1. ನಾಲ್ಕು ರೀತಿಯ ಧರ್ಮಾನುಸರಣೆಗಳು
ಹೀಗೆ ನಾನು ಕೇಳಿದ್ದೇನೆ. ಒಂದುಸಲ ಭಗವಾನರು ಶ್ರಾವಸ್ಥಿಯಲ್ಲಿನ ಅನಾಥಪಿಂಡಿಕರ ಜೇತವನದಲ್ಲಿನ ವಿಹಾರದಲ್ಲಿ ತಂಗಿದ್ದರು. ಆಗ ಭಗವಾನರು ಭಿಕ್ಷುಗಳನ್ನು ಕರೆದರು- “ಭಿಕ್ಷುಗಳೇ” ಎಂದು. “ಭದಂತರೇ” ಎಂದು ಆ ಭಿಕ್ಷುಗಳು ಭಗವಾನರಿಗೆ ಉತ್ತರಿಸಿದರು. ಭಗವಾನರು ಹೀಗೆ ಹೇಳಿದರು- “ಭಿಕ್ಷುಗಳೇ, ನಾಲ್ಕು ರೀತಿಯ ಧರ್ಮಾನುಸರಣೆಗಳಿವೆ. ಯಾವುವು ಆ ನಾಲ್ಕು? ಭಿಕ್ಷುಗಳೇ, ವರ್ತಮಾನದಲ್ಲಿ ಸುಖಕರವಾಗಿದ್ದು, ಭವಿಷ್ಯದಲ್ಲಿ ದುಃಖ ಫಲವನ್ನು ಉಂಟುಮಾಡುವ ಧರ್ಮಾನುಸರಣೆ ಇದೆ; ಭಿಕ್ಷುಗಳೇ, ವರ್ತಮಾನದಲ್ಲಿಯೂ ದುಃಖಕರವಾಗಿದ್ದು, ಭವಿಷ್ಯದಲ್ಲಿಯೂ ದುಃಖ ಫಲವನ್ನು ಉಂಟುಮಾಡುವ ಧರ್ಮಾನುಸರಣೆ ಇದೆ; ಭಿಕ್ಷುಗಳೇ, ವರ್ತಮಾನದಲ್ಲಿ ದುಃಖಕರವಾಗಿದ್ದು, ಭವಿಷ್ಯದಲ್ಲಿ ಸುಖ ಫಲವನ್ನು ಉಂಟುಮಾಡುವ ಧರ್ಮಾನುಸರಣೆ ಇದೆ; ಭಿಕ್ಷುಗಳೇ, ವರ್ತಮಾನ ದಲ್ಲಿಯೂ ಸುಖಕರವಾಗಿದ್ದು, ಭವಿಷ್ಯದಲ್ಲಿಯೂ ಸುಖ ಫಲವನ್ನು ಉಂಟುಮಾಡುವ ಧರ್ಮಾನುಸರಣೆ ಇದೆ.”
2. ವರ್ತಮಾನದಲ್ಲಿ ಸುಖ ಭವಿಷ್ಯದಲ್ಲಿ ದುಃಖ ಫಲ
2. “ಭಿಕ್ಷುಗಳೇ, ವರ್ತಮಾನದಲ್ಲಿ ಸುಖಕರವಾಗಿದ್ದು, ಭವಿಷ್ಯದಲ್ಲಿ ದುಃಖಫಲವನ್ನು ಉಂಟುಮಾಡುವ ಧರ್ಮಾನುಸರಣೆ ಯಾವುದು? ಭಿಕ್ಷುಗಳೇ, ಕೆಲವು ಶ್ರಮಣರು ಬ್ರಾಹ್ಮಣರು ಈ ರೀತಿಯ ವಾದ, ಈ ರೀತಿಯ ದೃಷ್ಟಿಯುಳ್ಳವರು ಇದ್ದಾರೆ- ‘ಕಾಮಸಂಬಂಧದಿಂದ ಯಾವ ದೋಷವೂ ಇಲ್ಲ’ ಎಂದು. ಅವರು ಕಾಮಸಂಬಂಧಿಯಾದ ಸುಖದಲ್ಲಿ ಮುಳುಗಿ ಹೋಗುತ್ತಾರೆ. ಅವರುಗಳು ತಲೆಯ ಮೇಲೆ ಕೂದಲನ್ನು ಗಂಟು ಕಟ್ಟುವ ಹೆಣ್ಣು ಪರಿವ್ರಾಜಕರನ್ನು ಸೇರಿಸುತ್ತಾರೆ. ಅವರು ಹೀಗೆ ಹೇಳುತ್ತಾರೆ- ‘ಈ ಕೆಲವು ಪೂಜ್ಯ ಶ್ರಮಣರು ಬ್ರಾಹ್ಮಣರು ಹೇಗೆ ಕಾಮ ಸಂಬಂಧಿಯಿಂದಾಗಿ ಭವಿಷ್ಯದಲ್ಲಿ ಉಂಟಾಗಬಹುದಾದ ಭಯವನ್ನು ಮುಂಗಾಣುತ್ತಾರೆ. ಕಾಮ ಸುಖಗಳನ್ನು ತೊಡೆದು ಹಾಕಬೇಕೆನ್ನುತ್ತಾರೆ. ಮತ್ತು ಕಾಮ ಸುಖದ ಬಗ್ಗೆ ಪೂರ್ಣವಾಗಿ ವಿವರಣೆ ನೀಡುತ್ತಾರೆ? ಈ ತಾರುಣ್ಯದ ಮೃದು ಶರೀರದ ಕೋಮಲತೆಯ ಪರಿವ್ರಾಜಿಕೆಯ ತೋಳಿನ ಸ್ಪರ್ಶದಲ್ಲಿ ಸುಖವು ಅಡಗಿದೆ’ ಎಂದು. ಅವರು ಕಾಮ ಸುಖದಲ್ಲಿ ಮುಳುಗಿಹೋಗುತ್ತಾರೆ. ಅವರು ಕಾಮ ಸುಖದಲ್ಲಿ ಮುಳುಗಿ ಹೋಗುವುದರಿಂದ ಸಾವಿನ ನಂತರ ಶರೀರ ಕಳೆದಮೇಲೆ ಹೀನಸ್ಥಿತಿ, ದುರ್ಗತಿ, ಅಧೋಗತಿ ಪಡೆದು, ನರಕದಲ್ಲಿ ಹುಟ್ಟುತ್ತಾರೆ. ಅವರು ಅಲ್ಲಿ ತೀವ್ರವಾದ, ತೀಕ್ಷ್ಣವಾದ ಕಠೋರವಾದ ದುಃಖದ ವೇದನೆಯನ್ನು ಅನುಭವಿಸುತ್ತಾರೆ. ಅವರು ಹೀಗೆ ಹೇಳುತ್ತಾರೆ- ‘ಈ ರೀತಿಯಾಗಿ ಆ ಪೂಜ್ಯ ಶ್ರಮಣರು ಕಾಮಸಂಬಂಧದಿಂದಾಗಿ ಭವಿಷ್ಯದಲ್ಲಿ ಉಂಟಾಗಬಹುದಾದ ಭಯವನ್ನು ಮುಂಗಾಣುತ್ತಾರೆ, ಕಾಮ ಸುಖಗಳನ್ನು ತೊಡೆದು ಹಾಕಬೇಕೆನ್ನುತ್ತಾರೆ, ಮತ್ತು ಕಾಮ ಸುಖದ ಬಗ್ಗೆ ಪೂರ್ಣವಾಗಿ ವಿವರಣೆ ನೀಡುತ್ತಾರೆ. ಇವೇ ಕಾಮದ ಕಾರಣದಿಂದಾಗಿ, ಕಾಮದ ತೀವ್ರವಾದ ತೀಕ್ಷ್ಣವಾದ ಕಠೋರವಾದ ದುಃಖದ ವೇದನೆಯನ್ನು ನಾವು ಅನುಭವಿಸುತ್ತೇವೆ” ಎಂದು.
3. “ಭಿಕ್ಷುಗಳೇ, ಹೇಗೆಂದರೆ, ಬೇಸಿಗೆಯ ಕೊನೆಯ ತಿಂಗಳಿನಲ್ಲಿ ಮಾಲುವಾ ಬಳ್ಳಿಯ ಬೀಜಕೋಶವು ಸಿಡಿಯುತ್ತದೆ. ಭಿಕ್ಷುಗಳೇ, ಅದರಿಂದಾಗಿ ಮಾಲುವಾ ಲತೆಯ ಬೀಜವು ಬೇರೆಡೆಯಲ್ಲಿದ್ದ ಸಾಲ ಮರದ ಕೆಳಗೆ ಬೀಳುತ್ತದೆ. ಆಗ ಭಿಕ್ಷುಗಳೇ, ಆ ಸಾಲ ಮರದಲ್ಲಿ ವಾಸಮಾಡುವ ದೇವತೆಯು ಭೀತನಾಗಿ ಸಂವೇಗಗೊಂಡು ಸಂತಾಪಗೊಳ್ಳಬಹುದು. ಆಗ ಭಿಕ್ಷುಗಳೇ, ಆ ಸಾಲ ಮರದಲ್ಲಿ ವಾಸಿಸುವ ದೇವತೆಯ ಸ್ನೇಹಿತರು ಮತ್ತು ಸಹಚರರು ಸಂಬಂಧಿಗಳು ಮತ್ತು ಬಂಧುಗಳು ಆದ ಉದ್ಯಾನವನದ ದೇವತೆಗಳು, ಆರಾಮದ ದೇವತೆಗಳು, ವನದೇವತೆಗಳು, ವೃಕ್ಷ ದೇವತೆಗಳು ಔಷಧಿಯುಕ್ತವಾದ ಹುಲ್ಲು ಮತ್ತು ಸಸ್ಯಗಳಲ್ಲಿ ವಾಸಿಸುವ ದೇವತೆಗಳು ಒಂದಾಗಿ, ಒಟ್ಟಾಗಿ ಸೇರಿ ಈ ರೀತಿಯಾಗಿ ಸಮಾಧಾನ ಹೇಳಬಹುದು- ‘ಮಾನ್ಯರೇ, ಭಯಪಡಬೇಡಿ, ಮಾನ್ಯರೇ ಭಯಪಡಬೇಡಿ. ಒಂದುವೇಳೆ ಈ ಮಾಲುವಾ ಲತೆಯ ಬೀಜವನ್ನು ಯಾವುದೊ ಒಂದು ನವಿಲು ನುಂಗಿಬಿಡಬಹುದು ಅಥವಾ ಜಿಂಕೆಯು ತಿಂದುಬಿಡಬಹುದು, ಕಾಡಿನ ಬೆಂಕಿಯು ಸುಟ್ಟುಬಿಡಬಹುದು, ಅಥವಾ ಕಾಡಿನ ಕೆಲಸಗಾರರು ಅದನ್ನು ತೆಗೆದು ಹಾಕಬಹುದು, ಅಥವಾ ಗೆದ್ದಲು ಹುಳು ತಿಂದುಹಾಕಬಹುದು, ಅಥವಾ ಅದು ಹುಟ್ಟದೇ ಹೋಗಬಹುದು’ ಎಂದು. ಭಿಕ್ಷುಗಳೇ, ಆದರೆ ಆ ಮಾಲುವಾ ಬಳ್ಳಿಯ ಬೀಜವನ್ನು ಯಾವ ನವಿಲೂ ನುಂಗಲಿಲ್ಲ, ಯಾವ ಜಿಂಕೆಯೂ ತಿನ್ನಲಿಲ್ಲ, ಯಾವ ಕಾಡಿನ ಬೆಂಕಿಯೂ ಸುಡಲಿಲ್ಲ, ಯಾವ ಕಾಡಿನ ಕೆಲಸಗಾರರೂ ತೆಗೆದು ಹಾಕಲಿಲ್ಲ, ಯಾವ ಗೆದ್ದಲು ಹುಳುವು ತಿಂದುಹಾಕಿಲ್ಲಿ, ಆ ಬೀಜವು ಮಳೆಗಾಲದಲ್ಲಿ ಸಮೃದ್ಧಿಯಾಗಿ ಬಂದ ಮಳೆಯಿಂದಾಗಿ ಮೊಳಕೆಯೊಡೆಯಿತು. ಆ ಮಾಲುವಾ ಬಳ್ಳಿಯು ತಾರುಣ್ಯದಿಂದಿತ್ತು, ಮೃದುವಾಗಿತ್ತು, ಕೋಮಲವಾಗಿತ್ತು. ನಿಧಾನವಾಗಿ ಆ ಸಾಲ ಮರವನ್ನು ಬಳಸಿ ಸುತ್ತಿಕೊಳ್ಳಬಹುದು. ಆಗ ಭಿಕ್ಷುಗಳೇ, ಆ ಸಾಲ ಮರದಲ್ಲಿ ವಾಸಮಾಡುವ ದೇವತೆಗೆ ಹೀಗೆ ಅನಿಸಿತು- ‘ಆ ಆದರಣೀಯ ಸ್ನೇಹಿತರು ಮತ್ತು ಸಹಚರರು, ಸಂಬಂಧಿಗಳು ಮತ್ತು ಬಂಧುಗಳು. ಉದ್ಯಾನವನ ದೇವತೆಗಳು, ಆರಾಮದ ದೇವತೆಗಳು, ವನದೇವತೆಗಳು, ವೃಕ್ಷ ದೇವತೆಗಳು ಔಷಧಿಯುಕ್ತವಾದ ಹುಲ್ಲು ಮತ್ತು ಸಸ್ಯಗಳಲ್ಲಿ ವಾಸಿಸುವ ದೇವತೆಗಳು ಒಂದಾಗಿ, ಒಟ್ಟಾಗಿ ಸೇರಿ ಈ ರೀತಿಯಾಗಿ ಸಮಾಧಾನ ಹೇಳಬಹುದು- ‘ಮಾನ್ಯರೇ, ಭಯಪಡಬೇಡಿ, ಮಾನ್ಯರೇ ಭಯಪಡಬೇಡಿ. ಒಂದುವೇಳೆ ಈ ಮಾಲುವಾ ಲತೆಯ ಬೀಜವನ್ನು ಯಾವುದೊ ಒಂದು ನವಿಲು ನುಂಗಿಬಿಡಬಹುದು ಅಥವಾ ಜಿಂಕೆಯು ತಿಂದುಬಿಡಬಹುದು, ಕಾಡಿನ ಬೆಂಕಿಯು ಸುಟ್ಟುಬಿಡಬಹುದು, ಅಥವಾ ಕಾಡಿನ ಕೆಲಸಗಾರರು ಅದನ್ನು ತೆಗೆದು ಹಾಕಬಹುದು, ಅಥವಾ ಗೆದ್ದಲು ಹುಳು ತಿಂದುಹಾಕಬಹುದು, ಅಥವಾ ಬೀಜವು ಹುಟ್ಟದೇ ಹೋಗಬಹುದು ಎಂಬುದಾಗಿ ಹೇಗೆ ಹೇಳಿದರು?’ ಎಂದು. ‘ಆ ಮಾಲುವಾ ಬಳ್ಳಿಯ ತಾರುಣ್ಯದ ಮೃದು ಶರೀರದ ಕೋಮಲತೆಯ ಬಳಸುವಿಕೆಯ ಸ್ಪರ್ಶದಲ್ಲಿಯೇ ಸುಖ ಇದೆ’ ಎಂದು. ಅದು ಆ ಸಾಲ ಮರವನ್ನು ಬಳಸಿ ಬೆಳೆದುಕೊಂಡಿತು. ಅದು ಆ ಸಾಲ ಮರವನ್ನು ಬಳಸಿ ಬೆಳೆದ ನಂತರ ಮೇಲಗಡೆಯಲ್ಲಿ ಛತ್ರಿಯ ರೀತಿಯಲ್ಲಿ ಹರಡಿಕೊಂಡಿತು, ಮೇಲುಗಡೆ ಛತ್ರಿಯ ರೀತಿ ಹರಡಿಕೊಂಡು ಅಲ್ಲಿಂದ ಕೆಳಗಡೆ ಬೆಳೆಯತೊಡಗಿತು, ಕೆಳಗಡೆ ಬೆಳೆದುಕೊಂಡ ಮೇಲೆ ಆ ಸಾಲ ಮರದ ದೊಡ್ಡ ದೊಡ್ಡ ಕೊಂಬೆಗಳು ಕೂಡ ಮುರಿದುಹೋದವು. ಭಿಕ್ಷುಗಳೇ, ಆಗ ಆ ಸಾಲ ಮರದಲ್ಲಿ ವಾಸಮಾಡುವ ದೇವತೆಗೆ ಹೀಗೆನಿಸಿತು- ‘ಇದಕ್ಕಾಗಿಯೇ ಆ ಆದರಣೀಯ ಸ್ನೇಹಿತರು ಮತ್ತು ಸಹಚರರು, ಸಂಬಂಧಿಗಳು ಮತ್ತು ಬಂಧುಗಳು... ಬೀಜವು ಮೊಳಕೆಯೊಡೆಯದೆ ಇರಬಹುದು ಎಂದದ್ದು. ಈ ಮಾಲುವಾ ಬೀಜದ ಕಾರಣಕ್ಕಾಗಿ, ಇದರಿಂದಾಗಿಯೇ ನಾನು ತೀವ್ರವಾದ ತೀಕ್ಷ್ಣವಾದ ಕಠೋರವಾದ ದುಃಖದ ಅನುಭವವನ್ನು ಅನುಭವಿಸುತ್ತೇವೆ’ ಎಂದು. ಭಿಕ್ಷುಗಳೇ, ಇದು ಹೀಗಿಯೇ ಭಿಕ್ಷುಗಳೇ! ಕೆಲವು ಸಮಣ ಬ್ರಾಹ್ಮಣರು ಹೀಗೆ ಹೇಳುವವರು-ಈ ದೃಷ್ಟಿ ಉಳ್ಳವರು ಇದ್ದಾರೆ; ‘ಕಾಮದಲ್ಲಿ ದೋಷವಿಲ್ಲ’ ಎಂದು. ಅವರು ಕಾಮಗಳಲ್ಲಿಯೇ ನೇಮ ಪಡೆಯುತ್ತಾರೆ* ತಲೆ ಗಂಟು ಹಾಕಿಕೊಂಡು ಪರಿವ್ರಾಜಿಕೆಯರನ್ನು ಸೇವಿಸುತ್ತಾರೆ. ಅವರು ಹೀಗೆ ಹೇಳುತ್ತಾರೆ: ‘ಯಾರವರು ಶ್ರಮಣ ಬ್ರಾಹ್ಮಣರು, ಕಾಮದಲ್ಲಿ (ಇಲ್ಲದ) ಬಾರದ ಭಯವನ್ನು ಕಂಡು, ಕಾಮಗಳನ್ನು ಬಿಡಬೇಕೆನ್ನುವವರು? ಕಾಮದ ಜ್ಞಾನವನ್ನು ಏನು ಹೇಳುತ್ತಾರೆ? ಈ ತರುಣ ಪರಿವ್ರಾಜಿಕೆಯ ಮೃದುವಾದ ನುಣುಪಾದ ತೋಳಲ್ಲೇ ಸುಖವಿದೆ’ ಎಂದು. ಅವರು ಕಾಮ ಸುಖದಲ್ಲಿ ಮುಳುಗಿಹೋಗುತ್ತಾರೆ. ಅವರು