ಊಟಿಸುತ್ತಿದೆ

ಅನುವಾದಗಳು [28]

ಸೇಖ ಸುತ್ತ

ಸೇಖ ಸುತ್ತ

1. ಶಾಕ್ಯರು ನಿರ್ಮಿಸಿದ ಹೊಸ ಸಭಾ ಭವನ

ಹೀಗೆ ನಾನು ಕೇಳಿದ್ದೇನೆ. ಒಂದು ಸಮಯದಲ್ಲಿ ಭಗವಾನರು ಶಾಕ್ಯರುಗಳೊಂದಿಗೆ ಕಪಿಲವಸ್ತುವಿನ ನ್ಯಗ್ರೋಧವಿಹಾರದಲ್ಲಿ ತಂಗಿದ್ದರು. ಆ ಸಮಯದಲ್ಲಿ ಕಪಿಲವಸ್ತುವಿನ ಶಾಕ್ಯರುಗಳು ಹೊಸದಾಗಿ ಸಭಾಭವನವನ್ನು ನಿರ್ಮಿಸಿದ್ದರು. ಅದು ಇಲ್ಲಿಯವರೆಗೂ ಯಾವ ಶ್ರಮಣನಿಂದಲೂ ಅಥವಾ ಬ್ರಾಹ್ಮಣನಿಂದಲೂ ಅಥವಾ ಒಬ್ಬ ಮಾನವ ಜೀವಿಯಿಂದಲೂ ಉಪಯೋಗಿಸಲ್ಪಟ್ಟಿಲ್ಲ. ಆಗ ಆ ಕಪಿಲವಸ್ತುವಿನ ಶಾಕ್ಯರುಗಳು ಭಗವಾನರು ಎಲ್ಲಿದ್ದರೋ ಅಲ್ಲಿಗೆ ಬಂದರು; ಸಮೀಪಕ್ಕೆ ಬಂದು ಭಗವಾನರಿಗೆ ನಮಿಸಿ ಒಂದೆಡೆ ಕುಳಿತರು. ಒಂದೆಡೆ ಕುಳಿತ ಆ ಕಪಿಲವಸ್ತುವಿನ ಶಾಕ್ಯರುಗಳು ಭಗವಾನರಿಗೆ ಹೀಗೆ ಹೇಳಿದರು- ಭಂತೇ, ಇಲ್ಲಿ ಕಪಿಲವಸ್ತುವಿನ ಶಾಕ್ಯರುಗಳು ಹೊಸದಾದ ಸಭಾಭವನವನ್ನು ನಿರ್ಮಿಸಿದ್ದೇವೆ. ಅದು ಇಲ್ಲಿಯವರೆವಿರೂ ಯಾವ ಶ್ರಮಣನಿಂದಲೂ ಅಥವಾ ಬ್ರಾಹ್ಮಣನಿಂದಲೂ ಅಥವಾ ಒಬ್ಬ ಮಾನವ ಜೀವಿಯಿಂದಲೂ ಉಪಯೋಗಿಸಲ್ಪಟ್ಟಿಲ್ಲ. ಭಂತೆ, ಮೊದಲಿಗೆ ಅದನ್ನು ಭಗವಾನರು ಉಪಯೋಗಿಸಲಿ. ಭಗವಾನರು ಮೊದಲು ಉಪಯೋಗಿಸಿದ ನಂತರ, ಕಪಿಲವಸ್ತುವಿನ ಶಾಕ್ಯರುಗಳಾದ ಉಪಯೋಗ ಮಾಡುವರು. ಇದರಿಂದಾಗಿ ಕಪಿಲವಸ್ತುವಿನ ಶಾಕ್ಯರುಗಳಿಗೆ ಬಹುಕಾಲದವರೆವಿಗೂ ಹಿತವೂ ಸುಖವೂ ಉಂಟಾಗುವುದು20 ಎನ್ನಲು ಭಗವಾನರು ಮೌನದಿಂದಲೇ ಒಪ್ಪಿಗೆ ಸೂಚಿಸಿದರು. ಆಗ ಕಪಿಲವಸ್ತುವಿನ ಶಾಕ್ಯರುಗಳು ಭಗವಾನರಿಂದ ಹೀಗೆ ಒಪ್ಪಿಗೆ ಪಡೆದುಕೊಂಡು, ಕುಳಿತಲ್ಲಿಂದ ಎದ್ದು, ಭಗವಾನರಿಗೆ ನಮಿಸಿ, ಪ್ರದಕ್ಷಿಣೆ ಮಾಡಿ, ಎಲ್ಲಿ ಹೊಸ ಸಭಾಭವನವಿತ್ತೋ ಅಲ್ಲಿಗೆ ಬಂದರು. ಬಂದನಂತರ, ಇಡೀ ಸಭಾಭವನವನ್ನು ಹಾಸಬೇಕಾಗಿದ್ದರಿಂದ ಹಾಸಿ, ಆಸನಗಳನ್ನು ಹಾಕಿ, ನೀರಿನ ಕುಡಿಕೆಯನ್ನು ವ್ಯವಸ್ಥೆ ಮಾಡಿಟ್ಟು, ಎಣ್ಣೆಯ ದೀಪವನ್ನು ಹಚ್ಚಿಟ್ಟು ಎಲ್ಲಿ ಭಗವಾನರಿದ್ದರೋ ಅಲ್ಲಿಗೆ ಬಂದರು. ಬಂದನಂತರ ಭಗವಾನರಿಗೆ ನಮಿಸಿ ಒಂದೆಡೆ ನಿಂತರು. ಹೀಗೆ ಒಂದೆಡೆ ನಿಂತ ಕಪಿಲವಸ್ತುವಿನ ಶಾಕ್ಯರುಗಳು ಭಗವಾನರಿಗೆ ಹೀಗೆ ಹೇಳಿದರು- ಇಡೀ ಸಭಾಭವನಕ್ಕೆ ಹಾಸಬೇಕಾದ್ದನ್ನು ಹಾಸಿದ್ದೇವೆ, ಆಸನಗಳನ್ನು ಹಾಕಿದ್ದೇವೆ, ನೀರಿನ ಕುಡಿಕೆಯನ್ನು ಇಟ್ಟಿದ್ದೇವೆ, ಎಣ್ಣೆಯ ದೀಪವನ್ನು ಹಚ್ಚಿದ್ದೇವೆ. ಭಂತೇ, ಭಗವಾನರು ಏನು ಮಾಡಬೇಕೆಂಬುದನ್ನು ಕಾಲ್ಕನುಗುಣವಾಗಿ ಯೋಚಿಸಬಹುದು. ಆಗ ಭಗವಾನರು ಉಡುಪು ಧರಿಸಿದಾದಮೇಲೆ, ತಮ್ಮ ಭಿಕ್ಷಾಪಾತ್ರೆ ಮತ್ತು ಹೊದಿಯುವ ಚೀವರ ಹಿಡಿದು, ಭಿಕ್ಷು ಸಂಘದ ಜೊತೆಗೂಡಿ, ಎಲ್ಲಿ ಸಭಾಭವನವಿತ್ತೋ ಅಲ್ಲಿಗೆ ಬಂದರು. ಬಂದನಂತರ ಕಾಲನ್ನು ತೊಳೆದುಕೊಂಡವರಾಗಿ, ಸಭಾಭವನದ ಒಳಹೊಕ್ಕು ಮಧ್ಯದ ಕಂಭಕ್ಕನುಗುಣವಾಗಿ ಪೂವರ್ಾಭಿಮುಖ ಮಾಡಿ ಕುಳಿತುಕೊಂಡರು. ಭಿಕ್ಷು ಸಂಘವೂ ಕೂಡ ಕಾಲನ್ನು ತೊಳೆದುಕೊಂಡವರಾಗಿ, ಸಭಾಭವನದ ಒಳಹೊಕ್ಕು ಪಶ್ಚಿಮದ ಗೋಡೆಗೆ ಎದುರಾಗಿ ಹಾಗೂ ಪೂವರ್ಾಭಿಮುಖ ಮಾಡಿ ಭಗವಾನರು ತಮ್ಮ ಮುಂದೆ ಇರುವ ಹಾಗೆ ಕುಳಿತುಕೊಂಡರು. ಕಪಿಲವಸ್ತುವಿನ ಶಾಕ್ಯರುಗಳು ಕೂಡ ಕಾಲನ್ನು ತೊಳೆದುಕೊಂಡು ಸಭಾಭವನವನ್ನು ಒಳಹೊಕ್ಕು, ಪೂರ್ವದ ಗೋಡೆಗೆ ಎದುರಾಗಿ, ಪಶ್ಚಿಮಾಭಿಮುಖವಾಗಿ, ಭಗವಾನರು ತಮ್ಮ ಎದುರಿಗಿರುವಂತೆ ಕುಳಿತುಕೊಂಡರು.

