ಅಂಬಲಟ್ಠಿಕ ರಾಹುಲೋವಾದ ಸುತ್ತ
1. ಅಂಬಲಟ್ಠಿಕದಲ್ಲಿ ರಾಹುಲನಿಗೆ ಹೇಳಿದ ಸೂತ್ರ
ಹೀಗೆ ನಾನು ಕೇಳಿದ್ದೇನೆ. ಒಂದುಸಲ ಭಗವಾನರು ರಾಜಗೃಹದ ವೇಳುವನದಲ್ಲಿನ ಅಳಿಲುಧಾಮದಲ್ಲಿ ತಂಗಿದ್ದರು. ಆ ಸಮಯದಲ್ಲಿಯೇ ರಾಹುಲನು ಅಂಬಲಟ್ಠಿಕದಲ್ಲಿ ತಂಗಿದ್ದನು.77 ಆಗ ಸಾಯಂಕಾಲದ ಸಮಯದಲ್ಲಿ ಭಗವಾನರು ಧ್ಯಾನದಿಂದೆದ್ದು, ಎಲ್ಲಿ ಅಂಬಲಟ್ಠಿಕದಲ್ಲಿ ಆಯುಷ್ಮಂತ ರಾಹುಲನಿದ್ದನೊ ಅಲ್ಲಿಗೆ ಬಂದರು. ಭಗವಾನರು ಬರುತ್ತಿದ್ದುದ್ದನ್ನು ರಾಹುಲನು ದೂರದಿಂದ ನೋಡಿದನು. ನೋಡಿದ ನಂತರ ಆಸನವನ್ನು ಮತ್ತು ಕೈಕಾಲು ತೊಳೆಯಲು ನೀರನ್ನು ಸಿದ್ಧಪಡಿಸಿದನು. ಭಗವಾನರು ಸಿದ್ಧಪಡಿಸಿದ ಆಸನದ ಮೇಲೆ ಕುಳಿತುಕೊಂಡರು. ಕುಳಿತುಕೊಂಡು ಪಾದಗಳನ್ನು ತೊಳೆದುಕೊಂಡರು. ಆಯುಷ್ಮಂತ ರಾಹುಲನು ಭಗವಾನರಿಗೆ ವಂದಿಸಿ ಒಂದೆಡೆ ಕುಳಿತನು.
2. ಆಗ ಭಗವಾನರು ಉಳಿದ ಸ್ವಲ್ಪ ನೀರಿನ ಪಾತ್ರೆಯಲ್ಲಿ ಸುರಿದು ಆಯುಷ್ಮಂತ ರಾಹುಲನಿಗೆ ಹೀಗೆ ಹೇಳಿದರು- ರಾಹುಲ, ನೀನು ಈ ಉಳಿದ ಸ್ವಲ್ಪ ನೀರನ್ನು ನೀರಿನ ಪಾತ್ರೆಯಲ್ಲಿ ಸುರಿದುದ್ದನ್ನು ನೋಡಿದೆಯಾ? ಎಂದು.
ಹೌದು ಭಂತೆ.
ರಾಹುಲ, ಹಾಗೆಯೇ, ತಿಳಿದೂ ಸುಳ್ಳು ಹೇಳುವುದರಲ್ಲಿ ಯಾರಿಗೆ ನಾಚಿಕೆ ಇಲ್ಲವೊ ಅವರ ಶ್ರಮಣತ್ವವು ಸ್ವಲ್ಪವಾಗಿರುತ್ತದೆ ಎಂದು. ನಂತರ ಭಗವಾನರು ಉಳಿದ ಸ್ವಲ್ಪ ನೀರನ್ನು ಚೆಲ್ಲಿ ಆಯುಷ್ಮಂತ ರಾಹುಲನಿಗೆ ಹೀಗೆ ಹೇಳಿದರು- ರಾಹುಲ, ನೀನು ಈ ಉಳಿದ ಸ್ವಲ್ಪ ನೀರನ್ನು ಚೆಲ್ಲಿದ್ದನ್ನು ನೋಡಿದೆಯಾ? ಎಂದು.
ಹೌದು ಭಂತೆ.
ರಾಹುಲ, ಹಾಗೆಯೇ, ತಿಳಿದೂ ಸುಳ್ಳು ಹೇಳುವುದರಲ್ಲಿ ಯಾರಿಗೆ ನಾಚಿಕೆ ಇಲ್ಲವೊ ಅವರ ಶ್ರಮಣತ್ವವು ಚೆಲ್ಲಿಹೋಗುತ್ತದೆ ಎಂದು.
ನಂತರ ಭಗವಾನರು ಆ ನೀರಿನ ಪಾತ್ರೆಯನ್ನು ಬುಡಮೇಲೆ-ತಲೆ ಕೆಳಗೆ ಮಾಡಿ ಆಯುಷ್ಮಂತ ರಾಹುಲನಿಗೆ ಹೀಗೆ ಹೇಳಿದರು- ರಾಹುಲ, ನೀನು ಈ ನೀರಿನ ಪಾತ್ರೆಯನ್ನು ಬುಡ-ಮೇಲೆ ತಲೆ-ಕೆಳಗೆ ಮಾಡಿದ್ದನ್ನು ನೋಡಿದೆಯಾ? ಎಂದು.
ಹೌದು ಭಂತೇ.
ರಾಹುಲ, ಹಾಗೆಯೇ ತಿಳಿದೂ ಸುಳ್ಳು ಹೇಳುವುದರಲ್ಲಿ ಯಾರಿಗೆ ನಾಚಿಕೆ ಇಲ್ಲವೊ ಅವರ ಶ್ರಮಣತ್ವವು ಹೀಗೆ ಬುಡ-ಮೇಲೆ ತಲೆ-ಕೆಳಗೆ ಇರುತ್ತದೆ ಎಂದು.
ನಂತರ ಭಗವಾನರು ನೀರಿನ ಪಾತ್ರೆಯನ್ನು ಸರಿಯಾಗಿಟ್ಟು ಆಯುಷ್ಮಂತ ರಾಹುಲನಿಗೆ ಹೀಗೆ ಹೇಳಿದರು- ರಾಹುಲ, ನೀನು ಈ ಬರಿದಾದ ಮತ್ತು ಏನೂ ಇಲ್ಲದ ನೀರಿನ ಪಾತ್ರೆಯನ್ನು ನೋಡಿದೆಯಾ? ಎಂದು.
ಹೌದು ಭಂತೇ.
