ಏಸುಕಾರೀ ಸುತ್ತ
ಹೀಗೆ ನಾನು ಕೇಳಿದ್ದೇನೆ.
ಒಂದುಸಲ ಭಗವಂತನು ಶ್ರಾವಸ್ತಿಯಲ್ಲಿ, ಜೇತವನದಲ್ಲಿ, ಅನಾಥಪಿಂಡಿಕನ ಆರಾಮದಲ್ಲಿ ತಂಗಿದ್ದನು.
ಆಗ ಏಸುಕಾರೀ ಬ್ರಾಹ್ಮಣನು ಭಗವಂತನಿದ್ದಲ್ಲಿಗೆ ಬಂದು, ಭಗವಂತನ ಬಳಿ ಕುಶಲಪ್ರಶ್ನೆಗಳನ್ನು ಕುರಿತಾಡಿ, ಒಂದುಕಡೆ ಕುಳಿತನು.
ಒಂದುಕಡೆ ಕುಳಿತಮೇಲೆ ಏಸುಕಾರೀ ಬ್ರಾಹ್ಮಣನು ಭಗವಂತನಿಗೆ ಹೀಗೆಂದನು:
ಬ್ರಾಹ್ಮಣರು, ಭೋ ಗೌತಮ, ನಾಲ್ಕು ರೀತಿಯ ಸೇವೆಯನ್ನು ತಿಳಿಸುತ್ತಾರೆ:
ಬ್ರಾಹ್ಮಣನ ಸೇವೆಯನ್ನು, ಕ್ಷತ್ರಿಯನ ಸೇವೆಯನ್ನು, ವೈಶ್ಯನ ಸೇವೆಯನ್ನು, ಶೂದ್ರನ ಸೇವೆಯನ್ನು ತಿಳಿಸುತ್ತಾರೆ.
ಇದರಲ್ಲಿ, ಭೋ ಗೌತಮ, ಬ್ರಾಹ್ಮಣರು ಬ್ರಾಹ್ಮಣನ ಸೇವೆಯನ್ನು ಹೀಗೆ ತಿಳಿಸುತ್ತಾರೆ:
ಬ್ರಾಹ್ಮಣನಾಗಲಿ, ಕ್ಷತ್ರಿಯನಾಗಲಿ, ವೈಶ್ಯನಾಗಲಿ, ಶೂದ್ರನಾಗಲಿ ಬ್ರಾಹ್ಮಣನನ್ನು ಸೇವಿಸಬಹುದು.
ಇದರಲ್ಲಿ, ಭೋ ಗೌತಮ, ಬ್ರಾಹ್ಮಣರು ಕ್ಷತ್ರಿಯನ ಸೇವೆಯನ್ನು ಹೀಗೆ ತಿಳಿಸುತ್ತಾರೆ:
ಕ್ಷತ್ರಿಯನಾಗಲಿ, ವೈಶ್ಯನಾಗಲಿ, ಶೂದ್ರನಾಗಲಿ ಕ್ಷತ್ರಿಯನನ್ನು ಸೇವಿಸಬಹುದು.
ಇದರಲ್ಲಿ, ಭೋ ಗೌತಮ, ಬ್ರಾಹ್ಮಣರು ವೈಶ್ಯನ ಸೇವೆಯನ್ನು ಹೀಗೆ ತಿಳಿಸುತ್ತಾರೆ:
ವೈಶ್ಯನಾಗಲಿ, ಶೂದ್ರನಾಗಲಿ, ವೈಶ್ಯನನ್ನು ಸೇವಿಸಬಹುದು.
ಮತ್ತೆ ಇದರಲ್ಲಿ, ಭೋ ಗೌತಮ, ಬ್ರಾಹ್ಮಣರು ಶೂದ್ರನ ಸೇವೆಯನ್ನು ಹೀಗೆ ತಿಳಿಸುತ್ತಾರೆ:
ಶೂದ್ರನೇ ಶೂದ್ರನ ಸೇವೆ ಮಾಡಬೇಕು.
ಬ್ರಾಹ್ಮಣರು ಈ ನಾಲ್ಕು ಸೇವೆಗಳನ್ನು ತಿಳಿಸುತ್ತಾರೆ. ಇದಕ್ಕೆ ತಾವು ಗೌತಮ, ಏನು ಹೇಳುವಿರಿ? ಎಂದನು.
2. ಏನು ಬ್ರಾಹ್ಮಣ, ಬ್ರಾಹ್ಮಣರು ತಿಳಿಸುವ ಈ ನಾಲ್ಕು ವಿಧದ ಸೇವೆಯನ್ನು ಸರ್ವಲೋಕವೂ ಒಪ್ಪುವುದೇನು?
ಇಲ್ಲ, ಭೋ ಗೌತಮ.
ಇದು ಹೇಗಿದೆ ಎಂದರೆ, ಬ್ರಾಹ್ಮಣ, ದರಿದ್ರನೂ ನಿರ್ಗತಿಕನೂ ಬಡವನೂ ಆದವನಿಗೆ ಇಷ್ಟವಿಲ್ಲದ ಚೂರನ್ನು ತಗುಲಿಹಾಕಿ, ಇದೊ, ಏ ಪುರುಷ, ಈ ಮಾಂಸ ನೀನು ತಿನ್ನಬೇಕು. ಇದರ ಬೆಲೆಯನ್ನೂ ತೆರಬೇಕು ಎಂದಹಾಗೆ.
ಇದರಂತೆಯೇ, ಬ್ರಾಹ್ಮಣ, ಬ್ರಾಹ್ಮಣರು ಶ್ರಮಣ ಬ್ರಾಹ್ಮಣರನ್ನು ಒಪ್ಪಿಸದೆ ಈ ನಾಲ್ಕು ಸೇವೆಗಳನ್ನು ತಿಳಿಸುತ್ತಾರೆ.
ಬ್ರಾಹ್ಮಣ, ಎಲ್ಲರ ಸೇವೆಯನ್ನೂ ಮಾಡಬೇಕೆಂದು ನಾನು ಹೇಳುವುದಿಲ್ಲ. ಯಾರ ಸೇವೆಯನ್ನೂ ಮಾಡತಕ್ಕದ್ದಲ್ಲವೆಂದೂ ನಾನು ಹೇಳುವುದಿಲ್ಲ.
ಯಾರ ಪರಿಚರ್ಯೆ ಮಾಡಿದರೆ ಆ ಪರಿಚರ್ಯೆಯಿಂದ ಒಳ್ಳೆಯದಾಗದೆ ಕೇಡಾಗುವುದೋ ಆ ಪರಿಚರ್ಯೆ ಮಾಡತಕ್ಕದ್ದಲ್ಲವೆಂದು ಹೇಳುತ್ತೇನೆ.
ಯಾರ ಪರಿಚರ್ಯೆ ಮಾಡಿದರೆ ಆ ಪರಿಚರ್ಯೆಯಿಂದ ಕೇಡಾಗದೆ ಮೇಲಾಗುವುದೋ ಆ ಪರಿಚರ್ಯೆಯನ್ನು ಮಾಡತಕ್ಕದ್ದು ಎಂದು ಹೇಳುತ್ತೇನೆ.
ಬ್ರಾಹ್ಮಣ, ಕ್ಷತ್ರಿಯನನ್ನು ಹೀಗೆ ಪ್ರಶ್ನಿಸುತ್ತೇನೆ:
ನೀನು ಎಂತಹವರ ಸೇವೆ ಮಾಡುವೆ? ನಿನ್ನ ಸೇವೆಯಿಂದ ಮೇಲಾಗದೆ ಕೇಡಾಗುವಂಥವರನ್ನೆ? ಅಥವಾ ಕೇಡಾಗದೆ ಮೇಲಾಗುವಂಥವರನ್ನೆ? ಚೆನ್ನಾಗಿ ಉತ್ತರ ಕೊಡಬಲ್ಲ ಕ್ಷತ್ರಿಯನು, ಬ್ರಾಹ್ಮಣ, ಹೀಗೆ ಉತ್ತರ ಕೊಡುವನು:
ಯಾರ ಸೇವೆಯಿಂದ ಕೇಡಾಗದೆ ಮೇಲಾಗುವುದೋ ಅಂಥವರ ಸೇವೆ ಮಾಡುವೆನಲ್ಲದೆ ಮೇಲಾಗದೆ ಕೇಡಾಗುವಂಥವರನ್ನಲ್ಲ.
ಹೀಗೆಯೇ ಬ್ರಾಹ್ಮಣರನ್ನೂ
ವೈಶ್ಯರನ್ನೂ
ಶೂದ್ರರನ್ನೂ
ಪ್ರಶ್ನಿಸುವೆನು,
ಬ್ರಾಹ್ಮಣ. ಚೆನ್ನಾಗಿ ಉತ್ತರ ಕೊಡಬಲ್ಲವರು ಅವರೂ ಹೀಗೇ ಉತ್ತರ ಕೊಡುವರು.
ಯಾರ ಸೇವೆಯಿಂದ ಕೇಡಾಗದೆ ಮೇಲಾಗುವುದೋ ಅಂಥವರ ಸೇವೆ ಮಾಡುವೆನಲ್ಲದೆ ಮೇಲಾಗದೆ ಕೇಡಾಗುವಂಥವರನ್ನಲ್ಲ.
ಬ್ರಾಹ್ಮಣ, ಉಚ್ಚ ಕುಲದಲ್ಲಿ ಹುಟ್ಟುವುದು ಮೇಲೆಂದಾಗಲಿ, ಕೀಳೆಂದಾಗಲಿ ನಾನು ಹೇಳುವುದಿಲ್ಲ.
ಉದಾರವಾದ ವರ್ಣವಿರುವುದರಿಂದ ಮೇಲೆಂದಾಗಲಿ, ಕೀಳೆಂದಾಗಲಿ ನಾನು ಹೇಳುವುದಿಲ್ಲ.
ಉದಾರವಾದ ಭೋಗವಿರುವುದರಿಂದ ಮೇಲೆಂದಾಗಲಿ ಕೀಳೆಂದಾಗಲಿ ನಾನು ಹೇಳುವುದಿಲ್ಲ.
