ಊಟಿಸುತ್ತಿದೆ

ಅನುವಾದಗಳು [33]

ಚೂಳವೇದಲ್ಲ ಸುತ್ತ

1. ಶರೀರದ ಹುಟ್ಟಿನ ನಿರೋಧ

ಹೀಗೆ ನಾನು ಕೇಳಿದ್ದೇನೆ. ಒಂದುಸಲ ಭಗವಾನರು ರಾಜಗೃಹದ ವೇಲುವನದಲ್ಲಿ ಅಳಿಲುಧಾಮದಲ್ಲಿ ತಂಗಿದ್ದರು. ಆಗ ಉಪಾಸಕ ವಿಶಾಖನು ಭಿಕ್ಷುಣಿ ಧಮ್ಮದಿನ್ನರ163 ಬಳಿ ಬಂದನು; ಬಂದನಂತರ ಭಿಕ್ಷುಣಿ ಧಮ್ಮದಿನ್ನರಿಗೆ ವಂದಿಸಿ ಒಂದೆಡೆ ಕುಳಿತನು. ಒಂದೆಡೆ ಕುಳಿತ ಆ ಉಪಾಸಕ ವಿಶಾಖನು ಭಿಕ್ಷುಣಿ ಧಮ್ಮದಿನ್ನರಿಗೆ ಹೀಗೆ ಹೇಳಿದನು-

2. “ಆರ್ಯೆ, ‘ಸ್ವಂತ ಶರೀರ, ಸ್ವಂತ ಶರೀರ’ ಎಂದು ಹೇಳುತ್ತಾರೆ. ಆರ್ಯೆ ಸ್ವಂತ ಶರೀರ ಎನ್ನುವುದರ ಬಗ್ಗೆ ಭಗವಾನರು ಏನು ಹೇಳುತ್ತಾರೆ?” ಎಂದು.

“ಆಯುಷ್ಮಂತ ವಿಶಾಖ, ಈ ಐದು ಉಪಾದಾನ ಬಂಧಗಳೇ (ಬಂಧನ ತತ್ವ ರಾಶಿಗಳೇ) ಸ್ವಂತ ಶರೀರ ಎಂಬುದಾಗಿ ಭಗವಾನರಿಂದ ಹೇಳಲಾಗಿದೆ. ಅದೆಂದರೆ- ರೂಪ ಉಪಾದಾನ, ಸಂವೇದನಾ ಉಪಾದಾನ, ಸಂಜ್ಞಾ ಉಪಾದಾನ, ಸಂಖಾರ ಉಪಾದಾನ ಮತ್ತು ವಿಞ್ಞಾನ ಉಪಾದಾನ. ಆಯುಷ್ಮಂತ ವಿಶಾಖ, ಇವೇ ಈ ಐದು ಉಪಾದಾನಗಳೇ ಶರೀರ164 ಎಂಬುದಾಗಿ ಭಗವಾನರಿಂದ ಹೇಳಲಾಗಿದೆ” ಎಂದು.

“ಒಳ್ಳೆಯದು ಆರ್ಯೆ” ಎಂದು ಉಪಾಸಕ ವಿಶಾಖನು ಭಿಕ್ಷುಣಿ ಧಮ್ಮದಿನ್ನರ ಮಾತುಗಳಿಗೆ ವಂದಿಸಿ ಅನುಮೋದಿಸುತ್ತ ಭಿಕ್ಷುಣಿ ಧಮ್ಮದಿನ್ನರಿಗೆ ಮತ್ತೊಂದು ಪ್ರಶ್ನೆಯನ್ನು ಕೇಳಿದನು- “ಆರ್ಯೆ, ಸ್ವಂತ ಶರೀರದ ಹುಟ್ಟು, ಸ್ವಂತ ಶರೀರದ ಹುಟ್ಟು’ ಎಂದು ಹೇಳುತ್ತಾರೆ ಆರ್ಯೆ. ಈ ಸ್ವಂತ ಶರೀರದ ಹುಟ್ಟಿನ ಬಗ್ಗೆ ಭಗವಾನರು ಏನು ಹೇಳುತ್ತಾರೆ?” ಎಂದು.

“ಆಯುಷ್ಮಂತ ವಿಶಾಖ, ಮರುಹುಟ್ಟಿಗೆ ಕಾರಣವಾದ ಭೋಗ ವ್ಯಾಮೋಹದ ಜೊತೆಗೂಡಿ ಅದರಲ್ಲಿ ಆನಂದ ಕಾಣುವ ಆಸೆ. ಅದೆಂದರೆ- ಇಂದ್ರಿಯ ಪಿಪಾಸೆ, ಸಂಭವಿಸುವ ಪಿಪಾಸೆ, ಸಂಭವಿಸದೆ ಇರುವುದಕ್ಕಾಗಿ ಪಿಪಾಸೆ; ಆಯುಷ್ಮಂತ ವಿಶಾಖ, ಇದೇ ‘ಸ್ವಂತ ಶರೀರದ ಹುಟ್ಟು’ ಎಂಬುದಾಗಿ ಭಗವಾನರು ಹೇಳಿದ್ದಾರೆ” ಎಂದು.

“ಆರ್ಯೆ, ‘ಸ್ವಂತ ಶರೀರದ ನಿರೋಧ, ಸ್ವಂತ ಶರೀರದ ನಿರೋಧ’ ಎಂದು ಹೇಳುತ್ತಾರೆ; ಆರ್ಯೆ ಸ್ವಂತ ಶರೀರದ ನಿರೋಧದ ಬಗ್ಗೆ ಭಗವಾನರು ಏನು ಹೇಳಿದ್ದಾರೆ?” ಎಂದು.

“ಆಯುಷ್ಮಂತ ವಿಶಾಖ, ಅದೆಂದರೆ ಈ ಪಿಪಾಸೆಯ ಶೇಷ ಉಳಿಯದಂತಹ ಪೂರ್ಣ ನಿರೋಧ, ತ್ಯಜಿಸುವಿಕೆ, ಬಿಟ್ಟುಬಿಡುವುದು, ಬಿಡುಗಡೆ, ಬಿಸಾಡುವುದು. ಇದನ್ನೇ ಆಯುಷ್ಮಂತ ವಿಶಾಖ, ಸ್ವಂತ ಶರೀರದ ನಿರೋಧ ಎಂಬುದಾಗಿ ಭಗವಾನರು ಹೇಳಿದ್ದಾರೆ” ಎಂದು.

“ಆರ್ಯೆ, ‘ಸ್ವಂತ ಶರೀರದ ನಿರೋಧಕ್ಕೆ ಒಯ್ಯುವ ಮಾರ್ಗ, ಸ್ವಂತ ಶರೀರದ ನಿರೋಧಕ್ಕೆ ಒಯ್ಯುವ ಮಾರ್ಗ’ ಎಂದು ಹೇಳುತ್ತಾರೆ; ಸ್ವಂತ ಶರೀರದ ನಿರೋಧಕ್ಕೆ ಒಯ್ಯುವ ಮಾರ್ಗ ಯಾವುದು ಎಂಬುದಾಗಿ ಭಗವಾನರು ಏನು ಹೇಳಿದ್ದಾರೆ?” ಎಂದು.

