ಊಟಿಸುತ್ತಿದೆ

ಅನುವಾದಗಳು [26]

ಭದ್ದಾಲಿ ಸುತ್ತ

ಭದ್ದಾಲಿ ಸುತ್ತ

1. ಒಂದುಬಾರಿ ಮಾತ್ರ ಆಹಾರ ಸೇವನೆ ಮಾಡುವಲ್ಲಿ ಭದ್ದಾಲಿಯ ನಿರುತ್ಸಾಹ

ಹೀಗೆ ನಾನು ಕೇಳಿದ್ದೇನೆ. ಒಂದುಸಲ ಭಗವಾನರು ಶ್ರಾವಸ್ತಿಯಲ್ಲಿ ಜೇತವನದ ಅನಾಥಪಿಂಡಿಕನ ವಿಹಾರದಲ್ಲಿ ತಂಗಿದ್ದರು. ಆಗ ಭಗವಾನರು ಭಿಕ್ಷುಗಳನ್ನು ಕರೆದರು- ಭಿಕ್ಷುಗಳೇ ಎಂದು. ಭದಂತರೇ ಎಂದು ಆ ಭಿಕ್ಷುಗಳು ಭಗವಾನರಿಗೆ ಉತ್ತರಿಸಿದರು. ಭಗವಾನರು ಹೀಗೆ ಹೇಳಿದರು- ಭಿಕ್ಷುಗಳೇ, ನಾನು ಒಂದುಬಾರಿ ಮಾತ್ರ ಆಹಾರವನ್ನು ಸೇವಿಸುತ್ತೇನೆ. ಭಿಕ್ಷುಗಳೇ, ನಾನು ಒಂದು ಬಾರಿ ಮಾತ್ರ ಆಹಾರವನ್ನು ಸೇವನೆ ಮಾಡುವುದರಿಂದಾಗಿ ಒಳ್ಳೆಯ ಆರೋಗ್ಯವನ್ನು ಹೊಂದಿದ್ದೇನೆ ಮತ್ತು ರೋಗವಿಲ್ಲದವನಾಗಿ, ಹಗುರತೆವುಳ್ಳವನಾಗಿ, ಬಲಶಾಲಿಯಾಗಿ ಮತ್ತು ಸುಖವಾಗಿ ಇದ್ದೇನೆ.91 ಭಿಕ್ಷುಗಳೇ ಬನ್ನಿ, ನೀವುಗಳೂ ಕೂಡ, ಒಂದು ಬಾರಿ ಮಾತ್ರ ಆಹಾರವನ್ನು ಸೇವಿಸುವವರಾಗಿ. ಭಿಕ್ಷುಗಳೇ, ನೀವುಗಳೂ ಕೂಡ ಒಂದು ಬಾರಿ ಮಾತ್ರ ಆಹಾರವನ್ನು ಸೇವನೆಮಾಡುವವರಾದಲ್ಲಿ ಒಳ್ಳೆಯ ಆರೋಗ್ಯವನ್ನು ಹೊಂದುವಿರಿ ಮತ್ತು ರೋಗವಿಲ್ಲದವರಾಗುವಿರಿ, ಹಗುರತೆವುಳ್ಳವರಾಗುವಿರಿ, ಬಲಶಾಲಿಯಾಗಿರುವಿರಿ ಮತ್ತು ಸುಖವಾಗಿ ಇರುವಿರಿ ಎಂದು ಹೀಗೆ ಹೇಳಿದ ಮೇಲೆ ಆಯುಷ್ಮಂತ ಭದ್ದಾಲಿಯು ಭಗವಾನರಿಗೆ ಹೀಗೆ ಹೇಳಿದನು- ಭಂತೆ, ನಾನು ಒಂದುಬಾರಿ ಮಾತ್ರ ಆಹಾರವನ್ನು ಸೇವನೆ ಮಾಡಲು ಸಾಧ್ಯವಾಗುವುದಿಲ್ಲ. ಭಂತೆ, ನಾನು ಒಂದುಬಾರಿ ಮಾತ್ರ ಆಹಾರವನ್ನು ಸೇವನೆಮಾಡುವ ಬಗ್ಗೆ ನನಗೆ ಸಂಶಯಗಳಿವೆ ಮತ್ತು ಅದು ನನ್ನಿಂದ ಸಾಧ್ಯವೇ ಎನ್ನುವ ಅಪನಂಬಿಕೆಯೂ ಇದೆ ಎಂದು.92

ಸರಿ ಹಾಗಾದರೆ ಭದ್ದಾಲಿ, ನೀನು ಎಲ್ಲಾದರೂ ಆಮಂತ್ರಿಸಲ್ಪಟ್ಟಾಗ ಅಲ್ಲಿ ಒಂದರ್ಧದಷ್ಟನ್ನು ಊಟಮಾಡಿ, ಇನ್ನೊಂದರ್ಧವನ್ನು ತೆಗೆದುಕೊಂಡು ಹೋಗಿ, ಅದನ್ನು ಊಟಮಾಡುವೆಯೇನು. ಭದ್ದಾಲಿ, ನೀನು ಹೀಗೆ ಒಂದು ಬಾರಿ ಆಹಾರ ಸೇವನೆ ಮಾಡುವುದರಿಂದ ಜೀವನ ನಡೆಸುವೆಯೇನು? ಎಂದು.

ಭಂತೆ, ಈ ರೀತಿಯಾಗಿಯೂ ಕೂಡ, ನಾನು ಆಹಾರವನ್ನು ಸೇವಿಸಲು ಸಾಧ್ಯವಾಗುವುದಿಲ್ಲ ಭಂತೆ. ನಾನು ಈ ರೀತಿಯಾಗಿ ಆಹಾರ ಸೇವನೆ ಮಾಡಿದರೂ ಸಹ, ನನಗೆ ಅದರ ಬಗ್ಗೆ ಸಂಶಯಗಳಿವೆ ಮತ್ತು ಅದು ನನ್ನಿಂದ ಸಾಧ್ಯವೇ ಎನ್ನುವ ಅಪನಂಬಿಕೆಯೂ ಇದೆ ಎಂದು.93

ಹೀಗಿರುವಲ್ಲಿ ಆಯುಷ್ಮಂತ ಭದ್ದಾಲಿಯು, ಭಗವಾನರಿಂದ ನಿಗದಿಪಡಿಸಲ್ಪಟ್ಟಂತಹ ನಿಯಮ ಪಾಲನೆಯನ್ನು ಮತ್ತು ಇಡೀ ಭಿಕ್ಷು ಸಮೂಹ ಆ ನಿಯಮ ಪಾಲನೆ ಮಾಡುತ್ತಿದ್ದರೂ ಸಹ,94 ಅದನ್ನು ಪಾಲಿಸಲು ತನ್ನಿಂದ ಆಗಲಾರದು ಎಂದು ತಿಳಿಸಿದ. ಆನಂತರ ಆಯುಷ್ಮಂತ ಭದ್ದಾಲಿಯು ಮೂರು ತಿಂಗಳುಗಳ ಕಾಲ ಭಗವಾನರ ಮುಖವನ್ನೇ ನೋಡಲಿಲ್ಲ. ಏಕೆಂದರೆ ಆತನು ಶಾಸ್ತರಿಂದ ನಿಯಮಿಸಲ್ಪಟ್ಟಂತಹ ಭಿಕ್ಷು ಶೀಲ ಶಿಕ್ಷಣಗಳನ್ನು ಪೂರ್ಣವಾಗಿ ಪಾಲಿಸಿದವನಾಗಿರಲಿಲ್ಲ.

2. ಆ ಒಂದು ಸಮಯದಲ್ಲಿ ಅನೇಕ ಜನ ಭಿಕ್ಷುಗಳು ಭಗವಾನರಿಗಾಗಿ ಚೀವರವನ್ನು (ಕಾಷಾಯವನ್ನು) ಸಿದ್ಧಪಡಿಸುತ್ತಿದ್ದರು- ಈ ಚೀವರ ತಯಾರು ಮಾಡುವ ಕಾರ್ಯ ಮುಗಿದ ಕೂಡಲೇ, ಭಗವಾನರು ಮೂರು ತಿಂಗಳುಗಳ ಕಾಲ ತಿರುಗಾಟ ನಡೆಸಲು ಪ್ರಾರಂಭಿಸುವರು ಎಂದು ಮಾತನಾಡಿಕೊಳ್ಳುತ್ತಿದ್ದರು. ಆಗ ಆಯುಷ್ಮಂತ ಭದ್ದಾಲಿಯು ಆ ಭಿಕ್ಷುಗಳಿದ್ದಲ್ಲಿಗೆ ಬಂದನು. ಹತ್ತಿರಕ್ಕೆ ಬಂದನಂತರ ಆ ಭಿಕ್ಷುಗಳಿಗೆ ವಂದಿಸಿ ಕುಶಲ ವಿಚಾರಿಸಿದನು. ಕುಶಲದ ಮಾತುಗಕತೆಗಳು ಮುಗಿದಾದ ನಂತರ ಒಂದೆಡೆ ಕುಳಿತನು. ಹೀಗೆ ಒಂದೆಡೆ ಕುಳಿತ ಆಯುಷ್ಮಂತ ಭದ್ದಾಲಿಗೆ ಆ ಭಿಕ್ಷುಗಳು ಈ ರೀತಿಯಾಗಿ ಹೇಳಿದರು- ಆಯುಷ್ಮಂತ ಭದ್ದಾಲಿ, ಈ ಚೀವರದ ಕೆಲಸ ಕಾರ್ಯಗಳು ಭಗವಾನರಿಗಾಗಿ ಸಿದ್ಧವಾಗುತ್ತಿವೆ. ಈ ಚೀವರ ತಯಾರು ಮಾಡುವ ಕಾರ್ಯ ಮುಗಿದಕೂಡಲೇ, ಭಗವಾನರು ಮೂರು ತಿಂಗಳುಗಳ ಕಾಲ ತಿರುಗಾಟ ನಡೆಸಲು ಪ್ರಾರಂಭಿಸುವರು. ಆದ್ದರಿಂದ ಆಯುಷ್ಮಂತ ಭದ್ದಾಲಿ, ಈ ಅವಕಾಶವನ್ನು ಮಾತುಗಳನ್ನು ಮನಸ್ಸಿನಲ್ಲಿಟ್ಟು ಸದುಪಯೋಗ ಮಾಡಿಕೋ; ಇಲ್ಲವಾದರೆ ಅನಂತರದಲ್ಲಿ ನಿನಗೆ ತುಂಬ ದುಃಖದಾಯಕವಾಗುವುದು ಎಂದು.

ಹಾಗೇ ಆಗಲಿ ಆಯುಷ್ಮಂತರುಗಳೇ ಎಂದು ಆಯುಷ್ಮಂತ ಭದ್ದಾಲಿಯು ಆ ಭಿಕ್ಷುಗಳಿಗೆ ಉತ್ತರ ಹೇಳಿ, ಭಗವಾನರು ಎಲ್ಲಿದ್ದರೋ ಅಲ್ಲಿಗೆ ಬಂದನು. ಹತ್ತಿರಕ್ಕೆ ಬಂದನಂತರ ಭಗವಾನರಿಗೆ ವಂದಿಸಿ ಒಂದೆಡೆ ಕುಳಿತನು. ಹೀಗೆ ಒಂದೆಡೆ ಕುಳಿತ ಆಯುಷ್ಮಂತ ಭದ್ದಾಲಿಯು ಭಗವಾನರಿಗೆ ಈ ರೀತಿಯಾಗಿ ಹೇಳಿದನು- ಭಂತೆ, ನನ್ನಿಂದ ಒಂದು ನಿಯಮೋಲ್ಲಂಘನೆ ನಡೆದಿದೆ. ಮೂರ್ಖನ ರೀತಿಯಲ್ಲಿ, ಮೂಡನ ರೀತಿಯಲ್ಲಿ, ಅಕುಸಲಿಯಾದವನ ರೀತಿಯಲ್ಲಿ, ಭಗವಾನರಿಂದ ನಿಗದಿಪಡಿಸಲ್ಪಟ್ಟಂತಹ ನಿಯಮಪಾಲನೆಯನ್ನು ಮತ್ತು ಇಡೀ ಭಿಕ್ಷು ಸಮೂಹ ಆ ನಿಯಮಪಾಲನೆ ಮಾಡುತ್ತಿದ್ದರೂ ಸಹ ಅದನ್ನು ಪಾಲಿಸಲು ನನ್ನಿಂದ ಆಗಲಾರದು ಎಂದು ತಿಳಿಸಿದೆ. ಭಂತೆ, ಭಗವಾನರು ಈ ನನ್ನಿಂದಾದ ನಿಯಮೋಲ್ಲಂಘನೆಯನ್ನು, ನಿಯಮೋಲ್ಲಂಘನೆ ಆಗಿದೆ ಎಂದು ಪರಿಗ್ರಹಿಸಬೇಕು ಇನ್ನುಮುಂದೆ ನಿಗ್ರಹಮಾಡಿಕೊಳ್ಳುವೆನು ಎಂದು.