3. ಉಚ್ಚ ಕುಲದಲ್ಲಿ ಹುಟ್ಟಿದವನಾದರೂ ಉದಾರವಾದ ವರ್ಣವುಳ್ಳವನಾದರೂ ಉದಾರವಾದ ಭೋಗವುಳ್ಳವನಾದರೂ ಯಾವನು ಪ್ರಾಣಿಗಳನ್ನು ಕೊಲ್ಲುವನೋ, ಕೊಡದುದನ್ನು ಕೊಳ್ಳುವನೋ, ಮನಸ್ಸಿಗೆ ಬಂದಂತೆ ಅತಿಚಾರ ಮಾಡುವನೋ, ಸುಳ್ಳು ಹೇಳುವನೋ, ಚಾಡಿ ಹೇಳುವನೋ, ಪರುಷವಾಗಿ ಆಡುವನೋ, ವ್ಯರ್ಥವಾಗಿ ಮಾತಾಡುವನೋ, ಅತಿಯಾಸೆಪಡುವನೋ, ದ್ವೇಷಾಸೂಯೆಯುಳ್ಳವನೋ, ಮಿಥ್ಯಾದೃಷ್ಟಿಯೋ ಅವನಿಗೆ ಆ ಉಚ್ಚಕುಲದಿಂದ, ಉದಾರವಾದ ವರ್ಣದಿಂದ, ಉದಾರವಾದ ಭೋಗದಿಂದ ಶ್ರೇಯಸ್ಸಿಲ್ಲ ಎಂದು ಹೇಳುತ್ತೇನೆ.
4. ಉಚ್ಚಕುಲದಲ್ಲಿ ಹುಟ್ಟಿದವನಾದರೂ ಉದಾರವಾದ ವರ್ಣವುಳ್ಳವನಾದರೂ ಉದಾರವಾದ ಭೋಗವುಳ್ಳವನಾದರೂ ಯಾವನು ಪ್ರಾಣಿಗಳನ್ನು ಕೊಲ್ಲದೆ, ಕೊಡದುದನ್ನು ಕೊಳ್ಳದೆ, ಮನಸ್ಸಿಗೆ ಬಂದಂತೆ ಅತಿಚಾರಮಾಡದೆ, ಸುಳ್ಳಾಡದೆ, ಚಾಡಿ ಹೇಳದೆ, ಪರುಷವಾಗಿ ನುಡಿಯದೆ, ವ್ಯರ್ಥವಾಗಿ ಮಾತಾಡದೆ, ಅತಿಯಾಸೆಪಡದೆ, ದ್ವೇಷಾಸೂಯೆಯುಳ್ಳವನಾಗದೆ, ಸಮ್ಯಕ್ದೃಷ್ಟಿಯುಳ್ಳವನಾಗುವನೋ ಅವನಿಗೆ ಆ ಉಚ್ಚಕುಲದಿಂದ, ಉದಾರವಾದ ವರ್ಣದಿಂದ, ಉದಾರವಾದ ಭೋಗದಿಂದ ಕೇಡಿಲ್ಲ ಎಂದು ಹೇಳುತ್ತೇನೆ.
ಬ್ರಾಹ್ಮಣ, ಎಲ್ಲರ ಸೇವೆಯನ್ನೂ ಮಾಡಬೇಕೆಂದು ನಾನು ಹೇಳುವುದಿಲ್ಲ. ಯಾರ ಸೇವೆಯನ್ನೂ ಮಾಡತಕ್ಕದ್ದಲ್ಲವೆಂದೂ ನಾನು ಹೇಳುವುದಿಲ್ಲ.
ಯಾರ ಪರಿಚರ್ಯೆಯಿಂದ, ಬ್ರಾಹ್ಮಣ, ಶ್ರದ್ಧೆ ವರ್ಧಿಸುವುದೋ, ಶೀಲ ವರ್ಧಿಸುವುದೋ, ಶ್ರುತ ವರ್ಧಿಸುವುದೋ, ತ್ಯಾಗ ವರ್ಧಿಸುವುದೋ, ಪ್ರಜ್ಞೆ ವರ್ಧಿಸುವುದೋ, ಅಂಥವರ ಸೇವೆ ಮಾಡತಕ್ಕದ್ದೆಂದು ನಾನು ಹೇಳುತ್ತೇನೆ.
5. ಹೀಗೆನ್ನಲು ಏಸುಕಾರೀ ಬ್ರಾಹ್ಮಣನು ಭಗವಂತನಿಗೆ ಹೀಗೆಂದನು:
ಬ್ರಾಹ್ಮಣರು, ಭೋ ಗೌತಮ, ನಾಲ್ಕು ರೀತಿಯ ಧನಗಳನ್ನು ತಿಳಿಸುತ್ತಾರೆ:
ಬ್ರಾಹ್ಮಣನ ಆದಾಯ, ಕ್ಷತ್ರಿಯನ ಆಧಾಯ, ವೈಶ್ಯನ ಆದಾಯ, ಶೂದ್ರನ ಆದಾಯ ಎಂದು.
ಇದರಲ್ಲಿ, ಭೋ ಗೌತಮ, ಬ್ರಾಹ್ಮಣರು ಬ್ರಾಹ್ಮಣನ ಆದಾಯವನ್ನು ಹೀಗೆ ತಿಳಿಸುತ್ತಾರೆ: ಭಿಕ್ಷಾಚರ್ಯವೆಂದು100.
ಬ್ರಾಹ್ಮಣನು ಭಿಕ್ಷಾಚರ್ಯವನ್ನು ಕಡೆಗಣಿಸಿದರೆ, ರಕ್ಷಕನಾದವನು ಕೊಡದುದನ್ನು ಕೊಂಡವನಾದ ಹಾಗೆ, ಅಕೃತ್ಯಕಾರಿಯಾಗುವನು.
