ಊಟಿಸುತ್ತಿದೆ

ಅನುವಾದಗಳು [25]

ಚಾತುಮ ಸುತ್ತ

ಚಾತುಮ ಸುತ್ತ

1. ಭಗವಾನರು ಭಿಕ್ಷುಗಳನ್ನು ಹೊರಹಾಕಿದರು

ಹೀಗೆ ನಾನು ಕೇಳಿದ್ದೇನೆ. ಒಂದುಸಲ ಭಗವಾನರು ಚಾತುಮಾ ಎಂಬ ಸ್ಥಳದ ಆಮಲಕೀ ವನದಲ್ಲಿ (ನೆಲ್ಲೀಗಿಡಗಳ ತೋಪಿನಲ್ಲಿ) ತಂಗಿದ್ದರು. ಆ ಒಂದು ಸಂದರ್ಭದಲ್ಲಿ ಸಾರಿಪುತ್ರ ಮತ್ತು ಮೊಗ್ಗಲ್ಲಾನರವರು ಮುಖಂಡತ್ವ ವಹಿಸಿಕೊಂಡ ಐದು ನೂರು ಜನ ಭಿಕ್ಷುಗಳೊಂದಿಗೆ, ಭಗವಾನರ ದರ್ಶನವನ್ನು ಪಡೆಯಲೋಸುಗ ಚಾತುಮಾಕ್ಕೆ ಬಂದರು. ಆಗ ಬಂದ ಭಿಕ್ಷುಗಳು ಮತ್ತು ಅಲ್ಲಿ ವಾಸವಾಗಿರುವ ಭಿಕ್ಷುಗಳು ನಡೆಸಿದ ಕುಶಲದ ಮಾತುಗಳು, ಬಂದವರುಗಳಿಗೆ ತಂಗಲು ಜಾಗದ ವ್ಯವಸ್ಥೆ, ಮತ್ತು ಚೀವರ ಪಿಂಡಪಾತ್ರೆಗಳನ್ನು ಅತ್ತ ಇತ್ತ ತೆಗೆದಿಡುವುದು ಹೀಗಾಗಿ ಗಲಾಟೆ ಕೋಲಾಹಲವು ಉಂಟಾಯಿತು. ಆಗ ಭಗವಾನರು ಆಯುಷ್ಮಂತ ಆನಂದರನ್ನು ಕರೆದರು- ಆನಂದ, ಯಾಕೆ ಈ ರೀತಿಯ ಮೀನು ಹಿಡಿಯುವಾಗ ಮಾಡುವ ಹಾಗೆ ಗಲಾಟೆ, ಕೋಲಾಹಲ ಎಂದು.

ಭಂತೆ, ಅದೆಂದರೆ, ಸಾರಿಪುತ್ತ ಮತ್ತು ಮೊಗ್ಗಲ್ಲಾನರನ್ನು ಮುಂದಿಟ್ಟುಕೊಂಡು ಐದು ನೂರು ಜನ ಭಿಕ್ಷುಗಳು ಭಗವಾನರನ್ನು ಕಾಣಲಿಕ್ಕೆಂದು ಚಾತುಮಾಕ್ಕೆ ಬಂದಿದ್ದಾರೆ. ಹೀಗಾಗಿ ಬಂದ ಭಿಕ್ಷುಗಳು ನಡೆಸಿದ ಕುಶಲದ ಮಾತಿನಿಂದಾಗಿ, ಬಂದವರುಗಳಿಗೆ ತಂಗಲು ವ್ಯವಸ್ಥೆ ಮಾಡುವುದರಿಂದಾಗಿ, ಚೀವರ ಪಿಂಡಪಾತ್ರೆಗಳನ್ನು ಇಡುವುದರಿಂದಾಗಿ ಈ ರೀತಿಯ ಗಲಾಟೆ ಕೋಲಾಹಲ ಉಂಟಾಗಿದೆ ಎಂದು.

ಹಾಗಾದರೆ ಆನಂದ, ನಾನು ಕರೆದೆನೆಂದು ಆ ಭಿಕ್ಷುಗಳನ್ನು ಕರೆಯಿರಿ- ಗುರುಗಳು ಆಯುಷ್ಮಂತರನ್ನು ಕರೆಯುತ್ತಿದ್ದಾರೆ ಎಂದು.

ಹಾಗೇ ಆಗಲಿ ಭಂತೆ ಎಂದು ಆಯುಷ್ಮಂತ ಆನಂದ ಭಗವಾನರಿಗೆ ಉತ್ತರ ನುಡಿದು, ಎಲ್ಲಿ ಆ ಭಿಕ್ಷುಗಳಿದ್ದರೋ ಅಲ್ಲಿಗೆ ಬಂದನು. ಬಳಿಗೆ ಬಂದನಂತರ ಈ ಭಿಕ್ಷುಗಳಿಗೆ ಹೀಗೆ ಹೇಳಿದನು- ಗುರುಗಳು ಆಯುಷ್ಮಂತರನ್ನು ಕರೆಯುತ್ತಿದ್ದಾರೆ ಎಂದು. ಹಾಗೇನು ಆಯುಷ್ಮಂತರೇ ಎಂದು ಆ ಭಿಕ್ಷುಗಳು ಆಯುಷ್ಮಂತ ಆನಂದರಿಗೆ ಉತ್ತರ ನುಡಿದು, ಎಲ್ಲಿ ಭಗವಾನರಿದ್ದರೋ ಅಲ್ಲಿಗೆ ಬಂದರು; ಬಳಿಗೆ ಬಂದನಂತರ ಭಗವಾನರಿಗೆ ವಂದನೆ ಸಲ್ಲಿಸಿ, ಒಂದೆಡೆ ಕುಳಿತರು. ಹೀಗೆ ಒಂದೆಡೆ ಕುಳಿತ ಆ ಭಿಕ್ಷುಗಳಿಗೆ, ಭಗವಾನರು ಹೀಗೆ ನುಡಿದರು- ಭಿಕ್ಷುಗಳೇ, ನೀವುಗಳು ಯಾಕೆ ಈ ರೀತಿ ಮೀನು ಹಿಡಿಯುವಾಗ ಮಾಡುವ ಹಾಗೆ ಗಲಾಟೆ ಕೋಲಾಹಲ ಮಾಡುತ್ತಿರುವಿರಿ ಎಂದು.

ಭಂತೆ, ಇಲ್ಲಿ ಸಾರಿಪುತ್ರ ಮತ್ತು ಮೊಗ್ಗಲ್ಲಾನರನ್ನು ಮುಂದಿಟ್ಟುಕೊಂಡು, ಐದು ನೂರು ಜನ ಭಿಕ್ಷುಗಳು ಭಗವಾನರನ್ನು ಕಾಣಲಿಕ್ಕೆಂದು ಚಾತುಮಾಕ್ಕೆ ಬಂದಿದ್ದೇವೆ. ಹೀಗಾಗಿ ಬಂದ ಭಿಕ್ಷುಗಳು ಮತ್ತು ಇಲ್ಲಿ ವಾಸವಾಗಿರುವ ಭಿಕ್ಷುಗಳು ನಡೆಸಿದ ಕುಶಲದ ಮಾತಿನಿಂದಾಗಿ, ಬಂದವರುಗಳಿಗೆ ತಂಗಲು ವ್ಯವಸ್ಥೆ ಮಾಡುವುದರಿಂದಾಗಿ, ಚೀವರ ಪಿಂಡಪಾತ್ರೆಗಳನ್ನು ಇಡುವುದರಿಂದಾಗಿ ಈ ರೀತಿಯ ಗಲಭೆ ಕೋಲಾಹಲ ಉಂಟಾಗಿದೆ ಎಂದು.

ಭಿಕ್ಷುಗಳೇ, ನೀವುಗಳು ಹೊರಟುಹೋಗಿ, ನಿಮ್ಮನ್ನು ಹೊರಹಾಕಿದ್ದೇನೆ, ನೀವುಗಳು ನನ್ನ ಹತ್ತಿರ ಇರಕೂಡದು.

