ಊಟಿಸುತ್ತಿದೆ

ಅನುವಾದಗಳು [26]

ಮಧುರ ಸುತ್ತ

ಮಧುರ ಸುತ್ತ

ಹೀಗೆ ನಾನು ಕೇಳಿದ್ದೇನೆ. ಒಂದು ಸಮಯದಲ್ಲಿ ಆಯುಷ್ಮಂತನಾದ ಮಹಾಕಚ್ಚಾನನು ಮಧುರೆಯ ಗುಂದಾವನದಲ್ಲಿ ತಂಗಿದ್ದನು.46

ಮಧುರೆಯ ರಾಜ ಅವಂತಿಪುತ್ರ ಹೀಗೆ ಕೇಳಲ್ಪಟ್ಟನು: ಸಮಣ ಕಚ್ಚಾನನು ಮಧುರಾದ ಗುಂದಾವನದಲ್ಲಿ ವಾಸಿಸುತ್ತಿದ್ದಾನೆ. ಆಚಾರ್ಯ ಕಚ್ಚಾನರ ಬಗ್ಗೆ ಒಂದು ಒಳ್ಳೆ ವರದಿ ಹೀಗೆ ಹರಡಿತ್ತು; ಆತನು ಪಂಡಿತನು, ಸೂಕ್ಷ್ಮ ಗ್ರಾಹಿಯು, ಮೇಧಾವಿಯು, ಬಹುಶ್ರುತನು, ವಿವೇಚನಾಶಾಲಿ; ಆತನು ವೃದ್ಧನೂ ಅರಹಂತನೂ ಆಗಿದ್ದಾನೆ. ಅಂತಹ ಅರಹಂತರ ದರ್ಶನ ಮಾಡುವುದು ಒಳ್ಳೆಯದು.

ಮಧುರೆಯ ರಾಜ ಅವಂತಿಪುತ್ರನು ತನ್ನ ಬಳಿಯಿರುವ ಸಾಕಷ್ಟು ಸಂಖ್ಯೆಯ ರಾಜ ಯಾನಗಳನ್ನು ಸಿದ್ಧಪಡಿಸುವಂತೆ ಹೇಳಿ ಅದರಲ್ಲಿ ಒಂದನ್ನು ತಾನು ಹತ್ತಿ ರಾಜಗಾಂಭೀರ್ಯದಿಂದ, ವೈಭವದಿಂದ ಮಧುರೆಯ ಹೊರವಲಯದಲ್ಲಿರುವ ಆಯುಷ್ಮಂತ ಮಹಾಕಚ್ಚಾನರನ್ನು ನೋಡಲು ಹೊರಟನು. ಎಲ್ಲಿಯವರೆಗೂ ರಸ್ತೆ ಸೌಕರ್ಯವಿತ್ತೊ, ಅಲ್ಲಿಯವರೆಗೂ ರಥದಲ್ಲಿಯೇ ಹೊರಟು, ಆನಂತರದಲ್ಲಿ ರಥದಿಂದಿಳಿದು ಕಾಲ್ನಡಿಗೆಯಲ್ಲಿ ಆಯುಷ್ಮಂತ ಮಹಾಕಚ್ಚಾನರ ಬಳಿಸಾರಿ, ಸಂತೋಷದಿಂದ ಕುಶಲ ಪ್ರಶ್ನೆಗಳನ್ನು ನಡೆಸಿ ಒಂದುಕಡೆ ಕುಳಿತು ಹೀಗೆ ಹೇಳಿದನು:

ಆಚಾರ್ಯ ಕಚ್ಚಾನರೆ, ಬ್ರಾಹ್ಮಣರು ಹೀಗೆ ಹೇಳುತ್ತಾರೆ:

ಬ್ರಾಹ್ಮಣರು ಉತ್ತಮ ವರ್ಣದವರು, ಅನ್ಯರು ಹೀನ ವರ್ಣದವರು,

ಬ್ರಾಹ್ಮಣರು ಸುಂದರ ವರ್ಣದವರು, ಅನ್ಯರು ಕಪ್ಪು ವರ್ಣದವರು,

ಬ್ರಾಹ್ಮಣರು ಮಾತ್ರ ಶುದ್ಧರಾದವರು. ಆಬ್ರಾಹ್ಮಣರು ಅಲ್ಲ;

ಬ್ರಾಹ್ಮಣರು ಮಾತ್ರವೇ ಬ್ರಹ್ಮನ ಪುತ್ರರು, ಅವನ ಬಾಯಿಯಿಂದ ಹುಟ್ಟಿದವರು, ಬ್ರಹ್ಮನಿಂದ ಹುಟ್ಟಿ, ಬ್ರಹ್ಮ ನಿರ್ಮಿತರಾಗಿ, ಬ್ರಹ್ಮದಾಯಾದರಾಗುತ್ತಾರೆ.

ಆಚಾರ್ಯ ಕಚ್ಚಾನರು ಈ ಬಗ್ಗೆ ಏನು ಹೇಳುತ್ತಾರೆ?

2. ಮಹಾರಾಜ, ಲೋಕದಲ್ಲಿ ಹೀಗೊಂದು ಬರಿಯ ಘೋಷವಿದೆ;

ಬ್ರಾಹ್ಮಣರು ಉತ್ತಮ ವರ್ಣದವರು... (ಮೇಲಿನಂತೆ)... ಬ್ರಹ್ಮದಾಯಾದರು. ಬ್ರಾಹ್ಮಣರ ಈ ಘೋಷ ಹೇಗೆ ಎಂಬುದನ್ನು ಈ ಪಯರ್ಾಯದಿಂದ ತಿಳಿಯಬಹುದು.

ನಿನಗೆ ಏನನ್ನಿಸುತ್ತದೆ ಮಹಾರಾಜ?

