ಊಟಿಸುತ್ತಿದೆ

ಅನುವಾದಗಳು [29]

ಪೋತಲಿಯ ಸುತ್ತ

ಪೋತಲಿಯ ಸುತ್ತ

ಹೀಗೆ ನಾನು ಕೇಳಿದ್ದೇನೆ. ಒಂದು ಸಮಯದಲ್ಲಿ ಭಗವಾನರು ಅಂಗುತ್ತರಾಪದ ಹತ್ತಿರ ಆಪಣ ಎಂಬ ಅಂಗುತ್ತರಾಪದ ವ್ಯಾಪಾರ ಸ್ಥಳವಾದ ಪಟ್ಟಣದಲ್ಲಿ ತಂಗಿದ್ದರು. ಆಗ ಭಗವಾನರು ಬೆಳಗಿನ ಸಮಯದಲ್ಲಿ, ಹೊರಡುವ ಉಡುಪುಧರಿಸಿ, ಭಿಕ್ಷಾಪಾತ್ರೆ ಮತ್ತು ಹೊದೆಯುವ ಬಟ್ಟೆ ತೆಗೆದುಕೊಂಡು, ಆಪಣದಲ್ಲಿ ಭಿಕ್ಷೆಗಾಗಿ ಬಂದರು. ಆಪಣದಲ್ಲಿ ಭಿಕ್ಷೆ ಪಡೆದುಕೊಂಡು, ಪಡೆದ ಭಿಕ್ಷೆಯನ್ನು ಊಟ ಮಾಡಿದ ಮೇಲೆ, ಬಳಿಯಲ್ಲಿಯೇ ಇದ್ದ ಕಾಡುಪ್ರದೇಶವನ್ನು ಹಗಲಿನ ಧ್ಯಾನ ಸಮಾಧಿ ಮಾಡುವುದಕ್ಕಾಗಿ ತಲುಪಿದರು. ಆ ಕಾಡುಪ್ರದೇಶದ ಒಳನಡೆದು ಒಂದೆಡೆಯ ಮರದ ಬುಡದಲ್ಲಿ ಹಗಲಿನ ಧ್ಯಾನ ಸಮಾಧಿಗಾಗಿ ಕುಳಿತರು. ಪೋತಲಿಯ ಎಂಬ ಒಬ್ಬ ಗೃಹಸ್ಥನು, ಚರ್ಮದಂತಹದವುಗಳಿಂದ, ಕೆಳಗಿನ ಉಡುಪು ಮತ್ತು ಮೇಲು ಹೊದಿಕೆಯನ್ನು ಉಪಯೋಗಿಸುವಂತಹವನು, ಕೊಡೆಹಿಡಿದಂತಹವನು, ವಾದ ಮಾಡುವುದಕ್ಕಾಗಿ ಕಾಲುನಡೆಯಲ್ಲಿಯೇ ತಿರುಗುವಂತಹವನು, ಅಲೆದಾಡುವಂತಹವನು, ಅವನು ಕೂಡ ಈ ಕಾಡು ಪ್ರದೇಶಕ್ಕೆ ಬಂದನು. ಆ ಕಾಡು ಪ್ರದೇಶದ ಒಳನಡೆದು ಎಲ್ಲಿ ಭಗವಾನರಿದ್ದರೋ ಅಲ್ಲಿಗೆ ಬಂದನು. ಬಳಿಗೆ ಬಂದ ನಂತರ ಭಗವಾನರೊಂದಿಗೆ ಕುಶಲದ ಮಾತುಕತೆ ಆದನಂತರ ಒಂದೆಡೆ ನಿಂತ ಆ ಗೃಹಸ್ಥ ಪೋತಲಿಯನಿಗೆ ಭಗವಾನರು ಹೀಗೆ ಹೇಳಿದರು- ಗೃಹಸ್ಥನೆ, ಆಸನಗಳು ಇಲ್ಲೇ ಇವೆ, ಕುಳಿತುಕೊಳ್ಳುವುದಾದರೆ ಕುಳಿತುಕೊ ಎಂದು ಹೀಗೆ ಹೇಳಿದ ಮೇಲೆ ಗೃಹಸ್ಥ ಪೋತಲಿಯನು ನನ್ನನ್ನು ಶ್ರಮಣ ಗೌತಮರು ಗೃಹಸ್ಥ ಎಂಬುದಾಗಿ ಕರೆಯುತ್ತಾರೆ ಎಂಬುದಕ್ಕೆ ಸಿಟ್ಟುಗೊಂಡು, ಅಸಂತೋಷದಿಂದ, ಮೌನವಾಗಿದ್ದುಬಿಟ್ಟನು. ಎರಡನೆಯಬಾರಿ ಭಗವಾನರು... ಪುನರುಚ್ಚರಿಸಿ... ಮೂರನೆಯ ಬಾರಿ ಭಗವಾನರು ಗೃಹಸ್ಥ ಪೋತಲಿಯನಿಗೆ ಹೀಗೆ ಹೇಳಿದರು- ಗೃಹಸ್ಥನೆ, ಆಸನಗಳು ಇಲ್ಲೇ ಇವೆ. ಕುಳಿತುಕೊಳ್ಳುವುದಾದರೆ ಕುಳಿತುಕೊ ಎಂದು ಹೀಗೆ ಹೇಳಿದ ಮೇಲೆ, ಗೃಹಸ್ಥ ಪೋತಲಿಯನು ನನ್ನನ್ನು ಶ್ರಮಣ ಗೌತಮರು ಗೃಹಸ್ಥ ಎಂಬುದಾಗಿ ಕರೆಯುತ್ತಾರೆ ಎಂಬುದಕ್ಕೆ ಸಿಟ್ಟುಗೊಂಡು, ಅಸಂತೋಷದಿಂದಾಗಿ, ಭಗವಾನರಿಗೆ ಹೀಗೆ ಹೇಳಿದನು- ಪೂಜ್ಯ ಗೌತಮರೆ, ನೀವು ನನ್ನನ್ನು ಗೃಹಸ್ಥನೇ ಎಂಬುದಾಗಿ ಕರೆಯುವುದು ಸರಿಯಾದದಲ್ಲ, ಹಾಗೆ ಕರೆಯುವುದು ಉಚಿತವೂ ಅಲ್ಲ.

ಆದರೆ ಗೃಹಸ್ಥನೆ, ನೀನು ಗೃಹಸ್ಥನಾಗಿರುವ ಎಲ್ಲಾ ಲಕ್ಷಣ, ಚಿನ್ಹೆ, ಗುರುತುಗಳನ್ನು ಹೊಂದಿರುವೆ.

ಆದರೆ ಪೂಜ್ಯ ಗೌತಮರೆ, ನಾನು ಎಲ್ಲಾ ಜೀವನೋದ್ಯೋಗವನ್ನೂ ತ್ಯಜಿಸಿದ್ದೇನೆ. ಎಲ್ಲಾ ಜೀವನೋಪಾಯವನ್ನೂ ಬಿಟ್ಟುಬಿಟ್ಟಿದ್ದೇನೆ ಎಂದು.

ಆದರೆ ಗೃಹಸ್ಥನೆ, ನೀನು ಎಲ್ಲಾ ಜೀವನೋದ್ಯೋಗವನ್ನು ಹೇಗೆ ತ್ಯಜಿಸಿದ್ದೀಯಾ, ಎಲ್ಲಾ ಜೀವನೋಪಾಯವನ್ನು ಹೇಗೆ ಬಿಟ್ಟುಬಿಟ್ಟಿದ್ದೀಯಾ?

ಪೂಜ್ಯ ಗೌತಮರೆ, ಇದರ ವಿಷಯವಾಗಿ ಅಂದರೆ ನಾನು ನನ್ನ ಮಕ್ಕಳಿಗೆ ನನ್ನದಾದಂತಹ, ವಂಶಪರಂಪರಾಗತ ಹಣ ಅಥವಾ ಧಾನ್ಯ, ಬೆಳ್ಳಿ ಅಥವಾ ಚಿನ್ನ, ಎಲ್ಲವನ್ನೂ ಅವರಿಗೆ ಕೊಟ್ಟುಬಿಟ್ಟಿದ್ದೇನೆ, ಅವುಗಳ ಸಂಬಂಧವಾಗಿ ಹಿತನುಡಿಗಳನ್ನಾಗಲೀ ಅಥವಾ ಕಟುನುಡಿಗಳನ್ನಾಗಲೀ ಆಡದೆ, ಆದಷ್ಟು ಕಡಿಮೆಯ ಊಟ ಉಡುಪು ಬಳಸುತ್ತಾ ಜೀವಿಸುತ್ತೇನೆ. ಈ ರೀತಿಯಾಗಿ ನಾನು, ಪೂಜ್ಯ ಗೌತಮರೇ, ಎಲ್ಲಾ ಜೀವನೋದ್ಯೋಗಗಳನ್ನು ತ್ಯಜಿಸಿದ್ದೇನೆ. ಎಲ್ಲಾ ಜೀವನೋಪಾಯಗಳನ್ನು ಬಿಟ್ಟುಬಿಟ್ಟಿದ್ದೇನೆ.

ಆದರೆ ಗೃಹಸ್ಥನೆ, ನೀನು ಹೇಳುವ ಜೀವನೋಪಾಯ ತ್ಯಜಿಸಿರುವಿಕೆ ಬೇರೆ ರೀತಿಯದು ಮತ್ತು ಆರ್ಯರ ನಿಯಮಗಳ ಪ್ರಕಾರ ಜೀವನೋಪಾಯ ತ್ಯಜಿಸಿರುವಿಕೆ ಬೇರೆ ರೀತಿಯದಾಗಿರುತ್ತದೆ.

ಹಾಗಾದರೆ, ಭಂತೆ, ಆರ್ಯರ ನಿಯಮಗಳ ಪ್ರಕಾರ ಜೀವನೋಪಾಯ ತ್ಯಜಿಸುವಿಕೆ ಎನ್ನುವುದು ಏನಾಗಿರುತ್ತದೆ? ಭಂತೆ ಭಗವಾನರು, ಆರ್ಯರ ನಿಯಮಗಳ ಪ್ರಕಾರ, ಜೀವನೋಪಾಯ ತ್ಯಜಿಸುವಿಕೆ ಎನ್ನುವುದು ಏನು ಎನ್ನುವುದರ ಬಗೆಗಿನ ಧರ್ಮವಿಷಯವನ್ನು ನನಗೆ ತಿಳಿಸಿದರೆ ಬಹಳ ಒಳ್ಳೆಯದಾಗುವುದು.

ಹಾಗಾದರೆ ಗೃಹಸ್ಥನೇ, ಕೇಳು, ಚೆನ್ನಾಗಿ ಮನಸ್ಸಿನಲ್ಲಿ ಗ್ರಹಿಸು, ಹೇಳುತ್ತೇನೆ.

ಹಾಗೆ ಆಗಲಿ ಭಂತೆ ಎಂದು ಆ ಗೃಹಸ್ಥ ಪೋತಲಿಯನು ಭಗವಾನರಿಗೆ ಉತ್ತರಿಸಿದನು.

