ಬಹುವೇದನೀಯ ಸುತ್ತ
1. ಎಷ್ಟು ಬಗೆಯ ಸಂವೇದನೆಗಳು - ಮೂರೋ ಅಥವಾ ಎರಡೋ?
ಹೀಗೆ ನಾನು ಕೇಳಿದ್ದೇನೆ. ಒಂದುಸಲ ಭಗವಾನರು ಶ್ರಾವಸ್ಥಿಯಲ್ಲಿ ಅನಾಥಪಿಂಡಿಕನ ಜೇತವನದಲ್ಲಿನ ವಿಹಾರದಲ್ಲಿ ತಂಗಿದ್ದರು. ಆಗ ಬಡಗಿ ಪಂಚಕಂಗನು ಎಲ್ಲಿ ಆಯುಷ್ಮಂತ ಉದಾಯಿ ಇದ್ದರೋ ಅಲ್ಲಿಗೆ ಬಂದನು; ಸಮೀಪಕ್ಕೆ ಬಂದು ಆಯುಷ್ಮಂತ ಉದಾಯಿಗೆ ನಮಸ್ಕರಿಸಿ ಒಂದೆಡೆ ಕುಳಿತನು. ಒಂದೆಡೆ ಕುಳಿತ ಆ ಬಡಗಿ ಪಂಚಕಂಗನು ಆಯುಷ್ಮಂತ ಉದಾಯಿಗೆ ಹೀಗೆ ಹೇಳಿದನು- ಭಂತೇ ಉದಾಯಿ, ಎಷ್ಟುಬಗೆಯ ಸಂವೇದನೆಗಳಿವೆ ಎಂದು ಭಗವಾನರಿಂದ ಹೇಳಲ್ಪಟ್ಟಿದೆ?
ಗೃಹಸ್ಥನೆ, ಮೂರು ಬಗೆಯ ಸಂವೇದನೆಗಳಿವೆ ಎಂದು ಭಗವಾನರಿಂದ ಹೇಳಲ್ಪಟ್ಟಿದೆ. ಸುಖ ಸಂವೇದನೆ, ದುಃಖ ಸಂವೇದನೆ, ದುಃಖವೂ ಅಲ್ಲದ ಸುಖವೂ ಅಲ್ಲದ ಸಂವೇದನೆ. ಗೃಹಸ್ಥನೇ, ಇವೇ ಮೂರು ಸಂವೇದನೆಗಳಿವೆ ಎಂದು ಭಗವಾನರಿಂದ ಹೇಳಲ್ಪಟ್ಟಿದೆ ಎಂದು.
ಹೀಗೆ ಹೇಳಿದ ಮೇಲೆ, ಬಡಗಿ ಪಂಚಕಂಗನು ಆಯುಷ್ಮಂತ ಉದಾಯಿಗೆ ಹೀಗೆ ಹೇಳಿದನು- ಭಂತೆ, ಉದಾಯಿ, ಮೂರುಬಗೆಯ ಸಂವೇದನೆಗಳಿವೆ ಎಂದು ಭಗವಾನರಿಂದ ಹೇಳಲ್ಪಟ್ಟಿಲ್ಲ; ಎರಡು ಬಗೆಯ ಸಂವೇದನೆಗಳಿವೆ ಎಂದು ಭಗವಾನರಿಂದ ಹೇಳಲ್ಪಟ್ಟಿದೆ- ಸುಖ ಸಂವೇದನೆ, ದುಃಖ ಸಂವೇದನೆ. ಭಂತೆ, ಈ ದುಃಖವೂ ಅಲ್ಲದ ಸುಖವೂ ಅಲ್ಲದ ಸಂವೇದನೆಯು ಶಾಂತಿಯುಕ್ತ ಮತ್ತು ಉತ್ಕೃಷ್ಟವಾದ ಸುಖ ಎಂದು ಭಗವಾನರಿಂದ ಹೇಳಲ್ಪಟ್ಟಿದೆ ಎಂದು. ಎರಡನೇಸಲವೂ ಆಯುಷ್ಮಂತ ಉದಾಯಿಯು ಬಡಿಗ ಪಂಚಕಂಗನಿಗೆ ಹೀಗೆ ಹೇಳಿದನು- ಗೃಹಸ್ಥನೆ, ಎರಡು ಸಂವೇದನೆಗಳಿವೆ ಎಂದು ಭಗವಾನರಿಂದ ಹೇಳಲ್ಪಟ್ಟಿಲ್ಲ; ಮೂರು ಸಂವೇದನೆಗಳಿವೆ ಎಂದು ಭಗವಾನರಿಂದ ಹೇಳಲ್ಪಟ್ಟಿದೆ. ಸುಖ ಸಂವೇದನೆ, ದುಃಖದ ಸಂವೇದನೆ, ದುಃಖವೂ ಅಲ್ಲದ ಸುಖವೂ ಅಲ್ಲದ ಸಂವೇದನೆ. ಗೃಹಸ್ಥನೇ, ಇವೇ ಮೂರು ಸಂವೇದನೆಗಳಿವೆ ಎಂದು ಭಗವಾನರಿಂದ ಹೇಳಲ್ಪಟ್ಟಿದೆ ಎಂದು. ಎರಡನೇಸಲವೂ ಬಡಗಿ ಪಂಚಕಂಗನು ಆಯುಷ್ಮಂತ ಉದಾಯಿಗೆ ಹೀಗೆ ಹೇಳಿದನು- ಭಂತೇ, ಉದಾಯಿ, ಮೂರುಬಗೆಯ ಸಂವೇದನೆಗಳಿವೆ ಎಂದು ಭಗವಾನರಿಂದ ಹೇಳಲ್ಪಟ್ಟಿಲ್ಲ; ಎರಡು ಬಗೆಯ ಸಂವೇದನೆಗಳಿವೆ ಎಂದು ಭಗವಾನರಿಂದ ಹೇಳಲ್ಪಟ್ಟಿದೆ. ಸುಖ ಸಂವೇದನೆ, ದುಃಖ ಸಂವೇದನೆ. ಭಂತೇ, ಈ ದುಃಖವೂ ಅಲ್ಲದ, ಸುಖವೂ ಅಲ್ಲದ ಸಂವೇದನೆಯು ಶಾಂತಿಯುಕ್ತ ಮತ್ತು ಉತ್ಕೃಷ್ಟವಾದ ಸುಖ ಎಂದು ಭಗವಾನರಿಂದ ಹೇಳಲ್ಪಟ್ಟಿದೆ ಎಂದು. ಮೂರನೆಯಸಲವೂ ಆಯುಷ್ಮಂತ ಉದಾಯಿಯು ಬಡಿಗ ಪಂಚಕಂಗನಿಗೆ ಹೀಗೆ ಹೇಳಿದರು- ಗೃಹಸ್ಥನೆ, ಎರಡು ಸಂವೇದನೆಗಳಿವೆ ಎಂದು ಭಗವಾನರಿಂದ ಹೇಳಲ್ಪಟ್ಟಿಲ್ಲ; ಮೂರು ಸಂವೇದನೆಗಳಿವೆ ಎಂದು ಭಗವಾನರಿಂದ ಹೇಳಲ್ಪಟ್ಟಿದೆ. ಸುಖ ಸಂವೇದನೆ, ದುಃಖದ ಸಂವೇದನೆ, ದುಃಖವೂ ಅಲ್ಲದ ಸುಖವೂ ಅಲ್ಲದ ಸಂವೇದನೆ. ಗೃಹಸ್ಥನೇ, ಇವೇ ಮೂರು ಸಂವೇದನೆಗಳಿವೆ ಎಂದು ಭಗವಾನರಿಂದ ಹೇಳಲ್ಪಟ್ಟಿದೆ ಎಂದು. ಮೂರನೆಯ ಸಲವೂ ಬಡಗಿ ಪಂಚಕಂಗನು ಆಯುಷ್ಮಂತ ಉದಾಯಿಗೆ ಹೀಗೆ ಹೇಳಿದನು- ಭಂತೇ, ಉದಾಯಿ, ಮೂರುಬಗೆಯ ಸಂವೇದನೆಗಳಿವೆ ಎಂದು ಭಗವಾನರಿಂದ ಹೇಳಲ್ಪಟ್ಟಿಲ್ಲ; ಎರಡು ಬಗೆಯ ಸಂವೇದನೆಗಳಿವೆ ಎಂದು ಭಗವಾನರಿಂದ ಹೇಳಲ್ಪಟ್ಟಿದೆ. ಸುಖ ಸಂವೇದನೆ, ದುಃಖ ಸಂವೇದನೆ. ಭಂತೇ, ಈ ದುಃಖವೂ ಅಲ್ಲದ, ಸುಖವೂ ಅಲ್ಲದ ಸಂವೇದನೆಯು ಶಾಂತಿಯುಕ್ತ ಮತ್ತು ಉತ್ಕೃಷ್ಟವಾದ ಸುಖ ಎಂದು ಭಗವಾನರಿಂದ ಹೇಳಲ್ಪಟ್ಟಿದೆ ಎಂದು. ಹೀಗೆ, ಆಯುಷ್ಮಂತ ಉದಾಯಿಗೆ ಬಡಗಿ ಪಂಚಕಂಗನನ್ನು ತಿಳಿದುಕೊಳ್ಳುವಂತೆ ಮಾಡಲು ಸಾಧ್ಯವಾಗಲಿಲ್ಲ ಅಲ್ಲದೆ ಬಡಗಿ ಪಂಚಕಂಗನಿಗೆ ಆಯುಷ್ಮಂತ ಉದಾಯಿಯನ್ನು ತಿಳಿದುಕೊಳ್ಳುವಂತೆ ಮಾಡಲು ಸಾಧ್ಯವಾಗಲಿಲ್ಲ.