“ಆಯುಷ್ಮಂತ ವಿಶಾಖ, ಆರ್ಯ ಅಷ್ಠಾಂಗಿಕ ಮಾರ್ಗವೇ ಸ್ವಂತ ಶರೀರದ ನಿರೋಧಕ್ಕೆ ಒಯ್ಯುವ ಮಾರ್ಗ ಎಂಬುದಾಗಿ ಭಗವಾನರು ಹೇಳಿದ್ದಾರೆ. ಅದೆಂದರೆ- ಸಮ್ಯಕ್ ದೃಷ್ಟಿ, ಸಮ್ಯಕ್ ಸಂಕಲ್ಪ, ಸಮ್ಯಕ್ ವಾಚಾ, ಸಮ್ಯಕ್ ಕಮ್ಮಾಂತ, ಸಮ್ಯಕ್ ಅಜೀವ, ಸಮ್ಯಕ್ ವ್ಯಾಯಾಮ, ಸಮ್ಯಕ್ ಸತಿ, ಸಮ್ಯಕ್ ಸಮಾಧಿ” ಎಂದು.

“ಆರ್ಯೆ, ಬಂಧನವೆಂಬುದು ಈ ಐದು ಉಪಾದಾನಗಳೇ? ಅಥವಾ ಈ ಉಪಾದಾನಗಳನ್ನು ಬಿಟ್ಟು ಬೇರೆ ಯಾವುದಾದರೂ ಬಂಧನ ಇದೆಯೇ?” ಎಂದು.

“ಆಯುಷ್ಮಂತ ವಿಶಾಖ, ಬಂಧನವೆಂಬುದು ಈ ಐದು ಉಪಾದಾನಗಳಲ್ಲ, ಅಥವಾ ಈ ಐದು ಉಪಾದಾನಗಳನ್ನು ಬಿಟ್ಟಿ ಬೇರೆ ಬಂಧನ ಇಲ್ಲ. ಆಯುಷ್ಮಂತ ವಿಶಾಖ, ಈ ಐದು ಉಪಾದಾನಗಳ ಬಗ್ಗೆ ಆಸೆ ಮತ್ತು ವ್ಯಾಮೋಹವೇ ಬಂಧನ”166 ಎಂದು.

3. “ಮತ್ತೆ ಆರ್ಯೆ, ಯಾವುದು ಸ್ವಂತ ಶರೀರದ ದೃಷ್ಟಿ ಆಗುತ್ತದೆ?” ಎಂದು.

“ಆಯುಷ್ಮಂತ ವಿಶಾಖ, ಇಲ್ಲಿ ಒಬ್ಬ ತಿಳುವಳಿಕೆ ಇಲ್ಲದ ಸಾಮಾನ್ಯ ಮನುಷ್ಯನು, ಉದಾತ್ತ ಜನರನ್ನು ಗೌರವಿಸದೇ ಉಳಿಯುವವನು, ಉದಾತ್ತ ಧರ್ಮವನ್ನು ಅರಿಯದವನು, ಉದಾತ್ತರ ಧರ್ಮದಲ್ಲಿ ಸುಶಿಕ್ಷಾಪರನಲ್ಲದವನು, ಸತ್ಪುರುಷರನ್ನು ಗೌರವಿಸದೇ ಉಳಿಯುವವನು, ಸತ್ಪುರುಷರ ಧರ್ಮವನ್ನು ಅರಿಯದವನು, ಸತ್ಪುರುಷರ ಧರ್ಮದಲ್ಲಿ ಸುಶಿಕ್ಷಾಪರನಲ್ಲದವನು, ರೂಪವೇ ಆತ್ಮ ಎಂದು, ಆತ್ಮವು ರೂಪವನ್ನು ಒಳಗೊಂಡಿದೆ, ರೂಪ ಆತ್ಮದಲ್ಲಿದೆ ಎಂದು ರೂಪದಿಂದ ಆತ್ಮವನ್ನು ಕಾಣುತ್ತಾನೆ. ಸಂವೇದನೆಯೇ ಆತ್ಮ... ಸಂಜ್ಞೆಯೇ ಆತ್ಮ... ಸಂಖಾರಗಳೇ ಆತ್ಮ... ವಿಞ್ಞಾನವೇ ಆತ್ಮ... ಆತ್ಮವು ವಿಞ್ಞಾನವನ್ನು ಒಳಗೊಂಡಿದೆ. ವಿಞ್ಞಾನವು ಆತ್ಮದಲ್ಲಿದೆ ಎಂದು ವಿಞ್ಞಾನದಿಂದ ಆತ್ಮವನ್ನು ಕಾಣುತ್ತಾನೆ. ಆಯುಷ್ಮಂತ ವಿಶಾಖ, ಹೀಗೆ ಸ್ವಂತ ಶರೀರದ ದೃಷ್ಟಿ ಆಗುತ್ತದೆ” ಎಂದು.

“ಮತ್ತೆ ಆರ್ಯೆ, ಯಾವುದು ಸ್ವಂತ ಶರೀರದ ದೃಷ್ಟಿ ಆಗುವುದಿಲ್ಲ?” ಎಂದು.

“ಆಯುಷ್ಮಂತ ವಿಶಾಖ, ಇಲ್ಲಿ ಒಬ್ಬ ತಿಳುವಳಿಕೆ ಇರುವ, ಉದಾತ್ತರ ಅನುಯಾಯಿ, ಉದಾತ್ತರನ್ನು ಗೌರವಿಸುವವನು, ಉದಾತ್ತರ ಧರ್ಮವನ್ನು ಅರಿತವನು, ಉದಾತ್ತರ ಧರ್ಮದಲ್ಲಿ ಸುಶಿಕ್ಷಾಪರನಾದವನು, ಸತ್ಪುರುಷರನ್ನು ಗೌರವಿಸುವವನು, ಸತ್ಪುರುಷರ ಧರ್ಮವನ್ನು ಅರಿತವನು, ಸತ್ಪುರುಷರ ಧರ್ಮದಲ್ಲಿ ಸುಶಿಕ್ಷಾಪರನಾದವನು, ರೂಪ ಆತ್ಮವಲ್ಲ, ಆತ್ಮವು ರೂಪವನ್ನು ಒಳಗೊಂಡಿಲ್ಲ, ರೂಪವು ಆತ್ಮದಲ್ಲಿಲ್ಲ, ರೂಪದಿಂದ ಆತ್ಮವಲ್ಲ ಎಂದು ಕಾಣುತ್ತಾನೆ. ಸಂವೇದನೆ ಆತ್ಮವಲ್ಲ... ಸಂಜ್ಞೆಯು ಆತ್ಮವಲ್ಲ... ಸಂಖಾರಗಳು ಆತ್ಮವಲ್ಲ... ವಿಞ್ಞಾನವು ಆತ್ಮವಲ್ಲ. ಆತ್ಮವು ವಿಞ್ಞಾನವನ್ನು ಒಳಗೊಂಡಿಲ್ಲ. ವಿಞ್ಞಾನ ಆತ್ಮದಲ್ಲಿಲ್ಲ, ವಿಞ್ಞಾನವೇ ಆತ್ಮವಲ್ಲ ಎಂದು ಕಾಣುತ್ತಾನೆ. ಆಯುಷ್ಮಂತ ವಿಶಾಖ, ಹೀಗೆ ಸ್ವಂತ ಶರೀರದ ದೃಷ್ಟಿ ಆಗುವುದಿಲ್ಲ” ಎಂದು.