2. ಧರ್ಮದ ಉಪದೇಶ ನೀಡಲು ಆನಂದರಿಗೆ ಕರೆ

ಆಗ ಭಗವಾನರು ಕಪಿಲವಸ್ತುವಿನ ಶಾಕ್ಯರುಗಳಿಗೆ ರಾತ್ರಿ ಬಹುಕಾಲದವರೆಗೂ ಧರ್ಮದ ವಿಷಯದಲ್ಲಿ, ಸಂತೋಷವಾಗುವ, ಸಮಾಧಾನವಾಗುವ, ಸಮುತ್ತೇಜಿಸುವ, ಸಂಪ್ರೇರೇಪಿಸುವ ಉಪದೇಶವನ್ನು ನೀಡಿದರು. ನಂತರ ಆಯುಷ್ಮಂತ ಆನಂದರನ್ನು ಕರೆದರು- ಆನಂದ, ಕಪಿಲವಸ್ತುವಿನ ಶಾಕ್ಯರುಗಳಿಗೆ, ಕಲಿಯಬೇಕಾದವರಿಗೆ ತಿಳಿಸುವಂತಹ ಧರ್ಮ ಮಾರ್ಗವನ್ನು ನೀನು ನೆನೆದು ತಿಳಿಸು. ನನ್ನ ಬೆನ್ನು ನೋಯುತ್ತಿದೆ. ಅದನ್ನು ನಾನು ವಿರಮಿಸುತ್ತೇನೆ ಎಂದು ಹೇಳಿದರು. ಆಗಲಿ ಭಂತೆ ಎಂದು ಆಯುಷ್ಮಂತ ಆನಂದ ಭಗವಾನರಿಗೆ ಉತ್ತರಿಸಿದರು. ಆಗ ಭಗವಾನರು ಹೊರಹೊದಿಕೆಯನ್ನು ನಾಲ್ಕು ಭಾಗವಾಗಿ ಮಡಿಸಿ ನಂತರ ಬಲಬದಿಯಾಗಿ, ಸಿಂಹ ಮಲಗುವ ಹಾಗೆ ಕಾಲನ್ನು ಕಾಲ ಮೇಲಿಟ್ಟುಕೊಂಡು, ಸ್ಮೃತಿವಂತರಾಗಿ, ಪೂರ್ಣ ಎಚ್ಚರವುಳ್ಳವರಾಗಿ, ಮತ್ತೆ ಏಳುವ ಬಗ್ಗೆ ಚಿಂತಿಸಿ ಅಂತೆಯೇ ಮಲಗಿಕೊಂಡರು.

3. ಕಲಿಯುವವರಿಗೆ ತಿಳಿಸುವ ಮಾರ್ಗ

2. ಆಗ ಆಯುಷ್ಮಂತ ಆನಂದ ಶಾಕ್ಯರ ಮಹಾನಾಮರನ್ನು ಕರೆದರು- ಇಲ್ಲಿ ಮಹಾನಾಮ ಒಬ್ಬ ಶ್ರೇಷ್ಠ ಶಿಷ್ಯನು, ಶೀಲಸಂಪನ್ನನಾಗಿರುತ್ತಾನೆ. ಇಂದ್ರಿಯಗಳ ಬಾಗಿಲುಗಳ ರಕ್ಷಕನಾಗಿರುತ್ತಾನೆ, ಆಹಾರದಲ್ಲಿ ಹಿತಮಿತದವನಾಗಿರುತ್ತಾನೆ, ಜಾಗರೂಕತೆಯಲ್ಲಿ ಮಗ್ನತೆವುಳ್ಳವನಾಗಿರುತ್ತಾನೆ, ಏಳು ರೀತಿಯ ಸದ್ಧರ್ಮಗಳನ್ನು ಹೊಂದಿದವನಾಗುತ್ತಾನೆ, ಇಚ್ಛಿಸಿದಾಗ ಸಾಧಿಸುವ, ಯಾವ ಅಡೆತಡೆಗಳಿಲ್ಲದೆ, ಯಾವ ತೊಂದರೆಯೂ ಇಲ್ಲದೆ, ಅತ್ಯಂತ ಪರಿಶುದ್ಧವಾದ ಮನೋಸ್ಥಿತಿಯಾದಂತಹ ಸಮಾಧಿಯ ನಾಲ್ಕು ಹಂತಗಳನ್ನು ಈಗಲೆ ಇಲ್ಲಿಯೇ ಸರಳವಾಗಿ ಸಾಧಿಸುವವನಾಗುತ್ತಾನೆ.

1. ಶೀಲಸಂಪನ್ನನಾಗುತ್ತಾನೆ

3. ಮಹಾನಾಮ, ಶ್ರೇಷ್ಠನಾದ ಶಿಷ್ಯನು ಹೇಗೆ ಶೀಲಸಂಪನ್ನನಾಗಿರುತ್ತಾನೆ? ಮಹಾನಾಮ, ಇಲ್ಲಿ ಶ್ರೇಷ್ಠನಾದ ಶಿಷ್ಯನು ಶೀಲವಂತನಾಗಿರುತ್ತಾನೆ. ಪಾತಿಮೋಕ್ಖದ (ಭಿಕ್ಷು ನಿಯಮಗಳು) ನಿಯಮದಿಂದ ಬದ್ಧವಾದ ಜೀವನವನ್ನು ನಡೆಸುವವನಾಗಿರುತ್ತಾನೆ. ಶುದ್ಧ ಆಚಾರ ಮತ್ತು ಯೋಗ್ಯ ವಾಸಸ್ಥಾನದಲ್ಲಿ ಉಳಿಯುವವನಾಗುತ್ತಾನೆ. ಸಣ್ಣ ತಪ್ಪುಗಳನ್ನು ಮಾಡುವುದರಲ್ಲೂ ಭಯ ಕಾಣುವವನಾಗುತ್ತಾನೆ. ಭಿಕ್ಷು ಶಿಕ್ಷಣದ ನಿಯಮಗಳನ್ನು ಸರಿ ಅರ್ಥದಲ್ಲಿ ತಿಳಿದುಕೊಂಡು ತರಬೇತು ಪಡೆಯುತ್ತಾನೆ. ಮಹಾನಾಮ, ಈ ರೀತಿಯಾಗಿ ಶ್ರೇಷ್ಠನಾದ ಶಿಷ್ಯನು ಶೀಲಸಂಪನ್ನಾಗುತ್ತಾನೆ.