ಕ್ಷತ್ರಿಯನೊಬ್ಬನು ಧನ ಕನಕ ಧಾನ್ಯ ಬೆಳ್ಳಿ ಸಂಪತ್ತುಗಳಲ್ಲಿ ಶ್ರೀಮಂತನಾದರೆ (ಇತರೆ) ಕ್ಷತ್ರಿಯರು ಅವನ ಏಳುವುದಕ್ಕಿಂತ ಮುಂಚೆ ಏಳುತ್ತಾರೆಯೇ ಮತ್ತು ಅವನು ವಿಶ್ರಾಂತಿ ಪಡೆದ ನಂತರ ವಿಶ್ರಾಂತಿ ಪಡೆಯುತ್ತಾರೇನು? ಅವನ ಸೇವೆ ಮಾಡಲು ಹಾತೊರೆಯುತ್ತಾರೆಯೇ? ಅವನನ್ನು ತೃಪ್ತಿಪಡಿಸಲು ಮತ್ತು ಅವನೊಂದಿಗೆ ಮಧುರವಾಗಿ ಮಾತನಾಡಲು ಇಚ್ಛಿಸುತ್ತಾರೇನು? ಹಾಗೆಯೇ ಬ್ರಾಹ್ಮಣರು, ವೈಶ್ಯರು ಮತ್ತು ಶ್ರಮಿಕರು ಹಾಗೆ ಮಾಡುತ್ತಾರೇನು?

ಹೌದು, ಹಾಗೆಯೇ ಮಾಡುತ್ತಾರೆ, ಆಚಾರ್ಯ ಕಚ್ಚಾನರೆ.

3. ಇದರ ಬಗ್ಗೆ ಏನೆಂದು ಯೋಚಿಸುವಿರಿ, ಮಹಾರಾಜರೇ?

ಬ್ರಾಹ್ಮಣನೊಬ್ಬನು ಧನ, ಕನಕ, ಧಾನ್ಯ, ಬೆಳ್ಳಿ, ಸಂಪತ್ತುಗಳಲ್ಲಿ ಶ್ರೀಮಂತನಾದರೆ (ಇತರೆ) ಬ್ರಾಹ್ಮಣರು ಅವನು ಏಳುವುದಕ್ಕಿಂತ ಮುಂಚೆ ಏಳುತ್ತಾರೆಯೇ ಮತ್ತು ಅವನು ವಿಶ್ರಾಂತಿ ಪಡೆದನಂತರ ವಿಶ್ರಾಂತಿ ಪಡೆಯುತ್ತಾರೆಯೇ? ಅವನ ಸೇವೆಮಾಡಲು ಹಾತೊರೆಯುತ್ತಾರೆಯೇ? ಅವನನ್ನು ತೃಪ್ತಿಪಡಿಸಲು ಮತ್ತು ಅವನೊಂದಿಗೆ ಮಧುರವಾಗಿ ಮಾತನಾಡಲು ಇಚ್ಛಿಸುತ್ತಾರೆಯೇ? ಹಾಗೆಯೇ ವೈಶ್ಯರು, ಶ್ರಮಿಕರು ಮತ್ತು ಕ್ಷತ್ರಿಯರೂ ಹಾಗೆ ಮಾಡುತ್ತಾರೆಯೇ?

ಹೌದು, ಹಾಗೆಯೇ ಮಾಡುತ್ತಾರೆ, ಆಚಾರ್ಯ ಕಚ್ಚಾನರೆ.

4. ಇದರ ಬಗ್ಗೆ ಏನೆಂದು ಯೋಚಿಸುವಿರಿ ಮಹಾರಾಜರೇ?

ವೈಶ್ಯನೊಬ್ಬನು ಧನ ಕನಕ ಧಾನ್ಯ ಬೆಳ್ಳಿ ಸಂಪತ್ತುಗಳಲ್ಲಿ ಶ್ರೀಮಂತನಾದರೆ (ಇತರೆ) ವೈಶ್ಯರು ಅವನು ಏಳುವುದಕ್ಕಿಂತ ಮುಂಚೆಯೇ ಏಳುತ್ತಾರೆಯೇ ಮತ್ತು ಅವನು ವಿಶ್ರಾಂತಿ ಪಡೆದ ನಂತರ ವಿಶ್ರಾಂತಿ ಪಡೆಯುತ್ತಾರೆಯೇ? ಅವನ ಸೇವೆ ಮಾಡಲು ಹಾತೊರೆಯುತ್ತಾರೆಯೇ? ಅವನನ್ನು ತೃಪ್ತಿಪಡಿಸಲು ಮತ್ತು ಅವನೊಂದಿಗೆ ಮಧುರವಾಗಿ ಮಾತನಾಡಲು ಇಚ್ಛಿಸುತ್ತಾರೆಯೇ? ಹಾಗೆಯೇ ಶ್ರಮಿಕರು, ಕ್ಷತ್ರಿಯರು ಬ್ರಾಹ್ಮಣರು ಹಾಗೆ ಮಾಡುತ್ತಾರೆಯೇ?47

ಹೌದು, ಹಾಗೆಯೇ ಮಾಡುತ್ತಾರೆ, ಆಚಾರ್ಯ ಕಚ್ಚಾನರೆ.

5. ಇದರ ಬಗ್ಗೆ ಏನೆಂದು ಯೋಚಿಸುವಿರಿ, ಮಹಾರಾಜರೆ?

ಶ್ರಮಿಕನೊಬ್ಬನು ಧನ ಕನಕ ಧಾನ್ಯ ಬೆಳ್ಳಿ ಸಂಪತ್ತುಗಳಲ್ಲಿ ಶ್ರೀಮಂತನಾದರೆ (ಇತರೆ) ಶ್ರಮಿಕರು ಅವನು ಏಳುವುದಕ್ಕಿಂತ ಮುಂಚೆಯೇ ಏಳುತ್ತಾರೆಯೇ? ಮತ್ತು ಅವನು ವಿಶ್ರಾಂತಿ ಪಡೆದನಂತರ ವಿಶ್ರಾಂತಿ ಪಡೆಯುತ್ತಾರೆಯೇ? ಅವನ ಸೇವೆ ಮಾಡಲು ಹಾತೊರೆಯುತ್ತಾರೆಯೇ? ಅವನನ್ನು ತೃಪ್ತಿಪಡಿಸಲು ಮತ್ತು ಅವನೊಂದಿಗೆ ಮಧುರವಾಗಿ ಮಾತನಾಡಲು ಇಚ್ಛಿಸುತ್ತಾರೆಯೇ? ಹಾಗೆಯೇ ಕ್ಷತ್ರಿಯರು, ಬ್ರಾಹ್ಮಣರು, ವೈಶ್ಯರು ಹಾಗೆಯೇ ಮಾಡುತ್ತಾರೆಯೇ?

