ಹೀಗೇ ಕೇಳಿದ್ದೇನೆ; ಒಮ್ಮೆ ಭಗವಾನರು ರಾಜಗಹದ ಹತ್ತಿರವಿರುವ ಗಿಜ್ಝಕೂಟ ಪರ್ವತ (ಗೃದ್ಧಕೂಟ ಪರ್ವತ)ದಲ್ಲಿ ತಂಗಿದ್ದರು. ಆ ಸಮಯದಲ್ಲಿ ವೇದೇಹಿಪುತ್ತ ಅಜಾತಸತ್ತುವು ಮಗಧದ ರಾಜನಾಗಿದ್ದನು. ಅವನಿಗೆ ವಜ್ಜಿಗಳ ಮೇಲೆ ದಂಡೆತ್ತಿ ಹೋಗಬೇಕೆಂಬ ಇಚ್ಛೆ ಹುಟ್ಟಿತು. ‘ಮಹಾಶಕ್ತಿವಂತರೂ ಮಹಾನುಭಾವರೂ ಆದ ವಜ್ಜಿಗಳನ್ನು ನಿರ್ಮೂಲ ಮಾಡುತ್ತೇನೆ, ವಜ್ಜಿಗಳನ್ನು ಸಂಪೂರ್ಣವಾಗಿ ನಾಶ ಮಾಡುತ್ತೇನೆ, ವಜ್ಜಿಗಳನ್ನು ಹೆಸರಿಲ್ಲದಂತೆ ಮಾಡುತ್ತೇನೆ’ ಎಂದುಕೊಂಡನು.
ಆಗ ಮಗಧದ ರಾಜ ವೇದೇಹಿಪುತ್ತ ಅಜಾತಸತ್ತುವು ಮಗಧದ ಮಹಾ ಅಮಾತ್ಯನಾದ ವಸ್ಸಕಾರ ಬ್ರಾಹ್ಮಣನನ್ನು ಕರೆದು ಹೀಗೆ ಹೇಳಿದನು: “ಬ್ರಾಹ್ಮಣ, ಭಗವಾನರ ಬಳಿಗೆ ಹೋಗು, ಆಮೇಲೆ ನನ್ನ ಹೆಸರಿನಲ್ಲಿ ಭಗವಾನರ ಪಾದಗಳಿಗೆ ತಲೆ ಮುಟ್ಟಿ ನಮಸ್ಕರಿಸಿ ಅವರು ಯಾವ ಬಾಧೆಯೂ ಇಲ್ಲದೆ, ಯಾವ ಆತಂಕವೂ ಇಲ್ಲದೆ ಸುಖವಾಗಿದ್ದಾರೆಯೇ, ಆರೋಗ್ಯವಂತರಾಗಿದ್ದಾರೆಯೇ ವಿಚಾರಿಸು- ‘ಭಂತೆ, ರಾಜ ವೇದೇಹಿಪುತ್ತ ಅಜಾತಸತ್ತುವು ಭಗವಾನರ ಪಾದಕ್ಕೆ ನಮಸ್ಕರಿಸಿ ಅವರು ಯಾವ ಬಾಧೆಯೂ ಇಲ್ಲದೆ ಯಾವ ಆತಂಕವೂ ಇಲ್ಲದೆ ಸುಖವಾಗಿ ಆರೋಗ್ಯದಿಂದ ಕೂಡಿದ್ದಾರೆಯೇ, ವಿಚಾರಿಸು’ ಎಂದು ಹೇಳಿದ್ದಾನೆ. ಮತ್ತೆ ಹೀಗೆ ಹೇಳು- ‘ಭಂತೆ, ಮಗಧದ ರಾಜ ವೇದೇಹಿಪುತ್ತ ಅಜಾತಸತ್ತುವು ವಜ್ಜಿಗಳ ಮೇಲೆ ದಂಡೆತ್ತಿ ಹೋಗಬೇಕೆಂದಿದ್ದಾನೆ. ಅವನು ಹೀಗೆ ಅಂದುಕೊಂಡಿದ್ದಾನೆ; ಮಹಾ ಶಕ್ತಿವಂತರೂ ಮಹಾನುಭಾವರೂ ಆದ ವಜ್ಜಿಗಳನ್ನು ನಿರ್ಮೂಲ ಮಾಡುತ್ತೇನೆ, ವಜ್ಜಿಗಳನ್ನು ಮಹಾಶಕ್ತಿವಂತರೂ ಮಹಾನುಭಾವರೂ ಆದ ವಜ್ಜಿಗಳನ್ನು ನಿರ್ಮೂಲ ಮಾಡುತ್ತೇನೆ, ವಜ್ಜಿಗಳನ್ನು ಸಂಪೂರ್ಣವಾಗಿ ನಾಶ ಮಾಡುತ್ತೇನೆ, ವಜ್ಜಿಗಳನ್ನು ಹೆಸರಿಲ್ಲದಂತೆ ಮಾಡುತ್ತೇನೆ. ಭಗವಾನರು ಏನನ್ನು ಹೇಳುತ್ತಾರೋ ಅದನ್ನು ತಿಳಿದು ನನಗೆ ಹಾಗೆಯೇ ತಿಳಿಸು. ತಥಾಗತರು ಸತ್ಯವಾದುದೆಲ್ಲವನ್ನು ಹೇಳುವುದಿಲ್ಲ.”
ವಸ್ಸಕಾರ ಬ್ರಾಹ್ಮಣ
ಮಗಧದ ಮಹಾಮಾತ್ಯನಾದ ವಸ್ಸಕಾರ ಬ್ರಾಹ್ಮಣನು ಮಗಧದ ರಾಜ ವೇದೇಹಿಪುತ್ತ ಅಜಾತಸತ್ತುವಿಗೆ ‘ಹಾಗೆಯೇ ಆಗಲಿ’ ಎಂದು ಹೇಳಿದನು. ಒಳ್ಳೊಳ್ಳೆಯ ವಾಹನಗಳನ್ನು ಸಿದ್ಧಪಡಿಸಿಕೊಂಡು ಅವುಗಳಲ್ಲೊಂದನ್ನು ಏರಿ ಗಿಜ್ಝಕೂಟ ಪರ್ವತಕ್ಕೆ ಹೊರಟನು. ಎಲ್ಲಿಯವರೆಗೆ ವಾಹನದಲ್ಲಿ ಹೋಗಬಹುದೋ ಅಷ್ಟು ದೂರ ಅದರಲ್ಲಿ ಹೋಗಿ ಆಮೇಲೆ ಅದರಿಂದಿಳಿದು ಭಗವಾನರಿದ್ದಲ್ಲಿಗೆ ನಡೆದುಕೊಂಡು ಹೋದನು. ಅವರ ಬಳಿಗೆ ಹೋದ ಮೇಲೆ ಅವರ ಕುಶಲವನ್ನು ವಿಚಾರಿಸಿ ಅವರಿಗೆ ಶುಭಾಶಯಗಳನ್ನು ತಿಳಿಸಿ ಒಂದುಕಡೆ ಕುಳಿತುಕೊಂಡನು. ಅನಂತರ ಭಗವಾನರನ್ನು ಕುರಿತು ಇಂತೆಂದನು: “ಭೋ ಗೋತಮ, ಮಗಧದ ರಾಜ ಅಜಾತಸತ್ತುವು ಗೋತಮನ ಪಾದಗಳನ್ನು ಮುಟ್ಟಿ ನಮಸ್ಕರಿಸಿ ಅವರು ಯಾವ ಬಾಧೆ ಆತಂಕಗಳಿಲ್ಲದೆ ಆರೋಗ್ಯ ಬಲಗಳಿಂದ ಕೂಡಿದ್ದಾರೆಯೇ ವಿಚಾರಿಸು ಎಂದು ಹೇಳಿದ್ದಾನೆ. ಗೋತಮ, ರಾಜ ಅಜಾತಸತ್ತುವು ವಜ್ಜಿಗಳ ಮೇಲೆ ದಂಡೆತ್ತಿ ಹೋಗಿ ಅವರನ್ನು ಹೇಳ ಹೆಸರಿಲ್ಲದಂತೆ ಮಾಡಬೇಕೆಂದಿದ್ದಾನೆ.”
ರಾಜನು ಅವನತಿ ಹೊಂದದಿರುವ ಧರ್ಮ
ಆ ಸಮಯದಲ್ಲಿ ಆಯುಷ್ಮಂತನಾದ ಆನಂದನು ಭಗವಾನರ ಹಿಂದೆ ನಿಂತುಕೊಂಡು ಅವರಿಗೆ ಬೀಸಣಿಗೆಯಿಂದ ಗಾಳಿ ಬೀಸುತ್ತಿದ್ದನು. ಭಗವಾನರು ಆನಂದನನ್ನು ಕುರಿತು “ಆನಂದ, ‘ವಜ್ಜಿಗಳು ಆಗಾಗ ಒಟ್ಟಾಗಿ ಸೇರುತ್ತಾರೆ’ ಎಂಬುದನ್ನು ಕೇಳಿದ್ದೀಯಾ?” ಎಂದು ಪ್ರಶ್ನಿಸಿದರು. “ಹಾಗೆ ಕೇಳಿದ್ದೇನೆ, ಭಂತೆ.”
“ಆನಂದ, ಎಲ್ಲಿಯವರೆಗೆ ವಜ್ಜಿಗಳು ಆಗಾಗ ಒಟ್ಟಿಗೆ ಸೇರುವ ಪದ್ಧತಿಯನ್ನಿಟ್ಟುಕೊಂಡಿದ್ದಾರೋ ಅಲ್ಲಿಯವರೆಗೆ, ಆನಂದ, ವಜ್ಜಿಗಳು ಉನ್ನತಿಯನ್ನು ಹೊಂದುತ್ತಲೇ ಇರುತ್ತಾರೆ. ಅವರು ಅವನತಿಯನ್ನು ಹೊಂದುವುದಿಲ್ಲ.
“ಆನಂದ, ‘ವಜ್ಜಿಗಳೆಲ್ಲರೂ ಒಟ್ಟಾಗಿ ಸೇರಿ, ಒಟ್ಟಾಗಿ (ಸಭೆಯಿಂದ) ಎದ್ದು ಒಟ್ಟಾಗಿ ತಮ್ಮ ಕೆಲಸವನ್ನು ಮಾಡುತ್ತಾರೆ’ ಎಂದು ಕೇಳಿದ್ದೀಯಾ?” “ಹಾಗೆ ಕೇಳಿದ್ದೇನೆ ಭಂತೆ.”
“ಆನಂದ, ಎಲ್ಲಿಯವರೆಗೆ ವಜ್ಜಿಗಳು ಒಟ್ಟಾಗಿ ಸೇರಿ (ಸಭೆಯಿಂದ) ಒಟ್ಟಾಗಿ ಎದ್ದು ಒಟ್ಟಾಗಿ ಕೆಲಸ ಮಾಡುತ್ತಾರೆಯೋ ಅಲ್ಲಿಯವರೆಗೆ, ಆನಂದ, ಅವರು ಉನ್ನತಿಯನ್ನು ಹೊಂದುತ್ತಲೇ ಇರುತ್ತಾರೆ, ಅವರು ಅವನತಿಯನ್ನು ಹೊಂದುವುದಿಲ್ಲ.”
“ಆನಂದ, ಇದುವರೆಗೆ ಯಾವುವು ಆಗಿಲ್ಲವೋ ಅವುಗಳನ್ನು ಆಚರಣೆಗೆ ತರದಿರುವ ಮತ್ತು ಈಗಾಗಲೇ ಆಗಿರುವವುಗಳನ್ನು ತಪ್ಪದೆ ಪಾಲಿಸುವ ಪದ್ಧತಿಯನ್ನು ವಜ್ಜಿಗಳು ಇಟ್ಟುಕೊಂಡಿರುವುದನ್ನು ಕೇಳಿದ್ದೀಯಾ? ಹಿಂದಿನಿಂದ ಬಂದಿರುವ ವಜ್ಜಿ ಧರ್ಮಗಳನ್ನು ಯಥಾವತತಾಗಿ ಪಾಲಿಸುತ್ತಿರುವುದನ್ನು ಕೇಳಿದ್ದೀಯಾ?” “ಕೇಳಿದ್ದೇನೆ ಭಂತೆ.”
“ಎಲ್ಲಿಯವರೆಗೆ ಆನಂದ, ವಜ್ಜಿಗಳು ಇದುವರೆಗೆ ಆಗಿರುವವುಗಳನ್ನು ಆಚರಣೆಗೆ ತರುವುದಿಲ್ಲವೋ ಈಗಾಗಲೇ ಆಗಿರುವವುಗಳನ್ನು ತಪ್ಪದೆ ಪಾಲಿಸುತ್ತಾರೋ ಹಿಂದಿನಿಂದ ಬಂದ ವಜ್ಜಿ ಧರ್ಮಗಳನ್ನು ಯಥಾವತ್ತಾಗಿ ಪಾಲಿಸುತ್ತಾರೋ ಅಲ್ಲಿಯವರೆಗೆ ಅವರು ವೃದ್ಧಿಯನ್ನು ಹೊಂದುತ್ತಿರುತ್ತಾರೆ, ಅವನತಿಯನ್ನು ಹೊಂದುವುದಿಲ್ಲ.
“ಆನಂದ, ವಜ್ಜಿಗಳು ತಮ್ಮ ಹಿರಿಯರನ್ನು ಸತ್ಕರಿಸುವ, ಗೌರವಿಸುವ, ಸನ್ಮಾನವನ್ನು ಮಾಡುವ, ಪೂಜಿಸುವ, ಅವರು ಹೇಳಿದುದನ್ನು ತಪ್ಪದೆ ಪಾಲಿಸುವ ಕ್ರಮವನ್ನಿಟ್ಟುಕೊಂಡಿರುವುದನ್ನು ಕೇಳಿದ್ದೀಯಾ?” “ಕೇಳಿದ್ದೇನೆ ಭಂತೆ.”
“ಆನಂದ, ಎಲ್ಲಿಯವರೆಗೆ ವಜ್ಜಿಗಳು ತಮ್ಮ ಹಿರಿಯರನ್ನು ಸತ್ಕರಿಸುವ, ಗೌರವಿಸುವ, ಸನ್ಮಾನಿಸುವ, ಪೂಜಿಸುವ ಮತ್ತು ಅವರು ಹೇಳಿದುದನ್ನು ಪಾಲಿಸುವ ಪದ್ಧತಿಯನ್ನಿಟ್ಟುಕೊಂಡಿರುತ್ತಾರೋ ಅಲ್ಲಿಯವರೆಗೆ ವೃದ್ಧಿಯನ್ನು ಹೊಂದುತ್ತಿರುತ್ತಾರೆ. ಅವನತಿಯನ್ನು ಹೊಂದುವುದಿಲ್ಲ.
“ಆನಂದ, ವಜ್ಜಿಗಳು ಕುಲಸ್ತ್ರೀಯರನ್ನೂ, ಕುಲ ಕುಮಾರಿಯರನ್ನೂ ಬಲವಂತವಾಗಿ ಕೂಡಿಹಾಕುವುದಿಲ್ಲ ಎಂಬುದನ್ನು ಕೇಳಿದ್ದೀಯಾ?” “ಕೇಳಿದ್ದೇನೆ ಭಂತೆ.”
“ಆನಂದ, ಎಲ್ಲಿಯವರೆಗೆ ವಜ್ಜಿಗಳು ಕುಲಸ್ತ್ರೀಯರನ್ನೂ ಕುಲ ಕುಮಾರಿಯರನ್ನೂ ಬಲವಂತವಾಗಿ ಕೂಡಿಹಾಕುವ ದುಷ್ಟ ಪದ್ಧತಿಯನ್ನು ಇಟ್ಟುಕೊಳ್ಳುವುದಿಲ್ಲವೋ ಅಲ್ಲಿಯವರೆಗೆ ಅವರು ವೃದ್ಧಿಯನ್ನು ಹೊಂದುತ್ತಿರುತ್ತಾರೆ. ಅವನತಿಯನ್ನು ಪಡೆಯುವುದಿಲ್ಲ.
“ಆನಂದ, ವಜ್ಜಿಗಳು ವಜ್ಜಿಗಳ ಚೈತ್ಯಗಳನ್ನೂ ಮತ್ತಿತರ ಪೂಜಾ ಮಂದಿರಗಳನ್ನೂ ಗೌರವಿಸುವ ಮಾನ್ಯತೆ ಮಾಡುವ, ಪೂಜಿಸುವ ಮತ್ತು ಹಿಂದಿನ ಪದ್ಧತಿಗಳಂತೆ ಅವುಗಳಿಗೆ ದಾನ ಮಾಡುವ ಮತ್ತು ಧರ್ಮ ಕಾರ್ಯಗಳನ್ನು ನಡೆಸುವ ನಡೆಸುವ ಪದ್ಧತಿಯನ್ನಿಟ್ಟುಕೊಂಡಿದಾರೆ. ಅವುಗಳನ್ನು ಒಡೆದುಹಾಕುವುದಿಲ್ಲ, ಪಾಳುಗೆಡುವುದಿಲ್ಲ ಎಂಬುದನ್ನು ಕೇಳಿದ್ದೀಯಾ?” “ಕೇಳಿದ್ದೇನೆ ಭಂತೆ.”
“ಆನಂದ, ಎಲ್ಲಿಯವರೆಗೆ ವಜ್ಜಿಗಳು ವಜ್ಜಿಗಳ ಚೈತ್ಯಗಳನ್ನೂ, ಮತ್ತಿತರ ಪೂಜಾ ಮಂದಿರಗಳನ್ನೂ ಗೌರವಿಸುವ, ಪೂಜಿಸುವ ಮತ್ತು ಅವುಗಳನ್ನು ಒಡೆದು ಹಾಕದೆ, ಪಾಳುಗೆಡವದೆ, ಹಿಂದಿನಿಂದ ಬಂದ ಪದ್ಧತಿಯಂತೆ ದಾನ ಮಾಡುವ ಮತ್ತು ಧಾರ್ಮಿಕ ಕಾರ್ಯಗಳನ್ನು ನಡೆಸುವ ಪದ್ಧತಿಯನ್ನಿಟ್ಟುಕೊಂಡಿರುತ್ತಾರೋ ಅಲ್ಲಿಯವರೆಗೆ ಅವರು ವೃದ್ಧಿಯನ್ನು ಹೊಂದುತ್ತಲೇ ಇರುತ್ತಾರೆ, ಅವನತಿಯನ್ನು ಹೊಂದುವುದಿಲ್ಲ.
“ಆನಂದ, ವಜ್ಜಿಗಳು ಅರಹಂತರಿಗೂ (ಇತರ) ಧಾರ್ಮಿಕರಿಗೂ ರಕ್ಷಣೆ ಕೊಟ್ಟು ಬೇರೆ ಕಡೆಗಳಿಂದ ಬರುತ್ತಿರುವ ಅರಹಂತರೂ, ಜಿತೇಂದ್ರಿಯರೂ ಮುಂದೆ ಬೇರೆ ಕಡೆಗಳಿಂದ ಬರಬಹುದಾದ ಅರಹಂತರೂ, ಜಿತೇಂದ್ರಿಯರೂ ಸುಖವಾಗಿಯೂ, ಸಂತೋಷವಾಗಿಯೂ ಇರುವಂತೆ ಮಾಡುವ ಪದ್ಧತಿಯನ್ನು ಇಟ್ಟುಕೊಂಡಿದ್ದಾರೆಂಬುದನ್ನು ಕೇಳಿದ್ದೀಯಾ?” “ಕೇಳಿದ್ದೇನೆ ಭಂತೆ.”
“ಆನಂದ, ಎಲ್ಲಿಯವರೆಗೆ ವಜ್ಜಿಗಳು ಅರಹಂತರಿಗೂ, ಧಾರ್ಮಿಕರಿಗೂ ರಕ್ಷಣೆ ಕೊಟ್ಟು ಬೇರೆ ಕಡೆಗಳಿಂದ ಬರುತ್ತಿರುವ ಅರಹಂತರೂ, ಜಿತೇಂದ್ರಿಯರೂ ಮುಂದೆ ಬೇರೆ ಕಡೆಗಳಿಂದ ಬರಬಹುದಾದ ಅರಹಂತರೂ, ಜಿತೇಂದ್ರಿಯರೂ ಸುಖವಾಗಿಯೂ, ಸಂತೋಷವಾಗಿಯೂ ಇರುವಂತೆ ಸೌಕರ್ಯಗಳನ್ನು ವಹಿಸುತ್ತಾರೋ ಅಲ್ಲಿಯವರೆಗೆ ಆನಂದ, ವಜ್ಜಿಗಳು ವೃದ್ಧಿಯನ್ನು ಹೊಂದುತ್ತಲೇ ಇರುತ್ತಾರೆ, ಅವನತಿಯನ್ನು ಹೊಂದುವುದಿಲ್ಲ.”
ಆಮೇಲೆ ಭಗವಾನರು ವಸ್ಸಕಾರ ಬ್ರಾಹ್ಮಣನನ್ನು ಕುರಿತು- “ಬ್ರಾಹ್ಮಣ, ಒಮ್ಮೆ ವೇಸಾಲಿಯ ಸಾರಂದದ ಚೈತ್ಯದಲ್ಲಿ ತಂಗಿದ್ದೆ. ಆಗ ವಜ್ಜಿಗಳಿಗೆ ಈ ರೀತಿಯಲ್ಲಿ ಹಾನಿಯನ್ನು ತಪ್ಪಿಸಬಲ್ಲ ಏಳು ನಿಯಮಗಳನ್ನು ಹೇಳಿದೆ. ಬ್ರಾಹ್ಮಣ, ಎಲ್ಲಿಯವರೆಗೆ ಹಾನಿಯನ್ನು ತಪ್ಪಿಸುವ ಈ ಏಳು ನಿಯಮಗಳು ವಜ್ಜಿಗಳಲ್ಲಿ ಉಳಿದಿರುತ್ತವೆಯೋ ಅಥವಾ ಹಾನಿಯನ್ನು ತಪ್ಪಿಸುವ ಈ ಏಳು ನಿಯಮಗಳಲ್ಲಿ ನಂಬಿಕೆಯನ್ನಿಟ್ಟು ವಜ್ಜಿಗಳು ಅವುಗಳನ್ನು ಪಾಲಿಸುತ್ತಾರೋ ಅಲ್ಲಿಯವರೆಗೆ, ಬ್ರಾಹ್ಮಣ, ವಜ್ಜಿಗಳು ವೃದ್ಧಿಯನ್ನು ಹೊಂದುತ್ತಲೇ ಇರುತ್ತಾರೆ. ಅವನತಿಯನ್ನು ಹೊಂದುವುದಿಲ್ಲ” ಎಂದರು.
ಇದನ್ನು ಕೇಳಿದ ಮಗಧದ ಮಹಾಮಾತ್ಯ ವಸ್ಸಕಾರ ಬ್ರಾಹ್ಮಣನು ಭಗವಾನರಿಗೆ ಹೀಗೆ ಹೇಳಿದನು- “ಹಾನಿಯನ್ನು ತಪ್ಪಿಸುವ ಈ ಏಳು ನಿಯಮಗಳಲ್ಲಿ ಒಂದನ್ನು ಒಟ್ಟಿಗೆ ಪಾಲಿಸಿದರೂ ವಜ್ಜಿಗಳು ವೃದ್ಧಿಯನ್ನು ಹೊಂದುತ್ತಾರೆ; ಅವನತಿಯನ್ನು ಹೊಂದುವುದಿಲ್ಲ. ಹಾನಿಯನ್ನು ತಪ್ಪಿಸುವ ಈ ಏಳು ನಿಯಮಗಳೆಲ್ಲವನ್ನೂ ಪಾಲಿಸುವವರನ್ನು ಕುರಿತು ಹೇಳುವುದೇನಿದೆ? ಭೋ, ಗೋತಮ, ಮಗಧದ ರಾಜ ವೇದೇಹಿಪುತ್ತನು ವಜ್ಜಿಗಳೊಂದಿಗೆ ಯುದ್ಧ ಮಾಡುವುದು ಸರಿಯಲ್ಲ; ಹೊಗಳಿಕೆಯಿಂದಲೋ, ಭೇದದಿಂದಲೋ ವಜ್ಜಿಗಳನ್ನು ಗೆಲ್ಲಬೇಕು. ಗೋತಮ, ನಾವೀಗ ಹೋಗುತ್ತೇವೆ, ನಮಗೆ ಮಾಡಬೇಕಾದ ಕೆಲಸ ಬಹಳವಿದೆ.”
“ನಿನಗೆ ತಿಳಿದಂತೆ ಮಾಡಬಹುದು ಬ್ರಾಹ್ಮಣ.” ಆಗ ಮಗಧದ ಮಹಾಮಾತ್ಯನಾದ ವಸ್ಸಕಾರ ಬ್ರಾಹ್ಮಣನು ಆಸನದಿಂದೆದ್ದು ಹೋದನು. ಭಗವಾನರ ಮಾತಿನಿಂದ ಸುಪ್ರೀತನಾಗಿದ್ದನು. ಅವನ್ನು ಒಪ್ಪಿಕೊಂಡಿದ್ದನು.
ಭಿಕ್ಷುಗಳು ಅವನತಿ ಹೊಂದದಿರುವ ಧರ್ಮ
ಮಗಧದ ಮಹಾಮಾತ್ಯನಾದ ವಸ್ಸಕಾರ ಬ್ರಾಹ್ಮಣನು ಹೊರಟುಹೋದ ಸ್ವಲ್ಪಹೊತ್ತಿನಲ್ಲಿಯೇ ಆಯುಷ್ಮಂತ ಆನಂದನನ್ನು ಭಗವಾನರು ಕರೆದರು. ಅವನಿಗೆ “ಆನಂದ, ನೀನು ಹೋಗಿ ರಾಜಗಹ ಮತ್ತು ಅದರ ಸುತ್ತಮುತ್ತಿನ ಎಲ್ಲ ಭಿಕ್ಷುಗಳೂ ಉಪಟ್ಠಾನಸಾಲೆಯಲ್ಲಿ ಸೇರುವಂತೆ ಮಾಡು” ಎಂದು ಹೇಳಿದರು. “ಹಾಗೆಯೇ ಆಗಲಿ ಭಂತೆ” ಎಂದು ಭಗವಾನರಿಗೆ ಹೇಳಿ ಅದರಂತೆ ರಾಜಗಹ ಮತ್ತು ಅದರ ಸುತ್ತಮುತ್ತ ಇದ್ದ ಎಲ್ಲ ಭಿಕ್ಷುಗಳನ್ನೂ ಉಪಟ್ಠಾನ ಸಾಲೆಯಲ್ಲಿ ಸೇರಿಸಿದನು. ಆಮೇಲೆ ಭಗವಾನರ ಹತ್ತಿರಕ್ಕೆ ಬಂದು ಅವರಿಗೆ ಅಭಿವಂದಿಸಿ ಒಂದುಕಡೆ ನಿಂತುಕೊಂಡನು. ಭಗವಾನರನ್ನು ಕುರಿತು ಇಂತೆಂದನು- “ಭಿಕ್ಷು ಸಂಘದ ಸಭೆ ಸೇರಿದೆ, ಭಗವಾನರಿಗೆ ಉಚಿತ ತೋರಿದಂತೆ ಮಾಡಬಹುದು.”
ಭಗವಾನರು ಆಸನದಿಂದ ಎದ್ದು ಉಪಟ್ಠಾನ ಸಾಲೆಗೆ ಹೋದರು. ಅಲ್ಲಿ ಅವರಿಗಾಗಿ ಪ್ರತ್ಯೇಕವಾಗಿ ಏರ್ಪಡಿಸಿದ್ದ ಆಸನದ ಮೇಲೆ ಕುಳಿತರು. ಕುಳಿತುಕೊಂಡ ಮೇಲೆ ಭಿಕ್ಷುಗಳಿಗೆ ಹೀಗೆ ಹೇಳಿದರು- “ಅವನತಿಯನ್ನು ತಪ್ಪಿಸುವ ಏಳು ನಿಯಮಗಳನ್ನು ಹೇಳುತ್ತೇನೆ. ಮನಸ್ಸಿಟ್ಟು ನಾನು ಹೇಳುವುದನ್ನು ಕೇಳುವುದು ಒಳ್ಳೆಯದು.”
“ಹಾಗೆಯೇ ಆಗಲಿ ಭಂತೆ” ಎಂದು ಆ ಭಿಕ್ಷುಗಳು ಭಗವಾನರಿಗೆ ಹೇಳಿದರು. ಆಮೇಲೆ ಭಗವಾನರು ಇಂತೆಂದರು-
“ಭಿಕ್ಷುಗಳೇ, ಎಲ್ಲಿಯವರೆಗೆ ಆಗಾಗ ಭಿಕ್ಷುಗಳು ಒಟ್ಟಾಗಿ ಸೇರುವ ಕ್ರಮವನ್ನಿಟ್ಟುಕೊಂಡಿರುತ್ತಾರೋ ಅಲ್ಲಿಯವರೆಗೆ ಭಿಕ್ಷುಗಳು ವೃದ್ಧಿಯನ್ನು ಹೊಂದುತ್ತಲೇ ಇರುತ್ತಾರೆ, ಅವರಿಗೆ ಅವನತಿಯು ಇರುವುದಿಲ್ಲ.
“ಭಿಕ್ಷುಗಳೇ, ಎಲ್ಲಿಯವರೆಗೆ ಅವರೆಲ್ಲರೂ ಒಟ್ಟಾಗಿ ಸೇರಿ ಒಟ್ಟಾಗಿ ಏಳುವ ಪದ್ಧತಿಯನ್ನಿಟ್ಟುಕೊಂಡಿರುತ್ತಾರೋ ಸಂಘದ ಕೆಲಸಗಳನ್ನು ಒಟ್ಟಾಗಿ ಸೇರಿ ಮಾಡುತ್ತಾರೆಯೋ, ಅಲ್ಲಿಯವರೆಗೆ ಭಿಕ್ಷುಗಳು ವೃದ್ಧಿಯನ್ನು ಹೊಂದುತ್ತಿರುತ್ತಾರೆ, ಅವರಿಗೆ ಅವನತಿ ಇರುವುದಿಲ್ಲ.
“ಎಲ್ಲಿಯವರೆಗೆ ಭಿಕ್ಷುಗಳು ಇಲ್ಲದಿರುವ ನಿಯಮವನ್ನು ಹೊಸದಾಗಿ ಮಾಡುವುದಿಲ್ಲವೋ ಇರುವುದನ್ನು ಮುರಿಯುವುದಿಲ್ಲವೋ, ಇರುವ ನಿಯಮಗಳನ್ನು ತಪ್ಪದೆ ಪಾಲಿಸುತ್ತಾರೋ ಅಲ್ಲಿಯವರೆಗೆ ಭಿಕ್ಷುಗಳು ವೃದ್ಧಿಯನ್ನು ಹೊಂದುತ್ತಲೇ ಇರುತ್ತಾರೆ. ಅವರಿಗೆ ಅವನತಿ ಇರುವುದಿಲ್ಲ.
“ಎಲ್ಲಿಯವರೆಗೆ ಭಿಕ್ಷುಗಳು ಇತರ ಭಿಕ್ಷುಗಳಿಗೂ, ಥೇರರಿಗೂ, ಹಿರಿಯ ಪಬ್ಬಜಿತರಿಗೂ, ಸಂಘದ ಮುಖಂಡರಿಗೂ, ಸಂಘದ ಶ್ರೇಷ್ಠರಿಗೂ ಗೌರವವನ್ನು ತೋರಿಸುತ್ತಾರೋ, ಸತ್ಕಾರವನ್ನು ಮಾಡುತ್ತಾರೋ, ಮಾನ್ಯತೆಯನ್ನು ಮಾಡುತ್ತಾರೋ, ಪೂಜಿಸುತ್ತಾರೋ, ಅವರು ಹೇಳಿದಂತೆ ನಡೆದುಕೊಳ್ಳುತ್ತಾರೋ ಅಲ್ಲಿಯವರೆಗೆ ಭಿಕ್ಷುಗಳು ವೃದ್ಧಿಯನ್ನು ಹೊಂದುತ್ತಿರುತ್ತಾರೆ, ಅವರಿಗೆ ಅವನತಿ ಇರುವುದಿಲ್ಲ.
“ಎಲ್ಲಿಯವರೆಗೆ ಭಿಕ್ಷುಗಳು ಪುನರ್ಜನ್ಮಕ್ಕೆ ಕಾರಣವಾದ ತಮ್ಮಲ್ಲಿಯೇ ಹುಟ್ಟುವ ತಣ್ಹಾಕ್ಕೆ ವಶರಾಗುವುದಿಲ್ಲವೋ ಅಲ್ಲಿಯವರೆಗೆ ಅವರು ವೃದ್ಧಿಯನ್ನು ಹೊಂದುತ್ತಲೇ ಇರುತ್ತಾರೆ. ಅವರಿಗೆ ಅವನತಿ ಇರುವುದಿಲ್ಲ.
“ಎಲ್ಲಿಯವರೆಗೆ ಭಿಕ್ಷುಗಳು ಅರಣ್ಯಗಳಲ್ಲಿ ಏಕಾಂತದಲ್ಲಿ ಕುಳಿತುಕೊಳ್ಳುವ ಕ್ರಮವನ್ನಿಟ್ಟುಕೊಂಡಿರುತ್ತಾರೋ ಅಲ್ಲಿಯವರೆಗೆ ಅವರು ವೃದ್ಧಿಯನ್ನು ಹೊಂದುತ್ತಲೇ ಇರುತ್ತಾರೆ, ಅವನತಿಯನ್ನು ಹೊಂದುವುದಿಲ್ಲ.
“ಎಲ್ಲಿಯವರೆಗೆ ಭಿಕ್ಷುಗಳು ತಮ್ಮ ಸ್ಮೃತಿಯನ್ನು ಬೆಳೆಸಿಕೊಂಡು ಬ್ರಹ್ಮಚಾರಿಗಳಾದವರು ಬಂದು ಅವರ ಜೊತೆಯಲ್ಲಿ ಸಂತೋಷದಲ್ಲಿರುವಂತೆ ಮಾಡಬಲ್ಲರೋ, ಅಲ್ಲಿಯವರೆಗೆ ಅವರು ವೃದ್ಧಿಯನ್ನು ಹೊಂದುತ್ತಲೇ ಇರುತ್ತಾರೆ, ಅವರಿಗೆ ಅವನತಿ ಇರುವುದಿಲ್ಲ.
“ಎಲ್ಲಿಯವರೆಗೆ ಭಿಕ್ಷುಗಳು ಹಾನಿಯನ್ನು ತಪ್ಪಿಸುವ ಈ ಏಳು ನಿಯಮಗಳನ್ನು ಪಾಲಿಸುತ್ತಾರೋ ಈ ಏಳು ನಿಯಮಗಳನ್ನು ತಪ್ಪದೆ ಅನುಸರಿಸುತ್ತಾರೋ ಅಲ್ಲಿಯವರೆಗೆ ಅವರು ವೃದ್ಧಿಯನ್ನು ಹೊಂದುತ್ತಲೇ ಇರುತ್ತಾರೆ; ಅವರಿಗೆ ಅವನತಿ ಇರುವುದಿಲ್ಲ.
“ಭಿಕ್ಷುಗಳೇ, ಹಾನಿಯನ್ನು ತಪ್ಪಿಸುವ ಮತ್ತೆ ಏಳು ನಿಯಮಗಳನ್ನು ಹೇಳುತ್ತೇನೆ. ಮನಸ್ಸಿಟ್ಟು ನಾನು ಹೇಳುವುದನ್ನು ಕೇಳುವುದು ಒಳ್ಳೆಯದು.”
“ಹಾಗೆಯೇ ಆಗಲಿ ಭಂತೆ” ಎಂದು ಭಿಕ್ಷುಗಳು ಭಗವಾನರಿಗೆ ಹೇಳಿದರು.
“ಎಲ್ಲಿಯವರೆಗೆ ಭಿಕ್ಷುಗಳು ಹಣಗಳಿಸುವ ಕಸುಬುಗಳಲ್ಲಿ ತೊಡಗದೆ ಅಂಥ ವೃತ್ತಿಗಳಲ್ಲಿ ಆಸೆಯಿಲ್ಲದೆ ಅಂಥ ವೃತ್ತಿಗಳಲ್ಲಿ ಅನುರಕ್ತರಾಗದೆ ಇರುತ್ತಾರೋ ಅಲ್ಲಿಯವರೆಗೆ ವೃದ್ಧಿಯನ್ನು ಹೊಂದುತ್ತಿರುತ್ತಾರೆ, ಅವರಿಗೆ ಅವನತಿ ಇರುವುದಿಲ್ಲ.
“ಎಲ್ಲಿಯವರೆಗೆ ಭಿಕ್ಷುಗಳು ಮಾತಿನಲ್ಲಿ ತೊಡಗದೆ ಮಾತಿನಲ್ಲಿ ಅತಿಹೆಚ್ಚಿನ ಆಸೆಯಿಟ್ಟುಕೊಳ್ಳದೆ ಮಾತಿನಲ್ಲಿ ಅನುರಕ್ತರಾಗದೆ ಇರುತ್ತಾರೋ ಅಲ್ಲಿಯವರೆಗೆ ಅವರು ವೃದ್ಧಿಯನ್ನು ಹೊಂದುತ್ತಿರುತ್ತಾರೆ, ಅವರಿಗೆ ಅವನತಿ ಇರುವುದಿಲ್ಲ.
“ಎಲ್ಲಿಯವರೆಗೆ ಭಿಕ್ಷುಗಳು ನಿದ್ದೆಯಲ್ಲಿ ಅತಿಯಾಗಿ ತೊಡಗದೆ, ನಿದ್ದೆಗೆ ವಶರಾಗದೆ, ನಿದ್ದೆಯಲ್ಲಿ ಅನುರಕ್ತರಾಗದೆ ಇರುತ್ತಾರೋ ಅಲ್ಲಿಯವರೆಗೆ ಅವರು ವೃದ್ಧಿಯನ್ನು ಹೊಂದುತ್ತಿರುತ್ತಾರೆ, ಅವರಿಗೆ ಅವನತಿ ಇರುವುದಿಲ್ಲ.
“ಎಲ್ಲಿಯವರೆಗೆ ಭಿಕ್ಷುಗಳು ಗುಂಪಿಗೆ ಸೇರಿಕೊಳ್ಳದೆ ಗುಂಪಿನಲ್ಲಿರಬೇಕೆಂಬ ಆಸೆಗೆ ವಶರಾಗದೆ ಗುಂಪಿನಲ್ಲಿ ಅನುರಕ್ತರಾಗದೆ ಇರುತ್ತಾರೋ ಅಲ್ಲಿಯವರೆಗೆ ಅವರು ವೃದ್ಧಿಯನ್ನು ಹೊಂದುತ್ತಿರುತ್ತಾರೆ, ಅವರಿಗೆ ಅವನತಿ ಇರುವುದಿಲ್ಲ.
“ಎಲ್ಲಿಯವರೆಗೆ ಭಿಕ್ಷುಗಳು ಪಾಪ ಮಡಲು ಇಷ್ಟಪಡುವುದಿಲ್ಲವೋ, ಪಾಪ ಮಾಡಬೇಕೆಂಬ ಇಚ್ಛೆಗಳಿಗೆ ವಶರಾಗುವುದಿಲ್ಲವೋ ಅಲ್ಲಿಯವರೆಗೆ ಅವರು ವೃದ್ಧಿಯನ್ನು ಹೊಂದುತ್ತಿರುತ್ತಾರೆ. ಅವರಿಗೆ ಅವನತಿ ಇರುವುದಿಲ್ಲ.
“ಎಲ್ಲಿಯವರೆಗೆ ಭಿಕ್ಷುಗಳು ಪಾಪಿಗಳಿಗೆ ಮಿತ್ರರಾಗುವುದಿಲ್ಲವೋ, ಪಾಪಿಗಳ ಸಹವಾಸದಲ್ಲಿರುವುದಿಲ್ಲವೋ, ಪಾಪಿಗಳ ಸಂಪರ್ಕವನ್ನು ಪಡೆದಿರುವುದಿಲ್ಲವೋ ಅಲ್ಲಿಯವರೆಗೆ ವೃದ್ಧಿಯನ್ನು ಹೊಂದುತ್ತಿರುತ್ತಾರೆ; ಅವರಿಗೆ ಅವನತಿ ಇರುವುದಿಲ್ಲ.
“ಎಲ್ಲಿಯವರೆಗೆ ಭಿಕ್ಷುಗಳು ಮಾರ್ಗದ ಮಧ್ಯದಲ್ಲಿಯೇ ನಿಲ್ಲದೆ (ಗುರಿಯನ್ನು ಮುಟ್ಟುವವರೆಗೆ ಸಾಧನೆಯಿಂದ ವಿರಮಿಸದೆ) ಮುಂದುವರೆಯುತ್ತಾರೋ ಅಲ್ಲಿಯವರೆಗೆ ಅವರು ವೃದ್ಧಿಯನ್ನು ಹೊಂದುತ್ತಿರುತ್ತಾರೆ; ಅವರಿಗೆ ಅವನತಿ ಇರುವುದಿಲ್ಲ.
“ಎಲ್ಲಿಯವರೆಗೆ ಭಿಕ್ಷುಗಳು ಹಾನಿಯನ್ನು ತಪ್ಪಿಸುವ ಈ ಏಳು ನಿಯಮಗಳನ್ನು ಪಾಲಿಸುತ್ತಾರೋ, ಈ ಏಳು ನಿಯಮಗಳನ್ನು ತಪ್ಪದೆ ಅನುಸರಿಸುತ್ತಾರೋ, ಅಲ್ಲಿಯವರೆಗೆ ಅವರು ವೃದ್ಧಿಯನ್ನು ಹೊಂದುತ್ತಲೇ ಇರುತ್ತಾರೆ; ಅವರಿಗೆ ಅವನತಿ ಇರುವುದಿಲ್ಲ.
“ಹಾನಿಯನ್ನು ತಪ್ಪಿಸುವ ಮತ್ತೆ ಏಳು ನಿಯಮಗಳನ್ನು ಹೇಳುತ್ತೇನೆ... ಎಲ್ಲಿಯವರೆಗೆ ಭಿಕ್ಷುಗಳು ಶ್ರದ್ಧಾವಂತರಾಗಿರುತ್ತಾರೋ... ಕೆಟ್ಟುದಕ್ಕೆ ನಾಚುತ್ತಾರೋ... ಕೆಟ್ಟುದನ್ನು ಮಾಡಲು ಭಯಪಡುತ್ತಾರೋ... ಬಹುಶ್ರುತರಾಗಿರುತ್ತಾರೋ... ವೀರ್ಯವಂತರಾಗಿರುತ್ತಾರೋ... ಬಹು ಚುರುಕಾದ ಸ್ಮೃತಿಯನ್ನು ಹೊಂದಿರುತ್ತಾರೋ... ಪಞ್ಞಾವಂತರಾಗಿರುತ್ತಾರೋ... ಅಲ್ಲಿಯವರೆಗೆ ಅವರು ವೃದ್ಧಿಯನ್ನು ಹೊಂದುತ್ತಿರುತ್ತಾರೆ, ಅವರಿಗೆ ಅವನತಿ ಇರುವುದಿಲ್ಲ. ಎಲ್ಲಿಯವರೆಗೆ ಭಿಕ್ಷುಗಳು ಈ ಏಳು ನಿಯಮಗಳನ್ನು ಪಾಲಿಸುತ್ತಾರೋ ಈ ಏಳು ನಿಯಮಗಳನ್ನು ತಪ್ಪದೆ ಅನುಸರಿಸುತ್ತಾರೋ ಅಲ್ಲಿಯವರೆಗೆ ವೃದ್ಧಿಯನ್ನು ಹೊಂದುತ್ತಿರುತ್ತಾರೆ; ಅವರಿಗೆ ಅವನತಿ ಇರುವುದಿಲ್ಲ.
“ಮತ್ತೆ ಭಿಕ್ಷುಗಳೇ, ಹಾನಿಯನ್ನು ತಪ್ಪಿಸುವ ಏಳು ನಿಯಮಗಳನ್ನು ಹೇಳುತ್ತೇನೆ. ನೀವು ಮನಸ್ಸಿಟ್ಟು ಕೇಳುವುದು ಒಳ್ಳೆಯದು.”
“ಆಗಲಿ ಭಂತೆ” ಎಂದು ಭಿಕ್ಷುಗಳು ಭಗವಾನರಿಗೆ ಹೇಳಿದರು. ಆಮೇಲೆ ಭಗವಾನರು ಹೀಗೆಂದರು: “ಎಲ್ಲಿಯವರೆಗೆ ಭಿಕ್ಷುಗಳು ಸತಿ ಸಂಭೋಜ್ಝಂಗವನ್ನು ಬೆಳೆಸಿಕೊಳ್ಳುತ್ತಿರುತ್ತಾರೋ... ಧಮ್ಮ ವಿನಯ ಸಂಭೋಜ್ಝಂಗವನ್ನು ಸಂಪಾದಿಸಲು ನಿರತರಾಗುತ್ತ ವೀರ್ಯ ಸಂಭೋಜ್ಝಂಗವನ್ನು ಸಂಪಾದಿಸಲು ನಿರತರಾಗುತ್ತಾರೋ... ಪ್ರೀತಿ ಸಂಭೋಜ್ಝಂಗವನ್ನು ಪಡೆಯಲು ಶ್ರಮಿಸುತ್ತಾರೋ... ಪಸ್ಸದ್ಧಿ ಸಂಭೋಜ್ಝಂಗವನ್ನು ಸಾಧಿಸಲು ನಿರತರಾಗುತ್ತಾರೋ ಸಮಾಧಿ ಸಂಭೋಜ್ಝಂಗದ ಸಾಧನೆಯಲ್ಲಿ ತೊಡಗುತ್ತಾರೋ ಅಲ್ಲಿಯವರೆಗೆ ಅವರು ವೃದ್ಧಿಯನ್ನು ಹೊಂದುತ್ತಿರುತ್ತಾರೆ; ಹಾನಿಯನ್ನು ಹೊಂದುವುದಿಲ್ಲ.
“ಎಲ್ಲಿಯವರೆಗೆ ಭಿಕ್ಷುಗಳು ಈ ಏಳು ನಿಯಮಗಳನ್ನು ಪಾಲಿಸುತ್ತಾರೋ ತಪ್ಪದೆ ಅನುಸರಿಸುತ್ತಾರೋ ಅಲ್ಲಿಯವರೆಗೆ ಭಿಕ್ಷುಗಳು ವೃದ್ಧಿಯನ್ನು ಹೊಂದುತ್ತಿರುತ್ತಾರೆ; ಅವರಿಗೆ ಹಾನಿ ಇರುವುದಿಲ್ಲ.
“ಭಿಕ್ಷುಗಳೇ, ಹಾನಿಯನ್ನು ತಪ್ಪಿಸುವ ಇನ್ನೂ ಏಳು ನಿಯಮಗಳನ್ನು ಹೇಳುತ್ತೇನೆ. ಮನಸ್ಸಿಟ್ಟು ಅವುಗಳನ್ನು ಕೇಳುವುದು ಒಳ್ಳೆಯದು.”
“ಹಾಗೆಯೇ ಆಗಲಿ ಭಂತೆ” ಎಂದು ಆ ಭಿಕ್ಷುಗಳು ಭಗವಾನರಿಗೆ ಹೇಳಿದರು.
“ಎಲ್ಲಿಯವರೆಗೆ ಭಿಕ್ಷುಗಳು ಅನಿಚ್ಚವನ್ನು ಕುರಿತು ಧ್ಯಾನಿಸುತ್ತಿರುವರೋ... ಅನತ್ತವನ್ನು ಕುರಿತು ಧ್ಯಾನಿಸುತ್ತಿರುವರೋ... ಅಶುಭವನ್ನು ಕುರಿತು ಧ್ಯಾನಿಸುತ್ತಿರುವರೋ... ಅಪಾಯಗಳನ್ನು ಕುರಿತು ಧ್ಯಾನಿಸುತ್ತರುವರೋ... ಅವುಗಳನ್ನು ದೂರೀಕರಿಸುವ ಅವಶ್ಯಕತೆಯನ್ನು ಕುರಿತು ಚಿಂತಿಸುತ್ತಿರುವರೋ... ವಿರಾಗ (ರಾಗವಿಲ್ಲದಿರುವ ಸ್ಥಿತಿಯನ್ನು)ವನ್ನು ಕುರಿತು ಚಿಂತಿಸುತ್ತಿರುವರೋ... ನಿರೋಧವನ್ನು ಕುರಿತು ಚಿಂತಿಸುತ್ತಿರುವರೋ ಅಲ್ಲಿಯವರೆಗೆ ಅವರು ವೃದ್ಧಿಯನ್ನು ಹೊಂದುತ್ತಲೇ ಇರುತ್ತಾರೆ; ಅವರಿಗೆ ಅಪಾಯವಿರುವುದಿಲ್ಲ.
“ಎಲ್ಲಿಯವರೆಗೆ ಭಿಕ್ಷುಗಳು ಈ ಏಳು ನಿಯಮಗಳನ್ನು ಪಾಲಿಸುತ್ತಾರೋ, ತಪ್ಪದೆ ಅನುಸರಿಸುತ್ತಾರೋ, ಅಲ್ಲಿಯವರೆಗೆ ಅವರು ವೃದ್ಧಿಯನ್ನು ಹೊಂದುತ್ತಲೇ ಇರುತ್ತಾರೆ; ಅವರಿಗೆ ಹಾನಿಯಾಗುವುದಿಲ್ಲ.
“ಭಿಕ್ಷುಗಳೇ, ಹಾನಿಯನ್ನು ತಪ್ಪಿಸುವ ಆರು ನಿಯಮಗಳನ್ನು ತಿಳಿಸುತ್ತೇನೆ. ಮನಸ್ಸಿಟ್ಟು ಅವುಗಳನ್ನು ಕೇಳುವುದು ಒಳ್ಳೆಯದು.”
“ಆಗಲಿ ಭಂತೆ” ಎಂದು ಆ ಭಿಕ್ಷುಗಳು ಭಗವಾನರಿಗೆ ಹೇಳಿದರು. ಭಗವಾನರು ಇಂತೆಂದರು:
“ಎಲ್ಲಿಯವರಗೆ ಭಿಕ್ಷುಗಳು ಜೊತೆಯ ಬ್ರಹ್ಮಚಾರಿಗಳಲ್ಲಿ ಮೈತ್ರಿಯಿಂದ ನಡೆದುಕೊಳ್ಳುತ್ತಿದ್ದು, ಆ ಮೈತ್ರಿಯನ್ನು ಒಳಗೂ ಹೊರಗೂ ಬೆಳೆಸಿಕೊಳ್ಳುತ್ತಿರುತ್ತಾರೋ ಅಲ್ಲಿಯವರೆಗೆ ಅವರು ವೃದ್ಧಿಯನ್ನು ಹೊಂದುತ್ತಿರುತ್ತಾರೆ; ಅವರಿಗೆ ಹಾನಿಯಿರುವುದಿಲ್ಲ.
“ಎಲ್ಲಿಯವರೆಗೆ ಭಿಕ್ಷುಗಳು ತಮ್ಮ ಜೊತೆಯ ಬ್ರಹ್ಮಚಾರಿಗಳೊಂದಿಗೆ ಮೈತ್ರಿಯುತವಾದ ಮಾತುಗಳನ್ನಾಡುತ್ತಾ ಆ ಮೈತ್ರಿಯನ್ನು ಒಳಗೂ ಹೊರಗೂ ಬಳಸಿಕೊಳ್ಳುತ್ತಿರುತ್ತಾರೋ....
“ಎಲ್ಲಿಯವರಗೆ ಭಿಕ್ಷುಗಳು ತಮ್ಮ ಜೊತೆಯ ಬ್ರಹ್ಮಚಾರಿಗಳ ಬಗೆಗೆ ಮನಸ್ಸಿನಲ್ಲಿ ಮೈತ್ರಿ ಭಾವನೆಯಿಂದಿದ್ದು ತಾವೇ ಇದ್ದಾಗಲೂ ಬೇರೆ ಜನರಿದ್ದಾಗಲೂ ಆ ಮೈತ್ರಿಯನ್ನು ತೋರಿಸುತ್ತಿರುತ್ತಾರೋ ಅಲ್ಲಿಯವರೆಗೆ ಅವರು ವೃದ್ಧಿಯನ್ನು ಹೊಂದುತ್ತಿರುತ್ತಾರೆ; ಅವರಿಗೆ ಹಾನಿಯುಂಟಾಗುವುದಿಲ್ಲ.
“ಎಲ್ಲಿಯವರೆಗೆ ಭಿಕ್ಷುಗಳು ತಮಗೆ ದೊರೆತುದನ್ನು ಪಿಂಡಪಾತ್ರೆಯಾಗಿರಬಹುದು, ಉಣಿಸಾಗಿರಬಹುದು. ತಮ್ಮ ಜೊತೆಯಲ್ಲಿಯ ಧರ್ಮಪಾಲಿತರಲ್ಲಿಯೂ, ಶೀಲವಂತರೆಲ್ಲರಲ್ಲಿಯೂ, ಬ್ರಹ್ಮಚಾರಿಗಳೆಲ್ಲರಲ್ಲಿಯೂ ಸಮನಾಗಿ ಹಂಚಿಕೊಳ್ಳುತ್ತಿರುತ್ತಾರೆಯೋ ಅಲ್ಲಿಯವರೆಗೆ ಅವರು ವೃದ್ಧಿಯನ್ನು ಹೊಂದುತ್ತಿರುತ್ತಾರೆ; ಅವರಿಗೆ ಹಾನಿಯುಂಟಾಗುವುದಿಲ್ಲ.
“ಎಲ್ಲಿಯವರೆಗೆ ಭಿಕ್ಷುಗಳು ಶೀಲವನ್ನು ಅರಿತು ಪಾಲಿಸುತ್ತಿರುವವರೊಂದಿಗೆ, ಫಲವನ್ನು ಕೊಡುವ ತಿಳಿದವರು ಶ್ಲಾಘಿಸುವ ರಾಗಮೋಹರಹಿತವಾದ ಸಮಾಧಿಯನ್ನು ಪಡೆಯಲು ಸಹಾಯಕವಾಗುವ ಬ್ರಹ್ಮಚಾರಿಗಳೊಂದಿಗೆ ಶೀಲಗಳನ್ನು ಅಖಂಡವಾಗಿ ಯಾವ ಕೊರತೆಯೂ ಇಲ್ಲದಂತೆ ಪೂರ್ಣ ಶ್ರಮದಿಂದ ಪಾಲಿಸುತ್ತಿರುತ್ತಾರೋ ಅಲ್ಲಿಯವರೆಗೆ ಅವರು ವೃದ್ಧಿಯನ್ನು ಹೊಂದುತ್ತಿರುತ್ತಾರೆ; ಅವರಿಗೆ ಹಾನಿಯಿರುವುದಿಲ್ಲ.
“ಎಲ್ಲಿಯವರೆಗೆ ಭಿಕ್ಷುಗಳು ದುಃಖದೆಡೆಗೆ ಕೊಂಡೊಯ್ಯುವ ಶ್ರೇಷ್ಠವಾದ ದೃಷ್ಟಿಯನ್ನು ಬೆಳೆಸಿಕೊಳ್ಳುತ್ತಿರುತ್ತಾರೋ ಅಂಥ ದೃಷ್ಟಿಯನ್ನು ಬೆಳೆಸಿಕೊಂಡಿರುವವರ ಮತ್ತು ಬ್ರಹ್ಮಚಾರಿಗಳ ಸಂಗಡ ವಾಸಿಸುತ್ತಾ ಅವುಗಳನ್ನು ಬೆಳೆಸಿಕೊಳ್ಳುತ್ತಿರುತ್ತಾರೋ ಅಲ್ಲಿಯವರೆಗೆ ಅವರು ವೃದ್ಧಿಯನ್ನು ಹೊಂದುತ್ತಿರುತ್ತಾರೆ; ಅವರಿಗೆ ಹಾನಿಯುಂಟಾಗುವುದಿಲ್ಲ.
“ಎಲ್ಲಿಯವರೆಗೆ ಭಿಕ್ಷುಗಳು ಈ ಆರು ನಿಯಮಗಳನ್ನು ಪಾಲಿಸುತ್ತಾರೋ, ತಪ್ಪದೆ ಅನುಸರಿಸುತ್ತಾರೋ ಅಲ್ಲಿಯವರೆಗೆ ಅವರು ವೃದ್ಧಿಯನ್ನು ಹೊಂದುತ್ತಿರುತ್ತಾರೆ; ಅವರಿಗೆ ಹಾನಿಯುಂಟಾಗುವುದಿಲ್ಲ.”
ರಾಜಗಹದ ಗಿಜ್ಝಕೂಟ ಪರ್ವತದಲ್ಲಿ ವಾಸಿಸುತ್ತಿದ್ದ ಆ ಸಮಯದಲ್ಲಿ ಭಗವಾನರು ಅನೇಕಾನೇಕ ಭಿಕ್ಷುಗಳಿಗೆ ಧಮ್ಮವನ್ನು ವಿವರಿಸುತ್ತಿದ್ದರು. ಇದು ಶೀಲ, ಇದು ಸಮಾಧಿ, ಇದು ಪಞ್ಞಾ, ಶೀಲವನ್ನು ಪರಿಪಾಲಿಸುವವರು ಸಮಾಧಿಯ ಮಹಾಫಲವನ್ನೂ, ಸಮಾಧಿಯನ್ನು ಸಾಧಿಸಿದವರು ಪಞ್ಞಾದ ಮಹಾ ಫಲವನ್ನೂ ಪಡೆಯುತ್ತಾರೆ. ಪಞ್ಞಾವನ್ನು ಗಳಿಸುವವರು ಪರಿಶುದ್ಧವಾದ ಚಿತ್ತವನ್ನು ಹೊಂದಿ ಆಸವಗಳಿಂದ ವಿಮುಕ್ತಿಯನ್ನು ಪಡೆಯುತ್ತಾರೆ. ಕಾಮಾಸವ, ಭವಾಸವ, ಅವಿಜ್ಜಾಸವಗಳಿಂದ ಮುಕ್ತವಾಗುವ ಅತ್ಯುತ್ತಮವಾದ ಸ್ಥಿತಿಯನ್ನು ಹೊಂದಿರುತ್ತಾರೆ.
ಭಗವಾನರು ರಾಜಗೃಹದಲ್ಲಿ ಇಷ್ಟವಿದ್ದಷ್ಟು ಕಾಲ ತಂಗಿದ್ದು ಆಮೇಲೆ ಆಯುಷ್ಮಂತನಾದ ಆನಂದನನ್ನು ಕರೆದು ಹೀಗೆ ಹೇಳಿದರು- “ಬಾ ಆನಂದ, ಅಂಬಲಟ್ಠಿಕಕ್ಕೆ ಹೋಗೋಣ.”
“ಹಾಗೆಯೇ ಆಗಲಿ ಭಂತೆ” ಎಂದು ಆಯುಷ್ಮಂತನಾದ ಆನಂದನು ಭಗವಾನರಿಗೆ ಹೇಳಿದನು. ಭಗವಾನರು ಒಂದು ದೊಡ್ಡ ಭಿಕ್ಷು ಸಮೂಹದೊಂದಿಗೆ ಅಂಬಲಟ್ಠಿಕಕ್ಕೆ ಹೋದರು. ಅಲ್ಲಿ ರಾಜನ ಛತ್ರದಲ್ಲಿ ಭಿಕ್ಷುಗಳೊಂದಿಗೆ ತಂಗಿದರು. ಅಂಬಲಟ್ಠಕದಲ್ಲಿ ರಾಜನ ಛತ್ರದಲ್ಲಿದ್ದಾಗ ಬಹುಸಂಖ್ಯೆಯ ಭಿಕ್ಷುಗಳಿಗೆ ಧಮ್ಮವನ್ನು ವಿವರಿಸಿದರು. ‘ಇದು ಶೀಲ, ಇದು ಸಮಾಧಿ, ಇದು ಪಞ್ಞಾ. ಶೀಲವನ್ನು ಪರಿಪಾಲಿಸುವವರು ಸಮಾಧಿಯ ಮಹಾಫಲವನ್ನೂ, ಸಮಾಧಿಯನ್ನು ಸಾಧಿಸುವವರು ಪಞ್ಞಾದ ಮಹಾ ಫಲವನ್ನೂ ಪಡೆಯುತ್ತಾರೆ. ಪಞ್ಞಾವನ್ನು ಗಳಿಸುವವರು ಪರಿಶುದ್ಧವಾದ ಚಿತ್ತವನ್ನು ಹೊಂದಿ, ಆಸವಗಳಿಂದ ವಿಮುಕ್ತಿಯನ್ನು ಪಡೆಯುತ್ತಾರೆ. ಕಾಮಾಸವ, ಭವಾಸವ, ಅವಿಜ್ಜಾಸವಗಳಿಂದ ಮುಕ್ತವಾಗುವ ಅತ್ಯುತ್ತಮ ಸ್ಥಿತಿಯನ್ನು ಪಡೆಯುತ್ತಾರೆ.
ಭಗವಾನರು ಅಂಬಲಟ್ಠಿಕದಲ್ಲಿ ಇಷ್ಟವಿದ್ದಷ್ಟು ಕಾಲ ತಂಗಿದ್ದು, ಆಮೇಲೆ ಆಯುಷ್ಮಂತನಾದ ಆನಂದನನ್ನು ಕುರಿತು ಇಂತೆಂದರು: “ಬಾ ಆನಂದ, ನಾಲಂದಕ್ಕೆ ಹೋಗೋಣ.”
“ಹಾಗೆಯ ಆಗಲಿ ಭಂತೆ” ಎಂದು ಆಯುಷ್ಮಂತ ಆನಂದನು ಭಗವಾನರಿಗೆ ಹೇಳಿದನು. ಆಮೇಲೆ ಒಂದು ದೊಡ್ಡ ಭಿಕ್ಷು ಸಮೂಹದೊಂದಿಗೆ ನಾಲಂದಕ್ಕೆ ಹೋದರು. ಭಗವಾನರು ಪಾವಾರಿಕನ ಆಮ್ರವನದಲ್ಲಿ ತಂಗಿದರು.
