ಅಪಣ್ಣಕ ಸುತ್ತ
1. ನಿರ್ವಿವಾದ ಧರ್ಮ
ಹೀಗೆ ನಾನು ಕೇಳಿದ್ದೇನೆ. ಒಂದುಸಲ ಭಗವಾನರು ಕೋಸಲದಲ್ಲಿ ದೊಡ್ಡ ಭಿಕ್ಷು ಸಂಘದೊಡನೆ ನಡೆದುಕೊಂಡು ಹೋಗುತ್ತ ಕೋಸಲದ ಬ್ರಾಹ್ಮಣ ಗ್ರಾಮವಾದ ಸಾಲಾ ಎಂಬಲ್ಲಿ ತಲುಪಿದರು. ಆ ಸಾಲಾಗ್ರಾಮದ ಗೃಹಸ್ಥರುಗಳು ಹೀಗೆ ಕೇಳಿದ್ದರು- ಗೌತಮ ಎಂಬ ಹೆಸರಿನ ಪೂಜ್ಯ ಶ್ರಮಣ ಸಾಕ್ಯಪುತ್ರನು, ಸಾಕ್ಯಕುಲದಿಂದ ಶ್ರಮಣನಾದವನು, ತಮ್ಮ ದೊಡ್ಡದಾದ ಭಿಕ್ಷು ಸಂಘದೊಡನೆ ನಡೆದುಕೊಂಡು ಹೋಗುತ್ತ ಈ ಸಾಲಾದ ಬಳಿ ತಲುಪಿರುವರಂತೆ. ಆ ಪೂಜ್ಯ ಗೌತಮರ ಬಗ್ಗೆ ಈ ರೀತಿಯ ಕೀರ್ತಿ, ಕಲ್ಯಾಣಗುಣಗಳು ಹರಡಿ ಪ್ರಸಿದ್ಧವಾಗಿವೆ. ನಿಜಕ್ಕೂ ಆ ಭಗವಾನರು ಹೀಗಿರುವರು- ಅವರು ಅರಹಂತರು, ಸಮ್ಯಕ್ ಸಂಬುದ್ಧರು, ವಿದ್ಯಾಚರಣ ಸಂಪನ್ನರು, ಸುಗತರು, ಲೋಕಜ್ಞರು, ಮನುಷ್ಯರನ್ನು ಪಳಗಿಸುವ ಅಸಮಾನ ಸಾರಥಿ (ಮಾರ್ಗದರ್ಶಿ), ದೇವತೆ ಹಾಗು ಮಾನವರ ಶಾಸ್ತರು (ಶ್ರೇಷ್ಠ ಗುರು). ಬುದ್ಧರು ಹಾಗು ಭಗವಾನರು ಎಂದು. ಅವರು ದೇವತೆಗಳಿಂದ ಕೂಡಿದ ಮಾರನಿಂದ ಕೂಡಿದ ಬ್ರಹ್ಮನಿಂದ ಕೂಡಿದ ಶ್ರಮಣ ಬ್ರಾಹ್ಮಣ ಪ್ರಜೆಗಳಿಂದ ಕೂಡಿದ ರಾಜ ಮನುಷ್ಯರಿಂದ ಕೂಡಿದ ಈ ಲೋಕವನ್ನು ತಾವೇ ಸ್ವತಃ ಜ್ಞಾನದಿಂದ ಸಾಕ್ಷಾತ್ಕರಿಸಿಕೊಂಡು ತಿಳಿಸಿ ಹೇಳುತ್ತಾರೆ. ಅವರು ಪದ ಮತ್ತು ಅರ್ಥಗಳೆರಡರಲ್ಲೂ, ಆರಂಭದಲ್ಲಿ ಕಲ್ಯಾಣದಾಯಕವಾದ ಮಧ್ಯದಲ್ಲಿ ಕಲ್ಯಾಣದಾಯಕವಾದ ಕೊನೆಯಲ್ಲಿ ಕಲ್ಯಾಣದಾಯಕವಾದ ಧರ್ಮವನ್ನು ತಿಳಿಸುತ್ತಾರೆ. ಪರಮ ಪರಿಪೂರ್ಣವಾದ ಪರಿಶುದ್ಧವಾದ ಬ್ರಹ್ಮಚರ್ಯ ಜೀವನವನ್ನು ಸಾರುತ್ತಾರೆ. ಆ ರೀತಿಯ ಅರಹಂತರನ್ನು ನೋಡುವುದಾದರೊ ಒಳ್ಳೆಯದೇ ಹೌದು ಎಂದು. ಆಗ ಆ ಸಾಲಾದ ಬ್ರಾಹ್ಮಣ ಗೃಹಸ್ಥರುಗಳು ಭಗವಾನರು ಎಲ್ಲಿದ್ದರೋ ಅಲ್ಲಿಗೆ ಬಂದರು; ಬಂದನಂತರ ಕೆಲವರು ಭಗವಾನರಿಗೆ ನಮಸ್ಕರಿಸಿ ಒಂದೆಡೆ ಕುಳಿತರು; ಕೆಲವರು ಭಗವಾನರ ಜೊತೆ ಕುಶಲ ವಿಚಾರಿಸಿದರು, ಕುಶಲ ಮಾತುಕತೆ ಮುಗಿದ ನಂತರ ಒಂದೆಡೆ ಕುಳಿತುಕೊಂಡರು; ಕೆಲವರು ಭಗವಾನರಿಗೆ ಕೈಜೋಡಿಸಿ ನಮಸ್ಕರಿಸಿ ಒಂದೆಡೆ ಕುಳಿತರು; ಕೆಲವರು ಭಗವಾನರಲ್ಲಿಗೆ ಹೋಗಿ ಹೆಸರು, ಗೋತ್ರ ತಿಳಿಸಿ ಒಂದೆಡೆ ಕುಳಿತರು; ಕೆಲವರು ಮೌನವಾಗಿ ಉಳಿದು ಒಂದೆಡೆ ಕುಳಿತರು.
2. ಒಂದೆಡೆ ಕುಳಿತುಕೊಂಡ ಆ ಸಾಲಾ (ಗ್ರಾಮ)ದ ಬ್ರಾಹ್ಮಣ ಗೃಹಸ್ಥರುಗಳಿಗೆ ಭಗವಾನರು ಹೀಗೆ ಹೇಳಿದರು- ಗೃಹಸ್ಥರೇ, ನಿಮಗೆ ಸಂತೃಪ್ತವಾಗುವಂತೆ, ಯಾರಲ್ಲಿ ನಿಮ್ಮ ಶ್ರದ್ಧೆಯು ಚೆನ್ನಾಗಿ ಸ್ಥಾಪಿಸಲ್ಪಟ್ಟಿರುವಂತೆ ಯಾರಾದರೂ ಗುರು ಇದ್ದಾರೆಯೇ?
ಭಂತೇ, ನಮಗೆ ಸಂತೃಪ್ತವಾಗುವಂತೆ, ಯಾರಲ್ಲಿ ನಮ್ಮ ಶ್ರದ್ಧೆಯು ಚೆನ್ನಾಗಿ ಸ್ಥಾಪಿಸಲ್ಪಟ್ಟಿರುವಂತೆ ಯಾವ ಗುರುವೂ ಇಲ್ಲ ಎಂದು.
ಗೃಹಸ್ಥರೇ, ನಿಮಗೆ ಸಂತೃಪ್ತವಾಗುವಂತೆ ಯಾವ ಗುರುವೂ ಇಲ್ಲದಿರುವುದರಿಂದ ಈ ನಿರ್ವಿವಾದ ಧಮ್ಮವನ್ನು ಅನುಸರಿಸಿ ಪಾಲನೆ ಮಾಡಿ. ಗೃಹಸ್ಥರೇ, ಈ ನಿರ್ವಿವಾದ ಧರ್ಮವನ್ನು ಕೈಗೊಂಡು ಪಾಲಿಸಿದರೆ ಅದು ನಿಮ್ಮ ಹಿತಕ್ಕಾಗಿ, ಸುಖಕ್ಕಾಗಿ ದೀರ್ಘವಾಗಿರುತ್ತದೆ. ಗೃಹಸ್ಥರೇ, ಆ ನಿರ್ವಿವಾದ ಧಮ್ಮ ಯಾವುದು?
3. ಗೃಹಸ್ಥರೇ, ಈ ರೀತಿ ವಾದಿಸುವ ಈ ರೀತಿ ತಿಳುವಳಿಕೆಯುಳ್ಳ ಕೆಲವು ಶ್ರಮಣ ಬ್ರಾಹ್ಮಣರು ಇದ್ದಾರೆ- ದಾನ (ಫಲ) ಇಲ್ಲ, ಅರ್ಪಣೆಯ (ಫಲ) ಇಲ್ಲ, ಬಲಿಯ (ಫಲ) ಇಲ್ಲ, ಒಳ್ಳೆಯ ಮತ್ತು ಕೆಟ್ಟ ಕರ್ಮಗಳ ಫಲ ಹಾಗು ಪರಿಣಾಮ ಇಲ್ಲ, ಈ ಲೋಕ ಇಲ್ಲ, ಪರಲೋಕವೂ ಇಲ್ಲ, ತಾಯಿ ಇಲ್ಲ, ತಂದೆ ಇಲ್ಲ, ಸ್ವಯಂಪ್ರೇರಿತ ಜೀವಿಗಳಿಲ್ಲ; ಲೋಕದಲ್ಲಿ ಸರಿಯಾದ ಮಾರ್ಗ ಹಿಡಿದ, ಸರಿಯಾಗಿ ಮುಂದೆ ಸಾಗುವ, ಯಾರು ಈ ಲೋಕವನ್ನು ಮತ್ತು ಪರಲೋಕವನ್ನು ತಮಗೆ ತಾವೇ ಉತ್ಕೃಷ್ಟವಾದ ಜ್ಞಾನದಿಂದ ಸಾಕ್ಷಾತ್ಕರಿಸಿಕೊಂಡು ಹೇಳುವ ಶ್ರಮಣರು, ಬ್ರಾಹ್ಮಣರು ಇಲ್ಲ ಎಂದು. ಗೃಹಸ್ಥರೇ, ಕೆಲವು ಶ್ರಮಣ ಬ್ರಾಹ್ಮಣರು ಈ ಶ್ರಮಣ ಬ್ರಾಹ್ಮಣರುಗಳಿಗೆ ನೇರವಾಗಿ ವಿರೋಧಿಸುತ್ತಾರೆ. ಅವರು ಹೀಗೆ ಹೇಳುತ್ತಾರೆ- ದಾನ (ಫಲ) ಇದೆ, ಅರ್ಪಣೆಯ (ಫಲ) ಇದೆ, ಬಲಿಯ (ಫಲ) ಇದೆ, ಒಳ್ಳೆಯ ಮತ್ತು ಕೆಟ್ಟ ಕರ್ಮಗಳ ಫಲ ಹಾಗು ಪರಿಣಾಮ ಇದೆ, ಈ ಲೋಕವಿದೆ, ಪರಲೋಕವೂ ಇದೆ. ತಾಯಿ ಇದ್ದಾಳೆ, ತಂದೆ ಇದ್ದಾನೆ, ಸ್ವಯಂಪ್ರೇರಿತ ಜೀವಿಗಳಿವೆ; ಲೋಕದಲ್ಲಿ ಸರಿಯಾದ ಮಾರ್ಗ ಹಿಡಿದ, ಸರಿಯಾಗಿ ಮುಂದೆ ಸಾಗುವ, ಯಾರು ಈ ಲೋಕವನ್ನು ಮತ್ತು ಪರಲೋಕವನ್ನು ತಮಗೆ ತಾವೇ ಉತ್ಕೃಷ್ಟವಾದ ಜ್ಞಾನದಿಂದ ಸಾಕ್ಷಾತ್ಕರಿಸಿಕೊಂಡು ಹೇಳುವ ಶ್ರಮಣರು ಬ್ರಾಹ್ಮಣರು ಇದ್ದಾರೆ. ಇದನ್ನು ಹೇಗೆ ಯೋಚಿಸುತ್ತೀರಿ, ಗೃಹಸ್ಥರೇ- ಈ ಶ್ರಮಣರು ಬ್ರಾಹ್ಮಣರು ಪರಸ್ಪರ ನೇರವಾಗಿ ವಿರೋಧಿಸಿ ವಾದಿಸುವರಲ್ಲವೆ?
ಹೌದು, ಭಂತೇ.
4. ಗೃಹಸ್ಥರೇ, ಯಾವ ಶ್ರಮಣ ಬ್ರಾಹ್ಮಣರು ಈ ರೀತಿ ವಾದಿಸುವರೊ ಈ ರೀತಿ ತಿಳುವಳಿಕೆಯುಳ್ಳವರೋ- ದಾನ (ಫಲ) ಇಲ್ಲ, ಅರ್ಪಣೆ (ಫಲ) ಇಲ್ಲ... ಪುನರುಚ್ಚರಿಸಿ... ಯಾರು ಈ ಲೋಕವನ್ನು ಮತ್ತು ಪರಲೋಕವನ್ನು ತಮಗೆ ತಾವೇ ಉತ್ಕೃಷ್ಟವಾದ ಜ್ಞಾನದಿಂದ ಸಾಕ್ಷಾತ್ಕರಿಸಿಕೊಂಡು ಹೇಳುವ ಶ್ರಮಣ ಬ್ರಾಹ್ಮಣರು ಇಲ್ಲ ಎಂದು ಅವರಿಂದ ಇದನ್ನು ನಿರೀಕ್ಷಿಸಬಹುದು, ಅಂದರೆ, ಶಾರೀರಿಕ ಸುಚರಿತ್ತ, ಮಾತಿನ ಸುಚರಿತ್ರ, ಮನಸ್ಸಿನ ಸುಚರಿತ್ರ, ಇ ಮೂರು ಕುಶಲ ಧರ್ಮಗಳನ್ನು ಬದಿಗಿಟ್ಟು ಶಾರೀರಿಕ ದುಶ್ಚರಿತ್ರ, ಮಾತಿನ ದುಶ್ಚರಿತ್ರ ಮನಸ್ಸಿನ ದುಶ್ಚರಿತ್ರ ಈ ಮೂರು ಅಕುಶಲ ಧರ್ಮಗಲನ್ನು ಕೈಗೊಂಡು ಅನುಸರಿಸುತ್ತಾರೆ. ಅದಕ್ಕೇನು ಕಾರಣ? ಆ ಒಳ್ಳೆಯ ಶ್ರಮಣ ಬ್ರಾಹ್ಮಣರು ಅಕುಶಲ ಧರ್ಮಗಳ ಅಪಾಯವನ್ನು, ಅವನತಿಯನ್ನು ಮತ್ತು ಕಲ್ಮಶಗಳನ್ನು, ಅಲ್ಲದೆ ಕುಶಲ ಧರ್ಮಗಳಿಗಾಗಿ ಅವುಗಳ ತ್ಯಜಿಸುವಿಕೆಯ ಉಪಯೋಗವು ಶುದ್ಧತೆಗೆ ಭಾಗಿಯಾಗುವುದನ್ನು ನೋಡುವುದಿಲ್ಲ. ಪರಲೋಕವು ಇರುವಾಗ ಯಾರ ತಿಳುವಳಿಕೆ ಪರಲೋಕ ಇಲ್ಲ ಎನ್ನುವುದು, ಅವನ ತಪ್ಪು ತಿಳುವಳಿಕೆ ಆಗುತ್ತದೆ. ಪರಲೋಕವು ಇರುವಾಗ ಯಾರ ಆಲೋಚನೆ ಪರಲೋಕ ಇಲ್ಲ ಎನ್ನುವುದು ಅವನ ತಪ್ಪು ಆಲೋಚನೆ ಆಗುತ್ತದೆ. ಪರಲೋಕವು ಇರುವಾಗ ಯಾರು ಪರಲೋಕ ಇಲ್ಲ ಎಂದು ಮಾತನಾಡುತ್ತಾರೊ ಅದು ಅವನ ತಪ್ಪು ಮಾತು ಆಗುತ್ತದೆ. ಪರಲೋಕವು ಇರುವಾಗ ಯಾರೊಬ್ಬನು ಪರಲೋಕ ಇಲ್ಲ ಎಂದು ಹೇಳುತ್ತಾನೆ; (ಹೀಗೆ) ಅವನು, ಯಾವ ಅರಹಂತರು ಪರಲೋಕವನ್ನು ತಿಳಿದವರಾಗಿದ್ದಾರೆಯೋ ಅವರಿಗೆ ಹಾಸ್ಯಮಾಡಿದವನಾಗುತ್ತಾನೆ. ಪರಲೋಕ ಇರುವಾಗ ಯಾರೊಬ್ಬನು ಪರಲೋಕ ಇಲ್ಲ ಎಂದು ಇತರರಿಗೆ ಮನದಟ್ಟು ಮಾಡಿದವನಾಗುತ್ತಾನೆ, ಈ ಮನದಟ್ಟುಮಾಡುವುದಕ್ಕಾಗಿ ತನಗೆ ತಾನು ಪ್ರಶಂಸಿಸಿಕೊಳ್ಳುತ್ತಾನೆ ಮತ್ತು ಇತರರನ್ನು ಧಿಕ್ಕರಿಸುತ್ತಾನೆ. ಹೀಗೆ ಅವನ ಒಳ್ಳೆಯ ಶೀಲಗಳು ತೊಡೆದು ಹೋಗುವುದಕ್ಕಿಂತ ಮೊದಲೇ ಕೆಟ್ಟ ಶೀಲಗಳು ಸ್ಥಾಪಿಸಲ್ಪಟ್ಟಿರುತ್ತವೆ- ಈ ತಪ್ಪು ತಿಳುವಳಿಕೆ, ತಪ್ಪು ಆಲೋಚನೆ, ತಪ್ಪು ಮಾತು, ಉದಾತ್ತರಿಗೆ ಹಾಸ್ಯ ಮಾಡುವಿಕೆ, ಅಸದ್ಧರ್ಮವನ್ನು ಮನದಟ್ಟು ಮಾಡುವಿಕೆ, ತನಗೆ ತಾನು ಪ್ರಶಂಸಿಸುವಿಕೆ ಮತ್ತು ಇತರರನ್ನು ಧಿಕ್ಕರಿಸುವಿಕೆ, ಈ ಅನೇಕ ಪಾಪಕಾರಿಯಾದ ಅಕುಶಲ ಧರ್ಮಗಳು ತಪ್ಪು ತಿಳುವಳಿಕೆಯ ಕಾರಣದಿಂದ ಹುಟ್ಟಿಕೊಳ್ಳುತ್ತವೆ.
ಗೃಹಸ್ಥರೆ, ಒಬ್ಬ ತಿಳುವಳಿಕೆಯುಳ್ಳ ಮನುಷ್ಯನು ಹೀಗೆ ಯೋಚಿಸುತ್ತಾನೆ- ಒಂದುವೇಳೆ ಪರಲೋಕ ಇಲ್ಲದಿದ್ದರೆ ಈ ಯೋಗ್ಯ ವ್ಯಕ್ತಿಯು ಶರೀರ ನಾಶವಾದ ನಂತರ ತನಗೆ ತಾನು ಸುರಕ್ಷತೆಯನ್ನು ಮಾಡಿಕೊಳ್ಳುವನು;68 ಆದರೆ ಒಂದುವೇಳೆ ಪರಲೋಕವಿದ್ದಿದ್ದರೆ ಈ ಯೋಗ್ಯ ವ್ಯಕ್ತಿಯು ಶರೀರ ನಾಶವಾಗಿ ಸಾವಿನ ನಂತರ ಅಪಾಯದಲ್ಲಿ ದುರ್ಗತಿಯಲ್ಲಿ ವಿನಿಪಾತಕದಲ್ಲಿ ನರಕದಲ್ಲಿ ಹುಟ್ಟುವನು. ಏನೇ ಆದರೂ ಪರಲೋಕ ಇಲ್ಲವೆಂದೇ ಆಗಲಿ, ಈ ಶ್ರಮಣ ಬ್ರಾಹ್ಮಣರ ಈ ಮಾತು ನಿಜವಾಗಲಿ, ಆದರೂ ಕೂಡ ಈ ಯೋಗ್ಯ ವ್ಯಕ್ತಿಯು ಜ್ಞಾನಿಗಳಿಂದ ಇಲ್ಲಿಯೇ ಈಗಲೇ ಹೀಗೆ ಖಂಡಿಸಲ್ಪಡುತ್ತಾನೆ- ಈ ಯೋಗ್ಯ ವ್ಯಕ್ತಿಯು ಕೆಟ್ಟ ಶೀಲವನ್ನು ಹೊಂದಿದವನು, ತಪ್ಪು ತಿಳುವಳಿಕೆಯುಳ್ಳವನು, ಏನೂ ಇಲ್ಲ ಎಂದು ವಾದಿಸುವವನು69 ಎಂದು. ಒಂದುವೇಳೆ ಪರಲೋಕ ಇದ್ದೇ ಇದೆ ಎಂದರೆ ಈ ಯೋಗ್ಯ ವ್ಯಕ್ತಿಗೆ ಎರಡು ರೀತಿಯ ಎಸೆತಗಳಿವೆ (ಸೋಲುಗಳಿವೆ)- ಅವನು ಜ್ಞಾನಿಗಳಿಂದ ಇಲ್ಲಿಯೇ ಈಗಲೇ ಖಂಡಿಸಲ್ಪಡುತ್ತಾನೆ, ಅಲ್ಲದೆ ಶರೀರ ನಾಶವಾದ ನಂತರ ಅಪಾಯದಲ್ಲಿ ದುರ್ಗತಿಯಲ್ಲಿ ವಿನಿಪಾತದಲ್ಲಿ ನರಕದಲ್ಲಿ ಹುಟ್ಟುವನು. ಹೀಗೆ ಈ ನಿರ್ವಿವಾದ ಧಮ್ಮವನ್ನು ಅವನು ಅಸಮಗ್ರವಾಗಿ ಕೈಗೊಂಡವನಾಗಿ, ಅವನು ಅದನ್ನು ಏಕಪಕ್ಷೀಯವಾಗಿ ಹರಡುತ್ತಾನೆ, ಕುಶಲಕರವಾದ ಸ್ಥಾನಗಳನ್ನು ತಿರಸ್ಕರಿಸುತ್ತಾನೆ.
5. ಗೃಹಸ್ಥರೇ, ಯಾವ ಶ್ರಮಣ ಬ್ರಾಹ್ಮಣರು ಈ ರೀತಿ ವಾದಿಸುವರೋ ಈ ರೀತಿ ತಿಳುವಳಿಕೆಯುಳ್ಳವರೋ- ದಾನ (ಫಲ) ಇದೆ... ಪುನರುಚ್ಚರಿಸಿ... ಯಾರು ಈ ಲೋಕವನ್ನು ಮತ್ತು ಪರಲೋಕವನ್ನು ತಮಗೆ ತಾವೇ ಉತ್ಕೃಷ್ಟವಾದ ಜ್ಞಾನದಿಂದ ಸಾಕ್ಷಾತ್ಕರಿಸಿಕೊಂಡು ಹೇಳುವ ಶ್ರಮಣ ಬ್ರಾಹ್ಮಣರು ಇದ್ದಾರೆ ಎಂದು. ಅವರಿಂದ ಇದನ್ನು ನಿರೀಕ್ಷಿಸಬಹುದು, ಅಂದರೆ ಶಾರೀರಿಕ ದುಶ್ಚರಿತ್ರೆ, ಮಾತಿನ ದುಶ್ಚರಿತ್ರೆ, ಮನಸ್ಸಿನ ದುಶ್ಚರಿತ್ರೆ. ಈ ಮೂರು ಅಕುಶಲ ಧರ್ಮಗಳನ್ನು ಬದಿಗಿಟ್ಟು ಶಾರೀರಿಕ ಸುಚರಿತ್ರ, ಮಾತಿನ ಸುಚರಿತ್ರ, ಮನಸ್ಸಿನ ಸುಚರಿತ್ರ- ಈ ಮೂರು ಕುಶಲ ಧರ್ಮಗಳನ್ನು ಕೈಗೊಂಡು ಅನುಸರಿಸುತ್ತಾರೆ. ಅದಕ್ಕೇನು ಕಾರಣ? ಆ ಒಳ್ಳೆಯ ಶ್ರಮಣ ಬ್ರಾಹ್ಮಣರು ಅಕುಶಲ ಧಮ್ಮಗಳ ಅಪಾಯವನ್ನು ಅವನತಿಯನ್ನು ಮತ್ತು ಕಲ್ಮಶಗಳನ್ನು, ಅಲ್ಲದೆ ಕುಶಲ ಧಮ್ಮಗಳಿಗಾಗಿ ಅವುಗಳ ತ್ಯಜಿಸುವಿಕೆಯ ಉಪಯೋಗವು ಶುದ್ಧತೆಗೆ ಭಾಗಿಯಾಗುವುದನ್ನು ನೋಡುತ್ತಾರೆ. ಪರಲೋಕ ಇರುವಾಗ ಯಾರ ತಿಳುವಳಿಕೆ ಪರಲೋಕ ಇದೆ ಎನ್ನುವುದು ಅವನ ಸರಿಯಾದ ತಿಳುವಳಿಕೆ ಆಗುತ್ತದೆ. ಪರಲೋಕ ಇರುವಾಗ ಯಾರ ಆಲೋಚನೆ ಪರಲೋಕ ಇದೆ ಎನ್ನುವುದು ಅವನ ಸರಿಯಾದ ಆಲೋಚನೆ ಆಗುತ್ತದೆ. ಪರಲೋಕವು ಇರುವಾಗ ಯಾರು ಪರಲೋಕ ಇದೆ ಎಂದು ಮಾತನಾಡುತ್ತಾರೊ ಅದು ಅವನ ಸರಿಯಾದ ಮಾತು ಆಗುತ್ತದೆ. ಪರಲೋಕವು ಇರುವಾಗ ಇರುವಾಗ ಯಾರೊಬ್ಬನು ಪರಲೋಕ ಇದೆ ಎಂದು ಹೇಳುತ್ತಾನೆ; ಹೀಗೆ ಅವನು ಯಾವ ಅರಹಂತರು ಪರಲೋಕವನ್ನು ತಿಳಿದವರಾಗಿದ್ದಾರೆಯೋ ಅವರಿಗೆ ಹಾಸ್ಯಮಾಡಿದವನಾಗುವುದಿಲ್ಲ. ಪರಲೋಕ ಇರುವಾಗ ಯಾರೊಬ್ಬನು ಪರಲೋಕ ಇದೆ ಎಂದು ಬೇರೆಯವರಿಗೆ ಮನದಟ್ಟು ಮಾಡಿದವನಾಗುತ್ತಾನೆ, ಈ ಮನದಟ್ಟು ಮಾಡುವುದಕ್ಕಾಗಿ ತನಗೆ ತಾನು ಪ್ರಶಂಸಿಸಿಕೊಳ್ಳುವುದಿಲ್ಲ ಮತ್ತು ಇತರರನ್ನು ಧಿಕ್ಕರಿಸುವುದಿಲ್ಲ. ಹೀಗೆ ಅವನ ಕೆಟ್ಟ ಶೀಲಗಳು ತೊಡೆದು ಹೋಗುವುದಕ್ಕಿಂತ ಮೊದಲೇ ಒಳ್ಳೆಯ ಶೀಲಗಳು ಸ್ಥಾಪಿಸಲ್ಪಟ್ಟಿರುತ್ತವೆ. ಈ ಸರಿಯಾದ ತಿಳುವಳಿಕೆ, ಸರಿಯಾದ ಆಲೋಚನೆ, ಸರಿಯಾದ ಮಾತು, ಉದಾತ್ತರಿಗೆ ಹಾಸ್ಯ ಮಾಡದಿರುವಿಕೆ, ಸದ್ಧರ್ಮವನ್ನು ಮನದಟ್ಟು ಮಾಡುವಿಕೆ, ತನಗೆ ತಾನು ಪ್ರಶಂಸಿಸದಿರುವಿಕೆ ಮತ್ತು ಇತರರನ್ನು ಧಿಕ್ಕರಿಸಿದೆ ಇರುವುದು, ಈ ಅನೇಕ ಕುಶಲ ಧರ್ಮಗಳು ಸರಿಯಾದ ತಿಳುವಳಿಕೆಯ ಕಾರಣದಿಂದ ಹುಟ್ಟಿಕೊಳ್ಳುತ್ತವೆ.
ಗೃಹಸ್ಥರೇ, ಒಬ್ಬ ತಿಳುವಳಿಕೆಯುಳ್ಳ ಮನುಷ್ಯನು ಹೀಗೆ ಯೋಚಿಸುತ್ತಾನೆ- ಒಂದುವೇಳೆ ಪರಲೋಕವಿದ್ದರೆ ಈ ಯೋಗ್ಯ ವ್ಯಕ್ತಿಯು ಶರೀರ ನಾಶವಾಗಿ ಸಾವಿನ ನಂತರ ಸುಗತಿಯಲ್ಲಿ ಸ್ವರ್ಗಲೋಕದಲ್ಲಿ ಹುಟ್ಟುವನು. ಏನೇ ಆದರೂ ಪರಲೋಕ ಇಲ್ಲವೆಂದೇ ಆಗಲಿ, ಹಾಗು ಈ ಶ್ರಮಣ ಬ್ರಾಹ್ಮಣರ ಈ ಮತು ನಿಜವಾಗಲಿ, ಆದರೂ ಕೂಡ ಈ ಯೋಗ್ಯ ವ್ಯಕ್ತಿಯು ಜ್ಞಾನಿಗಳಿಂದ ಇಲ್ಲಿಯೇ ಈಗಲೇ ಹೀಗೆ ಪ್ರಶಂಸಿಸಲ್ಪಡುತ್ತಾನೆ70 ಈ ಯೋಗ್ಯ ವ್ಯಕ್ತಿಯು ಶೀಲವಂತನಾಗಿದ್ದು ಸರಿಯಾದ ತಿಳುವಳಿಕೆಯುಳ್ಳವನು ಮತ್ತು ಇದೆ ಎಂದು ವಾದಿಸುವವನು ಎಂದು. ಒಂದುವೇಳೆ ಪರಲೋಕ ಇದ್ದೇ ಇದೆ ಎಂದರೆ ಈ ಯೋಗ್ಯ ವ್ಯಕ್ತಿಗೆ ಎರಡು ಅದೃಷ್ಟ ಎಸೆತಗಳಿವೆ (ಗೆಲುವುಗಳಿವೆ) ಅವನು ಜ್ಞಾನಿಗಳಿಂದ ಇಲ್ಲಿಯೇ ಈಗಲೇ ಪ್ರಶಂಸಿಲ್ಪಡುತ್ತಾನೆ, ಅಲ್ಲದೆ ಶರೀರ ನಾಶವಾಗಿ ಸಾವಿನ ನಂತರ ಸುಗತಿಯಲ್ಲಿ ಸ್ವರ್ಗಲೋಕದಲ್ಲಿ ಹುಟ್ಟುವನು. ಹೀಗೆ ಈ ನಿರ್ವಿವಾದ ಧಮ್ಮವನ್ನು ಸಮಗ್ರವಾಗಿ ಕೈಗೊಂಡವನಾಗಿ, ಅವನು ಅದನ್ನು ಎರಡೂ ಕಡೆ ಹರಡುತ್ತಾನೆ, ಅಕುಶಲಕರವಾದ ಸ್ಥಾನಗಳನ್ನು ತಿರಸ್ಕರಿಸುತ್ತಾನೆ.
