1. ದುರ್ಗತಿ ಸುಗತಿಗಳ ಮೂಲ
ಹೀಗೆ ನಾನು ಕೇಳಿದ್ದೇನೆ. ಒಂದುಸಲ ಭಗವಾನರು ಸಾವತ್ಥಿಯ ಅನಾಥಪಿಂಡಿಕನ ಜೇತವನದಲ್ಲಿನ ವಿಹಾರದಲ್ಲಿ ತಂಗಿದ್ದರು. ಆ ಸಮಯದಲ್ಲಿ ವೇರಂಜದ ಬ್ರಾಹ್ಮಣ ಗೃಹಸ್ಥರುಗಳು ಯಾವುದೋ ಒಂದು ಕಾರಣಕ್ಕಾಗಿ ಶ್ರಾವಸ್ಥಿಗೆ ಆಗಮಿಸಬೆಕಾಗಿ ಬಂತು. ಆ ಬ್ರಾಹ್ಮಣ ಗೃಹಸ್ಥರು ಹೀಗೆ ಕೇಳಿದ್ದರು- “ಗೌತಮ ಎಂಬ ಹೆಸರಿನ ಪೂಜ್ಯ ಶ್ರಮಣರು, ಸಾಕ್ಯಪುತ್ರರು, ಸಾಕ್ಯ ಕುಲದಿಂದ ಶ್ರಮಣರಾದವರು, ಸಾವತ್ಥಿಯ ಅನಾಥಪಿಂಡಿಕನ ಜೇತವನದಲ್ಲಿನ ವಿಹಾರದಲ್ಲಿ ತಂಗಿದ್ದಾರೆ. ಆ ಪೂಜ್ಯ ಗೌತಮರ ಬಗ್ಗೆ ಈ ರೀತಿಯಾಗಿ ಕೀರ್ತಿ ಕಲ್ಯಾಣ ಗುಣಗಳು ಹರಡಿ ಪ್ರಸಿದ್ಧವಾಗಿವೆ. ‘ನಿಜಕ್ಕೂ ಆ ಭಗವಾನರು ಈ ರೀತಿ ಇರುವರು, ಅವರು ಅರಹಂತರು, ಸಮ್ಯಕ್ ಸಂಬುದ್ಧರು, ವಿದ್ಯಾಚರಣಸಂಪನ್ನರು, ಸುಗತರು, ಲೋಕಜ್ಞರು, ಜೀವಿಗಳನ್ನು ಪಳಗಿಸುವ ಅಸಮಾನ ಸಾರಥಿ (ಮಾರ್ಗದರ್ಶಿ), ದೇವತೆ ಹಾಗು ಮಾನವರ ಶಾಸ್ತರು (ಶ್ರೇಷ್ಠ ಗುರು), ಬುದ್ಧರು (ಬೋಧಿ ಪಡೆದವರು ಹಾಗು ಬೋಧಿ ಪಡೆಯಲು ಮಾರ್ಗದರ್ಶನ ನೀಡುವವರು) ಹಾಗು ಭಗವಾನರು. ಅವರು ಈ ಲೋಕವನ್ನು ದೇವರುಗಳಿಂದ ಕೂಡಿದ, ಮಾರನಿಂದ ಕೂಡಿದ, ಬ್ರಹ್ಮನಿಂದ ಕೂಡಿದ, ಶ್ರಮಣ ಬ್ರಾಹ್ಮಣರಿಂದ ಕೂಡಿದ, ಪ್ರಜೆಗಳಿಂದ ಕೂಡಿದ, ರಾಜ ಮತ್ತು ಮನುಷ್ಯರಿಂದ ಕೂಡಿದ ಇವೆಲ್ಲವನ್ನೂ, ತಾವೇ ಸ್ವತಃ ಜ್ಞಾನದಿಂದ ಅರಿತಿದ್ದು, ತಿಳಿಸಿ ಹೇಳುತ್ತಾರೆ. ಅವರು ಪದ ಮತ್ತು ಅರ್ಥ ಎರಡರಲ್ಲೂ, ಆರಂಭದಲ್ಲಿ ಕಲ್ಯಾಣದಾಯಕವಾದ, ಮಧ್ಯದಲ್ಲಿ ಕಲ್ಯಾಣದಾಯಕವಾದ, ಕೊನೆಯಲ್ಲಿ ಕಲ್ಯಾಣದಾಯಕವಾದ ಧರ್ಮವನ್ನು ಉಪದೇಶಿಸುತ್ತಾರೆ. ಪರಮ ಪರಿಪೂರ್ಣವಾದ ಪರಿಶುದ್ಧವಾದ ಬ್ರಹ್ಮಚರ್ಯ ಜೀವನವನ್ನು ತಿಳಿಸುತ್ತಾರೆ; ಸರಿ, ಅಂತಹ ಅರಹಂತರನ್ನು ದರ್ಶಿಸುವುದು ಬಹಳ ಸೌಭಾಗ್ಯದಾಯಕ” ಎಂದು.