ಶ್ರೇಷ್ಠರ ನಿಯಮದ ಪ್ರಕಾರ ಜೀವನೋಪಾಯ ತ್ಯಜಿಸುವಿಕೆ

2. ಭಗವಾನರು ಹೀಗೆ ಹೇಳಿದರು- ಗೃಹಸ್ಥನೇ, ಈ ಎಂಟು ಬಗೆಯ ಧರ್ಮ ವಿಷಯಗಳು ಹೀಗೆ ಇವೆ. ಶ್ರೇಷ್ಠರ ನಿಯಮಗಳ ಪ್ರಕಾರ ಜೀವನೋಪಾಯ ತ್ಯಜಿಸುವಿಕೆ ಎನ್ನುವುದು. ಆ ಎಂಟು ಯವುವು? ಪ್ರಾಣಹತ್ಯೆ ಮಾಡದಿರುವಿಕೆ ಅನುಸರಿಸುವುದು, ಪ್ರಾಣಹತ್ಯೆ ಮಾಡುವುದನ್ನು ತೊಡೆದುಹಾಕುವುದು, ಕೊಟ್ಟಿದ್ದನ್ನು ಪಡೆಯುವುದನ್ನು ಅನುಸರಿಸುವುದು, ಕೊಡದೇ ಇದ್ದುದ್ದನ್ನು ಪಡೆಯುವುದನ್ನು ತೊಡೆದುಹಾಕುವುದು, ಸತ್ಯ ಹೇಳುವುದನ್ನು ಅನುಸರಿಸುವುದು, ಸುಳ್ಳು ಹೇಳುವುದನ್ನು ತೊಡೆದುಹಾಕುವುದು, ನಿಂದೆ ಮಾಡದಿರುವಿಕೆ ಅನುಸರಿಸುವುದು, ಚಾಡಿ ಹೇಳುವುದನ್ನು ತೊಡೆದುಹಾಕುವುದು, ಜಿಪುಣತೆ, ದುರಾಶೆ ಮಾಡಿದಿರುವಿಕೆ ಅನುಸರಿಸುವುದು, ಜಿಪುಣತೆ, ದುರಾಶೆ ಮಾಡುವುದನ್ನು ತೊಡೆದುಹಾಕುವುದು, ತಪ್ಪು ಹುಡುಕುವುದು, ಸಿಟ್ಟು ಮಾಡದಿರುವಿಕೆ ಅನುಸರಿಸುವುದು, ತಪ್ಪು ಹುಡುಕುವುದು, ಸಿಟ್ಟು ಮಾಡುವುದನ್ನು ತೊಡೆದುಹಾಕುವುದು. ಕ್ರೋಧ ಹತಾಶೆ ಮಾಡದಿರುವಿಕೆ ಅನುಸರಿಸುವುದು, ಕ್ರೋಧ ಹತಾಶೇ ಮಾಡುವುದನ್ನು ತೊಡೆದುಹಾಕುವುದು. ಇವೇ ಗೃಹಸ್ಥನೇ, ಆ ಎಂಟು ಬಗೆಯ ಧರ್ಮ ವಿಷಯಗಳು ಸಂಕ್ಷೇಪವಾಗಿ ತಿಳಿಸಲ್ಪಟ್ಟಿವೆ. ಸವಿವರವಾಗಿ ತಿಳಿಸಲ್ಪಟ್ಟಿಲ್ಲ. ಅವು ಶ್ರೇಷ್ಠರ ನಿಯಮಗಳ ಪ್ರಕಾರ ಜೀವನೋಪಾಯ ತ್ಯಜಿಸುವಿಕೆ ಎನ್ನುವುದು.

ಭಂತೆ, ಭಗವಾನರು ಈ ಎಂಟು ಬಗೆಯ ಧರ್ಮ ವಿಷಯಗಳನ್ನು ಸಂಕ್ಷೇಪವಾಗಿ ತಿಳಿಸಿದ್ದೀರಿ, ಸವಿವರವಾಗಿ ತಿಳಿಸಲಿಲ್ಲ. ಅವು ಶ್ರೇಷ್ಠರ ನಿಯಮಗಳ ಪ್ರಕಾರ ಜೀವನೋಪಾಯ ತ್ಯಜಿಸುವಿಕೆ ಎನ್ನುವುದು, ಬಹಳ ಒಳ್ಳೆಯದು. ಭಂತೆ, ನನಗೆ ಭಗವಾನರು ಈ ಎಂಟು ಬಗೆಯ ಧರ್ಮ ವಿಷಯಗಳನ್ನು ಸವಿವರವಾಗಿ ತಿಳಿಸಿ, ಕರುಣೆ ತೋರಬೇಕು.

ಹಾಗಿದ್ದರೆ ಗೃಹಸ್ಥನೇ ಕೇಳು, ಚೆನ್ನಾಗಿ ಮನಸ್ಸಿನಲ್ಲಿ ಗ್ರಹಿಸು ಹೇಳುತ್ತೇನೆ.

ಹಾಗೆ ಆಗಲಿ ಭಂತೆ ಎಂದು ಆ ಗೃಹಸ್ಥ ಪೋತಲಿಯನು ಭಗವಾನರಿಗೆ ಉತ್ತರಿಸಿದನು. ಭಗವಾನರು ಹೀಗೆ ಹೇಳಿದರು.

(1) ಪ್ರಾಣಹತ್ಯೆ ಮಾಡುವುದನ್ನು ತೊಡೆದುಹಾಕುವುದು.

3. ಪ್ರಾಣಹತ್ಯೆ ಮಾಡದಿರುವಿಕೆ ಅನುಸರಿಸುವುದು, ಪ್ರಾಣಹತ್ಯೆ ಮಾಡುವುದನ್ನು ತೊಡೆದುಹಾಕುವುದು ಎಂದು ನಾನು ಹೇಳುವುದು, ಯಾವುದರ ಸಂಬಂಧವಾಗಿ ಹೇಳಿರುವುದು? ಗೃಹಸ್ಥನೇ, ಇಲ್ಲಿ ಶ್ರೇಷ್ಠನಾದ ಶಿಷ್ಯನು ಈ ರೀತಿಯಾಗಿ ಆಲೋಚಿಸುತ್ತಾನೆ- ನಾನು ಸಂಕೋಲೆಗಳನ್ನುಂಟುಮಾಡುವ, ಕಾರಣಗಳಿಗೆ ಮೂಲವಾದ ಪ್ರಾಣಹತ್ಯೆ ಮಾಡುವವನಾಗಿರದೇ ಅವುಗಳಿಂದ ಉಂಟಾಗುವ ಸಂಕೋಲೆಗಳನ್ನು ತೊಡೆದುಹಕುವ ಮತ್ತು ತೆಗೆದುಹಾಕುವ ಮಾರ್ಗದಲ್ಲಿ ನಡೆಯುವವನಾಗಿರುತ್ತಾನೆ. ಆದರೆ ಒಂದು ವೇಳೆ, ನಾನು ಪ್ರಾಣಹತ್ಯೆ ಮಾಡುವವನಾದರೆ, ನನ್ನನ್ನೂ ಕೂಡ, ಆ ಪ್ರಾಣಹತ್ಯೆ ಮಾಡಿದ ಸಂಬಂಧವು ಹೆಣೆದುಕೊಳ್ಳುತ್ತದೆ. ಅಲ್ಲದೆ ವಿವೇಕಿಗಳು ಪರಿಶೀಲಿಸಿದ ಮೇಲೆ ಹೀಗೆ ಪ್ರಾಣಹತ್ಯೆ ಮಾಡಿದ ಸಂಬಂಧವಾಗಿ ನನ್ನನ್ನು ಹಂಗಿಸುತ್ತಾರೆ. ಸಾವಿನ ನಂತರ ಶರೀರ ಕಳೆದುಕೊಂಡ ಮೇಲೆ, ಪ್ರಾಣಹತ್ಯೆ ಮಾಡಿದ ಸಂಬಂಧವಾಗಿ ದುರ್ಗತಿಯಲ್ಲಿ ಬೀಳಬೇಕಾಗುವುದು.

ಆದ್ದರಿಂದ ಪ್ರಾಣಹತ್ಯೆ ಮಾಡುವುದು ಒಂದು ಸಂಕೋಲೆ ಮತ್ತು ಒಂದು ಬಂಧನ.26 ಪ್ರಾಣಹತ್ಯೆ ಮಾಡುವವನಿಗೆ ಅದರ ಸಂಬಂಧವಾಗಿ ಉಂಟಾಗುವ ಆ ಆಸವಗಳು ವಿಪತ್ಕಾರಿಯಾಗಿಯೂ ಮತ್ತು ವಿನಾಶಕಾರಿಯಾಗಿಯೂ ಇರುವಂತಹವು. ಆದರೆ ಪ್ರಾಣಹತ್ಯೆ ಮಾಡುವುದರಿಂದ ವಿರತನಾದವನಿಗೆ ಆಸವಗಳು, ವಿಪತ್ಕಾರಿಯಾಗಿ ಮತ್ತು ವಿನಾಶಕಾರಿಯಾಗುಳಿಯುವುದಿಲ್ಲ. ಪ್ರಾಣಹತ್ಯೆ ಮಾಡದಿರುವಿಕೆ ಅನುಸರಿಸುವುದು, ಪ್ರಾಣಹತ್ಯೆ ಮಾಡುವುದನ್ನು ತೊಡೆದುಹಾಕುವುದು ಎಂದು ಈ ರೀತಿಯಾಗಿ ನಾನು ಹೇಳುವುದು ಈ ಒಂದು ಸಂಬಂಧವಾಗಿಯೇ ಹೇಳಿರುವುದು.

(2) ಕೊಡದೆ ಇದ್ದುದನ್ನು ಪಡೆಯುವುದನ್ನು ತೊಡೆದುಹಾಕುವುದು

4. ಕೊಟ್ಟಿದ್ದನ್ನು ಪಡೆಯುವುದನ್ನು ಅನುಸರಿಸುವುದು, ಕೊಡದೇ ಇದ್ದುದನ್ನು ಪಡೆಯುವುದನ್ನು ತೊಡೆದುಹಾಕುವುದು ಎಂದು ನಾನು ಹೇಳುವುದು, ಯಾವುದರ ಸಂಬಂಧವಾಗಿ ಹೇಳಿರುವುದು? ಗೃಹಸ್ಥನೇ ಇಲ್ಲಿ ಶ್ರೇಷ್ಠನಾದ ಶಿಷ್ಯನು ಈ ರೀತಿಯಾಗಿ ಆಲೋಚಿಸುತ್ತಾನೆ- ನಾನು ಸಂಕೋಲೆಗಳನ್ನುಂಟುಮಾಡುವ ಕಾರಣಗಳಿಗೆ ಮೂಲವಾದ ಕೊಡದೇ ಇದ್ದುದನ್ನು ಪಡೆಯುವವನಾಗಿರದೇ, ಅವುಗಳಿಂದ ಉಂಟಾಗುವ ಸಂಕೋಲೆಗಳನ್ನು ತೊಡೆದುಹಾಕುವ ಮಾರ್ಗದಲ್ಲಿ ನಡೆಯುವವನಾಗಿರುತ್ತೇನೆ. ಆದರೆ ಒಂದುವೇಳೆ ನಾನು, ಕೊಡದೇ ಇದ್ದುದನ್ನು ಪಡೆಯುವವನಾದರೆ, ನನ್ನನ್ನು ಕೂಡ, ಆ ಕೊಡದೇ ಇದ್ದುದನ್ನು ಪಡೆದ ಸಂಬಂಧವು ಹಣೆದುಕೊಳ್ಳುತ್ತದೆ. ಅಲ್ಲದೆ ವಿವೇಕಿಗಳು ಪರಿಶೀಲಿಸಿದ ಮೇಲೆ ಹೀಗೆ ಕೊಡದೇ ಇದ್ದುದನ್ನು ಪಡೆದ ಸಂಬಂಧವಾಗಿ ನನ್ನನ್ನು ಹಂಗಿಸುತ್ತಾರೆ. ಸಾವಿನ ನಂತರ ಶರೀರ ಕಳೆದುಕೊಂಡ ಮೇಲೆ, ಕೊಡದೇ ಇದ್ದುದನ್ನು ಪಡೆದ ಸಂಬಂಧವಾಗಿ ದುರ್ಗತಿಯಲ್ಲಿ ಬೀಳಬೇಕಾಗುವುದು. ಆದ್ದರಿಂದ ಕೊಡದೇ ಇದ್ದುದನ್ನು ಪಡೆಯುವುದು ಒಂದು ಸಂಕೋಲೆ ಮತ್ತು ಒಂದು ಬಂಧನ ತಡೆ. ಕೊಡದೇ ಇದ್ದುದನ್ನು ಪಡೆಯುವವನಿಗೆ, ಅದರ ಸಂಬಂಧವಾಗಿ ಉಂಟಾಗುವ ಆ ಆಸವಗಳು ವಿಪತ್ಕಾರಿಯಾಗಿಯೂ ಮತ್ತು ವಿನಾಶಕಾರಿಯಾಗಿಯೂ ಇರುವಂತಹವು ಆದರೆ ಕೊಡದೇ ಇದ್ದುದನ್ನು ಪಡೆಯುವುದರಿಂದ ವಿರತನಾದವನಿಗೆ ಆಸವಗಳು ವಿಪತ್ಕಾರಿಯಾಗಿಯೂ ಮತ್ತು ವಿನಾಶಕಾರಿಯಾಗುಳಿಯುವುದಿಲ್ಲ. ಕೊಟ್ಟಿದ್ದನ್ನು ಪಡೆಯುವುದನ್ನು ಅನುಸರಿಸುವುದು, ಕೊಡದೇ ಇದ್ದುದನ್ನು ಪಡೆಯುವುದನ್ನು ತೊಡೆದುಹಾಕುವುದು ಎಂದು ಈ ರೀತಿಯಾಗಿ ನಾನು ಹೇಳುವುದು, ಈ ಒಂದು ಸಂಬಂಧವಾಗಿಯೇ ಹೇಳಿರುವುದು.