6. ಗೃಹಸ್ಥರೇ, ಈ ರೀತಿ ವಾದಿಸುವವರು, ಈ ರೀತಿ ದೃಷ್ಟಿಯುಳ್ಳವರು ಇದ್ದಾರೆ- ಮಾಡುವುದರಿಂದ (ಇತರರಿಂದ) ಮಾಡಿಸುವುದರಿಂದ, ಅಂಗಛೇದ ಮಾಡುವುದರಿಂದ ಅಂಗಛೇಧ ಮಾಡಿಸುವುದರಿಂದ, ಹಿಂಸೆ ಮಾಡುವುದರಿಂದ ಹಿಂಸೆ ಮಾಡಿಸುವುದರಿಂದ, ಶೋಕವನ್ನುಂಟುಮಾಡುವುದರಿಂದ, ಶೋಕವನ್ನುಂಟುಮಾಡಿಸುವುದ ರಿಂದ, ದಬ್ಬಾಳಿಕೆ ಮಾಡುವುದರಿಂದ ದಬ್ಬಾಳಿಕೆ ಮಾಡಿಸುವುದರಿಂದ, ಹೆದರಿಕೆಯನ್ನುಂಟುಮಾಡುವುದರಿಂದ ಹೆದರಿಕೆಯನುಂಟುಮಾಡಿಸುವುದರಿಂದ, ಜೀವಿಗಳ ವಧೆ ಮಾಡುವುದರಿಂದ, ಕೊಡದೆ ಇದ್ದದ್ದನ್ನು ತೆಗೆದುಕೊಳ್ಳುವುದರಿಂದ, ಅಪಹರಿಸಲು (ಬಾಗಿಲನ್ನು) ಒಡೆಯುವುದರಿಂದ, ಕನ್ನಗಳ್ಳತನಮಾಡುವುದರಿಂದ, (ದಾರಿಕರನ್ನು ದೋಚಲು) ಗುಂಪಾಗಿ ಅಗಡಿಕೂಡುವುದರಿಂದ, ಪರಸ್ತ್ರೀ ಬಳಿ ಹೋಗುವುದರಿಂದ, ಸುಳ್ಳು ಹೇಳುವುದರಿಂದ- ಹೀಗೆ ಮಾಡುವವನಿಂದ ಪಾಪವೇನೂ ಮಾಡಲ್ಪಟ್ಟಿಲ್ಲ. ಒಂದುವೇಳೆ ಯಾರಾದರೂ ಚೂಪಾದ ಪರಿಧಿಯುಳ್ಳ ಚಕ್ರದಿಂದ ಈ ಭೂಮಿಯ ಜೀವಿಗಳನ್ನು ಒಂದು ಮಾಂಸದ ಮುದ್ದೆ ಮಾಡಿದರೂ, ಒಂದು ಮಾಂಸದ ರಾಶಿ ಮಾಡಿದರೂ, ಆ ಮೂಲದಿಂದ (ಕಾರಣದಿಂದ) ಯಾವ ಪಾಪವೂ ಇಲ್ಲ, ಆ ಪಾಪಕ್ಕೆ ಪರಿಣಾಮವೂ ಇಲ್ಲ. ಅಲ್ಲದೆ ಯಾರಾದರೂ ಗಂಗಾನದಿಯ ದಕ್ಷಿಣ ತೀರಕ್ಕೆ ಕೊಲ್ಲುತ್ತ, ಕತ್ತರಿಸುತ್ತ, ಅಂಗಛೇದ ಮಾಡುತ್ತ ಮತ್ತು ಅಂಗಛೇದ ಮಾಡಿಸುತ್ತ ಹಿಂಸೆ ಮಾಡುತ್ತ ಹಿಂಸೆ ಮಾಡಿಸುತ್ತ ಹೋದರೂ ಆ ಮೂಲದಿಂದ ಯಾವ ಪಾಪವೂ ಇಲ್ಲ. ಆ ಪಾಪಕ್ಕೆ ಪರಿಣಾಮವೂ ಇಲ್ಲ. ಅಲ್ಲದೇ ಯಾರಾದರೂ ಗಂಗಾನದಿಯ ಉತ್ತರ ತೀರಕ್ಕೆ ದಾನವನ್ನು ಕೊಡುತ್ತ ದಾನವನ್ನು ಕೊಡಿಸುತ್ತ ಅರ್ಪಣೆ ಮಾಡುತ್ತ ಅರ್ಪಣೆ ಮಾಡಿಸುತ್ತ ಹೋದರೂ ಆ ಮೂಲದಿಂದ ಯಾವ ಪುಣ್ಯವೂ ಇಲ್ಲ. ಆ ಪುಣ್ಯಕ್ಕೆ ಪರಿಣಾಮವೂ ಇಲ್ಲ. ದಾನದಿಂದ, ದಮಿಸುವುದರಿಂದ, ಸಂಯಮದಿಂದ, ಸತ್ಯನುಡಿಯುವುದರಿಂದ ಪುಣ್ಯ ಇಲ್ಲ, ಆ ಪುಣ್ಯಕ್ಕೆ ಪರಿಣಾಮವೂ ಇಲ್ಲ ಎಂದು. ಗೃಹಸ್ಥರೇ, ಕೆಲವು ಶ್ರಮಣ ಬ್ರಾಹ್ಮಣರು ಈ ಶ್ರಮಣ ಬ್ರಾಹ್ಮಣರುಗಳಿಗೆ ನೇರವಾಗಿ ವಿರೋಧಿಸುತ್ತಾರೆ,71 ಅವರು ಹೀಗೆ ಹೇಳುತ್ತಾರೆ- ಮಾಡುವುದರಿಂದ (ಇತರರಿಂದ) ಮಾಡಿಸುವುದರಿಂದ, ಅಂಗಛೇದ ಮಾಡುವುದರಿಂದ ಅಂಗಛೇದ ಮಾಡಿಸುವುದರಿಂದ, ಹಿಂಸೆ ಮಾಡುವುದರಿಂದ, ಹಿಂಸೆ ಮಾಡಿಸುವುದರಿಂದ, ಶೋಕವನ್ನುಂಟುಮಾಡುವುದರಿಂದ, ಶೋಕವನ್ನುಂಟುಮಾಡಿಸುವದ ರಿಂದ, ದಬ್ಬಾಳಿಕೆ ಮಾಡುವುದರಿಂದ ದಬ್ಬಾಳಿಕೆ ಮಾಡಿಸುವುದರಿಂದ, ಹೆದರಿಕೆಯನ್ನುಂಟುಮಾಡುವುದರಿಂದ, ಕೊಡದೇ ಇದ್ದುದ್ದನ್ನು ತೆಗೆದುಕೊಳ್ಳುವುದರಿಂದ, ಅಪಹರಿಸಲು (ಬಾಗಿಲನ್ನು) ಒಡೆಯುವುದರಿಂದ, ಕನ್ನಗಳ್ಳತನ ಮಾಡುವುದರಿಂದ, (ದಾರಿಕರನ್ನು ದೋಚಲು) ಗುಂಪಾಗಿ ಅಡಗಿ ಕೂಡುವುದರಿಂದ, ಪರಸ್ತ್ರೀ ಬಳಿ ಹೋಗುವುದರಿಂದ, ಸುಳ್ಳು ಹೇಳುವುದರಿಂದ ಹೀಗೆ ಮಾಡುವವನಿಂದ ಪಾಪವು ಮಾಡಲ್ಪಟ್ಟಿದೆ. ಒಂದುವೇಳೆ ಯಾರಾದರೂ ಚೂಪಾದ ಪರಿಧಿಯುಳ್ಳ ಚಕ್ರದಿಂದ ಈ ಭೂಮಿಯ ಜೀವಿಗಳನ್ನು ಒಂದು ಮಾಂಸದ ಮುದ್ದೆ ಮಾಡಿದರೂ, ಒಂದು ಮಾಂಸದ ರಾಶಿ ಮಾಡಿದರೂ, ಆ ಮೂಲದಿಂದ (ಕಾರಣದಿಂದ) ಪಾಪವಿದೆ, ಆ ಪಾಪಕ್ಕೆ ಪರಿಣಾಮವೂ ಇದೆ. ಅಲ್ಲದೆ ಯಾರಾದರು ಗಂಗಾನದಿಯ ದಕ್ಷಿಣ ತೀರಕ್ಕೆ ಕೊಲ್ಲುತ್ತ, ಕತ್ತರಿಸುತ್ತ, ಅಂಗಛೇದ ಮಾಡುತ್ತ, ಮತ್ತು ಅಂಗಛೇದ ಮಾಡಿಸುತ್ತ, ಹಿಂಸೆ ಮಾಡುತ್ತ ಮತ್ತು ಹಿಂಸೆ ಮಾಡಿಸುತ್ತ ಹೋದರೆ ಆ ಮೂಲದಿಂದ ಪಾಪವಿದೆ, ಆ ಪಾಪಕ್ಕೆ ಪರಿಣಾಮವೂ ಇದೆ. ಅಲ್ಲದೆ ಯಾರಾದರೂ ಗಂಗಾನದಿಯ ಉತ್ತರ ತೀರಕ್ಕೆ ದಾನವನ್ನು ಮಾಡುತ್ತ ದಾನವನ್ನು ಕೊಡಿಸುತ್ತ, ಅರ್ಪಣೆ ಮಾಡುತ್ತ ಮತ್ತು ಅರ್ಪಣೆ ಮಾಡಿಸುತ್ತ ಹೋದರೆ ಆ ಮೂಲದಿಂದ ಪುಣ್ಯವು ಇದೆ, ಆ ಪುಣ್ಯಕ್ಕೆ ಪರಿಣಾಮವೂ ಇದೆ. ದಾನದಿಂದ, ದಮಿಸುವುದರಿಂದ, ಸಂಯಮದಿಂದ, ಸತ್ಯ ನುಡಿಯುವುದರಿಂದ ಪುಣ್ಯವಿದೆ. ಆ ಪುಣ್ಯಕ್ಕೆ ಪರಿಣಾಮವೂ ಇದೆ ಎಂದು. ಇದನ್ನು ಹೇಗೆ ಯೋಚಿಸತ್ತೀರಿ, ಗೃಹಸ್ಥರೇ, ಈ ಶ್ರಮಣ ಬ್ರಾಹ್ಮಣರು ಪರಸ್ಪರ ನೇರವಾಗಿ ವಿರೋಧಿಸಿ ವಾದಿಸುವರಲ್ಲವೆ ಎಂದು.
ಹೌದು ಭಂತೇ.
7. ಗೃಹಸ್ಥರೆ, ಈಗ ಯಾವ ಶ್ರಮಣ ಬ್ರಾಹ್ಮಣರು ಈ ರೀತಿ ವಾದಿಸುವರೊ ಈ ರೀತಿ ದೃಷ್ಟಿಯುಳ್ಳವರೊ ಮಾಡುವುದರಿಂದ ಮತ್ತು ಇತರರಿಂದ ಮಾಡಿಸುವುದರಿಂದ ಅಂಗಛೇದ ಮಾಡುವುದರಿಂದ ಅಂಗಛೇದ ಮಾಡಿಸುವುದರಿಂದ, ಹಿಂಸೆ ಮಾಡುವುದರಿಂದ, ಹಿಂಸೆ ಮಾಡಿಸುವುದರಿಂದ, ಶೋಕನ್ನುಂಟುಮಾಡವುದರಿಂದ ಶೋಕವನ್ನುಂಟುಮಾಡಿಸುವುದರಿಂದ, ದಬ್ಬಾಳಿಕೆ ಮಾಡುವುದರಿಂದ, ದಬ್ಬಾಳಿಕೆ ಮಾಡಿಸುವುದರಿಂದ, ಹೆದರಿಕೆಯನ್ನುಂಟುಮಾಡುವುದರಿಂದ, ಹೆದರಿಕೆಯನ್ನುಂಟುಮಾಡಿಸುವದರಿಂದ, ಜೀವಿಗಳ ವಧೆ ಮಾಡುವುದರಿಂದ, ಕೊಡದೆ ಇದ್ದದ್ದನ್ನು ತೆಗೆದುಕೊಳ್ಳುವುದರಿಂದ, ಅಪಹರಿಸಲು (ಬಾಗಿಲನ್ನು) ಒಡೆಯುವುದರಿಂದ, ಕನ್ನಗಳ್ಳತನ ಮಾಡುವುದರಿಂದ, (ದಾರಿಕರನ್ನು ದೋಚಲು) ಗುಂಪಾಗಿ ಅಡಗಿ ಕೂಡುವುದರಿಂದ, ಪರಸ್ತ್ರೀ ಬಳಿ ಹೋಗುವುದರಿಂದ, ಸುಳ್ಳು ಹೇಳುವುದರಿಂದ- ಹೀಗೆ ಮಾಡುವವನಿಂದ ಪಾಪವೇನು ಮಾಡಲ್ಪಟ್ಟಿಲ್ಲ. ಒಂದುವೇಳೆ ಯಾರಾದರೂ ಚೂಪಾದ ಪರಿಧಿಯುಳ್ಳ ಚಕ್ರದಿಂದ ಈ ಭೂಮಿಯ ಜೀವಿಗಳನ್ನು ಒಂದು ಮಾಂಸದ ಮುದ್ದೆ ಮಾಡಿದರೂ, ಒಂದು ಮಾಂಸದ ರಾಶಿ ಮಾಡಿದರೂ, ಆ ಮೂಲದಿಂದ ಯಾವ ಪಾಪವೂ ಇಲ್ಲ, ಆ ಪಾಪಕ್ಕೆ ಪರಿಣಾಮವೂ ಇಲ್ಲ. ಅಲ್ಲದೆ ಯಾರಾದರೂ ಗಂಗಾನದಿಯ ದಕ್ಷಿಣ ತೀರಕ್ಕೆ ಕೊಲ್ಲುತ್ತ ಕತ್ತರಿಸುತ್ತ... ಪುನರುಚ್ಚರಿಸಿ... ದಾನದಿಂದ, ದಮಿಸುವುದರಿಂದ, ಸಂಯಮದಿಂದ, ಸತ್ಯನುಡಿಯುವುದರಿಂದ ಪುಣ್ಯ ನಿರೀಕ್ಷಿಸಬಹುದು, ಅಂದರೆ ಶಾರೀರಿಕ ಸುಚರಿತ್ರ, ಮಾತಿನ ಸುಚರಿತ್ರ, ಮನಸ್ಸಿನ ಸುಚರಿತ್ರ, ಈ ಮೂರು ಕುಶಲ ಧರ್ಮಗಳನ್ನು ಬದಿಗಿಟ್ಟು ಶಾರೀರಿಕ ದುಶ್ಚರಿತ್ರ, ಮಾತಿನ ದುಶ್ಚರಿತ್ರ, ಮನಸ್ಸಿನ ದುಶ್ಚರಿತ್ರ ಈ ಮೂರು ಅಕುಶಲ ಧರ್ಮಗಳನ್ನು ಕೈಗೊಂಡು ಅನುಸರಿಸುತ್ತಾರೆ. ಅದಕ್ಕೇನು ಕಾರಣ? ಆ ಒಳ್ಳೆಯ ಶ್ರಮಣ ಬ್ರಾಹ್ಮಣರು ಅಕುಶಲ ಧಮ್ಮಗಳ ಅಪಾಯವನ್ನು, ಅವನತಿಯನ್ನು ಮತ್ತು ಕಲ್ಮಶಗಳನ್ನು, ಅಲ್ಲದೆ ಕುಶಲ ಧಮ್ಮಗಳಿಗಾಗಿ ಅವುಗಳ ತ್ಯಜಿಸುವಿಕೆಯ ಉಪಯೋಗವು ಶುದ್ಧತೆಗೆ ಭಾಗಿಯಾಗುವುದನ್ನು ನೋಡುವುದಿಲ್ಲ. ಮಾಡುವುದು ಇರುವಾಗ ಯಾರ ತಿಳುವಳಿಕೆ ಮಾಡುವುದು ಇಲ್ಲ ಎನ್ನುವುದು ಅವನ ತಪ್ಪು ತಿಳುವಳಿಕೆ ಆಗುತ್ತದೆ. ಮಾಡುವುದು ಇರುವಾಗ ಯಾರ ಆಲೋಚನೆ ಮಾಡುವುದು ಇಲ್ಲ ಎನ್ನುವುದು ಅವನ ತಪ್ಪು ಆಲೋಚನೆ ಆಗುತ್ತದೆ. ಮಾಡುವುದು ಇರುವಾಗ ಯಾರು ಮಾಡುವುದು ಇಲ್ಲ ಎಂದು ಮಾತನಾಡುತ್ತಾರೋ ಅದು ಅವನ ತಪ್ಪು ಮಾತು ಆಗುತ್ತದೆ. ಮಾಡುವುದು ಇರುವಾಗ ಯಾರು ಮಾಡುವುದು ಇಲ್ಲ ಎಂದು ಹೇಳುತ್ತಾನೊ, (ಹೀಗೆ) ಅವನು ಯಾವ ಅರಹಂತರು ಮಾಡುವುದಿದೆ ಎಂಬ ವಾದವನ್ನು ಮಂಡಿಸುತ್ತಾರೊ ಅವರಿಗೆ ಹಾಸ್ಯ ಮಾಡಿದವನಾಗುತ್ತಾನೆ. ಮಾಡುವುದು ಇರುವಾಗ ಯಾರು ಮಾಡುವುದು ಇಲ್ಲ ಎಂದು ಇತರರಿಗೆ ಮನದಟ್ಟುಮಾಡಿದವನಾಗುತ್ತಾನೆ, ಈ ಮನದಟ್ಟು ಮಾಡುವಿಕೆ ಅಸದ್ಧರ್ಮವಾಗುತ್ತದೆ. ಈ ಅಸದ್ಧರ್ಮವನ್ನು ಮನದಟ್ಟು ಮಾಡುವುದಕ್ಕಾಗಿ ತನಗೆ ತಾನು ಪ್ರಶಂಸಿಸಿಕೊಳ್ಳುತ್ತಾನೆ ಮತ್ತು ಇತರರನ್ನು ಧಿಕ್ಕರಿಸುತ್ತಾನೆ. ಹೀಗೆ ಅವನ ಒಳ್ಳೆಯ ಶೀಲಗಳು ತೊಡೆದು ಹೋಗುವುದಕ್ಕಿಂತ ಮೊದಲೇ ಕೆಟ್ಟ ಶೀಲಗಳು ಸ್ಥಾಪಿಸಲ್ಪಟ್ಟಿರುತ್ತವೆ. ಈ ತಪ್ಪು ತಿಳುವಳಿಕೆ, ತಪ್ಪು ಆಲೋಚನೆ, ತಪ್ಪು ಮಾತು, ಉದಾತ್ತರಿಗೆ ಹಾಸ್ಯಮಾಡುವಿಕೆ, ಅಸದ್ಧರ್ಮವನ್ನು ಮನದಟ್ಟು ಮಾಡುವಿಕೆ, ತನಗೆ ತಾನು ಪ್ರಶಂಸಿಸುವಿಕೆ ಮತ್ತು ಇತರರನ್ನು ಧಿಕ್ಕರಿಸುವಿಕೆ. ಈ ಅನೇಕ ಪಾಪಕಾರಿಯಾದ ಅಕುಶಲ ಧಮ್ಮಗಳು ತಪ್ಪು ತಿಳುವಳಿಕೆಯ ಕಾರಣದಿಂದಾಗಿ ಹುಟ್ಟಿಕೊಳ್ಳುತ್ತವೆ.