2. ಸಂವೇದನೆಗಳು ಬಗೆಬಗೆಯಾಗಿ ಉಪದೇಶಿಸಲ್ಪಟ್ಟಿವೆ.
2. ಆಯುಷ್ಮಂತ ಆನಂದರು, ಆಯುಷ್ಮಂತ ಉದಾಯಿಯು ಬಡಗಿ ಪಂಚಕಂಗನ ಜೊತೆ ನಡೆಸಿದ ಈ ಮಾತುಕತೆಯನ್ನು ಕೇಳಿಸಿಕೊಂಡರು. ನಂತರ ಆಯುಷ್ಮಂತ ಆನಂದರು ಎಲ್ಲಿ ಭಗವಾನರಿದ್ದರೋ ಅಲ್ಲಿಗೆ ಬಂದರು; ಸಮೀಪಕ್ಕೆ ಬಂದು ಭಗವಾನರಿಗೆ ನಮಸ್ಕರಿಸಿ ಒಂದೆಡೆ ಕುಳಿತರು. ಒಂದೆಡೆ ಕುಳಿತು ಆಯುಷ್ಮಂತ ಆನಂದರು ಈವರೆಗೆ ಆಯುಷ್ಮಂತ ಉದಾಯಿಯು ಬಡಗಿ ಪಂಚಕಂಗನ ಜೊತೆ ನಡೆಸಿದ ಮಾತುಕತೆ ಎಲ್ಲವನ್ನೂ ಭಗವಾನರಿಗೆ ತಿಳಿಸಿದರು. ಹೀಗೆ ಹೇಳಿದ ಮೇಲೆ, ಭಗವಾನರು ಆಯುಷ್ಮಂತ ಆನಂದರಿಗೆ ಹೀಗೆ ಹೇಳಿದರು- ಆನಂದ, ಉದಾಯಿಯ ವರ್ಗಿಕರಣ ನಿಜವಾಗಿದ್ದರೂ ಕೂಡ ಬಡಗಿ ಪಂಚಕಂಗನು ಅದನ್ನು ಒಪ್ಪಲಿಲ್ಲ ಮತ್ತು ಬಡಗಿ ಪಂಚಕಂಗನ ವರ್ಗಿಕರಣ ನಿಜವಾಗಿದ್ದರೂ ಕೂಡ ಉದಾಯಿ ಅದನ್ನು ಒಪ್ಪಲಿಲ್ಲ. ಆನಂದ, ನನ್ನಿಂದ (ಒಂದು ರೀತಿಯ) ವರ್ಗಿಕರಣದಲ್ಲಿ ಎರಡು ಸಂವೇದನೆಗಳು ಹೇಳಲ್ಪಟ್ಟಿವೆ, ನನ್ನಿಂದ (ಮತ್ತೊಂದು ರೀತಿಯ) ವರ್ಗಿಕರಣದಲ್ಲಿ ಮೂರು ಸಂವೇದನೆಗಳೂ ಹೇಳಲ್ಪಟ್ಟಿವೆ. ನನ್ನಿಂದ (ಮತ್ತೊಂದು ರೀತಿಯ) ವರ್ಗಿಕರಣದಲ್ಲಿ ಐದು ಸಂವೇದನೆಗಳು ಕೂಡ ಹೇಳಲ್ಪಟ್ಟಿವೆ, ನನ್ನಿಂದ (ಮತ್ತೊಂದು ಬಗೆಯ) ವರ್ಗಿಕರಣದಲ್ಲಿ ಆರು ಸಂವೇದನೆಗಳು ಕೂಡ ಹೇಳಲ್ಪಟ್ಟಿವೆ. ನನ್ನಿಂದ (ಮತ್ತೊಂದು ರೀತಿಯ) ವರ್ಗಿಕರಣದಲ್ಲಿ ಹದಿನೆಂಟು ಸಂವೇದನೆಗಳೂ ಹೇಳಲ್ಪಟ್ಟಿವೆ. ನನ್ನಿಂದ (ಮತ್ತೊಂದು ರೀತಿಯ) ವರ್ಗಿಕರಣದಲ್ಲಿ ಮೂವತ್ತಾರು ಸಂವೇದನೆಗಳೂ ಹೇಳಲ್ಪಟ್ಟಿವೆ.61 ನನ್ನಿಂದ (ಮತ್ತೊಂದು ರೀತಿಯ) ವರ್ಗಿಕರಣದಲ್ಲಿ ನೂರಎಂಟು ಸಂವೇದನೆಗಳೂ ಹೇಳಲ್ಪಟ್ಟಿವೆ.13 ಹೀಗೆ ಆನಂದ, ನನ್ನಿಂದ ಬಗೆಬಗೆಯ ವರ್ಗಿಕರಣದಲ್ಲಿ ಧರ್ಮವು ಬೋಧಿಸಲ್ಪಟ್ಟಿದೆ. ಆನಂದ ಹೀಗೆ ವಿವಿಧಬಗೆಯಲ್ಲಿ ನನ್ನಿಂದ ಧರ್ಮವು ಬೋಧಿಸಲ್ಪಟ್ಟರೂ, ಯಾರು