ಘಟಿಕಾರ ಸುತ್ತ
ಹೀಗೆ ನಾನು ಕೇಳಿದ್ದೇನೆ. ಭಗವಾನರು ಒಂದು ಸಮಯದಲ್ಲಿ ಕೋಸಲ ದೇಶದ ಪ್ರಜೆಗಳೊಡನೆ ತನ್ನ ಮಹಾ ಭಿಕ್ಖುಸಂಘದ ಸಮೇತ ಹೋಗುತ್ತಿದ್ದರು.
ಆಗ ಭಗವಾನರು ರಸ್ತೆಯ ಒಂದು ಬದಿಯಲ್ಲಿ ನಿಂತು ಮಂದಸ್ಮಿತರಾದರು. ಆಗ ಆಯುಷ್ಮಂತ ಆನಂದನಿಗೆ ಹೀಗೆನಿಸಿತು: ಏನು ಕಾರಣ, ಯಾವ ಉದ್ದೇಶಕ್ಕಾಗಿ ಭಗವಾನರು ಮಂದಸ್ಮಿತರಾದರು? ಕಾರಣವಿಲ್ಲದೆ ಭಗವಾನರು ನಗುವುದಿಲ್ಲ. ಹೀಗೆಂದುಕೊಂಡು ಚೀವರವನ್ನು ಸರಿಮಾಡಿಕೊಂಡು, ಗೌರವದಿಂದ ಕೈಜೋಡಿಸಿಕೊಂಡು ಭಗವಾನರಿಗೆ ಹೀಗೆ ಕೇಳಿದನು: ಭಂತೆ, ಏನು ಕಾರಣ ಮತ್ತು ಯಾವ ಉದ್ದೇಶಕ್ಕಾಗಿ ಭಗವಾನರು ಮಂದಸ್ಮಿತರಾದರು? ತಥಾಗತರು ಅಕಾರಣವಾಗಿ ಮಂದಸ್ಮಿತರಾಗುವುದಿಲ್ಲ.
ಆನಂದ, ಪೂರ್ವದಲ್ಲಿ ಈ ಜಾಗವು ಶ್ರೀಮಂತವಾದ ವ್ಯಾಪಾರ ಕೇಂದ್ರವಾಗಿ ವೇಭಲಿಂಗ ಎಂಬ ಹೆಸರಿನಿಂದ ಕರೆಯಲ್ಪಡುವ ಗಾಮನಿಗಮ (ಪಟ್ಟಣ) ವಾಗಿತ್ತು. ಇಲ್ಲಿ ಬಹಳ ಜನ ನಿವಾಸಿಗಳಿದ್ದರು ಮತ್ತು ಜನನಿಬಿಡವಾಗಿತ್ತು. ಭಗವಂತರೂ ಅರಹಂತರೂ ಸಮ್ಮಾಸಂಬುದ್ಧರೂ ಆದ ಕಸ್ಸಪರು ಈ ವ್ಯಾಪಾರ ಕೇಂದ್ರ ವೇಭಲಿಂಗದ ಬಳಿಯೇ ವಾಸಿಸುತ್ತಿದ್ದರು. ವಾಸ್ತವವಾಗಿ ಭಗವಂತರರೂ ಅರಹಂತರೂ ಸಮ್ಮಾಸಂಬುದ್ಧರೂ ಆದ ಕಸ್ಸಪರ ವಿಹಾರ ಇಲ್ಲಿತ್ತು; ವಾಸ್ತವವಾಗಿ ಇಲ್ಲಿಯೇ ಭಗವಾನ್ ಕಸ್ಸಪರು, ಅರಹಂತರೂ ಸಮ್ಮಾಸಂಬುದ್ಧರೂ ಆದವರು ವಾಸಿಸುತ್ತಿದ್ದರು ಮತ್ತು ಭಿಕ್ಖು ಸಂಘಕ್ಕೆ ಉಪದೇಶ ನೀಡುತ್ತಿದ್ದರು.
ಆಗ ಆಯುಷ್ಮಂತ ಆನಂದನು ತಾನು ಹೊದ್ದ ಸಂಘಾಟಿ (ಮೈಮೇಲೆ ಹಾಕಿಕೊಳ್ಳು ಶಲ್ಯೆ) ಯನ್ನು ನಾಲ್ಕು ಮಡಿಕೆ ಮಾಡಿ ನೆಲದಮೇಲೆ ಹಾಸಿ ಭಗವಾನರಿಗೆ ಹೀಗೆ ಹೇಳಿದ: ಹಾಗಾದರೆ, ಭಂತೆ, ಭಗವಾನರು ಇಲ್ಲಿ ದಯಮಾಡಿ ಆಸೀನರಾಗಬೇಕು. ಅಲ್ಲಿಗೆ ಇಲ್ಲಿ ಇಬ್ಬರು ಅರಹಂತರಾದವರು ಮತ್ತು ಸಮ್ಮಾಸಂಬುದ್ಧರು ಕುಳಿತಂತಾಗುತ್ತದೆ.
ಭಗವಾನರು ತಮಗೆ ಸಿದ್ಧಪಡಿಸಿದ ಆಸನದ ಮೇಲೆ ಕುಳಿತರು ಮತ್ತು ಆಯುಷ್ಮಂತ ಆನಂದನಿಗೆ ಹೀಗೆ ಹೇಳಿದರು:
2. ಆನಂದ, ಒಂದು ಕಾಲಕ್ಕೆ ವೇಭಲಿಂಗ ಎಂದು ಕರೆಯಿಸಿಕೊಳ್ಳುವ ಈ ನಗರವು ಸಮೃದ್ಧವಾಗಿ ವ್ಯಾಪಾರ ಕೇಂದ್ರವಾಗಿ ಜನನಿಬಿಡವಾಗಿತ್ತು. ಆಗ ಅರಹಂತರೂ ಸಮ್ಮಾಸಂಬುದ್ಧರೂ ಆದ ಭಗವಾನ್ ಕಸ್ಸಪರು ಈ ವ್ಯಾಪಾರನಗರ ವೇಭಲಿಂಗದಲ್ಲಿ ವಾಸಿಸುತ್ತಿದ್ದರು. ವಾಸ್ತವವಾಗಿ ಇಲ್ಲಿಯೇ ಭಗವಾನರೂ ಅರಹಂತರೂ ಸಮ್ಮಾಸಂಬುದ್ಧರೂ ಆದ ಕಸ್ಸಪರು ವಿಹಾರವನ್ನು ಹೊಂದಿದ್ದರು. ವಾಸ್ತವವಾಗಿ ಇಲ್ಲಿಯೇ ಭಗವಾನರೂ ಅರಹಂತರೂ ಸಮ್ಮಾಸಂಬುದ್ಧರೂ ಆದ ಕಸ್ಸಪರು ವಾಸಿಸುತ್ತಿದ್ದು ತಮ್ಮ ಭಿಕ್ಖು ಸಂಘಕ್ಕೆ ಮಾರ್ಗದರ್ಶನ ನೀಡುತ್ತಿದ್ದರು.