ಆಗಲಿ ಭಂತೆ ಎಂದು ಆ ಭಿಕ್ಷುಗಳು ಭಗವಾನರಿಗೆ ಉತ್ತರ ನುಡಿದು, ಆಸನದಿಂದೆದ್ದು, ಭಗವಾನರಿಗೆ ವಂದಿಸಿ, ಪ್ರದಕ್ಷಿಣೆ ಹಾಕಿ, ಹಾಸಿಗೆ ಬಟ್ಟೆಗಳನ್ನು ಜೋಡಿಸಿಕೊಂಡು, ಚೀವರ ಮತ್ತು ಪಿಂಡಪಾತ್ರೆಗಳನ್ನು ತೆಗೆದುಕೊಂಡು ಹೊರಟರು.

2. ಅಂತಹ ಒಂದು ಸಂದರ್ಭದಲ್ಲಿ ಚಾತುಮಾದ ಸಾಕ್ಯರುಗಳು ಯಾವುದೋ ಒಂದು ಕಾರಣದಿಂದ ಸಭಾಭವನದಲ್ಲಿ ಸೇರಿದ್ದರು. ಚಾತುಮಾದ ಸಾಕ್ಯರುಗಳು ಆ ಭಿಕ್ಷುಗಳು ದೂರದಲ್ಲಿ ಬರುತ್ತಿರುವುದನ್ನು ಕಂಡರು, ಕಂಡಕೂಡಲೇ ಆ ಭಿಕ್ಷುಗಳಿದ್ದಲ್ಲಿಗೆ ಬಂದರು. ಹತ್ತಿರ ಬಂದನಂತರ ಆ ಭಿಕ್ಷುಗಳಿಗೆ ಹೀಗೆ ಹೇಳಿದರು- ಆಯುಷ್ಮಂತರಾದ ನೀವುಗಳು ಈಗ ಎಲ್ಲಿಗೆ ಹೋಗುತ್ತಿರುವಿರಿ ಎಂದು.

ಆತ್ಮೀಯರೆ, ಭಗವಾನರು ಈ ಭಿಕ್ಷು ಸಮೂಹವನ್ನು ಹೊರಹಾಕಿದ್ದಾರೆ ಎಂದು.

ಹಾಗಿರುವುದಾದರೆ, ಒಂದು ಸ್ವಲ್ಪಹೊತ್ತು ಆಯುಷ್ಮಂತರುಗಳೇ, ಕುಳಿತಿರಿ. ನಾವುಗಳು ಭಗವಾನರನ್ನು ಒಪ್ಪಿಸಲು ಸಾಧ್ಯವಿರುವುದೋ ಎಂದು ಪ್ರಯತ್ನಿಸುತ್ತೇವೆ ಎಂದು. ಹಾಗೇ ಆಗಲಿ ಆತ್ಮೀಯರೆ ಎಂದು ಆ ಭಿಕ್ಷುಗಳು ಚಾತುಮಾದ ಸಾಕ್ಯರುಗಳಿಗೆ ಉತ್ತರ ನೀಡಿದರು. ಆಗ ಚಾತುಮಾದ ಸಾಕ್ಯರುಗಳು ಎಲ್ಲಿ ಭಗವಾನರಿದ್ದರೋ ಅಲ್ಲಿಗೆ ಬಂದರು. ಹತ್ತಿರಕ್ಕೆ ಬಂದನಂತರ ಭಗವಾನರಿಗೆ ವಂದಿಸಿ ಒಂದೆಡೆ ಕುಳಿತರು. ಹೀಗೆ ಒಂದೆಡೆ ಕುಳಿತ ಆ ಚಾತುಮಾದ ಸಾಕ್ಯರುಗಳು ಭಗವಾನರಿಗೆ ಹೀಗೆ ಹೇಳಿದರು- ಭಂತೇ, ಭಗವಾನರು ಆ ಭಿಕ್ಷು ಸಮೂಹದಲ್ಲಿ ಆನಂದಗೊಳ್ಳಲಿ, ಭಂತೇ, ಭಗವಾನರು ಆ ಭಿಕ್ಷು ಸಮೂಹವನ್ನು ಹರಸಲಿ. ಅದೆಂದರೆ, ಭಂತೆ, ಹಿಂದೆಯೂ ಭಗವಾನರಿಂದ ಭಿಕ್ಷು ಸಂಘವು ಅನುಗ್ರಹಿತವಾಗಿದೆ, ಅದೇರೀತಿಯಾಗಿ ಭಗವಾನರು ಹಾಗೆಯೇ ಭಿಕ್ಷು ಸಂಘಕ್ಕೆ ಅನುಗ್ರಹ ಮಾಡಲಿ. ಭಂತೆ, ಇದರಲ್ಲಿ ಹೊಸದಾಗಿ ಪಬ್ಬಜಿತರಾಗಿರುವಂತಹವರೂ, ಹೆಚ್ಚುಕಾಲ ಭಿಕ್ಷು ಜೀವನ ನಡೆಸಿರದಂತಹವರೂ, ಈ ಧಮ್ಮ ಮತ್ತು ವಿನಯ (ಭಿಕ್ಷು ಶಿಕ್ಷಣ ನಿಯಮ) ಕಲಿಕೆ ಹೊಸಬರಾದವರೂ ಇದ್ದಾರೆ. ಅವರುಗಳು ಭಗವಾನರ ದರ್ಶನವನ್ನು ಪಡೆಯುವುದಕ್ಕೆ ಆಗಿಲ್ಲ. ಹಾಗಾಗಿ ಅವರುಗಳಿಂದ ಏನಾದರೂ ತಪ್ಪು ನಡೆದಿರಬಹುದು. ಅವರುಗಳಿಂದ ಏನಾದರೂ ಅನಾಹುತವಾಗಿರಬಹುದು. ಅದು ಹೇಗೆಂದರೆ, ಭಂತೆ, ಬೆಳೆಯುತ್ತಿರುವ ಬೀಜಕ್ಕೆ ಸಕಾಲದಲ್ಲಿ ಸಾರ ದೊರೆಯದಿದ್ದರೆ, ಏನಾದರೂ ತಪ್ಪು ಆಗಬಹುದು ಮತ್ತು ಏನಾದರೂ ಅನಾಹುತವಾಗಬಹುದು. ಅದೇರೀತಿಯಲ್ಲಿ, ಭಂತೆ, ಇಲ್ಲಿ ಹೊಸದಾಗಿ ಪಬ್ಬಜಿತರಾಗಿರುವಂತಹವರೂ, ಹೆಚ್ಚುಕಾಲ ಭಿಕ್ಷು ಜೀವನ ನಡೆಸಿರದಂತಹವರೂ, ಈ ಧಮ್ಮ ಮತ್ತು ವಿನಯ ಕಲಿಕೆಗೆ ಹೊಸಬರಾದವರೂ ಇದ್ದಾರೆ. ಅಲ್ಲದೆ ಅವರುಗಳಿಗೆ ಭಗವಾನರ ದರ್ಶನವನ್ನು ಪಡೆಯಲಿಕ್ಕೆ ಆಗಿಲ್ಲ. ಹಾಗಾಗಿ ಅವರುಗಳಿಂದ ತಪ್ಪು ನಡೆದಿರಬಹುದು, ಅವರುಗಳಿಂದ ಏನಾದರೂ ಅನಾಹುತವಾಗಿರಬಹುದು. ಅದು ಹೇಗೆಂದರೆ, ಭಂತೆ, ಸಣ್ಣ ಕರುವು ತನ್ನ ತಾಯಿ ಹಸುವನ್ನು ಕಾಣದಿರುವಲ್ಲಿ ಆಗಬಹುದಾದ ಹಾಗೆ, ಏನಾದರೂ ತಪ್ಪು ಆಗಬಹುದು, ಏನಾದರೂ ಅನಾಹುತವಾಗಬಹುದು. ಅದೇರೀತಿಯಲ್ಲಿ ಭಂತೆ, ಇಲ್ಲಿ ಹೊಸದಾಗಿ ಪಬ್ಬಜಿತರಾಗಿರುವಂತಹವರೂ, ಹೆಚ್ಚುಕಾಲ ಭಿಕ್ಷು ಜೀವನ ನಡೆಸಿರದಂತಹವರೂ ಈ ಧಮ್ಮ ಮತ್ತು ವಿನ ಕಲಿಕೆಗೆ ಹೊಸಬರಾದವರೂ ಇದ್ದಾರೆ. ಅಲ್ಲದೆ ಅವರುಗಳಿಗೆ ಭಗವಾನರ ದರ್ಶನ ಪಡೆಯಲಿಕ್ಕೆ ಆಗಿಲ್ಲ, ಹಾಗಾಗಿ ಅವರುಗಳಿಂದ ಏನಾದರೂ ತಪ್ಪು ನಡೆದಿರಬಹುದು, ಏನಾದರೂ ಅನಾಹುತ ನಡೆದಿರಬಹುದು. ಭಂತೆ, ಭಗವಾನರು ಆ ಭಿಕ್ಷು ಸಮೂಹದಲ್ಲಿ ಆನಂದಗೊಳ್ಳಲಿ. ಭಂತೆ, ಭಗವಾನರು ಆ ಭಿಕ್ಷು ಸಮೂಹವನ್ನು ಹರಸಲಿ. ಅದೆಂದರೆ ಭಂತೆ, ಹಿಂದೆಯೂ ಭಗವಾನರಿಂದ ಭಿಕ್ಷು ಸಂಘವು ಅನುಗ್ರಹಿತವಾಗಿದೆ, ಅದೇರೀತಿಯಾಗಿ ಭಗವಾನರು ಹಾಗೆಯೇ ಭಿಕ್ಷು ಸಂಘಕ್ಕೆ ಅನುಗ್ರಹ ಮಾಡಲಿ ಎಂದು.