2. ಆರ್ಯ ಅಷ್ಠಾಂಗಿಕ ಮಾರ್ಗ

4. “ಆರ್ಯೆ, ಯಾವುದದು ಆರ್ಯ ಅಷ್ಠಾಂಗಿಕ ಮಾರ್ಗ?” ಎಂದು.

“ಆಯುಷ್ಮಂತ ವಿಶಾಖ, ಇದನ್ನೇ ಆರ್ಯ ಅಷ್ಠಾಂಗಿಕ ಮಾರ್ಗ ಎನ್ನುತ್ತಾರೆ. ಅದೆಂದರೆ ಸಮ್ಯಕ್ ದೃಷ್ಟಿ, ಸಮ್ಯಕ್ ಸಂಕಲ್ಪ, ಸಮ್ಯಕ್ ವಾಚಾ, ಸಮ್ಯಕ್ ಕಮ್ಮಾಂತಾ, ಸಮ್ಯಕ್ ಜೀವನ, ಸಮ್ಯಕ್ ವ್ಯಾಯಾಮ, ಸಮ್ಯಕ್ ಸತಿ ಮತ್ತು ಸಮ್ಯಕ್ ಸಮಾಧಿ” ಎಂದು.

“ಆರ್ಯೆ, ಈ ಆರ್ಯ ಅಷ್ಠಾಂಗಿಕ ಮಾರ್ಗವು ನಿರ್ಬಂಧಿತವಾದದ್ದೇ ಅಥವಾ ಅನಿರ್ಬಂಧಿತವಾದದ್ದೇ?” ಎಂದು.

“ಆಯುಷ್ಮಂತ, ವಿಶಾಖ, ಈ ಆರ್ಯ ಅಷ್ಠಾಂಗಿಕ ಮಾರ್ಗವು ನಿರ್ಬಂಧಿತವಾದದ್ದು” ಎಂದು.

“ಆರ್ಯೆ, ಆರ್ಯ ಅಷ್ಠಾಂಗಿಕ ಮಾರ್ಗದಿಂದಾಗಿ ಮೂರು ಗುಂಪುಗಳನ್ನು ಸಂಗ್ರಹಿಸಲಾಗಿದೆಯೋ ಅಥವಾ ಮೂರು ಗುಂಪುಗಳಿಂದ ಆರ್ಯ ಅಷ್ಠಾಂಗಿಕ ಮಾರ್ಗವನ್ನು ಸಂಗ್ರಹಿಸಲಾಗಿದೆಯೋ?”167 ಎಂದು.

“ಆಯುಷ್ಮಂತ ವಿಶಾಖ, ಆರ್ಯ ಅಷ್ಠಾಂಗಿಕ ಮಾರ್ಗದಿಂದ ಮೂರು ಗುಂಪುಗಳನ್ನು ಸಂಗ್ರಹಿಸಲಾಗಿಲ್ಲ. ಆಯುಷ್ಮಂತ ವಿಸಾಖ, ಮೂರು ಗುಂಪುಗಳಿಂದ ಆರ್ಯ ಅಷ್ಠಾಂಗಿಕ ಮಾರ್ಗವನ್ನು ಸಂಗ್ರಹಿಸಲಾಗಿದೆ. ಆಯುಷ್ಮಂತ ವಿಶಾಖ, ಯಾವುದೇ ಸಮ್ಯಕ್ ವಾಚಾ ಮತ್ತು ಯಾವುದೇ ಸಮ್ಯಕ್ ಕರ್ಮಂತ ಮತ್ತು ಯಾವುದೇ ಸಮ್ಯಕ್ ಅಜೀವ, ಇವುಗಳನ್ನು ಶೀಲಗಳ ಗುಂಪಿನಲ್ಲಿ ಸಂಗ್ರಹಿಸಲಾಗಿದೆ. ಯಾವುದೇ ಸಮ್ಯಕ್ ವ್ಯಾಯಾಮ ಮತ್ತು ಯಾವುದೇ ಸಮ್ಯಕ್ ಸತಿ ಮತ್ತು ಯಾವುದೇ ಸಮ್ಯಕ್ ಸಮಾಧಿ, ಇವುಗಳನ್ನು ಸಮಾಧಿ ಗುಂಪಿನಲ್ಲಿ ಸಂಗ್ರಹಿಸಲಾಗಿದೆ; ಯಾವುದೇ ಸಮ್ಯಕ್ ದೃಷ್ಟಿ ಮತ್ತು ಯಾವುದೇ ಸಮ್ಯಕ್ ಸಂಕಲ್ಪ, ಇವುಗಳನ್ನು ಪ್ರಜ್ಞೆ ಗುಂಪಿನಲ್ಲಿ ಸಂಗ್ರಹಿಸಲಾಗಿದೆ” ಎಂದು.

“ಮತ್ತೆ ಆರ್ಯೆ, ಸಮಾಧಿ (ಸ್ಥಿತಿ) ಎಂದರೇನು, ಸಮಾಧಿಯ ಸಂಕೇತ ಎಂದರೇನು, ಸಮಾಧಿಯ ಅಗತ್ಯಗಳೇನು, ಸಮಾಧಿಯ ವೃದ್ಧಿ ಯಾವುದು?” ಎಂದು.

“ಆಯುಷ್ಮಂತ ವಿಶಾಖ, ಯಾವುದೇ ಮನಸ್ಸಿನ ಏಕತೆ, ಅದು ಸಮಾಧಿ; ನಾಲ್ಕು ಜಾಗ್ರತೆಗಳ ಆಧಾರವೇ ನಾಲ್ಕು ಸಮ್ಯಕ್ ಪ್ರಯತ್ನಗಳು, ಸಮಾಧಿಯ ಅಗತ್ಯಗಳು. ಇವುಗಳನ್ನು ಮತ್ತೆ ಮತ್ತೆ ಅಭ್ಯಾಸ ಮಾಡುವುದೇ ವೃದ್ಧಿ ಹೊಂದಿಸುವುದೇ, ಬೆಳೆಸಿಕೊಳ್ಳುವುದೇ ಇಲ್ಲಿ ಸಮಾಧಿಯ ವೃದ್ಧಿ” ಎಂದು.168

3. ಮೂರು ಬಗೆಯ ಸಂಖಾರ (ಕಟ್ಟು) ಗಳು

5. ಆರ್ಯೆ, ಕ್ರಿಯಾಸರಣಿ ಎಂಬುದು ಎಷ್ಟು ಬಗೆಯದು? ಎಂದು.

“ಆಯುಷ್ಮಂತ ವಿಶಾಖ, ಮೂರು ರೀತಿಯ ಕಟ್ಟುಗಳು/ಸಂಖಾರಗಳು ಇವೆ. ಅವು ಕಾಯ ಸಂಖಾರ, ಮಾತಿನ ಸಂಖಾರ, ಮನಸ್ಸಿನ ಸಂಖಾರ” ಎಂದು.

