ಅಭಯರಾಜಕುಮಾರ ಸುತ್ತ
1. ತಥಾಗತರು ಅಪ್ರಿಯವಾದುದನ್ನು ಮಾತನಾಡುವರೆ?
ಹೀಗೆ ನಾನು ಕೇಳಿದ್ದೇನೆ. ಒಂದುಸಲ ಭಗವಾನರು ರಾಜಗೃಹದ ವೇಳುವನದಲ್ಲಿನ ಅಳಿಲುಧಾಮದಲ್ಲಿ ತಂಗಿದ್ದರು. ಹೀಗಿರುವಲ್ಲಿ ಅಭಯರಾಜಕುಮಾರನು ಎಲ್ಲಿ ನಿಗಂಠನಾತಪುತ್ರನಿದ್ದನೊ ಅಲ್ಲಿಗೆ ಬಂದನು; ಸಮೀಪಕ್ಕೆ ಬಂದು ನಿಗಂಠನಾತಪುತ್ರನಿಗೆ ನಮಸ್ಕರಿಸಿ ಒಂದೆಡೆ ಕುಳಿತನು. ಒಂದೆಡೆ ಕುಳಿತ ಅಭಯ ರಾಜಕುಮಾರನಿಗೆ ನಿಗಂಠನಾತಪುತ್ರನು ಹೀಗೆ ಹೇಳಿದನು- ಬಾ ರಾಜಕುಮಾರ, ನೀನು ಶ್ರಮಣ ಗೌತಮರ ತತ್ವವನ್ನು ಖಂಡಿಸು. ಇದರ ಪರಿಣಾಮದಿಂದಾಗಿ ನಿನ್ನ ಒಳ್ಳೆಯ ಕೀರ್ತಿಯು ಹೀಗೆ ಹರಡುವುದು- ಅಭಯರಾಜಕುಮಾರನಿಂದ ಮಹಾವೃದ್ಧಿಶಕ್ತಿಯುಳ್ಳ ಮಹಾಪ್ರತಾಪವುಳ್ಳ ಶ್ರಮಣ ಗೌತಮರ ತತ್ವವು ಖಂಡಿಸಲ್ಪಟ್ಟಿದೆ.
ಆದರೆ ಭಂತೆ, ಮಹಾವೃದ್ಧಿಶಕ್ತಿಯುಳ್ಳ ಮಹಾಪ್ರತಾಪುಳ್ಳ ಶ್ರಮಣ ಗೌತಮರ ತತ್ವವನ್ನು ನಾನು ಹೇಗೆ ಖಂಡಿಸಲಿ? ಎಂದು.
ಬಾ ರಾಜಕುಮಾರ, ನೀನು ಎಲ್ಲಿ ಶ್ರಮಣ ಗೌತಮರಿರುವರೋ ಅಲ್ಲಿಗೆ ಹೋಗು; ಸಮೀಪಕ್ಕೆ ಹೋಗಿ ಶ್ರಮಣ ಗೌತಮರಿಗೆ ಹೀಗೆ ಹೇಳು- ಭಂತೆ, ಇತರರಿಗೆ ಅಪ್ರಿಯವಾದಂತಹ ಒಪ್ಪಿಗೆಯಾಗದಂತಹ ಮಾತುಗಳನ್ನು ತಥಾಗತರು ಆಡುವರೆ ಎಂದು? ಒಂದುವೇಳೆ ಆ ಶ್ರಮಣ ಗೌತಮರು ಹೀಗೆ ಕೇಳಿದ್ದಕ್ಕೆ, ರಾಜಕುಮಾರ ಇತರರಿಗೆ ಅಪ್ರಿಯವಾದಂತಹ ಒಪ್ಪಿಗೆಯಾಗದಂತಹ ಮಾತನ್ನು ತಥಾಗತರು ಆಡುತ್ತಾರೆ ಎಂದು ಉತ್ತರಿಸಿದರೆ, ನಂತರ ನೀನು ಹೀಗೆ ಕೇಳು- ಭಂತೆ, ಹಾಗಾದರೆ ತಮಗೆ ಮತ್ತು ಸಾಮಾನ್ಯ ಮನುಷ್ಯನಿಗೆ ಇರುವ ವ್ಯತ್ಯಾಸವೇನು? ಸಾಮಾನ್ಯ ಮನುಷ್ಯನು ಮಾತ್ರ ಇತರರಿಗೆ ಅಪ್ರಿಯವಾದಂತಹ, ಒಪ್ಪಿಗೆಯಾಗದಂತಹ ಮಾತನ್ನು