ಅಂಗುಲಿಮಾಲ ಸುತ್ತ
ಹೀಗೆ ನಾನು ಕೇಳಿದ್ದೇನೆ. ಒಂದು ಸಮಯದಲ್ಲಿ ಭಗವಾನರು ಸಾವತ್ಥಿಯ ಅನಾಥಪಿಂಡಿಕನ ಜೇತವನದಲ್ಲಿ ತಂಗಿದ್ದರು.
ಆ ಸಂದರ್ಭದಲ್ಲಿ ಕೋಸಲ ದೇಶದ ರಾಜ ಪಸೇನದಿಯ ರಾಜ್ಯದಲ್ಲಿ ಅಂಗುಲಿಮಾಲ ಎಂಬ ಹೆಸರಿನ ಚೋರನಿದ್ದನು. ಅವನು ಕೊಲೆಗಡುಕನು, ರಕ್ತ ಪಿಪಾಸಿಯು, ಎಲ್ಲ ಜೀವಿಗಳಿಗೂ ಬಾಧೆ, ಹಿಂಸೆಗಳನ್ನು ಕೊಡುತ್ತಾ ನಿರ್ದಯಿಯಾಗಿದ್ದನು.
ಗ್ರಾಮಗಳು, ನಿಗಮಗಳು, ಜನಪದಗಳು ಇವನ ದೆಸೆಯಿಂದ ನಿರ್ಜಿವವಾಗಿದ್ದವು. ಅವನು ನಿರಂತರವಾಗಿ ಜನರನ್ನು ಕೊಲೆ ಮಾಡುತ್ತಾ ಅವರ ಬೆರಳುಗಳನ್ನು ಮಾಲೆಯನ್ನಾಗಿ ಮಾಡಿಕೊಂಡು ಧರಿಸಿದ್ದನು52.
ಒಂದು ಪೂವರ್ಾಹ್ನ ಸಮಯದಲ್ಲಿ ಭಗವಾನರು ಚೀವರವನ್ನು ಹೊದ್ದು ಪಿಂಡಪಾತ್ರೆಯನ್ನು ಹಿಡಿದು ಸಾವತ್ಥಿ ನಗರದಲ್ಲಿ ಭಿಕ್ಷೆಗಾಗಿ ಹೊರಟರು.
ಭಗವಾನರು ಸಾವತ್ಥಿಯಲ್ಲಿ ಭಿಕ್ಷೆಗಾಗಿ ತಿರುಗಿ, ಊಟದ ನಂತರ ತಮ್ಮ ಸೇನಾಸನವನ್ನು ವ್ಯವಸ್ಥೆಯಲ್ಲಿಟ್ಟು, ನಂತರದಲ್ಲಿ ಮೇಲು ಹೊದಿಕೆಯನ್ನು ಮತ್ತು ಪಿಂಡಪಾತ್ರೆಯನ್ನು ಹಿಡಿದು ಅಂಗುಲಿಮಾಲನಿರುವ ಹಾದಿಯಲ್ಲಿ ಹೊರಟರು.
ದನಗಾಹಿಗಳು, ಕುರಿಕಾಯುವವರು, ರೈತರುಗಳು ಭಗವಾನರು ಅಂಗುಲಿಮಾಲನಿರುವ ಹಾದಿಯ ಮುಖಾಂತರ ಹೋಗುತ್ತಿರುವುದನ್ನು ಕಂಡು ಹೇಳಿದರು:
ಸಮಣರೇ, ಈ ಹಾದಿಯಲ್ಲಿ ಹೋಗಬೇಡಿ.
ಈ ರಸ್ತೆಯಲ್ಲೇ ಚೋರನಾದ ಅಂಗುಲಿಮಾಲನಿರುವುದು. ಅವನು ಕೊಲೆಪಾತಕಿಯು, ರಕ್ತಪಿಪಾಸಿಯು, ನಿರ್ದಯಿಯಾಗಿ ಪ್ರಾಣಿ ಹಿಂಸೆಯನ್ನು ಮಾಡುವವನು.
ಗ್ರಾಮ, ನಿಗಮ, ಜನಪದಗಳು ಅವನ ದೆಸೆಯಿಂದಾಗಿ ಖಾಲಿಯಾಗಿವೆ. ಅವನು ನಿರಂತರವಾಗಿ ಜನರನ್ನು ಕೊಂದು ಅವರ ಬೆರಳುಗಳನ್ನು ಮಾಲೆಗೆ ಸೇರಿಸಿ ಧರಿಸಿದ್ದಾನೆ.
ಜನರು ಹತ್ತು, ಇಪ್ಪತ್ತು, ಮೂವತ್ತು, ನಲವತ್ತು ಗುಂಪಿನಲ್ಲಿ ಬಂದರೂ ಅವನ ಕೈಗೆ ಸಿಕ್ಕಿಹಾಕಿಕೊಂಡಿದ್ದಾರೆ.
ಹೀಗೆ ಹೇಳಿದ್ದನ್ನು ಕೇಳಿಸಿಕೊಂಡು ಭಗವಾನರು ಮೌನವಾಗಿಯೇ ಮಾರ್ಗದಲ್ಲಿ ಮುಂದುವರಿದರು.
ಎರಡನೆಸಾರಿಯೂ... ಮೂರನೆಸಾರಿಯೂ ದನಗಾಹಿಗಳು, ಕುರಿಕಾಯುವವರು, ರೈತರುಗಳು ಭಗವಾನರಿಗೆ ಹೇಳಿದಾಗ್ಯೂ,
ಭಗವಾನರು ಮೌನವಾಗಿಯೇ ಇದ್ದು ಮುಂದುವರೆದರು.
2. ಚೋರ ಅಂಗುಲಿಮಾಲನು ಭಗವಾನರು ಬರುತ್ತಿರುವುದನ್ನು ದೂರದಿಂದಲೇ ನೋಡಿದನು. ಭಗವಾನರು ಬರುತ್ತಿರುವುದನ್ನು ನೋಡಿ ಹೀಗೆ ಯೋಚಿಸಿದನು;
ಇದು ಆಶ್ಚರ್ಯ, ಇದು ಆಶ್ಚರ್ಯ,
ಜನ ಈ ಮಾರ್ಗದಲ್ಲಿ ಹತ್ತು, ಇಪ್ಪತ್ತು, ಮೂವತ್ತು, ನಲವತ್ತು ಗುಂಪಿನಲ್ಲಿ ಬರುತ್ತಾರೆ.
