ಬೋಧಿರಾಜಕುಮಾರ ಸುತ್ತ
ಹೀಗೆ ನಾನು ಕೇಳಿದ್ದೇನೆ.
ಒಂದು ಸಮಯದಲ್ಲಿ ಭಗವಾನರು ಭಗ್ಗ ದೇಶದ ಸುಸುಮಾರಗಿರಿಯ ಭೇಸಕಳಾವನದ ಮಿಗದಾಯಿ (ಜಿಂಕೆಧಾಮ)ಯಲ್ಲಿ ವಿಹರಿಸುತ್ತಿದ್ದರು.
ಆ ಸಂದರ್ಭದಲ್ಲಿ ಬೋಧಿರಾಜಕುಮಾರನಿಗಾಗಿ ಕೋಕನದ ಎಂಬ ಅರಮನೆಯನ್ನು ಆಗಷ್ಟೇ ನಿರ್ಮಿಸಿದ್ದರು. ಅಲ್ಲಿ ಇನ್ನೂ ಯಾವ ಸಮಣನಾಗಲಿ, ಬ್ರಾಹ್ಮಣನಾಗಲಿ ಅಥವಾ ಯಾವುದೇ ಮನುಷ್ಯನಾಗಲಿ ವಾಸಿಸಿರಲಿಲ್ಲ48.
ಆಗ ಬೋಧಿರಾಜಕುಮಾರನು ಬ್ರಾಹ್ಮಣ ಮಾಣವ (ವಿದ್ಯಾರ್ಥಿ) ಸಂಜಿಕಾಪುತ್ತನನ್ನು ಕರೆದು ಹೀಗೆ ಹೇಳಿದನು:
ಬಾ, ನನ್ನ ಪ್ರಿಯ ಸಂಜಿಕಾಪುತ್ತ, ಭಗವಾನರ ಬಳಿ ಹೋಗಿ ನನ್ನ ಹೆಸರಿನಲ್ಲಿ ಅವರಿಗೆ ಶಿರಬಾಗಿ ನಮಿಸಿ, ಅವರು ಬಾಧೆಗಳಿಂದ ಆತಂಕಗಳಿಂದ ದೂರವಿದ್ದಾರೇನೆಂದು ಮತ್ತು ಆರೋಗ್ಯವಾಗಿರುವರೇ, ಚೈತನ್ಯವಾಗಿರುವಿರೇ ಮತ್ತು ಸುಖವಾಗಿ ಇರುವಿರೇ ಎಂಬುದಾಗಿ ಹೀಗೆ ಕೇಳು: ಪೂಜ್ಯರೆ, ಬೋಧಿರಾಜಕುಮಾರರು ಭಗವಾನರಿಗೆ ಶಿರಬಾಗಿ ತಮ್ಮ ಪಾದಗಳಲ್ಲಿ ನಮಸ್ಕರಿಸುತ್ತಿದ್ದಾರೆ ಮತ್ತು ಅವರು ಕೇಳಿದರು ತಾವು ದೈಹಿಕ ಬಾಧೆಗಳಿಂದ, ಆತಂಕಗಳಿಂದ... ಸುಖವಾಗಿ ಇರುವಿರೇ.
ಆಮೇಲೆ ಹೀಗೆ ಹೇಳು:
ಪೂಜ್ಯರೇ, ಭಗವಾನರು ಮತ್ತು ಭಿಕ್ಖು ಸಂಘವು ನಾಳೆ ಬೋಧಿರಾಜಕುಮಾರನಿಂದ ಭೋಜನವನ್ನು ಸ್ವೀಕರಿಸಲು ಸಮ್ಮತಿ ನೀಡಬೇಕು.
ಹಾಗೆಯೇ ಆಗಲಿ ಮಹಾಸ್ವಾಮಿ ಎಂದು ಸಂಜಿಕಾಪುತ್ತನು ಹೇಳಿ ಭಗವಾನರ ಬಳಿ ಹೋಗಿ ಗೌರವವನ್ನು ಸಲ್ಲಿಸಿ ಉಭಯ ಕುಶಲೋಪರಿ ಆದಮೇಲೆ ಒಂದು ಪಕ್ಕದಲ್ಲಿ ಕುಳಿತು ಹೀಗೆ ಹೇಳಿದನು: ಆಚಾರ್ಯ ಗೌತಮರೆ, ಬೋಧಿರಾಜಕುಮಾರನು ಆಚಾರ್ಯ ಗೌತಮರ ಪಾದಗಳಿಗೆ ಶಿರಬಾಗಿ ನಮಸ್ಕರಿಸಿದ್ದಾನೆ ಮತ್ತು ಅವರು ದೈಹಿಕ ಬಾಧೆಗಳಿಲ್ಲದೆ ಸುಖವಾಗಿ ಇರುವಿರೇ ಎಂದು ಕೇಳಿದ್ದಾನೆ ಮತ್ತು ಹೀಗೆ ಹೇಳಿದ್ದಾನೆ: ಆಚಾರ್ಯ ಭಗವಾನರು ಮತ್ತು ಭಿಕ್ಖುಸಂಘವು ನಾಳೆ ಬೋಧಿರಾಜಕುಮಾರರರಿಂದ ಭೋಜನವನ್ನು ಸ್ವೀಕರಿಸಲು ಸಮ್ಮತಿ ನೀಡಬೇಕು.
ಭಗವಾನರು ಮೌನದಿಂದಲೇ ಸಮ್ಮತಿಸಿದರು.
ಭಗವಾನರು ಮೌನದಿಂದಲೆ ಸಮ್ಮತಿ ಸೂಚಿಸಿರುವುದನ್ನು ಮನಗಂಡು ಸಂಜಿಕಾಪುತ್ತನು ತನ್ನ ಸ್ಥಾನದಿಂದ ಎದ್ದು ಬೋಧಿರಾಜಕುಮಾರನಲ್ಲಿಗೆ ಹೋಗಿ ನಡೆದುದೆಲ್ಲವನ್ನು ವಿವರಿಸಿ ಹೀಗೆ ಹೇಳಿದನು:
ಸಮಣ ಗೌತಮರು ಸಮ್ಮತಿಯನ್ನು ಸೂಚಿಸಿದ್ದಾರೆ.
2. ಆನಂತರದಲ್ಲಿ ರಾತ್ರಿ ಮುಗಿದಮೇಲೆ ಬೋಧಿರಾಜಕುಮಾರನು ವಿವಿಧ ಭಕ್ಷ್ಯಗಳನ್ನು ತನ್ನ ಮನೆಯಲ್ಲಿ ತಯಾರಿಸಲು ವ್ಯವಸ್ಥೆ ಮಾಡಿದನು ಮತ್ತು ಕೋಕನದ ಅರಮನೆಯಲ್ಲಿ ಎಲ್ಲಕಡೆ ಬಿಳಿವಸ್ತ್ರವನ್ನು ಕೊನೆಯ ಮೆಟ್ಟಿಲಿನವರೆಗೂ ಹಾಸಿಸಿದನು. ಆಮೇಲೆ ಮಾಣವ ಸಂಜಿಕಾಪುತ್ತನನ್ನು ಕರೆದು ಹೇಳಿದನು:
ಬಾ, ನನ್ನ ಪ್ರಿಯ ಮಾಣವ ಸಂಜಿಕಾಪುತ್ತ. ಭಗವಾನರ ಬಳಿ ಹೋಗಿ ಸಮಯವಾಗಿದೆ ಎಂದು ಹೀಗೆ ಘೋಷಿಸು:
ಭಂತೆ, ಸಮಯವಾಗಿದೆ, ಭೋಜನವು ಸಿದ್ಧವಾಗಿದೆ.
ಆಗ ಪೂವರ್ಾಹ್ನ ಸಮಯವಾಗಿತ್ತು; ಭಗವಾನರು ಚೀವರವನ್ನು ಧರಿಸಿ, ಪಿಂಡಪಾತ್ರೆಯನ್ನು ಮತ್ತು ಮೇಲು ಹೊದಿಕೆಯನ್ನು ತೆಗೆದುಕೊಂಡು ಬೋಧಿರಾಜಕುಮಾರನ ಮನೆಯತ್ತ ಹೊರಟರು.
ಆ ಸಮಯದಲ್ಲಿ ಬೋಧಿ ರಾಜಕುಮಾರನು ಮನೆಯ ಮುಂಭಾಗದಲ್ಲಿ ನಿಂತು ಭಗವಾನರಿಗಾಗಿ ಕಾಯುತ್ತ ನಿಂತಿದ್ದನು.
ಭಗವಾನರು ಬರುತ್ತಿರುವುದನ್ನು ದೂರದಿಂದಲೇ ನೋಡಿ,
ಮುಂದೆ ನಡೆದು ಸಂದರ್ಶಿಸಿ ಗೌರವವನ್ನು ಸಲ್ಲಿಸಿದನು; ಆನಂತರದಲ್ಲಿ ತಾನು ಮುಂದೆ ಇದ್ದು ಭಗವಾನರು ಹಿಂಬಾಲಿಸುವಂತೆ ಮುನ್ನಡೆದು ಕೋಕನದ ಅರಮನೆಯತ್ತ ಹೋದರು.
ಆದರೆ ಭಗವಾನರು ಕೊನೆಯ ಮೆಟ್ಟಿಲ ಬಳಿ ಬಂದು ನಿಂತುಬಿಟ್ಟರು.
ಆಗ ಬೋಧಿರಾಜಕುಮಾರನು ಅವರಿಗೆ ಹೇಳಿದನು:
ಭಂತೆ, ಭಗವಾನರು, ಅರಹಂತರೂ ದಯಮಾಡಿ ಬಟ್ಟೆಯ ಮೇಲೆ ಪಾದವನ್ನು ಇಡಿ,
ಅದು ನನ್ನ ಬಹುಕಾಲದ ಯೋಗಕ್ಷೇಮ ಮತ್ತು ಸುಖಕ್ಕೆ ನಾಂದಿಯಾಗುತ್ತದೆ.
ಹೀಗೆ ಹೇಳಿದ ಮೇಲೆ ಭಗವಾನರು ಮೌನವಾದರು49.
ಎರಡನೆಯಸಾರಿ...
ಮೂರನೆಯಸಾರಿ ಬೋಧಿರಾಜಕುಮಾರನು ಹೇಳಿದನು:
ಭಂತೆ, ಭಗವಂತರೂ ಅರಹಂತರೂ ದಯಮಾಡಿ ಬಟ್ಟೆಯ ಮೇಲೆ ಪಾದವನ್ನು ಇಡಬೇಕು.
ಅದು ನನ್ನ ಬಹಳ ಕಾಲದ ಯೋಗಕ್ಷೇಮ ಮತ್ತು ಸುಖಕ್ಕೆ ನಾಂದಿಯಾಗುತ್ತದೆ.
3. ಭಗವಾನರು ಆಯುಷ್ಮಂತ ಆನಂದನತ್ತ ನೋಡಿದರು.
ಆಯುಷ್ಮಂತ ಆನಂದರು ಬೋಧಿರಾಜಕುಮಾರನಿಗೆ ಹೇಳಿದರು:
ರಾಜಕುಮಾರ, ಬಟ್ಟೆಯನ್ನು ತೆಗೆದುಬಿಡು,
ಭಗವಾನರು ಬಿಳಿಯ ಬಟ್ಟೆಯ ಮೇಲೆ ಕಾಲನ್ನಿಡುವುದಿಲ್ಲ.
ತಥಾಗತರಿಗೆ ಮುಂದಿನ ಪೀಳಿಗೆಯ ಮೇಲೆ ಅನುಕಂಪವಿದೆ50.
ಆದ್ದರಿಂದ ಬೋಧಿರಾಜಕುಮಾರನು ಬಿಳಿಯ ಬಟ್ಟೆಯನ್ನು ತೆಗೆಸಿಬಿಟ್ಟನು ಮತ್ತು ಅರಮನೆಯ ಮಹಡಿ ಭಾಗದಲ್ಲಿ ಆಸನಗಳನ್ನು ವ್ಯವಸ್ಥೆ ಮಾಡಿಸಿದನು.
ಭಗವಾನರು ಮತ್ತು ಭಿಕ್ಖು ಸಂಘವು ಅರಮನೆಯೊಳಗೆ ಪ್ರವೇಶಿಸಿ ತಮಗಾಗಿ ಸಿದ್ಧಪಡಿಸಿದ ಆಸನಗಳಲ್ಲಿ ಕುಳಿತರು.
ಆನಂತರದಲ್ಲಿ ಬೋಧಿರಾಜಕುಮಾರನು ತಾನೇ ಕೈಯಿಂದ ಬುದ್ಧನಿಗೂ ಮತ್ತು ಭಿಕ್ಖುಗಳಿಗೂ ತೃಪ್ತಿಯಾಗುವಂತೆ ವಿವಿಧ ಭಕ್ಷ್ಯಗಳನ್ನು ಬಡಿಸಿದನು.
ಭಗವಾನರು ತಮ್ಮ ಊಟವನ್ನು ಮುಗಿಸಿ ಪಿಂಡಪಾತ್ರೆಯಿಂದ ತಮ್ಮ ಕೈಯನ್ನು ಹಿಂತೆಗೆದುಕೊಂಡ ಮೇಲೆ ಬೋಧಿರಾಜಕುಮಾರನು ಎತ್ತರವಲ್ಲದ ಆಸನದಲ್ಲಿ ಒಂದು ಬದಿಯಲ್ಲಿ ಕುಳಿತುಕೊಂಡು
ಭಗವಾನರಿಗೆ ಹೀಗೆ ಹೇಳಿದನು:
ಭಗವಾನರೆ, ನಾವು ಹೀಗೆ ಯೋಚಿಸಿದ್ದೇವೆ:
ಸುಖವನ್ನು ಸುಖದಿಂದಲೇ ಪಡೆಯುವಂತದ್ದಲ್ಲ; ಸುಖವನ್ನು ದುಃಖದಿಂದ ಪಡೆಯುವಂತದ್ದು51.
4. ರಾಜಕುಮಾರ, ಬೋಧಿಜ್ಞಾನವನ್ನು ಪಡೆಯುವ ಮುನ್ನ, ಅಂದರೆ ಜ್ಞಾನೋದಯವಿರದ ಬೋಧಿಸತ್ತನಾಗಿದ್ದಾಗ, ನಾನೂ ಹೀಗೆ ಯೋಚಿಸಿದ್ದೆ.
ಸುಖವನ್ನು ಸುಖದಿಂದಲೇ ಪಡೆಯುವಂತದ್ದಲ್ಲ, ಸುಖವನ್ನು ದುಃಖದಿಂದ ಪಡೆಯುವಂತದ್ದು.
ರಾಜಕುಮಾರ, ಕೆಲವು ಕಾಲದನಂತರ ನಾನು ಹರೆಯದಲ್ಲಿದ್ದಾಗ, ನನ್ನ ತಲೆಗೂದಲು ಕಪ್ಪಿದ್ದಾಗ ಉತ್ಸಾಹದಿಂದ ತುಂಬಿರುವ ಯೌವನವನ್ನು ಪಡೆದವನಾಗಿದ್ದಾಗ ಪ್ರಾಪ್ತ ವಯಸ್ಕನಾಗಿದ್ದಾಗ ಮನಸ್ಸಿಲ್ಲದ ನನ್ನ ತಂದೆ-ತಾಯಿಯರು ಅತ್ತು ಗೋಳಾಡಿದರೂ ಕೂಡ ತಲೆಗೂದಲನ್ನು ತೆಗೆಸಿದವನಾಗಿ ಕಾಷಾಯ ವಸ್ತ್ರಗಳನ್ನು ಹೊದ್ದವನಾಗಿ ಮನೆ ಬಿಟ್ಟು ಹೊರಟ ಕಾರಣವೇನೆಂದರೆ-
ಕುಶಲದ ಹುಡುಕಾಟಕ್ಕಾಗಿ, ಉತ್ಕೃಷ್ಟವಾದುದಕ್ಕಾಗಿ, ಅತ್ಯಂತ ಶಾಂತಿದಾಯಕ ಮಾರ್ಗದ ಹುಡುಕಾಟಕ್ಕಾಗಿ ಆಲಾರಕಾಲಾಮರನ್ನು ಸಮೀಪಿಸಿದೆನು; ಸಮೀಪಿಸಿದ ನಂತರ ಆಲಾರಕಾಲಾಮರಿಗೆ ಹೀಗೆ ಹೇಳಿದೆನು-
ಆಯುಷ್ಮಂತ ಕಾಲಾಮರೇ, ನಾನು ಧರ್ಮ ಮತ್ತು ವಿನಯದಲ್ಲಿ (ನೀತಿ ಅನುಸರಣೆಯಲ್ಲಿ) ಬ್ರಹ್ಮಚರಿಯ ಪಾಲನೆ ಮಡುವ ಇಚ್ಛೆವುಳ್ಳವನಾಗಿದ್ದೇನೆ ಎಂದು.
ರಾಜಕುಮಾರ, ಹೀಗೆಂದು ಹೇಳಿದ ಮೇಲೆ ಆಲಾರಕಾಲಾಮರು ನನಗೆ ಹೀಗೆ ಹೇಳಿದರು ಆಯುಷ್ಮಂತ,
ಹಾಗೆಯೇ ಜೀವಿಸು;
ಈ ಧರ್ಮ ಯಾವರೀತಿಯದು ಎಂದರೆ ಒಬ್ಬ ಜ್ಞಾನಿಯಾದವನು ತನ್ನ ಗುರುವಿನಿಂದ ತನಗೆ ತಾನೇ ಸ್ವತಃ ಆದಷ್ಟು ಬೇಗ ಪರಮ ಜ್ಞಾನವನ್ನು ಗಳಿಸಿದವನಾಗಿ ಅದರಲ್ಲೇ ಉಳಿದು ಜೀವಿಸಬಹುದು ಎಂದು.
ರಾಜಕುಮಾರ, ಅದೇರೀತಿಯಲ್ಲಿ ನಾನು ಆದಷ್ಟು ಬೇಗ, ಆದಷ್ಟು ಜಾಗ್ರತನಾಗಿ ಆ ಧರ್ಮವನ್ನು ಪರಿಪೂರ್ಣವಾಗಿ ಅರಿತೆ. ರಾಜಕುಮಾರ ಅದೇರೀತಿಯಲ್ಲಿ ನಾನು ಕೇವಲ ತುಟಿಗಳ ಚಲನೆಯಿಂದ, ಕೇವಲ ಮತ್ತೆ ಮತ್ತೆ ಹೇಳುವಿಕೆಯಿಂದ ಜ್ಞಾನವಾದವನ್ನು ಮತ್ತು ಹಿರಿಯರ ವಾದವನ್ನು ಹೇಳುತ್ತೇನೆ, ನಾನು ತಿಳಿದಿದ್ದೇನೆ, ನಾನು ಕಂಡುಕೊಂಡಿದ್ದೇನೆ ಎಂದು. ಬೇರೆಯವರು ಹೇಳುವ ರೀತಿಯಲ್ಲಿಯೇ ನಾನು ಕೂಡ ಹೇಳುತ್ತಿದ್ದೆ.
ರಾಜಕುಮಾರ ನಂತರ ನನ್ನಲ್ಲಿ ಈ ರೀತಿಯ ವಿಚಾರ ಬಂತು- ಆಲಾರಕಾಲಾಮರು ಈ ಧರ್ಮವನ್ನು ಕೇವಲ ಶ್ರದ್ಧಾಪೂರ್ವಕವಾಗಿ ಹೇಳುವುದಿಲ್ಲ. ತನಗೆ ತಾನೇ ಪರಮಜ್ಞಾನವನ್ನು ಅವರು ಗಳಿಸಿಕೊಂಡು ಅದರಲ್ಲೇ ಉಳಿದು ಜೀವಿಸಲು ಉಪದೇಶಿಸುತ್ತಾರೆ. ಆದ್ದರಿಂದ ಆಲಾರಕಾಲಾಮರು ಈ ಧರ್ಮವನ್ನು ತಿಳಿದು ಅದರಲ್ಲೇ ಜೀವಿಸುತ್ತಾರೆ ಎಂದು.
5. ರಾಜಕುಮಾರ, ಆಗ ನಾನು ಎಲ್ಲಿ ಆಲಾರಕಾಲಾಮರಿದ್ದರೋ ಅಲ್ಲಿಗೆ ಸಮೀಪಿಸಿದೆನು;
ಸಮೀಪಿಸಿದನಂತರ ಆಲಾರಕಾಲಾಮರಿಗೆ ಹೀಗೆ ಹೇಳಿದೆನು-
ಆಯುಷ್ಮಂತ ಕಾಲಾಮರೇ, ಎಲ್ಲಿಯವರೆಗೆ ಈ ಧರ್ಮವನ್ನು ತನಗೆತಾನೇ ಪರಮಜ್ಞಾನವನ್ನು ತಿಳಿದುಕೊಂಡವರಾಗಿ ಅದರಲ್ಲೇ ಉಳಿದು ಜೀವಿಸಬೇಕೆಂದು ಹೇಳುತ್ತೀರಿ? ಎಂದು.
ರಾಜಕುಮಾರ, ಹೀಗೆ ಹೇಳಿದ ಮೇಲೆ ಆಲಾರಕಾಲಾಮರು ಅಕಿಂಚಞ್ಞಾಯತನದ (ಶೂನ್ಯ ಸ್ಥಿತಿಯ) ಬಗ್ಗೆ ತಿಳಿಸಿದರು.
ರಾಜಕುಮಾರ, ಇದಾದನಂತರ ನನಗೆ ಈ ರೀತಿಯ ವಿಚಾರ ಬಂತು-
ಕೇವಲ ಆಲಾರಕಾಲಾಮರಲ್ಲಿ ಮಾತ್ರವೇ ಶ್ರದ್ಧೆ ಇದೆ ಎಂದು. ಅಲ್ಲ, ನನ್ನಲ್ಲಿಯೂ ಶ್ರದ್ಧೆ ಇದೆ.
ಕೇವಲ ಆಲಾರಕಾಲಾಮರಲ್ಲಿ ಮಾತ್ರವೆ ಪುರುಷಾರ್ಥ ಇದೆ ಎಂದು ಅಲ್ಲ, ನನ್ನಲ್ಲಿಯೂ ಪುರುಷಾರ್ಥ ಇದೆ. ಕೇವಲ ಆಲಾರಕಾಲಾಮರಲ್ಲಿ ಮಾತ್ರವೇ ಜಾಗ್ರತ ಭಾವ ಇದೆ ಎಂದು ಅಲ್ಲ, ನನ್ನಲ್ಲಿಯೂ ಜಾಗ್ರತ ಭಾವ ಇದೆ. ಕೇವಲ ಆಲಾರಕಾಲಾಮರಲ್ಲಿ ಮಾತ್ರವೇ ಏಕಾಗ್ರತಾ ಸ್ಥಿತಿ ಇದೆ ಎಂದು ಅಲ್ಲ, ನನ್ನಲ್ಲಿಯೂ ಏಕಾಗ್ರತಾ ಸ್ಥಿತಿ ಇದೆ. ಕೇವಲ ಆಲಾರಕಾಲಾಮರಲ್ಲಿ ಪ್ರಜ್ಞೆ ಇದೆ ಎಂದು ಅಲ್ಲ, ನನ್ನಲ್ಲಿಯೂ ಪ್ರಜ್ಞೆ ಇದೆ.
ಆದ್ದರಿಂದ ಯಾವ ಧರ್ಮವನ್ನು ಆ ಕಾಲಾಮರು ತಮಗೆ ತಾವೇ ಪರಮಜ್ಞಾನವನ್ನು ತಿಳಿದುಕೊಂಡವರಾಗಿ ಅದರಲ್ಲೇ ಉಳಿದು ಜೀವಿಸುವರಾಗಿ ಎಂದು ಉಪದೇಶಿಸಿದರೋ, ಆ ಧರ್ಮವನ್ನು ನಾನು ಕೂಡ ತಿಳಿದುಕೊಳ್ಳಬೇಕಾಗಿದೆ ಎಂದು ಅರಿತೆನು.
