಹಿರಿಮೆವೆತ್ತ ಚಿತ್ತವೆಂದು ಅರಿಯುತ್ತಾರೆ, ಹಿರಿಮೆವಡೆಯದ ಚಿತ್ತವನ್ನು ಹಿರಿಮೆವಡೆಯದ ಚಿತ್ತವೆಂದು ಅರಿಯುತ್ತಾರೆ; ತನ್ನನ್ನು ಮೀರಿದ್ದನ್ನು ಪಡೆದ ಚಿತ್ತವನ್ನು ತನ್ನನ್ನು ಮೀರಿದ್ದನ್ನು ಪಡೆದ ಚಿತ್ತವೆಂದು ಅರಿಯುತ್ತಾರೆ, ತನ್ನನ್ನು ಮೀರಿದ್ದನ್ನು ಪಡೆಯದ ಚಿತ್ತವನ್ನು ತನ್ನನ್ನು ಮೀರಿದ್ದನ್ನು ಪಡೆಯದಚಿತ್ತವೆಂದು ಅರಿಯುತ್ತಾರೆ; ಸಮಾಹಿತವಾದ ಚಿತ್ತವನ್ನು ಸಮಾಹಿತ ಚಿತ್ತವೆಂದು ಅರಿಯುತ್ತಾರೆ, ಸಮಾಹಿತವಲ್ಲದ ಚಿತ್ತವನ್ನು ಸಮಾಹಿತವಲ್ಲದ ಚಿತ್ತವೆಂದು ಅರಿಯುತ್ತಾರೆ; ವಿಮುಕ್ತ ಚಿತ್ತವನ್ನು ವಿಮುಕ್ತ ಚಿತ್ತವೆಂದು ಅರಿಯುತ್ತಾರೆ, ಅವಿಮುಕ್ತ ಚಿತ್ತವನ್ನು ಅವಿಮುಕ್ತ ಚಿತ್ತವೆಂದು ಅರಿಯುತ್ತಾರೆ’ ಎಂದು.

2. ತಥಾಗತರ ಹತ್ತು ಬಲಗಳು

3. ಸಾರಿಪುತ್ತ, ಯಾವ ಬಲದಿಂದ ಕೂಡಿ ತಥಾಗತರು ಪರಮಕ್ಷೇಮವನ್ನು ಉದ್ಘೋಷಿಸುತ್ತಾರೋ, ಪರಿಷತ್ತಿನಲ್ಲಿ ಸಿಂಹ ಗರ್ಜನೆಯನ್ನು ಗರ್ಜಿಸುತ್ತಾರೋ, ಬ್ರಹ್ಮಚಕ್ರವನ್ನು ಪ್ರವರ್ತಿಸುತ್ತಾರೊ,181 ಅಂತಹ ಹತ್ತು ಬಲಗಳು ತಥಾಗತರಿಗೆ ಇವೆ. ಯಾವುವು ಆ ಹತ್ತು?

“ಇಲ್ಲಿ ಸಾರಿಪುತ್ತ, ತಥಾಗತರು ಇರುವುದನ್ನು ಇರುವುದೆಂದು, ಇಲ್ಲದ್ದನ್ನು ಇಲ್ಲದ್ದೆಂದು ಯಥಾರ್ಥವಾಗಿ ಪ್ರಜ್ಞಾಪೂರ್ವಕವಾಗಿ ಅರಿಯುತ್ತಾರೆ. ಸಾರೀಪುತ್ರ! ಯಾವುದನ್ನು ತಥಾಗತರು ಇರುವುದನ್ನು ಇರುವುದೆಂದು, ಇಲ್ಲದ್ದನ್ನು ಇಲ್ಲದ್ದೆಂದು ಯಥಾರ್ಥವಾಗಿ ಪ್ರಜ್ಞಾಪೂರ್ವಕವಾಗಿ ಅರಿಯುತ್ತಾರೋ,182 ಅದೇ ಸಾರಿಪುತ್ರ, ತಥಾಗತರ ತಥಾಗತ ಬಲವಾಗುತ್ತದೆ, ಈ ಬಲ ಪಡೆದದ್ದರಿಂದ ತಥಾಗತರು ಪರಮಕ್ಷೇಮವನ್ನು ಉದ್ಘೋಷಿಸುತ್ತಾರೆ, ಪರಿಷತ್ತಿನಲ್ಲಿ ಸಿಂಹ ಗರ್ಜನೆಯನ್ನು ಗರ್ಜಿಸುತ್ತಾರೆ, ಬ್ರಹ್ಮಚಕ್ರವನ್ನು ಪ್ರವರ್ತಿಸುತ್ತಾರೆ.

“ಅಲ್ಲದೇ ಮತ್ತೆ, ಸಾರಿಪುತ್ತ, ತಥಗತರು ಹಿಂದಿನ ಮುಂದಿನ ಇಂದಿನ ಕರ್ಮಾನುಷ್ಠಾನಗಳ ಫಲವನ್ನು ಸಾಧ್ಯತೆಯ ಪ್ರಕಾರ ಕಾರಣಗಳ ಪ್ರಕಾರ ಯಥಾರ್ಥವಾಗಿ ಪ್ರಜ್ಞಾಪೂರ್ವಕವಾಗಿ ಅರಿಯುತ್ತಾರೆ.183 ಸಾರಿಪುತ್ತ, ಯಾವುದನ್ನು ತಥಾಗತರು ಹಿಂದಿನ ಮುಂದಿನ ಇಂದಿನ ಕರ್ಮಾನುಷ್ಠಾನಗಳ ಫಲವನ್ನು ಸಾಧ್ಯತೆಯ ಪ್ರಕಾರ ಕಾರಣಗಳ ಪ್ರಕಾರ ಯಥಾರ್ಥವಾಗಿ ಪ್ರಜ್ಞಾಪೂರ್ವಕವಾಗಿ ಅರಿಯುತ್ತಾರೋ; ಅದೇ ಸಾರಿಪುತ್ತ, ತಥಾಗತರ ತಥಾಗತ ಬಲವಾಗುತ್ತದೆ, ಈ ಬಲ ಪಡೆದದ್ದರಿಂದ... ಬ್ರಹ್ಮಚಕ್ರವನ್ನು ಪ್ರವರ್ತಿಸುತ್ತಾರೆ.

“ಅಲ್ಲದೆ ಮತ್ತೆ ಸಾರಿಪುತ್ತ, ತಥಾಗತರು ಎಲ್ಲಿಗೆ ಎಲ್ಲಾ ಮಾರ್ಗಗಳು ಒಯ್ಯುತ್ತವೋ184 ಅದನ್ನು ಯಥಾರ್ಥವಾಗಿ ಪ್ರಜ್ಞಾಪೂರ್ವಕವಾಗಿ ಅರಿಯುತ್ತಾರೆ. ಸಾರಿಪುತ್ತ, ಯಾವುದನ್ನು ತಥಾಗತರು ಎಲ್ಲಿಗೆ ಎಲ್ಲಾ ಮಾರ್ಗಗಳು ಒಯ್ಯುತ್ತವೋ ಅದನ್ನು ಯಥಾರ್ಥವಾಗಿ ಪ್ರಜ್ಞಾಪೂರ್ವಕವಾಗಿ ಅರಿಯುತ್ತಾರೋ, ಅದೇ ಸಾರಿಪುತ್ತ ತಥಾಗತರ ತಥಾಗತ ಬಲವಾಗುತ್ತದೆ... ಬ್ರಹ್ಮಚಕ್ರವನ್ನು ಪ್ರವರ್ತಿಸುತ್ತಾರೆ.

“ಅಲ್ಲದೇ ಮತ್ತೆ ಸಾರಿಪುತ್ತ, ತಥಾಗತರು ಅನೇಕ ಧಾತುಗಳು185 - ವಿವಿಧ ಧಾತುಗಳಿಂದ ಕೂಡಿದ ಲೋಕವನ್ನು (ಇಡೀ ಲೋಕವನ್ನು) ಯಥಾರ್ಥವಾಗಿ ಪ್ರಜ್ಞಾಪೂರ್ವಕವಾಗಿ ಅರಿಯುತ್ತಾರೆ. ಸಾರಿಪುತ್ತ ಯಾವುದನ್ನು ತಥಾಗತರು ಅನೇಕ ಧಾತುಗಳು- ವಿವಿಧ ಧಾತುಗಳಿಂದ ಕೂಡಿದ (ಇಡೀ) ಲೋಕವನ್ನು ಯಥಾರ್ಥವಾಗಿ ಪ್ರಜ್ಞಾಪೂರ್ವಕವಾಗಿ ಅರಿಯುತ್ತಾರೋ ಅದೇ ಸಾರಿಪುತ್ರ, ತಥಾಗತರ ತಥಾಗತ ಬಲವಾಗುತ್ತದೆ; ಈ ಬಲ ಪಡೆದದ್ದರಿಂದ... ಬ್ರಹ್ಮಚಕ್ರವನ್ನು ಪ್ರವರ್ತಿಸುತ್ತಾರೆ.

“ಅಲ್ಲದೆ ಮತ್ತೆ ಸಾರಿಪುತ್ತ, ತಥಾಗತರು ಜೀವಿಗಳ ವಿವಿಧ ಒತ್ತಾಸೆಗಳನ್ನು186 ಯಥಾರ್ಥವಾಗಿ ಪ್ರಜ್ಞಾಪೂರ್ವಕವಾಗಿ ಅರಿಯುತ್ತಾರೆ. ಸಾರಿಪುತ್ತ, ಯಾವುದನ್ನು ತಥಾಗತರು ಜೀವಿಗಳ ವಿವಿಧ ಒತ್ತಾಸೆಗಳನ್ನು ಯಥಾರ್ಥವಾಗಿ ಪ್ರಜ್ಞಾಪೂರ್ವಕವಾಗಿ ಅರಿಯುತ್ತಾರೋ ಅದೇ ಸಾರಿಪುತ್ತ, ತಥಾಗತರ ತಥಾಗತ ಬಲವಾಗುತ್ತದೆ...

“ಅಲ್ಲದೇ ಮತ್ತೆ ಸಾರಿಪುತ್ತ, ತಥಾಗತರು ಪರಜೀವಿಗಳ, ಪರವ್ಯಕ್ತಿಗಳ ಇಂದ್ರಿಯಗಳ ಮೂಲ ಪ್ರವೃತ್ತಿಯನ್ನು187 [ಇಂದ್ರಿಯಗಳು ಇಪ್ಪತ್ತೆರಡು, ಪ್ರತಿ ಇಂದ್ರಿಯಕ್ಕೂ ವಿಶಿಷ್ಟವಾದ ಕ್ರಿಯೆ ಇದೆ. ಆ ಕ್ರಿಯೆಗಳು ಯಾವರೀತಿ ನಿಯಂತ್ರಿತವಾಗುತ್ತವೋ ಅವುಗಳನ್ನು ಪ್ರವೃತ್ತಿ ಎಂದು ಕರೆಯುತ್ತಾರೆ.] ಯಥಾರ್ಥವಾಗಿ ಪ್ರಜ್ಞಾಪೂರ್ವಕವಾಗಿ ಅರಿಯುತ್ತಾರೆ. ಸಾರಿಪುತ್ತ, ಯಾವುದನ್ನು ತಥಾಗತರು ಪರಜೀವಿಗಳ, ಪರವ್ಯಕ್ತಿಗಳ ಇಂದ್ರಿಯಗಳ ಮೂಲ ಪ್ರವೃತ್ತಿಯನ್ನು ಯಥಾರ್ಥವಾಗಿ ಪ್ರಜ್ಞಾಪೂರ್ವಕವಾಗಿ ಅರಿಯುತ್ತಾರೋ ಅದೇ ಸಾರಿಪುತ್ತ, ತಥಾಗತರ ತಥಾಗತ ಬಲವಾಗುತ್ತದೆ...

“ಅಲ್ಲದೆ ಮತ್ತೆ ಸಾರಿಪುತ್ತ, ತಥಾಗತರು ಧ್ಯಾನ ವಿಮೋಕ್ಖ ಸಮಾಧಿ ಸಮಾಪತ್ತಿಗಳು* ಹಾಳಾಗಿರುವುದನ್ನು (ಮಲಿನಗೊಂಡಿರುವುದನ್ನು) ಅದನ್ನು ಸ್ವಚ್ಛಗೊಳಿಸುವುದನ್ನೂ, ಅವುಗಳಿಂದ ಹೊರಬರುವುದನ್ನೂ,188 ಯಥಾರ್ಥವಾಗಿ ಪ್ರಜ್ಞಾಪೂರ್ವಕವಾಗಿ ಅರಿಯುತ್ತಾರೆ ಸಾರಿಪುತ್ರ, ಯಾವುದನ್ನು ತಥಾಗತರು ಧ್ಯಾನ ವಿಮೋಕ್ಷ ಸಮಾಧಿ ಸಮಾಪತ್ತಿಗಳು ಹಾಳಾಗಿರುವುದನ್ನು ಅದನ್ನು ಸ್ವಚ್ಛಗೊಳಿಸುವುದನ್ನೂ ಮತ್ತು ಅವುಗಳಿಂದ ಹೊರಬರುವುದನ್ನು ಯಥಾರ್ಥವಾಗಿ ಪ್ರಜ್ಞಾಪೂರ್ವಕವಾಗಿ ಅರಿಯುತ್ತಾರೋ ಅದೇ ಸಾರಿಪುತ್ರ ತಥಾಗತರ ತಥಾಗತ ಬಲವಾಗುತ್ತದೆ....

“ಅಲ್ಲದೇ ಮತ್ತೆ ಸಾರಿಪುತ್ತ, ತಥಾಗತರು ಅನೇಕ ವಿಧವಾದ ಪೂರ್ವ ಜನ್ಮಗಳನ್ನು ಸ್ಮರಿಸಿಕೊಳ್ಳುತ್ತಾರೆ. ಅದು ಹೇಗೆಂದರೆ- ಒಂದು ಜನ್ಮವನ್ನು, ಎರಡು ಜನ್ಮಗಳನ್ನು, ಮೂರು ಜನ್ಮಗಳನ್ನು, ನಾಲ್ಕು ಜನ್ಮಗಳನ್ನು, ಐದು ಜನ್ಮಗಳನ್ನು, ಹತ್ತು ಜನ್ಮಗಳನ್ನು, ಇಪ್ಪತ್ತು ಜನ್ಮಗಳನ್ನು, ಮೂವತ್ತು ಜನ್ಮಗಳನ್ನು, ನಲವತ್ತು ಜನ್ಮಗಳನ್ನು, ಐವತ್ತು ಜನ್ಮಗಳನ್ನು, ನೂರು ಜನ್ಮಗಳನ್ನು, ಸಾವಿರ ಜನ್ಮಗಳನ್ನು, ನೂರು ಸಾವಿರ ಜನ್ಮಗಳನ್ನು, ಅನೇಕ ಕಲ್ಪಾಂತರ ಲೋಕ ಲಯಗಳನ್ನು, ಅನೇಕ ಕಲ್ಪಾಂತರ ಲೋಕ ವಿಕಾಸಗಳನ್ನು, ಅನೇಕ ಕಲ್ಪಾಂತರ ಲೋಕಲಯ ವಿಕಾಸಗಳನ್ನು ಮತ್ತು ‘ಅಲ್ಲಿ ನನಗೆ ಇಂಥ ಹೆಸರಿತ್ತು ಇಂಥ ಗೋತ್ರವಿತ್ತು ಇಂಥ ವರ್ಣವಿತ್ತು ಇಂಥ ಆಹಾರವಿತ್ತು ಇಂಥ ಸುಖ-ದುಃಖಗಳು ಅನುಭವಕ್ಕೆ ಬಂದವು ಇಷ್ಟು ಆಯುಷ್ಯವಿತ್ತು, ಅದನ್ನು ಬಿಟ್ಟು ಇನ್ನೊಂದು ಕಡೆ ಹುಟ್ಟಿಬಂದೆ; ಅದರಲ್ಲಿ ನನಗೆ ಇಂಥ ಹೆಸರಿತ್ತು, ಇಂಥ ಗೋತ್ರವಿತ್ತು, ಇಂಥ ವರ್ಣವಿತ್ತು, ಇಂಥ ಆಹಾರವಿತ್ತು, ಇಂಥ ಸುಖ-ದುಃಖಗಳು ಅನುಭವಕ್ಕೆ ಬಂದವು, ಇಷ್ಟು ಆಯುಷ್ಮವಿತ್ತು, ಅದನ್ನು ಬಿಟ್ಟು ಇಲ್ಲಿ ಹುಟ್ಟಿ ಬಂದೆ’ ಎಂದು. ಹೀಗೆ ಸವಿವರವಾಗಿ ಮತ್ತು ಬಿಡಿಬಿಡಿಯಾಗಿ ಅನೇಕ ವಿಧವಾದ ಪೂರ್ವಜನ್ಮಗಳನ್ನು ಸ್ಮರಿಸಿಕೊಳ್ಳುತ್ತಾರೆ, ಹೇಗೆಂದರೆ - ಒಂದು ಜನ್ಮವನ್ನು ಎರಡು ಜನ್ಮಗಳನ್ನು... ಸವಿವರವಾಗಿ (ಮತ್ತು) ಬಿಡಿಬಿಡಿಯಾಗಿ ಅನೇಕ ವಿಧವಾದ ಪೂರ್ವ ಜನ್ಮಗಳನ್ನು ನೆನಪು ಮಾಡಿಕೊಳ್ಳುತ್ತಾರೆ; ಅದೇ ಸಾರಿಪುತ್ರ, ತಥಾಗತರ, ತಥಾಗತ ಬಲವಾಗುತ್ತದೆ...