ಆದರೂ ಅವರು ನನ್ನ ಕೈಗೆ ಸಿಕ್ಕಿಹಾಕಿಕೊಳ್ಳುತ್ತಾರೆ.
ಆದರೆ ಈ ಸಮಣನು ಯಾರ ಜೊತೆಯೂ ಇಲ್ಲದೆ ಒಬ್ಬಂಟಿಯಾಗಿಯೇ ಬರುತ್ತಿದ್ದಾನೆ. ಗ್ರಹಚಾರ ಕೆಟ್ಟಿರಬೇಕು. ಈ ಸಮಣನ ಜೀವವನ್ನೇಕೆ ತೆಗೆಯಬಾರದು?
ಹೀಗೆಂದುಕೊಂಡು ಅಂಗುಲಿಮಾಲನು ಕತ್ತಿಯನ್ನು ಗುರಾಣಿಯನ್ನು, ಬಿಲ್ಲು-ಬಾಣಗಳನ್ನು ತೆಗೆದುಕೊಂಡು ಭಗವಾನರ ಹಿಂದೆಯೇ ನಡೆದನು.
ಆಗ ಭಗವಾನರು ತಮ್ಮ ಅತಿಮಾನುಷ ಶಕ್ತಿಯನ್ನು ಚೋರ ಅಂಗುಲಿಮಾಲನ ಮೇಲೆ ಪ್ರಯೋಗಿಸಿ ಅವನು ಎಷ್ಟೇ ಜೋರಾಗಿ ನಡೆದರೂ ಸಹಜ ಗತಿಯಲ್ಲೇ ನಡೆಯುತ್ತಿದ್ದ ಭಗವಾನರನ್ನು ಮುಟ್ಟಲಾಗದಂತೆ ಮಾಡಿದರು.
ಆಗ ಚೋರ ಅಂಗುಲಿಮಾಲನು ಯೋಚಿಸಿದನು: ಇದು ಆಶ್ಚರ್ಯ, ಇದು ಆಶ್ಚರ್ಯ! ನಾನು ಈ ಹಿಂದೆ ಜೋರಾಗಿ ಓಡುವ ಆನೆಯನ್ನು ಹಿಡಿದು ನಿಲ್ಲಿಸುತ್ತಿದ್ದೆ. ವೇಗವಾಗಿ ಓಡುವ ಕುದುರೆಯನ್ನು ಹಿಡಿದು ನಿಲ್ಲಿಸುತ್ತಿದ್ದೆ. ಅತಿ ವೇಗವಾಗಿ ಓಡುವ ಹರಿಣವನ್ನು ಹಿಡಿದು ನಿಲ್ಲಿಸುತ್ತಿದ್ದೆ.
ಆದರೆ ಈಗ ನಾನು ಎಷ್ಟೇ ಜೋರಾಗಿ ಓಡಿದರೂ ಸಹಜ ಗತಿಯಲ್ಲೇ ನಡೆಯುತ್ತಿರುವ ಈ ಸಮಣನನ್ನು ಮುಟ್ಟುಲಾಗುತ್ತಿಲ್ಲ. ಅವನು ಓಡುವುದನ್ನು ನಿಲ್ಲಿಸಿ ಭಗವಾನರಿಗೆ ಕೂಗಿ ಹೇಳಿದನು: ನಿಲ್ಲು ಸಮಣನೆ, ನಿಲ್ಲು ಸಮಣ.
ನಾನು ನಿಂತಿದ್ದೇನೆ, ಅಂಗುಲಿಮಾಲ, ನೀನೂ ಸಹ ನಿಲ್ಲು.
ಆಗ ಚೋರ ಅಂಗುಲಿಮಾಲನು ಯೋಚಿಸಿದ:
ಈ ಸಮಣರು ಶಾಕ್ಯಪುತ್ರರು, ಸತ್ಯವನ್ನು ನುಡಿವವರು, ಸತ್ಯನಿಷ್ಠರು; ಆದರೂ ಈ ಸಮಣನು ನಡೆಯುತ್ತಲೇ ಇದ್ದರೂ ಹೇಳುತ್ತಾನೆ; ನಾನು ನಿಂತಿದ್ದೇನೆ, ನೀನೂ ಸಹ ನಿಲ್ಲು ಅಂಗುಲಿಮಾಲ ಎಂದು. ನಾನು ಸಮಣನಿಗೆ ಹೀಗೆ ಪ್ರಶ್ನಿಸಿದರೆ?
3. ಆಗ ಚೋರ ಅಂಗುಲಿಮಾಲನು ಭಗವಾನರನ್ನು ಉದ್ದೇಶಿಸಿ ಗಾಥೆಗಳ ಮೂಲಕ ಹೀಗೆ ಹೇಳಿದನು:
ಓ ಸಮಣ ನಡೆಯುತ್ತಲೆ ಇರುವ ನೀನು
ನಿಂತಿರುವೆಯೆಂದು ಹೇಳಿದೆ ನನಗೆ;
ಆದರೆ ನಾನು ನಿಂತಿರುವಾಗ, ಹೇಳುವೆ ನೀನು
ನಿಂತಿಲ್ಲ ನಾನೆಂದು?
ಓ ಸಮಣ ಕೇಳುವೆ ನಾನೀಗ ನಿನಗೆ ಇದರ ಅರ್ಥವನು;
ನಿಂತಿರುವೆ ಹೇಗೆ ನೀನು? ಮತ್ತೆ ನಾನು ನಿಂತಿಲ್ಲ!
ಆಂಗುಲಿಮಾಲ, ನಾನು ನಿಂತಿರುವೆನು ಸದಾ
ಜೀವ ಹಿಂಸೆಯನು ಮಾಡುವುದರಿಂದ ವಿರತನಾಗಿರಲು
ಜೀವ ಹಿಂಸೆಯನು ಮಾಡುತ್ತಲೆ ಇರುವೆ ನೀನು
ಇದು ಕಾರಣ ನಿಂತಿಲ್ಲ ನೀನು, ನಿಂತಿರುವೆ ನಾನು.
ಓ ಕೊನೆಗೂ ಬಂದನೀ ಸಮಣ, ಈ ಮಹರ್ಷಿ
ಈ ಮಹಾವನಕೆ ನನಗಾಗಿಯೇ53.