3. ಭದ್ದಾಲಿ, ನಿಜಕ್ಕೂ ನಿನ್ನಿಂದ ನಿಯಮೋಲ್ಲಂಘನೆಯು ನಡೆದಿದೆ. ಮೂರ್ಖನ ರೀತಿಯಲ್ಲಿ, ಮೂಢನ ರೀತಿಯಲ್ಲಿ, ಅಕುಶಲಿಯಾದವನ ರೀತಿಯಲ್ಲಿ ಭಗವಾನರಿಂದ ನಿಗದಿಪಡಿಸಲ್ಪಟ್ಟಂತಹ ನಿಯಮಪಾಲನೆಯನ್ನು ಮತ್ತು ಇಡೀ ಭಿಕ್ಷು ಸಮೂಹ ಆ ನಿಯಮಪಾಲನೆ ಮಾಡುತ್ತಿದ್ದರೂ ಸಹ ಅದನ್ನು ಪಾಲಿಸಲು ನಿನ್ನಿಂದ ಆಗಲಾರದು ಎಂದು ತಿಳಿಸಿದೆ. ಭದ್ದಾಲಿ, ಹಾಗಿರುವ ಸಂದರ್ಭದಲ್ಲಿ ನೀನು ಈ ರೀತಿಯಾಗಿ ವಿಚಾರಮಾಡಿ ಅರಿತುಕೊಳ್ಳಲಿಲ್ಲ- ಭಗವಾನರು ಶ್ರಾವಸ್ತಿಯಲ್ಲಿ ವಾಸಮಾಡುತ್ತಿದ್ದಾರೆ, ಭಗವಾನರಿಗೆ ಹೀಗೆ, ಈ ನನ್ನ ವಿಚಾರವು ತಿಳಿದುಬರುತ್ತದೆ- ಭದ್ದಾಲಿ ಎಂಬ ಹೆಸರಿನ ಭಿಕ್ಷುವು ಗುರುಗಳಿಂದ ನಿಯಮಿಸಲ್ಪಟ್ಟಂತಹ ಭಿಕ್ಷುಶೀಲ ಶಿಕ್ಷಣವನ್ನು ಪೂರ್ಣವಾಗಿ ಪಾಲನೆ ಮಾಡುತ್ತಿಲ್ಲ ಎಂದು. ಭದ್ದಾಲಿ ಹಾಗಿರುವ ಸಂದರ್ಭದಲ್ಲಿ ನೀನು ಈ ಒಂದು ರೀತಿಯಿಂದಲೂ ವಿಚಾರಮಾಡಿ ಅರಿತುಕೊಳ್ಳಲಿಲ್ಲ. ಭದ್ದಾಲಿ, ಹಾಗಿರುವ ಸಂದರ್ಭದಲ್ಲಿ ನೀನು ಈ ರೀತಿಯಾಗಿ ವಿಚಾರಮಾಡಿ ಅರಿತುಕೊಳ್ಳಲಿಲ್ಲ- ಶ್ರಾವಸ್ತಿಯಲ್ಲಿ ವಾಸಕ್ಕೆಂದು ಬಂದಿರುವ ಅನೇಕಮಂದಿ ಭಿಕ್ಷುಗಳಿದಾರೆ, ಅವರುಗಳಿಗೆ ಕೂಡ ಹೀಗೆ ಈ ನನ್ನ ವಿಚಾರವು ತಿಳಿದುಬರುತ್ತದೆ- ಭದ್ದಾಲಿ ಎಂಬ ಹೆಸರಿನ ಭಿಕ್ಷುವು ಗುರುಗಳಿಂದ ನಿಯಮಿಸಲ್ಪಟ್ಟಂತಹ ಭಿಕ್ಷುಶೀಲ ಶಿಕ್ಷಣವನ್ನು ಪೂರ್ಣವಾಗಿ ಪಾಲನೆ ಮಾಡುತ್ತಿಲ್ಲ ಎಂದು. ಭದ್ದಾಲಿ, ಹಾಗಿರುವ ಸಂದರ್ಭದಲ್ಲಿ ನೀನು ಈ ಒಂದು ರೀತಿಯಿಂದಲೂ ವಿಚಾರಮಾಡಿ ಅರಿತುಕೊಳ್ಳಲಿಲ್ಲ. ಭದ್ದಾಲಿ, ಹಾಗಿರುವ ಸಂದರ್ಭದಲ್ಲಿ, ನೀನು ಈ ರೀತಿಯಾಗಿ ವಿಚಾರಮಾಡಿ ಅರಿತುಕೊಳ್ಳಲಿಲ್ಲ- ಶ್ರಾವಸ್ತಿಯಲ್ಲಿ ವಾಸಕ್ಕೆಂದು ಬಂದಿರುವ ಅನೇಕ ಮಂದಿ ಭಿಕ್ಷುಗಳಿದ್ದಾರೆ, ಅವರುಗಳಿಗೆ ಕೂಡ ಹೀಗೆ, ಈ ನನ್ನ ವಿಚಾರವು ತಿಳಿದುಬರುತ್ತದೆ- ಭದ್ದಾಲಿ ಎಂಬ ಹೆಸರಿನ ಭಿಕ್ಷುವು ಗುರುಗಳಿಂದ ನಿಯಮಿಸಲ್ಪಟ್ಟಂತಹ ಭಿಕ್ಷುಶೀಲ ಶಿಕ್ಷಣವನ್ನು ಪೂರ್ಣವಾಗಿ ಪಾಲನೆ ಮಾಡುತ್ತಿಲ್ಲ ಎಂದು. ಭದ್ದಾಲಿ ಹಾಗಿರುವ ಸಂದರ್ಭದಲ್ಲಿ, ನೀನು ಈ ಒಂದು ರೀತಿಯಿಂದಲೂ ವಿಚಾರಮಾಡಿ ಅರಿತುಕೊಳ್ಳಲಿಲ್ಲ. ಭದ್ದಾಲಿ, ಹಾಗಿರುವ ಸಂದರ್ಭದಲ್ಲಿ ನೀನು ಈ ರೀತಿಯಾಗಿ ವಿಚಾರಮಾಡಿ ಅರಿತುಕೊಳ್ಳಲಿಲ್ಲ- ಅನೇಕಮಂದಿ ಉಪಾಸಕರು (ಶ್ರಮಣರಲ್ಲದ, ಅನುಯಾಯಿಗಳಾದಂತಹ ಗಂಡಸರು) ಶ್ರಾವಸ್ತಿಯಲ್ಲಿ ವಾಸಮಾಡಿಕೊಂಡಿದ್ದಾರೆ. ಅವರುಗಳಿಗೆ ಕೂಡ ಹೀಗೆ ಈ ನನ್ನ ವಿಚಾರವು ತಿಳಿದುಬರುತ್ತದೆ- ಭದ್ದಾಲಿ ಎಂಬ ಹೆಸರಿನ ಭಿಕ್ಷುವು ಗುರುಗಳಿಂದ ನಿಯಮಿಸ್ಪಟ್ಟಂತಹ ಭಿಕ್ಷುಶೀಲ ಶಿಕ್ಷಣವನ್ನು ಪೂರ್ಣವಾಗಿ ಪಾಲನೆ ಮಾಡುತ್ತಿಲ್ಲ ಎಂದು. ಭದ್ದಾಲಿ ಹಾಗಿರುವ ಸಂದರ್ಭದಲ್ಲಿ ನೀನು ಈ ರೀತಿಯಾಗಿ ವಿಚಾರಮಾಡಿ ಅರಿತುಕೊಳ್ಳಲಿಲ್ಲ- ಅನೇಕ ಮಂದಿ ಉಪಾಸಿಕೆಯರು (ಶ್ರಮಣರಲ್ಲದ ಅನುಯಾಯಿಗಳಾದಂತಹ ಹೆಂಗಸರು) ಶ್ರಾವಸ್ತಿಯಲ್ಲಿ ವಾಸಮಾಡಿಕೊಂಡಿದ್ದಾರೆ, ಅವರುಗಳಿಗೆ ಕೂಡ ಹೀಗೆ ಈ ನನ್ನ ವಿಚಾರವು ತಿಳಿದುಬರುತ್ತದೆ- ಭದ್ದಾಲಿ ಎಂಬ ಹೆಸರಿನ ಭಿಕ್ಷುವು, ಗುರುಗಳಿಂದ ನಿಯಮಿಸಲ್ಪಟ್ಟಂತಹ ಭಿಕ್ಷುಶೀಲ ಶಿಕ್ಷಣವನ್ನು ಪೂರ್ಣವಾಗಿ ಪಾಲನೆ ಮಾಡುತ್ತಿಲ್ಲ ಎಂದು. ಭದ್ದಾಲಿ ಹಾಗಿರುವ ಸಂದರ್ಭದಲ್ಲಿ ನೀನು ಈ ರೀತಿಯಾಗಿ ವಿಚಾರ ಮಾಡಿ ಅರಿತುಕೊಳ್ಳಲಿಲ್ಲ- ಅನೇಕ ಮಂದಿ ನಾನಾ ಮತಗಳಿಗೆ ಹೊಂದಿಕೊಂಡಂತಹ ಶ್ರಮಣರು, ಬ್ರಾಹ್ಮಣರು ಶ್ರಾವಸ್ತಿಯಲ್ಲಿ ಮಳೆಗಾಲ ವಾಸಕ್ಕೆಂದು ಬಂದು ಸೇರಿದ್ದಾರೆ, ಅವರುಗಳಿಗೆ ಕೂಡ, ಹೀಗೆ ಈ ನನ್ನ ವಿಚಾರವು ತಿಳಿದುಬರುತ್ತದೆ- ಭದ್ದಾಲಿ ಎಂಬ ಹೆಸರಿನ ಭಿಕ್ಷುವು, ಶ್ರಮಣ ಗೌತಮರ ಶಿಷ್ಯ ಮತ್ತು ಹಿರಿಯನೂ ಆದ ಆತನು ಗುರುಗಳಿಂದ ನಿಯಮಿಸಲ್ಪಟಂತಹ ಭಿಕ್ಷುಶೀಲ ಶಿಕ್ಷಣವನ್ನು ಪೂರ್ಣವಾಗಿ ಪಾಲನೆ ಮಾಡುತ್ತಿಲ್ಲ ಎಂದು ಭದ್ದಾಲಿ ಹಾಗಿರುವ ಸಂದರ್ಭದಲ್ಲಿ ನೀನು ಈ ಒಂದು ರೀತಿಯಿಂದಲೂ ವಿಚಾರಮಾಡಿ ಅರಿತುಕೊಳ್ಳಲಿಲ್ಲ ಎಂದು.

ಭಂತೆ, ನನ್ನಿಂದ ಒಂದು ನಿಯಮೋಲ್ಲಂಘನೆ ನಡೆದಿದೆ. ಮೂರ್ಖನ ರೀತಿಯಲ್ಲಿ, ಮೂಢನ ರೀತಿಯಲ್ಲಿ, ಅಕುಶಲಿಯಾದವನ ರೀತಿಯಲ್ಲಿ. ಭಗವಾನರಿಂದ ನಿಗದಿಪಡಿಸಲ್ಪಟ್ಟಂತಹ ನಿಯಮಪಾಲನೆಯನ್ನು ಮತ್ತು ಇಡೀ ಭಿಕ್ಷು ಸಮೂಹ ಆ ನಿಯಮಪಾಲನೆ ಮಾಡುತ್ತಿದ್ದರೂ ಸಹ ಅದನ್ನು ಪಾಲಿಸಲು ನನ್ನಿಂದ ಆಗಲಾರದು ಎಂದು ತಿಳಿಸಿದೆ. ಭಂತೆ, ಭಗವಾನರು ಈ ನನ್ನಿಂದಾದ ನಿಯಮೋಲ್ಲಂಘನೆಯನ್ನು ನಿಯಮೋಲ್ಲಂಘನೆ ಆಗಿರುವುದರಿಂದ, ನಿಯಮೋಲ್ಲಂಘನೆ ಆಗಿದೆ ಎಂದು ಪರಿಗ್ರಹಿಸಬಾರದು ಇನ್ನುಮುಂದೆ ನಿಗ್ರಹಮಾಡಿಕೊಳ್ಳುವೆನು ಎಂದು.

3. ಭದ್ದಾಲಿ, ನಿಜಕ್ಕೂ ನಿನ್ನಿಂದ ನಿಯಮೋಲ್ಲಂಘನೆಯು ನಡೆದಿದೆ. ಮೂರ್ಖನ ರೀತಿಯಲ್ಲಿ, ಮೂಢನ ರೀತಿಯಲ್ಲಿ, ಅಕುಶಲಿಯಾದವನ ರೀತಿಯಲ್ಲಿ ನನ್ನಿಂದ ನಿಗದಿಪಡಿಸಲ್ಪಟ್ಟಂತಹ ನಿಯಮ ಪಾಲನೆಯನ್ನು ಮತ್ತು ಇಡೀ ಭಿಕ್ಷು ಸಮೂಹ ಆ ನಿಯಮಪಾಲನೆಯನ್ನು ಮಾಡುತ್ತಿದ್ದರೂ ಸಹ ಅದನ್ನು ಪಾಲಿಸಲು ನನ್ನಿಂದ ಆಗಲರದು ಎಂದು ತಿಳಿಸಿದೆ. ಇದನ್ನು ಹೇಗೆ ತಿಳಿಯುತ್ತೀಯ, ಭದ್ದಾಲಿ, ಇಲ್ಲಿ ಒಬ್ಬ ಭಿಕ್ಷುವು ಎರಡೂ ರೀತಿಯ ವಿಭಾಗಗಳಿಂದಲೂ ಮುಕ್ತನಾದಂತಹವನು. ಆತನಿಗೆ ನಾನು ಹೀಗೆ ಹೇಳಬಹುದು- ಓ ಭಿಕ್ಷು ಬಾ ಇಲ್ಲಿ, ನೀನು ನನಗಾಗಿ ಈ ಉಸುಕಿನ ದಾರಿ ಮಾಡು ಎಂದು. ಆಗ ಆತನು ತಾನೇ ದಾರಿಯಾಗುವಂತೆ ಮಾಡುವನೋ ಅಥವಾ ದೇಹವನ್ನು ಬೇರೆಡೆಗೆ ತಿರುಗಿಸಿಕೊಂಡು ನಿಲ್ಲುವನೋ ಅಥವಾ ಇಲ್ಲ ಎಂದು ಹೇಳುವನೋ ಎಂದು.

ಅದು ಹಾಗಲ್ಲ ಭಂತೆ.

ಇದನ್ನು ಹೇಗೆ ಯೋಚಿಸುತ್ತೀಯಾ ಭದ್ದಾಲಿ, ಇಲ್ಲಿ ಒಬ್ಬ ಭಿಕ್ಷುವು ಪ್ರಜ್ಞೆಯಿಂದಾಗಿ ವಿಮುಕ್ತಿ ಪಡೆದಂತಹವನು, ಶರೀರದ ಮೂಲಕವಾಗಿ ಸಿದ್ಧಿ ಸಾಧಿಸಿದವನು, ದೃಷ್ಟಿಗಳನ್ನು ಗೆದ್ದಂತಹವನು, ಶ್ರದ್ಧೆಯಿಂದಾಗಿ ವಿಮುಕ್ತಿ ಪಡೆದಂತಹವನು, ಧರ್ಮಕ್ಕೆ ಅನುಸಾರವಾಗಿ ನಡೆಯುವಂತಹವನು ಶ್ರದ್ಧೆಗೆ ಅನುಸಾರವಾಗಿ ನಡೆಯುವಂತಹವನು, ಅಂತಹವನಿಗೆ ನಾನು ಹೀಗೆ ಹೇಳಬಹುದು- ಓ ಭಿಕ್ಷು ಬಾ ಇಲ್ಲ, ನೀನು ನನಗಾಗಿ ಈ ಉಸುಕಿನ ದಾರಿ ಮಾಡು ಎಂದು. ಆಗ ಆತನು ತಾನೇ ದಾರಿಯಾಗುವಂತೆ ಮಾಡುವನೋ ಅಥವಾ ದೇಹವನ್ನು ಬೇರೆಡೆಗೆ ತಿರುಗಿಸಿಕೊಂಡು ನಿಲ್ಲುವನೋ ಅಥವಾ ಇಲ್ಲ ಎಂದು ಹೇಳುವನೋ ಎಂದು.

ಅದು ಹಾಗಲ್ಲ ಭಂತೆ.

ಇದನ್ನು ಹೇಗೆ ಯೋಚಿಸುತ್ತೀಯಾ ಭದ್ದಾಲಿ, ಒಂದುವೇಳೆ, ಭದ್ದಾಲಿ ನೀನು ಅಂತಹ ಸಂದರ್ಭದಲ್ಲಿದ್ದಾಗ, ಎರಡೂರೀತಿಯ ವಿಭಾಗಗಳಿಂದಲೂ ಮುಕ್ತನಾದಂತಹವನು, ಅಥವಾ ಪ್ರಜ್ಞೆಯಿಂದಾಗಿ ವಿಮುಕ್ತಿ ಪಡೆದಂತಹವನು ಅಥವ ಶರೀರದ ಮೂಲಕವಾಗಿ ಸಿದ್ಧಿ ಪಡೆದವನು ಅಥವಾ ದೃಷ್ಟಿಗಳನ್ನು ಗೆದ್ದಂತಹವನು ಅಥವಾ ಶ್ರದ್ಧೆಯಿಂದಾಗಿ ವಿಮುಕ್ತಿ ಪಡೆದಂತಹವನು, ಅಥವಾ ಧರ್ಮಕ್ಕೆ ಅನುಸಾರವಾಗಿ ನಡೆಯುವಂತಹವನು, ಅಥವಾ ಶ್ರದ್ಧೆಗೆ ಅನುಸಾರವಾಗಿ ನಡೆಯುವಂತಹವನು ಎಂದು.