ಹೀಗೆಯೇ, ಕ್ಷತ್ರಿಯರಿಗೆ ಬಿಲ್ಲು ಬತ್ತಳಿಕೆಯನ್ನೂ ವೈಶ್ಯರಿಗೆ ಕೃಷಿಗೋರಕ್ಷವನ್ನೂ ಶೂದ್ರರಿಗೆ ಕುಯಿಲನ್ನು ಹೊತ್ತುಕೊಂಡು ಹೋಗುವುದನ್ನೂ ಆದಾಯವಾಗಿ ಹೇಳುತ್ತಾರೆ101.
ಅವರು ಅದನ್ನು ಕಡೆಗಣಿಸಿದರೆ, ರಕ್ಷಕನಾದವನು ಕೊಡದುದನ್ನು ಕೊಂಡವನಾದ ಹಾಗೆ, ಅಕೃತ್ಯಕಾರಿಯಾಗುವನು.
ಹೀಗೆ ಭೋ ಗೌತಮ, ಬ್ರಾಹ್ಮಣರು ಈ ನಾಲ್ಕು ಧನಗಳನ್ನು ತಿಳಿಸುವರು.
ಇದಕ್ಕೆ ತಾವು, ಗೌತಮ, ಏನು ಹೇಳುವಿರಿ? ಎಂದನು.
6. ಏನು, ಬ್ರಾಹ್ಮಣ, ಬ್ರಾಹ್ಮಣರು ತಿಳಿಸುವ ಈ ನಾಲ್ಕು ವಿಧದ ಧನವನ್ನು ಸರ್ವಲೋಕವೂ ಒಪ್ಪುವುದೇನು?
ಇಲ್ಲ ಗೌತಮ.
ಇದು ಹೇಗಿದೆ ಎಂದರೆ ಬ್ರಾಹ್ಮಣ, ದರಿದ್ರನೂ ನಿರ್ಗತಿಕನೂ ಬಡವನೂ ಆದವನಿಗೆ ಇಷ್ಟವಿಲ್ಲದ ಚೂರನ್ನು ತಗುಲಹಾಕಿ ಇದೊ, ಏ ಪುರುಷ, ಈ ಮಾಂಸ ನೀನು ತಿನ್ನಬೇಕು. ಇದರ ಬೆಲೆಯನ್ನೂ ತೆರಬೇಕು ಎಂದ ಹಾಗೆ.
ಇದರಂತೆಯೇ ಬ್ರಾಹ್ಮಣ, ಬ್ರಾಹ್ಮಣರು ಶ್ರಮಣ ಬ್ರಾಹ್ಮಣರನ್ನು ಒಪ್ಪಿಸದೆ ಈ ನಾಲ್ಕು ಧನಗಳನ್ನು ತಿಳಿಸುತ್ತಾರೆ.
ನಾನು, ಬ್ರಾಹ್ಮಣ, ಆರ್ಯವೂ ಲೋಕೋತ್ತರವೂ ಆದ ಧರ್ಮವನ್ನು ಪುರುಷನ ಆದಾಯವೆಂದು ತಿಳಿಸುತ್ತೇನೆ.
ಪ್ರಾಚೀನವಾದ ತಾಯಿ-ತಂದೆಯರ ಕುಲವಂಶವನ್ನು ಅನುಸರಿಸಿ ಎಲ್ಲೆಲ್ಲಿ ತಾನು ಹುಟ್ಟುವನೋ ಅಲ್ಲಿ ಅದರಂತೆ ಅವನನ್ನು ಎಣಿಸುವರು.
ಕ್ಷತ್ರಿಯ ಕುಲದಲ್ಲಿ ಹುಟ್ಟಿದರೆ, ಕ್ಷತ್ರಿಯನೆಂದೇ ಎಣಿಸುವರು.
ಬ್ರಾಹ್ಮಣ ಕುಲದಲ್ಲಿ ಹುಟ್ಟಿದರೆ, ಬ್ರಾಹ್ಮಣನೆಂದೇ ಎಣಿಸುವರು.
ವೈಶ್ಯ ಕುಲದಲ್ಲಿ ಹುಟ್ಟಿದರೆ, ವೈಶ್ಯನೆಂದೇ ಎಣಿಸುವರು.
ಶೂದ್ರ ಕುಲದಲ್ಲಿ ಹುಟ್ಟಿದರೆ, ಶೂದ್ರನೆಂದೇ ಎಣಿಸುವರು.
ಇದು ಹೇಗೆಂದರೆ, ಬ್ರಾಹ್ಮಣ, ಅಗ್ನಿ ಯಾವುದರಿಂದ ಉರಿಯುವುದೇ ಅದಕ್ಕೆ ಆ ಹೆಸರು ಬರುವ ಹಾಗೆ.
ಕಟ್ಟಿಗೆ ಕಾರಣವಾಗಿ ಅಗ್ನಿ ಜ್ವಲಿಸಿದರೆ, ಅದು ಕಟ್ಟಿಗೆಯ ಅಗ್ನಿ;
ಚೆಕ್ಕೆ ಕಾರಣವಾಗಿ ಅಗ್ನಿ ಜ್ವಲಿಸಿದರೆ, ಅದು ಚೆಕ್ಕೆಯ ಅಗ್ನಿ;
ತೃಣ ಕಾರಣವಾಗಿ ಬೆಂಕಿ ಉರಿದರೆ, ಅದು ತೃಣದ ಬೆಂಕಿ;
ಗೋಮಯ ಕಾರಣವಾಗಿ ಬೆಂಕಿ ಉರಿದರೆ, ಅದು ಗೋಮಯದ ಬೆಂಕಿ.