ನಿನ್ನ ಧಮ್ಮಗಾಥೆಯನು ಕೇಳಿ
ತೊರೆವೆನಿನ್ನು ಪಾಪಕರ್ಮವನು ಎಂದೆಂದು.
ಹೇಳಿ ಹೀಗೆ ಚೋರನು ಬಿಸುಡಿದನಾ ಆಯುಧಗಳನು
ಎಸೆದನವುಗಳನು ಕಣಿವೆಯೊಂದರೊಳಗೆ
ಪೂಜಿಸಿದನು ಚೋರನು ಸುಗತನ ಪಾದವನು
ಪಬ್ಬಜ್ಜವನು ಪ್ರಸಾದಿಸೆಂದು ಅಗಲೆ ಕೇಳಿದನು
ಬುದ್ಧ ಭಗವಾನ ಮಹಾಕಾರುಣಿಕನು
ಎಲ್ಲ ಲೋಕಗಳ ದೇವತೆಗಳ ಗುರುವು ನುಡಿದನು ಹೀಗೆ:
ಬಾ ಭಿಕ್ಖು ಎಂದು.
ಅವನಾದನು ಹೀಗೆ ಭಿಕ್ಖು54.
4. ಆನಂತರದಲ್ಲಿ ಭಗವಾನರು ಅಂಗುಲಿಮಾಲ ಶಿಷ್ಯನೊಡನೆ ಸಾವತ್ಥಿಗೆ ವಾಪಸು ಹೋದರು.
ಹಂತ ಹಂತವಾಗಿ ನಡೆಯುತ್ತಾ ಅಂತಿಮವಾಗಿ ಸಾವತ್ಥಿಗೆ ಬಂದರು. ಅಲ್ಲಿ ಸಾವತ್ಥಿಯ ಜೇತವನದ ಅನಾಥಪಿಂಡಿಕಾರಾಮದಲ್ಲಿ ವಾಸಿಸತೊಡಗಿದರು.
ಆ ಸಂದರ್ಭದಲ್ಲಿ ಜನರು ರಾಜ ಪಸೇನದಿಯ ಅರಮನೆಯ ಒಳಾಂಗಣದ ರಕ್ಷಣಾ ಗೋಡೆಯ ಬಳಿ ಗುಂಪು ಗುಂಪಾಗಿ ಸೇರಿ ಜೋರಾಗಿ ಗದ್ದಲದಿಂದ ಆರಚಿ ಕೂಗಾಡುತ್ತಿದ್ದರು:
ಮಹಾಸ್ವಾಮಿ, ಚೋರ ಅಂಗುಲಿಮಾಲನು ನಿಮ್ಮ ರಾಜ್ಯದಲ್ಲಿದ್ದಾನೆ, ಅವನೊಬ್ಬ ಪಾತಕಿ, ರಕ್ತಪಿಪಾಸು, ಜೀವಿಗಳನ್ನು ನಿರ್ದಯವಾಗಿ ಹಿಂಸಿಸುತ್ತಿದ್ದಾನೆ, ಕೊಲ್ಲುತ್ತಿದ್ದಾನೆ.
ಗ್ರಾಮಗಳು, ನಿಗಮಗಳು, ಜನಪದಗಳು ಅವನಿಂದಾಗಿ ಖಾಲಿಯಾಗಿವೆ.
ಅವನು ಜನರನ್ನು ನಿರಂತರವಾಗಿ ಸಾಯಿಸುತ್ತಿದ್ದಾನೆ, ಅವರ ಬೆರಳುಗಳನ್ನು ಮಾಲೆಯನ್ನಾಗಿ ಮಾಡಿಕೊಂಡು ಧರಿಸಿದ್ದಾನೆ! ರಾಜರು ಅವನನ್ನು ಮಟ್ಟಹಾಕಬೇಕು!
ಆಗ ಕೋಸಲಾಧಿಪತಿ ರಾಜ ಪಸೇನದಿಯು ಐದುನೂರು ಅಶ್ವ ದಳದೊಂದಿಗೆ ಸಾವತ್ಥಿಯ ಹೊರವಲಯದಲ್ಲಿರುವ ಜೇತವನಕ್ಕೆ ಹೋದನು.
ಎಲ್ಲಿಯವರೆಗೂ ರಥಗಳು ಹೋಗುತ್ತವೊ ಅಲ್ಲಿಯವರೆಗೂ ರಸ್ತೆಯಲ್ಲಿ ಹೋಗಿ, ಆನಂತರ ರಥದಿಂದಿಳಿದು ಭಗವಾನರಲ್ಲಿಗೆ ನಡೆದು ಹೋದನು. ಭಗವಾನರಿಗೆ ಗೌರವವನ್ನು ಸಲ್ಲಿಸಿ ಒಂದು ಬದಿಯಲ್ಲಿ ಕುಳಿತನು. ಆಗ ಭಗವಾನರು ಅವನಿಗೆ ಹೀಗೆ ಹೇಳಿದರು:
ಏನು ಸಮಾಚಾರ, ಮಹಾರಾಜ? ಮಗಧ ದೇಶದ ರಾಜಸೇನಿಯ ಬಿಂಬಿಸಾರನೇನಾದರು ನಿನ್ನ ಮೇಲೆ ದಂಡೆತ್ತಿ ಬರುತ್ತಿದ್ದಾನೆಯೆ? ಅಥವಾ ವೇಸಾಲಿಯ ಲಿಚ್ಛವಿಗಳು ಅಥವಾ ಶತ್ರುರಾಜರು ನಿನ್ನ ಮೇಲೆ ಬೀಳುತ್ತಿದ್ದಾರೆಯೆ?
ಪೂಜ್ಯ ಭಂತೆ, ಮಗಧದ ರಾಜ ಸೇನಿಯ ಬಿಂಬಿಸಾರನಾಗಲಿ, ವೇಸಾಲಿಯ ಲಿಚ್ಛವಿಗಳಾಗಲಿ ಅಥವಾ ಶತ್ರು ರಾಜರುಗಳಾಗಲಿ ನನ್ನ ಮೇಲೆ ಬೀಳುತ್ತಿಲ್ಲ.
