ಊಟಿಸುತ್ತಿದೆ

ಅನುವಾದಗಳು [30]

ಉಪಾಲಿ ಸುತ್ತ

ಉಪಾಲಿ ಸುತ್ತ

ಹೀಗೆ ನಾನು ಕೇಳಿದ್ದೇನೆ. ಒಂದುಸಲ ಭಗವಾನರು ನಲಂದದ ಹತ್ತಿರದಲ್ಲಿದ್ದ ಪಾವಾರಿಕ ಎಂಬುವನ ಮಾವಿನ ತೋಪಿನಲ್ಲಿ ತಂಗಿದ್ದರು. ಆ ಒಂದು ಸಮಯದಲ್ಲಿ ನಾತಪುತ್ರನೆಂಬ ನಿಗಂಠ (ಜೈನ)ನು, ಜೈನರ ಮಹಾ ಪರಿವಾರದೊಂದಿಗೆ ನಲಂದದಲ್ಲಿ ವಾಸಮಾಡುತ್ತಿದ್ದನು. ಹಾಗಿರುವಾಗ ದೀರ್ಘತಪಸ್ವಿಯೆಂಬ36 ಜೈನನು, ನಲಂದದಲ್ಲಿ ಭಿಕ್ಷೆಗಾಗಿ ಓಡಾಡಿಕೊಂಡು, ಭಿಕ್ಷಾಟನೆ ಮುಗಿಸಿಕೊಂಡು, ಆಹಾರ ಸೇವಿಸಿದಾದ ಮೇಲೆ, ಭಗವಾನರಿಂದ್ದ ಪಾವಾರಿಕ ಮಾವಿನ ತೋಪಿನಲ್ಲಿಗೆ ಬಂದನು. ಹತ್ತಿರಕ್ಕೆ ಬಂದಮೇಲೆ, ಭಗವಾನರೊಂದಿಗೆ ಕುಶಲದ ಮಾತುಗಳನ್ನಾಡಿದನು. ಕುಶಲದ, ಗೌರವಾದರದ ಮಾತುಕತೆಯನ್ನು ಮುಗಿಸಿದ ಬಳಿಕ ಒಂದೆಡೆ ನಿಂತುಕೊಂಡನು. ಹೀಗೆ ಒಂದೆಡೆ ನಿಂತ ಆ ದೀರ್ಘತಪಸ್ವಿಗೆ ಭಗವಾನರು ಹೀಗೆ ಹೇಳಿದರು: ತಪಸ್ವಿಯೇ, ಇಲ್ಲಿ ಆಸನಗಳಿವೆ ನಿನಗೆ ಇಷ್ಟವಿದ್ದಲ್ಲಿ ಕುಳಿತುಕೋ ಎಂದು. ಹೀಗೆ ಹೇಳಿದ ಮೇಲೆ ಜೈನ ದೀರ್ಘತಪಸ್ವಿಯು ಹತ್ತಿರದಲ್ಲಿದ್ದ ಸಣ್ಣ ಆಸನ ಒಂದನ್ನು ತೆಗೆದುಕೊಂಡು ಒಂದೆಡೆ ಕುಳಿತನು. ಒಂದೆಡೆ ಕುಳಿತ ಆ ದೀರ್ಘತಪಸ್ವಿಗೆ ಭಗವಾನರು ಹೀಗೆ ಹೇಳಿದರು- ತಪಸ್ವಿಯೇ, ನಾತಪುತ್ರನು ಪಾಪದ ಕಾರ್ಯವು ಉಂಟಾಗುವುದಕ್ಕೆ ಹಾಗೂ ಪಾಪದ ಕಾರ್ಯದ ಮುಂದುವರಿಕೆಗೆ ಎಷ್ಟುಬಗೆಯ ಕಾರ್ಯಗಳು ಇವೆ ಎಂಬುದಾಗಿ ತಿಳಿಸಿದ್ದಾನೆ? ಎಂದು.

ಆಯುಷ್ಮಂತ ಗೌತಮರೆ, ಕರ್ಮ ಕರ್ಮ ಎಂದು ನೆಲೆಗೊಳಿಸುವ ರೂಢಿ ನಿಗಂಠ ನಾತಪುತ್ರನದಲ್ಲ. ಆಯುಷ್ಮಂತ ಗೌತಮರೆ, ದಂಡ ದಂಡ ಎಂಬುದಾಗಿ ನಿಗಂಠ ನಾತಪುತ್ರನು ಹೇಳುವ ರೂಢಿ ಇದೆ.37

ತಪಸ್ವಿಯೇ, ಹಾಗಾದರೆ ಎಷ್ಟು ಬಗೆಯ ದಂಡಗಳನ್ನು (ತಪ್ಪುಗಳನ್ನು) ನಿಗಂಠನಾತಪುತ್ರನು ಪಾಪ ಕರ್ಮ ಉಂಟಾಗುವುದಕ್ಕೆ ಮತ್ತು ಪಾಪದ ಕಾರ್ಯ ಮುಂದುವರಿಕೆಗೆ ಇವೆ ಎಂದು ಹೇಳುತ್ತಾನೆ.

ಆಯುಷ್ಮಂತ ಗೌತಮರೆ, ನಿಗಂಠನಾತಪುತ್ರನು ಮೂರು ಬಗೆಯ ತಪ್ಪುಗಳು ಪಾಪ ಕರ್ಮ ಉಂಟಾಗುವುದಕ್ಕೆ ಮತ್ತು ಪಾಪ ಕರ್ಮ ಮುಂದುವರಿಕೆಗೆ ಇವೆ ಎಂದು ಹೇಳುತ್ತಾನೆ. ಅವು ಯಾವುವೆಂದರೆ- ಶರೀರದಿಂದಾಗುವ ತಪ್ಪು, ಮಾತಿನಿಂದಾಗುವ ತಪ್ಪು ಮತ್ತು ಮನಸ್ಸಿನಿಂದಾಗುವ ತಪ್ಪು ಎಂದು.38

ಹಾಗಾದರೆ ತಪಸ್ವಿಯೇ, ಶರೀರದ ತಪ್ಪು ಬೇರೆಯದು, ಮಾತಿನ ತಪ್ಪು ಬೇರೆಯದು ಹಾಗೂ ಮನಸ್ಸಿನ ತಪ್ಪು ಬೇರೆಯದು ಹಾಗೇನು.

ಹೌದು ಆಯುಷ್ಮಂತ ಗೌತಮರೆ, ಶರೀರದ ತಪ್ಪು ಬೇರೆಯದು, ಮಾತಿನ ತಪ್ಪು ಬೇರೆಯದು ಹಾಗೂ ಮನಸ್ಸಿನ ತಪ್ಪು ಬೇರೆಯದು.

ಹಾಗಾದರೆ ಹೀಗೆ ವರ್ತಿಸಲ್ಪಟ್ಟ, ಹೀಗೆ ವಿಭಜಿಸಲ್ಪಟ್ಟ ಮೂರುಬಗೆಯ ತಪ್ಪುಗಳಲ್ಲಿ, ಯಾವಬಗೆಯ ತಪ್ಪನ್ನು, ನಿಗಂಠನಾತಪುತ್ರನು, ಪಾಪದ ಕಾರ್ಯ ಉಂಟಾಗುವುದಕ್ಕೆ ಮತ್ತು ಪಾಪದ ಕಾರ್ಯ ಮುಂದುವರಿಕೆಗೆ ಮಹಾದೋಷಿ ಎಂದು ಹೇಳುತ್ತಾನೆ. ಅದು ಶರೀರದ ತಪ್ಪು ಅಥವಾ ಮಾತಿನ ತಪ್ಪು ಅಥವಾ ಅದು ಮನಸ್ಸಿನ ತಪ್ಪು ಎಂದು.

ಆಯುಷ್ಮಂತ ಗೌತಮರೆ, ಹೀಗೆ ವಿಭಾಗಿಸಲ್ಪಟ್ಟ, ಹೀಗೆ ವಿಭಜಿಸಲ್ಪಟ್ಟ ಈ ಮೂರುಬಗೆಯ ತಪ್ಪುಗಳಲ್ಲಿ, ನಿಗಂಠನಾತಪುತ್ರನು ಶರೀರದ ತಪ್ಪನ್ನು ಪಾಪದ ಕಾರ್ಯ ಉಂಟಾಗುವುದಕ್ಕೆ ಮತ್ತು ಪಾಪದ ಕಾರ್ಯ ಮುಂದುವರಿಕೆಗೆ ಮಹಾದೋಷಿ ಎಂಬುದಾಗಿ ಹೇಳುತ್ತಾನೆ. ಹಾಗಲ್ಲದೆ ಮಾತಿನ ತಪ್ಪು ಅಲ್ಲ ಮತ್ತು ಮನಸ್ಸಿನ ತಪ್ಪು ಅಲ್ಲ ಎಂದು.

ತಪಸ್ವಿ, ಶರೀರದ ತಪ್ಪು ಎಂದಲ್ಲವೇ ನೀನು ಹೇಳುವುದು?

ಆಯುಷ್ಮಂತ ಗೌತಮರೆ, ಶರೀರದ ತಪ್ಪು ಎಂದೇ ನಾನು ಹೇಳುತ್ತೇನೆ.

ತಪಸ್ವಿ ಶರೀರದ ತಪ್ಪು ಎಂದಲ್ಲವೇ ನೀನು ಹೇಳುವುದು?

ಆಯುಷ್ಮಂತ ಗೌತಮರೆ, ಶರೀರದ ತಪ್ಪು ಎಂದೇ ನಾನು ಹೇಳುತ್ತೇನೆ.

ತಪಸ್ವಿ ಶರೀರದ ತಪ್ಪು ಎಂದಲ್ಲವೇ ನೀನು ಹೇಳುವುದು?

ಆಯುಷ್ಮಂತ ಗೌತಮರೆ, ಶರೀರದ ತಪ್ಪು ಎಂದೇ ನಾನು ಹೇಳುವುದು.

ಹೀಗೆ ಭಗವಾನರು, ನಿಗಂಠ ದಿರ್ಘತಪಸ್ವಿಯಿಂದ ಅವನದೇ ಹೇಳಿಕೆಯನ್ನು ಮೂರನೆಯ ಬಾರಿಯವರೆಗೂ ಕೇಳಿ ನಿರ್ಧರಿಸಿಕೊಂಡರು.

2. ಹೀಗೆ ಹೇಳಿದಮೇಲೆ ನಿಗಂಠ ದೀರ್ಘತಪಸ್ವಿಯು ಭಗವಾನರಿಗೆ ಹೀಗೆ ಹೇಳಿದನು- ಆಯುಷ್ಮಂತ ಗೌತಮರೆ, ನೀವು ಯಾವ ಬಗೆಯ ತಪ್ಪನ್ನು ಪಾಪದ ಕಾರ್ಯ ಉಂಟಾಗುವುದಕ್ಕೆ ಮತ್ತು ಪಾಪದ ಕಾರ್ಯ ಮುಂದುವರಿಕೆಗೆ ಇವೆ ಎಂದು ಹೇಳುತ್ತೀರಿ ಎಂದು.

ತಪಸ್ವಿಯೇ, ತಥಾಗತರು ದಂಡ, ದಂಡ (ತಪ್ಪು, ತಪ್ಪು) ಎಂಬುದಾಗಿ ನೆಲೆಗೊಳಿಸುವ ರೂಢಿಯವರಲ್ಲ, ಕಾರ್ಯ, ಕಾರ್ಯ ಎಂಬುದಾಗಿ. ತಪಸ್ವಿಯೇ ತಥಾಗತರು ನೆಲೆಗೊಳಿಸುವ ರೂಢಿವುಳ್ಳವರು.

ಹಾಗಾದರೆ ಆಯುಷ್ಮಂತ ಗೌತಮರೆ, ಎಷ್ಟು ಬಗೆಯ ಕಾರ್ಯಗಳು, ಪಾಪದ ಕಾರ್ಯ ಉಂಟಾಗುವುದಕ್ಕೆ ಮತ್ತು ಪಾಪದ ಕಾರ್ಯ ಮುಂದುವರಿಕೆಗೆ ಇವೆ ಎಂದು ಹೇಳುತ್ತೀರಿ ಎಂದು.

ತಪಸ್ವಿ, ನಾನು ಮೂರುಬಗೆಯ ಕಾರ್ಯಗಳು, ಪಾಪದ ಕಾರ್ಯ ಉಂಟಾಗುವುದಕ್ಕೆ ಮತ್ತು ಪಾಪದ ಕಾರ್ಯ ಮುಂದುವರಿಕೆಗೆ ಇವೆ ಎಂದು ಹೇಳುತ್ತೇನೆ. ಅವು ಯಾವುವೆಂದರೆ- ಶರೀರದ ಕಾರ್ಯ, ಮಾತಿನ ಕಾರ್ಯ ಮತ್ತು ಮನಸ್ಸಿನ ಕಾರ್ಯ ಎಂದು.

ಹಾಗಾದರೆ ಆಯುಷ್ಮಂತ ಗೌತಮರೆ, ಶರೀರದ ಕಾರ್ಯ ಬೇರೆಯದು, ಮಾತಿನ ಕಾರ್ಯ ಬೇರೆಯದು ಮತ್ತು ಮನಸ್ಸಿನ ಕಾರ್ಯ ಬೇರೆಯದು, ಹಾಗೇನು?

ತಪಸ್ವಿ, ಶರೀರದ ಕಾರ್ಯ ಬೇರೆಯದು, ಮಾತಿನ ಕಾರ್ಯ ಬೇರೆಯದು ಹಾಗೂ ಮನಸ್ಸಿನ ಕಾರ್ಯ ಬೇರೆಯದು ಎಂದು.

ಹಾಗಾದರೆ ಆಯುಷ್ಮಂತ ಗೌತಮರೆ, ಹೀಗೆ ವಿಭಾಗಿಸಲ್ಪಟ್ಟ, ಹೀಗೆ ವಿಭಜಿಸಲ್ಪಟ್ಟ ಮೂರು ಬಗೆಯ ಕಾರ್ಯಗಳಲ್ಲಿ ಯಾವ ಬಗೆಯ ಕಾರ್ಯ ಪಾಪದ ಕಾರ್ಯ ಉಂಟಾಗುವುದಕ್ಕೆ ಮತ್ತು ಪಾಪದ ಕಾರ್ಯ ಮುಂದುವರಿಕೆಗೆ ಮಹಾದೋಷಿ ಎಂದು ಹೇಳುತ್ತೀರಿ. ಅದು ಶರೀರದ ಕಾರ್ಯವೇ, ಅಥವಾ ಅದು ಮಾತಿನ ಕಾರ್ಯವೇ ಅಥವಾ ಅದು ಮನಸ್ಸಿನ ಕಾರ್ಯವೇ ಎಂದು?39

ತಪಸ್ವಿಯೇ, ಹೀಗೆ ವಿಭಾಗಿಸಲ್ಪಟ್ಟ, ಹೀಗೆ ವಿಭಜಿಸಲ್ಪಟ್ಟ ಈ ಮೂರು ಬಗೆಯ ಕಾರ್ಯಗಳಲ್ಲಿ, ಮನಸ್ಸಿನ ಕಾರ್ಯವೇ, ಪಾಪದ ಕಾರ್ಯ ಉಂಟಾಗುವುದಕ್ಕೆ ಮತ್ತು ಪಾಪದ ಕಾರ್ಯ ಮುಂದುವರಿಕೆಗೆ ಮಹಾದೋಷಿ ಎಂಬುದಾಗಿ ನಾನು ಹೇಳುತ್ತೇನೆ. ಹಾಗಲ್ಲದೆ ಶರೀರದ ಕಾರ್ಯವೂ ಅಲ್ಲ ಮತ್ತು ಮಾತಿನ ಕಾರ್ಯವೂ ಅಲ್ಲ ಎಂದು.

ಆಯುಷ್ಮಂತ ಗೌತಮರೆ, ಮನಸ್ಸಿನ ಕಾರ್ಯ ಎಂದಲ್ಲವೇ ನೀವು ಹೇಳುವುದು?

ತಪಸ್ವಿ, ಮನಸ್ಸಿನ ಕಾರ್ಯ ಎಂದೇ ನಾನು ಹೇಳುತ್ತೇನೆ.

ಆಯುಷ್ಮಂತ ಗೌತಮರೆ, ಮನಸ್ಸಿನ ಕಾರ್ಯ ಎಂದಲ್ಲವೇ ನೀವು ಹೇಳುವುದು?

ತಪಸ್ವಿ, ಮನಸ್ಸಿನ ಕಾರ್ಯ ಎಂದೇ ನಾನು ಹೇಳುತ್ತೇನೆ.

ಆಯುಷ್ಮಂತ ಗೌತಮರೆ, ಮನಸ್ಸಿನ ಕಾರ್ಯ ಎಂದಲ್ಲವೇ ನೀವು ಹೇಳುವುದು?

ತಪಸ್ವಿ, ಮನಸ್ಸಿನ ಕಾರ್ಯ ಎಂದೇ ನಾನು ಹೇಳುತ್ತೇನೆ.

ಹೀಗೆ ನಿಗಂಠ ದೀರ್ಘತಪಸ್ವಿಯು ಭಗವಾನರಿಮದ ಅವರದೇ ಹೇಳಿಕೆಯನ್ನು ಮೂರನೇಬಾರಿಯೂ ಕೇಳಿ ನಿರ್ಧರಿಸಿಕೊಂಡ ಮೇಲೆ, ಕುಳಿತಲ್ಲಿಂದ ಎದ್ದು, ಎಲ್ಲಿ ನಿಗಂಠ ನಾತಪುತ್ರ ಇದ್ದನೋ ಅಲ್ಲಿಗೆ ಬಂದನು.