3. ಈ ವೇಭಲಿಂಗದಲ್ಲಿ ಭಗವಾನರೂ ಅರಹಂತರೂ ಸಮ್ಮಾಸಂಬುದ್ಧರೂ ಆದ ಕಸ್ಸಪರಿಗೆ ಘಟಿಕಾರನೆಂಬ ಹೆಸರಿನ ಒಬ್ಬ ಕುಂಬಾರ ಮುಖ್ಯ ಸೇವಕನಿದ್ದ. ಘಟಿಕಾರನಿಗೆ ಜೋತಿಪಾಲನೆಂಬ ಹೆಸರಿನ ಬ್ರಾಹ್ಮಣ ಮಾಣವ (ವಿದ್ಯಾರ್ಥಿ) ಆಪ್ತಗೆಳೆಯನಾಗಿದ್ದ29.
ಒಂದುದಿನ ಕುಂಬಾರ ಘಟಿಕಾರನು ಬ್ರಾಹ್ಮಣ ವಿದ್ಯಾರ್ಥಿ ಜೋತಿಪಾಲನಿಗೆ ಹೀಗೆ ಹೇಳಿದ: ನನ್ನ ಪ್ರಿಯ ಜೋತಿಪಾಲ, ನಾವು ಅರಹಂತರೂ ಸಮ್ಮಾಸಂಬುದ್ಧರೂ ಆದ ಭಗವಾನ್ ಕಸ್ಸಪರನ್ನು ಹೋಗಿ ನೋಡೋಣ. ಅರಹಂತರೂ ಸಮ್ಮಾಸಂಬುದ್ಧರೂ ಆದ ಭಗವಾನರನ್ನು ನೋಡುವುದು ಒಳ್ಳೆಯದು ಎಂದು ನಾನು ನಂಬುತ್ತೇನೆ. ಅದಕ್ಕೆ ಬ್ರಾಹ್ಮಣ ವಿದ್ಯಾರ್ಥಿ ಜೋತಿಪಾಲ ಹೇಳಿದ: ಪ್ರಿಯ ಘಟಿಕಾರ, ಸಾಕು, ಈ ಬೋಳುತಲೆಯ ಸಮಣನನ್ನು ನೋಡಿ ಏನು ಪ್ರಯೋಜನ?
ಎರಡು ಮತ್ತು ಮೂರನೇ ಸಾರಿ ಕುಂಬಾರ ಘಟಿಕಾರ ಹೇಳಿದ, ನನ್ನ ಪ್ರಿಯ ಜೋತಿಪಾಲ ನಾವು ಭಗವಾನ್ ಅರಹಂತರೂ ಸಮ್ಮಾಸಂಬುದ್ಧರೂ ಆದ ಕಸ್ಸಪರನ್ನು ಹೋಗಿ ನೋಡೋಣ. ಅರಹಂತರೂ ಸಮ್ಮಾಸಂಬುದ್ಧರೂ ಆದ ಭಗವಾನರನ್ನು ನೋಡುವುದು ಒಳ್ಳೆಯದು ಎಂದು ನಾನು ನಂಬುತ್ತೇನೆ. ಮತ್ತೆ ಅದಕ್ಕೆ ಎರಡು ಮತ್ತು ಮೂರನೇಸಾರಿ ಬ್ರಾಹ್ಮಣ ವಿದ್ಯಾರ್ಥಿ ಜೋತಿಪಾಲ ಹೇಳಿದ: ಪ್ರಿಯ ಘಟಿಕಾರ, ಸಾಕು, ಈ ಬೋಳು ತಲೆಯ ಸಮಣನನ್ನು ನೋಡಿ ಏನು ಪ್ರಯೋಜನ? ಆಯ್ತು, ನನ್ನ ಪ್ರಿಯ ಜೋತಿಪಾಲ ಮೈ ಉಜ್ಜುವ ನಾರನ್ನು ಮತ್ತು ಸ್ನಾನ ಚೂರ್ಣವನ್ನು ತೆಗೆದುಕೊಂಡು ನದಿಗೆ ಸ್ನಾನಕ್ಕೆ ಹೋಗೋಣ. ಆಯ್ತು, ಒಳ್ಳೆಯದು ಎಂದು ಜೋತಿಪಾಲ ಹೇಳಿದ.
4. ಹೀಗೆ ಘಟಿಕಾರನು ಮತ್ತು ಬ್ರಾಹ್ಮಣ ವಿದ್ಯಾರ್ಥಿ ಜೋತಿಪಾಲರು ನಾರನ್ನು ಮತ್ತು ಸ್ನಾನ ಚೂರ್ಣವನ್ನು ತೆಗೆದುಕೊಂಡು ನದಿ ಸ್ನಾನಕ್ಕೆ ಹೋದರು. ಆಗ ಘಟಿಕಾರನು ಜೋತಿಪಾಲನಿಗೆ ಹೇಳಿದ: ನನ್ನ ಪ್ರಿಯ ಜೋತಿಪಾಲ, ಭಗವಾನರೂ, ಅರಹಂತರೂ ಸಮ್ಮಾಸಂಬುದ್ಧರೂ ಆದ ಕಸ್ಸಪರ ವಿಹಾರ ಇಲ್ಲಿ ಹತ್ತಿರವೇ ಇದೆ, ನಾವಿಬ್ಬರೂ ಭಗವಾನರೂ ಅರಹಂತರೂ ಸಮ್ಮಾಸಂಬುದ್ಧರೂ ಆದ ಕಸ್ಸಪರನ್ನು ನೋಡೋಣ. ಭಗವಾನರೂ ಅರಹಂತರೂ ಸಮ್ಮಾಸಂಬುದ್ಧರನ್ನು ನೋಡುವುದು ಒಳ್ಳೆಯದೆಂದು ನಾನು ನಂಬುತ್ತೇನೆ. ಅದಕ್ಕೆ ಜೋತಿಪಾಲ ಉತ್ತರಿಸಿದ: ಸಾಕು, ನನ್ನ ಪ್ರಿಯ ಘಟಿಕಾರನೆ, ಬೋಳು ತಲೆಯ ಸಮಣನನ್ನು ನೋಡಿ ಏನು ಪ್ರಯೋಜನ?
ಎರಡು ಮತ್ತು ಮೂರನೇಸಾರಿ ಘಟಿಕಾರ ಹೇಳಿದ: ನನ್ನ ಪ್ರಿಯ ಜೋತಿಪಾಲ ಭಗವಾನರೂ, ಅರಹಂತರೂ ಆದ ಕಸ್ಸಪರು.... ಅದಕ್ಕೆ ಜೋತಿಪಾಲ ಉತ್ತರಿಸಿದ: ಸಾಕು ನನ್ನ ಪ್ರಿಯ ಘಟಿಕಾರನೆ, ಬೋಳುತಲೆಯ ಸಮಣನನ್ನು ನೋಡಿ ಏನು ಪ್ರಯೋಜನ?30
ಆಗ ಘಟಿಕಾರನು ಬ್ರಾಹ್ಮಣ ವಿದ್ಯಾರ್ಥಿ ಜೋತಿಪಾಲನ ಸೊಂಟಪಟ್ಟಿಯನ್ನು ಹಿಡಿದು ಹೇಳಿದ: ನನ್ನ ಪ್ರಿಯ ಜೋತಿಪಾಲ, ಭಗವಾನರೂ ಅರಹಂತರೂ ಸಮ್ಮಾ ಸಂಬುದ್ಧರೂ ಆದ ಕಸ್ಸಪರ ವಿಹಾರವು ಇಲ್ಲಿ ಹತ್ತಿರವೇ ಇದೆ. ನಾವಿಬ್ಬರೂ ಹೋಗಿ ಅರಹಂತರೂ ಸಮ್ಮಾ ಸಂಬುದ್ಧರೂ ಭಗವಾನರೂ ಆದ ಕಸ್ಸಪರನ್ನು ನೋಡೋಣ. ಭಗವಾನರೂ ಅರಹಂತರೂ ಸಮ್ಮಾ ಸಂಬುದ್ಧರೂ ಆದ ಕಸ್ಸಪರನ್ನು ನೋಡುವುದು ಒಳ್ಳೆಯದೆಂದು ನಾನು ನಂಬುತ್ತೇನೆ. ಅದಕ್ಕೆ ಬ್ರಾಹ್ಮಣ ವಿದ್ಯಾರ್ಥಿ ಜೋತಿಪಾಲ ಸೊಂಟಪಟ್ಟಿಯನ್ನು ಬಿಡಿಸಿಕೊಂಡು ಹೇಳಿದ: ಸಾಕು, ಪ್ರಿಯ ಘಟಿಕಾರನೆ, ಬೋಳು ತಲೆಯ ಸಮಣನನ್ನು ನೋಡಿ ಏನು ಪ್ರಯೋಜನ?