ಅದು ಹಾಗಲ್ಲ ಭಂತೆ.

ಭದ್ದಾಲಿ, ಅಂತಹ ಸಂದರ್ಭದಲ್ಲಿ ನೀನು ಕೇವಲ ಖಾಲಿಯಾದಂತಹವನು, ಶೂನ್ಯವಾಗುಳಿಯುವವನು, ಯಾವ ಮಟ್ಟಕ್ಕೂ ಏರದವನು ಎಂದಾಗುವುದಿಲ್ಲವೆ ಎಂದು.

ಹೌದು ಭಂತೆ. ಭಂತೆ, ನನ್ನಿಂದ ನಿಯಮೋಲ್ಲಂಘನೆ ನಡೆದಿದೆ. ಮೂರ್ಖನ ರೀತಿಯಲ್ಲಿ, ಮೂಢನ ರೀತಿಯಲ್ಲಿ, ಅಕುಶಲಿಯಾದವನ ರೀತಿಯಲ್ಲಿ. ಭಗವಾನರಿಂದ ನಿಗದಿಪಡಿಸಲ್ಪಟ್ಟಂತಹ ನಿಯಮಪಾಲನೆಯನ್ನು ಮತ್ತು ಇಡೀ ಭಿಕ್ಷು ಸಮೂಹ ಆ ನಿಯಮ ಪಾಲನೆಯನ್ನು ಮಾಡುತ್ತಿದ್ದರೂ ಸಹ ಅದನ್ನು ಪಾಲಿಸಲು ನನ್ನಿಂದ ಆಗಲಾರದು ಎಂದು ತಿಳಿಸಿದೆ. ಭಂತೆ, ಭಗವಾನವರು ನನ್ನಿಂದ ನಿಯಮೋಲ್ಲಂಘನೆ ಆಗಿರುವುದರಿಂದ, ನಿಯಮೋಲ್ಲಂಘನೆ ಆಗಿದೆ ಎಂದು ಪರಿಗ್ರಹಿಸಬೇಕು, ಇನ್ನುಮುಂದೆ ನಿಗ್ರಹ ಮಾಡಿಕೊಳ್ಳುವೆನು ಎಂದು.

ಭದ್ದಾಲಿ, ನಿಜಕ್ಕೂ ನಿನ್ನಿಂದ ನಿಯಮೋಲ್ಲಂಘನೆ ನಡೆದಿದೆ. ಮೂರ್ಖನ ರೀತಿಯಲ್ಲಿ, ಮೂಢನ ರೀತಿಯಲ್ಲಿ, ಅಕುಶಲಿಯಾದವನ ರೀತಿಯಲ್ಲಿ, ನನ್ನಿಂದ ನಿಗದಿಪಡಿಸಲ್ಪಟ್ಟಂತಹ ನಿಯಮ ಪಾಲನೆಯನ್ನು ಮತ್ತು ಇಡೀ ಭಿಕ್ಷು ಸಮೂಹ ಆ ನಿಯಮ ಪಾಲನೆಯನ್ನು ಮಾಡುತ್ತಿದ್ದರೂ ಸಹ ಅದನ್ನು ಪಾಲಿಸಲು ನನ್ನಿಂದ ಆಗಲಾರದು ಎಂದು ತಿಳಿಸಿದೆ. ಆದರೆ ಭದ್ದಾಲಿ, ನೀನು ನಿಯಮೋಲ್ಲಂಘನೆ ಆಗಿರುವುದನ್ನು ನಿಯಮೋಲ್ಲಂಘನೆ ಆಗಿದೆ ಎಂದು ಅರಿತು, ಧರ್ಮದ ರೀತಿಯಲ್ಲಿ ತಪ್ಪನ್ನು ಒಪ್ಪಿಕೊಳ್ಳುವುದರಿಂದ, ನಾನು ಅದನ್ನು ಪರಿಗ್ರಹಿಸುತ್ತೇನೆ. ಭದ್ದಾಲಿ, ಉತ್ಕೃಷ್ಟರಾದವರ ನೀತಿ-ನಿಯಮದಲ್ಲಿ ಯಾರು ನಿಯಮೋಲ್ಲಂಘನೆ ಆಗಿರುವುದನ್ನು, ನಿಯಮೋಲ್ಲಂಘನೆ ಆಗಿದೆ ಎಂಬುದನ್ನು ಅರಿತು, ತಪ್ಪನ್ನು ಒಪ್ಪಿಕೊಂಡು ಆನಂತರದಲ್ಲಿ ಆ ನಿಯಮಪಾಲನೆ ಮಾಡಿ, ನಿಗ್ರಹವನ್ನು ಸಾಧಿಸುವವನು, ನಿಜಕ್ಕೂ ಉದ್ದಾರವಾಗುವನು.

2. ಗುರುಗಳಿಂದ ನಿಗದಿಯಾದ ನಿಯಮಗಳನ್ನು ಪೂರ್ಣವಾಗಿ ಪಾಲಿಸುವವನು

4. ಭದ್ದಾಲಿ, ಇಲ್ಲಿ ಯಾರೋ ಒಬ್ಬ ಭಿಕ್ಷುವು ಗುರುಗಳಿಂದ ನಿಗದಿಪಡಿಸಲ್ಪಟ್ಟಂತಹ ನಿಯಮಪಾಲನೆಯನ್ನು ಪೂರ್ಣವಾಗಿ ಪಾಲನೆ ಮಾಡದವನಾಗುತ್ತಾನೆ. ಆತನಿಗೆ ಹೀಗೆ ಅನಿಸುತ್ತದೆ- ಒಂದುವೇಳೆ, ನಾನೊಂದು ಬಹುದೂರದಲ್ಲಿನ ಜಾಗದಲ್ಲಿ ತಂಗಿದರೆ- ಅಂದರೆ ಒಂದು ಕಾಡಿನಲ್ಲಿ, ಯಾವುದೋ ಒಂದು ಮರದ ಬುಡದಲ್ಲಿ, ಯಾವುದೋ ಒಂದು ಬೆಟ್ಟದಲ್ಲಿ, ಒಂದು ಕಣಿವೆಯಲ್ಲಿ, ಒಂದು ಪರ್ವತದ ಗವಿಯಲ್ಲಿ, ಒಂದು ಸ್ಮಶಾನದಲ್ಲಿ, ಒಂದು ತೋಪಿನಲ್ಲಿ, ಒಂದು ಬಯಲು ಪ್ರದೇಶದಲ್ಲಿ, ಒಂದು ಹುಲ್ಲಿನ ಜೋಪಡಿಯಲ್ಲಿ. ಆಗ ಇತರರಂತೆ, ನಾನೂ ಕೂಡ, ಶ್ರೇಷ್ಠ ಮನುಷ್ಯರಾದವರ ಧರ್ಮಸಿದ್ಧಿಯನ್ನು, ಉತ್ತಮರ ಉತ್ಕೃಷ್ಟವಾದ ಜ್ಞಾನ-ದರ್ಶನದ ವಿಶೇಷತೆಯನ್ನು ಸಾಕ್ಷಾತ್ಕರಿಸಿಕೊಳ್ಳಬಹುದು ಎಂದು. ಹಾಗಾಗಿ ಆತನು ಬಹುದೂರದಲ್ಲಿನ ಜಾಗದಲ್ಲಿ ತಂಗುವನು. ಅಂದರೆ, ಯಾವುದೋ ಒಂದು ಕಾಡಿನಲ್ಲಿ, ಯಾವುದೋ ಒಂದು ಮರದ ಬುಡದಲ್ಲಿ, ಯಾವುದೋ ಒಂದು ಬೆಟ್ಟದಲ್ಲಿ, ಒಂದು ಕಣಿವೆಯಲ್ಲಿ, ಒಂದು ಪರ್ವತದ ಗವಿಯಲ್ಲಿ, ಒಂದು ಸ್ಮಶಾನದಲ್ಲಿ, ಒಂದು ತೋಪಿನಲ್ಲಿ, ಒಂದು ಬಯಲು ಪ್ರದೇಶದಲ್ಲಿ, ಒಂದು ಹುಲ್ಲಿನ ಜೋಪಡಿಯಲ್ಲಿ. ಈ ರೀತಿಯಲ್ಲಿ ಆತನು ಏಕಾಂಗಿಯಾಗಿ ವಾಸಮಾಡುತ್ತಿರಬೇಕಾದರೆ, ಗುರುಗಳು ಅತನನ್ನು ದೋಷಿಯೆಂದು ಹಳಿಯುತ್ತಾರೆ. ಆತನನ್ನು ಅರಿತು ತಿಳಿದ, ಅವನ ಸಹ ಬ್ರಹ್ಮಚಾರಿಗಳೂ ಸಹ ಆತನನ್ನು ದೋಷಿಯೆಂದು ಹಳಿಯುತ್ತಾರೆ, ದೇವತೆಗಳೂ ಸಹ ಆತನನ್ನು ದೋಷಿಯೆಂದು ಹಳಿಯುತ್ತಾರೆ. ತನ್ನಿಂದಲೂ ತಾನೇ ದೋಷಿಯೆಂದು ಹಳಿಯಲ್ಪಡುವನು. ಹೀಗೆ ಆತನು ಗುರುಗಳಿಂದ ದೋಷಿಯೆಂದು ಹೀಯಾಳಿಸಿಕೊಂಡವನಾಗಿ, ಆತನನ್ನು ಅರಿತು ತಿಳಿದ ಅವನ ಸಹಬ್ರಹ್ಮಚಾರಿಗಳಿಂದಲೂ ದೋಷಿಯೆಂದು ಹೀಯಾಳಿಸಿಕೊಂಡವನಾಗಿ, ದೇವತೆಗಳಿಂದಲೂ ದೋಷಿಯೆಂದು ಹೀಯಾಳಿಸಿಕೊಂಡವನಾಗಿ, ಶ್ರೇಷ್ಠ ಮನುಷ್ಯರಾದವರ ಧರ್ಮಸಿದ್ಧಿಯನ್ನು, ಉತ್ತಮರ ಉತ್ಕೃಷ್ಟವಾದ ಜ್ಞಾನ-ದರ್ಶನದ ವಿಶೇಷತೆಯನ್ನು ಸಾಕ್ಷಾತ್ಕರಿಸಿಕೊಳ್ಳಲಾಗುವುದಿಲ್ಲ. ಇದಕ್ಕೆ ಏನು ಕಾರಣ. ಅದೇನೆಂದರೆ, ಭದ್ದಾಲಿ, ಆತನು ಗುರುಗಳಿಂದ ನಿಗದಿಪಡಿಸಲ್ಪಟ್ಟಂತಹ ನಿಯಮ ಪಾಲನೆಯನ್ನು ಪೂರ್ಣವಾಗಿ ಪಾಲನೆಯನ್ನು ಮಾಡದವನಾದ್ದರಿಂದ ಹಾಗಾಯಿತು.

5. ಭದ್ದಾಲಿ, ಆದರೆ ಇಲ್ಲಿ ಯಾರೋ ಒಬ್ಬ ಭಿಕ್ಷುವು ಗುರುಗಳಿಂದ ನಿಗದಿಪಡಿಸಲ್ಪಟ್ಟಂತಹ ನಿಯಮ ಪಾಲನೆಯನ್ನು ಪೂರ್ಣವಾಗಿ ಪಾಲನೆ ಮಾಡಿದಂತಹವನಾಗುತ್ತಾನೆ. ಆತನಿಗೆ ಹೀಗೆ ಅನಿಸುತ್ತದೆ- ಒಂದುವೇಳೆ, ನಾನೊಂದು ಬಹುದೂರದಲ್ಲಿನ ಜಾಗದಲ್ಲಿ ತಂಗಿದರೆ- ಅಂದರೆ ಒಂದು ಕಾಡಿನಲ್ಲಿ, ಯಾವುದೋ ಒಂದು ಮರದ ಬುಡದಲ್ಲಿ, ಯಾವುದೋ ಒಂದು ಬೆಟ್ಟದಲ್ಲಿ, ಒಂದು ಕಣಿವೆಯಲ್ಲಿ, ಒಂದು ಪರ್ವತದ ಗವಿಯಲ್ಲಿ, ಒಂದು ಸ್ಮಶಾನದಲ್ಲಿ, ಒಂದು ತೋಪಿನಲ್ಲಿ, ಒಂದು ಬಯಲು ಪ್ರದೇಶದಲ್ಲಿ, ಒಂದು ಹುಲ್ಲಿನ ಜೋಪಡಿಯಲ್ಲಿ. ಆಗ ಇತರರಂತೆ, ನಾನೂ ಕೂಡ, ಶ್ರೇಷ್ಠ ಮನುಷ್ಯರಾದವರ ಧರ್ಮಸಿದ್ಧಿಯನ್ನು, ಉತ್ತಮರ ಉತ್ಕೃಷ್ಟವಾದ ಜ್ಞಾನ-ದರ್ಶನದ ವಿಶೇಷತೆಯನ್ನು ಸಾಕ್ಷಾತ್ಕರಿಸಿಕೊಳ್ಳಬಹುದು ಎಂದು. ಹಾಗಾಗಿ ಆತನು ಬಹುದೂರದಲ್ಲಿನ ಜಾಗದಲ್ಲಿ ತಂಗುವನು. ಅಂದರೆ, ಯಾವುದೋ ಒಂದು ಕಾಡಿನಲ್ಲಿ, ಯಾವುದೋ ಒಂದು ಮರದ ಬುಡದಲ್ಲಿ, ಯಾವುದೋ ಒಂದು ಬೆಟ್ಟದಲ್ಲಿ, ಒಂದು ಕಣಿವೆಯಲ್ಲಿ, ಒಂದು ಪರ್ವತದ ಗವಿಯಲ್ಲಿ, ಒಂದು ಸ್ಮಶಾನದಲ್ಲಿ, ಒಂದು ತೋಪಿನಲ್ಲಿ, ಒಂದು ಬಯಲು ಪ್ರದೇಶದಲ್ಲಿ, ಒಂದು ಹುಲ್ಲಿನ ಜೋಪಡಿಯಲ್ಲಿ. ಈ ರೀತಿಯಲ್ಲಿ ಆತನು ಏಕಾಂಗಿಯಾಗಿ ವಾಸಮಾಡುತ್ತಿರಬೇಕಾದರೆ, ಗುರುಗಳು ಅತನನ್ನು ದೋಷಿಯೆಂದು ಹಳಿಯುವುದಿಲ್ಲ, ಆತನನ್ನು ಅರಿತು ತಿಳಿದ, ಅವನ ಸಹ ಬ್ರಹ್ಮಚಾರಿಗಳೂ ಸಹ ಆತನನ್ನು ದೋಷಿಯೆಂದು ಹಳಿಯುವುದಿಲ್ಲ, ದೇವತೆಗಳೂ ಸಹ ಆತನನ್ನು ದೋಷಿಯೆಂದು ಹಳಿಯುವುದಿಲ್ಲ, ತನ್ನಿಂದಲೂ ತಾನೇ ದೋಷಿಯೆಂದು ಹಳಿಯಲ್ಪಡುವುದಿಲ್ಲ. ಹೀಗೆ ಆತನು ಗುರುಗಳಿಂದ ದೋಷಿಯೆಂದು ಹೀಯಾಳಿಸಿಕೊಳ್ಳದವನಾಗಿ, ಆತನನ್ನು ಅರಿತು ತಿಳಿದ ಅವನ ಸಹಬ್ರಹ್ಮಚಾರಿಗಳಿಂದಲೂ ದೋಷಿಯೆಂದು ಹೀಯಾಳಿಸಿಕೊಳ್ಳದವನಾಗಿ, ದೇವತೆಗಳಿಂದಲೂ ದೋಷಿಯೆಂದು ಹೀಯಾಳಿಸಿಕೊಳ್ಳದವನಾಗಿ, ತನ್ನಿಂದಲೂ ತಾನು ದೋಷಿಯೆಂದು ಹೀಯಾಳಿಸಿಕೊಳ್ಳದವನಾಗಿ, ಶ್ರೇಷ್ಠ ಮನುಷ್ಯರದವರ ಧರ್ಮಸಿದ್ಧಿಯನ್ನು ಉತ್ತಮರ ಉತ್ಕೃಷ್ಟವಾದ ಜ್ಞಾನ-ದರ್ಶನದ ವಿಶೇಷತೆಯನ್ನು ಸಾಕ್ಷಾತ್ಕರಿಸಿಕೊಳ್ಳುವನು. ಆತನು ಕಾಮವನ್ನು ದಾಟಿದವನಾಗಿ, ಅಕುಶಲ ಧರ್ಮಗಳನ್ನು ದಾಟಿದವನಾಗಿ, ಸವಿತರ್ಕನಾಗಿ, ಸವಿಚಾರನಾಗಿ, ಏಕಾಂತತೆಯಿಂದಾಗಿ ಬಂದ ಆನಂದ ಮತ್ತು ಸುಖದಿಂದ ಕೂಡಿದ ಸಮಾಧಿಯ ಮೊದಲ ಹಂತವನ್ನು ಸಾಧಿಸಿಕೊಂಡು ನೆಲೆಗೊಳ್ಳುತ್ತಾನೆ. ಇದಕ್ಕೆ ಏನು ಕಾರಣ? ಅದೇನೆಂದರೆ ಭದ್ದಾಲಿ, ಆತನು ಗುರುಗಳಿಂದ ನಿಗದಿಪಡಿಸಲ್ಪಟ್ಟಂತಹ ನಿಯಮಪಲನೆಯನ್ನು ಪೂರ್ಣವಾಗಿ ಪಾಲನೆಯನ್ನು ಮಾಡಿದವನಾದ್ದರಿಂದ ಹಾಗಾಯಿತು.

