ಸುಭ ಸುತ್ತ
ಹೀಗೆ ನಾನು ಕೇಳಿದ್ದೇನೆ. ಒಂದು ಸಮಯದಲ್ಲಿ ಭಗವಾನರು ಸಾವತ್ಥಿಯ ಜೇತವನದ ಅನಾಥಪಿಂಡಿಕಾರಾಮದಲ್ಲಿ ತಂಗಿದ್ದರು.
ಆ ಸಂದರ್ಭದಲ್ಲಿಯೇ ತೋದೇಯ್ಯನ ಮಗ ಬ್ರಾಹ್ಮಣ ಮಾಣವ ಸುಭನು ಸಾವತ್ಥಿಯ ಗೃಹಸ್ಥರೊಬ್ಬರ ಮನೆಯಲ್ಲಿ ಯಾವುದೋ ಕಾರ್ಯನಿಮಿತ್ತ ವಾಸಿಸುತ್ತಿದ್ದನು107.
ಆಗ ತೋದೇಯ್ಯನ ಮಗ ಬ್ರಾಹ್ಮಣ ಮಾಣವ ಸುಭನು ಯಾವ ಮನೆಯಲ್ಲಿ ವಾಸಿಸುತ್ತಿದದನೋ ಆ ಗೃಹಪತಿಗೆ ಕೇಳಿದನು:
ಗೃಹಪತಿಯೇ, ನಾನು ಕೇಳಿರುವಂತೆ
ಸಾವತ್ಥಿಯಲ್ಲಿ ಸಮಣರು ಮತ್ತು ಬ್ರಾಹ್ಮಣರು ಇಲ್ಲವೆಂದಿಲ್ಲ.
ಆದರೆ ನಾವು ಇಂದು ಯಾವ ಸಮಣ ಅಥವಾ ಬ್ರಾಹ್ಮಣನಿಗೆ ಹೋಗಿ ಅಲ್ಲಿ ಗೌರವ ಸಲ್ಲಿಸಬಹುದು?
ಪೂಜ್ಯರೆ, ಭಗವಾನರು ಸಾವತ್ಥಿಯ ಜೇತವನದ ಅನಾಥಪಿಂಡಿಕಾರಾಮದಲ್ಲಿ ತಂಗಿದ್ದಾರೆ. ನೀವು ಭಗವಾನರ ಬಳಿ ಹೋಗಿ ಗೌರವವನ್ನು ಸಲ್ಲಿಸಬಹುದು.
ಆಗ ಗೃಹಪತಿಯ ಮಾತನ್ನು ಕೇಳಿದ ತೋದೇಯ್ಯನ ಮಗ ಬ್ರಾಹ್ಮಣ ಮಾಣವ ಸುಭನು ಭಗವಾನರ ಬಳಿಸಾರಿ ಸಂತೋಷದಿಂದ ಮಾತುಕತೆಯಾಡಿ ಕುಶಲ ಕೇಳಿದ ಬಳಿಕ ಒಂದುಕಡೆ ಕುಳಿತನು. ಒಂದುಕಡೆ ಕುಳಿತ ಸುಭನು ಭಗವಾನರನ್ನು ಕುರಿತು ಹೀಗೆಂದನು:
ಆಚಾರ್ಯ ಗೌತಮರೆ, ಬ್ರಾಹ್ಮಣರು ಹೀಗೆ ಹೇಳುತ್ತಾರೆ:
ಗೃಹಸ್ಥರು ನ್ಯಾಯವಾದ ಕುಶಲ ಧಮ್ಮದ ಆರಾಧಕರು; ಯಾರು ಪಬ್ಬಜಿತರಾಗಿದ್ದಾರೊ (ಪರಿವ್ರಾಜಕ) ಅವರು ನ್ಯಾಯವಾದ ಕುಶಲ ಧಮ್ಮದ ಆರಾಧಕರಲ್ಲ.
ಇದರ ಬಗ್ಗೆ ಆಚಾರ್ಯ ಗೌತಮರು ಏನು ಹೇಳುತ್ತಾರೆ?
2. ಮಾಣವನೆ, ಇಲ್ಲಿ ನಾನು ವಿಭಜ್ಜವಾದದಿಂದ (ವಿಶ್ಲೇಷಿಸಿ) ಮಾತನಾಡುವವನು; ಏಕಂಶವಾದದಿಂದಲ್ಲ (ಒಂದುಕಡೆಯಿಂದಲೇ ವಾದ ಮಾಡುವುದು). ತಪ್ಪುದಾರಿ ಹಿಡಿದು ಅನುಸರಿಸುವ ಗೃಹಸ್ಥನನ್ನಾಗಲಿ ಅಥವಾ ಪಬ್ಬಜಿತನನ್ನಾಗಲಿ ನಾನು ಹೊಗಳುವುದಿಲ್ಲ;
ಯಾರು ತಪ್ಪುದಾರಿ ಹಿಡಿದು ಅನುಸರಿಸುತ್ತಿದ್ದಾರೊ ಅವರು ಗೃಹಸ್ಥರಾಗಲಿ ಅಥವಾ ಪಬ್ಬಜಿತರಾಗಲಿ ಅವರ ತಪ್ಪು ಅನುಸರಣೆಯ ಕಾರಣದಿಂದ ಕುಶಲ ಧಮ್ಮದ ಸರಿದಾರಿಯಲ್ಲಿ ಸಾಗುವುದಿಲ್ಲ.
ಸರಿದಾರಿ ಹಿಡಿದು ಅನುಸರಿಸುವ ಗೃಹಸ್ಥನನ್ನಾಗಲಿ ಅಥವಾ ಪಬ್ಬಜಿತನನ್ನಾಗಲಿ ಅವನನ್ನು ನಾನು ಹೊಗಳುತ್ತೇನೆ;
ಯಾರು ಸರಿದಾರಿ ಹಿಡಿದು ಅನುಸರಿಸುತ್ತಿದ್ದಾರೋ ಅವರು ಗೃಹಸ್ಥರಾಗಲಿ ಅಥವಾ ಪಬ್ಬಜಿತರಾಗಲಿ ಅವರ ಸರಿಯಾದ ಅನುಸರಣೆಯ ಕಾರಣದಿಂದಾಗಿ ಕುಶಲ ಧಮ್ಮದಲ್ಲಿ ಸಾಗುತ್ತಾರೆ.
ಆಚಾರ್ಯ ಗೌತಮರೆ, ಬ್ರಾಹ್ಮಣರು ಹೀಗೆ ಹೇಳುತ್ತಾರೆ:
ಗೃಹಸ್ಥರ ಬದುಕು ಮಹತ್ತರವಾದ ಕರ್ತವ್ಯಗಳಿಂದ ಮಹತ್ತರವಾದ ಚಟುವಟಿಕೆಗಳಿಂದ, ಮಹತ್ತರವಾದ ಆಡಳಿತ ನಿಯಂತ್ರಣಗಳಿಂದ, ಮಹತ್ತರವಾದ ಶ್ರಮದಿಂದ ಕೂಡಿದ್ದು ಮಹತ್ತರವಾದ ಫಲದಿಂದಲೇ ಕೂಡಿರುತ್ತದೆ.
ಪಬ್ಬಜಿತರ ಬದುಕು ಅಲ್ಪ ಕರ್ತವ್ಯಗಳಿಂದ, ಅಲ್ಪ ಚಟುವಟಿಕೆಗಳಿಂದ, ಅಲ್ಪ ಆಡಳಿತ ನಿಯಂತ್ರಣಗಳಿಂದ ಅಲ್ಪ ಶ್ರಮದಿಂದ ಕೂಡಿದ್ದು, ಅಲ್ಪ ಫಲವನ್ನೇ ಕೊಡುವಂಥದ್ದಾಗಿರುತ್ತದೆ.
ಆಚಾರ್ಯ ಗೌತಮರೆ, ಈ ಬಗ್ಗೆ ಏನೆನ್ನುವಿರಿ?
ಮಾಣವ, ಇಲ್ಲಿಯೂ ಸಹ ನಾನು ವಿಭಜ್ಜವಾದದಿಂದ ಮಾತನಾಡುವವನು, ಏಕಂಶವಾದದಿಂದಲ್ಲ.
ಮಹಾ ಕರ್ತವ್ಯಗಳಿಂದ, ಮಹಾ ಚಟುವಟಿಕೆಗಳಿಂದ, ಮಹಾ ಆಡಳಿತ ನಿಯಂತ್ರಣಗಳಿಂದ, ಮಹಾ ಶ್ರಮದಿಂದ ಕೂಡಿರುವ ಬದುಕು ಸೋತಾಗ (ತಪ್ಪಾದಾಗ) ಅಲ್ಪ ಫಲವನ್ನೇ ಕೊಡುವುದು.
ಮಹಾ ಕರ್ತವ್ಯಗಳಿಂದ, ಮಹಾ ಚಟುವಟಿಕೆಗಳಿಂದ, ಮಹಾ ಆಡಳಿತ ನಿಯಂತ್ರಣಗಳಿಂದ, ಮಹಾ ಶ್ರಮದಿಂದ ಕೂಡಿರುವ ಬದುಕು ಗೆದ್ದಾಗ ಮಹಾಫಲವನ್ನೇ ಕೊಡುವುದು.
ಅಲ್ಪ ಕರ್ತವ್ಯಗಳಿಂದ, ಅಲ್ಪ ಚಟುವಟಿಕೆಗಳಿಂದ, ಅಲ್ಪ ಆಡಳಿತ ನಿಯಂತ್ರಗಳಿಂದ, ಅಲ್ಪ ಶ್ರಮದಿಂದ ಕೂಡಿರುವ ಬದುಕು ಸೋತಾಗ ಅಲ್ಪ ಫಲವನ್ನೇ ಕೊಡುವುದು.
ಅಲ್ಪ ಕರ್ತವ್ಯಗಳಿಂದ, ಅಲ್ಪ ಚಟುವಟಿಕೆಗಳಿಂದ, ಅಲ್ಪ ಆಡಳಿತ ನಿಯಂತ್ರಣಗಳಿಂದ, ಅಲ್ಪ ಶ್ರಮದಿಂದ ಕೂಡಿರುವ ಬದುಕು ಗೆದ್ದಾಗ ಮಹಾಫಲವನ್ನೇ ಕೊಡುವುದು.