3. ಆ ಒಂದು ಸಮಯದಲ್ಲಿ ನಿಗಂಠನಾತಪುತ್ರನು ಬಾಲಕಿನಿ ಎಂಬ ಹಳ್ಳಿಯ ಉಪಾಲಿಯ ಮುಖಂಡತ್ವದಲ್ಲಿ ಬಂದಿದ್ದ ದೊಡ್ಡ ಜನ ಸಮುದಾಯದೊಂದಿದೆ ಕುಳಿತಿದ್ದನು. ನಿಗಂಠನಾತಪುತ್ರನು, ದೂರದಲ್ಲಿ ಬರುತ್ತಿದ್ದ ನಿಗಂಠ ದೀರ್ಘತಪಸ್ವಿಗೆ ಹೀಗೆ ಹೇಳಿದನು- ಒಳ್ಳೆಯದು, ತಪಸ್ವಿ, ನೀನು ಅದೂ ದಿನದ ಈ ಬಿಸಿಲಿನಲ್ಲಿ ಎತ್ತಣಿಂದ ಬರುತ್ತಿದ್ದೀಯಾ ಎಂದು?

ಭಂತೆ, ಈಗಷ್ಟೇ ನಾನು ಶ್ರಮಣ ಗೌತಮರಲ್ಲಿಂದ ಬರುತ್ತಿದ್ದೇನೆ ಎಂದು.

ಹಾಗಾದರೆ ತಪಸ್ವಿ, ನೀನು ಶ್ರಮಣ ಗೌತಮರ ಹತ್ತಿರ ಏನಾದರೂ ಮಾತುಕತೆ ಆಡಿದೆಯೇನು?

ಹೌದು ಭಂತೇ, ನಾನು ಶ್ರಮಣ ಗೌತಮರ ಹತ್ತಿರ ಕೆಲವು ಮಾತುಕತೆ ಆಡಿದೆನು.

ಹಾಗಿದ್ದರೆ ತಪಸ್ವಿ, ನಿನ್ನ ಮತ್ತು ಶ್ರಮಣ ಗೌತಮರ ನಡುವೆ ನಡೆದ ಮಾತುಕತೆ ಯಾವ ವಿಷಯವನ್ನು ಕುರಿತು ಆದದ್ದು? ಎಂದು.

ಆಗ ನಿಗಂಠ ದೀರ್ಘತಪಸ್ವಿಯು, ತನ್ನ ಮತ್ತು ಭಗವಾನರ ನಡುವೆ ನಡೆದ ಎಲ್ಲಾ ವಿಷಯವನ್ನು ನಿಗಂಠನಾತಪುತ್ರನಿಗೆ ವಿವರವಾಗಿ ತಿಳಿಸಿದನು. ಹೀಗೆ ಹೇಳಿದ ಮೇಲೆ ನಿಗಂಠ ನಾತಪುತ್ರನು ನಿಗಂಠ ದೀರ್ಘತಪಸ್ವಿಗೆ ಹೀಗೆ ಹೇಳಿದನು- ಒಳ್ಳೆಯದು, ಒಳ್ಳೆಯದು, ತಪಸ್ವಿ! ಯಾವರೀತಿಯಲ್ಲಿ ಒಬ್ಬ ಶಿಷ್ಯನು ತನ್ನ ಗುರುವು ತಿಳಿಸಿದ ದರ್ಶನದ ವಿಷಯವನ್ನು ಚೆನ್ನಾಗಿ ಮನನಮಾಡಿಕೊಂಡಿರುವಂತಹವನು ಅರ್ಥಮಾಡಿಕೊಂಡಿರುವಂತಹವನು ತಿಳಿಸುವನೋ ಅದೇ ರೀತಿಯಲ್ಲಿ. ನಿಗಂಠ ದೀರ್ಘತಪಸ್ವಿಯಿಂದ ಶ್ರಮಣ ಗೌತಮರಿಗೆ ವಿವರಿಸಲ್ಪಟ್ಟಿದೆ. ಹೇಗೆ ತಾನೆ ಅಲ್ಪವಾದ ಮನಸ್ಸಿನ ತಪ್ಪು, ಅದಕ್ಕೆ ಹೋಲಿಸಿದರೆ ಅಪಾರವಾಗಿರುವಂತಹ ಶರೀರದ ತಪ್ಪನ್ನು ಮೀರಿ ಶೋಭಿಸಬಲ್ಲದು. ಆದ್ದರಿಂದಲೇ, ಶರೀರದ ತಪ್ಪು, ಪಾಪದ ಕಾರ್ಯ ಉಂಟಾಗುವುದಕ್ಕೆ ಮತ್ತು ಪಾಪದ ಕಾರ್ಯ ಮುಂದುವರಿಗೆ ಮಹಾದೋಷಿ ಎಂದು ಗಣಿಸಲ್ಪಟ್ಟಿದೆ, ಹಾಗಲ್ಲದೆ ಮಾತಿನ ತಪ್ಪು ಅಲ್ಲ, ಹಾಗೆಯೇ ಮನಸ್ಸಿನ ತಪ್ಪು ಅಲ್ಲ ಎಂದು.

4. ಹೀಗೆ ಹೇಳಿದ ಮೇಲೆ ಗೃಹಸ್ಥ ಉಪಾಲಿಯು ನಿಗಂಠನಾತಪುತ್ರನಿಗೆ ಹೀಗೆ ಹೇಳಿದನು- ಒಳ್ಳೆಯದು, ಒಳ್ಳೆಯದು ಭಂತೇ ಧೀರ್ಘತಪಸ್ವಿ! ಯಾವರೀತಿಯಲ್ಲಿ ಒಬ್ಬ ಶಿಷ್ಯನು, ತನ್ನ ಗುರುವು ತಿಳಿಸಿದ ದರ್ಶನದ ವಿಷಯವನ್ನು ಚೆನ್ನಾಗಿ ಮನನಮಾಡಿಕೊಂಡಿರುವಂತಹವನು, ಅರ್ಥಮಾಡಿಕೊಂಡಿರುವಂತಹವನು ತಿಳಿಸುವನೋ, ಅದೇರೀತಿಯಲ್ಲಿ ಭದಂತ ದೀರ್ಘತಪಸ್ವಿಯಿಂದ ಶ್ರಮಣ ಗೌತಮರಿಗೆ ವಿವರಿಸಲ್ಪಟ್ಟಿದೆ. ಹೇಗೆ ತಾನೆ ಅಲ್ಪವಾದ ಮನಸ್ಸಿನ ತಪ್ಪು, ಅದಕ್ಕೆ ಹೋಲಿಸಿದರೆ ಅಪಾರವಾಗಿರುವಂತಹ ಶರೀರದ ತಪ್ಪನ್ನು ಮೀರಿ ಶೋಭಿಸಬಲ್ಲದು. ಆದ್ದರಿಂದಲೇ, ಶರೀರದ ತಪ್ಪು, ಪಾಪದ ಕಾರ್ಯ ಉಂಟಾಗುವುದಕ್ಕೆ ಮತ್ತು ಪಾಪದ ಕರ್ಯ ಮುಂದುವರಿಕೆಗೆ ಮಹಾದೋಷಿ ಎಂದು ಗಣಿಸಲ್ಪಟ್ಟಿದೆ. ಹಾಗಲ್ಲದೆ ಮಾತಿನ ತಪ್ಪು ಅಲ್ಲ, ಹಾಗೆಯೇ ಮನಸ್ಸಿನ ತಪ್ಪೂ ಅಲ್ಲ. ಒಳ್ಳೆಯದು ಭಂತೇ, ನೀವು ಬಯಸುವುದಾದರೆ, ನಾನು ಹೋಗುತ್ತೇನೆ. ಈ ವಿಷಯದ ಮಾತು ತಪ್ಪು ಎಂದು ಶ್ರಮಣ ಗೌತಮರ ವಾದ ಹೂಡುತ್ತೇನೆ. ನಿಜಕ್ಕೂ ಶ್ರಮಣ ಗೌತಮರು ಯಾವರೀತಿಯಲ್ಲಿ ಭದಂತ ದೀರ್ಘತಪಸ್ವಿಯನ್ನು ಒಂದು ನಿಲುವಿಗೆ ಕಟ್ಟಿ ನಿಲ್ಲಿಸಿದ್ದರೋ, ಹಾಗೆ ಒಂದು ನಿಲುವಿಗೆ ಕಟ್ಟಿ ನಿಲ್ಲಿಸಿದ್ದೇ ಆದರೆ, ಯಾವರೀತಿಯಲ್ಲಿ ಒಬ್ಬ ಶಕ್ತಿಶಾಲಿಯಾದ ಮನುಷ್ಯ ಉದ್ದ ಕೂದಲುಳ್ಳ ಟಗರನ್ನು, ಅದರ ಕೂದಲನ್ನು ಹಿಡಿದು ಮುಂದಕ್ಕೆ ಎಳೆಯಬಹುದು, ಹಿಂದಕ್ಕೆ ನೂಕಬಹುದು, ಹಿಂದಕ್ಕೆ ಮುಂದಕ್ಕೆ ಜಗ್ಗಾಡಬಹುದು, ಅದೇರೀತಿಯಲ್ಲಿ ಶ್ರಮಣ ಗೌತಮರನ್ನು ನಾನು ವಾದವಿವಾದಗಳಿಂದ ಮುಂದಕ್ಕೆ ಎಳೆಯುತ್ತೇನೆ, ಹಿಂದಕ್ಕೆ ನೂಕುತ್ತೇನೆ, ಹಿಂದಕ್ಕೆ ಮುಂದಕ್ಕೆ ಜಗ್ಗಾಡುತ್ತೇನೆ. ಯಾವರೀತಿಯಲ್ಲಿ ಒಬ್ಬ ಶಕ್ತಿಶಾಲಿ ಭಟ್ಟಿ ಇಳಿಸುವವ, ದೊಡ್ಡದಾದ ಭಟ್ಟಿ ಇಳಿಸುವ ಪಾತ್ರೆಯನ್ನು ಆಳವಾದ ನೀರಿನಲ್ಲಿ ಮುಳುಗಿಸಿ, ಅದರ ಒಂದು ಮೂಲೆಯನ್ನು ಹಿಡಿದುಕೊಂಡು ಮುಂದಕ್ಕೆ ಎಳೆಯುವುದು, ಹಿಂದಕ್ಕೆ ನೂಕುವುದು, ಹಿಂದಕ್ಕೆ ಮುಂದಕ್ಕೆ ಜಗ್ಗಾಡಬಹುದು, ಅದೇರೀತಿಯಲ್ಲಿ ಶ್ರಮಣ ಗೌತಮರನ್ನು ನಾನು ವಾದ ವಿವಾದಗಳಿಂದ ಮುಂದಕ್ಕೆ ಎಳೆಯುತ್ತೇನೆ, ಹಿಂದಕ್ಕೆ ನೂಕುತ್ತೇನೆ, ಹಿಂದಕ್ಕೆ ಮುಂದಕ್ಕೆ ಜಗ್ಗಾಡುತ್ತೇನೆ. ಯಾವರೀತಿಯಲ್ಲಿ ಒಬ್ಬ ಶಕ್ತಿಶಾಲಿ ಮಾದಕ ವಸ್ತು ಮಿಶ್ರಣ ಮಾಡುವವನು, ಜರಡಿಯ ಹಿಡಿಯನ್ನು ಹಿಡಿದು ಮೇಲಕ್ಕೆ ಎಸೆಯಬಹುದು, ಕೆಳಕ್ಕೆ ಎಸೆಯಬಹುದು, ಚೆನ್ನಾಗಿ ಎತ್ತಾಡಬಹುದು, ಅದೇರೀತಿಯಲ್ಲಿ ಶ್ರಮಣ ಗೌತಮರನ್ನು ನಾನು ವಾದ ವಿವಾದಗಳಿಂದ ಮೇಲಕ್ಕೆ ಎಸೆಯುತ್ತೇನೆ, ಕೆಳಕ್ಕೆ ಎಸೆಯುತ್ತೇನೆ, ಚೆನ್ನಾಗಿ ಎತ್ತಾಡುತ್ತೇನೆ ಯಾವ ರೀತಿಯಲ್ಲಿ ಪೂರ್ಣವಾಗಿ ಬೆಳೆದು ಅನುಭವಿಯಾದಂತಹ ಅರವತ್ತು ವರುಷದ ಆನೆಯೊಂದು, ಆಳವಾದ ಕೊಳದಲ್ಲಿ ಇಳಿದು ಹುಚ್ಚಾಬಟ್ಟೆ ಕುಣಿಯುತ್ತಾ ಆನಂದವಾಗಿ ನೀರಾಟವನ್ನು ಆಡುವ ಹಾಗೆ, ಅದೇರೀತಿಯಲ್ಲಿ ನಾನು ಶ್ರಮಣ ಗೌತಮರನ್ನು ಹುಚ್ಚಾಬಟ್ಟೆ ಕುಣಿಯುವ ಆನಂದದ ನೀರಾಟದ ಹಾಗೆ ಆಟವಾಡಿಸುತ್ತೇನೆ. ಒಳ್ಳೆಯದು ಭಂತೆ, ನೀವು ಬಯಸುವುದಾದರೆ, ನಾನು ಹೊರಡುತ್ತೇನೆ. ಶ್ರಮಣ ಗೌತಮರ ಈ ವಿಷಯದಲ್ಲಿನ ಮಾತು ತಪ್ಪು ಎಂದು ವಾದ ಮಾಡುತ್ತೇನೆ ಎಂದು.

ಗೃಹಸ್ಥನೆ, ನೀನು ಹೋಗು, ಶ್ರಮಣ ಗೌತಮರ ಈ ವಿಷಯದಲ್ಲಿನ ಮಾತು ತಪ್ಪು ಎಂದು ವಾದವನ್ನು ಮಾಡು. ಗೃಹಸ್ಥನೇ, ನಾನು ಅಥವಾ ನಿಗಂಠ ದೀರ್ಘತಪಸ್ವಿ ಅಥವಾ ನೀನು ಶ್ರಮಣ ಗೌತಮರ ಈ ವಿಷಯದಲ್ಲಿನ ಮಾತು ತಪ್ಪು ಎಂದು ವಾದ ಮಾಡಬಹುದು.

5. ಹೀಗೆ ಹೇಳಿದ ಮೇಲೆ, ನಿಗಂಠ ದೀರ್ಘತಪಸ್ವಿಯು ನಿಗಂಠನಾತಪುತ್ರನಿಗೆ ಹೀಗೆ ಹೇಳಿದನು- ಭಂತೇ, ಗೃಹಸ್ಥ ಉಪಾಲಿಯು ಶ್ರಮಣ ಗೌತಮರ ಬಳಿ ವಾದ ಮಾಡುವುದು ನನಗೇನೋ ಸರಿಯೆಂದು ತೋರುವುದಿಲ್ಲ. ಭಂತೇ, ಶ್ರಮಣ ಗೌತಮರು ಮರುಳು ಮಾಡುವಂತವರು, ಬೇರೆ ಮತದ ಅನುಯಾಯಿಗಳನ್ನು ಹೇಗೆ ಮರುಳು ಮಾಡಬಹುದು ಎಂಬುದನ್ನು ಚೆನ್ನಾಗಿ ಬಲ್ಲವರು.

ತಪಸ್ವಿ, ಗೃಹಸ್ಥ ಉಪಾಲಿಯು ಶ್ರಮಣ ಗೌತಮರ ಶಿಷ್ಯನಾಗಬಹುದು ಎಂಬುದು ಅಸಾಧ್ಯದ ಮಾತು. ಅಲ್ಲದೆ ಶ್ರಮಣ ಗೌತಮರೇ ಗೃಹಸ್ಥ ಉಪಾಲಿಯ ಶಿಷ್ಯನಾಗಬಹುದು ಎಂಬುದು ಸಾಧ್ಯವಾಗುವ ಮಾತು. ಗೃಹಸ್ಥನೇ ನೀನು ಹೋಗು, ಶ್ರಮಣ ಗೌತಮರ ಈ ವಿಷಯದಲ್ಲಿನ ಮಾತು ತಪ್ಪು ಎಂದು ವಾದವನ್ನು ಮಾಡು. ಗೃಹಸ್ಥನೇ, ನಾನು ಅಥವಾ ನಿಗಂಠ ದೀರ್ಘತಪಸ್ವಿ ಅಥವಾ ನೀನು ಶ್ರಮಣ ಗೌತಮರ ಈ ವಿಷಯದಲ್ಲಿನ ಮಾತು ತಪ್ಪು ಎಂದು ವಾದ ಮಾಡಬಹುದು.

ಎರಡನೆಯಬಾರಿ ದೀರ್ಘತಪಸ್ವಿಯು... ಪುನರುಚ್ಚರಿಸಿ... ಮೂರನೆಯ ಬಾರಿಯೂ ಸಹ ನಿಗಂಠ ದೀರ್ಘತಪಸ್ವಿಯು, ನಿಗಂಠನಾತಪುತ್ರನಿಗೆ ಹೀಗೆ ಹೇಳಿದನು- ಭಂತೇ, ಗೃಹಸ್ಥ, ಉಪಾಲಿಯು ಶ್ರಮಣ ಗೌತಮರ ಬಳಿ ವಾದ ಮಾಡುವುದು ನನಗೇನೋ ಸರಿಯೆಂದು ತೋರುವುದಿಲ್ಲ. ಭಂತೇ ಶ್ರಮಣ ಗೌತಮರು ಮರುಳು ಮಾಡುವಂತಹವರು. ಬೇರೆ ಮತದ ಅನುಯಾಯಿಗಳನ್ನು ಹೇಗೆ ಮರುಳು ಮಾಡಬಹುದು ಎಂಬುದನ್ನು ಚೆನ್ನಾಗಿ ಬಲ್ಲವರು.

