ಊಟಿಸುತ್ತಿದೆ

ಅನುವಾದಗಳು [35]

ಆಕಾಂಕ್ಷೆ ಸುತ್ತ

ವಿವಿಧ ಆಕಾಂಕ್ಷೆಗಳಿರುವ ಭಿಕ್ಷುವು ಹೇಗಿರಬೇಕು

ಹೀಗೆ ನಾನು ಕೇಳಿದ್ದೇನೆ. ಒಂದು ಸಲ ಭಗವಾನರು ಶ್ರಾವಸ್ತಿಯ ಜೇತವನದಲ್ಲಿರುವ ಅನಾಥಪಿಂಡಿಕರ ವಿಹಾರದಲ್ಲಿ ತಂಗಿದ್ದರು. ಆಗ ಭಗವಾನರು-“ಭಿಕ್ಷುಗಳೇ” ಎಂದು ಭಿಕ್ಷುಗಳನ್ನು ಸಂಭೋಧಿಸಿದರು. “ಭದಂತರೇ” (ಪೂಜ್ಯರೇ) ಎಂದು ಭಿಕ್ಷುಗಳು ಭಗವಾನರಿಗೆ ಉತ್ತರಿಸಿದರು. ಭಗವಾನರು ಹೀಗೆ ಹೇಳಿದರು-

“ಭಿಕ್ಷುಗಳೇ, ಶೀಲಸಂಪನ್ನರಾಗಿ ಪ್ರಾತಿಮೋಕ್ಷಕ್ಕೆ ಬದ್ಧರಾಗಿ ಬಾಳಿರಿ. ಪ್ರಾತಿಮೋಕ್ಷಗಳ ಸಂಯಮಗಳನುಸಾರ (ಭಿಕ್ಷುಗಳು ಪಾಲಿಸಬೇಕಾದ ಸಂಹಿತೆ) ಸಂಯುಮಿಗಳಾಗಿ, ಆಚಾರಗೋಚರ ಸಂಪನ್ನರಾಗಿ, ವರ್ಜ್ಯವಾಗಿರುವ ಸಣ್ಣ ಸಣ್ಣ ದೋಷಗಳೀಗೂ ಹೆದರಿ ಬಾಳಿರಿ; ಕೈಗೊಂಡಿರುವ ಶಿಕ್ಷಾಪದಗಳಲ್ಲಿ (ನಿಯಮಾಚಾರಗಳಲ್ಲಿ) ಚೆನ್ನಾಗಿ ಪಳಗಿರಿ.76

2. “ಭಿಕ್ಷುಗಳೇ, ಭಿಕ್ಷುವು-‘ನಾನು ಸಹಸನ್ಯಾಸಿಗಳಿಗೆ ಪ್ರಿಯನೂ ಮತ್ತು ಮೆಚ್ಚಿಗೆಯವನೂ ಗೌರವಾರ್ಹನೂ ಸನ್ಮಾನ್ಯನೂ ಆಗಬೇಕು’ ಎಂದು ಆಕಾಂಕ್ಷಿಸಿದರೆ, ಶೀಲಗಳನ್ನೇ ಪೂರೈಸುವವನಾಗಿ, ಆಂತರ್ಯದಲ್ಲಿ ಮನಸ್ಸನ್ನು ಸಂತೈಸುವುದರಲ್ಲಿ ತೊಡಗಿ, ಎಡೆಬಿಡದ ಧ್ಯಾನದಲ್ಲಿ ತೊಡಗಿ, ವಿಪಸ್ಸನವನ್ನು ಅನುಭವಿಸಿ, ಶೂನ್ಯಗೃಹಗಳಲ್ಲಿ ವಾಸಮಾಡುವವನಾಗಲಿ.77

“ಭಿಕ್ಷುಗಳೇ, ಭಿಕ್ಷುವು ‘ಕಾಷಾಯ ವಸ್ತ್ರ, ಭಿಕ್ಷಾನ್ನ, ವಾಸಸ್ಥಾನ, ಆರೋಗ್ಯಕ್ಕೆ ಅವಶ್ಯಕವಾದ ಔಷಧಿ ಮುಂತಾದ ಸಾಮಗ್ರಿಗಳು ನನಗೆ ಸಿಗಲಿ’ ಎಂದು ಆಕಾಂಕ್ಷಿಸಿದರೆ, ಶೀಲಗಳನ್ನೇ ಪೂರೈಸುವವನಾಗಿ ಆಂತರ್ಯದಲ್ಲಿ ಮನಸ್ಸನ್ನು ಸಂತೈಸುವುದರಲ್ಲಿ ತೊಡಗಿ, ಎಡೆಬಿಡದ ಧ್ಯಾನದಲ್ಲಿ ತೊಡಗಿ, ವಿಪಸ್ಸನವನ್ನು ಅನುಭವಿಸಿ, ಶೂನ್ಯಗೃಹಗಳಲ್ಲಿ ವಾಸಮಾಡುವವನಾಗಲಿ.

