ಊಟಿಸುತ್ತಿದೆ

ಅನುವಾದಗಳು [30]

ಚಂಕೀ ಸುತ್ತ

ಚಂಕೀ ಸುತ್ತ

ಹೀಗೆ ನಾನು ಕೇಳಿದ್ದೇನೆ. ಒಂದು ಸಮಯದಲ್ಲಿ ಭಗವಾನರು ತಮ್ಮ ಮಹಾ ಭಿಕ್ಖು ಸಂಘದೊಡನೆ ಕೊಸಲ ದೇಶದಲ್ಲಿ ಸಂಚರಿಸುತ್ತಾ ಕೋಸಲ ಬ್ರಾಹ್ಮಣ ಗ್ರಾಮವಾದ ಓಪಾಸಾದಕ್ಕೆ ಬಂದರು.

ಭಗವಾನರು ಅಲ್ಲಿನ ಸಾಲವೃಕ್ಷಗಳ ತೋಪಿನ ದೇವವನದಲ್ಲಿ ತಂಗಿದ್ದರು.

ಆ ಸಂದರ್ಭದಲ್ಲಿ ಚಂಕೀ ಎನ್ನುವ ಬ್ರಾಹ್ಮಣನು ಓಪಾಸಾದ ಗ್ರಾಮವನ್ನು ಆಳುತ್ತಿದ್ದನು. ಕೋಸಲದ ರಾಜ ಪಸೇನದಿಯಿಂದ ದತ್ತಿಯಾಗಿ ಬಂದಿರುವ ಈ ಗ್ರಾಮವು ಹುಲ್ಲುಗಾವಲು, ವನ, ಜಲ, ಧನ, ಧಾನ್ಯ, ಜೀವರಾಶಿಗಳಿಂದ ಸಮೃದ್ಧವಾಗಿತ್ತು.

ಓಪಾಸಾದಾದ ಬ್ರಾಹ್ಮಣ ಗೃಹಸ್ಥರು ಹೀಗೆ ಕೇಳಲ್ಪಟ್ಟರು.

ಶಾಕ್ಯ ಪುತ್ರರಾದ ಸಮಣ ಗೌತಮರು ಶಾಕ್ಯ ಕುಲದ ಪಬ್ಬಜಿತರು. ಇವರು ವಿದೇಹ ರಾಜ್ಯದಲ್ಲಿ ತಮ್ಮ ಐದುನೂರು ಭಿಕ್ಖುಗಳ ಭಿಕ್ಖು ಸಂಘದಲ್ಲಿ ಸಂಚರಿಸುತ್ತಿದ್ದಾರೆ.

ಈ ಪೂಜ್ಯ ಗೌತಮರ ಬಗ್ಗೆ ಒಳ್ಳೆಯ ವದಂತಿಯೊಂದು ಹಬ್ಬಿದೆ:

ಭಗವಾನರು ಅರಹಂತರು, ಸಮ್ಮಾಸಂಬುದ್ಧರು, ವಿದ್ಯಾಚರಣ ಸಂಪನ್ನರು ಸುಗತರು ಲೋಕ ಜ್ಞಾನಿಗಳು, ವ್ಯಕ್ತಿಗಳನ್ನು ಪಳಗಿಸುವ ಅಸಮಾನ ಮಾರ್ಗದರ್ಶಿಗಳು. ದೇವತೆಗಳ ಹಾಗು ಮಾನವರ ಗುರುಗಳು, ಭಗವಂತರು ಮತ್ತು ಬುದ್ಧರು.

ತಮ್ಮ ಸ್ವಯಂ ಅಭಿಜ್ಞಾನದಿಂದ ಈ ಲೋಕದ ದೇವತೆಗಳನ್ನು, ಮಾರರನ್ನು, ಬ್ರಹ್ಮರನ್ನು, ಸಮಣರನ್ನು ಬ್ರಾಹ್ಮಣರನ್ನು ಪ್ರಜೆಗಳನ್ನು ರಾಜರನ್ನು ಅರಿತಿದ್ದಾರೆ.

ಯಾವ ಧರ್ಮವು ಆದಿಯಲ್ಲಿ ಮಧ್ಯದಲ್ಲಿ ಮತ್ತು ಅಂತ್ಯದಲ್ಲಿ ಕಲ್ಯಾಣದಿಂದ ಕೂಡಿದೆಯೋ ಅಂತಹ ಧರ್ಮವನ್ನು ಅರ್ಥ ವ್ಯಂಜನಗಳಿಂದ ಬೋಧಿಸಿ ಪರಿಪೂರ್ಣವೂ ಪರಿಶುದ್ಧವೂ ಆದ ಬ್ರಹ್ಮಚರ್ಯ (ಪವಿತ್ರ) ಜೀವನವನ್ನು ಪ್ರಕಾಶಿಸುವಂತವರು,

ಇಂತಹ ಅರಹಂತರನ್ನು ಈಗ ನೋಡುವುದು ಒಳ್ಳೆಯದು.

ಆಗ ಓಪಾಸಾದಾದ ಬ್ರಾಹ್ಮಣ ಗೃಹಸ್ಥರು ಗುಂಪು ಗುಂಪಾಗಿ ಓಪಾಸಾದವನ್ನು ಬಿಟ್ಟು ಉತ್ತರದ ಕಡೆಗಿರುವ ಸಾಲತೋಪಿನ ದೇವವನದತ್ತ ತೆರಳಿದರು.

2. ಆ ಸಂದರ್ಭದಲ್ಲಿ ಬ್ರಾಹ್ಮಣ ಚಂಕಿಯು ಮಧ್ಯಾಹ್ನದ ವಿರಾಮಕ್ಕೆಂದು ತನ್ನ ಅರಮನೆಯ ಮಹಡಿಗೆ ತೆರಳಿದ್ದನು.

ಆಗ ಅವನು ಓಪಾಸಾದಾದ ಬ್ರಾಹ್ಮಣ ಗೃಹಸ್ಥರು ಗುಂಪು ಗುಂಪಾಗಿ ಓಪಾಸಾದಾವನ್ನು ಬಿಟ್ಟು ಉತ್ತರದಲ್ಲಿರುವ ಸಾಲ ತೋಪಿನ ದೇವವನದತ್ತ ಹೋಗುತ್ತಿರುವುದನ್ನು ನೋಡಿದನು.

ಅವರನ್ನು ನೋಡಿದ ಮೇಲೆ ತನ್ನ ಕ್ಷತ್ರಿಯನನ್ನು ಕರೆದು ಕೇಳಿದನು:

ಕ್ಷತ್ರಿಯನೆ, ಓಪಾಸಾದಾದ ಬ್ರಾಹ್ಮಣ ಗೃಹಸ್ಥರು ಗುಂಪು ಗುಂಪಾಗಿ ಓಪಾಸಾದಾವನ್ನು ಬಿಟ್ಟು ಉತ್ತರದಲ್ಲಿರುವ ಸಾಲತೋಪಿನ ದೇವವನದತ್ತ ಏಕೆ ಹೋಗುತ್ತಿದ್ದಾರೆ?

ಸ್ವಾಮಿ, ಶಾಕ್ಯಪುತ್ರನಾದ ಸಮಣ ಗೌತಮರು ಪಬ್ಬಜಿತರಾಗಿ ಕೋಸಲ ದೇಶದಲ್ಲಿ ಸಂಚರಿಸುತ್ತಿದ್ದಾರೆ

ಈ ಪೂಜ್ಯ ಗೌತಮರ ಬಗ್ಗೆ ಒಳ್ಳೆಯ ವದಂತಿಯೊಂದು ಹಬ್ಬಿದೆ:

ಭಗವಾನರು ಅರಹಂತರು, ಸಮ್ಮಾಸಂಬುದ್ಧರು, ವಿದ್ಯಾಚರಣ ಸಂಪನ್ನರು ಸುಗತರು ಲೋಕ ಜ್ಞಾನಿಗಳು, ವ್ಯಕ್ತಿಗಳನ್ನು ಪಳಗಿಸುವ ಅಸಮಾನ ಮಾರ್ಗದರ್ಶಿಗಳು. ದೇವತೆಗಳ ಹಾಗು ಮಾನವರ ಗುರುಗಳು, ಭಗವಂತರು ಮತ್ತು ಬುದ್ಧರು. ತಮ್ಮ ಸ್ವಯಂ ಅಭಿಜ್ಞಾನದಿಂದ ಈ ಲೋಕದ ದೇವತೆಗಳನ್ನು, ಮಾರರನ್ನು, ಬ್ರಹ್ಮರನ್ನು, ಸಮಣರನ್ನು ಬ್ರಾಹ್ಮಣರನ್ನು ಪ್ರಜೆಗಳನ್ನು ರಾಜರನ್ನು ಅರಿತಿದ್ದಾರೆ. ಯಾವ ಧರ್ಮವು ಆದಿಯಲ್ಲಿ ಮಧ್ಯದಲ್ಲಿ ಮತ್ತು ಅಂತ್ಯದಲ್ಲಿ ಕಲ್ಯಾಣದಿಂದ ಕೂಡಿದೆಯೋ ಅಂತಹ ಧರ್ಮವನ್ನು ಅರ್ಥ ವ್ಯಂಜನಗಳಿಂದ ಬೋಧಿಸಿ ಪರಿಪೂರ್ಣವೂ ಪರಿಶುದ್ಧವೂ ಆದ ಬ್ರಹ್ಮಚರ್ಯ (ಪವಿತ್ರ) ಜೀವನವನ್ನು ಪ್ರಕಾಶಿಸುವಂತವರು.

ಅವರೆಲ್ಲರೂ ಆಚಾರ್ಯ ಗೌತಮರನ್ನು ನೋಡಲು ಹೋಗುತ್ತಿದ್ದಾರೆ.

ಆಯಿತು, ಕ್ಷತ್ರಿಯನೆ, ಓಪಾಸಾದಾದ ಗೃಹಸ್ಥರ ಬಳಿಹೋಗಿ ಅವರಿಗೆ ಹೇಳು:

ಮಾನ್ಯರೆ, ದಯಮಾಡಿ ಸ್ವಲ್ಪ ಕಾಯಿರಿ, ಬ್ರಾಹ್ಮಣ ಚಂಕಿಯು ಕೂಡ ಸಮಣ ಗೌತಮರನ್ನು ನೋಡಲು ಹೋಗುತ್ತಾರೆ.

ಆಯಿತು, ಸ್ವಾಮಿ ಎಂದು ಕ್ಷತ್ರಿಯನು ಹೇಳಿ ಓಪಾಸಾದಾದ ಬ್ರಾಹ್ಮಣರ ಗೃಹಸ್ಥರ ಬಳಿ ಹೋಗಿ ಅವರಿಗೆ ಸಂದೇಶವನ್ನು ಮುಟ್ಟಿಸಿದನು.

3. ಆ ಸಂದರ್ಭದಲ್ಲಿ ನಾನಾ ಪ್ರಾಂತ್ಯಗಳಿಂದ ನಾನಾ ಕಾರಣಗಳಿಗಾಗಿ ಬಂದ ಐದುನೂರು ಬ್ರಾಹ್ಮಣರು ಒಪಾಸಾದಾದಲ್ಲಿ ತಂಗಿದ್ದರು.

ಅವರೆಲ್ಲ ಹೀಗೆ ಕೇಳಲ್ಪಟ್ಟರು:

ಬ್ರಾಹ್ಮಣ ಚಂಕಿಯು ಸಮಣ ಗೌತಮರನ್ನು ನೋಡಲು ಹೋಗುತ್ತಾರಂತೆ.

ಆಗ ಅವರು ಬ್ರಾಹ್ಮಣ ಚಂಕಿಯ ಬಳಿ ಹೋಗಿ ಕೇಳಿದರು,

ಸ್ವಾಮಿ, ನೀವು ಸಮಣ ಗೌತಮರನ್ನು ನೋಡಲು ಹೋಗುತ್ತಿದ್ದೀರಂತೆ, ಅದು ನಿಜವೇ?

ಹೌದು, ಮಾನ್ಯರೆ, ನಾನು ಸಮಣ ಗೌತಮರನ್ನು ನೋಡಲು ಹೋಗುತ್ತಿದ್ದೇನೆ.

ಸ್ವಾಮಿ, ಸಮಣ ಗೌತಮರನ್ನು ನೋಡಲು ಹೋಗಬೇಡಿ.

ಆಚಾರ್ಯ ಚಂಕಿಯವರೆ, ಸಮಣ ಗೌತಮರನ್ನು ನೋಡಲು ಹೋಗುವುದು ನಿಮಗೆ ತರವಲ್ಲ;

ವಾಸ್ತವವಾಗಿ ಸಮಣ ಗೌತಮರೇ ನಿಮ್ಮನ್ನು ನೋಡಲು ಬರುವುದು ಸರಿ ಇರುತ್ತದೆ.