ಸಾರಿಪುತ್ರನ ಸಿಂಹನಾದ
ಅನಂತರ ಆಯುಷ್ಮಂತ ಸಾರಿಪುತ್ತನು ಭಗವಾನರಲ್ಲಿಗೆ ಬಂದನು. ಅವರಿಗೆ ಅಭಿವಂದಿಸಿ ಒಂದುಕಡೆ ಕುಳಿತುಕೊಂಡನು. ಆಮೇಲೆ ಭಗವಾನರನ್ನು ಕುರಿತು ಇಂತೆಂದನು: “ಭಗವಂತ, ಭಗವಾನರಿಗಿಂತ ಶ್ರೇಷ್ಠನಾದ ಅಥವಾ ಹೆಚ್ಚು ತಿಳಿದವನಾದ ಸಮಣನಾಗಲೀ, ಬ್ರಾಹ್ಮಣನಾಗಲೀ ಹಿಂದೆ ಇದ್ದಿರಲಿಲ್ಲ, ಇಂದು ಇಲ್ಲ, ಮುಂದೆ ಇರುವುದಿಲ್ಲ ಎಂದು ತಿಳಿದಿದ್ದೇನೆ; ಸಂಬೋಧಿಯನ್ನು ಪಡೆದವರೂ ಇಲ್ಲ.”
“ಸಾರಿಪುತ್ತ, ನೀನು ನುಡಿದ ಮಾತುಗಳು ತುಂಬಾ ಚೆನ್ನಾಗಿವೆ! ತುಂಬ ಧೈರ್ಯದಿಂದ ಹೇಳುತ್ತಿದ್ದೀಯೇ, ಎಂಥ ಸಿಂಹನಾದವನ್ನು ಮಾಡಿಬಿಟ್ಟಿದ್ದೀಯೆ! ನನಗೆ ಇಷ್ಟು ತಿಳಿದಿದೆ. ಭಗವಾನರಿಗಿಂತ ಶ್ರೇಷ್ಠನಾದ ಅಥವಾ ತಿಳಿದವನಾದ ಸಮಣನಾಗಲೀ, ಬ್ರಾಹ್ಮಣನಾಗಲೀ ಹಿಂದೆ ಇದ್ದಿರಲಿಲ್ಲ, ಇಂದು ಇಲ್ಲ, ಮುಂದೆ ಇರುವುದಿಲ್ಲ’ ಎಂದು ಘೋಷಿಸುತ್ತಿರುವೆಯಲ್ಲವೆ? ಹಿಂದೆ ಇದ್ದ ಅರಹಂತರೆಲ್ಲರನ್ನೂ ಸಮ್ಮಾಸಂಬುದ್ಧರೆಲ್ಲರನ್ನೂ ತಿಳಿದು ಅವರ ಚಿತ್ತದಲ್ಲಿರುವುದನ್ನೆಲ್ಲಾ ಅರಿತು ‘ಆ ಭಗವಾನರ ಶೀಲ ಹೀಗಿತ್ತು, ಅವರ ಚಿತ್ತದಲ್ಲಿನ ವಿಚಾರಗಳು ಹೀಗಿದ್ದುವು, ಅವರ ಪಞ್ಞಾ ಹೀಗಿತ್ತು, ಅವರ ಜೀವನ ಹೀಗಿತ್ತು, ಅವರ ವಿಮುಕ್ತಿಯ ಬಗೆ ಹೀಗಿತ್ತು’ ಎಂದು ಹೇಳಬಲ್ಲವನಾಗಿದ್ದೀಯಲ್ಲವೆ?”
“ಹಾಗಲ್ಲ ಭಂತೆ.”
“ಸಾರಿಪುತ್ತ, ಹೋಗಲಿ ಮುಂದೆ ಬರುವ ಅರಹಂತರೆಲ್ಲರನ್ನೂ, ಸಮ್ಮಾಸಂಬುದ್ಧರೆಲ್ಲರನ್ನೂ ತಿಳಿದು ಅವರ ಚಿತ್ತದಲ್ಲಿರುವುದನ್ನು ಅರಿತು ‘ಆ ಭಗವಾನರ ಶೀಲ ಹೀಗಿರುತ್ತದೆ, ಅವರ ಚಿತ್ತದಲ್ಲಿನ ವಿಚಾರಗಳು ಹೀಗಿರುತ್ತವೆ, ಅವರ ಪಞ್ಞಾ ಹೀಗಿರುತ್ತದೆ ಅವರ ಜೀವನ ಹೀಗಿರುತ್ತದೆ. ಅವರ ವಿಮುಕ್ತಿಯ ಬಗೆ ಹೀಗಿರುತ್ತದೆ’ ಎಂಬುದನ್ನು ಹೇಳಬಲ್ಲವನಾಗಿದ್ದೀಯಲ್ಲವೆ ?”
“ಹಾಗಲ್ಲ ಭಂತೆ.”
“ಸಾರಿಪುತ್ತ, ಇಂದಿನ ಕಾಲದ ಅರಹಂತನೂ, ಸಮ್ಮಾಸಂಬುದ್ಧನೂ ಆದ ನನ್ನನ್ನು ತಿಳಿದು ನನ್ನ ಚಿತ್ತದಲ್ಲಿರುವುದನ್ನೆಲ್ಲಾ ಅರಿತು ಭಗವಾನರ ಶೀಲ ಇದು, ಅವರ ಚಿತ್ತದಲ್ಲಿನ ವಿಚಾರಗಳು ಇವು, ಅವರ ಪಞ್ಞಾ ಇದು. ಅವರ ಬದುಕಿನ ಕ್ರಮ ಇದು, ಅವರ ವಿಮುಕ್ತಿಯು ಹೀಗಿದೆ ಎಂದು ಹೇಳಬಲ್ಲವನಾಗಿದ್ದೀಯಲ್ಲವೆ?
“ಸಾರಿಪುತ್ತ, ಹಿಂದಿನ ಮುಂದಾಗುವ ಮತ್ತು ಇಂದು ಇರುವ ಅರಹಂತರ ಮತ್ತು ಸಮ್ಮಾಸಂಬುದ್ಧರ ಚಿತ್ತವನ್ನು ಅರಿಯುವ ಚೇತೋಪರಿಯಾಯಞಾಣವು ನಿನಗಿಲ್ಲ. (ಆದರೂ) ಸಾರಿಪುತ್ತ, ‘ನನಗಿಷ್ಟು ತಿಳಿದಿದೆ, ಭಂತೆ, ನಿಮಗಿಂತ ಶ್ರೇಷ್ಠನೂ, ಹೆಚ್ಚು ತಿಳಿದವನೂ ಆದ ಬೇರೊಬ್ಬ ಸಮಣನಾಗಲೀ, ಬ್ರಾಹ್ಮಣನಾಗಲೀ ಇಲ್ಲ, ಸಂಬೋಧಿಯನ್ನು ಪಡೆದವನಿಲ್ಲ’ ಎಂಬ ಸಿಂಹನಾದವನ್ನು ಮಾಡುತ್ತಿದ್ದೀಯೆ. ತುಂಬ ಧೈರ್ಯದಿಂದ ಕೂಡಿರುವ ಚೆನ್ನಾಗಿ ತೋರುವ ಮಾತುಗಳು ನಿನ್ನ ನಾಲಿಗೆಯಿಂದ ಬರುತ್ತಿವೆ.”
ಭಂತೆ, ಹಿಂದೆ ಆಗಿಹೋದ, ಇಂದು ಇರುವ ಮತ್ತು ಮುಂದೆ ಆಗುವ ಅರಹಂತ ಸಮ್ಮಾಸಂಬುದ್ಧರ ಮನಸ್ಸನ್ನು ತಿಳಿಯುವ ಚೇತೋಪರಿಯಾಯಞಾಣವು ನನಗಿಲ್ಲ. ಆದರೆ ಧಮ್ಮವನ್ನು ಪಾಲಿಸುವವರ ಬಗೆಗೆ ತಿಳಿವಳಿಕೆ ಇದೆ. ಭಂತೆ, ರಾಜನಾದವನು ತನ್ನ ಗಡಿಯಲ್ಲಿರುವ ನಗರದ ಸುತ್ತ ಶತ್ರುಗಳು ಪ್ರವೇಶಿಸದಂತೆ ಬಲವಾದ ತಳಹದಿ ಇರುವ ದುರ್ಗಮವಾದ ಪ್ರಾಕಾರವನ್ನು ಕಟ್ಟಿ, ಒಂದೇ ಒಂದು ದ್ವಾರವನ್ನು ಇಟ್ಟು ಜಾಣನೂ ತಿಳಿದವನೂ ವಿಶ್ವಾಸಾರ್ಹನೂ ಆದ ದ್ವಾರಪಾಲಕನನ್ನಿಟ್ಟು ಅವನಿಗೆ ಗೊತ್ತಿರುವವರಲ್ಲದೆ ಮತ್ತಾರೂ ಅದನ್ನು ಪ್ರವೇಶಿಸಲು ಸಾಧ್ಯವಿಲ್ಲದಂಥ ವ್ಯವಸ್ಥೆಯನ್ನು ಮಾಡುವಂತೆ ನನಗೆ ಧರ್ಮ ರಕ್ಷಣೆಯ ಬಗೆಗೆ ಅರಿವಿದೆ. ಆ ದ್ವಾರಪಾಲಕನು ಆ ಪ್ರಾಕಾರವನ್ನು ಆಗಾಗ ಸುತ್ತಿ ಒಂದು ಬೆಕ್ಕು ಮಾತ್ರ ಪ್ರವೇಶಿಸಬಹುದಾದಷ್ಟು ಸಂದಿ ಹೊರತು ಪ್ರಾಕಾರದ ಮಿಕ್ಕೆಲ್ಲ ವಿವರಗಳನ್ನೂ ತಿಳಿದಿರುತ್ತಾನೆ. ಅವನು ಹೀಗೆಂದುಕೊಳ್ಳುತ್ತಾನೆ- ‘ಯಾವ ದೊಡ್ಡ ಪ್ರಾಣಿಯೇ ಆಗಲೀ, ಈ ನಗರವನ್ನು ಪ್ರವೇಶಿಸಬೇಕಾದರೆ ಅಥವಾ ನಿಷ್ಕ್ರಮಿಸಬೇಕಾದರೆ ಈ ಬಾಗಿಲಿನ ಮೂಲಕ ಮಾತ್ರ ಸಾಧ್ಯವಾಗುತ್ತದೆ. ಹಾಗೆಯೇ ಭಂತೆ, ನನಗೆ ಧಮ್ಮವನ್ನು ಪಾಲಿಸುವವರ ಬಗೆಗೆ ಅರಿವಿದೆ. ಭಂತೆ, ಪಂಚನೀವರಣಗಳನ್ನು ದಾಟಿ ಚಿತ್ತದ ಉಪಕ್ಲೇಶಗಳನ್ನು ಪ್ರಜ್ಞೆಯಿಂದ ದುರ್ಬಲಗೊಳಿಸಿ ನಾಲ್ಕು ಸತಿಪಟ್ಠಾನಗಳಲ್ಲಿ ಚಿತ್ತವನ್ನು ನಿಲ್ಲಿಸಿಕೊಂಡು ಸಪ್ತಬೋಜ್ಝಂಗಗಳನ್ನು ಧ್ಯಾನದ ಮೂಲಕ ಸ್ಪಷ್ಟವಾಗಿ ಅರಿತು ಅನುತ್ತರವಾದ ಸಮ್ಮಾಸಂಬೋಧಿಯನ್ನು ಸಾಕ್ಷಾತ್ಕರಿಸಿಕೊಂಡ ಅರಹಂತರೂ, ಸಮ್ಮಾಸಂಬುದ್ಧರೂ ಆದ ಭಗವಂತರು ಹಿಂದೆ ಇದ್ದರು. ಹಾಗೆಯೇ ಪಂಚನೀವರಣಗಳನ್ನು ದಾಟಿ ಚಿತ್ತದ ಉಪಕ್ಲೇಶಗಳನ್ನು ಪಞ್ಞಾದಿಂದ ದುರ್ಬಲಗೊಳಿಸಿ ನಾಲ್ಕು ಸತಿ ಪಟ್ಠಾನಗಳಲ್ಲಿ ಚಿತ್ತವನ್ನು ನಿಲ್ಲಿಸಿ ಸಪ್ತಭೋಜ್ಝಂಗಗಳನ್ನು ಧ್ಯಾನದ ಮೂಲಕ ಸ್ಪಷ್ಟವಾಗಿ ಅರಿತು ಅನುತ್ತರವಾದ ಸಮ್ಮಾಸಂಬೋಧಿಯನ್ನೂ ಸಾಕ್ಷಾತ್ಕರಿಸಿಕೊಂಡ ಅರಹಂತರೂ, ಸಮ್ಮಾಸಂಬುದ್ಧರೂ ಭಗವಂತರೂ ಮುಂದೆಯೂ ಬರುತ್ತಾರೆ. ಭಂತೆ, ಹಾಗೆಯೇ ಪಂಚನೀವರಣಗಳನ್ನು ದಾಟಿ ಚಿತ್ತದ ಉಪಕ್ಲೇಶಗಳನ್ನು ಪಞ್ಞಾದಿಂದ ದುರ್ಬಲಗೊಳಿಸಿ ನಾಲ್ಕು ಸತಿಪಟ್ಠಾನಗಳಲ್ಲಿ ಚಿತ್ತವನ್ನು ನಿಲ್ಲಿಸಿ ಸಪ್ತಭೋಜ್ಝಂಗಗಳನ್ನು ಧ್ಯಾನದ ಮೂಲಕ ಅರಿತು ಅನುತ್ತರವಾದ ಸಮ್ಮಾಸಂಬೋಧಿಯನ್ನು ಸಾಕ್ಷಾತ್ಕರಿಸಿಕೊಂಡಿರುವ ಅರಹಂತರೂ, ಸಮ್ಮಾಸಂಬುದ್ಧರೂ ಭಗವಂತರೂ ಇಂದೂ ಇದ್ದಾರೆ, ಇವರೆಲ್ಲರನ್ನೂ ನಾನು ಬಲ್ಲೆ.”
ನಾಲಂದದಲ್ಲಿನ ಪಾವಾರಿಕನ ಆಮ್ರವನದಲ್ಲಿದ್ದಾಗ ಭಗವಾನರು ಅಲ್ಲಿಯೂ ಬಹು ಸಂಖ್ಯೆಯ ಭಿಕ್ಷುಗಳಿಗೆ ಧಮ್ಮವನ್ನು ವಿವರಿಸಿದರು- ಶೀಲವು ಹೀಗಿದೆ, ಸಮಾಧಿಯು ಹೀಗಿದೆ, ಪಞ್ಞಾವು ಹೀಗಿದೆ. ಶೀಲವನ್ನು ತಪ್ಪದೆ ಪಾಲಿಸುವುದರಿಂದ ಸಾಮಾಧಿಯ ಮಹಾಫಲವೂ ಮಹಾ ಸುಖವೂ ದೊರೆಯುತ್ತದೆ. ಸಮಾಧಿಯನ್ನು ಸಾಧಿಸುವುದರಿಂದ ಪಞ್ಞಾದ ಮಹಾಫಲವೂ, ಮಹಾ ಸುಖವೂ ದೊರೆಯುತ್ತದೆ. ಪಞ್ಞಾವನ್ನು ಪಡೆಯುವುದರಿಂದ ಕಾಮಾಸವ ಭವಾಸವ ಅವಿಜ್ಜಾಸವಗಳೆಂಬ ಮೂರು ಆಸವಗಳಿಂದ ಚಿತ್ತವು ವಿಮುಕ್ತಿಯನ್ನು ಪಡೆಯುತ್ತದೆ.
ದುಶ್ಶೀಲದ ಅಪಾಯಗಳು
ಭಗವಾನರು ನಾಲಂದದಲ್ಲಿ ಇಚ್ಛೆಯಿದ್ದಷ್ಟು ಕಾಲ ಇದ್ದು, ಆಯುಷ್ಮಂತ ಆನಂದನನ್ನು ಕರೆದು ಹೀಗೆಂದರು- “ಆನಂದ, ಪಾಟಲಿ ಗ್ರಾಮಕ್ಕೆ ಹೋಗೋಣ.” “ಹಾಗೆಯೇ ಆಗಲಿ ಭಂತೆ” ಎಂದು ಆಯುಷ್ಮಂತನಾದ ಆನಂದನು ಭಗವಾನರಿಗೆ ಹೇಳಿದನು. ಆಮೇಲೆ ಭಗವಾನರು ಒಂದು ದೊಡ್ಡ ಭಿಕ್ಷು ಸಂಘದೊಂದಿಗೆ ಪಾಟಲಿಗ್ರಾಮಕ್ಕೆ ಹೋದರು. ಪಾಟಲಿಗ್ರಾಮದ ಉಪಾಸಕರು “ಭಗವಾನರು ಪಾಟಲಿಗ್ರಾಮಕ್ಕೆ ಬಂದಿದ್ದಾರೆ” ಎಂಬುದನ್ನು ಕೇಳಿದರು. ಅವರು ಭಗವಾನರಲ್ಲಿಗೆ ಹೋದರು. ಹೋದಮೇಲೆ ಭಗವಾನರಿಗೆ ಅಭಿವಂದಿಸಿ ಒಂದುಕಡೆ ಕುಳಿತುಕೊಂಡರು. ಭಗವಾನರಿಗೆ “ಭಂತೆ, ತಾವು ನಮ್ಮ ವಿಶ್ರಾಂತಿ ಗೃಹದಲ್ಲಿ ಉಳಿದುಕೊಳ್ಳಿ” ಎಂದರು. ಅಲ್ಲಿ ತಂಗಲು ಭಗವಾನರು ಮೌನದಿಂದ ತಮ್ಮ ಸಮ್ಮತಿಯನ್ನು ಸೂಚಿಸಿದರು. ಅದನ್ನು ಅರ್ಥ ಮಾಡಿಕೊಂಡ ಆ ಪಾಟಲಿಗ್ರಾಮದ ಉಪಾಸಕರು ಎದ್ದು ಪ್ರದಕ್ಷಿಣೆಯನ್ನು ಮಾಡಿ ವಿಶ್ರಾಂತಿ ಗೃಹದ ಕಡೆಗೆ ಹೋದರು. ಆ ವಿಶ್ರಾಂತಿ ಗೃಹದ ನೆಲದ ಮೇಲೆಲ್ಲಾ ಹೊಸದಾಗಿ ತಂದ ಮರಳನ್ನು ಹರಡಿ ಆಸನಗಳನ್ನು ಅಣಿಮಾಡಿ ನೀರಿನ ಪಾತ್ರೆಯನ್ನು ತಕ್ಕ ಸ್ಥಳದಲ್ಲಿಟ್ಟು ತೈಲದೀಪವನ್ನು ಸರಿಯಾದ ಕಡೆ ಇಟ್ಟು ಭಗವಾನರಲ್ಲಿಗೆ ಬಂದು ಒಂದುಕಡೆ ನಿಂತುಕೊಂಡರು. ಆಮೇಲೆ ಭಗವಾನರನ್ನು ಕುರಿತು ಇಂತೆಂದರು; “ಭಂತೆ, ವಿಶ್ರಾಂತಿ ಗೃಹವನ್ನೆಲ್ಲಾ ಸಿದ್ಧಗೊಳಿಸಿದ್ದೇವೆ. ಆಸನಗಳನ್ನು ಅಣಿ ಮಾಡಿದ್ದೇವೆ. ನೀರಿನ ಪಾತ್ರೆಯನ್ನು ತಕ್ಕ ಸ್ಥಳದಲ್ಲಿಟ್ಟಿದ್ದೇವೆ. ತೈಲದೀಪವನ್ನು ಸರಿಯಾದ ಕಡೆ ಇಟ್ಟಿದ್ದೇವೆ. ಮುಂದಿನದನ್ನು ನಿರ್ಧರಿಸಲು ಇದು ಸರಿಯಾದ ಕಾಲವಾಗಿದೆ.” ಆ ಸಾಯಂಕಾಲ ತಮ್ಮ ವಸ್ತ್ರಗಳನ್ನು ಹಾಕಿಕೊಂಡು ಪಾತ್ರೆ ಚೀವರಗಳೊಂದಿಗೆ ಭಿಕ್ಷುಸಂಘದೊಡನೆ ವಿಶ್ರಾಂತಿ ಗೃಹಕ್ಕೆ ಹೋದರು. ತಮ್ಮ ಪಾದಗಳನ್ನು ತೊಳೆದುಕೊಂಡು ವಿಶ್ರಾಂತಿ ಗೃಹವನ್ನು ಪ್ರವೇಶಿಸಿದರು. ಮಧ್ಯದ ಕಂಬದಡಿಯಲ್ಲಿ ಪೂರ್ವಾಭಿಮುಖವಾಗಿ ಕುಳಿತರು. ಭಿಕ್ಷು ಸಂಘದವರು ತಾವೂ ಪಾದಗಳನ್ನು ತೊಳೆದುಕೊಂಡು ವಿಶ್ರಾಂತಿ ಗೃಹವನ್ನು ಪ್ರವೇಶಿಸಿ ಪಶ್ಚಿಮ ದಿಕ್ಕಿನ ಗೋಡೆಯ ಹತ್ತಿರ ಪೂರ್ವಾಭಿಮುಖವಾಗಿ ಭಗವಾನರ ಸುತ್ತ ಕುಳಿತರು; ಪಾಟಲಿಗಾಮದ ಉಪಾಸಕರು ತಮ್ಮ ಕಾಲುಗಳನ್ನು ತೊಳೆದುಕೊಂಡು ವಿಶ್ರಾಂತಿ ಗೃಹವನ್ನು ಪ್ರವೇಶಿಸಿ ಪೂರ್ವದಿಕ್ಕಿನ ಗೋಡೆಯ ಹತ್ತಿರ ಪಶ್ಚಿಮಾಭಿಮುಖವಾಗಿ ಭಗವಾನರ ಸುತ್ತು ಕುಳಿತರು.
ಆಮೇಲೆ ಭಗವಾನರು ಪಾಟಲಿಗಾಮದ ಉಪಾಸಕರನ್ನು ಕುರಿತು ಹೀಗೆಂದರು- “ಗೃಹಪತಿಗಳೇ, ಶೀಲವನ್ನು ಪಾಲಿಸದವರು ಐದು ನಷ್ಟಗಳನ್ನು ಅನುಭವಿಸುತ್ತಾರೆ. ಆ ಐದು ಯಾವುವು? ಗೃಹಪತಿಗಳೇ, ಶೀಲವನ್ನು ಪಾಲಿಸದ ದುಶ್ಶೀಲನು ಎಚ್ಚರಿಕೆ ತಪ್ಪಿದವನಾಗುವುದರಿಂದ ಮಹತ್ತಾದ ಭೋಗದಿಂದ ವಂಚಿತನಾಗುತ್ತಾನೆ. ಇದು ಅಂಥವನು ಅನುಭವಿಸಿದ ಮೊದಲನೆಯ ನಷ್ಟ.
“ಮತ್ತೆ ಗೃಹಪತಿಗಳೇ, ಶೀಲವನ್ನು ಪಾಲಿಸದ ದುಶ್ಶೀಲನು ಪಾಪಿ ಎಂಬ ದುಕ್ಕೀರ್ತಿಗೆ ಒಳಗಾಗುತ್ತಾನೆ. ಇದು ಶೀಲವನ್ನು ಪಾಲಿಸದ ದುಶ್ಶೀಲನು ಅನುಭವಿಸುವ ಎರಡನೆಯ ನಷ್ಟ.
“ಪುನಃ ಗೃಹಪತಿಗಳೇ, ಶೀಲವನ್ನು ಪಾಲಿಸದ ದುಶ್ಶೀಲನು ಯಾವುದಾದರೂ ಸಮೂಹಕ್ಕೆ ಹೋದಾಗ ಅಂದರೆ ಕ್ಷತ್ರಿಯ ಸಮೂಹವನ್ನಾಗಲೀ ಬ್ರಾಹ್ಮಣ ಸಮೂಹವನ್ನಾಗಲೀ ಗೃಹಪತಿಗಳ ಸಮೂಹವನ್ನಾಗಲೀ ಸಮಣರ ಸಮೂಹವನ್ನಾಗಲೀ ಸೇರಿದಾಗ ಮಂಕು ಹಿಡಿದವನಂತೆ ತಿಳಿವಳಿಕೆ ಇಲ್ಲದವನಂತೆ ವರ್ತಿಸುತ್ತಾರೆ. ಇದು ಆ ದುಶ್ಶೀಲನು ಅನುಭವಿಸುವ ಮೂರನೆಯ ನಷ್ಟ.
“ಪುನಃ ಗೃಹಪತಿಗಳೇ, ಶೀಲವನ್ನು ಪಾಲಿಸದ ದುಶ್ಶೀಲನು ಸಾಯುವಾಗ ಕಾತುರತೆ ಕಳವಳಗಳಿಂದ ಕೂಡಿರುತ್ತಾನೆ. ಇದು ಅಂಥ ದುಶ್ಶೀಲನು ಅನುಭವಿಸುವ ನಾಲ್ಕನೆಯ ಹಾನಿ.
“ಗೃಹಪತಿಗಳೇ, ಶೀಲವನ್ನು ಹಾಳುಮಾಡಿಕೊಂಡಿರುವ ದುಶ್ಶೀಲನು ಕಾಯದಿಂದ ಬೇರೆಯಾಗಿ ಮರಣಾನಂತರ ‘ಅಪಾಯ’, ‘ದುಗ್ಗತಿ’, ‘ವಿನಿಪಾತ’ ಮತ್ತು ‘ನಿರಯ’ವೆಂಬ ಲೋಕಗಳಲ್ಲಿ ಒಂದರಲ್ಲಿ ಹುಟ್ಟುತ್ತಾನೆ. ಇದು ದುಶ್ಶೀಲನಾದವನಿಗೆ ಆಗುವ ಐದನೆಯ ಹಾನಿ. ಗೃಹಪತಿಗಳೇ, ಶೀಲವನ್ನು ಪಾಲಿಸದ ದುಶ್ಶೀಲನಾದವನಿಗೆ ಆಗುವ ಐದು ಹಾನಿಗಳು ಇವು.
ಶೀಲವಂತನ ಆಚರಣೆಗಳು
“ಶೀಲವನ್ನು ಪಾಲಿಸುವವರು, ಗೃಹಪತಿಗಳೇ, ಐದು ಬಗೆಯ ಲಾಭಗಳನ್ನು ಪಡೆಯುತ್ತಾರೆ. ಆ ಐದು ಯಾವುವು” ಶೀಲಸಂಪನ್ನನಾದವನು ಎಚ್ಚರಿಕೆಯಿಂದಿರುವವನಾಗಿ ಮಹತ್ತಾದ ಭೋಗವನ್ನನುಭವಿಸುತ್ತಾನೆ. ಇದು ಶೀಲವಂತನು ಪಡೆಯುವ ಮೊದಲನೆಯ ಲಾಭ.
“ಮತ್ತೆ, ಗೃಹಪತಿಗಳೇ, ಶೀಲವಂತನು ಸತ್ಕೀರ್ತಿಯನ್ನು ಪಡೆಯುತ್ತಾನೆ. ಇದು ಶೀಲವಂತನ ಎರಡನೆಯ ಲಾಭ.
“ಮತ್ತೆ ಗೃಹಪತಿಗಳೇ, ಶೀಲವಂತನಾದವನು ಕ್ಷತ್ರಿಯರು, ಬ್ರಾಹ್ಮಣರು, ಗೃಹಪತಿಗಳು, ಸಮಣರು ಮುಂತಾದ ಗಣ್ಯರ ಸಮೂಹವನ್ನು ಸೇರಿದಾಗ ಯಾವರೀತಿಯ ಭಯವೂ ಇಲ್ಲದೆ ಜಾಣನಂತೆಯೇ ಪರಿಗಣಿಸಲ್ಪಡುತ್ತಾನೆ. ಶೀಲ ಸಂಪನ್ನನಾದವನು ಪಡೆಯುವ ಮೂರನೆಯ ಲಾಭ ಇದು.
“ಶೀಲವಂತನಾದವನಿಗೆ ಮರಣದ ಸಮಯದಲ್ಲಿ ಯಾವ ಕಳಕಳ ಕಾತುರತೆಗಳೂ ಇರುವುದಿಲ್ಲ. ಇದು ಶೀಲಸಂಪನ್ನನು ಪಡೆಯುವ ನಾಲ್ಕನೆಯ ಲಾಭ.
“ಗೃಹಪತಿಗಳೇ, ಶೀಲವಂತನಾದವನು ಕಾಯದಿಂದ ಬೇರೆಯಾಗಿ ಮರಣ ಹೊಂದಿದ ಮೇಲೆ ಸುಗತಿಯನ್ನು ಪಡೆಯುತ್ತಾನೆ. ಸ್ವರ್ಗ ಲೋಕದಲ್ಲಿ ಹುಟ್ಟುತ್ತಾನೆ. ಇದು ಶೀಲಸಂಪನ್ನನು ಪಡೆಯುವ ಐದನೆಯ ಲಾಭ.”
ಭಗವಾನರು ಪಾಟಲಿಗಾಮದ ಉಪಾಸಕರಿಗೆ ಈ ರೀತಿ ಧಮ್ಮವನ್ನು ವಿವರಿಸಿ ಅವರನ್ನು ಸ್ಫೂರ್ತಿಗೊಳಿಸಿ, ಉತ್ತೇಜನಗೊಳಿಸಿ, ಸಂತೋಷಗೊಳಿಸಿ, ಉತ್ಸಾಹಗೊಳಿಸಿದರು. ಆಗ ರಾತ್ರಿ ಬಹಳ ಹೊತ್ತಾಗಿತ್ತು. ಗೃಹಪತಿಗಳೇ, ರಾತ್ರಿ ಬಹಳ ಹೊತ್ತಾಗಿದೆ, ನೀವು ನಿಮಗೆ ಉಚಿತವಾಗಿ ತೋರಿದಂತೆ ಮಾಡಬಹುದು” ಎಂದು ಹೇಳಿ ಅವರನ್ನು ಕಳಿಸಿದರು.
“ಹಾಗೆಯೇ ಆಗಲಿ ಭಂತೆ” ಎಂದು ಪಾಟಲಿಗಾಮದ ಉಪಾಸಕರು ಭಗವಾನರಿಗೆ ಉತ್ತರವಿತ್ತು ಆಸನಗಳಿಂದ ಎದ್ದು ಭಗವಾನರಿಗೆ ಅಭಿವಂದಿಸಿ ಪ್ರದಕ್ಷಿಣೆಯನ್ನು ಮಾಡಿ ಅಲ್ಲಿಂದ ಹೊರಟು ಹೋದರು. ಸ್ವಲ್ಪಹೊತ್ತಾದ ಮೇಲೆ ಭಗವಾನರು ಪಾಟಲಿಗಾಮದ ಉಪಾಸಕರು ಅವರಿಗಾಗಿ ಕಟ್ಟಿಕೊಟ್ಟಿದ್ದ ಕುಟೀರಕ್ಕೆ ಹೋದರು.
ಪಾಟಲಿಪುತ್ರ ನಗರ ನಿರ್ಮಾಣ
ಆ ಸಮಯದಲ್ಲಿ ಮಗಧದ ಮಹಾಮಾತ್ಯರಾದ ಸುನಿಧ ಮತ್ತು ವಸ್ಸಕಾರರು ವಜ್ಜಿಗಳು ನಗರವನ್ನು ಪ್ರವೇಶಿಸದಂತೆ ಪಾಟಲಿಗಾಮವನ್ನು ನಗರವನ್ನಾಗಿ ಮಾಡುತ್ತಿದ್ದರು. ಆಗ ಪಾಟಲಿಗಾಮದ ಪ್ರದೇಶದಲ್ಲಿ ಅನೇಕ ಸಾವಿರ ದೇವತೆಗಳು ತುಂಬಿಕೊಂಡಿದ್ದರು. ಯಾವ ಪ್ರದೇಶದಲ್ಲಿ ಅಂಥ ಮಹಾಶಕ್ತರಾದ ದೇವತೆಗಳು ತುಂಬಿರುತ್ತಿದ್ದರೋ ಆ ನಿವೇಶನದಲ್ಲಿ ಕಟ್ಟಡಗಳನ್ನು ಕಟ್ಟಿಸುವಂತೆ ಮಹಾಶಕ್ತರಾದ ರಾಜನ ಮತ್ತು ಆ ರಾಜನ ಮಹಾಮಾತ್ಯಮರ ಚಿತ್ತಗಳನ್ನು ತಿರುಗಿಸುತ್ತಿದ್ದರು. ಯಾವ ಪ್ರದೇಶದಲ್ಲಿ ಮಧ್ಯಮ ಪ್ರಮಾಣದ ಶಕ್ತಿಯನ್ನು ಹೊಂದಿರುತ್ತಿದ್ದ ದೇವತೆಗಳು ತುಂಬಿರುತ್ತಿದ್ದರೋ ಆ ನಿವೇಶನದಲ್ಲಿ ಕಟ್ಟಡಗಳನ್ನು ಕಟ್ಟಿಸುವಂತೆ ಆ ದೇವತೆಗಳು ಸಾಧಾರಣ ಶಕ್ತಿಯನ್ನು ಹೊಂದಿದ್ದ ರಾಜರ ಮತ್ತು ಅವರ ಮಹಾಮಾತ್ಯರ ಚಿತ್ತವನ್ನು ತಿರುಗಿಸುತ್ತಿದ್ದರು. ಯಾವ ಪ್ರದೇಶದಲ್ಲಿ ನೀಚ ದೇವತೆಗಳು ತುಂಬಿರುತ್ತಿದ್ದರೋ ಆ ನಿವೇಶನದಲ್ಲಿ ಕಟ್ಟಡಗಳನ್ನು ಕಟ್ಟುವಂತೆ ನೀಚರಾಜರ ಮತ್ತು ಅವರ ಮಹಾಮಾತ್ಯರ ಚಿತ್ತವನ್ನು ತಿರುಗಿಸುತ್ತಿದ್ದರು. ಭಗವಾನರು ತಮ್ಮ ಪರಿಶುದ್ಧವಾದ ಸಾಧಾರಣ ಮನುಷ್ಯರಿಗೆ ಸಾಧ್ಯವಲ್ಲದ ದಿವ್ಯ ಚಕ್ಷುಗಳಿಂದ ಪಾಟಲಿಗಾಮದ ಪ್ರದೇಶದಲ್ಲಿ ಸಹಸ್ರಾರು ಸಂಖ್ಯೆಯ ದೇವತೆಗಳಿರುವುದನ್ನು ಕಂಡರು. ಭಗವಾನರು ರಾತ್ರಿಯಾದ ಮೇಲೆ ಬಹುಬೇಗನೆ ಎದ್ದು ಆಯುಷ್ಮಂತನಾದ ಆನಂದನನ್ನು ಕರೆದು- “ಪಾಟಲಿಗಾಮವನ್ನು ನಗರವನ್ನಾಗಿ ಮಾಡುತ್ತಿರುವವರು ಯಾರು?” ಎಂದು ಕೇಳಿದರು.
“ಭಂತೆ, ಸುನಿಧ ಮತ್ತು ವಸ್ಸಕಾರ ಮಹಾಮಾತ್ಯರು ವಜ್ಜಿಗಳು ಪ್ರವೇಶಿಸದಂತೆ ಪಾಟಲಿಗಾಮವನ್ನು ನಗರವನ್ನಾಗಿ ಮಾಡುತ್ತಿದ್ದಾರೆ.”
“ಆನಂದ, ಮಗಧದ ಮಹಾಮಾತ್ಯರಾದ ಸುನಿಧ ಮತ್ತು ವಸ್ಸಕಾರರು ತಾವತಿಂಸ ದೇವತೆಗಳೊಡನೆ ಸಮಾಲೋಚನೆ ಮಾಡಿದ್ದಾರೋ ಎನ್ನುವಂತೆ ವಜ್ಜಿಗಳು ಪ್ರವೇಶಿಸದಂತೆ ಪಾಟಲಿಗಾಮವನ್ನು ನಗರವನ್ನಾಗಿ ಮಾಡುತ್ತಿದ್ದಾರೆ. ಸಾಧಾರಣ ಮುನುಷ್ಯರಿಗೆ ಸಾಧ್ಯವಾಗದ ಪರಿಶುದ್ಧವಾದ ದಿವ್ಯ ಚಕ್ಷುಗಳಿಂದ ನಾನು ಪಾಟಲಿಗಾಮದ ಪ್ರದೇಶದಲ್ಲಿ ಸಾವಿರಾರು ಸಂಖ್ಯೆ ಸಂಖ್ಯೆಯಲ್ಲಿ ಸೇರಿರುವ ದೇವತೆಗಳನ್ನು ನೋಡಿದ್ದೇನೆ. ಆನಂದ, ಯಾವ ಪ್ರದೇಶದಲ್ಲಿ ಮಹಾಶಕ್ತರಾದ ದೇವತೆಗಳು ತುಂಬಿರುತ್ತಾರೋ ಆ ನಿವೇಶನದಲ್ಲಿ ಕಟ್ಟಡಗಳನ್ನು ಕಟ್ಟುವಂತೆ ಆ ದೇವತೆಗಳು ಮಹಾಶಕ್ತರಾದ ರಾಜರ ಮತ್ತು ರಾಜರ ಮಹಾಮಾತ್ಯರ ಚಿತ್ತವನ್ನು ತಿರುಗಿಸುತ್ತಾರೆ. ಯಾವ ಪ್ರದೇಶದಲ್ಲಿ ಮಧ್ಯಮ ಪ್ರಮಾಣದ ಶಕ್ತಿಯನ್ನು ಹೊಂದಿರುವ ದೇವತೆಗಳು ತುಂಬಿರುತ್ತಾರೋ ಆ ನಿವೇಶನದಲ್ಲಿ ಕಟ್ಟಡಗಳನ್ನು ಕಟ್ಟುವಂತೆ ಆ ದೇವತೆಗಳು ಸಾಧಾರಣ ಮಟ್ಟದ ರಾಜರ ಮತ್ತು ಆ ರಾಜರ ಮಹಮಾತ್ಯರ ಚಿತ್ತವನ್ನು ತಿರುಗಿಸುತ್ತಾರೆ. ಯಾವ ಪ್ರದೇಶದಲ್ಲಿ ನೀಚ ದೇವತೆಗಳು ತುಂಬಿರುತ್ತಾರೋ ಆ ನಿವೇಶನದಲ್ಲಿ ಕಟ್ಟಡವನ್ನು ಕಟ್ಟಿಸುವಂತೆ ಆ ದೇವತೆಗಳು ನೀಚರಾಜರ ಮತ್ತು ಆ ರಾಜರ ಮಹಾಮಾತ್ಯರ ಚಿತ್ತವನ್ನು ತಿರುಗಿಸುತ್ತಾರೆ. ಎಲ್ಲಿಯವರೆಗೆ ಆನಂದ, ಆರ್ಯರು ಬರುತ್ತಿರುತ್ತಾರೋ ಎಲ್ಲಿಯವರೆಗೆ ಎಲ್ಲಿಯವರೆಗೆ ವರ್ತಕರು ಸಂಚರಿಸುತ್ತಾರೋ ಅಲ್ಲಿಯವರೆಗೆ ಈ ಪಾಟಲಿಪುತ್ತವು ಅಗ್ರ ನಗರವಾಗಿಯೇ ಇರುತ್ತದೆ. ನದಿಯ ಹತ್ತಿರವಿರುವ ಈ ಪಾಟಲಿಪುತ್ತಕ್ಕೆ ಮೂರು ಅಪಾಯಗಳಿವೆ. ಅವು ಯಾವುವೆಂದರೆ ಅಗ್ನಿ, ಪ್ರವಾಹ ಮತ್ತು ಅಂತಃಕಲಹ.
ಆಗ ಮಗಧದ ಮಹಾಮಾತ್ಯರಾದ ಸುನಿಧ ಮತ್ತು ವಸ್ಸಕಾರರು ಭಗವಾನರ ಬಳಿಗೆ ಬಂದರು, ಅವರಿಗೆ ಗೌರವ ತೋರಿಸಿದರು. ಕುಶಲಪ್ರಶ್ನೆ ಮಾಡಿ ಶುಭಾಶಯಗಳನ್ನು ತಿಳಿಸಿ ಒಂದುಕಡೆ ನಿಂತುಕೊಂಡರು. ಹೀಗೆ ಒಂದುಕಡೆ ನಿಂತುಕೊಂಡ ಸುನಿಧ ಮತ್ತು ವಸ್ಸಕಾರ ಮಹಾಮಾತ್ಯರು ಭಗವಾನರಿಗೆ ಹೀಗೆಂದರು- “ಗೋತಮರು ಭಿಕ್ಷು ಸಂಘದೊಡನೆ ಊಟಕ್ಕೆ ದಯಮಾಡಿಸಬೇಕು.” ಮೌನದ ಮೂಲಕ ಭಗವಾನರು ತಮ್ಮ ಒಪ್ಪಿಗೆಯನ್ನು ಕೊಟ್ಟರು. ಸುನಿಧ ವಸ್ಸಕಾರ ಮಗಧದ ಮಹಾಮಾತ್ಯರು ಭಗವಾನರ ಸಮ್ಮತಿಯನ್ನು ತಿಳಿದು ತಮ್ಮ ಆವಾಸಕ್ಕೆ ಬಂದರು. ತಮ್ಮ ಮನೆಗಳಲ್ಲಿ ಶ್ರೇಷ್ಠವಾದ ಭೋಜನವನ್ನೂ, ಭಕ್ಷ್ಯಗಳನ್ನೂ ಸಿದ್ಧಪಡಿಸಿ ಸಕಾಲದಲ್ಲಿ ಭಗವಾನರ ಬಳಿಗೆ ಬಂದು “ಊಟಕ್ಕೆ ಕಾಲವಾಯಿತು ಭಂತೆ” ಎಂದು ತಿಳಿಸಿದರು.
ಭಗವಾನರು ಪೂರ್ವಾಹ್ನದಲ್ಲಿ ಚೀವರವನ್ನು ಧರಿಸಿ ಪಿಂಡಪಾತ್ರೆಯನ್ನು ತೆಗೆದುಕೊಂಡು ಭಿಕ್ಷು ಸಂಘದ ಸಮೇತ ಮಗಧದ ಮಹಾಮಾತ್ಯರಾದ ಸುನಿಧ ವಸ್ಸಕಾರರ ಮನೆಗಳಿಗೆ ಹೋದರು. ತಮಗಾಗಿ ಪ್ರತ್ಯೇಕವಾಗಿ ಏರ್ಪಡಿಸಿದ್ದ ಆಸನದ ಮೇಲೆ ಕುಳಿತರು. ಆಮೇಲೆ ಮಗಧದ ಮಹಾಮಾತ್ಯರಾದ ಸುನಿಧ ವಸ್ಸಕಾರರು ಶ್ರೇಷ್ಠವಾದ ಭೋಜನವನ್ನೂ ಭಕ್ಷ್ಯಗಳನ್ನೂ ಭಿಕ್ಷು ಸಂಘಕ್ಕೂ ಬುದ್ಧಭಗವಾನರಿಗೂ ತಾವೇ ಸಮರ್ಪಿಸಿದರು, ಸಂತೃಪ್ತಿಪಡಿಸಿದರು. ಭಗವಾನರು ಊಟವನ್ನು ಮುಗಿಸಿ ಪಾತ್ರೆಯನ್ನೂ ಕೈಯನ್ನೂ ತೊಳೆದುಕೊಂಡ ಮೇಲೆ ಸುನಿಧ ವಸ್ಸಕಾರರು ತಗ್ಗಾದ ಆಸನಗಳನ್ನು ತಂದು ಅವುಗಳ ಮೇಲೆ ಕುಳಿತರು. ಒಂದುಕಡೆ ಕುಳಿತುಕೊಂಡ ಮೇಲೆ ಸುನಿಧ ಮತ್ತು ವಸ್ಸಕಾರರಿಗೆ ಭಗವಾನರು ಈ ಗಾಥೆಯನ್ನು ಹೇಳಿದರು-
ತನ್ನೆಡೆಯೊಳಿರುವ ಶೀಲಗಳ ಪಾಲಿಸುವ
ಸುಮನ ಹೊಂದಿರುವ ಬ್ರಹ್ಮಚಾರಿಗೆ
ಜಾಣನಾದವನೊದಗಿಸಲಿ ಆಸನವಸನಗಳನು.
ಅರ್ಪಿಸಲಿ ಅಲ್ಲಿರುವ ದೇವದೇವತೆಗಳಿಗೆ ದಾನ ದಕ್ಷಿಣೆಗಳನು
ಪೂಜಿತರಾದವರು ಸನ್ಮಾನ್ಯರಾದವರು ಪೂಜಿಸುವರವನು
ಮಾನ್ಯಮಾಡುವರು, ದೇವದೇವತೆಗಳನುಕಂಪ ತೋರುವರು
ಏಕೈಕ ಪುತ್ರನನು ಪ್ರೀತಿಸುವ ತಾಯಿಯೊಲು
ಹಾರೈಸುವವರು ಮಂಗಳವ ಸತತ.
ಈ ಗಾಥೆಯನ್ನು ಹೇಳಿ ಭಗವಾನರು ತಮ್ಮ ಆಸನದಿಂದ ಎದ್ದುಹೋದರು.
ಆಮೇಲೆ ಮಗಧದ ಮಹಾಮಾತ್ಯರಾದ ಸುನಿಧ ಮತ್ತು ವಸ್ಸಕಾರರು ಭಗವಾನರನ್ನು ಹಿಂಬಾಲಿಸಿದರು. “ಸಮಣ ಗೋತಮರು ಯಾವ ಹೆಬ್ಬಾಗಿಲ ಮೂಲಕ ನಿಷ್ಕ್ರಮಿಸುವರೋ ಅದಕ್ಕೆ ಗೋತಮ ದ್ವಾರವೆಂದೇ ಹೆಸರಾಗಲಿ. ಯಾವ ಕಡೆಯಲ್ಲಿ ಗಂಗಾನದಿಯನ್ನು ದಾಟುವರೋ ಅದು ಗೋತಮ ತೀರ್ಥವೆಂದೇ ಹೆಸರು ಪಡೆಯಲಿ”. ಆ ದಿನದಿಂದ ಭಗವಾನರು ನಿಷ್ಕ್ರಮಿಸಿದ ಹೆಬ್ಬಾಗಿಲು ಗೋತಮದ್ವಾರವೆಂದೇ ಹೆಸರು ಪಡೆದಿದೆ. ಅನಂತರ ಭಗವಾನರು ಗಂಗಾನದಿಯ ದಡಕ್ಕೆ ಬಂದರು. ಆ ಸಮಯದಲ್ಲಿ ಗಂಗಾನದಿಯಲ್ಲಿ ದಾಟಲಾರದಷ್ಟು ನೆರೆ ಬಂದಿತ್ತು. ಆಗ ಕೆಲವರು ದೋಣಿಯನ್ನು ಹುಡುಕಲು ಹೊರಟರು. ಕೆಲವರು ದೋಣಿಗೆ ಮರವನ್ನು ತರಲು ಹೊರಟರು. ಮತ್ತೆ ಕೆಲವರು ಹರಿಗೋಲನ್ನು ಕಟ್ಟಲು ಹವಣಿಸಿದರು. ಬಲಶಾಲಿಯಾದವನೊಬ್ಬನು ತನ್ನ ತೋಳನ್ನು ಚಾಚುವಷ್ಟು ಶೀಘ್ರ ಕಾಲದಲ್ಲಿ ಅಥವಾ ಚಾಚಿದ ತೋಳನ್ನು ಮಡಿಸಿಕೊಳ್ಳುವಷ್ಟು ಶೀಘ್ರ ಕಾಲದಲ್ಲಿ ಭಗವಾನರು ಭಿಕ್ಷು ಸಂಘದೊಡನೆ ಗಂಗಾನದಿಯ ಒಂದು ತೀರದಿಂದ ಮತ್ತೊಂದು ತೀರಕ್ಕೆ ಹೋಗಿ ನಿಂತರು. ನಾವೆಯನ್ನು ಹುಡುಕಲು ಹೊರಟವರನ್ನೂ ಮರವನ್ನು ತರಲು ಹೊರಟವರನ್ನೂ ಹರಿಗೋಲನ್ನು ಕಟ್ಟಲು ಹವಣಿಸುತ್ತಿರುವವರನ್ನೂ ನೋಡಿದರು. ಅವರ ಉದ್ದೇಶವನ್ನು ತಿಳಿದ ಭಗವಾನರು ಆಗ ಒಂದು ಉದಾನವನ್ನು ಉದ್ಗಾರ ಮಾಡಿದರು.
ಸೇತುವೆಯ ಕಟ್ಟಿ ಸಾಗರವ ದಾಟುವಾ
ಜನರವರು ಮೇಧಾವಿಗಳು, ತಿಳಿದವರು
ಹರಿಗೋಲ ಕಟ್ಟಿ ದಾಟಲೆಳೆಸುವ
ಜನರು ಆಗುವರೆ ಅರಿತವರು ಮೇಧಾವಿ ವಿವೇಕಿಗಳು!
ಪ್ರಥಮ ಪಠಣ ಭಾಗ.
ಆರ್ಯಸತ್ಯಗಳ ಕಥೆ
ಅನಂತರ ಆಯುಷ್ಮಂತನಾದ ಆನಂದನನ್ನು ಕುರಿತು “ಓ ಆಯುಷ್ಮಂತನಾದ ಆನಂದ, ಕೋಟಿಗ್ರಾಮಕ್ಕೆ ಹೋಗೋಣ ಬಾ” ಎಂದು ಹೇಳಿದರು. “ಹಾಗೆಯೇ ಆಗಲಿ ಭಂತೆ” ಎಂದು ಆಯುಷ್ಮಂತನಾದ ಆನಂದನು ಭಗವಾನರಿಗೆ ಹೇಳಿದನು. ಆಮೇಲೆ ಭಗವಾನರು ಒಂದು ದೊಡ್ಡ ಭಿಕ್ಷು ಸಮೂಹದೊಂದಿಗೆ ಕೋಟಿಗ್ರಾಮಕ್ಕೆ ಹೋದರು. ಅಲ್ಲಿ ಅವರು ತಂಗಿದರು. ಅಲ್ಲಿದ್ದಾಗ ಭಿಕ್ಷುಗಳಿಗೆ ಹೀಗೆ ಬೋಧಿಸಿದರು-
“ನಾಲ್ಕು ಆರ್ಯಸತ್ಯಗಳನ್ನು ಅರಿಯದುದರಿಂದ, ಅವನ್ನು ಸರಿಯಾಗಿ ಅರ್ಥಮಾಡಿಕೊಳ್ಳದೆ ಇರುವುದರಿಂದ ನಾವು, ನೀವೂ ಎಲ್ಲರೂ ಹುಟ್ಟು-ಸಾವುಗಳ ಕಡೆಗೆ ಧಾವಿಸಿ ಅವುಗಳಲ್ಲಿಯೇ ದೀರ್ಘಕಾಲ ಸುತ್ತುತ್ತಿರಬೇಕಾಯಿತು. ಆ ನಾಲ್ಕು ಯಾವುವು? ದುಃಖ ಆರ್ಯತತ್ವವನ್ನು ಅರಿಯದುದರಿಂದ ಅದನ್ನು ಸರಿಯಾಗಿ ಅರ್ಥಮಾಡಿಕೊಳ್ಳದುದರಿಂದ ನಾನೂ ನೀವೂ ಹುಟ್ಟು-ಸಾವುಗಳ ಕಡೆಗೆ ಧಾವಿಸಿ ಅವುಗಳಲ್ಲಿಯೇ ಸುತ್ತುತ್ತಿರಬೇಕಾಯಿತು. ಭಿಕ್ಷುಗಳೇ, ದುಃಖ ನಿರೋಧ ಆರ್ಯಸತ್ಯವನ್ನು ಅರಿಯದುದರಿಂದ ಅದನ್ನು ಸರಿಯಾಗಿ ಅರ್ಥಮಾಡಿಕೊಳ್ಳದುದರಿಂದ ನಾನೂ ನೀವೂ ಎಲ್ಲರೂ ಹುಟ್ಟು-ಸಾವುಗಳ ಕಡೆಗೆ ಧಾವಿಸಿ ಅವುಗಳಲ್ಲಿಯೇ ದೀರ್ಘಕಾಲ ಸುತ್ತುತ್ತಿರಬೇಕಾಯಿತು. ದುಃಖ ನಿರೋಧದ ಕಡೆಗೆ ಹೋಗುವ ಮಾರ್ಗ ಆರ್ಯಸತ್ಯವನ್ನು ಅರಿಯದುದರಿಂದ ಸರಿಯಾಗಿ ಅರ್ಥಮಾಡಿಕೊಳ್ಳದುದರಿಂದ ನಾನೂ ನೀವೂ ಹುಟ್ಟು-ಸಾವುಗಳ ಕಡೆಗೆ ಧಾವಿಸಿ ಅವುಗಳಲ್ಲಿಯೇ ದೀರ್ಘಕಾಲ ಸುತ್ತುತ್ತಿರಬೇಕಾಯಿತು. ಭಿಕ್ಷುಗಳೇ, ದುಃಖ ಆರ್ಯಸತ್ಯವನ್ನು ಅರಿತು ಸರಿಯಾಗಿ ಅರ್ಥಮಾಡಿಕೊಂಡಾಗ ದುಃಖಸಮುದಯ ಆರ್ಯಸತ್ಯವನ್ನು ಅರಿತು ಸರಿಯಾಗಿ ಅರ್ಥಮಾಡಿಕೊಂಡಾಗ ದುಃಖ ನಿರೋಧ ಆರ್ಯಸತ್ಯವನ್ನು ಅರಿತು ಸರಿಯಾಗಿ ಅರ್ಥಮಾಡಿಕೊಂಡಾಗ ದುಃಖ ನಿರೋಧದ ಕಡೆಗೆ ತೆಗೆದುಕೊಂಡು ಹೋಗುವ ಮಾರ್ಗ ಆರ್ಯಸತ್ಯವನ್ನು ಅರಿತು ಸರಿಯಾಗಿ ಅರ್ಥ ಮಾಡಿಕೊಂಡಾಗ ಭವತಣ್ಹಾವು ಚೂರು ಚೂರಾಗಿ ಹೋಗುತ್ತದೆ. ಭವಕ್ಕೆ ಕಾರಣವಾದುದು ಕ್ಷೀಣವಾಗುತ್ತದೆ. ಮುಂದಿನ ಜನ್ಮವಿರುವುದಿಲ್ಲ”. ಹೀಗೆ ಹೇಳಿದ ನಂತರ ಆ ಶ್ರೇಷ್ಠರು ಇಂತೆಂದರು-
“ಚತುರಾರ್ಯ ಸತ್ಯಗಳ ತಿಳಿಯದವ ಸುತ್ತುವನು
ಬಹುಕಾಲ ಜಾತಿಮರಣಗಳ ಲೋಕಗಳ
ಅವುಗಳನರಿತ ವಿವೇಕಿ ಸಾಧಕನು
ದುಃಖಮೂಲವನೆ ಬಿಸುಡುವನು ಅವನಿಗಿಲ್ಲ ಹುಟ್ಟು ಸಾವುಗಳು”
ಕೋಟಿಗ್ರಾಮದಲ್ಲಿದ್ದಷ್ಟು ಕಾಲದಲ್ಲಿ ಭಗವಾನರು ಬಹುಸಂಖ್ಯೆಯ ಭಿಕ್ಷುಗಳಿಗೆ ಧಮ್ಮವನ್ನು ವಿವರಿಸಿದರು- “ಇದು ಶೀಲ, ಇದು ಸಮಾಧಿ, ಇದು ಪಞ್ಞಾ. ಶೀಲದಿಂದ ಕೂಡಿಸುವ ಸಮಾಧಿಯು ಮಹತ್ಫಲವನ್ನು ಕೊಡುತ್ತದೆ. ಅದರಿಂದಾಗುವ ಲಾಭವು ಅಧಿಕ. ಸಮಾಧಿಯಿಂದ ಕೂಡಿದ ಪಞ್ಞಾ ಮಹತ್ಫಲವನ್ನು ಕೊಡುತ್ತಿದೆ. ಅದರಿಂದಾಗುವ ಲಾಭವು ಅಧಿಕ. ಪಞ್ಞಾವನ್ನು ಪಡೆದಿರುವ ಚಿತ್ತವು ಮೂರು ಆಸವಗಳಿಂದ ಮುಕ್ತವಾಗುತ್ತದೆ. ಅವಾವುವೆಂದರೆ: ಕಾಮಾಸವ, ಭವಾಸವ, ಅವಿಜ್ಜಾಸವ.”
ಮುಗಿಯದ (ಅನಾವತ್ತಿ) ಧಮ್ಮ ಸಂಬೋಧಿ ಪಾರಾಯಣ
ಕೋಟಿಗಾಮದಲ್ಲಿ ಸಾಕಷ್ಟು ಕಾಲ ನಿಂತಮೇಲೆ ಭಗವಾನರು ಆಯುಷ್ಮಂತ ಆನಂದನಿಗೆ ಹೀಗೆ ಹೇಳಿದರು: “ಆನಂದ, ನಾತಿಕಕ್ಕೆ ಹೋಗೋಣ ಬಾ...” “ಹಾಗೆಯೇ ಆಗಲಿ ಭಂತೆ” ಎಂದು ಆನಂದನು ಭಗವಾನರಿಗೆ ಹೇಳಿದನು. ಅನಂತರ ಒಂದು ದೊಡ್ಡ ಭಿಕ್ಷು ಸಮೂಹದೊಂದಿಗೆ ಭಗವಾನರು ನಾತಿಕಕ್ಕೆ ಹೋದರು. ಅಲ್ಲಿನ ಗಿಜ್ಝಕಾವಸಥದಲ್ಲಿ ತಂಗಿದರು. ಆಗ ಆಯುಷ್ಮಂತನಾದ ಆನಂದನು ಭಗವಾನರಲ್ಲಿಗೆ ಹೋದನು. ಸಮೀಪಿಸಿ ಭಗವಾನರಿಗೆ ಅಭಿವಂದಿಸಿ ಒಂದುಕಡೆ ಕುಳಿತುಕೊಂಡನು. ಆಮೇಲೆ ಭಗವಾನರನ್ನು ಕುರಿತು ಇಂತೆಂದನು- “ಭಂತೆ, ಭಿಕ್ಷು ಸಾಲ್ಹನು ನಾತಿಕದಲ್ಲಿ ಕಾಲವಾಗಿದ್ದಾನೆ. ಈಗ ಅವನ ಗತಿ ಏನಾಗಿದೆ? ಅವನು ಎಲ್ಲಿ ಹುಟ್ಟಿದ್ದಾನೆ” ಭಿಕ್ಷುಣಿ ನಂದಾಳು ನಾತಿಕದಲ್ಲಿ ಕಾಲವಾಗಿದ್ದಾಳೆ. ಅವಳ ಗತಿ ಏನಾಗಿದೆ, ಎಲ್ಲಿ ಹುಟ್ಟಿದ್ದಾಳೆ? ಉಪಾಸಕನಾದ ಸುದತ್ತನು ಕಾಲವಾಗಿದ್ದಾನೆ, ಭಂತೆ, ಅವನ ಗತಿ ಏನಾಗಿದೆ, ಅವನು ಎಲ್ಲಿ ಹುಟ್ಟಿದ್ದಾನೆ? ಉಪಾಸಿಕೆಯಾದ ಸುಜಾತಳು ಕಾಲವಾಗಿದ್ದಾಳೆ, ಅವಳ ಗತಿ ಏನಾಗಿದೆ, ಅವಳು ಎಲ್ಲಿ ಹುಟ್ಟಿದ್ದಾಳೆ? ಕುಕ್ಕಟನೆಂಬ ಉಪಾಸಕನು ಕಾಲವಾಗಿದ್ದಾನೆ, ಅವನ ಗತಿ ಏನಾಗಿದೆ, ಅವನು ಎಲ್ಲಿ ಹುಟ್ಟಿದ್ದಾನೆ? ಕಾಲಿಂಬನೆಂಬ ಉಪಾಸಕನು ನಿಕಟನೆಂಬ ಉಪಾಸಕನು... ಕಟಿಸ್ಸಹನೆಂಬ ಉಪಾಸಕನು... ತುಟ್ಠಿಯೆಂಬ ಉಪಾಸಕನು.. ಸುಬದ್ಧ ಎಂಬ ಉಪಾಸಕನು ಭಂತೆ, ನಾತಿಕದಲ್ಲಿ ಕಾಲವಾಗಿದ್ದಾರೆ, ಅವರ ಗತಿ ಏನಾಗಿದೆ, ಅವರು ಎಲ್ಲಿ ಹುಟ್ಟಿದ್ದಾರೆ?”