ರಾಜಕುಮಾರ, ಈ ಕಾರಣಕ್ಕಾಗಿ ಆದಷ್ಟು ಬೇಗ, ಆದಷ್ಟು ಜಾಗ್ರತೆಯಾಗಿ ಆ ಧರ್ಮವನ್ನು ತನಗೆ ತಾನೇ ಪರಮ ಜ್ಞಾನವನ್ನು ತಿಳಿದುಕೊಂಡವನಾಗಿ ಅದರಲ್ಲೇ ಉಳಿದು ಜೀವಿಸಿದೆನು.
ರಾಜಕುಮಾರ, ಆಗ ನಾನು ಎಲ್ಲಿ ಆಲಾರಕಾಲಾಮರಿದ್ದರೂ ಅಲ್ಲಿಗೆ ಸಮೀಪಿಸಿದೆನು;
ಸಮೀಪಿಸಿದ ನಂತರ ಆಲಾರಕಾಲಾಮರಿಗೆ ಹೀಗೆ ಹೇಳಿದೆನು- ಆಯುಷ್ಮಂತ ಕಾಲಾಮರೇ, ಇದನ್ನೇ ಏನು, ಈ ಧರ್ಮವನ್ನು ತಮಗೆ ತಾವೇ ಪರಮಜ್ಞಾನವನ್ನು ತಿಳಿದುಕೊಂಡು ಅದರಲ್ಲಿಯೇ ಉಳಿದು ಜೀವಿಸಬೇಕು ಎಂದು ಹೇಳುವುದು?
ಆಯುಷ್ಮಂತ, ಹೌದು
ಇದನ್ನೇ ನಾನು, ಈ ಧರ್ಮವನ್ನು ತನಗೆ ತಾನೇ ಪರಮಜ್ಞಾನವನ್ನು ತಿಳಿದುಕೊಂಡು ಅದರಲ್ಲಿಯೇ ಉಳಿದು ಜೀವಿಸಿ ಎಂದು ಹೇಳುತ್ತೇನೆ.
ಹೌದು ಆಯುಷ್ಮಂತ, ನಾನು ಕೂಡ ಇದನ್ನು ಈ ಧರ್ಮವನ್ನು ತನಗೆ ತಾನೇ ಪರಮ ಜ್ಞಾನವನ್ನು ತಿಳಿದುಕೊಂಡು ಅದರಲ್ಲಿಯೇ ಉಳಿದು ಜೀವಿಸುತ್ತೇನೆ ಎಂದು.
ಆಯುಷ್ಮಂತ, ಬಹಳ ಲಾಭದಾಯಕವಾದದ್ದು, ಆಯುಷ್ಮಂತ, ಬಹಳ ಯೋಗ್ಯ ರೀತಿಯಲ್ಲಿ ಗಳಿಸಿದ್ದು,
ಇದು ನಾನು ತಮ್ಮಂತಹ ಆಯುಷ್ಮಂತರಾದ ಸಹಬ್ರಹ್ಮಚಾರಿಗಳ ದರ್ಶನ ಪಡೆದದ್ದು, ಈ ಧರ್ಮವನ್ನೇ ತನಗೆ ತಾನೇ ಪರಮಜ್ಞಾನವನ್ನು ತಿಳಿದುಕೊಂಡು ಅದರಲ್ಲೇ ಉಳಿದು ಜೀವಿಸುತ್ತೇನೆ. ಅದರಂತೆಯೇ ನೀನು ಧರ್ಮವನ್ನು ತನಗೆ ತಾನೇ ಪರಮಜ್ಞಾನವನ್ನು ತಿಳಿದುಕೊಂಡು ಅದರಲ್ಲಿಯೇ ಉಳಿದು ಜೀವಿಸಬೇಕೆಂದು ಹೇಳುತ್ತೇನೆ. ಈ ಧರ್ಮವನ್ನು ಈ ರೀತಿಯಾಗಿ ನಾನು ತಿಳಿದಿದ್ದೇನೆ. ಅದೇ ಧರ್ಮವನ್ನು ನೀನು ಕೂಡ ತಿಳಿದಿದ್ದೀಯೇ, ಯಾವ ಧರ್ಮವನ್ನು ನೀನು ತಿಳಿದಿದ್ದೀಯೋ ಅದೇ ಧರ್ಮವನ್ನು ನಾನೂ ತಿಳಿದಿದ್ದೇನೆ.
ಆದ್ದರಿಂದ ನಾನೂ ಹೇಗೋ ಹಾಗೆಯೇ ನೀನೂ ಕೂಡ. ನೀನು ಹೇಗೋ ನಾನು ಹಾಗೆಯೇ.
ಆಯುಷ್ಮಂತ, ಆದ್ದರಿಂದ ಬಾ ನಾವಿಬ್ಬರೂ ಕೂಡಿ ಈ ಬಳಗವನ್ನು ನೋಡಿಕೊಳ್ಳೋಣ.
ರಾಜಕುಮಾರ, ಈ ರೀತಿಯಾಗಿ ಆಚಾರ್ಯ ಆಲಾರಕಾಲಾಮರು ಶಿಷ್ಯನಾದ ನನ್ನನ್ನು ತಮ್ಮ ಸಮಾನ ಸ್ಥಿತಿಗೇರಿಸಲು ಮತ್ತು ಅತ್ಯಂತ ಗೌರವಾದರದಿಂದ ನನ್ನನ್ನು ಗೌರವಿಸಿದರು.
ರಾಜಕುಮಾರ ಆದ್ದರಿಂದಾಗಿ ನನ್ನಲ್ಲಿ ಈ ರೀತಿಯ ವಿಚಾರ ಬಂತು-
ಈ ಧರ್ಮವು ಪ್ರಪಂಚದಿಂದ ವಿಮುಖಗೊಳಿಸುವುದಿಲ್ಲ, ವಿರಕ್ತಿಗೊಳಿಸುವುದಿಲ್ಲ, ಅದನ್ನು ತಡೆಹಿಡಿಯುವುದಿಲ್ಲ. ಉಪಶಾಂತಿ ಗೊಳಿಸುವುದಿಲ್ಲ, ಪರಮಜ್ಞಾನ ದೊರೆಯುವುದಿಲ್ಲ, ಸಂಬೋಧಿ ಸಿಗುವುದಿಲ್ಲ, ನಿಬ್ಬಾನವನ್ನು ಪಡೆಯಲಾಗುವುದಿಲ್ಲ. ಆದರೆ ಕೇವಲ ಶೂನ್ಯತ್ವವನ್ನು ಮಾತ್ರ ಅರಿಯಲು ಸಾದ್ಯ ಎಂದು.
ರಾಜಕುಮಾರ, ಆದ್ದರಿಂದ ನಾನು ಆ ಧರ್ಮವನ್ನು ಆಚರಿಸುವುದನ್ನು ಬಿಟ್ಟು ಆ ಧರ್ಮದಿಂದ ದೂರವಾಗಿ ಹೊರಟುಹೋದೆನು.
6. ರಾಜಕುಮಾರ, ನಂತರದಲ್ಲಿ ನಾನು ಕುಶಲದ ಹುಡುಕಾಟಕ್ಕಾಗಿ ಉತ್ಕೃಷ್ಟವಾದುದಕ್ಕಾಗಿ ಅತ್ಯಂತ ಶಾಂತಿದಾಯಕ ಮಾರ್ಗದ ಹುಡುಕಾಟಕ್ಕಾಗಿ ಉದ್ದಕ ರಾಮಪುತ್ರರಿದ್ದಲ್ಲಿಗೆ ಬಂದೆನು; ಹತ್ತಿರ ಬಂದವನಾಗಿ ಉದ್ದಕ ರಾಮಪುತ್ರರಿಗೆ ಹೀಗೆಂದು ಹೇಳಿದೆನು-
ಆಯುಷ್ಮಂತರೇ, ನಾನು ಧರ್ಮ ಮತ್ತು ವಿನಯದಲ್ಲಿ (ನೀತಿ ಅನುಸರಣೆಯಲ್ಲಿ) ಬ್ರಹ್ಮಚರಿಯ ಪಾಲನೆ ಮಾಡುವ ಇಚ್ಛೆವುಳ್ಳವನಾಗಿದ್ದೇನೆ! ಎಂದು.
ರಾಜಕುಮಾರ ಹೀಗೆಂದು ಹೇಳಿದ ಮೇಲೆ ಉದ್ದಕ ರಾಮಪುತ್ರರು ನನಗೆ ಹೀಗೆ ಹೇಳಿದರು-
ಆಯುಷ್ಮಂತ ಹಾಗೆಯೇ ಜೀವಿಸು; ಈ ಧರ್ಮ ಯಾವ ರೀತಿಯದು ಎಂದರೆ ಒಬ್ಬ ಜ್ಞಾನಿಯಾದ ಪುರುಷನು ತನ್ನ ಗುರುವಿನಿಂದ ಕಲಿತಂತೆಯೇ ತನಗೆ ತಾನೇ ಸ್ವತಃ ಆದಷ್ಟು ಬೇಗ ಪರಮಜ್ಞಾನವನ್ನು ಗಳಿಸಿದವನಾಗಿ ಅದರಲ್ಲೇ ಉಳಿದು ಜೀವಿಸಬಹುದು ಎಂದು.
ರಾಜಕುಮಾರ, ಅದೇರೀತಿಯಲ್ಲಿ ನಾನು ಆದಷ್ಟು ಬೇಗ, ಆದಷ್ಟು ಜಾಗ್ರತೆಯಾಗಿ ಆ ಧರ್ಮವನ್ನು ಪರಿಪೂರ್ಣವಾಗಿ ಅರಿತೆ.
ರಾಜಕುಮಾರ, ಅದೇರೀತಿಯಲ್ಲಿ ನಾನು ಕೇವಲ ತುಟಿಗಳ ಚಲನೆಯಿಂದ ಕೇವಲ ಮತ್ತೆ ಮತ್ತೆ ಹೇಳುವಿಕೆಯಿಂದ ಜ್ಞಾನವಾದವನ್ನು, ಥೇರವಾದವನ್ನು ಹೇಳುತ್ತೇನೆ. ನಾನು ತಿಳಿದಿದ್ದೇನೆ, ನಾನು ಕಂಡುಕೊಂಡಿದ್ದೇನೆ ಎಂದು ಬೇರೆಯವರು ಹೇಳುವ ರೀತಿಯಲ್ಲಿಯೇ ನಾನೂ ಕೂಡ ಹೇಳುತ್ತಿದ್ದೆ.
ರಾಜಕುಮಾರ, ನಂತರ ನನ್ನಲ್ಲಿ ಈ ರೀತಿಯ ವಿಚಾರ ಬಂತು-
ರಾಮರು ಈ ಧರ್ಮವನ್ನು ಕೇವಲ ಶ್ರದ್ಧಾಪೂರ್ವಕವಾಗಿ ಹೇಳುವುದಿಲ್ಲ, ತನಗೆ ತಾನೇ, ತಮಗೆ ತಾವೇ ಪರಮಜ್ಞಾನವನ್ನು ಅವರು ಗಳಿಸಿಕೊಂಡು ಅದರಲ್ಲೇ ಉಳಿದು ಜೀವಿಸಲು ಉಪದೇಶಿಸುತ್ತಾರೆ.
ಆದ್ದರಿಂದ ರಾಮರು ಈ ಧರ್ಮವನ್ನು ತಿಳಿದು ಅದರಲ್ಲೇ ಜೀವಿಸುತ್ತಾರೆ ಎಂದು.
7. ರಾಜಕುಮಾರ, ಆಗ ನಾನು ಎಲ್ಲಿ ಉದ್ದಕ ರಾಮಪುತ್ರರಿದ್ದರೋ ಅಲ್ಲಿಗೆ ಸಮೀಪಿಸಿದೆನು.
ಸಮೀಪಿಸಿದ ನಂತರ ಉದ್ದಕ ರಾಮಪುತ್ರರಿಗೆ ಹೀಗೆ ಹೇಳಿದೆನು-
ಆಯುಷ್ಮಂತ ರಾಮರೇ, ಎಲ್ಲಿಯವರೆಗೆ ಈ ಧರ್ಮವು ತನಗೆ ತಾನೇ ಪರಮಜ್ಞಾನವನ್ನು ತಿಳಿದುಕೊಂಡವರಾಗಿ ಅದರಲ್ಲೇ ಉಳಿದು ಜೀವಿಸಬೇಕೆಂದು ಹೇಳುತ್ತೀರಿ? ಎಂದು.
ರಾಜಕುಮಾರ, ಹೀಗೆ ಹೇಳಿದ ಮೇಲೆ ಉದ್ದಕ ರಾಮಪುತ್ರರು ನೇವಸಞ್ಞಾಯತನದ (ಮಾನಸಿಕ ಗ್ರಹಿಕೆ ಮತ್ತು ಮಾನಸಿಕ ಗ್ರಹಿಕೆ ಇಲ್ಲದಿರುವಿಕೆ) ಸ್ಥಿತಿಯ ಬಗ್ಗೆ ತಿಳಿಸಿದರು.
ರಾಜಕುಮಾರ, ಇದಾದನಂತರ ನನಗೆ ಈ ರೀತಿಯ ವಿಚಾರ ಬಂತು-
ಕೇವಲ ರಾಮರಲ್ಲಿ ಮಾತ್ರವೇ ಶ್ರದ್ಧೆ ಇದೆ ಎಂದು ಅಲ್ಲ, ನನ್ನಲ್ಲಿಯೂ ಶ್ರದ್ಧೆ ಇದೆ. ಕೇವಲ ರಾಮರಲ್ಲಿ ಮಾತ್ರವೇ ಪುರುಷಾರ್ಥ ಇದೆ ಎಂದು ಅಲ್ಲ, ನನ್ನಲ್ಲಿಯೂ ಪುರುಷಾರ್ಥ ಇದೆ, ಕೇವಲ ರಾಮರಲ್ಲಿ ಮಾತ್ರವೇ ಜಾಗ್ರತಭಾವ ಇದೆ ಎಂದು ಅಲ್ಲ, ನನ್ನಲ್ಲಿಯೂ ಜಾಗ್ರತಭಾವ ಇದೆ. ಕೇವಲ ರಾಮರಲ್ಲಿ ಮಾತ್ರವೇ ಏಕಾಗ್ರತಾ ಸ್ಥಿತಿ ಇದೆ ಎಂದು ಅಲ್ಲ, ನನ್ನಲ್ಲಿಯೂ ಏಕಾಗ್ರತಾ ಸ್ಥಿತಿ ಇದೆ, ಕೇವಲ ರಾಮರಲ್ಲಿ ಮಾತ್ರವೇ ಪ್ರಜ್ಞೆ ಇದೆ ಎಂದು ಅಲ್ಲ, ನನ್ನಲ್ಲಿಯೂ ಪ್ರಜ್ಞೆ ಇದೆ.
ಆದ್ದರಿಂದ ಯಾವ ಧರ್ಮವನ್ನು ರಾಮರು ತಮಗೆ ತಾವೇ ಪರಮಜ್ಞಾನವನ್ನು ತಿಳಿದುಕೊಂಡವರಾಗಿ ಅದರಲ್ಲೇ ಉಳಿದು ಜೀವಿಸುವವರಾಗಿ ಎಂದು ಉಪದೇಶಿಸಿದರೋ ಆ ಧರ್ಮವನ್ನು ನಾನೂ ಕೂಡ ತಿಳಿದುಕೊಳ್ಳಬೇಕಾಗಿದೆ ಎಂದು ಅರಿತೆನು.
ರಾಜಕುಮಾರ, ಆ ಕಾರಣಕ್ಕಾಗಿ ಆದಷ್ಟು ಬೇಗ, ಆದಷ್ಟು ಜಾಗ್ರತೆಯಾಗಿ ಆ ಧರ್ಮವನ್ನು ತನಗೆ ತಾನೇ ಪರಮಜ್ಞಾನವನ್ನು ತಿಳಿದುಕೊಂಡವನಾಗಿ ಅದರಲ್ಲೇ ಉಳಿದು ಜೀವಿಸಿದೆನು.
ರಾಜಕುಮಾರ, ಆಗ ನಾನು ಎಲ್ಲಿ ಉದ್ದಕ ರಾಮಪುತ್ರರಿದ್ದರೋ ಅಲ್ಲಿಗೆ ಸಮೀಪಿಸಿದೆನು; ಸಮೀಪಿಸಿದ ನಂತರ ಉದ್ದಕ ರಾಮಪುತ್ರರಿಗೆ ಹೀಗೆ ಹೇಳಿದೆನು-
ಆಯುಷ್ಮಂತ ರಾಮರೇ, ಇದನ್ನೇ ಏನು ಈ ಧರ್ಮವನ್ನು ತಮಗೆ ತಾವೇ ಪರಮಜ್ಞಾನವನ್ನು ತಿಳಿದುಕೊಂಡು ಅದರಲ್ಲಿಯೇ ಉಳಿದು ಜೀವಿಸಬೇಕು ಎಂದು ಹೇಳುವುದು?
ಆಯುಷ್ಮಂತ ಹೌದು,
ಇದನ್ನೇ ನಾನು, ಈ ಧರ್ಮವನ್ನು ತನಗೆ ತಾನೇ ಪರಮಜ್ಞಾನವನ್ನು ತಿಳಿದುಕೊಂಡು ಅದರಲ್ಲಿಯೇ ಉಳಿದು ಜೀವಿಸಿ ಎಂದು ಹೇಳುತ್ತೇನೆ.
ಹೌದು ಆಯುಷ್ಮಂತ, ನಾನು ಕೂಡ ಇದನ್ನೇ ಈ ಧರ್ಮವನ್ನು ತನಗೆ ತಾನೇ ಪರಮಜ್ಞಾನವನ್ನು ತಿಳಿದುಕೊಂಡು ಅದರಲ್ಲಿಯೇ ಉಳಿದು ಜೀವಿಸುತ್ತೇನೆ.
ಆಯುಷ್ಮಂತ, ಬಹಳ ಲಾಭದಾಯಕವಾದದ್ದು, ಆಯುಷ್ಮಂತ, ಬಹಳ ಯೋಗ್ಯ ರೀತಿಯಲ್ಲಿ ಗಳಿಸಿದ್ದು,
ಇದು ನಾನು ತಮ್ಮಂಹ ಆಯುಷ್ಮಂತರಾದ ಸಹ ಬ್ರಹ್ಮಚಾರಿಗಳ ದರ್ಶನ ಪಡೆದದ್ದು. ಈ ಧರ್ಮವನ್ನೇ ರಾಮರು ತಮಗೆ ತಾವೇ ಪರಮಜ್ಞಾನವನ್ನು ತಿಳಿದುಕೊಂಡು ಅದರಲ್ಲೇ ಉಳಿದು ಜೀವಿಸುತ್ತೇನೆ.
ಅದರಂತೆಯೇ ನೀನೂ ಧರ್ಮವನ್ನು ತನಗೆ ತಾನೇ ಪರಮಜ್ಞಾನವನ್ನು ತಿಳಿದುಕೊಂಡು ಅದರಲ್ಲಿಯೇ ಉಳಿದು ಜೀವಿಸಬೇಕು. ಆ ಧರ್ಮವನ್ನೇ ರಾಮ ತನಗೆ ತಾನೇ ಪರಮಜ್ಞಾನವನ್ನು ತಿಳಿದುಕೊಂಡು ಅದರಲ್ಲಿಯೇ ಉಳಿದು ಜೀವಿಸಬೇಕೆಂದು ಹೇಳುತ್ತೇನೆ.
ಈ ರೀತಿಯಾಗಿ ಈ ಧರ್ಮವನ್ನು ರಾಮ ಪರಮ ಜ್ಞಾನವನ್ನು ಅರಿತುಕೊಂಡಿರುವಂತೆಯೇ ನೀನೂ ಆ ಧರ್ಮವನ್ನು ತಿಳಿದುಕೊಳ್ಳುತ್ತೀಯಾ, ಯಾವ ಧರ್ಮವನ್ನು ನೀನು ತಿಳಿದುಕೊಂಡಿದ್ದೀಯೋ ಅದೇ ಧರ್ಮವನ್ನು ರಾಮರು ಆ ಧರ್ಮದ ಪರಮಜ್ಞಾನವನ್ನು ತಿಳಿದಿದ್ದಾರೆ. ಈ ರೀತಿಯಾಗಿ ರಾಮರು ಹೇಗೋ ನೀನೂ ಕೂಡ ಅದೇರೀತಿ ಆಗುತ್ತೀಯ. ನೀನು ಹೇಗೋ ಅದೇರೀತಿ ರಾಮರು ಆಗುತ್ತಾರೆ. ಆಯುಷ್ಮಂತ, ಆದ್ದರಿಂದ ಬಾ, ನಾವಿಬ್ಬರೂ ಕೂಡಿ ಈ ಬಳಗವನ್ನು ನೋಡಿಕೊಳ್ಳೋಣ. ರಾಜಕುಮಾರ, ಈ ರೀತಿಯಾಗಿ ಉದ್ದಕ ರಾಮಪುತ್ರರು ಶಿಷ್ಯನಾದ ನನ್ನನ್ನು ಆಚಾರ್ಯ ಪದವಿಯಲ್ಲಿ ಕೂರಿಸಿದರು. ಮತ್ತು ಅತ್ಯಂತ ಗೌರವಾದರದಿಂದ ನನ್ನನ್ನು ಗೌರವಿಸಿದರು. ರಾಜಕುಮಾರ, ಅದರಿಂದಾಗಿ ನನ್ನಲ್ಲಿ ಈ ರೀತಿಯ ವಿಚಾರ ಬಂತು. ಈ ಧರ್ಮವು ಪ್ರಪಂಚದಿಂದ ವಿಮುಖಗೊಳಿಸುವುದಿಲ್ಲ, ವಿರಕ್ತಿಗೊಳಿಸುವುದಿಲ್ಲ, ಪರಮಜ್ಞಾನ ದೊರೆಯುವುದಿಲ್ಲ, ಸಂಬೋಧಿ ಸಿಗುವುದಿಲ್ಲ, ನಿಬ್ಬಾನವನ್ನು ಪಡೆಯಲಾಗುವುದಿಲ್ಲ. ಆದರೆ ಕೇವಲ ಮಾನಸಿಕ ಗ್ರಹಿಕೆ ಮತ್ತು ಮಾನಸಿಕ ಗ್ರಹಿಕೆ ಇಲ್ಲದಿರುವಿಕೆಯನ್ನು ಮಾತ್ರ ಅರಿಯಲು ಸಾಧ್ಯ ಎಂದು. ರಾಜಕುಮಾರ, ಆದ್ದರಿಂದ ನಾನು ಆ ಧರ್ಮವನ್ನು ಆಚರಿಸುವುದನ್ನು ಬಿಟ್ಟು ಆ ಧರ್ಮದಿಂದ ದೂರವಾಗಿ ಹೊರಟುಹೋದೆನು.
8. ರಾಜಕುಮಾರ, ಆನಂತರದಲ್ಲಿ ನಾನು ಕುಶಲದ ಹುಡುಕಾಟಕ್ಕಾಗಿ ಉತ್ಕೃಷ್ಟವಾದುದಕ್ಕಾಗಿ, ಅತ್ಯಂತ ಶಾಂತಿದಾಯಕ ಮಾರ್ಗದ ಹುಡುಕಾಟಕ್ಕಾಗಿ ಸ್ವಲ್ಪ ಸಮಯದ ನಂತರ ಭಿಕ್ಷಾಟನೆ ಮಾಡುವ ಯಾತ್ರಿಕನಾಗಿ ಮಗಧದ ಮೂಲಕ ಉರುವೇಲವೆಂಬ ನಗರದ ಸರಹದ್ದಿಗೆ ತಲುಪಿದೆನು.
ಆ ಸ್ಥಳದಲ್ಲಿ ನಾನು ರಮಣೀಯವಾದ ಹಾಯಗಡವನ್ನು (ಕಾಲ್ಹೊಳೆಯನ್ನು) ಹಾಗೂ ಜೀವನಾಧಾರಕ್ಕಾಗಿ ಹತ್ತಿರದಲ್ಲಿರುವ ಹಳ್ಳಿಯು ಕಂಡುಬಂದಿತು.
