ಊಟಿಸುತ್ತಿದೆ

ಅನುವಾದಗಳು [26]

ನಳಕಪಾನ ಸುತ್ತ

ನಳಕಪಾನ ಸುತ್ತ

1. ಅನುರುದ್ಧನನ್ನು ಕುರಿತು ಭಗವಾನರ ಉಪದೇಶ

ಹೀಗೆ ನಾನು ಕೇಳಿದ್ದೇನೆ. ಒಂದು ಸಮಯದಲ್ಲಿ ಭಗವಾನರು ಕೋಸಲದ ನಳಕಪಾನದ ಪಲಾಸವನದಲ್ಲಿ (ಕಂದು ನೀಲಿ ಬಣ್ಣದ ಹೂ ಬಿಡುವ ಮರ) ತಂಗಿದ್ದರು. ಅಂತಹ ಒಂದು ಸಂದರ್ಭದಲ್ಲಿ ಬಹಳಷ್ಟು ಜನ ಹೆಸರಾಂತ ಪ್ರಮುಖ ಕುಟುಂಬದ ಮಕ್ಕಳು ಭಗವಾನರ ಬಗ್ಗೆ ಶ್ರದ್ಧೆ ಹೊಂದಿದವರಾಗಿದ್ದರಿಂದ, ಮನೆಬಿಟ್ಟು ಮನೆಯಿಲ್ಲದವರಾಗಿ, ಪಬ್ಬಜಿತರಾದರು- ಆಯುಷ್ಮಂತ ಅನುರುದ್ಧ ಆಯುಷ್ಮಂತ ಭದ್ದಿಯ, ಆಯುಷ್ಮಂತ ರೇವತ, ಆಯುಷ್ಮಂತ ಆನಂದ ಮತ್ತು ಇನ್ನೂ ಅನೇಕರು ಹೆಸರಾಂತ ಪ್ರಮುಖ ಕುಟುಂಬದ ಮಕ್ಕಳು. ಅಂತಹ ಒಂದು ಸಮಯದಲ್ಲಿ ಭಗವಾನರು ಭಿಕ್ಷು ಸಂಘ ಸಮೂಹದೊಂದಿಗೆ ಒಂದು ಬಯಲು ಪ್ರದೇಶದಲ್ಲಿ ಕುಳಿತವರಾಗಿದ್ದರು. ಆಗ ಭಗವಾನರು ಆ ಕುಟುಂಬದ ಮಕ್ಕಳನ್ನು ಕುರಿತವರಾಗಿ ಉಳಿದ ಭಿಕ್ಷುಗಳನ್ನು ಕೇಳಿದರು- ಭಿಕ್ಷುಗಳೇ ಕುಟುಂಬದ ಮಕ್ಕಳಾಗಿದ್ದಂತಹವರು ನನ್ನ ಮೇಲೆ ಶ್ರದ್ಧೆಯಿಟ್ಟವರಾಗಿ, ಮನೆ ಬಿಟ್ಟು ಮನೆಯಿಲ್ಲದವರಾಗಿ ಪಬ್ಬಜಿತರಾಗಿರುವರು. ಭಿಕ್ಷುಗಳೇ, ಅವರುಗಳು ಈ ಭಿಕ್ಷು ಬ್ರಹ್ಮಚರ್ಯ ಜೀವನದಲ್ಲಿ ಆನಂದದಿಂದಿರುವಿರೋ ಹೇಗೆ? ಎಂದು. ಹೀಗೆ ಹೇಳಿದಾಗ ಭಿಕ್ಷುಗಳು ಮೌನವಾಗಿಯೇ ಉಳಿದರು. ಎರಡನೆಯಬಾರಿ ಭಗವಾನರು ಕುಟುಂಬದ ಮಕ್ಕಳಾಗಿದ್ದಂತಹವನ್ನು ಕುರಿತು ಭಿಕ್ಷುಗಳನ್ನು ಉದ್ದೇಶಿಸಿದವರಾಗಿ ಹೀಗೆ ಹೇಳಿದರು- ಭಿಕ್ಷುಗಳೇ ಕುಟುಂಬದ ಮಕ್ಕಳಾಗಿದ್ದಂತಹವರು ನನ್ನ ಮೇಲೆ ಶ್ರದ್ಧೆಯಿಟ್ಟವರಾಗಿ, ಮನೆ ಬಿಟ್ಟು ಮನೆಯಿಲ್ಲದವರಾಗಿ ಪಬ್ಬಜಿತರಾಗಿರುವರು. ಭಿಕ್ಷುಗಳೇ, ಅವರುಗಳು ಈ ಭಿಕ್ಷು ಬ್ರಹ್ಮಚರ್ಯ ಜೀವನದಲ್ಲಿ ಆನಂದದಿಂದಿರುವಿರೋ ಹೇಗೆ? ಎಂದು. ಎರಡನೆಯಬಾರಿಯೂ ಸಹ ಹೀಗೆ ಕೇಳಿದಾಗ ಭಿಕ್ಷುಗಳು ಮೌನವಾಗಿಯೇ ಉಳಿದರು. ಮೂರನೆಯಬಾರಿ ಭಗವಾನರು ಕುಟುಂಬದ ಮಕ್ಕಳಾಗಿದ್ದಂತಹವರನ್ನು ಕುರಿತು ಭಿಕ್ಷುಗಳನ್ನು ಉದ್ದೇಶಿಸಿದವರಾಗಿ ಹೀಗೆ ಹೇಳಿದರು- ಭಿಕ್ಷುಗಳೇ ಕುಟುಂಬದ ಮಕ್ಕಳಾಗಿದ್ದಂತಹವರು ನನ್ನ ಮೇಲೆ ಶ್ರದ್ಧೆಯಿಟ್ಟವರಾಗಿ, ಮನೆ ಬಿಟ್ಟು ಮನೆಯಿಲ್ಲದವರಾಗಿ ಪಬ್ಬಜಿತರಾಗಿರುವರು. ಭಿಕ್ಷುಗಳೇ, ಅವರುಗಳು ಈ ಭಿಕ್ಷು ಬ್ರಹ್ಮಚರ್ಯ ಜೀವನದಲ್ಲಿ ಆನಂದದಿಂದಿರುವಿರೋ ಹೇಗೆ? ಎಂದು. ಮೂರನೇ ಬಾರಿಯೂ ಕೂಡ ಹೀಗೆ ಕೇಳಿದಾಗ ಭಿಕ್ಷುಗಳು ಮೌನವಾಗಿಯೇ ಉಳಿದರು.

2. ಆಗ ಭಗವಾನರಿಗೆ ಹೀಗೆ ಅನ್ನಿಸಿತು- ಒಂದುವೇಳೆ ನಾನು ಕುಟುಂಬದ ಮಕ್ಕಳನ್ನೇ ಕೇಳಿದರೆ ಹೇಗೆ? ಎಂದು. ಆಗ ಭಗವಾನರು ಆಯುಷ್ಮಂತ ಅನುರುದ್ಧನನ್ನು ಕುರಿತು ಹೀಗೆ ಹೇಳಿದರು- ಅನುರುದ್ಧ, ನೀವುಗಳು ಬ್ರಹ್ಮಚರ್ಯ ಜೀವನದಲ್ಲಿ ಆನಂದದಿಂದಿರುವಿರೋ ಹೇಗೆ? ಎಂದು.

ಭಂತೆ, ನಿಜಕ್ಕೂ ನಾವು ಬ್ರಹ್ಮಚರ್ಯ ಜೀವನದಲ್ಲಿ ಆನಂದದಿಂದಿರುವೆವು ಎಂದು.

