1. ಬಕನೆಂಬ ಬ್ರಹ್ಮನ ದೃಷ್ಟಿಗಳು
ಹೀಗೆ ನಾನು ಕೇಳಿದ್ದೇನೆ. ಒಂದುಸಲ ಭಗವಾನರು ಶ್ರಾವಸ್ತಿಯ ಜೇತವನದಲ್ಲಿನ ಅನಾಥಪಿಂಡಿಕನ ವಿಹಾರದಲ್ಲಿ ತಂಗಿದ್ದರು. ಆಗ ಭಗವಾನರು ಭಿಕ್ಷುಗಳನ್ನು ಕರೆದರು- “ಭಿಕ್ಷುಗಳೇ” ಎಂದು. “ಭದಂತರೇ” ಎಂದು ಆ ಭಿಕ್ಷುಗಳು ಭಗವಾನರಿಗೆ ಉತ್ತರಿಸಿದರು. ಭಗವಾನರು ಹೀಗೆ ಹೇಳಿದರು-
“ಭಿಕ್ಷುಗಳೇ, ಒಂದು ಸಮಯದಲ್ಲಿ ನಾನು ದೊಡ್ಡ ಸಾಲ ಮರದ ಹತ್ತಿರದ ಸುಭಗವನದಲ್ಲಿನ ಉಕ್ಖಟ್ಠದಲ್ಲಿ ತಂಗಿದ್ದೆನು.203 ಭಿಕ್ಷುಗಳೇ, ಆ ಒಂದು ಸಮಯದಲ್ಲಿ ಬಕಬ್ರಹ್ಮನಲ್ಲಿ ಈ ಬಗೆಯ ಕೆಟ್ಟ ದೃಷ್ಟಿಯು ಹುಟ್ಟಿಬಂತು- ‘ಇದು ನಿತ್ಯ, ಇದು ಅಚಲ, ಇದು ಶಾಶ್ವತ, ಇದು ಸರ್ವಸ್ವ, ಇದು ಗತಿಸುವ ಸ್ವಭಾವದ್ದಲ್ಲ, ಇದು ಹುಟ್ಟಿರುವುದಿಲ್ಲ, ಇದು ಮುಪ್ಪಾಗುವುದಿಲ್ಲ, ಸಾಯುವುದಿಲ್ಲ, ಗತಿಸುವುದಿಲ್ಲ, ಮೇಲೆದ್ದು ಬರುವುದಿಲ್ಲ, ಇದರಿಂದ ಮುಂದೆ ಬೇರೆ ಯಾವುದೂ ತಪ್ಪಿಸಿಕೊಳ್ಳುವುದಿಲ್ಲ’ ಎಂದು. ಭಿಕ್ಷುಗಳೇ, ಆಗ ನಾನು ಬಕಬ್ರಹ್ಮನ ಮನಸ್ಸಿನ ವಿತರ್ಕ ವಿಚಾರಗಳನ್ನು ನನ್ನ ಮನಸ್ಸಿನ ಮೂಲಕವಾಗಿಯೇ ತಿಳಿದುಕೊಂಡು ಯಾವರೀತಿಯಲ್ಲಿ ಒಬ್ಬ ಶಕ್ತಿಶಾಲಿ ಮನುಷ್ಯನು ಮಡಿಚಿದ ತನ್ನ ಕೈಯನ್ನು ಚಾಚುತ್ತಾನೆ, ಚಾಚಿದ ಕೈಯನ್ನು ಮಡಚುತ್ತಾನೆ ಹಾಗೆ, ಅದೇರೀತಿಯಲ್ಲಿ ದೊಡ್ಡ ಸಾಲಮರದ ಹತ್ತಿರದ ಸುಭಗವನದಲ್ಲಿನ ಉಖ್ಖಟ್ಠದಿಂದ ಮರೆಯಾಗಿ ಆ ಬ್ರಹ್ಮಲೋಕದಲ್ಲಿ ಕಾಣಿಸಿಕೊಂಡೆನು. ಭಿಕ್ಷುಗಳೇ, ಬಕಬ್ರಹ್ಮನು ನಾನು ದೂರದಲ್ಲಿ ಬರುತ್ತಿರುವುದನ್ನು ಕಂಡನು. ಕಂಡು ನನಗೆ ಹೇಳಿದನು- ‘ಬನ್ನಿ ಓ ಆದರಣೀಯರೇ, ಸ್ವಾಗತವು ಆದರಣೀಯರೇ! ಆದರಣೀಯರು ಈ ಅವಕಾಶವನ್ನು ಉಪಯೋಗಿಸಿಕೊಂಡು ಇಲ್ಲಿ ಬಂದಿರಿ. ಆದರಣೀಯರೇ, ಇದು ನಿತ್ಯ, ಇದು ಅಚಲ, ಇದು ಶಾಶ್ವತ, ಇದು ಸರ್ವಸ್ವ, ಇದು ಗತಿಸುವ ಸ್ವಭಾವದ್ದಲ್ಲ, ಇದು ಹುಟ್ಟಿರುವುದಲ್ಲ, ಮುಪ್ಪಾಗುವುದಿಲ್ಲ, ಸಾಯುವುದಿಲ್ಲ, ಗತಿಸುವುದಿಲ್ಲ, ಮೇಲೆದ್ದು ಬರುವುದಿಲ್ಲ, ಇದರಿಂದ ಮುಂದೆ ಯಾವುದೂ ತಪ್ಪಿಸಿಕೊಳ್ಳುವುದಿಲ್ಲ’204 ಎಂದು.
2. “ಭಿಕ್ಷುಗಳೇ, ಹೀಗೆ ಹೇಳಿದ ಮೇಲೆ ನಾನು ಬಕಬ್ರಹ್ಮನಿಗೆ ಹೀಗೆ ಹೇಳಿದೆನು- ‘ನಿಶ್ಚಯವಾಗಿಯೂ, ಬಕಬ್ರಹ್ಮನು ಅಜ್ಞಾನದಲ್ಲಿ ಮುಳುಗಿಹೋಗಿದ್ದಾನೆ; ನಿಶ್ಚಯವಾಗಿಯೂ ಬಕಬ್ರಹ್ಮನು ಅಜ್ಞಾನದಲ್ಲಿ ಮುಳುಗಿಹೋಗಿದ್ದಾನೆ. ಯಾವುದು ಅನಿತ್ಯವೋ ಅದನ್ನೇ ನಿತ್ಯವೆಂದು ಹೇಳುತ್ತಾನೆ, ಯಾವುದು ಅಚಲವಲ್ಲವೋ ಅದನ್ನೇ ಅಚಲವೆಂದು ಹೇಳುತ್ತಾನೆ, ಯಾವುದು ಅಶಾಶ್ವತವೋ ಅದನ್ನೇ ಶಾಶ್ವತವೆಂದು ಹೇಳುತ್ತಾನೆ, ಯಾವುದು ಸರ್ವಸ್ವವಲ್ಲವೋ ಅದನ್ನೇ ಸರ್ವಸ್ವವೆಂದು ಹೇಳುತ್ತಾನೆ, ಯಾವುದು ಗತಿಸುವ ಸ್ವಭಾವವುಳ್ಳದ್ದೋ ಅದನ್ನೇ ಗತಿಸುವ ಸ್ವಭಾವದ್ದಲ್ಲ ಎಂದು ಹೇಳುತ್ತಾನೆ, ಯಾವುದು ಹುಟ್ಟುವುದೋ, ಮುಪ್ಪಾಗುವುದೋ, ಸಾಯುವುದೋ, ಗತಿಸುವುದೋ, ಮೇಲೆದ್ದು ಬರುವುದೋ ಅದನ್ನು ಹೀಗೆ ಹೇಳುತ್ತಾನೆ- ‘ಇದು ಹುಟ್ಟಿರುವುದಿಲ್ಲ, ಮುಪ್ಪಾಗುವುದಿಲ್ಲ, ಸಾಯುವುದಿಲ್ಲ, ಗತಿಸುವುದಿಲ್ಲ, ಮೇಲೆದ್ದು ಬರುವುದಿಲ್ಲ’ ಎಂದು. ಇದರಿಂದ ಮುಂದೆ ತಪ್ಪಿಸಿಕೊಳ್ಳಲು ಸಾಧ್ಯವಿದ್ದರೂ ಸಹ ‘ಇದರಿಂದ ಮುಂದೆ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳುತ್ತಾನೆ’ ಎಂದು.