“ಆನಂದ, ಭಿಕ್ಷು ಸಾಲ್ಹನು ಆಸವಗಳನ್ನು ಕಳೆದುಕೊಂಡು, ಅನಾಸವವಾದ ಚಿತ್ತವಿಮುಕ್ತಿಯನ್ನು ಪಡೆದು ಪಞ್ಞಾ ವಿಮುಕ್ತಿಯನ್ನು ಹೊಂದಿದವನಾಗಿ ಧಮ್ಮವನ್ನು ತಾನೇ ಸಾಕ್ಷಾತ್ಕರಿಸಿಕೊಂಡವನಾಗಿ ಉಪಸಂಪದವನ್ನು ಪಡೆದಿದ್ದಾನೆ. ಭಿಕ್ಷುಣಿ ನಂದಾಳು ಲೋಕಕ್ಕೆ ಬಂಧಿಸುವ ಐದು ಸಂಯೋಜನಗಳನ್ನು ಸಂಪೂರ್ಣವಾಗಿ ಕಳೆದುಕೊಂಡು ಹುಟ್ಟು-ಸಾವುಗಳಿಲ್ಲದ ಸ್ಥಿತಿಯನ್ನು ಸಂಪಾದಿಸಿದವಳಾಗಿ ಪರಿನಿಬ್ಬಾನವನ್ನು ಪಡೆದಿದ್ದಾಳೆ. ಉಪಾಸಕನಾದ ಸುದತ್ತನು ಮೂರು ಸಂಯೋಜನಗಳನ್ನು ಕಳೆದುಕೊಂಡವನಾಗಿ ಲೋಭ, ಮೋಹ, ದ್ವೇಷಗಳನ್ನು ದಮಿಸಿದವನಾಗಿ ಸಕದಗಾಮಿಯಾಗಿ ಒಂದೇ ಒಂದು ಜನ್ಮವನ್ನು ಮಾತ್ರ ಹೊಂದಿ, ದುಃಖವನ್ನು ಕೊನೆಗೊಳಿಸಿಕೊಳ್ಳುತ್ತಾನೆ. ಉಪಾಸಿಕೆಯಾದ ಸುಜಾತಳು ಮೂರು ಸಂಯೋಜನಗಳನ್ನು ಕಳೆದುಕೊಂಡು ಸೋತಾಪನ್ನಳಾಗಿ ಕೀಳು ಜನ್ಮಗಳನ್ನು ಎತ್ತದಂಥ ಸ್ಥಿತಿಯನ್ನು ಪಡೆದು ಸಂಬೋಧಿಯನ್ನು ಪಡೆಯಬಲ್ಲ ಸಾಮರ್ಥ್ಯವನ್ನು ಪಡೆಯುತ್ತಾಳೆ. ಉಪಾಸಕನಾದ ಕುಕ್ಕುಟನು ಲೋಕಕ್ಕೆ ಬೋಧಿಸುವ ಸಂಯೋಜನಗಳನ್ನು ಸಂಪೂರ್ಣವಾಗಿ ಕಳೆದುಕೊಂಡವನಾಗಿ ಹುಟ್ಟು-ಸಾವುಗಳಿಲ್ಲದ ಸ್ಥಿತಿಯನ್ನು ಸಂಪಾದಿಸಿದವನಾಗಿ ಪರಿನಿಬ್ಬಾನವನ್ನು ಪಡೆದಿದ್ದಾನೆ. ಉಪಾಸಕನಾದ ಕಾಲಂಬನು... ಉಪಾಸಕ ನಿಕಟನೂ... ಉಪಾಸಕ ಕಟಿಸ್ಸಹನು... ಉಪಾಸಕ ತುಟ್ಠಿಯು... ಉಪಾಸಕ ಸಂತುಟ್ಠಿಯು... ಉಪಾಸಕ ಭದ್ದನು... ಉಪಾಸಕ ಸುಬದ್ಧನು ಲೋಕಕ್ಕೆ ಬಂಧಿಸುವ ಐದು ಸಂಯೋಜನೆಗಳನ್ನು ಸಂಪೂರ್ಣವಾಗಿ ಕಳೆದುಕೊಂಡವನಾಗಿ ಹುಟ್ಟು-ಸಾವುಗಳಿಲ್ಲದ ಸ್ಥಿತಿಯನ್ನು ಸಂಪಾದಿಸಿದವನಾಗಿ ಪರಿನಿಬ್ಬಾನವನ್ನು ಪಡೆದಿದ್ದಾನೆ. ನಾತಿಕದಲ್ಲಿ ಕಾಲವಾದ ಐವತ್ತು ಇತರ ಉಪಾಸಕರೂ ಲೋಕಕ್ಕೆ ಬಂಧಿಸುವ ಐದು ಸಂಯೋಜನಗಳನ್ನು ಸಂಪೂರ್ಣವಾಗಿ ಕಳೆದುಕೊಂಡವರಾಗಿ ಹುಟ್ಟು-ಸಾವುಗಳಿಲ್ಲದ ಸ್ಥಿತಿಯನ್ನು ಪಡೆದವರಾಗಿ ಪರಿನಿಬ್ಬಾನವನ್ನು ಪಡೆದಿದ್ದಾರೆ. ನಾತಿಕದಲ್ಲಿ ಕಾಲವಾದ ತೊಂಭತ್ತಕ್ಕಿಂತ ಕಡಿಮೆಯಿಲ್ಲದ ಇತರ ಉಪಾಸಕರು ಮೂರು ಸಂಯೋಜನಗಳನ್ನು ಕಳೆದುಕೊಂಡವರಾಗಿ ರಾಗ, ಮೋಹ, ದ್ವೇಷಗಳನ್ನು ದಮಿಸಿದವರಾಗಿ ಸಕದಾಗಾಮಿಗಳಾಗಿ ಒಂದೇ ಒಂದು ಜನ್ಮವನ್ನು ಮಾತ್ರ ಪಡೆದು ದುಃಖವನ್ನು ಅಂತ್ಯಗೊಳಿಸಿಕೊಳ್ಳುತ್ತಾರೆ. ಆನಂದ, ನಾತಿಕದಲ್ಲಿ ಕಾಲವಾದ ಐನೂರಕ್ಕಿಂತ ಹೆಚ್ಚು ಸಂಖ್ಯೆಯ ಉಪಾಸಕರು ಮೂರು ಸಂಯೋಜನಗಳನ್ನು ಕಳೆದುಕೊಂಡವರಾಗಿ ಸೋತಾಪನ್ನರಾಗಿ ಕೀಳು ಜನ್ಮಗಳನ್ನು ಎತ್ತದಂಥ ಸ್ಥಿತಿಯನ್ನು ಹೊಂದಿ ಸಂಬೋಧಿಯನ್ನು ಪಡೆಯಬಲ್ಲಂಥ ಸಾಮರ್ಥ್ಯವನ್ನು ಪಡೆಯುತ್ತಾರೆ.
ಧಮ್ಮದಾಸಧಮ್ಮ ಪರ್ಯಾಯ
“ಆನಂದ, ಮನುಷ್ಯನಾದವನು ಕಾಲವಾಗುವುದರಲ್ಲಿ ಆಶ್ಚರ್ಯವೇನೂ ಇಲ್ಲ. ಕಾಲವಾದ ಅವರಲ್ಲಿ ಒಬ್ಬೊಬ್ಬರೂ ತಥಾಗತನಲ್ಲಿಗೆ ಹೋಗಿ ಅವರ ಇಂದಿನ ಸ್ಥಿತಿಯನ್ನು ಕುರಿತು ಕೇಳುತ್ತಿದ್ದರೆ ನನಗೆ ಬೇಸರವಾಗುತ್ತದೆ. ಆನಂದ, ಆದುದರಿಂದ ಕಾಲವಾದ ಉತ್ತಮ ಶಿಷ್ಯರು ತಾವು ಏನಾಗುತ್ತೇವೆಂಬುದನ್ನು ತಿಳಿಯಬಲ್ಲ ಧಮ್ಮಾದರ್ಶ ಎಂಬ ಧಮ್ಮದ ಒಂದು ಬಗೆಯನ್ನು ಹೇಳಿಕೊಡುತ್ತೇನೆ. ಅದನ್ನು ತಿಳಿದುಕೊಂಡವನು “ನನಗೆ ನಿರಯ ಲೋಕ ಎಂದೂ ಪ್ರಾಪ್ರವಾಗುವುದಿಲ್ಲ. ಪ್ರಾಣಿಲೋಕಕ್ಕಾಗಲೀ, ಪ್ರೇತಲೋಕಕ್ಕಾಗಲೀ ಅಪಾಯ ದುಗ್ಗತಿ ನಿಪಾತಲೋಕಗಳಿಗಾಗಲೀ ನಾನು ಹೋಗುವುದಿಲ್ಲ. ನನಗೆ ಸೋತಾಪನ್ನ ಸ್ಥಿತಿ ದೊರಕಿದೆ. ಸಂಬೋಧಿಯನ್ನು ಪಡೆಯಬಲ್ಲ ಸಾಮರ್ಥ್ಯವನ್ನು ಹೊಂದಿದ್ದೇನೆ’ ಎಂದು ವಿವರಿಸಬಲ್ಲವನಾಗಿರುತ್ತಾನೆ.
“ಆನಂದ, ಧರ್ಮಾದರ್ಶ ಎಂಬ ಧಮ್ಮದ ಬಗ್ಗೆ ತಿಳಿದ ಶ್ರೇಷ್ಠನಾದ ಶಿಷ್ಯನು ತಾನು ಕಾಲವಾದ ಮೇಲೆ ಹೇಗೆ ಆಗುತ್ತೇನೆಂದು ವಿವರಿಸುತ್ತಾನಷ್ಟೆ. ‘ನನಗೆ ನಿರಯವಿಲ್ಲ, ನೀಚ ಯೋನಿಯಲ್ಲಿ ಹುಟ್ಟುವುದಿಲ್ಲ. ಪ್ರೇತ ಲೋಕದಲ್ಲಿ ಹುಟ್ಟುವುದಿಲ್ಲ. ಅಪಾಯ ದುರ್ಗತಿ ನಿಪಾತ ಲೋಕಗಳಿಗೆ ಹೋಗುವುದಿಲ್ಲ. ನನಗೆ ಸೋತಾಪನ್ನ ಸ್ಥಿತಿ ದೊರಕಿದೆ. ಸಂಬೋಧಿಯನ್ನು ಪಡೆಯಬಲ್ಲ ಸಾಮರ್ಥ್ಯವನ್ನು ಹೊಂದಿದ್ದೇನೆ. ಅವನು ಅರಿತಿರುವ ಧರ್ಮಾದರ್ಶವು ಹೇಗಿರುತ್ತದೆ?
“ಆನಂದ, ಅದನ್ನು ಹೊಂದಿರುವ ಶ್ರೇಷ್ಠನಾದ ಶಿಷ್ಯನು ಬುದ್ಧರಲ್ಲಿ ವಿಶೇಷವಾದ ನಂಬುಗೆಯನ್ನು ಹೊಂದಿದವನಾಗಿರುತ್ತಾನೆ. ಅವರು ಅರಹಂತರೂ ಸಮ್ಮಾಸಂಬುದ್ಧರೂ ವಿಜ್ಜಾಚರಣ ಸಂಪನ್ನರೂ ಸುಗತರೂ ಲೋಕಗಳನ್ನೆಲ್ಲಾ ತಿಳಿದವರೂ ಮನುಷ್ಯರ ಮಾರ್ಗ ತೋರಿಸುವವರು, ದೇವತೆಗಳಿಗೂ ಮನುಷ್ಯರಿಗೂ ನಾಯಕ ಶ್ರೇಷ್ಠರೂ, ಬುದ್ಧರೂ, ಭಗವಾನರೂ ಆಗಿದ್ದಾರೆ’ ಎಂಬ ನಂಬಿಕೆಯನ್ನು ಹೊಂದಿರುತ್ತಾನೆ.
“ಧರ್ಮದಲ್ಲಿ ಅತುಲವಾದ ವಿಶ್ವಾಸವನ್ನು ಹೊಂದಿರುತ್ತಾನೆ. ‘ಧಮ್ಮವು ಭಗವಾನರಿಂದ ಸ್ಪಷ್ಟವಾಗಿ ವಿವರಿಸಲ್ಪಟ್ಟಿದೆ, ಇಲ್ಲಿಯೇ ಪರೀಕ್ಷಿಸಬಲ್ಲುದಾಗಿದೆ. ಇಲ್ಲಿಯೇ ಫಲಕೊಡುವಂಥದಾಗಿದೆ. ಎಲ್ಲರೂ ತಾವೇ ತಿಳಿಯಬಲ್ಲದಂಥದ್ದಾಗಿದೆ. ಶ್ರೇಷ್ಠವಾದ ದಾರಿಯಲ್ಲಿ ತೆಗೆದುಕೊಂಡು ಹೋಗಬಲ್ಲದ್ದಾಗಿದೆ. ವಿವೇಕಿಗಳು ತಾವೇ ಪ್ರತ್ಯೇಕವಾಗಿ ಅರಿಯಬಲ್ಲದಂಥದ್ದಾಗಿದೆ’ ಎಂಬ ನಂಬಿಕೆಯನ್ನು ಹೊಂದಿರುತ್ತಾನೆ.
“ಸಂಘದಲ್ಲಿ ಅತುಲವಾದ ನಂಬುಗೆಯನ್ನು ಹೊಂದಿರುತ್ತಾನೆ. ‘ಭಗವಾನರ ಶಿಷ್ಯ ಸಂಘವು ಒಳ್ಳೆಯ ದಾರಿಯಲ್ಲಿ ಹೋಗುವಂಥದು. ಋಜು ಮಾರ್ಗದಲ್ಲಿ ಹೋಗುವಂಥದು. ನಾಲ್ಕು ಜೊತೆಯಾಗಿರುವ ಎಂಟು ಬಗೆಯ ಶ್ರೇಷ್ಠ ಮಾನವರು ನಡೆಯುವ ನ್ಯಾಯಮಾರ್ಗವಾಗಿರುವಂಥದು. ದಾನಕ್ಕೂ, ಪೂಜ್ಯತೆಗೂ, ದಕ್ಷಿಣೆಗೂ ಅರ್ಹವಾಗಿರುವಂಥದು ಲೋಕದ ಅತ್ಯುತ್ತಮ ಪುಣ್ಯ ಕ್ಷೇತ್ರವಾಗಿರುವಂಥದು’ ಎಂಬ ನಂಬುಗೆಯನ್ನು ಹೊಂದಿರುತ್ತಾನೆ.
“ಅಂಥವನು ಶ್ರೇಷ್ಠರಾದವರಿಗೆ ಪ್ರಿಯವಾಗಿರುವ ಶೀಲವನ್ನು ಹೊಂದಿರುತ್ತಾನೆ. ಅಖಂಡವಾದ, ಅಚ್ಛಿದ್ರವಾದ, ಯಾವ ಕಶ್ಮಲವೂ ಇಲ್ಲದ ನಿಂದಾತೀತವಾದ, ಬಂಧನಗಳಿಂದ ಮುಕ್ತಮಾಡಬಲ್ಲ, ಅರಿತವರು ಸ್ತುತಿಸುವ ಮುಂದೆ ಒಳ್ಳೆಯ ಜನ್ಮಗಳನ್ನು ಪಡೆಯಬೇಕೆಂಬ ಬಯಕೆಗಳಿಂದ ದೂರವಾದ ಸಮಾಧಿಯನ್ನು ನೀಡಬಲ್ಲ ಶೀಲಗಳನ್ನು ಹೊಂದಿರುತ್ತಾನೆ.
“ಆನಂದ, ಧರ್ಮಾದರ್ಶವನ್ನು ಹೊಂದಿರುವ ಶ್ರೇಷ್ಠನಾದ ಶಿಷ್ಯನು ತಾನು ಕಾಲವಾದ ಮೇಲೆ ತನ್ನ ಸ್ಥಿತಿಯನ್ನು ಹೀಗೆ ವಿವರಿಸಬಲ್ಲವನಾಗುತ್ತಾನೆ- ‘ನಿರಯವು ನನಗಿಲ್ಲ, ನೀಚ ಯೋನಿಯಲ್ಲಿ ಹುಟ್ಟುವುದಿಲ್ಲ, ಪ್ರೇತಲೋಕದಲ್ಲಿ ಜನಿಸುವುದಿಲ್ಲ. ಅಪಾಯ ದುಗ್ಗತಿ ನಿಪಾತ ಲೋಕಗಳು ನನಗೆ ಲಭಿಸುವುದಿಲ್ಲ. ನನಗೆ ಸೋತಾಪನ್ನ ಸ್ಥಿತಿ ದೊರಕಿದೆ, ಸಂಬೋಧಿಯನ್ನು ಪಡೆಯಬಲ್ಲ ಸಾಮರ್ಥ್ಯವನ್ನು ಹೊಂದಿದ್ದೇನೆ.”
ಅನಂತರ ಭಗವಾನರು ನಾತಿಕದಲ್ಲಿ ಉಳಿದುಕೊಂಡಿದ್ದ ನಿಜ್ಜಿಕಾವಸಥದಲ್ಲಿದ್ದ ಬಹುಸಂಖ್ಯೆಯ ಭಿಕ್ಷುಗಳಿಗೆ ಧಮ್ಮವನ್ನು ವಿವರಿಸಿದರು- “ಇದು ಶೀಲ, ಇದು ಸಮಾಧಿ, ಇದು ಪಞ್ಞಾ. ಶೀಲದಿಂದ ಕೂಡಿರುವ ಸಮಾಧಿಯು ಮಹತ್ಫಲವನ್ನು ಕೊಡುತ್ತದೆ. ಅದರಿಂದಾಗುವ ಲಾಭವು ಅಧಿಕ. ಸಮಾಧಿಯಿಂದ ಕೂಡಿದ ಸಮಾಧಿಯ ಮಹತ್ಫಲವನ್ನು ಕೊಡುತ್ತದೆ. ಅದರಿಂದಾಗುವ ಲಾಭವು ಅಧಿಕ. ಪಞ್ಞಾದಿಂದ ಕೂಡಿರುವ ಚಿತ್ತವು ಮೂರು ಆಸವಗಳಿಂದ ಮುಕ್ತವಾಗುತ್ತದೆ. ಅವಾವುವೆಂದರೆ- ಕಾಮಾಸವ, ಭವಾಸವ, ಅವಿಜ್ಜಾಸವ”
ಭಗವಾನರು ನಾತಿಕಾದಲ್ಲಿ ಇಚ್ಛೆಯಿದ್ದಷ್ಟು ಕಾಲ ಇದ್ದು ಆಮೇಲೆ ಆಯುಷ್ಮಂತನಾದ ಆನಂದನನ್ನು ಕುರಿತು “ಆನಂದ, ವೇಸಾಲಿಗೆ ಹೋಗೋಣ ಬಾ” ಎಂದರು. “ಹಾಗೆಯೇ ಆಗಲಿ, ಭಂತೆ” ಎಂದು ಆಯುಷ್ಮಂತನಾದ ಆನಂದನು ಹೇಳಿದನು. ಅನಂತರ ಭಗವಾನರು ದೊಡ್ಡ ಭಿಕ್ಷು ಸಂಘದೊಂದಿಗೆ ವೇಸಾಲಿಗೆ ಹೋದರು. ವೇಸಾಲಿಯಲ್ಲಿ ಅಂಬ್ರಪಾಲಿವನದಲ್ಲಿ ತಂಗಿದರು. ಅಲ್ಲಿ ಭಿಕ್ಷುಗಳಿಗೆ ಹೀಗೆ ಬೋಧಿಸಿದರು- “ಭಿಕ್ಷುಗಳೇ, ಭಿಕ್ಷುವಾದವನು ಸ್ಮೃತಿವಂತನಾಗಿ ಎಚ್ಚರಿಕೆಯಿಂದ ಕೂಡಿದವನಾಗಿ ಇರಬೇಕು. ಇದು ನಾನು ನಿಮಗೆ ಮಾಡುವ ಅನುಶಾಸನ. ಭಿಕ್ಷುವಾದವನು ಹೇಗೆ ಸ್ಮೃತಿವಂತನಾಗುತ್ತಾನೆ? ಭಿಕ್ಷುವಾದವನು ಕಾಯವನ್ನು ಅದರ ಯಥಾಸ್ಥಿತಿಯಲ್ಲಿ ಸದಾ ನೋಡುವವನಾಗಿ ಸ್ಮೃತಿವಂತನಾಗುತ್ತಾನೆ, ಶಾಂತಚಿತ್ತನಾಗುತ್ತಾನೆ. ಲೋಕದ ಮೇಲಿನ ಅತಿಯಾದ ಆಸೆಯನ್ನು ದೋಷಪೂರಿತವಾದ ಮನಸ್ಸನ್ನೂ ಗೆಲ್ಲುತ್ತಾನೆ, ಉತ್ಸಾಹಶಾಲಿಯಾಗುತ್ತಾನೆ. ವೇದನೆಯನ್ನು ಅದರ ಯಥಾಸ್ಥಿತಿಯಲ್ಲಿ ಸದಾ ನೋಡುವವನಾಗಿ... ಚಿತ್ತವನ್ನು ಅದರ ಯಥಾಸ್ಥಿತಿಯಲ್ಲಿ ನೋಡುವವನಾಗಿ ಧಮ್ಮವನ್ನು ಅದರ ಯಥಾಸ್ಥಿತಿಯಲ್ಲಿ ನೋಡುವವನಾಗಿ ಸ್ಮೃತಿವಂತನಾಗುತ್ತಾನೆ, ಶಾಂತಚಿತ್ತನಾಗುತ್ತಾನೆ. ಲೋಕದ ಮೇಲಿನ ಅತಿಯಾದ ಆಸೆಯನ್ನೂ ದೋಷಪೂರಿತವಾದ ಮನಸ್ಸನ್ನೂ ಗೆಲ್ಲುತ್ತಾನೆ. ಹೀಗೆ ಭಿಕ್ಷುವು ಸ್ಮೃತಿವಂತನಾಗುತ್ತಾನೆ, ಉತ್ಸಾಹಶಾಲಿಯಾಗುತ್ತಾನೆ.
“ಭಿಕ್ಷು, ಒಬ್ಬನು ಹೇಗೆ ಎಚ್ಚರವುಳ್ಳವನಾಗಿರುತ್ತಾನೆ? ಭಿಕ್ಷುಗಳೇ, ಹೋಗುವಾಗ ಮತ್ತು ಬರುವಾಗ ಎಚ್ಚರವುಳ್ಳವನಾಗಿರುತ್ತಾನೆ. ಮುಂದೆ ನೋಡುವಾಗ ಹಿಂದಕ್ಕೆ ತಿರುಗಿ ನೋಡುವಾಗ ಎಚ್ಚರಿಕೆಯುಳ್ಳವನಾಗಿರುತ್ತಾನೆ. ತೋಳನ್ನು ಮಡಚಿಕೊಳ್ಳುವಾಗ ಮತ್ತು ಅದನ್ನು ಚಾಚುವಾಗ ಎಚ್ಚರವುಳ್ಳವನಾಗಿರುತ್ತಾನೆ. ಪಿಂಡಪಾತ್ರೆಯನ್ನು ಉಪಯೋಗಿಸುವಾಗ ಚೀವರವನ್ನು ಧರಿಸುವಾಗ ಎಚ್ಚರದಿಂದಿರುತ್ತಾನೆ. ಕುಡಿಯುವಾಗ ತಿನ್ನುವಾಗ ಮಲಗುವಾಗ ಎಚ್ಚರಿಕೆ ಉಳ್ಳವನಾಗಿರುತ್ತಾನೆ. ಜಲಮಲಗಳನ್ನು ವಿಸರ್ಜಿಸುವಾಗ ಎಚ್ಚರವುಳ್ಳವನಾಗಿರುತ್ತಾನೆ. ನಡೆಯುವಾಗ, ನಿಲ್ಲುವಾಗ, ಕುಳಿತುಕೊಳ್ಳುವಾಗ ಎಚ್ಚರದಿಂದಿರುತ್ತಾನೆ. ಸುಪ್ತವಾಗಿರುವಾಗ ಜಾಗ್ರತೆಯಿಂದಿರುವಾಗ ಎಚ್ಚರವುಳ್ಳವನಾಗಿರುತ್ತಾನೆ. ಮಾತನಾಡುವಾಗ ಮೌನದಿಂದಿರುವಾಗ ಎಚ್ಚರಿಕೆ ಉಳ್ಳವನಾಗಿರುತ್ತಾನೆ. ಸ್ಮೃತಿವಂತನಾಗಿ ಇದನ್ನು ನಿಮಗೆ ನಾವು ಅನುಶಾಸನ ಮಾಡುತ್ತೇವೆ.
ಅಂಬಪಾಲಿ ಗಣಿಕಾ
ಗಣಿಕೆಯಾದ ಅಂಬಪಾಲಿಯು ‘ಭಗವಾನರು ವೇಸಾಲಿಗೆ ಬಂದು ನನ್ನ ಮಾವಿನ ತೋಪಿನಲ್ಲಿ (ಅಂಬವನ) ತಂಗುತ್ತಾರೆ’ ಎಂಬುದನ್ನು ಜನರಿಂದ ಕೇಳಿದಳು. ಅಂಬಪಾಲಿ ಗಣಿಕೆಯು ಉತ್ತಮವಾದ ವಾಹನಗಳನ್ನು ಸಿದ್ಧಪಡಿಸಿಕೊಂಡು ಆ ವಾಹನಗಳಲ್ಲೊಂದನ್ನು ಹತ್ತಿ ಅದರಲ್ಲಿ ವೇಸಾಲಿಯಿಂದ ಭಗವಾನರು ತಂಗಿದ್ದ ಆರಾಮದ ಕಡೆಗೆ ಹೊರಟಳು. ವಾಹನದಲ್ಲಿ ಎಷ್ಟು ದೂರ ಹೋಗಬಹುದೋ ಅಷ್ಟು ದೂರ ಹೋಗಿ ಆಮೇಲೆ ವಾಹನದಿಂದ ಇಳಿದು ಭಗವಾನರಲ್ಲಿಗೆ ಹೋದಳು. ಅನಂತರ ಭಗವಾನರಿಗೆ ಅಭಿವಂದಿಸಿ ಒಂದುಕಡೆ ಕುಳಿತುಕೊಂಡಳು. ಹೀಗೆ ಕುಳಿತುಕೊಂಡ ಅಂಬಪಾಲಿಗೆ ಭಗವಾನರು ಧಮ್ಮವನ್ನು ಬೋಧಿಸಿದರು. ಆಕೆಯನ್ನು ಸ್ಫೂರ್ತಿಗೊಳಿಸಿದರು. ಉತ್ತೇಜನಗೊಳಿಸಿದರು, ಸಂತೋಷಪಡಿಸಿದರು. ಭಗವಾನರ ಧಮ್ಮ ಬೋಧನೆಯಿಂದ ಸ್ಫೂರ್ತಿಗೊಂಡ ಉತ್ತೇಜನಗೊಂಡ ಸಂತೋಷಗೊಂಡ ಅಂಬಪಾಲಿಯು ಭಗವಾನರಲ್ಲಿ ಹೀಗೆ ಭಿನ್ನವಿಸಿಕೊಂಡಳು- “ಭಂತೆ, ತಾವು ನಾಳೆ ಭಿಕ್ಷು ಸಂಘದೊಡನೆ ಭೋಜನಕ್ಕೆ ನನ್ನ ಮನೆಗೆ ದಯಮಾಡಿಸಲು ಒಪ್ಪಿಗೆ ಕೊಡಿ.” ಭಗವಾನರು ಮೌನದಿಂದ ತಮ್ಮ ಒಪ್ಪಿಗೆಯನ್ನು ಸೂಚಿಸಿದರು. ಆಮೇಲೆ ಅಂಬಪಾಲಿಯು ಎದ್ದು ಭಗವಾನರಿಗೆ ಪ್ರದಕ್ಷಿಣೆಯನ್ನು ಮಾಡಿ ನಮಸ್ಕರಿಸಿ ಅವರನ್ನು ಬೀಳ್ಕೊಂಡಳು.
ಆಗ ವೇಸಾಲಿಯಲ್ಲಿದ್ದ ಲಿಚ್ಛವಿ ಕುಲದವರು ‘ಭಗವಾನರು ವೇಸಾಲಿಗೆ ಬಂದು ಅಲ್ಲಿಯ ಅಂಬಪಾಲಿಯಲ್ಲಿನ ವನದಲ್ಲಿ ತಂಗಿದ್ದಾರೆ’ ಎಂಬುದನ್ನು ಕೇಳಿದರು. ಆ ಲಿಚ್ಛವಿ ಜನರು ಉತ್ತಮೋತ್ತಮವಾದ ಯಾನಗಳನ್ನು ಸಿದ್ಧಪಡಿಸಿಕೊಂಡು ಒಬ್ಬೊಬ್ಬರು ಒಂದನ್ನು ಹತ್ತಿ ಆ ವಾಹನದಲ್ಲಿ ವೇಸಾಲಿಯಿಂದ ಹೊರಟರು. ಕೆಲವರು ಶ್ಯಾಮಲ ವರ್ಣದವರಾಗಿದ್ದು ಶ್ಯಾಮಲ ವಸ್ತ್ರಗಳನ್ನು ಧರಿಸಿ, ಶ್ಯಾಮಲವರ್ಣದ ಆಭರಣಗಳನ್ನು ಧರಿಸಿದ್ದರು. ಕೆಲವು ಲಿಚ್ಛವಿಗಳು ಹಳದಿ ಬಣ್ಣದವರಾಗಿದ್ದು, ಹಳದಿ ವಸ್ತ್ರಗಳನ್ನು ಧರಿಸಿ ಹಳದಿ ಆಭರಣಗಳಿಂದ ಅಲಂಕೃತರಾಗಿದ್ದರು. ಕೆಲವು ಲಿಚ್ಛವಿಗಳು ಕೆಂಪು ಬಣ್ಣದವರಾಗಿದ್ದು, ಕೆಂಪು ವಸ್ತ್ರಗಳನ್ನು ಧರಿಸಿಕೊಂಡು ಕೆಂಪು ಒಡವೆಗಳಿಂದ ಅಲಂಕರಿಸಿಕೊಂಡಿದ್ದರು. ಕೆಲವು ಲಿಚ್ಛವಿಗಳು ಬಿಳೀ ಬಣ್ಣದವರಾಗಿದ್ದು, ಬಿಳಿ ವಸ್ತ್ರಗಳನ್ನು ಧರಿಸಿಕೊಂಡು ಬಿಳಿ ಒಡವೆಗಳಿಂದ ಅಲಂಕರಿಸಿಕೊಂಡರು. ಅಂಬಪಾಲಿಯು ಲಿಚ್ಛವಿಗಳಿಗೆ ಎದುರು ದಿಕ್ಕಿನಲ್ಲಿ ಹೋದಳು. ಅವಳ ರಥವು ಯುವಕ ಲಿಚ್ಛವಿಗಳ ರಥಗಳ ಪಕ್ಕದಲ್ಲಿಯೇ ಅಚ್ಚು ಅಚ್ಚುಗಳನ್ನು ಸವರಿಕೊಂಡು ಚಕ್ರಗಳು ಚಕ್ರಗಳನ್ನು ಸವರಿಕೊಂಡು ಎದುರು ಹೋಯಿತು. ಆಗ ಲಿಚ್ಛವಿಗಳು ಅಂಬಪಾಲಿ ಗಣಿಕೆಯನ್ನು ಕುರಿತು “ಅಂಬಪಾಲಿ, ಯುವಕ ಲಿಚ್ಛವಿಗಳ ರಥಗಳ ಪಕ್ಕದಲ್ಲಿಯೇ ಜೊತೆ ಜೊತೆಯಾಗಿ ಅವರ ರಥದ ಅಚ್ಚುಗಳಿಗೆ ಅಚ್ಚುಗಳನ್ನು ಸವರಿಕೊಂಡು ಅವರ ಚಕ್ರಗಳಿಗೆ (ಭಿನ್ನ ರಥದ) ಚಕ್ರಗಳನ್ನು ತಾಗಿಕೊಂಡು ಏಕೆ ಎದುರಾಗುತ್ತಿದ್ದೀಯೇ?” ಎಂದು ಕೇಳಿದರು.
“ಆರ್ಯಪುತ್ರರೇ, ಭಿಕ್ಷು ಸಂಘದೊಂದಿಗೆ ನಾಳೆ ಭೋಜನಕ್ಕೆ ಬರಬೇಕೆಂದು ಭಗವಾನರನ್ನು ಆಹ್ವಾನಿಸಿದ್ದೇನೆ” ಎಂದಳು.
“ಲೇ ಅಂಬಪಾಲಿ, ಭಿಕ್ಷೆಯನ್ನು ನಮಗೆ ಬಿಟ್ಟುಬಿಡು, ಒಂದು ಲಕ್ಷ ಕೊಡುತ್ತೇವೆ.”
“ಆರ್ಯಪುತ್ರರೇ, ವೇಸಾಲಿ ಎಲ್ಲವನ್ನೂ ಅದರ ಸುತ್ತುಮುತ್ತಿನ ಪ್ರದೇಶಗಳೊಂದಿಗೆ ಬಿಟ್ಟುಕೊಟ್ಟರೂ ನಾನು ಈ ಭಿಕ್ಷೆಯನ್ನು ಬಿಟ್ಟುಕೊಡುವುದಿಲ್ಲ.”
ಆಗ ಲಿಚ್ಛವಿಗಳು ಕೈ ಕೈ ಹಿಸುಕಿಕೊಂಡರು. ‘ಅಂಬಿಕಾಳು ನಮ್ಮನ್ನು ಜಯಿಸಿದ್ದಾಳೆ, ನಮ್ಮನ್ನು ಜಯಿಸಿಬಿಟ್ಟಿದ್ದಾಳೆ’ ಎಂದುಕೊಂಡರು. ಆಮೇಲೆ ಆ ಲಿಚ್ಛವಿಗಳು ಅಂಬಪಾಲಿವನಕ್ಕೆ ಹೋದರು. ಭಗವಾನರು ಲಿಚ್ಛವಿಗಳು ಬರುತ್ತಿರುವುದನ್ನು ದೂರದಿಂದಲೇ ನೋಡಿದರು. ಆಗ ಭಿಕ್ಷುಗಳಿಗೆ ಹೀಗೆಂದರು- “ಭಿಕ್ಷುಗಳೇ, ನೀವು ತಾವತಿಂಸಗಳನ್ನು ನೋಡಿಲ್ಲ. ಅವರಂತಿರುವ ಲಿಚ್ಛವಿಗಳನ್ನು ನೋಡಿ. ಅವರನ್ನು ಚೆನ್ನಾಗಿ ನೋಡಿ. ಅವರನ್ನ ತಾವತಿಂಸ ದೇವತೆಗಳಿಗೆ ಹೋಲಿಸಿಕೊಳ್ಳಿ.” ಲಿಚ್ಛವಿಗಳು ವಾಹನದಲ್ಲಿ ಎಷ್ಟು ದೂರ ಹೋಗಬಹುದೋ, ಅಷ್ಟು ದೂರ ಹೋಗಿ ಆಮೇಲೆ ವಾಹನದಿಂದಿಳಿದು ಭಗವಾನರ ಹತ್ತಿರಕ್ಕೆ ನಡೆದು ಹೋದರು. ಅನಂತರ ಭಗವಾನರಿಗೆ ಅಭಿವಂದಿಸಿ ಒಂದುಕಡೆ ಕುಳಿತುಕೊಂಡರು. ಹೀಗೆ ಕುಳಿತುಕೊಂಡ ಲಿಚ್ಛವಿಗಳಿಗೆ ಭಗವಾನರು ಧಮ್ಮವನ್ನು ಬೋಧಿಸಿದರು. ಅವರನ್ನು ಸ್ಫೂರ್ತಿಗೊಳಿಸಿದರು, ಉತ್ತೇಜನಗೊಳಿಸಿದರು, ಸಂತೋಷಪಡಿಸಿದರು. ಭಗವಾನರ ಧಮ್ಮ ಬೋಧನೆಯಿಂದ ಸ್ಫೂರ್ತಿಗೊಂಡ, ಉತ್ತೇಜನಗೊಂಡ, ಸಂತೋಷಗೊಂಡ ಲಿಚ್ಛವಿಗಳು ಭಗವಾನರಲ್ಲಿ ಹೀಗೆ ವಿನಂತಿಸಿಕೊಂಡರು. “ಭಿಕ್ಷು ಸಂಘದೊಂದಿಗೆ ನಾಳೆ ಊಟಕ್ಕೆ ಬರಲು ತಮ್ಮ ಸಮ್ಮತಿಯನ್ನು ಕೊಡಿ”. ಆಗ ಭಗವಾನರು “ಅಂಬಪಾಲಿ ಗಣಿಕೆಯ ಮನೆಗೆ ಊಟಕ್ಕೆ ಬರುತ್ತೇವೆ ಎಂದು ಒಪ್ಪಿಕೊಂಡಿದ್ದೇನೆ ಲಿಚ್ಛವಿಗಳೇ” ಎಂದು ಉತ್ತರವಿತ್ತರು. ಆಗ ಲಿಚ್ಛವಿಗಳು ಕೈ ಕೈ ಹಿಸುಕಿಕೊಂಡರು. “ಅಂಬಿಕಾಳಿಂದ ಜಿತರಾಗಿದ್ದೇವೆ, ಜಿತರಾಗಿಬಿಟ್ಟಿದ್ದೇವೆ” ಎಂದುಕೊಂಡರು. ಭಗವಾನರ ಮಾತುಗಳಿಂದ ಸಂತೋಷಗೊಂಡ ಲಿಚ್ಛವಿಗು ಅವರ ಮಾತುಗಳನ್ನು ಅನುಮೋದಿಸಿ ತಮ್ಮ ತಮ್ಮ ಆಸನಗಳಿಂದ ಎದ್ದು ಭಗವಾನರಿಗೆ ಪ್ರದಕ್ಷಿಣೆ ಮಾಡಿ ನಮಸ್ಕರಿಸಿ ಬೀಳ್ಕೊಂಡರು.
ಅನಂತರ ಅಂಬಪಾಲಿಯು ಆ ರಾತ್ರಿಯಾದ ಮೇಲೆ ತನ್ನ ಮನೆಯಲ್ಲಿ ಉತ್ತಮವಾದ ಭಕ್ಷ್ಯ ಭೋಜ್ಯಗಳನ್ನು ಸಿದ್ಧಪಡಿಸಿ ಭಗವಾನರಲ್ಲಿಗೆ ಸಕಾಲದಲ್ಲಿ ಹೋದಳು- “ಭಂತೆ, ಕಾಲವಾಯಿತು, ಊಟವು ಸಿದ್ಧವಾಗಿದೆ” ಎಂದಳು. ಭಗವಾನರು ಪೂರ್ವಾಹ್ನದಲ್ಲಿ ಪಿಂಡಪಾತ್ರೆಯೊಂದಿಗೆ ಭಿಕ್ಷು ಸಂಘದೊಡನೆ ಅಂಬಪಾಲಿಯ ನಿವಾಸಕ್ಕೆ ಹೋದರು. ಅಲ್ಲಿ ಅವರಿಗಾಗಿ ಪ್ರತ್ಯೇಕವಾಗಿ ಸಿದ್ಧಪಡಿಸಿದ ಆಸನದ ಮೇಲೆ ಕುಳಿತರು. ಅಂಬಪಾಲಿಯು ಪಂಕ್ತಿಯ ಮೊದಲಲ್ಲಿದ್ದ ಬುದ್ಧ ಭಗವಾನರಿಗೂ ಭಿಕ್ಷು ಸಂಘಕ್ಕೂ ಉತ್ತಮವಾದ ಭಕ್ಷ್ಯ ಭೋಜ್ಯಗಳನ್ನು ವ್ಯಂಜನಗಳೊಂದಿಗೆ ಸಮರ್ಪಿಸಿದಳು, ಅವರನ್ನು ತೃಪ್ತಿಪಡಿಸಿದಳು. ಭಗವಾನರು ಊಟವಾದ ಮೇಲೆ ಪಿಂಡಪಾತ್ರೆ ಮತ್ತು ಕೈಗಳನ್ನು ತೊಳೆದುಕೊಂಡ ಮೇಲೆ ಆಕೆ ಒಂದು ತಗ್ಗಾದ ಆಸನದ ಮೇಲೆ ಕುಳಿತುಕೊಂಡಳು. ಆನಂತರ ಹೀಗೆ ಭಿನ್ನವಿಸಿಕೊಂಡಳು. “ಈ ಮನೆಯನ್ನು ಭಗವಾನರ ಹಿರಿಯತನವಿರುವ ಭಿಕ್ಷು ಸಂಘಕ್ಕೆ ಅರ್ಪಿಸುತ್ತೇನೆ.” ಭಗವಾನರು ಆರಾಮವನ್ನು ಪರಿಗ್ರಹಿಸಿದರು. ಭಗವಾನರು ಅಂಬಪಾಲಿಗೆ ಧಮ್ಮವನ್ನು ಬೋಧಿಸಿದರು, ಆಕೆಯನ್ನು ಸ್ಫೂರ್ತಿಪಡಿಸಿದರು, ಉತ್ತೇಜನಗೊಳಿಸಿದರು, ಸಂತೋಷಪಡಿಸಿದರು. ಅನಂತರ ಆಸನದಿಂದೆದ್ದು ಹೋದರು. ಭಗವಾನರು ವೇಸಾಲಿಯಲ್ಲಿನ ಅಂಬಪಾಲಿ ವನದಲ್ಲಿ ತಂಗಿದ್ದಾಗ ಬಹು ಸಂಖ್ಯೆಯಲ್ಲಿದ್ದ ಭಿಕ್ಷುಗಳಿಗೆ ಧಮ್ಮವನ್ನು ವಿವರಿಸಿದರು- “ಇದು ಶೀಲ, ಇದು ಸಮಾಧಿ, ಇದು ಪಞ್ಞಾ, ಶೀಲದಿಂದ ಕೂಡಿದ ಸಮಾಧಿಯು ಮಹತ್ಫಲವನ್ನು ಕೊಡುತ್ತದೆ; ಮಹಾ ಲಾಭವನ್ನು ತರುತ್ತದೆ. ಸಮಾಧಿಯಿಂದ ಕೂಡಿದ ಪಞ್ಞಾವು ಮಹತ್ಫಲವನ್ನು ಕೊಡುತ್ತದೆ, ಮಹಾಲಾಭವನ್ನು ತರುತ್ತದೆ. ಪಞ್ಞಾದಿಂದ ಕೂಡಿದ ಚಿತ್ತವು ಆಸವಗಳಿಂದ ಬಿಡುಗಡೆಯಾಗುತ್ತದೆ. ಆ ಆಸವಗಳು ಯಾವುವೆಂದರೆ- ಕಾಮಾಸವ, ಭವಾಸವ, ಅವಿಜ್ಝಾಸವ.”
ವೇಲುವಾ ಗ್ರಾಮದತ್ತ
ಭಗವಾನರು ಅಂಬಪಾಲಿ ವನದಲ್ಲಿ ಇಚ್ಛೆಯಿದ್ದಷ್ಟು ಕಾಲ ಇದ್ದಮೇಲೆ ಆಯುಷ್ಮಂತನಾದ ಆನಂದನಿಗೆ “ಆಯುಷ್ಮಂತ ಆನಂದ, ವೇಲುವ ಗ್ರಾಮಕ್ಕೆ ಹೋಗೋಣ” ಎಂದರು. “ಹಾಗೆಯೇ ಆಗಲಿ ಭಂತೆ” ಎಂದು ಆನಂದನು ಭಗವಾನರಿಗೆ ಹೇಳಿದನು. ಅನಂತರ ದೊಡ್ಡ ಭಿಕ್ಷು ಸಂಘದೊಂದಿಗೆ ವೇಲುವಗ್ರಾಮಕ್ಕೆ ಹೋದರು. ಆ ಗ್ರಾಮದಲ್ಲಿಯೇ ತಂಗಿದರು. ಆಗ ಭಿಕ್ಷುಗಳಿಗೆ ಹೀಗೆ ಸೂಚಿಸಿದರು- “ಭಿಕ್ಷುಗಳೇ, ಈ ಮಳೆಗಾಲದಲ್ಲಿ ವೇಸಾಲಿಯ ಸುತ್ತಮುತ್ತ ನಿಮ್ಮ ಮಿತ್ರರೋ, ನಿಮ್ಮ ಪರಿಚಿತರೋ, ನಿಮ್ಮ ಬಂಧುಗಳೋ ಇರುವ ಕಡೆಯಲ್ಲಿ ಉಳಿದುಕೊಳ್ಳಿ, ನಾನು ಈ ವೇಲುವ ಗ್ರಾಮದಲ್ಲಿ ಉಳಿದುಕೊಳ್ಳುತ್ತೇನೆ.” “ಹಾಗೆಯೇ ಆಗಲಿ, ಭಂತೆ” ಎಂದು ಆ ಭಿಕ್ಷುಗಳು ಭಗವಾನರಿಗೆ ಹೇಳಿದರು. ವೇಸಾಲಿಯ ಸುತ್ತುಮುತ್ತ ಆ ಮಳೆಗಾಲದಲ್ಲಿ ಅವರ ಮಿತ್ರರೋ ಪರಿಚಿತರೋ ಬಂಧುಗಳೋ ಇರುವ ಕಡೆಗಳಲ್ಲಿಯೇ ಉಳಿದುಕೊಂಡರು. ಭಗವಾನರು ವೇಲುವ ಗ್ರಾಮದಲ್ಲಿ ಉಳಿದುಕೊಂಡರು.
ಭಗವಾನರಿಗೆ ಮಳೆಗಾಲದಲ್ಲಿ ತೀವ್ರವಾದ ಬಾಧೆಯೊಂದು ಹುಟ್ಟುಕೊಂಡಿತು. ಮರಣ ಸಮಯದಲ್ಲಿ ಬರಬಹುದಾದ ಅತಿಯಾದ ನೋವು ಬಂದಿತು. ಆದರೂ ಭಗವಾನರು ಸ್ಮೃತಿಮತರಾಗಿಯೇ ಶಾಂತಿಚಿತ್ತರಾಗಿಯೇ ಇದ್ದರು. ವಿಹ್ವಲರಾಗದೆ ಅದನ್ನು ಸಹಿಸಿಕೊಂಡರು. ಆಗ ಭಗವಾನರು ಹೀಗೆಂದುಕೊಂಡರು: ‘ಆತ್ಮೀಯರಾದ ಮಕ್ಕಳಂತಿರುವ ಶಿಷ್ಯರಾದವರಿಗೆ ವಿದಾಯ ಹೇಳದೆ ಭಿಕ್ಷು ಸಂಘಕ್ಕೆ ಹೇಳಬೇಕಾದುದೆಲ್ಲವನ್ನೂ ಹೇಳದೆ ಪರಿನಿಬ್ಬಾನವನ್ನು ಪಡೆಯುವುದು ಸರಿಯಲ್ಲ. ಈ ಬಾಧೆಯನ್ನು ನನ್ನ ಶಕ್ತಿಯಿಂದಲೇ ಗೆದ್ದು ಸಕಾಲ ಬರುವವರೆಗೂ ಜೀವದಿಂದ ಇರುತ್ತೇನೆ.’ ಅದರಂತೆ ಭಗವಾನರು ತಮ್ಮ ಶಕ್ತಿಯಿಂದ ಆ ಬಾಧೆಯನ್ನು ಗೆದ್ದು ಸರಿಯಾದ ಕಾಲ ಬರುವವರೆಗೂ ಜೀವಿದಿಂದಿದ್ದರು. ಭಗವಾನರ ಬಾಧೆಯು ಕಡಿಮೆಯಾಯಿತು. ಭಗವಾನರು ಆನಂತರ ಬಹುಬೇಗನೆ ಗುಣಮುಖರಾದರು. ಬಾಧೆಯು ಅವರಿಂದ ಬಿಟ್ಟುಹೋದ ಮೇಲೆ ಅವರು ವಿಹಾರದಿಂದ ಹೊರಟು ಅಲ್ಲಿನ ನೆರಳಿನಲ್ಲಿ ಆಸನದ ಮೇಲೆ ಕುಳಿತರು. ಆಗ ಆನಂದನು ಭಗವಾನರ ಬಳಿಗೆ ಬಂದನು. ಭಗವಾನರಿಗೆ ಅಭಿವಂದಿಸಿ ಒಂದುಕಡೆ ಕುಳಿತುಕೊಂಡನು. ಆಮೇಲೆ ಆಯುಷ್ಮಂತನಾದ ಆನಂದನು ಭಗವಾನರನ್ನು ಕುರಿತು ಇಂತೆಂದನು: “ಭಗವಾನರು ಆರೋಗ್ಯವಾಗಿರುವಾಗ ಅವರನ್ನು ನೋಡಿದ್ದೇನೆ, ಭಗವಾನರು ಕಾಯಿಲೆಯಿದ್ದುದನ್ನೂ ನೋಡಿದ್ದೇನೆ. ಭಂತೆ, ನನ್ನ ದೇಹವು ದುರ್ಬಲವಾಗಿದೆ, ದಿಕ್ಕು ಕಾಣುತ್ತಿಲ್ಲ, ಭಗವಾನರ ಕಾಯಿಲೆಯಿಂದ ನನ್ನ ಇಂದ್ರಿಯಗಳೇ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಆದರೂ ಈ ಒಂದು ಭಾವನೆಯು ನನಗೆ ಸಮಾಧಾನವನ್ನು ತರುತ್ತಿದೆ- “ಭಿಕ್ಷು ಸಂಘಕ್ಕೆ ಹೇಳಬೇಕಾದುದೆಲ್ಲವನ್ನೂ ಹೇಳದೆ ಭಗವಾನರು ಪರಿನಿಬ್ಬಾನವನ್ನು ಪಡೆಯುವುದಿಲ್ಲ.”
“ಆನಂದ, ನನ್ನಿಂದ ಭಿಕ್ಷು ಸಂಘವು ಏನನ್ನಾದರೂ ಅಪೇಕ್ಷಿಸುತ್ತದೆಯೇ? ಆನಂದ, ನಾನು ವಿವರಿಸುವ ಧಮ್ಮದ ಅಂತರಾರ್ಥವೇ ಬೇರೆ, ಬಾಹ್ಯರ್ಥವೇ ಬೇರೆ ಆಗಿಲ್ಲ. ಆನಂದ, ತಥಾಗತನ ಧಮ್ಮವು ಆಚಾರ್ಯನ ಮುಷ್ಠಿಯಲ್ಲಿ ಸಿಕ್ಕಿಕೊಂಡಿಲ್ಲ. ಆನಂದ, ಯಾರಾದರೂ ತಮ್ಮ ಮನಸ್ಸಿನಲ್ಲಿ ‘ನಾನು ಭಿಕ್ಷು ಸಂಘವನ್ನು ನಡೆಸಿಕೊಂಡು ಹೋಗುತ್ತೇನೆ, ಭಿಕ್ಷು ಸಂಘವು ನನ್ನನ್ನು ಅವಲಂಬಿಸಿದೆ’ ಎಂದುಕೊಂಡರೆ ಅವನೇ ಆನಂದ, ಭಿಕ್ಷು ಸಂಘಕ್ಕೆ ನಿಯಮಾವಳಿಯನ್ನು ಸಿದ್ಧಪಡಿಸಬೇಕು. ಆದರೆ ಭಗವಾನರಿಗೆ ತಾನೇ ಸಂಘವನ್ನು ನಡೆಸಬೇಕೆಂಬ ಅಥವಾ ಅದು ತನ್ನನ್ನೇ ಅವಲಂಬಿಸಿದೆ ಎಂಬ ಭಾವನೆ ಇಲ್ಲ. ತಥಾಗತನನ್ನು ಸಂಘವು ಅವಲಂಬಿಸಿಲ್ಲ. ಆನಂದ, ತಥಾಗತನು ಭಿಕ್ಷು ಸಂಘಕ್ಕೆ ಸೂಚನೆಗಳನ್ನು ಕೊಡಬೇಕಾದುದಿಲ್ಲ. ಆನಂದ, ತಥಾಗತನು ಭಿಕ್ಷು ಸಂಘಕ್ಕೆ ಸೂಚನೆಗಳನ್ನು ಕೊಡಬೇಕಾದುದಿಲ್ಲ. ನಾನು ಈಗ ದುರ್ಬಲನಾಗಿದ್ದೇನೆ, ವೃದ್ಧನಾಗಿದ್ದೇನೆ, ನನ್ನ ಪಯಣವು ಮುಗಿಯುತ್ತಾ ಬಂದಿದೆ. ಕಾಲವು ಆಗಿ ಹೋಗುತ್ತಿದೆ. ನನಗೆ ಎಂಭತ್ತು ವರ್ಷವಾಯಿತು. ಮುರಿದು ಹೋಗಿರುವ ಗಾಡಿಯೊಂದು ಚಲಿಸುವುದಕ್ಕೆ ಹಲಗೆ ಹಗ್ಗಗಳು ಬೇಕಾಗುವಂತೆ ತಥಾಗತನ ಕಾಯವು ಶುಶ್ರೂಷೆಯಿಮದ ಮಾತ್ರ ಕೆಲಸ ಮಾಡಬಲ್ಲದು ಎನಿಸುತ್ತದೆ. ಯಾವ ಸಮಯದಲ್ಲಿ ಆನಂದ, ತಥಾಗತನು ಯಾವುದನ್ನೂ ಮನಸ್ಸಿಗೆ ತೆಗೆದುಕೊಳ್ಳದೆ ವೇದನೆಗಳ ನಿರೋಧದಲ್ಲಿ ಮಾತ್ರ ಮನಸ್ಸನ್ನು ನಿಲ್ಲಿಸುತ್ತಾನೋ ಆ ಸಮಯದಲ್ಲಿ ತಥಾಗತನ ಕಾಯವು ಉಲ್ಲಾಸದಿಂದಿರುತ್ತದೆ. ಆದುದರಿಂದ, ಆನಂದ, ನಿಮಗೆ ನೀವೇ ದ್ವೀಪವಾಗಿ (ದೀಪವಾಗಿ), ನಿಮಗೆ ನೀವೇ ಶರಣು ಹೋಗಿ ಮತ್ತೆ ಯಾವುದಕ್ಕೂ ಶರಣು ಹೋಗುವುದು ಬೇಡ. ಧಮ್ಮವನ್ನೇ ದ್ವೀಪವನ್ನಾಗಿ (ದೀಪ) ಮಾಡಿಕೊಳ್ಳಿ. ಧಮ್ಮಕ್ಕೇ ಶರಣು ಹೋಗಿ, ಮತ್ತಾವುದಕ್ಕೂ ಶರಣು ಹೋಗುವುದು ಬೇಡ. ಭಿಕ್ಷುವಾದವನು ತನಗೆ ತಾನೇ ಹೇಗೆ ದ್ವೀಪವಾಗಬಲ್ಲ, ತನಗೆ ತಾನೇ ಶರಣು ಹೋಗಬಲ್ಲ? ಧಮ್ಮವನ್ನೇ ದ್ವೀಪವನ್ನಾಗಿ ಮಾಡಿಕೊಳ್ಳಬಲ್ಲ, ಧಮ್ಮಕ್ಕೆ ಶರಣಾಗಬಲ್ಲ? ಮತ್ತಾವುದಕ್ಕೂ ಶರಣು ಹೋಗದೆ ಇರಬಲ್ಲಂಥ ಸಾಮರ್ಥ್ಯವನ್ನು ಹೇಗೆ ಪಡೆಯಬಲ್ಲ? ಆನಂದ, ಭಿಕ್ಷುವಾದವನು ಕಾಯವನ್ನು ಅದು ಇರುವಂತೆಯೇ ಕಾಣುವವನಾಗಿ (ಕಾಯಾನುಸತಿ) ಶಾಂತಚಿತ್ತನಾಗಿ ಲೋಕದಲ್ಲಿ ಕಂಡುಬರುವ ತೀವ್ರತರವಾದ ಕಾಮವನ್ನೂ, ದುರ್ಮನಸ್ಸನ್ನೂ ಜಯಿಸಿರುತ್ತಾನೆ. ವೇದನೆಗಳನ್ನು, ಚಿತ್ತವನ್ನು, ಧಮ್ಮವನ್ನು ಅದು ಇರುವಂತೆಯೇ ಕಾಣುವವನಾಗಿ ಲೋಕದಲ್ಲಿ ಕಂಡುಬರುವ ತೀವ್ರತರವಾದ ಕಾಮವನ್ನು ದುರ್ಮನಸ್ಸನ್ನೂ ಜಯಿಸಿರುತ್ತಾನೆ. ಹೀಗೆ ಆನಂದ, ಭಿಕ್ಷುವಾದವನು ತನ್ನನ್ನೇ ದ್ವೀಪವನ್ನಾಗಿ ಮಾಡಿಕೊಳ್ಳುತ್ತಾನೆ, ತನಗಲ್ಲದೆ ಬೇರಾವುದಕ್ಕೂ ಶರಣು ಹೋಗದವನಾಗುತ್ತಾನೆ, ಧಮ್ಮವನ್ನೇ ದ್ವೀಪವನ್ನಾಗಿ ಮಾಡಿಕೊಳ್ಳುತ್ತಾನೆ, ಧರ್ಮವಲ್ಲದೆ ಮತ್ತಾವುದಕ್ಕೂ ಶರಣು ಹೋಗದವನಾಗುತ್ತಾನೆ. ಆನಂದ, ಯಾವ ಭಿಕ್ಷುವು ಈಗಲೂ ಮತ್ತು ತನ್ನ ಅನಂತರವೂ ತನ್ನನ್ನೇ ದ್ವೀಪವನ್ನಾಗಿ ಮಾಡಿಕೊಳ್ಳುತ್ತಾನೋ ತನಗಲ್ಲದೆ ಬೇರಾವುದಕ್ಕೂ ಶರಣು ಹೋಗಬಲ್ಲದವನಾಗುತ್ತಾನೋ, ಧಮ್ಮವನ್ನು ದ್ವೀಪವನ್ನಾಗಿ ಮಾಡಿಕೊಳ್ಳುತ್ತಾನೋ, ಧಮ್ಮವಲ್ಲದೆ ಮತ್ತಾವುದಕ್ಕೂ ಶರಣು ಹೋಗದವನಾಗುತ್ತಾನೋ ಆ ಭಿಕ್ಷುವು ಅಗ್ರಸ್ಥಿತಿಯನ್ನು ಮುಟ್ಟುತ್ತಾನೆ. (ಆದರೆ) ಅವನು ಸಾಧನೆ ಮಾಡುವ ಇಚ್ಛೆಯನ್ನು ಹೊಂದಿರಬೇಕು.
ದ್ವಿತೀಯ ಪಠಣ ಭಾಗ
ನಿಮಿತ್ತೋಭಾಸ ಕಥೆ
ಒಂದುದಿನ ಪೂರ್ವಾಹ್ನ ಸಮಯದಲ್ಲಿ ಭಗವಾನರು ಚೀವರವನ್ನು ಧರಿಸಿಕೊಂಡು ಪಿಂಡಪಾತ್ರೆಯೊಡನೆ ಭಿಕ್ಷೆಗಾಗಿ ವೇಸಾಲಿಗೆ ಹೋದರು. ವೇಸಾಲಿಯಲ್ಲಿ ನಡೆದು ಭಿಕ್ಷೆ ಮುಗಿಸಿದ ಮೇಲೆ ತಂದ ಭಿಕ್ಷೆಯನ್ನುಂಡು ಪಿಂಡಪಾತ್ರೆಯನ್ನು ಇಟ್ಟನಂತರ ಆಯುಷ್ಮಂತನಾದ ಆನಂದನನ್ನು ಕುರಿತು ಇಂತೆಂದರು- “ಆನಂದ, ಚಾಪೆಯನ್ನು ತೆಗೆದುಕೋ; ಚಾಪಾಲ ಚೈತ್ಯಕ್ಕೆ ಹೋಗೋಣ, ಈ ಹಗಲು ಅಲ್ಲಿಯೇ ಇರೋಣ.” “ಭಂತೆ, ಹಾಗೆಯೇ ಆಗಲಿ” ಎಂದು ಆನಂದನು ಭಗವಾನರಿಗೆ ಹೇಳಿ ಚಾಪೆಯನ್ನು ತೆಗೆದುಕೊಂಡು ಅವರ ಹಿಂದೆಯೇ ಹೋದನು. ಆಮೇಲೆ ಭಗವಾನರು ಚಾಪಾಲಿಯನ್ನು ತಲುಪಿದರು. ಅಲ್ಲಿ ತಮಗಾಗಿ ಇದ್ದ ಪ್ರತ್ಯೇಕವಾದ ಆಸನದಲ್ಲಿ ಕುಳಿತರು. ಆಯುಷ್ಮಂತನದ ಆನಂದನು ಭಗವಾನರಿಗೆ ನಮಸ್ಕರಿಸಿ ಒಂದುಕಡೆ ಕುಳಿತನು.