ತಪಸ್ವಿ, ಗೃಹಸ್ಥ ಉಪಾಲಿಯು ಶ್ರಮಣ ಗೌತಮರ ಶಿಷ್ಯನಾಗಬಹುದು ಎಂಬುದು ಅಸಾಧ್ಯದ ಮಾತು. ಅಲ್ಲದೆ ಶ್ರಮಣ ಗೌತಮರೇ ಗೃಹಸ್ಥ ಉಪಾಲಿಯ ಶಿಷ್ಯನಾಗಬಹುದು ಎಂಬುದು ಸಾಧ್ಯವಾಗುವ ಮಾತು. ಗೃಹಸ್ಥನೇ ನೀನು ಹೋಗು, ಶ್ರಮಣ ಗೌತಮರ ಈ ವಿಷಯದಲ್ಲಿನ ಮಾತು ತಪ್ಪು ಎಂದು ವಾದ ಮಾಡು. ಗೃಹಸ್ಥನೇ, ನಾನು ಅಥವಾ ನಿಗಂಠ ದೀರ್ಘತಪಸ್ವಿ ಅಥವಾ ನೀನು ಶ್ರಮಣ ಗೌತಮರ ಈ ವಿಷಯದಲ್ಲಿನ ಮಾತು ತಪ್ಪು ಎಂದು ವಾದ ಮಾಡಬಹುದು ಎಂದು.

ಹಾಗೇ ಆಗಲಿ ಭಂತೇ ಎಂದು ಗೃಹಸ್ಥ ಉಪಾಲಿಯು ನಿಗಂಠನಾತಪುತ್ರನಿಗೆ ಉತ್ತರ ಕೊಟ್ಟಾದ ಮೇಲೆ, ಕುಳಿತಲ್ಲಿಂದ ಎದ್ದು, ನಿಗಂಠನಾತಪುತ್ರನಿಗೆ ಪ್ರದಕ್ಷಿಣೆ ಹಾಕಿ ನಮಸ್ಕರಿಸಿದ ಮೇಲೆ, ಪವಾರಿಕ ಮಾವಿನ ತೋಪಿಗೆ ಬಂದು ಎಲ್ಲಿ ಭಗವಾನರಿದ್ದರೋ ಅಲ್ಲಿಗೆ ಬಂದನು. ಹತ್ತಿರಕ್ಕೆ ಬಂದನಂತರ, ಭಗವಾನರಿಗೆ ನಮಸ್ಕರಿಸಿ ಒಂದೆಡೆ ಕುಳಿತುಕೊಂಡನು. ಹೀಗೆ ಒಂದೆಡೆ ಕುಳಿತ ಗೃಹಸ್ಥ ಉಪಾಲಿಯು ಭಗವಾನರಿಗೆ ಹೀಗೆ ಹೇಳಿದನು- ಭಂತೇ, ನಿಗಂಠ ದೀರ್ಘತಪಸ್ವಿಯು ಇಲ್ಲಿ ಬಂದಿದ್ದರಲ್ಲವೇ? ಎಂದು.

ಗೃಹಸ್ಥನೇ, ನಿಗಂಠ ದೀರ್ಘತಪಸ್ವಿಯು ಇಲ್ಲಿಗೆ ಬಂದಿದ್ದರು ಎಂದು.

ಭಂತೆ, ಹಾಗಾದರೆ ಆಗ ನೀವು ನಿಗಂಠ ದೀರ್ಘತಪಸ್ವಿಯೊಂದಿಗೆ ಏನಾದರೂ ವಿಷಯದ ಬಗ್ಗೆ ಮಾತನಾಡಿದಿರಾ? ಎಂದು.

ಗೃಹಸ್ಥನೆ, ಹೌದು ಆಗ ನಾನು ನಿಗಂಠ ದೀರ್ಘತಪಸ್ವಿಯೊಂದಿಗೆ ಒಂದು ವಿಷಯದ ಬಗ್ಗೆ ಮಾತನಾಡಿದೆ ಎಂದು.

ಭಂತೆ, ಹಾಗಾದರೆ ತಾವು ನಿಗಂಠ ದೀರ್ಘತಪಸ್ವಿಯೊಂದಿಗೆ ಯಾವ ವಿಷಯವಾಗಿ ಮಾತನಾಡಿದಿರಿ? ಎಂದು.

ಆಗ ಭಗವಾನರು, ನಿಗಂಠ ದೀರ್ಘತಪಸ್ವಿಯೊಂದಿಗೆ ನಡೆದ ವಿಷಯದ ಮಾತುಕತೆಯನ್ನು ಎಲ್ಲಾ ವಿವರಗಳೊಂದಿಗೆ ಗೃಹಸ್ಥ ಉಪಾಲಿಗೆ ತಿಳಿಸಿದರು.

6. ಹೀಗೆ ಹೇಳಿದ ಮೇಲೆ ಗೃಹಸ್ಥ ಉಪಾಲಿಯು ಭಗವಾನರಿಗೆ ಹೀಗೆ ಹೇಳಿದನು- ಒಳ್ಳೆಯದು, ಒಳ್ಳೆಯದು ಭಂತೇ ತಪಸ್ವಿ! ಯಾವರೀತಿಯಲ್ಲಿ ಒಬ್ಬ ಶಿಷ್ಯನು, ತನ್ನ ಗುರುವು ತಿಳಿಸಿದ ದರ್ಶನ ವಿಷಯವನ್ನು ಚೆನ್ನಾಗಿ ಮನನ ಮಾಡಿಕೊಂಡಿರುವಂತಹವನು, ಅರ್ಥಮಾಡಿಕೊಂಡಿರುವಂತಹವನು ತಿಳಿಸುವನೋ, ಅದೇರೀತಿಯಲ್ಲಿ ನಿಗಂಠ ದೀರ್ಘತಪಸ್ವಿಯಿಂದ ಭಗವಾನರಿಗೆ ವಿವರಿಸಲ್ಪಟ್ಟಿದೆ. ಹೇಗೆತಾನೆ ಅಲ್ಪವಾದ ಮನಸ್ಸಿನ ತಪ್ಪು ಅದಕ್ಕೆ ಹೋಲಿಸಿದರೆ ಅಪಾರವಾಗಿರುವಂತಹ ಶರೀರದ ತಪ್ಪನ್ನು ಮೀರಿ ಶೋಭಿಸಬಲ್ಲದು. ಆದ್ದರಿಂದಲೇ ಶರೀರದ ತಪ್ಪು, ಪಾಪದ ಕಾರ್ಯ ಉಂಟಾಗುವುದಕ್ಕೆ ಮತ್ತು ಪಾಪದ ಕಾರ್ಯ ಮುಂದುವರಿಕೆಗೆ ಮಹಾದೋಷಿ ಎಂದು ಗಣಿಸಲ್ಪಟ್ಟಿದೆ. ಹಾಗಲ್ಲದೆ ಮಾತಿನ ತಪ್ಪು ಅಲ್ಲ, ಹಾಗೆಯೇ ಮನಸ್ಸಿನ ತಪ್ಪೂ ಅಲ್ಲ ಎಂದು.

ಹಾಗಿದ್ದರೆ, ಗೃಹಸ್ಥನೆ, ನೀನು ನಿಜಕ್ಕೂ ಸತ್ಯದ ಆಧಾರದ ಮೇಲೆ ಮಾತನಾಡುವವನಾದರೆ, ಈಗ ಸ್ವಲ್ಪ ಮಾತನಾಡೋಣ.

ಭಂತೇ, ನಾನು ಸತ್ಯದ ಆಧಾರದ ಮೇಲೆ ಮಾತನಾಡುತ್ತೇನೆ, ಆ ಕಾರಣಕ್ಕಾಗಿ ಈಗ ಸ್ವಲ್ಪ ಮಾತನಾಡೋಣ.

7. ಗೃಹಸ್ಥನೇ, ಈ ಬಗ್ಗೆ ನೀನು ಹೇಗೆ ಯೋಚಿಸುತ್ತೀಯ? ಇಲ್ಲಿ ಒಬ್ಬ ನಿಗಂಠನು ರೋಗಪೀಡಿತನಾಗಿದ್ದು, ದುಃಖವುಳ್ಳವನಾಗಿದ್ದು, ತುಂಬಾ ಬಳಲಿಕೆಯಿಂದ ನಿತ್ರಾಣನಾಗಿದ್ದೂ, ತಣ್ಣೀರನ್ನು ಕುಡಿಯುವುದನ್ನು ಬಿಟ್ಟು (ತಣ್ಣೀರು ಉಪಯೋಗ ಆತನಿಗೆ ಔಷಧವಾಗಿದ್ದು, ನಿಯಂತ್ರಣಕ್ಕಾಗಿ ಅದನ್ನು ಬಿಟ್ಟಿರುತ್ತಾನೆ) ಬಿಸಿನೀರನ್ನು ಕುಡಿಯುವವನಾಗುತ್ತಾನೆ. ಹಾಗಿದ್ದರೆ, ಗೃಹಸ್ಥನೆ, ನಿಗಂಠನಾತಪುತ್ರನು, ಈತನು ಮತ್ತೆ ಎಲ್ಲಿ ಹುಟ್ಟಿಬರುತ್ತಾನೆ ಎಂದು ತಿಳಿಸುವನು.40

ಭಂತೆ ಮಾನಸಿಕವಾಗಿ ಅವಲಂಬನ ಪಡೆದಂತಹ ದೇವತೆಗಳು ಇದ್ದಾರೆ, ಆತನು ಅಲ್ಲಿ ಮರುಹುಟ್ಟು ಪಡೆಯುತ್ತಾನೆ.

ಇದಕ್ಕೆ ಕಾರಣವೇನು?

ಭಂತೆ, ಅತನು ಸಾಯುವಾಗ ಮಾನಸಿಕವಾಗಿ ಅಂಟಿಕೊಂಡಿದ್ದ ಆದ್ದರಿಂದ ಹಾಗೆ ಎಂದು.

ಗೃಹಸ್ಥನೇ, ಎಚ್ಚರಿಕೆಯಿಂದ ಇರು, ಗೃಹಸ್ಥನೇ ಎಚ್ಚರಿಕೆವುಳ್ಳವನಾಗಿ ವಿವರಣೆ ನೀಡು. ನಿನ್ನ ಹಿಂದಿನ ಮಾತು ಈಗಿನ ಮಾತಿಗೆ, ಈಗಿನ ಮಾತು ನಿನ್ನ ಹಿಂದಿನ ಮಾತಿಗೆ ಒಂದಕ್ಕೊಂದು ಹೊಂದಿಕೆ ಆಗುತ್ತಿಲ್ಲ. ಗೃಹಸ್ಥನೆ, ಹಾಗಿದ್ದರೂ ನೀನು ಈ ಮಾತುಗಳನ್ನು ಹೇಳುತ್ತಿದ್ದೀಯೆ-. ಭಂತೆ, ನಾನು ಸತ್ಯದ ಆಧಾರದ ಮೇಲೆ ಮಾತನಾಡುತ್ತೇನೆ. ಆ ಕಾರಣಕ್ಕಾಗಿ ಈಗ ಮಾತನಾಡೋಣ ಎಂದು.

ಭಂತೇ, ಹಾಗಿದ್ದರೂ ಭಗವಾನರು ಹೀಗೆ ಹೇಳಿದರೂ ಸಹ, ಶರೀರದ ತಪ್ಪು ಪಾಪದ ಕಾರ್ಯ ಉಂಟಾಗುವುದಕ್ಕೆ ಮತ್ತು ಪಾಪದ ಕಾರ್ಯ ಮುಂದುವರಿಕೆಗೆ ಮಹಾದೋಷಿ, ಹಾಗಲ್ಲದೆ ಮಾತಿನ ತಪ್ಪು ಅಲ್ಲ, ಹಾಗೆಯೇ ಮನಸ್ಸಿನ ತಪ್ಪೂ ಅಲ್ಲ, ಎಂದು ನಾನು ಅನ್ನುತ್ತೇನೆ ಎಂದು.

8. ಗೃಹಸ್ಥನೇ, ಈ ಬಗ್ಗೆ ನೀನು ಹೇಗೆ ಯೋಚಿಸುತ್ತೀಯೆ, ಇಲ್ಲಿ ಒಬ್ಬ ನಿಗಂಠನು ನಾಲ್ಕು ಕಾಲಗಳಲ್ಲಿಯೂ ಸಂಯಮದಿಮದ ಕೂಡಿದ್ದಿರುವನು, ಎಲ್ಲ ನಿಯಂತ್ರಣಗಳಿಂದ41 ನಿಯಂತ್ರಿತನಾಗಿದ್ದಿರುವನು, ಎಲ್ಲ ನಿಯಂತ್ರಣಗಳಿಂದ ಬಂಧಿತನಾಗಿದ್ದಿರುವನು, ಎಲ್ಲ ನಿಯಂತ್ರಣಗಳಿಂದ ಶುದ್ಧನಾಗಿದ್ದರುವನು, ಎಲ್ಲ ನಿಯಂತ್ರಣಗಳಿಂದ ನಿದರ್ೆಶಿತನಾಗಿದ್ದಿರುವನು, ಆತನು ಮುಂದೆ ನಡೆಯುವಾಗ, ಹಿಂದೆ ನಡೆಯುವಾಗ, ಅನೇಕ ಸಣ್ಣ ಕೀಟಗಳ ಸಾವಿಗೆ ಕಾರಣನಾಗುತ್ತಾನೆ. ಹಾಗಿದ್ದರೆ ಗೃಹಸ್ಥನೆ, ನಿಗಂಠನಾತಪುತ್ರನು ಇದಕ್ಕೆ ಯಾವ ರೀತಿಯ ಫಲವನ್ನು ತಿಳಿಸುವನು ಎಂದು.

ಭಂತೆ, ನಿಗಂಠನಾತಪುತ್ರನು ಇದು ಇಚ್ಛಾಪೂರ್ವಕವಾದದ್ದಲ್ಲದ್ದರಿಂದ, ಅದನ್ನು ಮಹಾದೋಷಿ ಅಲ್ಲ ಎಂದು ತಿಳಿಸುವನು ಎಂದು.

ಗೃಹಸ್ಥನೆ, ಹಾಗಾದರೆ ಅದು ಇಚ್ಛಿತವಾಗಿದ್ದರೆ? ಎಂದು.

ಭಂತೇ, ಮಹಾದೋಷಿ ಆಗುತ್ತದೆ ಎಂದು.

ಗೃಹಸ್ಥನೇ ಹಾಗಾದರೆ ಇಚ್ಛೆಯನ್ನು ನಿಗಂಠನಾತಪುತ್ರನು ಯಾವುದರಡಿಯಲ್ಲಿ ತಿಳಿಸುವನು? ಎಂದು.

ಭಂತೇ, ಮನಸ್ಸಿನ ತಪ್ಪು ಅದರಲ್ಲಿದೆ ಎಂದು.

ಗೃಹಸ್ಥನೇ, ಎಚ್ಚರಿಕೆಯಿಂದ ಇರು, ಗೃಹಸ್ಥನೇ ಎಚ್ಚರಿಕೆವುಳ್ಳವನಾಗಿ ವಿವರಣೆ ನೀಡು. ನಿನ್ನ ಹಿಂದಿನ ಮಾತು ಈಗಿನ ಮಾತಿಗೆ, ಈಗಿನ ಮಾತು ನಿನ್ನ ಹಿಂದಿನ ಮಾತಿಗೆ ಒಂದಕ್ಕೊಂದು ಹೊಂದಿಕೆ ಆಗುತ್ತಿಲ್ಲ. ಗೃಹಸ್ಥನೆ, ಹಾಗಿದ್ದರೂ ನೀನು ಈ ಮಾತುಗಳನ್ನು ಹೇಳುತ್ತಿದ್ದೀಯೆ-. ಭಂತೆ, ನಾನು ಸತ್ಯದ ಆಧಾರದ ಮೇಲೆ ಮಾತನಾಡುತ್ತೇನೆ. ಆ ಕಾರಣಕ್ಕಾಗಿ ಈಗ ಮಾತನಾಡೋಣ ಎಂದು.

ಭಂತೇ, ಹಾಗಿದ್ದರೂ ಭಗವಾನರು ಹೀಗೆ ಹೇಳಿದರೂ ಸಹ, ಶರೀರದ ತಪ್ಪು ಪಾಪದ ಕಾರ್ಯ ಉಂಟಾಗುವುದಕ್ಕೆ ಮತ್ತು ಪಾಪದ ಕಾರ್ಯ ಮುಂದುವರಿಕೆಗೆ ಮಹಾದೋಷಿ, ಹಾಗಲ್ಲದೆ ಮಾತಿನ ತಪ್ಪು ಅಲ್ಲ, ಹಾಗೆಯೇ ಮನಸ್ಸಿನ ತಪ್ಪೂ ಅಲ್ಲ, ಎಂದು ನಾನು ಅನ್ನುತ್ತೇನೆ ಎಂದು.42

9. ಗೃಹಸ್ಥನೇ, ಈ ಬಗ್ಗೆ ಹೇಗೆ ಯೋಚಿಸುತ್ತೀಯೆ, ಈ ನಲಂದವು (ಪಟ್ಟಣ) ಜಯಪ್ರದವಾಗಿದೆ ಮತ್ತು ಸಂಪದ್ಭರಿತವಾಗಿದೆ ಹಾಗೂ ಜನಭರಿತವಾಗಿದೆ ಮತ್ತು ದಟ್ಟವಾಗಿ ಜನರಿಂದ ತುಂಬಿದೆ.

ಹೌದು ಭಂತೆ, ಈ ನಲಂದವು ಜಯಪ್ರದವಾಗಿದೆ ಮತ್ತು ಸಂಪದ್ಭರಿತವಾಗಿದೆ ಹಾಗೂ ಜನಭರಿತವಾಗಿದೆ ಮತ್ತು ದಟ್ಟವಾಗಿ ಜನರಿಂದ ತುಂಬಿದೆ.

