ಹೀಗೆ ನಾನು ಕೇಳಿದ್ದೇನೆ. ಒಂದುಸಲ ಭಗವಾನರು ಶ್ರಾವಸ್ಥಿಯಲ್ಲಿ ಅನಾಥಪಿಂಡಿಕರ ಜೇತವನದಲ್ಲಿನ ವಿಹಾರದಲ್ಲಿ ತಂಗಿದ್ದರು. ಆ ಒಂದು ಸಮಯದಲ್ಲಿ ಮೀನುಗಾರನ ಪುತ್ರ ಸಾತಿ ಎಂಬ ಭಿಕ್ಷುವಿನಲ್ಲಿ ಈ ರೀತಿಯ ಹಾನಿಕಾರಕ ದೃಷ್ಟಿಯು ಉಂಟಾಯಿತು- ‘ನಾನು ತಿಳಿದಿರುವ ಹಾಗೆ ಭಗವಾನರು ಉಪದೇಶಿಸಿದ ಧರ್ಮ ಯಾವುದೆಂದರೆ ಒಂದೇ ವಿಧವಾದ ವಿಞ್ಞಾನ (ಮರುಹುಟ್ಟುಗಳಲ್ಲಿ) ಮುಂದುವರೆಯುತ್ತದೆ, ಉಳಿದು ಬರುತ್ತದೆ, ಬೇರಾವುದೂ ಅಲ್ಲ’ ಎಂದು. ಅನೇಕ ಭಿಕ್ಷುಗಳು ಇದನ್ನು ಕೇಳಿದರು. ಮೀನುಗಾರನ ಪುತ್ರ, ಸಾತಿ ಎಂಬ ಭಿಕ್ಷುವಿನಲ್ಲಿ ಈ ರೀತಿಯ ಹಾನಿಕಾರಕ ದೃಷ್ಟಿಯು ಉಂಟಾಗಿದೆ. ‘ನಾನು ತಿಳಿದಿರುವ ಹಾಗೆ ಭಗವಾನರು ಉಪದೇಶಿಸಿದ ಧರ್ಮ ಯಾವುದೆಂದರೆ ಒಂದೇ ವಿಧವಾದ ವಿಞ್ಞಾನ (ಮರುಹುಟ್ಟುಗಳಲ್ಲಿ) ಮುಂದುವರೆಯುತ್ತದೆ, ಉಳಿದು ಬರುತ್ತದೆ, ಬೇರಾವುದೂ ಅಲ್ಲ’ ಎಂದು. ಆಗ ಭಿಕ್ಷುಗಳು ಎಲ್ಲಿ ಮೀನುಗಾರನ ಪುತ್ರ ಭಿಕ್ಷು ಸಾತಿ ಇದ್ದನೋ ಅಲ್ಲಿಗೆ ಬಂದರು. ಬಂದನಂತರ ಮೀನುಗಾರನ ಪುತ್ರ ಭಿಕ್ಷು ಸಾತಿಗೆ ಹೀಗೆ ಹೇಳಿದರು- “ಆಯುಷ್ಮಂತ ಸಾತಿ, ಇದು ನಿಜವೇ, ನಿನ್ನಲ್ಲಿ ಈ ರೀತಿಯ ಹಾನಿಕಾರಕ ದೃಷ್ಟಿಯು ಉಂಟಾಗಿದ್ದು ನಿಜವೇ? ‘ನಾನು ತಿಳಿದಿರುವ ಹಾಗೆ ಭಗವಾನರು ಉಪದೇಶಿಸಿದ ಧರ್ಮ ಯಾವುದೆಂದರೆ ಒಂದೇ ವಿಧವಾದ ವಿಞ್ಞಾನ (ಮರುಹುಟ್ಟುಗಳಲ್ಲಿ) ಮುಂದುವರೆಯುತ್ತದೆ, ಉಳಿದು ಬರುತ್ತದೆ, ಬೇರಾವುದೂ ಅಲ್ಲ” ಎಂದು.
“ಆಯುಷ್ಮಂತರೇ, ನಿಶ್ಚಯವಾಗಿಯೂ ಹೌದು. ನಾನು ತಿಳಿದಿರುವ ಹಾಗೆ ಭಗವಾನರು ಉಪದೇಶಿಸಿದ ಧರ್ಮ ಯಾವುದೆಂದರೆ ಒಂದೇ ವಿಧವಾದ ವಿಞ್ಞಾನ (ಮರುಹುಟ್ಟುಗಳಲ್ಲಿ) ಮುಂದುವರೆಯುತ್ತದೆ, ಉಳಿದು ಬರುತ್ತದೆ, ಬೇರಾವುದೂ ಅಲ್ಲ” ಎಂದು.
ಆಗ ಭಿಕ್ಷುಗಳು ಮೀನುಗಾರನ ಪುತ್ರ ಭಿಕ್ಷು ಸಾತಿಯನ್ನು ಈ ರೀತಿಯ ಹಾನಿಕಾರಕ ದೃಷ್ಟಿಯಿಂದ ಮನಸ್ಸನ್ನು ತಿರುಗಿಸಲು ಪ್ರಶ್ನೆ ಮಾಡಿದರು, ಅಡ್ಡಪ್ರಶ್ನೆ ಮಾಡಿದರು, ಒತ್ತಾಯಪಡಿಸಿದರು- ಆಯುಷ್ಮಂತ ಸಾತಿ, ಹೀಗೆ ಹೇಳಬೇಡ, ಭಗವಾನರನ್ನು ತಪ್ಪಾಗಿ ನಿರೂಪಿಸಬೇಡ, ಭಗವಾನರನ್ನು ತಪ್ಪಾಗಿ ನಿರೂಪಿಸುವುದು ಒಳ್ಳೆಯದಲ್ಲ. ಭಗವಾನರು ಹೀಗೆ ಹೇಳಿಯೇ ಇಲ್ಲ. ಆಯುಷ್ಮಂತ ಸಾತಿ, ಅನೇಕ ಪರಿಯಲ್ಲಿ (ಸೂತ್ರ ಉಪದೇಶಗಳಲ್ಲಿ) ವಿಞ್ಞಾನ (ಮರುಹುಟ್ಟುಗಳಲ್ಲಿ) ಅವಲಂಬನೆಯಿಂದ ಹುಟ್ಟುತ್ತದೆ ಎಂದೇ ಭಗವಾನರಿಂದ ಹೇಳಲ್ಪಟ್ಟಿದೆ. ಕಾರಣೀಭೂತ ಪರಿಸ್ಥಿತಿಗಳಿಲ್ಲದೇ ಚಿತ್ತಸ್ಮೃತಿಯ ಹುಟ್ಟುವಿಕೆ ಇಲ್ಲ” ಎಂದು.
ಆದರೆ ಮೀನುಗಾರನ ಪುತ್ರ ಭಿಕ್ಷು ಸಾತಿ ಆ ಭಿಕ್ಷುಗಳಿಂದ ಹೀಗೆ ತಿದ್ದಿದರೂ, ಪ್ರಶ್ನೆ ಮಾಡಿದರು, ಅಡ್ಡಪ್ರಶ್ನೆ ಮಾಡಿದರೂ, ಒತ್ತಾಯಪಡಿಸಿದರೂ ಕೂಡ ಆ ಹಾನಿಕಾರಕ ದೃಷ್ಟಿಗೆ ಹಠದಿಂದ ಅಂಟಿಕೊಂಡು ಈ ರೀತಿಯಾಗಿ ನಿರ್ಧರಿಸಿದನು- “ಆಯುಷ್ಮಂತರೇ, ನಿಶ್ಚಯವಾಗಿಯೂ ನಾನು ತಿಳಿದಿರುವ ಹಾಗೆ ಭಗವಾನರು ಉಪದೇಶಿಸಿದ ಧರ್ಮ ಯಾವುದೆಂದರೆ ಒಂದೇ ವಿಧವಾದ ವಿಞ್ಞಾನ (ಮರುಹುಟ್ಟುಗಳಲ್ಲಿ) ಮುಂದುವರೆಯುತ್ತದೆ, ಉಳಿದು ಬರುತ್ತದೆ, ಬೇರಾವುದೂ ಅಲ್ಲ” ಎಂದು.
2. ಯಾವಾಗ ಆ ಭಿಕ್ಷುಗಳು ಮೀನುಗಾರನ ಪುತ್ರ, ಭಿಕ್ಷು ಸಾತಿಯ ಮನಸ್ಸನ್ನು ಆ ಹಾನಿಕಾರಕ ದೃಷ್ಟಿಯಿಂದ ತಿರುಗಿಸಲು ವಿಫಲರಾದರೋ, ಆಗ ಆ ಭಿಕ್ಷುಗಳು ಭಗವಾನರೆಲ್ಲಿದ್ದರೋ ಅಲ್ಲಿಗೆ ಬಂದರು; ಬಂದನಂತರ ಭಗವಾನರಿಗೆ ನಮಸ್ಕರಿಸಿ ಒಂದೆಡೆ ಕುಳಿತರು. ಒಂದೆಡೆ ಕುಳಿತು ಆ ಭಿಕ್ಷುಗಳು ಭಗವಾನರಿಗೆ ಹೀಗೆ ಹೇಳಿದರು- “ಭಂತೆ, ಮೀನುಗಾರನ ಪುತ್ರ, ಸಾತಿ ಎಂಬ ಹೆಸರಿನ ಭಿಕ್ಷುವಿನಲ್ಲಿ ಈ ರೀತಿಯ ಹಾನಿಕಾರಕ ದೃಷ್ಟಿಯು ಉಂಟಾಗಿದೆ- ‘ನಾನು ತಿಳಿದಿರುವ ಹಾಗೆ ಭಗವಾನರು ಉಪದೇಶಿಸಿದ ಧರ್ಮ ಯಾವುದೆಂದರೆ ಒಂದೇ ವಿಧವಾದ ವಿಞ್ಞಾನ (ಮರುಹುಟ್ಟುಗಳಲ್ಲಿ) ಮುಂದುವರೆಯುತ್ತದೆ, ಉಳಿದುಬರುತ್ತದೆ, ಬೇರಾವುದೂ ಅಲ್ಲ’ ಎಂದು. ಭಂತೆ, ನಾವು ಮೀನುಗಾರನ ಪುತ್ರ ಸಾತಿ ಎಂಬ ಹೆಸರಿನ ಭಿಕ್ಷುವಿನಲ್ಲಿ ಈ ರೀತಿಯ ಹಾನಿಕಾರ ದೃಷ್ಟಿಯು ಉಂಟಾಗಿದೆ ಎಂದು ಕೇಳಿದೆವು- ‘ನಾನು ತಿಳಿದಿರುವ ಹಾಗೆ ಭಗವಾನರು ಉಪದೇಶಿಸಿದ ಧರ್ಮ ಯಾವುದೆಂದರೆ ಒಂದೇ ವಿಧವಾದ ವಿಞ್ಞಾನ (ಮರುಹುಟ್ಟುಗಳಲ್ಲಿ) ಮುಂದುವರೆಯುತ್ತದೆ, ಉಳಿದುಬರುತ್ತದೆ, ಬೇರಾವುದೂ ಅಲ್ಲ’ ಭಂತೆ, ಆಗ ನಾವು ಮೀನುಗಾರನ ಪುತ್ರ, ಭಿಕ್ಷು ಸಾತಿ ಎಲ್ಲಿದ್ದನೋ ಅಲ್ಲಗೆ ಹೋದೆವು; ಹೋದನಂತರ ಮೀನುಗಾರನ ಪುತ್ರ, ಭಿಕ್ಷು ಸಾತಿಗೆ ಹೀಗೆ ಹೇಳಿದೆವು- ‘ಆಯುಷ್ಮಂತ ಸಾತಿ, ಇದು ನಿಜವೇ, ನಿನ್ನಲ್ಲಿ ಈ ರೀತಿಯ ಹಾನಿಕಾರಕ ದೃಷ್ಟಿಯು ಉಂಟಾದದ್ದು. ‘ನಾನು ತಿಳಿದಿರುವ ಹಾಗೆ ಭಗವಾನರು ಉಪದೇಶಿಸಿದ ಧರ್ಮ ಯಾವುದೆಂದರೆ ಒಂದೇ ವಿಧವಾದ ವಿಞ್ಞಾನ (ಮರುಹುಟ್ಟುಗಳಲ್ಲಿ) ಮುಂದುವರೆಯುತ್ತದೆ, ಉಳಿದುಬರುತ್ತದೆ, ಬೇರಾವುದೂ ಅಲ್ಲ’ ಎಂದು. ಭಂತೆ, ಹೀಗೆ ಹೇಳಿದ ಮೇಲೆ, ಮೀನುಗಾರ ಪುತ್ರ ಭಿಕ್ಷು ಸಾತಿ ನಮಗೆ ಹೀಗೆ ಹೇಳಿದನು- ‘ಆಯುಷ್ಮಂತರೇ, ನಿಶ್ಚಯವಾಗಿಯೂ ಹಾಗೆಯೇ. ನಾನು ತಿಳಿದಿರುವ ಹಾಗೆ ಭಗವಾನರು ಉಪದೇಶಿಸಿದ ಧರ್ಮ ಯಾವುದೆಂದರೆ ಒಂದೇ ವಿಧವಾದ ವಿಞ್ಞಾನ (ಮರುಹುಟ್ಟುಗಳಲ್ಲಿ) ಮುಂದುವರೆಯುತ್ತದೆ, ಉಳಿದುಬರುತ್ತದೆ, ಬೇರಾವುದೂ ಅಲ್ಲ’ ಎಂದು. ಭಂತೆ, ಆಗ ನಾವು ಮೀನುಗಾರನ ಪುತ್ರ, ಭಿಕ್ಷು ಸಾತಿಯನ್ನು ಈ ರೀತಿಯ ಹಾನಿಕಾರಕ ದೃಷ್ಟಿಯಿಂದ ಮನಸ್ಸನ್ನು ತಿರುಗಿಸಲು ಹೀಗೆ ಪ್ರಶ್ನೆ ಮಾಡಿದೆವು, ತಿದ್ದಿದೆವು, ಒತ್ತಾಯಪಡಿಸಿದೆವು- ‘ಆಯುಷ್ಮಂತ ಸಾತಿ, ಹೀಗೆ ಹೇಳಬೇಡ. ಭಗವಾನರನ್ನು ತಪ್ಪಾಗಿ ನಿರೂಪಿಸಬೇಡ, ಭಗವಾನರನ್ನು ತಪ್ಪಾಗಿ ನಿರೂಪಿಸುವುದು ಒಳಿತಲ್ಲ. ಭಗವಾನರು ಹೀಗೆ ಹೇಳಿಯೇ ಇಲ್ಲ. ಆಯುಷ್ಮಂತ ಸಾತಿ, ಅನೇಕ ಪರಿಯಲ್ಲಿ (ಸೂತ್ರ ಉಪದೇಶಗಳಲ್ಲಿ) ಅವಲಂಬನೆಯಿಂದ ಪ್ರತೀತಿ ಸಮುತ್ಪಾದದಿಂದ ವಿಞ್ಞಾನ ಹುಟ್ಟುತ್ತದೆ ಎಂದೇ ಭಗವಾನರಿಂದ ಹೇಳಲ್ಪಟ್ಟಿದೆ, ಕಾರಣೀಭೂತ ಪರಿಸ್ಥಿತಿಗಳಿಲ್ಲದೆ ಚಿತ್ತಸ್ಮೃತಿಯ ಹುಟ್ಟುವಿಕೆಯೂ ಇಲ್ಲ’ ಎಂದು. ಆದರೆ ಭಂತೆ, ಮೀನುಗಾರನ ಪುತ್ರ, ಭಿಕ್ಷು ಸಾತಿ, ನಮ್ಮಿಂದ ಹೀಗೆ ಪ್ರಶ್ನೆ ಮಾಡಲ್ಪಟ್ಟರೂ, ಅಡ್ಡಪ್ರಶ್ನೆ ಮಾಡಲ್ಪಟ್ಟರೂ ಒತ್ತಾಯಪಡಿಸಲ್ಪಟ್ಟರೂ ಕೂಡ ಆ ಹಾನಿಕಾರಕ ದೃಷ್ಟಿಗೆ ಹಠದಿಂದ ಅಂಟಿಕೊಂಡು ಈ ರೀತಿಯಾಗಿ ನಿರ್ಧರಿಸಿದನು- ‘ಆಯುಷ್ಮಂತರೇ, ನಿಶ್ಚಯವಾಗಿಯೂ ಹಾಗೆಯೇ. ನಾನು ತಿಳಿದಿರುವ ಹಾಗೆ ಭಗವಾನರು ಉಪದೇಶಿಸಿದ ಧರ್ಮ ಯಾವುದೆಂದರೆ ಒಂದೇ ವಿಧವಾದ ವಿಞ್ಞಾನ (ಮರುಹುಟ್ಟುಗಳಲ್ಲಿ) ಮುಂದುವರೆಯುತ್ತದೆ, ಉಳಿದುಬರುತ್ತದೆ, ಬೇರಾವುದೂ ಅಲ್ಲ’ ಎಂದು. ಭಂತೆ, ಯಾವಾಗ ನಾವು ಮೀನುಗಾರನ ಪುತ್ರ, ಭಿಕ್ಷು ಸಾತಿಯನ್ನು ಆ ಹಾನಿಕಾರಕ ದೃಷ್ಟಿಯಿಂದ ಮನಸ್ಸನ್ನು ತಿಗುಗಿಸಲು ವಿಫಲರಾದೆವೋ, ಆಗ ನಾವು ಈ ವಿಷಯವನ್ನು ಭಗವಾನರಿಗೆ ತಿಳಿಸುತ್ತಿದ್ದೇವೆ” ಎಂದು.
3. ಆಗ ಭಗವಾನರು ಬೇರೊಬ್ಬ ಭಿಕ್ಷುವನ್ನು ಕರೆದರು- “ಬಾ ಭಿಕ್ಷು, ನನ್ನ ಈ ಮಾತನ್ನು ಮೀನುಗಾರನ ಪುತ್ರ, ಭಿಕ್ಷು ಸಾತಿಗೆ ಹೇಳು. ಆಯುಷ್ಮಂತ ಸಾತಿ, ನಿನ್ನನ್ನು ಶಾಸ್ತರು ಕರೆಯುತ್ತಾರೆ” ಎಂದು. “ಆಗಲಿ ಭಂತೆ” ಎಂದು ಆ ಭಿಕ್ಷು ಭಗವಾನರಿಗೆ ಉತ್ತರಿಸಿ ಮೀನುಗಾರನ ಪುತ್ರ ಭಿಕ್ಷು ಸಾತಿ ಎಲ್ಲಿದ್ದನೋ ಅಲ್ಲಿಗೆ ಬಂದನು; ಬಂದನಂತರ ಮೀನುಗಾರನ ಪುತ್ರ, ಭಿಕ್ಷು ಸಾತಿಗೆ ಹೀಗೆ ಹೇಳಿದನು. “ಆಯುಷ್ಮಂತ ಸಾತಿ, ನಿನ್ನನ್ನು ಶಾಸ್ತರು ಕರೆಯುತ್ತಾರೆ” ಎಂದು. “ಆಗಲಿ ಆಯುಷ್ಮಂತನೇ” ಎಂದು ಮೀನುಗಾರನ ಪುತ್ರ ಸಾತಿ ಆ ಭಿಕ್ಷುವಿಗೆ ಪ್ರತ್ಯುತ್ತರ ನೀಡಿ ಭಗವಾನರೆಲ್ಲಿದ್ದರೋ ಅಲ್ಲಿಗೆ ಬಂದನು. ಬಂದನಂತರ ಭಗವಾನರಿಗೆ ನಮಸ್ಕರಿಸಿ ಒಂದೆಡೆ ಕುಳಿತನು. ಒಂದೆಡೆ ಕುಳಿತುಕೊಂಡ ಆ ಮೀನುಗಾರನ ಪುತ್ರ ಭಿಕ್ಷು ಸಾತಿಗೆ ಭಗವಾನರು ಹೀಗೆ ಹೇಳಿದರು- “ಸಾತಿ, ಇದು ನಿಜವೆ? ಈ ರೀತಿಯ ಹಾನಿಕಾರಕ ದೃಷ್ಟಿಯು ನಿನ್ನಲ್ಲಿ ಉಂಟಾದದ್ದು- ‘ನಾನು ತಿಳಿದಿರುವ ಹಾಗೆ ಭಗವಾನರು ಉಪದೇಶಿಸಿದ ಧರ್ಮ ಯಾವುದೆಂದರೆ ಒಂದೇ ವಿಧವಾದ ವಿಞ್ಞಾನ (ಮರುಹುಟ್ಟುಗಳಲ್ಲಿ) ಮುಂದುವರೆಯುತ್ತದೆ, ಉಳಿದುಬರುತ್ತದೆ, ಬೇರಾವುದೂ ಅಲ್ಲ’ ಎಂದು.
