ಊಟಿಸುತ್ತಿದೆ

ಅನುವಾದಗಳು [36]

ಧರ್ಮದಾಯಾದ ಸುತ್ತ

1. ಭಿಕ್ಖುಗಳಲ್ಲಿ ಭಗವಾನರ ಅನುಕಂಪ

ಹೀಗೆ ನಾನು ಕೇಳಿದ್ದೇನೆ. ಒಂದು ಸಲ ಭಗವಾನರು ಶ್ರಾವಸ್ಥಿಯ ಹತ್ತಿರದ ಅನಾಥಪಿಂಡಿಕನ ಜೇತವನದಲ್ಲಿದ್ದ ವಿಹಾರದಲ್ಲಿ ತಂಗಿದ್ದರು. ಹೀಗಿರುವಲ್ಲಿ ಭಗವಾನರು “ಭಿಕ್ಖುಗಳೇ”51 ಎಂದು ಕರೆದರು. “ಭದನ್ತರೆ (ಪೂಜ್ಯರೇ)” ಎಂದು ಭಿಕ್ಖುಗಳು ಉತ್ತರಿಸಿದರು. ಭಗವಾನರು ಹೀಗೆ ಹೇಳಿದರು-

“ಭಿಕ್ಖುಗಳೇ, ನನ್ನ (ಆಧ್ಯಾತ್ಮಿಕ) ಧರ್ಮಕ್ಕೆ ಬಾಧ್ಯಸ್ಥರಾಗಿ; ಲೌಕಿಕ ಸಂಪತ್ತಿಗೆ ಬಾಧ್ಯಸ್ಥರಾಗ ಬೇಡಿ” ಎಂದು. ನನ್ನ ಶ್ರಾವಕರು ಧರ್ಮಕ್ಕೆ ಬಾಧ್ಯಸ್ತರಾಗುವರೆ? ಇಲ್ಲ ಲೌಕಿಕ ಸಂಪತ್ತಿಗೆ ಬಾಧ್ಯಸ್ತರಾಗುವರೆ?’ ಎಂದು. ‘ನಿಮ್ಮ ಮೇಲೆ ನನಗೆ ಅನುಕಂಪವಿದೆ.’ ಭಿಕ್ಖುಗಳೇ, ನೀವು ಲೌಕಿಕ ಸಂಪತ್ತಿಗೆ ಬಾಧ್ಯಸ್ಥರಾದರೆ ಧರ್ಮಕ್ಕೆ ಬಾಧ್ಯಸ್ಥರಾಗದಿದ್ದರೆ, ಅದರ ಪರಿಣಾಮವಾಗಿ ನೀವೂ ಈರೀತಿಯ ಅಪಪ್ರಚಾರಕ್ಕೆ ಒಳಗಾಗುತ್ತೀರಿ ‘ಶಾಸ್ತರ ಶ್ರಾವಕರು ಲೌಕಿಕ ಸಂಪತ್ತಿಗೆ ಬಾಧ್ಯಸ್ತರಾಗಿದ್ದಾರೆ ಧರ್ಮಕ್ಕೆ ಬಾಧ್ಯಸ್ತರಾಗಿಲ್ಲ ಎಂದು’. ನಾನೂ ಕೂಡ ಆ ರೀತಿ ‘ಶಾಸ್ತರ ಶ್ರಾವಕರು ಲೌಕಿಕ ಸಂಪತ್ತಿಗೆ ಬಾದ್ಯಸ್ತರಾಗಿದ್ದಾರೆ ಧರ್ಮಕ್ಕೆ ಬಾಧ್ಯಸ್ತರಾಗಿಲ್ಲ’. ಎಂದು ಅಪಪ್ರಚಾರಕ್ಕೆ ಒಳಗಾಗುತ್ತೇನೆ. ಆದರೆ ಭಿಕ್ಖುಗಳೇ, ನೀವು ಧರ್ಮಕ್ಕೆ ಬಾಧ್ಯಸ್ಥರಾದರೆ ಲೌಕಿಕ ಸಂಪತ್ತಿಗೆ ಬಾಧ್ಯಸ್ಥರಾಗದಿದ್ದರೆ, ಅದರ ಪರಿಣಾಮವಾಗಿ ನೀಮ್ಮ ಬಗ್ಗೆ ‘ಶಾಸ್ತರ ಶ್ರಾವಕರು ಧರ್ಮಕ್ಕೆ ಬಾಧ್ಯಸ್ಥರಾಗಿದ್ದಾರೆ, ಲೌಕಿಕ ಸಂಪತ್ತಿಗೆ ಬಾಧ್ಯಸ್ಥರಾಗಿಲ್ಲ,’ ಎಂದು ಹೇಳುತ್ತಾರೆ. ನೀವೂ ಕೂಡ ಆ ರೀತಿ ಅಪಪ್ರಚಾರಕ್ಕೊಳಗಾಗುವುದಿಲ್ಲ. ‘ಶಾಸ್ತರ ಶ್ರಾವಕರು ಧರ್ಮಕ್ಕೆ ಬಾಧ್ಯಸ್ಥರಾಗಿದ್ದಾರೆ, ಲೌಕಿಕ ಸಂಪತ್ತಿಗೆ ಬಾಧ್ಯಸ್ಥರಾಗಿಲ್ಲ’ ಎಂದಾಗಿ ನಾನೂ ಕೂಡ ಅಪಪ್ರಚಾರಕ್ಕೊಳಗಾಗುವುದಿಲ್ಲ. ಆದ್ದರಿಂದ, ಭಿಕ್ಖುಗಳೇ, ನೀವು ನನ್ನ ಧರ್ಮಕ್ಕೆ ಬಾಧ್ಯಸ್ಥರಾಗಿ ಲೌಕಿಕ ಸಂಪತ್ತಿಗೆ ಬಾಧ್ಯಸ್ಥರಾಗಬೇಡಿ; ‘ನನ್ನ ಶ್ರಾವಕರು ಧರ್ಮಕ್ಕೆ ಬಾಧ್ಯಸ್ಥರಾಗುವರೆ? ಲೌಕಿಕ ಸಂಪತ್ತಿಗೆ ಬಾಧ್ಯಸ್ಥರಾಗದೆ ಇರುವರೆ?’ ಎಂದು ನನಗೆ ನಿಮ್ಮ ಮೇಲೆ ಅನುಕಂಪವಿದೆ.