2. ಇಂದ್ರಿಯಗಳ ಬಾಗಿಲುಗಳ ರಕ್ಷಕನಾಗುತ್ತಾನೆ

ಮಹಾನಾಮ, ಶ್ರೇಷ್ಠನಾದ ಶಿಷ್ಯನು ಹೇಗೆ ಇಂದ್ರಿಯಗಳ ಬಾಗಿಲುಗಳ ರಕ್ಷಕನಾಗುತ್ತಾನೆ? ಮಹಾನಾಮ, ಇಲ್ಲಿ ಶ್ರೇಷ್ಠನಾದ ಶಿಷ್ಯನು ಕಣ್ಣಿನಿಂದ ರೂಪವನ್ನು ನೋಡಿದ ಮೇಲೆ ಹೊರನೋಟಕ್ಕೆ ಮಾರುಹೋಗುವುದಿಲ್ಲ, ವಿವರಗಳಿಂದಾಗಿಯೂ ಮಾರು ಹೋಗುವುದಿಲ್ಲ. ಒಂದುವೇಳೆ ಕಣ್ಣು ಇಂದ್ರಿಯವನ್ನು ಹಿಡಿತದಲ್ಲಿ ಇಟ್ಟುಕೊಳ್ಳದೆ ಹೋದರೆ ದುರಾಸೆ-ದುಮ್ಮಾನ ಮುಂತಾದ ಅಕುಶಲ ಧರ್ಮಸ್ಥಿತಿಗಳು ಧಾಳಿ ಮಾಡಿ ಅಧಿಕಾರ ಮಾಡುತ್ತವೆ. ಆದ್ದರಿಂದ ಅವುಗಳನ್ನು ಹಿಡಿತದಲ್ಲಿಡುವ ದಾರಿಯಲ್ಲಿ ನಡೆಯುತ್ತಾನೆ. ಕಣ್ಣು ಇಂದ್ರಿಯವನ್ನು ರಕ್ಷಿಸಿಕೊಳ್ಳುತ್ತಾನೆ. ಕಣ್ಣು ಇಂದ್ರಿಯದ ಮೇಲೆ ಹಿಡಿತವನ್ನು ಸಾಧಿಸಿಕೊಳ್ಳುತ್ತಾನೆ. ಕಿವಿಯಿಂದ ಶಬ್ದವನ್ನು ಕೇಳಿದ ಮೆಲೆ... ಪುನರುಚ್ಚರಿಸಿ... ನಾಲಿಗೆಯಿಂದ ರಸವನ್ನು ಸವಿದ ಮೇಲೆ... ಪುನರುಚ್ಚರಿಸಿ... ನಾಲಿಗೆಯಿಂದ ರಸವನ್ನು ಸವಿದ ಮೇಲೆ... ಪುನರುಚ್ಚರಿಸಿ... ಶರೀರದಿಂದ ಸ್ಪರ್ಶವನ್ನು ಅನುಭವಿಸಿದ ಮೇಲೆ... ಪುನರುಚ್ಚರಿಸಿ... ಮನಸ್ಸಿನಿಂದ ವಸ್ತುಸ್ಥಿತಿಗಳನ್ನು ಅರಿತಮೇಲೆ ಅವುಗಳ ಮೇಲುನೋಟಕ್ಕೆ ಮಾರುಹೋಗುವುದಿಲ್ಲ, ವಿವರಗಳಿಂದಾಗಿಯೂ ಮಾರುಹೋಗುವುದಿಲ್ಲ. ಒಂದುವೇಳೆ ಮನಸ್ಸು ಎಂಬ ಇಂದ್ರಿಯವನ್ನು ಹಿಡಿತದಲ್ಲಿ ಇಟ್ಟುಕೊಳ್ಳದೇ ಹೋದರೆ ದುರಾಸೆ-ದುಮ್ಮಾನ ಮುಂತಾದ ಅಕುಶಲ ಧರ್ಮಸ್ಥಿತಿಗಳು ದಾಳಿಮಾಡಿ ಅಧಿಕಾರ ಮಾಡುತ್ತವೆ. ಆದ್ದರಿಂದ ಅವುಗಳನ್ನು ಹಿಡಿತದಲ್ಲಿಡುವ ದಾರಿಯಲ್ಲಿ ನಡೆಯುತ್ತಾನೆ. ಮನಸ್ಸು ಇಂದ್ರಿಯವನ್ನು ರಕ್ಷಿಸಿಕೊಳ್ಳುತ್ತಾನೆ. ಮನಸ್ಸು ಇಂದ್ರಿಯದ ಮೇಲೆ ಹಿಡಿತವನ್ನು ಸಾಧಿಸಿಕೊಳ್ಳುತ್ತಾನೆ. ಮಹಾನಾಮ, ಈ ರೀತಿಯಾಗಿ ಶ್ರೇಷ್ಠನಾದ ಶಿಷ್ಯನು ಇಂದ್ರಿಯಗಳ ಬಾಗಿಲುಗಳ ರಕ್ಷಕನಾಗುತ್ತಾನೆ.

3. ಆಹಾರದಲ್ಲಿ ಹಿತಮಿತದವನಾಗಿರುತ್ತಾನೆ

ಮಹಾನಾಮ ಶ್ರೇಷ್ಠನಾದ ಶಿಷ್ಯನು ಹೇಗೆ ಆಹಾರ ಸೇವನೆಯಲ್ಲಿ ಹಿತಮಿತದವನಾಗಿರುತ್ತಾನೆ? ಇಲ್ಲಿ ಮಹಾನಾಮ, ಶ್ರೇಷ್ಠನಾದ ಶಿಷ್ಯನು ಚೆನ್ನಾಗಿ ಆಲೋಚಿಸಿ ಆಹಾರವನ್ನು ಸೇವಿಸುವವನಾಗುತ್ತಾನೆ- ಆನಂದಕ್ಕಾಗಿ ಅಲ್ಲ, ಶೋಭೆಗಾಗಿ ಅಲ್ಲ, ಶೃಂಗಾರಕ್ಕಾಗಿ ಅಲ್ಲ. ಆದರೆ ಕೇವಲ ಈ ಶರೀರವನ್ನು ಸುಸ್ಥಿತಿಯಲ್ಲಿಟ್ಟುಕೊಂಡು ಜೀವಿಸುವುದಕ್ಕಾಗಿ ಮಾತ್ರ. ಯಾತನೆಯನ್ನು ಕೊನೆಗಾಣಿಸುವುದಕ್ಕಾಗಿ ಮಾತ್ರ, ಬ್ರಹ್ಮಚರ್ಯ ಜೀವನವನ್ನು ನಡೆಸುವುದಕ್ಕಾಗಿ ಮಾತ್ರ. ಈ ಕಾರಣದಿಂದಾಗಿ ಹುಟ್ಟುವ ಹಳೆಯ ಅನುಭವಗಳನ್ನು ದೂರೀಕರಿಸಿ ಮತ್ತು ಹೊಸ ಅನುಭವಗಳು ಹುಟ್ಟದಂತೆ ಮಾಡುವುದಕ್ಕಾಗಿ ಮಾತ್ರ. ಅದರಿಂದಾಗಿ ನನಗೆ ಆಕ್ಷೇಪಣೆಗಳಿರುವುದಿಲ್ಲ ಹಾಗೂ ಸುಖಾರೋಗ್ಯ ಇರುತ್ತದೆ. ಈ ರೀತಿಯಾಗಿ ಮಹಾನಾಮ ಶ್ರೇಷ್ಠನಾದ ಶಿಷ್ಯನು ಆಹಾರ ಸೇವನೆಯಲ್ಲಿ ಹಿತಮಿತದವನಾಗಿರುತ್ತಾನೆ.