ಒಳ್ಳೆಯದು, ಒಳ್ಳೆಯದು ಅನುರುದ್ಧ! ಆನುರುದ್ಧ, ಈ ರೀತಿಯಾಗಿ ನಿಮ್ಮಂಥ ಕುಟುಂಬದ ಮಕ್ಕಳುಗಳು ಶ್ರದ್ಧೆಯಿಂದಾಗಿ ಮನೆಬಿಟ್ಟು ಮನೆಯಿಲ್ಲದವರಾಗಿ ಪಬ್ಬಜಿತರಾಗಿರುವವರು, ನೀವುಗಳು ಹೀಗೆ ಬ್ರಹ್ಮಚರ್ಯ ಜೀವನದಲ್ಲಿ ಆನಂದವಾಗಿರುವುದು ನಿಜಕ್ಕೂ ನಿಮಗೆ ಯುಕ್ತವಾಗಿರುವಂತಿದೆ. ಅನುರುದ್ದ, ನೀವುಗಳು, ಸದೃಢವಾಗಿರುವಂತಹ ತಾರುಣ್ಯ ತುಂಬಿರುವಂತಹ ಜೀವನದ ಮೊದಲನೇ ಕಾಲದ ವಯಸ್ಸಿನಲ್ಲಿ, ತಲೆಕೂದಲು ಇನ್ನೂ ಕಪ್ಪಾಗಿರುವಂತಹ ಸಮಯದಲ್ಲಿ, ಇಂದ್ರಿಯ ಸುಖಭೋಗಗಳನ್ನು ಆನಂದಿಸುತ್ತ ಮೈಮರೆಯುವಂತಹ, ಅಂತಹ ಕಾಲದಲ್ಲಿ ಅದನ್ನು ತಿಳಿದು ನೀವುಗಳು, ಅನುರುದ್ಧ, ಸದೃಢವಾದ ತಾರುಣ್ಯ ತುಂಬಿದ ಜೀವನದ ಮೊದಲ ಕಾಲದಲ್ಲಿ ತಲೆಗೂದಲು ಕಪ್ಪಾಗಿರುವಂತಹ ಸಮಯದಲ್ಲಿ, ಮನೆಬಿಟ್ಟು ಮನೆಯಿಲ್ಲದವರಾಗಿ ಪಬ್ಬಜಿತರಾಗಿರುವಿರಿ. ಅದೂ ಅಲ್ಲದೆ, ನೀವುಗಳು, ಅನುರುದ್ಧ, ರಾಜರುಗಳ ಸೂಚನೆಯಿಂದಾಗಿ ಮನೆಬಿಟ್ಟು ಮನೆಯಿಲ್ಲದವರಾಗಿ ಪಬ್ಬಜಿತರಾದವರಲ್ಲ, ಅಥವಾ ಕಳ್ಳರುಗಳ ಸೂಚನೆಯಿಂದಾಗಿ ಮನೆಬಿಟ್ಟು ಮನೆಯಿಲ್ಲದವರಾಗಿ ಪಬ್ಬಜಿತರಾದವರಲ್ಲ ಅಥವಾ ಸಾಲದ ಹೊರೆಯಿಂದಾಗಿ ಮನೆಬಿಟ್ಟು ಮನೆಯಿಲ್ಲದವರಾಗಿ ಪಬ್ಬಜಿತರಾದವರಲ್ಲ ಅಥವಾ ಹೆದರಿಕೆಯಿಂದಾಗಿ ಮನೆಬಿಟ್ಟು ಮನೆಯಿಲ್ಲದವರಾಗಿ ಪಬ್ಬಜಿತರಾದವರಲ್ಲ, ಅಥವಾ ಹೆದರಿಕೆಯಿಂದಾಗಿ ಮನೆಬಿಟ್ಟು ಮನೆಯಿಲ್ಲದವರಾಗಿ ಪಬ್ಬಜಿತರಾದವರಲ್ಲ, ಅಥವಾ ಬದುಕಲು ಯಾವ ಜೀವನೋಪಾಯವೂ ಇಲ್ಲದ್ದರಿಂದಾಗಿ, ಮನೆಬಿಟ್ಟು ಮನೆಯಿಲ್ಲದವರಾಗಿ ಪಬ್ಬಜಿತರಾದವರಲ್ಲ. ಹಾಗಲ್ಲದೆ ನೀವುಗಳು, ಹುಟ್ಟಿನಿಂದಾಗಿ, ಮುಪ್ಪಿನಿಂದಾಗಿ, ಮರಣದಿಂದಾಗಿ, ಶೋಕದಿಂದಾಗಿ, ವ್ಯಸನದಿಂದಾಗಿ, ದುಃಖದಿಂದಾಗಿ, ಕ್ರಂದನದಿಂದಾಗಿ, ಬೀಳುಮನದಿಂದಾಗಿ ಆವರಿಸಲ್ಪಟ್ಟಿದ್ದೇವೆ, ದುಃಖದಿಂದ ಪೂರ್ತಿಯಾಗಿ ಆವರಿಸಲ್ಪಟ್ಟಿದ್ದೇವೆ, ದುಃಖದಿಂದ ಪೂರ್ಣವಾಗಿ ಮುಳುಗಿ ಹೋಗಿದ್ದೇವೆ. ಇಂತಹ ಈ ಅಗಾಧವಾದ ದುಃಖದ ರಾಶಿಯ ಕೊನೆಗೊಳಿಸುವಿಕೆಯನ್ನು ಕಾಣಲು ಸಾಧ್ಯ ಎಂಬ ನಂಬುಗೆಯಿಂದ, ಅಲ್ಲವೆ ಅನುರುದ್ಧ, ನೀವುಗಳು ಇಂತಹ ಶ್ರದ್ಧೆಯಿಂದಾಗಿ ಮನೆಬಿಟ್ಟು ಮನೆಯಿಲ್ಲದವರಾಗಿ ಪಬ್ಬಜಿತರಾಗಿರುವುದು? ಎಂದು.

ಹೌದು ಭಂತೆ.

ಆದರೆ ಅನುರುದ್ಧರುಗಳೇ, ಈ ರೀತಿಯಾಗಿ ಪಬ್ಬಜಿತರಾದ ಬಳಿಕ ಆ ಕುಟುಂಬದ ಮಕ್ಕಳು ಮಾಡಬೇಕಾದುದೇನು? ಅನುರುದ್ಧರುಗಳೇ, ಇಂದ್ರಿಯ ಸುಖಭೋಗದಿಂದ ದೂರವುಳಿದು ಅಕುಶಲ ಧರ್ಮವಿಷಯಗಳಿಂದ ದೂರವುಳಿದು ಆನಂದ ಮತ್ತು ಸುಖವನ್ನು ಅಥವಾ ಅಂತಹ ಬೇರೆತರನಾದ, ಹೆಚ್ಚಿನದಾದ, ಶಾಂತಿಯುತ ಸ್ಥಿತಿಯನ್ನು ಪಡೆಯದೆ ಉಳಿದರೆ, ಆಗ ಆತನ ಮನಸ್ಸನ್ನು ದುರಾಸೆಯು ಆಕ್ರಮಿಸಿಕೊಂಡು ಉಳಿದುಬಿಡುತ್ತದೆ, ಮನಸ್ಸನ್ನು ಹಗೆತನವು ಆಕ್ರಮಿಸಿಕೊಂಡು ಉಳಿದುಬಿಡುತ್ತದೆ, ಮನಸ್ಸನ್ನು ಸೋಮಾರಿತನ ಮತ್ತು ಮೊದ್ದುತನ ಆಕ್ರಮಿಸಿಕೊಂಡು ಉಳಿದುಬಿಡುತ್ತದೆ. ಮನಸ್ಸನ್ನು ಚಂಚಲತೆ ಮತ್ತು ಚಿಂತೆ ಆಕ್ರಮಿಸಿಕೊಂಡು ಉಳಿದುಬಿಡುತ್ತದೆ. ಮನಸ್ಸನ್ನು ಸಂದೇಹವು ಆಕ್ರಮಿಸಿಕೊಂಡು ಉಳಿದುಬಿಡುತ್ತದೆ, ಮನಸ್ಸನ್ನು ಅತೃಪ್ತಿಯು ಆಕ್ರಮಿಸಿಕೊಂಡು ಉಳಿದುಬಿಡುತ್ತದೆ, ಮನಸ್ಸನ್ನು ಜಡತೆಯು ಆಕ್ರಮಿಸಿಕೊಂಡು ಉಳಿದುಬಿಡುತ್ತದೆ, ಅನುರುದ್ಧರುಗಳೆ, ಇಂದ್ರಿಯ ಸುಖಭೋಗದಿಂದ ದೂರವುಳಿದು, ಅಕುಶಲ ಧರ್ಮ ವಿಷಯಗಳಿಂದ ದೂರವುಳಿದು, ಆನಂದ ಮತ್ತು ಸುಖವನ್ನು ಅಥವಾ ಅಂತಹ ಬೇರೆ ತೆರನಾದ ಹೆಚ್ಚಿನದಾದ ಶಾಂತಿಯುತ ಸ್ಥಿತಿಯನ್ನು ಪಡೆಯದೆ ಹೀಗೆ ಉಳಿಯುವನು.

ಅನುರುದ್ಧರುಗಳೇ, ಇಂದ್ರಿಯ ಸುಖಭೋಗದಿಂದ ದೂರವುಳಿದು, ಅಕುಶಲ ಧರ್ಮ ವಿಷಯಗಳಿಂದ ದೂರವುಳಿದು, ಆನಂದ ಮತ್ತು ಸುಖವನ್ನು ಅಥವಾ ಅಂತಹ ಬೇರೆ ತೆರನಾದ ಹೆಚ್ಚಿನದಾದ ಶಾಂತಿಯುತ ಸ್ಥಿತಿಯನ್ನು ಪಡೆದು ಉಳಿದಾಗ, ಆಗ ಆತನ ಮನಸ್ಸನ್ನು ದುರಾಶೆಯು ಆಕ್ರಮಿಸಿಕೊಂಡು ಉಳಿಯುವುದಿಲ್ಲ, ಮನಸ್ಸನ್ನು ಹಗೆತನವು ಆಕ್ರಮಿಸಿಕೊಂಡು ಉಳಿಯುವುದಿಲ್ಲ, ಮನಸ್ಸನ್ನು ಸೋಮಾರಿತನ ಮತ್ತು ಮೊದ್ದುತನ ಆಕ್ರಮಿಸಿಕೊಂಡು ಉಳಿಯುವುದಿಲ್ಲ, ಮನಸ್ಸನ್ನು ಚಂಚಲತೆ ಮತ್ತು ಚಿಂತೆ ಆಕ್ರಮಿಸಿಕೊಂಡು ಉಳಿಯುವುದಿಲ್ಲ, ಮನಸ್ಸನ್ನು ಸಂದೇಹವು ಆಕ್ರಮಿಸಿಕೊಂಡು ಉಳಿಯುವುದಿಲ್ಲ, ಮನಸ್ಸನ್ನು ಅತೃಪ್ತಿಯು ಆಕ್ರಮಿಸಿಕೊಂಡು ಉಳಿಯುವುದಿಲ್ಲ, ಮನಸ್ಸನ್ನು ಜಡತೆಯು ಆಕ್ರಮಿಸಿಕೊಂಡು ಉಳಿಯುವುದಿಲ್ಲ. ಅನುರುದ್ಧರುಗಳೇ, ಇಂದ್ರಿಯ ಸುಖಭೋಗದಿಂದ ದೂರವುಳಿದು, ಅಕುಶಲ ಧರ್ಮ ವಿಷಯಗಳಿಂದ ದೂರವುಳಿದು, ಆನಂದ ಮತ್ತು ಸುಖವನ್ನು ಅಥವಾ ಅಂತಹ ಬೇರೆ ತೆರನಾದ ಹೆಚ್ಚಿನದಾದ ಶಾಂತಿಯುತ ಸ್ಥಿತಿಯನ್ನು ಪಡೆದು ಹೀಗೆ ಉಳಿಯುವನು.