ಸ್ವಾಮಿ, ನೀವು ಹುಟ್ಟಿನಿಂದ ಏಳು ತಲೆಮಾರಿನವರೆಗೆ ತಾಯಿಯ ಕಡೆಯಿಂದ ಮತ್ತು ತಂದೆಯ ಕಡೆಯಿಂದ ಉಭಯತ್ರ ಸುಜಾತರು, ಪ್ರಶ್ನಾತೀತರು ಮತ್ತು ಪವಿತ್ರರು.

ಹೀಗಿರುವಾಗ ಆಚಾರ್ಯ ಚಂಕೀ, ನೀವು ಸಮಣ ಗೌತಮರನ್ನು ನೋಡಲು ಹೋಗುವುದು ಸರಿಯಲ್ಲ.

ಸಮಣ ಗೌತಮರು ನಿಮ್ಮನ್ನು ನೋಡಲು ಬರುವುದು ಸೂಕ್ತವಾಗಿರುತ್ತದೆ.

ನೀವು ನಿಘಂಟು, ಕೇಟುಭ, ಅಕ್ಷರ ಪ್ರಬೇಧಗಳು ಮತ್ತು ಐದನೆಯದಾಗಿ ಇತಿಹಾಸದೊಡನೆ ಮೂರು ವೇದಗಳನ್ನು ಬಲ್ಲವರು, ವೇದಗಳ ಪದಪಾಠವನ್ನು ಬಲ್ಲವರು, ವೈಯಾಕರಣರು, ಲೋಕಾಯತದಲ್ಲೂ ಮಹಾಪುರುಷ ಲಕ್ಷಣಗಳಲ್ಲೂ ಪಂಡಿತರು.

ನೀವು ರೂಪವಂತರು, ದರ್ಶನೀಯರು, ಸಮಾಧಾನಚಿತ್ತರು, ಸುಂದರ ವರ್ಣವುಳ್ಳವರು, ಬ್ರಹ್ಮ ವರ್ಣವನ್ನು ಬ್ರಹ್ಮ ವರ್ಚಸ್ಸನ್ನು ಉಳ್ಳವರು.

ನೀವು ಶೀಲವಂತರು, ಆರ್ಯಶೀಲರು, ಕುಶಲಶೀಲರು, ಕುಶಲ ಶೀಲದಿಂದಲೇ ಸದಾ ಇರುವವರು.

ಸ್ವಾಮಿ, ನೀವು ಕಲ್ಯಾಣವಾಚಿಗಳು, ಕಲ್ಯಾಣವಾಗ್ಮಿಗಳು. ನೀವು ಸೌಜನ್ಯದಿಂದ ಸ್ಪಷ್ಟವಾಗಿ, ತಪ್ಪಿಲ್ಲದೆ ಮಾತನಾಡಿ ಅರ್ಥವನ್ನು ಸಂವಹಿಸುವ ಶಕ್ತಿಯುಳ್ಳವರು.

ಮಾನ್ಯರೆ, ನೀವು ಬಹು ಆಚಾರ್ಯರುಗಳಿಗೆ ಆಚಾರ್ಯರು, ನೀವು ಮುನ್ನೂರುಜನ ಬ್ರಾಹ್ಮಣ ಶಿಷ್ಯರಿಗೆ ಮಂತ್ರಗಳನ್ನು ಉಪದೇಶಿಸುವವರು.

ಮಾನ್ಯರೆ, ನೀವು ಕೋಸಲದ ರಾಜ ಪಸೇನದಿಯಿಂದ ಸತ್ಕಾರಗೊಂಡವರು, ಗೌರವಿಸಲ್ಪಟ್ಟವರು, ಸಂಮ್ಮಾನಿತರು, ಪೂಜಿಸಲ್ಪಟ್ಟವರು ಮತ್ತು ಪ್ರಶಂಸಿಸಲ್ಪಟ್ಟವರು.

ನೀವು ಬ್ರಾಹ್ಮಣ ಪೊಕ್ಖರಸಾತಿಯಿಂದ ಸತ್ಕಾರಗೊಂಡವರು97, ಗೌರವಿಸಲ್ಪಟ್ಟವರು, ಸಂಮ್ಮಾನಿತರು, ಪೂಜಿಸಲ್ಪಟ್ಟವರು ಮತ್ತು ಪ್ರಶಂಸಿಲ್ಪಟ್ಟವರು.

ಸ್ವಾಮಿ, ನೀವು ಕೋಸಲದ ರಾಜ ಪಸೇನದಿಯಿಂದ ದತ್ತಿಯಾಗಿ ಬಂದಿರುವ ವನ, ಜಲ, ಧನ, ಧಾನ್ಯ ಜೀವರಾಶಿಗಳಿಂದ ಕೂಡಿ ಸಮೃದ್ಧಿಯಾಗಿರುವ ಓಪಾಸಾದವನ್ನು ಆಳುವವರು.

ಹೀಗಿರುವಾಗ, ಆಚಾರ್ಯ ಚಂಕೀ, ನೀವು ಸಮಣ ಗೌತಮರನ್ನು ನೋಡಲು ಹೋಗುವುದು ಸರಿಯಲ್ಲ,

ಸಮಣ ಗೌತಮರೇ ಬಂದು ನಿಮ್ಮನ್ನು ನೋಡುವುದು ಸರಿಯಿರುತ್ತದೆ.

4. ಅವರು ಇಷ್ಟೆಲ್ಲಾ ಹೇಳಿದ ಮೇಲೆ ಬ್ರಾಹ್ಮಣ ಚಂಕೀಯು ಆ ಬ್ರಾಹ್ಮಣರಿಗೆ ಹೀಗೆ ಹೇಳಿದನು:

ಮಾನ್ಯರೆ, ಗೌತಮರನ್ನು ನೋಡಲು ಹೋಗುವುದು ಏಕೆ ಸರಿ

ಮತ್ತು ಸಮಣ ಗೌತಮರು ನನ್ನನ್ನು ನೋಡಲು ಬರುವುದು ಏಕೆ ಸರಿಯಿಲ್ಲ ಎಂಬುದನ್ನು ಈಗ ನನ್ನಿಂದ ಕೇಳಿರಿ.

ಮಾನ್ಯರೆ, ಸಮಣ ಗೌತಮರು ಹುಟ್ಟಿನಿಂದ ಏಳು ತಲೆಮಾರು ಹಿಂದಿನವರೆಗೆ ತಮ್ಮ ತಾಯಿಯ ಕಡೆಯಿಂದ ಮತ್ತು ತಂದೆಯ ಕಡೆಯಿಂದ ಉಭಯತ್ರ ಸುಜಾತರು, ಪ್ರಶ್ನಾತೀತರು ಮತ್ತು ಪವಿತ್ರರು.

ಈ ಕಾರಣದಿಂದ ಮಾನ್ಯರೆ, ಸಮಣ ಗೌತಮರು ನನ್ನನ್ನು ನೋಡಲು ಬರುವುದು ಸರಿಯಲ್ಲ, ನಾನು ಸಮಣ ಗೌತಮರನ್ನು ನೋಡಲು ಹೋಗುವುದೇ ಸರಿ ಇರುತ್ತದೆ.

ಮಾನ್ಯರೆ, ಸಮಣ ಗೌತಮರು ಹಿರಣ್ಯ ಸುವರ್ಣಗಳಿರುವ ಭಂಡಾರವನ್ನೇ ಬಿಟ್ಟು ಪಬ್ಬಜಿತರಾದವರು.

ಮಾನ್ಯರೆ, ಸಮಣ ಗೌತಮರು ಇನ್ನೂ ಕಪ್ಪು ಕೂದಲಿದ್ದು ಯೌವನವನ್ನು ಅನುಭವಿಸುತ್ತಿರುವ ತಾರುಣ್ಯದಲ್ಲೇ ಮನೆಯನ್ನು ತೊರೆದು ಪಬ್ಬಜಿತರಾದವರು.

ಮಾನ್ಯರೆ, ತಮ್ಮ ತಂದೆ-ತಾಯಿಗಳು ಭಿನ್ನವಾಗಿಯೇ ಯೋಚಿಸುತ್ತಿದ್ದ ಅಶ್ರುತಪ್ತರಾಗಿರುವಾಗಲೇ ಕೇಶಮುಂಡನ ಮಾಡಿಕೊಂಡು ಕಾಷಾಯ ವಸ್ತ್ರಗಳನ್ನು ಧರಿಸಿ ಮನೆಯನ್ನು ತೊರೆದು ಪಬ್ಬಜಿತರಾದವರು.

ಮಾನ್ಯರೆ, ಸಮಣ ಗೌತಮರು ರೂಪವಂತರು, ದರ್ಶನೀಯರು, ಸಮಾಧಾನಚಿತ್ತರು, ಅಪ್ರತಿಮ ಸೌಂದರ್ಯವನ್ನು ಉಳ್ಳವರು, ಬ್ರಹ್ಮ ವರ್ಣವನ್ನು ಮತ್ತು ಬ್ರಹ್ಮ ವರ್ಚಸ್ಸನ್ನು ಉಳ್ಳವರು.

ಮಾನ್ಯರೇ, ಸಮಣ ಗೌತಮರು ಶೀಲವಂತರು, ಆರ್ಯಶೀಲರು, ಕುಶಲಶೀಲರು ಕುಶಲಶೀಲದಿಂದಲೇ ಸದಾ ಇರುವವರು.

ಮಾನ್ಯರೆ, ಸಮಣ ಗೌತಮರು ಕಲ್ಯಾಣ ವಾಚಿಗಳು, ಕಲ್ಯಾಣ ವಾಗ್ಮಿಗಳು, ಸೌಜನ್ಯದಿಂದ ನುಡಿಯುವವರು, ಸ್ಪಷ್ಟವಾಗಿ, ತಪ್ಪಿಲ್ಲದೆ ಮಾತನಾಡಿ ಅರ್ಥವನ್ನು ಸಂವಹಿಸುವ ಶಕ್ತಿಯುಳ್ಳವರು.

ಮಾನ್ಯರೆ, ಸಮಣ ಗೌತಮರು ಬಹು ಆಚಾರ್ಯರ ಆಚಾರ್ಯರು.

ಮಾನ್ಯರೆ, ಸಮಣ ಗೌತಮರು ಕಾಮರಾಗಗಳನ್ನು ಕಳೆದುಕೊಂಡವರು, ಚಾಪಲ್ಯವಿಗತರು, ಮಾನ್ಯರೆ, ಸಮಣ ಗೌತಮರು ಕಮ್ಮವಾದಿಗಳು, ಕ್ರಿಯಾವಾದಿಗಳು, ಬ್ರಾಹ್ಮಣ ಸಂತತಿಗೆ ಯಾವ ಕೇಡನ್ನು ಬಯಸದಿರುವವರು.

ಮಾನ್ಯರೆ, ಸಮಣ ಗೌತಮರು ಉಚ್ಚ ಕುಲದಿಂದ ಪಬ್ಬಜಿತರಾದವರು, ಅಸಂಭಿನ್ನ ಕ್ಷತ್ರಿಯ ಕುಲದವರು;

ಮಾನ್ಯರೆ ಸಮಣ ಗೌತಮರು ಮಹಾಧನ, ಮಹಾಭೋಗಗಳನ್ನು ಉಳ್ಳ ಆಢ್ಯಕುಲದಿಂದ ಪಬ್ಬಜಿತರಾದವರು;

ಮಾನ್ಯರೆ, ಜನರು ಮೂಲೆ ಮೂಲೆಗಳಲ್ಲಿರುವ ರಾಜ್ಯಗಳಿಂದ ಜನಪದಗಳಿಂದ ಬಂದು ಸಮಣ ಗೌತಮರನ್ನು ಪ್ರಶ್ನಿಸುತ್ತಾರೆ.

ಮಾನ್ಯರೆ, ಅನೇಕ ಸಾವಿರಾರು ದೇವತೆಗಳು ಜೀವನಪರ್ಯಂತ ಸಮಣ ಗೌತಮರಿಗೆ ಶರಣುಹೋಗಿದ್ದಾರೆ.