ರಾಜಕುಮಾರ, ಆಗ ನನಗೆ ಈ ರೀತಿಯ ವಿಚಾರ ಬಂತು.
ಆಹ, ಆಹ ಇದು ನಿಜಕ್ಕೂ ಬಹಳ ರಮಣೀಯವಾದ ಭೂಪ್ರದೇಶ, ಪ್ರಶಾಂತವಾದ ಅರಣ್ಯಪ್ರದೇಶ, ಶುಭ್ರವಾಗಿ ಹರಿಯುವ ನದಿ ಮತ್ತು ರಮಣೀಯವಾದ ಹಾಯಗಡ ಹಾಗೂ ಜೀವನಾಧಾರಕ್ಕಾಗಿ ಹತ್ತಿರದಲ್ಲಿರುವ ಹಳ್ಳಿ.
ನಿಜಕ್ಕೂ ಇದು ಪರಿಶ್ರಮಪಡುವ ಯುವಕನಿಗೆ ಪರಿಶ್ರಮಪಡಲು ಒಳ್ಳೆಯದು ಎಂದು.
ರಾಜಕುಮಾರ, ಆದ್ದರಿಂದ ಪರಿಶ್ರಮಿಸಲು ಯೋಗ್ಯವಾಗಿದೆ ಎಂದು ನಾನು ಆ ಸ್ಥಳದಲ್ಲಿಯೇ ಕುಳಿತೆನು.
9. ರಾಜಕುಮಾರ, ನನಗೆ ಹಿಂದೆ ಕೇಳಿರದ ಈ ಮೂರು ಉದಾಹರಣೆಗಳು ತಮ್ಮಷ್ಟಕ್ಕೆ ತಾವೇ ಗೋಚರಗೊಂಡವು.
ಅದು ಹೇಗೆಂದರೆ, ರಾಜಕುಮಾರ, ಒಂದು ಹಸಿಯಾದ ಸಾರವತ್ತಾದ ನೀರಿನಲ್ಲಿ ಬಿದ್ದಿರುವ ಮರದ ತುಂಡಿಗೆ ಒಬ್ಬ ಮನುಷ್ಯನು ಉರಿಯುತ್ತಿರುವ ಕೊಳ್ಳಿಯನ್ನು ಹಿಡಿದು ಬಂದು ನಾನು ಬೆಂಕಿಯನ್ನು ಹೊತ್ತಿಸುತ್ತೇನೆ, ನಾನು ಉಷ್ಣವನ್ನು ಉಂಟುಮಾಡುತ್ತೇನೆ ಎಂದಂತೆ.
ರಾಜಕುಮಾರ, ಇದನ್ನು ಹೇಗೆ ಯೋಚಿಸುತ್ತೀಯಾ,
ಆ ಮನುಷ್ಯನು ಅಲ್ಲಿರುವ ಹಸಿಯಾದ ಸಾರವತ್ತಾದ ನೀರಿನಲ್ಲಿ ಬಿದ್ದಿರುವ ಮರದ ತುಂಡಿಗೆ ತಾನು ಹಿಡಿದು ತಂದಿರುವ ಉರಿಯುತ್ತಿರುವ ಕೊಳ್ಳಿಯಿಂದ ತಿಕ್ಕುವುದರಿಂದ ಬೆಂಕಿಯನ್ನು ಹೊತ್ತಿಸಬಹುದೇ ಮತ್ತು ಉಷ್ಣವನ್ನು ಉಂಟುಮಾಡಬಹುದೇ ಎಂದು?
ಪೂಜ್ಯ ಗೌತಮರೇ, ಅದು ಸಾಧ್ಯವಿಲ್ಲ.
ಅದಕ್ಕೆ ಕಾರಣವೇನು ?
ಪೂಜ್ಯ ಗೌತಮರೇ, ಏಕೆಂದರೆ ಸಾರವತ್ತಾದ ಮರದ ತುಂಡು ಹಸಿಯಾಗಿದೆ ಮತ್ತು ಅದು ಅಲ್ಲದೆ ನೀರಿನಲ್ಲಿ ಬಿದ್ದಿದೆ. ಆದ್ದರಿಂದ ಆ ಮನುಷ್ಯನು ಕೇವಲ ಬಳಲಿಕೆಯನ್ನು ಮತ್ತು ನಿರಾಶೆಯನ್ನು ಪಡೆಯುತ್ತಾನೆ.
ಅದೇರೀತಿಯಲ್ಲಿ ರಾಜಕುಮಾರ, ಯಾವ ಬ್ರಾಹ್ಮಣರು ಅಥವಾ ಶ್ರಮಣರು ಶಾರೀರಿಕವಾಗಿ ಆಗಲಿ ಅಥವಾ ಮಾನಸಿಕವಾಗಿ ಆಗಲಿ ಇಂದ್ರಿಯ ಕಾಮನೆಗಳಿಂದ ದೂರ ಉಳಿಯದೇ ಬದುಕಿದರೆ ಮತ್ತು ಅವರ ಕಾಮನೆಗಳಲ್ಲಿ ಇಂದ್ರಿಯ ಆಸೆ, ಇಂದ್ರಿಯ ಲಾಲಸೆ, ಇಂದ್ರಿಯ ಪ್ರಮುಕ್ತತೆ, ಇಂದ್ರಿಯ ಪಿಪಾಸೆ, ಇಂದ್ರಿಯ ರಾಗೋದ್ರೇಕ-ಇವುಗಳನ್ನು ಅವನು ಅಂತರಂಗದಲ್ಲಿ ದಮನ ಮಾಡದಿದ್ದರೆ ಮತ್ತು ಶಮನ ಮಾಡದಿದ್ದರೆ, ಅರ್ಹ ಪೂಜ್ಯ ಶ್ರಮಣರು ಬ್ರಾಹ್ಮಣರು ಪ್ರಯತ್ನಶೀಲರಾದುದಕ್ಕಾಗಿ ತೀವ್ರವಾದ ದುಃಖದ ತೊಂದರೆಯ ತಿವಿತದ ಅನುಭವಗಳನ್ನು ಅನುಭವಿಸುತ್ತಾರೆ, ಹಾಗು ಅವರುಗಳಿಗೆ ಜ್ಞಾನವನ್ನು, ದರ್ಶನವನ್ನು, ಅನುತ್ತರವಾದ ಸಂಬೋಧಿಯನ್ನು ಪಡೆಯಲು ಸಾಧ್ಯವಿರುವುದಿಲ್ಲ. ಅವರು ಅರ್ಹ ಪೂಜ್ಯರಾದ ಶ್ರಮಣರು ಬ್ರಾಹ್ಮಣರು ಪ್ರಯತ್ನಶೀಲರಾದುದಕ್ಕಾಗಿ ತೀವ್ರವಾದ ದುಃಖದ ತೊಂದರೆಯ ತಿವಿತದ ಅನುಭವಗಳನ್ನು ಅನುಭವಿಸುವುದಿಲ್ಲ. ಹಾಗು ಅವರುಗಳಿಗೆ ಜ್ಞಾನವನ್ನು, ದರ್ಶನವನ್ನು, ಅನುತ್ತರವಾದ ಸಂಬೋಧಿಯನ್ನು ಪಡೆಯಲು ಸಾಧ್ಯವಿರುವುದಿಲ್ಲ.
ರಾಜಕುಮಾರ, ಇದು ನನ್ನಲ್ಲಿ ಹಿಂದೆ ಕೇಳಿರದ ತನ್ನಷ್ಟಕ್ಕೆ ತಾನೇ ಗೋಚರಗೊಂಡ ಮೊದಲ ಉದಾಹರಣೆ.
10. ರಾಜಕುಮಾರ, ನಂತರದಲ್ಲಿ ನನ್ನಲ್ಲಿ ಈ ರೀತಿಯ ಹಿಂದೆ ಕೇಳಿರದ ತನ್ನಷ್ಟಕ್ಕೆತಾನೇ ಎರಡನೇ ಉದಾಹರಣೆ ಗೋಚರಗೊಂಡಿತು. ಅದು ಹೇಗೆಂದರೆ, ರಾಜಕುಮಾರ, ಹಸಿಯಾದ ಸಾರವತ್ತಾದ ನೀರಿನಿಂದ ದೂರವಾಗಿ ಒಣ ನೆಲದ ಮೇಲೆ ಬಿದ್ದಿರುವ ಮರದ ತುಂಡಿಗೆ ಒಬ್ಬ ಮನುಷ್ಯನು ಉರಿಯುತ್ತಿರುವ ಕೊಳ್ಳಿಯನ್ನು ಹಿಡಿದು ಬಂದು ನಾನು ಬೆಂಕಿಯನ್ನು ಹೊತ್ತಿಸುತ್ತೇನೆ, ನಾನು ಉಷ್ಣವನ್ನು ಉಂಟುಮಾಡುತ್ತೇನೆ ಎಂದು. ಇದನ್ನು ನೀನು ಹೇಗೆ ಯೋಚಿಸುತ್ತೀಯಾ? ರಾಜಕುಮಾರ, ಆ ಮನುಷ್ಯನು ಅಲ್ಲಿರುವ ಹಸಿಯಾದ ಸಾರವತ್ತಾದ ನೀರಿನಿಂದ ದೂರವಾಗಿ ಒಣ ನೆಲದ ಮೇಲೆ ಬಿದ್ದಿರುವ ಮರದ ತುಂಡಿಗೆ ಆ ಮನುಷ್ಯನು ತಾನು ಹಿಡಿದು ತಂದಿರುವ ಉರಿಯುತ್ತಿರುವ ಕೊಳ್ಳಿಯಿಂದ ತಿಕ್ಕುವುದರಿಂದ ಬೆಂಕಿಯನ್ನು ಹೊತ್ತಿಸಬಹುದೆ ಮತ್ತು ಉಷ್ಣವನ್ನು ಉಂಟುಮಾಡಬಹುದೆ? ಎಂದು.
ಪೂಜ್ಯ ಗೌತಮರೇ, ಅದು ಸಾಧ್ಯವಿಲ್ಲ.
ಅದಕ್ಕೆ ಕಾರಣವೇನು?
ಪೂಜ್ಯ ಗೌತಮರೇ, ಏಕೆಂದರೆ ನೀರಿನಿಂದ ದೂರವಾಗಿ ಒಣ ನೆಲದ ಮೇಲೆ ಆ ಸಾರವತ್ತಾದ ಮರದ ತುಂಡು ಇದ್ದರೂ ಅದು ಹಸಿಯಾಗಿದೆ. ಆದ್ದರಿಂದ ಆ ಮನುಷ್ಯನು ಕೇವಲ ಬಳಲಿಕೆಯನ್ನು ಮತ್ತು ನಿರಾಶೆಯನ್ನು ಪಡೆಯುತ್ತಾನೆ ಎಂದು.
ಅದೇರೀತಿಯಲ್ಲಿ ರಾಜಕುಮಾರ, ಯಾವ ಬ್ರಾಹ್ಮಣರು ಅಥವಾ ಶ್ರಮಣರು ಕೇವಲ ಶಾರೀರಿಕವಾಗಿ ಇಂದ್ರಿಯ ಕಾಮನೆಗಳಿಂದ ದೂರ ಉಳಿಯದೇ ಬದುಕಿದರೆ ಮತ್ತು ಅವರ ಕಾಮನೆಗಳಲ್ಲಿ ಇಂದ್ರಿಯ ಆಸೆ, ಇಂದ್ರಿಯ ಲಾಲಸೆ, ಇಂದ್ರಿಯ ಪ್ರಮುಕ್ತತೆ, ಇಂದ್ರಿಯ ಪಿಪಾಸೆ, ಇಂದ್ರಿಯ ರಾಗೋದ್ರೇಕ-ಇವುಗಳನ್ನು ಅವನು ಅಂತರಂಗದಲ್ಲಿ ದಮನ ಮಾಡದಿದ್ದರೆ ಮತ್ತು ಶಮನ ಮಾಡಿದಿದ್ದರೆ, ಅರ್ಹ ಪೂಜ್ಯ ಶ್ರಮಣರು ಬ್ರಾಹ್ಮಣರು ಪ್ರಯತ್ನಶೀಲರಾದುದಕ್ಕಾಗಿ ತೀವ್ರವಾದ ದುಃಖದ ತೊಂದರೆಯ ತಿವಿತದ ಅನುಭವಗಳನ್ನು ಅನುಭವಿಸುತ್ತಾರೆ. ಹಾಗೂ ಅವರುಗಳಿಗೆ ಜ್ಞಾನವನ್ನು, ದರ್ಶನವನ್ನು, ಅನುತ್ತರವಾದ ಸಂಬೋಧಿಯನ್ನು ಪಡೆಯಲು ಸಾಧ್ಯವಿರುವುದಿಲ್ಲ. ಅವರು ಅರ್ಹ, ಪೂಜ್ಯ ಶ್ರಮಣರು ಬ್ರಾಹ್ಮಣರು ಪ್ರಯತ್ನಶೀಲರಾದುದಕ್ಕಾಗಿ ತೀವ್ರವಾದ ದುಃಖದ ತೊಂದರೆಯ ತಿವಿತದ ಅನುಭವಗಳನ್ನು ಅನುಭವಿಸುವುದಿಲ್ಲ. ಹಾಗು ಅವರುಗಳಿಗೆ ಜ್ಞಾನವನ್ನು, ದರ್ಶನವನ್ನು, ಅನುತ್ತರವಾದ ಸಂಬೋಧಿಯನ್ನು ಪಡೆಯಲು ಸಾಧ್ಯವಿರುವುದಿಲ್ಲ.
ರಾಜಕುಮಾರ, ಇದು ನನ್ನಲ್ಲಿ ಹಿಂದೆ ಕೇಳಿರದ ತನ್ನಷ್ಟಕ್ಕೆ ತಾನೇ ಗೋಚರಗೊಂಡ ಎರಡನೇ ಉದಾಹರಣೆ.
11. ರಾಜಕುಮಾರ, ನಂತರದಲ್ಲಿ ನನ್ನಲ್ಲಿ ಈ ರೀತಿಯ ಹಿಂದೆ ಕೇಳಿರದ ತನ್ನಷ್ಟಕ್ಕೆ ತಾನೇ ಮೂರನೆಯ ಉದಾಹರಣೆ ಗೋಚರಗೊಂಡಿತು.
ಅದು ಹೇಗೆಂದರೆ, ರಾಜಕುಮಾರ, ಒಣಗಿದ ಬೆಂಡಾಗಿರುವ ಮರದ ತುಂಡು ನೀರಿನಿಂದ ದೂರವಾಗಿ ಒಣಗಿದ ನೆಲದ ಮೇಲೆ ಇದ್ದು ಆಗ ಒಬ್ಬ ಮನುಷ್ಯನು ಉರಿಯುತ್ತಿರ ಕೊಳ್ಳಿಯನ್ನು ಹಿಡಿದು ಬಂದು ನಾನು ಬೆಂಕಿಯನ್ನು ಹೊತ್ತಿಸುತ್ತೇನೆ ನಾನು ಉಷ್ಣವನ್ನು ಉಂಟುಮಾಡುತ್ತೇನೆ ಎಂದು.
ಇದನ್ನು ನೀನು ಹೇಗೆ ಯೋಚಿಸುತ್ತೀಯ, ರಾಜಕುಮಾರ,
ಆ ಮನುಷ್ಯನು ಅಲ್ಲಿರುವ ಒಣಗಿದ ಬೆಂಡಾಗಿರುವ ನೀರಿನಿಂದ ದೂರವಾಗಿ ಒಣ ನೆಲದ ಮೇಲೆ ಇರುವ ಮರದ ತುಂಡಿಗೆ ಆ ಮನುಷ್ಯನು ತಾನು ಹಿಡಿದು ತಂದಿರುವ ಉರಿಯುತ್ತಿರುವ ಕೊಳ್ಳಿಯಿಂದ ತಿಕ್ಕುವುದರಿಂದ ಬೆಂಕಿಯನ್ನು ಹೊತ್ತಿಸಬಹುದೆ ಮತ್ತು ಉಷ್ಣವನ್ನು ಉಂಟುಮಾಡಬಹುದೆ ಎಂದು?
ಪೂಜ್ಯ ಗೌತಮರೇ, ಸಾಧ್ಯವಿದೆ.
ಅದಕ್ಕೆ ಕಾರಣವೇನು?
ಪೂಜ್ಯ ಗೌತಮರೇ, ಏಕೆಂದರೆ ನೀರಿನಿಂದ ದೂರವಾಗಿ ಒಣನೆಲದ ಮೇಲೆ ಆ ಒಣಗಿದ, ಬೆಂಡಾಗಿರುವ ಮರದ ತುಂಡಿದೆ.
ರಾಜಕುಮಾರ, ಅದೇರೀತಿಯಲ್ಲಿ ಇಂದ್ರಿಯ ಕಾಮನೆಗಳಿಂದ ದೂರ ಉಳಿದು ಬದುಕಿದರೆ, ಮತ್ತು ಅವರ ಕಾಮನೆಗಳಲ್ಲಿ ಇಂದ್ರಿಯ ಆಸೆ, ಇಂದ್ರಿಯಲಾಲಸೆ, ಇಂದ್ರಿಯ ಪ್ರುಮುಕ್ತತೆ, ಇಂದ್ರಿಯ ಪಿಪಾಸೆ ಇಂದ್ರಿಯ ರಾಗೋದ್ರೇಕ ಇವುಗಳನ್ನು ಅವನು ಅಂತರಂಗದಲ್ಲಿ ದಮನ ಮಾಡಿದ್ದರೆ ಮತ್ತು ಶಮನ ಮಾಡಿದ್ದರೆ, ಅರ್ಹ, ಪೂಜ್ಯ ಶ್ರಮಣರು ಬ್ರಾಹ್ಮಣರು ಪ್ರಯತ್ನಶೀಲರಾದುದಕ್ಕಾಗಿ ತೀವ್ರವಾದ ದುಃಖದ ತೊಂದರೆಯ ತಿವಿತದ ಅನುಭವಗಳನ್ನು ಅನುಭವಿಸಿದರೂ ಅವರುಗಳಿಗೆ ಜ್ಞಾನವನ್ನು, ದರ್ಶನವನ್ನು ಅನುತ್ತರವಾದ ಸಂಬೋಧಿಯನ್ನು ಪಡೆಯಲು ಸಾಧ್ಯವಿದೆ. ಅವರು ಅರ್ಹ, ಪೂಜ್ಯ ಶ್ರಮಣರು, ಬ್ರಾಹ್ಮಣರು ಪ್ರಯತ್ನಶೀಲರಾದುದಕ್ಕಾಗಿ ತೀವ್ರವಾದ ದುಃಖದ ತೊಂದರೆಯ ತಿವಿತದ ಅನುಭವಗಳನ್ನು ಅನುಭವಿಸದೆ ಇದ್ದರೂ ಅವರುಗಳಿಗೆ ಜ್ಞಾನವನ್ನು, ದರ್ಶನವನ್ನು, ಅನುತ್ತರವಾದ ಸಂಬೋಧಿಯನ್ನು ಪಡೆಯಲು ಸಾಧ್ಯವಿದೆ. ರಾಜಕುಮಾರ, ಇದು ನನ್ನಲ್ಲಿ ಹಿಂದೆ ಕೇಳಿರದ ತನ್ನಷ್ಟಕ್ಕೆ ತಾನೇ ಗೋಚರಗೊಂಡ ಮೂರನೇ ಉದಾಹರಣೆ.
ರಾಜಕುಮಾರ ಇವೇ ಆ ಮೂರು ನನ್ನಲ್ಲಿ ಹಿಂದೆ ಕೇಳಿರದ ತಮ್ಮಷ್ಟಕ್ಕೆ ತಾವೇ ಗೋಚರಗೊಂಡ ಮೂರು ಉದಾಹರಣೆಗಳು.
12. ರಾಜಕುಮಾರ, ನಂತರದಲ್ಲಿ ನನಗೆ ಹೀಗೆ ಅನಿಸಿತು-
ಒಂದುವೇಳೆ ಹೀಗೆ ನಾನು ಹಲ್ಲಿನಿಂದ ಹಲ್ಲನ್ನು ಕಚ್ಚಿಕೊಂಡು, ನಾಲಿಗೆಯಿಂದ ಬಾಯಿಯ ಮೇಲ್ಭಾಗವನ್ನು ಒತ್ತಿಕೊಂಡು ಮನಸ್ಸಿನಿಂದಲೇ ಮನಸ್ಸನ್ನು ನಿಗ್ರಹಿಸಬಲ್ಲೆನಾದರೆ, ದಮನ ಮಾಡಬಲ್ಲೆನಾದರೆ, ದರ್ಪದಿಂದ ಆಳಬಲ್ಲೆನಾದರೆ ಎಂದು.
ಅದೇರೀತಿಯಲ್ಲಿ ರಾಜಕುಮಾರ, ಹಲ್ಲಿನಿಂದ ಹಲ್ಲನ್ನು ಕಚ್ಚಿಕೊಂಡು, ನಾಲಿಗೆಯಿಂದ ಬಾಯಿಯ ಮೇಲ್ಭಾಗವನ್ನು ಒತ್ತಿಕೊಂಡು ಮನಸ್ಸಿನಿಂದಲೇ ಮನಸ್ಸನ್ನು ದಮನಮಾಡುತ್ತೇನೆ, ನಿಗ್ರಹಿಸುತ್ತೇನೆ, ದರ್ಪದಿಂದ ಆಳುತ್ತೇನೆ.
ರಾಜಕುಮಾರ, ಹಲ್ಲಿನಿಂದ ಹಲ್ಲನ್ನು ಕಚ್ಚಿಕೊಂಡು, ನಾಲಿಗೆಯಿಂದ ಬಾಯಿಯ ಮೇಲ್ಭಾಗವನ್ನು ಒತ್ತಿಕೊಂಡು, ಮನಸ್ಸಿನಿಂದ ಮನಸ್ಸನ್ನು ನಿಗ್ರಹಿಸಿದಾಗ ದಮನ ಮಾಡಿದಾಗ, ದರ್ಪದಿಂದ ಆಳಿದಾಗ ನನ್ನಲ್ಲಿ ಕಂಕುಳಿನಲ್ಲಿ ಬೆವರು ಹರಿದುಬಂತು.
ರಾಜಕುಮಾರ, ಯಾವ ರೀತಿಯಲ್ಲಿ ಒಬ್ಬ ಶಕ್ತಿಶಾಲಿ ಮನುಷ್ಯ ದುರ್ಬಲ ಮನುಷ್ಯನ ತಲೆಯನ್ನು ಹಿಡಿದುಕೊಂಡು ಅಥವಾ ಭುಜವನ್ನು ಹಿಡಿದುಕೊಂಡು ನಿಗ್ರಹ ಮಾಡುವಂತೆ, ದಮನಮಾಡುವಂತೆ, ದರ್ಪದಿಂದ ಆಳುವಂತೆ,
ಅದೇರೀತಿಯಲ್ಲಿ ನಾನು ಕೂಡ. ರಾಜಕುಮಾರ, ಹಲ್ಲಿನಿಂದ ಹಲ್ಲನ್ನು ಕಚ್ಚಿದಾಗ ನಾಲಿಗೆಯಿಂದ ಬಾಯಿಯ ಮೇಲ್ಭಾಗವನ್ನು ಒತ್ತಿದಾಗ, ಮನಸ್ಸಿನಿಂದ ಮನಸ್ಸನ್ನು ನಿಗ್ರಹಿಸಿದಾಗ, ದಮನಮಾಡಿದಾಗ, ದರ್ಪದಿಂದ ಆಳಿದಾಗ ಕಂಕುಳಲ್ಲಿ ಬೆವರು ಹರಿದುಬಂತು.