4. ಜಾಗರೂಕತೆಯಲ್ಲಿ ಮಗ್ನನಾಗಿರುತ್ತಾನೆ

ಮಹಾನಾಮ, ಶ್ರೇಷ್ಠನಾದ ಶಿಷ್ಯನು ಹೇಗೆ ಜಾಗರೂಕತೆಯಲ್ಲಿ ಮಗ್ನತೆವುಳ್ಳವನಾಗಿರುತ್ತಾನೆ? ಇಲ್ಲಿ, ಮಹಾನಾಮ ಶ್ರೇಷ್ಠನಾದ ಶಿಷ್ಯನು, ಹಗಲಿನಲ್ಲಿ ನಡೆದಾಡುವಾಗ ಅಥವಾ ಕುಳಿತಿರುವಾಗ ಮನಸ್ಸನ್ನು ಮುತ್ತಿರುವ ಸ್ಥಿತಿಗಳಿಂದ ಮನಸ್ಸನ್ನು ಶುದ್ಧಿಗೊಳಿಸುತ್ತಾನೆ. ರಾತ್ರಿಯ ಮೊದಲ ಕಾಲದಲ್ಲಿ ನಡೆದಾಡುವಾಗ ಅಥವಾ ಕುಳಿತಿರುವಾಗ ಮನಸ್ಸನ್ನು ಮುತ್ತಿರುವ ಸ್ಥಿತಿಗಳಿಂದ ಶುದ್ಧಿಗೊಳಿಸುತ್ತಾನೆ; ರಾತ್ರಿಯ ಮಧ್ಯ ಕಾಲದಲ್ಲಿ ಬಲ ಮಗ್ಗಲಾಗಿ ಸಿಂಹನಿದ್ರೆ, ಭಂಗಿಯಲ್ಲಿದ್ದು, ಕಾಲುಗಳನ್ನು ಒಂದರ ಮೇಲೊಂದು ಇಟ್ಟುಕೊಂಡು ಏಳುವ ಹೊತ್ತನ್ನು ಮನಸ್ಸಿನಲ್ಲಿ ನಿರ್ಧರಿಸಿಕೊಂಡು ಎಚ್ಚರಿಕೆ ಹಾಗೂ ಸ್ಮೃತಿವಂತನಾಗಿ ಮಲಗುತ್ತಾನೆ. ರಾತ್ರಿಯ ಕೊನೆಯ ಕಾಲದಲ್ಲಿ ಎದ್ದು, ಅನಂತರ ನಡೆದಾಡುವಾಗ ಮತ್ತು ಕುಳಿತಿರುವಾಗ ಮನಸ್ಸನ್ನು ಮುತ್ತಿರುವ ಸ್ಥಿತಿಗಳಿಂದ ಶುದ್ಧಿಗೊಳಿಸುತ್ತಾನೆ. ಈ ರೀತಿಯಾಗಿ ಮಹಾನಾಮ, ಶ್ರೇಷ್ಠನಾದ ಶಿಷ್ಯನು ಜಾಗರೂಕತೆಯಲ್ಲಿ ಮಗ್ನತೆವುಳ್ಳವನಾಗಿರುತ್ತಾನೆ.

5. ಏಳುಬಗೆಯ ಸದ್ಧರ್ಮಗಳನ್ನು ಹೊಂದಿದವನಾಗುತ್ತಾನೆ

4. ಮಹಾನಾಮ, ಶ್ರೇಷ್ಠನಾದ ಶಿಷ್ಯನು ಹೇಗೆ ಏಳು ರೀತಿಯ ಸದ್ಧರ್ಮಗಳನ್ನು ಹೊಂದಿದವನಾಗುತ್ತಾನೆ? ಇಲ್ಲಿ ಮಹಾನಾಮ ಶ್ರೇಷ್ಠನಾದ ಶಿಷ್ಯನು ಶ್ರದ್ಧೆವುಳ್ಳವನಾಗುತ್ತಾನೆ ಮತ್ತು ತಥಾಗತರ ಬೋಧಿ ಜ್ಞಾನದಲ್ಲೂ ಶ್ರದ್ಧೆ ಹೊಂದಿ ಹೀಗೆ ತಿಳಿಯುತ್ತಾನೆ- ಭಗವಾನರು, ಅರಹಂತರು, ಸಮ್ಯಕ್ಸಂಬುದ್ಧರು, ವಿದ್ಯಾಚರಣ ಸಂಪನ್ನರು, ಸುಗತರು, ಲೋಕಜ್ಞಾನಿಗಳು ಮಾನವರನ್ನು ಪಳಗಿಸುವ ಅಸಮಾನ ಮಾರ್ಗದರ್ಶಿಗಳು, ದೇವತೆಗಳ ಹಾಗೂ ಮಾನವರ ಗುರು, ಬುದ್ಧರು ಮತ್ತು ಭಗವಾನರು ಸಹ ಆಗಿರುವರು. ಅವನು ಲಜ್ಜಾ ಸ್ವಭಾವದವನಾಗುತ್ತಾನೆ, ಶರೀರದಿಂದುಂಟುಮಾಡುವ ಕೆಟ್ಟ ನಡಾವಳಿಗಳಿಗೆ, ಮಾತಿನಿಂದಾಗುವ ಕೆಟ್ಟ ನಡಾವಳಿಗಳಿಗೆ ಮತ್ತು ಮನಸ್ಸಿನಿಂದಾಗುವ ಕೆಟ್ಟ ನಡಾವಳಿಗಳಿಗೆ ಲಜ್ಜೆವುಳ್ಳವನಾಗುತ್ತಾನೆ. ಪಾಪದ ಅಕುಶಲ ಧರ್ಮಗಳಿಗೆ ಒಳಗಾಗುವ ಸ್ಥಿತಿಗಳಿಗೆ ಲಜ್ಜೆವುಳ್ಳವನಾಗುತ್ತಾನೆ. ಅವನು ನಿಂದೆಗೊಳಗಾಗದವನಾಗುತ್ತಾನೆ. ಶರೀರದಿಂದುಟಾಗುವ ಕೆಟ್ಟ ನಡಾವಳಿಗಳಿಂದ, ಮಾತಿನಿಂದಾಗುವ ಕೆಟ್ಟ ನಡಾವಳಿಗಳಿಂದ ಮತ್ತು ಮನಸ್ಸಿನಿಂದಾಗುವ ಕೆಟ್ಟ ನಡಾವಳಿಗಳಿಂದ ನಿಂದೆಗೊಳಗಾಗದವ ನಾಗುತ್ತಾನೆ. ಪಾಪದ ಅಕುಶಲ ಧರ್ಮಗಳಿಗೆ ಒಳಗಾಗುವ ಸ್ಥಿತಿಗಳಿಮದ ನಿಂದೆಗೊಳಗಾಗುತ್ತಾನೆ. ಪಾಪದ ಅಕುಶಲ ಧರ್ಮಗಳಿಗೆ ಒಳಗಾಗುವ ಸ್ಥಿತಿಗಳಿಮದ ನಿಂದೆಗೊಳಗಾಗುತ್ತಾನೆ. ಅವನು ಬಹಳಷ್ಟನ್ನು ಕೇಳಿ ಕಲಿತವನಾಗುತ್ತಾನೆ. ಕೇಳಿದ್ದನ್ನು ನೆನಪಿನಲ್ಲಿಟ್ಟುಕೊಳ್ಳುವವನಾಗುತ್ತಾನೆ. ಕೇಳಿದ್ದೆಲ್ಲವನ್ನೂ ಸಂಗ್ರಹಿಸಿಟ್ಟುಕೊಳ್ಳುವವನಾಗುತ್ತಾನೆ. ಯಾವ ಧರ್ಮ ವಿಷಯವು ಆರಂಭದಲ್ಲೂ ಕಲ್ಯಾಣದಾಯಕ, ಮಧ್ಯದಲ್ಲೂ ಕಲ್ಯಾಣದಾಯಕ, ಅಂತ್ಯದಲ್ಲೂ ಕಲ್ಯಾಣದಾಯಕ, ಪ್ರತಿ ಅಕ್ಷರದಲ್ಲೂ ಮತ್ತು ಅರ್ಥದಲ್ಲೂ ಸಂಪೂರ್ಣವಾಗಿ ಪರಿಪೂರ್ಣವಾದ, ಪರಿಶುದ್ಧವಾದ ಬ್ರಹ್ಮಚರ್ಯ ಜೀವನವನ್ನು ಅಭಿವೃದ್ಧಿಮಾಡುವಂತಹುದು ಮತ್ತು ಅಂತಹ ಧರ್ಮ ವಿಷಯಗಳನ್ನು ಬಹಳಷ್ಟು ಕೇಳಿ ಕಲಿತವನಾಗುತ್ತಾನೆ, ಮನನ ಮಾಡಿದವನಾಗುತ್ತಾನೆ. ಮಾತಿನಲ್ಲಿಯೂ ಪರಿಚಯಿಸಿಕೊಂಡವನು, ಮಾನಸಿಕವಾಗಿಯೂ ಗ್ರಹಿಸಿದವನು ಹಾಗೂ ಸರಿದೃಷ್ಟಿಯಿಂದಲೂ ಗ್ರಹಿಸಿದವನು ಆಗುತ್ತಾನೆ. ಅವನು ಯಾವಾಗಲೂ ಪ್ರಯತ್ನಶೀಲನಗಿ ಅಕುಶಲದ ಧರ್ಮ ವಿಷಯಗಳನ್ನು ತೊಡೆದುಹಾಕಲು ಕುಶಲದ ಧರ್ಮ ವಿಷಯಗಳನ್ನು ಗಳಿಸಿಕೊಳ್ಳಲು ಜೀವಿಸುತ್ತಾನೆ. ದೃಢತೆಯಿಂದ ನಿರಂತರ ಪುರುಷಾರ್ಥವಂತನಾಗಿ ಮುಂದುವರೆಯುತ್ತಾನೆ. ಕುಶಲಧರ್ಮ ವಿಷಯಗಳನ್ನು ಸುರಕ್ಷಿತವಾಗಿ ಉಳಿಸಿಕೊಂಡು ಅವನು ಜಾಗರೂಕನಾಗಿರುತ್ತಾನೆ. ಅತ್ಯಂತ ಉತ್ಕೃಷ್ಟವಾದ ಜಾಗರೂಕತೆ ಮತ್ತು ವಿವೇಚನೆಯನ್ನು ಹಿಂದೆಂದೋ ಮಾಡಿದ ಕೆಲಸ, ಆಡಿದ ಮಾತು, ಇವುಗಳ ಜ್ಞಾಪಕ ಮತ್ತು ನೆನೆಸಿಕೊಳ್ಳುವಿಕೆಯನ್ನು ಕೂಡ ಹೊಂದಿದವನಾಗುತ್ತಾನೆ.21 ಅವನು ಅರಿವು ಉಳ್ಳವನಾಗುತ್ತಾನೆ. ಮೂಡುವಿಕೆ ಮತ್ತು ಮರೆಯಾಗುವಿಕೆಯ ಬಗ್ಗೆ ಅರಿವನ್ನು ಹೊಂದಿದವನಾಗುತ್ತಾನೆ. ಆರ್ಯರಾದಂತಹವರು ಪಡೆದ ಒಳನೋಟದಿಂದ ದುಃಖದ ಸಂಪೂರ್ಣ ನಾಶದ ದಾರಿಯ ಬಗ್ಗೆ ಅರಿತವನಾಗುತ್ತಾನೆ.22 ಈ ರೀತಿಯಾಗಿ ಮಹಾನಾಮ, ಶ್ರೇಷ್ಠನಾದ ಶಿಷ್ಯನು ಈ ಏಳುಬಗೆಯ ಸದ್ಧರ್ಮಗಳನ್ನು ಹೊಂದಿದವನಾಗುತ್ತಾನೆ.