“ಮತ್ತೆ ಆರ್ಯೆ, ಕಾಯ ಸಂಖಾರ ಎಂದರೇನು, ಮಾತಿನ ಸಂಖಾರ ಎಂದರೇನು, ಮನಸ್ಸಿನ ಸಂಖಾರ ಎಂದರೇನು?” ಎಂದು.

“ಆಯುಷ್ಮಂತ ವಿಶಾಖ, ಉಸಿರು ತೆಗೆದುಕೊಳ್ಳುವುದು ಮತ್ತು ಉಸಿರು ಬಿಡುವುದು ಕಾಯ ಸಂಖಾರ ಎನಿಸುತ್ತವೆ. ವಿತರ್ಕ ಮತ್ತು ವಿಚಾರ ಇವು ಮಾತಿನ ಸಂಖಾರ ಎನಿಸುತ್ತದೆ. ಸಂಜ್ಞೆ ಮತ್ತು ಸಂವೇದನೆ ಇವು ಮನಸ್ಸಿನ ಸಂಖಾರ ಎನಿಸುತ್ತವೆ”169 ಎಂದು.

“ಮತ್ತೆ ಆರ್ಯೆ, ಉಸಿರು ತೆಗೆದುಕೊಳ್ಳುವುದು ಮತ್ತು ಉಸಿರು ಬಿಡುವುದು ಏಕೆ ಕಾಯ ಸಂಖಾರ ಎನಿಸುತ್ತವೆ. ವಿತರ್ಕ ಮತ್ತು ವಿಚಾರ ಇವು ಏಕೆ ಮಾತಿನ ಸಂಖಾರ ಎನಿಸುತ್ತದೆ. ಸಂಜ್ಞೆ ಮತ್ತು ಸಂವೇದನೆ ಇವು ಏಕೆ ಮನಸ್ಸಿನ ಸಂಖಾರ ಎನಿಸುತ್ತವೆ?” ಎಂದು.

“ಆಯುಷ್ಮಂತ ವಿಶಾಖ, ಉಸಿರು ತೆಗೆದುಕೊಳ್ಳುವುದು ಮತ್ತು ಉಸಿರು ಬಿಡುವುದು ಇವು ಶರೀರ ಸಂಬಂಧಿಯ ಸ್ಥಿತಿಗಳು. ಶರೀರ ನಿಬದ್ಧವಾದವುಗಳು. ಆದ್ದರಿಂದ ಉಸಿರು ತೆಗೆದುಕೊಳ್ಳುವುದು ಮತ್ತು ಉಸಿರು ಬಿಡುವುದು ಇವು ಶರೀರ ಸಂಖಾರ ಎನಿಸುತ್ತವೆ. ಆಯುಷ್ಮಂತ ವಿಶಾಖ, ಮೊದಲು ವಿತರ್ಕ, ವಿಚಾರ ಮಾಡಿಕೊಂಡು ಆನಂತರವೇ ಮಾತುಗಳು ಮೂಡಿಬರುತ್ತವೆ, ಆದ್ದರಿಂದ ವಿತರ್ಕ ಮತ್ತು ವಿಚಾರಗಳು ಮಾತಿನ ಸಂಖಾರ ಎನಿಸುತ್ತವೆ. ಸಂಜ್ಞೆ ಮತ್ತು ಸಂವೇದನೆ ಇವು ಮನಸ್ಸಿಗೆ ಸಂಬಂಧಿಯಾದ ಸ್ಥಿತಿಗಳು, ಮನಸ್ಸಿನಲ್ಲಿ ನಿಬದ್ಧವಾದವುಗಳು. ಆದ್ದರಿಂದ ಸಂಜ್ಞೆ ಮತ್ತು ಸಂವೇದನೆಗಳು ಇವು ಮನಸ್ಸಿನ ಸಂಖಾರ ಎನಿಸುತ್ತವೆ”170 ಎಂದು.

4. ಸಂಜ್ಞೆ ಮತ್ತು ಸಂವೇದನೆಗಳ ನಿರೋಧ ಸಿದ್ಧಿ

6. “ಆರ್ಯೆ, ಸಂಜ್ಞೆ ಮತ್ತು ಸಂವೇದನೆಗಳ ನಿರೋಧ ಸಿದ್ಧಿ ಹೇಗೆ ಆಗುತ್ತದೆ?” ಎಂದು.

“ಆಯುಷ್ಮಂತ ವಿಶಾಖ, ಭಿಕ್ಷುಗಳು ಸಂಜ್ಞೆ ಮತ್ತು ಸಂವೇದನೆಯ ನಿರೋಧ ಸಿದ್ಧಿಯನ್ನು ಸಾಧಿಸಿದರೂ ಅವರಿಗೆ ಹೀಗೆ ಅನಿಸುವುದಿಲ್ಲ- ‘ನಾನು ಸಂಜ್ಞೆ ಮತ್ತು ಸಂವೇದನೆಗಳ ನಿರೋಧ ಸಿದ್ಧಿಯನ್ನು ಸಾಧಿಸುವೆನು’ ಎಂದು ಅಥವಾ ‘ನಾನು ಸಂಜ್ಞೆ ಮತ್ತು ಸಂವೇದನೆಯ ನಿರೋಧ ಸಿದ್ಧಿಯನ್ನು ಸಾಧಿಸುತ್ತಿದ್ದೇನೆ’ ಎಂದು ಅಥವಾ ‘ನಾನು ಸಂಜ್ಞೆ ಮತ್ತು ಸಂವೇದನೆಗಳ ನಿರೊಧ ಸಿದ್ಧಿಯನ್ನು ಸಾಧಿಸಿದೆನು’ ಎಂದು. ಅದೂ ಅಲ್ಲದೆ ಅವನ ಮನಸ್ಸು ಹಿಂದೆಯೇ ಅಭ್ಯಾಸ ಮಾಡಿದ್ದುದರಿಂದ ಈ ಸ್ಥಿತಿಯು ಉಂಟಾಗಬಹುದು”171 ಎಂದು.

“ಆರ್ಯೆ, ಗ್ರಹಿಸುವಿಕೆ ಮತ್ತು ಅನುಭವಿಸುವಿಕೆಯ ನಿರೋಧ ಸಿದ್ಧಿಯನ್ನು ಸಾಧಿಸುತ್ತಿರುವ ಭಿಕ್ಷುಗಳಲ್ಲಿ ಮೊದಲಿಗೆ ಯಾವ ಸ್ಥಿತಿಗಳು ಕೊನೆಗೊಳ್ಳುತ್ತವೆ- ಕಾಯ ಸಂಖಾರಗಳೋ ಅಥವಾ ಮಾತಿನ ಸಂಖಾರಗಳೋ?” ಎಂದು.

“ಆಯುಷ್ಮಂತ ವಿಶಾಖ, ಸಂಜ್ಞೆ ಸಂವೇದನೆಯ ನಿರೋಧ ಸಿದ್ಧಿ ಸಾಧಿಸುತ್ತಿರುವ ಭಿಕ್ಷುವಿನಲ್ಲಿ ಮೊದಲಿಗೆ ಮಾತಿನ ಸಂಖಾರ ಕೊನೆಗೊಳ್ಳುತ್ತದೆ. ಆನಂತರದಲ್ಲಿ ಕಾಯ ಸಂಖಾರ ಆನಂತರದಲ್ಲಿ ಮನಸ್ಸಿನ ಸಂಖಾರ ಕೊನೆಗೊಳ್ಳುತ್ತವೆ”172 ಎಂದು.