ಆಡುತ್ತಾನೆ. ಒಂದು ವೇಳೆ ಶ್ರಮಣ ಗೌತಮರು ಹೀಗೆ ಕೇಳಿದ್ದಕ್ಕೆ, ರಾಜಕುಮಾರ, ಇತರರಿಗೆ ಅಪ್ರಿಯವಾದಂತಹ, ಒಪ್ಪಿಗೆಯಾಗದಂತಹ ಮಾತನ್ನು ತಥಾಗತರು ಆಡುವುದಿಲ್ಲ ಎಂದು ಉತ್ತರಿಸಿದರೆ, ನಂತರ ನೀನು ಹೀಗೆ ಕೇಳು- ಭಂತೇ, ಹಾಗಾದರೆ ತಮ್ಮಿಂದ ದೇವದತ್ತನು ಹೀಗೇಕೆ ಹೇಳಲ್ಪಟ್ಟಿದ್ದಾನೆ- ದೇವದತ್ತನು ದುಃಖಪೂರಿತ ಸ್ಥಿತಿಗೆ ಸೇರಿದವನು, ದೇವದತ್ತನು ನರಕಕ್ಕೆ ಸೇರಿದವನು, ದೇವದತ್ತನು (ಈ) ಕಲ್ಪದವರೆಗೆ (ನರಕದಲ್ಲಿ) ಇರುತ್ತಾನೆ, ದೇವದತ್ತನು ಸರಿಪಡಿಸಲಾಗದಂತಹವನು ಎಂದು? ತಮ್ಮ ಆ ಮಾತಿನಿಂದ ದೇವದತ್ತನು ಕೋಪಗೊಂಡಿದ್ದನು ಮತ್ತು ಅಸಂತುಷ್ಟನಾಗಿದ್ದನು. ರಾಜಕುಮಾರ, ಹೀಗೆ ನಿನ್ನಿಂದ ಶ್ರಮಣ ಗೌತಮರು ಎರಡು ಕೊಂಬಿನ ಪೇಚಿನ ಪ್ರಶ್ನೆಯನ್ನು ಕೇಳಲ್ಪಟ್ಟಾಗ ಅದನ್ನು ನುಂಗಲೂ ಸಾಧ್ಯವಾಗುವುದಿಲ್ಲ, ಉಗುಳಲೂ ಸಾಧ್ಯವಾಗುವುದಿಲ್ಲ. ಹೇಗೆಂದರೆ ಒಬ್ಬನ ಗಂಟಲಿನಲ್ಲಿ ಕಬ್ಬಿಣದ ಕೊಕ್ಕೆಯು ಸಿಕ್ಕಿಕೊಂಡಾಗ, ಅವನಿಗೆ ಅದನ್ನು ನುಂಗಲೂ ಸಾಧ್ಯವಾಗುವುದಿಲ್ಲ, ಉಗುಳಲೂ ಸಾಧ್ಯವಾಗುವುದಿಲ್ಲ; ಹಾಗೆಯೇ, ರಾಜಕುಮಾರ ನಿನ್ನಿಂದ ಶ್ರಮಣ ಗೌತಮರು ಎರಡು ಕೊಂಬಿನ ಪೇಚಿನ ಪ್ರಶ್ನೆಯನ್ನು ಕೇಳಲ್ಪಟ್ಟಾಗ ಅದನ್ನು ನುಂಗಲೂ ಸಾಧ್ಯವಾಗುವುದಿಲ್ಲ, ಅದನ್ನು ಉಗುಳಲೂ ಸಾಧ್ಯವಾಗುವುದಿಲ್ಲ ಎಂದು.
ಹಾಗೆಯೇ ಆಗಲಿ, ಭಂತೆ ಎಂದು ಅಭಯರಾಜಕುಮಾರನು ನಿಗಂಠನಾತಪುತ್ರನಿಗೆ ಉತ್ತರಿಸಿ ಆಸನದಿಂದ ಮೇಲೆದ್ದು ನಿಗಂಠನಾತಪುತ್ರನಿಗೆ ನಮಸ್ಕರಿಸಿ ಪ್ರದಕ್ಷಿಣೆ ಮಾಡಿ ಎಲ್ಲಿ ಭಗವಾನರಿದ್ದಾರೋ ಅಲ್ಲಿಗೆ ಬಂದನು; ಸಮೀಪಕ್ಕೆ ಬಂದು ಭಗವಾನರಿಗೆ ನಮಸ್ಕರಿಸಿ ಒಂದೆಡೆ ಕುಳಿತನು.