ಗೃಹಸ್ಥನೆ, ಈ ಬಗ್ಗೆ ಹೇಗೆ ಯೋಚಿಸುತ್ತೀಯೆ, ಒಂದುವೇಳೆ ಇಲ್ಲಿಗೆ ಒಬ್ಬ ಮನುಷ್ಯನು ಕತ್ತಿ ಹಿರಿದುಕೊಂಡು ಬರಬಹುದು. ಆತನು ಹೀಗೆ ಹೇಳಬಹುದು ನಾನು ಈ ನಲಂದದಲ್ಲಿರುವ ಎಲ್ಲಾ ಜೀವಿಗಳನ್ನು ಒಂದೇ ಕ್ಷಣದಲ್ಲಿ ಒಂದೇ ಮುಹೂರ್ತದಲ್ಲಿ, ಒಂದು ಮಾಂಸದ ಮುದ್ದೆಯನ್ನಾಗಿ ಒಂದು ಮಾಂಸದ ರಾಶಿಯನ್ನಾಗಿ ಮಾಡುತ್ತೇನೆ ಎಂದು. ಗೃಹಸ್ಥನೇ, ಈ ಬಗ್ಗೆ ಹೇಗೆ ಯೋಚಿಸುತ್ತೀಯೆ, ಹೀಗೆ ಹೇಳುವ ಆ ಮನುಷ್ಯನು ಈ ನಲಂದದಲ್ಲಿರುವ ಎಲ್ಲಾ ಜೀವಿಗಳನ್ನು ಒಂದೇ ಕ್ಷಣದಲ್ಲಿ, ಒಂದೇ ಮುಹೂರ್ತದಲ್ಲಿ, ಒಂದು ಮಾಂಸದ ಮುದ್ದೆಯನ್ನಾಗಿ, ಒಂದು ಮಾಂಸದ ರಾಶಿಯನ್ನಾಗಿ ಮಾಡಲು ಸಾಧ್ಯವೇ? ಎಂದು.

ಭಂತೇ, ಹತ್ತು ಜನ ಮನುಷ್ಯರಿಂದಲೂ, ಭಂತೇ ಇಪ್ಪತ್ತು ಜನ ಮನುಷ್ಯರಿಂದಲೂ, ಭಂತೇ ಮೂವತ್ತು ಜನ ಮನುಷ್ಯರಿಂದಲೂ, ಭಂತೆ ನಲವತ್ತು ಜನ ಮನುಷ್ಯರಿಂದಲೂ, ಭಂತೇ ಐವತ್ತು ಜನ ಮನುಷ್ಯರಿಂದಲೂ ಈ ನಲಂದದಲ್ಲಿರುವ ಎಲ್ಲಾ ಜೀವಿಗಳನ್ನು ಒಂದೇ ಕ್ಷಣದಲ್ಲಿ, ಒಂದೇ ಮುಹೂರ್ತದಲ್ಲಿ ಒಂದು ಮಾಂಸದ ಮುದ್ದೆಯನ್ನಾಗಿ, ಒಂದು ಮಾಂಸದ ರಾಶಿಯನ್ನಾಗಿ ಮಾಡಲು ಸಾಧ್ಯವಾಗುವುದಿಲ್ಲ. ಹಾಗಿರುವಾಗ ಅಲ್ಪನಾದ ಒಬ್ಬನೇ ಒಬ್ಬ ಮನುಷ್ಯ ಏನು ಮೆರೆಯಬಲ್ಲ.

ಗೃಹಸ್ಥನೇ ಈ ಬಗ್ಗೆ ಹೇಗೆ ಯೋಚಿಸುತ್ತೀಯೆ, ಇಲ್ಲಿಗೆ ಒಬ್ಬ ಶ್ರಮಣನೋ ಅಥವಾ ಬ್ರಾಹ್ಮಣನೋ ವೃದ್ಧಿಶಕ್ತಿ ಮತ್ತು ಮಾನಸಿಕ ಶಕ್ತಿ ಸಾಧಿಸಿರುವವನು ಬರಬಹುದು. ಆತನು ಹೀಗೆ ಹೇಳಬಹುದು- ನಾನು ಈ ನಲಂದವನ್ನು ಮನಸ್ಸಿನ ದ್ವೇಷದೊಂದು ಕಾರ್ಯದಿಂದ ಬೂದಿ ಮಾಡಿಬಿಡುತ್ತೇನೆ ಎಂದು ಗೃಹಸ್ಥನೇ, ಈ ಬಗ್ಗೆ ಹೇಗೆ ಯೋಚಿಸುತ್ತೀಯೆ, ಹೀಗೆ ಹೇಳುವ ಆ ಶ್ರಮಣನು ಅಥವಾ ಬ್ರಾಹ್ಮಣನು, ವೃದ್ಧಿಶಕ್ತಿ ಮತ್ತು ಮಾನಸಿಕ ಶಕ್ತಿ ಸಾಧಿಸಿರುವವನು, ಈ ನಲಂದವನ್ನು ಮನಸ್ಸಿನ ದ್ವೇಷದೊಂದು ಕಾರ್ಯದಿಂದಾಗಿ ಬೂದಿ ಮಾಡಿಬಿಡಲು ಸಾಧ್ಯವೇ? ಎಂದು.

ಭಂತೇ, ಹತ್ತು ನಲಂದಗಳನ್ನೂ ಕೂಡ, ಇಪ್ಪತ್ತು ನಲಂದಗಳನ್ನು ಕೂಡ, ಮೂವತ್ತು ನಲಂದಗಳನ್ನು ಕೂಡ, ನಲವತ್ತು ನಲಂದಗಳನ್ನು ಕೂಡ, ಐವತ್ತು ನಲಂದಗಳನ್ನು ಕೂಡ ಅಂತಹ ಆ ಶ್ರಮಣನಿಂದ ಅಥವಾ ಬ್ರಾಹ್ಮಣನಿಂದ, ವೃದ್ಧಿಶಕ್ತಿ ಮತ್ತು ಮಾನಸಿಕ ಶಕ್ತಿ ಸಾಧಿಸಿರುವವನಿಂದ, ಮನಸ್ಸಿನ ಒಂದೇ ಒಂದು ದ್ವೇಷ ಕಾರ್ಯದಿಂದಾಗಿ ಬೂದಿ ಮಾಡಬಹುದು. ಹಾಗಿರುವಾಗ ಅಲ್ಪವಾದ ಒಂದೇ ಒಂದು ಈ ನಲಂದ ಹೇಗೆ ಮೆರೆಯಬಲ್ಲದು ಎಂದು.

ಗೃಹಸ್ಥನೇ, ಎಚ್ಚರಿಕೆಯಿಂದ ಇರು, ಗೃಹಸ್ಥನೇ ಎಚ್ಚರಿಕೆವುಳ್ಳವನಾಗಿ ವಿವರಣೆ ನೀಡು. ನಿನ್ನ ಹಿಂದಿನ ಮಾತು ಈಗಿನ ಮಾತಿಗೆ, ಈಗಿನ ಮಾತು ನಿನ್ನ ಹಿಂದಿನ ಮಾತಿಗೆ ಒಂದಕ್ಕೊಂದು ಹೊಂದಿಕೆ ಆಗುತ್ತಿಲ್ಲ. ಗೃಹಸ್ಥನೆ, ಹಾಗಿದ್ದರೂ ನೀನು ಈ ಮಾತುಗಳನ್ನು ಹೇಳುತ್ತಿದ್ದೀಯೆ-. ಭಂತೆ, ನಾನು ಸತ್ಯದ ಆಧಾರದ ಮೇಲೆ ಮಾತನಾಡುತ್ತೇನೆ. ಆ ಕಾರಣಕ್ಕಾಗಿ ಈಗ ಮಾತನಾಡೋಣ ಎಂದು.

ಭಂತೇ, ಹಾಗಿದ್ದರೂ ಭಗವಾನರು ಹೀಗೆ ಹೇಳಿದರೂ ಸಹ, ಶರೀರದ ತಪ್ಪು ಪಾಪದ ಕಾರ್ಯ ಉಂಟಾಗುವುದಕ್ಕೆ ಮತ್ತು ಪಾಪದ ಕಾರ್ಯ ಮುಂದುವರಿಕೆಗೆ ಮಹಾದೋಷಿ, ಹಾಗಲ್ಲದೆ ಮಾತಿನ ತಪ್ಪು ಅಲ್ಲ, ಹಾಗೆಯೇ ಮನಸ್ಸಿನ ತಪ್ಪೂ ಅಲ್ಲ, ಎಂದು ನಾನು ಅನ್ನುತ್ತೇನೆ ಎಂದು.

10. ಗೃಹಸ್ಥನೆ, ಈ ಬಗ್ಗೆ ಹೇಗೆ ಯೋಚಿಸುತ್ತೀಯ, ನೀನು ದಂಡಕಾರಣ್ಯ, ಕಲಿಂಗಾರಣ್ಯ, ಮೆಜ್ಝಾರಣ್ಯ, ಮಾತಂಗಾರಣ್ಯಗಳು, ಅರಣ್ಯಗಳಾಗಿವೆ ಮತ್ತು ಅವು ಹೇಗೆ ಅರಣ್ಯಗಳಾದವು ಎಂದು ಕೇಳಿ ತಿಳಿದಿದ್ದೀಯಾ?

ಹೌದು ಭಂತೆ, ನಾನು ದಂಡಕಾರಣ್ಯ, ಕಲಿಂಗಾರಣ್ಯ, ಮೆಜ್ಝಾರಣ್ಯ, ಮಾತಂಗಾರಣ್ಯಗಳು ಅರಣ್ಯಗಳಾಗಿವೆ ಮತ್ತು ಅವು ಹೇಗೆ ಅರಣ್ಯಗಳಾದವು ಎಂದು ಕೇಳಿ ತಿಳಿದಿದ್ದೇನೆ.

ಗೃಹಸ್ಥನೆ, ಈ ಬಗ್ಗೆ ಹೇಗೆ ಯೋಚಿಸುತ್ತೀದ್ದೀಯೆ, ನೀನು ಕೇಳಿ ತಿಳಿದಿರುವ ಆ ದಂಡಕಾರಣ್ಯ, ಕಲಿಂಗಾರಣ್ಯ, ಮೆಜ್ಝಾರಣ್ಯ, ಮಾತಂಗಾರಣ್ಯಗಳು ಅರಣ್ಯಗಳಾಗಿವೆ ಮತ್ತು ಯಾವ ಕಾರಣಕ್ಕಾಗಿ ಅರಣ್ಯಗಳಾಗಿವೆ? ಎಂದು.

ಭಂತೆ, ನಾನು ಕೇಳಿ ತಿಳಿದಿರುವ ಪ್ರಕಾರ ಆ ದಂಡಕಾರಣ್ಯ, ಕಲಿಂಗಾರಣ್ಯ, ಮೆಜ್ಝಾರಣ್ಯ, ಮಾತಂಗಾರಣ್ಯಗಳು ಋಷಿಗಳ ಮಾನಸಿಕ ದ್ವೇಷದ ಒಂದು ಕಾರ್ಯದಿಂದಾಗಿ ಆ ಅರಣ್ಯಗಳು ಅರಣ್ಯಗಳಾಗಿವೆ.

ಗೃಹಸ್ಥನೇ, ಎಚ್ಚರಿಕೆಯಿಂದ ಇರು, ಗೃಹಸ್ಥನೇ ಎಚ್ಚರಿಕೆವುಳ್ಳವನಾಗಿ ವಿವರಣೆ ನೀಡು. ನಿನ್ನ ಹಿಂದಿನ ಮಾತು ಈಗಿನ ಮಾತಿಗೆ, ಈಗಿನ ಮಾತು ನಿನ್ನ ಹಿಂದಿನ ಮಾತಿಗೆ ಒಂದಕ್ಕೊಂದು ಹೊಂದಿಕೆ ಆಗುತ್ತಿಲ್ಲ. ಗೃಹಸ್ಥನೆ, ಹಾಗಿದ್ದರೂ ನೀನು ಈ ಮಾತುಗಳನ್ನು ಹೇಳುತ್ತಿದ್ದೀಯೆ-. ಭಂತೆ, ನಾನು ಸತ್ಯದ ಆಧಾರದ ಮೇಲೆ ಮಾತನಾಡುತ್ತೇನೆ. ಆ ಕಾರಣಕ್ಕಾಗಿ ಈಗ ಮಾತನಾಡೋಣ ಎಂದು.

11. ಭಂತೆ, ಭಗವಾನರು ನೀಡಿದ ಮೊದಲನೇ ಹೋಲಿಕೆಯೇ ನನಗೆ ತೃಪ್ತಿ ಮತ್ತು ಸ್ಪಷ್ಟತೆಯನ್ನು ಉಂಟುಮಾಡಿತು. ಹಾಗಿದ್ದರೂ ನಾನು ಭಗವಾನರ ಮಾತಿನ ವಿರುದ್ಧ ವಾದ ಹಿಡಿದ ಕಾರಣವೇನೆಂದರೆ ನಾನು ಭಗವಾನರು ನೀಡುವ ವಿವಿಧರೀತಿಯ ವಿವರಣೆಗಳನ್ನು ಕೇಳಿಸಿಕೊಳ್ಳಬೇಕೆಂಬ ಆಸೆಯಿಂದ. ಅದ್ಭುತವು ಭಂತೆ, ಅದ್ಭುತವು ಭಂತೆ. ಅದು ಹೇಗೆಂದರೆ, ವಿಪರೀತವಾಗಿರುವುದನ್ನು ಸರಿಪಡಿಸಿದಂತೆ ಅಥವಾ ಮುಚ್ಚಿ ಹೋಗಿರುವುದನ್ನು ತೆರೆದಿಟ್ಟಮತೆ ಅಥವಾ ದಾರಿತಪ್ಪಿದವನಿಗೆ ದಾರಿ ತೋರಿಸುವಂತೆ, ಅಥವಾ ಕತ್ತಲಿನಲ್ಲಿ ಎಣ್ಣೆ ದೀಪವನ್ನು ಹಿಡಿದು- ಕಣ್ಣಿರುವವರಿಗೆ ರೂಪಾಕಾರಗಳನ್ನು ನೋಡಲು ಸಾಧ್ಯವಾಗುವ ಹಾಗೆ ಎಂದು. ಅದೇರೀತಿಯಲ್ಲಿ ಭಗವಾನರಿಂದ ಅನೇಕ ಪ್ರಕಾರವಾಗಿ ಈ ಧರ್ಮವು ಪ್ರಕಾಶಿಲ್ಪಟ್ಟಿದೆ. ಆದ್ದರಿಂದ ಭಂತೆ, ನಾನು ಭಗವಾನರಿಗೆ ಮತ್ತು ಧರ್ಮಕ್ಕೆ ಮತ್ತು ಭಿಕ್ಷು ಸಂಘಕ್ಕೆ ಶರಣು ಹೋಗುತ್ತೇನೆ. ಭಗವಾನರು ನನ್ನನ್ನು ಉಪಾಸಕನೆಂದು ಇಂದಿನಿಂದ ನನ್ನ ಜೀವವಿರುವವರೆಗೂ ಶರಣು ಬಂದವನೆಂದು ಪರಿಗಣಿಸಲಿ.

12. ಗೃಹಸ್ಥನೆ, ಆಲೋಚಿಸಿ ನೋಡು. ನಿಮ್ಮಂಥ ಜನಪ್ರಿಯರಾದವರು ಚೆನ್ನಾಗಿ ಆಲೋಚಿಸಿ ವಿಷಯಗಳನ್ನು ನಿರ್ಧರಿಸುವುದು ಒಳ್ಳೆಯದು ಎಂದು.

ಭಂತೆ, ಭಗವಾನರ ಈ ನುಡಿಗಳಿಂದಾಗಿ ಮತ್ತೂ ಹೆಚ್ಚಾಗಿ ನನಗೆ ತೃಪ್ತಿಯಾಗಿದೆ ಮತ್ತು ಸ್ಪಷ್ಟತೆ ಬಂದಿದೆ. ಅಂದರೆ ಭಗವಾನರು ನನಗೆ ಈ ನುಡಿಗಳನ್ನು ಹೇಳಿದಾಗ- ಗೃಹಸ್ಥನೆ, ಆಲೋಚಿಸಿ ನೋಡು, ನಿಮ್ಮಂಥ ಜನಪ್ರಿಯರಾದವರು ಚೆನ್ನಾಗಿ ಆಲೋಚಿಸಿ ವಿಷಯಗಳನ್ನು ನಿರ್ಧರಿಸುವುದು ಒಳ್ಳೆಯದು ಎಂದು. ಭಂತೆ, ನಾನು ಬೇರೆ ಮತಾವಲಂಬಿಗಳ ಶಿಷ್ಯನಾಗಿ ಅವರಿಗೆ ಲಭಿಸಿದ್ದೇ ಆದರೆ, ಅವರುಗಳು ಇಡೀ ನಲಂದದಲ್ಲಿ ಹೆಗ್ಗಳಿಕೆಯ ಪತಾಕೆಗಳನ್ನು ಹಿಡಿದು ಮೆರೆಯುತ್ತಿದ್ದರು- ಗೃಹಸ್ಥ ಉಪಲಿಯು ನಮ್ಮ ಶಿಷ್ಯತ್ವಕ್ಕೆ ಸೇರಿ ಬಂದಿದ್ದಾನೆ ಎಂದು. ಆದರೆ ಭಗವಾನರು ನನಗೆ ಹೀಗೆ ಹೇಳಿದ್ದಾರೆ- ಗೃಹಸ್ಥನೆ, ಆಲೋಚಿಸಿ ನೋಡು, ನಿಮ್ಮಂಥ ಜನಪ್ರಿಯರಾದವರು ಚೆನ್ನಾಗಿ ಆಲೋಚಿಸಿ ವಿಷಯಗಳನ್ನು ನಿರ್ಧರಿಸುವುದು ಒಳ್ಳೆಯದು. ಆದುದರಿಂದಾಗಿ ಭಂತೆ, ಎರಡನೆಯಬಾರಿ ನಾನು ಭಗವಾನರಿಗೆ, ಮತ್ತು ಧರ್ಮಕ್ಕೆ ಮತ್ತು ಭಿಕ್ಷು ಸಂಘಕ್ಕೆ ಶರಣು ಹೋಗುತ್ತೇನೆ. ಭಗವಾನರು ನನ್ನನ್ನು ಉಪಾಸಕನೆಂದು ಇಂದಿನಿಂದ ನನ್ನ ಜೀವವಿರುವವರೆಗೂ ಶರಣು ಬಂದವನೆಂದು ಪರಿಗಣಿಸಲಿ.