ಆದರೆ ಅಂಗುಲಿಮಾಲನೆಂಬ ಚೋರನು ನನ್ನ ರಾಜ್ಯದಲ್ಲೇ ಇದ್ದಾನೆ. ಅವನು ಕೊಲೆಪಾತಕಿಯು, ರಕ್ತಪಿಪಾಸುವು, ಜೀವಿಗಳನ್ನು ನಿರ್ದಯೆಯಿಂದ ಹಿಂಸಿಸುತ್ತಿದ್ದಾನೆ. ಅವನಿಂದಾಗಿ ಗ್ರಾಮಗಳು, ನಿಗಮಗಳು, ಜನಪದಗಳು ಖಾಲಿಯಾಗಿವೆ. ಅವನು ನಿರಂತರವಾಗಿ ಜನರನ್ನು ಸಾಯಿಸುತ್ತಿದ್ದಾನೆ ಮತ್ತು ಅವರ ಬೆರಳುಗಳನ್ನು ಮಾಲೆಯಾಗಿ ಮಾಡಿಕೊಂಡು ಧರಿಸಿದ್ದಾನೆ ಭಂತೆ. ಅವನನ್ನು ನಾನು ಮಟ್ಟ ಹಾಕಲು ಸಾಧ್ಯವಿಲ್ಲವಾಗಿದೆ.
ಮಹಾರಾಜ, ನೀನೊಂದುವೇಳೆ ಅಂಗುಲಿಮಾಲನನ್ನು ಕೇಶಮುಂಡನ ಮಾಡಿಕೊಂಡು, ಕಾಷಾಯವಸ್ತ್ರವನ್ನು ಧರಿಸಿ, ಮನೆಯನ್ನು ತೊರೆದು ಪಬ್ಬಜಿತನಾಗಿರುವುದನ್ನು ಕಂಡರೆ, ಪ್ರಾಣಿಹಿಂಸೆಯಿಂದ ವಿರತನಾಗಿರುವುದನ್ನು, ತನ್ನದಲ್ಲದುದನ್ನು ತೆಗೆದುಕೊಳ್ಳುವುದರಿಂದ ವಿರತನಾಗಿರುವುದನ್ನು, ಸುಳ್ಳು ಹೇಳುವುದರಿಂದ ವಿರತನಾಗಿರುವುದನ್ನು ಕಂಡರೆ; ರಾತ್ರಿ ಊಟವನ್ನು ಬಿಟ್ಟು ದಿನದಲ್ಲಿ ಒಂದು ಹೊತ್ತು ಮಾತ್ರ ಊಟ ಮಾಡುತ್ತಿದ್ದರೆ, ಬ್ರಹ್ಮಚಾರಿಯಾಗಿ, ಗುಣವಂತನೂ ನೀತಿವಂತನೂ ಆಗಿರುವುದನ್ನು ಕಂಡರೆ, ಆಗ ನೀನು ಅವನನ್ನು ಯಾವರೀತಿ ಉಪಚರಿಸುವೆ?
ಪೂಜ್ಯ ಭಂತೆ, ನಾವು ಅವರಿಗೆ ಅಭಿವಂದಿಸುತ್ತೇವೆ ಅಥವಾ ಎದ್ದು ನಿಲ್ಲುತ್ತೇವೆ ಅಥವಾ ಕುಳಿತುಕೊಳ್ಳಲು ಆಹ್ವಾನಿಸುತ್ತೇವೆ ಅಥವಾ ಚೀವರ, ಪಿಂಡಪಾತ, ಸೇನಾಸನ, ಗಿಲಾನಪಚ್ಚಯ, ಬೇಸಜ್ಜಪರಿಕರಗಳನ್ನು ಒಪ್ಪಿಕೊಳ್ಳಲು ವಿನಂತಿಸುತ್ತೇವೆ ಅಥವಾ ಅವರಿಗೆ ಸಂವಿಧಾನ ರೀತ್ಯ ರಕ್ಷಣೆಯನ್ನು ಪೋಷಣೆಯನ್ನು ಕೊಡುತ್ತೇವೆ.
ಆದರೆ ಭಂತೆ, ಅವನು ದುಶ್ಶೀಲನು, ಪಾಪಕರ್ಮಿಯೂ ಆಗಿದ್ದಾನೆ. ಹೀಗಿರುವಾಗ ಅವನು ಶೀಲ ಸಂಯಮವುಳ್ಳವನು ಹೇಗೆ ಆಗುತ್ತಾನೆ?
5. ಆ ಸಂದರ್ಭದಲ್ಲಿ ಆಯುಷ್ಮಾನ್ ಆಂಗುಲಿಮಾಲನು ಭಗವಾನರ ಬಳಿಯೇ ಕುಳಿತಿದ್ದನು. ಆಗ ಭಗವಾನರು ತಮ್ಮ ಬಲಗೈಯನ್ನು ಚಾಚಿ ತೋರಿಸುತ್ತಾ ಕೋಸಲ ರಾಜ ಪಸೇನದಿಗೆ ಹೇಳಿದನು:
ಮಹಾರಾಜ, ಇವನೇ ಅಂಗುಲಿಮಾಲ.
ಹೀಗೆ ಕೇಳಿದ ತಕ್ಷಣ ರಾಜ ಪಸೇನದಿಯು ಭಯಭೀತನಾಗಿ ನಡುಗಿದನು.
ಇದನ್ನು ಅರಿತ ಭಗವಾನರು ಹೇಳಿದರು:
ಮಹಾರಾಜ, ಭಯಭೀತರಾಗಬೇಡಿ, ಅವನಿಂದ ಭಯಗೊಳ್ಳಬೇಕಾದ್ದು ಏನಿಲ್ಲ.
ರಾಜನ ಭಯ, ಭೀತಿ, ನಡುಗುವುದು ಕಡಿಮೆಯಾಯಿತು. ಆಗ ಅವನು ಆಯುಷ್ಮಂತ ಅಂಗುಲಿಮಾಲನ ಬಳಿ ಹೋಗಿ ಹೇಳಿದ: ಪೂಜ್ಯ ಭಂತೆ, ನೀವು ನಿಜವಾಗಿಯೂ ಅಂಗುಲಿಮಾಲರೆ?
ಹೌದು, ಮಹಾರಾಜ.
ಪೂಜ್ಯ ಭಂತೆ, ತಮ್ಮ ಗೋತ್ರ ಯಾವುದು? ತಮ್ಮ ತಾಯಿಯವರ ಗೋತ್ರ ಯಾವುದು?