ಹೌದು, ಹಾಗೆಯೇ ಮಾಡುತ್ತಾರೆ, ಆಚಾರ್ಯ ಕಚ್ಚಾನರೆ.

6. ಈಗ ಏನೆಂದು ಯೋಚಿಸುವಿರಿ, ಮಹಾರಾಜರೆ? ವಸ್ತುಸ್ಥಿತಿ ಹೀಗಿರುವಾಗ ಈ ನಾಲ್ಕು ವರ್ಣಗಳು ಸಮ ಸಮ ಆದವೋ ಇಲ್ಲವೋ? ಅಥವಾ ನಿಮಗೆ ಇದು ಹೇಗೆ ಅನ್ನಿಸುತ್ತದೆ?

ಇದು ಖಂಡಿತವಾಗಿಯೂ ಹೀಗೆ ಇದ್ದರೆ, ಆಗ ಈ ನಾಲ್ಕು ವರ್ಣಗಳೂ ಸಮಸಮ. ಇವುಗಳ ನಡುವೆ ವ್ಯತ್ಯಾಸವಿರುವುದು ನನಗಂತೂ ಕಾಣುತ್ತಿಲ್ಲ.

ಇದು ಹೀಗೆ ಮಹಾರಾಜರೆ, ಬ್ರಾಹ್ಮಣರು ಹೇಳುವ ಮಾತು ಈ ಲೋಕದಲ್ಲಿ ಕೇವಲ ಒಂದು ಹೇಳಿಕೆ ಎಂದು ಅರ್ಥಮಾಡಿಕೊಳ್ಳಲು ಇದೊಂದು ಮಾರ್ಗ.

7. ನೀವೇನೆಂದು ಯೋಚಿಸುವಿರಿ ಮಹಾರಾಜರೇ?

ಒಂದುವೇಳೆ ಕ್ಷತ್ರಿಯನೊಬ್ಬನು ಜೀವಿಗಳನ್ನು ಹತ್ಯೆ ಮಾಡಿದಲ್ಲಿ, ಯಾವುದನ್ನು ಕೊಟ್ಟಿಲ್ಲವೊ ಅದನ್ನು ತೆಗೆದುಕೊಂಡಲ್ಲಿ, ಇಂದ್ರಿಯ ಭೋಗದಲ್ಲಿ ಮಿಥ್ಯಾಚಾರವೆಸಗಿದಲ್ಲಿ, ಸುಳ್ಳಾಡಿದಲ್ಲಿ, ಈಷರ್ೆಯಿಂದ ಮಾತನಾಡಿದಲ್ಲಿ, ಕಠಿಣವಾಗಿ ಮಾತನಾಡಿದಲ್ಲಿ, ಹರಟೆ ಕೊಚ್ಚಿದಲ್ಲಿ, ವಿಷಯಾಸಕ್ತನಾದಲ್ಲಿ, ತಿರಸ್ಕಾರ ಮನೋಭಾವವುಳ್ಳವನಾದಲ್ಲಿ, ತಪ್ಪು ದೃಷ್ಟಿ ಹೊಂದಿದಲ್ಲಿ ಅವನ ಕಾಯವು ನಶಿಸಿ, ಸತ್ತಮೇಲೆ ಅಪಾಯದ ದುಗ್ಗತಿಯಲ್ಲಿ ವಿನಿಪಾತದಲ್ಲಿ ನಿರಯದಲ್ಲಿ ಮತ್ತೆ ಅವನು ಕಾಣಿಸಿಕೊಳ್ಳುವುದಿಲ್ಲವೆ? ಅಥವಾ ಈ ಪ್ರಕರಣವು ನಿಮಗೆ ಹೇಗೆ ಅನ್ನಿಸುತ್ತದೆ?

ಆಚಾರ್ಯ ಕಚ್ಚಾನರೆ, ಕ್ಷತ್ರಿಯನೊಬ್ಬನು ಹಾಗೆ ಇದ್ದ ಪಕ್ಷದಲ್ಲಿ ಅವನು ಅಪಾಯದ ದುಗ್ಗತಿಯಲ್ಲಿ, ವಿನಿಪಾತದಲ್ಲಿ ನಿರಯದಲ್ಲಿ ಕಾಣಿಸಿಕೊಳ್ಳುತ್ತಾನೆ. ಹೀಗೆಂದು ನನಗೆ ಅನ್ನಿಸುತ್ತದೆ ಮತ್ತು ಅರಹಂತರು ಹೀಗೆ ಹೇಳಿರುವುದನ್ನು ನಾನು ಕೇಳಿದ್ದೇನೆ.