ರಾಹುಲ, ಹಾಗೆಯೇ ತಿಳಿದೂ ಸುಳ್ಳು ಹೇಳುವುದರಲ್ಲಿ ಯಾರಿಗೆ ನಾಚಿಕೆ ಇಲ್ಲವೋ ಅವರ ಶ್ರಮಣತ್ವವು ಹೀಗೆ ಬರಿದಾಗಿರುತ್ತದೆ ಮತ್ತು ಏನೂ ಇಲ್ಲದಂತಾಗಿರುತ್ತದೆ ಎಂದ. ಹೇಗೆಂದರೆ ರಾಹುಲ, ರಥಗಂಬದಂತೆ ಉದ್ದವಾದ ದಂತಗಳುಳ್ಳ, ಸಂಪೂರ್ಣವಾಗಿ ಬೆಳೆದ ಉತ್ಕೃಷ್ಟ ಜಾತಿಯ, ಸಂಗ್ರಾಮಕ್ಕೆ ಹೊಂದಿಕೊಂಡಿರುವ ರಾಜನ ಸಲಗವು ಯುದ್ಧಕ್ಕೆ ಹೋದಾಗ ಮುಂದಿನ ಕಾಲುಗಳನ್ನು ಉಪಯೋಗಿಸುತ್ತದೆ, ಹಿಂದಿನ ಕಾಲುಗಳನ್ನೂ ಉಪಯೋಗಿಸುತ್ತದೆ, ಮುಂದಿನ ದೇಹದ ಭಾಗವನ್ನು ಉಪಯೋಗಿಸುತ್ತದೆ, ಹಿಂದಿನ ದೇಹದ ಭಾಗವನ್ನೂ ಉಪಯೋಗಿಸುತ್ತದೆ, ತಲೆಯನ್ನು ಉಪಯೋಗಿಸುತ್ತದೆ, ಕಿವಿಗಳನ್ನು ಉಪಯೋಗಿಸುತ್ತದೆ, ದಂತಗಳನ್ನೂ ಉಪಯೋಗಿಸುತ್ತದೆ, ಬಾಲವನ್ನೂ ಉಪಯೋಗಿಸುತ್ತದೆ, ಆದರೆ ಸೊಂಡಿಲನ್ನು ಮಾತ್ರ ರಕ್ಷಿಸಿಕೊಳ್ಳುತ್ತದೆ. ಆಗ ಮಾವಟಿಗನಿಗೆ ಹೀಗೆನ್ನಿಸುತ್ತದೆ ರಥಗಂಬದಂತೆ ಉದ್ದವಾದ ದಂತಗಳುಳ್ಳ, ಸಂಪೂರ್ಣವಾಗಿ ಬೆಳೆದ, ಉತ್ಕೃಷ್ಟ ಜಾತಿಯ, ಸಂಗ್ರಾಮಕ್ಕೆ ಹೊಂದಿಕೊಂಡ ರಾಜನ ಈ ಸಲಗವು ಯುದ್ಧಕ್ಕೆ ಹೋದಾಗ ಮುಂದಿನ ಕಾಲುಗಳನ್ನು ಉಪಯೋಗಿಸುತ್ತದೆ, ಹಿಂದಿನ ಕಾಲುಗಳನ್ನೂ ಉಪಯೋಗಿಸುತ್ತದೆ... ಪುನರುಚ್ಚರಿಸಿ... ಬಾಲವನ್ನೂ ಉಪಯೋಗಿಸುತ್ತದೆ; ಆದರೆ ಸೊಂಡಿಲನ್ನು ಮಾತ್ರ ರಕ್ಷಿಸಿಕೊಳ್ಳುತ್ತದೆ. ಈ ಸಲಗವು ರಾಜನಿಗೆ ತನ್ನ ಜೀವವನ್ನು ಅರ್ಪಿಸಿಲ್ಲ ಎಂದು. ರಾಹುಲ, ಆದರೆ ರಥಗಂಬದಂತೆ ಉದ್ದವಾದ ದಂತಗಳುಳ್ಳ, ಸಂಪೂರ್ಣವಾಗಿ ಬೆಳೆದ, ಉತ್ಕೃಷ್ಟ ಜಾತಿಯ, ಸಂಗ್ರಾಮಕ್ಕೆ ಹೊಂದಿಕೊಂಡ ರಾಜನ ಸಲಗವು ಯುದ್ಧಕ್ಕೆ ಹೋದಾಗ ಮುಂದಿನ ಕಾಲುಗಳನ್ನು ಉಪಯೋಗಿಸುತ್ತದೆ, ಹಿಂದಿನ ಕಾಲುಗಳನ್ನೂ ಉಪಯೋಗಿಸುತ್ತದೆ- ಪುನರುಚ್ಚರಿಸಿ... ಬಾಲವನ್ನೂ ಉಪಯೋಗಿಸುತ್ತದೆ, ಸೊಂಡಿಲನ್ನೂ ಕೂಡ ಉಪಯೋಗಿಸುತ್ತದೆ, ಆಗ ಮಾವಟಿಗನಿಗೆ ಹೀಗೆನಿಸುತ್ತದೆ- ರಥಗಂಬದಂತೆ ಉದ್ದವಾದ ದಂತಗಳುಳ್ಳ, ಸಂಪೂರ್ಣವಾಗಿ ಬೆಳೆದ, ಉತ್ಕೃಷ್ಟ ಜಾತಿಯ, ಸಂಗ್ರಾಮಕ್ಕೆ ಹೊಂದಿಕೊಂಡ ರಾಜನ ಆನೆಸಲಗವು ಯುದ್ಧಕ್ಕೆ ಹೋದಾಗ ಮುಂದಿನ ಕಾಲುಗಳನ್ನು ಉಪಯೋಗಿಸುತ್ತದೆ, ಹಿಂದಿನ ಕಾಲುಗಳನ್ನೂ ಉಪಯೋಗಿಸುತ್ತದೆ, ಮುಂದಿನ ದೇಹದ ಭಾಗವನ್ನು ಉಪಯೋಗಿಸುತ್ತದೆ, ಹಿಂದಿನ ದೇಹದ ಭಾಗವನ್ನೂ ಉಪಯೋಗಿಸುತ್ತದೆ, ತಲೆಯನ್ನು ಉಪಯೋಗಿಸುತ್ತದೆ, ಕಿವಿಗಳನ್ನು ಉಪಯೋಗಿಸುತ್ತದೆ, ದಂತಗಳನ್ನೂ ಉಪಯೋಗಿಸುತ್ತದೆ, ಬಾಲವನ್ನೂ ಉಪಯೋಗಿಸುತ್ತದೆ, ಸೊಂಡಿಲನ್ನೂ ಕೂಡ ಉಪಯೋಗಿಸುತ್ತದೆ. ಈ ಸಲಗವು ರಾಜನಿಗೆ ತನ್ನ ಜೀವವನ್ನೇ ಅರ್ಪಿಸಿದೆ. ಇನ್ನು ರಾಜನ ಆನೆಸಲಗವು ಮಾಡದಿರುವುದು ಏನೂ ಉಳಿದಿಲ್ಲ ಎಂದು. ರಾಹುಲ, ಹಾಗೆಯೇ ತಿಳಿದೂ ಸುಳ್ಳು ಹೇಳುವುದರಲ್ಲಿ ಯಾರಿಗೆ ನಾಚಿಕೆ ಇಲ್ಲವೊ ಅವನು ಮಾಡದಿರುವ ಯಾವುದೇ ಪಾಪವು ಉಳಿದಿಲ್ಲ ಎಂದು ನಾನು ಹೇಳುತ್ತೇನೆ. ಆದ್ದರಿಂದ ರಾಹುಲ, ಹಾಸ್ಯದಲ್ಲಿಯೂ ಕೂಡ ನಾನು ಸುಳ್ಳನ್ನು ಹೇಳುವುದಿಲ್ಲ ಎಂದು-ಹೀಗೆ ರಾಹುಲ, ನೀನು ಕಲಿಯತಕ್ಕದ್ದು.
2. ಪರಿಶೀಲಿಸಿ ಕರ್ಮವನ್ನು ಮಾಡತಕ್ಕದ್ದು
3. ಇದನ್ನು ಹೇಗೆ ಯೋಚಿಸುವೆ, ರಾಹುಲ, ಕನ್ನಡಿಯ ಉದ್ದೇಶವೇನು ಎಂದು?