3. “ಭಿಕ್ಖುಗಳೇ, ಆಗ ಪಾಪಿಯಾದ ಮಾರನು ಮತ್ತೊಂದುರೀತಿಯ ಬ್ರಹ್ಮರ ಗುಂಪಿಗೆ ನುಸುಳಿ205 ಬಂದು ನನಗೆ ಈ ರೀತಿ ಹೇಳಿದನು- ‘ಭಿಕ್ಷು, ಇದರ ಗೊಡವೆಗೆ ಹೋಗಬೇಡ, ಇದರ ಗೊಡವೆಗೆ ಹೋಗಬೇಡ, ಓ ಭಿಕ್ಷು, ಈ ಬ್ರಹ್ಮನು ಮಹಾಬ್ರಹ್ಮ, ವಿಜಯಿ, ಅಪಜಯವಿಲ್ಲದವನು, ಎಲ್ಲವನ್ನೂ ಕಾಣುವವನು, ನಿಗ್ರಹಿಸುವವನು, ಸ್ವಾಮಿಯು, ಕರ್ತೃ, ನಿರ್ಮಾತೃ, ಶ್ರೇಷ್ಠ, ಅಂತ್ಯಗೊಳಿಸುವವನು, ಒಡೆಯ, ತಂದೆ. ಈಗ ಇರುವ ಮತ್ತು ಮುಂದೆ ಬರುವ ಎಲ್ಲದಕ್ಕೂ ಅವನು ಹಾಗೆಯೇ. ಭಿಕ್ಷು ನಿನಗಿಂತ ಮುಂಚೆಯೇ ಶ್ರಮಣರು, ಬ್ರಾಹ್ಮಣರು ಈ ಲೋಕದಲ್ಲಿ ಇದ್ದರು. ಅವರು ಭೂಮಿಯನ್ನು ಧಿಕ್ಕರಿಸಿದ್ದರು, ಭೂಮಿಯನ್ನು ತಿರಸ್ಕರಿಸಿದ್ದರು, ಆಪವನ್ನು ಧಿಕ್ಕರಿಸಿದ್ದರು ಆಪವನ್ನು ತಿರಸ್ಕರಿಸಿದ್ದರು, ಗಾಳಿಯನ್ನು ಧಿಕ್ಕರಿಸಿದ್ದರು ಗಾಳಿಯನ್ನು ತಿರಸ್ಕರಿಸಿದ್ದರು, ಜೀವಿಗಳನ್ನು ಧಿಕ್ಕರಿಸಿದ್ದರು ಜೀವಿಗಳನ್ನು ತಿರಸ್ಕರಿಸಿದ್ದರು, ದೇವತೆಗಳನ್ನು ಧಿಕ್ಕರಿಸಿದ್ದರು ದೇವತೆಗಳನ್ನು ತಿರಸ್ಕರಿಸಿದ್ದರು, ಪ್ರಜಾಪತಿಯನ್ನು ಧಿಕ್ಕರಿಸಿದ್ದರು, ಪ್ರಜಾಪತಿಯನ್ನು ತಿರಸ್ಕರಿಸಿದ್ದರು, ಬ್ರಹ್ಮನನ್ನು ಧಿಕ್ಕರಿಸಿದ್ದರು, ಬ್ರಹ್ಮನನ್ನು ತಿರಸ್ಕರಿಸಿದ್ದರು206- ಅವರು, ಶರೀರ ಗತಿಸಿದ ಮೇಲೆ, ಪ್ರಾಣವು ಕತ್ತರಿಸಿ ಹೋದಮೇಲೆ, ಹೀನ ಗುಂಪಿನಲ್ಲಿ ಸ್ಥಾಪಿತರಾದರು.207 ಆದರೆ ಭಿಕ್ಷು, ಮುಂಚೆಯೂ ಕೆಲವು ಶ್ರಮಣರು ಬ್ರಾಹ್ಮಣರು ಈ ಲೋಕದಲ್ಲಿ ಇದ್ದರು. ಅವರುಗಳು ಭೂಮಿಯನ್ನು ಪ್ರಶಂಸಿಸಿದರು ಭೂಮಿಯನ್ನು ಮೆಚ್ಚಿಕೊಂಡಿದ್ದರು, ಆಪವನ್ನು ಪ್ರಶಂಸಿಸಿದರು ಆಪವನ್ನು ಮೆಚ್ಚಿಕೊಂಡಿದ್ದರು, ತೇಜಸ್ಸನ್ನು ಪ್ರಶಂಸಿಸಿದರು ತೇಜಸ್ಸನ್ನು ಮೆಚ್ಚಿಕೊಂಡಿದ್ದರು, ಗಾಳಿಯನ್ನು ಪ್ರಶಂಸಿಸಿದರು ಗಾಳಿಯನ್ನು ಮೆಚ್ಚಿಕೊಂಡಿದ್ದರು,208 ಜೀವಿಗಳನ್ನು ಪ್ರಶಂಸಿಸಿದರು ಜೀವಿಗಳನ್ನು ಮೆಚ್ಚಿಕೊಂಡಿದ್ದರು, ದೇವತೆಗಳನ್ನು ಪ್ರಶಂಸಿಸಿದರು ದೇವತೆಗಳನ್ನು ಮೆಚ್ಚಿಕೊಂಡಿದ್ದರು, ಪ್ರಜಾಪತಿಯನ್ನು ಪ್ರಂಶಸಿಸಿದರು ಪ್ರಜಾಪತಿಯನ್ನು ಮೆಚ್ಚಿಕೊಂಡಿದ್ದರು, ಬ್ರಹ್ಮನನ್ನು ಪ್ರಶಂಸಿಸಿದರು ಬ್ರಹ್ಮನನ್ನು ಮೆಚ್ಚಿಕೊಂಡಿದ್ದರು. ಅವರು, ಶರೀರಿ ಗತಿಸಿದ ಮೇಲೆ ಪ್ರಾಣವು ಕತ್ತರಿಸಿ ಹೋದಮೇಲೆ ಉಚ್ಛ ಗುಂಪಿನಲ್ಲಿ ಸ್ಥಾಪಿತರಾದರು.209 ಭಿಕ್ಷು ಈ ಕಾರಣಕ್ಕಾಗಿ ಹೀಗೆ ಹೇಳುತ್ತೇನೆ- ‘ಆದರಣೀಯರೇ, ಆ ಬ್ರಹ್ಮರ ಮಾತನ್ನು ಮೀರಿ ಹೋಗಬೇಡಿ, ಭಿಕ್ಷು ಒಂದುವೇಳೆ ಬ್ರಹ್ಮರ ಮಾತನ್ನು ಮೀರಿ ನಡೆದರೆ, ಹೇಗಾಗುವುದೆಂದರೆ: ಒಬ್ಬ ಮನುಷ್ಯನು ಐಶ್ವರ್ಯ ಸಿಗುವಾಗ ಕೋಲಿನಿಂದ ಹೊಡೆದು ಓಡಿಸುವ ರೀತಿಯಲ್ಲಿ, ಹೇಗೆಂದರೆ ಭಿಕ್ಷು, ಒಬ್ಬ ಮನುಷ್ಯನು ನರಕದ ಪ್ರಪಾತದಿಂದ ಕೆಳಗೆ ಬೀಳುವಾಗ ಅವನ ಕೈ ಮತ್ತು ಕಾಲಿಗೆ ಭೂಮಿಯು ನಿಲುಕದೇ ಹೋಗಬಹುದು. ಭಿಕ್ಷು ಇಂತಹ ಪರಿಸ್ಥಿತಿಯು ನಿಮಗೂ ಆಗಬಹುದು. ಆದರಣೀಯರೇ, ಆ ಬ್ರಹ್ಮರು ಏನನ್ನು ಹೇಳುತ್ತಾರೋ ನೀವು ಅದನ್ನು ಅದೇರೀತಿಯಲ್ಲಿ ಮಾಡಿರಿ, ಬ್ರಹ್ಮರ ಮಾತನ್ನು ಮೀರಿ ನೀವು ಹೋಗಬೇಡಿ. ಭಿಕ್ಷು ನೀವು ಇಲ್ಲಿ ಬ್ರಹ್ಮ ಸಮೂಹ ಇರುವುದನ್ನು ಕಂಡಿಲ್ಲವೇ?’ ಎಂದು. ಭಿಕ್ಷುಗಳೇ ಹೀಗೆ ನನಗೆ ಪಾಪಿಯಾದ ಮಾರನು ಬ್ರಹ್ಮರ ಸಮೂಹದ ಕಡೆಗೆ ಕೊಂಡೊಯ್ಯುವ ರೀತಿಯಲ್ಲಿ ಹೇಳಿದನು210-
