ಊಟಿಸುತ್ತಿದೆ

ಅನುವಾದಗಳು [39]

ಬಟ್ಟೆಯ ಉಪಮೆ ಸುತ್ತ

ಭಿಕ್ಷುವು ಚಿತ್ತದ ಉಪಕ್ಲೇಷ ಗಳನ್ನು ತೊಡೆದು ಹಾಕುತ್ತಾನೆ

ಹೀಗೆ ನಾನು ಕೇಳಿದ್ದೇನೆ. ಒಂದುಸಲ ಭಗವಾನರು ಶ್ರಾವಸ್ತಿಯ ಜೇತವನದಲ್ಲಿರುವ ಅನಾಥಪಿಂಡಕರ ವಿಹಾರದಲ್ಲಿ ತಂಗಿದ್ದರು. ಅಲ್ಲಿ ಭಗವಾನರು “ಭಿಕ್ಷುಗಳೇ” ಎಂದು ಭಿಕ್ಷುಗಳನ್ನು ಸಂಬೋಧಿಸಿದರು. “ಭದಂತರೆ” ಎಂದು ಭಿಕ್ಷುಗಳು ಉತ್ತರಿಸಿದರು. ಭಗವಾನರು ಹೀಗೆ ಹೇಳಿದರು -

“ಉದಾಹರಣೆಗೆ ಭಿಕ್ಷುಗಳೇ, ಬಟ್ಟೆಯು ಕೊಳಕಾಗಿ, ಕಲೆ ಹತ್ತಿ ಇರುತ್ತದೆ; ಅಂತಹದನ್ನು ರಜಕ*ನು ಯಾವ ಯಾವ ಬಣ್ಣದಲ್ಲಿ ಅದ್ದುತ್ತಾನೆಯೋ-ಅದು ನೀಲಿಯಾಗಿರಲಿ, ಹಳದಿಯಾಗಿರಲಿ, ಕೆಂಪಾಗಿರಲಿ, ಎಣ್ಣೆಗೆಂಪಾ (ಮಂಜಿಷ್ಠ) ಗಿರಲಿ, ಅದು ಕೆಟ್ಟ ಬಣ್ಣವೇ ಆಗುತ್ತದೆ, ಅಪರಿಶುದ್ಧವಾದ ಬಣ್ಣವೇ ಆಗುತ್ತದೆ. ಅದಕ್ಕೇನು ಕಾರಣ? ಭಿಕ್ಷುಗಳೇ, ಬಟ್ಟೆಯ ಅಪರಿಶುದ್ಧತೆ (ಕೊಳಕುತನವೇ) ಕಾರಣ. ಹೀಗೆಯೇ, ಭಿಕ್ಷುಗಳೇ, ಚಿತ್ತವು ಕಲ್ಮಷಗೊಂಡಿದ್ದಾಗ ದುರ್ಗತಿಯನ್ನು ನಿರೀಕ್ಷಿಸಬಹುದು.85 ಇನ್ನೊಂದು ಉದಾಹರಣೆ ಭಿಕ್ಷುಗಳೇ, ಬಟ್ಟೆಯು ಪರಿಶುದ್ಧವಾಗಿದ್ದು ಒಗೆದಿರುವುದು, ಅಂತಹದನ್ನು ರಜಕನು ಯಾವ ಯಾವ ಬಣ್ಣದಲ್ಲಿ ಅದ್ದುತ್ತಾನೇಯೊ-ಅದು ನೀಲಿಯಾಗಲಿ ಹಳದಿಯಾಗಲಿ, ಕೆಂಪಾಗಲಿ ಎಣ್ಣೆಗೆಂಪಾಗಲೀ-ಅದಕ್ಕೆ ಚೆನ್ನಾಗಿ ಬಣ್ಣ ಹಿಡಿಯುತ್ತದೆ, ಪರಿಶುದ್ಧವಾದ ಬಣ್ಣವಾಗುತ್ತದೆ. ಅದಕ್ಕೇನು ಕಾರಣ? ಭಿಕ್ಷುಗಳೇ ಬಟ್ಟೆಯ ಪರಿಶುದ್ಧತೆಯೇ ಕಾರಣ. ಅದೇ ರೀತಿ ಭಿಕ್ಷುಗಳೇ, ಚಿತ್ತವು ಕಲ್ಮಷವಿಲ್ಲದಿದ್ದಾಗ ಸುಗತಿಯನ್ನು ನಿರೀಕ್ಷಿಸಬಹುದು.

2. “ಭಿಕ್ಷುಗಳೇ, ಚಿತ್ತದ ಉಪಕ್ಲೇಷಗಳು (ಮನಸ್ಸಿನ ಕೊಳೆಗಳು) ಯಾವುವು?86 (ಅಭೀಷ್ಟ) ದುರಾಶೆ, ವಿಷಮ ಲೋಭ (ಅಪಾಯಕಾರಿಯಾದ) ಚಿತ್ತದ ಉಪಕ್ಲೇಷ, ಹಗೆತನ ಚಿತ್ತದ ಉಪಕ್ಲೇಷ, ಕ್ರೋಧ ಚಿತ್ತದ ಉಪಕ್ಲೇಷ, ರೊಚ್ಚು ಚಿತ್ತದ ಉಪಕ್ಲೇಷ, ಹೀನಾಯಿಸುವುದು ಚಿತ್ತದ ಉಪಕ್ಲೇಷ, ದರ್ಪ ಚಿತ್ತದ ಉಪಕ್ಲೇಷ, ಈರ್ಷೆ ಚಿತ್ತದ ಉಪಕ್ಲೇಷ, ಮತ್ಸರ ಚಿತ್ತದ ಉಪಕ್ಲೇಷ, ಮೋಸ ಚಿತ್ತದ ಉಪಕ್ಲೇಷ, ವಂಚನೆ ಚಿತ್ತದ ಉಪಕ್ಲೇಷ, ಹಠಮಾರಿತನ ಚಿತ್ತದ ಉಪಕ್ಲೇಷ, ದುರಾಗ್ರಹ ಚಿತ್ತದ ಉಪಕ್ಲೇಷ, ಅಹಂಕಾರ ಚಿತ್ತದ ಉಪಕ್ಲೇಷ, ದುರಭಿಮಾನ ಚಿತ್ತದ ಉಪಕ್ಲೇಷ ಮದ ಚಿತ್ತದ ಉಪಕ್ಲೇಷ, ಎಚ್ಚರಿಕೆಯಿಲ್ಲದ ಸ್ಥಿತಿ, ಇವು ಚಿತ್ತದ ಉಪಕ್ಲೇಷಗಳು.87

