1. ಯಾರು ಏಳಿಗೆ ಹೊಂದಲಾರರು
ಹೀಗೆ ನಾನು ಕೇಳಿದ್ದೇನೆ. ಒಂದುಸಲ ಭಗವಾನರು ಶ್ರಾವಸ್ಥಿಯ ಹತ್ತಿರದ ಅನಾಥಪಿಂಡಿಕರ ಜೇತವನದಲ್ಲಿನ ವಿಹಾರದಲ್ಲಿ ತಂಗಿದ್ದರು. ಅಲ್ಲಿ ಭಗವಾನರು ಭಿಕ್ಷುಗಳನ್ನು “ಭಿಕ್ಷುಗಳೇ” ಎಂದು ಕರೆದರು. “ಭದನ್ತರೇ” ಎಂದು ಆ ಭಿಕ್ಷುಗಳು ಭಗವಾನರಿಗೆ ಉತ್ತರಿಸಿದರು. ಭಗವಾನರು ಹೀಗೆ ಹೇಳಿದರು-
“ಭಿಕ್ಷುಗಳೇ, ಯಾವುದೇ ಭಿಕ್ಷುಗಳಿರಲಿ, ಈ ಐದು ಚೇತೋಖಲ (ಮನಸ್ಸಿನ ಮೊಂಡುತನ)ಗಳನ್ನು ತೊರೆದಿಲ್ಲವೋ, ಐದು ಮನಸ್ಸಿನ ಕಟ್ಟು (ಬಂಧನ)ಗಳನ್ನು ಕತ್ತರಿಸಿಲ್ಲವೋ ಅವರು ದಿಟವಾಗಿಯೂ ಈ ಧರ್ಮ ಮತ್ತು ವಿನಯ (ಶಿಸ್ತು) ಗಳಲ್ಲಿ ಏಳಿಗೆಯನ್ನೂ, ಬೆಳವಣಿಗೆಯನ್ನೂ, ಪೂರ್ಣ ವಿಕಾಸವನ್ನೂ ಹೊಂದುವಂಥ ಸಾಧ್ಯತೆಯೇ ಉಂಟಾಗುವುದಿಲ್ಲ.217
“ಯಾವುವು ಅವರು ತೊರೆಯದ ಐದು ಚೇತೋಖಿಲಗಳು? ಇಲ್ಲಿ ಭಿಕ್ಷುಗಳೇ, ಭಿಕ್ಷುವು ಶಾಸ್ತ (ಬುದ್ಧ)ರಲ್ಲಿ ಸಂಶಯಪಡುತ್ತಾನೆ, ಸಂದೇಹಿಸುತ್ತಾನೆ, ನಂಬಿಕೆಯಿಡುವುದಿಲ್ಲ, ಶ್ರದ್ಧೆಯಿಡುವುದಿಲ್ಲ. ಭಿಕ್ಷುಗಳೇ, ಯಾವ ಭಿಕ್ಷುವು ಶಾಸ್ತರಲ್ಲಿ ಸಂಶಯಪಡುತ್ತಾನೆ, ಸಂದೇಹಿಸುತ್ತಾನೆ, ನಂಬಿಕೆಯಿಡುವುದಿಲ್ಲ, ಶ್ರದ್ಧೆಯಿಡುವುದಿಲ್ಲ ಅವನ ಮನಸ್ಸು ಅದರಿಂದ ವೀರ್ಯ, ಪ್ರಯತ್ನಶೀಲತೆ, ಪ್ರಯಾಸ ಮತ್ತು ಪುರುಷಾರ್ಥಗಳ ಕಡೆಗೆ ಬಾಗುವುದಿಲ್ಲ. ಯಾರ ಮನಸ್ಸು ವೀರ್ಯ, ಪ್ರಯತ್ನಶೀಲತೆ, ಪ್ರಯಾಸ ಮತ್ತು ಪುರುಷಾರ್ಥಗಳ ಕಡೆಗೆ ಬಾಗುವುದಿಲ್ಲವೋ ಅವನಿಗೆ ಇದೇ ತೊರೆಯದ ಮೊದಲನೆಯ ಚೇತೋಖಿಲ.