4. “ಭಿಕ್ಷುಗಳೇ, ಹೀಗೆ ಹೇಳಿದಮೇಲೆ ನಾನು ಪಾಪಿಯಾದ ಮಾರನಿಗೆ ಹೀಗೆ ಹೇಳಿದೆನು- ‘ನಾನು ನಿನ್ನನ್ನು ತಿಳಿದಿದ್ದೇನೆ, ಪಾಪಿಯೇ; ನನಗೆ ನೀನು ಗೊತ್ತಿಲ್ಲವೆಂದು ನೀನು ನನ್ನ ಬಗ್ಗೆ ತಿಳಿಯಬೇಡ’ ಎಂದು. ‘ಮಾರನೇ, ನೀನು ಪಾಪಿಯು, ಮತ್ತೂ ಪಾಪಿಯೆ, ಯಾವ ಯಾವ ಬ್ರಹ್ಮರಿದ್ದಾರೆ, ಯಾವ ಯಾವ ಬ್ರಹ್ಮ ಸಮೂಹಗಳಿವೆ, ಯಾವ ಯಾವ ಬ್ರಹ್ಮ ಸಭೆಗಳಿವೆ ಎಲ್ಲವೂ ನಿನ್ನ ಕೈಗೆ ನಿಲುಕುವಂತಹವು, ಎಲ್ಲವೂ ನಿನ್ನ ವಶದಲ್ಲಿರುವಂತಹವು. ಆದ್ದರಿಂದ ಪಾಪಿಯೇ, ನಿನಗೆ ಹೀಗೆ ಅನಿಸುತ್ತದೆ- ‘ಇದು ಕೂಡ ನನ್ನ ಕೈಗೆ ನಿಲುಕುವಂತಾಗಲಿ, ಇನ್ನೊಂದು ಕೂಡ ನನ್ನ ವಶದಲ್ಲಿರಲಿ’ ಎಂದು. ಆದರೆ ಪಾಪಿಯೇ, ನಾನು ನಿನ್ನ ಕೈಗೆ ನಿಲುಕುವುದೂ ಇಲ್ಲ ಮತ್ತು ನಿನ್ನ ವಶದಲ್ಲಿಯೂ ಇಲ್ಲ” ಎಂದು.
5. “ಭಿಕ್ಷುಗಳೇ, ಹೀಗೆ ಹೇಳಿದ ಮೇಲೆ ನನಗೆ ಬಕಬ್ರಹ್ಮ ಹೀಗೆ ಹೇಳಿದನು- “ಆದರಣೀಯರೇ, ನಾನು ಯಾವಾಗಲೂ ನಿತ್ಯನಾಗಿರುವುದರಿಂದ ನಿತ್ಯ ಎಂದು ಹೇಳುತ್ತೇನೆ, ಯಾವಾಗಲೂ ಅಚಲನಾಗಿರುವುದರಿಂದ ಅಚಲ ಎಂದು ಹೇಳುತ್ತೇನೆ, ಯಾವಾಗಲೂ ಶಾಶ್ವತನಾಗಿರುವುದರಿಂದ ಶಾಶ್ವತ ಎಂದು ಹೇಳುತ್ತೇನೆ, ಯಾವಾಗಲೂ ಸರ್ವಸ್ವನಾಗಿರುವುದರಿಂದ ಸರ್ವಸ್ವ ಎಂದು ಹೇಳುತ್ತೇನೆ, ಯಾವಾಗಲೂ ಗತಿಸುವ ಸ್ವಭಾವ ಇಲ್ಲದ್ದರಿಂದ ನಾನು ಗತಿಸದ ಸ್ವಭಾವವುಳ್ಳವನು ಎಂದು ಹೇಳುತ್ತೇನೆ, ಯಾವಾಗಲೂ ಹುಟ್ಟುವುದಿಲ್ಲ, ಮುಪ್ಪಾಗುವುದಿಲ್ಲ, ಸಾಯುವುದಿಲ್ಲ, ಗತಿಸುವುದಿಲ್ಲ, ಮೇಲೆ ಬರುವುದಿಲ್ಲ’ ಎಂದು. ಇದರಿಂದ ಮುಂದೆ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳುತ್ತೇನೆ. ಭಿಕ್ಷು ನಿನಗಿಂತ ಮುಂಚೆಯೂ ಈ ಲೋಕದಲ್ಲಿ ಶ್ರಮಣರು ಬ್ರಾಹ್ಮಣರು ಇದ್ದರು. ಯಾರು ಎಲ್ಲಿಯವರೆಗೆ ನಿನ್ನ ಪೂರ್ಣ ಜೀವಿತವಿದೆಯೋ ಅಲ್ಲಿಯವರೆಗೂ ಅವರುಗಳು ತಪಸ್ಸಾಧನೆಯನ್ನು ಮಾಡಿದ್ದರು. ಅವರುಗಳು ಕೂಡ ಈ ರೀತಿಯಾಗಿ ತಿಳಿದಿದ್ದರು- ಮುಂದೆ ಇದಕ್ಕಿಂತ ಬೇರೆಯದಾದ್ದು ತಪ್ಪಿಸಿಕೊಳ್ಳುವಿಕೆ ಸಾಧ್ಯ ಇದೆ ಎಂದರೆ ಮುಂದೆ ಇದಕ್ಕಿಂತ ಬೇರೆಯದಾದ ತಪ್ಪಿಸಿಕೊಳ್ಳುವಿಕೆ ಸಾಧ್ಯ ಇದೆ. ಮುಂದೆ ಇದಕ್ಕಿಂತ ಬೇರೆಯದಾದ್ದು ತಪ್ಪಿಸಿಕೊಳ್ಳಲು ಸಾಧವಿಲ್ಲ ಎಂದರೆ ಮುಂದೆ ಇದಕ್ಕಿಂತ ಬೇರೆಯದಾದ್ದು ತಪ್ಪಿಸಿಕೊಳ್ಳಲು ಸಾಧ್ಯ ಇಲ್ಲ’ ಎಂದು. ಭಿಕ್ಷು, ಆದ್ದರಿಂದ ನಾನು ನಿನಗೆ ಈ ರೀತಿ ಹೇಳುತ್ತೇನೆ- ‘ಮುಂದೆ ಇದಕ್ಕಿಂತ ಬೇರೆಯದಾದ ತಪ್ಪಿಸಿಕೊಳ್ಳುವಿಕೆ ಸಾಧ್ಯ ಎಂಬುದು ಕಾಣಬರುವುದೇ ಇಲ್ಲ. ನೀವು ಎಷ್ಟೇ ವಿಧವಾದ ಶ್ರಮವಹಿಸಿದರೂ ಕಷ್ಟಗಳನ್ನು ಅನುಭವಿಸಿದರೂ ಸಹ ಸಾಧ್ಯವಿಲ್ಲ. ಭಿಕ್ಷು, ಆದರೆ ನೀವು ಭೂಮಿಯನ್ನು ಅರಿತು ನಡೆದರೆ ನನಗೆ ಬಹಳ ಆತ್ಮೀಯರಾಗುತ್ತೀರಿ. ನನ್ನ ಸತ್ವದ ಮೇಲೆ ಭರವಸೆ ಇಟ್ಟವರಾಗುತ್ತೀರಿ. ನನಗಿಂತ ಚಿಕ್ಕವರಿಗೆ ಏನನ್ನು ಮಾಡಬೇಕೋ ಅದನ್ನು ಮಾಡಿಕೊಳ್ಳುತ್ತೇನೆ.211 ಹಾಗೆಯೇ ಆಪ... ತೇಜ... ಗಾಳಿ... ಜೀವಿಗಳು... ದೇವತೆಗಳು... ಪ್ರಜಾಪತಿ... ಬ್ರಹ್ಮನನ್ನು ಅರಿತು ನಡೆದರೆ ನನಗೆ ಬಹಳ ಆತ್ಮೀಯರಾಗುತ್ತೀರಿ. ನನ್ನ ಸತ್ವದ ಮೇಲೆ ಭರವಸೆ ಇಟ್ಟವರಾಗುತ್ತೀರಿ, ನನಗಿಂತ ಚಿಕ್ಕವರಿಗೆ ಏನನ್ನು ಮಾಡಬೇಕೊ ಅದನ್ನು ಮಾಡಿಕೊಡುತ್ತೇನೆ’ ಎಂದು.
