ಊಟಿಸುತ್ತಿದೆ

ಅನುವಾದಗಳು [26]

ಮಾರತಜ್ಜನೀಯ ಸುತ್ತ

1. ಮಾರನು ಮಹಾಮೊಗ್ಗಲ್ಲಾನರ ಹೊಟ್ಟೆಯಲ್ಲಿ ಅವಿತದ್ದು

ಹೀಗೆ ನಾನು ಕೇಳಿದ್ದೇನೆ. ಒಂದು ಸಮಯದಲ್ಲಿ ಆಯುಷ್ಮಂತ ಮಹಾಮೊಗ್ಗಲ್ಲಾನರು ಭಗ್ಗರ ಸುಂಸುಮಾರ ಗಿರಿಯಲ್ಲಿನ ಜಿಂಕೆ ಉದ್ಯಾನದಲ್ಲಿರುವ ಭೇಸಕಳಾ ಎಂಬ ವನದಲ್ಲಿ ತಂಗಿದ್ದರು. ಆಗ ಒಂದು ಸಮಯದಲ್ಲಿ ಆಯುಷ್ಮಂತ ಮಹಾ ಮೊಗ್ಗಲ್ಲಾನರು ಬಯಲಿನಲ್ಲಿ ಶತಪಥ ತಿರುಗುತ್ತಿದ್ದರು. ಒಂದು ಸಂದರ್ಭದಲ್ಲಿ ಪಾಪಿಯಾದ ಮಾರನು ಆಯುಷ್ಮಂತ ಮಹಾಮೊಗ್ಗಲ್ಲಾನರ ಹೊಟ್ಟೆಯನ್ನು ಪ್ರವೇಶಿಸಿ ಉದರದಲ್ಲಿ ಕುಳಿತುಬಿಟ್ಟನು. ಆಗ ಆಯುಷ್ಮಂತ ಮಹಾಮೊಗ್ಗಲ್ಲಾನರಿಗೆ ಹೀಗೆನ್ನಿಸಿತು-‘ಯಾಕೆ ಈಗ ನನ್ನ ಹೊಟ್ಟೆಯು ಭಾರವಾಗಿದೆ, ತುಂಬಿಹೋದಂತಿದೆ’ ಎಂದು.

2. ಆಗ ಆಯುಷ್ಮಂತ ಮಹಾಮೊಗ್ಗಲ್ಲಾನರು ನಡೆದಾಡುವುದನ್ನು ನಿಲ್ಲಿಸಿ, ತಮ್ಮ ಕುಟೀರಕ್ಕೆ ಬಂದು, ಅಲ್ಲಿದ್ದ ಆಸನದ ಮೇಲೆ ಕುಳಿತುಕೊಂಡರು. ಹೀಗೆ ಕುಳಿತುಕೊಂಡ ಆಯುಷ್ಮಂತ ಮಹಾಮೊಗ್ಗಲ್ಲಾನರು ತಮ್ಮ ಬಗ್ಗೆ ಚೆನ್ನಾಗಿ ಚಿಂತಿಸತೊಡಗಿದರು. ಆಗ ಆಯುಷ್ಮಂತ ಮಹಾಮೊಗ್ಗಲ್ಲಾನರು, ಪಾಪಿಯಾದ ಮಾರನು ಹೊಟ್ಟೆಯಲ್ಲಿ ಪ್ರವೇಶ ಪಡೆದು ಉದರದಲ್ಲಿ ಉಳಿದುಬಿಟ್ಟಿರುವುದನ್ನು ತಿಳಿದುಕೊಂಡರು. ಅದನ್ನು ಕಂಡು ಪಾಪಿಯಾದ ಮಾರನಿಗೆ ಹೀಗೆ ಹೇಳಿದರು- “ಹೊರಗೆ ಹೊರಡು ಪಾಪಿಯೇ, ಹೊರಗೆ ಹೊರಡು ಪಾಪಿಯೇ. ತಥಾಗತರನ್ನು ಅಥವಾ ತಥಾಗತರ ಶಿಷ್ಯರನ್ನು ತೊಂದರೆಗೊಳಿಸಬೇಡ. ಹಾಗೇನಾದರೂ ಮಾಡಿದರೆ ಬಹುಕಾಲದವರೆಗೂ ತೊಂದರೆ ಮತ್ತು ದುಃಖವನ್ನು ಅನುಭವಿಸಬೇಕಾಗುವುದು” ಎಂದು. ಆಗ ಪಾಪಿಯಾದ ಮಾರನಿಗೆ ಹೀಗೆನಿಸಿತು; ‘ಈ ಶ್ರಮಣನು ನನ್ನನ್ನು ಕಾಣದೆಯೇ, ನನ್ನನ್ನು ನೋಡದೆಯೇ ಹೀಗೆ ಹೇಳುವನಲ್ಲ- ‘ಹೊರಗೆ ಹೊರಡು ಪಾಪಿಯೇ, ಹೊರಗೆ ಹೊರಡು ಪಾಪಿಯೇ’ ಎಂದು. ಇಷ್ಟು ಜಾಗ್ರತೆಯಾಗಿ ನನ್ನನ್ನು ಅವರ ಗುರುಗಳೂ ತಿಳಿಯಲಾರರು, ಆದರೆ ಹೇಗೆ ಈ ಶಿಷ್ಯನು ತಿಳಿದ?’ ಎಂದು

3. ಆಗ ಆಯುಷ್ಮಂತ ಮಹಾಮೊಗ್ಗಲ್ಲಾನರು ಪಾಪಿಯಾದ ಮಾರನಿಗೆ ಹೀಗೆ ಹೇಳಿದರು- “ನಿನ್ನನ್ನು ನಾನು ತಿಳಿದಿದ್ದೇನೆ, ಪಾಪಿಯಾದವನೆ, ನೀನು ಹೀಗೆ ತಿಳಿದುಕೊಳ್ಳಬೇಡ- ‘ಅವನು ನನ್ನನ್ನು ತಿಳಿದಿಲ್ಲ ಎಂಬುದಾಗಿ’ ಎಂದು. ಮಾರ ನೀನೇ ಪಾಪಮತಿ, ಪಾಪಿಯಾದವನು ನೀನೇ. ಹೀಗೆನಿಸಿರಬಹುದು- ‘ಈ ಶ್ರಮಣನು ನನ್ನನ್ನು ಕಾಣದೆಯೇ ನನ್ನನ್ನು ನೋಡದೆಯೇ ಹೀಗೆ ಹೇಳುವನಲ್ಲ’ ಎಂದು. ಹೊರಗೆ ಹೊರಡು ಪಾಪಿಯೇ, ಹೊರಗೆ ಹೊರಡು ಪಾಪಿಯೇ! ತಥಾಗತರನ್ನು ಅಥವಾ ತಥಾಗತರ ಶಿಷ್ಯರನ್ನು ತೊಂದರೆಗೊಳಿಸಬೇಡ. ಹಾಗೇನಾದರೂ ಮಾಡಿದರೆ ಬಹುಕಾಲದವರೆಗೂ ತೊಂದರೆ ಮತ್ತು ದುಃಖವನ್ನು ಅನುಭವಿಸಬೇಕಾಗುವುದು ಎಂದು. ಇಷ್ಟು ಜಾಗ್ರತೆಯಾಗಿ ನನ್ನನ್ನು ಅವರ ಗುರುಗಳೂ ತಿಳಿಯಲಾರರು, ಆದರೆ ಹೇಗೆ ಈ ಶಿಷ್ಯನು ನನ್ನನ್ನು ತಿಳಿದ” ಎಂದು.

ಆಗ ಪಾಪಿಯಾದ ಮಾರನಿಗೆ ಹೀಗೆನಿಸಿತು- ‘ಈ ಶ್ರಮಣನು ನನ್ನನ್ನು ಕಂಡಿದ್ದಾನೆ, ನನ್ನನ್ನು ನೋಡಿದ್ದಾನೆ. ಹೊರಗೆ ಹೊರಡು ಪಾಪಿಯೇ, ಹೊರಗೆ ಹೊರಡು ಪಾಪಿಯೇ. ತಥಾಗತರನ್ನು ಅಥವಾ ತಥಾಗತರ ಶಿಷ್ಯರನ್ನು ತೊಂದರೆಗೊಳಿಸಬೇಡ. ಹಾಗೇನಾದರೂ ಮಾಡಿದರೆ ಬಹುಕಾಲದವರೆಗೂ ತೊಂದರೆ ಮತ್ತು ದುಃಖವನ್ನು ಅನುಭವಿಸಬೇಕಾಗುವುದು’ ಎಂದು. ಆಗ ಪಾಪಿಯಾದ ಮಾರನು ಆಯುಷ್ಮಂತ ಮಹಾಮೊಗ್ಗಲ್ಲಾನರ ಬಾಯಿಂದ ಹೊರಬಂದು, ಬಾಗಿಲಿನ ಬಳಿಯಲ್ಲಿ ನಿಂತನು.