“ಅಲ್ಲದೆ ಮತ್ತೆ ಭಿಕ್ಷುಗಳೇ, ಭಿಕ್ಷುವು ಧರ್ಮ (ಬುದ್ಧರ ಉಪದೇಶ)ದಲ್ಲಿ ಸಂಶಯಪಡುತ್ತಾನೆ, ಸಂದೇಹಪಡುತ್ತಾನೆ, ನಂಬಿಕೆಯಿಡುವುದಿಲ್ಲ,218 ಶ್ರದ್ಧೆಯಿಡುವುದಿಲ್ಲ ಅವನು ಪುರುಷಾರ್ಥಗಳ ಕಡೆ ಬಾಗುವುದಿಲ್ಲ. ಇದೇ ಅವನಲ್ಲಿ ತೊರೆಯದ ಎರಡನೇ ಚೇತೋಖಿಲ.
“ಅಲ್ಲದೇ ಮತ್ತೆ ಭಿಕ್ಷುಗಳೇ, ಭಿಕ್ಷುವು (ಆರ‍್ಯರ ಮತ್ತು ಭಿಕ್ಷುಗಳ) ಸಂಘದಲ್ಲಿ ಸಂಶಯಪಡುತ್ತಾನೆ, ಸಂದೇಹಿಸುತ್ತಾನೆ, ನಂಬಿಕೆಯಿಡುವುದಿಲ್ಲ, ಶ್ರದ್ಧೆಯಿಡುವುದಿಲ್ಲ... ಇದೇ ಅವನಲ್ಲಿ ತೊರೆಯದ ಮೂರನೆಯ ಚೇತೋಖಿಲ.
“ಅಲ್ಲದೇ ಮತ್ತೆ ಭಿಕ್ಷುಗಳೇ, ಭಿಕ್ಷುವು ನಿಯಮಾಚರಣೆಯಲ್ಲಿ ಸಂಶಯಪಡುತ್ತಾನೆ, ಸಂದೇಹಿಸುತ್ತಾನೆ, ನಂಬಿಕೆಯಿಡುವುದಿಲ್ಲ, ಶ್ರದ್ಧೆಯಿಡುವುದಿಲ್ಲ... ಇದೇ ಅವನಲ್ಲಿ ತೊರೆಯದ ನಾಲ್ಕನೆಯ ಚೇತೋಖಿಲ.
“ಅಲ್ಲದೇ ಮತ್ತೆ, ಭಿಕ್ಷುಗಳೇ, ಭಿಕ್ಷುವು ಸಹ ಸನ್ಯಾಸಿಗಳಲ್ಲಿ ಸಿಟ್ಟಿಗೇಳುತ್ತಾನೆ, ಅಸಂತುಷ್ಟನಾಗುತ್ತನೆ, ಹಿಂಸಿಸುವ ಮನಸ್ಸುಳ್ಳವನಾಗುತ್ತಾನೆ, ಮೊಂಡನಾಗುತ್ತಾನೆ, ಇದೇ ಅವನಲ್ಲಿ ತೊರೆಯದ ಐದನೆಯ ಚೇತೋಖಿಲ. ಇವೇ ಅವನಲ್ಲಿ ತೊರೆಯದ ಐದು ಚೇತೋಖಿಲಗಳು.
2. “ಯಾವುವು ಅವರಲ್ಲಿ ಕತ್ತರಿಸಿ ಹೋಗದ ಮನಸ್ಸಿನ ಐದು ಕಟ್ಟುಗಳು? ಇಲ್ಲಿ ಭಿಕ್ಷುಗಳೇ, ಭಿಕ್ಷುವು ಕಾಮದಲ್ಲಿ ವೀತರಾಗನಾಗಿಲ್ಲ, ಆಶೆ ಬಿಟ್ಟಿಲ್ಲ, ವ್ಯಾಮೋಹ ಬಿಟ್ಟಿಲ್ಲ, ಪಿಪಾಸೆ ಬಿಟ್ಟಿಲ್ಲ, ದಾಹ ಬಿಟ್ಟಿಲ್ಲ, ತೃಷ್ಣೆಯನ್ನು ಬಿಟ್ಟಿಲ್ಲ.219 ಭಿಕ್ಷುಗಳೇ, ಯಾವ ಭಿಕ್ಷುವು ಕಾಮದಲ್ಲಿ ವೀತರಾಗನಾಗಿಲ್ಲ... ಆದ್ದರಿಂದ, ಇದೇ ಅವನಲ್ಲಿ ಕತ್ತರಿಸಿ ಹೋಗದ ಮೊದಲನೆಯ ಮನಸ್ಸಿನ ಕಟ್ಟು.