8. ಇದರ ಬಗ್ಗೆ ಏನೆಂದು ಯೋಚಿಸಿರುವಿರಿ, ಮಹಾರಾಜರೆ? ಒಂದುವೇಳೆ ಬ್ರಾಹ್ಮಣನೊಬ್ಬನು... ವೈಶ್ಯನೊಬ್ಬನು... ಶ್ರಮಿಕನೊಬ್ಬನು ಜೀವಿಗಳನ್ನು ಹತ್ಯೆ ಮಾಡಿದಲ್ಲಿ... ತಪ್ಪು ದೃಷ್ಟಿ ಹೊಂದಿದ್ದಲ್ಲಿ? ಅವನ ಕಾಯವು ನಶಿಸಿ, ಸತ್ತಮೇಲೆ ಅಪಾಯದ ದುಗ್ಗತಿಯಲ್ಲಿ, ವಿನಿಪಾತದಲ್ಲಿ ನಿರಯದಲ್ಲಿ ಮತ್ತೆ ಅವನು ಕಾಣಿಸಿಕೊಳ್ಳುವುದಿಲ್ಲವೆ? ಅಥವಾ ಇಲ್ಲವೆ? ಅಥವಾ ಈ ಪ್ರಕರಣವು ನಿಮಗೆ ಹೇಗೆ ಅನ್ನಿಸುತ್ತದೆ.

ಆಚಾರ್ಯ ಕಚ್ಚಾನರೆ, ಬ್ರಾಹ್ಮಣನೊಬ್ಬನು... ವೈಶ್ಯನೊಬ್ಬನು... ಶ್ರಮಿಕನೊಬ್ಬನು ಹಾಗೆ ಇದ್ದ ಪಕ್ಷದಲ್ಲಿ ಅವನು ಅಪಾಯದ ದುಗ್ಗತಿಯಲ್ಲಿ, ವಿನಿಪಾತದಲ್ಲಿ ನಿರಯದಲ್ಲಿ ಕಾಣಿಸಿಕೊಳ್ಳುತ್ತಾನೆ. ಹೀಗೆಂದು ನನಗನ್ನಿಸುತ್ತದೆ ಮತ್ತು ಹೀಗೆ ಹೇಳಿರುವುದನ್ನು ಅರಹಂತರಿಂದ ಕೇಳಿ ತಿಳಿದಿದ್ದೇನೆ.

ಇದರ ಬಗ್ಗೆ ಏನೆಂದು ಯೋಚಿಸುವಿರಿ, ಮಹಾರಾಜರೆ? ವಸ್ತುಸ್ಥಿತಿ ಹೀಗಿರಲು ನಾಲ್ಕು ವರ್ಣಗಳೂ ಸಮಸಮ ಅಲ್ಲವೇ? ಅಥವಾ ಬೇರೆಯೇ? ಅಥವಾ ಈ ಪ್ರಕರಣ ನಿಮಗೆ ಹೇಗೆ ಎನ್ನಿಸುತ್ತದೆ?

ಇದು ಖಂಡಿತವಾಗಿಯೂ ಹಾಗೆ ಇದ್ದರೆ, ಆಚಾರ್ಯ ಕಚ್ಚಾನರೆ, ಈ ನಾಲ್ಕು ವರ್ಣಗಳೂ ಸಮಸಮ. ಇವುಗಳ ನಡುವೆ ವ್ಯತ್ಯಾಸವಿರುವುದಂತೂ ನನಗೆ ಕಾಣುತ್ತಿಲ್ಲ.

ಬ್ರಾಹ್ಮಣರು ಮಾಡುವ ಹೇಳಿಕೆ ಈ ಲೋಕದಲ್ಲಿ ಕೇವಲ ಹೇಳಿಕೆ ಎಂಬುದನ್ನು ನಿರೂಪಿಸಲು ಇದೂ ಒಂದು ಮಾರ್ಗ ಮಹಾರಾಜರೇ.

10. ಇದರ ಬಗ್ಗೆ ಏನೆಂದು ಯೋಚಿಸುವಿರಿ, ಮಹಾರಾಜರೆ? ಒಂದುವೇಳೆ ಕ್ಷತ್ರಿಯನೊಬ್ಬನು ಜೀವಿಗಳನ್ನು ಹಿಂಸಿಸುವುದರಿಂದ ವಿರತನಾದರೆ, ತನ್ನದಲ್ಲದ್ದನ್ನು ತೆಗೆದುಕೊಳ್ಳುವುದರಿಂದ ವಿರತನಾದರೆ, ಮಿಚ್ಚಾಚಾರ ಮಾಡುವುದರಿಂದ ವಿರತನಾದರೆ, ಮೃಷಾವಾದದಿಂದ ವಿರತನಾದರೆ, ದ್ವೇಷಪೂರಿತ ಮಾತಿನಿಂದ ವಿರತನಾದರೆ, ಕಠಿಣ ಮಾತುಗಳಿಂದ ವಿರತನಾದರೆ, ಹರಟೆಯಿಂದ ವಿರತನಾದರೆ, ದುರಾಶೆಯಿಂದ ವಿರತನಾದರೆ, ತಿರಸ್ಕಾರ ಮನೋಭಾವವಿಲ್ಲದವನಾಗಿದ್ದರೆ ಮತ್ತು ಸಮ್ಯಕ್ದೃಷ್ಟಿಯನ್ನು ಹೊಂದಿದ್ದರೆ ಅವನ ಕಾಯವು ನಶಿಸಿದ ಮೇಲೆ, ಸತ್ತನಂತರ ಅವನು ಸುಗತಿಯಲ್ಲೋ ಇಲ್ಲವೇ ಸ್ವರ್ಗದಲ್ಲಿ ಮತ್ತೆ ಕಾಣಿಸಿಕೊಳ್ಳುತ್ತಾನೋ ಇಲ್ಲವೋ? ಅಥವಾ ಈ ಬಗ್ಗೆ ನಿಮಗೆ ಏನನ್ನಿಸುತ್ತದೆ?

ಆಚಾರ್ಯ ಕಚ್ಚಾನರೆ, ಆ ಕ್ಷತ್ರಿಯನು ಹಾಗೆ ಇದ್ದ ಪಕ್ಷದಲ್ಲಿ ಅವನು ಸುಗತ ಸ್ವರ್ಗ ಲೋಕದಲ್ಲಿ ಕಾಣಿಸಿಕೊಳ್ಳುತ್ತಾನೆ. ನನಗೆ ಎನ್ನಿಸುವುದು ಹೀಗೆ ಮತ್ತು ಅರಹಂತರಿಂದ ನಾನು ಹೀಗೆ ಕೇಳಿದ್ದೇನೆ.