2. ಕಕುಸಂಧರ ಕಾಲದ ದೂಸಿ ಹೆಸರಿನ ಮಾರ

4. ಆಯುಷ್ಮಂತ ಮಹಾಮೊಗ್ಗಲ್ಲಾನರು ಪಾಪವಂತನಾದ ಮಾರನು ಈ ರೀತಿಯಾಗಿ ಬಾಗಿಲ ಬಳಿಯಲ್ಲಿ ನಿಂತಿದ್ದನ್ನು ಕಂಡರು. ಪಾಪವಂತನಾದ ಮಾರನನ್ನು ಕಂಡು ಹೀಗೆ ಹೇಳಿದರು- “ಪಾಪಿಯಾದ ಮಾರನೇ ಖಂಡಿತವಾಗಿಯೂ ನಾನು ನಿನ್ನನ್ನು ಕಾಣುತ್ತಿದ್ದೇನೆ. ನೀನು ಹೀಗೆ ತಿಳಿದುಕೊಳ್ಳಬೇಡ- ‘ಅವನು ನನ್ನನ್ನು ಕಾಣುವುದಿಲ್ಲ’ ಎಂದು. ಈಗ ನೀನು ಪಾಪಿಯಾದ ಮಾರನೇ, ಬಾಗಿಲ ಬಳಿಯಲ್ಲಿ ನಿಂತಿದ್ದೀಯ. ಹಿಂದೆ ಪಾಪಿಯೇ, ನಾನು ಕೂಡ ದೂಸಿ ಎಂಬ ಹೆಸರಿನ ಮಾರನಾಗಿದ್ದೆ.221 ನನಗೆ ಆ ಕಾಳಿ ಎಂಬ ಹೆಸರಿನ ತಂಗಿಯಿದ್ದಳು. ಅವಳಿಗೆ ನೀನು ಮಗನಾಗಿದ್ದೆ. ಹಾಗಾಗಿ ನೀನು ನನ್ನ ಸೋದರಿಯ ಮಗನೇ ಆಗಿರುವೆ. ಆ ಒಂದು ಸಮಯದಲ್ಲಿ ಪಾಪಿಯೇ, ಅರಹಂತರೂ, ಸಮ್ಮಾಸಂಬುದ್ಧರು ಆದ ಕಕುಸಂಧ ಭಗವಾನರು ಲೋಕದಲ್ಲಿ ಹುಟ್ಟಿದ್ದರು.222 ಪಾಪಿಯೇ, ಅರಹಂತರೂ ಸಮ್ಮಾಸಂಬುದ್ಧರೂ ಆದ ಕಕುಸಂಧ ಭಗವಾನರಿಗೆ, ವಿಧುರ ಮತ್ತು ಸಂಜೀವ ಎಂಬ ಹೆಸರುಳ್ಳ ಶಿಷ್ಯರ ಜೋಡಿ ಇತ್ತು. ಹಾಗೂ ಅವರುಗಳು ಅಗ್ರಮಾನ್ಯರಾಗಿದ್ದರು ಮತ್ತು ಪ್ರಮುಖ ಶಿಷ್ಯರ ಜೋತೆಯಾಗಿದ್ದರು. ಪಾಪಿಯೇ, ಅರಹಂತರೂ ಸಮ್ಮಾಸಂಬುದ್ಧರೂ ಆದ ಕಕುಸಂಧ ಭಗವಾನರ ಎಲ್ಲ ಶಿಷ್ಯರುಗಳಲ್ಲಿ, ಆಯುಷ್ಮಂತ ವಿಧುರನ ಸರಿಸಮಾನರಾಗಿ ಧರ್ಮವನ್ನು ಉಪದೇಶಿಸಬಲ್ಲವರು ಯಾರೂ ಇರಲಿಲ್ಲ. ಇದರಿಂದಾಗಿ, ಪಾಪಿಯೇ, ಆಯುಷ್ಮಂತ ವಿಧುರ, ಅಸಮಾನ ವಿಧುರ223 ಎಂಬುದಾಗಿ ಕರೆಯಲ್ಪಡುವಂತಾದನು.

5. “ಆದರೆ ಪಾಪಿಯೇ, ಆಯುಷ್ಮಂತ ಸಂಜೀವನು ಅರಣ್ಯಕ್ಕೆ ಹೋಗಿ, ಮರದ ಬುಡದಲ್ಲಿ ಉಳಿದು, ಬಯಲಿನಂತಹ ಸ್ಥಳಗಳಲ್ಲಿ ಉಳಿದು, ಬಹಳ ಬೇಗನೆ ಸಂಜ್ಞೆ ಮತ್ತು ಸಂವೇದನೆಗಳನ್ನು ನಿರೋಧಿಸುವ ಸ್ಥಿತಿಯನ್ನು ಸಾಧಿಸಿಕೊಂಡನು. ಒಂದುಬಾರಿ ಹಿಂದೆ ಈ ರೀತಿಯಾಗಿ ಆಯುಷ್ಮಂತ ಸಂಜೀವನು ಸಂಜ್ಞೆ ಮತ್ತು ಸಂವೇದನೆ ನಿರೋಧದ ಸಿದ್ಧಿ ಪಡೆಯುವುದಕ್ಕೆ ಬೇರೊಂದೆಡೆಯಲ್ಲಿ ಮರದ ಬುಡದಲ್ಲಿ ಕುಳಿತಿದ್ದನು. ಆಗ ಪಾಪಿಯೇ, ಈ ರೀತಿಯಾಗಿ ಆಯುಷ್ಮಂತ ಸಂಜೀವನು ಸಂಜ್ಞೆ ಮತ್ತು ಸಂವೇದನೆ ನಿರೋಧ ಸ್ಥಿತಿ ಪಡೆಯಲು ಒಂದೆಡೆ ಮರದ ಬುಡದಲ್ಲಿ ಕುಳಿತಿರುವುದನ್ನು ದನ ಕಾಯುವವರು, ಕುರಿ ಕಾಯುವವರು, ರೈತರು, ದಾರಿಹೋಕರು ಕಂಡರು. ಕಂಡ ಅವರುಗಳಿಗೆ ಹೀಗೆ ಎನಿಸಿತು- ‘ನಿಜಕ್ಕೂ ಆಶ್ಚರ್ಯವಾಗಿದೆ, ನಿಜಕ್ಕೂ ಅದ್ಭುತವಾಗಿದೆ! ಈ ಶ್ರಮಣನು ಕುಳಿತುಕೊಂಡೇ ಸತ್ತುಹೋಗಿದ್ದಾನೆ. ಬನ್ನಿ, ನಾವು ಇವನ ಸಂಸ್ಕಾರ ಮಾಡೋಣ’ ಎಂದು. ಆಗ ಪಾಪಿಯೇ, ಆ ದನ ಕಾಯುವವರು, ಕುರಿ ಕಾಯುವವರು, ರೈತರು, ದಾರಿಹೋಕರು ಹುಲ್ಲನ್ನು, ಕಟ್ಟಿಗೆಯನ್ನು, ಸಗಣಿಯನ್ನು ಒಂದೆಡೆ ಸೇರಿಸಿ, ಆಯುಷ್ಮಂತ ಸಂಜೀವನ ಶರೀರವನ್ನು ಅದರಿಂದ ಮುಚ್ಚಿ ಬೆಂಕಿಯನ್ನು ಹಚ್ಚಿ ಹೊರಟುಹೋದರು. ನಂತರದಲ್ಲಿ ಪಾಪಿಯೇ, ಆಯುಷ್ಮಂತ ಸಂಜೀವನು ಆ ರಾತ್ರಿ ಕಳೆದಮೇಲೆ, ಆ ಸಮಾಧಿ ಸ್ಥಿತಿಯಿಂದ ಎದ್ದು,224 ಚೀವರ-ವಸ್ತ್ರಗಳನ್ನು ಸರಿಪಡಿಸಿಕೊಂಡು, ಬೆಳಗಿನ ಸಮಯದಲ್ಲಿ, ಚೀವರ ಹೊದ್ದು, ಪಿಂಡಪಾತ್ರೆ ತೆಗೆದುಕೊಂಡು ಭಿಕ್ಷಾಟನೆಗಾಗಿ ಆ ಹಳ್ಳಿಗೆ ಹೋದನು. ಪಾಪಿಯೇ, ಆ ದನ ಕಾಯುವವರು, ಕುರಿ ಕಾಯುವವರು, ರೈತರು, ದಾರಿಹೋಕರು ಆಯುಷ್ಮಂತ ಸಂಜೀವನು ಭಿಕ್ಷಾಟನೆ ಮಾಡುತ್ತಿರುವುದನ್ನು ಕಂಡರು. ಅದನ್ನು ಕಂಡು, ಅವರಿಗೆ ಹೀಗೆನಿಸಿತು- ‘ನಿಜಕ್ಕೂ ಆಶ್ಚರ್ಯವಾಗಿದೆ, ನಿಜಕ್ಕೂ ಅದ್ಭುತವಾಗಿದೆ! ಶ್ರಮಣನು ಕುಳಿತಿರುವಂತೆಯೇ ಸತ್ತುಹೋಗಿದ್ದನು, ಆದರೆ ಈಗ ಅವನು ಮತ್ತೆ ಜೀವಂತವಾಗಿ ಬಂದಿದ್ದಾನೆ’ ಎಂದು. ಆದ್ದರಿಂದಾಗಿ, ಪಾಪಿಯೇ! ಈ ಆಯುಷ್ಮಂತ ಸಂಜೀವ, ಸಂಜೀವದ ಸಂಜೀವ225 ಎಂಬುದಾಗಿ ಕರೆಯಲ್ಪಡುವಂತಾದನು.