ಹೀಗೆಯೇ ನಾನು, ಬ್ರಾಹ್ಮಣ, ಆರ್ಯವೂ ಲೋಕೋತ್ತರವೂ ಆದ ಧರ್ಮವನ್ನು ಪುರುಷನ ಆದಾಯವೆಂದು ತಿಳಿಸುತ್ತೇನೆ.
ಪ್ರಾಚೀನವಾದ ತಾಯಿ-ತಂದೆಯರ ಕುಲವಂಶವನ್ನು ಅನುಸರಿಸಿ ಎಲ್ಲೆಲ್ಲಿ ತಾನು ಹುಟ್ಟುವನೋ ಅಲ್ಲಿ ಅದರಂತೆ ಅವನನ್ನು ಎಣಿಸುವರು.
ಕ್ಷತ್ರಿಯ ಕುಲದಲ್ಲಿ, ಬ್ರಾಹ್ಮಣ ಕುಲದಲ್ಲಿ, ವೈಶ್ಯ ಕುಲದಲ್ಲಿ, ಶೂದ್ರ ಕುಲದಲ್ಲಿ ಹುಟ್ಟಿಬಂದರೆ ಅವನನ್ನು ಕ್ಷತ್ರಿಯ, ಬ್ರಾಹ್ಮಣ, ವೈಶ್ಯ, ಶೂದ್ರ ಎಂದು ಎಣಿಸುವರು.
ಕ್ಷತ್ರಿಯ ಕುಲದವನಾದರೂ, ಬ್ರಾಹ್ಮಣ, ಮನೆಯಿಂದ ಮನೆಯಿಲ್ಲದ ಸ್ಥಿತಿಗೆ ಪರಿವ್ರಜಿಸಿದನಾದರೆ, ಅವನು ತಥಾಗತನು ತಿಳಿಸಿರುವ ಧರ್ಮವಿನಯಕ್ಕೆ ಬಂದು, ಪ್ರಾಣಿಹಿಂಸೆ ಮಾಡದವನಾಗುವನು; ಕೊಡದುದನ್ನು ಕೊಳ್ಳದವನಾಗುವನು; ಅಬ್ರಹ್ಮಚರ್ಯದಿಂದ ವಿಮುಖನಾಗುವನು; ಸುಳ್ಳಾಡದವನಾಗುವನು; ಚಾಡಿ ಹೇಳದವನಾಗುವನು; ಪರುಷವಾಗಿ ಮಾತನಾಡದವನಾಗುವನು; ವ್ಯರ್ಥವಾಗಿ ಮಾತಾಡದವನಾಗುವನು; ಅತಿಯಾಸೆಪಡದಿರುವನು; ದ್ವೇಷಾಸೂಯೆಯಿಲ್ಲದವನಾಗುವನು; ಸಮ್ಯಕ್ ದೃಷ್ಟಿಯುಳ್ಳವನಾಗುವನು; ನ್ಯಾಯವೂ ಧರ್ಮವೂ ಕುಶಲವೂ ಆದುದನ್ನು ಆರಾಧಿಸುವವನಾಗುವನು.
ಹೀಗೆಯೇ, ಬ್ರಾಹ್ಮಣ ಕುಲದವನಾಗಲಿ,
ವೈಶ್ಯ ಕುಲದವನಾಗಲಿ,
ಶೂದ್ರ ಕುಲದವನಾಗಲಿ, ಮನೆಯಿಂದ ಮನೆಯಿಲ್ಲದ ಸ್ಥಿತಿಗೆ ಪರಿವ್ರಜಿಸಿದರೆ ಅವನು ತಥಾಗತನು ತಿಳಿಸಿರುವ ಧರ್ಮವಿನಯಕ್ಕೆ ಬಂದು ಪ್ರಾಣಿಹಿಂಸೆ ಮಾಡದವನಾಗುವನು; ಕೊಡದುದನ್ನು ಕೊಳ್ಳದವನಾಗುವನು; ಅಬ್ರಹ್ಮಚರ್ಯದಿಂದ ವಿಮುಖನಾಗುವನು; ಸುಳ್ಳಾಡದವನಾಗುವನು; ಚಾಡಿ ಹೇಳದವನಾಗುವನು; ಪರುಷವಾಗಿ ಮಾತನಾಡದವನಾಗುವನು; ವ್ಯರ್ಥವಾಗಿ ಮಾತಾಡದವನಾಗುವನು; ಅತಿಯಾಸೆಪಡದಿರುವನು; ದ್ವೇಷಾಸೂಯೆಯಿಲ್ಲದವನಾಗುವನು; ಸಮ್ಯಕ್ ದೃಷ್ಟಿಯುಳ್ಳವನಾಗುವನು; ನ್ಯಾಯವೂ, ಧರ್ಮವೂ ಕುಶಲವೂ ಆದುದನ್ನು ಆರಾಧಿಸುವವನಾಗುವನು.