13. ಗೃಹಸ್ಥನೆ, ನಿಮ್ಮ ಕುಟುಂಬವು ಬಹಳ ಕಾಲದಿಂದ ನಿಗಂಠರಿಗೆ ಆಧಾರ ನೀಡುತ್ತಾ ಬಂದಿದೆ, ಹಾಗೆಯೇ ಇನ್ನು ಮುಂದೆಯೂ ಅವರುಗಳು ಭಿಕ್ಷಾಟನೆಗೆ ಬಂದಾಗ ನೀಡತಕ್ಕದ್ದು ಎಂಬುದನ್ನು ನೆನಪಿನಲ್ಲಿಡತಕ್ಕದ್ದು ಎಂದು.

ಭಂತೆ, ಭಗವಾನರ ಈ ನುಡಿಗಳಿಂದ ಇನ್ನೂ ಹೆಚ್ಚಾಗಿ ನನಗೆ ತೃಪ್ತಿಯಾಗಿದೆ ಮತ್ತು ಸ್ಪಷ್ಟನೆ ಬಂದಿದೆ, ಅಂದರೆ ಭಗವಾನರು ನನಗೆ ಈ ನುಡಿಗಳನ್ನು ಹೇಳಿದಾಗ- ಗೃಹಸ್ಥನೆ, ನಿಮ್ಮ ಕುಟುಂಬವು ಬಹಳ ಕಾಲದಿಂದ ನಿಗಂಠರಿಗೆ ಆಧಾರ ನೀಡುತ್ತಾ ಬಂದಿದೆ, ಹಾಗೆಯೇ ಇನ್ನು ಮುಂದೆಯೂ ಅವರುಗಳು ಭಿಕ್ಷಾಟನೆಗೆ ಬಂದಾಗ ನೀಡತಕ್ಕದ್ದು ಎಂಬುದನ್ನು ನೆನಪಿನಲ್ಲಿಡತಕ್ಕದ್ದು ಎಂದು. ಶ್ರಮಣ ಗೌತಮರು ಹೀಗೆ ಹೇಳುತ್ತಾರೆ ಎಂಬುದಾಗಿ ನಾನು ಕೇಳಿದ್ದೆ- ನನಗೆ ಮಾತ್ರ ದಾನ ಕೊಡತಕ್ಕದ್ದು, ಬೇರೆಯವರಿಗೆ ದಾನ ಕೊಡತಕ್ಕುದಲ್ಲ; ನನ್ನ ಶಿಷ್ಯರಿಗೆ ಮಾತ್ರ ದಾನ ಕೊಡತಕ್ಕದ್ದು, ಬೇರೆಯವರ ಶಿಷ್ಯರಿಗೆ ದಾನ ಕೊಡತಕ್ಕುದಲ್ಲ; ನನಗೆ ಕೊಟ್ಟಿದ್ದು ಮಹಾಫಲವನ್ನು ತರುತ್ತದೆ, ಬೇರೆಯವರಿಗೆ ಕೊಟ್ಟಿದ್ದು ಮಹಾಫಲವನ್ನು ತರುತ್ತದೆ, ಬೇರೆಯವರ ಶಿಷ್ಯರಿಗೆ ಕೊಟ್ಟಿದ್ದು ಮಹಾಫಲವನ್ನು ತರುವುದಿಲ್ಲ ಎಂದು. ಆದರೆ ಭಗವಾನರು ನನ್ನನ್ನು ನಿಗಂಠರಿಗೆ ಕೂಡ ದಾನ ಕೊಡಲು ಪ್ರೋತ್ಸಾಹಿಸುತ್ತಿದ್ದೀರಿ. ಭಂತೆ, ಅದನ್ನು ನಾನು ಕಾಲ ಕೂಡಿಬಂದಾಗ ತಿಳಿಯುವವನಾಗುತ್ತೇನೆ. ಆದುದರಿಂದಾಗಿ ಭಂತೆ, ಮೂರನೆಯಬಾರಿ ನಾನು ಭಗವಾನರಿಗೆ ಮತ್ತು ಧರ್ಮಕ್ಕೆ ಮತ್ತು ಭಿಕ್ಷು ಸಂಘಕ್ಕೆ ಶರಣು ಹೋಗುತ್ತೇನೆ. ಭಗವಾನರು ನನ್ನನ್ನು ಉಪಾಸಕನೆಂದು ಇಂದಿನಿಂದ ನನ್ನ ಜೀವವಿರುವವರೆಗೂ ಶರಣು ಬಂದವನೆಂದು ಪರಿಗಣಿಸಲಿ.

14. ಆ ನಂತರ ಭಗವಾನರು ಗೃಹಸ್ಥ ಉಪಾಲಿಗೆ ಹಂತ ಹಂತವಾಗಿ ತಿಳಿದುಕೊಳ್ಳುವಂತಹ ಉಪದೇಶಗಳನ್ನು ನೀಡಿದರು. ಅದೆಂದರೆ- ದಾನದ ಬಗೆಗಿನ ಉಪದೇಶ, ಶೀಲಗಳ ಬಗೆಗಿನ ಉಪದೇಶ, ಸ್ವರ್ಗಗಳ ಬಗೆಗಿನ ಉಪದೇಶ, ಆಸೆಪಡುವುದರಲ್ಲಿ ಅಡಗಿರುವ ಅಪಾಯಗಳು ಹೀನತೆಗಳು, ಕಶ್ಮಲಗಳು ಹಾಗೂ ತ್ಯಜಿಸುವಿಕೆಯಲ್ಲಿರುವ ಮಂಗಲಗಳನ್ನು ಪ್ರಕಾಶಪಡಿಸಿದರು. ಯಾವಾಗ ಗೃಹಸ್ಥ ಉಪಾಲಿಯ ಮನಸ್ಸು ಸಿದ್ಧವಾಗಿದೆ, ಗ್ರಹಿಸುವ ಮನಸ್ಸುಳ್ಳವನಾಗಿದ್ದಾನೆ, ಯಾವ ತಡೆಗಳೂ ಇಲ್ಲದ ಮನಸ್ಸುಳ್ಳವನಾಗಿದ್ದಾನೆ, ಉನ್ನತವಾದಂತಹ ಮನಸ್ಸುಳ್ಳವನಾಗಿದ್ದಾನೆ, ಪ್ರಸನ್ನವಾದಂತಹ ಮನಸ್ಸುಳ್ಳವನಾಗಿದ್ದಾನೆ ಎಂದು ಭಗವಾನರು ಅರಿತ ನಂತರ, ಆಗ ಬುದ್ಧರುಗಳು ತಿಳಿಸಲು ಸಾಧ್ಯವಿರುವಂತಹ ಧರ್ಮದ ಉಪದೇಶವನ್ನು ಆತನಿಗೆ ಪ್ರಚುರಪಡಿಸಿದರು. ದುಃಖ, ಮೂಲ, ನಿರೋಧ, ಮಾರ್ಗ. ಯಾವ ರೀತಿಯಲ್ಲಿ ಪರಿಶುದ್ಧವಾದ ಬಿಳಿ ಬಟ್ಟೆಯು, ಯಾವೊಂದು ಕೊಳೆಯೂ ಇಲ್ಲದಿರುವಂತಹುದು, ಅದಕ್ಕೆ ಹಾಕಿದ ಬಣ್ಣವನ್ನು ಪೂರ್ಣವಾಗಿ ಒಳಗೊಳ್ಳುವ ಹಾಗೆ. ಅದೇರೀತಿಯಲ್ಲಿ, ಗೃಹಸ್ಥ ಉಪಾಲಿಯು ಅಲ್ಲಿ ಆಸನದಲ್ಲಿ ಕುಳಿತಿರುವಾಗಲೇ, ಕೊಳೆಯಿಲ್ಲದಂತಹ, ಕಳಂಕವಿಲ್ಲದಂತಹ ಧರ್ಮದ ದರ್ಶನವು ಆತನಲ್ಲಿ ಉದಯಿಸಿತು- ಯಾವು ಯಾವುದು ಹುಟ್ಟುವ ಧರ್ಮವನ್ನು ಹೊಂದಿರುವಂತಹುದೋ ಅವೆಲ್ಲವೂ, ಗತಿಸುವ ಧರ್ಮವನ್ನು ಹೊಂದಿರುವಂತಹವು ಎಂದು. ಆಗ ಗೃಹಸ್ಥ ಉಪಾಲಿಯು ಧರ್ಮವನ್ನು43 ತಿಳಿದವನಾಗಿ, ಧರ್ಮವನ್ನು ಅರಿತವನಾಗಿ, ಧರ್ಮವನ್ನು ಗ್ರಹಿಸಿದವನಾಗಿ, ಧರ್ಮವನ್ನು ಆಳ-ಹರಹಿನೊಂದಿಗೆ ಅರಿವು ಪಡೆದವನಾಗಿ, ಅನಿಶ್ಚಿತತೆಗಳನ್ನು ಮೀರಿ ನಿಂತವನಾಗಿ, ಪ್ರಶ್ನೆಗಳೇಳುವುದನ್ನು ಮುಗಿಸಿದವನಾಗಿ, ಸ್ಪಷ್ಟವಾಗಿ ಅರ್ಥ ವಿವರಣೆ ಮಾಡಬಲ್ಲವನಾಗಿ, ಗುರುಗಳ ಅನುಶಾಸನದಲ್ಲಿ ಬೇರೆಯವರ ಅಗತ್ಯವಿಲ್ಲದೆ ನಂಬಿ-ನಡೆದವನಾಗಿ (ಇವುಗಳೆಲ್ಲಾ ಸೋತಾಪನ್ನ ಸ್ಥಿತಿ ಪಡೆದ ಸಾಧಕರ ಗುಣಗಳು) ಭಗವಾನರಿಗೆ ಹೀಗೆ ಹೇಳಿದನು- ಈಗ ಭಂತೆ ನಾನು ಹೋಗಬೇಕು, ಬಹಳ ಕಾರ್ಯಗಳಿವೆ, ಬಹಳಷ್ಟು ಮಾಡಬೇಕಾದ್ದು ಉಳಿದಿದೆ ಎಂದು.

ಗೃಹಸ್ಥನೆ, ಈಗ ಕಾಲ ಬಂದಿದೆ, ನೀನು ಮಾಡಬೇಕೆಂದಿರುವುದನ್ನು ಮಾಡು ಎಂದು.

15. ಆಗ ಗೃಹಸ್ಥ ಉಪಾಲಿಯು ಭಗವಾನರ ಮಾತುಗಳಿಂದಾಗಿ ಆನಂದಗೊಂಡು ಮತ್ತು ಒಪ್ಪಿಕೊಂಡವನಾಗಿ, ಕುಳಿತಲ್ಲಿಂದ ಎದ್ದು, ಭಗವಾನರಿಗೆ ಪ್ರದಕ್ಷಿಣೆ ಹಾಕಿ ನಮಸ್ಕರಿಸಿದಾದಮೇಲೆ ತನ್ನ ಮನೆಗೆ ಹಿಂದಿರುಗಲು ಹೊರಟನು. ಬಂದಮೇಲೆ ಕಾವಲುಗಾರನನ್ನು ಬರಹೇಳಿದನು. ಯೋಗ್ಯನಾದ ಕಾವಲುಗಾರನೇ, ಇಂದಿನಿಂದ ನಿಗಂಠರಿಗೆ ಮತ್ತು ನಿಗಂಠಿಯರಿಗೆ ನನ್ನ ಮನೆ ಬಾಗಿಲು ಮುಚ್ಚುತ್ತೇನೆ ಮತ್ತು ನನ್ನ ಮನೆ ಬಾಗಿಲನ್ನು ಭಗವಾನರ ಶಿಷ್ಯರಾದ ಭಿಕ್ಷುಗಳಿಗೆ, ಭಿಕ್ಷಣಿಯರಿಗೆ, ಉಪಾಸಕರಿಗೆ ಮತ್ತು ಉಪಾಸಕಿಯರಿಗೆ ತೆರೆಯುತ್ತೇನೆ. ಒಂದುವೇಳೆ ಯಾರಾದರು ನಿಗಂಠರು ಬಂದರೆ ಅವರಿಗೆ ನೀನು ಹೀಗೆ ಹೇಳು- ಭಂತೆ, ನಿಲ್ಲಿರಿ. ಒಳಗೆ ಬರಬೇಡಿ. ಇಂದಿನಿಂದ ಗೃಹಸ್ಥ ಉಪಾಲಿಯು ಶ್ರಮಣ ಗೌತಮರ ಶಿಷ್ಯತ್ವವನ್ನು ಪಡೆದುಕೊಂಡಿದ್ದಾರೆ. ನಿಗಂಠರಿಗೆ, ನಿಗಂಠಿಯರಿಗೆ ಮನೆ ಬಾಗಿಲನ್ನು ಮುಚ್ಚಿದ್ದಾಯಿತು ಹಾಗೂ ಭಗವಾನರ ಶಿಷ್ಯರಾದ ಭಿಕ್ಷುಗಳಿಗೆ, ಭಿಕ್ಷುಣಿಯರಿಗೆ, ಉಪಾಸಕರಿಗೆ, ಉಪಾಸಕಿಯರಿಗೆ ಮನೆ ಬಾಗಿಲನ್ನು ತೆರೆದಿರುತ್ತೇವೆ, ಹಾಗೊಂದು ವೇಳೆ ಭಂತೆ, ನಿಮಗೆ ಭಿಕ್ಷೆ ಬೇಕಿದ್ದರೆ, ಇಲ್ಲಿಯೇ ಕುಳಿತಿರಿ, ಅವರು ಇಲ್ಲಿಗೇ ತಂದು ನೀಡುವರು ಎಂದು.

ಹಾಗೇ ಆಗಲಿ ಪೂಜ್ಯರೇ ಎಂದು ಆ ಕಾವಲುಗಾರನು ಗೃಹಸ್ಥ ಉಪಾಲಿಗೆ ಉತ್ತರಿಸಿದನು.

16. ನಿಗಂಠ ದೀರ್ಘತಪಸ್ವಿಯು ಹೀಗಾಡುವುದನ್ನು ಕೇಳಿದನು- ಗೃಹಸ್ಥ ಉಪಾಲಿಯು ಶ್ರಮಣ ಗೌತಮರ ಶಿಷ್ಯನಾಗಿ ಬಿಟ್ಟಿದ್ದಾನಂತೆ ಎಂದು. ಆಗ ನಿಗಂಠ ದೀರ್ಘತಪಸ್ವಿಯು, ಎಲ್ಲಿ ನಿಗಂಠನಾತಪುತ್ರನಿದ್ದನೋ ಅಲ್ಲಿಗೆ ಬಂದನು; ಬಳಿಗೆ ಬಂದನಂತರ ನಿಗಂಠನಾತಪುತ್ರನಿಗೆ ಹೀಗೆ ಹೇಳಿದನು- ಭಂತೆ, ನಾನು ಹೀಗೆ ಕೇಳಿದೆ, ಗೃಹಸ್ಥ ಉಪಾಲಿಯು ಶ್ರಮಣ ಗೌತಮರ ಶಿಷ್ಯನಾಗಿಬಿಟ್ಟಿದ್ದಾನಂತೆ ಎಂದು.

ತಪಸ್ವಿ, ಇದು ಅಸಂಭವ, ಸಾಧ್ಯವಾಗುವಂತಹುದಲ್ಲ. ಗೃಹಸ್ಥ ಉಪಾಲಿಯು ಶ್ರಮಣ ಗೌತಮರ ಶಿಷ್ಯನಾದ ಎನ್ನುವುದು. ಇದು ಸಂಭವಿಸುವಂತಹುದೆಂದು ಕಂಡುಬರುತ್ತದೆ, ಅಂದರೆ ಶ್ರಮಣ ಗೌತಮರು ಗೃಹಸ್ಥ ಉಪಾಲಿಯ ಶಿಷ್ಯರಾಗಿಬಿಟ್ಟಿರಬಹುದು ಎಂಬುದು ಎಂದು.

ಎರಡನೆಯಬಾರಿ ನಿಗಂಠ ದೀರ್ಘತಪಸ್ವಿಯು... ಪುನರುಚ್ಚರಿಸಿ... ಮೂತನೆಯ ಬಾರಿ ನಿಗಂಠ ದೀರ್ಘತಪಸ್ವಿಯು ನಿಗಂಠನಾತಪುತ್ರನಿಗೆ ಹೀಗೆ ಹೇಳಿದನು- ಭಂತೇ ನಾನು ಹೀಗೆ ಕೇಳಿದೆ... ಗೃಹಸ್ಥ ಉಪಾಲಿಯು ಶಿಷ್ಯನಾಗಿಬಿಟ್ಟಿರಬಹುದು ಎಂದು.

ಹಾಗಿದ್ದರೆ ಭಂತೆ, ನಾನು ಹೋಗಿ, ಇದರ ಬಗ್ಗೆ ಗೃಹಸ್ಥ ಉಪಾಲಿಯು ಶ್ರಮಣ ಗೌತಮರ ಶಿಷ್ಯನಾಗಿರುವನೇ ಅಥವಾ ಇಲ್ಲವೇ ಎಂಬುದನ್ನು ತಿಳಿದುಬರುತ್ತೇನೆ ಎಂದು.