“ಭಿಕ್ಷುಗಳೇ, ಭಿಕ್ಷುವು-‘ಯಾರು ಕೊಟ್ಟ ಕಾಷಾಯ ವಸ್ತ್ರಗಳನ್ನು, ಭಿಕ್ಷಾನ್ನವನ್ನು, ವಾಸಸ್ಥಳಗಳನ್ನು, ಆರೋಗ್ಯಕ್ಕೆ ಅವಶ್ಯಕವಾದ ಔಷಧಿ ಮುಂತಾದ ಸಾಮಗ್ರಿಗಳನ್ನು ಬಳಸುತ್ತಿದ್ದೇನೋ ಅವರ ಈ ಉಪಕಾರ ಮಹತ್ಫಲಗಳನ್ನು ಕೊಡಲಿ, ತುಂಬಾ ಒಳಿತಾಗಲಿ’ ಎಂದು ಆಕಾಂಕ್ಷಿಸಿದರೆ ಶೀಲಗಳನ್ನೇ ಪೂರೈಸುವವನಾಗಿ ಆಂತರ್ಯದಲ್ಲಿ ಮನಸ್ಸನ್ನು ಸಂತೈಸುವುದರಲ್ಲಿ ತೊಡಗಿ, ಎಡೆಬಿಡದ ಧ್ಯಾನದಲ್ಲಿ ತೊಡಗಿ, ವಿಪಸ್ಸನವನ್ನು ಅನುಭವಿಸಿ, ಶೂನ್ಯಗೃಹಗಳಲ್ಲಿ ವಾಸಮಾಡುವವನಾಗಲಿ.

“ಭಿಕ್ಷುಗಳೇ, ಭಿಕ್ಷುವು-‘ಯಾವ ನಮ್ಮ ಕುಟುಂಬದವರು, ರಕ್ತ ಸಂಬಂಧಿಗಳು, ಪಿತೃಗಳು, ಕಾಲವಾದವರು ಶ್ರದ್ಧೆಯಿಂದ ಕೂಡಿದ ಮನಸ್ಸಿನವರು, ನಮ್ಮನ್ನು ಸ್ಮರಿಸಿಕೊಳ್ಳುತ್ತಾರೆ ಅವರಿಗೆ ಅದು (ಆ ಸ್ಮರಣೆ) ಮಹಾಫಲಗಳನ್ನು ಕೊಡಲಿ. ಅದು ತುಂಬಾ ಒಳಿತನ್ನು ಮಾಡಲಿ’. ಎಂದು ಆಕಾಂಕ್ಷಿಸಿದರೆ ಶೀಲಗಳನ್ನೇ ಪೂರೈಸುವವನಾಗಿ ಆಂತರ್ಯದಲ್ಲಿ ಮನಸ್ಸನ್ನು ಸಂತೈಸುವುದರಲ್ಲಿ ತೊಡಗಿ, ಎಡೆಬಿಡದೆ ಧ್ಯಾನದಲ್ಲಿ ತೊಡಗಿ, ವಿಪಸ್ಸನವನ್ನು ಅನುಭವಿಸಿ, ಶೂನ್ಯಗೃಹಗಳಲ್ಲಿ ವಾಸ ಮಾಡುವವನಾಗಲಿ.78

3. “ಭಿಕ್ಷುಗಳೇ, ಭಿಕ್ಷುವು-‘ನಾನು ಬೇಸರ ಮತ್ತು ಭೋಗಗಳನ್ನು ತಾಳಿಕೊಳ್ಳುವಂತೆ ಆಗಲಿ, ಬೇಸರವು ನನ್ನನ್ನು ತಟ್ಟದಿರಲಿ, ಬೇಸರವು ಹುಟ್ಟುತ್ತಿದ್ದ ಹಾಗೆಯೇ ಗೆಲ್ಲುತ್ತಾ ಗೆಲ್ಲುತ್ತಾ ಬಾಳುವಂತಾಗಲಿ’ ಎಂದು ಆಕಾಂಕ್ಷಿಸಿದರೆ ಶೀಲಗಳನ್ನೇ ಪೂರೈಸುವವನಾಗಿ.... ಶೂನ್ಯಗೃಹಗಳಲ್ಲಿ ವಾಸ ಮಾಡುವವನಾಗಲಿ.