ಗೃಹಸ್ಥರೇ, ಒಬ್ಬ ತಿಳುವಳಿಕೆಯುಳ್ಳ ಮನುಷ್ಯನು ಹೀಗೆ ಯೋಚಿಸುತ್ತಾನೆ- ಒಂದುವೇಳೆ ಮಾಡುವುದು ಇಲ್ಲದಿದ್ದರೆ ಈ ಯೋಗ್ಯ ವ್ಯಕ್ತಿಯು ಶರೀರ ನಾಶವಾದ ನಂತರ ತನಗೆ ತಾನು ಸುರಕ್ಷತೆಯನ್ನು ಮಾಡಿಕೊಳ್ಳುವನು; ಆದರೆ ಒಂದುವೇಳೆ ಮಾಡುವುದು ಇಲ್ಲದಿದ್ದರೆ ಈ ಯೋಗ್ಯ ವ್ಯಕ್ತಿಯು ಶರೀರ ನಾಶವಾಗಿ ಸಾವಿನ ನಂತರ ಅಪಾಯದಲ್ಲಿ ದುರ್ಗತಿಯಲ್ಲಿ ವಿನಿಪಾತಕದಲ್ಲಿ ನರಕದಲ್ಲಿ ಹುಟ್ಟುವನು. ಏನೇ ಆದರೂ ಮಾಡುವುದು ಇಲ್ಲವೆಂದೇ ಆಗಲಿ, ಈ ಶ್ರಮಣ ಬ್ರಾಹ್ಮಣರ ಈ ಮಾತು ನಿಜವಾಗಲಿ, ಆದರೂ ಕೂಡ ಈ ಯೋಗ್ಯ ವ್ಯಕ್ತಿಯು ಜ್ಞಾನಿಗಳಿಂದ ಇಲ್ಲಿಯೇ ಈಗಲೇ ಹೀಗೆ ಖಂಡಿಸಲ್ಪಡುತ್ತಾನೆ- ಈ ಯೋಗ್ಯ ವ್ಯಕ್ತಿಯು ಕೆಟ್ಟ ಶೀಲವನ್ನು ಹೊಂದಿದವನು, ತಪ್ಪು ತಿಳುವಳಿಕೆಯುಳ್ಳವನು, ಮಾಡುವುದು ಇಲ್ಲ ಎಂದು ವಾದಿಸುವವನು ಎಂದು. ಒಂದುವೇಳೆ ಮಾಡುವುದು ಇದ್ದೇ ಇದೆ ಎಂದರೆ ಈ ಯೋಗ್ಯ ವ್ಯಕ್ತಿಗೆ ಎರಡು ರೀತಿಯ ಸೋಲುಗಳಿವೆ. ಅವನು ಜ್ಞಾನಿಗಳಿಂದ ಇಲ್ಲಿಯೇ ಈಗಲೇ ಖಂಡಿಸಲ್ಪಡುತ್ತಾನೆ, ಅಲ್ಲದೆ ಶರೀರ ನಾಶವಾದ ನಂತರ ಅಪಾಯದಲ್ಲಿ ದುರ್ಗತಿಯಲ್ಲಿ ವಿನಿಪಾತದಲ್ಲಿ ನರಕದಲ್ಲಿ ಹುಟ್ಟುವನು. ಹೀಗೆ ಈ ನಿರ್ವಿವಾದ ಧಮ್ಮವನ್ನು ಅವನು ಅಸಮಗ್ರವಾಗಿ ಕೈಗೊಂಡವನಾಗಿ, ಅವನು ಅದನ್ನು ಏಕಪಕ್ಷೀಯವಾಗಿ ಹರಡುತ್ತಾನೆ, ಕುಶಲಕರವಾದ ಸ್ಥಾನಗಳನ್ನು ತಿರಸ್ಕರಿಸುತ್ತಾನೆ.
8. ಗೃಹಸ್ಥರೆ, ಈಗ ಯಾವ ಶ್ರಮಣ ಬ್ರಾಹ್ಮಣರು ಈ ರೀತಿ ವಾದಿಸುವರೊ ಈ ರೀತಿ ದೃಷ್ಟಿಯುಳ್ಳವರೊ- ಮಾಡುವುದರಿಂದ (ಇತರರಿಂದ) ಮಾಡಿಸುವುದರಿಂದ, ಅಂಗಛೇದ ಮಾಡುವುದರಿಂದ ಅಂಗಛೇದ ಮಾಡಿಸುವುದರಿಂದ, ಹಿಂಸೆ ಮಾಡುವುದರಿಂದ, ಹಿಂಸೆ ಮಾಡಿಸುವುದರಿಂದ, ಶೋಕನ್ನುಂಟುಮಾಡವುದರಿಂದ ಶೋಕವನ್ನುಂಟುಮಾಡಿಸುವುದರಿಂದ, ದಬ್ಬಾಳಿಕೆ ಮಾಡುವುದರಿಂದ, ದಬ್ಬಾಳಿಕೆ ಮಾಡಿಸುವುದರಿಂದ, ಹೆದರಿಕೆಯನ್ನುಂಟುಮಾಡುವುದರಿಂದ, ಹೆದರಿಕೆಯನ್ನುಂಟುಮಾಡಿಸುವದರಿಂದ, ಜೀವಿಗಳ ವಧೆ ಮಾಡುವುದರಿಂದ, ಕೊಡದೆ ಇದ್ದದ್ದನ್ನು ತೆಗೆದುಕೊಳ್ಳುವುದರಿಂದ, ಅಪಹರಿಸಲು (ಬಾಗಿಲನ್ನು) ಒಡೆಯುವುದರಿಂದ, ಕನ್ನಗಳ್ಳತನ ಮಾಡುವುದರಿಂದ, (ದಾರಿಕರನ್ನು ದೋಚಲು) ಗುಂಪಾಗಿ ಅಡಗಿ ಕೂಡುವುದರಿಂದ, ಪರಸ್ತ್ರೀ ಬಳಿ ಹೋಗುವುದರಿಂದ, ಸುಳ್ಳು ಹೇಳುವುದರಿಂದ- ಹೀಗೆ ಮಾಡುವವನಿಂದ ಪಾಪವು ಮಾಡಲ್ಪಟ್ಟಿದೆ. ಒಂದುವೇಳೆ ಯಾರಾದರೂ ಚೂಪಾದ ಪರಿಧಿಯುಳ್ಳ ಚಕ್ರದಿಂದ ಈ ಭೂಮಿಯ ಜೀವಿಗಳನ್ನು ಒಂದು ಮಾಂಸದ ಮುದ್ದೆ ಮಾಡಿದರೂ, ಒಂದು ಮಾಂಸದ ರಾಶಿ ಮಾಡಿದರೂ, ಆ ಮೂಲದಿಂದ ಪಾಪವಿದೆ, ಆ ಪಾಪಕ್ಕೆ ಪರಿಣಾಮವೂ ಇದೆ. ಯಾರಾದರೂ ಗಂಗಾನದಿಯ ದಕ್ಷಿಣ ತೀರಕ್ಕೆ ಕೊಲ್ಲುತ್ತ, ಕತ್ತರಿಸುತ್ತ, ಅಂಗಛೇದ ಮಾಡುತ್ತ ಮತ್ತು ಅಂಗಛೇಧ ಮಾಡಿಸುತ್ತ ಹಿಂಸೆ ಮಾಡುತ್ತ ಹಿಂಸೆ ಮಾಡಿಸುತ್ತ ಹೋದರೆ ಆ ಮೂಲದಿಂದ ಪಾಪವಿದೆ, ಆ ಪಾಪಕ್ಕೆ ಪರಿಣಾಮವೂ ಇದೆ. ಅಲ್ಲದೆ ಯರಾದರೂ ಗಂಗಾನದಿಯ ಉತ್ತರ ತೀರಕ್ಕೆ ದಾನವನ್ನು ಕೊಡುತ್ತ ದಾನವನ್ನು ಕೊಡಿಸುತ್ತ ಅರ್ಪಣೆ ಮಾಡುತ್ತ ಅರ್ಪಣೆ ಮಾಡಿಸುತ್ತ ಹೋದರೂ ಆ ಮೂಲದಿಂದ ಪುಣ್ಯವಿದೆ, ಆ ಪುಣ್ಯಕ್ಕೆ ಪರಿಣಾಮವೂ ಇದೆ. ದಾನದಿಂದ, ದಮಿಸುವುದರಿಂದ, ಸಂಯಮದಿಂದ, ಸತ್ಯನುಡಿಯುವುದರಿಂದ, ಪುಣ್ಯವಿದೆ, ಆ ಪುಣ್ಯಕ್ಕೆ ಪರಿಣಾಮವೂ ಇದೆ ಎಂದು ಅವರಿಂದ ಇದನ್ನು ನಿರೀಕ್ಷಿಸಬಹುದು. ಅಂದರೆ ಶಾರೀರಿಕ ದುಶ್ಚರಿತ್ರೆ, ಮಾತಿನ ದುಶ್ಚರಿತ್ರೆ, ಮನಸ್ಸಿನ ದುಶ್ಚರಿತ್ರೆ ಈ ಮೂರು ಅಕುಶಲ ಧಮ್ಮಗಳನ್ನು ಬದಿಗಿಟ್ಟು ಶಾರೀರಿಕ ಸುಚರಿತ್ರ, ಮಾತಿನ ಸುಚರಿತ್ರ, ಮನಸ್ಸಿನ ಸುಚರಿತ್ರ - ಈ ಮೂರು ಕುಶಲ ಧಮ್ಮಗಳನ್ನು ಕೈಗೊಂಡು ಅನುಸರಿಸುತ್ತಾನೆ. ಅದಕ್ಕೇನು ಕಾರಣ? ಆ ಒಳ್ಳೆಯ ಶ್ರಮಣ ಬ್ರಾಹ್ಮಣರು ಅಕುಶಲ ಧಮ್ಮಗಳ ಅಪಾಯವನ್ನು ಅವನತಿಯನ್ನು ಮತ್ತು ಕಲ್ಮಶಗಳನ್ನು, ಅಲ್ಲದೆ ಕುಶಲ ಧಮ್ಮಗಳಿಗಾಗಿ ಅವುಗಳ ತ್ಯಜಿಸುವಿಕೆಯ ಉಪಯೋಗವು ಶುದ್ಧತೆಗೆ ಭಾಗಿಯಾಗುವುದನ್ನು ನೋಡುತ್ತಾರೆ. ಮಾಡುವುದು ಇರುವಾಗ ಯಾರ ತಿಳುವಳಿಕೆ ಮಾಡುವುದು ಇದೆ ಎನ್ನುವುದು ಅವನ ಸರಿಯಾದ ತಿಳುವಳಿಕೆ ಆಗುತ್ತದೆ. ಮಾಡುವುದು ಇರುವಾಗ ಯಾರ ಆಲೋಚನೆ ಮಾಡುವುದು ಇದೆ ಎನ್ನುವುದು ಅವನ ಸರಿಯಾದ ಆಲೋಚನೆ ಆಗುತ್ತದೆ. ಮಾಡುವದು ಇರುವಾಗ ಯಾರು ಮಾಡುವುದು ಇದೆ ಎಂದು ಮಾತನಾಡುತ್ತಾರೋ ಅದು ಅವನ ಸರಿಯಾದ ಮಾತು ಆಗುತ್ತದೆ. ಮಾಡುವುದು ಇರುವಾಗ ಯಾರೊಬ್ಬನು ಮಾಡುವುದು ಇದೆ ಎಂದು ಹೇಳುತ್ತಾನೆ; ಹೀಗೆ ಅವನು ಯಾವ ಅರಹಂತರು ಮಾಡುವುದು ಇದೆ ಎಂಬ ವಾದವನ್ನು ಮಂಡಿಸುತ್ತಾನೊ ಅವರಿಗೆ ಹಾಸ್ಯ ಮಾಡಿದವನಾಗುವುದಿಲ್ಲ. ಮಾಡುವುದು ಇರುವಾಗ ಯಾರು ಮಾಡುವುದು ಇದೆ ಎಂದು ಬೇರೆಯವರಿಗೆ ಮನದಟ್ಟುಮಾಡಿದವನಾಗುತ್ತಾನೆ. ಈ ಮನದಟ್ಟು ಮಾಡುವುದಕ್ಕಾಗಿ ತನಗೆ ತಾನು ಪ್ರಶಂಸಿಸಿಕೊಳ್ಳುವುದಿಲ್ಲ ಮತ್ತು ಇತರರನ್ನು ಧಿಕ್ಕರಿಸುವುದಿಲ್ಲ. ಹೀಗೆ ಅವನ ಕೆಟ್ಟ ಶೀಲಗಳು ತೊಡೆದು ಹೋಗುವುದಕ್ಕಿಂತ ಮೊದಲೇ ಒಳ್ಳೆಯ ಶೀಲಗಳು ಸ್ಥಾಪಿಸಲ್ಪಟ್ಟಿರುತ್ತವೆ. ಈ ಸರಿಯಾದ ತಿಳುವಳಿಕೆ, ಸರಿಯಾದ ಆಲೋಚನೆ; ಸರಿಯಾದ ಮಾತು, ಉದಾತ್ತರಿಗೆ ಹಾಸ್ಯ ಮಾಡದಿರುವಿಕೆ, ಸದ್ಧರ್ಮವನ್ನು ಮನದಟ್ಟು ಮಾಡುವಿಕೆ, ತನಗೆ ತಾನು ಪ್ರಶಂಸಿಸದಿರುವಿಕೆ ಮತ್ತು ಇತರರನ್ನು ಧಿಕ್ಕರಿಸಿದೆ ಇರುವುದು. ಈ ಅನೇಕ ಕುಶಲ ಧಮ್ಮಗಳು ಸರಿಯಾದ ತಿಳುವಳಿಕೆಯ ಕಾರಣದಿಂದ ಹುಟ್ಟಿಕೊಳ್ಳುತ್ತವೆ.
ಗೃಹಸ್ಥರೇ, ಒಬ್ಬ ತಿಳುವಳಿಕೆಯುಳ್ಳ ಮನುಷ್ಯನು ಹೀಗೆ ಯೋಚಿಸುತ್ತಾನೆ- ಒಂದುವೇಳೆ ಮಾಡುವುದು ಇದ್ದರೆ ಈ ಯೋಗ್ಯ ವ್ಯಕ್ತಿಯು ಶರೀರ ನಾಶವಾಗಿ ಸಾವಿನ ನಂತರ ಸುಗತಿಯಲ್ಲಿ ಸ್ವರ್ಗಲೋಕದಲ್ಲಿ ಹುಟ್ಟುವನು. ಏನೇ ಆದರೂ ಮಾಡುವುದು ಇಲ್ಲವೆಂದೇ ಆಗಲಿ, ಹಾಗೂ ಈ ಶ್ರಮಣ ಬ್ರಾಹ್ಮಣರ ಈ ಮಾತೂ ನಿಜವಾಗಲಿ, ಆದರೂ ಈ ಯೋಗ್ಯ ವ್ಯಕ್ತಿಯು ಜ್ಞಾನಿಗಳಿಂದ ಇಲ್ಲಿಯೇ ಈಗಲೇ ಹೀಗೆ ಪ್ರಶಂಸಿಸಲ್ಪಡುತ್ತಾನೆ- ಈ ಯೋಗ್ಯ ವ್ಯಕ್ತಿಯು ಶೀಲವಂತನಾಗಿದ್ದು, ಸರಿಯಾದ ತಿಳುವಳಿಕೆಯುಳ್ಳವನು ಮತ್ತು ಮಾಡುವುದಿದೆ ಎಂದು ವಾದಿಸುವವನು ಎಂದು. ಒಂದುವೇಳೆ ಮಾಡುವುದು ಇದ್ದೇ ಇದೆ ಎಂದರೆ ಈ ಯೋಗ್ಯ ವ್ಯಕ್ತಿಗೆ ಎರಡು ಗೆಲುವುಗಳಿವೆ- ಅವನು ಜ್ಞಾನಿಗಳಿಂದ ಇಲ್ಲಿಯೇ ಈಗಲೇ ಪ್ರಶಂಸಿಸಲ್ಪಡುತ್ತಾನೆ. ಅಲ್ಲದೆ ಶರೀರ ನಾಶವಾಗಿ ಸಾವಿನ ನಂತರ ಸುಗತಿಯಲ್ಲಿ ಸ್ವರ್ಗಲೋಕದಲ್ಲಿ ಹುಟ್ಟುವನು. ಹೀಗೆ ನಿರ್ವಿವಾದ ಧಮ್ಮವನ್ನು ಸಮಗ್ರವಾಗಿ ಕೈಗೊಂಡವನಾಗಿ, ಅವನು ಅದನ್ನು ಎರಡೂ ಕಡೆ ಹರಡುತ್ತಾನೆ, ಅಕುಶಲಕರವಾದ ಸ್ಥಾನಗಳನ್ನು ತಿರಸ್ಕರಿಸುತ್ತಾನೆ.