3. ಆಗ ಬ್ರಹ್ಮ ಸಹಂಪತಿಯೂ ಕೂಡ,108 ಭಗವಾನರ ಮನಸ್ಸಿನಲ್ಲಿನ ವಿಚಾರವನ್ನು ಮನಸ್ಸಿನ ಮೂಲಕವಾಗಿ ಅರಿತುಕೊಂಡವನಾಗಿ- ಅದು ಹೇಗೆಂದರೆ, ಒಬ್ಬ ಶಕ್ತಿಶಾಲಿ ಮನುಷ್ಯನು ತನ್ನ ಮಡಚಿರುವಂತಹ ಕೈಯನ್ನು ಬಿಡಿಸಿ ಚಾಚುವ ಹಾಗೆ, ಬಿಡಿಸಿ ಚಾಚಿದ ಕೈಯನ್ನು ಮಡಚುವ ಹಾಗೆ, ಅದೇರೀತಿಯಲ್ಲಿ. ಬ್ರಹ್ಮಲೋಕದಲ್ಲಿ ಮರೆಯಾಗಿ ಭಗವಾನರ ಮುಂದೆ ಕಾಣಿಸಿಕೊಂಡನು. ಆನಂತರ ಬ್ರಹ್ಮ ಸಹಂಪತಿಯು ಮೇಲು ಹೊದಿಕೆಯನ್ನು ಒಂದು ಹೆಗಲ ಮೇಲೆ ಹೊದ್ದುಕೊಂದು, ಭಗವಾನರೆದುರಿಗೆ ಕೈಜೋಡಿಸಿ ವಂದಿಸಿದವನಾಗಿ, ಭಗವಾನರಿಗೆ ಹೀಗೆ ಹೇಳಿದನು- ಭಂತೆ, ಭಗವಾನರು ಆ ಭಿಕ್ಷು ಸಮೂಹದಲ್ಲಿ ಆನಂದಗೊಳ್ಳಲಿ. ಭಂತೆ, ಭಗವಾನರು ಆ ಭಿಕ್ಷು ಸಮೂಹವನ್ನು ಹರಸಲಿ. ಅದೆಂದರೆ, ಭಂತೆ ಹಿಂದೆಯೂ ಭಗವಾನರಿಂದ ಭಿಕ್ಷು ಸಂಘವು ಅನುಗ್ರಹಿತವಾಗಿದೆ. ಅದೇರೀತಿಯಾಗಿ ಭಗವಾನರು, ಹಾಗೆಯೇ ಭಿಕ್ಷು ಸಂಘಕ್ಕೆ ಅನುಗ್ರಹ ಮಾಡಲಿ. ಭಂತೆ, ಇದರಲ್ಲಿ ಹೊಸದಾದ ಪಬ್ಬಜಿತರಾಗಿರು ವಂತಹವರೂ, ಹೆಚ್ಚುಕಾಲ ಭಿಕ್ಷು ಜೀವನ ನಡೆಸಿರದಂತಹವರೂ ಈ ಧಮ್ಮ ಮತ್ತು ವಿನಯ ಕಲಿಕೆಗೆ ಹೊಸಬರಾದವರೂ ಇದ್ದಾರೆ. ಅವರುಗಳು ಭಗವಾನರ ದರ್ಶನವನ್ನು ಪಡೆಯಲಿಕ್ಕೆ ಆಗಿಲ್ಲ. ಹಾಗಾಗಿ ಅವರುಗಳಿಂದ ಏನಾದರೂ ತಪ್ಪು ನಡೆದಿರಬಹುದು, ಅವರುಗಳಿಂದ ಏನಾದರೂ ಅನಾಹುತವಾಗಿರಬಹುದು. ಅದು ಹೇಗೆಂದರೆ, ಭಂತೆ, ಬೆಳೆಯುತ್ತಿರುವ ಬೀಜಕ್ಕೆ ಸಕಾಲದಲ್ಲಿ ನೀರು ದೊರೆಯದಿದದರೆ, ಏನಾದರೂ ತಪ್ಪು ಆಗಬಹುದು ಮತ್ತು ಏನಾದರೂ ಅನಾಹುತವಾಗಬಹುದು. ಅದೇ ರೀತಿಯಲ್ಲಿ ಭಂತೆ, ಇಲ್ಲಿ ಹೊಸದಾಗಿ ಪಬ್ಬಜಿತರಾಗಿರುವಂತಹವರು, ಹೆಚ್ಚುಕಾಲ ಭಿಕ್ಷುಜೀವನ ನಡೆಸಿರದಂತಹವರು, ಈ ಧಮ್ಮ ಮತ್ತು ವಿನಯ ಕಲಿಕೆಗೆ ಹೊಸಬರಾದವರೂ ಇದ್ದಾರೆ. ಅಲ್ಲದೆ ಅವರುಗಳಿಗೆ ಭಗವಾನರ ದರ್ಶನವನ್ನು ಪಡೆಯಲಿಕ್ಕೆ ಆಗಿಲ್ಲ. ಹಾಗಾಗಿ ಅವರುಗಳಿಂದ ಏನಾದರೂ ತಪ್ಪು ನಡೆದಿರಬಹುದು, ಅವರುಗಳಿಂದ ಏನಾದರೂ ಅನಾಹುತವಾಗಿರಬಹುದು. ಅದು ಹೇಗೆಂದರೆ, ಭಂತೆ, ಸಣ್ಣ ಕರುವು ತನ್ನ ತಾಯಿ ಹಸುವನ್ನು ಕಾಣದಿರುವಲ್ಲಿ ಆಗಬಹುದಾದ ಹಾಗೆ, ಏನಾದರೂ ತಪ್ಪು ಆಗಬಹುದು ಏನಾದರೂ ಅನಾಹುತವಾಗಬಹುದು. ಅದೇರೀತಿಯಲ್ಲಿ ಭಂತೆ, ಇಲ್ಲಿ ಹೊಸದಾಗಿ ಪಬ್ಬಜಿತರಾಗಿರುವಂತಹವರು, ಹೆಚ್ಚುಕಾಲ ಭಿಕ್ಷು ಜೀವನ ನಡೆಸಿರದಂತಹವರು, ಈ ಧಮ್ಮ ಮತ್ತು ವಿನಯ ಕಲಿಕೆಗೆ ಹೊಸಬರಾದವರು ಇದ್ದಾರೆ. ಅಲ್ಲದೆ ಅವರುಗಳಿಗೆ ಭಗವಾನರ ದರ್ಶನ ಪಡೆಯಲಿಕ್ಕೆ ಆಗಿಲ್ಲ, ಹಾಗಾಗಿ ಅವರುಗಳಿಂದ ಏನಾದರೂ ತಪ್ಪು ನಡೆದಿರಬಹುದು, ಏನಾದರೂ ಅನಾಹುತ ನಡೆದಿರಬಹುದು. ಭಂತೆ, ಭಗವಾನರು ಆ ಭಿಕ್ಷು ಸಮೂಹದಲ್ಲಿ ಆನಂದಗೊಳ್ಳಲಿ. ಭಂತೆ, ಭಗವಾನರು ಆ ಭಿಕ್ಷು ಸಮೂಹವನ್ನು ಹರಸಲಿ. ಅದೆಂದರೆ, ಭಂತೆ ಹಿಂದೆಯೂ ಭಗವಾನರಿಂದ ಭಿಕ್ಷು ಸಂಘವು ಅನುಗ್ರಹಿತವಾಗಿದೆ. ಅದೇರೀತಿಯಾಗಿ ಭಗವಾನರು ಹಾಗೆಯೇ, ಭಿಕ್ಷು ಸಂಘಕ್ಕೆ ಅನುಗ್ರಹ ಮಾಡಲಿ ಎಂದು.