“ಆರ್ಯೆ, ಹೇಗೆ ಸಂಖಾರ ಮತ್ತು ಸಂವೇದನೆಯ ನಿರೋಧ ಸಿದ್ಧಿಯ ಉಗಮವು ಆಗುತ್ತದೆ?” ಎಂದು.

“ಆಯುಷ್ಮಂತ ವಿಶಾಖ, ಭಿಕ್ಷುಗಳಲ್ಲಿ ಸಂಜ್ಞೆ ಮತ್ತು ಸಂವೇದನೆಯ ನಿರೋಧ ಸಿದ್ಧಿ ಉಗಮವಾದಾಗ ಅವರುಗಳಿಗೆ ಹೀಗೆ ಅನಿಸುವುದಿಲ್ಲ. ‘ನಾನು ಸಂಜ್ಞೆ ಮತ್ತು ಸಂವೇದನೆಯ ನಿರೋಧ ಸಿದ್ಧಿಯನ್ನು ಮಾಡುವೆನು’ ಎಂದು ಅಥವಾ ‘ನಾನು ಸಂಜ್ಞೆ ಮತ್ತು ಸಂವೇದನೆಯ ನಿರೋಧ ಸಿದ್ಧಿಯನ್ನು ಉಂಟುಮಾಡುತ್ತಿದ್ದೇನೆ’ ಎಂದು ಅಥವಾ ‘ನಾನು ಸಂಜ್ಞೆ ಮತ್ತು ಸಂವೇದನೆಯ ನಿರೋಧ ಸಿದ್ಧಿಯನ್ನು ಉಂಟುಮಾಡಿದೆನು’ ಎಂದು. ಅದೂ ಅಲ್ಲದೆ ಅವನು ಈ ಮನಸ್ಸು ಹಿಂದೆಯೇ ಅಭ್ಯಾಸಿಸಲ್ಪಟ್ಟಿದ್ದು ಅದರಿಂದಾಗಿ ಈ ಸ್ಥಿತಿಯು ಉಂಟಾಗಬಹುದು”173 ಎಂದು.

“ಆರ್ಯೆ ಸಂಜ್ಞೆ ಮತ್ತು ಸಂವೇದನೆಯ ನಿರೋಧ ಸಿದ್ಧಿ ಕೊನೆಗೊಳ್ಳಲು ಆರಂಭವಾದ ಭಿಕ್ಷುವಿನಲ್ಲಿ ಮೊದಲಿಗೆ ಯಾವ ಸ್ತಿತಿ ಹುಟ್ಟುತ್ತದೆ- ಶರೀರ ಸಂಖಾರವೋ, ಮಾತಿನ ಸಂಖಾರವೋ ಅಥವಾ ಮನಸ್ಸಿನ ಸಂಖಾರವೋ?” ಎಂದು.

“ಆಯುಷ್ಮಂತ ವಿಶಾಖ, ಸಂಜ್ಞೆ ಮತ್ತು ಸಂವೇದನೆಯು ನಿರೋಧ ಸಿದ್ಧಿ ಕೊನೆಗೊಳ್ಳಲು ಆರಂಭವಾದ ಭಿಕ್ಷುವಿನಲ್ಲಿ ಮೊದಲಿಗೆ ಮನಸ್ಸಿನ ಸಂಖಾರಗಳು ಹುಟ್ಟುತ್ತದೆ, ನಂತರದಲ್ಲಿ ಶರೀರ ಸಂಖಾರಗಳು, ಆನಂತರದಲ್ಲಿ ಮಾತಿನ ಸಂಖಾರಗಳು”174 ಎಂದು.

“ಆರ್ಯೆ, ಸಂಜ್ಞೆ ಮತ್ತು ಸಂವೇದನೆಯ ನಿರೋಧ ಸಿದ್ಧಿ ಕೊನೆಗೊಳ್ಳಲು ಆರಂಭವಾದ ಮೇಲೆ ಭಿಕ್ಷುವಿನಲ್ಲಿ ಎಷ್ಟು ಬಗೆಯ ಸಂಬಂಧಗಳು ಸ್ಪರ್ಶಿಸುತ್ತವೆ?” ಎಂದು.

“ಸಂಜ್ಞೆ ಸಂವೇದನೆಗಳನ್ನು ನಿರೋಧಗೊಳಿಸಲು ಆರಂಭಿಸಿದ ಭಿಕ್ಷುವಿನಲ್ಲಿ ಮೂರು ಸಂಬಂಧಗಳು ಸ್ಪರ್ಶಿಸುತ್ತವೆ. ಅವು- ಶೂನ್ಯ ಸ್ಪರ್ಶ, ಗುರುತಿಲ್ಲದ ಸ್ಪರ್ಶ, ಕಾಮನೆಯಿಲ್ಲದ ಸ್ಪರ್ಶ.”175

“ಆರ್ಯೆ, ಸಂಜ್ಞೆ ಮತ್ತು ಸಂವೇದನೆಯ ನಿರೋಧ ಸಿದ್ಧಿ ಕೊನೆಗೊಳ್ಳಲು ಆರಂಭವಾದ ಭಿಕ್ಷುಗಳಲ್ಲಿ ಮನಸ್ಸು ಯಾವುದರ ಕಡೆ ವಾಲಿರುತ್ತದೆ, ತಿರುಗಿರುತ್ತದೆ, ಆಧರಿಸಿರುತ್ತದೆ?” ಎಂದು.

“ಆಯುಷ್ಮಂತ ವಿಶಾಖ, ಸಂಜ್ಞೆ ಮತ್ತು ಸಂವೇದನೆಯ ನಿರೋಧ ಸಿದ್ಧಿ ಕೊನೆಗೊಳ್ಳು ಆರಂಭವಾದ ಭಿಕ್ಷುಗಳಲ್ಲಿ ಮನಸ್ಸು ಏಕಾಂತತೆಯ ಕಡೆ ವಾಲಿರುತ್ತದೆ, ಏಕಾಂತತೆಯ ಕಡೆಗೆ ತಿರುಗಿರುತ್ತದೆ. ಏಕಾಂತತೆಯನ್ನು ಆಧರಿಸಿರುತ್ತದೆ”176 ಎಂದು.

5. ಮೂರು ಬಗೆಯ (ಸಂ)ವೇದನಾಗಳು

7. “ಆರ್ಯೆ, ವೇದನಾ (ಅನುಭವ) ಎಷ್ಟು ಬಗೆಯದು?” ಎಂದು.

“ಆಯುಷ್ಮಂತ ವಿಶಾಖ, ವೇದನಾ (ಅನುಭವ) ಈ ರೀತಿಯ ಮೂರು ಬಗೆಯವು. ಸುಖ ಅನುಭವ, ದುಃಖ ಅನುಭವ, ದುಃಖವೂ ಅಲ್ಲದ ಸುಖವೂ ಅಲ್ಲದ ಅನುಭವ” ಎಂದು.