ಮಹಾರಾಜ, ನನ್ನ ತಂದೆ ಗಗ್ಗ; ನನ್ನ ತಾಯಿ ಮಂತಾಣಿ.
ಇನ್ನು ಭಂತೆ, ಆರ್ಯ ಗಗ್ಗ-ಮಂತಾಣಿಪುತ್ತರಾದ ನೀವು ವಿರಾಮದಿಂದ ಇರಿ.
ನಾನು ಚೀವರನ್ನು, ಭಿಕ್ಷಾನ್ನವನ್ನು, ಸೇನಾಸನವನ್ನು, ಔಷಧಿಗಳನ್ನು ಆರ್ಯ ಗಗ್ಗ ಮಂತಾಣಿಪುತ್ತರಿಗೆ ಒದಗಿಸುತ್ತೇನೆ.
6. ಆ ಸಮಯದಲ್ಲಿ ಆಯುಷ್ಮಂತ ಅಂಗುಲಿಮಾಲನು ಅರಣ್ಯವಾಸಿಯಾಗಿ, ಭಿಕ್ಷಾನ್ನ ಭುಂಜಕನಾಗಿ, ಫಂಸುಕೂಲಧಾರಿಯಾಗಿ (ಹರಿದ ಬಟ್ಟೆಗಳಿಂದ ಮಾಡಿದ ಚೀವರ) ಕೇವಲ ಮೂರು ಚೀವರಗಳನ್ನು ಹೊಂದಿರುವ ನಿಯಂತ್ರಣಕ್ಕೆ ಒಳಪಟ್ಟಿದ್ದನು.
ಆಗ ಮಾರ್ನುಡಿದನು: ಮಹಾರಾಜರೇ,
ಸಾಕು, ಮೂರು ಚೀವರಗಳಿಂದ ನಾನು ಪರಿಪೂರ್ಣನಾಗಿದ್ದೇನೆ.
ಆನಂತರದಲ್ಲಿ ಪಸೇನದಿಯು ಭಗವಾನರ ಹತ್ತಿರ ತಿರುಗಿ, ಅವರಿಗೆ ವಂದಿಸಿ ಒಂದು ಪಕ್ಕದಲ್ಲಿ ಕುಳಿತು ಹೀಗೆ ಹೇಳಿದನು:
ಇದು ಆಶ್ಚರ್ಯ ಭಂತೆ, ಅದ್ಭುತ ಭಂತೆ,
ಭಗವಾನರು ಮದಿಸಿದವರನ್ನು ಪಳಗಿಸುತ್ತಾರೆ, ಅಶಾಂತಿಯಿಂದಿರುವವರಿಗೆ ಶಾಂತಿಯನ್ನು ತರುತ್ತಾರೆ ಮತ್ತು ಯಾರು ನಿಬ್ಬಾಣವನ್ನು ಪಡೆದಿಲ್ಲವೊ ಅಂತಹವರನ್ನು ನಿಬ್ಬಾಣದತ್ತ ಕೊಂಡೊಯ್ಯುತ್ತಾರೆ.
ಭಂತೆ, ನಾವೇ ಅವರನ್ನು ಬಲದಿಂದ ಶಸ್ತ್ರಗಳಿಂದ ಪಳಗಿಸಲಿಲ್ಲ. ಆದರೂ ತಾವು ಭಗವಾನರು ಯಾವ ಬಾಹು ಶಕ್ತಿ ಮತ್ತು ಶಸ್ತ್ರಗಳನ್ನು ಪ್ರಯೋಗಿಸದೆ ಮಣಿಸಿದ್ದೀರಿ.
ನಾವಿನ್ನು ಹೊರಡುತ್ತೇವೆ ಭಂತೆ.
ನಾವು ಕಾರ್ಯಭಾರದಲ್ಲಿದ್ದೇವೆ, ಮಾಡಲಿನ್ನೂ ಬಹಳ ಕೆಲಸಗಳಿವೆ.
ಮಹಾರಾಜ, ಇನ್ನು ಏನನ್ನು ಮಾಡಬೇಕೋ ಅದನ್ನು ಮಾಡಲು ತಮಗೆ ಸಮಯವಾಗಿದೆ.
ಆನಂತರ ಕೋಸಲದ ರಾಜ ಪಸೇನದಿಯು ತನ್ನ ಆಸನದಿಂದ ಎದ್ದು ಭಗವಾನರಿಗೆ ವಂದಿಸಿ ಪ್ರದಕ್ಷಿಣೆ ಹಾಕಿ ನಿರ್ಗಮಿಸಿದನು.
7. ಆಗ ಮುಂಜಾನೆಯ ಸಮಯ. ಆಯುಷ್ಮಂತ ಅಂಗುಲಿಮಾಲನು ಸರಿಯಾಗಿ ಬಟ್ಟೆ ಧರಿಸಿ ಚೀವರವನ್ನು ಹೊದ್ದು ಪಿಂಡಪಾತ್ರೆಯನ್ನು ಹಿಡಿದು ಸಾವತ್ಥಿಯ ನಗರದೊಳಕ್ಕೆ ಭಿಕ್ಷೆಗಾಗಿ ಹೊರಟನು.
ಹಾಗೆಯೇ ಮನೆಯಿಂದ ಮನೆಗೆ ಭಿಕ್ಷೆಗಾಗಿ ಅಲೆದಾಡುತ್ತಿರುವಾಗ ಗರ್ಭಿಣಿಯೊಬ್ಬಳು ವಿಕಲಾಂಗ ಮಗುವಿಗೆ ಜನ್ಮವನ್ನು ಕೊಡುತ್ತಿದ್ದಳು.
ಆಗ ಅವನ ಮನಸ್ಸಿನಲ್ಲಿ ಹೀಗೆ ಅನ್ನಿಸಿತು:
ಜೀವಿಗಳು ಹೀಗೆ ಕ್ಲೇಶಗಳಿಂದ ಬಳಲುತ್ತಿದ್ದಾರೆ! ಅಯ್ಯೋ ಹೇಗೆ ಜೀವಿಗಳು ಎಷ್ಟೊಂದು ಕ್ಲೇಶಗಳಿಂದ ಬಳಲುತ್ತಿದ್ದಾರೆ!