ಮಾನ್ಯರೆ, ಸಮಣ ಗೌತಮರ ಬಗ್ಗೆ ಹೀಗೊಂದು ಒಳ್ಳೆಯ ವರದಿ ಬಂದಿದೆ;

ಭಗವಾನರು, ಅರ್ಹಂತರು, ಸಮ್ಮಕ್ ಸಂಬುದ್ಧರು, ವಿದ್ಯಾಚರಣ ಸಂಪನ್ನರು, ಸುಗತರು, ಲೋಕಜ್ಞಾನಿಗಳು, ವ್ಯಕ್ತಿಗಳನ್ನು ಪಳಗಿಸುವ ಅಸಮಾನ ಮಾರ್ಗದರ್ಶಿಗಳು, ದೇವತೆಗಳ ಹಾಗು ಮಾನವರ ಗುರು, ಬುದ್ಧರು ಮತ್ತು ಭಾಗ್ಯವಂತರು.

ಮಾನ್ಯರೆ, ಸಮಣ ಗೌತಮರು ಮೂವತ್ತೆರಡು ಮಹಾಪುರುಷ ಲಕ್ಷಣಗಳನ್ನು ಹೊಂದಿರುವವರು.

ಮಾನ್ಯರೆ ಮಗಧ ದೇಶದ ರಾಜ ಬಿಂಬಿಸಾರ, ಅವನ ಪತ್ನಿ ಮತ್ತು ಮಕ್ಕಳು ಸಮಣ ಗೌತಮರಿಗೆ ಜೀವನ ಪರ್ಯಂತ ಶರಣು ಹೋಗಿದ್ದಾರೆ.

ಮಾನ್ಯರೆ, ಕೋಸಲ ದೇಶದ ರಾಜ ಪಸೇನದಿ, ಅವನ ಪತ್ನಿ ಮತ್ತು ಮಕ್ಕಳು ಜೀವನಪರ್ಯಂತ ಸಮಣ ಗೌತಮರಿಗೆ ಶರಣು ಹೋಗಿದ್ದಾರೆ.

ಮಾನ್ಯರೆ, ಬ್ರಾಹ್ಮಣ ಪೊಕ್ಖರಸಾತಿ, ಅವನ ಪತ್ನಿ ಮತ್ತು ಮಕ್ಕಳು ಜೀವನಪರ್ಯಂತ ಸಮಣ ಗೌತಮರಿಗೆ ಶರಣು ಹೋಗಿದ್ದಾರೆ.

ಮಾನ್ಯರೆ, ಸಮಣ ಗೌತಮರು ಓಪಾಸಾದಾದ ಉತ್ತರಕ್ಕಿರುವ ಸಾಲತೋಪಿನ ದೇವವನದಲ್ಲಿ ತಂಗಿದ್ದಾರೆ.

ಈಗ, ಯಾರೇ ಸಮಣರಾಗಲಿ, ಬ್ರಾಹ್ಮಣರಾಗಲಿ, ನಮ್ಮ ಗ್ರಾಮಕ್ಕೆ ಬಂದರೆ ಅವರು ನಮ್ಮ ಅತಿಥಿಗಳಾಗುತ್ತಾರೆ.

ಬಂದ ಅತಿಥಿಗಳನ್ನು ನಾವು ಸತ್ಕರಿಸಬೇಕು, ಗೌರವಿಸಬೇಕು, ಸನ್ಮಾನಿಸಬೇಕು, ಪೂಜಿಸಬೇಕು. ಸಮಣ ಗೌತಮರು ಓಪಾಸಾದಕ್ಕೆ ಬಂದಿರುವುದರಿಂದ ಅವರು ನಮ್ಮ ಅತಿಥಿ, ನಮ್ಮ ಅತಿಥಿಯನ್ನು ಸತ್ಕರಿಸಬೇಕು, ಗೌರವಿಸಬೇಕು, ಸನ್ಮಾನಿಸಬೇಕು ಮತ್ತು ಪೂಜಿಸಬೇಕು.

ವಸ್ತುಸ್ಥಿತಿ ಹೀಗಿರುವಾಗ, ಮಾನ್ಯರೆ, ಸಮಣ ಗೌತಮರು ನನ್ನನ್ನು ನೋಡಲು ಬರುವುದು ಸರಿಯಲ್ಲ; ನಾನೇ ಸಮಣ ಗೌತಮರನ್ನು ನೋಡಲು ಹೋಗುವುದು ಸರಿ.

ಮಾನ್ಯರೆ, ಇಷ್ಟರಮಟ್ಟಿಗೆ ಸಮಣ ಗೌತಮರನ್ನು ಹೊಗಳುವುದನ್ನು ತಿಳಿದಿದ್ದೇನೆ. ಆದರೆ ಅವರನ್ನು ವರ್ಣಿಸುವುದು ಇಷ್ಟಕ್ಕೆ ಸೀಮಿತವಲ್ಲ.

ಅವರು ವರ್ಣನೆಗೆ ಸಿಲುಕದಿರುವವರು.

ಸಮಣ ಗೌತಮರು ಪ್ರತಿಯೊಂದು ಗುಣವನ್ನೂ ಹೊಂದಿರುವುದರಿಂದ ಅವರು ನನ್ನನ್ನು ಕಾಣಲು ಬರುವುದು ಸರಿಯಿಲ್ಲ.

ನಾನೇ ಸಮಣ ಗೌತಮರನ್ನು ನೋಡಲು ಹೋಗುವುದು ಸೂಕ್ತ.

ಆದ್ದರಿಂದ, ಮಾನ್ಯರೆ, ನಾವೆಲ್ಲ ಸಮಣ ಗೌತಮರನ್ನು ನೋಡಲು ಹೋಗೋಣ.

5. ಆಗ ಬ್ರಾಹ್ಮಣ ಚಂಕಿಯು ಮಹಾ ಬ್ರಾಹ್ಮಣ ಗಣದೊಂದಿಗೆ ಭಗವಾನರ ಬಳಿಸಾರಿ ಸಂತೋಷದಿಂದ ಮಾತುಕತೆಯಾಡಿ ಕುಶಲ ಕೇಳಿದ ಬಳಿಕ ಒಂದುಕಡೆ ಕುಳಿತನು.

ಆ ಸಂದರ್ಭದಲ್ಲಿ ಭಗವಾನರು ವೃದ್ಧ ಬ್ರಾಹ್ಮಣರೊಂದಿಗೆ ಸಂತೋಷದಿಂದ ಮಾತುಕತೆಯಾಡಿ ಕುಶಲ ಕೇಳಿಯಾಗಿ ಕುಳಿತಿದ್ದರು.

ಆ ಸಮಯದಲ್ಲಿ ಆ ಸಭೆಯಲ್ಲಿ ಕಾಪಟಿಕ ಎನ್ನುವ ಬ್ರಾಹ್ಮಣ ಮಾಣವಕನು ಕುಳಿತಿದ್ದನು. ಯುವಕ, ಬೋಳುತಲೆ, ಹುಟ್ಟಿ ಹದಿನಾರು ವರ್ಷ, ನಿಘಂಟು, ಕೌಟುಭ, ಅಕ್ಷರ ಪ್ರಭೇದಗಳು ಮತ್ತು ಐದನೆಯದಾಗಿ ಇತಿಹಾಸದೊಡನೆ ಮೂರು ವೇದಗಳನ್ನು ಬಲ್ಲವನ್ನು; ವೇದಗಳ ಪದಪಾಠವನ್ನು ಬಲ್ಲವನು, ವೈಯಾಕರಣನು, ಲೋಕಾಯತದಲ್ಲೂ ಮಹಾಪುರುಷ ಲಕ್ಷಣಗಳಲ್ಲೂ ಪಂಡಿತನು ಆಗಿದ್ದನು.

ವೃದ್ಧ ಬ್ರಾಹ್ಮಣರು ಭಗವಾನರೊಂದಿಗೆ ಸಂವಾದದಲ್ಲಿರುವಾಗ ಅವರ ಮಾತಿನ ಮಧ್ಯೆ ತೂರಿ ಅಡ್ಡಿಪಡಿಸುತ್ತಿದ್ದನು.

ಆಗ ಭಗವಾನರು ಬ್ರಾಹ್ಮಣ ಮಾಣವ ಕಾಪಟಿಕನನ್ನು ಹೀಗೆ ಗದರಿದರು:

ವೃದ್ಧ ಬ್ರಾಹ್ಮಣರು ಸಂವಾದದಲ್ಲಿ ತೊಡಗಿರುವಾಗ ಆಯುಷ್ಮಂತ ಭಾರದ್ವಾಜರು ಬಾಯಿಹಾಕಿ ಅಡ್ಡಿಬಾರದಿರಲಿ.

ಆಯುಷ್ಮಂತ ಭಾರದ್ವಾಜರು ಮಾತು ಮುಗಿಯುವವರೆಗೂ ಕಾಯಲಿ.

ಹೀಗೆ ಹೇಳಿದ ಮೇಲೆ, ಬ್ರಾಹ್ಮಣ ಚಂಕಿಯು ಭಗವಾನರಿಗೆ ಹೇಳಿದನು:

ಆಚಾರ್ಯ ಗೌತಮರು ಮಾಣವ ಕಾಪಟಿಕನಿಗೆ ಗದರದಿರಲಿ.

ಈ ಬ್ರಾಹ್ಮಣ ಮಾಣವ ಕಾಪಟಿಕನು ಕುಲಪುತ್ರನು, ಬಹುಶ್ರುತನು, ಪಂಡಿತನು, ಕಲ್ಯಾಣದ ಮಾತುಗಳನ್ನಾಡುವವನೂ, ಆಚಾರ್ಯ ಗೌತಮರೊಂದಿಗೆ ಚಚರ್ೆಯಲ್ಲಿ ಭಾಗವಹಿಸಲು ಸಮರ್ಥನೂ ಆಗಿರುವವನು!

ಆಗ ಭಗವಾನರು ಹೀಗೆ ಯೋಚಿಸಿದರು:

ಖಂಡಿತವಾಗಿಯೂ, ಈ ಬ್ರಾಹ್ಮಣನು ಇವನನ್ನು ಹೀಗೆ ಆದರಿಸುವುದರಿಂದ ಈ ಬ್ರಾಹ್ಮಣ ಮಾಣವ ಕಾಪಟಿಕನು ತ್ರಿವೇದ ಪಾರಂಗತನೇ ಇರಬೇಕು.

6. ಆಗ ಬ್ರಾಹ್ಮಣ ಮಾಣವ ಕಾಪಟಿಕನು ಹೀಗೆ ಯೋಚಿಸಿದನು:

ಸಮಣ ಗೌತಮರು ನನ್ನ ಕಣ್ಣನ್ನು ದಿಟ್ಟಿಸಿ ನೋಡಿದ್ದರಿಂದ ನಾನು ಅವರಿಗೆ ಒಂದು ಪ್ರಶ್ನೆಯನ್ನು ಕೇಳಬೇಕು.

ಆನಂತರದಲ್ಲಿ ಭಗವಾನರು ಬ್ರಾಹ್ಮಣ ಮಾಣವ ಕಾಪಟಿಕನ ಮನಸ್ಸಿನಲ್ಲಿ ಆಗುತ್ತಿದ್ದ ಆಲೋಚನೆಯನ್ನು ಅರಿತು ಅವನತ್ತ ಕಣ್ಣುಹಾಯಿಸಿದರು.

ಆಗ ಬ್ರಾಹ್ಮಣ ಮಾಣವ ಕಾಪಟಿಕನು ಯೋಚಿಸಿದ:

ಸಮಣ ಗೌತಮರು ನನ್ನ ಕಡೆ ತಿರುಗಿದ್ದಾರೆ,

ನಾನೊಂದುವೇಳೆ ಪ್ರಶ್ನೆಯನ್ನು ಕೇಳಿದರೆ.

ಆಗ ಅವನು ಭಗವಾನರಿಗೆ ಹೇಳಿದನು:

ಆಚಾರ್ಯ ಗೌತಮರೆ, ಬ್ರಾಹ್ಮಣರ ಪುರಾತನ ಮಂತ್ರಪದಗಳು ಮೌಖಿಕ ಪರಂಪರೆಯಿಂದ ಗ್ರಂಥಗಳ ಸಂಗ್ರಹದಿಂದ ಬಂದುವಾದ್ದರಿಂದ ಬ್ರಾಹ್ಮಣರು ಒಂದು ಖಚಿತ ತೀಮರ್ಾನಕ್ಕೆ ಬಂದಿರುತ್ತಾರೆ.

ಇದೇ ಸತ್ಯ, ಬೇರೆಯದು ಸುಳ್ಳು.

ಇದಕ್ಕೆ ಆಚಾರ್ಯ ಗೌತಮರು ಏನೆನ್ನುವಿರಿ?