9. ಗೃಹಸ್ಥರೇ, ಈ ರೀತಿ ವಾದಿಸುವ ಈ ರೀತಿ ದೃಷ್ಟಿಯುಳ್ಳ ಕೆಲವು ಶ್ರಮಣ ಬ್ರಾಹ್ಮಣರು ಇದ್ದಾರೆ72 ಜೀವಿಗಳ ಚಿತ್ತಮಲಿನತೆಗೆ ಹೇತು ಇಲ್ಲ, ಕಾರಣವೂ ಇಲ್ಲ; ಹೇತುವಿಲ್ಲದೆ ಕಾರಣ ಇಲ್ಲದೆ ಜೀವಿಗಳು ಮಲಿನಗೊಳ್ಳುತ್ತವೆ. ಜೀವಿಗಳ ವಿಶುದ್ಧಿಗೂ ಹೇತು ಇಲ್ಲ, ಕಾರಣ ಇಲ್ಲ; ಹೇತುವಿಲ್ಲದೆ ಕಾರಣವಿಲ್ಲದೆ ಜೀವಿಗಳು ವಿಶುದ್ಧಗೊಳ್ಳುತ್ತವೆ. ಬಲ ಇಲ್ಲ, ಶಕ್ತಿ ಇಲ್ಲ, ಪುರುಷಾರ್ಥ ಇಲ್ಲ, ಪುರುಷ ಪ್ರಯತ್ನ ಇಲ್ಲ; ಎಲ್ಲಾ ಜೀವಿಗಳು ಎಲ್ಲಾ ಪ್ರಾಣಿಗಳು, ಎಲ್ಲಾ ಜಂತುಗಳು, ಎಲ್ಲಾ ಸಜೀವ ವಸ್ತುಗಳು ಅಧಿಕಾರ ಇಲ್ಲದ್ದವು, ಬಲ ಇಲ್ಲದ್ದವು, ಶಕ್ತಿ ಇಲ್ಲದ್ದವು, ನಿಯತ್ತಿನಿಂದ (ವಿಧಿಯಿಂದ) ಅವಕಾಶದಿಂದ, ಸ್ವಭಾವದಿಂದ ತಿರುಗಿಸಲ್ಪಟ್ಟಿವೆ. ಅವು ಆರು ವರ್ಗಗಳಲ್ಲಿ ಸುಖ-ದುಃಖವನ್ನು ಅನುಭವಿಸುತ್ತವೆ ಎಂದು.73 ಗೃಹಸ್ಥರೇ, ಆ ಶ್ರಮಣ ಬ್ರಾಹ್ಮಣರನ್ನು ಕೆಲವು ಶ್ರಮಣ ಬ್ರಾಹ್ಮಣರು ಹೀಗೆ ನೇರವಾಗಿ ವಿರೋಧಿಸುತ್ತಾರೆ. ಅವರು ಹೀಗೆ ಹೇಳುತ್ತಾರೆ- ಜೀವಿಗಳ ಚಿತ್ತಮಲಿನತೆಗೆ ಹೇತು ಇದೆ, ಕಾರಣವೂ ಇದೆ; ಹೇತುವಿದ್ದು ಕಾರಣವಿದ್ದು ಜೀವಿಗಳು ಮಲಿನಗೊಳ್ಳುತ್ತವೆ. ಜೀವಿಗಳ ವಿಶುದ್ಧಿಗೂ ಹೇತು ಇದೆ, ಕಾರಣವೂ ಇದೆ, ಹೇತುವಿದ್ದು ಕಾರಣವಿದ್ದು ಜೀವಿಗಳು ವಿಶುದ್ಧಗೊಳ್ಳುತ್ತವೆ. ಬಲ ಇದೆ, ಶಕ್ತಿ ಇದೆ, ಪುರುಷಾರ್ಥ ಇದೆ, ಪುರುಷ ಪ್ರಯತ್ನವೂ ಇದೆ; ಎಲ್ಲಾ ಜೀವಿಗಳು, ಎಲ್ಲಾ ಪ್ರಾಣಿಗಳು, ಎಲ್ಲಾ ಜಂತುಗಳು, ಎಲ್ಲಾ ಸಜೀವ ವಸ್ತುಗಳು ಅಧಿಕಾರವುಳ್ಳವು, ಬಲವುಳ್ಳವು, ಶಕ್ತಿಯುಳ್ಳವು, ನಿಯತಿಯಿಂದ ಅವಕಾಶದಿಂದ ಸ್ವಭಾವದಿಂದ ತಿರುಗಿಸಲ್ಪಟ್ಟಿಲ್ಲ, ಅವು ಆರು ವರ್ಗಗಳಲ್ಲಿ ಸುಖದುಃಖವನ್ನು ಅನುಭವಿಸುವುದಿಲ್ಲ ಎಂದು. ಇದನ್ನು ಹೇಗೆ ಯೋಚಿಸುತ್ತೀರಿ, ಗೃಹಸ್ಥರೇ, ಈ ಶ್ರಮಣ ಬ್ರಾಹ್ಮಣರು ಪರಸ್ಪರ ನೇರವಾಗಿ ವಿರೋಧಿಸುವರಲ್ಲವೇ?
ಹೌದು ಭಂತೆ.
10. ಗೃಹಸ್ಥರೇ, ಈಗ ಯಾವ ಶ್ರಮಣ ಬ್ರಾಹ್ಮಣರು ಹೀಗೆ ವಾದಿಸುತ್ತಾರೊ, ಹೀಗೆ ಹೇಳುತ್ತಾರೊ- ಜೀವಿಗಳ ಚಿತ್ತ ಮಲಿನತೆಗೆ ಹೇತು ಇಲ್ಲ, ಕಾರಣ ಇಲ್ಲ... ಪುನರುಚ್ಚರಿಸಿ... ಅವು ಆರು ವರ್ಗಗಳಲ್ಲಿ ಸುಖ ದುಃಖವನ್ನು ಅನುಭವಿಸುತ್ತವೆ ಎಂದು. ಅವರಿಂದ ಇದನ್ನು ನಿರೀಕ್ಷಿಸಬಹುದು, ಅಂದರೆ ಶಾರೀರಿಕ ಸುಚರಿತ್ರೆ, ಮಾತಿನ ಸುಚರಿತ್ರೆ, ಮನಸ್ಸಿನ ಸುಚರಿತ್ರೆ ಈ ಮೂರು ಕುಶಲ ಧಮ್ಮಗಳನ್ನು ಬದಿಗಿಟ್ಟು ಶಾರೀರಿಕ ದುಶ್ಚರಿತ್ರೆ, ಮಾತಿನ ದುಶ್ಚರಿತ್ರೆ, ಮನಸ್ಸಿನ ದುಶ್ಚರಿತ್ರೆ- ಈ ಮೂರು ಅಕುಶಲ ಧಮ್ಮಗಳನ್ನು ಕೈಗೊಂಡು ಅನುಸರಿಸುತ್ತಾರೆ. ಅದಕ್ಕೇನು ಕಾರಣ? ಆ ಒಳ್ಳೆಯ ಶ್ರಮಣ ಬ್ರಾಹ್ಮಣರು ಅಕುಶಲ ಧಮ್ಮಗಳ ಅಪಾಯವನ್ನು, ಅವನತಿಯನ್ನು ಮತ್ತು ಕಲ್ಮಶಗಳನ್ನು, ಅಲ್ಲದೆ ಕುಶಲ ಧಮ್ಮಗಳಿಗಾಗಿ ಅವುಗಳ ತ್ಯಜಿಸುವಿಕೆಯ ಉಪಯೋಗವು ಶುದ್ಧತೆಗೆ ಭಾಗಿಯಾಗುವುದನ್ನು ನೋಡುವುದಿಲ್ಲ. ಹೇತು ಇರುವಾಗ ಯಾರ ತಿಳುವಳಿಕೆ ಹೇತು ಇಲ್ಲ ಎನ್ನುವುದು ಅವನ ತಪ್ಪು ತಿಳುವಳಿಕೆ ಆಗುತ್ತದೆ. ಹೇತು ಇರುವಾಗ ಯಾರ ಆಲೋಚನೆ ಹೇತು ಇಲ್ಲ ಎನ್ನುವುದು ಅವನ ತಪ್ಪು ಆಲೋಚನೆ ಆಗುತ್ತದೆ. ಹೇತು ಇರುವಾಗ ಯಾರು ಹೇತು ಇಲ್ಲ ಎಂದು ಮಾತನಾಡುತ್ತಾರೊ ಅದು ಅವನ ತಪ್ಪು ಮಾತು ಆಗುತ್ತದೆ. ಹೇತು ಇರುವಾಗ ಯಾರು ಹೇತು ಇಲ್ಲ ಎಂದು ಹೇಳುತ್ತಾರೋ (ಹೀಗೆ) ಅವನು ಯಾವ ಅರಹಂತರು ಹೇತು ಇದೆ ಎಂಬ ವಾದವನ್ನು ಮಂಡಿಸುತ್ತಾರೊ ಅವರಿಗೆ ಹಾಸ್ಯಮಾಡಿದಂತಾಗುತ್ತದೆ. ಹೇತು ಇರುವಾಗ ಯಾರು ಹೇತು ಇಲ್ಲ ಎಂದು ಇತರರಿಗೆ ಮನದಟ್ಟು ಮಾಡಿಸುತ್ತಾನೆ, ಅವನ ಈ ಮನದಟ್ಟು ಮಾಡುವಿಕೆ ಅಸದ್ಧರ್ಮವಾಗುತ್ತದೆ. ಈ ಅಸದ್ಧರ್ಮವನ್ನು ಮನದಟ್ಟು ಮಾಡುವುದಕ್ಕಾಗಿ ತನಗೆ ತಾನು ಪ್ರಶಂಸಿಸಿಕೊಳ್ಳುತ್ತಾನೆ ಮತ್ತು ಇತರರನ್ನು ಧಿಕ್ಕರಿಸುತ್ತಾನೆ. ಹೀಗೆ ಅವನ ಒಳ್ಳೆಯ ಶೀಲಗಳು ತೊಡೆದು ಹೋಗುವುದಕ್ಕಿಂತ ಮೊದಲೇ ಕೆಟ್ಟ ಶೀಲಗಳು ಸ್ಥಾಪಿಸಲ್ಪಟ್ಟಿರುತ್ತವೆ- ಈ ತಪ್ಪು ತಿಳುವಳಿಕೆ, ತಪ್ಪು ಆಲೋಚನೆ, ತಪ್ಪು ಮಾತು, ಉದಾತ್ತರಿಗೆ ಹಾಸ್ಯ ಮಾಡುವಿಕೆ, ಅಸದ್ಧರ್ಮವನ್ನು ಮನದಟ್ಟು ಮಾಡುವಿಕೆ, ತನಗೆ ತಾನು ಪ್ರಶಂಸಿಸುವಿಕೆ ಮತ್ತು ಇತರರನ್ನು ಧಿಕ್ಕರಿಸುವಿಕೆ, ಈ ಅನೇಕ ಪಾಪಕಾರಿಯಾದ ಅಕುಶಲ ಧಮ್ಮಗಳು ತಪ್ಪು ತಿಳುವಳಿಕೆಯ ಕಾರಣದಿಂದಾಗಿ ಹುಟ್ಟಿಕೊಳ್ಳುತ್ತವೆ.
ಗೃಹಸ್ಥರೇ, ಒಬ್ಬ ತಿಳುವಳಿಕೆಯುಳ್ಳ ಮನುಷ್ಯನು ಹೀಗೆ ಯೋಚಿಸುತ್ತಾನೆ- ಒಂದು ವೇಳೆ ಹೇತು ಇದ್ದರೆ ಈ ಯೋಗ್ಯ ವ್ಯಕ್ತಿಯು ಶರೀರ ನಾಶವಾದ ನಂತರ ತನಗೆ ತಾನು ಸುರಕ್ಷತೆಯನ್ನು ಮಾಡಿಕೊಳ್ಳುವನು; ಆದರೆ ಒಂದುವೇಳೆ ಹೇತು ಇಲ್ಲದಿದ್ದರೆ ಈ ಯೋಗ್ಯ ವ್ಯಕ್ತಿಯ ಶರೀರ ನಾಶವಾಗಿ ಸಾವಿನ ನಂತರ ಅಪಾಯದಲ್ಲಿ ದುರ್ಗತಿಯನ್ನು ವಿನಿಪಾತಕದಲ್ಲಿ ನರಕದಲ್ಲಿ ಹುಟ್ಟುವನು. ಏನೇ ಆದರೂ ಹೇತು ಇಲ್ಲವೆಂದೇ ಆಗಲಿ ಈ ಶ್ರಮಣ ಬ್ರಾಹ್ಮಣರ ಮಾತು ನಿಜವಾಗಲಿ, ಆದರೂ ಕೂಡ ಈ ಯೋಗ್ಯ ವ್ಯಕ್ತಿಯು ಜ್ಞಾನಿಗಳಿಂದ ಇಲ್ಲಿಯೇ ಈಗಲೇ ಹೀಗೆ ಖಂಡಿಸಲ್ಪಡುತ್ತಾನೆ- ಈ ಯೋಗ್ಯ ವ್ಯಕ್ತಿಯು ಕೆಟ್ಟ ಶೀಲವನ್ನು ಹೊಂದಿದವನು, ತಪ್ಪು ತಿಳುವಳಿಕೆಯುಳ್ಳವನು, ಹೇತು ಇಲ್ಲ ಎಂದು ವಾದಿಸುವವನು ಎಂದು. ಒಂದುವೇಳೆ ಹೇತು ಇದ್ದೇ ಇದೆ ಎಂದರೆ ಈ ಯೋಗ್ಯ ವ್ಯಕ್ತಿಗೆ ಎರಡು ರೀತಿಯ ಸೋಲುಗಳಿವೆ- ಅವನು ಜ್ಞಾನಿಗಳಿಂದ ಇಲ್ಲಿಯೇ ಈಗಲೇ ಖಂಡಿಸಲ್ಪಡುತ್ತಾನೆ. ಅಲ್ಲದೆ ಶರೀರ ನಾಶವಾದ ನಂತರ ಅಪಾಯದಲ್ಲಿ ದುರ್ಗತಿಯಲ್ಲಿ ವಿನಿಪಾತಕದಲ್ಲಿ ನರಕದಲ್ಲಿ ಹುಟ್ಟುವನು. ಹೀಗೆ ಈ ನಿರ್ವಿವಾದ ಧಮ್ಮವನ್ನು ಅವನು ಅಸಮಗ್ರವಾಗಿ, ಕೈಗೊಂಡವನಾಗಿ, ಅವನು ಅದನ್ನು ಏಕಪಕ್ಷಿಯಾಗಿ ಹರಡುತ್ತಾನೆ, ಕುಶಲಕರವಾದ ಸ್ಥಾನಗಳನ್ನು ತಿರಸ್ಕರಿಸುತ್ತಾನೆ.
11. ಗೃಹಸ್ಥರೇ, ಈಗ ಯಾವ ಶ್ರಮಣ ಬ್ರಾಹ್ಮಣರು ಈ ರೀತಿ ವಾದಿಸುವರೋ ಈ ರೀತಿ ದೃಷ್ಟಿಯುಳ್ಳವರೋ- ಜೀವಿಗಳ ಚಿತ್ತಮಲಿನತೆಗೆ ಹೇತು ಇದೆ, ಕಾರಣವೂ ಇದೆ... ಪುನರುಚ್ಚರಿಸಿ... ಅವು ಆರು ವರ್ಗಗಳಲ್ಲಿ ಸುಖದುಃಖವನ್ನು ಅನುಭವಿಸುವುದಿಲ್ಲ ಎಂದು. ಅವರಿಂದ ಇದನ್ನು ನಿರೀಕ್ಷಿಸಬಹುದು. ಅಂದರೆ ಶಾರೀರಿಕ ದುಶ್ಚರಿತ್ರೆ, ಮಾತಿನ ದುಶ್ಚರಿತ್ರೆ, ಮನಸ್ಸಿನ ದುಶ್ಚರಿತ್ರೆ- ಈ ಮೂರು ಅಕುಶಲ ಧಮ್ಮಗಳನ್ನು ಬದಿಗಿಟ್ಟು ಶಾರೀರಿಕ ಸುಚರಿತ್ರೆ, ಮಾತಿನ ಸುಚರಿತ್ರೆ, ಮನಸ್ಸಿನ ಸುಚರಿತ್ರೆ- ಈ ಮೂರು ಕುಶಲ ಧಮ್ಮಗಳನ್ನು ಕೈಗೊಂಡು ಅನುಸರಿಸುತ್ತಾನೆ ಅದಕ್ಕೇನು ಕಾರಣ? ಈ ಒಳ್ಳೆಯ ಶ್ರಮಣ ಬ್ರಾಹ್ಮಣರು ಅಕುಶಲ ಧಮ್ಮಗಳ ಅಪಾಯವನ್ನು ಅವನತಿಯನ್ನು ಮತ್ತು ಕಲ್ಮಶಗಳನ್ನು, ಅಲ್ಲದೆ ಕುಶಲ ಧಮ್ಮಗಳಿಗಾಗಿ ಅವುಗಳ ತ್ಯಜಿಸುವಿಕೆಯ ಉಪಯೋಗವು ಶುದ್ಧತೆಗೆ ಭಾಗಿಯಾಗುವುದನ್ನು ನೋಡುತ್ತಾರೆ. ಹೇತು ಇರುವಾಗ ಯಾರ ತಿಳುವಳಿಕೆ ಹೇತು ಇದೆ ಎನ್ನುವುದು ಅವನ ಸರಿಯಾದ ತಿಳುವಳಿಕೆ ಆಗುತ್ತದೆ. ಹೇತು ಇರುವಾಗ ಯಾರ ಆಲೋಚನೆ ಹೇತು ಇದೆ ಎನ್ನುವುದು ಅವನ ಸರಿಯಾದ ಆಲೋಚನೆ ಆಗುತ್ತದೆ. ಹೇತು ಇರುವಾಗ ಯಾರು ಹೇತು ಇದೆ ಎಂದು ಮಾತನಾಡುತ್ತಾರೋ ಅದು ಅವನ ಸರಿಯಾದ ಮಾತು ಆಗುತ್ತದೆ. ಹೇತು ಇರುವಾಗ ಯಾರೊಬ್ಬನು ಹೇತು ಇದೆ ಎಂದು ಹೇಳುತ್ತಾನೆ; (ಹೀಗೆ) ಅವನು ಯಾವ ಅರಹಂತರು ಹೇತುವಿದೆ ಎಂಬ ವಾದವನ್ನು ಮಂಡಿಸುತ್ತಾರೊ ಅವರಿಗೆ ಹಾಸ್ಯ ಮಾಡಿದವನಾಗುವುದಿಲ್ಲ. ಹೇತು ಇರುವಾಗ ಹೇತು ಇದೆ ಎಂದು ಅವನು ಇತರರಿಗೆ ಮನದಟ್ಟು ಮಾಡಿಸುತ್ತಾನೆ, ಈ ಮನದಟ್ಟು ಮಾಡಿಸುವಿಕೆ ಸದ್ಧರ್ಮವಾಗುತ್ತದೆ. ಈ ಸದ್ಧರ್ಮವನ್ನು ಮನದಟ್ಟು ಮಾಡುವುದಕ್ಕಾಗಿ ತನಗೆ ತಾನು ಪ್ರಶಂಸಿಸಿಕೊಳ್ಳುವುದಿಲ್ಲ ಮತ್ತು ಇತರರನ್ನು ಧಿಕ್ಕರಿಸುವುದಿಲ್ಲ. ಹೀಗೆ ಅವನ ಕೆಟ್ಟ ಶೀಲಗಳು ತೊಡೆದುಹೋಗುವುದಕ್ಕಿಂತ ಮೊದಲೇ ಒಳ್ಳೆಯ ಶೀಲಗಳು ಸ್ಥಾಪಿಸಲ್ಪಟ್ಟಿರುತ್ತವೆ. ಈ ಸರಿಯಾದ ತಿಳುವಳಿಕೆ, ಸರಿಯಾದ ಆಲೋಚನೆ, ಸರಿಯಾದ ಮಾತು, ಉದಾತ್ತರಿಗೆ ಹಾಸ್ಯ ಮಾಡದಿರುವಿಕೆ, ಸದ್ಧರ್ಮವನ್ನು ಮನದಟ್ಟು ಮಾಡಿಸುವಿಕೆ, ತನಗೆ ತಾನು ಪ್ರಶಂಸಿಸದಿರುವಿಕೆ ಮತ್ತು ಇತರರನ್ನು ಧಿಕ್ಕರಿಸದೆ ಇರುವುದು, ಈ ಅನೇಕ ಕುಶಲ ಧಮ್ಮಗಳು ಸರಿಯಾದ ತಿಳುವಳಿಕೆಯ ಕಾರಣದಿಂದ ಹುಟ್ಟಿಕೊಳ್ಳುತ್ತವೆ.