7. ನಿನಗೆ ಏನೆನ್ನಿಸುತ್ತದೆ, ಬ್ರಾಹ್ಮಣ?
ಈ ಸ್ಥಳದಲ್ಲಿ ವೈರವಿಲ್ಲದೆ ದ್ವೇಷವಿಲ್ಲದೆ ಮೈತ್ರಿಯಿಂದಿರುವ ಚಿತ್ತವನ್ನು ಉಂಟುಮಾಡಿಕೊಳ್ಳುವುದು ಬ್ರಾಹ್ಮಣರಿಗೆ ಮಾತ್ರ ಸಾಧ್ಯ? ಕ್ಷತ್ರಿಯನಾಗಲಿ, ವೈಶ್ಯನಾಗಲಿ, ಶೂದ್ರನಿಗಾಗಲಿ ಸಾಧ್ಯವಿಲ್ಲವೇನು?
ಹಾಗಲ್ಲ, ಭೋ ಗೌತಮ,
ಕ್ಷತ್ರಿಯನಿಗಾಗಲಿ, ವೈಶ್ಯನಿಗಾಗಲಿ, ಶೂದ್ರನಿಗಗಲಿ, ನಾಲ್ಕು ವರ್ಣಗಳಲ್ಲಿ ಎಲ್ಲರಿಗೂ ಈ ಸ್ಥಳದಲ್ಲಿ ವೈರವಿಲ್ಲದೆ ದ್ವೇಷವಿಲ್ಲದೆ ಮೈತ್ರಿಯಿಂದ ಕೂಡಿರುವ ಚಿತ್ತವನ್ನು ಉಂಟುಮಾಡಿಕೊಳ್ಳುವುದು ಸಾಧ್ಯ.
ಅದರಂತೆಯೇ, ಬ್ರಾಹ್ಮಣ, ಕ್ಷತ್ರಿಯ ಕುಲದವನಾಗಲಿ, ವೈಶ್ಯ ಕುಲದವನಾಗಲಿ, ಶೂದ್ರ ಕುಲದವನಾಗಲಿ ಮನೆಯಿಂದ ಮನೆಯಿಲ್ಲದ ಸ್ಥಿತಿಗೆ ಪರಿವ್ರಜಿಸಿದವನಾದರೆ, ಅವನು ತಥಾಗತನು ತಿಳಿಸಿದ ಧರ್ಮ ವಿನಯಕ್ಕೆ ಬಂದು... (ಮೇಲಿನಂತೆ).... ನ್ಯಾಯವೂ ಧರ್ಮವೂ ಕುಶಲವೂ ಆದುದನ್ನು ಆರಾಧಿಸುವವನಾಗುವನು.
8. ನಿನಗೆ ಏನೆನ್ನಿಸುತ್ತದೆ, ಬ್ರಾಹ್ಮಣ?
ಶುಕ್ತಿಯನ್ನೂ ಸ್ನಾನಚೂರ್ಣವನ್ನೂ ತೆಗೆದುಕೊಂಡು ನದಿಗೆ ಹೋಗಿ ಧೂಳು-ಕೊಳೆಗಳನ್ನು ತೊಳೆಯುವುದು ಬ್ರಾಹ್ಮಣನಿಗೆ ಮಾತ್ರ ಶಕ್ಯ? ಕ್ಷತ್ರಿಯನಿಗೆ ವೈಶ್ಯನಿಗೆ ಶೂದ್ರನಿಗೆ ಶಕ್ಯವಿಲ್ಲವೇನು?
ಹಾಗಲ್ಲ, ಭೋ ಗೌತಮ.
ಕ್ಷತ್ರಿಯನಿಗಾಗಲಿ ವೈಶ್ಯನಿಗಾಗಲಿ, ಶೂದ್ರನಿಗಾಗಲಿ, ನಾಲ್ಕು ವರ್ಣಗಳಲ್ಲಿ ಎಲ್ಲರಿಗೂ ಶುಕ್ತಿಯನ್ನೂ ಸ್ನಾನಚೂರ್ಣವನ್ನು ತೆಗೆದುಕೊಂಡು ನದಿಗೆ ಹೋಗಿ ಧೂಳು-ಕೊಳೆಗಳನ್ನು ತೊಳೆಯುವುದು ಸಾಧ್ಯ.
ಅದರಂತೆಯೇ, ಬ್ರಾಹ್ಮಣ, ಕ್ಷತ್ರಿಯ ಕುಲದವನಾಗಲಿ, ವೈಶ್ಯಕುಲದವನಾಗಲಿ, ಶೂದ್ರ ಕುಲದವನಾಗಲಿ ಮನೆಯಿಂದ ಮನೆಯಿಲ್ಲದ ಸ್ಥಿತಿಗೆ ಪರಿವ್ರಜಿಸಿದವನಾದರೆ, ಅವನು ತಥಾಗತನು ತಿಳಿಸಿದ ಧರ್ಮ ವಿನಯಕ್ಕೆ ಬಂದು... (ಮೇಲಿನಂತೆ)... ನ್ಯಾಯವೂ ಧರ್ಮವೂ ಕುಶಲವೂ ಆದುದನ್ನು ಆರಾಧಿಸುವವನಾಗುವನು.
9. ನಿನಗೆ ಏನೆನ್ನಿಸುತ್ತದೆ, ಬ್ರಾಹ್ಮಣ?