6. “ಆಗ ಪಾಪಿಯೇ, ಆ ದೂಸಿ ಮಾರನಿಗೆ ಹೀಗೆನಿಸಿತು- ಈ ಭಿಕ್ಷುಗಳು ಶೀಲವಂತರಾಗಿರುವರು, ಕಲ್ಯಾಣ ಗುಣಗಳನ್ನು ಹೊಂದಿರುವಂತಹವರು, ಅವರ ಬರುವಿಕೆ ಮತ್ತು ಹೋಗುವಿಕೆಗಳು ನನಗೆ ಕಾಣುವುದೇ ಇಲ್ಲ. ಒಂದುವೇಳೆ ನಾನು ಬ್ರಾಹ್ಮಣ ಗೃಹಸ್ಥರುಗಳನ್ನು ಕಂಡು ಹೀಗೆ ಪ್ರಭಾವ ಮಾಡಿದರೆ- ನೀವುಗಳು ಈ ಶೀಲವಂತರಾದ, ಕಲ್ಯಾಣ ಗುಣಗಳನ್ನುಳ್ಳ ಭಿಕ್ಷುಗಳನ್ನು ನಿಂದಿಸಿರಿ, ಬಯ್ಯಿರಿ, ಪೀಡಿಸಿರಿ, ರೇಗಿಸಿರಿ. ಹಾಗೊಂದು ವೇಳೆ ನೀವುಗಳು ನಿಂದಿಸಿದ್ದರಿಂದಾಗಿ, ಬಯ್ದಿದ್ದರಿಂದಾಗಿ, ಪೀಡಿಸಿದ್ದರಿಂದಾಗಿ, ರೇಗಿಸಿದ್ದರಿಂದಾಗಿ, ಅವರುಗಳ ಮನಸ್ಸು ಚಂಚಲವಾಗಬಹುದು, ಆಗ ಅವರ ಮೇಲೆ ಹಿಡಿತ ಸಾಧಿಸಲು ಈ ದೂಸಿ ಮಾರನಿಗೆ ಒಂದು ಅವಕಾಶ ದೊರೆಯುವುದು’ ಎಂದು. ಆಗ ಆ ದೂಸಿ ಮಾರನು ಬ್ರಾಹ್ಮಣ ಗೃಹಸ್ಥರುಗಳನ್ನು ಕಂಡು ಹೀಗೆ ಪ್ರಭಾವ ಬೀರಿದನು- ‘ನೀವುಗಳು ಈ ಶೀಲವಂತರಾದ, ಕಲ್ಯಾಣ ಗುಣಗಳುಳ್ಳ ಭಿಕ್ಷುಗಳನ್ನು ನಿಂದಿಸಿರಿ. ಬಯ್ಯಿರಿ, ಪೀಡಿಸಿರಿ, ರೇಗಿಸಿರಿ, ಹಾಗೆ ಮಾಡಿದ್ದರಿಂದಾಗಿ, ನೀವು ನಿಂದಿಸಿದ್ದರಿಂದಾಗಿ, ಬಯ್ದಿದ್ದರಿಂದಾಗಿ, ಪೀಡಿಸಿದ್ದರಿಂದಾಗಿ, ರೇಗಿಸಿದ್ದರಿಂದಾಗಿ, ಅವರ ಮನಸ್ಸು ಚಂಚಲವಾಗುವುದು. ಆಗ ಅವರೆ ಮೇಲೆ ಹಿಡಿತ ಸಾಧಿಸಲು ಈ ದೂಸಿ ಮಾರನಿಗೆ ಒಂದು ಅವಕಾಶ ದೊರೆಯುತ್ತದೆ’ ಎಂದು.