ಪ್ರತಿಬಿಂಬಿಸುವುದು ಅದರ ಉದ್ದೇಶವಾಗಿದೆ ಭಂತೆ ಎಂದು.
ರಾಹುಲ, ಹಾಗೆಯೇ ಪ್ರತಿಬಿಂಬಿಸಿ ಪರಿಶೀಲಿಸಿ ಶರೀರದಿಂದ ಕರ್ಮವನ್ನು ಮಾಡತಕ್ಕದ್ದು. ಪ್ರತಿಬಿಂಬಿಸಿ, ಪರಿಶೀಲಿಸಿ ಮಾತಿನಿಂದ ಕರ್ಮವನ್ನು ಮಾಡತಕ್ಕದ್ದು, ಪ್ರತಿಬಿಂಬಿಸಿ ಪರಿಶೀಲಿಸಿ ಮನಸ್ಸಿನಿಂದ ಕರ್ಮವನ್ನು ಮಾಡತಕ್ಕದ್ದು. ಯಾವಾಗ ನೀನು, ರಾಹುಲ, ಶರೀರದಿಂದ ಕರ್ಮವನ್ನು ಮಾಡುವ ಆಸೆಯುಳ್ಳವನಾಗುತ್ತಿಯೊ ಆಗ ನೀನು ಶರೀರದ ಕರ್ಮವನ್ನು ಪರಿಶೀಲಿಸಬೇಕು- ಶರೀರದಿಂದ ನಾನು ಯಾವ ಕರ್ಮವನ್ನು ಮಾಡುವ ಆಸೆಯುಳ್ಳವನಾಗಿರುವೆನೊ ಆ ಶರೀರದ ಕರ್ಮವು ನನ್ನ ವ್ಯಥೆಗೆ ನಡೆಸುವುದೆ, ಬೇರೆಯವರ ವ್ಯಥೆಗೆ ನಡೆಸುವುದೆ, ಇಬ್ಬರ ವ್ಯಥೆಗೂ ನಡೆಸುವುದೆ- ಈ ಶರೀರದ ಕರ್ಮವು ಅಕುಶಲವಾಗಿರುವುದೆ, ದುಃಖವನ್ನುಂಟುಮಾಡುವುದೆ, ದುಃಖ ಫಲವನ್ನು ತರುವುದೆ ಎಂದು. ಒಂದುವೇಳೆ ರಾಹುಲ, ನೀನು ಪರಿಶೀಲಿಸಿದಾಗ ಇದನ್ನು ತಿಳಿಯುತ್ತೀಯ- ಶರೀರದಿಂದ ನಾನು ಯಾವ ಕರ್ಮವನ್ನು ಮಾಡುವ ಆಸೆಯುಳ್ಳವನಾಗಿರುವೆನೊ ಆ ಶರೀರದ ಕರ್ಮವು ನನ್ನ ವ್ಯಥೆಗೆ ನಡೆಸುವುದು, ಬೇರೆಯವರ ವ್ಯಥೆಗೆ ನಡೆಸುವುದು, ಇಬ್ಬರ ವ್ಯಥೆಗೂ ನಡೆಸುವುದು- ಈ ಶರೀರದ ಕರ್ಮವು ಅಕುಶಲವಾಗಿರುವುದು, ದುಃಖವನ್ನುಂಟುಮಾಡುವುದು, ದುಃಖ ಫಲವನ್ನು ತರುವುದು. ರಾಹುಲ, ನೀನು ಈ ತರಹದ ಕರ್ಮವನ್ನು ಶರೀರದಿಂದ ಎಂದೂ ಮಾಡಲೇಬಾರದು. ಆದರೆ ರಾಹುಲ, ಒಂದುವೇಳೆ ನೀನು ಪರಿಶೀಲಿಸಿದಾಗ ಇದನ್ನು ತಿಳಿಯುತ್ತೀಯ- ಶರೀರದಿಂದ ನಾನು ಯಾವ ಕರ್ಮವನ್ನು ಮಾಡುವ ಆಸೆಯುಳ್ಳವನಾಗಿರುವೆನೊ ಆ ಶರೀರದ ಕರ್ಮವು ನನ್ನ ವ್ಯಥೆಗೆ ನಡೆಸುವುದಿಲ್ಲ, ಬೇರೆಯವರ ವ್ಯಥೆಗೆ ನಡೆಸುವುದುಇಲ್ಲ, ಇಬ್ಬರ ವ್ಯಥೆಗೂ ನಡೆಸುವುದಿಲ್ಲ- ಈ ಶರೀರದ ಕರ್ಮವು ಕುಶಲವಾಗಿರುವುದು, ಸುಖವನ್ನುಂಟುಮಾಡುವುದು, ಸುಖ ಫಲವನ್ನು ತರುವುದು ಎಂದು. ರಾಹುಲ, ನೀನು ಈ ತರಹದ ಕರ್ಮವನ್ನು ಶರೀರದಿಂದ ಮಾಡಬೇಕು.
ರಾಹುಲ, ನೀನು ಶರೀರದಿಂದ ಕರ್ಮವನ್ನು ಮಾಡುತ್ತಿರುವಾಗಲೂ ಆ ನಿನ್ನ ಶರೀರದ ಕರ್ಮವನ್ನು ಪರಿಶೀಲಿಸಬೇಕು. ಶರೀರದಿಂದ ನಾನು ಯಾವ ಕರ್ಮವನ್ನು ಮಾಡುತ್ತಿರುವೆನೊ, ಈ ಶರೀರದ ಕರ್ಮವು ನನ್ನ ವ್ಯಥೆಗೆ ನಡೆಸುತ್ತದೆಯೆ, ಬೇರೆಯವರ ವ್ಯಥೆಗೆ ನಡೆಸುತ್ತದೆಯೆ, ಇಬ್ಬರ ವ್ಯಥೆಗೂ ನಡೆಸುತ್ತದೆಯೆ- ಈ ಶರೀರದ ಕರ್ಮವು ಅಕುಶಲವಾಗಿದೆಯೆ, ದುಃಖವನ್ನುಂಟುಮಾಡುತ್ತದೆಯೆ, ದುಃಖ ಫಲವನ್ನು ತರುತ್ತದೆಯೆ ಎಂದು. ಒಂದುವೇಳೆ ರಾಹುಲ, ನೀನು ಪರಿಶೀಲಿಸಿದಾಗ ಇದನ್ನು ತಿಳಿಯುತ್ತೀಯ- ಶರಿರದಿಂದ ನಾನು ಯಾವ ಕರ್ಮವನ್ನು ಮಾಡುತ್ತಿರುವೆನೊ ಈ ಶರಿರದ ಕರ್ಮವು ನನ್ನ ವ್ಯಥೆಗೆ ನಡೆಸುತ್ತದೆ, ಬೇರೆಯವರ ವ್ಯಥೆಗೆ ನಡೆಸುತ್ತದೆ, ಇಬ್ಬರ ವ್ಯಥೆಗೂ ನಡೆಸುತ್ತದೆ- ಈ ಶರೀರದ ಕರ್ಮವು ಅಕುಶಲವಾಗಿದೆ, ದುಃಖವನ್ನುಂಟುಮಾಡುತ್ತದೆ, ದುಃಖ ಫಲವನ್ನು ತರುತ್ತದೆ. ರಾಹುಲ, ನೀನು ಈ ತರಹದ ಶರೀರದ ಕರ್ಮವನ್ನು ತಡೆಹಿಡಿಯಬೇಕು. ಆದರೆ ರಾಹುಲ, ಒಂದುವೇಳೆ, ನೀನು ಪರಿಶೀಲಿಸಿದಾಗ ಇದನ್ನು ತಿಳಿಯುತ್ತೀಯ- ಶರಿರದಿಂದ ನಾನು ಯಾವ ಕರ್ಮವನ್ನು ಮಾಡುತ್ತಿರುವೆನೊ ಈ ಶರೀರದ ಕರ್ಮವು ನನ್ನ ವ್ಯಥೆಗೆ ನಡೆಸುತ್ತಿಲ್ಲ, ಬೇರೆಯವರ ವ್ಯಥೆಗೆ ನಡೆಸುತ್ತಿಲ್ಲ, ಇಬ್ಬರ ವ್ಯಥೆಗೂ ನಡೆಸುತ್ತಿಲ್ಲ- ಈ ಶರೀರದ ಕರ್ಮವು ಕುಶಲವಾಗಿದೆ, ಸುಖವನ್ನುಂಟು ಮಾಡುತ್ತದೆ, ಸುಖ ಫಲವನ್ನು ತರುತ್ತದೆ. ರಾಹುಲ, ನೀನು ಈ ತರಹದ ಶರೀರದ ಕರ್ಮವನ್ನು ಮುಂದುವರಿಸಬೇಕು.