“ಆರ್ಯೆ, ಸುಖ ವೇದನಾ ಎಂದರೇನು? ದುಃಖ ವೇದನಾ ಎಂದರೇನು, ದುಃಖವೂ ಅಲ್ಲದ ಸುಖವೂ ಅಲ್ಲದ ವೇದನಾ ಎಂದರೇನು?” ಎಂದು.

“ಆಯುಷ್ಮಂತ ವಿಶಾಖ, ಯಾವುದು ಶಾರೀರಿಕವಾಗಿ ಅಥವಾ ಮಾನಸಿಕವಾಗಿ ಸುಖ ಮತ್ತು ಪ್ರಿಯವಾದ ಅನುಭವ ಕೊಡುವುದೋ ಅದು ಸುಖ ಸಂವೇದನೆ. ಆಯುಷ್ಮಂತ ವಿಶಾಖ, ಯಾವುದು ಶಾರೀರಿಕವಾಗಿ ಅಥವಾ ಮಾನಸಿಕವಾಗಿ ದುಃಖ ಮತ್ತು ಅಪ್ರಿಯವಾದ ಅನುಭವ ಕೊಡುವುದೋ ಅದು ದುಃಖ ಸಂವೇದನೆ. ಆಯುಷ್ಮಂತ ವಿಶಾಖ, ಯಾವುದು ಶಾರೀರಿಕವಾಗಿ ಅಥವಾ ಮಾನಸಿಕವಾಗಿ ಅಪ್ರಿಯವೂ ಅಲ್ಲದ ಪ್ರಿಯವೂ ಅಲ್ಲದ ಅನುಭವ, ಕೊಡುವುದೋ ಅದು ದುಃಖವೂ ಅಲ್ಲದ ಸುಖವೂ ಅಲ್ಲದ ಸಂದೇದನೆ” ಎಂದು.

“ಆರ್ಯೆ, ಸುಖ ಸಂವೇದನೆಯಲ್ಲಿ ಸುಖ ಎಂದರೇನು, ದುಃಖ ಎಂದರೇನು? ದುಃಖ ಸಂವೇದನೆಯಲ್ಲಿ ಸುಖ ಎಂದರೇನು, ದುಃಖ ಎಂದರೇನು? ದುಃಖವೂ ಅಲ್ಲದ ಸುಖವೂ ಅಲ್ಲದ ಸಂವೇದನೆಯಲ್ಲಿ ಸುಖ ಎಂದರೇನು, ದುಃಖ ಎಂದರೇನು?” ಎಂದು.

“ಆಯುಷ್ಮಂತ ವಿಶಾಖ, ಸುಖ ಸಂವೇದನೆ ಎಂದರೆ (ಅದು) ಉಳಿದಿರುವುದರಿಂದ ಸುಖ, ಬದಲಾಗುವುದರಿಂದ ದುಃಖ, ದುಃಖ ಸಂವೇದನೆ ಎಂದರೆ (ಅದು) ಉಳಿದಿರುವುದರಿಂದ ದುಃಖ, ಬದಲಾಗುವುದರಿಂದ ಸುಖ, ದುಃಖವೂ ಅಲ್ಲದ ಸುಖವೂ ಅಲ್ಲದ ಸಂವೇದನೆ ಎಂದರೆ ತಿಳಿದಿರುವಿಕೆಯಿಂದ ಸುಖ, ತಿಳಿಯದೆ ಇರುವಿಕೆಯಿಂದ ದುಃಖ ಎಂದು.

“ಸುಖ ಸಂವೇದನೆಯಲ್ಲಿ ಯಾವ ಪ್ರವೃತ್ತಿಯು ಹುದುಗಿರುತ್ತದೆ, ದುಃಖ ಸಂವೇದನೆಯಲ್ಲಿ ಯಾವ ಪ್ರವೃತ್ತಿಯು ಹುದುಗಿರುತ್ತದೆ, ದುಃಖವೂ ಅಲ್ಲದ ಸುಖವೂ ಅಲ್ಲದ ಸಂವೇದನೆಯಲ್ಲಿ ಯಾವ ಪ್ರವೃತ್ತಿಯು ಹುದುಗಿರುತ್ತದೆ?” ಎಂದು.

“ಆಯುಷ್ಮಂತ ವಿಶಾಖ, ಸುಖದಲ್ಲಿ ವ್ಯಾಮೋಹ ಪ್ರವೃತ್ತಿ ಹುದುಗಿರುತ್ತದೆ, ದುಃಖದಲ್ಲಿ ವಿರೋಧಿಸುವ ಪ್ರವೃತ್ತಿ ಹುದುಗಿರುತ್ತದೆ, ದುಃಖವೂ ಅಲ್ಲದ ಸುಖವೂ ಅಲ್ಲದರಲ್ಲಿ ಅಜ್ಞಾನ ಪ್ರವೃತ್ತಿ ಹುದುಗಿರುತ್ತದೆ”177 ಎಂದು.

“ಆರ್ಯೆ, ಎಲ್ಲ ಸುಖ ಸಂವೇದನೆಯಲ್ಲಿ ವ್ಯಾಮೋಹ ಪ್ರವೃತ್ತಿ ಹುದುಗಿರುತ್ತದೆಯೆ, ಎಲ್ಲ ದುಃಖ ವಿರೋಧಿಸುವ ಪ್ರವೃತ್ತಿ ಹುದುಗಿರುತ್ತದೆಯೆ, ಎಲ್ಲ ದುಃಖವೂ ಅಲ್ಲದ ಸುಖವೂ ಅಲ್ಲದ ಸಂವೇದನೆಯಲ್ಲಿ ಅಜ್ಞಾನ ಪ್ರವೃತ್ತಿ ಹುದುಗಿರುತ್ತದೆಯೆ?” ಎಂದು.

“ಆಯುಷ್ಮಂತ ವಿಶಾಖ, ಎಲ್ಲ ಸುಖ ಸಂವೇದನೆಯಲ್ಲಿ ವ್ಯಾಮೋಹ ಪ್ರವೃತ್ತಿ ಹುದುಗಿರುವುದಿಲ್ಲ, ಎಲ್ಲ ದುಃಖ ಸಂವೇದನೆಯಲ್ಲಿ ವಿರೋಧಿಸುವ ಪ್ರವೃತ್ತಿ ಹುದುಗಿರುವುದಿಲ್ಲ, ಎಲ್ಲ ದುಃಖವೂ ಅಲ್ಲದ ಸುಖವೂ ಅಲ್ಲದ ಸಂವೇದನೆಯಲ್ಲಿ ಅಜ್ಞಾನ ಪ್ರವೃತ್ತಿ ಹುದುಗಿರುವುದಿಲ್ಲ” ಎಂದು.

“ಆರ್ಯೆ, ಸುಖ ಸಂವೇದನೆಯಲ್ಲಿ ಏನನ್ನು ತೊಡೆದುಹಾಕಬಹುದು, ದುಃಖ ಸಂವೇದನೆಯಲ್ಲಿ ಏನನ್ನು ತೊಡೆದು ಹಾಕಬಹುದು ದುಃಖವೂ ಅಲ್ಲದ ಸುಖವೂ ಅಲ್ಲದ ಸಂವೇದನೆಯಲ್ಲಿ ಏನನ್ನು ತೊಡೆದುಹಾಕಬಹುದು” ಎಂದು.