“ಅಲ್ಲದೇ ಮತ್ತೆ ಸಾರಿಪುತ್ರ, ತಥಾಗತರು ವಿಶುದ್ಧವಾದ ಮಾನವಾತೀತ ದಿವ್ಯನೇತ್ರದಿಂದ ಸಾಯುತ್ತಿರುವ ಮತ್ತೆ ಹುಟ್ಟುತ್ತಿರುವ ಅಧಮವಾದ - ಉತ್ತಮವಾದ; ಸುರೂಪಿಯಾದ - ಕುರೂಪಿಯಾದ; ಸದ್ಗತಿ - ದುರ್ಗತಿಗಳಿಗೆ ಹೋಗುತ್ತಿರುವ, ತಮ್ಮ ಕರ್ಮಾನುಸಾರವಾಗಿರುವ ಜೀವಿಗಳನ್ನು ಪ್ರಜ್ಞಾಪೂರ್ವಕವಾಗಿ ಅರಿಯುತ್ತಾರೆ - ‘ಓಹೋ ಈ ಜೀವಿಗಳು ದೈಹಿಕ ದುರ್ನಡತೆಯನ್ನು ಹೊಂದಿದ, ಮಾತಿನ ದುರ್ನಡತೆಯನ್ನು ಹೊಂದಿದ, ಮನಸ್ಸಿನ ದುರ್ನಡತೆಯನ್ನು ಹೊಂದಿದ, ಆರ‍್ಯರ ಮೇಲೆ ಅಪವಾದಗಳನ್ನು ಹೇರುವ, ತಪ್ಪು ದೃಷ್ಟಿಯನ್ನು ಹೊಂದಿದ, ತಪ್ಪು ದೃಷ್ಟಿಯ ಪ್ರಕಾರ ನಡೆದುಕೊಳ್ಳುತ್ತಿದ್ದವರು, ಮೈಗರೆದಾಗ ಸಾವಿನ ಬಳಿಕ ಅಧೋ ಲೋಕದಲ್ಲಿ, ದುರ್ಗತಿಯಲ್ಲಿ, ಪಾತಕದಲ್ಲಿ, ನರಕದಲ್ಲಿ, ಹುಟ್ಟಿದ್ದಾರೆ; ಅಥವಾ ಮತ್ತೆ, ಯಾವ ಈ ಮಹಾಜೀವಿಗಳು ದೈಹಿಕ ಸನ್ನಡತೆಯಿಂದ ಹುಟ್ಟುವ, ಮಾತಿನ ಸನ್ನಡತೆಯಿಂದ ಹುಟ್ಟುವ, ಮನಸ್ಸಿನ ಸನ್ನಡತೆಯಿಂದ ಹುಟ್ಟುವ, ಆರ್ಯರ ಬಗ್ಗೆ ಅಪವಾದಗಳನ್ನು ಹೇರದ, ಯಥಾರ್ಥ ದೃಷ್ಟಿಯನ್ನು ಹೊಂದಿದ ಯಥಾರ್ಥ ದೃಷ್ಟಿಗೆ ಅನುಸಾರವಾಗಿ ನಡೆದುಕೊಳ್ಳುವ ಅವರು, ಮೈಗರೆದು ಸಾವಿನ ನಂತರ ಸುಗತಿಯಲ್ಲಿ, ಸ್ವರ್ಗ ಲೋಕದಲ್ಲಿ ಹುಟ್ಟಿದ್ದಾರೆ’ ಎಂದು. ಹೀಗೆ ವಿಶುದ್ಧವಾದ ಮಾನವಾತೀತ ದಿವ್ಯನೇತ್ರದಿಂದ ಜೀವಿಗಳನ್ನು ನೋಡುತ್ತಾರೆ, ಹೀಗೆ ಸಾಯುತ್ತಿರುವ, ಮರುಹುಟ್ಟುತ್ತಿರುವ, ಅಧಮವಾದ, ಉತ್ತಮವಾದ, ಸುರೂಪಿಯಾದ, ಕುರೂಪಿಯಾದ; ಸದ್ಗತಿ-ದುರ್ಗತಿಗಳನ್ನು ತಮ್ಮ ಕರ್ಮಾನುಸಾರವಾಗಿ ಹೊಂದುತ್ತಿರುವ ಜೀವಿಗಳ ಬಗ್ಗೆ ಅರಿಯುತ್ತಾರೆ. ಹೀಗೆ ಸಾರಿಪುತ್ತ ಏನನ್ನು ಯಾವ ತಥಾಗತರು ವಿಶುದ್ಧವಾದ ಮಾನವಾತೀತ ದಿವ್ಯನೇತ್ರದಿಂದ ಜೀವಿಗಳನ್ನು ನೋಡುತ್ತಾರೋ, ಹೀಗೆ ಸಾಯುತ್ತಿರುವ ಮರುಹುಟ್ಟುತ್ತಿರುವ ಅಧಮವಾದ-ಉತ್ತಮವಾದ; ಸುರೂಪಿಯಾದ-ಕುರೂಪಿಯಾದ; ಸದ್ಗತಿ-ದುರ್ಗತಿಗಳನ್ನು ತಮ್ಮ ಕರ್ಮಾನುಸಾರವಾಗಿ ಹೊಂದುತ್ತಿರುವ ಜೀವಿಗಳ ಬಗ್ಗೆ ಅರಿಯುತ್ತಾರೋ - ಈ ದೊಡ್ಡ ಜೀವಿಗಳು ದೈಹಿಕ ದುರ್ನಡತೆಯನ್ನು ಹೊಂದಿದ, ತಪ್ಪು ದೃಷ್ಟಿಯ ಪ್ರಕಾರ ನಡೆದುಕೊಳ್ಳುವ, ಅವರು ಮೈಗೆರೆದಾಗ ಸಾವಿನ ಬಳಿಕ ಅಧೋ ಲೋಕದಲ್ಲಿ ದುರ್ಗತಿಯಲ್ಲಿ ಪಾತಕದಲ್ಲಿ ನರಕದಲ್ಲಿ ಹುಟ್ಟಿದ್ದಾರೆ.189 ಅಥವಾ ಮತ್ತೆ, ಈ ಮಹಾನ್ ಜೀವಿಗಳು ದೈಹಿಕ ಸನ್ನಡತೆಯಿಂದ ಪ್ರಜ್ಞಾಪೂರ್ವಕ ದೃಷ್ಟಿಗಳಿಗನುಸಾರವಾಗಿ ನಡೆದುಕೊಳ್ಳುವ ಅವರು, ಮೈಗರೆದು, ಸಾವಿನ ನಂತರ ಸ್ವರ್ಗ ಲೋಕದಲ್ಲಿ ಹುಟ್ಟಿದಾರೆ, ಎಂದು. ಹೀಗೆ ವಿಶುದ್ಧವಾದ ಮಾನವಾತೀತ ದಿವ್ಯ ನೇತ್ರದಿಂದ, ಜೀವಿಗಳನ್ನು ನೋಡುತ್ತಾರೋ, ಹೀಗೆ ಸಾಯುತ್ತಿರುವ, ಮರುಹುಟ್ಟುತ್ತಿರುವ, ಅಧಮವಾದ-ಉತ್ತಮವಾದ, ಸುರೂಪಿಯಾದ-ಕುರೂಪಿಯಾದ; ಸದ್ಗತಿ-ದುರ್ಗತಿಗಳನ್ನು ತಮ್ಮ ಕರ್ಮಾನುಸಾರವಾಗಿ ಹೊಂದುತ್ತಿರುವ ಜೀವಿಗಳನ್ನು ಅರಿಯುತ್ತಾರೋ; ಇದೂ ಕೂಡ ಸಾರಿಪುತ್ತ ತಥಾಗತರ ತಥಾಗತ ಬಲವಾಗುತ್ತದೆ...

“ಅಲ್ಲದೇ ಮತ್ತೆ ಸಾರಿಪುತ್ತ, ತಥಾಗತರು ಆಸವಗಳನ್ನು ಹಿಂಗಿಸಿ ಆಸವರಹಿತರಾಗಿ ಚಿತ್ತದ ವಿಮುಕ್ತಿಯನ್ನು ಪ್ರಜ್ಞಾದ ವಿಮುಕ್ತಿಯನ್ನು ಹೊಂದಿ ಈ ಸ್ವಂತ ಪ್ರತ್ಯಕ್ಷ ಜ್ಞಾನದಿಂದ ಇಲ್ಲೇ ಈಗಲೇ ಸಾಕ್ಷಾತ್ಕಾರ ಪಡೆದುಕೊಂಡು ಬಾಳುತ್ತಾರೆ. ಸಾರಿಪುತ್ರ ಇದೇನು ತಥಾಗತರು ಆಸವಗಳನ್ನು ಹಿಂಗಿಸಿ ಆಸವರಹಿತರಾಗಿ ಚಿತ್ತದ ವಿಮುಕ್ತಿಯನ್ನು ಪ್ರಜ್ಞಾದ ವಿಮುಕ್ತಿಯನ್ನು ಹೊಂದಿ ಈ ಸ್ವಂತ ಪ್ರತ್ಯಕ್ಷ ಜ್ಞಾನದಿಂದ ಇಲ್ಲೇ ಈಗಲೇ ಸಾಕ್ಷಾತ್ಕಾರ ಪಡೆದುಕೊಂಡು ಏನನು ಬಾಳುತ್ತಾರೊ ಅದೂ ತಥಾಗತರ ತಥಾಗತ ಬಲವಾಗುತ್ತದೆ...

“ಸಾರಿಪುತ್ತ, ಇವು ಹತ್ತು, ತಥಾಗತರ ಹತ್ತು ತಥಾಗತ ಬಲಗಳು. ಈ ಬಲಗಳನ್ನು ಪಡೆದದ್ದರಿಂದ ತಥಾಗತರು ಪರಮ ಕ್ಷೇಮವನ್ನು ಉದ್ಘೋಷಿಸುತ್ತಾರೆ, ಪರಿಷತ್ತಿನಲ್ಲಿ ಸಿಂಹಗರ್ಜನೆಯನ್ನು ಗರ್ಜಿಸುತ್ತಾರೆ, ಬ್ರಹ್ಮಚಕ್ರವನ್ನು ಪ್ರವರ್ತಿಸುತ್ತಾರೆ.

4. ಸಾರಿಪುತ್ತ, ಯಾರೇ ಆಗಲಿ, ನನ್ನನ್ನು ಹೀಗೆ ತಿಳಿದು ಹೀಗೆ ನೋಡಿಯೂ- ‘ಶ್ರಮಣ ಗೋತಮರಿಗೆ ಮನುಷ್ಯಾತೀತವಾದ ಆರ‍್ಯ ಯೋಗ್ಯವಾದ ವಿಶಿಷ್ಟ ಲೋಕೋತ್ತರ ಜ್ಞಾನ ದರ್ಶನ ಇಲ್ಲ, ಶ್ರಮಣ ಗೋತಮರು ತರ್ಕದಿಂದ ತಟ್ಟಿಮಾಡಿದ ತಮ್ಮದೇ ಆಲೋಚನೆಯನ್ನನುಸರಿಸಿ ತಮಗೆ ತೋರಿದಂತೆ ಉಪದೇಶಿಸುತ್ತಾರೆ’ ಎಂದು ಈ ರೀತಿ ಹೇಳಿದರೆ, ಸಾರಿಪುತ್ತ, ಅಂತಹ ಮಾತುಗಳನ್ನು ತೊಡೆಯದಿದ್ದರೆ ಅಂತಹ ಮನಸ್ಸನ್ನು ತೊಡೆಯದಿದ್ದರೆ, ಅಂತಹ (ಮಿಥ್ಯಾ) ದೃಷ್ಟಿಯನ್ನು ಬಿಟ್ಟುಬಿಡದಿದ್ದರೆ, ಅವರು ಖಂಡಿತವಾಗಿಯೂ ನರಕದಲ್ಲಿ ಬಿದ್ದಂತೆಯೇ ಆಗುತ್ತದೆ. ಹೇಗೆಂದರೆ ಸಾರಿಪುತ್ತ, ಭಿಕ್ಷುವು ಶೀಲ ಸಂಪನ್ನನಾಗಿ, ಸಮಾಧಿ ಸಂಪನ್ನನಾಗಿ, ಪ್ರಜ್ಞಾ ಸಂಪನ್ನನಾಗಿ ಇಲ್ಲಿಯೇ ಈಗಲೇ ಸರ್ವೋತ್ತಮ ಜ್ಞಾನವನ್ನು ಅನುಭವಿಸುತ್ತಾನೆ. ಇದು ಹೀಗೆ ಸಂಪನ್ನವಾಗಿದೆ (ಆದ್ದರಿಂದ) ಸಾರಿಪುತ್ತ, ನಾನು ಹೇಳುತ್ತೇನೆ - ಅಂತಹ ಮಾತುಗಳನ್ನು ತೊಡೆದುಹಾಕದೆ, ಅಂತದ ಮನಸ್ಸನ್ನು ತೊಡೆದುಹಾಕದೆ, ಅಂತಹ (ಮಿಥ್ಯಾ) ದೃಷ್ಟಿಯನ್ನು ಬಿಟ್ಟುಬಿಡದೆ (ಇದ್ದರೆ) ಅವನು ಖಂಡಿತವಾಗಿಯೂ ನರಕದಲ್ಲಿ ಬಿದ್ದಂತೆಯೇ ಆಗುತ್ತದೆ.

3. ತಥಾಗತರ ನಾಲ್ಕು ಧೈರ್ಯ ಗುಣಗಳು

5. “ಸಾರಿಪುತ್ತ, ಇವು ನಾಲ್ಕು ತಥಾಗತರ ಧೈರ್ಯ ಗುಣಗಳು. ಈ ಧೈರ್ಯ ಗುಣಗಳಿಂದ ಕೂಡಿ ತಥಾಗತರು ಪರಮ ಕ್ಷೇಮವನ್ನು ಉದ್ಘೋಷಿಸುತ್ತಾರೆ, ಪರಿಷತ್ತಿನಲ್ಲಿ ಸಿಂಹಗರ್ಜನೆಯನ್ನು ಗರ್ಜಿಸುತ್ತಾರೆ, ಬ್ರಹ್ಮಚಕ್ರವನ್ನು ಪ್ರವರ್ತಿಸುತ್ತಾರೆ, ಆ ನಾಲ್ಕು ಯಾವುವು?

“ಸಾರಿಪುತ್ತ, ‘ನೀವು ಸಮ್ಯಕ್ ಸಂಬುದ್ಧರೆಂದು ಉದ್ಘೋಷಿಸಿಕೊಳ್ಳುವ ಈ ಧರ್ಮಗಳಲ್ಲಿ ಸಂಬುದ್ಧರಾಗಿಲ್ಲ [ಸಂಬುದ್ಧ = ಅರಿವಿನ ಒಳನೋಟದಿಂದ ತಿಳಿದವರು.]’ ಎಂದು ಇಲ್ಲಿ ಯಾವುದೇ ಶ್ರಮಣ ಅಥವಾ ಬ್ರಾಹ್ಮಣ ಅಥವಾ ದೇವ ಅಥವಾ ಮಾರ ಅಥವಾ ಬ್ರಹ್ಮ ಅಥವಾ ಲೋಕದಲ್ಲಿನ ಯಾರೇ ಆದರೂ ಯಥಾರ್ಥ ಧರ್ಮದ ಪ್ರಕಾರ ಅಪಾದಿಸಲು ಯಾವ ಕಾರಣವೂ ನನಗೆ ಕಂಡುಬರುವುದಿಲ್ಲ. ಸಾರಿಪುತ್ತ, ಈ ಯಾವ ಕಾರಣವೂ ನನಗೆ ಕಂಡುಬಾರದೇ ಇರುವುದರಿಂದ ನಾನು ಕ್ಷೇಮದಿಂದ, ಅಭಯದಿಂದ, ಧೈರ್ಯ ಗುಣದಿಂದ ನೆಲೆಗೊಳ್ಳುತ್ತೇನೆ.

“ಸಾರಿಪುತ್ತ, ಕ್ಷೀಣಾಸವರಾಗಿದ್ದೀರೆಂದು ಉದ್ಘೋಷಿಸುವ ನೀವು ಈ ಆಸವಗಳನ್ನು ಪರೀಕ್ಷಿಸಿಕೊಂಡಿಲ್ಲ ಎಂದು ಯಾವುದೇ ಶ್ರಮಣ ಅಥವಾ ಬ್ರಾಹ್ಮಣ ಅಥವಾ ದೇವ ಅಥವಾ ಮಾರ ಅಥವಾ ಬ್ರಹ್ಮ ಅಥವಾ ಲೋಕದಲ್ಲಿನ ಯಾರೇ ಆದರೂ, ಯಥಾರ್ಥ ಧರ್ಮದ ಪ್ರಕಾರ ಅಪಾದಿಸಲು ಯಾವ ಕಾರಣವೂ ನನಗೆ ಕಂಡುಬರುವುದಿಲ್ಲ. ಸಾರಿಪುತ್ತ, ಈ ಯಾವ ಕಾರಣವೂ ನನಗೆ ಕಂಡುಬಾರದೇ ಇರುವುದರಿಂದ ನಾನು ಕ್ಷೇಮದಿಂದ, ಅಭಯದಿಂದ, ಧೈರ್ಯ ಗುಣದಿಂದ ನೆಲೆಗೊಳ್ಳುತ್ತೇನೆ.

“ಸಾರಿಪುತ್ತ, ‘ಯಾವ ಧರ್ಮಗಳು ವಿಘ್ನಕಾರಿಗಳೆಂದು ನೀವು ಹೇಳುತ್ತೀರೋ ಅವುಗಳನ್ನು ಆಚರಣೆ ಮಾಡಿದಾಗ ಅವು ವಿಘ್ನಕಾರಿಗಳಾಗಿಲ್ಲ ಎಂದು ಯಾವುದೇ ಶ್ರಮಣ ಅಥವಾ ಬ್ರಾಹ್ಮಣ ಅಥವಾ ದೇವ ಅಥವಾ ಮಾರ ಅಥವಾ ಬ್ರಹ್ಮ ಅಥವಾ ಲೋಕದಲ್ಲಿನ ಯಾರೇ ಆದರೂ, ಯಥಾರ್ಥ ಧರ್ಮದ ಪ್ರಕಾರ ಆಪಾದಿಸುತ್ತಾರೆ ಎಂಬುದಕ್ಕೆ ಯಾವ ಕಾರಣವೂ ನನಗೆ ಕಂಡುಬರುವುದಿಲ್ಲ. ಸಾರಿಪುತ್ತ, ಈ ಯಾವ ಕಾರಣವೂ ನನಗೆ ಕಂಡುಬಾರದೇ ಇರುವುದರಿಂದ ನಾನು ಕ್ಷೇಮವಾಗಿ ಅಭಯದಿಂದ ಧೈರ್ಯ ಗುಣಗಳಿಂದ ನೆಲೆಗೊಳ್ಳುತ್ತೇನೆ.

“ಸಾರಿಪುತ್ತ, ‘ಆದರೆ ಯಾರ ಉಪಯೋಗಕ್ಕಾಗಿ ಈ ಧರ್ಮ ನಿಮ್ಮಿಂದ ಉಪದೇಶಿತವಾಗಿದೆಯೋ ಅದನ್ನು ಸರಿಯಾಗಿ ಆಚರಿಸಿದರೂ ಖಂಡಿತವಾಗಿಯೂ ದುಃಖ ನಾಶಕ್ಕೆ ಒಯ್ಯಲ್ಪಡುವುದಿಲ್ಲ’ ಎಂದು ಶ್ರಮಣ ಅಥವಾ ಬ್ರಾಹ್ಮಣ ಅಥವಾ ದೇವ ಅಥವಾ ಮಾರ ಅಥವಾ ಬ್ರಹ್ಮ ಅಥವಾ ಲೋಕದಲ್ಲಿನ ಯಾರೇ ಆದರೂ, ಯಥಾರ್ಥ ಧರ್ಮದ ಪ್ರಕಾರ ಆಪಾದಿಸುತ್ತಾರೆ ಎಂಬುದಕ್ಕೆ ಯಾವ ಕಾರಣವೂ ನನಗೆ ಕಂಡುಬರುವುದಿಲ್ಲ. ಸಾರಿಪುತ್ತ, ಈ ಯಾವ ಕಾರಣವೂ ನನಗೆ ಕಂಡುಬಾರದೇ ಇರುವುದರಿಂದ ನಾನು ಕ್ಷೇಮವಾಗಿ ಅಭಯದಿಂದ ಧೈರ್ಯಗುಣಗಳಿಂದ ನೆಲೆಗೊಳ್ಳುತ್ತೇನೆ.

“ಸಾರಿಪುತ್ರ, ಇವು ನಾಲ್ಕು ತಥಾಗತರ ಧೈರ್ಯ ಗುಣಗಳು; ಈ ಧೈರ್ಯ ಗುಣಗಳಿಂದ ಕೂಡಿ ತಥಾಗತರು ಪರಮ ಕ್ಷೇಮವನ್ನು ಉದ್ಘೋಷಿಸುತ್ತಾರೆ, ಪರಿಷತ್ತಿನಲ್ಲಿ ಸಿಂಹಗರ್ಜನೆಯನ್ನು ಗರ್ಜಿಸುತ್ತಾರೆ, ಬ್ರಹ್ಮಚಕ್ರವನ್ನು ಪ್ರವರ್ತಿಸುತ್ತಾರೆ.