“ಭಂತೆ, ನಿಶ್ಚಯವಾಗಿಯೂ ಹಾಗೆಯೇ, ನಾನು ತಿಳಿದಿರುವ ಹಾಗೆ ಭಗವಾನರು ಉಪದೇಶಿಸಿದ ಧರ್ಮ ಯಾವುದೆಂದರೆ ಒಂದೇ ವಿಧವಾದ ವಿಞ್ಞಾನ (ಮರುಹುಟ್ಟುಗಳಲ್ಲಿ) ಮುಂದುವರೆಯುತ್ತದೆ, ಉಳಿದುಬರುತ್ತದೆ, ಬೇರಾವುದೂ ಅಲ್ಲ” ಎಂದು. “ಸಾತಿ, ವಿಞ್ಞಾನ ಎಂದರೇನು?” ಎಂದು. “ಭಂತೆ, ಇದೇ ಯಾವುದು ಮಾತನಾಡುವುದು, ಅನುಭವಿಸುವುದು, ಒಳ್ಳೆಯ ಮತ್ತು ಕೆಟ್ಟ ಕರ್ಮಗಳ ಫಲವನ್ನು ಇಲ್ಲಿ ಅಲ್ಲಿ ಅನುಭೋಗಿಸುವುದು”107 ಎಂದು.
“ಮೂರ್ಖ ಮನುಷ್ಯ, ಯಾರಿಗೆ ನನ್ನಿಂದ ಈ ರೀತಿಯಾಗಿ ಧರ್ಮವು ಉಪದೇಶಿಸಲ್ಪಟ್ಟಿದೆ ಎಂದು ನೀನು ತಿಳಿದಿದ್ದೀಯ? ಮೂರ್ಖ ಮನುಷ್ಯನೇ, ಅನೇಕ ಪರಿಯಲ್ಲಿ (ಸೂತ್ರ ಉಪದೇಶಗಳಲ್ಲಿ) ವಿಞ್ಞಾನ ಅವಲಂಬನೆಯಿಂದ (ಪ್ರತೀತಿ ಸಮುತ್ಪಾದದಿಂದ) ಹುಟ್ಟುತ್ತದೆ ಎಂದು ನನ್ನಿಂದ ಹೇಳಲ್ಪಟ್ಟಿಲ್ಲವೆ? ಕಾರಣೀಭೂತ ಪರಿಸ್ಥಿತಿಗಳಿಲ್ಲದೇ ವಿಞ್ಞಾನದ ಹುಟ್ಟುವಿಕೆ ಇಲ್ಲ ಎಂದು ಹೇಳಿಲ್ಲವೇ? ಎಂದು. ಆದರೆ ಮೂರ್ಖ ಮನುಷ್ಯನೇ, ನಿನ್ನದೇ ಆದ ತಪ್ಪು ತಿಳುವಳಿಕೆಯಿಂದ ಕೇವಲ ನನ್ನನ್ನು ತಪ್ಪಾಗಿ ನಿರೂಪಿಸಿದೆ. ಅಲ್ಲದೆ ನೀನು ನಿನಗೆ ಹಾನಿ ಮಾಡಿಕೊಂಡಿರುವೆ ಮತ್ತು ಬಹಳ ಅಪುಣ್ಯವನ್ನು ಸಂಗ್ರಹಿಸಿದೆ. ಮೂರ್ಖ ಮನುಷ್ಯನೇ, ಇದಕ್ಕಾಗಿ ನಿನಗೆ ದೀರ್ಘಕಾಲದವರೆಗೆ ಅಹಿತವೂ ಮತ್ತು ದುಃಖವೂ ಉಂಟಾಗುತ್ತದೆ” ಎಂದು.
4. ನಂತರ ಭಗವಾನರು ಭಿಕ್ಷುಗಳನ್ನು ಕರೆದರು- “ಭಿಕ್ಷುಗಳೇ, ಇದನ್ನು ಹೇಗೆ ಯೋಚಿಸುತ್ತೀರಿ, ಮೀನುಗಾರನ ಪುತ್ರ, ಭಿಕ್ಷು ಸಾತಿಗೆ ಈ ಧರ್ಮ ಮತ್ತು ವಿನಯದ (ನೀತಿ ಅನುಸರಣೆಯ) ಅರಿವಿನ ಕಿಡಿ ಉಂಟಾಗಿದೆಯೇ?” ಎಂದು.
“ಇದು ಹೇಗೆ ಸಾಧ್ಯ ಭಂತೆ? ಹಾಗೆ ಇಲ್ಲ ಭಂತೆ” ಎಂದು.
ಇದನ್ನು ಕೇಳಿದ ಮೇಲೆ, ಮೀನುಗಾರನ ಪುತ್ರ, ಭಿಕ್ಷು ಸಾತಿ ಸುಮ್ಮನೆ, ನಾಚಿಕೆಯುಳ್ಳವನಾಗಿ, ಹೆಗಲು ಜೋತುಬಿದ್ದವನಾಗಿ, ಕೆಳಮುಖ ಮಾಡಿ, ಉದಾಸೀನನಾಗಿ, ಏನೂ ಹೇಳಲಾಗದೆ ಕುಳಿತನು. ಆಗ ಭಗವಾನರು ಮೀನುಗಾರನ ಪುತ್ರ, ಭಿಕ್ಷು ಸಾತಿ ಸುಮ್ಮನೆ, ನಾಚಿಕೆಯುಳ್ಳವನಾಗಿ, ಹೆಗಲು ಜೋತುಬಿದ್ದವನಾಗಿ, ಕೆಳಮುಖ ಮಾಡಿ, ಉದಾಸೀನನಾಗಿ, ಏನೂ ಹೇಳಲಾಗದೆ ಇರುವುದನ್ನು ತಿಳಿದುಕೊಂಡು ಮೀನುಗಾರನ ಪುತ್ರ ಭಿಕ್ಷು ಸಾತಿಗೆ ಹೀಗೆ ಹೇಳಿದರು- “ಮೂರ್ಖ ಮನುಷ್ಯನೇ, ನೀನು ನಿನ್ನದೇ ಆದ ಈ ಹಾನಿಕಾರಕ ದೃಷ್ಟಿಯಿಂದ ವಿವರಿಸುತ್ತೀಯೆ; ನಾನು ಇದರ ಬಗ್ಗೆ ಭಿಕ್ಷುಗಳಿಗೆ ಪ್ರಶ್ನೆ ಮಾಡುವೆನು” ಎಂದು.
ಆಗ ಭಗವಾನರು ಭಿಕ್ಷುಗಳನ್ನು ಕರೆದರು- “ಭಿಕ್ಷುಗಳೇ, ನೀವು ಈ ರೀತಿಯಾಗಿ ನನ್ನಿಂದ ಧರ್ಮವು ಉಪದೇಶಿಸ್ಪಟ್ಟಿರುವುದನ್ನು ತಿಳಿದಿರುವಿರೇನು? ಈ ಮೀನುಗಾರನ ಪುತ್ರ ಭಿಕ್ಷು ಸಾತಿಯ ರೀತಿಯಲ್ಲಿ, ತನ್ನದೇ ಆದ ತಪ್ಪು ತಿಳುವಳಿಕೆಯಿಂದ ಕೇವಲ ನನ್ನನ್ನು ತಪ್ಪಾಗಿ ನಿರೂಪಿಸಿದನಲ್ಲದೆ ತಾನು ತನಗೆ ಹಾನಿಮಾಡಿಕೊಂಡಿದ್ದಾನೆ ಮತ್ತು ಬಹಳ ಅಪುಣ್ಯವನ್ನು ಸಂಗ್ರಹಿಸಿಕೊಂಡಿದ್ದಾನೆ” ಎಂದು.
“ಹಾಗೆ ಇಲ್ಲ ಭಂತೆ! ಭಂತೆ, ಅನೇಕ ಪರಿಯಲ್ಲಿ ವಿಞ್ಞಾನವು ಪ್ರತೀತಿ ಸಮುತ್ಪಾದದಿಂದ ಹುಟ್ಟುತ್ತದೆ ಎಂದು ಭಗವಾನರು ಹೇಳಿದ್ದಾರೆ. ಕಾರಣೀಭೂತ ಪರಿಸ್ಥಿತಿಗಳಿಲ್ಲದೆ ಚಿತ್ತ ವಿಞ್ಞಾನದ ಹುಟ್ಟು ಇಲ್ಲ” ಎಂದು.
“ಒಳ್ಳೆಯದು, ಒಳ್ಳೆಯದು ಭಿಕ್ಷುಗಳೇ! ಭಿಕ್ಷುಗಳೇ, ನೀವು ಈ ರೀತಿಯಾಗಿ ನನ್ನಿಂದ ಧರ್ಮವು ಉಪದೇಶಿಸಲ್ಪಟ್ಟಿರುವುದನ್ನು ತಿಳಿದಿದ್ದು ಒಳ್ಳೆಯದು. ಭಿಕ್ಷುಗಳೇ, ಅನೇಕ ಪರಿಯಲ್ಲಿ (ಸೂತ್ರ ಉಪದೇಶಗಳಲ್ಲಿ) ನಿಮಗೆ ವಿಞ್ಞಾನ ಅವಲಂಬನೆಯಿಂದ ಹುಟ್ಟುತ್ತದೆ ಎಂದು ನಾನು ಹೇಳಿದ್ದೇನೆ. ಕಾರಣೀಭೂತ ಪರಿಸ್ಥಿತಿಗಳಿಲ್ಲದೆ ವಿಞ್ಞಾನದ ಹುಟ್ಟು ಇಲ್ಲ ಎಂದು. ಆದರೆ ಮೀನುಗಾರನ ಪುತ್ರ, ಭಿಕ್ಷು ಸಾತಿ ತನ್ನದೇ ಆದ ತಪ್ಪು ತಿಳುವಳಿಕೆಯಿಂದ ಕೇವಲ ನನ್ನನ್ನು ತಪ್ಪಾಗಿ ನಿರೂಪಿಸಿದನಲ್ಲದೆ ತನಗೆ ಹಾನಿ ಮಾಡಿಕೊಂಡಿದ್ದಾನೆ ಮತ್ತು ಬಹಳ ಅಪುಣ್ಯವನ್ನು ಸಂಗ್ರಹಿಸಿಕೊಂಡಿದ್ದಾನೆ. ಅದಕ್ಕಾಗಿಯೇ ಆ ಮೂರ್ಖ ಮನುಷ್ಯನಿಗೆ ದೀರ್ಘ ಕಾಲದವರೆಗೆ ಅಹಿತವು ಮತ್ತು ದುಃಖವು ಉಂಟಾಗುತ್ತದೆ.”
2. ಸಮ್ಯಕ್ ದೃಷ್ಟಿ; ಪ್ರತೀತಿಸಮುಪ್ಪಾದ (ಅವಲಂಬನೆಯ ಹುಟ್ಟು)
5. “ಭಿಕ್ಷುಗಳೇ, ಯಾವ ಕಾರಣೀಭೂತ ಪರಿಸ್ಥಿತಿಗಳನ್ನು ಅವಲಂಬಿಸಿ ವಿಞ್ಞಾನ ಹುಟ್ಟುತ್ತದೆಯೋ ಅದು ಆಯಾ ಸಂಬಂಧಿ ಹೆಸರುಗಳಿಂದ ಕರೆಯಲ್ಪಡುತ್ತದೆ.108 ಕಣ್ಣು ಮತ್ತು ಅಕಾರವನ್ನು ಅವಲಂಬಿಸಿ ವಿಞ್ಞಾನ ಹುಟ್ಟುತ್ತದೆ, ಅದು ಕಣ್ಣು ಸಂಬಂಧಿ ವಿಞ್ಞಾನ ಎಂದು ಕರೆಯಲ್ಪಡುತ್ತದೆ. ಕಿವಿ ಮತ್ತು ಶಬ್ದವನ್ನು ಅವಲಂಬಿಸಿ ವಿಞ್ಞಾನ ಹುಟ್ಟುತ್ತದೆ, ಅದು ಕಿವಿ ಸಂಬಂಧಿ ವಿಞ್ಞಾನ ಎಂದು ಕರೆಯಲ್ಪಡುತ್ತದೆ. ಮೂಗು ಮತ್ತು ವಾಸನೆಯನ್ನು ಅವಲಂಬಿಸಿ ವಿಞ್ಞಾನ ಹುಟ್ಟುತ್ತದೆ, ಅದು ಮೂಗು ಸಂಬಂಧಿ ವಿಞ್ಞಾನ ಎಂದು ಕರೆಯಲ್ಪಡುತ್ತದೆ. ನಾಲಿಗೆ ಮತ್ತು ರುಚಿಯನ್ನು ಅವಲಂಬಿಸಿ ವಿಞ್ಞಾನ ಹುಟ್ಟುತ್ತದೆ, ಅದು ನಾಲಿಗೆ ಸಂಬಂಧಿ ವಿಞ್ಞಾನ ಎಂದು ಕರೆಯಲ್ಪಡುತ್ತದೆ. ಶರೀರ ಮತ್ತು ಸ್ಪರ್ಶವನ್ನು ಅವಲಂಬಿಸಿ ವಿಞ್ಞಾನ ಹುಟ್ಟುತ್ತದೆ, ಅದು ಶರೀರ ಸಂಬಂಧಿ ವಿಞ್ಞಾನ ಎಂದು ಕರೆಯಲ್ಪಡುತ್ತದೆ. ಮನಸ್ಸು ಮತ್ತು ಮನೋ ವಿಷಯಗಳನ್ನು ಅವಲಂಬಿಸಿ ವಿಞ್ಞಾನ ಹುಟ್ಟುತ್ತದೆ, ಅದು ಮನೋಸಂಬಂಧಿ ವಿಞ್ಞಾನ ಎಂದು ಕರೆಯಲ್ಪಡುತ್ತದೆ.
“ಹೇಗೆಂದರೆ ಭಿಕ್ಷುಗಳೇ, ಯಾವ ಕಾರಣೀಭೂತ ಪರಿಸ್ಥಿತಿಗಳನ್ನು ಅವಲಂಬಿಸಿ ಬೆಂಕಿಯು ಉರಿಯುತ್ತದೋ ಅದು ಆಯಾ ಸಂಬಂಧಿ ಹೆಸರುಗಳಿಂದ ಕರೆಯಲ್ಪಡುತ್ತದೆ. ಕಟ್ಟಿಗೆಯನ್ನು ಅವಲಂಬಿಸಿ ಬೆಂಕಿಯು ಉರಿಯುತ್ತದೆ, ಅದು ಕಟ್ಟಿಗೆ ಬೆಂಕಿ ಎಂದು ಕರೆಯಲ್ಪಡುತ್ತದೆ; ಚಕ್ಕೆಯನ್ನು ಅವಲಂಬಿಸಿ ಬೆಂಕಿ ಉರಿಯುತ್ತದೆ, ಅದು ಚಕ್ಕೆ ಬೆಂಕಿ ಎಂದು ಕರೆಯಲ್ಪಡುತ್ತದೆ; ಹುಲ್ಲನ್ನು ಅವಲಂಬಿಸಿ ಬೆಂಕಿ ಉರಿಯುತ್ತದೆ, ಅದು ಹುಲ್ಲು ಬೆಂಕಿ ಎಂದು ಕರೆಯಲ್ಪಡುತ್ತದೆ; ಸೆಗಣಿಯನ್ನು ಅವಲಂಬಿಸಿ ಬೆಂಕಿ ಉರಿಯುತ್ತದೆ, ಅದು ಸೆಗಣಿ ಬೆಂಕಿ ಎಂದು ಕರೆಯಲ್ಪಡುತ್ತದೆ; ಹೊಟ್ಟನ್ನು ಅವಲಂಬಿಸಿ ಬೆಂಕಿ ಉರಿಯುತ್ತದೆ, ಅದು ಹೊಟ್ಟಿನ ಬೆಂಕಿ ಎಂದು ಕರೆಯಲ್ಪಡುತ್ತದೆ; ಕಸವನ್ನು ಅವಲಂಬಿಸಿ ಬೆಂಕಿಯು ಉರಿಯುತ್ತದೆ, ಅದು ಕಸದ ಬೆಂಕಿ ಎಂದು ಕರೆಯಲ್ಪಡುತ್ತದೆ. ಭಿಕ್ಷುಗಳೇ, ಅದೇರೀತಿಯಲ್ಲಿ ಯಾವ ಕಾರಣೀಭೂತ ಪರಿಸ್ಥಿತಿಗಳನ್ನು (ಪ್ರತ್ಯಯಗಳನ್ನು) ಅವಲಂಬಿಸಿ ವಿಞ್ಞಾನ ಹುಟ್ಟುತ್ತದೋ, ಅದು ಆಯಾ ಹೆಸರುಗಳಿಂದ ಕರೆಯಲ್ಪಡುತ್ತದೆ. ಕಣ್ಣು ಮತ್ತು ಅಕಾರವನ್ನು ಅವಲಂಬಿಸಿ ವಿಞ್ಞಾನ ಹುಟ್ಟುತ್ತದೆ, ಅದು ಕಣ್ಣು ಸಂಬಂಧಿ ವಿಞ್ಞಾನ ಎಂದು ಕರೆಯಲ್ಪಡುತ್ತದೆ. ಕಿವಿ ಮತ್ತು ಶಬ್ದವನ್ನು ಅವಲಂಬಿಸಿ ವಿಞ್ಞಾನ ಹುಟ್ಟುತ್ತದೆ, ಅದು ಕಿವಿ ಸಂಬಂಧಿ ವಿಞ್ಞಾನ ಎಂದು ಕರೆಯಲ್ಪಡುತ್ತದೆ. ಮೂಗು ಮತ್ತು ವಾಸನೆಯನ್ನು ಅವಲಂಬಿಸಿ ವಿಞ್ಞಾನ ಹುಟ್ಟುತ್ತದೆ, ಅದು ಮೂಗು ಸಂಬಂಧಿ ವಿಞ್ಞಾನ ಎಂದು ಕರೆಯಲ್ಪಡುತ್ತದೆ. ನಾಲಿಗೆ ಮತ್ತು ರುಚಿಯನ್ನು ಅವಲಂಬಿಸಿ ವಿಞ್ಞಾನ ಹುಟ್ಟುತ್ತದೆ, ಅದು ನಾಲಿಗೆ ಸಂಬಂಧಿ ವಿಞ್ಞಾನ ಎಂದು ಕರೆಯಲ್ಪಡುತ್ತದೆ. ಶರೀರ ಮತ್ತು ಸ್ಪರ್ಶವನ್ನು ಅವಲಂಬಿಸಿ ವಿಞ್ಞಾನ ಹುಟ್ಟುತ್ತದೆ, ಅದು ಶರೀರ ಸಂಬಂಧಿ ವಿಞ್ಞಾನ ಎಂದು ಕರೆಯಲ್ಪಡುತ್ತದೆ. ಮನಸ್ಸು ಮತ್ತು ಮನೋ ವಿಷಯಗಳನ್ನು ಅವಲಂಬಿಸಿ ವಿಞ್ಞಾನ ಹುಟ್ಟುತ್ತದೆ, ಅದು ಮನೋಸಂಬಂಧಿ ವಿಞ್ಞಾನ ಎಂದು ಕರೆಯಲ್ಪಡುತ್ತದೆ.
3. ತೆಪ್ಪದ ಉದಾಹರಣೆಯೊಂದಿಗೆ ಧರ್ಮವನ್ನು ತಿಳಿಸುವಿಕೆ
6. “ಭಿಕ್ಷುಗಳೇ, ಇದೇ ಅಸ್ತಿತ್ವ ಎಂದು ಕಾಣುತ್ತೀರೇನು?” ಎಂದು.
“ಹೌದು ಭಂತೆ.”
“ಭಿಕ್ಷುಗಳೇ, ಅದು ಆಹಾರದಿಂದ ಹುಟ್ಟಿದೆ ಎಂದು ಕಾಣುತ್ತೀರೇನು?” ಎಂದು.
“ಹೌದು ಭಂತೆ.”
“ಭಿಕ್ಷುಗಳೇ, ಆಹಾರದ ಇಲ್ಲದಿರುವಿಕೆಯಿಂದ ಯಾವ ಅಸ್ತಿತ್ವ ಉಂಟೋ, ಅದೂ ಇಲ್ಲದಂತಾಗುವ ಸ್ವಭಾವವುಳ್ಳದ್ದು ಎಂದು ಕಾಣುತ್ತೀರೇನು?” ಎಂದು.
“ಹೌದು ಭಂತೆ.”
“ಭಿಕ್ಷುಗಳೇ, ಈ ಅಸ್ತಿತ್ವ ಇಲ್ಲದಿರಬಹುದು ಎಂಬ ಸಂದೇಹದಿಂದಾಗಿ ಅನಿಶ್ಚಿತತೆ ಹುಟ್ಟುತ್ತದೆಯೇ?” ಎಂದು.
“ಹೌದು ಭಂತೆ.”
“ಭಿಕ್ಷುಗಳೇ, ಇದು ಆಹಾರದಿಂದ ಹುಟ್ಟಿದೆ, ಅದು ಹಾಗಿಲ್ಲದೇ ಇರಬಹುದು ಎಂಬ ಸಂದೇಹದಿಂದಾಗಿ ಅನಿಶ್ಚಿತತೆ ಹುಟ್ಟುತ್ತದೆಯೇ?” ಎಂದು.
“ಹೌದು ಭಂತೆ.”
“ಭಿಕ್ಷುಗಳೇ, ಆಹಾರದ ಇಲ್ಲದಿರುವಿಕೆಯಿಂದ ಈ ಅಸ್ತಿತ್ವ ಇದೆಯೋ ಅದು ಇಲ್ಲದಂತಾಗುವ ಸ್ವಭಾವವುಳ್ಳದ್ದು, ಅದು ಹಾಗಿಲ್ಲದೆ ಇರಬಹುದು ಎಂಬ ಸಂದೇಹದಿಂದಾಗಿ ಅನಿಶ್ಚಿತತೆಯು ಹುಟ್ಟುತ್ತದೆಯೇ?” ಎಂದು.