3. ಮಾಣವ, ಯಾವ ಬದುಕು ಮಹಾ ಕರ್ತವ್ಯಗಳಿಂದ... ಕೂಡಿದ್ದು ಸೋತಾಗ ಅಲ್ಪ ಫಲವನ್ನು ಕೊಡುತ್ತದೆ?
ಕೃಷಿ ಎನ್ನುವ ಬದುಕಿನಲ್ಲಿ ಮಹಾ ಕರ್ತವ್ಯ, ಮಹಾ ಚಟುವಟಿಕೆ... ಕೂಡಿದ್ದು ವಿಫಲವಾದಾಗ ಅಲ್ಪ ಫಲವನ್ನು ಕೊಡುತ್ತದೆ.
ಮತ್ತೆ ಮಾಣವ, ಯಾವ ಬದುಕು, ಮಹಾ ಕರ್ತವ್ಯಗಳಿಂದ ಕೂಡಿದ್ದು... ಗೆದ್ದಾಗ ಮಹಾಫಲವನ್ನು ಕೊಡುತ್ತದೆ?
ಪುನಃ ಕೃಷಿ ಎನ್ನುವ ಬದುಕಿನಲ್ಲಿಯೇ ಮಹಾ ಕರ್ತವ್ಯ... ಕೂಡಿದ್ದು ಗೆದ್ದಾಗ ಮಹಾಫಲವನ್ನು ಕೊಡುತ್ತದೆ.
ಮತ್ತೆ ಮಾಣವ, ಯಾವ ಬದುಕು ಅಲ್ಪ ಕರ್ತವ್ಯ... ಅಲ್ಪ ಚಟುವಟಿಕೆ... ಕೂಡಿದ್ದು ವಿಫಲವಾದಾಗ ಅಲ್ಪ ಫಲವನ್ನು ಕೊಡುತ್ತದೆ?
ವಾಣಿಜ್ಯ ಎನ್ನುವ ಬದುಕಿನಲ್ಲಿ ಅಲ್ಪ ಕರ್ತವ್ಯ... ಕೂಡಿದ್ದು ವಿಫಲವಾದಾಗ ಅಲ್ಪ ಫಲವನ್ನು ಕೊಡುತ್ತದೆ108.
ಮತ್ತೆ ಮಾಣವ, ಯಾವ ಬದುಕು ಅಲ್ಪ ಕರ್ತವ್ಯಗಳಿಂದ... ಕೂಡಿದ್ದು ಗೆದ್ದಾಗ ಮಹಾಫಲವನ್ನು ಕೊಡುತ್ತದೆ?
ವಾಣಿಜ್ಯವೇ ಬದುಕಿನಲ್ಲಿ ಅಲ್ಪ ಕರ್ತವ್ಯಗಳಿಂದ... ಕೂಡಿದ್ದು ಗೆದ್ದಾಗ ಮಹಾಫಲವನ್ನು ಕೊಡುತ್ತದೆ.
ಮಾಣವ, ಕೃಷಿಯೂ ಬದುಕೇ (ಕೆಲಸ) ಆಗಿದ್ದು ಮಹಾ ಕರ್ತವ್ಯ... ಕೂಡಿದ್ದು ವಿಫಲವಾದಾಗ ಅಲ್ಪ ಫಲವನ್ನು ಕೊಡುವಂತೆಯೇ ಗೃಹವಾಸಿಯ ಬದುಕು ಕೂಡ ಮಹಾ ಕರ್ತವ್ಯ, ಮಹಾ ಚಟುವಟಿಕೆ, ಮಹಾ ಆಡಳಿತ ನಿಯಂತ್ರಣಗಳಿಮದ ಮಹಾ ಶ್ರಮದಿಂದ ಕೂಡಿದ್ದರೂ ವಿಫಲವಾದಾಗ ಅಲ್ಪಫಲವನ್ನು ಕೊಡುತ್ತದೆ.
ಕೃಷಿಯಂತಹ ಬದುಕಿನಲ್ಲಿ ಮಹಾಕರ್ತವ್ಯ... ಕೂಡಿದ್ದು ಸಫಲವಾದಾಗ ಮಹಾಫಲವನ್ನು ಕೊಡುವಂತೆಯೇ ಗೃಹವಾಸಿಯ ಬದುಕು ಕೂಡ ಮಹಾ ಕರ್ತವ್ಯ, ಮಹಾ ಚಟುವಟಿಕೆ, ಮಹಾ ಆಡಳಿತ ನಿಯಂತ್ರಣಗಳಿಂದ, ಮಹಾ ಶ್ರಮಗಳಿಂದ, ಕೂಡಿದ್ದು ಸಫಲವಾದಾಗ ಮಹಾಫಲವನ್ನು ಕೊಡುತ್ತದೆ.
ವಾಣಿಜ್ಯವೂ ಬದುಕೇ ಆಗಿದ್ದು ಅಲ್ಪ ಕರ್ತವ್ಯ... ಕೂಡಿದ್ದು ವಿಫಲವಾದಾಗ ಅಲ್ಪ ಫಲವನ್ನು ಕೊಡುವಂತೆ ಪಬ್ಬಜಿತನಾದವನ ಬದುಕು ಅಲ್ಪ ಕರ್ತವ್ಯ, ಅಲ್ಪ ಚಟುವಟಿಕೆ, ಅಲ್ಪ ಆಡಳಿತ ನಿಯಂತ್ರಣಗಳಿಂದ, ಅಲ್ಪ ಶ್ರಮಗಳಿಂದ ಕೂಡಿದ್ದು ವಿಫಲವಾದಾಗ ಅಲ್ಪಫಲವನ್ನು ಕೊಡುತ್ತದೆ.
ವಾಣಿಜ್ಯವೂ ಬದುಕೇ ಆಗಿದ್ದು, ಅಲ್ಪ ಕರ್ತವ್ಯ... ಕೂಡಿದ್ದು ಸಫಲವಾದಾಗ ಮಹಾಫಲವನ್ನು ಕೊಡುವಂತೆ ಪಬ್ಬಜಿತನಾದವನ ಬದುಕು ಅಲ್ಪ ಕರ್ತವ್ಯ, ಅಲ್ಪ ಚಟುವಟಿಕೆ, ಅಲ್ಪ ಆಡಳಿತ ನಿಯಂತ್ರಣಗಳಿಂದ ಅಲ್ಪ ಶ್ರಮದಿಂದ ಕೂಡಿದ್ದು ಸಫಲವಾದಾಗ ಮಹಾಫಲವನ್ನು ಕೊಡುತ್ತದೆ.
ಆಚಾರ್ಯ ಗೌತಮರೆ, ಬ್ರಾಹ್ಮಣರು ಕುಶಲದ ಸಾಕ್ಷಾತ್ಕಾರಕ್ಕಾಗಿ ಐದು ಪುಣ್ಯ ಕ್ರಿಯೆಗಳನ್ನು ವಿಧಿಸುತ್ತಾರೆ.
4. ಮಾಣವನೆ, ನಿನಗೆ ತೊಂದರೆ ಎನಿಸದಿದ್ದರೆ ಇಲ್ಲಿರುವ ಸಭೆಗೆ ಬ್ರಾಹ್ಮಣರು ಕುಶಲದ ಆರಾಧನೆಗಾಗಿ ವಿಧಿಸಿಕೊಂಡಿರುವ ಐದು ಪುಣ್ಯಕ್ರಿಯೆಗಳನ್ನು ದಯಮಾಡಿ ಹೇಳುವೆಯಾ?
ಆಚಾರ್ಯ ಗೌತಮರೆ, ನನಗೇನೂ ತೊಂದರೆಯಿಲ್ಲ. ತಮ್ಮಂತಹ ಪೂಜ್ಯರು ಮತ್ತು ಇತರರು ಕುಳಿತಿರುವ ಸಭೆಯಲ್ಲಿ ಹೇಳುವುದಕ್ಕೆ.
ಮಾಣವ, ಹಾಗಾದರೆ ಕೇಳು.
ಆಚಾರ್ಯ ಗೌತಮರೆ, ಕುಶಲದ ಸಾಕ್ಷಾತ್ಕಾರಕ್ಕಾಗಿ ಬ್ರಾಹ್ಮಣರು ವಿಧಿಸಿಕೊಂಡಿರುವ ಮೊದಲ ಪುಣ್ಯಕ್ರಿಯೆ ಎಂದರೆ ಸತ್ಯ.
ತಪಸ್ಸು ಎರಡನೆಯದು...
ಬ್ರಹ್ಮಚರಿಯವು ಮೂರನೆಯದು...
ಅಧ್ಯಯನವು ನಾಲ್ಕನೆಯದು...
ತ್ಯಾಗ ಐದನೆಯದು...
ಈ ಐದು ಪುಣ್ಯಕ್ರಿಯೆಗಳನ್ನು ಬ್ರಾಹ್ಮಣರು ಕುಶಲದ ಸಾಕ್ಷಾತ್ಕಾರಕ್ಕಾಗಿ ವಿಧಿಸಿಕೊಂಡಿದ್ದಾರೆ.
ಆಚಾರ್ಯ ಗೌತಮರೆ, ಇದಕ್ಕೆ ತಾವೇನೆನ್ನುವಿರಿ?
ಮಾಣವ, ಬ್ರಾಹ್ಮಣರಲ್ಲಿ ಒಬ್ಬನಾದರೂ ಹೀಗೆ ಹೇಳುತ್ತಾನೇನು; ಈ ಐದು ಸಂಗತಿಗಳ ಫಲವನ್ನು ನಾನು ನನ್ನ ಸ್ವಂತ ಜ್ಞಾನದಿಂದ ಅರಿತಿದ್ದೇನೆ ಎಂದು ಘೋಷಿಸುತ್ತೇನೆ ಎಂದು.
ಇಲ್ಲ, ಆಚಾರ್ಯ ಗೌತಮರೆ!
ಹಾಗಾದರೆ ಮಾಣವ, ಬ್ರಾಹ್ಮಣರಲ್ಲಿ ಒಬ್ಬ ಆಚಾರ್ಯನಾದರೂ ಅಥವಾ ಆ ಆಚಾರ್ಯನ ಹಿಂದಿನ ಏಳು ಸಂತತಿಗಳ ಆಚಾರ್ಯರು ಹೀಗೆ ಹೇಳುತ್ತಾರೇನು:
ಈ ಐದು ಸಂಗತಿಗಳ ಫಲವನ್ನು ನನ್ನ ಸ್ವಂತ ಜ್ಞಾನದಿಂದ ಅರಿತಿದ್ದೇನೆ ಎಂದು ಘೋಷಿಸುತ್ತೇನೆ? ಎಂದು.