ಒಬ್ಬರಿಗೊಬ್ಬರು ಸರಿಯಾದುದನ್ನು ನುಡಿದಾಗ, ಒಳ್ಳೆಯದನ್ನು ಹೇಳಿದಾಗ ಒಪ್ಪುವುದಿಲ್ಲವೋ, ಮನ್ನಿಸುವುದಿಲ್ಲವೋ, ಸಮ್ಮತಿಸುವುದಿಲ್ಲವೋ ಅವರಿಂದ ಇದನ್ನು ನಿರೀಕ್ಷಿಸಬಹುದು ಅವರು- ಜಗಳವಾಡುವವರಾಗಿ, ಕಲಹಕಾರಿಯಾಗಿ, ವಿವಾದಕುಶಲರಾಗಿ ಪರಸ್ಪರ ಬಾಯಿ ಅಸ್ತ್ರದಿಂದ ಗಾಯಗೊಳಿಸಿ ಉಳಿಯುವರು. ಹೀಗೆ ಆನಂದ, ನನ್ನಿಂದ ಧರ್ಮವು ವಿವಿಧ ಬಗೆಯಲ್ಲಿ ಬೋಧಿಸಲ್ಪಟ್ಟಿದೆ. ಆನಂದ, ಹೀಗೆ ವಿವಿಧ ಬಗೆಯಲ್ಲಿ ನನ್ನಿಂದ ಧರ್ಮವು ಬೋಧಿಸಲ್ಪಟ್ಟಾಗ, ಯಾರು ಒಬ್ಬರಿಗೊಬ್ಬರು ಸರಿಯಾದುದನ್ನು ನುಡಿದಾಗ, ಒಳ್ಳೆಯದನ್ನು ಹೇಳಿದಾಗ ಒಪ್ಪುವರೊ, ಮನ್ನಿಸುವರೊ, ಸಮ್ಮತಿಸುವರೊ, ಅವರಿಂದ ಇದನ್ನು ನಿರೀಕ್ಷಿಸಬಹುದು. ಅವರು ಸ್ನೇಹಭಾವದವರಾಗಿ, ಕೂಡಿಕೊಂಡಿರುವವರಾಗಿ, ವಿವಾದವಿಲ್ಲದವರಾಗಿ ಹಾಲು ನೀರು ಕೂಡುವಂತೆ ಪರಸ್ಪರ ಪ್ರೀತಿಯ ಕಣ್ಣುಗಳಿಂದ ನೋಡಿಕೊಂಡು ಉಳಿಯುವರು.
3. ಶ್ರೇಷ್ಠವಾದ ಉತ್ಕೃಷ್ಟವಾದ ರೀತಿಯ ಸುಖಗಳು
3. ಆನಂದ, ಈ ಐದು ಕಾಮತಂತುಗಳಿವೆ62 ಯಾವುವು ಐದು? ಕಣ್ಣಿನಿಂದ ಅರಿಯಬಹುದಾದ ರೂಪಗಳು, ಇಷ್ಟವಾಗಿರುವಂತವು, ಅಪೇಕ್ಷಿತವಾಗಿರುವಂತವು, ಮುದಗೊಳಿಸುವಂತವು, ಪ್ರಿಯರೂಪವಾದಂತವು, ಕಾಮಸಂಬಂಧವಾದಂತವು. ರಾಗೋತ್ತೇಜನಗೊಳಿಸುವಂಹವು. ಕಿವಿಗಳಿಂದ ಅರಿಯಬಹುದಾದ ಸದ್ದುಗಳು ಪುನರುಚ್ಚರಿಸಿ... ಮೂಗಿನಿಂದ ಅರಿಯಬಹುದಾದ ವಾಸನೆಗಳು... ಪುನರುಚ್ಚರಿಸಿ... ನಾಲಿಗೆಯಿಂದ ಅರಿಯಬಹುದಾದ ರುಚಿಗಳು ಪುನರುಚ್ಚರಿಸಿ... ಶರೀರದಿಂದ ಅರಿಯಬಹುದಾದ ಸ್ಪರ್ಶಗಳು. ಇಷ್ಟವಾಗಿರುವಂತಹವು, ಅಪೇಕ್ಷಿತವಾಗಿರುವಂತವು, ಮುದಗೊಳಿಸುವಂತವು, ಪ್ರಿಯರೂಪವದಂತಹವು, ಕಾಮ ಸಂಬಂಧವಾದಂತವು, ರಾಗೋತ್ತೇಜನಗೊಳಿಸುವಂತವು. ಆನಂದ, ಈ ಐದು ಕಾಮತಂತುಗಳನ್ನು ಅವಲಂಬಿಸಿ ಸುಖ, ಮಾನಸಿಕ ಸುಖ ಹುಟ್ಟುತ್ತದೋ ಅದು ಕಾಮಸುಖ ಎಂದು ಕರೆಯಲ್ಪಡುತ್ತದೆ.