2. ಆಗ ವೇರಂಜದ ಬ್ರಾಹ್ಮಣ ಗೃಹಸ್ಥರುಗಳು ಭಗವಾನರು ಎಲ್ಲಿದ್ದರೋ ಅಲ್ಲಿಗೆ ಬಂದರು. ಬಂದನಂತರ ಕೆಲವರು ಭಗವಾನರಿಗೆ ನಮಸ್ಕರಿಸಿ ಒಂದೆಡೆ ಕುಳಿತರು; ಕೆಲವರು ಭಗವಾನರ ಜೊತೆ ಕುಶಲ ವಿಚಾರಿಸಿದರು; ಕುಶಲ ಮಾತುಕತೆ ಮುಗಿದ ನಂತರ ಒಂದೆಡೆ ಕುಳಿತುಕೊಂಡರು; ಕೆಲವರು ಭಗವಾನರಿಗೆ ಕೈ ಜೋಡಿಸಿ ನಮಸ್ಕರಿಸಿ ಒಂದೆಡೆ ಕುಳಿತರು; ಕೆಲವರು ಭಗವಾನರಲ್ಲಿಗೆ ಹೋಗಿ ಹೆಸರು ಗೊತ್ರ ತಿಳಿಸಿ ಒಂದೆಡೆ ಕುಳಿತರು; ಕೆಲವರು ಮೌನವಾಗಿ ಉಳಿದು ಒಂದೆಡೆ ಕುಳಿತರು. ಒಂದೆಡೆ ಕುಳಿತುಕೊಂಡ ಆ ಸಾಲಾದ ಬ್ರಾಹ್ಮಣ ಗೃಹಸ್ಥರು ಭಗವಾನರಿಗೆ ಹೀಗೆ ಹೇಳಿದರು- “ಪೂಜ್ಯ ಗೌತಮರೇ, ಯಾವ ಮೂಲದಿಂದಾಗಿ, ಯಾವ ಕಾರಣದಿಂದಾಗಿ ಇಲ್ಲಿ ಕೆಲವು ಜೀವಿಗಳು ಸಾವಿನ ನಂತರ, ಶರೀರ ಕಳೆದುಕೊಂಡ ಮೇಲೆ ಅಪಾಯ ಸ್ಥಿತಿಯಲ್ಲಿ, ದುರ್ಗತಿಯಲ್ಲಿ, ಅಧೋಗತಿಯಲ್ಲಿ, ನರಕದಲ್ಲಿ ಹುಟ್ಟಿಬರುತ್ತವೆ? ಪೂಜ್ಯ ಗೌತಮ, ಯಾವ ಮೂಲದಿಂದಾಗಿ ಯಾವ ಕಾರಣದಿಂದಾಗಿ ಕೆಲವು ಜೀವಿಗಳು ಸಾವಿನ ನಂತರ ಶರೀರ ಕಳೆದುಕೊಂಡ ಮೇಲೆ ಸುಗತಿಯಲ್ಲಿ ಸ್ವರ್ಗ ಲೋಕದಲ್ಲಿ ಹುಟ್ಟಿಬರುತ್ತವೆ” ಎಂದು?
2. ಅಧರ್ಮ ಚರ್ಯೆಯಿಂದಾಗಿ ದುರ್ಗತಿ
3. “ಅಧರ್ಮ ಆಚಾರದಿಂದಾಗಿ, ದುಷ್ಟ ದುರಾಚಾರದ ಕಾರಣದಿಂದಾಗಿ ಗೃಹಸ್ಥರುಗಳೇ, ಇಲ್ಲಿಯ ಕೆಲವು ಜೀವಿಗಳು ಸಾವಿನ ನಂತರ ಶರೀರ ಕಳೆದುಕೊಂಡ ಮೇಲೆ ಅಪಾಯ ಸ್ಥಿತಿಯಲ್ಲಿ, ದುರ್ಗತಿಯಲ್ಲಿ ಅಧೋಗತಿಯಲ್ಲಿ ನರಕದಲ್ಲಿ ಹುಟ್ಟಿಬರುತ್ತವೆ. ಧರ್ಮಾನುಸರಣೆಯಿಂದಾಗಿ, ಒಳ್ಳೆಯ ನಡವಳಿಕೆಯ ಕಾರಣದಿಂದಾಗಿ ಗೃಹಸ್ಥರುಗಳೇ, ಇಲ್ಲಿಯ ಕೆಲವು ಜೀವಿಗಳು ಸಾವಿನ ನಂತರ ಶರೀರ ಕಳೆದುಕೊಂಡಮೇಲೆ ಸುಗತಿಯಲ್ಲಿ, ಸ್ವರ್ಗಲೋಕದಲ್ಲಿ ಹುಟ್ಟಿಬರುತ್ತವೆ” ಎಂದು.