ಆಯುಷ್ಮಂತ ಅಂಗುಲಿಮಾಲನು ಸಾವತ್ಥಿಯಲ್ಲಿ ಭಿಕ್ಷೆಗಾಗಿ ಸುತ್ತಾಡಿ, ವಾಪಾಸು ಬಂದು ಊಟವನ್ನು ಮುಗಿಸಿದ ಮೇಲೆ ಭಗವಾನರ ಬಳಿ ಹೋಗಿ ಅಭಿವಂದಿಸಿ ಒಂದು ಪಕ್ಕದಲ್ಲಿ ಕುಳಿತು ಹೀಗೆ ಹೇಳಿದನು:
ಭಂತೆ, ನಾನು ಪೂವರ್ಾಹ್ನ ಸಮಯದಲ್ಲಿ ಚೀವರವನ್ನು ಧರಿಸಿ ಮೇಲು ಹೊದಿಕೆಯನ್ನು ಹೊದ್ದು ಪಿಂಡಪಾತ್ರೆಯನ್ನು ಹಿಡಿದು ಸಾವತ್ಥಿಗೆ ಭಿಕ್ಷೆಗಾಗಿ ಹೋದೆನು.
ಸಾವತ್ಥಿಯಲ್ಲಿ ಮನೆಯಿಂದ ಮನೆಗೆ ಭಿಕ್ಷೆಗೆ ಹೋಗುತ್ತಿದ್ದಾಗ ಒಬ್ಬ ಹೆಂಗಸು ಅಂಗವಿಕಲ ಮಗುವಿಗೆ ಜನ್ಮ ಕೊಡುತ್ತಿರುವುದನ್ನು ನೋಡಿದೆ.
ಅದನ್ನು ನೋಡಿದ ಮೇಲೆ ನನಗೆ ಹೀಗೆ ಯೋಚನೆ ಬಂದಿತು:
ಜೀವಿಗಳು ಹೇಗೆ ಎಷ್ಟೊಂದು ಕ್ಲೇಶಗಳಿಂದ ಬಳಲುತ್ತಿದ್ದಾರೆ; ಜೀವಿಗಳು ಹೇಗೆ ಎಷ್ಟು ಕ್ಲೇಶಗಳಿಂದ ಬಳಲುತ್ತಿದ್ದಾರೆ?
8. ಹಾಗಾದರೆ ಅಂಗುಲಿಮಾಲ,
ನೀನು ಸಾವತ್ಥಿಗೆ ಹೋಗಿ ಆ ಹೆಂಗಸಿಗೆ ಹೇಳು:
ಸೋದರಿ, ನಾನು ಹುಟ್ಟಿದಂದಿನಿಂದ, ನನಗೆ ನೆನಪಿರುವಂತೆ ನಾನು ಯಾವ ಜೀವಿಯ ಜೀವವನ್ನು ಉದ್ದೇಶಪೂರ್ವಕವಾಗಿ ತೆಗೆದಿಲ್ಲ, ಈ ಸತ್ಯದಿಂದ ನಿನಗೆ ಮಂಗಳವಾಗಲಿ ಮತ್ತು ನಿನ್ನ ಮಗುವು ಚೆನ್ನಾಗಿರಲಿ55.
ಭಂತೆ, ಇದು ಉದ್ದೇಶಪೂರ್ವಕವಾಗಿ ಹೇಳುವ ಸುಳ್ಳು ಅಲ್ಲವೆ, ಕಾರಣ ನಾನು ಬಹಳಷ್ಟು ಜೀವಿಗಳ ಪ್ರಾಣವನ್ನು ಉದ್ದೇಶಪೂರ್ವಕವಾಗಿಯೇ ತೆಗೆದಿದ್ದೇನೆ.
ಇರಲಿ ಅಂಗುಲಿಮಾಲ, ನೀನು ಸಾವತ್ಥಿಗೆ ಹೋಗಿ ಆ ಹೆಂಗಸಿಗೆ ಹೇಳು: ಸೋದರಿ, ನಾನು ಶ್ರೇಷ್ಠ ಕುಲದಲ್ಲಿ ಹುಟ್ಟಿದವನಾಗಿದ್ದು, ನನಗೆ ನೆನಪಿರುವಂತೆ ನಾನು ಯಾವ ಜೀವಿಯ ಜೀವವನ್ನು ಉದ್ದೇಶಪೂರ್ವಕವಾಗಿ ತೆಗೆದಿಲ್ಲ, ಈ ಸತ್ಯದಿಂದ ನಿನಗೆ ಮಂಗಳವಾಗಲಿ ಮತ್ತು ನಿನ್ನ ಮಗುವು ಚೆನ್ನಗಿರಲಿ.
ಹಾಗೆಯೇ ಆಗಲಿ ಭಂತೆ ಎಂದು ಆಯುಷ್ಮಂತ ಅಂಗುಲಿಮಾಲನು ಉತ್ತರಿಸಿ ಸಾವತ್ಥಿಗೆ ಹೋಗಿ ಆ ಹೆಂಗಸಿಗೆ ಹೇಳಿದನು:
ಸೋದರಿ, ನಾನು ಶ್ರೇಷ್ಠ ಕುಲದಲ್ಲಿ ಹುಟ್ಟಿದವನಾಗಿದ್ದು ನನಗೆ ನೆನಪಿರುವಂತೆ ನಾನು ಯಾವ ಜೀವಿಯ ಜೀವವನ್ನು ಉದ್ದೇಶಪೂರ್ವಕವಾಗಿ ತೆಗೆದಿಲ್ಲ. ಈ ಸತ್ಯದಿಂದ ನಿನಗೆ ಮಂಗಳವಾಗಲಿ ಮತ್ತು ನಿನ್ನ ಮಗುವು ಚೆನ್ನಾಗಿರಲಿ. ಆನಂತರದಲ್ಲಿ ಆ ಹೆಂಗಸು ಮತ್ತು ಮಗುವು ಚೆನ್ನಾಗಿ ಆದರು.
