1. ಮಿಥ್ಯಾ ದೃಷ್ಟಿಯನ್ನು ತೊಲಗಿಸುವುದು
ಹೀಗೆ ನಾನು ಕೇಳಿದ್ದೇನೆ.101 ಒಂದು ಸಲ ಭಗವಾನರು ಶ್ರಾವಸ್ತಿಯ ಜೇತನವನದಲ್ಲಿನ ಅನಾಥ ಪಿಂಡಿಕನ ವಿಹಾರದಲ್ಲಿ ತಂಗಿದ್ದರು. ಆಗ ಆಯುಷ್ಮಂತನಾದ ಮಹಾಚುಂದ ಸಂಜೆಯ ಸಮಯದಲ್ಲಿ ಧ್ಯಾನದಿಂದ ಎದ್ದು, ಭಗವಾನರು ಎಲ್ಲಿದ್ದರೋ ಅಲ್ಲಿಗೆ ಹೋದ; ಅಲ್ಲಿಗೆ ಹೋಗಿ ಭಗವಾನರಿಗೆ ವಂದಿಸಿ ಒಂದು ಕಡೆಗೆ ಕೂತನು. ಒಂದು ಕಡೆಗೆ ಕೂತ ಆಯುಷ್ಮಾನ್ ಮಹಾಚುಂದ ಭಗವಾನರಿಗೆ ಇದನ್ನು ಕೇಳಿದನು—“ಭಂತೇ (ಪೂಜ್ಯರೇ) ಆತ್ಮವಾದಕ್ಕೆ ಸಂಬಂಧಿಸಿದ ಲೋಕವಾದಕ್ಕೆ ಸಂಬಂಧಿಸಿದ ಅನೇಕ ವಿಧವಾದ ಮಿಥ್ಯಾದೃಷ್ಟಿಗಳು102 ಯಾವುವು ಲೋಕದಲ್ಲಿ ಹುಟ್ಟುತ್ತವೆ ಭಂತೇ, ಅವುಗಳ ಮೂಲವನ್ನು ಆಲೋಚಿಸಿದಾಗ ಭಿಕ್ಷುವಿಗೆ ಆ ಮಿಥ್ಯಾದೃಷ್ಟಿಗಳನ್ನು ನಾಶಮಾಡಲು ಆ ಮಿಥ್ಯೆಗಳನ್ನು ತೊಡೆದು ಹಾಕಲು ಆಗುತ್ತದೆಯೆ?”103 ಎಂದು.
2. “ಚುಂದ, ಆತ್ಮವಾದಕ್ಕೆ ಸಂಬಂಧಿಸಿದ ಲೋಕವಾದಕ್ಕೆ ಸಂಬಂಧಿಸಿದ ಅನೇಕ ವಿಧವಾದ ಮಿಥ್ಯಾದೃಷ್ಟಿಗಳು ಯಾವುವು ಲೋಕದಲ್ಲಿ ಉತ್ಪನ್ನವಾಗುತ್ತವೋ - ಎಲ್ಲಿ (ಯಾವ ಇಂದ್ರಿಯದಲ್ಲಿ) ಈ ಮಿಥ್ಯಾ ದೃಷ್ಟಿಗಳು ಉತ್ಪನ್ನವಾಗುತ್ತವೋ ಮತ್ತು ಎಲ್ಲಿ ಅಡಗಿರುತ್ತವೋ, ಎಲ್ಲಿ ಆಚರಣೆಗೆ ಬರುತ್ತವೋ104 ಅವನ್ನು ‘ಇದು ನನ್ನದಲ್ಲ, ಇದು ನಾನಲ್ಲ, ಇದು ನನ್ನ ಆತ್ಮವಲ್ಲ’ ಎಂದು - ಈ ರೀತಿಯಾಗಿ ಇರುವುದನ್ನು ಇದ್ದಂತೆ ಸರಿಯಾದ ಅರಿವಿನಿಂದ ನೋಡಿದರೆ, ಈ ರೀತಿಯಲ್ಲಿ, ಮಿಥ್ಯಾ ದೃಷ್ಟಿಗಳು ನಾಶವಾಗುತ್ತವೆ, ಈ ರೀತಿಯಲ್ಲಿ ಮಿಥ್ಯಾ ದೃಷ್ಟಿಗಳು ತೊಲಗುತ್ತವೆ105 .
2. ಸಲ್ಲೇಖದ ವಿಧಾನ
“ಚುಂದ, ಇಂತಹ ಒಂದು ಸಂದರ್ಭವಿರಬಹುದು, ಏನೆಂದರೆ, ಇಲ್ಲಿ ಒಬ್ಬ ಭಿಕ್ಷುವು ಕಾಮವನ್ನು ದಾಟಿದವನಾಗಿ, ಅಕುಶಲವಾದ ಧರ್ಮವನ್ನು ದಾಟಿದವನಾಗಿ, ಸವಿತರ್ಕನಾಗಿ, ಸವಿಚಾರನಾಗಿ, ಏಕಾಂತದಿಂದ ಹುಟ್ಟಿದ ಆನಂದ ಮತ್ತು ಸುಖದಿಂದ ಕೂಡಿದ ಪ್ರಥಮ ಝಾನವನ್ನು (ಸಮಾಧಿಯ ಮೊದಲ ಹಂತ) ಸಾಧಿಸಿಕೊಂಡು ನೆಲೆಗೊಳ್ಳುತ್ತಾನೆ. ಅವನಿಗೆ ‘ತಿದ್ದುವಿಕೆಯಲ್ಲಿ ವಿಹರಿಸುತ್ತಿದ್ದೇನೆ.- ಎಂಬ ಭಾವನೆಯಾಗುತ್ತದೆ. ಆದರೆ ಚುಂದ, ಆರ್ಯರ (ಸೋತಾಪನ್ನ ಮೊದಲಾದವರ) ವಿನಯದಲ್ಲಿ (ಆಚರಣೆಯಲ್ಲಿ) ಇವುಗಳನ್ನು ತಿದ್ದುವುದೆಂದು ಹೇಳುವುದಿಲ್ಲ. ಆರ್ಯರ ವಿನಯದಲ್ಲಿ ಇವುಗಳನ್ನು ಇಲ್ಲಿ ಈಗ ಸುಖವಾಗಿ ವಿಹರಿಸುವುದು ಎಂದು ಹೇಳುತ್ತಾರೆ.106
“ಚುಂದ, ಇಂತಹ ಒಂದು ಸಂದರ್ಭವಿರಬಹುದು, ಏನೆಂದರೆ ಇಲ್ಲಿ ಒಬ್ಬ ಭಿಕ್ಷುವು ವಿತರ್ಕ ವಿಚಾರಗಳನ್ನು ಉಪಶಮನಗೊಳಿಸಿ ಆಂತರಿಕ ಸ್ಥೈರ್ಯ ಮತ್ತು ಮನಸ್ಸಿನ ಏಕೋಭಾವದಿಂದ ಸಮಾಧಿಯಿಂದ ಹುಟ್ಟಿದ ವಿತರ್ಕಗಳಿಲ್ಲದ, ವಿಚಾರಗಳಿಲ್ಲದ, ಆನಂದ ಮತ್ತು ಸುಖದಿಂದ ಕೂಡಿದ ದ್ವಿತೀಯ ಝಾನವನ್ನು (ಸಮಾಧಿಯ ಮೂರನೇ ಹಂತ) ಸಾಧಿಸಿಕೊಂಡು ನೆಲೆಗೊಳ್ಳುತ್ತಾನೆ. ಅವನಿಗೆ ‘ತಿದ್ದುವಿಕೆಯಲ್ಲಿ ವಿಹರಿಸುತ್ತಿದ್ದೇನೆ’- ಎಂಬ ಭಾವನೆಯಾಗುತ್ತದೆ. ಆದರೆ ಚುಂದ, ಇವುಗಳನ್ನು ಆರ್ಯರ ವಿನಯದಲ್ಲಿ ತಿದ್ದುವುದೆಂದು ಹೇಳುವುದಿಲ್ಲ. ಆರ್ಯರ ವಿನಯದಲ್ಲಿ ಇವುಗಳನ್ನು ಇಲ್ಲಿ ಈಗ ಸುಖವಾಗಿ ವಿಹರಿಸುವುದು ಎಂದು ಹೇಳುತ್ತಾರೆ.
“ಚುಂದ, ಇಂತಹ ಒಂದು ಸಂದರ್ಭವಿರಬಹುದು, ಏನೆಂದರೆ ಇಲ್ಲಿ ಒಬ್ಬ ಭಿಕ್ಷುವು ಪ್ರೀತಿ, ವಿರಾಗಗಳನ್ನು ಮರೆಯಾಗಿಸಿ, ಉಪೇಕ್ಷಾ (ಸಮಚಿತ್ತತೆ)ಯಲ್ಲಿ ನೆಲೆಗೊಳ್ಳಬಹುದು, ಎಚ್ಚರಿಕೆಯಿಂದಲೂ ಮತ್ತು ಸರಿಯಾದ ಅರಿವಿನಿಂದಲೂ ಕಾಯದಿಂದ ಸುಖವನ್ನು ಅನುಭವಿಸಬಹುದು. ಯಾವುದನ್ನು ಆರ್ಯರು ‘ಉಪೇಕ್ಷೆಯ ಎಚ್ಚರಿಕೆಯಲ್ಲಿ ಸುಖದಿಂದ ವಿಹರಿಸುತ್ತಾನೆ’ ಎಂದು ಹೇಳುತ್ತಾರೋ ಆ ತೃತೀಯ ಝಾನವನ್ನು (ಸಮಾಧಿಯ ಮೂರನೇ ಹಂತ) ಸಾಧಿಸಿಕೊಂಡು ವಿಹರಿಸುತ್ತಾನೆ. ಅವನಿಗೆ ಇಂತಹ ಭಾವನೆ ಬರಬಹುದು - ‘ತಿದ್ದುವುದರಲ್ಲಿ ವಿಹರಿಸುತ್ತಿದ್ದೇನೆ’ ಎಂದು. ಆದರೆ ಚುಂದ, ಇವುಗಳನ್ನು ಆರ್ಯರ ವಿನಯದಲ್ಲಿ ತಿದ್ದುವುದೆಂದು ಕರೆಯುವುದಿಲ್ಲ. ಇವುಗಳನ್ನು ಆರ್ಯರ ವಿನಯದಲ್ಲಿ ಇಲ್ಲಿ ಈಗ ಸುಖದಲ್ಲಿ ವಿಹರಿಸುವುದು ಎಂದು ಹೇಳುತ್ತಾರೆ.