ಆನಂದ, ಯಾರಾದರೂ ಹೀಗೆ ಹೇಳಬಹುದು- ಇದು ಜೀವಿಗಳು ಅನುಭವಿಸಬಹುದಾದ ಪರಮಶ್ರೇಷ್ಠ ಸುಖ ಮತ್ತು ಆನಂದ ಎಂದು. ಇದನ್ನು ಅವನಿಗೆ ನಾನು ಮನ್ನಿಸಲಾರೆ. ಇದಕ್ಕೇನು ಕಾರಣ? ಆನಂದ, ಈ ಸುಖಕ್ಕಿಂತ ಉತ್ಕೃಷ್ಟವಾದ ಮತ್ತು ಉದಾತ್ತವಾದ ಮತ್ತೊಂದು ಸುಖವಿದೆ. ಯಾವುದದು ಆನಂದ, ಈ ಸುಖಕ್ಕಿಂತ ಉತ್ಕೃಷ್ಟವಾದ ಮತ್ತು ಉದಾತ್ತವಾದ ಮತ್ತೊಂದು ಸುಖ? ಆನಂದ, ಇಲ್ಲಿ ಭಿಕ್ಷುವು ಕಾಮವನ್ನು ದಾಟಿದವನಾಗಿ ಅಕುಶಲ ಧರ್ಮಗಳನ್ನು ದಾಟಿದವನಾಗಿ... ಪುನರುಚ್ಚರಿಸಿ... ಸಮಾಧಿಯ ಮೊದಲನೆಯ ಹಂತವನ್ನು ಸಾಧಿಸಿಕೊಂಡು ನೆಲೆಗೊಳ್ಳುತ್ತಾನೆ. ಆನಂದ, ಇದೇ ಆ ಸುಖಕ್ಕಿಂತ ಉತ್ಕೃಷ್ಟವಾದ ಮತ್ತು ಉದಾತ್ತವಾದ ಮತ್ತೊಂದು ಸುಖ.
ಆನಂದ, ಯಾರಾದರೂ ಹೀಗೆ ಹೇಳಬಹುದು. ಇದು ಜೀವಿಗಳು ಅನುಭವಿಸಬಹುದಾದ ಪರಮಶ್ರೇಷ್ಠ ಸುಖ ಮತ್ತು ಆನಂದ ಎಂದು. ಇದನ್ನು ಅವನಿಗೆ ನಾನು ಮನ್ನಿಸಲಾರೆ. ಇದಕ್ಕೇನು ಕಾರಣ? ಆನಂದ, ಈ ಸುಖಕ್ಕಿಂತ ಉತ್ಕೃಷ್ಟವಾದ ಮತ್ತು ಉದಾತ್ತವಾದ ಮತ್ತೊಂದು ಸುಖವಿದೆ. ಯಾವುದದು ಆನಂದ, ಈ ಸುಖಕ್ಕಿಂತ ಉತ್ಕೃಷ್ಟವಾದ ಮತ್ತು ಉದಾತ್ತವಾದ ಮತ್ತೊಂದು ಸುಖ? ಆನಮದ, ಇಲ್ಲಿ ಭಿಕ್ಷುವು ಕಾಮವನ್ನು ದಾಟಿದವನಾಗಿ ಅಕುಶಲ ಧರ್ಮಗಳನ್ನು ದಾಟಿದವನಾಗಿ... ಪುನರುಚ್ಚರಿಸಿ... ಸಮಾಧಿಯ ಮೊದಲನೆಯ ಹಂತವನ್ನು ಸಾಧಿಸಿಕೊಂಡು ನೆಲೆಗೊಳ್ಳುತ್ತಾನೆ. ಆನಂದ, ಇದೇ ಆ ಸುಖಕ್ಕಿಂತ ಉತ್ಕೃಷ್ಟವಾದ ಮತ್ತು ಉದಾತ್ತವಾದ ಮತ್ತೊಂದು ಸುಖ.