“ಸಾರಿಪುತ್ತ, ಯಾರೇ ಆಗಲಿ ನನಗೆ ಹೀಗೆ ತಿಳಿದೂ, ಹೀಗೆ ನೋಡಿಯೂ - ‘ಶ್ರಮಣ ಗೋತಮರಿಗೆ ಮನುಷ್ಯಾತೀತವಾದ ಆರ‍್ಯ ಯೋಗ್ಯವಾದ ವಿಶಿಷ್ಟ ಲೋಕೋತ್ತರ ಜ್ಞಾನ ದರ್ಶನ ಇಲ್ಲ... ಎಂದರೆ ಖಂಡಿತವಾಗಿಯೂ ನರಕದಲ್ಲಿ ಬಿದ್ದಂತೆಯೇ ಆಗುತ್ತದೆ.

4. ತಥಾಗತರು ಎಂಟು ಪರಿಷತ್ತುಗಳಲ್ಲಿ ಅಭಯ ಪ್ರಾಪ್ತಿಯುಳ್ಳವರಾಗಿದ್ದಾರೆ

6. “ಸಾರಿಪುತ್ತ, ಈ ಎಂಟು ಪರಿಷತ್ತುಗಳಿವೆ. ಯಾವುವು ಆ ಎಂಟು? ಕ್ಷತ್ರಿಯ ಪರಿಷತ್ತು, ಬ್ರಾಹ್ಮಣ ಪರಿಷತ್ತು, ಗೃಹಪತಿ ಪರಿಷತ್ತು, ಶ್ರಮಣ ಪರಿಷತ್ತು, ಚಾತುಮಹಾರಾಜಿಕ (ದೇವ) ಪರಿಷತ್ತು, ತಾವತಿಂಸ (ದೇವ) ಪರಿಷತ್ತು, ಮಾರ ಪರಿಷತ್ತು, ಬ್ರಹ್ಮ ಪರಿಷತ್ತು - ಇವುಗಳೇ ಸಾರಿಪುತ್ತ, ಎಂಟು ಪರಿಷತ್ತುಗಳು. ಈ ನಾಲ್ಕು ಧೈರ್ಯ ಗುಣಗಳುಳ್ಳವನಾಗಿ ತಥಾಗತನು ಈ ಎಂಟು ಪರಿಷತ್ತುಗಳನ್ನು ಸಮೀಪಿಸುತ್ತಾನೆ, ತಲುಪುತ್ತಾನೆ. ಸಾರಿಪುತ್ತ, ಎಷ್ಟೋ ನೂರಾರು ಕ್ಷತ್ರಿಯ ಪರಿಷತ್ತುಗಳನ್ನು ಸಮೀಪಿಸಿದ್ದನ್ನು ನಾನು ನೇರವಾಗಿ ತಿಳಿದಿದ್ದೇನೆ ಮತ್ತು ನಾನು ಈ ಹಿಂದೆ ಅವರ ಹತ್ತಿರದಲ್ಲಿಯೇ ಕುಳಿತಿದ್ದೆ, ಈ ಹಿಂದೆ ಮಾತುಕತೆಯಾಡಿದ್ದೆ, ಈ ಹಿಂದೆ ಅವರೊಡನೆ ಚರ್ಚೆ ನಡೆಸಿದ್ದೇನೆ, ನಿಜವಾಗಿಯೂ ಸಾರಿಪುತ್ತ, ‘ಅಲ್ಲಿ ಹೆದರಿಕೆಯಾಗಲಿ, ಪುಕ್ಕಲುತನವಾಗಲೀ ಉಂಟಾಗುತ್ತದೆ’ ಎಂಬ ಯಾವ ಕಾರಣವನ್ನೂ ನಾನು ಕಾಣಲಿಲ್ಲ.

“ಸಾರಿಪುತ್ತ, ಈ ಯಾವ ಕಾರಣವೂ ನೇರವಾಗಿ ಕಂಡುಬಾರದೆ ಇರುವುದರಿಂದ ನಾನು ಕ್ಷೇಮ ಪ್ರಾಪ್ತಿಯುಳ್ಳವನಾಗಿ, ಅಭಯ ಪ್ರಾಪ್ತಿಯುಳ್ಳವನಾಗಿ, ಧೈರ್ಯಗುಣಗಳುಳ್ಳವನಾಗಿ ನೆಲೆಗೊಳ್ಳುತ್ತೇನೆ. ಸಾರಿಪುತ್ರ, ಅದೆಷ್ಟೋ ನೂರಾರು ಬ್ರಾಹ್ಮಣ ಪರಿಷತ್ತುಗಳನ್ನು... ಗೃಹಪತಿ ಪರಿಷತ್ತುಗಳನ್ನು... ಶ್ರಮಣ ಪರಿಷತ್ತುಗಳನ್ನು... ಚಾತುಮಹಾರಾಜಿಕ (ದೇವ) ಪರಿಷತ್ತುಗಳನ್ನು... ತಾವತಿಂಸ (ದೇವ) ಪರಿಷತ್ತುಗಳನ್ನು... ಮಾರ ಪರಿಷತ್ತುಗಳನ್ನು... ಬ್ರಹ್ಮ ಪರಿಷತ್ತುಗಳನ್ನು... ಸಮೀಪಿಸಿದ್ದೇನೆ. ಮತ್ತು ನಾನು ಈ ಹಿಂದೆ ಅವರ ಹತ್ತಿರದಲ್ಲಿಯೇ ಕುಳಿತಿದ್ದೇನೆ, ಈ ಹಿಂದೆ ಮಾತುಕತೆಯಾಡಿದ್ದೇನೆ, ಈ ಹಿಂದೆ ಅವರೊಡನೆ ಚರ್ಚೆ ನಡೆಸಿದ್ದೇನೆ. ನಿಜವಾಗಿಯೂ ಸಾರಿಪುತ್ತ, ‘ಅಲ್ಲಿ ನನಗೆ ಹೆದರಿಕೆಯಾಗಲಿ, ಪುಕ್ಕಲುತನವಾಗಲೀ ಉಂಟಾಗುತ್ತದೆ’ ಎಂಬ ಯಾವ ಕಾರಣವನ್ನೂ ನಾನು ಕಾಣಲಿಲ್ಲ. ಆ ಯಾವ ಕಾರಣವೂ ಕಂಡುಬಾರದೆ ಇರುವುದರಿಂದ ನಾನು ಕ್ಷೇಮವಾಗಿ ಅಭಯದಿಂದ, ಧೈರ್ಯಗುಣಗಳಿಮದ ನೆಲೆಗೊಳ್ಳುತ್ತೇನೆ.

“ಸಾರಿಪುತ್ತ, ಯಾರೇ ಆಗಲಿ, ನನಗೆ ಹೀಗೆ ತಿಳಿದೂ, ಹೀಗೆ ನೋಡಿಯೂ ‘ಶ್ರಮಣ ಗೋತಮರಿಗೆ ಮನುಷ್ಯಾತೀತವಾದ ಆರ‍್ಯ ಯೋಗ್ಯವಾದ ವಿಶಿಷ್ಟ ಲೋಕೋತ್ತರ ಜ್ಞಾನ ದರ್ಶನ ಇಲ್ಲ, ಶ್ರಮಣ ಗೋತಮರು ತರ್ಕದಿಂದ ತಟ್ಟಿಮಾಡಿದ ತಮ್ಮದೇ ಆಲೋಚನೆಯನ್ನನುಸರಿಸಿ ತಮಗೆ ತೋರಿದಂತೆ ಉಪದೇಶಿಸುತ್ತಾರೆ’ ಎಂದು ಹೇಳಿದರೆ ಸಾರಿಪುತ್ತ, ಅಂತಹ ಮಾತುಗಳನ್ನು ತೊಡೆಯದಿದ್ದರೆ, ಅಂತಹ ಮನಸ್ಸನ್ನು ತೊಡೆಯದಿದ್ದರೆ, ಅಂತಹ (ಮಿಥ್ಯಾ) ದೃಷ್ಟಿಯನ್ನು ಬಿಟ್ಟುಬಿಡದಿದ್ದರೆ ಅವರು ಖಂಡಿತವಾಗಿಯೂ ನರಕದಲ್ಲಿ ಬಿದ್ದಂತೆಯೇ ಆಗುತ್ತದೆ. ಹೇಗೆಂದರೆ ಸಾರಿಪುತ್ತ, ಭಿಕ್ಷುವು ಶೀಲ ಸಂಪನ್ನನಾಗಿ, ಸಮಾಧಿ ಸಂಪನ್ನನಾಗಿ, ಪ್ರಜ್ಞಾ ಸಂಪನ್ನನಾಗಿ ಇಲ್ಲಿಯೇ ಈಗಲೇ ಸರ್ವೋತ್ತಮವಾಗಿ ಧರ್ಮವನ್ನು ಅನುಭವಿಸುತ್ತಾನೆ. ಅಂತಹ ಸನ್ನಿವೇಶ ಇರುವುದರಿಂದ ಸಾರಿಪುತ್ತ ನಾನು ಹೇಳುತ್ತೇನೆ - ಅಂತಹ ಮಾತುಗಳನ್ನು ತೊಡೆದುಹಾಕದೆ, ಅಂತಹ ಮನಸ್ಸನ್ನು ತೊಡೆದುಹಾಕದೆ, ಅಂತಹ (ಮಿಥ್ಯಾ) ದೃಷ್ಟಿಯನ್ನು ಬಿಟ್ಟುಬಿಡದಿದ್ದರೆ ಅವನು ಖಂಡಿತವಾಗಿಯೂ ನರಕದಲ್ಲಿ ಬಿದ್ದಂತೆಯೇ ಆಗುತ್ತದೆ.

5. ನಾಲ್ಕು ರೀತಿಯ ಹುಟ್ಟುಗಳು*

7. ಸಾರಿಪುತ್ತ, ಈ ನಾಲ್ಕು ಹುಟ್ಟುಗಳಿವೆ, ಯಾವುವು ಆ ನಾಲ್ಕು? ಅಂಡಜ ಹುಟ್ಟು, ಜಲಾಬುಜ ಹುಟ್ಟು, ಸಂಸ್ವೇದಜ ಹುಟ್ಟು, ಔಪಪಾತಿಕ ಹುಟ್ಟು.

“ಮತ್ತು ಸಾರಿಪುತ್ತ, ಯಾವುದು ಅಂಡಜ ಹುಟ್ಟು? ಸಾರಿಪುತ್ತ, ಯಾವ ಯಾವ ಜೀವಿಗಳು ಮೊಟ್ಟೆಯನ್ನು ಒಡೆದುಕೊಂಡು ಹುಟ್ಟುತ್ತವೆ - ಅವುಗಳನ್ನು ಸಾರಿಪುತ್ತ, ಅಂದಜ ಹುಟ್ಟು ಎಂದು ಕರೆಯುತ್ತಾರೆ.

“ಮತ್ತು ಸಾರಿಪುತ್ತ, ಯಾವುವು ಜಲಬುಜ ಹುಟ್ಟು? ಸಾರಿಪುತ್ತ, ಯಾವ ಯಾವ ಜೀವಿಗಳು ಬಸಿರನ್ನು ಸೀಳಿಕೊಂಡು ಹುಟ್ಟುತ್ತವೆ - ಅವುಗಳನ್ನು ಸಾರಿಪುತ್ತ, ಜಲಾಬುಜ ಹುಟ್ಟು ಎಂದು ಕರೆಯುತ್ತಾರೆ.

“ಮತ್ತು ಸಾರಿಪುತ್ತ, ಯಾವುವು ಸಂಸ್ವೇದಜ ಹುಟ್ಟು? ಸಾರಿಪುತ್ತ, ಯಾವ ಯಾವ ಜೀವಿಗಳು ಕೊಳೆತ ಮೀನಿನಲ್ಲಿ ಅಥವಾ ಕೊಳೆತ ಹೆಣದಲ್ಲಿ ಅಥವಾ ಕೊಳೆತ ಹಿಟ್ಟಿನಲ್ಲಿ ಅಥವಾ ಹೊಲಸಿನ (ಮಲ) ತಿಪ್ಪೆಯಲ್ಲಿ ಅಥವಾ ಮೋರಿಗಳಲ್ಲಿ ಹುಟ್ಟುತ್ತವೆ - ಅವುಗಳನ್ನು ಸಾರಿಪುತ್ತ, ಸಂಸ್ವೇದಜ ಹುಟ್ಟು ಎಂದು ಕರೆಯುತ್ತಾರೆ.

“ಮತ್ತು ಸಾರಿಪುತ್ತ, ಯಾವುವು ಔಪಪಾತಿಕ ಹುಟ್ಟು? ಸಾರಿಪುತ್ತ, ದೇವರ ಹುಟ್ಟು, ನರಕವಾಸಿಗಳ ಹುಟ್ಟು, ಕೆಲವು ಮನುಷ್ಯರ ಹುಟ್ಟು, ಕೆಲವು ಪತಿತರ ಹುಟ್ಟು - ಇದನ್ನು ಸಾರಿಪುತ್ತ, ಔಪಪಾತಿಕ ಹುಟ್ಟು ಎಂದು ಕರೆಯುತ್ತಾರೆ.

“ಇವುಗಳೇ ಸಾರಿಪುತ್ತ, ನಾಲ್ಕು ಹುಟ್ಟುಗಳು.

“ಸಾರಿಪುತ್ತ, ಯಾರೇ ಆಗಲಿ, ನನಗೆ ಹೀಗೆ ತಿಳಿದೂ, ಹೀಗೆ ನೋಡಿಯೂ - ‘ಶ್ರಮಣ ಗೋತಮರಿಗೆ ಮನುಷ್ಯಾತೀತವಾದ ಆರ‍್ಯ ಯೋಗ್ಯವಾದ ವಿಶಿಷ್ಟ ಲೋಕೋತ್ತರ ಜ್ಞಾನದ ದರ್ಶನ ಇಲ್ಲ ಎಂದರೆ... ಖಂಡಿತವಾಗಿಯೂ ನರಕದಲ್ಲಿ ಬಿದ್ದಂತೆಯೇ ಆಗುತ್ತದೆ.

6. ಐದು ಗತಿಗಳು*

8. “ಸಾರಿಪುತ್ತ, ಇವು ಐದು ಗತಿಗಳು;* ಯಾವುದು ಆ ಐದು? ನರಕ, ಪಶುಗಳ ಲೋಕ (ತಿರ್ಯಕ್ ಯೋನಿ), ಪೇತಲೋಕ (ಪ್ರೇತ್ಯ), ಮನುಷ್ಯ ಲೋಕ ಮತ್ತು ದೇವ ಲೋಕ.190 ಮತ್ತು ಸಾರಿಪುತ್ತ ನರಕವನ್ನು ನಾನು ಪ್ರಜ್ಞಾಪೂರ್ವಕವಾಗಿ ಅರಿತಿದ್ದೇನೆ. ನರಕಕ್ಕೆ ಹೋಗುತ್ತಿರುವ ಮಾರ್ಗವನ್ನು, ನರಕಕ್ಕೆ ಒಯ್ಯುವ ಮಾರ್ಗವನ್ನು ಅರಿತಿದ್ದೇನೆ; ದೇಹವನ್ನು ಬಿಟ್ಟವನಾಗಿ ಸಾವಿನ ನಂತರ ಯಾವ ನಡತೆಯಿಂದ ಅಪಾಯಕ್ಕೆ ದುರ್ಗತಿಗೆ ಪಾತಕಕ್ಕೆ ನರಕಕ್ಕೆ ಹೋಗಿ ಹುಟ್ಟುತ್ತಾನೆ - ಅದನ್ನೂ ನಾನು ಪ್ರಜ್ಞಾಪೂರ್ವಕವಾಗಿ ಅರಿತಿದ್ದೇನೆ. ಮತ್ತು ಸಾರಿಪುತ್ತ, ಪಶುಲೋಕವನ್ನು ನಾನು ಅರಿತಿದ್ದೇನೆ, ಪಶುಲೋಕಕ್ಕೆ ಹೋಗುತ್ತಿರುವ ಮಾರ್ಗವನ್ನು ಪಶುಲೋಕಕ್ಕೆ ಒಯ್ಯುವ ಮಾರ್ಗವನ್ನು ಅರಿತಿದ್ದೇನೆ; ದೇಹವನ್ನು ಬಿಟ್ಟವನಾಗಿ ಸಾವಿನ ನಂತರ ಯಾವ ನಡತೆಯಿಂದ ಪಶುಲೋಕವನ್ನು ಸೇರಿ ಹುಟ್ಟುತ್ತಾನೆ ಅದನ್ನು ಅರಿತಿದ್ದೇನೆ ಮತ್ತು ಸಾರಿಪುತ್ತ, ಪ್ರೇತಲೋಕಕ್ಕೆ ಒಯ್ಯುವ ಮಾರ್ಗವನ್ನು ಅರಿತಿದ್ದೇನೆ; ದೇಹವನ್ನು ಬಿಟ್ಟವನಾಗಿ ಸಾವಿನ ನಂತರ ಯಾವ ನಡತೆಯಿಂದ ಪ್ರೇತಲೋಕ ಸೇರಿ ಹುಟ್ಟುತ್ತಾನೆ... ಅದನ್ನು ಅರಿತಿದ್ದೇನೆ. ಮತ್ತು ಸಾರಿಪುತ್ತ ಮನುಷ್ಯ ಲೋಕವನ್ನು ನಾನು ಅರಿತಿದ್ದೇನೆ; ದೇಹವನ್ನು ಬಿಟ್ಟವನಾಗಿ ಸಾವಿನ ನಂತರ ಯಾವ ನಡತೆಯಿಂದ ಮನುಷ್ಯಲೋಕ ಸೇರಿ ಹುಟ್ಟುತ್ತಾನೆ - ಅದನ್ನು ಅರಿತಿದ್ದೇನೆ, ಮತ್ತು ಸಾರಿಪುತ್ತ ದೇವಲೋಕವನ್ನು ನಾನು ಅರಿತಿದ್ದೇನೆ, ದೇವಲೋಕಕ್ಕೆ ಹೋಗುತ್ತಿರುವ ಮಾರ್ಗವನ್ನು, ದೇವಲೋಕಕ್ಕೆ ಒಯ್ಯುವ ಮಾರ್ಗವನ್ನು ಅರಿತಿದ್ದೇನೆ; ದೇಹವನ್ನು ಬಿಟ್ಟವನಾಗಿ ಸಾವಿನ ನಂತರ ಯಾವ ನಡತೆಯಿಂದ ಸುಗತಿಯನ್ನು, ಸ್ವರ್ಗಲೋಕವನ್ನು ಸೇರುತ್ತಾನೆ. ಅದನ್ನೂ ಅರಿತಿದ್ದೇನೆ ಮತ್ತು ಸಾರಿಪುತ್ರ, ನಿರ್ವಾಣವನ್ನು ಅರಿತಿದ್ದೇನೆ, ನಿರ್ವಾಣಕ್ಕೆ ಹೋಗುತ್ತಿರುವ ಮಾರ್ಗವನ್ನು, ನಿರ್ವಾಣಕ್ಕೆ ಒಯ್ಯುವ ಮಾರ್ಗವನ್ನು ಅರಿತಿದ್ದೇನೆ, ಆಸವಗಳನ್ನು ಹಿಂಗಿಸಿ ಆಸವರಹಿತರಾಗಿ ಚಿತ್ತದ ವಿಮುಕ್ತಿಯನ್ನು ಹೊಂದಿ ಪ್ರಜ್ಞಾದಿಂದ ವಿಮುಕ್ತರಾಗಿ ಇಲ್ಲೇ ಈಗಲೇ ಸ್ವತಃ ಹೇಗೆ ಸಾಕ್ಷಾತ್ಕರಿಸಿಕೊಂಡು ಬಾಳುತ್ತಾರೆ... ಅದನ್ನೂ ಅರಿತಿದ್ದೇನೆ.