2. ಪಿಂಡಪಾತ (ಭಿಕ್ಷಾನ್ನ) ಬಿಡಬೇಕಾದ ಸ್ಥಿತಿಯಿದ್ದರೆ

2. “ಈಗ ಭಿಕ್ಖುಗಳೇ, ಸಾಕೆನುಸುವಷ್ಟು, ಪರಿಪೂರ್ಣವಾಗಿ, ತೃಪ್ತವಾಗಿ ತಿಂದು ಮುಗಿಸಿದ, ಬೇಕಾದಷ್ಟು, ಹೆಚ್ಚಾಗುವಷ್ಟು, ಆಹಾರ ಸೇವಿಸಿರುವಾಗ; ಇನ್ನು ಹೆಚ್ಚಾದಂತಹ, ಬಿಡಬೇಕಾದಂತಹ ಪಿಂಡಪಾತ ಕೂಡ ಇದೆ ಎನ್ನಿ. ಆಗ ಹಸಿವು ದುರ್ಬಲತೆಯಿಂದ ಕೂಡಿದ ಇಬ್ಬರು ಭಿಕ್ಖುಗಳು ಬಂದರು. ಅವರಿಗೆ ನಾನು ಹೀಗೆ ಹೇಳಿದೆ ಎನ್ನಿ ‘ಭಿಕ್ಖುಗಳೇ, ನಾನು ಸಾಕೆನಿಸುವಷ್ಟು ಪರಿಪೂರ್ಣ ಮುಗಿಸಿ, ಬೇಕಾದಷ್ಟು, ಹೆಚ್ಚಾಗುವಂತೆ ಆಹಾರ ಸೇವಿಸಿದ್ದೇನೆ; ಇನ್ನೂ ನನ್ನದಾದ ಹೆಚ್ಚಾದ, ಬಿಡಬೇಕಾದಂತಹ ಪಿಂಡಪಾತ ಇದೆ ನಿಮಗೆ ಇಷ್ಟ ಇದ್ದರೆ ಸೇವಿಸಿ, ನೀವು ಸೇವಿಸದೇ ಇದ್ದರೆ ಇದನ್ನು ನಾನು ಗಿಡಗಳಿಲ್ಲದ ಸ್ಥಳದಲ್ಲಿ ಚೆಲ್ಲುತ್ತೇನೆ. ಅಥವಾ ಪ್ರಾಣಿಗಳಿಲ್ಲದ ನೀರಿನಲ್ಲಿ ಹರಿದು ಬಿಡುತ್ತೇನೆ.’ಎಂದು ಆಗ ಅವರಲ್ಲಿ ಒಬ್ಬ ಭಿಕ್ಖುವಿಗೆ ಹೀಗೆನ್ನಿಸೀತು “ಭಗವಾನರು ಸಾಕೆನಿಸುವಂತೆ, ಪರಿಪೂರ್ಣವಾಗಿ, ತೃಪ್ತರಾಗಿ ತಿಂದು ಮುಗಿಸಿದ್ದಾರೆ, ಬೇಕಾದಂತೆ, ಹೆಚ್ಚಾಗುವಂತೆ ಆಹಾರ ಸೇವಿಸಿದ್ದಾರೆ, ಆದರೂ ಭಗವಾನರ ಹೆಚ್ಚಿದಂತಹ, ಬಿಡಬೇಕಾದಂತಹ ಪಿಂಡಪಾತ ಇದೆ. ನಾವು ಇದನ್ನು ಸೇವಿಸದೇ ಇದ್ದರೆ ಅದನ್ನು ಭಗವಾನರು ಗಿಡಗಳಿಲ್ಲದ ಸ್ಥಳದಲ್ಲಿ ಚೆಲ್ಲುತ್ತಾರೆ, ಅಥವಾ ಪ್ರಾಣಿಗಳಿರದ ನೀರಿನಲ್ಲಿ ಹರಿದು ಬಿಡುತ್ತಾರೆ. ಆದರೆ ಭಗವಾನರು ಹೀಗೆ ಹೇಳಿದ್ದಾರೆ “ಭಿಕ್ಖುಗಳೇ, ನನ್ನ ಧರ್ಮಕ್ಕೆ (ಆಧ್ಯಾತ್ಮಿಕ) ಬಾಧ್ಯಸ್ಥರಾಗಿ, ಲೌಕಿಕ ಸಂಪತ್ತಿಗೆ ಬಾಧ್ಯಸ್ಥರಾಗಬೇಡಿ,”ಎಂದು. ಆದರೆ ಈ ಪಿಂಡಪಾತವೂ ಸಹ ಲೌಕಿಕ ವಸ್ತು ನಾನು ಈ ಪಿಂಡಪಾತವನ್ನು ಸೇವಿಸದೆ ಹಸಿವು ದುರ್ಬಲತೆಗಳಿಂದ ಈ ದಿನ ರಾತ್ರಿ ಕಳೆಯಬಹುದೇ?’ ಎಂದು ಅವನು ಆ ಪಿಂಡಪಾತವನ್ನು ಸೇವಿಸದೆ ಹಸಿವು ದುರ್ಬಲತೆಗಳಿಂದ ಆ ದಿನ ರಾತ್ರಿಯನ್ನು ಕಳೆದನು.