ಯಾವಾಗ ಬ್ರಾಹ್ಮಣ ವಿದ್ಯಾರ್ಥಿ ಜೋತಿಪಾಲ ತನ್ನ ತಲೆಯನ್ನು ತೊಳೆದುಕೊಂಡಿದ್ದನೋ ಆಗ ಘಟಿಕಾರ ಅವನ ಜುಟ್ಟನ್ನು ಹಿಡಿದು ಎಳೆದ31. ನನ್ನ ಪ್ರಿಯ ಜ್ಯೋತಿಪಾಲ, ಭಗವಾನರೂ ಅರಹಂತರೂ ಸಮ್ಮಾಸಂಬುದ್ಧರೂ ಆದ ಕಸ್ಸಪರ ವಿಹಾರವು ಹತ್ತಿರದಲ್ಲೇ ಇದೆ. ಆದ್ದರಿಂದ ನಾವಿಬ್ಬರೂ ಹೋಗಿ ಭಗವಾನರೂ ಅರಹಂತರೂ ಸಮ್ಮಾಸಂಬುದ್ಧರೂ ಆದ ಕಸ್ಸಪರನ್ನು ನೋಡೋಣ. ಭಗವಾನರೂ ಅರಹಂತರೂ ಸಮ್ಮಾ ಸಂಬುದ್ಧರೂ ಆದ ಕಸ್ಸಪರನ್ನು ನೋಡುವುದು ಒಳ್ಳೆಯದೆಂದು ನಾನು ನಂಬುತ್ತೇನೆ.
ಆಗ ಬ್ರಾಹ್ಮಣ ವಿದ್ಯಾರ್ಥಿ ಜೋತಿಪಾಲ ಯೋಚಿಸಿದ: ನನಗಿಂತ ಭಿನ್ನ ಜಾತಿಯವನಾದ ಕುಂಬಾರ ಘಟಿಕಾರನು ನಾವು ತಲೆ ತೊಳೆದಾದ ಮೇಲೆ ನಮ್ಮ ಜುಟ್ಟನ್ನು ಹಿಡಿಯುವುದೆಂದರೆ! ಇದು ಆಶ್ಚರ್ಯ, ಇದು ಅದ್ಭುತ. ಇದು ಸಾಮಾನ್ಯ ವಿಷಯವಲ್ಲ! ಆಗ ಅವನು ಕುಂಬಾರ ಘಟಿಕಾರನಿಗೆ ಹೇಳಿದ: ನನ್ನ ಪ್ರಿಯ ಘಟಿಕಾರ ನೀನು ಎಲ್ಲಿಯವರೆಗೂ ಹೋಗುವೆಯೋ ನಾನು ಅಲ್ಲಿಯವರೆಗೂ ಹೋಗುತ್ತೇನೆ. ನನ್ನ ಪ್ರಿಯ ಜೋತಿಪಾಲ, ಭಗವಾನರೂ ಅರಹಂತರೂ ಪರಮ ಪರಿಶುದ್ಧರೂ ಆದವರನ್ನು ನೋಡುವುದು ಒಳ್ಳೆಯದೆಂದು ನಾನು ನಂಬುತ್ತೇನೆ ಎಂದನು ಘಟಿಕಾರ. ಎಂದಮೇಲೆ ನನ್ನ ಪ್ರಿಯ ಘಟಿಕಾರ, ನಾನೂ ಬರುತ್ತೇನೆ. ನಾವಿಬ್ಬರೂ ಅವರನ್ನು ಸಂದರ್ಶಿಸೋಣ ಎಂದನು ಜೋತಿಪಾಲ.
5. ಹೀಗೆ ಕುಂಬಾರ ಘಟಿಕಾರ ಮತ್ತು ಬ್ರಾಹ್ಮಣ ಮಾಣವ, ಜೋತಿಪಾಲರು ಭಗವಾನರೂ ಅರಹಂತರೂ ಸಮ್ಮಾಸಂಬುದ್ಧರೂ ಆದ ಕಸ್ಸಪರ ಬಳಿಗೆ ಹೋದರು. ಘಟಿಕಾರನು ಪ್ರಣಾಮಗಳನ್ನು ಸಲ್ಲಿಸಿ ಒಂದು ಬಳಿಯಲ್ಲಿ ಕುಳಿತರೆ ಜೋತಿಪಾಲನು ನಮಸ್ಕರಿಸಿ ಉಭಯ ಕುಶಲೋಪರಿ ಮಾತುಗಳನ್ನು ಮುಗಿಸಿದ ಮೇಲೆ ಅವನೂ ಒಂದು ಪಕ್ಕದಲ್ಲಿ ಕುಳಿತನು. ಆಗ ಘಟಿಕಾರನು ಭಗವಾನರೂ ಅರಹಂತರೂ ಸಮ್ಮಾಸಂಬುದ್ಧರೂ ಆದ ಕಸ್ಸಪರಿಗೆ ಹೀಗೆ ಹೇಳಿದನು: ಪೂಜ್ಯರೇ, ಈ ಬ್ರಾಹ್ಮಣ ಮಾಣವ ಜೋತಿಪಾಲ ನನ್ನ ಗೆಳೆಯ, ನನ್ನ ಆತ್ಮೀಯ ಗೆಳೆಯ. ಭಗವಾನರು ಇವನಿಗೆ ಧಮ್ಮವನ್ನು ಉಪದೇಶಿಸಬೇಕು.