6. “ಬ್ರಹ್ಮ ನಾನು ಕೂಡ ಇದನ್ನು ತಿಳಿದಿದ್ದೇನೆ- ಒಂದುವೇಳೆ ಭೂಮಿಯನ್ನು ನಾನು ಅರಿತುನಡೆದರೆ ನಿನಗೆ ಬಹಳ ಆತ್ಮೀಯನಾಗುತ್ತೇನೆ, ನಿನ್ನ ಸತ್ವದ ಮೇಲೆ ಭರವಸೆ ಇಟ್ಟವನಾಗುತ್ತೇನೆ. ನಿನಗಿಂತ ಚಿಕ್ಕವರಿಗೆ ಏನನ್ನು ಮಾಡಿಕೊಡಬೇಕೊ ಅದನ್ನು ಮಾಡಿಕೊಡುತ್ತೀಯ. ಹಾಗೆಯೇ ಆಪ... ತೇಜ... ಗಾಳಿ... ಜೀವಿಗಳು... ದೇವತೆಗಳು... ಪ್ರಜಾಪತಿ... ಬ್ರಹ್ಮನನ್ನು ಅರಿತು ನಡೆದರೆ ನಿನಗೆ ಬಹಳ ಆತ್ಮೀಯದವನಾಗುತ್ತೇನೆ. ನಿನ್ನ ಸತ್ವದ ಮೇಲೆ ಭರವಸೆ ಇಟ್ಟವನಾಗುತ್ತೇನೆ. ನಿನಗಿಂತ ಚಿಕ್ಕವರಿಗೆ ಏನನ್ನು ಮಾಡಿಕೊಡಬೇಕೋ ಅದನ್ನು ಮಾಡಿಕೊಡುತ್ತೀಯ’ ಎಂದು. ಹಾಗೆಯೇ, ಮತ್ತೆ ಬ್ರಹ್ಮ, ನಿನ್ನ ಮಿತಿಯನ್ನು ಅರಿತಿದ್ದೇನೆ ಹಾಗು ನಿನ್ನ ಮಹತ್ತನ್ನು ಅರಿತಿದ್ದೇನೆ. ಈ ಬಕಬ್ರಹ್ಮನು ಹೀಗೆ ಮಹಾಶಕ್ತಿಶಾಲಿಯು, ಈ ಬಕಬ್ರಹ್ಮನು ಮಹಾಮಹಿಮನು ಈ ಬಕಬ್ರಹ್ಮನು ಮಹಾಯಶೋವಂತನು” ಎಂದು.
7. “ಆದರಣೀಯರೇ, ನೀವು ನನ್ನ ಬಗ್ಗೆ ಹೇಗೆ ಮಿತಿಯನ್ನು ತಿಳಿಯುತ್ತೀರಿ, ಮಹತ್ತನ್ನು ತಿಳಿಯುತ್ತೀರಿ- ಈ ಬಕಬ್ರಹ್ಮನು ಹೀಗೆ ಮಹಾಶಕ್ತಿಶಾಲಿಯು, ಈ ಬಕಬ್ರಹ್ಮನು ಹೀಗೆ ಮಹಾಮಹೀಮನು, ಈ ಬಕಬ್ರಹ್ಮನು ಹಿಗೆ ಮಹಾಯಶೋವಂತನು” ಎಂದು.
ಎಲ್ಲಿಯವರೆಗೆ ಚಂದ್ರ ಸೂರ್ಯರು, ಎಲ್ಲ ದಿಕ್ಕುಗಳನ್ನು ಪ್ರಭೆಯಿಂದ ಬೆಳಗುವರೊ |
ಅಲ್ಲಿಯವರೆಗಿದೆ ಸಾವಿರ ಲೋಕದ ಪರಿಧಿ, ಅಲ್ಲಿರುವವರರೆಲ್ಲರೂ ನಿನ್ನ ವಶವರ್ತುಲದವರು ||
ಇರುವ ಬೇರೆ ಬಗೆಗಳನ್ನು ತಿಳಿದಿರುವೆಯೇನು ? ವ್ಯಾಮೋಹಿಯನ್ನು ಮತ್ತು ನಿರ್ಮೋಹಿಯನ್ನು |
ಬದುಕಿ ಇರುವವರನ್ನು ಬದುಕು ಮುಗಿಸಿ ಹೋಗುವವರನ್ನು,
ಜೀವಿಗಳು ಬಂದಿರುವುದನ್ನು, ಬಂದು ಹೋಗುವುದನ್ನು ತಿಳಿದಿರುವೆ ಏನು ? ||
ಈ ರೀತಿಯಾಗಿ ನಾನು ಬಕಬ್ರಹ್ಮ, ನಿನ್ನ ಮಿತಿಯನ್ನು ತಿಳಿದಿದ್ದೇನೆ212 ನಿನ್ನ ಮಹತ್ತನ್ನು ತಿಳಿದಿದ್ದೇನೆ- ‘ಈ ಬಕಬ್ರಹ್ಮನು ಹೀಗೆ ಮಹಾ ಶಕ್ತಿಶಾಲಿಯು, ಈ ಬಕಬ್ರಹ್ಮನು ಮಹಾಮಹೀಮನು ಈ ಬಕಬ್ರಹ್ಮನು ಹೀಗೆ ಮಹಾ ಯಶೋವಂತನು’ ಎಂದು.