ರಾಹುಲ, ನೀನು ಶರೀರದಿಂದ ಕರ್ಮವನ್ನು ಮಾಡಿದ ಮೇಲೂ ಆ ನಿನ್ನ ಶರೀರದ ಕರ್ಮವನ್ನು ಪರಿಶೀಲಿಸಬೇಕು- ಶರೀರದಿಂದ ನಾನು ಯಾವ ಕರ್ಮವನ್ನು ಮಾಡಿದೆನೊ ಆ ಶರೀರದ ಕರ್ಮವು ನನ್ನ ವ್ಯಥೆಗೆ ನಡೆಸುತ್ತದೆಯೆ, ಬೇರೆಯವರ ವ್ಯಥೆಗೆ ನಡೆಸುತ್ತದೆಯೆ, ಇಬ್ಬರ ವ್ಯಥೆಗೂ ನಡೆಸುತ್ತದೆಯೆ- ಆ ಶರೀರದ ಕರ್ಮವು ಅಕುಶಲವಾಗಿತ್ತೆ, ದುಃಖವನ್ನುಂಟುಮಾಡುತ್ತದೆಯೆ, ದುಃಖಫಲವನ್ನು ತರುತ್ತದೆಯೆ ಎಂದು. ಒಂದುವೇಳೆ ರಾಹುಲ, ನೀನು ಪರಿಶೀಲಿಸಿದಾಗ ಇದನ್ನು ತಿಳಿಯುತ್ತೀಯ- ಶರೀರದಿಂದ ನಾನು ಯಾವ ಕರ್ಮವನ್ನು ಮಾಡಿದೆನೊ ಆ ಶರೀರದ ಕರ್ಮವು ನನ್ನ ವ್ಯಥೆಗೆ ನಡೆಸುತ್ತದೆ, ಬೇರೆಯವರ ವ್ಯಥೆಗೆ ನಡೆಸುತ್ತದೆ. ಇಬ್ಬರ ವ್ಯಥೆಗೂ ನಡೆಸುತ್ತದೆ, ಆ ಶರೀರದ ಕರ್ಮವು ಅಕುಶಲವಾಗಿತ್ತು, ದುಃಖವನ್ನುಂಟು ಮಾಡುತ್ತದೆ, ದುಃಖಫಲವನ್ನು ತರುತ್ತದೆ ಎಂದು. ರಾಹುಲ, ಈ ತರಹದ ಶರೀರದ ಕರ್ಮವನ್ನು ನೀನು ಗುರುವಿನಲ್ಲಿ ಅಥವಾ ಜ್ಞಾನಿಗಳಲ್ಲಿ ಅಥವಾ ಸಹ ಬ್ರಹ್ಮಚಾರಿಗಳಲ್ಲಿ ಹೇಳಿಕೊಳ್ಳಬೇಕು, ವಿವರಿಸಬೇಕು, ಬಹಿರಂಗಪಡಿಸಬೇಕು; ಹೇಳಿಕೊಂಡು ವಿವವರಿಸಿ ಬಹಿರಂಗಪಡಿಸಿ ಭವಿಷ್ಯದಲ್ಲಿ ಸಂಯಮವನ್ನು ಕೈಗೊಳ್ಳಬೇಕು. ಆದರೆ ರಾಹುಲ, ಒಂದುವೇಳೆ, ನೀನು ಪರಿಶೀಲಿಸಿದಾಗ ಇದನ್ನು ತಿಳಿಯುತ್ತೀಯ- ಶರೀರದಿಂದ ನಾನು ಯಾವ ಕರ್ಮವನ್ನು ಮಾಡಿದೆನೊ ಆ ಶರೀರದ ಕರ್ಮವು ನನ್ನ ವ್ಯಥೆಗೆ ನಡೆಸಲಿಲ್ಲ- ಆ ಶರೀರದ ಕರ್ಮವು ಕುಶಲವಾಗಿತ್ತು, ಸುಖವನ್ನುಂಟುಮಾಡುತ್ತದೆ, ಸುಖಫಲವನ್ನು ತರುತ್ತದೆ ಎಂದು. ರಾಹುಲ, ಅದರಿಂದ ನೀನು, ಕುಶಲ ಧಮ್ಮಗಳಲ್ಲಿ ಹಗಲುರಾತ್ರಿ ಕಲಿಯುತ್ತಿರುವವನ ಹಾಗೆ ಸಂತೋಷ ಮತ್ತು ಆನಂದದಿಂದ ಇರುತ್ತೀಯ.