“ಆಗ ಆ ಎರಡನೆ ಭಿಕ್ಖುವಿಗೆ ಹೀಗೆನಿಸಿತು-ಭಗವಾನರು ಸಾಕೆನಿಸುವಂತೆ, ಪರಿಪೂರ್ಣರಾಗಿ, ತೃಪ್ತರಾಗುವಂತೆ, ಬೇಕಾದಷ್ಟು, ಹೆಚ್ಚಾಗುವಂತೆ ಆಹಾರ ಸೇವಿಸಿದ್ದಾರೆ. ಆದರೂ ಭಗವಾನರ ಹೆಚ್ಚಾದ, ಬಿಡಬೇಕಾದ, ಪಿಂಡಪಾತ ಇದೆ. ನಾವು ಇದನ್ನು ಸೇವಿಸದೇ ಇದ್ದರೆ, ಅದನ್ನು ಭಗವಾನರು ಗಿಡಗಳಿಲ್ಲದ ಸ್ಥಳದಲ್ಲಿ ಚೆಲ್ಲುತ್ತಾರೆ. ಅಥವಾ ಪ್ರಾಣಿಗಳಿರದ ನೀರಿನಲ್ಲಿ ಹರಿದು ಬಿಡುತ್ತಾರೆ. ನಾನು ಈ ಪಿಂಡಪಾತವನ್ನು ಸೇವಿಸಿ ಹಸಿವು ದುರ್ಬಲತೆಗಳನ್ನು ನಾಶಮಾಡಿಕೊಂಡು ಈ ಹಗಲು ರಾತ್ರಿಯನ್ನು ಕಳೆಯಬಹುದೆ? ಆಗ ಅವನು ಆ ಪಿಂಡಪಾತವನ್ನು ಸೇವಿಸಿ, ಹಸಿವು ದುರ್ಬಲತೆಗಳನ್ನು ನಾಶಮಾಡಿಕೊಂಡು ಆ ದಿನ ರಾತ್ರಿಯನ್ನು ಕಳೆಯುತ್ತಾನೆ.

“ಭಿಕ್ಖುಗಳೇ, ಪಿಂಡಪಾತವನ್ನು ಸೇವಿಸಿ ಹಸಿವು ದುರ್ಬಲತೆಗಳನ್ನು ನಾಶಮಾಡಿಕೊಂಡು ಹಗಲು-ರಾತ್ರಿ ಕಳೆದ ಭಿಕ್ಖುವಿಗಿಂತ, ಮೊದಲಿನ ಭಿಕ್ಖುವನ್ನು ನಾನು ಗೌರವಿಸುತ್ತೇನೆ ಹಾಗೂ ಪ್ರಶಂಸಿಸುತ್ತೇನೆ. ಇದಕ್ಕೆ ಏನು ಕಾರಣ? ಭಿಕ್ಖುಗಳೇ, ಆ ಭಿಕ್ಖುವಿಗೆ ಅದರಿಂದ ಬಹುಕಾಲದವರೆಗೂ ಅಲ್ಪೇಚ್ಛೆ, ಸಂತುಷ್ಟಿ, ಸಲ್ಲೇಖತೆ, ತನ್ನನ್ನು ಕಡೆಗಾಣಿಸಿಕೊಳ್ಳುವಿಕೆ, ಸರಳ ಪೋಷಣೆ ಮತ್ತು ಪ್ರಯತ್ನಶೀಲತೆ ಒದಗಿ ಬರುತ್ತವೆ52 . ಆದ್ದರಿಂದ ಭಿಕ್ಖುಗಳೇ, ನನ್ನ (ಆಧ್ಯಾತಿಕ) ಧರ್ಮಕ್ಕೆ ಬಾಧ್ಯಸ್ಥರಾಗಿ, ಲೌಕಿಕ ಸಂಪತ್ತಿಗೆ ಬಾಧ್ಯಸ್ಥರಾಗಬೇಡಿ, ‘ನನ್ನ ಶ್ರಾವಕರು ಧರ್ಮಕ್ಕೆ ಬಾಧ್ಯಸ್ಥರಾಗುವರೆ? ಲೌಕಿಕ ಸಂಪತ್ತಿಗೆ ಹೇಗೆ ಬಾಧ್ಯಸ್ಥರಾಗದಿರುವರೆ? ಎಂದು ನನಗೆ ನಿಮ್ಮ ಮೇಲೆ ಅನುಕಂಪವಿದೆ.”