“ಅಲ್ಲದೇ ಮತ್ತೆ ಭಿಕ್ಷುಗಳೇ, ಭಿಕ್ಷುವು ಕಾಯದಲ್ಲಿ ವೀತರಾಗನಾಗಿಲ್ಲ, ಆಶೆ ಬಿಟ್ಟಿಲ್ಲ, ವ್ಯಾಮೋಹ ಬಿಟ್ಟಿಲ್ಲ, ಪಿಪಾಸೆ ಬಿಟ್ಟಿಲ್ಲ, ದಾಹ ಬಿಟ್ಟಿಲ್ಲ, ತೃಷ್ಣೆಯನ್ನು ಬಿಟ್ಟಿಲ್ಲ. ಇದೇ ಅವನಲ್ಲಿ ಕತ್ತರಿಸಿ ಹೋಗದ ಎರಡನೆಯ ಮನಸ್ಸಿನ ಕಟ್ಟು.
“ಅಲ್ಲದೇ ಮತ್ತೆ ಭಿಕ್ಷುಗಳೇ, ಭಿಕ್ಷುವು ರೂಪದಲ್ಲಿ ವೀತರಾಗನಾಗಿಲ್ಲ... ಆದ್ದರಿಂದ ಇದೇ ಅವನಲ್ಲಿ ಕತ್ತರಿಸಿ ಹೋಗದ ಮೂರನೆಯ ಮನಸ್ಸಿನ ಕಟ್ಟು.
“ಅಲ್ಲದೇ ಮತ್ತೆ, ಭಿಕ್ಷುವು ಕಂಠಮಟ್ಟ ಹೊಟ್ಟೆಬಿರಿಯುವ ಹಾಗೆ ತಿಂದು ಹಾಸಿಗೆಯ ಸುಖದಲ್ಲಿ, ಮಲಗುವ ಸುಖದಲ್ಲಿ, ತೂಕಡಿಕೆಯ ಸುಖಗಳಲ್ಲಿ ನಿರತನಾಗಿ ಬಾಳುತ್ತಾನೆ. ಭಿಕ್ಷುಗಳೇ, ಆ ಭಿಕ್ಷುವು ಕಂಠಮಟ್ಟ ಹೊಟ್ಟೆ ಬಿರಿಯುವ ಹಾಗೆ ತಿಂದು ಹಾಸಿಗೆಯ ಸುಖದಲ್ಲಿ, ಮಲಗುವ ಸುಖದಲ್ಲಿ, ತೂಕಡಿಕೆಯ ಸುಖಗಳಲ್ಲಿ ನಿರತನಾಗಿ ಬಾಳುತ್ತಾನೆ. ಇದೇ ಅವನಲ್ಲಿ ಕತ್ತರಿಸಿ ಹೋಗದ ನಾಲ್ಕನೆಯ ಮನಸ್ಸಿನ ಕಟ್ಟು.
ಅಲ್ಲದೇ ಮತ್ತೆ ಭಿಕ್ಷುಗಳೇ, ಭಿಕ್ಷುವು ಯಾವುದಾದರು ದೇವಲೋಕದ ಬಯಕೆಯಿಂದ ಬ್ರಹ್ಮಚರ್ಯವನ್ನು ಆಚರಿಸುತ್ತಾನೆ- ‘ನಾನು ಈ ಶೀಲಗಳಿಂದ ಅಥವಾ ವ್ರತಗಳಿಂದ ಅಥವಾ ತಪಸ್ಸಿನಿಂದ ಅಥವಾ ಬ್ರಹ್ಮಚರ್ಯದಿಂದ ದೇವನಾಗುತ್ತೇನೆ ಅಥವಾ ಯಾವುದಾದರೊಬ್ಬ ದೇವತೆಯನ್ನು ಮೀರಿಸಿದವನಾಗುತ್ತೇನೆ’ ಎಂದು. ಭಿಕ್ಷುಗಳೇ, ಆ ಭಿಕ್ಷುವು ಯಾವುದಾದರೂ ದೇವಸ್ಥಿತಿಯ ಬಯಕೆಯಿಂದ ಬ್ರಹ್ಮಚರ್ಯವನ್ನು ಆಚರಿಸುತ್ತಾನೆ - ‘ನಾನು ಈ ಶೀಲಗಳಿಂದ ಅಥವಾ ವ್ರತಗಳಿಂದ ಅಥವಾ ತಪಸ್ಸಿನಿಂದ ಅಥವಾ ಬ್ರಹ್ಮಚರ್ಯದಿಂದ ದೇವನಾಗುತ್ತೇನೆ ಅಥವಾ ಯಾವುದಾದರೊಬ್ಬ ದೇವಸ್ಥಿತಿ ತಲುಪುತ್ತೇನೆ’ ಎಂದು. ಆದ್ದರಿಂದ ಇದೇ ಅವನಲ್ಲಿ ಕತ್ತರಿಸಿ ಹೋಗದ ಐದನೆಯ ಮನಸ್ಸಿನ ಕಟ್ಟು. ಇವೇ ಅವನಲ್ಲಿ ಕತ್ತರಿಸಿ ಹೋಗದ ಐದು ಮನಸ್ಸಿನ ಕಟ್ಟುಗಳು.