ಹೀಗೆ ಕುಳಿತುಕೊಂಡ ಭಗವಾನರು ಆನಂದನಿಗೆ ಇಂತೆಂದರು- “ಆನಂದ, ವೇಸಾಲಿಯು ಎಷ್ಟು ರಮಣೀಯವಾಗಿದೆ! ಉದೇನ ಚೈತ್ಯವು ಎಷ್ಟು ರಮಣೀಯವಾಗಿದೆ! ಗೋತಮರ ಚೈತ್ಯವು ಸತ್ತಂಬ ಚೈತ್ಯವು ಬಹುಪುತ್ರ ಚೈತ್ಯವು *ಸಾಕಂದದ ಚೈತ್ಯವು ಎಷ್ಟು ರಮಣೀಯವಾಗಿದೆ; ಚಾಪಾಲ ಚೈತ್ಯವಾದರೂ ಇಷ್ಟು ರಮಣೀಯ; ಆನಂದ, ನಾಲ್ಕು ಋದ್ಧಿ ಮಾರ್ಗಗಳನ್ನು ತಿಳಿದವನು, ಅವುಗಳನ್ನು ಯಾನವಾಗಿ ಆಧಾರವಾಗಿ ಉಪಯೋಗಿಸಬಲ್ಲವನು ಇಚ್ಛೆಪಟ್ಟಲ್ಲಿ ಅದೇ ಜನ್ಮದಲ್ಲಿ ಒಂದು ಕಲ್ಪದಷ್ಟು ಕಾಲ ಪೂರ್ತಿಯಾಗಿ ಅಥವಾ ಆ ಕಲ್ಪದಲ್ಲಿ ಉಳಿದ ಭಾಗದಲ್ಲಿ ಇರಬಲ್ಲವನಾಗುತ್ತಾನೆ. ತಥಾಗತನು ನಾಲ್ಕು ಋದ್ಧಿ ಮಾರ್ಗಗಳನ್ನು ತಿಳಿದವನಾಗಿದ್ದಾನೆ. ಅವುಗಳನ್ನು ಯಾನವಾಗಿ ಆಧಾರವಾಗಿ ಉಪಯೋಗಿಸಬಲ್ಲವನಾಗಿದ್ದಾನೆ. ಆದುದರಿಂದ ಇಚ್ಛೆಪಟ್ಟಲ್ಲಿ ಅವನು ಈ ಕಲ್ಪದಷ್ಟು ಕಾಲ ಪೂರ್ತಿಯಾಗಿ ಅಥವಾ ಈ ಕಲ್ಪದಲ್ಲಿ ಉಳಿದಿರುವಷ್ಟು ಕಾಲ ಬದುಕಬಲ್ಲ.” ಹೀಗೆ ಭಗವಾನರು ಸ್ಪಷ್ಟವಾದ ಸೂಚನೆಯನ್ನು ಮಾಡಿದರೂ, ಸ್ಪಷ್ಟವಾಗಿ ಹೇಳಿದರೂ ಆಯುಷ್ಮಂತನಾದ ಆನಂದನು ಅದನ್ನು ಅರಿಯಲಾರದಷ್ಟು ಮಂದ ಬುದ್ಧಿಯವನಾಗಿಬಿಟ್ಟಿದ್ದನು. ಭಗವಾನರನ್ನು “ಭಂತೆ, ಈ ಕಲ್ಪ ಮುಗಿಯುವವರೆಗೂ ಭಗವಾನರು ಬದುಕಬೇಕು, ಬಹುಜನ ಹಿತಕ್ಕಾಗಿ ಬಹುಜನ ಸುಖಕ್ಕಾಗಿ ದೇವತೆಗಳ ಮತ್ತು ಮನುಷ್ಯರ ಹಿತ ಸುಖಗಳಿಗಾಗಿ ತಾವು ಬದುಕಬೇಕು, ಸುಗತ” ಎಂದು ಯಾಚಿಸಲಿಲ್ಲ. ಅವನ ಮನಸ್ಸನ್ನು ಮಾರನು ವ್ಯಾಪಿಸಿಬಿಟ್ಟಿದ್ದನು. ಆಗ ಎರಡನೆಯಸಾರಿ ಭಗವಾನರು... ಮೂರನೆಯಸಾರಿ ಭಗವಾನರು ಆನಂದನನ್ನು ಕುರಿತು: ವೇಸಾಲಿಯು ಎಷ್ಟು ರಮಣೀಯವಾಗಿದೆ! ಉದೇನ ಚೈತ್ಯವು ಎಷ್ಟು ರಮಣೀಯವಾಗಿದೆ! ಗೋತಮರ ಚೈತ್ಯವು ಸತ್ತಂಬ ಚೈತ್ಯವು ಬಹುಪುತ್ರ ಚೈತ್ಯವು *ಸಾಕಂದದ ಚೈತ್ಯವು ಎಷ್ಟು ರಮಣೀಯವಾಗಿದೆ; ಚಾಪಾಲ ಚೈತ್ಯವಾದರೂ ಇಷ್ಟು ರಮಣೀಯ; ಆನಂದ, ನಾಲ್ಕು ಋದ್ಧಿ ಮಾರ್ಗಗಳನ್ನು ತಿಳಿದವನು, ಅವುಗಳನ್ನು ಯಾನವಾಗಿ ಆಧಾರವಾಗಿ ಉಪಯೋಗಿಸಬಲ್ಲವನು ಇಚ್ಛೆಪಟ್ಟಲ್ಲಿ ಅದೇ ಜನ್ಮದಲ್ಲಿ ಒಂದು ಕಲ್ಪದಷ್ಟು ಕಾಲ ಪೂರ್ತಿಯಾಗಿ ಅಥವಾ ಆ ಕಲ್ಪದಲ್ಲಿ ಉಳಿದ ಭಾಗದಲ್ಲಿ ಇರಬಲ್ಲವನಾಗುತ್ತಾನೆ. ತಥಾಗತನು ನಾಲ್ಕು ಋದ್ಧಿ ಮಾರ್ಗಗಳನ್ನು ತಿಳಿದವನಾಗಿದ್ದಾನೆ. ಅವುಗಳನ್ನು ಯಾನವಾಗಿ ಆಧಾರವಾಗಿ ಉಪಯೋಗಿಸಬಲ್ಲವನಾಗಿದ್ದಾನೆ. ಆದುದರಿಂದ ಇಚ್ಛೆಪಟ್ಟಲ್ಲಿ ಅವನು ಈ ಕಲ್ಪದಷ್ಟು ಕಾಲ ಪೂರ್ತಿಯಾಗಿ ಅಥವಾ ಈ ಕಲ್ಪದಲ್ಲಿ ಉಳಿದಿರುವಷ್ಟು ಕಾಲ ಬದುಕಬಲ್ಲ.” ಹೀಗೆ ಭಗವಾನರು ಸ್ಪಷ್ಟವಾದ ಸೂಚನೆಯನ್ನು ಮಾಡಿದರೂ, ಸ್ಪಷ್ಟವಾಗಿ ಹೇಳಿದರೂ ಆಯುಷ್ಮಂತನಾದ ಆನಂದನು ಅದನ್ನು ಅರಿಯಲಾರದಷ್ಟು ಮಂದ ಬುದ್ಧಿಯವನಾಗಿಬಿಟ್ಟಿದ್ದನು. ಭಗವಾನರನ್ನು “ಭಂತೆ, ಈ ಕಲ್ಪ ಮುಗಿಯುವವರೆಗೂ ಭಗವಾನರು ಬದುಕಬೇಕು, ಬಹುಜನ ಹಿತಕ್ಕಾಗಿ ಬಹುಜನ ಸುಖಕ್ಕಾಗಿ ದೇವತೆಗಳ ಮತ್ತು ಮನುಷ್ಯರ ಹಿತ ಸುಖಗಳಿಗಾಗಿ ತಾವು ಬದುಕಬೇಕು, ಸುಗತ” ಎಂದು ಯಾಚಿಸಲಿಲ್ಲ. ಅವನ ಮನಸ್ಸನ್ನು ಮಾರನು ವ್ಯಾಪಿಸಿಬಿಟ್ಟಿದ್ದನು. ಆಗ ಭಗವಾನರು ಆನಂದನಿಗೆ “ಆನಂದ, ಹೊರಡು, ನನ್ನ ಪಾಡಿಗೆ ನನ್ನನ್ನು ಬಿಟ್ಟುಬಿಡು, ನಿನಗೆ ಇಷ್ಟವಿರುವ ಕೆಲಸದಲ್ಲಿ ನೀನು ತೊಡಗಬಹುದು” ಎಂದು ಹೇಳಿದರು. “ಹಾಗೆಯೇ ಆಗಲಿ ಭಂತೆ” ಎಂದು ಭಗವಾನರಿಗೆ ಹೇಳಿ ಆಸನದಿಂದೆದ್ದು, ಭಗವಾನರಿಗೆ ಅಭಿವಂದಿಸಿ ಪ್ರದಕ್ಷಿಣೆ ಮಾಡಿ ಹತ್ತಿರದಲ್ಲಿದ್ದ ಒಂದು ಮರದ ಬುಡದಲ್ಲಿ ಕುಳಿತುಕೊಂಡನು.
ಮಾರನು ಯಾಚನೆ ಮಾಡಿಕೊಂಡುದು
ಆಯುಷ್ಮಂತನಾದ ಆನಂದನು ಹೊರಟುಹೋದ ಸ್ವಲ್ಪಹೊತ್ತಿನಲ್ಲಿಯೇ ಪಾಪಿಯಾದ ಮಾರನು ಭಗವಾನರ ಬಳಿಗೆ ಬಂದನು. ಬಂದು ಒಂದುಕಡೆ ಕುಳಿತುಕೊಂಡನು. ಆಮೇಲೆ ಭಗವಾನರನ್ನು ಕುರಿತು ಇಂತೆಂದನು- “ಪರಿನಿಬ್ಬಾನವನ್ನು ಬೇಗ ಪಡೆಯಿರಿ. ಭಗವಾನ್, ಬೇಗ ಪರಿನಿಬ್ಬಾನವನ್ನು ಹೊಂದಿ ಸುಗತ. ಇದು ಪರಿನಿಬ್ಬಾನಕ್ಕೆ ಸಕಾಲವಾಗಿದೆ. ಭಗವಾನರೇ ಹೀಗೆ ಹೇಳಿರುವವರಷ್ಟೆ- ‘ಓ ಪಾಪಿ, ನಾನು ಪರಿನಿಬ್ಬಾನವನ್ನು ಪಡೆಯುವುದಿಲ್ಲ, ಎಲ್ಲಿಯವರೆಗೆ ಭಿಕ್ಷುಗಳು ನನ್ನ ಸರಿಯಾದ ಶಿಷ್ಯರಾಗಿಲ್ಲವೋ ಅವರು ವಿವೇಕಿಗಳೂ ವಿನೀತರೂ ವಿಶಾರದರೂ ಬಹುಶ್ರುತರೂ ಧಮ್ಮವನ್ನು ಪಾಲಿಸುವವರೂ ಧಮ್ಮ ಮತ್ತು ಅನುಧಮ್ಮಗಳನ್ನು ಅನುಸರಿಸುವವರೂ ಸರಿಯಾದ ಮಾರ್ಗದಲ್ಲಿ ನಡೆಯುವವರೂ ಅನುಧಮ್ಮಗಳೆಲ್ಲವನ್ನೂ ತಪ್ಪದೆ ಪಾಲಿಸುವವರೂ ತಾವು ಪಡೆದುದನ್ನು ಬೇರೆಯವರಿಗೆ ತಿಳಿಸುವವರೂ, ಬೋಧಿಸುವವರೂ, ಪ್ರಕಾಶಪಡಿಸುವವರೂ, ಧಮ್ಮವನ್ನು ಪ್ರತಿಷ್ಠಿಸಬಲ್ಲವರೂ, ಅವನ್ನು ವಿವರಿಸಬಲ್ಲವರೂ, ವಿಭಜಿಸಿ ಹೇಳುವವರೂ, ಸ್ಪಷ್ಟಪಡಿಸಬಲ್ಲವರೂ, ಪರವಾದಗಳು ಹುಟ್ಟಿಕೊಂಡಾಗ ಧಮ್ಮದ ಮೂಲಕ ಅವುಗಳನ್ನು ನಿಗ್ರಹಿಸಬಲ್ಲವರೂ ಬೇರೆ ಕಡೆಗಳಲ್ಲಿ ಧಮ್ಮವನ್ನು ಪ್ರಸರಿಸಬಲ್ಲವರೂ ಆಗಿಲ್ಲವೋ ಅಲ್ಲಿಯವರೆಗೆ ನಾನು ಪರಿನಿಬ್ಬಾನವನ್ನು ಪಡೆಯುವುದಿಲ್ಲ’. ಆದರೆ ಈಗ ಭಂತೆ, ಭಿಕ್ಷುಗಳು ಭಗವಾನರ ಸರಿಯಾದ ಶಿಷ್ಯರಾಗಿದ್ದಾರೆ. ಅವರು ವಿವೇಕಿಗಳೂ, ವಿನೀತರೂ, ವಿಶಾರದರೂ, ಬಹುಶ್ರುತರೂ ಧಮ್ಮವನ್ನು ಪಾಲಿಸುವವರೂ, ಧಮ್ಮ ಮತ್ತು ಅನುಧಮ್ಮಗಳನ್ನು ಅನುಸರಿಸುವವರೂ, ಸರಿಯಾದ ಮಾರ್ಗದಲ್ಲಿ ನಡೆಯುವವರೂ ಅನುಧಮ್ಮಗಳೆಲ್ಲವನ್ನೂ ತಪ್ಪದೆ ಪಾಲಿಸುವವರೂ ತಾವು ಆಚಾರ್ಯರಿಂದ ಪಡೆದುದನ್ನು ಬೇರೆಯವರಿಗೆ ತಿಳಿಸುವವರೂ ಪ್ರಕಾಶಪಡಿಸುವವರು ಧಮ್ಮವನ್ನು ಪ್ರತಿಷ್ಠಿಸಬಲ್ಲವರೂ, ವಿವರಿಸಬಲ್ಲವರು, ಧಮ್ಮವನ್ನು ವಿಭಜಿಸಿ ಹೇಳಬಲ್ಲವರು, ಸ್ಪಷ್ಟಪಡಿಸಬಲ್ಲವರೂ, ಸುಲಭವಾಗಿ ನಿಗ್ರಹಿಸಬಲ್ಲ ಬೇರೆ ಧರ್ಮಗಳು ಹುಟ್ಟಿಕೊಂಡಾಗ ಅವುಗಳನ್ನು ನಿಗ್ರಹಿಸಬಲ್ಲವರೂ ಧಮ್ಮವನ್ನು ಬೇರೆ ಕಡೆಗಳಲ್ಲಿ ಪ್ರಸಾರ ಮಾಡಬಲ್ಲವರೂ ಆಗಿದ್ದಾರೆ. (ಆದುದರಿಂದ) ಭಗವಾನರು ಪರಿನಿಬ್ಬಾನವನ್ನು ಪಡೆಯಬಹುದು. ಸುಗತರು ಪರಿನಿಬ್ಬಾನವನ್ನು ಪಡೆಯಬಹುದು. ಭಗವಾನರಿಗೆ ಪರಿನಿಬ್ಬಾನಕ್ಕೆ ಇದು ಸಕಾಲವಾಗಿದೆ.
“ಭಗವಾನರೇ ಹೀಗೆ ಹೇಳಿರುವವರಷ್ಟೆ- ‘ಓ ಪಾಪಿ, ನಾನು ಪರಿನಿಬ್ಬಾನವನ್ನು ಪಡೆಯುವುದಿಲ್ಲ, ಎಲ್ಲಿಯವರೆಗೆ ಭಿಕ್ಷುಣಿಯರು ನನ್ನ ಸರಿಯಾದ ಶಿಷ್ಯರಾಗಿಲ್ಲವೋ ಅವರು ವಿವೇಕಿಗಳೂ ವಿನೀತರೂ ವಿಶಾರದರೂ ಬಹುಶ್ರುತರೂ ಧಮ್ಮವನ್ನು ಪಾಲಿಸುವವರೂ ಧಮ್ಮ ಮತ್ತು ಅನುಧಮ್ಮಗಳನ್ನು ಅನುಸರಿಸುವವರೂ ಸರಿಯಾದ ಮಾರ್ಗದಲ್ಲಿ ನಡೆಯುವವರೂ ಅನುಧಮ್ಮಗಳೆಲ್ಲವನ್ನೂ ತಪ್ಪದೆ ಪಾಲಿಸುವವರೂ ತಾವು ಪಡೆದುದನ್ನು ಬೇರೆಯವರಿಗೆ ತಿಳಿಸುವವರೂ, ಬೋಧಿಸುವವರೂ, ಪ್ರಕಾಶಪಡಿಸುವವರೂ, ಧಮ್ಮವನ್ನು ಪ್ರತಿಷ್ಠಿಸಬಲ್ಲವರೂ, ಅವನ್ನು ವಿವರಿಸಬಲ್ಲವರೂ, ವಿಭಜಿಸಿ ಹೇಳುವವರೂ, ಸ್ಪಷ್ಟಪಡಿಸಬಲ್ಲವರೂ, ಪರವಾದಗಳು ಹುಟ್ಟಿಕೊಂಡಾಗ ಧಮ್ಮದ ಮೂಲಕ ಅವುಗಳನ್ನು ನಿಗ್ರಹಿಸಬಲ್ಲವರೂ ಬೇರೆ ಕಡೆಗಳಲ್ಲಿ ಧಮ್ಮವನ್ನು ಪ್ರಸರಿಸಬಲ್ಲವರೂ ಆಗಿಲ್ಲವೋ ಅಲ್ಲಿಯವರೆಗೆ ನಾನು ಪರಿನಿಬ್ಬಾನವನ್ನು ಪಡೆಯುವುದಿಲ್ಲ’. ಆದರೆ ಈಗ ಭಂತೆ, ಭಿಕ್ಷುಣಿಯರು ಭಗವಾನರ ಸರಿಯಾದ ಶಿಷ್ಯರಾಗಿದ್ದಾರೆ. ಅವರು ವಿವೇಕಿಗಳೂ, ವಿನೀತರೂ, ವಿಶಾರದರೂ, ಬಹುಶ್ರುತರೂ ಧಮ್ಮವನ್ನು ಪಾಲಿಸುವವರೂ, ಧಮ್ಮ ಮತ್ತು ಅನುಧಮ್ಮಗಳನ್ನು ಅನುಸರಿಸುವವರೂ, ಸರಿಯಾದ ಮಾರ್ಗದಲ್ಲಿ ನಡೆಯುವವರೂ ಅನುಧಮ್ಮಗಳೆಲ್ಲವನ್ನೂ ತಪ್ಪದೆ ಪಾಲಿಸುವವರೂ ತಾವು ಆಚಾರ್ಯರಿಂದ ಪಡೆದುದನ್ನು ಬೇರೆಯವರಿಗೆ ತಿಳಿಸುವವರೂ ಪ್ರಕಾಶಪಡಿಸುವವರು ಧಮ್ಮವನ್ನು ಪ್ರತಿಷ್ಠಿಸಬಲ್ಲವರೂ, ವಿವರಿಸಬಲ್ಲವರು, ಧಮ್ಮವನ್ನು ವಿಭಜಿಸಿ ಹೇಳಬಲ್ಲವರು, ಸ್ಪಷ್ಟಪಡಿಸಬಲ್ಲವರೂ, ಸುಲಭವಾಗಿ ನಿಗ್ರಹಿಸಬಲ್ಲ ಬೇರೆ ಧರ್ಮಗಳು ಹುಟ್ಟಿಕೊಂಡಾಗ ಅವುಗಳನ್ನು ನಿಗ್ರಹಿಸಬಲ್ಲವರೂ ಧಮ್ಮವನ್ನು ಬೇರೆ ಕಡೆಗಳಲ್ಲಿ ಪ್ರಸಾರ ಮಾಡಬಲ್ಲವರೂ ಆಗಿದ್ದಾರೆ. (ಆದುದರಿಂದ) ಭಗವಾನರು ಪರಿನಿಬ್ಬಾನವನ್ನು ಪಡೆಯಬಹುದು. ಸುಗತರು ಪರಿನಿಬ್ಬಾನವನ್ನು ಪಡೆಯಬಹುದು. ಭಗವಾನರಿಗೆ ಪರಿನಿಬ್ಬಾನಕ್ಕೆ ಇದು ಸಕಾಲವಾಗಿದೆ.
“ಭಗವಾನರೇ ಹೀಗೆ ಹೇಳಿರುವವರಷ್ಟೆ- ‘ಓ ಪಾಪಿ, ನಾನು ಪರಿನಿಬ್ಬಾನವನ್ನು ಪಡೆಯುವುದಿಲ್ಲ, ಎಲ್ಲಿಯವರೆಗೆ ಉಪಾಸಕರು ನನ್ನ ಸರಿಯಾದ ಶಿಷ್ಯರಾಗಿಲ್ಲವೋ ಅವರು ವಿವೇಕಿಗಳೂ ವಿನೀತರೂ ವಿಶಾರದರೂ ಬಹುಶ್ರುತರೂ ಧಮ್ಮವನ್ನು ಪಾಲಿಸುವವರೂ ಧಮ್ಮ ಮತ್ತು ಅನುಧಮ್ಮಗಳನ್ನು ಅನುಸರಿಸುವವರೂ ಸರಿಯಾದ ಮಾರ್ಗದಲ್ಲಿ ನಡೆಯುವವರೂ ಅನುಧಮ್ಮಗಳೆಲ್ಲವನ್ನೂ ತಪ್ಪದೆ ಪಾಲಿಸುವವರೂ ತಾವು ಪಡೆದುದನ್ನು ಬೇರೆಯವರಿಗೆ ತಿಳಿಸುವವರೂ, ಬೋಧಿಸುವವರೂ, ಪ್ರಕಾಶಪಡಿಸುವವರೂ, ಧಮ್ಮವನ್ನು ಪ್ರತಿಷ್ಠಿಸಬಲ್ಲವರೂ, ಅವನ್ನು ವಿವರಿಸಬಲ್ಲವರೂ, ವಿಭಜಿಸಿ ಹೇಳುವವರೂ, ಸ್ಪಷ್ಟಪಡಿಸಬಲ್ಲವರೂ, ಪರವಾದಗಳು ಹುಟ್ಟಿಕೊಂಡಾಗ ಧಮ್ಮದ ಮೂಲಕ ಅವುಗಳನ್ನು ನಿಗ್ರಹಿಸಬಲ್ಲವರೂ ಬೇರೆ ಕಡೆಗಳಲ್ಲಿ ಧಮ್ಮವನ್ನು ಪ್ರಸರಿಸಬಲ್ಲವರೂ ಆಗಿಲ್ಲವೋ ಅಲ್ಲಿಯವರೆಗೆ ನಾನು ಪರಿನಿಬ್ಬಾನವನ್ನು ಪಡೆಯುವುದಿಲ್ಲ’. ಆದರೆ ಈಗ ಭಂತೆ, ಉಪಾಸಕರು ಭಗವಾನರ ಸರಿಯಾದ ಶಿಷ್ಯರಾಗಿದ್ದಾರೆ. ಅವರು ವಿವೇಕಿಗಳೂ, ವಿನೀತರೂ, ವಿಶಾರದರೂ, ಬಹುಶ್ರುತರೂ ಧಮ್ಮವನ್ನು ಪಾಲಿಸುವವರೂ, ಧಮ್ಮ ಮತ್ತು ಅನುಧಮ್ಮಗಳನ್ನು ಅನುಸರಿಸುವವರೂ, ಸರಿಯಾದ ಮಾರ್ಗದಲ್ಲಿ ನಡೆಯುವವರೂ ಅನುಧಮ್ಮಗಳೆಲ್ಲವನ್ನೂ ತಪ್ಪದೆ ಪಾಲಿಸುವವರೂ ತಾವು ಆಚಾರ್ಯರಿಂದ ಪಡೆದುದನ್ನು ಬೇರೆಯವರಿಗೆ ತಿಳಿಸುವವರೂ ಪ್ರಕಾಶಪಡಿಸುವವರು ಧಮ್ಮವನ್ನು ಪ್ರತಿಷ್ಠಿಸಬಲ್ಲವರೂ, ವಿವರಿಸಬಲ್ಲವರು, ಧಮ್ಮವನ್ನು ವಿಭಜಿಸಿ ಹೇಳಬಲ್ಲವರು, ಸ್ಪಷ್ಟಪಡಿಸಬಲ್ಲವರೂ, ಸುಲಭವಾಗಿ ನಿಗ್ರಹಿಸಬಲ್ಲ ಬೇರೆ ಧರ್ಮಗಳು ಹುಟ್ಟಿಕೊಂಡಾಗ ಅವುಗಳನ್ನು ನಿಗ್ರಹಿಸಬಲ್ಲವರೂ ಧಮ್ಮವನ್ನು ಬೇರೆ ಕಡೆಗಳಲ್ಲಿ ಪ್ರಸಾರ ಮಾಡಬಲ್ಲವರೂ ಆಗಿದ್ದಾರೆ. (ಆದುದರಿಂದ) ಭಗವಾನರು ಪರಿನಿಬ್ಬಾನವನ್ನು ಪಡೆಯಬಹುದು. ಸುಗತರು ಪರಿನಿಬ್ಬಾನವನ್ನು ಪಡೆಯಬಹುದು. ಭಗವಾನರಿಗೆ ಪರಿನಿಬ್ಬಾನಕ್ಕೆ ಇದು ಸಕಾಲವಾಗಿದೆ.
“ಭಗವಾನರೇ ಹೀಗೆ ಹೇಳಿರುವವರಷ್ಟೆ- ‘ಓ ಪಾಪಿ, ನಾನು ಪರಿನಿಬ್ಬಾನವನ್ನು ಪಡೆಯುವುದಿಲ್ಲ, ಎಲ್ಲಿಯವರೆಗೆ ಉಪಾಸಿಕೆಯರು ನನ್ನ ಸರಿಯಾದ ಶಿಷ್ಯರಾಗಿಲ್ಲವೋ ಅವರು ವಿವೇಕಿಗಳೂ ವಿನೀತರೂ ವಿಶಾರದರೂ ಬಹುಶ್ರುತರೂ ಧಮ್ಮವನ್ನು ಪಾಲಿಸುವವರೂ ಧಮ್ಮ ಮತ್ತು ಅನುಧಮ್ಮಗಳನ್ನು ಅನುಸರಿಸುವವರೂ ಸರಿಯಾದ ಮಾರ್ಗದಲ್ಲಿ ನಡೆಯುವವರೂ ಅನುಧಮ್ಮಗಳೆಲ್ಲವನ್ನೂ ತಪ್ಪದೆ ಪಾಲಿಸುವವರೂ ತಾವು ಪಡೆದುದನ್ನು ಬೇರೆಯವರಿಗೆ ತಿಳಿಸುವವರೂ, ಬೋಧಿಸುವವರೂ, ಪ್ರಕಾಶಪಡಿಸುವವರೂ, ಧಮ್ಮವನ್ನು ಪ್ರತಿಷ್ಠಿಸಬಲ್ಲವರೂ, ಅವನ್ನು ವಿವರಿಸಬಲ್ಲವರೂ, ವಿಭಜಿಸಿ ಹೇಳುವವರೂ, ಸ್ಪಷ್ಟಪಡಿಸಬಲ್ಲವರೂ, ಪರವಾದಗಳು ಹುಟ್ಟಿಕೊಂಡಾಗ ಧಮ್ಮದ ಮೂಲಕ ಅವುಗಳನ್ನು ನಿಗ್ರಹಿಸಬಲ್ಲವರೂ ಬೇರೆ ಕಡೆಗಳಲ್ಲಿ ಧಮ್ಮವನ್ನು ಪ್ರಸರಿಸಬಲ್ಲವರೂ ಆಗಿಲ್ಲವೋ ಅಲ್ಲಿಯವರೆಗೆ ನಾನು ಪರಿನಿಬ್ಬಾನವನ್ನು ಪಡೆಯುವುದಿಲ್ಲ’. ಆದರೆ ಈಗ ಭಂತೆ, ಉಪಾಸಿಕೆಯರು ಭಗವಾನರ ಸರಿಯಾದ ಶಿಷ್ಯರಾಗಿದ್ದಾರೆ. ಅವರು ವಿವೇಕಿಗಳೂ, ವಿನೀತರೂ, ವಿಶಾರದರೂ, ಬಹುಶ್ರುತರೂ ಧಮ್ಮವನ್ನು ಪಾಲಿಸುವವರೂ, ಧಮ್ಮ ಮತ್ತು ಅನುಧಮ್ಮಗಳನ್ನು ಅನುಸರಿಸುವವರೂ, ಸರಿಯಾದ ಮಾರ್ಗದಲ್ಲಿ ನಡೆಯುವವರೂ ಅನುಧಮ್ಮಗಳೆಲ್ಲವನ್ನೂ ತಪ್ಪದೆ ಪಾಲಿಸುವವರೂ ತಾವು ಆಚಾರ್ಯರಿಂದ ಪಡೆದುದನ್ನು ಬೇರೆಯವರಿಗೆ ತಿಳಿಸುವವರೂ ಪ್ರಕಾಶಪಡಿಸುವವರು ಧಮ್ಮವನ್ನು ಪ್ರತಿಷ್ಠಿಸಬಲ್ಲವರೂ, ವಿವರಿಸಬಲ್ಲವರು, ಧಮ್ಮವನ್ನು ವಿಭಜಿಸಿ ಹೇಳಬಲ್ಲವರು, ಸ್ಪಷ್ಟಪಡಿಸಬಲ್ಲವರೂ, ಸುಲಭವಾಗಿ ನಿಗ್ರಹಿಸಬಲ್ಲ ಬೇರೆ ಧರ್ಮಗಳು ಹುಟ್ಟಿಕೊಂಡಾಗ ಅವುಗಳನ್ನು ನಿಗ್ರಹಿಸಬಲ್ಲವರೂ ಧಮ್ಮವನ್ನು ಬೇರೆ ಕಡೆಗಳಲ್ಲಿ ಪ್ರಸಾರ ಮಾಡಬಲ್ಲವರೂ ಆಗಿದ್ದಾರೆ. (ಆದುದರಿಂದ) ಭಗವಾನರು ಪರಿನಿಬ್ಬಾನವನ್ನು ಪಡೆಯಬಹುದು. ಸುಗತರು ಪರಿನಿಬ್ಬಾನವನ್ನು ಪಡೆಯಬಹುದು. ಭಗವಾನರಿಗೆ ಪರಿನಿಬ್ಬಾನಕ್ಕೆ ಇದು ಸಕಾಲವಾಗಿದೆ.
“ಮತ್ತೆ ಭಗವಾನರೇ ಹೀಗೆ ಹೇಳಿರುವವರಷ್ಟೆ- ‘ಓ ಪಾಪಿ, ನಾನು ಪರಿನಿಬ್ಬಾನವನ್ನು ಪಡೆಯುವುದಿಲ್ಲ, ಎಲ್ಲಿಯವರೆಗೆ ಈ ಬ್ರಹ್ಮಚರ್ಯವು ಅಂದರೆ ಧಮ್ಮವು ಯಶಸ್ವಿಯಾಗಿಲ್ಲವೋ, ಎಲ್ಲ ಜನರ ಸಂಪತ್ತಾಗಿಲ್ಲವೋ, ದೇವತೆಗಳಿಗೆ ಮತ್ತು ಮನುಷ್ಯರಿಗೆ ವಿವರಿಸಲ್ಪಟ್ಟಿಲ್ಲವೋ ಅಲ್ಲಿಯವರೆಗೆ ನಾನು ಪರಿನಿಬ್ಬಾನವನ್ನು ಪಡೆಯುವುದಿಲ್ಲ’. ಆದರೆ ಈಗ ಭಂತೆ, ಭಗವಾನರ ಬ್ರಹ್ಮಚರ್ಯವು ಯಶಸ್ವಿಯಾಗಿದೆ, ಎಲ್ಲ ಜನರ ಸಂಪತ್ತಾಗಿದೆ. ದೇವತೆಗಳಿಗೆ ಮತ್ತು ಮನುಷ್ಯರಿಗೆ ವಿವರಿಸಲ್ಪಟ್ಟಿದೆ. (ಆದುದರಿಂದ) ಭಗವಾನರು ಪರಿನಿಬ್ಬಾನವನ್ನು ಪಡೆಯಬಹುದು. ಸುಗತರು ಪರಿನಿಬ್ಬಾನವನ್ನು ಪಡೆಯಬಹುದು. ಭಗವಾನರಿಗೆ ಪರಿನಿಬ್ಬಾನಕ್ಕೆ ಇದು ಸಕಾಲವಾಗಿದೆ.”
ಹೀಗೆ ಹೇಳಿದ ಪಾಪಿಯಾದ ಮಾರನಿಗೆ ಭಗವಾನರು ಇಂತೆಂದರು- “ಪಾಪಿ, ನೀನು ಸಂತೋಷಪಡು, ಬಹುಬೇಗನೇ ತಥಾಗತರ ಪರಿನಿಬ್ಬಾನವಾಗುತ್ತದೆ. ಇಲ್ಲಿಂದ ಮೂರು ತಿಂಗಳು ಮುಗಿಯುವ ಹೊತ್ತಿಗೆ ತಥಾಗತನು ಪರಿನಿಬ್ಬಾನವನ್ನು ಪಡೆಯುತ್ತಾನೆ.”
ಆಯಸ್ಸು ತ್ಯಜಿಸುವುದು
ಭಗವಾನರು ಚಾಪಾಲಿ ಚೈತ್ಯದಲ್ಲಿ ಸ್ಮೃತಿವಂತರೂ, ಶಾಂತಚಿತ್ತರೂ ಆಗಿದ್ದರು. ಹೀಗಿದ್ದಾಗಲೇ ಉಳಿದ ಆಯಸ್ಸನ್ನು ತ್ಯಜಿಸಲು ಮನಸ್ಸು ಮಾಡಿಬಿಟ್ಟರು. ಅವರು ಹೀಗೆ ಹೀಗೆ ಆಯಸ್ಸನ್ನು ತ್ಯಜಿಸಲು ನಿಶ್ಚಯಿಸಿದಾಗ ಒಂದು ಭಯಂಕರವಾದ ಭೂಕಂಪವಾಯಿತು. ಅದು ಅತಿ ಭೀಷಣವೂ ಭಯಾನಕವೂ ಆಗಿತ್ತು. ದೇವದುಂದುಭಿಯು ಮೊಳಗಿತು. ಇದರ ಪರಿಣಾಮವನ್ನು ಅರಿತ ಭಗವಾನರು ಈ ಉದಾನವನ್ನು ಹೇಳಿದರು-
ಅತುಲವೋ ಅಲ್ಪವೋ
ಮುನಿಯಾದವನು ‘ಭವ ಸಂಸಾರ’ವನು ವರ್ಜಿಪನು
ಶಾಂತಚಿತ್ತವ ಪಡೆದ ಆ ವರಮುನಿಯು
ಕವಚಪರಿಯಂದದೊಳು ವರ್ಜಿಪನು ತನ್ನ ಇರವಿನ ಬಲೆಯ.
ಮಹಾಭೂಕಂಪನದ ಕಾರಣ
ಆನಂತರ ಆಯುಷ್ಮಂತನಾದ ಆನಂದನಿಗೆ ಹೀಗೆ ಅನ್ನಿಸಿತು- “ಆಶ್ಚರ್ಯ! ಅದ್ಭುತ! ಒಂದು ಮಹಾ ಭೂಕಂಪವಾಯಿತು! ಈ ಭೂಕಂಪ ಎಷ್ಟು ಉಗ್ರವಾದುದಾಗಿದೆ! ಭಯಂಕರವಾದುದಾಗಿದೆ! ದೇವದುಂದುಭಿಯು ಮೊಳಗಿದೆ! ಈ ಭೂಕಂಪವಾಗಲು ಏನು ಕಾರಣವಿರಬಹುದು?”
ಆಯುಷ್ಮಂತನಾದ ಆನಂದನು ಭಗವಾನರ ಬಳಿಗೆ ಬಂದನು. ಅವರಿಗೆ ನಮಸ್ಕರಿಸಿ ಒಂದುಕಡೆ ಕುಳಿತುಕೊಂಡನು. ಆಮೇಲೆ ಭಗವಾನರನ್ನು ಕುರಿತು ಇಂತೆಂದನು- “ಆಶ್ಚರ್ಯ ಭಂತೆ, ಅದ್ಭುತ ಭಂತೆ! ಒಂದು ಮಹಾ ಭೂಕಂಪವಾಗಿದೆ. ಭಂತೆ, ಈ ಭೂಕಂಪವು ಭಯಾನಕವೂ ಉಗ್ರವೂ ಆಗಿದೆ! ದೇವದುಂದುಭಿಯೂ ಮೊಳಗಿದೆ. ಈ ಮಹಾ ಭೂಕಂಪಕ್ಕೆ ಏನು ಕಾರಣ?”
“ಆನಂದ, ಮಹಾ ಭೂಕಂಪಕ್ಕೆ ಎಂಟು ಕಾರಣಗಳಿವೆ. ಆ ಎಂಟು ಯಾವುವು? ಈ ಮಹಾಪೃಥ್ವಿಯು ಜಲದ ಮೇಲೆ ನಿಂತಿದೆ. ಜಲವು ವಾಯುವಿನ ಮೇಲೆ ನಿಂತಿದೆ. ವಾಯುವು ಆಕಾಶದಲ್ಲಿ ನಿಂತಿದೆ. ಒಮ್ಮೊಮ್ಮೆ ಆನಂದ, ವಾಯುವು ಚಲಿಸುತ್ತದೆ. ವಾಯುವು ಚಲಿಸಿದಾಗ ಜಲವು ಕಂಪಿಸುತ್ತದೆ. ಜಲವು ಕಂಪಿಸಿದಾಗ ಪೃಥ್ವಿಯೂ ಕಂಪಿಸುತ್ತದೆ, ಮಹಾಭೂಕಂಪವಾಗಲು ಇದು ಮೊದಲನೆಯ ಕಾರಣ.
“ಮತ್ತೆ ಆನಂದ, ಸಮಣನೋ, ಋದ್ಧಿಶಕ್ತಿಯನ್ನು ಅರಿಯುವ ಚಿತ್ತವನ್ನು ಪಡೆದಿರುವವನೋ, ಬ್ರಾಹ್ಮಣನೋ ಮಹಾಬಲಶಾಲಿ ಮತ್ತು ಮಹಾನುಭಾವನಾಗಿರುವ ದೇವತೆಯೋ ಪೃಥ್ವಿಯನ್ನೂ, ಸಾಗರವನ್ನೂ ಧ್ಯಾನದ ಮೂಲಕ ಚೆನ್ನಾಗಿ ಅರಿತಾಗ ಈ ಪೃಥ್ವಿ ಕಂಪಿಸುತ್ತದೆ, ಬಲವಾಗಿ ಕಂಪಿಸುತ್ತದೆ, ಅತಿ ವೇಗವಾಗಿ ಕಂಪಿಸುತ್ತದೆ. ಮಹಾ ಭೂಕಂಪಕ್ಕೆ ಇದು ಎರಡನೆಯ ಕಾರಣ.
“ಮತ್ತೆ ಆನಂದ, ಬೋಧಿಸತ್ವನು ತುಸಿತಕಾಯವನ್ನು ಬಿಟ್ಟು ಸ್ಮೃತಿವಂತನಾಗಿ ಶಾಂತಚಿತ್ತದಿಂದ ಮಾತೃ ಗರ್ಭವನ್ನು ಹೊಕ್ಕಾಗ ಭೂಮಿಯು ಕಂಪಿಸುತ್ತದೆ. ಬಲವಾಗಿ ಕಂಪಿಸುತ್ತದೆ. ಅತಿ ವೇಗವಾಗಿ ಕಂಪಿಸುತ್ತದೆ. ಮಹಾ ಭೂಕಂಪಕ್ಕೆ ಇದು ಮೂರನೆಯ ಕಾರಣ.
“ಮತ್ತೆ ಅನಂದ, ಬೋಧಿಸತ್ವನು ಸ್ಮೃತಿವಂತನಾಗಿ ಶಾಂತಿಚಿತ್ತದಿಂದ ಮಾತೃ ಗರ್ಭದಿಂದ ನಿಷ್ಕ್ರಮಿಸಿದಾಗ ಭೂಮಿಯು ಕಂಪಿಸುತ್ತದೆ, ಬಲವಾಗಿ ಕಂಪಿಸುತ್ತದೆ, ಅತಿ ವೇಗವಾಗಿ ಕಂಪಿಸುತ್ತದೆ. ಇದು ಮಹಾ ಭೂಕಂಪಕ್ಕೆ ನಾಲ್ಕನೆಯ ಕಾರಣ.
“ಆನಂದ, ತಥಾಗತನು ಎಂದು ಉತ್ಕೃಷ್ಟವಾದ ಸಂಬೋಧಿಯನ್ನು ಸಂಪಾದಿಸುತ್ತಾನೋ ಅಂದು ಭೂಮಿಯು ಕಂಪಿಸುತ್ತದೆ, ಬಲವಾಗಿ ಕಂಪಿಸುತ್ತದೆ, ಅತಿ ವೇಗವಾಗಿ ಕಂಪಿಸುತ್ತದೆ. ಇದು ಮಹಾಭೂಕಂಪಕ್ಕೆ ಐದನೆಯ ಕಾರಣ.
“ಮತ್ತೆ ಆನಂದ, ತಥಾಗತನು ಎಂದು ಅತಿ ಶ್ರೇಷ್ಠವಾದ ಧರ್ಮಚಕ್ರವನ್ನು ಚಲಿಸುತ್ತಾನೋ ಅಂದು ಭೂಮಿಯು ಕಂಪಿಸುತ್ತದೆ, ಬಲವಾಗಿ ಕಂಪಿಸುತ್ತದೆ, ಅತಿ ವೇಗವಾಗಿ ಕಂಪಿಸುತ್ತದೆ. ಇದು ಮಹಾಭೂಕಂಪಕ್ಕೆ ಆರನೆಯ ಕಾರಣ.
“ಆನಂದ, ತಥಾಗತನು ಎಂದು ಸ್ಮೃತಿವಂತನಾಗಿ, ಶಾಂತಚಿತ್ತದಿಂದ ತನ್ನ ಆಯಸ್ಸನ್ನು ವರ್ಜಿಸಲು ಮನಸ್ಸು ಮಾಡುತ್ತಾನೋ ಅಂದು ಭೂಮಿಯು ಕಂಪಿಸುತ್ತದೆ, ಬಲವಾಗಿ ಕಂಪಿಸುತ್ತದೆ, ಅತಿ ವೇಗವಾಗಿ ಕಂಪಿಸುತ್ತದೆ. ಇದು ಮಹಾಭೂಕಂಪಕ್ಕೆ ಏಳನೆಯ ಕಾರಣ.
“ಮತ್ತೆ ಆನಂದ, ತಥಾಗತನು ಜನ್ಮ ಜನ್ಮಾಂತರಗಳ ಸಿಕ್ಕುಗಳಾವುವನ್ನೂ ಉಳಿಸಿಕೊಳ್ಳದೆ ನಿಬ್ಬಾನವನ್ನು ಪಡೆದಾಗ ಭೂಮಿಯು ಕಂಪಿಸುತ್ತದೆ, ಬಲವಾಗಿ ಕಂಪಿಸುತ್ತದೆ, ಅತಿ ವೇಗವಾಗಿ ಕಂಪಿಸುತ್ತದೆ. ಇದು ಮಹಾಭೂಕಂಪಕ್ಕೆ ಎಂಟನೆಯ ಕಾರಣ. “ಆನಂದ, ಮಹಾಭೂಕಂಪಕ್ಕೆ ಇವೇ ಎಂಟು ಕಾರಣಗಳು.
ಎಂಟು ಕೂಟಗಳು
“ಆನಂದ, ಎಂಟು ವಿಧವಾದ ಕೂಟಗಳಿವೆ. ಆ ಎಂಟು ಯಾವುವು? ಕ್ಷತ್ರಿಯರ ಕೂಟ, ಬ್ರಾಹ್ಮಣರ ಕೂಟ, ಗೃಹಸ್ಥರ ಕೂಟ, ಸಮಣರ ಕೂಟ, ಚತುರ್ಮಹಾರಾಜ ದೇವತೆಗಳ ಕೂಟ, ತಾವತಿಂಸ ದೇವತೆಗಳ ಕೂಟ, ಮಾರರ ಕೂಟ ಮತ್ತು ಬ್ರಹ್ಮರ ಕೂಟ. ನೂರಾರು ಕ್ಷತ್ರಿಯರ ಕೂಟಕ್ಕೆ ಹೋಗಿ ಅಲ್ಲಿ ಆಗುವುದನ್ನು ಚೆನ್ನಾಗಿ ಅರಿತಿದ್ದೇನೆ. ಅಲ್ಲಿ (ಅವರು) ಸೇರುವ ಮೊದಲೇ ಸಲ್ಲಾಪ ಮಾಡುವ ಮೊದಲೇ ವಾದವನ್ನು ಆರಂಭಿಸುವ ಮೊದಲೇ ನಾನು ಇರುತ್ತಿದ್ದೆ. ಅಲ್ಲಿದ್ದವರ ವರ್ಣದಂತೆಯೇ ನನ್ನ ವರ್ಣವೂ ಆಗುತ್ತಿತ್ತು. ಅವರ ಸ್ವರದಂತೆಯೇ ನನ್ನ ಸ್ವರವೂ ಆಗುತ್ತಿತ್ತು. ಧಮ್ಮವನ್ನು ಅವರಿಗೆ ವಿವರಿಸಿ ಸ್ಫೂರ್ತಿಗೊಳಿಸಿ, ಉತ್ತೇಜನಗೊಳಿಸಿ ಸಂತೋಷಪಡಿಸುತ್ತಿದ್ದೆ. ನಾನು ಮಾತಾಡುತ್ತಿದ್ದಾಗ ಅವರಿಗೆ ನಾನು ಯಾರು ಎಂಬುದು ಗೊತ್ತಾಗುತ್ತಿರಲಿಲ್ಲ. ಈ ಮಾತುಗಳನ್ನು ಆಡಿದವರು ಯಾರು? ದೇವತೆಯೋ, ಮನುಷ್ಯನೋ? (ಎಂದು ಅಂದುಕೊಳ್ಳುತ್ತಿದ್ದರು) ಧಮ್ಮವನ್ನು ವಿವರಿಸಿ, ಸ್ಫೂರ್ತಿಗೊಳಿಸಿ, ಉತ್ತೇಜನಗೊಳಿಸಿ, ಸಂತೋಷಪಡಿಸಿ ಅಂತರ್ಧಾನವಾಗುತ್ತಿದ್ದೆ. ಅಂತರ್ಧಾನವಾದಾಗಲೂ ನಾನು ಯಾರು ಎಂಬುದು ಗೊತ್ತಾಗುತ್ತಿರಲಿಲ್ಲ. ‘ಅಂತರ್ಧಾನವಾದ ಈತ ದೇವತೆಯೋ, ಮನುಷ್ಯನೋ’ ಎಂದುಕೊಳ್ಳುತ್ತಿದ್ದರು. ನೂರಾರು ಬ್ರಾಹ್ಮಣರ ಕೂಟಕ್ಕೆ... ಸಮಣರ ಕೂಟಕ್ಕೆ... ಚತುರ್ಮಹಾರಾಜ ದೇವತೆಗಳ ಕೂಟಕ್ಕೆ... ತಾವತಿಂಸ ದೇವತೆಗಳ ಕೂಟಕ್ಕೆ... ಮಾರರ ಕೂಟಕ್ಕೆ... ಬ್ರಾಹ್ಮಣರ ಕೂಟಕ್ಕೆ ಹೋಗಿ ಅಲ್ಲಿ ಆಗುವುದನ್ನು ಚೆನ್ನಾಗಿ ಅರಿತಿದ್ದೇನೆ. ಅಲ್ಲಿ (ಅವರು) ಒಟ್ಟಾಗಿ ಸೇರುವ ಮೊದಲೇ ಸಲ್ಲಾಪ ಮಾಡುವ ಮೊದಲೇ ವಾದಕ್ಕಿಳಿಯುವ ಮೊದಲೇ ನಾನು ಇರುತ್ತಿದ್ದೆ. ಅಲ್ಲಿದ್ದವರ ವರ್ಣದಂತೆಯೇ ನನ್ನ ವರ್ಣವೂ ಆಗುತ್ತಿತ್ತು. ಅವರ ಸ್ವರದಂತೆಯೇ ನನ್ನ ಸ್ವರವೂ ಆಗುತ್ತಿತ್ತು. ಧಮ್ಮವನ್ನು ಅವರಿಗೆ ವಿವರಿಸಿ, ಸ್ಫೂರ್ತಿಗೊಳಿಸಿ, ಉತ್ತೇಜನಗೊಳಿಸಿ ಸಂತೋಷಪಡುತ್ತಿದ್ದೆ. ನಾನು ಹೀಗೆ ಮಾತಾಡುತ್ತಿದ್ದಾಗ ನಾನು ಯಾರು ಎಂಬುದು ಅವರಿಗೆ ಗೊತ್ತಾಗುತ್ತಿರಲಿಲ್ಲ. ‘ಈ ಮಾತುಗಳನ್ನಾಡಿದವರು ಯಾರು ದೇವತೆಯೋ ಮನುಷ್ಯನೋ’ ಎಂದುಕೊಳ್ಳುತ್ತಿದ್ದರು. ಧಮ್ಮವನ್ನು ವಿವರಿಸಿ ಸ್ಫೂರ್ತಿಗೊಳಿಸಿ, ಉತ್ತೇಜನಗೊಳಿಸಿ, ಸಂತೋಷಪಡಿಸಿ, ಅಂತರ್ಧಾನವಾಗುತ್ತಿದ್ದೆ. ಅಂತರ್ಧಾನವಾದಾಗಲೂ ನಾನು ಯಾರು ಎಂಬುದು ಗೊತ್ತಾಗುತ್ತಿರಲಿಲ್ಲ. ಅಂತರ್ಧಾನವಾದ ಈತ ದೇವತೆಯೋ, ಮನುಷ್ಯನೋ ಎಂದು ಅಂದುಕೊಳ್ಳುತ್ತಿದ್ದರು. ಇವೇ ಎಂಟು ವಿಧವಾದ ಕೂಟಗಳು.
ಎಂಟು ಅಭಿಭಾಯತನಗಳು
“ಆನಂದ, ಈ ಎಂಟು ಉತ್ಕೃಷ್ಟ ಸ್ಥಾನಗಳಿವೆ. ಈ ಎಂಟು ಯಾವುವು? ಒಳ್ಳೆಯ ಬಣ್ಣದಿಂದ ಕೂಡಿರುವ ಅಥವಾ ಕೆಟ್ಟ ಬಣ್ಣವಿರುವ ಹೊರಗಿನ ರೂಪಗಳನ್ನು ನೋಡಬಲ್ಲ ರೂಪಸಞ್ಞಾಯು ಉತ್ಕೃಷ್ಟವಾಗಿರುವುದನ್ನು ನೋಡುತ್ತೇನೆ, ತಿಳಿಯುತ್ತೇನೆ’ ಎಂದು ಅವನು ಹೇಳುತ್ತಾನೆ. ಇವನು ಪಡೆದಿರುವುದೇ ಮೊದಲನೆಯ ಉತ್ಕರಷ್ಟ ಸ್ಥಾನ.
“ಒಳ್ಳೆಯ ಬಣ್ಣದಿಂದ ಕೂಡಿರುವ ಅಥವಾ ಕೆಟ್ಟ ಬಣ್ಣವಿರುವ ಆದರೆ ಯಾವ ಗಾತ್ರವೂ ಇಲ್ಲದ ಹೊರಗಿನ ರೂಪಗಳನ್ನು ನೋಡಬಲ್ಲ ರೂಪಸಞ್ಞಾಯು. ‘ಉತ್ಕೃಷ್ಟವಾದುದನ್ನು ನೋಡುತ್ತೇನೆ, ತಿಳಿಯುತ್ತೇನೆ’ ಎಂದು ಅವನು ಹೇಳಬಲ್ಲವನಾಗುತ್ತಾನೆ. ಇವನು ಪಡೆದಿರುವುದೇ ಎರಡನೆಯ ಉತ್ಕೃಷ್ಟ ಸ್ಥಾನ.
“ಒಳ್ಳೆಯ ಬಣ್ಣದಿಂದ ಕೂಡಿರುವ ಹೊರಗಿನ ರೂಪಗಳನ್ನು ನೋಡಬಲ್ಲವನು ‘ಉತ್ಕೃಷ್ಟವಾಗಿರುವುದನ್ನು ನೋಡುತ್ತೇನೆ, ತಿಳಿಯುತ್ತೇನೆ’ ಎಂದು ಹೇಳುತ್ತಾನೆ. ಇವನು ಪಡೆದಿರುವುದೇ ಮೂರನೆಯ ಉತ್ಕೃಷ್ಟ ಸ್ಥಾನ. ಒಳ್ಳೆಯ ಬಣ್ಣದಿಂದ ಕೂಡಿದ ಅಥವಾ ಕೆಟ್ಟ ಬಣ್ಣವಿರುವ ಆದರೆ ಯಾವ ಗಾತ್ರವೂ ಇಲ್ಲದ ಹೊರಗಿನ ರೂಪಗಳನ್ನು ನೋಡಬಲ್ಲ ಅರೂಪ ಸಞ್ಞೀಯು ‘ಉತ್ಕೃಷ್ಟವಾಗಿರುವುದನ್ನು ತಿಳಿಯಬಲ್ಲವನಾಗಿದ್ದಾನೆ’ ಎಂದು ಹೇಳುತ್ತಾನೆ. ಇವನು ಪಡೆದಿರುವುದೇ ನಾಲ್ಕನೆಯ ಉತ್ಕೃಷ್ಟ ಸ್ಥಾನ.
“ನೀಲಿಯ, ನೀಲಿಯ ಬಣ್ಣವಿರುವ ನೀಲಿಯಾಗಿ ಕಾಣುವ ನೀಲಿಯನ್ನು ವ್ಯಕ್ತಗೊಳಿಸುವ ಹೊರಗಿನ ರೂಪಗಳನ್ನು ನೋಡಬಲ್ಲ ಅರೂಪ ಸಞ್ಞಿಯು ಇರುತ್ತಾನೆ. ನೀಲಿಯ ನೀಲಿ ಬಣ್ಣವಿರುವ ನೀಲಿಯಾಗಿ ಕಾಣುವ ನೀಲಿಯನ್ನು ವ್ಯಕ್ತಪಡಿಸುವ ಉಮಾ ಪುಷ್ಪದಂತೆ ಅಥವಾ ನೀಲಿಯ ನೀಲಿ ಬಣ್ಣವಿರುವ ನೀಲಿ ಬಣ್ಣವಾಗಿ ತೋರುವ ನೀಲಿಯನ್ನು ವ್ಯಕ್ತಪಡಿಸುವ ಅದರ ಎರಡೂ ಕಡೆಗಲ್ಲಿ ಬಹು ಅಂದವಾದ ಕೆಲಸವನ್ನು ಮಾಡಿರುವ ವಾರಣಾಸಿಯ ವಸ್ತ್ರದಂತೆ ನೀಲಿಯ ನೀಲಿ ಬಣ್ಣವಿರುವ ನೀಲಿಯಾಗಿ ಕಾಣುವ ನೀಲಿಯನ್ನು ವ್ಯಕ್ತಗೊಳಿಸುವ ಹೊರಗಿನ ರೂಪಗಳನ್ನು ನೋಡಬಲ್ಲ ಆ ಅರೂಪಸಞ್ಞಿಯು ಇರುತ್ತಾನೆ. ‘ಉತ್ಕೃಷ್ಟವಾಗಿರುವುದನ್ನು ನೋಡುವವನಾಗಿದ್ದೇನೆ, ತಿಳಿಯಬಲ್ಲವನಾಗಿದ್ದೇನೆ’ ಎಂದು ಹೇಳುತ್ತಾನೆ. ಇವನು ಪಡೆದಿರುವುದೇ ಐದನೆಯ ಉತ್ಕೃಷ್ಟ ಸ್ಥಾನ.
“ಹಳದಿ ಬಣ್ಣವಿರುವ ಹಳದಿಯಾಗಿ ಕಾಣುವ ಹಳದಿ ಹೂವಾಗಿರುವ ಕಾಣಿಕಾರ ಪುಷ್ಪದಂತೆ ಅಥವಾ ಪೀತ ಬಣ್ಣದ ಪೀತ ಬಣ್ಣವಾಗಿ ಕಾಣುವ ಪೀತ ಬಣ್ಣವನ್ನು ವ್ಯಕ್ತಪಡಿಸುವ ಅದರ ಎರಡು ಕಡೆಗಳಲ್ಲಿ ಅಂದವಾದ ಕೆಲಸವನ್ನು ಮಾಡಿರುವ ವಾರಣಸಿಯ ಪೀತ ವಸ್ತ್ರದಂತೆ ಪೀತವರ್ಣವಿರುವ ಪೀತವಾಗಿ ಕಾಣುವ ಪೀತಬಣ್ಣವನ್ನು ವ್ಯಕ್ತಪಡಿಸುವ ಹೊರಗಿನ ಪೀತರೂಪಗಳನ್ನು ನೋಡಬಲ್ಲ ಅರೂಪಸಞ್ಞಿಯು ‘ಉತ್ಕೃಷ್ಟವಾಗಿರುವುದನ್ನು ನೋಡುವವನಾಗಿದ್ದೇನೆ, ತಿಳಿಯಬಲ್ಲವನಾಗಿದ್ದೇನೆ’ ಎಂದು ಹೇಳುತ್ತಾನೆ. ಇವನು ಪಡೆದಿರುವುದೇ ಆರನೆಯ ಉತ್ಕೃಷ್ಟ ಸ್ಥಾನ.
“ಕೆಂಪು ಬಣ್ಣವಿರುವ ಕೆಂಪಾಗಿ ಕಾಣುವ ಕೆಂಪನ್ನು ವ್ಯಕ್ತಗೊಳಿಸುವ ಹೊರಗಿನ ಲೋಹಿತವರ್ಣದ ವಸ್ತುಗಳನ್ನು ನೋಡಬಲ್ಲ ಅರೂಪಸಞ್ಞ ಇರುತ್ತಾನೆ. ಕೆಂಪು ಬಣ್ಣದ ಕೆಂಪಾಗಿ ತೋರುವ ಕೆಂಪನ್ನು ವ್ಯಕ್ತಗೊಳಿಸುವ ಕೆಂಪು ಹೂವಾದ ಬಂಧು ಜೀವಕ ಪುಷ್ಪದಂತೆ ಅಥವಾ ಕೆಂಪು ಬಣ್ಣದ ಕೆಂಪು ಬಣ್ಣವಾಗಿರುವಂತೆ ತೋರುವ ಕೆಂಪನ್ನು ವ್ಯಕ್ತಪಡಿಸುವ ಅದರ ಎರಡೂ ಕಡೆಗಳಲ್ಲಿ ಅಂದವಾದ ಕೆಲಸವನ್ನು ಮಾಡಿರುವ ವಾರಣಾಸಿಯ ಲೋಹಿತ ವಸ್ತ್ರದಂತೆ ಲೋಹಿತ ವರ್ಣದ ಕೆಂಪಾಗಿ ತೋರುವ ಕೆಂಪು ಬಣ್ಣವನ್ನು ವ್ಯಕ್ತಪಡಿಸುವ ಹೊರಗಿನ ಲೋಹಿತ ವಸ್ತ್ರಗಳನ್ನು ನೋಡಬಲ್ಲ ಆ ಅರೂಪಸಞ್ಞಿಯು ‘ಉತ್ಕೃಷ್ಟವಾಗಿರುವುದನ್ನು ನೋಡಬಲ್ಲವನಾಗಿದ್ದೇನೆ, ಉತ್ಕೃಷ್ಟವಾಗಿರುವುದನ್ನು ತಿಳಿಯಬಲ್ಲವನಾಗಿದ್ದೇನೆ’ ಎಂದು ಹೇಳುತ್ತಾನೆ. ಇವನು ಪಡೆದಿರುವುದೇ ಏಳನೆಯ ಉತ್ಕೃಷ್ಟ ಸ್ಥಾನ.
“ಶ್ವೇತವರ್ಣದ ಶ್ವೇತವಾಗಿ ಕಾಣುವ ಶ್ವೇತವನ್ನು ವ್ಯಕ್ತಗೊಳಿಸುವ ಹೊರಗಿನ ಬಿಳೀ ಬಣ್ಣದ ವಸ್ತ್ರಗಳನ್ನು ನೋಡಬಲ್ಲ ಅರೂಪಸಞ್ಞಿಯು ಇರುತ್ತಾನೆ, ಶ್ವೇತವರ್ಣದ ಶ್ವೇತವಾಗಿ ತೋರುವ ಶ್ವೇತವನ್ನು ವ್ಯಕ್ತಗೊಳಿಸುವ ಶ್ವೇತ ನಕ್ಷತ್ರದಂತೆ ಅಥವಾ ಶ್ವೇತವರ್ಣದ ಶ್ವೇತವಾಗಿ ತೋರುವ ಶ್ವೇತವರ್ಣವನ್ನು ವ್ಯಕ್ತಗೊಳಿಸುವ ಅದರ ಎರಡೂ ಕಡೆಯಲ್ಲಿ ಅಂದವಾದ ಕೆಲಸವನ್ನು ಮಾಡಿರುವ ವಾರಣಾಸಿಯ ಶ್ವೇತವಸ್ತ್ರದಂತೆ ಶ್ವೇತ ವರ್ಣದ ಶ್ವೇತವಾಗಿ ತೋರುವ ಶ್ವೇತವನ್ನು ವ್ಯಕ್ತಗೊಳಿಸುವ ಹೊರಗಿನ ಶ್ವೇತವಸ್ತ್ರಗಳನ್ನು ನೋಡಬಲ್ಲ ಆ ಅರೂಪಸಞ್ಞಿಯು ‘ಉತ್ಕೃಷ್ಟವಾಗಿರುವುದನ್ನು ನೋಡಬಲ್ಲವನಾಗಿದ್ದೇನೆ, ತಿಳಿಯಬಲ್ಲವನಾಗಿದ್ದೇನೆ’ ಎಂದು ಹೇಳುತ್ತಾನೆ. ಇವನು ಪಡೆದಿರುವುದೇ ಎಂಟನೆಯ ಉತ್ಕೃಷ್ಟ ಸ್ಥಾನ.