3. “ಭಿಕ್ಷುಗಳೇ, ಅಲ್ಲಿ ಆ ಭಿಕ್ಷುವು, ‘ದುರಾಶೆ ವಿಷಮ ಲೋಭ ಚಿತ್ತದ ಉಪಕ್ಲೇಷ’ ಎಂದು ಅರಿತಾಗ ಚಿತ್ತದ ಉಪಕ್ಲೇಷಗಳಾದ ದುರಾಶೆ ಮತ್ತು ವಿಷಮ ಲೋಭಗಳನ್ನು ತೊಡೆದು ಹಾಕುತ್ತಾನೆ. ‘ಹಗೆತನ ಚಿತ್ತದ ಉಪಕ್ಲೇಷ’ ಎಂದು ಅರಿತಾಗ ಚಿತ್ತದ ಉಪಕ್ಲೇಷವಾದ ಹಗೆತನವನ್ನು ತೊಡೆದು ಹಾಕುತ್ತಾನೆ. ‘ಕ್ರೋಧ ಚಿತ್ತದ ಉಪಕ್ಲೇಷ’ ಎಂದು ಅರಿತಾಗ ಚಿತ್ತದ ಉಪಕ್ಲೇಷವಾದ ಕ್ರೋಧವನ್ನು ತೊಡೆದು ಹಾಕುತ್ತಾನೆ. ‘ರೊಚ್ಚು ಚಿತ್ತದ ಉಪಕ್ಲೇಷ’ ಎಂದು ಅರಿತಾಗ ಚಿತ್ತದ ಉಪಕ್ಲೇಷವಾದ ರೊಚ್ಚನ್ನು ತೊಡೆದು ಹಾಕುತ್ತಾನೆ. ‘ಹೀನಾಯಿಸುವುದು ಚಿತ್ತದ ಉಪಕ್ಲೇಷ’ ಎಂದು ಅರಿತಾಗ ಚಿತ್ತದ ಉಪಕ್ಲೇಷವಾದ ಹೀನಾಯಿಸುವುದನ್ನು ತೊಡೆದು ಹಾಕುತ್ತಾನೆ. ‘ದರ್ಪ ಚಿತ್ತದ ಉಪಕ್ಲೇಷ’ ಎಂದು ಅರಿತಾಗ ಚಿತ್ತದ ಉಪಕ್ಲೇಷವಾದ ದರ್ಪವನ್ನು ತೊಡೆದು ಹಾಕುತ್ತಾನೆ. ‘ಈರ್ಷೆ ಚಿತ್ತದ ಉಪಕ್ಲೇಷ’ ಎಂದು ಅರಿತಾಗ ಚಿತ್ತದ ಉಪಕ್ಲೇಷವಾದ ಈರ್ಷೆಯನ್ನು ತೊಡೆದು ಹಾಕುತ್ತಾನೆ. ‘ಮತ್ಸರ ಚಿತ್ತದ ಉಪಕ್ಲೇಷ’ ಎಂದು ಅರಿತಾಗ ಚಿತ್ತದ ಉಪಕ್ಲೇಷವಾದ ಮತ್ಸರವನ್ನು ತೊಡೆದು ಹಾಕುತ್ತಾನೆ. ‘ಮೋಸ ಚಿತ್ತದ ಉಪಕ್ಲೇಷ’ ಎಂದು ಅರಿತಾಗ ಚಿತ್ತದ ಉಪಕ್ಲೇಷವಾದ ಮೋಸತನವನ್ನು ತೊಡೆದು ಹಾಕುತ್ತಾನೆ. ‘ವಂಚನೆ ಚಿತ್ತದ ಉಪಕ್ಲೇಷ’ ಎಂದು ಅರಿತಾಗ ಚಿತ್ತದ ಉಪಕ್ಲೇಷವಾದ ವಂಚನೆತನವನ್ನು ತೊಡೆದು ಹಾಕುತ್ತಾನೆ. ‘ಹಠಮಾರಿತನ ಚಿತ್ತದ ಉಪಕ್ಲೇಷ’ ಎಂದು ಅರಿತಾಗ ಚಿತ್ತದ ಉಪಕ್ಲೇಷವಾದ ಹಠಮಾರಿತನವನ್ನು ತೊಡೆದು ಹಾಕುತ್ತಾನೆ. ‘ದುರಾಗ್ರಹ ಚಿತ್ತದ ಉಪಕ್ಲೇಷ’ ಎಂದು ಅರಿತಾಗ ಚಿತ್ತದ ಉಪಕ್ಲೇಷವಾದ ದುರಾಗ್ರಹವನ್ನು ತೊಡೆದು ಹಾಕುತ್ತಾನೆ. ‘ಅಹಂಕಾರ ಚಿತ್ತದ ಉಪಕ್ಲೇಷ’ ಎಂದು ಅರಿತಾಗ ಚಿತ್ತದ ಉಪಕ್ಲೇಷವಾದ ಅಹಂಕಾರವನ್ನು ತೊಡೆದು ಹಾಕುತ್ತಾನೆ. ‘ದುರಭಿಮಾನ ಚಿತ್ತದ ಉಪಕ್ಲೇಷ’ ಎಂದು ಅರಿತಾಗ ಚಿತ್ತದ ಉಪಕ್ಲೇಷವಾದ ದುರಭಿಮಾನವನ್ನು ತೊಡೆದು ಹಾಕುತ್ತಾನೆ. ‘ಮದ ಚಿತ್ತದ ಉಪಕ್ಲೇಷ’ ಎಂದು ಅರಿತಾಗ ಚಿತ್ತದ ಉಪಕ್ಲೇಷವಾದ ಮದವನ್ನು ತೊಡೆದು ಹಾಕುತ್ತಾನೆ. ಎಚ್ಚರಿಕೆಯಿಲ್ಲದ ಸ್ಥಿತಿ, ಇವು ಚಿತ್ತದ ಉಪಕ್ಲೇಷ’ ಎಂದು ಅರಿತಾಗ ಚಿತ್ತದ ಉಪಕ್ಲೇಷವಾದ ಎಚ್ಚರಿಕೆಯಿಲ್ಲದ ಸ್ಥಿತಿಯನ್ನು ತೊಡೆದು ಹಾಕುತ್ತಾನೆ.