“ಭಿಕ್ಷುಗಳೇ, ಯಾವ ಯಾವ ಭಿಕ್ಷುಗಳು ಈ ಐದು ಚೇತೋಖಿಲಗಳನ್ನು ತೊರೆದಿಲ್ಲವೋ, ಐದು ಮನಸ್ಸಿನ ಕಟ್ಟುಗಳನ್ನು ಕತ್ತರಿಸಿಕೊಂಡಿಲ್ಲವೋ ಅವರು ದಿಟವಾಗಿಯೂ ಈ ಧರ್ಮ ಮತ್ತು ವಿನಯದಲ್ಲಿ ಏಳಿಗೆಯನ್ನು, ಬೆಳವಣಿಗೆಯನ್ನು, ಪೂರ್ಣವಿಕಾಸವನ್ನು ಹೊಂದುವ ಸಾಧ್ಯತೆ ಪಡೆಯುವುದೇ ಇಲ್ಲ.
2. ಯಾರು ಏಳಿಗೆ ಹೊಂದುತ್ತಾರೆ
3. “ಭಿಕ್ಷುಗಳೇ, ಯಾವ ಯಾವ ಭಿಕ್ಷುಗಳು ಈ ಐದು ಚೇತೋಖಿಲಗಳನ್ನು ತೊರೆದಿದ್ದಾರೋ, ಐದು ಮನಸ್ಸಿನ ಕಟ್ಟುಗಳನ್ನು ಕತ್ತರಿಸಿಕೊಂಡಿದ್ದಾರೋ ಅವರು ದಿಟವಾಗಿಯೂ ಈ ಧರ್ಮ ಮತ್ತು ವಿನಯಗಳಲ್ಲಿ ಏಳಿಗೆಯನ್ನು ಬೆಳವಣಿಗೆಯನ್ನು ಪೂರ್ಣ ವಿಕಾಸವನ್ನು ಹೊಂದುವ ಸಾಧ್ಯತೆ ಇದೆ.
“ಯಾವುದು ಅವರು ತೊರೆದ ಐದು ಚೇತೋಖಿಲಗಳು? ಇಲ್ಲಿ ಭಿಕುಗಳೇ, ಭಿಕ್ಷುವು ಶಾಸ್ತರಲ್ಲಿ ಸಂಶಯಪಡುವುದಿಲ್ಲ, ಸಂದೇಹಿಸುವುದಿಲ್ಲ, ನಂಬಿಕೆಯಿಡುತ್ತಾನೆ, ಶ್ರದ್ಧೆಯಿಡುತ್ತಾನೆ. ಭಿಕ್ಷುಗಳೇ, ಯಾವ ಭಿಕ್ಷುವು ಶಾಸ್ತರಲ್ಲಿ ಸಂಶಯಪಡುವುದಿಲ್ಲ, ಸಂದೇಹಿಸುವುದಿಲ್ಲ, ನಂಬಿಕೆಯಿಡುತ್ತಾನೆ, ಶ್ರದ್ಧೆಯಿಡುತ್ತಾನೆ, ಅವನ ಮನಸ್ಸು ವೀರ್ಯ, ಪ್ರಯತ್ನಶೀಲತೆ, ಪ್ರಯಾಸ ಮತ್ತು ಪುರುಷಾರ್ಥಗಳ ಕಡೆಗೆ ಬಾಗುತ್ತದೆ. ಯಾರ ಮನಸ್ಸು ವೀರ್ಯ ಪ್ರಯತ್ನಶೀಲತೆ, ಪ್ರಯಾಸ ಮತ್ತು ಪುರುಷಾರ್ಥಗಳ ಕಡೆಗೆ ಬಾಗುತ್ತವೆಯೋ, ಅವನಿಗೆ ಇದೇ (ಅವನು) ತೊರೆದ ಮೊದಲನೆಯ ಚೇತೋಖಿಲ,
“ಅಲ್ಲದೇ ಮತ್ತೆ ಭಿಕ್ಷುಗಳೇ, ಭಿಕ್ಷುವು ಧರ್ಮ (ಬುದ್ಧರ ಉಪದೇಶ)ದಲ್ಲಿ ಸಂಶಯಪಡುವುದಿಲ್ಲ, ಸಂದೇಹಿಸುವುದಿಲ್ಲ, ನಂಬಿಕೆಯಿಡುತ್ತಾನೆ, ಶ್ರದ್ಧೆಯಿಡುತ್ತಾನೆ... ಆದ್ದರಿಂದ ಇದೇ ಅವನು ತೊರೆದ ಎರಡನೆಯ ಚೇತೋಖಿಲ.