4. ಚಾತುಮಾದ ಸಾಕ್ಯರುಗಳು ಮತ್ತು ಬ್ರಹ್ಮ ಸಹಂಪತಿ ಅವರುಗಳು ಬೀಜದ ಹಾಗೂ ಸಣ್ಣ ಕರುವಿನ ಉದಾಹರಣೆಯಿಂದಾಗಿ ಭಗವಾನರನ್ನು ಒಪ್ಪಿಸಿದರು. ನಂತರ ಆಯುಷ್ಮಂತ ಮಹಾಮೊಗ್ಗಲ್ಲಾನ ಭಿಕ್ಷುಗಳನ್ನು ಈ ರೀತಿ ಕರೆದರು- ಆಯುಷ್ಮಂತರುಗಳೆ, ಎದ್ದೇಳಿ. ನಿಮ್ಮ ಭಿಕ್ಷಾಪಾತ್ರೆ ಮತ್ತು ಚೀವರವನ್ನು ತೆಗೆದುಕೊಳ್ಳಿ. ಚಾತುಮಾದ ಸಾಕ್ಯರುಗಳು ಮತ್ತು ಬ್ರಹ್ಮ ಸಹಂಪತಿ ಅವರುಗಳು ಬೀಜದ ಉದಾಹರಣೆಯಿಂದಾಗಿ ಹಾಗೂ ಸಣ್ಣ ಕರುವಿನ ಉದಾಹರಣೆಯಿಂದಾಗಿ ಭಗವಾನರನ್ನು ಒಪ್ಪಿಸಿರುವರು ಎಂದು. ಹಾಗೆ ಆಗಲಿ ಆಯುಷ್ಮಂತರೆ ಎಂದು ಆ ಭಿಕ್ಷುಗಳು ಆಯುಷ್ಮಂತ ಮಹಾಮೊಗ್ಗಲ್ಲಾನರಿಗೆ ಉತ್ತರ ನುಡಿದು, ಆಸನದಿಂದೆದ್ದು, ಭಿಕ್ಷಾಪಾತ್ರೆ ಮತ್ತು ಚೀವರಗಳನ್ನು ತೆಗೆದುಕೊಂಡು ಭಗವಾನರು ಎಲ್ಲಿದ್ದರೋ ಅಲ್ಲಿಗೆ ಬಂದರು. ಹತ್ತರಕ್ಕೆ ಬಂದನಂತರ ಭಗವಾನರಿಗೆ ವಂದಿಸಿ ಒಂದೆಡೆ ಕುಳಿತರು. ಹೀಗೆ ಒಂದೆಡೆ ಕುಳಿತ ನಂತರ, ಆಯುಷ್ಮಂತ ಸಾರಿಪುತ್ರನನ್ನು ಭಗವಾನರು ಹೀಗೆ ಕೇಳಿದರು- ಸಾರಿಪುತ್ರ, ನಾನು ಭಿಕ್ಷು ಸಮೂಹವನ್ನು ಹೊರಹಾಕಿದ್ದನ್ನು ಕಂಡು ನಿನಗೇನನ್ನಿಸಿತು? ಎಂದು.

ಭಂತೆ ನನಗೆ ಹೀಗೆನಿಸಿತು- ಭಗವಾನರು ಭಿಕ್ಷು ಸಮೂಹವನ್ನು ಹೊರಹಾಕಿದ್ದಾರೆ. ಭಗವಾನರು ಇತರರ ಬಗ್ಗೆ ಚಿಂತಿಸುವವರಲ್ಲ, ಅವರು ಈಗ ಮತ್ತು ಇಲ್ಲಿ ಸಿಗುವಂತಹ ಸುಖದಲ್ಲಿ ಆನಂದಿಸುತ್ತ ಇರುವವರಾಗುತ್ತಾರೆ, ನಾವುಗಳೂ ಕೂಡ, ಇತರರ ಬಗ್ಗೆ ಚಿಂತಿಸಬೇಕಾಗಿಲ್ಲ, ನಾವು ಈಗ ಮತ್ತು ಇಲ್ಲಿ ಸಿಗುವಂತಹ ಸುಖವನ್ನು ಆನಂದಿಸುತ್ತಾ ಇರಬಹುದು ಎಂದು.

ಸಾರಿಪುತ್ರ, ನೀನು ನಿಧಾನಿಸು. ಸಾರಿಪುತ್ತ ನೀನು ನಿಧಾನಿಸು. ಅಂತಹ ಈಗ ಮತ್ತು ಇಲ್ಲಿಯ ಸುಖದಲ್ಲಿರುವಂತಹ ಯೋಚನೆ ಬಾರದಿರಲಿ ಎಂದು.109

ಆಗ ಭಗವಾನರು ಆಯುಷ್ಮಂತ ಮೊಗ್ಗಲ್ಲಾನನ್ನು ಕರೆದರು- ಮೊಗ್ಗಲ್ಲಾನ ನಾನು ಭಿಕ್ಷು ಸಮೂಹವನ್ನು ಹೊರಹಾಕಿದ್ದನ್ನು ಕಂಡು ನಿನಗೇನನ್ನಿಸಿತು? ಎಂದು.

ಭಂತೆ ನನಗೆ ಹೀಗೆನಿಸಿತು- ಭಗವಾನರು ಭಿಕ್ಷು ಸಮೂಹವನ್ನು ಹೊರಹಾಕಿದ್ದಾರೆ. ಭಗವಾನರು ಈಗ ಇತರರ ಬಗ್ಗೆ ಚಿಂತಿಸುವವರಲ್ಲ. ಅವರು ಈಗ ಮತ್ತು ಇಲ್ಲಿ ಸಿಗುವಂತಹ ಸುಖದಲ್ಲಿ ಆನಂದಿಸುತ್ತಾ ಇರುವವರಾಗುತ್ತಾರೆ. ನಾನು ಮತ್ತು ಆಯುಷ್ಮಂತ ಸಾರಿಪುತ್ರ ಭಿಕ್ಷು ಸಂಘಕ್ಕೆ ಮಾರ್ಗ ತೋರಿಸಬೇಕಾಗುತ್ತದೆ ಎಂದು.