9. ಇಲ್ಲಿ ಸಾರಿಪುತ್ರ, ನಾನು ಒಬ್ಬ ವ್ಯಕ್ತಿಯನ್ನು (ನನ್ನ) ಮನಸ್ಸಿನಿಂದ (ಅವನ) ಮನಸ್ಸನ್ನು ಆವರಿಸಿ ಪ್ರಜ್ಞಾಪೂರ್ವಕವಾಗಿ ಅರಿಯುತ್ತೇನೆ... ‘ಈ ವ್ಯಕ್ತಿ ಹಾಗೆ ನಡೆಯುತ್ತಿದ್ದಾನೆ, ಹಾಗೆ ವರ್ತನೆ ಪಡೆದಿದ್ದಾನೆ, ಅಂತಹ ಮಾರ್ಗವನ್ನು ಹಿಡಿದಿದ್ದಾನೆ; ಎಂತಹದ್ದೆಂದರೆ, ದೇಹವನ್ನು ತೊರೆದು ಸಾವಿನ ನಂತರ ಅಪಾಯವನ್ನು ದುರ್ಗತಿಯನ್ನು ನರಕವನ್ನು ಸೇರಿ ಹುಟ್ಟುತ್ತಾನೆ’ ಎಂದು. ಆನಂತರ ವಿಶುದ್ಧವಾದ ಮಾನವಾತೀತ ದಿವ್ಯನೇತ್ರದಿಂದ ಆ ಅವನು ದೇಹವನ್ನು ತೊರೆದು ಸಾವಿನ ನಂತರ ಅಪಾಯವನ್ನು ದುರ್ಗತಿಯನ್ನು ನರಕವನ್ನು ಸೇರಿ ಹುಟ್ಟಿದವನು ಅತಿಯಾದ ದುಃಖವನ್ನು ತೀವ್ರವಾದ ಕಟುವಾದ ವೇದನೆಯನ್ನು ಅನುಭವಿಸುತ್ತಿರುವುದನ್ನು ನಾನು ಕಾಣುತ್ತೇನೆ. ಉದಾಹರಣೆಗೆ ಸಾರಿಪುತ್ತ, ಜ್ವಾಲೆಯಿಲ್ಲದ, ಹೊಗೆಯಿಲ್ಲದ, ಕೆಂಡದಿಂದ ತುಂಬಿರುವ, ಆಳಿಗಿಂತಲೂ ಎತ್ತರದ ಕೆಂಡದ ಹೊಂಡವಿದೆ, ಮತ್ತು ಬಿಸಿಲಿನಿಂದ ಬೆಂದ ಬೇಸತ್ತ ಕಂಗೆಟ್ಟ ಬಳಲಿ ಬಾಯಾರಿ ನೀರಡಿಕೆಯಾದ ಮನುಷ್ಯನು ಇರುವ ಒಂದೇ ಒಂದು ದಾರಿಯಲ್ಲಿ ಅದೇ ಕೆಂಡದ ರಾಶಿಯ ಕಡೆಗೆ ಹೊರಟಿದ್ದಾನೆ, ಕಣ್ಣಿರುವ ಮನುಷ್ಯನು ಆ ಅಂತಹವನ್ನು ನೋಡಿ ಹೀಗೆ ಹೇಳಿಯಾನು- ‘ಈ ಲೋಕದ ಮನುಷ್ಯ, ಅಂತಹ ನಡತೆಯುಳ್ಳವನು, ಅಂತಹ ವರ್ತನೆಯುಳ್ಳವನು, ಅಂತಹ ಮಾರ್ಗವನ್ನು ಹಿಡಿದಿದ್ದಾನೆ’ ಎಂದು. ಆನಂತರ ಆ ಕೆಂಡದ ಹೊಂಡದಲ್ಲಿ ಬಿದ್ದವನನ್ನು ಅತ್ಯಂತ ದುಃಖವುಳ್ಳವನು ತೀವ್ರವಾದ ಕಟುವಾದ ವೇದನೆಯನ್ನು ಅನುಭವಿಸುತ್ತಿರುವುದನ್ನು ನೋಡಿಯಾನು. ಹೀಗೆಯೇ ನಾನೂ ಸಹ ಸಾರಿಪುತ್ತ, ಇಲ್ಲಿ ಒಬ್ಬ ವ್ಯಕ್ತಿ (ನನ್ನ) ಮನಸ್ಸಿನಿಂದ (ಅವನ) ಮನಸ್ಸನ್ನು ಆವರಿಸಿ ಹೀಗೆ ಪ್ರಜ್ಞಾಪೂರ್ವಕವಾಗಿ ಅರಿಯುತ್ತೇನೆ - ‘ಈ ವ್ಯಕ್ತಿ ಹಾಗೆ ನಡೆಯುತ್ತಿದ್ದಾನೆ, ಹಾಗೆ ವರ್ತನೆ ಪಡೆದಿದ್ದಾನೆ. ಅಂತಹ ಮಾರ್ಗವನ್ನು ಹಿಡಿದಿದ್ದಾನೆ, ಎಂತಹದ್ದೆಂದರೆ, ದೇಹವನ್ನು ತೊರೆದು ಸಾವಿನ ನಂತರ ಅಪಾಯವನ್ನು, ದುರ್ಗತಿಯನ್ನು, ಪಾತಕವನ್ನು ನರಕವನ್ನು ಸೇರಿ ಹುಟ್ಟುತ್ತಾನೆ’ ಎಂದು. ಆನಂತರ ವಿಶುದ್ಧವಾದ ಮಾನವಾತೀತವಾದ ದಿವ್ಯನೇತ್ರದಿಂದ ಆ ಅವನು ದೇಹವನ್ನು ತೊರೆದು ಸಾವಿನ ನಂತರ ಅಪಾಯವನ್ನು ದುರ್ಗತಿಯನ್ನು, ಪಾತಕವನ್ನು, ನರಕವನ್ನು ಸೇರಿ ಹುಟ್ಟಿದ, ಅತಿಯಾದ ದುಃಖವನ್ನು ತೀವ್ರವಾದ ಕಟುವಾದ ವೇದನೆಯನ್ನು ಅನುಭವಿಸುತ್ತಿರುವುದನ್ನು ನಾನು ಕಾಣುತ್ತೇನೆ.

“ಇಲ್ಲಿ ಸಾರಿಪುತ್ತ, ನಾನು ಒಬ್ಬ ವ್ಯಕ್ತಿಯನ್ನು (ನನ್ನ) ಮನಸ್ಸಿನಿಂದ (ಅವನ) ಮನಸ್ಸನ್ನು ಆವರಿಸಿ ಹೀಗೆ ಪ್ರಜ್ಞಾಪೂರ್ವಕವಾಗಿ ಅರಿಯುತ್ತೇನೆ - ‘ಈ ವ್ಯಕ್ತಿ ಹಾಗೆ ನಡೆಯುತ್ತಿದ್ದಾನೆ, ಹಾಗೆ ವರ್ತಿಸುತ್ತಿದ್ದಾನೆ, ಅಂತಹ ಮಾರ್ಗವನ್ನು ಹಿಡಿದಿದ್ದಾನೆ; ಎಂತಹದ್ದೆಂದರೆ, ದೇಹವನ್ನು ತೊರೆದು ಸಾವಿನ ನಂತರ ಪಶುಲೋಕವನ್ನು ಸೇರಿ ಹುಟ್ಟುತ್ತಾನೆ’ ಎಂದು. ಆನಂತರ ವಿಶುದ್ಧವಾದ ಮಾನವಾತೀತವಾದ ದಿವ್ಯ ನೇತ್ರದಿಂದ ದೇಹವನ್ನು ತೊರೆದು ಸಾವಿನ ನಂತರ ಪಶುಲೋಕವನ್ನು ಸೇರಿ ಹುಟ್ಟಿದ ಆ ಅವನು ದುಃಖವನ್ನೂ ತೀವ್ರವೂ, ಕಟುವೂ ಆದ ವೇದನೆಯನ್ನು ಅನುಭವಿಸುತ್ತಿರುವುದನ್ನು ನಾನು ಕಾಣುತ್ತೇನೆ. ಉದಾಹರಣೆಗೆ ಸಾರಿಪುತ್ತ, ಆಳಿಗಿಂತಲೂ ಉದ್ದದ ಹೊಲಸಿನಿಂದ ತುಂಬಿದ ಹೊಲಸು (ಮಲ) ಗುಂಡಿಯಿದೆ, ಮತ್ತು ಬಿಸಿಲಿನಿಂದ ಬೆಂದ ಬೇಸತ್ತ ಕಂಗೆಟ್ಟ ಬಳಲಿ ಬಾಯಾರಿ ನೀರಡಿಕೆಯಾದ ಮನುಷ್ಯನು, ಇರುವ ಒಂದೇ ಒಂದು ದಾರಿಯಲ್ಲಿ ಅದೇ ಹೊಲಸುಗುಂಡಿಯ ಕಡೆಗೆ ಹೊರಟಿದ್ದಾನೆ. ಕಣ್ಣಿರುವ ಮನುಷ್ಯನು ಆ ಅಂತಹವನನ್ನು ನೋಡಿ ಹೀಗೆ ಹೇಳಿಯಾನು - ‘ಆ ದೊಡ್ಡ ಮನುಷ್ಯ, ಅಂತಹ ನಡತೆಯುಳ್ಳವನು, ಅಂತಹ ವರ್ತನೆಯುಳ್ಳವನು, ಅಂತಹ ಮಾರ್ಗವನ್ನು ಹಿಡಿದಿದ್ದಾನೆ’. ಎಂತಹದೆಂದರೆ, ಅದು ಹೊಲಸು ಗುಂಡಿಗೆ ಬರುತ್ತದೆ; ಅನಂತರ, ಆ ಹೊಲಸಿನ ಗುಂಡಿಯಲ್ಲಿ ಬಿದ್ದವನು, ದುಃಖವನ್ನೂ, ತೀವ್ರವೂ ಕಟುವೂ ಆದ ವೇದನೆಯನ್ನು ಅನುಭವಿಸುತ್ತಿರುವುದನ್ನೂ ನೋಡಿಯಾನು. ಹೀಗೆಯೇ ನಾನು ಸಹ ಸಾರಿಪುತ್ತ. ಇಲ್ಲಿ ಒಬ್ಬ ವ್ಯಕ್ತಿಯನ್ನು (ನನ್ನ) ಮನಸ್ಸಿನಿಂದ (ಅವನ) ಮನಸ್ಸನ್ನು ಆವರಿಸಿ, ಹೀಗೆ ಪ್ರಜ್ಞಾಪೂರ್ವಕವಾಗಿ ಅರಿಯುತ್ತೇನೆ. ‘ಈ ವ್ಯಕ್ತಿ ಹಾಗೆ ನಡೆಯುತ್ತಿದ್ದಾನೆ, ಹಾಗೆ ವರ್ತಿಸುತ್ತಿದ್ದಾನೆ, ಅಂತಹ ಮಾರ್ಗ ಹಿಡಿದಿದ್ದನೆ; ಎಂತಹದ್ದೆಂದರೆ, ದೇಹವನ್ನು ತೊರೆದು ಸಾವಿನ ನಂತರ ಪಶುಲೋಕವನ್ನು ಸೇರಿ ಹುಟ್ಟುತ್ತಾನೆ’ ಎಂದು. ಅನಂತರ, ವಿಶುದ್ಧವಾದ ಮಾನವಾತೀತ ದಿವ್ಯ ನೇತ್ರದಿಂದ ಆ ಅವನು ದೇಹವನ್ನು ತೊರೆದು ಸಾವಿನ ನಂತರ ಪಶುಲೋಕವನ್ನು ಸೇರಿ ಹುಟ್ಟಿದ್ದನ್ನು, ದುಃಖವನ್ನೂ, ತೀವ್ರವೂ, ಕಟುವೂ ಆದ ವೇದನೆಯನ್ನೂ ಅನುಭವಿಸುತ್ತಿರುವುದನ್ನು ಕಾಣುತ್ತೇನೆ.

“ಇಲ್ಲಿ ಸಾರಿಪುತ್ತ, ನಾನು ಒಬ್ಬ ವ್ಯಕ್ತಿಯನ್ನು (ನನ್ನ) ಮನಸ್ಸಿನಿಂದ (ಅವನ) ಮನಸ್ಸನ್ನು ಆವರಿಸಿ ಹೀಗೆ ಪ್ರಜ್ಞಾಪೂರ್ವಕವಾಗಿ ಅರಿಯುತ್ತೇನೆ - ‘ಈ ವ್ಯಕ್ತಿ ಹಾಗೆ ನಡೆಯುತ್ತಿದ್ದಾನೆ, ಹಾಗೆ ವರ್ತಿಸುತ್ತಿದ್ದಾನೆ, ಅಂತಹ ದಾರಿ ಹಿಡಿದಿದ್ದಾನೆ; ಎಂತಹದ್ದೆಂದರೆ, ದೇಹವನ್ನು ತೊರೆದು ಸಾವಿನ ನಂತರ ಪ್ರೇತಲೋಕವನ್ನು ಸೇರಿ ಹುಟ್ಟುತ್ತಾನೆ’ ಎಂದು. ಆನಂತರ ವಿಶುದ್ಧವಾದ ಮಾನವಾತೀತ ದಿವ್ಯನೇತ್ರದಿಂದ ದೇಹವನ್ನು ತೊರೆದು ಸಾವಿನ ನಂತರ ಪ್ರೇತಲೋಕವನ್ನು ಸೇರಿ ಹುಟ್ಟಿದ ಆ ಅವನನ್ನು ದುಃಖವೇ ಹೆಚ್ಚಾಗಿರುವ ವೇದನೆಯನ್ನು ಅನುಭವಿಸುವವನನ್ನಾಗಿ ಕಾಣುತ್ತೇನೆ. ಉದಾಹರಣೆಗೆ ಸಾರಿಪುತ್ತ, ಸಮತಟ್ಟಲ್ಲದ ಭೂ ಭಾಗದಲ್ಲಿ ಹುಟ್ಟಿದ ಮರವು, ಕಡಿಮೆ ಎಲೆಗಳನ್ನುಳ್ಳದ್ದು, ವಿರಳವಾದ ನೆರಳನ್ನುಳ್ಳದ್ದು, ಇದೆ. ಮತ್ತು ಬಿಸಿಲಿನಿಂದ ಬೆಂದ, ಬೇಸತ್ತ ಕಂಗೆಟ್ಟು ಬಳಲಿ ಬಾಯಾರಿ ನೀರಡಿಕೆಯಾದ ಮನುಷ್ಯನು, ಇರುವ ಒಂದೇ ಒಂದು ದಾರಿಯಲ್ಲಿ ಅದೇ ಮರದ ಕಡೆಗೆ ಹೊರಟಿದ್ದನೆ. ಕಣ್ಣಿರುವ ಮನುಷ್ಯನು ಆ ಅಂತಹವನನ್ನು ಕಂಡು ಹೀಗೆ ಹೇಳಿಯಾನು - ‘ಈ ಒಳ್ಳೆ ಮನುಷ್ಯ ಅಂತಹ ನಡತೆಯುಳ್ಳವನು, ಅಂತಹ ವರ್ತನೆಯುಳ್ಳವನು. ಅಂತಹ ಮಾರ್ಗ ಹಿಡಿಸಿದ್ದಾನೆ; ಎಂತಹದೆಂದರೆ, ಈ ಮರದ ಕಡೆಗೇ ಬರುತ್ತಾನೆ’ ಎಂದು. ಆನಂತರ, ಆ ಮರದ ನೆರಳಿನಲ್ಲಿ ಕುಳಿತಿರುವ ಅಥವಾ ಮಲಗಿರುವ ಆ ಅವನನ್ನು ಕಂಡು ದುಃಖವೇ ಹೆಚ್ಚಾಗಿರುವ ವೇದನೆಯನ್ನು ಅನುಭವಿಸುವವನನ್ನಾಗಿ ನೋಡಿಯಾನು, ಹೀಗೆಯೇ ನಾನೂ ಸಹ ಸಾರಿಪುತ್ರ, ಇಲ್ಲಿ ಒಬ್ಬ ವ್ಯಕ್ತಿಯನ್ನು (ನನ್ನ) ಮನಸ್ಸಿನಿಂದ (ಅವನ) ಮನಸ್ಸನ್ನು ಆವರಿಸಿ ಹೀಗೆ ಪ್ರಜ್ಞಾಪೂರ್ವಕ ಅರಿಯುತ್ತೇನೆ - ‘ಈ ವ್ಯಕ್ತಿ ಹಾಗೆ ನಡೆಯುತ್ತಿದ್ದಾನೆ, ಹಾಗೆ ವರ್ತಿಸುತ್ತಿದ್ದಾನೆ, ಅಂತಹ ಮಾರ್ಗ ಹಿಡಿದಿದ್ದಾನೆ, ಎಂತಹದ್ದೆಂದರೆ ದೇಹವನ್ನು ತೊರೆದು ಸಾವಿನ ನಂತರ ಪ್ರೇತಲೋಕವನ್ನು ಸೇರಿ ಹುಟ್ಟುತ್ತಾನೆ’ ಎಂದು. ಅನಂತರ ವಿಶುದ್ಧವಾದ ಮಾನವಾತೀತವಾದ ದಿವ್ಯನೇತ್ರದಿಂದ, ದೇಹವನ್ನು ತೊರೆದು ಸಾವಿನ ನಂತರ ಪ್ರೇತಲೋಕವನ್ನು ಸೇರಿ ಹುಟ್ಟಿದ ಆ ಅವನು ದುಃಖವೇ ಹೆಚ್ಚಾಗಿರುವ ವೇದನೆಯನ್ನು ಅನುಭವಿಸುವುದನ್ನು ಕಾಣುತ್ತೇನೆ.