ಕಾಮ ಸುಖದಲ್ಲಿ ಮುಳುಗಿ ಹೋಗುವುದರಿಂದ ಸಾವಿನ ನಂತರ ಶರೀರ ಕಳೆದಮೇಲೆ ಹೀನಸ್ಥಿತಿ, ದುರ್ಗತಿ, ಅಧೋಗತಿ ಪಡೆದು, ನರಕದಲ್ಲಿ ಹುಟ್ಟುತ್ತಾರೆ. ಅವರು ಅಲ್ಲಿ ತೀವ್ರವಾದ, ತೀಕ್ಷ್ಣವಾದ ಕಠೋರವಾದ ದುಃಖದ ವೇದನೆಯನ್ನು ಅನುಭವಿಸುತ್ತಾರೆ. ಅವರು ಹೀಗೆ ಹೇಳುತ್ತಾರೆ- ‘ಈ ರೀತಿಯಾಗಿ ಆ ಪೂಜ್ಯ ಶ್ರಮಣರು ಕಾಮಸಂಬಂಧದಿಂದಾಗಿ ಭವಿಷ್ಯದಲ್ಲಿ ಉಂಟಾಗಬಹುದಾದ ಭಯವನ್ನು ಮುಂಗಾಣುತ್ತಾರೆ, ಕಾಮ ಸುಖಗಳನ್ನು ತೊಡೆದು ಹಾಕಬೇಕೆನ್ನುತ್ತಾರೆ, ಮತ್ತು ಕಾಮ ಸುಖದ ಬಗ್ಗೆ ಪೂರ್ಣವಾಗಿ ವಿವರಣೆ ನೀಡುತ್ತಾರೆ. ಇವೇ ಕಾಮದ ಕಾರಣದಿಂದಾಗಿ, ಕಾಮದ ತೀವ್ರವಾದ ತೀಕ್ಷ್ಣವಾದ ಕಠೋರವಾದ ದುಃಖದ ವೇದನೆಯನ್ನು ನಾವು ಅನುಭವಿಸುತ್ತೇವೆ” ಎಂದು. ಇದಕ್ಕೆ ವರ್ತಮಾನದಲ್ಲಿ ಸುಖಕರವಾಗಿದ್ದು, ಭವಿಷ್ಯದಲ್ಲಿ ದುಃಖ ಫಲವನ್ನು ಉಂಟುಮಾಡುವ ಧರ್ಮಾನುಸರಣೆ ಎನ್ನುತ್ತಾರೆ.
3. ವರ್ತಮಾನದಲ್ಲಿ ದುಃಖ ಭವಿಷ್ಯದಲ್ಲಿಯೂ ದುಃಖ ಫಲ
4. “ಭಿಕ್ಷುಗಳೇ, ವರ್ತಮಾನದಲ್ಲಿ ದುಃಖಕರವಾಗಿದ್ದು, ಭವಿಷ್ಯದಲ್ಲಿಯೂ ದುಃಖಫಲವನ್ನು ಉಂಟುಮಾಡುವ ಧರ್ಮಾನುಸರಣೆ ಯಾವುದು? ಭಿಕ್ಷುಗಳೇ, ಇಲ್ಲಿ ಕೆಲವರು ಬಟ್ಟೆ ಧರಿಸದವರು ಸದಾಚಾರ ಬಿಟ್ಟವರು, ಕೈಯನ್ನು ನೆಕ್ಕುವವರು, ಬನ್ನಿ ಎಂದು ಕರೆದಾಗ ಬಾರದವರು, ನಿಲ್ಲಿ ಎಂದು ಹೇಳಿದಾಗ ನಿಲ್ಲದವರು, ನೀಡಿದ್ದನ್ನು ಒಪ್ಪದವರು, ಅವರಿಗಾಗಿಯೇ ಮಾಡಿದ್ದನ್ನು ತೆಗೆದುಕೊಳ್ಳದವರು, ನಿಮಂತ್ರಣ (ಆಹ್ವಾನ) ಒಪ್ಪದವರು, ಮಡಕೆ ಬಾಯಿಂದ ತೆಗೆದುಕೊಳ್ಳದವರು, ಕಟ್ಟಿಗೆ ಹೊರೆಯಲ್ಲಿ ತೆಗೆದುಕೊಳ್ಳದವರು, ಒನಕೆಯ ಬಳಿ ತೆಗೆದುಕೊಳ್ಳದವರು, ಇನ್ನೊಬ್ಬರ ಎದುರಿನಲ್ಲಿ ತೆಗೆದುಕೊಳ್ಳದವರು, ಬಸುರಿಯ ಕೈಯಿಂದ, ಮಗುವಿಗೆ (ಮೊಲೆ) ಹಾಲು ಉಣಿಸುವವಳಿಂದ, ಪುರುಷನ ಜೊತೆಗಿರುವವಳಿಂದ, ಚೆಲ್ಲಿದೆಡೆಯಿಂದ (ಭಿಕ್ಷೆ) ತೆಗೆದುಕೊಳ್ಳದವರು, ಅಂತಹವಳು ಇರುವ ಎಡೆಯಿಂದ, ನೊಣ, ಹುಳ ಹುಪ್ಪಟೆ ಇರುವ ಎಡೆಯಿಂದ ತೆಗೆದುಕೊಳ್ಳದವರು; ಮೀನು, ಮಾಂಸ, ಸುರೆ, ಮೇರಯ (ಅಫೀಮಿನಿಂತಹದು), ಉತ್ತೇಜಕ ನೀರು ಕುಡಿಯುವುದಿಲ್ಲ. ಒಂದು ತಟ್ಟೆಯಲ್ಲಿದ್ದದ್ದನ್ನು.... ಏಳು ತಟ್ಟೆಯಲ್ಲಿದ್ದದ್ದನ್ನು, ಒಂದು ಮನೆ ಒಂದು ತುತ್ತು ಅಥವಾ ಎರಡು ಮನೆ ಎರಡು ತುತ್ತು.... ಅಥವಾ ಏಳು ಮನೆ ಏಳು ತುತ್ತು ಪಡೆಯುತ್ತಾರೆ. ದಿನಕ್ಕೊಂದುಸಲ, ಎರಡು ದಿನಕ್ಕೊಂದುಸಲ.... ಏಳು ದಿನಕ್ಕೊಂದುಸಲ ಆಹಾರ ಸೇವಿಸುತ್ತಾರೆ. ಹೀಗೆ.... ಅರ್ಧ ತಿಂಗಳಿಗೊಂದುಸಲ ನೇಮದ ಊಟ ಮಾಡುವವರಿದ್ದಾರೆ. ಅವರು ಕಾಯಿಪಲ್ಲೆ ತಿನ್ನುವವರಾಗಬಹುದು, ಶ್ಯಾಮಾಕ (ಸಜ್ಜೆ) ಅಥವಾ ಕಾಡಕ್ಕಿ (ನವಣೆ) ದದ್ದುಲಬೀಜ, ಗಾಳಿ ಬೀಳಿಸಿದ (ಕಾಯಿ-ಹಣ್ಣು) ತಿನ್ನುವವರಿದ್ದಾರೆ. ಅದರಲ್ಲಿ ಸೆಣಬು (ಗೋಣೆಪಟ್ಟ) ಹೆಣೆದ, ತೇಪೆ ಹಾಕಿದ ಬಟ್ಟೆ... ಹುಲ್ಲಿನ ಉಡುಗೆ.... ತೊಗಟೆಯ ಉಡುಗೆ... ಕೂದಲಕಂಬಳಿ... ಉಣ್ಣೆ ಬಟ್ಟೆ... ಗೂಬೆಪುಕ್ಕ ಉಡುತ್ತಾರೆ. ತಲೆಗೂದಲು ಗಡ್ಡ ಕಿತ್ತುಕೊಳ್ಳುವವರಿದ್ದಾರೆ (ಲುಂಚನ)* ಇದನ್ನು ಅನುಸರಿಸುವ (ಬೇರೆಯವರಿಗೂ ಕೀಳುವ) ವರಿದ್ದಾರೆ, ನಿಂತೇ ಇರುವವರು, ಆಸನ ಬಿಟ್ಟಿರುವವರು, ಕುಕ್ಕರುಗಾಲಲ್ಲೇ ಕುಳಿತವರು ಇದ್ದಾರೆ. ಮುಳ್ಳು ಹಾವುಗೆಯವರು... ಮುಳ್ಳು ಹಾಸಿಗೆಯವರು ಇದ್ಧಾರೆ. ಮೂರು ಸಂಖ್ಯೆಗಳಲ್ಲಿ ನೀರಿನಲ್ಲಿ ಮುಳುಗಿ ಏಳುವವರು ಇದ್ದಾರೆ.** ಅವನು ಸಾವಿನ ನಂತರ ಶರೀರ ಕಳೆದುಕೊಂಡ ಮೇಲೆ ಹೀನ ಸ್ಥಿತಿಯಲ್ಲಿ, ದುರ್ಗತಿಯಲ್ಲಿ, ಅಧೋಗತಿಯಲ್ಲಿ, ನರಕದಲ್ಲಿ ಹುಟ್ಟುತ್ತಾರೆ. ಭಿಕ್ಷುಗಳೇ, ಇದನ್ನೇ ವರ್ತಮಾನದಲ್ಲಿ ದುಃಖಕರವಾಗಿದ್ದು, ಭವಿಷ್ಯದಲ್ಲಿಯೂ ದುಃಖ ಫಲವನ್ನು ಉಂಟುಮಾಡುವ ಧರ್ಮಾನುಸರಣೆ ಎನ್ನುತ್ತಾರೆ.