4. “ಭಿಕ್ಷುಗಳೇ, ಭಿಕ್ಷುವಿಗೆ, ‘ದುರಾಶೆ, ವಿಷಮ ಲೋಭ ಚಿತ್ತದ ಉಪಕ್ಲೇಷ’ ಎಂಬ ಅರಿವು ಬಂದ ಕೂಡಲೇ ಅವನ ಚಿತ್ತದ ಉಪಕ್ಲೇಷಗಳಾದ ದುರಾಶೆ, ವಿಷಮ ಲೋಭವು ನಾಶ ಹೊಂದುತ್ತವೆ. ‘ಹಗೆತನ ಚಿತ್ತದ ಉಪಕ್ಲೇಷ’ ಎಂಬ ಅರಿವು ಬಂದ ಕೂಡಲೆ (ಅವನ) ಚಿತ್ತದ ಉಪಕ್ಲೇಷವಾದ ಹಗೆತನ ನಾಶಹೊಂದುತ್ತದೆ.88 ‘ಕ್ರೋಧ ಚಿತ್ತದ ಉಪಕ್ಲೇಷ’ ಎಂಬ ಅರಿವು ಬಂದ ಕೂಡಲೆ (ಅವನ) ಚಿತ್ತದ ಉಪಕ್ಲೇಷವಾದ ಕ್ರೋಧವು ನಾಶಹೊಂದುತ್ತದೆ. ‘ರೊಚ್ಚು ಚಿತ್ತದ ಉಪಕ್ಲೇಷ’ ಎಂಬ ಅರಿವು ಬಂದ ಕೂಡಲೆ (ಅವನ) ಚಿತ್ತದ ಉಪಕ್ಲೇಷವಾದ ರೊಚ್ಚುತನ ನಾಶಹೊಂದುತ್ತದೆ. ‘ಹೀನಾಯಿಸುವುದು ಚಿತ್ತದ ಉಪಕ್ಲೇಷ’ ಎಂಬ ಅರಿವು ಬಂದ ಕೂಡಲೆ (ಅವನ) ಚಿತ್ತದ ಉಪಕ್ಲೇಷವಾದ ಹೀನಾಯಿಸುವುದು ನಾಶಹೊಂದುತ್ತದೆ. ‘ದರ್ಪ ಚಿತ್ತದ ಉಪಕ್ಲೇಷ’ ಎಂಬ ಅರಿವು ಬಂದ ಕೂಡಲೆ (ಅವನ) ಚಿತ್ತದ ಉಪಕ್ಲೇಷವಾದ ದರ್ಪವು ನಾಶಹೊಂದುತ್ತದೆ. ‘ಈರ್ಷೆ ಚಿತ್ತದ ಉಪಕ್ಲೇಷ’ ಎಂಬ ಅರಿವು ಬಂದ ಕೂಡಲೆ (ಅವನ) ಚಿತ್ತದ ಉಪಕ್ಲೇಷವಾದ ಈರ್ಷೆಯು ನಾಶಹೊಂದುತ್ತದೆ. ‘ಮತ್ಸರ ಚಿತ್ತದ ಉಪಕ್ಲೇಷ’ ಎಂಬ ಅರಿವು ಬಂದ ಕೂಡಲೆ (ಅವನ) ಚಿತ್ತದ ಉಪಕ್ಲೇಷವಾದ ಮತ್ಸರವು ನಾಶಹೊಂದುತ್ತದೆ. ‘ಮೋಸ ಚಿತ್ತದ ಉಪಕ್ಲೇಷ’ ಎಂಬ ಅರಿವು ಬಂದ ಕೂಡಲೆ (ಅವನ) ಚಿತ್ತದ ಉಪಕ್ಲೇಷವಾದ ಮೋಸತನವು ನಾಶಹೊಂದುತ್ತದೆ. ‘ವಂಚನೆ ಚಿತ್ತದ ಉಪಕ್ಲೇಷ’ ಎಂಬ ಅರಿವು ಬಂದ ಕೂಡಲೆ (ಅವನ) ಚಿತ್ತದ ಉಪಕ್ಲೇಷವಾದ ವಂಚತನವು ನಾಶಹೊಂದುತ್ತದೆ. ‘ಹಠಮಾರಿತನ ಚಿತ್ತದ ಉಪಕ್ಲೇಷ’ ಎಂಬ ಅರಿವು ಬಂದ ಕೂಡಲೆ (ಅವನ) ಚಿತ್ತದ ಉಪಕ್ಲೇಷವಾದ ಹಠಮಾರಿತನ ನಾಶಹೊಂದುತ್ತದೆ. ‘ದುರಾಗ್ರಹ ಚಿತ್ತದ ಉಪಕ್ಲೇಷ’ ಎಂಬ ಅರಿವು ಬಂದ ಕೂಡಲೆ (ಅವನ) ಚಿತ್ತದ ಉಪಕ್ಲೇಷವಾದ ದುರಾಗ್ರಹ ನಾಶಹೊಂದುತ್ತದೆ. ‘ಅಹಂಕಾರ ಚಿತ್ತದ ಉಪಕ್ಲೇಷ’ ಎಂಬ ಅರಿವು ಬಂದ ಕೂಡಲೆ (ಅವನ) ಚಿತ್ತದ ಉಪಕ್ಲೇಷವಾದ ಅಹಂಕಾರವು ನಾಶಹೊಂದುತ್ತದೆ. ‘ದುರಭಿಮಾನ ಚಿತ್ತದ ಉಪಕ್ಲೇಷ’ ಎಂಬ ಅರಿವು ಬಂದ ಕೂಡಲೆ (ಅವನ) ಚಿತ್ತದ ಉಪಕ್ಲೇಷವಾದ ದುರಭಿಮಾನವು ನಾಶಹೊಂದುತ್ತದೆ. ‘ಮದ ಚಿತ್ತದ ಉಪಕ್ಲೇಷ’ ಎಂಬ ಅರಿವು ಬಂದ ಕೂಡಲೆ (ಅವನ) ಚಿತ್ತದ ಉಪಕ್ಲೇಷವಾದ ಮದವು ನಾಶಹೊಂದುತ್ತದೆ. ‘ಎಚ್ಚರಿಕೆಯಿಲ್ಲದ ಸ್ಥಿತಿ, ಇವು ಚಿತ್ತದ ಉಪಕ್ಲೇಷ’ ಎಂದು ಅರಿವು ಬಂದ ಕೂಡಲೇ (ಅವನ) ಚಿತ್ತದ ಉಪಕ್ಲೇಷವಾದ ಎಚ್ಚರಿಕೆಯಿಲ್ಲದ ಸ್ಥಿತಿ ನಾಶ ಹೊಂದುತ್ತದೆ.