11. ಈ ಬಗ್ಗೆ ಏನೆಂದು ಯೋಚಿಸುವಿರಿ, ಮಹಾರಾಜರೆ? ಒಂದುವೇಳೆ ಬ್ರಾಹ್ಮಣನೊಬ್ಬನು... ವೈಶ್ಯನೊಬ್ಬನು... ಶ್ರಮಿಕನೊಬ್ಬನು ಜೀವಿಗಳನ್ನು ಹಿಂಸಿಸುವುದರಿಂದ ವಿರತನಾದರೆ... ಮತ್ತು ಸಮ್ಯಕ್ ದೃಷ್ಟಿಯನ್ನು ಹೊಂದಿದ್ದರೆ ಅವನ ಕಾಯವು ನಶಿಸಿದ ಮೇಲೆ ಸತ್ತನಂತರ ಅವನು ಸುಗತಿಯಲ್ಲಿ ಸ್ವರ್ಗಲೋಕದಲ್ಲಿ ಮತ್ತೆ ಕಾಣಿಸಿಕೊಳ್ಳುತ್ತಾನೋ ಇಲ್ಲವೋ ಅಥವಾ ಈ ಬಗ್ಗೆ ನಿಮಗೆ ಏನನ್ನಿಸುತ್ತದೆ?

ಆಚಾರ್ಯ ಕಚ್ಚಾನರೆ, ಬ್ರಾಹ್ಮಣನೊಬ್ಬನು... ವೈಶ್ಯನೊಬ್ಬನು... ಶ್ರಮಿಕನೊಬ್ಬನು ಹಾಗೆ ಇದ್ದಪಕ್ಷದಲ್ಲಿ ಅವನು ಸುಗತಿಯಲ್ಲೊ ಇಲ್ಲವೊ ಸ್ವರ್ಗಲೋಕದಲ್ಲೋ ಕಾಣಿಸಿಕೊಳ್ಳುತ್ತಾನೆ. ಹೀಗೆಂದು ನನಗನ್ನಿಸುತ್ತದೆ ಮತ್ತು ಅರಹಂತರಿಂದ ನಾನು ಹೀಗೆ ಕೇಳಿದ್ದೇನೆ.

ಈಗ ಏನೆನ್ನುವಿರಿ, ಮಹಾರಾಜರೆ? ವಸ್ತುಸ್ಥಿತಿ ಹೀಗಿರುವಾಗ ಈ ನಾಲ್ಕು ವರ್ಣಗಳೂ ಸಮಸಮವೇ ಅಥವಾ ಬೇರೆಯೆ? ಅಥವಾ ನಿಮಗೆ ಈ ಬಗ್ಗೆ ಏನೆನ್ನಿಸುತ್ತದೆ?

12. ಇದು ಖಂಡಿತವಾಗಿಯೂ ಹಾಗೆ ಇದ್ದರೆ ಆಚಾರ್ಯ ಕಚ್ಚಾನರೆ, ಈ ನಾಲ್ಕು ವರ್ಣಗಳೂ ಸಮಸಮ. ಇವುಗಳ ನಡುವೆ ವ್ಯತ್ಯಾಸವಿರುವುದಂತೂ ನನಗೆ ಕಾಣುತ್ತಿಲ್ಲ.

ಬ್ರಾಹ್ಮಣರು ಮಾಡುವ ಹೇಳಿಕೆ ಕೇವಲ ಹೇಳಿಕೆ ಮಾತ್ರ ಎಂಬುದನ್ನು ನಿರೂಪಿಸಲು ಇದೂ ಒಂದು ಮಾರ್ಗ, ಮಹಾರಾಜರೆ.

13. ಇದರ ಬಗ್ಗೆ ಏನೆಂದು ಯೋಚಿಸುವಿರಿ, ಮಹಾರಾಜರೆ? ಒಂದುವೇಳೆ ಕ್ಷತ್ರಿಯನೊಬ್ಬನು ಮನೆಗಳಿಗೆ ನುಗ್ಗಿ ಸಂಪತ್ತು ಕೊಳ್ಳೆ ಹೊಡೆದರೆ, ದರೋಡೆ ಮಾಡಿದರೆ, ಹೆದ್ದಾರಿಯಲ್ಲಿ ಹೊಂಚು ಹಾಕಿದರೆ, ಇನ್ನೊಬ್ಬರ ಹೆಂಡತಿಯನ್ನು ಕೆಡಿಸಿದರೆ ಮತ್ತು ನಿಮ್ಮ ಜನ ಅವನನ್ನು ಬಂಧಿಸಿ ನಿಮ್ಮ ಮುಂದೆ ಹಾಜರುಪಡಿಸಿ ಹೀಗೆ ಹೇಳಿದರೆ: ಮಹಾಸ್ವಾಮಿ, ಇವನು ಅಪರಾಧಿ, ಇವನಿಗೆ ಏನು ಶಿಕ್ಷೆಯನ್ನು ಕೊಡಬೇಕೆಂದು ತಾವು ಆದೇಶಿಸುತ್ತೀರಿ ಅವನನ್ನು ಹೇಗೆ ಕಾಣುತ್ತೀರಿ?

ಆಚಾರ್ಯ ಕಚ್ಚಾನರೆ, ನಾವು ಅವನಿಗೆ ಮರಣದಂಡನೆ ವಿಧಿಸುತ್ತೇವೆ. ಇಲ್ಲವೇ ದಂಡ ವಿಧಿಸುತ್ತೇವೆ. ಇಲ್ಲವೇ ಗಡಿಪಾರು ಮಾಡುತ್ತೇವೆ ಅಥವಾ ಅವನು ಯಾವುದಕ್ಕೆ ಅರ್ಹನೋ ಅದನ್ನು ವಿಧಿಸುತ್ತೇವೆ. ಕಾರಣ ಅವನು ಹೊಂದಿದ್ದ ಕ್ಷತ್ರಿಯ ಧರ್ಮದ ಘನತೆಯನ್ನು ಕಳೆದುಕೊಂಡಿದ್ದಾನೆ. ಸುಲಭದಲ್ಲಿ ಅವನನ್ನು ಒಬ್ಬ ಸಾಮಾನ್ಯ ಚೋರನೆಂದು ಪರಿಗಣಿಸುತ್ತೇವೆ.