“ಚುಂದ, ಇಂತಹ ಒಂದು ಸಂದರ್ಭವಿರಬಹುದು, ಏನೆಂದರೆ ಇಲ್ಲಿ ಒಬ್ಬ ಭಿಕ್ಷುವು ಸುಖವನ್ನು ಬಿಟ್ಟವನಾಗಿ ದು:ಖವನ್ನು ಬಿಟ್ಟವನಾಗಿ ಈಗಾಗಲೇ ಮಾನಸಿಕ ಉಬ್ಬುತಗ್ಗುಗಳು ಅಸ್ತಂಗತವಾಗಿ, ದು:ಖವೂ ಅಲ್ಲದ ಸುಖವೂ ಅಲ್ಲದ ಉಪೇಕ್ಷಾದಿಂದ ಉಂಟಾದ ಪರಿಶುದ್ಧ ಎಚ್ಚರ ಸ್ಥಿತಿಯಾದ ಚತುರ್ಥ ಝಾನವನ್ನು (ಸಮಾಧಿಯ ನಾಲ್ಕನೆ ಹಂತ) ಸಾಧಿಸಿಕೊಂಡು ನೆಲೆಗೊಳ್ಳುತ್ತಾನೆ, ಅವನಿಗೆ ಇಂತಹ ಭಾವನೆ ಬರಬಹುದು-‘ತಿದ್ದುವುದರಲ್ಲಿ ವಿಹರಿಸುತ್ತದ್ದೇನೆ’ ಎಂದು. ಆದರೆ ಚುಂದ, ಇವುಗಳನ್ನು ಆರ್ಯರ ವಿನಯದಲ್ಲಿ ತಿದ್ದುವುದೆಂದು ಕರೆಯುವುದಿಲ್ಲ. ಇವುಗಳನ್ನು ಆರ್ಯರ ವಿನಯದಲ್ಲಿ ಇಲ್ಲಿ ಈಗ ಸುಖದಲ್ಲಿ ವಿಹರಿಸುವುದು ಎಂದು ಕರೆಯುತ್ತಾರೆ.
“ಚುಂದ, ಇಂತಹ ಒಂದು ಸಂದರ್ಭವಿರಬಹುದು, ಏನೆಂದರೆ ಇಲ್ಲಿ ಒಬ್ಬ ಭಿಕ್ಷುವು ರೂಪದ ಗುರುತನ್ನು ಮೀರಿ, ರೂಪ ಸಂಘಟ್ಟಣೆಯ ಗುರುತು ಮುಳುಗಿ, ನಾನಾ ವಿಧದ ಗುರುತಿಸುವಿಕೆಗಳನ್ನು ಆಲೋಚಿಸದೆ, ‘ಅನಂತ ಆಕಾಶ’ವೆಂದು ಆಕಾಸಾನಂಚಾಯತನ ಸ್ಥಿತಿ ಸಾಧಿಸಿಕೊಂಡು ನೆಲೆಗೊಳ್ಳುತ್ತಾನೆ. ಅವನಿಗೆ ಇಂತಹ ಭಾವನೆ ಬರಬಹುದು- ‘ತಿದ್ದುವುದರಲ್ಲಿ ವಿಹರಿಸುತ್ತಿದ್ದೇನೆ’ ಎಂದು. ಆದರೆ ಚುಂದ, ಇವುಗಳನ್ನು ಆರ್ಯರ ವಿನಯದಲ್ಲಿ ತಿದ್ದುವುದೆಂದು ಕರೆಯುವುದಿಲ್ಲ. ಇವುಗಳನ್ನು ಆರ್ಯರ ವಿನಯದಲ್ಲಿ ಇಲ್ಲಿ ಈಗ ಶಾಂತಿಯಲ್ಲಿ ವಿಹರಿಸುವುದು ಎಂದು ಕರೆಯುತ್ತಾರೆ.
“ಚುಂದ, ಇಂತಹ ಒಂದು ಸಂದರ್ಭವಿರಬಹುದು, ಏನೆಂದರೆ ಇಲ್ಲಿ ಒಬ್ಬ ಭಿಕ್ಷುವು ಆಕಾಸನಂಚಾಯತನ ಸ್ಥಿತಿಯನ್ನು ಪೂರ್ಣವಾಗಿ ಮೀರಿ ‘ಅನಂತ ವಿಜ್ಞಾನ’ ವೆಂದು ವಿಜ್ಞಾಣಂಚಾಯತನ ಸ್ಥಿತಿ ಸಾಧಿಸಿಕೊಂದು ನೆಲೆಗೊಳ್ಳುತ್ತಾನೆ. ಅವನಿಗೆ ಇಂತಹ ಭಾವನೆ ಬರಹುದು ‘ತಿದ್ದುವುದರಲ್ಲಿ ವಿಹರಿಸುತ್ತಿದ್ದೇನೆ’ ಎಂದು. ಆದರೆ ಚುಂದ, ಇವುಗಳನ್ನು ಆರ್ಯರ ವಿನಯದಲ್ಲಿ ತಿದ್ದುವುದೆಂದು ಕರೆಯುವುದಿಲ್ಲ. ಇವುಗಳನ್ನು ಆರ್ಯರ ವಿನಯದಲ್ಲಿ ಇಲ್ಲಿ ಈಗ ಶಾಂತಿಯಲ್ಲಿ ವಿಹರಿಸುವುದು ಎಂದು ಕರೆಯುತ್ತಾರೆ.
“ಚುಂದ, ಇಂತಹ ಒಂದು ಸಂದರ್ಭವಿರಬಹುದು, ಏನೆಂದರೆ ಇಲ್ಲಿ ಒಬ್ಬ ಭಿಕ್ಷುವು ವಿಜ್ಞಾಣಂಚಾಯತನ ಸ್ಥಿತಿ ಪೂರ್ಣವಾಗಿ ಮೀರಿ ‘ಏನೂ ಇಲ್ಲ’ ಎಂದು ಅಕಿಂಚಜ್ಞಾಯತನ ಸ್ಥಿತಿ ಸಾಧಿಸಿಕೊಂಡು ನೆಲೆಗೊಳ್ಳುತ್ತಾನೆ. ಅವನಿಗೆ ಇಂತಹ ಭಾವನೆ ಬರಬಹುದು-‘ತಿದ್ದುವುದರಲ್ಲಿ ವಿಹರಿಸುತ್ತಿದ್ದೇನೆ’ ಎಂದು. ಆದರೆ ಚುಂದ, ಇವುಗಳನ್ನು ಆರ್ಯರ ವಿನಯದಲ್ಲಿ ತಿದ್ದುವುದೆಂದು ಕರೆಯುವುದಿಲ್ಲ. ಇವುಗಳನ್ನು ಆರ್ಯರ ವಿನಯದಲ್ಲಿ ಇಲ್ಲಿ ಈಗ ಶಾಂತಿಯಲ್ಲಿ ವಿಹರಿಸುವುದು ಎಂದು ಕರೆಯುತ್ತಾರೆ.
“ಚುಂದ, ಇಂತಹ ಒಂದು ಸಂದರ್ಭವಿರಬಹುದು, ಏನೆಂದರೆ ಇಲ್ಲಿ ಒಬ್ಬ ಭಿಕ್ಷುವು ಅಕಿಂಚಜ್ಞಾಯತನ ಸ್ಥಿತಿ ಪೂರ್ಣವಾಗಿ ಅತಿಕ್ರಮಿಸಿ ನೇವಸಜ್ಞಾನಾಸಂಜ್ಞಾಯತನ ಸ್ಥಿತಿ ಸಾಧಿಸಿಕೊಂಡು ನೆಲೆಗೊಳ್ಳುತ್ತಾನೆ. ಅವನಿಗೆ ಇಂತಹ ಭಾವನೆ ಬರಬಹುದು ‘ತಿದ್ದುವುದರಲ್ಲಿ ವಿಹರಿಸುತ್ತಿದ್ದೇನೆ’ ಎಂದು. ಆದರೆ ಚುಂದ, ಇವುಗಳನ್ನು ಆರ್ಯರ ವಿನಯದಲ್ಲಿ ತಿದ್ದುವುದೆಂದು ಕರೆಯುವುದಿಲ್ಲ. ಇವುಗಳನ್ನು ಆರ್ಯರ ವಿನಯದಲ್ಲಿ ಇಲ್ಲಿ ಈಗ ಶಾಂತಿಯಲ್ಲಿ ವಿಹರಿಸುವುದು ಎಂದು ಕರೆಯುತ್ತಾರೆ.