ಆಗ ಭಗವಾನರೂ ಅರಹಂತರೂ ಸಮ್ಮಾಸಂಬುದ್ಧರೂ ಆದ ಕಸ್ಸಪರು ಕುಂಬಾರ ಘಟಿಕಾರ ಮತ್ತು ಬ್ರಾಹ್ಮಣ ಮಾಣವ ಜೋತಿಪಾಲರಿಗೆ ತಮ್ಮ ಧಮ್ಮೋಪದೇಶದ ಮೂಲಕ ಸೂಚಿಸಿದರು, ಆಗ್ರಹಿಸಿದರು, ಜಾಗ್ರತಗೊಳಿಸಿದರು ಮತ್ತು ಉತ್ಸಾಹಗೊಳಿಸಿದರು. ಭಗವಾನ್ ಕಸ್ಸಪರ ಧಮ್ಮೋಪದೇಶದಿಂದ ಹರ್ಷಿತರಾಗಿ ಮುದಗೊಂಡು ತಮ್ಮ ಆಸನಗಳಿಂದೆದ್ದು ಭಗವಾನರೂ ಅರಹಂತರೂ ಸಮ್ಮಾಸಂಬುದ್ಧರೂ ಆದ ಕಸ್ಸಪರಿಗೆ ಅಭಿವಂದಿಸಿ ಪ್ರದಕ್ಷಿಣೆ ಹಾಕಿ ಅಲ್ಲಿಂದ ನಿರ್ಗಮಿಸಿದರು.
6. ಆಗ ಜೋತಿಪಾಲನು ಘಟಿಕಾರನಿಗೆ ಕೇಳಿದ, ನನ್ನ ಪ್ರಿಯ ಘಟಿಕಾರ ನೀನು ಈ ಧಮ್ಮವನ್ನು ಕೇಳಿದಮೇಲೆ ನೀನೇಕೆ ಅನಗಾರಿಕ ಪಬ್ಬಜಿತನಾಗಬಾರದು? - ನನ್ನ ಪ್ರಿಯ ಜೋತಿಪಾಲ, ನಿನಗೆ ಗೊತ್ತಿಲ್ಲವೆ, ಅಂಧರೂ ಹಾಗು ವೃದ್ಧರಾದ ತಂದೆ-ತಾಯಿಗಳನ್ನು ನಾನು ನೋಡಿಕೊಳ್ಳುತ್ತಿದ್ದೇನೆಂದು? ಹಾಗಾದರೆ, ನನ್ನ ಪ್ರೀತಿಯ ಘಟಿಕಾರ, ನಾನು ಅನಗಾರಿಕ ಪಬ್ಬಜಿತನಾಗುತ್ತೇನೆ.
ಆಗ ಕುಂಬಾರನಾದ ಘಟಿಕಾರ ಮತ್ತು ಬ್ರಾಹ್ಮಣ ಮಾಣವ ಜೋತಿಪಾಲರು ಭಗವಾನರೂ ಅರಹಂತರೂ ಸಮ್ಮಾ ಸಂಬುದ್ಧರೂ ಆದ ಕಸ್ಸಪರ ಬಳಿಗೆ ಹೋದರು. ಅವರಿಗೆ ಅಭಿವಂದಿಸಿ, ಇಬ್ಬರೂ ಒಂದು ಬದಿಯಲ್ಲಿ ಕುಳಿತರು. ಆಗ ಕುಂಬಾರ ಘಟಿಕಾರನು ಅರಹಂತರೂ ಸಮ್ಮಾಸಂಬುದ್ಧರೂ ಆದ ಭಗವಾನ್ ಕಸ್ಸಪರಿಗೆ ಹೀಗೆ ಹೇಳಿದನು- ಪೂಜ್ಯರೇ, ಬ್ರಾಹ್ಮಣ ಮಾಣವ ಜೋತಿಪಾಲನು ನನ್ನ ಗೆಳೆಯ, ನನ್ನ ಆತ್ಮೀಯ ಗೆಳೆಯ. ಭಗವಾನರು ಅವನಿಗೆ ಪಬ್ಬಜ್ಜವನ್ನು ಕೊಡಬೇಕು. ಬ್ರಾಹ್ಮಣ ಮಾಣವ ಜೋತಿಪಾಲನು ಭಗವಾನರೂ ಅರಹಂತರೂ ಸಮ್ಮಾಸಂಬುದ್ಧರೂ ಆದ ಕಸ್ಸಪರಿಂದ ಪಬ್ಬಜ್ಜವನ್ನು ಪಡೆದನು, ಆನಂತರದಲ್ಲಿ ಉಪಸಂಪದವನ್ನೂ (ಪೂರ್ಣ ಪ್ರಮಾಣದ ಭಿಕ್ಖುತ್ವ) ಪಡೆದನು.32
7. ಬ್ರಾಹ್ಮಣ ಮಾಣವ ಜೋತಿಪಾಲನು ಉಪಸಂಪದವನ್ನು ಪಡೆದು ಬಹಳ ಕಾಲ ಆಗಿರಲಿಲ್ಲ. ಉಪಸಂಪದವನ್ನು ಪಡೆದು ಹದಿನೈದು ದಿನಗಳಾಗಿತ್ತು. ಅರಹಂತರೂ ಸಮ್ಮಾಸಂಬುದ್ಧರೂ ಆದ ಭಗವಾನ್ ಕಸ್ಸಪರು ಎಷ್ಟುಕಾಲವಿರಬೇಕೆಂದು ಎಂದುಕೊಂಡಿದ್ದರೊ ಅಷ್ಟುಕಾಲ ವೇಭಲಿಂಗದಲ್ಲಿದ್ದು, ವಾರಾಣಸಿಯ ಕಡೆ ಹೊರಟು, ನಡೆಯುತ್ತಾ ನಡೆಯುತ್ತಾ ವಾರಾಣಸಿಗೆ ಬಂದು ಇಸಿಪತನದ ಮಿಗದಾಯಿ ವನದಲ್ಲಿ ಉಳಿದುಕೊಂಡರು.
ಆಗ ಕಾಶಿರಾಜ ಕಿಕೀ ಹೀಗೆ ಕೇಳಲ್ಪಟ್ಟನು: ಅರಹಂತರೂ ಸಮ್ಮಾಸಂಬುದ್ಧರೂ ಆದ ಭಗವಾನ್ ಕಸ್ಸಪರು ವಾರಾಣಸಿ ತಲುಪಿದ್ದು ಇಸಿಪತನದ ಮಿಗದಾಯಿಯಲ್ಲಿ ವಾಸಿಸುತ್ತಿದ್ದಾರೆ. ಆದ್ದರಿಂದ ರಾಜನು ಹಲವಾರು ರಥಗಳನ್ನು ಸಿದ್ಧಪಡಿಸುವಂತೆ ಹೇಳಿ ರಾಜರಥವೊಂದನ್ನು ಹತ್ತಿ ಎಲ್ಲ ರಾಜವೈಭವದಿಂದ ವಾರಾಣಸಿಯನ್ನು ಬಿಟ್ಟು ಅರಹಂತರೂ ಸಮ್ಮಾಸಂಬುದ್ಧರೂ ಆದ ಭಗವಾನ್ ಕಸ್ಸಪರನ್ನು ನೋಡಲು ಹೊರಟನು. ಎಲ್ಲಿಯವರೆಗೂ ರಥಗಳು ಸಾಗುತ್ತವೆಯೋ ಅಲ್ಲಿಯವರೆಗೂ ರಸ್ತೆಯಲ್ಲಿ ಸಾಗಿ, ಆನಂತರ ರಥದಿಂದ ಇಳಿದು ಕಾಲ್ನಡಿಗೆಯಲ್ಲಿ ಅರಹಂತರೂ ಸಮ್ಮಾಸಂಬುದ್ಧರೂ ಆದ ಭಗವಾನ್ ಕಸ್ಸಪರ ಬಳಿ ಹೋದನು. ಅರಹಂತರೂ ಸಮ್ಮಾಸಂಬುದ್ಧರೂ ಆದ ಭಗವಾನ್ ಕಸ್ಸಪರಿಗೆ ಅಭಿವಂದಿಸಿ ಒಂದು ಪಕ್ಕದಲ್ಲಿ ಕುಳಿತನು. ಆನಂತರದಲ್ಲಿ ಅರಹಂತರೂ ಸಮ್ಮಾಸಂಬುದ್ಧರೂ ಆದ ಭಗವಾನ್ ಕಸ್ಸಪರು ಕಿಕೀ ಕಾಶಿರಾಜನಿಗೆ ಧಮ್ಮೋಪದೇಶದ ಮೂಲಕ ಸೂಚಿಸಿದರು, ಆಗ್ರಹಿಸಿದರು, ಜಾಗ್ರತಗೊಳಿಸಿದರು ಮತ್ತು ಉತ್ಸಾಹಗೊಳಿಸಿದರು.