“ಇಲ್ಲಿ ಸಾರಿಪುತ್ರ, ನಾನು ಒಬ್ಬ ವ್ಯಕ್ತಿಯನ್ನು (ನನ್ನ) ಮನಸ್ಸಿನಿಂದ (ಅವನ) ಮನಸ್ಸನ್ನು ಆವರಿಸಿ ಹೀಗೆ ಪ್ರಜ್ಞಾಪೂರ್ವಕವಾಗಿ ಅರಿಯುತ್ತೇನೆ - ‘ಈ ವ್ಯಕ್ತಿ ಹಾಗೆ ನಡೆಯುತ್ತಿದ್ದಾನೆ, ಹಾಗೆ ವಾಸಿಸುತ್ತಿದ್ದಾನೆ. ಅಂತಹ ಮಾರ್ಗವನ್ನು ಹಿಡಿದಿದ್ದನೆ. ಎಂತಹದ್ದೆಂದರೆ, ದೇಹವನ್ನು ತೊರೆದು ಸಾವಿನ ನಂತರ ಮನುಷ್ಯ ಲೋಕವನ್ನು ಸೇರಿ ಹುಟ್ಟುತ್ತಾನೆ’ ಎಂದು. ಆನಂತರ ವಿಶುದ್ಧವಾದ ಮಾನವಾತೀತ ದಿವ್ಯನೇತ್ರದಿಂದ ದೇಹವನ್ನು ತೊರೆದು ಸಾವಿನ ನಂತರ ಮನುಷ್ಯ ಲೋಕದಲ್ಲಿ ಹುಟ್ಟಿದ ಆ ಅವನನ್ನು ಸುಖವೇ ಹೆಚ್ಚಾಗಿರುವ ವೇದನೆಯನ್ನು ಅನುಭವಿಸುತ್ತಿರುವುದನ್ನು ಕಾಣುತ್ತೇನೆ. ಉದಾಹರಣೆಗೆ ಸಾರಿಪುತ್ತ. ಸಮತಟ್ಟಾದ ಭೂ ಭಾಗದಲ್ಲಿ ಹುಟ್ಟಿದ ಮರವು, ಒತ್ತಾದ ಎಲೆಗಳಿಂದ ದಟ್ಟವಾದ ನೆರಳಿಂದ ಕೂಡಿ ಇದೆ; ಮತ್ತು ಬಿಸಿಲಿನಿಂದ ಬೆಂದ ಬೇಸತ್ತ ಕಂಗೆಟ್ಟ ಬಳಲಿ ಬಾಯಾರಿ ನೀರಡಿಕೆಯಾದ ಮನುಷ್ಯನು ಇರುವ ಒಂದೇ ಒಂದು ದಾರಿಯಲ್ಲಿ ಅದೇ ಮರದ ಕಡೆಗೆ ಹೊರಟಿದ್ದಾನೆ. ಕಣ್ಣಿರುವ ಮನುಷ್ಯನು ಆ ಅಂತಹವನನ್ನು ಕಂಡು ಹೀಗೆ ಹೇಳಿಯಾನು- ‘ಈ ಒಳ್ಳೆ ಮನುಷ್ಯ ಅಂತಹ ನಡತೆಯುಳ್ಳವನು, ಅಂತಹ ವರ್ತನೆಯುಳ್ಳವನು ಅಂತಹ ಮಾರ್ಗವನ್ನು ಹಿಡಿದಿದ್ದಾನೆ. ಎಂತಹದೆಂದರೆ, ಈ ಮರದ ಕಡೆಗೇ ಬರುತ್ತಾನೆ’ ಎಂದು. ಆನಂತರ, ಆ ಮರದ ನೆರಳಲ್ಲಿ ಕುಳಿತಿರುವ ಅಥವಾ ಮಲಗಿರುವ ಆ ಅವನನ್ನು ಸುಖವೇ ಹೆಚ್ಚಾಗಿರುವ ವೇದನೆಯನ್ನು ಅನುಭವಿಸುತ್ತಿರುವುದನ್ನು ನೋಡಿಯಾನು. ಹೀಗೆಯೇ ನಾನೂ ಸಹ, ಸಾರಿಪುತ್ರ, ಇಲ್ಲಿ ಒಬ್ಬ ವ್ಯಕ್ತಿಯನ್ನು (ನನ್ನ) ಮನಸ್ಸಿನಿಂದ (ಅವನ) ಮನಸ್ಸನ್ನು ಆವರಿಸಿ ಹೀಗೆ ಪ್ರಜ್ಞಾಪೂರ್ವಕವಾಗಿ ಅರಿಯುತ್ತೇನೆ- ‘ಈ ವ್ಯಕ್ತಿ ಹಾಗೆ ನಡೆಯುತ್ತಿದ್ದಾನೆ, ಹಾಗೆ ವರ್ತಿಸುತ್ತಿದ್ದಾನೆ, ಅಂತಹ ಮಾರ್ಗವನ್ನು ಹಿಡಿದಿದ್ದಾನೆ, ಎಂತಹದ್ದೆಂದರೆ, ದೇಹವನ್ನು ತೊರೆದು ಸಾವಿನ ನಂತರ ಮನುಷ್ಯ ಲೋಕವನ್ನು ಸೇರಿ ಹುಟ್ಟುತ್ತಾನೆ’ ಎಂದು. ಆನಂತರ ವಿಶುದ್ಧವಾದ ಮಾನವಾತೀತವಾದ ದಿವ್ಯ ನೇತ್ರದಿಂದ ದೇಹವನ್ನು ತೊರೆದು ಸಾವಿನ ನಂತರ ಮನುಷ್ಯ ಲೋಕವನ್ನು ಸೇರಿ ಹುಟ್ಟಿದ ಆ ಅವವನ್ನು ಸುಖವೇ ಹೆಚ್ಚಾಗಿರುವ ವೇದನೆಯನ್ನು ಅನುಭವಿಸುವವನ್ನಾಗಿ ಕಾಣುತ್ತೇನೆ.

“ಇಲ್ಲಿ ಸಾರೀಪುತ್ರ, ನಾನು ಒಬ್ಬ ವ್ಯಕ್ತಿಯನ್ನು (ನನ್ನ) ಮನಸ್ಸಿನಿಂದ (ಅವನ) ಮನಸ್ಸನ್ನು ಆವರಿಸಿ ಹೀಗೆ ಪ್ರಜ್ಞಾಪೂರ್ವಕವಾಗಿ ಅರಿಯುತ್ತೇನೆ - ‘ಈ ವ್ಯಕ್ತಿ ಹಾಗೆ ನಡೆಯುತ್ತಿದ್ದಾನೆ, ಹಾಗೆ ವರ್ತಿಸುತ್ತಿದಾನೆ, ಅಂತಹ ಮಾರ್ಗವನ್ನು ಹಿಡಿದಿದ್ದಾನೆ’, ಎಂತಹದ್ದೆಂದರೆ, ದೇಹವನ್ನು ತೊರೆದು ಸಾವಿನ ನಂತರ ಸುಗತಿಯನ್ನು, ಸ್ವರ್ಗಲೋಕವನ್ನು ಸೇರಿ ಹುಟ್ಟುತ್ತಾನೆ’ ಎಂದು. ಆನಂತರ ವಿಶುದ್ಧವಾದ ಮಾನವಾತೀತವಾದ ದಿವ್ಯ ನೇತ್ರದಿಂದ ದೇಹವನ್ನು ತೊರೆದು ಸಾವಿನ ನಂತರ ಸುಗತಿಯನ್ನು ಸ್ವರ್ಗಲೋಕವನ್ನು ಸೇರಿ ಹುಟ್ಟಿದ ಆ ಅವನು ಪರಿಪೂರ್ಣ ಸುಖ ವೇದನೆಯನ್ನೇ ಅನುಭವಿಸುವುದನ್ನು ಕಾಣುತ್ತೇನೆ. ಉದಾಹರಣೆಗೆ ಸಾರಿಪುತ್ತ ಒಂದು ಅರಮನೆ ಇದೆ, ಇಲ್ಲಿ ಒಳಗೂ-ಹೊರಗೂ ಗಾರೆ ಗಜ್ಜಾಗಿರುವ, ಮನೆಯಾಗಿರುವ, ಕಂಬಿಗಳಿಂದ ಭದ್ರವಾಗಿರುವ, ಕಿಟಕಿಗಳನ್ನು ಮುಚ್ಚಿರುವ, ಉಪ್ಪರಿಗೆಯಿದೆ. ಅಲ್ಲಿ ಕಂಬಳಿ ಹಾಸಿರುವ, ಮಗ್ಗಲು ಹಾಸಿಗೆ ಹಾಸಿರುವ, ಹೊದಿಕೆ ಹೊದಿಸಿರುವ, ಕಪ್ಪು ಜಿಂಕೆಯ ಚರ್ಮವನ್ನು ಹೊದಿಸಿರುವ ಮೇಲು ಪರದೆಯನ್ನುಳ್ಳ, ಎರಡೂ (ತಲೆ ಮತ್ತು ಕಾಲಿನ) ಕಡೆಗೆ ಕೆಂಪು ದಿಂಬುಗಳನ್ನು ಹಾಕಿರುವ, ಪಲ್ಲಂಗವಿದೆ ಮತ್ತು ಬಿಸಿಲಿನಿಂದ ಬೆಂದ ಕಂಗೆಟ್ಟ ಬಳಲಿ ಬಾಯಾರಿದ ಮನುಷ್ಯನು ಇರುವ ಒಂದೇ ಒಂದು ದಾರಿಯಲ್ಲಿ ಅದೇ ಅರಮನೆಯ ಕಡೆಗೆ ಹೊರಟಿದ್ದಾನೆ. ಕಣ್ಣಿರುವ ಮನುಷ್ಯನು ಆ ಅಂತಹವನನ್ನು ಕಂಡು ಹೀಗೆ ಹೇಳಿಯಾನು- ‘ಈ ಒಳ್ಳೆ ಮನುಷ್ಯ ಅಂತಹ ನಡತೆಯುಳ್ಳವನು, ಅಂತಹ ವರ್ತನೆಯುಳ್ಳವನು ಅಂತಹ ಮಾರ್ಗವನ್ನು ಹಿಡಿದಿದ್ದಾನೆ; ಎಂತಹದೆಂದರೆ, ಈ ಅರಮನೆಯ ಕಡೆಗೆ ಬರುತ್ತಾನೆ’ ಎಂದು. ಆನಂತರ ಆ ಅರಮನೆಯಲ್ಲಿ ಆ ಉಪ್ಪರಿಗೆಯಲ್ಲಿ ಆ ಪಲ್ಲಂಗದಲ್ಲಿ ಕುಳಿತಿರುವ ಅಥವಾ ಮಲಗಿರುವ ಆ ಅವನನ್ನು ಪರಿಪೂರ್ಣ ಸುಖ ವೇದನೆಯನ್ನೇ ಅನುಭವಿಸುತ್ತಿರುವುದನ್ನು ನೋಡಿಯಾನು. ಹೀಗೆ ನಾನೂ ಸಹ ಸಾರಿಪುತ್ತ ಇಲ್ಲಿ ಒಬ್ಬ ವ್ಯಕ್ತಿಯನ್ನು (ನನ್ನ) ಮನಸ್ಸಿನಿಂದ (ಅವನ) ಮನಸ್ಸನ್ನು ಆವರಿಸಿ ಹೀಗೆ ಪ್ರಜ್ಞಾಪೂರ್ವಕವಾಗಿ ಅರಿಯುತ್ತೇನೆ- ‘ಈ ವ್ಯಕ್ತಿ ಹಾಗೆ ನಡೆಯುತ್ತಾನೆ, ಹಾಗೆ ವರ್ತಿಸುತ್ತಾನೆ, ಅಂತಹ ಮಾರ್ಗವನ್ನು ಹಿಡಿಸಿದ್ದಾನೆ’, ಎಂತಹದ್ದೆಂದರೆ, ದೇಹವನ್ನು ತೊರೆದು ಸಾವಿನ ನಂತರ ಸುಗತಿಯನ್ನು ಸ್ವರ್ಗಲೋಕವನ್ನು ಸೇರಿ ಹುಟ್ಟುತ್ತಾನೆ’ ಎಂದು. ಆನಂತರ ವಿಶುದ್ಧವಾದ ಮಾನವಾತೀತ ದಿವ್ಯನೇತ್ರದಿಂದ ದೇಹವನ್ನು ತೊರೆದು ಸಾವಿನ ನಂತರ ಸುಗತಿಯನ್ನು ಸ್ವರ್ಗಲೋಕವನ್ನು ಸೇರಿ ಹುಟ್ಟಿದ ಆ ಅವನು ಪರಿಪೂರ್ಣ ಸುಖ ವೇದನೆಯನ್ನೇ ಅನುಭವಿಸುವುದನ್ನು ಕಾಣುತ್ತೇನೆ.

“ಇಲ್ಲಿ ಸಾರಿಪುತ್ತ, ನಾನು ಒಬ್ಬ ವ್ಯಕ್ತಿಯನ್ನು (ನನ್ನ) ಮನಸ್ಸಿನಿಂದ (ಅವನ) ಮನಸ್ಸನ್ನು ಆವರಿಸಿ ಹೀಗೆ ಪ್ರಜ್ಞಾಪೂರ್ವಕವಾಗಿ ಅರಿಯುತ್ತೇನೆ - ‘ಈ ವ್ಯಕ್ತಿ ಹಾಗೆ ನಡೆಯುತ್ತಾನೆ, ಹಾಗೆ ವರ್ತಿಸುತ್ತಾನೆ, ಅಂತಹ ಮಾರ್ಗ ಹಿಡಿದಿದ್ದಾನೆ; ಎಂತಹದ್ದೆಂದರೆ, ಆಸವಗಳನ್ನು ಹಿಂಗಿಸಿ, ಆಸವರಹಿತನಾಗಿ ಚಿತ್ತದ ವಿಮುಕ್ತಿಯನ್ನು ಹೊಂದಿ ಪ್ರಜ್ಞಾದಿಂದ ವಿಮುಕ್ತಿಯನ್ನು ಪಡೆದು ಸ್ವಂತ ಪ್ರತ್ಯಕ್ಷ ಜ್ಞಾನದಿಂದ ಇಲ್ಲೇ ಈಗಲೇ ಸ್ವತಃ ಸಾಕ್ಷಾತ್ಕರಿಸಿಕೊಂಡು ಬಾಳುತ್ತಾನೆ’ ಎಂದು. ಆಮೇಲೆ ಆಸವಗಳನ್ನು ಹಿಂಗಿಸಿ ಆಸವರಹಿತನಾಗಿ ಚಿತ್ತದ ವಿಮುಕ್ತಿಯನ್ನು ಹೊಂದಿ ಪ್ರಜ್ಞಾದಿಂದ ವಿಮುಕ್ತಿಯನ್ನು ಪಡೆದು ಸ್ವಂತ ಪ್ರತ್ಯಕ್ಷ ಜ್ಞಾನದಿಂದ ಇಲ್ಲೇ ಈಗಲೇ ಸ್ವತಃ ಸಾಕ್ಷಾತ್ಕರಿಸಿಕೊಂಡು ಬಾಳುತ್ತಿರುವ ಆ ಅವನನ್ನು ಪರಮಸುಖವೇದನೆ ಅನುಭವಿಸುತ್ತಿರುವವನನ್ನಾಗಿ ಕಾಣುತ್ತೇನೆ,191 ಉದಾಹರಣೆಗೆ, ಸಾರಿಪುತ್ತ! ನಿರ್ಮಲವಾದ ನೀರುಳ್ಳ, ಹಿತವಾದ ನೀರುಳ್ಳ, ತಣ್ಣನೆಯ ನೀರುಳ್ಳ, ತಿಳಿಯಾದ ಸುಂದರವಾದ ದಂಡೆಯುಳ್ಳ ರಮಣೀಯವಾದ ಕೊಳವಿದೆ, ಅದರ ಹತ್ತಿರದಲ್ಲಿಯೇ ದಟ್ಟವಾದ ವನವಿದೆ ಮತ್ತು ಬಿಸಿಲಿನಿಂದ ಬೆಂದ, ಬೇಸತ್ತ, ಕಂಗೆಟ್ಟ, ಬಳಲಿ ಬಾಯಾರಿ ನೀರಡಿಕೆಯಾದ ಮನುಷ್ಯನು ಇರುವ ಒಂದೇ ಒಂದು ದಾರಿಯಲ್ಲಿ ಅದೇ ಕೊಳಕ್ಕೆ ಹೊರಟಿದ್ದಾನೆ, ಕಣ್ಣಿರುವ ಮನುಷ್ಯನು ಆ ಅವನನ್ನು ನೋಡಿ ಹೀಗೆ ಹೇಳಿಯಾನು- ‘ಈ ಒಳ್ಳೆ ಮನುಷ್ಯ, ಅಂತಹ ನಡತೆಯುಳ್ಳವನು ಅಂತಹ ವರ್ತನೆಯುಳ್ಳವನು, ಅಂತಹ ಮಾರ್ಗವನ್ನು ಹಿಡಿದಿದ್ದಾನೆ, ಎಂತಹದೆಂದರೆ, ಈ ಕೊಳಕ್ಕೇ ಬರುತ್ತಾನೆ’ ಎಂದು. ಅನಂತರ ಅವನನ್ನು ಕೊಳದಲ್ಲಿ ಮುಳುಗಿ ಮಿಂದು, ನೀರು ಕುಡಿದು, ಹಿಂದೆಯಿದ್ದ ಎಲ್ಲಾ ದುಗುಡ ಬಳಲಿಕೆ - ಬೇಗುದಿಗಳನ್ನು ಸಂಪೂರ್ಣವಾಗಿ ಉಪಶಮನಗೊಳಿಸಿ; ಮೇಲೆ ಬಂದು ಅದೇ ವನದಲ್ಲಿ ಕುಳಿತಿರುವ ಅಥವಾ ಮಲಗಿರುವ ಆ ಅವನನ್ನು ಪರಮಸುಖವೇದನೆಯನ್ನು ಅನುಭವಿಸುತ್ತಿರುವವನ್ನಾಗಿ ನೋಡಿಯಾನು. ಹೀಗೆಯೇ ನಾನೂ ಸಹ ಸಾರಿಪುತ್ತ, ಇಲ್ಲಿ ಒಬ್ಬ ವ್ಯಕ್ತಿಯನ್ನು (ನನ್ನ) ಮನಸ್ಸಿನಿಂದ (ಅವನ) ಮನಸ್ಸನ್ನು ಆವರಿಸಿ ಹೀಗೆ ಪ್ರಜ್ಞಾಪೂರ್ವಕವಾಗಿ ಅರಿಯುತ್ತೇನೆ - ‘ಈ ವ್ಯಕ್ತಿ ಹಾಗೆ ನಡೆಯುತ್ತಿದ್ದಾನೆ, ಹಾಗೆ ವರ್ತಿಸುತ್ತಿದ್ದಾನೆ, ಅಂತಹ ಮಾರ್ಗವನ್ನು ಹಿಡಿದಿದ್ದಾನೆ, ಎಂತಹದ್ದೆಂದರೆ, ಆಸವಗಳನ್ನು ಹಿಂಗಿಸಿ ಆಸವರಹಿತನಾಗಿ ಚಿತ್ತದ ವಿಮುಕ್ತಿಯನ್ನು ಹೊಂದಿ ಪ್ರಜ್ಞಾದಿಂದ ವಿಮುಕ್ತಿಯನ್ನು ಹೊಂದಿ ಸ್ವಂತ ಪ್ರತ್ಯಕ್ಷ ಜ್ಞಾನದಿಂದ ಇಲ್ಲೇ ಈಗಲೇ ಸ್ವತಃ ಸಾಕ್ಷಾತ್ಕಾರ ಪಡೆದುಕೊಂಡು ಬಾಳುತ್ತಾನೆ’ ಎಂದು. ಆಮೇಲೆ ಆಸವಗಳನ್ನು ಹಿಂಗಿಸಿ, ಆಸವರಹಿತನಾಗಿ, ಚಿತ್ತದ ವಿಮುಕ್ತಿಯನ್ನು ಹೊಂದಿ, ಪ್ರಜ್ಞಾದ ವಿಮುಕ್ತಿಯನ್ನು ಪಡೆದು, ಸ್ವಂತ ಪ್ರತ್ಯಕ್ಷ ಜ್ಞಾನದಿಂದ ಇಲ್ಲೇ ಈಗಲೇ ಸ್ವತಃ ಸಾಕ್ಷಾತ್ಕಾರ ಪಡೆದುಕೊಂಡು ಬಾಳುತ್ತಿರುವ ಆ ಅವನು ಪರಮಸುಖ ವೇದನೆಯನ್ನು ಅನುಭವಿಸುತ್ತಿರುವುದನ್ನು ಕಾಣುತ್ತೇನೆ, ಇವೇ ಸಾರಿಪುತ್ತ ಐದು ಗತಿಗಳು.