ರಾಜಕುಮಾರ, ಆದರೆ ನನ್ನಲ್ಲಿ ಆಲಸ್ಯವಿಲ್ಲದ ಪ್ರಯತ್ನಶೀಲತೆಯು ಉಂಟಾಯಿತು. ಚಂಚಲತೆಯಿಲ್ಲದ ಎಚ್ಚರ ಸ್ಥಿತಿಯು ಉಪಸ್ಥಿತವಾಯಿತು. ಆದರೂ ನನ್ನ ಶರೀರ ಕ್ಷೊಭೆಗೊಳಗಾಗಿತ್ತು. ಮತ್ತು ಅಶಾಂತಿಗೊಳಗಾಗಿತ್ತು. ಏಕೆಂದರೆ ದುಃಖವೇ ಪ್ರಧಾನವಾಗಿರುವಾಗ ಅದರ ವಿರುದ್ಧವೇ ನಾನು ಹೋರಾಡುತ್ತಿದ್ದೆ.
13. ರಾಜಕುಮಾರ, ಆನಂತರದಲ್ಲಿ ನನಗೆ ಹೀಗೆ ಅನಿಸಿತು- ಒಂದುವೇಳೆ ಉಸಿರಾಟವನ್ನು ನಿಲ್ಲಿಸಿದ ಧ್ಯಾನ ಸಮಾಧಿಯನ್ನು ಅಭ್ಯಾಸ ಮಾಡಿದರೆ ಹೇಗೆ. ಅದೇರೀತಿಯಲ್ಲಿ ನಾನು, ರಾಜಕುಮಾರ, ಬಾಯಿಯಿಂದ ಮತ್ತು ಮೂಗಿನಿಂದ ಒಳ ಉಸಿರಾಟವನ್ನು ಮತ್ತು ಹೊರ ಉಸಿರಾಟ ನಿಲ್ಲಿಸಿದ ಮೇಲೆ ಕಿವಿಗಳ ರಂಧ್ರಗಳಲ್ಲಿ ಗಾಳಿಯು ಜೋರಾದ ಶಬ್ದ ಉಂಟುಮಾಡಿತು. ಹೇಗೆಂದರೆ, ಕಮ್ಮಾರನ ತಿದಿಯ ಗಾಳಿ ಚೀಲವು ಮಾಡುವ ಜೋರಾದ ಶಬ್ದದ ಹಾಗೆ. ಅದೇರೀತಿಯಲ್ಲಿ ಕೂಡ ನನ್ನಲ್ಲಿ, ರಾಜಕುಮಾರ, ಬಾಯಿಯಿಂದ ಮತ್ತು ಮೂಗಿನಿಂದ ನಡೆವ ಒಳ ಉಸಿರಾಟ ಮತ್ತು ಹೊರ ಉಸಿರಾಟ ನಿಲ್ಲಿಸಿದ ಮೇಲೆ ಕಿವಿಯ ರಂಧ್ರಗಳಲ್ಲಿ ಗಾಳಿಯು ಜೋರಾದ ಶಬ್ದವನ್ನು ಉಂಟುಮಾಡಿತು. ರಾಜಕುಮಾರ, ಆದರೆ ನನ್ನಲ್ಲಿ ಆಲಸ್ಯವಿಲ್ಲದ ಪ್ರಯತ್ನಶೀಲತೆಯು ಉಂಟಾಯಿತು.
14. ರಾಜಕುಮಾರ, ಆನಂತರದಲ್ಲಿ ನನಗೆ ಹೀಗೆ ಅನಿಸಿತು-
ಒಂದುವೇಳೆ ಉಸಿರಾಟವನ್ನು ನಿಲ್ಲಿಸಿದ ಧ್ಯಾನ ಸಮಾಧಿಯನ್ನು ಅಭ್ಯಾಸ ಮಾಡಿದರೆ ಹೇಗೆ ಎಂದು.
ಅದೇರೀತಿಯಲ್ಲಿ ರಾಜಕುಮಾರ, ಬಾಯಿಯಿಂದ ಮತ್ತು ಮೂಗಿನಿಂದ ಮತ್ತು ಕಿವಿಯಿಂದ ನಡೆವ ಒಳ ಉಸಿರಾಟ ಮತ್ತು ಹೊರ ಉಸಿರಾಟವನ್ನು ನಿಲ್ಲಿಸಿದ ಮೇಲೆ
ಬಲಯುತವಾದ ಗಾಳಿಯು ತಲೆಯೊಳಗೆ ಬಾಧೆಯನ್ನುಂಟುಮಾಡಿತು.
ಹೇಗೆಂದರೆ ರಾಜಕುಮಾರ, ಒಬ್ಬ ಬಲಶಾಲಿಯಾದ ಮನುಷ್ಯನು ಹರಿತವಾದ ಕತ್ತಿಯಿಂದ ತಲೆಯನ್ನು ಸೀಳುವ ಹಾಗೆ, ಅದೇರೀತಿಯಾಗಿ ಕೂಡ ನನ್ನಲ್ಲಿ, ರಾಜಕುಮಾರ, ಬಾಯಿಯಿಂದ ಮತ್ತು ಮೂಗಿನಿಂದ ಮತ್ತು ಕಿವಿಯಿಂದ ನಡೆವ ಒಳ ಉಸಿರಾಟ ಮತ್ತು ಹೊರ ಉಸಿರಾಟವನ್ನು ನಿಲ್ಲಿಸಿದ ಮೇಲೆ ಬಲಯುತವಾದ ಗಾಳಿಯು ತಲೆಯೊಳಗೆ ಬಾಧೆಯನ್ನುಂಟುಮಾಡಿತು. ರಾಜಕುಮಾರ, ಆದರೆ ನನ್ನಲ್ಲಿ ಆಲಸ್ಯವಿಲ್ಲದ ಪ್ರಯತ್ನಶೀಲತೆಯು ಉಂಟಾಯಿತು...
15. ರಾಜಕುಮಾರ, ನಂತರದಲ್ಲಿ ನನಗೆ ಹೀಗೆ ಅನಿಸಿತು-
ಒಂದುವೇಳೆ ಉಸಿರಾಟವನ್ನು ನಿಲ್ಲಿಸಿದ ಧ್ಯಾನ ಸಮಾಧಿಯನ್ನು ಅಭ್ಯಾಸ ಮಾಡಿದರೆ ಹೇಗೆ ಎಂದು.
ಅದೇರೀತಿಯಲ್ಲಿ ನಾನು, ರಾಜಕುಮಾರ, ಬಾಯಿಯಿಂದ ಮತ್ತು ಮೂಗಿನಿಂದ ಮತ್ತು ಕಿವಿಯಿಂದ ನಡೆವ ಒಳ ಉಸಿರಾಟ ಮತ್ತು ಹೊರ ಉಸಿರಾಟವನ್ನು ನಿಲ್ಲಿಸಿದೆನು. ಆನಂತರದಲ್ಲಿ ನನಗೆ, ರಾಜಕುಮಾರ, ಬಾಯಿಯಿಂದ ಮತ್ತು ಮೂಗಿನಿಂದ ಮತ್ತು ಕಿವಿಯಿಂದ ನಡೆವ ಒಳ ಉಸಿರಾಟ ಮತ್ತು ಹೊರ ಉಸಿರಾಟವನ್ನು ನಿಲ್ಲಿಸಿದ ಮೇಲೆ ಬಲಯುತವಾದ ತಲೆನೋವು ತಲೆಯಲ್ಲಿ ಉಂಟಾಯಿತು.
ಹೇಗೆಂದರೆ, ರಾಜಕುಮಾರ, ಬಲವಾದ ಮನುಷ್ಯನೊಬ್ಬನು ತಲೆಯನ್ನು ಒಂದು ಗಟ್ಟಿಯಾದ ಚರ್ಮದ ಪಟ್ಟಿಯಿಂದ ಬಲವಾಗಿ ಸುತ್ತಿ ಕಟ್ಟಿದ್ದ ರೀತಿಯಲ್ಲಿ. ಅದೇರೀತಿಯಲ್ಲಿ ಕೂಡ, ರಾಜಕುಮಾರ, ಬಾಯಿಯಿಂದ ಮತ್ತು ಮೂಗಿನಿಂದ ಮತ್ತು ಕಿವಿಯಿಂದ ನಡೆವ ಒಳ ಉಸಿರಾಟ ಮತ್ತು ಹೊರ ಉಸಿರಾಟವನ್ನು ನಿಲ್ಲಿಸಿದ ಮೇಲೆ ಬಲಯುತವಾದ ತಲೆನೋವು ತಲೆಯಲ್ಲಿ ಉಂಟಾಯಿತು. ರಾಜಕುಮಾರ, ಆದರೆ ನನ್ನಲ್ಲಿ ಆಲಸ್ಯವಿಲ್ಲದ ಪ್ರಯತ್ನಶೀಲತೆಯು ಉಂಟಾಯಿತು...
16. ರಾಜಕುಮಾರ, ಆನಂತರದಲ್ಲಿ ನನಗೆ ಹೀಗೆ ಅನಿಸಿತು- ಒಂದುವೇಳೆ ಉಸಿರಾಟವನ್ನು ನಿಲ್ಲಿಸಿದ ಧ್ಯಾನ ಸಮಾಧಿಯನ್ನು ಅಭ್ಯಾಸ ಮಾಡಿದರೆ ಹೇಗೆ ಎಂದು. ಅದೇರೀತಿಯಲ್ಲಿ ನಾನು, ರಾಜಕುಮಾರ, ಬಾಯಿಯಿಂದ ಮತ್ತು ಮೂಗಿನಿಂದ ಮತ್ತು ಕಿವಿಯಿಂದ ನಡೆವ ಒಳ ಉಸಿರಾಟ ಮತ್ತು ಹೊರ ಉಸಿರಾಟವನ್ನು ನಿಲ್ಲಿಸಿದೆನು. ಆನಂತರದಲ್ಲಿ ನನಗೆ, ರಾಜಕುಮಾರ, ಬಾಯಿಯಿಂದ ಮತ್ತು ಮೂಗಿನಿಂದ ಮತ್ತು ಕಿವಿಯಿಂದ ನಡೆವ ಒಳ ಉಸಿರಾಟ ಮತ್ತು ಹೊರ ಉಸಿರಾಟವನ್ನು ನಿಲ್ಲಿಸಿದ ಮೇಲೆ ಶಕ್ತಿಶಾಲಿಯಾದ ಗಾಳಿಯು ನನ್ನ ಹೊಟ್ಟೆಯಲ್ಲೆಲ್ಲ ಸುಳಿದಾಡುತ್ತಿರುವಂತಾಯಿತು. ಹೇಗೆಂದರೆ, ರಾಜಕುಮಾರ, ಒಬ್ಬ ದಕ್ಷನಾದ ಹಸು ಕಡಿಯುವವನು ಅಥವಾ ಹಸು ಕಡಿಯುವವನ ಸಹಾಯಕ ಒಂದು ಹರಿತವಾದ ಚೂರಿಯಿಂದ ಹಸುವಿನ ಹೊಟ್ಟೆಯನ್ನು ಕೊಚ್ಚುವ ರೀತಿಯಲ್ಲಿ. ಅದೇರೀತಿಯಲ್ಲಿ ಕೂಡ. ರಾಜಕುಮಾರ, ಬಾಯಿಯಿಂದ ಮತ್ತು ಮೂಗಿನಿಂದ ಮತ್ತು ಕಿವಿಯಿಂದ ನಡೆವ ಒಳ ಉಸಿರಾಟ ಮತ್ತು ಹೊರ ಉಸಿರಾಟವನ್ನು ನಿಲ್ಲಿಸಿದ ಮೇಲೆ ಶಕ್ತಿಶಾಲಿಯಾದ ಗಾಳಿಯು ನನ್ನ ಹೊಟ್ಟೆಯಲ್ಲೆಲ್ಲಾ ಸುಳಿದಾಡುತ್ತಿರುವಂತಾಯಿತು. ರಾಜಕುಮಾರ, ಆದರೆ ನನ್ನಲ್ಲಿ ಆಲಸ್ಯವಿಲ್ಲದ ಪ್ರಯತ್ನಶೀಲತೆಯು ಉಂಟಾಯಿತು.
17. ರಾಜಕುಮಾರ, ಆನಂತರದಲ್ಲಿ ನನಗೆ ಹೀಗೆ ಎನ್ನಿಸಿತು - ಒಂದುವೇಳೆ ಉಸಿರಾಟವನ್ನು ನಿಲ್ಲಿಸಿದ ಧ್ಯಾನ ಸಮಾಧಿಯನ್ನು ಅಭ್ಯಾಸ ಮಾಡಿದರೆ ಹೇಗೆ ಎಂದು. ಅದೇರೀತಿಯಲ್ಲಿ ನಾನು, ರಾಜಕುಮಾರ, ಬಾಯಿಯಿಂದ ಮತ್ತು ಮೂಗಿನಿಂದ ಮತ್ತು ಕಿವಿಯಿಂದ ನಡೆವ ಒಳ ಉಸಿರಾಟ ಮತ್ತು ಹೊರ ಉಸಿರಾಟವನ್ನು ನಿಲ್ಲಿಸಿದ ಮೇಲೆ ಶರೀರದಲ್ಲಿ ಭಯಂಕರವಾದ ಉರಿ ಉಂಟಾಯಿತು. ಹೇಗೆಂದರೆ, ಇಬ್ಬರು ಬಲವಾದ ಮನುಷ್ಯರು ಒಬ್ಬ ದುರ್ಬಲ ಮನುಷ್ಯನ ಎರಡು ಕೈಗಳನ್ನು ಹಿಡಿದುಕೊಂಡು ಉರಿಯುತ್ತಿರುವ ಬೆಂಕಿ ಕೆಂಡದ ಮೇಲೆ ಸುತ್ತಿಸಿ ಸುತ್ತಿಸಿ ಗರಿಗರಿಯಾಗಿ ಸುಡುವ ಹಾಗೆ. ಅದೇರೀತಿಯಲ್ಲಿ, ರಾಜಕುಮಾರ, ಬಾಯಿಯಿಂದ ಮತ್ತು ಮೂಗಿನಿಂದ ಮತ್ತು ಕಿವಿಯಿಂದ ನಡೆವ ಒಳ ಉಸಿರಾಟ ಮತ್ತು ಹೊರ ಉಸಿರಾಟವನ್ನು ನಿಲ್ಲಿಸಿದ ಮೇಲೆ ಶರೀರದಲ್ಲಿ ಭಯಂಕರವಾದ ಉರಿ ಉಂಟಾಯಿತು. ರಾಜಕುಮಾರ, ಆದರೆ ನನ್ನಲ್ಲಿ ಆಲಸ್ಯವಿಲ್ಲದ ಪ್ರಯತ್ನಶೀಲತೆಯು ಉಂಟಾಯಿತು.... ಪುನರುಚ್ಚರಿಸಿ.... ಹುಟ್ಟಿದ ದುಃಖದ ಅನುಭವವು ಮನಸ್ಸನ್ನು ಆಕ್ರಮಿಸಿಕೊಂಡು ಉಳಿಯಲಾಗಲಿಲ್ಲ. ರಾಜಕುಮಾರ, ಈ ರೀತಿಯಾಗಿರುವ ನನ್ನನ್ನು ಕಂಡು ದೇವತೆಗಳು ಹೀಗೆ ನುಡಿದರು- ಶ್ರಮಣ ಗೌತಮರು ಸತ್ತುಹೋಗಿದ್ದಾರೆ ಎಂದು. ಕೆಲವು ದೇವತೆಗಳು ಹೀಗೆ ನುಡಿದರು- ಶ್ರಮಣ ಗೌತಮರು ಇನ್ನೂ ಸತ್ತಿಲ್ಲ, ಈಗ ಸಾಯುವ ಸ್ಥಿತಿಯಲ್ಲಿದ್ದಾರೆ ಎಂದು. ಕೆಲವು ದೇವತೆಗಳು ಹೀಗೆ ನುಡಿದರು- ಶ್ರಮಣ ಗೌತಮರು ಸತ್ತೂ ಇಲ್ಲ ಮತ್ತು ಸಾಯುವ ಸ್ಥಿತಿಯಲ್ಲೂ ಇಲ್ಲ. ಶ್ರಮಣ ಗೌತಮರು ಅರಹಂತರು, ಅರಹಂತರಾಗಿರುವವರ ಜೀವನವೇ ಹೀಗಿರುತ್ತದೆ ಎಂದು.
18. ರಾಜಕುಮಾರ, ಆನಂತರದಲ್ಲಿ ನನಗೆ ಹೀಗೆ ಅನಿಸಿತು - ಒಂದುವೇಳೆ ನಾನು ಎಲ್ಲರೀತಿಯ ಆಹಾರ ಸೇವನೆ ನಿಲ್ಲಿಸಿದರೆ ಹೇಗೆ ಎಂದು. ಆಗ ರಾಜಕುಮಾರ, ನನ್ನಲ್ಲಿಗೆ ದೇವತೆಗಳು ಬಂದು ಹೀಗೆ ಹೇಳಿದರು- ಪೂಜ್ಯರೇ, ಹಾಗೆ ನೀವು ಎಲ್ಲರೀತಿಯ ಆಹಾರ ಸೇವನೆಯನ್ನು ನಿಲ್ಲಿಸಬೇಡಿ. ಪೂಜ್ಯರೇ, ನೀವು ಖಂಡಿತವಾಗಿಯು ಹಾಗೆ ಎಲ್ಲರೀತಿಯ ಆಹಾರ ಸೇವನೆಯನ್ನು ನಿಲ್ಲಿಸಿದ್ದೇ ಆದರೆ ಆಗ ನಾವು ನಮ್ಮ ದಿವ್ಯ ಆಹಾರವನ್ನು ಕೂದಲಿನ ರಂಧ್ರದ ಮೂಲಕವಾಗಿ ಹರಿಸುತ್ತೇವೆ, ಅದರಿಂದಾಗಿ ನೀವು ಜೀವಿಸಬಹುದು ಎಂದು. ರಾಜಕುಮಾರ, ಆಹಾರ ಸೇವನೆಯನ್ನು ನಿಲ್ಲಿಸುವೆನೆಂದುಕೊಂಡಿರುವಾಗ ನಾನು ಈ ದೇವತೆಗಳ ದಿವ್ಯ ಆಹಾರವನ್ನು ಕೂದಲಿನ ರಂಧ್ರಗಳ ಮೂಲಕ ಹರಿಸಿಕೊಂಡಿದ್ದೆ. ಆದರೆ ಅದರಿಂದಾಗಿ ನಾನು ಸುಳ್ಳು ಹೇಳಿದಂತಾಗುತ್ತದೆ ಎಂದು. ಆದ್ದರಿಂದ ನಾನು, ರಾಜಕುಮಾರ, ಆ ದೇವತೆಗಳನ್ನು ಅಗತ್ಯವಿಲ್ಲ ಎಂದು ಹೇಳಿ ಕಳಿಸಿಬಿಟ್ಟೆನು.
19. ರಾಜಕುಮಾರ, ಆನಂತರದಲ್ಲಿ ನನಗೆ ಹೀಗೆ ಅನಿಸಿತು- ಒಂದುವೇಳೆ ಸ್ವಲ್ಪ ಸ್ವಲ್ಪ ತೊಟ್ಟು ತೊಟ್ಟು ಆಹಾರವನ್ನು ಸೇವಿಸಿದರೆ, ಹೇಳುವುದಾದರೆ- ಕಾಳುಗಳ ಕಟ್ಟುರಸವಾಗಲಿ, ಬೇಳೆಗಳ ರಸವಾಗಲಿ, ಸೊಪ್ಪಿನ ರಸವಾಗಲಿ, ಬೀಜಕಾಳುವಿನ ರಸವಾಗಲಿ ಎಂದು. ರಾಜಕುಮಾರ, ನಾನು ಸ್ವಲ್ಪ ತೊಟ್ಟು ತೊಟ್ಟು ಆಹಾರವನ್ನು ಸೇವಿಸಿದೆನು. ಹೇಳುವುದಾದರೆ-ಕಾಳುಗಳ ಕಟ್ಟುರಸವಾಗಲಿ, ಬೇಳೆಗಳ ರಸವಾಗಲಿ, ಸೊಪ್ಪಿನ ರಸವಾಗಲಿ, ಬೀಜಕಾಳುವಿನ ರಸವಾಗಲಿ. ಆ ರೀತಿಯಾಗಿ ನಾನು ರಾಜಕುಮಾರ, ಸ್ವಲ್ಪ ಸ್ವಲ್ಪ ತೊಟ್ಟು ತೊಟ್ಟು ಆಹಾರವನ್ನು ಸೇವಿಸಿದ್ದರಿಂದಾಗಿ, ಹೇಳುವುದಾದರೆ-ಕಾಳುಗಳ ಕಟ್ಟು ರಸವಾಗಲಿ, ಬೇಳೆಗಳ ರಸವಾಗಲಿ, ಸೊಪ್ಪಿನ ರಸವಾಗಲಿ, ಬೀಜ ಕಾಳುವಿನ ರಸವಾಗಲಿ ಸೇವಿಸಿದ್ದರಿಂದಾಗಿ ನನ್ನ ಶರೀರವು ಅತೀವವಾಗಿ ಸೊರಗಿಹೋಯಿತು. ಹೀಗೆ ಕಡಿಮೆ ಆಹಾರ ಸೇವನೆಯಿಂದಾಗಿ ಹೇಗಾಯಿತೆಂದರೆ ನನ್ನ ಅಂಗ ಪ್ರತ್ಯಂಗಗಳು ದ್ರಾಕ್ಷಿ ಬಳ್ಳಿಯ ಅಥವಾ ಬೊಂಬಿನ ಕಡ್ಡಿಯ ಗಂಟುಗಳ ರೀತಿಯಾದವು. ಹೀಗೆ ಕಡಿಮೆ ಆಹಾರ ಸೇವನೆಯಿಂದಾಗಿ ಹೇಗಾಯಿತೆಂದರೆ, ನನ್ನ ಕುಂಡೆಯ ಭಾಗವು ಒಂಟೆಯ ಗೊರಸಿನ ರೀತಿಯಲ್ಲಿ ಆಯಿತು. ಹೀಗೆ ಕಡಿಮೆ ಆಹಾರ ಸೇವನೆಯಿಂದಾಗಿ ಹೇಗಾಯಿತೆಂದರೆ ನನ್ನ ಬೆನ್ನೆಲುಬು ಕೊರೆದು ಕೂಡಿಸಿದ ಮಣಿಗಳ ರೀತಿಯಾಯಿತು. ಹೀಗೆ ಕಡಿಮೆ ಆಹಾರ ಸೇವನೆಯಿಂದಾಗಿ ಹೇಗಾಯಿತೆಂದರೆ ನನ್ನ ಸೊರಗಿದ ಎದೆ ಮೂಳೆಗಳು ಕೃಶವಾಗಿ ಹಾಳಾಗಿ ಪಾಳು ಬಿದ್ದಿರುವ ಉಗ್ರಾಣದ ಛಾವಣಿಯ ಗಳುಗಳ ರೀತಿಯಲ್ಲಿ ಆದವು. ಹೀಗೆ ಕಡಿಮೆ ಆಹಾರ ಸೇವನೆಯಿಂದಾಗಿ ಹೇಗಾಯಿತೆಂದರೆ ಅತ್ಯಂತ ಆಳವಾದ ಬಾವಿಯಲ್ಲಿ ಉಳಿದಿರುವ ಸ್ವಲ್ಪ ನೀರಿನ ರೀತಿಯಲ್ಲಿ ನನ್ನ ಕಣ್ಣಾಲೆಗಳು ಆಳವಾಗಿ ಗುಳಿಬಿದ್ದು ಕಣ್ಣಿನ ರಂಧ್ರಗಳಲ್ಲಿ ಹುದುಗಿರುವಂತೆ ಆದವು. ಹೀಗೆ ಕಡಿಮೆ ಆಹಾರ ಸೇವನೆಯಿಂದಾಗಿ ಸುಡುವ ಗಾಳಿ ಮತ್ತು ಬೇಗೆಯಿಂದಾಗಿ ಸುಕ್ಕು ಸುಕ್ಕಾಗಿ ಒಣಗಿ ಹೋಗಿರುವಂತೆ ಆಯಿತು. ಹೀಗಿರುವಲ್ಲಿ ರಾಜಕುಮಾರ, ನಾನು ಹೊಟ್ಟೆಯ ಚರ್ಮವನ್ನು ಮುಟ್ಟಿದಾಗ ಬೆನ್ನಲುಬನ್ನು ಹಿಡಿದುಕೊಂಡಂತಾಯಿತು. ಬೆನ್ನೆಲುಬನ್ನು ಮುಟ್ಟಿದಾಗ ಹೊಟ್ಟೆಯ ಚರ್ಮವನ್ನು ಹಿಡಿದುಕೊಂಡಂತಾಯಿತು. ರಾಜಕುಮಾರ, ಹೀಗೆ ನಾನು ಕಡಿಮೆ ಆಹಾರ ಸೇವಿಸಿದ್ದರಿಂದಾಗಿ ಹೊಟ್ಟೆಯ ಚರ್ಮ ಮತ್ತು ಬೆನ್ನೆಲುಬುಗಳು ಒಂದೇ ಆದವು. ಹೀಗಿರುವಲ್ಲಿ ನಾನು, ರಾಜಕುಮಾರ, ಮಲವನ್ನು ಅಥವಾ ಮೂತ್ರವನ್ನು ಮಾಡಬೇಕೆಂದಾಗ ಕಡಿಮೆ ಆಹಾರ ಸೇವನೆಯಿಂದಾಗಿ ಅಲ್ಲಿಯೆ ಮಕಾಡಿಯಾಗಿ ಬಿದ್ದುಬಿಟ್ಟೆನು. ಹೀಗಿರುವಲ್ಲಿ ನಾನು ರಾಜಕುಮಾರ, ಈ ರೀತಿ ಇರುವ ಶರೀರವನ್ನು ನನ್ನ ಬೆರಳುಗಳಿಂದ ಅಂಗಾಂಗಗಳನ್ನು ನೋವು ನಿವಾರಣೆಗೆ ಸವರಿದೆನು. ರಾಜಕುಮಾರ, ಹಾಗೆ ನಾನು ಕೈಬೆರಳುಗಳಿಂದ ಅಂಗಾಂಗಗಳನ್ನು ಸವರಿದಾಗ ಕಡಿಮೆ ಆಹಾರ ಸೇವನೆಯಿಂದಾಗಿ ಚರ್ಮದಲ್ಲಿ ಬೇರುರಿದ್ದ ಕೂದಲುಗಳು ತಮ್ಮ ಜಾಗದಿಂದ ಉದುರಿಹೋದವು. ರಾಜಕುಮಾರ, ಹೀಗಿರುವ ನನ್ನನ್ನು ಮನುಷ್ಯರು ಕಂಡಾಗ ಹೀಗೆ ಹೇಳಿದರು- ಶ್ರಮಣ ಗೌತಮರು ಕರಿಯ ಮನುಷ್ಯರು ಎಂದು. ಕೆಲವು ಮನುಷ್ಯರು ಹೀಗೆ ಹೇಳಿದರು- ಶ್ರಮಣ ಗೌತಮರು ಕಪ್ಪಾಗಿಲ್ಲ, ಶ್ರಮಣ ಗೌತಮರು ಕಂದು ಬಣ್ಣದವರಾಗಿದ್ದಾರೆ ಎಂದು. ಕೆಲವು ಮನುಷ್ಯರು ಹೀಗೆ ಹೇಳಿದರು- ಶ್ರಮಣ ಗೌತಮರು ಕಪ್ಪು ಅಲ್ಲ, ಕಂದು ಅಲ್ಲ, ಶ್ರಮಣ ಗೌತಮರು ಕಳೆಗುಂದಿದ ಹಳದಿ ಬಣ್ಣದ ಮನುಷ್ಯರು ಎಂದು. ರಾಜಕುಮಾರ, ಹೀಗೆ ನಾನು ಕಡಿಮೆ ಆಹಾರ ಸೇವಿಸಿದ್ದರಿಂದಾಗಿ ಪರಿಶುದ್ಧವಾಗಿ ಹೊಳೆಯುತ್ತಿದ್ದ ನನ್ನ ಚರ್ಮದ ಬಣ್ಣವು ಕಳಾಹೀನವಾಗಿ ಮಾರ್ಪಟ್ಟಿತ್ತು.