ಭಗವಾನರು ಹೀಗೆಂದು ನುಡಿದರು. ಹೀಗೆ ನುಡಿದು ‘ಸುಗತರು’ ಆಸನದಿಂದ ಎದ್ದು ಕುಟೀರದೆಡೆಗೆ ನಡೆದರು.

3. ಆಯುಷ್ಮಂತ ಸಾರಿಪುತ್ರರ ಉಪದೇಶ

3. “ಭಗವಾನರು ತೆರಳಿದ ಸ್ವಲ್ಪವೇ ಹೊತ್ತಿಗೆ ಆಯುಷ್ಮಂತ ಸಾರಿಪುತ್ರರು ಭಿಕ್ಖುಗಳನ್ನು ಕರೆದರು-“ ಆಯುಷ್ಮಂತ ಭಿಕ್ಖುಗಳೇ” ಎಂದರು “ಆಯುಷ್ಮಂತರೇ” ಎಂದು ಆ ಭಿಕ್ಖುಗಳೂ ಆಯುಷ್ಮಂತ ಸಾರಿಪುತ್ರರಿಗೆ ಉತ್ತರಿಸಿದರು. ಆಯುಷ್ಮಂತ ಸಾರಿಪುತ್ರರು ಹೀಗೆ ಹೇಳಿದರು.

ಹೇಗೆ ಏಕಾಂತತೆಯ ಆಚರಣೆಯನ್ನು ಕಲಿಯುವುದಿಲ್ಲ.

‘ಆಯುಷ್ಮಂತರೆ, ಹೀಗೆ ಶಾಸ್ತರು ಏಕಾಂತತೆಯಲ್ಲಿ ಇದ್ದರೂ ಕೂಡ ಅವರ ಶ್ರಾವಕರು ಏಕಾಂತತೆಯ ಆಚರಣೆಯನ್ನು ಹೇಗೆ ಮಾಡುವುದಿಲ್ಲ?; ಅಲ್ಲದೆ ಶಾಸ್ತರು ಏಕಾಂತತೆಯಲ್ಲಿ ಇದ್ದರೆ ಅವರ ಶ್ರಾವಕರು ಕೂಡ ಹೇಗೆ ಏಕಾಂತತೆಯ ಆಚರಣೆ ಕಲಿಯುತ್ತಾರೆ?

“ಆಯುಷ್ಮಂತರೇ ಆಯುಷ್ಮಂತ ಸಾರಿಪುತ್ರರ ಹತ್ತಿರಕ್ಕೆ ಈ ಉಪದೇಶದ ಅರ್ಥವನ್ನು ತಿಳಿದುಕೊಳ್ಳಲು ನಾವು ಬಹುದೂರದಿಂದ ಬಂದಿದ್ದೇವೆ. ಉಪದೇಶದ ಅರ್ಥ ಆಯುಷ್ಮಂತ ಸಾರಿಪುತ್ರರಿಗೆ ಗೋಚರವಾದರೆ ಬಹಳ ಒಳ್ಳಯದಾಗುತ್ತದೆ. ಆಯುಷ್ಮಂತ ಸಾರಿಪುತ್ರರಿಂದ ಕೇಳಿಕೊಂಡು ಭಿಕ್ಖುಗಳೂ ಮನಸ್ಸಿನಲ್ಲಿ ಇಟ್ಟುಕೊಳ್ಳುತ್ತಾರೆ.” ಎಂದು.

‘ಹಾಗಾದರೆ, ಆಯುಷ್ಮಂತರೆ ಕೇಳಿ, ಚೆನ್ನಾಗಿ ಮನಸ್ಸಿನಲ್ಲಿ ಇಟ್ಟುಕೊಳ್ಳಿ. ಹೇಳುವೆ’ ಎಂದರು. ‘ಆಗಲಿ ಭಂತೇ’ ಉತ್ತರಿಸಿದರು. ಆಯುಷ್ಮಂತ ಸಾರಿಪುತ್ರರು ಹೀಗೆ ಹೇಳಿದರು-