ಗೃಹಸ್ಥರೇ, ಒಬ್ಬ ತಿಳುವಳಿಕೆಯುಳ್ಳ ಮನುಷ್ಯನು ಹೀಗೆ ಯೋಚಿಸುತ್ತಾನೆ- ಒಂದು ವೇಳೆ ಹೇತು ಇದ್ದರೆ, ಈ ಯೋಗ್ಯ ವ್ಯಕ್ತಿಯು ಶರೀರ ನಾಶವಾಗಿ ಸಾವಿನ ನಂತರ ಸುಗತಿಯಲ್ಲಿ ಸ್ವರ್ಗಲೋಕದಲ್ಲಿ ಹುಟ್ಟುವನು. ಏನೇ ಆದರೂ ಹೇತು ಇಲ್ಲವೆಂದೇ ಆಗಲಿ, ಹಾಗು ಈ ಶ್ರಮಣ ಬ್ರಾಹ್ಮಣರ ಈ ಮಾತೂ ನಿಜವಾಗಲಿ, ಆದರೂ ಈ ಯೋಗ್ಯ ವ್ಯಕ್ತಿಯು ಜ್ಞಾನಿಗಳಿಂದ ಇಲ್ಲಿಯೇ ಈಗಲೇ ಹೀಗೆ ಪ್ರಶಂಸಿಸಲ್ಪಡುತ್ತಾನೆ- ಈ ಯೋಗ್ಯ ವ್ಯಕ್ತಿಯು ಶೀಲವಂತನಾಗಿದ್ದು, ಸರಿಯಾದ ತಿಳುವಳಿಕೆಯುಳ್ಳವನು ಮತ್ತು ಹೇತುವಿದೆ ಎಂದು ವಾದಿಸುವವನು ಎಂದು. ಒಂದುವೇಳೆ ಹೇತು ಇದ್ದೇ ಇದೆ ಎಂದರೆ ಈ ಯೋಗ್ಯ ವ್ಯಕ್ತಿಗೆ ಎರಡು ಗೆಲವುಗಳಿವೆ- ಅವನು ಜ್ಞಾನಿಗಳಿಂದ ಇಲ್ಲಿಯೇ ಈಗಲೇ ಪ್ರಶಂಸಿಸಲ್ಪಡುತ್ತಾನೆ, ಅಲ್ಲದೆ ಶರೀರ ನಾಶವಾಗಿ ಸಾವಿನ ನಂತರ ಸುಗತಿಯಲ್ಲಿ ಸ್ವರ್ಗಲೋಕದಲ್ಲಿ ಹುಟ್ಟುವನು. ಹೀಗೆ ಈ ನಿರ್ವಿವಾದ ಧಮ್ಮವನ್ನು ಸಮಗ್ರವಾಗಿ ಕೈಗೊಂಡವನಾಗಿ, ಅವನು ಅದನ್ನು ಎರಡೂ ಕಡೆ ಹರಡುತ್ತಾನೆ, ಅಕುಶಲಕರವಾದ ಸ್ಥಾನಗಳನ್ನು ತಿರಸ್ಕರಿಸುತ್ತಾನೆ.
12. ಗೃಹಸ್ಥರೇ, ಈ ರೀತಿ ವಾದಿಸುವ ಈ ರೀತಿ ದೃಷ್ಟಿಯುಳ್ಳ ಕೆಲವು ಶ್ರಮಣ ಬ್ರಾಹ್ಮಣರು ಇದ್ದಾರೆ- ಖಂಡಿತವಾಗಿಯೂ ಅರೂಪ ಸ್ಥಿತಿಗಳು ಇಲ್ಲ ಎಂದು. ಗೃಹಸ್ಥರೇ, ಈ ಶ್ರಮಣ ಬ್ರಾಹ್ಮಣರಿಗೆ ಕೆಲವು ಶ್ರಮಣ ಬ್ರಾಹ್ಮಣರು ಹೀಗೆ ನೇರವಾಗಿ ವಿರೋಧಿಸುತ್ತಾರೆ- ಖಂಡಿತವಾಗಿಯೂ ಅರೂಪ ಸ್ಥಿತಿಗಳಿವೆ ಎಂದು. ಇದನ್ನು ಹೇಗೆ ಯೋಚಿಸುತ್ತೀರಿ, ಗೃಹಸ್ಥರೇ, ಈ ಶ್ರಮಣ ಬ್ರಾಹ್ಮಣರು ಪರಸ್ಪರ ನೇರವಾಗಿ ವಿರೋಧಿಸುತ್ತಾರಲ್ಲವೆ ಎಂದು.
ಹೌದು ಭಂತೆ.
ಗೃಹಸ್ಥರೇ, ಒಬ್ಬ ತಿಳುವಳಿಕೆಯುಳ್ಳ ಮನುಷ್ಯನು ಹೀಗೆ ಯೋಚಿಸುತ್ತಾನೆ- ಯಾವ ಈ ಪೂಜ್ಯ ಶ್ರಮಣ ಬ್ರಾಹ್ಮಣರು ಈ ರೀತಿ ವಾದಿಸುವರೊ ಈ ರೀತಿ ದೃಷ್ಟಿಯುಳ್ಳವರೊ- ಖಂಡಿತವಾಗಿಯೂ ಅರೂಪ ಸ್ಥಿತಿಗಳಿಲ್ಲ ಎಂದು, ಇನ್ನು ನನ್ನಿಂದ ನೋಡಲ್ಪಟ್ಟಿಲ್ಲ; ಅಲ್ಲದೆ ಯಾವ ಶ್ರಮಣ ಬ್ರಾಹ್ಮಣರು ಈ ರೀತಿ ವಾದಿಸುವರೋ ಈ ರೀತಿ ದೃಷ್ಟಿಯುಳ್ಳವರೋ ಖಂಡಿತವಾಗಿಯೂ ಅರೂಪ ಸ್ಥಿತಿಗಳಿವೆ ಎಂದು. ಇದು ನನ್ನಿಂದ ತಿಳಿಯಲ್ಪಟ್ಟಿಲ್ಲ. ನಾನಾದರೊ ತಿಳಿಯದೆ ನೋಡದೆ ಒಂದು ಪಕ್ಷವನ್ನು ತೆಗೆದುಕೊಂಡು ಅದನ್ನು ಹೀಗೆ ವಿವರಿಸಿದರೆ. ಇದು ಮಾತ್ರ ಸತ್ಯ ಬೇರೆಯೆಲ್ಲ ತಪ್ಪು ಎಂದು. ಅದು ನನಗೆ ತಕ್ಕುದಾದುದಲ್ಲ. ಯಾವ ಪೂಜ್ಯ ಶ್ರಮಣ ಬ್ರಾಹ್ಮಣರು ಈ ರೀತಿ ವಾದಿಸುತ್ತಾರೆ ಈ ರೀತಿ ದೃಷ್ಟಿಯುಳ್ಳವರು- ಖಂಡಿತವಾಗಿಯೂ ಅರೂಪ ಸ್ಥಿತಿಗಳು ಇಲ್ಲ ಎಂದು. ಒಂದುವೇಳೆ ಈ ಶ್ರಮಣ ಬ್ರಾಹ್ಮಣರ ಮಾತು ಸತ್ಯವಾದರೆ, ಮನಸ್ಸಿನಿಂದ ಕೂಡಿದ ಅರೂಪ ದೇವತೆಗಳಲ್ಲಿ ನನ್ನ ಹುಟ್ಟು ಸಂಭವಿಸುವುದು, ಈ ನಿರ್ವಿವಾದ ಸಾಧ್ಯತೆಯು ಇದೆ. ಅಲ್ಲದೆ ಯಾವ ಶ್ರಮಣ ಬ್ರಾಹ್ಮಣರು ಈ ರೀತಿ ವಾದಿಸುವರು. ಈ ದೃಷ್ಟಿಯುಳ್ಳವರು- ಖಂಡಿತವಾಗಿಯೂ ಅರೂಪ ಸ್ಥಿತಿಗಳು ಇವೆ ಎಂದು. ಒಂದುವೇಳೆ ಈ ಶ್ರಮಣ ಬ್ರಾಹ್ಮಣರ ಮಾತು ಸತ್ಯವಾದರೆ, ಗ್ರಹಿಕೆಯಿಂದ ಕೂಡಿದ ಆ ಅರೂಪ ದೇವತೆಗಳಲ್ಲಿ ನನ್ನ ಹುಟ್ಟು ಸಂಭವಿಸುವುದು,74 ಈ ನಿರ್ವಿವಾದ ಸಾಧ್ಯತೆಯೂ ಇದೆ. ರೂಪಗಳ ಬಗ್ಗೆ ದಂಡ ತೆಗೆದುಕೊಳ್ಳುವುದು, ಶಸ್ತ್ರ ತೆಗೆದುಕೊಳ್ಳುವುದು, ಕಲಹ, ಜಗಳ, ವಿವಾದ, ಪ್ರತ್ಯಾರೋಪಣೆ ಹಗೆತನ, ಸುಳ್ಳು ಹೇಳುವಿಕೆ ಇವೆಲ್ಲಾ ಕಂಡುಬರುತ್ತವೆ. ಆದರೆ ಖಂಡಿತವಾಗಿಯೂ ಅರೂಪಗಳನ್ನು ಕುರಿತು ಇವೆಲ್ಲ ಕಂಡುಬರುವುದಿಲ್ಲ ಹೀಗೆ ಯೋಚಿಸಿದವನಾಗಿ ಅವನು ಕೇವಲ ರೂಪಗಳ ತಾತ್ಸಾರಕ್ಕಾಗಿ, (ಅವುಗಳ ಮೇಲಿನ) ವಿರಾಗಕ್ಕಾಗಿ, (ಅವುಗಳ) ತಡೆಯುವಿಕೆಗಾಗಿ ಮಾರ್ಗವನ್ನು ಅನುಸರಿಸಿದವನಾಗುತ್ತಾನೆ.75
13. ಗಹಸ್ಥರೇ, ಈ ರೀತಿ ವಾದಿಸುವ ಈ ರೀತಿ ದೃಷ್ಟಿಯುಳ್ಳ ಕೆಲವು ಶ್ರಮಣ ಬ್ರಾಹ್ಮಣರಿದ್ದಾರೆ- ಖಂಡಿತವಾಗಿಯೂ ಸಂಭವಿಸುವಿಕೆಯ ತಡೆ ಇಲ್ಲ ಎಂದು.76 ಗೃಹಸ್ಥರೇ, ಈ ಶ್ರಮಣ ಬ್ರಾಹ್ಮಣರಿಗೆ ಕೆಲವು ಶ್ರಮಣ ಬ್ರಾಹ್ಮಣರು ಹೀಗೆ ನೇರವಾಗಿ ವಿರೋಧಿಸುತ್ತಾರೆ. ಅವರು ಹೀಗೆ ಹೇಳುತ್ತಾರೆ- ಖಂಡಿತವಾಗಿಯೂ ಸಂಭವಿಸುವಿಕೆಯ ತಡೆ ಇದೆ ಎಂದು. ಇದನ್ನು ಹೇಗೆ ಯೋಚಿಸುತ್ತೀರಿ, ಗೃಹಸ್ಥರೇ, ಈ ಶ್ರಮಣ ಬ್ರಾಹ್ಮಣರು ಪರಸ್ಪರ ನೇರವಾಗಿ ವಿರೋಧಿಸುತ್ತಾರಲ್ಲವೆ ಎಂದು.
ಹೌದು ಭಂತೆ.
ಗೃಹಸ್ಥರೇ, ಈಗ ಒಬ್ಬ ತಿಳುವಳಿಕೆಯುಳ್ಳ ಮನುಷ್ಯನು ಹೀಗೆ ಯೋಚಿಸುತ್ತಾನೆ- ಯಾವ ಪೂಜ್ಯ ಶ್ರಮಣ ಬ್ರಾಹ್ಮಣರು ಈ ರೀತಿ ವಾದಿಸುತ್ತಾರೆ, ಈ ರೀತಿ ದೃಷ್ಟಿಯುಳ್ಳವರು- ಖಂಡಿತವಾಗಿಯೂ ಸಂಭವಿಸುವಿಕೆಯ ತಡೆ ಇಲ್ಲ ಎಂದು, ಇದು ನನ್ನಿಂದ ನೋಡಲ್ಪಟ್ಟಿಲ್ಲ, ಯಾವ ಪೂಜ್ಯ ಶ್ರಮಣ ಬ್ರಾಹ್ಮಣರು ಈ ರೀತಿ ವಾದಿಸುವರು, ಈ ರೀತಿ ದೃಷ್ಟಿಯುಳ್ಳವರು-ಖಂಡಿತವಾಗಿಯೂ ಸಂಭವಿಸುವಿಕೆಯ ತಡೆ ಇದೆ ಎಂದು. ಇದು ನನ್ನಿಂದ ತಿಳಿಯಲ್ಪಟ್ಟಿಲ್ಲ. ನಾನಾದರೊ ತಿಳಿಯದೆ ನೋಡದೆ ಒಂದು ಪಕ್ಷವನ್ನು ತೆಗೆದುಕೊಂಡು ಹೀಗೆ ವಿವರಿಸಿದರೆ- ಇದು ಮಾತ್ರ ಸತ್ಯ, ಬೇರೆಯೆಲ್ಲ ತಪ್ಪು ಎಂದು, ಅದು ನನಗೆ ತಕ್ಕುದಾದುದಲ್ಲ. ಯಾವ ಪೂಜ್ಯ ಶ್ರಮಣ ಬ್ರಾಹ್ಮಣರು ಈ ರೀತಿ ವಾದಿಸುತ್ತಾರೆ ಈ ರೀತಿ ದೃಷ್ಟಿಯುಳ್ಳವರು-ಖಂಡಿತವಾಗಿಯೂ ಸಂಭವಿಸುವಿಕೆಯ ತಡೆ ಇಲ್ಲ ಎಂದು. ಒಂದುವೇಳೆ ಈ ಶ್ರಮಣ ಬ್ರಾಹ್ಮಣರ ಮಾತು ಸತ್ಯವಾದರೆ, ಗ್ರಹಿಕೆಯಿಂದ ಕೂಡಿದ ಆ ಅರೂಪ ದೇವತೆಗಳಲ್ಲಿ ನನ್ನ ಹುಟ್ಟು ಸಂಭವಿಸುವುದು, ಈ ನಿರ್ವಿವಾದ ಸಾಧ್ಯತೆಯು ಇದೆ. ಅಲ್ಲದೆ ಯಾವ ಪೂಜ್ಯ ಶ್ರಮಣ ಬ್ರಾಹ್ಮಣರು ಈ ರೀತಿ ವಾದಿಸುವರು, ಈ ರೀತಿ ದೃಷ್ಟಿಯುಳ್ಳವರು-ಖಂಡಿತವಾಗಿಯೂ ಸಂಭವಿಸುವಿಕೆಯ ತಡೆ ಇದೆ ಎಂದು. ಒಂದುವೇಳೆ ಈ ಶ್ರಮಣ ಬ್ರಾಹ್ಮಣರ ಮಾತು ಸತ್ಯವಾದರೆ, ನಾನು ಇಲ್ಲಿಯೇ ಈಗಲೇ ನಿಬ್ಬಾಣವನ್ನು ಹೊಂದುವನು, ಈ ನಿರ್ವಿವಾದ ಸಾಧ್ಯತೆಯೂ ಇದೆ. ಯಾವ ಪೂಜ್ಯ ಶ್ರಮಣ ಬ್ರಾಹ್ಮಣರು ಈ ರೀತಿ ವಾದಿಸುವರು ಈ ರೀತಿ ದೃಷ್ಟಿಯುಳ್ಳವರು-ಖಂಡಿತವಾಗಿಯೂ ಸಂಭವಿಸುವಿಕೆಯ ತಡೆ ಇಲ್ಲ ಎಂದು, ಅವರ ಈ ದೃಷ್ಟಿ ರಾಗಕ್ಕೆ ಹತ್ತಿರವಾಗಿದೆ, ಬಂಧನಕ್ಕೆ ಹತ್ತಿರವಾಗಿದೆ, ಸಂತೋಷಕ್ಕೆ ಹತ್ತಿರವಾಗಿದೆ, ಒಪ್ಪಿಗೆಗೆ ಹತ್ತಿರವಾಗಿದೆ, ಅಂಟುವಿಕೆಗೆ ಹತ್ತಿರವಾಗಿದೆ. ಆದರೆ ಯಾವ ಪೂಜ್ಯ ಶ್ರಮಣ ಬ್ರಾಹ್ಮಣರು ಈ ರೀತಿ ವಾದಿಸುವರು ಈ ರೀತಿ ದೃಷ್ಟಿಯುಳ್ಳವರು-ಖಂಡಿತವಾಗಿಯೂ ಸಂಭವಿಸುವಿಕೆಯ ತಡೆ ಇದೆ ಎಂದು, ಅವರ ಈ ದೃಷ್ಟಿಯು ರಾಗವಿಲ್ಲದಿರುವಿಕೆಗೆ ಹತ್ತಿರವಾಗಿದೆ, ಬಂಧನವಿಲ್ಲದಿರುವಿಕೆಗೆ ಹತ್ತಿರವಾಗಿದೆ ಸಂತೋಷವಿಲ್ಲದಿರುವಿಕೆಗೆ ಹತ್ತಿರವಾಗಿದೆ, ಒಪ್ಪಿಗೆ ಇಲ್ಲದಿರುವಿಕೆಗೆ ಹತ್ತಿರವಾಗಿದೆ, ಅಂತುವಿಕೆ ಇಲ್ಲದಿರುವಿಕೆಗೆ ಹತ್ತಿರವಾಗಿದೆ; ಎಂದು. ಅವನು ಹೀಗೆ ಯೋಚಿಸಿದವನಾಗಿ ಸಂಭವಿಸುವಿಕೆಯ (ಬಗ್ಗೆ) ತಾತ್ಸಾರವಾಗಿ ವಿರಾಗಕ್ಕಾಗಿ, ತಡೆಯುವಿಕೆಗಾಗಿ ಮಾರ್ಗವನ್ನು ಅನುಸರಿಸುತ್ತಾನೆ.