7. “ಆಗ ಪಾಪಿಯೇ, ಆ ದೂಸಿ ಮಾರನಿಂದ ಹೀಗೆ ಪ್ರಭಾವಿತರಾದ ಆ ಬ್ರಾಹ್ಮಣ ಗೃಹಸ್ಥರುಗಳು ಶೀಲವಂತರಾದ, ಕಲ್ಯಾಣಗುಣಗಳನ್ನುಳ್ಳ ಆ ಭಿಕ್ಷುಗಳನ್ನು ಹೀಗೆ ನಿಂದಿಸಿದರು, ಬಯ್ದರು, ಪೀಡಿಸಿದರು, ರೇಗಿಸಿದರು227- ‘ಈ ತಲೆ ಬೋಳಿಸಿರುವ ಶ್ರಮಣರುಗಳು ಕೀಳಾದವರು, ಕಪ್ಪಾಗಿರುವವರು, ನಮ್ಮ ಬಂಧುಗಳ ಕಾಲಿನಿಂದ ಹುಟ್ಟಿರುವಂತಹವರು.228 ‘ನಾವು ಧ್ಯಾನ ಮಾಡುವವರು, ನಾವು ಧ್ಯಾನ ಮಾಡುವವರು’ ಎಂದು ಹೇಳುತ್ತಾ, ತಮ್ಮ ಭುಜಗಳನ್ನು ತಗ್ಗಿಸಿದವರಾಗಿ, ಮುಖಗಳನ್ನು ಕೆಳಗೆ ಹಾಕಿದವರಾಗಿ, ಮದ್ದನ್ನು ಸೇವಿಸಿದವರ ಹಾಗೆ ಅವರುಗಳು ಧ್ಯಾನ ಮಾಡುವರೇ ಸರಿ, ಹೆಚ್ಚಾಗಿ ಧ್ಯಾನ ಮಾಡುವವರೇ ಸರಿ, ಇನ್ನೂ ಹೆಚ್ಚಾಗಿ ಧ್ಯಾನ ಮಾಡುವವರೇ ಸರಿ, ಮತ್ತಷ್ಟು ಹೆಚ್ಚಾಗಿ ಧ್ಯಾನ ಮಾಡುವವರೇ ಸರಿ.229 ಅದು ಹೇಗೆಂದರೆ ಒಂದು ಮರದ ಕೊಂಬೆಯ ಮೇಲೆ ಹಾದುಹೋಗುವ ಇಲಿಯನ್ನು ಹಿಡಿಯಲು ಹೊಂಚಿ ಕುಳಿತ ಗೂಬೆಯು ಧ್ಯಾನ ಮಾಡುವುದು, ಹೆಚ್ಚಾಗಿ ಧ್ಯಾನ ಮಾಡುವುದು, ಇನ್ನೂ ಹೆಚ್ಚಾಗಿ ಧ್ಯಾನ ಮಾಡುವುದು, ಮತ್ತಷ್ಟೂ ಹೆಚ್ಚಾಗಿ ಧ್ಯಾನ ಮಾಡುವುದು, ಅದೇರೀತಿಯಾಗಿ ಈ ತಲೆ ಬೋಳಿಸಿರುವ ಶ್ರಮಣರುಗಳು, ಕೀಳಾದವರು, ಕಪ್ಪಾಗಿರುವವರು, ನಮ್ಮ ಬಂಧುಗಳ ಕಾಲಿನಿಂದ ಹುಟ್ಟಿರುವಂತಹವರು ‘ನಾವು ಧ್ಯಾನ ಮಾಡುವವರು, ನಾವು ಧ್ಯಾನ ಮಾಡುವವರು’ ಎಂದು ಹೇಳುತ್ತಾ, ತಮ್ಮ ಭುಜಗಳನ್ನು ತಗ್ಗಿಸಿದವರಾಗಿ, ಮುಖಗಳನ್ನು ಕೆಳಗೆ ಹಾಕಿದವರಾಗಿ, ಮದ್ದನ್ನು ಸೇವಿಸಿದವರ ಹಾಗೆ ಅವರುಗಳು ಧ್ಯಾನ ಮಾಡುವರೇ ಸರಿ, ಹೆಚ್ಚಾಗಿ ಧ್ಯಾನ ಮಾಡುವವರೇ ಸರಿ, ಇನ್ನೂ ಹೆಚ್ಚಾಗಿ ಧ್ಯಾನ ಮಾಡುವವರೇ ಸರಿ, ಮತ್ತಷ್ಟು ಹೆಚ್ಚಾಗಿ ಧ್ಯಾನ ಮಾಡುವವರೇ ಸರಿ. ಅದು ಹೇಗೆಂದರೆ ನದೀ ತೀರದಲ್ಲಿ ನರಿಯು, ಹಾಯುವ ಮೀನುಗಳನ್ನು ಹೊಂಚಿ ಹಿಡಿಯಲು ಧ್ಯಾನ ಮಾಡುವುದು, ಹೆಚ್ಚಾಗಿ ಧ್ಯಾನ ಮಾಡುವುದು, ಇನ್ನೂ ಹೆಚ್ಚಾಗಿ ಧ್ಯಾನ ಮಾಡುವುದು, ಮತ್ತಷ್ಟೂ ಹೆಚ್ಚಾಗಿ ಧ್ಯಾನ ಮಾಡುವುದು, ಅದೇರೀತಿಯಾಗಿ ಈ ತಲೆ ಬೋಳಿಸಿರುವ ಶ್ರಮಣರುಗಳು... ಮತ್ತಷ್ಟು ಹೆಚ್ಚಾಗಿ ಧ್ಯಾನ ಮಾಡುವವರೇ ಸರಿ. ಅದು ಹೇಗೆಂದರೆ ಗುಡ್ಡೆ ಹಾಕಿದ ಕಸದ ತಿಪ್ಪೆಯ ಮೇಲೆ ಹಾದುಹೋಗುವ ಇಲಿಯನ್ನು ಹೊಂಚಿ ಹಿಡಿಯಲು ಕುಳಿತ ಬೆಕ್ಕು ಧ್ಯಾನ ಮಾಡುವುದು, ಹೆಚ್ಚಾಗಿ ಧ್ಯಾನ ಮಾಡುವುದು, ಇನ್ನೂ ಹೆಚ್ಚಾಗಿ ಧ್ಯಾನ ಮಾಡುವುದು, ಮತ್ತಷ್ಟು ಹೆಚ್ಚಾಗಿ ಧ್ಯಾನ ಮಾಡುವುದು, ಅದೇರೀತಿಯಾಗಿ ಈ ತಲೆ ಬೋಳಿಸಿರುವ ಶ್ರಮಣರುಗಳು... ಮತ್ತಷ್ಟು ಹೆಚ್ಚಾಗಿ ಧ್ಯಾನ ಮಾಡುವವರೇ ಸರಿ. ಅದು ಹೇಗೆಂದರೆ ಕಸದ ತಿಪ್ಪೆಯ ಬಳಿ, ಹೊರೆ ಇಳಿಸಿದ ಕತ್ತೆಯೊಂದು, ಧ್ಯಾನ ಮಾಡುವುದು, ಹೆಚ್ಚಾಗಿ ಧ್ಯಾನ ಮಾಡುವುದು, ಇನ್ನೂ ಹೆಚ್ಚಾಗಿ ಧ್ಯಾನ ಮಾಡುವುದು, ಮತ್ತಷ್ಟು ಹೆಚ್ಚಾಗಿ ಧ್ಯಾನ ಮಾಡುವುದು. ಅದೇರೀತಿಯಾಗಿ ಈ ತಲೆ ಬೋಳಿಸಿರುವ ಶ್ರಮಣರುಗಳು...ಮತ್ತಷ್ಟು ಹೆಚ್ಚಾಗಿ ಧ್ಯಾನ ಮಾಡುವವರೇ ಸರಿ’ ಎಂದು.

8. “ಪಾಪಿಯೇ ಆ ಸಮಯದ ನಂತರ, ಆ ಮನುಷ್ಯರುಗಳು ಯಾರು ಯಾರು ಗತಿಸಿಹೋದರೋ ಅವರೆಲ್ಲರುಗಳು ಶರೀರ ಕಳೆದುಕೊಂಡಮೇಲೆ, ಮರಣವನ್ನು ಪಡೆದವರು, ದುಃಖದ ಸ್ಥಿತಿಯನ್ನು, ದುರ್ಗತಿಯನ್ನು, ಅಪಾಯದ ಸ್ಥಿತಿಯನ್ನು ತಲುಪಿ ನರಕದಲ್ಲಿ ಹುಟ್ಟುವಂತಾದರು.

9. “ಪಾಪಿಯೇ, ಆಗ ಅರಹಂತರೂ, ಸಮ್ಮಾಸಂಬುದ್ಧರೂ ಆದ ಕಕುಸಂಧ ಭಗವಾನರು ಆ ಭಿಕ್ಷುಗಳನ್ನು ಕರೆದರು- ‘ಭಿಕ್ಷುಗಳೇ, ಆ ಬ್ರಾಹ್ಮಣ ಗೃಹಸ್ಥರುಗಳು ದೂಸಿ ಮಾರನ ಮಾತಿನಿಂದ ಪ್ರಭಾವಿತರಾಗಿದ್ದಾರೆ- ‘ಈ ಶೀಲವಂತರಾದ ಕಲ್ಯಾಣಗುಣಗಳುಳ್ಳ ಭಿಕ್ಷುಗಳನ್ನು ನೀವುಗಳು ನಿಂದಿಸಿರಿ, ಬಯ್ಯಿರಿ, ಪೀಡಿಸಿರಿ, ರೇಗಿಸಿರಿ. ನೀವುಗಳು ಹಾಗೆ ಮಾಡಿದ್ದರಿಂದಾಗಿ, ನೀವು ನಿಂದಿಸಿದ್ದರಿಂದಾಗಿ, ಬಯ್ದಿದ್ದರಿಂದಾಗಿ, ಪೀಡಿಸಿದ್ದರಿಂದಾಗಿ, ರೇಗಿಸಿದ್ದರಿಂದಾಗಿ ಅವರುಗಳ ಮನಸ್ಸು ಚಂಚಲವಾಗುವುದು. ಆಗ ಅವರ ಮೇಲೆ ಹಿಡಿತ ಸಾಧಿಸಲು ಈ ದೂಸಿ ಮಾರನಿಗೆ ಒಂದು ಅವಕಾಶ ದೊರೆಯುತ್ತದೆ’ ಎಂದು. ಭಿಕ್ಷುಗಳೇ, ಆದ್ದರಿಂದ ನೀವುಗಳು ಮೈತ್ರಿಯಿಂದೊಡಗೂಡಿದ ಮನಸ್ಸನ್ನು ಒಂದನೆಯ ದಿಕ್ಕಿನೆಡೆಗೆಲ್ಲಾ ಹರಡಿ ಜೀವಿಸಿ, ಹಾಗೆಯೇ ಎರಡನೆಯ ದಿಕ್ಕಿನೆಡೆಗೆಲ್ಲಾ, ಹಾಗೆಯೇ ಮೂರನೆಯ ದಿಕ್ಕಿನೆಡೆಗೆಲ್ಲಾ, ಹಾಗೆಯೇ ನಾಲ್ಕನೇ ದಿಕ್ಕಿಗೆಲ್ಲಾ ಹರಡಿರಿ. ಅದೇರೀತಿಯಲ್ಲಿ ಮೇಲ್ಮುಖವಾಗಿ, ಕೆಳಮುಖವಾಗಿ, ಸುತ್ತೆಲ್ಲಾ ಈ ಲೋಕದ ಎಲ್ಲೆಡೆಯೂ ಎಲ್ಲ ಜೀವಿಗಳಿಗೂ ಎಲ್ಲಕ್ಕೂ ವಿಪುಲವಾಗಿ, ಮಹತ್ತರವಾಗಿ, ಅಳತೆಗೆ ಮೀರಿದಂತೆ ಮೈತ್ರಿಯಿಂದೊಡಗೂಡಿದ, ಅವೈರದಿಂದ ಕೂಡಿದ, ಹಗೆತನದಿಂದ ದೂರವಿರುವ, ಮನಸ್ಸನ್ನು ಹರಡಿ ಜೀವಿಸಿರಿ. ಕರುಣೆಯಿಂದೊಡಗೂಡಿದ ಮನಸ್ಸನ್ನು... ಮುದಿತದಿಂದೊಡಗೂಡಿದ ಮನಸ್ಸನ್ನು... ಉಪೇಕ್ಖಾದಿಂದೊಡಗೂಡಿದ ಮನಸ್ಸನ್ನು ಒಂದನೆಯ ದಿಕ್ಕಿನೆಡೆಗೆಲ್ಲಾ ಹರಡಿ ಜೀವಿಸಿ, ಹಾಗೆಯೇ ಎರಡನೆಯ ದಿಕ್ಕಿನೆಡೆಗೆಲ್ಲಾ, ಹಾಗೆಯೇ ಮೂರನೆಯ ದಿಕ್ಕಿನೆಡೆಗೆಲ್ಲಾ, ಹಾಗೆಯೇ ನಾಲ್ಕನೇ ದಿಕ್ಕಿಗೆಲ್ಲಾ ಹರಡಿರಿ. ಅದೇರೀತಿಯಲ್ಲಿ ಮೇಲ್ಮುಖವಾಗಿ, ಕೆಳಮುಖವಾಗಿ, ಸುತ್ತೆಲ್ಲಾ ಈ ಲೋಕದ ಎಲ್ಲೆಡೆಯೂ ಎಲ್ಲ ಜೀವಿಗಳಿಗೂ ಎಲ್ಲಕ್ಕೂ ವಿಪುಲವಾಗಿ, ಮಹತ್ತರವಾಗಿ, ಅಳತೆಗೆ ಮೀರಿದಂತೆ ಮೈತ್ರಿಯಿಂದೊಡಗೂಡಿದ, ಅವೈರದಿಂದ ಕೂಡಿದ, ಹಗೆತನದಿಂದ ದೂರವಿರುವ, ಮನಸ್ಸನ್ನು ಹರಡಿರಿ, ಜೀವಿಸಿರಿ’230 ಎಂದು.