ಅದು ಹೇಗೆ ಭಾರದ್ವಾಜ, ಬ್ರಾಹ್ಮಣರಲ್ಲೇ ಒಬ್ಬ ಬ್ರಾಹ್ಮಣನಾದರೂ ಹೀಗೆ ಹೇಳುತ್ತಾನೆಯೇ:

ನನಗೆ ಇದು ಗೊತ್ತು, ನಾನು ಇದನ್ನು ನೋಡಿದ್ದೇನೆ;

ಇದು ಮಾತ್ರವೇ ಸತ್ಯ, ಬೇರೆಲ್ಲವೂ ಸುಳ್ಳು ಎಂದು.

ಇಲ್ಲ, ಆಚಾರ್ಯ ಗೌತಮರೆ.

ಅದು ಹೇಗೆ ಭಾರದ್ವಾಜ, ಬ್ರಾಹ್ಮಣರಲ್ಲೇ ಒಬ್ಬ ಆಚಾರ್ಯನಾಗಲಿ ಅಥವಾ ಒಬ್ಬನೇ ಆಚಾರ್ಯನ ಹಿಂದಿನ ಏಳು ಸಂತತಿಗಳವರೆಗಿನ ಆಚಾರ್ಯರು ಹೀಗೆ ಹೇಳಲಾರರು:

ನನಗೆ ಇದು ಗೊತ್ತು, ನಾನು ಇದನ್ನು ನೋಡಿದ್ದೇನೆ;

ಇದು ಮಾತ್ರವೇ ಸತ್ಯ, ಬೇರೆಲ್ಲವೂ ಸುಳ್ಳು.

ಇಲ್ಲ, ಆಚಾರ್ಯ ಗೌತಮರೆ.

ಅದು ಹೇಗೆ ಭಾರದ್ವಾಜ, ಪೂರ್ವದ ಬ್ರಾಹ್ಮಣ ಋಷಿಗಳು, ಮಂತ್ರಕರ್ತರು, ಮಂತ್ರ ಸಂಯೋಜಕರು, ಈ ಯಾವ ಮಂತ್ರಗಳನ್ನು ಮುಂಚೆ ಪಠಿಸಿದರೋ, ಹಾಡಿದರೋ ಸಂಯೋಜಿಸಿದರೋ ಅದೇ ಮಂತ್ರಗಳನ್ನು ಬ್ರಾಹ್ಮಣರು ಈ ದಿನಗಳಲ್ಲೂ ಈಗಲೂ ಪಠಿಸುತ್ತಾರೆ, ಪುನರುಚ್ಚರಿಸುತ್ತಾರೆ, ಯಾವುದನ್ನು ಈ ಹಿಂದೆ ಹಾಡಿದ್ದರೋ ಮತ್ತು ಯಾವುದನ್ನು ಪಠಿಸಿದ್ದರೋ ಅದನ್ನೇ ಪುನರುಚ್ಚರಿಸುತ್ತಾರೆ-ಎಂದರೆ, ಅಟ್ಠಕ, ವಾಮಕ, ವಾಮದೇವ, ವೆಸ್ಸಾಮಿತ್ತ, ಯಮತಗ್ಗಿ, ಅಂಗೀರಸ, ಭಾರದ್ವಾಜ, ವಾಸೇಟ್ಠ, ಕಸ್ಸಪ ಮತ್ತು ಭಗು -

ಈ ಎಲ್ಲಾ ಹಿಂದಿನ ಬ್ರಾಹ್ಮಣ ಋಷಿಗಳು ಹೀಗೆ ಹೇಳುತ್ತಾರೆಯೇ

ನಮಗೆ ಇದು ಗೊತ್ತು, ನಾವು ಇದನ್ನು ನೋಡಿದ್ದೆವೆ;

ಇದು ಮಾತ್ರವೇ ಸತ್ಯ, ಬೇರೆಲ್ಲವೂ ಸುಳ್ಳು.

ಇಲ್ಲ, ಆಚಾರ್ಯ ಗೌತಮರೆ.

ಆದ್ದರಿಂದ ಭಾರದ್ವಾಜ, ಇದರಿಂದ ತಿಳಿಯುವುದೇನೆಂದರೆ ಬ್ರಾಹ್ಮಣರಲ್ಲೇ ಒಬ್ಬ ಬ್ರಾಹ್ಮಣನಾದರೂ ಹೀಗೆ ಹೇಳಲಾರ: ನನಗೆ ಇದು ಗೊತ್ತು, ನಾನು ಇದನ್ನು ನೋಡಿದ್ದೇನೆ; ಇದು ಮಾತ್ರವೇ ಸತ್ಯ, ಬೇರೆಲ್ಲವೂ ಸುಳ್ಳು.

ಇನ್ನು ಬ್ರಾಹ್ಮಣರಲ್ಲೇ ಒಬ್ಬನೇ ಒಬ್ಬ ಆಚಾರ್ಯ ಅಥವಾ ಆ ಆಚಾರ್ಯನ ಹಿಂದಿನ ಏಳು ತಲೆಮಾರುಗಳ ಆಚಾರ್ಯರು ಹೀಗೆ ಹೇಳಲಾರರು; ನನಗೆ ಇದು ಗೊತ್ತು, ನಾನು ಇದನ್ನು ನೋಡಿದ್ದೇನೆ; ಇದು ಮಾತ್ರವೇ ಸತ್ಯ, ಬೇರೆಲ್ಲವೂ ಸುಳ್ಳು.

ಇನ್ನು ಪೂರ್ವದ ಬ್ರಾಹ್ಮಣ ಋಷಿಗಳು, ಮಂತ್ರಕರ್ತರು, ಮಂತ್ರ ಸಂಯೋಜಕರು... ಈ ಎಲ್ಲ ಹಿಂದಿನ ಬ್ರಾಹ್ಮಣ ಋಷಿಗಳು ಹೀಗೆ ಹೇಳಲಿಲ್ಲ:

ನಮಗೆ ಇದು ಗೊತ್ತು, ನಾವು ಇದನ್ನು ನೋಡಿದ್ದೇವೆ;

ಇದು ಮಾತ್ರವೇ ಸತ್ಯ, ಬೇರೆಲ್ಲವೂ ಸುಳ್ಳು ಎಂದು.

7. ಅಂಧ ವ್ಯಕ್ತಿಗಳ ಒಂದು ಸಾಲು ಒಬ್ಬರಿಗೆ ಒಬ್ಬರು ತಾಕಿದಂತೆ ಇತ್ತು ಎಂದಿಟ್ಟುಕೊಳ್ಳಿ. ಮೊದಲನೆಯವನು ನೋಡಲಾರ, ಮಧ್ಯದವನು ನೋಡಲಾರ ಮತ್ತು ಕೊನೆಯವನೂ ನೋಡಲಾರ.

ಹಾಗೆಯೇ ಭಾರದ್ವಾಜ, ಈ ಬ್ರಾಹ್ಮಣರ ಹೇಳಿಕೆಯು ಅಂಧರ ಸಾಲಿನಂತೆ; ಮೊದಲನೆಯವನು ನೋಡಲಾರ, ಮಧ್ಯದವನು ನೋಡಲಾರ ಮತ್ತು ಕೊನೆಯವನೂ ನೋಡಲಾರ.

ನಿನಗೆ ಏನನ್ನಿಸುತ್ತದೆ ಭಾರದ್ವಾಜ?

ಹೀಗಿರುವಾಗ ಬ್ರಾಹ್ಮಣರ ಶ್ರದ್ಧೆಯು ಆಧಾರರಹಿತವಾದುದಲ್ಲವೆ?

ಆಚಾರ್ಯ ಗೌತಮರೆ, ಬ್ರಾಹ್ಮಣರು ಶ್ರದ್ಧೆಯಿಂದ ಮಾತ್ರವೇ ಗೌರವಿಸುವುದಿಲ್ಲ, ಮೌಖಿಕ ಪರಂಪರೆಯಿಂದಲೂ ಗೌರವಿಸುತ್ತಾರೆ.

ಭಾರದ್ವಾಜ, ಮೊದಲು ನೀನು ಶ್ರದ್ಧೆಯ ನಿಲುವನ್ನು ತೆಗೆದುಕೊಂಡೆ. ಈಗ ಮೌಖಿಕ ಪರಂಪರೆಯ ಬಗ್ಗೆ ಹೇಳುವೆ.

ಭಾರದ್ವಾಜ, ಐದು ಸಂಗತಿಗಳಿವೆ. ಅವು ಇಲ್ಲೇ ಈಗಲೇ ಎರಡುರೀತಿಯ ಸರಿ ಅಥವಾ ತಪ್ಪು ಎಂಬ ವಿಪಾಕಗಳನ್ನು ಕೊಡುತ್ತವೆ. ಆ ಐದು ಯಾವುವು?

ಸದ್ಧಾ (ಶ್ರದ್ಧೆ), ರುಚಿ (ಅನುಮೋದನೆ), ಅನುಸ್ಸವೋ (ಮೌಖಿಕ ಪರಂಪರೆ), ಅಕಾರಪರಿವಿತಕ್ಕೋ (ತಾರ್ಕಿಕವಾದ ಚಿಂತನೆ) ಮತ್ತು ದಿಟ್ಠಿ ನಿಜ್ಝಾನಕ್ಖಂತಿ (ಚಿಂತನೆ ಮಾಡಿ ಒಂದು ಆಲೋಚನೆ ದೃಷ್ಟಿಯನ್ನು ಒಪ್ಪಿಕೊಳ್ಳುವುದು).

ಈಗ ಯಾವುದಾದರೂ ಒಂದನ್ನು ನಂಬಿಕೆಯಿಂದ ಸಂಪೂರ್ಣವಾಗಿ ಒಪ್ಪಿಕೊಳ್ಳಬಹುದು; ಅದು ಶೂನ್ಯವೂ, ಟೊಳ್ಳೂ, ಅಸತ್ಯವೂ ಆಗಿರಬಹುದು. ಆದರೆ ಇನ್ನೂ ಕೆಲವೊಂದನ್ನು ನಂಬಿಕೆಯಿಂದ ಸಂಪೂರ್ಣವಾಗಿ ಒಪ್ಪಿಕೊಳ್ಳದೆ ಇರಬಹುದು; ಆದರೂ ವಾಸ್ತವವೂ, ನಿಜವೂ ಮತ್ತು ಅಸತ್ಯದಿಂದ ದೂರವಾಗಿರಬಹುದು.

ಪುನಃ ಕೆಲವೊಂದನ್ನು ಪೂರ್ಣವಾಗಿ ಅನುಮೋದಿಸಬಹುದು...

ಚೆನ್ನಾಗಿ ತಾರ್ಕಿಕ ಚಿಂತನೆ ಮಾಡಬಹುದು...

ಚಿಂತನೆ ಮಾಡಿ ಒಂದು ಆಲೋಚನೆಗೆ ಬರಬಹುದು. ಆದರೂ ಅದು ರಿಕ್ತವೂ, ತುಚ್ಛವೂ ಸುಳ್ಳು ಆಗಿರಬಹುದು. ಆದರೆ ಕೆಲವು ಸಂಗತಿಗಳು ತಾರ್ಕಿಕ ಚಿಂತನೆಗೆ ಒಳಪಡದಿದ್ದರೂ ಅವು ವಾಸ್ತವವೂ, ನಿಜವೂ ಮತ್ತು ಅಸತ್ಯದಿಂದ ದೂರವಾಗಿರಬಹುದು.

(ಈ ಪರಿಸ್ಥಿತಿಗಳಲ್ಲಿ) ಸತ್ಯವನ್ನು ಕಾಪಾಡಿಕೊಂಡು ಬರುವ ಒಬ್ಬ ಬುದ್ಧಿವಂತ ಮನುಷ್ಯನು ಇದುವೇ ಸತ್ಯ, ಅನ್ನವೆಲ್ಲವೂ ಸುಳ್ಳು ಎಂಬ ತೀಮರ್ಾನಕ್ಕೆ ಬರುವುದು ಸರಿಯಲ್ಲ.

8. ಆದರೆ ಆಚಾರ್ಯ ಗೌತಮರೆ, ಸತ್ಯರಕ್ಷಣೆಯು ಯಾವರೀತಿಯಲ್ಲಿ ಆಗುತ್ತದೆ? ಒಬ್ಬನು ಸತ್ಯವನ್ನು ಹೇಗೆ ರಕ್ಷಿಸುತ್ತಾನೆ? ನಾವು ಆಚಾರ್ಯ ಗೌತಮರನ್ನು ಸತ್ಯರಕ್ಷಣೆಯ ಬಗ್ಗೆ ಕೇಳುತ್ತೇವೆ.