ಇಲ್ಲ, ಆಚಾರ್ಯ ಗೌತಮರೆ.
ಮಾಣವ, ಆಯಿತು, ಇನ್ನು ಬಹು ಹಿಂದಿನ ಬ್ರಾಹ್ಮಣರಾದ ಋಷಿಗಳು, ಮಂತ್ರ ಸೃಷ್ಟಿಕಾರರು, ಮಂತ್ರ ಪಠಣಕಾರರಾದ ಅಟ್ಠಕ, ವಾಮಕ, ವಾಮದೇವ, ವೇಸ್ಸಮಿತ್ತ, ಯಮತಗ್ಗಿ, ಅಂಗೀರಸ, ಭಾರದ್ವಾಜ, ವಾಸೆಟ್ಠ, ಕಸ್ಸಪ ಮತ್ತು ಭಗು ಇವರು ಯಾವ ಮಂತ್ರಗಳನ್ನು ಪಠಿಸಿದರೊ, ಹೇಳಿದರೊ, ಸಂಯೋಜಿಸಿದರೊ ಅವನ್ನು ಈಗಲೂ ಬ್ರಾಹ್ಮಣರು ಪಠಿಸುತ್ತಾರೆ, ಜಪಿಸುತ್ತಾರೆ, ಹಾಡುತ್ತಾರೆ.
ಇಂತಹ ಪ್ರಾಚೀನ ಬ್ರಾಹ್ಮಣ ಋಷಿಗಳು ಹೇಳಿದರೇ:
ನಾವು ಈ ಐದು ಸಂಗತಿಗಳ ಫಲವನ್ನು ನಮ್ಮ ಸ್ವಂತ ಜ್ಞಾನದಿಂದ ಅರಿತಿದ್ದೇವೆಂದು ಘೋಷಿಸುತ್ತೇವೆ. ಎಂದು.
ಇಲ್ಲ, ಆಚಾರ್ಯ ಗೌತಮರೆ.
ಆದ್ದರಿಂದ ಮಾಣವ, ಬ್ರಾಹ್ಮಣ ಸಮೂಹದಲ್ಲಿ ಒಬ್ಬ ಬ್ರಾಹ್ಮಣನಾದರೂ ಹೀಗೆ ಹೇಳಲಾರ: ಈ ಐದು ಸಂಗತಿಗಳ ಫಲವನ್ನು ನನ್ನ ಸ್ವಂತ ಜ್ಞಾನದಿಂದ ಅರಿತಿದ್ದೇನೆಂದು ಘೋಷಿಸುತ್ತೇನೆ ಎಂದು.
ಮತ್ತು ಬ್ರಾಹ್ಮಣರಲ್ಲಿ ಒಬ್ಬ ಆಚಾರ್ಯನಾಗಲಿ ಅಥವಾ ಆ ಒಬ್ಬ ಆಚಾರ್ಯನ ಹಿಂದಿನ ಏಳು ತಲೆಮಾರುಗಳ ಆಚಾರ್ಯರಾಗಲಿ ಹೀಗೆ ಹೇಳುವುದಿಲ್ಲ; ಈ ಐದು ಸಂಗತಿಗಳ ಫಲವನ್ನು ನನ್ನ ಸ್ವಂತ ಜ್ಞಾನದಿಂದ ಅರಿತಿದ್ದೇನೆಂದು ಘೋಷಿಸುತ್ತೇನೆ ಎಂದು.
ಮತ್ತು ಬಹು ಹಿಂದಿನ ಋಷಿಗಳು ಕೂಡ ಹೀಗೆ ಹೇಳಲಿಲ್ಲ: ನಾವು ಈ ಐದು ಸಂಗತಿಗಳ ಫಲವನ್ನು ನಮ್ಮ ಸ್ವಂತ ಜ್ಞಾನದಿಂದ ಅರಿತಿದ್ದೇವೆಂದು ಘೋಷಿಸುತ್ತೇವೆ ಎಂದು.
ಒಬ್ಬರ ಪಕ್ಕ ಒಬ್ಬರು ನಿಂತ ಅಂಧರ ಸಾಲು ಇತ್ತೆಂದುಕೊಳ್ಳೋಣ: ಮೊದಲನೆಯವನು ನೋಡಲಾರ, ಮಧ್ಯದವನು ನೋಡಲಾರ ಮತ್ತು ಕೊನೆಯವನೂ ನೋಡಲಾರ.
ಹಾಗೆಯೇ ಮಾಣವನೆ, ಈ ಬ್ರಾಹ್ಮಣರ ಹೇಳಿಕೆ ಹೇಗೆ ಕಾಣುತ್ತದೆಂದರೆ ಅಂಧರ ಸಾಲಿನಂತೆ ಅವರಲ್ಲಿ ಮೊದಲನೆಯವನು ನೋಡಲಾರ, ಮಧ್ಯದವನು ನೋಡಲಾರ ಮತ್ತು ಕೊನೆಯವನು ನೋಡಲಾರ.
5. ಹೀಗೆ ಹೇಳಿದ್ದನ್ನು ಕೇಳಿ ತೋದೆಯ್ಯನ ಮಗ ಬ್ರಾಹ್ಮಣ ಮಾಣವ ಸುಭನಿಗೆ ಅಂಧರ ಸಾಲಿನ ಉಪಮೆ ಕೋಪ ತರಿಸಿತು ಮತ್ತು ಅಸಂತೋಷ ಉಂಟುಮಾಡಿ ಅವನು ಭಗವಾನರನ್ನು ನಿಂದಿಸಿದನು, ಹೀನವಾಗಿ ಕಂಡನು ಮತ್ತು ಹೀಗೆ ಖಂಡಿಸಿದನು: ಸಮಣ ಗೌತಮ ಪಾಪಿಗಳಾಗುತ್ತೀರಿ.
ಆಮೇಲೆ ಭಗವಾನರಿಗೆ ಹೀಗೆ ಹೇಳಿದನು: ಆಚಾರ್ಯ ಗೌತಮರೆ, ಸುಭಗವನದ ಒಡೆಯನೂ ಓಪಮನ್ನೋ ಕುಲದ ಬ್ರಾಹ್ಮಣ ಪೋಕ್ಖರಸಾತಿಯು ಹೀಗೆ ಹೇಳುತ್ತಾನೆ:
ಕೆಲವು ಸಮಣರು ಮತ್ತು ಬ್ರಾಹ್ಮಣರು ತಾವು ಮಾನವಾತೀತ ಧಮ್ಮಕ್ಕೆ ಸೇರಿದವರೆಂದೂ, ಆರ್ಯರು ಮಾತ್ರ ಬಲ್ಲ ಜ್ಞಾನ ಮತ್ತು ದರ್ಶನಗಳನ್ನು ಹೊಂದಿದವರೆಂದು ಹೇಳಿಕೊಳ್ಳುತ್ತಾರೆ.
ಆದರೆ ಅವರು ಹೇಳುವುದು ನಗೆಪಾಟಲು, ಹುರುಳಿಲ್ಲದ ಮತ್ತು ಟೊಳ್ಳು ಮಾತುಗಳಾಗಿರುತ್ತವೆ.
ಮನುಷ್ಯ ಮಾತ್ರನಾದವನು ಆರ್ಯರು ಮಾತ್ರ ಹೊಂದಿರತಕ್ಕ ಜ್ಞಾನ ಮತ್ತು ದರ್ಶನಗಳ ಮಾನವಾತೀತ ಧಮ್ಮ ಸ್ಥಿತಿಯನ್ನು ಹೇಗೆ ಪಡೆಯಬಲ್ಲ? ಅದು ಅಸಾಧ್ಯವಾದುದು.
ಹಾಗಾದರೆ ಮಾಣವ, ಬ್ರಾಹ್ಮಣ ಪೋಕ್ಖರಸಾತಿಯು ಎಲ್ಲ ಸಮಣರ ಬ್ರಾಹ್ಮಣರ ಚಿತ್ತವನ್ನು ತನ್ನ ಚಿತ್ತದ ಮೂಲಕ ಅರಿಯಬಲ್ಲನೆ?
ಆಚಾರ್ಯ ಗೌತಮರೆ, ಬ್ರಾಹ್ಮಣ ಪೋಕ್ಖರಸಾತಿಯು ತನ್ನ ದಾಸಿ ಪುಣ್ಣಿಕಾಳ ಚಿತ್ತವನ್ನು ತನ್ನ ಚಿತ್ತದ ಮೂಲಕ ಅರಿಯಲಾರದವನು ಇನ್ನು ಸಮಣರ ಮತ್ತು ಬ್ರಾಹ್ಮಣರ ಚಿತ್ತವನ್ನು ಅರಿಯಬಲ್ಲನೆ?
6. ಮಾಣವ, ಒಬ್ಬ ಮನುಷ್ಯ ಹುಟ್ಟುತ್ತಲೇ ಅಂಧನಾಗಿ ಕಪ್ಪು-ಬಿಳುಪುಗಳ ರೂಪುಗಳನ್ನು ನೋಡದವನಾಗಿ, ಸಮ ಅಸಮಗಳನ್ನು ನೋಡದವನಾಗಿ, ತಾರೆ, ಚಂದಿರ, ಸೂರ್ಯರನ್ನು ನೋಡದವನಾಗಿ ಇದ್ದಾನೆ ಎಂದಿಟ್ಟುಕೊಳ್ಳೋಣ.
ಅವನು ಹೀಗೆ ಹೇಳಬಹುದು:
ಕಪ್ಪು-ಬಿಳುಪು ಎಂಬ ರೂಪಗಳಿಲ್ಲ ಮತ್ತು ಕಪ್ಪು-ಬಿಳುಪು ರೂಪಗಳನ್ನು ನೋಡಿದವರು ಯಾರೂ ಇಲ್ಲ, ನೀಲ ಹಳದಿ ಕೆಂಪು ಮಂಜಿಷ್ಟ ರೂಪಗಳಿಲ್ಲ ಮತ್ತು ನೀಲ ಹಳದಿ ಕೆಂಪು ಮಂಜಿಷ್ಟ ರೂಪಗಳನ್ನು ನೋಡಿದವರು ಯರೂ ಇಲ್ಲ.