“ಪೂಜ್ಯ ಗೌತಮರು, ಸಂಕ್ಷಿಪ್ತವಾಗಿ ಹೇಳಿ, ಪೂರ್ಣವಾಗಿ ಅರ್ಥವನ್ನು ತಿಳಿಸದೇ ವಿವರಿಸಿ ತಿಳಿಸಿದ ಈ ವಿಷಯದ, ಪೂರ್ಣ ಅರ್ಥದ ಅರಿವು ನಮಗೆ ತಿಳಿಯಲಿಲ್ಲ. ಪೂಜ್ಯ ಗೌತಮರು ಆ ಧರ್ಮವನ್ನು ಉಪದೇಶಿಸಿದರೆ ಬಹಳ ಒಳ್ಳೆಯದಾಗುತ್ತದೆ. ಅದರಿಂದಾಗಿ ನಾವುಗಳು ಪೂಜ್ಯ ಗೌತಮರು ಸಂಕ್ಷಿಪ್ತವಾಗಿ ತಿಳಿಸಿದ, ಪೂರ್ಣವಾಗಿ ವಿವರಿಸದೇ ಇರುವ ಅರ್ಥವನ್ನು ವಿವರಿಸಿ ಹೇಳಿದಾಗ ಅದರ ಅರ್ಥವನ್ನು ತಿಳಿಯಬಹುದು” ಎಂದು.
“ಗೃಹಸ್ಥರೇ, ಹಾಗೇ ಆಗಲಿ, ಆಲಿಸಿ, ಚೆನ್ನಾಗಿ ಮನಸ್ಸಿಟ್ಟು ತಿಳಿದುಕೊಳ್ಳಿ, ನಾನೀಗ ಹೇಳುತ್ತೇನೆ” ಎಂದು.
“ಹಾಗೆಯೇ ಆಗಲಿ, ಪೂಜ್ಯರೇ” ಎಂದು ಆ ವೇರಂಜದ ಬ್ರಾಹ್ಮಣ ಗೃಹಸ್ಥರು ಭಗವಾನರಿಗೆ ಉತ್ತರಿಸಿದರು. ಭಗವಾನರು ಹೀಗೆ ಹೇಳಿದರು-
4. “ಗೃಹಸ್ಥರೇ, ಮೂರು ರೀತಿಯ ಶರೀರದಿಂದಾಗುವ ಅಧರ್ಮಾಚರಣೆಗಳು, ಕೆಟ್ಟ ನಡವಳಿಕೆಗಳು ಉಂಟು. ನಾಲ್ಕು ರೀತಿಯ ಮಾತಿನಿಂದಾಗುವ ಅಧರ್ಮಾಚರಣೆಗಳು ಕೆಟ್ಟ ನಡವಳಿಕೆಗಳು ಉಂಟು. ಮೂರು ರೀತಿಯಾಗಿ ಮನಸ್ಸಿನಿಂದಾಗುವ ಅಧರ್ಮಾಚಣರೆಗಳು ಕೆಟ್ಟ ನಡವಳಿಕೆಗಳು ಉಂಟು.
“ಗೃಹಸ್ಥರೇ, ಇರುವ ಮೂರು ರೀತಿಯ ಶರೀರದಿಂದಾಗುವ ಅಧರ್ಮಾಚರಣೆ ಕೆಟ್ಟ ನಡವಳಿಕೆಗಳು ಯಾವುವು? ಗೃಹಸ್ಥರೇ, ಇಲ್ಲಿ ಒಬ್ಬನು ಪ್ರಾಣಿಹತ್ಯೆಯನ್ನು ಮಾಡುವವನಾಗುತ್ತಾನೆ... ತನಗೆ ಕೊಡದಿದ್ದುದನ್ನು ತೆಗೆದುಕೊಳ್ಳುವವನಾಗುತ್ತಾನೆ... ಕಾಮ ಸಂಬಂಧವಾದ ಆಸೆ ಹೊಂದಿರುವವನಾಗುತ್ತಾನೆ... ಚರಿತ್ರಹೀನನಾಗುತ್ತಾನೆ. ಗೃಹಸ್ಥರೇ, ಇವೇ ಆ ಮೂರುರೀತಿಯ ಶರೀರದಿಂದಾಗುವ ಅಧರ್ಮಾಚರಣೆಗಳು, ಕೆಟ್ಟ ನಡವಳಿಕೆಗಳು.
“ಗೃಹಸ್ಥರೇ, ಇನ್ನು ಆ ನಾಲ್ಕು ರೀತಿಯ ಮಾತಿನಿಂದಾಗುವ ಅಧರ್ಮಾಚರಣೆ ಕೆಟ್ಟ ನಡವಳಿಕೆಗಳು ಯಾವುವು? ಗೃಹಸ್ಥರೇ, ಇಲ್ಲಿ ಒಬ್ಬನು ಸುಳ್ಳು ಹೇಳುವವನಾಗುತ್ತಾನೆ... ಚಾಡಿ ಹೇಳುವವನಾಗುತ್ತಾನೆ... ಕಠೋರವಾದ ಮಾತುಗಳನ್ನು ಆಡುವವನಾಗುತ್ತಾನೆ... ಹರಟೆ ಹೊಡೆಯುವವನಾಗುತ್ತಾನೆ... ಗೃಹಸ್ಥರೇ, ಹೀಗೆ ಇವೇ ನಾಲ್ಕು ರೀತಿಯ ಮಾತಿನ ಅಧರ್ಮಾಚರಣೆ ಮತ್ತು ದುಷ್ಟ ದುರಾಚಾರಗಳು.