ಭಾರದ್ವಾಜ, ಒಬ್ಬ ಮನುಷ್ಯನಿಗೆ ಶ್ರದ್ಧೆಯಿದ್ದರೆ ಅವನು ಸತ್ಯರಕ್ಷಣೆಯ ಬಗ್ಗೆ ಹೀಗೆ ಹೇಳುತ್ತಾನೆ; ನನ್ನ ಶ್ರದ್ಧೆಯು ಹೀಗಿದೆ.

ಆದರೂ ಅವನು ಒಂದು ನಿರ್ದಿಷ್ಟ ತೀಮರ್ಾನಕ್ಕೆ ಬರುವುದಿಲ್ಲ.

ಇದುವೇ ಸತ್ಯ, ಅನ್ಯವೆಲ್ಲವೂ ಸುಳ್ಳು.ಎಂದು.

ಈ ರೀತಿಯಲ್ಲಿ ಭಾರದ್ವಾಜ, ಸತ್ಯದ ರಕ್ಷಣೆ ಇದೆ;

ಈ ರೀತಿಯಲ್ಲಿ ಸತ್ಯವನ್ನು ರಕ್ಷಿಸಬಹುದು, ಹೀಗೆ ನಾವು ಸತ್ಯರಕ್ಷಣೆಯ ಬಗ್ಗೆ ವರ್ಣಿಸುತ್ತೇವೆ.

ಆದರೂ ಸಹ ಇನ್ನೂ ಸತ್ಯದ ಅವಿಷ್ಕಾರವಾಗಿಲ್ಲ (ಸತ್ಯದ ಜಾಗ್ರತಿ ಆಗಿಲ್ಲ).

ಒಬ್ಬ ಮನುಷ್ಯನು ಯಾವುದಾದರೂ ಒಂದನ್ನು ರುಚಿಸಿದರೆ (ಅನುಮೋದಿಸಿದರೆ)... ಅವನು ಮೌಖಿಕ ಪರಂಪರೆಯನ್ನು ಸ್ವೀಕರಿಸಿದರೆ... ತಾರ್ಕಿಕ ಚಿಂತನೆ ಮಾಡಿ (ಒಂದು ತೀಮರ್ಾನಕ್ಕೆ ಬಂದರೆ), ಚಿಂತನೆಯಿಂದ ಆಲೋಚನೆ (ದೃಷ್ಟಿ)ಯನ್ನು ಲಭ್ಯಮಾಡಿಕೊಂಡರೆ,

ಆಗ ಅವನು ಸತ್ಯವನ್ನು ರಕ್ಷಿಸಲು ಹೀಗೆ ಹೇಳುತ್ತಾನೆ; ನನ್ನ ಚಿಂತನೆಯಿಂದ ಲಭ್ಯವಾದ ದೃಷ್ಟಿ ಹೀಗಿದೆ.

ಆದರೆ ಅವನು ಒಂದು ನಿಖರ ತೀಮರ್ಾನಕ್ಕೆ ಬಂದಿಲ್ಲ;

ಇದುವೇ ಸತ್ಯ, ಅನ್ಯವೆಲ್ಲಾ ಸುಳ್ಳು ಎಂದು.

ಹೀಗೆ ಹೇಳುವುದರಿಂದಲೂ ಭಾರದ್ವಾಜ, ಸತ್ಯವನ್ನು ರಕ್ಷಿಸಲಾಗಿದೆ; ಈ ರೀತಿಯಲ್ಲಿ ಅವನು ಸತ್ಯವನ್ನು ರಕ್ಷಿಸುತ್ತಾನೆ, ಈ ರೀತಿಯಲ್ಲಿ ನಾವು ಸತ್ಯ ರಕ್ಷಣೆಯನ್ನು ವರ್ಣಿಸುತ್ತೇವೆ.

ಆದರೂ ಸಹ ಸತ್ಯದ ಅನುಬೋಧ ಆಗಿಲ್ಲ.

9. ಆಚಾರ್ಯ ಗೌತಮರೆ, ಆ ರೀತಿಯಲ್ಲಿ ಸತ್ಯದ ರಕ್ಷಣೆಯಾಗುತ್ತದೆ, ಆ ರೀತಿಯಲ್ಲಿ ಒಬ್ಬನು ಸತ್ಯವನ್ನು ರಕ್ಷಿಸುತ್ತಾನೆ, ಆ ರೀತಿಯಲ್ಲಿ ಸತ್ಯವನ್ನು ಗೌರವಿಸುತ್ತೇವೆ.

ಆದರೆ, ಆಚಾರ್ಯ ಗೌತಮರೆ, ಯಾವರೀತಿಯಲ್ಲಿ ಸತ್ಯದ ಅವಿಷ್ಕಾರವಾಗುತ್ತದೆ? ಯಾವರೀತಿಯಲ್ಲಿ ಒಬ್ಬನು ಸತ್ಯದ ಜಾಗೃತಿಯನ್ನು ಮಾಡುತ್ತಾನೆ? ನಾವು ಆಚಾರ್ಯ ಗೌತಮರಿಗೆ ಸತ್ಯದ ಜಾಗ್ರತಿಯ ಬಗ್ಗೆ ಹೇಳುವಂತೆ ಕೋರುತ್ತೇವೆ.

ಇಲ್ಲಿ ಭಾರದ್ವಾಜ, ಒಬ್ಬ ಭಿಕ್ಖು ಒಂದು ಗ್ರಾಮ ಅಥವಾ ನಿಗಮದ ಆಸರೆಯಿಂದ ಬದುಕುತ್ತಿರಬಹುದು.

ಆಗ ಒಬ್ಬ ಗೃಹಸ್ಥ ಅಥವಾ ಗೃಹಸ್ಥನ ಮಗ ಅವನ ಬಳಿ ಹೋಗಿ ಲೋಭದಿಂದ ಕೂಡಿರುವ, ದ್ವೇಷದಿಂದ ಕೂಡಿರುವ ಮತ್ತು ಮೋಹದಿಂದ ಕೂಡಿರುವ ಬಗ್ಗೆ ಮೂರು ರೀತಿಯಲ್ಲಿ ಪರೀಕ್ಷಿಸುತ್ತಾನೆ:

ಈ ಪೂಜ್ಯರು ಲೋಭದಿಂದ ಕೂಡಿದವರಾಗಿ, ಮನಸ್ಸು ಆ ಸ್ಥಿತಿಯಿಂದಲೇ ತುಂಬಿದ್ದರೂ ಆ ಬಗ್ಗೆ ಗೊತ್ತಿಲ್ಲದೆಯೇ ನನಗೆ ಗೊತ್ತು ಎಂದು ಹೇಳಬಹುದು ಅಥವಾ ಅದನ್ನು ನೋಡದೆಯೇ ನಾನು ನೋಡಿದ್ದೇನೆ ಎಂದು ಹೇಳಬಹುದು ಅಥವಾ ಬೇರೆಯವರಿಗೆ ಆ ರೀತಿಯಲ್ಲಿ ಮಾಡು ಎಂದು ಹೇಳಿ ಆ ಮೂಲಕ ತೊಂದರೆಗೊಳಗಾಗಿ ಬಹುಕಾಲ ದುಃಖಿಸಬಹುದು.

ಯಾವಾಗ ಆ ಗೃಹಸ್ಥನು ಹೀಗೆ ಪರೀಕ್ಷಿಸುತ್ತಾ ಹೋಗುತ್ತಾನೊ ಅವನಿಗೆ ಅರಿವಾಗುತ್ತದೆ.

ಈ ಪೂಜ್ಯರಲ್ಲಿ ಲೋಭ ಮೂಲವಾದ ಸ್ಥಿತಿಗಳು ಇಲ್ಲ.

ಈ ಪೂಜ್ಯರ ಕಾಯ ಮತ್ತು ವಾಕ್ ನಡತೆಗಳು ಲೋಭ ಮೂಲವಾದುವಲ್ಲ.

ಈ ಆಯುಷ್ಮಂತರು ಉಪದೇಶಿಸುವ ದಮ್ಮವು ಗಂಭೀರವೂ, ನೋಡಲು ಮತ್ತು ಅರಿಯಲು ಕಷ್ಟವೂ, ಆನಂದದಾಯಕವೂ, ಭವ್ಯವೂ, ತರ್ಕಕ್ಕೆ ನಿಲುಕದ್ದೂ ಮತ್ತು ಸೂಕ್ಷ್ಮವೂ ಹಾಗು ಪಂಡಿತನಾದವನು ಅನುಭವಿಸುವಂತಹದೂ ಆಗಿದೆ.

ಯಾರು ಲೋಭದಿಂದ ಪೀಡಿತರಾಗಿದ್ದಾರೊ ಅಂತಹವರು ಈ ಧಮ್ಮವನ್ನು ಸುಲಭವಾಗಿ ಬೋಧಿಸಲು ಸಾಧ್ಯವಿಲ್ಲ.

10. ಹೀಗೆ ಅವನನ್ನು ಸಂಶೋಧಿಸಿ ಲೋಭ ಮೂಲವಾದ ಸ್ಥಿತಿಗಳಿಂದ ಮುಕ್ತನಾಗಿ ಪರಿಶುದ್ಧನಾಗಿರುವುದನ್ನು ಕಂಡುಕೊಂಡಮೇಲೆ ಈ ಪೂಜ್ಯರು ದ್ವೇಷ ಸಂಬಂಧಿತ ಸ್ಥಿತಿಗಳಿಂದ ಕೂಡಿದ ಬಗ್ಗೆ ಪರೀಕ್ಷಿಸುತ್ತಾನೆ;

ಈ ಪೂಜ್ಯರು ದ್ವೇಷದಿಂದ ಕೂಡಿದವರಾಗಿ, ಮನಸ್ಸು ಆ ಸ್ಥಿತಿಯಿಂದಲೇ ತುಂಬಿದ್ದರೂ ಆ ಬಗ್ಗೆ

ಗೊತ್ತಿಲ್ಲದೆಯೇ ನನಗೆ ಗೊತ್ತು ಎಂದು ಹೇಳಬಹುದು ಅಥವಾ ಅದನ್ನು ನೋಡದೆಯೇ ನಾನು ನೋಡಿದ್ದೇನೆ ಎಂದು ಹೇಳಬಹುದು

ಅಥವಾ ಬೇರೆಯವರಿಗೆ ಆ ರೀತಿಯಲ್ಲಿ ಮಾಡು ಎಂದು ಹೇಳಿ ಆ ಮೂಲಕ ತೊಂದರೆಗೊಳಗಾಗಿ ಬಹುಕಾಲ ದುಃಖಿಸಬಹುದು!

ಯಾವಾಗ ಆ ಗೃಹಸ್ಥನು ಹೀಗೆ ಪರೀಕ್ಷಿಸುತ್ತಾ ಹೋಗುತ್ತಾನೊ ಅವನಿಗೆ ಅರಿವಾಗುತ್ತದೆ;

ಈ ಪೂಜ್ಯರಲ್ಲಿ ದ್ವೇಷ ಮೂಲವಾದ ಸ್ಥಿತಿಗಳು ಇಲ್ಲ.

ಈ ಪೂಜ್ಯರ ಕಾಯ ಮತ್ತು ವಾಗ್ನಡತೆಗಳು ದ್ವೇಷಮಯವಾದುವಲ್ಲ.

ಈ ಆಯುಷ್ಮಂತರು ಉಪದೇಶಿಸುವ ಧಮ್ಮವು ಗಂಭೀರವೂ, ನೋಡಲು ಮತ್ತು ಅರಿಯಲು ಕಷ್ಟವೂ, ಆನಂದದಾಯಕವೂ ಭವ್ಯವೂ, ತರ್ಕಕ್ಕೆ ನಿಲುಕದ್ದೂ ಮತ್ತು ಸೂಕ್ಷ್ಮವೂ ಹಾಗು ಪಂಡಿತನಾದವನು ಅನುಭವಿಸುವಂತಹದೂ ಆಗಿದೆ.

ಯಾರು ದ್ವೇಷದಿಂದ ಪೀಡಿತರಾಗಿದ್ದಾರೊ, ಅಂತಹವರು ಈ ಧಮ್ಮವನ್ನು ಸುಲಭವಾಗಿ ಬೋಧಿಸಲು ಸಾಧ್ಯವಿಲ್ಲ.