2. ನಾಲ್ಕು ವಿಧದ ವ್ಯಕ್ತಿಗಳು
14. ಗೃಹಸ್ಥರೇ, ಈ ಲೋಕದಲ್ಲಿ ನಾಲ್ಕು ವಿಧದ ವ್ಯಕ್ತಿಗಳು ಜೀವಿಸುವುದು ಕಂಡುಬರುತ್ತದೆ. ಯಾವುದು ನಾಲ್ಕು ವಿಧ? ಗೃಹಸ್ಥರೇ, ಇಲ್ಲಿ ಯಾರೊಬ್ಬ ವ್ಯಕ್ತಿ ತನ್ನನ್ನು ತಾನೇ ಪೀಡಿಸಿಕೊಳ್ಳುವಂತಹ ಮನಸ್ಸುಳ್ಳವನಾಗಿ ತಾನು ಪೀಡನೆ ಅನುಭವಿಸುತ್ತಾನೆ; ಗೃಹಸ್ಥರೇ, ಮತ್ತೆ ಇಲ್ಲಿ ಯಾರೊಬ್ಬ ವ್ಯಕ್ತಿ ಬೇರೆಯವರನ್ನು ಪೀಡಿಸುವಂತಹ ಮನಸ್ಸುಳ್ಳವನಾಗಿ ಬೇರೆಯವರನ್ನು ಪೀಡಿಸುತ್ತಾನೆ; ಗೃಹಸ್ಥರೇ, ಮತ್ತೆ ಇಲ್ಲಿ ಯಾರೊಬ್ಬ ವ್ಯಕ್ತಿ ತನ್ನನ್ನು ತಾನೇ ಪೀಡಿಸಿಕೊಳ್ಳುವಂತಹ ಮನಸ್ಸುಳ್ಳವನಾಗಿ ತನ್ನನ್ನು ತಾನು ಪೀಡಿಸಿಕೊಳ್ಳುತ್ತಾನೆ ಮತ್ತು ಬೇರೆಯವರನ್ನು ಪೀಡಿಸುವಂತಹ ಮನಸ್ಸುಳ್ಳವನಾಗಿ ಬೇರೆಯವರನ್ನು ಪೀಡಿಸುತ್ತಾನೆ; ಗೃಹಸ್ಥರೇ, ಮತ್ತೆ ಇಲ್ಲಿ ಯಾರೊಬ್ಬ ವ್ಯಕ್ತಿ ತನ್ನನ್ನು ತಾನು ಪೀಡಿಸಿಕೊಳ್ಳದಂತಹ ಮನಸ್ಸುಳ್ಳವನಾಗಿ ತಾನು ಪೀಡನೆ ಅನುಭವಿಸುವುದಿಲ್ಲ ಮತ್ತು ಬೇರೆಯವರನ್ನು ಪೀಡಿಸುವಂತಹ ಮನಸ್ಸಿಲ್ಲದವನಾಗಿ ಬೇರೆಯವರನ್ನು ಪೀಡಿಸುವುದಿಲ್ಲ. ಆದ್ದರಿಂದ ತನ್ನನ್ನು ತಾನು ಪೀಡಿಸಿಕೊಳ್ಳದಿರುವ ಮತ್ತು ಬೇರೆಯವರನ್ನು ಪೀಡಿಸದಿರುವಂತಹ ಮಾನಸಿಕ ದೃಷ್ಟಿಯನ್ನು ಹೊಂದಿರುವುದರಿಂದಾಗಿ ಅವನು ಇಲ್ಲಿಯೇ ಈಗಲೇ ಬೇಗ ಇಲ್ಲದವನಾಗಿ ಉಪಶಮನ ಪಡೆದವನಾಗಿ, ತಣ್ಣಗಾಗಿಸಿದವನಾಗಿ ತನ್ನಲ್ಲಿ ತಾನು ಬ್ರಹ್ಮಾನುಭವದಲ್ಲಿ ನೆಲೆಗೊಂಡವನಂತೆ ಅಂತಹ ಸುಖವನ್ನು ಅನುಭವಿಸುತ್ತಾನೆ.
15. ಗೃಹಸ್ಥರೇ, ಯಾವ ವಿಧದ ವ್ಯಕ್ತಿಯು ತನಗೆ ತಾನು ಪೀಡಿಸಿಕೊಳ್ಳುತ್ತಾನೆ ಮತ್ತು ತನಗೆ ತಾನು ಪೀಡಿಸಿಕೊಳ್ಳುವಂತಹ ಮನಸ್ಸುಳ್ಳವನು? ಭಿಕ್ಷುಗಳೇ, ಇಲ್ಲಿ ಒಬ್ಬ ವ್ಯಕ್ತಿಯು ಬಟ್ಟೆ ಧರಿಸದವನಾಗುತ್ತಾನೆ. ಆಚಾರಹೀನನಾಗುತ್ತಾನೆ (ಊಟದ ನಂತರ) ಕೈಯನ್ನು ನೆಕ್ಕುವವನಾಗುತ್ತಾನೆ. ಪುನರುಚ್ಚರಿಸಿ... (51ನೇ ಸುತ್ತದ ಪುಟ 11 ನೋಡಿ) ಈ ರೀತಿಯಾಗಿ ಅನೇಕ ವಿಧದ ದೇಹದಂಡನೆ ಮತ್ತು ಹಿಂಸೆಯಾಗುವಂತಹ ಆಚರಣೆಯನ್ನು ಅನುಸರಿಸುತ್ತಾನೆ. ಭಿಕ್ಷುಗಳೇ, ಈ ವಿಧದ ವ್ಯಕ್ತಿಯು ತನಗೆ ತಾನು ಪೀಡಿಸಿಕೊಳ್ಳುವಂತಹವನು ಮತ್ತು ತನ್ನನ್ನು ತಾನು ಪೀಡಿಸಿಕೊಳ್ಳುವ ಆಚರಣೆಯುಳ್ಳವನು ಎಂದು ಕರೆಯಲ್ಪಡುತ್ತಾನೆ.
ಗೃಹಸ್ಥರೇ, ಯಾವ ವಿಧದ ವ್ಯಕ್ತಿಯು ಬೇರೆಯವರನ್ನು ಹಿಂಸಿಸುವ ಮನಸ್ಸುಳ್ಳವನಾಗಿ ಬೇರೆಯವರನ್ನು ಪೀಡಿಸುತ್ತಾನೆ? ಭಿಕ್ಷುಗಳೇ, ಇಲ್ಲಿ ಯಾರೊಬ್ಬ ವ್ಯಕ್ತಿಯು ಕುರಿ ಹಿಡಿಯುವವನಾಗುತ್ತಾನೆ, ಹಂದಿ ಹಿಡಿಯುವವನಾಗುತ್ತಾನೆ, ಹಕ್ಕಿಯ ಬೇಟೆಗಾರನಾಗುತ್ತಾನೆ, ಕಾಡು ಮೃಗಗಳನ್ನು ಹಿಡಿಯುವವನಾಗುತ್ತಾನೆ, ಬೇಡನಾಗುತ್ತಾನೆ, ಮೀನು ಹಿಡಿಯುವವನಾಗುತ್ತಾನೆ, ಕಳ್ಳನಾಗುತ್ತಾನೆ, ದರೋಡೆಕೋರನಾಗುತ್ತಾನೆ, ಹಸುಗಳನ್ನು ಕಡಿಯುವವನಾಗುತ್ತಾನೆ, ಕಾರಾಗೃಹದ ಉಸ್ತುವಾರಿಯಾದವನಾಗುತ್ತಾನೆ, ಅಥವಾ ಇಂತಹ ಬೇರೆ ಕ್ರೂರ ಕೆಲಸಗಳನ್ನು ಮಾಡುವಂತಹವರಲ್ಲಿ ಒಬ್ಬನಾಗುತ್ತಾನೆ. ಭಿಕ್ಷುಗಳೇ, ಈ ವಿಧದ ವ್ಯಕ್ತಿಯು ಬೇರೆಯವರವನ್ನು ಹಿಂಸಿಸುವ ಮನಸ್ಸುಳ್ಳವನಾಗಿ ಬೇರೆಯವರವನ್ನು ಪೀಡಿಸುವವನು ಎಂದು ಕರೆಯಲ್ಪಡುತ್ತಾನೆ.
ಗೃಹಸ್ಥರೇ, ಯಾವ ವ್ಯಕ್ತಿ ತನ್ನನ್ನು ತಾನು ಪೀಡಿಸಿಕೊಳ್ಳುವವನು ಮತ್ತು ಬೇರೆಯವರನ್ನು ಪೀಡಿಸುವ ಮನಸ್ಸುಳ್ಳವನಾಗಿ ಬೇರೆಯವರನ್ನು ಪೀಡಿಸುವವನು? ಭಿಕ್ಷುಗಳೇ, ಇಲ್ಲಿ ಒಬ್ಬ ವ್ಯಕ್ತಿಯು ಕ್ಷತ್ರಿಯ ಕುಲದ ಅಭಿಶಿಕ್ತ ರಾಜನು ಅಥವಾ ಅತುಳ ಐಶ್ವರ್ಯವುಳ್ಳ ಬ್ರಾಹ್ಮಣ ಕುಲದವನಾಗಿರಬಹುದು. ಅವನು ನಗರದ ಪೂರ್ವ ಭಾಗದಲ್ಲಿ ಹೊಸದಾದ ಯಜ್ಞ ಶಾಲೆಯನ್ನು ಕಟ್ಟಿಸಿ ತನ್ನ ತಲೆಗೂದಲು ಮತ್ತು ಗಡ್ಡವನ್ನು ಬೋಳಿಸಿಕೊಂಡು ತೊಗಲಿನ ಉಡುಗೆಯನ್ನು ತೊಟ್ಟವನಾಗಿ ತುಪ್ಪ ಮತ್ತು ಎಣ್ಣೆಯನ್ನು ತನ್ನ ಶರೀರಕ್ಕೆ ಹಚ್ಚಿಕೊಂಡವನಾಗಿ ತನ್ನ ಬೆನ್ನನ್ನು ಜಿಂಕೆಯ ಕೊಂಬಿನಿಂದ ಕೆರೆದು ಈ ಹೊಸ ಯಜ್ಞಶಾಲೆಗೆ ತನ್ನ ಮಹಾರಾಣಿಯರೊಂದಿಗೆ ಮತ್ತು ಬ್ರಾಹ್ಮಣ ಪುರೋಹಿತನೊಂದಿಗೆ ಬರುತ್ತಿದ್ದನು. ಅವನು ಅಲ್ಲಿ ನೆಲದಮೇಲೆ ಹಾಸಿದ ಹುಲ್ಲಿನ ಮೇಲೆ ಮಲಗುತ್ತಿದ್ದನು. ತನ್ನಂತಹುದೇ ಕರುವುಳ್ಳ ಒಂದು ಹಸುವಿನ ಕೆಚ್ಚಲಿನ ಒಂದು ತೊಟ್ಟಿನಲ್ಲಿ ಕರೆಯುವ ಹಾಲನ್ನು ರಾಜನು ಉಪಯೋಗಿಸುತ್ತಾನೆ, ಅದರ ಎರಡನೆಯ ತೊಟ್ಟಿನಲ್ಲಿ ಕರೆಯುವ ಹಾಲನ್ನು ಮಹಾರಾಣಿಯು ಉಪಯೋಗಿಸುತ್ತಾಳೆ, ಅದರ ಕೆಚ್ಚಲಿನ ಮೂರನೆಯ ತೊಟ್ಟಿನಲ್ಲಿ ಕರೆಯುವ ಹಾಲನ್ನು ಬ್ರಾಹ್ಮಣ ಪುರೋಹಿತನು ಉಪಯೋಗಿಸುತ್ತಾನೆ, ಅದರ ಕೆಚ್ಚಲಿನ ನಾಲ್ಕನೆಯ ತೊಟ್ಟಿನಲ್ಲಿ ಕರೆಯುವ ಹಾಲನ್ನು ಬೆಂಕಿಗೆ ಆಹುತಿ ಮಾಡುತ್ತಾರೆ, ಉಳಿದದ್ದರಲ್ಲಿ ಕರುವು ಉಪಯೋಗಿಸುತ್ತದೆ. ಅವನು ಹೀಗೆ ಹೇಳುವನು- ಇಂತಿಷ್ಟು ಹೋರಿಗಳು ಯಜ್ಞಾರ್ಥವಾಗಿ ಕಡಿಯಲ್ಪಡಲಿ, ಇಂತಿಷ್ಟು ಹೋರಿಕರುಗಳು ಯಜ್ಞಾರ್ಥವಾಗಿ ಕಡಿಯಲ್ಪಡಲಿ, ಇಂತಿಷ್ಟು ಹಸುಕರುಗಳು ಯಜ್ಞಾರ್ಥವಾಗಿ ಕಡಿಯಲ್ಪಡಲಿ, ಇಂತಿಷ್ಟು ಮೇಕೆಗಳು ಯಜ್ಞಾರ್ಥವಾಗಿ ಕಡಿಯಲ್ಪಡಲಿ, ಇಂತಿಷ್ಟು ಕುರಿಗಳು ಯಜ್ಞಾರ್ಥವಾಗಿ ಕಡಿಯಲ್ಪಡಲಿ, ಇಂತಿಷ್ಟು ಕುದುರೆಗಳು ಯಜ್ಞಾರ್ಥವಾಗಿ ಕಡಿಯಲ್ಪಡಲಿ, ಇಂತಿಷ್ಟು ಮರಗಳು ಬಲಿಕಂಬಕ್ಕಾಗಿ ಕಡಿಯಲ್ಪಡಲಿ, ಇಂತಿಷ್ಟು ದಬರ್ೆ ಹುಲ್ಲನ್ನು ಯಾಗದ ಕೆಲಸಕ್ಕಾಗಿ ಕತ್ತರಿಸಲ್ಪಡಲಿ ಎಂದು. ಯಾರು ಅವರ ಸೇವಕರಾದವರು ಅಥವಾ ಅವರ ದೂತರಾದವರು ಅಥವಾ ಅವರ ಕೆಲಸದವರಾದವರು ಅವರು ದಂಡನೆಗೆ ಹೆದರಿ ಭಯಭೀತರಾಗಿ ಕಣ್ಣೀರು ಸುರಿಸುತ್ತ ಅಳುಮುಖದವರಾಗಿ ಈ ನಿಯೋಜಿತ ಕೆಲಸಗಳನ್ನು ಮಾಡುತ್ತಾರೆ. ಭಿಕ್ಷುಗಳೇ, ಈ ವಿಧದ ವ್ಯಕ್ತಿಯು ತನ್ನನ್ನು ತಾನು ಪೀಡಿಸಿಕೊಳ್ಳುವ ಮನಸ್ಸುಳ್ಳವನಾಗಿ ತನಗೆ ತಾನು ಪೀಡಿಸಿಕೊಳ್ಳುತ್ತಾನೆ ಮತ್ತು ಬೇರೆಯವರನ್ನು ಪೀಡಿಸುವ ಮನಸ್ಸುಳ್ಳವನಾಗಿ ಬೇರೆಯವರನ್ನು ಪೀಡಿಸುವವನು ಎಂದು ಕರೆಯಲ್ಪಡುತ್ತಾನೆ.