ಸಮ ಅಸಮ ಎಂಬುವಿಲ್ಲ, ಸಮ ಅಸಮಗಳನ್ನು ನೋಡಿದವರು ಯಾರೂ ಇಲ್ಲ. ತಾರೆಗಳು, ಚಂದರಿ ಸೂರ್ಯರಿಲ್ಲ ಮತ್ತು ತಾರೆಗಳು, ಚಂದಿರ ಸೂರ್ಯರನ್ನು ನೋಡಿದವರು ಯಾರೂ ಇಲ್ಲ. ನನಗೆ ಇವು ಗೊತ್ತಿಲ್ಲ, ನಾನು ಇವನ್ನು ನೋಡಿಲ್ಲ. ಆದ್ದರಿಂದ ಇವು ಇಲ್ಲ.
ಮಾಣವ, ಹೀಗೆ ಮಾತನಾಡುವುದರಿಂದ ಅವನು ಸರಿಯಗಿ ಮಾತನಾಡಿದನೆ?
ಇಲ್ಲ, ಆಚಾರ್ಯ ಗೌತಮರೆ,
ಕಪ್ಪು-ಬಿಳುಪು ರೂಪಗಳಿವೆ, ಮತ್ತು ಕಪ್ಪು-ಬಿಳುಪು ರೂಪಗಳನ್ನು ನೋಡುವವರಿದ್ದಾರೆ... ತಾರೆಗಳು, ಚಂದಿರ, ಸೂರ್ಯರಿದ್ದಾರೆ ಮತ್ತು ತಾರೆಗಳು, ಚಂದಿರ, ಸೂರ್ಯರನ್ನು ನೋಡುವವರಿದ್ದಾರೆ. ನನಗೆ ಇವು ಗೊತ್ತಿಲ್ಲ, ನಾನು ಇವನ್ನು ನೋಡಿಲ್ಲ, ಆದ್ದರಿಂದ ಇವು ಇಲ್ಲ ಎಂದು ಹೇಳುವವನು ಸರಿಯಾಗಿ ಮಾತನಾಡುತ್ತಿಲ್ಲ.
ಹಾಗೆಯೇ ಮಾಣವ, ಬ್ರಾಹ್ಮಣ ಪೋಕ್ಖರಸಾತಿಯು ಅಂಧನು ಮತ್ತು ದೃಷ್ಟಿ ಇಲ್ಲದವನು.
ಅವನು ಆರ್ಯರು ಹೊಂದಿರತಕ್ಕ ಜ್ಞಾನ ಮತ್ತು ದರ್ಶನಗಳ ಮಾನವಾತೀತ ಧಮ್ಮ ಸ್ಥಿತಿಯಿಂದ ಅವನು ತಿಳಿಯುತ್ತಾನೆ ನೋಡುತ್ತಾನೆ ಎಂದರೆ - ಅದು ಅಸಾಧ್ಯ.
ನೀನೇನನ್ನುವಿ, ಮಾಣವ?
7. ಕೋಸಲದ ಶ್ರೀಮಂತ ಬ್ರಾಹ್ಮಣರಾದ ಬ್ರಾಹ್ಮಣ ಚಂಕೀ, ಬ್ರಾಹ್ಮಣ ತಾರುಕ್ಖ, ಬ್ರಾಹ್ಮಣ ಪೋಕ್ಖರಸಾತಿ, ಬ್ರಾಹ್ಮಣ ಜಾಣುಸ್ಸೋಣಿ ಮತ್ತು ನಿಮ್ಮ ತಂದೆಯವರಾದ ಬ್ರಾಹ್ಮಣ ತೋದೆಯ್ಯ ಇವರಿಗೆ ಉತ್ತಮವಾದುದು ಯಾವುದು? ಅವರು ಹೇಳುವ ಮಾತುಗಳು ಲೋಕರೂಢಿಯ ತೆರನಾಗಿರಬೇಕೆ ಅಥವಾ ಲೋಕರೂಢಿಯನ್ನು ಮೂದಲಿಸುವಂತಿರಬೇಕೆ?
ಅವು ಲೋಕರೂಢಿಗೆ ಹೊಂದಿಕೊಂಡಂತಿರಬೇಕು, ಆಚಾರ್ಯ ಗೌತಮರೆ.
ಅವರು ಹೇಳುವ ಮಾತುಗಳು ಆಲೋಚನೆಯಿಂದ ಬಂದುವು ಆಗಿರಬೇಕೋ, ಆಲೋಚನಾರಹಿತವೋ? ಅವರಿಗೆ ಯಾವುದು ಒಳ್ಳೆಯದು?
ಆಚಾರ್ಯ ಗೌತಮರೆ, ಮನಸ್ಸಿನಿಂದ ಬಂದ ಮಾತುಗಳು.
ಅವರು ಹೇಳುವ ಮಾತುಗಳು ಚಿಂತನೆಯಿಂದ ಬಂದಿರಬೇಕೋ, ಚಿಂತನಾರಹಿತವಾಗಿಯೋ? ಅವರಿಗೆ ಯಾವುದು ಒಳ್ಳೆಯದು?
ಆಚಾರ್ಯ ಗೌತಮರೆ, ಚಿಂತನೆಯಿಂದ ಬಂದ ಮಾತುಗಳು.
ಅವರು ಹೇಳುವ ಮಾತುಗಳು ಅನುಕೂಲಕರವಾಗಿರಬೇಕೊ ಅಥವಾ ಅನನುಕೂಲವಾಗಿರಬೇಕೋ? ಅವರಿಗೆ ಯಾವುದು ಒಳ್ಳೆಯದು?
ಅನುಕೂಲಕರವಾಗಿರುವುದು, ಆಚಾರ್ಯ ಗೌತಮರೆ.
8. ಮಾಣವ, ಏನೆನ್ನುವಿ? ಹಾಗಾದರೆ ಬ್ರಾಹ್ಮಣ ಪೋಕ್ಖರಸಾತಿಯು ಮಾಡಿದ ಹೇಳಿಕೆ ಲೋಕರೂಢಿಗನುಗುಣ ವಾದುದೇ ಅಥವಾ ಲೋಕರೂಢಿಯನ್ನು ಅಲ್ಲಗಳೆದುದೇ?
ಅದು ಲೋಕರೂಢಿಯನ್ನು ಅಲ್ಲಗಳೆದುದು, ಆಚಾರ್ಯ ಗೌತಮರೆ.
ಅವರು ಮಾಡಿದ ಹೇಳಿಕೆ ಆಲೋಚನಾಪೂರ್ವದಿಂದ ಬಂದುದೆ ಅಥವಾ ಆಲೋಚನಾರಹಿತವಾದುದೆ? ಅದು ಆಲೋಚನಾರಹಿತವಾದುದು, ಆಚಾರ್ಯ ಗೌತಮರೆ.
ಅವರು ನೀಡಿದ ಹೇಳಿಕೆ ಚಿಂತನೆಯಿಂದ ಬಂದುದೋ ಅಥವಾ ಚಿಂತನಾರಹಿತವಾಗಿ ಬಂದುದೋ?
ಚಿಂತನಾರಹಿತವಾಗಿ ಬಂದುದು, ಆಚಾರ್ಯ ಗೌತಮರೆ.
ಅವರು ಮಾಡಿದ ಹೇಳಿಕೆಯು ಉಪಯುಕ್ತವೋ ಅಥವಾ ಅನುಪಯುಕ್ತವೋ?
ಅನುಪಯುಕ್ತ, ಆಚಾರ್ಯ ಗೌತಮರೆ.
9. ಮಾಣವ, ಇಲ್ಲಿ ಐದು ರೀತಿಯ ಅಡೆತಡೆಗಳಿವೆ (ನೀವರಣ). ಯಾವುದು ಆ ಐದು?
ಕಾಮಚ್ಛಂದ ನೀವರಣ (ಇಂದ್ರಿಯ ಸಂಬಂಧದ ಆಸೆಗಳು),
ಬ್ಯಾಪಾದ ನೀವರಣ (ಅಸೂಯೆ),
ಥೀನಮದ್ದ ನೀವರಣ (ಆಲಸ್ಯ ಮತ್ತು ಜಡತ್ವ),
ಉದ್ದಚ್ಚಕುಕ್ಕುಚ್ಚ ನೀವರಣ (ತಳಮಳ ಮತ್ತು ಪರಿತಾಪ)
ಮತ್ತು ವಿಚಿಕಿಚ್ಛ ನೀವರಣ (ಸಂದೇಹ)
ಇವು ಐದು ಬ್ರಾಹ್ಮಣ
ಪೋಕ್ಖರಸಾತಿಯು ಈ ಐದು ನೀವರಣಗಳಿಂದ ತಡೆಯಲ್ಪಟ್ಟಿದ್ದಾನೆ, ಅಡ್ಡಗಟ್ಟಲ್ಪಟ್ಟಿದ್ದಾನೆ, ಮುಸುಕಲ್ಪಟ್ಟಿದ್ದಾನೆ.
ಅವನು ಆರ್ಯರು ಹೊಂದಿರುವ ಜ್ಞಾನ ಮತ್ತು ದರ್ಶನಗಳ ಮಾನವಾತೀತ ಧಮ್ಮ ಸ್ಥಿತಿಯಿಂದ ನೋಡುತ್ತಾನೆ, ತಿಳಿಯುತ್ತಾನೆ ಎಂದರೆ ಅದು ಅಸಾಧ್ಯವು.
10. ಮಾಣವ, ಇಲ್ಲಿ ಐದು ರೀತಿಯ ಕಾಮಗುಣಗಳಿವೆ.
ಆ ಐದು ಯಾವುವು?
ಕಣ್ಣಿನಿಂದ ಗುರುತಿಸಬಲ್ಲ ರೂಪಗಳು. ಇವು ಅಂದುಕೊಂಡಂತಹವು, ಇಷ್ಟಪಟ್ಟಂತಹವು, ಪ್ರಿಯವೂ ಕಾಮಪ್ರಚೋದನೀಯವೂ ಸಮ್ಮತವೂ ಇಂದ್ರಿಯ ಲಾಲಸೆಗಳಿಂದ ಕೂಡಿರುವಂಥವು.