8. “ಬ್ರಹ್ಮ, ಬೇರೆ ಕಾಯಗಳಿವೆ, ಅವುಗಳನ್ನು ನೀನು ತಿಳಿದಿಲ್ಲ ಮತ್ತು ಕಂಡಿಲ್ಲ; ಆದರೆ ನಾನು ಅವುಗಳನ್ನು ತಿಳಿದಿದ್ದೇನೆ ಮತ್ತು ಕಂಡಿದ್ದೇನೆ, ಬ್ರಹ್ಮ ಆಭಸ್ಸರ ಎಂಬ ಕಾಯಗಳಿವೆ. ಅಲ್ಲಿ ಚ್ಯುತನಾಗಿ ನೀನು ಇಲ್ಲಿ ಹುಟ್ಟಿದ್ದರಿಂದಾಗಿ ಅವುಗಳು ಇರುವುದನ್ನು ಕಾಣದಿರುವೆ.213 ಅಲ್ಲದೇ ಅತಿ ದೀರ್ಘಕಾಲದವರೆಗೆ ಇರುವುದರಿಂದಾಗಿ ಅವುಗಳ ಸ್ಮೃತಿ ಹೋಗಿದೆ. ಅವುಗಳನ್ನು ನೀನು ತಿಳಿದಿಲ್ಲ ಮತ್ತು ಕಂಡಿಲ್ಲ. ಆದರೆ ನಾನು ಅವುಗಳನ್ನು ತಿಳಿದಿದ್ದೇನೆ ಮತ್ತು ಕಂಡಿದ್ದೇನೆ. ಆದ್ದರಿಂದಾಗಿ, ಬ್ರಹ್ಮ ನಾನು ನಿನ್ನೊಂದಿಗೆ ಪರಮಜ್ಞಾನದ ವಿಷಯದಲ್ಲಿ ಕೇವಲ ಸರಿಸಮಾನನೆಂಬುದು ಹಾಗಿರಲಿ, ಇನ್ನು ಕೆಳದರ್ಜೆಯ ಮಾತು ಎಲ್ಲಿದೆ? ಹಾಗಲ್ಲದೆ ನಾನು ನಿನಗಿಂತಲೂ ಅಧಿಕವಾಗಿರುವವನು.214 ಬ್ರಹ್ಮ ಸುಭಕಿಣ್ಹ ಎಂಬ ಕಾಯಗಳಿವೆ, ವೇಹಫಲ ಎಂಬ ಕಾಯಗಳಿವೆ, ಅಭಿಭೂ ಎಂಬ ಕಾಯಗಳಿವೆ. ಅವುಗಳನ್ನು ನೀನು ತಿಳಿದೂ ಇಲ್ಲ ಮತ್ತು ಕಂಡೂ ಇಲ್ಲ. ಆದರೆ ನಾನು ಅವುಗಳನ್ನು ತಿಳಿದೂ ಇದ್ದೇನೆ, ಕಂಡೂ ಇದ್ದೇನೆ. ಆದ್ದರಿಂದಾಗಿ ಬ್ರಹ್ಮ, ನಾನು ನಿನ್ನೊಂದಿಗೆ ಪರಮಜ್ಞಾನದ ವಿಷಯದಲ್ಲಿ ಕೇವಲ ಸರಿಸಮಾನನೆಂಬುದು ಹಾಗಿರಲಿ, ಇನ್ನು ಕೆಳದರ್ಜೆಯ ಮಾತು ಎಲ್ಲಿದೆ? ಹಾಗಲ್ಲದೆ ನಾನು ನಿನಗಿಂತ ಅಧಿಕನಾಗಿರುವವನು. ಬ್ರಹ್ಮ, ನಾನು ಭೂಮಿಯ ಹರಹನ್ನು ಭೂಮಿಯ ಹರಹೆಂದೇ ತಿಳಿದಿದ್ದೇನೆ. ಈ ಭೂಮಿಯ ಹರಹನ್ನು ಕೇವಲ ಭೂಮಿಯ ಹರಹಿನಿಂದಲೇ ಕಾಣಲು ಅಸಾಧ್ಯ, ಅದರಿಂದಾಗಿ ಭೂಮಿಯ (ಆತ್ಮದ) ಹರಹೆಂದು ಕಾಣಬೇಡ, ಭೂಮಿಯಿಂದಾಗಿಯೇ (ಆತ್ಮ) ಎಂದು ಕಾಣಬೇಡ, ಭೂಮಿಯ ಕಾರಣದಿಂದಾಗಿ (ಆತ್ಮ) ಎಂದು ಕಾಣಬೇಡ, ಭೂಮಿಯು ನನ್ನದು ಎಂದು ಕಾಣಬೇಡ, ಭೂಮಿಗೆ ನಾನು ನಮಿಸುವುದಿಲ್ಲ.215 ಆದ್ದರಿಂದಾಗಿ ಬ್ರಹ್ಮ, ನಾನು ನಿನ್ನೊಂದಿಗೆ ಪರಮಜ್ಞಾನದ ವಿಷಯದಲ್ಲಿ ಕೇವಲ ಸರಿಸಮಾನನೆಂಬುದು ಹಾಗಿರಲಿ, ಇನ್ನು ಕೆಳದರ್ಜೆಯ ಮಾತು ಎಲ್ಲಿದೆ? ಹಾಗಲ್ಲದೆ ನಾನು ನಿನಗಿಂತ ಅಧಿಕನಾಗಿರುವವನು. ಬ್ರಹ್ಮ, ನಾನು ಆಪವನ್ನು... ತೇಜವನ್ನು... ಗಾಳಿಯನ್ನು... ಜೀವಿಗಳನ್ನು... ದೇವತೆಗಳನ್ನು.. ಪ್ರಜಾಪತಿಯನ್ನು... ಬ್ರಹ್ಮನನ್ನು... ಅಭಸ್ಸರರನ್ನು... ಸುಭಕಿಣ್ಹರನ್ನು... ವೇಹಪ್ಫಲರನ್ನು... ಅಭಿಭೂರನ್ನು... ನಾನು ಎಲ್ಲವನ್ನು ಎಲ್ಲವೆಂದೇ ತಿಳಿದಿದ್ದೇನೆ. ಯಾವುದೆಲ್ಲವನ್ನೂ ಕೇವಲ ಎಲ್ಲದರಿಂದಲೇ ಕಾಣಲು ಅಸಾಧ್ಯ, ಅದರಿಂದಾಗಿ ಎಲ್ಲವನ್ನು (ಆತ್ಮ)ವೆಂದು ಕಾಣಬೇಡ, ಎಲ್ಲವೂ (ಆತ್ಮ) ದಿಂದಾಗಿಯೇ ಎಂದು ಕಾಣಬೇಡ, ಎಲ್ಲದರ ಕಾರಣದಿಂದಾಗಿಯೇ (ಅತ್ಮ) ಎಂದು ಕಾಣಬೇಡ, ಎಲ್ಲವು ನನ್ನದು ಎಂದು ಕಾಣಬೇಡ, ಎಲ್ಲದಕ್ಕೆ ನಾನು ನಮಿಸುವುದಿಲ್ಲ. ಆದ್ದರಿಂದಾಗಿ ಬ್ರಹ್ಮ, ನಾನು ನಿನ್ನೊಂದಿಗೆ ಪರಮಜ್ಞಾನದ ವಿಷಯದಲ್ಲಿ ಕೇವಲ ಸರಿಸಮಾನನೆಂಬುದು ಹಾಗಿರಲಿ, ಇನ್ನು ಕೆಳದರ್ಜೆಯ ಮಾತು ಎಲ್ಲಿದೆ? ಹಾಗಲ್ಲದೆ ನಾನು ನಿನಗಿಂತ ಅಧಿಕನಾಗಿರುವವನು” ಎಂದು.