ಆನಂದ, ಯಾರಾದರೂ ಹೀಗೆ ಹೇಳಬಹುದು- ಇದು ಜೀವಿಗಳು ಅನುಭವಿಸಬಹುದಾದ ಪರಮಶ್ರೇಷ್ಠ ಸುಖ ಮತ್ತು ಆನಂದ ಎಂದು. ಇದನ್ನು ಅವನಿಗೆ ನಾನು ಮನ್ನಿಸಲಾರೆ. ಇದಕ್ಕೇನು ಕಾರಣ? ಆನಂದ, ಈ ಸುಖಕ್ಕಿಂತ ಉತ್ಕೃಷ್ಟವಾದ ಮತ್ತು ಉದಾತ್ತವಾದ ಮತ್ತೊಂದು ಸುಖವಿದೆ. ಯಾವುದದು ಆನಂದ, ಈ ಸುಖಕ್ಕಿಂತ ಉತ್ಕಥಷ್ಟವಾದ ಮತ್ತು ಉದಾತ್ತವಾದ ಮತ್ತೊಂದು ಸುಖ? ಇಲ್ಲಿ ಭಿಕ್ಷುವು ವಿತರ್ಕವಿಚಾರಗಳನ್ನು63 ಶರಮಗೊಳಿಸಿದವನಾಗಿ... ಪುನರುಚ್ಚರಿಸಿ... ಸಮಾಧಿಯ ಎರಡನೇ ಹಂತವನ್ನು ಸಾಧಿಸಿಕೊಂಡು ನೆಲೆಗೊಳ್ಳುತ್ತಾನೆ. ಆನಂದ, ಇದೇ ಆ ಸುಖಕ್ಕಿಂತ ಉತ್ಕೃಷ್ಟವಾದ ಮತ್ತು ಉದಾತ್ತವಾದ ಮತ್ತೊಂದು ಸುಖ.
ಆನಂದ, ಯಾರಾದರು ಹೀಗೆ ಹೇಳಬಹುದು... ಪುನರುಚ್ಚರಿಸಿ... ಯಾವುದದು ಆನಂದ, ಈ ಸುಖಕ್ಕಿಂತ ಉತ್ಕೃಷ್ಟವಾದ ಮತ್ತು ಉದಾತ್ತವಾದ ಮತ್ತೊಂದು ಸುಖ? ಆನಂದ, ಇಲ್ಲಿ ಭಿಕ್ಷುವು ಆಂತರಿಕ ಆನಂದವನ್ನು ಮರೆಯಾಗಿಸಿ ಪುನರುಚ್ಚರಿಸಿ... ಸಮಾಧಿಯ ಮೂರನೇ ಹಂತವನ್ನು ಸಾಧಿಸಿಕೊಂಡು ನೆಲೆಗೊಳ್ಳುತ್ತಾನೆ. ಆನಂದ, ಇದೇ ಆ ಸುಖಕ್ಕಿಂತ ಉತ್ಕೃಷ್ಟವಾದ ಮತ್ತು ಉದಾತ್ತವಾದ ಮತ್ತೊಂದು ಸುಖ.
ಆನಂದ, ಯಾರಾದರೂ ಹೀಗೆ ಹೇಳಬಹುದು... ಪುನರುಚ್ಚರಿಸಿ... ಯಾವುದದು ಆನಂದ, ಈ ಸುಖಕ್ಕಿಂತ ಉತ್ಕೃಷ್ಟವಾದ ಮತ್ತು ಉದಾತ್ತವಾದ ಮತ್ತೊಂದು ಸುಖ? ಆನಂದ, ಇಲ್ಲಿ ಭಿಕ್ಷುವು ಸುಖವನ್ನು ತೊರೆದವನಾಗಿ... ಪುನರುಚ್ಚರಿಸಿ... ಸಮಾಧಿಯ ನಾಲ್ಕನೇ ಹಂತವನ್ನು ಸಾಧಿಸಿಕೊಂಡು ನೆಲೆಗೊಳ್ಳುತ್ತಾನೆ. ಆನಂದ, ಇದೇ ಆ ಸುಖಕ್ಕಿಂತ ಉತ್ಕೃಷ್ಟವಾದ ಉದಾತ್ತವಾದ ಮತ್ತೊಂದು ಸುಖ.