20. ರಾಜಕುಮಾರ, ಆನಂತರದಲ್ಲಿ ನನಗೆ ಹೀಗೆ ಅನಿಸಿತು- ಕೆಲವು ಶ್ರಮಣರು ಅಥವಾ ಬ್ರಾಹ್ಮಣರು ಹಿಂದೆ ಗತಕಾಲದಲ್ಲಿ ತೀವ್ರವಾದ ನೋವು ಉಂಟುಮಾಡುವ ತೀಕ್ಷ್ಣವಾಗಿರುವಂತಹ ಉಗ್ರವಾದ ದುಃಖ ಅನುಭವವನ್ನು ಅನುಭವಿಸಿದ್ದಾರೆ. ಆದರೆ ಅದೇ ಅಂತ್ಯವೇ ಅಥವಾ ಅದಕ್ಕಿಂತಲೂ ಕಡೆಯಾದ ಸ್ಥಿತಿ ಇದೆಯೆ. ಕೆಲವು ಶ್ರಮಣರು ಅಥವಾ ಬ್ರಾಹ್ಮಣರು ಈಗಲೂ ತೀವ್ರವಾದ ನೋವು ಉಂಟುಮಾಡುವ ತೀಕ್ಷ್ಣವಾದ ಉಗ್ರವಾದ ದುಃಖ ಅನುಭವವನ್ನು ಅನುಭವಿಸುತ್ತಿದ್ದಾರೆ. ಆದರೆ ಅದೇ ಅಂತ್ಯವೆ ಅಥವಾ ಅದಕ್ಕಿಂತಲೂ ಕಡೆಯಾದ ಸ್ಥಿತಿ ಇದೆಯೆ. ಈ ರೀತಿಯಾಗಿ ನಾನು ಬಹು ಉಗ್ರವಾದ ದುಃಖವನ್ನುಂಟುಮಾಡುವ ಅಭ್ಯಾಸಗಳಲ್ಲಿ ತೊಡಗಿದರೂ ಸಹ ಉತ್ತಮ ಮನುಷ್ಯರು ಸಾಧಿಸುವ ಧರ್ಮಗಳನ್ನು, ಆರ್ಯರೆಂದೆನಿಸಿಕೊಳ್ಳುವವರು ಸಾಧಿಸುವ ವಿಶೇಷ ಜ್ಞಾನ ಮತ್ತು ದರ್ಶನಗಳನ್ನು ಸಾಧಿಸಲಾಗುವುದಿಲ್ಲ. ಬೋಧಿಯನ್ನು ಪಡೆಯಬಲ್ಲ ಬೇರೊಂದು ಮಾರ್ಗ ಇರಬಹುದೆ ಎಂದು? ರಾಜಕುಮಾರ, ಆನಂತರದಲ್ಲಿ ನನಗೆ ಹೀಗೆ ಅನಿಸಿತು. ಒಮ್ಮೆ ಸಾಕ್ಯ ಕುಲದ ನನ್ನ ತಂದೆ ಭೂಮಿಯನ್ನು ಉಳುಮೆ ಮಾಡುತ್ತಿದ್ದಾಗ, ನಾನು ನೇರಳೆ ಮರದ ಕೆಳಗೆ ಕುಳಿತಿರುವಾಗ ಕಾಮವನ್ನು ದಾಟಿದವನಾಗಿ ಅಕುಶಲ ಧರ್ಮಗಳನ್ನು ದಾಟಿದವನಾಗಿ ಸವಿತರ್ಕನಾಗಿ ಸವಿಚಾರನಾಗಿ ಏಕಾಂತತೆಯಿಂದ ಹುಟ್ಟಿದ ಆನಂದ ಮತ್ತು ಸುಖದಿಂದ ಕೂಡಿದ ಸಮಾಧಿಯ ಮೊದಲ ಹಂತವನ್ನು ಸಾಧಿಸಿಕೊಂಡು ನೆಲೆಗೊಳ್ಳುವಿಕೆಯನ್ನು ಮನಗೊಂಡೆನು. ಬೋಧಿಯನ್ನು ಪಡೆಯುವ ಮಾರ್ಗವು ಇದಾಗಬಹುದು ಎಂದು. ರಾಜಕುಮಾರ, ಆನಂತರದಲ್ಲಿ ನನ್ನಲ್ಲಿ ಉಂಟಾದ ಜಾಗ್ರತ ಸ್ಥಿತಿಯಿಂದಾಗಿ ಈ ಅರಿವು ಮೂಡಿಬಂತು. ಇದೇ ಬೋಧಿಯ ಮಾರ್ಗ ಎಂದು. ರಾಜಕುಮಾರ, ಆನಂತರದಲ್ಲಿ ನನಗೆ ಹೀಗೆ ಅನ್ನಿಸಿತು ಆ ಸುಖದ ಅನುಭವಕ್ಕೆ, ನನ್ನಲ್ಲಿ ಹೆದರಿಕೆ ಉಂಟಾಗುವುದೇನು, ಯಾವ ಸುಖವು ಇಂದ್ರಿಯ ಸುಖವನ್ನು ಬಿಟ್ಟು ಬೇರೆಯದಾಗಿದೆಯೊ, ಅವುಗಳಿಗೆ ಎಂದು. ರಾಜಕುಮಾರ, ಆನಂತರದಲ್ಲಿ ನನಗೆ ಹೀಗೆ ಅನಿಸಿತು ಆ ಸುಖದ ಅನುಭವಕ್ಕೆ ನಾನು ಹೆದರುವುದಿಲ್ಲ, ಯಾವ ಸುಖವು ಇಂದ್ರಿಯ ಸುಖವನ್ನು ಬಿಟ್ಟು ಬೇರೆಯದಾಗಿದೆಯೊ ಅವುಗಳಿಗೆ ಎಂದು.
21. ರಾಜಕುಮಾರ, ಆನಂತರದಲ್ಲಿ ನನಗೆ ಹೀಗೆ ಅನಿಸಿತು- ನಾನು ಈ ರೀತಿಯಾಗಿ ಶರೀರವನ್ನು ದಂಡನೆಗೆ ಒಳಪಡಿಸಿ, ಕೃಶಕಾಯನಾಗಿದ್ದೇನೆ. ಆದರೆ ಆ ರೀತಿಯ ಸುಖದ ಸ್ಥಿತಿಯನ್ನು ಪಡೆಯಲು ಕಷ್ಟ ಸಾಧ್ಯವಾಗುತ್ತದೆ. ಒಂದುವೇಳೆ ನಾನು ಶಕ್ತಿವರ್ಧಕವಾದಂತಹ ಆಹಾರ ಅನ್ನ ಮತ್ತು ಮೊಸರನ್ನು ಸೇವಿಸಿದರೆ ಹೇಗೆ? ಎಂದು. ಹಾಗೆಯೇ ನಾನು, ರಾಜಕುಮಾರ, ಶಕ್ತಿವರ್ಧಕವಾದಂತಹ ಆಹಾರ ಅನ್ನ ಮತ್ತು ಮೊಸರನ್ನು ಸೇವಿಸಿದನು. ಆ ಸಮಯದಲ್ಲಿ, ರಾಜಕುಮಾರ, ನನ್ನನ್ನು ಐದುಜನ ಭಿಕ್ಷುಗಳು ಸೇವೆ ಮಾಡುತ್ತ ಜೊತೆಯಲ್ಲಿದ್ದರು- ಯಾವಾಗ ಶ್ರಮಣ ಗೌತಮರು ಧರ್ಮವನ್ನು ಅವಿಷ್ಕಾರ ಮಾಡುತ್ತಾರೋ ಆಗ ಅವರು ಅದನ್ನು ನಮಗೆ ಪ್ರಕಾಶಪಡಿಸುತ್ತಾರೆ ಎಂದು. ಯಾವಾಗ ನಾನು, ರಾಜಕುಮಾರ, ಶಕ್ತಿವರ್ಧಕವಾದ ಆಹಾರ ಅನ್ನ ಮತ್ತು ಮೊಸರನ್ನು ಸೇವಿಸಿದೆನೋ ಆಗ ನನ್ನನ್ನು ಆ ಐದು ಜನ ಭಿಕ್ಷುಗಳು ಧಿಕ್ಕರಿಸಿ ಹೊರಟುಹೋದರು. ಶ್ರಮಣ ಗೌತಮರು ಯತೇಚ್ಛವಾಸಿಗಳು, ಪ್ರಯತ್ನದಲ್ಲಿ ನಂಬಿಕೆ ಇಲ್ಲದವರು, ಯತೇಚ್ಛದ ಜೀವನದ ಕಡೆ ತಿರುಗಿದವರು ಎಂದು.
ಹಾಗಾಗಿ ನಾನು, ರಾಜಕುಮಾರ, ಶಕ್ತಿವರ್ಧಕವಾದ ಆಹಾರವನ್ನು ಸೇವಿಸಿಕೊಂಡು, ಬಲವನ್ನು ವೃದ್ಧಿಸಿಕೊಂಡು, ಕಾಮವನ್ನು ದಾಟಿದವನಾಗಿ ಅಕುಶಲ ಧರ್ಮಗಳನ್ನು ದಾಟಿದವನಾಗಿ ಸವಿತರ್ಕನಾಗಿ, ಸವಿಚಾರನಾಗಿ ಏಕಾಂತತೆಯಿಂದ ಹುಟ್ಟಿದ ಆನಂದ ಮತ್ತು ಸುಖದಿಂದ ಕೂಡಿದ ಸಮಾಧಿಯ ಮೊದಲನೆ ಹಂತವನ್ನು ಸಾಧಿಸಿಕೊಂಡು ನೆಲೆಗೊಂಡೆನು. ಈ ರೀತಿಯಾಗಿ ನನ್ನಲ್ಲಿ ರಾಜಕುಮಾರ, ಹುಟ್ಟಿದ ಸುಖದ ಅನುಭವವು ಕೂಡ ಮನಸ್ಸನ್ನು ಆಕ್ರಮಿಸಿಕೊಂಡು ಉಳಿಯಲು ಆಗಲಿಲ್ಲ. ವಿತರ್ಕ ವಿಚಾರಗಳನ್ನು ಶಮನಗೊಳಿಸಿ ಆಂತರಿಕ ಸ್ಥೈರ್ಯ ಮತ್ತು ಮನಸ್ಸಿನ ಏಕೋಭಾವದಿಂದ ಸಮಾಧಿಯಲ್ಲಿ ಹುಟ್ಟಿದ ವಿತರ್ಕಗಳಿಲ್ಲದ ವಿಚಾರಗಳಿಲ್ಲದ ಆನಂದ ಮತ್ತು ಸುಖದಿಂದ ಕೂಡಿದ ಸಮಾಧಿಯ ಎರಡನೆ ಹಂತವನ್ನು ಸಾಧಿಸಿಕೊಂಡು ನೆಲೆಗೊಂಡೆನು. ಈ ರೀತಿಯಾಗಿ ನನ್ನಲ್ಲಿ, ರಾಜಕುಮಾರ, ಹುಟ್ಟಿದ ಸುಖದ ಅನುಭವವು ಕೂಡ ಮನಸ್ಸನ್ನು ಆಕ್ರಮಿಸಿಕೊಂಡು ಉಳಿಯಲು ಆಗಲಿಲ್ಲ. ಆನಂದ ಮರೆಯಾಗಿ ನಾನು ಉಪೇಕ್ಖಾ (ಸಮಚಿತ್ತತೆ)ದಲ್ಲಿ ನೆಲೆಗೊಂಡೆನು. ಜಾಗ್ರತ ಸ್ಥಿತಿ, ಪ್ರಜ್ಞಾಧಾರ ಜಾಗೃತ ಸ್ಥಿತಿ ಹೊಂದಿದೆನು. ಸುಖವನ್ನು ಶರೀರದಲ್ಲೇ ಅನುಭವಿಸಿದೆನು, ಯಾವುದನ್ನು ಆರ್ಯರು ಹೀಗೆ ಘೋಷಿಸುತ್ತಾರೆ- ಉಪೇಕ್ಖಾ ಮತ್ತು ಜಾಗೃತ ಸ್ಥಿತಿ ಹೊಂದಿದವನೆ ಸುಖದಲ್ಲಿ ನೆಲೆಗೊಂಡವನು ಎಂದು. ಇಂಥ ಸಮಾಧಿಯ ಮೂರನೆಯ ಹಂತವನ್ನು ಸಾಧಿಸಿಕೊಂಡು ನೆಲೆಗೊಂಡೆನು. ಈ ರೀತಿಯಾಗಿ ನನ್ನಲ್ಲಿ ರಾಜಕುಮಾರ, ಹುಟ್ಟಿದ ಸುಖದ ಅನುಭವವು ನನ್ನ ಮನಸ್ಸನ್ನು ಆಕ್ರಮಿಸಿಕೊಂಡು ಉಳಿಯಲಾಗಲಿಲ್ಲ. ಸುಖವನ್ನು ಬಿಟ್ಟವನಾಗಿ ದುಃಖವನ್ನು ಬಿಟ್ಟವನಾಗಿ ಸುಮ್ಮಾನ-ದುಮ್ಮಾನಗಳನ್ನು ಅಸ್ತಂಗತಮಾಡಿ ದುಃಖವೂ ಅಲ್ಲದ ಸುಖವೂ ಅಲ್ಲದ ಉಪೇಕ್ಖಾದಿಂದ ಉಂಟಾದ ಪರಿಶುದ್ಧ ಎಚ್ಚರ ಸ್ಥಿತಿಯಾದ ಸಮಾಧಿಯ ನಾಲ್ಕನೆಯ ಹಂತವನ್ನು ಸಾಧಿಸಿಕೊಂಡು ನೆಲೆಗೊಂಡೆನು. ಈ ರೀತಿಯಾಗಿ ನನ್ನಲ್ಲಿ, ರಾಜಕುಮಾರ, ಹುಟ್ಟಿದ ಸುಖದ ಅನುಭವವು ನನ್ನ ಮನಸ್ಸನ್ನು ಆಕ್ರಮಿಸಿಕೊಂಡು ಉಳಿಯಲು ಆಗಲಿಲ್ಲ.
22. ಸಮಾಹಿತವಾದ ಆ ಚಿತ್ತವು ಈ ರೀತಿಯಾದ ಪರಿಶುದ್ಧವೂ ನಿರ್ಮಲವೂ ದೋಷ ವಿಮುಕ್ತವೂ ಮೃದುವೂ ಕಾರ್ಯ ಯೋಗ್ಯವೂ ಸ್ಥಿರವೂ ಅಚಲವೂ ಆಗಿ ಹಿಂದಿನ ಜನ್ಮ ಸ್ಮರಣೆಗಳ ಕಡೆಗೆ ಚಿತ್ತವನ್ನು ತಿರುಗಿಸಿದೆ, ಬಾಗಿಸಿದೆ. ನನ್ನ ಅನೇಕ ವಿಧವಾದ ಪೂರ್ವ ಜನ್ಮಗಳನ್ನು ನೆನಪಿಗೆ ತಂದುಕೊಂಡೆ. ಹೇಗೆಂದರೆ- ಒಂದು ಜನ್ಮವನ್ನು.... ಪುನರುಚ್ಚರಿಸಿ.... ಹೀಗೆ ಸವಿವರವಾಗಿ, ಬಿಡಿಬಿಡಿಯಾಗಿ ಅನೇಕ ವಿಧವಾದ ಪೂರ್ವಜನ್ಮಗಳನ್ನು ನೆನಪು ಮಾಡಿಕೊಂಡೆ. ಹೀಗೆ ರಾಜಕುಮಾರ, ರಾತ್ರಿಯ ಮೊದಲ ಜಾವದಲ್ಲಿ ಮೊದಲನೆಯ ಲೋಕೋತ್ತರ ಜ್ಞಾನ ನನ್ನಲ್ಲಿ ಉಂಟಾಯಿತು; ಅಜ್ಞಾನ ಹರಿದು ಜ್ಞಾನ ಹುಟ್ಟಿತು; ತಮಸ್ಸು ನಾಶವಾಯಿತು, ಬೆಳಕು ಹುಟ್ಟಿತು; ಸದಾ ಎಚ್ಚರವಾಗಿರುವವನಿಗೆ ಉತ್ಸಾಹಶೀಲನಿಗೆ ಸಂಯಮಶೀಲನಿಗೆ ಹೇಗೆ ಆಗುತ್ತದೋ ಹಾಗೆ. ಈ ರೀತಿಯಾಗಿ ನನ್ನಲ್ಲಿ ಹುಟ್ಟಿದ ಸುಖದ ಅನುಭವವು ನನ್ನ ಮನಸ್ಸನ್ನು ಆಕ್ರಮಿಸಿಕೊಂಡು ಉಳಿಯಲು ಆಗಲಿಲ್ಲ.
23. ಸಮಾಹಿತವಾದ ಆ ಚಿತ್ತವು ಈ ರೀತಿಯಾಗಿ ಪರಿಶುದ್ಧವೂ ನಿರ್ಮಲವೂ, ಉಜ್ವಲವೂ ಎಲ್ಲ ದೋಷಗಳಿಂದ ವಿಮುಕ್ತವೂ ಮೃದುವೂ ಕಾರ್ಯ ಯೋಗ್ಯವೂ ಸ್ಥಿರವೂ ಅಚಲವೂ ಆಗಿ ಜೀವಿಗಳ ಸಾವು ಮತ್ತು ಮರುಹುಟ್ಟುಗಳ ಕಡೆಗೆ ಚಿತ್ತವನ್ನು ತಿರುಗಿಸದೆ, ಬಾಗಿಸಿ, ಆ ವಿಶುದ್ಧವಾದ ಮಾನವಾತೀತ ದಿವ್ಯ ನೇತ್ರದಿಂದ ಜೀವಿಗಳನ್ನು ನೋಡಿದೆ. ಸಾಯುತ್ತಿರುವ ಮತ್ತೆ ಹುಟ್ಟುತ್ತಿರುವ ಅಧಮ-ಉತ್ತಮವಾದ ಸುರೂಪಿ-ಕುರೂಪಿಯಾದ ಸದ್ಗತಿ-ದುರ್ಗತಿಗಳಿಗೆ ಹೋಗುತ್ತಿರುವ ಕಮ್ಮ-ಕಮರ್ಾನುಸಾರವಾಗಿರುವ ಜೀವಿಗಳನ್ನು ಅರಿತೆನು.... ಪುನರುಚ್ಚರಿಸಿ...ಹೀಗೆ ರಾಜಕುಮಾರ, ರಾತ್ರಿಯ ಮಧ್ಯದ ಜಾವದಲ್ಲಿ ಎರಡನೆಯ ಲೋಕೋತ್ತರ ಜ್ಞಾನ ನನ್ನಲ್ಲಿ ಉಂಟಾಯಿತು. ಅಜ್ಞಾನವು ಹರಿದುಹೋಯಿತು. ಜ್ಞಾನ ಹುಟ್ಟಿತು; ತಮಸ್ಸು ನಾಶವಾಯಿತು, ಬೆಳಕು ಹುಟ್ಟಿತು; ಸದಾ ಎಚ್ಚರವಾಗಿರುವವನಿಗೆ ಉತ್ಸಾಹಶೀಲನಿಗೆ ಸಂಯಮಶೀಲನಿಗೆ ಹೇಗೆ ಆಗುತ್ತದೋ ಹಾಗೆ.