2. ಆತನು ಅಚಲಶ್ರದ್ಧೆಯುಳ್ಳವನು ಆಗುತ್ತಾನೆ.

5. “ಆಗ ಭಗವಾನರು ನಿಜವಾಗಿಯು ಅರಹಂತರು, ಸಮ್ಯಕ್ ಸಂಬುದ್ಧರು (ಸಂಪೂರ್ಣವಾಗಿ ಬೋಧಿಪಡೆದ ತ್ರಿಕಾಲಜ್ಞರು.) ವಿದ್ಯಾಚರಣ ಸಂಪನ್ನರು (ಅಲೌಕಿಕ ವಿದ್ಯೆ ಮತ್ತು ಶೀಲ ಸಮಾಧಿಗಳ ಆಚರಣೆ ಉಳ್ಳವರು.) ಸುಗತರು (ಲೋಕಕ್ಕೆ ಬೆಳಕಾಗಲು ಮಂಗಳರೂಪಿಯಾಗಿ ಧರೆಗೆ ಇಳಿದುಬಂದವರು.) ಲೋಕವಿದರು (ಸರ್ವಲೋಕಗಳನ್ನು ತಿಳಿದವರು [ಲೋಕ-ಕಾಲದೇಶದಿಂದ ಕೂಡಿದ ಬ್ರಹ್ಮಾಂಡ, ಜೀವಲೋಕ ಮತ್ತು ತತ್ವಲೋಕ ಎಂದು ಮೂರು ವಿಧ]) ಪಳಗಿಸಲು ಯೋಗ್ಯರಾದವರಿಗೆ ಎಣೆಯಿಲ್ಲದ ಸಾರಥಿ, ದೇವ-ಮನುಷ್ಯರಿಗೆ ಶಾಸ್ತಾ (ಶಾಸ್ತಾ=ಶಾಸನವನ್ನು, ಧರ್ಮವನ್ನು ಕೊಡುವ ಪರಮಗುರು.) ಬುದ್ಧ (ಬೋಧಿಯನ್ನು ಪಡೆದವರು ಮತ್ತು ಬೋಧಿಯನ್ನು ಕೊಡುವವರು.) ಭಗವಂತ (ರಕ್ಷಕರು ಮತ್ತು ಸಂಸಾರವನ್ನು ದಾಟಿಸುವವರು.) ಎಂದು ಬುದ್ಧರಲ್ಲಿ ಅಚಲ ಶ್ರದ್ಧೆಯುಳ್ಳವನಾಗುತ್ತಾನೆ.89 ‘ಭಗವಾನರು ಧರ್ಮವನ್ನು ಸುಸ್ಪಷ್ಟವಾಗಿ ಬೋಧಿಸಿದ್ದಾರೆ. ಅದು ಇಲ್ಲೇ ಈಗಲೇ ಕಾಣಸಿಗುವುದು, ತತ್‍ಕ್ಷಣವೇ ಫಲನೀಡುವಂತಹದು, ಪರೀಕ್ಷಿಸಿರೆಂದು ಕರೆಯುವುದು, ನಿರ್ವಾಣದತ್ತ ಮುನ್ನಡೆಸುವುದು, ಬಲ್ಲವರು ನೇರವಾಗಿ ತಿಳಿಯಬೇಕಾದದ್ದು’ ಎಂದು ಧರ್ಮದಲ್ಲಿ ಅಚಲಶ್ರದ್ಧೆಯುಳ್ಳವನಾಗುತ್ತಾನೆ. ‘ಭಗವಾನರ ಶ್ರಾವನಕ ಸಂಘ ಸುಪ್ರತಿಪನ್ನವಾಗಿದೆ (ಅಲೌಕಿಕ ಸನ್ಮಾರ್ಗದಲ್ಲಿ ದೃಢವಾಗಿ ನೆಲೆ ನಿಂತಿರುವುದಾಗಿದೆ). ಭಗವಾನರ ಶ್ರಾವಕ ಸಂಘ ಋಜುಪ್ರತಿಪನ್ನವಾಗಿದೆ (ನೇರವಾದ ಮಾರ್ಗದಲ್ಲಿ ನೆಲೆಗೊಂಡಿದೆ) ಭಗವಾನರ ಶ್ರಾವಕ ಸಂಘ ನ್ಯಾಯ ಪ್ರತಿಪನ್ನವಾಗಿದೆ (ನ್ಯಾಯ ಮಾರ್ಗದಲ್ಲಿ ನೆಲೆಗೊಂಡಿದೆ) ಭಗವಾನರ ಶ್ರಾವಕ ಸಂಘ ಸಮೀಚೀನ ಪ್ರತಿಪನ್ನವಾಗಿದೆ (ಸರಿಯಾದ ಸುಯೋಗ್ಯವಾದ ಮಾರ್ಗದಲ್ಲಿ ನೆಲೆಗೊಂಡಿದೆ) ಅದು ಯಾವುದೆಂದರೆ, ನಾಲ್ಕು ಲೋಕೋತ್ತರ ವಿಶೇಷ ವ್ಯಕಿಗಳ ಜೋಡಿ, ಎಂಟು ವ್ಯಕ್ತಿಗಳು [(1) ಸೋತಾಪನ್ನ (ನಿರ್ವಾಣ ದರ್ಶನ ಉಳ್ಳವನು, ನಿರ್ವಾಣದ ಅಲೆಯೊಳಗೆ ಇರುವವನು ಇವನು ಸುಗತಿಯಲ್ಲಿ ಏಳು ಜನ್ಮಗಳನ್ನು ಪಡೆಯಬಲ್ಲ) (2) ಸಕದಾಗಾಮಿ (ಇವನು ಸುಗತಿಯಲ್ಲಿ ಒಮ್ಮೆ ಮಾತ್ರ ಜನ್ಮ ಪಡೆಯುತ್ತಾನೆ, ನಂತರ ನಿರ್ವಾಣ ಹೊಂದುತ್ತಾನೆ) (3) ಅನಾಗಾಮಿ (ಕಾಮಲೋಕಕ್ಕೆ ಬಾರದವರ, ಶುದ್ಧಾವಾಸವೆಂಬ ಅಲೌಕಿಕ ಸ್ಥಿತಿಯಲ್ಲಿ ಸ್ವಯಂ ಹುಟ್ಟಿ ಅರಹಂತರಾಗುವವರು) (4) ಅರಹಂತ (ನಿರ್ವಾಣವನ್ನು ಸಂಪೂರ್ಣವಾಗಿ ಸಾಧಿಸಿಕೊಂಡವರು) ಅವರು ಯಾವ ಲೋಕಕ್ಕೂ ಹಿಂತಿರುಗದವರು. ಈ ನಾಲ್ಕು ವಿಧ ಪುರುಷದ್ವಯರೇ ಮಾರ್ಗ ಮತ್ತು ಫಲಭಾಗಿಗಳೆಂಬ ಭೇದದಿಂದ ಎಂಟು ವಿಧ ವ್ಯಕ್ತಿಗಳಾಗುತ್ತಾರೆ.] ಇದೇ ಭಗವಾನರ ಶ್ರಾವಕ ಸಂಘ. ಅವು ಪೂಜನೀಯವೂ ಗೌರವಾರ್ಹವೂ, ದಕ್ಷಿಣೆಗೆ ಅರ್ಹವಾದುದೂ, ಕೈ ಮುಗಿಯಬೇಕಾದದ್ದು, ಲೋಕದಲ್ಲಿ ಎಣೆಯಿಲ್ಲದ ಪುಣ್ಯ ಕ್ಷೇತ್ರವೂ ಆಗಿದೆ ಎಂದು ಸಂಘದಲ್ಲಿ ಅಚಲ ಶ್ರದ್ಧೆಯುಳ್ಳವನಾಗುತ್ತಾನೆ.