ಕಿವಿಯಿಂದ ಗುರುತಿಸಬಲ್ಲ ಶಬ್ದಗಳು...
ಮೂಗಿನಿಂದ ಗುರುತಿಸಬಲ್ಲ ವಾಸನೆಗಳು...
ನಾಲಗೆಯಿಂದ ಗುರುತಿಸಬಲ್ಲ ರಸಗಳು...
ಕಾಯದಿಂದ ಗುರುತಿಸಬಲ್ಲ ಸ್ಪರ್ಶಗಳು - ಇವು ಅಂದುಕೊಂಡಂತಹವು, ಇಷ್ಟಪಟ್ಟಂತಹವು, ಪ್ರಿಯವೂ ಕಾಮಪ್ರಚೋದನೀಯವೂ ಸಮ್ಮತವೂ ಇಂದ್ರಿಯ ಲಾಲಸೆಗಳಿಂದ ಕೂಡಿರುವಂಥವು.
ಮಾಣವ, ಇವೇ ಐದು ಕಾಮಗುಣಗಳು.
ಬ್ರಾಹ್ಮಣ ಪೋಕ್ಖರಸಾತಿಯು ಈ ಐದು ಕಾಮಗುಣಗಳಿಗೆ ಬಂಧಿತನಾಗಿದ್ದಾನೆ, ಅವುಗಳಿಂದ ಮೋಹಿತನಾಗಿದ್ದಾನೆ ಮತ್ತು ಅವುಗಳಿಗೆ ಕಟಿಬದ್ಧನಾಗಿ ಅವುಗಳೊಳಗಿರುವ ಅಪಾಯವನ್ನರಿಯದೆಯೇ ಅಥವಾ ಅವುಗಳಿಂದ ಪಾರಾಗಲು ಗೊತ್ತಾಗದಿರುವ ಕಾರಣ ಅವನ್ನು ಅನುಭವಿಸುತ್ತಿದ್ದಾನೆ.
ಅವನು ಆರ್ಯರು ಹೊಂದಿರುವ ಜ್ಞಾನ ಮತ್ತು ದರ್ಶನಗಳ ಮಾನವಾತೀತ ಧಮ್ಮಸ್ಥಿತಿಯಿಂದ ನೋಡುತ್ತಾನೆ, ತಿಳಿಯುತ್ತಾನೆ ಎಂದರೆ ಅದು ಅಸಾಧ್ಯವಾದುದು.
ಮಾಣವ, ನೀನೇನೆನ್ನುವೆ?
ಈ ಎರಡು ಬಗೆಯ ಬೆಂಕಿಗಳಲ್ಲಿ ಯಾವುದರಲ್ಲಿ (ಉತ್ತಮ) ಜ್ಞಾಲೆ, ಬಣ್ಣ, ಬೆಳಕು ಇರುತ್ತದೆ? ಯಾವ ಬೆಂಕಿಯು ಹುಲ್ಲು ಕಟ್ಟಿಗೆ ಇತ್ಯಾದಿಗಳನ್ನು ಇಂಧನವಾಗಿ ಅವಲಂಬಿಸಿರುವುದೋ ಅಥವಾ ಯಾವ ಬೆಂಕಿಯು ಹುಲ್ಲು ಕಟ್ಟಿಗೆ ಇತ್ಯಾದಿಗಳನ್ನು ಇಂಧನವಾಗಿ ಅವಲಂಬಿಸಿಲ್ಲವೋ?
ಆಚಾರ್ಯ ಗೌತಮರೆ, ಯಾವ ಬೆಂಕಿಯು ಸಾಧ್ಯವಾದರೆ ಹುಲ್ಲು ಕಟ್ಟಿಗೆ ಇತ್ಯಾದಿಗಳ ಇಂಧನ ಸಹಾಯವಿಲ್ಲದೆ ಉರಿಯುತ್ತದೋ ಅದರ ಜ್ವಾಲೆ, ಬಣ್ಣ, ಬೆಳಕು ಉತ್ತಮವಾಗಿರುತ್ತದೆ.
ಮಾಣವ, ಅದು ಅಸಾಧ್ಯವಾದುದು. ಬೆಂಕಿಯು ಹುಲ್ಲು, ಕಟ್ಟಿಗೆಗಳಿಂದ ಇಂಧನ ಸಹಾಯವಿಲ್ಲದೆ ಉರಿಯುವುದು ಸಾಧ್ಯವಿಲ್ಲ. ಕೇವಲ ಅದು ಅಸಾಮಾನ್ಯ ಶಕ್ತಿಯಿಂದ ಮಾತ್ರ ಸಾಧ್ಯ.
ಹೇಗೆ ಬೆಂಕಿಯು ಹುಲ್ಲು ಕಟ್ಟಿಗೆಗಳೆಂಬ ಇಂಧನದ ಮೇಲೆ ಅವಲಂಬಿತವಾಗಿ ಉರಿಯುವಂತೆಯೇ ಪಂಚಕಾಮಗುಣಗಳ ಮೇಲೆ ಅವಲಂಬಿತವಾಗಿಯೇ ಆನಂದವು ಉತ್ಪತ್ತಿಯಾಗುತ್ತದೆಂದು ನಾನು ಹೇಳುತ್ತೇನೆ.
ಹೇಗೆ ಬೆಂಕಿಯು ಹುಲ್ಲು ಕಟ್ಟಿಗೆಗಳೆಂಬ ಇಂಧನದ ಮೇಲೆ ಅವಲಂಬಿತವಾಗದೆ ಉರಿಯುವುದು ಯಾವುದೆಂದರೆ ಕಾಮದಿಂದ ಹೊರತಾದ ಅಕುಶಲ ಧಮ್ಮಗಳಿಂದ ಹೊರತಾದ ಆನಂದವು.
ಮತ್ತೆ ಮಾಣವ, ಕಾಮದಿಂದ ಹೊರತಾದ, ಅಕುಶಲ ಧಮ್ಮಗಳಿಂದ ಹೊರತಾದ ಆನಂದವು ಯಾವುದು?
ಇಲ್ಲಿ ಮಾಣವ, ಭಿಕ್ಖುವಾದವನು ಕಾಮವನ್ನು ದಾಟಿದವನಾಗಿ ಅಕುಶಲ ಧಮ್ಮಗಳನ್ನು ದಾಟಿದವನಾಗಿ, ಸವಿತರ್ಕನಾಗಿ ಸವಿಚಾರನಾಗಿ ಏಕಾಂತದಿಂದ ಹುಟ್ಟಿದ ಆನಂದ ಮತ್ತು ಸುಖದಿಂದ ಪ್ರಥಮ ಝಾನವನ್ನು ಸಾಧಿಸಿಕೊಂಡು ನೆಲೆಗೊಳ್ಳುತ್ತಾನೆ.
ಮಾಣವ, ಇದು ಕಾಮದಿಂದ ಹೊರತಾಗಿ ಅಕುಶಲ ಧಮ್ಮಗಳಿಂದ ಹೊರತಾಗಿ ಹುಟ್ಟಿದ ಆನಂದ.
ಪುನಃ ಭಿಕ್ಖುವಾದವನು ಸವಿತರ್ಕನಾಗಿ ಮತ್ತು ಸವಿಚಾರನಾಗಿ ಏಕಾಂತದಿಂದ ಹುಟ್ಟಿದ ಆನಂದ ಮತ್ತು ಸುಖದಿಂದ ಎರಡನೇ ಝಾನವನ್ನು ಸಾಧಿಸಿಕೊಂಡು ನೆಲೆಗೊಳ್ಳುತ್ತಾನೆ; ಅಲ್ಲಿ ಸವಿತರ್ಕ ಸವಿಚಾರಗಳು ಇರದೆ ಆತ್ಮವಿಶ್ವಾಸ ಮತ್ತು ಏಕಾಗ್ರತೆ ಇರುತ್ತವೆ.
11. ಮಾಣವ, ಬ್ರಾಹ್ಮಣರು ಕುಶಲ ಸಂಪಾದನೆಗಾಗಿ ಯಾವ ಪುಣ್ಯಕ್ರಿಯೆಗಳನ್ನು ವಿಧಿಸಿದ್ದಾರೋ ಆ ಐದು ವಿಧಿಗಳಲ್ಲಿ ಯಾವುದು ಫಲಪ್ರದಕಾರಿಯಾದ ಕುಶಲ ಸಂಪಾದನೆಯ ಪುಣ್ಯ ಕ್ರಿಯೆ?
ಆಚಾರ್ಯ ಗೌತಮರೆ, ಬ್ರಾಹ್ಮಣರು ಕುಶಲ ಸಂಪಾದನೆಗಾಗಿ ಯಾವ ಪುಣ್ಯ ಕ್ರಿಯೆಗಳನ್ನು ವಿಧಿಸಿದ್ದಾರೊ ಅವುಗಳಲ್ಲಿ ಮಹತ್ಫಲವಾದ ಕುಶಲ ಸಂಪಾದನೆಯ ಪುಣ್ಯಕ್ರಿಯೆ ಎಂದರೆ ತ್ಯಾಗ.
ನೀನೇನೆನ್ನುವಿ ಮಾಣವ?
ಇಲ್ಲೊಬ್ಬ ಬ್ರಾಹ್ಮಣ ಮಹಾ ಯಜ್ಞವನ್ನಿಟ್ಟುಕೊಂಡಿದ್ದಾನೆ.
ಮತ್ತೆ ಅದಕ್ಕೆ ಇಬ್ಬರು ಬ್ರಾಹ್ಮಣರು ಮಹಾಯಜ್ಞದಲ್ಲಿ ಭಾಗವಹಿಸುವ ಇಚ್ಛೆಯಿಂದ ಹೋಗುತ್ತಾರೆ.