6. ಅಲ್ಲದೆ ಮತ್ತೆ ಭದ್ದಾಲಿ, ಭಿಕ್ಷುವು, ವಿತರ್ಕ ಮತ್ತು ವಿಚಾರಗಳನ್ನು ಉಪಶಮನಗೊಳಿಸಿ, ಆಂತರಿಕ ಸ್ಥೈರ್ಯ ಮತ್ತು ಮನಸ್ಸಿನ ಏಕೋಭಾವದಿಂದ ವಿತರ್ಕಗಳಿಲ್ಲದ ವಿಚಾರಗಳಿಲ್ಲದ ಸಮಾಧಿಯಲ್ಲಿ ಹುಟ್ಟಿದ ಆನಂದ ಮತ್ತು ಸುಖದಿಂದ ಕೂಡಿದ, ಸಮಾಧಿಯ ಎರಡನೆಯ ಹಂತವನ್ನು ಸಾಧಿಸಿಕೊಂಡು ನೆಲೆಗೊಳ್ಳುತ್ತಾನೆ. ಇದಕ್ಕೆ ಏನು ಕಾರಣ? ಅದೇನೆಂದರೆ, ಭದ್ದಾಲಿ, ಆತನು ಗುರುಗಳಿಂದ ನಿಗದಿಪಡಿಸಲ್ಪಟ್ಟಂತಹ ನಿಯಮಪಾಲನೆಯನ್ನು ಪೂರ್ಣವಾಗಿ ಪಾಲನೆಯನ್ನು ಮಾಡಿದವನಾದ್ದರಿಂದ ಹಾಗಾಯಿತು.

ಅಲ್ಲದೆ ಮತ್ತೆ, ಭಿಕ್ಷುವು ಆನಂದದಿಂದ ವಿರಕ್ತನಾಗಿ, ಸಮಚಿತ್ತತೆಯಲ್ಲಿ ನೆಲೆಗೊಳ್ಳುತ್ತಾನೆ. ಜಾಗರೂಕತೆ ಮತ್ತು ಸಂಪೂರ್ಣ ಎಚ್ಚರಿಕೆಯನ್ನು ಹೊಂದಿ ಶರೀರದಲ್ಲೇ ಸುಖವನ್ನು ಅನುಭವಿಸುತ್ತಾನೆ. ಯಾವುದನ್ನು ಉತ್ತಮರಾದವರು ಹೀಗೆ ತಿಳಿಯಪಡಿಸುತ್ತಾರೆ- ಅಂದರೆ ಸಮಚಿತ್ತತೆ ಮತ್ತು ಜಾಗರೂಕತೆಯನ್ನು ಹೊಂದಿದವನೇ ಸುಖದಲ್ಲಿ ನೆಲೆಗೊಂಡವನು ಎಂದು. ಇಂತಹ ಸಮಾಧಿಯ ಮೂರನೇ ಹಂತವನ್ನು ಸಾಧಿಸಿಕೊಂಡು ನೆಲೆಗೊಳ್ಳುತ್ತಾನೆ. ಇದಕ್ಕೆ ಏನು ಕಾರಣ? ಅದೇನೆಂದರೆ, ಭದ್ದಾಲಿ, ಆತನು ಗುರುವಿನಿಂದ ನಿಗದಿಪಡಿಸಲ್ಪಟ್ಟಂತಹ ನಿಯಮಪಾಲನೆಯನ್ನು ಪೂಣವಾಗಿ ಪಾಲನೆಯನ್ನು ಮಾಡಿದವನಾದ್ದರಿಂದ ಹಾಗಾಯಿತು.

ಅಲ್ಲದೆ ಮತ್ತೆ ಭದ್ದಾಲಿ, ಭಿಕ್ಷುವು ಸುಖವನ್ನು ಬಿಟ್ಟವನಾಗಿ, ದುಃಖವನ್ನು ಬಿಟ್ಟವನಾಗಿ, ಹಿಂದಿನ ಎಲ್ಲಾ ಮಾನಸಿಕ ಸುಮ್ಮಾನ-ದುಮ್ಮಾನಗಳನ್ನು ಕಾಣದಂತಾಗಿಸಿ, ದುಃಖವೂ ಅಲ್ಲದ, ಸುಖವೂ ಅಲ್ಲದ ಉಪೆಕ್ಖಾದಿಂದ ಉಂಟಾದ ಪರಿಶುದ್ಧ ಎಚ್ಚರ ಸ್ಥಿತಿಯ ಸಮಾಧಿಯ ನಾಲ್ಕನೆಯ ಹಂತವನ್ನು ಸಾಧಿಸಿಕೊಂಡು ನೆಲೆಗೊಳ್ಳುತ್ತಾನೆ. ಇದಕ್ಕೆ ಏನು ಕಾರಣ? ಅದೇನೆಂದರೆ ಭದ್ದಾಲಿ, ಆತನು ಗುರುಗಳಿಂದ ನಿಗದಿಪಡಿಸಲ್ಪಟ್ಟಂತಹ ನಿಯಮಪಾಲನೆಯನ್ನು ಪೂರ್ಣವಾಗಿ ಪಾಲನೆಯನ್ನು ಮಾಡಿದವನಾದ್ದರಿಂದ ಹಾಗಾಯಿತು.

ಆತನು ಈ ರೀತಿಯ ಪ್ರಶಾಂತ, ಪರಿಶುದ್ಧ ಪ್ರಕಾಶಮಾನವಾದ ಕಳಂಕರಹಿತವಾದ, ಕಲ್ಮಶರಹಿತವಾದ ಮೃದುತರವಾದ, ಶ್ರಮಿಸುವ ಅಚಲವಾದ, ಮನಸ್ಸಿನಿಂದ ಹಿಂದಿನ ಜೀವಿತಗಳ ಜ್ಞಾಪಕ ಜ್ಞಾನಗಳ ಮನಸ್ಥಿತಿಯತ್ತ ದೃಷ್ಟಿಹರಿಸುತ್ತಾನೆ. ಅವನು ತನ್ನ ಅನೇಕ ವಿಧದ ಹಿಂದಿನ ಜೀವಿತಗಳನ್ನು ಜ್ಞಾಪಿಸಿಕೊಳ್ಳುತ್ತಾನೆ. ಅದೆಂದರೆ- ಒಂದು ಹುಟ್ಟು, ಎರಡು ಹುಟ್ಟುಗಳು... ಪುನರುಚ್ಚರಿಸಿ... ಈ ರೀತಿಯಾಗಿ ಸವಿವರವಾದ ಸಸ್ವರೂಪಗಳೊಂದಿಗೆ ಅನೇಕ ವಿಧದ ಹಿಂದಿನ ಜೀವಿತಗಳನ್ನು ಜ್ಞಾಪಿಸಿಕೊಳ್ಳುತ್ತಾನೆ. ಇದಕ್ಕೆ ಏನು ಕಾರಣ? ಅದೆಂದರೆ, ಭದ್ದಾಲಿ, ಆತನು ಗುರುಗಳಿಂದ ನಿಗದಿಪಡಿಸಲ್ಪಟ್ಟಂತಹ ನಿಯಮಪಾಲನೆಯನ್ನು ಪೂರ್ಣವಾಗಿ ಪಾಲನೆ ಮಾಡಿದವನಾದ್ದರಿಂದ ಹಾಗಾಯಿತು.

ಆತನು ಈ ರೀತಿಯ ಉಪಶಾಂತ ಪರಿಶುದ್ಧ ಪ್ರಕಾಶಮಾನವಾದ ಕಳಂಕರಹಿತವಾದ ಕಲ್ಮಶರಹಿತವಾದ ಮೃದುತರವಾದ ಶ್ರಮಿಸುವ ಅಚಲವಾದ ಮನಸ್ಸಿನಿಂದ ಜೀವಿಗಳ ಮರಣ ಮತ್ತು ಮರುಹುಟ್ಟನ್ನು ಅರಿಯುವ ಜ್ಞಾನದ ಮನಸ್ಥಿತಿಯತ್ತ ದೃಷ್ಟಿಹರಿಸುತ್ತಾನೆ. ಆತನು ಮಾನವ ದೃಷ್ಟಿಯನ್ನು ಮೀರಿದ ವಿಶುದ್ಧವಾದ ದಿವ್ಯದೃಷ್ಟಿಯಿಂದ ಜೀವಿಗಳು ಮರಣವಾಗುವುದನ್ನು ಹುಟ್ಟಿಬರುವುದನ್ನು ಕೀಳಾಗುವ, ಮೇಲಾಗುವ, ಕುರೂಪದ, ಸುರೂಪದ, ಒಳ್ಳೆಯ ಸ್ಥಿತಿಯ ಕೆಟ್ಟ ಸ್ಥಿತಿಯ, ತಮ್ಮ ಕರ್ಮಗಳಿಗೆ ಅನುಸಾರವಾದ ಗತಿಗಳನ್ನು ಹೊಂದುವ ಜೀವಿಗಳನ್ನು ಕಾಣುತ್ತಾನೆ- ನಿಜಕ್ಕೂ ಈ ಮಹತ್ವವುಳ್ಳ ಜೀವಿಗಳು ತಮ್ಮ ಶರೀರದಿಂದಾಗುವ ಕೆಟ್ಟ ಆಚರಣೆಗಳಿಂದಾಗಿ ಅವುಗಳಿಂದ ಹಿಡಿತಗೊಂಡವರಾಗಿ... ಪುನರುಚ್ಚರಿಸಿ... ಕೆಳಗಿನ ಸ್ಥಿತಿಗಳಲ್ಲಿ, ನರಕದಲ್ಲಿ ಹುಟ್ಟುತ್ತವೆ; ನಿಜಕ್ಕೂ ಈ ಮಹತ್ವವುಳ್ಳ ಜೀವಿಗಳು ತಮ್ಮ ಶರೀರದಿಂದಾಗುವ ಒಳ್ಳೆಯ ಆಚರಣೆಗಳಿಂದಾಗಿ, ಅವುಗಳಿಂದ ಹಿಡಿತಗೊಂಡವಾಗಿ... ಪುನರುಚ್ಚರಿಸಿ... ಒಳ್ಳೆಯ ಸ್ಥಿತಿಗಳಲ್ಲಿ, ಸ್ವರ್ಗಲೋಕದಲ್ಲಿ ಹುಟ್ಟುತ್ತವೆ; ಹೀಗೆ ಆತನು ಮಾನವ ದೃಷ್ಟಿಯನ್ನು ಮೀರಿದ ವಿಶುದ್ಧವಾದ ದಿವ್ಯದೃಷ್ಟಿಯಿಂದ... ಪುನರುಚ್ಚರಿಸಿ... ತಮ್ಮ ಕರ್ಮಗಳಿಗೆ ಅನುಸಾರವಾದ ಗತಿಗಳನ್ನು ಜೀವಿಗಳು ಹೊಂದುವುದನ್ನು ಕಾಣುತ್ತಾನೆ. ಇದಕ್ಕೆ ಏನು ಕಾರಣ? ಅದೆಂದರೆ, ಭದ್ದಾಲಿ, ಆತನು ಗುರುಗಳಿಂದ ನಿಗದಿಪಡಿಸಲ್ಪಟ್ಟಂತಹ ನಿಯಮಪಾಲನೆಯನ್ನು ಪೂರ್ಣವಾಗಿ ಪಾಲನೆ ಮಾಡಿದವನಾದ್ದರಿಂದ ಹಾಗಾಯಿತು.