ಆನಂದ ಯಾರಾದರೂ ಹೀಗೆ ಹೇಳಬಹುದು... ಪುನರುಚ್ಚರಿಸಿ... ಯಾವುದದು ಆನಂದ, ಈ ಸುಖಕ್ಕಿಂತ ಉತ್ಕೃಷ್ಟವಾದ ಮತ್ತು ಉದಾತ್ತವಾದ ಮತ್ತೊಂದು ಸುಖ? ಆನಂದ, ಇಲ್ಲಿ ಭಿಕ್ಷುವು ಎಲ್ಲ ರೂಪಗಳ ಗ್ರಹಿಕೆಗಳನ್ನು ಅತಿಕ್ರಮಿಸಿ, ಇಂದ್ರಿಯ ಪ್ರತಿಕ್ರಿಯೆಗಳ ಗ್ರಹಿಕೆಗಳನ್ನು ಅಸ್ಥಂಗಿಸಿ, ಅನೇಕ ವಿಧಗಳ ಗ್ರಹಿಕೆಗಳನ್ನು ಲೆಕ್ಕಿಸದೆ ಆಕಾಶವು ಅನಂತವಾದುದು ಎಂದು ಆಕಾಸಾನಂಚಾಯತನವನ್ನು64 ಸಾಧಿಸಿಕೊಂಡು ನೆಲೆಗೊಳ್ಳುತ್ತಾನೆ. ಆನಂದ, ಇದೇ, ಆ ಸುಖಕ್ಕಿಂತ ಉತ್ಕೃಷ್ಟವಾದ ಉದಾತ್ತವಾದ ಮತ್ತೊಂದು ಸುಖ.
ಆನಂದ, ಯಾರಾದರು ಹೀಗೆ ಹೇಳಬಹುದು... ಪುನರುಚ್ಚರಿಸಿ... ಯಾವುದದು ಆನಂದ, ಈ ಸುಖಕ್ಕಿಂತ ಉತ್ಕೃಷ್ಟವಾದ ಉದಾತ್ತವಾದ ಮತ್ತೊಂದು ಸುಖ? ಆನಂದ, ಇಲ್ಲಿ ಭಿಕ್ಷುವು ಎಲ್ಲ ಅಕಾಸಾನಂಚಾಯತನವನ್ನು ಅತಿಕ್ರಮಿಸಿ ಅರಿವು ಅನಂತವಾದುದು ಎಂದು ವಿಞ್ಞಣಂಚಾಯತನವನ್ನು ಸಾಧಿಸಿಕೊಂಡು ನೆಲೆಗೊಳ್ಳುತ್ತಾನೆ. ಆನಂದ, ಇದೇ ಆ ಸುಖಕ್ಕಿಂತ ಉತ್ಕೃಷ್ಟವಾದ ಉದಾತ್ತವಾದ ಮತ್ತೊಂದು ಸುಖ.
ಆನಂದ, ಯಾರಾದರೂ ಹೀಗೆ ಹೇಳಬಹುದು... ಪುನರುಚ್ಚರಿಸಿ... ಯಾವುದದು ಆನಂದ, ಈ ಸುಖಕ್ಕಿಂತ ಉತ್ಕೃಷ್ಟವಾದ ಮತ್ತು ಉದಾತ್ತವಾದ ಮತ್ತೊಂದು ಸುಖ? ಆನಂದ, ಇಲ್ಲಿ ಭಿಕ್ಷುವು ಎಲ್ಲ ವಿಞ್ಞಾಣಂಚಾಯತನವನ್ನು ಅತಿಕ್ರಮಿಸಿ ಏನೂ ಇಲ್ಲ ಎಂದು ಅಕಿಂಚಞ್ಞಾಯತನವನ್ನು ಸಾಧಿಸಿಕೊಂಡು ನೆಲೆಗೊಳ್ಳುತ್ತಾನೆ. ಆನಂದ, ಇದೇ ಆ ಸುಖಕ್ಕಿಂತ ಉತ್ಕೃಷ್ಟವಾದ ಮತ್ತು ಉದಾತ್ತವಾದ ಮತ್ತೊಂದು ಸುಖ.
ಆನಂದ ಯಾರಾದರೂ ಹೀಗೆ ಹೇಳಬಹುದು... ಪುನರುಚ್ಚರಿಸಿ... ಯಾವುದದು ಆನಂದ, ಈ ಸುಖಕ್ಕಿಂತ ಉತ್ಕೃಷ್ಟವಾದ ಮತ್ತು ಉದಾತ್ತವಾದ ಮತ್ತೊಂದು ಸುಖ? ಆನಂದ, ಇಲ್ಲಿ ಭಿಕ್ಷುವು ಎಲ್ಲ ಅಕಿಂಚಞ್ಞಾಯತನವನ್ನು ಅತಿಕ್ರಮಿಸಿ ನೇವಸಞ್ಞಾನಾಸಞ್ಞಾಯತನವನ್ನು ಸಾಧಿಸಿಕೊಂಡು ನೆಲೆಗೊಳ್ಳುತ್ತಾನೆ. ಆನಂದ, ಇದೇ ಆ ಸುಖಕ್ಕಿಂತ ಉತ್ಕೃಷ್ಟವಾದ ಮತ್ತು ಉದಾತ್ತವಾದ ಮತ್ತೊಂದು ಸುಖ.