(3) ಸುಳ್ಳು ಹೇಳುವುದನ್ನು ತೊಡೆದುಹಾಕುವುದು

5. ಸತ್ಯ ಹೇಳುವುದನ್ನು ಅನುಸರಿಸುವುದು. ಸುಳ್ಳು ಹೇಳುವುದನ್ನು ತೊಡೆದುಹಾಕುವುದು ಎಂದು ನಾನು ಹೇಳುವುದು, ಯಾವುದರ ಸಂಬಂಧವಾಗಿ ಹೇಳಿರುವುದು? ಗೃಹಸ್ಥನೇ ಇಲ್ಲಿ ಶ್ರೇಷ್ಠನಾದ ಶಿಷ್ಯನು ಈ ರೀತಿಯಾಗಿ ಆಲೋಚಿಸುತ್ತಾನೆ- ನಾನು ಸಂಕೋಲೆಗಳನ್ನುಂಟುಮಾಡುವ ಕಾರಣಗಳಿಗೆ ಮೂಲವಾದ ಸುಳ್ಳು ಹೇಳುವವನಾಗಿರದೇ, ಅವುಗಳಿಂದ ಉಂಟಾಗುವ ಸಂಕೋಲೆಗಳನ್ನು ತೊಡೆದುಹಾಕುವ ಮತ್ತು ತೆಗೆದುಹಾಕುವ ಮಾರ್ಗದಲ್ಲಿ ನಡೆಯುವವನಾಗಿರುತ್ತೇನೆ. ಆದರೆ ಒಂದುವೇಳೆ, ನಾನು ಸುಳ್ಳು ಹೇಳುವವನಾದರೆ, ನನ್ನನ್ನು ಕೂಡ, ಈ ಸುಳ್ಳು ಹೇಳಿದ ಸಂಬಂಧವು ಹೆಣೆದುಕೊಳ್ಳುತ್ತದೆ. ಅಲ್ಲದೆ ವಿವೇಕಿಗಳು ಪರಿಶೀಲಿಸಿದ ಮೇಲೆ ಹೀಗೆ ಸುಳ್ಳು ಹೇಳಿದ ಸಂಬಂಧವಾಗಿ ನನ್ನನ್ನು ಹಂಗಿಸುತ್ತಾರೆ. ಸಾವಿನ ನಂತರ, ಶರೀರ ಕಳೆದುಕೊಂಡ ಮೇಲೆ, ಸುಳ್ಳು ಹೇಳಿದ ಸಂಬಂಧವಾಗಿ ದುರ್ಗತಿಯಲ್ಲಿ ಬೀಳಬೇಕಾಗುವುದು. ಆದ್ದರಿಂದ ಸುಳ್ಳು ಹೇಳುವುದು ಒಂದು ಸಂಕೋಲೆ ಮತ್ತು ಒಂದು ಬಂಧನ ತಡೆ ಸುಳ್ಳು ಹೇಳುವವನಿಗೆ ಅದರ ಸಂಬಂಧವಾಗಿ ಉಂಟಾಗುವ ಆ ಆಸವಗಳು ವಿಪತ್ಕಾರಿಯಾಗಿಯೂ ಮತ್ತು ವಿನಾಶಕಾರಿಯಾಗಿಯೂ ಇರುವಂತಹವು. ಆದರೆ ಸುಳ್ಳು ಹೇಳುವುದರಿಂದ ವಿರತನಾದವನಿಗೆ ಆಸವಗಳು ವಿಪತ್ಕಾರಿಯಾಗಿ ಮತ್ತು ವಿನಾಶಕಾರಿಯಾಗುಳಿಯುವುದಿಲ್ಲ. ಸತ್ಯ ಹೇಳುವುದನ್ನು ಅನುಸರಿಸುವುದು. ಸುಳ್ಳು ಹೇಳುವುದನ್ನು ತೊಡೆದುಹಾಕುವುದು ಎಂದು ಈ ರೀತಿಯಾಗಿ ನಾನು ಹೇಳುವುದು ಈ ಒಂದು ಸಂಬಂಧವಾಗಿಯೇ ಹೇಳಿರುವುದು.

(4) ಚಾಡಿ ಹೇಳುವುದನ್ನು ತೊಡೆದುಹಾಕುವುದು

6. ಚಾಡಿ ಹೇಳದೇ ಇರುವುದನ್ನು ಅನುಸರಿಸುವುದು, ಚಾಡಿ ಹೇಳುವುದನ್ನು ತೊಡೆದುಹಾಕುವುದು, ಎಂದು ನಾನು ಹೇಳುವುದು, ಯಾವುದರ ಸಂಬಂಧವಾಗಿ ಹೇಳಿರುವುದು? ಗೃಹಸ್ಥನೆ, ಇಲ್ಲಿ, ಉತ್ತಮವಾದ ಶಿಷ್ಯನು ಈ ರೀತಿಯಾಗಿ ಆಲೋಚಿಸುತ್ತಾನೆ- ನಾನು, ಸಂಕೋಲೆಗಳನ್ನುಂಟುಮಾಡುವ ಕಾರಣಗಳಿಗೆ ಮೂಲವಾದ ಚಾಡಿ ಹೇಳುವವನಾಗಿರದೆ, ಅವುಗಳಿಂದ ಉಂಟಾಗುವ ಸಂಕೋಲೆಗಳನ್ನು ತೊಡೆದುಹಾಕುವ ಮತ್ತು ತೆಗೆದುಹಾಕುವ ಮಾರ್ಗದಲ್ಲಿ ನಡೆಯುವವನಾಗಿರುತ್ತೇನೆ. ಆದರೆ, ಒಂದುವೇಳೆ, ನಾನು ಚಾಡಿ ಹೇಳುವವನಾದರೆ, ನನ್ನನ್ನು ಕೂಡ, ಆ ಚಾಡಿ ಹೇಳಿದ ಸಂಬಂಧವು ಹೆಣೆದುಕೊಳ್ಳುತ್ತದೆ. ಅಲ್ಲದೆ ವಿವೇಕಿಗಳು ಪರಿಶೀಲಿಸಿದ ಮೇಲೆ ಹೀಗೆ ಚಾಡಿ ಹೇಳಿದ ಸಂಬಂಧವಾಗಿ ನನ್ನನ್ನು ಹಂಗಿಸುತ್ತಾರೆ. ಸಾವಿನ ನಂತರ, ಶರೀರ ಕಳೆದುಕೊಂಡ ಮೇಲೆ ಚಾಡಿ ಹೇಳಿದ ಸಂಬಂಧವಾಗಿ ದುರ್ಗತಿಯಲ್ಲಿ ಬೀಳಬೇಕಾಗುವುದು. ಆದ್ದರಿಂದ ಚಾಡಿ ಹೇಳುವವನಿಗೆ ಅದರ ಸಂಬಂಧವಾಗಿ ಉಂಟಾಗುವ ಆಸವಗಳು ವಿಪತ್ಕಾರಿಯಾಗಿಯೂ ಮತ್ತು ವಿನಾಶಕಾರಿಯಾಗಿಯೂ ಇರುವಂತಹವು. ಆದರೆ ಚಾಡಿ ಹೇಳುವುದರಿಂದ ವಿರತನಾದವನಿಗೆ, ಆಸವಗಳು ವಿಪತ್ಕಾರಿಯಾಗಿ ಮತ್ತು ವಿನಾಶಕಾರಿಯಾಗಿ ಉಳಿಯುವುದಿಲ್ಲ. ಚಾಡಿ ಹೇಳದೇ ಇರುವುದನ್ನು ಅನುಸರಿಸುವುದು, ಚಾಡಿ ಹೇಳುವುದನ್ನು ತೊಡೆದುಹಾಕುವುದು ಎಂದು ಈ ರೀತಿಯಾಗಿ ನಾನು ಹೇಳುವುದು. ಈ ಒಂದು ಸಂಬಂಧವಾಗಿಯೇ ಹೇಳಿರುವುದು.

(5) ಜಿಪುಣತೆ, ದುರಾಶೆ ತೊಡೆದುಹಾಕುವುದು

7. ಜಿಪುಣತೆ, ದುರಾಶೆ ಮಾಡದಿರುವಿಕೆ ಅನುಸರಿಸುವುದು, ಜಿಪುಣತೆ, ದುರಾಶೆ ಮಾಡುವುದನ್ನು ತೊಡೆದುಹಾಕುವುದು ಎಂದು ನಾನು ಹೇಳುವುದು ಯಾವುದರ ಸಂಬಂಧವಾಗಿ ಹೇಳಿರುವುದು? ಗೃಹಸ್ಥನೆ, ಇಲ್ಲಿ ಉತ್ತಮನಾದ ಶಿಷ್ಯನು ಈ ರೀತಿಯಾಗಿ ಆಲೋಚಿಸುತ್ತಾನೆ- ನಾನು ಸಂಕೋಲೆಗಳನ್ನುಂಟುಮಾಡುವ ಕಾರಣಗಳಿಗೆ ಮೂಲವಾದ ಜಿಪುಣತೆ, ದುರಾಶೆ ಮಾಡುವವನಾಗಿರದೆ, ಅವುಗಳಿಂದ ಉಂಟಾಗುವ ಸಂಕೋಲೆಗಳನ್ನು ತೊಡೆದುಹಾಕುವ ಮತ್ತು ತೆಗೆದುಹಾಕುವ ಮಾರ್ಗದಲ್ಲಿ ನಡೆಯುವವನಾಗಿರುತ್ತೇನೆ. ಆದರೆ, ಒಂದುವೇಳೆ, ನಾನು ಜಿಪುಣತೆ, ದುರಾಶೆ ಮಾಡುವವನಾದರೆ, ನನ್ನನ್ನು ಕೂಡ. ಆ ಜಿಪುಣತೆ, ದುರಾಶೆ ಮಾಡಿದ ಸಂಬಂಧವು ಹೆಣೆದುಕೊಳ್ಳುತ್ತದೆ. ಅಲ್ಲದೆ ವಿವೇಕಿಗಳು ಪರಿಶೀಲಿಸಿದ ಮೇಲೆ ಹೀಗೆ ಜಿಪುಣತೆ, ದುರಾಶೆ ಮಾಡಿದ ಸಂಬಂಧವಾಗಿ ನನ್ನನ್ನು ಹಂಗಿಸುತ್ತಾರೆ. ಸಾವಿನ ನಂತರ, ಶರೀರ ಕಳೆದುಕೊಂಡ ಮೇಲೆ ಜಿಪುಣತೆ, ದುರಾಶೆ ಮಾಡಿದ ಸಂಬಂಧವಾಗಿ ದುರ್ಗತಿಯಲ್ಲಿ ಬೀಳಬೇಕಾಗುವುದು. ಆದ್ದರಿಂದ ಜಿಪುಣತೆ, ದುರಾಶೆ ಮಾಡುವವನಿಗೆ ಅದರ ಸಂಬಂಧವಾಗಿ ಉಂಟಾಗುವ ಆ ಆಸವಗಳು ವಿಪತ್ಕಾರಿಯಾಗಿಯೂ ಮತ್ತು ವಿನಾಶಕಾರಿಯಾಗಿಯೂ ಇರುವಂತಹವು. ಆದರೆ ಜಿಪುಣತೆ ದುರಾಶೆ ಮಾಡುವುದರಿಂದ ವಿರತನಾದವನಿಗೆ ಆಸವಗಳು ವಿಪತ್ಕಾರಿಯಾಗಿಯೂ ಮತ್ತು ವಿನಾಶಕಾರಿಯಾಗಿ ಉಳಿಯುವುದಿಲ್ಲ. ಜಿಪುಣತೆ, ದುರಾಶೆ ಮಾಡದಿರುವಿಕೆ ಅನುಸರಿಸುವುದು, ಜಿಪುಣತೆ, ದುರಾಶೆ ಮಾಡುವುದನ್ನು ತೊಡೆದು ಹಾಕುವುದು ಎಂದು ಈ ರೀತಿಯಾಗಿ ನಾನು ಹೇಳುವುದು, ಈ ಒಂದು ಸಂಬಂಧವಾಗಿಯೇ ಹೇಳಿರುವುದು.