3. “ಓ ಚುಂದ, ಇಲ್ಲಿ ಹೀಗೆಯೇ ತಿದ್ದುಪಡಿಯನ್ನು ಮಾಡಿಕೊಳ್ಳಬೇಕು.107 ‘ಪರರು ಹಿಂಸಾಚಾರಿಗಳು ಆಗಿರುತ್ತಾರೆ, ಆದರೆ ನಾವು ಅಹಿಂಸಾಚಾರಿಗಳು ಆಗುತ್ತೇವೆ’ ಎಂಬ ತಿದ್ದುಪಡಿ ಮಾಡಿಕೊಳ್ಳಬೇಕು.108 ‘ಪರರು ಪ್ರಾಣಿಹತ್ಯೆ ಮಾಡುವವರಾಗಿರುತ್ತಾರೆ, ಆದರೆ ನಾವು ಪ್ರಾಣಿ ಹತ್ಯೆಯಿಂದ ವಿರತರಾಗಿರುತ್ತೇವೆ’ ಎಂಬ ತಿದ್ದುಪಡಿ ಮಾಡಿಕೊಳ್ಳಬೇಕು. ‘ಪರರು ಕಳುವು ಮಾಡುವವರಾಗಿರುತ್ತಾರೆ, ಆದರೆ ನಾವು ಕಳುವು ಮಾಡುವುದರಿಂದ ವಿರತರಾಗಿರುತ್ತೇವೆ’ ಎಂಬ ತಿದ್ದುಪಡಿ ಮಾಡಿಕೊಳ್ಳಬೇಕು. ‘ಪರರು ಅಬ್ರಹ್ಮಚಾರಿಗಳಾಗಿರುತ್ತಾರೆ, ಆದರೆ ನಾವು ಬ್ರಹ್ಮಚಾರಿಗಳಾಗಿರುತ್ತೇವೆ’ ಎಂಬ ತಿದ್ದುಪಡಿ ಮಾಡಿಕೊಳ್ಳಬೇಕು. ‘ಪರರು ಸುಳ್ಳರಾಗಿರುತ್ತಾರೆ, ಆದರೆ ನಾವು ಸುಳ್ಳಿನಿಂದ ವಿರತರಾಗಿರುತ್ತೇವೆ’ ಎಂಬ ತಿದ್ದುಪಡಿ ಮಾಡಿಕೊಳ್ಳಬೇಕು. ‘ಪರರು ಚಾಡಿಕೋರರಾಗಿರುತ್ತಾರೆ, ಆದರೆ ನಾವು ಚಾಡಿ ಹೇಳುವುದರಿಂದ ವಿರತರಾಗಿರುತ್ತೇವೆ’ ಎಂಬ ತಿದ್ದುಪಡಿ ಮಾಡಿಕೊಳ್ಳಬೇಕು. ‘ಪರರು ಕಟುನುಡಿಯುವವರಾಗಿರುತ್ತಾರೆ, ಆದರೆ ನಾವು ಕಟುನುಡಿಯಿಂದ ವಿರತರಾಗಿರುತ್ತೇವೆ’ ಎಂಬ ತಿದ್ದುಪಡಿ ಮಾಡಿಕೊಳ್ಳಬೇಕು. ‘ಪರರು ಹರಟೆಕೋರರಾಗಿರುತ್ತಾರೆ. ಆದರೆ ನಾವು ಹರಟೆಯಿಂದ ವಿರತರಾಗಿರುತ್ತೇವೆ’ ಎಂಬ ತಿದ್ದುಪಡಿ ಮಾಡಿಕೊಳ್ಳಬೇಕು. ‘ಪರರು ದುರಾಶೆಯುಳ್ಳವರಾಗಿರುತ್ತಾರೆ. ಆದರೆ ನಾವು ದುರಾಶೆಯಿಂದ ವಿರತರಾಗಿರುತ್ತೇವೆ’ ಎಂಬ ತಿದ್ದುಪಡಿ ಮಾಡಿಕೊಳ್ಳಬೇಕು. ‘ಪರರು ಹಗೆ ತುಂಬಿದವರಾಗಿರುತ್ತಾರೆ. ಆದರೆ ನಾವು ಹಗೆ ತುಂಬಿದ ಮನಸ್ಸಿನಿಂದ ವಿರತರಾಗುತ್ತೇವೆ’ ಎಂಬ ತಿದ್ದುಪಡಿ ಮಾಡಿಕೊಳ್ಳಬೇಕು. ‘ಪರರು ತಪ್ಪು ದೃಷ್ಟಿಯುಳ್ಳವರಾಗಿರುತ್ತಾರೆ, ಆದರೆ ನಾವು ಸಮ್ಯಕ್ ದೃಷ್ಟಿಯುಳ್ಳವರಾಗಿರುತ್ತೇವೆ’ ಎಂಬ ತಿದ್ದುಪಡಿ ಮಾಡಿಕೊಳ್ಳಬೇಕು. ‘ಪರರು ತಪ್ಪು ವಿಚಾರಿಗಳಾಗಿರುತ್ತಾರೆ, ಆದರೆ ನಾವು ಸಮ್ಯಕ್ ವಿಚಾರಿಗಳಾಗಿರುತ್ತೇವೆ’ ಎಂಬ ತಿದ್ದುಪಡಿ ಮಾಡಿಕೊಳ್ಳಬೇಕು. ‘ಪರರು ತಪ್ಪು ನುಡಿಯುವವರಾಗಿರುತ್ತಾರೆ, ಆದರೆ ನಾವು ಒಳ್ಳೆಯ ನುಡಿ (ಸಮ್ಯಕ್ ವಾಚಿ) ನುಡಿದವರಾಗಿರುತ್ತೇವೆ’ ಎಂಬ ತಿದ್ದುಪಡಿ ಮಾಡಿಕೊಳ್ಳಬೇಕು. ‘ಪರರು ತಪ್ಪು ಕಾರ್ಯಗಳನ್ನೆಸಗುವವರಾಗಿರುತ್ತಾರೆ, ಆದರೆ ನಾವು ಸಮ್ಯಕ್ ಕಾರ್ಯಗಳನ್ನೆಸಗುವವರಾಗಿರುತ್ತೇವೆ’ ಎಂಬ ತಿದ್ದುಪಡಿ ಮಾಡಿಕೊಳ್ಳಬೇಕು. ‘ಪರರು ತಪ್ಪು ಆಜೀವಿಕೆ (ಬದಕುವ ದಾರಿ) ಉಳ್ಳವವರಾಗಿರುತ್ತಾರೆ. ಆದರೆ ನಾವು ಸಮ್ಯಕ್ ಆಜೀವಿಗಳಾಗಿರುತ್ತೇವೆ’ ಎಂಬ ತಿದ್ದುಪಡಿ ಮಾಡಿಕೊಳ್ಳಬೇಕು. ‘ಪರರು ತಪ್ಪು ಪ್ರಯತ್ನಗಳುಳ್ಳವರಾಗಿರುತ್ತಾರೆ, ಆದರೆ ನಾವು ಸಮ್ಯಕ್ ಪ್ರಯತ್ನಶೀಲರಾಗಿರುತ್ತೇವೆ’ ಎಂಬ ತಿದ್ದುಪಡಿ ಮಾಡಿಕೊಳ್ಳಬೇಕು. ‘ಪರರು ತಪ್ಪು ಎಚ್ಚರವುಳ್ಳವರಾಗಿರುತ್ತಾರೆ, ಆದರೆ ನಾವು ಸರಿಯಾದ ಎಚ್ಚರವುಳ್ಳವರಾಗಿರುತ್ತೇವೆ’ ಎಂಬ ತಿದ್ದುಪಡಿ ಮಾಡಿಕೊಳ್ಳಬೇಕು. ‘ಪರರು ಮಿಥ್ಯಾ ಸಮಾಧಿ ಸಂಪನ್ನರಾಗಿರುತ್ತಾರೆ, ಆದರೆ ನಾವು ಸಮ್ಯಕ್ ಸಮಾಧಿ ಸಂಪನ್ನರಾಗಿರುತ್ತೇವೆ. ಎಂಬ ತಿದ್ದುಪಡಿ ಮಾಡಿಕೊಳ್ಳಬೆಕು. ‘ಪರರು ಮಿಥ್ಯಾ ಜ್ಞಾನಿಗಳಾಗಿರುತ್ತಾರೆ. ಆದರೆ ನಾವು ಸಮ್ಯಕ್ ಜ್ಞಾನಿಗಳಾಗಿರುತ್ತೇವೆ’ ಎಂಬ ತಿದ್ದುಪಡಿ ಮಾಡಿಕೊಳ್ಳಬೇಕು. ‘ಪರರು ಸುಳ್ಳೆ ವಿಮುಕ್ತರಾಗಿರುತ್ತಾರೆ. ಆದರೆ ನಾವು ಸರಿಯಾಗಿ ವಿಮುಕ್ತರಾಗಿರುತ್ತೇವೆ’ ಎಂಬ ತಿದ್ದುಪಡಿ ಮಾಡಿಕೊಳ್ಳಬೇಕು.
‘ಪರರು ಆಲಸ್ಯ ಜಡತೆಗಳಿಂದ ತುಂಬಿದವರಾಗಿರುತ್ತಾರೆ, ಆದರೆ ನಾವು ಆಲಸ್ಯ ಜಡತೆಗಳನ್ನು ತೊರೆದವರಾಗಿರುತ್ತೇವೆ’ ಎಂಬ ತಿದ್ದುಪಡಿ ಮಾಡಿಕೊಳ್ಳಬೇಕು. ‘ಪರರು ಚಂಚಲ ಮನಸ್ಸಿನವರಾಗಿರುತ್ತಾರೆ, ಆದರೆ ನಾವು ನಿಶ್ಚಂಚಲರಾಗಿರುತ್ತೇವೆ’ ಎಂಬ ತಿದ್ದುಪಡಿ ಮಾಡಿಕೊಳ್ಳಬೇಕು. ‘ಪರರು ಸಂಶಯ ಮನಸ್ಸಿನವರಾಗಿರುತ್ತಾರೆ. ಆದರೆ ನಾವು ನಿಸ್ಸಂಶಯ ಮನದವರಾಗಿರುತ್ತೇವೆ’ ಎಂಬ ತಿದ್ದುಪಡಿ ಮಾಡಿಕೊಳ್ಳಬೇಕು.
ಪರರು ಕ್ರೋಧಿಗಳಾಗಿರುತ್ತಾರೆ, ಆದರೆ ನಾವು ಕ್ರೋಧರಹಿತರಾಗಿರುತ್ತೇವೆ’ ಎಂಬ ತಿದ್ದುಪಡಿ ಮಾಡಿಕೊಳ್ಳಬೇಕು. ‘ಪರರು ಸೇಡುಳ್ಳವರಾಗಿರುತ್ತಾರೆ. ಆದರೆ ನಾವು ಸೇಡಿನಿಂದ ವಿರತರಾಗಿರುತ್ತೇವೆ’ ಎಂಬ ತಿದ್ದುಪಡಿ ಮಾಡಿಕೊಳ್ಳಬೇಕು. ‘ಪರರು ಕಡೆನುಡಿಯುವವರು’, ಆದರೆ ‘ನಾವು ಕಡೆನುಡಿಯದವರು’ ಎಂಬ ತಿದ್ದುಪಡಿ ಮಾಡಿಕೊಳ್ಳಬೇಕು ‘ಪರರು ದರ್ಪವುಳ್ಳವರಾಗಿರುತ್ತಾರೆ. ಆದರೆ ನಾವು ದರ್ಪರಹಿತರಾಗಿರುತ್ತೇವೆ’ ಎಂಬ ತಿದ್ದುಪಡಿ ಮಾಡಿಕೊಳ್ಳಬೇಕು. ‘ಪರರು ಈಷ್ರ್ಯೆ ತುಂಬಿದವರಾಗಿರುತ್ತಾರೆ, ಆದರೆ ನಾವು ಈಷ್ರ್ಯಾರಹಿತರಾಗಿರುತ್ತೇವೆ’ ಎಂಬ ತಿದ್ದುಪಡಿ ಮಾಡಿಕೊಳ್ಳಬೇಕು. ‘ಪರರು ಮತ್ಸರ ತುಂಬಿದವರಾಗಿರುತ್ತಾರೆ, ಆದರೆ ನಾವು ಮತ್ಸರವಿಲ್ಲದವರಾಗಿರುತ್ತೇವೆ’ ಎಂಬ ತಿದ್ದುಪಡಿ ಮಾಡಿಕೊಳ್ಳಬೇಕು. ‘ಪರರು ಮೋಸಗಾರರಾಗಿರುತ್ತಾರೆ, ಆದರೆ ನಾವು ಮೋಸವಿಲ್ಲದವರಾಗಿರುತ್ತೇವೆ’ ಎಂಬ ತಿದ್ದುಪಡಿಮಾಡಿಕೊಳ್ಳಬೇಕು. ‘ಪರರು ಮಾಯಕಾರರಾಗಿರುತ್ತಾರೆ, ಆದರೆ ನಾವು ಮಾಯಕಾರ್ಯವಿಲ್ಲದವರು ಎಂಬ ತಿದ್ದುಪಡಿ ಮಾಡಿಕೊಳ್ಳಬೇಕು. ‘ಪರರು ಹಠಮಾರಿಗಳಾಗಿರುತ್ತಾರೆ ಆದರೆ ನಾವು ಹಠಮಾರಿಗಳಲ್ಲ ಎಂಬ ತಿದ್ದುಪಡಿ ಮಾಡಿಕೊಳ್ಳಬೇಕು. ‘ಪರರು ಹಮ್ಮುತುಂಬಿದವರಾಗಿರುತ್ತಾರೆ. ಆದರೆ ನಾವು ಹಮ್ಮಿಲ್ಲದವರಾಗಿರುತ್ತೇವೆ’ ಎಂಬ ತಿದ್ದುಪಡಿ ಮಾಡಿಕೊಳ್ಳಬೇಕು. ‘ಪರರು ಹೇಳಿದಂತೆ ಕೇಳದವರಾಗಿರುತ್ತಾರೆ, ಆದರೆ ನಾವು ಹೇಳಿದಂತೆ ಕೇಳುವವರಾಗಿರುತ್ತೇವೆ’ ಎಂಬ ತಿದ್ದುಪಡಿ ಮಾಡಿಕೊಳ್ಳಬೇಕು. ‘ಪರರು ಕೆಟ್ಟ ಗೆಳೆಯರುಳ್ಳವರಾಗಿರುತ್ತಾರೆ, ಆದರೆ ನಾವು ಒಳ್ಳೆಯ ಗೆಳೆಯರುಳ್ಳವರಾಗಿರುತ್ತೇವೆ’ ಎಂಬ ತಿದ್ದುಪಡಿ ಮಾಡಿಕೊಳ್ಳಬೇಕು. ‘ಪರರು ಮೈಮರೆವಿನವರಾಗಿರುತ್ತಾರೆ. ಆದರೆ ನಾವು ಎಚ್ಚರವಾಗಿರುತ್ತೇವೆ’ ಎಂಬ ತಿದ್ದುಪಡಿ ಮಾಡಿಕೊಳ್ಳಬೇಕು ‘ಪರರು ಶ್ರದ್ಧಾರಹಿತರಾಗಿರುತ್ತಾರೆ. ಆದರೆ ನಾವು ಶ್ರದ್ಧಾಸಂಪನ್ನರಾಗಿರುತ್ತೇವೆ’ ಎಂಬ ತಿದ್ದುಪಡಿ ಮಾಡಿಕೊಳ್ಳಬೇಕು. ‘ಪರರು ಲಜ್ಜೆಯಿಲ್ಲದವರಾಗಿರುತ್ತಾರೆ, ಆದರೆ ನಾವು ಲಜ್ಜೆಯುಳ್ಳವರಾಗಿರುತ್ತೇವೆ’ ಎಂಬ ತಿದ್ದುಪಡಿ ಮಾಡಿಕೊಳ್ಳಬೇಕು. ‘ಪರರು ಅಂಜಿಕೆಯಿಲ್ಲದವರಾಗಿರುತ್ತಾರೆ, ಆದರೆ ನಾವು ಅಂಜಿಕೆಯುಳ್ಳವರಾಗಿರುತ್ತೇವೆ’ ಎಂಬ ತಿದ್ದುಪಡಿ ಮಾಡಿಕೊಳ್ಳಬೇಕು. ‘ಪರರು ಕಡಿಮೆ ತಿಳುವಳಿಕೆಯುಳ್ಳವರಾಗಿರುತ್ತಾರೆ, ಆದರೆ ನಾವು ಹೆಚ್ಚು ತಿಳುವಳಿಕೆಯುಳ್ಳವರಗಿರುತ್ತೇವೆ’ ಎಂಬ ತಿದ್ದುಪಡಿ ಮಾಡಿಕೊಳ್ಳಬೇಕು. ‘ಪರರು ಸೋಮಾರಿಗಳಾಗಿರುತ್ತಾರೆ, ಆದರೆ ನಾವು ಹುರುಪುಳ್ಳವರಾಗಿರುತ್ತೇವೆ’ ಎಂಬ ತಿದ್ದುಪಡಿ ಮಾಡಿಕೊಳ್ಳಬೇಕು. ‘ಪರರು ಅಜಾಗರೂಕರಾಗಿರುತ್ತಾರೆ. ಆದರೆ ನಾವು ಜಾಗರೂಕರಾಗಿರುತ್ತೇವೆ’ ಎಂಬ ತಿದ್ದುಪಡಿ ಮಾಡಿಕೊಳ್ಳಬೇಕು. ‘ಪರರು ಅಲ್ಪಮತಿಗಳಾಗಿರುತ್ತಾರೆ, ಆದರೆ ನಾವು ಪ್ರಜ್ಞಾಸಂಪನ್ನರಾಗಿರುತ್ತೇವೆ’ ಎಂಬ ತಿದ್ದುಪಡಿ ಮಾಡಿಕೊಳ್ಳಬೇಕು. ‘ಪರರು ಅಲ್ಪಮತಿಗಳಾಗಿರುತ್ತಾರೆ, ಆದರೆ ನಾವು ಪ್ರಜ್ಞಾಸಂಪನ್ನರಾಗಿರುತ್ತೇವೆ’ ಎಂಬ ತಿದ್ದುಪಡಿ ಮಾಡಿಕೊಳ್ಳಬೇಕು. ಪರರು ತಮ್ಮ ಮತಾಂಧತೆಯೆಂದ ಮಿಥ್ಯಾಗ್ರಾಹಿಗಳೂ, ಅದಕ್ಕೆ ಬಲವಾಗಿ ಅಂಟಿಕೊಂಡವರೂ, ಅದನ್ನು ಸುಲಭವಾಗಿ ಬಿಡಲೊಲ್ಲದವರೂ ಆಗಿರುತ್ತಾರೆ,109 ಆದರೆ ನಾವು ಮತಾಂಧರಾಗದೆ ಸತ್ಯಾಗ್ರಾಹಿಗಳಾಗಿ, [ಮತವನ್ನು] ಸುಲಭವಾಗಿ ಬಿಡಬಲ್ಲವರೂ ಆಗಿರುತ್ತೇವೆ’ ಎಂಬ ತಿದ್ದುಪಡಿ ಮಾಡಿಕೊಳ್ಳಬೇಕು.