9. “ಹಾಗಾದರೆ ಆದರಣೀಯರೇ, ಯಾವ ಎಲ್ಲವನ್ನು ಕೇವಲ ಎಲ್ಲವುದರಿಂದಲೇ ಕಾಣಲು ಅಸಾಧ್ಯ, ಹಾಗಿದ್ದರೆ ಎಚ್ಚರಿಕೆವಹಿಸಿ, ನಿಮಗೆ ತೊಂದರೆ ಆಗಬಹುದು, ನಿಮಗೆ ಶೂನ್ಯ ಎಂಬ ಸ್ಥಿತಿ ಬಂದೊದಗಬಹುದು”216 ಎಂದು.
10. “ವಿಭಜಿಸಿ ನೋಡುವ ಮನೋಸ್ಥಿತಿಯು ಗುರುತಿಸಲಾಗದಂತಹುದು, (ಆ)ವಿಜ್ಞಾನ ಅನಂತವಾಗಿರುವಂತಹುದು. ಎಲ್ಲರೀತಿಯಿಂದಲೂ ಪ್ರಕಾಶಿಸುವಂತಹುದು,217 ಭೂಮಿಯ ಹರಹಿನಿಂದ ಭೂಮಿಯು ಹರಹನ್ನು ಬೇರ್ಪಡಿಸಲಾಗುವುದಿಲ್ಲ, ಆಪದಿಂದ ತೇವವನ್ನು ಬೇರ್ಪಡಿಸಲಾಗುವುದಿಲ್ಲ, ತೇಜಸ್ಸಿನಿಂದ ಉಷ್ಣತ್ವ ಅದನ್ನು ಬೇರ್ಪಡಿಸಲಾಗುವುದಿಲ್ಲ, ಗಾಳಿಯ ಚಲನೆಯು ಚಲನತ್ವದಿಂದ ಅದನ್ನು ಬೇರ್ಪಡಿಸಲಾಗುವುದಿಲ್ಲ, ದೇವತೆಗಳಿಂದ ದೇವತ್ವ ಅದನ್ನು ಬೇರ್ಪಡಿಸಲಾಗುವುದಿಲ್ಲ, ಅಭಸ್ಸರಿಂದ ಅಭಸ್ಸರತ್ವವನ್ನು ಬೇರ್ಪಡಿಸಲಾಗುವುದಿಲ್ಲ, ಸುಭಕಿಣ್ಹರಿಂದ ಸುಭಕಿಣ್ಹತ್ವ ಅದನ್ನು ಬೇರ್ಪಡಿಸಲಾಗುವುದಿಲ್ಲ, ಅಭಿಭೂರಿಂದ ಅಭೀಭೂತ್ವ ಅದನ್ನು ಬೇರ್ಪಡಿಸಲಾಗುವುದಿಲ್ಲ. ಸರ್ವರಿಂದ ಸರ್ವತ್ವ ಅದನ್ನು ಬೇರ್ಪಡಿಸಲಾಗುವುದಿಲ್ಲ.”
2. ಭಗವಾನರ ವೃದ್ಧಿಶಕ್ತಿ ಸಂಕಲ್ಪ
11. “ಆದರಣೀಯರೇ, ನಾನು ಈಗ ಇಲ್ಲಿ ನಿಮ್ಮ ಎದುರಿನಿಂದ ಮರೆಯಾಗಿ ಹೋಗುತ್ತೇನೆ” ಎಂದು.
“ಬ್ರಹ್ಮ, ನೀನು ಈಗ ಇಲ್ಲಿ ನನ್ನ ಎದುರಿನಿಂದ ಮರೆಯಾಗಿ ಹೋಗಲು ಸಾಧ್ಯವಿದ್ದರೆ ಹೋಗು” ಎಂದು.
“ಭಿಕ್ಷುಗಳೇ, ಆಗ ಬಕಬ್ರಹ್ಮನು ‘ನಾನು ಶ್ರಮಣ ಗೌತಮರ ಎದುರಿನಿಂದ ಮರೆಯಾಗುತ್ತೇನೆ, ನಾನು ಶ್ರಮಣ ಗೌತಮರ ಎದುರಿನಿಂದ ಮರೆಯಾಗುತ್ತೇನೆ’ ಎಂದು ಹೇಳಿದರೂ ನನ್ನ ಎದುರಿನಿಂದ ಮರೆಯಾಗಲು ಸಾಧ್ಯವಾಗಲಿಲ್ಲ.
12. “ಭಿಕ್ಷುಗಳೇ, ಹೀಗೆ ಹೇಳಿದ ಮೇಲೆ ನಾನು ಬಕಬ್ರಹ್ಮನಿಗೆ ಈ ರೀತಿಯಾಗಿ ಹೇಳಿದೆನು- ‘ಬ್ರಹ್ಮ, ನಾನು ಇಲ್ಲಿ ನಿನ್ನ ಎದುರಿನಿಂದ ಮರೆಯಾಗಿ ಹೋಗುತ್ತೇನೆ” ಎಂದು.
“ಆದರಣೀಯರೇ, ನೀವು ಈಗ ಇಲ್ಲಿ ನನ್ನ ಎದುರಿನಿಂದ ಮರೆಯಾಗಿ ಹೋಗಲು ಸಾಧ್ಯವಿದ್ದರೆ ಹೋಗಿ” ಎಂದು.
“ಭಿಕ್ಷುಗಳೇ, ಆಗ ನಾನು ಈ ರೀತಿಯಾದ ವೃದ್ಧಿಶಕ್ತಿ ಸಂಕಲ್ಪವನ್ನು ಸಂಕಲ್ಪಿಸಿಕೊಂಡೆನು- ‘ಈ ಬ್ರಹ್ಮ ಮತ್ತು ಬ್ರಹ್ಮ ಸಮೂಹ ಮತ್ತು ಬ್ರಹ್ಮ ಸಮುದಾಯ ನನ್ನ ಧ್ವನಿಯನ್ನು ಮಾತ್ರ ಕೇಳಲಿ, ಆದರೆ ನನ್ನನ್ನು ಕಾಣದಿರಲಿ’ ಎಂದು. ಮರೆಯಾಗಿ ಈ ಗಾಥೆಯನ್ನು ಹೇಳಿದೆನು-
‘ಹುಟ್ಟಿನಲ್ಲಿರುವ ಅಪಾಯವನ್ನು ಅರಿತು, ಹುಟ್ಟಿದೆ ಹುಟ್ಟನ್ನು ಇಲ್ಲವಾಗಿಸುವುದಕ್ಕೆ |
ಹುಟ್ಟನ್ನು ನಾನೆಂದೂ ಸತ್ಕರಿಸುವುದಿಲ್ಲ | ಆನಂದಿಸುವುದಕ್ಕಾಗಿ ಅದನ್ನು ಬಯಸುವುದೂ ಇಲ್ಲ’ ಎಂದು.218
13. “ಭಿಕ್ಷುಗಳೇ, ಆಗ ಬ್ರಹ್ಮ, ಬ್ರಹ್ಮ ಸಮೂಹ ಮತ್ತು ಬ್ರಹ್ಮ ಸಮುದಾಯ ಆಶ್ಚರ್ಯಚಕಿತರಾಗಿ ಅದ್ಭುತವನ್ನು ಕಂಡಂತಾಗಿ ಹೀಗೆ ಹೇಳಿದರು- ‘ಪೂಜ್ಯರೇ, ಆಶ್ಚರ್ಯಕರವಾಗಿದೆ, ಪೂಜ್ಯರೇ, ಅದ್ಭುತವಾಗಿದೆ. ಶ್ರಮಣ ಗೌತಮರ ಈ ಮಹಾ ವೃದ್ಧಿಶಕ್ತಿಯು ಈ ಸಾಕ್ಯಪುತ್ರರಾದ ಸಾಕ್ಯಕುಲದಿಂದ ಪಬ್ಬಜಿತರಾದ ಶ್ರಮಣ ಗೌತಮರಲ್ಲಿ ಇರುವಂತಹ ಮಹಾ ಅನುಭಾವ ಶಕ್ತಿಯನ್ನು, ನಾವು ಹಿಂದೆಂದೂ ಇಂತಹುದನ್ನು ಕಂಡಿರಲಿಲ್ಲ ಮತ್ತು ಕೇಳಿರಲಿಲ್ಲ. ಇತರ ಯಾವ ಶ್ರಮಣರಲ್ಲೂ, ಬ್ರಾಹ್ಮಣರಲ್ಲೂ ಈ ರೀತಿಯ ಮಹಾ ವೃದ್ಧಿಶಕ್ತಿಯನ್ನು ಈ ರೀತಿಯ ಮಹಾ ಅನುಭಾವ ಶಕ್ತಿಯನ್ನು ಕಂಡಿರಲಿಲ್ಲ, ಕೇಳಿರಲಿಲ್ಲ. ಹುಟ್ಟುವುದರಲ್ಲಿ ಆನಂದಿಸುವ, ಹುಟ್ಟುವುದರಲ್ಲೇ ನಿರತರಾಗಿರುವ, ಹುಟ್ಟುವುದರಲ್ಲೇ ಮಗ್ನರಾಗಿರುವ ಜನಗಳಲ್ಲಿ ಪೂಜ್ಯರು ಹುಟ್ಟುವಿಕೆಯನ್ನು ಬೇರುಸಹಿತವಾಗಿ ತೆಗೆದುಹಾಕಿದ್ದಾರೆ’ ಎಂದು.