3. ಅವನ ಮನಸ್ಸು ಸಮಾಧಿಸ್ಥವಾಗುತ್ತದೆ

6. “ಹಂತ ಹಂತವಾಗಿ (ನಾಲ್ಕು ಹಂತಗಳಲ್ಲಿ) ಮೇಲೇರುತ್ತಿದ್ದಂತೆಯೇ ಸಂಕೋಲೆಗಳು ತೊರೆದುಹೋಗುತ್ತಿದ್ದಂತೆ, ಹೊರಬೀಳುತಿದ್ದಂತೆ, ಬಿಟ್ಟು ಹೋಗುತ್ತಿದ್ದಂತೆ, ಹಿಂಜರಿಯುತ್ತಿದ್ದಂತೆ, ಕಳಚಿ ಹೋಗುತ್ತಿದ್ದಂತೆ ಅವನು ‘ನಾನು ಬುದ್ಧನಲ್ಲಿ ಅಚಲ ಶ್ರದ್ಧೆಯುಳ್ಳವನಾಗಿದ್ದೇನೆ’ ಎಂದು (ಗಂಭೀರವಾದ) ಸ್ಪೂರ್ತಿಯ ಅನುಭವ ಪಡೆಯುತ್ತಾನೆ90 . (ಲೋಕೋತ್ತರ) ಧರ್ಮದ ಅನುಭವ ಪಡೆಯುತ್ತಾನೆ,91 ಆ ಧರ್ಮದ ಅನುಭವದಿಂದ ಉಂಟಾದ ಸಂತೋಷವನ್ನು ಪಡೆಯುತ್ತಾನೆ, ಸಂತೋಷವಾದ್ದರಿಂದ ಪ್ರೀತಿ (ಆನಂದ) ಪಡೆಯುತ್ತಾನೆ, ಆನಂದಿತನಾದ್ದರಿಂದ ಅವನ ಕಾಯ (ನಾಮ ಮತ್ತು ರೂಪ) ಪ್ರಶಾಂತವಾಗುತ್ತದೆ, ಪ್ರಶಾಂತಕಾಯದಿಂದ ಸುಖವನ್ನು ಅನುಭವಿಸುತ್ತಾನೆ, ಸುಖಿಯಾದ್ದರಿಂದ ಚಿತ್ತವನ್ನು ಸಮಾಧಿಯಲ್ಲಿ ನೆಡುತ್ತಾನೆ.92 ‘ನಾನು ಧರ್ಮದಲ್ಲಿ ಅಚಲ ಶ್ರದ್ಧೆ ಉಳ್ಳವನಾಗಿದ್ದೇನೆ .... ನಾನು ಸಂಘದಲ್ಲಿ ಅಚಲ ಶ್ರದ್ಧೆ ಉಳ್ಳವನಾಗಿದ್ದೇನೆ ಎಂದು ಸ್ಫೂರ್ತಿಯ ಅನುಭವ ಪಡೆಯುತ್ತಾನೆ, ಲೋಕತ್ತರ ಧರ್ಮದ ಅನುಭವ ಪಡೆಯುತ್ತಾನೆ, ಆ ಧರ್ಮದ ಅನುಭವದಿಂದ ಉಂಟಾದ ಸಂತೋಷವನ್ನು ಪಡೆಯುತ್ತಾನೆ, ಸಂತೋಷಿತನಾದ್ದರಿಂದ ಪ್ರೀತಿ (ಆನಂದ) ಪಡೆಯುತ್ತಾನೆ, ಆನಂದಿತನಾದ್ದರಿಂದ ಕಾಯ ಪ್ರಶಾಂತವಾಗುತ್ತದೆ, ಪ್ರಶಾಂತ ಕಾಯದಿಂದ ಸುಖವನ್ನು ಅನುಭವಿಸುತ್ತಾನೆ, ಸುಖಿಯಾದ್ದರಿಂದ ಚಿತ್ತವನ್ನು ಸಮಾಧಿಯಲ್ಲಿ ನೆಡುತ್ತಾನೆ. ‘ಹಂತ ಹಂತವಾಗಿ ಸಂಕೋಲೆಗಳು ತೊರೆದು ಹೋಗುತ್ತಿವೆ, ಹೊರಬೀಳುತ್ತಿವೆ, ಬಿಟ್ಟು ಹೋಗುತ್ತಿವೆ, ಹಿಂಜರೆಯುತ್ತಿವೆ, ಕಳಚಿ ಹೋಗುತ್ತಿವೆ’ ಎಂದು ಸ್ಫೂರ್ತ-ಅನುಭವ ಬರುತ್ತದೆ. ಲೋಕೋತ್ತರ ಧರ್ಮದ ಅನುಭವ ಬರುತ್ತದೆ, ಆ ಧರ್ಮದ ಅನುಭವದಿಂದ ಉಂಟಾದ ಸಂತೋಷವನ್ನು ಪಡೆಯುತ್ತಾನೆ, ಸಂತೋಷಿತನಾದ್ದರಿಂದ ಅನಂದ ಪಡೆಯುತ್ತಾನೆ, ಆನಂದಿತನಾದ್ದರಿಂದ ಕಾಯ ಪ್ರಶಾಂತವಾಗುತ್ತದೆ. ಪ್ರಶಾಂತ ಕಾಯದಿಂದ ಸುಖವನ್ನು ಅನುಭವಿಸುತ್ತಾನೆ. ಸುಖಿಯಾದ್ದರಿಂದ ಚಿತ್ತವನ್ನು ಸಮಾಧಿಯಲ್ಲಿ ನೆಡುತ್ತಾನೆ.

7. “ಭಿಕ್ಷುಗಳೇ, ಇಂತಹ ಈ ರೀತಿಯ ಶೀಲಗಳುಳ್ಳ, ಈ ರೀತಿಯ (ಆಧ್ಯಾತ್ಮಿಕ) ಧರ್ಮ ಹೊಂದಿರುವ, ಈ ರೀತಯ ಪ್ರಜ್ಞೆಯನ್ನು ಪಡೆದಿರುವ ಭಿಕ್ಷುವು ಸುವಾಸನಾಯುಕ್ತವಾದ, ಕಸತೆಗೆದಿರುವ, ಅನೇಕ ವಿಧದ ಸಾರು, ಅನೇಕ ವಿಧ ಕಾಯಿಪಲ್ಯೆಗಳಿಂದ ಕೂಡಿರುವ ಭಿಕ್ಷಾನ್ನವನ್ನು93 ತಿಂದರೂ ಕೂಡ ಅದು ಅವನಿಗೆ ಅಡ್ಡಿಯಾಗುವುದಿಲ್ಲ.94 ಅದು ಹೇಗೆಂದರೆ, ಭಿಕ್ಷುಗಳೇ, ಕೊಳೆಯಾದ ಕಲೆಯಾದ ಬಟ್ಟೆ ಶುದ್ಧವಾದ ನೀರಿನಿಂದ ಒಗೆಯಲ್ಪಟ್ಟು ಪರಿಶುದ್ಧವಾಗುತ್ತದೆ. ಕಂಗೊಳಿಸುತ್ತದೆ ಅಥವಾ ಮೂಸೆಯಲ್ಲಿಟ್ಟು ಶುಚಿಗೊಳಿಸಿದ ಚಿನ್ನ ಪರಿಶುದ್ಧವಾಗುತ್ತದೆ, ಕಂಗೊಳಿಸುತ್ತದೆ, ಹೀಗೆಯೇ ಭಿಕ್ಷುಗಳೇ, ಈ ರೀತಿಯ ಶೀಲವುಳ್ಳ ಈ ರೀತಿಯ (ಆಧ್ಯಾತ್ಮಿಕ) ಧರ್ಮವುಳ್ಳ, ಈ ರೀತಿಯ ಪ್ರಜ್ಞೆಯುಳ್ಳ ಭಿಕ್ಷುವು ಸುವಾಸನಾಯುಕ್ತವಾದ ಕಸತೆಗೆದಿರುವ ಅನೇಕ ವಿಧದ ಸಾರು ಅನೇಕ ವಿಧ ಕಾಯಿಪಲ್ಯೆಗಳಿಂದ ಕೂಡಿರುವ ಭಿಕ್ಷಾನ್ನವನ್ನು ತಿಂದರೂ ಕೂಡ ಅದು ಅವನಿಗೆ ಅಡ್ಡಿಯಾಗುವುದಿಲ್ಲ.

4. ಆತನು ಬ್ರಹ್ಮವಿಹಾರಗಳನ್ನು ಬೆಳೆಸಿಕೊಳ್ಳುತ್ತಾನೆ

8. “ಆತನು ಮೈತ್ರಿಯಿಂದ ಒಡಗೂಡಿದ ಚಿತ್ತದಿಂದ95 ಒಂದು ದಿಕ್ಕನ್ನು ವ್ಯಾಪಿಸಿ ತಂಗುತ್ತಾನೆ. ಹಾಗೆಯೆ ಎರಡನೆಯ ದಿಕ್ಕನ್ನೂ ಹಾಗೆಯೆ ಮೂರನೆಯ ದಿಕ್ಕನ್ನೂ, ಹಾಗೆಯ ನಾಲ್ಕನೆಯ ದಿಕ್ಕನ್ನೂ (ವ್ಯಾಪಿಸಿ ತಂಗುತ್ತಾನೆ.) ಹೀಗೆ ಮೇಲೆ ಕೆಳಗೆ, ಮೂಲೆ ಮೂಲೆಗಳನ್ನ, ಎಲ್ಲ ದಿಕ್ಕುಗಳನ್ನು ಎಲ್ಲೆಲ್ಲೂ ಎಲ್ಲ ಲೋಕಗಳನ್ನು ಆವರಿಸಿ ಮೈತ್ರಿಯಿಂದ ಒಡಗೂಡಿದ ಚಿತ್ತದಿಂದ ವಿಪುಲವಾಗಿ ಮಹತ್ವಪೂರ್ಣವಾಗಿ, ಮಿತಿಯಿಲ್ಲದೆ, ವೈರವಿಲ್ಲದೆ, ದ್ವೇಷವಿಲ್ಲದೆ ಹರಡಿ ತಂಗುತ್ತಾನೆ. ಕರುಣೆಯಿಂದ ಒಡಗೂಡಿದ ಚಿತ್ತದಿಂದ ... ಮುದಿತತೆ[* ಬೇರೆಯವರ ಸಂತೋಷದಿಂದ ತಾನು ಸಂತೋಷಪಡುವುದು]ಯಿಂದ ಒಡಗೂಡಿದ ಚಿತ್ತದಿಂದ ... ಉಪೇಕ್ಷಾದಿಂದ (ಸಮಚಿತ್ತತೆಯಿಂದ) ಒಡಗೂಡಿದ ಚಿತ್ತದಿಂದ ಒಂದು ದಿಕ್ಕನ್ನು ವ್ಯಾಪಿಸಿ ತಂಗುತ್ತಾನೆ. ಹಾಗೆಯೆ ಎರಡನೆಯ, ಹಾಗೆಯೆ ಮೂರನೆಯ, ಹಾಗೆಯೆ ನಾಲ್ಕನೆಯ ದಿಕ್ಕನ್ನು (ವ್ಯಾಪಿಸಿ ತಂಗುತ್ತಾನೆ) ಹೀಗೆ ಮೇಲೆ ಕೆಳಗೆ ಮೂಲೆ ಮೂಲೆಗಳನ್ನು ಆವರಿಸಿ ಉಪೇಕ್ಷಾದಿಂದ ಒಡಗೂಡಿದ ಚಿತ್ತದಿಂದ ವಿಪುಲವಾಗಿ ಮಹತ್ವಪೂರ್ಣವಾಗಿ ಮಿತಿಯಿಲ್ಲದೆ ವೈರವಿಲ್ಲದೆ, ದ್ವೇಷವಿಲ್ಲದೆ ಹರಡಿ ತಂಗುತ್ತಾನೆ.