3. ಮನಸ್ಸಿನಲ್ಲಿ ಉತ್ಪಾದಿಸಬೇಕಾದ ವಿಧಾನ
4. “ಚುಂದ, ಕುಶಲಧರ್ಮಗಳ ಬಗ್ಗೆ ಮನಸ್ಸು ಹುಟ್ಟಿದರೆ ಕೂಡ ಮಹೋಪಕಾರವಾಗುತ್ತದೆ ಎಂದು ನಾನು ಹೇಳುತ್ತೇನೆ, ಅದನ್ನು ಕಾಯಾ ವಾಚಾ ಅನುಸರಿಸಿದರೆ ಇನ್ನು ಕೇಳಬೇಕೆ?110 ಆದ್ದರಿಂದ, ಚುಂದ, ‘ಪರರು ಹಿಂಸಾಚಾರಿಗಳಾಗಿರುತ್ತಾರೆ. ಆದರೆ ನಾವು ಅಹಿಂಸಾಚಾರಿಗಳಾಗಿರುತ್ತೇವೆ.’ ಎಂಬ ಮನಸ್ಸನ್ನು ಉಂಟುಮಾಡಬೇಕು. ‘ಪರರು ಪ್ರಾಣಿಹತ್ಯೆ ಮಾಡುವವರಾಗಿರುತ್ತಾರೆ, ಆದರೆ ನಾವು ಪ್ರಾಣಿಹತ್ಯೆದಿಂದ ವಿರತರಾಗಿರುತ್ತೇವೆ’ ಎಂಬ ಮನಸ್ಸನ್ನು ಉತ್ಪಾದಿಸಿಕೊಳ್ಳಬೇಕು.... ‘ಪರರು ತಮ್ಮ ಮತಾಂಧತೆಯಿಂದ ಮಿಥ್ಯಾಗ್ರಾಹಿಗಳೂ ಅದಕ್ಕೆ ಬಲವಾಗಿ ಅಂಟಿಕೊಂಡವರೂ ಸುಲಭವಾಗಿ ಬಿಡಲೊಲ್ಲದವರೂ ಆಗಿರುತ್ತಾರೆ, ಆದರೆ ನಾವು ಮತಾಂಧರಾಗದೆ ಸತ್ಯಾಗ್ರಾಹಿಗಳಾಗಿ ಸುಲಭವಾಗಿ ಬಿಡಬಲ್ಲವರೂ ಆಗಿರುತ್ತೇವೆ’ ಎಂಬ ಮನಸ್ಸನ್ನು ಉಂಟುಮಾಡಿಕೊಳ್ಳಬೇಕು.
4. ತಪ್ಪಿಸುವಿಕೆಯ ವಿಧಾನ
5. “ಚುಂದ, ಇದು ಹೇಗೆಂದರೆ, ಒಂದು ಏರುತಗ್ಗಿನ ಮಾರ್ಗವಿದೆಯೆಂದಿಟ್ಟುಕೋ. ಅದನ್ನು ತಪ್ಪಿಸುವುದಕ್ಕೆ ಬೇರೊಂದು ಸುಗಮವಾದ ಮಾರ್ಗವಿರುತ್ತದೆ; ಅಥವಾ ಚುಂದ, ನದಿಯೊಳಗಿನ ಅಪಾಯಕಾರಿಯಾದ ಸೆಳವು ಇದೆಯೆಂದಿಟ್ಟುಕೋ, ಅದನ್ನು ತಪ್ಪಸಿವುದಕ್ಕೆ ಬೇರೊಂದು ಸುಗಮವಾದ ಕಾಲುಹೊಳೆಯಿರುತ್ತದೆ; ಇದೇ ರೀತಿ ಚುಂದ, ಹಿಂಸಾಚಾರಿಯಾಗಿರುವ ವ್ಯಕ್ತಿಗೆ ಅದನ್ನು ತಪ್ಪಿಸುವುದಕ್ಕೆ ಅಹಿಂಸೆಯಿರುತ್ತದೆ, ಪ್ರಾಣಿಹತ್ಯ ಮಾಡುವ ವ್ಯಕ್ತಿಗೆ ಅದನ್ನು ತಪ್ಪಿಸುವುದಕ್ಕೆ ಪ್ರಾಣಿಹತ್ಯದಿಂತ ವಿರತಿಯಿರುತ್ತದೆ, ಕಳುವು ಮಾಡುವ ವ್ಯಕ್ತಿಗೆ ಅದನ್ನು ತಪ್ಪಿಸುವುದಕ್ಕೆ ಕಳುವಿನಿಂದ ವಿರತಿಯಿರುತ್ತದೆ. ಬ್ರಹ್ಮಚರ್ಯವಿಲ್ಲದ ವ್ಯಕ್ತಿಗೆ ಅದನ್ನು ತಪ್ಪಿಸುವುದಕ್ಕೆ ಬ್ರಹ್ಮಚರ್ಯವಿರುತ್ತದೆ. ಸುಳ್ಳನಾಗಿರುವ ವ್ಯಕ್ತಿಗೆ ಅದನ್ನು ತಪ್ಪಿಸುವುದಕ್ಕೆ ಸುಳ್ಳಿನಿಂದ ವಿರತಿಯಿರುತ್ತದೆ, ಚಾಡಿಕೋರನಾಗಿರುವ ವ್ಯಕ್ತಿಗೆ ಅದನ್ನು ತಪ್ಪಿಸುವುದಕ್ಕೆ ಚಾಡಿಕೋರತೆಯಿಂದ ವಿರತಿಯಿರುತ್ತದೆ, ಕಟುನುಡಿಯ ವ್ಯಕ್ತಿಗೆ ಅದನ್ನು ತಪ್ಪಿಸುವುದಕ್ಕೆ ಕಟುನುಡಿಯಿಂದ ವಿರತಿಯಿರುತ್ತದೆ, ಹರಟೆಕೋರ ವ್ಯಕ್ತಿಗೆ ಅದನ್ನು ತಪ್ಪಿಸುವುದಕ್ಕೆ ಹರಟೆಯಿಂದ ವಿರತಿಯಿರುತ್ತದೆ. ದುರಾಶೆಯ ವ್ಯಕ್ತಿಗೆ ಅದನ್ನು ತಪ್ಪಸುವುದಕ್ಕೆ ದುರಾಶೆಯಿಂದ ವಿರತಿಯಿರುತ್ತದೆ, ಹಗೆ ತುಂಬಿದ ವ್ಯಕ್ತಿಗೆ ಅದನ್ನು ತಪ್ಪಿಸುವುದಕ್ಕೆ ಹಗೆಯಿಂದ ವಿರತಿಯಿರುತ್ತದೆ, ತಪ್ಪು ದೃಷ್ಟಿಯ ವ್ಯಕ್ತಿಗೆ ಅದನ್ನು ತಪ್ಪಿಸುವುದಕ್ಕೆ ಸಮ್ಯಕ್ ದೃಷ್ಟಿಯಿರುತ್ತದೆ, ತಪ್ಪು ವಿಚಾರದ ವ್ಯಕ್ತಿಗೆ ಅದನ್ನು ತಪ್ಪಿಸುವುದಕ್ಕೆ ಸಮ್ಯಕ್ ವಿಚಾರವಿರುತ್ತದೆ, ತಪ್ಪುನುಡಿಯ ವ್ಯಕ್ತಿಗೆ ಅದನ್ನು ತಪ್ಪಿಸುವುದಕ್ಕೆ ಸರಿಯಾದ ನುಡಿಯಿರುತ್ತದೆ, ತಪ್ಪು ಕಾರ್ಯವೆಸಗುವ ವ್ಯಕ್ತಿಗೆ ಅದನ್ನು ತಪ್ಪಿಸುವುದಕ್ಕೆ ಸರಿಯಾದ ಜೀವನರೀತಿಯ ಕಾರ್ಯವಿರುತ್ತದೆ, ತಪ್ಪು ಆಜೀವದ ವ್ಯಕ್ತಿಗೆ ಅದನ್ನು ತಪ್ಪಿಸುವುದಕ್ಕೆ ಸರಿಯಾದ ಬದುಕುವ ರೀತಿ ಇರುತ್ತದೆ, ತಪ್ಪು ಪ್ರಯತ್ನದ ಜೀವಿಗೆ ಅದನ್ನು ತಪ್ಪಿಸುವುದಕ್ಕೆ ಸಮ್ಯಕ್ ಪ್ರಯತ್ನಶೀಲತೆ ಇರುತ್ತದೆ, ತಪ್ಪು ಎಚ್ಚರದ ವ್ಯಕ್ತಿಗೆ ಅದನ್ನು ತಪ್ಪಿಸುವುದಕ್ಕೆ ಸರಿಯಾದ ಎಚ್ಚರವಿರುತ್ತದೆ, ತಪ್ಪಾದ ಸಮಾಧಿಯ ವ್ಯಕ್ತಿಗೆ ಅದನ್ನು ತಪ್ಪಿಸುವುದಕ್ಕೆ ಸಮ್ಯಕ್ ಜ್ಞಾನವಿರುತ್ತದೆ. ಸುಳ್ಳೆ ವಿಮುಕ್ತಿಯಾದ ವ್ಯಕ್ತಿಗೆ ಅದನ್ನು ತಪಿಸುವುದಕ್ಕೆ ಸಮ್ಯಗ್ವಿಮುಕ್ತಿಯಿರುತ್ತದೆ.