9. ಆಯುಷ್ಮಂತ ಅಂಗುಲಿಮಾಲನು ಏಕಾಂಗಿಯಾಗಿ ವಾಸಿಸುತ್ತಾ, ಪರಾಙ್ಮುಕನಾಗಿ, ಅಪ್ರಮತ್ತನಾಗಿ, ಉತ್ಸಾಹಿತನಾಗಿ ದೃಢಚಿತ್ತದಿಂದ ಸ್ವಯಂ ಅಭಿಜ್ಞಾನದ ಮೂಲಕ ಬ್ರಹ್ಮಚರ್ಯದ ಪರಮ ಗುರಿಯನ್ನು ಮುಟ್ಟಿ ಆ ಕೂಡಲೇ ಅಲ್ಲಿಯೇ ಆಗಲೇ ನೆಲೆಸಲು ಇಚ್ಛಿಸುವುದಕ್ಕಾಗಿ ಯಾವ ಕುಲಪುತ್ರರು ಮನೆಯನ್ನು ತೊರೆದು ಪಬ್ಬಜಿತರಾರುತ್ತಾರೊ ಅಂತಹ ಸ್ಥಿತಿಯನ್ನು ತಾನೇ ಸಾಕ್ಷಾತ್ಕರಿಸಿ ತಾನೇ ಇದನ್ನು ಅರಿತನು: ಹುಟ್ಟು ನಾಶವಾಯಿತು, ಬ್ರಹ್ಮಚರ್ಯ ಜೀವನವನ್ನು ಪಾಲಿಸಿದ್ದಾಯಿತು, ಏನನ್ನು ಮಾಡಬೇಕೊ ಅದನ್ನು ಮಾಡಿಯಾಯಿತು, ಇನ್ನುಮುಂದೆ ಯಾವ ಜನ್ಮವೂ ಇಲ್ಲ. ಹೀಗೆ ಆಯುಷ್ಮಂತ ಅಂಗುಲಿಮಾಲನು ಅರಹಂತನಾದನು.
10. ಅದು ಪೂವರ್ಾಹ್ನ ಸಮಯವಾಗಿತ್ತು. ಆಯುಷ್ಮಂತ ಅಂಗುಲಿಮಾಲನು ಚೀವರವನ್ನು ಧರಿಸಿ ಮೇಲು ಹೊದಿಕೆಯನ್ನು ಮತ್ತು ಪಿಂಡಪಾತ್ರೆಯನ್ನು ಹಿಡಿದು ಭಿಕ್ಷೆಗಾಗಿ ಸಾವತ್ಥಿ ನಗರಕ್ಕೆ ಹೋದನು.
ಆಗ ಯಾರೋ ಒಬ್ಬರು ಮಣ್ಣು ಹೆಂಟೆಯನ್ನು ಅಂಗುಲಿಮಾಲನ ಮೇಲೆ ಎಸೆದರು, ಅದು ಅವನ ದೇಹಕ್ಕೆ ತಾಗಿತು. ಯಾರೋ ಒಬ್ಬರು ಕೋಲನ್ನು ಎಸೆದರು ಅದು ಅವನಿಗೆ ಬಿತ್ತು ಮತ್ತು ಇನ್ನೊಬ್ಬರು ಬೋಕಿ ಚೂರನ್ನು ಎಸೆದರು, ಅದು ಅವನಿಗೆ ತಾಕಿತು.
ಅಂಗುಲಿಮಾಲನ ತಲೆಯಿಂದ ರಕ್ತ ಸೋರಿತು, ಪಿಂಡಪಾತ್ರೆಯು ಒಡೆದುಹೋಯಿತು, ಮೇಲು ಹೊದಿಕೆಯ ಹರಿದು ಹೋಯಿತು. ಇಂತಹ ಸ್ಥಿತಿಯಲ್ಲಿ ಆಯುಷ್ಮಂತ ಅಂಗುಲಿಮಾಲನು ಭಗವಾನರ ಬಳಿಗೆ ಹೋದನು.
ಭಗವಾನರು ದೂರದಿಂದಲೇ ಬರುತ್ತಿರುವುದನ್ನು ನೋಡಿ ಹೇಳಿದರು:
ಸಹಿಸಿಕೋ ಬ್ರಾಹ್ಮಣ, ಸಹಿಸಿಕೋ.
ಕರ್ಮಫಲವನ್ನು ನೀನು ಇಲ್ಲಿಯೇ ಈಗಲೇ ಅನುಭವಿಸುತ್ತಿರುವೆ, ಮುಂದೆ ಯಾವ ಈ ಎಲ್ಲವನ್ನು ನಿರಯ ಲೋಕದಲ್ಲಿ ಬಹಳ ವರ್ಷಗಳು, ಬಹು ನೂರು ವರ್ಷಗಳು ಬಹು ಸಹಸ್ರ ವರ್ಷಗಳು ಅನುಭವಿಸಬೇಕಿತ್ತೋ ಅದೆಲ್ಲವನ್ನೂ ಈಗಲೇ ಅನುಭವಿಸುತ್ತಿರುವೆ56.
ನಂತರದಲ್ಲಿ ಆಯುಷ್ಮಂತ ಅಂಗುಲಿಮಾಲನು ಒಬ್ಬನೇ ಇದ್ದು ವಿಮುಕ್ತಿಯ ಸುಖವನ್ನು ಅನುಭವಿಸುತ್ತಾ ಆನಂದ ಭಾವದಲ್ಲಿ ಹೀಗೆ ಉದ್ಗರಿಸಿದನು.
1. ಒಮ್ಮೆ ಅಸಡ್ಡೆಯಲ್ಲಿ ಬದುಕಿದವನು
ಇರನೆಂದೂ ಇನ್ನು ಮುಂದೆ ಅಸಡ್ಡೆಯಲಿ
ಬೆಳಗುವನವನು ಲೋಕವನು
ಮೋಡದಿಂದ ಹೊರಬಂದ ಚಂದಿರನ ತೆರದಿ
2. ಪಾಪ ಕರ್ಮಗಳನು ಮಾಡುತಿರುವನು
ನಿಲ್ಲಿಸಿ ಮಾಡಿ ಕುಶಲ ಕರ್ಮಗಳನು
ಬೆಳಗುವನವನು ಲೋಕವನು
ಮೋಡದಿಂದ ಹೊರಬಂದ ಚಂದಿರನ ತೆರದಿ
3. ಯೌವನದಲಿರುವ ಭಿಕ್ಖು
ಬುದ್ಧಸಾಸನವನು ಪಾಲಿಸಿ
ಬೆಳಗುವನವನು ಲೋಕವನು
ಮೋಡದಿಂದ ಹೊರಬಂದ ಚಂದಿರನ ತೆರದಿ
4. ಕೇಳಲಿ, ಧಮ್ಮಕಥೆಯನು ನನ್ನ ಅರಿಗಳು
ಬುದ್ಧಸಾಸನವನನುಸರಿಸಲಿ ಅವರು
ಸಜ್ಜನರಿಗಾಗಿ ಕಾಯಲಿ ನನ್ನ ಅರಿಗಳು
ಸಜ್ಜನರೆ ಧಮ್ಮವನು ಮುನ್ನಡೆಸುವವರು
5. ತಮ್ಮ ಕಿವಿಗೊಡಲಿ ಕಾಲ ಕಾಲಕೆ ನನ್ನ ಅರಿಗಳು
ಕೇಳಲಿ ಧಮ್ಮವನು ಅವರು ತಾಳ್ಮೆಯನು ಬೋಧಿಸುವವರಿಂದ
ಮೈತ್ರಿಯನು ಕೊಂಡಾಡುವವರು
ಧಮ್ಮವನು ಪಾಲಿಸಲಿ ಕುಶಲ ಕರ್ಮದಿಂದ.