“ಭಿಕ್ಷುಗಳೇ, ಭಿಕ್ಷುವು-‘ನಾನು ಭಯ ಮತ್ತು ಭೀಕರತೆಗಳನ್ನು ತಾಳಿಕೊಳ್ಳುವಂತಾಗಲಿ’ ಭಯ-ಭೀಕರತೆ ನನ್ನನ್ನು ತಟ್ಟದಿರಲಿ, ಭಯ-ಭೀಕರತೆಯು ಹುಟ್ಟುತ್ತಿದ್ದ ಹಾಗೆಯೇ ಗೆಲ್ಲುತ್ತಾ ಗೆಲ್ಲುತ್ತಾ ಬಾಳುವಂತಾಗಲಿ’ ಎಂದು ಆಕಾಂಕ್ಷಿಸಿದರೆ ಶೀಲಗಳನ್ನೇ ಪೂರೈಸುವವನಾಗಿ.... ಶೂನ್ಯಗೃಹಗಳಲ್ಲಿ ವಾಸಮಾಡುವವನಾಗಲಿ.

“ಭಿಕ್ಷುಗಳೇ, ಭಿಕ್ಷುವು-‘ನಾಲ್ಕು ಝಾನಗಳ (ಸಮಾಧಿ ಸ್ಥಿತಿಗಳ) ಅತಿ ಉತ್ಕೃಷ್ಟ ಪರಿಶುದ್ಧ ಚಿತ್ತಸ್ಥಿತಿಯನ್ನು, ಹಾಗೂ ಈಗಲೇ ಇಲ್ಲಿಯೇ ಸುಖವಾಗಿರುವ ರೀತಿಯನ್ನು ಬಯಸಿ, ಬಯಸಿದ ಕ್ಷಣ ಅದು ಸುಲಭವಾಗಿ ತೊಂದರೆಯಿಲ್ಲದೆ ಸಿಗಲಿ’ ಎಂದು ಆಕಾಂಕ್ಷಿಸಿದರೆ ಶೀಲಗಳನ್ನೇ ಪೂರೈಸುವವನಾಗಿ.... ಶೂನ್ಯಗೃಹಗಳಲ್ಲಿ ವಾಸಮಾಡುವವನಾಗಲಿ.

“ಭಿಕ್ಷುಗಳೇ, ಭಿಕ್ಷುವು-‘ಆ ಶಾಂತಸ್ಥಿತಿಯನ್ನು, ವಿಮೋಕ್ಷವನ್ನು, ರೂಪ(ಆಕಾರ) ಬ್ರಹ್ಮಲೋಕವನ್ನು ಅತಿಕ್ರಮಿಸಿ, ಅರೂಪ(ನಿರಾಕಾರ) ಬ್ರಹ್ಮಲೋಕ ಸ್ಥಿತಿಯನ್ನು ಮನೋಕಾಯದಿಂದ ಅನುಭವಿಸಿ ಬಾಳುವಂತಾಗಲಿ’ ಎಂದು ಆಕಾಂಕ್ಷಿಸಿದರೆ ಶೀಲಗಳನ್ನೇ ಪೂರೈಸುವವನಾಗಿ.... ಶೂನ್ಯಗೃಹಗಳಲ್ಲಿ ವಾಸಮಾಡುವವನಾಗಲಿ.79

4. “ಭಿಕ್ಷುಗಳೇ, ಭಿಕ್ಷುವು-‘ಮೂರು ವಿಧ ಸಂಯೋಜನ (ಸಂಕೋಲೆ)ಗಳನ್ನು ನಾಶ ಮಾಡಿ, ನಾನು ಸೋತಾಪನ್ನ ಆಗಿ ದುರ್ಗತಿಗೆ ಬೀಳದಿರುವ ಮತ್ತು ಸಂಭೋಧಿ ಪಡೆಯುವ ನಿಶ್ಚಿತ ಸ್ಥಿತಿಯಲ್ಲಿ ಬಾಳುವಂತಾಗಲಿ’ ಎಂದು ಆಕಾಂಕ್ಷಿಸಿದರೆ ಶೀಲಗಳನ್ನೇ ಪೂರೈಸುವವನಾಗಿ.... ಶೂನ್ಯಗೃಹಗಳಲ್ಲಿ ವಾಸಮಾಡುವವನಾಗಲಿ.80

“ಭಿಕ್ಷುಗಳೇ, ಭಿಕ್ಷುವು-‘ಮೂರು ವಿಧ ಸಂಯೋಜನಗಳನ್ನು ನಾಶ ಮಾಡಿ, ರಾಗ ದ್ವೇಷ ಮೋಹಗಳನ್ನು ಕ್ಷೀಣಿಸಿ ಸಕದಾಗಾಮಿ ಆಗಿ ಒಂದು ಬಾರಿ ಮಾತ್ರ ಕಾಮಲೋಕದಲ್ಲಿ ಬಂದು ದುಃಖವನ್ನು ಕೊನೆಗೊಳಿಸುವಂತಾಗಲಿ’ ಎಂದು ಆಕಾಂಕ್ಷಿಸಿದರೆ ಶೀಲಗಳನ್ನೇ ಪೂರೈಸುವವನಾಗಿ.... ಶೂನ್ಯಗೃಹಗಳಲ್ಲಿ ವಾಸಮಾಡುವವನಾಗಲಿ.