2. ಒಂದೆಡೆ ಕುಳಿತ ಅಭಯರಾಜಕುಮಾರನಿಗೆ ಸೂರ್ಯನನ್ನು ನೋಡಿ ಹೀಗೆನ್ನಿಸಿತು- ಇಂದು ಭಗವಾನರ ತತ್ವವನ್ನು ಖಂಡಿಸಲು ಇದು ಸರಿಯಾದ ಸಮಯವಲ್ಲ, ನಾಳೆ ನಾನು ನನ್ನ ಮನೆಯಲ್ಲಿಯೇ ಭಗವಾನರ ತತ್ವವನ್ನು ಖಂಡಿಸುವೆನು ಎಂದು ಭಗವಾನರಿಗೆ ಹೀಗೆ ಹೇಳಿದನು- ಭಂತೇ, ಭಗವಾನರು ಇನ್ನೂ ಮೂವರೊಂದಿಗೆ58 ನಾಳಿನ ಭೋಜನವನ್ನು ಸ್ವೀಕರಿಸಲಿ ಎಂದು. ಭಗವಾನರು ಮೌನವಾಗಿದ್ದು ಒಪ್ಪಿಗೆ ಸೂಚಿಸಿರು. ನಂತರ ಅಭಯ ರಾಜಕುಮಾರನು ಭಗವಾನರ ಒಪ್ಪಿಗೆಯನ್ನು ತಿಳಿದು ಆಸನದಿಂದೆದ್ದು, ಭಗವಾನರಿಗೆ ನಮಸ್ಕರಿಸಿ ಪ್ರದಕ್ಷಿಣೆ ಮಾಡಿ ತೆರಳಿದನು. ನಂತರ ಭಗವಾನರು ಆ ರಾತ್ರಿಯು ಅಂತ್ಯವಾದ ಮೇಲೆ, ಬೆಳಗಿನ ಸಮಯದಲ್ಲಿ ಕಾಷಾಯ ವಸ್ತ್ರ ಧರಿಸಿ ಭಿಕ್ಷಾಪಾತ್ರೆ ಮತ್ತು ಮೇಲುಹೊದಿಕೆಯನ್ನು ತೆಗೆದುಕೊಂಡು ಎಲ್ಲಿ ಅಭಯ ರಾಜಕುಮಾರನ ಮನೆಯಿತ್ತೋ ಅಲ್ಲಿಗೆ ಬಂದರು; ಅಲ್ಲಿಗೆ ಬಂದು ಸಿದ್ಧಪಡಿಸಿದ ಆಸನದ ಮೇಲೆ ಕುಳಿತರು. ನಂತರ ಅಭಯರಾಜಕುಮಾರನು ತನ್ನ ಕೈಯಿಂದಲೇ ಬಡಿಸಿ ಭಗವಾನರನ್ನು ಅತ್ಯುತ್ತಮವಾದ ಖಾದ್ಯದಿಂದ, ಭೋಜನದಿಂದ ಸಂತೃಪ್ತಿಗೊಳಿಸಿದನು. ನಂತರ ಭಗವಾನರು ಭೋಜನ ಮುಗಿಸಿ, ಭಿಕ್ಷಾ ಪಾತ್ರೆ ಕೈಯಲ್ಲಿರದೇ ಇರುವಾಗ ಬೇರೆ ಕಡೆ ಕೆಳಗಡೆ ಆಸನವನ್ನು ತೆಗೆದುಕೊಂಡ ಒಂದೆಡೆ ಕುಳಿತನು.
3. ಒಂದೆಡೆ ಕುಳಿತ ಅಭಯರಾಜಕುಮಾರನು ಭಗವಾನರಿಗೆ ಹೀಗೆ ಹೇಳಿದನು- ಭಂತೆ, ಇತರರಿಗೆ ಅಪ್ರಿಯವಾದಂತಹ ಒಪ್ಪಿಗೆಯಾಗದಂತಹ ಮಾತುಗಳನ್ನು ತಥಾಗತರು ಆಡುವರೆ? ಎಂದು.
ರಾಜಕುಮಾರ ಇದು ಏಕಪಕ್ಷೀಯವಾಗಿಲ್ಲವೆ?
ಭಂತೆ, ಹಾಗಾದರೆ ನಿಗಂಠರು ಕಳೆದುಕೊಂಡಂತೆಯೇ ಸರಿ ಎಂದು.
ರಾಜಕುಮಾರ, ನೀನು ಹೀಗೇಕೆ ಹೇಳುತ್ತೀಯ- ಭಂತೆ, ಹಾಗಾದರೆ ನಿಗಂಠರು ಕಳೆದುಕೊಂಡಂತೆಯೇ ಸರಿ ಎಂದು.