10. “ಆಗ ಪಾಪಿಯೇ, ಆ ಭಿಕ್ಷುಗಳು ಅರಹಂತರೂ ಸಮ್ಮಾಸಂಬುದ್ಧರೂ ಆದ ಕಕುಸಂಧ ಭಗವಾನರಿಂದ ಈ ರೀತಿಯಾಗಿ ತಿಳಿಸಲ್ಪಟ್ಟ ಮೇಲೆ, ಈ ರೀತಿಯಾಗ ಉಪದೇಶಿಸಲ್ಪಟ್ಟ ಮೇಲೆ, ಅರಣ್ಯಕ್ಕೆ ಹೋಗಿ, ಮರದ ಬುಡದಲ್ಲಿ ಉಳಿದು, ಬಯಲಿನಂತಹ ಸ್ಥಳದಲ್ಲಿ ಉಳಿದು, ಮೈತ್ರಿಯಿಂದೊಡಗೂಡಿದ ಮನಸ್ಸನ್ನು ಒಂದನೆಯ ದಿಕ್ಕಿನೆಡೆಗೆಲ್ಲಾ ಹರಡಿ ಜೀವಿಸಿದರು, ಹಾಗೆಯೇ ಎರಡನೆಯ ದಿಕ್ಕಿನೆಡೆಗೆಲ್ಲಾ, ಹಾಗೆಯೇ ಮೂರನೆಯ ದಿಕ್ಕಿನೆಡೆಗೆಲ್ಲಾ, ಹಾಗೆಯೇ ನಾಲ್ಕನೆಯ ದಿಕ್ಕಿನೆಡೆಗೆಲ್ಲಾ ಹರಡಿ, ಜೀವಿಸಿದರು. ಅದೇರೀತಿಯಲ್ಲಿ ಮೇಲ್ಮುಖವಾಗಿ, ಕೆಳಮುಖವಾಗಿ, ಸುತ್ತೆಲ್ಲಾ, ಈ ಲೋಕದ ಎಲ್ಲೆಡೆಯೂ, ಎಲ್ಲ ಜೀವಿಗಳಿಗೂ, ಎಲ್ಲಕ್ಕೂ ವಿಫುಲವಾಗಿ, ಮಹತ್ತರವಾಗಿ ಅಳತೆಗೆ ಮೀರಿದಂತೆ, ಮೈತ್ರಿಯಿಂದೊಡಗೂಡಿದ, ಅವೈರದಿಂದ ಕೂಡಿದ, ಹಗೆತನದಿಂದ ದೂರವಿರುವ, ಮನಸ್ಸನ್ನು ಹರಡಿ ಜೀವಿಸಿದರು. ಕರುಣೆಯಿಂದೊಡಗೂಡಿದ ಮನಸ್ಸನ್ನು... ಮುದಿತಾದಿಂದೊಡಗೂಡಿದ ಮನಸ್ಸನ್ನು... ಉಪೇಕ್ಖಾದಿಂದೊಡಗೂಡಿದ ಮನಸ್ಸನ್ನು ಒಂದನೆಯ ದಿಕ್ಕಿನೆಡೆಗೆಲ್ಲಾ ಹರಡಿ ಜೀವಿಸಿದರು, ಹಾಗೆಯೇ ಎರಡನೆಯ ದಿಕ್ಕಿನೆಡೆಗೆಲ್ಲಾ, ಹಾಗೆಯೇ ಮೂರನೆಯ ದಿಕ್ಕಿನೆಡೆಗೆಲ್ಲಾ, ಹಾಗೆಯೇ ನಾಲ್ಕನೆಯ ದಿಕ್ಕಿನೆಡೆಗೆಲ್ಲಾ ಹರಡಿ, ಜೀವಿಸಿದರು. ಅದೇರೀತಿಯಲ್ಲಿ ಮೇಲ್ಮುಖವಾಗಿ, ಕೆಳಮುಖವಾಗಿ, ಸುತ್ತೆಲ್ಲಾ, ಈ ಲೋಕದ ಎಲ್ಲೆಡೆಯೂ, ಎಲ್ಲ ಜೀವಿಗಳಿಗೂ, ಎಲ್ಲಕ್ಕೂ ವಿಫುಲವಾಗಿ, ಮಹತ್ತರವಾಗಿ ಅಳತೆಗೆ ಮೀರಿದಂತೆ, ಮೈತ್ರಿಯಿಂದೊಡಗೂಡಿದ, ಅವೈರದಿಂದ ಕೂಡಿದ, ಹಗೆತನದಿಂದ ದೂರವಿರುವ, ಮನಸ್ಸನ್ನು ಹರಡಿ ಜೀವಿಸಿದರು.