5. ಮಹಾನಾಮ, ಶ್ರೇಷ್ಠನಾದ ಶಿಷ್ಯನು ತನ್ನ ಇಷ್ಟದಂತೆ, ಕಷ್ಟವಿಲ್ಲದಂತೆ, ಭಾದಕವೂ ಇಲ್ಲದಂತೆ, ಅತ್ಯಂತ ಪರಿಶುದ್ಧವಾದ ಮಾನಸಿಕ ಸ್ಥಿತಿಗಳಾದ ಸಮಾಧಿಯ ನಾಲ್ಕು ನೆಲೆಗಳನ್ನು ಹೇಗೆ ಇಲ್ಲಿಯೇ, ಈಗಲೇ ಸಾಧಿಸಿ ನೆಲೆಗೊಂಡವನಾಗುತ್ತಾನೆ? ಇಲ್ಲಿ ಮಹಾನಾಮ ಶ್ರೇಷ್ಠನಾದ ಶಿಷ್ಯನು ಕಾಮವನ್ನು ದಾಟಿದವನಾಗಿ... ಪುನರುಚ್ಚರಿಸಿ... ಸಮಾಧಿಯ ಮೊದಲ ಹಂತವನ್ನು ಸಾಧಿಸಿಕೊಂಡು ನೆಲೆಗೊಳ್ಳುತ್ತಾನೆ. ವಿತರ್ಕ ವಿಚಾರಗಳನ್ನು ಉಪಶಮನಗೊಳಿಸಿ, ಆಂತರಿಕ ಸ್ಥೈರ್ಯ... ಸಮಾಧಿಯ ಎರಡನೆಯ ಹಂತವನ್ನು ಸಾಧಿಸಿಕೊಂಡು ನೆಲೆಗೊಳ್ಳುತ್ತಾನೆ. ಆನಂದವು ಮರೆಯಾಗಿ... ಸಮಾಧಿಯ ಮೂರನೆಯ ಹಂತವನ್ನು ಸಾಧಿಸಿಕೊಂಡು ನೆಲೆಗೊಳ್ಳುತ್ತಾನೆ. ಸುಖವನ್ನು ಬಿಟ್ಟವನಾಗಿ, ದುಃಖವನ್ನು ಬಿಟ್ಟವನಾಗಿ, ಹಿಂದಿನ ಮಾನಸಿಕ ಸುಮ್ಮಾನ ದುಮ್ಮಾನಗಳನ್ನು ಅಂತ್ಯಗೊಳಿಸಿದವನಾಗಿ... ಸಮಾಧಿಯ ನಾಲ್ಕನೆಯ ಹಂತವನ್ನು ಸಾಧಿಸಿಕೊಂಡು ನೆಲೆಗೊಳ್ಳುತ್ತಾನೆ. ಈ ರೀತಿಯಾಗಿ ಮಹಾನಾಮ, ಶ್ರೇಷ್ಠನಾದ ಶಿಷ್ಯನು ತನ್ನ ಇಷ್ಟದಂತೆ, ಕಷ್ಪವಿಲ್ಲದಂತೆ, ಬಾಧಕವೂ ಇಲ್ಲದಂತೆ, ಅತ್ಯಂತ ಪರಿಶುದ್ಧವಾದ ಮಾನಸಿಕ ಸ್ಥಿತಿಗಳಾದ ಸಮಾಧಿಯ ನಾಲ್ಕು ನೆಲೆಗಳನ್ನು ಇಲ್ಲಿಯೇ ಈಗಲೇ ಸಾಧಿಸಿ ನೆಲೆಗೊಂಡವನಾಗುತ್ತಾನೆ.