ಭಂತೆ, ನಾನು ಎಲ್ಲಿ ನಿಗಂಠನಾತಪುತ್ರನಿದ್ದನೋ ಅಲ್ಲಿಗೆ ಹೋದೆನು. ಸಮೀಪಕ್ಕೆ ಹೋಗಿ ನಿಗಂಠನಾತಪುತ್ರನಿಗೆ ನಮಸ್ಕರಿಸಿ ಒಂದೆಡೆ ಕುಳಿತೆನು. ಒಂದೆಡೆ ಕುಳಿತ ನನಗೆ ನಿಗಂಠನಾತಪುತ್ರನು ಹೀಗೆ ಹೇಳಿದನು- ಬಾ ರಾಜಕುಮಾರ, ನೀನು ಶ್ರಮಣ ಗೌತಮರ ತತ್ವವನ್ನು ಖಂಡಿಸು. ಇದರ ಪರಿಣಾಮದಿಂದಾಗಿ ನಿನ್ನ ಬಗ್ಗೆ ಒಳ್ಳೆಯ ಕೀರ್ತಿಯು ಹೀಗೆ ಹರಡುವುದು- ಅಭಯರಾಜಕುಮಾರನಿಂದ ಮಹಾವೃದ್ಧಿಶಕ್ತಿಯುಳ್ಳ ಮಹಾಪ್ರತಾಪುಳ್ಳ ಶ್ರಮಣ ಗೌತಮರ ತತ್ವವು ಖಂಡಿಸಲ್ಪಟ್ಟಿದೆ ಎಂದು ಹೀಗೆ ಹೇಳಿದ ಮೇಲೆ, ಭಂತೆ, ನಿಗಂಠನಾತಪುತ್ರನಿಗೆ ಹೀಗೆ ಹೇಳಿದೆನು- ಆದರೆ ಭಂತೆ, ಮಹಾವೃದ್ಧಿಶಕ್ತಿಯುಳ್ಳ ಮಹಾಪ್ರತಾಪವುಳ್ಳ ಶ್ರಮಣ ಗೌತಮರ ತತ್ವವನ್ನು ನಾನು ಹೇಗೆ ಖಂಡಿಸಲಿ ಎಂದು?
ಬಾ ರಾಜಕುಮಾರ, ನೀನು ಎಲ್ಲಿ ಶ್ರಮಣಗೌತಮರಿರುವರೋ ಅಲ್ಲಿಗೆ ಹೋಗು; ಸಮೀಪಕ್ಕೆ ಹೋಗಿ ಶ್ರಮಣ ಗೌತಮರಿಗೆ ಹೀಗೆ ಹೇಳು- ಭಂತೆ, ಇತರರಿಗೆ ಅಪ್ರಿಯವಾದಂತಹ ಒಪ್ಪಿಗೆಯಾಗದಂತಹ ಮಾತುಗಳನ್ನು ತಥಾಗತರು ಆಡುವರೆ ಎಂದು? ಒಂದುವೇಳೆ ಆ ಶ್ರಮಣ ಗೌತಮರು ಹೀಗೆ ಕೇಳಿದ್ದಕ್ಕೆ, ರಾಜಕುಮಾರ ಇತರರಿಗೆ ಅಪ್ರಿಯವಾದಂತಹ ಒಪ್ಪಿಗೆಯಾಗದಂತಹ ಮಾತನ್ನು ತಥಾಗತರು ಆಡುತ್ತಾರೆ ಎಂದು ಉತ್ತರಿಸಿದರೆ, ನಂತರ ನೀನು ಹೀಗೆ ಕೇಳು- ಭಂತೆ, ಹಾಗಾದರೆ ತಮಗೆ ಮತ್ತು ಸಾಮಾನ್ಯ ಮನುಷ್ಯನಿಗೆ ಇರುವ ವ್ಯತ್ಯಾಸವೇನು? ಸಾಮಾನ್ಯ ಮನುಷ್ಯನು ಮಾತ್ರ ಇತರರಿಗೆ ಅಪ್ರಿಯವಾದಂತಹ, ಒಪ್ಪಿಗೆಯಾಗದಂತಹ ಮಾತನ್ನು ಆಡುತ್ತಾನೆ ಎಂದು. ಒಂದುವೇಳೆ ಶ್ರಮಣ ಗೌತಮರು ಹೀಗೆ ಕೇಳಿದ್ದಕ್ಕೆ, ರಾಜಕುಮಾರ, ಇತರರಿಗೆ ಅಪ್ರಿಯವಾದಂತಹ, ಒಪ್ಪಿಗೆಯಾಗದಂತಹ ಮಾತನ್ನು ಆಡುವುದಿಲ್ಲ ಎಂದು ಉತ್ತರಿಸಿದರೆ, ನಂತರ ನೀನು ಹೀಗೆ ಕೇಳು- ಭಂತೆ, ಹಾಗಾದರೆ ತಮ್ಮಿಂದ ದೇವದತ್ತನು ಹೀಗೇಕೆ ಹೇಳಲ್ಪಟ್ಟಿದ್ದಾನೆ- ದೇವದತ್ತನು