“ಹೌದು ಭಂತೆ.”
“ಭಿಕ್ಷುಗಳೇ, ಇದು ಅಸ್ತಿತ್ವ ಎಂದು ಯಥಾರ್ಥವಾಗಿ ಸಮ್ಯಕ್ ಪ್ರಜ್ಞೆಯಿಂದ ಕಾಣುವವನಲ್ಲಿ ಸಂದೇಹವು ತೊಡೆದು ಹೋಗುವುದೇ?” ಎಂದು.
“ಹೌದು ಭಂತೆ.”
“ಭಿಕ್ಷುಗಳೇ, ಅದು ಆಹಾರದಿಂದ ಹುಟ್ಟಿದೆ ಎಂದು ಯಥಾರ್ಥವಾಗಿ ಸಮ್ಯಕ್ ಪ್ರಜ್ಞೆಯಿಂದ ಕಾಣುವವನಲ್ಲಿ ಸಂದೇಹವು ತೊಡೆದು ಹೋಗುವುದೇ?” ಎಂದು.
“ಹೌದು ಭಂತೆ.”
“ಭಿಕ್ಷುಗಳೇ, ಆಹಾರದ ಇಲ್ಲದಿರುವಿಕೆಯಿಂದ ಈ ಅಸ್ತಿತ್ವ ಇದೆಯೋ ಅದು ಇಲ್ಲದಂತಾಗುವ ಸ್ವಭಾವವುಳ್ಳದ್ದು ಎಂದು ಯಥಾರ್ಥವಾಗಿ ಸಮ್ಯಕ್ ಪ್ರಜ್ಞೆಯಿಂದ ಕಾಣುವವನಲ್ಲಿ ಈ ಸಂದೇಹವು ತೊಡೆದು ಹೋಗುವುದೇ?” ಎಂದು.
“ಹೌದು ಭಂತೆ.”
“ಭಿಕ್ಷುಗಳೇ, ಇದೇ ಅದರ ಅಸ್ತಿತ್ವ ಎಂಬುದರಿಂದಾಗಿ ನೀವು ಹೀಗೆ ಸಂದೇಹವಿಲ್ಲದೆ ಇರುವಿರೇನು?” ಎಂದು.
“ಹೌದು ಭಂತೆ.”
“ಭಿಕ್ಷುಗಳೇ, ಇದೇ ಅದರ ಆಹಾರದಿಂದಾಗಿನ ಹುಟ್ಟು ಎಂಬುದರಿಂದಾಗಿ ನೀವು ಹೀಗೆ ಸಂದೇಹವಿಲ್ಲದೆ ಇರುವಿರೇನು?” ಎಂದು.
“ಹೌದು ಭಂತೆ.”
“ಭಿಕ್ಷುಗಳೇ, ಇದೇ ಅದರ ಆಹಾರದ ಇಲ್ಲದಿರುವಿಕೆಯಿಂದ ಈ ಅಸ್ತಿತ್ವ ಇದೆಯೋ ಅದು ಇಲ್ಲದಂತಾಗುವ ಸ್ವಭಾವವುಳ್ಳದ್ದು ಎಂಬುದರಿಂದಾಗಿ ಹೀಗೆ ಸಂದೇಹವಿಲ್ಲದೆ ಇರುವಿರೇನು?” ಎಂದು.
“ಹೌದು ಭಂತೆ.”
“ಭಿಕ್ಷುಗಳೇ, ಇದೇ ಅಸ್ತಿತ್ವ ಎಂದು ಯಥಾರ್ಥವಾಗಿ ಸಮ್ಯಕ್ ಪ್ರಜ್ಞೆಯಿಂದ ಸರಿಯಾಗಿ ನೋಡಲ್ಪಟ್ಟಿದೆಯೇ?” ಎಂದು.
“ಹೌದು ಭಂತೆ.”
“ಭಿಕ್ಷುಗಳೇ, ಅದು ಆಹಾರದಿಂದ ಹುಟ್ಟಿದೆ ಎಂದು ಯಥಾರ್ಥವಾಗಿ ಸಮ್ಯಕ್ ಪ್ರಜ್ಞೆಯಿಂದ ನೋಡಲ್ಪಟ್ಟಿದೆಯೇ?” ಎಂದು.
“ಹೌದು ಭಂತೆ.”
“ಭಿಕ್ಷುಗಳೇ, ಆಹಾರದ ಇಲ್ಲದಿರುವಿಕೆಯಿಂದ ಈ ಅಸ್ತಿತ್ವ ಇದೆಯೋ ಅದು ಇಲ್ಲದಂತಾಗುವ ಸ್ವಭಾವವುಳ್ಳದ್ದು ಎಂದು ಯಥಾರ್ಥವಾಗಿ ಸಮ್ಯಕ್ ಪ್ರಜ್ಞೆಯಿಂದ ಸರಿಯಾಗಿ ನೋಡಲ್ಪಟ್ಟಿದೆಯೇ? ಎಂದು.
“ಹೌದು ಭಂತೆ.”
“ಭಿಕ್ಷುಗಳೇ, ನೀವುಗಳು ಇಂತಹ ಪರಿಶುದ್ಧವಾದ, ಈ ರೀತಿಯಾಗಿ ನಿರ್ಮಲವಾಗಿರುವ ದೃಷ್ಟಿಗೆ ಅಂಟಿಕೊಂಡಿದ್ದೇ ಆದರೆ, ಅದನ್ನು ಕಾಪಾಡಿದ್ದೇ ಆದರೆ, ಅದರೊಂದಿಗೆ ಆನಂದಿಸಿದ್ದೇ ಆದರೆ, ಅದನ್ನು ನಿಮ್ಮದೆಂದೇ ಗಮನಿಸಿದ್ದೇ ಆದರೆ, ನಂತರ ಭಿಕ್ಷುಗಳೇ, ನೀವುಗಳು ತೆಪ್ಪದ ಉದಾಹರಣೆಯೊಂದಿಗೆ ತಿಳಿಸಿರುವ ಧರ್ಮವನ್ನು ಅರ್ಥಮಾಡಿಕೊಂಡು ಅದರಂತೆ ಅದು ಕೇವಲ ದಾಟುವುದಕ್ಕೆ ಮಾತ್ರ, ಉಳಿಸಿಕೊಳ್ಳುವುದಕ್ಕಲ್ಲ ಎಂದು ತಿಳಿಯುತ್ತೀರೇನು?” ಎಂದು.
“ಹಾಗಲ್ಲವೇ ಭಂತೆ ?” 110
“ಭಿಕ್ಷುಗಳೇ, ನೀವುಗಳು ಇಂತಹ ಪರಿಶುದ್ಧವಾದ ಮತ್ತು ಈ ರೀತಿಯಾಗಿ ನಿರ್ಮಲವಾದ ದೃಷ್ಟಿಗೆ ಅಂಟಿಕೊಳ್ಳದಿದ್ದರೆ, ಅದನ್ನು ಕಾಪಾಡದಿದ್ದರೆ, ಅದರೊಂದಿಗೆ ಆನಂದಿಸದಿದ್ದರೆ, ಅದನ್ನು ನಿಮ್ಮದೆಂದೇ ಗಮನಿಸಿದಿದ್ದರೆ, ನಂತರ ಭಿಕ್ಷುಗಳೇ, ನೀವುಗಳು ತೆಪ್ಪದ ಉದಾಹರಣೆಯೊಂದಿಗೆ ತಿಳಿಸಿರುವ ಧರ್ಮವನ್ನು ಅರ್ಥ ಮಾಡಿಕೊಂಡು ಅದರಂತೆ ಅದು ಕೇವಲ ದಾಟುವುದಕ್ಕೆ ಮಾತ್ರ, ಉಳಿಸಿಕೊಳ್ಳುವುದಕ್ಕಲ್ಲ ಎಂದು ತಿಳಿಯುತ್ತೀರೇನು?” ಎಂದು.
“ಹೌದು ಭಂತೆ.”
7. ಭಿಕ್ಷುಗಳೇ, ಹುಟ್ಟಿಬಂದಿರುವ ಜೀವಿಗಳ ಉಳಿಯುವಿಕೆಗೆ ಅಥವಾ ಹುಟ್ಟಲು ಅವಕಾಶ ಕಾಯುತ್ತಿರುವ ಸತ್ವಗಳಿಗೆ ಈ ನಾಲ್ಕು ಬಗೆಯ ಆಹಾರಗಳು ಇವೆ. ಆ ನಾಲ್ಕು ಯಾವುವು? ವಸ್ತುರೂಪದ ಆಹಾರ (ತುತ್ತು ಮಾಡಿ ತಿನ್ನುವ), ಅದು ಸ್ಥೂಲರೂಪದ್ದಾಗಿದ್ದಿರಬಹುದು ಅಥವಾ ಸೂಕ್ಷ್ಮ ರೂಪದ್ದಾಗಿದ್ದಿರಬಹುದು, ಇಂದ್ರಿಯಗಳ ಸಂಬಂಧಿ ಸ್ಪರ್ಶ ಎರಡನೆಯದು, ಮಾನಸಿಕ ಸಂಕಲ್ಪ ಮೂರನೆಯದು, ವಿಞ್ಞಾನ ನಾಲ್ಕನೆಯದು.
ಭಿಕ್ಷುಗಳೇ, ಈ ನಾಲ್ಕು ಆಹಾರಗಳಿಗೆ ಯಾವುದು ಮೂಲ, ಯಾವುದು ಹುಟ್ಟು, ಯಾವುದು ಜನಕ, ಯಾವುದು ಜೀವಿಸುವಿಕೆ?
ಈ ನಾಲ್ಕು ಆಹಾರಗಳಿಗೆ ತೃಷ್ಣೆಯೇ ಮೂಲ. ತೃಷ್ಣೆಯೇ ಹುಟ್ಟು, ತೃಷ್ಣೆಯೇ ಜನಕ, ತೃಷ್ಣೆಯೇ ಜೀವಿಸುವಿಕೆ.
ಭಿಕ್ಷುಗಳೇ, ತೃಷ್ಣೆಗೆ ಯಾವುದು ಮೂಲ, ಯಾವುದು ಹುಟ್ಟು, ಯಾವುದು ಜನಕ, ಯಾವುದು ಜೀವಿಸುವಿಕೆ?
ತೃಷ್ಣೆಗೆ ಅನುಭವವೇ (ವೇದನೆಯೇ) ಮೂಲ. ಸಂವೇದನೆಯೇ ಹುಟ್ಟು, ಸಂವೇದನೆಯೇ ಜನಕ, ಸಂವೇದನೆಯೇ ಜೀವಿಸುವಿಕೆ.
ಭಿಕ್ಷುಗಳೇ, ಸಂವೇದನೆಗೆ ಯಾವುದು ಮೂಲ, ಯಾವುದು ಹುಟ್ಟು, ಯಾವುದು ಜನಕ, ಯಾವುದು ಜೀವಿಸುವಿಕೆ?
ಸಂವೇದನೆಗೆ (ಇಂದ್ರಿಯ) ಸ್ಪರ್ಶವೇ (ಸಂಪರ್ಕ) ಮೂಲ, (ಇಂದ್ರಿಯ) ಸ್ಪರ್ಶವೇ ಹುಟ್ಟು, (ಇಂದ್ರಿಯ) ಸ್ಪರ್ಶವೇ ಜನಕ, (ಇಂದ್ರಿಯ) ಸ್ಪರ್ಶವೇ ಜೀವಿಸುವಿಕೆ.
ಭಿಕ್ಷುಗಳೇ, (ಇಂದ್ರಿಯ) ಸ್ಪರ್ಶಕ್ಕೆ ಯಾವುದು ಮೂಲ, ಯಾವುದು ಹುಟ್ಟು, ಯಾವುದು ಜನಕ, ಯಾವುದು ಜೀವಿಸುವಿಕೆ?
(ಇಂದ್ರಿಯ) ಸ್ಪರ್ಶಕ್ಕೆ ಆರು (ಇಂದ್ರಿಯ) ಕ್ಷೇತ್ರಗಳೇ ಮೂಲ. ಆರು (ಇಂದ್ರಿಯ) ಕ್ಷೇತ್ರಗಳೇ ಹುಟ್ಟು, ಆರು (ಇಂದ್ರಿಯ) ಕ್ಷೇತ್ರಗಳೇ ಜನಕ. ಆರು (ಇಂದ್ರಿಯ) ಕ್ಷೇತ್ರಗಳೇ ಜೀವಿಸುವಿಕೆ.
ಭಿಕ್ಷುಗಳೇ, ಆರು (ಇಂದ್ರಿಯ) ಕ್ಷೇತ್ರಗಳಿಗೆ ಯಾವುದು ಮೂಲ?
ಯಾವುದು ಹುಟ್ಟು, ಯಾವುದು ಜನಕ, ಯಾವುದು ಜೀವಿಸುವಿಕೆ?
ಆರು (ಇಂದ್ರಿಯ) ಕ್ಷೇತ್ರಗಳಿಗೆ ನಾಮರೂಪ (ಮನಸ್ಸು-ಶರೀರವೇ) ಮೂಲ, ನಾಮರೂಪ (ಮನಸ್ಸು-ಶರೀರವೇ) ಹುಟ್ಟು, ನಾಮರೂಪ (ಮನಸ್ಸು-ಶರೀರವೇ) ಜೀವಿಸುವಿಕೆ.
ಭಿಕ್ಷುಗಳೇ ನಾಮರೂಪ (ಮನಸ್ಸು-ಶರೀರಕ್ಕೆ) ಯಾವುದು ಮೂಲ, ಯಾವುದು ಹುಟ್ಟು, ಯಾವುದು ಜನಕ, ಯಾವುದು ಜೀವಿಸುವಿಕೆ? ನಾಮರೂಪ (ಮನಸ್ಸು-ಶರೀರಕ್ಕೆ) ವಿಞ್ಞಾನವೇ ಮೂಲ, ವಿಞ್ಞಾನವೇ ಹುಟ್ಟು, ವಿಞ್ಞಾನವೇ ಜನಕ, ವಿಞ್ಞಾನವೇ ಜೀವಿಸುವಿಕೆ. ಭಿಕ್ಷುಗಳೇ, ವಿಞ್ಞಾನಕ್ಕೆ ಯಾವುದು ಮೂಲ, ಯಾವುದು ಹುಟ್ಟು, ಯಾವುದು ಜನಕ, ಯಾವುದು ಜೀವಿಸುವಿಕೆ? ವಿಞ್ಞಾನಕ್ಕೆ ಸಂಖಾರ (ಕರ್ಮ ನಿರ್ಮಾಣಗಳೇ) ಮೂಲ, ಸಂಖಾರ (ಕರ್ಮ ನಿರ್ಮಾಣಗಳೇ) ಹುಟ್ಟು, ಸಂಖಾರ (ಕರ್ಮ ನಿರ್ಮಾಣಗಳೇ) ಜನಕ, ಸಂಖಾರ (ಕರ್ಮ ನಿರ್ಮಾಣಗಳೇ) ಜೀವಿಸುವಿಕೆ. ಭಿಕ್ಷುಗಳೇ ಸಂಖಾರ (ಕರ್ಮ ನಿರ್ಮಾಣ) ಗಳಿಗೆ ಯಾವುದು ಹುಟ್ಟು, ಯಾವುದು ಜನಕ, ಯಾವುದು ಜೀವಿಸುವಿಕೆ? ಸಂಖಾರ (ಕರ್ಮ ನಿರ್ಮಾಣ) ಗಳಿಗೆ ಅಜ್ಞಾನವೇ ಮೂಲ, ಸಂಖಾರ (ಕರ್ಮ ನಿರ್ಮಾಣ) ಗಳಿಗೆ ಅಜ್ಞಾನವೇ ಹುಟ್ಟು, ಸಂಖಾರ (ಕರ್ಮ ನಿರ್ಮಾಣ) ಗಳಿಗೆ ಅಜ್ಞಾನವೇ ಜನಕ, ಸಂಖಾರ (ಕರ್ಮ ನಿರ್ಮಾಣ) ಗಳಿಗೆ ಅಜ್ಞಾನವೇ ಜೀವಿಸುವಿಕೆ. ಭಿಕ್ಷುಗಳೇ, ಈ ರೀತಿಯಾಗಿ ಅಜ್ಞಾನವನ್ನು ಅವಲಂಬಿಸಿ ಸಂಖಾರಗಳನ್ನು (ಕರ್ಮ ನಿರ್ಮಾಣ) ಅವಲಂಬಿಸಿ, ವಿಞ್ಞಾನ, ವಿಞ್ಞಾನವನ್ನು ಅವಲಂಬಿಸಿ ನಾಮರೂಪ, ನಾಮರೂಪವನ್ನು ಅವಲಂಬಿಸಿ ಆರು (ಇಂದ್ರಿಯ) ಕ್ಷೇತ್ರಗಳು, ಆರು (ಇಂದ್ರಿಯ) ಕ್ಷೇತ್ರಗಳನ್ನು ಅವಲಂಬಿಸಿ (ಇಂದ್ರಿಯ) ಸ್ಪರ್ಶ, (ಇಂದ್ರಿಯ) ಸ್ಪರ್ಶವನ್ನು ಅವಲಂಬಿಸಿ ಸಂವೇದನೆ, ಸಂವೇದನೆಯನ್ನು ಅವಲಂಬಿಸಿ ತೃಷ್ಣೆ, ತೃಷ್ಣೆಯನ್ನು ಅವಲಂಬಿಸಿ ಉಪಾದಾನ (ಅಂಟುವಿಕೆ). ಉಪಾದಾನವನ್ನು ಅವಲಂಬಿಸಿ ಅಸ್ತಿತ್ವ, ಅಸ್ತಿತ್ವವನ್ನು ಅವಲಂಬಿಸಿ ಹುಟ್ಟು, ಹುಟ್ಟನ್ನು ಅವಲಂಬಿಸಿ ಮುಪ್ಪು, ಮರಣ, ಶೋಕ, ಗೋಳು, ಶಾರೀರಿಕ ನೋವು, ಮಾನಸಿಕ ನೋವು, ಹತಾಶೆಗಳು ಹುಟ್ಟುತ್ತವೆ. ಈ ರೀತಿಯಾಗಿ ಇಡೀ ದುಃಖರಾಶಿಯ ಹುಟ್ಟು ಆಗುತ್ತದೆ.