14. ಇದರ ಬಗ್ಗೆ ಏನೆಂದು ಯೋಚಿಸುವಿರಿ, ಮಹಾರಾಜರೆ? ಒಂದುವೇಳೆ ಬ್ರಾಹ್ಮಣನೊಬ್ಬನು... ವೈಶ್ಯನೊಬ್ಬನು... ಶ್ರಮಿಕನೊಬ್ಬನು ಮನೆಗಳಿಗೆ ನುಗ್ಗಿ... ಇನ್ನೊಬ್ಬರ ಹೆಂಡತಿಯನ್ನು ಕೆಡಿಸಿದರೆ ಮತ್ತು ನಿಮ್ಮ ಜನ ಅವನನ್ನು ಬಂಧಿಸಿ ನಿಮ್ಮ ಮುಂದೆ ಹಾಜರುಪಡಿಸಿ ಹೀಗೆ ಹೇಳಿದರೆ: ಇವನು ಅಪರಾಧಿ, ಇವನಿಗೆ ಏನು ಶಿಕ್ಷೆಯನ್ನು ಕೊಡಬೇಕೆಂದು ತಾವು ಆದೇಶಿಸುತ್ತೀರಿ? ಅವನನ್ನು ಹೇಗೆ ಕಾಣುತ್ತೀರಿ?

ಆಚಾರ್ಯ ಕಚ್ಚಾನರೆ, ನಾವು ಅವನಿಗೆ ಮರಣದಂಡನೆಯನ್ನು ವಿಧಿಸುತ್ತೇವೆ, ಇಲ್ಲವೇ ದಂಡ ವಿಧಿಸುತ್ತೇವೆ, ಇಲ್ಲವೇ ಗಡಿಪಾರು ಮಾಡುತ್ತೇವೆ ಅಥವಾ ಅವನು ಯಾವುದಕ್ಕೆ ಅರ್ಹನೋ ಅದನ್ನು ವಿಧಿಸುತ್ತೇವೆ. ಯಾಕೆ ಹಾಗೆ? ಕಾರಣ ಅವನು ಹೊಂದಿದ್ದ ಬ್ರಾಹ್ಮಣ ಘನತೆಯನ್ನು... ವೈಶ್ಯ ಘನತೆಯನ್ನು... ಶ್ರಮಿಕ ಘನತೆಯನ್ನು ಕಳೆದುಕೊಂಡಿದ್ದಾನೆ; ಅವನನ್ನು ಒಬ್ಬ ಸಾಮಾನ್ಯ ಚೋರನನ್ನಾಗಿ ಪರಿಗಣಿಸುತ್ತೇವೆ.

15. ಈಗ ಏನೆನ್ನುವಿರಿ, ಮಹಾರಾಜರೆ? ವಸ್ತುಸ್ಥಿತಿ ಹೀಗಿರುವಾಗ ಈ ನಾಲ್ಕು ವರ್ಣಗಳೂ ಸಮಸಮವೇ ಅಥವಾ ಬೇರೆಯೇ? ಅಥವಾ ನಿಮಗೆ ಈ ಬಗ್ಗೆ ಏನನ್ನಿಸುತ್ತದೆ?

ಇದು ಖಂಡಿತವಾಗಿಯೂ ಹಾಗೆ ಇದ್ದರೆ ಆಚಾರ್ಯ ಕಚ್ಚಾನರೆ, ಈ ನಾಲ್ಕು ವರ್ಣಗಳು ಸಮಸಮ. ಇವುಗಳ ನಡುವೆ ವ್ಯತ್ಯಾಸವಿರುವುದಂತೂ ನನಗೆ ಕಾಣುತ್ತಿಲ್ಲ.

ಬ್ರಾಹ್ಮಣರು ಮಾಡುವ ಹೇಳಿಕೆ ಈ ಲೋಕದಲ್ಲಿ ಕೇವಲ ಹೇಳಿಕೆ ಮಾತ್ರ ಎಂಬುದನ್ನು ನಿರೂಪಿಸಲು ಇದು ಒಂದು ಮಾರ್ಗ ಮಹಾರಾಜರೆ.

16. ಇದರ ಬಗ್ಗೆ ಏನು ಹೇಳುವಿರಿ ಮಹಾರಾಜರೆ? ಒಂದುವೇಳೆ ಕ್ಷತ್ರಿಯನೊಬ್ಬನು ಕೇಶಮುಂಡನ ಮಾಡಿಕೊಂಡು, ಕಾಷಾಯ ವಸ್ತ್ರಗಳನ್ನು ಧರಿಸಿ, ಮನೆಯನ್ನು ತೊರೆದು ಪಬ್ಬಜಿತನಾದರೆ, ಜೀವಹಿಂಸೆಯಿಂದ ವಿರತನಾದರೆ, ತನ್ನದಲ್ಲದುದನ್ನು ತೆಗೆದುಕೊಳ್ಳವುದರಿಂದ ವಿರತನಾದರೆ, ಮೃಷಾವಾದದಿಂದ ವಿರತನಾದರೆ, ರಾತ್ರಿ ವೇಳೆ ಆಹಾರ ತೆಗೆದುಕೊಳ್ಳುವುದನ್ನು ನಿಲ್ಲಿಸಿದರೆ, ದಿನದ ಒಂದು ಹೊತ್ತಿನಲ್ಲಿ ಮಾತ್ರವೇ ಊಟ ಮಾಡಿದರೆ, ಬ್ರಹ್ಮಚರ್ಯನ್ನು ಪಾಲಿಸುತ್ತಾ ಸತ್ಯವಂತನಾಗಿ ಒಳ್ಳೆಯ ಗುಣಗಳನ್ನು ಹೊಂದಿದವನಾಗಿದ್ದರೆ ಅವನನ್ನು ಹೇಗೆ ಪರಿಗಣಿಸುವೆ?