4. ಆರೋಗ್ಯವಂತ, ಒಡೆಯದೇ ಇರುವ ಮೊಟ್ಟೆಯ ಹಾಗೆ ಸಂಪನ್ನರಾಗಿರುವವರು

6. ಮಹಾನಾಮ, ಈ ರೀತಿಯಾಗಿ, ಶ್ರೇಷ್ಠನಾದ ಶಿಷ್ಯನು ಹೀಗೆ ಶೀಲಸಂಪನ್ನನಾಗಿರುತ್ತಾನೆ, ಹೀಗೆ ಇಂದ್ರಿಯಗಳ ಬಾಗಿಲುಗಳ ರಕ್ಷಕನಾಗಿರುತ್ತಾನೆ, ಹೀಗೆ ಆಹಾರ ಸೇವನೆಯಲ್ಲಿ ಹಿತಮಿತದವನಾಗಿರುತ್ತಾನೆ, ಹೀಗೆ ಜಾಗರೂಕತೆಯಲ್ಲಿ ಮಗ್ನನಾಗಿರುತ್ತಾನೆ. ಹೀಗೆ ಏಳು ಬಗೆಯ ಸದ್ಧರ್ಮಗಳನ್ನು ಹೊಂದಿದವನಾಗಿರುತ್ತಾನೆ, ಹೀಗೆ ತನ್ನ ಇಷ್ಟದಂತೆ, ಕಷ್ಟವಿಲ್ಲದಂತೆ, ಬಾಧಕವೂ ಇಲ್ಲದಂತೆ, ಅತ್ಯಂತ ಪರಿಶುದ್ಧವಾದ ಮಾನಸಿಕ ಸ್ಥಿತಿಗಳಾದ ಸಮಾಧಿಯ ನಾಲ್ಕು ನೆಲೆಗಳನ್ನು ಇಲ್ಲಿಯೇ, ಈಗಲೇ ಸಾಧಿಸಿ ನೆಲೆಗೊಂಡವನಾಗಿರುತ್ತಾನೆ, ಮಹಾನಾಮ ಇಂತಹ ಶ್ರೇಷ್ಠ ಶಿಷ್ಯನಿಗೆ ಸೇಖರ ಮಾರ್ಗದಲ್ಲಿರುವವನು ಎಂದು ಹೇಳಲ್ಪಡುತ್ತಾನೆ.

ಆರೋಗ್ಯವಂತ, ಒಡೆಯದೇ ಇರುವ ಮೊಟ್ಟೆಯ ಹಾಗೆ ಸಂಪನ್ನನಾಗಿರುವವನು, ಯಶಸ್ವಿಯಾಗಿ ಒಡೆದು ಹೊರಬರಲು ಸಿದ್ಧನಾಗಿರುವವನು, ಸಂಬೋಧಿಯನ್ನು ಪಡೆಯಲು ಸಿದ್ಧನಾಗಿರುವವನು, ಅತ್ಯಂತ ಶ್ರೇಯಸ್ಕರವಾದ ಯೋಗಕ್ಷೇಮವನ್ನು ಜಯಿಸಲು ಸಿದ್ಧನಾಗಿರುವವನು ಆಗುತ್ತಾನೆ. ಅದೆಂದರೆ, ಮಹಾನಾಮ, ಎಂಟು ಅಥವಾ ಹತ್ತು ಅಥವಾ ಹನ್ನೆರಡು ಕೋಳಿಮೊಟ್ಟೆಗಳಿದ್ದು, ಅವುಗಳನ್ನು ಕೋಳಿಯು ಚೆನ್ನಾಗಿ ಹೊರಬರಲು ಯೋಗ್ಯ ಮಾಡಿದ್ದೇ ಆದರೆ, ಹಾಗಾಗಿದ್ದರೆ ಆ ಕೋಳಿಯಲ್ಲಿ ಈ ರೀತಿಯ ಯೋಚನೆ ಬರುತ್ತಿರಲಿಲ್ಲ- ಓಹ್ ನನ್ನ ಕೋಳಿಮರಿಗಳು, ತಮ್ಮ ಕಾಲುಗಳ ಉಗುರಿನಿಂದಾಗಿ ಅಥವಾ ಕೊಕ್ಕಿನಿಂದಾಗಲಿ ಮೊಟ್ಟೆಯ ಹೊರಭಾಗ ಒಡೆದುಕೊಂಡು ಸೌಖ್ಯದಿಂದ ಹೊರಬರುವಂತಾಗಲಿ ಎಂದು. ಆದರೆ ಕೋಳಿಮರಿಗಳೆಂದರೆ ತಮ್ಮ ಕಾಲುಗುರಿನಿಂದ ಅಥವಾ ಕೊಕ್ಕಿನಿಂದ ಮೊಟ್ಟೆಯ ಹೊರಭಾಗ ಒಡೆದುಕೊಂಡು ಸೌಖ್ಯದಿಂದ ಹೊರಬರುವ ಬಲವುಳ್ಳಂತಹವು. ಅದೇರೀತಿಯಾಗಿ, ಮಹಾನಾಮ, ಯಾವಾಗ ಶ್ರೇಷ್ಠನಾದ ಶಿಷ್ಯನು ಹೀಗೆ ಶೀಲಸಂಪನ್ನನಾಗಿರುತ್ತಾನೆ, ಹೀಗೆ ಇಂದ್ರಿಯಗಳ ಬಾಗಿಲುಗಳ ರಕ್ಷಕನಾಗಿರುತ್ತಾನೆ. ಹೀಗೆ ಆಹಾರ ಸೇವನೆಯಲ್ಲಿ ಹಿತಮಿತದವನಾಗಿರುತ್ತಾನೆ, ಹೀಗೆ ಜಾಗರೂಕತೆಯಲ್ಲಿ ಮಗ್ನನಾಗಿರುತ್ತಾನೆ, ಹೀಗೆ ಏಳುಬಗೆಯ ಸದ್ಧರ್ಮಗಳನ್ನು ಹೊಂದಿದವನಾಗಿರುತ್ತಾನೆ. ಹೀಗೆ ತನ್ನ ಇಷ್ಟದಂತೆ, ಕಷ್ಟವಿಲ್ಲದಂತೆ, ಬಾಧಕವೂ ಇಲ್ಲದಂತೆ, ಅತ್ಯಂತ ಪರಿಶುದ್ಧವಾದ ಮಾನಸಿಕ ಸ್ಥಿತಿಗಳಾದ ಸಮಾಧಿಯ ನಾಲ್ಕು ನೆಲೆಗಳನ್ನು ಇಲ್ಲಿಯೇ ಈಗಲೇ ಸಾಧಿಸಿ ನೆಲೆಗೊಂಡವನಾಗಿರುತ್ತಾನೆ. ಮಹಾನಾಮ, ಇಂತಹ ಶ್ರೇಷ್ಠ ಶಿಷ್ಯನಿಗೆ ಸೇಖರ ಮಾರ್ಗದಲ್ಲಿರುವವನು, ಆರೋಗ್ಯವಂತ ಒಡೆಯದೇ ಇರುವ ಮೊಟ್ಟೆಯ ಹಾಗೆ ಸಂಪನ್ನನಾಗಿರುವವನು, ಯಶಸ್ವಿಯಾಗಿ ಒಡೆದು ಹೊರಬರಲು ಸಿದ್ಧನಾಗಿರುವವನು, ಸಂಬೋಧಿಯನ್ನು ಪಡೆಯಲು ಸಿದ್ಧನಾಗಿರುವವನು, ಅತ್ಯಂತ ಶ್ರೇಯಸ್ಕರವಾದ ಯೋಗಕ್ಷೇಮವನ್ನು ಜಯಿಸಲು ಸಿದ್ಧನಾಗಿರುವವನು ಎಂದು ಹೇಳಲ್ಪಡುತ್ತಾನೆ.