ಅದರಲ್ಲಿ ಒಬ್ಬ ಬ್ರಾಹ್ಮಣ ಹೀಗೆ ಯೋಚಿಸುತ್ತಾನೆ:
ಓ, ಅಲ್ಲಿನ ಭೋಜನ ಶಾಲೆಯಲ್ಲಿ ನಾನು ಅಗ್ರಾಸನವನ್ನು, ಅಗ್ರೋದಕವನ್ನು, ಅಗ್ರಪಿಂಡವನ್ನು ಪಡೆಯಬಹುದು; ನನ್ನ ಹೊರತಾಗಿ ಬೇರೆ ಯಾವ ಬ್ರಾಹ್ಮಣನೂ ಅಲ್ಲಿನ ಭೋಜನ ಶಾಲೆಯಲ್ಲಿ ಅಗ್ರಾಸನವನ್ನು, ಅಗ್ರೋದಕವನ್ನು, ಅಗ್ರಪಿಂಡವನ್ನು ಪಡೆಯಲಾರ! ಇನ್ನೊಬ್ಬ ಬ್ರಾಹ್ಮಣ, ಎಂದರೆ ಆ ಬ್ರಾಹ್ಮಣನಲ್ಲದೆ ಬೇರೆಯವರನು, ಭೋಜನ ಶಾಲೆಯಲ್ಲಿ ಅಗ್ರಾಸವನ್ನು, ಅಗ್ರೋದಕವನ್ನು, ಅಗ್ರಪಿಂಡವನ್ನು ಪಡೆಯುವ ಸಾಧ್ಯತೆ ಇದೆ.
ಈ ಬಗ್ಗೆ ಯೋಚಿಸುತ್ತ ಮೊದಲನೆಯ ಬ್ರಾಹ್ಮಣನು ಕುಪಿತನಾಗುತ್ತಾನೆ ಮತ್ತು ಅಸಂತೋಷಗೊಳ್ಳುತ್ತಾನೆ. ಬ್ರಾಹ್ಮಣರು ಇದಕ್ಕೆ ಯಾವರೀತಿಯ ವಿಪಾಕವನ್ನು ಹೇಳುತ್ತಾರೆ?
ಆಚಾರ್ಯ ಗೌತಮರೆ, ಬ್ರಾಹ್ಮಣರು ಬೇರೆಯವರು ಕುಪಿತಗೊಳ್ಳಲಿ, ಅಸಂತುಷ್ಟರಾಗಲಿ ಎಂಬ ಕಾರಣದಿಂದ ಈ ರೀತಿಯಲ್ಲಿ ದಾನವನ್ನು ಕೊಡುವುದಿಲ್ಲ. ಬ್ರಾಹ್ಮಣರು ಅನುಕಂಪದಿಂದ ಪ್ರಭಾವಿತರಾಗಿ ದಾನವನ್ನು ಕೊಡುತ್ತಾರೆ.
ಮಾಣವ, ಹಾಗಿದ್ದಲ್ಲಿ ಇದು ಅನುಕಂಪ ಪ್ರೇರಿತರಾಗಿ ದಾನ ನೀಡುವುದು, ಬ್ರಾಹ್ಮಣರು ಕುಶಲ ಸಂಪಾದನೆಗಾಗಿ ಮಾಡುವ ಆರನೆ ಪುಣ್ಯಕ್ರಿಯೆ ಅಲ್ಲವೆ?
ಆಚಾರ್ಯ ಗೌತಮರೆ, ಇದು ಅನುಕಂಪ ಪ್ರೇರಿತರಾಗಿ ದಾನ ನೀಡುವುದು, ಬ್ರಾಹ್ಮಣರು ಕುಶಲ ಸಂಪಾದನೆಗಾಗಿ ಮಾಡುವ ಆರನೇ ಪುಣ್ಯಕ್ರಿಯೆ.
ಮಾಣವ, ಕುಶಲ ಸಂಪಾದನೆಗಾಗಿ ಬ್ರಾಹ್ಮಣರು ವಿಧಿಸಿರುವ ಆ ಐದು ಪುಣ್ಯಕ್ರಿಯೆಗಳನ್ನು ನೀನು ಯಾವಾಗಲೂ ಆ ಐದನ್ನು ಯಾರಲ್ಲಿ ನೋಡುವೆ?
ಗೃಹಸ್ಥರಲ್ಲೋ, ಪಬ್ಬಜಿತರಲ್ಲೊ?
ಕುಶಲ ಸಂಪಾದನೆಗಾಗಿ ಬ್ರಾಹ್ಮಣರು ವಿಧಿಸಿರುವ ಆ ಪಂಚಧಮ್ಮಗಳನ್ನು, ಆಚಾರ್ಯ ಗೌತಮರೆ, ನಾನು ಯಾವಾಗಲೂ ಪಬ್ಬಜಿತರಲ್ಲಿ ಕಾಣುತ್ತೇನೆ, ಗೃಹಸ್ಥರಲ್ಲಿ ಯಾವಾಗಲೂ ಇಲ್ಲ.
ಕಾರಣ ಗೃಹಸ್ಥರಿಗೆ ಮಹತ್ತರವಾದ ಕರ್ತವ್ಯಗಳು, ಮಹತ್ತರವಾದ ಚಟುವಟಿಕೆಗಳು, ಮಹತ್ತರವಾದ ಆಡಳಿತ ನಿಯಂತ್ರಣಗಳು ಮತ್ತು ಮಹತ್ತರವಾದ ಶ್ರಮಗಳಿರುತ್ತವೆ; ಹಾಗಾಗಿ ಅವನು ಸತತವಾಗಿ ಸಮಿತವಾಗಿ ಸತ್ಯವನ್ನು ನುಡಿಯಲಾರ,
ತಪಸ್ವಿಯಾಗಿರಲಾರ,
ಬ್ರಹ್ಮಚಾರಿಯಾಗಿರಲಾರ,
ಅಧ್ಯಯನಶೀಲನಾಗಲಾರ ಅಥವಾ
ತ್ಯಾಗಶೀಲನಾಗಿರಲಾರ.
ಆದರೆ ಪಬ್ಬಜಿತನಾದವನಿಗೆ ಅಲ್ಪ ಕರ್ತವ್ಯಗಳು, ಅಲ್ಪವಾದ ಚಟುವಟಿಕೆಗಳು, ಅಲ್ಪ ಆಡಳಿತ ನಿಯಂತ್ರಣಗಳು ಮತ್ತು ಅಲ್ಪ ಶ್ರಮಗಳಿರುತ್ತವೆ. ಹಾಗಾಗಿ ಅವನು ಸತತವಾಗಿ ಸಮಿತವಾಗಿ ಸತ್ಯವನ್ನು ನುಡಿಯುತ್ತಾನೆ, ತಪಸ್ವಿಯಾಗಿರುತ್ತಾನೆ,
ಬ್ರಹ್ಮಚಾರಿಯಾಗಿರುತ್ತಾನೆ.
ಅಧ್ಯಯನಶೀಲನಗಿರುತ್ತಾನೆ
ಮತ್ತು ತ್ಯಾಗಶೀಲನಾಗಿರುತ್ತಾನೆ.
ಹೀಗೆ ಕುಶಲ ಸಂಪಾದನೆಗಾಗಿ ಬ್ರಾಹ್ಮಣರು ವಿಧಿಸಿರುವ ಪಂಚ ಪುಣ್ಯಕ್ರಿಯೆಗಳನ್ನು ನಾನು ಯಾವಾಗಲೂ ಪಬ್ಬಜಿತರಲ್ಲಿ ಕಾಣುತ್ತೇನೆ. ಆದರೆ ಗೃಹಸ್ಥನಲ್ಲಿ ಎಂದೂ ಇಲ್ಲ.
12. ಮಾಣವ, ಕುಶಲ ಸಂಪಾದನೆಗಾಗಿ ಬ್ರಾಹ್ಮಣರು ವಿಧಿಸಿರುವ ಆ ಐದು ಪುಣ್ಯಕ್ರಿಯೆಗಳನ್ನು ಅವೈರವನ್ನು ಮತ್ತು ಅಸೂಯಾರಹಿತ ಸ್ಥಿತಿಯ ಚಿತ್ತವನ್ನು ಬೆಳೆಸುವ ಚಿತ್ತಪರಿಕರಗಳೆಂದು ನಾನು ಕರೆಯುತ್ತೇನೆ.
ಮಾಣವ, ಇಲ್ಲಿ ಭಿಕ್ಖುವು ಸತ್ಯವಾದಿಯು,
ನಾನು ಸತ್ಯವಾದಿ ಎಂದು ಚಿಂತನೆ ಮಾಡುತ್ತಾ ಅರ್ಥದಿಂದ ಲಾಭವನ್ನು ಪಡೆಯುತ್ತಾನೆ, ಧಮ್ಮದಿಂದ ಲಾಭವನ್ನು ಪಡೆಯುತ್ತಾನೆ, ಧಮ್ಮ ಸಂಪರ್ಕದಿಂದ ಆನಂದ ಹೊಂದುತ್ತಾನೆ.
ಯಾವ ಆನಂದವು ಕುಶಲದೊಡನೆ ಸಂಪರ್ಕಗೊಂಡಿದೆಯೋ ಅದನ್ನು ನಾನು ಚಿತ್ತಪರಿಕರವೆಂದು ಕರೆಯುತ್ತೇನೆ.
ಇಲ್ಲ ಮಾಣವ, ಭಿಕ್ಖುವೊಬ್ಬನು ತಪಸ್ವಿ...
ಬ್ರಹ್ಮಚಾರಿ...
ಅಧ್ಯಯನಶೀಲ...
ತ್ಯಾಗಶೀಲ.
ನಾನು ತ್ಯಾಗಶೀಲನು ಎಂದು ಚಿಂತನೆ ಮಾಡುವುದರಿಂದ ಅರ್ಥದಿಂದ ಲಾಭವನ್ನು ಪಡೆಯುತ್ತಾನೆ, ಧಮ್ಮದಿಂದ ಲಾಭವನ್ನು ಪಡೆಯುತ್ತಾನೆ, ಧಮ್ಮ ಸಂಪರ್ಕದಿಂದ ಆನಂದವನ್ನು ಹೊಂದುತ್ತಾನೆ.
ಯಾವ ಆನಂದವು ಕುಶಲದೊಡನೆ ಸಂಪರ್ಕಗೊಂಡಿದೆಯೋ ಅದನ್ನು ನಾನು ಚಿತ್ತಪರಿಕರವೆಂದು ಕರೆಯುತ್ತೇನೆ.
ಹೀಗೆ ಕುಶಲ ಸಂಪಾದನೆಗಾಗಿ ಬ್ರಾಹ್ಮಣರು ವಿಧಿಸಿರುವ ಆ ಐದು ಪುಣ್ಯಕ್ರಿಯೆಗಳನ್ನು ಅವೈರವನ್ನು ಮತ್ತು ಅಸೂಯಾರಹಿತ ಸ್ಥಿತಿಯ ಚಿತ್ತವನ್ನು ಬೆಳೆಸುವ ಚಿತ್ತಪರಿಕರವೆಂದು ಕರೆಯುತ್ತೇನೆ.