ಆತನು ಈ ರೀತಿಯ ಉಪಶಾಂತ, ಪರಿಶುದ್ಧ ಪ್ರಕಾಶಮಾನವಾದ ಕಳಂಕರಹಿತವಾದ ಕಲ್ಮಶರಹಿತವಾದ ಮೃದುತರವಾದ ಶ್ರಮಿಸುವ ಅಚಲವಾದ ಮನಸ್ಸಿನಿಂದ ಆಸವಗಳನ್ನು ಕ್ಷಯಿಸುವ ಜ್ಞಾನದ ಮನಸ್ಥಿತಿಯತ್ತ ದೃಷ್ಟಿಹರಿಸುತ್ತಾನೆ. ಅವನು ಇದು ದುಃಖ ಎಂದು ಯಥಾರ್ಥವಾಗಿ ತಿಳಿದುಕೊಳ್ಳುತ್ತಾನೆ. ಇದು ದುಃಖದ ಹುಟ್ಟು ಎಂದು ಯಥಾರ್ಥವಾಗಿ ತಿಳಿದುಕೊಳ್ಳುತ್ತಾನೆ. ಇದು ದುಃಖ ನಿರೋಧಕ್ಕೆ ಒಯ್ಯುವ ಮಾರ್ಗ ಎಂದು ಯಥಾರ್ಥವಾಗಿ ತಿಳಿದುಕೊಳ್ಳುತ್ತಾನೆ. ಇವು ಆಸವಗಳು ಎಂದು ಯಥಾರ್ಥವಾಗಿ ತಿಳಿದುಕೊಳ್ಳುತ್ತಾನೆ. ಇದು ಆಸವಗಳ ಹುಟ್ಟುಗಳು ಎಂದು ಯಥಾರ್ಥವಾಗಿ ತಿಳಿದುಕೊಳ್ಳುತ್ತಾನೆ. ಇದು ಆಸವಗಳ ನಿರೋಧ ಎಂದು ಯಥಾರ್ಥವಾಗಿ ತಿಳಿದುಕೊಳ್ಳುತ್ತಾನೆ. ಇದು ಆಸವಗಳ ನಿರೋಧಕ್ಕೆ ಒಯ್ಯುವ ಮಾರ್ಗ ಎಂದು ಯಥಾರ್ಥವಾಗಿ ತಿಳಿದುಕೊಳ್ಳುತ್ತಾನೆ. ಆತನು ಈ ರೀತಿಯಾಗಿ ತಿಳಿದುಕೊಂಡಿದ್ದರಿಂದಾಗಿ, ಈ ರೀತಿಯಾಗಿ ಅರಿತುಕೊಂಡಿದ್ದರಿಂದಾಗಿ, ಆತನ ಮನಸ್ಸು ಕಾಮಾಸವಗಳಿಂದ ವಿಮುಕ್ತಿ ಪಡೆಯುತ್ತದೆ. ಆತನ ಮನಸ್ಸು ಭವಾಸವಗಳಿಂದ ವಿಮುಕ್ತಿಪಡೆಯುತ್ತದೆ, ಆತನ ಮನಸ್ಸು ಅವಿದ್ಯಾಸವಗಳಿಂದ ವಿಮುಕ್ತಿ ಪಡೆಯುತ್ತದೆ. ವಿಮುಕ್ತನಾಗಿದ್ದೇನೆ ಎಂಬ ವಿಮುಕ್ತಿ ಜ್ಞಾನವು ಉಂಟಾಗುತ್ತದೆ. ಹುಟ್ಟುವಿಕೆಯನ್ನು ನಾಶಮಾಡಿದಂತಾಯಿತು, ಬ್ರಹ್ಮಚರ್ಯ ಜೀವನವನ್ನು ನಡೆಸಿದ್ದಾಯಿತು, ಮಾಡಬೇಕಾದುದ್ದನ್ನು ಮಾಡಿ ಮುಗಿಸಿಯಾಯಿತು, ಇಂಥದು ಉಳಿದಿದೆ, ಎಂಬುದು ಏನೂ ಇಲ್ಲ ಎಂದು ತಿಳಿಯುತ್ತಾನೆ. ಇದಕ್ಕೆ ಏನು ಕಾರಣ? ಅದೆಂದರೆ ಭದ್ದಾಲಿ, ಆತನು ಗುರುಗಳಿಮದ ನಿಗದಿಪಡಿಲ್ಪಟ್ಟಂತಹ ನಿಯಮಪಾಲನೆಯನ್ನು ಪೂರ್ಣವಾಗಿ ಪಾಲನೆ ಮಾಡಿದವನಾದ್ದರಿಂದಾಗಿ ಹಾಗಾಯಿತು.

3. ಹಲವಾರು ರೀತಿಯ ತಪ್ಪುಗಳನ್ನು ಮಾಡುವವನೂ ಮತ್ತು ಹಲವಾರು ರೀತಿಯ ತಪ್ಪುಗಳನ್ನು ಮಾಡದವನು

7. ಹೀಗೆ ಹೇಳಿದ ಮೇಲೆ ಭದ್ದಾಲಿಯು ಭಗವಾನರಿಗೆ ಹೀಗೆ ಹೇಳಿದನು- ಭಂತೆ, ಯಾವ ಕಾರಣಕ್ಕಾಗಿ, ಅಥವಾ ಯಾವ ವಿಚಾರಕ್ಕಾಗಿ ಇಲ್ಲಿನ ಯಾವನೊ ಒಬ್ಬ ಭಿಕ್ಷುವಿನ ಬಗ್ಗೆ ಮತ್ತೆ ಮತ್ತೆ ಈ ರೀತಿಯ ಕ್ರಮವನ್ನು ಕೈಗೊಳ್ಳಲಾಗುತ್ತಿದೆ? ಹಾಗಲ್ಲದೆ, ಭಂತೆ, ಯಾವ ಕಾರಣಕ್ಕಾಗಿ ಅಥವಾ ಯಾವ ವಿಚಾರಕ್ಕಾಗಿ ಇಲ್ಲಿನ ಯಾವನೊ ಒಬ್ಬ ಭಿಕ್ಷುವಿನ ಬಗ್ಗೆ ಮತ್ತೆ ಮತ್ತೆ ಈ ರೀತಿಯ ಕ್ರಮವನ್ನು ಕೈಗೊಳ್ಳುತ್ತಿಲ್ಲ ಎಂದು.

ಅದರ ಬಗ್ಗೆ ಹೇಳುವುದಾದರೆ, ಭದ್ದಾಲಿ, ಇಲ್ಲಿ ಯಾವನೋ ಒಬ್ಬ ಭಿಕ್ಷುವು ಸದಾಕಾಲವೂ ದೋಷಪೂರಕ ಕಾರ್ಯ ಮಾಡುವವನು ಮತ್ತು ಹಲವಾರು ರೀತಿಯ ತಪ್ಪುಗಳನ್ನು ಮಾಡುವವನೂ ಆಗಿರುವನು. ಆತನು ಭಿಕ್ಷುಗಳು ಏನಾದರೂ ಕೇಳಿದಾಗ, ತಾನು ಬೇರೊಂದನ್ನು ಕೇಳುವನು ಹಾಗೆ ಅವರ ಮಾತನ್ನು ಬದಿಗೆ ಸರಿಸುವನು, ಕೇಳಿದ್ದನ್ನು ಬಿಟ್ಟು ಉಳಿದದ್ದನ್ನೆಲ್ಲಾ ಹೇಳುತ್ತಾ ಹೋಗುವನು, ಆತನು ಕೋಪಗೊಳ್ಳುವನು, ಹಗೆ ಸಾಧಿಸುವನು ಮತ್ತು ಅಸಂತುಷ್ಟನು, ಆತನು ಒಳ್ಳೆಯ ರೀತಿಯಲ್ಲಿ ವರ್ತಿಸುವುದಿಲ್ಲ. ಆತನು ಸಂಯಮ ಹೊಂದಿದವನಾಗಿರುವುದಿಲ್ಲ, ಆತನು ತನ್ನ ನಡಾವಳಿಕೆಗಳನ್ನು ಸರಿಮಾಡಿಕೊಳ್ಳುವವನಾಗಿರುವುದಿಲ್ಲ, ನನ್ನ ಯಾವ ಕಾರ್ಯದಿಂದ ಭಿಕ್ಷು ಸಂಘಕ್ಕೆ ಸಂತೋಷವಾಗುತ್ತದೆ, ಅದನ್ನು ಮಾಡೋಣ ಅನ್ನುವವನಲ್ಲ. ಆದ್ದರಿಂದಾಗಿ, ಭದ್ದಾಲಿ, ಆ ಭಿಕ್ಷುಗಳಿಗೆ ಈ ರೀತಿಯಾಗಿ ಅನಿಸುತ್ತದೆ- ಈ ಆಯುಷ್ಮಂತನು, ಈ ಭಿಕ್ಷುವು ಸದಾಕಾಲವೂ ದೋಷಪೂರಕ ಕಾರ್ಯ ಮಾಡುವವನು, ಹಲವಾರು ರೀತಿಯ ತಪ್ಪುಗಳನ್ನು ಮಾಡುವವನೂ ಆಗಿರುವನು. ಈತನು ಭಿಕ್ಷುಗಳು ಏನಾದರೂ ಕೇಳಿದಾಗ, ತಾನು ಬೇರೊಂದನ್ನು ಕೇಳುವನು, ಹಾಗೆ ಅವರ ಮಾತನ್ನು ಬದಿಗೆ ಸರಿಸುವನು, ಕೇಳಿದನ್ನು ಬಿಟ್ಟು, ಉಳಿದದ್ದನ್ನೆಲ್ಲಾ ಹೇಳುತ್ತಾ ಹೋಗುವವನು, ಈತನು ಕೋಪಗೊಳ್ಳುವನು, ಹಗೆಸಾಧಿಸುವವನು ಮತ್ತು ಅಸಂತುಷ್ಟನು. ಈತನು ಒಳ್ಳೆಯ ರೀತಿಯಲ್ಲಿ ವರ್ತಿಸುವುದಿಲ್ಲ, ಸಂಯಮ ಹೊಂದಿದವನಾಗಿರುವುದಿಲ್ಲ, ತನ್ನ ನಡಾವಳಿಕೆಗಳನ್ನು ಸರಿಮಾಡಿಕೊಳ್ಳುವವನಾಗಿರುವುದಿಲ್ಲ. ನನ್ನ ಯಾವ ಕಾರ್ಯದಿಂದ ಭಿಕ್ಷು ಸಂಘಕ್ಕೆ ಸಂತೋಷವಾಗುತ್ತದೆ ಅದನ್ನು ಮಾಡೋಣ ಅನ್ನುವವನಲ್ಲ. ಈ ಭಿಕ್ಷುವನ್ನು ಪದೇ ಪದೇ ಪರೀಕ್ಷಿಸಿ, ಅದರಂತೆ ಆತನನ್ನು ವಿಮರ್ಶಿಸಬೇಕಾಗಿರುವುದರಿಂದ, ತಕ್ಷಣದ ಅಧಿಕಾರಯುತವಾದ ಕ್ರಮ ಸಾಧ್ಯವಿಲ್ಲದ್ದರಿಂದ ಆ ಆಯುಷ್ಮಂತರುಗಳು ನಿಧಾನಗತಿಯಲ್ಲಿ ಕಾರ್ಯ ಸಾಧಿಸುತ್ತಾರೆ. ಆದ್ದರಿಂದಾಗಿ, ಭದ್ದಾಲಿ, ಆ ಆಯುಷ್ಮಂತರುಗಳು ನಿಧಾನಗತಿಯಲ್ಲಿ ಪದೇ ಪದೇ ಪರೀಕ್ಷಿಸಿ ವಿಮರ್ಶಿಸಬೇಕಾಗಿರುವುದರಿಂದಾಗಿ ಆ ಭಿಕ್ಷುವಿನ ವಿಷಯದಲ್ಲಿ, ತಕ್ಷಣದ ಅಧಿಕಾರಯುತವಾದ ಕ್ರಮ ಸಾಧ್ಯವಾಗುವುದಿಲ್ಲ.

8. ಆದರೆ ಇಲ್ಲಿ ಭದ್ದಾಲಿ, ಯಾರೋ ಒಬ್ಬ ಭಿಕ್ಷುವು ಸದಾಕಾಲ ದೋಷಪೂರಿತ ಕಾರ್ಯ ಮಾಡುವವನು, ಹಲವಾರು ರೀತಿಯ ತಪ್ಪುಗಳನ್ನು ಮಾಡುವವನೂ ಆಗಿರುವನು. ಆತನನ್ನು ಭಿಕ್ಷುಗಳು ಏನಾದರೂ ಕೇಳಿದಾಗ, ತಾನು ಬೇರೊಂದನ್ನು ಕೇಳುವುದಿಲ್ಲ, ಹಾಗೆ ಅವರ ಮಾತನ್ನು ಬದಿಗೆ ಸರಿಸುವುದಿಲ್ಲ. ಕೇಳಿದ್ದನ್ನು ಬಿಟ್ಟು ಉಳಿದದ್ದನ್ನು ಹೇಳುವುದಿಲ್ಲ, ಆತನು ಕೋಪಗೊಳ್ಳುವುದಿಲ್ಲ, ಹಗೆ ಸಾಧಿಸುವುದಿಲ್ಲ ಮತ್ತು ಅಸಂತುಷ್ಟನಾಗುವುದಿಲ್ಲ, ಆತನು ಒಳ್ಳೆಯ ರೀತಿಯಲ್ಲಿ ವರ್ತಿಸುತ್ತಾನೆ, ಸಂಯಮ ಹೊಂದಿರುವವನು, ತನ್ನ ನಡಾವಳಿಕೆಗಳನ್ನು ಸರಿಪಡಿಸಿಕೊಳ್ಳುವಂತಹವನು, ನನ್ನ ಯಾವ ಕಾರ್ಯದಿಂದ ಭಿಕ್ಷು ಸಂಘಕ್ಕೆ ಸಂತೋಷ ಉಂಟಾಗುತ್ತದೆ, ಅದನ್ನು ಮಾಡೋಣ ಎನ್ನುವವನು. ಆದ್ದರಿಂದಾಗಿ, ಭದ್ದಾಲಿ, ಆ ಭಿಕ್ಷುಗಳಿಗೆ ಈ ರೀತಿಯಾಗಿ ಅನಿಸುತ್ತಿದೆ- ಈ ಆಯುಷ್ಮಂತನು, ಈ ಭಿಕ್ಷುವು ಸದಾಕಾಲ ದೋಷಪೂರಕ ಕಾರ್ಯಗಳನ್ನು ಮಾಡುವವನು, ಹಲವಾರು ರೀತಿಯ ತಪ್ಪುಗಳನ್ನು ಮಾಡುವವನೂ ಆಗಿರುವನು. ಈತನು ಭಿಕ್ಷುಗಳು ಏನಾದರೂ ಕೇಳಿದಾಗ ತಾನು ಬೇರೊಂದನ್ನು ಹೇಳುವವನಲ್ಲ, ಹಾಗೆ ಅವರ ಮಾತನ್ನು ಬದಿಗೆ ಸರಿಸುವವನಲ್ಲ, ಕೇಳಿದ್ದನ್ನು ಬಿಟ್ಟು ಉಳಿದಿದ್ದನ್ನು ಹೇಳುವವನಲ್ಲ. ಈತನು ಕೋಪಗೊಳ್ಳುವವನಲ್ಲ, ಹಗೆಸಾಧಿಸುವವನಲ್ಲ ಮತ್ತು ಅಸಂತುಷ್ಟನಾಗುವವನಲ್ಲ. ಈತನು ಒಳ್ಳೆಯ ರೀತಿಯಲ್ಲಿ ವರ್ತಿಸುತ್ತಾನೆ, ಸಂಯಮವನ್ನು ಹೊಂದಿರುವಂತಹವನು, ತನ್ನ ನಡಾವಳಿಕೆಗಳನ್ನು ಸರಿಪಡಿಸಿಕೊಳ್ಳುವಂತಹನು. ತನ್ನ ಯಾವ ಕಾರ್ಯದಿಂದ ಭಿಕ್ಷು ಸಂಘಕ್ಕೆ ಸಂತೋಷವಾಗುತ್ತದೆ. ಅದನ್ನು ಮಾಡೋಣ ಅನ್ನುವವನು. ಈ ಭಿಕ್ಷುವನ್ನು ಪದೇ ಪದೇ ಪರೀಕ್ಷಿಸಿ, ಅದರಂತೆ ಆತನನ್ನು ವಿಮರ್ಶಿಸಬೇಕಾಗಿರುವುದರಿಂದ ಮತ್ತು ತಕ್ಷಣದ ಅಧಿಕಾರಯುತವಾದ ಕ್ರಮ ಸಾಧ್ಯವಿರುವುದರಿಂದ, ಆ ಆಯುಷ್ಮಂತರುಗಳು ಬೇಗ ಬೇಗನೇ ಕಾರ್ಯ ಸಾಧಿಸುತ್ತಾರೆ. ಆದ್ದರಿಂದಾಗಿ, ಭದ್ದಾಲಿ, ಆ ಆಯುಷ್ಮಂತರುಗಳು ಬೇಗಬೇಗನೆ ಪದೇ ಪದೇ ಪರೀಕ್ಷಿಸಿ, ವಿಮಶರ್ೆ ಮಾಡುತ್ತಾರೆ. ಆ ಭಿಕ್ಷುವಿನ ವಿಷಯದಲ್ಲಿ ತಕ್ಷಣದ ಅಧಿಕಾರಯುತವಾದ ಕ್ರಮವು ಸಾಧ್ಯವಾಗುತ್ತದೆ.