7. ಮಹಾನಾಮ, ಆ ಶ್ರೇಷ್ಠನಾದ ಶಿಷ್ಯನು ಇಂತಹ ಎಣೆಯಿಲ್ಲದ ಪರಿಶುದ್ಧವಾದ ಸಮಚಿತ್ತತೆ23 ಮತ್ತು ಜಾಗರೂಕತೆಯನ್ನು ಗಳಿಸಿಕೊಂಡಿದ್ದರಿಂದಾಗಿ, ಹಿಂದಿನ ಅನೇಕಾನೇಕ ಜೀವಿತಗಳನ್ನು ನೆನಪು ಮಾಡಿಕೊಳ್ಳುತ್ತಾನೆ. ಅದೆಂದರೆ: ಒಂದು ಹುಟ್ಟು, ಎರಡು ಹುಟ್ಟುಗಳು... ಪುನರುಚ್ಚರಿಸಿ... ಹೀಗೆ ಅವನು ಎಲ್ಲಾ ಬಗೆಯಲ್ಲಿ, ಸವಿವರವಾಗಿ ಹಿಂದಿನ ಅನೇಕಾನೇಕ ಜೀವಿತಗಳನ್ನು ನೆನಪು ಮಾಡಿಕೊಳ್ಳುತ್ತಾನೆ. ಇದು ಕೋಳಿಮರಿಗಳು ಕೋಳಿ ಮೊಟ್ಟೆಯನ್ನು ಒಡೆಯುವಲ್ಲಿನ ಮೊದಲ ಹಂತದ ಹಾಗಿನ ಅವನ ಒಡೆದುಬರುವಿಕೆ.

ಮಹಾನಾಮ, ಆ ಶ್ರೇಷ್ಠನಾದ ಶಿಷ್ಯನು ಇಂತಹ ಎಣೆಯಿಲ್ಲದೆ ಪರಿಶುದ್ಧವಾದ ಸಮಚಿತ್ತತೆ ಮತ್ತು ಜಾಗರೂಕತೆಯನ್ನು ಗಳಿಸಿಕೊಂಡಿದ್ದರಿಂದಾಗಿ, ದಿವ್ಯವಾದ ವಿಶುದ್ಧವಾದ ಮಾನವರಿಗಿಂತ ಮಿಗಿಲಾದ, ಕಣ್ಣುಗಳಿಂದ ಜೀವಿಗಳ ನಡೆಯನ್ನು, ಹುಟ್ಟುವಿಕೆಯನ್ನು, ಹೀನತೆಯನ್ನು, ಉನ್ನತಿಯನ್ನು, ಸುರೂಪವನ್ನು, ಕುರೂಪವನ್ನು, ಒಳ್ಳೆಯ ಗತಿಯನ್ನು, ಕೆಟ್ಟ ಗತಿಯನ್ನು, ಕರ್ಮಕ್ಕನುಸಾರವಾಗಿ ಸಾಗುವ ಜೀವಿಗಳನ್ನು ಗುರುತಿಸುತ್ತಾನೆ. ಇದು ಕೋಳಿಮರಿಗಳು ಕೋಳಿಮೊಟ್ಟೆಯನ್ನು ಒಡೆಯುವಲ್ಲಿನ ಎರಡನೆಯ ಹಂತದ ಹಾಗಿನ ಅವನ ಒಡೆದುಬರುವಿಕೆ.

ಮಹಾನಾಮ, ಆ ಶ್ರೇಷ್ಠವಾದ ಶಿಷ್ಯನು ಇಂತಹ ಎಣೆಯಿಲ್ಲದ ಪರಿಶುದ್ಧವಾದ ಸಮಚಿತ್ತತೆ ಮತ್ತು ಜಾಗರೂಕತೆಯನ್ನು ಗಳಿಸಿಕೊಂಡದ್ದರಿಂದಾಗಿ, ಆಸವಗಳನ್ನು ಕ್ಷಯಿಸಿ, ಆಸವಗಳಿಂದ ಮನಸ್ಸನ್ನು ಮುಕ್ತಿಗೊಳಿಸಿ ಕೊಂಡವನಾಗಿ, ಪ್ರಜ್ಞೆಯನ್ನು ಮುಕ್ತಿಗೊಳಿಸಿಕೊಂಡವನಾಗಿ, ಇಲ್ಲಿಯೇ ಈಗಲೇ ತನಗೆ ಪರಿಪೂರ್ಣ ಅರಿವನ್ನು ಪಡೆದುಕೊಂಡವನಾಗಿ ಉಳಿಯುತ್ತಾನೆ. ಇದು ಕೋಳಿಮರಿಗಳು ಕೋಳಿಮೊಟ್ಟೆಯನ್ನು ಒಡೆಯುವಲ್ಲಿನ ಮೂರನೆಯ ಹಂತದ ಹಾಗಿನ ಅವನ ಒಡೆದುಬರುವಿಕೆ.24

5. ಜ್ಞಾನ-ಆಚರಣೆ ಸಂಪನ್ನ

8. ಮಹಾನಾಮ, ಹೇಗೇಗೆ ಶ್ರೇಷ್ಠನಾದ ಶಿಷ್ಯನು ಶೀಲಸಂಪನ್ನನಾಗುತ್ತಾನೋ ಅದರೊಂದಿಗೆ ಆಚರಣೆಯ ಎಲ್ಲಾ (15 ಬಗೆ) ಹಂತಗಳನ್ನು ಸಾಧಿಸುತ್ತಾನೆ, ಮಹಾನಾಮ, ಹೇಗೇಗೆ ಶ್ರೇಷ್ಠನಾದ ಶಿಷ್ಯನು ಇಂದ್ರಿಗಳ ಬಾಗಿಲುಗಳ ರಕ್ಷಕನಾಗುತ್ತಾನೋ ಅದರೊಂದಿಗೆ ಆಚರಣೆಯ ಎಲ್ಲಾ (15 ಬಗೆ) ಹಂತಗಳನ್ನೂ ಸಾಧಿಸುತ್ತಾನೆ. ಮಹಾನಾಮ, ಹೇಗೇಗೇ ಶ್ರೇಷ್ಠನಾದ ಶಿಷ್ಯನು ಆಹಾರ ಸೇವನೆಯಲ್ಲಿ ಹಿತಮಿತದವನಾಗುತ್ತಾನೋ ಅದರೊಂದಿಗೆ ಆಚರಣೆಯ ಎಲ್ಲಾ (15 ಬಗೆ) ಹಂತಗಳನ್ನು ಸಾಧಿಸುತ್ತಾನೆ ಮಹಾನಾಮ, ಹೇಗೇಗೆ ಶ್ರೇಷ್ಠನಾದ ಶಿಷ್ಯನು ಜಾಗರೂಕತೆಯಲ್ಲಿ ಮಗ್ನನಾಗುತ್ತಾನೋ ಅದರೊಂದಿಗೆ ಆಚರಣೆಯ ಎಲ್ಲಾ (15 ಬಗೆ) ಹಂತಗಳನ್ನು ಸಾಧಿಸುತ್ತಾನೆ, ಮಹಾನಾಮ, ಹೇಗೇಗೆ ಶ್ರೇಷ್ಠನಾದ ಶಿಷ್ಯನು ಏಳುಬಗೆಯ ಸದ್ಧರ್ಮಗಳನ್ನು ಹೊಂದಿದವನಾಗುತ್ತಾನೋ, ಅದರೊಂದಿಗೆ ಆಚರಣೆಯ ಎಲ್ಲಾ (15 ಬಗೆ) ಹಂತಗಳನ್ನು ಸಾಧಿಸುತ್ತಾನೆ. ಮಹಾನಾಮ, ಹೇಗೇಗೆ ಶ್ರೇಷ್ಠನಾದ ಶಿಷ್ಯನು ತನ್ನ ಇಷ್ಟದಂತೆ, ಕಷ್ಟವಿಲ್ಲದಂತೆ, ಬಾಧಕವೂ ಇಲ್ಲದಂತೆ, ಅತ್ಯಂತ ಪರಿಶುದ್ಧವಾದ ಮಾನಸಿಕ ಸ್ಥಿತಿಗಳಾದ ಸಮಾಧಿಯ ನಾಲ್ಕು ನೆಲೆಗಳನ್ನು ಇಲ್ಲಿಯೇ ಈಗಲೇ, ಸಾಧಿಸಿ, ನೆಲೆಗೊಂಡವನಾಗುತ್ತಾನೋ, ಅದರೊಂದಿಗೆ ಆಚರಣೆಯ ಎಲ್ಲಾ (15 ಬಗೆ) ಹಂತಗಳನ್ನು ಸಾಧಿಸುತ್ತಾನೆ.