ತಪಸ್ವಿ ನೀನು ಹೋಗಿ ಇದರ ಬಗ್ಗೆ ಗೃಹಸ್ಥ ಉಪಾಲಿಯು ಶ್ರಮಣ ಗೌತಮರ ಶಿಷ್ಯನಾಗಿರುವನೇ ಅಥವಾ ಇಲ್ಲವೇ ಎಂಬುದನ್ನು ತಿಳಿದು ಬಾ.

17. ಆಗ ನಿಗಂಠ ದೀರ್ಘತಪಸ್ವಿಯು ಎಲ್ಲಿ ಗೃಹಸ್ಥ ಉಪಾಲಿಯ ಮನೆ ಇತ್ತೋ ಅಲ್ಲಿಗೆ ಬಂದನು. ಕಾವಲುಗಾರನು ನಿಗಂಠ ದೀರ್ಘತಪಸ್ವಿಯು ಬರುತ್ತಿರುವುದನ್ನು ದೂರದಿಂದಲೇ ಕಂಡನು. ಕಂಡಾದ ಮೇಲೆ ನಿಗಂಠ ದೀರ್ಘತಪಸ್ವಿಗೆ ಹೀಗೆ ಹೇಳಿದನು- ನಿಲ್ಲಿರಿ ಭಂತೆ, ಒಳಗೆ ಬರಬೇಡಿ. ಇಂದಿನಿಂದಾಗಿ ಗೃಹಸ್ಥ ಉಪಾಲಿಯು ಶ್ರಮಣ ಗೌತಮರ ಶಿಷ್ಯತ್ವವನ್ನು ಪಡೆದುಕೊಂಡಿದ್ದಾರೆ. ನಿಗಂಠರಿಗೆ, ನಿಗಂಠಿಯರಿಗೆ ಮನೆ ಬಾಗಿಲನ್ನು ಮುಚ್ಚಿದ್ದಾಯಿತು ಹಾಗೂ ಭಗವಾನರ ಶಿಷ್ಯರಾದ ಭಿಕ್ಷುಗಳಿಗೆ, ಭಿಕ್ಷುಣಿಯರಿಗೆ, ಉಪಾಸಕರಿಗೆ, ಉಪಾಸಕಿಯರಿಗೆ ಮನೆ ಬಾಗಿಲನ್ನು ತೆರೆದಿದ್ದಾಯಿತು. ಹಾಗೊಂದು ವೇಳೆ ನಿಮಗೆ ಭಿಕ್ಷೆ ಬೇಕಿದ್ದರೆ, ಇಲ್ಲಿಯೇ ನಿಂತಿರಿ, ಅವರು ಇಲ್ಲಿಗೇ ತಂದು ನೀಡುವರು ಎಂದು.

ಆಯುಷ್ಮಂತನೇ, ನನಗೆ ಭಿಕ್ಷೆ ಬೇಕಿಲ್ಲ ಎಂದು ಹೇಳಿ ತಕ್ಷಣವೇ ಹಿಂತಿರುಗಿದವನಾಗಿ, ಎಲ್ಲಿ ನಿಗಂಠನಾತಪುತ್ರನಿದ್ದನೋ ಅಲ್ಲಿಗೆ ಬಂದನು. ಬಳಿಗೆ ಬಂದನಂತರ ನಿಗಂಠನಾತಪುತ್ರನಿಗೆ ಹೀಗೆ ಹೇಳಿದನು- ಭಂತೆ, ಇದು ನಿಜವು. ಅಂದರೆ ಗೃಹಸ್ಥ ಉಪಾಲಿಯು ಶ್ರಮಣ ಗೌತಮರ ಶಿಷ್ಯನಾಗಿ ಸೇರಿಬಿಟ್ಟಿದ್ದಾನೆ. ಭಂತೆ, ನಾನು ನಿಮಗೆ ಹೇಳಿದಾಗ, ಭಂತೆ ನೀವು ನನ್ನ ಮಾತಿಗೆ ಕಿವಿಗೊಡಲಿಲ್ಲ. ಅದೆಂದರೆ ಗೃಹಸ್ಥ ಉಪಾಲಿಯು ಶ್ರಮಣ ಗೌತಮರ ವಾದ ತಪ್ಪು ಎಂದು ತೋರಿಸುವುದಕ್ಕೆ ಹೋಗುವುದು ಬೇಡ ಅಂದಾಗ. ಭಂತೆ, ಶ್ರಮಣ ಗೌತಮ ನಿಜಕ್ಕೂ ಮರುಳು ಮಾಡುವವನು. ಬೇರೆ ಮತಾವಲಂಬಿಗಳ ಶಿಷ್ಯರನ್ನು ಹೇಗೆ ಮರುಳುಮಾಡಬೇಕೆಂಬ ಮರುಳು ಮಾಡುವ ಮಾಯಾವಿದ್ಯೆಯನ್ನು ತಿಳಿದಿರುವವನು ಎಂದು. ಭಂತೆ, ಗೃಹಸ್ಥ ಉಪಾಲಿಯನ್ನು ಶ್ರಮಣ ಗೌತಮನು ಮರುಳು ಮಾಡುವ ಮಾಯಾವಿದ್ಯೆಯಿಂದ ಮರುಳುಮಾಡಿಬಿಟ್ಟಿದ್ದಾನೆ ಎಂದು.

ತಪಸ್ವಿ, ಇದು ಅಸಂಭವ, ಸಾಧ್ಯವಾಗುವಂತಹುದಲ್ಲ, ಗೃಹಸ್ಥ ಉಪಾಲಿಯು ಶ್ರಮಣ ಗೌತಮರ ಶಿಷ್ಯನಾದ ಎನ್ನುವುದು. ಇದು ಸಂಭವಿಸುವಂತಹುದೆಂದು ಕಂಡುಬರುತ್ತದೆ. ಅಂದರೆ ಶ್ರಮಣ ಗೌತಮರು ಗೃಹಸ್ಥ ಉಪಾಲಿಯ ಶಿಷ್ಯರಾಗಿಬಿಟ್ಟಿರಬಹುದು ಎಂಬದು ಎಂದು. ಎರಡನೆಯಬಾರಿ ಕೂಡ ನಿಗಂಠ ದೀಘತಪಸ್ವಿಯು ನಿಗಂಠನಾತಪುತ್ರನಿಗೆ ಹೀಗೆ ಹೇಳಿದನು- ಭಂತೆ, ಇದು ನಿಜವು... ಪುನರುಚ್ಚರಿಸಿ... ಗೃಹಸ್ಥ ಉಪಾಲಿಯು ಶಿಷ್ಯರಾಗಿಬಿಟ್ಟಿರಬಹುದು ಎಂಬುದು. ಮೂರನೆಯ ಬಾರಿಯೂ ಸಹ ನಿಗಂಠ ದೀಘತಪಸ್ವಿಯು ನಿಗಂಠನಾತಪುತ್ರನಿಗೆ ಹೀಗೆ ಹೇಳಿದನು- ಭಂತೆ, ಇದು ನಿಜವು... ಪುನರುಚ್ಚರಿಸಿ... ಗೃಹಸ್ಥ ಉಪಾಲಿಯ ಶಿಷ್ಯರಾಗಿಬಿಟ್ಟಿರಬಹುದು ಎಂಬುದು ಎಂದು. ತಪಸ್ವಿ, ಹಾಗಿದ್ದರೆ, ಸ್ವತಃ ನಾನೇ ಹೋಗುತ್ತೇನೆ, ಹೋಗಿ ತಿಳಿಯುತ್ತೇನೆ. ಇದರ ಬಗ್ಗೆ, ಗೃಹಸ್ಥ ಉಪಾಲಿಯು ಶ್ರಮಣ ಗೌತಮರ ಶಿಷ್ಯನಾಗಿರುವನೇ ಅಥವಾ ಇಲ್ಲವೇ ಎಂಬುದನ್ನು ತಿಳಿದು ಬರುತ್ತೇನೆ ಎಂದು.

ಆಗ ನಿಗಂಠನಾತಪುತ್ರನು ದೊಡ್ಡದಾದ ನಿಗಂಠರ ಸಮೂಹದೊಂದಿಗೆ ಎಲ್ಲಿ ಗೃಹಸ್ಥ ಉಪಾಲಿಯ ಮನೆಯಿದ್ದಿತೋ ಅಲ್ಲಿಗೆ ಬಂದನು. ಕಾವಲುಗಾರನು ನಿಗಂಠನಾತಪುತ್ರನು ಬರುತ್ತಿರುವುದನ್ನು ದೂರದಲ್ಲಿಯೇ ಕಂಡನು. ಕಂಡಾದಮೇಲೆ ನಿಗಂಠನಾತಪುತ್ರನಿಗೆ ಹೀಗೆ ಹೇಳಿದನು- ನಿಲ್ಲಿರಿ, ಭಂತೆ ಒಳಗೆ ಬರಬೇಡಿ. ಇಂದಿನಿಂದಾಗಿ ಗೃಹಸ್ಥ ಉಪಾಲಿಯು ಶ್ರಮಣ ಗೌತಮರ ಶಿಷ್ಯತ್ವವನು ಪಡೆದುಕೊಂಡಿದ್ದಾರೆ. ನಿಗಂಠರಿಗೆ, ನಿಗಂಠಿಯರಿಗೆ, ಮನೆ ಬಾಗಿಲನ್ನು ಮುಚ್ಚಿದ್ದಾಯಿತು. ಹಾಗೂ ಭಗವಾನರ ಶಿಷ್ಯರಾದ ಭಿಕ್ಷುಗಳಿಗೆ, ಭಿಕ್ಷುಣಿಯರಿಗೆ, ಉಪಾಸಕರಿಗೆ, ಉಪಾಸಿಕೆಯರಿಗೆ ಮನೆ ಬಾಗಿಲನ್ನು ತೆರೆದದ್ದಾಯಿತು. ಹಾಗೊಂದು ವೇಳೆ ನಿಮಗೆ ಭಿಕ್ಷೆ ಬೇಕಿದ್ದರೆ, ಇಲ್ಲಿಯೇ ನಿಂತಿರಿ. ಅವರು ಇಲ್ಲಿಗೇ ತಂದು ನೀಡುವರು ಎಂದು.

ಯೋಗ್ಯ ಕಾವಲುಗಾರನೇ, ನೀನು ಗೃಹಸ್ಥ ಉಪಾಲಿಯು ಎಲ್ಲಿ ಇರುವರೋ ಅಲ್ಲಿಗೆ ಹೋಗು, ಅವರಲ್ಲಿಗೆ ಹೋದ ನಂತರ ಗೃಹಸ್ಥ ಉಪಾಲಿಗೆ ಹೀಗೆ ಹೇಳು- ಪೂಜ್ಯರೇ, ನಿಗಂಠನಾತಪುತ್ರರು ದೊಡ್ಡದಾದ ನಿಗಂಠ ಸಮೂಹದೊಂದಿಗೆ ಬಂದು ಬಾಗಿಲಲ್ಲಿ ನಿಂತಿದ್ದಾರೆ. ಅವರು ನಿಮ್ಮನ್ನು ಕಾಣಬೇಕೆನ್ನುತ್ತಾರೆ ಎಂದು.

ಆಗಲಿ ಭಂತೆ ಎಂದು ಆ ಕಾವಲುಗಾರನು ನಿಗಂಠನಾತಪುತ್ರರಿಗೆ ಉತ್ತರ ಕೊಟ್ಟು, ಬಳಿಕ ಎಲ್ಲಿ ಗೃಹಸ್ಥ ಉಪಾಲಿ ಇದ್ದರೋ ಅಲ್ಲಿಗೆ ಬಂದನು. ಬಳಿಗೆ ಬಂದ ನಂತರ ಗೃಹಸ್ಥ ಉಪಾಲಿಗೆ ಹೀಗೆ ಹೇಳಿದನು- ಪೂಜ್ಯರೇ, ನಿಗಂಠನಾತಪುತ್ರರು, ದೊಡ್ಡದಾದ ನಿಗಂಠರ ಸಮೂಹದೊಂದಿಗೆ ಬಾಗಿಲಲ್ಲಿ ಬಂದು ನಿಂತಿದ್ದಾರೆ, ಅವರು ನಿಮ್ಮನ್ನು ಕಾಣಬಯಸುತ್ತಾರೆ ಎಂದು.

ಹಾಗಾದರೆ ಯೋಗ್ಯ ಕಾವಲುಗಾರನೆ, ಮಧ್ಯದ ಬಾಗಿಲ ಬಳಿ ಇರುವ ಪಡಸಾಲೆಯಲ್ಲಿ ಕುಳಿತುಕೊಳ್ಳಲು ಆಸನಗಳನ್ನು ಹಾಕಿ ಸಿದ್ಧಪಡಿಸು ಎಂದು.

ಆಗಲಿ ಪೂಜ್ಯರೇ, ಎಂದು ಆ ಕಾವಲುಗಾರನು ಗೃಹಸ್ಥ ಉಪಾಲಿಗೆ ಉತ್ತರ ಕೊಟ್ಟು, ಮಧ್ಯದ ಬಾಗಿಲ ಬಳಿ ಇರುವ ಪಡಸಾಲೆಯಲ್ಲಿ ಆಸನಗಳನ್ನು ಹಾಕಿ ಸಿದ್ಧಪಡಿಸಿ, ಎಲ್ಲಿ ಗೃಹಸ್ಥ ಉಪಾಲಿ ಇದ್ದರೋ ಅಲ್ಲಿಗೆ ಬಂದನು. ಬಂದನಂತರ ಗೃಹಸ್ಥ ಉಪಾಲಿಗೆ ಹೀಗೆ ಹೇಳಿದನು- ಪೂಜ್ಯರೆ, ಮಧ್ಯದ ಬಾಗಿಲ ಬಳಿಯಿರುವ ಪಡಸಾಲೆಯಲ್ಲಿ ಆಸನಗಳನ್ನು ಹಾಕಿ ಸಿದ್ಧಪಡಿಸಿಯಾಯಿತು. ನೀವು ಬಯಸಿದಂತೆ ಮಾಡುವ ಸಮಯ ಬಂದಿದೆ ಎಂದು.

18. ಆಗ ಗೃಹಸ್ಥ ಉಪಾಲಿಯು ಮಧ್ಯದ ಬಾಗಿಲ ಬಳಿಯಿರುವ ಪಡಸಾಲೆ ಎಲ್ಲಿತ್ತೋ ಅಲ್ಲಿಗೆ ಬಂದನು. ಬಂದನಂತರ ಅಲ್ಲಿದ್ದ ಆಸನಗಳಲ್ಲೆಲ್ಲಾ ಮುಖ್ಯವಾದಂತಹ, ಶ್ರೇಷ್ಠವಾದಂತಹ, ಉತ್ತಮವಾದಂತಹ, ಎತ್ತರವಿರುವಂತಹ ಆಸನದಲ್ಲಿ ತಾನು ಕುಳಿತುಕೊಂಡ ಬಳಿಕ, ಕಾವಲುಗಾರರನ್ನು ಕರೆದನು- ಯೋಗ್ಯ ಕಾವಲುಗಾರನೆ, ಎಲ್ಲಿ ನಿಗಂಠನಾತಪುತ್ರರು ಇರುವರೋ ಅಲ್ಲಿಗೆ ಹೋಗು, ಹೋದಬಳಿಕ ನಿಗಂಠನಾತಪುತ್ರರಿಗೆ ಹೀಗೆಂದು ಹೇಳು- ಭಂತೆ, ಗೃಹಸ್ಥ ಉಪಾಲಿಯು ಹೀಗೆ ಹೇಳಿದ್ದಾರೆ- ಭಂತೆ ಒಂದುವೇಳೆ ಒಳಗೆ ಬರುವ ಇಚ್ಛೆಯಿದ್ದರೆ ಬರಬಹುದು ಎಂದು.

ಆಗಲಿ ಪೂಜ್ಯರೇ ಎಂದು ಆ ಕಾವಲುಗಾರನು ಗೃಹಸ್ಥ ಉಪಾಲಿಗೆ ಉತ್ತರ ಕೊಟ್ಟ ಬಳಿಕ, ಎಲ್ಲಿ ನಿಗಂಠನಾತಪುತ್ರರಿದ್ದರೋ ಅಲ್ಲಿಗೆ ಬಂದನು. ಬಂದನಂತರ ನಿಗಂಠನಾತಪುತ್ರರಿಗೆ ಹೀಗೆಂದು ಹೇಳಿದನು- ಭಂತೆ, ಗೃಹಸ್ಥ ಉಪಾಲಿಯು ಹೀಗೆ ಹೇಳಿದ್ದಾರೆ- ಭಂತೆ ಒಂದುವೇಳೆ, ಒಳಗೆ ಬರುವ ಇಚ್ಛೆಯಿದ್ದರೆ ಬರಬಹುದು ಎಂದು.