ಎಂಟು ವಿಮೋಕ್ಖಗಳು
“ಎಂಟು ವಿಮೋಕ್ಖಗಳಿವೆ, ಆ ಎಂಟು ಯಾವುವು? ರೂಪವನ್ನು ಹೊಂದಿರುವವನು ರೂಪವನ್ನು ನೋಡಬಲ್ಲವನಾಗಿರುತ್ತಾನೆ. ಇದು ಮೊದಲನೆಯ ವಿಮೋಕ್ಖ. ತಾನು ಅರೂಪಸ್ಥಿತಿಯಲ್ಲಿದ್ದರೂ ಹೊರಗಿನ ರೂಪಗಳನ್ನು ನೋಡಬಲ್ಲವನಾಗಿರುತ್ತಾನೆ. ಇದು ಎರಡನೆಯ ವಿಮೋಕ್ಖ. ಶುಭವಾದುದನ್ನು ಧ್ಯಾನ ಮಾಡುತ್ತಾ ಅದರಲ್ಲಿಯೇ ತಲ್ಲೀನನಾಗುತ್ತಾನೆ. ಇದು ಮೂರನೆಯ ವಿಮೋಕ್ಖ. ರೂಪಗಳಷ್ಟನ್ನೇ ನೋಡಬಲ್ಲ ಸಾಮರ್ಥ್ಯವನ್ನು ಮೀರಿ ಅರಿವಿನಲ್ಲಿರಬಹುದಾದ ದೋಷಗಳನ್ನು ನಾಶಮಾಡಿಕೊಂಡು ನಾನಾ ಬಗೆಯದಾಗಿರುವ ಅಪೂರ್ಣ ಅರಿವನ್ನು ದೂರ ಮಾಡಿ ಆಕಾಶವು ಅನಂತವಾಗಿದೆ ಎಂಬುದಾಗಿ ತೋರುವ ‘ಅಕಾಸಾನಂಚಾಯತನ’ವನ್ನು ಸಾಧಿಸಿ ಅಲ್ಲಿಯೇ ಇರುತ್ತಾನೆ. ಇದು ನಾಲ್ಕನೆಯ ವಿಮೋಕ್ಖ, ಅಕಾಸಾನಂಚಾಯತನಗಳೆಲ್ಲವನ್ನೂ ದಾಟಿ ‘ವಿಞ್ಞಾಣವು ಅನಂತವಾಗಿದೆ’ ಎಂಬುದಾಗಿ ತೋರುವ ‘ವಿಞ್ಞಾಣಂಚಾಯತನ’ವನ್ನು ಸಾಧಿಸಿ ಅದರಲ್ಲಿ ಇರುತ್ತಾನೆ. ಇದು ಐದನೆಯ ವಿಮೋಕ್ಖ. ವಿಞ್ಞಾಣಂಚಾಯತನಗಳೆಲ್ಲವನ್ನೂ ದಾಟಿ ‘ಏನೂ ಇಲ್ಲ’ ಎಂಬುದನ್ನ ತಿಳಿಯಬಲ್ಲ ಅಕಿಂಚಾಯತನ’ವನ್ನು ಸಾಧಿಸಿ ಅದರಲ್ಲಿರುತ್ತಾನೆ. ಇದು ಆರನೆಯ ವಿಮೋಕ್ಖ. ಅಕಿಂಚಾಯತನಗಳೆಲ್ಲವನ್ನು ದಾಟಿ ‘ನೇವಸಞ್ಞಾನಾಸಞ್ಞಾಯತನ’ವನ್ನು ಸಾಧಿಸಿ ಅದರಲ್ಲಿ ಇರುತ್ತಾನೆ. ಇದು ಏಳನೆಯ ವಿಮೋಕ್ಖ. ನೇವಸಞ್ಞಾನಾಸಞ್ಞಾಯತನಗಳೆಲ್ಲವನ್ನೂ ದಾಟಿ ‘ಸಞ್ಞಾವೇದಾಯತಿ’ ನಿರೋಧ ಸಾಧಿಸುತ್ತಾನೆ. ಇದು ಎಂಟನೆಯ ವಿಮೋಕ್ಖ.
“ಆನಂದ, ಒಮ್ಮೆ ಉರುವೇಲದಲ್ಲಿ ನೇರಂಜನಿ ನದಿಯ ತೀರದಲ್ಲಿನ ಅಜಪಾಲನ ನಿಗ್ರೋಧ ಬುಡದಲ್ಲಿದ್ದೆ. ಆಗತಾನೇ ಸಂಬೋಧಿಯನ್ನು ಪಡೆದಿದ್ದೆ. ಆಗ ಪಾಪಿಯಾದ ಮಾರನು ನನ್ನ ಬಳಿಗೆ ಬಂದು ಒಂದುಕಡೆ ನಿಂತುಕೊಂಡನು. ಆಮೇಲೆ ಆ ಪಾಪಿಯು ಹೀಗೆಂದನು: ‘ಪರಿನಿಬ್ಬಾನವನ್ನು ಪಡೆಯಬಹುದು, ಭಗವಾನರೇ, ಸುಗತರು ಪರಿನಿಬ್ಬಾನವನ್ನು ಪಡೆಯಬಹುದು. ಇದು ಪರಿನಿಬ್ಬಾನಕ್ಕೆ ಸರಿಯಾದ ಕಾಲವಾಗಿದೆ ಭಂತೆ’. ಹೀಗೆ ಹೇಳಿದ ಪಾಪಿ ಮಾರನಿಗೆ ನಾನು ‘ಓ ಪಾಪಿ ಎಲ್ಲಿಯವರೆಗೆ ಭಿಕ್ಷುಗಳು ಒಳ್ಳೆಯ ಶಿಷ್ಯರಾಗಿ ತಿಳಿವಳಿಕೆಯನ್ನು ಪಡೆದಿಲ್ಲವೋ, ನೀತಿಯನ್ನು ಪಾಲಿಸುವುದಿಲ್ಲವೋ, ವಿಶಾರದರೂ, ಬಹುಶ್ರುತರೂ ಆಗಿಲ್ಲವೋ, ಧಮ್ಮವನ್ನು ಗ್ರಹಿಸಿಲ್ಲವೋ, ಧಮ್ಮ ಅನುಧಮ್ಮಗಳಂತೆ ನಡೆಯುತ್ತಿಲ್ಲವೋ, ಸರಿಯಾದ ದಾರಿಯಲ್ಲಿ ಹೋಗುತ್ತಿಲ್ಲವೋ, ಧಮ್ಮವನ್ನು ಚಾಚುತಪ್ಪದೆ ಪಾಲಿಸುತ್ತಿಲ್ಲವೋ, ಆಚಾರ್ಯರಾಗಿಲ್ಲವೋ, ಅರ್ಥಮಾಡಿಕೊಂಡಿಲ್ಲವೋ, ಧಮ್ಮವನ್ನು ತಿಳಿಸಬಲ್ಲವರೂ, ಬೋಧಿಸಬಲ್ಲವರೂ, ಪ್ರತಿಷ್ಠಾಪಿಸಬಲ್ಲವರೂ, ವಿವರಿಸಬಲ್ಲವರೂ, ವಿಭಜಿಸಬಲ್ಲವರೂ, ಸ್ಪಷ್ಟವಾಗಿ ಹೇಳಬಲ್ಲವರೂ ಆಗಿಲ್ಲವೋ, ಹುಟ್ಟಿಕೊಳ್ಳುವ ಇತರ ವಾದಗಳನ್ನು ತಾನು ಪಾಲಿಸುವ ಧಮ್ಮದಿಂದ ನಿಗ್ರಹಿಸಿ ಆಶ್ಚರ್ಯವನ್ನುಂಟುಮಾಡುವ ರೀತಿಯಲ್ಲಿ ನನ್ನ ಧಮ್ಮವನ್ನು ಪ್ರಸಾರಿಸಬಲ್ಲವರಾಗಿಲ್ಲವೋ ಅಲ್ಲಿಯವರೆಗೆ ನಾನು ಪರಿನಿಬ್ಬಾಣವನ್ನು ಪಡೆಯುವುದಿಲ್ಲ’ ಎಂದು ಉತ್ತರವಿತ್ತೆ.
“ಓ ಪಾಪಿ ಎಲ್ಲಿಯವರೆಗೆ ಭಿಕ್ಷುಣಿಯರು ಒಳ್ಳೆಯ ಶಿಷ್ಯೆಯರಾಗಿ ತಿಳಿವಳಿಕೆಯನ್ನು ಪಡೆದಿಲ್ಲವೋ, ನೀತಿಯನ್ನು ಪಾಲಿಸುವುದಿಲ್ಲವೋ, ವಿಶಾರದರೂ, ಬಹುಶ್ರುತರೂ ಆಗಿಲ್ಲವೋ, ಧಮ್ಮವನ್ನು ಗ್ರಹಿಸಿಲ್ಲವೋ, ಧಮ್ಮ ಅನುಧಮ್ಮಗಳಂತೆ ನಡೆಯುತ್ತಿಲ್ಲವೋ, ಸರಿಯಾದ ದಾರಿಯಲ್ಲಿ ಹೋಗುತ್ತಿಲ್ಲವೋ, ಧಮ್ಮವನ್ನು ಚಾಚುತಪ್ಪದೆ ಪಾಲಿಸುತ್ತಿಲ್ಲವೋ, ಆಚಾರ್ಯರಾಗಿಲ್ಲವೋ, ಅರ್ಥಮಾಡಿಕೊಂಡಿಲ್ಲವೋ, ಧಮ್ಮವನ್ನು ತಿಳಿಸಬಲ್ಲವರೂ, ಬೋಧಿಸಬಲ್ಲವರೂ, ಪ್ರತಿಷ್ಠಾಪಿಸಬಲ್ಲವರೂ, ವಿವರಿಸಬಲ್ಲವರೂ, ವಿಭಜಿಸಬಲ್ಲವರೂ, ಸ್ಪಷ್ಟವಾಗಿ ಹೇಳಬಲ್ಲವರೂ ಆಗಿಲ್ಲವೋ, ಹುಟ್ಟಿಕೊಳ್ಳುವ ಇತರ ವಾದಗಳನ್ನು ತಾನು ಪಾಲಿಸುವ ಧಮ್ಮದಿಂದ ನಿಗ್ರಹಿಸಿ ಆಶ್ಚರ್ಯವನ್ನುಂಟುಮಾಡುವ ರೀತಿಯಲ್ಲಿ ನನ್ನ ಧಮ್ಮವನ್ನು ಪ್ರಸಾರಿಸಬಲ್ಲವರಾಗಿಲ್ಲವೋ ಅಲ್ಲಿಯವರೆಗೆ ನಾನು ಪರಿನಿಬ್ಬಾಣವನ್ನು ಪಡೆಯುವುದಿಲ್ಲ’
“ಓ ಪಾಪಿ ಎಲ್ಲಿಯವರೆಗೆ ಉಪಾಸಕರು ಒಳ್ಳೆಯ ಶಿಷ್ಯರಾಗಿ ತಿಳಿವಳಿಕೆಯನ್ನು ಪಡೆದಿಲ್ಲವೋ, ನೀತಿಯನ್ನು ಪಾಲಿಸುವುದಿಲ್ಲವೋ, ವಿಶಾರದರೂ, ಬಹುಶ್ರುತರೂ ಆಗಿಲ್ಲವೋ, ಧಮ್ಮವನ್ನು ಗ್ರಹಿಸಿಲ್ಲವೋ, ಧಮ್ಮ ಅನುಧಮ್ಮಗಳಂತೆ ನಡೆಯುತ್ತಿಲ್ಲವೋ, ಸರಿಯಾದ ದಾರಿಯಲ್ಲಿ ಹೋಗುತ್ತಿಲ್ಲವೋ, ಧಮ್ಮವನ್ನು ಚಾಚುತಪ್ಪದೆ ಪಾಲಿಸುತ್ತಿಲ್ಲವೋ, ಆಚಾರ್ಯರಾಗಿಲ್ಲವೋ, ಅರ್ಥಮಾಡಿಕೊಂಡಿಲ್ಲವೋ, ಧಮ್ಮವನ್ನು ತಿಳಿಸಬಲ್ಲವರೂ, ಬೋಧಿಸಬಲ್ಲವರೂ, ಪ್ರತಿಷ್ಠಾಪಿಸಬಲ್ಲವರೂ, ವಿವರಿಸಬಲ್ಲವರೂ, ವಿಭಜಿಸಬಲ್ಲವರೂ, ಸ್ಪಷ್ಟವಾಗಿ ಹೇಳಬಲ್ಲವರೂ ಆಗಿಲ್ಲವೋ, ಹುಟ್ಟಿಕೊಳ್ಳುವ ಇತರ ವಾದಗಳನ್ನು ತಾನು ಪಾಲಿಸುವ ಧಮ್ಮದಿಂದ ನಿಗ್ರಹಿಸಿ ಆಶ್ಚರ್ಯವನ್ನುಂಟುಮಾಡುವ ರೀತಿಯಲ್ಲಿ ನನ್ನ ಧಮ್ಮವನ್ನು ಪ್ರಸಾರಿಸಬಲ್ಲವರಾಗಿಲ್ಲವೋ ಅಲ್ಲಿಯವರೆಗೆ ನಾನು ಪರಿನಿಬ್ಬಾಣವನ್ನು ಪಡೆಯುವುದಿಲ್ಲ’
“ಓ ಪಾಪಿ ಎಲ್ಲಿಯವರೆಗೆ ಉಪಾಸಿಕೆಯರು ಒಳ್ಳೆಯ ಶಿಷ್ಯೆಯರಾಗಿ ತಿಳಿವಳಿಕೆಯನ್ನು ಪಡೆದಿಲ್ಲವೋ, ನೀತಿಯನ್ನು ಪಾಲಿಸುವುದಿಲ್ಲವೋ, ವಿಶಾರದರೂ, ಬಹುಶ್ರುತರೂ ಆಗಿಲ್ಲವೋ, ಧಮ್ಮವನ್ನು ಗ್ರಹಿಸಿಲ್ಲವೋ, ಧಮ್ಮ ಅನುಧಮ್ಮಗಳಂತೆ ನಡೆಯುತ್ತಿಲ್ಲವೋ, ಸರಿಯಾದ ದಾರಿಯಲ್ಲಿ ಹೋಗುತ್ತಿಲ್ಲವೋ, ಧಮ್ಮವನ್ನು ಚಾಚುತಪ್ಪದೆ ಪಾಲಿಸುತ್ತಿಲ್ಲವೋ, ಆಚಾರ್ಯರಾಗಿಲ್ಲವೋ, ಅರ್ಥಮಾಡಿಕೊಂಡಿಲ್ಲವೋ, ಧಮ್ಮವನ್ನು ತಿಳಿಸಬಲ್ಲವರೂ, ಬೋಧಿಸಬಲ್ಲವರೂ, ಪ್ರತಿಷ್ಠಾಪಿಸಬಲ್ಲವರೂ, ವಿವರಿಸಬಲ್ಲವರೂ, ವಿಭಜಿಸಬಲ್ಲವರೂ, ಸ್ಪಷ್ಟವಾಗಿ ಹೇಳಬಲ್ಲವರೂ ಆಗಿಲ್ಲವೋ, ಹುಟ್ಟಿಕೊಳ್ಳುವ ಇತರ ವಾದಗಳನ್ನು ತಾನು ಪಾಲಿಸುವ ಧಮ್ಮದಿಂದ ನಿಗ್ರಹಿಸಿ ಆಶ್ಚರ್ಯವನ್ನುಂಟುಮಾಡುವ ರೀತಿಯಲ್ಲಿ ನನ್ನ ಧಮ್ಮವನ್ನು ಪ್ರಸಾರಿಸಬಲ್ಲವರಾಗಿಲ್ಲವೋ ಅಲ್ಲಿಯವರೆಗೆ ನಾನು ಪರಿನಿಬ್ಬಾಣವನ್ನು ಪಡೆಯುವುದಿಲ್ಲ’.
“ಎಲ್ಲಿಯವರೆಗೆ ನನ್ನ ಸಾಧನೆಯು ಯಶಸ್ವಿಯಾಗಿಲ್ಲವೋ ಅದು ಎಲ್ಲ ಜನರ ಸಂಪತ್ತಾಗಿಲ್ಲವೋ ದೇವತೆಗಳಿಗೆ ಮತ್ತು ಮನುಷ್ಯರಿಗೆ ವಿವರಿಸಲ್ಪಟ್ಟಿಲ್ಲವೋ ಅಲ್ಲಿಯವರೆಗೆ ನಾನು ಪರಿನಿಬ್ಬಾಣವನ್ನು ಪಡೆಯುವುದಿಲ್ಲ.’
“ಆನಂದ, ಮತ್ತೆ ಪಾಪಿಯಾದ ಮಾರನು ನಾನಿದ್ದ ಚಾಪಾಲಿಯಲ್ಲಿನ ಚೈತ್ಯಕ್ಕೆ ಬಂದು ಒಂದುಕಡೆ ನಿಂತುಕೊಂಡನು. ಆಮೇಲೆ ಆ ಪಾಪಿಯು ಹೀಗೆಂದನು- ‘ಭಗವಾನರು ಪರಿನಿಬ್ಬಾಣವನ್ನು ಪಡೆಯಬಹುದು. ಪರಿನಿಬ್ಬಾನಕ್ಕೆ ಇದು ಸರಿಯಾದ ಕಾಲವಾಗಿದೆ. ಭಗವಾನರು ಭಗವಾನರೇ ಹೀಗೆ ಹೇಳಿರುವವರಷ್ಟೆ- ಓ ಪಾಪಿ, ನಾನು ಪರಿನಿಬ್ಬಾನವನ್ನು ಪಡೆಯುವುದಿಲ್ಲ, ಎಲ್ಲಿಯವರೆಗೆ ಭಿಕ್ಷುಗಳು ನನ್ನ ಸರಿಯಾದ ಶಿಷ್ಯರಾಗಿಲ್ಲವೋ.... ಭಿಕ್ಷುಣಿಯರು... ಉಪಾಸಕರು.... ಉಪಾಸಿಕೆಯರು... ಅಲ್ಲಿಯವರೆಗೆ ನಾನು ಪರಿನಿಬ್ಬಾಣವನ್ನು ಪಡೆಯುವುದಿಲ್ಲ. ಹಿಂದೆ ಹೇಳಿದಂತೆ ಭಗವಾನರ ಸಾಧನೆಯು ಯಶಸ್ವಿಯಾಗಿದೆ. ಧಮ್ಮವು ಎಲ್ಲರ ಸಂಪತ್ತಾಗಿದೆ. ದೇವತೆಗಳಿಗೆ ಮತ್ತು ಮನುಷ್ಯರಿಗೆ ವಿವರಿಸಲ್ಪಟ್ಟಿದೆ. ಭಗವಾನರು ಪರಿನಿಬ್ಬಾಣವನ್ನು ಪಡೆಯಬಹುದು. ಸುಗತರು ಪರಿನಿಬ್ಬಾನವನ್ನು ಪಡೆಯಬಹುದು. ಪರಿನಿಬ್ಬಾನಕ್ಕೆ ಇದು ಸಕಾಲವಾಗಿದೆ.’
“ಹೀಗೆ ಹೇಳಿದ ಪಾಪಿ ಮಾರನಿಗೆ ನಾನು ‘ಪಾಪಿ, ಸುಖಪಡು, ತಥಾಗತನು ಪರಿನಿಬ್ಬಾನವನ್ನು ಪಡೆಯುವುದು ಬಹುದೂರವಿಲ್ಲ. ಇಲ್ಲಿಗೆ ಮೂರು ತಿಂಗಳು ತುಂಬುವ ಮೊದಲು ತಥಾಗತನು ಪರಿನಿಬ್ಬಾನವನ್ನು ಪಡೆಯುತ್ತಾನೆ. ಆನಂದ, ಈ ಹೊತ್ತು ಉಪಾಲಿಯ ಚೈತ್ಯದಲ್ಲಿ ತನ್ನ ಆಯಸ್ಸಿನಲ್ಲಿ ಉಳಿದಿರುವ ಭಾಗವನ್ನು ಮನಃಪೂರ್ವಕವಾಗಿ ವಿಚಲಿತನಾಗದೆ ತಿರಸ್ಕರಿಸಿದ್ದಾನೆ ಎಂದು ಹೇಳಿದೆ.”
ಆನಂದನು ಯಾಚಿಸಿದುದು
ಹೀಗೆ ಹೇಳಿದ ಭಗವಾನರಿಗೆ ಆಯುಷ್ಮಂತನಾದ ಆನಂದನು ಇಂತೆಂದನು- “ಭಂತೆ, ತಾವು ಈ ಕಲ್ಪದ ಅಂತ್ಯದವರೆಗೂ ಇರಬೇಕು. ಸುಗತರಾದ ತಾವು ಬಹುಜನ ಹಿತಕ್ಕಾಗಿ ಬಹುಜನ ಸುಖಕ್ಕಾಗಿ ಲೋಕದ ಮೇಲಿನ ಅನುಕಂಪೆಯಿಂದ ದೇವತೆಗಳ ಮತ್ತು ಮನುಷ್ಯರ ಹಿತಕ್ಕಾಗಿ, ಸುಖಕ್ಕಾಗಿ ಅವರಿಗೋಸ್ಕರ ಈ ಕಲ್ಪದ ಅಂತ್ಯದವರೆಗೂ ಇರುತಂತಾಗಬೇಕು...”
“ಸಾಕು ಆನಂದ, ತಥಾಗತನನ್ನು ಯಾಚಿಸಬೇಡ. ತಥಾಗತನನ್ನು ಯಾಚಿಸುವುದನ್ನು ಇದು ಅಕಾಲ.” ಎರಡನೆಯ ಸಾರಿ ಆಯುಷ್ಮಂತನಾದ ಆನಂದನು ಭಗವಾನರನ್ನು ಕುರಿತು “ಭಂತೆ, ತಾವು ಈ ಕಲ್ಪದ ಅಂತ್ಯದವರೆಗೂ...” ಮೂರನೆಯ ಸಾರಿ ಆಯುಷ್ಮಂತನಾದ ಆನಂದನು “ಭಂತೆ, ತಾವು ಈ ಕಲ್ಪದ ಅಂತ್ಯದವರೆಗೂ ಇರಬೇಕು. ಸುಗತರಾದ ತಾವು ಬಹುಜನ ಹಿತಕ್ಕಾಗಿ, ಬಹುಜನ ಸುಖಕ್ಕಾಗಿ ಲೋಕದ ಮೇಲಿನ ಅನುಕಂಪೆಯಿಂದ ದೇವತೆಗಳ ಮತ್ತು ಮನುಷ್ಯರ ಹಿತಕ್ಕಾಗಿ, ಸುಖಕ್ಕಾಗಿ ಅವರಿಗೋಸ್ಕರ ಈ ಕಲ್ಪವಿರುವವರೆಗೂ ಇರುವಂತಾಗಬೇಕು.” “ತಥಾಗತನ ಬೋಧಿಯಲ್ಲಿ ಶ್ರದ್ಧೆ ಇದೆಯೇ, ಆನಂದ ?” “ಇದೇ ಭಂತೆ.”
“ಆನಂದ, ನಾನೇ ತಮ್ಮಿಂದಲೇ ಈ ಮಾತುಗಳನ್ನು ಕೇಳಿದ್ದೇನೆ, ತಮ್ಮಿಂದಲೇ ಈ (ಭರವಸೆಯನ್ನು) ಪಡೆದಿದ್ದೇನೆ- ‘ಯಾವನು ಋದ್ದಿಯ ನಾಲ್ಕು ಮಾರ್ಗಗಳನ್ನು ಅರಿತಿದ್ದು ಅವುಗಳನ್ನು ಮನನ ಮಾಡಿ ಸಾಧಿಸಿದ್ದಾನೋ ಅವುಗಳನ್ನು ಯಾನಗಳನ್ನಾಗಿ, ಆಧಾರಗಳನ್ನಾಗಿ ಮಾಡಿಕೊಳ್ಳಬಲ್ಲಂಥ ಸಾಮರ್ಥ್ಯವನ್ನು ಪಡೆದಿದ್ದಾನೋ ಅಂಥವನು ಈ ಕಲ್ಪದಷ್ಟು ಕಾಲ ಅಥವಾ ಈ ಕಲ್ಪವು ಉಳಿದಿರುವಷ್ಟು ಕಾಲ ಬದುಕಬಲ್ಲ. ತಥಾಗತನು ಋದ್ಧಿಯ ನಾಲ್ಕು ಮಾರ್ಗಗಳನ್ನು ಅರಿತಿದ್ದಾನೆ. ಅವುಗಳನ್ನು ಯಾನಗಳನ್ನಾಗಿ, ಆಧಾರಗಳನ್ನಾಗಿ ಮಾಡಿಕೊಳ್ಳಬಲ್ಲ ಸಾಮರ್ಥ್ಯವನ್ನು ಪಡೆದಿದ್ದಾನೆ. ಅವುಗಳನ್ನು ಸಂಪೂರ್ಣವಾಗಿ ಸಾಧಿಸಿದ್ದಾನೆ. (ಆದುದರಿಂದ) ಈ ಕಲ್ಪದಷ್ಟು ಕಾಲ ಅಥವಾ ಈ ಕಲ್ಪದಲ್ಲಿ ಇನ್ನೂ ಉಳಿದಿರುವಷ್ಟು ಕಾಲ ಬದುಕಬಲ್ಲ.” “ನಿನಗೆ ಶ್ರದ್ಧೆಯಿದೆಯೇ ಆನಂದ ?” “ಇದೆ, ಭಂತೆ.”
“ಹಾಗಾದರೆ ನಿನ್ನಿಂದ ತಪ್ಪಾಗಿದೆ. ಅಪರಾಧ ನಿನ್ನದೇ ಆಗಿದೆ. ನಿನ್ನ ಮೌಢ್ಯದಿಂದ ಸ್ಪಷ್ಟವಾಗಿ ಹೇಳಿದ ಮಾತುಗಳನ್ನು ತಿಳಿದುಕೊಳ್ಳಲಾರದೆ ಹೋದೆ. ತಥಾಗತನನ್ನು ಯಾಚಿಸದೆ ಹೋದೆ- ‘ಭಗವಾನರು ಈ ಕಲ್ಪದ ಅಂತ್ಯದವರೆಗೂ ಇರಬೇಕು. ಸುಗತರಾದ ತಾವು ಬಹುಜನ ಹಿತಕ್ಕಗಿ ಬಹುಜನ ಸುಖಕ್ಕಾಗಿ ಲೋಕದ ಮೇಲಿನ ಅನುಕಂಪೆಯಿಂದ ದೇವತೆಗಳ ಮತ್ತು ಮನುಷ್ಯರ ಹಿತಕ್ಕಾಗಿ ಸುಖಕ್ಕಾಗಿ ಅವರಿಗೋಸ್ಕರ ಈ ಕಲ್ಪವಿರುವವರೆಗೂ ಇರಬೇಕು’. ಆನಂದ, ತಥಾಗತನನ್ನು ಹೀಗೆ ಯಾಚಿಸಿದ್ದರೆ ಎರಡನೆಯಸಾರಿಯೂ ತಥಾಗತನು ನಿನ್ನ ಕೋರಿಕೆಯನ್ನು ಮನ್ನಿಸುತ್ತಿರುಲಿಲ್ಲವೋ ಏನೊ? ಮೂರನೆಯಸಾರಿಯಂತೂ ನಿನ್ನ ಕೋರಿಕೆಯನ್ನು ಮನ್ನಿಸುತ್ತಿದ್ದನು. ಆದುದರಿಂದ ನಿನ್ನದೇ ತಪ್ಪು, ನಿನ್ನದೇ ಅಪರಾಧ.
“ಒಮ್ಮೆ ಆನಂದ, ರಾಜಗಹದಲ್ಲಿನ ಗಿಜ್ಝಕೂಟ ಪರ್ವತದಲ್ಲಿ ತಂಗಿದ್ದೆ. ಅಲ್ಲಿ ಆನಂದ, ನಿನಗೆ ಹೀಗೆ ಹೇಳಿದೆನಷ್ಟೆ- ‘ಆನಂದ, ರಾಜಗಹವು ಎಷ್ಟು ರಮಣೀಯವಾಗಿದೆ, ಗಿಜ್ಝಕೂಟ ಪರ್ವತವು ಎಷ್ಟು ರಮಣೀಯವಾಗಿದೆ! ಯಾವನು, ಆನಂದ, ಋದ್ದಿಯ ನಾಲ್ಕು ಮಾರ್ಗಗಳನ್ನು ಅರಿತಿದ್ದಾನೋ, ಅವುಗಳನ್ನು ಮನನ ಮಾಡಿದ್ದಾನೋ, ಅವುಗಳನ್ನು ಸಾಧಿಸಿದ್ದಾನೋ ಅವುಗಳನ್ನು ಯಾನಗಳನ್ನಾಗಿ ಆಧಾರಗಳನ್ನಾಗಿ ಮಾಡಿಕೊಳ್ಳಬಲ್ಲ ಸಾಮರ್ಥ್ಯವನ್ನು ಪಡೆದಿದ್ದಾನೋ ಅಂಥವನು ಈ ಕಲ್ಪದಷ್ಟು ಕಾಲ ಅಥವಾ ಈ ಕಲ್ಪವು ಉಳಿದಿರುವಷ್ಟು ಕಾಲ ಬದುಕಿರಬಲ್ಲ. ತಥಾಗತನು ಋದ್ಧಿಯ ನಾಲ್ಕು ಮಾರ್ಗಗಳನ್ನು ಅರಿತಿದ್ದಾನೆ. ಅವುಗಳನ್ನು ಯಾನಗಳನ್ನಾಗಿ ಆಧಾರಗಳನ್ನಾಗಿ ಮಾಡಿಕೊಳ್ಳಬಲ್ಲ ಸಾಮರ್ಥ್ಯವನ್ನು ಪಡೆದಿದ್ದಾನೆ. ಅವುಗಳನ್ನು ಸಂಪೂರ್ಣವಾಗಿ ಸಾಧಿಸಿದ್ದಾನೆ. ಆದುದರಿಂದ ಈ ಕಲ್ಪದಷ್ಟು ಕಾಲ ಅಥವಾ ಈ ಕಲ್ಪವು ಇನ್ನೂ ಉಳಿದಿರುವಷ್ಟು ಕಾಲ ಬದುಕಬಲ್ಲ. ಆನಂದ, ಹೀಗೆ ಮಾತುಗಳು ಸ್ಪಷ್ಟವಾಗಿದ್ದರೂ ನಿನ್ನ ಮೌಢ್ಯದಿಂದ ತಿಳಿದುಕೊಳ್ಳಲಾರದೆ ಹೋದೆ. ‘ಭಗವಾನರು ಈ ಕಲ್ಪದ ಅಂತ್ಯದವರೆಗೂ ಇರಬೇಕು. ಸುಗತರಾದ ತಾವು ಬಹುಜನ ಹಿತಕ್ಕಗಿ ಬಹುಜನ ಸುಖಕ್ಕಾಗಿ ಲೋಕದ ಮೇಲಿನ ಅನುಕಂಪೆಯಿಂದ ದೇವತೆಗಳ ಮತ್ತು ಮನುಷ್ಯರ ಹಿತಕ್ಕಾಗಿ ಸುಖಕ್ಕಾಗಿ ಅವರಿಗೋಸ್ಕರ ಈ ಕಲ್ಪವಿರುವವರೆಗೂ ಇರಬೇಕು’. ಆನಂದ, ತಥಾಗತನನ್ನು ಹೀಗೆ ಯಾಚಿಸಿದ್ದರೆ ಎರಡನೆಯಸಾರಿಯೂ ತಥಾಗತನು ನಿನ್ನ ಕೋರಿಕೆಯನ್ನು ಮನ್ನಿಸುತ್ತಿರುಲಿಲ್ಲವೋ ಏನೊ? ಮೂರನೆಯಸಾರಿಯಂತೂ ನಿನ್ನ ಕೋರಿಕೆಯನ್ನು ಮನ್ನಿಸುತ್ತಿದ್ದನು. ಆದುದರಿಂದ ನಿನ್ನದೇ ತಪ್ಪು, ನಿನ್ನದೇ ಅಪರಾಧ.”
“ಆನಂದ, ಒಮ್ಮೆ ಅದೇ ರಾಜಗೃಹದಲ್ಲಿನ ಗೋತಮ ನಿಗ್ರೋಧದಲ್ಲಿ ತಂಗಿದ್ದೆ.... ಅದೇ ರಾಜಗೃಹದ ಚೋರ ಪ್ರಪಾದಲ್ಲಿ ತಂಗಿದ್ದೆ.... ಅದೇ ರಾಜಗಹದ ವೇಭರ ಗಿರಿಯ ಸತ್ತಪಣ್ಣಿ ಗುಹೆಯಲ್ಲಿ ತಂಗಿದ್ದೆ.... ಅದೇ ರಾಜಗಹದ ಇಸಿಗಲಿ ಗಿರಿಯ ಕಾಳಸಿಲೆಯ ಮೇಲೆ ತಂಗಿದ್ದೆ.... ಅದೇ ರಾಜಗಹದ ಸೀತವನದಲ್ಲಿನ ಸಪ್ಪಸೊಂಡಿಕ ಗುಹೆಯಲ್ಲಿ ತಂಗಿದ್ದೆ... ಅ ರಾಜಗಹದ ತಪೋದಾರಾಮದಲ್ಲಿ ತಂಗಿದ್ದೆ... ಅದೇ ರಾಜಗಹದಲ್ಲಿನ ಜೀವಕನ ಆಮ್ರವನದಲ್ಲಿ ತಂಗಿದ್ದೆ.... ಅದೇ ರಾಜಗಹದಲ್ಲಿನ ಮುದ್ದಕುಚ್ಚಿಯಲ್ಲಿನ ಮಿಗಾದಾಯದಲ್ಲಿ ತಂಗಿದ್ದೆ. ಅಲ್ಲಿದ್ದಾಗ, ಆನಂದ, ಹೀಗೆ ಹೇಳಿದೆನಷ್ಟೆ- ‘ಆನಂದ, ರಾಜಗಹವು ಎಷ್ಟು ರಮಣೀಯವಾಗಿದೆ! ಗಿಜ್ಝಕೂಟ ಪರ್ವತವು ಎಷ್ಟು ರಮಣೀಯ, ಗೋತಮ ನಿಗ್ರೋಧವು ಎಷ್ಟು ರಮಣೀಯ, ಚೋರಪ್ರಪಾತವು ಎಷ್ಟು ರಮಣೀಯ, ವೇಭರಗಿರಿಯ ಸತ್ತಪಣ್ಣಿ ಗುಹೆಯು ಎಷ್ಟು ರಮಣೀಯ, ಇಸಿಗಲಿಗಿರಿಯ ಕಾಳಸಿಲೆಯು ಎಷ್ಟು ರಮಣೀಯ, ಸೀತವನದಲ್ಲಿದ್ದ ಸಪ್ಪಸೊಂಡಿಕ ಗುಹೆಯ ಎಷ್ಟು ರಮಣೀಯ. ತಪೋದಾರಾಮವು ಎಷ್ಟು ರಮಣೀಯ, ವೇಳುವನದಲ್ಲಿನ ಕಲಂದಕ ನಿವಾಸವು ಎಷ್ಟು ರಮಣೀಯ, ಜೀವನಕ ಅಂಬವನವು ಎಷ್ಟು ರಮಣೀಯ, ಮದ್ದಕುಚ್ಚಿಯಲ್ಲಿನ ಮಿಗಾದಾಯವು ಎಷ್ಟು ರಮಣೀಯ! ಯಾವನು, ಆನಂದ, ಋದ್ದಿಯ ನಾಲ್ಕು ಮಾರ್ಗಗಳನ್ನು ಅರಿತಿದ್ದಾನೋ, ಅವುಗಳನ್ನು ಮನನ ಮಾಡಿದ್ದಾನೋ, ಅವುಗಳನ್ನು ಸಾಧಿಸಿದ್ದಾನೋ ಅವುಗಳನ್ನು ಯಾನಗಳನ್ನಾಗಿ ಆಧಾರಗಳನ್ನಾಗಿ ಮಾಡಿಕೊಳ್ಳಬಲ್ಲ ಸಾಮರ್ಥ್ಯವನ್ನು ಪಡೆದಿದ್ದಾನೋ ಅಂಥವನು ಈ ಕಲ್ಪದಷ್ಟು ಕಾಲ ಅಥವಾ ಈ ಕಲ್ಪವು ಉಳಿದಿರುವಷ್ಟು ಕಾಲ ಬದುಕಿರಬಲ್ಲ. ತಥಾಗತನು ಋದ್ಧಿಯ ನಾಲ್ಕು ಮಾರ್ಗಗಳನ್ನು ಅರಿತಿದ್ದಾನೆ. ಅವುಗಳನ್ನು ಯಾನಗಳನ್ನಾಗಿ ಆಧಾರಗಳನ್ನಾಗಿ ಮಾಡಿಕೊಳ್ಳಬಲ್ಲ ಸಾಮರ್ಥ್ಯವನ್ನು ಪಡೆದಿದ್ದಾನೆ. ಅವುಗಳನ್ನು ಸಂಪೂರ್ಣವಾಗಿ ಸಾಧಿಸಿದ್ದಾನೆ. ಆದುದರಿಂದ ಈ ಕಲ್ಪದಷ್ಟು ಕಾಲ ಅಥವಾ ಈ ಕಲ್ಪವು ಇನ್ನೂ ಉಳಿದಿರುವಷ್ಟು ಕಾಲ ಬದುಕಬಲ್ಲ. ಆನಂದ, ಹೀಗೆ ಮಾತುಗಳು ಸ್ಪಷ್ಟವಾಗಿದ್ದರೂ ನಿನ್ನ ಮೌಢ್ಯದಿಂದ ತಿಳಿದುಕೊಳ್ಳಲಾರದೆ ಹೋದೆ. ‘ಭಗವಾನರು ಈ ಕಲ್ಪದ ಅಂತ್ಯದವರೆಗೂ ಇರಬೇಕು. ಸುಗತರಾದ ತಾವು ಬಹುಜನ ಹಿತಕ್ಕಗಿ ಬಹುಜನ ಸುಖಕ್ಕಾಗಿ ಲೋಕದ ಮೇಲಿನ ಅನುಕಂಪೆಯಿಂದ ದೇವತೆಗಳ ಮತ್ತು ಮನುಷ್ಯರ ಹಿತಕ್ಕಾಗಿ ಸುಖಕ್ಕಾಗಿ ಅವರಿಗೋಸ್ಕರ ಈ ಕಲ್ಪವಿರುವವರೆಗೂ ಇರಬೇಕು’. ಆನಂದ, ತಥಾಗತನನ್ನು ಹೀಗೆ ಯಾಚಿಸಿದ್ದರೆ ಎರಡನೆಯಸಾರಿಯೂ ತಥಾಗತನು ನಿನ್ನ ಕೋರಿಕೆಯನ್ನು ಮನ್ನಿಸುತ್ತಿರುಲಿಲ್ಲವೋ ಏನೊ? ಮೂರನೆಯಸಾರಿಯಂತೂ ನಿನ್ನ ಕೋರಿಕೆಯನ್ನು ಮನ್ನಿಸುತ್ತಿದ್ದನು. ಆದುದರಿಂದ ನಿನ್ನದೇ ತಪ್ಪು, ನಿನ್ನದೇ ಅಪರಾಧ.”
51, “ಆನಂದ, ಒಮ್ಮೆ ವೇಸಾಲಿಯ ಉದ್ಯಾನ ಚೈತ್ಯದಲ್ಲಿ ತಂಗಿದ್ದೆ. ಅಲ್ಲಿ ಆನಂದ, ನಿನಗೆ ಹೀಗೆ ಹೇಳಿದೆನಷ್ಟೆ- ‘ವೇಸಾಲಿಯು ಎಷ್ಟು ರಮಣೀಯವಾಗಿದೆ! ಉದೇನ ಚೈತ್ಯವು ಎಷ್ಟು ರಮಣೀಯವಾಗಿದೆ! ಯಾವನು, ಆನಂದ, ಋದ್ದಿಯ ನಾಲ್ಕು ಮಾರ್ಗಗಳನ್ನು ಅರಿತಿದ್ದಾನೋ, ಅವುಗಳನ್ನು ಮನನ ಮಾಡಿದ್ದಾನೋ, ಅವುಗಳನ್ನು ಸಾಧಿಸಿದ್ದಾನೋ ಅವುಗಳನ್ನು ಯಾನಗಳನ್ನಾಗಿ ಆಧಾರಗಳನ್ನಾಗಿ ಮಾಡಿಕೊಳ್ಳಬಲ್ಲ ಸಾಮರ್ಥ್ಯವನ್ನು ಪಡೆದಿದ್ದಾನೋ ಅಂಥವನು ಈ ಕಲ್ಪದಷ್ಟು ಕಾಲ ಅಥವಾ ಈ ಕಲ್ಪವು ಉಳಿದಿರುವಷ್ಟು ಕಾಲ ಬದುಕಿರಬಲ್ಲ. ತಥಾಗತನು ಋದ್ಧಿಯ ನಾಲ್ಕು ಮಾರ್ಗಗಳನ್ನು ಅರಿತಿದ್ದಾನೆ. ಅವುಗಳನ್ನು ಯಾನಗಳನ್ನಾಗಿ ಆಧಾರಗಳನ್ನಾಗಿ ಮಾಡಿಕೊಳ್ಳಬಲ್ಲ ಸಾಮರ್ಥ್ಯವನ್ನು ಪಡೆದಿದ್ದಾನೆ. ಅವುಗಳನ್ನು ಸಂಪೂರ್ಣವಾಗಿ ಸಾಧಿಸಿದ್ದಾನೆ. ಆದುದರಿಂದ ಈ ಕಲ್ಪದಷ್ಟು ಕಾಲ ಅಥವಾ ಈ ಕಲ್ಪವು ಇನ್ನೂ ಉಳಿದಿರುವಷ್ಟು ಕಾಲ ಬದುಕಬಲ್ಲ. ಆನಂದ, ಹೀಗೆ ಮಾತುಗಳು ಸ್ಪಷ್ಟವಾಗಿದ್ದರೂ ನಿನ್ನ ಮೌಢ್ಯದಿಂದ ತಿಳಿದುಕೊಳ್ಳಲಾರದೆ ಹೋದೆ. ‘ಭಗವಾನರು ಈ ಕಲ್ಪದ ಅಂತ್ಯದವರೆಗೂ ಇರಬೇಕು. ಸುಗತರಾದ ತಾವು ಬಹುಜನ ಹಿತಕ್ಕಗಿ ಬಹುಜನ ಸುಖಕ್ಕಾಗಿ ಲೋಕದ ಮೇಲಿನ ಅನುಕಂಪೆಯಿಂದ ದೇವತೆಗಳ ಮತ್ತು ಮನುಷ್ಯರ ಹಿತಕ್ಕಾಗಿ ಸುಖಕ್ಕಾಗಿ ಅವರಿಗೋಸ್ಕರ ಈ ಕಲ್ಪವಿರುವವರೆಗೂ ಇರಬೇಕು’. ಆನಂದ, ತಥಾಗತನನ್ನು ಹೀಗೆ ಯಾಚಿಸಿದ್ದರೆ ಎರಡನೆಯಸಾರಿಯೂ ತಥಾಗತನು ನಿನ್ನ ಕೋರಿಕೆಯನ್ನು ಮನ್ನಿಸುತ್ತಿರುಲಿಲ್ಲವೋ ಏನೊ? ಮೂರನೆಯಸಾರಿಯಂತೂ ನಿನ್ನ ಕೋರಿಕೆಯನ್ನು ಮನ್ನಿಸುತ್ತಿದ್ದನು. ಆದುದರಿಂದ ನಿನ್ನದೇ ತಪ್ಪು, ನಿನ್ನದೇ ಅಪರಾಧ.”
ಒಮ್ಮೆ ಆನಂದ, ಇದೇ ವೇಸಾಲಿಯ ಗೋತಮಕ ಚೈತ್ಯದಲ್ಲಿ ತಂಗಿದ್ದೆ.... ಇದೇ ವೇಸಾಲಿಯ ಸತ್ತಂಬ ಚೈತ್ಯದಲ್ಲಿ ತಂಗಿದ್ದೆ.... ಇದೇ ವೇಸಾಲಿಯ ಬಹುಪುತ್ತ ಚೈತ್ಯದಲ್ಲಿ ತಂಗಿದ್ದೆ.... ಇದೇ ವೇಸಾಲಿಯ ಸಾರಂದದ ಚೈತ್ಯದಲ್ಲಿ ತಂಗಿದ್ದೆ.... ಇಂದು ಚಾಪಾಲಿ ಚೈತ್ಯದಲ್ಲಿರುವಾಗ ಹೀಗೆ ಹೇಳಿದೆನಷ್ಟೆ. ‘ಆನಂದ, ವೇಸಾಲಿಯು ಎಷ್ಟು ರಮಣೀಯವಾಗಿದೆ. ಉದೇವ ಚೈತ್ಯವು ಎಷ್ಟು ರಮಣೀಯ, ಗೋತಮಕ ಚೈತ್ಯವು ಎಷ್ಟು ರಮಣೀಯ, ಸತ್ತಂಬ ಚೈತ್ಯವು ಎಷ್ಟು ರಮಣೀಯ, ಬಹುಪುತ್ತ ಚೈತ್ಯವು ಎಷ್ಟು ರಮಣೀಯ, ಸಾರಂದದ ಚೈತ್ಯವು ಎಷ್ಟು ರಮಣೀಯ, ಚಾಪಾಲಿ ಚೈತ್ಯವು ಎಷ್ಟು ರಮಣೀಯವಾಗಿದೆ! ಯಾವನು, ಆನಂದ, ಋದ್ದಿಯ ನಾಲ್ಕು ಮಾರ್ಗಗಳನ್ನು ಅರಿತಿದ್ದಾನೋ, ಅವುಗಳನ್ನು ಮನನ ಮಾಡಿದ್ದಾನೋ, ಅವುಗಳನ್ನು ಸಾಧಿಸಿದ್ದಾನೋ ಅವುಗಳನ್ನು ಯಾನಗಳನ್ನಾಗಿ ಆಧಾರಗಳನ್ನಾಗಿ ಮಾಡಿಕೊಳ್ಳಬಲ್ಲ ಸಾಮರ್ಥ್ಯವನ್ನು ಪಡೆದಿದ್ದಾನೋ ಅಂಥವನು ಈ ಕಲ್ಪದಷ್ಟು ಕಾಲ ಅಥವಾ ಈ ಕಲ್ಪವು ಉಳಿದಿರುವಷ್ಟು ಕಾಲ ಬದುಕಿರಬಲ್ಲ. ತಥಾಗತನು ಋದ್ಧಿಯ ನಾಲ್ಕು ಮಾರ್ಗಗಳನ್ನು ಅರಿತಿದ್ದಾನೆ. ಅವುಗಳನ್ನು ಯಾನಗಳನ್ನಾಗಿ ಆಧಾರಗಳನ್ನಾಗಿ ಮಾಡಿಕೊಳ್ಳಬಲ್ಲ ಸಾಮರ್ಥ್ಯವನ್ನು ಪಡೆದಿದ್ದಾನೆ. ಅವುಗಳನ್ನು ಸಂಪೂರ್ಣವಾಗಿ ಸಾಧಿಸಿದ್ದಾನೆ. ಆದುದರಿಂದ ಈ ಕಲ್ಪದಷ್ಟು ಕಾಲ ಅಥವಾ ಈ ಕಲ್ಪವು ಇನ್ನೂ ಉಳಿದಿರುವಷ್ಟು ಕಾಲ ಬದುಕಬಲ್ಲ. ಆನಂದ, ಹೀಗೆ ಮಾತುಗಳು ಸ್ಪಷ್ಟವಾಗಿದ್ದರೂ ನಿನ್ನ ಮೌಢ್ಯದಿಂದ ತಿಳಿದುಕೊಳ್ಳಲಾರದೆ ಹೋದೆ. ‘ಭಗವಾನರು ಈ ಕಲ್ಪದ ಅಂತ್ಯದವರೆಗೂ ಇರಬೇಕು. ಸುಗತರಾದ ತಾವು ಬಹುಜನ ಹಿತಕ್ಕಗಿ ಬಹುಜನ ಸುಖಕ್ಕಾಗಿ ಲೋಕದ ಮೇಲಿನ ಅನುಕಂಪೆಯಿಂದ ದೇವತೆಗಳ ಮತ್ತು ಮನುಷ್ಯರ ಹಿತಕ್ಕಾಗಿ ಸುಖಕ್ಕಾಗಿ ಅವರಿಗೋಸ್ಕರ ಈ ಕಲ್ಪವಿರುವವರೆಗೂ ಇರಬೇಕು’. ಆನಂದ, ತಥಾಗತನನ್ನು ಹೀಗೆ ಯಾಚಿಸಿದ್ದರೆ ಎರಡನೆಯಸಾರಿಯೂ ತಥಾಗತನು ನಿನ್ನ ಕೋರಿಕೆಯನ್ನು ಮನ್ನಿಸುತ್ತಿರುಲಿಲ್ಲವೋ ಏನೊ? ಮೂರನೆಯಸಾರಿಯಂತೂ ನಿನ್ನ ಕೋರಿಕೆಯನ್ನು ಮನ್ನಿಸುತ್ತಿದ್ದನು. ಆದುದರಿಂದ ನಿನ್ನದೇ ತಪ್ಪು, ನಿನ್ನದೇ ಅಪರಾಧ.”
“ಆನಂದ, ನಾನು ಆಗಲೇ ತಿಳಿಸಿದ್ದೆನಷ್ಟೆ- ಯಾವುವು ಪ್ರಿಯವಾಗಿಯೇ ಸಂತೋಷವನ್ನುಂಟು ಮಾಡುತ್ತವೆಯೋ ಅವುಗಳಿಂದ ನಾವು ಬೇರೆಯಾಗಬೇಕು. ಅವುಗಳನ್ನು ತೊರೆಯಬೇಕು. ಅವುಗಳ ಸಂಬಂಧವಿಲ್ಲದವರಾಗಿಯೇ ಆಗಬೇಕು. ಹಾಗೆ ಆಗದಿರುವುದು ಸಾಧ್ಯವೇ? ಯಾವುದು ಹುಟ್ಟಿದೆಯೋ, ಬದುಕಿದೆಯೋ, ಜೀವಿಯಾಗಿ ಉಳಿದಿದೆಯೋ ಅದು ಕ್ಷಯಿಸಲೇ ಬೇಕು. ಅದು ಕ್ಷಯಿಸದಿರಲು ಸಾಧ್ಯವೇ? ಅಂಥ ಪರಿಸ್ಥಿತಿ ಇರುವುದೇ ಇಲ್ಲ. ಯಾವುದು ತಥಾಗತನಿಂದ ವರ್ಜಿಸಲ್ಪಟ್ಟಿದೆಯೋ ತ್ಯಜಿಸಲ್ಪಟ್ಟಿದೆಯೋ ತಿರಸ್ಕರಿಸಲ್ಪಟ್ಟಿದೆಯೋ ಆ ಆಯುಃಶ್ಯೇಷದ ಬಗೆಗೆ ತಥಾತನು ಹೇಳಿದ್ದಾಗಿದೆ. ತಥಾಗತನ ಪರಿನಿಬ್ಬಾನವು ಬಹು ದೂರವಿಲ್ಲ. ಇಂದಿನಿಂದ ಮೂರು ತಿಂಗಳು ಕೊನೆಯಲ್ಲಿ ತಥಾಗತನು ಪರಿನಿಬ್ಬಾನವನ್ನು ಪಡೆಯುತ್ತಾನೆ. ಈ ಮಾತುಗಳನ್ನು ತಥಾಗತನೇ ಆಡಿಬಿಟ್ಟಿದ್ದಾನೆ. ತಥಾಗತನು ಜೀವಿಸುವುದಕ್ಕೆ ತನ್ನ ಮಾತುಗಳನ್ನು ಹಿಂತೆಗೆದುಕೊಳ್ಳಬೇಕಾಗುತ್ತದೆ. ಇಂಥ ಪರಿಸ್ಥಿತಿಯು ಬರುವುದೇ ಇಲ್ಲ. ಓ ಆನಂದ, ಮಹಾವನದ ಕೂಟಾಗಾರ ಸಾಲೆಗೆ ಹೋಗೋಣ” ಎಂದರು. “ಹಾಗೆಯೇ ಆಗಲಿ ಭಂತೆ” ಎಂದು ಆಯುಷ್ಮಂತನಾದ ಆನಂದನು ಭಗವಾನರಿಗೆ ಪ್ರತ್ಯುತ್ತರವಿತ್ತನು.
ಅನಂತರ ಭಗವಾನರು ಆಯುಷ್ಮಂತ ಆನಂದನ ಸಂಗಡ ಮಹಾವನದ ಕೂಟಗಾರಸಾಲೆಗೆ ಹೋದರು. ಆಮೇಲೆ ಆಯುಷ್ಮಂತ ಆನಂದನನ್ನು ಕುರಿತು ಇಂತೆಂದರು- “ಹೋಗು, ಆನಂದ, ವೇಸಾಲಿಯ ಸುತ್ತಮುತ್ತಲಿರುವ ಭಿಕ್ಷುಗಳೆಲ್ಲರನ್ನೂ ಉಪಟ್ಠಾನ ಸಾಲೆಯಲ್ಲಿ ಸೇರಿಸು.” “ಹಾಗೆಯೇ ಆಗಲಿ ಭಂತೆ” ಎಂದು ಆನಂದನು ಉತ್ತರವನ್ನು ಹೇಳಿ ವೇಸಾಲಿಯ ಸುತ್ತಮುತ್ತ ಇದ್ದ ಎಲ್ಲ ಭಿಕ್ಷುಗಳನ್ನೂ ಉಪಟ್ಠಾನ ಸಾಲೆಯಲ್ಲಿ ಸೇರಿಸಿ ಭಗವಾನರಲ್ಲಿಗೆ ಬಂದನು. ಅವರಿಗೆ ಅಭಿವಂದಿಸಿ ಒಂದುಕಡೆ ನಿಂತುಕೊಂಡನು. “ಭಂತೆ, ಭಿಕ್ಷು ಸಂಘವು ಸೇರಿದೆ, ಭಗವಾನರು ಸೂಕ್ತವಾದುದನ್ನು ಮಾಡಬಹುದು” ಎಂದನು.
ಭಗವಾನರು ಆ ಉಪಟ್ಠಾನ ಸಾಲಿಗೆ ಹೋಗಿ ಅವರಿಗಾಗಿ ಪ್ರತ್ಯೇಕವಾಗಿ ಏರ್ಪಡಿಸಿದ್ದ ಆಸನದ ಮೇಲೆ ಕುಳಿತರು. ಆಮೇಲೆ ಭಿಕ್ಷು ಸಂಘಕ್ಕೆ ಹೀಗೆ ತಿಳಿಸಿದರು- “ಭಿಕ್ಷುಗಳೇ, ಯಾರಿಗೆ ನಾನು ಸ್ವಪ್ರಯತ್ನದಿಂದ ಅರಿತಿರುವ ಧಮ್ಮವನ್ನು ಬೋಧಿಸಿರುವೆನೋ ಅವರು ಅದನ್ನು ಗ್ರಹಿಸಿ ಅದರಂತೆ ನಡೆದು ಅದನ್ನು ಕುರಿತು ಮನನ ಚಿಂತನಗಳನ್ನು ಮಾಡಿ ಅದನ್ನು ಶುದ್ಧ ರೂಪದಲ್ಲಿಯೇ ಅದು ಬಹುಕಾಲ ನಿಲ್ಲುವಂತೆ ಅವರು ಪ್ರಸಾರ ಮಾಡಲಿ. ನಿಮ್ಮ ಜೀವನ ಶುದ್ಧವಾಗಿರಲಿ. ಬಹುಜನ ಹಿತಕ್ಕಾಗಿ, ಬಹುಜನ ಸುಖಕ್ಕಾಗಿ ಲೋಕದ ಮೇಲಿನ ಅನುಕಂಪೆಯಿಂದ ದೇವತೆಗಳ ಮತ್ತು ಮನುಷ್ಯರ ಹಿತಕ್ಕಾಗಿ ಸುಖಕ್ಕಾಗಿ ಅವರಿಗೋಸ್ಕರ ಪ್ರಸಾರಮಾಡಿ ಭಿಕ್ಷುಗಳು, ಯಾವುದನ್ನು ನಾನು ಸ್ವಪ್ರಯತ್ನದಿಂದ ಅರಿತು ಬೋಧಿಸಿರುವೆನೋ, ಅದನ್ನು ಗ್ರಹಿಸಿ ಅದರಂತೆ ನಡೆದು ಅದನ್ನು ಕುರಿತು ಮನನ ಚಿಂತನ ಮಾಡಿ ಶುದ್ಧ ರೂಪದಲ್ಲಿಯೇ ಬಹುಕಾಲ ನಿಲ್ಲುವಂತೆ ಬಹುಜನ ಹಿತಕ್ಕಾಗಿ, ಬಹುಜನ ಸುಖಕ್ಕಾಗಿ ಲೋಕಗಳ ಅನುಕಂಪೆಯಿಂದ ದೇವತೆಗಳ ಮತ್ತು ಮನುಷ್ಯರ ಹಿತಕ್ಕಾಗಿ ಸುಖಕ್ಕಾಗಿ ಅವರಿಗೋಸ್ಕರ ನೀವು ಪ್ರಸಾರ ಮಾಡಬೇಕಾದ ಆ ಧಮ್ಮದ ವಿವರಗಳು ಯಾವು ಯಾವುವೆಂದರೆ- ನಾಲ್ಕು ಸತಿಪಟ್ಠಾನಗಳು, ನಾಲ್ಕು ಸಮ್ಯಕ್ ಪ್ರಧಾನಗಳು, ನಾಲ್ಕು ಇದ್ಧಿಪಾದಗಳು, ಐದು ಇಂದ್ರಿಯಗಳು, ಐದು ಬಲಗಳು, ಏಳು ಬೋಜ್ಝಂಗಗಳು ಮತ್ತು ಅರಿಯ ಅಟ್ಠಂಗಮಗ್ಗ. ನಾನು ಸ್ವಪ್ರಯತ್ನದಿಂದ ಅರಿತು ಬೋಧಿಸಿರುವುದನ್ನು ಗ್ರಹಿಸಿ ಅದರಂತೆ ನಡೆದು ಅದನ್ನು ಕುರಿತು ಚಿಂತನ ಮಾಡಿ ಅದರ ಶುದ್ಧರೂಪದಲ್ಲಿಯೇ ಬಹುಕಾಲ ನಿಲ್ಲುವಂತೆ ಬಹುಜನ ಹಿತಕ್ಕಾಗಿ ಬಹುಜನ ಸುಖಕ್ಕಾಗಿ ಲೋಕಗಳ ಅನುಕಂಪೆಯಿಂದ ದೇವತೆಗಳ ಮತ್ತು ಮನುಷ್ಯರ ಹಿತಕ್ಕಾಗಿ ಅವರಿಗೋಸ್ಕರ ನೀವು ಪ್ರಸಾರ ಮಾಡಬೇಕಾದ ಧಮ್ಮದ ವಿವರಗಳು ಇವೆ.”
ಆಮೇಲೆ ಭಿಕ್ಷುಗಳನ್ನು ಕುರಿತು ಇಂತೆಂದರು- “ಭಿಕ್ಷುಗಳೇ, ನಿಮಗೆ ಒತ್ತಿ ಹೇಳುತ್ತಿದ್ದೇನೆ. ಸಂಖಾರಗಳು ವಯಾ ಧಮ್ಮಿಗಳು ಅಂದರೆ ಅವುಗಳೆಲ್ಲವೂ ಕ್ಷಯಿಸುತ್ತವೆ. ಎಚ್ಚರಿಕೆಯಿಂದ ಸಂಪಾದಿಸಿಕೊಳ್ಳಿ. ತಥಾಗತನು ಪರಿನಿಬ್ಬಾನವನ್ನು ಪಡೆಯುವ ಕಾಲ ಬಹುದೂರವಿಲ್ಲ. ಇಲ್ಲಿಂದ ಮೂರು ತಿಂಗಳ ಹೊತ್ತಿಗೆ ತಥಾಗತನು ಪರಿನಿಬ್ಬಾನವನ್ನು ಪಡೆಯುತ್ತಾನೆ....” ಭಗವಾನರು ಹೇಳಿದುದು ಹೀಗೆ. ಇಷ್ಟು ಹೇಳಿದ ಸುಗತರು ಮತ್ತೆ ಇಂತೆಂದರು-
ಪರಿಪಕ್ವವಾಯಿತೆನ್ನ ಬಾಳು ಜೀವನವಿದು ಮುಗಿಯುತ್ತಿದ್ದು |
ನಿಮ್ಮೆಲ್ಲರ ಬೀಳ್ಕೊಡುತಿಹೆನು ನನಗೆ ನಾನೇ ಶರಣು ಹೋಗುವೆ ||
ಭಿಕ್ಷುಗಳೇ, ನೀವೆಲ್ಲ ಬಾಳಿ ಸಂಶೀಲ ಸ್ಮೃತಿವಂತರಾಗಿ ನಿಮಗಿಲ್ಲದಿರಲಿ ಮೈಮರವು |
ಸಂಕಲ್ಪವದು ಅಚಲವಾಗಿರಲಿ ಎಚ್ಚರದಿ ರಕ್ಷಿಸಿರಿ ನಿಮ್ಮ ಚಿತ್ತವನು ||
ಧಮ್ಮ ವಿನಯಗಳ ಎಚ್ಚರದಿ ರಕ್ಷಿಸರಿ ಹುಟ್ಟು ಸಂಸಾರಗಳ |
ದುಃಖ ಸಂಕೋಲೆಗಳ ಕೊನೆಗೊಳಿಸಿ ಮತ್ತೆ ಮೊಳೆಯದಂತೆ ||
ತೃತೀಯ ಪಠಣ ಭಾಗ
ಒಮ್ಮೆ ಹಿಂದೆ ನೋಡುವುದು
ಒಂದು ಪೂರ್ವಾಹ್ನ ಸಮಯದಲ್ಲಿ ಭಗವಾನರು ಚೀವರನ್ನು ಧರಿಸಿಕೊಂಡು ಪಿಂಡಪಾತ್ರೆಯೊಡನೆ ಭಿಕ್ಷೆಗಾಗಿ ವೇಸಾಲಿಯನ್ನು ಪ್ರವೇಶಿಸಿದರು. ಭಿಕ್ಷೆಗಾಗಿ ಸುತ್ತಾಡಿದ ಮೇಲೆ ಊಟ ಮಾಡಿ ಪಿಂಡಪಾತ್ರೆಯನ್ನು ತೊಳೆದು ಹಿಂತಿರುಗುತ್ತಿದ್ದಾಗ ವೇಸಾಲಿಯನ್ನೊಮ್ಮೆ ಹಿಂದೆ ತಿರುಗಿ ನೋಡಿದರು. ಆನಂದನಿಗೆ ಹೀಗೆ ಹೇಳಿದರು- “ಆನಂದ, ತಥಾಗತನಿಗೆ ವೇಸಾಲಿಯ ದರ್ಶನವು ಇದೇ ಕೊನೆಯದು. ಆನಂದ, ಹೋಗೋಣ ಬಾ, ಭಂಡಗಾಮಕ್ಕೆ ತೆರಳೋಣ.” “ಹಾಗೆಯೇ ಆಗಲಿ ಭಂತೆ” ಎಂದು ಆನಂದನು ಭಗವಾನರಿಗೆ ಹೇಳಿದನು.