ಒಳ್ಳೆಯದು, ಒಳ್ಳೆಯದು ಮೊಗ್ಗಲ್ಲಾನ! ನಾನು ಮೊಗ್ಗಲ್ಲಾನ ಅಥವಾ ಸಾರಿಪುತ್ರ ಮತ್ತು ಮೊಗ್ಗಲ್ಲಾನ ಹೀಗೆ ನಾವು ಭಿಕ್ಷು ಸಂಘಕ್ಕೆ ಮಾರ್ಗದರ್ಶಿಗಳಾಗಬಹುದು ಎಂದು.

2. ಪಬ್ಬಜಿತರಿಗೆ ಉಂಟಾಗುವ ನಾಲ್ಕು ಅಪಾಯಗಳು

5. ನಂತರದಲ್ಲಿ ಭಗವಾನರು ಭಿಕ್ಷುಗಳನ್ನು ಕುರಿತು ಹೇಳಿದರು- ಭಿಕ್ಷುಗಳೇ, ನೀರಿಗಿಳಿಯುವವನಿಗೆ ನಾಲ್ಕು ರೀತಿಯ ಅಪಾಯಗಳು ಎದುರಾಗುತ್ತವೆ ಎಂದು ಮನಗಂಡಿರಬೇಕು.110 ಯಾವುದದು ನಾಲ್ಕು? ಅಲೆಗಳ ಅಪಾಯ, ಮೊಸಳೆಗಳ ಆಪಾಯ, ಸುಳಿಗಳ ಅಪಾಯ, ಕ್ರೂರ ಮೀನುಗಳ ಅಪಾಯ. ಭಿಕ್ಷುಗಳೇ, ನೀರಿಗಿಳಿಯುವವನಿಗೆ ಇವುಗಳೇ ಆ ನಾಲ್ಕು ರೀತಿಯ ಅಪಾಯಗಳು ಎದುರಾಗುತ್ತವೆ ಎಂದು ಆತನು ಮನಗಂಡಿರಬೇಕು. ಅದೇರೀತಿಯಲ್ಲಿ ಭಿಕ್ಷುಗಳೆ, ಮನೆಬಿಟ್ಟು, ಮನೆ ತೊರೆದವರಾಗಿ ಕೆಲವು ಮನುಷ್ಯರಿಗೆ ಈ ಧಮ್ಮ ಮತ್ತು ವಿನಯಗಳಲ್ಲಿ ನಾಲ್ಕು ರೀತಿಯ ಅಪಾಯಗಳು ಎದುರಾಗುತ್ತವೆ ಎಂದು ಮನಗಂಡಿಬೇಕು. ಯಾವುದದು ನಾಲ್ಕು? ಅಲೆಗಳ ಅಪಾಯ, ಮೊಸಳೆಗಳ ಅಪಾಯ, ಸುಳಿಗಳ ಅಪಾಯ ಮತ್ತು ಕ್ರೂರ ಮೀನುಗಳ ಅಪಾಯ.

ಅಲೆಗಳ ಅಪಾಯ

6. ಭಿಕ್ಷುಗಳೇ, ಅಲೆಗಳ ಅಪಾಯ ಎಂದರೇನು? ಇಲ್ಲಿ ಭಿಕ್ಷುಗಳೇ, ಯಾರೊಬ್ಬ ಕುಟುಂಬದ ಮಗನು, ಮನೆ ಬಿಟ್ಟು, ಮನೆ ತೊರೆದವನಾಗಿ, ಈ ರೀತಿಯ ಶ್ರದ್ಧೆಯಿಂದಾಗಿ ಪಬ್ಬಜಿತನಾಗುತ್ತಾನೆ- ನಾನು ಹುಟ್ಟಿನಿಂದಾಗಿ, ಮುಪ್ಪಿನಿಂದಾಗಿ, ಮರಣದಿಂದಾಗಿ, ಶೋಕದಿಂದಾಗಿ, ವ್ಯಸನದಿಂದಾಗಿ, ದುಃಖದಿಂದಾಗಿ, ಕ್ರಂದನದಿಂದಾಗಿ ಮತ್ತು ಬೀಳುಮನದಿಂದಾಗಿ, ಆವರಿಸಿಕೊಂಡಿದ್ದರೂ, ದುಃಖದಿಂದ ಪೂರ್ತಿಯಾಗಿ ಆವರಿಸಿಕೊಂಡಿದ್ದರೂ, ದುಃಖದಿಂದ ಪೂರ್ಣವಗಿ ಮುಳುಗಿ ಹೋಗಿದ್ದರೂ, ಇಂತಹ ಅಗಾಧವಾದ ದುಃಖದ ರಾಶಿಯ ಕೊನೆಗೊಳಿಸುವಿಕೆಯನ್ನು ಕಾಣಲು ಸಾಧ್ಯ ಎಂಬುದಾಗಿ ನಂಬಿರುತ್ತೇನೆ ಎಂದು. ಆಗ ಆತನ ಸಹ ಬ್ರಹ್ಮಚಾರಿಗಳು, ಹೀಗೆ ಪಬ್ಬಜಿತನಾದವನಿಗೆ ಈ ರೀತಿಯಾಗಿ ಹೇಳುತ್ತಾರೆ, ನಿದರ್ೆಶಿಸುತ್ತಾರೆ- ಈ ರೀತಿಯಾಗಿ ನೀನು ಹೊರ ಹೋಗಬೇಕು, ನೀನು ಈ ರೀತಿ ಹಿಂದಿರುಗಿ ಬರಬೇಕು, ನೀನು ಈ ರೀತಿ ಮುಂದೆ ನೋಡಬೇಕು. ನೀನು ಈ ರೀತಿ ಸುತ್ತೆಲ್ಲಾ ನೋಡಬೇಕು, ನೀನು ಈ ರೀತಿ ಕೈಯನ್ನು ಮುಂದೆ ಚಾಚಬೇಕು, ನೀನು ಈ ರೀತಿ ಕೈಯನ್ನು ಹಿಂದೆ ಮಡಚಬೇಕು, ನೀನು ಈ ರೀತಿ ಹೊರಹೊದಿಕೆಯನ್ನು, ಚೀವರವನ್ನು, ಭಿಕ್ಷಾಪಾತ್ರೆಯನ್ನು ಹೊಂದಿರಬೇಕು ಎಂದು. ಆತನಿಗೆ ಈ ರೀತಿ ಎನಿಸುತ್ತದೆ. ನಾವು, ಹಿಂದೆ ಮನೆಯಲ್ಲಿ ಇರುವವರಾಗಿದ್ದಾಗ, ಬೇರೆಯವರಿಗೆ ಹೇಳುತ್ತಿದ್ದೆವು, ನಿದರ್ೆಶಿಸುತ್ತಿದ್ದೆವು. ಆದರೆ, ಇವರುಗಳಿಗೆ ನನಗೆ ಮಗನ ಸಮಾನರಾಗಿರುವಂತಹವರು, ಮೊಮ್ಮಗ ಸಮಾನರಾಗಿರುವಂತಹವು, ನಮಗೆ ಹೇಳಲು, ನಿದರ್ೆಶಿಸಲು ಆಲೋಚಿಸುತ್ತಿದ್ದಾರೆ ಎಂದು. ಆತನು ಈ ಭಿಕ್ಷು ಶಿಕ್ಷಣವನ್ನು ಬಿಟ್ಟವನಾಗಿ, ಮತ್ತೆ ಹೀನವಾಗಿರುವಂತಹ ಪ್ರಾಪಂಚಿಕಕ್ಕೆ ಮರಳುತ್ತಾನೆ. ಭಿಕ್ಷುಗಳೇ, ಇದನ್ನು ನಾನು, ಅಲೆಗಳ ಅಪಾಯಕ್ಕೆ ಹೆದರಿದವನಾಗಿ ಭಿಕ್ಷು ಶಿಕ್ಷಣವನ್ನು ಬಿಟ್ಟವನಾಗಿ, ಪ್ರಾಪಂಚಿಕಕ್ಕೆ ಮತ್ತೆ ಹಿಂದಿರುಗುತ್ತಾನೆ ಎಂದು ಹೇಳುತ್ತಾನೆ. ಅಲೆಗಳ ಅಪಾಯ ಎಂಬುದು, ಭಿಕ್ಷುಗಳೇ, ಕೋಪದಿಂದುಂಟಾಗುವ ಕೆಡುಕು ಎಂಬುದಕ್ಕೆ ಸರಿಸಮಾನವಾದದ್ದಾಗಿದೆ.