8. “ಹುಟ್ಟನ್ನು ಅವಲಂಬಿಸಿಯೇ ಮುಪ್ಪು ಮರಣ ಇದೆ ಎಂಬುದಾಗಿ ಹೇಳಿದೆ. ಭಿಕ್ಷುಗಳೇ, ಹುಟ್ಟನ್ನು ಅವಲಂಬಿಸಿಯೇ ಮುಪ್ಪು ಮರಣಗಳೇ ಅಥವಾ ಅಲ್ಲವೇ ಅಥವಾ ಇದು ಕಾಣಬರುವ ಬಗೆ ಹೇಗೆ? ಎಂದು. “ಭಂತೆ, ಹುಟ್ಟುನ್ನು ಅವಲಂಬಿಸಿಯೇ ಮುಪ್ಪು, ಮರಣ. ಇದು ಹೀಗೆಯೇ ಕಾಣಬರುತ್ತದೆ. ಹುಟ್ಟನ್ನು ಅವಲಂಬಿಸಿಯೇ ಮುಪ್ಪು, ಮರಣ” ಎಂದು. “ಅಸ್ತಿತ್ವವನ್ನು ಅವಲಂಬಿಸಿಯೇ ಹುಟ್ಟು ಇದೆ ಎಂಬುದಾಗಿ ಹೇಳಲಾಗಿದೆ; ಭಿಕ್ಷುಗಳೇ, ಅಸ್ತಿತ್ವವನ್ನು ಅವಲಂಬಿಸಿಯೇ ಹುಟ್ಟು ಅಥವಾ ಅಲ್ಲವೇ ಅಥವಾ ಇದು ಕಾಣಬರುವ ಬಗೆ ಹೇಗೆ?” ಎಂದು. “ಭಂತೆ, ಅಸ್ತಿತ್ವವನ್ನು ಅವಲಂಬಿಸಿಯೇ ಹುಟ್ಟು; ಇದು ಹೀಗೆಯೇ ಕಾಣಬರುತ್ತದೆ. ಅಸ್ತಿತ್ವವನ್ನು ಅವಲಂಬಿಸಿಯೇ ಹುಟ್ಟು” ಎಂದು. “ಉಪಾದಾನವನ್ನು ಅವಲಂಬಿಸಿಯೇ ಅಸ್ತಿತ್ವ ಇದೆ ಎಂಬುದಾಗಿ ಹೇಳಲ್ಪಟ್ಟಿದೆ; ಭಿಕ್ಷುಗಳೇ, ಉಪಾದಾನವನ್ನು ಅವಲಂಬಿಸಿಯೇ ಅಸ್ತಿತ್ವವೇ ಅಥವಾ ಅಲ್ಲವೇ ಅಥವಾ ಇದು ಕಾಣಬರುವ ಬಗೆ ಹೇಗೆ?” ಎಂದು. “ಭಂತೆ, ಉಪಾದಾನ ಅವಲಂಬಿಸಿಯೇ ಅಸ್ತಿತ್ವ; ಇದು ಹೀಗೆಯೇ ಕಾಣಬರುತ್ತದೆ. ಉಪಾದಾನವನ್ನು ಅವಲಂಬಿಸಿಯೇ ಅಸ್ತಿತ್ವ” ಎಂದು. “ತೃಷ್ಣೆಯನ್ನು ಅವಲಂಬಿಸಿಯೇ ಉಪಾದಾನ ಇದೆ ಎಂಬುದಾಗಿ ಹೇಳಲಾಗಿದೆ; ಭಿಕ್ಷುಗಳೇ, ತೃಷ್ಣೆಯನ್ನು ಅವಲಂಬಿಸಿ ಉಪಾದಾನ ಅಥವಾ ಅಲ್ಲವೆ, ಅಥವಾ ಇದು ಕಾಣಬರುವ ಬಗೆ ಹೇಗೆ?” ಎಂದು. “ಭಂತೆ, ತೃಷ್ಣೆಯನ್ನು ಅವಲಂಬಿಸಿಯೇ ಉಪಾದಾನ; ಇದು ಹೀಗೆಯೇ ಕಾಣಬರುತ್ತದೆ- ತೃಷ್ಣೆಯನ್ನು ಅವಲಂಬಿಸಿಯೇ ಉಪಾದಾನ” ಎಂದು. “ಸಂವೇದನೆಯನ್ನು ಅವಲಂಬಿಸಿಯೇ ತೃಷ್ಣೆ ಇದೆ ಎಂಬುದಾಗಿ ಹೇಳಲಾಗಿದೆ; ಭಿಕ್ಷುಗಳೇ, (ಸಂ)ವೇದನೆಯನ್ನು ಅವಲಂಬಿಸಿಯೇ ತೃಷ್ಣೆಯೇ ಅಥವಾ ಅಲ್ಲವೆ, ಅಥವಾ ಇದು ಕಾಣಬರುವ ಬಗೆ ಹೇಗೆ?” ಎಂದು. “ಭಂತೆ, (ಸಂ)ವೇದನೆಯನ್ನು ಅವಲಂಬಿಸಿಯೇ ತೃಷ್ಣೆ; ಇದು ಹೀಗೆಯೇ ಕಾಣಬರುತ್ತದೆ. ಸಂವೇದನೆ ಅವಲಂಬಿಸಿಯೇ ತೃಷ್ಣೆ” ಎಂದು. “(ಇಂದ್ರಿಯ) ಸ್ಪರ್ಶವನ್ನು ಅವಲಂಬಿಸಿಯೇ (ಸಂ)ವೇದನೆ ಇದೆ ಎಂಬುದಾಗಿ ಹೇಳಲಾಗಿದೆ; ಭಿಕ್ಷುಗಳೇ, (ಇಂದ್ರಿಯ) ಸ್ಪರ್ಶವನ್ನು ಅವಲಂಬಿಸಿಯೇ ವೇದನೆಯೇ ಅಥವಾ ಅಲ್ಲವೆ, ಅಥವಾ ಇದು ಕಾಣಬರುವ ಬಗೆ ಹೇಗೆ?” ಎಂದು. “ಭಂತೆ, (ಇಂದ್ರಿಯ) ಸ್ಪರ್ಶವನ್ನು ಅವಲಂಬಿಸಿಯೇ ವೇದನಾ; ಇದು ಹೀಗೆಯೇ ಕಾಣಬರುತ್ತದೆ- (ಇಂದ್ರಿಯ) ಸ್ಪರ್ಶವನ್ನು ಅವಲಂಬಿಸಿಯೇ ವೇದನೆ” ಎಂದು. “ಆರು (ಇಂದ್ರಿಯ) ಕ್ಷೇತ್ರಗಳನ್ನು ಅವಲಂಬಿಸಿಯೇ (ಇಂದ್ರಿಯ) ಸ್ಪರ್ಶ ಎಂಬುದಾಗಿ ಹೇಳಲಗಿದೆ; ಭಿಕ್ಷುಗಳೇ, ಆರು (ಇಂದ್ರಿಯ) ಕ್ಷೇತ್ರಗಳನ್ನು ಅವಲಂಬಿಸಿಯೇ (ಇಂದ್ರಿಯ) ಸ್ಪರ್ಶವೇ ಅಥವಾ ಅಲ್ಲವೆ, ಅಥವಾ ಇದು ಕಾಣಬರುವ ಬಗೆ ಹೇಗೆ?” ಎಂದು. “ಭಂತೆ, ಆರು (ಇಂದ್ರಿಯ) ಕ್ಷೇತ್ರಗಳನ್ನು ಅವಲಂಬಿಸಿಯೇ (ಇಂದ್ರಿಯ) ಸ್ಪರ್ಶ; ಇದು ಹೀಗೆಯೇ ಕಾಣಬರುತ್ತದೆ- ಆರು (ಇಂದ್ರಿಯ) ಕ್ಷೇತ್ರಗಳನ್ನು ಅವಲಂಬಿಸಿಯೇ (ಇಂದ್ರಿಯ) ಸ್ಪರ್ಶ” ಎಂದು. “ನಾಮರೂಪವನ್ನು ಅವಲಂಬಿಸಿಯೇ ಆರು (ಇಂದ್ರಿಯ) ಕ್ಷೇತ್ರಗಳು ಇವೆ ಎಂಬುದಾಗಿ ಹೇಳಲ್ಪಟ್ಟಿದೆ; ನಾಮರೂಪವನ್ನು ಅವಲಂಬಿಸಿಯೇ ಆರು (ಇಂದ್ರಿಯ) ಕ್ಷೇತ್ರಗಳೇ ಅಥವಾ ಅಲ್ಲವೇ, ಅಥವಾ ಇದು ಕಾಣಬರುವ ಬಗೆ ಹೇಗೆ?” ಎಂದು. “ಭಂತೆ, ನಾಮರೂಪ ಅವಲಂಬಿಸಿಯೇ ಆರು (ಇಂದ್ರಿಯ) ಕ್ಷೇತ್ರಗಳು; ಇದು ಹೀಗೆಯೇ ಕಾಣಬರುತ್ತದೆ- ನಾಮರೂಪವನ್ನು ಅವಲಂಬಿಸಿಯೇ ಆರು (ಇಂದ್ರಿಯ) ಕ್ಷೇತ್ರಗಳು” ಎಂದು. “ವಿಞ್ಞಾನವನ್ನು ಅವಲಂಬಿಸಿಯೇ ನಾಮರೂಪ ಇದೆ ಎಂಬುದಾಗಿ ಹೇಳಲಾಗಿದೆ; ವಿಞ್ಞಾನವನ್ನು ಅವಲಂಬಿಸಿಯೇ ನಾಮರೂಪ ಅಥವಾ ಅಲ್ಲವೆ, ಅಥವಾ ಅದು ಕಾಣಬರುವ ಬಗೆ ಹೇಗೆ?” ಎಂದು. “ಭಂತೆ, ವಿಞ್ಞಾನವನ್ನು ಅವಲಂಬಿಸಿಯೇ ನಾಮರೂಪ, ಇದು ಹೀಗೆಯೇ ಕಾಣಬರುತ್ತದೆ- ವಿಞ್ಞಾನವನ್ನು ಅವಲಂಬಿಸಿಯೇ ನಾಮರೂಪ” ಎಂದು. “ಸಂಖಾರಗಳನ್ನು ಅವಲಂಬಿಸಿಯೇ ವಿಞ್ಞಾನ ಇದೆ ಎಂಬುದಾಗಿ ಹೇಳಲಾಗಿದೆ; ಭಿಕ್ಷುಗಳೇ, ಸಂಖಾರಗಳನ್ನು ಅವಲಂಬಿಸಿಯೇ ವಿಞ್ಞಾನವೇ? ಅಥವಾ ಅಲ್ಲವೆ, ಅಥವಾ ಇದು ಕಾಣಬರುವ ಬಗೆ ಹೇಗೆ?” ಎಂದು. “ಭಂತೆ, ಸಂಖಾರಗಳನ್ನು ಅವಲಂಬಿಸಿಯೇ ವಿಞ್ಞಾನ; ಇದು ಹೀಗೆಯೇ ಕಾಣಬರುತ್ತದೆ. ಸಂಖಾರಗಳನ್ನು ಅವಲಂಬಿಸಿಯೇ ವಿಞ್ಞಾನ ಎಂದು. “ಅಜ್ಞಾನವನ್ನು ಅವಲಂಬಿಸಿಯೇ ಸಂಖಾರಗಳು ಇವೆ ಎಂಬುದಾಗಿ ಹೇಳಲಾಗಿದೆ; ಭಿಕ್ಷುಗಳೇ, ಅಜ್ಞಾನವನ್ನು ಅವಲಂಬಿಸಿಯೇ ಸಂಖಾರಗಳೇ, ಅಥವಾ ಅಲ್ಲವೆ, ಅಥವಾ ಇದು ಕಾಣಬರುವ ಬಗೆ ಹೇಗೆ?” ಎಂದು. “ಭಂತೆ, ಅಜ್ಞಾನವನ್ನು ಅವಲಂಬಿಸಿಯೇ ಸಂಖಾರ; ಇದು ಹೀಗೆಯೇ ಕಾಣಬರುತ್ತದೆ- ಅಜ್ಞಾನವನ್ನು ಅವಲಂಬಿಸಿಯೇ ಸಂಖಾರಗಳು” ಎಂದು.
9. “ಭಿಕ್ಷುಗಳೇ, ಒಳ್ಳೆಯದು. ಭಿಕ್ಷುಗಳೇ, ಈ ರೀತಿಯಾಗಿ ನೀವುಗಳು ಕೂಡ ಹೇಳುತ್ತೀರಿ, ನಾನು ಕೂಡ ಈ ರೀತಿಯಾಗಿಯೇ ಹೇಳುತ್ತೇನೆ- ‘ಇದು ಇದ್ದರೆ ಅದು ಉಂಟಾಗುತ್ತದೆ, ಇದರ ಹುಟ್ಟುವಿಕೆಯಿಂದ ಅದು ಹುಟ್ಟುತ್ತದೆ.112 ಅದೆಂದರೆ: ಅಜ್ಞಾನವನ್ನು ಅವಲಂಬಿಸಿ ಸಂಖಾರಗಳು, ಸಂಖಾರಗಳನ್ನು ಅವಲಂಬಿಸಿ ವಿಞ್ಞಾನ, ವಿಞ್ಞಾನವನ್ನು ಅವಲಂಬಿಸಿ ನಾಮರೂಪ, ನಾಮರೂಪವನ್ನು ಅವಲಂಬಿಸಿ ಆರು (ಇಂದ್ರಿಯ) ಕ್ಷೇತ್ರಗಳು, ಆರು (ಇಂದ್ರಿಯ) ಕ್ಷೇತ್ರಗಳನ್ನು ಅವಲಂಬಿಸಿ (ಇಂದ್ರಿಯ) ಕ್ಷೇತ್ರಗಳು, ಆರು (ಇಂದ್ರಿಯ) ಸ್ಪರ್ಶವನ್ನು ಅವಲಂಬಿಸಿ ವೇದನಾ, ವೇದನಾವನ್ನು ಅವಲಂಬಿಸಿ ತೃಷ್ಣೆ, ತೃಷ್ಣೆಯನ್ನು ಅವಲಂಬಿಸಿ ಉಪಾದಾನ, ಉಪಾದಾನವನ್ನು ಅವಲಂಬಿಸಿ ಅಸ್ತಿತ್ವ, ಅಸ್ತಿತ್ವವನ್ನು ಅವಲಂಬಿಸಿ ಹುಟ್ಟು, ಹುಟ್ಟನ್ನು ಅವಲಂಬಿಸಿ ಮುಪ್ಪು, ಮರಣ, ಶೋಕ, ಕ್ರಂದನ, ಶಾರೀರಿಕ ನೋವು, ಮಾನಸಿಕ ನೋವು, ಹತಾಶೆಗಳು ಹುಟ್ಟುತ್ತವೆ’. ಈ ರೀತಿಯಾಗಿ ಇಡೀ ದುಃಖರಾಶಿಯ ಹುಟ್ಟುವಿಕೆ ಆಗುತ್ತದೆ.
“ಸಂಪೂರ್ಣವಾಗಿ ಅಜ್ಞಾನವನ್ನು ಶೇಷವಿಲ್ಲದಂತೆ ಅಳಿಸಿಹಾಕಿ, ಇಲ್ಲವಾಗಿಸುವುದರಿಂದ ಸಂಖಾರಗಳು ಇಲ್ಲವಾಗುತ್ತವೆ, ಸಂಖಾರಗಳನ್ನು ಇಲ್ಲವಾಗಿಸುವುದರಿಂದ ವಿಞ್ಞಾನ ಇಲ್ಲವಾಗುತ್ತದೆ, ವಿಞ್ಞಾನವನ್ನು ಇಲ್ಲವಾಗಿಸುವುದರಿಮದ ನಾಮರೂಪ ಇಲ್ಲವಾಗುತ್ತದೆ, ನಾಮರೂಪ ಇಲ್ಲವಾಗಿಸುವುದರಿಂದ ಆರು (ಇಂದ್ರಿಯ) ಕ್ಷೇತ್ರಗಳು ಇಲ್ಲವಾಗುತ್ತವೆ. ಆರು (ಇಂದ್ರಿಯ) ಕ್ಷೇತ್ರಗಳನ್ನು ಇಲ್ಲವಾಗಿಸುವುದರಿಂದ (ಇಂದ್ರಿಯ) ಸ್ಪರ್ಶವು ಇಲ್ಲವಾಗುತ್ತದೆ, (ಇಂದ್ರಿಯ) ಸ್ಪರ್ಶವನ್ನು ಇಲ್ಲವಾಗಿಸುವುದರಿಂದ ತೃಷ್ಣೆಯು ಇಲ್ಲವಾಗುತ್ತದೆ, ತೃಷ್ಣೆಯನ್ನು ಇಲ್ಲವಾಗಿಸಿರುವುದರಿಂದ ಉಪಾದಾನ ಇಲ್ಲವಾಗುತ್ತದೆ, ಉಪಾದಾನವನ್ನು ಇಲ್ಲವಾಗಿಸುವುದರಿಂದ ಅಸ್ತಿತ್ವ ಇಲ್ಲವಾಗುತ್ತದೆ, ಅಸ್ತಿತ್ವವನ್ನು ಇಲ್ಲವಾಗಿಸುವುದರಿಂದ ಹುಟ್ಟು ಇಲ್ಲವಾಗುತ್ತದೆ, ಹುಟ್ಟನ್ನು ಇಲ್ಲವಾಗಿಸುವುದರಿಂದ ಮುಪ್ಪು, ಮರಣ, ಶೋಕ, ಕ್ರಂದನ, ಶಾರೀರಿಕ ನೋವು, ಮಾನಸಿಕ ನೋವು, ಹತಾಶೆಗಳು ಇಲ್ಲವಾಗುತ್ತವೆ. ಈ ರೀತಿಯಾಗಿ ಇಡೀ ದುಃಖ ರಾಶಿ ಇಲ್ಲವಾಗುತ್ತದೆ.