“ಅಲ್ಲದೇ ಮತ್ತೆ ಭಿಕ್ಷುಗಳೇ, ಭಿಕ್ಷುವು ಸಂಘದಲ್ಲಿ ಸಂಶಯಪಡುವುದಿಲ್ಲ, ಸಂದೇಹಪಡುವುದಿಲ್ಲ, ನಂಬಿಕೆಯಿಡುತ್ತಾನೆ, ಶ್ರದ್ಧೆಯಿಡುತ್ತಾನೆ. ಇದೇ ಅವನು ತೊರೆದ ನಾಲ್ಕನೆಯ ಚೇತೋಖಿಲ.
“ಅಲ್ಲದೇ ಮತ್ತೆ ಭಿಕ್ಷುಗಳೇ, ಭಿಕ್ಷುವು ಸಹಸನ್ಯಾಸಿಗಳಲ್ಲಿ ಸಿಟ್ಟಿಗೇಳುವುದಿಲ್ಲ, ಅಸಂತುಷ್ಟನಾಗುವುದಿಲ್ಲ, ಹಿಂಸಿಸುವ ಮನಸ್ಸುಳ್ಳವನಾಗುವುದಿಲ್ಲ, ಮೊಂಡನಾಗುವುದಿಲ್ಲ, ಭಿಕ್ಷುಗಳೇ, ಯಾವ ಭಿಕ್ಷುವು ಸಹ ಸನ್ಯಾಸಿಗಳಲ್ಲಿ ಸಿಟ್ಟಿಗೇಳುವುದಿಲ್ಲ, ಅಸಂತುಷ್ಟನಾಗುವುದಿಲ್ಲ, ಹಿಂಸಿಸುವ ಮನಸ್ಸುಳ್ಳವನಾಗುವುದಿಲ್ಲ, ಮೊಂಡನಾಗುವುದಿಲ್ಲ ಅವನ ಮನಸ್ಸು ವೀರ್ಯ, ಪ್ರಯತ್ನಶೀಲತೆ ಪ್ರಯಾಸ ಪುರುಷಾರ್ಥಗಳ ಕಡೆಗೆ ಬಾಗುತ್ತದೆ. ಯಾರ ಮನಸ್ಸು ವೀರ್ಯ, ಪ್ರಯತ್ನಶೀಲತೆ, ಪ್ರಯಾಸ ಮತ್ತು ಪುರುಷಾರ್ಥಗಳ ಕಡೆಗೆ ಬಾಗುತ್ತದೆಯೋ ಅವನಿಗೆ ಇದೇ ತೊರೆದಾದ ಐದನೆಯ ಚೇತೋಖಿಲ. ಇವೇ ಅವನು ತೊರೆದಾದ ಐದು ಚೇತೋಖಿಲಗಳು.