“ಗೃಹಸ್ಥರೇ, ಇರುವ ಆ ಮೂರು ರೀತಿಯ ಮನಸ್ಸಿನ ಅಧರ್ಮಾಚಾರ ಮತ್ತು ದುಷ್ಟದುರಾಚಾರಗಳು ಯಾವುವು? ಗೃಹಸ್ಥರೇ ಇಲ್ಲಿ ಒಬ್ಬನು ದುರಾಸೆಯುಳ್ಳವನಾಗುತ್ತಾನೆ. ಹಗೆತನದ ಮನಸ್ಸುಳ್ಳವನಾಗುತ್ತಾನೆ... ಮಿಥ್ಯಾದೃಷ್ಟಿಯುಳ್ಳವನಾಗುತ್ತಾನೆ... ಏನೂ ಇಲ್ಲಾ ಎನ್ನುವ ಭಾವನೆಯುಳ್ಳವನಾಗುತ್ತಾನೆ... ತನಗೆ ತಾನೇ ಪಡೆದುಕೊಂಡು ಉಳಿಯುತ್ತಾನೆ ಎಂದು. ಗೃಹಸ್ಥರೇ, ಇವೇ ಆ ಮೂರು ರೀತಿಯ ಮನಸ್ಸಿನ ಅಧರ್ಮ ಆಚಾರಗಳು ಮತ್ತು ದುಷ್ಟ ದುರಾಚಾರಗಳು.
“ಗೃಹಸ್ಥರೇ, ಹೀಗೆ ಅಧರ್ಮ ಆಚಾರದಿಂದಾಗಿ ದುಷ್ಟ ದುರಾಚಾರದ ಕಾಣದಿಂದಾಗಿ, ಇಲ್ಲಿ ಕೆಲವು ಜೀವಿಗಳು ಸಾವಿನ ನಂತರ ಶರೀರ ಕಳೆದುಕೊಂಡಮೇಲೆ ಅಪಾಯ ಸ್ಥಿತಿಯಲ್ಲಿ, ದುರ್ಗತಿಯಲ್ಲಿ, ಅಧೋಗತಿಯಲ್ಲಿ, ನರಕದಲ್ಲಿ ಹುಟ್ಟಿಬರುತ್ತವೆ.
3. ಧರ್ಮ ಚರ್ಯೆಯಿಂದಾಗಿ ಸುಗತಿ
5. “ಗೃಹಸ್ಥರೇ, ಮೂರು ವಿಧದ ಶರೀರದ ಧರ್ಮ ಆಚಾರಗಳು ಮತ್ತು ಒಳ್ಳೆಯ ಸದಾಚಾರಗಳಿವೆ. ನಾಲ್ಕು ವಿಧದ ಮಾತಿನ ಧರ್ಮ ಆಚಾರ ಮತ್ತು ಒಳ್ಳೆಯ ಸದಾಚಾರಗಳಿವೆ, ಮೂರು ವಿಧದ ಮನಸ್ಸಿನ ಧರ್ಮ ಆಚಾರಗಳು ಮತ್ತು ಒಳ್ಳೆಯ ಸದಾಚಾರಗಳಿವೆ.
“ಗೃಹಸ್ಥರೇ, ಮೂರುರೀತಿಯ ಶರೀರದ ಧರ್ಮ ಆಚಾರಗಳು ಮತ್ತು ಒಳ್ಳೆಯ ಸದಾಚಾರಗಳು ಯಾವುವು? ಗೃಹಸ್ಥರೇ, ಇಲ್ಲಿ ಒಬ್ಬನು ಪ್ರಾಣಿಹತ್ಯೆ ಮಾಡುವುದನ್ನು ಬಿಟ್ಟು ಪ್ರಾಣಿಹತ್ಯೆ ಮಾಡುವುದರಿಂದ ವಿರತನಾಗುತ್ತಾನೆ. ಕಳುವು ಮಾಡುವುದನ್ನು ಬಿಟ್ಟು, ಕಳುವು ಮಾಡುವುದರಿಂದ ವಿರತನಾಗುತ್ತಾನೆ, ಕಾಮ ಸಂಬಂಧದ ಆಸೆ ಬಿಟ್ಟು ಕಾಮ ಸಂಬಂಧದ ಆಸೆಯಿಂದ ವಿರತನಾಗಿ ಉಳಿಯುತ್ತಾನೆ. ಆ ರೀತಿಯವರಲ್ಲಿ ಕಾಮದ ಚಾರಿತ್ರ್ಯಹೀನನಾಗುವುದಿಲ್ಲ. ಗೃಹಸ್ಥರೇ, ಇವೇ ಆ ಮೂರು ರೀತಿಯ ಶರೀರದ ಧರ್ಮ-ಆಚಾರ ಮತ್ತು ಒಳ್ಳೆಯ ಸದಾಚಾರಗಳು.