4. ವರ್ತಮಾನದಲ್ಲಿ ದುಃಖ ಭವಿಷ್ಯದಲ್ಲಿ ಸುಖ ಫಲ
5. “ಭಿಕ್ಷುಗಳೇ, ವರ್ತಮಾನದಲ್ಲಿ ದುಃಖಕರವಾಗಿದ್ದು ಭವಿಷ್ಯದಲ್ಲಿ ಸುಖ ಫಲವನ್ನು ಉಂಟುಮಾಡುವ ಧರ್ಮಾನುಸರಣೆ ಯಾವುದು? ಭಿಕ್ಷುಗಳೇ, ಇಲ್ಲಿ ಕೆಲವರಲ್ಲಿ ಒಬ್ಬನು ಸ್ವಭಾವಿಕವಾಗಿಯೇ ತೀವ್ರವಾದ ರಾಗವುಳ್ಳವನಾಗಿರುತ್ತಾನೆ, ಅವನು ಪ್ರತಿಕ್ಷಣವೂ ರಾಗ ಕಾರಣದಿಂದಾಗಿ ಉಂಟಾದ ದುಃಖ ಮತ್ತು ದುಮ್ಮಾನವನ್ನು ಅನುಭವಿಸುತ್ತಾನೆ; ಸ್ವಾಭಾವಿಕವಾಗಿಯೇ ತೀವ್ರವಾಗಿ ದ್ವೇಷವುಳ್ಳವನಾಗಿರುತ್ತಾನೆ, ಅವನು ಪ್ರತಿಕ್ಷಣವೂ ದ್ವೇಷದ ಕಾರಣದಿಂದಾಗಿ ಉಂಟಾದ ದುಃಖ ಮತ್ತು ದುಮ್ಮಾನವನ್ನು ಅನುಭವಿಸುತ್ತಾನೆ; ಸ್ವಾಭಾವಿಕವಾಗಿಯೇ ತೀವ್ರವಾಗಿ ಮೋಹವುಳ್ಳವನಾಗಿರುತ್ತಾನೆ, ಅವನು ಪ್ರತಿಕ್ಷಣವೂ ಮೋಹದಿಂದಾಗಿ ಉಂಟಾದ ದುಃಖ ಮತ್ತು ದುಮ್ಮಾನಗಳನ್ನು ಅನುಭವಿಸುತ್ತಾನೆ. ಅವನು ಇಂಥಹ ದುಃಖದಿಂದ ಕೂಡಿದ್ದರೂ ಸಹ, ದುಮ್ಮಾನದಿಂದ ಕೂಡಿದ್ದರೂ ಸಹ ಮುಖದಲ್ಲಿ ಕಣ್ಣೀರು ಸುರಿಸುತ್ತ ಮನದಲ್ಲಿ ರೋಧಿಸುತ್ತಿದ್ದರೂ ಪರಿಪೂರ್ಣ ಪರಿಶುದ್ಧ ಬ್ರಹ್ಮಚರ್ಯ ಜೀವನವನ್ನು ನಡೆಸುತ್ತಾನೆ. ಅವನು ಸಾವಿನ ನಂತರ ಶರೀರ ಕಳೆದುಕೊಂಡ ಮೇಲೆ ಒಳ್ಳೆಯ ಗತಿಯಲ್ಲಿ ಸ್ವರ್ಗ ಲೋಕದಲ್ಲಿ ಹುಟ್ಟುತ್ತಾನೆ. ಭಿಕ್ಷುಗಳೇ, ಇದನ್ನೇ ವರ್ತಮಾನದಲ್ಲಿ ದುಃಖಕರವಾಗಿದ್ದು ಭವಿಷ್ಯದಲ್ಲಿ ಸುಖ ಫಲವನ್ನು ಉಂಟುಮಾಡುವ ಧರ್ಮಾನುಸರಣೆ ಎನ್ನುತ್ತಾರೆ.