10. “ಹುಟ್ಟನ್ನು ಇಲ್ಲವಾಗಿಸುವುದರಿಂದ ಮರಣಗಳು ಇಲ್ಲವಾಗುತ್ತವೆ ಎಂದು ಹೇಳಲಾಗಿದೆ; ಹುಟ್ಟನ್ನು ಇಲ್ಲವಾಗಿಸುವುದರಿಂದ ಮುಪ್ಪು ಮರಣಗಳು ಇಲ್ಲವಾಗುತ್ತವೆಯೇ ಅಥವಾ ಅಲ್ಲವೆ, ಅಥವಾ ಇದು ಕಾಣಬರುವ ಬಗೆ ಹೇಗೆ?” ಎಂದು. “ಭಂತೇ, ಹುಟ್ಟನ್ನು ಇಲ್ಲವಾಗಿಸುವುದರಿಂದ ಮುಪ್ಪು ಮರಣಗಳು ಇಲ್ಲವಾಗುತ್ತವೆ; ಇದು ಹೀಗೆಯೇ ಕಾಣಬರುತ್ತದೆ- ಹುಟ್ಟನ್ನು ಇಲ್ಲವಾಗಿಸುವುದರಿಂದ ಮುಪ್ಪು ಮರಣಗು ಇಲ್ಲವಾಗುತ್ತವೆ” ಎಂದು. “ಅಸ್ಥಿತ್ವವನ್ನು ಇಲ್ಲವಾಗಿಸುವುದರಿಂದ ಹುಟ್ಟು ಇಲ್ಲವಾಗುತ್ತದೆ ಎಂದು ಹೇಳಲಾಗಿದೆ; ಭಿಕ್ಷುಗಳೇ, ಅಸ್ತಿತ್ವವನ್ನು ಇಲ್ಲವಾಗಿಸುವುದರಿಂದ ಹುಟ್ಟು ಇಲ್ಲವಾಗುತ್ತದೆಯೇ ಅಥವಾ ಅಲ್ಲವೆ, ಅಥವಾ ಇದು ಕಾಣಬರುವ ಬಗೆ ಹೇಗೆ?” ಎಂದು. “ಭಂತೆ, ಅಸ್ತಿತ್ವವವನ್ನು ಇಲ್ಲವಾಗಿಸುವುದರಿಂದ ಹುಟ್ಟು ಇಲ್ಲವಾಗುತ್ತದೆ; ಇದು ಹೀಗೆಯೇ ಕಾಣಬರುತ್ತದೆ- ಅಸ್ತಿತ್ವವನ್ನು ಇಲ್ಲವಾಗಿಸುವುದರಿಂದ ಹುಟ್ಟು ಇಲ್ಲವಾಗುತ್ತದೆ” ಎಂದು. “ಉಪಾದಾನವನ್ನು ಇಲ್ಲವಾಗಿಸುವುದರಿಂದ ಅಸ್ತಿತ್ವ ಇಲ್ಲವಾಗುತ್ತದೆ ಎಂದು ಹೇಳಲಾಗಿದೆ; ಭಿಕ್ಷುಗಳೇ, ಅಂಟುವಿಕೆಯನ್ನು ಇಲ್ಲವಾಗಿಸುವುದರಿಂದ ಅಸ್ತಿತ್ವ ಇಲ್ಲವಾಗುತ್ತದೆಯೇ ಅಥವಾ ಅಲ್ಲವೇ, ಅಥವಾ ಇದು ಕಾಣಬರುವ ಬಗೆ ಹೇಗೆ?” ಎಂದು. “ಭಂತೆ, ಉಪಾದಾನವನ್ನು ಇಲ್ಲವಾಗಿಸುವುದರಿಂದ ಅಸ್ತಿತ್ವ ಇಲ್ಲವಾಗುತ್ತದೆ; ಇದು ಹೀಗೆಯೇ ಕಾಣಬರುತ್ತದೆ ಉಪಾದಾನವನ್ನು ಇಲ್ಲವಾಗಿಸುವುದರಿಂದ ಅಸ್ತಿತ್ವ ಇಲ್ಲವಾಗುತ್ತದೆ” ಎಂದು. “ತೃಷ್ಣೆಯನ್ನು ಇಲ್ಲವಾಗಿಸುವುದರಿಂದ ಉಪಾದಾನ ಇಲ್ಲವಾಗುತ್ತದೆ ಎಂದು ಹೇಳಲಾಗಿದೆ, ಭಿಕ್ಷುಗಳೇ, ತೃಷ್ಣೆಯನ್ನು ಇಲ್ಲವಾಗಿಸುವುದರಿಂದ ಉಪಾದಾನ ಇಲ್ಲವಾಗುತ್ತದೆಯೇ ಅಥವಾ ಅಲ್ಲವೆ, ಅಥವಾ ಇದು ಕಾಣಬರುವ ಬಗೆ ಹೇಗೆ?” ಎಂದು. “ಭಂತೆ, ತೃಷ್ಣೆಯನ್ನು ಇಲ್ಲವಾಗಿಸುವುದರಿಂದ ಉಪಾದಾನ ಇಲ್ಲವಾಗುತ್ತದೆ; ಇದು ಹೀಗೆಯೇ ಕಾಣಬರುತ್ತದೆ- ತೃಷ್ಣೆಯನ್ನು ಇಲ್ಲವಾಗಿಸುವುದರಿಂದ ಉಪಾದಾನ ಇಲ್ಲವಾಗುತ್ತದೆ” ಎಂದು. “ವೇದನೆಗಳು ಇಲ್ಲವಾಗಿಸುವುದರಿಂದ ತೃಷ್ಣೆಯು ಇಲ್ಲವಾಗುತ್ತದೆ ಎಂದು ಹೇಳಲಾಗಿದೆ; ಭಿಕ್ಷುಗಳೇ, ವೇದನೆಯನ್ನು ಇಲ್ಲವಾಗಿಸುವುದರಿಂದ ತೃಷ್ಣೆಯು ಇಲ್ಲವಾಗುತ್ತದೆಯೇ ಅಥವಾ ಅಲ್ಲವೆ, ಅಥವಾ ಇದು ಕಾಣಬರುವ ಬಗೆ ಹೇಗೆ?” ಎಂದು. “ಭಂತೆ, ವೇದನಾವನ್ನು ಇಲ್ಲವಾಗಿಸುವುದರಿಮದ ತೃಷ್ಣೆಯು ಇಲ್ಲವಾಗುತ್ತದೆ; ಇದು ಹೀಗೆಯೇ ಕಾಣಬರುತ್ತದೆ- ಇಲ್ಲಿ ವೇದನಾವನ್ನು ಇಲ್ಲವಾಗಿಸುವುದರಿಂದ ತೃಷ್ಣೆಯು ಇಲ್ಲವಾಗುತ್ತದೆ” ಎಂದು. “(ಇಂದ್ರಿಯ) ಸ್ಪರ್ಶವನ್ನು ಇಲ್ಲವಾಗಿಸುವುದರಿಂದ ವೇದನಾ ಇಲ್ಲವಾಗುತ್ತದೆ- ಎಂದು ಹೇಳಲ್ಪಟ್ಟಿದೆ; ಭಿಕ್ಷುಗಳೇ, (ಇಂದ್ರಿಯ) ಸ್ಪರ್ಶವನ್ನು ಇಲ್ಲವಾಗಿಸುವುದರಿಂದ ಇಲ್ಲವಾಗುತ್ತದೆಯೇ ಅಥವಾ ಅಲ್ಲವೆ, ಅಥವಾ ಇದು ಕಾಣಬರುವ ಬಗೆ ಹೇಗೆ?” ಎಂದು. “ಭಂತೆ, (ಇಂದ್ರಿಯ) ಸ್ಪರ್ಶವನ್ನು ಇಲ್ಲವಾಗಿಸುವುದರಿಂದ ವೇದನಾ ಇಲ್ಲವಾಗುತ್ತದೆ; ಇದು ಹೀಗೆಯೇ ಕಾಣಬರುತ್ತದೆ- (ಇಂದ್ರಿಯ) ಸ್ಪರ್ಶವನ್ನು ಇಲ್ಲವಾಗಿಸುವುದರಿಂದ ವೇದನೆ ಇಲ್ಲವಾಗುತ್ತದೆ” ಎಂದು. “ಆರು (ಇಂದ್ರಿಯ) ಕ್ಷೇತ್ರಗಳನ್ನು ಇಲ್ಲವಾಗಿಸುವುದರಿಂದ (ಇಂದ್ರಿಯ) ಸ್ಪರ್ಶ ಇಲ್ಲವಾಗುತ್ತದೆ ಎಂದು ಹೇಳಲಾಗಿದೆ; ಭಿಕ್ಷುಗಳೇ, ಆರು (ಇಂದ್ರಿಯ) ಕ್ಷೇತ್ರಗಳನ್ನು ಇಲ್ಲವಾಗಿಸುವುದರಿಂದ (ಇಂದ್ರಿಯ) ಸ್ಪರ್ಶ ಇಲ್ಲವಾಗುತ್ತದೆಯೇ ಅಥವಾ ಅಲ್ಲವೆ, ಅಥವಾ ಇದು ಕಾಣಬರುವ ಬಗೆ ಹೇಗೆ?” ಎಂದು. “ಭಂತೆ, ಆರು (ಇಂದ್ರಿಯ) ಕ್ಷೇತ್ರಗಳನ್ನು ಇಲ್ಲವಾಗಿಸುವುದರಿಂದ (ಇಂದ್ರಿಯ) ಸ್ಪರ್ಶ ಇಲ್ಲವಾಗುತ್ತದೆ; ಇದು ಹೀಗೆಯೇ ಕಾಣಬರುತ್ತದೆ- ಆರು (ಇಂದ್ರಿಯ) ಕ್ಷೇತ್ರಗಳನ್ನು ಇಲ್ಲವಾಗಿಸುವುದರಿಂದ (ಇಂದ್ರಿಯ) ಸ್ಪರ್ಶ ಇಲ್ಲವಾಗುತ್ತದೆ” ಎಂದು. “ನಾಮರೂಪ (ಮನಸ್ಸು-ಶರೀರ) ಇಲ್ಲವಾಗಿಸುವುದರಿಂದ ಆರು (ಇಂದ್ರಿಯ) ಕ್ಷೇತ್ರಗಳು ಇಲ್ಲವಾಗುತ್ತವೆ ಎಂದು ಹೇಳಲಾಗಿದೆ; ಭಿಕ್ಷುಗಳೇ, ನಾಮರೂಪ ಇಲ್ಲವಾಗಿಸುವುದರಿಂದ ಆರು (ಇಂದ್ರಿಯ) ಕ್ಷೇತ್ರಗಳು ಇಲ್ಲವಾಗುತ್ತವೆಯೇ ಅಥವಾ ಅಲ್ಲವೆ, ಅಥವಾ ಇದು ಕಾಣಬರುವ ಬಗೆ ಹೇಗೆ?” ಎಂದು. “ಭಂತೆ, ನಾಮರೂಪವನ್ನು ಇಲ್ಲವಾಗಿಸುವುದರಿಂದ ಆರು (ಇಂದ್ರಿಯ) ಕ್ಷೇತ್ರಗಳು ಇಲ್ಲವಾಗುತ್ತವೆ; ಇದು ಹೀಗೆಯೇ ಕಾಣಬರುತ್ತದೆ. ನಾಮರೂಪ ಇಲ್ಲವಾಗಿಸುವುದರಿಂದ ಆರು (ಇಂದ್ರಿಯ) ಕ್ಷೇತ್ರಗಳು ಇಲ್ಲವಾಗುತ್ತವೆ” ಎಂದು. “ವಿಞ್ಞಾನವನ್ನು ಇಲ್ಲವಾಗಿಸುವುದರಿಂದ ನಾಮರೂಪ ಇಲ್ಲವಾಗುತ್ತದೆ ಎಂದು ಹೇಳಲಾಗಿದೆ; ಭಿಕ್ಷುಗಳೇ, ವಿಞ್ಞಾನವನ್ನು ಇಲ್ಲವಾಗಿಸುವುದರಿಂದ ನಾಮರೂಪ ಇಲ್ಲವಾಗುತ್ತದೆಯೇ ಅಥವಾ ಅಲ್ಲವೆ, ಅಥವಾ ಇದು ಕಾಣಬರುವ ಬಗೆ ಹೇಗೆ?” ಎಂದು. “ಭಂತೆ, ವಿಞ್ಞಾನವನ್ನು ಇಲ್ಲವಾಗಿಸುವುದರಿಂದ ನಾಮರೂಪ ಇಲ್ಲವಾಗುತ್ತದೆ; ಇದು ಹೀಗೆಯೇ ಕಾಣಬರುತ್ತದೆ. ವಿಞ್ಞಾನವನ್ನು ಇಲ್ಲವಾಗಿಸುವುದರಿಂದ ನಾಮರೂಪ ಇಲ್ಲವಾಗುತ್ತದೆ” ಎಂದು. “ಸಂಖಾರಗಳನ್ನು ಇಲ್ಲವಾಗಿಸುವುದರಿಂದ ವಿಞ್ಞಾನ ಇಲ್ಲವಾಗುತ್ತದೆ ಎಂದು ಹೇಳಲಾಗಿದೆ; ಸಂಖಾರಗಳನ್ನು ಇಲ್ಲವಾಗಿಸುವುದರಿಂದ ವಿಞ್ಞಾನ ಇಲ್ಲವಾಗುತ್ತದೆಯೇ ಅಥವಾ ಅಲ್ಲವೆ, ಅಥವಾ ಇದು ಕಾಣಬರುವ ಬಗೆ ಹೇಗೆ?” ಎಂದು. “ಭಂತೆ, ಸಂಖಾರಗಳನ್ನು ಇಲ್ಲವಾಗಿಸುವುದರಿಂದ ವಿಞ್ಞಾನ ಇಲ್ಲವಾಗುತ್ತದೆ; ಇದು ಹೀಗೆಯೇ ಕಾಣಬರುತ್ತದೆ ಸಂಖಾರ ನಿರ್ಮಾಣಗಳನ್ನು ಇಲ್ಲವಾಗಿಸುವುದರಿಂದ ವಿಞ್ಞಾನ ಇಲ್ಲವಾಗುತ್ತದೆ” ಎಂದು. “ಅಜ್ಞಾನವನ್ನು ಇಲ್ಲವಾಗಿಸುವುದರಿಂದ ಸಂಖಾರ ಇಲ್ಲವಾಗುತ್ತವೆ ಎಂದು ಹೇಳಲ್ಪಟ್ಟಿದೆ; ಭಿಕ್ಷುಗಳೇ, ಅಜ್ಞಾನವನ್ನು ಇಲ್ಲವಾಗಿಸುವುದರಿಂದ ಸಂಖಾರ ಇಲ್ಲವಾಗುತ್ತವೆಯೇ ಅಥವಾ ಅಲ್ಲವೆ, ಅಥವಾ ಇದು ಕಾಣಬರುವ ಬಗೆ ಹೇಗೆ?” ಎಂದು. “ಭಂತೆ, ಅಜ್ಞಾನವನ್ನು ಇಲ್ಲವಾಗಿಸುವುದರಿಂದ ಸಂಖಾರಗಳು ಇಲ್ಲವಾಗುತ್ತವೆ; ಇದು ಹೀಗೆಯೇ ಕಾಣಬರುತ್ತದೆ- ಅಜ್ಞಾನವನ್ನು ಇಲ್ಲವಾಗಿಸುವುದರಿಂದ ಸಂಖಾರಗಳು ಇಲ್ಲವಾಗುತ್ತವೆ” ಎಂದು.
11. “ಭಿಕ್ಷುಗಳೇ, ಒಳ್ಳೆಯದು. ಭಿಕ್ಷುಗಳೇ, ಈ ರೀತಿಯಾಗಿ ನೀವುಗಳು ಕೂಡ ಹೇಳುತ್ತೀರಿ, ನಾನು ಕೂಡ ಈ ರೀತಿಯಾಗಿಯೇ ಹೇಳುತ್ತೇನೆ- ‘ಇದು ಇಲ್ಲದಿದ್ದರೆ ಅದು ಉಂಟಾಗುವುದಿಲ್ಲ. ಇದರ ಇಲ್ಲವಾಗುವಿಕೆಯಿಂದ ಅದು ಇಲ್ಲವಾಗುತ್ತದೆ’. ಅದೆಂದರೆ- ಅಜ್ಞಾನವನ್ನು ಇಲ್ಲವಾಗಿಸುವುದರಿಂದ ಸಂಖಾರಗಳು ಇಲ್ಲವಾಗುತ್ತವೆ, ಸಂಖಾರಗಳನ್ನು ಇಲ್ಲವಾಗಿಸುವುದರಿಂದ ವಿಞ್ಞಾನ ಇಲ್ಲವಾಗುತ್ತದೆ, ನಾಮರೂಪ ಇಲ್ಲವಾಗಿಸುವುದರಿಂದ ಆರು (ಇಂದ್ರಿಯ) ಕ್ಷೇತ್ರಗಳು ಇಲ್ಲವಾಗುತ್ತವೆ, ಆರು (ಇಂದ್ರಿಯ) ಕ್ಷೇತ್ರಗಳನ್ನು ಇಲ್ಲವಾಗಿಸುವುದರಿಂದ (ಇಂದ್ರಿಯ) ಸ್ಪರ್ಶ ಇಲ್ಲವಾಗುತ್ತದೆ, (ಇಂದ್ರಿಯ) ಸ್ಪರ್ಶವನ್ನು ಇಲ್ಲವಾಗಿಸುವುದರಿಂದ ಸಂವೇದನೆ ಇಲ್ಲವಾಗುತ್ತದೆ, ಸಂವೇದನೆ ಇಲ್ಲವಾಗಿಸುವುದರಿಂದ ತೃಷ್ಣೆಯು ಇಲ್ಲವಾಗುತ್ತದೆ. ತೃಷ್ಣೆಯನ್ನು ಇಲ್ಲವಾಗಿಸುವುದರಿಂದ ಉಪದಾನ ಇಲ್ಲವಾಗುತ್ತದೆ. ಉಪಾದಾನವನ್ನು ಇಲ್ಲವಾಗಿಸುವುದರಿಂದ ಅಸ್ತಿತ್ವವು ಇಲ್ಲವಾಗುತ್ತದೆ, ಅಸ್ತಿತ್ವವವನ್ನು ಇಲ್ಲವಾಗಿಸುವುದರಿಂದ ಹುಟ್ಟು ಇಲ್ಲವಾಗುತ್ತದೆ, ಹುಟ್ಟನ್ನು ಇಲ್ಲವಾಗಿಸುವುದರಿಂದ ಮುಪ್ಪು, ಮರಣ, ಶೋಕ, ಕ್ರಂದನ, ಶಾರೀರಿಕ ನೋವು, ಮಾನಸಿಕ ನೋವು, ಹತಾಶೆಗಳು ಇಲ್ಲವಾಗುತ್ತವೆ. ಈ ರೀತಿಯಾಗಿ ಇಡೀ ದುಃಖರಾಶಿಯು ಇಲ್ಲವಾಗುತ್ತದೆ.
12. “ಭಿಕ್ಷುಗಳೇ, ನೀವು ಕೂಡ ಹೀಗೆ ತಿಳಿದಮೇಲೆ, ಹೀಗೆ ಕಂಡುಕೊಂಡ ಮೇಲೆ ಗತಿಸಿಹೋದ ಹಿಂದಿನ ಬಗ್ಗೆ ಹೀಗೆ ಯೋಚಿಸುವಿರೇನು- ‘ನಾವುಗಳು ಹಿಂದಿನ ಕಾಲದಲ್ಲಿ ಇದ್ದೆವೇನು? ನಾವು ಹಿಂದಿನ ಕಾಲದಲ್ಲಿ ಇರಲಿಲ್ಲವೇನು, ನಾನು ಹಿಂದಿನ ಕಾಲದಲ್ಲಿ ಏನಾಗಿದ್ದೆವು, ನಾವು ಹಿಂದಿನ ಕಾಲದಲ್ಲಿ ಹೇಗಿದ್ದೆವು, ಏನಾಗಿದ್ದು ನಾವು ಹಿಂದಿನ ಕಾಲದಲ್ಲಿ ಏನಾದೆವು?” ಎಂದು.
“ಇಲ್ಲ ಭಂತೆ.”
“ಭಿಕ್ಷುಗಳೇ, ನೀವು ಕೂಡ ಹೀಗೆ ತಿಳಿದಮೇಲೆ ಹೀಗೆ ಕಂಡುಕೊಂಡಮೇಲೆ ಮುಂದೆ ಬರುವ ಕಾಲದ ಬಗ್ಗೆ ಹೀಗೆ ಯೋಚಿಸುವಿರೇನು- ‘ನಾವುಗಳು ಮುಂದಿನ ಕಾಲದಲ್ಲಿ ಇರುವೆವೇನು, ನಾನು ಮುಂದಿನ ಕಾಲದಲ್ಲಿ ಇರುವುದಿಲ್ಲವೇನು, ನಾವು ಮುಂದಿನ ಕಾಲದಲ್ಲಿ ಏನಾಗುವೆವು, ಮುಂದಿನ ಕಾಲದಲ್ಲಿ ಏನಾಗಿದ್ದು ಆ ಮುಂದಿನ ಕಾಲದಲ್ಲಿ ಏನಾಗುವೆವು?” ಎಂದು.
“ಇಲ್ಲ ಭಂತೆ.”
“ಭಿಕ್ಷುಗಳೇ, ನೀವು ಕೂಡ ಹೀಗೆ ತಿಳಿದಮೇಲೆ ಹೀಗೆ ಕಂಡುಕೊಂಡ ಮೇಲೆ ಈ ರೀತಿಯಾಗಿ ಈಗಿನ ಕಾಲದ ಬಗ್ಗೆ ಅಂತರಂಗದಲ್ಲಿ ಹೀಗೆ ಸಂದೇಹಿಸುವಿರೇನು- ‘ನಾನು ನಾನೆಯೆ, ನಾನು ನಾನಲ್ಲವೇ, ನಾನು ಏನು, ನಾನು ಹೇಗೆ, ಈ ಸತ್ವ ಯಾವುದರಿಂದ ಬಂತು, ಎಲ್ಲಿಗೆ ಹೋಗುವುದು? ಎಂದು.
“ಇಲ್ಲ ಭಂತೆ.”
“ಭಿಕ್ಷುಗಳೇ, ನೀವು ಕೂಡ ಹೀಗೆ ತಿಳಿದಮೇಲೆ ಹೀಗೆ ಕಂಡುಕೊಂಡ ಮೇಲೆ ಹೀಗೆ ಹೇಳುತ್ತೀರೇನು- ‘ಗುರುಗಳನ್ನು ಗೌರವಿಸುತ್ತೇವೆ, ಆದ್ದರಿಂದ ಗುರುವಿಗೆ ಗೌರವಿಸುವುದಿಕ್ಕಾಗಿ ನಾವುಗಳು ಹೀಗೆ ಹೇಳುತ್ತೇವೆ” ಎಂದು.
“ಇಲ್ಲ ಭಂತೆ.”
“ಭಿಕ್ಷುಗಳೇ, ನೀವು ಕೂಡ ಹೀಗೆ ತಿಳಿದಮೇಲೆ ಹೀಗೆ ಕಂಡುಕೊಂಡ ಮೇಲೆ ಹೀಗೆ ಹೇಳುತ್ತೀರೇನು- ‘ಶ್ರಮಣನು ನಮಗೆ ಹೀಗೆ ಹೇಳಿದನು, ಶ್ರಮಣರ ಮಾತಿನ ಮೇರೆಗೆ ಹೀಗೆ ಹೇಳಿವೆ ಮತ್ತು ಆದ್ದರಿಂದ ನಾವುಗಳು ಹಾಗೆ ಹೇಳುತ್ತೇವೆ” ಎಂದು.113
“ಇಲ್ಲ ಭಂತೆ.”
“ಭಿಕ್ಷುಗಳೇ, ನೀವು ಕೂಡ ಹೀಗೆ ತಿಳಿದಮೇಲೆ ಹೀಗೆ ಕಂಡುಕೊಂಡ ಮೇಲೆ ಬೇರೆಯ ಗುರುವೊಬ್ಬನನ್ನು ಅರಸುವಿರೇನು?” ಎಂದು.
“ಇಲ್ಲ ಭಂತೆ.”
“ಭಿಕ್ಷುಗಳೇ, ನೀವು ಕೂಡ ಹೀಗೆ ತಿಳಿದಮೇಲೆ ಹೀಗೆ ಕಂಡುಕೊಂಡ ಮೇಲೆ ಸಾಮಾನ್ಯ ಶ್ರಮಣರ ಬ್ರಾಹ್ಮಣರ ವ್ರತ ಮತ್ತು ಮಂಗಳದ ಆಚರಣೆಗಳಿಗೆ ಅದೇ ಈ ಎಲ್ಲದರ ಸಾರ ಎಂದು ತಿಳಿದು ಹಿಂದಿರುಗುವಿರೇನು? ಎಂದು.
“ಇಲ್ಲ ಭಂತೆ.”
“ಭಿಕ್ಷುಗಳೇ, ನೀವುಗಳು ಕೇವಲ ನಿಮ್ಮಿಂದಲೇ ಪ್ರತ್ಯಕ್ಷವಾಗಿ ತಿಳಿದಿದ್ದನ್ನು ಪ್ರತ್ಯಕ್ಷವಾಗಿ ಕಂಡದ್ದನ್ನು ಪ್ರತ್ಯಕ್ಷವಾಗಿ ಅನುಭವಿಸಿದ್ದನ್ನು ಅವುಗಳನ್ನು ಮಾತ್ರವೇ ಹೇಳುವಿರೇನು?” ಎಂದು.
“ಹೌದು ಭಂತೆ.”
“ಒಳ್ಳೆಯದು ಭಿಕ್ಷುಗಳೇ, ನಿಮಗಾಗಿ ಭಿಕ್ಷುಗಳೇ, ನಾನು ಧರ್ಮವನ್ನು ಈಗಲೇ ಕಾಣುವಂಥದ್ದು, ಕಾಲವಿಳಂಬವಿಲ್ಲದೆ ಫಲವನ್ನು ತರುವಂಥದ್ದು, ಬಾ ಕಂಡುಕೊ ಎಂದು ಆಹ್ವಾನಿಸುವಂಥದ್ದು, ಮೇಲ್ಮುಖವಾಗಿ (ನಿಬ್ಬಾನ) ನಡೆಸುವಂಥದ್ದು, ಜ್ಞಾನಿಯಾದ ಪ್ರತಿಯೊಬ್ಬನಿಂದಲೂ ತನಗೆ ತಾನೇ ತಿಳಿದುಕೊಳ್ಳುವಂಥದ್ದು. ಆದ ಧಮ್ಮವನ್ನು ನಿಮಗೆ ತಿಳಿಸಿದೆ. ಭಿಕ್ಷುಗಳೇ, ಈ ಧರ್ಮವು ಈಗಲೇ ಕಾಣುವಂಥದ್ದು, ಕಾಲವಿಳಂಬವಿಲ್ಲದೆ ಫಲವನ್ನು ತರುವಂಥದ್ದು, ಬಾ ಕಂಡುಕೊ ಎಂದು ಆಹ್ವಾನಿಸುವಂಥದ್ದು, ಮೇಲ್ಮುಖವಾಗಿ (ನಿಬ್ಬಾನ) ನಡೆಸುವಂಥದ್ದು, ಜ್ಞಾನಿಯಾದ ಪ್ರತಿಯೊಬ್ಬನಿಂದಲೂ ತನಗೆ ತಾನೇ ತಿಳಿದುಕೊಳ್ಳುವಂಥದ್ದು- ಆದ್ದರಿಂದಲೇ ಹೀಗೆ ಹೇಳಲಾಗಿದೆ- ಅವಲಂಬನೆಯನ್ನು (ಪಟಿಚ್ಚ ಉತ್ಪಾದವನ್ನು) ಈ ಕಾರಣಕ್ಕಾಗಿ ಹೀಗೆ ಹೇಳಲಾಗಿದೆ” ಎಂದು.