ಧಮ್ಮೋಪದೇಶ ಮುಗಿದಮೇಲೆ ಕಿಕೀ ಕಾಶಿರಾಜನು ಹೇಳಿದನು: ಪೂಜ್ಯರೇ, ಭಗವಾನರಾದ ತಾವು ತಮ್ಮ ಭಿಕ್ಖುಸಂಘದ ಸಮೇತ ನಾಳೆ ನನ್ನಿಂದ ಭೋಜನವನ್ನು ಸ್ವೀಕರಿಸಲು ಒಪ್ಪಿಕೊಳ್ಳಬೇಕು. ಅರಹಂತರೂ ಸಮ್ಮಾಸಂಬುದ್ಧರೂ ಆದ ಭಗವಾನ್ ಕಸ್ಸಪರು ಮೌನದಿಂದಲೆ ಸಮ್ಮತಿ ಸೂಚಿಸಿದರು. ಭಗವಾನರೂ ಅರಹಂತರೂ ಸಮ್ಮಾಸಂಬುದ್ಧರು ಒಪ್ಪಿಗೆ ನೀಡಿದ್ದಾರೆಂಬುದನ್ನು ಅರಿತು ತನ್ನ ಆಸನದಿಂದ ಎದ್ದು ಅಭಿವಂದಿಸಿ ಪ್ರದಕ್ಷಿಣೆ ಹಾಕಿ ರಾಜನು ನಿರ್ಗಮಿಸಿದನು.
ಕಿಕೀ ಕಾಶಿರಾಜನು ಆ ರಾತ್ರಿ ಮುಗಿದ ಬಳಿಕ ತನ್ನ ನಿವಾಸದಲ್ಲಿಯೇ ಅನೇಕ ಭಕ್ಷ್ಯ ಭೋಜ್ಯಗಳನ್ನು, ವ್ಯಂಜನಗಳನ್ನು ತಯಾರು ಮಾಡಿಸಿ ಭೋಜನದ ವೇಳೆ ಹತ್ತಿರ ಬಂದಾಗ ಅರಹಂತರೂ ಸಮ್ಮಾಸಂಬುದ್ಧರೂ ಆದ ಭಗವಾನ್ ಕಸ್ಸಪರಿಗೆ ಪೂಜ್ಯರೇ, ಇದು ಭೋಜನದ ವೇಳೆ ಎಂದು ಬಿನ್ನವಿಸಿದನು.
8. ಅದು ಬೆಳಗಿನ ಸಮಯವಾದುದರಿಂದ ಅರಹಂತರೂ ಸಮ್ಮಾಸಂಬುದ್ಧರೂ ಆದ ಭಗವಾನ್ ಕಸ್ಸಪರು ಚೀವರವನ್ನು ಹೊದ್ದು ಪಿಂಡಪಾತ್ರೆಯನ್ನು ಹಿಡಿದು ತಮ್ಮ ಭಿಕ್ಷು ಸಂಘದೊಡನೆ ಕಿಕೀ ಕಾಶಿರಾಜನ ನಿವಾಸಕ್ಕೆ ತೆರಳಿ ಅಲ್ಲಿ ತಮಗಾಗಿ ಸಿದ್ಧಪಡಿಸಿದ ಆಸನದಲ್ಲಿ ಕುಳಿತರು. ಆಗ ಸ್ವತಃ ಕಿಕೀ ಕಾಶಿರಾಜನೇ ತನ್ನ ಕೈಯಿಂದಲೇ ಭಗವಾನರಿಗೂ ಭಿಕ್ಖು ಸಂಘಕ್ಕೂ ವಿಧವಿಧವಾದ ರುಚಿಕರ ಭಕ್ಷ್ಯ ಭೋಜ್ಯಗಳನ್ನು ಬಡಿಸಿದನು. ಅರಹಂತರೂ ಸಮ್ಮಾಸಂಬುದ್ಧರೂ ಆದ ಭಗವಾನ್ ಕಸ್ಸಪರು ಪಿಂಡಪಾತ್ರೆಯಲ್ಲಿನ ಊಟವನ್ನೆಲ್ಲ ಮುಗಿಸಿಯಾದ ಮೇಲೆ ಕಿಕೀ ಕಾಶಿರಾಜನು ಎತ್ತರವಲ್ಲದ ಆಸನದಲ್ಲಿ ಕುಳಿತು ಹೇಳಿದ: ಪೂಜ್ಯರೇ, ಭಗವಾನರಾದ ತಾವು ವಷರ್ಾವಾಸಕ್ಕಾಗಿ ವಾರಾಣಸಿಯಲ್ಲಿ ಉಳಿದುಕೊಳ್ಳಲು ನಿವಾಸವೊಂದನ್ನು ನನ್ನಿಂದ ಸ್ವೀಕರಿಸಬೇಕು, ಅದು ಸಂಘಕ್ಕೆ ಅನುಕೂಲವಾಗುತ್ತದೆ. ರಾಜನೆ, ನನಗೆ ಈಗಾಗಲೇ ವಷರ್ಾವಾಸಕ್ಕಾಗಿ ವಸತಿ ಇದೆ, ಅದು ಸಾಕು.
ಕಿಕೀ ಕಾಶಿರಾಜನು ಎರಡು ಮತ್ತು ಮೂರನೆಬಾರಿ ಹೇಳಿದ: ಪೂಜ್ಯರೆ, ಭಗವಾನರಾದ ತಾವು ವಷರ್ಾವಾಸಕ್ಕಾಗಿ ವಾರಾಣಸಿಯಲ್ಲಿ ಉಳಿದುಕೊಳ್ಳಲು ನಿವಾಸವೊಂದನ್ನು ನನ್ನಿಂದ ಸ್ವೀಕರಿಸಬೇಕು; ಅದು ಸಂಘಕ್ಕೆ ಅನುಕೂಲವಾಗುತ್ತದೆ. ರಾಜನೆ, ನನಗೆ ಈಗಾಗಲೇ ವಷರ್ಾವಾಸಕ್ಕಾಗಿ ವಸತಿ ಇದೆ, ಅದು ಸಾಕು.