“ಆಯುಷ್ಮಂತರೇ, ಶಾಸ್ತರು ಏಕಾಂತತೆಯಲ್ಲಿ ಇದ್ದರೂ ಕೂಡ ಶ್ರಾವಕರು ಏಕಾಂತತೆಯ ಆಚರಣೆಯನ್ನು ಹೇಗೆ ಮಾಡುವುದಿಲ್ಲ? ಆಯುಷ್ಮಂತರೇ, ಇಲ್ಲಿ ಶಾಸ್ತರು ಏಕಾಂತತೆಯಲ್ಲಿ ಇದ್ದರೂ ಕೂಡ, ಶ್ರಾವಕರು ಏಕಾಂತತೆಯ ಆಚರಣೆಯನ್ನು ಮಾಡುವುದಿಲ್ಲ - ಯಾವ ವಿಷಯಗಳನ್ನು ತೊಡೆದು ಹಾಕಬೇಕೆಂದು ಶಾಸ್ತರು ಹೇಳುವರೋ ಆ ವಿಷಯಗಳನ್ನು ಅವರು ತೊಡೆದು ಹಾಕಿರುವುದಿಲ್ಲ, ಕಾರ್ಯಚಂಚಲತೆ ಹಾಗೂ ಅಜಾಗರೂಕತೆಯಿಂದ ತಪ್ಪೆಸಗುವುದರಲ್ಲಿ ಮೊದಲಿಗರಾಗಿ, ಏಕಾಂತತೆಯನ್ನು ಬಿಟ್ಟುಬಿಡುವವರು. ಆಗ ಆಯುಷ್ಮಂತರೇ, ಹಿರಿಯ ಭಿಕ್ಖುಗಳು ಮೂರು ಕಾರಣದಿಂದಾಗಿ ತಪ್ಪು ಮಾಡಿದಂತಾಗುತ್ತದೆ53 - ಶಾಸ್ತರು ಏಕಾಂತತೆಯಲ್ಲಿ ಇದ್ದರೂ ಕೂಡ ಶ್ರಾವಕರು ಏಕಾಂತತೆಯ ಆಚರಣೆ ಮಾಡುವುದಿಲ್ಲವೆಂಬ ಮೊದಲನೇ ಕಾರಣಕ್ಕಾಗಿ ಹಿರಿಯ ಭಿಕ್ಖುಗಳು ತಪ್ಪು ಮಾಡಿದಂತಾಗುತ್ತದೆ. ಯಾವ ವಿಷಯಗಳನ್ನು ಅವರು ತೊಡೆದು ಹಾಕಬೇಕೆಂದು ಶಾಸ್ತರು ಹೇಳಿರುವರೋ ಆ ವಿಷಯಗಳನ್ನು ಅವರು ತೊಡೆದುಹಾಕುವುದಿಲ್ಲವೆಂಬ ಈ ಎರಡನೇ ಕಾರಣಕ್ಕಾಗಿ ಹಿರಿಯ ಭಿಕ್ಖುಗಳು ತಪ್ಪು ಮಾಡಿದಂತಾಗುತ್ತದೆ. ಕಾರ್ಯಚಂಚಲತೆ ಹಾಗೂ ಅಜಾಗರೂಕತೆಯಿಂದ ತಪ್ಪಾಗುವುದರಲ್ಲಿ ಮೊದಲಿಗರಾಗಿ ಏಕಾಂತತೆಯನ್ನು ಬಿಟ್ಟುಬಿಡುವವರು ಎಂಬ ಈ ಮೂರನೆ ಕಾರಣಕ್ಕಾಗಿ ಹಿರಿಯ ಭಿಕ್ಖುಗಳು ತಪ್ಪುಮಾಡಿದಂತಾಗುತ್ತದೆ. ಹೀಗೆ ಆಯುಷ್ಮಂತರೇ, ಮಧ್ಯಮ ಭಿಕ್ಖುಗಳೂ ..... ಹೊಸ ಭಿಕ್ಖುಗಳು ಕೂಡ ಮೂರು ಕಾರಣದಿಂದ ತಪ್ಪಿತಸ್ಥರಾಗುತ್ತರೆ. ‘ಶಾಸ್ತರು ಏಕಾಂತತೆಯಲ್ಲಿ ಇರುತ್ತಾರೆ ಶ್ರಾವಕರು ಏಕಾಂತತೆಯ ಆಚರಣೆ ಮಾಡುವುದಿಲ್ಲ ಎಂದು ಈ ಮೊದಲನೆ ಕಾರಣದಿಂದ (ಮಧ್ಯಮ ಮತ್ತು) ಹೊಸಭಿಕ್ಖುಗಳು ತಪ್ಪಿತಸ್ಥರಾಗುತ್ತಾರೆ. ಯಾವ ವಿಷಯಗಳನ್ನು ಶಾಸ್ತರು ಬಿಟ್ಟುಬಿಡಬೇಕೆಂದು ಹೇಳುವರೋ ಆ ವಿಷಯಗಳನ್ನು ಬಿಟ್ಟುಬಿಡುವುದಿಲ್ಲ ಎಂದು ಈ ಎರಡನೆ ಕಾರಣದಿಂದ (ಮಧ್ಯಮ ಮತ್ತು) ಹೊಸ ಭಿಕ್ಖುಗಳು ತಪ್ಪಿತಸ್ಥರಾಗುತ್ತಾರೆ. ಕಾರ್ಯಚಂಚಲರು ಮತ್ತು ಅಜಾಗರೂಕರು, ಆಗಿ ತಪ್ಪು ಮಾಡುವುದರಲ್ಲಿ ಮೊದಲಿಗರಾಗಿ ಹಾಗೂ ಏಕಾಂತತೆಯನ್ನು ಬಿಟ್ಟುಬಿಡುವರು ಎಂದು ಈ ಮೂರನೇ ಕಾರಣದಿಂದಾಗಿ ಹೊಸ ಭಿಕ್ಖುಗಳು ತಪ್ಪಿತಸ್ಥರಾಗುತ್ತಾರೆ, ಹೊಸ ಭಿಕ್ಖುಗಳು, ಆಯುಷ್ಮಂತರೇ, ಈ ಮೂರು ಕಾರಣಗಳಿಂದಾಗಿ ತಪ್ಪಿತಸ್ಥರಾಗುತ್ತಾರೆ, ಹೀಗೆಯೇ, ಆಯುಷ್ಮಂತರೇ, ಶಾಸ್ತರು ಏಕಾಂತತೆಯಲ್ಲಿ ಇದ್ದರೂ ಕೂಡ ಶ್ರಾವಕರು ಏಕಾಂತತೆಯ ಆಚರಣೆ ಮಾಡುವುದಿಲ್ಲ.