ಮೊಸಳೆಗಳ ಅಪಾಯ

7. ಭಿಕ್ಷುಗಳೇ, ಯಾವುದದು, ಮೊಸಳೆಗಳ ಅಪಾಯ? ಇಲ್ಲಿ ಭಿಕ್ಷುಗಳೇ, ಯಾರೊಬ್ಬ ಕುಟುಂಬದ ಮಗನು, ಮನೆಬಿಟ್ಟು ಮನೆ ತೊರೆದವನಾಗಿ, ಈ ರೀತಿಯ ನಂಬುಗೆಯಿಂದ ಪಬ್ಬಜಿತನಾಗುತ್ತಾನೆ- ಹುಟ್ಟಿನಿಂದಾಗಿ, ಮುಪ್ಪಿನಿಂದಾಗಿ, ಮರಣದಿಂದಾಗಿ, ಶೋಕದಿಂದಾಗಿ, ವ್ಯಸನದಿಂದಾಗಿ, ದುಃಖದಿಂದಾಗಿ, ಕ್ರಂದನದಿಂದಾಗಿ ಮತ್ತು ಬೀಳುಮನದಿಂದಾಗಿ ಆವರಿಸಿಕೊಂಡಿದ್ದೇನೆ. ದುಃಖದಿಂದ ಪೂರ್ಣವಾಗಿ ಮುಳುಗಿ ಹೋಗಿದ್ದೇನೆ. ಆದರೂ ಈ ಅಗಾಧವಾದ ದುಃಖದ ರಾಶಿಯ ಕೊನೆಗೊಳಿಸುವಿಕೆಯನ್ನು ಕಾಣಲು ಸಾಧ್ಯ ಎಂದು ನಂಬಿರುತ್ತೇನೆ ಎಂದು ಆಗ ಅವನ ಸಹ ಬ್ರಹ್ಮಚಾರಿಗಳು ಈ ರೀತಿಯಾಗಿ ಪಬ್ಬಜಿತನಾದವನಿಗೆ ಹೀಗೆ ಹೇಳುತ್ತಾರೆ, ನಿದರ್ೆಶಿಸುತ್ತಾರೆ- ನೀನು ಇದನ್ನು ತಿನ್ನಬಹುದು, ಇದನ್ನು ನೀನು ತಿನ್ನಬಾರದು. ಇದನ್ನು ನೀನು ಸೇವಿಸಬಹುದು, ಇದನ್ನು ನೀನು ಸೇವಿಸಬಾರದು, ಇದನ್ನು ನೀನು ರುಚಿ ನೋಡಬಹುದು, ಇದನ್ನು ನೀನು ರುಚಿ ನೋಡಬಾರದು, ಇದನ್ನು ನೀನು ಕುಡಿಯಬಹುದು, ಇದನ್ನು ನೀನು ಕುಡಿಯಬಾರದು.111 ಯಾವುದನ್ನು ತಿನ್ನಬಹುದು ಎಂದು ಹೇಳಿದೆಯೋ ಅದನ್ನು ಮಾತ್ರ ತಿನ್ನಬೇಕು, ತಿನ್ನಬಾರದು ಎಂದು ಹೇಳಿರುವುದನ್ನು ತಿನ್ನಬಾರದು, ಸೇವಿಸಬಹುದು ಎಂದು ಹೇಳಿರುವುದನ್ನು ಮಾತ್ರ ಸೇವಿಸಬಹುದು, ಸೇವಿಸಬಾರದು ಎಂದು ಹೇಳಿರುವುದನ್ನು ಮಾತ್ರ ರುಚಿ ನೋಡಬಹುದು, ರುಚಿ ನೋಡಬಾರದು ಎಂದು ಹೇಳಿರುವುದನ್ನು ರುಚಿ ನೋಡಬಾರದು, ಕುಡಿಯಬಹುದು ಎಂದು ಹೇಳಿರುವುದನ್ನು ಮಾತ್ರ ಕುಡಿಯಬಹುದು, ಕುಡಿಯಬಾರದು ಎಂದು ಹೇಳಿರುವುದನ್ನು ಕುಡಿಯಬಾರದು. ನಿಗಧಿಯಾದ ವೇಳೆಯಲ್ಲಿ ಮಾತ್ರ ತಿನ್ನಬಹುದು, ನಿಗಧಿಯಲ್ಲದ ಅವೇಳೆಯಲ್ಲಿ ತಿನ್ನಬಾರದು, ನಿಗಧಿಯಾದ ವೇಳೆಯಲ್ಲಿ ಮಾತ್ರ ಸೇವಿಸಬಹುದು, ನಿಗಧಿಯಲ್ಲದ ಅವೇಳೆಯಲ್ಲಿ ಸೇವಿಸಬಾರದು, ನಿಗಧಿಯಾದ ವೇಳೆಯಲ್ಲಿ ಮಾತ್ರ ರುಚಿ ನೋಡಬಹುದು, ನಿಗಧಿಯಲ್ಲದ ಅವೇಳೆಯಲ್ಲಿ ರುಚಿ ನೋಡಬಾರದು, ನಿಗಧಿಯಾದ ವೇಳೆಯಲ್ಲಿ ಮಾತ್ರ ಕುಡಿಯಬಹುದು, ನಿಗಧಿಯಲ್ಲದ ಅವೇಳೆಯಲ್ಲಿ ಕುಡಿಯಬಾರದು ಎಂದು ಆತನಿಗೆ ಹೀಗೆ ಎನಿಸುತ್ತದೆ- ನಾನು ಹಿಂದೆ ಮನೆಯಲ್ಲಿರುವಂತಹ ಸ್ಥಿತಿಯಲ್ಲಿ, ನಾನು ಯಾವುದನ್ನು ಬಯಸುತ್ತಿದ್ದೆನೋ ಅದನ್ನು ತಿನ್ನುತ್ತಿದ್ದೆ, ನಾನು ಯಾವುದನ್ನು ಬಯಸುತ್ತಿರಲಿಲ್ಲವೋ ಅದನ್ನು ತಿನ್ನುತ್ತಿರಲಿಲ್ಲ, ನಾನು ಯಾವುದನ್ನು ಬಯಸುತ್ತಿದ್ದೆನೋ ಅದನ್ನು ಸೇವಿಸುತ್ತಿದ್ದೆ, ನಾನು ಯಾವುದನ್ನು ಬಯಸುತ್ತಿರಲಿಲ್ಲವೋ ಅದನ್ನು ಸೇವಿಸುತ್ತಿರಲಿಲ್ಲ. ನಾನು ಯಾವುದನ್ನು ಬಯಸುತ್ತಿದ್ದೆನೋ ಅದನ್ನು ರುಚಿ ನೋಡುತ್ತಿದ್ದೆ, ನಾನು ಯಾವುದನ್ನು ಬಯಸುತ್ತಿರಲಿಲ್ಲವೋ ಅದನ್ನು ರುಚಿ ನೋಡುತ್ತಿರಲಿಲ್ಲ. ನಾನು ಯಾವುದನ್ನು ಬಯಸುತ್ತಿದ್ದೆನೋ ಅದನ್ನು ಕುಡಿಯುತ್ತಿದ್ದೆ, ನಾನು ಯಾವುದನ್ನು ಬಯಸುತ್ತಿರಲಿಲ್ಲವೋ ಅದನ್ನು ಕುಡಿಯುತ್ತಿರಲಿಲ್ಲ. ನಿಗಧಿಯಾದ ವೇಳೆಯಲ್ಲೂ ತಿನ್ನುತ್ತಿದ್ದೆ, ನಿಗಧಿಯಲ್ಲದ ಅವೇಳೆಯಲ್ಲೂ ತಿನ್ನುತ್ತಿದ್ದೆ, ನಿಗಧಿಯಾದ ವೇಳೆಯಲ್ಲೂ ಸೇವಿಸುತ್ತಿದ್ದೆ, ನಿಗಧಿಯಲ್ಲದ ಅವೇಳೆಯಲ್ಲೂ ಸೇವಿಸುತ್ತಿದ್ದೆ,112 ನಿಗಧಿಯಾದ ವೇಳೆಯಲ್ಲೂ ರುಚಿ ನೋಡುತ್ತಿದ್ದೆ, ನಿಗಧಿಯಲ್ಲದ ಅವೇಳೆಯಲ್ಲೂ ರುಚಿ ನೋಡಿತ್ತಿದ್ದೆ, ನಿಗಧಿಯಾದ ವೇಳೆಯಲ್ಲೂ ಕುಡಿಯುತ್ತಿದ್ದೆ, ನಿಗಧಿಯಲ್ಲದ ಅವೇಳೆಯಲ್ಲೂ ಕುಡಿಯುತ್ತಿದ್ದೆ. ಆದರೆ ಶ್ರದ್ಧೆಯಿಂದ ಗೃಹಸ್ಥರುಗಳು ಹಗಲಿನ ಅವೇಳೆಯಲ್ಲಿ ಉತ್ತಮವಾಗಿರುವಂತಹ ಆಹಾರ ಪಾನೀಯಗಳನ್ನು ನೀಡುತ್ತಾರೆ. ಅದರಿಂದಾಗಿ ಅವರುಗಳು ನಮ್ಮ ಬಾಯಿಗಳ ಮೇಲೆ ನಿಯಂತ್ರಣ ಹಾಕುವರೇನು? ಎಂದು. ಆತನು ಹೀಗೆ ಭಿಕ್ಷು ಶಿಕ್ಷಣವನ್ನು ಬಿಟ್ಟವನಾಗಿ ಪ್ರಾಪಂಚಿಕಕ್ಕೆ ಮತ್ತೆ ಹಿಂದಿರುಗುತ್ತಾನೆ. ಭಿಕ್ಷುಗಳೇ, ಇದನ್ನು ನಾನು ಹೇಳುತ್ತೇನೆ, ಮೊಸಳೆಗಳ ಅಪಾಯದಂತಹ ಹೆದರಿಕೆಯಿಂದಾಗಿ ಆತನು ಭಿಕ್ಷು ಶಿಕ್ಷಣವನ್ನು ಬಿಟ್ಟವನಾಗಿ, ಪ್ರಾಪಂಚಿಕಕ್ಕೆ ಮತ್ತೆ ಹಿಂದಿರುಗುತ್ತಾನೆ. ಮೊಸಳೆಗಳ ಅಪಾಯ ಎಂಬುದು, ಭಿಕ್ಷುಗಳೇ ಹೊಟ್ಟೆಬಾಕತನದ ಇನ್ನೊಂದು ಹೆಸರು.