(6) ತಪ್ಪು ಹುಡುಕುವುದು, ಸಿಟ್ಟು ಮಾಡುವುದನ್ನು ತೊಡೆದುಹಾಕುವುದು

8. ತಪ್ಪು ಹುಡುಕುವುದು, ಸಿಟ್ಟು ಮಾಡದಿರುವಿಕೆ ಅನುಸರಿಸುವುದು, ತಪ್ಪು ಹುಡುಕುವುದು, ಸಿಟ್ಟು ಮಾಡುವುದನ್ನು ತೊಡೆದು ಹಾಕುವುದು ಎಂದು ನಾನು ಹೇಳುವುದು, ಯಾವುದರ ಸಂಬಂಧವಾಗಿ ಹೇಳಿರುವುದು? ಗೃಹಸ್ಥನೆ, ಇಲ್ಲಿ ಉತ್ತಮನಾದ ಶಿಷ್ಯನು ಈ ರೀತಿಯಾಗಿ ಆಲೋಚಿಸುತ್ತಾನೆ- ನಾನು ಸಂಕೋಲೆಗಳನ್ನುಂಟುಮಾಡುವ ಕಾರಣಗಳಿಗೆ ಮೂಲವಾದ ತಪ್ಪು ಹುಡುಕುವುದು, ಸಿಟ್ಟು ಮಾಡುವವನು ಆಗಿರದೆ ಅವುಗಳಿಂದ ಉಂಟಾಗುವ ಸಂಕೋಲೆಗಳನ್ನು ತೊಡೆದುಹಾಕುವ ಮತ್ತು ತೆಗೆದುಹಾಕುವ ಮಾರ್ಗದಲ್ಲಿ ನಡೆಯುವವನಾಗಿರುತ್ತೇನೆ. ಆದರೆ ಒಂದುವೇಳೆ, ನಾನು ತಪ್ಪು ಹುಡುಕುವುದು, ಸಿಟ್ಟು ಮಾಡುವವನು ಆದರೆ ನನ್ನನ್ನೂ ಕೂಡ, ಆ ತಪ್ಪು ಹುಡುಕುವುದು, ಸಿಟ್ಟು ಮಾಡುವುದು, ಆದ ಆ ಸಂಬಂಧವು ಹೆಣೆದುಕೊಳ್ಳುತ್ತದೆ. ಅಲ್ಲದೆ ವಿವೇಕಿಗಳು ಪರಿಶೀಲಿಸಿದ ಮೇಲೆ ಹೀಗೆ ತಪ್ಪು ಹುಡುಕುವುದು, ಸಿಟ್ಟು ಮಾಡುವುದರ ಸಂಬಂಧವಾಗಿ ನನ್ನನ್ನು ಹಂಗಿಸುತ್ತಾರೆ. ಸಾವಿನ ನಂತರ, ಶರೀರ ಕಳೆದುಕೊಂಡ ಮೇಲೆ ತಪ್ಪು ಹುಡುಕುವುದು, ಸಿಟ್ಟು ಮಾಡುವುದು, ಇದರ ಸಂಬಂಧವಾಗಿ ದುರ್ಗತಿಯಲ್ಲಿ ಬೀಳಬೇಕಾಗುವುದು. ಆದ್ದರಿಂದ ತಪ್ಪು ಹುಡುಕುವುದು ಸಿಟ್ಟು ಮಾಡುವುದು ಒಂದು ಸಂಕೋಲೆ ಮತ್ತು ಒಂದು ಬಂಧನ ತಡೆ. ತಪ್ಪು ಹುಡುಕುವವನಿಗೆ, ಸಿಟ್ಟು ಮಾಡುವವನಿಗೆ, ಅದರ ಸಂಬಂಧವಾಗಿ ಉಂಟಾಗುವ ಈ ಆಸವಗಳು ವಿಪತ್ಕಾರಿಯಾಗಿಯೂ ಮತ್ತು ವಿನಾಶಕಾರಿಯಾಗಿಯೂ ಇರುವಂತಹವು. ಆದರೆ ತಪ್ಪು ಹುಡುಕುವುದು, ಸಿಟ್ಟು ಮಾಡುವುದು ಇದರಿಂದ ವಿರತನಾದವನಿಗೆ ಆಸವಗಳು ವಿಪತ್ಕಾರಿಯಾಗಿ ಮತ್ತು ವಿನಾಶಕಾರಿಯಾಗಿ ಉಳಿಯುವುದಿಲ್ಲ. ತಪ್ಪು ಹುಡುಕುವುದು, ಸಿಟ್ಟು ಮಾಡಿದಿರುವಿಕೆ ಅನುಸರಿಸುವುದು, ತಪ್ಪು ಹುಡುಕುವುದು, ಸಿಟ್ಟು ಮಾಡದಿರುವಿಕೆ ಅನುಸರಿಸುವುದು, ತಪ್ಪು ಹುಡುಕುವುದು, ಸಿಟ್ಟು ಮಾಡುವುದನ್ನು ತೊಡೆದು ಹಾಕುವುದು ಎಂದು ಈ ರೀತಿಯಾಗಿ ನಾನು ಹೇಳುವುದು, ಈ ಒಂದು ಸಂಬಂಧವಾಗಿಯೇ ಹೇಳಿರುವುದು.

(7) ಕ್ರೋಧ ಹತಾಶೆ ತೊಡೆದು ಹಾಕುವುದು

9. ಕ್ರೋಧ ಹತಾಶೆ ಮಾಡದಿರುವಿಕೆ ಅನುಸರಿಸುವುದು ಕ್ರೋಧ ಹತಾಶೆ ಮಾಡುವಿಕೆಯನ್ನು ತೊಡೆದು ಹಾಕುವುದು ಎಂದು ನಾನು ಹೇಳುವುದು ಯಾವುದರ ಸಂಬಂಧವಾಗಿ ಹೇಳಿರುವುದು? ಗೃಹಸ್ಥನೆ, ಇಲ್ಲಿ ಉತ್ತಮವಾದ ಶಿಷ್ಯನು ಈ ರೀತಿಯಾಗಿ ಆಲೋಚಿಸುತ್ತಾನೆ- ನಾನು ಸಂಕೋಲೆಗಳನ್ನುಂಟುಮಾಡುವ ಕಾರಣಗಳಿಗೆ ಮೂಲವಾದ ಕ್ರೋಧ ಹತಾಶೆ ಮಾಡುವವನು ಆಗಿರದೆ, ಅವುಗಳಿಂದ ಉಂಟಾಗುವ ಸಂಕೋಲೆಗಳನ್ನು ತೊಡೆದುಹಾಕುವ ಮತ್ತು ತೆಗೆದುಹಾಕುವ ಮಾರ್ಗದಲ್ಲಿ ನಡೆಯುವವನಾಗಿರುತ್ತೇನೆ. ಆದರೆ, ಒಂದುವೇಳೆ, ನಾನು ಕ್ರೋಧ, ಹತಾಶೆ ಮಾಡುವವನಾದರೆ, ನನ್ನನ್ನೂ ಕೂಡ ಆ ಕ್ರೋಧ ಹತಾಶೆ ಮಾಡಿದ ಸಂಬಂಧವು ಹೆಣೆದುಕೊಳ್ಳುತ್ತದೆ. ಅಲ್ಲದೆ, ವಿವೇಕಿಗಳು ಪರಿಶೀಲಿಸಿದ ಮೇಲೆ ಹೀಗೆ ಕ್ರೋಧ ಹತಾಶೆ ಮಾಡಿದ ಸಂಬಂಧವಾಗಿ ನನ್ನನ್ನು ಹಂಗಿಸುತ್ತಾರೆ. ಸಾವಿನ ನಂತರ, ಶರೀರ ಕಳೆದುಕೊಂಡ ಮೇಲೆ ಕ್ರೋಧ ಹತಾಶೆ ಮಾಡಿದ ಸಂಬಂಧವಾಗಿ ದುರ್ಗತಿಯಲ್ಲಿ ಬೀಳಬೇಕಾಗುವುದು. ಆದ್ದರಿಂದ ಕ್ರೋಧ ಹತಾಶೆ ಒಂದು ಸಂಕೋಲೆ ಮತ್ತು ಒಂದು ಬಂಧನ ತಡೆ. ಕ್ರೋಧ, ಹತಾಶೆ ಒಂದು ಸಂಕೋಲೆ ಮತ್ತು ಒಂದು ಬಂಧನ ತಡೆ. ಕ್ರೋಧ, ಹತಾಶೆ ಮಾಡುವವನಿಗೆ ಅದರ ಸಂಬಂಧವಾಗಿ ಉಂಟಾಗುವ ಆ ಆಸವಗಳು ವಿಪತ್ಕಾರಿಯಾಗಿಯೂ ಮತ್ತು ವಿನಾಶಕಾರಿಯಾಗಿಯೂ ಇರುವಂತಹವು. ಆದರೆ ಕ್ರೋಧ ಹತಾಶೆ ಮಾಡುವುದರಿಂದ ವಿರತನಾದವನಿಗೆ ಆಸವಗಳು ವಿಪತ್ಕಾರಿಯಾಗಿ ಮತ್ತು ವಿನಾಶಕಾರಿಯಾಗಿ ಉಳಿಯುವುದಿಲ್ಲ. ಕ್ರೋಧ ಹತಾಶೆ ಮಾಡದಿರುವಿಕೆ ಅನುಸರಿಸುವುದು, ಕ್ರೋಧ ಹತಾಶೆ ಮಾಡುವಿಕೆಯನ್ನು ತೊಡೆದು ಹಾಕುವುದು ಎಂದು ಈ ರೀತಿಯಾಗಿ ಹೇಳಿರುವುದು.

(8) ಅಹಂಕಾರ ತೊಡೆದುಹಾಕುವುದು

10. ಅಹಂಕಾರ ಮಾಡದಿರುವಿಕೆ ಅನುಸರಿಸುವುದು, ಅಹಂಕಾರ ಮಾಡುವುದನ್ನು ತೊಡೆದುಹಾಕುವುದು- ಎಂದು ನಾನು ಹೇಳುವುದು, ಯಾವುದರ ಸಂಬಂಧವಾಗಿ ಹೇಳಿರುವುದು. ಗೃಹಸ್ಥನೆ, ಇಲ್ಲಿ, ಉತ್ತಮನಾದ ಶಿಷ್ಯನು ಈ ರೀತಿಯಾಗಿ ಆಲೋಚಿಸುತ್ತಾನೆ- ನಾನು ಸಂಕೋಲೆಗಳನ್ನುಂಟುಮಾಡುವ ಕಾರಣಗಳಿಗೆ ಮೂಲವಾದ ಅಹಂಕಾರ ಮಾಡುವವನು ಆಗಿರದೆ ಅವುಗಳಿಂದ ಉಂಟಾಗುವ ಸಂಕೋಲೆಗಳನ್ನು ತೊಡೆದುಹಾಕುವ ಮತ್ತು ತೆಗೆದುಹಾಕುವ ಮಾರ್ಗದಲ್ಲಿ ನಡೆಯುವವನಾಗಿರುತ್ತೇನೆ. ಆದರೆ ಒಂದುವೇಳೆ ನಾನು ಅಹಂಕಾರ ಮಾಡುವವನಾದರೆ, ನನ್ನನ್ನು ಕೂಡ ಆ ಅಹಂಕಾರ ಮಾಡಿದ ಸಂಬಂಧವು ಹೆಣೆದುಕೊಳ್ಳುತ್ತದೆ. ಅಲ್ಲದೆ ವಿವೇಕಿಗಳು ಪರಿಶೀಲಿಸಿದ ಮೆಲೆ ಹೀಗೆ ಅಹಂಕಾರ ಮಾಡಿದ ಸಂಬಂಧವಾಗಿ ನನ್ನನ್ನು ಹಂಗಿಸುತ್ತಾರೆ. ಸಾವಿನ ನಂತರ ಶರೀರ ಕಳೆದುಕೊಂಡ ಮೇಲೆ ಅಹಂಕಾರ ಮಾಡಿದ ಸಂಬಂಧವಾಗಿ ದುರ್ಗತಿಯಲ್ಲಿ ಬೀಳಬೇಕಾಗುವುದು. ಆದ್ದರಿಂದ ಅಹಂಕಾರ ಒಂದು ಸಂಕೋಲೆ ಮತ್ತು ಒಂದು ಬಂಧನ ತಡೆ. ಅಹಂಕಾರ ಮಾಡುವವನಿಗೆ ಅದರ ಸಂಬಂಧವಾಗಿ ಉಂಟಾಗುವ ಆ ಆಸವಗಳು ವಿಪತ್ಕಾರಿಯಾಗಿಯೂ ಮತ್ತು ವಿನಾಶಕಾರಿಯಾಗಿಯೂ ಇರುವಂತಹವು. ಆದರೆ ಅಹಂಕಾರ ಮಾಡುವುದರಿಂದ ವಿರತನಾದವನಿಗೆ ಆಸವಗಳು ವಿಪತ್ಕಾರಿಯಾಗಿ ಮತ್ತು ವಿನಾಶಕಾರಿಯಾಗಿ ಉಳಿಯುವುದಿಲ್ಲ. ಅಹಂಕಾರ ಮಾಡದಿರುವಿಕೆ ಅನುಸರಿಸುವುದು, ಅಹಂಕಾರ ಮಾಡುವುದನ್ನು ತೊಡೆದುಹಾಕುವುದು ಎಂದು ಈ ರೀತಿಯಾಗಿ ನಾನು ಹೇಳುವುದು27 ಈ ಒಂದು ಸಂಬಂಧವಾಗಿಯೇ ಹೇಳಿರುವುದು.