ರಾಜ ಯೋಚಿಸಿದ: ಅರಹಂತರೂ ಸಮ್ಮಾಸಂಬುದ್ಧರೂ ಆದ ಭಗವಾನ್ ಕಸ್ಸಪರು ವಷರ್ಾವಾಸಕ್ಕಾಗಿ ವಾರಾಣಸಿಯಲ್ಲಿ ಉಳಿದುಕೊಳ್ಳಲು ನನ್ನಿಂದ ನಿವಾಸವನ್ನು ಸ್ವೀಕರಿಸಲು ಸಮ್ಮತಿಸುತ್ತಿಲ್ಲ ಹೀಗೆಂದುಕೊಂಡು ಅತೃಪ್ತನಾಗಿ ಬೇಸರಗೊಂಡನು.
9. ಆಗ ಹೇಳಿದನು: ಪೂಜ್ಯರೆ, ತಮಗೆ ನನಗಿಂತಲೂ ಉತ್ತಮರಾದ ಸೇವಕರಿದ್ದಾರೆಯೇ? ಹೌದು, ಮಹಾರಾಜರೆ, ವೇಭಲಿಂಗ ಎನ್ನುವ ವ್ಯಾಪಾರ ನಗರವಿದೆ, ಅಲ್ಲಿ ಘಟಿಕಾರ ಎಂಬ ಹೆಸರಿನ ಕುಂಬಾರನಿದ್ದಾನೆ, ಅವನು ನನ್ನ ಸೇವಕ, ನನ್ನ ಪ್ರಮುಖ ಸೇವಕ. ಮಹಾರಾಜ ಈಗ ನೀನು ಯೋಚಿಸಿದೆ: ಅರಹಂತರೂ ಸಮ್ಮಾಸಂಬುದ್ಧರೂ ಆದ ಭಗವಾನ್ ಕಸ್ಸಪರು ವಷರ್ಾವಾಸಕ್ಕಾಗಿ ಉಳಿದುಕೊಳ್ಳಲು ನನ್ನಿಂದ ನಿವಾಸವನ್ನು ಸ್ವೀಕರಿಸಲು ಸಮ್ಮತಿಸುತ್ತಿಲ್ಲ ಮತ್ತು ಈ ಕಾರಣಕ್ಕಾಗಿ ಅಸಮಾಧಾನಗೊಂಡು ಬೇಸರಗೊಂಡಿದ್ದೀರಿ; ಆದರೆ ಕುಂಬಾರ ಘಟಿಕಾರನು ಹಾಗಲ್ಲ ಮತ್ತು ಹಾಗೆ ಆಗುವುದೂ ಇಲ್ಲ. ಕುಂಬಾರ ಘಟಿಕಾರನು ಬುದ್ಧ, ಧಮ್ಮ, ಸಂಘಕ್ಕೆ ಶರಣು ಹೋಗಿದ್ದಾನೆ. ಅವನು ಪ್ರಾಣಿ ಹಿಂಸೆ ಮಾಡುವುದರಿಂದ, ತನ್ನದಲ್ಲದುದನ್ನು ತೆಗೆದುಕೊಳ್ಳುವುದರಿಂದ, ಮದ್ಯಪಾನ ಮಾಡುವುದರಿಂದ ಈ ಎಲ್ಲವುಗಳಿಂದ ವಿರತನಾಗಿದ್ದಾನೆ. ಅವನಿಗೆ ಬುದ್ಧ, ಧಮ್ಮ, ಸಂಘಗಳಲ್ಲಿ ಅವಿಚ್ಛನ್ನವಾದ ಶ್ರದ್ಧೆಯಿದೆ. ಆರ್ಯರು ಮೆಚ್ಚುವಂತಹ ಶೀಲಸಂಪನ್ನನು. ಅವನಿಗೆ ದುಃಖ, ದುಃಖ ಸಮುದಯ, ದುಃಖ ನಿರೋಧ ಮತ್ತು ದುಃಖ ನಿರೋಧಗಮನಗಳ ಬಗ್ಗೆ ಯವುದೇ ಸಂಶಯವಿಲ್ಲ. ಅವನು ದಿನದಲ್ಲಿ ಒಪ್ಪತ್ತು ಮಾತ್ರವೇ ಊಟ ಮಾಡುವುದು, ಬ್ರಹ್ಮಚರ್ಯವನ್ನು ಪಾಲಿಸುವವನು, ಶೀಲವಂತನು ಮತ್ತು ಕಲ್ಯಾಣ ಧರ್ಮದವನು. ಅವನು ಮಣಿ ಸುವರ್ಣಗಳನ್ನು ಲೆಕ್ಕಿಸದವನು, ಬೆಳ್ಳಿ ಬಂಗಾರಗಳನ್ನು ತ್ಯಜಿಸಿದವನು. ಅವನು ಜೇಡಿಮಣ್ಣಿಗಾಗಿ ತನ್ನ ಕೈಯಿಂದ ನೆಲವನ್ನು ಅಗೆಯುವವನಲ್ಲ, ತೀರಗಳಲ್ಲಿರುವ ಮತ್ತು ಇಲಿ ಹೆಗ್ಗಣಗಳು ಕೊರೆದು ಬಿಸಾಡಿದ ಮಣ್ಣನ್ನು ಗಾಡಿಯಲ್ಲಿ ತುಂಬಿಕೊಂಡು ಮನೆಗೆ ತರುತ್ತಾನೆ. ಕುಂಭವನ್ನು ತಯಾರಿಸಿದ ಮೇಲೆ ಹೇಳುತ್ತಾನೆ: ಯಾರು ಇದನ್ನು ಇಷ್ಟಪಡುತ್ತಾರೊ ಅವರು ಇದಕ್ಕೆ ಒಂದು ಗೊತ್ತ್ತಾದ ಪ್ರಮಾಣದ ಅಕ್ಕಿಯನ್ನೋ ಗೊತ್ತಾದ ಪ್ರಮಾಣದ ಕಾಳನ್ನೋ ಗೊತ್ತಾದ ಪ್ರಮಾಣದ ಬೇಳೆಯನ್ನೊ ಇಟ್ಟು ಅವರು ಇದನ್ನು ತೆಗೆದುಕೊಂಡು ಹೋಗಲಿ33 ಎಂದು ಅವನು ತನ್ನ ವೃದ್ಧ ಅಂಧ ತಂದೆ-ತಾಯಿಯವರನ್ನು ಸೇವೆ ಮಾಡುತ್ತಿದ್ದಾನೆ. ಅವನು ಐದು ಸಂಯೋಜನೆಗಳನ್ನು ನಾಶ ಮಾಡಿದವನಾಗಿ ಓಪಪಾತಿಕವಾಗಿ ಜನ್ಮವನ್ನು ಪಡೆಯುತ್ತಾನೆ. ಆನಂತರದಲ್ಲಿ ಅಂತಿಮ ನಿಬ್ಬಾಣವನ್ನು ಪಡೆದು ಪ್ರಪಂಚಕ್ಕೆ ಮತ್ತೆ ಮರಳುವುದಿಲ್ಲ.