4. ರಾಹುಲ, ಯಾವಾಗ ನೀನು ಮಾತಿನಿಂದ ಕರ್ಮವನ್ನು ಮಾಡುವ ಆಸೆಯುಳ್ಳವನಾಗುತ್ತೀಯೊ, ಆಗ ನೀನು ಆ ಮಾತಿನ ಕರ್ಮವನ್ನು ಪರಿಶೀಲಿಸಬೇಕು- ಮಾತಿನಿಂದ ನಾನು ಯಾವ ಕರ್ಮವನ್ನು ಮಾಡುವ ಆಸೆಯುಳ್ಳವನಾಗಿರುವೆನೊ, ಆ ಮಾತಿನ ಕರ್ಮವು ನನ್ನ ವ್ಯಥೆಗೆ ನಡೆಸುವುದೆ, ಬೇರೆಯವರ ವ್ಯಥೆಗೆ ನಡೆಸುವುದೆ, ಇಬ್ಬರ ವ್ಯಥೆಗೂ ನಡೆಸುವುದೆ- ಈ ಮಾತಿನ ಅಕುಶಲವಾಗಿರುವುದೆ, ದುಃಖವನ್ನುಂಟುಮಾಡುವುದೆ, ದುಃಖ ಫಲವನ್ನು ತರುವುದೆ ಎಂದು. ಒಂದುವೇಳೆ ರಾಹುಲ, ನೀನು ಪರಿಶೀಲಿಸಿದಾಗ ಇದನ್ನು ತಿಳಿಯುತ್ತೀಯ- ಮಾತಿನಿಂದ ನಾನು ಯಾವ ಕರ್ಮವನ್ನು ಮಾಡುವ ಆಸೆಯುಳ್ಳವನಾಗಿರುವೆನೊ ಆ ಮಾತಿನ ಕರ್ಮವು ನನ್ನ ವ್ಯಥೆಗೆ ನಡೆಸುವುದು, ಬೇರೆಯವರ ವ್ಯಥೆಗೆ ನಡೆಸುವುದು, ಇಬ್ಬರ ವ್ಯಥೆಗೂ ನಡೆಸುವುದು- ಈ ಮಾತಿನ ಕರ್ಮವು ಅಕುಶಲವಾಗಿರುವುದು, ದುಃಖವನ್ನುಂಟು ಮಾಡುವುದು, ದುಃಖ ಫಲವನ್ನು ತರುವುದು ಎಂದು. ರಾಹುಲ, ನೀನು ಈ ತರಹದ ಕರ್ಮವನ್ನು ಮಾತಿನಿಂದ ಎಂದೂ ಮಾಡಲೇಬಾರದು. ಆದರೆ ರಾಹುಲ, ಒಂದುವೇಳೆ ನೀನು ಪರಿಶೀಲಿಸಿದಾಗ ಇದನ್ನು ತಿಳಿಯುತ್ತೀಯ- ಮಾತಿನಿಂದ ನಾನು ಯಾವ ಕರ್ಮವನ್ನು ಮಾಡುವ ಆಸೆಯುಳ್ಳವನಾಗಿರುವೆನೊ ಆ ಮಾತಿನ ಕರ್ಮವು ನನ್ನ ವ್ಯಥೆಗೆ ನಡೆಸುವುದಿಲ್ಲ, ಬೇರೆಯವರ ವ್ಯಥೆಗೆ ನಡೆಸುವುದಿಲ್ಲ, ಇಬ್ಬರ ವ್ಯಥೆಗೂ ನಡೆಸುವುದಿಲ್ಲ- ಈ ಮಾತಿನ ಕರ್ಮವು ಕುಶಲವಾಗಿರುವುದು, ಸುಖವನ್ನುಂಟುಮಾಡುವುದು, ಸುಖ ಫಲವನ್ನು ತರುವುದು. ರಾಹುಲ, ನೀನು ಈ ತರಹದ ಕರ್ಮವನ್ನು ಮಾತಿನಿಂದ ಮಾಡಬೇಕು.
ರಾಹುಲ, ನೀನು ಮಾತಿನಿಂದ ಕರ್ಮವನ್ನು ಮಾಡುತ್ತಿರುವಾಗಲೂ ಆ ನಿನ್ನ ಮಾತಿನ ಕರ್ಮವನ್ನು ಪರಿಶೀಲಿಸಬೇಕು- ಮಾತಿನಿಂದ ನಾನು ಯಾವ ಕರ್ಮವನ್ನು ಮಾಡುತ್ತಿರುವೆನೊ ಈ ಮಾತಿನ ಕರ್ಮವು ನನ್ನ ವ್ಯಥೆಗೆ ನಡೆಸುತ್ತದೆಯೆ, ಬೇರೆಯವರ ವ್ಯಥೆಗೆ ನಡೆಸುತ್ತದೆಯೆ, ಇಬ್ಬರ ವ್ಯಥೆಗೂ ನಡೆಸುತ್ತದೆಯೆ. ಈ ಮಾತಿನ ಕರ್ಮವು ಅಕುಶಲವಾಗಿದೆಯೆ, ದುಃಖವನ್ನುಂಟುಮಾಡುತ್ತದೆಯೆ, ದುಃಖ ಫಲವನ್ನು ತರುತ್ತದೆಯೆ ಎಂದು? ಒಂದುವೇಳೆ ರಾಹುಲ, ನೀನು ಪರಿಶೀಲಿಸಿದಾಗ ಇದನ್ನು ತಿಳಿಯುತ್ತೀಯ- ಮಾತಿನಿಂದ ನಾನು ಯಾವ ಕರ್ಮವನ್ನು ಮಾಡುತ್ತಿರುವೆನೊ ಈ ಮಾತಿನ ಕರ್ಮವು ನನ್ನ ವ್ಯಥೆಗೆ ನಡೆಸುತ್ತದೆ, ಬೇರೆಯವರ ವ್ಯಥೆಗೆ ನಡೆಸುತ್ತದೆ, ಇಬ್ಬರ ವ್ಯಥೆಗೂ ನಡೆಸುತ್ತದೆ. ಈ ಮಾತಿನ ಕರ್ಮವು ಅಕುಶಲವಾಗಿದೆ, ದುಃಖನ್ನುಂಟುಮಾಡುತ್ತದೆ, ದುಃಖ ಫಲವನ್ನು ತರುತ್ತದೆ ಎಂದು. ರಾಹುಲ ನೀನು ಈ ತರಹದ ಮಾತಿನ ಕರ್ಮವನ್ನು ತಡೆಹಿಡಿಯಬೇಕು. ಆದರೆ ರಾಹುಲ, ಒಂದುವೇಳೆ ನೀನು ಪರಿಶೀಲಿಸಿದಾಗ ಇದನ್ನು ತಿಳಿಯುತ್ತೀಯ- ಮಾತಿನಿಂದ ನಾನು ಯಾವ ಕರ್ಮವನ್ನು ಮಾಡುತ್ತಿರುವೆನೊ ಈ ಮಾತಿನ ಕರ್ಮವು ನನ್ನ ವ್ಯಥೆಗೆ ನಡೆಸುತ್ತಿಲ್ಲ. ಬೇರೆಯವರ ವ್ಯಥೆಗೆ ನಡೆಸುತ್ತಿಲ್ಲ, ಇಬ್ಬರ ವ್ಯಥೆಗೂ ನಡೆಸುತ್ತಿಲ್ಲ. ಈ ಮಾತಿನ ಕರ್ಮವು ಕುಶಲವಾಗಿದೆ, ಸುಖವನ್ನುಂಟುಮಾಡುತ್ತದೆ, ಸುಖ ಫಲವನ್ನು ತರುತ್ತದೆ ಎಂದು. ರಾಹುಲ, ನೀನು ಈ ತರಹದ ಮಾತಿನ ಕರ್ಮವನ್ನು ಮುಂದುವರಿಸಬೇಕು.