11. ಹೀಗೆ ಅವನನ್ನು ಸಂಶೋಧಿಸಿ ದ್ವೇಷ ಮೂಲವಾದ ಸ್ಥಿತಿಗಳಿಂದ ಮುಕ್ತನಾಗಿ ಪರಿಶುದ್ಧನಾಗಿರುವುದನ್ನು ಕಂಡುಕೊಂಡ ಮೇಲೆ ಈ ಪೂಜ್ಯರು ಮೋಹ ಸಂಬಂಧಿತ ಸ್ಥಿತಿಗಳಿಂದ ಕೂಡಿದ ಬಗ್ಗೆ ಪರೀಕ್ಷಿಸುತ್ತಾನೆ;

ಈ ಪೂಜ್ಯರು ಮೋಹದಿಂದ ಕೂಡಿದವರಾಗಿ, ಮನಸ್ಸು ಆ ಸ್ಥಿತಿಯಿಂದಲೇ ತುಂಬಿದ್ದರೂ ಆ ಬಗ್ಗೆ ಗೊತ್ತಿಲ್ಲದೆಯೇ ನನಗೆ ಗೊತ್ತು ಎಂದು ಹೇಳಬಹುದು ಅಥವಾ ಅದನ್ನು ನೋಡದೆಯೇ ನಾನು ನೋಡಿದ್ದೇನೆ ಎಂದು ಹೇಳಬಹುದು

ಅಥವಾ ಬೇರೆಯವರಿಗೆ ಆ ರೀತಿಯಲ್ಲಿ ಮಾಡು ಎಂದು ಹೇಳಿ ಆ ಮೂಲಕ ತೊಂದರೆಗೊಳಗಾಗಿ ಬಹುಕಾಲ ದುಃಖಿಸಬಹುದು!

ಯಾವಾಗ ಆ ಗೃಹಸ್ಥನು ಹೀಗೆ ಪರೀಕ್ಷಿಸುತ್ತಾ ಹೋಗುತ್ತಾನೊ ಅವನಿಗೆ ಅರಿವಾಗುತ್ತದೆ.

ಈ ಪೂಜ್ಯರಲ್ಲಿ ಮೋಹ ಮೂಲವಾದ ಸ್ಥಿತಿಗಳು ಇಲ್ಲ.

ಈ ಪೂಜ್ಯರ ಕಾಯ ಮತ್ತು ವಾಗ್ನಡತೆಗಳು ಮೋಹ ಮೂಲವಾದುವಲ್ಲ.

ಈ ಆಯುಷ್ಮಂತರು ಉಪದೇಶಿಸುವ ಧಮ್ಮವು ಗಂಭೀರವೂ, ನೋಡಲು ಮತ್ತು ಅರಿಯಲು ಕಷ್ಟವೂ, ಆನಂದದಾಯಕವೂ, ಭವ್ಯವೂ, ತರ್ಕಕ್ಕೆ ನಿಲುಕದ್ದೂ ಮತ್ತು ಸೂಕ್ಷ್ಮವೂ ಹಾಗು ಪಂಡಿತನಾದವನು ಅನುಭವಿಸುವಂತಹುದೂ ಆಗಿದೆ.

ಯಾರು ಮೋಹದಿಂದ ಪೀಡಿತರಾಗಿದ್ದಾರೋ ಅಂತಹವರು ಈ ಧಮ್ಮವನ್ನು ಸುಲಭವಾಗಿ ಬೋಧಿಸಲು ಸಾಧ್ಯವಿಲ್ಲ.

ಹೀಗೆ ಅವನನ್ನು ಸಂಶೋಧಿಸಿ ಮೋಹ ಮೂಲವಾದ ಸ್ಥಿತಿಗಳಿಂದ ಮುಕ್ತನಾಗಿ ಪರಿಶುದ್ಧನಾಗಿರುವುದನ್ನು ಕಂಡುಕೊಂಡ ನಂತರದಲ್ಲಿ ಅವನು ಅವರ ಮೇಲೆ ಶ್ರದ್ಧೆಯನ್ನಿಡುತ್ತಾನೆ, ಶ್ರದ್ಧೆ ತುಂಬಿದವನಾಗಿ ಅವರ ಬಳಿಸಾರಿ ಶ್ರದ್ಧೆಯನ್ನಿಡುತ್ತಾನೆ, ಶ್ರದ್ಧೆ ತುಂಬಿದವನಾಗಿ ಅವರ ಬಳಿಸಾರಿ ಗೌರವಿಸುತ್ತಾನೆ, ಗೌರವವನ್ನು ಸಲ್ಲಿಸಿದ ಮೇಲೆ ಕಿವಿಗೊಡುತ್ತಾನೆ, ಕಿವಿಗೊಟ್ಟು ಧಮ್ಮವನ್ನು ಕೇಳುತ್ತಾನೆ; ಧಮ್ಮವನ್ನು ಕೇಳಿದಮೇಲೆ ಅದನ್ನು ಮನಸ್ಸಿನಲ್ಲಿಟ್ಟುಕೊಳ್ಳುತ್ತಾನೆ, ಧಾರಯಿಸಿದ ಧಮ್ಮದ ಅರ್ಥವನ್ನು ಪರೀಕ್ಷಿಸುತ್ತಾನೆ; ಹೀಗೆ ಪರೀಕ್ಷಿಸಿದ ಮೇಲೆ ಅದರ ಬಗ್ಗೆ ಚಿಂತಿಸಿ ಆ ಧಮ್ಮವನ್ನು ಒಪ್ಪಿಕೊಳ್ಳುವ ಸ್ಥಿತಿಗೆ ಬರುತ್ತಾನೆ, ಪರಾಮರ್ಶಿಸಿ ಒಪ್ಪಿಕೊಳ್ಳುವುದರಿಂದ (ಮನಸ್ಸಿನಾಳದಿಂದ ಸಹಜವಾದ) ಉತ್ಸಾಹವು ಮೂಡುತ್ತದೆ, ಉತ್ಸಾಹ ಮೂಡಿದಾಗ (ಅನಿತ್ಯಾದಿಗಳನ್ನು ನೋಡುವ) ತುಲನೆ ಮಾಡುತ್ತಾನೆ, ತುಲನೆಯಿಂದ ಪ್ರಯತ್ನಶೀಲನಾಗುತ್ತಾನೆ, ದೃಢ ಪ್ರಯತ್ನದಿಂದ ಕಾಯದ ಮೂಲಕ ಪರಮ ಸತ್ಯವನ್ನು ಸಾಕ್ಷಾತ್ಕರಿಸಿಕೊಂಡು ಪ್ರಜ್ಞಾಶೀಲನಾಗುತ್ತಾನೆ, ಆ ಪ್ರಜ್ಞೆಯಿಂದಲೇ ನೋಡುತ್ತಾನೆ98.

ಭಾರದ್ವಾಜ, ಹೀಗೆ ಸತ್ಯಾನುಬೋಧವನ್ನು ಮಾಡಿಕೊಳ್ಳುತ್ತಾನೆ;ಈ ರೀತಿಯಲ್ಲಿ ನಾವು ಸತ್ಯಾನುಬೋಧವನ್ನು ವಿವರಿಸುತ್ತೇವೆ.

ಆದರೂ ಸಹ ಇದು ಸತ್ಯದ ಉತ್ಪತ್ತಿಯಲ್ಲ99.

12. ಆಚಾರ್ಯ ಗೌತಮರೆ, ಹೀಗೆ ಸತ್ಯಾನುಬೋಧೆಯಾಗುತ್ತದೆ, ಈ ರೀತಿಯಲ್ಲಿ ಒಬ್ಬನು ಸತ್ಯಾನುಬೋಧೆಯನ್ನು ಮಾಡಿಕೊಳ್ಳುತ್ತಾನೆ; ಈ ರೀತಿಯಲ್ಲಿ ನಾವು ಸತ್ಯಾನುಬೋಧೆಯನ್ನು ವಿವರಿಸುತ್ತೇವೆ ಎಂದಾದರೆ ಆಚಾರ್ಯ ಗೌತಮರೆ, ಇನ್ನು ಯಾವ ರೀತಿಯಲ್ಲಿ ಸತ್ಯದ ಉತ್ಪತ್ತಿಯಾಗವುದು? ಇನ್ನೂ ಯಾವ ರೀತಿಯಲ್ಲಿ ಒಬ್ಬನು ಸತ್ಯಾನುತ್ಪತ್ತಿಯನ್ನು ಮಾಡಿಕೊಳ್ಳುತ್ತಾನೆ? ನಾವು ಆಚಾರ್ಯ ಗೌತಮರನ್ನು ಸತ್ಯಾನುತ್ಪತ್ತಿಯ ಬಗ್ಗೆ ಹೇಳುವಂತೆ ಕೇಳುತ್ತೇವೆ.

ಭಾರದ್ವಾಜ, ಸತ್ಯದ ಉತ್ಪತ್ತಿಯು ಆಸೇವನಾ (ಪುನರಾವೃತ್ತಿ), ಭಾವನಾ (ಬೆಳವಣಿಗೆ ಅಥವಾ ವೃದ್ಧಿ) ಮತ್ತು ಬಹುಲೀಕಮ್ಮ (ಅವುಗಳನ್ನೇ ಮಾಡುವುದರಲ್ಲಿ) ಅಡಗಿದೆ. ಈ ರೀತಿಯಲ್ಲಿ ಭಾರದ್ವಾಜ, ಸತ್ಯಾನುತ್ಪತ್ತಿಯಾಗುತ್ತದೆ, ಈ ರೀತಿಯಲ್ಲಿ ಒಬ್ಬನು ಸತ್ಯಾನುತ್ಪತ್ತಿಯನ್ನು ಮಾಡಿಕೊಳ್ಳುತ್ತಾನೆ, ಈ ರೀತಿಯಲ್ಲಿ ನಾವು ಸತ್ಯಾನುತ್ಪತ್ತಿಯನ್ನು ವಿವರಿಸುತ್ತೇವೆ.

13. ಆಚಾರ್ಯ ಗೌತಮರೆ, ಆ ರೀತಿಯಲ್ಲಿ ಸತ್ಯಾನುತ್ಪತ್ತಿಯಾಗುತ್ತದೆ, ಆ ರೀತಿಯಲ್ಲಿ ಒಬ್ಬನು ಸತ್ಯಾನುತ್ಪತ್ತಿಯನ್ನು ಮಾಡಿಕೊಳ್ಳುತ್ತಾನೆ; ಆ ರೀತಿಯಲ್ಲಿ ನಾವು ಸತ್ಯಾನುತ್ಪತ್ತಿಯನ್ನು ಗುರುತಿಸುತ್ತೇವೆ ಎಂದಾದರೆ, ಆಚಾರ್ಯ ಗೌತಮರೆ, ಸತ್ಯಾನುತ್ಪತ್ತಿಗೆ ಯಾವುದು ಅತಿ ಅನುಕೂಲವಾದ ಸಂಗತಿ? ನಾವು ಅಚಾರ್ಯ ಗೌತಮರನ್ನು ಸತ್ಯಾನುತ್ಪತ್ತಿಗೆ ಅತ್ಯನುಕೂಲವಾದ ಸಂಗತಿಯನ್ನು ತಿಳಿಸಿಕೊಡುವಂತೆ ಕೇಳಿಕೊಳ್ಳುತ್ತೇವೆ.

ಭಾರದ್ವಾಜ, ಸತ್ಯಾನುತ್ಪತ್ತಿಗೆ ಪ್ರಯತ್ನಶೀಲತೆಯೇ ಬಹೂಪಕಾರವಾದುದು, ಒಬ್ಬನು ಪ್ರಯತ್ನಶೀಲನಾಗದಿದ್ದರೆ ಅವನು ಸತ್ಯಾನುತ್ಪತ್ತಿಯನ್ನು ಮಾಡಿಕೊಳ್ಳಲಾರ. ಕಾರಣ ಪ್ರಯತ್ನಶಿಲತೆಯಿಂದಲೇ ಸತ್ಯಾನುತ್ಪತ್ತಿಯಾಗುವುದು. ಆದ್ದರಿಂದಲೇ ಪ್ರಯತ್ನಶೀಲತೆಯೇ ಸತ್ಯಾನುತ್ಪತ್ತಿಗೆ ಬಹುಮುಖ್ಯವಾದ ಸಂಗತಿ.

ಆದರೆ ಆಚಾರ್ಯ ಗೌತಮರೆ, ಪ್ರಯತ್ನಶೀಲತೆಗೆ ಯಾವುದು ಬಹು ಸಹಕಾರಿಯಾದ ಸಂಗತಿ? ನಾವು ಆಚಾರ್ಯ ಗೌತಮರನ್ನು ಪ್ರಯತ್ನಶೀಲತೆಗೆ ಬೇಕಾದ ಬಹು ಸಹಕಾರಿಯಾದ ಸಂಗತಿಯನ್ನು ಕೇಳುತ್ತೇವೆ.