13. “ಭಿಕ್ಷುಗಳೇ, ಮೂರು ಕಾರಣಗಳ ಕೂಡುವಿಕೆಯಿಂದಾಗಿ ಹೊಟ್ಟೆಯಲ್ಲಿ ಬ್ರೂಣ ಧಾರಣೆ ಉಂಟಾಗುತ್ತದೆ.114 ಇಲ್ಲಿ ತಾಯಿ-ತಂದೆಯರ ಕೂಡುವಿಕೆಯ ಕಾರಣವಿದೆ, ಆದರೆ ತಾಯಿಗೆ ಗರ್ಭಧಾರಣೆಯ ಕಾಲವಲ್ಲ, ಮರುಹುಟ್ಟು ಪಡೆಯುವ ಯಾವ ಸತ್ವವೂ115 ಇಲ್ಲ. ಹಾಗಾಗಿ ಹೊಟ್ಟೆಯಲ್ಲಿ ಭ್ರೂಣ ಧಾರಣೆ ಉಂಟಾಗುವುದಿಲ್ಲ. ಇಲ್ಲಿ ತಾಯಿ-ತಂದೆಯರ ಕೂಡುವಿಕೆಯ ಕಾರಣವಿದೆ. ತಾಯಿಗೆ ಗರ್ಭಧಾರಣೆಗೆ ಸಕಾಲ. ಆದರೆ ಮರುಹುಟ್ಟು ಪಡೆಯುವ ಯಾವ ಸತ್ವವೂ ಇಲ್ಲ. ಹಾಗಾಗಿ ಹೊಟ್ಟೆಯಲ್ಲಿ ಭ್ರೂಣ ಧಾರಣೆ ಉಂಟಾಗುವುದಿಲ್ಲ. ಭಿಕ್ಷುಗಳೇ, ಆದರೆ ತಂದೆ-ತಾಯಿಯರ ಕೂಡುವಿಕೆಯ ಕಾರಣವಿದೆ, ತಾಯಿಗೆ ಗರ್ಭಧಾರಣೆಗೆ ಸಕಾಲ, ಮರುಹುಟ್ಟು ಪಡೆಯುವ ಸತ್ವವೂ ಇದೆ- ಈ ಮೂರು ಕಾರಣಗಳ ಕೂಡುವಿಕೆಯಿಂದಾಗಿ ಹೊಟ್ಟೆಯಲ್ಲಿ ಭ್ರೂಣ ಧಾರಣೆಯು ಉಂಟಾಗುತ್ತದೆ. ಭಿಕ್ಷುಗಳೇ, ನಂತರದಲ್ಲಿ ತಾಯಿಯು ಒಂಭತ್ತು ಅಥವಾ ಹತ್ತು ತಿಂಗಳುಗಳ ಕಾಲ ಭ್ರೂಣವನ್ನು ಹೊಟ್ಟೆಯಲ್ಲಿ ತುಂಬಿ ದುಗುಡದಿಂದ ಮತ್ತು ದೊಡ್ಡ ಹೊರಯೆಂಬಂತೆ ಹೊರುತ್ತಾಳೆ. ಭಿಕ್ಷುಗಳೇ, ನಂತರದಲ್ಲಿ ತಾಯಿಯು ಒಂಭತ್ತನೆಯ ಅಥವಾ ಹತ್ತನೆಯ ತಿಂಗಳಿನ ಅಂತ್ಯದಲ್ಲಿ ಹೊಟ್ಟೆಯಲ್ಲಿ ತುಂಬ ದುಗುಡದಿಂದ ದೊಡ್ಡ ಹೊರೆಯಾಗಿರುವುದನ್ನು ಹೆರುತ್ತಾಳೆ. ಈ ರೀತಿಯಾಗಿ ಹುಟ್ಟಿರುವುದನ್ನು ತನ್ನ ರಕ್ತದಿಂದ ಪೆÇೀಷಿಸುತ್ತಾಳೆ. ಭಿಕ್ಷುಗಳೇ, ತಾಯಿಯ ಎದೆಹಾಲನ್ನು ಆರ್ಯರ ವಿನಯದಲ್ಲಿ ರಕ್ತವೆಂದು ಕರೆಯಲಾಗಿದೆ. ಭಿಕ್ಷುಗಳೇ, ಹೀಗೆ ಬಾಲಕನು ಶರೀರದ ಬೆಳವಣಿಗೆಯ ಅನುಗುಣವಾಗಿ, ಇಂದ್ರಿಯ ಬೆಳವಣಿಗೆಯ ಅನುಗುಣವಾಗಿ, ಆ ಬಾಲಕನು ತನ್ನ ವಯಸ್ಸಿನ ಅನುಗುಣವಾಗಿ ಮಕ್ಕಳ ಹಲವು ಆಟಗಳನ್ನು ಆಡುತ್ತಾನೆ, ಅವುಗಳೆಂದರೆ- ನೇಗಿಲು ಆಟ, ಎಳೆಯುವ ಗಾಡಿಯ ಆಟ, ಕುಣಿದಾಟಗಳು, ಗಾಳಿಪಟದ ಆಟ, ಎಲೆಯಿಂದಾದ ಆಟದ ತಕ್ಕಡಿ, ಆಟದ ಬಂಡಿ, ಬಿಲ್ಲು-ಬಾಣದ ಆಟ. ಭಿಕ್ಷುಗಳೇ, ಹೀಗೆ ಬಾಲಕನ ಶರೀರದ ಬೆಳವಣಿಗೆಗೆ ಅನುಗುಣವಾಗಿ, ಇಂದ್ರಿಯ ಬೆಳವಣಿಗೆಗೆ ಅನುಗುಣವಾಗಿ, ಐದುಬಗೆಯ (ಇಂದ್ರಿಯ) ಕಾಮ ಗುಣಗಳಿಂದ ಕೂಡಿದವನಾಗುತ್ತಾನೆ ಮತ್ತು ಆನಂದಿಸುವವನಾಗುತ್ತಾನೆ. ಕಣ್ಣಿನಿಂದ ಕಂಡು ಅರಿಯಬಹುದಾದ ಆಕಾರಗಳಿಗೆ ಇಷ್ಟಪಡುತ್ತಾನೆ, ಆಸೆಪಡುತ್ತಾನೆ, ಅಪೇಕ್ಷಿಸಿಸುತ್ತಾನೆ, ಪ್ರಿಯವಾದವುಗಳನ್ನು ಬಯಸುತ್ತಾನೆ, ಕಾಮಸಂಬಂಧಿಯಾಗಿ ಕಾಣುತ್ತಾನೆ, ಭೋಗಾಪೇಕ್ಷಿಯಾಗುತ್ತಾನೆ, ಕಿವಿಯಿಂದ ಕೇಳಿ ಅರಿಯಬಹುದಾದ ಶಬ್ದಗಳನ್ನು.... ಮೂಗಿನಿಂದ ಪಡೆದು ಅರಿಯಬಹುದಾದ ವಾಸನೆಗಳನ್ನು.... ನಾಲಿಗೆಯಿಂದ ಪಡೆದು ಅರಿಯಬಹುದಾದ ರಸಗಳನ್ನು.... ಶರೀರದಿಂದ ಸ್ಪರ್ಶಿಸಿ ಅರಿಯಬಹುದಾದ ಸ್ಪರ್ಶಗಳನ್ನು ಇಷ್ಟಪಡುತ್ತಾನೆ, ಆಸೆಪಡುತ್ತಾನೆ, ಅಪೇಕ್ಷೆಪಡುತ್ತಾನೆ, ಪ್ರಿಯವಾದವುಗಳನ್ನು ಬಯಸುತ್ತಾನೆ. ಕಾಮಸಂಬಂಧಿಯಾಗಿ ಕಾಣುತ್ತಾನೆ, ಭೋಗಾಪೇಕ್ಷಿಯಾಗುತ್ತಾನೆ.
14. “ಅವನು ಕಣ್ಣಿನಿಂದ ಆಕಾರಗಳನ್ನು ಕಂಡನಂತರ ಪ್ರಿಯವಾದ ಆಕಾರಗಳಾದರೆ ಪ್ರಿಯವಾದ ಭಾವನೆಗಳನ್ನು ವ್ಯಕ್ತಿಪಡಿಸುತ್ತಾನೆ, ಅಪ್ರಿಯವಾದ ಆಕಾರಗಳಾದರೆ ಅಪ್ರಿಯವಾದ ಭಾವನೆಗಳನ್ನು ವ್ಯಕ್ತಪಡಿಸುತ್ತಾನೆ, ಶರೀರದ ಬಗ್ಗೆ ಎಚ್ಚರದ ಮನಸ್ಥಿತಿಯನ್ನು ಹೊಂದಿದವನಾಗಿರದೆ ಒಂದು ಮಿತಿಯಿಂದ ಕೂಡಿದ ಮನಸ್ಸನ್ನು ಪಡೆದವನಾಗಿ ಉಳಿಯುತ್ತಾನೆ. ಅದರಿಂದಾಗಿ ಅವನು ಮನಸ್ಸಿನ ಮುಕ್ತಿ ಮತ್ತು ಪ್ರಜ್ಞೆಯ ಮುಕ್ತ ಸ್ಥಿತಿಯನ್ನು ಯಥಾರ್ಥವಾಗಿ ತಿಳಿಯದವನಾಗುತ್ತಾನೆ. ಯಾವುದರಿಂದಾಗಿ ಆ ಪಾಪ ಮೂಲದ ಅಕುಶಲ ಧರ್ಮ ವಿಷಯಗಳು ಕ್ಲೇಷವಿಲ್ಲದಂತೆ ಮುಗಿದುಹೋಗುತ್ತಿದ್ದವೋ ಅದು ಆಗುವುದಿಲ್ಲ. ಹೀಗೆ ಅವನು ಒಪ್ಪುವ, ವಿರೋಧಿಸುವ ಮನಸ್ಥಿತಿಯಿಂದ ಕೂಡಿದವನಾಗಿ ಯಾವಾಗ ಯಾವಬಗೆಯ (ಸಂ)ವೇದನೆ ಅನುಭವಿಸಿದಾಗ, ಅದು ಸುಖ ಅಥವಾ ದುಃಖದ್ದಾಗಿರಲಿ, ಸುಖವೂ ಅಲ್ಲದ, ದುಃಖವೂ ಅಲ್ಲದ (ಸಂ)ವೇದನೆಯಾಗಿರಲಿ, ಅವನು ಆ ಅನುಭವದಲ್ಲಿ ಆನಂದಪಡೆಯುತ್ತಾನೆ, ಅದನ್ನು ಬಯಸುತ್ತಾನೆ, ಅದಕ್ಕಾಗಿ ಹಾತೊರೆಯುತ್ತಾನೆ, ಉಳಿಯುತ್ತಾನೆ. ಹೀಗೆ ಅವನು ಅನುಭವದಲ್ಲಿ ಆನಂದಪಡೆಯುತ್ತ ಅದನ್ನು ಬಯಸುತ್ತ, ಅದಕ್ಕಗಿ ಹಾತೊರೆಯುತ್ತಿರುವಾಗ ಉಲ್ಲಾಸವು ಹುಟ್ಟಿಬರುತ್ತದೆ.116 ಆ ಅನುಭವಗಳಿಂದಾಗಿ ಉಲ್ಲಾಸ ಪಡೆಯುತ್ತಿರುವಾಗ ಅಂಟುವಿಕೆ ಉಂಟಾಗುತ್ತದೆ. ಈ ಅಂಟುವಿಕೆಯನ್ನು ಅವಲಂಬಿಸಿ ಅಸ್ತಿತ್ವ, ಅಸ್ತಿತ್ವವನ್ನು ಅವಲಂಬಿಸಿ ಹುಟ್ಟು, ಹುಟ್ಟನ್ನು ಅವಲಂಬಿಸಿ ಮುಪ್ಪು, ಮರಣ, ಶೋಕ, ಕ್ರಂದನ, ಶಾರೀರಿಕ ನೋವು, ಮಾನಸಿಕ ನೋವು, ಹತಾಶೆಗಳು ಹುಟ್ಟುತ್ತವೆ. ಈ ರೀತಿಯಾಗಿ ಇಡೀ ದುಃಖರಾಶಿಯ ಹುಟ್ಟುವಿಕೆ ಆಗುತ್ತದೆ. ಕಿವಿಯಿಂದ ಶಬ್ದವನ್ನು ಕೇಳಿದನಂತರ... ಮೂಗಿನಿಂದ ವಾಸನೆಯನ್ನು ಗ್ರಹಿಸಿದ ನಂತರ... ನಾಲಿಗೆಯಿಂದ ರಸಗಳನ್ನು ಗ್ರಹಿಸಿದ ನಂತರ... ಶರೀರದಿಂದ ಸ್ಪರ್ಶಗಳನ್ನು ಅನುಭವಿಸಿದ ನಂತರ... ಮನಸ್ಸಿನಿಂದ ಮನೋವಿಷಯಗಳನ್ನು ಗ್ರಹಿಸಿದ ನಂತರ, ಪ್ರಿಯವಾದ ವಿಷಯಗಳಾದರೆ ಪ್ರಿಯವಾದ ಭಾವನೆಗಳನ್ನು ವ್ಯಕ್ತಪಡಿಸುತ್ತಾನೆ, ಅಪ್ರಿಯವಾದ ವಿಷಯಗಳಾದರೆ ಅಪ್ರಿಯವಾದ ಭಾವನೆಗಳನ್ನು ವ್ಯಕ್ತಪಡಿಸುತ್ತಾನೆ, ಶರೀರದ ಬಗ್ಗೆ ಎಚ್ಚರದ ಮನಸ್ಥಿತಿಯನ್ನು ಹೊಂದಿದವನಾಗಿರದೆ ಒಂದು ಮಿತಿಯಿಂದ ಕೂಡಿದ ಮನಸ್ಸನ್ನು ಪಡೆದವನಾಗಿ ಉಳಿಯುತ್ತಾನೆ. ಅದರಿಂದಾಗಿ ಅವನು ಮನಸ್ಸಿನ ಮುಕ್ತಿ ಮತ್ತು ಪ್ರಜ್ಞೆಯ ಮುಕ್ತ ಸ್ಥಿತಿಯನ್ನು ಯಥಾರ್ಥವಾಗಿ ತಿಳಿಯದವನಾಗುತ್ತಾನೆ. ಯಾವುದರಿಂದಾಗಿ ಆ ಪಾಪ ಮೂಲದ ಅಕುಶಲ ಧರ್ಮವಿಷಯಗಳು ಶೇಷವಿಲ್ಲದಂತೆ ಮುಗಿದುಹೋಗುತ್ತಿದ್ದವೊ, ಅದು ಹಾಗೆ ಆಗುವುದಿಲ್ಲ. ಹೀಗೆ ಅವನು ಒಪ್ಪುವ ಮತ್ತು ವಿರೋಧಿಸುವ ಮನಸ್ಥಿತಿಯಿಂದ ಕೂಡಿದವನಾಗಿ ಯಾವಾಗ ಯಾವ ಬಗೆಯ ಅನುಭವವನ್ನು ಅನುಭವಿಸಿದಾಗ, ಅದು ಸುಖ ಅಥವಾ ದುಃಖದ್ದಾಗಿರಲಿ, ಸುಖವೂ ಅಲ್ಲದ ದುಃಖವೂ ಅಲ್ಲದ ಅನುಭವವಾಗಿರಲಿ, ಅವನು ಆ ಅನುಭವದಲ್ಲಿ ಆನಂದ ಪಡೆಯುತ್ತಾನೆ, ಅದನ್ನು ಬಯಸುತ್ತಾನೆ, ಅದಕ್ಕಾಗಿ ಹಾತೊರೆಯುತ್ತಾ ಉಳಿಯುತ್ತಾನೆ, ಹೀಗೆ ಅವನು ಆ ಅನುಭವದಲ್ಲಿ ಆನಂದ ಪಡೆಯುತ್ತ ಅದನ್ನು ಬಯಸುತ್ತ, ಅದಕ್ಕಾಗಿ ಹಾತೊರೆಯುತ್ತಿರುವಾಗ ಉಲ್ಲಾಸವು ಹುಟ್ಟಿಬರುತ್ತದೆ. ಆ ಅನುಭವಗಳಿಂದಾಗಿ ಉಲ್ಲಾಸ ಪಡೆಯುತ್ತಿರುವಾಗ ಅಂಟುವಿಕೆ ಉಂಟಾಗುತ್ತದೆ. ಈ ಅಂಟುವಿಕೆಯನ್ನು ಅವಲಂಬಿಸಿ ಅಸ್ತಿತ್ವ, ಅಸ್ತಿತ್ವವನ್ನು ಅವಲಂಬಿಸಿ ಹುಟ್ಟು, ಹುಟ್ಟನ್ನು ಅವಲಂಬಿಸಿ ಮುಪ್ಪು, ಮರಣ, ಶೋಕ, ಕ್ರಂದನ, ಶಾರೀರಿಕ ನೋವು, ಮಾನಸಿಕ ನೋವು, ಹತಾಶೆಗಳು ಹುಟ್ಟುತ್ತವೆ. ಈ ರೀತಿಯಾಗಿ ಇಡೀ ದುಃಖರಾಶಿಯು ಹುಟ್ಟುತ್ತದೆ.
4. ನಿಬ್ಬಾನಕ್ಕೆ ಕೊಂಡೊಯ್ಯುವ ಮಾರ್ಗ; ತೃಷ್ಣೆಯನ್ನು ಕ್ಷಯಿಸಿದ ವಿಮುಕ್ತ ಸ್ಥಿತಿ
15. “ಇದೇರೀತಿಯಲ್ಲಿ ಭಿಕ್ಷುಗಳೇ, ತಥಾಗತರು ಲೋಕದಲ್ಲಿ ಉದಯಿಸುತ್ತಾರೆ. ಅವರು ಅರಹಂತರು, ಸಮ್ಯಕ್ ಸಂಬುದ್ಧರು, ವಿದ್ಯಾಚರಣ ಸಂಪನ್ನರು, ಸುಗತರು, ಲೋಕಜ್ಞರು, ವ್ಯಕ್ತಿಗಳನ್ನು ಪಳಗಿಸುವ ಅಸಮಾನ ಸಾರಥಿ (ಮಾರ್ಗದರ್ಶಿ), ದೇವತೆಗಳ ಹಾಗು ಮಾನವರ ಶ್ರೇಷ್ಠ ಗುರುಗಳು, ಬುದ್ಧರು (ಬೋಧಿಯನ್ನು ಪಡೆದವರು ಮತ್ತು ಬೋಧಿಯನ್ನು ತರುವವರು) ಮತ್ತು ಭಗವಾನರು. ಅವರು ಈ ದೇವತೆಗಳಿಂದ ಕೂಡಿದ, ಮಾರನಿಂದ ಕೂಡಿದ ಬ್ರಹ್ಮನಿಂದ ಕೂಡಿದ ಶ್ರಮಣ-ಬ್ರಾಹ್ಮಣರಿಂದ ಕೂಡಿದ ಪ್ರಜೆಗಳಿಂದ ಕೂಡಿದ ರಾಜ ಮನುಷ್ಯರುಗಳಿಂದ ಕೂಡಿದ ಲೋಕಕ್ಕೆ ತಾವೇ ಸ್ವತಃ ಜ್ಞಾನದಿಂದ ಅರಿತಿರುವುದನ್ನು ತಿಳಿಸಿ ಹೇಳುತ್ತಾರೆ. ಅವರು ಪದ ಮತ್ತು ಅರ್ಥಗಳೆರಡರಲ್ಲೂ, ಆರಂಭದಲ್ಲಿ ಕಲ್ಯಾಣದಾಯಕವಾದ ಮಧ್ಯದಲ್ಲಿ ಕಲ್ಯಾಣದಾಯಕವಾದ, ಕೊನೆಯಲ್ಲಿ ಕಲ್ಯಾಣದಾಯಕವಾದ ಧರ್ಮವನ್ನು ತಿಳಿಸುತ್ತಾರೆ. ಪರಮ ಪರಿಪೂರ್ಣವಾದ, ಪರಿಶುದ್ಧವಾದ ಬ್ರಹ್ಮಚರಿಯ ಜೀವನವನ್ನು ತಿಳಿಸುತ್ತಾರೆ. ಗೃಹಸ್ಥರು ಅಥವಾ ಗೃಹಸ್ಥನ ಮಗನು ಅಥವಾ ಬೇರೆ ಕುಟುಂಬದಲ್ಲಿ ಹುಟ್ಟಿದವನು ಆ ಧರ್ಮವನ್ನು ಕೇಳುತ್ತಾನೆ. ಆ ಧರ್ಮವನ್ನು ಕೇಳಿದ ನಂತರ ಅವನಿಗೆ ತಥಾಗತರಲ್ಲಿ ಶ್ರದ್ಧೆ ಉಂಟಾಗುತ್ತದೆ. ಅವನು ಆ ರೀತಿಯ ಶ್ರದ್ಧಾವಂತನಾದ ಮೇಲೆ ಈ ರೀತಿಯಾಗಿ ಚಿಂತನೆ ನಡೆಸುತ್ತಾನೆ- ‘ಗೃಹಸ್ಥ ಜೀವನ ಬಂಧನವುಳ್ಳದ್ದು, ಕಲ್ಮಶವುಳ್ಳದ್ದು, ಶ್ರಮಣ ಜೀವನ ಬಿಡುಗಡೆವುಳ್ಳದ್ದು, ಅದು ಗೃಹಸ್ಥ ಜೀವಿಗೆ ಕಷ್ಟಸಾಧ್ಯವು, ಹೊಳೆವ ಶಂಖದಂತೆ ಸಮಗ್ರವಾಗಿ ಪರಿಪೂರ್ಣವಾದ, ಸಮಗ್ರವಾಗಿ ಪರಿಶುದ್ಧವಾದ ಬ್ರಹ್ಮಚರಿಯಲ್ಲಿ ಜೀವಿಸುವುದು ಕಷ್ಟ. ಒಂದುವೇಳೆ ನಾನು ತಲೆಗೂದಲು ಮತ್ತು ಗಡ್ಡವನ್ನು ತೆಗೆಸಿಕೊಂಡು ಕಾಷಾಯ ವಸ್ತ್ರಗಳನ್ನು ಹೊದ್ದುಕೊಂಡು ಮನೆ ಬಿಟ್ಟು ಮನೆ ಇಲ್ಲದವನಾಗಿ ಶ್ರಮಣನಾದರೆ?’ ಎಂದು. ಕೆಲವು ಕಾಲದ ನಂತರ ಅಲ್ಪವಾಗಿದ್ದರೂ ತನ್ನ ಎಲ್ಲ ಸಂಪತ್ತನ್ನೂ ತೊರೆದು ಅಗಾಧವಾಗಿದ್ದರೂ ತನ್ನ ಎಲ್ಲ ಸಂಪತ್ತನ್ನೂ ತೊರೆದು, ಅಲ್ಪವಾಗಿದ್ದರೂ ತನ್ನ ಬಂಧು ಪರಿವಾರವನ್ನು ತೊರೆದು, ಅಗಾಧವಾಗಿದ್ದರೂ ತನ್ನ ಬಂಧು ಪರಿವಾರವನ್ನು ತೊರೆದು, ತಲೆಗೂದಲು ಮತ್ತು ಗಡ್ಡವನ್ನು ತೆಗೆಸಿಕೊಂಡು ಕಾಷಾಯ ವಸ್ತ್ರ ಹೊದ್ದುಕೊಂಡು ಮನೆ ಬಿಟ್ಟು ಮನೆ ಇಲ್ಲದವನಾಗಿ ಶ್ರಮಣನಾಗುತ್ತಾನೆ.