ಹೇಗೆ ಏಕಾಂತತೆಯ ಆಚರಣೆಯ ಮಾಡುತ್ತಾರೆ

4. “ಮತ್ತ್ತೆ ಆಯುಷ್ಮಂತರೇ, ಹೇಗೆ ಶಾಸ್ತರು ಏಕಾಂತತೆಯಿಂದ ಇದ್ದರೂ ಶ್ರಾವಕರೂ ಕೂಡ ಏಕಾಂತತೆಯ ಆಚರಣೆ ಕಲಿಯುತ್ತಾರೆ? ಆಯುಷ್ಮಂತರೇ, ಹೇಗೆ ಶಾಸ್ತರು ಏಕಾಂತತೆಯಿಂದ ಇದ್ದರೂ ಶ್ರಾವಕರೂ ಕೂಡ ಏಕಾಂತತೆಯ ಆಚರಣೆ ಮಾಡುತ್ತಾರೆ ಎಂದರೆ ಯಾವ ವಿಷಯಗಳನ್ನು ಶಾಸ್ತರು ಬಿಟ್ಟುಬಿಡಬೇಕೆಂದು ಹೇಳುವರೋ ಆ ವಿಷಯಗಳನ್ನು ಅವರು ಬಿಟ್ಟು ಬಿಡುತ್ತಾರೆ. ಹಾಗೂ ಕಾರ್ಯಚಂಚಲರೂ ಆಗದೆ ತಪ್ಪು ಮಾಡುವುದನ್ನು ಮತ್ತು ಅಜಾಗರೂಕತೆಯನ್ನು ಬಿಟ್ಟು ಏಕಾಂತತೆಯಲ್ಲಿ ಮೊದಲಿಗರಾಗುತ್ತಾರೆ. ಇಲ್ಲಿ ಆಯುಷ್ಮಂತರೆ, ಹಿರಿಯ ಭಿಕ್ಖುಗಳು ಈ ಮೂರು ಕಾರಣದಿಂದ ಪ್ರಶಂಸನೀಯರಾಗುತ್ತಾರೆ ‘ಶಾಸ್ತರು ಏಕಾಂತದಿಂದ ಇರುತ್ತಾರೆ. ಶ್ರಾವಕರೂ ಕೂಡ ಏಕಾಂತತೆಯ ಆಚರಣೆ ಮಾಡುತ್ತಾರೆ’ ಎಂಬ ಈ ಮೊದಲನೆ ಕಾರಣದಿಂದ ಹಿರಿಯ ಭಿಕ್ಖುಗಳು ಪ್ರಶಂಸನೀಯರಾಗುತ್ತಾರೆ. ‘ಯಾವ ವಿಷಯಗಳನ್ನು ಶಾಸ್ತರು ಬಿಟ್ಟು ಬಿಡುತ್ತಾರೆ. ಆ ವಿಷಯಗಳನ್ನು ಇವರೂ ಬಿಟ್ಟು ಬಿಡುತ್ತಾರೆ ಎಂಬ ಈ ಎರಡನೇ ಕಾರಣದಿಂದ ಹಿರಿಯ ಭಿಕ್ಖುಗಳು ಪ್ರಶಂಸನೀಯರಾಗುತ್ತಾರೆ. ‘ಕಾರ್ಯಚಂಚಲರಲ್ಲದವರೂ, ಅಜಾಗರೂಕರಲ್ಲದವರೂ. ತಪ್ಪುಮಾಡುವುದನ್ನು ಬಿಟ್ಟ್ಟು ಬಿಡುವವರೂ, ಏಕಾಂತತೆಯಲ್ಲಿ ಮೊದಲಿಗರು’ ಎಂಬ ಈ ಮೂರನೆ ಕಾರಣದಿಂದ ಹಿರಿಯ ಭಿಕ್ಖುಗಳು ಪ್ರಶಂಸನೀಯರಾಗುತ್ತಾರೆ. ಆಯುಷ್ಮಂತರೇ, ಹಿರಿಯ ಭಿಕ್ಖುಗಳು ಈ ಮೂರು ಕಾರಣಗಳಿಂದ ಪ್ರಶಂಸನೀಯರಾಗುತ್ತಾರೆ. ಇಲ್ಲಿ, ಮಧ್ಯಮ ಭಿಕ್ಖುಗಳೂ.... ಹೊಸ ಭಿಕ್ಖುಗಳೂ ಕೂಡ ಮೂರು ಕಾರಣದಿಂದಾಗಿ ಪ್ರಶಂಸನೀಯರಾಗುತ್ತಾರೆ. ‘ಶಾಸ್ತರು ಏಕಾಂತದಿಂದ ಇರುತ್ತಾರೆ ಶ್ರಾವಕರೂ ಕೂಡ ಏಕಾಂತತೆಯ ಆಚರಣೆ ಮಾಡುತ್ತಾರೆ’ ಎಂಬ ಈ ಮೊದಲನೆ ಕಾರಣದಿಂದ (ಮಧ್ಯಮ ಮತ್ತು) ಹೊಸ ಭಿಕ್ಖುಗಳೂ ಪ್ರಶಂಸನೀಯರಾಗುತ್ತಾರೆ. ಯಾವ ವಿಷಯಗಳನ್ನು ಶಾಸ್ತರು ಬಿಟ್ಟು ಬಿಡಬೇಕೆಂದು ಹೇಳಿರುವರೋ ಆ ವಿಷಯಗಳನ್ನು ಅವರು ಬಿಟ್ಟುಬಿಡುತ್ತಾರೆ’ ಎಂಬ ಈ ಎರಡನೆ ಕಾರಣದಿಂದ (ಮಧ್ಯಮ ಮತ್ತು) ಹೊಸ ಭಿಕ್ಖುಗಳು ಪ್ರಶಂಸನೀಯರಾಗುತ್ತಾರೆ. ಕಾರ್ಯಚಂಚಲರಲ್ಲದವರೂ, ಅಜಾಗರೂಕರಲ್ಲದವರೂ, ತಪ್ಪು ಮಾಡುವುದನ್ನು ಬಿಟ್ಟು ಬಿಡುವವರೂ ಏಕಾಂತತೆಯಲ್ಲಿ ಮೊದಲಿಗರೂ’ ಎಂಬ ಈ ಮೂರನೇ ಕಾರಣದಿಂದ (ಮಧ್ಯಮ ಮತ್ತು) ಹೊಸ ಭಿಕ್ಷಗಳು ಪ್ರಶಂಸನೀಯರಾಗುತ್ತಾರೆ. ಆಯುಷ್ಮಂತರೇ, ಹೊಸ ಭಿಕ್ಖುಗಳು ಈ ಮೂರು ಕಾರಣದಿಂದ ಪ್ರಶಂಸನೀಯರಾಗುತ್ತಾರೆ. ಹೀಗೆಯೇ, ಆಯುಷ್ಮಂತರೇ, ಶಾಸ್ತರು ಏಕಾಂತತೆಯಿಂದ ಇರುತ್ತಾರೆ, ಶ್ರಾವಕರೂ ಏಕಾಂತತೆಯ ಆಚರಣೆಯ ಮಾಡುತ್ತಾರೆ.