11. ಗೃಹಸ್ಥನೇ, ಇವುಗಳೇ ಆ ಎಂಟು ಬಗೆಯ ಧರ್ಮ ವಿಷಯಗಳು. ಸಂಕ್ಷೇಪವಾಗಿಯೂ ತಿಳಿಸಿರುವೆನು. ಸವಿವರವಾಗಿಯೂ ತಿಳಿಸಿರುವೆನು. ಇವು ಶ್ರೇಷ್ಠರ ನಿಯಮಗಳ ಪ್ರಕಾರ ಜೀವನೋಪಾಯ ತ್ಯಜಿಸುವಿಕೆ ಎಂದು ಕರೆಯಲ್ಪಡುವುದು; ಹಾಗಾದರೂ ಸಹ ಶ್ರೇಷ್ಠರ ನಿಯಮಗಳ ಪ್ರಕಾರ ಎಲ್ಲದರ ಎಲ್ಲವೂ ಎಲ್ಲದರ ಎಲ್ಲ ರೀತಿಯಲ್ಲಿಯೂ ಜೀವನೋಪಾಯ ತ್ಯಜಿಸುವಿಕೆ ಎಂಬುದು ಆಗಬರುವುದಿಲ್ಲ ಎಂದು.

3. ಎಲ್ಲದರ ಎಲ್ಲವೂ ಕೂಡಿ ಜೀವನೋಪಾಯ ತ್ಯಜಿಸುವಿಕೆ

12. ಹಾಗಾದರೆ ಭಂತೇ, ಶ್ರೇಷ್ಠರ ನಿಯಮಗಳ ಪ್ರಕಾರ ಎಲ್ಲದರ ಎಲ್ಲವೂ, ಎಲ್ಲದರ ಎಲ್ಲ ರೀತಿಯಲ್ಲಿಯೂ ಜೀವನೋಪಾಯ ತ್ಯಜಿಸುವಿಕೆ ಎಂಬುದು ಆಗಬರುವುದು ಹೇಗೆ? ಒಳ್ಳೆಯದು, ಭಂತೇ, ಭಗವಾನರು ನನಗೆ ಆ ಧರ್ಮ ವಿಷಯವನ್ನು ತಿಳಿಸುವಂಥವರಾಗಲಿ, ಯಾವುದು ಶ್ರೇಷ್ಠರ ನಿಯಮಗಳ ಪ್ರಕಾರ ಎಲ್ಲದರ ಎಲ್ಲವೂ, ಎಲ್ಲದರ ಎಲ್ಲ ರೀತಿಯಲ್ಲಿಯೂ ಜೀವನೋಪಾಯ ತ್ಯಜಿಸುವಿಕೆ ಎಂಬುದು ಆಗ ಬರುವುದು ಎಂದು.

ಹಾಗಿದ್ದರೆ ಗೃಹಸ್ಥನೇ, ಕೇಳು. ಚೆನ್ನಾಗಿ ಮನಸ್ಸಿನಲ್ಲಿ ಗ್ರಹಿಸು, ಹೇಳುತ್ತೇನೆ ಎಂದು. ಹಾಗೆ ಆಗಲಿ ಭಂತೆ ಎಂದು ಆ ಗೃಹಸ್ಥ ಪೋತಲಿಯನು ಭಗವಾನರಿಗೆ ಉತ್ತರಿಸಿದನು. ಭಗವಾನರು ಹೀಗೆ ಹೇಳಿದರು-

ಎಲುಬಿನ ಹಂದರದ ಉದಾಹರಣೆಯ ಹಾಗೆ ಆಸೆ

ಹೇಗೆಂದರೆ ಗೃಹಸ್ಥನೇ, ಒಂದು ನಾಯಿಯು, ಹಸಿವು ಮತ್ತು ಬಳಲಿಕೆಯಿಂದ ಕೂಡಿರುವಂತಹದು, ದನಗಳನ್ನು ಕಡಿಯುವ ಕಸಾಯಿಖಾನೆಯ ಬಳಿ ಇದೆ.28 ಆಗ, ದಕ್ಷನಾದ ದನ ಕಸಾಯಿ ಅಥವಾ ಆ ದನ ಕಸಾಯಿ ಸಹಾಯಕ ಶಿಷ್ಯ ಒಂದು ಹೆರೆದಿರುವ, ಚೆನ್ನಾಗಿ ಕೆರೆದಿರುವ, ಏನೂ ಮಾಂಸವಿರದಿರುವ, ಆದರೆ ಕೇವಲ ರಕ್ತ ಸವೆರಿರುವ, ಒಂದು ಎಲುಬನ್ನು ಅದರ ಮುಂದೆ ಎಸೆಯುತ್ತಾನೆ. ಗೃಹಸ್ಥನೇ ಇದರ ಬಗ್ಗೆ ಹೇಗೆ ಯೋಚಿಸುತ್ತೀಯಾ? ಆ ನಾಯಿಯು ಅಂತಹ, ಹೆರೆದಿರುವ, ಚೆನ್ನಾಗಿ ಕೆರೆದಿರುವ, ಏನೂ ಮಾಂಸವಿರದಿರುವ ಆದರೆ ಕೇವಲ ರಕ್ತ ಸವೆರಿರುವ ಎಲುಬಿನ ತುಂಡಿನಿಂದ ತನ್ನ ಹಸಿವು ಮತ್ತು ಬಳಲಿಕೆಯನ್ನು ಹೋಗಲಾಡಿಸಿಕೊಳ್ಳಬಹುದೇ? ಎಂದು

ಆಗುವುದಿಲ್ಲ ಭಂತೆ.

ಅದಕ್ಕೆ ಕಾರಣವೇನು?

ಭಂತೆ, ಏಕೆಂದರೆ ಆ ಎಲುಬಿನ ತುಂಡನ್ನು ಹೆರೆದಿದ್ದಾರೆ, ಚೆನ್ನಾಗಿ ಕೆರೆದಿದ್ದಾರೆ, ಅದರಲ್ಲಿ ಏನೂ ಮಾಂಸವಿಲ್ಲ ಮತ್ತು ಕೇವಲ ರಕ್ತವನ್ನು ಸವೆರಿದ್ದಾರೆ. ಅದರಿಂದಾಗಿ ಏನೂ ಸಿಗದೆ, ನಾಯಿಯು ಮತ್ತಷ್ಟು ಆಯಾಸವನ್ನು ನಿತ್ರಾಣವನ್ನು ಪಡೆಯಲು ಸಾಧ್ಯ.

ಇದೇರೀತಿಯಾಗಿ, ಗೃಹಸ್ಥನೇ, ಉತ್ತಮನಾದ ಶಿಷ್ಯನು ಹೀಗೆ ಆಲೋಚಿಸುತ್ತಾನೆ- ಈ ಎಲುಬಿನ ಹಂದರದ ಉದಾಹರಣೆಯ ಹಾಗೆಯೇ ಈ ಆಸೆಯು. ಅದೆಂದರೆ ಬಹಳ ದುಃಖ ತರುವಂಥಾದ್ದು, ಬಹಳ ಸಂಕಟ ತರುವಂಥಾದ್ದು ಮತ್ತು ಅದರಲ್ಲಿಯೇ ಅಪಾಯ ಅಡಗಿದೆ ಎಂಬುದಾಗಿ ಭಗವಾನರಿಂದ ಹೇಳಲ್ಪಟ್ಟಿದೆ ಎಂದು. ಈ ರೀತಿಯಾಗಿ, ಯಥಾರ್ಥವಾಗಿ ಸಮ್ಯಕ್ ಅರಿವಿನಿಂದ ಕಂಡುಕೊಂಡು, ಯಾವು ಯಾವುದು ಬಹುರೂಪವುಳ್ಳದ್ದು, (ಐದು ಇಂದ್ರಿಯ ರೂಪವಾಗಿ ಅದನ್ನು ಬಹುರೂಪಿ ಎಂದು ಉಪೇಕ್ಖಾದಿಂದ ತಿಳಿದು ಅದನ್ನು ದೂರವಿಡಬೇಕು. ಯಾವು ಯಾವುದು ಏಕರೂಪ (ಸಮಾಧಿಯ ನಾಲ್ಕು ಹಂತಗಳು) ವಾಗಿರುವುದೋ ಅದನ್ನು ಏಕರೂಪಿ ಎಂದು ಉಪೇಕ್ಖಾದಿಂದ ತಿಳಿದು,29 ಆ ಎಲ್ಲವು ಲೋಕದಲ್ಲಿನ ಹಿಡಿತಗಳೂ ಎಂದರಿತು ಉಪೇಕ್ಖಾ ವಿಕಾಸದಿಂದ ಅವುಗಳೆಲ್ಲವನ್ನು ಸಂಪೂರ್ಣವಾಗಿ ಪರಿಹರಿಸುತ್ತಾನೆ.

ಮಾಂಸ ಮುದ್ದೆ ಉದಾಹರಣೆಯ ಹಾಗೆ ಆಸೆ

13. ಹೇಗೆಂದರೆ, ಗೃಹಸ್ಥನೇ, ಒಂದು ಹದ್ದು ಅಥವಾ ಗಿಡುಗ ಅಥವಾ ಡೇಗೆಯು ಮಾಂಸದ ಮುದ್ದೆಯನ್ನು ತೆಗೆದುಕೊಂಡು ಮೇಲೆ ಹಾರಿತು. ಅದನ್ನು ಬೇರೆಯ ಹದ್ದುಗಳು ಅಥವಾ ಗಿಡುಗಗಳು ಅಥವಾ ಡೇಗೆಗಳು ಹಿಂಬಾಲಿಸಿ ಹಿಂಬಾಲಿಸಿ ಹರಿಹರಿದು ಹಾಕುತ್ತವೆ, ಚೂರು ಚೂರು ಮಾಡಿ ಹಾಕುತ್ತವೆ. ಗೃಹಸ್ಥನೇ, ಇದರ ಬಗ್ಗೆ ಹೇಗೆ ಯೋಚಿಸುತ್ತೀಯಾ, ಆಗ ಆ ಹದ್ದು ಅಥವಾ ಗಿಡುಗ ಅಥವಾ ಡೇಗೆಯು ಮಾಂಸದ ಮುದ್ದೆಯನ್ನು ತತ್ಕ್ಷಣವೇ ಬಿಸಾಡದಿದ್ದರೆ, ಅದು ಆ ಕಾರಣದಿಂದಾಗಿ ಸಾಯುತ್ತದೆ ಅಥವಾ ಮರಣ ಸಮಾನವಾದ ನೋವನ್ನು ಅನುಭವಿಸಬೇಕಾಗಬಹುದು ಅಲ್ಲವೇ.

ಹೌದು, ಭಂತೆ.