4. “ಯಾವುವು ಅವನಲ್ಲಿ ಕತ್ತರಿಸಿ ಹೋದ ಮನಸ್ಸಿನ ಐದು ಕಟ್ಟುಗಳು? ಇಲ್ಲಿ ಭಿಕ್ಷುಗಳೇ, ಭಿಕ್ಷುವು ಕಾಮದಲ್ಲಿ ವೀತರಾಗನು, ಆಶೆಬಿಟ್ಟವನು, ವ್ಯಾಮೋಹ ಬಿಟ್ಟವನು, ಪಿಪಾಸೆ ಬಿಟ್ಟವನು, ದಾಹ ಬಿಟ್ಟವನು, ತೃಷ್ಣೆಯನ್ನು ಬಿಟ್ಟವನು (ಆಗುತ್ತಾನೆ). ಭಿಕ್ಷುಗಳೇ, ಯಾವ ಭಿಕ್ಷುವು ಕಾಮದಲ್ಲಿ ವೀತರಾಗನು, ಆಸೆಬಿಟ್ಟವನು, ವ್ಯಾಮೋಹ ಬಿಟ್ಟವನು, ಪಿಪಾಸೆ ಬಿಟ್ಟವನು, ದಾಹ ಬಿಟ್ಟವನು, ತೃಷ್ಣೆ ಬಿಟ್ಟವನು ಆಗುವನೋ; ಅವನ ಮನಸ್ಸು ವೀರ್ಯ, ಪ್ರಯತ್ನಶೀಲತೆ ಪ್ರಯಾಸ ಪುರುಷಾರ್ಥಗಳ ಕಡೆಗೆ ಬಾಗುತ್ತದೆ. ಯಾರ ಮನಸ್ಸು ವೀರ್ಯ ಪ್ರಯತ್ನಶೀಲತೆ, ಪ್ರಯಾಸ, ಪುರುಷಾರ್ಥಗಳ ಕಡೆಗೆ ಬಾಗುತ್ತದೆಯೋ ಅವನಿಗೆ ಇದೇ ಹೀಗೆ ಕತ್ತರಿಸಿಹೋದ ಈ ಮೊದಲ ಮನಸ್ಸಿನ ಕಟ್ಟು.
“ಅಲ್ಲದೇ ಮತ್ತೆ ಭಿಕ್ಷುಗಳೇ, ಭಿಕ್ಷುವು ಕಾಯದಲ್ಲಿ ವೀತರಾಗನಾಗುತ್ತಾನೆ... ರೂಪದಲ್ಲಿ ವೀತರಾಗನಾಗುತ್ತಾನೆ... ಕಂಠ ಮಟ್ಟ ಹೊಟ್ಟೆ ಬಿರಿಯುವ ಹಾಗೆ ತಿನ್ನದೆ, ಹಾಸಿಗೆಯ ಸುಖ, ಮಲಗುವ ಸುಖ, ತೂಕಡಿಕೆಯ ಸುಖಗಳಲ್ಲಿ ನಿರತನಾಗದೆ ಬಾಳುತ್ತಾನೆ; ಭಿಕ್ಷುಗಳೇ, ಅಂತಹವನ ಮನಸ್ಸು ವೀರ್ಯ, ಪ್ರಯತ್ನಶೀಲತೆ ಪ್ರಯಾಸ ಪುರುಷಾರ್ಥಗಳ ಕಡೆಗೆ ಬಾಗುತ್ತದೆ. ಯಾರ ಮನಸ್ಸು ವೀರ್ಯ, ಪ್ರಯತ್ನಶೀಲತೆ, ಪ್ರಯಾಸ, ಪುರುಷಾರ್ಥಗಳ ಕಡೆಗೆ ಬಾಗುತ್ತದೆಯೋ ಅವನ ಮನಸ್ಸಿನ ಈ ನಾಲ್ಕನೆಯ ಕಟ್ಟು ಹೀಗೆ ಕತ್ತರಿಸಿ ಹೋಗುತ್ತದೆ.
“ಅಲ್ಲದೇ ಮತ್ತೆ ಭಿಕ್ಷುಗಳೇ, ಭಿಕ್ಷುವು ಯಾವುದಾದರೂ ದೇವಲೋಕದ ಬಯಕೆಯಿಂದ ಬ್ರಹ್ಮಚರ್ಯವನ್ನು ಪಾಲಿಸುವುದಿಲ್ಲ - ‘ನಾನು ಈ ಶೀಲಗಳಿಂದ ಅಥವಾ ವ್ರತಗಳಿಂದ ಅಥವಾ ತಪಸ್ಸಿನಿಂದ ಅಥವಾ ಬ್ರಹ್ಮಚರ್ಯದಿಂದ ದೇವನಾಗುತ್ತೇನೆ ಅಥವಾ ಯಾವುದಾದರೊಬ್ಬ ದೇವರನ್ನು ಮೀರಿಸಿದವನಾಗುತ್ತೇನೆ’ ಎಂದು (ಬ್ರಹ್ಮಚರ್ಯ ಪಾಲಿಸಲು ತೊಡಗುವುದಿಲ್ಲ).