ಆಲಸ್ಯ ಜಡತೆಗಳಿಂದ ತುಂಬಿದ ವ್ಯಕ್ತಿಗೆ ಅದನ್ನು ತಪ್ಪಿಸುವುದಕ್ಕೆ ಆಲಸ್ಯ ಜಡತೆಯಿಂದ ವಿರತಿಯಿರುತ್ತದೆ, ಚಂಚಲ ಮನಸ್ಸಿನ ವ್ಯಕ್ತಿಗೆ ಅದನ್ನು ತಪ್ಪಿಸುವುದಕ್ಕೆ ನಿಶ್ಚಲತೆಯಿರುತ್ತದೆ, ಸಂಶಯ ಮನಸ್ಸಿನ ವ್ಯಕ್ತಿಗೆ ಅದನ್ನು ತಪ್ಪಿಸುವುದಕ್ಕೆ ನಿಸ್ಸಂಶಯತೆಯಿರುತ್ತದೆ, ಕ್ರೋಧಿಯಾದ ವ್ಯಕ್ತಿಗೆ ಅದನ್ನು ತಪ್ಪಿಸುವುದಕ್ಕೆ ಕ್ರೋಧರಾಹಿತ್ಯ ಇರುತ್ತದೆ, ಶತೃತ್ವ ತುಂಬಿದ ವ್ಯಕ್ತಿಗೆ ಅದನ್ನು ತಪ್ಪಿಸುವುದಕ್ಕೆ ಶತೃತ್ವ ರಹಿತತೆಯಿರುತ್ತದೆ, ಕಡೆ ನುಡಿಯ ವ್ಯಕ್ತಿಗೆ ಅದನ್ನು ತಪ್ಪಿಸುವುದಕ್ಕೆ ಕಡೆನುಡಿಯಿಲ್ಲದಿರುವಿಕೆ (ಮೃದುನುಡಿ) ಇರುತ್ತದೆ. ದರ್ಪ ತುಂಬಿದ ವ್ಯಕ್ತಿಗೆ ಅದನ್ನು ತಪ್ಪಿಸುವುದಕ್ಕೆ ದರ್ಪರಹಿತತೆಯಿರುತ್ತದೆ, ಈಷ್ರ್ಯೆ ತುಂಬಿದ ವ್ಯಕ್ತಿಗೆ ಅದನ್ನು ತಪ್ಪಿಸುವುದಕ್ಕೆ ಈಷ್ರ್ಯಾರಾಹಿತ್ಯವಿರುತ್ತದೆ, ಮತ್ಸರ ತುಂಬಿದ ವ್ಯಕ್ತಿಗೆ ಅದನ್ನು ತಪ್ಪಿಸುವುದಕ್ಕೆ ಮತ್ಸರ ಹೀನತೆಯಿರುತ್ತದೆ, ಕಪಟ ವ್ಯಕ್ತಿಗೆ ಅದನ್ನು ತಪ್ಪಿಸುವುದಕ್ಕೆ ಕಪಟವಿಲ್ಲದಿರುವಿಕೆಯಿರುತ್ತದೆ, ಮೋಸಗೊಳಿಸುವ ವ್ಯಕ್ತಿಗೆ ಅದನ್ನು ತಪ್ಪಿಸುವುದಕ್ಕೆ ಮೋಸದಿಂದ ವಿರತಿಯಿರುತ್ತದೆ, ಹಠಮಾರಿ ವ್ಯಕ್ತಿಗೆ ಅದನ್ನು ತಪ್ಪಿಸುವುದಕ್ಕೆ ಹಠಮಾರಿತನದಿಂದ ವಿರತಿಯಿರುತ್ತದೆ, ಹಮ್ಮು ತುಂಬಿದ ವ್ಯಕ್ತಿಗೆ ಅದನ್ನು ತಪ್ಪಿಸುವುದಕ್ಕೆ ಹಮ್ಮಿಲ್ಲದಿರುವಿಕೆಯಿರುತ್ತದೆ, ಹೇಳಿದಂತೆ ಕೇಳದ ವ್ಯಕ್ತಿಗೆ ಅದನ್ನು ತಪ್ಪಿಸುವುದಕ್ಕೆ ಹೇಳಿದಂತೆ ಕೇಳುವುದಿರುತ್ತದೆ, ಕೆಟ್ಟ ಗೆಳೆಯರುಳ್ಳ ವ್ಯಕ್ತಿಗೆ ಅದನ್ನು ತಪ್ಪಿಸುವುದಕ್ಕೆ ಒಳ್ಳೆಯ ಗೆಳೆತನವಿರುತ್ತದೆ, ಮೈಮರೆವಿನ ವ್ಯಕ್ತಿಗೆ ಅದನ್ನು ತಪ್ಪಿಸುವುದಕ್ಕೆ ಎಚ್ಚರವಿರುತ್ತದೆ, ಶ್ರದ್ಧಾರಹಿತನಾದ ವ್ಯಕ್ತಿಗೆ ಅದನ್ನು ತಪ್ಪಿಸುವುದಕ್ಕೆ ಶ್ರದ್ಧೆಯರುತ್ತದೆ, ಲಜ್ಜೆಯಿಲ್ಲದೆ ವ್ಯಕ್ತಿಗೆ ಅದನ್ನು ತಪ್ಪಿಸುವುದಕ್ಕೆ ಲಜ್ಜೆಯಿರುತ್ತದೆ, ತಪ್ಪಿನ ಅಂಜಿಕೆಯಿಲ್ಲದ ವ್ಯಕ್ತಿಗೆ ಅದನ್ನು ತಪ್ಪಿಸುವುದಕ್ಕೆ ತಪ್ಪಿನ ಅಂಜಿಕೆಯಿರುತ್ತದೆ, ಕಡಿಮೆ ತಿಳುವಳಿಕೆಯುಳ್ಳ ವ್ಯಕ್ತಿಗೆ ಅದನ್ನು ತಪ್ಪಸುವುದಕ್ಕೆ ಹೆಚ್ಚು ತಿಳುವಳಿಕೆಯಿರುತ್ತದೆ, ಸೋಮಾರಿಯಾದ ವ್ಯಕ್ತಿಗೆ ಅದನ್ನು ತಪ್ಪಿಸುವುದಕ್ಕೆ ಹುರುಪಿರುತ್ತದೆ, ಅಜಾಗರೂಕ ವ್ಯಕ್ತಿಗೆ ಅದನ್ನು ತಪ್ಪಿಸುವುದಕ್ಕೆ ಜಾಗರೂಕತೆ ಇರುತ್ತದೆ, ಅಲ್ಪ ಮತಿಯಾದ ವ್ಯಕ್ತಿಗೆ ಅದನ್ನು ತಪ್ಪಿಸುವುದಕ್ಕೆ ಪ್ರಜ್ಞಾಸಂಪದವಿರುತ್ತದೆ, ಮತಾಂಧತೆಯಿಂದ ಮಿಥ್ಯಾಗ್ರಾಹಿಯಾಗಿ, ಅದಕ್ಕೆ ಬಲವಾಗಿ ಅಂಟಿಕೊಂಡವನಾಗಿ ಸುಲಭವಾಗಿ ಬಿಡಲೊಲ್ಳದ ವ್ಯಕ್ತಿಗೆ ಅದನ್ನು ತಪ್ಪಿಸುವುದಕ್ಕೆ ಮತಾಂಧತೆಯಿಂದ ಮಿಥ್ಯಾಗ್ರಾಹಿಯಾಗದೆ, ಅದಕ್ಕೆ ಬಲವಾಗಿ ಅಂಟಿಕೊಳ್ಳದೆ ಸುಲಭವಾಗಿ ಬಿಡುವಿಕೆಯಿರುತ್ತದೆ.
5. ಊರ್ಧ್ವಗತಿಗೇರುವ ವಿಧಾನ
6. “ಚುಂದ, ಉದಾಹರಣೆಗೆ ಯಾವ ಯಾವ ಅಕುಶಲ ಧರ್ಮಗಳಿವೆಯೋ ಅವೆಲ್ಲಾ ಅಧೋಗತಿಗೆ ಒಯ್ಯುವಂಥವು, ಯಾವ ಕುಶಲ ಧರ್ಮಗಳಿವೆಯೋ ಅವೆಲ್ಲಾ ಊರ್ಧ್ವಗತಿಗೆ ಒಯ್ಯುವಂಥವು. ಹಾಗೆಯೇ ಹಿಂಸಾಚಾರಿಯಾದ ವ್ಯಕ್ತಿಗೆ ಅಹಿಂಸೆಯು ಊರ್ಧ್ವಗತಿಗೆ ಒಯ್ಯುವಂಥದಾಗುತ್ತದೆ. ಪ್ರಾಣಿಹತ್ಯೆ ಮಾಡುವ ವ್ಯಕ್ತಿಗೆ ಪ್ರಾಣಿಹತ್ಯೆಯ ವಿರತಿಯು ಊರ್ಧ್ವಗತಿಗೆ ಒಯ್ಯುವಂಥದಾಗುತ್ತದೆ ...... ಮತಾಂಧತೆಯಿಂದ ಮಿಥ್ಯಾಗ್ರಾಹಿಯಾಗಿ ಅದಕ್ಕೆ ಬಲವಾಗಿ ಅಂಟಿಕೊಂಡವನಾಗಿ, ಅದನ್ನು ಸುಲಭವಾಗಿ ಬಿಡಲೊಲ್ಲದ ವ್ಯಕ್ತಿಗೆ ಮತಾಂಧತೆಯಿಂದ ಮಿಥ್ಯಾಗ್ರಾಹಿಯಾಗದೆ ಅದಕ್ಕೆ ಬಲವಾಗಿ ಅಂಟಿಕೊಳ್ಳದೆ ಇರುವಿಕೆ ಸುಲಭವಾಗಿ ಊರ್ಧ್ವಗತಿಗೆ ಒಯ್ಯುವಂಥದ್ದಾಗಿರುತ್ತದೆ.