3. ಅನುರುದ್ಧರುಗಳೇ, ನನ್ನ ಬಗೆಗೆ ನೀವು ಹೇಗೆ ಯೋಚಿಸುವಿರಿ- ಯಾವ ಆಸವಗಳು ಕ್ಲೇಶಗಳನ್ನು ಉಂಟುಮಾಡುವಂತಹವೋ ಮತ್ತೆ ಮರುಹುಟ್ಟನ್ನು ಉಂಟುಮಾಡುವಂತಹವೋ, ಭಯಾನಕವಾಗಿರುವಂತಹವೋ, ಅವು ಮಾಗಿ ದುಃಖವನ್ನು ತರುವಂತಹವೋ, ಮುಂದೆ ಹುಟ್ಟು, ಮುಪ್ಪು, ಮರಣವನ್ನು ಉಂಟುಮಾಡುವಂತಹವು. ಇವುಗಳು ತಥಾಗತರಿಂದ ತೊಡೆದುಹಾಕಲ್ಪಟ್ಟಿಲ್ಲ; ಆದ್ದರಿಂದಾಗಿ ತಥಾಗತರು ಪರಿಗಣಿಸುವುದರಿಂದಾಗಿ ಒಂದನ್ನು ಮುಂದುವರಿಸುತ್ತಾರೆ, ಪರಿಗಣಿಸುವುದರಿಂದಾಗಿ ಇನ್ನೊಂದನ್ನು ಹೊಂದಿದವರಾಗುತ್ತಾರೆ, ಪರಿಗಣಿಸುವುದರಿಂದಾಗಿ ಮತ್ತೊಂದನ್ನು ದೂರ ಮಾಡುತ್ತಾರೆ, ಪರಿಗಣಿಸುವುದರಿಂದಾಗಿ ಬೇರೊಂದನ್ನು ಹೊರಹಾಕುತ್ತಾರೆ ಎಂದು.

ಇಲ್ಲ ಭಂತೆ, ನಾವು ಭಗವಾನರ ಬಗ್ಗೆ ಹೀಗೆ ಯೋಚಿಸುವುದಿಲ್ಲ- ಯಾವ ಆಸವಗಳು ಕ್ಲೇಶಗಳನ್ನು ಉಂಟುಮಾಡುವಂತಹವೋ ಮತ್ತೆ ಮರುಹುಟ್ಟನ್ನು ಉಂಟುಮಾಡುವಂತಹವೋ, ಭಯಾನಕವಾಗಿರುವಂತಹವೋ, ಅವು ಮಾಗಿ ದುಃಖವನ್ನು ತರುವಂತಹವೋ, ಮುಂದೆ ಹುಟ್ಟು, ಮುಪ್ಪು, ಮರಣವನ್ನು ಉಂಟುಮಾಡುವಂತಹವು. ಇವುಗಳು ತಥಾಗತರಿಂದ ತೊಡೆದುಹಾಕಲ್ಪಟ್ಟಿಲ್ಲ; ಆದ್ದರಿಂದಾಗಿ ತಥಾಗತರು ಪರಿಗಣಿಸುವುದರಿಂದಾಗಿ ಒಂದನ್ನು ಮುಂದುವರಿಸುತ್ತಾರೆ, ಪರಿಗಣಿಸುವುದರಿಂದಾಗಿ ಇನ್ನೊಂದನ್ನು ಹೊಂದಿದವರಾಗುತ್ತಾರೆ, ಪರಿಗಣಿಸುವುದರಿಂದಾಗಿ ಮತ್ತೊಂದನ್ನು ದೂರ ಮಾಡುತ್ತಾರೆ, ಪರಿಗಣಿಸುವುದರಿಂದಾಗಿ ಬೇರೊಂದನ್ನು ಹೊರಹಾಕುತ್ತಾರೆ. ಭಂತೆ, ನಾವು ಭಗವಾನರ ಬಗ್ಗೆ ಹೀಗೆ ಯೋಚಿಸುತ್ತೇವೆ- ಯಾವ ಆಸವಗಳು ಕ್ಲೇಶಗಳನ್ನು ಉಂಟುಮಾಡುವವೋ ಮತ್ತೆ ಮರುಹುಟ್ಟನ್ನು ಉಂಟುಮಾಡುವವೋ, ಭಯಾನಕ ವಾಗಿರುವವೋ, ಅವು ಮಾಗಿ ದುಃಖವನ್ನು ತರುವಂತಹವೋ, ಮುಂದೆ ಹುಟ್ಟು, ಮುಪ್ಪು, ಮರಣವನ್ನು ಉಂಟುಮಾಡುವವೋ. ಇವುಗಳು ತಥಾಗತರಿಂದ ತೊಡೆದುಹಾಕಲ್ಪಟ್ಟಿದೆ. ಆದ್ದರಿಂದಾಗಿ ಭಗವಾನರು ತಥಾಗತರು ಪರಿಣಿಸುವುದರಿಂದಾಗಿ ಒಂದನ್ನು ಮುಂದುವರೆಸುತ್ತಾರೆ, ಪರಿಣಿಸುವುದರಿಂದಾಗಿ ಇನ್ನೊಂದನ್ನು ಹೊಂದಿದವರಾಗುತ್ತಾರೆ, ಪರಿಗಣಿಸುವುದರಿಂದಾಗಿ ಮತ್ತೊಂದನ್ನು ದೂರಮಾಡುತ್ತಾರೆ, ಪರಿಗಣಿಸುವುದರಿಂದಾಗಿ ಬೇರೊಂದನ್ನು ಹೊರಹಾಕುತ್ತಾರೆ ಎಂದು.

ಒಳ್ಳೆಯದು, ಒಳ್ಳೆಯದು ಅನುರುದ್ಧರುಗಳೇ! ಅನುರುದ್ಧರುಗಳೇ, ಯಾವ ಆಸವಗಳು ಕ್ಲೇಶಗಳನ್ನು ಉಂಟುಮಾಡುವವೋ ಮತ್ತೆ ಮರುಹುಟ್ಟನ್ನು ಉಂಟುಮಾಡುವುವೋ, ಭಯಾನಕವಾಗಿರುವಂತಹವೋ, ಮಾಗಿ ದುಃಖವನ್ನು ತರುವಂತಹವೋ, ಮುಂದೆ ಹುಟ್ಟು, ಮುಪ್ಪು, ಮರಣವನ್ನು ಉಂಟುಮಾಡುವಂತಹವೋ, ಅವುಗಳು ತಥಾಗತರಿಂದ ತೊಡೆದುಹಾಕಲ್ಪಟ್ಟಿವೆ, ಅವುಗಳು ಬೇರುಸಹಿತ ತೆಗೆದುಹಾಕಲ್ಪಟ್ಟಿವೆ, ಕಡಿದ ತಾಳೆಮರದ ತುಂಡಿನ ಹಾಗೆ ಮಾಡಲ್ಪಟ್ಟಿದೆ, ಮುಂದೆ ಮರುಹುಟ್ಟನ್ನು ಪಡೆಯಲು ಸಾಧ್ಯವಿರದಂತೆ, ಹುಟ್ಟಡಗಿಸಿಬಿಟ್ಟಿದೆ. ಅದು ಹೇಗೆಂದರೆ, ಅನುರುದ್ಧರುಗಳೇ, ಹೇಗೆ ತಾಳೆಮರದ ಬೆಳೆದ ಮೇಲ್ಭಾಗವನ್ನು ಕತ್ತರಿಸಿ ಹಾಕಿದಾಗ, ಅದು ಮತ್ತೆ ಬೆಳೆಯಲಾರದೋ, ಅದೇರೀತಿಯಲ್ಲಿ. ಅನುರುದ್ಧರುಗಳೇ ಯಾವ ಆಸವಗಳು ಕ್ಲೇಶಗಳನ್ನು ಉಂಟುಮಾಡುವವೋ ಮತ್ತೆ ಮರುಹುಟ್ಟನ್ನು ಉಂಟುಮಾಡುವವೋ, ಭಯಾನಕವಾಗಿರುವಂತಹವೋ, ಮಾಗಿ ದುಃಖವನ್ನು ತರುವಂತಹವೋ, ಮುಂದೆ ಹುಟ್ಟು, ಮುಪ್ಪು, ಮರಣವನ್ನು ಉಂಟುಮಾಡುವಂತಹವೋ, ಅವುಗಳು ತಥಾಗತರಿಂದ ತೊಡೆದುಹಾಕಲ್ಪಟ್ಟಿವೆ, ಅವುಗಳು ಬೇರುಸಹಿತ ತೆಗೆದುಹಾಕಲ್ಪಟ್ಟಿವೆ, ಕಡಿದ ತಾಳೆಮರದ ತುಂಡಿನ ಹಾಗೆ ಮಾಡಲ್ಪಟ್ಟಿದೆ, ಮುಂದೆ ಮರುಹುಟ್ಟನ್ನು ಪಡೆಯಲು ಸಾಧ್ಯವಿರದಂತೆ, ಹುಟ್ಟಡಗಿಸಿಬಿಟ್ಟಿದೆ; ಆದ್ದರಿಂದಾಗಿ ತಥಾಗತರು ಪರಿಣಿಸುವುದರಿಂದಾಗಿ ಒಂದನ್ನು ಮುಂದುವರೆಸುತ್ತಾರೆ, ಪರಿಣಿಸುವುದರಿಂದಾಗಿ ಇನ್ನೊಂದನ್ನು ಹೊಂದಿದವರಾಗುತ್ತಾರೆ, ಪರಿಗಣಿಸುವುದರಿಂದಾಗಿ ಮತ್ತೊಂದನ್ನು ದೂರಮಾಡುತ್ತಾರೆ, ಪರಿಗಣಿಸುವುದರಿಂದಾಗಿ ಬೇರೊಂದನ್ನು ಹೊರಹಾಕುತ್ತಾರೆ.