ಮಹಾನಾಮ, ಅದೂ ಅಲ್ಲದೆ, ಶ್ರೇಷ್ಠನಾದ ಶಿಷ್ಯನು ಹಿಂದಿನ ಅನೇಕಾನೇಕ ಜೀವಿತಗಳನ್ನು ನೆನಪುಮಾಡಿಕೊಳ್ಳುತ್ತಾನೆ. ಅದೆಂದರೆ- ಒಂದು ಹುಟ್ಟು, ಎರಡು ಹುಟ್ಟುಗಳು ಪುನರುಚ್ಚರಿಸಿ... ಹೀಗೆ ಅವನು ಎಲ್ಲಾ ಬಗೆಯಲ್ಲಿ, ಸವಿವರವಾಗಿ ಹಿಂದಿನ ಅನೇಕಾನೇಕ ಜೀವಿತಗಳನ್ನು ನೆನಪು ಮಾಡಿಕೊಳ್ಳುತ್ತಾನೆ. ಅದರೊಂದಿಗೆ ಜ್ಞಾನದ (3 ಬಗೆಯವು) ಹಂತ ಸಾಧಿಸುತ್ತಾನೆ. ಮಹಾನಾಮ, ಹೇಗೇಗೇ ಶ್ರೇಷ್ಠನಾದ ಶಿಷ್ಯನು ದಿವ್ಯವಾದ, ವಿಶುದ್ಧವಾದ ಮಾನವರಿಗಿಂತ ಮಿಗಿಲಾದ ಕಣ್ಣುಗಳಿಂದ ಜೀವಿಗಳ ನಡೆಯನ್ನು, ಹುಟ್ಟುವಿಕೆಯನ್ನು, ಹೀನತೆಯನ್ನು, ಉನ್ನತೆಯನ್ನು, ಸುರೂಪವನ್ನು, ಒಳ್ಳೆಯ ಗತಿಯನ್ನು ಕೆಟ್ಟಗತಿಯನ್ನು, ಕರ್ಮಕ್ಕನುಸಾರವಾಗಿ ಸಾಗುವ ಜೀವಿಗಳನ್ನು ಗುರುತಿಸುತ್ತಾನೆ. ಅದರೊಂದಿಗೆ ಜ್ಞಾನದ (3 ಬಗೆಯವು) ಹಂತಗಳನ್ನು ಸಾಧಿಸುತ್ತಾನೆ. ಮಹಾನಾಮ, ಹೇಗೇಗೆ ಶ್ರೇಷ್ಠನಾದ ಶಿಷ್ಯನು ಆಸವಗಳನ್ನು ಕ್ಷಯಿಸಿ, ಆಸವಗಳಿಂದ ಚಿತ್ತವನ್ನು ಮುಕ್ತಿಗೊಳಿಸಿಕೊಂಡು, ಪ್ರಜ್ಞೆಯನ್ನು ಮುಕ್ತಿಗೊಳಿಸಿಕೊಂಡು, ಇಲ್ಲಿಯೇ, ಈಗಲೇ ತನಗೆ ತಾನೇ ಪರಿಪೂರ್ಣ ಅರಿವನ್ನು ಪಡೆದುಕೊಂಡು ಉಳಿಯುತ್ತಾನೆ. ಅದರೊಂದಿಗೆ, ಜ್ಞಾನದ (3 ಬಗೆಯವು) ಹಂತಗಳನ್ನು ಸಾಧಿಸುತ್ತಾನೆ.

ಮಹಾನಾಮ, ಇಂತಹ ಶ್ರೇಷ್ಠನಾದ ಶಿಷ್ಯನಿಗೆ ಜ್ಞಾನಸಂಪನ್ನ (3 ಬಗೆಯವು) ಎಂದೂ, ಆಚರಣೆಯ ಸಂಪನ್ನ (15 ಬಗೆಯವು) ಎಂದೂ, ಜ್ಞಾನ-ಆಚರಣೆ-ಸಂಪನ್ನ ಎಂದೂ ಹೇಳಲ್ಪಡುತ್ತಾನೆ.

9. ಮಹಾನಾಮ, ಸನತ್ಕುಮಾರ ಎಂಬ ಬ್ರಹ್ಮನು ಈ ಪದ್ಯವನ್ನು ಹೇಳಿದನು:

ಗೋತ್ರಕ್ಕನುಸಾರವಾಗಿ ಜನರಲ್ಲಿ ಕ್ಷತ್ರಿಯನು ಶ್ರೇಷ್ಠನೆನಿಸಿಕೊಳ್ಳುತ್ತಾನೆ

ದೇವ ಮನುಷ್ಯರಲ್ಲಿ ಜ್ಞಾನ-ಆಚರಣೆ ಸಂಪನ್ನನು ಅತ್ಯುತ್ತಮನು ಎಂದು.

ಆಗ ಸನತ್ಕುಮಾರ ಬ್ರಹ್ಮನು ಹೇಳಿದ ಪದ್ಯವು, ಮಹಾನಾಮ, ಒಳ್ಳೆಯದಕ್ಕಾಗಿ ಹಾಡಲ್ಪಟ್ಟಿದೆ, ಕೆಟ್ಟದ್ದಕ್ಕಾಗಿ ಹಾಡಲ್ಪಡಲಿಲ್ಲ. ಒಳ್ಳೆಯದಕ್ಕಾಗಿ ಹೇಳಲ್ಪಟ್ಟಿದೆ, ಕೆಟ್ಟದ್ದಕ್ಕಾಗಿ ಹೇಳಲ್ಪಡಲಿಲ್ಲ, ಗುರಿಯನ್ನು ಗಮನದಲ್ಲಿಟ್ಟುಕೊಂಡಿದೆ, ಗುರಿಯನ್ನು ಗಮನದಲ್ಲಿಟ್ಟುಕೊಂಡಿಲ್ಲದೇ ಇಲ್ಲ ಎಂದು ಭಗವಾನರು ಇದನ್ನು ಅನುಮೋದಿಸಿರುವರು.24

ಆಗ ಭಗವಾನರು ಎದ್ದು, ಆಯುಷ್ಮಂತ ಆನಂದರಿಗೆ ಹೇಳಿದರು- ಒಳ್ಳೆಯದು, ಒಳ್ಳೆಯದು, ಆನಂದ, ಬಹಳ ಒಳ್ಳೆಯದು. ಆನಂದ ನೀನು ಕಪಿಲವಸ್ತುವಿನ ಶಾಕ್ಯರುಗಳಿಗೆ ಸೇಖರು (ಕಲಿಯಬೇಕಾದವರು) ಅನುಸರಿಸಬೇಕಾದ ಮಾರ್ಗವನ್ನು ಹೇಳಿದೆ, ಎಂದು.

ಹೀಗೆ ಆಯುಷ್ಮಂತ ಆನಂದ ಹೇಳಿದರು, ಶಾಸ್ತರು ಅದನ್ನು ಅನುಮೋದಿಸಿದರು. ಸ್ಫೂರ್ತಿಯಿಂದ ಕಪಿಲವಸ್ತುವಿನ ಶಾಕ್ಯರುಗಳು ಆಯುಷ್ಮಂತ ಆನಂದರ ನುಡಿಗಳಿಗೆ ಆನಂದಗೊಂಡರು.

ಇಲ್ಲಿಗೆ ಸೇಖ ಸುತ್ತ ಮುಗಿಯಿತು

ಟಿಪ್ಪಣಿಗಳು [4]