24. ಸಮಾಹಿತವಾದ ಆ ಚಿತ್ತವು ಈ ರೀತಿಯಾಗಿ ಪರಿಶುದ್ಧವು, ನಿರ್ಮಲವೂ, ಉಜ್ವಲವೂ ಎಲ್ಲಾ ದೋಷಗಳಿಂದ ವಿಮುಕ್ತವೂ ಮೃದುವೂ ಕಾರ್ಯ ಯೋಗ್ಯವೂ ಸ್ಥಿರವೂ ಅಚಲವೂ ಆಗಿ ಆಸವಗಳ ಕ್ಷಯದ ಕಡೆಗೆ ಚಿತ್ತವನ್ನು ತಿರುಗಿಸದೆ, ಬಾಗಿಸದೆ. ಆಗ ದುಃಖ ಇದೆ ಎಂಬ ಪ್ರತ್ಯಕ್ಷ ಜ್ಞಾನ ಪಡೆದೆ, ಇದೇ ದುಃಖದ ಹುಟ್ಟು ಎಂಬ ಪ್ರತ್ಯಕ್ಷ ಜ್ಞಾನವನ್ನು ಪಡೆದೆ. ಇದೇ ದುಃಖದ ನಿರೋಧ ಎಂಬ ಪ್ರತ್ಯಕ್ಷ ಜ್ಞಾನವನ್ನು ಪಡೆದೆ, ಇದೇ ದುಃಖದ ನಿರೋಧಕ್ಕೆ ಒಯ್ಯುವ ಮಾರ್ಗ ಎಂಬ ಪ್ರತ್ಯಕ್ಷ ಜ್ಞಾನವನ್ನು ಪಡೆದೆ. ಇದೇ ಆಸವ ಎಂಬ ಪ್ರತ್ಯಕ್ಷ ಜ್ಞಾನವನ್ನು ಪಡೆದೆ, ಇದೇ ಆಸವಗಳ ನಿರೋಧ ಎಂಬ ಪ್ರತ್ಯಕ್ಷ ಜ್ಞಾನವನ್ನು ಪಡೆದೆ. ಇದೇ ಆಸವಗಳ ನಿರೋಧಕ್ಕೆ ಒಯ್ಯುವ ಮಾರ್ಗ ಎಂಬ ಪ್ರತ್ಯಕ್ಷ ಜ್ಞಾನವನ್ನು ಪಡೆದೆ.
ಹೀಗೆ ಕಂಡಮೇಲೆ, ಹೀಗೆ ಅರಿತಮೇಲೆ ಕಾಮಾಸವಗಳಿಂದಲೂ ಚಿತ್ತವು ಬಿಡುಗಡೆ ಹೊಂದಿದೆ. ಭವಾಸವಗಳಿಂದಲೂ ಚಿತ್ತವು ಬಿಡುಗಡೆ ಹೊಂದಿದೆ. ಅಜ್ಞಾನದ ಆಸವಗಳಿಂದಲೂ ಚಿತ್ತವು ಬಿಡುಗಡೆ ಹೊಂದಿದೆ, ಬಿಡುಗಡೆ ಹೊಂದಿದಾಗ ಬಿಡುಗಡೆಯಾಯಿತು ಎಂದು ಅರಿವಾಯಿತು. ಜನ್ಮವು ಕೊನೆಯಾಯಿತು, ಬ್ರಹ್ಮಚರ್ಯವು ಪೂರ್ಣವಾಯಿತು, ಮಾಡಬೇಕಾದುದನ್ನು ಮಾಡಿದ್ದಾಯಿತು. ಸಾಧಿಸಬೇಕಾದ್ದು ಇನ್ನೇನು ಉಳಿದಿಲ್ಲ ಈ ಜ್ಞಾನ ಉಂಟಾಯಿತು. ಹೀಗೆ ರಾಜಕುಮಾರ, ರಾತ್ರಿಯ ಕೊನೆಯ ಜಾವದಲ್ಲಿ ಮೂರನೆಯ ಜ್ಞಾನ ಉಂಟಾಯಿತು. ಅಜ್ಞಾನವು ಹರಿದುಹೋಯಿತು, ಜ್ಞಾನ ಹುಟ್ಟಿತು; ತಮಸ್ಸು ನಾಶವಾಯಿತು, ಸದಾ ಎಚ್ಚರವಾಗಿರುವವನಿಗೆ ಉತ್ಸಾಹಶೀಲನಿಗೆ ಸಂಯಮಶೀಲನಿಗೆ ಹೇಗೆ ಆಗುತ್ತದೋ ಹಾಗೆ.
25. ರಾಜಕುಮಾರ, ನಂತರದಲ್ಲಿ ನನಗೆ ಈ ರೀತಿಯ ವಿಚಾರ ಬಂತು- ನಾನು ಅರಿತು ಜಯಗಳಿಸಿರುವ ಈ ಧರ್ಮವು ಬಹಳ ಗಂಭೀರವಾದದ್ದು. ಕಾಣಲು ಅಸಾಧ್ಯವಾದದ್ದು, ಅರಿಯಲು ಅಸಾಧ್ಯವಾದದ್ದು, ಶಾಂತವಾದದ್ದು, ಶ್ರೇಷ್ಠವಾದದ್ದು, ಮಾತಿಗೆ ಮೀರಿದ್ದು, ಸೂಕ್ಷ್ಮವಾದದ್ದು, ಪಂಡಿತರುಗಳಿಗೆ ಜ್ಞಾನ ನೀಡುವಂತದ್ದು. ಆದರೆ ಇದು ಇಂದ್ರಿಯ ಸುಖ ಲೋಲುಪತೆಯಲ್ಲಿಯೇ ಖುಷಿಪಡುವವನಿಗೆ, ಇಂದ್ರಿಯ ಸುಖಲೋಲುಪತೆಯಿಂದ ಖುಷಿ ಹೊಂದಿದವನಿಗೆ, ಇಂದ್ರಿಯ ಸುಖಲೋಲುಪತೆಯಲ್ಲಿಯೇ ಮುಳುಗಿ ಹೋದವನಿಗೆ, ಇದು ಹೊಸ ಸೃಷ್ಟಿ. ಆದ್ದರಿಂದ ಇಂದ್ರಿಯ ಸುಖಲೋಲುಪತೆಯಲ್ಲಿಯೇ ಖುಷಿಪಡುವವನಿಗೆ ಇಂದ್ರಿಯ ಸುಖಲೋಲುಪತೆಯಿಂದ ಖುಷಿ ಹೊಂದಿದವನಿಗೆ ಇಂದ್ರಿಯ ಸುಖಲೋಲುಪತೆಯಲ್ಲಿ ಮುಳುಗಿ ಹೋದವನಿಗೆ ಈ ರೀತಿಯ ಇರುವಿಕೆಯ ಸ್ಥಿತಿಯನ್ನು ಕಾಣಲು ಬಹಳ ಕಷ್ಟಸಾಧ್ಯ-ಕಾರ್ಯ ಕಾರಣ ಸಂಬಂಧವಾಗಿ ಉಂಟಾಗುವ ಈ ಹುಟ್ಟುವಿಕೆಯನ್ನು ಹಾಗೂ ಈ ರೀತಿ ಇರುವಿಕೆಯ ಸ್ಥಿತಿಯನ್ನು ಕೂಡ ಕಾಣಲು ಕಷ್ಟಸಾಧ್ಯವಾದದ್ದು. ಎಲ್ಲ ನಿಮಿತ್ತ ಕಾರ್ಯಗಳನ್ನು ನಿಮರ್ೂಲ ಮಾಡಬಹುದು. ಎಲ್ಲ ಬಂಧನಗಳನ್ನು ತೆಗೆದೊಗೆಯಬಹುದು. ತೃಷ್ಣೆಯನ್ನು ಕ್ಷಯ ಮಾಡಬಹುದು. ವಿರಾಗವಾದದ್ದು, ನಿರೋಧಿಸುವಂತದ್ದು ಈ ನಿಬ್ಬಾನ ಎಂದು. ಆದರೆ ಈ ಧರ್ಮವನ್ನು ಉಪದೇಶಿಸಿದರೆ, ನಾನು ಹೇಳಿದ್ದನ್ನು ಬೇರೆಯವರು ಅರ್ಥಮಾಡಿಕೊಳ್ಳದಿದ್ದರೆ, ಅದು ನನಗೆ ದಣಿವು ಉಂಟುಮಾಡುವಂತಿದ್ದು ಹಾಗೂ ತೊಂದರೆದಾಯಕವಾದದ್ದು ಆಗುತ್ತದೆ ಎಂದು. ರಾಜಕುಮಾರ, ಇದೂ ಅಲ್ಲದೆ ಹಿಂದೆ ಯಾರೂ ಕೇಳಿರದ ಈ ಗಾಥೆಗಳು ತಮ್ಮಷ್ಟಕ್ಕೆ ತಾವೇ ನನ್ನಲ್ಲಿ ಹೊರಹೊಮ್ಮಿದವು.
ನಾನು ಪರಿಶ್ರಮನಾಗಿ ಜಯಿಸಿದ್ದೇನೆ,
ಸಾಕು ಇದನ್ನು ನಾನು ತಿಳಿಸಬೇಕೇಕೆ,
ರಾಗ, ದ್ವೇಷ, ಮೋಹಗಳಿಂದ ಪೀಡಿತರಾಗಿರುವವರು,
ಈ ಧರ್ಮ ಅವರಿಂದ ಅರಿಯಲಾಗುವುದಿಲ್ಲ.
ಶ್ರೋತದ ವಿರುದ್ಧ ಸಾಗುವಂತಿದ್ದು, ಸೂಕ್ಷ್ಮವಾದದ್ದು,
ಗಂಭೀರವಾದದ್ದು, ಕಾಣಲಸಾಧ್ಯವಾದದ್ದು, ಅಣುರೂಪದ್ದು,
ಸುಖ ಕಾಮಿಗಳಾದವರಿಗೆ ಗೋಚರಿಸುವಂತದ್ದು,
ಅಜ್ಞಾನದ ಅಂಧಕಾರದಲ್ಲಿ ಅದ್ದಿ ಹೋಗಿರುವವರಿಗೂ ಎಂದು.
26. ರಾಜಕುಮಾರ, ನಾನು ಈ ರೀತಿಯಾಗಿ ಚಿಂತಿಸುತ್ತಿರುವಾಗ ನನ್ನ ಮನಸ್ಸು ಈ ಅಲ್ಪ ಶ್ರಮಕ್ಕಾಗಿ ಚಿಂತಿಸಿತೇ ಹೊರತು ಧರ್ಮವನ್ನು ಉಪದೇಶಿಸಬೇಕೆಂದಲ್ಲ.
ರಾಜಕುಮಾರ, ಆ ಸಮಯದಲ್ಲಿ ಬ್ರಹ್ಮಸಹಂಪತಿ ನನ್ನ ಮನದ ಈ ಚಿಂತೆಯನ್ನು ತನ್ನ ಮನದ ಮೂಲಕ ತಿಳಿದಾಗ ಈ ರೀತಿಯ ವಿಚಾರ ಬಂತು-
ಓ ಈ ಲೋಕ ನಾಶ ಹೊಂದುತ್ತದೆ, ಓ ಈ ಲೋಕ ವಿನಾಶ ಹೊಂದುತ್ತದೆ, ಏಕೆಂದರೆ ತಥಾಗತರು, ಅರ್ಹಂತರು, ಸಮ್ಮಾಸಂಬುದ್ಧರು ಈ ಅಲ್ಪ ಶ್ರಮಕ್ಕಾಗಿ ಚಿಂತಿಸುತ್ತಾರೆಯೇ ಹೊರತು ಧರ್ಮವನ್ನುಪದೇಶಿಸುವುದಕ್ಕಲ್ಲ ಎಂದು.
ರಾಜಕುಮಾರ, ಆಗ ಬ್ರಹ್ಮ ಸಹಂಪತಿ ಯಾವ ರೀತಿಯಲ್ಲಿ ಒಬ್ಬ ಬಲಶಾಲಿಯಾದ ಮನುಷ್ಯ ಮಡಿಚಿರುವ ತನ್ನ ಕೈಯನ್ನು ಮುಂದೆ ಚಾಚುವ ರೀತಿಯಲ್ಲಿ, ಮುಂದೆ ಚಾಚಿದ ಕೈಯನ್ನು ಮತ್ತೆ ಮಡಚುವ ರೀತಿಯಲ್ಲಿ, ಈ ವಿಧವಾಗಿ- ಬ್ರಹ್ಮಲೋಕದಿಂದ ಮರೆಯಾಗಿ ನನ್ನ ಮುಂದೆ ಕಾಣಿಸಿಕೊಂಡರು.
ರಾಜಕುಮಾರ, ಆನಂತರ ಬ್ರಹ್ಮಸಹಂಪತಿ ತಾನು ಹೊದ್ದಿರುವ ಹೊದಿಕೆಯನ್ನು ಒಂದು ಭುಜದ ಹೆಗಲಮೇಲೆ ಬರುವಂತೆ ಸರಿಪಡಿಸಿಕೊಂಡು ಎರಡೂ ಕರಗಳನ್ನೂ ಜೋಡಿಸಿ, ನಮಸ್ಕರಿಸಿ ನನಗೆ ಈ ರೀತಿ ಹೇಳಿದರು-
ಭದಂತರೇ, ಭಗವಾನರೇ, ಧರ್ಮವನ್ನು ಉಪದೇಶಿಸಿ, ಸುಗತರೇ ಧರ್ಮವನ್ನು ಉಪದೇಶಿಸಿ.
ಕಣ್ಣಿಗೆ ಸ್ವಲ್ಪ ಧೂಳು ಮುಚ್ಚಿರುವ ಜೀವಿಗಳು ಇದ್ದಾರೆ, ಧರ್ಮವನ್ನು ತಿಳಿಯದೆ ನಾಶ ಹೊಂದುತ್ತಿದ್ದಾರೆ. ಧರ್ಮವನ್ನು ತಿಳಿಸಿದ್ದೇ ಆದರೆ ಅವರು ಬದುಕಿ ಬೆಳೆಯುತ್ತಾರೆ ಎಂದು. ರಾಜಕುಮಾರ, ಬ್ರಹ್ಮಸಹಂಪತಿ ನನಗೆ ಹೀಗೆ ಹೇಳಿದರು. ಆನಂತರದಲ್ಲಿ ಮತ್ತೆ ಈ ರೀತಿ ಹೇಳಿದರು.
ಮುಂಚೆ ಮಗಧದಲ್ಲಿ ಹುಟ್ಟಿ ಹರಡಿತ್ತು,
ಅಶುದ್ಧವಾದ ಧರ್ಮ ಕಲುಷಿತ ಕಳೆಯಿಂದ ಕೂಡಿ.
ಸಾವು ಇರದ ಮುಕ್ತಿಯ ಬಾಗಿಲನ್ನು ತೆರೆ,
ನಿರ್ಮಲನಿಗೆ ಗೋಚರಿಸಿದ ಧರ್ಮವನ್ನು ಅವರು ಕೇಳಲಿ.
ಪರ್ವತ ಶಿಖರದ ಉತ್ತುಂಗ ಬಂಡೆಯ ಮೇಲೆ ನಿಂತು,
ಸುತ್ತ ಮುತ್ತಲಿನ ಎಲ್ಲ ಜನರನ್ನು ಕಾಣುವ ಮಾನವನ ರೀತಿ.
ಅದೇರೀತಿಯಲ್ಲಿ ಧರ್ಮವೇ ನೀನಾಗಿರುವ ಓ ಸುಜ್ಞಾನಿಯೇ,
ಹಂತ ಹಂತದ ಅನಂತ ಅರಿತಿರುವ ಸತ್ಯದರ್ಶಿಯೇ.
ದುಃಖಮುಕ್ತನೇ ನೋಡು ಈ ಜನರ ದುಃಖವನ್ನು,
ಹುಟ್ಟು ಮತ್ತು ಮುಪ್ಪಿನ ಭಾರದಿಂದ ಕುಗ್ಗಿ ಹೋಗಿರುವವರು.
ಯುದ್ಧ ವಿಜಯಿಯಾದ ಓ ವೀರನೆ ಎದ್ದೇಳು,
ಋಣವಿರದ, ವ್ಯಾಪಾರ ವಾಹಿನಿಯ ನೇತಾರ.
ಭಗವಂತನೇ ಧರ್ಮವನ್ನು ಉಪದೇಶಿಸು,
ಅದನ್ನು ಅರಿತ ಇತರರು ಕೂಡ ಉನ್ನತಿಯನ್ನು ಪಡೆಯಲಿ.
27. ರಾಜಕುಮಾರ, ಆನಂತರ ನಾನು ಬ್ರಹ್ಮನ ಈ ಸಂದೇಶವನ್ನು ತಿಳಿದುಕೊಂಡು ಜೀವಿಗಳಿಗಾಗಿ ಕರುಣೆಯಿಂದ ಬುದ್ಧ-ಚಕ್ಷುವಿನಿಂದ ಇಡೀ ಲೋಕವನ್ನು ಅವಲೋಕಿಸಿದೆನು. ಭಿಕ್ಷುಗಳೇ, ಈ ರೀತಿಯಾಗಿ ನಾನು ಬುದ್ಧ-ಚಕ್ಷುವಿನಿಂದ ಇಡೀ ಲೋಕವನ್ನು ಅವಲೋಕಿಸುತ್ತಿರುವಾಗ ಕಣ್ಣಿಗೆ ಸ್ವಲ್ಪ ಧೂಳು ಮುಚ್ಚಿರುವ ಜೀವಿಗಳು, ಬಹಳ ಧೂಳು ಮುಚ್ಚಿರುವವರು, ತೀಕ್ಷ್ಣ ಇಂದ್ರಿಯ ಸ್ವಭಾವದವರು, ಇಂದ್ರಿಯ ಮಾಂದ್ಯತೆಯವರು, ಸುಸ್ವಭಾವದವರು, ದುಸ್ವಭಾವದವರು, ವಿಧೇಯರು, ಅವಿಧೇಯರು, ಕೆಲವರು ಪಾಪವನ್ನು ಪರಲೋಕವನ್ನು ಕಂಡು ಹೆದರುವವರು ಇದ್ದಾರೆ. ಕೆಲವರು ಪಾಪವನ್ನು ಪರಲೋಕವನ್ನು ಕಂಡು ಹೆದರದಿರುವವರು ಇದ್ದಾರೆ. ಹೇಗೆ ನೀಲಿ ಕಮಲವಿರುವ ಕೊಳದಲ್ಲಾಗಲೀ, ಅಥವಾ ಕೆಂಪು ಕಮಲವಿರುವ ಕೊಳದಲ್ಲಾಗಲೀ, ಅಥವಾ ಬಿಳಿ ಕಮಲವಿರುವ ಕೊಳದಲ್ಲಾಗಲೀ ಕೆಲವು ನೀಲಿ ಕಮಲಗಳು ಅಥವಾ ಕೆಂಪು ಕಮಲಗಳು ಅಥವಾ ಬಿಳಿ ಕಮಲಗಳು ನೀರಿನಲ್ಲಿ ಹುಟ್ಟುತ್ತವೆ, ನೀರಿನಲ್ಲಿಯೇ ಬೆಳೆಯುತ್ತವೆ. ನೀರಿನಿಂದ ಮೇಲಕ್ಕೆ ಬರದೆ, ಆದರೆ ಮುಳುಗಿಕೊಂಡಿದ್ದು ಉಳಿಯುತ್ತವೆ, ಕೆಲವು ನೀಲಿ ಕಮಲಗಳು ಅಥವಾ ಕೆಂಪು ಕಮಲಗಳು ಅಥವಾ ಬಿಳಿ ಕಮಲಗಳು ನೀರಿನಲ್ಲಿ ಹುಟ್ಟುತ್ತವೆ, ನೀರಿನಲ್ಲಿಯೇ ಬೆಳೆಯುತ್ತವೆ ಹಾಗೂ ನೀರಿನ ಮೇಲ್ಮೈಯ ಹಂತವನ್ನು ತಲುಪಿ ಉಳಿಯುತ್ತವೆ, ಕೆಲವು ನೀಲಿ ಕಮಲಗಳು ಅಥವಾ ಕೆಂಪು ಕಮಲಗಳು ಅಥವಾ ಬಿಳಿ ಕಮಲಗಳು ನೀರಿನಲ್ಲಿ ಹುಟ್ಟುತ್ತವೆ, ನೀರಿನಲ್ಲಿಯೇ ಬೆಳೆಯುತ್ತವೆ, ನೀರಿನಿಂದ ಹೊರಚಿಮ್ಮಿ ಬೆಳೆಯುತ್ತವೆ, ನೀರಿನಿಂದ ಕಲುಷಿತಗೊಳ್ಳದೆ ಉಳಿಯುತ್ತವೆ. ರಾಜಕುಮಾರ, ಇದೇರೀತಿಯಾಗಿ ನಾನು, ಬುದ್ಧ ಚಕ್ಷುವಿನಿಂದ ಲೋಕವನ್ನು ಅವಲೋಕಿಸಿದಾಗ ಕಣ್ಣಿಗೆ ಸ್ವಲ್ಪ ಧೂಳು ಮುಚ್ಚಿರುವ ಜೀವಿಗಳು, ಬಹಳ ಧೂಳು ಮುಚ್ಚಿರುವವರು, ತೀಕ್ಷ್ಣ ಇಂದ್ರಿಯವುಳ್ಳವರು, ಇಂದ್ರಿಯ ಮಾಂದ್ಯತೆಯವರು, ಸುಸ್ವಭಾವದವರು, ದುಸ್ವಭಾವದವರು, ವಿಧೇಯರು, ಅವಿಧೇಯರು, ಕೆಲವರು ಪಾಪವನ್ನು ಪರಲೋಕವನ್ನು ಕಂಡು ಹೆದರುವವರು ಇದ್ದಾರೆ, ಕೆಲವರು ಪಾಪವನ್ನು ಪರಲೋಕವನ್ನು ಕಂಡು ಹೆದರದಿರುವವರು ಇದ್ದಾರೆ. ರಾಜಕುಮಾರ, ನಂತರದಲ್ಲಿ ನಾನು ಬ್ರಹ್ಮ ಸಹಂಪತಿಯನ್ನು ಈ ಗಾಥೆಗಳಿಂದ ಉತ್ತರಿಸಿದೆನು.
ಸಾವು ಇರದ ಮುಕ್ತಿಯ ಬಾಗಿಲು ಅವರಿಗೆ ತೆರೆದೇ ಇರುತ್ತದೆ,
ಯಾರು ಶ್ರದ್ಧೆಯಿಂದ ಮುಕ್ತಿಯ ಶ್ರೋತದಲ್ಲಿ ಸಾಗುತ್ತಾರೋ ಅವರಿಗೆ
ಅನುಪಯುಕ್ತ ಆಯಾಸ ಯೋಚಿಸಿ ನಾನು ಉಪದೇಶಿಸಲಿಲ್ಲ,
ಮಾನವರಿಗೆ ಒಳಿತು ಮಾಡುವ ಧರ್ಮವನ್ನು ಓ ಬ್ರಹ್ಮಾ ಎಂದು.
28. ರಾಜಕುಮಾರ, ಆಗ ಬ್ರಹ್ಮ ಸಹಂಪತಿ ಭಗವಂತರು ಧರ್ಮವನ್ನು ಉಪದೇಶಿಸುವ ಅಗತ್ಯವನ್ನು ನಾನು ಒದಗಿಸಿದೆ ಎಂದು ನನಗೆ ಪ್ರದಕ್ಷಿಣೆ ಮಾಡಿ ನಮಸ್ಕಾರ ಮಾಡಿ ಅಲ್ಲಿಯೇ ಆಗಲೇ ಕಾಣದಾದರು.