“ಸಾರಿಪುತ್ತ, ಯಾರೇ ಆಗಲಿ, ನನ್ನ ಬಗ್ಗೆ ಹೀಗೆ ತಿಳಿದೂ ಹೀಗೆ ನೋಡಿಯೂ, ‘ಶ್ರಮಣ ಗೋತಮರಿಗೆ ಮನುಷ್ಯಾತೀತವಾದ ಆರ‍್ಯ ಯೋಗ್ಯವಾದ ಲೋಕೋತ್ತರ ಜ್ಞಾನ ದರ್ಶನ ಇಲ್ಲ. ಶ್ರಮಣ ಗೋತಮರು ತರ್ಕದಿಂದ ತಟ್ಟಿಮಾಡಿದ ತಮ್ಮದೇ ಆಲೋಚನೆಯನ್ನು ಅನುಸರಿಸಿ ತಮಗೆ ತೋರಿದಂತೆ ಉಪದೇಶಿಸುತ್ತಾರೆ’ ಎಂದು. ಈ ರೀತಿ ಹೇಳಿದರೆ ಸಾರಿಪುತ್ತ, ಅಂತಹ ಮಾತುಗಳನ್ನು ತೊಡೆಯದಿದ್ದರೆ, ಅಂತಹ ಮನಸ್ಸನ್ನು ತೊಡೆಯದಿದ್ದರೆ, ಅಂತಹ (ಮಿಥ್ಯಾ) ದೃಷ್ಟಿಯನ್ನು ಬಿಟ್ಟುಬಿಡದಿದ್ದರೆ, ಅವರು ಖಂಡಿತವಾಗಿಯೂ ನರಕದಲ್ಲಿ ಬಿದ್ದಂತೆಯೇ ಆಗುತ್ತದೆ. ಹೇಗೆಂದರೆ ಸಾರಿಪುತ್ತ, ಭಿಕ್ಷುವು ಶೀಲಸಂಪನ್ನನಾಗಿ, ಸಮಾಧಿ ಸಂಪನ್ನನಾಗಿ, ಪ್ರಜ್ಞಾ ಸಂಪನ್ನನಾಗಿ ಇಲ್ಲಿಯೇ ಈಗಲೇ ಸರ್ವೋತ್ತಮ ಜ್ಞಾನವನ್ನು ಅನುಭವಿಸುತ್ತಾನೆ. ಅಂತಹ ಸನ್ನಿವೇಶ ಇದೆ. ಆದ್ದರಿಂದ ಸಾರಿಪುತ್ತ, ನಾನು ಹೇಳುತ್ತೇನೆ- ಅಂತಹ ಮಾತುಗಳನ್ನು ತೊಡೆದುಹಾಕದೆ, ಅಂತಹ ಮನಸ್ಸನ್ನು ತೊಡೆದುಹಾಕದೆ, ಅಂತಹ (ಮಿಥ್ಯಾ) ದೃಷ್ಟಿಯನ್ನು ಬಿಟ್ಟಿಬಿಡದೆ ಇದ್ದರೆ ಅವನು ಖಂಡಿತವಾಗಿಯೂ ನರಕದಲ್ಲಿ ಬಿದ್ದಂತೆಯೇ ಆಗುತ್ತದೆ.

10. “ಸಾರಿಪುತ್ತ, ನಾನು ಚತುರಂಗ ಬ್ರಹ್ಮಚರ್ಯ ಆಚರಣೆ ಮಾಡಿದವನಾಗಿ (ಇವುಗಳನ್ನು) ನೇರವಾಗಿ (ಸ್ವತಃ) ಕಂಡುಕೊಂಡಿದ್ದೇನೆ - ‘ತಪಸ್ವಿಯಾಗಿ, ನಿಜವಾಗಿಯೂ ಪರಮ ತಪಸ್ವಿಯಾಗಿದ್ದೇನೆ, ಒರಟನಾಗಿ ನಿಜವಾಗಿಯೂ ಪರಮ ಒರಟನಾಗಿದ್ದೇನೆ, ಕಟ್ಟುನಿಟ್ಟಿನವನಾಗಿ ನಿಜವಾಗಿಯೂ ಪರಮ ಕಟ್ಟುನಿಟ್ಟಿನವನಾಗಿದ್ದೇನೆ, ಒಬ್ಬಂಟಿಗನಾಗಿ ನಿಜವಾಗಿಯೂ ಪರಮ ಒಬ್ಬಂಟಿಗನಾಗಿದ್ದೇನೆ.192

“ಸಾರಿಪುತ್ತ, ನನ್ನ ತಪಸ್ಸು ಈ ರೀತಿಯದಾಗಿತ್ತು - (ಬತ್ತಲಾಗಿದ್ದೆ) ಬಟ್ಟೆ ಇಲ್ಲದೆ ಇದ್ದೆ, ಆಚಾರ ಬಿಟ್ಟವನಾಗಿದ್ದೆ, ಕೈಯನ್ನು ನೆಕ್ಕುತ್ತಿದ್ದವನಾಗಿದ್ದೆ, ಬಾರೆಂದರೆ ಬಾರದವನಾಗಿದ್ದೆ, ನಿಲ್ಲೆಂದರೆ ನಿಲ್ಲದವನಾಗಿದ್ದೆ, ನನಗಾಗಿ ತಂದುದನ್ನು, ನನಗಾಗಿ ಮಾಡಿದ್ದನ್ನು, ಆಮಂತ್ರಣವನ್ನೂ ಒಪ್ಪುತ್ತಿರಲಿಲ್ಲ, ಮಡಕೆಯಲ್ಲಿದ್ದುದನ್ನು ತೆಗೆದುಕೊಳ್ಳುತ್ತಿರಲಿಲ್ಲ, ಪಾತ್ರೆಯಲ್ಲಿದ್ದುದನ್ನು ತೆಗೆದುಕೊಳ್ಳುತ್ತಿರಲಿಲ್ಲ, ಹೊಸ್ತಿಲು ದಾಟಿದ್ದನ್ನು, ಕೋಲು ದಾಟಿದ್ದನ್ನು, ಒನಕೆ ದಾಟಿದ್ದನ್ನು, ಇಬ್ಬರುಣ್ಣುವ ಕಡೆಯಿಂದ, ಗರ್ಭಿಣಿಯರಿಂದ, ಹಾಲೂಡುತ್ತಿರುವ ತಾಯಿಯಿಂದ, ಗಂಡಸರ ಜೊತೆಯಲ್ಲಿದ್ದವಳಿಂದ, ಅನ್ನಸಿಗುವುದೆಂದು (ಪ್ರಚಾರಕ್ಕೆ) ಹೇಳಲಾಗಿರುವ ಕಡೆಯಿಂದ, ನಾಯಿಯಿದ್ದ ಕಡೆಯಿಂದ, ನೊಣಗಳು ಗುಂಯ್ಞ್‍ಗುಡುವ ಕಡೆಯಿಂದ ತೆಗೆದುಕೊಳ್ಳುತ್ತಿರಲಿಲ್ಲ. ಮೀನನ್ನಾಗಲೀ, ಮಾಂಸವನ್ನಾಗಲೀ ಸ್ವೀಕರಿಸುತ್ತಿರಲಿಲ್ಲ. ಸುರೆಯನ್ನಾಗಲೀ, ಹೆಂಡವನ್ನಾಗಲೀ, ಕಳ್ಳನ್ನಾಗಲೀ ತೆಗೆದುಕೊಳ್ಳುತ್ತಿರಲಿಲ್ಲ. ಒಂದೇ ಮನೆಯವನಾಗಿದ್ದೆ (ಒಂದೇ ಮನೆಯಿಂದ ಭಿಕ್ಷೆ ಸ್ವೀಕರಿಸುವವನಾಗಿದ್ದೆ ಎಂಬ ಅರ್ಥ). ಒಂದೇ ತುತ್ತಿನವನಾಗಿದ್ದೆ, ಎರಡೇ ಮನೆಯವನಾಗಿದ್ದೆ ಅಥವಾ ಎರಡೇ ತುತ್ತಿನವನಾಗಿದ್ದೆ... ಏಳು ಮನೆಯವನಾಗಿದ್ದೆ ಅಥವಾ ಏಳು ತುತ್ತಿನವನಾಗಿದ್ದೆ; ಒಂದೇ ತಟ್ಟೆಯಲ್ಲಿದ್ದುದರಿಂದಲೇ ಜೀವ ಹಿಡಿದವನಾಗಿದ್ದೆ, ಎರಡು ತಟ್ಟೆಯಲ್ಲಿದ್ದುದರಿಂದಲೇ ಜೀವ ಹಿಡಿಯುತ್ತಿದ್ದೆ... ಏಳು ತಟ್ಟೆಯಲ್ಲಿದ್ದುದರಿಂದಲೇ ಜೀವ ಹಿಡಿದವನಾಗಿದ್ದೆ; ಒಂದೇ ಹೊತ್ತು ಉಣ್ಣುವವನಾಗಿದ್ದೆ, ಎರಡು ದಿನಕ್ಕೊಂದು ಹೊತ್ತು ಉಣ್ಣುವವನಾಗಿದ್ದೆ... ಏಳು ದಿನಗಳಿಗೆ ಒಂದೇ ಹೊತ್ತು ಉಣ್ಣುವವನಾಗಿದ್ದೆ; ಹೀಗೆ ಅರ್ಧ ತಿಂಗಳ ಕಾಲ ನಿಗದಿಯಾದ ಕಾಲಕ್ಕೆ ಮಾತ್ರ ಉಣ್ಣುವವನಾಗಿದ್ದೆ. ಹೀಗೆ ದೇಹದಂಡನೆ (ತಪಶ್ಚರ್ಯ)ಯ ಆಚರಣೆಯುಳ್ಳವನಾಗಿ ಜೀವಿಸುತ್ತಿದ್ದೆ.

“ಶಾಖಾಹಾರಿಯಾದ್ದೆ ಅಥವಾ ಸಜ್ಜೆಯನ್ನೇ ತಿನ್ನುವವನಾಗಿದ್ದೆ, ಕಾಡಿಕ್ಕಿಯನ್ನು ತಿನ್ನುವವನಾಗಿದ್ದೆ, ದದ್ದುಲದ ಬೀಜವನ್ನು ತಿನ್ನುವವನಾಗಿದ್ದೆ, ಪಾಚಿಯನ್ನು ತಿನ್ನುವವನಾಗಿದ್ದೆ, (ಭತ್ತದ) ಉಟ್ಟುಲನ್ನು ತಿನ್ನುವವನಾಗಿದ್ದೆ, ಮುಸುರೆಯುಣ್ಣುವವನಾಗಿದ್ದೆ, ಹಿಂಡಿಯನ್ನು ತಿನ್ನುವವನಾಗಿದ್ದೆ, ಹುಲ್ಲನ್ನು ತಿನ್ನುವವನಾಗಿದ್ದೆ, ಸಗಣಿ ತಿನ್ನುವವನಾಗಿದ್ದೆ, ಕಾಡಿನ ಬೇರು-ಹಣ್ಣುಗಳನ್ನು ತಿನ್ನುವವನಾಗಿದ್ದೆ, ಗಾಳಿ ಕೆಡವಿದ್ದನ್ನು ತಿನ್ನುವವನಾಗಿದ್ದೆ, ಹೀಗೆ ಜೀವ ಹಿಡಿದಿದ್ದೆ.

“ಸೆಣಬನ್ನು ಉಡುತ್ತಿದ್ದೆ, ಸೆಣಬಿನಿಂದ ಹೆಣೆದ ಬಟ್ಟೆಯುಡುತ್ತಿದ್ದೆ, ಹೆಣಕ್ಕೆ (ಸುತ್ತಿದ) ಬಟ್ಟೆಯುಡುತ್ತಿದ್ದೆ, ಬಿಸುಟ ಚಿಂದಿಗಳನ್ನುಡುತ್ತಿದ್ದೆ, ಮರದ ತೊಗಟೆಯನ್ನುಡುತ್ತಿದ್ದೆ, ಜಿಂಕೆಯ ತೊಗಲನ್ನು ತೊಡುತ್ತಿದ್ದೆ, ಕಪ್ಪು ಜಿಂಕೆಯ ತೊಗಲನ್ನು ತೊಡುತ್ತಿದ್ದೆ, ಕಪ್ಪು ಜಿಂಕೆಯ ತೊಗಲ ತೇಪೆಯನ್ನು ತೊಡುತ್ತಿದ್ದೆ, ಮರದ ಹುಲ್ಲಿನ ಉಡುಗೆ ತೊಡುತ್ತಿದ್ದೆ, ತೊಗಟೆಯುಡಿಗೆ ತೊಡುತ್ತಿದ್ದೆ, ಗೂಬೆ ರೆಕ್ಕೆಯುಡುಗೆ ತೊಡುತ್ತಿದ್ದೆ. ಕೂದಲನ್ನು ಕಿತ್ತು ತೆಗೆಯುವವನಾಗಿದ್ದೆ, ಕೂದಲು ಕಿತ್ತು ತೆಗೆಯುವ ಆಚರಣೆಯನ್ನು ಅನುಸರಿಸಿದೆ, ಆಸನ ತೊರೆದು ಸದಾನಿಂತೇ ಇರುವವನಾಗಿದ್ದೆ, ಕುಕ್ಕುರುಗಾಲಿನಲ್ಲಿ ಕುಳಿತುಕೊಳ್ಳುವ ಆಚರಣೆಯನ್ನು ಅನುಸರಿಸುವವನಾಗಿದ್ದೆ, ಚುಚ್ಚುಮುಳ್ಳಿನ ಹಾಸಿಗೆಯವನಾಗಿ ಚುಚ್ಚು ಮುಳ್ಳಿನ ಮೇಲೆ ಮಲಗುವವನಾಗಿದ್ದೆ, ಇರುಳಿನಲ್ಲಿ ಮೂರು ಬಾರಿ ಮೀಯುವ ಆಚರಣೆಯನ್ನು ಅನುಸರಿಸುವವನಾಗಿ ಬಾಳುತ್ತಿದ್ದೆ - ಹೀಗೆ, ಈ ರೀತಿ ಅನೇಕ ವಿಧ ದೇಹದಂಡನೆ ಮತ್ತು ಹಿಂಸೆಯಾಗುವಂಥ ಆಚರಣೆ ಅನುಸರಿಸಿ ಬಾಳುತ್ತಿದ್ದೆ. ಸಾರಿಪುತ್ತ, ನನ್ನ ತಪಸ್ಸು ಇಂತಹುದಾಗಿತ್ತು.

11. “ಸಾರಿಪುತ್ತ, ಇದು ನನ್ನ ಒರಟುತನವಾಗಿತ್ತು - ಅನೇಕ ವರ್ಷಗಳಿಂದ ಒಟ್ಟಾದ ಧೂಳಿನ ರಾಶಿ ದೇಹದಲ್ಲಿ ಚಕ್ಕೆಯೇಳುತ್ತಿತ್ತು. ಉದಾರಣೆಗೆ ಸಾರಿಪುತ್ತ, ಮರದ ಬೊಡ್ಡೆ ಅನೇಕ ವರ್ಷಗಳಲ್ಲಿ ಒಟ್ಟುಗೂಡಿದ (ತೊಗಟೆಯ) ಚಕ್ಕೆಯೇಳುತ್ತದೆ. ಹೀಗೆಯೇ ಸಾರಿಪುತ್ತ, ಅನೇಕ ವರ್ಷಗಳಿಂದ ಒಟ್ಟಾದ ಧೂಳಿನ ರಾಶಿ ನನ್ನ ದೇಹದಲ್ಲಿ ಚಕ್ಕೆಯೇಳುತ್ತದೆ. ಆಗ ಸಾರಿಪುತ್ತ - “ಓ ನಾನು ಈ ಧೂಳಿನ ರಾಶಿಯನ್ನು ಕೈಯಿಂದ ಒರೆಸೋಣ ಅಥವಾ ಬೇರೆಯವರು ಕೈಯಿಂದ ಈ ಧೂಳಿನ ರಾಶಿಯನ್ನು ಒರೆಸಲಿ’ ಎಂದು ನನಗೆ ಅನಿಸಲೇ ಇಲ್ಲ, ಇದು ಸಾರಿಪುತ್ತ, ನನ್ನಲ್ಲಿ ಇದ್ದ ಅತಿ ಒರಟುತನವಾಗಿತ್ತು.

“ಅಲ್ಲಿ ಸಾರಿಪುತ್ತ, ಇದು ನನಗಿದ್ದ ಕಟ್ಟುಪಾಡಾಗಿತ್ತು - ಆ ನಾನು ಸಾರಿಪುತ್ತ, ಎಚ್ಚರಿಕೆ (ಇಲ್ಲಿ ಎಚ್ಚರಿಕೆ ಅತಿಯಾಗಿ ಧ್ಯಾನವಾಗಿರುವುದಿಲ್ಲ, ಕೇವಲ ಮಡಿವಂತಿಕೆ) ಯಿಂದ ಮುಂದೆ ಹೋಗುತ್ತಿದ್ದೆ, ಎಚ್ಚರಿಕೆಯಿಂದ ಹಿಂತಿರುಗುತ್ತಿದ್ದೆ, ನನ್ನಲ್ಲಿ ಒಂದು ತೊಟ್ಟು ನೀರಿಗೂ ಕೂಡ ದಯೆ ಉಂಟಾಗಿತ್ತು. ‘ನಾನು ಹಳ್ಳಗಳಲ್ಲಿ ಸಿಕ್ಕಿಕೊಂಡಿರುವ ಸೂಕ್ಷ್ಮ ಪ್ರಾಣಿಗಳನ್ನು ಕೊಲ್ಲುವುದು ಬೇಡ193 ಎನ್ನುವಷ್ಟು. ಇದು ಸಾರಿಪುತ್ತ, ನನ್ನಲ್ಲಿನ ಅತಿಯಾದ ಕಟ್ಟುಪಾಡು.

“ಅಲ್ಲಿ ಸಾರಿಪುತ್ತ, ಇದು ನನ್ನ ಒಂಟಿತನ (ಎಲ್ಲರಿಂದಲೂ ಎಲ್ಲ ವಿಧದಲ್ಲೂ ದೂರವಾಗಿರುವುದು)ವಾಗಿತ್ತು- ಆ ನಾನು ಸಾರಿಪುತ್ತ, ಯಾವುದಾದರೊಂದು ಕಾಡಿನ ಒಳಹೊಕ್ಕು ತಂಗಿರುತ್ತಿದ್ದೆ. ದನಗಾಹಿಗಳನ್ನಾಗಲಿ, ಅಥವಾ ಕುರುಬರನ್ನಾಗಲೀ ಅಥವಾ ಹುಲ್ಲು ಕೊಯ್ಯುವವರನ್ನಾಗಲೀ ಅಥವಾ ಕಟ್ಟಿಗೆ ತೆಗೆದುಕೊಂಡು ಹೋಗುವವರನ್ನಾಗಲಿ ಅಥವಾ ಕಾಡಿನಲ್ಲಿ ಕೆಲಸ ಮಾಡುವವರನ್ನಾಗಲಿ ನೋಡಿದಾಗ; ಕಾಡಿನಿಂದ ಕಾಡಿಗೆ, ಪೆÇದೆಯಿಂದ ಪೆÇದೆಗೆ, ಕಣಿವೆಯಿಂದ ಕಣಿವೆಗೆ, ಗುಡ್ಡದಿಂದ ಗುಡ್ಡಕ್ಕೆ ಓಡಿಹೋಗುತ್ತಿದ್ದೆ. ಅದಕ್ಕೇನು ಕಾರಣ? ಅವರು ನನ್ನನ್ನು ನೋಡದೆಯಿರಲಿ, ನಾನು ಅವರನ್ನು ನೋಡದೆಯಿರಲಿ ಎಂದು. ಉದಾಹರಣೆಗೆ ಸಾರಿಪುತ್ತ, ಕಾಡುಜಿಂಕೆ ಮನುಷ್ಯರನ್ನು ನೋಡಿ ಕಾಡಿನಿಂದ ಕಾಡಿಗೆ ಪೆÇದೆಯಿಂದ ಪೆÇದೆಗೆ ಕಣಿವೆಯಿಂದ ಕಣಿವೆಗೆ ಓಡಿಹೋಗುತ್ತದೆ. ಹೀಗೆಯೇ ಸಾರಿಪುತ್ತ, ನಾನು ಯಾವಾಗ ದನಗಾಹಿಗಳನ್ನಾಗಲಿ ಅಥವಾ ಕುರುಬರನ್ನಾಗಲೀ ಅಥವಾ ಹುಲ್ಲು ಕೊಯ್ಯುವವರನ್ನಾಗಲೀ ಅಥವಾ ಕಟ್ಟಿಗೆ ತೆಗೆದುಕೊಂಡು ಹೋಗುವವರನ್ನಾಗಲೀ ಅಥವಾ ಕಾಡಿನಲ್ಲಿ ಕೆಲಸ ಮಾಡುವವರನ್ನಾಗಲೀ ನೋಡಿದಾಗ, ಕಾಡಿನಿಂದ ಕಾಡಿಗೆ ಪೆÇದೆಯಿಂದ ಪೆÇದೆಗೆ ಕಣಿವೆಯಿಂದ ಕಣಿವೆಗೆ ಗುಡ್ಡದಿಂದ ಗುಡ್ಡಕ್ಕೆ ಓಡಿಹೋಗುತ್ತಿದ್ದೆ, ಅದಕ್ಕೇನು ಕಾರಣ? ಅವರು ನನ್ನನ್ನು ನೋಡದೆಯಿರಲಿ, ನಾನು ಅವರನ್ನು ನೋಡದೆಯಿರಲಿ ಎಂದು. ಇದು ಸಾರಿಪುತ್ತ, ನನ್ನ (ಅತಿಯಾದ) ಒಬ್ಬಂಟಿತನವಾಗಿತ್ತು.