13. ಹೀಗೆ ಹೇಳಿದ ಮೇಲೆ, ತೋದೇಯ್ಯಪುತ್ರ ಬ್ರಾಹ್ಮಣ ಸುಭನು ಭಗವಾನರಿಗೆ ಹೇಳಿದನು:
ಆಚಾರ್ಯ ಗೌತಮರೆ, ಸಮಣ ಗೌತಮರು ಬ್ರಹ್ಮನ ಬಳಿ ಹೋಗುವ ಮಾರ್ಗವನ್ನು ತಿಳಿದಿದ್ದಾರೆಂದು ನಾನು ಕೇಳಿದ್ದೇನೆ.
ಮಾಣವ, ನೀನೇನೆನ್ನುವಿ?
ನಳಕಾರಗಾಮವು ಇಲ್ಲಿಂದ ಹತ್ತಿರವೇ ಇದೆ. ಬಹುದೂರ ಇಲ್ಲವಲ್ಲವೆ?
ಹೌದು, ಆಚಾರ್ಯರೆ, ನಳಕಾರಗಾಮವು ಇಲ್ಲಿಂದ ಬಹುದೂರವಿಲ್ಲ, ಹತ್ತಿರವೇ ಇದೆ.
ಮಾಣವ, ಇದಕ್ಕೆ ಏನೆನ್ನುವಿ? ಇಲ್ಲಿ ಒಬ್ಬ ಮನುಷ್ಯ ನಳಕಾರಗಾಮದಲ್ಲಿ ಹುಟ್ಟಿ ಬೆಳೆದಿದ್ದಾನೆ. ಅವನು ನಳಕಾರಗಾಮವನ್ನು ಬಿಟ್ಟ ತಕ್ಷಣವೇ ಅವನಿಗೆ ಆ ಗ್ರಾಮದ ಹಾದಿಯನ್ನು ಕೇಳಿದರು.
ಆಗ ಆ ಮನುಷ್ಯನು ಉತ್ತರಿಸುವುದರಲ್ಲಿ ನಿಧಾನಿಸುತ್ತಾನೆಯೇ ಅಥವಾ ಅಳುಕುತ್ತಾನೆಯೇ?
ಇಲ್ಲ, ಆಚಾರ್ಯ ಗೌತಮರೆ.
ಏಕೆ, ಹೀಗೆ?
ಏಕೆಂದರೆ ಆ ಮನುಷ್ಯನು ಅಲ್ಲೇ ಹುಟ್ಟಿ ಬೆಳೆದಿರುವುದರಿಂದ ಅವನಿಗೆ ಆ ಗ್ರಾಮದ ಎಲ್ಲ ಮಾರ್ಗಗಳು ಚೆನ್ನಾಗಿ ಪರಿಚಯವಿರುತ್ತವೆ.
ಆದರೂ ಒಬ್ಬ ಮನುಷ್ಯನು ನಳಕಾರಗಾಮದಲ್ಲಿ ಹುಟ್ಟಿ ಬೆಳೆದಿದ್ದರೂ ಆ ಗ್ರಾಮದ ಮಾರ್ಗಗಳ ಬಗ್ಗೆ ವಿಚಾರಿಸಿದಾಗ ಉತ್ತರಿಸಲು ನಿಧಾನಿಸಬಹುದು ಅಥವಾ ಅಳುಕಬಹುದು. ಆದರೆ ತಥಾಗತರಿಗೆ ಬ್ರಹ್ಮಲೋಕದ ಬಗ್ಗೆ ಕೇಳಿದಾಗ, ಬ್ರಹ್ಮಲೋಕದ ಮಾರ್ಗದ ಬಗ್ಗೆ ಕೇಳಿದಾಗ ಉತ್ತರಿಸಲು ಎಂದೂ ನಿಧಾನಿಸುವುದಿಲ್ಲ ಮತ್ತು ಅಳುಕುವುದಿಲ್ಲ.
ಮಾಣವ, ನಾನು ಬ್ರಹ್ಮನನ್ನು ಅರಿತಿದ್ದೇನೆ, ನಾನು ಬ್ರಹ್ಮಲೋಕವನ್ನು ಅರಿತಿದ್ದೇನೆ ಮತ್ತು ಬ್ರಹ್ಮಲೋಕಕ್ಕೆ ಹೋಗುವ ಮಾರ್ಗವನ್ನು ಅರಿತಿದ್ದೇನೆ.
ಆಚಾರ್ಯ ಗೌತಮರೆ, ಸಮಣ ಗೌತಮರು ಬ್ರಹ್ಮನ ಬಳಿ ಹೋಗುವ ಮಾರ್ಗವನ್ನು ಉಪದೇಶಿಸುತ್ತಾರೆಂದು ಕೇಳಿದ್ದೇನೆ.
ಆಚಾರ್ಯ ಗೌತಮರು ಬ್ರಹ್ಮನ ಬಳಿ ಹೋಗುವ ಮಾರ್ಗವನ್ನು ನನಗೆ ಉಪದೇಶಿಸಿದರೆ ಒಳ್ಳೆಯದೆಂದು ಭಾವಿಸುತ್ತೇನೆ.
ಹಾಗಾದರೆ ಮಾಣವ, ಮನಸ್ಸಿಟ್ಟು ನಾನು ಹೇಳುವುದನ್ನು ಕೇಳು.
ಹಾಗೆಯೇ ಆಗಲಿ, ಆಚಾರ್ಯರೆ ಎಂದನು.
ಭಗವಾನರು ಹೀಗೆ ಹೇಳಿದರು:
14. ಮಾಣವ, ಬ್ರಹ್ಮನ ಬಳಿ ಹೋಗುವ ಮಾರ್ಗ ಯಾವುದು?
ಇಲ್ಲಿ ಒಬ್ಬ ಭಿಕ್ಖುವು ಒಂದು ದಿಕ್ಕನ್ನು ಪೂರ್ತಿ ಮೈತ್ರಿ ಚಿತ್ತದಿಂದ ಆವರಿಸಿ ಅಲ್ಲಿ ನೆಲೆಗೊಳ್ಳುತ್ತಾನೆ. ಹಾಗೆಯೇ ಎರಡನೇ ದಿಕ್ಕನ್ನು, ಹಾಗೆಯೇ ಮೂರನೇ ದಿಕ್ಕನ್ನು, ಹಾಗೆಯೇ ನಾಲ್ಕನೇ ದಿಕ್ಕನ್ನು; ಅಂತೆಯೇ ಊಧ್ರ್ವ ಲೋಕವನ್ನು, ಕೆಳಗಿನ ಲೋಕವನ್ನು, ಸುತ್ತಲೂ, ಎಲ್ಲೂ ಮತ್ತು ಎಲ್ಲಕಡೆಯು ತಾನೇ ತಾನಾಗಿ ಮೈತ್ರಿಚಿತ್ತದಿಂದ ವಿಪುಲವಾಗಿ ಮಹಾ ಆನಂದದಿಂದ ಅಪ್ರಮಾಣವಾದ ಅವೈರದಿಂದ ಅಸೂಯಾರಹಿತವಾಗಿ ನೆಲೆಸುತ್ತಾನೆ.
ಹೀಗೆ ಮೈತ್ರಿ ಭಾವದಿಂದ ಚಿತ್ತವಿಮುಕ್ತಿ ಹೊಂದಿದವನಾಗುತ್ತಾನೆ. ಅಲ್ಲಿ ಮಿತಿಗೊಳಪಡುವ ಕರ್ಮವೂ ಇರುವುದಿಲ್ಲ ಮತ್ತು ಯಾರೂ ಇರುವುದಿಲ್ಲ.
ಹೇಗೆ ಒಬ್ಬನು ಬಲವಾದ ಶಂಖನಾದವನ್ನು ಮಾಡಿದರೆ ಆ ಶಬ್ದವು ನಾಲ್ಕು ದಿಕ್ಕುಗಳಲ್ಲೂ ಹರಡಿ, ಅದನ್ನು ಯಾವುದೇ ಕಷ್ಟವಿಲ್ಲದೇ ಹೇಗೆ ಅದನ್ನು ತಾನೇ ಕೇಳಬಹುದೋ ಹಾಗೆ ಮೈತ್ರಿಭಾವದಿಂದುದಯವಾದ ಚೇತೋವಿಮುಕ್ತಿಯಲ್ಲಿ ಪ್ರಮಾಣಕ್ಕೊಳಪಡುವ ಕರ್ಮವೂ ಇರುವುದಿಲ್ಲ, ಅಲ್ಲಿ ಯಾರೂ ಇರುವುದಿಲ್ಲ109.
ಇದು ಬ್ರಹ್ಮನ ಬಳಿ ಹೋಗುವ ಹಾದಿ.
ಮತ್ತೆ ಒಬ್ಬ ಭಿಕ್ಖುವು ಒಂದು ದಿಕ್ಕನ್ನು ಪೂರ್ತಿ ಕರುಣಚಿತ್ತದಿಂದ ಆವರಿಸಿ...
ಮುದಿತ ಚಿತ್ತದಿಂದ (ಆನಂದ) ಆವರಿಸಿ...
ಉಪೇಕ್ಖ ಚಿತ್ತದಿಂದ (ಚಿತ್ತಸಮತೆ) ಆವರಿಸಿ ಅಲ್ಲಿ ನೆಲೆಗೊಳ್ಳುತ್ತಾನೆ. ಹಾಗೆಯೇ ಎರಡನೇ ದಿಕ್ಕನ್ನು, ಹಾಗೆಯೇ ಮೂರನೇ ದಿಕ್ಕನ್ನು, ಹಾಗೆಯೇ ನಾಲ್ಕನೇ ದಿಕ್ಕನ್ನು; ಅಂತೆಯೇ ಊಧ್ರ್ವ ಲೋಕವನ್ನು ಕೆಳಗಿನ ಲೋಕವನ್ನು, ಸುತ್ತಲೂ, ಎಲ್ಲೂ ಮತ್ತು ಎಲ್ಲಕಡೆಯೂ ತಾನೇತಾನಾಗಿ ಸಮಚಿತ್ತದಿಂದ ವಿಪುಲವಾಗಿ, ಮಹಾ ಆನಂದದಿಂದ ಅಪ್ರಮಾಣವಾದ ಅವೈರದಿಂದ ಅಸೂಯಾರಹಿತವಾಗಿ ನೆಲೆಸುತ್ತಾನೆ.