2. ಕಾಲಗತವಾದ ಬಳಿಕ ಉಂಟಾಗುವ ಸ್ಥಿತಿ ಕುರಿತ ವಿವರಣೆ

ಅನುರುದ್ಧರುಗಳೇ, ಇದರ ಬಗ್ಗೆ ನೀವು ಹೀಗೆ ಯೋಚಿಸುತ್ತೀರಿ, ಯಾವ ವಿಶೇಷವಾದ ಉದ್ದೇಶ ಹೊಂದಿ, ತಥಾಗತರು, ಶಿಷ್ಯರುಗಳು ಗತಿಸಿಹೋದಮೇಲೆ, ಕಾಲಗತವಾದ ಬಳಿಕ ಉಂಟಾಗುವ ಸ್ಥಿತಿ ಕುರಿತು ವಿವರಣೆ ನೀಡುತ್ತಾರೆ- ಅಂತಹವನು ಅಂತಹುದರಲ್ಲಿ ಹುಟ್ಟಿದ್ದಾನೆ. ಅಂತಹವನು ಆ ಅಂತಹುದರಲ್ಲಿ ಹುಟ್ಟಿದ್ದಾನೆ ಎಂದು.113

ಭಂತೆ, ಭಗವಾನರ ಮೂಲಕವಾಗಿಯೇ ಧರ್ಮ ತಿಳಿದುಬರುತ್ತದೆ, ಭಗವಾನರೇ ನಮಗೆ ಹರಿಕಾರರು, ಭಗವಾನರೇ ನಮಗೆ ನಿರ್ಣಯಕಾರರು. ಭಂತೆ, ಭಗವಾನರು ಹೀಗೆ ನುಡಿದ ಮಾತುಗಳಿಗೆ, ಭಗವಾನರು ಅದರ ಅರ್ಥವೇನೆಂದು ತಿಳಿಸಿದರೆ ಬಹಳ ಒಳ್ಳೆಯದಾಗುವುದು. ಭಗವಾನರು ಹೇಳಿದ್ದು ಕೇಳಿಕೊಂಡು ಭಿಕ್ಷುಗಳು ನೆನಪಿನಲ್ಲಿಟ್ಟುಕೊಳ್ಳುವರು ಎಂದು.

ಅನುರುದ್ಧರುಗಳೆ, ತಥಾಗಥರಿಗೆ ಜನರನ್ನು ವಂಚಿಸುವ ಉದ್ದಿಶ್ಯವಿಲ್ಲ, ಜನರನ್ನು ಸಿಡಿದೆಬ್ಬಿಸುವ ಉದ್ದಿಶ್ಯವೂ ಇಲ್ಲ, ಅಥವಾ ಲಾಭಕ್ಕಾಗಿ, ಗೌರವಕ್ಕಾಗಿ, ಯಶಸ್ಸಿಗಾಗಿ ಮತ್ತು ವಸ್ತು ವಿಷಯಗಳನ್ನು ಪಡೆಯುವುದಕ್ಕಾಗಿ ಅಥವಾ ಜನರು ನನ್ನನ್ನು ಈ ರೀತಿಯವನೆಂದು ತಿಳಿಯಲಿ ಎಂದು ಅಲ್ಲ. ಅವರು ಶಿಷ್ಯರುಗಳು ಮರಣಹೊಂದಿದ ನಂತರ, ಕಾಲಗತವಾದ ಬಳಿಕ ಉಂಟಾಗುವ ಸ್ಥಿತಿಯನ್ನು ಕುರಿತು ಹೀಗೆ ಹೇಳುವುದು- ಅಂತಹವನು ಅಂತಹ ಸ್ಥಿತಿಯಲ್ಲಿ ಹುಟ್ಟಿದ್ದಾನೆ, ಅಂತಹವನು ಆ ಅಂತಹ ಸ್ಥಿತಿಯಲ್ಲಿ ಹುಟ್ಟಿದ್ದಾನೆ ಎಂದು. ಅನುರುದ್ಧರುಗಳೆ, ಅನೇಕ ಜನ ಕುಟುಂಬದ ಮಕ್ಕಳು ಶ್ರದ್ಧೆ, ಮಹತ್ತರವಾದ ಉತ್ಸಾಹ ಮತ್ತು ಮಹತ್ತರವಾದ ಆನಂದವನ್ನು ಹೊಂದಿದವರಾಗಿದ್ದಾರೆ. ಅವರುಗಳು ಇದನ್ನು ಕೇಳಿದವರಾಗಿ, ತಮ್ಮ ಮನಸ್ಸನ್ನು ಅದರಲ್ಲೇ ತೊಡಗಿಸುತ್ತಾರೆ. ಅದರಿಂದಾಗಿ ಅನುರುದ್ಧರುಗಳೇ, ಅವರುಗಳಿಗೆ ಬಹಳ ಕಾಲದವರೆಗೂ ಹಿತವೂ ಮತ್ತು ಸುಖವೂ ಉಂಟಾಗುವುದು.

4. ಅನುರುದ್ಧರುಗಳೇ, ಇಲ್ಲಿ ಒಬ್ಬ ಭಿಕ್ಷುವು ಹೀಗೆ ಕೇಳಲ್ಪಡುವನು- ಇಂತಹ ಒಬ್ಬ ಭಿಕ್ಷುವು ಕಾಲಗತವಾದನು; ಭಗವಾನರು ಈ ರೀತಿಯಾಗಿ ವಿವರಿಸಿದ್ದಾರೆ- ಆತನು ಮಹಾಪ್ರಜ್ಞೆಯನ್ನು ಪಡೆದ ಸ್ಥಿತಿಯಲ್ಲಿ ನೆಲೆಸಿರುವನು114 ಎಂದು. ಒಂದುವೇಳೆ ಯಾರೊಬ್ಬ ಆಯುಷ್ಮಂತನು ಇದನ್ನು ಎದುರಿಗೇ ಕಂಡಿದ್ದರೆ ಅಥವಾ ಇದನ್ನು ಯಾರಿಂದಲೋ ಕೇಳಿದ್ದರೆ- ಇಂತಹ ಆಯುಷ್ಮಂತನು ಹೀಗೆ ಶೀಲವಂತನಾಗಿದ್ದನೂ ಎಂದೂ, ಇಂತಹ ಆಯುಷ್ಮಂತನು ಹೀಗೆ ಧಮ್ಮಚಿತ್ತವನ್ನು ಪಡೆದಿದ್ದನೂ ಎಂದೂ, ಇಂತಹ ಆಯುಷ್ಮಂತನು ಈ ರೀತಿಯಾಗಿ ಅರಿವನ್ನು ಪಡೆದಿದ್ದನೂ ಎಂದೂ, ಇಂತಹ ಆಯುಷ್ಮಂತನು ಈ ವಿಧವಾಗಿ ಜೀವಿಸಿದ್ದನೂ ಎಂದು, ಇಂತಹ ಆಯುಷ್ಮಂತನು ಈ ಬಗೆಯಾಗಿ ಬಿಡುಗಡೆಯನ್ನು ಪಡೆದನೂ ಎಂಬುದಾಗಿ ಎಂದು. ಆತನು ಹಾಗಾಗಿ ಶ್ರದ್ಧೆಯಿಂದ, ಶೀಲದಿಂದ, ಕಲಿಕೆಯಿಂದ, ತ್ಯಾಗದಿಂದ ಮತ್ತು ಅರಿವಿನಿಂದ, ಅಂತಹ ಸ್ಥಿತಿಯ ಗುರಿಯ ಬಗ್ಗೆಯೇ ಒಮ್ಮನಸ್ಸಿನಿಂದ ಚಿಂತಿಸುತ್ತಾನೆ ಮತ್ತು ಅನುಸರಿಸುತ್ತಾನೆ. ಅನುರುದ್ಧರುಗಳೆ, ಈ ರೀತಿಯಿಂದಾಗಿ ಭಿಕ್ಷುಗಳಿಗೆ ಅನುಕೂಲಕರವಾದ ಸುಖದ ವಾಸವು ದೊರಕುತ್ತದೆ.

ಅನುರುದ್ಧರುಗಳೇ, ಇಲ್ಲಿ ಒಬ್ಬ ಭಿಕ್ಷುವು ಹೀಗೆ ಕೇಳಲ್ಪಡುವನು- ಇಂತಹ ಒಬ್ಬ ಭಿಕ್ಷುವು ಕಾಲಗತವಾದನು; ಭಗವಾನರು ಈ ರೀತಿಯಾಗಿ ವಿವರಿಸಿದ್ದಾರೆ- ಕೆಳಹಂತಗಳಿಗೆ ಕೊಂಡೊಯ್ಯುವ ಐದು ಬಗೆಯ ಸಂಕೋಲೆಗಳನ್ನು ನಾಶಪಡಿಸಿದವನಾಗಿ, ಆತನು ಕ್ಷಣದಲ್ಲಿ ಹೊಮ್ಮುವ ಹುಟ್ಟನ್ನು ಪಡೆದು, ಅಲ್ಲಿಯೇ ಪರಿನಿಬ್ಬಾನವನ್ನು ಪಡೆದವನಾಗಿ ಮತ್ತು ಆ ಲೋಕದಿಮದ ಮತ್ತೆ ಹಿಂದಿರುಗಿಬಾರದಂತಹ ಸ್ಥಿತಿ ಪಡೆದಿದ್ದಾನೆ ಎಂದು. ಒಂದುವೇಳೆ ಯಾರೊಬ್ಬ ಆಯುಷ್ಮಂತನು ಇದನ್ನು ಎದುರಿಗೇ ಕಂಡಿದ್ದರೆ ಅಥವಾ ಇದನ್ನು ಯಾರಿಂದಲೋ ಕೇಳಿದ್ದರೆ- ಇಂತಹ ಆಯುಷ್ಮಂತನು ಹೀಗೆ ಶೀಲವಂತನಾಗಿದ್ದನೂ ಎಂದು, ಹೀಗೆ ಧಮ್ಮಚಿತ್ತವನ್ನೂ... ಪುನರುಚ್ಚರಿಸಿ... ಈ ರೀತಿಯ ಅರಿವನ್ನು... ಈ ವಿಧವಾಗಿ ಜೀವಿಸಿದ್ದನೂ... ಇಂತಹ ಆಯುಷ್ಮಂತನು ಈ ಬಗೆಯಾಗಿ ಬಿಡುಗಡೆ ಹೊಂದಿದನೂ ಎಂಬುದಾಗಿ ಎಂದು. ಆತನು ಹಾಗಾಗಿ, ಶ್ರದ್ಧೆಯಿಂದ, ಶೀಲದಿಂದ, ಕಲಿಕೆಯಿಂದ, ತ್ಯಾಗದಿಂದ ಮತ್ತು ಅರಿವಿನಿಂದ, ಅಂತಹ ಸ್ಥಿತಿಯ ಗುರಿಯ ಬಗ್ಗೆಯೇ ಒಮ್ಮನಸ್ಸಿನಿಂದ ಚಿಂತಿಸುತ್ತಾನೆ ಮತ್ತು ಅನುಸರಿಸುತ್ತಾರೆ. ಈ ರೀತಿಯಿಂದಾಗಿ ಅನುರುದ್ಧರುಗಳೇ, ಭಿಕ್ಷುಗಳಿಗೆ ಅನುಕೂಲಕರವಾದ ಸುಖದ ವಾಸವು ದೊರಕುತ್ತದೆ.