ದುಃಖಪೂರಿತ ಸ್ಥಿತಿಗೆ ಸೇರಿದವನು, ದೇವದತ್ತನು ನರಕಕ್ಕೆ ಸೇರಿದವನು, ದೇವದತ್ತನು ಕಲ್ಪದವರೆಗೆ (ನರಕದಲ್ಲಿ) ಇರುತ್ತಾನೆ, ದೇವದತ್ತನು ಸರಿಪಡಿಸಲಾಗದಂತಹವನು ಎಂದು. ತಮ್ಮ ಆ ಮಾತಿನಿಂದ ದೇವದತ್ತನು ಕೋಪಗೊಂಡಿದ್ದನು ಮತ್ತು ಅಸಂತುಷ್ಟನಾಗಿದ್ದನು. ರಾಜಕುಮಾರ, ಹೀಗೆ ನಿನ್ನಿಂದ ಶ್ರಮಣ ಗೌತಮರು ಎರಡು ಕೊಂಬಿನ ಪೇಚಿನ ಪ್ರಶ್ನೆಯನ್ನು ಕೇಳಲ್ಪಟ್ಟಾಗ ಅದನ್ನು ನುಂಗಲೂ ಸಾಧ್ಯವಾಗುವುದಿಲ್ಲ, ಉಗುಳಲೂ ಸಾಧ್ಯವಾಗುವುದಿಲ್ಲ. ಹೇಗೆಂದರೆ ಒಬ್ಬನ ಗಂಟಲಿನಲ್ಲಿ ಕಬ್ಬಿಣದ ಕೊಕ್ಕೆಯು ಸಿಕ್ಕಿಕೊಂಡಾಗ, ಅವನಿಗೆ ಅದನ್ನು ನುಂಗಲೂ ಸಾಧ್ಯವಾಗುವುದಿಲ್ಲ, ಉಗುಳಲೂ ಸಾಧ್ಯವಾಗುವುದಿಲ್ಲ. ಹಾಗೆಯೇ, ರಾಜಕುಮಾರ, ನಿನ್ನಿಂದ ಶ್ರಮಣ ಗೌತಮರು ಎರಡು ಕೊಂಬಿನ ಪೇಚಿನ ಪ್ರಶ್ನೆಯನ್ನು ಕೇಳಲ್ಪಟ್ಟಾಗ ಅದನ್ನು ನುಂಗಲೂ ಸಾಧ್ಯವಾಗುವುದಿಲ್ಲ, ಉಗುಳಲೂ ಸಾಧ್ಯವಾಗುವುದಿಲ್ಲ.
2. ಅನುಕಂಪದಿಂದ ಅಪ್ರಿಯವಾದುದನ್ನೂ ಮಾತನಾಡಬಹುದು
4. ಆ ಒಂದು ಸಮಯದಲ್ಲಿ ಪುಟ್ಟ ಮುದ್ದಾದ ಮಗುವು ಒರಗಿಕೊಂಡು ಅಭಯರಾಜಕುಮಾರನ ತೊಡೆಯ ಮೇಲೆ ಕುಳಿತುಕೊಂಡಿತ್ತು. ಆಗ ಭಗವಾನರು ಅಭಯರಾಜಕುಮಾರನಿಗೆ ಹೀಗೆ ಹೇಳಿದರು- ರಾಜಕುಮಾರ, ಇದನ್ನು ನೀನು ಹೇಗೆ ಯೋಚಿಸುತ್ತೀಯೆ, ಒಂದುವೇಳೆ ಈ ಮಗುವು ನಿನ್ನ ಅಜಾಗ್ರತೆಯಿಂದಾಗಿ ಅಥವಾ ದಾದಿಯರ ಅಜಾಗ್ರತೆಯಿಂದಾಗ ತನ್ನ ಬಾಯಲ್ಲಿ ಕಟ್ಟಿಗೆಯನ್ನೋ ಅಥವಾ ಕಲ್ಲನ್ನೋ ಹಾಕಿಕೊಂಡರೆ, ಅವನಿಗಾಗಿ ನೀನೇನು ಮಾಡುವೆ? ಎಂದು.
ಭಂತೆ, ನಾನು ಅದನ್ನು ಹೊರಗೆ ತೆಗೆಯಬೇಕು. ಒಂದುವೇಳೆ, ಭಂತೇ, ನನಗೆ ತೆಗೆಯಲಾಗದಿದ್ದರೆ ಕೂಡಲೇ ಎಡಗೈಯಿಂದ ತಲೆಯನ್ನು ಹಿಡಿದುಕೊಂಡು ಬಲಗೈಯಿಂದ ಬೆರಳನ್ನು ವಂಕುಮಾಡಿ ರಕ್ತ ಬಂದರೂ ಸಹ ತೆಗೆಯಬೇಕು. ಅದಕ್ಕೇನು ಕಾರಣ? ಭಂತೆ, ಮಗುವಿನಲ್ಲಿ ನನಗೆ ಅನುಕಂಪವಿದೆ ಎಂದು.