“ಭಿಕ್ಷುಗಳೇ, ಭಿಕ್ಷುವು-‘ಮೊದಲಿನ ಸ್ಥೂಲವಾದ ಐದು ವಿಧ ಸಂಯೋಜನಗಳನ್ನು ನಾಶ ಮಾಡಿ, ಓಪಪಾತಿಕನಾಗಿ ಹುಟ್ಟುವವನಾಗಿ ಅಲ್ಲಿ (ಶುದ್ಧಾವಾದ ಬ್ರಹ್ಮಲೋಕದಲ್ಲಿ) ಪರಿನಿರ್ವಾಣ ಪಡೆದು ಮತ್ತೆ ಆ ಲೋಕದಿಂದ ಕೆಳಗೆ ಬೀಳದ ಸ್ಥಿತಿ ಪಡೆಯುವಂತಾಗಲಿ,ಎಂದು ಆಕಾಂಕ್ಷಿಸಿದರೆ ಶೀಲಗಳನ್ನೇ ಪೂರೈಸುವವನಾಗಿ.... ಶೂನ್ಯಗೃಹಗಳಲ್ಲಿ ವಾಸಮಾಡುವವನಾಗಲಿ.81

5. “ಭಿಕ್ಷುಗಳೇ, ಭಿಕ್ಷುವು-‘ತಾನು ಅನೇಕ ವಿಧವಾದ ಸಿದ್ಧಿಗಳನ್ನು ಅನುಭವಿಸುವಂತಾಗಲಿ*ಒಬ್ಬನಾಗಿ ಅನೇಕರಾಗುವಂತಾಗಲಿ-ಅನೇಕರಾಗಿ ಒಬ್ಬನಾಗುವಂತಾಗಲಿ; ಕಾಣುವಂತಾಗಲಿ-ಮರೆಯಾಗುವಂತಾಗಲಿ; ಆಕಾಶವನ್ನು ಹಾದು ಹೋಗುವಂತೆ ಗೋಡೆಗಳನ್ನು, ದುರ್ಗಗಳ ಪ್ರಾಕಾರಗಳನ್ನು ಪರ್ವತಗಳನ್ನು ತಡೆಯಿಲ್ಲದೆ ಹಾದು ಹೋಗುವಂತಾಗಲಿ, ನೀರಿನೊಳಗೆ ಹೋಗುವಂತೆ, ಪೃಥ್ವಿಯೊಳಗೆ ಮುಳುಗಿ ಮೇಲೇಳುವಂತಾಗಲಿ, ನೆಲದ ಮೇಲೆ ನಡೆದಾಡುವಂತೆ ರೆಕ್ಕೆಯುಳ್ಳ ಪಕ್ಷಿಯ ಹಾಗೆ, ಭೇದಿಸದೆ ನೀರಿನ ಮೇಲೆ ನಡೆದಾಡುವಂತಾಗಲಿ, ಆಕಾಶದಲ್ಲಿ ಆಸನಬದ್ಧರಾಗಿ ಹಾರುವಂತಾಗಲಿ ತನ್ನ ಕೈಗಳಿಂದ ಈ ಮಹಾನುಭಾವರಾದ ಮತ್ತು ಮಹಾಶಕ್ತಿ ಸಂಪನ್ನರಾದ ಚಂದ್ರಸೂರ್ಯರನ್ನು ಮುಟ್ಟುವಂತಾಗಲಿ, ಸವರುವಂತಾಗಲಿ, ಬ್ರಹ್ಮ ಲೋಕದವರೆಗಿನದನ್ನೂ ನನ್ನ ಕಾಯ**ದ ವಶದಲ್ಲಿಟ್ಟುಕೊಳ್ಳುವಂತಾಗಲಿ’ ಎಂದು ಆಕಾಂಕ್ಷಿಸಿದರೆ82 ಶೀಲಗಳನ್ನೇ ಪೂರೈಸುವವನಾಗಿ.... ಶೂನ್ಯಗೃಹಗಳಲ್ಲಿ ವಾಸಮಾಡುವವನಾಗಲಿ.