ಹೀಗೆ ಸಮಚಿತ್ತಭಾವದಿಂದ ಚೇತೋವಿಮುಕ್ತಿ ಹೊಂದಿದವನಾಗಿ ಅಲ್ಲಿ ಯಾವುದೇ ಮಿತಿಗೊಳಪಡುವ ಕರ್ಮವೂ ಇರುವುದಿಲ್ಲ ಮತ್ತು ಅಲ್ಲಿ ಯಾರೂ ಇರುವುದಿಲ್ಲ. ಹೇಗೆ ಒಬ್ಬನು ಬಲವಾದ ಶಂಖನಾದವನ್ನು ಮಾಡಿದರೆ ಆ ಶಬ್ದವು ನಾಲ್ಕು ದಿಕ್ಕುಗಳಲ್ಲೂ ಹರಡಿ ಯಾವುದೇ ಕಷ್ಟವಿಲ್ಲದೆ ಹೇಗೆ ಅದನ್ನು ತಾನೇ ಕೇಳಬಹುದೋ ಹಾಗೆ ಸಮಚಿತ್ತ ಭಾವದಿಂದುದಯವಾದ ಚೇತೋವಿಮುಕ್ತಿಯಲ್ಲಿ ಪ್ರಮಾಣಕ್ಕೊಳಪಡುವ ಕರ್ಮವೂ ಇರುವುದಿಲ್ಲ, ಅಲ್ಲಿ ಯಾರೂ ಇರುವುದಿಲ್ಲ.
ಇದು ಕೂಡ ಬ್ರಹ್ಮನ ಬಳಿ ಹೋಗಲು ಹಾದಿ.
15. ಯಾವಾಗ ಇದನ್ನು ಹೇಳಿದರೋ ಆಗ ತೋದೇಯ್ಯನ ಪುತ್ರ ಬ್ರಾಹ್ಮಣ ಸುಭನು ಭಗವಾನರನ್ನು ಕುರಿತು ಹೇಳಿದನು:
ಅದ್ಭುತ, ಆಚಾರ್ಯ ಗೌತಮರೆ! ಅದ್ಭುತ, ಆಚಾರ್ಯ ಗೌತಮರೆ!
ಆಚಾರ್ಯ ಗೌತಮರು ಮಗುಚಿರುವುದನ್ನು ಸರಿಯಾಗಿ ಇಟ್ಟಂತೆ, ರಹಸ್ಯವಾದುದನ್ನು ಬಯಲು ಮಾಡಿದಂತೆ, ದಾರಿ ತಪ್ಪಿದವನಿಗೆ ಅದನ್ನು ತೋರಿಸಿಕೊಟ್ಟಂತೆ ಅಥವಾ ಕಣ್ಣುಗಳಿರುವವರಿಗೂ ಕತ್ತಲಲ್ಲಿ ರೂಪಗಳನ್ನು ನೋಡಲು ತೈಲ ಹಣತೆಯನ್ನು ಹಿಡಿದಂತೆ. ಧಮ್ಮವನ್ನು ಬಹುವಿಧದಲ್ಲಿ ಸ್ಪಷ್ಟಪಡಿಸಿದ್ದೀರಿ.
ನಾನು ಆಚಾರ್ಯ ಗೌತಮರಿಗೆ ಶರಣು ಹೋಗುತ್ತೇನೆ ಮತ್ತು ಧಮ್ಮಕ್ಕೂ ಹಾಗು ಭಿಕ್ಖು ಸಂಘಕ್ಕೂ ಶರಣು ಹೋಗುತ್ತೇನೆ. ನಾನು ಉಪಾಸಕನಾಗಿ ಜೀವನಪರ್ಯಂತ ಶರಣು ಹೋದವನೆಂದು ಆಚಾರ್ಯ ಗೌತಮರು ತಿಳಿಯಲಿ.
ಆಚಾರ್ಯ ಗೌತಮರೆ, ಈಗ ನಾವಿನ್ನು ಹೊರಡುತ್ತೇವೆ. ಮಾಡಲು ಬಹಳ ಕೆಲಸವಿದೆ.
ಮಾಣವ, ಈಗ ಏನು ಮಾಡಬೇಕೆಂದಿದ್ದೀರೊ ಅದಕ್ಕೆ ನಿಮಗೆ ಸಮಯ ಬಂದಿದೆ.
ಆನಂತರದಲ್ಲಿ ತೋದೇಯ್ಯನ ಮಗ ಬ್ರಾಹ್ಮಣ ಸುಭನು ಭಗವಾನರ ಮಾತುಗಳಿಂದ ಅಭಿನಂದಿತನಾಗಿ ತನ್ನ ಜಾಗದಿಂದ ಎದ್ದು, ಭಗವಾನರಿಗೆ ಗೌರವವನ್ನು ಸಲ್ಲಿಸಿ ಪ್ರದಕ್ಷಿಣೆ ಹಾಕಿ ನಿರ್ಗಮಿಸಿದನು.
16. ಆ ಸಂದರ್ಭದಲ್ಲಿ ಬ್ರಾಹ್ಮಣ ಜಾಣುಸ್ಸೋಣಿಯು ಶ್ವೇತಾಶ್ವಗಳಿಂದ ಎಳೆಯಲ್ಪಟ್ಟ ಶ್ವೇತ ರಥದಲ್ಲಿ ಕುಳಿತು ಮಧ್ಯಾಹ್ನ ಸಮಯದಲ್ಲಿ ಸಾವತ್ಥಿಯನ್ನು ಬಿಟ್ಟು ಹೊರಟಿದ್ದನು.
ಆಗ ಅವನು ತೋದೇಯ್ಯನ ಮಗ ಬ್ರಾಹ್ಮಣ ಸುಭನನ್ನು ದೂರದಿಂದಲೇ ನೋಡಿ ಕೇಳಿದನು:
ಆಚಾರ್ಯ, ಭಾರದ್ವಾಜರು ಈ ಮಧ್ಯಾಹ್ನದ ಹೊತ್ತಲ್ಲಿ ಎಲ್ಲಿಂದ ಬರುತ್ತಿದ್ದೀರಿ?
ಸ್ವಾಮಿ, ನಾನು ಸಮಣ ಗೌತಮರ ದರ್ಶನದಿಂದ ಬರುತ್ತಿದ್ದೇನೆ.
ಆಚಾರ್ಯ ಭಾರದ್ವಾಜರು ಸಮಣ ಗೌತಮರ ಪ್ರಜ್ಞಾ ಪಾಂಡಿತ್ಯದ ಬಗ್ಗೆ ಏನೆನ್ನುತ್ತಾರೆ? ಅವರು ಪ್ರಾಜ್ಞರೇ, ಅಲ್ಲವೇ?
ಸ್ವಾಮಿ, ಸಮಣ ಗೌತಮರ ಪ್ರಜ್ಞಾ ಪಾಂಡಿತ್ಯದ ಬಗ್ಗೆ ತಿಳಿದಿರಲು ನಾನು ಯಾರು? ಅವರ ಪ್ರಜ್ಞಾ ಪಾಂಡಿತ್ಯವನ್ನು ತಿಳಿಯಬೇಕಾದರೆ ಒಬ್ಬನು ಅವರ ಸಮಕ್ಕೇ ಇರಬೇಕಾಗುತ್ತದೆ.
ಆಚಾರ್ಯ ಭಾರದ್ವಾಜರು ಸಮಣ ಗೌತಮರ ಬಗ್ಗೆ ಅತ್ಯಂತ ಪ್ರಶಂಸನೀಯ ಮಾತುಗಳನ್ನೇ ಆಡುತ್ತಿದ್ದೀರಿ.
ಸ್ವಾಮಿ, ಸಮಣ ಗೌತಮರನ್ನು ಪ್ರಶಂಸಿಸಲು ನಾನು ಯಾರು?
ಸಮಣ ಗೌತಮರನ್ನು ಶ್ರೇಷ್ಠ ದೇವ ಮನುಷ್ಯರೇ ಹೊಗಳಿದ್ದಾರೆ. ಸ್ವಾಮಿ, ಕುಶಲವನ್ನು ಸಂಪಾದಿಸಲು ಬ್ರಾಹ್ಮಣರು ಯಾವ ಐದು ಪುಣ್ಯಕ್ರಿಯೆಗಳನ್ನು ವಿಧಿಸಿದ್ದಾರೋ ಅವನ್ನು ಸಮಣ ಗೌತಮರು ಅವೈರವನ್ನು ಮತ್ತು ಅಸೂಯಾರಾಹಿತ್ವವನ್ನು ಬೆಳೆಸುವ ಚಿತ್ತ ಪರಿಕರವೆಂದು ಕರೆಯುತ್ತಾರೆ.
17. ಹೀಗೆ ಹೇಳಿದ್ದನ್ನು ಕೇಳಿ ಬ್ರಾಹ್ಮಣ ಜಾಣುಸ್ಸೋಣಿಯು ಶ್ವೇತಾಶ್ವಗಳಿಂದ ಎಳೆಯಲ್ಪಟ್ಟ ಶ್ವೇತ ರಥದಿಂದ ಇಳಿದು ತನ್ನ ಶಲ್ಯವನ್ನು ಸರಿಮಾಡಿಕೊಂಡು ಭಗವಾನರಿರುವ ದಿಕ್ಕಿನತ್ತ ಕೈಗಳನ್ನು ಗೌರವದಿಂದ ಚಾಚಿ ನಮಸ್ಕರಿಸಿ ಹೀಗೆ ಉದ್ಗರಿಸಿದನು:
ಇದು ಕೋಸಲದ ರಾಜ ಪಸೇನದಿಗೆ ಲಾಭ; ಅರಹಂತರೂ ಸಮ್ಮಾಸಂಬುದ್ಧರೂ ಆದ ತಥಾಗತರು ಕೋಸಲದಲ್ಲಿ ವಾಸಿಸುತ್ತಿರುವುದರಿಂದ ರಾಜ ಪಸೇನದಿಗೆ ಇದು ಮಹಾಲಾಭ.
ಟಿಪ್ಪಣಿಗಳು [4]
English
Việt Ngữ