ಆನಂದ ಯಾರಾದರೂ ಹೀಗೆ ಹೇಳಬಹುದು- ಇದು ಜೀವಿಗಳು ಅನುಭವಿಸಬಹುದಾದ ಪರಮಶ್ರೇಷ್ಠ ಸುಖ ಮತ್ತು ಆನಂದ ಎಂದು. ಇದನ್ನು ಅವನಿಗೆ ನಾನು ಮನ್ನಿಸಲಾರೆ ಅದಕ್ಕೇನು ಕಾರಣ? ಆನಂದ, ಈ ಸುಖಕ್ಕಿಂತ ಉತ್ಕೃಷ್ಟವಾದ ಮತ್ತು ಉದಾತ್ತವಾದ ಮತ್ತೊಂದು ಸುಖವಿದೆ. ಯಾವುದದು ಆನಂದ, ಈ ಸುಖಕ್ಕಿಂತ ಉತ್ಕೃಷ್ಟವಾದ ಮತ್ತು ಉದಾತ್ತವಾದ ಮತ್ತೊಂದು ಸುಖ? ಆನಂದ, ಇಲ್ಲಿ ಭಿಕ್ಷುವು ಎಲ್ಲ ನೇವಸಞ್ಞಾನಾಸಞ್ಞಾಯತನವನ್ನು ಅತಿಕ್ರಮಿಸಿ ಗ್ರಹಿಕೆ ಮತ್ತು ಸಂವೇದನೆಗಳ ನಿರೋಧ ಸ್ಥಿತಿಯನ್ನು ಸಾಧಿಸಿಕೊಂಡು ನೆಲೆಗೊಳ್ಳುತ್ತಾನೆ. ಆನಂದ ಇದೇ ಆ ಸುಖಕ್ಕಿಂತ ಉತ್ಕೃಷ್ಟವಾದ ಮತ್ತು ಉದಾತ್ತವಾದ ಮತ್ತೊಂದು ಸುಖ.
4. ಆದರೆ ಆನಂದ, ಈ ಪರಿಸ್ಥಿತಿ ಇರಬಹುದು, ಯಾವಾಗ ಬೇರೆ ಮತಾನುಯಾಯಿ ಪರಿವ್ರಾಜಕರು ಹೀಗೆ ಹೇಳಬಹುದು- ಶ್ರಮಣ ಗೌತಮರು ಗ್ರಹಿಕೆ ಮತ್ತು ಸಂವೇದನೆಗಳ ನಿರೋಧ ಸ್ಥಿತಿಯನ್ನು ಹೇಳುತ್ತಾರೆ; ಮತ್ತು ಅದನ್ನು ಸುಖವೆಂದು ವಿವರಿಸುತ್ತಾರೆ. ಇದೇನು, ಇದು ಹೇಗೆ ಎಂದು. ಅದನ್ನು ಸುಖವೆಂದು ವಿವರಿಸುತ್ತಾರೆ. ಇದೇನು, ಇದು ಹೇಗೆ ಎಂದು? ಆನಂದ, ಹೀಗೆ ಹೇಳುವ ಬೇರೆ ಮತಾನುಯಾಯಿ ಪರಿವ್ರಾಜಕರಿಗೆ ಹೀಗೆ ಹೇಳತಕ್ಕದ್ದು- ಆಯುಷ್ಮಂತ, ಭಗವಾನರು ಸುಖವನ್ನು ಕೇವಲ ಸುಖ ಸಂವೇದನೆಯನ್ನು ಕುರಿತು ಹೇಳುವುದಿಲ್ಲ; ಆಯುಷ್ಮಂತ, ಅದಲ್ಲದೆ, ಯಾವಾಗ ಯಾವಾಗ ಎಲ್ಲೆಲ್ಲಿ ಸುಖವು ಉಪಲಬ್ಧವಾಗುತ್ತದೊ ಅದನ್ನೆಲ್ಲವನ್ನೂ ತಥಾಗತರು ಸುಖವೆಂದು ವಿವರಿಸುತ್ತಾರೆ ಎಂದು.
ಭಗವಾನರು ಇದನ್ನು ನುಡಿದರು. ಸ್ಫೂರ್ತಿಗೊಂಡ ಆಯುಷ್ಮಂತ ಆನಂದರು ಭಗವಾನರ ಮಾತಿಗೆ ಸಂತೋಷಗೊಂಡರು.
ಟಿಪ್ಪಣಿಗಳು [4]
English
Việt Ngữ