ರಾಜಕುಮಾರ, ಹಾಗೆಯೇ ತಥಾಗತರು ಯಾವ ಮಾತನ್ನು ಯಥಾರ್ಥವಲ್ಲದ್ದು, ಸತ್ಯವಲ್ಲದ್ದು, ಒಳ್ಳೆಯತನಕ್ಕೆ ಸಂಬಂಧವಿಲ್ಲದ್ದು ಮತ್ತು ಇತರರಿಗೆ ಅಪ್ರಿಯವಾದದ್ದು, ಒಪ್ಪಿಗೆಯಾಗದಂತಹುದು ಎಂದು ತಿಳಿಯುತ್ತಾರೋ ಅಂಥ ಮಾತನ್ನು ತಥಾಗತರು ಆಡುವುದಿಲ್ಲ. ಮತ್ತೆ, ತಥಾಗತರು ಯಾವ ಮಾತನ್ನು ಯಥಾರ್ಥವಾದದ್ದು, ಸತ್ಯವುಳ್ಳದ್ದು, ಒಳ್ಳೆಯತನಕ್ಕೆ ಸಂಬಂಧವಿಲ್ಲದ್ದು ಮತ್ತು ಇತರರಿಗೆ ಅಪ್ರಿಯವಾದದ್ದು, ಒಪ್ಪಿಗೆಯಾಗದಂತಹುದು ಎಂದು ತಿಳಿಯುತ್ತಾರೋ, ಅಂಥ ಮಾತನ್ನು ಕೂಡ ತಥಾಗತರು ಮಾತನಾಡುವುದಿಲ್ಲ. ಅಲ್ಲದೆ, ತಥಾಗತರು ಯಾವ ಮಾತನ್ನು ಯಥಾರ್ಥವಾದದ್ದು, ಸತ್ಯವುಳ್ಳದ್ದು, ಒಳ್ಳೆಯತನಕ್ಕೆ ಸಂಬಂಧವುಳ್ಳದ್ದು ಮತ್ತು ಇತರರಿಗೆ ಅಪ್ರಿಯವಾದದ್ದು, ಒಪ್ಪಿಗೆಯಾಗದಂತಹುದು ಎಂದು ತಿಳಿಯುತ್ತಾರೋ, ಅಲ್ಲಿ ಆ ಮಾತನ್ನು ವಿವರಿಸಲು ತಥಾಗತರು ಸಮಯವನ್ನು ತಿಳಿದವರಾಗಿರುತ್ತಾರೆ. ಮತ್ತೆ, ತಥಾಗತರು ಯಾವ ಮಾತನ್ನು ಯತಾರ್ಥವಲ್ಲದ್ದು, ಸತ್ಯವಲ್ಲದ್ದು, ಒಳ್ಳೆಯತನಕ್ಕೆ ಸಂಬಂಧವಿಲ್ಲದ್ದು ಮತ್ತು ಇತರರಿಗೆ ಪ್ರಿಯವಾದದ್ದು, ಒಪ್ಪಿಗೆಯಾಗುವಂತಹುದು ಎಂದು ತಿಳಿಯುತ್ತಾರೋ ಅಂಥ ಮಾತನ್ನು ತಥಾಗತರು ಆಡುವುದಿಲ್ಲ. ಮತ್ತೆ ಯಾವ ಮಾತನ್ನು ತಥಾಗತರು ಯತಾರ್ಥವಾದದ್ದು, ಸತ್ಯವುಳ್ಳದ್ದು, ಆದರೆ ಒಳ್ಳೆಯತನಕ್ಕೆ ಸಂಬಂಧವಿಲ್ಲದ್ದು ಮತ್ತು ಇತರರಿಗೆ ಪ್ರಿಯವಾದದ್ದು, ಒಪ್ಪಿಗೆಯಾಗುವಂತಹುದು ಎಂದು ತಿಳಿಯುತ್ತಾರೋ, ಅಂಥ ಮಾತನ್ನು ತಥಾಗತರು ಆಡುವುದಿಲ್ಲ. ಅಲ್ಲದೆ, ಯಾವ ಮಾತನ್ನು ತಥಾಗತರು ಯಥಾರ್ಥವಾದದ್ದು, ಸತ್ಯವುಳ್ಳದ್ದು, ಒಳ್ಳೆಯತನಕ್ಕೆ ಸಂಬಂಧವುಳ್ಳದ್ದು ಮತ್ತು ಇತರರಿಗೆ ಪ್ರಿಯವಾದದ್ದು, ಒಪ್ಪಿಗೆಯಾಗುವಂತಹುದು ತಿಳಿಯುತ್ತಾರೋ, ಅಲ್ಲಿ ಆ ಮಾತನ್ನು ವಿವರಿಸಲು ತಥಾಗತರು ಸಮಯವನ್ನು ತಿಳಿದವರಾಗಿರುತ್ತಾರೆ. ಇದಕ್ಕೇನು ಕಾರಣ ರಾಜಕುಮಾರ, ಜೀವಿಗಳಲ್ಲಿ ತಥಾಗತರಿಗೆ ಅನುಕಂಪವಿದೆ ಎಂದು.