ಭಿಕ್ಷುಗಳೇ, ಆ ಭಿಕ್ಷುವು ಯಾವುದೋ ದೇವಲೋಕದ ಬಯಕೆಯಿಂದ ಬ್ರಹ್ಮಚರ್ಯವನ್ನು ಪಾಲಿಸುವುದಿಲ್ಲ- ‘ನಾನು ಈ ಶೀಲಗಳಿಂದ ಅಥವಾ ವ್ರತಗಳಿಂದ ಅಥವಾ ತಪಸ್ಸಿನಿಂದ ಅಥವಾ ಬ್ರಹ್ಮಚರ್ಯದಿಂದ ದೇವನಾಗುತ್ತೇನೆ ಅಥವಾ ಯಾವುದಾದರು (ಬ್ರಹ್ಮಚರ್ಯ ಪಾಲಿಸುವುದಿಲ್ಲ) ದೇವರನ್ನು ಮೀರಿಸಿದವನಾಗುತ್ತೇನೆ’ ಎಂದು. (ಆಗ) ಅವನ ಮನಸ್ಸು ವೀರ್ಯ, ಪ್ರಯತ್ನಶೀಲತೆ, ಪ್ರಯಾಸ, ಪುರುಷಾರ್ಥಗಳ ಕಡೆಗೆ ಬಾಗುತ್ತದೆ, ಯಾರ ಮನಸ್ಸು ವೀರ್ಯ, ಪ್ರಯತ್ನಶೀಲತೆ, ಪ್ರಯಾಸ, ಪುರುಷಾರ್ಥಗಳ ಕಡೆಗೆ ಬಾಗುತ್ತದೆಯೋ ಹೀಗೆ ಅವನ ಈ ಐದನೆಯ ಮನಸ್ಸಿನ ಕಟ್ಟು, ಕತ್ತರಿಸಿ ಹೋಗುತ್ತದೆ. ಇವೇ ಅವನಲ್ಲಿ ಕತ್ತರಿಸಿಹೋದ ಐದು ಮನಸ್ಸಿನ ಕಟ್ಟುಗಳು.
“ಭಿಕ್ಷುಗಳೇ, ಯಾವ ಯಾವ ಭಿಕ್ಷುವಿಗೆ ಈ ಐದು ಚೇತೋಖಿಲಗಳನ್ನು ತೊರೆದಾಗಿದೆಯೋ, ಈ ಐದು ಮನಸ್ಸಿನ ಕಟ್ಟುಗಳನ್ನು ಕತ್ತರಿಸಾಗಿದೆಯೋ ಅವನು ದಿಟವಾಗಿಯೂ ಈ ಧರ್ಮ ಮತ್ತು ವಿನಯಗಳಲ್ಲಿ ಏಳಿಗೆಯನ್ನು, ಬೆಳವಣಿಗೆಯನ್ನು, ಪೂರ್ಣ ವಿಕಾಸವನ್ನು ಹೊಂದುವಂತಹ ಸಂದರ್ಭ ಉಂಟಾಗುತ್ತದೆ.220
3. ಭಿಕ್ಷುವು ಎಡೆಬಿಡದ ಪ್ರಯತ್ನದ ಹದಿನೈದು ಅಂಗಗಳಿಂದ ಕೂಡಿದವನಾಗುತ್ತಾನೆ
5. “ಅವನು (ಭಿಕ್ಷುವು) ಸಮಾದಿಸ್ಥಗೊಂಡ ಛಂದದ (ಸಂಕಲ್ಪಶಕ್ತಿ) ಜೊತೆಗಿನ, ಕ್ರಿಯಾಶೀಲವಾದ, ವೀರ್ಯಶಕ್ತಿಯಿಂದೊಡಗೂಡಿ, ಇದ್ಧಿಪಾದ (ಸಿದ್ಧಿಯ ಅಂಗ)ಗಳನ್ನು ಬೆಳೆಸಿಕೊಳ್ಳುತ್ತಾನೆ. ಸಮಾಧಿಸ್ಥಗೊಂಡ ಪ್ರಯತ್ನಶೀಲತೆಯ ಜೊತೆಗಿನ ವೀರ್ಯಶಕ್ತಿಯಿಂದೊಡಗೂಡಿದ ಇದ್ಧಿಪಾದಗಳನ್ನು ಬೆಳೆಸಿಕೊಳ್ಳುತ್ತಾನೆ, ಸಮಾಧಿಸ್ಥಗೊಂಡ ಪರಿಶುದ್ಧತೆಯ ಜೊತೆಗಿನ ವೀರ್ಯಶಕ್ತಿಯಿಂದೊಡಗೂಡಿದ ಇದ್ಧಿಪಾದಗಳನ್ನು ಬೆಳೆಸಿಕೊಳ್ಳುತ್ತಾನೆ. ಸಮಾಧಿಸ್ಥಗೊಂಡ, ಪರೀಕ್ಷಕ ಪ್ರಜ್ಞಾದ ಜೊತೆಗಿನ ವೀರ್ಯ ಶಕ್ತಿಯಿಂದೊಡಗೂಡಿದ ಇದ್ಧಿಪಾದಗಳನ್ನು ಬೆಳೆಸಿಕೊಳ್ಳುತ್ತಾನೆ; ಎಡೆಬಿಡದ ಪ್ರಯತ್ನವೇ ಐದನೆಯದು. ಭಿಕ್ಷುಗಳೇ, ಯಾವಾಗ ಆ ಭಿಕ್ಷುವು ಈ ಎಡೆಬಿಡದ ಪ್ರಯತ್ನದ ಜೊತೆಯಾಗಿ ಹದಿನೈದು ಅಂಗಗಳಿಂದ ಕೂಡಿಕೊಳ್ಳುತ್ತಾನೆ, ಆಗ ಅವನು ಲೋಕ ವಿಮುಖತೆಗೆ ಅರ್ಹನಾಗುತ್ತಾನೆ, ಸಂಬೋಧಿಗೆ ಅರ್ಹನಾಗುತ್ತಾನೆ, ಎಣೆಯಿಲ್ಲದ ಯೋಗಕ್ಷೇಮವನ್ನು ಹೊಂದಲು ಅರ್ಹನಾಗುತ್ತಾನೆ.221 ಉದಾಹರಣೆಗೆ ಭಿಕ್ಷುಗಳೇ, ಕೋಳಿಯು ಎಂಟು ಅಥವಾ ಹತ್ತು ಅಥವಾ ಹನ್ನೆರಡು ಮೊಟ್ಟೆಗಳಿಂದ (ಕೂಡಿದ್ದು), ಆ ಮೊಟ್ಟೆಗಳ ಮೇಲೆ ಸರಿಯಾಗಿ ಕುಳಿತುಕೊಂಡು, ಸರಿಯಾಗಿ ಕಾವು ಕೊಟ್ಟು ಸರಿಯಾಗಿ ಒಡೆಯುವಂತೆ ಮಾಡುತ್ತದೆ- ‘ದಿಟವಾಗಿಯೂ ನನ್ನ ಕೋಳಿಮರಿಗಳು ಕಾಲುಗುರಿನಿಂದ ಅಥವಾ ಕೊಕ್ಕಿನಿಂದ ಚಿಪ್ಪನ್ನೊಡೆದು ಜೋಪಾನವಾಗಿ ಹೊರಗೆ ಬರುವಂತಾಗಲಿ’ ಎಂಬ ಇಚ್ಛೆಯು ಆ ಕೋಳಿಯಲ್ಲಿ ಉಂಟಾಗಿದ್ದರೂ, ಆ ಕೋಳಿಮರಿಗಳು ಕಾಲುಗುರಿನಿಂದ ಅಥವಾ ಕೊಕ್ಕಿನಿಂದ ಚಿಪ್ಪನ್ನೊಡೆದು ಜೋಪಾನವಾಗಿ ಹೊರಬರಲು ಅರ್ಹವಾಗುತ್ತವೆ.222 ಇದೇರೀತಿ ಭಿಕ್ಷುಗಳೇ, ಈ ಎಡೆಬಿಡದ ಪ್ರಯತ್ನದ ಜೊತೆಗಿನ ಹದಿನೈದು ಅಂಗಗಳಿಂದ ಕೂಡಿದ ಭಿಕ್ಷುವು ಲೋಕವಿಮುಖತೆಗೆ ಅರ್ಹನಾಗುತ್ತಾನೆ, ಸಂಬೋಧಿಗೆ ಅರ್ಹನಾಗುತ್ತಾನೆ, ಎಣೆಯಿಲ್ಲದ ಯೋಗಕ್ಷೇಮವನ್ನು ಹೊಂದಲು ಅರ್ಹನಾಗುತ್ತಾನೆ’ ಎಂದು.
ಭಗವಾನರು ಹೀಗೆ ಹೇಳಿದರು. ಸ್ಫೂರ್ತಿ ಪಡೆದ ಆ ಭಿಕ್ಷುಗಳು ಭಗವಾನರ ಮಾತಿಗೆ ಆನಂದಗೊಂಡರು.
ಟಿಪ್ಪಣಿಗಳು [4]
English
Việt Ngữ