5. ಆತನು ಆಂತರಿಕವಾದ ಸ್ನಾನದಿಂದ ಸ್ನಾತ[ಸ್ನಾನ ಮಾಡಿದವ]ನಾಗುತ್ತಾನೆ.

9. “ಆತನು ‘ಇದು ಈ ಶುದ್ಧವಾದ (ಬ್ರಹ್ಮವಿಹಾರ) ಸ್ಥಿತಿ ಇದೆ, ಹೀನವಾದ (ಬಿಟ್ಟು ಬಿಟ್ಟರು ಕ್ಲೇಷದಿಂದ ಕೂಡಿದ) ಸ್ಥಿತಿ ಇದೆ, ಇನ್ನೂ ಉತ್ತಮ (ಇದಕ್ಕೂ ಮೇಲಿನ ಅರಹಂತರ) ಸ್ಥಿತಿ ಇದೆ, ಈ ಗ್ರಹಿಕೆಯಿಂದ ಕೂಡಿದ, ಲೋಕವನ್ನು ಮೀರಿದ, ಬಿಡುಗಡೆ (ನಿಬ್ಭಾಣ) ತಿಳಿದ ಸ್ಥಿತಿ ಇದೆ’96 ಎಂದು ಅರಿಯುತ್ತಾನೆ. ಈ ರೀತಿ ಕಂಡುಕೊಂಡ ಅವನಿಗೆ ಕಾಮಾಸವಗಳಿಂದ ಚಿತ್ತವು ವಿಮುಕ್ತವಾಗುತ್ತದೆ, (ಬಿಡುಗಡೆ ಹೊಂದುತ್ತದೆ) ಭವಾಸಗಳಿಂದ ಚಿತ್ತವು ವಿಮುಕ್ತವಾಗುತ್ತದೆ, ಅವಿದ್ಯಾಸವಗಳಿಂದ ಚಿತ್ತವು ವಿಮುಕ್ತವಾಗುತ್ತದೆ. ಮುಕ್ತವಾದಾಗ, ಮುಕ್ತವಾಗಿದೆ ಎಂಬ ಜ್ಞಾನ ಬರುತ್ತದೆ. ‘ಜನ್ಮವು ಕೊನೆಯಾಯಿತು. ಬ್ರಹ್ಮಚರ್ಯವು ಪೂರ್ಣವಾಯಿತು. ಮಾಡಬೇಕಾದ್ದನ್ನು ಮಾಡಿದ್ದಾಯಿತು, ಸಾಧಿಸಬೇಕಾದ್ದು ಇನ್ನೇನೂ ಉಳಿದಿಲ್ಲ’ ಎಂದು ಅರಿಯುತ್ತಾನೆ. ಭಿಕ್ಷುಗಳೆ ಇವನಿಗೆ ಹೇಳುತ್ತಾರೆ ‘ಆಂತರಿಕ ಸ್ನಾನದಿಂದ ಸ್ನಾನ ಮಾಡಿದ ಭಿಕ್ಷು’ ಎಂದು.97

6. ನದಿಯ ಸ್ನಾನ ಜೀವಿಗಳನ್ನು ಶುದ್ಧಗೊಳಿಸುವುದಿಲ್ಲ

10. ಆ ಸಮಯದಲ್ಲಿ ಸುಂದರಿಕ ಭಾರದ್ವಾಜನೆಂಬ ಬ್ರಾಹ್ಮಣನು ಭಗವಾನರ ಹತ್ತಿರದಲ್ಲಿ ಕುಳಿತಿದ್ದನು. ಆಗ ಸುಂದರಿಕ ಭಾರದ್ವಾಜ ಬ್ರಾಹ್ಮಣನು ಭಗವಾನರಿಗೆ ಹೀಗೆ ಹೇಳಿದನು - “ಪೂಜ್ಯ ಗೋತಮರು ಬಾಹುಕ ನದಿಗೆ ಸ್ನಾನ ಮಾಡಲು ಹೋಗುತ್ತಾರೆಯೇ?” ಎಂದು.

“ಬ್ರಾಹ್ಮಣನೆ, ಬಾಹುಕಾ ನದಿಯಿಂದೇನು? ಬಾಹುಕಾ ನದಿಯು ಏನು ಮಾಡುತ್ತದೆ?” ಎಂದರು.

“ಪೂಜ್ಯ ಗೋತಮರೆ, ಬಾಹುಕಾ ನದಿಯು ಬಿಡುಗಡೆ ತರುತ್ತದೆಂದು (ಲೋಕವು) ಬಹಳಜನರು ಒಪ್ಪಿದ್ದಾರೆ. ಪೂಜ್ಯ ಗೋತಮರೆ, ಬಾಹುಕಾ ನದಿಯು ಪುಣ್ಯಕರವೆಂದು ಬಹಳ ಜನರು ಒಪ್ಪಿದ್ದಾರೆ, ಬಾಹುಕಾ ನದಿಯು ಮಾಡಿದ ಪಾಪವನ್ನು ಹರಿಸಿ ಬಿಡುತ್ತದೆ ಎಂದು ಬಹಳ ಜನ ಒಪ್ಪಿದ್ದಾರೆ.” ಎಂದು. ಆಗ ಭಗವಾನರು ಸುಂದರಿಕ ಭಾರದ್ವಾಜ ಬ್ರಾಹ್ಮಣನಿಗೆ ಗಾಥೆಯ ಮೂಲಕ ಉಪದೇಶಿಸಿದರು-

“ಬಾಹುಕವೊ, ಅಧಿಕಕ್ಕವೊ, ಗಯೆಯೊ, ಸುಂದರಿಕೆಯೊ, ಸರಸ್ವತಿ, ಪ್ರಯಾಗವೊ, ಬಾಹುಮತಿಯೆಂಬ ನದಿಯೊ ಅಲ್ಲಿ ನಿತ್ಯ ಮಿಂದರೇನು ಮೂರ್ಖ, ಕಪ್ಪು ಕವರ್i ಬಿಳಿಯಾಗದು.

“ಏನು ಮಾಡಬಲ್ಲವು ಸುಂದರಿಕ-ಪ್ರಯಾಗ-ಬಾಹುಕ98 ನದಿಗಳು

ಪಾಪ ಕಾರ್ಯವೆಸಗಿದವನನ್ನು ಕಲುಷಿತ ನರನನ್ನು

ಎಂದೂ ಅವು ತೊಳೆಯವು.