ರಾಜಕುಮಾರ, ನಂತರದಲ್ಲಿ ನನಗೆ ಈ ರೀತಿಯ ವಿಚಾರ ಬಂತು- ಮೊದಲಿಗೆ ನಾನು ಯಾರಿಗೆ ಈ ಧರ್ಮವನ್ನು ಉಪದೇಶಿಸಲಿ? ಯಾರು ಈ ಧರ್ಮವನ್ನು ಜಾಗ್ರತೆಯಾಗಿ ಅರಿಯಬಲ್ಲರು? ಎಂದು. ರಾಜಕುಮಾರ, ಆ ನಂತರದಲ್ಲಿ ನನಗೆ ಈ ರೀತಿಯ ವಿಚಾರ ಬಂತು- ನಿಜಕ್ಕೂ ಆಲಾರಕಾಲಾಮರು ಪಂಡಿತರು, ಅನುಭವಶಾಲಿಗಳು, ಮೇಧಾವಿ ಬಹು ಕಾಲದವರೆಗೆ ಕಣ್ಣಿನಲ್ಲಿ ಸ್ವಲ್ಪ ಧೂಳು ಉಳ್ಳವರಾಗಿದ್ದರು; ಆದ್ದರಿಂದ ಆಲಾರಕಾಲಾಮರಿಗೆ ಮೊದಲಿಗೆ ಧರ್ಮವನ್ನು ಉಪದೇಶಿಸುತ್ತೇನೆ. ಅವರು ಈ ಧರ್ಮವನ್ನು ಜಾಗ್ರತೆಯಾಗಿ ಅರಿಯಬಲ್ಲರು ಎಂದು. ರಾಜಕುಮಾರ, ಆ ಸಮಯದಲ್ಲಿ ದೇವತೆಗಳು ನನ್ನ ಸಮೀಪಕ್ಕೆ ಬಂದು ಈ ರೀತಿ ಹೇಳಿದರು: ಭದಂತರೇ, ಆಲಾರಕಾಲಾಮರು ಗತಿಸಿ ಏಳು ದಿನಗಳಾಯಿತು ಎಂದರು. ಈ ರೀತಿಯಾಗಿ ಜ್ಞಾನ ಮತ್ತು ದರ್ಶನಗಳು ನನ್ನಲ್ಲಿ ಉದಯಿಸಿದವು ಆಲಾರಕಾಲಾಮರು ಗತಿಸಿ ಏಳು ದಿನಗಳಾಯಿತು ಎಂದು. ರಾಜಕುಮಾರ, ಆನಂತರದಲ್ಲಿ ನನಗೆ ರೀತಿಯ ವಿಚಾರ ಬಂತು- ಆಲಾರಕಾಲಾಮರಿಗೆ ಬಹಳ ನಷ್ಟವಾದಂತಾಯಿತು. ನಿಜಕ್ಕೂ ಅವರು ಈ ಧರ್ಮವನ್ನು ಕೇಳಿದ್ದೇ ಆಗಿದ್ದರೆ ಜಾಗ್ರತೆಯಾಗಿ ಅರಿತುಕೊಳ್ಳುತ್ತಿದ್ದರು ಎಂದು.
29. ರಾಜಕುಮಾರ, ಆನಂತರದಲ್ಲಿ ನನಗೆ ಈ ರೀತಿಯ ವಿಚಾರ ಬಂತು- ಮೊದಲಿಗೆ ನಾನು ಯಾರಿಗೆ ಈ ಧರ್ಮವನ್ನು ಉಪದೇಶಿಸಬೇಕು? ಯಾರು ಈ ಧರ್ಮವನ್ನು ಜಾಗ್ರತೆಯಾಗಿ ಅರಿಯಬಲ್ಲರು? ಎಂದು. ರಾಜಕುಮಾರ, ಆನಂತರದಲ್ಲಿ ನನಗೆ ಈ ರೀತಿಯ ವಿಚಾರ ಬಂತು- ನಿಜಕ್ಕೂ ಉದ್ದಕ ರಾಮಪುತ್ತರು, ಪಂಡಿತರು, ಅನುಭವಶಾಲಿಗಳು, ಮೇಧಾವಿ ಬಹುಕಾಲದವರೆಗೆ ಕಣ್ಣಿನಲ್ಲಿ ಸ್ವಲ್ಪ ಧೂಳು ಉಳ್ಳವರಾಗಿದ್ದರು; ಆದ್ದರಿಂದ ಉದ್ದಕ ರಾಮಪುತ್ರರಿಗೆ ಮೊದಲಿಗೆ ಈ ಧರ್ಮವನ್ನು ಉಪದೇಶಿಸುತ್ತೇನೆ. ಅವರು ಈ ಧರ್ಮವನ್ನು ಜಾಗ್ರತೆಯಾಗಿ ಅರಿಯಬಲ್ಲರು ಎಂದು. ರಾಜಕುಮಾರ, ಆ ಸಮಯದಲ್ಲಿ ದೇವತೆಗಳು ನನ್ನ ಸಮೀಪಕ್ಕೆ ಬಂದು ಈ ರೀತಿ ಹೇಳಿದರು ಭದಂತರೇ, ಉದ್ದಕ ರಾಮಪುತ್ರರು ನೆನ್ನೆ ರಾತ್ರಿ ಗತಿಸಿದರು ಎಂದು. ರಾಜಕುಮಾರ, ನಂತರದಲ್ಲಿ ನನಗೆ ಈ ರೀತಿಯ ವಿಚಾರ ಬಂತು- ಉದ್ದಕ ರಾಮಪುತ್ರರಿಗೆ ಬಹಳ ನಷ್ಟವಾದಂತಾಯಿತು. ನಿಜಕ್ಕೂ ಅವರು ಈ ಧರ್ಮವನ್ನು ಕೇಳಿದ್ದೇ ಆಗಿದ್ದರೆ ಜಾಗ್ರತೆಯಾಗಿ ಅರಿತುಕೊಳ್ಳುತ್ತಿದ್ದರು ಎಂದು.
ರಾಜಕುಮಾರ, ಆನಂತರದಲ್ಲಿ ನನಗೆ ಈ ರೀತಿಯ ವಿಚಾರ ಬಂತು- ಮೊದಲಿಗೆ ನಾನು ಯಾರಿಗೆ ಈ ಧರ್ಮವನ್ನು ಉಪದೇಶಿಸಲಿ; ಯಾರು ಈ ಧರ್ಮವನ್ನು ಜಾಗ್ರತೆಯಾಗಿ ಅರಿಯಬಲ್ಲರು? ಎಂದು. ರಾಜಕುಮಾರ, ಆನಂತರದಲ್ಲಿ ನನಗೆ ಈ ರೀತಿಯ ವಿಚಾರ ಬಂತು- ನನಗೆ ಉಪಕಾರಿಯಾಗಿದ್ದ ಐದು ಜನ ಸನ್ಯಾಸಿಗಳ ಗುಂಪು, ನಾನು ಕಠೋರವಾಗಿ ಶ್ರಮಿಸುತ್ತಿದ್ದಾಗ ಬಹಳ ಸಹಾಯಕರಾಗಿದ್ದರು. ಆದ್ದರಿಂದ ಈ ಐದು ಜನ ಸನ್ಯಾಸಿಗಳ ಗುಂಪಿಗೆ ಮೊದಲಿಗೆ ಧರ್ಮವನ್ನು ಉಪದೇಶಿಸುತ್ತೇನೆ ಎಂದು. ರಾಜಕುಮಾರ, ಆನಂತರದಲ್ಲಿ ನನಗೆ ಈ ರೀತಿಯ ವಿಚಾರ ಬಂತು - ಆದರೆ ಈ ಐದು ಜನ ಸನ್ಯಾಸಿಗಳ ಗುಂಪು ಯಾವ ಸ್ಥಳದಲ್ಲಿ ಜೀವಿಸುತ್ತಿದ್ದಾರೆ? ಎಂದು. ರಾಜಕುಮಾರ, ಆ ಸಮಯದಲ್ಲಿ ನಾನು ಪರಿಶುದ್ಧವಾದ ಹಾಗೂ ಮಾನವರ ದೃಷ್ಟಿಗೆ ನಿಲುಕದ ಆದರೆ ದಿವ್ಯ ದೃಷ್ಟಿಗೆ ಐದುಜನ ಸನ್ಯಾಸಿಗಳ ಗುಂಪು ವಾರಾಣಸಿಯ ಬಳಿಯ ಇಸಿಪಟನದ ಜಿಂಕೆಯ ವನದಲ್ಲಿ ಜೀವಿಸುತ್ತಿರುವುದು ಕಂಡುಬಂತು.
30. ರಾಜಕುಮಾರ, ಆಗ ನಾನು ಉರುವೇಲದಲ್ಲಿ ಎಷ್ಟುಕಾಲ ಉಳಿಯಬೇಕೆನಿಸಿತ್ತೊ ಅಷ್ಟುಕಾಲ ಉಳಿದು ನಂತರದಲ್ಲಿ ಕಾಲ ನಡಿಗೆಯಲ್ಲಿ ವಾರಾಣಸಿಯ ಕಡೆಗೆ ಹೊರಟೆನು. ರಾಜಕುಮಾರ ಆ ಸಮಯದಲ್ಲಿ ಉಪಕನೆಂಬ ದಿಗಂಬರ ಸಾಧು ಬೋಧಿವೃಕ್ಷ ಮತ್ತು ಗಯಾ ಈ ಮಧ್ಯದ ದಾರಿಯಲ್ಲಿ ನನ್ನನ್ನು ಕಂಡು ಈ ರೀತಿ ಹೇಳಿದನು- ಆಯುಷ್ಮಂತರೇ, ನಿಮ್ಮ ಇಂದ್ರಿಯಗಳು ಬಹಳ ಪರಿಶುಭ್ರವಾಗಿವೆ. ದೇಹಕಾಂತಿ ಪರಿಶುದ್ಧವಾಗಿದೆ ಮತ್ತು ಪರಿಪೂರ್ಣವಾಗಿದೆ! ಆಯುಷ್ಮಂತರೇ, ನೀವು ಯಾರ ಬಳಿಯಲ್ಲಿ ಶಿಷ್ಯವೃತ್ತಿಯನ್ನು ಮಾಡಿದಿರಿ; ಅಥವಾ ನೀವು ಯಾವುದರ ಸಲುವಾಗಿ; ಅಥವಾ ನೀವು ಯಾವ ಧರ್ಮವನ್ನು ನಂಬಿ ಪ್ರಚಾರ ಮಾಡುತ್ತೀರಿ? ಎಂದು. ಹೀಗೆ ಹೇಳಿದ ಮೇಲೆ ರಾಜಕುಮಾರ, ನಾನು ದಿಗಂಬರ ಸಾಧು ಉಪಕನಿಗೆ ಗಾಥೆಗಳ ಮೂಲಕ ಈ ರೀತಿಯಾಗಿ ಹೇಳಿದೆನು.
ಸರ್ವ ವಿಜಯಿ ನಾನು, ಸರ್ವ ಜ್ಞಾನಿ ನಾನು,
ಎಲ್ಲ ಧರ್ಮಗಳಿಗಿಂತ ಪರಿಶುದ್ಧನು ನಾನು,
ಎಲ್ಲ ಬಿಟ್ಟು ತಣ್ಹ ಕ್ಷಯಿಸಿ ವಿಮುಕ್ತನಾದವನು,
ನನಗೆ ನಾನೇ ಅರಿತವನು, ಯಾರಿಂದ ಎಂದು ಹೇಳಲಿ?
ಆಚಾರ್ಯರು ನನಗೆ ಯಾರೂ ಇಲ್ಲ,
ನನ್ನಂಥವರು ಯಾರೂ ಜೀವಿಸಿಲ್ಲ.
ದೇವತೆಗಳೂ ಇರುವ ಈ ಲೋಕದಲ್ಲಿ,
ನನಗೆ ಯಾರೂ ಸರಿಸಮಾನರಿಲ್ಲ.
ಲೋಕದಲ್ಲಿ ನಾನೇ ಅರ್ಹಂತನು,
ನಾನೇ ಸಾಟಿ ಇರದ ಶಾಸ್ತನು (ಗುರುವು).
ನಾನೊಬ್ಬನೇ ಸಮ್ಮಾಸಂಬುದ್ಧನು,
ನಿಬ್ಬಾನವನ್ನು ಪಡೆದ ಉಪಶಾಂತನು ನಾನು
ಧರ್ಮಚಕ್ರವನ್ನು ಆವರ್ತಿಸಲೆಂದು,
ಕಾಶಿನಗರಕ್ಕೆ ನಡೆಯುತಿಹೆ ನಾನು.
ಕುರುಡಾಗಿರುವ ಲೋಕ ಜೀವಿಗಳಿಗೆ,
ಮರಣ ವಿಮುಖ ದುಂದುಭಿಯನ್ನು ಮೊಳಗಿಸಲು.
ಆಯುಷ್ಮಂತರೇ, ಹಾಗಾದರೆ ಯಾವುದನ್ನು ತಿಳಿದದ್ದರಿಂದ ಅರ್ಹಂತನೆಂದು, ಅನಂತವನ್ನು ಜಯಿಸಿದವನೆಂದು ಹೇಳುವಿರಿ?
ನನ್ನಂತೆ ಅವರೂ ವಿಜಯಿಗಳು ಹೌದು,
ಯಾರು ಆಸವಗಳನ್ನು ಕ್ಷಯಿಸುತ್ತಾರೋ ಅವರು.
ಪಾಪ ಧರ್ಮಗಳನ್ನು ನಾನು ಜಯಿಸಿದ್ದೇನೆ,
ಆದ್ದರಿಂದ ನಾನು ವಿಜಯಿ ಎಂದು.
ರಾಜಕುಮಾರ, ಹೀಗೆ ಹೇಳಿದಮೇಲೆ ದಿಗಂಬರ ಸಾಧು ಉಪಕನು ಆಯುಷ್ಮಂತರೇ, ಹಾಗೇ ಆಗಲಿ ಎಂದು ಹೇಳಿ ತಲೆ ಅಲ್ಲಾಡಿಸಿ ಬೇರೊಂದು ದಾರಿ ಹಿಡಿದು ಹೊರಟುಹೋದನು.
31. ರಾಜಕುಮಾರ, ಆಗ ನಾನು ಕಾಲು ನಡಿಗೆಯಲ್ಲಿ ನಡೆಯುತ್ತ ನಡೆದುಕೊಂಡೇ ವಾರಾಣಸಿಯ ಇಸಿಪತನದ ಜಿಂಕೆಯ ವನಕ್ಕೆ ಬಂದು ಅಲ್ಲಿ ಐದು ಜನ ಸನ್ಯಾಸಿಯರ ಗುಂಪು ಇದ್ದಲ್ಲಿಗೆ ಸಮೀಪಿಸಿದೆನು. ರಾಜಕುಮಾರ, ಆ ಸಮಯದಲ್ಲಿ ಐದು ಜನ ಸನ್ಯಾಸಿಗಳ ಗುಂಪು ನಾನು ಬರುತ್ತಿರುವುದನ್ನು ದೂರದಲ್ಲಿರುವಂತೆಯೇ ಕಂಡರು; ಕಂಡು ತಮ್ಮ ತಮ್ಮಲ್ಲೇ ಈ ರೀತಿ ಹೇಳಿಕೊಂಡರು- ಆಯುಷ್ಮಂತರೇ, ಅದೋ ಅಲ್ಲಿ ಶ್ರಮಣ ಗೋತಮನು ಬರುತ್ತಿದ್ದಾನೆ. ಭೋಗಿಯಾದವನು, ಸಾಧನೆಯಲ್ಲಿ ಚಂಚಲೆಯಾದವನು, ಭೋಗಲಾಲಸೆಯ ಜೀವನಕ್ಕೆ ಹಿಂದಿರುಗಿದವನು. ಆದ್ದರಿಂದ ಅವನಿಗೆ ನಮಸ್ಕರಿಸಬಾರದು, ಬಂದಾಗ ಎದ್ದು ನಿಲ್ಲಬಾರದು; ಅವನ ಚೀವರ ಮತ್ತು ಪಿಂಡಪಾತ್ರೆಯನ್ನು ಹಿಡಿದು ಗೌರವಿಸಬಾರದು. ಆದರೂ ಒಂದು ಆಸನವನ್ನು ಹಾಸಿರೋಣ, ಅದರ ಮೆಲೆ ಕುಳಿತುಕೊಳ್ಳುವುದಾದರೆ ಕುಳಿತುಕೊಳ್ಳಲಿ. ರಾಜಕುಮಾರ, ಹೇಗೆ ಹೇಗೆ ನಾನು ಹತ್ತಿರಕ್ಕೆ ಸಮೀಪಿಸಿದೆನೋ ಹಾಗೆ ಹಾಗೆಯೇ ಐದುಜನ ಸನ್ಯಾಸಿಗಳ ಗುಂಪು ಮೊದಲು ಏನು ಮಾತಾಡಿಕೊಂಡಿದ್ದರೋ ಅದರಂತೆಯೇ ನಡೆಯಲಾಗಲಿಲ್ಲ. ಕೆಲವರು ನಾನು ಹತ್ತಿರ ಬರುತ್ತಿದ್ದಂತೆಯೇ ಚೀವರ ಮತ್ತು ಪಿಂಡಪಾತ್ರೆಯನ್ನು ಹಿಡಿದುಕೊಂಡರು, ಇನ್ನು ಕೆಲವರು ಆಸನವನ್ನು ಸಿದ್ಧಪಡಿಸಿದರು, ಇನ್ನು ಕೆಲವರು ಕಾಲು ತೊಳೆಯುವುದಕ್ಕಾಗಿ ನೀರನ್ನು ತಂದರು. ನಂತರ ಅವರು ನನ್ನ ಹೆಸರಿನೊಂದಿಗೆ ಆಯುಷ್ಮಂತರೇ ಎಂಬುದಾಗಿ ಗೌರವಿಸಿ ಕರೆದರು.
ರಾಜಕುಮಾರ, ಹೀಗೆ ಹೇಳಿದ ನಂತರ, ನಾನು ಐದು ಜನ ಸನ್ಯಾಸಿಗಳ ಗುಂಪಿಗೆ ಈ ರೀತಿ ಹೇಳಿದೆನು-
ಭಿಕ್ಷುಗಳೇ, ತಥಾಗತರವನ್ನು ಹೆಸರಿನಿಂದಾಗಲಿ ಮತ್ತು ಆಯುಷ್ಮಂತರೇ ಎಂಬುದಾಗಿ ಕರೆಯಬಾರದು.
ಭಿಕ್ಷುಗಳೇ, ತಥಾಗತರು ಅರ್ಹಂತರಾಗಿರುವವರು, ಸಮ್ಮಾಸಂಬುದ್ಧರಾಗಿರುವವರು. ಭಿಕ್ಷುಗಳೇ, ಕಿವಿಗೊಟ್ಟು ಕೇಳಿ, ಮೃತ್ಯುವಿಮುಖ ಸ್ಥಿತಿ ಕಂಡುಬಂದಿದೆ, ನಾನು ತಿಳಿಹೇಳುತ್ತೇನೆ. ನಾನು ಧರ್ಮವನ್ನು ಉಪದೇಶಿಸುತ್ತೇನೆ.
ಯಾವ ರೀತಿಯಾಗಿ ವಿಧಿಸಲ್ಪಟ್ಟಿದೆಯೋ ಆ ರೀತಿಯಾಗಿ ಆಚರಣೆ ಮಾಡಿದರೆ ಯಾವ ಕಾರಣಕ್ಕಾಗಿ ಕುಟುಂಬದಲ್ಲಿನ ಯುವಜನ ಮನೆ ತೊರೆದು ಮನೆ ಇಲ್ಲದವರಾಗಿ ಅಲೆದಾಡುತ್ತಾರೋ ಅದಕ್ಕೆ ಉತ್ತರವಾಗಿ-ಬ್ರಹ್ಮಚರಿಯ ಪರಿಪಾಲನೆ ಮಾಡುತ್ತ ಇಲ್ಲಿಯೇ, ಈಗಲೇ ತನಗೆ ತಾನೇ ಧರ್ಮದ ಪರಮಜ್ಞಾನವನ್ನು ತಿಳಿದುಕೊಂಡು ಅದರಲ್ಲಿಯೇ ಉಳಿದು ಜೀವಿಸಬಹುದು.
ರಾಜಕುಮಾರ, ಹೀಗೆ ಹೇಳಿದ ಮೇಲೆ ಐದು ಜನ ಸನ್ಯಾಸಿಗಳ ಗುಂಪು ನನಗೆ ಈ ರೀತಿ ಕೇಳಿದರು-
ಆದರೆ ನೀವು ಆಯುಷ್ಮಂತ ಗೋತಮರೇ, ಆಗ ಪರಿಶ್ರಮಿಸುತ್ತಿದ್ದಾಗ, ಆಗಿನ ಮಾರ್ಗ ಅನುಸರಿಸುತ್ತಿದ್ದಾಗ ಆ ರೀತಿಯ ಕಠೋರ ಸಾಧನೆ ಮಾಡುತ್ತಿದ್ದಾಗ ಗಳಿಸಲಾಗದಿದ್ದ, ಹಿರಿಯ ಜ್ಞಾನ ಸಿದ್ಧಿಯ ಸ್ಥಿತಿ ಆರ್ಯರ ಜ್ಞಾನ ದರ್ಶನಗಳ ವಿಶೇಷತೆ ಆಗಲೇ ಸಿದ್ಧಿಸಲಿಲ್ಲ. ಆದ್ದರಿಂದ ನೀವು ಈ ರೀತಿಯ ಭೋಗಿಯಾದ ಬಳಿಕ ಸಾಧನೆಯಲ್ಲಿ ಚಂಚಲತೆ ಉಳ್ಳವರಾದ ಬಳಿಕ ಭೋಗಲಾಲಸೆಯ ಜೀವನಕ್ಕೆ ಹಿಂದಿರುಗಿದ ಬಳಿಕ ಹಿರಿಯ ಜ್ಞಾನ ಸಿದ್ಧಿಯ ಸ್ಥಿತಿಯನ್ನು ಆರ್ಯರು ಜ್ಞಾನ ದರ್ಶನಗಳ ವಿಶೇಷತೆಯನ್ನು ಸಿದ್ಧಿಸಿದೆ, ಎನ್ನುವಿರಲ್ಲ?.
ಹೀಗೆ ಹೇಳಿದ ಬಳಿಕ,
ರಾಜಕುಮಾರ, ನಾನು ಐದುಜನ ಸನ್ಯಾಸಿಗಳ ಗುಂಪಿಗೆ ಹೇಳಿದೆನು-
ಭಿಕ್ಷುಗಳೇ, ತಥಾಗತರು ಭೋಗಿಗಳಲ್ಲ, ಸಾಧನೆಯಲ್ಲಿ ಚಂಚಲಿಗಳಲ್ಲ, ಭೋಗಲಾಲಸೆಯ ಜೀವನಕ್ಕೆ ಹಿಂದಿರುಗಿದವರಲ್ಲ.
ಭಿಕ್ಷುಗಳೇ, ತಥಾಗತರು ಅರ್ಹಂತರಾಗಿರುವವರು, ಸಮ್ಮಾಸಂಬುದ್ಧರಾಗಿರುವವರು,
ಭಿಕ್ಷುಗಳೇ, ಕಿವಿಗೊಟ್ಟು ಕೇಳಿ. ಮೃತ್ಯುವಿಮುಖ ಸ್ಥಿತಿ ಕಂಡುಬಂದಿದೆ. ನಾನು ತಿಳಿಹೇಳುತ್ತೇನೆ, ನಾನು ಧರ್ಮವನ್ನು ಉಪದೇಶಿಸುತ್ತೇನೆ.
ಯಾವ ರೀತಿಯಾಗಿ ವಿಧಿಸಲ್ಪಟ್ಟಿದೆಯೋ ಆ ರೀತಿಯಾಗಿ ಆಚರಣೆ ಮಾಡಿದರೆ- ಯಾವ ಕಾರಣಕ್ಕಾಗಿ ಕುಟುಂಬದಲ್ಲಿನ ಯುವಜನ ಮನೆ ತೊರೆದು ಮನೆ ಇಲ್ಲದವರಾಗಿ ಅಲೆದಾಡುತ್ತಾರೋ ಅದಕ್ಕೆ ಉತ್ತರವಾಗಿ-ಬ್ರಹ್ಮಚರಿಯ ಪರಿಪಾಲನೆ ಮಾಡುತ್ತ ಇಲ್ಲಿಯೇ ಈಗಲೇ ತನಗೆ ತಾನೇ ಧರ್ಮದ ಪರಮ ಜ್ಞಾನವನ್ನು ತಿಳಿದುಕೊಂಡು ಅದರಲ್ಲಿಯೇ ಉಳಿದು ಜೀವಿಸಬಹುದು.