11. “ಪಾಪಿಯೇ, ಆಗ ದೂಸಿ ಮಾರನಿಗೆ ಹೀಗೆನಿಸಿತು- ಹೀಗೆ ನಾನು ಕಾರ್ಯ ನಿರ್ವಹಿಸುತ್ತಿದ್ದರೂ, ಈ ಶೀಲವಂತರಾದ, ಕಲ್ಯಾಣಗುಣಗಳನ್ನುಳ್ಳ ಭಿಕ್ಷುಗಳು ಬರುವುದು ಮತ್ತು ಹೋಗುವುದು ನನಗೆ ಕಾಣುವುದೇ ಇಲ್ಲ. ಒಂದುವೇಳೆ ನಾನು ಬ್ರಾಹ್ಮಣ ಗೃಹಸ್ಥರುಗಳನ್ನು ಕಂಡು ಹೀಗೆ ಪ್ರಭಾವ ಮಾಡಿದರೆ- ‘ನೀವುಗಳು ಈ ಶೀಲವಂತರಾದ, ಕಲ್ಯಾಣ ಗುಣಗಳನ್ನುಳ್ಳ ಭಿಕ್ಷುಗಳಿಗೆ ಸತ್ಕಾರ ಮಾಡಿರಿ, ಗೌರವ ಮಾಡಿರಿ, ಮಾನ್ಯತೆ ಮಾಡಿರಿ, ಪೂಜೆ ಮಾಡಿರಿ. ಹಾಗೊಂದು ವೇಳೆ ನೀವುಗಳು ಸತ್ಕಾರ ಮಾಡಿದ್ದರಿಂದಾಗಿ, ಗೌರವ ಮಾಡಿದ್ದರಿಂದಾಗಿ, ಮಾನ್ಯತೆ ಮಾಡಿದ್ದರಿಂದಾಗಿ, ಪೂಜೆ ಮಾಡಿದ್ದರಿಂದಾಗಿ ಅವರುಗಳ ಮನಸ್ಸು ಚಂಚಲವಾಗಬಹುದು, ಆಗ ಅವರ ಮೇಲೆ ಹಿಡಿತ ಸಾಧಿಸಲು ಈ ದೂಸಿ ಮಾರನಿಗೆ ಒಂದು ಅವಕಾಶ ದೊರೆಯುವುದು’ ಎಂದು.231 ಆಗ ಆ ದೂಸಿ ಮಾರನು ಬ್ರಾಹ್ಮಣ ಗೃಹಸ್ಥರುಗಳನ್ನು ಕಂಡು ಹೀಗೆ ಪ್ರಭಾವ ಬೀರಿದನು- ‘ನೀವುಗಳು ಈ ಶೀಲವಂತರಾದ, ಕಲ್ಯಾಣ ಗುಣಗಳನ್ನುಳ್ಳ ಭಿಕ್ಷುಗಳಿಗೆ ಸತ್ಕಾರ ಮಾಡಿರಿ, ಗೌರವ ಮಾಡಿರಿ, ಮಾನ್ಯತೆ ಮಾಡಿರಿ, ಪೂಜೆ ಮಾಡಿರಿ. ಹಾಗೊಂದು ವೇಳೆ ನೀವುಗಳು ಸತ್ಕಾರ ಮಾಡಿದ್ದರಿಂದಾಗಿ, ಗೌರವ ಮಾಡಿದ್ದರಿಂದಾಗಿ, ಮಾನ್ಯತೆ ಮಾಡಿದ್ದರಿಂದಾಗಿ, ಪೂಜೆ ಮಾಡಿದ್ದರಿಂದಾಗಿ ಅವರುಗಳ ಮನಸ್ಸು ಚಂಚಲವಾಗಬಹುದು, ಆಗ ಅವರ ಮೇಲೆ ಹಿಡಿತ ಸಾಧಿಸಲು ಈ ದೂಸಿ ಮಾರನಿಗೆ ಒಂದು ಅವಕಾಶ ದೊರೆಯುತ್ತದೆ’ ಎಂದು. ಆಗ ಪಾಪಿಯೇ ಆ ದೂಸಿ ಮಾರನಿಂದ ಹೀಗೆ ಪ್ರಭಾವಿಸಲ್ಪಟ್ಟ ಆ ಬ್ರಾಹ್ಮಣ ಗೃಹಸ್ಥರುಗಳು ಶೀಲವಂತರಾದ, ಕಲ್ಯಾಣಗುಣಗಳುಳ್ಳ ಆ ಭಿಕ್ಷುಗಳಿಗೆ ಸತ್ಕಾರ ಮಾಡಿದರು, ಗೌರವ ಮಾಡಿದರು, ಮಾನ್ಯತೆ ಮಾಡಿದರು, ಪೂಜೆ ಮಾಡಿದರು.

12. “ಪಾಪಿಯೇ, ಆ ಸಮಯದ ನಂತರ, ಆ ಮನುಷ್ಯರುಗಳು, ಯಾರು ಯಾರು ಗತಿಸಿ ಹೋದರೋ, ಅವರೆಲ್ಲರುಗಳು ಶರೀರ ಕಳೆದುಕೊಂಡ ಮೇಲೆ ಮರಣವನ್ನು ಪಡೆದವರು, ಸುಗತಿಯಲ್ಲಿ ಮತ್ತು ಸ್ವರ್ಗಲೋಕದಲ್ಲಿ ಹುಟ್ಟುವಂತಾದರು.

13. “ಆಗ ಪಾಪಿಯೇ, ಅರಹಂತರೂ, ಸಮ್ಮಾಸಂಬುದ್ಧರೂ ಆದ ಕಕಸುಂಧ ಭಗವಾನರು ಆ ಭಿಕ್ಷುಗಳನ್ನು ಕರೆದರು- ‘ಭಿಕ್ಷುಗಳೇ, ಆ ಬ್ರಾಹ್ಮಣ ಗೃಹಸ್ಥರುಗಳು ದೂಸಿ ಮಾರನ ಈ ಮಾತಿನಿಂದ ಪ್ರಭಾವಿತರಾಗಿದ್ದಾರೆ- ‘ಈ ಶೀಲವಂತರಾದ, ಕಲ್ಯಾಣ ಗುಣಗಳನ್ನುಳ್ಳ ಭಿಕ್ಷುಗಳಿಗೆ ಸತ್ಕಾರ ಮಾಡಿರಿ, ಗೌರವ ಮಾಡಿರಿ, ಮಾನ್ಯತೆ ಮಾಡಿರಿ, ಪೂಜೆ ಮಾಡಿರಿ. ಹಾಗೊಂದು ವೇಳೆ ನೀವುಗು ಸತ್ಕಾರ ಮಾಡಿದ್ದರಿಂದಾಗಿ, ಗೌರವ ಮಾಡಿಸಿದ್ದರಿಂದಾಗಿ, ಮಾನ್ಯತೆ ಮಾಡಿದ್ದರಿಂದಾಗಿ, ಪೂಜೆ ಮಾಡಿದ್ದರಿಂದಾಗಿ ಅವರುಗಳ ಮನಸ್ಸು ಚಂಚಲವಾಗುವುದು, ಆಗ ಅವರ ಮೇಲೆ ಹಿಡಿತ ಸಾಧಿಸಲು ಈ ದೂಸಿ ಮಾರನಿಗೆ ಒಂದು ಅವಕಾಶ ದೊರೆಯುತ್ತದೆ’ ಎಂದು. ಆದ್ದರಿಂದ ಭಿಕ್ಷುಗಳೇ, ನೀವುಗಳು ಕಾಯದಲ್ಲಿ ಅಶುಭ ಕಾಣುವ ಮನಸ್ಸುಳ್ಳವರಾಗಿ ಉಳಿಯಿರಿ, ಆಹಾರದ ಬೇಸರಿಕೆ ಕಾಣುವ ಮನಸ್ಸುಳ್ಳವರಾಗಿ ಉಳಿಯಿರಿ, ಇಡೀ ಲೋಕ ವ್ಯವಹಾರದಲ್ಲಿ ಆನಂದವಿಲ್ಲದಿರುವುದನ್ನು ಕಾಣುವ ಮನಸ್ಸನ್ನು ಉಳ್ಳವರಾಗಿ ಉಳಿಯಿರಿ, ಎಲ್ಲಾ ಅವಲಂಬಿಸಿರುವ ವಸ್ತು (ಸಂಖಾರ)ಗಳು ಅನಿತ್ಯವಾದವು ಎಂದು ಕಾಣುವ ಮನಸ್ಸನ್ನು ಉಳ್ಳವರಾಗಿ ಉಳಿಯಿರಿ’ ಎಂದು. ಆಗ ಪಾಪಿಯೇ! ಆ ಭಿಕ್ಷುಗಳು ಅರಹಂತರೂ ಸಮ್ಮಾಸಂಬುದ್ಧರೂ ಆದ ಕಕಸಂಧ ಭಗವಾನರಿಂದ ಈ ರೀತಿಯಾಗಿ ತಿಳಿಸಲ್ಪಟ್ಟ ಮೇಲೆ, ಈ ರೀತಿಯಾಗಿ ಉಪದೇಶಿಸಲ್ಪಟ್ಟ ಮೇಲೆ, ಅರಣ್ಯಕ್ಕೆ ಹೋಗಿ, ಮರದ ಬುಡದಲ್ಲಿ ಉಳಿದು, ಬಯಲಿನಂತಹ ಸ್ಥಳದಲ್ಲಿ ಉಳಿದು, ಶರೀರದ ಅಶುಭ ಕಾಣುವ ಮನಸ್ಸುಳ್ಳವರಾದರು. ಎಲ್ಲಾ ಅವಲಂಬಿಸಿರುವ ವಸ್ತುಗಳು ಅನಿತ್ಯವಾದವು232 ಎಂಬ ಮನಸ್ಸುಳ್ಳವರಾದರು.