3. ತಥಾಗತರಿಗೆ ಅದೇ ಸ್ಥಳದಲ್ಲಿ (ಉತ್ತರವು) ಮೂಡಿ ಬರುತ್ತದೆಯೇ?
5. ಭಂತೇ, ಯಾವಾಗ ಕ್ಷತ್ರಿಯ ಪಂಡಿತರೂ ಬ್ರಾಹ್ಮಣ ಪಂಡಿತರೂ ಗೃಹಸ್ಥ ಪಂಡಿತರೂ ಶ್ರಮಣ ಪಂಡಿತರೂ ಪ್ರಶ್ನೆಯನ್ನು ರಚಿಸಿಕೊಂಡು ತಥಾಗತರಲ್ಲಿಗೆ ಹೋಗಿ ಕೇಳುತ್ತಾರೆ; ಭಂತೇ, ಭಗವಾನರು ಮನಸ್ಸಿನಲ್ಲಿ ಮೊದಲೇ ಯಾರು ನನ್ನಲ್ಲಿಗೆ ಬಂದು ಹೀಗೆ ಕೇಳುತ್ತಾರೆ. ಅವರಿಗೆ ನಾನು ಹೀಗೆ ಪ್ರಶ್ನಿಸಿ, ಹೀಗೆ ಉತ್ತರಿಸುವೆನು ಎಂದು ಯೋಚನೆ ಮಾಡಿದವರಾಗಿರುತ್ತಾರೆಯೇ ಅಥವಾ ತಥಾಗತರಿಗೆ ಅದೇ ಸ್ಥಳದಲ್ಲಿ (ಉತ್ತರವು) ಕೂಡಲೇ ಮೂಡಿಬರುತ್ತದೆಯೇ ಎಂದು.
ಆಗಲಿ ರಾಜಕುಮಾರ, ನಿನಗೆ ನಾನು ಮರುಪ್ರಶ್ನೆಯನ್ನು ಕೇಳುವೆನು, ನಿನಗೆ ಹೇಗೆ ತಿಳಿದುಬರುತ್ತದೋ ಹಾಗೆಯೇ ಉತ್ತರಿಸು. ಇದನ್ನು ಹೇಗೆ ಯೋಚಿಸುತ್ತೀಯ, ರಾಜಕುಮಾರ, ನೀನು ರಥದ ಅಂಗ ಪ್ರತ್ಯಂಗಗಳ ಕುಶಲನೆ? ಎಂದು.
ಹೌದು, ಭಂತೇ, ನಾನು ರಥದ ಅಂಗ ಪ್ರತ್ಯಂಗಗಳ ಕುಶಲನು ಎಂದು.
ಇದನ್ನು ಹೇಗೆ ಯೋಚಿಸುತ್ತೀಯ, ರಾಜಕುಮಾರ, ಯಾರಾದರು ನಿನ್ನಲ್ಲಿಗೆ ಬಂದು ಹೀಗೆ ಕೇಳಿದರೆ- ರಥದ ಈ ಅಂಗ ಪ್ರತ್ಯಂಗದ ಹೆಸರೇನು? ಎಂದು. ನೀನು ಮನಸ್ಸಿನಲ್ಲಿ ಹೀಗೆ ಯೋಚನೆ ಮಾಡಿದವನಾಗಿರುತ್ತೀಯೆ, ಯಾರಾದರೂ ನನ್ನಲ್ಲಿಗೆ ಬಂದು ಹೀಗೆ ಕೇಳುವರು ಅವರಿಗೆ ನಾನು ಹೀಗೆ ಪ್ರಶ್ನಿಸಿ ಹೀಗೆ ಉತ್ತರಿಸುವೆನು ಎಂದು ಅಥವಾ ಅದೇ ಸ್ಥಳದಲ್ಲಿ ನಿನಗೆ (ಉತ್ತರವು) ಕೂಡಲೇ ಮೂಡಿಬರುತ್ತದೆಯೇ ಎಂದು.