10. ಒಮ್ಮೆ ನಾನು ವೇಭಲಿಂಗದಲ್ಲಿ ವಾಸಿಸುತ್ತಿದ್ದ ಸಂದರ್ಭದಲ್ಲಿ, ಬೆಳಗಿನ ಹೊತ್ತಿನಲ್ಲಿ ಚೀವರವನ್ನು ಸರಿಮಾಡಿಕೊಂಡು ಪಿಂಡಪಾತ್ರೆಯನ್ನು ಹಿಡಿದು ಕುಂಬಾರ ಘಟಿಕಾರನ ತಂದೆ-ತಾಯಿಯಲ್ಲಿಗೆ ಹೋಗಿ ಕೇಳಿದೆ: ಕುಂಬಾರನೆಲ್ಲಿ ಹೋಗಿದ್ದಾನೆ? ಅವರು: ಪೂಜ್ಯರೆ, ತಮ್ಮ ಸೇವಕನು ಹೊರಗೆ ಹೋಗಿದ್ದಾನೆ, ಆದರೇನಂತೆ ಪಾತ್ರೆಯಲ್ಲಿ ಅನ್ನವಿದೆ, ಬಟ್ಟಲಿನಲ್ಲಿ ಸಾರಿದೆ, ಅದನ್ನು ಊಟಮಾಡಿ ಎಂದರು.
ನಾನು ಹಾಗೆಯೇ ಮಾಡಿ ಹೊರಟುಹೋದೆ. ಆನಂತರ ಕುಂಬಾರ ಘಟಿಕಾರ ತನ್ನ ತಂದೆ-ತಾಯಿಗಳಿಗೆ ಕೇಳಿದನು, ಯಾರು ಈ ಪಾತ್ರೆಯಲ್ಲಿರುವ ಅನ್ನವನ್ನು ಮತ್ತು ಬಟ್ಟಲಿನಲ್ಲಿದ್ದ ಸಾರನ್ನು ತಿಂದು ಹೋಗಿದ್ದಾರೆ? ನಮ್ಮ ಪ್ರಿಯನೆ, ಅರಹಂತರೂ ಸಮ್ಮಾಸಂಬುದ್ಧರೂ ಆದ ಭಗವಾನ್ ಕಸ್ಸಪರು.
ಆಗ ಕುಂಬಾರ ಘಟಿಕಾರನು ಆಲೋಚಿಸಿದ: ನನಗೆ ಲಾಭವೇ ಆಯಿತು, ನನಗೆ ದೊಡ್ಡ ಲಾಭವೇ ಆಯಿತು. ಅರಹಂತರೂ ಸಮ್ಮಾಸಂಬುದ್ಧರೂ ಆದ ಭಗವಾನ್ ಕಸ್ಸಪರು ಹೀಗೆ ನನ್ನ ಮೇಲೆ ವಿಶ್ವಾಸವನ್ನಿಟ್ಟಿದ್ದಾರೆ. ಇದರಿಂದ ಆನಂದ ಸುಖಗಳು ಅವನನ್ನು ಆವರಿಸಿ ಅವನು ಅದೇ ಗುಂಗಿನಲ್ಲಿ ಹದಿನೈದು ದಿನಗಳಕಾಲ ಇದ್ದನು. ಅವನ ತಂದೆ-ತಾಯಿಗಳು ಒಂದುವಾರ ಕಾಲ ಆ ಗುಂಗಿನಲ್ಲಿದ್ದರು.
11. ಇನ್ನೊಂದು ಸಂದರ್ಭದಲ್ಲಿ ನಾನು ವೇಭಲಿಂಗದಲ್ಲಿ ವಾಸಿಸುತ್ತಿದ್ದಾಗ, ಬೆಳಗಿನ ಸಮಯದಲ್ಲಿ ಚೀವರವನ್ನು ಹೊದ್ದು ಪಿಂಡಪಾತ್ರೆಯನ್ನು ಹಿಡಿದು ಕುಂಬಾರ ಘಟಿಕಾರನ ತಂದೆ-ತಾಯಿಗಳಲ್ಲಿಗೆ ಹೋಗಿ ಕುಂಬಾರನು ಎಲ್ಲಿ ಹೋಗಿದ್ದಾನೆ? ಎಂದು ಕೇಳಿದೆ. ಅವರು ಪೂಜ್ಯರೇ, ನಿಮ್ಮ ಸೇವಕನು ಹೊರಗೆ ಹೋಗಿದ್ದಾನೆ, ಆದರೇನಂತೆ, ಒಂದು ಬಟ್ಟಲಿನಲ್ಲಿ ಗಂಜಿ ಇದೆ, ಇನ್ನೊಂದರಲ್ಲಿ ಗೊಜ್ಜು ಇದೆ, ಊಟ ಮಾಡಿ ಎಂದರು.
ನಾನು ಹಾಗೆಯೇ ಮಾಡಿ ಹೊರಟುಹೋದೆ. ಆನಂತರದಲ್ಲಿ ಕುಂಬಾರ ಘಟಿಕಾರನು ತಂದೆ-ತಾಯಿಯರ ಬಳಿ ಬಂದು ಕೇಳಿದ: ಈ ಬಟ್ಟಲಿನಲ್ಲಿದ್ದ ಗಂಜಿಯನ್ನು ಇನ್ನೊಂದರಲ್ಲಿದ್ದ ಗೊಜ್ಜನ್ನು ತಿಂದು ಹೋದವರು ಯಾರು? ಅವರು: ನಮ್ಮ ಪ್ರಿಯನೇ, ಅರಹಂತರೂ ಸಮ್ಮಾಸಂಬುದ್ಧರೂ ಭಗವಾನರೂ ಆದ ಕಸ್ಸಪರು ಹಾಗೆ ಮಾಡಿದರು ಎಂದರು.
ಆಗ ಕುಂಬಾರ ಘಟಿಕಾರ ಅಲೋಚಿಸಿದ: ಇದು ನನಗೆ ಲಾಭ, ಇದು ಮಹಾ ಲಾಭ ನನಗೆ. ಅರಹಂತರೂ ಸಮ್ಮಾಸಂಬುದ್ಧರೂ ಆದ ಭಗವಾನ್ ಕಸ್ಸಪರು ನನ್ನ ಮೇಲೆ ಹೀಗೆ ವಿಸ್ವಾಸವನ್ನಿಟ್ಟಿದ್ದಾರೆ. ಇದರಿಂದ ಆನಂದ ಸುಖಗಳು ಅವನನ್ನು ಆವರಿಸಿ ಅವನು ಅದೇ ಗುಂಗಿನಲ್ಲಿ ಹದಿನೈದು ದಿನಗಳ ಕಾಲವಿದ್ದನು. ಅವನ ತಂದೆ ತಾಯಿಗಳು ಒಂದು ವಾರದ ಕಾಲ ಆ ಗುಂಗಿನಲ್ಲಿದ್ದರು.
12. ಮತ್ತೊಂದು ಸಂದರ್ಭದಲ್ಲಿ ನಾನು ವೇಭಲಿಂಗದಲ್ಲಿ ವಾಸಿಸುತ್ತಿದ್ದಾಗ ನನ್ನ ಗುಡಿಸಲು ಸೋರಲಾರಂಭಿಸಿತು. ಆಗ ನಾನು ಭಿಕ್ಖುಗಳಿಗೆ ಹೇಳಿದೆ: ಭಿಕ್ಖುಗಳೇ, ಕುಂಬಾರ ಘಟಿಕಾರನ ಮನೆಗೆ ಹೋಗಿ ಅಲ್ಲಿ ಹುಲ್ಲೇನಾದರೂ ಇದೆಯೇ ಎಂಬುದನ್ನು ತಿಳಿದುಬನ್ನಿ.