ಆಗ ನಿಗಂಠನಾತಪುತ್ರನು ದೊಡ್ಡದಾದ ನಿಗಂಠರ ಸಮೂಹದೊಂದಿಗೆ ಎಲ್ಲಿ ಮಧ್ಯದ ಬಾಗಿಲ ಹತ್ತಿರವಿರುವ ಪಡಸಾಲೆಗೆ ಬಂದನು. ಆಗ ಗೃಹಸ್ಥ ಉಪಾಲಿಯು ಹಿಂದಿನ ಸಮಯದಲ್ಲಾಗಿದ್ದರೆ, ದೂರದಲ್ಲಿ ಬರುತ್ತಿರುವ ನಿಗಂಠನಾತಪುತ್ರರನ್ನು ಕಂಡಕೂಡಲೇ ತಕ್ಷಣವೇ ಹತ್ತಿರಕ್ಕೆ ಹೋಗಿ ಸ್ವಾಗತಿಸಿ, ನಂತರ ಮುಖ್ಯವಾದಂತಹ ಮತ್ತು ಶ್ರೇಷ್ಠವಾದಂತಹ ಮತ್ತು ಉತ್ತಮವಾಗಿರುವಂತಹ ಮತ್ತು ಎತ್ತರವಾಗಿರುವಂತಹ ಆಸನಕ್ಕೆ ಕರೆದೊಯ್ದು, ತಾನು ಹೊದ್ದಿರುವ ಮೇಲು ಬಟ್ಟೆಯಲ್ಲಿ ಅದನ್ನು ಶುದ್ಧಮಾಡಿ, ಅದರ ಮೇಲೆ ಹಾಕಿ ಕುಳ್ಳಿರಿಸುತ್ತಿದ್ದನು. ಆದರೆ ಈಗ ತಾನೇ ಮುಖ್ಯವಾದಂತಹ ಮತ್ತು ಶ್ರೇಷ್ಠವಾದಂತಹ ಮತ್ತು ಉತ್ತಮವಾದಂತಹ ಮತ್ತು ಎತ್ತರವಾಗಿರುವಂತಹ ಆಸನದಲ್ಲಿ ಕುಳಿತುಕೊಂಡು ನಿಗಂಠನಾತಪುತ್ರನಿಗೆ ಹೀಗೆ ಹೇಳಿದನು- ಭಂತೆ, ಇಲ್ಲಿ ಆಸನಗಳಿವೆ. ತಾವು ನಿಜಕ್ಕೂ ಬಯಸುವುದಾದರೆ ಕುಳಿತುಕೊಳ್ಳಿ ಎಂದು. ಹೀಗೆ ಹೇಳಿದ ಮೇಲೆ ನಿಗಂಠನಾತಪುತ್ರನು ಗೃಹಸ್ಥ ಉಪಾಲಿಗೆ ಹೀಗೆ ಹೇಳಿದನು- ಗೃಹಸ್ಥನೆ, ನೀನು ಹುಚ್ಚನಾಗಿದ್ದೀಯೆ, ಗೃಹಸ್ಥನೇ ನೀನು ಮಂದ ಬುದ್ಧಿಯವನಾಗಿದ್ದೀಯೆ. ಭಂತೇ ನಾನು ಶ್ರಮಣ ಗೌತಮರ ವಾದ ತಪ್ಪು ಎಂದು ನಿರೂಪಿಸುತ್ತೇನೆ ಎಂದು ಹೋದವನು, ಹಿರಿದಾದ ವಾದಗಳ ಕಗ್ಗಂಟಿನಲ್ಲಿ ಸಿಲುಕಿಕೊಂಡು ಹಿಂತಿರುಗಿ ಬಂದಿದ್ದೀಯೆ. ಹೇಗೆಂದರೆ, ಗೃಹಸ್ಥನೆ, ಒಬ್ಬನು ಕಸಿ ಮಾಡಿಸುವೆನು ಎಂದು ಹೋದವನು, ಎರಡನ್ನು ಕಸಿ ಮಾಡಿಸಿಕೊಂಡು ಹಿಂತಿರುಗಿ ಬಂದಂತಾಗಿದೆ. ಹೇಗೆಂದರೆ ಗೃಹಸ್ಥನೆ, ಒಬ್ಬನು ಕಣ್ಣುಗಳನ್ನು ತೆಗೆಯುವೆ ಎಂದು ಹೋದವನು, ಎರಡು ಕಣ್ಣುಗಳನ್ನು ಕಳೆದುಕೊಂಡು ಹಿಂತಿರುಗಿ ಬಂದಂತಾಗಿದೆ; ಅದೇರೀತಿಯಲ್ಲಿ ನೀನು, ಗೃಹಸ್ಥನೇ. ಭಂತೇ, ಶ್ರಮಣ ಗೌತಮರ ವಾದ ತಪ್ಪು ಎಂದು ನಿರೂಪಿಸುತ್ತೇನೆ ಎಂದು ಹೋದವನು ಹಿರಿದಾದ ವಾದಗಳ ಕಗ್ಗಂಟಿನಲ್ಲಿ ಸಿಕ್ಕಿಕೊಂಡು ಹಿಂತಿರುಗಿ ಬಂದಿದ್ದೀಯೆ. ಗೃಹಸ್ಥನೆ, ನಿನ್ನನ್ನು ಶ್ರಮಣ ಗೌತಮನು ತನ್ನ ಮರುಳುಮಾಡುವ ಮಾಯೆಯಿಂದ ಮರುಳುಗೊಳಿಸಿ ಮತಾಂತರಿಸಿದ್ದಾನೆ ಎಂದು.

19. ಭಂತೆ, ಅದು ಶುಭಕ್ಕಾಗಿ ಮತಾಂತರಗೊಳಿಸುವ ಮರುಳುಮಾಡುವಿಕೆ. ಭಂತೇ, ಒಳ್ಳೆಯದಕ್ಕಾಗಿ ಮತಾಂತರಗೊಳಿಸುವ ಮರುಳು ಮಾಡುವಿಕೆ,44 ಭಂತೆ, ನನ್ನ ಪ್ರಿಯಜನರೂ ಮತ್ತು ಬಂಧು ಬಾಂಧವರುಗಳನ್ನು ಈ ರೀತಿಯ ಮತಾಂತರಗೊಳಿಸುವ ಮರುಳು ಮಾಡುವಿಕೆಯಿಂದ, ಮತಾಂತರಗೊಳಿಸಿದ್ದೇ ಆದರೆ, ಆ ಪ್ರಿಯ ಜನರಿಗೆ ಮತ್ತು ಬಂಧು ಬಾಂಧವರುಗಳಿಗೆ ಇದರಿಂದಾಗಿ ಬಹುಕಾಲದವರೆಗೆ ಹಿತವೂ ಮತ್ತು ಸುಖವೂ ಉಂಟಾಗುತ್ತದೆ. ಭಂತೇ ಎಲ್ಲಾ ಕ್ಷತ್ರಿಯ ಜನಗಳನ್ನು ಈ ರೀತಿಯ ಮತಾಂತರಗೊಳಿಸುವ ಮರುಳು ಮಾಡುವಿಕೆಯಿಂದ, ಮರುಳುಗೊಳಿಸಿದ್ದೇ ಆದರೆ, ಆ ಎಲ್ಲಾ ಕ್ಷತ್ರಿಯರಿಗೆ ಬಹುಕಾಲದವರೆಗೆ ಹಿತವೂ ಸುಖವೂ ಉಂಟಾಗುತ್ತದೆ; ಭಂತೆ, ಎಲ್ಲಾ ಬ್ರಾಹ್ಮಣರನ್ನೂ ಕೂಡ ಪುನರುಚ್ಚರಿಸಿ... ವೈಶ್ಯರನ್ನು ಪುನರುಚ್ಚರಿಸಿ... ಶೂದ್ರರನ್ನು ಈ ರೀತಿಯ ಮತಾಂತರಗೊಳಿಸುವಿಕೆಯಿಂದ, ಮತಾಂತರಗೊಳಿಸಿದ್ದೇ ಆದರೆ ಇದರಿಂದಾಗಿ ಅವರೆಲ್ಲ ಶೂದ್ರರಿಗೆ ಬಹುಕಾಲದವರೆಗೆ ಹಿತವೂ, ಸುಖವೂ ಉಂಟಾಗುತ್ತದೆ; ಭಂತೇ, ಈ ಲೋಕದಲ್ಲಿರುವ ಎಲ್ಲಾ ದೇವತೆಗಳನ್ನೂ, ಮಾರರನ್ನೂ, ಬ್ರಹ್ಮರನ್ನೂ, ಶ್ರಮಣರನ್ನೂ, ಬ್ರಾಹ್ಮಣರನ್ನೂ, ಪ್ರಜೆಗಳನ್ನೂ, ರಾಜರನ್ನೂ, ಮನುಷ್ಯರೆಲ್ಲರನ್ನೂ ಈ ರೀತಿಯ ಮತಂತರಗೊಳಿಸುವಿಕೆಯಿಂದ ಮತಾಂತರಗೊಳಿಸಿದ್ದೇ ಆದರೆ, ಈ ಲೋಕದಲ್ಲಿರುವ ಆ ಎಲ್ಲಾ ದೇವತೆಗಳಿಗೆ, ಮಾರರಿಗೆ, ಬ್ರಹ್ಮರಿಗೆ, ಶ್ರಮಣರಿಗೆ, ಬ್ರಾಹ್ಮಣರಿಗೆ, ಪ್ರಜೆಗಳಿಗೆ, ರಾಜರಿಗೆ, ಮನುಷ್ಯರೆಲ್ಲರಿಗೆ, ಬಹುಕಾಲದವರೆಗೆ ಹಿತವೂ-ಸುಖವೂ ಉಂಟಾಗುತ್ತದೆ ಎಂದು. ಭಂತೇ ಅದಕ್ಕಾಗಿ ನಾನು ಒಂದು ಉದಾಹರಣೆಯನ್ನು ಕೊಡುತ್ತೇನೆ. ಏಕೆಂದರೆ ಬಹುಮಂದಿ ಬುದ್ಧಿವಂತ ಮನುಷ್ಯರು, ಉದಾಹರಣೆಯೊಂದಿಗೆ ಹೇಳಿದಾಗ ಅದರ ಅರ್ಥವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುತ್ತಾರೆ.

20. ಭಂತೆ, ಹಿಂದೊಮ್ಮೆ ಯಾರೊಬ್ಬ ಬ್ರಾಹ್ಮಣನು, ಮುದುಕನಾದಂತಹವನು, ವೃದ್ಧನಾದವನು, ವರುಷಗಳಿಂದಾಗಿ ಬಳಲಿದಂತಹವು, ತನ್ನ ಇನ್ನೂ ಯುವತಿಯಾಗಿರುವಂತಹ, ಅದರಲ್ಲೂ ಗರ್ಭಿಣಿಯಾಗಿರುವ ಮತ್ತು ಹೆರಿಗೆಯ ದಿನಗಳು ಹತ್ತಿರವಾಗಿರುವಂತಹ ಬ್ರಾಹ್ಮಣ ಹೆಂಡತಿಯೊಂದಿಗೆ ಇದ್ದಾನೆ. ಆಗ ಭಂತೆ, ಆ ಯುವ ಹೆಂಡತಿ ಆ ಬ್ರಾಹ್ಮಣನಿಗೆ ಹೀಗೆ ಹೇಳಿದಳು- ಬ್ರಾಹ್ಮಣ, ನೀನು ಹೋಗು, ಪೇಟೆಯಿಂದ ಒಂದು ಕೋತಿಮರಿ ಬೊಂಬೆಯನ್ನು ಕೊಂಡುಕೊಂಡು ಬಾ, ಅದು ನನ್ನ ಮಗುವಿಗೆ ಆಟವಾಡುವುದಕ್ಕೆ ಜೊತೆಗಾರ ಆಗುತ್ತದೆ ಎಂದು. ಭಂತೆ, ಹೀಗೆ ಹೇಳಿದ ಮೇಲೆ ಆ ಬ್ರಾಹ್ಮಣನು ಆ ಯುವ ಹೆಂಡತಿಗೆ ಹೀಗೆ ಹೇಳಿದನು- ನನ್ನಾಕೆಯೇ ಇರು, ನಿನ್ನ ಹೆರಿಗೆ ಆಗಲಿ, ನನ್ನಾಕೆಯೇ, ಆಗ ಒಂದುವೇಳೆ ನಿನಗೆ ಗಂಡುಮಗು ಹುಟ್ಟಿದರೆ, ಅವನಿಗಾಗಿ ನಾನು ಪೇಟೆಯಿಂದ ಒಂದು ಕೋತಿಮರಿ ಬೊಂಬೆಯನ್ನು ಕೊಂಡುಕೊಂಡು ಬರುತ್ತೇನೆ; ಅದು ನಿನ್ನ ಗಂಡು ಮಗುವಿಗೆ ಆಟವಾಡಲು ಜೊತೆಗಾರನಾಗುತ್ತದೆ. ಆದರೆ ಒಂದುವೇಳೆ, ನನ್ನಾಕೆಯೇ ನಿನಗೆ ಹೆಣ್ಣು ಮಗು ಹುಟ್ಟಿದರೆ, ಆಕೆಗಾಗಿ ನಾನು ಪೇಟೆಯಿಂದ ಒಂದು ಹೆಣ್ಣು ಕೋತಿಮರಿ ಬೊಂಬೆಯನ್ನು ಕೊಂಡುಕೊಂಡು ಬರುತ್ತೇನೆ, ಅದು ನಿನ್ನ ಹೆಣ್ಣು ಮಗುವಿಗೆ ಆಟವಾಡಲು ಜೊತೆಗಾತಿಯಾಗುತ್ತದೆ ಎಂದು. ಎರಡನೆಯ ಬಾರಿಯೂ ಸಹ ಭಂತೆ, ಆ ಯುವ ಹೆಂಡತಿಯು ಪುನರುಚ್ಚರಿಸಿ... ಮೂರನೆಯ ಬಾರಿಯೂ ಕೂಡ, ಭಂತೆ, ಆ ಯುವ ಹೆಂಡತಿಯು ಆ ಬ್ರಾಹ್ಮಣನಿಗೆ ಹೀಗೆ ಹೇಳಿದಳು- ಬ್ರಾಹ್ಮಣ, ನೀನು ಹೋಗು, ಪೇಟೆಯಿಂದ ಒಂದು ಕೋತಿಮರಿ ಬೊಂಬೆಯನ್ನು ಕೊಂಡುಕೊಂಡು ಬಾ ಅದು ನನ್ನ ಮಗುವಿಗೆ ಆಟವಾಡಲು ಜೊತೆಗಾರ ಆಗುತ್ತದೆ ಎಂದು. ಭಂತೆ ಆಗ ಆ ಬ್ರಾಹ್ಮಣನು ಆ ಯುವ ಹೆಂಡತಿಯ ಬಗ್ಗೆ ಅತಿಯಾದ ಪ್ರೀತಿವುಳ್ಳವನಾದ್ದರಿಂದ, ಮೋಹಾನುರಾಗದ ಮನಸ್ಸಿನಿಂದ ಕೂಡಿದವನಾದ್ದರಿಂದ, ಪೇಟೆಯಿಂದ ಒಂದು ಗಂಡು ಕೋತಿಮರಿ ಬೊಂಬೆಯನ್ನು ಕೊಂಡುಕೊಂಡು ತಂದಾದ ಮೇಲೆ, ಆ ಯುವ ಹೆಂಡತಿಗೆ ಹೀಗೆ ಹೇಳಿದನು- ನನ್ನಾಕೆಯೆ, ನಾನು ಪೇಟೆಯಿಂದ ಒಂದು ಗಂಡು ಕೋತಿಮರಿ ಬೊಂಬೆಯನ್ನು ಕೊಂಡುಕೊಂಡು ಬಂದಿದ್ದೇನೆ, ಅದು ನಿನ್ನ ಮಗುವಿಗೆ ಆಟವಾಡಲು ಜೊತೆಗಾರ ಆಗುತ್ತದೆ ಎಂದು. ಭಂತೆ, ಹೀಗೆ ಹೇಳಿದ ಮೇಲೆ ಆ ಯುವ ಹೆಂಡತಿಯು ಆ ಬ್ರಾಹ್ಮಣನಿಗೆ ಹೀಗೆ ಹೇಳಿದಳು- ಬ್ರಾಹ್ಮಣ, ನೀನು ಹೋಗು, ಈ ಕೋತಿಮರಿ ಬೊಂಬೆಯನ್ನು ಬಣ್ಣ ಹಾಕುವವನ ಮಗ ರತ್ತಪಾಣಿ ಎಲ್ಲಿರುವನೋ ಅಲ್ಲಿಗೆ ತೆಗೆದುಕೊಂಡು ಹೋಗು, ಅಲ್ಲಿಗೆ ಹೋದನಂತರ, ಬಣ್ಣ ಹಾಕುವವನ ಮಗ ರತ್ತಪಾಣಿಗೆ ಹೀಗೆ ಹೇಳಿ- ಯೋಗ್ಯನಾದ ರತ್ತಪಾಣಿಯೇ, ಈ ಕೋತಿಮರಿ ಬೊಂಬೆಗೆ ಹಳದಿ ಬಣ್ಣದಂತಹ ಬಣ್ಣದಿಂದ ಕಂಗೊಳಿಸುವಂತೆ ಮಾಡಿ. ಎಲ್ಲಾಕಡೆಯೂ ಚೆನ್ನಾಗಿ ಉಜ್ಜಿ ಉಜ್ಜಿ ಸರಿಮಾಡಿ. ಎರಡೂ ಕಡೆಯೂ ಕೋಮಲವಾಗಿರುವ ಹಾಗೆ ಮಾಡಿಸಬೇಕೆಂಬ ಇಚ್ಛೆಯಾಗಿದೆ ನನಗೆ ಎಂದು.