ಇದೇರೀತಿಯಾಗಿ ಗೃಹಸ್ಥನೆ, ಉತ್ತಮನಾದ ಶಿಷ್ಯನು ಹೀಗೆ ಆಲೋಚಿಸುತ್ತಾನೆ- ಈ ಮಾಂಸದ ಮುದ್ದೆಯ ಉದಾಹರಣೆಯ ಹಾಗೆಯೇ ಈ ಆಸೆಯು. ಅದೆಂದರೆ ಬಹಳ ದುಃಖ ತರುವಂಥಾದ್ದು, ಬಹಳ ಸಂಕಟ ತರುವಂಥಾದ್ದು, ಮತ್ತು ಅದರಲ್ಲಿಯೇ ಅಪಾಯ ಅಡಗಿದೆ ಎಂಬುದಾಗಿ ಭಗವಾನರಿಂದ ಹೇಳಲ್ಪಟ್ಟಿದೆ ಎಂದು. ಈ ರೀತಿಯಾಗಿ ಯಥಾರ್ಥವಾಗಿ ಸಮ್ಯಕ್ ಅರಿವಿನಿಂದ ಕಂಡುಕೊಂಡು ಯಾವು ಯಾವುದು ಬಹುರೂಪವುಳ್ಳದ್ದು (ಐದು ಇಂದ್ರಿಯ ರೂಪವಾಗಿ) ಅದನ್ನು ಬಹುರೂಪಿ ಎಂದು ಉಪೇಕ್ಖಾದಿಂದ ತಿಳಿದು ಅದನ್ನು ದೂರವಿಡಬೇಕು. ಯಾವು ಯಾವುದು ಏಕರೂಪ (ಸಮಾಧಿಯ ನಾಲ್ಕು ಹಂತಗಳು) ವಾಗಿರುವುದೋ ಅದನ್ನು ಏಕರೂಪಿ ಎಂದು ಉಪೇಕ್ಖಾದಿಂದ ತಿಳಿದು ಆ ಎಲ್ಲವೂ ಲೋಕದಲ್ಲಿನ ಹಿಡಿತಗಳೂ ಎಂದರಿತು, ಉಪೇಕ್ಖಾ ವಿಕಾಸದಿಂದ ಅವುಗಳೆಲ್ಲವನ್ನೂ ಸಂಪೂರ್ಣವಾಗಿ ಪರಿಹರಿಸುತ್ತಾನೆ.

ಹುಲ್ಲಿನ ಪಂಜಿನ ಉದಾಹರಣೆಯ ಹಾಗೆ ಆಸೆ

14. ಹೇಗೆಂದರೆ, ಗೃಹಸ್ಥನೆ, ಒಬ್ಬ ಮನುಷ್ಯನು ಉರಿಯುತ್ತಿರುವ ಹುಲ್ಲಿನ ಪಂಜನ್ನು ಹಿಡಿದು ಗಾಳಿಗೆ ಎದುರಾಗಿ ಹೋಗುತ್ತಾನೆ, ಇದರ ಬಗ್ಗೆ ಹೇಗೆ ಯೋಚಿಸುತ್ತೀಯಾ, ಗೃಹಸ್ಥನೇ ಆಗ ಆ ಮನುಷ್ಯನು, ಆ ಉರಿಯುತ್ತಿರುವ ಹುಲ್ಲಿನ ಪಂಜನ್ನು ತಕ್ಷಣವೇ ಬಿಸಾಡದಿದ್ದರೆ, ಅದು ಆ ಉರಿಯುತ್ತಿರುವ ಹುಲ್ಲಿನ ಪಂಜು ಕೈಯನ್ನು ಸುಡಬಹುದು ಅಥವಾ ತೋಳನ್ನು ಸುಡಬಹುದು, ಅಥವಾ ಬೇರೆ ಬೇರೆ ಅಂಗಗಳನ್ನು ಭಾಗಗಳನ್ನು ಸುಡಬಹುದು. ಅವನು ಆ ಕಾರಣದಿಂದಾಗಿ ಸಾಯುತ್ತಾನೆ ಮರಣ ಅಥವಾ ಸಮಾನವಾದ ನೋವನ್ನು ಅನುಭವಿಸಬೇಕಾಗಬಹದು ಅಲ್ಲವೆ?

ಹೌದು ಭಂತೆ.

ಇದೇರೀತಿಯಾಗಿ ಗೃಹಸ್ಥನೇ, ಉತ್ತಮನಾದ ಶಿಷ್ಯನು ಹೀಗೆ ಆಲೋಚಿಸುತ್ತಾನೆ- ಈ ಹುಲ್ಲಿನ ಪಂಜಿನ ಉದಾಹರಣೆಯ ಹಾಗೆಯೇ ಈ ಆಸೆಯು, ಅದೆಂದರೆ ಬಹಳ ದುಃಖ ತರುವಂಥಾದ್ದು, ಬಹಳ ಸಂಕಟ ತರುವಂಥಾದ್ದು ಮತ್ತು ಅದರಲ್ಲಿಯೇ ಅಪಾಯ ಅಡಗಿದೆ ಎಂಬುದಾಗಿ ಭಗವಾನರಿಂದ ಹೇಳಲ್ಪಟ್ಟಿದೆ ಎಂದು. ಈ ರೀತಿಯಾಗಿ ಯಥಾರ್ಥವಾಗಿ ಸಮ್ಯಕ್ ಅರಿವಿನಿಂದ ಕಂಡುಕೊಂಡು... ಪುನರುಚ್ಚರಿಸಿ... ಉಪೇಕ್ಖಾ ವಿಕಾಸದಿಂದ ಅವುಗಳೆಲ್ಲವನ್ನೂ ಸಂಪೂರ್ಣವಾಗಿ ಪರಿಹರಿಸುತ್ತಾನೆ.

ಕೆಂಡದ ಉದಾಹರಣೆಯ ಹಾಗೆ ಆಸೆ

15. ಹೇಗೆಂದರೆ, ಗೃಹಸ್ಥನೆ, ಒಂದು ಕೆಂಡದ ಗುಂಡಿಯಿದ್ದು, ಅದು ಒಂದು ಆಳೆತ್ತರಕ್ಕಿಂತಲೂ ಜಾಸ್ತಿಯಿದ್ದು ಅದರ ತುಂಬಾ ಉರಿಯಿಂದ ಹೊಗೆಯಿರದ ಕೆಂಡದಿಂದ ತುಂಬಿದೆ. ಅಲ್ಲಿಗೆ ಒಬ್ಬ ಜೀವಿಸಬೇಕೆಂದು, ಆಸೆಯಿರುವ ಸಾಯಲು ಆಸೆಯಿರದಿರುವ ಸುಖವನ್ನು ಬಯಸುವ ಮತ್ತು ದುಃಖದಿಂದ ಮುದುಡಿಹೋಗುವಂತಹ ಮನುಷ್ಯನು ಬರಬಹುದು. ಅವನನ್ನು ಇಬ್ಬರು ಬಲಶಾಲಿಗಳಾದ ಮನುಷ್ಯರು, ಎರಡು ತೋಳುಗಳನ್ನು ಹಿಡಿದುಕೊಂಡು, ಆ ಕೆಂಡದಿಂದ ತುಂಬಿದ ಗುಂಡಿಗೆ ಎಳೆದೊಯ್ಯಬಹುದು. ಇದರ ಬಗ್ಗೆ ಹೇಗೆ ಯೋಚಿಸುತ್ತೀಯಾ, ಗೃಹಸ್ಥನೇ, ಆ ಮನುಷ್ಯನು ತನ್ನ ಶರೀರವನ್ನು ಹಾಗೆ ಹೀಗೆ ತಿರುಗಿಸಬಹುದಲ್ಲವೆ? ಎಂದು.

ಹೌದು ಭಂತೆ.

ಅದಕ್ಕೆ ಕಾರಣ ಏನು?

ಭಂತೆ, ಆ ಮನುಷ್ಯನು ಹೀಗೆ ಅರಿತಿರುತ್ತಾನೆ, ಒಂದುವೇಳೆ ನಾನು ಈ ಕೆಂಡದ ಗುಂಡಿಗೆ ಬಿದ್ದೆನಾದರೆ ಆ ಕಾರಣದಿಂದಾಗಿ ಮರಣವು ಅಥವಾ ಮರಣ ಸಮಾನವಾದ ದುಃಖವನ್ನು ನಾನು ಅನುಭವಿಸಬೇಕಾಗಬಹುದು.

ಇದೇರೀತಿಯಾಗಿ ಗೃಹಸ್ಥನೇ, ಉತ್ತಮನಾದ ಶಿಷ್ಯನು ಹೀಗೆ ಆಲೋಚಿಸುತ್ತಾನೆ- ಈ ಕೆಂಡದ ಗುಂಡಿಯ ಉದಾಹರಣೆಯ ಹಾಗೆಯೇ ಈ ಆಸೆಯು. ಅದೆಂದರೆ ಬಹಳ ದುಃಖ ತರುವಂಥಾದ್ದು, ಬಹಳ ಸಂಕಟ ತರುವಂಥಾದ್ದು ಮತ್ತು ಅದರಲ್ಲಿಯೇ ಅಪಾಯ ಅಡಗಿದೆ ಎಂಬುದಾಗಿ ಭಗವಾನರಿಂದ ಹೇಳಲ್ಪಟ್ಟಿದೆ ಎಂದು. ಈ ರೀತಿಯಾಗಿ ಯಥಾರ್ಥವಾಗಿ ಸಮ್ಯಕ್ ಅರಿವಿನಿಂದ ಕಂಡುಕೊಂಡು ಪುನರುಚ್ಚರಿಸಿ... ಉಪೇಕ್ಖಾ ವಿಕಾಸದಿಂದ ಅವುಗಳೆಲ್ಲವನ್ನೂ ಸಂಪೂರ್ಣವಾಗಿ ಪರಿಹರಿಸುತ್ತಾನೆ.

ಕನಸಿನ ಉದಾಹರಣೆಯ ಹಾಗೆ ಆಸೆ

16. ಹೇಗೆಂದರೆ, ಗೃಹಸ್ಥನೆ, ಒಬ್ಬ ಮನುಷ್ಯನು ಕನಸಿನಲ್ಲಿ ರಮ್ಯವಾದ ಉದ್ಯಾನಗಳನ್ನು, ರಮ್ಯವಾದ ವನಗಳನ್ನು, ರಮ್ಯವಾದ ಭೂಪ್ರದೇಶವನ್ನು, ರಮ್ಯವಾದ ಕೊಳಗಳನ್ನು ಕಾಣಬಹುದು. ಆದರೆ ಅವನು ಎಚ್ಚರಗೊಂಡಾಗ ಏನನ್ನೂ ಕಾಣಲಾಗುವುದಿಲ್ಲ. ಇದೇರೀತಿಯಾಗಿ, ಗೃಹಸ್ಥನೆ, ಉತ್ತಮನಾದ ಶಿಷ್ಯನು ಹೀಗೆ ಆಲೋಚಿಸುತ್ತಾನೆ- ಈ ಕನಸಿನ ಉದಾಹರಣೆಯ ಹಾಗೆಯೇ ಈ ಆಸೆಯು ಅಂದರೆ ಬಹಳ ದುಃಖ ತರುವಂಥಾದ್ದು, ಬಹಳ ಸಂಕಟ ತರುವಂಥಾದ್ದು ಮತ್ತು ಅದರಲ್ಲಿಯೇ ಅಪಾಯ ಅಡಗಿದೆ ಎಂಬುದಾಗಿ ಭಗವಾನರಿಂದ ಹೇಳಲ್ಪಟ್ಟಿದೆ.... ಪುನರುಚ್ಚರಿಸಿ... ಉಪೇಕ್ಖಾ ವಿಕಾಸದಿಂದ ಅವುಗಳೆಲ್ಲವನ್ನೂ ಸಂಪೂರ್ಣವಾಗಿ ಪರಿಹರಿಸುತ್ತಾನೆ.

ಎರವಲು ಪಡೆದ ಉದಾಹರಣೆಯ ಹಾಗೆ ಆಸೆ

17. ಹೇಗೆಂದರೆ ಗೃಹಸ್ಥನೆ, ಒಬ್ಬ ಮನುಷ್ಯನು ಹಣವನ್ನು, ವಾಹನವನ್ನು, ಆಭರಣಗಳನ್ನು ಮತ್ತು ಅಲಂಕಾರಿಕ ಮಣಿ ಕುಂಡಲಗಳನ್ನು ಬೇರೆಯವರಿಂದ ಎರವಲು ಪಡೆಯುವನು. ಅವನು ಹಾಗೆ ಬೇರೆಯವರಿಂದ ಪಡೆದ ಸಂಪತ್ತಿನಿಂದ ಕೂಡಿದವನಾಗಿ, ಅವುಗಳನ್ನು ಹೊಂದಿದವನಾಗಿ ಪೇಟೆಯಲ್ಲಿ ತಿರುಗಾಡಿಕೊಂಡು ಬರಬಹುದು. ಅದನ್ನು ಜನಗಳು ಕಂಡು ಹೀಗೆ ಹೇಳಬಹುದು- ಈ ಮನುಷ್ಯನು ಭಾಗ್ಯವಂತ, ಬಹಳ ಐಶ್ವರ್ಯವಂತ. ಹೀಗೆ ಭಾಗ್ಯವಂತರು ಭೋಗಗಳನ್ನು ಅನುಭವಿಸುವರು ಎಂದು. ಆದರೆ ಅವುಗಳ ಒಡೆಯರು ಎಲ್ಲಿ ಎಲ್ಲಿ ಅವನನ್ನು ಕಂಡಾಗ, ಅಲ್ಲಿ ಅಲ್ಲಿಯೇ ಅವುಗಳನ್ನು ತೆಗೆದುಕೊಂಡು ಹೋಗಬಹುದು. ಇದರ ಬಗ್ಗೆ ಹೇಗೆ ಯೋಚಿಸುತ್ತೀಯಾ, ಗೃಹಸ್ಥನೆ, ಆ ಮನುಷ್ಯನು ಬೇರೆಯವರ ಹಾಗೆ ಆಗಲು ಪ್ರಯತ್ನಿಸಿದ್ದು ಸಾಕಾಯಿತಲ್ಲವೆ.