ಅನುರುದ್ಧರುಗಳೇ, ಇಲ್ಲಿ ಒಬ್ಬ ಭಿಕ್ಷುವು, ಹೀಗೆ ಕೇಳಲ್ಪಡುವನು- ಇಂತಹ ಒಬ್ಬ ಭಿಕ್ಷುವು ಕಾಲಗತವಾದನು; ಭಗವಾನರು ಈ ರೀತಿಯಾಗಿ ವಿವರಿಸಿದ್ದಾರೆ- ಮೂರು ಸಂಕೋಲೆಗಳನ್ನು ನಾಶಪಡಿಸಿದವನಾಗಿ ರಾಗ, ದ್ವೇಷ ಮತ್ತು ಮೋಹಗಳನ್ನು ಕ್ಷೀಣಿಸಿದವನಾಗಿ, ಆತನು ಒಮ್ಮೆ ಮಾತ್ರ ಹುಟ್ಟಿಬರುವ ಸಕದಾಗಾಮಿಯಾಗಿರುವವನು ಮತ್ತು ಹಾಗೆ ಈ ಲೋಕದಲ್ಲಿ ಒಮ್ಮೆ ಬಂದು ದುಃಖದ ನಾಶವನ್ನು ಮಾಡಿಕೊಳ್ಳುವನು ಎಂದು. ಒಂದುವೇಳೆ, ಯಾರೊಬ್ಬ ಆಯುಷ್ಮಂತನು ಇದನ್ನು ಎದುರಿಗೇ ಕಂಡಿದ್ದರೆ ಅಥವಾ ಇದನ್ನು ಯಾರಿಂದಲೋ ಕೇಳಿದ್ದರೆ- ಇಂತಹ ಆಯುಷ್ಮಂತನು ಹೀಗೆ ಶೀಲವಂತನಾಗಿದ್ದನೂ ಎಂದು ಹೀಗೆ ಧಮ್ಮಚಿತ್ತನೂ... ಪುನರುಚ್ಚರಿಸಿ... ಈ ರೀತಿಯ ಅರಿವುಳ್ಳವನೂ... ಈ ವಿಧವಾಗಿ ಜೀವಿಸಿದ್ದನೂ... ಇಂತಹ ಆಯುಷ್ಮಂತನು ಈ ಬಗೆಯಾಗಿ ಬಿಡುಗಡೆ ಹೊಂದಿದನು ಎಂಬುದಾಗಿ ಎಂದು. ಆತನು ಹಾಗಾಗಿ ಶ್ರದ್ಧೆಯಿಂದ, ಶೀಲದಿಂದ, ಕಲಿಕೆಯಿಂದ, ತ್ಯಾಗದಿಂದ ಮತ್ತು ಅರಿವಿನಿಂದ, ಅಂತಹ ಸ್ಥಿತಿಯ ಗುರಿಯ ಬಗ್ಗೆಯೇ ಒಮ್ಮನಸ್ಸಿನಿಂದ ಚಿಂತಿಸುತ್ತಾನೆ ಮತ್ತು ಅನುಭವಿಸುತ್ತಾನೆ. ಈ ರೀತಿಯಿಂದಾಗಿ, ಅನುರುದ್ಧರುಗಳೇ, ಭಿಕ್ಷುಗಳಿಗೆ ಅನುಕೂಲಕರವಾದ ಸುಖವು ದೊರಕುತ್ತದೆ.

5. ಅನುರುದ್ಧರುಗಳೇ, ಇಲ್ಲಿ ಒಬ್ಬ ಭಿಕ್ಷುಣಿಯು ಹೀಗೆ ಕೇಳಲ್ಪಡುವಳು- ಇಂತಹ ಒಬ್ಬ ಭಿಕ್ಷುಣಿಯು ಕಾಲಗತವಾದಳು; ಭಗವಾನರು ಈ ರೀತಿಯಾಗಿ ವಿವರಿಸಿದ್ದಾರೆ- ಆಕೆಯು ಮಹಾ ಪ್ರಜ್ಞೆಯನ್ನು ಪಡೆದ ಸ್ಥಿತಿಯಲ್ಲಿ ನೆಲೆಸಿರುವಳು ಎಂದು. ಒಂದುವೇಳೆ ಯಾರೊಬ್ಬಳು ಸಹೋದರಿಯು ಇದನ್ನು ಎದುರಿಗೇ ಕಂಡಿದ್ದರೆ ಅಥವಾ ಇದನ್ನು ಯಾರಿಂದಲೋ ಕೇಳಿದ್ದರೆ- ಇಂತಹ ಸಹೋದರಿಯು ಹೀಗೆ ಶೀಲವಂತಳಾಗಿದ್ದಳೂ ಎಂದು, ಇಂತಹ ಸಹೋದರಿಯು ಹೀಗೆ ಧಮ್ಮಚಿತ್ತವನ್ನು ಪಡೆದಿದ್ದಳೂ ಎಂದು, ಇಂತಹ ಸಹೋದರಿಯು ಈ ರೀತಿಯಾಗಿ ಅರಿವನ್ನು ಪಡೆದಿದ್ದಳೂ ಎಂದು, ಇಂತಹ ಸಹೋದರಿಯು ಈ ವಿಧವಾಗಿ ಜೀವಿಸಿದ್ದಳೂ ಎಂದು, ಇಂತಹ ಸಹೋದರಿಯು ಈ ಬಗ್ಗೆಯಾಗಿ ಬಿಡುಗಡೆಯನ್ನು ಪಡೆದಳೂ ಎಂಬುದಾಗಿ ಎಂದು. ಆಕೆಯು ಹಾಗಾಗಿ ಶ್ರದ್ಧೆಯಿಂದ, ಶೀಲದಿಂದ, ಕಲಿಕೆಯಿಂದ, ತ್ಯಾಗದಿಂದ ಮತ್ತು ಅರಿವಿನಿಂದ ಅಂತಹ ಸ್ಥಿತಿಯ ಗುರಿಯ ಬಗ್ಗೆಯೇ ಒಮ್ಮನಸ್ಸಿನಿಂದ ಚಿಂತಿಸುತ್ತಾಳೆ ಮತ್ತು ಅನುಸರಿಸುತ್ತಾಳೆ. ಅನುರುದ್ಧರುಗಳೇ, ಈ ರೀತಿಯಿಂದಾಗಿ ಭಿಕ್ಷುನಿಯರಿಗೆ ಅನುಕೂಲಕರವಾದ ಸುಖದ ವಾಸವು ದೊರಕುತ್ತದೆ.

ಅನುರುದ್ಧರುಗಳೇ, ಇಲ್ಲಿ ಒಬ್ಬ ಭಿಕ್ಷುಣಿಯು ಹೀಗೆ ಕೇಳಲ್ಪಡುವಳು- ಇಂತಹ ಒಬ್ಬ ಭಿಕ್ಷುಣಿಯು ಕಾಲಗತವಾದಳು; ಭಗವಾನರು ಈ ರೀತಿಯಾಗಿ ವಿವರಿಸಿದ್ದಾರೆ- ಕೆಳಹಂತಗಳಿಗೆ ಕೊಂಡೊಯ್ಯುವ ಐದು ಬಗೆಯ ಸಂಕೋಲೆಗಳನ್ನು ನಾಶಪಡಿಸಿದವಳಾಗಿ, ಆಕೆಯು ಕ್ಷಣದಲ್ಲಿ ಹೊಮ್ಮುವ ಹುಟ್ಟನ್ನು ಪಡೆದು, ಅಲ್ಲಿಯೇ ಪರಿನಿಬ್ಬಾನವನ್ನು ಪಡೆದವಳಾಗಿ ಮತ್ತು ಆ ಲೋಕದಿಂದ ಮತ್ತೆ ಹಿಂದಿರುಗಿ ಬಾರದಂತಹ ಸ್ಥಿತಿ ಪಡೆದಿದ್ದಾಳೆ ಎಂದು. ಒಂದುವೇಳೆ ಯಾರೊಬ್ಬಳು ಸಹೋದರಿಯು ಇದನ್ನು ಎದುರಿಗೇ ಕಂಡಿದ್ದರೆ ಅಥವಾ ಇದನ್ನು ಯಾರಿಂದಲೋ ಕೇಳಿದ್ದರೆ- ಇಂತಹ ಸಹೋದರಿಯು ಹೀಗೆ ಶೀಲವಂತಳಾಗಿದ್ದಳು ಎಂದು, ಹೀಗೆ ಧಮ್ಮಚಿತ್ತವನ್ನು... ಪುನರುಚ್ಚರಿಸಿ... ಈ ರೀತಿಯ ಅರಿವನ್ನು... ಈ ವಿಧವಾಗಿ ಜೀವಿಸಿದ್ದಳು, ಇಂತಹ ಸಹೋದರಿಯು ಈ ಬಗೆಯಾಗಿ ಬಿಡುಗಡೆ ಹೊಂದಿದಳೂ ಎಂಬುದಾಗಿ ಎಂದು. ಆಕೆಯು ಹಾಗಾಗಿ ಶ್ರದ್ಧೆಯಿಂದ, ಶೀಲದಿಂದ, ಕಲಿಕೆಯಿಂದ, ತ್ಯಾಗದಿಂದ ಮತ್ತು ಅರಿವಿನಿಂದ, ಅಂತಹ ಸ್ಥಿತಿಯ ಗುರಿಯ ಬಗ್ಗೆಯೇ ಒಮ್ಮನಸ್ಸಿನಿಂದ ಚಿಂತಿಸುತ್ತಾಳೆ ಮತ್ತು ಅನುಸರಿಸುತ್ತಾಳೆ. ಈ ರೀತಿಯಿಂದಾಗಿ ಅನುರುದ್ಧರುಗಳೇ, ಭಿಕ್ಷುಣಿಯರುಗಳಿಗೆ ಅನುಕೂಲಕರವಾದ ಸುಖದ ವಾಸವು ದೊರಕುತ್ತದೆ.