“ಭಿಕ್ಷುಗಳೇ, ಭಿಕ್ಷುವು-‘ತಾನು ಮಾನವಾತೀತವಾದ ವಿಶುದ್ಧವಾದ ದಿವ್ಯಶ್ರೋತ್ರದಿಂದ ಎರಡು ಬಗೆಯ ಶಬ್ದಗಳನ್ನು ಕೇಳಿಸಿಕೊಳ್ಳುವಂತಾಗಲಿ, ದೂರದಿಂದಾಗಲಿ ಹತ್ತಿರದಿಂದಾಗಲಿ ದೇವರ ಮತ್ತು ಮನುಷ್ಯರ ಶಬ್ದಗಳನ್ನು ಕೇಳಿಸಿಕೊಳ್ಳುವಂತಾಗಲಿ’ ಎಂದು ಆಕಾಂಕ್ಷಿಸಿದರೆ ಶೀಲಗಳನ್ನು ಪೂರೈಸುವವನಾಗಿ.... ಶೂನ್ಯಗೃಹಗಳಲ್ಲಿ ವಾಸಮಾಡುವವನಾಗಲಿ.

“ಭಿಕ್ಷುಗಳೇ, ಭಿಕ್ಷುವು-‘ಬೇರೆ ಬೇರೆ ಜೀವಿಗಳ ಬೇರೆ ವ್ಯಕ್ತಿಗಳ ಮನಸ್ಸುಗಳನ್ನು ತನ್ನ ಮನಸ್ಸಿನಿಂದ ಅರಿಯುವಂತಾಗಲಿ, ಚಿತ್ತವು ರಾಗದಿಂದ ತುಂಬಿದ್ದರೆ ಚಿತ್ತವು ರಾಗದಿಂದ ತುಂಬಿದೆ ಎಂದು ಅರಿಯುವಂತಾಗಲಿ ಅಥವಾ ಚಿತ್ತವು ರಾಗವನ್ನು ನೀಗಿದ್ದರೆ ಚಿತ್ತವು ರಾಗವನ್ನು ನೀಗಿದೆ ಎಂದು ಅರಿಯುವಂತಾಗಲಿ, ಚಿತ್ತವು ದ್ವೇಷದಿಂದ ತುಂಬಿದ್ದರೆ ಚಿತ್ತವು ದ್ವೇಷದಿಂದ ತುಂಬಿದೆ ಎಂದು ಅರಿಯುವಂತಾಗಲಿ ಅಥವಾ ಚಿತ್ತವು ದ್ವೇಷವನ್ನು ನೀಗಿದ್ದರೆ ಚಿತ್ತವು ದ್ವೇಷವನ್ನು ನೀಗಿದೆ ಎಂದು ಅರಿಯುವಂತಾಗಲಿ, ಚಿತ್ತವು ಮೋಹದಿಂದ ತುಂಬಿದ್ದರೆ ಚಿತ್ತವು ಮೋಹದಿಂದ ತುಂಬಿದೆ ಎಂದು ಅರಿಯುವಂತಾಗಲಿ ಚಿತ್ತವು ಮೋಹವನ್ನು ನೀಗಿದ್ದರೆ ಚಿತ್ತವು ಮೋಹವನ್ನು ನೀಗಿದೆ ಎಂದು ಅರಿಯುವಂತಾಗಲಿ. ಕುಗ್ಗಿರುವ ಚಿತ್ತವನ್ನು ಕುಗ್ಗಿರುವ ಚಿತ್ತವೆಂದು ಅರಿಯುವಂತಾಗಲಿ; ಚದುರಿದ ಚಿತ್ತವನ್ನು ಚದುರಿದ ಚಿತ್ತವೆಂದು ಅರಿಯುವಂತಾಗಲಿ, ಹಿರಿಮೆವೆತ್ತ ಚಿತ್ತವನ್ನು ಹಿರಿಮೆವೆತ್ತ ಚಿತ್ತವೆಂದು ಅರಿಯುವಂತಾಗಲಿ; ಹಿರಿಮೆ ವಡೆಯದ ಚಿತ್ತವನ್ನು ಹಿರಿಮೆವಡೆಯದ ಚಿತ್ತವೆಂದು ಅರಿಯುವಂತಾಗಲಿ, ತನ್ನನ್ನು ಮೀರಿದ್ದನ್ನು ಪಡೆದ ಚಿತ್ತವನ್ನು ತನ್ನನ್ನು ಮೀರಿದ್ದನ್ನು ಪಡೆದ ಚಿತ್ತ ಎಂದು ಅರಿಯುವಂತಾಗಲಿ; ತನ್ನನ್ನು ಮೀರಿದ್ದನ್ನು ಪಡೆಯದ ಚಿತ್ತವನ್ನು ತನ್ನನ್ನು ಮೀರಿದ್ದನ್ನು ಪಡೆಯದ ಚಿತ್ತವೆಂದು ಅರಿಯುವಂತಾಲಿ, ಸಮಾಹಿತವಾದ ಚಿತ್ತವನ್ನು ಸಮಾಹಿತ ಚಿತ್ತವೆಂದು ಅರಿಯುವಂತಾಗಲಿ. ಸಮಾಹಿತವಲ್ಲದ ಚಿತ್ತವನ್ನು ಸಮಾಹಿತವಲ್ಲದ ಚಿತ್ತವೆಂದು ಅರಿಯುವಂತಾಲಿ, ವಿಮುಕ್ತ ಚಿತ್ತವನ್ನು ವಿಮುಕ್ತ ಚಿತ್ತವೆಂದು ಅರಿಯುವಂತಾಗಲಿ, ಅವಿಮುಕ್ತ ಚಿತ್ತವನ್ನು ಅವಿಮುಕ್ತ ಚಿತ್ತವೆಂದು ಅರಿಯುವಂತಾಗಲಿ,’ ಎಂದು ಆಕಾಂಕ್ಷಿಸಿದರೆ ಶೀಲಗಳನ್ನೇ ಪೂರೈಸುವವನಾಗಿ ಶೂನ್ಯಗೃಹಗಳಲ್ಲಿ ವಾಸಮಾಡುವವನಾಗಲಿ.