ಭಾರದ್ವಾಜ, ತುಲನೆಯು ಪ್ರಯತ್ನಶೀಲತೆಗೆ ಬೇಕಾದ ಬಹುಮುಖ್ಯವಾದ ಸಂಗತಿ. ಒಬ್ಬನು ತುಲನೆ ಮಾಡಿದಿದ್ದರೆ ಪ್ರಯತ್ನಶೀಲನಾಗಲಾರ. ಕಾರಣ ತುಲನೆ ಮಾಡುವುದರಿಂದಲೇ ಪ್ರಯತ್ನಶೀಲನಾಗುತ್ತಾನೆ. ಆದ್ದರಿಂದಲೇ ತುಲನೆ ಪ್ರಯತ್ನಶೀಲತೆಗೆ ಬಹು ಉಪಕಾರಿಯಾದ ಸಂಗತಿ.

ಹಾಗಾದರೆ ತುಲನೆಗೆ ಬೇಕಾದ ಮುಖ್ಯ ಸಂಗತಿ ಯಾವುದು, ಆಚಾರ್ಯ ಗೌತಮರೆ? ನಾವು ಆಚಾರ್ಯ ಗೌತಮರನ್ನು ತುಲನೆಗೆ ಬೇಕಾದ ಬಹು ಉಪಕಾರಿಯಾದ ಸಂಗತಿ ಯಾವುದು ಎಂಬುದನ್ನು ಕೇಳುತ್ತೇವೆ.

ಭಾರದ್ವಾಜ, ತುಲನೆಗೆ ಉಪಕಾರಿಯಾದ ಸಂಗತಿ ಎಂದರೆ ಉತ್ಸಾಹ (ಶಕ್ತಿ). ಯಾರ ಮನಸ್ಸು ಉತ್ಸಾಹಗೊಳ್ಳುವುದಿಲ್ಲವೋ ಅವರು ತುಲನೆಯಲ್ಲಿ ತೊಡಗಲಾರರು; ಆದರೆ ಒಬ್ಬನು ತನ್ನ ಮನಸ್ಸನ್ನು ಉತ್ಸಾಹಗೊಳಿಸುವುದರಿಂದ ತುಲನೆ ಮಾಡುತ್ತಾನೆ. ಆದ್ದರಿಂದ ತುಲನೆಗೆ ಉತ್ಸಾಹವು ಬಹು ಉಪಕಾರಿಯಾದುದು.

ಆದರೆ, ಆಚಾರ್ಯ ಗೌತಮರೆ, ಮನಸ್ಸನ್ನು ಉತ್ಸಾಹಗೊಳಿಸುವುದಕ್ಕೆ ಉಪಕಾರಿಯಾದ ಸಂಗತಿ ಯಾವುದು? ನಾವು ಆಚಾರ್ಯ ಗೌತಮರನ್ನು ಮನಸ್ಸು ಉತ್ಸಾಹಗೊಳ್ಳುವುದಕ್ಕೆ ಉಪಕಾರಿಯಾದ ಸಂಗತಿ ಯಾವುದೆಂದು ಕೇಳುತ್ತೇವೆ.

ಭಾರದ್ವಾಜ, ಛಂದವು (ದೃಢ ಮನಸ್ಸು) ಉತ್ಸಾಹಕ್ಕೆ ಉಪಕಾರಿಯಾದ ಸಂಗತಿ. ಒಬ್ಬನ ಮನಸ್ಸಿನಲ್ಲಿ ದೃಢತೆ ಇಲ್ಲದಿದ್ದರೆ ಅವನು ಉತ್ಸಾಹಗೊಳ್ಳಲಾರ. ಯಾರ ಮನಸ್ಸಿನಲ್ಲಿ ದೃಢತೆ ಇಲ್ಲವೊ ಅವರಲ್ಲಿ ಉತ್ಸಾಹವು ಪುಟಿಯುವುದಿಲ್ಲ; ದೃಢತೆ ಇರುವುದರಿಂದಲೇ ಒಬ್ಬನು ಉತ್ಸಾಹಗೊಳ್ಳುತ್ತಾನೆ. ಆದ್ದರಿಂದ ದೃಢಮನಸ್ಸು ಉತ್ಸಾಹಕ್ಕೆ ತುಂಬ ಉಪಕಾರಿಯಾದುದು.

ಹಾಗಾದರೆ, ಆಚಾರ್ಯ ಗೌತಮರೆ, ದೃಢ ಮನಸ್ಸಿಗೆ ಬೇಕಾದ ಉಪಕಾರಿಯಾದ ಸಂಗತಿ ಯಾವುದು? ನಾವು ಆಚಾರ್ಯ ಗೌತಮರನ್ನು ದೃಢ ಮನಸ್ಸಿಗೆ ಬೇಕಾದ ಸಂಗತಿ ಯಾವುದೆಂದು ಕೇಳುತ್ತೇವೆ.

ಭಾರದ್ವಾಜ, ದೃಢ ಮನಸ್ಸಿಗೆ ಬೇಕಾದ ಬಹು ಉಪಕಾರಿಯಾದ ಸಂಗತಿ ಎಂದರೆ ಚಿಂತನೆ ನಡೆಸಿ ಒಂದು ಬೋಧನೆಯನ್ನು ಒಪ್ಪಿಕೊಳ್ಳುವುದು. ಒಬ್ಬನು ಚಿಂತನೆ ನಡೆಸಿ ಬೋಧನೆಯನ್ನು ಒಪ್ಪಿಕೊಳ್ಳುವ ಸ್ಥಿತಿಗೆ ಬರದಿದ್ದರೆ ಮಾನಸಿಕ ದೃಢತೆ ಬರಲಾರದು. ಚಿಂತನೆ ನಡೆಸಿ ಬೋಧನೆಯನ್ನು ಒಪ್ಪಿಕೊಳ್ಳುವ ಸ್ಥಿತಿಗೆ ಬರುವುದರಿಂದ ಮಾನಸಿಕ ದೃಢತೆ ಏಳುತ್ತದೆ. ಆದ್ದರಿಂದ ಚಿಂತನೆ ನಡೆಸಿ ಬೋಧನೆಯನ್ನು ಒಪ್ಪಿಕೊಳ್ಳುವುದು ಮಾನಸಿಕ ದೃಢತೆಗೆ ಸಹಕಾರಿ.

ಹಾಗಾದರೆ ಆಚಾರ್ಯ ಗೌತಮರೆ, ಚಿಂತನೆಯನ್ನು ನಡೆಸಿ ಬೋಧನೆಗಳನ್ನು ಒಪ್ಪಿಕೊಳ್ಳಲು ಯಾವುದು ಬಹು ಉಪಕಾರಿ? ನಾವು ಆಚಾರ್ಯ ಗೌತಮರನ್ನು ಚಿಂತನೆ ನಡೆಸಿ ಬೋಧನೆಗಳನ್ನು ಒಪ್ಪಿಕೊಳ್ಳಲು ಯಾವ ಸಂಗತಿಯು ಉಪಕಾರಿ ಎಂಬುದನ್ನು ತಿಳಿಸುವಂತೆ ಕೇಳುತ್ತೇವೆ.

ಭಾರದ್ವಾಜ, ಚಿಂತನೆ ನಡೆಸಿ ಬೋಧನೆಗಳನ್ನು ಒಪ್ಪಿಕೊಳ್ಳುವುದಕ್ಕೆ ಬಹು ಉಪಕಾರಿಯಾದ ಸಂಗತಿ ಎಂದರೆ ಅರ್ಥಗಳನ್ನು ಪರೀಕ್ಷಿಸುವುದು. ಒಬ್ಬನು ಅವುಗಳ ಅರ್ಥವನ್ನು ಪರೀಕ್ಷಿಸದಿದ್ದರೆ ಬೋಧನೆಗಳನ್ನು ಒಪ್ಪಿಕೊಳ್ಳುವುದಕ್ಕಾಗಿ ಚಿಂತನೆಯನ್ನು ನಡೆಸಲಾರ. ಒಬ್ಬನು ಅವುಗಳ ಅರ್ಥವನ್ನು ಪರೀಕ್ಷಿಸುವುದರಿಂದ ಚಿಂತನೆ ನಡೆಸಿ ಬೋಧನೆಗಳನ್ನು ಒಪ್ಪಿಕೊಳ್ಳುವ ಸ್ಥಿತಿಗೆ ಬರುತ್ತಾನೆ. ಆದ್ದರಿಂದಲೇ ಚಿಂತನೆ ಮಾಡಿ ಬೋಧನೆಗಳನ್ನು ಒಪ್ಪಿಕೊಳ್ಳುವ ಸ್ಥಿತಿಗೆ ಬರಲು ಅರ್ಥ ಪರೀಕ್ಷಿಸುವುದು ಬಹು ಸೂಕ್ತ.

ಹಾಗಾದರೆ, ಆಚಾರ್ಯ ಗೌತಮರೆ, ಅರ್ಥ ಪರೀಕ್ಷೆಗೆ ಬೇಕಾದ ಉಪಕಾರಿ ಸಂಗತಿ ಯಾವುದು? ನಾವು ಅಚಾರ್ಯ ಗೌತಮರನ್ನು ಅರ್ಥ ಪರೀಕ್ಷಿಸಲು ಬೇಕಾದ ಅತ್ಯಂತ ಉಪಕಾರಿಯಾದ ಸಂಗತಿ ಯಾವುದೆಂದು ಕೇಳುತ್ತೇವೆ.

ಧಮ್ಮ ಬೋಧನೆಗಳ ಧಾರಣೆಯೇ ಅರ್ಥ ಪರೀಕ್ಷೆಗೆ ಬೇಕಾದ ಮುಖ್ಯ ಸಂಗತಿ ಭಾರದ್ವಾಜ. ಯಾರು ಧಮ್ಮ ಬೋಧನೆಯನ್ನು ಧಾರಯಿಸುವುದಿಲ್ಲವೋ (ಸ್ಮರಣೆಯಲ್ಲಿಟ್ಟುಕೊಳ್ಳುವುದಿಲ್ಲವೋ) ಅವರು ಅದರ ಅರ್ಥವನ್ನು ಪರೀಕ್ಷಿಸಲು ಸಾಧ್ಯವಿಲ್ಲ. ಧಮ್ಮ ಬೋಧನೆಯನ್ನು ಸ್ಮರಿಸಿಕೊಳ್ಳುವುದರಿಂದಲೇ ಅರ್ಥ ಪರೀಕ್ಷಿಸಲು ಸಾಧ್ಯ.

ಹಾಗಾದರೆ ಆಚಾರ್ಯ ಗೌತಮರೆ, ಧಮ್ಮಧಾರಣೆಗೆ ಬೇಕಾದ ಬಹೂಪಕಾರಿಯಾದ ಸಂಗತಿ ಯಾವುದು? ನಾವು ಆಚಾರ್ಯ ಗೌತಮರನ್ನು ಧಮ್ಮಧಾರಣೆಗೆ ಬೇಕಾದ ಉಪಕಾರಿ ಸಂಗತಿ ಯಾವುದು ಎಂಬುದನ್ನು ಕೇಳುತ್ತೇವೆ.

ಧಮ್ಮ ಶ್ರವಣವು ಧಮ್ಮಧಾರಣೆ ಮಾಡಿಕೊಳ್ಳಲು ಬಹುಪಕಾರಿಯಾದ ಸಂಗತಿ. ಯಾರು ಧಮ್ಮವನ್ನು ಕೇಳುವುದಿಲ್ಲವೋ ಅವರಿಗೆ ಧಮ್ಮವನ್ನು ಧಾರಣೆ ಮಾಡಿಕೊಳ್ಳಲು ಸಾಧ್ಯವಿಲ್ಲ. ಧಮ್ಮವನ್ನು ಕೇಳುವುದರಿಂದ ಧಮ್ಮವನ್ನು ಧಾರಣೆ ಮಾಡಲು ಸಾಧ್ಯವಾಗುತ್ತಿದೆ. ಆದ್ದರಿಂದ ಧಮ್ಮವನ್ನು ಕೇಳುವುದು ಧಮ್ಮಧಾರಣೆಗೆ ಸಹಾಯವಾಗುತ್ತದೆ.

ಹಾಗಾದರೆ ಆಚಾರ್ಯ ಗೌತಮರೆ, ಧಮ್ಮ ಶ್ರವಣಕ್ಕೆ ಬೇಕಾದ ಉಪಯುಕ್ತ ಸಂಗತಿ ಯಾವುದು? ನಾವು ಆಚಾರ್ಯ ಗೌತಮರನ್ನು ಧಮ್ಮ ಶ್ರವಣಕ್ಕೆ ಬೇಕಾದ ಉಪಯುಕ್ತ ಸಂಗತಿ ಯಾವುದೆಂದು ಕೇಳುತ್ತೇವೆ.