ಭಗವಾನರು ಒಂದು ದೊಡ್ಡ ಭಿಕ್ಷು ಸಂಘದೊಂದಿಗೆ ಭಂಡಿಗಾಮಕ್ಕೆ ಹೋದರು. ಭಂಡಿಗಾಮದಲ್ಲಿಯೇ ತಂಗಿದರು. ಅಲ್ಲಿ ಭಗವಾನರು ಭಿಕ್ಷು ಸಂಘವನ್ನು ಕುರಿತು ಹೀಗೆ ಬೋಧಿಸಿದರು- “ಭಿಕ್ಷುಗಳೇ, ನೀವೂ ನಾನೂ ನಾಲ್ಕು ಧಮ್ಮಗಳನ್ನು ಅರಿಯದುದರಿಂದಲೇ ಅವುಗಳನ್ನು ಗ್ರಹಿಸದುದರಿಂದಲೇ ಬಹುಕಾಲ ಈ ಸಂಸಾರದಲ್ಲಿ ಸುತ್ತಾಡಬೇಕಾಯಿತು, ಲೋಕಕ್ಕೆ ಧಾವಿಸಬೇಕಾಯಿತು. ಈ ನಾಲ್ಕು ಯಾವುವು? ಶ್ರೇಷ್ಠವಾದ ಶೀಲವನ್ನು ಅರಿಯದುದರಿಂದಲೇ ಅದನ್ನು ಪಾಲಿಸದುದರಿಂದಲೇ ನೀವೂ ನಾನೂ ಬಹುಕಾಲ ಈ ಸಂಸಾರದಲ್ಲಿ ಸುತ್ತಾಡಬೇಕಾಯಿತು, ಲೋಕಕ್ಕೆ ಧಾವಿಸಬೇಕಾಯಿತು. ಭಿಕ್ಷುಗಳೇ, ಶ್ರೇಷ್ಠವಾದ ಸಮಾಧಿಯನ್ನು ಅರಿಯದುದರಿಂದಲೇ ಅದನ್ನು ಬೆಳೆಸಿಕೊಳ್ಳದುದರಿಂದಲೇ, ನೀವೂ ನಾನೂ ಬಹುಕಾಲ ಈ ಸಂಸಾರದಲ್ಲಿ ಸುತ್ತಾಡಬೇಕಾಯಿತು, ಲೋಕಕ್ಕೆ ಧಾವಿಸಬೇಕಾಯಿತು. ಶ್ರೇಷ್ಠವಾದ ಪಞ್ಞಾವನ್ನು ಬೆಳೆಸಿಕೊಳ್ಳದುದರಿಂದಲೇ, ಗಳಿಸದುದರಿಂದಲೇ ನಾನೂ, ನೀವೂ ಬಹುಕಾಲ ಈ ಸಂಸಾರದಲ್ಲಿ ಸುತ್ತಾಡಬೇಕಾಯಿತು. ಲೋಕಕ್ಕೆ ಧಾವಿಸಬೇಕಾಯಿತು. ಭಿಕ್ಷುಗಳೇ, ಶ್ರೇಷ್ಠವಾದ ವಿಮುಕ್ತಿಯನ್ನು ಪಡೆಯದುದರಿಂದಲೇ ಸಾಧಿಸದುದರಿಂದಲೇ ನಾನೂ, ನೀವೂ ಬಹುಕಾಲ ಈ ಸಂಸಾರದಲ್ಲಿ ಸುತ್ತಾಡಬೇಕಾಯಿತು. ಲೋಕಕ್ಕೆ ಧಾವಿಸಬೇಕಾಯಿತು. ಮತ್ತೆ ಭಿಕ್ಷುಗಳೇ, ಶ್ರೇಷ್ಠವಾದ ಶೀಲವನ್ನು ಅರಿತು ಗ್ರಹಿಸಿ, ಶ್ರೇಷ್ಠವಾದ ಸಮಾಧಿಯನ್ನು ಅರಿತು ಬೆಳೆಸಿಕೊಂಡು, ಶ್ರೇಷ್ಠವಾದ ಪಞ್ಞಾವನ್ನು ಬೆಳೆಸಿಕೊಂಡು, ಗಳಿಸಿಕೊಂಡು, ಶ್ರೇಷ್ಠವಾದ ಸಮಾಧಿಯನ್ನು ಪಡೆಯಬಹುದು.” ಭಗವಾನರು ಹೀಗೆ ಹೇಳಿದರು. ಇಷ್ಟು ಹೇಳಿದ ಸುಗತರು ಮತ್ತೆ ಇಂತೆಂದರು-
“ಅನುಪಮವು ಶೀಲ ಸಮಾಧಿ ಪಞ್ಞಾ ವಿಮುಕ್ತಿಗಳು
ವಿಜಯಿ ಗೋತಮನವನು ಅರಿತಿಹನು ಈ ನಾಲ್ಕು ಧಮ್ಮಗಳ ||
ಸ್ಪಷ್ಟಗೊಳಿಸಿಹನವನು ಭಿಕ್ಷುಗಳ ಸಂಘಕ್ಕೆ
ದುಃಖವದ ಕೊನೆಗೊಳಿಸಿ ದಿವ್ಯ ಚಕ್ಷುವ ಪಡೆದು
ಶ್ರಾಸ್ತ ಗೋತಮನು ಪಡೆದಿಹನು ಪರಮ ನಿಬ್ಬಾನವನು ||
ಭಂಡಿಗಾಮದಲ್ಲಿ ಬಹುಸಂಖ್ಯೆಯಲ್ಲಿದ್ದ ಭಿಕ್ಷುಗಳಿಗೆ ಧಮ್ಮವನ್ನು ವಿವರಿಸಿದರು- “ಇದು ಶೀಲ, ಇದು ಸಮಾಧಿ, ಇದು ಪಞ್ಞಾ ಶೀಲದಿಂದ ಕೂಡಿದ ಸಮಾಧಿಯು ಮಹತ್ಫಲವನ್ನು ಕೊಡುತ್ತದೆ, ಮಹಾಲಾಭವನ್ನು ತರುತ್ತದೆ. ಸಮಾಧಿಯಿಂದ ಕೂಡಿದ ಪಞ್ಞಾವು ಮಹತ್ಫಲವನ್ನು ಕೊಡುತ್ತದೆ. ಮಹಾಲಾಭವನ್ನು ತರುತ್ತದೆ. ಪಞ್ಞಾದಿಂದ ಕೂಡಿದ ಚಿತ್ತವು ಮಂಕುಗೊಳಿಸುವ ಆಸವಗಳಿಂದ ಮುಕ್ತವಾಗಿರುತ್ತದೆ. ಆಸವಗಳಾವುವೆಂದರೆ ಕಾಮಾಸವ, ಭವಾಸವ, ಅವಿಜ್ಜಾಸವ.
ನಾಲ್ಕು ಮಹಾ ಪ್ರಮಾಣಗಳು
ಭಂಡಿಗಾಮದಲ್ಲಿ ಎಷ್ಟು ದಿನ ಇರಬೇಕು ಎನ್ನಿಸಿತೋ ಅಷ್ಟುದಿನ ಭಗವಾನರು ಆ ಗ್ರಾಮದಲ್ಲಿ ತಂಗಿದ್ದರು. ಆಮೇಲೆ ಆನಂದನನ್ನು ಕರೆದು- “ಆಯುಷ್ಮಂತನಾದ ಆನಂದ, ಹತ್ಥಿಗಾಮ, ಅಂಬಗಾಮ, ಜಂಬುಗಾಮ ಮತ್ತು ಭೋಗ ನಗರಗಳಿಗೆ ಹೋಗೋಣ ಬಾ” ಎಂದರು. “ಹಾಗೆಯೇ ಆಗಲಿ ಭಂತೆ” ಎಂದು ಆಯುಷ್ಮಂತ ಆನಂದನು ಉತ್ತರವಿತ್ತನು. ಆನಂದತರ ಭಗವಾನರು ಒಂದು ದೊಡ್ಡ ಭಿಕ್ಷು ಸಂಘದೊಂದಿಗೆ ಭೋಗ ನಗರಕ್ಕೆ ಹೋದರು. ಆ ಭೋಗನಗರದಲ್ಲಿ ಆನಂದ ಚೈತ್ಯದಲ್ಲಿ ಭಗವಾನರು ಉಳಿದುಕೊಂಡರು. ಅಲ್ಲಿ ಭಗವಾನರು ಭಿಕ್ಷುಗಳನ್ನು ಕುರಿತು ಇಂತೆಂದರು- “ಭಿಕ್ಷುಗಳೇ, ನಾಲ್ಕು ಮಹಾಪ್ರಮಾಣಗಳನ್ನು ವಿವರಿಸುತ್ತೇನೆ, ಮನಸ್ಸಿಟ್ಟು ಕೇಳಿ. ಈಗ ಹೇಳುತ್ತೇನೆ.” “ಹಾಗೆಯೇ ಆಗಲಿ ಭಂತೆ” ಎಂದು ಭಿಕ್ಷುಗಳು ಭಗವಾನರಿಗೆ ಉತ್ತರಿಸಿದರು. ಭಗವಾನರು ಇಂತೆಂದರು-
“ಭಿಕ್ಷುಗಳೇ, ಭಿಕ್ಷುವೊಬ್ಬನು ಇಲ್ಲಿ ಹೀಗೆ ಹೇಳಬಹುದು- ‘ಭಗವಾನರ ಮುಖದಿಂದಲೇ ಈ ಮಾತುಗಳನ್ನು ಹೇಳಿದ್ದೇನೆ. ಅವರಿಂದಲೇ ಈ ಮಾತುಗಳನ್ನು ಗ್ರಹಿಸಿದ್ದೇನೆ- ಇದು ಧಮ್ಮ, ಇದು ವಿನಯ, ‘ಇದು ಗುರುವಿನ ಶಾಸನ’. ಭಿಕ್ಷುವಿನ ಆ ಮಾತುಗಳನ್ನು ಒಪ್ಪಿಕೊಳ್ಳಲೂ ಬೇಡಿ, ತಿರಸ್ಕರಿಸಲೂ ಬೇಡಿ. ಒಪ್ಪಿಕೊಳ್ಳದೆ, ತಿರಸ್ಕರಿಸದೆ ಆ ಮಾತುಗಳ ಅರ್ಥವನ್ನೂ, ಧ್ವನಿಯನ್ನೂ ಎಚ್ಚರಿಕೆಯಿಂದ ಗ್ರಹಿಸಿ. ನೀವು ಹಿಂದೆ ಏನನ್ನು ಕೇಳಿದ್ದೀರ ವಿನಯದ ನಿಯಮಗಳು ಏನಿವೆಯೋ ಅವುಗಳ ಬೆಳಕಿನಲ್ಲಿ ಪರೀಕ್ಷಿಸಿ. ಹಿಂದೆ ಕೇಳಿದ ಸುತ್ತಗಳಿಗೆ ಮತ್ತು ಪಾಲಿಸುತ್ತಿರುವ ವಿನಯದ ನಿಯಮಗಳಿಗೆ ಆ ಮಾತುಗಳು ಹೊಂದಿಕೊಳ್ಳದಿದ್ದರೆ ಇದು ಭಗವಾನರ ವಚನವಲ್ಲ. ಇದನ್ನು ಭಿಕ್ಷುವು ಸರಿಯಾಗಿ ಗ್ರಹಿಸಿಲ್ಲ ಎಂದು ಅರಿಯಿರಿ. ಭಿಕ್ಷುಗಳೇ, ಅದನ್ನು ತಿರಸ್ಕರಿಸಿ. ಹಿಂದೆ ಕೇಳಿದ ಸುತ್ತಗಳಿಗೆ ಪಾಲಿಸುತ್ತಿರುವ ವಿನಯದ ನಿಯಮಗಳಿಗೆ ಹೊಂದಿಕೊಳ್ಳುವಂತಿದ್ದರೆ ಇದು “ಭಗವಾನರ ವಚನ ಇದನ್ನು ಭಿಕ್ಷುವು ಚೆನ್ನಾಗಿ ಗ್ರಹಿಸಿದ್ದಾನೆ” ಎಂದು ಅರಿಯಿರಿ. ಇದು ನಾನು ವಿವರಿಸಬೇಕಾದ ಮೊದಲನೆಯ ಪ್ರಮಾಣ, ಇದನ್ನು ಸ್ವೀಕರಿಸಿ.
“ಭಿಕ್ಷುಗಳೇ, ಭಿಕ್ಷುವೊಬ್ಬನು ಹೀಗೆ ಹೇಳಬಹುದು- ‘ಹತ್ತಿರದಲ್ಲಿಯೇ ಪ್ರಮುಖರು ಮತ್ತು ಥೇರರನ್ನೊಳಗೊಂಡ ಸಂಘವಿದೆ. ಆ ಸಂಘದವರಿಂದಲೇ ಈ ಮಾತುಗಳನ್ನು ಕೇಳಿದ್ದೇನೆ. ಈ ಮಾತುಗಳನ್ನು ಗ್ರಹಿಸಿದ್ದೇನೆ- ಇದು ಧಮ್ಮ, ಇದು ವಿನಯ, ಇದು ಗುರುವಿನ ಶಾಸನ! ಭಿಕ್ಷುವಿನ ಆ ಮಾತುಗಳನ್ನು ಒಪ್ಪಿಕೊಳ್ಳಲೂ ಬೇಡಿ, ತಿರಸ್ಕರಿಸಲೂ ಬೇಡಿ. ಒಪ್ಪಿಕೊಳ್ಳದೆ ತಿರಸ್ಕರಿಸದೆ ಆ ಮಾತುಗಳ ಅರ್ಥವನ್ನು, ಧ್ವನಿಯನ್ನೂ ಗ್ರಹಿಸಿ. ನೀವು ಹಿಂದೆ ಏನನ್ನು ಕೇಳಿದ್ದೀರೋ ವಿನಯದ ನಿಯಮಗಳು ಏನಿವೆಯೋ ಅವುಗಳ ಬೆಳಕಿನಲ್ಲಿ ಪರೀಕ್ಷಿಸಿ. ಹಿಂದೆ ಕೇಳಿದ ಸುತ್ತಗಳಿಗೆ ಮತ್ತು ಪಾಲಿಸುತ್ತಿರುವ ನಿಯಮಗಳಿಗೆ ಆ ಮಾತುಗಳು ಹೊಂದಿಕೊಳ್ಳದಿದ್ದರೆ ಇದು ಭಗವಾನರ ವಚನವಲ್ಲ, ಸಂಘವು ಸರಿಯಾಗಿ ಗ್ರಹಿಸಿಲ್ಲ ಎಂದು ಅರಿಯಿರಿ. ಭಿಕ್ಷುಗಳೇ, ಅದನ್ನು ತಿರಸ್ಕರಿಸಿ. ಹಿಂದೆ ಕೇಳಿದ ಸುತ್ತಗಳಿಗೆ ಪಾಲಿಸುತ್ತಿರುವ ವಿನಯದ ನಿಯಮಗಳಿಗೆ ಹೊಂದಿಕೊಳ್ಳುವಂತಿದ್ದರೆ ‘ಇದು ಭಗವಾನರ ವಚನ, ಇದನ್ನು ಸಂಘವು ಚೆನ್ನಾಗಿ ಗ್ರಹಿಸಿದೆ’ ಎಂದು ಅರಿಯಿರಿ. ಇದು ನಾನು ವಿವರಿಸಬೇಕಾದ ಎರಡನೆಯ ಪ್ರಮಾಣ, ಇದನ್ನು ಸ್ವೀಕರಿಸಿ.
“ಮತ್ತೆ ಭಿಕ್ಷುವೊಬ್ಬನು ಹೀಗೆ ಹೇಳಬಹುದು- ‘ಆ ತಾಣದಲ್ಲಿ ಬಹುಶ್ರುತರೂ, ಧಮ್ಮವನ್ನು ತಿಳಿದವರೂ, ವಿನಯವನ್ನು ಪಾಲಿಸುತ್ತಿರುವವರೂ ಅಭಿಧಮ್ಮ (ಮಾತಿಕಾ)ವನ್ನು ಚೆನ್ನಾಗಿ ಅರ್ಥಮಾಡಿಕೊಂಡವರೂ ಆದ ಬಹು ಸಂಖ್ಯೆಯ ಥೇರವಾದ ಭಿಕ್ಷುಗಳು ಇದ್ದಾರೆ. ಆ ಥೇರರ ಬಾಯಿಂದಲೇ ಈ ಮಾತುಗಳನ್ನು ಕೇಳಿದ್ದೇನೆ. ಈ ಮಾತುಗಳನ್ನು ಗ್ರಹಿಸಿದ್ದೇನೆ- ‘ಇದು ಧಮ್ಮ, ಇದು ವಿನಯ, ಇದು ಗುರುವಿನ ಶಾಸನ! ಭಿಕ್ಷುವಿನ ಮಾತುಗಳನ್ನು ಒಪ್ಪಿಕೊಳ್ಳಲೂ ಬೇಡಿ, ತಿರಸ್ಕರಿಸಲೂ ಬೇಡಿ... ‘ಇದು ಭಗವಾನರ ವಚನವಲ್ಲ, ಆ ಥೇರರು ಸರಿಯಾಗಿ ಗ್ರಹಿಸಿಲ್ಲ’ ಎಂದು ತಿಳಿಯಿರಿ. ಭಿಕ್ಷುಗಳೇ, ಅದನ್ನು ತಿರಸ್ಕರಿಸಿ. ಆದರೆ ಹಿಂದೆ ಕೇಳಿದ ಸುತ್ತಗಳಿಗೆ ಪಾಲಿಸುತ್ತಿರುವ ವಿನಯಗಳಿಗೆ ಹೊಂದಿಕೊಳ್ಳುವಂತಿದ್ದರೆ ‘ಇದು ಭಗವಾನರ ವಚನ. ಆ ಥೇರರು ಚೆನ್ನಾಗಿ ಗ್ರಹಿಸಿದ್ದಾರೆ’ ಎಂದು ಅರಿಯಿರಿ. ಇದು ನಾನು ವಿವರಿಸಬೇಕಾದ ಮೂರನೆಯ ಪ್ರಮಾಣ. ಇದನ್ನು ಸ್ವೀಕರಿಸಿ.
“ಭಿಕ್ಷುವೊಬ್ಬನು ಹೀಗೆ ಹೇಳಬಹುದು- ‘ಆ ತಾಣದಲ್ಲಿ ಬಹುಶ್ರುತನೂ, ಧಮ್ಮವನ್ನು ಅರಿತವನೂ, ವಿನಯವನ್ನು ಪಾಲಿಸುತ್ತಿರುವವನೂ, ಅಭಿಧಮ್ಮವನ್ನು ಚೆನ್ನಾಗಿ ಅರ್ಥಮಾಡಿಕೊಂಡಿರುವವನೂ ಆದ ಒಬ್ಬ ಭಿಕ್ಷು ಥೇರನಿದ್ದಾನೆ. ಅವನ ಮುಖದಿಂದಲೇ ಈ ಮಾತುಗಳನ್ನು ಕೇಳಿದ್ದೇನೆ, ಈ ಮಾತುಗಳನ್ನು ಗ್ರಹಿಸಿದ್ದೇನೆ- ‘ಇದು ಧಮ್ಮ, ಇದು ವಿನಯ, ಇದು ಗುರುವಿನ ಶಾಸನ’. ಥೇರನ ಈ ಮಾತುಗಳನ್ನು ಒಪ್ಪಿಕೊಳ್ಳಲೂ ಬೇಡಿ, ತಿರಸ್ಕರಿಸಲೂ ಬೇಡಿ. ಒಪ್ಪಿಕೊಳ್ಳದೆ, ತಿರಸ್ಕರಿಸದೆ ಆ ಮಾತುಗಳ ಅರ್ಥವನ್ನು, ಧ್ವನಿಯನ್ನು ಗ್ರಹಿಸಿ. ನೀವು ಹಿಂದೆ ಏನನ್ನು ಕೇಳಿದ್ದೀರೋ, ನೀವು ಸಾಧಿಸುತ್ತಿರುವ ವಿನಯದ ನಿಯಮಗಳು ಏನಿವೆಯೋ, ಅವುಗಳ ಬೆಳಕಿನಲ್ಲಿ ಪರೀಕ್ಷಿಸಿ. ಹಿಂದೆ ಕೇಳಿದ ಸುತ್ತಗಳಿಗೆ ಮತ್ತು ಪಾಲಿಸುತ್ತಿರುವ ನಿಯಮಗಳಿಗೆ ಆ ಮಾತುಗಳು ಹೊಂದಿಕೊಳ್ಳದಿದ್ದರೆ ‘ಇದು ಭಗವಾನರ ವಚನವಲ್ಲ. ಆ ಥೇರನು ಸರಿಯಾಗಿ ಗ್ರಹಿಸಿಲ್ಲ’ ಎಂದು ಅದನ್ನು ಅರಿಯಿರಿ, ಅದನ್ನು ತಿರಸ್ಕರಿಸಿ. ಹಿಂದೆ ಕೇಳಿದ ಸುತ್ತಗಳಿಗೆ ಪಾಲಿಸುತ್ತಿರುವ ನಿಯಮಗಳಿಗೆ ಹೊಂದಿಕೊಳ್ಳುವಂತಿದ್ದರೆ, ‘ಇದು ಭಗವಾನರ ವಚನ, ಇದನ್ನು ಭಿಕ್ಷುವು ಚೆನ್ನಾಗಿ ಗ್ರಹಿಸಿದ್ದಾನೆ’ ಎಂದು ಅರಿಯಿರಿ. ಇದು ನಾನು ವಿವರಿಸಬೇಕಾದ ನಾಲ್ಕನೆಯ ಪ್ರಮಾಣ. ಇದನ್ನು ಸ್ವೀಕರಿಸಿ.
ಭಗವಾನರು ಭೋಗನಗರದಲ್ಲಿ ಆನಂದ ಚೈತ್ಯದಲ್ಲಿದ್ದಾಗ ಬಹುಸಂಖ್ಯೆಯಲ್ಲಿದ್ದ ಭಿಕ್ಷುಗಳಿಗೆ ಧಮ್ಮವನ್ನು ವಿವರಿಸಿದರು- ‘ಇದು ಶೀಲ, ಇದು ಸಮಾಧಿ, ಇದು ಪಞ್ಞಾ. ಶೀಲದಿಂದ ಕೂಡಿದ ಪಞ್ಞಾವು ಮಹತ್ಫಲವನ್ನು ಕೊಡುತ್ತದೆ. ಮಹಾಲಾಭವನ್ನು ತರುತ್ತದೆ. ಪಞ್ಞಾದಿಂದ ಕೂಡಿದ ಚಿತ್ತವು ಮಂಕುಗೊಳಿಸುವ ಆಸವಗಳಿಂದ ಮುಕ್ತವಾಗುತ್ತದೆ. ಆಸವಗಳಾವುವೆಂದರೆ- ಕಾಮಾಸವ, ಭವಾಸವ, ಅವಿಜ್ಝಾಸವ.”
ಕಮ್ಮಾರಪುತ್ರ ಚುಂದವಸ್ತು
ಭೋಗಿನಗರದಲ್ಲಿ ಎಷ್ಟುದಿನ ಇರಬೇಕಾಗಿತ್ತೋ ಅಷ್ಟು ದಿನವೂ ಭಗವಾನರು ಅಲ್ಲಿದ್ದರು. ಆಮೇಲೆ ಆಯುಷ್ಮಂತನಾದ ಆನಂದನಿಗೆ ಹೀಗೆ ಹೇಳಿದರು- “ಆನಂದ, ಪಾವಕ್ಕೆ ಹೋಗೋಣ ಬಾ” ಎಂದರು. “ಹಾಗೆಯೇ ಆಗಲಿ ಭಂತೆ” ಎಂದು ಆನಂದನು ಉತ್ತರವಿತ್ತನು. ಆಮೇಲೆ ಒಂದು ದೊಡ್ಡ ಭಿಕ್ಷು ಸಂಘದೊಂದಿಗೆ ಭಗವಾನರು ಪಾವಾಕ್ಕೆ ಹೋದರು. ಅಲ್ಲಿ ಭಗವಾನರು ಕಮ್ಮಾರನ ಮಗ ಚುಂದನ ಆಮ್ರವನದಲ್ಲಿ ತಂಗಿದರು. ಕಮ್ಮಾರನ ಮಗ ಚುಂದನು “ಭಗವಾನರು ಪಾವಕ್ಕೆ ಬಂದಿದ್ದಾರೆ, ಪಾವದಲ್ಲಿ ನನ್ನ ಆಮ್ರವನದಲ್ಲಿ ತಂಗಿದ್ದಾರೆ” ಎಂಬುದನ್ನು ಕೇಳಿದನು. ಆಮೇಲೆ ಆ ಚುಂದನು ಭಗವಾನರ ಬಳಿಗೆ ಬಂದನು. ಭಗವಾನರನ್ನು ಅಭಿವಂದಿಸಿ ಒಂದುಕಡೆ ಕುಳಿತುಕೊಂಡನು. ಕಮ್ಮಾರ ಪುತ್ರನಾದ ಚುಂದನಿಗೆ ಭಗವಾನರು ಧಮ್ಮವನ್ನು ವಿವರಿಸಿದರು. ಅವನನ್ನು ಸ್ಫೂರ್ತಿಗೊಳಿಸಿ, ಸಂತೋಷಗೊಳಿಸಿ, ಉತ್ತೇಜನಗೊಳಿಸಿದರು. ಭಗವಾನರನ್ನು ಕುರಿತು ಆ ಕಮ್ಮಾರನು, “ಭಂತೆ, ನನ್ನ ಮನೆಯಲ್ಲಿ ಭಿಕ್ಷು ಸಂಘದೊಡನೆ ನಾಳೆ ಊಟಕ್ಕೆ ದಯಮಾಡಿಸಬೇಕು” ಎಂದನು. ಭಗವಾನರು ಮೌನದ ಮೂಲಕ ತಮ್ಮ ಒಪ್ಪಿಗೆಯನ್ನಿತ್ತರು. ಆಮೇಲೆ ಚುಂದನು ಭಗವಾನರು ಒಪ್ಪಿದ್ದನ್ನು ತಿಳಿದು ಅವರಿಗೆ ಆಸನದಿಂದ ಎದ್ದು ನಮಸ್ಕರಿಸಿ ಪ್ರದಕ್ಷಿಣೆ ಮಾಡಿ ವಿದಾಯ ಹೇಳಿ ಹೊರಟು ಹೋದನು.
ಆ ರಾತ್ರಿಯು ಕಳೆದ ಮೇಲೆ ಚುಂದನು ತನ್ನ ಮನೆಯಲ್ಲಿ ಉತ್ತಮವಾದ ಖಾದ್ಯ ಪದಾರ್ಥಗಳನ್ನು ಭಕ್ಷ್ಯಗಳನ್ನು ಮಾಡಿಸಿದನು. ಮಾಡಿದ ವಿಶೇಷವಾದ ಅಡಿಗೆಗಳಲ್ಲಿ ಸೂಕರಮಕದ್ದವವೂ ಒಂದಾಗಿತ್ತು. ಸಕಾಲಕ್ಕೆ ಬಂದು ಭಗವಾನರಿಗೆ “ಕಾಲವಾಗಿದೆ ಭಂತೆ, ಊಟಕ್ಕೆ ಸಕಾಲವಾಗಿದೆ” ಎಂದು ಭಿನ್ನವಿಸಿಕೊಂಡನು. ಪೂರ್ವಾಹ್ನ ಸಮಯದಲ್ಲಿ ಚೀವರವನ್ನು ಧರಿಸಿಕೊಂಡು ಪಿಂಡಪಾತ್ರೆಯನ್ನು ತೆಗೆದುಕೊಂಡು ತಮ್ಮ ತಂಗುದಾಣವನ್ನು ಬಿಟ್ಟು ಭಿಕ್ಷು ಸಂಘದೊಂದಿಗೆ ಕಮ್ಮಾರನ ಮಗ ಚುಂದನ ಮನೆಗೆ ಹೋದರು. ಮನೆಯನ್ನು ಸೇರಿದ ಮೇಲೆ ತಮಗಾಗಿ ಏರ್ಪಡಿಸಿದ್ದ ಪ್ರತ್ಯೇಕವಾದ ಆಸನದ ಮೇಲೆ ಕುಳಿತರು. ಚುಂದನನ್ನು ಕರೆದು ಅವನಿಗೆ ಭಗವಾನರು ಇಂತೆಂದರು- “ಚುಂದ, ಸೂಕರಮದ್ದವದ ಅಡಿಗೆ ಏನಿದೆಯೋ ಅದನ್ನು ನನಗೇ ಬಡಿಸು. ಖಾದ್ಯ ಪದಾರ್ಥಗಳೂ ಭಕ್ಷ್ಯಗಳೂ ಏನಿವೆಯೋ ಅವನ್ನು ಭಿಕ್ಷುಗಳಿಗೆ ಬಡಿಸು.” “ಹಾಗೆಯೇ ಆಗಲಿ ಭಂತೆ” ಎಂದು ಹೇಳಿದನು. ಕಮ್ಮಾರನ ಮಗ ಚುಂದನು ಸೂಕರಮದ್ದವದ ಅಡಿಗೆಯನ್ನು ಭಗವಾನರಿಗೂ ಇತರ ಖಾದ್ಯ ಪದಾರ್ಥ ಮತ್ತು ಭೋಜ್ಯ ಪದಾರ್ಥಗಳನ್ನು ಭಿಕ್ಷು ಸಂಘಕ್ಕೂ ಬಡಿಸಿದನು. ಆನಂತರ ಭಗವಾನರು ಚುಂದನಿಗೆ “ಚುಂದ, ಸೂಕರಮದ್ದವದ ಅಡಿಗೆ ಎಷ್ಟು ಉಳಿಯುತ್ತದೆಯೋ ಅಷ್ಟನ್ನೂ ಹೂತುಬಿಡು. ಚುಂದ, ತಥಾಗತನ ಹೊರತು ಅದನ್ನು ಸರಿಯಾಗಿ ಅರಗಿಸಿಕೊಳ್ಳಬಲ್ಲ ದೇವತೆಗಳನ್ನಾಗಲೀ, ಮಾರರನ್ನಾಗಲೀ, ಬ್ರಹ್ಮರನ್ನಾಗಲೀ, ಸಮಣಬ್ರಾಹ್ಮಣರನ್ನಾಗಲೀ ನಾನು ಕಾಣೆ” ಎಂದರು. “ಹಾಗೆಯೇ ಆಗಲಿ ಭಂತೆ” ಎಂದು ಚುಂದನು ಭಗವಾನರಿಗೆ ಉತ್ತರಿಸಿ ಉಳಿದ ಸೂಕರಮದ್ದವವನ್ನು ಹೂತುಬಿಟ್ಟು ಭಗವಾನರ ಬಳಿಗೆ ಬಂದನು. ನಮಸ್ಕರಿಸಿ ಒಂದುಕಡೆ ಕುಳಿತುಕೊಂಡನು. ಹೀಗೆ ಕುಳಿತುಕೊಂಡ ಕಮ್ಮಾರಪುತ್ರ ಚುಂದನಿಗೆ ಧಮ್ಮವನ್ನು ವಿವರಿಸಿ ಅವನನ್ನು ಸ್ಫೂರ್ತಿಗೊಳಿಸಿ, ಸಂತೋಷಗೊಳಿಸಿ ಉತ್ತೇಜನಗೊಳಿಸಿದರು.
ಕಮ್ಮಾರಪುತ್ರನ ಮನೆಯಲ್ಲಿ ಊಟ ಮಾಡಿದ ಭಗವಾನರಿಗೆ ತೀವ್ರವಾದ ನೋವನ್ನುಂಟುಮಾಡುವ ರೋಗ ಬಂದಿತು. ಮರಣವನ್ನು ತರುವಂಥ ತಡೆಯಲಾರದಷ್ಟು ನೋವನ್ನುಂಟು ಮಾಡುವಂಥ ಅತಿಸಾರ ಪೀಡಿಸಿತು. ಆದರೂ ಭಗವಾನರು ಅದನ್ನು ಶಾಂತಚಿತ್ತದಿಂದ ಸಹಿಸಿಕೊಂಡರು. ಮನಸ್ಸಿನ ದೃಢತೆಯನ್ನು ಕಳೆದುಕೊಳ್ಳಲಿಲ್ಲ. ಆಗ ಆಯುಷ್ಮಂತನಾದ ಆನಂದನನ್ನು ಕರೆದು “ಆನಂದ, ಕುಸಿನಾರಕ್ಕೆ ಹೋಗೋಣ ಬಾ” ಎಂದರು. ಅವನು “ಹಾಗೆಯೇ ಆಗಲಿ ಭಂತೆ” ಎಂದು ಅವರಿಗೆ ಹೇಳಿದನು.
“ನಾನಿಂತು ಕೇಳಿರುವೆ, ಚುಂದ ಕಮ್ಮಾರನ ಆತಿಥ್ಯ
ತಂದಿತಯ್ಯೋ ಭಗವಂತನಿಗೆ ಮರಣವನೆ;
ಆ ಧೀರ ಸಹಿಸಿದನು ಸಮಚಿತ್ತದಲಿ
ಪರಿಪರಿಯೆ ಪೀಡಿಸುವ ಆ ಬಾಧೆಯನು ||
ಗುರುಶ್ರೇಷ್ಠ ಪಡೆದನಾ ಪ್ರಬಲ ವ್ಯಾಧಿಯನು
ಸೂಕರಮದ್ದವನುಂಡಂತೆ
ಪೀಡೆಯದು ಬಿಟ್ಟಂತೆ ಹೇಳಿದನು ಭಗವಂತ
ಕುಸಿನಾರ ಪಟ್ಟಣಕೆ ತೆರಳೋಣ ಬಾ.”
ಮಾರ್ಗದಲ್ಲಿ ನಡೆಯುತ್ತಿರುವಾಗ ಭಗವಾನರು ಒಂದುಕಡೆಗೆ ಹೋಗಿ ಮರದ ಬುಡದಲ್ಲಿ ನಿಂತರು. ಅಲ್ಲಿ ಆಯುಷ್ಮಂತನಾದ ಆನಂದನಿಗೆ “ಈ ಬಟ್ಟೆಯನ್ನು ನಾಲ್ಕು ಪದರಗಳಾಗುವಂತೆ ಮಡಿಸು. ಆಯಾಸವಾಗಿದೆ, ಆನಂದ, ಸ್ವಲ್ಪಹೊತ್ತು ಕುಳಿತುಕೊಂಡು ಆಯಾಸವನ್ನು ಪರಿಹರಿಸಿಕೊಳ್ಳುತ್ತೇನೆ” ಎಂದು ಹೇಳಿದರು. “ಹಾಗೆಯೇ ಆಗಲಿ, ಭಂತೆ” ಎಂದು ಆನಂದನು ಅವರಿಗೆ ಹೇಳಿ ಬಟ್ಟೆಯನ್ನು ನಾಲ್ಕು ಮಡಿಕೆಗಳಾಗುವಂತೆ ಮಡಿಸಿದನು. ಆ ಬಟ್ಟೆಯ ಮೇಲೆ ಕುಳಿತುಕೊಂಡರು. ಆಮೇಲೆ ಆನಂದನಿಗೆ “ಒಂದಿಷ್ಟು ನೀರನ್ನು ತಾ ಆನಂದ, ಬಾಯಾರಿಕೆಯಾಗಿದೆ, ನೀರನ್ನು ಕುಡಿಯುತ್ತೇನೆ” ಎಂದರು. ಹೀಗೆ ಹೇಳಿದ ಭಗವಾನರಿಗೆ ಆನಂದನು “ಈಗತಾನೆ ಐನೂರು ಬಂಡಿಗಳು ಹೋಗಿವೆ, ಅವುಗಳ ಚಕ್ರಗಳಿಂದ ನೀರು ಬಗ್ಗಡವಾಗಿ ಕೊಳೆಯಿಂದ ಕೂಡಿ ಬಚ್ಚಲಿನಂತೆ ಹರಿಯುತ್ತಿದೆ. ಭಂತೆ, ಕಕುಧಾ ನದಿಯು ಇಲ್ಲಿಗೆ ದೂರದಲ್ಲಿಲ್ಲ, ಅದರ ನೀರು ಪರಿಶುದ್ಧವಾಗಿದೆ, ಚೆನ್ನಾಗಿದೆ, ತಣ್ಣಗಿದೆ, ಬೆಳ್ಳಗಿದೆ. ಆ ನದಿಯು ರಮಣೀಯವಾಗಿದೆ, ಅಲ್ಲಿಗೆ ಸುಲಭವಾಗಿ ಹೋಗಬಹುದು. ಆ ನೀರನ್ನು ಭಗವಾನರು ಕುಡಿಯಬಹುದು. ಅದರಿಂದ ಕೈಕಾಲುಗಳನ್ನು ತೊಳೆದುಕೊಂಡು ತಂಪು ಮಾಡಿಕೊಳ್ಳಬಹುದು” ಎಂದನು.
ಭಗವಾನರು ಎರಡನೆಯಸಾರಿ ಆನಂದನಿಗೆ “ನನಗಿಷ್ಟು ನಿರನ್ನು ತಂದುಕೊಡು ಆನಂದ, ಕುಡಿಯುತ್ತೇನೆ, ಬಾಯಾರಿಕೆಯಾಗಿದೆ. ಆನಂದ, ಕುಡಿಯಬೇಕಾಗಿದೆ.” ಆನಂದನು ಎರಡನೆಯ ಸಾರಿಯೂ ಭಗವಾನರಿಗೆ “ಈಗತಾನೆ ಐನೂರು ಬಂಡಿಗಳು ಹೋಗಿವೆ, ಅವುಗಳ ಚಕ್ರಗಳಿಂದ ನೀರು ಬಗ್ಗಡವಾಗಿ ಕೊಳೆಯಿಂದ ಕೂಡಿ ಬಚ್ಚಲಿನಂತೆ ಹರಿಯುತ್ತಿದೆ. ಭಂತೆ, ಕಕುಧಾ ನದಿಯು ಇಲ್ಲಿಗೆ ದೂರದಲ್ಲಿಲ್ಲ, ಅದರ ನೀರು ಪರಿಶುದ್ಧವಾಗಿದೆ, ಚೆನ್ನಾಗಿದೆ, ತಣ್ಣಗಿದೆ, ಬೆಳ್ಳಗಿದೆ. ಆ ನದಿಯು ರಮಣೀಯವಾಗಿದೆ, ಅಲ್ಲಿಗೆ ಸುಲಭವಾಗಿ ಹೋಗಬಹುದು. ಆ ನೀರನ್ನು ಭಗವಾನರು ಕುಡಿಯಬಹುದು. ಅದರಿಂದ ಕೈಕಾಲುಗಳನ್ನು ತೊಳೆದುಕೊಂಡು ತಂಪು ಮಾಡಿಕೊಳ್ಳಬಹುದು” ಎಂದನು.
ಭಗವಾನರು ಮೂರನೆಯ ಸಾರಿ ಆನಂದನಿಗೆ “ನನಗಿಷ್ಟು ನೀರನ್ನು ತಂದುಕೊಡು ಆನಂದ, ಕುಡಿಯುತ್ತೇನೆ. ಬಾಯಾರಿಕೆಯಾಗಿದೆ ಆನಂದ, ಕುಡಿಯಬೇಕಾಗಿದೆ” ಎಂದರು. “ಹಾಗೆಯೇ ಆಗಲಿ ಭಂತೆ” ಎಂದು ಆನಂದನು ಭಗವಾನರಿಗೆ ಹೇಳಿ ಪಾತ್ರೆಯನ್ನು ತೆಗೆದುಕೊಂಡು ಆ ಹಳ್ಳದ ಹತ್ತಿರಕ್ಕೆ ಹೋದನು. ಚಕ್ರಗಳಿಂದ ಬಗ್ಗಡವಾಗಿ ಕೊಳೆಯಿಂದ ಕೂಡಿ ಬಚ್ಚಲಿನಂತೆ ಹರಿಯುತ್ತಿದ್ದ ಆ ನದಿಯ ನೀರು ಆಯುಷ್ಮಂತನಾದ ಆನಂದನು ಬಂದು ನೋಡಿದಾಗ ಸ್ವಚ್ಛವಾಗಿತ್ತು, ಶುದ್ಧವಾಗಿತ್ತು. ಆಗ ಆನಂದನು ಹೀಗೆಂದುಕೊಂಡನು: ‘ಆಶ್ಚರ್ಯ, ಅದ್ಭುತ, ತಥಾಗತನ ಶಕ್ತಿಯೂ ಅವನ ಮಹಾತ್ಮೆಯೂ ಅದ್ಭುತವಾದದ್ದು! ಚಕ್ರಗಳ ದೆಸೆಯಿಮದ ಬಗ್ಗಡವಾಗಿ ಕೊಳೆಯಿಂದ ಕೂಡಿ ಬಚ್ಚಲಿನಂತೆ ಹರಿಯುತ್ತಿದ್ದ ಈ ನದಿಯು ನಾನು ಇಲ್ಲಿಗೆ ಬಂದು ನೋಡುವಾಗ ಸ್ವಚ್ಛವಾಗಿದೆ, ಶುದ್ಧವಾಗಿದೆ’*. ಆನಂದನು ಪಾತ್ರೆಯಲ್ಲಿ ನೀರನ್ನು ತೆಗೆದುಕೊಂಡು ಭಗವಾನರ ಬಳಿಗೆ ಹೋದನು. ಆಮೇಲೆ ಭಗವಾನರನ್ನು ಕುರಿತು “ಆಶ್ಚರ್ಯ ಭಂತೆ, ಅದ್ಭುತ ಭಂತೆ, ತಥಾಗತನ ಶಕ್ತಿಯು ಮಹತ್ತಾದುದು. ಆತನ ಮಹಾತ್ಮೆಯು ಅದ್ಭುತವಾದದ್ದು. ಈಗತಾನೇ ಚಕ್ರಗಳು ಹರಿದು ಈ ನದಿಯ ನೀರು ಬಗ್ಗಡವಾಗಿತ್ತು, ಕೊಳೆಯಿಂದ ಕೂಡಿತ್ತು. ಆದರೆ ಈಗ ಬಂದು ನೋಡುವಾಗ ಅದು ಸ್ವಚ್ಛವಾಗಿದೆ, ಶುದ್ಧವಾಗಿದೆ. ಭಗವಾನರು ನೀರನ್ನು ಕುಡಿಯೋಣವಾಗಲಿ, ಸುಗತರು ಕುಡಿಯೋಣವಾಗಲಿ” ಎಂದನು. ಆಗ ಭಗವಾನರು ನೀರನ್ನು ಪಾನ ಮಾಡಿದರು.
ಪುಕ್ಕುಸಮಲ್ಲ ಪುತ್ರನ ಬಗ್ಗೆ
ಆಗ ಮಲ್ಲಪುತ್ರನು ಅಲಾರ ಕಾಲಾಮನ ಶಿಷ್ಯನೂ ಆದ ಪುಕ್ಕಸನು ಕುಸಿನಾರದಿಂದ ಪಾವಕ್ಕೆ ಪ್ರಯಾಣ ಮಾಡುತ್ತಿದ್ದನು. ಭಗವಾನರು ಒಂದು ಮರದ ಬುಡದಲ್ಲಿ ಕುಳಿತಿರುವುದನ್ನು ಆತನು ನೋಡಿದನು. ಪುಕ್ಕಸನು ಅವರ ಹತ್ತಿರಕ್ಕೆ ಬಂದು ನಮಸ್ಕರಿಸಿ ಒಂದುಕಡೆ ಕುಳಿತುಕೊಂಡನು. ಆಮೇಲೆ ಭಗವಾನರನ್ನು ಕುರಿತು ಇಂತೆಂದನು- “ಭಂತೆ, ಆಶ್ಚರ್ಯ! ಭಂತೆ ಅದ್ಭುತ! ಪಬ್ಬಜಿತರಾದವರು ವಿಹಾರದಲ್ಲಿ ಶಾಂತರಾಗಿ ಇರುವುದು ಆಶ್ಚರ್ಯ, ಅದ್ಭುತ! ಹಿಂದೊಂದು ಸಮಯದಲ್ಲಿ ಆಲಾರಕಲಾಮನು ಪ್ರಯಾಣ ಮಾಡುತ್ತಿದ್ದನು. ಆಗ ಹಗಲು ಮಾರ್ಗಕ್ಕೆ ಹತ್ತಿರದಲ್ಲಿದ್ದ ಒಂದು ಮರದ ಬುಡದಲ್ಲಿ ದಣಿವಾರಿಸಲು ಕುಳಿತುಕೊಂಡನು. ಭಂತೆ, ಆಲಾರಕಾಲಾಮನು ಕುಳಿತಿದ್ದ ಸಮಯದಲ್ಲಿ ಐನೂರು ಬಂಡಿಗಳು ಹತ್ತಿರದಲ್ಲಿಯೇ ಹೋದವು. ಆ ಐನೂರು ಬಂಡಿಗಳ ಹಿಂದೆ ಹಿಂದೆಯೇ ಬರುತ್ತಿದ್ವನೊಬ್ಬನು ಅಲಾರಕಾಲಾಮನ ಹತ್ತಿರಕ್ಕೆ ಬಂದನು. ಬಂದವನು ಆಲಾರಕಾಲಾಮನನ್ನು ಕುರಿತು “ಭಂತೆ, ಐನೂರು ಬಂಡಿಗಳು ಹೋದುದನ್ನು ತಾವು ನೋಡಿದಿರಾ?” ಎಂದು ಕೇಳಿದನು.
“ಇಲ್ಲ ಮಗೂ, ನಾನು ನೋಡಲಿಲ್ಲ.” “ಶಬ್ದವನ್ನೇನಾದರೂ ಕೇಳಿದಿರಾ ಭಂತೆ ?” “ಅದನ್ನೂ ಕೇಳಲಿಲ್ಲ ಮಗೂ.” “ಹೋಗಲಿ ಭಂತೆ, ತಾವು ಆಗ ನಿದ್ದೆಯಲ್ಲಿದ್ದಿರಾ ?” “ಇಲ್ಲ ಮಗೂ.” “ಅಂದರೆ, ನೀವು ಎಚ್ಚರದಿಂದಿದ್ದಿರಾ, ಭಂತೆ ?” “ಹೌದು.” “ತಾವು ಎಚ್ಚರದಿಂದಿದ್ದರೂ ಜಾಗೃತರಾಗಿದ್ದರೂ ಐನೂರು ಬಂಡಿಗಳು ಹೋದದ್ದನ್ನು ನೋಡಲಿಲ್ಲ, ಅವುಗಳ ಸದ್ದನ್ನು ಕೇಳಲಿಲ್ಲ. ಆದರೆ ಭಂತೆ, ತಮ್ಮ ಬಟ್ಟೆಯು ಧೂಳಿನಿಂದ ತುಂಬಿದೆಯಲ್ಲಾ?” “ಹೌದು.”
“ಆಗ ಭಂತೆ, ಆತನು ಹೀಗೆಂದುಕೊಂಡನು. ‘ಪಬ್ಬಜಿತರಾದವರು ಶಾಂತಿಯಿಂದಿರುವುದು ಆಶ್ಚರ್ಯ, ಅದ್ಭುತ! ಎಚ್ಚರದಿಂದಿದ್ದರೂ, ಜಾಗೃತೆಯಿಂದಿದ್ದರೂ ಐನೂರು ಬಂಡಿಗಳು ಹತ್ತಿರವೇ ಹೋದರೂ ಅವುಗಳು ಅವರಿಗೆ ಕಾಣುವುದಿಲ್ಲ, ಅವುಗಳ ಶಬ್ದವು ಅರಿಗೆ ಕೇಳುವುದಿಲ್ಲ! ಆಲಾರಕಾಲಾಮನಲ್ಲಿ ತನಗಿದ್ದ ವಿಶ್ವಾಸವನ್ನು ಹೀಗೆ ವ್ಯಕ್ತಪಡಿಸಿ ಆತ ಹೊರಟು ಹೋದನು.
“ನಿನಗೆ ಏನನ್ನಿಸುತ್ತದೆ, ಪುಕ್ಕಸ? ಐನೂರು ಬಂಡಿಗಳು ಹತ್ತಿರವೇ ಹೋದರೂ ಎಚ್ಚರದಿಂದಿದ್ದರೂ ಅವುಗಳನ್ನು ನೋಡದಿರುವುದೂ ಅವುಗಳ ಸದ್ದನ್ನು ಕೇಳದಿರುವುದೂ ಹೆಚ್ಚೋ ಅಥವಾ ದೇವತೆಯು ಧಾರಾಕಾರವಾಗಿ ಮಳೆಯನ್ನು ಸುರಿಸುತ್ತಿದ್ದರೂ ಸಿಡಿಲು ಎಡೆಬಿಡದೆ ಆರ್ಭಟಿಸುತ್ತಿದ್ದರೂ ಜಾಗೃತರಾಗಿದ್ದಾಗ ಅವುಗಳನ್ನು ನೋಡದಿರುವುದೂ ಅವುಗಳ ಶಬ್ದವನ್ನು ಕೇಳದಿರುವುದು ಹೆಚ್ಚೋ?”
“ಎಲ್ಲಿಯ ಹೋಲಿಕೆ ಭಂತೆ? ಐನೂರು ಬಂಡಿಗಳಿರಲಿ, ಏಳು ನೂರು ಎಂಟುನೂರು ಒಂಭೈನೂರು ಸಾವಿರ ಬಂಡಿಗಳು ಇಲ್ಲವೆ ಒಂದು ಲಕ್ಷ ಬಂಡಿಗಳು ಹತ್ತಿರವೇ ಹೋಗುತ್ತಿದ್ದಾಗಲೂ ಅವುಗಳನ್ನು ನೋಡದಿರುವುದಾಗಲೀ ಅವುಗಳ ಸದ್ದನ್ನು ಕೇಳದಿರುವುದಾಗಲೀ ಹೆಚ್ಚಲ್ಲ. ಎಚ್ಚರದಿಂದಿರುವಾಗ ಧಾರಾಕಾರವಾಗಿ ಮಳೆ ಬೀಳುತ್ತಿರುವಾಗ ಸಿಡಿಲು ಒಂದೇ ಸಮನೆ ಘರ್ಜಿಸುತ್ತಿರುವಾಗ ಅವುಗಳನ್ನು ನೋಡದಿರುವುದೂ, ಅವುಗಳ ಸದ್ದನ್ನು ಕೇಳದಿರುವುದೂ ಹೆಚ್ಚಿನದು. ಅಂಥವರನ್ನು ಕಾಣುವುದು ಕಷ್ಟ.”
“ಒಮ್ಮೆ ಪುಕ್ಕುಸ, ಆತುಮದ ಭೂಸಾಗರದಲ್ಲಿ ತಂಗಿದ್ದೆ. ಆಗ ಮಳೆ ಸುರಿಯುತ್ತಿತ್ತು, ಸಿಡಿಲು ಘರ್ಜಿಸುತ್ತಿತ್ತು. ಭೂಸಾಗರದ ಹತ್ತಿರದಲ್ಲಿಯೇ ಇಬ್ಬರು ಕೃಷಿಕರು ಸತ್ತರು, ನಾಲ್ಕು ಎತ್ತುಗಳೂ ಹತವಾದವು. ಆಗ ಪುಕ್ಕುಸ, ಆತಮದ ಮಹಾಜನರ ಗುಂಪು ಸತ್ತ ಆ ಇಬ್ಬರು ಸೋದರರ ಬಳಿ ಮತ್ತು ಎತ್ತುಗಳ ಬಳಿ ಬಂದಿತು. ಅದೇ ಸಮಯದಲ್ಲಿ ನಾನು ಭೂಸಾಗರದ ಬಾಯಿಲಲ್ಲಿಯೇ ಆ ಕಡೆ ಈ ಕಡೆ ನಡೆಯುತ್ತಾ ಧ್ಯಾನ ನಿರತನಾಗಿದ್ದೆ. ಆ ಮಹಾಜನರ ಗುಂಪಿನಲ್ಲಿದ್ದವನೊಬ್ಬನು ನನ್ನ ಹತ್ತಿರಕ್ಕೆ ಬಂದನು. ನಮಸ್ಕರಿಸಿ ಒಂದುಕಡೆ ನಿಂತುಕೊಂಡನು. ‘ಗೆಳೆಯ, ಮಹಾಜನದ ಗುಂಪು ಏತಕ್ಕಾಗಿ ಇಲ್ಲಿ ಸೇರಿದೆ?’ ಎಂದು ಆತನ್ನು ನಾನು ಕೇಳಿದೆ.
“ಭಂತೆ, ಈಗತಾನೇ ಮಳೆ ಧಾರಾಕಾರವಾಗಿ ಸುರಿಯಿತು. ಸಿಡಿಲು ಆರ್ಭಟಿಸಿತು. ಇಬ್ಬರು ಕೃಷಿಕ ಸೋದರರು ಸತ್ತರು, ನಾಲ್ಕು ಎತ್ತುಗು ಹತವಾದುವು. ಆದುದರಿಂದ ಜನರ ಗುಂಪು ಸೇರಿದೆ. ಎಲ್ಲಿದ್ದೀರಿ ಭಂತೆ ?”
“ಗೆಳೆಯ ಇಲ್ಲಿಯೇ ಇದ್ದೇನೆ.” “ಭಂತೆ, ನೀವು ಏನನ್ನೂ ನೋಡಲಿಲ್ಲವೇ ?” “ಇಲ್ಲ.” “ಯಾವ ಸದ್ದನ್ನೂ ಕೇಳಲಿಲ್ಲವೇ, ಭಂತೆ ?” “ಇಲ್ಲ.” “ತಾವು ಆಗ ನಿದ್ದೆ ಮಾಡುತ್ತಿದ್ದಿರಾ ?” “ಇಲ್ಲ.” “ತಾವು ಎಚ್ಚರದಿಂದಿದ್ದಿರಾ ?” “ಹೌದು.”
“ಭಂತೆ, ಹೌದು ಎಚ್ಚರದಿಂದಿದ್ದರೂ, ಜಾಗೃತರಾಗಿದ್ದರೂ ಮಳೆ ಸುರಿಯುತ್ತಿದ್ದುದನ್ನು ನೀವು ನೋಡಲಿಲ್ಲ, ಸಿಡಿಲು ಆರ್ಭಟಿಸುತ್ತಿದ್ದುದನ್ನು ಕೇಳಲಿಲ್ಲ ಅಲ್ಲವೇ ?”
“ನೀನು ಹೇಳುತ್ತಿರುವುದು ಸರಿ.”
“ಪುಕ್ಕುಸ, ಆಗ ಆತನು ಹೀಗೆಂದುಕೊಂಡನು- ‘ಎಚ್ಚರದಿಂದಿದ್ದರೂ, ಜಾಗೃತರಾಗಿದ್ದರೂ ಸುರಿಯುತ್ತಿರುವ ಮಳೆಯನ್ನಾಗಲೀ, ಆರ್ಭಟಿಸುತ್ತಿರುವ ಸಿಡಿಲನ್ನಾಗಲೀ ನೋಡದಿರುವುದೂ, ಕೇಳದಿರುವುದೂ ಆಶ್ಚರ್ಯ, ಅದ್ಭುತ! ಪಬ್ಬಜಿತರಾದವರು ವಿಹಾರದಲ್ಲಿ ಅಷ್ಟು ಶಾಂತಿಯಿಂದಿರುತ್ತಾರೆ.’ ಹೀಗೆ ತನ್ನ ವಿಶ್ವಾಸವನ್ನು ವ್ಯಕ್ತಪಡಿಸಿ ನನ್ನನ್ನು ನಮಸ್ಕರಿಸಿ ಆತನು ಬೀಳ್ಕೊಂಡನು.”
ಹೀಗೆ ಹೇಳಿದ ಭಗವಾನರನ್ನು ಕುರಿತು ಮಲ್ಲಪುತ್ರ ಪುಕ್ಕಸನು ಇಂತೆಂದನು- “ಭಂತೆ, ಆಲಾರಕಾಲಾಮನಲ್ಲಿ ನನಗಿದ್ದ ವಿಶ್ವಾಸವನ್ನು ಬಿರುಗಾಳಿಯಲ್ಲಿ ತೂರಿಬಿಡುತ್ತೇನೆ, ವೇಗವಾಗಿ ಹರಿಯುತ್ತಿರುವ ನದಿಯ ಪ್ರವಾಹದಲ್ಲಿ ಹಾಕಿಬಿಡುತ್ತೇನೆ. ತಾವು ಹೇಳಿದುದು ಎಷ್ಟು ಉತ್ಕೃಷ್ಟ ಭಂತೆ, ಎಷ್ಟು ಉತ್ಕೃಷ್ಟವಾಗಿದೆ. ತಲೆಕೆಳಗಾಗಿ ಬಿದ್ದಿರುವುದನ್ನು ನೆಟ್ಟಗೆ ನಿಲ್ಲಿಸುವವನಂತೆ, ಅಡಗಿರುವುದನ್ನು ತೆಗೆದು ತೋರಿಸುವವನಂತೆ, ಕುರುಡನಿಗೆ ದಾರಿ ತೋರಿಸುವವನಂತೆ, ಕತ್ತಲಲ್ಲಿರುವವರಿಗೆ ದಿಪ ಹಿಡಿಯುವವನಂತೆ ಅನೇಕ ರೀತಿಯಲ್ಲಿ ಧಮ್ಮಗಳನ್ನು ಪ್ರಕಾಶಪಡಿಡಿದ್ದೀರಿ. ಕಣ್ಣಿರುವವನು ರೂಪಗಳನ್ನು ನೋಡುವಂತೆ, ನಾನು ಧಮ್ಮಗಳನ್ನು ನೋಡಬಲ್ಲವನಾಗಿದ್ದೆನೆ. ಇಂದಿನಿಂದ ಭಗವಂತನಿಗೂ, ಧಮ್ಮಕ್ಕೂ ಭಿಕ್ಷು ಸಂಘಕ್ಕೂ ಶರಣು ಹೋಗುತ್ತೇನೆ. ಶರಣಾಗತನಾದ ನನ್ನನ್ನು ಇಂದಿನಿಂದ ನನ್ನ ಜೀವವಿರುವವರೆಗೂ ಉಪಾಸಕನನ್ನಾಗಿ ಸ್ವೀಕರಿಸಿ.”
ಆನಂತರ ಮಲ್ಲಪುತ್ರನಾದ ಪುಕ್ಕಸನು ಹತ್ತಿರವಿದ್ದ ಒಬ್ಬನಿಗೆ ಹೀಗೆ ಹೇಳಿದನು- “ಗೆಳೆಯ, (ಚಿನ್ನದ ದಾರದಿಂದ ಮಾಡಿದ) ಒಂದು ಜೊತೆ ಜರತಾರಿ ವಸ್ತ್ರಗಳನ್ನು ನನಗೆ ತಂದುಕೊಡು”. “ಹಾಗೆಯೇ ಆಗಲಿ ಭಂತೆ” ಎಂದು ಆ ಮನುಷ್ಯನು ಪುಕ್ಕಸನಿಗೆ ಹೇಳಿ ಚಿನ್ನದ ದಾರದಿಂದ ಮಾಡಿದ ಒಂದು ಜೊತೆ ವಸ್ತ್ರಗಳನ್ನು ತಂದುಕೊಟ್ಟನು. ಆಮೇಲೆ ಆ ಬಟ್ಟೆಗಳನ್ನು ಭಗವಾನರಿಗೆ ಸಮರ್ಪಿಸಿ- “ಭಂತೆ, ಈ ಬಟ್ಟೆಗಳನ್ನು ತಂದಿದ್ದೇನೆ, ದಯಮಾಡಿ ಸ್ವೀಕರಿಸಬೇಕು” ಎಂದು ಕೇಳಿಕೊಂಡನು.
“ಪುಕ್ಕಸ, ಒಂದನ್ನು *ನನಗೆ ಹೊದಿಸು, ಒಂದನ್ನು ಆನಂದನಿಗೆ ಹೊದಿಸು.”
ಪುಕ್ಕಸನು “ಹಾಗೆಯೇ ಆಗಲಿ ಭಂತೆ” ಎಂದು ಹೇಳಿ ಒಂದು ವಸ್ತ್ರವನ್ನು ಭಗವಾನರಿಗೂ ಮತ್ತೊಂದು ವಸ್ತ್ರವನ್ನು ಆನಂದನಿಗೂ ಹೊದಿಸಿದನು. ಭಗವಾನರು ಪುಕ್ಕಸನಿಗೆ ಧಮ್ಮವನ್ನು ವಿವರಿಸಿ ಅವನನ್ನು ಸ್ಫೂರ್ತಿಗೊಳಿಸಿ ಉತ್ತೇಜನಗೊಳಿಸಿ ಸಂತೋಷಪಡಿಸಿದರು.
ಭಗವಾನರ ಧಮ್ಮದ ವಿವರಣೆಯಿಂದ ಸ್ಫೂರ್ತಿಗೊಂಡ, ಉತ್ತೇಜನಗೊಂಡ, ಸಂತೋಷಗೊಂಡ ಪುಕ್ಕಸನು ತನ್ನ ಆಸನದಿಂದೆದ್ದು ಭಗವಾನರಿಗೆ ನಮಸ್ಕರಿಸಿ ಪ್ರದಕ್ಷಿಣೆ ಮಾಡಿ ಹೊರಟುಹೋದನು.