“ಭಿಕ್ಷುಗಳೇ, ಭಿಕ್ಷುವು-‘ಅನೇಕ ವಿಧವಾದ ಪೂರ್ವ ಜನ್ಮಗಳನ್ನು ಸ್ಮರಿಸಿಕೊಳ್ಳುವಂತಾಗಲಿ, ಹೇಗೆಂದರೆ ಒಂದು ಜನ್ಮವನ್ನು, ಎರಡು ಜನ್ಮಗಳನ್ನು, ಮೂರು ಜನ್ಮಗಳನ್ನು, ನಾಲ್ಕು ಜನ್ಮಗಳನ್ನು, ಐದು ಜನ್ಮಗಳನ್ನು, ಹತ್ತು ಜನ್ಮಗಳನ್ನು, ಇಪ್ಪತ್ತು ಜನ್ಮಗಳನ್ನು, ನಲವತ್ತು ಜನ್ಮಗಳನ್ನು, ಐವತ್ತು ಜನ್ಮಗಳನ್ನು, ನೂರು ಜನ್ಮಗಳನ್ನು, ಸಾವಿರ ಜನ್ಮಗಳನ್ನು, ನೂರು ಸಾವಿರ ಜನ್ಮಗಳನ್ನು, ಅನೇಕ ಕಲ್ಪಾಂತರ ಲೋಕಲಯಗಳನ್ನು ಅನೇಕ ಕಲ್ಪಾಂತರ ಲೋಕವಿಕಾಸಗಳನ್ನು, ಅನೇಕ ಕಲ್ಪಾಂತರ ಲೋಕ ಲಯವಿಕಸನಗಳನ್ನು’, ಅಲ್ಲಿ ನನಗೆ ಇಂಥ ಹೆಸರಿತ್ತು, ಇಂಥ ಗೋತ್ರವಿತ್ತು ಇಂಥ ವರ್ಣ*ವಿತ್ತು ಇಂಥ ಆಹಾರವಿತ್ತು ಇಂಥ ಸುಖದು:ಖಗಳು ಅನುಭವಕ್ಕೆ ಬಂದವು, ಇಷ್ಟೊಂದು ಆಯುಷ್ಯವಿತ್ತು ಅದನ್ನು ಬಿಟ್ಟು ಇನ್ನೊಂದು ಕಡೆ ಹುಟ್ಟಿ ಬಂದೆ, ಅದರಲ್ಲಿ ನನಗೆ ಇಂಥ ಹೆಸರಿತ್ತು, ಇಂಥ ಗೋತ್ರವಿತ್ತು ಇಂಥ ವರ್ಣವಿತ್ತು ಇಂಥ ಆಹಾರವಿತ್ತು ಇಂಥ ಸುಖದು:ಖಗಳು ಅನುಭವಕ್ಕೆ ಬಂದವು, ಇಷ್ಟೊಂದು ಆಯುಷ್ಯವಿತ್ತು ಅದನ್ನು ಬಿಟ್ಟು ಇಲ್ಲಿ ಹುಟ್ಟಿ ಬಂದೆ, ಅದರಲ್ಲಿ ನನಗೆ ಇಂಥ ಹೆಸರಿತ್ತು, ಇಂಥ ಗೋತ್ರವಿತ್ತು ಇಂಥ ವರ್ಣವಿತ್ತು ಇಂಥ ಆಹಾರವಿತ್ತು ಇಂಥ ಸುಖದು:ಖಗಳು ಅನುಭವಕ್ಕೆ ಬಂದವು ಇಷ್ಟು ಆಯುಷ್ಯವಿತ್ತು, ಅದನ್ನು ಬಿಟ್ಟು ಇಲ್ಲಿ ಹುಟ್ಟಿ ಬಂದೆ ಎಂದೂ ಹೀಗೆ ಎಲ್ಲ ಆಕಾರ ಮತ್ತು ವಿವರಗಳೊಂದಿಗೆ ಅನೇಕ ವಿಧವಾದ ಪೂರ್ವಜನ್ಮಗಳನ್ನು ಸ್ಮರಿಸಿಕೊಳ್ಳುವಂತಾಗಲಿ’ ಎಂದು ಆಕಾಂಕ್ಷಿಸಿದರೆ ಶೀಲಗಳನ್ನೇ ಪೂರೈಸುವವನಾಗಿ..... ಶೂನ್ಯಗೃಹಗಳಲ್ಲಿ ವಾಸಮಾಡುವವನಾಗಲಿ.