“ಗೃಹಸ್ಥರೇ, ನಾಲ್ಕು ರೀತಿಯ ಮಾತಿನ ಧರ್ಮ ಆಚಾರ ಮತ್ತು ಒಳ್ಳೆಯ ಸದಾಚಾರಗಳು ಯಾವುವು? ಗೃಹಸ್ಥರೇ, ಇಲ್ಲಿ ಒಬ್ಬನು ಸುಳ್ಳು ಹೇಳುವುದನ್ನು ಬಿಟ್ಟು, ಸುಳ್ಳು ಮಾತಿನಿಂದ ವಿರತನಾಗುತ್ತಾನೆ... ಚಾಡಿ ಹೇಳುವುದನ್ನು ಬಿಟ್ಟು ಚಾಡಿ ಹೇಳುವುದರಿಂದ ವಿರತನಾಗುತ್ತಾನೆ... ಹರಟೆ ಹೊಡೆಯುವುದನ್ನು ಬಿಟ್ಟು ಹರಟೆ ಹೊಡೆಯುವುದರಿಂದ ವಿರತನಾಗುತ್ತಾನೆ... ಸವೇಳೆಯ, ಸಉಸಂಬದ್ಧವಾಗ ಗುರಿಯುಳ್ಳ ನಿಶ್ಚಿತ ಧ್ಯೇಯದ ಮಾತುಗಳನ್ನು ಆಡುವವನಾಗುತ್ತಾನೆ. ಗೃಹಸ್ಥರೇ, ಇವೇ ಆ ನಾಲ್ಕು ವಿಧದ ಮಾತಿನ ಧರ್ಮ ಆಚಾರಗಳು ಮತ್ತು ಒಳ್ಳೆಯ ಸದಾಚಾರಗಳು.
“ಗೃಹಸ್ಥರೇ, ಇರುವ ಆ ಮೂರು ರೀತಿಯ ಮನಸ್ಸಿನ ಧರ್ಮ ಆಚಾರಗಳು- ಒಳ್ಳೆಯ ಸದಾಚಾರಗಳು ಯಾವುವು? ಗೃಹಸ್ಥರೇ, ಇಲ್ಲಿ ಒಬ್ಬನು ದುರಾಸೆ ಇಲ್ಲದವನಾಗುತ್ತಾನೆ, ಅವನು ಪರರ ಸ್ಥಿರಾಸ್ತಿ ಮತ್ತು ಚರಾಸ್ತಿಗಳನ್ನು ಈ ರೀತಿಯ ಬಯಸುವವನಾಗುವುದಿಲ್ಲ... ಹಗೆತನವುಳ್ಳ ಮನಸ್ಸಿನವನಾಗುವುದಿಲ್ಲ... ಸಮ್ಯಕ್ ದೃಷ್ಟಿಯುಳ್ಳವನಾಗುತ್ತಾನೆ... ತಿಳಿದುಕೊಂಡು ಹೇಳುತ್ತಾನೆ ಎಂದು. ಗೃಹಸ್ಥರೇ, ಇವೇ ಆ ಮೂರು ರೀತಿಯ ಮನಸ್ಸಿನ ಧರ್ಮಾಚಾರ ಮತ್ತು ಒಳ್ಳೆಯ ಸದಾಚಾರಗಳು.
ಗೃಹಸ್ಥರೇ, ಈ ರೀತಿಯಿಂದಾಗಿ ಧರ್ಮಾಚಾರದಿಂದಾಗಿ ಮತ್ತು ಒಳ್ಳೆಯ ಸದಾಚಾರದಿಂದಾಗಿ. ಗೃಹಸ್ಥರೇ, ಇಲ್ಲಿ ಕೆಲವು ಜೀವಿಗಳು ಸಾವಿನ ನಂತರ ದೇಹವನ್ನು ತೊರೆದು ಸುಗತಿಯಲ್ಲಿ, ಸ್ವರ್ಗದಲ್ಲಿ ಹುಟ್ಟಿಬರುತ್ತವೆ.