3. ಬ್ರಹ್ಮ ಸಮೂಹದಲ್ಲಿ ಮಾರನ ಮರೆಯಾಗುವಿಕೆ
14. “ಭಿಕ್ಷುಗಳೇ, ಆಗ ಪಾಪಿಯಾದ ಮಾರನು ಬೇರೊಂದು ಬ್ರಹ್ಮಸಮೂಹವನ್ನು ಒಳಹೊಕ್ಕು ನನಗೆ ಈ ರೀತಿಯಾಗಿ ಹೇಳಿದನು- ‘ಆದರಣೀಯರೇ, ನೀವು ಹೀಗೆ ಇದನ್ನು ತಿಳಿದಿರುವುದರಿಂದ, ನೀವು ಹೀಗೆ ಅರ್ಥ ಮಾಡಿಕೊಂಡಿರುವುದರಿಂದ ಇದನ್ನು ಶಿಷ್ಯರುಗಳಿಗೆ ತಿಳಿಸಬೇಡಿ, ಶ್ರಮಣರಿಗೆ ತಿಳಿಸಬೇಡಿ, ಶಿಷ್ಯರುಗಳಿಗೆ ಈ ಧರ್ಮವನ್ನು ಉಪದೇಶಿಸಬೇಡಿ, ಶ್ರಮಣರಿಗೂ ಉಪದೇಶಿಸಬೇಡಿ, ಅಂಥಹ ಶಿಷ್ಯರುಗಳನ್ನು ಹೊಂದಲು ಆಸೆಪಡಬೇಡಿ; ಶ್ರಮಣರಿಗೂ ಆಸೆಪಡಿಸಬೇಡಿ, ಭಿಕ್ಷು, ನಿಮಗಿಂತ ಮೊದಲು ಈ ಲೋಕದಲ್ಲಿ ಅರಹಂತರೆಂದು ಹೇಳಿಕೊಂಡ ಸಮ್ಯಕ್ ಜ್ಞಾನಿ (ಬುದ್ಧ) ಎಂದು ಹೇಳಿಕೊಂಡಿದ್ದ ಶ್ರಮಣರು ಬ್ರಾಹ್ಮಣರು ಇದ್ದರು. ಅವರುಗಳು ಶಿಷ್ಯರುಗಳಿಗೆ ಶ್ರಮಣರಿಗೆ ತಿಳಿಸಿಹೇಳಿದರು, ಶಿಷ್ಯರುಗಳಿಗೆ ಶ್ರಮಣರುಗಳಿಗೆ ಧರ್ಮವನ್ನು ಉಪದೇಶಿಸಿದರು, ಶಿಷ್ಯರುಗಳಿಗಾಗಿ ಶ್ರಮಣರುಗಳಿಗಾಗಿ ಆಸೆಪಟ್ಟರು. ಅವರು ಶಿಷ್ಯರುಗಳಿಗೆ ಶ್ರಮಣರುಗಳಿಗೆ ತಿಳಿಸಿಹೇಳಿದ್ದರಿಂದಾಗಿ, ಶಿಷ್ಯರುಗಳಿಗೆ, ಶ್ರಮಣರುಗಳಿಗೆ ಉಪದೇಶಿಸಿದ್ದರಿಂದಾಗಿ, ಶಿಷ್ಯರುಗಳನ್ನು ಶ್ರಮಣರುಗಳನ್ನು ಹೊಂದಲು ಆಸೆಪಟ್ಟಿದ್ದರಿಂದಾಗಿ, ಶರೀರ ಕಳೆದಮೇಲೆ ಜೀವದ ಬೇರು ಕತ್ತರಿಸಿದ ಮೇಲೆ ಹೀನಸ್ಥಿತಿಯಲ್ಲಿ ಉಳಿದರು. ಭಿಕ್ಷು, ನಿಮಗಿಂತ ಮೊದಲು ಈ ಲೋಕದಲ್ಲಿ ಅರಹಂತರೆಂದು ಹೇಳಿಕೊಂಡ ಸಮ್ಯಕ್ ಜ್ಞಾನಿ (ಬುದ್ಧ) ಎಂದು ಹೇಳಿಕೊಂಡಿದ್ದ ಶ್ರಮಣರು ಬ್ರಾಹ್ಮಣರು ಇದ್ದರು. ಅವರುಗಳು ಶಿಷ್ಯರುಗಳಿಗೆ ಶ್ರಮಣರಿಗೆ ತಿಳಿಸಿ ಹೇಳಲಿಲ್ಲ, ಶಿಷ್ಯರುಗಳಿಗೆ ಶ್ರಮಣರುಗಳಿಗೆ ಧರ್ಮವನ್ನು ಉಪದೇಶಿಸಲಿಲ್ಲ, ಶಿಷ್ಯರುಗಳಿಗಾಗಿ ಶ್ರಮಣರುಗಳಿಗಾಗಿ ಆಸೆಪಡಲಿಲ್ಲ. ಅವರು ಶಿಷ್ಯರುಗಳಿಗೆ ಶ್ರಮಣರುಗಳಿಗೆ ತಿಳಿಸದೇ ಇದ್ದುದರಿಂದಾಗಿ, ಶಿಷ್ಯರನ್ನು ಶ್ರಮಣರನ್ನು ಹೊಂದಲು ಆಸೆಪಡದೆ ಇದ್ದುದರಿಂದಾಗಿ, ಶರೀರ ಕಳೆದುಕೊಂಡಮೇಲೆ ಜೀವದ ಬೇರು ಕತ್ತರಿಸಿದ ಮೇಲೆ ಉತ್ತಮ ಸ್ಥಿತಿಯಲ್ಲಿ ಉಳಿದರು. ಭಿಕ್ಷು ಆದ್ದರಿಂದ ನಾನು ನಿಮಗೆ ಹೀಗೆ ಹೇಳುತ್ತೇನೆ- ‘ಆದರಣೀಯರೇ, ನೀವು ತೊಂದರೆ ಇಲ್ಲದಂತೆ ಜೀವಿಸಿ ಮತ್ತು ಇಲ್ಲಿಯೇ ಈಗಲೇ ಸುಖವನ್ನು ಬಯಸಿ ಅದರಲ್ಲೇ ಉಳಿದು ಜೀವಿಸಿ. ತಿಳಿಸದಿರುವಿಕೆಯು ಕೌಶಲ್ಯವಲ್ಲವೆ? ಆದರಣೀಯರೇ ಇತರರಿಗೆ ತಿಳಿಸಿ ಹೇಳುವುದಕ್ಕೆ ಹೋಗಬೇಡಿ”219 ಎಂದು.