“ಸಾರಿಪುತ್ತ, ಆ ನಾನು ಹಸುಗಳು ಹೊರಟುಹೋಗಿರುವ, ದನಗಾಹಿಗಳು ಹೊರಟುಹೋಗಿರುವ ಕೊಟ್ಟಿಗೆಗಳು ಏನಿವೆಯೋ ಅದರೊಳಗೆ ನಾಲ್ಕು ಕಾಲಿನ ಮೇಲೆ (ಪ್ರಾಣಿಗಳಂತೆ) ಹೋಗಿ ತಾಯ ಮೊಲೆ ಕುಡಿವ ಚಿಕ್ಕ (ಎಳೆ) ಗರುಗಳ ಸಗಣಿ ಏನಿದೆಯೋ ಅದನ್ನು ಸಹಿತ ತಿನ್ನುತ್ತಿದ್ದೆ. ಸಾರಿಪುತ್ತ ಎಲ್ಲಿಯವರೆಗೆ ನನ್ನ ಮೂತ್ರ-ಮಲ ಮುಗಿಯುವುದಿಲ್ಲವೋ ಅಲ್ಲಿಯವರೆಗೆ ನನ್ನದೇ ಮೂತ್ರ-ಮಲಗಲನ್ನು ತಿನ್ನುತ್ತಿದ್ದೆ. ಇದು ಸಾರಿಪುತ್ತ ನನ್ನ (ಮಹಾ) ವಿಕಟಭೋಜನವಾಗಿತ್ತು.

12. “ಸಾರಿಪುತ್ತ, ಆ ನಾನು ಯವುದಾದರೊಂದು ಹೆದರಿಕೆ ಹುಟ್ಟಿಸುವ ವನದಲ್ಲಿ ಒಳಹೊಕ್ಕು ತಂಗಿರುತ್ತಿದ್ದೆ. ಅಲ್ಲಿ ಸಾರಿಪುತ್ತ, ಹೆದರಿಕೆ ಹುಟ್ಟಿಸುವ ಕಾಡುಗಳಿಗೂ ಮೀರಿ ಹೆದರಿಕೆ ಹುಟ್ಟಿಸುವಂತಹುದಾಗಿತ್ತು. ಎಷ್ಟೆಂದರೆ ಯಾರು ರಾಗರಹಿತನಲ್ಲವೋ ಅವನು ಆ ವನವನ್ನು ಪ್ರವೇಶಿಸಿದರೆ ಮೈ (ಯಿಡೀ) ನವಿರೇಳುತ್ತಿತ್ತು. ಆ ನಾನು ಸಾರಿಪುತ್ತ, ರಾತ್ರಿಗಳಲ್ಲಿ ಶೀತದ ಹೇಮಂತದ ಪಕ್ಷದ ಕೊನೆ ಎಂಟು ದಿನಗಳಲ್ಲಿ ಹಿಮ ಬೀಳುವ ಹೊತ್ತಿನಲ್ಲಿ ಅಂತಹ ರಾತ್ರಿಗಳಲ್ಲಿ ಬಯಲಿನಲ್ಲಿ ತಂಗಿರುತ್ತಿದ್ದೆ, ಅದೇ ಹಗಲಿನಲ್ಲಿ, ಕಾಡಿನಲ್ಲಿ (ತಂಗಿರುತ್ತಿದ್ದೆ).194 ಬಿಸಿಲುಗಾಲದ ಕೊನೆಯ ತಿಂಗಳಿನಲ್ಲಿ ಹಗಲು ಬಯಲಿನಲ್ಲಿ ತಂಗಿರುತ್ತಿದ್ದೆ, ಅದೇ ರಾತ್ರಿ ಕಾಡಿನಲ್ಲಿ (ತಂಗಿರುತ್ತಿದ್ದೆ). ಆಗ ಸಾರಿಪುತ್ತ, ನನಗೆ ತಟ್ಟನೆ ಹಿಂದೆ ಎಂದೂ ಕೇಳದ ಈ ಗಾಥೆ ತೋರಿಬಂತು-

“ಸಟೆದರೂ ಸೀತದಿಂದ, ಬೆಂದರೂ ಬಿಸಿಲಿನಲ್ಲಿ

ಒಂಟಿಯಾಗಿ ಎದೆಬಿರಿಯುವ ಕಾಡಿನಲ್ಲಿ

ಉಡುಗೆಯಿರದೆ, ಬತ್ತಲಾಗಿ, ಬೆಂಕಿಯಿರದೆ ಮೈ ಕಾವಿಗೆ

ಅರಸುತ್ತಲೇ ನಡೆಯುವನು ಮುನಿಯೊಬ್ಬನು” ಎಂದು.

“ಸಾರಿಪುತ್ತ, ಆಗ ನಾನು ಸುಡುಗಾಡಿನಲ್ಲಿ ಮಡಿದವರ ಎಲುಬುಗಳನ್ನು ತಲೆದಿಂಬು ಮಾಡಿಕೊಂಡು ಮಲಗುತ್ತಿದ್ದೆ, ಮತ್ತು ಸಾರಿಪುತ್ತ, ದನಗಾಹಿ ಹುಡುಗರು ನನ್ನ ಹತ್ತಿರ ಬಂದು ಉಗಿಯುತ್ತಿದ್ದರು, ಉಚ್ಚೆ ಹೊಯ್ಯುತ್ತಿದ್ದರು, ದೂಳೆರಚುತ್ತಿದ್ದರು, ಕಿವಿಯೊಳಕ್ಕೆ ಶಲಾಕೆಗಳನ್ನು ನೂಕುತ್ತಿದ್ದರು; ಇಷ್ಟಾದರೂ ಸಾರಿಪುತ್ತ, ಅವರ ಬಗ್ಗೆ ಕೇಡು ಮನಸ್ಸು ಉಂಟಾಗದಿದ್ದು ನನಗೇ ನೇರವಾಗಿ ಗೊತ್ತಿದೆ. ಹೀಗೆ ನಾನು ಸಾರಿಪುತ್ತ, ಉಪೇಕ್ಖಾದಲ್ಲಿ ತಂಗಿದವನಾಗಿದ್ದೆ.

13. “ಸಾರಿಪುತ್ತ, ಕೆಲವು ಶ್ರಮಣರು, ಬ್ರಾಹ್ಮಣರು ಹೀಗೆ ವಾದಿಸುವರು ಈ ದೃಷ್ಟಿಯುಳ್ಳವರು- ‘ಆಹಾರದಿಂದಲೇ ಶುದ್ಧಿ,195 ಎಂದು. ಅವರು ಹೀಗನ್ನುತ್ತಾರೆ- ‘ಎಲಚಿಹಣ್ಣಿನಿಂದಲೇ ಜೀವಿಸೋಣ’ ಎಂದು. ಅವರು ಎಲಚಿಹಣ್ಣನ್ನು ತಿನ್ನುತ್ತಾರೆ, ಎಲಚಿಯ ಹುಡಿಯನ್ನೇ ತಿನ್ನುತ್ತಾರೆ, ಎಲಚಿಯ ನೀರನ್ನೇ ಕುಡಿಯುತ್ತಾರೆ, ಎಲಚಿಯ ಹಣ್ಣಿನ ಅನೇಕ ವಿಧ ಕಷಾಯಗಳನ್ನು ಸೇವಿಸುತ್ತಾರೆ. ಸಾರಿಪುತ್ತ, ದಿನಕ್ಕೆ ಒಂದೇ ಒಂದು ಎಲಚಿಹಣ್ಣನ್ನು ತಿಂದು ಬದುಕಿದ್ದು ನನಗೆ ನೇರವಾಗಿ ನೆನಪಿದೆ. ನಿನಗೆ ಹೀಗೆನಿಸಬಹುದು ಸಾರಿಪುತ್ತ! ಆಗ ಎಲಚಿಹಣ್ಣು ಬಹಳ ದೊಡ್ಡದಾಗಿರಬಹುದೆಂದು, ಅದನ್ನು ಹಾಗೆ ತಿಳಿಯಬಾರದು ಸಾರಿಪುತ್ತ, ಆಗ ಕೂಡ ಎಲಚಿಹಣ್ಣು, ಹೀಗೇ ಈಗಿನ ಗಾತ್ರದ್ದೇ ಆಗಿತ್ತು. ಆಗ ಸಾರಿಪುತ್ರ, ಒಂದೇ ಒಂದು ಎಲಚಿಹಣ್ಣನ್ನೇ ತಿನ್ನುತ್ತಿದ್ದರಿಂದ, ಬಹಳ ಕಡಿಮೆ ಆಹಾರ ತಿನ್ನುತ್ತಿದ್ದರಿಂದ ನನ್ನ ಅಂಗ ಪ್ರತ್ಯಂಗಗಳು ಹೇಗಾಗಿದ್ದುವೆಂದರೆ; ದ್ರಾಕ್ಷಿ ಬಳ್ಳಿಯ ಕಾಂಡದಂತೆ, ಬಿದುರುಕಡ್ಡಿಯ ಹಾಗೆ ಆಗಿದ್ದುವು. ಬಹಳ ಕಡಿಮೆ ಆಹಾರ ತಿನ್ನುತ್ತಿದ್ದರಿಂದ ನನ್ನ ಹಿಂಭಾಗವು ಹೇಗಾಗಿದ್ದಿತ್ತೆಂದರೆ ಒಂಟೆಯ (ಗೊರಸು) ಕಾಲಿನ ಹಾಗೆ (ಆಯಿತು), ಬಹಳ ಕಡಿಮೆ ಆಹಾರ ತಿನ್ನುತ್ತಿದ್ದರಿಂದ ನನ್ನ ಬೆನ್ನೆಲುಬು ಹೇಗಾಗಿದ್ದಿತ್ತೆಂದರೆ ದಾರಕ್ಕೆ ಪೆÇೀಣಿಸಿದ ಮಣಿಯ ಹಾಗೆ ಎದ್ದುಕಾಣತೊಡಗಿತ್ತು. ಬಹಳ ಕಡಿಮೆ ಆಹಾರ ತಿನ್ನುತ್ತಿದ್ದರಿಂದ ನನ್ನ ಪಕ್ಕೆಲುಬುಗಳು ಹೇಗಾಗಿದ್ದುವೆಂದರೆ ಕೊಟ್ಟಿಗೆಯೊಂದರ ಹಾಗೆ ಛಾವಣಿಯಿರದ ಬರೀ ಜಂತೆಯೇ ಅಡ್ಡಾದಿಡ್ಡಿ ಕಾಣುವ ಹಾಗೆ ಎದ್ದು ಕಾಣುತ್ತಿದ್ದವು. ಹೀಗೆ ಬಹಳ ಕಡಿಮೆ ಆಹಾರ ತಿನ್ನುತ್ತಿದ್ದರಿಂದ ನನ್ನ ಕಣ್ಣುಗಳು ಹೇಗಾಗಿದ್ದುವೆಂದರೆ, ಬಹಳ ಆಳವಾದ ಬಾವಿಯಲ್ಲಿನ ನೀರು ಹೇಗೆ ಮಿನುಗುತ್ತದೋ ಹಾಗೆ ಕಣ್ಣಿನ ಬಾವಿಯ ಆಳಕ್ಕಿಳಿದು ತೋರತೊಡಗಿದ್ದವು. ಹೀಗೆ ಬಹಳ ಕಡಿಮೆ ಆಹಾರ ತಿನ್ನುತ್ತಿದ್ದರಿಂದ ನನ್ನ ತಲೆಯೂ ಹೇಗಾಗಿತ್ತೆಂದರೆ, ಕಹಿ ಹೀರೇಕಾಯಿ ಬಿಸಿಲಿಗೆ ಮತ್ತು ಗಾಳಿಗೆ ಬಾಡಿ ಬರಲಾಗುತ್ತದೋ ಹಾಗೆ ಬಾಡಿ ಬರಲಾಗಿತ್ತು. ಆಗ ಸಾರಿಪುತ್ತ... ‘ಹೊಟ್ಟೆಯ ತೊಗಲು ಹಿಡಿಯುತ್ತೇನೆ ಎಂದು ಹೋದಾಗ ಬೆನ್ನು ಮೂಳೆ ಕೈಗೆ ಸಿಗುತ್ತಿತ್ತು. ‘ಬೆನ್ನು ಮೂಳೆ ಹಿಡಿಯುತ್ತೇನೆ’ ಎಂದು ಹೋದಾಗ ಹೊಟ್ಟೆಯ ತೊಗಲು ಕೈಗೆ ಸಿಗುತ್ತಿತ್ತು. ಬಹಳ ಕಡಿಮೆ ಆಹಾರ ತಿನ್ನುತ್ತಿದ್ದರಿಂದ ಮಲ-ಮೂತ್ರ ವಿಸರ್ಜನೆ ಮಾಡೋಣವೆಂದು ಹೋದಾಗ ಮುಖ ಅಡಿಯಾಗಿ ಬೀಳುತ್ತಿದ್ದೆ. ಆಗ ಸಾರಿಪುತ್ತ, ಬಹಳ ಕಡಿಮೆ ಆಹಾರ ತಿನ್ನುತ್ತಿದ್ದರಿಂದ ನನ್ನ ಮೈಯನ್ನು ಸಡಿಲಗೊಳಿಸಲು ನನ್ನ ಮೈಯನ್ನು ತಿಕ್ಕಿಕೊಳ್ಳೋಣವೆಂದು ಕೈಯಿಂದ ತಿಕ್ಕಿಕೊಳ್ಳಹೋದಾಗ ಬುಡದ ಕಡೆ ಕೊಳೆತು ಹೋಗಿದ್ದ ರೋಮವು ಉದುರಿಹೋಗುತ್ತಿತ್ತು.

14. “ಸಾರಿಪುತ್ತ, ಕೆಲವು ಶ್ರಮಣರು, ಬ್ರಾಹ್ಮಣರು ಹೀಗೆ ವಾದಿಸುವರು, ಈ ದೃಷ್ಟಿಯುಳ್ಳವರು... ‘ಆಹಾರದಿಂದಲೇ ಶುದ್ಧಿ’ ಎಂದು. ಅವರು ಹೀಗನ್ನುತ್ತಾರೆ- ‘ಹೆಸರುಕಾಳಿನಿಂದ ಜೀವಹಿಡಿಯೋಣ (ಅಥವಾ) ಎಳ್ಳಿನಿಂದ ಜೀವಹಿಡಿಯೋಣ (ಅಥವಾ) ಅಕ್ಕಿಯಿಂದ ಜೀವಹಿಡಿಯೋಣ’ ಎಂದು. ಅವರು ಅಕ್ಕಿಯನ್ನು ತಿನ್ನುತ್ತಾರೆ, ಅಕ್ಕಿಯ ಹುಡಿಯನ್ನು ತಿನ್ನುತ್ತಾರೆ, ಅಕ್ಕಿಯ ನೀರನ್ನೇ ಕುಡಿಯುತ್ತಾರೆ - ಅನೇಕ ವಿಧ ಅಕ್ಕಿಯ ಕಷಾಯಗಳನ್ನು ಕೂಡ ಸೇವಿಸುತ್ತಾರೆ. ಸಾರಿಪುತ್ರ, ದಿನಕ್ಕೆ ಒಂದೇ ಒಂದು ಕಾಣು ಅಕ್ಕಿಯನ್ನು ತಿಂದು ಬದುಕಿದ್ದು ನನಗೆ ನೇರವಾಗಿ ನೆನಪಿದೆ. ನಿನಗೆ ಹೀಗೆನಿಸಬಹುದು ಸಾರಿಪುತ್ತ - ಆಗ ಅಕ್ಕಿ (ಕಾಳು) ಬಹಳ ದೊಡ್ಡದಾಗಿರಬಹುದೆಂದು, ಅದನ್ನು ಹಾಗೆ ತಿಳಿಯಬಾರದು ಸಾರಿಪುತ್ತ. ಆಗ ಕೂಡ ಅಕ್ಕಿ (ಕಾಳು) ಈಗಿನ ಗಾತ್ರದ್ದೇ ಆಗಿತ್ತು. ಆಗ ಸಾರಿಪುತ್ತ, ಒಂದೇ ಒಂದು ಅಕ್ಕಿ ಕಾಳನ್ನೇ ತಿನ್ನುತ್ತಿದ್ದರಿಂದ ನನ್ನ ದೇಹವು ತುಂಬಾ ಬಡವಾಯಿತು. ಬಹಳ ಕಡಿಮೆ ಆಹಾರ ತಿನ್ನುತ್ತಿದ್ದರಿಂದ ಅಂಗ ಪ್ರತ್ಯಂಗಗಳು ಹೇಗಾಗಿದ್ದುವೆಂದರೆ, ದ್ರಾಕ್ಷಿ ಬಳ್ಳಿಯ ಕಾಂಡದಂತೆ... ರೋಮವು ಉದುರಿಹೋಗುತ್ತಿತ್ತು.

“ಸಾರಿಪುತ್ತ, ಈ ಸ್ಥಿತಿಗಳಿಂದ ಈ ಆಚರಣೆಗಳಿಂದ ಈ ಕಷ್ಟಕರವಾದ ಈ ತೀವ್ರ ಕಠಿಣವಾದ ಅಭ್ಯಾಸಗಳಿಂದ, ಮನುಷ್ಯಾತೀತ ಆರೋಗ್ಯವಾದ, ವಿಶಿಷ್ಟ ಲೋಕೋತ್ತರ ಜ್ಞಾನ ದರ್ಶನವನ್ನು ಪಡೆದುಕೊಳ್ಳಲಿಲ್ಲ. ಇದಕ್ಕೇನು ಕಾರಣ? ಆರ‍್ಯರ ಲೋಕೋತ್ತರ ಪ್ರಜ್ಞೆಯನ್ನು ಪಡೆಯದಿದ್ದುದರಿಂದ. ಯಾವ ಆರ‍್ಯರ ಲೋಕೋತ್ತರ ಪ್ರಜ್ಞೆಯನ್ನು ಅರಿಯುವುದರಿಂದ ಮುನ್ನಡೆ ಹೊಂದುತ್ತಾರೋ, ಇದನ್ನು ಪಾಲಿಸುವವರು ದುಃಖ ಹಿಂಗಿಸುತ್ತಾರೋ, ಆ ಆರ‍್ಯರ ಲೋಕೋತ್ತರ ಪ್ರಜ್ಞೆಯನ್ನು (ಸಂಪೂರ್ಣವಾಗಿ ಸರಿಯಾದ ರೀತಿಯಲ್ಲಿ) ನಾನು ಅರಿಯಲಿಲ್ಲ.