ಪಾಪ ವಿಷಯಗಳನ್ನು ತೊರೆಯಬೇಕಾದಲ್ಲಿ ಮಧ್ಯಮ ಮಾರ್ಗ

5. “ಇಲ್ಲಿ ಆಯುಷ್ಮಂತರೇ, ಲೋಭವೇ ಪಾಪ (ಪಾಪದ ಮೂಲ) ದ್ವೇಷವೇ ಪಾಪ (ಪಾಪದ ಮೂಲ)54 ಲೋಭವನ್ನು ನಾಶ ಮಾಡುವುದಕ್ಕೆ ಮತ್ತು ದ್ವೇಷವನ್ನು ನಾಶ ಮಾಡುವುದಕ್ಕೆ; ಕಣ್ಣು ತೆರೆಸುವ, ಜ್ಞಾನ ನೀಡುವ ಉಪಶಮನಕರವಾದ ಪ್ರತ್ಯಕ್ಷ ದರ್ಶನಕ್ಕೆ ಸಂಬೋಧಿಗೆ ನಿಬ್ಬಾಣಕ್ಕೆ ಕರೆದೊಯ್ಯುವಂತಹ ಮಧ್ಯಮ ಪ್ರತಿಪದ ಇದೆ. ಯಾವುದು ಆ ಮಧ್ಯಮ ಪತಿಪದ- ಆಯುಷ್ಮಂತರೇ, ಕಣ್ಣು ತೆರೆಸುವುದು, ಜ್ಞಾನ ನೀಡುವುದು, ಉಪಶಮನಗೊಳಿಸುವುದು, ಪ್ರತ್ಯಕ್ಷದರ್ಶನದ ಸಂಬೋಧಿಯ ನಿರ್ವಾಣಕ್ಕೆ ಕರೆದೊಯ್ಯುವಂತಹದು. ಇದೇ ಆ ಆರ್ಯ ಅಷ್ಟಾಂಗಿಕ (ಎಂಟು ಅಂಗಗಳ) ಮಾರ್ಗ. ಅವುಗಳು- ಸಮ್ಯಕ್ ದೃಷ್ಟಿ, ಸಮ್ಯಕ್ ಸಂಕಲ್ಪ, ಸಮ್ಯಕ್ ವಚನ, ಸಮ್ಯಕ್ ಕರ್ಮಾಂತ, ಸಮ್ಯಕ್ ಆಜೀವ, ಸಮ್ಯಕ್ ವಾಯಾಮ, ಸಮ್ಯಕ್ ಸತಿ, ಸಮ್ಯಕ್ ಸಮಾಧಿ. ಆಯುಷ್ಮಂತರೇ, ಕಣ್ಣು ತೆರೆಸುವ ಜ್ಞಾನ ನೀಡುವ, ಉಪಶಮನಗೊಳಿಸುವ ಪ್ರತ್ಯಕ್ಷದರ್ಶನದ, ಸಂಬೋಧಿಯ, ನಿಬ್ಬಾಣಕ್ಕೆ ಕರೆದೊಯ್ಯುವಂತಹದು. ಇದೇ ಆ ಮಧ್ಯಮ ಪ್ರತಿಪದ.55