ಸ್ವಲ್ಪ ಹೊತ್ತಾದ ಮೇಲೆ ಮಲ್ಲಪುತ್ರನಾದ ಪುಕ್ಕಸನು ಕೊಟ್ಟ ಚಿನ್ನದ ದಾರದ ವಸ್ತ್ರವನ್ನು ಆಯುಷ್ಮಂತನಾದ ಆನಂದನು ಭಗವಾನರಿಗೆ ಹೊದಿಸಿದನು. ಭಗವಾನರು ಹೊದ್ದುಕೊಂಡ ಮೇಲೆ ಆ ಬಟ್ಟೆಯು ತನ್ನ ಕಾಂತಿಯನ್ನು ಕಳೆದುಕೊಂಡಂತೆ ತೋರಿತು. ಆಗ ಆನಂದನು “ಭಂತೆ, ಭಗವಾನರ ಮೈ ಎಷ್ಟು ಪರಿಶುದ್ಧ; ಎಷ್ಟು ಕಾಂತಿಯುತ; ಇದು ಎಷ್ಟು ಅದ್ಭುತ, ಭಂತೆ ಎಷ್ಟು ಆಶ್ಚರ್ಯ! ಚಿನ್ನದ ದಾರದಿಂದ ಮಾಡಿದ ಬಟ್ಟೆಗಳನ್ನು ಭಗವಾನರಿಗೆ ಹೊದಿಸಿದ ಮೇಲೆ ಅದು ತನ್ನ ಕಾಂತಿಯನ್ನೇ ಕಳೆದುಕೊಂಡಿದೆಯಲ್ಲಾ.”
“ಅದು ಹಾಗೆಯೇ ಆನಂದ, ಅದು ಹಾಗೆಯೇ. ಎರಡು ಸಂದರ್ಭಗಳಲ್ಲಿ ತಥಾಗತನ ಮೈಚರ್ಮವು ಕಾಂತಿಯುತವಾಗುತ್ತದೆ. ಆ ಎರಡು ಸಂದರ್ಭಗಳು ಯಾವುವು? ಯಾವ ರಾತ್ರಿಯಲ್ಲಿ ತಥಾಗತನು ಅನುಪಮವಾದ ಸಂಬೋಧಿಯನ್ನು ಪಡೆಯುತ್ತಾನೋ ಆ ಸಮಯದಲ್ಲಿ ಯಾವ ರಾತ್ರಿ ಯಾವುದೂ ಉಳಿಯದ ಪರಿನಿಬ್ಬಾಣವನ್ನು ಪಡೆಯತ್ತಾನೋ ಆ ರಾತ್ರಿಯಲ್ಲಿ ಈ ಎರಡು ಸಂದರ್ಭಗಳಲ್ಲಿ ತಥಾಗತನ ಶರೀರವು ಪರಿಶುದ್ಧವಾಗಿ ಕಾಂತಿಯಿಂದ ಹೊಳೆಯುತ್ತವೆ. ಆನಂದ, ಇಂದು ರಾತ್ರಿ ಪಶ್ಚಿಮಯಾಮದಲ್ಲಿ (ಮೂರನೆಯ ಯಾಮ) ಕುಸಿನಾರದ ಉಪವತ್ತನದಲ್ಲಿ ಮಲ್ಲರ ಶಾಲವನದಲ್ಲಿ ಎರಡು ಶಾಲವೃಕ್ಷಗಳ ನಡುವೆ ತಥಾಗತನು ಪರಿನಿಬ್ಬಾನವನ್ನು ಹೊಂದುತ್ತಾನೆ. ಆಯುಷ್ಮಂತ, ಕಕುಧಾ ನದಿಗೆ ಹೋಗೋಣ ಬಾ.”
“ಹಾಗೆಯೇ ಆಗಲಿ ಭಂತೆ” ಎಂದು ಆನಂದನು ಭಗವಾನರಿಗೆ ಭಿನ್ನವಿಸಿಕೊಂಡನು.
ಭಕ್ತ ಪುಕ್ಕಸ ತಂದ ಚಿನ್ನದುಡಿಗೆಯ ಜೋಡಿಯನು
ಶ್ರೇಷ್ಠ ತಾ ಹೊದೆದು ಶೋಭಿಸಿದ ಹೇಮವರ್ಣದಲಿ.
ಆನಂತರ ಭಗವಾನರು ಒಂದು ದೊಡ್ಡ ಭಿಕ್ಷು ಸಂಘದೊಂದಿಗೆ ಕಕುಧಾ ನದಿಗೆ ಬಂದರು. ಅದರಲ್ಲಿ ಸ್ನಾನ ಮಾಡಿ ಅದರ ನೀರನ್ನು ಪಾನ ಮಾಡಿ ಮತ್ತೊಂದು ಕಡೆಗೆ ಬಂದು ಅಲ್ಲಿಯ ಆಮ್ರವನಕ್ಕೆ ಹೋದರು. ಆಮೇಲೆ ಆಯುಷ್ಮಂತನಾದ ಚುಂದಕನಿಗೆ ಹೀಗೆ ಹೇಳಿದರು- “ಚುಂದಕ, ಈ ಬಟ್ಟೆಯನ್ನು ನಾಲ್ಕು ಮಡಿಕೆಗಳನ್ನಾಗಿ ಮಾಡಿ ಹಾಸು, ನನಗೆ ಆಯಾಸವಾಗಿದೆ, ಮಲಗುತ್ತೇನೆ.” “ಹಾಗೆಯೇ ಮಾಡುತ್ತೇನೆ ಭಂತೆ” ಎಂದು ಆ ಚುಂದಕನು ಭಗವಾನರು ಹೇಳಿದಂತೆ ನಾಲ್ಕು ಮಡಿಕೆಗಳನ್ನಾಗಿ ಮಡಿಸಿದನು. ಭಗವಾನರು ಬಲಮಗ್ಗುಲಿನಲ್ಲಿ ಒಂದು ಕಾಲಿನ ಮೇಲೆ ಮತ್ತೊಂದನ್ನು ಹಾಕಿಕೊಂಡು ಸಿಂಹವು ಮಲಗುವಂತೆ ಮಲಗಿದರು. ಸ್ಮೃತಿವಂತರಾಗಿ, ಶಾಂತಚಿತ್ತರಾಗಿ ಸಕಾಲದಲ್ಲಿ ಏಳಲು ಮನಸ್ಸು ಮಾಡಿ ಮಲಗಿಕೊಂಡರು. ಆಯುಷ್ಮಂತನಾದ ಚುಂದಕನು ಭಗವಾನರ ಮುಂದೆ ಕುಳಿತುಕೊಂಡನು.
ಕುದುಧಾ ನದಿಯ ಬಳಿ ಬುದ್ಧ ತಾ ಬಂದು ಕಂಡರಾ ತಿಳಿನೀರ ಹೊಳೆಯ
ಆಲಸಿಕೆಯನು ತೊರೆದ ಶ್ರೇಷ್ಠರಹ
ಲೋಕದೊಳಪ್ರತಿಮರಹ ತಥಾಗತರು ಸಾರಿದರು ಆ ತಿಳಿಹೊಳೆಯ ಬಳಿಗೆ
ಆ ಪಟಕ ಜಲದಲ್ಲಿ ಜಳಕವನೆ ಮಾಡಿ
ಕುಡಿದು ಶುದ್ಧೋದಕವ ಅರಹಂತ ಸಮ್ಯಕ್‍ಸಂಬುದ್ಧ
ಸೇರಿದರು ಭಿಕ್ಷುಗಗಣವನು ಬೇಗ ||
ತಾ ಕಂಡ ಧಮ್ಮವನು ಶಿಷ್ಯವೃಂದಕೆ ತಿಳಿಸಿ
ಮಹರ್ಷಿ ಭಗವಂತ ನಡದರಾಮ್ರವನಕೆ ||
ಚುಂದ ಭಿಕ್ಷುವು ಕರೆದು
ತಂದಿದ್ದ ವಸ್ತ್ರವನು ನಾಲ್ಕು ಮಡಿಸಲು ಹೇಳಿ
ದಣಿವನಾರಿಸಿಕೊಳಲು ಮಲಗಿದರು ಅಲ್ಲಿ ||
ತಥಾಗತ ಬಿರುದನು ಪಡೆದ ದಾರಿತೋರ್ವನ ಮುಂದೆ
ಚುಂದ ಭಿಕ್ಷುವು ಕುಳಿತ
ಭಗವಾನರು ಆಯುಷ್ಮಂತನಾದ ಆನಂದನನ್ನು ಕುರಿತು- “ಆನಂದ, ಕಮ್ಮಾರ ಪುತ್ರನಾದ ಚುಂದನನ್ನು ಯಾರಾದರೂ ಮೂದಲಿಸಬಹುದು- ‘ಗೆಳೆಯ ಚುಂದ, ನೀನು ನಷ್ಟವನನ್ನುಭವಿಸುತ್ತಿರುವೆ, ನೀನು ಕೆಟ್ಟುದನ್ನು ಮಾಡಿದೆ. ತಥಾಗತರು ನಿನ್ನ ಮನೆಯ ಊಟವನ್ನು ಮಾಡಿದ ಮೇಲೆ ಪರಿನಿಬ್ಬಾನವನ್ನು ಪಡೆದರು’ ಎಂದು ಹೇಳಬಹುದು. ಚುಂದನಿಗುಂಟಾಗಬಹುದಾದ ಇಂಥ ನಿಂದೆಯನ್ನು ತಪ್ಪಿಸಬೇಕು- ‘ಗೆಳೆಯ ಚುಂದ, ನೀನು ಲಾಭವನ್ನು ಹೊಂದಿದ್ದೀಯೆ, ಒಳ್ಳೆಯದನ್ನು ಮಾಡಿದ್ದೀಯೆ. ತಥಾಗತರು ನಿನ್ನ ಮನೆಯ ಊಟವನ್ನು ಮಾಡಿಯೇ ಪರಿನಿಬ್ಬಾನವನ್ನು ಪಡೆದರು.’ ಗೆಳೆಯ ಚುಂದ, ಭಗವಾನರ ಬಾಯಿಯಿಂದಲೇ ಈ ಮಾತುಗಳನ್ನು ಕೇಳಿದ್ದೇನೆ- ‘ಎರಡು ಭಿಕ್ಷೆಗಳು ಅತ್ಯುತ್ತಮ ಫಲವನ್ನು ಕೊಟ್ಟಿವೆ. ಒಂದೇರೀತಿಯ ವಿಪಾಕವನ್ನು ಹೊಂದಿವೆ. ಮತ್ತಾವ ಭಿಕ್ಷೆಯೂ ಅಂಥ ಮಹತ್ಫಲವನ್ನಾಗಲೀ, ಅಂಥ ಮಹಾ ಲಾಭವನ್ನಾಗಲೀ ತರುವುದಿಲ್ಲ. ಆ ಎರಡು ಯಾವುವು? ಯಾವ ಭಿಕ್ಷೆಯನ್ನುಂಡು ತಥಾಗತನು ಅನುಪಮವಾದ ಸಂಬೋಧಿಯನ್ನು ಪಡೆದನೋ ಅದೊಂದು; ಯಾವ ಭಿಕ್ಷೆಯನ್ನುಂಡು ತಥಾಗತನು ಯಾವ ಧಾತುವೂ ಉಳಿಯದ ರೀತಿಯಲ್ಲಿ ಪರಿನಿಬ್ಬಾನವನ್ನು ಪಡೆದನೋ ಅದೊಂದು. ಈ ಎರಡು ಭಿಕ್ಷೆಗಳು ಇನ್ನು ಮಿಕ್ಕೆಲ್ಲ ಭಿಕ್ಷೆಗಳಿಗಿಮತ ಮಹತ್ಫಲವನ್ನು ಕೊಡುತ್ತವೆ, ಮಹಾಭಾಗ್ಯವನ್ನು ತರುತ್ತವೆ. ಇವೆರಡು ಭಿಕ್ಷೆಗಳು ಒಂದೇ ವಿಪಾಕವನ್ನು ಹೊಂದುತ್ತವೆ. ಕಮ್ಮಾರ ಪುತ್ರನಾದ ಆಯುಷ್ಮಂತ ಚುಂದನು ಮಾಡಿದ ಕಮ್ಮವು ಅವನ ಆಯಸ್ಸನ್ನು ವರ್ಧಿಸುತ್ತದೆ. ಕಮ್ಮಾರ ಪುತ್ರನಾದ ಆಯುಷ್ಮಂತ ಚುಂದನು ಮಾಡಿದ ಕರ್ಮವು ವರ್ಣವನ್ನು ಉತ್ತಮಗೊಳಿಸುತ್ತದೆ. ಕಮ್ಮಾರ ಪುತ್ರನಾದ ಆಯುಷ್ಮಂತ ಚುಂದನು ಮಾಡಿದ ಕರ್ಮವು ಸುಖವನ್ನು ವರ್ಧಿಸುತ್ತದೆ. ಕಮ್ಮಾರ ಪುತ್ರನಾದ ಆಯುಷ್ಮಂತನು ಮಾಡಿದ ಕರ್ಮವು ಯಶಸ್ಸನ್ನು ವರ್ಧಿಸುತ್ತದೆ. ಕಮ್ಮಾರ ಪುತ್ರನಾದ ಆಯುಷ್ಮಂತ ಚುಂದನು ಮಾಡಿದ ಕರ್ಮವು ಸ್ವರ್ಗಕ್ಕೆ ಕೊಂಡೊಯ್ಯುತ್ತದೆ. ಕಮ್ಮಾರ ಪುತ್ರನಾದ ಆಯುಷ್ಮಂತ ಚುಂದನು ಮಾಡಿದ ಕರ್ಮವು ಅಧಿಪತ್ಯವನ್ನೇ ತರುತ್ತದೆ’. ಚುಂದನಿಗೆ ಬರಬಹುದಾದ ವಿಷಾದವನ್ನು ಹೀಗೆ ತಪ್ಪಿಸಬೇಕು ಆನಂದ.”
ಕೊಡುವವಗೆ ಬೆಳೆಯುವುದು ಪುಣ್ಯಭಂಡಾರ
ಸಂಯಮಿಗೆ ಅವೈರ ವರ್ಧಿಪುದೆ ದಿಟವು
ಕುಶಲಧರ್ಮಿಗೆ ಪಾಪವಿರುವುದೇ ಇಲ್ಲ
ರಾಗದ್ವೇಷ ಮೇಣ್ ಮೋಹಗಳ ಗೆದ್ದವಗೆ
ಮತ್ತಿಲ್ಲ ಅಶಾಂತಿ ಉದ್ರೇಕ
ಚತುರ್ಥ ಪಠಣ ಭಾಗ
ಜೋಡಿ ಶಾಲವೃಕ್ಷಗಳು
ಭಗವಾನರು ಆನಂದನನ್ನು ಕರೆದು ‘ಬಾ ಆನಂದ, ಹಿರಞ್ಞಾವತಿಯನ್ನು ಹಾದು ಕುಸಿನಾರದ ಉಪವತ್ತನದ ಬಳಿಯ ಮಲ್ಲರ ಶಾಲವನಕ್ಕೆ ಹೋಗೋಣ” ಎಂದು ಹೇಳಿದರು. “ಹಾಗೆಯೇ ಆಗಲಿ ಭಂತೆ” ಎಂದು ಆನಂದನು ಭಗವಾನರಿಗೆ ಹೇಳಿದನು. ಅದರಂತೆ ಭಗವಾನರು ಬಂದು ದೊಡ್ಡ ಭಿಕ್ಷು ಸಂಘದೊಂದಿಗೆ ಹಿರಞ್ಞಾವತಿಯ ಆಚೆಯ ತೀರದಲ್ಲಿದ್ದ ಕುಸಿನಾರದ ಉಪವತ್ತನದ ಬಳಿಯ ಮಲ್ಲರ ಶಾಲವನಕ್ಕೆ ಹೋದರು. ಆನಂದನಿಗೆ “ಶಾಲವೃಕ್ಷಗಳ ಜೋಡಿಯ ನಡುವೆ ಮಂಚವನ್ನು ಸಿದ್ಧಪಡಿಸು, ಉತ್ತರ ದಿಕ್ಕಿನಲ್ಲಿ ತಲೆ ಬರುವಂತೆ ಸಿದ್ಧಮಾಡು, ಆಯಾಸವಾಗಿದೆ, ಮಲಗುತ್ತೇನೆ” ಎಂದರು. ಆನಂದನು “ಹಾಗೆಯೇ ಆಗಲಿ ಭಂತೆ” ಎಂದು ಹೇಳಿ ಭಗವಾನರು ಹೇಳಿದಂತೆ ಶಾಲವೃಕ್ಷಗಳ ಜೋಡಿಯ ನಡುವೆ ಮಂಚವನ್ನು ಸಿದ್ಧಪಡಿಸಿದನು. ಭಗವಾನರು ಒಂದರ ಕಾಲನ್ನು ಮತ್ತೊಂದರ ಮೇಲೆ ಹಾಕಿ ಬಲಮಗ್ಗುಲಿನಲ್ಲಿ ಸಿಂಹವು ಮಲಗಿದಂತೆ ಮಲಗಿದರು. ಆ ಸಮಯದಲ್ಲಿ ಅವರು ಸ್ಮೃತಿವಂತರೂ, ಶಾಂತಚಿತ್ತರೂ ಆಗಿದ್ದರು.
ಅಕಾಲವಾಗಿದ್ದರೂ ಆ ಸಮಯದಲ್ಲಿ ಆ ಎರಡು ಶಾಲವೃಕ್ಷಗಳ ಹೂಗಳಿಂದ ತುಂಬಿಹೋಗಿದ್ದುವು. ಆ ಹೂಗಳು ತಥಾಗತರ ಶರೀರವನ್ನೆಲ್ಲಾ ಮುಚ್ಚಿಬಿಟ್ಟವು. ತಥಾಗತರನ್ನು ಪೂಜೆ ಮಾಡಲು ಅವರ ಮೇಲೆ ವೃಕ್ಷಗಳು ಪುಷ್ಪವನ್ನು ಸುರಿದುವು. ಅವು ಅವರ ಶರೀರದ ಮೇಲೆಲ್ಲಾ ಹರಡಿಕೊಂಡುವು. ಅಂತರಿಕ್ಷದಿಂದ ದಿವ್ಯವಾದ ಮಂದಾರ ಪುಷ್ಪಗಳು ಬಿದ್ದುವು. ಅವು ತಥಾಗತರ ಶರೀರದ ಮೇಲೆಲ್ಲಾ ಹರಡಿಕೊಂಡು ಅದನ್ನು ಮುಚ್ಚಿಬಿಟ್ಟುವು. ಈ ರೀತಿಯಲ್ಲಿ ತಥಾಗತರನ್ನು ಪೂಜಿಸಿದುವು. ಅಂತರಿಕ್ಷದಿಂದ ದಿವ್ಯವಾದ ಚಂದನ ಚೂರ್ಣವು ಸುರಿದು ತಥಾಗತರ ಶರೀರದ ಮೇಲೆಲ್ಲಾ ಹರಡಿಕೊಂಡು ಅವರನ್ನು ಪೂಜಿಸಿತು. ತಥಾಗತನ ಪೂಜೆಗೆ ತಕ್ಕಂತೆ ದಿವ್ಯವಾದ ಸಂಗೀತವು ಸಂಗೀತವಾದ್ಯಗಳೂ ಅಂತರಿಕ್ಷದಲ್ಲಿ ಮೊಳಗಿದುವು.
ಆಗ ಭಗವಾನರು ಆನಂದನಿಗೆ ಹೀಗೆ ಹೇಳಿದರು- “ಈ ಕಾಲದಲ್ಲಿ ಶಾಲವೃಕ್ಷ ಜೀವಿಯು ಹೂಗಳಿಂದ ತುಂಬಿಹೋಗಿದೆ. ಆ ಹೂಗಳು ತಥಾಗತನನ್ನು ಪೂಜಿಸಲು ಅವನ ಶರೀರದ ಮೇಲೆ ಹರಡಿಕೊಂಡು ಅದನ್ನು ಮುಚ್ಚಿಬಿಟ್ಟಿವೆ. ದಿವ್ಯವಾದ ಮಂದಾರ ಪುಷ್ಪಗಳು ಅಂತರಿಕ್ಷದಿಂದ ಸುರಿಯುತ್ತಿವೆ. ತಥಾಗತನನ್ನು ಪೂಜಿಸುವ ಸಲುವಾಗಿ ಆ ಪುಷ್ಪಗಳು ಅವನ ಶರೀರದ ಮೇಲೆ ಹರಡಿಕೊಂಡು ಅವನ್ನು ಮುಚ್ಚಿಬಿಟ್ಟಿವೆ. ದಿವ್ಯವಾದ ಚಂದನ ಚೂರ್ಣವು ಅಂತರಿಕ್ಷದಿಂದ ಬೀಳುತ್ತಿದೆ. ತಥಾಗತನನ್ನು ಪೂಜಿಸಿ ಆತನ ಶರೀರದ ಮೇಲೆಲ್ಲಾ ಹರಡಿಕೊಂಡು ಅದನ್ನು ಮುಚ್ಚಿಬಿಟ್ಟಿದೆ. ತಥಾಗತನ ಪೂಜೆಗೆ ತಕ್ಕಂತೆ ಅಂತರಿಕ್ಷದಲ್ಲಿ ದಿವ್ಯವಾದ ಸಂಗೀತವೂ ಸಂಗೀತವಾದ್ಯಗಳೂ ಅಂತರಿಕ್ಷದಲ್ಲಿ ಮೊಳಗುತ್ತಿವೆ. ತಥಾಗತನನ್ನು ಗೌರವಿಸುವುದೂ, ಮಾನ್ಯ ಮಾಡುವುದೂ ಪೂಜಿಸುವುದೂ ಅವನಿಗೆ ಭಕ್ತಿ ತೋರಿಸುವುದೂ ಹೀಗಲ್ಲ. ಆನಂದ, ಯಾವ ಭಿಕ್ಷು ಭಿಕ್ಷುಣಿಯರೂ ಉಪಾಸಕ ಉಪಾಸಿಕೆಯರೂ ಧಮ್ಮ ಅನುಧಮ್ಮದಂತೆ ನಡೆದು ಸನ್ಮಾರ್ಗದಲ್ಲಿ ನಡೆಯುತ್ತಾ (ಅಸ್) ಧರ್ಮಚಾರಿಗಳಾಗಿದ್ದಾರೋ ಅವರು ಮಾತ್ರ ತಥಾಗತನನ್ನು ಸತ್ಕರಿಸುತ್ತಾರೆ ಗೌರವಿಸುತ್ತಾರೆ. ಆತನಿಗೆ ಮಾನ್ಯ ಮಾಡುತ್ತಾರೆ, ಆತನನ್ನು ಪೂಜಿಸುತ್ತಾರೆ, ಆತನಿಗೆ ಭಕ್ತಿ ತೋರಿಸುತ್ತಾರೆ. ಆತನಿಗೆ ಇದೇ ಪರಮಪೂಜೆ. ಆದುದರಿಮದ, ಆನಂದ, ಧರ್ಮ ಮತ್ತು ಅನುಧರ್ಮಗಳಂತೆ ನಡೆಸು ಸನ್ಮಾರ್ಗದಲ್ಲಿ ನಡೆಯುತ್ತಾ (ಅನು) ಧರ್ಮಚಾರಿಯಾಗಿ ಬಾಳಿ, ಇದನ್ನು ಕಲಿಯತಕ್ಕದ್ದು ಆನಂದ.”
ಉಪವಾಣ ಥೇರರು
ಆ ಸಮಯಲ್ಲಿ ಆಯುಷ್ಮಂತನಾದ ಉಪವಾಣನು ಭಗವಾನರ ಮುಂದೆ ನಿಂತುಕೊಂಡು ಅವರಿಗೆ ಬೀಸಣಿಗೆಯಿಂದ ಬೀಸುತ್ತಿದ್ದನು. ಭಗವಾನರು ಉಪವಾಣನಿಗೆ ಬೇಸರದಿಂದ ಹೀಗೆ ಹೇಳಿದರು- “ಭಿಕ್ಷು, ನನ್ನ ಮುಂದೆ ನಿಲ್ಲಬೇಡ, ದೂರ ಸರಿ.” ಆಗ ಆಯುಷ್ಮಂತನಾದ ಆನಂದನಿಗೆ ಹೀಗನ್ನಿಸಿತು; ‘ಆಯುಷ್ಮಂತನಾದ ಉಪವಾಣನು ಬಹುಕಾಲದಿಂದ ಭಗವಾನರ ಆಪ್ತ ಶಿಷ್ಯನಾಗಿದ್ದಾನೆ. ಅವರ ಹತ್ತಿರದಲ್ಲೇ ಇದ್ದವನಾಗಿದ್ದಾನೆ. ಆದರೂ ಭಗವಾನರು ತಮ್ಮ ಅಂತ್ಯಕಾಲದಲ್ಲಿ ಉಪವಾಣನಿಗೆ ಭರ್ತ್ಯನೆ ಮಾಡಿ- ‘ಭಿಕ್ಷು, ದೂರ ಸರಿ, ನನ್ನ ಮುಂದೆ ನಿಲ್ಲಬೇಡ’ ಎಂದು ಹೇಳುತ್ತಿದ್ದಾರೆ. ಆಯುಷ್ಮಂತನಾದ ಉಪಾವಾಣನಿಗೆ ಹೀಗೆ ಹೇಳಲು ಕಾರಣವೇನಿರಬಹುದು? ಯಾವುದಕ್ಕೋಸ್ಕರ ಹೀಗೆ ಹೇಳುತ್ತಾರೆ? ಭಗವಾನರಿಗೆ “ಭಂತೆ, ಆಯುಷ್ಮಂತನಾದ ಉಪವಾಣನು ಬಹುಕಾಲದಿಂದ ತಮ್ಮ ಆಪ್ತ ಶಿಷ್ಯನಾಗಿದ್ದು, ತಮ್ಮ ಹತ್ತಿರವೇ ಇದ್ದು ತಮ್ಮ ಸೇವೆ ಮಾಡುತ್ತಿದ್ದಾನೆ. ಆದರೂ ತಮ್ಮ ಅಂತ್ಯಕಾಲದಲ್ಲಿ ಆಯುಷ್ಮಂತನಾದ ಉಪವಾಣನಿಗೆ ಭರ್ತ್ಯನೆ ಮಾಡಿ ‘ಭಿಕ್ಷು, ದೂರ ಸರಿ, ನನ್ನ ಮುಂದೆ ನಿಲ್ಲಬೇಡ’ ಎಂದು ಹೇಳಿದಿರಿ. ಉಪವಾಣನಿಗೆ ಭರ್ತ್ಯನೆ ಮಾಡಲು ಕಾರಣವೇನು? ಏತಕ್ಕೋಸ್ಕರ ಹೀಗೆ ಮಾಡಿದಿರಿ?” ಎಂದು ಆನಂದನು ಕೇಳಿದನು.
“ಆನಂದ, ತಥಾಗತನ ದರ್ಶನ ಮಾಡಲು ದಶ ಲೋಕಧಾತುಗಳಲ್ಲಿನ ದೇವತೆಗಳು ಅಧಿಕ ಸಂಖ್ಯೆಯಲ್ಲಿ ಒಟ್ಟಾಗಿ ಸೇರಿದ್ದಾರೆ. ಕುಸಿನಾರದ ಉಪವತ್ತನದಲ್ಲಿರುವ ಮಲ್ಲರ ಶಾಲವನದ ಸುತ್ತ ಹನ್ನೆರಡು ಯೋಜನೆಗಳಷ್ಟು ಪ್ರದೇಶದಲ್ಲಿ ಒಂದು ಕೂದಲಿನಷ್ಟೂ ಎಡೆಯಿಲ್ಲದಂತೆ ಮಹಾಶಕ್ತರಾದ ದೇವತೆಗಳು ತುಂಬಿಹೋಗಿದ್ದಾರೆ. ಆನಂದ, ಆ ದೇವತೆಗಳು ‘ತಥಾಗತನ ದರ್ಶನಕ್ಕಾಗಿ ದೂರದಿಂದ ನಾವು ಬಂದಿದ್ದೇವೆ, ಅರಹಂತರೂ ಸಮ್ಮಾಸಂಬುದ್ಧರೂ ಆದ ತಥಾಗತರು ಲೋಕದಲ್ಲಿ ಬಹು ಕಾಲಕ್ಕೊಮ್ಮೆ ಉದಯಿಸುತ್ತಾರೆ. ಈ ರಾತ್ರಿಯ ಪಶ್ಚಿಮ ಯಾಮದಲ್ಲಿ ತಥಾಗತನ ಪರಿನಿಬ್ಬಾನವು ಸಂಭವಿಸುತ್ತದೆ. ಮಹಾಶಕ್ತನಾದ ಈ ಭಿಕ್ಷುವು ಭಗವಾನರ ಮುಂದೆ ನಿಂತು ಅವರು ನಮಗೆ ಮರೆಯಾಗುವಂತೆ ಮಾಡಿದ್ದಾನೆ. ತಥಾಗತನ ಕೊನೆಯ ಕಾಲದಲ್ಲಿ ಅವರ ದರ್ಶನವು ನಮಗಾಗುವುದಿಲ್ಲ’ ಎಂದು ಆ ದೇವತೆಗಳು ಗೊಣಗುತ್ತಿದ್ದಾರೆ.”
“ಭಂತೆ, ಯಾವ ದೇವತೆಗಳನ್ನು ಕುರಿತು ಯೋಚಿಸುತ್ತಿದ್ದೀರಿ?”
“ಆನಂದ, ಆಕಾಶದಲ್ಲಿದ್ದರೂ ಪೃಥ್ವಿಯ ಜೀವಿಗಳಿಗಿರುವಂಥ ಮನಸ್ಸುಳ್ಳ ದೇವತೆಗಳಿದ್ದಾರೆ. ಅತಿ ಕ್ಷಿಪ್ರದಲ್ಲಿಯೇ ಭಗವಾನರು ಪರಿನಿಬ್ಬಾನವನ್ನು ಪಡೆಯುತ್ತಾರೆ. ಅತಿ ಕ್ಷಿಪ್ರದಲ್ಲಿಯೇ ಲೋಕದ ಕಣ್ಣು ಹೋಗಿಬಿಡುತ್ತದೆ ಎಂದುಕೊಂಡು ಅವರು ಕೂದಲನ್ನು ಕಿತ್ತುಕೊಂಡು ಅಳುತ್ತಾರೆ, ತೋಳುಗಳನ್ನು ಚಾಚಿಕೊಂಡು ಅಳುತ್ತಾರೆ, ಭೂಮಿಯ ಮೇಲೆ ಬಿದ್ದು ಒದ್ದಾಡುತ್ತಾರೆ.
“ಆನಂದ, ಈ ಪೃಥ್ವಿಯಲ್ಲೇ ಇದ್ದು, ಇಲ್ಲಿಯ ಇತರ ಜೀವಿಗಳಿಗಿರುವಂತಹ ಮನಸ್ಸನ್ನುಳ್ಳ ದೇವತೆಗಳಿದ್ದಾರೆ. ಅತಿ ಕ್ಷಿಪ್ರದಲ್ಲಿಯೇ ಭಗವಾನರು ಪರಿನಿಬ್ಬಾಣವನ್ನು ಹೊಂದುತ್ತಾರೆ. ಅತಿ ಕ್ಷಿಪ್ರದಲ್ಲಿಯೇ ಸುಗತರು ಪರಿನಿಬ್ಬಾನವನ್ನು ಪಡೆಯುತ್ತಾರೆ. ಅತಿ ಕ್ಷಿಪ್ರದಲ್ಲಿಯೇ ಲೋಕದ ಕಣ್ಣು ಹೋಗಿಬಿಡುತ್ತದೆ’ ಎಂದುಕೊಂಡು ಅವರು ಕೂದಲನ್ನು ಕಿತ್ತುಕೊಂಡು ಅಳುತ್ತಾರೆ, ತೋಳುಗಳನ್ನು ಚಾಚಿಕೊಂಡು ಅಳುತ್ತಾರೆ, ನೆಲದಮೇಲೆ ಬಿದ್ದು ಒದ್ದಾಡುತ್ತಾರೆ.
“ಆದರೆ ರಾಗವನ್ನು ಗೆದ್ದು, ದೇವತೆಗಳು ಸ್ಮೃತಿವಂತರಾಗಿ ಸಂಖಾರಗಳು ಅನಿತ್ಯವಾದುವು ಎಂಬುದನ್ನು ಅರಿತು ಶಾಂತಚಿತ್ತದಿಂದಿರುತ್ತಾರೆ.”
ನಾಲ್ಕು ಶ್ರದ್ಧಾ ಸ್ಥಾನಗಳು
“ಭಂತೆ, ಹಿಂದೊಮ್ಮೆ ಮಳೆಗಾಲ ಕಳೆದಮೇಲೆ ತಥಾಗತನ ದರ್ಶನಾರ್ಥವಾಗಿ ಭಿಕ್ಷುಗಳು ಬೇರೆ ಬೇರೆ ಕಡೆಗಳಿಂದ ಬರುತ್ತಿದ್ದರು. ಒಳ್ಳೆಯ ಮನಸ್ಸಿನವರಾದ ಅವರನ್ನು ಆದರದಿಂದ ಸ್ವಾಗತಿಸುವ ಅವಕಾಶವನ್ನು ಪಡೆಯುತ್ತಿದ್ದೆವು. ಭಗವಾನರು ನಮ್ಮನ್ನು ತೊರೆದ ಮೇಲೆ ಒಳ್ಳೆಯ ಮನಸ್ಸಿನವರಾದ ಆ ಭಿಕ್ಷುಗಳನ್ನು ಆದರದಿಂದ ಸ್ವಾಗತಿಸುವ ಅವಕಾಶವನ್ನು ನಾವು ಪಡೆಯುವುದಿಲ್ಲ.”
“ಆನಂದ, ಶ್ರದ್ಧಾವಂತರಾದ ಕುಲಪುತ್ರರು ಭಕ್ತಿಯಿಂದ ದರ್ಶನ ಮಾಡಬೇಕಾದ ನಾಲ್ಕು ಸ್ಥಳಗಳಿವೆ. ಆ ನಾಲ್ಕು ಯಾವುವು? ತಥಾಗತನು ಹುಟ್ಟಿದ ಸ್ಥಾನವು ಶ್ರದ್ಧಾವಂತರಾದ ಕುಲಪುತ್ರರು ಭಕ್ತಿಯಿಂದ ದರ್ಶಿಸಬೇಕಾದ ಒಂದನೆಯ ಸ್ಥಳ. ತಥಾಗತನು ಅನುಪಮವಾದ ಸಂಬೋಧಿಯನ್ನು ಪಡೆದು ತಾಣವು ಶ್ರದ್ಧಾವಂತರಾದ ಕುಲಪುತ್ರರು ಭಕ್ತಿಯಿಂದ ದರ್ಶಿಸಬೇಕಾದ (ಎರಡನೆಯ) ಸ್ಥಳ. ತಥಾಗತನು ಧರ್ಮಚಕ್ರವನ್ನು ಪ್ರವರ್ತಿಸಿದ ಸ್ಥಳವು ಶ್ರದ್ಧಾವಂತರಾದ ಕುಲಪುತ್ರರು ಭಕ್ತಿಯಿಂದ ದರ್ಶಿಸಬೇಕಾದ (ಮೂರನೆಯ) ಸ್ಥಳ. ತಥಾಗತನು ಯಾವುದೂ ಉಳಿಯದಂತೆ ನಿಬ್ಬಾನವನ್ನು ಪಡೆದ ಈ ಸ್ಥಳವು ಆನಂದ, ಶ್ರದ್ಧಾವಂತರಾದ ಕುಲಪುತ್ರರು ದರ್ಶಿಸಬೇಕಾದ (ನಾಲ್ಕನೆಯ ಸ್ಥಳ).
“ಆನಂದ, ಭಿಕ್ಷು ಭಿಕ್ಷುಣಿಯರೂ ಉಪಾಸಕ, ಉಪಾಸಿಕೆಯರೂ ಈ ನಾಲ್ಕು ಸ್ಥಳಗಳಿಗೆ- ಇದು ತಥಾಗತನು ಹುಟ್ಟಿದ ಸ್ಥಳ, ಇದು ತಥಾಗತನು ಸಂಬೋಧಿಯನ್ನು ಸಾಧಿಸಿದ ಸ್ಥಳ, ಇದು ತಥಾಗತನು ಅನುಪಮವಾದ ಧರ್ಮಚಕ್ರವನ್ನು ಪ್ರವರ್ತಿಸಿದ ಸ್ಥಳ, ಇದು ತಥಾಗತನು ಯಾವುದೂ ಉಳಿಯದಂಥ ನಿಬ್ಬಾನವನ್ನು ಪಡೆದ ಸ್ಥಳ ಎಂದುಕೊಂಡು ಬರುತ್ತಾರೆ. ಯಾರು ಈ ಕ್ಷೇತ್ರಗಳಿಗೆ ಯಾತ್ರೆ ಹೋದಾಗ ಪ್ರಸನ್ನಚಿತ್ತದಿಂದ ಕಾಲವಾಗುತ್ತಾರೋ ಅವರೆಲ್ಲರೂ ಕಾಯದಿಂದ ಬೇರೆಯಾಗಿ ಮರಣವನ್ನು ಪಡೆದ ಮೇಲೆ ಸ್ವರ್ಗ ಲೋಕದಲ್ಲಿ ಹುಟ್ಟುತ್ತಾರೆ.”
......................................
“ಭಂತೆ, ಮಾತೃವರ್ಗದ ಸಂಗಡ ಹೇಗೆ ನಡೆದುಕೊಳ್ಳೋಣ?” “ನೋಡಬೇಡಿ ಆನಂದ.” “ನೋಡಿದಾಗ ನಮ್ಮ ಸ್ಮೃತಿಯನ್ನು ಹೇಗಿಟ್ಟುಕೊಳ್ಳೋಣ?” “ಮಾತನಾಡಬೇಡಿ ಆನಂದ.” “ಭಂತೆ. ಮಾತನಾಡಿದಾಗ ನಮ್ಮ ಸ್ಮೃತಿಯನ್ನು ಹೇಗಿಟ್ಟುಕೊಳ್ಳೋಣ.” “ನಿಮ್ಮ ಸ್ಮೃತಿಯನ್ನು ಕಾಪಾಡಿಕೊಳ್ಳಿ.”
“ಭಂತೆ, ತಥಾಗತನ ಶರೀರವನ್ನು ಹೇಗೆ ನೋಡಿಕೊಳ್ಳೋಣ?”
“ತಥಾಗತರ ಶರೀರವನ್ನು ಪೂಜಿಸುವ ಸಲುವಾಗಿ ನೀವು ಸಾಧನೆಯಲ್ಲಿ ಹಿಂದೆ ಬೀಳಬೇಡಿ. ಸಾರವಾಗಿರುವವುಳನ್ನು ಸಾಧಿಸಿದುವುದರಲ್ಲಿ ನಿರತರಾಗಿ ಎಚ್ಚರದಿಮದ ಸಾರವಾಗಿರುವವುಗಳನ್ನು ಕುರಿತು ಚಿಂತಿಸಿ, ಮಂಥಿಸಿ ಆನಂದ, ತಥಾಗತನಲ್ಲಿ ಭಕ್ತಿಯಿಂದಿರುವ ಕ್ಷತ್ರಿಯ ಪಂಡಿತರೂ ಬ್ರಾಹ್ಮಣ ಪಂಡಿತರೂ ಗೃಹಸ್ಥ ಪಂಡಿತರೂ ಇದ್ದಾರೆ. ಅವರು ತಥಾಗತನ ಶರೀರ ಪೂಜೆಯನ್ನು ಮಾಡುತ್ತಾರೆ.”
“ಭಂತೆ, ತಥಾಗತನ ಶರೀರವನ್ನು ಹೇಗೆ ಪೂಜಿಸಬೇಕು?” “ಚಕ್ರವರ್ತಿಯ ಶರೀರವನ್ನು ಹೇಗೆ ಗೌರವಿಸುತ್ತಾರ ಹಾಗೆಯೇ ತಥಾಗತನ ಶರೀರವನ್ನೂ ಗೌರವಿಸಬೇಕು.”
“ರಾಜರ ಚಕ್ರವರ್ತಿಯಾದವನ ಶರೀರವನ್ನು ಹೇಗೆ ಗೌರವಿಸುತ್ತಾರೆ, ಭಂತೆ ?”
“ಅಂಥ ಚಕ್ರವರ್ತಿಯ ಶರೀರವನ್ನು ಹೊಸ ಬಟ್ಟೆಯಿಂದ ಮುಚ್ಚುತ್ತಾರೆ. ಅಂಥ ವಸ್ತ್ರದಿಂದ ಮುಚ್ಚಿದ ಮೇಲೆ ಹಿಂಜಿದ ಹತ್ತಿ (ವಿಹಿತಕಪ್ಪಸ) ದಿಂದ ಮುಚ್ಚುತ್ತಾರೆ. ಆಮೇಲೆ ಮತ್ತೊಂದು ಹೊಸ ಬಟ್ಟೆಯನ್ನು ಹೊದಿಸುತ್ತಾರೆ. ತಥಾಗತನ ಶರೀರವನ್ನು ಈ ಪ್ರಕಾರವಾಗಿ ಒಂದೊಂದಾದ ಮೇಲೆ ಒಂದೊಂದರಂತೆ ಐನೂರು ಸಾರಿ ಮುಚ್ಚುತ್ತಾರೆ. ಆಮೇಲೆ ಶರೀರವನ್ನು ಎಳ್ಳೆಣ್ಣೆಯ ಚಿನ್ನದ ಕೊಪ್ಪರಿಗೆಯಲ್ಲಿಡುತ್ತಾರೆ. ಅದನ್ನು ಅಂಥದೇ ಮತ್ತೊಂದು ಕೊಪ್ಪರಿಗೆಯಲ್ಲಿಡುತ್ತಾರೆ. ಆಮೇಲೆ ಶರೀರವನ್ನು ಪೂರ್ಣವಾಗಿ ಗಂಧದ ಮರದಿಂದಲೇ ಆದ ಚಿತೆಯ ಮೇಲಿಟ್ಟು ದಹನ ಮಾಡುತ್ತಾರೆ. ನಾಲ್ಕು ಮಾರ್ಗಗಳು ಸಂಧಿಸುವ ಕಡೆ ಚಕ್ರವರ್ತಿಯ ನೆನಪಿಗಾಗಿ ಸ್ತೂಪವನ್ನು ಕಟ್ಟಿಸುತ್ತಾರೆ. ಆನಂದ, ರಾಜರ ರಾಜನಾದ ಚಕ್ರವರ್ತಿಯ ಶರೀರವನ್ನು ಈ ರೀತಿಯಲ್ಲಿ ಸಂಸ್ಕಾರ ಮಾಡುತ್ತಾರೆ. ಇದೇ ರೀತಿಯಲ್ಲಿಯೇ ತಥಾಗತನ ಶರೀರವನ್ನೂ ಮಾಡಬೇಕು. ನಾಲ್ಕು ಮಾರ್ಗಗಳು ಸಂಧಿಸುವ ಕಡೆಯಲ್ಲಿ ಸ್ತೂಪವನ್ನು ನಿರ್ಮಿಸಬೇಕು. ಅಲ್ಲಿ ಅದನ್ನು ಯಾರು ಹೂವು ಗಂಧ ಚೂರ್ಣಗಳಿಂದ ಪೂಜಿಸುತ್ತಾರೋ, ಗೌರವಿಸುತ್ತಾರೋ ಯಾರ ಚಿತ್ತವು ಅಲ್ಲಿ ಪ್ರಸನ್ನತೆಯಿಂದ ಕೂಡಿರುತ್ತದೋ ಅವರು ಬಹುಕಾಲ ಸುಖದಿಂದ, ಕ್ಷೇಮದಿಂದ ಇರುತ್ತಾರೆ.
ಸ್ತೂಪಾರ್ಹ ವ್ಯಕ್ತಿಗಳು
“ಆನಂದ, ಸ್ತೂಪಗಳಿಗೆ ಅರ್ಹರಾದ ನಾಲ್ಕುಬಗೆಯ ಜನರಿದ್ದಾರೆ. ಆ ನಾಲ್ಕುಬಗೆಯ ಜನರು ಯಾರು? ಅರಹಂತನೂ ಸಮ್ಮಾಸಂಬುದ್ಧನೂ ಆದ ತಥಾಗತನು ಸ್ತೂಪಕ್ಕೆ ಅರ್ಹವಾಗಿದ್ದಾನೆ. ಪಚ್ಛೇಕ ಸಂಬುದ್ಧರೂ ತಥಾಗತನ ಶಿಷ್ಯರೂ ಚಕ್ರವರ್ತಿಯೂ ಸ್ತೂಪಕ್ಕೆ ಅರ್ಹರಾಗಿದ್ದಾರೆ.
“ಯಾವ ಕಾರಣದಿಂದ ಅರಹಂತ ಸಮ್ಮಾಸಂಬುದ್ಧ ತಥಾಗತನು ಸ್ತೂಪಕ್ಕೆ ಅರ್ಹನಾಗಿದ್ದಾನೆ? ಇಂಥವನ ಸ್ತೂಪದಿಂದ ಬಹುಜನರ ಚಿತ್ತವು ಪ್ರಸನ್ನವಾಗುತ್ತದೆ. ಇಂಥ ಚಿತ್ತವನ್ನು ಪಡೆದವರು ಕಾಯದಿಂದ ಬೇರೆಯಾಗಿ ಮರಣವನ್ನು ಹೊಂದಿದಾಗ ಸ್ವರ್ಗಲೋಕದಲ್ಲಿ ಹುಟ್ಟುತ್ತಾರೆ. ಈ ಕಾರಣದಿಂದ, ಆನಂದ, ಅರಹಂತನಾದ ತಥಾಗತನು ಸ್ಥೂಪಕ್ಕೆ ಅರ್ಹನಾಗಿದ್ದಾನೆ.
“ಯಾವ ಕಾರಣ ಪಚ್ಚೇಕ ಸಂಬುದ್ಧನು ಸ್ತೂಪಕ್ಕೆ ಅರ್ಹನಾಗಿದ್ದಾನೆ? ಭಗವಂತನಾದ ಪಚ್ಚೇಕ ಬುದ್ಧನ ಸ್ತೂಪವನ್ನು ನೋಡಿದಾಗ ಬಹುಜನರ ಚಿತ್ತವು ಪ್ರಸನ್ನತೆಯನ್ನು ಪಡೆಯುತ್ತದೆ. ಇಂಥ ಚಿತ್ತವನ್ನು ಪಡೆದವರು ಕಾಯದಿಂದ ಬೇರೆಯಾಗಿ ಮರಣ ಹೊಂದಿದ ಮೇಲೆ ಸ್ವರ್ಗಲೋಕದಲ್ಲಿ ಹುಟ್ಟುತ್ತಾರೆ. ಈ ಕಾರಣದಿಂದ ಆನಂದ, ಪಚ್ಚೇಕ ಸಂಬುದ್ಧನು ಸ್ತೂಪಕ್ಕೆ ಅರ್ಹನಾಗಿದ್ದಾನೆ.
“ಏತಕ್ಕಾಗಿ ಆನಂದ, ತಥಾಗತನ ಶಿಷ್ಯನು ಸ್ತೂಪಕ್ಕೆ ಅರ್ಹನಾಗಿದ್ದಾನೆ?” ಭಗವಾನರ ಶಿಷ್ಯನ ಸ್ತೂಪವನ್ನು ನೋಡಿದಾಗ ಬಹಳ ಜನರ ಚಿತ್ತವು ಪ್ರಸನ್ನತೆಯನ್ನು ಪಡೆಯುತ್ತದೆ. ಇಂಥ ಚಿತ್ತವನ್ನು ಪಡೆದವರು ಕಾಯದಿಂದ ಬೇರೆಯಾಗಿ ಮರಣವನ್ನು ಹೊಂದಿದಾಗ ಸ್ವರ್ಗಲೋಕದಲ್ಲಿ ಹುಟ್ಟುತ್ತಾರೆ. ಈ ಕಾರಣದಿಂದ ತಥಾಗತನ ಶಿಷ್ಯನು ಸ್ತೂಪಕ್ಕೆ ಅರ್ಹನಾಗಿದ್ದಾನೆ.
“ಯಾವ ಕಾರಣದಿಂದ ಚಕ್ರವರ್ತಿಯ ಸ್ತೂಪಕ್ಕೆ ಅರ್ಹನಾಗಿದ್ದಾನೆ? ಧಾರ್ಮಿಕನಾದ ಆ ಧರ್ಮರಾಜನ ಸ್ತೂಪವು ಬಹುಜನರ ಚಿತ್ತವು ಪ್ರಸನ್ನತೆಯನ್ನು ಪಡೆಯುತ್ತದೆ. ಅಂಥ ಚಿತ್ತವನ್ನು ಹೊಂದಿದವರು ಕಾಯವು ಬೇರೆಯಾಗಿ ಮರಣ ಹೊಂದಿದ ಮೇಲೆ ಸ್ವರ್ಗ ಲೋಕದಲ್ಲಿ ಹುಟ್ಟುತ್ತಾರೆ. ಈ ಕಾರಣದಿಂದ ಚಕ್ರವರ್ತಿಯು ಸ್ತೂಪಕ್ಕೆ ಅರ್ಹನಾಗುತ್ತಾನೆ. ಹೀಗೆ ಸ್ತೂಪಕ್ಕೆ ನಾಲ್ಕು ಬಗೆಯ ಜನರು ಅರ್ಹರಾಗಿದ್ದಾರೆ.”
ಆನಂದನಿಗೆ ಆಶ್ಚರ್ಯವಾದುದು
ಆಮೇಲೆ ಆಯುಷ್ಮಂತನಾದ ಆನಂದನು ವಿಹಾರವನ್ನು* ಪ್ರವೇಶಿಸಿ ಬಾಗಿಲನ್ನು ಒರಗಿಕೊಂಡು ಅಳುತ್ತಾ ನಿಂತನು- “ನಾನು ಕಲಿಯಬೇಕಾದ ಸಮಯದಲ್ಲಿ ನನ್ನ ಮೇಲೆ ಅನುಕಂಪವನ್ನಿಟ್ಟಿದ್ದವನು ಪರಿನಿಬ್ಬಾನವನ್ನು ಪಡೆಯುತ್ತಾನೆ.” ಆಗ ಭಗವಾನರು ಭಿಕ್ಷುಗಳನ್ನು ಕರೆದು- “ಭಿಕ್ಷುಗಳೇ, ಆನಂದನು ಎಲ್ಲಿದ್ದಾನೆ?” ಎಂದು ಕೇಳಿದರು.
“ಭಂತೆ, ಆಯುಷ್ಮಂತನಾದ ಆನಂದನು ವಿಹಾರವನ್ನು ಪ್ರವೇಶಿಸಿ ಬಾಗಿಲನ್ನು ಒರಗಿಕೊಂಡು ‘ನಾನಿನ್ನೂ ಕಲಿಯುತ್ತಿರುವಾಗಲೇ ನನ್ನ ಮೇಲೆ ಅನುಕಂಪವಿರುವ ಪರಮಗುರುವು ಪರಿನಿಬ್ಬಾನವನ್ನು ಹೊಂದುತ್ತಾನೆ’ ಎಂದುಕೊಂಡು ಅಳುತ್ತಾ ನಿಂತಿದ್ದಾನೆ” ಎಂದು ಹೇಳಿದರು. ಆಗ ಭಗವಾನರು ಒಬ್ಬ ಭಿಕ್ಷುವನ್ನು ಕರೆದು- “ಭಿಕ್ಷು, ಆನಂದನನ್ನು ಕುರಿತು ‘ಗೆಳೆಯ, ಗುರು ನಿನ್ನನ್ನು ಕರೆಯುತ್ತಿದ್ದಾರೆ’ ಎಂದು ನಾನು ಹೇಳಿದ್ದೇನೆಂದು ತಿಳಿಸು” ಎಂದರು. “ಹಾಗೆಯೇ ಆಗಲಿ ಭಂತೆ” ಎಂದು ಆ ಭಿಕ್ಷುವು ಭಗವಾನರಿಗೆ ತಿಳಿಸಿ ಆನಂದನ ಬಳಿಗೆ ಬಂದನು. “ಗೆಳೆಯ, ಗುರು ನಿನ್ನನ್ನು ಕರೆಯುತ್ತಿದ್ದಾರೆ” ಎಂದು ಆನಂದನಿಗೆ ಹೇಳಿದನು. “ಆಗಲಿ ಗೆಳೆಯ” ಎಂದು ಆನಂದನು ಆ ಭಿಕ್ಷುವಿಗೆ ಹೇಳಿ ಭಗವಾನರ ಬಳಿಗೆ ಬಂದನು. ಭಗವಾನರಿಗೆ ಅಭಿವಂದಿಸಿ ಒಂದುಕಡೆ ನಿಂತುಕೊಂಡನು. ಭಗವಾನರು ಆನಂದನಿಗೆ “ಸಾಕು ಆನಂದ, ಶೋಕಿಸಬೇಡ, ಸಂಕಟಪಡಬೇಡ. ಆನಂದ, ನಮಗೆ ಪ್ರಿಯವಾಗಿರುವ ಎಲ್ಲವುಗಳಿಂದ ನಾವು ಬೇರೆಯಾಗಲೇ ಬೇಕು ಎಂದು ಹೇಳಿದ್ದೆನಲ್ಲವೇ? ಯಾವುದು ಹುಟ್ಟಿದೆಯೋ ವ್ಯವಸ್ಥೆಗೆ ಒಳಪಟ್ಟಿದೆಯೋ ಅದು ನಾಶವಾಗಲೇ ಬೇಕು. ನಾಶವಾಗುವುದು ಜೀವಿಗಳ ಧರ್ಮ. ತಥಾಗತನ ಶರೀರವು ನಶಿಸಲೇ ಬೇಕು. ನಾಶವಾಗುವುದು ಜೀವಿಗಳ ಧರ್ಮ. ತಥಾಗತರ ಶರೀರವು ನಶಿಸಲೇ ಬೇಕು. ನಶಿಸದಿರುವಂಥ ಸ್ಥಿತಿ ಇಲ್ಲವೇ ಇಲ್ಲ ಎಂದು ಹೇಳಿದ್ದೇನೆ. ಆನಂದ, ಬಹುಕಾಲದಿಂದ ನೀನು ಮೈತ್ರಿ ಭಾವನೆಯಿಂದ ಕಾಯಾ ವಾಚಾ ಮನಸಾ ಅಗಣಿತವಾದ ಸುಖವನ್ನೂ ಹಿತವನ್ನೂ ಉಂಟುಮಾಡಿ ನನ್ನ ಹತ್ತಿರವೇ ಇದ್ದಿಯೆ, ನೀನು ಎಷ್ಟು ಪುಣ್ಯವನ್ನು ಮಾಡಿದ್ದೀಯೆ! ಆನಂದ! ಸಾಧನೆ ಮಾಡು, ಬೇಗನೆ ಆಸವಗಳೆಲ್ಲವನ್ನೂ ಕಳೆದುಕೊಳ್ಳುವೆ” ಎಂದು ಹೇಳಿದರು.
ಆನಂತರ ಭಗವಾನರು ಭಿಕ್ಷುಗಳಿಗೆ ಇಂತೆಂದರು- “ನನಗೆ ಆನಂದನು ಆಪ್ತ ಶಿಷ್ಯನಾಗಿರುವಂತೆ ಯಾರು ಹಿಂದೆ ಸಮ್ಮಾಸಂಬುದ್ಧರಾಗಿದ್ದರೋ ಅವರಿಗೂ ಆಪ್ತ ಶಿಷ್ಯರಿದ್ದರು. ಮುಂದೆ ಯಾರು ಸಮ್ಮಾಸಂಬುದ್ಧರೂ, ಅರಹಂತರೂ ಯಾರು ಬರುತ್ತಾರೋ ಅವರಿಗೂ ನನಗೆ ಆನಂದನು ಆಪ್ತ ಶಿಷ್ಯನಾಗಿರುವಂತೆ ಆಪ್ತ ಶಿಷ್ಯರಿರುತ್ತಾರೆ. ಆನಂದನು ಪಂಡಿತನು, ಅವನು ಮೇಧಾವಿ. ತಥಾಗತನ ದರ್ಶನಾರ್ಥವಾಗಿ ಭಿಕ್ಷುಗಳು, ಭಿಕ್ಷುಣಿಯರು, ಉಪಾಸಕರು, ಉಪಾಸಿಕೆಯರು, ರಾಜ, ರಾಜನ ಮಹಾಮಂತ್ರಿಗಳು ಇತರ ಆಚಾರ್ಯರು ಅವರು ಶಿಷ್ಯರು ಎಂದು ಬರುತ್ತಾರೆಂಬುದು ಅವನಿಗೆ ಗೊತ್ತು.
“ಆಶ್ಚರ್ಯವನ್ನುಂಟುಮಾಡುವ, ಅದ್ಭುತವಾಗಿ ಕಾಣುವ ನಾಲ್ಕು ಧರ್ಮಗಳು ಆನಂದನಲ್ಲಿವೆ. ಆ ನಾಲ್ಕು ಯಾವುವು? ಭಿಕ್ಷುಗಳೇ, ಭಿಕ್ಷುಗಳ ಕೂಟ ಒಂದು ಆನಂದನಲ್ಲಿಗೆ ಬಂದರೆ, ಅವನನ್ನು ನೋಡಿ ತುಂಬ ಸಂತೋಷಪಡುತ್ತಾರೆ. ಅಲ್ಲಿ ಅವನು ಧರ್ಮವನ್ನು ಬೋಧಿಸಿದರೆ, ಅವರು ಅದನ್ನು ಕೇಳಿ ಸಂತೋಷಪಡುತ್ತಾರೆ. ಭಿಕ್ಷುಗಳ ಕೂಟವು ಬೇಸರದಿಂದಿದ್ದರೆ ಆನಂದನು ಮೌನವಾಗಿರುತ್ತಾನೆ. ಭಿಕ್ಷುಣಿಯರ ಕೂಟವು ಆನಂದನ ಹತ್ತಿರಕ್ಕೆ ಬಂದರೆ ಅವರು ಅವನನ್ನು ನೋಡಿ ಸಂತೋಷಪಡುತ್ತಾರೆ. ಆಗ ಅವರಿಗೆ ಧರ್ಮವನ್ನು ಬೋಧಿಸಿದರೆ ಅದನ್ನು ಕೇಳಿ ಅವರು ಸಂತೋಷಪಡುತ್ತಾರೆ. ಆ ಭಿಕ್ಷುಣಿಯರ ಕೂಟವು ಬೇಸರದಿಂದಿದ್ದರೆ ಆನಂದನು ಮೌನದಿಂದಿರುತ್ತಾನೆ. ಉಪಾಸಕರ ಗುಂಪು ಆನಂದನ ಹತ್ತಿರಕ್ಕೆ ಬಂದರೆ ಅವನನ್ನು ನೋಡಿ ಅವರು ಸಂತೋಷಪಡುತ್ತಾರೆ. ಆಗ ಆನಂದನು ಧಮ್ಮವನ್ನು ವಿವರಿಸಿದರೆ ಅದನ್ನು ಕೇಳಿ ಅವರು ಸಂತೋಷಪಡುತ್ತಾರೆ. ಉಪಾಸಕರ ಕೂಟವು ಬೇಸರದಿಂದಿದ್ದರೆ ಆನಂದನು ಮೌನದಿಂದಿರುತ್ತಾರೆ. ಭಿಕ್ಷುಗಳೇ, ಉಪಾಸಿಕೆಯರ ಗುಂಪು ಆನಂದನ ಹತ್ತಿರಕ್ಕೆ ಬಂದರೆ ಅವನನ್ನು ನೋಡಿ ಅದು ಸಂತೋಷಪಡುತ್ತದೆ. ಅವನು ಧಮ್ಮವನ್ನು ಬೋಧಿಸಿದರೆ ಅದನ್ನು ಕೇಳಿ ಆ ಗುಂಪು ಸಂತೋಷಪಡುತ್ತದೆ. ಆ ಉಪಾಸಿಕೆಯರ ಗುಂಪು ಬೇಸರದಿಂದಿದ್ದರೆ ಆನಂದನು ಮೌನದಿಂದಿರುತ್ತಾನೆ. ಈ ನಾಲ್ಕು ಆಶ್ಚರ್ಯವನ್ನುಂಟುಮಾಡುವ ಮತ್ತು ಅದ್ಭುತವಾಗಿ ಕಾಣುವ ಧರ್ಮಗಳು ಆನಂದನಲ್ಲಿವೆ.