ಆಚಾರ್ಯ ಕಚ್ಚಾನರೆ, ನಾವು ಅಂತಹವರನ್ನು ಗೌರವಿಸುತ್ತೇವೆ ಅಥವಾ ಅವರು ಬಂದಾಗ ನಾವು ಎದ್ದುನಿಲ್ಲುತ್ತೇವೆ ಅಥವಾ ಆಸನವನ್ನು ಸ್ವೀಕರಿಸುವಂತೆ ವಿನಂತಿಸುತ್ತೇವೆ ಅಥವಾ ಅವರಿಗೆ ಚೀವರವನ್ನು, ಭಿಕ್ಷಾನ್ನವನ್ನು, ಶಯನಾಸನವನ್ನು ಮತ್ತು ಔಷಧ ಪರಿಕರಗಳನ್ನು ಸ್ವೀಕರಿಸುವಂತೆ ಕೋರುತ್ತೇವೆ. ಅಥವಾ ಅವರಿಗೆ ಸಂವಿಧಾನ ರೀತ್ಯ ರಕ್ಷಣೆಯನ್ನು ಪೋಷಣೆಯನ್ನು ಕೊಡುತ್ತೇವೆ. ಏಕೆ ಹಾಗೆ? ಕಾರಣ ಅವರು ತಮ್ಮ ಹಿಂದಿನ ಕ್ಷತ್ರಿಯತ್ವವನ್ನು ಕಳೆದುಕೊಂಡು ಸಮಣರಾಗಿರುವುದರಿಂದ.

17. ಇದರ ಬಗ್ಗೆ ಏನು ಯೋಚಿಸುವಿರಿ, ಮಹಾರಾಜರೆ? ಒಂದುವೇಳೆ ಬ್ರಾಹ್ಮಣನೊಬ್ಬ... ವೈಶ್ಯನೊಬ್ಬ... ಶ್ರಮಿಕನೊಬ್ಬ ಕೇಶಮುಂಡನ ಮಾಡಿಕೊಂಡು... ಬ್ರಹ್ಮಚರ್ಯವನ್ನು ಪಾಲಿಸುತ್ತ, ಸತ್ಯವಂತನಾಗಿ, ಒಳ್ಳೆಯ ಗುಣಗಳನ್ನು ಹೊಂದಿದವರಾಗಿದ್ದರೆ? ಅವನನ್ನು ಹೇಗೆ ಪರಿಗಣಿಸುವಿರಿ?

ಆಚಾರ್ಯ ಕಚ್ಚಾನರೆ, ನಾವು ಅಂತಹವರನ್ನು ಗೌರವಿಸುತ್ತೇವೆ ಅಥವಾ ಅವರು ಬಂದಾಗ ಎದ್ದು ನಿಲ್ಲುತ್ತೇವೆ ಅಥವಾ ಆಸನವನ್ನು ಸ್ವೀಕರಿಸುವಂತೆ ವಿನಂತಿಸುತ್ತೇವೆ, ಅವರಿಗೆ ಚೀವರವನ್ನು, ಭಿಕ್ಷಾನ್ನವನ್ನು, ಶಯನಾಸನವನ್ನು ಮತ್ತು ಔಷಧ ಪರಿಕರಗಳನ್ನು ಸ್ವೀಕರಿಸುವಂತೆ ಕೋರುತ್ತೇವೆ ಅಥವಾ ಸಂವಿಧಾನರೀತ್ಯ ರಕ್ಷಣೆಯನ್ನು ಪೋಷಣೆಯನ್ನು ಕೊಡುತ್ತೇವೆ. ಏಕೆ ಹಾಗೆ? ಕಾರಣ ಅವರು ತಮ್ಮ ಹಿಂದಿನ ಬ್ರಾಹ್ಮಣತನವನ್ನು... ವೈಶ್ಯತನವನ್ನು... ಶ್ರಮಿಕತನವನ್ನು ಕಳೆದುಕೊಂಡಿದ್ದಾರೆ ಮತ್ತು ಸರಳವಾಗಿ ಹೇಳುವುದಾದರೆ ಸಮಣರಾಗಿದ್ದಾರೆ.

ಈಗೇನೆನ್ನುವಿರಿ, ಮಹಾರಾಜರೆ? ವಸ್ತುಸ್ಥಿತಿ ಹೀಗಿರಲು ಈ ನಾಲ್ಕು ವರ್ಣಗಳು ಸಮಸಮವೆ? ಅಥವಾ ಇಲ್ಲವೆ? ಅಥವಾ ನಿಮ್ಮ ದೃಷ್ಟಿಯಲ್ಲಿ ಹೇಗೆ ಕಾಣುತ್ತದೆ?

18. ಆಚಾರ್ಯ ಕಚ್ಚಾನರೆ, ಇದು ಖಂಡಿತವಾಗಿಯೂ ಹಾಗೆ ಇದ್ದರೆ ನಾಲ್ಕು ವರ್ಣಗಳು ಸಮಸಮ. ಇವುಗಳ ನಡುವೆ ವ್ಯತ್ಯಾಸವಿರುವುದಂತೂ ನನಗೆ ಕಾಣುತ್ತಿಲ್ಲ.

ಬ್ರಾಹ್ಮಣರು ಮಾಡುವ ಹೇಳಿಕೆ ಈ ಲೋಕದಲ್ಲಿ ಕೇವಲ ಹೇಳಿಕೆ ಮಾತ್ರ ಎಂಬುದನ್ನು ನಿರೂಪಿಸಲು ಇದೂ ಒಂದು ಮಾರ್ಗ, ಮಹಾರಾಜರೇ.