ಪೂಜ್ಯರೇ, ನಾವು ಕುಂಬಾರ ಘಟಿಕಾರನ ಮನೆಗೆ ಹೋಗಿ ನೋಡಲಾಗಿ ಅಲ್ಲಿ ಹುಲ್ಲು ಇರಲಿಲ್ಲ. ಅವನ ಗುಡಿಸಿಲಿನ ಮಾಡಿಗೆ ಹುಲ್ಲು ಹಾಸಿದೆ. ಭಿಕ್ಷುಗಳೇ ಹೋಗಿ, ಕುಂಬಾರ ಘಟಿಕಾರನ ಗುಡಿಸಿಲಿನ ಹುಲ್ಲನ್ನು ಕಿತ್ತುಕೊಂಡು ಬನ್ನಿ.
ಅವರು ಹಾಗೆಯೇ ಮಾಡಿದರು. ಆಗ ಕುಂಬಾರ ಘಟಿಕಾರನ ತಂದೆ-ತಾಯಿಗಳು ಭಿಕ್ಖುಗಳಿಗೆ ಕೇಳಿದರು: ಯಾರು ಮನೆಯ ಹುಲ್ಲನ್ನು ಕೀಳುತ್ತಿರುವುದು? ಅವರು ಸೋದರಿ, ಅರಹಂತರೂ ಸಮ್ಮಾಸಂಬುದ್ಧರೂ ಭಗವಾನರೂ ಆದ ಕಸ್ಸಪರ ಗುಡಿಸಲು ಸೋರುತ್ತಿದೆ ಎಂದರು. ಪೂಜ್ಯರೆ, ತೆಗೆದುಕೊಂಡು ಹೋಗಿ, ತೆಗೆದುಕೊಂಡು ಹೋಗಿ, ಒಳ್ಳೆಯದಾಗಲಿ.
ಆನಂತರದಲ್ಲಿ ಘಟಿಕಾರ ತನ್ನ ತಂದೆ-ತಾಯಿಗಳಿಗೆ ಕೇಳಿದ: ಮಾಡಿನ ಹುಲ್ಲುಹಾಸನ್ನು ಯಾರು ತೆಗೆದುಕೊಂಡು ಹೋದರು?
ನನ್ನ ಪ್ರಿಯನೆ, ಭಿಕ್ಖುಗಳು ತೆಗೆದುಕೊಂಡು ಹೋದರು. ಅರಹಂತರೂ ಸಮ್ಮಾಸಂಬುದ್ಧರೂ ಆದ ಭಗವಾನ್ ಕಸ್ಸಪರ ಗುಡಿಸಲು ಸೋರುತ್ತಿದೆಯಂತೆ.
ಆಗ ಕುಂಬಾರ ಘಟಿಕಾರನು ಆಲೋಚಿಸಿದನು: ನನಗೆ ಇದು ಲಾಭ, ನನಗೆ ಇದು ಮಹಾ ಲಾಭ. ಅರಹಂತರೂ, ಸಮ್ಮಾಸಂಬುದ್ಧರೂ ಆದ ಭಗವಾನ್ ಕಸ್ಸಪರು ನನ್ನ ಮೇಲೆ ವಿಶ್ವಾಸವನ್ನಿಟ್ಟುಕೊಂಡಿದ್ದಾರೆ. ಇದರಿಂದ ಅವನಿಗೆ ಆನಂದ ಸುಖಗಳು ಆವರಿಸಿ ಅವನು ಆ ಗುಂಗಿನಲ್ಲೇ ಹದಿನೈದು ದಿನಗಳ ಕಾಲ ಇದ್ದನು. ಅವನ ತಂದೆ-ತಾಯಿಗಳು ಒಂದು ವಾರದ ಕಾಲ ಆ ಗುಂಗಿನಲ್ಲಿದ್ದರು. ಮೂರು ತಿಂಗಳಕಾಲ ಅವನ ಮನೆಗೆ ಆಕಾಶವೇ ಮಾಳಿಗೆಯಾಗಿತ್ತು. ಅಷ್ಟು ಕಾಲವೂ ಮಳೆ ಬರಲಿಲ್ಲ, ಇಂತಹವನು ಕುಂಬಾರ ಘಟಿಕಾರ.
ಕುಂಬಾರ ಘಟಿಕಾರನಿಗೆ ಇದೊಂದು ಲಾಭ. ಅರಹಂತರೂ ಸಮ್ಮಾಸಂಬುದ್ಧರೂ ಆದ ಭಗವಾನ್ ಕಸ್ಸಪರು ಅವನ ಮೇಲೆ ಭರವಸೆ ಇಟ್ಟಿದುದು ಒಂದು ಮಹಾನ್ ಲಾಭ.
13. ಆಗ ಕಿಕೀ ಕಾಶಿರಾಜನು ಕುಂಬಾರ ಘಟಿಕಾರನಿಗೆ ಐದುನೂರು ಬಂಡಿಗಳನ್ನು ತುಂಬಿದ ಕೆಂಪು ಅಕ್ಕಿ ಮತ್ತು ಸಾಂಬಾರ ಪದಾರ್ಥಗಳನ್ನು ಕಳುಹಿಸಿದ. ರಾಜಭಟರು ಕುಂಬಾರ ಘಟಿಕಾರನಲ್ಲಿಗೆ ಹೋಗಿ ಹೇಳಿದರು: ಪೂಜ್ಯರೆ, ಇಲ್ಲಿ ಐದುನೂರು ಬಂಡಿ ತುಂಬಿದ ಕೆಂಪು ಅಕ್ಕಿ ಮತ್ತು ಸಾಂಬಾರ ಪದಾರ್ಥಗಳು ಇವೆ. ಕಿಕೀ ಕಾಶಿರಾಜನು ತಮಗೆ ಕಳುಹಿಸಿದ್ದಾರೆ, ತಾವು ದಯಮಾಡಿ ಒಪ್ಪಿಸಿಕೊಳ್ಳಬೇಕು. ರಾಜನಿಗೆ ಸಮಯವಿರುವುದಿಲ್ಲ ಮತ್ತು ಬಹಳಷ್ಟು ಕೆಲಸವಿರುತ್ತದೆ ಇವಿಷ್ಟೂ ರಾಜನಿಗೇ ಇರಲಿ34.
ಆನಂದ ಈಗ ನೀನು ಹೀಗೆಯೇ ಯೋಚಿಸಬಹುದು: ಆ ಸಂದರ್ಭದಲ್ಲಿದ್ದ ಬ್ರಾಹ್ಮಣ ಮಾಣವ ಜೋತಿಪಾಲ ಬೇರೆ ಯಾರೋ ಇರಬಹುದು ಎಂದು. ಆದರೆ ನೀನು ಹಾಗೇನು ತಿಳಿಯಬೇಕಿಲ್ಲ. ಆ ಸಂದರ್ಭದಲ್ಲಿದ್ದ ಬ್ರಾಹ್ಮಣ ಮಾಣವ ಜೋತಿಪಾಲನು ನಾನೇ.
ಭಗವಾನರು ಹೇಳಿದ್ದು ಹೀಗೆ. ಸ್ಫೂರ್ತಿಗೊಂಡ ಆಯುಷ್ಮಂತನಾದ ಆನಂದನು ಭಗವಾನರ ಉಪದೇಶವನ್ನು ಅಭಿನಂದಿಸಿದನು.
ಟಿಪ್ಪಣಿಗಳು [4]
English
Việt Ngữ