ಹೌದು ಭಂತೆ.

ಅದಕ್ಕೆ ಕಾರಣ ಏನು?

ಭಂತೆ, ನಿಜಕ್ಕೂ ಒಡೆಯರಾದವರು ಅವರದ್ದನ್ನು ತೆಗೆದುಕೊಂಡುಬಿಡುವರು ಎಂದು. ಇದೇ ರೀತಿಯಲ್ಲಿ ಗೃಹಸ್ಥನೆ, ಉತ್ತಮನಾದ ಶಿಷ್ಯನು ಹೀಗೆ ಆಲೋಚಿಸುತ್ತಾನೆ- ಈ ಎರವಲು ಪಡೆದ ಉದಾಹರಣೆಯ ಹಾಗೆಯೇ ಆಸೆಯು. ಅದೆಂದರೆ ಬಹಳ ದುಃಖ ತರುವಂಥಾದ್ದು, ಬಹಳ ಸಂಕಟ ತರುವಂಥಾದ್ದು ಮತ್ತು ಅದರಲ್ಲಿಯೇ ಅಪಾಯ ಅಡಗಿದೆ ಎಂಬುದಾಗಿ ಭಗವಾನರಿಂದ ಹೇಳಲ್ಪಟ್ಟಿದೆ ಎಂದು... ಪುನರುಚ್ಚರಿಸಿ... ಉಪೆಕ್ಖಾ ವಿಕಾಸದಿಂದ ಅವುಗಳೆಲ್ಲವನ್ನೂ ಸಂಪೂರ್ಣವಾಗಿ ಪರಿಹರಿಸುತ್ತಾನೆ.

ಮರದಲ್ಲಿನ ಹಣ್ಣಿನ ಉದಾಹರಣೆಯ ಹಾಗೆ ಆಸೆ

18. ಹೇಗೆಂದರೆ, ಗೃಹಸ್ಥನೆ, ಹಳ್ಳಿಯಿಂದ ಅಥವಾ ಪೇಟೆ ಪಟ್ಟಣದಿಂದ ಬಹಳ ದೂರವಲ್ಲದ ಒಂದು ದಟ್ಟ ಕಾಡುಪ್ರದೇಶವಿದೆ. ಅಲ್ಲಿಯ ಒಂದು ಮರವು ಬಹಳಷ್ಟು ಹಣ್ಣುಗಳಿಂದ ಮತ್ತು ಮಾಗಿದ ಹಣ್ಣುಗಳಿಂದ ತುಂಬಿಕೊಂಡಿದೆ. ಆದರೆ ಆ ಮರದ ಒಂದು ಹಣ್ಣು ಕೂಡ ನೆಲದ ಮೇಲೆ ಬಿದ್ದಿಲ್ಲ. ಆಗ ಒಬ್ಬ ಮನುಷ್ಯನು ಹಣ್ಣನ್ನು ಗುರಿಯಾಗಿಟ್ಟುಕೊಂಡು, ಹಣ್ಣಿಗಾಗಿ ಹುಡುಕಾಡುತ್ತಾ ಹಣ್ಣಿಗಾಗಿ ಅಲೆದಾಡುತ್ತಾ ಬರಬಹುದು. ಅವನು ಆ ಕಾಡು ಪ್ರದೇಶದ ಒಳಹೊಕ್ಕು, ಬಹಳ ಹಣ್ಣುಗಳಿಂದ ಮತ್ತು ಮಾಗಿದ ಹಣ್ಣುಗಳಿಂದ ಕೂಡಿರುವ ಆ ಮರವನ್ನು ಕಾಣಬಹುದು. ಅವನಿಗೆ ಹೀಗೆನಿಸುತ್ತದೆ, ಈ ಮರವು ಬಹಳ ಹಣ್ಣುಗಳಿಂದ ಮತ್ತು ಮಾಗಿದ ಹಣ್ಣುಗಳಿಂದ ಕೂಡಿದೆ, ಆದರೆ ಒಂದು ಹಣ್ಣು ಕೂಡ ನೆಲದಮೇಲೆ ಬಿದ್ದಿಲ್ಲ. ಆದರೂ ಪರವಾಗಿಲ್ಲ, ನನಗೆ ಮರ ಹತ್ತಲು ಬರುವುದು. ಹಾಗಾದುದರಿಂದ ನಾನು ಈ ಮರದ ಮೇಲೆ ಹತ್ತಿಕೊಂಡು ಎಷ್ಟು ಬೇಕೋ ಅಷ್ಟನ್ನು ತಿನ್ನಬಹುದು ಮತ್ತು ನನ್ನ ಬಟ್ಟೆಯಲ್ಲಿ ತುಂಬಿಕೊಳ್ಳಬಹುದು ಎಂದು. ಆಗ ಅವನು ಮರವನ್ನು ಹತ್ತಿ ಎಷ್ಟು ಬೇಕೋ ಅಷ್ಟನ್ನು ತಿನ್ನುವನು ಮತ್ತು ಬಟ್ಟೆಯಲ್ಲಿ ತುಂಬಿಕೊಳ್ಳುವನು. ಆನಂತರ ಎರಡನೆಯ ಮನುಷ್ಯನೊಬ್ಬನು ಹಣ್ಣನ್ನು ಗುರಿಯಾಗಿಟ್ಟುಕೊಂಡು, ಹಣ್ಣಿಗಾಗಿ ಹುಡುಕಾಡುತ್ತಾ, ಹಣ್ಣಿಗಾಗಲಿ ಅಲೆದಾಡುತ್ತಾ ಒಂದು ಚೂಪಾದ ಕೊಡಲಿಯನ್ನು ಹಿಡಿದು ಬರಬಹುದು. ಅವನು ಆ ಕಾಡು ಪ್ರದೇಶದ ಒಳಹೊಕ್ಕು, ಬಹಳ ಹಣ್ಣುಗಳಿಂದ ಮತ್ತು ಮಾಗಿದ ಹಣ್ಣುಗಳಿಂದ ಕೂಡಿರುವ ಆ ಮರವನ್ನು ಕಾಣಬಹುದು. ಅವನಿಗೆ ಹೀಗೆನಿಸುತ್ತದೆ, ಈ ಮರವು ಬಹಳ ಹಣ್ಣುಗಳಿಂದ ಮತ್ತು ಮಾಗಿದ ಹಣ್ಣುಗಳಿಂದ ಕೂಡಿದೆ, ಆದರೆ ಒಂದು ಹಣ್ಣು ಕೂಡ ನೆಲದ ಮೇಲೆ ಬಿದ್ದಿಲ್ಲ, ಅದೂ ಅಲ್ಲದೆ ನನಗೆ ಮರಹತ್ತಲೂ ಸಹ ಬರುವುದಿಲ್ಲ. ಹಾಗಾದುದರಿಂದ ನಾನು ಈ ಮರವನ್ನು ಬಡದಿಂದ ಕಡಿದು ಎಷ್ಟು ಬೇಕೋ ಅಷ್ಟನ್ನು ತಿನ್ನಬಹುದು ಮತ್ತು ನನ್ನ ಬಟ್ಟೆಯಲ್ಲಿ ತುಂಬಿಕೊಳ್ಳಬಹುದು ಎಂದು. ಆಗ ಅವನು ಆ ಮರದ ಬುಡವನ್ನು ಕಡಿಯಬಹುದು. ಇದರ ಬಗ್ಗೆ ಹೇಗೆ ಯೋಚಿಸುತ್ತೀಯಾ? ಗೃಹಸ್ಥನೆ, ಇದಕ್ಕೆ ಮುಂಚೆ ಮರವನ್ನು ಹತ್ತಿದ ಮೊದಲನೇ ಮನುಷ್ಯನು ನಿಜಕ್ಕೂ ಬೇಗ ಬೇಗ ಕೆಳಗಿಳಿಯದೇ ಹೋದರೆ, ಆಗ ಮರವು ಬೀಳುವಾಗ ಅವನು ತನ್ನ ಕೈಯನ್ನು ಅಥವಾ ಕಾಲನ್ನು ಮುರಿದುಕೊಳ್ಳಬಹುದು, ಅವನು ಆ ಕಾರಣದಿಂದಾಗಿ ಮರಣವನ್ನು ಅಥವಾ ಮರಣ ಸಮಾನವಾದ ದುಃಖವನ್ನು ಅನುಭವಿಸಬೇಕಾಗಬಹುದು.

ಹೌದು ಭಂತೆ.

ಇದೇ ರೀತಿಯಲ್ಲಿ, ಗೃಹಸ್ಥನೇ, ಉತ್ತಮನಾದ ಶಿಷ್ಯನು ಹೀಗೆ ಆಲೋಚಿಸುತ್ತಾನೆ- ಈ ಮರದಲ್ಲಿನ ಹಣ್ಣಿನ ಉದಾಹರಣೆಯ ಹಾಗೆಯೇ. ಆಸೆಯು, ಅದೆಂದರೆ ಬಹ ದುಃಖದ ತರುವಂಥಾದ್ದು, ಬಹಳ ಸಂಕಟ ತರುವಂಥಾದ್ದು ಮತ್ತು ಅದರಲ್ಲಿಯೇ ಅಪಾಯ ಅಡಗಿದೆ ಎಂಬುದಾಗಿ, ಭಗವಾನರಿಂದ ಹೇಳಲ್ಪಟ್ಟಿದೆ ಎಂದು ಈ ರೀತಿಯಾಗಿ ಯಥಾರ್ಥವಾಗಿ, ಸಮ್ಯಕ್ ಅರಿವಿನಿಂದ ಕಂಡುಕೊಂಡು ಯಾವು ಯಾವುದು ಬಹುರೂಪವುಳ್ಳದ್ದು (ಐದು ಇಂದ್ರಿಯ ರೂಪವಾಗಿ) ಅದನ್ನು ಬಹುರೂಪಿ ಎಂದು ಉಪೆಕ್ಖಾದಿಂದ ತಿಳಿದು ಅದನ್ನು ದೂರವಿಡಬೇಕು ಯಾವು ಯಾವುದು ಏಕರೂಪ (ಸಮಾಧಿಯ ನಾಲ್ಕು ಹಂತಗಳು) ವಾಗಿರುವುದೋ ಅದನ್ನು ಏಕರೂಪಿ ಎಂದು ಉಪೆಕ್ಖಾದಿಂದ ತಿಳಿದು, ಆ ಎಲ್ಲವೂ ಲೋಕದಲ್ಲಿನ ಹಿಡಿತಗಳು ಎಂದರಿತು ಉಪೆಕ್ಖಾ ವಿಕಾಸದಿಂದ ಅವುಗಳೆಲ್ಲವನ್ನೂ ಸಂಪೂರ್ಣವಾಗಿ ಪರಿಹರಿಸುತ್ತಾನೆ.

19. ಗೃಹಸ್ಥನೇ, ಆ ಉತ್ತಮನಾದ ಶಿಷ್ಯನು ಇಂತಹ ಎಣೆಯಿಲ್ಲದ ಪರಿಶುದ್ಧವಾದ ಸಮಚಿತ್ತತೆ ಮತ್ತು ಜಾಗರೂಕತೆಯನ್ನು ಗಳಿಸಿಕೊಂಡಿದ್ದರಿಂದಾಗಿ, ಹಿಂದಿನ ಅನೇಕಾನೇಕ ಜೀವಿತಗಳನ್ನು ನೆನಪು ಮಾಡಿಕೊಳ್ಳುತ್ತಾನೆ. ಅದೆಂದರೆ- ಒಂದು ಹುಟ್ಟು, ಎರಡು ಹುಟ್ಟುಗಳು... ಪುನರುಚ್ಚರಿಸಿ... ಹೀಗೆ ಅವನು ಎಲ್ಲಾ ಬಗೆಯಲ್ಲಿ ಸವಿವರವಾಗಿ ಹಿಂದಿನ ಅನೇಕಾನೇಕ ಜೀವಿಗಳನ್ನು ನೆನಪು ಮಾಡಿಕೊಳ್ಳುತ್ತಾನೆ.