32. ಈ ಪಂಚವಗ್ಗೀಯ ಭಿಕ್ಖುಗಳು ನನ್ನಿಂದ ಬೋಧನೆಯನ್ನು ಮತ್ತು ಸೂಚನೆಗಳನ್ನು ಪಡೆದ ಸ್ವಲ್ಪ ಕಾಲದಲ್ಲೇ ಸ್ವಯಂ ಅಭಿಜ್ಞಾನದ ಮೂಲಕ ಪರಮ ಗುರಿಯನ್ನು ಮುಟ್ಟಿ ಆ ಕೂಡಲೇ ಅಲ್ಲಿಯೇ ನೆಲೆಸಲು ಯಾವ ಕುಲಪುತ್ರರು ನ್ಯಾಯವಾಗಿಯೇ ಮನೆಯನ್ನು ತೊರೆದು ಪಬ್ಬಜಿತರಾಗುತ್ತಾರೊ ಅಂತಹ ಸ್ವಯಂ ಅಭಿಜ್ಞಾನವನ್ನು ಪಡೆದರು.
ಹೀಗೆ ಹೇಳಿದಮೇಲೆ ಬೋಧಿರಾಜಕುಮಾರನು ಭಗವಾನರಿಗೆ ಹೇಳಿದನು: ಭಂತೆ, ಸ್ವಯಂ ಅಭಿಜ್ಞಾನದ ಮೂಲಕ ಬ್ರಹ್ಮಚರ್ಯದ ಪರಮ ಗುರಿಯನ್ನು ಮುಟ್ಟಿ ಆ ಕೂಡಲೇ ಅಲ್ಲಿಯೇ ಆಗಲೇ ನೆಲೆಸಲು ಇಚ್ಛಿಸುವುದಕ್ಕಾಗಿ ಯಾವ ಕುಲಪುತ್ರರು ಮನೆಯನ್ನು ತೊರೆದು ಪಬ್ಬಜಿತರಾಗುತ್ತಾರೊ ಅಂತಹ ಸ್ಥಿತಿಯನ್ನು ತಥಾಗತರಿಂದ ಶಿಕ್ಷಣ ಪಡೆದ ಭಿಕ್ಖುಗಳು ಎಷ್ಟು ಕಾಲದಲ್ಲಿ ಸ್ವಯಂ ಅಭಿಜ್ಞಾನದ ಸಾಕ್ಷಾತ್ಕಾರ ಮಾಡಿಕೊಳ್ಳುತ್ತಾರೆ?
ಇದಕ್ಕೆ ರಾಜಕುಮಾರರೇ ನಾನೊಂದು ಮರುಪ್ರಶ್ನೆಯನ್ನು ಹಾಕುತ್ತೇನೆ. ನಿನಗೆ ಬಂದಂತೆ ಅದನ್ನು ಉತ್ತರಿಸಿ ಏನೆನ್ನುವಿರಿ, ರಾಜಕುಮಾರ! ನೀವು ಆನೆಯ ಮೇಲೆ ಕುಳಿತು ಸವಾರಿ ಮಾಡುವಾಗ ಅದನ್ನು ಅಂಕುಶದಿಂದ ಹೇಗೆ ನಿಯಂತ್ರಿಸಬೇಕು ಎನ್ನುವ ಕೌಶಲ್ಯವಿದೆಯೆ?
ಇದೆ ಭಂತೆ.
ಇದಕ್ಕೆ ಏನೆಂದು ಯೋಚಿಸುವಿರಿ, ರಾಜಕುಮಾರ? ಇಲ್ಲೊಬ್ಬ ವ್ಯಕ್ತಿ ಬಂದು ಹೀಗೆ ಯೋಚಿಸುತ್ತಾನೆ: ಬೋಧಿರಾಜಕುಮಾರನು ಆನೆಯ ಮೇಲೆ ಕುಳಿತು ಸವಾರಿ ಮಾಡುವಾಗ ಅಂಕುಶವನ್ನು ಪ್ರಯೋಗಿಸುವ ಕಲೆಯನ್ನು ತಿಳಿದಿದ್ದಾನೆ, ನಾನು ಅವರಿಂದ ಈ ಕಲೆಯಲ್ಲಿ ತರಬೇತಿ ಪಡೆದರೆ ಹೇಗೆ? ಅವನು ಅಶ್ರದ್ಧೆಯುಳ್ಳವನಾಗಿದ್ದರೆ ಶ್ರದ್ಧೆಯುಳ್ಳವನು ಹೇಗೆ ಸಾಧಿಸಬಹುದೋ ಆ ರೀತಿ ಅವನು ಸಾಧಿಸಲಾರ; ಅವನು ಬಹಳಷ್ಟು ಅನಾರೋಗ್ಯದಿಂದ ಬಳಲುತ್ತಿದ್ದರೆ ಆರೋಗ್ಯವಂತನು ಸಾಧಿಸುವಂತೆ ಅವನು ಸಾಧಿಸಲಾರ. ಅವನು ಮೋಸ, ಕುತಂತ್ರವುಳ್ಳವನಾಗಿದ್ದರೆ ಪ್ರಾಮಾಣಿಕನು ಸತ್ಯವಂತನು ಸಾಧಿಸುವಂತೆ ಸಾಧಿಸಲಾರ. ಅವನು ಸೋಮಾರಿಯಾಗಿದ್ದರೆ ವೀರ್ಯವಂತನು ಏನು ಸಾಧಿಸಬಹುದೋ ಅದನ್ನು ಅವನು ಸಾಧಿಸಲಾರ; ಅವನು ಪ್ರಜ್ಞಾವಂತನಲ್ಲದವನಾದರೆ ಪ್ರಜ್ಞಾವಂತನು ಸಾಧಿಸುವಂತೆ ಅವನು ಸಾಧಿಸಲಾರ. ಈಗ ಏನೆಂದು ಯೋಚಿಸುವಿರಿ, ರಾಜಕುಮಾರ? ಇಂತಹ ವ್ಯಕ್ತಿಯು ನಿಮ್ಮ ಅಡಿಯಲ್ಲಿ ಆನೆಯ ಮೇಲೆ ಕುಳಿತು ಸವಾರಿ ಮಾಡುವಾಗ ಅಂಕುಶ ಪ್ರಯೋಗ ಮಾಡುವ ಕಲೆಯನ್ನು ಕಲಿಯುವನೆ?
ಭಂತೆ, ಅವನು ಈ ಐದರಲ್ಲಿ ಒಂದು ಊನವನ್ನು ಹೊಂದಿದ್ದರೂ ನನ್ನ ಅಡಿಯಲ್ಲಿ ಕಲಿಯಲಾರ. ಇನ್ನು ಐದರ ಬಗ್ಗೆ ಏನು ಹೇಳುವುದು?
33. ಈಗ ಏನೆಂದು ಯೋಚಿಸುವಿರಿ, ರಾಜಕುಮಾರ? ಒಬ್ಬ ವ್ಯಕ್ತಿ ಇಲ್ಲಿಗೆ ಬಂದು ಹೀಗೆ ಯೋಚಿಸುತ್ತಾನೆ: ಭೋಧಿ ರಾಜಕುಮಾರನು ಆನೆಯ ಮೇಲೆ ಕುಳಿತು ಸವಾರಿ ಮಾಡುವಾಗ ಅಂಕುಶವನ್ನು ಪ್ರಯೋಗಿಸುವ ಕಲೆಯನ್ನು ಅರಿತಿದ್ದಾನೆ. ನಾನು ಅವರಿಂದ ಈ ಕಲೆಯನ್ನು ಕಲಿತರೆ ಹೇಗೆ? ಅವನು ಶ್ರದ್ಧೆಯುಳ್ಳವನಾದಲ್ಲಿ ಒಬ್ಬ ಶ್ರದ್ಧಾವಂತನು ಏನನ್ನು ಸಾಧಿಸಬಹುದು ಅದನ್ನು ಅವನು ಸಾಧಿಸುತ್ತಾನೆ; ಅವನು ಅನಾರೋಗ್ಯದಿಂದ ಮುಕ್ತನಾಗಿದ್ದವನಾಗಿದ್ದಲ್ಲಿ ಅವನು ಆರೋಗ್ಯವಂತನಾದವನು ಏನನ್ನು ಸಾಧಿಸುತ್ತಾನೋ ಅದನ್ನು ಸಾಧಿಸುತ್ತಾನೆ; ಅವನು ಪ್ರಾಮಾಣಿಕನೂ ಸತ್ಯವಂತನೂ ಆಗಿದ್ದಲ್ಲಿ ಒಬ್ಬ ಪ್ರಾಮಾಣಿಕನೂ ಸತ್ಯವಂತನೂ ಸಾಧಿಸುವಂತದ್ದನ್ನು ಸಾಧಿಸುತ್ತಾನೆ; ಅವನು ವೀರ್ಯವಂತನಾಗಿದ್ದಲ್ಲಿ ವೀರ್ಯವಂತನು ಏನನ್ನು ಸಾಧಿಸಬಹುದೋ ಅದನ್ನು ಅವನು ಸಾಧಿಸುತ್ತಾನೆ; ಅವನು ಪ್ರಾಜ್ಞನಾಗಿದ್ದಲ್ಲಿ ಪ್ರಾಜ್ಞನು ಏನು ಸಾಧಿಸಬಹುದೋ ಅದನ್ನು ಸಾಧಿಸುತ್ತಾನೆ. ಈಗ ಏನೆಂದು ಯೋಚಿಸುವಿರಿ, ರಾಜಕುಮಾರ? ಇಂತಹ ವ್ಯಕ್ತಿಯು ನಿಮ್ಮ ಅಡಿಯಲ್ಲಿ ಆನೆಯ ಮೇಲೆ ಕುಳಿತು ಸವಾರಿ ಮಾಡುವಾಗ ಅಂಕುಶ ಪ್ರಯೋಗ ಮಾಡುವ ಕಲೆಯನ್ನು ಕಲಿಯಬಹುದೇ?
ಭಂತೆ, ಮೇಲಿನ ಒಂದು ಗುಣವಿದ್ದರೂ ಅವನು ನನ್ನ ಅಡಿಯಲ್ಲಿ ತಯಾರಿ ಹೊಂದಬಹುದು, ಹೀಗಿದ್ದರೆ ಐದೂ ಇದ್ದರೆ ಏನು ಹೇಳಬೇಕು?
34. ಹಾಗೆಯೇ ರಾಜಕುಮಾರ, ಐದು ಪರಿಶ್ರಮಗಳಿವೆ. ಆ ಐದು ಯಾವುವು? ಇಲ್ಲಿ ಭಿಕ್ಖುವಾದವನು ತಥಾಗತನ ಬೋಧಿಯಲ್ಲಿ ಹೀಗೆ ಶ್ರದ್ಧೆಯನ್ನಿಟ್ಟಿರುತ್ತಾನೆ: ಭಗವಾನರು ಅರಹಂತರು ಸಮ್ಮಾಸಂಬುದ್ಧರು, ವಿದ್ಯಾಚರಣ ಸಂಪನ್ನರು, ಸುಗತರು, ಲೋಕಗಳನ್ನು ಅರಿತವರು, ಜನರನ್ನು ಸರಿದಾರಿಗೆ ತರುವ ಅಸಮಾನ ಪುರುಷರು, ದೇವತೆಗಳು ಹಾಗು ಮನುಷ್ಯರ ಗುರುವು ಬೋಧಿ ಜ್ಞಾನವನ್ನು ಪಡೆದವರು ಮತ್ತು ಭಗವಾನರು!
ಅವನು ಭಾದೆಗಳಿಂದ ಆತಂಕಗಳಿಂದ ಮುಕ್ತನಾದವನಾಗಿದ್ದು ಅತ್ಯಂತ ಶೀತವೂ ಅಲ್ಲದ ಅತ್ಯಂತ ಉಷ್ಣವೂ ಅಲ್ಲದ ಮಧ್ಯಮ ಜೀರ್ಣ ಶಕ್ತಿಯನ್ನು ಹೊಂದಿದ್ದು, ಶ್ರಮದ ಆಯಾಸವನ್ನು ತಾಳಿಕೊಳ್ಳುವವನಾಗಿರುತ್ತಾನೆ.
ಅವನು ಅಕುಶಲ ಸಂಗತಿಗಳನ್ನು ತೊರೆಯುವಲ್ಲಿ ಮತ್ತು ಕುಶಲ ಸಂಗತಿಗಳನ್ನು ನಿರ್ವಹಿಸುವಲ್ಲಿ ವೀರನು, ನಿಶ್ಚಲನು; ಪ್ರಯತ್ನಗಳನ್ನು ಏಕಮನಸ್ಸಿನಿಂದ ಮಾಡುವವನು, ಕುಶಲ ಧಮ್ಮಗಳನ್ನು ಕಾಪಾಡುವವನು ಆಗಿರುತ್ತಾನೆ.
ಅವನು ಪ್ರಾಜ್ಞನು; ದುಃಖವನ್ನು ಸಂಪೂರ್ಣವಾಗಿ ನಾಶಮಾಡುವ ಶ್ರೇಷ್ಠವೂ ಪ್ರಬೇಧಕವೂ ಆದ ಪ್ರಜ್ಞೆಯನ್ನು ಉಳ್ಳವನು. ಇವು ಐದು ಪ್ರಧಾನ ಪ್ರಯತ್ನಶೀಲ ಅಂಗಗಳು.
34. ರಾಜಕುಮಾರ, ಭಿಕ್ಖುವಾದವನು ಈ ಐದು ಪ್ರಯತ್ನಶೀಲ ಅಂಗಗಳನ್ನು ಹೊಂದಿದ್ದರೆ ವಿನಯ (ಶಿಸ್ತು)ವನ್ನು ನೀಡುವ ತಥಾಗತರನ್ನು ಕಾಣುತ್ತಾನೆ. ಅವನು ಏಳು ವರ್ಷಗಳ ಕಾಲ ವಾಸ ಮಾಡಿದರೆ ಸ್ವಯಂ ಅಭಿಜ್ಞಾನದ ಮೂಲಕ ಬ್ರಹ್ಮಚರ್ಯದ ಪರಮಗುರಿಯನ್ನು ಮುಟ್ಟಿ ಆ ಕೂಡಲೇ ಅಲ್ಲಿಯೇ ಆಗಲೇ ನೆಲೆಸಲು ಇಚ್ಛಿಸುವುದಕ್ಕಾಗಿ ಯಾವ ಕುಲಪುತ್ರರು ಮನೆಯನ್ನು ತೊರೆದು ಪಬ್ಬಜಿತರಾಗುತ್ತಾರೊ ಅಂತಹ ಸ್ಥಿತಿಯನ್ನು ಸಾಕ್ಷಾತ್ಕರಿಸಿಕೊಳ್ಳುತ್ತಾನೆ.
ರಾಜಕುಮಾರ, ಏಳು ವರ್ಷವಿರಲಿ ಒತ್ತಟ್ಟಿಗೆ. ಭಿಕ್ಖುವಾದವನು ಐದು ಪ್ರಧಾನ ಪ್ರಯತ್ನಶೀಲಗಳನ್ನು ಹೊಂದಿದ್ದರೆ ವಿನಯವನ್ನು ನೀಡುವ ತಥಾಗತರನ್ನು ಕಾಣುತ್ತಾನೆ. ಅವನು ಅರು ವರ್ಷ... ಐದು ವರ್ಷ... ನಾಲ್ಕು ವರ್ಷ... ಮೂರು ವರ್ಷ... ಎರಡು ವರ್ಷ... ಒಂದು ವರ್ಷ... ಒಂದು ................, ರಾಜಕುಮಾರ, ಅವನು ಏಳು ತಿಂಗಳ ಕಾಲ ವಾಸಮಾಡಿದರೆ... ಆರು ತಿಂಗಳು... ಐದು ತಿಂಗಳು... ನಾಲ್ಕು ತಿಂಗಳು... ಮೂರು ತಿಂಗಳು... ಎರಡು ತಿಂಗಳು... ಒಂದು ತಿಂಗಳು... ಒಂದು ಪಕ್ಷ... ಒಂದು ಪಕ್ಷ ವೇಳೆ, ರಾಜಕುಮಾರ, ಅವನು ಏಳುದಿನಗಳು ಮತ್ತು ರಾತ್ರಿಗಳು... ಆರು ದಿನಗಳು ಮತ್ತು ರಾತ್ರಿಗಳು... ಐದು ದಿನಗಳು ಮತ್ತು ರಾತ್ರಿಗಳು... ನಾಲ್ಕು ದಿನಗಳು ಮತ್ತು ರಾತ್ರಿಗಳು... ಮೂರು ದಿನಗಳು ಮತ್ತು ರಾತ್ರಿಗಳು... ಎರಡು ದಿನಗಳು ಮತ್ತು ರಾತ್ರಿಗಳು... ಒಂದು ದಿನ ಮತ್ತು ರಾತ್ರಿ..
ರಾಜಕುಮಾರ, ಒಂದುದಿನ ಮತ್ತು ರಾತ್ರಿಯೇ ಆಗಿರಲಿ. ಭಿಕ್ಖುವಾದವನು ಐದು ಪ್ರಧಾನ ಪ್ರಯತ್ನಶೀಲ ಅಂಗಗಳನ್ನು ಹೊಂದಿದ್ದರೆ ತಥಾಗತನಿಂದ ವಿನಯವನ್ನು ಪಡೆಯುತ್ತಾನೆ, ನಂತರದಲ್ಲಿ (ತಥಾಗತನಿಂದ) ಸಂಜೆಯಲ್ಲಿ ಅನುಶಾಸನ (ಉಪದೇಶ) ಪಡೆದು ಮುಂಜಾನೆಗೆ ವಿವೇಕವನ್ನು ಹೊಂದುತ್ತಾನೆ. ಮುಂಜಾನೆ ಅನುಶಾಸನವನ್ನು ಪಡೆದಲ್ಲಿ ಸಂಜೆಗೆ ವಿವೇಕವನ್ನು ಹೊಂದುತ್ತಾನೆ.
ಹೀಗೆ ಹೇಳಿದ ನಂತರದಲ್ಲಿ ಬೋಧಿ ರಾಜಕುಮಾರನು ಭಗವಾನರಿಗೆ ಹೀಗೆ ಹೇಳಿದನು: ಓ ಬುದ್ಧನೆ, ಓ ಧಮ್ಮವೆ, ಧಮ್ಮವನ್ನು ಎಷ್ಟು ಚೆನ್ನಾಗಿ ಘೋಷಿಸಿದಿರಿ. ಸಂಜೆಯಲ್ಲಿ ಒಬ್ಬನಿಗೆ ಅನುಶಾಸನವನ್ನು ಬೋಧಿಸಿದರೆ ಮುಂಜಾನೆಗೆ ವಿವೇಕವನ್ನು ಹೊಂದುತ್ತಾನೆ; ಮುಂಜಾನೆಯಲ್ಲಿ ಅನುಶಾಸನವನ್ನು ಬೋಧಿಸಿದರೆ ಸಂಜೆಗೆ ವಿವೇಕವನ್ನು ಹೊಂದುತ್ತಾನೆ.
35. ಇದಿಷ್ಟು ಹೇಳಿಯಾದ ನಂತರದಲ್ಲಿ ಸಂಜಿಕಾಪುತ್ತ ಮಾಣವನು ಬೋಧಿರಾಜಕುಮಾರನಿಗೆ ಹೇಳಿದನು: ಯಜಮಾನ ಬೋಧಿ ಹೇಳಿದರು: ಓ ಬುದ್ಧನೆ, ಓ ಧಮ್ಮವೆ, ಧಮ್ಮವನ್ನು ಎಷ್ಟು ಚೆನ್ನಾಗಿ ಘೋಷಿಸಿದಿರಿ ಎಂದು. ಆದರೆ ಅವರು ಹೀಗೆ ಹೇಳಲಿಲ್ಲ: ನಾನು ಆಚಾರ್ಯ ಗೌತಮರಿಗೆ ಶರಣು ಹೋಗುತ್ತೇನೆ ಮತ್ತು ಧಮ್ಮಕ್ಕೆ ಹಾಗು ಭಿಕ್ಖು ಸಂಘಕ್ಕೆ ಎಂದು.
ಹಾಗೆಂದು ಹೇಳಬೇಡಿ ನನ್ನ ಪ್ರಿಯ ಸಂಜಿಕಾಪುತ್ತ, ಹಾಗೆಂದು ಹೇಳಬೇಡಿ. ನಾನಿದನ್ನು ನನ್ನ ತಾಯಿಯಿಂದ ತಿಳಿದೆ ಮತ್ತು ಕೇಳಿದೆ. ಒಮ್ಮೆ ಭಗವಾನರು ಕೋಸಂಬಿಯ ಘೋಸಿತಾರಾಮದಲ್ಲಿ ವಾಸಿಸುತ್ತಿದ್ದರು. ಆಗ ನನ್ನ ತಾಯಿಯು ಗರ್ಭಿಣಿಯಾಗಿದ್ದಾಗ ಭಗವಾನರ ಬಳಿಗೆ ಹೋಗಿ ಗೌರವವನ್ನು ಸಲ್ಲಿಸಿಯಾದ ಮೇಲೆ ಒಂದು ಪಕ್ಕದಲ್ಲಿ ಕುಳಿತು ಅವರಿಗೆ ಹೇಳಿದಳು: ಭಂತೆ, ನನ್ನ ಗರ್ಭದಲ್ಲಿರುವ ರಾಜಕುಮಾರ ಅಥವಾ ರಾಜಕುಮಾರಿಯಾಗಲಿ ಯಾರೇ ಇರಲಿ, ಭಗವಾನರ ಬಳಿ ಬಂದು ಶರಣು ಹೋದಾಗ, ಧಮ್ಮಕ್ಕೆ ಭಿಕ್ಖು ಸಂಘಕ್ಕೆ ಹೋದಾಗ, ಭಗವಾನರು ಆ ಮಗುವು ಉಪಾಸಕನಾಗಿ ಜೀವನಪರ್ಯಂತ ಶರಣು ಹೋಗಿದೆಯೆಂದು ನೆನಪಿಸಿಕೊಳ್ಳಲಿ. ಇನ್ನೊಂದು ಸಂದರ್ಭವೂ ಇದೆ, ಭಗವಾನರು ಭಗ್ಗ ದೇಶದ ಸುಸುಮಾರಗಿರಿಯ ಭೇಸಕಳಾವನದ ಮಿಗದಾಯಿಯಲ್ಲಿದ್ದಾಗ. ಆಗ ನನ್ನ ದಾಸಿಯು ತನ್ನ ಸೊಂಟದ ಮೇಲೆ ನನ್ನ ಹಾಕಿಕೊಂಡು ಭಗವಾನರಲ್ಲಿಗೆ ಹೋಗಿ ಅಭಿವಂದಿಸಿ ಒಂದು ಬದಿಯಲ್ಲಿ ನಿಂತು ಹೀಗೆ ಹೇಳಿದಳು: ಭಂತೆ, ಬೋಧಿರಾಜಕುಮಾರನು ಭಗವಾನರಿಗೆ, ಧಮ್ಮಕ್ಕೆ ಭಿಕ್ಖು ಸಂಘಕ್ಕೆ ಶರಣು ಹೋಗುತ್ತಾನೆ. ಅವನು ಉಪಾಸಕನಾಗಿ ಜೀವನಪರ್ಯಂತ ಶರಣು ಹೋಗಿದ್ದಾನೆಂದು ಭಗವಾನರು ನೆನಪಿಸಿಕೊಳ್ಳಲಿ. ಈಗ ನನ್ನ ಪ್ರೀತಿಯ ಸಂಜಿಕಾಪುತ್ತ, ನಾನು ಮೂರನೆಯಬಾರಿ ಭಗವಾನರಿಗೆ, ಧಮ್ಮಕ್ಕೆ ಮತ್ತು ಭಿಕ್ಖು ಸಂಘಕ್ಕೆ ಶರಣು ಹೋಗುತ್ತೇನೆ. ನಾನು ಜೀವನಪರ್ಯಂತ ಉಪಾಸಕನಾಗಿ ಶರಣು ಹೋಗಿದ್ದೇನೆಂದು ಭಗವಾನರು ಸ್ವೀಕರಿಸಲಿ.
ಟಿಪ್ಪಣಿಗಳು [4]
English
Việt Ngữ