6. ಪರಿನಿರ್ವಾಣ [ಪ್ರಾಪಂಚಿಕ ಬಂಧನದಿಂದ ಬಿಡುಗಡೆ] ವಿಧಿ
7. “ನಿಜವಾಗಿಯೂ ಚುಂದ, ಒಬ್ಬ ತಾನೇ ಆಳವಾದ ಕಂದಕದಲ್ಲಿ ಬಿದ್ದಿದ್ದು, ಕಂದಕದಲ್ಲಿರುವ ಬೇರೊಬ್ಬನನ್ನು ಮೇಲೆತ್ತುತ್ತಾನೆಂಬುದು ಸಾಧ್ಯವೇ ಇಲ್ಲ. ‘ನಿಜವಾಗಿಯೂ ಚುಂದ, ಒಬ್ಬ ತಾನು ಆಳವಾದ ಕಂದಕದಲ್ಲಿ ಬೀಳದೆ ಕಂದಕದಲ್ಲಿ ಬಿದ್ದಿರುವ ಬೇರೊಬ್ಬನನ್ನು ಮೇಲೆತ್ತುತ್ತಾ’ ನೆಂಬುದು ಸಾಧ್ಯವಿದೆ. ‘ನಿಜವಾಗಿಯೂ ಚುಂದ, ಒಬ್ಬ ತಾನೇ ಹತೋಟಿಯಿಲ್ಲದೆ, ಶಿಸ್ತಿಲ್ಲದೆ, ಪರಿನಿರ್ವಾಣವಿಲ್ಲದೆ, ಪರರಿಗೆ ಹತೋಟಿಯನ್ನಾಗಲೀ, ಶಿಸ್ತನ್ನಾಗಲಿ, ಪರಿನಿರ್ವಾಣವನ್ನಾಗಲಿ ತಂದುಕೊಡುವುದು’ ಸಾಧ್ಯವೇ ಇಲ್ಲ. ‘ನಿಜವಾಗಿಯೂ ಚುಂದ, ಒಬ್ಬ ತಾನೇ ಹತೋಟಿಯಿಂದಿರುವವನು, ಶಿಸ್ತಿನಿಂದಿರುವವನು, ಪರಿನಿರ್ವಾಣವನ್ನು ಪಡೆದಿರುವವನು ಪರರಿಗೆ ಹತೋಟಿಯನ್ನು ಶಿಸ್ತನ್ನು ಪರಿನಿರ್ವಾಣವನ್ನು ತಂದುಕೊಡುತ್ತಾನೆ’ ಎನ್ನುವುದು ಸಾಧ್ಯವಿದೆ.111
ಹಾಗೆಯೇ ಚುಂದ, ಹಿಂಸಾಚಾರೀ ವ್ಯಕ್ತಿಗೆ ಅಹಿಂಸೆ (ಹಿಂಸೆಯಿಂದ ನಿವೃತ್ತಿ) ಪರಿನಿರ್ವಾಣಕ್ಕೊಯು ವಂಥದ್ದಾಗಿರುತ್ತದೆ,112 ಪ್ರಾಣಿಹತ್ಯೆ ಮಾಡುವ ವ್ಯಕ್ತಿಗೆ ಪ್ರಾಣಿಹತ್ಯೆಯ ವಿರತಿಯು ಪರಿನಿರ್ವಾಣಕ್ಕೊಯ್ಯುವಂಥದ್ದಾಗಿರುತ್ತದೆ, ಕಳುವು ಮಾಡುವು ವ್ಯಕ್ತಿಗೆ ಕಳುವು ಮಾಡುವುದನ್ನು ನಿಲ್ಲಿಸುವುದು ಪರಿನಿರ್ವಾಣಕ್ಕೊಯ್ಯುವಂಥದಾಗಿರುತ್ತದೆ. ಅಬ್ರಹ್ಮಚಾರಿಗೆ ಅಬ್ರಹ್ಮಚರ್ಯದಿಂದ ವಿರತಿ ಪರಿನಿರ್ವಾಣಕ್ಕೊಯ್ಯುವಂಥದಾಗಿರುತ್ತದೆ. ಕೆಟ್ಟ ಮಾತನ್ನಾಡುವ ವ್ಯಕ್ತಿಗೆ ಕೆಟ್ಟ ಮಾತಿನ ವಿರಮಣ ಪರಿನಿರ್ವಾಣಕ್ಕೊಯ್ಯುವಂಥದಾಗಿರುತ್ತದೆ. ಒರಟು ಮಾತನಾಡುವವನಿಗೆ ಒರಟು ಮಾತಿನಿಂದ ವಿರಮಣ ಪರಿನಿರ್ವಾಣಕ್ಕೊಯ್ಯುವಂಥದಾಗಿರುತ್ತದೆ. ಹರಟೆ ಕೊಚ್ಚುವವನಿಗೆ ಹರಟೆ ಹೊಡೆಯುವುದರಿಂದ ವಿರಮಣ ಪರಿನಿರ್ವಾಣಕ್ಕೊಯ್ಯುವಂಥದಾಗಿರುತ್ತದೆ. ಅವಿದ್ಯೆಯಿಂದ ಕೂಡಿದವನಿಗೆ ಅವಿದ್ಯೆಯ ವಿರಮಣ ಪರಿನಿರ್ವಾಣಕ್ಕೊಯ್ಯು ವಂಥದಾಗಿರುತ್ತದೆ. ತಂಟೆ ಮಾಡುವ ಚಿತ್ತದ ವ್ಯಕ್ತಿಗೆ ತಂಟೆತಕರಾರುಗಳಿಂದ ವಿರಮಣ ಪರಿನಿರ್ವಾಣಕ್ಕೊಯ್ಯು ವಂಥದಾಗಿರುತ್ತದೆ. ಮಿಥ್ಯಾದೃಷ್ಟಿಯ ವ್ಯಕ್ತಿಗೆ ಮಿಥ್ಯಾ ದೃಷ್ಟಿಯಿಂದ ವಿರಮಣ ಪರಿನಿರ್ವಾಣಕ್ಕೊಯ್ಯುವಂಥದಾಗಿರುತ್ತದೆ. ಮಿಥ್ಯಾ ಸಂಕಲ್ಪದ ವ್ಯಕ್ತಿಗೆ ಸಮ್ಮಾ ಸಂಕಲ್ಪ ಪರಿನಿರ್ವಾಣಕ್ಕೊಯ್ಯುವಂಥದಾಗಿರುತ್ತದೆ. ಮಿಥ್ಯೆಯ ಮಾತಿನ ವ್ಯಕ್ತಿಗೆ ಸಮ್ಮಾವಾಚಾ (ಮಾತು) ಪರಿನಿರ್ವಾಣಕ್ಕೊಯ್ಯುವಂಥದಾಗಿರುತ್ತದೆ. ಮಿಥ್ಯಾ ಕರ್ಮದ ವ್ಯಕ್ತಿಗೆ ಸಮ್ಯಕ್ ಕರ್ಮ ಪರಿನಿರ್ವಾಣಕ್ಕೊಯ್ಯುವಂಥದಾಗಿರುತ್ತದೆ. ಮಿಥ್ಯಾ ಅಜೀವಿಕೆಯ ವ್ಯಕ್ತಿಗೆ ಸಮ್ಯಕ್ ಅಜೀವಿಕೆ (ಬದುಕು) ಪರಿನಿರ್ವಾಣಕ್ಕೊಯ್ಯುವಂಥದಾಗಿರುತ್ತದೆ. ಮಿಥ್ಯಾ ವ್ಯಾಯಾಮದ ವ್ಯಕ್ತಿಗೆ ಸಮ್ಯಕ್ ವ್ಯಾಯಾಮ ಪರಿನಿರ್ವಾಣಕ್ಕೊಯ್ಯು ವಂಥದಾಗಿರುತ್ತದೆ. ಮಿಥ್ಯಾ ಸತಿಯ ವ್ಯಕ್ತಿಗೆ ಸಮ್ಮಾಸತಿ (ಸರಿಯಾದ ಎಚ್ಚರ) ಪರಿನಿರ್ವಾಣಕ್ಕೊಯ್ಯುವಂಥದಾಗಿರುತ್ತದೆ. ಮಿಥ್ಯಾ ಸಮಾಧಿಯ ವ್ಯಕ್ತಿಗೆ ಸಮ್ಮಾಸಮಾಧಿ ಪರಿನಿರ್ವಾಣಕ್ಕೊಯ್ಯುವಂಥದಾಗಿರುತ್ತದೆ. ಜಡತೆಯ ವ್ಯಕ್ತಿಗೆ ಜಡತೆಯನ್ನು ಕಳೆದುಕೊಳ್ಳುವುದು ಪರಿನಿರ್ವಾಣಕ್ಕೊಯ್ಯುವಂಥದಾಗಿರುತ್ತದೆ. ಉದ್ಧಟನಿಗೆ ಅನುದ್ಧತೆಯು ಪರಿನಿರ್ವಾಣಕ್ಕೊಯ್ಯು ವಂಥದಾಗಿರುತ್ತದೆ. ಆಲಸ್ಯ ಜಡತೆಗಳಿಂದ ತುಂಬಿದ ವ್ಯಕ್ತಿಗೆ ಅದನ್ನು ತಪ್ಪಿಸುವುದಕ್ಕೆ ಆಲಸ್ಯ ಜಡತೆಯಿಂದ ವಿರತಿಯಿರುತ್ತದೆ, ಚಂಚಲ ಮನಸ್ಸಿನ ವ್ಯಕ್ತಿಗೆ ಅದನ್ನು ತಪ್ಪಿಸುವುದಕ್ಕೆ ನಿಶ್ಚಲತೆಯಿರುತ್ತದೆ, ಸಂಶಯ ಮನಸ್ಸಿನ ವ್ಯಕ್ತಿಗೆ ಅದನ್ನು ತಪ್ಪಿಸುವುದಕ್ಕೆ ನಿಸ್ಸಂಶಯತೆಯಿರುತ್ತದೆ, ಕ್ರೋಧಿಯಾದ ವ್ಯಕ್ತಿಗೆ ಅದನ್ನು ತಪ್ಪಿಸುವುದಕ್ಕೆ ಕ್ರೋಧರಾಹಿತ್ಯ ಇರುತ್ತದೆ, ಶತೃತ್ವ ತುಂಬಿದ ವ್ಯಕ್ತಿಗೆ ಅದನ್ನು ತಪ್ಪಿಸುವುದಕ್ಕೆ ಶತೃತ್ವ ರಹಿತತೆಯಿರುತ್ತದೆ, ಕಡೆ ನುಡಿಯ ವ್ಯಕ್ತಿಗೆ ಅದನ್ನು ತಪ್ಪಿಸುವುದಕ್ಕೆ ಕಡೆನುಡಿಯಿಲ್ಲದಿರುವಿಕೆ (ಮೃದುನುಡಿ) ಇರುತ್ತದೆ. ದರ್ಪ ತುಂಬಿದ ವ್ಯಕ್ತಿಗೆ ಅದನ್ನು ತಪ್ಪಿಸುವುದಕ್ಕೆ ದರ್ಪರಹಿತತೆಯಿರುತ್ತದೆ, ಈಷ್ರ್ಯೆ ತುಂಬಿದ ವ್ಯಕ್ತಿಗೆ ಅದನ್ನು ತಪ್ಪಿಸುವುದಕ್ಕೆ ಈಷ್ರ್ಯಾರಾಹಿತ್ಯವಿರುತ್ತದೆ, ಮತ್ಸರ ತುಂಬಿದ ವ್ಯಕ್ತಿಗೆ ಅದನ್ನು ತಪ್ಪಿಸುವುದಕ್ಕೆ ಮತ್ಸರ ಹೀನತೆಯಿರುತ್ತದೆ, ಕಪಟ ವ್ಯಕ್ತಿಗೆ ಅದನ್ನು ತಪ್ಪಿಸುವುದಕ್ಕೆ ಕಪಟವಿಲ್ಲದಿರುವಿಕೆಯಿರುತ್ತದೆ, ಮೋಸಗೊಳಿಸುವ ವ್ಯಕ್ತಿಗೆ ಅದನ್ನು ತಪ್ಪಿಸುವುದಕ್ಕೆ ಮೋಸದಿಂದ ವಿರತಿಯಿರುತ್ತದೆ, ಹಠಮಾರಿ ವ್ಯಕ್ತಿಗೆ ಅದನ್ನು ತಪ್ಪಿಸುವುದಕ್ಕೆ ಹಠಮಾರಿತನದಿಂದ ವಿರತಿಯಿರುತ್ತದೆ, ಹಮ್ಮು ತುಂಬಿದ ವ್ಯಕ್ತಿಗೆ ಅದನ್ನು ತಪ್ಪಿಸುವುದಕ್ಕೆ ಹಮ್ಮಿಲ್ಲದಿರುವಿಕೆಯಿರುತ್ತದೆ, ಹೇಳಿದಂತೆ ಕೇಳದ ವ್ಯಕ್ತಿಗೆ ಅದನ್ನು ತಪ್ಪಿಸುವುದಕ್ಕೆ ಹೇಳಿದಂತೆ ಕೇಳುವುದಿರುತ್ತದೆ, ಕೆಟ್ಟ ಗೆಳೆಯರುಳ್ಳ ವ್ಯಕ್ತಿಗೆ ಅದನ್ನು ತಪ್ಪಿಸುವುದಕ್ಕೆ ಒಳ್ಳೆಯ ಗೆಳೆತನವಿರುತ್ತದೆ, ಮೈಮರೆವಿನ ವ್ಯಕ್ತಿಗೆ ಅದನ್ನು ತಪ್ಪಿಸುವುದಕ್ಕೆ ಎಚ್ಚರವಿರುತ್ತದೆ, ಶ್ರದ್ಧಾರಹಿತನಾದ ವ್ಯಕ್ತಿಗೆ ಅದನ್ನು ತಪ್ಪಿಸುವುದಕ್ಕೆ ಶ್ರದ್ಧೆಯರುತ್ತದೆ, ಲಜ್ಜೆಯಿಲ್ಲದೆ ವ್ಯಕ್ತಿಗೆ ಅದನ್ನು ತಪ್ಪಿಸುವುದಕ್ಕೆ ಲಜ್ಜೆಯಿರುತ್ತದೆ, ತಪ್ಪಿನ ಅಂಜಿಕೆಯಿಲ್ಲದ ವ್ಯಕ್ತಿಗೆ ಅದನ್ನು ತಪ್ಪಿಸುವುದಕ್ಕೆ ತಪ್ಪಿನ ಅಂಜಿಕೆಯಿರುತ್ತದೆ, ಕಡಿಮೆ ತಿಳುವಳಿಕೆಯುಳ್ಳ ವ್ಯಕ್ತಿಗೆ ಅದನ್ನು ತಪ್ಪಸುವುದಕ್ಕೆ ಹೆಚ್ಚು ತಿಳುವಳಿಕೆಯಿರುತ್ತದೆ, ಸೋಮಾರಿಯಾದ ವ್ಯಕ್ತಿಗೆ ಅದನ್ನು ತಪ್ಪಿಸುವುದಕ್ಕೆ ಹುರುಪಿರುತ್ತದೆ, ಅಜಾಗರೂಕ ವ್ಯಕ್ತಿಗೆ ಅದನ್ನು ತಪ್ಪಿಸುವುದಕ್ಕೆ ಜಾಗರೂಕತೆ ಇರುತ್ತದೆ, ಅಲ್ಪ ಮತಿಯಾದ ವ್ಯಕ್ತಿಗೆ ಅದನ್ನು ತಪ್ಪಿಸುವುದಕ್ಕೆ ಪ್ರಜ್ಞಾಸಂಪದವಿರುತ್ತದೆ, ಮತಾಂಧತೆಯಿಂದ ಮಿಥ್ಯಾಗ್ರಾಹಿಯಾಗಿ ಅದಕ್ಕೆ ಬಲವಾಗಿ ಅಂಟಿಕೊಂಡ ಅದನ್ನು ಸುಲಭವಾಗಿ ಬಿಡಲೊಲ್ಲದ ವ್ಯಕ್ತಿಗೆ ಮತಾಂಧತೆಯಿಲ್ಲದ ಮಿಥ್ಯಗ್ರಾಹಿಯಲ್ಲದ ಅದಕ್ಕೆ ಬಲವಾಗಿ ಅಂಟಿಕೊಳ್ಳದ ಸುಲಭವಾಗಿ ಬಿಡಬಹುದಾದ ಸ್ಥಿತಿಯು ಪರಿನಿರ್ವಾಣಕ್ಕೊಯ್ಯುವಂಥದಾಗಿರುತ್ತದೆ.
8. “ಹೀಗೆಯೇ ಚುಂದ, ನನ್ನಿಂದ ತಿದ್ದುಪಡಿಯ ವಿಧಾನ ಉಪದೇಶಿತವಾಗಿದೆ, (ಅದನ್ನು)ಮನಸ್ಸಿನಲ್ಲಿ ಉಂಟುಮಾಡಿಕೊಳ್ಳಬೇಕಾದ ವಿಧಾನ ಉಪದೇಶಿತವಾಗಿದೆ, ತಪ್ಪಿಸುವೆಕೆಯ ವಿಧಾನ ಉಪದೇಶಿತವಾಗಿದೆ, ಮೇಲೇರುವ ವಿಧಾನ ಉಪದೇಶಿತವಾಗಿದೆ, ಪರಿನಿರ್ವಾಣದ ವಿಧಾನ ಉಪದೇಶಿತವಾಗಿದೆ. ಚುಂದ, ಶ್ರಾವಕರ ಹಿತೈಷಿಯಾದ ಅನುಕಂಪಿಯಾದ ಶಾಸ್ತನು ಅನುಕಂಪದಿಂದ ಮಾಡಲೇಬೇಕಾದವು ಯಾವುವೋ, ಅವುಗಳು ನನ್ನಿಂದ ಆಗಿವೆ.113 ‘ಚುಂದ, ಇವು ಮರದ ಬುಡಗಳು, ಇವು ಶೂನ್ಯ ಗೃಹಗಳು, ಚುಂದ, ಧ್ಯಾನಮಾಡಿ, ಎಚ್ಚರಗೆಡಬೇಡಿ. (ಮುಂದೆ) ಪಶ್ಚಾತ್ತಾಪ ಪಡುವವರು ಆಗಬೇಡಿ’ - ಇವೇ ನಮ್ಮ ಅನುಶಾಸನ ಎಂದು.
ಭಗವಾನರು ಹೀಗೆ ನುಡಿದರು. ಸ್ಫೂರ್ತಿಯನ್ನು ಪಡೆದ ಆಯುಷ್ಮಂತನಾದ ಮಹಾಚುಂದನು ಭಗವಾನರ ನುಡಿಗೆ ಆನಂದಗೊಂಡನು.
“ನಲವತ್ ನಾಲ್ಕು ಪದಗಳನ್ನು ಹೇಳಿಯಾಯಿತು.
ಸಾಗರದಂತೆ ಗಂಭೀರವಾದುದು”.
ಟಿಪ್ಪಣಿಗಳು [4]
English
Việt Ngữ