“ಭಿಕ್ಷುಗಳೇ, ಭಿಕ್ಷುವು-‘ವಿಶುದ್ಧವಾದ ಮಾನವಾತೀತವಾದ ದಿವ್ಯ ನೇತ್ರದಿಂದ ಜೀವಿಗಳನ್ನು ಅರಿಯುವಂತಾಗಲಿ; ಸಾಯುತ್ತಿರುವ ಮತ್ತೆ ಹುಟ್ಟುತ್ತಿರುವ ಅಧಮ- ಉತ್ತಮವಾದ, ಸುರೂಪಿ-ಕುರೂಪಿಯಾದ, ಸದ್ಗತಿ-ದುರ್ಗತಿಗಳನ್ನು ತಮ್ಮ ಕರ್ಮಾನುಸಾರ ಹೊಂದುತ್ತಿರುವ ಜೀವಿಗಳನ್ನು ಅರಿಯುವಂತಾಗಲಿ,’ ದೈಹಿಕ ದುರ್ನಡತೆಯಿಂದ ಮಾತಿನ ದುರ್ನಡತೆಯಿಂದ ಮನಸ್ಸಿನ ದುರ್ನಡತೆಯಿಂದ, ಆರ್ಯರ ಮೇಲೆ ಅಪವಾದಗಳನ್ನು ಹೇರುವುದರಿಂದ, ತಪ್ಪು ದೃಷ್ಟಿಯನ್ನು ಹೊಂದಿದ ತಪ್ಪು ದೃಷ್ಟಿಯ ಪ್ರಕಾರ ನಡೆದುಕೊಳ್ಳುವ ಆ ಜೀವಿಗಳು ಮೈಗರೆದಾಗ ಸಾವಿನ ಬಳಿಕ ನರಕದಲ್ಲಿ, ಅಪಾಯ ಸ್ಥಿತಿಯಲ್ಲಿ, ದುರ್ಗತಿಯಲ್ಲಿ, ಅಧೋಲೋಕದಲ್ಲಿ ಹುಟ್ಟುತ್ತಾರೆ. ಒಳ್ಳೆಯ ಜೀವಿಗಳು ಕಾಯದ ಸನ್ನಡತೆಯಿಂದ ಮಾತಿನ ಸನ್ನಡತೆಯಿಂದ ಮನಸ್ಸಿನ ಸನ್ನಡತೆಯಿಂದ, ಆರ್ಯರ ಬಗ್ಗೆ ಅಪವಾದಗಳನ್ನು ಹೇರದೆ ಇರುವುದರಿಂದ, ಯಥಾರ್ಥ ದೃಷ್ಟಿಯಿಂದ ಯಥಾರ್ಥ ದೃಷ್ಟಿಯನುಸಾರ ನಡೆದುಕೊಳ್ಳುವುದರಿಂದ ಮೈಗರೆದು ಸಾವಿನ ಬಳಿಕ ಸದ್ಗತಿಯನ್ನು, ಸ್ವರ್ಗವನ್ನು ಪಡೆದುಕೊಳ್ಳುತ್ತಾರೆ. ಹೀಗೆ ವಿಶುದ್ಧವಾದ ಮಾನವಾತೀತವಾದ ದಿವ್ಯ ನೇತ್ರದಿಂದ ಜೀವಿಗಳನ್ನು ಅರಿಯುವಂತಾಗಲಿ, ಸಾಯುತ್ತಿರುವ ಮತ್ತೆ ಹುಟ್ಟುತ್ತಿರುವ ಅಧಮ ಉತ್ತಮವಾದ, ಸುರೂಪಿ-ಕುರೂಪಿಗಳನ್ನು (ಸದ್-ವರ್ಣ, ದುರ್ವರ್ಣ) ಸದ್ಗತಿ-ದುರ್ಗತಿಗಳನ್ನು ತಮ್ಮ ಕರ್ಮಾನುಸಾರ ಹೊಂದುತ್ತಿರುವ ಜೀವಿಗಳನ್ನು ಅರಿಯುವಂತಾಗಲಿ’ ಎಂದು ಆಕಾಂಕ್ಷಿಸಿದರೆ ಶೀಲಗಳನ್ನೇ ಪೂರೈಸುವವನಾಗಿ ಆಂತರ್ಯದಲ್ಲಿ ಮನಸ್ಸನ್ನು ಸಂತೈಸುವುದರಲ್ಲಿ ತೊಡಗಿ, ಎಡೆಬಿಡದ ಧ್ಯಾನದಲ್ಲಿ ತೊಡಗಿ, ವಿಪಸ್ಸನವನ್ನು ಅನುಭವಿಸಿ, ಶೂನ್ಯಗೃಹಗಳಲ್ಲಿ ವಾಸಮಾಡುವವನಾಗಲಿ.