ರಾಹುಲ, ನೀನು ಮಾತಿನಿಂದ ಕರ್ಮವನ್ನು ಮಾಡಿದ ಮೇಲೂ ಆ ನಿನ್ನ ಮಾತಿನ ಕರ್ಮವನ್ನು ಪರಿಶೀಲಿಸಬೇಕು- ಮಾತಿನಿಂದ ನಾನು ಯಾವ ಕರ್ಮವನ್ನು ಮಾಡಿದೆನೊ ಆ ಮಾತಿನ ಕರ್ಮವು ನನ್ನ ವ್ಯಥೆಗೆ ನಡೆಸುತ್ತದೆಯೆ, ಬೇರೆಯವರ ವ್ಯಥೆಗೆ ನಡೆಸುತ್ತದೆಯೆ, ಇಬ್ಬರ ವ್ಯಥೆಗೂ ನಡೆಸುತ್ತದೆಯ. ಆ ಮಾತಿನ ಕರ್ಮವು ಅಕುಶಲವಾಗಿತ್ತೆ, ದುಃಖವನ್ನುಂಟು ಮಾಡುತ್ತದೆಯೆ, ದುಃಖಫಲವನ್ನು ತರುತ್ತದೆಯೆ ಎಂದು. ಒಂದುವೇಳೆ ರಾಹುಲ, ನಿನು ಪರಿಶೀಲಿಸಿದಾಗ ಇದನ್ನು ತಿಳಿಯುತ್ತೀಯ- ಮಾತಿನಿಂದ ನಾನು ಯಾವ ಕರ್ಮವನ್ನು ಮಾಡಿದೆನೊ ಆ ಮಾತಿನ ಕರ್ಮವು ನನ್ನ ವ್ಯಥೆಗೆ ನಡೆಸುತ್ತದೆ, ಬೇರೆಯವರ ವ್ಯಥೆಗೆ ನಡೆಸುತ್ತದೆ, ಇಬ್ಬರ ವ್ಯಥೆಗೂ ನಡೆಸುತ್ತದೆ. ಆ ಮಾತಿನ ಕರ್ಮವು ಅಕುಶಲವಾಗಿತ್ತು, ದುಃಖವನ್ನುಂಟುಮಾಡುತ್ತದೆ, ದುಃಖಫಲವನ್ನು ತರುತ್ತದೆ ಎಂದು. ರಾಹುಲ, ಈ ತರಹದ ಮಾತಿನ ಕರ್ಮವನ್ನು ನೀನು ಗುರುವಿನಲ್ಲಿ ಅಥವಾ ಜ್ಞಾನಿಗಳಲ್ಲಿ ಅಥವಾ ಸಹಬ್ರಹ್ಮಚಾರಿಗಳಲ್ಲಿ ಹೇಳಿಕೊಳ್ಳಬೇಕು, ವಿವರಿಸಬೇಕು, ಬಹಿರಂಗಪಡಿಸಬೇಕು; ಹೇಳಿಕೊಂಡು, ವಿವರಿಸಿ, ಬಹಿರಂಗಪಡಿಸಿ ಭವಿಷ್ಯದಲ್ಲಿ ಸಂಯಮವನ್ನು ಕೈಗೊಳ್ಳಬೇಕು. ಆದರೆ ರಾಹುಲ, ಒಂದುವೇಳೆ ನೀನು ಪರಿಶೀಲಿಸಿದಾಗ ಇದನ್ನು ತಿಳಿಯುತ್ತೀಯ- ಮಾತಿನಿಂದ ನಾನು ಯಾವ ಕರ್ಮವನ್ನು ಮಾಡಿದೆನೊ ಆ ಮಾತಿನ ಕರ್ಮವು ನನ್ನ ವ್ಯಥೆಗೆ ನಡೆಸಲಿಲ್ಲ, ಬೇರೆಯವರ ವ್ಯಥೆಗೆ ನಡೆಸಲಿಲ್ಲ, ಇಬ್ಬರ ವ್ಯಥೆಗೂ ನಡೆಸಲಿಲ್ಲ- ಆ ಮಾತಿನ ಕರ್ಮವು ಕುಶಲವಾಗಿತ್ತು, ಸುಖವನ್ನುಂಟುಮಾಡುತ್ತದೆ, ಸುಖ ಫಲವನ್ನು ತರುತ್ತದೆ ಎಂದು. ರಾಹುಲ, ಅದರಿಂದ ನೀನು, ಕುಶಲ ಧಮ್ಮಗಳಲ್ಲಿ ಹಗಲುರಾತ್ರಿ ಕಲಿಯುತ್ತಿರುವವನ ಹಾಗೆ ಸಂತೋಷ ಮತ್ತು ಆನಂದದಿಂದ ಇರುತ್ತೀಯ.
5. ರಾಹುಲ, ಯಾವಾಗ ನೀನು ಮನಸ್ಸಿನ ಕರ್ಮವನ್ನು ಮಾಡುವ ಆಸೆಯುಳ್ಳವನಾಗುತ್ತೀಯೋ, ಆ ನಿನ್ನ ಮನಸ್ಸಿನ ಕರ್ಮವನ್ನು ಪರಿಶೀಲಿಸಬೇಕು- ಮನಸ್ಸಿನಿಂದ ನಾನು ಯಾವ ಕರ್ಮವನ್ನು ಮಾಡುತ್ತಿರುವೆನೊ ಈ ಮನಸ್ಸಿನ ಕರ್ಮವು ನನ್ನ ವ್ಯಥೆಗೆ ನಡೆಸುತ್ತದೆಯೆ, ಬೇರೆಯವರ ವ್ಯಥೆಗೆ ನಡೆಸುತ್ತದೆಯೆ, ಇಬ್ಬರ ವ್ಯಥೆಗೂ ನಡೆಸುತ್ತದೆಯೆ- ಈ ಮನಸ್ಸಿನ ಕರ್ಮವು ಅಕುಶಲವಾಗಿದೆಯೆ, ದುಃಖವನ್ನುಂಟುಮಾಡುತ್ತದೆಯೆ, ದುಃಖಫಲವನ್ನು ತರುತ್ತದೆಯೆ ಎಂದು. ಒಂದುವೇಳೆ ರಾಹುಲ, ನೀನು ಪರಿಶೀಲಿಸಿದಾಗ ಇದನ್ನು ತಿಳಿಯುತ್ತೀಯ- ಮನಸ್ಸಿನಿಂದ ನಾನು ಯಾವ ಕರ್ಮವನ್ನು ಮಾಡುತ್ತಿರುವೆನೊ ಈ ಮನಸ್ಸಿನ ಕರ್ಮವು ನನ್ನ ವ್ಯಥೆಗೆ ನಡೆಸುತ್ತದೆ, ಬೇರೆಯವರ ವ್ಯಥೆಗೆ ನಡೆಸುತ್ತದೆ, ಇಬ್ಬರ ವ್ಯಥೆಗೂ ನಡೆಸುತ್ತದೆ- ಈ ಮನಸ್ಸಿನ ಕರ್ಮವು ಅಕುಶಲವಾಗಿದೆ, ದುಃಖವನ್ನುಂಟುಮಾಡುತ್ತದೆ, ದುಃಖಫಲವನ್ನು ತರುತ್ತದೆ ಎಂದು. ರಾಹುಲ, ನೀನು ಈ ತರಹದ ಮನಸ್ಸಿನ ಕರ್ಮವನ್ನು ತಡೆಹಿಡಿಯಬೇಕು. ಆದರೆ, ರಾಹುಲ, ಒಂದುವೇಳೆ ನೀನು ಪರಿಶೀಲಿಸಿದಾಗ ಇದನ್ನು ತಿಳಿಯುತ್ತೀಯ- ಮನಸ್ಸಿನಿಂದ ನಾನು ಯಾವ ಯಾವ ಕರ್ಮವನ್ನು ಮಾಡುತ್ತಿರುವೆನೊ ಈ ಮನಸ್ಸಿನ ಕರ್ಮವು ನನ್ನ ವ್ಯಥೆಗೆ ನಡೆಸುತ್ತಿಲ್ಲ, ಬೇರೆಯವರ ವ್ಯಥೆಗೆ ನಡೆಸುತ್ತಿಲ್ಲ, ಇಬ್ಬರ ವ್ಯಥೆಗೂ ನಡೆಸುತ್ತಿಲ್ಲ- ಈ ಮನಸ್ಸಿನ ಕರ್ಮವು ಕುಶಲವಾಗಿದೆ, ಸುಖವನ್ನುಂಟುಮಾಡುತ್ತದೆ, ಸುಖ ಫಲವನ್ನು ತರುತ್ತದೆ ಎಂದು. ರಾಹುಲ, ನೀನು ಈ ತರಹದ ಕರ್ಮವನ್ನು ಮುಂದುವರೆಸಬೇಕು.