“ಆಯುಷ್ಮಂತ ವಿಶಾಖ, ಸುಖದಲ್ಲಿ ವ್ಯಾಮೋಹ ಪ್ರವೃತ್ತಿಯನ್ನು ತೊಡೆದುಹಾಕಬಹುದು, ದುಃಖ ವಿರೋಧಿಸುವ ಪ್ರವೃತ್ತಿಯನ್ನು ತೊಡೆದುಹಾಕಬಹುದು, ದುಃಖವೂ ಅಲ್ಲದ ಸುಖವೂ ಅಲ್ಲದ ವೇದನೆಯಲ್ಲಿ ಅಜ್ಞಾನ ಪ್ರವೃತ್ತಿಯನ್ನು ತೊಡೆದುಹಾಕಬಹುದು” ಎಂದು.

“ಆರ್ಯೆ, ಎಲ್ಲ ಸುಖ ಸಂವೇದನೆಯಲ್ಲಿ ವ್ಯಾಮೋಹ ಪ್ರವೃತ್ತಿಯನ್ನು ತೊಡೆದುಹಾಕಬಹುದೆ, ಎಲ್ಲ ದುಃಖ ಸಂವೇದನೆಯಲ್ಲಿ ವಿರೋಧಿಸುವ ಪ್ರವೃತ್ತಿಯನ್ನು ತೊಡೆದುಹಾಕಬಹುದೆ, ಎಲ್ಲ ದುಃಖವೂ ಅಲ್ಲದ ಸುಖವೂ ಅಲ್ಲದ ಸಂವೇದನೆಯಲ್ಲಿ ಅಜ್ಞಾನ ಪ್ರವೃತ್ತಿಯನ್ನು ತೊಡೆದುಹಾಕಬಹುದೆ?” ಎಂದು.

“ಆಯುಷ್ಮಂತ ವಿಶಾಖ, ಎಲ್ಲ ಸುಖ ವ್ಯಾಮೋಹ ಪ್ರವೃತ್ತಿಯನ್ನು ತೊಡೆದುಹಾಕಲಾಗುವುದಿಲ್ಲ, ಎಲ್ಲ ದುಃಖ ವಿರೋಧಿಸುವ ಪ್ರವೃತ್ತಿಯನ್ನು ತೊಡೆದು ಹಾಕಲಾಗುವುದಿಲ್ಲ, ಎಲ್ಲ ದುಃಖವೂ ಅಲ್ಲದ ಸುಖವೂ ಅಲ್ಲದ ಸಂವೇದನೆಯಲ್ಲಿ ಅಜ್ಞಾನ ಪ್ರವೃತ್ತಿಯನ್ನು ತೊಡೆದುಹಾಕಲಾಗುವುದಿಲ್ಲ.

ಇಲ್ಲಿ ಆಯುಷ್ಮಂತ ವಿಶಾಖ, ಭಿಕ್ಷುವು ಕಾಮವನ್ನು ದಾಟಿದವನಾಗಿ, ಅಕುಶಲ ಧರ್ಮಗಳನ್ನು ದಾಟಿದವನಾಗಿ ಸವಿತರ್ಕನಾಗಿ, ಸವಿಚಾರನಾಗಿ ಏಕಾಂತದಿಂದ ಹುಟ್ಟಿದ ಆನಂದ ಮತ್ತು ಸುಖದಿಂದ ಕೂಡಿದ ಸಮಾಧಿಯ ಮೊದಲ ಹಂತವನ್ನು ಸಾಧಿಸಿಕೊಂಡು ನೆಲೆಗೊಳ್ಳುತ್ತಾನೆ. ವ್ಯಾಮೋಹವನ್ನು ಅವನು ತೊಡೆದುಹಾಕುತ್ತಾನೆ. ಹಾಗಾಗಿ ಅವನಲ್ಲಿ ವ್ಯಾಮೋಹದ ಪ್ರವೃತ್ತಿ ಹುದುಗಿ ಉಳಿಯುವುದಿಲ್ಲ.178 ಆಯುಷ್ಮಂತ ವಿಶಾಖ, ಇಲ್ಲಿ ಭಿಕ್ಷುವು ಈ ರೀತಿಯಾಗಿ ಆಲೋಚಿಸುತ್ತಾನೆ- ‘ಖಂಡಿತವಾಗಿಯೂ ಆರ್ಯರುಗಳು ಯಾವರೀತಿಯ ಸ್ಥಿತಿಯನ್ನು ಸಾಧಿಸಿಕೊಂಡು ನೆಲೆಗೊಳ್ಳುತ್ತಾರೋ ಅಂಥಹ ಸ್ಥಿತಿಯನ್ನು ನಾನು ಕೂಡ ಸಾಧಿಸಿಕೊಂಡು ಯಾವಾಗ ನೆಲೆಗೊಳ್ಳುತ್ತೇನೆ?’ ಎಂದು. ಈ ರೀತಿಯಾಗಿ ಅನುತ್ತರವಾದ ವಿಮುಕ್ತಿಯ ಬಗ್ಗೆ ಪ್ರೀತಿಯನ್ನು ಹುಟ್ಟಿಸಿಕೊಂಡಮೇಲೆ ಈ ಪ್ರಿಯ ಕಾಮನೆಯಿಂದಾಗಿ ದುಮ್ಮಾನವು ಹುಟ್ಟುತ್ತದೆ, ವಿರೋಧವು ಆಗ ತೊಡೆದು ಹೋಗುತ್ತದೆ. ಹಾಗು ಅಲ್ಲಿ ವಿರೋಧಿಸುವ ಪ್ರವೃತ್ತಿಯು ಹುದುಗಿ ಉಳಿಯುವುದಿಲ್ಲ.179 ಆಯುಷ್ಮಂತ ವಿಶಾಖ, ಇಲ್ಲಿ ಭಿಕ್ಷುವು ಸುಖವನ್ನು ಬಿಟ್ಟವನಾಗಿ, ದುಃಖವನ್ನು ಬಿಟ್ಟವನಾಗಿ ಹಿಂದಿನ ಮಾನಸಿಕ ಸುಮ್ಮಾನ ದುಮ್ಮಾನಗಳನ್ನು ಅಂತ್ಯಗೊಳಿಸಿದವನಾಗಿ, ದುಃಖವೂ ಅಲ್ಲದ ಸುಖವೂ ಅಲ್ಲದ ಉಪೇಕ್ಷಾದಿಂದ ಉಂಟಾದ ಪರಿಶುದ್ಧ ಎಚ್ಚರ ಸ್ಥಿತಿಯಾದ ಸಮಾಧಿಯ ನಾಲ್ಕನೆಯ ಹಂತವನ್ನು ಸಾಧಿಸಿಕೊಂಡು ನೆಲೆಗೊಳ್ಳುತ್ತಾನೆ. ಅಜ್ಞಾನವನ್ನು ಅಲ್ಲಿಯೇ ತೊಡೆದುಹಾಕುತ್ತಾನೆ. ಅಲ್ಲಿ ಅಜ್ಞಾನ ಪ್ರವೃತ್ತಿಯು ಹುದುಗಿ ಉಳಿಯುವುದಿಲ್ಲ”180 ಎಂದು.

8. “ಆರ್ಯೆ, ಸುಖ ಸಂವೇದನೆಯ ಪ್ರತಿರೂಪ181 ಏನು?” ಎಂದು.