16. “ಅವನು ಈ ರೀತಿಯಾಗಿ ಶ್ರಮಣನಾಗಿ, ಭಿಕ್ಷು ಶಿಕ್ಷಣ ಪಡೆದು, ಅವರಂತೆಯೇ ಜೀವಿಸುವವನಾಗಿ ಪ್ರಾಣಿಹತ್ಯೆ ಮಾಡುವುದನ್ನು ತೊರೆದು ಪ್ರಾಣಿಹತ್ಯೆಯಿಂದ ವಿರತನಾಗುತ್ತಾನೆ, ದಂಡವನ್ನು ತೆಗೆದಿಟ್ಟವನಾಗಿ ಆಯುಧವನ್ನು ತೆಗೆದಿಟ್ಟವನಾಗಿ, ಪಾಪಭೀರುವಾಗಿ ದಯಾವಂತನಾಗಿ ಎಲ್ಲ ಪ್ರಾಣಿ ಜೀವಿಗಳ ಹಿತಕ್ಕೆ ಅನುಕಂಪವುಳ್ಳವನಾಗಿ ಜೀವಿಸುತ್ತಾನೆ.
ತನ್ನದ್ದಲ್ಲದ್ದನ್ನು ತೆಗೆದುಕೊಳ್ಳುವುದನ್ನು ತೊರೆದವನಾಗಿ ತನ್ನದ್ದಲ್ಲದ್ದನ್ನು ತೆಗೆದುಕೊಳ್ಳುವುದರಿಂದ ವಿರತನಾಗುತ್ತಾನೆ. ಕೊಟ್ಟಿದ್ದನ್ನು ಮಾತ್ರ ತೆಗೆದುಕೊಳ್ಳುವವನಾಗುತ್ತಾನೆ, ಕೊಟ್ಟಿದ್ದನ್ನು ಮಾತ್ರ ಕಾಯ್ದುಕೊಳ್ಳುವವನಾಗುತ್ತಾನೆ.
ತನಗೆ ತಾನು ಪರಿಶುದ್ಧ ಜೀವಿಯಾಗಿ ಜೀವಿಸುತ್ತಾನೆ. ಅಬ್ರಹ್ಮಚಾರಿಯವನ್ನು ತೊರೆದು ಬ್ರಹ್ಮಚಾರಿ ಆಗುತ್ತಾನೆ. ವ್ಯಭಿಚಾರದಿಂದಲೂ ಕಾಮಸಂಬಂಧಿ ಕ್ರಿಯೆಯಿಂದಲೂ ವಿರತನಾಗುತ್ತಾನೆ,
ಸುಳ್ಳು ಮಾತನ್ನು ತೊರೆದು ಸುಳ್ಳು ಹೇಳುವುದರಿಂದ ವಿರತನಾಗುತ್ತಾನೆ, ಸತ್ಯವಾದಿ, ಸತ್ಯಸಂಧ, ನಂಬಿಕಸ್ಥ ವಿಶ್ವಾಸಿಯಾಗುತ್ತಾನೆ. ಲೋಕದಲ್ಲಿ ಮೊಸಗಾರನಾಗುವುದಿಲ್ಲ.
ಚಾಡಿ ಮಾತನ್ನು ತೊರೆದು ಚಾಡಿಯ ಮಾತುಗಳನ್ನು ಹೇಳುವುದರಿಂದ ವಿರತನಾಗುತ್ತಾನೆ. ಇಲ್ಲಿ ಕೇಳಿಕೊಂಡು ಬೇರೆಡೆಯಲ್ಲಿ ಹೇಳಿ, ಇವುಗಳಿಂದ ಭೇದವುಂಟುಮಾಡುವವನಲ್ಲ ಅಥವಾ ಬೇರೊಂದೆಡೆಯಲ್ಲಿ ಕೇಳಿಕೊಂಡು ಅವುಗಳಿಂದ ಇಲ್ಲಿ ಭೇಧವನ್ನುಂಟುಮಾಡುವವನಲ್ಲ. ಈ ರೀತಿಯಾಗಿ ಭೇದವಿರುವಲ್ಲಿ ಏಕತೆ ಉಂಟುಮಾಡುವವನು, ಸ್ನೇಹಿತರನ್ನೆಲ್ಲರನ್ನು ಒಂದುಗೂಡಿಸುವಂತಹ ಐಕ್ಯಮತ್ಯದಿಂದ ಸುಖಪಡುವ ಐಕ್ಯಮತ್ಯದಿಂದ ಸಂತೋಷಪಡುವ, ಐಕ್ಯಮತ್ಯದಿಂದ ಆನಂದಪಡುವ ಐಕ್ಯಮತ್ಯತೆಯನ್ನುಂಟುಮಾಡುವ ಮಾತುಗಳನ್ನು ಆಡುವವನಾಗುತ್ತಾನೆ.
ಕಟುನುಡಿಯನ್ನು ತೊರೆದು ಕಟುವಾದ ಮಾತುಗಳನ್ನು ಆಡುವುದರಿಂದ ವಿರತನಾಗುತ್ತಾನೆ, ಅವು ಎಂತಹ ಮಾತುಗಳು ಎಂದರೆ ಮಧುರವಾಗಿರುವಂತಹವು, ಕಿವಿಗಳಿಗೆ ಹಿತವಾಗಿರುವಂತಹವು, ಪ್ರೇಮದಿಂದ ಕೂಡಿರುವಂತಹವು, ಹೃದಯಂಗಮವಾಗಿರುವಂತಹವು, ಸಭ್ಯವಾಗಿರುವಂತಹವು, ಬಹುಜನರಿಗೆ ಒಪ್ಪಿಗೆಯಾಗುವಂತಹವು, ಅಂತಹ ಮಾತುಗಳನ್ನು ಮಾತನಾಡುವವನಾಗುತ್ತಾನೆ.
ಹರಟೆ ಹೊಡೆಯುವುದನ್ನು ತೊರೆದು ಹರಟೆ ಹೊಡೆಯುವುದರಿಂದ ವಿರತನಾಗುತ್ತಾನೆ. ಸರಿಯಾದ ಕಾಲದಲ್ಲಿ ಮಾತನಾಡುತ್ತಾನೆ, ಯಥಾರ್ಥವನ್ನು ಮಾತನಾಡುತ್ತಾನೆ. ಅರ್ಥವುಳ್ಳದ್ದನ್ನು ಮಾತನಾಡುತ್ತಾನೆ, ಧರ್ಮವನ್ನು ಮಾತನಾಡುತ್ತಾನೆ, ಶಿಸ್ತಿನ (ವಿನಯದ) ಬಗ್ಗೆ ಮಾತನಾಡುತ್ತಾನೆ, ಸಂಗ್ರಹಿಸಲು ಯೋಗ್ಯವಾದ ಮಾತುಗಳನ್ನಾಡುತ್ತಾನೆ. ಸಕಾಲದಲ್ಲಿ ಸೌಹಾರ್ದವಾಗಿರುವ, ಗುರಿ ಸಾಧಿಸುವ, ಅರ್ಥದಿಂದ ಕೂಡಿದ ವಿವೇಚನೆಯ ಮಾತುಗಳನ್ನು ಆಡುತ್ತಾನೆ.
17. “ಅವನು ಬೀಜ ಜೀವವನ್ನಾಗಲಿ, ಸಸ್ಯ ಜೀವವನ್ನಾಗಲಿ ಹಾಳು ಮಾಡುವುದರಿಂದ ವಿರತನಾಗುತ್ತಾನೆ. ಒಂದೇ ಹೊತ್ತು ಆಹಾರ ಸೇವಿಸುವವನಾಗುತ್ತಾನೆ, ರಾತ್ರಿ ಕಾಲದಲ್ಲಾಗಲಿ, ಅಕಾಲದಲ್ಲಾಗಲಿ ಆಹಾರ ಸೇವಿಸುವುದರಿಂದ ವಿರತನಾಗುತ್ತಾನೆ, ನೃತ್ಯ-ಗೀತೆ-ವಾದನ- ಮೋಜಿನ ಕುಣಿತ ಪ್ರದರ್ಶನಗಳನ್ನು ನೋಡುವುದರಿಂದ ವಿರತನಾಗುತ್ತಾನೆ. ಮಾಲಾ-ಗಂಧ-ಲೇಪನೆ-ಸೌಂದರ‍್ಯ ಸಾಧನೆ ಮತ್ತು ಅಲಂಕಾರಿಕ ವಸ್ತುಗಳನ್ನು ಧರಿಸುವುದರಿಂದ ವಿರತನಾಗುತ್ತಾನೆ. ಎತ್ತರವಾದ ಮತ್ತು ವಿಲಾಸಕಾರಕವಾದ ಆಸನಗಳನ್ನು ಉಪಯೋಗಿಸುವುದರಿಂದ ವಿರತನಾಗುತ್ತಾನೆ. ಚಿನ್ನ ಮತ್ತು ಬೆಳ್ಳಿಗಳನ್ನು ಪಡೆಯುವುದರಿಂದ ವಿರತನಾಗುತ್ತಾನೆ, ಧಾನ್ಯ ಪದಾರ್ಥಗಳನ್ನು ಪಡೆಯುವುದರಿಂದ ವಿರತನಾಗುತ್ತಾನೆ. ದಾಸ-ದಾಸಿಯರನ್ನು ಪಡೆಯುವುದರಿಂದ ವಿರತನಾಗುತ್ತಾನೆ, ಮೇಕೆ ಮತ್ತು ಕುರಿಗಳನ್ನು ಪಡೆಯುವುದರಿಂದ ವಿರತನಾಗುತ್ತಾನೆ. ಆನೆಗಳು, ಹಸುಗಳು, ಕುದುರೆಗಳು ಮತ್ತು ಹೆಣ್ಣು ಕುದುರೆಗಳನ್ನು ಪಡೆಯುವುದರಿಂದ ವಿರತನಾಗುತ್ತಾನೆ. ಹೊಲ ಮತ್ತು ಜಾಗಗಳನ್ನು ಪಡೆಯುವುದರಿಂದ ವಿರತನಾಗುತ್ತಾನೆ. ರಾಯಭಾರಿಯಾಗುವ ಮತ್ತು ಅಂತಹ ಸ್ಥಿತಿಯ ಉಪಯೋಗ ಮಾಡಿಕೊಳ್ಳುವುದರಿಂದ ವಿರತನಾಗುತ್ತಾನೆ. ಕೊಳ್ಳುವುದರಿಂದ ಮತ್ತು ಮಾರಾಟ ಮಾಡುವುದರಿಂದ ವಿರತನಾಗುತ್ತಾನೆ. ತೂಕಗಳ್ಳತನದಿಂದ, ಲೋಹಗಳ್ಳತನದಿಂದ, ಅಳತೆಗಳ್ಳತನದಿಂದ ವಿರತನಾಗುತ್ತಾನೆ, ಮೋಸ ಮಾಡುವುದರಿಂದ, ಲಂಚಗುಳಿತನ, ವಂಚಕತನ ಮತ್ತು ಮೋಸ ಮಾಡುವುದರಿಂದ ವಿರತನಾಗುತ್ತಾನೆ. ಕೈಕಾಲು ಕತ್ತರಿಸುವಿಕೆಯಿಂದ, ಕೊಲೆ ಮಾಡುವುದರಿಂದ, ಕಟ್ಟಿಹಾಕುವುದರಿಂದ, ದರೋಡೆ ಮಾಡುವುದರಿಂದ ವಿರತನಾಗುತ್ತಾನೆ.
18. “ಅವನು ಶರೀರವನ್ನು ಕಾಪಾಡಿಕೊಳ್ಳುವುದಕ್ಕೋಸ್ಕರ ಕಾಷಾಯ ವಸ್ತ್ರಗಳನ್ನು ಹೊಂದಿದವನಾಗಿ, ಹಸಿವನ್ನು ಹೋಗಲಾಡಿಸಿಕೊಳ್ಳಲು ಭಿಕ್ಷಾಪಾತ್ರೆ ಹೊಂದಿದವನಾಗಿ, ಅವುಗಳಲ್ಲೇ ತೃಪ್ತಿ ಹೊಂದುತ್ತಾನೆ. ಅವನು ಎಲ್ಲಿ ಹೋಗುತ್ತಾನೋ ಅಲ್ಲೆಲ್ಲಾ ಇವುಗಳೊಂದಿಗೆ ಹೋಗುತ್ತಾನೆ. ಹೇಗೆಂದರೆ ಯಾವರೀತಿಯಲ್ಲಿ ಪಕ್ಷಿಯು ತಾನು ಹಾರಾಡುವಾಗೆಲ್ಲ ತನ್ನ ರೆಕ್ಕೆಗಳೊಂದಿಗೆ ಹಾರಾಡುತ್ತದೊ; ಅದೇರೀತಿಯಲ್ಲಿ ಭಿಕ್ಷು ಶರೀರವನ್ನು ಕಾಪಾಡಿಕೊಳ್ಳುವುದಕ್ಕೋಸ್ಕರ ಕಾಷಾಯ ವಸ್ತ್ರಗಳನ್ನು ಹೊಂದಿದವನಾಗಿ, ಹಸಿವನ್ನು ಹೋಗಲಾಡಿಸಿಕೊಳ್ಳಲು ಭಿಕ್ಷಾಪಾತ್ರೆ ಹೊಂದಿದವನಾಗಿ ಅವುಗಳಲ್ಲೇ ತೃಪ್ತಿ ಹೊಂದಿದವನಾಗುತ್ತಾನೆ, ಅವನು ಎಲ್ಲಿ ಹೋಗುತ್ತಾನೋ ಅಲ್ಲೆಲ್ಲ ಇವುಗಳೊಂದಿಗೆ ಹೋಗುತ್ತಾನೆ. ಅವನು ಈ ರೀತಿಯ ಆರ್ಯರ ಶೀಲ ಆಚರಣೆಗಳಿಂದ ಸಂಪನ್ನನಾಗಿ ಅದರಿಂದಾಗಿ ಉಂಟಾಗುವ ಕಳಂಕರಹಿತ ಸುಖವನ್ನು ಅನುಭವಿಸುತ್ತಾನೆ.
19. “ಅವನು ಕಣ್ಣಿನಿಂದ ಕಂಡ ಯವುದೇ ಆಕಾರ ರೂಪದ ಸಾಮಾನ್ಯ ಸಂಕೇತಕ್ಕೂ ಆಕರ್ಷಿತನಾಗುವುದಿಲ್ಲ. ಅದರ ವಿವರ ವಿಶೇಷಕ್ಕೂ ಆಕರ್ಷಿತನಾಗುವುದಿಲ್ಲ. ಈ ನೋಡುವ ಕಣ್ಣ ಅವಯವವನ್ನು ಹತೋಟಿಯಲ್ಲಿಡದೆ, ಅದರಂತೆ ಜೀವಿಸಿದರೆ ದುರಾಶೆ ಮತ್ತು ಖಿನ್ನತೆಗಳು ಪಾಪಕಾರಣವಾದ ಅಕುಶಲ ಮಾನಸಿಕ ಸ್ಥಿತಿಗಳು ಅಧಿಕಾರ ನಡೆಸಬಹುದು. ಆದ್ದರಿಂದ ಅವನು ಹತೋಟಿಯಲ್ಲಿಟ್ಟುಕೊಂಡೆ ನಡೆದಾಡುತ್ತಾನೆ, ಕಣ್ಣು ಅವಯವವನ್ನು ರಕ್ಷಿಸುತ್ತಾನೆ. ಕಣ್ಣಿನ ಅವಯವದ ಮೇಲೆ ಹತೋಟಿಯನ್ನು ಪಡೆದುಕೊಳ್ಳುತ್ತಾನೆ. ಕಿವಿಯಿಂದ ಕೇಳಿದ ಯಾವುದೇ ಶಬ್ದ... ಮೂಗಿನಿಂದ ಗ್ರಹಿಸಿದ ಯಾವುದೇ ವಾಸನೆ... ನಾಲಿಗೆಯಿಂದ ಗಳಿಸಿದ ಯಾವುದೇ ರಸ... ಶರೀರದಿಂದ ಗ್ರಹಿಸಿದ ಯಾವುದೇ ಸ್ಪರ್ಶ... ಮನಸ್ಸಿನಲ್ಲಿನ ಯಾವುದೇ ಸ್ಥಿತಿಯನ್ನು ಅರಿತುಕೊಂಡು ಯಾವುದೇ ಸಾಮಾನ್ಯ ಸ್ಥಿತಿಗೆ ಆಕರ್ಷಿತನಾಗುವುದಿಲ್ಲ. ಅದರ ವಿವರ ವಿಶೇಷಕ್ಕೂ ಆಕರ್ಷಿತನಾಗುವುದಿಲ್ಲ. ಈ ಅರಿಯದ (ಮನ) ಇಂದ್ರಿಯವನ್ನು ಹತೋಟಿಯಲ್ಲಿಡದೇ ಅದರಂತೆ ಜೀವಿಸಿದರೆ ದುರಾಶೆ ಮತ್ತು ಖಿನ್ನತೆಗಳು ಪಾಪಕಾರಣವಾದ ಅಕುಶಲ ಮಾನಸಿಕ ಸ್ಥಿತಿಗಳು ಅಧಿಕಾರ ನಡೆಸಬಹುದು. ಆದ್ದರಿಂದ ಅವನ್ನು ಹತೋಟಿಯಲ್ಲಿಟ್ಟುಕೊಂಡೇ ನಡೆದಾಡುತ್ತಾನೆ. (ಮನ) ಇಂದ್ರಿಯವನ್ನು ಅರಕ್ಷಿಸುತ್ತಾನೆ, (ಮನ) ಇಂದ್ರಿಯದ ಮೇಲೆ ಹತೋಟಿಯನ್ನು ಪಡೆದುಕೊಳ್ಳುತ್ತಾನೆ. ಅವರು ಈ ರೀತಿಯ ಆರ್ಯರ ಶೀಲ ಆಚರಣೆ ಸಂಪನ್ನನಾಗಿ ಇದರಿಂದಾಗಿ ಉಂಟಾಗುವ ಕಳಂಕರಹಿತ ಸುಖವನ್ನು ಅನುಭವಿಸುತ್ತಾನೆ.