ರಾಹುಲ, ನೀನು ಮನಸ್ಸಿನಿಂದ ಕರ್ಮವನ್ನು ಮಾಡುತ್ತಿರುವಾಗಲೂ ಆ ನಿನ್ನ ಮನಸ್ಸಿನ ಕರ್ಮವನ್ನು ಪರಿಶೀಲಿಸಬೇಕು- ಮನಸ್ಸಿನಿಂದ ನಾನು ಯಾವ ಕರ್ಮವನ್ನು ಮಾಡುತ್ತಿರುವೆನೊ ಈ ಮನಸ್ಸಿನ ಕರ್ಮವು ನನ್ನ ವ್ಯಥೆಗೆ ನಡೆಸುತ್ತದೆಯೆ, ಬೇರೆಯವರ ವ್ಯಥೆಗೆ ನಡೆಸುತ್ತದೆಯೆ, ಇಬ್ಬರ ವ್ಯಥೆಗೂ ನಡೆಸುತ್ತದೆಯೆ- ಈ ಮನಸ್ಸಿನ ಕರ್ಮವು ಅಕುಶಲವಾಗಿದೆಯೆ, ದುಃಖವನ್ನುಂಟುಮಾಡುತ್ತದೆಯೆ, ದುಃಖ ಫಲವನ್ನು ತರುತ್ತದೆಯೆ ಎಂದು. ಒಂದುವೇಳೆ, ರಾಹುಲ, ನೀನು ಪರಿಶೀಲಿಸಿದಾಗ ಇದನ್ನು ತಿಳಿಯುತ್ತೀಯ- ಮನಸ್ಸಿನಿಂದ ನಾನು ಯಾವ ಕರ್ಮವನ್ನು ಮಾಡುತ್ತಿರುವೆನೊ ಈ ಮನಸ್ಸಿನ ಕರ್ಮವು ನನ್ನ ವ್ಯಥೆಗೆ ನಡೆಸುತ್ತದೆ. ಈ ಮನಸ್ಸಿನ ಕರ್ಮವು ಅಕುಶಲವಾಗಿದೆ, ದುಃಖವನ್ನುಂಟುಮಾಡುತ್ತದೆ. ದುಃಖ ಫಲವನ್ನು ತರುತ್ತದೆ ಎಂದು. ರಾಹುಲ, ನೀನು ಈ ತರಹದ ಮನಸ್ಸಿನ ಕರ್ಮವನ್ನು ತಡೆಹಿಡಿಯಬೇಕು. ಆದರೆ ರಾಹುಲ, ಒಂದುವೇಳೆ ನೀನು ಪರಿಶೀಲಿಸಿದಾಗ ಇದನ್ನು ತಿಳಿಯುತ್ತೀಯ- ಮನಸ್ಸಿನಿಂದ ನಾನು ಯಾವ ಕರ್ಮವನ್ನು ಮಾಡುತ್ತಿರುವೆನೊ ಈ ಮನಸ್ಸಿನ ಕರ್ಮವು ನನ್ನ ವ್ಯಥೆಗೆ ನಡೆಸುತ್ತಿಲ್ಲ, ಬೇರೆಯವರ ವ್ಯಥೆಗೆ ನಡೆಸುತ್ತಿಲ್ಲ, ಇಬ್ಬರ ವ್ಯಥೆಗೂ ನಡೆಸುತ್ತಿಲ್ಲ, ಈ ಮನಸ್ಸಿನ ಕರ್ಮವು ಕುಶಲವಾಗಿದೆ, ಸುಖವನ್ನುಂಟುಮಾಡುತ್ತದೆ, ಸುಖ ಫಲವನ್ನು ತರುತ್ತದೆ ಎಂದು. ರಾಹುಲ, ನೀನು ಈ ತರಹದ ಮನಸ್ಸಿನ ಕರ್ಮವನ್ನು ಮುಂದುವರಿಸಬೇಕು.
ರಾಹುಲ, ನೀನು ಮನಸ್ಸಿನಿಂದ ಕರ್ಮವನ್ನು ಮಾಡಿದ ಮೇಲೂ ಆ ನಿನ್ನ ಮನಸ್ಸಿನ ಕರ್ಮವನ್ನು ಪರಿಶೀಲಿಸಬೇಕು- ಮನಸ್ಸಿನಿಂದ ನಾನು ಯಾವ ಕರ್ಮವನ್ನು ಮಾಡಿದೆನೊ ಆ ಮನಸ್ಸಿನ ಕರ್ಮವು ನನ್ನ ವ್ಯಥೆಗೆ ನಡೆಸುತ್ತದೆಯೆ, ಬೇರೆಯವರ ವ್ಯಥೆಗೆ ನಡೆಸುತ್ತದೆಯೆ, ಇಬ್ಬರ ವ್ಯಥೆಗೂ ನಡೆಸುತ್ತದೆಯೆ. ಆ ಮನಸ್ಸಿನ ಕರ್ಮವು ಅಕುಶಲವಾಗಿತ್ತೆ, ದುಃಖವನ್ನುಂಟುಮಾಡುತ್ತದೆಯೆ, ದುಃಖಫಲವನ್ನು ತರುತ್ತದೆಯೆ ಎಂದು. ಒಂದುವೇಳೆ ರಾಹುಲ, ನೀನು ಪರಿಶೀಲಿಸಿದಾಗ ಇದನ್ನು ತಿಳಿಯುತ್ತೀಯ- ಮನಸ್ಸಿನಿಂದ ನಾನು ಯಾವ ಕರ್ಮವನ್ನು ಮಾಡಿದೆನೊ ಆ ಮನಸ್ಸಿನ ಕರ್ಮವು ನನ್ನ ವ್ಯಥೆಗೆ ನಡೆಸುತ್ತದೆ, ಬೇರೆಯವರ ವ್ಯಥೆಗೆ ನಡೆಸುತ್ತದೆ, ಇಬ್ಬರ ವ್ಯಥೆಗೂ ನಡೆಸುತ್ತದೆ. ಆ ಮನಸ್ಸಿನ ಕರ್ಮವು ಅಕುಶಲವಾಗಿತ್ತು, ದುಃಖವನ್ನುಂಟುಮಾಡುತ್ತದೆ, ದುಃಖಫಲವನ್ನು ತರುತ್ತದೆ ಎಂದು. ರಾಹುಲ, ಈ ತರಹದ ಮನಸ್ಸಿನ ಕರ್ಮವನ್ನು ನೀನು ತಿರಸ್ಕರಿಸಬೇಕು. (ಅದಕ್ಕಾಗಿ) ನಾಚಿಕೆಪಡಬೇಕು, ಜಿಗುಪ್ಸೆ ಹೊಂದಬೇಕು. ತಿರಸ್ಕರಿಸಿ, ನಾಚಿಕೆಪಟ್ಟು, ಜಿಗುಪ್ಸೆ ಹೊಂದಿ ಭವಿಷ್ಯದಲ್ಲಿ ಸಂಯಮವನ್ನು ಕೈಗೊಳ್ಳಬೇಕು. ಆದರೆ ರಾಹುಲ, ಒಂದುವೇಳೆ ನೀನು ಪರಿಶೀಲಿಸಿದಾಗ ಇದನ್ನು ತಿಳಿಯುತ್ತೀಯ- ಮನಸ್ಸಿನಿಂದ ನಾನು ಯಾವ ಕರ್ಮವನ್ನು ಮಾಡಿದೆನೊ ಆ ಮನಸ್ಸಿನ ಕರ್ಮವು ನನ್ನ ವ್ಯಥೆಗೆ ನಡೆಸಲಿಲ್ಲ, ಬೇರೆಯವರ ವ್ಯಥೆಗೆ ನಡೆಸಲಿಲ್ಲ, ಇಬ್ಬರ ವ್ಯಥೆಗೂ ನಡೆಸಲಿಲ್ಲ. ಆ ಮನಸ್ಸಿನ ಕರ್ಮವು ಕುಶಲವಾಗಿತ್ತು, ಸುಖವನ್ನುಂಟುಮಾಡುತ್ತದೆ, ಸುಖಫಲವನ್ನು ತರುತ್ತದೆ ಎಂದು. ರಾಹುಲ, ಅದರಿಂದ ನೀನು, ಹಗಲುರಾತ್ರಿ ಕಲಿಯುತ್ತಿರುವವನ ಹಾಗೆ ಸಂತೋಷ ಮತ್ತು ಆನಂದದಿಂದ ಇರುತ್ತೀಯ.