ಭಂತೆ, ನಾನು ಒಳ್ಳೆಯ ಸಾರಥಿ ಎಂದು ಹೆಸರು ಗಳಿಸಿದ್ದೇನೆ. ರಥದ ಅಂಗ ಪ್ರತ್ಯಂಗಗಳ ಕುಶಲನೂ ಆಗಿದ್ದೇನೆ. ನನಗೆ ರಥದ ಎಲ್ಲ ಅಂಗ ಪ್ರತ್ಯಂಗಗಳು ಸಂಪೂರ್ಣವಾಗಿ ಗೊತ್ತಿವೆ. ನನಗೆ ಅದೇ ಸ್ಥಳದಲ್ಲಿ (ಉತ್ತರವು) ಕೂಡಲೇ ಮೂಡಿಬರುತ್ತದೆ ಎಂದು.
ಹಾಗೆಯೇ ರಾಜಕುಮಾರ, ಯಾವಾಗ ಕ್ಷತ್ರಿಯ ಪಂಡಿತರೂ ಬ್ರಾಹ್ಮಣ ಪಂಡಿತರೂ, ಗೃಹಸ್ಥ ಪಂಡಿತರೂ, ಶ್ರಮಣ ಪಂಡಿತರೂ ಪ್ರಶ್ನೆಯನ್ನು ರಚಿಸಿಕೊಂಡು ತಥಾಗತರಲ್ಲಿಗೆ ಬಂದು ಕೇಳುತ್ತಾರೊ, ಅದೇ ಸ್ಥಳದಲ್ಲಿ ತಥಾಗತರಿಗೆ (ಉತ್ತರವು) ಕೂಡಲೇ ಮೂಡಿಬರುತ್ತದೆ, ಅದಕ್ಕೇನು ಕಾರಣ? ರಾಜಕುಮಾರ, ತಥಾಗತರಿಂದ ಧಮ್ಮಧಾತುವು59 ಆಳವಾಗಿ ಅರಿಯಲ್ಪಟ್ಟಿದೆ. ಧಮ್ಮಧಾತುವಿನ ಈ ಆಳವಾದ ಅರಿಯುವಿಕೆಯಿಂದ ತಥಾಗತರಿಗೆ (ಉತ್ತರವು) ಕೂಡಲೇ ಮೂಡಿಬರುತ್ತದೆ ಎಂದು.
6. ಹೀಗೆ ಹೇಳಿದ ಮೇಲೆ, ಅಭಯರಾಜಕುಮಾರನು ಭಗವಾನರಿಗೆ ಹೀಗೆ ಹೇಳಿದನು- ಅದ್ಭುತವಾಗಿದೆ ಭಂತೆ, ಅದ್ಭುತವಾಗಿದೆ ಭಂತೆ, ಅದು ಹೇಗೆಂದರೆ ಭಂತೆ, ತಲೆಕೆಳಗಾಗಿರುವುದನ್ನು, ಮೇಲ್ಮುಖವಾಗಿ ಸರಿಸುವಂತೆ, ಸರಿಮಾಡಿ ಇಟ್ಟಂತೆ, ಅಥವಾ ಮುಚ್ಚಿಟ್ಟಿರುವುದನ್ನು ಬಿಚ್ಚಿ ಹೇಳಿದಂತೆ, ಅಥವಾ ದಾರಿತಪ್ಪಿದವನಿಗೆ ದಾರಿ ತೋರಿಸುವಂತೆ. ಅಥವಾ ಕತ್ತಲಿನಲ್ಲಿ ಎಣ್ಣೆಯ ದೀಪ ಹಿಡಿದಿರುವಂತೆ ಮತ್ತು ಅದರಿಂದಾಗಿ ಕಣ್ಣುಳ್ಳವರು ವಸ್ತುರೂಪಗಳನ್ನು ಕಾಣುವ ಹಾಗೆ ಎಂದು. ಇದೇ ರೀತಿಯಲ್ಲಿ ಭಂತೆ, ಭಗವಾನರು ಅನೇಕ ಪರಿಯಲ್ಲಿ ಧರ್ಮವನ್ನು ಪ್ರಕಾಶಪಡಿಸಿದ್ದೀರಿ, ಆದ್ದರಿಂದ ನಾನು ಭಂತೆ, ಭಗವಾನರಿಗೆ ಮತ್ತು ಧರ್ಮಕ್ಕೆ ಮತ್ತು ಭಿಕ್ಷು ಸಂಘಕ್ಕೆ ಶರಣು ಹೋಗುತ್ತೇನೆ. ಭಗವಾನರು, ನನ್ನನ್ನು ಉಪಾಸಕನೆಂದು (ಶರಣು ಬಂದವನೆಂದು) ಒಪ್ಪಿಕೊಳ್ಳಲಿ, ಇಂದಿನಿಂದ ಪ್ರಾಣವಿರುವವರೆಗೂ ಶರಣು ಬಂದವನು ಎಂದು.
ಟಿಪ್ಪಣಿಗಳು [4]
English
Việt Ngữ