14. “ಪಾಪಿಯೇ, ಆಗ ಅರಹಂತರೂ, ಸಮ್ಮಾಸಂಬುದ್ಧರೂ ಆದ ಕಕುಸಂಧ ಭಗವಾನರು ಬೆಳಗಿನ ಸಮಯದಲ್ಲಿ, ವಸ್ತ್ರಧರಿಸಿ ಭಿಕ್ಷಾಪಾತ್ರೆ ಮತ್ತು ಚೀವರವನ್ನು ತೆಗೆದುಕೊಂಡು, ಆಯುಷ್ಮಂತ ವಿಧುರನನ್ನು ಶ್ರಮಣ ಸಹಚರನನ್ನಾಗಿಸಿಕೊಂಡು, ಆ ಹಳ್ಳಿಗೆ ಭಿಕ್ಷೆಗಾಗಿ ಬಂದರು. ಪಾಪಿಯೇ, ಆಗ ದೂಸಿ ಮಾರನು ಬೇರೊಬ್ಬ ಯುವಕನನ್ನು ಪ್ರಭಾವಗೊಳಿಸಿ, ಅವನು ಒಂದು ಕಲ್ಲನ್ನು ತೆಗೆದುಕೊಂಡು ಆಯುಷ್ಮಂತ ವಿಧುರರ ತಲೆಗೆ ಹೊಡೆದನು, ತಲೆಯು ಸೀಳುಬಿಟ್ಟುಕೊಂಡಿತು. ಆಗ ಪಾಪಿಯೇ, ಆಯುಷ್ಮಂತ ವಿಧುರ, ನನ್ನ ತಲೆ ಒಡೆದು ಹೋಗಿದ್ದರೂ, ಅದರಿಂದ ರಕ್ತ ಸುರಿಯುತ್ತಿದ್ದರೂ ಸಹ ಅರಹಂತರೂ, ಸಮ್ಮಾಸಂಬುದ್ಧರೂ ಆದ ಕಕುಸಂಧ ಭಗವಾನರ ಜೊತೆ ಜೊತೆಯಾಗಿಯೇ ನಡೆದರು. ಆಗ ಪಾಪಿಯೇ, ಅರಹಂತರೂ, ಸಮ್ಮಾಸಂಬುದ್ಧರೂ ಆದ ಕಕುಸಂಧ ಭಗವಾನರು ಆನೆಯು ದೃಷ್ಟಿ ಹರಿಸುವಂತೆ ಸುತ್ತೆಲ್ಲ ನೋಡಿದರು. ‘ಈ ದೂಸಿ ಮಾರನು ಇತಿಮಿತಿಯನ್ನು ಅರಿಯದವನಾಗಿದ್ದಾನೆ’ ಎಂದು. ಹೀಗೆ ಅವರು ಸುತ್ತೆಲ್ಲಾ ನೋಡುತ್ತಿರುವಂತೆಯೇ, ಪಾಪಿಯೇ, ಆ ದೂಸಿ ಮಾರನು ಆ ಸ್ಥಳದಿಂದ ಕಾಣದಾಗಿ ಮಹಾ ನರಕದಲ್ಲಿ ಹುಟ್ಟಿಬಂದನು.233

3. ಮಹಾ ನರಕದಲ್ಲಿ ದೂಸಿ ಮಾರ

15. “ಪಾಪಿಯೇ, ಆ ಮಹಾ ನರಕ ಮೂರು ರೀತಿಯಾಗಿ ಗುರುತಿಸಲ್ಪಡುತ್ತದೆ- ಆರು ಇಂದ್ರಿಯಗಳ ನೆಲೆ ಉಪಸ್ಸಾಯತನಿಕ ಎಂಬ ಹೆಸರಿನಿಂದ, ದೊಡ್ಡ ಮೊಳೆಗಳೊಂದಿಗೆ ‘ಸಮಾಗಮ ಸಂಕುಸಮಾಹತೊ’ ಎಂಬ ಹೆಸರಿನಿಂದ ಪಚ್ಚತ ವೇದನೆ (ಬೇರೆಯದೇ ಆದ ಅನುಭವ) ಎಂಬ ಹೆಸರಿನಿಂದ.234 ಆಗ ಪಾಪಿಯೇ, ಆ ನರಕಪಾಲಕ ನನ್ನ ಬಳಿ ಬಂದು ಹೀಗೆ ಹೇಳಿದನು- ನೀವು ಮಹನೀಯರೆ, ಮೊಳೆಯು ಬಂದು ಹೃದಯದಲ್ಲಿರುವ ಮೊಳೆಯನ್ನು ಮುಟ್ಟಿದಾಗ ನೀವು ಹೀಗೆ ಅರಿತುಕೊಳ್ಳಬೇಕು- ‘ಒಂದು ಸಾವಿರ ವರ್ಷ ನರಕದಲ್ಲಿ ನಾನು ಅನುಭವಿಸಬೇಕು’ ಎಂದು. ಅದೇರೀತಿಯಲ್ಲಿ, ನಾನು ಪಾಪಿಯೇ, ಅನೇಕ ವರ್ಷಗಳವರೆಗೆ ಆ ಮಹಾ ನರಕದಲ್ಲಿ ಬಿದ್ದಿದ್ದೆನು, ಹತ್ತು ಸಾವಿರ ವರ್ಷಗಳವರೆಗೆ ಆ ಮಹಾ ನರಕದಲ್ಲಿ ಬಿದ್ದಿದ್ದೆನು, ಹತ್ತು ಸಾವಿರ ವರ್ಷಗಳವರೆಗೆ ಆ ಮಹಾ ನರಕದಲ್ಲಿದ್ದು, ಉಟ್ಠಾನಿಮಾ ಎಂಬ ನೋವಿನನುಭವವನ್ನು ಅನುಭವಿಸುತ್ತಾ, ಉಸ್ಸದೇಯಲ್ಲಿ ಬಿದ್ದೆನು. ಹಾಗಾದ್ದರಿಂದಾಗಿ, ಪಾಪಿಯೇ,235 ನನ್ನ ಈ ಶರೀರವು ಈ ರೀತಿಯಾಗಿ ಮನುಷ್ಯನ ರೀತಿಯದಾಯಿತು. ಮತ್ತು ನನ್ನ ಈ ತಲೆಯು ಈ ರೀತಿಯಾಗಿ ಮೀನಿನಂತಾಯಿತು.