ಅನುರುದ್ಧರುಗಳೇ, ಇಲ್ಲಿ ಒಬ್ಬ ಭಿಕ್ಷುಣಿಯು ಹೀಗೆ ಕೇಳಲ್ಪಡುತ್ತಾಳೆ- ಇಂತಹ ಒಬ್ಬ ಭಿಕ್ಷುಣಿಯು ಕಾಲಗತವಾದಳು; ಭಗವಾನರು ಈ ರೀತಿಯಾಗಿ ವಿವರಿಸಿದ್ದಾರೆ- ಮೂರು ಸಂಕೋಲೆಗಳನ್ನು ನಾಶಪಡಿಸಿದವಳಾಗಿ, ರಾಗ, ದ್ವೇಷ ಮತ್ತು ಮೋಹಗಳನ್ನು ಕ್ಷೀಣಿಸಿದವಳಾಗಿ, ಆಕೆಯು ಒಮ್ಮೆ ಮಾತ್ರ ಹುಟ್ಟಿಬರುವ ಸಕದಾಗಾಮಿನಿ ಯಾಗಿರುವಳು ಮತ್ತು ಹಾಗೆ ಈ ಲೋಕದಲ್ಲಿ ಒಮ್ಮೆ ಬಂದು ದುಃಖದ ನಾಶವನ್ನು ಮಾಡಿಕೊಳ್ಳುವಳು ಎಂದು. ಒಂದುವೇಳೆ ಯಾರೊಬ್ಬಳು ಸಹೋದರಿಯು ಇದನ್ನು ಎದುರಿಗೇ ಕಂಡಿದ್ದರೆ ಅಥವಾ ಇದನ್ನು ಯಾರಿಂದಲೋ ಕೇಳಿದ್ದರೆ- ಇಂತಹ ಸಹೋದರಿಯು ಹೀಗೆ ಶೀಲವಂತಳಾಗಿದ್ದಳು ಎಂದು. ಹೀಗೆ ಧಮ್ಮಚಿತ್ತಳು... ಪುನರುಚ್ಚರಿಸಿ... ಈ ರೀತಿಯ ಅರಿವುಳ್ಳವಳೂ... ಈ ವಿಧವಾಗಿ ಜೀವಿಸಿದ್ದಳೂ... ಇಂತಹ ಸಹೋದರಿಯು ಈ ಬಗೆಯಾಗಿ ಬಿಡುಗಡೆ ಹೊಂದಿದಳೂ ಎಂಬುದಾಗಿ ಎಂದು. ಆಕೆಯು ಹಾಗಾಗಿ ಶ್ರದ್ಧೆಯಿಂದ, ಶೀಲದಿಂದ, ಕಲಿಕೆಯಿಂದ, ತ್ಯಾಗದಿಂದ ಮತ್ತು ಅರಿವಿನಿಂದ, ಅಂತಹ ಸ್ಥಿತಿಯ ಗುರಿಯ ಬಗ್ಗೆಯೇ ಒಮ್ಮನಸ್ಸಿನಿಂದ ಚಿಂತಿಸುತ್ತಾಳೆ ಮತ್ತು ಅನುಸರಿಸುತ್ತಾಳೆ. ಈ ರೀತಿಯಿಂದಾಗಿ ಅನುರುದ್ಧರುಗಳೇ, ಭಿಕ್ಷುಣಿಯರುಗಳಿಗೆ ಅನುಕೂಲಕರವಾದ ಸುಖದ ವಾಸವು ದೊರಕುತ್ತದೆ.

ಅನುರುದ್ಧರುಗಳೇ, ಇಲ್ಲಿ ಒಬ್ಬ ಭಿಕ್ಷುಣಿಯು ಹೀಗೆ ಕೇಳಲ್ಪಡುತ್ತಾಳೆ- ಇಂತಹ ಒಬ್ಬ ಭಿಕ್ಷುಣಿಯು ಕಾಲಗತವಾದಳು; ಭಗವಾನರು ಈ ರೀತಿಯಾಗಿ ವಿವರಿಸಿದ್ದಾರೆ- ಮೂರು ಸಂಕೋಲೆಗಳನ್ನು ನಾಶಪಡಿಸಿ ಸೋತಾಪನ್ನಳಾಗಿ ವಿನಿಪಾತದಿಂದ (ನಾಲ್ಕು ದುರ್ಗತಿಯ ಜೀವ ಸ್ಥರಗಳಿಂದ) ಮುಕ್ತಳಾಗಿ ಸುಗತಿಯೆಡೆಗೆ ನಡೆದು ಸಂಬೋಧಿಯ ಮಾರ್ಗದಲ್ಲಿ ಸ್ಥಾಪನೆಗೊಂಡಿರುತ್ತಾಳೆ ಎಂದು. ಒಂದುವೇಳೆ ಯಾರೊಬ್ಬಳು ಸಹೋದರಿಯು ಇದನ್ನು ಎದುರಿಗೇ ಕಂಡಿದ್ದರೆ ಅಥವಾ ಇದನ್ನು ಯಾರಿಂದಲೋ ಕೇಳಿದ್ದರೆ- ಇಂತಹ ಸಹೋದರಿಯು ಹೀಗೆ ಶೀಲವಂತಳಾಗಿದ್ದಳು ಎಂದು. ಹೀಗೆ ಧಮ್ಮಚಿತ್ತಳು... ಪುನರುಚ್ಚರಿಸಿ... ಈ ರೀತಿಯ ಅರಿವುಳ್ಳವಳೂ... ಈ ವಿಧವಾಗಿ ಜೀವಿಸಿದ್ದಳೂ... ಇಂತಹ ಸಹೋದರಿಯು ಈ ಬಗೆಯಾಗಿ ಬಿಡುಗಡೆ ಹೊಂದಿದಳೂ ಎಂಬುದಾಗಿ ಎಂದು. ಆಕೆಯು ಹಾಗಾಗಿ ಶ್ರದ್ಧೆಯಿಂದ, ಶೀಲದಿಂದ, ಕಲಿಕೆಯಿಂದ, ತ್ಯಾಗದಿಂದ ಮತ್ತು ಅರಿವಿನಿಂದ, ಅಂತಹ ಸ್ಥಿತಿಯ ಗುರಿಯ ಬಗ್ಗೆಯೇ ಒಮ್ಮನಸ್ಸಿನಿಂದ ಚಿಂತಿಸುತ್ತಾಳೆ ಮತ್ತು ಅನುಸರಿಸುತ್ತಾಳೆ. ಈ ರೀತಿಯಿಂದಾಗಿ ಅನುರುದ್ಧರುಗಳೇ, ಭಿಕ್ಷುಣಿಯರುಗಳಿಗೆ ಅನುಕೂಲಕರವಾದ ಸುಖದ ವಾಸವು ದೊರಕುತ್ತದೆ.

6. ಅನುರುದ್ಧರುಗಳೇ, ಇಲ್ಲಿ ಒಬ್ಬ ಉಪಾಸಕನು ಹೀಗೆ ಕೇಳಲ್ಪಡುವನು- ಇಂತಹ ಒಬ್ಬ ಉಪಾಸಕನು ಕಾಲಗತವಾದನು; ಭಗವಾನರು ಈ ರೀತಿಯಾಗಿ ವಿವರಿಸಿದ್ದಾರೆ- ಕೆಳಹಂತಕ್ಕೆ ಕೊಂಡೊಯ್ಯುವ ಐದುಬಗೆಯ ಸಂಕೋಲೆಗಳನ್ನು ನಾಶಪಡಿಸಿದವನಾಗಿ, ಆತನು ಕ್ಷಣದಲ್ಲಿ ಹೊಮ್ಮುವ ಹುಟ್ಟನ್ನು ಪಡೆದು, ಅಲ್ಲಿಯೇ ಪರಿನಿಬ್ಬಾಣವನ್ನು ಪಡೆದವನಾಗಿ ಮತ್ತು ಆ ಲೋಕದಿಂದ ಮತ್ತೆ ಹಿಂದಿರುಗಿ ಬಾರದಂತಹ ಸ್ಥಿತಿ ಪಡೆದಿದ್ದಾನೆ ಎಂದು. ಒಂದುವೇಳೆ ಯಾರೊಬ್ಬ ಆಯುಷ್ಮಂತನು ಇದನ್ನು ಎದುರಿಗೆ ಕಂಡಿದ್ದರೆ, ಅಥವಾ ಇದನ್ನು ಯಾರಿಂದಲೋ ಕೇಳಿದ್ದರೆ- ಇಂತಹ ಆಯುಷ್ಮಂತನು ಹೀಗೆ ಶೀಲವಂತನಾಗಿದ್ದನು ಎಂದು, ಇಂತಹ ಆಯುಷ್ಮಂತನು ಹೀಗೆ ಧಮ್ಮಚಿತ್ತವನ್ನು ಪಡೆದಿದ್ದನೂ ಎಂದು, ಇಂತಹ ಆಯುಷ್ಮಂತನು ಈ ರೀತಿಯಾಗಿ ಅರಿವನ್ನು ಪಡೆದಿದ್ದನೂ ಎಂದು, ಇಂತಹ ಆಯುಷ್ಮಂತನು ಈ ವಿಧವಾಗಿ ಜೀವಿಸಿದ್ದನೂ ಎಂದು, ಇಂತಹ ಆಯುಷ್ಮಂತನು ಈ ಬಗೆಯಾಗಿ ಬಿಡುಗಡೆಯನ್ನು ಪಡೆದನೂ ಎಂಬುದಾಗಿ ಎಂದು. ಆತನು ಹಾಗಾಗಿ ಶ್ರದ್ಧೆಯಿಂದ, ಶೀಲದಿಂದ, ಕಲಿಕೆಯಿಂದ, ತ್ಯಾಗದಿಂದ ಮತ್ತು ಅರಿವಿನಿಂದ, ಅಂತಹ ಸ್ಥಿತಿಯ ಗುರಿಯ ಬಗ್ಗೆಯೇ ಒಮ್ಮನಸ್ಸಿನಿಂದ ಚಿಂತಿಸುತ್ತಾನೆ ಮತ್ತು ಅನುಸರಿಸುತ್ತಾನೆ. ಅನುರುದ್ಧರುಗಳೇ, ಈ ರೀತಿಯಿಂದಾಗಿ ಉಪಾಸಕರಿಗೆ ಅನುಕೂಲಕರವಾದ ಸುಖದ ವಾಸವು ದೊರಕುತ್ತದೆ.