ಗೃಹಸ್ಥನೆ, ಆ ಉತ್ತಮನಾದ ಶಿಷ್ಯನು ಇಂತಹ ಎಣೆಯಿಲ್ಲದ ಪರಿಶುದ್ಧವಾದ ಸಮಚಿತ್ತತೆ ಮತ್ತು ಜಾಗರೂಕತೆಯನ್ನು ಗಳಿಸಿಕೊಂಡಿದ್ದರಿಂದಾಗಿ, ದಿವ್ಯವಾದ, ವಿಶುದ್ಧವಾದ, ಮಾನವರಿಗಿಂತ ಮಿಗಿಲಾದ ಕಣ್ಣುಗಳಿಂದ ಜೀವಿಗಳ ನಡೆಯನ್ನು, ಹುಟ್ಟುವಿಕೆಯನ್ನು, ಹೀನತೆಯನ್ನು, ಉನ್ನತಿಯನ್ನು ಸುರೂಪವನ್ನು, ಕುರೂಪವನ್ನು ಒಳ್ಳೆಯ ಗತಿಯನ್ನು ಕೆಟ್ಟ ಗತಿಯನ್ನು... ಪುನರುಚ್ಚರಿಸಿ... ಕರ್ಮಕ್ಕನುಸಾರವಾಗಿ ಸಾಗುವ ಜೀವಿಗಳನ್ನು ಗುರುತಿಸುತ್ತಾನೆ.

ಗೃಹಸ್ಥನೆ, ಆ ಉತ್ತಮನಾದ ಶಿಷ್ಯನು ಇಂತಹ ಎಣೆಯಿಲ್ಲದ ಪರಿಶುದ್ಧವಾದ ಸಮಚಿತ್ತತೆ ಮತ್ತು ಜಾಗರೂಕತೆಯನ್ನು ಗಳಿಸಿಕೊಂಡಿದ್ದರಿಂದಾಗಿ, ಆಸವಗಳನ್ನು ಕ್ಷಯಿಸಿ, ಆಸವಗಳಿಂದ ಮನಸ್ಸನ್ನು ಮುಕ್ತಿಗೊಳಿಸಿಕೊಂಡವನಾಗಿ, ಪ್ರಜ್ಞೆಯನ್ನು ಮುಕ್ತಿಗೊಳಿಸಿಕೊಂಡವನಾಗಿ, ಇಲ್ಲಿಯೇ ಈಗಲೇ, ತನಗೆ ತಾನೇ ಪರಿಪೂರ್ಣ ಅರಿವನ್ನು ಪಡೆದುಕೊಂಡವನಾಗಿ ಉಳಿಯುತ್ತಾನೆ. ಗೃಹಸ್ಥನೆ, ಹೀಗೆಯೇ ಶ್ರೇಷ್ಠರ ನಿಯಮಗಳ ಪ್ರಕಾರ ಎಲ್ಲದರ ಎಲ್ಲವೂ, ಎಲ್ಲದರ ಎಲ್ಲ ರೀತಿಯಲ್ಲಿಯೂ ಜೀವನೋಪಾಯ ತ್ಯಜಿಸುವಿಕೆ ಆಗಬರುವುದು.

4. ಗೃಹಸ್ಥ ಪೋತಲಿಯ

20. ಗೃಹಸ್ಥನೆ, ಇದರ ಬಗೆಗೆ ಹೇಗೆ ಯೋಚಿಸುತ್ತೀಯೆ? ಯಾವ ರೀತಿಯಲ್ಲಿ ಶ್ರೇಷ್ಠರ ನಿಯಮಗಳ ಪ್ರಕಾರ, ಎಲ್ಲದರ ಎಲ್ಲವೂ ಎಲ್ಲದರ ಎಲ್ಲ ರೀತಿಯಲ್ಲಿಯೂ ಜೀವನೋಪಾಯ ತ್ಯಜಿಸುವಿಕೆ ಆಗುವುದು. ಹಾಗಿರುವುದರಿಂದ ನೀನು ಈ ರೀತಿಯ ಜೀವನೋಪಾಯ ತ್ಯಜಿಸುವಿಕೆಯನ್ನು ನಿನ್ನಲ್ಲಿ ನೀನು ಆಗ ಮಾಡಿರುವಿಯೇನು ಎಂದು?

ಭಂತೆ, ನನಗೆ ಹೇಗೆ ಸಾಧ್ಯವು ಶ್ರೇಷ್ಠರ ನಿಯಮಗಳ ಪ್ರಕಾರ ಎಲ್ಲದರ ಎಲ್ಲವೂ, ಎಲ್ಲದರ ಎಲ್ಲ ರೀತಿಯಲ್ಲಿಯೂ ಜೀವನೋಪಾಯ ತ್ಯಜಿಸುವಿಕೆ ಆಗ ಮಾಡುವುದಕ್ಕೆ ಭಂತೆ, ನಾನು, ಶ್ರೇಷ್ಠರ ನಿಯಮಗಳ ಪ್ರಕಾರ ಎಲ್ಲದರ ಎಲ್ಲವೂ, ಎಲ್ಲದರ ಎಲ್ಲ ರೀತಿಯಲ್ಲಿಯೂ ಜೀವನೋಪಾಯ ತ್ಯಜಿಸುವಿಕೆಯಿಂದ ಬಹಳ ದೂರದಲ್ಲಿದ್ದೇನೆ. ಭಂತೆ, ನಾವುಗಳು ಇದುವರೆವಿಗೂ ಬೇರೆ ಮತಾವಲಂಬಿ ಪರಿವ್ರಾಜಕರು ಕೀಳುಮಟ್ಟದವರಾಗಿದ್ದರೂ, ಮೇಲು ಮಟ್ಟದವರೆಂದು ಮಾನ್ಯ ಮಾಡುತ್ತಿದ್ದೆವು. ಕೀಳುಮಟ್ಟದವರಾಗಿದ್ದರೂ ಮೇಲು ಮಟ್ಟದವರಿಗೆ ನೀಡುವ ಆಹಾರವನ್ನು ನೀಡುತ್ತಿದ್ದೆವು. ಕೆಳಮಟ್ಟದವರಾಗಿದ್ದರೂ, ಮೇಲು ಮಟ್ಟದವರ ಆಸ್ಥಾನದಲ್ಲಿ ಕುಳ್ಳರಿಸುತ್ತಿದ್ದೆವು. ಆದರೆ ಭಂತೆ, ನಾವುಗಳು ಭಿಕ್ಷುಗಳು ಮೇಲು ಮಟ್ಟದವರಾಗಿದ್ದರೂ, ಕೀಳುಮಟ್ಟದವರೆಂದು ಮಾನ್ಯ ಮಾಡುತ್ತಿದ್ದೆವು,30 ಮೇಲೆ ಮಟ್ಟದವರಾಗಿದ್ದರೂ, ಕೀಳುಮಟ್ಟದವರಿಗೆ ನೀಡುವ ಆಹಾರವನ್ನು ನೀಡುತ್ತಿದ್ದೆವು, ಮೇಲುಮಟ್ಟದವರಾಗಿದ್ದರೂ, ಕೀಳುಮಟ್ಟದವರ ಸ್ಥಾನದಲ್ಲಿ ಕುಳ್ಳಿರಿಸುತ್ತಿದ್ದೆವು. ಇನ್ನುಮುಂದೆ ಭಂತೆ, ನಾವುಗಳು ಬೇರೆ ಮತಾವಲಂಬಿ ಪರಿವ್ರಾಜಕರು ಕೀಳುಮಟ್ಟದವ ರಾಗಿರುವುದರಿಂದ, ಕೀಳು ಮಟ್ಟದವರೆಂದೇ ತಿಳಿದುಕೊಳ್ಳುತ್ತೇವೆ. ಕೀಳುಮಟ್ಟದವರಾಗಿರುವುದರಿಂದ ಕೀಳುಮಟ್ಟದವರಿಗೆ ನೀಡುವ ಆಹಾರವನ್ನು ನೀಡುತ್ತೇವೆ, ಕೀಳುಮಟ್ಟದವರಾಗಿರುವುದರಿಂದ, ಕೀಳುಮಟ್ಟದವರ ಸ್ಥಾನದಲ್ಲಿ ಕುಳ್ಳಿರಿಸುತ್ತೇವೆ. ಆದರೆ ಭಂತೆ, ನಾವುಗಳು ಭಿಕ್ಷುಗಳು ಮೇಲ ಮಟ್ಟದವರಾಗಿರುವುದರಿಂದ, ಮೇಲು ಮಟ್ಟದವರೆಂದು ತಿಳಿದುಕೊಳ್ಳುತ್ತೇವೆ, ಮೇಲು ಮಟ್ಟದವರಾಗಿರುವುದರಿಂದ ಮೇಲು ಮಟ್ಟದವರಿಗೆ ನೀಡುವ ಆಹಾರವನ್ನು ನೀಡುತ್ತೇವೆ ಮೇಲು ಮಟ್ಟದವರಾಗಿರುವುದರಿಂದ ಮೇಲು ಮಟ್ಟದವರ ಸ್ಥಾನದಲ್ಲಿ ಕುಳ್ಳಿರಿಸುತ್ತೇವೆ. ಭಂತೆ, ಭಗವಾನರು ನನ್ನಲ್ಲಿ ನಿಜಕ್ಕೂ ಶ್ರಮಣರಿಗೆ ತೋರಬೇಕಾದ ಶ್ರಮಣಾದರವನ್ನು ಶ್ರಮಣರಿಗೆ ತೋರಬೇಕಾದ ಶ್ರಮಣ ಸಮರ್ಪಣೆಯನ್ನು ಶ್ರಮಣರಿಗೆ ತೋರಬೇಕಾದ ಶ್ರಮಣ ಗೌರವವನ್ನು ಎಚ್ಚರಿಸಿದ್ದೀರಿ. ಅದ್ಭುತವು ಭಂತೆ, ಅದ್ಭುತವು ಭಂತೆ, ಅದು ಹೇಗೆಂದರೆ ಭಂತೆ, ತಲೆಕೆಳಗಾಗಿರುವುದನ್ನು, ಮೇಲ್ಮುಖವಾಗಿ ಸರಿಸುವಂತೆ, ಸರಿಮಾಡಿ ಇಟ್ಟಂತೆ, ಅಥವಾ ಮುಚ್ಚಿಟ್ಟಿರುವುದನ್ನು ಬಿಚ್ಚಿ ಹೇಳಿದಂತೆ, ಅಥವಾ ದಾರಿತಪ್ಪಿದವನಿಗೆ ದಾರಿ ತೋರಿಸುವಂತೆ. ಅಥವಾ ಕತ್ತಲಿನಲ್ಲಿ ಎಣ್ಣೆಯ ದೀಪ ಹಿಡಿದಿರುವಂತೆ ಮತ್ತು ಅದರಿಂದಾಗಿ ಕಣ್ಣುಳ್ಳವರು ವಸ್ತುರೂಪಗಳನ್ನು ಕಾಣುವ ಹಾಗೆ ಎಂದು. ಇದೇ ರೀತಿಯಲ್ಲಿ ಭಂತೆ, ಭಗವಾನರು ಅನೇಕ ಪರಿಯಲ್ಲಿ ಧರ್ಮವನ್ನು ಪ್ರಕಾಶಪಡಿಸಿದ್ದೀರಿ, ಆದ್ದರಿಂದ ನಾನು ಭಂತೆ, ಭಗವಾನರಿಗೆ ಮತ್ತು ಧರ್ಮಕ್ಕೆ ಮತ್ತು ಭಿಕ್ಷು ಸಂಘಕ್ಕೆ ಶರಣು ಹೋಗುತ್ತೇನೆ. ಭಗವಾನರು, ನನ್ನನ್ನು ಉಪಾಸಕನೆಂದು (ಶರಣು ಬಂದವನೆಂದು) ಒಪ್ಪಿಕೊಳ್ಳಲಿ, ಇಂದಿನಿಂದ ಪ್ರಾಣವಿರುವವರೆಗೂ ಶರಣು ಬಂದವನು ಎಂದು ತಿಳಿಯಿರಿ.

ಇಲ್ಲಿಗೆ ಪೋತಲಿಯ ಸುತ್ತ ಮುಗಿಯಿತ

ಟಿಪ್ಪಣಿಗಳು [4]