9. ಇಲ್ಲಿ ಭದ್ದಾಲಿ, ಯಾರೋ ಒಬ್ಬ ಭಿಕ್ಷುವು ಆಗಾಗ ದೋಷಪೂರಕ ಕಾರ್ಯ ಮಾಡುವವನು ಮತ್ತು ಕೆಲವು ರೀತಿಯಲ್ಲಿ ತಪ್ಪುಗಳನ್ನು ಮಾಡುವವನೂ ಆತನು ಭಿಕ್ಷುಗಳು ಏನಾದರೂ ಕೇಳಿದಾಗ ತಾನು ಬೇರೊಂದನ್ನು ಹೇಳುವವನು, ಹಾಗೆ ಅವರ ಮಾತನ್ನು ಬದಿಗೆ ಸರಿಸುವವನು, ಕೇಳಿದ್ದನ್ನು ಬಿಟ್ಟು ಉಳಿದಿದ್ದನ್ನು ಹೇಳುವವನು, ಆತನು ಕೋಪಗೊಳ್ಳುವವನು, ಹಗೆ ಸಾಧಿಸುವವನು ಮತ್ತು ಅಸಂತುಷ್ಟನಾಗುವವನು ಆತನು ಒಳ್ಳೆಯ ರೀತಿಯಲ್ಲಿ ವರ್ತಿಸುವವನಲ್ಲ, ಸಂಯಮ ಹೊಂದಿದವನೂ ಅಲ್ಲ, ತನ್ನ ನಡಾವಳಿಕೆಗಳನ್ನು ಸರಿಪಡಿಸಿಕೊಳ್ಳುವಂತಹವನೂ ಅಲ್ಲ, ತನ್ನ ಯಾವ ಕಾರ್ಯದಿಂದ ಭಿಕ್ಷುಸಂಘಕ್ಕೆ ಸಂತೋಷವಾಗುತ್ತದೆ, ಅದನ್ನು ಮಾಡೋಣ ಅನ್ನುವವನಲ್ಲ. ಆದ್ದರಿಂದಾಗಿ, ಭದ್ದಾಲಿ, ಆ ಭಿಕ್ಷುಗಳಿಗೆ ಈ ರೀತಿಯಾಗಿ ಅನಿಸುತ್ತದೆ- ಈ ಆಯುಷ್ಮಂತನು ಈ ಭಿಕ್ಷುವು ಆಗಾಗ ದೋಷಪೂರಕ ಕಾರ್ಯಗಳನ್ನು ಮಾಡುವವನು, ಕೆಲವು ರೀತಿಯಲ್ಲಿ ತಪ್ಪುಗಳನ್ನು ಮಾಡುವವನೂ ಆಗಿರುವನು. ಈತನು ಭಿಕ್ಷುಗಳು ಏನಾದರೂ ಕೇಳಿದಾಗ ತಾನು ಬೇರೊಂದನ್ನು ಹೇಳುವವನು, ಹಾಗೆ ಅವರ ಮಾತನ್ನು ಬದಿಗೆ ಸರಿಸುವವನು. ಕೇಳಿದ್ದನ್ನು ಬಿಟ್ಟು, ಉಳಿದದ್ದನ್ನು ಹೇಳುವವನು, ಈತನು ಕೋಪಗೊಳ್ಳುವವನು, ಹಗೆಸಾಧಿಸುವವನು ಮತ್ತು ಅಸಂತುಷ್ಟಿಯಾಗುವವನು, ಈತನು ಒಳ್ಳೆಯ ರೀತಿಯಲ್ಲಿ ವರ್ತಿಸುವವನಲ್ಲ, ಸಂಯಮ ಹೊಂದಿದವನಲ್ಲ, ತನ್ನ ನಡಾವಳಿಕೆಗಳನ್ನು ಸರಿಪಡಿಸಿಕೊಳ್ಳುವಂತಹವನೂ ಅಲ್ಲ. ತನ್ನ ಯಾವ ಕಾರ್ಯದಿಂದ ಭಿಕ್ಷುಸಂಘಕ್ಕೆ ಸಂತೋಷವಾಗುತ್ತದೆ ಅದನ್ನು ಮಾಡೋಣ ಅನ್ನುವವನಲ್ಲ. ಆ ಅಯುಷ್ಮಂತರುಗಳಿಗೆ, ಈ ಭಿಕ್ಷುವಿನ ವಿಷಯದಲ್ಲಿ ಪದೇ ಪದೇ ಪರೀಕ್ಷಿಸಿ ವಿಮಶರ್ೆ ಮಾಡಬೇಕಾಗಿರುವುದರಿಂದ, ಅಧಿಕಾರಯುತವಾದ ಕ್ರಮವನ್ನು ತಕ್ಷಣ ಸಾಧಿಸಲಾಗುವುದಿಲ್ಲ ಎಂದು. ಆದ್ದರಿಂದಾಗಿ, ಭದ್ದಾಲಿ, ಆ ಭಿಕ್ಷುಗಳು, ಈ ಭಿಕ್ಷುವಿನ ವಿಷಯದಲ್ಲಿ ಪದೇ ಪದೇ ಪರೀಕ್ಷಿಸಿ ವಿಮಶರ್ೆ ಮಾಡಬೇಕಾಗಿರುವುದರಿಂದಾಗಿ, ಅಧಿಕಾರಯುತವಾದ ಕ್ರಮವನ್ನು ತಕ್ಷಣ ಸಾಧಿಸಲು ಸಾಧ್ಯವಾಗುವುದಿಲ್ಲ.

10. ಇಲ್ಲಿ ಭದ್ದಾಲಿ, ಯಾರೋ ಒಬ್ಬ ಭಿಕ್ಷುವು ಆಗಾಗ ದೋಷಪೂರಕವಾದ ಕಾರ್ಯಗಳನ್ನು ಮಾಡುವವನು, ಕೆಲವು ರೀತಿಯಲ್ಲಿ ತಪ್ಪುಗಳನ್ನು ಮಾಡುವವನೂ ಆಗಿರುವನು. ಆತನು ಭಿಕ್ಷುಗಳು ಏನಾದರೂ ಕೇಳಿದಾಗ ತಾನು ಬೇರೊಂದನ್ನು ಹೇಳುವುದಿಲ್ಲ. ಹಾಗೆ ಅವನ ಮಾತನ್ನು ಬದಿಗೆ ಸರಿಸುವುದಿಲ್ಲ, ಕೇಳಿದ್ದನ್ನು ಬಿಟ್ಟು ಉಳಿದದ್ದನ್ನು ಹೇಳುವುದಿಲ್ಲ, ಆತನು ಕೋಪಗೊಳ್ಳುವುದಿಲ್ಲ, ಹಗೆಸಾಧಿಸುವುದಿಲ್ಲ ಮತ್ತು ಅಸಂತುಷ್ಟನಲ್ಲ. ಆತನು ಒಳ್ಳೆಯ ರೀತಿಯಲ್ಲಿ ವರ್ತಿಸುವವನು, ಸಂಯಮಹೊಂದಿದವನು, ತನ್ನ ನಡಾವಳಿಕೆಗಳನ್ನು ಸರಿಪಡಿಸಿಕೊಳ್ಳುವಂತಹವನು. ತನ್ನ ಯಾವ ಕಾರ್ಯದಿಂದ ಭಿಕ್ಷು ಸಂಘಕ್ಕೆ ಸಂತೋಷವಾಗುತ್ತದೆ ಅದನ್ನು ಮಾಡೋಣ ಅನ್ನುವವನು. ಆದ್ದರಿಂದಾಗಿ ಭದ್ದಾಲಿ, ಆ ಭಿಕ್ಷುಗಳಿಗೆ ಈ ರೀತಿಯಾಗಿ ಅನಿಸುತ್ತದೆ- ಈ ಆಯುಷ್ಮಂತನು, ಈ ಭಿಕ್ಷುವು ಆಗಾಗ ದೋಷಪೂರಕವಾದ ಕಾರ್ಯಗಳನ್ನು ಮಾಡುವವನು, ಕೆಲವು ರೀತಿಯಲ್ಲಿ ತಪ್ಪುಗಳನ್ನು ಮಾಡುವವನೂ ಆಗಿರುವನು. ಈತನು ಭಿಕ್ಷುಗಳು ಏನಾದರೂ ಕೇಳಿದಾಗ ತಾನು ಬೇರೊಂದನ್ನು ಹೇಳುವುದಿಲ್ಲ. ಹಾಗೆ ಅವರ ಮಾತನ್ನು ಬದಿಗೆ ಸರಿಸುವುದಿಲ್ಲ, ಕೇಳಿದ್ದನ್ನು ಬಿಟ್ಟು ಉಳಿದದ್ದನ್ನು ಹೇಳುವುದಿಲ್ಲ, ಈತನು ಕೋಪಗೊಳ್ಳುವುದಿಲ್ಲ, ಹಗೆಸಾಧಿಸುವುದಿಲ್ಲ ಮತ್ತು ಅಸಂತುಷ್ಟನಲ್ಲ. ಈತನು ಒಳ್ಳೆಯ ರೀತಿಯಲ್ಲಿ ವರ್ತಿಸುವವನು, ಸಂಯಮಹೊಂದಿದವನು, ತನ್ನ ನಡಾವಳಿಕೆಗಳನ್ನು ಸರಿಪಡಿಸಿಕೊಳ್ಳುವಂತಹವನು. ತನ್ನ ಯಾವ ಕಾರ್ಯದಿಂದ ಭಿಕ್ಷು ಸಂಘಕ್ಕೆ ಸಂತೋಷವಾಗುತ್ತದೆ ಅದನ್ನು ಮಾಡೋಣ ಅನ್ನುವವನು. ಆ ಆಯುಷ್ಮಂತರುಗಳಿಗೆ, ಈ ಭಿಕ್ಷುವಿನ ವಿಷಯದಲ್ಲಿ ಪದೇ ಪದೇ ಪರೀಕ್ಷಿಸಿ ವಿಮಶರ್ೆ ಮಾಡಬೇಕಾಗಿರುವುದರಿಮದ, ಅಧಿಕಾರಯುತವಾದ ಕ್ರಮವನ್ನು ತಕ್ಷಣ ಸ್ಥಾಪಿಸಲು ಆಗುವುದು ಎಂದು. ಆದ್ದರಿಂದಾಗಿ ಭದ್ದಾಲಿ, ಆ ಭಿಕ್ಷುಗಳು, ಈ ಭಿಕ್ಷುವಿನ ವಿಷಯದಲ್ಲಿ ಪದೇ ಪದೇ ಪರೀಕ್ಷಿಸಿ, ವಿಮಶರ್ೆ ಮಾಡಬೇಕಾಗಿರುವುದರಿಂದ, ಅಧಿಕಾರಯುತವಾದ ಕ್ರಮವನ್ನು ತಕ್ಷಣ ಸಾಧಿಸಲು ಸಾಧ್ಯವಾಗುವುದು.

11. ಈ ವಿಷಯವಾಗಿ ಹೇಳುವುದಾದರೆ, ಭದ್ದಾಲಿ, ಯಾರೋ ಒಬ್ಬ ಭಿಕ್ಷುವು ಕೇವಲ ಅಲ್ಪ ಪ್ರಮಾಣದ ನಂಬಿಕೆವುಳ್ಳವನಗಿ ಮತ್ತು ಕೇವಲ ಕಡಿಮ ಪ್ರಮಾಣದ ಗೌರವಾದರವನ್ನು ಉಳ್ಳವನಾಗಿ95 ಸಾಗುತ್ತಿರುವವನು. ಆದ್ದರಿಂದ ಭದ್ದಾಲಿ, ಆ ಭಿಕ್ಷುಗಳಿಗೆ ಹೀಗೆ ಅನಿಸುತ್ತದೆ. ಈ ಆಯುಷ್ಮಂತನಾದ ಭಿಕ್ಷುವು ಕೇವಲ ಅಲ್ಪ ಪ್ರಮಾಣದ ಗೌರವಾದರವನ್ನಿಟ್ಟುಕೊಂಡವನಾಗಿ ಮತ್ತು ಕೇವಲ ಕಡಿಮೆ ಪ್ರಮಾಣದ ಗೌರವಾದರವನ್ನಿಟ್ಟುಕೊಂಡವನಾಗಿ ಸಾಗುತ್ತಿರುವನು. ನಿಜಕ್ಕೂ ನಾವುಗಳು ಈ ಭಿಕ್ಷುವಿನ ವಿಷಯದಲ್ಲಿ ಪದೇ ಪದೇ ಕ್ರಮವನ್ನು ತೆಗೆದುಕೊಂಡದ್ದೇ ಆದರೆ- ನಾವುಗಳು ಎಚ್ಚರಿಕೆ ವಹಿಸದಿದ್ದರೆ ಅವನಲ್ಲಿರುವ ಈ ಅಲ್ಪ ಪ್ರಮಾಣದ ನಂಬಿಕೆಯೂ ಮತ್ತು ಕಡಿಮೆ ಪ್ರಮಾಣದ ಗೌರವಾದರವೂ ಹೊರಟುಹೋದೀತು ಎಂದು. ಅದು ಹೇಗೆಂದರೆ, ಭದ್ದಾಲಿ, ಒಬ್ಬ ಮನುಷ್ಯನು ದೃಷ್ಟಿಯಿರುವ ಕೇವಲ ಒಂದು ಕಣ್ಣನ್ನು ಹೊಂದಿರುವನು, ಅದನ್ನು ಆತನ ಮಿತ್ರರು ಗೊತ್ತಿರುವವರು ಮತ್ತು ಬಂಧುಗಳು ಸಂಬಂಧಿಗಳು ಆ ಅವನ ಒಂದು ಕಣ್ಣನ್ನು ರಕ್ಷಣೆ ಮಾಡಬಹುದು- ಹಾಗಿಲ್ಲವಾದರೆ ಎಚ್ಚರಿಕೆವಹಿಸದಿದ್ದರೆ ಆತನಲ್ಲಿರುವ ಆ ಒಂದು ಕಣ್ಣು ಕೂಡ ಹೊರಟುಹೋದೀತು ಎಂದು. ಅದೇರೀತಿಯಲ್ಲಿ ಕೂಡ, ಭದ್ದಾಲಿ, ಯಾರೋ ಒಬ್ಬ ಭಿಕ್ಷುವು ಕೇವಲ ಅಲ್ಪಪ್ರಮಾಣದ ನಂಬಿಕೆವುಳ್ಳವನಾಗಿ ಸಾಗುತ್ತಾನೆ. ಆದ್ದರಿಂದ, ಭದ್ದಾಲಿ, ಆ ಭಿಕ್ಷುಗಳಿಗೆ ಹೀಗೆ ಅನಿಸುತ್ತದೆ- ಈ ಆಯುಷ್ಮಂತನಾದ ಭಿಕ್ಷುವು ಕೇವಲ ಅಲ್ಪ ಪ್ರಮಾಣದ ನಂಬಿಕೆಯುಳ್ಳವನಾಗಿ, ಕೇವಲ ಕಡಿಮೆ ಪ್ರಮಾಣದ ಗೌರವಾದರವುಳ್ಳವನಾಗಿ ಸಾಗುತ್ತಿದ್ದಾನೆ. ನಿಜಕ್ಕೂ ನಾವುಗಳು ಈ ಭಿಕ್ಷುವಿನ ವಿಷಯದಲ್ಲಿ ಪದೇ ಪದೇ ಕ್ರಮವನ್ನು ತೆಗೆದುಕೊಂಡದ್ದೇ ಆದರೆ- ನಾವುಗಳು ಎಚ್ಚರವಹಿಸದೇ ಇದ್ದರೆ ಅವನಲ್ಲಿರುವ ಈ ಅಲ್ಪ ಪ್ರಮಾಣದ ನಂಬಿಕೆಯೂ ಮತ್ತು ಕಡಿಮೆ ಪ್ರಮಾಣದ ಗೌರವಾದರವು ಹೊರಟುಹೋದೀತು ಎಂದು. ಈ ಕಾರಣಕ್ಕಾಗಿ ಭದ್ದಾಲಿ, ಮತ್ತು ಈ ವಿಚಾರಕ್ಕಾಗಿ ಯಾರೋ ಒಬ್ಬ ಭಿಕ್ಷುವಿನ ವಿಷಯದಲ್ಲಿ ಪದೇ ಪದೇ ಅದೇ ಕ್ರಮವನ್ನು ಕೈಗೊಳ್ಳುವುದಿಲ್ಲ ಎಂದು.