ಅನುರುದ್ಧರುಗಳೇ, ಇಲ್ಲಿ ಒಬ್ಬ ಉಪಾಸಕನು ಹೀಗೆ ಕೇಳಲ್ಪಡುವನು- ಇಂತಹ ಒಬ್ಬ ಉಪಾಸಕನು ಕಾಲಗತವಾದನು; ಭಗವಾನರು ಈ ರೀತಿಯಾಗಿ ವಿವರಿಸಿದ್ದಾರೆ- ಮೂರು ಸಂಕೋಲೆಗಳನ್ನು ನಾಶಪಡಿಸಿದವನಾಗಿ ರಾಗ, ದ್ವೇಷ ಮತ್ತು ಮೋಹಗಳನ್ನು ಕ್ಷೀಣಿಸಿದವನಾಗಿ, ಆತನು ಒಮ್ಮೆ ಮಾತ್ರ ಹುಟ್ಟಿಬರುವ ಸಕದಾಗಾಮಿಯಾಗಿರುವನು ಮತ್ತು ಹಾಗೆ ಈ ಲೋಕದಲ್ಲಿ ಒಮ್ಮೆ ಬಂದು, ದುಃಖದ ನಾಶವನ್ನು ಮಾಡಿಕೊಳ್ಳುವನು ಎಂದು. ಒಂದುವೇಳೆ ಯಾರೊಬ್ಬ ಆಯುಷ್ಮಂತನು ಇದನ್ನು ಎದುರಿಗೇ ಕಂಡಿದ್ದರೆ ಅಥವಾ ಯಾರಿಂದಲೋ ಕೇಳಿದ್ದರೆ- ಇಂತಹ ಆಯುಷ್ಮಂತನು ಹೀಗೆ ಶೀಲವಂತನಾಗಿದ್ದನು ಎಂದು, ಹೀಗೆ ಧಮ್ಮಚಿತ್ತವನ್ನು ಪಡೆದಿದ್ದನು, ಈ ರೀತಿಯ ಅರಿವುಳ್ಳವನಾಗಿದ್ದನೂ, ಈ ವಿಧವಾಗಿ ಜೀವಿಸಿದ್ದನೂ ಇಂತಹ ಆಯುಷ್ಮಂತನು ಈ ಬಗೆಯಾಗಿ ಬಿಡುಗಡೆ ಹೊಂದಿದನೂ ಎಂಬುದಾಗಿ ಎಂದು. ಆತನು ಹಾಗಾಗಿ, ಶ್ರದ್ಧೆಯಿಂದ, ಶೀಲದಿಂದ, ಕಲಿಕೆಯಿಂದ, ತ್ಯಾಗದಿಂದ ಮತ್ತು ಅರಿವಿನಿಂದ, ಅಂತಹ ಸ್ಥಿತಿಯ ಗುರಿಯ ಬಗ್ಗೆಯೇ ಒಮ್ಮನಸ್ಸಿನಿಂದ ಚಿಂತಿಸುತ್ತಾನೆ ಮತ್ತು ಅನುಸರಿಸುತ್ತಾನೆ. ಈ ರೀತಿಯಿಂದಾಗಿ, ಅನುರುದ್ಧರುಗಳೇ, ಉಪಾಸಕರಿಗೆ ಅನುಕೂಲಕರವಾದ ಸುಖದ ವಾಸವು ದೊರಕುತ್ತವೆ.

ಅನುರುದ್ಧರುಗಳೇ, ಇಲ್ಲಿ ಒಬ್ಬ ಉಪಾಸಕನು ಹೀಗೆ ಕೇಳಲ್ಪಡುವನು- ಇಂತಹ ಒಬ್ಬ ಉಪಾಸಕನು ಕಾಲಗತವಾದನು; ಭಗವಾನರು ಈ ರೀತಿಯಾಗಿ ವಿವರಿಸಿದ್ದಾರೆ- ಮೂರು ಸಂಕೋಲೆಗಳನ್ನು ನಾಶಪಡಿಸಿದವನಾಗಿ, ಸೋತಾಪನ್ನನಾಗಿ ವಿನಿಪಾತದಿಂದ ಮುಕ್ತನಾಗಿ ಸುಗತಿಯೆಡೆಗೆ ನಡೆದು ಸಂಬೋಧಿಯ ಮಾರ್ಗದಲ್ಲಿ ಸ್ಥಾಪನೆಗೊಂಡಿರುತ್ತಾನೆ ಎಂದು. ಒಂದುವೇಳೆ ಯಾರೊಬ್ಬ ಆಯುಷ್ಮಂತನು ಇದನ್ನು ಎದುರಿಗೇ ಕಂಡಿದ್ದೆ ಅಥವಾ ಇದನ್ನು ಯಾರಿಂದಲೋ ಕೇಳಿದ್ದರೆ- ಇಂತಹ ಆಯುಷ್ಮಂತನು ಹೀಗೆ ಶೀಲವಂತನಾಗಿದ್ದನೂ ಎಂದು, ಹೀಗೆ ಧಮ್ಮಚಿತ್ತನಾಗಿದ್ದನೂ, ಈ ರೀತಿಯ ಅರಿವುಳ್ಳವನಾಗಿದ್ದನೂ, ಈ ವಿಧವಾಗಿ ಜೀವಿಸಿದ್ದನೂ, ಇಂತಹ ಆಯುಷ್ಮಂತನು ಈ ಬಗೆಯಾಗಿ ಬಿಡುಗಡೆ ಹೊಂದದನೂ ಎಂಬುದಾಗಿ ಎಂದು. ಆತನು ಹಾಗಾಗಿ ಶ್ರದ್ಧೆಯಿಂದ, ಶೀಲದಿಂದ, ಕಲಿಕೆಯಿಂದ, ತ್ಯಾಗದಿಂದ ಮತ್ತು ಅರಿವಿನಿಂದ, ಅಂತಹ ಸ್ಥಿತಿಯ ಗುರಿಯ ಬಗ್ಗೆಯೇ ಒಮ್ಮನಸ್ಸಿನಿಂದ ಚಿಂತಿಸುತ್ತಾನೆ ಮತ್ತು ಅನುಸರಿಸುತ್ತಾನೆ. ಈ ರೀತಿಯಿಂದಾಗಿ ಅನುರುದ್ಧರುಗಳೇ, ಉಪಾಸಕರುಗಳಿಗೆ ಅನುಕೂಲಕವಾದ ಸುಖದ ವಾಸವು ದೊರಕುತ್ತದೆ.

7. ಅನುರುದ್ಧರುಗಳೇ, ಇಲ್ಲಿ ಒಬ್ಬ ಉಪಾಸಿಕೆಯು ಹೀಗೆ ಕೇಳಲ್ಪಡುವಳು- ಇಂತಹ ಒಬ್ಬ ಉಪಾಸಿಕೆಯು ಕಾಲಗತವಾದಳು; ಭಗವಾನರು ಈ ರೀತಿಯಾಗಿ ವಿವರಿಸಿದ್ದಾರೆ- ಕೆಳಹಂತಗಳಿಗೆ ಕೊಂಡೊಯ್ಯುವ ಐದುಬಗೆಯ ಸಂಕೋಲೆಗಳನ್ನು ನಾಶಪಡಿಸಿದವಳಾಗಿ, ಆಕೆಯ ಕ್ಷಣದಲ್ಲಿ ಹೊಮ್ಮುವ ಹುಟ್ಟನ್ನು ಪಡೆದು, ಅಲ್ಲಿಯೇ ಪರಿನಿಬ್ಬಾಣವನ್ನು ಪಡೆದವಳಾಗಿ ಮತ್ತು ಆ ಲೋಕದಿಂದ ಮತ್ತೆ ಹಿಂದಿರುಗಿಬಾರದಂತಹ ಸ್ಥಿತಿ ಪಡೆದಿದ್ದಾಳೆ ಎಂದು. ಒಂದುವೇಳೆ ಯಾರೊಬ್ಬಳು ಸಹೋದರಿಯು ಇದನ್ನು ಎದುರಿಗೇ ಕಂಡಿದ್ದರೆ ಅಥವಾ ಇದನ್ನು ಯಾರಿಂದಲೋ ಕೇಳಿದ್ದರೆ- ಇಂತಹ ಸಹೋದರಿಯು ಹೀಗೆ ಶೀಲವಂತಳಾಗಿದ್ದಳು, ಹೀಗೆ ಧಮ್ಮಚಿತ್ತ ಪಡೆದಿದ್ದಳು, ಈ ರೀತಿಯ ಅರಿವನ್ನು ಪಡೆದಿದ್ದಳು, ಈ ವಿಧವಾಗಿ ಜೀವಿಸಿದ್ದಳೂ, ಇಂತಹ ಸಹೋದರಿಯು ಈ ಬಗೆಯಾಗಿ ಬಿಡುಗಡೆ ಹೊಂದಿದಳು ಎಂಬುದಾಗಿ ಎಂದು. ಆಕೆಯು ಹಾಗಾಗಿ, ಶ್ರದ್ಧೆಯಿಂದ, ಶೀಲದಿಂದ, ಕಲಿಕೆಯಿಂದ, ತ್ಯಾಗದಿಂದ ಮತ್ತು ಅರಿವಿನಿಂದ ಅಂತಹ ಸ್ಥಿತಿಯ ಗುರಿಯ ಬಗ್ಗೆಯೇ ಒಮ್ಮನಸ್ಸಿನಿಂದ ಚಿಂತಿಸುತ್ತಾಳೆ ಮತ್ತು ಅನುಸರಿಸುತ್ತಾಳೆ. ಈ ರೀತಿಯಿಂದಾಗಿ ಅನುರುದ್ಧರುಗಳೇ, ಉಪಾಸಿಕೆಯರಿಗೆ ಅನುಕೂಲಕರವಾದಂತಹ ಸುಖದ ವಾಸವು ದೊರಕುತ್ತದೆ.