“ಇಲ್ಲಿ ಆಯುಷ್ಮಂತರೇ, ಕ್ರೋಧವೇ ಪಾಪ, ಸೇಡೇ ಪಾಪ ಕಡೆನುಡಿಯೇ ಪಾಪ, ದರ್ಪವೇ ಪಾಪ ಈರ್ಷೆಯೇ, ಪಾಪ, ಮಚ್ಚರವೇ (ಮತ್ಸರವೇ) ಪಾಪ. ಮೋಸವೇ ಪಾಪ, ವಂಚನೆಯೇ ಪಾಪ, ಹಠಮಾರಿತನವೆ ಪಾಪ, ಸೊಕ್ಕೇ ಪಾಪ, ಅಹಂಕಾರವೇ ಪಾಪ, ದುರಭಿಮಾನವೇ ಪಾಪ ಮದವೇ ಪಾಪ, ಎಚ್ಚರಿಕೆಯಿಲ್ಲದ ಸ್ಥಿತಿಯೇ ಪಾಪ, ಮದವನ್ನು ನಾಶಮಾಡುವುದಕ್ಕೆ ಮತ್ತು ಎಚ್ಚರಿಕೆ ಇಲ್ಲದ ಸ್ಥಿತಿ ನಾಶ ಮಾಡುವುದಕ್ಕೆ ಮಧ್ಯಮ ಪ್ರತಿಪದವು ಇದೆ. ಯಾವುದು ಕಣ್ಣು ತೆರೆಸುವುದೋ, ಜ್ಞಾನ ನೀಡುವುದೊ, ಉಪಶಮನಗೊಳಿಸುವುದೋ ಪ್ರತ್ಯಕ್ಷ ದರ್ಶನಕ್ಕೆ, ಸಂಬೋಧಿಗೆ ನಿಬ್ಬಾಣಕ್ಕೆ ಕರೆದೊಯ್ಯುವಂತಹುದೊ, ಅಂತಹ ಮಧ್ಯಮ ಪ್ರತಿಪದವು ಇದೆ. ಆಯುಷ್ಮಂತರೇ, ಕಣ್ಣು ತೆರೆಸುವ ಜ್ಞಾನ ನೀಡುವ ಉಪಶಮನಗೊಳಿಸುವ, ಪ್ರತ್ಯಕ್ಷ ದರ್ಶನದ ಸಂಭೋಧಿಯ ನಿರ್ವಾಣಕ್ಕೆ ಕರೆದೊಯ್ಯುವಂತಹ ಆ ಮಧ್ಯಮ ಪ್ರತಿಪದ ಯಾವುದದು? ಇದೇ ಆ ಆರ್ಯ ಅಷ್ಟಾಂಗಿಕ ಮಾರ್ಗ. ಅವುಗಳು-ಸಮ್ಯಕ್ ದೃಷ್ಟಿ, ಸಮ್ಯಕ್ ಸಂಕಲ್ಪ, ಸಮ್ಯಕ್ ವಚನ, ಸಮ್ಯಕ್ ಕರ್ಮಾಂತ, ಸಮ್ಯಕ್ ಆಜೀವ, ಸಮ್ಯಕ್ ವಾಯಾಮ, ಸಮ್ಯಕ್ ಸತಿ, ಸಮ್ಯಕ್ ಸಮಾಧಿ. ಆಯುಷ್ಮಂತರೇ, ಇದೇ ಆ ಮಧ್ಯಮ. ಪ್ರತಿಪದವು ಕಣ್ಣು ತೆರೆಸುವಂತಹದು, ಜ್ಞಾನ ನೀಡುವುದು ಉಪಶಮನಗೊಳಿಸಿ ಪ್ರತ್ಯಕ್ಷ ದರ್ಶನದ ಸಂಬೋಧಿಗೆ ನಿರ್ವಾಣಕ್ಕೆ ಕರೆದೊಯ್ಯುವಂತಹದು.

ಆಯುಷ್ಮಂತ ಸಾರಿಪುತ್ರರು ಇದನ್ನು ಹೇಳಿದರು. ಸಮಾಧಾನ ಪಡೆದ ಆ ಭಿಕ್ಖುಗಳು ಆಯುಷ್ಮಂತ ಸಾರಿಪುತ್ರರ ಉಪದೇಶದಿಂದ ಆನಂದಗೊಂಡರು.

ಇಲ್ಲಿಗೆ ಧರ್ಮದಾಯಾದ ಸುತ್ತ ಮುಗಿಯಿತು.

ಟಿಪ್ಪಣಿಗಳು [4]