15. “ಸಾರಿಪುತ್ತ, ಕೆಲವು ಶ್ರಮಣರು ಬ್ರಾಹ್ಮಣರು ಹೀಗೆ ವಾದಿಸುತ್ತಾರೆ. ಈ ದೃಷ್ಟಿ ಹೊಂದಿರುತ್ತಾರೆ ‘ಸಂಸಾರದ ಮೂಲಕವೇ ಶುದ್ಧಿ’ ಎಂದು. ಆದರೆ ಸಾರಿಪುತ್ತ, ಶುದ್ಧಾ ವಾಸದ (ಬ್ರಹ್ಮ) ದೇವರುಗಳನ್ನು ಬಿಟ್ಟು ಈ ಸಂಸಾರದ ದೀರ್ಘ (ನೀಳ)ವಾದ ತಿರುಗಾಟದಲ್ಲಿ (ಕೋಟ್ಯಾಂತರ ಕಲ್ಪ ಪರ್ಯಂತ) ನಾನು ಹೊಕ್ಕು ಬರದ ಲೋಕಗಳನ್ನು ಕಾಣುವುದು ಅಸದಳ. ಮತ್ತು ಸಾರಿಪುತ್ತ, ನಾನು ಶುದ್ಧಾವಾಸದ ದೇವರುಗಳ ಬಳಿ ಸಾರಿದ್ದರೆ ಈ ಲೋಕಗಳಿಗೆ ಹಿಂತಿರುಗುತ್ತಿರಲಿಲ್ಲ.

“ಸಾರಿಪುತ್ತ, ಕೆಲವು ಶ್ರಮಣರು ಬ್ರಾಹ್ಮಣರು ಹೀಗೆ ವಾದಿಸುತ್ತಾರೆ. ಈ ದೃಷ್ಟಿ ಹೊಂದಿದ್ದಾರೆ - ‘ಉಪಪತ್ತಿ (ವಿಶಿಷ್ಟರೀತಿಯ ಪುನರ್ ಜನ್ಮ)ಯಿಂದಲೇ ಶುದ್ಧಿ’ ಎಂದು. ಆದರೆ ಸಾರಿಪುತ್ತ, ಶುದ್ಧಾ ವಾಸದ (ಬ್ರಹ್ಮ) ದೇವರುಗಳನ್ನು ಬಿಟ್ಟು ಈ ಸಂಸಾರದ ದೀರ್ಘವಾದ ತಿರುಗಾಟದಲ್ಲಿ ನಾನು ಹೊಕ್ಕುಬರದ, ಉಪಪತ್ತಿಯನ್ನು ಕಾಣುವುದು ಅಸದಳ. ಮತ್ತು ಸಾರಿಪುತ್ತ, ನಾನು ಶುದ್ಧಾವಾಸದ ದೇವರುಗಳ ಬಳಿ ಸಾರಿದ್ದರೆ ಈ ಲೋಕಗಳಿಗೆ ಹಿಂತಿರುಗುತ್ತಿರಲಿಲ್ಲ.196

“ಸಾರಿಪುತ್ತ, ಕೆಲವು ಶ್ರಮಣರು ಬ್ರಾಹ್ಮಣರು ಹೀಗೆ ವಾದಿಸುತ್ತಾರೆ. ಈ ದೃಷ್ಟಿ ಹೊಂದಿದ್ದಾರೆ - ‘ಆವಾಸ (ದೇವ ಭವ) ದಿಂದಲೇ ಶುದ್ಧಿ’ ಎಂದು. ಆದರೆ ಸಾರಿಪುತ್ರ, ಶುದ್ಧಾ ವಾಸದ (ಬ್ರಹ್ಮ) ದೇವರುಗಳನ್ನು ಬಿಟ್ಟು ಈ ಸಂಸಾರದ ದೀರ್ಘವಾದ ತಿರುಗಾಟದಲ್ಲಿ ನಾನು ಹೊಕ್ಕು ಬರದ ಆವಾಸವನ್ನು ಕಾಣುವುದು ಅಸದಳ. ಮತ್ತು ಸಾರಿಪುತ್ತ, ನಾನು ಶುದ್ಧಾವಾಸದ ದೇವರುಗಳ ಬಳಿ ಸಾರಿದ್ದರೆ ಈ ಲೋಕಗಳಿಗೆ ಹಿಂತಿರುಗುತ್ತಿರಲಿಲ್ಲ.

“ಸಾರಿಪುತ್ತ, ಕೆಲವು ಶ್ರಮಣರು ಬ್ರಾಹ್ಮಣರು ಹೀಗೆ ವಾದಿಸುತ್ತಾರೆ. ಈ ದೃಷ್ಟಿಯುಳ್ಳವರು - ‘ಯಜ್ಞದಿಂದಲೇ ಶುದ್ಧಿ’ ಎಂದು. ಆದರೆ ಸಾರಿಪುತ್ತ, ಈ ದೀರ್ಘವಾದ ತಿರುಗಾಟದಲ್ಲಿ ಮೂರ್ಧಾಭಿಷಿಕ್ತನಾದ ಒಳ್ಳೆಯ ಕ್ಷತ್ರಿಯ ರಾಜನಾಗಲಿ ಅಥವಾ ಮಹದೈಶ್ವರ್ಯಶಾಲಿ ಬ್ರಾಹ್ಮಣನಾಗಲಿ ನಾನು ಹಿಂದೆ ಮಾಡದೇ ಇದ್ದ ಯಜ್ಞವನ್ನು ಕಾಣುವುದು ಅಸದಳ.

“ಸಾರಿಪುತ್ತ, ಕೆಲವು ಶ್ರಮಣರು ಬ್ರಾಹ್ಮಣರು ಹೀಗೆ ವಾದಿಸುತ್ತಾರೆ. ಈ ದೃಷ್ಟಿ ಹೊಂದಿದ್ದಾರೆ - ‘ಅಗ್ನಿ ಆರಾಧನೆಯಿಂದಲೇ ಶುದ್ಧಿ’ ಎಂದು. ಆದರೆ ಸಾರಿಪುತ್ರ, ಈ ದೀರ್ಘ ತಿರುಗಾಟದಲ್ಲಿ ಮೂರ್ಧಾಭಿಷಿಕ್ತನಾದ ಒಳ್ಳೆಯ ಕ್ಷತ್ರಿಯ ರಾಜನಾಗಲಿ ಅಥವಾ ಮಹದೈಶ್ವರ್ಯಶಾಲಿ ಬ್ರಾಹ್ಮಣನಾಗಲಿ ನಾನು ಆರಾಧಿಸದೇ ಇದ್ದ ಅಗ್ನಿಯನ್ನು ಆರಾಧಿಸುವುದನ್ನು ಕಾಣುವುದು ಅಸದಳ.

16. ಸಾರಿಪುತ್ತ, ಕೆಲವು ಶ್ರಮಣರು ಬ್ರಾಹ್ಮಣರು ಹೀಗೆ ವಾದಿಸುತ್ತಾರೆ. ಈ ದೃಷ್ಟಿ ಹೊಂದಿದ್ದಾರೆ - ಈ ಒಳ್ಳೆಯ ಮನುಷ್ಯ ಎಲ್ಲಿಯವರೆಗೆ ಇನ್ನೂ ಗಟ್ಟಿಮುಟ್ಟಾದ ಯುವಕನಾಗಿದ್ದಾನೆ, ಒಳ್ಳೆಯ ಕಪ್ಪುಗೂದಲಿನವನಾಗಿದ್ದಾನೆ, ತುಂಬು ಯೌವನಿಗನಾಗಿದ್ದಾನೆ, ಬದುಕಿನ ಮೊದಲ ಹಂತದಲ್ಲಿದ್ದಾನೆ; ಅಲ್ಲಿಯವರೆಗೆ ತಿಳಿಯಾದ ಅರಿವುಳ್ಳವನಾಗಿರುತ್ತಾನೆ. ಆದರೆ ಯವಾಗ ಈ ಒಳ್ಳೆಯ ಮನುಷ್ಯನು ಮುಪ್ಪಾಗುತ್ತಾನೆ ಮುದುಕನಾಗುತ್ತಾನೆ, ವರ್ಷಗಳಿಂದ ಬಾಗುತ್ತಾನೆ, ಆಯುಷ್ಯದ ಕೊನೆ ಮುಟ್ಟುತ್ತಾನೆ, ಬದುಕಿನ ಕೊನೆಯ ಭಾಗ ಮುಟ್ಟುತ್ತಾನೆ, ಎಂಬತ್ತು ವರ್ಷದವನಾಗುತ್ತಾನೆ, ತೊಂಬತ್ತು ವರ್ಷದವನಾಗುತ್ತಾನೆ, ನೂರು ವರ್ಷದವನಾಗುತ್ತಾನೆ, ಆವಾಗ ಅವನಿಂದ ತಿಳಿಯಾದ ಅರಿವು ಇಳಿಮುಖವಾಗುತ್ತದೆ. ಸಾರಿಪುತ್ತ, ಇದನ್ನು ಹಾಗೆ ಕಾಣತಕ್ಕದಲ್ಲ. ಆದರೆ ಸಾರಿಪುತ್ತ, ನಾನು ಮುಪ್ಪಾಗಿದ್ದೇನೆ, ಮುದುಕನಾಗಿದ್ದೇನೆ, ವರ್ಷಗಳಿಂದ ಬಾಗಿದ್ದೇನೆ, ಆಯುಷ್ಮದ ಕೊನೆ ಮುಟ್ಟಿದ್ದೇನೆ, ಬದುಕಿನ ಕೊನೆ ಮುಟ್ಟಿದ್ದೇನೆ. ನನಗೆ ಈಗ ಎಂಬತ್ತು ವರ್ಷ ನಡೆಯುತ್ತಿದೆ. ಸಾರಿಪುತ್ತ, ಈಗ ನೂರು ವರ್ಷವಾಗಿರುವ ನೂರು ವರ್ಷ ಬದುಕಿರುವ ಪರಮ ಎಚ್ಚರದಿಂದಲೂ ಗತಿಯಿಂದಲೂ ಧೀಶಕ್ತಿಯಿಂದಲೂ ತಿಳಿಯಾದ ಅರಿವಿನಿಂದಲೂ ಒಡಗೂಡಿದ ನಾಲ್ಕು ಶ್ರಮಣರು ನನಗೆ ಇರಬಹುದು.197 ಉದಾಹರಣೆಗೆ ಸಾರಿಪುತ್ತ ಸಾಧನೆಗೈದ ಪಳಗಿದ ಅಣಿಯಾದ ಬಿಲ್ಲುಗಾರ ಹಗುರವಾದ ಬಾಣದಿಂದ ತಾಳೆಯ ಮರದ ನೆರಳಿನಲ್ಲಿ ಸುಲಭವಾಗಿ ಬಾಣ ಹಾಯಿಸಿಯಾನು. ಹೀಗೆ ಪರಿಪೂರ್ಣ ಎಚ್ಚರವುಳ್ಳವರೂ, ಪರಿಪೂರ್ಣ ಗತಿಯುಳ್ಳವರೂ, ಸಂಪೂರ್ಣ ಸ್ಮೃತಿಯುಳ್ಳವರೂ ಈ ರೀತಿ ಶ್ರೇಷ್ಠವಾದ ಈ ದೇದೀಪ್ಯಮಾನವಾದ ಪ್ರಜ್ಞಾವಂತಿಕೆಯನ್ನು ಒಳಗೊಂಡವರೂ ಆದ ಅವರು ನಾಲ್ಕು ಎಚ್ಚರದ ನೆಲೆಗಳನ್ನು ಉಪದೇಶಿಸುತ್ತಿದ್ದಂತೆಯೇ ನನ್ನನ್ನು ಪ್ರಶ್ನೆಗಳನ್ನು ಕೇಳಿಯಾರು. ಪ್ರಶ್ನೆ ಕೇಳು ಕೇಳುತ್ತಿದ್ದಂತೆ ನಾನು ಅವರಿಗೆ ತಿಳಿಹೇಳುತ್ತೇನೆ. ನಾನು ತಿಳಿಹೇಳುತ್ತಿದ್ದಂತೆ ತಿಳಿಹೇಳಿದ್ದನ್ನು ಅವರು ಗ್ರಹಿಸಿಕೊಳ್ಳುತ್ತಾರೆ, ಮತ್ತು ನನ್ನನ್ನು ಎರಡನೆಯ ಉತ್ತರಕ್ಕಾಗಿ ಕೇಳುವುದಿಲ್ಲ (ಎಂದಿಟ್ಟುಕೊಳ್ಳೋಣ). ಉಣ್ಣುವುದು, ಕುಡಿಯುವುದು, ಅಗಿಯುವುದು, ರುಚಿ ನೋಡುವುದು ಬಿಟ್ಟು, ಮಲ-ಮೂತ್ರ ವಿಸರ್ಜನೆ ಬಿಟ್ಟು, ನಿದ್ದೆ ಆಯಾಸಗಳನ್ನು ತೊರೆದುಹಾಕಿ, ಉಳಿದಂತೆ, ಸಾರಿಪುತ್ತ, ತಥಾಗತರ ಧರ್ಮೋಪದೇಶವನ್ನು ಕೇಳುತ್ತಿದ್ದರೂ ತಥಾಗತರ ಧರ್ಮೋಪದೇಶ ಮುಗಿಯುವುದೇ ಇಲ್ಲ. ತಥಾಗತರ ಧರ್ಮಪಥಗಳ* ವಿವರಣೆ ಮುಗಿಯುವುದೇ ಇಲ್ಲ. ಪ್ರಶ್ನೆಗಳಿಗೆ ತಥಾಗತರ ವಿದ್ವತ್ ಪ್ರತಿಭಾಪೂರ್ಣವಾದ ಉತ್ತರಗಳು ಮುಗಿಯುವುದೇ ಇಲ್ಲ. ಆದ್ದರಿಂದ ನನ್ನ ಆ ನಾಲ್ಕು ಜನ ನೂರು ವರ್ಷದ, ನೂರು ವರ್ಷ ಬದುಕಿದ ಶ್ರಾವಕರು ನೂರು ವರ್ಷದ ಕೊನೆಯಲ್ಲಿ ಕಾಲ (ಮರಣ)ವಾಗಿರುತ್ತಾರೆ. ಸಾರಿಪುತ್ತ, ಮಂಚದ ಮೇಲೆ ನನ್ನನ್ನು ಹೊತ್ತುಕೊಂಡು ಹೋದರೂ ತಥಾಗತರ (ನನ್ನ) ತಿಳಿಯಾದ ಅರಿವಿನಲ್ಲಿ ಯಾವ ಬದಲಾವಣೆ ಇರುವುದೇ ಇಲ್ಲ. ಸಾರಿಪುತ್ತ, ಸರಿಯಾಗಿ ಹೇಳುತ್ತಾ ಯಾರಾದರೊಬ್ಬರ ಬಗ್ಗೆ ಹೇಳಬೇಕಾದರೆ ಲೋಕದಲ್ಲಿ - ‘ಅಂತಹವರನ್ನು ಸಂಮೋಹದ (ಸಂಮೋಹ- ಮಾನಸಿಕ ಕತ್ತಲು, ಅವಿದ್ಯೆ, ಅಜ್ಞಾನ) ವಶವಾಗದವರು ಬಹುಜನರ ಹಿತಕ್ಕಾಗಿ, ಬಹುಜನರ ಸುಖಕ್ಕಾಗಿ, ಲೋಕದ ಬಗೆಗಿನ ಅನುಕಂಪಕ್ಕಾಗಿ, ಒಳಿತಿಗಾಗಿ ದೇವ-ಮನುಷ್ಯರ ಹಿತಕ್ಕಾಗಿ ಸುಖಕ್ಕಾಗಿ ಲೋಕದಲ್ಲಿ ಹುಟ್ಟಿದ ಮಹಾನುಭಾವರು, ಎಂದು ದಿಟ್ಟವಾಗಿ ಹೇಳುವುದಾದರೆ; ನನ್ನನ್ನು ಹಾಗೆಂದು ಕರೆಯಬಹುದು. ಸಂಮೋಹದ ವಶವಾಗದವನು, ಬಹುಜನರ ಹಿತಕ್ಕಾಗಿ, ಬಹುಜನರ ಸುಖಕ್ಕಾಗಿ ಲೋಕದ ಬಗೆಗಿನ ಅನುಕಂಪಕ್ಕಾಗಿ ಒಳಿತಿಗಾಗಿ ವಶವಾಗದವನು, ಬಹುಜನರ ಹಿತಕ್ಕಾಗಿ, ಬಹುಜನರ ಸುಖಕ್ಕಾಗಿ ಲೋಕದ ಬಗೆಗಿನ ಅನುಕಂಪಕ್ಕಾಗಿ ಒಳಿತಿಗಾಗಿ ದೇವ-ಮನುಷ್ಯರ ಹಿತಕ್ಕಾಗಿ ಲೋಕದಲ್ಲಿ ಹುಟ್ಟಿದ ಮಹಾನುಭಾವ’ ಎಂದು.

17. ಆ ಸಮಯದಲ್ಲಿ ಆಯುಷ್ಮಂತ ನಾಗಸಮಾಲರು,198 ಭಗವಾನರ ಹಿಂದೆ ನಿಂತು ಭಗವಾನರಿಗೆ ಗಾಳಿ ಬೀಸುತ್ತಿದ್ದರು. ಆಗ ಆಯುಷ್ಮಂತ ನಾಗಸಮಾಲರು ಭಗವಾನರನ್ನು ಕುರಿತು ಹೀಗೆ ಹೇಳಿದರು- ‘ಆಶ್ಚರ್ಯ ಭಂತೇ, ಅದ್ಭುತ ಭಂತೇ!’ ಭಂತೇ, ಈ ಧರ್ಮ ಪರಿಯಾಯ (ಉಪದೇಶ ವಿಧಾನ) ಕೇಳಿ ನನ್ನ (ಮೈ) ಕೂದಲು ನಿಮಿರಿದೆ. ಭಂತೇ, ಈ ಧರ್ಮ ಪರಿಯಾಯವನ್ನು ಯಾವ ಹೆಸರಿನಿಂದ ಕರೆಯೋಣ’ ಎಂದು.

‘(ನಿನಗೆ ಮೈನವಿರೆದ್ದಿದೆ) ಆದ್ದರಿಂದ ನಾಗಸಮಾಲ, ನೀನು ಈ ಧರ್ಮ ಪರಿಯಾಯವನ್ನು ಮೈನವಿರೇಳುವ190 ಧರ್ಮ ಪರಿಯಾಯವೆಂದೇ ನೆನಪಿಡು’ ಎಂದು.

ಭಗವಾನರು ಹಾಗೆ ಹೇಳಿದರು. ಸ್ಫೂರ್ತಿ ಪಡೆದ ಆಯುಷ್ಮಂತ ನಾಗಸಮಾಲನು ಭಗವಾನರ ನುಡಿಗೆ ಆನಂದಗೊಂಡನು.

ಇಲ್ಲಿಗೆ ಸಿಂಹನಾದ ದೀರ್ಘ ಸುತ್ತ ಮುಗಿಯಿತು.

ಟಿಪ್ಪಣಿಗಳು [5]