ಅನುರುದ್ಧರುಗಳೇ, ಇಲ್ಲಿ ಒಬ್ಬ ಉಪಾಸಿಕೆಯು ಹೀಗೆ ಕೇಳಲ್ಪಡುತ್ತಾಳೆ- ಇಂತಹ ಒಬ್ಬ ಉಪಾಸಿಕೆಯು ಕಾಲಗತವಾದಳು; ಭಗವಾನರು ಈ ರೀತಿಯಾಗಿ ವಿವರಿಸಿದ್ದಾರೆ- ಮೂರು ಸಂಕೋಲೆಗಳನ್ನು ನಾಶಪಡಿಸಿದವಳಾಗಿ, ರಾಗ, ದ್ವೇಷ ಮತ್ತು ಮೋಹಗಳನ್ನು ಕ್ಷೀಣಿಸಿದವಳಾಗಿ, ಆಕೆಯು ಒಮ್ಮೆ ಮಾತ್ರ ಹುಟ್ಟಿಬರುವ ಸಕದಾಗಾಮಿನಿ ಯಾಗಿರುವಳು ಮತ್ತು ಹಾಗೆ ಈ ಲೋಕದಲ್ಲಿ ಒಮ್ಮೆ ಬಂದು ದುಃಖದ ನಾಶವನ್ನು ಮಾಡಿಕೊಳ್ಳುವಳು ಎಂದು ಒಂದುವೇಳೆ ಯಾರೊಬ್ಬಳು ಸಹೋದರಿಯು ಇದನ್ನು ಎದುರಿಗೇ ಕಂಡಿದ್ದರೆ, ಅಥವಾ ಇದನ್ನು ಯಾರೊಂದಲೋ ಕೇಳಿದ್ದರೆ- ಇಂತಹ ಸಹೋದರಿಯು ಹೀಗೆ ಶೀಲವಂತಳಾಗಿದ್ದಳೂ ಎಂದು, ಹೀಗೆ ಧಮ್ಮಚಿತ್ತ ಪಡೆದಿದ್ದಳೂ, ಈ ರೀತಿಯ ಅರಿವುಳ್ಳವಳಾಗಿದ್ದಳೂ, ಈ ವಿಧವಾಗಿ ಜೀವಿಸಿದ್ದಳೂ, ಇಂತಹ ಸಹೋದರಿಯು ಈ ಬಗೆಯಾಗಿ ಬಿಡುಗಡೆ ಹೊಂದಿದಳೂ ಎಂಬುದಾಗಿ ಎಂದು. ಆಕೆಯು ಹಾಗಾಗಿ ಶ್ರದ್ಧೆಯಿಂದ, ಶೀಲದಿಂದ, ಕಲಿಕೆಯಿಂದ, ತ್ಯಾಗದಿಂದ ಮತ್ತು ಅರಿವಿನಿಂದ, ಅಂತಹ ಸ್ಥಿತಿಯ ಗುರಿಯ ಬಗ್ಗೆಯೇ ಒಮ್ಮನಸ್ಸಿನಿಂದ ಚಿಂತಿಸುತ್ತಾಳೆ ಮತ್ತು ಅನುಸರಿಸುತ್ತಾಳೆ. ಈ ರೀತಿಯಿಂದಗಿ ಅನುರುದ್ಧರುಗಳೇ, ಉಪಾಸಿಕೆಯರಿಗೆ ಅನುಕೂಲಕರವಾದ ಸುಖದ ವಾಸವು ದೊರಕುತ್ತದೆ.

ಅನುರುದ್ಧರುಗಳೇ, ಇಲ್ಲಿ ಒಬ್ಬ ಉಪಾಸಿಕೆಯು ಹೀಗೆ ಕೇಳಲ್ಪಡುವಳು- ಇಂತಹ ಒಬ್ಬ ಉಪಾಸಿಕೆಯು ಕಾಲಗತವಾದಳು; ಭಗವಾನರು ಈ ರೀತಿಯಾಗಿ ವಿವರಿಸಿದ್ದಾರೆ- ಮೂರು ಸಂಕೋಲೆಗಳನ್ನು ನಾಶಪಡಿಸಿದವಳಾಗಿ, ಆಕೆಯು ಸೋತಾಪನ್ನಳಾಗಿ ವಿನಿಪಾತದಿಂದ ಸಂಬೋಧಿಯ ಮಾರ್ಗದಲ್ಲಿ ಸ್ಥಾಪನೆಗೊಂಡಿರುತ್ತಾಳೆ ಎಂದು. ಒಂದುವೇಳೆ ಯಾರೊಬ್ಬಳು ಸಹೋದರಿಯು ಇದನ್ನು ಎದುರಿಗೇ ಕಂಡಿದ್ದರೆ ಅಥವಾ ಇದನ್ನು ಯಾರಿಂದಲೋ ಕೇಳಿದ್ದರೆ- ಇಂತಹ ಸಹೋದರಿಯು ಹೀಗೆ ಶೀಲವಂತಳಾಗಿದ್ದಳು ಎಂದು, ಹೀಗೆ ಧಮ್ಮಚಿತ್ತ ಪಡೆದಿದ್ದಳು, ಈ ರೀತಿಯ ಅರಿವುಳ್ಳವಳಾಗಿದ್ದಳೂ, ಈ ವಿಧವಾಗಿ ಜೀವಿಸಿದ್ದಳೂ, ಇಂತಹ ಸಹೋದರಿಯು ಈ ಬಗೆಯಾಗಿ ಬಿಡುಗಡೆ ಹೊಂದಿದಳೂ ಎಂಬುದಾಗಿ ಎಂದು. ಆಕೆಯು ಹಾಗಾಗಿ ಶ್ರದ್ಧೆಯಿಂದ, ಶೀಲದಿಂದ, ಕಲಿಕೆಯಿಂದ, ತ್ಯಾಗದಿಂದ ಮತ್ತು ಅರಿವಿನಿಂದ, ಅಂತಹ ಸ್ಥಿತಿಯ ಗುರಿಯ ಬಗ್ಗೆಯೇ ಒಮ್ಮನಸ್ಸಿನಿಂದ ಚಿಂತಿಸುತ್ತಾಳೆ ಮತ್ತು ಅನುಸರಿಸುತ್ತಾಳೆ. ಈ ರೀತಿಯಿಂದಾಗಿ, ಅನುರುದ್ಧರುಗಳೇ ಉಪಾಸಿಕೆಯರಿಗೆ ಅನುಕೂಲಕರವಾದಂತಹ ಸುಖದ ವಾಸವು ದೊರಕುತ್ತದೆ.

ಆದ್ದರಿಂದಾಗಿ, ಅನುರುದ್ಧರುಗಳೆ, ತಥಾಗಥರಿಗೆ ಜನರನ್ನು ವಂಚಿಸುವ ಉದ್ದಿಶ್ಯವಿಲ್ಲ, ಜನರನ್ನು ಸಿಡಿದೆಬ್ಬಿಸುವ ಉದ್ದಿಶ್ಯವೂ ಇಲ್ಲ, ಅಥವಾ ಲಾಭಕ್ಕಾಗಿ, ಗೌರವಕ್ಕಾಗಿ, ಯಶಸ್ಸಿಗಾಗಿ ಮತ್ತು ವಸ್ತು ವಿಷಯಗಳನ್ನು ಪಡೆಯುವುದಕ್ಕಾಗಿ ಅಥವಾ ಜನರು ನನ್ನನ್ನು ಈ ರೀತಿಯವನೆಂದು ತಿಳಿಯಲಿ ಎಂದೂ ಅಲ್ಲ. ಅವರು ಶಿಷ್ಯರುಗಳು ಮರಣಹೊಂದಿದ ನಂತರ, ಕಾಲಗತವಾದ ಬಳಿಕ ಉಂಟಾಗುವ ಸ್ಥಿತಿಯನ್ನು ಕುರಿತು ಹೀಗೆ ಹೇಳುವುದು- ಅಂತಹವನು ಅಂತಹ ಸ್ಥಿತಿಯಲ್ಲಿ ಹುಟ್ಟಿದ್ದಾನೆ, ಅಂತಹವನು ಆ ಅಂತಹ ಸ್ಥಿತಿಯಲ್ಲಿ ಹುಟ್ಟಿದ್ದಾನೆ ಎಂದು. ಅನೇಕ ಜನ ಕುಟುಂಬದ ಮಕ್ಕಳು ಶ್ರದ್ಧೆ, ಮಹತ್ತರವಾದ ಉತ್ಸಾಹ ಮತ್ತು ಮಹತ್ತರವಾದ ಆನಂದವನ್ನು ಹೊಂದಿದವರಾಗಿದ್ದಾರೆ. ಅವರುಗಳು ಇದನ್ನು ಕೇಳಿದವರಾಗಿ, ತಮ್ಮ ಮನಸ್ಸನ್ನು ಅದರಲ್ಲೇ ತೊಡಗಿಸಿದವರಾಗುತ್ತಾರೆ. ಆದ್ದರಿಂದಾಗಿ ಅನುರುದ್ಧರುಗಳೇ, ಅವರುಗಳಿಗೆ ಬಹಳ ಕಾಲದವರೆಗೂ ಹಿತವೂ ಮತ್ತು ಸುಖವೂ ಉಂಟಾಗುವುದು ಎಂದು.

ಭಗವಾನರು ಹೀಗೆ ನುಡಿದರು. ಆಯುಷ್ಮಂತ ಅನುರುದ್ಧರುಗಳು ಭಗವಾನರ ನುಡಿಗಳಿಮದ ಆನಂದಗೊಂಡವರಾಗಿ ಅಭಿನಂದಿಸಿದರು.

ಇಲ್ಲಿಗೆ ನಳಕಪಾನ ಸುತ್ತ ಮುಗಿಯಿತು

ಟಿಪ್ಪಣಿಗಳು [4]