ಭಂತೆ, ಆಗ ಆ ಬ್ರಾಹ್ಮಣನು, ಆ ಯುವ ಹೆಂಡತಿಯ ಬಗ್ಗೆ ಅತಿಯಾದ ಪ್ರೀತಿವುಳ್ಳವನಾಗಿದ್ದರಿಂದ, ಮೋಹಾನುರಾಗದ ಮನಸ್ಸಿನಿಂದ ಕೂಡಿದವನಾದ್ದರಿಂದ, ಆ ಕೋತಿಮರಿಯನ್ನು ತೆಗೆದುಕೊಂಡು ಎಲ್ಲಿ ಬಣ್ಣ ಹಾಕುವವನ ಮಗ ರತ್ತಪಾಣಿಯಿದ್ದನೋ ಅಲ್ಲಿಗೆ ಬಂದನು. ಅಲ್ಲಿಗೆ ಬಂದ ನಂತರ, ಬಣ್ಣ ಹಾಕುವವನ ಮಗ ರತ್ತಪಾಣಿಗೆ ಹೀಗೆ ಹೇಳಿದನು- ಯೋಗ್ಯನಾದ ರತ್ತಪಾಣಿಯೇ, ಈ ಕೋತಿಮರಿ ಬೊಂಬೆಗೆ, ಹಳದೀ ಬಣ್ಣದಂತಹ ಬಣ್ಣದಿಂದ ಕಂಗೊಳಿಸುವಂತೆ ಮಾಡಿ, ಎಲ್ಲಾಕಡೆಯೂ ಚೆನ್ನಾಗಿ ಉಜ್ಜಿ ಉಜ್ಜಿ ಸರಿಮಾಡಿ, ಎರಡೂ ಕಡೆಯೂ ಕೋಮಲವಾಗಿರುವ ಹಾಗೆ ಮಾಡಿಸಬೇಕೆಂಬ ಇಚ್ಛೆ ನನ್ನದು ಎಂದು. ಭಂತೆ, ಹೀಗೆ ಹೇಳಿದ ಮೇಲೆ, ಆ ಬಣ್ಣ ಹಾಕುವವನ ಮಗ ರತ್ತಪಾಣಿಯು ಆ ಬ್ರಾಹ್ಮಣನಿಗೆ ಹೀಗೆ ಹೇಳಿದನು- ಪೂಜ್ಯರೆ, ಈ ಕೋತಿಮರಿ ಬೊಂಬೆಗೆ ಬಣ್ಣ ಹಾಕಬಹುದಷ್ಟೇ ವಿನಹ ಅದನ್ನು ಚೆನ್ನಾಗಿ ಉಜ್ಜಿ ಉಜ್ಜಿ ಸರಿಮಾಡಲಾಗುವುದಿಲ್ಲ ಮತ್ತು ಕೋಮಲವನ್ನಾಗಿಯೂ ಮಾಡಲಾಗುವುದಿಲ್ಲ ಎಂದು. ಅದೇರೀತಿಯಲ್ಲಿ ಭಂತೆ, ಮೂರ್ಖರಾದ ನಿಗಂಠರುಗಳ ವಾದವು (ಮೂರ್ಖರ) ಮೂರ್ಖತೆಯ ಬಣ್ಣ ಹಾಕಿದಂತಿದೆ ಆದರೆ ತಿಳಿದವರದ್ದಲ್ಲ ಹಾಗೂ ಅದನ್ನು ಉಜ್ಜಿ ಸರಿಪಡಿಸಲಾಗುವಂತಹುದಲ್ಲ ಮತ್ತು ಕೋಮಲವನ್ನಾಗಿ ಮಾಡಲಾಗುವಂತಹುದಲ್ಲ. ಅನಂತರ ಭಂತೆ, ಆ ಬ್ರಾಹ್ಮಣನು, ಇನ್ನೊಂದು ಸಮಯದಲ್ಲಿ ಹೊಸದಾದ ಎರಡು ಬಟ್ಟೆಗಳನ್ನು ತೆಗೆದುಕೊಂಡು ಬಣ್ಣ ಹಾಕುವವನ ಮಗ ರತ್ತಪಾಣಿಯ ಹತ್ತಿರ ಬಂದನು; ಬಂದನಂತರ ಬಣ್ಣ ಹಾಕುವವನ ಮಗ ರಕ್ತಪಾಣಿಗೆ ಹೀಗೆ ಹೇಳಿದನು- ಯೋಗ್ಯನಾದ ರತ್ತಪಾಣಿಯೇ, ಈ ಹೊಸದಾದ ಎರಡು ಬಟ್ಟೆಗಳಿಗೆ, ಹಳದಿ ಎಂದು ಕರೆಯಲ್ಪಡುವಂತಹ ಬಣ್ಣವನ್ನು ಹಾಕಿ. ಚೆನ್ನಾಗಿ ಉಜ್ಜಿ ಉಜ್ಜಿ ಸರಿಮಾಡಿ, ಎರಡೂ ಕಡೆಯೂ ಕೋಮಲವಾಗಿರುವ ಹಾಗೆ ಮಾಡಿಸಬೇಕೆಂಬ ಇಚ್ಛೆ ನನ್ನದು! ಎಂದು ಹೀಗೆ ಹೇಳಿದ ಮೇಲೆ ಭಂತೆ, ಆ ಬಣ್ಣ ಹಾಕುವವನ ಮಗ ರತ್ತಪಾಣಿಯು ಆ ಬ್ರಾಹ್ಮಣನಿಗೆ ಹೀಗೆ ಹೇಳಿದನು- ಪೂಜ್ಯರೇ, ಈ ಹೊಸದಾದ ಎರಡೂ ಬಟ್ಟೆಗಳಿಗೆ ಬಣ್ಣ ಹಾಕಬಹುದು, ಅವುಗಳನ್ನು ಚೆನ್ನಾಗಿ ಉಜ್ಜಿ ಉಜ್ಜಿ ಸರಿಮಾಡಬಹುದು ಮತ್ತು ಕೋಮಲವಾಗಿಯೂ ಮಾಡಬಹುದು ಎಂದು. ಅದೇರೀತಿಯಲ್ಲಿ ಭಂತೆ, ಆ ಅರಹಂತರಾದ, ಸಮ್ಯಕ್ ಸಂಬುದ್ಧರಾದ, ಭಗವಾನರ ವಾದವು ತಿಳುವಳಿಕೆಯ (ತಿಳುವಳಿಕೆವುಳ್ಳವರ) ಬಣ್ಣ ಹಾಕಿದಂತಿದೆ. ಆದರೆ (ಮೂರ್ಖರ) ಮೂರ್ಖತೆಯದಲ್ಲ ಹಾಗೂ ಅದು ಉಜ್ಜಿ ಸರಿಪಡಿಸಬಲ್ಲದು ಮತ್ತು ಕೋಮಲವಾಗಿ ಮಾಡಬಲ್ಲದು ಎಂದು.

ಗೃಹಸ್ಥನೆ, ರಾಜ ಹಾಗೂ ಆಸ್ಥಾನಿಕರು ನಿನ್ನನ್ನು ಹೀಗೆಂದು ತಿಳಿದುಕೊಂಡಿದ್ದಾರೆ- ಗೃಹಸ್ಥ ಉಪಾಲಿಯು ನಿಗಂಠನಾತಪುತ್ರರ ಶಿಷ್ಯನು ಎಂದು. ಹಾಗಿದ್ದರೆ ಗೃಹಸ್ಥನೆ, ನೀನು ಯಾರ ಶಿಷ್ಯನೆಂದು ತಿಳಿಸಬೇಕು ಎಂದು.

ಹೀಗೆ ಹೇಳಿದ ಮೇಲೆ ಗೃಹಸ್ಥ ಉಪಾಲಿಯು ಕುಳಿತಲ್ಲಿಂದ ಎದ್ದು, ಒಂದೇ ಹೆಗಲಮೇಲೆ (ಎಡದ ಭುಜದ ಮೇಲೆ) ಇರುವಂತೆ ಮೇಲು ಹೊದಿಕೆಯನ್ನು ಹೊದ್ದುಕೊಂಡು, ಎತ್ತಕಡೆ ಭಗವಾನರಿದ್ದಾರೋ ಆ ಕಡೆಗೆ ಕೈಜೋಡಿಸಿ ನಮನಮಾಡಿ, ನಿಗಂಠನಾತಪುತ್ರರಿಗೆ ಹೀಗೆ ಹೇಳಿದನು-

ಭಂತೆ ಹಾಗಾದರೆ ನಾನು ಯಾರ ಶಿಷ್ಯನೆಂದು ಕೇಳಿ ತಿಳಿಯಿರಿ ಎಂದು.

21. ಧೀರನ, ಅಜ್ಞಾನಮುಕ್ತನ, ಮನಸ್ಸಿನ ಬಂಜರುತನವನ್ನು ಸೀಳಿದವನ, ವಿಜಯವನ್ನು ಜಯಿಸಿದವನ |

ದುಃಖವಿಲ್ಲದವನ, ಅತ್ಯಂತ ಸಮವಾದ ಚಿತ್ತವುಳ್ಳವನ, ಶೀಲವನ್ನು ಬೆಳೆಸಿಕೊಂಡವನ, ಒಳ್ಳೆಯ ಪ್ರಜ್ಞೆಯುಳ್ಳವನ|

ಎಲ್ಲವನ್ನೊಳಗೊಂಡವನ, ಮಲವಿಲ್ಲದವನ,45 ಅಂಥ ಭಗವಂತರ ಶಿಷ್ಯನು ನಾನು ||

ಸಂಶಯಗಳಿಲ್ಲದವನ, ಸಂತೋಷದಿಂದಿರುವವನ, ಲೌಕಿಕ ವಸ್ತುಗಳನ್ನು ತ್ಯಜಿಸಿದವನ, ಪರಮಸುಖದಲ್ಲಿ ಆನಂದ ಕಾಣುವವನ |

ಶ್ರಮಣನ (ಸಾಧನೆಯ ಉನ್ನತಿಯನ್ನು ಪಡೆದ) ಮನುಷ್ಯನ, ತನ್ನ ಕೊನೆಯ ಶರೀರದಲ್ಲಿರುವವನ, (ಸಾಧನೆಯ ಉನ್ನತಿಯನ್ನು ಪಡೆದ) ನರನ |

ಉಪಮಾತೀತನ, ಕಶ್ಮಲಮುಕ್ತನ - ಅಂಥ ಭಗವಂತರ ಶಿಷ್ಯನು ನಾನು ||

ದೃಢನಾದವನ, ಕುಶಲನ, (ಉತ್ತಮ ಸ್ಥಿತಿಗೆ) ನಡೆಸುವವನ, ಸಾರಥಿವರನ |

ಅನುತ್ತರವಾದವನ, ಹೊಳೆಯುವವನ, ಅನಿಶ್ಚಿತತೆಯಿಲ್ಲದವನ, ಪ್ರಭೆಯನ್ನು ತರುವವನ |

ಗರ್ವವನ್ನು ಮುರಿದವನ, ವೀರನ- ಅಂಥ ಭಗವಂತರ ಶಿಷ್ಯನು ನಾನು ||

ಮನುಷ್ಯರಲ್ಲಿ ಉತ್ತಮನಾದವನ, ಅಳೆಯಲಾಗದವನ, ಗಂಭೀರನಾದವನ,46 ಜ್ಞಾನವನ್ನು ಗೆದ್ದುಕೊಂಡವನ |

ಸುರಕ್ಷಿತವನ್ನು ತರುವವನ, ಜ್ಞಾನಿಯ, ಧಮ್ಮದ ಮೆಲೆ ನಿಂತಿರುವವನ, ತನ್ನನ್ನು ತಾನು ದಮಿಸಿಕೊಂಡವನ|

ಅಂಟುವಿಕೆಯಿಂದ ದೂರನಾದವನ, ಮುಕ್ತನಾದವನ- ಅಂಥ ಭಗವಂತರ ಶಿಷ್ಯನು ನಾನು ||

ಶ್ರೇಷ್ಠನ, ದೂರ ಇರುವಿಕೆಯವನ, ಬಂಧನ ನಾಶಗೊಳಿಸಿದವನ, ಮುಕ್ತನಾದವನ|

ಮೃದುಭಾಷಿಯ, ಶುದ್ಧನಾದವನ, ಧ್ವಜ ಕೆಳಗಿಳಿಸಿದವನ (ಸಮರ ಅಂತ್ಯವಾಗುವುದು), ರಾಗವಿಲ್ಲದವನ|

ದಮಿಸಿದವನ, ಅಡೆತಡೆ ಇಲ್ಲದವನ- ಅಂಥ ಭಗವಂತರ ಶಿಷ್ಯನು ನಾನು ||

(ವಿಪಸ್ಸಿ ಬುದ್ಧರ ನಂತರ) ಏಳನೇ ಋಷಿಯಾದವನ,47 (ಮೂಢನಂಬಿಕೆಗಳಲ್ಲಿ) ವಿಶ್ವಾಸ ಇಲ್ಲದವನ, ಮೂರು ಜ್ಞಾನಗಳನ್ನೂ ಹೊಂದಿದವನ, ಉತ್ಕೃಷ್ಟ ಸ್ಥಿತಿ ತಲುಪಿದವನ |

ತೊಳೆದವನ, ಪದಗಳಲ್ಲಿ ನಿಪುಣನಾದವನ, ಶಾಂತನಾದವನ, ಜ್ಞಾನವನ್ನು ಹುಡುಕಿದವನ |

ಧಮ್ಮದಾತನಾದವನ, ಸಾಮಥ್ರ್ಯವುಳ್ಳವನ- ಅಂಥ ಭಗವಂತರ ಶಿಷ್ಯನು ನಾನು ||

ಉದಾತ್ತನಾದವನ, ವೃದ್ಧಿ ಹೊಂದಿದವನ, ಪಡೆಯಬೇಕಾದುದ್ದನ್ನು ಪಡೆದವನ, ವಿವರಿಸುವವನ |

ಎಚ್ಚರಿಕೆಯುಳ್ಳವನ, ವಿದರ್ಶನವುಳ್ಳವನ, ರಾಗದೆಡೆಗೆ ವಾಲದವನ,48 ದ್ವೇಷವಿಲ್ಲದವನ |

ದುಃಖರಹಿತ, ನೈಪುಣ್ಯತೆಯನ್ನು ಪಡೆದ- ಅಂಥ ಭಗವಂತರ ಶಿಷ್ಯನು ನಾನು ||

ಉತ್ಕೃಷ್ಟವಾದುದರೆಡೆಗೆ ಹೋದವನ, ಧ್ಯಾನಿಯಾದವನ, ಒಳಗೆ ಅಡೆತಡೆ ಇಲ್ಲದವನ, ಶುದ್ಧನಾದವನ |

ಅಂಟಿಕೊಳ್ಳದವನ, ಹಿತನಾದವನ, ದೂರನಾದವನ, ಶ್ರೇಷ್ಠವಾದುದನ್ನು ಪಡೆದವನ |

ದಾಟಿದವನ, ಸಹಾಯ ಒಟ್ಟುವವನ- ಅಂಥ ಭಗವಂತರ ಶಿಷ್ಯನು ನಾನು ||

ಶಾಂತತೆಯನ್ನು ಹೊಂದಿದವನ, ಪ್ರಜ್ಞೆಯಿಂದ ತುಂಬಿದವನ, ಮಹಾಪ್ರಜ್ಞೆಯನ್ನು ಹೊಂದಿದವನ, ಲೋಭವಿಲ್ಲದವನ|

ತಥಾಗತ, ಸುಗತರ, ಹೋಲಿಸಲು ಅಸಾಧ್ಯವಾದವನ, ಸರಿಸಮಾನವಿಲ್ಲದವನ |

ವಿಸಾರದನ, ನಿಪುಣನ- ಅಂಥ ಭಗವಂತರ ಶಿಷ್ಯನು ನಾನು ||

ತೃಷ್ಣೆಯನ್ನು ಕತ್ತರಿಸಿದವನ, ಬುದ್ಧನ, ಹೊಗೆ (ಅಸ್ಪಷ್ಟತೆ) ಇಲ್ಲದವನ, ಕೊಳಕು ಇಲ್ಲದವನ |

ದಾನಕ್ಕೆ ಯೋಗ್ಯನಾದವನ, ಯಕ್ಖನ, ಉತ್ತಮ ವ್ಯಕ್ತಿಯ, ಅಳತೆಗೆ ಮೀರಿದವನ |

ಮಹಾ ವ್ಯಕ್ತಿಯ, ಯಶಸ್ಸಿನ ತುದಿಯನ್ನು ತಲುಪಿದವನ- ಅಂಥ ಭಗವಂತರ ಶಿಷ್ಯನು ನಾನು ||

22. ಗೃಹಸ್ಥನೆ, ಯಾವಾಗ ನಿನ್ನಿಂದ ಶ್ರಮಣ ಗೌತಮನ ಬಗ್ಗೆ ಈ ವರ್ಣನೆಗಳು ಕೂಡಿಹಾಕಲ್ಪಟ್ಟವು? ಎಂದು.

ಭಂತೆ, ಹೇಗೆಂದರೆ ಅನೇಕ ಹೂಗಳ ಒಂದು ದೊಡ್ಡ ರಾಶಿ ಇದ್ದು, ಅದರಿಂದ ಒಬ್ಬ ದಕ್ಷನಾದ ಹೂಗಾರ ಅಥವಾ ಹೂಗಾರನ ಸಹಾಯಕ ನಾನಾಬಗೆಯ ಮಾಲೆಗಳನ್ನು ಕಟ್ಟಬಹುದು; ಹಾಗೆಯೇ, ಭಂತೆ, ಈ ಭಗವಂತರು ಅನೇಕ ವರ್ಣನೆಗಳನ್ನು ಪಡೆದಿದ್ದಾರೆ. ಅನೇಕ ನೂರು ವರ್ಣನೆಗಳನ್ನು ಪಡೆದಿದ್ದಾರೆ| ಭಂತೆ, ಈ ವರ್ಣನೆಗಳಿಗೆ ಅರ್ಹರಾದವರನ್ನು ಯಾರು ತಾನೇ ವರ್ಣಿಸುವುದಿಲ್ಲ? ಎಂದು.

ಆಗ ನಿಗಂಠನಾಥಪುತ್ರನು ಭಗವಾನರ ಹೊಗಳಿಕೆಯನ್ನು ಸಹಿಸಲಾಗದ ಕಾರಣ ಅಲ್ಲಿಯೇ ಬಿಸಿಯಾದ ರಕ್ತ ಅವನ ಬಾಯಿಯಿಂದ ಹೊರಬಂದಿತು.49

ಇಲ್ಲಿಗೆ ಉಪಾಲಿ ಸುತ್ತ ಮುಗಿಯಿತು

ಟಿಪ್ಪಣಿಗಳು [4]