6. ಹಿಂಸಿಸರು ಅವರು ನನ್ನನು ಆಗ
ಯಾವ ಜೀವಿಯನೂ ಹಿಂಸಿಸಲು ಯೋಚಿಸರು ಅವರು
ರಕ್ಷಿಪರು ಬಲಹೀನರನು ಬಲಿಷ್ಠರನು
ಪಡೆಯಲಿಂತಹವರು ಪರಮಶಾಂತಿಯನು
7. ಹರಿಸುವನು ನೀರಗಂಟಿ ಸರಿಯಾಗಿ ನೀರನು
ಉಸುಕಾರನು ಚೂಪಿಸುವನು ಅಂಬನು
ರೂಪವ ಕೊಡುವನು ಬಡಗಿ ತುಂಡುಮರವನು
ತನ್ನನೇ ಹಣಿಸಿಕೊಳ್ಳುವನು ವಿವೇಕಿಯಾದವನು.
8. ದಂಡಿಸುವರು ಕೆಲರು ವಿಧವಿಧತೆರದಿ
ಏಟಿನಿಂದ ಚಾಟಿನಿಂದ ಕೋಲಿನಿಂದ
ಆದರೆ ದಂಡಿಸಿದರು ನನ್ನನು ಅವರು
ಶಸ್ತ್ರಗಳೇ ಇರಲಿಲ್ಲ ಅವರ (ಆ ಬುದ್ಧನ) ಬಳಿ
9. ಅಹಿಂಸಕ ನನ್ನ ಹೆಸರು
ಹೀಗಿದ್ದರೂ ಆಗಿದ್ದೆ ಹಿಂಸಕ57
ಯಾವ ಹೆಸರು ನನ್ನದೋ
ಅಂತೆಯೇ ಬದುಕಿರುವೆನೀಗ ಹಿಂಸಿಸದೆ
10. ಅಂಗುಲಿಮಾಲ ನನ್ನ ಹೆಸರು, ಕಳೆದೆ ಒಂದು ಕಾಲವನು ಮಹಾ ಚೋರನಾಗಿ
ತುಂಬು ತೊರೆಯೊಂದು ಕೊಚ್ಚಿ ಒಯ್ದಿತು ನನ್ನನು
ಬಂದೆನಾಗ ಬುದ್ಧನೆಡೆಗೆ ಶರಣಾಗಿ
11. ಅಂಗುಲಿಮಾಲ ನನ್ನ ಹೆಸರು, ರಕ್ತಸಿಕ್ತ ಕೈಗಳು ಆಗಿದ್ದವು ಒಮ್ಮೆ
ಶರಣಗಮನವನ್ನು ಕಂಡ ನನಗೆ
ಕಳಚಿಬಿದ್ದವು ನನ್ನ ಭವದ ಬಂಧನಗಳು
12. ನಾನು ಮಾಡಿದ ಕರ್ಮಗಳು
ಕೊಂಡು ಹೋಗುವುವು ನನ್ನನು ದುರ್ಗತಿಗೆ
ಅದರ ಫಲವು ಬಂದಿದೆ ಈಗಲೇ
ಉಣುತಿರುವೆನದನು ಮತ್ತೆ ಹೊರೆಬಾರದಂತೆ58
13. ವರ್ತಿಸುವನು ಮೂರ್ಖನು ಅಜ್ಞಾನಿಯು, ಎಚ್ಚರವನು ಮರೆತು
ಎಚ್ಚರವು ಬಂಡವಾಳ ಮೇಧಾವಿಗೆ
ರಕ್ಷಿಸುವನದನು ಅವನು ಸದಾ.
14. ತಪ್ಪದಿರು ಎಚ್ಚರವನು
ಮುಳುಗದಿರು ಅಲ್ಲೇ ಕಾಮಭೋಗದಲಿ.
ಎಚ್ಚರವಿರುವವನು ಮೇಣ್ ಧ್ಯಾನಿಯು
ಪಡೆವನು ವಿಪುಲ ಸುಖವನು
15. ಸ್ವಾಗತಿಸಿದೆ ನಾನು ಬಯಸಿದ ಆಯ್ಕೆಯನು
ಅದು ನಿಲ್ಲಲಿ ಹಾಗೆಯೇ, ಇಲ್ಲ ಅಲ್ಲಿ ಕೇಡು,
ಜನರಿಗೆ ತಿಳಿದ ಎಲ್ಲ ಧರ್ಮಗಳಲ್ಲಿ, ನಾನು ಬಂದ ಧಮ್ಮವೇ ಶ್ರೇಷ್ಠ.
16. ಸ್ವಾಗತಿಸಿದೆ ನಾನು ಬಯಸಿದ ಆಯ್ಕೆಯನು,
ಅದು ನಿಲ್ಲಲಿ ಹಾಗೆಯೇ, ಇಲ್ಲ ಅಲ್ಲಿ ಕೇಡು,
ಮೂರು ವಿದ್ಯೆಗಳರಿತಿರುವ ನಾನು
ಬುದ್ಧಸಾಸನವನೆಲ್ಲ ಸಾಧಿಸಿರುವೆನು.
ಟಿಪ್ಪಣಿಗಳು [4]
English
Việt Ngữ