5. ವರ್ತಮಾನದಲ್ಲಿ ಸುಖ ಭವಿಷ್ಯದಲ್ಲಿಯೂ ಸುಖ ಫಲ
6. “ಭಿಕ್ಷುಗಳೇ, ವರ್ತಮಾನದಲ್ಲಿ ಸುಖಕರವಾಗಿದ್ದು ಭವಿಷ್ಯದಲ್ಲಿಯೂ ಸುಖ ಫಲವನ್ನು ಉಂಟುಮಾಡುವ ಧರ್ಮಾನುಸರಣೆ ಯಾವುದು? ಭಿಕ್ಷುಗಳೇ, ಇಲ್ಲಿ ಕೆಲವರಲ್ಲಿ ಒಬ್ಬನು, ಸ್ವಾಭಾವಿಕವಾಗಿ ತೀವ್ರವಾದ ರಾಗವುಳ್ಳವನಾಗಿರುವುದಿಲ್ಲ, ಅವನು ಪ್ರತಿಕ್ಷಣವೂ ರಾಗದಿಂದ ಉಂಟಾಗುವಂತಹ ದುಃಖ ಮತ್ತು ದುಮ್ಮಾನಗಳನ್ನು ಅನುಭವಿಸುವುದಿಲ್ಲ. ಅವನು ಸ್ವಾಭಾವಿಕವಾಗಿ ತೀವ್ರವಾದ ದ್ವೇಷವುಳ್ಳವನಾಗಿರುವುದಿಲ್ಲ, ಅವನು ಪ್ರತಿಕ್ಷಣವೂ ದ್ವೇಷದಿಂದ ಉಂಟಾಗುವಂತಹ ದುಃಖ ಮತ್ತು ದುಮ್ಮಾನಗಳನ್ನು ಅನುಭವಿಸುವುದಿಲ್ಲ. ಅವನು ಸ್ವಾಭಾವಿಕವಾಗಿ ತೀವ್ರವಾದ ಮೋಹವುಳ್ಳವನಾಗಿರುವುದಿಲ್ಲ, ಅವನು ಪ್ರತಿಕ್ಷಣವೂ ಮೋಹದಿಂದ ಉಂಟಾಗುವಂತಹ ದುಃಖ ದುಮ್ಮಾನಗಳನ್ನು ಅನುಭವಿಸುವುದಿಲ್ಲ. ಅವನು ಕಾಮವನ್ನು ದಾಟಿದವನಾಗಿ ಅಕುಶಲ ಧರ್ಮವನ್ನು ದಾಟಿದವನಾಗಿ ಸವಿತರ್ಕದಿಂದ ಸವಿಚಾರದಿಂದ ಏಕಾಂತದಿಂದ ಹುಟ್ಟಿದ ಆನಂದ ಮತ್ತು ಸುಖದಿಂದ ಕೂಡಿದ ಎರಡನೇ ಹಂತವನ್ನು ಸಾಧಿಸಿಕೊಂಡು ನೆಲೆಗೊಳ್ಳುತ್ತಾನೆ. ಸಮಾಧಿಯ ಮೂರನೇ ಹಂತವನ್ನು... ಸಮಾಧಿಯ ನಾಲ್ಕನೆಯ ಹಂತವನ್ನು ಸಾಧಿಸಿಕೊಂಡು ನೆಲೆಗೊಳ್ಳುತ್ತಾನೆ. ಅವನು ಸಾವಿನ ನಂತರ ಶರೀರ ಕಳೆದುಕೊಂಡ ಮೇಲೆ ಒಳ್ಳೆಯ ಸ್ಥಿತಿಯಲ್ಲಿ ಸ್ವರ್ಗ ಲೋಕದಲ್ಲಿ ಹುಟ್ಟುತ್ತಾನೆ. ಭಿಕ್ಷುಗಳೇ, ಇದನ್ನೇ ವರ್ತಮಾನದಲ್ಲಿ ಸುಖಕರವಾಗಿದ್ದು, ಭವಿಷ್ಯದಲ್ಲಿ ಸುಖ ಫಲವನ್ನು ಉಂಟುಮಾಡುವ ಧರ್ಮಾನುಸರಣೆ ಎನ್ನುತ್ತಾರೆ. ಭಿಕ್ಷುಗಳೇ, ಇವೇ ಆ ನಾಲ್ಕು ಧರ್ಮಾನುಸರಣೆಗಳು” ಎಂದು.
ಭಗವಾನರು ಹೀಗೆ ನುಡಿದರು. ಸ್ಫೂರ್ತಿ ಪಡೆದ ಆ ಭಿಕ್ಷುಗಳು ಭಗವಾನರ ನುಡಿಗೆ ಆನಂದಗೊಂಡರು.
ಟಿಪ್ಪಣಿಗಳು [4]
English
Việt Ngữ