4. ಧರ್ಮಾಚಾರಿ ಅಪೇಕ್ಷಿಸಿದಲ್ಲಿಯೇ ಹುಟ್ಟುತ್ತಾನೆ
6. “ಗೃಹಸ್ಥರೇ, ಧರ್ಮಾಚಾರಿ ಮತ್ತು ಸದಾಚಾರಿಯಾದವನು ಈ ರೀತಿ ಅಪೇಕ್ಷಿಸಬೇಕು- ‘ಓಹ್ ಸಾವಿನ ನಂತರ ದೇಹವನ್ನು ತೊರೆದು, ಅತುಳ ಐಶ್ವರ್ಯವುಳ್ಳ ಮಹಾ ಕ್ಷತ್ರಿಯ ಕುಲ ಸಮೂಹದಲ್ಲಿ ಹುಟ್ಟುವಂತಾಗಲಿ’ ಎಂದು. ಅವನಿಗೆ ಸಾವಿನ ನಂತರ ಶರೀರ ಕಳೆದುಕೊಂಡ ಮೇಲೆ ಈ ರೀತಿಯ ಅತುಳ ಐಶ್ವರ್ಯವುಳ್ಳ ಮಹಾ ಕ್ಷತ್ರಿಯ ಕುಲದಲ್ಲಿ ಹುಟ್ಟಿಬರುವ ಸಂದರ್ಭ ಒದಗಿಬರುತ್ತದೆ. ಇದಕ್ಕೆ ಕಾರಣವೇನು? ಅದೆಂದರೆ: ಅವನು ಸಂದರ್ಭ ಒದಗಿಬರುತ್ತದೆ. ಇದಕ್ಕೆ ಕಾರಣವೇನು? ಅದೆಂದರೆ ಅವನು ಧರ್ಮಾಚಾರಿ ಮತ್ತು ಸದಾಚಾರಿ. ಗೃಹಸ್ಥರೇ, ಧರ್ಮಾಚಾರಿ ಮತ್ತು ಸದಾಚಾರಿಯಾದವನು ಈ ರೀತಿ ಅಪೇಕ್ಷಿಸಬೇಕು- ‘ಓಹ್ ಸಾವಿನ ನಂತರ ದೇಹವನ್ನು ಕಳೆದುಕೊಮಡ ಮೇಲೆ ನಾನು ಧನವಂತ ಮಹಾಬ್ರಾಹ್ಮಣ ಕುಲಸಮೂಹದಲ್ಲಿ... ಧನವಂತ ಮಹಾ ಗೃಹಸ್ಥರುಗಳ ಕುಲ ಸಮೂಹದಲ್ಲಿ ಹುಟ್ಟುವಂತಾಗಲಿ’ ಎಂದು. ಅವನಿಗೆ ಸಾವಿನ ನಂತರ ದೇಹವನ್ನು ತೊರೆದು ಈ ರೀತಿಯ ಧನವಂತ ಮಹಾಬ್ರಾಹ್ಮಣ ಕುಲಸಮೂಹದಲ್ಲಿ... ಧನವಂತ ಮಹಾ ಗೃಹಸ್ಥರುಗಳ ಕುಲ ಸಮೂಹದಲ್ಲಿ ಹುಟ್ಟುವಂತಾಗಲಿ’ ಎಂದು. ಅವನಿಗೆ ಸಾವಿನ ನಂತರ ದೇಹವನ್ನು ತೊರೆದು ಈ ರೀತಿಯ ಧನವಂತ ಮಹಾ ಗೃಹಸ್ಥರ ಕುಲಸಮೂಹದಲ್ಲಿ ಹುಟ್ಟಿಬರುವ ಸಂದರ್ಭ ಒದಗಿಬರುತ್ತದೆ. ಇದಕ್ಕೆ ಕಾರಣವೇನು? ಅದೆಂದರೆ ಅವನು ಧರ್ಮಾಚಾರಿ ಮತ್ತು ಸದಾಚಾರಿ.
“ಗೃಹಸ್ಥರೇ, ಧರ್ಮಾಚಾರಿ ಮತ್ತು ಸದಾಚಾರಿಯಾದವನು ಈ ರೀತಿ ಅಪೇಕ್ಷಿಸಬೇಕು- ‘ಓಹ್, ಸಾವಿನ ನಂತರ ದೇಹವನ್ನು ತೊರೆದು ಚಾತುಮಹಾರಾಜಿಕ ದೇವ ಸ್ಥಿತಿಯಲ್ಲಿ ಹುಟ್ಟುವಂತಾಗಲಿ’ ಎಂದು. ಅವನು ಸಾವಿನ ನಂತರ ದೇಹವನ್ನು ತೊರೆದು ಚಾತುಮಹಾರಾಜಿಕ ದೇವ ಸ್ಥಿತಿಯಲ್ಲಿ ಹುಟ್ಟುತ್ತಾನೆ. ಇದಕ್ಕೆ ಕಾರಣವೇನು? ಅದೆಂದರೆ ಅವನು ಧರ್ಮಾಚಾರಿ ಮತ್ತು ಸದಾಚಾರಿ. ಗೃಹಸ್ಥರೇ, ಧರ್ಮಾಚಾರಿ ಮತ್ತು ಸದಾಚಾರಿಯಾದವನು ಈ ರೀತಿ ಅಪೇಕ್ಷಿಸಬೇಕು- ‘ಓಹ್, ಸಾವಿನ ನಂತರ ದೇಹವನ್ನು ತೊರೆದು ತಾವತಿಂಸ ದೇವ ಸಮೂಹದಲ್ಲಿ... ಯಾಮ ದೇವ ಸಮೂಹದಲ್ಲಿ... ತುಸಿತ ದೇವ ಸಮೂಹದಲ್ಲಿ... ನಿರ್ಮಾಣರತಿ ದೇವಸಮೂಹದಲ್ಲಿ... ಪರನಿಮ್ಮಿತವಾಸವತ್ತಿ ದೇವ ಸಮೂಹದಲ್ಲಿ... ಅಥವಾ ಬ್ರಹ್ಮಕಾಯವುಳ್ಳ ದೇವ ಸಮೂಹದಲ್ಲಿ ಹುಟ್ಟುವಂತಾಗಲಿ’ ಎಂದು. ಅವನು ಸಾವಿನ ನಂತರ ದೇಹವನ್ನು ತೊರೆದು ಬ್ರಹ್ಮಕಾಯವುಳ್ಳ ದೇವ ಸಮೂಹದಲ್ಲಿ ಹುಟ್ಟುತ್ತಾನೆ. ಅದಕ್ಕೆ ಕಾರಣವೇನು? ಅದೆಂದರೆ ಅವನು ಧರ್ಮಾಚಾರಿ ಮತ್ತು ಸದಾಚಾರಿ.