ಗೃಹಸ್ಥರೇ, ಯಾವ ವ್ಯಕ್ತಿ ತನ್ನನ್ನು ತಾನು ಪೀಡಿಸಿಕೊಳ್ಳದಂತಹ ಮನಸ್ಸುಳ್ಳವನಾಗಿ ತಾನು ಪೀಡನೆ ಅನುಭವಿಸುದಿಲ್ಲ ಮತ್ತು ಬೇರೆಯವರನ್ನು ಪೀಡಿಸದಿರುವಂತಹ ಮನಸ್ಸುಳ್ಳವನಾಗಿ ಬೇರೆಯವರನ್ನು ಪೀಡಿಸುವುದಿಲ್ಲ. ಆದ್ದರಿಂದ ತನ್ನನ್ನು ಪೀಡಿಸಿಕೊಳ್ಳದಿರುವ ಮತ್ತು ಬೇರೆಯವರನ್ನು ಪೀಡಿಸದಿರುವಂತಹ ಮಾನಸಿಕ ದೃಷ್ಟಿಯನ್ನು ಹೊಂದಿರುವುದರಿಂದಾಗಿ ಅವನು ಇಲ್ಲಿಯೇ ಈಗಲೇ ಬೇಗೆ ಇಲ್ಲದವನಾಗಿ, ಉಪಶಮನ ಪಡೆದವನಾಗಿ, ತಣ್ಣಗಾಗಿಸಿದವನಾಗಿ, ತನ್ನಲ್ಲಿ ತಾನು ಬ್ರಾಹ್ಮನುಭವದಲ್ಲಿ ನೆಲೆಗೊಂಡವನಂತೆ ಅಂತಹ ಸುಖವನ್ನು ಅನುಭವಿಸುತ್ತಾನೆ? ಗೃಹಸ್ಥರೇ, ತಥಾಗತರು ಲೋಕದಲ್ಲಿ ಉದಯಿಸುತ್ತಾರೆ. ಅವರು ಅರಹಂತರು, ಸಮ್ಯಕ್ ಸಂಬುದ್ಧರು... ಪುನರುಚ್ಚರಿಸಿ... (51ನೇ ಸುತ್ತ ಪುಟ 15) ಅವನು ಈ ಐದು ತಡೆಗಳನ್ನು ತೊರೆದು ಆಂತರಿಕ ಅರಿವಿನಿಂದ ಮನಸ್ಸಿನ ದೌರ್ಬಲ್ಯಗಳನ್ನು ದುರ್ಬಲ ಮಾಡಿದವನಾಗಿ ಕಾಮವನ್ನು ದಾಟಿದವನಾಗಿ ಅಕುಶಲ ಧರ್ಮಗಳನ್ನು ದಾಟಿದವನಾಗಿ ಸವಿತರ್ಕನಾಗಿ, ಸವಿಚಾರನಾಗಿ ಏಕಾಂತದಿಂದ ಹುಟ್ಟಿದ ಆನಂದ ಮತ್ತು ಸುಖದಿಂದ ಕೂಡಿದ ಸಮಾಧಿಯ ಮೊದಲ ಹಂತವನ್ನು ಸಾಧಿಸಿಕೊಂಡು ನೆಲೆಗೊಳ್ಳುತ್ತಾನೆ. ವಿತರ್ಕ ವಿಚಾರಗಳನ್ನು ಉಪಶಮನಗೊಳಿಸಿ ಆಂತರಿಕ ಸ್ಥೈರ್ಯ ಮತ್ತು ಮನಸ್ಸಿನ ಏಕೋಭಾವದಿಂದ ವಿತರ್ಕಗಳಿಲ್ಲದ ವಿಚಾರಗಳಿಲ್ಲದ ಸಮಾಧಿಯಲ್ಲಿ ಹುಟ್ಟಿದ ಆನಂದ ಮತ್ತು ಸುಖದಿಂದ ಕೂಡಿದ ಸಮಾಧಿಯ ಎರಡನೇ ಹಂತವನ್ನು ಸಾಧಿಸಿಕೊಂಡು ನೆಲೆಗೊಳ್ಳುತ್ತಾನೆ. ಭಿಕ್ಷುಗಳೇ, ಆನಂದ ಮರೆಯಾಗಿ ಉಪೇಕ್ಖಾ (ಸಮಚಿತ್ತತೆ)ದಲ್ಲಿ ನೆಲೆಗೊಳ್ಳುತ್ತಾನೆ, ಜಾಗರ ಸ್ಥಿತಿ ಮತ್ತು ಅರಿವುಗಳನ್ನು ಹೊಂದಿ ಸುಖವನ್ನು ಕಾಯದಲ್ಲೇ ಅನುಭವಿಸುತ್ತಾನೆ, ಯಾವುದನ್ನು ಆರ್ಯರು ಹೀಗೆ ಘೋಷಿಸುತ್ತಾರೋ ಉಪೇಕ್ಖಾ ಮತ್ತು ಜಾಗರ ಸ್ಥಿತಿಯನ್ನು ಹೊಂದಿದವನೇ ಸುಖದಲ್ಲಿ ನೆಲೆಗೊಂಡವನು ಎಂದು. ಇಂತಹ ಸಮಾಧಿಯ ಮೂರನೇ ಹಂತವನ್ನು ಸಾಧಿಸಿಕೊಂಡು ಅದರಲ್ಲಿ ನೆಲೆಗೊಳ್ಳುತ್ತಾನೆ. ಭಿಕ್ಷು ಸುಖವನ್ನು ಬಿಟ್ಟವನಾಗಿ, ದುಃಖವನ್ನು ಬಿಟ್ಟವನಾಗಿ ಹಿಂದಿನ ಎಲ್ಲ ಮಾನಸಿಕ ಸುಮ್ಮಾನ-ದುಮ್ಮಾನಗಳು ಕಾಣದಂತಾಗಿ ದುಃಖವೂ ಅಲ್ಲದ ಸುಖವೂ ಅಲ್ಲದ ಉಪೇಕ್ಖಾದಿಂದ ಉಂಟಾದ ಪರಿಶುದ್ಧ ಎಚ್ಚರ ಸ್ಥಿತಿಯಾದ ಸಮಾಧಿಯ ನಾಲ್ಕನೇ ಹಂತವನ್ನು ಸಾಧಿಸಿಕೊಂಡು ನೆಲೆಗೊಳ್ಳುತ್ತಾನೆ.
ಅವನ ಈ ಬಗೆಯ ಸಮಾಹಿತವಾದ ಚಿತ್ತವು ಈ ರೀತಿಯಾಗಿ ಪರಿಶುದ್ಧವೂ, ಉಜ್ವಲವೂ, ನಿರ್ಮಲವೂ, ದೋಷವಿಮುಕ್ತವೂ, ಮೃದುವೂ, ಕಾರ್ಯಯೋಗ್ಯವೂ, ಸ್ಥಿರವೂ ಅಚಲವೂ ಆಗಿ ಹಿಂದಿನ ಜನ್ಮ ಸ್ಮರಣೆಗಳ ಕಡೆಗೆ ಚಿತ್ತವು ತಿರುಗಿತು. ಹೇಗೆಂದರೆ ಒಂದು ಜನ್ಮವನ್ನು ಎರಡು ಜನ್ಮಗಳನ್ನು... ಪುನರುಚ್ಚರಿಸಿ... ಹೀಗೆ ಸವಿವರವಾಗಿ ಉದ್ದೇಶಪೂರ್ಣವಾದ ಅನೇಕ ವಿಧವಾದ ಪೂರ್ವ ಜೀವನಗಳು ನೆನಪಿಗೆ ಬಂದವು. ಅವನ ಈ ಬಗೆಯ ಸಮಾಹಿತವಾದ ಚಿತ್ತವು ಈ ರೀತಿಯಾಗಿ ಪರಿಶುದ್ಧವೂ ನಿರ್ಮಲವೂ ಉಜ್ವಲವೂ ಎಲ್ಲ ದೋಷಗಳಿಂದ ವಿಮುಕ್ತವೂ, ಮೃದುವೂ, ಕಾರ್ಯಯೋಗ್ಯವೂ, ಸ್ಥಿರವೂ ಅಚಲವೂ ಆಗಿ ಜೀವಿಗಳ ಸಾವು ಮತ್ತು ಮರುಹುಟ್ಟುಗಳೆಡೆಗೆ ಚಿತ್ತ ತಿರುಗಿತು. ಆ ವಿಶುದ್ಧವಾದ ಮಾನವಾತೀತ ದಿವ್ಯ ಕಣ್ಣುಗಳಿಂದ ಜೀವಿಗಳನ್ನು ನೋಡುತ್ತಾನೆ. ಸಾಯುತ್ತಿರುವ ಮತ್ತೆ ಹುಟ್ಟುತ್ತಿರುವ, ಅಧಮ-ಉತ್ತಮವಾದ, ಸುರುಪಿ-ಕುರುಪಿಯಾದ ಸದ್ಗತಿ-ದುರ್ಗತಿಗಳಿಗೆ ಹೋಗುತ್ತಿರುವ ತಮ್ಮ ಕಮರ್ಾನುಸಾರವಾಗಿರುವ ಜೀವಿಗಳನ್ನು ಅರಿಯುತ್ತಾನೆ. ಅವನ ಈ ಬಗೆಯ ಸಮಾಹಿತವಾದ ಚಿತ್ತವು ಈ ರೀತಿಯಾಗಿ ಪರಿಶುದ್ಧವೂ, ಉಜ್ವಲವೂ, ಎಲ್ಲ ದೋಷಗಳಿಂದ ವಿಮುಕ್ತವೂ, ಮೃದುವೂ, ಕಾರ್ಯ ಯೋಗ್ಯವೂ, ಸ್ಥಿರವೂ, ಅಚಲವೂ ಆಗಿ ಆಸವಗಳ ಕಡೆಗೆ ಚಿತ್ತ ತಿರುಗಿತು. ಅವನು ಇದೇ ದುಃಖ ಎಂದು ಯತಾರ್ಥವಾಗಿ ತಿಳಿದುಕೊಳ್ಳುತ್ತಾನೆ. ಇದೇ ದುಃಖದ ಹುಟ್ಟು ಎಂದು ಯಥಾರ್ಥವಾಗಿ ತಿಳಿದುಕೊಳ್ಳುತ್ತಾನೆ. ಇದೇ ದುಃಖದ ನಿರೋಧ ಎಂದು ಯಥಾರ್ಥವಾಗಿ ತಿಳಿದುಕೊಳ್ಳುತ್ತಾನೆ. ಇದೇ ದುಃಖದ ನಿರೋಧಕ್ಕೆ ಒಯ್ಯುವ ಮಾರ್ಗ ಎಂದು ಯಥಾರ್ಥವಾಗಿ ತಿಳಿಯುತ್ತಾನೆ. ಇವೇ ಆಸವಗಳು ಎಂದು ಯಥಾರ್ಥವಾಗಿ ತಿಳಿಯುತ್ತಾನೆ, ಇದೇ ಆಸವಗಳ ಹುಟ್ಟು ಎಂದು ಯಥಾರ್ಥವಾಗಿ ತಿಳಿಯುತ್ತಾನೆ. ಇದೇ ಆಸವಗಳ ನಿರೋಧ ಎಂದು ಯಥಾರ್ಥವಾಗಿ ತಿಳಿಯುತ್ತಾನೆ. ಇದೇ ಆಸವಗಳ ನಿರೋಧಕ್ಕೆ ಒಯ್ಯುವ ಮಾರ್ಗ ಎಂದು ಯಥಾರ್ಥವಾಗಿ ತಿಳಿಯುತ್ತಾನೆ. ಹೀಗೆ ಕಂಡಮೇಲೆ, ಹೀಗೆ ಅರಿತುಕೊಂಡ ಮೇಲೆ ಕಾಮಾಸವಗಳಿಂದಲೂ ಚಿತ್ತ ಬಿಡುಗಡೆ ಹೊಂದುತ್ತದೆ, ಭವಾಸವಗಳಿಂದಲೂ ಚಿತ್ತ ಬಿಡುಗಡೆ ಹೊಂದುತ್ತದೆ, ಅವಿದ್ಯಾಸವಗಳಿಂದಲೂ ಚಿತ್ತ ಬಿಡುಗಡೆ ಹೊಂದುತ್ತದೆ. ಬಿಡುಗಡೆ ಹೊಂದಿದಾಗ ಬಿಡುಗಡೆಯಾಯಿತು ಎಂದು ಅರಿವಿಗೆ ಬರುತ್ತದೆ. ಜನ್ಮವು ಕೊನೆಯಾಯಿತು, ಬ್ರಹ್ಮಚರ್ಯವು ಜೀವನವು ಜೀವಿಸಿಯಾಯಿತು, ಮಾಡುವುದೆಲ್ಲ ಮಾಡಿಯಾಯಿತು ಈ ತರಹದ (ಎಲ್ಲ ಬಗೆಯ ದುಃಖ) ಇನ್ನೇನು ಉಳಿದಿಲ್ಲ ಎಂದು ಯಥಾರ್ಥವಾಗಿ ತಿಳಿಯುತ್ತಾನೆ. ಗೃಹಸ್ಥರೇ, ಈ ವಿಧದ ವ್ಯಕ್ತಿಯು ತನ್ನನ್ನು ತಾನು ಪೀಡಿಸಿಕೊಳ್ಳದಂತಹ ಮನಸ್ಸುಳ್ಳವನಾಗಿ ತಾನು ತನಗೆ ಪೀಡಿಸಿಕೊಳ್ಳುವುದಿಲ್ಲ; ಬೇರೆಯವರನ್ನು ಪೀಡಿಸುವಂತಹ ಮನಸ್ಸಿಲ್ಲದವನಾಗಿ ಬೇರೆಯವರನ್ನು ಪೀಡಿಸದಿರುವ ಆಚರಣೆಯುಳ್ಳವನು ಎಂದು ಕರೆಯಲ್ಪಡುತ್ತಾನೆ. ಅದರಿಂದಾಗಿ ತನ್ನನ್ನು ಪೀಡಿಸಿಕೊಳ್ಳದಿರುವ ಮತ್ತು ಬೇರೆಯವರನ್ನು ಪೀಡಿಸದಿರುವಂತಹ ಮಾನಸಿಕ ದೃಷ್ಟಿಯನ್ನು ಹೊಂದಿರುವುದರಿಂದಾಗಿ ಅವನು ಇಲ್ಲಿಯೇ ಈಗಲೇ ಬೇರೆ ಇಲ್ಲದವನಾಗಿ, ತಣ್ಣಗಾಗಿಸಿದವನಾಗಿ ತನ್ನಲ್ಲಿ ತಾನು ಬ್ರಹ್ಮಾನುಭವದಲ್ಲಿ ನೆಲೆಗೊಂಡವನಂತೆ, ಅಂತಹ ಸುಖವನ್ನು ಅನುಭವಿಸುತ್ತಾನೆ.
16. ಹೀಗೆ ಹೇಳಿದ ಮೇಲೆ ಸಾಲಾದ ಬ್ರಾಹ್ಮಣ ಗೃಹಸ್ಥರು ಭಗವಾನರಿಗೆ ಈ ರೀತಿ ಹೇಳಿದರು- ಅದ್ಭುತವಾದದು, ಪೂಜ್ಯ ಗೌತಮರೇ, ಅದ್ಭುತವಾದುದು ಪೂಜ್ಯ ಗೌತಮರೇ! ಪೂಜ್ಯ ಗೌತಮರೇ, ಅದು ಹೇಗೆಂದರೆ, ವಿಪರೀತವಾಗಿರುವುದನ್ನು ಸರಿಪಡಿಸಿದಂತೆ, ಅಥವಾ ಮುಚ್ಚಿ ಹೋಗಿರುವುದನ್ನು ತೆಗೆದಿಟ್ಟಂತೆ, ಅಥವಾ ದಾರಿ ತಪ್ಪಿದವನಿಗೆ ದಾರಿ ತೋರಿಸುವಂತೆ, ಅಥವಾ ಕತ್ತಲಿನಲ್ಲಿ ಎಣ್ಣೆ ದೀಪವನ್ನು ಹಿಡಿದು- ಕಣ್ಣಿರುವವರು ರೂಪಾಕಾರಗಳನ್ನು ನೋಡಲು ಸಾಧ್ಯವಾಗುವಂತೆ ಎಂದು. ಅದೇರೀತಿಯಲ್ಲಿ ಪೂಜ್ಯ ಗೌತಮರಿಂದ ಅನೇಕ ಪ್ರಕಾರವಾಗಿ ಈ ಧಮ್ಮವು ಪ್ರಕಾಶಿಸಲ್ಪಟ್ಟಿದೆ. ಆದ್ದರಿಂದ ನಾವು ಗೌತಮರಿಗೆ ಮತ್ತು ಧಮ್ಮಕ್ಕೆ ಮತ್ತು ಭಿಕ್ಷು ಸಂಘಕ್ಕೆ ಶರಣು ಹೋಗುತ್ತೇವೆ. ಪೂಜ್ಯ ಗೌತಮರು ನಮ್ಮನ್ನು ಉಪಾಸಕರು ಎಂದು ಇಂದಿನಿಂದ ನಮ್ಮ ಜೀವ ಇರುವವರೆಗೆ ಶರಣು ಹೋದವರು ಎಂದು ಪರಿಗಣಿಸಲಿ.
ಟಿಪ್ಪಣಿಗಳು [4]
English
Việt Ngữ