15. “ಭಿಕ್ಷುಗಳೇ, (ಮಾರ) ಹೀಗೆ ಹೇಳಿದ ಮೇಲೆ ನಾನು ಪಾಪಿಯಾದ ಮಾರನಿಗೆ ಹೀಗೆ ಹೇಳಿದೆನು- ‘ನಿನ್ನನ್ನು ನಾನು ತಿಳಿದುಕೊಂಡಿದ್ದೇನೆ. ಪಾಪಿಯೇ, ನೀನು ಹೀಗೆ ತಿಳಿಯಬೇಡ- ‘ಅವನಿಗೆ ನಾನು ಗೊತ್ತಿಲ್ಲ’ ಎಂದು. ಮಾರ ನೀನೇ ಪಾಪಿವಂತನು. ಪಾಪವಂತನೇ, ನೀನು ನನ್ನ ಮೇಲಿನ ಒಳಿತಿಗಾಗಿ ಅನುಕಂಪದಿಂದಾಗಿ ಹೀಗೆ ಹೇಳುತ್ತಿಲ್ಲ; ನಿನಗೆ ನನ್ನ ಮೇಲೆ ಅನುಕಂಪ ಇಲ್ಲದಿರುವುದರಿಂದ ನನ್ನ ಕೆಡುಕಿಗಾಗಿ ಹೀಗೆ ಹೇಳುತ್ತಿದ್ದೀಯೆ. ಪಾಪವಂತನೇ (ಈ ಮುಂಚಿನ) ನೀನು ಈ ರೀತಿಯಾಗಿ ಯೋಚಿಸುತ್ತೀಯ- ‘ಶ್ರಮಣ ಗೌತಮರು ಯಾರಿಗೆ ಧರ್ಮವನ್ನು ಉಪದೇಶಿಸುವರೋ ಅವರುಗಳು ನನ್ನ ವಶದಿಂದ ಮುಕ್ತರಾಗುವರು’ ಎಂದು. ಪಾಪವಂತನೇ, ಅವರುಗಳು ಸಮ್ಯಕ್ ಜ್ಞಾನಿಗಳು (ಬುದ್ಧ) ಅಲ್ಲದಿದ್ದರೂ ಸಹ ಸಮ್ಯಕ್ ಜ್ಞಾನಿಗಳು (ಬುದ್ಧ) ಎಂದು ತಿಳಿದುಕೊಂಡಿದ್ದರು. ಪಾಪವಂತನೇ, ಆದರೆ ನಾನು ಸಮ್ಯಕ್ ಜ್ಞಾನಿ (ಬುದ್ಧ) ಆಗಿರುವುದರಿಂದಲೇ ಸಮ್ಯಕ್ ಜ್ಞಾನಿ ಬುದ್ಧ ಎಂದು ತಿಳಿದುಕೊಂಡಿದ್ದೇನೆ. ಪಾಪವಂತನೇ, ತಥಾಗತರು ಶಿಷ್ಯರುಗಳಿಗೆ ಧರ್ಮವನ್ನು ಉಪದೇಶಿಸಿದಗಲೂ ಅವರು ಅವರೇ ಇರುತ್ತಾರೆ, ಪಾಪವಂತನೆ, ತಥಾಗತರು ಶಿಷ್ಯರುಗಳಿಗೆ ಧರ್ಮವನ್ನು ಉಪದೇಶಿಸದೆ ಇದ್ದಾಗಲೂ ಅವರು ಅವರೇ ಆಗಿರುತ್ತಾರೆ.220 ಪಾಪವಂತನೇ, ತಥಾಗತರು ಶಿಷ್ಯರುಗಳಿಗೆ ತಿಳಿಸಿ ಹೇಳದಾಗಲೂ ಅವರು ಅವರೇ ಆಗಿರುತ್ತಾರೆ, ಪಾಪಿವಂತನೇ, ತಥಾಗತರು ಶಿಷ್ಯರುಗಳಿಗೆ ತಿಳಿಸಿ ಹೇಳಿದಾಗಲೂ ಅವರು ಅವರೇ ಆಗಿರುತ್ತಾರೆ. ಇದಕ್ಕೆ ಏನು ಕಾರಣ? ಪಾಪಿವಂತನೇ, ಯಾವ ಆಸವಗಳು ಕಲುಶತೆಯನ್ನು ಉಂಟುಮಾಡುವವೊ, ಮರುಹುಟ್ಟನ್ನು ಉಂಟುಮಾಡುವವೊ, ಭಯಾನಕವಾಗಿರುವವೊ, ದುಃಖಫಲವನ್ನು ಉಂಟುಮಾಡುವವೊ ಅವುಗಳು ತಥಾಗತರಲ್ಲಿ ತೊಡೆದುಹೋಗಿವೆ, ಬೇರುಸಹಿತ ಕಿತ್ತುಹಾಕಲ್ಪಟ್ಟಿವೆ. ಕಡಿದಿರುವ ತಾಳೆಮರದ ತುಂಡಿನ ರೀತಿಯಲ್ಲಿದ್ದು, ಮುಂದೆ ಬದುಕಿ ಉಳಿಯದೇ ಇರುವ ಹಾಗೆ ಮಾಡಲಾಗಿವೆ. ಹೇಗೆಂದರೆ ಪಾಪಿವಂತನೇ, ತಾಳೆಮರದ ಚಿಗುರುವ ಚೆಂಡನ್ನು ಕಡಿದಿರುವುದರಿಂದಾಗಿ ಮತ್ತೆ ಅದು ಚಿಗುರಿ ಬಂದು ಬದುಕದೆ ಇರುವ ಹಾಗೆ (ಮಾಡಿದಂತೆ). ಅದೇರೀತಿಯಲ್ಲಿ ಪಾಪಿವಂತನೇ, ಯಾವ ಆಸವಗಳು ಕಲುಶತೆಯನ್ನು ಉಂಟುಮಾಡುವವೊ ಅದರಿಂದಾಗಿ ಹುಟ್ಟು, ಮುಪ್ಪು ಮರಣ ಮುಂದೆ ಉಂಟಾಗುವವೊ ತಥಾಗತರಲ್ಲಿ ಅವುಗಳು ತೊಡೆದುಹೋಗಿವೆ. ಬೇರುಸಹಿತ ಕಿತ್ತುಹಾಕಲ್ಪಟ್ಟಿವೆ. ಕಡಿದಿರುವ ತಾಳೆ ಮರದ ತುಂಡಿನ ರೀತಿಯಲ್ಲಿದ್ದು ಮುಂದೆ ಬದುಕಿ ಉಳಿಯದೆ ಇರುವ ರೀತಿಯ ಹಾಗೆ ಮಾಡಲಾಗಿವೆ” ಎಂದು.
16. “ಹೀಗೆ ಮಾರನು ಒಪ್ಪಿಸುವುದರಲ್ಲಿ ಸೋತದ್ದರಿಂದಾಗಿ, ಇದು ಬ್ರಹ್ಮನಿಗೆ ಆಮಂತ್ರಣ ನೀಡಿದ್ದರಿಂದಾಗಿ ಇದನ್ನು ‘ಬ್ರಹ್ಮನಿಗೆ ಸವಾಲು ಮಾಡಿದ್ದು’ ಎಂಬುದಾಗಿ ಈ ಸೂತ್ರ ಕರೆಯಲ್ಪಟ್ಟಿದೆ” ಎಂದು.
ಟಿಪ್ಪಣಿಗಳು [4]
English
Việt Ngữ