19. ಈ ಮಾತನ್ನು ಕೇಳಿದಮೇಲೆ ಮಧುರೆಯ ರಾಜ ಆವಂತಿಪುತ್ರನು ಆಯುಷ್ಮಂತ ಮಹಾ ಕಚ್ಚಾನರಿಗೆ ಹೀಗೆ ಹೇಳಿದನು: ಅದ್ಭುತ! ಆಚಾರ್ಯ ಮಹಾ ಕಚ್ಚಾನರೆ, ಅದ್ಭುತ! ಆಚಾರ್ಯ ಮಹಾ ಕಚ್ಚಾನರೆ, ಯಾವುದು ಮಗುಚಿಕೊಂಡಿದೆಯೋ ಅದನ್ನು ಸರಿಮಾಡಿದಂತೆ, ಯಾವುದು ಗುಪ್ತವಾಗಿತ್ತೋ ಅದನ್ನು ಬಯಲು ಮಾಡಿದಂತೆ, ದಾರಿತಪ್ಪಿದವನಿಗೆ ದಾರಿತೋರಿಸಿದಂತೆ, ಕಣ್ಣುಗಳಿದ್ದೂ ಕತ್ತಲಲ್ಲಿ ರೂಪಗಳನ್ನು ನೋಡಲಾಗದವನಿಗೆ ದೀಪ ಹಿಡಿದಂತೆ. ಧಮ್ಮವನ್ನು ಬಹುವಿಧಗಳಲ್ಲಿ ಚೆನ್ನಾಗಿ ತಿಳಿ ಹೇಳಿದ್ದಾರೆ. ನಾನು ಆಚಾರ್ಯ ಮಹಾ ಕಚ್ಚಾನರಿಗೆ ಶರಣು ಹೋಗುತ್ತೇನೆ, ಧಮ್ಮಕ್ಕೆ ಶರಣು ಹೋಗುತ್ತೇನೆ ಮತ್ತು ಭಿಕ್ಖು ಸಂಘಕ್ಕೆ ಶರಣು ಹೋಗುತ್ತೇನೆ. ಇಂದಿನಿಂದ ನಾನು ಆಜೀವಪರ್ಯಂತ ಅವರಿಗೆ ಶರಣು ಹೋಗಿದ್ದೇನೆಂದು ಆಚಾರ್ಯ ಮಹಾಕಚ್ಚಾನರು ನೆನಪಿಸಿಕೊಳ್ಳಲಿ.

ಮಹಾರಾಜ, ನನಗೆ ಶರಣು ಹೋಗಬೇಡ. ನಾನು ಯಾವ ಭಗವಾನರಿಗೆ ಶರಣು ಹೋಗಿದ್ದೇನೋ ಅವರಿಗೆ ಶರಣು ಹೋಗು.

ಆಚಾರ್ಯ ಕಚ್ಚಾನರೆ, ಆ ಅರಹಂತರೂ ಸಮ್ಯಕ್ ಸಂಬುದ್ಧರೂ ಆದ ಭಗವಾನರು ಈಗ ಎಲ್ಲಿ ವಾಸಿಸುತ್ತಿದ್ದಾರೆ?

ಅರಹಂತರೂ ಸಮ್ಮಾಸಂಬುದ್ಧರೂ ಆದ ಭಗವಾನರು ಈಗ ಪರಿನಿಬ್ಬುತರಾಗಿದ್ದಾರೆ, ಮಹಾರಾಜರೆ.

11. ಭಗವಾನರೇನಾದರು ಹತ್ತು ಯೋಜನೆಗಳ ದೂರದಲ್ಲಿದ್ದಾರೆಂದು ಕೇಳಿದ್ದರೆ ಆ ಅರಹಂತರೂ ಸಮ್ಮಾಸಂಬುದ್ಧರೂ ಆದ ಭಗವಾನರನ್ನು ನೋಡಲು ಹತ್ತು ಯೋಜನೆಗಳು ಹೋಗುತ್ತಿದ್ದೆವು. ಭಗವಾನರು ಇಪ್ಪತ್ತು ಯೋಜನೆಗಳ ದೂರ... ಮೂವತ್ತು ಯೋಜನೆಗಳ ದೂರ... ನಲವತ್ತು ಯೋಜನೆಗಳ ದೂರ... ಐವತ್ತು ಯೋಜನೆಗಳ ದೂರ... ನೂರು ಯೋಜನೆಗಳ ದೂರದಲ್ಲಿ ಇದ್ದಾರೆಂದು ಕೇಳಿದ್ದರೆ ನೂರು ಯೋಜನೆಗಳನ್ನು ನಡೆದು ಅರಹಂತರೂ ಸಮ್ಮಾಸಂಬುದ್ಧರೂ ಆದ ಭಗವಾನರನ್ನು ನೋಡಲು ಹೋಗುತ್ತಿದ್ದವು. ಆದರೆ ಭಗವಾನರು ಪರಿನಿಬ್ಬುತ (ಕಾಲವಾಗಿರುವುದರಿಂದ) ರಾಗಿರುವುದರಿಂದ ನಾವು ಭಗವಾನರಿಗೆ ಶರಣು ಹೋಗುತ್ತೇವೆ, ಧಮ್ಮಕ್ಕೆ ಶರಣು ಹೋಗುತ್ತೇವೆ ಮತ್ತು ಭಿಕ್ಖು ಸಂಘಕ್ಕೆ ಶರಣು ಹೋಗುತ್ತೇವೆ. ಇಂದಿನಿಂದ ನಾನು ಆಜೀವಪರ್ಯಂತ ಉಪಾಸಕನಾಗಿರುವೆನೆಂದು ಆಚಾರ್ಯ ಕಚ್ಚಾನರು ನನ್ನನ್ನು ಸ್ವೀಕರಿಸಲಿ.

ಇಲ್ಲಿಗೆ ಮಧುರ ಸುತ್ತ ಮುಗಿಯಿತು.

ಟಿಪ್ಪಣಿಗಳು [4]