6. ರಾಹುಲ, ಯಾರೆಲ್ಲ ಭೂತಕಾಲದಲ್ಲಿ ಶ್ರಮಣರು ಅಥವಾ ಬ್ರಾಹ್ಮಣರು ಶಾರೀರಿಕ ಕರ್ಮವನ್ನು ಪರಿಶುದ್ಧಗೊಳಿಸಿದರೊ, ಮಾತಿನ ಕರ್ಮವನ್ನು ಪರಿಶುದ್ಧಗೊಳಿಸದರೊ, ಮನಸ್ಸಿನ ಕರ್ಮವನ್ನು ಪರಿಶುದ್ಧಗೊಳಿಸಿದರೋ ಅವರೆಲ್ಲಾ ಹೀಗೆಯೇ ಪ್ರತಿಬಿಂಬಿಸಿ ಪರಿಶೀಲಿಸಿ ಶಾರೀರಿಕ ಕರ್ಮವನ್ನು ಪರಿಶುದ್ಧಗೊಳಿಸಿದರು, ಪ್ರತಿಬಿಂಬಿಸಿ ಪರಿಶೀಲಿಸಿ ಮಾತಿನ ಕರ್ಮವನ್ನು ಪರಿಶುದ್ಧಗೊಳಿಸಿದರು, ಪ್ರತಿಬಿಂಬಿಸಿ ಪರಿಶೀಲಿಸಿ ಮನಸ್ಸಿನ ಕರ್ಮವನ್ನು ಪರಿಶುದ್ಧಗೊಳಿಸಿದರು. ರಾಹುಲ, ಯಾರೆಲ್ಲ ಭವಿಷ್ಯದಲ್ಲಿ ಶ್ರಮಣರು ಅಥವಾ ಬ್ರಾಹ್ಮಣರು ಕೂಡ ಶಾರೀರಿಕ ಕರ್ಮವನ್ನು ಪರಿಶುದ್ಧಗೊಳಿಸುವರೋ, ಮಾತಿನ ಕರ್ಮವನ್ನು ಪರಿಶುದ್ಧಗೊಳಿಸುವರೋ, ಮನಸ್ಸಿನ ಕರ್ಮವನ್ನು ಪರಿಶುದ್ಧಗೊಳಿಸುವರೊ, ಅವರೆಲ್ಲ ಹೀಗೆಯೇ ಪ್ರತಿಬಿಂಬಿಸಿ ಪರಿಶೀಲಿಸಿ ಶಾರೀರಿಕ ಕರ್ಮವನ್ನು ಪರಿಶುದ್ಧಗೊಳಿಸುವರು, ಪ್ರತಿಬಿಂಬಿಸಿ ಪರಿಶೀಲಿಸಿ ಮಾತಿನ ಕರ್ಮವನ್ನು ಪರಿಶುದ್ಧಗೊಳಿಸುವರು, ಪ್ರತಿಬಿಂಬಿಸಿ ಪರಿಶೀಲಿಸಿ ಮನಸ್ಸಿನ ಕರ್ಮವನ್ನು ಪರಿಶುದ್ಧಗೊಳಿಸುವರು. ರಾಹುಲ, ಯಾರೆಲ್ಲ ವರ್ತಮಾನದಲ್ಲಿ ಶ್ರಮಣರು ಅಥವಾ ಬ್ರಾಹ್ಮಣರು ಕೂಡ ಶಾರೀರಿಕ ಕರ್ಮವನ್ನು ಪರಿಶುದ್ಧಗೊಳಿಸುತ್ತಿರುವರೊ, ಮಾತಿನ ಕರ್ಮವನ್ನು ಪರಿಶುದ್ಧಗೊಳಿಸುತ್ತಿರುವರೋ, ಮನಸ್ಸಿನ ಕರ್ಮವನ್ನು ಪರಿಶುದ್ಧಗೊಳಿಸುತ್ತಿರುವರೋ, ಅವರೆಲ್ಲ ಹೀಗೆಯೇ ಪ್ರತಿಬಿಂಬಿಸಿ ಪರಿಶೀಲಿಸಿ ಶಾರೀರಿಕ ಕರ್ಮವನ್ನು ಪರಿಶುದ್ಧಗೊಳಿಸುತ್ತಾರೆ. ಪ್ರತಿಬಿಂಬಿಸಿ ಪರಿಶೀಲಿಸಿ ಮಾತಿನ ಕರ್ಮವನ್ನು ಪರಿಶುದ್ಧಗೊಳಿಸುತ್ತಾರೆ, ಪ್ರತಿಬಿಂಬಿಸಿ, ಪರಿಶೀಲಿಸಿ ಮನಸ್ಸಿನ ಕರ್ಮವನ್ನು ಪರಿಶುದ್ಧಗೊಳಿಸುತ್ತಾರೆ. ರಾಹುಲ, ಹಾಗೆಯೇ ಪ್ರತಿಬಿಂಬಿಸಿ ಪರಿಶೀಲಿಸಿ ಶಾರೀರಿಕ ಕರ್ಮವನ್ನು ಪರಿಶುದ್ಧಗೊಳಿಸುತ್ತೇನೆ, ಪ್ರತಿಬಿಂಬಿಸಿ ಪರಿಶೀಲಿಸಿ ಮಾತಿನ ಕರ್ಮವನ್ನು ಪರಿಶುದ್ಧಗೊಳಿಸುತ್ತೇನೆ, ಪ್ರತಿಬಿಂಬಿಸಿ ಪರಿಶೀಲಿಸಿ ಮನಸ್ಸಿನ ಕರ್ಮವನ್ನು ಪರಿಶುದ್ಧಗೊಳಿಸುತ್ತೇನೆ ಎಂದು ರಾಹುಲ, ಹೀಗೆ ನೀನು ಕಲಿಯತಕ್ಕದ್ದು ಎಂದು.
ಹೀಗೆ ಭಗವಾನರು ನುಡಿದರು. ಸ್ಫೂರ್ತಿಗೊಂಡ ಆಯುಷ್ಮಂತ ರಾಹುಲ ಭಗವಾನರ ಮಾತಿಗೆ ಆನಂದಗೊಂಡನು ಎಂದು.
ಟಿಪ್ಪಣಿಗಳು [4]
English
Việt Ngữ