ಇಲ್ಲಿ ಮೂಧರ್ಾಭಿಷಿಕನಾದ ಕ್ಷತ್ರಿಯ ರಾಜನೊಬ್ಬನು ನಾನಾ ಜಾತಿಯ ಒಂದುನೂರು ಜನರನ್ನು ಒಟ್ಟುಗೂಡಿಸಿ, ಕ್ಷತ್ರಿಯ ಕುಲದಿಂದ, ಬ್ರಾಹ್ಮಣ ಕುಲದಿಂದ, ರಾಜನ್ಯ ಕುಲದಿಂದ ಉತ್ಪನ್ನರಾದವರು ಬನ್ನಿರಿ; ಶಾಲವೃಕ್ಷದ ಅಥವಾ ಸರಳ ವೃಕ್ಷದ ಅಥವಾ ಚಂದನ ವೃಕ್ಷದ ಅಥವಾ ಪದುಮಕದ ಉತ್ತರಾರಣಿಯನ್ನು ತಂದು ಬೆಂಕಿಯನ್ನು ಹುಟ್ಟಿಸಿ, ತೇಜಸ್ಸನ್ನು ಕಾಣಿಸಿರಿ. ಮತ್ತೆ ಚಂಡಾಲ ಕುಲದಿಂದಲೂ, ನಿಷಾದ ಕುಲದಿಂದಲೂ ವೇಣಕುಲದಿಂದಲೂ, ರಥಕಾರ ಕುಲದಿಂದಲೂ ಪುಕ್ಕುಸ ಕುಲದಿಂದಲೂ ಉತ್ಪನ್ನರಾದವರು ಬನ್ನಿರಿ; ನಾಯಿ ನೀರು ಕುಡಿಯುವ ತೊಟ್ಟಿಯಿಂದಾಗಲಿ, ಹಂದಿಯ ತೊಟ್ಟಿಯಿಂದಾಗಲಿ, ಅಗಸರ ತೊಟ್ಟಿಯಿಂದಾಗಲಿ, ಹರಳಿನ ಕಡ್ಡಿಗಳಿಂದಾಗಲಿ, ಉತ್ತರಾರಣಿಯನ್ನು ತಂದು ಬೆಂಕಿಯನ್ನು ಹುಟ್ಟಿಸಿ, ತೇಜಸ್ಸನ್ನು ಕಾಣಿಸಿರಿ ಎಂದರೆ ನಿನ್ನಗೇನನ್ನಿಸುತ್ತದೆ, ಬ್ರಾಹ್ಮಣ?
ಕ್ಷತ್ರಿಯ ಕುಲದಿಂದ, ಬ್ರಾಹ್ಮಣ ಕುಲದಿಂದ, ರಾಜನ್ಯ ಕುಲದಿಂದ ಉತ್ಪನ್ನರಾದವರು ಶಾಲ ಅಥವಾ ಸರಳ ಅಥವಾ ಚಂದನ ಅಥವಾ ಪದುಮಕದ ಉತ್ತರಾರಣಿಯನ್ನು ತಂದು ಹುಟ್ಟಿಸಿದ ಬೆಂಕಿ, ಕಾಣಿಸಿದ ತೇಜಸ್ಸು-ಆ ಬೆಂಕಿ ಮಾತ್ರ ಉರಿಯುತ್ತ, ಬಣ್ಣವಾಗಿ, ಬೆಳಕಾಗಿರುವುದೇನು? ಆ ಅಗ್ನಿಯಿಂದ ಮಾತ್ರ ಅಗ್ನಿಕರಣೀಯಗಳನ್ನು ಮಾಡಲು ಶಕ್ಯವೇನು? ಆದರೆ ಚಂಡಾಲ ಕುಲದಿಂದ, ನಿಷಾದ ಕುಲದಿಂದ, ವೇಣು ಕುಲದಿಂದ, ರಥಕಾರ ಕುಲದಿಂದ, ಪುಕ್ಕುಸ ಕುಲದಿಂದ ಉತ್ಪನ್ನರಾದವರು ನಾಯಿ ನೀರು ಕುಡಿಯವ ತೊಟ್ಟಿಯಿಂದಾಗಲಿ, ಹಂದಿಯ ತೊಟ್ಟಿಯಿಂದಾಗಲಿ, ಅಗಸರ ತೊಟ್ಟಿಯಿಂದಾಗಲಿ, ಹರಳಿನ ಕಡ್ಡಿಗಳಿಂದಾಗಲಿ, ಉತ್ತರಾರಣಿಯನ್ನು ತಂದು ಹುಟ್ಟಿಸಿದ ಬೆಂಕಿ, ಕಾಣಿಸಿದ ತೇಜಸ್ಸು ಆ ಬೆಂಕಿ ಮಾತ್ರ ಉರಿಯದೆ, ಬಣ್ಣವಿಲ್ಲದೆ, ಬೆಳಕಿಲ್ಲದೆ ಇರುವುದೇನು? ಆ ಅಗ್ನಿಯಿಂದ ಅಗ್ನಿಕರಣೀಯಗಳನ್ನು ಮಾಡಲು ಶಕ್ಯವಿಲ್ಲವೇನು?