ಭಾರದ್ವಾಜ, ಧಮ್ಮ ಶ್ರವಣಕ್ಕೆ ಉಪಯುಕ್ತವಾದ ಸಂಗತಿ ಎಂದರೆ ಕಿವಿಯನ್ನು ಕೊಡುವುದು. ಯಾರು ಕಿವಿಯನ್ನು ಕೊಡುವುದಿಲ್ಲವೋ (ಕೇಳಿಸಿಕೊಳ್ಳುವುದಿಲ್ಲವೋ) ಅವರು ಧಮ್ಮವನ್ನು ಕೇಳಿಸಿಕೊಳ್ಳಲಾರರು. ಕಿವಿಯನ್ನು ಕೊಡುವುದರಿಂದಲೇ ಒಬ್ಬನು ಧಮ್ಮವನ್ನು ಕೇಳುತ್ತಾನೆ. ಆದ್ದರಿಂದ ಕಿವಿಯನ್ನು ಕೊಡುವುದೇ ಧಮ್ಮವನ್ನು ಕೇಳಲು ಅತ್ಯಂತ ಉಪಯುಕ್ತವಾದ ಸಂಗತಿ.

ಹಾಗಾದರೆ ಆಚಾರ್ಯ ಗೌತಮರೆ, ಕಿವಿಯನ್ನು ಕೊಡಬೇಕಾದರೆ ಉಪಯುಕ್ತವಾದ ಸಂಗತಿ ಯಾವುದು? ನಾವು ಅಚಾರ್ಯ ಗೌತಮರನ್ನು ಕಿವಿಯನ್ನು ಕೊಡಬೇಕಾದರೆ ಉಪಯುಕ್ತವಾದ ಸಂಗತಿ ಯಾವುದೆಂದು ಕೇಳುತ್ತೇವೆ.

ಭಾರದ್ವಾಜ, ಕಿವಿಯನ್ನು ಕೊಡಬೇಕಾದರೆ ಉಪಯುಕ್ತವಾದ ಸಂಗತಿ ಯಾವುದೆಂದರೆ ಗೌರವವನ್ನು ಕೊಡುವುದು. ಒಬ್ಬನು ಗೌರವವನ್ನು ಕೊಡದಿದ್ದರೆ ಅವನು ಕಿವಿಯನ್ನು ಕೊಡಲಾರ. ಗೌರವವನ್ನು ಕೊಡುವುದರಿಂದಲೇ ಒಬ್ಬನು ಕಿವಿಕೊಡುತ್ತಾನೆ. ಆದ್ದರಿಂದಲೇ ಗೌರವ ಕೊಡುವುದು ಕಿವಿಗೊಡಲು ಉಪಯುಕ್ತವಾದ ಸಂಗತಿ.

ಹಾಗಾದರೆ ಆಚಾರ್ಯ ಗೌತಮರೆ, ಗೌರವ ಕೊಡಲು ಉಪಯುಕ್ತವಾದ ಸಂಗತಿ ಯಾವುದು? ನಾವು ಆಚಾರ್ಯ ಗೌತಮರನ್ನು ಗೌರವ ಕೊಡಲು ಉಪಯುಕ್ತವಾದ ಸಂಗತಿ ಯಾವುದೆಂದು ಕೇಳುತ್ತೇವೆ.

ಭಾರದ್ವಾಜ, ಬಳಿ ಹೋಗುವುದು ಗೌರವ ಕೊಡಲು ಉಪಯುಕ್ತವಾದ ಸಂಗತಿ. ಒಬ್ಬನು (ಗುರುಗಳ) ಬಳಿ ಹೋಗದಿದ್ದರೆ, ಅವನು ಅವರಿಗೆ ಗೌರವವನ್ನು ಕೊಡಲು ಸಾಧ್ಯವಿಲ್ಲ. ಗುರುಗಳ ಬಳಿ ಸಾಗುವುದರಿಂದಲೆ ಗೌರವವನ್ನು ಕೊಡಲು ಸಾಧ್ಯವಾಗುತ್ತದೆ. ಆದ್ದರಿಂದ ಗೌರವ ಕೊಡಬೇಕಾದರೆ (ಗುರುಗಳ) ಬಳಿ ಹೋಗುವುದು ಉಪಯುಕ್ತ.

ಹಾಗಾದರೆ ಆಚಾರ್ಯ ಗೌತಮರೆ, (ಗುರುಗಳ) ಬಳಿ ಹೋಗುವುದಕ್ಕೆ ಯಾವ ಸಂಗತಿಯು ಉಪಯುಕ್ತವಾಗುತ್ತದೆ? ನಾವು ಆಚಾರ್ಯ ಗೌತಮರನ್ನು (ಗುರುಗಳ) ಬಳಿ ಹೋಗುವುದಕ್ಕೆ ಯಾವ ಸಂಗತಿಯು ಉಪಯುಕ್ತವಾದುದೆಂದು ಕೇಳುತ್ತೇವೆ.

ಭಾರದ್ವಾಜ, ಬಳಿ ಸಾರುವುದಕ್ಕೆ ಶ್ರದ್ಧೆಯು ಬಹಳ ಉಪಯುಕ್ತವಾದ ಸಂಗತಿ ಒಬ್ಬನು (ಗುರುಗಳಲ್ಲಿ) ಶ್ರದ್ಧೆ ಉಳ್ಳವನಾಗದಿದ್ದರೆ, ಅವನು ಅವರನ್ನು ಸಂದರ್ಶಿಸಲಾರ. ಶ್ರದ್ಧೆಯಿದ್ದರೆ ಅವನು ಸಂದರ್ಶಿಸುತ್ತಾನೆ. ಆದ್ದರಿಂದ ಸಂದರ್ಶಿಸಲು (ಬಳಿಸಾರಲು) ಶ್ರದ್ಧೆಯು ಬಹು ಮುಖ್ಯವಾದ ಸಂಗತಿ.

14. ನಾವು ಅಚಾರ್ಯ ಗೌತಮರನ್ನು ಸತ್ಯರಕ್ಷಣೆಯ ಬಗ್ಗೆ ಕೇಳಿದೆವು; ಆಚಾರ್ಯ ಗೌತಮರು ಸತ್ಯ ರಕ್ಷಣೆಯ ಬಗ್ಗೆ ತಿಳಿಸಿದರು. ಅವರ ಉತ್ತರವು ರುಚಿಸಿದೆ. ನಾವು ಅದನ್ನು ಒಪ್ಪುತ್ತೇವೆ ಮತ್ತು ನಮಗೆ ಅದರಿಂದ ಸಂತೋಷವಾಗಿದೆ. ನಾವು ಆಚಾರ್ಯ ಗೌತಮರಿಗೆ ಸತ್ಯಾನುಬೋಧೆಯ ಬಗ್ಗೆ ಕೇಳಿದೆವು. ಅದಕ್ಕೆ ಆಚಾರ್ಯ ಗೌತಮರು ಸತ್ಯಾನುಬೋಧೆಯ ಬಗ್ಗೆ ತಿಳಿಸಿದರು. ಅವರ ಉತ್ತರವು ರುಚಿಸಿದೆ, ನಾವು ಅದನ್ನು ಒಪ್ಪುತ್ತೇವೆ ಮತ್ತು ನಮಗೆ ಅದರಿಂದ ಸಂತೋಷವಾಗಿದೆ. ನಾವು ಆಚಾರ್ಯ ಗೌತಮರನ್ನು ಸತ್ಯಾನುತ್ಪತ್ತಿಯ ಬಗ್ಗೆ ಕೇಳಿದೆವು; ಅದಕ್ಕೆ ಆಚಾರ್ಯ ಗೌತಮರು ಸತ್ಯಾನುತ್ಪತ್ತಿಯ ಬಗ್ಗೆ ತಿಳಿಸಿದರು. ಅವರ ಉತ್ತರವು ರುಚಿಸಿದೆ, ನಾವು ಅದನ್ನು ಒಪ್ಪುತ್ತೇವೆ ಮತ್ತು ನಮಗೆ ಅದರಿಂದ ಸಂತೋಷವಾಗಿದೆ. ನಾವು ಆಚಾರ್ಯ ಗೌತಮರನ್ನು ಸತ್ಯಾನುತ್ಪತ್ತಿಗೆ ಉಪಯುಕ್ತವಾದ ಸಂಗತಿ ಯಾವುದೆಂದು ಕೇಳಿದೆವು; ಆಚಾರ್ಯ ಗೌತಮರು ಸತ್ಯಾನುತ್ಪತ್ತಿಗೆ ಉಪಯುಕ್ತವಾದ ಸಂಗತಿ ಯಾವುದೆಂದು ತಿಳಿಸಿದರು. ಅವರ ಉತ್ತರವು ರುಚಿಸಿದೆ, ನಾವು ಅದನ್ನು ಒಪ್ಪುತ್ತೇವೆ ಮತ್ತು ನಮಗೆ ಅದರಿಂದ ಸಂತೋಷವಾಗಿದೆ.

ಆಚಾರ್ಯ ಗೌತಮರಿಗೆ ನಾವು ಯಾವುದೇ ಸಂಗತಿಯನ್ನು ಕೇಳಿದರೂ ಅವರು ನಮಗೆ ಉತ್ತರ ನೀಡಿದರು.

ನಾವು ಅವರ ಉತ್ತರವನ್ನು ಸ್ವೀಕರಿಸಿದ್ದೇವೆ, ಅದನ್ನು ಒಪ್ಪುತ್ತೇವೆ. ಮತ್ತು ನಮಗೆ ಅದರಿಂದ ಸಂತೋಷವಾಗಿದೆ.

ಆಚಾರ್ಯ ಗೌತಮರೆ, ಮೊದಲು ನಾವು ಹೀಗೆ ಯೋಚಿಸುತ್ತಿದ್ದೆವು:

ಕರಿ ಸೇವಕರ ಕಾಲಿನಿಂದ ಹುಟ್ಟಿದ ಈ ಮುಂಡಕ ಸಮಣರಿಗೆ ಧಮ್ಮವೇನೆಂದು ಅರ್ಥವಾಗುತ್ತದೆ? ಎಂದು. ಆದರೆ ಆಚಾರ್ಯ ಗೌತಮರು ನಿಜವಾಗಿಯೂ ನನ್ನಲ್ಲಿ ಸಮಣರ ಬಗ್ಗೆ ಪ್ರೇಮವನ್ನು, ಸಮಣರಲ್ಲಿ ನಂಬಿಕೆಯನ್ನು ಮತ್ತು ಸಮಣರಲ್ಲಿ ಗೌರವವನ್ನು ತುಂಬಿ ಪ್ರೋತ್ಸಾಹಿಸಿದ್ದಾರೆ.

ಅದ್ಭುತ, ಆಚಾರ್ಯ ಗೌತಮರೆ! ಅದ್ಭುತ ಆಚಾರ್ಯ ಗೌತಮರೆ! ಪೂಜ್ಯ ಗೌತಮರು ಮಗುಚಿ ಬಿದ್ದುದನ್ನು ಸರಿಯಾಗಿ ಇಡುವಂತೆ, ರಹಸ್ಯವಾದುದನ್ನು ಬಯಲು ಮಾಡಿದಂತೆ, ತಪ್ಪಿಹೋದ ದಾರಿಯನ್ನು ಒಬ್ಬನಿಗೆ ತೋರಿಸುವಂತೆ, ಕಣ್ಣಿದ್ದರೂ ಕತ್ತಲಲ್ಲಿ ಕಾಣದಿರುವಾಗ ದೀಪವೊಂದನ್ನು ಹಿಡಿದು ರೂಪಗಳನ್ನು ನೋಡಲು ಸಾಧ್ಯವಾಗುವಂತೆ. ಧಮ್ಮವನ್ನು ವಿವಿಧ ಬಗೆಗಳಲ್ಲಿ ಸ್ಪಷ್ಟಪಡಸಿದ್ದಾರೆ. ನಾನು ಪೂಜ್ಯ ಗೌತಮರಿಗೆ ಶರಣು ಹೋಗುತ್ತೇನೆ ಮತ್ತು ಧಮ್ಮಕ್ಕೆ ಹಾಗು ಭಿಕ್ಖುಗಳ ಸಂಘಕ್ಕೆ ಶರಣು ಹೋಗುತ್ತೇನೆ. ಇಂದಿನಿಂದ ಜೀವನ ಪರ್ಯಂತ ನಾನು ಉಪಾಸಕನಾಗಿ ಶರಣು ಹೋದವನೆಂದು ಆಚಾರ್ಯ ಗೌತಮರು ತಿಳಿಯಲಿ.

ಇಲ್ಲಿಗೆ ಚಂಕೀ ಸುತ್ತ ಮುಗಿಯಿತು

ಟಿಪ್ಪಣಿಗಳು [4]