“ಗೃಹಸ್ಥರೇ, ಧರ್ಮಾಚಾರಿ ಮತ್ತು ಸದಾಚಾರಿಯಾದವನು ಈ ರೀತಿಯಾಗಿ ಅಪೇಕ್ಷಿಸಬೇಕು- ‘ಓಹ್, ಸಾವಿನ ನಂತರ ದೇಹವನ್ನು ತೊರೆದು ಆಭಾ ದೇವತೆಗಳ ಸಮೂಹದಲ್ಲಿ ಹುಟ್ಟುವಂತಾಗಲಿ’ ಎಂದು. ಅವನು ಸಾವಿನ ನಂತರ ದೇಹವನ್ನು ತೊರೆದು ಆಭಾ ದೇವತೆಗಳ ಸಮೂಹದಲ್ಲಿ ಹುಟ್ಟುತ್ತಾನೆ; ಅದಕ್ಕೆ ಕಾರಣವೇನು? ಅದೆಂದರೆ: ಅವನು ಧರ್ಮಾಚಾರಿ ಮತ್ತು ಸದಾಚಾರಿ. ಗೃಹಸ್ಥರೇ, ಧರ್ಮಾಚಾರಿ ಮತ್ತು ಸದಾಚಾರಿಯಾದವನು ಈ ರೀತಿಯಾಗಿ ಅಪೇಕ್ಷಿಸಬೇಕು. ‘ಓಹ್ ಸಾವಿನ ನಂತರ ದೇಹವನ್ನು ತೊರೆದು ಪರಿತ್ತಾಭಾ ದೇವ ಸಮೂಹದಲ್ಲಿ ಅಪ್ಪಮಾನಾಭಾ ದೇವ ಸಮೂಹದಲ್ಲಿ... ಅಭಸ್ಸರ ದೇವ ಸಮೂಹದಲ್ಲಿ... ಪರಿತ್ತಸುಭ ದೇವ ಸಮೂಹದಲ್ಲಿ... ಅಪ್ಪಮಾನಾಸುಭ ದೇವ ಸಮೂಹದಲ್ಲಿ... ಸುಭಕಿಣ್ಹ ದೇವ ಸಮೂಹದಲ್ಲಿ... ವೇಹಫಲ ದೇವ ಸಮೂಹದಲ್ಲಿ... ಅವಿಹ ದೇವ ಸಮೂಹದಲ್ಲಿ... ಅತಪ್ಪ ದೇವ ಸಮೂಹದಲ್ಲಿ... ಸುದಸ್ಸ ದೇವ ಸಮೂಹದಲ್ಲಿ... ಸುದಸ್ಸಿ ದೇವ ಸಮೂಹದಲ್ಲಿ... ಅಕನಿಟ್ಠ ದೇವ ಸಮೂಹದಲ್ಲಿ... ಆಕಾಸಾನಂಚಾಯತನ ದೇವ ಸಮೂಹದಲ್ಲಿ... ವಿಞ್ಞಾಣಂಚಾಯತನ ದೇವ ಸಮೂಹದಲ್ಲಿ... ಅಕಿಂಚಞ್ಞಾಯತನ ದೇವ ಸಮೂಹದಲ್ಲಿ... ಅಥವಾ ನೇವಸಞ್ಞಾನಾಸಞ್ಞಾಯತನ ದೇವ ಸಮೂಹದಲ್ಲಿ ಹುಟ್ಟಿ ಬರುವಂತಾಗಲಿ’ ಎಂದು. ಅವನು ಸಾವಿನ ನಂತರ ದೇಹವನ್ನು ತೊರೆದು ನೇವಸಞ್ಞಾನಾಸಞ್ಞಾಯತನ ದೇವ ಸಮೂಹದಲ್ಲಿ ಹುಟ್ಟಿ ಬರುತ್ತಾನೆ. ಅದಕ್ಕೆ ಕಾರಣವೇನು? ಅದೆಂದರೆ: ಅವನು ಧರ್ಮಾಚಾರಿ ಮತ್ತು ಸದಾಚಾರಿ.
“ಗೃಹಸ್ಥರೇ, ಧರ್ಮಾಚಾರಿ ಮತ್ತು ಸದಾಚಾರಿಯಾದವನು ಈ ರೀತಿ ಅಪೇಕ್ಷಿಸಬೇಕು- ‘ಓಹ್, ನಾನು ಆಸವಗಳನ್ನು ಕ್ಷಯಿಸಿ, ಆಸವಗಳು ಇಲ್ಲದವನಾಗಿ ಚಿತ್ತವಿಮುಕ್ತಿಯನ್ನು ಪಡೆದು, ಪ್ರಜ್ಞಾವಿಮುಕ್ತಿಯನ್ನು ಪಡೆದು, ಧರ್ಮದ ನೇರ ದರ್ಶನಗಳನ್ನು ಸ್ವತಃ ನಾನೇ ನನ್ನ ಅರಿವಿನಿಂದಲೇ ಗಳಿಸಿಕೊಂಡು ಅದರಲ್ಲೇ ಉಳಿದು ಜೀವಿಸುವಂತಾಗಲಿ’ ಎಂದು. ಅವನಿಗೆ ಆಸವಗಳನ್ನು ಕ್ಷಯಿಸಿ, ಆಸವಗಳು ಇಲ್ಲದವನಾಗಿ, ಚಿತ್ತವಿಮುಕ್ತಿಯನ್ನು ಪಡೆದು ಪ್ರಜ್ಞಾ ವಿಮುಕ್ತಿಯನ್ನು ಪಡೆದು ಧರ್ಮದ ನೇರ ದರ್ಶನವನ್ನು ಸ್ವತಃ ತಾನೇ ತನ್ನ ಅರಿವಿನಿಂದಲೇ ಗಳಿಸಿಕೊಂಡು ಅದರಲ್ಲೇ ಉಳಿದು ಜೀವಿಸುವ ಸಂದರ್ಭ ಒದಗಿಬರಬಹುದು. ಅದಕ್ಕೆ ಕಾರಣವೇನು? ಅದೆಂದರೆ ಅವನು ಧರ್ಮಾಚಾರಿ ಮತ್ತು ಸದಾಚಾರಿ” ಎಂದು.
5. ವೇರಂಜದ ಬ್ರಾಹ್ಮಣರ ಶರಣಗಮನ
7. ಹೀಗೆ ಹೇಳಿದ ಮೇಲೆ ವೇರಂಜದ ಬ್ರಾಹ್ಮಣ ಗೃಹಸ್ಥರು ಭಗವಾನರಿಗೆ ಈ ರೀತಿ ಹೇಳಿದರು- “ಅದ್ಭುತವಾದದು, ಪೂಜ್ಯ ಗೌತಮರೇ, ಅದ್ಭುತವಾದುದು ಪೂಜ್ಯ ಗೌತಮರೇ! ಪೂಜ್ಯ ಗೌತಮರೇ, ಅದು ಹೇಗೆಂದರೆ ಸೊಟ್ಟಾಗಿರುವುದನ್ನು ನೇರವಾಗಿಸುವಂತೆ ಅಥವಾ ಮುಚ್ಚಿ ಹೋಗಿರುವುದನ್ನು ತೆಗೆದಿಟ್ಟಂತೆ, ಅಥವಾ ದಾರಿ ತಪ್ಪಿದವನಿಗೆ ದಾರಿ ತೋರಿಸುವಂತೆ, ಅಥವಾ ಕತ್ತಲಿನಲ್ಲಿ ಎಣ್ಣೆ ದೀಪವನ್ನು ಹಿಡಿದು ಕಣ್ಣಿರುವವರು ರೂಪಾಕಾರಗಳನ್ನು ನೋಡಲು ಸಾಧ್ಯವಾಗುವಂತೆ ಮಾಡಿದಿರಿ ಎಂದು. ಅದೇರೀತಿಯಲ್ಲಿ ಪೂಜ್ಯ ಗೌತಮರಿಂದ ಅನೇಕ ಪ್ರಕಾರವಾಗಿ ಈ ಧರ್ಮವು ಪ್ರಕಾಶಿಸಲ್ಪಟ್ಟಿದೆ. ಆದ್ದರಿಂದ ನಾವು ಗೌತಮರಿಗೆ ಮತ್ತು ಧರ್ಮಕ್ಕೆ ಮತ್ತು ಭಿಕ್ಷು ಸಂಘಕ್ಕೆ ಶರಣು ಹೋಗುತ್ತೇವೆ. ಪೂಜ್ಯ ಗೌತಮರು ನಮ್ಮನ್ನು ಉಪಾಸಕರು ಎಂದು ಇಂದಿನಿಂದ ನಮ್ಮ ಜೀವ ಇರುವವರೆಗೆ ಶರಣು ಬಂದವರು ಎಂದು ಪರಿಗಣಿಸಲಿ” ಎಂದು.
ಟಿಪ್ಪಣಿಗಳು [4]
English
Việt Ngữ