4. ಭಿಕ್ಷು-ಉತ್ಕೃಷ್ಟವಾದ ಕುದುರೆಯ ಉದಾಹರಣೆಯಲ್ಲಿ

12. ಭಂತೇ ಯಾವ ಕಾರಣವಾಗಿ ಮತ್ತು ಯಾವ ವಿಚಾರವಾಗಿ, ಈ ಹಿಂದೆ ಕಡಿಮೆ ಸಂಖ್ಯೆಯ ಭಿಕ್ಷುಶೀಲ ನಿಯಮಗಳಿದ್ದವು ಹಾಗೂ ಅಪಾರ ಸಂಖ್ಯೆಯಲ್ಲಿ ಭಿಕ್ಷುಗಳು ಉತ್ಕೃಷ್ಟವಾದ ಜ್ಞಾನದ ಸಿದ್ಧಿಯಲ್ಲಿ ನೆಲೆಗೊಳ್ಳುತ್ತಿದ್ದರು. ಆದರೆ ಭಂತೆ, ಯಾವ ಕಾರಣವಾಗಿ ಮತ್ತು ಯಾವ ವಿಚಾರವಾಗಿ ಈಗ ಈ ತರಹದ ಅನೇಕ ವಿವಿಧ ಭಿಕ್ಷುಶೀಲ ನಿಯಮಗಳು ಇವೆ. ಆದರೆ ಕಡಿಮೆ ಸಂಖ್ಯೆಯಲ್ಲಿ ಭಿಕ್ಷುಗಳು ಉತ್ಕೃಷ್ಟವಾದ ಜ್ಞಾನದ ಸಿದ್ಧಿಯಲ್ಲಿ ನೆಲೆಗೊಳ್ಳುತ್ತಿದ್ದಾರೆ ಎಂದು.

ಭದ್ದಾಲಿ, ಅದು ಹೀಗಿದೆ. ಯಾವಾಗ ಜೀವಿಗಳು ಕ್ಷೀಣಿಸುತ್ತಾ ಹೋಗುವರೋ ಯಾವಾಗ ಸದ್ಧರ್ಮವು ಮರೆಯಾಗುತ್ತಾ ಹೋಗುವುದೋ ಅಂತಹ ಸಂದರ್ಭದಲ್ಲಿ ಹೆಚ್ಚಿನ ರೀತಿಯ ಭಿಕ್ಷುಶೀಲ ನಿಯಮಗಳು ಉಂಟಾಗುತ್ತವೆ ಮತ್ತು ಕಡಿಮೆ ಸಂಖ್ಯೆಯಲ್ಲಿ ಭಿಕ್ಷುಗಳು ಉತ್ಕೃಷ್ಟವಾದ ಜ್ಞಾನದ ಸಿದ್ಧಿಯಲ್ಲಿ ನೆಲೆಗೊಳ್ಳುತ್ತಾರೆ. ಭದ್ದಾಲಿ, ಸಾಸ್ತರು ಶಿಷ್ಯರುಗಳಿಗೆ ಹೊಸದಾದ ಭಿಕ್ಷುಶೀಲ ನಿಯಮವನ್ನು, ಭಿಕ್ಷುಸಂಘದಲ್ಲಿ ಆಸವಗಳಿಗೆ ಕಾರಣವಾದ ವಿಷಯಗಳು ಕಾಣಿಸಿಕೊಂಡಾಗ ಮಾತ್ರ ನಿಗದಿಪಡಿಸುತ್ತಾರೆ. ಭದ್ದಾಲಿ, ಯಾವಾಗ ಭಿಕ್ಷುಸಂಘದಲ್ಲಿ ಆಸವಗಳಿಗೆ ಕಾರಣವಾದ ವಿಷಯಗಳು ಕಾಣಿಸಿಕೊಳ್ಳುವವೋ ಆಗ ಮಾತ್ರ ಹೊಸದಾದ ಭಿಕ್ಷುಶೀಲ ನಿಯಮವನ್ನು ಶಾಸ್ತರು ನಿಗದಿಪಡಿಸುತ್ತಾರೆ. ಅದು ಏಕೆಂದರೆ ಅಂತಹ ಆಸವಗಳಿಗೆ ಕಾರಣವಾದ ವಿಷಯಗಳನ್ನು ತೊಡೆದುಹಾಕಲಿಕ್ಕಾಗಿ ಮಾತ್ರ. ಭದ್ದಾಲಿ, ಭಿಕ್ಷು ಸಂಘವು ಅಗಾಧವಾಗಿ ಬೆಳವಣಿಗೆ ಪಡೆಯುವವರೆಗೂ ಅದರಲ್ಲಿ ಅಂತಹ ಆಸವಗಳಿಗೆ ಕಾರಣವಾದ ವಿಷಯಗಳು ಉಂಟಾಗಲು ಆಸ್ಪದವಿರುವುದಿಲ್ಲ. ಆದರೆ ಯಾವಾಗ, ಭದ್ದಾಲಿ, ಭಿಕ್ಷು ಸಂಘವು ಅಗಾಧವಾದ ಬೆಳವಣಿಗೆಯನ್ನು ಪಡೆಯುವುದೋ ಆಗ ಅದರಲ್ಲಿ ಅಂತಹ ಆಸವಗಳಿಗೆ ಕಾರಣವಾದ ವಿಷಯಗಳು ಕಾಣಿಸಿಕೊಳ್ಳುತ್ತವೆ. ಅಂತಹ ಸಂದರ್ಭದಲ್ಲಿ ಶಾಸ್ತರು ಹೊಸದಾದ ಭಿಕ್ಷುಶೀಲ ನಿಯಮವನ್ನು ಶಿಷ್ಯರುಗಳಿಗೆ ನಿಗದಿಪಡಿಸುತ್ತಾರೆ. ಅದು ಏಕೆಂದರೆ ಅಂತಹ ಆಸವಗಳಿಗೆ ಕಾರಣವಾದ ವಿಷಯಗಳನ್ನು ತೊಡೆದು ಹಾಕಲಿಕ್ಕಾಗಿ ಮಾತ್ರ. ಭದ್ದಾಲಿ ಎಲ್ಲಿಯವರೆಗೆ ಭಿಕ್ಷು ಸಂಘದಲ್ಲಿ96 ಇವುಗಳು ಉಂಟಾಗುವುದಿಲ್ಲವೋ, ಅಂದರೆ ಯಾವಾಗ ಸಂಘವು ಹೆಚ್ಚಿನ ಗಳಿಕೆಯನ್ನು ಪಡೆಯುವುದೋ ಆವಾಗ, ಯಾವಾಗ ಸಂಘವು ಹೆಚ್ಚಿನ ಕೀರ್ತಿಯನ್ನು ಪಡೆಯುವುದೋ ಆವಾಗ, ಯಾವಾಗ ಸಂಘದಲ್ಲಿ ಹೆಚ್ಚಿನ ಮಿತಿಮೀರಿದ ಕಲಿಯುವಿಕೆಯು ಉಂಟಾಗುವುದೋ ಆವಾಗ, ಯಾವಾಗ ಸಂಘವು ಹೆಚ್ಚಿನ ಕಾಲದವರೆಗೂ ನಡೆದುಬರುವುದೋ ಆವಾಗ. ಇಲ್ಲಿ ಕೆಲವು ಆಸವಗಳಿಗೆ ಕಾರಣವಾದ ವಿಷಯಗಳು ಉಂಟಾಗುವುವು ಭದ್ದಾಲಿ. ಯಾವಾಗ ಸಂಘವು ಬಹುಕಾಲದವರೆಗೂ ನಡೆದು ಬರುವುದೋ ಆವಾಗ, ಇಲ್ಲಿ ಕೆಲವು ಆಸವಗಳಿಗೆ ಕಾರಣವಾದ ವಿಷಯಗಳು ಉಂಟಗುತ್ತವೆ, ಆಗ ಶಾಸ್ತರು ಶಿಷ್ಯರುಗಳಿಗೆ ಭಿಕ್ಷುಶೀಲ ನಿಯಮವನ್ನು, ಆ ಆಸವಗಳಿಗೆ ಕಾರಣವಾದ ವಿಷಯಗಳನ್ನು ತೊಡೆದುಹಾಕಲು ಮಾತ್ರ ನಿಗದಿಪಡಿಸುತ್ತಾರೆ.

13. ಭದ್ದಾಲಿ, ನೀವುಗಳು ಬಹಳ ಕಡಿಮೆ ಜನರಿದ್ದೀರಿ. ಯಾವಾಗ ನಾನು ನಿನಗೆ ಉತ್ಕೃಷ್ಟವಾದ ಕುದುರೆಯ ಉದಾಹರಣೆಯ ಧರ್ಮ ಉಪದೇಶವನ್ನು ನೀಡಿದಾಗ. ಭದ್ದಾಲಿ, ಅದು ನಿನಗೆ ನೆನಪಿದೆಯೇ?

ಇಲ್ಲ ಭಂತೆ.

ಭದ್ದಾಲಿ, ಈ ಮರೆತಿರುವಿಕೆಯನ್ನು ಯಾವ ಕಾರಣಕ್ಕಾಗಿಯೆಂದು ಹೇಳುತ್ತೀಯಾ?

ಭಂತೆ, ಯಾವ ಕಾರಣಕ್ಕಾಗಿ ಅಂದರೆ ನಾನು ಬಹಳ ಕಾಲದವರೆಗೂ ಗುರುಗಳಿಂದ ನಿಗದಿಪಡಿಸಲ್ಪಟ್ಟಂತಹ ನಿಯಮ ಪಾಲನೆಯನ್ನು ಪೂರ್ಣರೀತಿಯಲ್ಲಿ ಪಾಲನೆ ಮಾಡದವನಾದ್ದರಿಂದ ಎಂಬುದಾಗಿ ಹೇಳುತ್ತೇನೆ.

ಭದ್ದಾಲಿ, ಅದಕ್ಕೆ ಇದೊಂದೇ ಕಾರಣವಲ್ಲ ಅಥವಾ ಇದೊಂದೇ ವಿಚಾರವಲ್ಲ. ಭದ್ದಾಲಿ, ನಾನು ನನ್ನ ಮನಸ್ಸಿನಿಂದ ನಿನ್ನ ಮನಸ್ಸನ್ನು ಬಹಳ ಕಾಲದಿಂದ ತಿಳಿದುಕೊಂಡಿದ್ದೇನೆ- ನಾನು ಧರ್ಮ ಉಪದೇಶಿಸುತ್ತಿರುವಾಗಲೆಲ್ಲಾ, ಈ ಮೂರ್ಖ ಮನುಷ್ಯನು ಆ ಧಮ್ಮವನ್ನು ಕೇಳಲು ಅತಿ ಜಾಗರೂಕತೆಯಿಂದ ತನ್ನನ್ನು ತಾನು ತೊಡಗಿಸಿಕೊಳ್ಳುವುದೂ ಇಲ್ಲ, ಎಚ್ಚರಿಕೆಯನ್ನು ಹೊಂದಿರುವುದೂ ಇಲ್ಲ, ಇಡೀ ಮನಸ್ಸನ್ನು ಕೇಂದ್ರೀಕರಿಸಿಕೊಂಡು ಕೇಳಿಸಿಕೊಳ್ಳುವವನೂ ಅಲ್ಲ. ಭದ್ದಾಲಿ, ಹಾಗಾಗಿದ್ದರೂ ಇರಲಿ, ನಾನು ಈಗ ನಿನಗೆ ಉತ್ಕೃಷ್ಟವಾದ ಕುದುರೆಯ ಉದಾಹರಣೆಯ ಧರ್ಮ ಉಪದೇಶವನ್ನು ತಿಳಿಸುತ್ತೇನೆ. ಅದನ್ನು ಕೇಳಿಕೋ, ಚೆನ್ನಾಗಿ ಮನಸ್ಸಿನಲ್ಲಿ ಗ್ರಹಿಸಿಕೋ, ಈಗ ತಿಳಿಸಿ ಹೇಳುತ್ತೇನೆ. ಹಾಗೆ ಆಗಲಿ ಭಂತೆ ಎಂದು ಆ ಆಯುಷ್ಮಂತ ಭದ್ದಾಲಿಯು ಭಗವಾನರಿಗೆ ಉತ್ತರಿಸಿದನು. ಭಗವಾನರು ಹೀಗೆ ಹೇಳಿದರು-