“ಆಯುಷ್ಮಂತ ವಿಶಾಖ, ಸುಖ ಸಂವೇದನೆಯ ಪ್ರತಿರೂಪ ದುಃಖ ಸಂವೇದನೆ” ಎಂದು.

“ಆರ್ಯೆ, ದುಃಖವೂ ಅಲ್ಲದ ಸುಖವೂ ಅಲ್ಲದ ಸಂವೇದನೆಯ ಪ್ರತಿರೂಪ ಏನು?” ಎಂದು.

“ಆಯುಷ್ಮಂತ ವಿಶಾಖ, ದುಃಖವೂ ಅಲ್ಲದ ಸುಖವೂ ಅಲ್ಲದ ಸಂವೇದನೆಯ ಪ್ರತಿರೂಪ ಅಜ್ಞಾನ”182 ಎಂದು.

“ಆರ್ಯೆ, ಅಜ್ಞಾನದ ಪ್ರತಿರೂಪ ಏನು?” ಎಂದು.

“ಆಯುಷ್ಮಂತ ವಿಶಾಖ, ಅಜ್ಞಾನದ ಪ್ರತಿರೂಪ ಜ್ಞಾನ” ಎಂದು.

“ಆರ್ಯೆ, ಜ್ಞಾನದ ಪ್ರತಿರೂಪ ಏನು?” ಎಂದು.

“ಆಯುಷ್ಮಂತ ವಿಶಾಖ, ಜ್ಞಾನದ ಪ್ರತಿರೂಪ ವಿಮುಕ್ತಿ” ಎಂದು.

“ಆರ್ಯೆ, ವಿಮುಕ್ತಿಯ ಪ್ರತಿರೂಪ ಏನು? ಎಂದು.

“ಆಯುಷ್ಮಂತ ವಿಶಾಖ, ವಿಮುಕ್ತಿಯ ಪ್ರತಿರೂಪ ನಿಬ್ಬಾನ” ಎಂದು.

“ಆರ್ಯೆ, ನಿಬ್ಬಾನದ ಪ್ರತಿರೂಪ ಏನು?” ಎಂದು.

“ಆಯುಷ್ಮಂತ ವಿಸಾಖ, ಪ್ರಶ್ನೆಗಳು ಬಹಳವಾದವು. ಉತ್ತರ ಇಲ್ಲದಂತಹ ಪ್ರಶ್ನೆಗಳನ್ನು ಕೊನೆವರೆಗೂ ಕೇಳಿದ್ದಾಯಿತು.183 ಆಯುಷ್ಮಂತ ವಿಶಾಖ, ಬ್ರಹ್ಮಚರಿಯ ಜೀವನವು ನಿಬ್ಬಾನದಲ್ಲಿ ಉಳಿಯುವುದಕ್ಕಾಗಿ, ನಿಬ್ಬಾನವನ್ನು ಗಳಿಸಿಕೊಳ್ಳುವುದಕ್ಕಾಗಿ, ನಿಬ್ಬಾನದ ಗುರಿ ಸಾಧಿಸುವುದಕ್ಕಾಗಿ. ಆಯುಷ್ಮಂತ ವಿಶಾಖ, ಅಪೇಕ್ಷಿಸುವುದೇ ಆದರೆ ಭಗವಾನರಲ್ಲಿಗೆ ಹೋಗಿ ಈ ಎಲ್ಲದರ ಬಗ್ಗೆ ಕೇಳು, ಭಗವಾನರು ಏನೆಂದು ವಿವರಿಸುವರೋ ಅದನ್ನು ನಿನ್ನಲ್ಲಿ ಚೆನ್ನಾಗಿ ಉಳಿಸಿಕೊ” ಎಂದು.

6. ಭಗವಾನರ ಅನುಮೋದನೆ

9. ಆಗ ಉಪಾಸಕ ವಿಶಾಖನು ಭಿಕ್ಷುಣಿ ಧಮ್ಮದಿನ್ನರ ಮಾತುಗಳಿಂದ ಆನಂದಗೊಂಡು ಅಭಿನಂದಿಸಿ ಆಸನದಿಂದೆದ್ದು ಭಿಕ್ಷುಣಿ ಧಮ್ಮದಿನ್ನರಿಗೆ ಪ್ರದಕ್ಷಿಣೆ ಮಾಡಿ ವಂದಿಸಿ ನಂತರ ಭಗವಾನರಲ್ಲಿಗೆ ಬಂದನು; ಸಮೀಪಕ್ಕೆ ಬಂದು ಭಗವಾನರಿಗೆ ವಂದಿಸಿ ಒಂದೆಡೆ ಕುಳಿತನು. ಒಂದೆಡೆ ಕುಳಿತುಕೊಂಡ ಆಯುಷ್ಮಂತ ವಿಶಾಖ, ಭಿಕ್ಷುಣಿ ಧಮ್ಮದಿನ್ನರ ಜೊತೆಯಲ್ಲಿ ಮಾತನಾಡಿದ ಆ ಎಲ್ಲ ಮಾತುಕತೆಗಳನ್ನು ಭಗವಾನರಿಗೆ ತಿಳಿಸಿದನು. ಇದನ್ನು ಕೇಳಿದ ಮೇಲೆ ಭಗವಾನರು ಉಪಾಸಕ ವಿಶಾಖನಿಗೆ ಹೀಗೆ ಹೇಳಿದರು- “ವಿಶಾಖ, ಭಿಕ್ಷುಣಿ ಧಮ್ಮದಿನ್ನೆ ಪಂಡಿತಳು. ವಿಶಾಖ, ಭಿಕ್ಷುಣಿ ಧಮ್ಮದಿನ್ನೆ ಮಹಾಜ್ಞಾನಿ. ವಿಶಾಖ, ನನ್ನಲ್ಲಿ ನೀನು ಈ ರೀತಿಯಾಗಿ ಕೇಳಿದ್ದರೂ ಸಹ ನಾನು ಕೂಡ ಅದೇರೀತಿಯಲ್ಲಿ ವಿವರಿಸುತ್ತಿದ್ದೆ, ಯಾವರೀತಿಯಲ್ಲಿ ಭಿಕ್ಷುಣಿ ಧಮ್ಮದಿನ್ನ ವಿವರಿಸಿದಳೋ ಆ ರೀತಿಯಲ್ಲಿ. ಅದೇ ಇದರ ಅರ್ಥ. ಅದೇರೀತಿಯಾಗಿ ನೀನು ಗ್ರಹಿಸಬೇಕು (ಮನಸ್ಸಿನಲ್ಲಿಟ್ಟುಕೊಳ್ಳಬೇಕು)”184 ಎಂದು.

ಭಗವಾನರು ಹೀಗೆ ನುಡಿದರು. ಸ್ಫೂರ್ತಿಗೊಂಡ ಉಪಾಸಕ ವಿಶಾಖ ಭಗವಾನರ ಮಾತಿಗೆ ಆನಂದಗೊಂಡನು.

ಇಲ್ಲಿಗೆ ಮಹಾವೇದಲ್ಲ ಸುತ್ತ ಮುಗಿಯಿತು.

ಟಿಪ್ಪಣಿಗಳು [4]