“ಶುದ್ಧನಾದವನಿಗೆ ಸದಾ ಹಬ್ಬ, ಪುಣ್ಯದಿನ99

ಶುದ್ಧನು ಸತ್ಕರ್ಮಿಯು, ಪ್ರತಿ ದಿವಸವೂ ವ್ರತ ನಡೆಸುವವನು,

ಇಲ್ಲಿ ಬ್ರಾಹ್ಮಣ, ಬಂದುಮಿಂದು, ಎಲ್ಲರಿಗೂ ಕ್ಷೇಮ ನೀಡು.

“ಸುಳ್ಳನಾಡದಿದ್ದರೆ, ಪ್ರಾಣಿಹತ್ಯೆ ತೊರೆದರೆ

ಕಳುವು ಮಾಡದಿದ್ದರೆ, ಶ್ರದ್ಧಾವಂತನಾದರೆ

ಮಚ್ಚರವನು ತೊರೆದರೆ ಗಯೆಗೆ ಹೋಗಿ ಏನು ಗೈವೆ?

ಬಾವಿಯಲ್ಲೇ ಗಯೆಯಿದೆ.”

11. ಹೀಗೆನ್ನಲಾಗಿ, ಸುಂದರಿಕ ಭಾರದ್ವಾಜನೆಂಬ ಬ್ರಾಹ್ಮಣನು ಭಗವಾನರಿಗೆ ಹೇಳಿದನು “ಅದ್ಭುತ ಓ ಗೋತಮರೆ, ಅದ್ಭುತ ಓ ಗೋತಮರೆ! ಇದು ಹೇಗೆಂದರೆ ಗೋತಮರೆ, ಬೋರಲಾಗಿದ್ದುದನ್ನು ಸರಿಯಾಗಿ ನಿಲ್ಲಿಸಿದ ಹಾಗೆ, ಮುಚ್ಚಿಟ್ಟಿದ್ದನ್ನು ಹೊರತೆಗೆದು ತೋರಿದಂತೆ, ದಾರಿ ತಪ್ಪಿಸಿಕೊಂಡವನಿಗೆ ದಾರಿ ತೋರಿಸಿದ ಹಾಗೆ, ಕತ್ತಲಿನಲ್ಲಿ ಎಣ್ಣೆ ದೀಪವನ್ನು ಹಿಡಿದು ಕಣ್ಣುಳ್ಳವರಿಗೆ ಕಾಣಿಸುವ ಹಾಗೆ; ಹಾಗೆಯೇ ಪೂಜ್ಯ ಗೋತಮರಿಂದ ಅನೇಕ ವಿಧಗಳಲ್ಲಿ ಧರ್ಮವು ಬೆಳಗಲ್ಪಟ್ಟಿದೆ. ಆದ್ದರಿಂದ ನಾನು ಭಗವಾನರಾದ ಗೋತಮರಿಗೆ ಶರಣು ಹೋಗುತ್ತೇನೆ (ಭಗವಾನರ) ಧರ್ಮಕ್ಕೆ ಮತ್ತು ಭಿಕ್ಷು ಸಂಘಕ್ಕೆ ಶರಣು ಹೋಗುತ್ತೇನೆ. ಪೂಜ್ಯ ಗೋತಮರ ಕೈಯಿಂದ ನನಗೆ ಪಾರಿವ್ರಾಜ್ಯ (ಪಬ್ಬಜ್ಜ) ದೊರಕುವಂತಾಲಿ, ಭಿಕ್ಷು ದೀಕ್ಷೆ ದೊರಕುವ ಹಾಗಾಗಲಿ.”100 ಮತ್ತೆ ಸುಂದರಿಕ ಭಾರದ್ವಾಜ ಬ್ರಾಹ್ಮಣನು ಭಗವಾನರ ಕೈಯಿಂದ ಪಾರಿವ್ರಾಜ್ಯವನ್ನು ಪಡೆದುಕೊಂಡನು. ಭಿಕ್ಷುದೀಕ್ಷೆಯನ್ನು ಪಡೆದುಕೊಂಡನು. ಭಿಕ್ಷುದೀಕ್ಷೆಯಾದ ಮೇಲೆ ಸ್ವಲ್ಪಕಾಲದಲ್ಲೇ ಆಯುಷ್ಯಂತನಾದ ಭಾರದ್ವಾಜನು ಒಂಟಿಯಾಗಿ ಜಗತ್ತನ್ನು ತೊರೆದವನು, ಎಚ್ಚರದಿಂದ ಕೂಡಿ, ತಪೋ ನಿರತನಾಗಿ, ಸ್ವಯಂ ಹತೋಟಿಯುಳ್ಳವನಾಗಿ ಈ ರೀತಿ ಬಾಳುತ್ತಿರಲು ಬಹಳ ಬೇಗ-ಯಾವುದಕ್ಕೋಸ್ಕರ ಕುಲಪುತ್ರರು ನಿಜವಾಗಿ ಮನೆತೊರೆದು ಮನೆಯಿಲ್ಲದವರಾಗಿ ವೈರಾಗ್ಯ ತಾಳುತ್ತಾರೆಯೋ, ಆ ಲೋಕೋತ್ತರವಾದ ಗುರಿಯನ್ನು-ಬ್ರಹ್ಮಚರ್ಯದ ತುಟ್ಟತುದಿಯನ್ನು, ಇಲ್ಲಿಯೇ ಈಗಲೇ ತಾನಾಗಿ ಸಾಕ್ಷಾತ್ತಾಗಿ ಅರಿತುಕೊಂಡು ನೆಲೆನಿಂತನು. “ಜನ್ಮವು ಕೊನೆಯಾಯಿತು. ಮಾಡಬೇಕಾದ್ದನ್ನು ಮಾಡಿದ್ದಾಯಿತು. ಸಾಧಿಸಬೇಕಾದ್ದು ಇನ್ನೇನೂ ಉಳಿದಿಲ್ಲ” ಎಂಬ ಪ್ರತ್ಯಕ್ಷ ಜ್ಞಾನವು ಅನುಭವಕ್ಕೆ ಬಂದಿತು. ಪೂಜ್ಯ ಭಾರದ್ವಾಜನು ಅರ್ಹಂತರುಗಳಲ್ಲಿ ಒಬ್ಬನಾದನು.

ಇಲ್ಲಿಗೆ ಬಟ್ಟೆಯ ಉಪಮೆ ಸುತ್ತ ಮುಗಿಯಿತು.

ಟಿಪ್ಪಣಿಗಳು [5]