6. “ಭಿಕ್ಷುಗಳೇ, ಭಿಕ್ಷುವು-‘ಆಸವಗಳನ್ನು ಹಿಂಗಿಸಿ, ಆಸವ ರಹಿತನಾಗಿ ಚಿತ್ತದ ವಿಮುಕ್ತಿಯನ್ನು ಹೊಂದಿ ಪ್ರಜ್ಞಾದ ವಿಮುಕ್ತಿಯನ್ನು ಹೊಂದಿ, ಈ ಸ್ವಂತ ಪ್ರತ್ಯಕ್ಷ ಜ್ಞಾನದಿಂದ (ಅಭಿಜ್ಞಾ) ಇಲ್ಲಿಯೇ ಈಗಲೇ ಸಾಕ್ಷಾತ್ಕರಿಸಿಕೊಂಡು ಬಾಳುವಂತಾಗಲಿ’ ಎಂದು ಆಕಾಂಕ್ಷಿಸಿದರೆ ಶೀಲಗಳನ್ನೇ ಪೂರೈಸುವವನಾಗಿ, ಆಂತರ್ಯದಲ್ಲಿ ಮನಸ್ಸನ್ನು ಸಂತೈಸುವುದರಲ್ಲಿ ತೊಡಗಿ, ಎಡೆಬಿಡದ ಧ್ಯಾನ್ಯದಲ್ಲಿ ತೊಡಗಿ, ವಿಪಸ್ಸನವನ್ನು ಅನುಭವಿಸಿ ಶೂನ್ಯಗೃಹಗಳಲ್ಲಿ ವಾಸಮಾಡುವವನಾಗಲಿ.83

“ಭಿಕ್ಷುಗಳೇ, ಶೀಲಸಂಪನ್ನರಾಗಿ, ಪ್ರಾತಿಮೋಕ್ಷಕ್ಕೆ ಬದ್ಧರಾಗಿ ಬಾಳಿರಿ-ಪ್ರಾತಿಮೋಕ್ಷಗಳ ಸಂಯಮಗಳನುಸಾರ ಸಂಯಮಿಗಳಾಗಿ, ಆಚಾರಗೋಚರ ಸಂಪನ್ನರಾಗಿ ವರ್ಜ್ಯವಾಗಿರುವ ಸಣ್ಣ ಸಣ್ಣ ದೋಷಗಳಿಗೂ ಹೆದರಿ ಬಾಳಿರಿ-ಕೈಗೊಂಡಿರುವ ಶಿಕ್ಷಾಪದಗಳಲ್ಲಿ ಚೆನ್ನಾಗಿ ಪಳಗಿರಿ’- ಹೀಗೆ ನಾನು ಹೇಳಿದ್ದೆಲ್ಲವೂ ಇದನ್ನು ಕುರಿತೇ ಹೇಳಿದ್ದು” ಎಂದು.

“ಭಗವಾನರು ಹೀಗೆ ನುಡಿದರು, ಸ್ಫೂರ್ತಿ ಪಡೆದ ಆ ಭಿಕ್ಷುಗಳು ಭಗವಾನರ ನುಡಿಗೆ ಆನಂದಗೊಂಡರು.

ಇಲ್ಲಿಗೆ ಆಕಾಂಕ್ಷೆ ಸುತ್ತ ಮುಗಿಯಿತು.

ಟಿಪ್ಪಣಿಗಳು [4]