14. ಅದು ಹೇಗೆಂದರೆ, ಭದ್ಧಾಲಿ, ಒಬ್ಬ ಮಹಾಕುಶಲಿಯಾದಂತಹ ಕುದುರೆ ಶಿಕ್ಷಕನು, ಒಂದು ಸುಂದರವಾದ ಉತ್ಕೃಷ್ಟವಾದ ಕುದುರೆ ತನಗೆ ದೊರೆತ ಕೂಡಲೇ, ಮೊಟ್ಟಮೊದಲಿಗೆ ಅದಕ್ಕೆ ಕಡಿವಾಣ ಹಾಕಿ, ಅದರ ಬಗ್ಗೆ ಕಲಿಕೆ ನೀಡುತ್ತಾನೆ. ಹಾಗೆ ಆ ಕಡಿವಾಣ ಹಾಕಿ ಅದರ ಬಗ್ಗೆ ಕಲಿಸುತ್ತಿರುವಾಗ ಯಾವ ಯಾವ ತೆರನಾದ ವಿಪರೀತ ವೃತ್ತಿಗಳು, ಅಡಚಣೆಗಳು, ತೊಂದರೆಗಳು, ಮುಂಚೆಯಿಲ್ಲದ್ದು, ಈ ಹೊಸ ಕಲಿಕೆಯಿರುವಾಗ ಉಂಟಾಗುತ್ತದೆ. ಆತನು ಅಡಚಣೆಯಿಲ್ಲದ ಪೂರ್ಣ ಪ್ರಮಾಣದ ಕಲಿಸುವಿಕೆಯಿಂದಾಗಿ ಮತ್ತು ಆಯಾ ಹಂತದ ಕಲಿಸುವಿಕೆಯಿಂದಾಗಿ ಆ ಸ್ಥಿತಿಯಲ್ಲಿ ಪರಿಪೂರ್ಣವಾಗಿ ಸಾಮಥ್ರ್ಯ ಪಡೆಯುತ್ತದೆ.97 ನಂತರದಲ್ಲಿ ಭದ್ದಾಲಿ, ಶಿಕ್ಷಕನು, ಯಾವಾಗ ಆ ಉತ್ಕೃಷ್ಟವಾದ ಕುದುರೆಯ ಅಡಚಣೆಯಿಲ್ಲದೆ ಪೂರ್ಣ ಪ್ರಮಾಣದ ಕಲಿಕೆಯಿಂದಾಗಿ ಮತ್ತು ಆಯಾ ಹಂತದ ಕಲಿಕೆಯಿಂದಾಗಿ, ಈ ಸ್ಥಿತಿಯಲ್ಲಿ ಪರಿಪೂರ್ಣತೆಯನ್ನು ಸಾಧಿಸುವುದೋ, ಆನಂತರದಲ್ಲಿ, ಆ ಕುಶಲಿಯಾದ ಕುದುರೆ ಶಿಕ್ಷಕನು, ಇನ್ನು ಮುಂದಿನ ಕಲಿಕೆಯಾದ ಜೀನನ್ನು ಹೊದ್ದುಕೊಳ್ಳುವುದನ್ನು ಕಲಿಸಲಾರಂಭಿಸುವನು. ಹಾಗೆ ಆ ಜೀನನ್ನು ಹೊದಿಯುವಿಕೆಯನ್ನು ಕಲಿಸುತ್ತಿರುವಾಗ, ಯಾವ ಯಾವ ತೆರನಾದ ವಿಪರೀತ ವೃತ್ತಿಗಳು, ಅಡಚಣೆಗಳು, ತೊಂದರೆಗಳು, ಮುಂಚೆಯಿಲ್ಲದ್ದು, ಈ ಹೊಸ ಕಲಿಕೆಯಿರುವಾಗ ಉಂಟಾಗುತ್ತದೆ. ಆತನು ಅಡಚಣೆಯಿಲ್ಲದ ಪೂರ್ಣ ಪ್ರಮಾಣದ ಕಲಿಸುವಿಕೆಯಿಂದಾಗಿ ಮತ್ತು ಆಯಾ ಹಂತದ ಕಲಿಸುವಿಕೆಯಿಂದಾಗಿ ಆ ಸ್ಥಿತಿಯಲ್ಲಿ ಪೂರ್ಣ ರೀತಿಯ ಸಾಮಥ್ರ್ಯ ಪಡೆಯುವಂತೆ ಮಾಡುತ್ತಾನೆ. ಭದ್ದಾಲಿ, ಆನಂತರದಲ್ಲಿ, ಶಿಕ್ಷಕನು ಯಾವಾಗ ಆ ಉತ್ಕೃಷ್ಟವಾದ ಕುದುರೆಯು ಅಡಚಣೆಯಿಲ್ಲದೆ ಪೂರ್ಣ ಪ್ರಮಾಣದ ಕಲಿಕೆಯಿಂದಾಗಿ ಮತ್ತು ಆಯಾ ಹಂತದ ಕಲಿಕೆಯಿಂದಾಗಿ ಈ ಸ್ಥಿತಿಯಲ್ಲಿ ಪರಿಪೂರ್ಣತೆಯನ್ನು ಸಾಧಿಸುವುದೋ, ಅನಂತರದಲ್ಲಿ, ಆ ಕುಶಲಿಯಾದ ಕುದುರೆ ಶಿಕ್ಷಕನು ಇನ್ನು ಮುಂದಿನ ಕಲಿಕೆಯಾದ, ನೇರ ನಡಿಗೆಯನ್ನು, ಸುತ್ತು ಹಾಕುವುದನ್ನು, ಗೊರಸಿನ ಕಲಿಕೆಗಳನ್ನು, ನೆಗೆದೋಡುವಿಕೆಯನ್ನು, ನಾಗಾಲೋಟವನ್ನು, ಅತ್ಯುತ್ತಮವಾದ ಗುಣಧರ್ಮಗಳನ್ನು ಮತ್ತು ಅತ್ಯುತ್ತಮವಾದ ಪರಿಣಿತ ಕಲಿಕೆಗಳನ್ನು ಕಲಿಸಿ, ಅದರಿಂದಾಗಿ ಎಲ್ಲ ರೀತಿಯಿಂದಲೂ ಅದು ಎಣೆಯಿಲ್ಲದ ವೇಗ ಹೊಂದಿದ್ದು, ಎಣೆಯಿಲ್ಲದ ಚುರುಕುತನ ಪಡೆದಿದ್ದು, ಎಣೆಯಿಲ್ಲದ ಗುಣ ಸ್ವಭಾವವನ್ನು ಹೊಂದಿರುವಂತಾಗುತ್ತದೆ. ಹಾಗೆಂದು ಆ ಎಣೆಯಿಲ್ಲದ ವೇಗ ಹೊಂದಬೇಕಾದರೆ, ಎಣೆಯಿಲ್ಲದ ಚುರುಕುತನ ಪಡೆಯಬೇಕಾದರೆ, ಎಣೆಯಿಲ್ಲದ ಗುಣ ಸ್ವಭಾವವನ್ನು ಹೊಂದಬೇಕಾದರೆ, ಅದರ ಬಗ್ಗೆ ಕಲಿಸುತ್ತಿರುವಾಗ, ಯಾವ ಯಾವ ತೆರನಾದ ವಿಪರೀತ ವೃತ್ತಿಗಳು, ಅಡಚಣೆಗಳು, ತೊಂದರೆಗಳು, ಮುಂಚೆಯಿಲ್ಲದ್ದು, ಈ ಹೊಸ ಕಲಿಕೆಯಿರುವಾಗ ಉಂಟಾಗುತ್ತದೆ. ಆತನು ಅಡಚಣೆಯಿಲ್ಲದ ಪೂರ್ಣ ಪ್ರಮಾಣದ ಕಲಿಸುವಿಕೆಯಿಂದಾಗಿ ಮತ್ತು ಆಯಾ ಹಂತದ ಕಲಿಸುವಿಕೆಯಿಂದಾಗಿ ಆ ಸ್ಥಿತಿಯಲ್ಲಿ ಪರಿಪೂರ್ಣವಾಗಿ ಸಾಮಥ್ರ್ಯ ಪಡೆಯುವಂತೆ ಮಾಡುತ್ತಾನೆ. ಹೀಗಿರುವಲ್ಲಿ ಭದ್ದಾಲಿ ಶಿಕ್ಷಕನು ಯಾವಾಗ ಆ ಉತ್ಕೃಷ್ಟವಾದ ಕುದುರೆಯು ಅಡಚಣೆಯಿಲ್ಲದೆ ಪೂರ್ಣ ಪ್ರಮಾಣದ ಕಲಿಕೆಯಿಂದಾಗಿ ಮತ್ತು ಆಯಾ ಹಂತದ ಕಲಿಕೆಯಿಂದಾಗಿ ಈ ಸ್ಥಿತಿಯಲ್ಲಿ ಪರಿಪೂರ್ಣತೆಯನ್ನು ಸಾಧಿಸುವುದೋ, ಆನಂತರದಲ್ಲಿ ಆ ಕುಶಲಿಯಾದ ಕುದುರೆ ಶಿಕ್ಷಕನು, ಇನ್ನು ಮುಂದಿನದಾದ ಹೊಳಪನ್ನು ಮತ್ತು ಮೆರಗನ್ನು ಅದಕ್ಕೆ ಒದಗಿಬರುವಂತೆ ಮಾಡುತ್ತಾನೆ. ಭದ್ದಾಲಿ, ಈ ರೀತಿಯಾಗಿ ಈ ಹತ್ತು ಗುಣ ಸ್ವಭಾವಗಳಿಂದ ಸಂಪನ್ನವಾದಂತಹ ಉತ್ಕೃಷ್ಟವಾದ ಕುದುರೆಯು ಮಾತ್ರ ರಾಜರುಗಳು ಉಪಯೋಗಿಸಲು ಅರ್ಹವಾಗುತ್ತದೆ, ರಾಜರುಗಳು ಕಾಪಾಡಲು ಐಶ್ವರ್ಯಯುತವಾಗಿ ಯೋಗ್ಯವೆನಿಸುತ್ತದೆ. ಹಾಗೂ ರಾಜರುಗಳು ಹೊಂದಿರಲೇಬೇಕಾದಂತಹ ರಾಜವೈಭವವೆಂದು ಪರಿಗಣಿಸಲ್ಪಡುತ್ತದೆ.

ಅದೇರೀತಿಯಲ್ಲಿ ಕೂಡ, ಭದ್ದಾಲಿ ಹತ್ತು ಗುಣಗಳಿಂದ ಕೂಡಿದಂತಹ ಒಬ್ಬ ಭಿಕ್ಷುವು ದಾನ ಯೋಗ್ಯನಾಗುತ್ತಾನೆ. ಆತಿಥ್ಯ ಮಾಡಲು ಅರ್ಹನೆನಿಸುತ್ತಾನೆ, ಕೊಡುಗೆಗಳನ್ನು ಕೊಡಲು ಪಾತ್ರನೆನಿಸುತ್ತಾನೆ. ಕೈಜೋಡಿಸಿ ನಮಸ್ಕರಿಸಲು ಪೂಜ್ಯನಾಗುತ್ತಾನೆ ಮತ್ತು ಈ ಲೋಕದಲ್ಲಿ ಎಣೆಯಿಲ್ಲದ ಪುಣ್ಯವನ್ನು ಪಡೆಯುವ ಕ್ಷೇತ್ರವೆನಿಸುತ್ತಾನೆ. ಆ ಹತ್ತು ಗುಣಗಳು ಯಾವುವು? ಇಲ್ಲಿ ಭದ್ದಾಲಿ, ಒಬ್ಬ ಭಿಕ್ಷುವು ಅಸೇಖನು98 ಪಡೆಯುವಂತಹ ಸಮ್ಯಕ್ ದೃಷ್ಟಿಯನ್ನು ಹೊಂದಿದವನಾಗಿರುತ್ತಾನೆ, ಅಸೇಖನು ಪಡೆಯುವಂತಹ ಸಮ್ಯಕ್ ಮತನ್ನು ಹೊಂದಿದವನಾಗಿರುತ್ತಾನೆ, ಅಸೇಖನು ಪಡೆಯುವಂತಹ ಸಮ್ಯಕ್ ಕಾರ್ಯವನ್ನು ಹೊಂದಿದವನಾಗಿರುತ್ತಾನೆ, ಅಸೇಖನು ಪಡೆಯುವಂತಹ ಸಮ್ಯಕ್ ಅಜೀವವನ್ನು ಹೊಂದಿದವನಾಗಿರುತ್ತಾನೆ, ಅಸೇಖನು ಪಡೆಯುವಂತಹ ಸಮ್ಯಕ್ ಯತ್ನಶೀಲತೆಯನ್ನು ಹೊಂದಿದವನಾಗಿರುತ್ತಾನೆ, ಅಸೇಖನು ಪಡೆಯುವಂತಹ ಸಮ್ಯಕ್ ಸ್ಮೃತಿಯನ್ನು ಹೊಂದಿದವನಾಗಿರುತ್ತಾನೆ, ಅಸೇಖನು ಪಡೆಯುವಂತಹ ಸಮ್ಯಕ್ ಸಮಾಧಿಯನ್ನು ಹೊಂದಿದವನಾಗಿರುತ್ತಾನೆ. ಅಸೇಖನು ಪಡೆಯುವಂತಹ ಸಮ್ಯಕ್ ಜ್ಞಾನವನ್ನು ಹೊಂದಿದವನಾಗಿರುತ್ತಾನೆ, ಅಸೇಖನು ಪಡೆಯುವಂತಹ ಸಮ್ಯಕ್ ವಿಮುಕ್ತಿಯನ್ನು ಹೊಂದಿದವನಾಗಿರುತ್ತಾನೆ- ಹೀಗೆ, ಭದ್ದಾಲಿ, ಹತ್ತು ಧರ್ಮಗುಣಗಳನ್ನು ಹೊಂದಿದವನಾಗಿರುತ್ತಾನೆ-99 ಹೀಗೆ ಭದ್ದಾಲಿ, ಹತ್ತು ಧರ್ಮಗುಣಗಳನ್ನು ಹೊಂದಿದವನಾಗಿರುತ್ತಾನೆ- ಹೀಗೆ, ಭದ್ದಾಲಿ, ಹತ್ತು ಧರ್ಮಗುಣಗಳನ್ನು ಹೊಂದಿದವನಾದಂತಹ ಭಿಕ್ಷುವು, ದಾನಯೋಗ್ಯನೆನಿಸುತ್ತಾನೆ. ಆತಿಥ್ಯ ಮಾಡಲು ಅರ್ಹನೆನಿಸುತ್ತಾನೆ, ಕೊಡುಗೆಗಳನ್ನು ಕೊಡಲು ಪಾತ್ರನೆನಿಸುತ್ತಾನೆ, ಕೈಜೋಡಿಸಿ ನಮಸ್ಕರಿಸಲು ಪೂಜ್ಯನೆನಿಸುತ್ತಾನೆ ಮತ್ತು ಈ ಲೋಕದಲ್ಲಿ ಎಣೆಯಿಲ್ಲದ ಪುಣ್ಯವನ್ನು ಪಡೆಯುವ ಕ್ಷೇತ್ರವೆನಿಸುತ್ತಾನೆ ಎಂದು.

ಭಗವಾನರು ಹೀಗೆ ನುಡಿದರು. ಸಂತೋಷಗೊಂಡ ಆಯುಷ್ಮಂತ ಭದ್ದಾಲಿಯು ಭಗವಾನರ ಈ ನುಡಿಗಳಿಗೆ, ಅಭಿವಂದಿಸಿದರು.

ಇಲ್ಲಿಗೆ ಭದ್ದಾಲಿ ಸುತ್ತ ಮುಗಿಯಿತು

ಟಿಪ್ಪಣಿಗಳು [4]