ಸುಳಿಗಳ ಅಪಾಯ

8. ಭಿಕ್ಷುಗಳೇ, ಯಾವುದದು ಸುಳಿಗಳ ಅಪಾಯ? ಇಲ್ಲಿ ಭಿಕ್ಷುಗಳೇ, ಯಾರೊಬ್ಬ ಕುಟುಂಬದ ಮಗನು, ಈ ನಂಬುಗೆಯಿಂದಾಗಿ ಮನೆಬಿಟ್ಟು ಮನೆ ತೊರೆದವನಾಗಿ ಪಬ್ಬಜಿತನಾಗುತ್ತಾನೆ- ಹುಟ್ಟಿನಿಂದಾಗಿ, ಮುಪ್ಪಿನಿಂದಾಗಿ, ಮರಣದಿಂದಾಗಿ, ಶೋಕದಿಂದಾಗಿ, ವ್ಯಸನದಿಂದಾಗಿ, ದುಃಖದಿಂದಾಗಿ, ಕ್ರಂದನದಿಂದಾಗಿ ಮತ್ತು ಬೀಳುಮನದಿಂದಾಗಿ ಆವರಿಸಲ್ಪಟ್ಟಿದ್ದೇನೆ. ದುಃಖದಿಂದ ಪೂರ್ತಿಯಾಗಿ ಆವರಿಸಲ್ಪಟ್ಟಿದ್ದೇನೆ. ದುಃಖದಿಂದ ಪೂರ್ಣವಾಗಿ ಮುಳುಗಿಹೋಗಿದ್ದೇನೆ. ಆದರೆ ಈ ಅಗಾಧವಾದ ದುಃಖದ ರಾಶಿಯ ಕೊನೆಗೊಳ್ಳಿಸುವಿಕೆಯನ್ನು ಕಾಣಲು ಸಾದ್ಯ ಎಂದು ನಂಬಿರುತ್ತೇನೆ ಎಂದು ಆತನು ಹೀಗೆ ಪಬ್ಬಜಿತನಾದಂತಹವನು, ಬೆಳಗಿನ ಸಮಯದಲ್ಲಿ ಸಿದ್ಧನಾಗಿ, ಭಿಕ್ಷಾ ಪಾತ್ರೆ ಮತ್ತು ಚೀವರನ್ನು ತೆಗೆದುಕೊಂಡವನಾಗಿ, ಹಳ್ಳಿಗೆ ಅಥವಾ ಪಟ್ಟಣಕ್ಕೆ ಭಿಕ್ಷಾಟನೆಗಾಗಿ ಹೊರಡುವನು. ಆದರೆ ಆತನು ತನ್ನ ಶರೀರದ ಮೇಲೆ ಎಚ್ಚರಿಕೆಯನ್ನು ಹೊಂದಿಲ್ಲದೆ, ತನ್ನ ಮಾತಿನ ಮೇಲೆ ಎಚ್ಚರಿಕೆಯನ್ನು ಹೊಂದಿಲ್ಲದೆ, ಜಾಗ್ರತೆಯಾಗಿರುವಂತಹ ಸ್ಮೃತಿಯನ್ನು ಹೊಂದಿಲ್ಲದೆ, ಇಂದ್ರಿಯಗಳನ್ನು ಸಂಯಮದಲ್ಲಿಟ್ಟುಕೊಳ್ಳದೆ, ಹಾಗಿರುವಾಗ ಗೃಹಸ್ಥನನ್ನು ಅಥವಾ ಗೃಹಸ್ಥರ ಮಗನನ್ನು ಆತನು ಐದು ಇಂದ್ರಿಯಗಳಿಗೆ ಹೊಂದಿದ ಸುಖಗಳಲ್ಲಿ ಇರುವುದನ್ನು ಮತ್ತು ಅದರಲ್ಲಿ ಆನಂದಿಸುತ್ತಾ ಮೈಮರೆಯುವುದನ್ನು ಅಲ್ಲಿ ಕಾಣುತ್ತಾನೆ. ಆತನಿಗೆ ಹೀಗೆ ಅನಿಸುತ್ತದೆ- ನಾನು ಹಿಂದೆ ಮನೆಯಲ್ಲಿರುವವನಾಗಿದ್ದಾಗ ಐದು ಇಂದ್ರಿಯಗಳಿಗೆ ಹೊಂದಿದ ಸುಖಗಳಲ್ಲಿ ಇರುವ ಮತ್ತು ಅದರಲ್ಲಿ ಆನಂದಿಸುತ್ತಾ ಮೈಮರೆಯಬಹುದಾಗಿತ್ತು. ನನ್ನ ಮನೆಯಲ್ಲಿ ಬೇಕಾದ ಹಾಗೆ ಐಶ್ವರ್ಯ ಅನುಕೂಲಗಳಿವೆ. ಅದರಿಂದಾಗಿ ಭೋಗ ಸುಖವನ್ನು ಅನುಭವಿಸಲೂಬಹುದು. ಅಂತೆಯೇ ಪುಣ್ಯಾದಿ ಕಾರ್ಯಗಳನ್ನು ಮಾಡಲೂಬಹುದು ಎಂದು. ಆತನು ಭಿಕ್ಷು ಶಿಕ್ಷಣವನ್ನು ಬಿಟ್ಟವನಾಗಿ ಪ್ರಾಪಂಚಿಕಕ್ಕೆ ಮತ್ತೆ ಹಿಂದಿರುಗುತ್ತಾನೆ. ಭಿಕ್ಷುಗಳೇ, ಇದಕ್ಕೆ ನಾನು ಹೇಳುತ್ತೇನೆ, ಸುಳಿಗಳಿಂದಾಗುವ ಅಪಾಯಕ್ಕೆ ಹೆದರಿದವನಾಗಿ, ಭಿಕ್ಷು ಶಿಕ್ಷಣವನ್ನು ಬಿಟ್ಟವನಾಗಿ ಹೀನವಾದ ಪ್ರಾಪಂಚಿಕಕ್ಕೆ ಮರಳುತ್ತಾನೆ. ಸುಳಿಗಳ ಅಪಾಯ ಎಂಬುದು ಭಿಕ್ಷುಗಳೇ, ಐದು ಇಂದ್ರಿಯಗಳ ಕಾಮಗುಣಕ್ಕೆ ಇನ್ನೊಂದು ಸಮಾನವಾದಂತಹ ಹೆಸರು.