“ಅವನು ಹೋಗುವಾಗಾಗಲಿ ಅಥವಾ ಬರುವಾಗಾಗಲಿ ಪ್ರಜ್ಞಾಧಾರದ ಜಾಗ್ರತೆಯಿಂದ ವ್ಯವಹರಿಸುತ್ತಾನೆ, ಕೆಳಗೆ ನೋಡುವಾಗಾಗಲಿ ಅಥವಾ ಸುತ್ತೆಲ್ಲ ಕಡೆ ನೋಡುವಾಗಾಗಲಿ ಅವನು ಪ್ರಜ್ಞಾಧಾರ ಜಾಗ್ರತೆಯಿಂದ ವ್ಯವಹರಿಸುತ್ತಾನೆ. ಮಡಚಿಕೊಳ್ಳುವುದರಲ್ಲಾಗಲಿ ಅಥವಾ ಹರಡುವುದರಲ್ಲಾಗಲಿ ಪ್ರಜ್ಞಾಧಾರ ಜಾಗ್ರತೆಯಿಂದ ವ್ಯವಹರಿಸುತ್ತಾನೆ. ಮೇಲುಹೊದಿಕೆಯನ್ನು, ಭಿಕ್ಷಾಪಾತ್ರೆಯನ್ನು, ಚೀವರವನ್ನು ತೆಗೆದುಕೊಂಡು ಹೋಗುವಾಗ ಪ್ರಜ್ಞಾಧಾರ ಜಾಗ್ರತೆಯಿಂದ ವ್ಯವಹರಿಸುತ್ತಾನೆ. ಅಗಿಯುವಾಗಾಗಲಿ, ಕುಡಿಯುವಾಗಾಗಲಿ, ತಿನ್ನುವಾಗಾಗಲಿ, ರುಚಿ ನೋಡುವಾಗಾಗಲಿ, ಪ್ರಜ್ಞಾಧಾರ ಜಾಗ್ರತೆಯಿಂದ ವ್ಯವಹರಿಸುತ್ತಾನೆ. ಮಲ ಮೂತ್ರ ಮಾಡುವಾಗಾಗಲಿ ಪ್ರಜ್ಞಾಧಾರ ಜಾಗ್ರತೆಯಿಂದ ವ್ಯವಹರಿಸುತ್ತಾನೆ. ನಡೆಯುವಾಗಾಗಲಿ, ನಿಂತಿರುವಾಗಾಗಲಿ, ಕುಳಿತಿರುವಾಗಾಗಲಿ, ನಿದ್ರಿಸುತ್ತಿರುವಾಗಾಗಲಿ, ಎಚ್ಚರವಿರುವಾಗಾಗಲಿ, ಮಾತನಾಡುವಾಗಾಗಲಿ, ಮೌನದಿಂದಿರುವಾಗಾಗಲಿ ಪ್ರಜ್ಞಾಧಾರದ ಜಾಗ್ರತೆಯಿಂದ ವ್ಯವಹರಿಸುತ್ತಾನೆ.
20. “ಅವನು ಈ ರೀತಿಯ ಆರ್ಯರ ಶೀಲ ಆಚರಣೆಯ ಸಂಪನ್ನನಾಗಿ (ಇವೇ ಆರ್ಯರ ಸಂತೃಪ್ತಿಯ ಸಂಪನ್ನಶೀಲತೆ) ಮತ್ತು ಈ ರೀತಿಯ ಆರ್ಯರ ಇಂದ್ರಿಯ ಸಂವರ ಸಂಪನ್ನನಾಗಿ ಮತ್ತು ಈ ರೀತಿಯ ಆರ್ಯರ ಸತಿ (ಎಚ್ಚರಿಕೆ) ಮತ್ತು ಸಮಾಧಿ ಸಂಪನ್ನನಾಗಿ ತಾನು ವಾಸಿಸಲು ಇಂತಹ ಏಕಾಂತದ ಸ್ಥಳವನ್ನು ಆರಿಸಿಕೊಳ್ಳುತ್ತಾನೆ. ಅದು ಅರಣ್ಯದಲ್ಲಿ, ಮರದ ಕೆಳಗೆ, ಪರ್ವತದಲ್ಲಿ, ಕಣಿವೆಯಲ್ಲಿ, ಗಿರಿ ಗುಹೆಯಲ್ಲಿ, ಸ್ಮಶಾನದಲ್ಲಿ, ವನಪ್ರದೇಶದಲ್ಲಿ, ವಿಶಾಲ ಪ್ರದೇಶದಲ್ಲಿ, ಹುಲ್ಲಿನ ಬಣವೆಯ ಮೇಲೆ ಇರಬಹುದು. ಅವನು ಭಿಕ್ಷಾಟನೆಯಿಂದ ಹಿಂದಿರುಗಿ ಆಹಾರವನ್ನು ಸೇವಿಸಿದ ಮೇಲೆ ಒಂದರ ಮೇಲೊಂದು ಕಾಲುಗಳನ್ನು ಹಾಕಿಕೊಂಡು ಸುಖಾಸನದಲ್ಲಿ ಕುಳಿತುಕೊಳ್ಳುತ್ತಾನೆ. ಬೆನ್ನನ್ನು ಮತ್ತು ದೇಹವನ್ನು ನೇರವಾಗಿರಿಸಿಕೊಂಡು, ಜಾಗೃತಸ್ಥಿತಿ ಸತಿಯನ್ನು ತನ್ನೆದುರಿಗೆ ಸ್ಥಾಪಿಸಿಕೊಳ್ಳುತ್ತಾನೆ. ಅವನು ಲೋಕದ ಮೇಲಿನ ದುರಾಶೆಯನ್ನು ತೊರೆದು, ದುರಾಶೆ ಇಲ್ಲದ ಮನೋಸ್ಥಿತಿವುಳ್ಳವನಾಗುತ್ತಾನೆ. ದುರಾಶೆಯ ಚಿತ್ತವನ್ನು ಪರಿಶುದ್ಧಗೊಳಿಸುತ್ತಾನೆ. ಹಗೆತನ ಮತ್ತು ದ್ವೇಷವನ್ನು ತೊರೆದು ಹಗೆತನವಿಲ್ಲದ ಮನೋಸ್ಥಿತಿವುಳ್ಳವನಾಗಿ ಉಳಿಯುತ್ತಾನೆ. ಎಲ್ಲ ಪ್ರಾಣಿ ಜೀವಿಗಳ ಹಿತ ಬಯಸುವವನಾಗಿ ಹಗೆತನ ಮತ್ತು ದ್ವೇಷದ ಚಿತ್ತವನ್ನು ಪರಿಶುದ್ಧಗೊಳಿಸುತ್ತಾನೆ. ಆಲಸ್ಯ ಮತ್ತು ಮಂಪರನ್ನು ತೊರೆದು ಆಲಸ್ಯ ಮತ್ತು ಮಂಪರುರಹಿತನಾಗಿ ಉಳಿಯುತ್ತಾನೆ. ಬೆಳಕು ಕಂಡವನಾಗಿ, ಸತಿವುಳ್ಳವನಾಗಿ, ಪೂರ್ಣ ಪ್ರಜ್ಞಾವಂತನಾಗಿ ಆಲಸ್ಯ ಮತ್ತು ಚಿಂತೆಯನ್ನು ತೊರೆದು ಶಾಂತತೆವುಳ್ಳವನಾಗಿ ಉಳಿಯುತ್ತಾನೆ. ಆ ಕಾರಣದಿಂದಾಗಿ ಮನಸ್ಸನ್ನು ಉಪಶಾಂತಗೊಳಿಸಿದವನಾಗಿ ಚಂಚಲತೆ ಮತ್ತು ಚಿಂತೆಯ ಚಿತ್ತವನ್ನು ಪರಿಶುದ್ಧಗೊಳಿಸುತ್ತಾನೆ. ಸಂದೇಹವನ್ನು ತೊರೆದು ಸಂದೇಹವನ್ನು ದಾಟಿದವನಾಗಿ ಉಳಿಯುತ್ತಾನೆ, ಕುಶಲ ಧರ್ಮಗಳ ಬಗ್ಗೆ ಅಪನಂಬಿಕೆಯಿಂದ ದೂರನಾಗಿ ಸಂದೇಹ ಚಿತ್ತವನ್ನು ಪರಿಶುದ್ಧಗೊಳಿಸುತ್ತಾನೆ.
21. “ಅವನು ಈ ಐದು ತಡೆಗಳನ್ನು ತೊರೆದು ಆಂತರಿಕ ಅರಿವಿನಿಂದ ಮನಸ್ಸಿನ ದೌರ್ಬಲ್ಯಗಳನ್ನು ದುರ್ಬಲ ಮಾಡಿದವನಾಗಿ, ಕಾಮವನ್ನು ದಾಟಿದವನಾಗಿ ಅಕುಶಲ ಧರ್ಮಗಳನ್ನು ದಾಟಿದವನಾಗಿ, ಸವಿತರ್ಕನಾಗಿ, ಸವಿಚಾರನಾಗಿ, ಏಕಾಂತದಿಂದ ಹುಟ್ಟಿದ ಆನಂದ ಮತ್ತು ಸುಖದಿಂದ ಕೂಡಿದ ಸಮಾಧಿಯ ಮೊದಲ ಹಂತವನ್ನು ಸಾಧಿಸಿಕೊಂಡು ನೆಲೆಗೊಳ್ಳುತ್ತಾನೆ. ಅಲ್ಲದೆ ಮತ್ತೆ ಭಿಕ್ಷುಗಳೇ, ಭಿಕ್ಷುವು ವಿತರ್ಕ ವಿಚಾರಗಳನ್ನು ಉಪಶಮನಗೊಳಿಸಿ ಆಂತರಿಕ ಸ್ಥೈರ್ಯ ಮತ್ತು ಮನಸ್ಸಿನ ಏಕೋಭಾವದಿಂದ ವಿತರ್ಕಗಳಿಲ್ಲದ ವಿಚಾರಗಳಿಲ್ಲದ ಸಮಾಧಿಯಲ್ಲಿ ಹುಟ್ಟಿದ ಆನಂದ ಮತ್ತು ಸುಖದಿಂದ ಕೂಡಿದ ಸಮಾಧಿಯ ಎರಡನೇ ಹಂತವನ್ನು... ಸಮಾಧಿಯ ಮೂರನೆಯ ಹಂತವನ್ನು... ಸಮಾಧಿಯ ನಾಲ್ಕನೆಯ ಹಂತವನ್ನು ಸಾಧಿಸಿಕೊಂಡು ನೆಲೆಗೊಳ್ಳುತ್ತಾನೆ.
22. ಅವನು ಕಣ್ಣಿನಿಂದ ಆಕಾರಗಳನ್ನು ಕಂಡನಂತರ ಪ್ರಿಯವಾದ ಆಕಾರಗಳಿಗೆ ಪ್ರಿಯವಾದ ಭಾವನೆಗಳನ್ನು ವ್ಯಕ್ತಪಡಸುವುದಿಲ್ಲ. ಅಪ್ರಿಯವಾದ ಆಕಾರಗಳಾದರೆ ಅಪ್ರಿಯವಾದ ಭಾವನೆಗಳನ್ನು ವ್ಯಕ್ತಪಡಿಸುವುದಿಲ್ಲ. ಶರೀರದ ಬಗ್ಗೆ ಎಚ್ಚರದ ಮನಸ್ಥಿತಿಯನ್ನು ಹೊಂದಿದವನಾಗಿ ಮಿತಿ ಇಲ್ಲದ ಮನಸ್ಸನ್ನು ಪಡೆದವನಾಗಿ ಉಳಿಯುತ್ತಾನೆ. ಅದರಿಂದಾಗಿ ಅವನು ಮನಸ್ಸಿನ ಮುಕ್ತಿ ಮತ್ತು ಪ್ರಜ್ಞೆಯ ಮುಕ್ತ ಸ್ಥಿತಿಯನ್ನು ಯಥಾರ್ಥವಾಗಿ ತಿಳಿದವನಾಗುತ್ತಾನೆ. ಯಾವುದರಿಂದಾಗಿ ಆ ಪಾಪ ಮೂಲದ ಅಕುಶಲ ಧರ್ಮ ವಿಷಯಗಳು ಶೇಷವಿಲ್ಲದಂತೆ ಮುಗಿದು ಹೋಗುತ್ತಿದ್ದವೊ ಅದು ಆಗುತ್ತದೆ.117 ಹೀಗೆ ಅವನು ಒಪ್ಪುವ ಯಾ ವಿರೋಧಿಸುವ ಮನಸ್ಥಿತಿಯಿಂದ ಕೂಡಿರದೆ, ಯಾವಾಗ ಯಾವ ಬಗೆಯ ಸಂವೇದನೆಯನ್ನು ಅನುಭವಿಸುವನೋ ಆಗ ಅದು ಸುಖ ಅಥವಾ ದುಃಖದ್ದಾಗಿರಲಿ, ಸುಖವೂ ಅಲ್ಲದ ದುಃಖವೂ ಅಲ್ಲದ ಸಂವೇದನೆ ಆಗಿರಲಿ, ಅವನು ಸಂವೇದನೆಯಲ್ಲಿ ಆನಂದ ಪಡೆಯುವುದಿಲ್ಲ, ಅದನ್ನು ಬಯಸುವುದಿಲ್ಲ, ಅದಕ್ಕೆ ಹಾತೊರೆಯುತ್ತ ಉಳಿಯುವುದಿಲ್ಲ.118 ಹೀಗೆ ಅವನು ಆ ವೇದನೆಯಲ್ಲಿ ಆನಂದ ಪಡೆಯದೆ ಅದನ್ನು ಬಯಸದೆ ಅದಕ್ಕಾಗಿ ಹಾತೊರೆಯದೆ ಇರುವಾಗ ಉಲ್ಲಾಸವು ಇಲ್ಲವಾಗುತ್ತದೆ. ಸಂವೇದನೆಗಳಿಂದಾಗಿ ಉಲ್ಲಾಸ ಪಡೆಯದೆ ಇರುವಾಗ ಅಂಟುವಿಕೆ (ಉಪಾದಾನ) ಇಲ್ಲವಾಗುತ್ತದೆ. ಈ ಅಂಟುವಿಕೆಯನ್ನು ಇಲ್ಲವಾಗಿಸುವುದರಿಂದ ಅಸ್ತಿತ್ವ ಇಲ್ಲವಾಗುತ್ತದೆ, ಅಸ್ತಿತ್ವವನ್ನು ಇಲ್ಲವಾಗಿಸುವುದರಿಮದ ಹುಟ್ಟು ಇಲ್ಲವಾಗುತ್ತದೆ, ಹುಟ್ಟನ್ನು ಇಲ್ಲವಾಗಿಸುವುದರಿಂದ ಮುಪ್ಪು, ಮರಣ, ಶೋಕ, ಕ್ರಂದನ, ಶಾರೀರಿಕ ನೋವು, ಮಾನಸಿಕ ನೋವು, ಹತಾಶೆಗಳು ಇಲ್ಲವಾಗುತ್ತವೆ. ಈ ರೀತಿಯಾಗಿ ಇಡೀ ದುಃಖರಾಶಿಯು ಇಲ್ಲವಾಗುತ್ತದೆ. ಅವನು ಕಿವಿಯಿಂದ ಶಬ್ದವನ್ನು ಕೇಳಿದ ನಂತರ... ಮೂಗಿನಿಂದ ವಾಸನೆಯನ್ನು ಗ್ರಹಿಸಿದ ನಂತರ... ನಾಲಿಗೆಯಿಂದ ರಸವನ್ನು ಸವಿದ ನಂತರ... ಶರೀರದಿಂದ ಸ್ಪರ್ಶಗಳನ್ನು ಅನುಭವಿಸಿದ ನಂತರ... ಮನಸ್ಸಿನಿಂದ ಮನೋವಿಷಯಗಳನ್ನು ಗ್ರಹಿಸಿದ ನಂತರ, ಪ್ರಿಯವಾದ (ಮನೋ) ವಿಷಯಗಳಿಗೆ ಪ್ರಿಯವಾದ ಭಾವನೆಗಳನ್ನು ವ್ಯಕ್ತಪಡಿಸುವುದಿಲ್ಲ. ಅಪ್ರಿಯವಾದ (ಮನೋ) ವಿಷಯಗಳಾದರೆ ಅಪ್ರಿಯವಾದ ಭಾವನೆಗಳನ್ನು ವ್ಯಕ್ತಪಡಿಸುವುದಿಲ್ಲ. ಶರೀರದ ಬಗ್ಗೆ ಎಚ್ಚರದ ಮನಸ್ತಿತಿಯನ್ನು ಹೊಂದಿದವನಾಗಿ ಮಿತಿ ಇಲ್ಲದ ಮನಸ್ಸನ್ನು ಪಡೆದವನಾಗಿ ಉಳಿಯುತ್ತಾನೆ. ಅದರಿಂದಾಗಿ ಅವನು ಮನಸ್ಸಿನ ಮುಕ್ತಿ ಮತ್ತು ಪ್ರಜ್ಞೆಯ ಮುಕ್ತ ಸ್ಥಿತಿಯನ್ನು ಯಥಾರ್ಥವಾಗಿ ತಿಳಿದವನಾಗುತ್ತಾನೆ. ಯಾವುದರಿಂದ ಆ ಪಾಪ ಮೂಲದ ಅಕುಶಲ ಧರ್ಮ ವಿಷಯಗಳು ಶೇಷವಿಲ್ಲದಂತೆ ಮುಗಿದುಹೋಗುತ್ತಿದ್ದವೋ ಅದು ಆಗುತ್ತದೆ. ಹೀಗೆ ಅವನು ಒಪ್ಪುವ, ವಿರೋಧಿಸುವ ಮನಸ್ಥಿತಿಯಿಂದ ಕೂಡಿರದೆ ಯಾವ ಬಗೆಯ ಅನುಭವವನ್ನು ಅನುಭವಿಸುವಾಗಲೂ ಅದು ಸುಖ ಅಥವಾ ದುಃಖದ್ದಾಗಿರಲಿ, ಸುಖವೂ ಅಲ್ಲದ ದುಃಖವೂ ಅಲ್ಲದ ಅನುಭವವಾಗಿರಲಿ, ಅವನು ಆ ಅನುಭವದಲ್ಲಿ ಆನಂದ ಪಡೆಯುವುದಿಲ್ಲ, ಅದನ್ನು ಬಯಸುವುದಿಲ್ಲ, ಅದಕ್ಕೆ ಹಾತೊರೆಯುತ್ತ ಉಳಿಯುವುದಿಲ್ಲ. ಹೀಗೆ ಅವನು ಆ ಅನುಭವದಲ್ಲಿ ಆನಂದ ಪಡೆಯದೆ ಅದನ್ನು ಬಯಸದೆ, ಅದಕ್ಕಾಗಿ ಹಾತೊರೆಯದೆ ಇರುವಾಗ ಉಲ್ಲಾಸವು ಇಲ್ಲವಾಗುತ್ತದೆ. ಆ ಅನುಭವಗಳಿಂದಾಗಿ ಉಲ್ಲಾಸ ಪಡೆಯದೆ ಇರುವಾಗ ಅಂಟುವಿಕೆ ಇಲ್ಲವಾಗುತ್ತದೆ. ಈ ಅಂಟುವಿಕೆಯನ್ನು ಇಲ್ಲವಾಗಿಸುವುದರಿಂದ ಅಸ್ತಿತ್ವ ಇಲ್ಲವಾಗುತ್ತದೆ, ಅಸ್ತಿತ್ವವನ್ನು ಇಲ್ಲವಾಗಿಸುವುದರಿಂದ ಹುಟ್ಟು ಇಲ್ಲವಾಗುತ್ತದೆ, ಹುಟ್ಟನ್ನು ಇಲ್ಲವಾಗಿಸುವುದರಿಂದ ಮುಪ್ಪು, ಮರಣ, ಶೋಕ, ಕ್ರಂದನ, ಶಾರೀರಿಕ ನೋವು, ಮಾನಸಿಕ ನೋವು, ಹತಾಶೆಗಳು ಇಲ್ಲವಾಗುತ್ತವೆ. ಈ ರೀತಿಯಾಗಿ ಇಡೀ ದುಃಖರಾಶಿಯು ಇಲ್ಲವಾಗುತ್ತದೆ.
“ಭಿಕ್ಷುಗಳೇ, ತೃಷ್ಣೆಯ ಕ್ಷಯದಿಂದ ವಿಮುಕ್ತಿ ಹೊಂದುವುದನ್ನು ಸಂಕ್ಷಿಪ್ತವಾಗಿ ನಾನು ಹೇಳಿದ ಹಾಗೆ ನೀವು ಮನಸ್ಸಿನಲ್ಲಿ ಉಳಿಸಿಕೊಳ್ಳಿರಿ. ಆದರೆ ಮೀನುಗಾರನ ಪುತ್ರ ಭಿಕ್ಷು ಸಾತಿ, ತೃಷ್ಣೆಯ ಮಹಾಬಲೆಯಲ್ಲಿ ತೃಷ್ಣೆಯ ಬಂಧನದಲ್ಲಿ ಸಿಲುಕಿಕೊಂಡಿದ್ದಾನೆ” ಎಂದು.
ಭಗವಾನರು ಹೀಗೆ ನುಡಿದರು. ಸ್ಫೂರ್ತಿ ಪಡೆದ ಆ ಭಿಕ್ಷುಗಳು ಭಗವಾನರ ನುಡಿಗೆ ಆನಂದಗೊಂಡರು.
ಟಿಪ್ಪಣಿಗಳು [5]
English
Deutsch
Việt Ngữ