ಯಾವುದದು ನರಕ, ದೂಸಿಯು ಬಾಧೆ ಅನುಭವಿಸಿದ್ದು,

ಬ್ರಾಹ್ಮಣೋತ್ತಮ ಕಕುಸಂಧನ ಶಿಷ್ಯ ವಿಧುರನನ್ನು ಘಾತಿಸಿದ್ದದ್ದು

ಅದು ಒಂದು ನೂರು ಲೋಹದ ಮುಳ್ಳುಗಳಿಂದಾದದ್ದು, ಪ್ರತಿಯೊಂದು ಬೇರೆ ಬೇರೆ ಬಾಧೆ

ಇದೇ ಆ ನರಕ ಅಲ್ಲಿ ದೂಸಿಯು ಬಾಧೆ ಅನುಭವಿಸಿದ್ದು,

ಬ್ರಾಹ್ಮಣೋತ್ತಮ ಕಕುಸಂಧನ ಶಿಷ್ಯ ವಿಧುರನನ್ನು ಘಾತಿಸಿದ್ದಕ್ಕೆ ||

ಹೀಗೆಂದು ಅರಿಯುತ್ತಾನೆ ಭಿಕ್ಷು, ಬುದ್ಧರ ಶಿಷ್ಯನಾದವನನ್ನು ಭಿಕ್ಷುವನ್ನು

ಘಾತಿಸಿದ್ದೇ ಆದರೆ, ಕರಿಯನೇ ದುಃಖಕ್ಕೆ ಗುರಿಯಾಗುತ್ತೀಯೆ ಎಂದು ||

ಕಲ್ಪಕಾಲ ಸಾಗರದ ಮಧ್ಯದ ಮಹಡಿಯ ಮನೆಯಲ್ಲಿದ್ದರೂ

ಹೊಳೆವ, ಬೆಳಗುವ, ಕಾಂತಿಯುಕ್ತವಾದ ಪಚ್ಚೆರತ್ನಗಳಿಂದ ಕೂಡಿದ್ದರೂ,

ನಾನಾ ವಿಲಾಸ ವಿಭ್ರಮದ ಅಪ್ಸರೆಯರು ನರ್ತಿಸಿದರೂ

ಭಿಕ್ಷುವನ್ನು ಘಾತಿಸಿದ್ದೇ ಆದರೆ, ಕರಿಯನೇ ದುಃಖಕ್ಕೆ ಗುರಿಯಾಗುತ್ತೀಯೆ ಎಂದು ||

ಹೀಗೆಂದು ಅರಿಯುತ್ತಾನೆ ಭಿಕ್ಷು,

ಬುದ್ಧರ ಶಿಷ್ಯನಾದವನು ಭಿಕ್ಷುವನ್ನು ಘಾತಿಸಿದ್ದೇ ಆದರೆ,

ಕರಿಯನೇ ದುಃಖಕ್ಕೆ ಗುರಿಯಾಗುತ್ತೀಯೆ ಎಂದು ||

ಬುದ್ಧರಿಂದ ಬೋಧಿಸಲ್ಪಟ್ಟವರು, ಭಿಕ್ಷು ಸಂಘದಿಂದ ಕಾಯಲ್ಪಟ್ಟವರು

ಮಿಗಾರಮಾತಾ ಭವನವನ್ನು ತನ್ನ ಪಾದದಿಂದ ಅಲುಗಿಸಿದವನು237 ||

ಹೀಗೆಂದು ಅರಿಯುತ್ತಾನೆ ಭಿಕ್ಷು, ಬುದ್ಧರ ಶಿಷ್ಯನಾದವನನ್ನು

ಭಿಕ್ಷುವನ್ನು ಘಾತಿಸಿದ್ದೇ ಆದರೆ, ಕರಿಯನೇ ದುಃಖಕ್ಕೆ ಗುರಿಯಾಗುತ್ತಾನೆ ಎಂದು ||

ಯಾರು ವೈಜಯಂತ ಭವನವನ್ನು ತನ್ನ ಪಾದದಿಂದ ಅಲುಗಿಸಿದವನು238

ತನ್ನ ವೃದ್ಧಿಶಕ್ತಿಯಿಂದ ಬಲ ಸಂಪನ್ನನಾದವನು, ದೇವತೆಗಳನ್ನೂ ನಡುಗಿಸಿದವನು

ಹೀಗೆಂದು ಅರಿಯುತ್ತಾನೆ ಭಿಕ್ಷು, ಬುದ್ಧರ ಶಿಷ್ಯನಾದವನನ್ನು

ಭಿಕ್ಷುವನ್ನು ಘಾತಿಸಿದ್ದೇ ಆದರೆ, ಕರಿಯನೇ ದುಃಖಕ್ಕೆ ಗುರಿಯಾಗುತ್ತಾನೆ ಎಂದು ||

ಯಾರು ವೈಜಯಂತ ಭವನದಲ್ಲಿರುವ ಇಂದ್ರನನ್ನು ಕೇಳಿದ್ದೆ ಆದರೆ

ನೀನು ಆಸವಗಳನ್ನು ಕ್ಷಯಿಸುವ ತೃಷ್ಣೆಯಿಂದ ವಿಮುಕ್ತಿ ಗಳಿಸುವುದನ್ನು ಅರಿತಿರುವೆಯೇನು ಎಂದು

ಅದಕ್ಕೆ ಇಂದ್ರನು ನಿಜವನ್ನೇ ನುಡಿಯುವನು, ಕೇಳಿದ ಪ್ರಶ್ನೆಗೆ ಸರಿ ಉತ್ತರವಾಗಿ

ಹೀಗೆಂದು ಅರಿಯುತ್ತಾನೆ ಭಿಕ್ಷು, ಬುದ್ಧರ ಶಿಷ್ಯನಾದವನನ್ನು

ಭಿಕ್ಷುವನ್ನು ಘಾತಿಸಿದ್ದೇ ಆದರೆ, ಕರಿಯನೇ ದುಃಖಕ್ಕೆ ಗುರಿಯಾಗುತ್ತಾನೆ ಎಂದು ||

ಯಾರ ಸುದ್ಧಮ್ಮ ಸಂಭಾಂಗಣದಲ್ಲಿರುವ ಬ್ರಹ್ಮ ಸಮೂಹದ ಬ್ರಹ್ಮನನ್ನು ಕೇಳಿದ್ದೇ ಆದರೆ,

ಹಿಂದಿನ ನಿನ್ನ ದೃಷ್ಟಿಯು ಈಗಲೂ ಹಾಗೇ ನಿನ್ನ ದೃಷ್ಟಿಯೇ ಆಗಿದೆಯೇನು? ಎಂದು,

ನೀನು ಬ್ರಹ್ಮಲೋಕದಲ್ಲಿಂದಲೂ ಮರೆಯಾಗುವ ಪ್ರಭೆಯನ್ನು ಕಂಡಿಲ್ಲವೇನು? ಎಂದು

ಅದಕ್ಕೆ ಬ್ರಹ್ಮನು ನಿಜವನ್ನೇ ನುಡಿಯುವನು, ಕೇಳಿದ ಪ್ರಶ್ನೆಗೆ ಸರಿ ಉತ್ತರವಾಗಿ

ಆದರಣೀಯರೇ, ಹಿಂದೆ ಇದ್ದ ನನ್ನ ದೃಷ್ಟಿಯು, ನನ್ನ ದೃಷ್ಟಿಯೇ ಆಗಿರಲಿಲ್ಲ

ನಾನು ಬ್ರಹ್ಮಲೋಕದಲ್ಲಿಂದಲು ಮರೆಯಾಗುವ ಪ್ರಭೆಯನ್ನೂ ಕಂಡಿದ್ದೇನೆ

ಹಾಗಿರುವಾಗ ಇಂದು ನಾನು ಹೇಗೆ ಹೇಳಲಿ ನಾನು ಶಾಶ್ವತನು, ನಿತ್ಯನೂ ಎಂದು240 ||

ಹೀಗೆಂದು ಅರಿಯುತ್ತಾನೆ ಭಿಕ್ಷು, ಬುದ್ಧರ ಶಿಷ್ಯನಾದವನು

ಭಿಕ್ಷುವನ್ನು ಘಾತಿಸಿದ್ದೇ ಆದರೆ, ಕರಿಯನೇ ದುಃಖಕ್ಕೆ ಗುರಿಯಾಗುತ್ತಾನೆ ಎಂದು ||

ಯಾರು ತಾವು ವಿಮುಕ್ತರಾದ್ದರಿಂದ ಮಹಾಮೇರು ಶಿಖರವನ್ನು ಏರಿಸುವರೋ

ಪೂರ್ವ ವಿದೇಹದ ಕಾನನ ಹಾಗೂ ಭೂಮಿಯ ಮೇಲೆ ಮಲಗುವ ಮಾನವನು (ಬುದ್ಧ)241 ||

ಹೀಗೆಂದು ಅರಿಯುತ್ತಾನೆ ಭಿಕ್ಷು, ಬುದ್ಧರ ಶಿಷ್ಯನಾದವನನ್ನು

ಭಿಕ್ಷುವನ್ನು ಘಾತಿಸಿದ್ದೇ ಆದರೆ, ಕರಿಯನೇ ದುಃಖಕ್ಕೆ ಗುರಿಯಾಗುತ್ತಾನೆ ಎಂದು ||

ಸುಡುವ ಬೆಂಕಿ ಅರಿಯುವುದಿಲ್ಲ, ನಾನು ಮೂರ್ಖನನ್ನು ಸುಡುತ್ತಿದ್ದೇನೆ ಎಂದು

ಆದರೆ ಮೂರ್ಖನು ಸುಟ್ಟುಹೋಗುತ್ತಾನೆ ಉರಿಯುತ್ತಿರುವ ಬೆಂಕಿಗೆ ಸಿಲುಕಿ ||

ಹಾಗೆಯೇ, ನೀನು, ಮಾರ, ತಥಾಗತರನ್ನು ಎದುರಿಸಿದ್ದೇ ಆದರೆ

ನಿನಗೆ ನೀನು ಬೂದಿಯಾಗುತ್ತೀಯ ಮೂರ್ಖನು ಬೆಂಕಿಗೆ ಸಿಲುಕಿದಂತೆ ||

ಅಪುಣ್ಯವನ್ನು ಮಾರನು ಗೆಲಿಸುತ್ತಾನೆ, ತಥಾಗತರನ್ನು ಎದುರಿಸುವುದರಿಂದ

ಓ ಪಾಪಿಯೇ ನೀನು ಹೀಗೆ ಯೋಚಿಸಬೇಡ, ಪಾಪವು ಸ್ವತಃ ಫಲತರುವುದಿಲ್ಲ ಎಂದು ||

ನೀನು ಮಾಡಿದ ಪಾಪವು ಬಹುಕಾಲ ರಾಶಿಯಾಗಿ ಪರಿಣಮಿಸುವುದು

ಮಾರನೇ ಬುದ್ಧರಿಂದ ವಿಮುಖನಾಗು, ಭಿಕ್ಷುಗಳ ಮೇಲಿನ ಆಸೆ ಅಳಿಸಿಹಾಕು

ಹೀಗೆ ಮಾರನನ್ನು ಅಲ್ಲಾಡಿಸಿದನು ಭಿಕ್ಷುವು ಭೇಸಕಾಲವನದಲ್ಲಿ

ಬಸವಳಿದವನಾಗಿ ಆ ಯಕ್ಷನು; ಆಗಲೇ ಅಲ್ಲಿಂದ ಮರೆಯಾದನು ಎಂದು ||

ಇಲ್ಲಿಗೆ ಮಾರತಜ್ಜನೀಯ ಸುತ್ತ ಮುಗಿಯಿತು.

ಟಿಪ್ಪಣಿಗಳು [4]