ಕ್ರೂರ ಮೀನುಗಳ ಅಪಾಯ

9. ಭಿಕ್ಷುಗಳೇ, ಯಾವುದದು ಕ್ರೂರ ಮೀನುಗಳ ಅಪಾಯ? ಇಲ್ಲಿ ಭಿಕ್ಷುಗಳೇ, ಯಾರೊಬ್ಬ ಕುಟುಂಬದ ಮಗನು, ಮನೆ ಬಿಟ್ಟು ಮನೆ ತೊರೆದವನಾಗಿ, ಈ ನಂಬುಗೆಯಿಂದ ಪಬ್ಬಜಿತನಾಗುತ್ತಾನೆ- ಹುಟ್ಟಿನಿಂದಾಗಿ, ಮುಪ್ಪಿನಿಂದಾಗಿ, ಮರಣದಿಂದಾಗಿ, ಶೋಕದಿಂದಾಗಿ, ವ್ಯಸನದಿಂದಾಗಿ, ದುಃಖದಿಮದಾಗಿ, ಕ್ರಂದನದಿಂದಾಗಿ ಮತ್ತು ಬಿಳುಮನದಿಂದಾಗಿ ಆವರಿಸಲ್ಪಟ್ಟಿದ್ದೇನೆ. ದುಃಖದಿಂದ ಪೂರ್ತಿಯಾಗಿ ಆವರಿಸಲ್ಪಟ್ಟಿದ್ದೇನೆ. ದುಃಖದಿಂದ ಪೂರ್ಣವಾಗಿ ಮುಳುಗಿಹೋಗಿದ್ದೇನೆ; ಆದರೆ ಈ ಅಗಾಧವಾದ ದುಃಖದ ರಾಶಿಯ ಕೊನೆಗೊಳಿಸುವಿಕೆಯನ್ನು ಕಾಣಲು ಸಾಧ್ಯ ಎಂದು ನಂಬಿರುತ್ತೇನೆ ಎಂದು. ಆತನು ಹಿಗೆ ಪಬ್ಬಜಿತನಾದಂತಹವನು, ಬೆಳಗಿನ ಸಮಯದಲ್ಲಿ ಸಿದ್ಧನಾಗಿ, ಭಿಕ್ಷಾಪಾತ್ರೆ ಮತ್ತು ಚೀವರವನ್ನು ತೆಗೆದುಕೊಂಡವನಾಗಿ ಹಳ್ಳಿಗೆ ಅಥವಾ ಪಟ್ಟಣಕ್ಕೆ ಭಿಕ್ಷಾಟನೆಗಾಗಿ ಹೊರಡುವನು. ಆತನು ತನ್ನ ಶರೀರದ ಮೇಲೆ ಎಚ್ಚರಿಕೆಯನ್ನು ಹೊಂದಿಲ್ಲದೆ, ತನ್ನ ಮಾತಿನ ಮೇಲೆ ಎಚ್ಚರಿಕೆಯನ್ನು ಹೊಂದಿಲ್ಲದೆ, ಜಾಗ್ರತೆಯಾಗಿರುವಂತಹ ಸ್ಮೃತಿಯನ್ನು ಹೊಂದಿಲ್ಲದೆ, ಇಂದ್ರಿಯಗಳನ್ನು ಸಂಯಮದಲ್ಲಿಟ್ಟುಕೊಳ್ಳದೆ, ಹಾಗಿರುವಾಗ, ಸರಿಯಾಗಿ ಬಟ್ಟೆ ಹಾಕಿಕೊಳ್ಳದೆ ಇರುವಂತಹ ಅಥವಾ ಅರಬರೆ ಬಟ್ಟೆ ಹಾಕಿರುವಂತಹ ಹೆಂಗಸನ್ನು ಅಲ್ಲಿ ನೋಡುತ್ತಾನೆ. ಹಾಗೆ ಆತನು ಸರಿಯಾಗಿ ಬಟ್ಟೆ ಹಾಕದಿರುವಂತಹ ಅಥವಾ ಅರಬರೆ ಬಟ್ಟೆ ಹಾಕಿರುವಂತಹ ಹೆಂಗಸನ್ನು ಕಂಡಾಗ, ಆತನ ಮನಸ್ಸಿನಲ್ಲಿ ರಾಗವು ಉಂಟಾಗುವುದು. ಆತನ ಮನಸ್ಸಿನಲ್ಲಿ ಹೀಗೆ ರಾಗವುಂಟಾದ್ದರಿಂದಾಗಿ, ಭಿಕ್ಷು ಶಿಕ್ಷಣವನ್ನು ಬಿಟ್ಟವನಾಗಿ, ಹೀನವಾದಂತಹ ಪ್ರಾಪಂಚಿಕಕ್ಕೆ ಮರಳುತ್ತಾನೆ, ಭಿಕ್ಷುಳೇ, ಇದಕ್ಕೆ ನಾನು ಹೇಳುತ್ತೇನೆ, ಕ್ರೂರ ಮೀನುಗಳ ಅಪಾಯದಿಂದ ಹೆದರಿದವನಾಗಿ, ಭಿಕ್ಷು ಶಿಕ್ಷಣವನ್ನು ಬಿಟ್ಟವನಾಗಿ ಪ್ರಾಪಂಚಿಕಕ್ಕೆ ಮತ್ತೆ ಹಿಂದಿರುಗುತ್ತಾನೆ. ಕ್ರೂರ ಮೀನುಗಳ ಅಪಾಯ ಎಂಬುದು ಭಿಕ್ಷುಗಳೇ, ಹೆಂಗಸಿನ ಬಗೆಗೆ ಹೇಳುವ ಇನ್ನೊಂದು ಹೆಸರು. ಭಿಕ್ಷುಗಳೇ, ಇವುಗಳೇ ಆ ನಾಲು ಅಪಾಯಗಳು, ಮನೆ ಬಿಟ್ಟು ಮನೆ ತೊರೆದವನಾಗಿ ಪಬ್ಬಜಿತರಾಗುವ ಕೆಲವು ಮನುಷ್ಯರುಗಳು ಧಮ್ಮ ಮತ್ತು ವಿನಯದಲ್ಲಿರುವಾಗ ಎದುರಾಗುವಂತಹವುಗಳು ಎಂದು ಕಾಣತಕ್ಕದ್ದು ಎಂದು.

ಭಗವಾನರು ಹೀಗೆ ನುಡಿದರು. ಭಗವಾನರ ನುಡಿಗಳಿಗೆ ಆನಂದಗೊಂಡ ಭಿಕ್ಷುಗಳು ಅಭಿವಂದಿಸಿದರು ಎಂದು.

ಇಲ್ಲಿಗೆ ಚಾತುಮ ಸುತ್ತ ಮುಗಿಯಿತು

ಟಿಪ್ಪಣಿಗಳು [4]