ಹಾಗಾಗದು, ಭೋ ಗೌತಮರೆ, ಕ್ಷತ್ರಿಯ ಕುಲದಿಂದ, ಬ್ರಾಹ್ಮಣ ಕುಲದಿಂದ, ರಾಜನ್ಯ ಕುಲದಿಂದ ಉತ್ಪನ್ನರಾದವರು ಶಾಲ ಅಥವಾ ಸರಳ ಅಥವಾ ಚಂದನ ಅಥವಾ ಪದುಮಕದ ಉತ್ತರಾರಣಿಯನ್ನು ತಂದು ಹುಟ್ಟಿಸಿದ ಬೆಂಕಿ, ಕಾಣಿಸಿದ ತೇಜಸ್ಸು - ಆ ಬೆಂಕಿ ಕೂಡ ಉರಿಯುತ್ತ, ಬಣ್ಣವಾಗಿ, ಬೆಳಕಾಗಿರುವುದು. ಅದರಿಂದಲೂ ಅಗ್ನಿಕರಣೀಯಗಳನ್ನು ಮಾಡಲು ಶಕ್ಯ. ಹಾಗಲ್ಲದೆ ಚಾಂಡಾಲ ಕುಲದಿಂದ, ನಿಷಾದ ಕುಲದಿಂದ, ವೇಣುಕುಲದಿಂದ, ರಥಕಾರ ಕುಲದಿಂದ, ಪುಕ್ಕುಸ ಕುಲದಿಂದ ಉತ್ಪನ್ನರಾದವರು ನಾಯಿ ನೀರು ಕುಡಿಯುವ ತೊಟ್ಟಿಯಿಂದಾಗಲಿ, ಹಂದಿಯ ತೊಟ್ಟಿಯಿಂದಾಗಲಿ, ಅಗಸರ ತೊಟ್ಟಿಯಿಂದಾಗಲಿ, ಹರಳಿನ ಕಡ್ಡಿಗಳಿಂದಾಗಲಿ, ಉತ್ತರಾರಣಿಯನ್ನು ತಂದು ಹುಟ್ಟಿಸಿದ ಬೆಂಕಿ, ಕಾಣಿಸಿದ ತೇಜಸ್ಸು ಆ ಬೆಂಕಿ ಕೂಡ ಉರಿಯುತ್ತ, ಬಣ್ಣವಾಗಿ, ಬೆಳಕಾಗಿರುವುದು. ಅದರಿಂದಲೂ ಅಗ್ನಿಕರಣೀಯಗಳನ್ನು ಮಾಡಲು ಶಕ್ಯ. ಎಲ್ಲ ಬೆಂಕಿಯೂ, ಭೋ ಗೌತಮರೇ, ಉರಿಯುತ್ತ, ಬಣ್ಣವಾಗಿ, ಬೆಳಕಾಗಿರುವುದು, ಎಲ್ಲ ಬೆಂಕಿಯಿಂದಲೂ ಅಗ್ನಿಕರಣೀಯಗಳನ್ನು ಮಾಡಲು ಶಕ್ಯ.
ಅದರಂತೆಯೇ, ಬ್ರಾಹ್ಮಣ, ಕ್ಷತ್ರಿಯ ಕುಲದವನಾಗಲಿ ಮನೆಯಿಂದ ಮನೆಯಿಲ್ಲದ ಸ್ಥಿತಿಗೆ ಪರಿವ್ರಜಿಸಿದವನಾದರೆ, ಅವನು ತಥಾಗತನು ತಿಳಿಸಿರುವ ಧರ್ಮ ವಿನಯಕ್ಕೆ ಬಂದು ಪ್ರಾಣಿಹಿಂಸೆ ಮಾಡದವನಾಗುವನು; ಕೊಡದುದನ್ನು ಕೊಳ್ಳದವನಾಗುವನು; ಅಬ್ರಹ್ಮಚರ್ಯದಿಂದ ವಿಮುಖನಾಗುವನು; ಸುಳ್ಳಾಡದವನಾಗುವನು; ಚಾಡಿ ಹೇಳದವನಾಗುವನು; ಪರುಷವಾಗಿ ಮಾತನಾಡದವನಾಗುವನು; ವ್ಯರ್ಥವಾಗಿ ಮಾತಾಡದವನಾಗುವನು; ಅತಿಯಾಸೆಪಡದಿರುವನು; ದ್ವೇಷಾಸೂಯೆಯಿಲ್ಲದವನಾಗುವನು; ಸಮ್ಯಕ್ ದೃಷ್ಟಿಯುಳ್ಳವನಾಗುವನು; ನ್ಯಾಯವೂ ಧರ್ಮವೂ ಕುಶಲವೂ ಆದುದನ್ನು ಆರಾಧಿಸುವವನಾಗುವನು.
ಹೀಗೆನ್ನಲು, ಏಸುಕಾರೀ ಬ್ರಾಹ್ಮಣನು ಬಲು ಸೊಗಸು, ಭೋ ಗೌತಮ. ಬಲು ಸೊಗಸು, ಭೋ ಗೌತಮ. ಇಂದಿನಿಂದ ಜೀವವಿರುವವರೆಗೂ ಶರಣಾಗತನಾದ ಉಪಾಸಕನೆಂದು ಪೂಜ್ಯ ಗೌತಮನು ನನ್ನನ್ನು ಸ್ವೀಕರಿಸಲಿ ಎಂದು ಭಗವಂತನಿಗೆ ಹೇಳಿದನು.
ಟಿಪ್ಪಣಿಗಳು [4]
English
Việt Ngữ