“ಭಿಕ್ಷುಗಳೇ, ಚಕ್ರವರ್ತಿಯಲ್ಲಿ ಆಶ್ಚರ್ಯವನ್ನುಂಟುಮಾಡುವ ಅದ್ಭುತವಾಗಿ ಕಾಣುವ ನಾಲ್ಕು ಧರ್ಮಗಳಿವೆ. ಆ ನಾಲ್ಕು ಯಾವುವು? ಕ್ಷತ್ರಿಯರ ಕೂಟವು ಚಕ್ರವರ್ತಿಯ ಹತ್ತಿರಕ್ಕೆ ಬಂದಾಗ ಅವನನ್ನು ನೋಡಿ ಆ ಗುಂಪು ಸಂತೋಷಪಡುತ್ತದೆ. ಕ್ಷತ್ರಿಯರ ಕೂಟವು ಬೇಸರದಿಂದಿದ್ದರೆ ಚಕ್ರವರ್ತಿ ಮೌನದಿಂದಿರುತ್ತಾನೆ. ಬ್ರಾಹ್ಮಣರ ಗುಂಪು.... ಗೃಹಪತಿಗಳ ಗುಂಪು.... ಸಮಣರ ಗುಂಪು ಚಕ್ರವರ್ತಿಯಲ್ಲಿಗೆ ಬಂದರೆ ಅವನನ್ನು ನೋಡಿ ಆ ಗುಂಪು ಸಂತೋಷಪಡುತ್ತದೆ. ಚಕ್ರವರ್ತಿಯ ಮಾತನ್ನು ಕೇಳಿ ಆ ಗುಂಪು ಸಂತೋಷಪಡುತ್ತದೆ. ಸಮಣರ ಗುಂಪು ಬೇಸರದಿಂದಿದ್ದರೆ ಚಕ್ರವತಿಯು ಮೌನದಿಂದಿರುತ್ತಾನೆ. ಇಂಥವೇ ಅದ್ಭುತವಾದ ಮತ್ತು ಆಶ್ಚರ್ಯವನ್ನುಂಟುಮಾಡುವ ಧರ್ಮಗಳು ಆನಂದನಲ್ಲಿವೆ. ಭಿಕ್ಷುಗಳ ಕೂಟವು ಆನಂದ ದರ್ಶನಾರ್ಥವಾಗಿ ಅವನಲ್ಲಿಗೆ ಬಂದರೆ ಅವನನ್ನು ನೋಡಿ ಅದು ಸಂತೋಷಪಡುತ್ತದೆ. ಅವನು ಧರ್ಮವನ್ನು ವಿವರಿಸಿದರೆ ಅದನ್ನು ಕೇಳಿ ಆ ಗುಂಪು ಸಂತೋಷಪಡುತ್ತದೆ. ಆ ಭಿಕ್ಷುಗಳ ಕೂಟವು ಬೇಸರದಿಂದಿದ್ದರೆ ಆನಂದನು ಮೌನವಾಗಿರುತ್ತಾನೆ. ಭಿಕ್ಷುಣಿಯರ ಗುಂಪು... ಉಪಾಸಕರ ಗುಂಪು... ಉಪಾಸಿಕೆಯರ ಗುಂಪು ಆನಂದನ ದರ್ಶನಾರ್ಥವಾಗಿ ಬಂದರೆ ಅವನನ್ನು ನೋಡಿ ಆ ಗುಂಪು ಸಂತೋಷಪಡುತ್ತದೆ. ಅವನು ಧರ್ಮವನ್ನು ಬೋಧಿಸಿದರೆ ಅದನ್ನು ಕೇಳಿ ಆ ಗುಂಪು ಸಂತೋಷಪಡುತ್ತದೆ. ಉಪಾಸಿಕೆಯರ ಗುಂಪು ದರ್ಶನಾರ್ಥವಾಗಿ ಆನಂದನ ಹತ್ತಿರಕ್ಕೆ ಬಂದರೆ ಅವನನ್ನು ನೋಡಿ ಆ ಗುಂಪು ಸಂತೋಷಪಡುತ್ತದೆ. ಆನಂದನು ಧರ್ಮವನ್ನು ಬೋಧಿಸಿದರೆ ಅದನ್ನು ಕೇಳಿ ಸಂತೋಷಪಡುತ್ತದೆ. ಉಪಾಸಿಕೆಯರ ಗುಂಪು ಬೇಸರದಿಂದಿದ್ದರೆ ಆನಂದನು ಮೌನದಿಂದಿರುತ್ತಾನೆ. ಆಶ್ಚರ್ಯವನ್ನುಂಟುಮಾಡುವ ಅದ್ಭುತವಾಗಿ ಕಾಣುವ ಈ ನಾಲ್ಕು ಧರ್ಮಗಳು ಆನಂದನಲ್ಲಿವೆ.”
ಮಹಾಸುದಸ್ಸನ ಸುತ್ತ ಉಪದೇಶ
ಇದನ್ನು ಕೇಳಿದ ಆಯುಷ್ಮಂತ ಆನಂದನು ಭಗವಾನರನ್ನು ಕುರಿತು ಹೀಗೆ ಹೇಳಿದನು- “ಭಂತೆ, ಈ ಸಣ್ಣ ನಗರದಲ್ಲಿ ಈ ಮೂಲೆಯಲ್ಲಿ ಈ ಶಾಖಾ ನಗರದಲ್ಲಿ ಭಗವಾನರು ಪರಿನಿಬ್ಬಾನವನ್ನು ಪಡೆಯುವುದು ಬೇಡ. ಚಂಪು, ರಾಜಗಹ, ಸಾವತ್ಥಿ, ಸಾಕೇತ, ಕೋಸಂಬಿ, ವಾರಣಾಸಿ ಮುಂತಾದ ಮಹಾನಗರ ಒಂದರಲ್ಲಿ ಭಗವಾನರು ಪರಿನಿಬ್ಬಾನವನ್ನು ಪಡೆಯಲಿ. ಅವುಗಳಲ್ಲಿ ತಥಾಗತನಲ್ಲಿ ಭಕ್ತಿಯುಳ್ಳ ಕ್ಷತ್ರಿಯರೂ ಮಹಾ ಬ್ರಾಹ್ಮಣರೂ ಮಹಾ ಗೃಹಪತಿಗಳೂ ಇದ್ದಾರೆ. ಅವರು ತಥಾಗತನ ಶರೀರವನ್ನು ತಕ್ಕ ರೀತಿಯಲ್ಲಿ ಪೂಜಿಸುತ್ತಾರೆ.”
“ಆನಂದ, ಹಾಗೆ ಹೇಳಬೇಡ, ಸಣ್ಣ ನಗರ, ಸಣ್ಣ ಕೊಂಪೆ, ಶಾಖಾನಗರ ಎಂದು ಹೇಳಬೇಡ; ಆನಂದ, ಪೂರ್ವದಲ್ಲಿ ಮಹಾಸುದಸ್ಸನ ಎಂಬ ಹೆಸರಿನ ಚಕ್ರವರ್ತಿ ಇದ್ದನು. ಅವನು ಧಾರ್ಮಿಕನೂ, ಧರ್ಮರಾಜನೂ, ನಾಲ್ಕು ದಿಕ್ಕುಗಳನ್ನೂ ಗೆದ್ದವನೂ, ತನ್ನ ಜನಗಳನ್ನು ರಕ್ಷಿಸುವವನೂ, ಸಪ್ತರತ್ನಗಳನ್ನು ಪಡೆದಿದ್ದವನೂ ಆಗಿದ್ದನು. ಆ ಮಹಾಸುದಸ್ಸನನಿಗೆ ಕುಸಾವತಿ ಎಂಬ ಹೆಸರಿನಲ್ಲಿ ಈ ಕುಸಿನಾರವೇ ರಾಜಧಾನಿಯಾಗಿತ್ತು. ಅದರ ವಿಸ್ತಾರವು ಪೂರ್ವ ಪಶ್ಚಿಮವಾಗಿ ಹನ್ನೆರಡು ಯೋಜನೆಗಳು ಉತ್ತರ ದಕ್ಷಿಣವಾಗಿ ಏಳು ಯೋಜನೆಗಳಷ್ಟು ಇದ್ದುವು. ಈ ಕುಸಾವತಿಯು ಆನಂದ, ಪ್ರಬಲವೂ, ಸಂಪದ್ಭರಿತವೂ ಬಹು ಜನರಿಂದ ತುಂಬಿದ್ದುದೂ ಆಗಿತ್ತು, ಅದು ಸುಭಿಕ್ಷವಾಗಿತ್ತು. ದೇವತೆಗಳ ರಾಜಧಾನಿಯಾದ ಅಳಕಮಂದ ನಗರದಂತೆ ಅದು ಪ್ರಬಲವೂ ಸಂಪದ್ಭರಿತವೂ ಆಗಿತ್ತು. ಅದು ಯಕ್ಷರಿಂದ ತುಂಬಿದ್ದಂತೆ ಇದು ಜನರಿಂದ ತುಂಬಿದ್ದಿತು, ಅವರಂತೆಯೇ ಸುಭಿಕ್ಷವಾಗಿತ್ತು. ಕುಸಾವರಿತಯು ಹೀಗಿತ್ತು; ಆನಂದ, ಕುಸಾವತಿ ನಗರವು ಹಗಲೂ-ರಾತ್ರಿಯೂ ಆನೆಗಳ ಘೀಂಕಾರ, ಕುದುರೆಗಳ ಕೂಗು, ರಥಗಳ ಸದ್ದು, ಭೇರಿಗಳ ಸದ್ದು, ಮೃದಂಗಗಳ ನಿನಾದ, ವೀಣೆಗಳ ಸಂಗೀತ, ಹಾಡುಗಳ ನಿನಾದ, ಶಂಖಧ್ವನಿ, ತಾಳಧ್ವನಿ, ‘ತಿನ್ನಿರಿ, ಕುಡಿಯಿರಿ’ ಎಂಬ ಮನುಷ್ಯರ ಕಿರುಚು ಮುಂತಾದ ಹತ್ತು ಬಗೆಯ ಸದ್ದುಗಳಿಂದ ಕೂಡಿದ್ದಿತು.
“ಆನಂದ, ಕುಸಿನಾರದೊಳಕ್ಕೆ ಹೋಗಿ ಅಲ್ಲಿಯ ಮಲ್ಲರಿಗೆ ಹೀಗೆ ತಿಳಿಸು- ಈ ದಿನ ರಾತ್ರಿ, ವಾಸೆಟ್ಠರೆ, ಮಾರನೆಯ ಜಾವದಲ್ಲಿ ತಥಾಗತರು ಪರಿನಿಬ್ಬಾನವನ್ನು ಪಡೆಯುತ್ತಾರೆ. ವಾಸೆಟ್ಠರೆ, ಸರಿಯಾಗಿ ನಡೆದುಕೊಳ್ಳಿ, ನಮ್ಮ ಗ್ರಾಮದ ಹತ್ತಿರವೇ ತಥಾಗತನ ಪರಿನಿಬ್ಬಾನವಾಯಿತು. ತಥಾಗತನ ಅಂತ್ಯಕಾಲವು ನಮಗೆ ಲಭಿಸಲಿಲ್ಲ ಎಂದು ಆಮೇಲೆ ನಿಮ್ಮನ್ನು ನಿಂದಿಸಿಕೊಳ್ಳಬೇಡಿ.” “ಭಂತೆ, ಹಾಗೆಯೇ ಆಗಲಿ” ಎಂದು ಆಯುಷ್ಮಂತನಾದ ಆನಂದನು ಹೇಳಿ ಚೀವರವನ್ನು ಧರಿಸಿಕೊಂಡು ಪಿಂಡಪಾತ್ರೆಯೊಂದಿಗೆ ಇನ್ನೊಬ್ಬನೊಂದಿಗೆ ಕುಸಿನಾರವನ್ನು ಪ್ರವೇಶಿಸಿದನು.
ಮಲ್ಲರಿಗೆ ವಂದಿಸಿದುದು
ಆ ಸಮಯದಲ್ಲಿ ಕುಸಿನಾರದ ಮಲ್ಲರು ಆ ಪಟ್ಟಣದ ಹತ್ತೂ ಜನರ ಕಟ್ಟಡದಲ್ಲಿ ಯಾವುದೋ ಕೆಲಸಕ್ಕಾಗಿ ಸೇರಿದ್ದರು. ಆನಂದನು ಮಲ್ಲರು ಸೇರುತ್ತಿದ್ದ ಹತ್ತೂ ಜನರ ಕಟ್ಟಡದ ಬಳಿಗೆ ಬಂದನು. ಕುಸಿನಾರದ ಮಲ್ಲರಿಗೆ- “ವಾಸೆಟ್ಠರೆ, ಈ ರಾತ್ರಿಯ ಕೊನೆಯ ಜಾವದಲ್ಲಿ ತಥಾಗತರ ಪರಿನಿಬ್ಬಾನವಾಗುತ್ತಿದೆ, ಸರಿಯಾಗಿ ನಡೆದುಕೊಳ್ಳಿ. ‘ನಮ್ಮ ಗ್ರಾಮಕ್ಕೆ ಸೇರಿದ ಸ್ಥಳದಲ್ಲಿಯೇ ತಥಾಗತರ ಪರಿನಿಬ್ಬಾನವಾಯಿತು, ನಮಗೆ ಅವರ ಅಂತ್ಯಕಾಲದ ದರ್ಶನ ಲಭಿಸಲಿಲ್ಲ’ ಎಂದು ಆಮೇಲೆ ನಿಮ್ಮನ್ನು ನೀವೇ ನಿಂದಿಸಿಕೊಳ್ಳಬೇಡಿ” ಎಂದು ತಿಳಿಸಿದನು. ಆನಂದನು ಹೀಗೆ ಹೇಳಿದುದನ್ನು ಕೇಳಿದ ಮಲ್ಲರು ಮಲ್ಲಪುತ್ರರೊಂದಿಗೆ, ಮನೆಯ ಸೊಸೆಯರೊಡನೆ, ಮಲ್ಲ ಗೃಹಿಣಿಯರೊಂದಿಗೆ, ದುಃಖತಪ್ತರಾಗಿ ಧಾವಿಸಿದರು. ಕೆಲವರು ಕೂದಲನ್ನು ಕಿತ್ತುಕೊಂಡು ಅತ್ತರು. ಕೆಲವರು ತೋಳನ್ನು ಚಾಚಿಕೊಂಡು ಅತ್ತರು. ಕೆಲವರು ಕೆಳಕ್ಕೆ ಬಿದ್ದು ಒದ್ದಾಡಿದರು- “ಅತಿ ಕ್ಷಿಪ್ರದಲ್ಲಿಯೇ ಭಗವಾನರು ಪರಿನಿಬ್ಬಾನವನ್ನು ಹೊಂದುತ್ತಾರೆ, ಅತಿ ಕ್ಷಿಪ್ರದಲ್ಲಿಯೇ ಸುಗತರು ಪರಿನಿಬ್ಬಾನವನ್ನು ಪಡೆಯುತ್ತಾರೆ. ಅತಿ ಕ್ಷಿಪ್ರದಲ್ಲಿಯೇ ಲೋಕದ ಕಣ್ಣಾದವರು ಅಂತರ್ಧಾನವಾಗುತ್ತಾರೆ” ಎಂದು ಅತ್ತರು. ಆಗ ಮಲ್ಲರು ಮಲ್ಲಪುತ್ರರೊಂದಿಗೆ, ಮನೆಯ ಸೊಸೆಯರೊಡನೆ, ಮಲ್ಲ ಗೃಹಿಣಿಯರೊಂದಿಗೆ, ದುಃಖತಪ್ತರಾಗಿ ಭಾರವಾದ ಮನಸ್ಸಿನಿಂದ ಉಪಗತ್ತನದ ಮಲ್ಲರ ಶಾಲವನಕ್ಕೆ ಆನಂದನು ಇದ್ದಲ್ಲಿಗೆ ಹೋದರು. ಆಗ ಆಯುಷ್ಮಂತನಾದ ಆನಂದನು ಹೀಗೆಂದುಕೊಂಡನು. ‘ನಾನು ಕುಸಿನಾರದ ಮಲ್ಲರನ್ನು ಒಬ್ಬೊಬ್ಬರನ್ನಾಗಿ ಭಗವಂತನನ್ನು ವಂದಿಸಲು ಬಿಟ್ಟರೆ ಕುಸಿನಾರದ ಮಲ್ಲರೆಲ್ಲರೂ ಭಗವಾನರನ್ನು ವಂದಿಸುವ ಹೊತ್ತಿಗೆ ರಾತ್ರಿಯೇ ಮುಗಿದುಹೋಗುತ್ತದೆ. ಕುಸಿನಾರದ ಮಲ್ಲರನ್ನು ಅವರ ವಂಶಕ್ಕನುಗುಣವಾಗಿ ಸೇರಿಸಿ ಭಗವಾನರನ್ನು ವಂದಿಸುವಂತೆ ಹೇಳುತ್ತೇನೆ- ‘ಭಂತೆ, ಈ ಹೆಸರಿನ ಮಲ್ಲ ಸುಪುತ್ರನು ಭಾರ್ಯೆಯೊಂದಿಗೆ ಪರಿವಾರದೊಂದಿಗೆ, ಗೆಳೆಯರೊಂದಿಗೆ, ಭಗವಾನರ ಪಾದಕ್ಕೆ ತಲೆಬಾಗಿ ಬಂದಿಸುತ್ತಾನೆ’ ಎಂದು ಹೇಳುತ್ತೇನೆ’ ಆಮೇಲೆ ಆನಂದನು ಕುಸಿನಾರದ ಮಲ್ಲರನ್ನು ಅವರವರ ವಂಶಕ್ಕನುಗುಣವಾಗಿ ಸೇರಿಸಿ ಭಗವಂತರಿಗೆ ಹೀಗೆ ಹೇಳಿದನು- “ಭಂತೆ, ಈ ಹೆಸರಿನ ಮಲ್ಲ ಸುಪುತ್ರನು ಭಾರ್ಯೆಯೊಂದಿಗೆ ಸಪರಿವಾರವಾಗಿ, ಗೆಳೆಯರೊಂದಿಗೆ ಭಗವಾನರಿಗೆ ತಲೆಬಾಗಿ ವಂದಿಸುತ್ತಿದ್ದಾನೆ”. ಆಯುಷ್ಮಂತನಾದ ಆನಂದನು ಈ ರೀತಿಯಲ್ಲಿ ಪ್ರಥಮ ಜಾವದಲ್ಲಿ ಕುಸಿನಾರದ ಮಲ್ಲರನ್ನು ಭಗವಾನರನ್ನು ವಂದಿಸುವಂತೆ ಮಾಡಿದನು.
ಸುಭದ್ಧ ಪರಿಬ್ಬಾಜಕನಿಗೆ ಹೇಳಿದುದು
ಆ ಸಮಯದಲ್ಲಿ ಸುಭದ್ದನೆಂಬ ಪರಿಬ್ಬಾಜಕನು ಕುಸಿನಾರದಲ್ಲಿ ವಾಸಿಸುತ್ತಿದ್ದನು. ಆ ಪರಿಬ್ಬಾಜಕನು ಈ ಮಾತುಗಳನ್ನು ಕೇಳಿದನು. ಈ ರಾತ್ರಿಯ ಕೊನೆಯ ಜಾವದಲ್ಲಿ ಸಮಣ ಗೋತಮನು ಪರಿನಿಬ್ಬಾನವನ್ನು ಪಡೆಯುತ್ತಾನೆ. ಆಗ ಆತನು ಹೀಗೆಂದುಕೊಂಡನು- “ವೃದ್ಧರೂ, ಪೂಜ್ಯರೂ ಆದ ಆಚಾರ್ಯ ಪ್ರಾಚಾರ್ಯರು ‘ಎಂದೋ ಒಮ್ಮೆ ಲೋಕದಲ್ಲಿ ತಥಾಗತರೂ ಅರಹಂತರೂ ಆದವರು ಹುಟ್ಟುತ್ತಾರೆ’ ಎಂದು ಹೇಳುವುದನ್ನು ಕೇಳಿದ್ದೇನೆ. ಈ ದಿನ ರಾತ್ರಿ ಕೊನೆಯ ಜಾವದಲ್ಲಿ ಸಮಣ ಗೋತಮನು ಪರಿನಿಬ್ಬಾನವನ್ನು ಹೊಂದುತ್ತಾನೆ ಎಂದು ಕೇಳಿದ್ದೇನೆ. ನನಗೆ ಈಗ ಒಂದು ಭಾವನೆ ಹುಟ್ಟಿಕೊಂಡಿದೆ- ‘ಸಮಣ ಗೋತಮನು ನನ್ನಲ್ಲಿ ಪ್ರಸನ್ನನಾಗಬಹುದು. ಆತನು ಧಮ್ಮವನ್ನು ಯಥಾರ್ಥವಾಗಿ ಬೋಧಿಸಿ ನನ್ನಲ್ಲಿ ಹುಟ್ಟಿರುವ ಸಂದೇಹವನ್ನು ಪರಿಹರಿಸಬಹುದು”. ಆಗ ಆ ಪರಿಬ್ಬಾಜಕ ಸುಭದ್ದನು ಉಪವತ್ತನದ ಮಲ್ಲರ ಶಾಲವನದಲ್ಲಿ ಆಯುಷ್ಮಂತನಾದ ಆನಂದನು ಇದ್ದೆಡೆಗೆ ಬಂದನು. ಆನಂದನಿಗೆ ಆತನು ಹೀಗೆ ಹೇಳಿದನು- “ಗೆಳೆಯ ಆನಂದ, ವೃದ್ಧರೂ, ಪೂಜ್ಯರೂ ಆದ ಆಚಾರ್ಯ ಪ್ರಾಚಾರ್ಯರು ಎಂದೋ ಒಮ್ಮೆ ಲೋಕದಲ್ಲಿ ಅರಹಂತರೂ ತಥಾಗತರೂ ಆದವರು ಹುಟ್ಟುತ್ತಾರೆ’ ಎಂದು ಹೇಳುವುದನ್ನು ಕೇಳಿದ್ದೇನೆ. ಈ ರಾತ್ರಿ ಕೊನೆಯ ಜಾವದಲ್ಲಿ ಸಮಣ ಗೋತಮನು ಪರಿನಿಬ್ಬಾನವನ್ನು ಹೊಂದುತ್ತಾನೆ. ನನಗೆ ಈಗ ಒಂದು ಭಾವನೆ ಬಂದಿದೆ- “ಸಮಣ ಗೋತಮನು ಪ್ರಸನ್ನನಾಗಿ ನನಗೆ ಧಮ್ಮವನ್ನು ಬೋಧಿಸಿ ನನ್ನಲ್ಲಿರುವ ಸಂದೇಹವನ್ನು ಪರಿಹರಿಸಬಹುದು. ಗೆಳೆಯ ಆನಂದ, ನಾನು ಈಗ ಸಮಣ ಗೋತಮನ ದರ್ಶನವನ್ನು ಪಡೆಯಬಹುದಲ್ಲವೇ?” ಹೀಗೆ ಹೇಳಿದ ಸುಭದ್ದ ಪರಿಬ್ಬಾಜಕನಿಗೆ ಆನಂದನು ಇಂತೆಂದನು- “ಗೆಳೆಯ ಸುಭದ್ದ, ಸಾಕು ಸುಮ್ಮನಿರು, ತಥಾಗತರಿಗೆ ತೊಂದರೆ ಕೊಡುವುದು ಬೇಡ, ಭಗವಾನರು ಆಯಾಸಗೊಂಡಿದ್ದಾರೆ”. ಎರಡನೆಯಸಾರಿ, ಸುಭದ್ದನು... ಮೂರನೆಯ ಸಾರಿ ಸುಭದ್ದ ಪರಿಬ್ಬಾಜಕನು “ಆನಂದ, ವೃದ್ಧರೂ, ಪೂಜ್ಯರೂ ಆದ ಆಚಾರ್ಯ ಪ್ರಾಚಾರ್ಯರು ಎಂದೋ ಒಮ್ಮೆ ಲೋಕದಲ್ಲಿ ಅರಹಂತರೂ ತಥಾಗತರೂ ಆದವರು ಹುಟ್ಟುತ್ತಾರೆ’ ಎಂದು ಹೇಳುವುದನ್ನು ಕೇಳಿದ್ದೇನೆ. ಈ ರಾತ್ರಿ ಕೊನೆಯ ಜಾವದಲ್ಲಿ ಸಮಣ ಗೋತಮನು ಪರಿನಿಬ್ಬಾನವನ್ನು ಹೊಂದುತ್ತಾನೆ. ನನಗೆ ಈಗ ಒಂದು ಭಾವನೆ ಬಂದಿದೆ- “ಸಮಣ ಗೋತಮನು ಪ್ರಸನ್ನನಾಗಿ ನನಗೆ ಧಮ್ಮವನ್ನು ಬೋಧಿಸಿ ನನ್ನಲ್ಲಿರುವ ಸಂದೇಹವನ್ನು ಪರಿಹರಿಸಬಹುದು. ಗೆಳೆಯ ಆನಂದ, ನಾನು ಈಗ ಸಮಣ ಗೋತಮನ ದರ್ಶನವನ್ನು ಪಡೆಯಬಹುದಲ್ಲವೇ?” ಎಂದು ಕೇಳಿದನು. ಮೂರನೆಯ ಸಾರಿಯು ಆನಂದನು ಸುಭದ್ದ ಪರಿಬ್ಬಾಜಕನಿಗೆ “ಗೆಳೆಯ, ಸುಭದ್ದ, ಸಾಕು ಸುಮ್ಮನಿರು, ತಥಾಗತರಿಗೆ ತೊಂದರೆ ಕೊಡುವುದು ಬೇಡ. ಭಗವಾನರು ಆಯಾಸಗೊಂಡಿದ್ದಾರೆ” ಎಂದು ಹೇಳಿದನು.
ಭಗವಾನರು ಆಯುಷ್ಮಂತನಾದ ಆನಂದನಿಗೂ ಪರಿಬ್ಬಾಜಕ ಸುಭದ್ದನಿಗೂ ಆದ ಈ ಸಂಭಾಷಣೆಯನ್ನು ಕೇಳಿದರು. ಆನಂದನಿಗೆ ಭಗವಾನರು ಹೀಗೆ ಹೇಳಿದರು- “ಆನಂದ, ಸುಭದ್ದನನ್ನು ತಡೆಯಬೇಡ, ಸುಭದ್ದನಿಗೆ ತಥಾಗತನ ದರ್ಶನವು ಲಭಿಸಲಿ. ಸುಭದ್ದನು ನನ್ನನ್ನು ಏನು ಕೇಳುತ್ತಾನೋ ಅದನ್ನು ತಿಳಿದುಕೊಳ್ಳಬೇಕೆಂಬ ಆಸೆಯಿಂದಲೇ ಕೇಳುತ್ತಾನೆ. ನನಗೆ ತೊಂದರೆ ಮಾಡುವುದಕ್ಕಾಗಿ ಅವನು ಕೇಳುವುದಿಲ್ಲ. ನನ್ನನ್ನು ಕೇಳಿದ್ದಕ್ಕೆಲ್ಲಕ್ಕೂ ನಾನು ಉತ್ತರ ಹೇಳುತ್ತೇನೆ, ಅವನು ಅದನ್ನು ಬೇಗ ತಿಳಿದುಕೊಳ್ಳುತ್ತಾನೆ.” ಆಗ ಆಯುಷ್ಮಂತನಾದ ಆನಂದನು ಸುಭದ್ದನನ್ನು ಕುರಿತು ಹೀಗೆ ಹೇಳಿದನು- “ಸುಭದ್ದ, ಬಾ, ಭಗವಾನರು ಅಪ್ಪಣೆಯನ್ನು ಕೊಟ್ಟಿದ್ದಾರೆ.” ಆಗ ಪರಿಬ್ಬಾಜಕ ಸುಭದ್ದನು ಭಗವಾನರ ಬಳಿಗೆ ಹೋದನು. ಭಗವಾನರಿಗೆ ನಮಸ್ಕರಿಸಿದನು. ಅವನಿಗೆ ಗೌರವ ತೋರಿಸಿ ಅವರ ಆರೋಗ್ಯವನ್ನು ವಿಚಾರಿಸಿ ಒಂದುಕಡೆ ಕುಳಿತುಕೊಂಡನು. ಆಮೇಲೆ ಪರಿಬ್ಬಾಜಕ ಸುಭದ್ದನು ಭಗವಾನರಿಗೆ ಹೀಗೆಂದನು- “ಗೆಳೆಯ ಗೋತಮ, ಸಮಣ ಬ್ರಾಹ್ಮಣರ ವಿವಿಧ ಸಂಘಗಳಿಗೆ ಮುಖ್ಯರಾದವರೂ, ಗಣ್ಯರೂ, ವಿವಿಧ ಪಂಗಡಗಳಿಗೆ ಆಚಾರ್ಯರಾದವರೂ, ತಿಳಿದವರೂ, ಯಶಸ್ಸನ್ನು ಪಡೆದಿರುವವರೂ ಬೇರೆ ಬೇರೆ ವಾದಗಳನ್ನು ಪ್ರಸಿದ್ಧಪಡಿಸಿದವರೂ ಬಹುಜನರ ಗೌರವವನ್ನು ಪಡೆದವರೂ ಆದ ಪೂರಣ ಕಸ್ಸಪ, ಮೊಕ್ಖಾಲಿ ಗೋಸಾಲ, ಅಜಿತ ಕೇಸಕಂಬಳಿ, ಪಕುಧ ಕಚ್ಚಾಯನ, ಸಂಜಯ ಬೇಲಟ್ಠಿಪುತ್ತ, ನಿಗಂಠನಾಥಪುತ್ತ ಇವರೆಲ್ಲರೂ ಎಲ್ಲವನ್ನು ತಿಳಿದುಕೊಂಡಿದ್ದಾರೆಯೆ? ಕೆಲವನ್ನು ತಿಳಿದುಕೊಂಡಿಲ್ಲವೇ? ಅಥವಾ ಅವರಲ್ಲಿ ತಿಳಿದವರೂ ಕೆಲವರೂ, ತಿಳಿಯದಿದ್ದವರೂ ಕೆಲವರೂ ಇರುವರೇ ?”
“ಸುಭದ್ದ ಸಾಕು ನಿಲ್ಲಿಸು, ಎಲ್ಲವನ್ನು ಅರಿತಿದ್ದಾರೆಯೋ, ಎಲ್ಲವನ್ನೂ ಅರಿತಿಲ್ಲವೋ, ಕೆಲವರು ಅರಿತವರಿದ್ದಾರೋ, ಅರಿವನ್ನೇ ಪಡೆಯದಿರುವವರು ಕೆಲವರಿರುವರೋ ಎಂದು ಕೇಳುವುದನ್ನು ನಿಲ್ಲಿಸು. ನಿನಗೆ ಧಮ್ಮವನ್ನು ತಿಳಿಸುತ್ತೇನೆ, ಕೇಳು; ಮನಸ್ಸಿಟ್ಟು ಕೇಳುವುದು ಒಳ್ಳೆಯದು, ಹೇಳುತ್ತೇನೆ.”
“ಹಾಗೆಯೇ ಆಗಲಿ ಭಂತೆ” ಎಂದು ಪರಿಬ್ಬಾಜಕ ಸುಭದ್ದನು ಭಗವಾನರಿಗೆ ಹೇಳಿದನು. ಆಗ ಭಗವಾನರು-
“ಸುಭದ್ದ, ಯಾವುದರ ಧರ್ಮದಲ್ಲಿ ಧಮ್ಮ, ವಿನಯ, ಅಟ್ಠಂಗ ಮಗ್ಗವನ್ನು ಕಾಣಲಾಗುವುದಿಲ್ಲವೋ, ಅದರಲ್ಲಿ ಪ್ರಥಮ ವರ್ಗದ ಸಮಣನನ್ನು ಕಾಣಲಾಗುವುದಿಲ್ಲ. ಎರಡನೆಯ ವರ್ಗಕ್ಕೆ ಸೇರಿದ ಸಮಣನಾಗಲೀ, ಮೂರನೆಯ ವರ್ಗಕ್ಕೆ ಸೇರಿದ ಸಮಣನಾಗಲೀ, ನಾಲ್ಕನೆಯ ವರ್ಗಕ್ಕೆ ಸೇರಿದ ಸಮಣನಾಗಲೀ ಕಾಣುವುದಿಲ್ಲ. ಯಾವುದರಲ್ಲಿ, ಸುಭದ್ದ, ಧಮ್ಮವಿನಯ, ಅಟ್ಠಂಗ ಮಗ್ಗವನ್ನು ಕಾಣಲಾಗುತ್ತದೋ ಅದರಲ್ಲಿ ಸಮಣನನ್ನು ಕಾಣಬಹುದು. ಎರಡನೆಯ ವರ್ಗಕ್ಕೆ ಸೇರಿದ ಸಮಣನೂ, ಮೂರನೆಯ ವರ್ಗಕ್ಕೆ ಸೇರಿದ ಸಮಣನೂ, ನಾಲ್ಕನೆಯ ವರ್ಗಕ್ಕೆ ಸೇರಿದ ಸಮಣನೂ ಅಲ್ಲಿ ಕಾಣುತ್ತಾರೆ. ಇಲ್ಲಿ ಧಮ್ಮ ವಿನಯ ಅಟ್ಠಂಗ ಮಗ್ಗಗಳಿವೆ. ಇಲ್ಲಿ ಸಮಣನೂ ಎರಡನೆಯ ವರ್ಗಕ್ಕೆ ಸೇರಿದ ಸಮಣನೂ, ಮೂರನೆಯ ವರ್ಗಕ್ಕೆ ಸೇರಿದ ಸಮಣನೂ, ನಾಲ್ಕನೆಯ ವರ್ಗಕ್ಕೆ ಸೇರಿದ ಸಮಣನೂ ಇದ್ದಾರೆ. ಬೇರೆ ವಾದಗಳಲ್ಲಿ ಸಮಣರಾರನ್ನೂ ಕಾಣಲಾಗುವುದಿಲ್ಲ. ಸುಭದ್ದ, ಭಿಕ್ಷುಗಳು ಇದರಲ್ಲಿದ್ದು, ಒಳ್ಳೆಯ ಬಾಳನ್ನು ಬಾಳಲಿ. ಲೋಕದಲ್ಲಿ ಅರಹಂತರಿಲ್ಲದಿರುವಂಥ ಸ್ಥಿತಿ ಬರುವುದು ಬೇಡ.
ಪ್ರಾಯ ಇಪ್ಪತ್ತೊಂಭತ್ತರಲಿ ನಾ ಮನೆಯ ತೊರೆದು
ಸತ್ಯವನೆ ಹುಡುಕುತ್ತ ತಡಕುತ್ತ ಹೊರಟೆ |
ಐವತ್ತು ಮೇಲೊಂದು ವರುಷ ಉರುಳಿ ಹೋದುವು
ನಾ ಮನೆಯ ತೊರೆದಂದಿನಿಂದ
ನ್ಯಾಯದಾ ಧಮ್ಮದಾ ದಾರಿಯಲಿ ನಡೆದೆ
ಸಮಣರಿಲ್ಲವು ಬೇರೆ ಧರ್ಮದಲಿ
“ಎರಡನೆಯ ವರ್ಗದ ಸಮಣನಾಗಲೀ ಮೂರನೆಯ ವರ್ಗದ ಸಮಣನಾಗಲೀ, ನಾಲ್ಕನೆಯ ವರ್ಗದ ಸಮಣನಾಗಲೀ ಇಲ್ಲ. ಬೇರೆ ವಾದಗಳಲ್ಲಿ ಸಮಣರು ಇರುವುದಿಲ್ಲ. ಇದರಲ್ಲಿದ್ದು ಭಿಕ್ಷುಗಳು ಒಳ್ಳೆಯ ಬಾಳನ್ನು ಬಾಳಲಿ. ಲೋಕದಲ್ಲಿ ಅರಹಂತರಿಲ್ಲದಿರುವಂಥ ಸ್ಥಿತಿ ಬರುವುದು ಬೇಡ.”
ಹೀಗೆ ಹೇಳಿದ ಭಗವಾನರನ್ನು ಕುರಿತು ಸುಭದ್ದ ಪರಿಬ್ಬಾಜಕನು ಹೀಗೆಂದನು- “ಎಷ್ಟು ಉತ್ಕೃಷ್ಟ ಭಂತೆ, ನೀವು ಹೇಳುವುದು ಎಷ್ಟು ಉತ್ಕೃಷ್ಟ ! ತಲೆಕೆಳಗಾಗಿ ಬಿದ್ದಿರುವುದನ್ನು ನೆಟ್ಟಗೆ ನಿಲ್ಲಿಸುವವನಂತೆ ಮುಚ್ಚಿಹೋಗಿರುವುದನ್ನು ತೆಗೆದು ತೋರಿಸುವವನಂತೆ ದಾರಿ ತಪ್ಪಿದವನಿಗೆ ದಾರಿ ತೋರಿಸುವವನಂತೆ ಕತ್ತಲಲ್ಲಿರುವವನಿಗೆ ದೀಪ ಹಿಡಿಯುವವನಂತೆ ಕಣ್ಣಿರುವವನು ರೂಪಗಳನ್ನು ನೋಡಬಲ್ಲಂತೆ ಭಗವಾನರು ಅನೇಕ ಪರಿಯಲ್ಲಿ ಧಮ್ಮವನ್ನು ಪ್ರಕಾಶಪಡಿಸಿದ್ದಾರೆ. ಭಂತೆ, ಭಗವಾನರಿಗೆ ಶರಣು ಹೋಗುತ್ತೇನೆ, ಧಮ್ಮಕ್ಕೂ, ಭಿಕ್ಷು ಸಂಘಕ್ಕೂ ಶರಣು ಹೋಗುತ್ತೇನೆ. ಭಗವಾನರ ಮುಂದೆಯೇ ನನಗೆ ಪಬ್ಬಜ್ಜವು ಲಭಿಸಲಿ, ಉಪಸಂಪದವೂ ಲಭಿಸಲಿ.”
“ಸುಭದ್ದ, ಯಾವನು ಇತರ ಧರ್ಮವನ್ನು ಅನುಸರಿಸುತ್ತಿದ್ದಾನೋ ಅಂಥವನು ಧಮ್ಮ ವಿನಯಗಳಿಗನುಸಾರವಾಗಿ ಪಬ್ಬಜ್ಜವನ್ನು ಪಡೆಯಬೇಕಾದರೆ ಉಪಸಂಪದವನ್ನು ಹೊಂದಿಬೇಕಾದರೆ ನಾಲ್ಕು ತಿಂಗಳಷ್ಟು ಶಿಕ್ಷಣ ಪಡೆಯಬೇಕು. ನಾಲ್ಕು ಮಾಸಗಳ ಆನಂತರ ಶ್ರೇಷ್ಠವಾದ ಚಿತ್ತವನ್ನು ಹೊಂದಿರುವ ಭಿಕ್ಷುಗಳು ಆತನನ್ನು ಪಬ್ಬಜಿತನನ್ನಾಗಿಯೇ, ಭಿಕ್ಷುವನ್ನಾಗಿಯೇ ಸ್ವೀಕರಿಸುತ್ತಾರೆ. ಮನುಷ್ಯ ಮನುಷ್ಯರಲ್ಲಿ ವ್ಯತ್ಯಾಸವಿರುವುದು ನನಗೆ ಗೊತ್ತು.”
“ಭಂತೆ, ಬೇರೆ ಧರ್ಮವನ್ನು ಅನುಸರಿಸುತ್ತಿರುವವರು ಧಮ್ಮ ವಿನಯಗಳಿಗನುಸಾರವಾಗಿ ಪಬ್ಬಜ್ಜವನ್ನು ಪಡೆಯಬೇಕಾದರೆ ಉಪಸಂಪದವನ್ನು ಹೊಂದಬೇಕಾದರೆ ನಾಲ್ಕು ಮಾಸಗಳಷ್ಟು ಶಿಕ್ಷಣವನ್ನು ಪಡೆಯಬೇಕಷ್ಟೆ. ಆಮೇಲೆ ಶ್ರೇಷ್ಠವಾದ ಚಿತ್ತವನ್ನು ಪಡೆದಿರುವ ಭಿಕ್ಷುಗಳು ಅವರನ್ನು ಪಬ್ಬಜಿತರನ್ನಾಗಿಯೋ, ಭಿಕ್ಷುಗಳಾಗಿಯೋ ಸ್ವೀಕರಿಸುತ್ತಾರಷ್ಟೆ. ನಾನಾರದೋ ನಾಲ್ಕು ವರ್ಷಗಳಷ್ಟು ಕಾಲ ಶಿಕ್ಷಣ ಪಡೆಯಲು ಸಿದ್ಧನಾಗಿದ್ದೇನೆ. ಆಮೇಲೆ ಶ್ರೇಷ್ಠವಾದ ಚಿತ್ತವನ್ನು ಪಡೆದಿರುವ ಭಿಕ್ಷುಗಳು ನನ್ನನ್ನು ಪಬ್ಬಜ್ಜನನ್ನಾಗಿಯೋ ಭಿಕ್ಷುವನ್ನಾಗಿಯೋ ಸ್ವೀಕರಿಸಲಿ.”
ಆಮೇಲೆ ಭಗವಾನರು ಆಯುಷ್ಮಂತನಿಗೆ “ಸುಭದ್ದನು ಪಬ್ಬಜ್ಜನಾಗಲಿ” ಎಂದರು. “ಹಾಗೆಯೇ ಆಗಲಿ ಭಂತೆ” ಎಂಬುದಾಗಿ ಆಯುಷ್ಮಂತನಾದ ಆನಂದನು ಭಗವಾನರಿಗೆ ವಿನಂತಿ ಮಾಡಿಕೊಂಡನು. ಪರಿಬ್ಬಾಜಕ ಸುಭದ್ದನು ಅನಂತರ ಆಯುಷ್ಮಂತನಾದ ಆನಂದನಿಗೆ ಹೀಗೆ ಹೇಳಿದನು- “ಗೆಳೆಯ ಆನಂದ, ನಿನಗೆ ಲಾಭವಾಗಿದೆ. ಗೆಳೆಯ ಆನಂದ, ನಿನ್ನದು ಒಳ್ಳೆಯ ಲಾಭ. ಗುರುಗಳಿಂದಲೇ ನಿನಗೆ ಅಂತೇವಾಸಿ (ಆಪ್ತಶಿಷ್ಯನ) ಸ್ಥಾನ ದೊರಕಿಬಿಟ್ಟಿದೆ. ಆನಂತರ ಸುಭದ್ದ ಪರಿಬ್ಬಾಜಕನು ಭಗವಾನರ ಎದುರಿನಲ್ಲಿಯೇ ಪಬ್ಬಜ್ಜನಾದನು. ಸ್ವಲ್ಪ ಕಾಲದ ಮೇಲೆ ಆತನು ಏಕಾಂಗಿಯಾಗಿ ಜಾಗೃತನಾಗಿ ನಿಷ್ಠಾವಂತನಾಗಿ ಉತ್ಸಾಹಶಾಲಿಯಾಗಿ ಸಾಧನೆ ಮಾಡುವವನಾದನು. ಕುಲಪುತ್ರರಾದವರು ಯಾವುದುಕೋಸ್ಕರ ಮನೆಯನ್ನು ತೊರೆದು ಪಬ್ಬಜಿತರಾಗುತ್ತಾರೋ ಆಮೇಲೆ ಬ್ರಹ್ಮಚರ್ಯವನ್ನು ಪಾಲಿಸುತ್ತಾರೋ ಅಂಥ ಧರ್ಮವನ್ನು ತಾನೇ ಅರಿತು ಸಾಕ್ಷಾತ್ಕಾರ ಮಾಡಿಕೊಳ್ಳುವ ಸಾಮರ್ಥ್ಯವನ್ನು ಪಡೆದನು. ‘ಹುಟ್ಟು ಕ್ಷೀಣವಾಯಿತು, ಬ್ರಹ್ಮಚರ್ಯವನ್ನು ಪಾಲಿಸಿಯಾಯಿತು, ಮಾಡಬೇಕಾದ್ದನ್ನು ಮಾಡಿದ್ದಾಯಿತು, ಇನ್ನು ಮೇಲೆ ಪರವಿಲ್ಲ” ಎಂಬುದನ್ನು ಅರಿತನು. ಆಯುಷ್ಮಂತನಾದ ಸುಭದ್ದನು ಮತ್ತೊಬ್ಬ ಅರಹಂತನಾದನು. ಭಗವಂತನಿಂದಲೇ ದೀಕ್ಷೆ ಪಡೆದ ಶಿಷ್ಯರಲ್ಲಿ ಕೊನೆಯವನಾದನು.
ಪಂಚಮ ಪಠಣ ಭಾಗ
ತಥಾಗತರ ಕೊನೆಯ ಮಾತುಗಳು
ಭಗವಾನರು ಆಯುಷ್ಮಂತನಾದ ಆನಂದನಿಗೆ ಇಂತೆಂದರು- “ನಿಮಗೆ ಹೀಗೆನ್ನಿಸಬಹುದು ‘ಗುರುವಿನ ಪ್ರವಚನ ಮುಗಿದುಹೋಯಿತು, ಗುರು ಇನ್ನಿಲ್ಲ’; ನೀವು ಹಾಗೆ ತಿಳಿಯಬಾರದು. ಆನಂದ, ನನ್ನಿಂದ ವಿವರಿಸಲ್ಪಟ್ಟಿರುವ ಧಮ್ಮ ವಿನಯಗಳು ನನ್ನ ಆನಂತರ ನಿಮಗೆ ಗುರು ಆಗುತ್ತವೆ. ಭಿಕ್ಷುಗಳು ನಾನು ಹೋದಮೇಲೆ ಒಬ್ಬರನ್ನೊಬ್ಬರು ಈಗ ಕರೆಯುವಂತೆ ಗೆಳೆಯನೆಂದು ಕರೆಯುವುದು ಬೇಡ. ಹಿರಿಯ ಭಿಕ್ಷುಗಳು ಕಿರಿಯ ಭಿಕ್ಷುಗಳನ್ನು ಅವರ ಹೆಸರಿನಿಂದಲೋ ಅವರ ಗೊತ್ರದ ಹೆಸರಿನಿಂದಲೋ ‘ಗೆಳೆಯ’ ಎಂದೇ ಕರೆಯಲಿ. ಕಿರಿಯ ಭಿಕ್ಷುಗಳು ಹಿರಿಯ ಭಿಕ್ಷುಗಳನ್ನು ‘ಭಂತೆ’ ಎಂದೇ ‘ಆಯಸ್ಮಾ’ ಎಂದೇ ಕರೆಯಬೇಕು. ನನ್ನ ನಂತರ, ಆನಂದ, ಸಂಘವು ಅಪ್ರಧಾನವಾದ ನಿಯಮಗಳನ್ನು ಬಿಟ್ಟುಬಿಡಬಹುದು. ಆನಂದ, ನನ್ನ ನಂತರ ಭಿಕ್ಷುವಾದ ಚನ್ನನಿಗೆ ಬ್ರಹ್ಮದಂಡವನ್ನು ವಿಧಿಸಿ.”
“ಯಾವುದು ಬ್ರಹ್ಮದಂಡ, ಭಂತೆ ?”
“ಭಿಕ್ಷು ಫನ್ನಸು* ಮಾತನಾಡಿದಾಗ ಅವನಿಗೆ ಉತ್ತರಿಸಬೇಡಿ, ಬುದ್ಧಿವಾದವನ್ನು ಹೇಳಬೇಡಿ, ಏನನ್ನೂ ವಿಧಿಸಬೇಡಿ.”
ಆನಂತರ ಭಗವಾನರು ಭಿಕ್ಷುಗಳಿಗೆ ಇಂತೆಂದರು- ‘ಒಬ್ಬ ಭಿಕ್ಷುವೇನಾದರೂ ಬುದ್ಧನಲ್ಲಿ ಧಮ್ಮದಲ್ಲಿ ಸಂಘದಲ್ಲಿ ಅಥವಾ ಮಗ್ಗದಲ್ಲಿ ಅಥವಾ ಕ್ರಮದಲ್ಲಿ ಸಂಶಯವನ್ನು ತಾಳಿದ್ದರೆ ಅಥವಾ ಅವುಗಳ ಬಗ್ಗೆ ಕೆಟ್ಟ ಭಾವನೆ ಬಂದಿದ್ದರೆ ಅದನ್ನು ಕೇಳಿ ಚರ್ಚಿಸಿ. ಆಮೇಲೆ ಈಗ ನಮ್ಮ ಗುರು ಇಲ್ಲ. ಅವರು ನಮ್ಮ ಎದುರಿನಲ್ಲಿದ್ದಾಗ ತಾವು ಅವರೊಂದಿಗೆ ಚರ್ಚಿಸಲಿಲ್ಲ ಎಂದು ವಿಷಾದಪಡಬೇಡಿ. ಇವನ್ನು ಕೇಳಿದ ಮೇಲೂ ಭಿಕ್ಷುಗಳು ಮೌನದಿಂದಿದ್ದರು. ಭಗವಾನರು ಎರಡನೆಯಸಾರಿ... ಭಗವಾನರು ಮೂರನೆಯ ಸಾರಿ ಭಿಕ್ಷುಗಳಿಗೆ ಇಂತೆಂದರು- ‘‘ಒಬ್ಬ ಭಿಕ್ಷುವೇನಾದರೂ ಬುದ್ಧನಲ್ಲಿ ಧಮ್ಮದಲ್ಲಿ ಸಂಘದಲ್ಲಿ ಅಥವಾ ಮಗ್ಗದಲ್ಲಿ ಅಥವಾ ಕ್ರಮದಲ್ಲಿ ಸಂಶಯವನ್ನು ತಾಳಿದ್ದರೆ ಅಥವಾ ಅವುಗಳ ಬಗ್ಗೆ ಕೆಟ್ಟ ಭಾವನೆ ಬಂದಿದ್ದರೆ ಅದನ್ನು ಕೇಳಿ ಚರ್ಚಿಸಿ. ಆಮೇಲೆ ಈಗ ನಮ್ಮ ಗುರು ಇಲ್ಲ. ಅವರು ನಮ್ಮ ಎದುರಿನಲ್ಲಿದ್ದಾಗ ತಾವು ಅವರೊಂದಿಗೆ ಚರ್ಚಿಸಲಿಲ್ಲ ಎಂದು ವಿಷಾದಪಡಬೇಡಿರಿ.” ಮೂರನೆಯ ಸಾರಿಯೂ ಭಿಕ್ಷುಗಳು ಮೌನದಿಂದಿದ್ದರು. ಆಗ ಭಗವಾನರು ಭಿಕ್ಷುಗಳಿಗೆ ಇಂತೆಂದರು- “ಭಿಕ್ಷುಗಳೇ, ನಿಮ್ಮ ಗುರುವಿನ ಮೇಲಿನ ಗೌರವದಿಂದ ನೀವು ಅವರೊಂದಿಗೆ ಚರ್ಚಿಸದಿರಬಹುದು. ಒಬ್ಬ ಭಿಕ್ಷುವು (ಸಹಾಯಕ) ಮತ್ತೊಬ್ಬನೊಂದಿಗೆ ಸಮಾಲೋಚಿಸಲಿ”. ಇದನ್ನು ಕೇಳಿದ ಮೇಲೂ ಭಿಕ್ಷುಗಳು ಮೌನದಿಂದಲೇ ಇದ್ದರು.
ಆಗ ಆಯುಷ್ಮಂತನಾದ ಆನಂದನು ಭಗವಾನರನ್ನು ಕುರಿತು ಇಂತೆಂದನು- “ಆಶ್ಚರ್ಯ ಭಂತೆ, ಅದ್ಭುತ ಭಂತೆ! ಈ ಭಿಕ್ಷು ಸಂಘದಲ್ಲಿ ಬುದ್ಧರಲ್ಲಾಗಲೀ, ಧಮ್ಮದಲ್ಲಾಗಲೀ, ಸಂಘದಲ್ಲಾಗಲೀ, ಮಗ್ಗದಲ್ಲಾಗಲೀ, ಕ್ರಮದಲ್ಲಾಗಲೀ ಸಂಶಯವನ್ನು ಅಥವಾ ಕೆಟ್ಟ ಭಾವನೆಯನ್ನು ಹೊಂದಿರುವ ಯಾವ ಭಿಕ್ಷುವೂ ಇಲ್ಲ, ನನಗೂ ಇದು ಸಂತೋಷವಾಗಿದೆ.”
“ತುಂಬು ವಿಶ್ವಾಸದಿಂದ ನೀನು ಮಾತನಾಡುತ್ತಿರುವೆ. ಆನಂದ, ತಥಾಗತನಿಗೆ ಚೆನ್ನಾಗಿ ಗೊತ್ತಿದೆ. ಆನಂದ, ಬುದ್ಧನಲ್ಲಾಗಲೀ, ಧಮ್ಮದಲ್ಲಾಗಲೀ, ಸಂಘದಲ್ಲಾಗಲೀ, ಮಗ್ಗದಲ್ಲಾಗಲಿ, ಕ್ರಮದಲ್ಲಾಗಲೀ ಸಂಶಯವಿರುವ ಕೆಟ್ಟ ಭಾವನೆಯಿರುವ ಭಿಕ್ಷುವು ಈ ಭಿಕ್ಷು ಸಂಘದಲ್ಲಿ ಒಬ್ಬನೂ ಇಲ್ಲ. ಈ ಐನೂರು ಭಿಕ್ಷುಗಳಲ್ಲಿ ತುಂಬ ಹಿಂದುಳಿದಿರುವವನೂ ಸೋತಾಪನ್ನನಾಗಿದ್ದಾನೆ. ಯಾವನೂ ಕೆಳಕ್ಕೆ ಬೀಳುವುದಿಲ್ಲ. ಸಂಬೋಧಿಯನ್ನು ಪಡೆಯುವ ಮಾರ್ಗದಲ್ಲಿಯೇ ಇದ್ದಾನೆ.”
ಆನಂತರ ಭಗವಾನರು ಭಿಕ್ಷುಗಳನ್ನು ಕುರಿತು “ಭಿಕ್ಷುಗಳೇ, ನಿಮಗೆ ಒತ್ತಿ ಹೇಳುತ್ತಿದ್ದೇನೆ; ಎಲ್ಲ ಸಂಖಾರಗಳೂ ವ್ಯಯವಾಗುತ್ತವೆ, ಎಚ್ಚರಿಕೆಯಿಂದ ಸಂಪಾದಿಸಿಕೊಳ್ಳಿ”. ಇದೇ ತಥಾಗತನ ಕೊನೆಯ ಮಾತಾಯಿತು.
ಪರಿನಿಬ್ಬುತರಾದುದು
ಆನಂತರ ಭಗವಾನರು ಪ್ರಥಮ ಧ್ಯಾನದಲ್ಲಿ ಉಳಿದರು. ಪ್ರಥಮ ಧ್ಯಾನದಿಂದ ಎದ್ದು ದ್ವಿತೀಯ ಧ್ಯಾನಕ್ಕೆ ಇಳಿದರು. ದ್ವಿತೀಯ ಧ್ಯಾನದಿಂದೆದ್ದು ತೃತೀಯ ಧ್ಯಾನವನ್ನು ಹೊಕ್ಕರು. ತೃತೀಯ ಧ್ಯಾನದಿಂದ ಎದ್ದು ಚತುರ್ಥ ಧ್ಯಾನವನ್ನು ಹೊಕ್ಕರು. ಚತುರ್ಥ ಧ್ಯಾನದಿಂದ ಎದ್ದು ಅಕಾಸಾನಂಚಾಯತನವನ್ನು ಹೊಕ್ಕರು. ಅಲ್ಲಿಂದ ವಿಞ್ಞಾಣಂಚಾಯತನವನ್ನು ಪ್ರವೇಶಿಸಿದರು. ಆ ಮನಸ್ಸಿನ ಸ್ಥಿತಿಯನ್ನು ಮೀರಿ ಅಕಿಂಚಞ್ಞಾಯತನವನ್ನು ಪ್ರವೇಶಿಸಿದರು. ಅಕಿಂಚಞ್ಞಾಯತನದ ಮನಸ್ಸಿನ ಸ್ಥಿತಿಯನ್ನು ಮೀರಿ ನೇವಸಞ್ಞಾನಾಸಞ್ಞಾಯತನವನ್ನು ಪ್ರವೇಶಿಸಿದರು. ನೇವಸಞ್ಞಾನಾಸಞ್ಞಾಯತನದ ಮನಸ್ಸಿನ ಸ್ಥಿತಿಯನ್ನೂ ಮೀರಿ ಸಂಞ್ಞಾವೇದಯಿತ ನಿರೋಧವನ್ನು ಪ್ರವೇಶಿಸಿದರು.
ಆಗ ಆನಂದನು ಆಯುಷ್ಮಂತನಾದ ಅನಿರುದ್ಧನಿಗೆ “ಭಂತೆ ಅನಿರುದ್ಧ, ಭಗವಾನರು ಪರಿನಿಬ್ಬಾನವನ್ನು ಪಡೆದುಬಿಟ್ಟರು” ಎಂದನು.
“ಗೆಳೆಯ ಆನಂದ, ಭಗವಾನರು ಪರಿನಿಬ್ಬಾನವನ್ನು ಹೊಂದಿಲ್ಲ, ಸಂಞ್ಞಾವೇದಯಿತ ನಿರೋಧವನ್ನು ಪ್ರವೇಶಿಸಿದ್ದಾರೆ” ಎಂದನು. ಆನಂತರ ಭಗವಾನರು ಸಞ್ಞಾವೇದಯಿತ ನಿರೋಧ ಸ್ಥಿತಿಯಿಂದ ನೇವಸಞ್ಞಾನಾಸಞ್ಞಾಯತನವನ್ನು ಹೊಕ್ಕರು. ಅಲ್ಲಿಂದ ಅಕಿಂಚಾಯತನವನ್ನು ಪ್ರವೇಶಿಸಿದರು. ಅಕಿಂಚಾಯತನ ಸ್ಥಿತಿಯಿಂದ ವಿಞ್ಞಣಾಯತನವನ್ನು ಪ್ರವೇಶಿಸಿದರು. ಅಲ್ಲಿಂದ ಅಕಾಸಾನಂಚಾಯತನವನ್ನು ಪ್ರವೇಶಿಸಿದರು. ಅದನ್ನು ಬಿಟ್ಟು ಚತುರ್ಥ ಧ್ಯಾನವನ್ನು ಪಡೆದರು. ಅದನ್ನು ಬಿಟ್ಟು ತೃತೀಯ ಧ್ಯಾನಕ್ಕೆ ಬಂದರು. ತೃತೀಯ ಧ್ಯಾನದಿಂದ ದ್ವಿತೀಯ ಧ್ಯಾನಕ್ಕೆ ಇಳಿದರು. ಅಲ್ಲಿಂದ ಪ್ರಥಮ ಧ್ಯಾನಕ್ಕೆ ಬಂದರು. ಮತ್ತೆ ಅಲ್ಲಿಂದ ದ್ವಿತೀಯ ಧ್ಯಾನಕ್ಕೆ ಹೋದರು. ದ್ವಿತೀಯ ಧ್ಯಾನದಿಂದ ತೃತೀಯ ಧ್ಯಾನಕ್ಕೂ ಅಲ್ಲಿಂದ ಚತುರ್ಥ ಧ್ಯಾನಕ್ಕೂ ಹೋದರು. ಚತುರ್ಥ ಧ್ಯಾನವನ್ನು ಮೀರಿ ಭಗವಾನರು ಪರಿನಿಬ್ಬಾನವನ್ನು ಪಡೆದರು.
ಭಗವಾನರ ಪರಿನಿಬ್ಬಾನವಾದ ಸಮಯದಲ್ಲಿ ಮೈನವಿರೇಳುವಂಥ ಭೀಷಣವಾದ ಭೂಕಂಪವಾಯಿತು. ದೇವದುಂದುಭಿಯು ಮೊಳಗಿತು. ಭಗವಾನರು ಪರಿನಿಬ್ಬಾನವನ್ನು ಪಡೆದಾಗ ಬ್ರಹ್ಮಸಹಂಪತಿಯು ಈ ಗಾಥೆಯನ್ನು ಹಾಡಿದನು:
ಲೋಕದೊಳಗಿರ್ಪ ಎಲ್ಲ ಭೂತಗಳು ತೊರೆಯುವುವು ತಮ್ಮೆಲ್ಲ ಸಮುಚ್ಚಯಗಳನು |
ಲೋಕದೊಳಗಿರ್ಪ ಮನುಜರೆಲ್ಲರ ಗುರುವು ಅನುಪಮನು |
ಗುರುವರ್ಯ ತಥಾಗತನು ಪರಿನಿಬ್ಬಾನ ಹೊಂದಿದನು ಸಂಬುದ್ಧ ಅರಹಂತ ||
ಭಗವಾನರು ಪರಿನಿಬ್ಬಾನವಾದ ಸಮಯದಲ್ಲಿ ದೇವೆಂದ್ರ ಸಕ್ಕನು ಈ ಗಾಥೆಯನ್ನು ಹಾಡಿದನು:
ಉತ್ಪಾದ ವ್ಯಯಗಳುಂಟು ಸಂಖಾರಗಳಿಗೆಲ್ಲ ಹುಟ್ಟು ಸಾವಿಗೆ ಸಿಲುಕಿ ಬೀಳುವುವು |
ಜೀವಿಗಳ ಹುಟ್ಟು ಮರುಹುಟ್ಟುಗಳ ಕ್ಷಯವೆ ಸುಖವು, ಬೇರಿಲ್ಲ ಪರಮ ಸುಖ ||
ಭಗವಾನರು ಪರಿನಿಬ್ಬಾನವನ್ನು ಪಡೆದ ಸಮಯದಲ್ಲಿ ಆಯುಷ್ಮಂತನಾದ ಅನುರುದ್ಧನು ಈ ಗಾಥೆಯನ್ನು ಹಾಡಿದನು-
ಸ್ಥಿರ ಚಿತ್ತವುಳ್ಳವಗೆ ಶಾಂತಿ ಪಡೆದಿಹ ಮುನಿಗೆ |
ಕಾಲ ಬರುವಹ ಮುನ್ನ ತೊಳಲಾಟವಿಲ್ಲ, ಒಳತೋಟ ಇಲ್ಲ ||
ಕಂಪಿಸದ ಚಿತ್ತವದು ವೇದನೆಯನೆ ನಶಿಸಿ ವಿಮೋಕ್ಷವನೆ ಪಡೆದು
ಜ್ಯೋತಿ ಕುಂದುವ ತರದಿ ನಿಬ್ಬಾನವನೆ ಹೊಂದಿ ನಂದಿಹೋಯಿತು ಇರದೆ ||
ಭಗವಾನರು ಪರಿನಿಬ್ಬಾನವನು ಪಡೆದ ಸಮಯದಲ್ಲಿ ಆಯುಷ್ಮಂತನಾದ ಆನಂದನು ಈ ಗಾಥೆಯನ್ನು ಹಾಡಿದನು:
ಭಯದಿ ನಿಮಿರಿತು ದೇಹ
ಸಂಬುದ್ಧ ಅರಹಂತ ನಿಬ್ಬಾನವನ್ನು ಪಡೆದಾಗ ||
ಭಗವಾನರು ನಿಬ್ಬಾನವನ್ನು ಪಡೆದಾಗ ರಾಗಗಳನ್ನು ಇನ್ನೂ ಗೆಲ್ಲದ ಕೆಲವು ಭಿಕ್ಷುಗಳು ತೋಳುಗಳನ್ನು ಚಾಚಿ ಅತ್ತರು. ಕೆಳಗೆ ಬಿದ್ದು ಒದ್ದಾಡಿದರು. “ಬಹುಬೇಗನೆ ಭಗವಾನರು ಪರಿನಿಬ್ಬಾನ ಹೊಂದಿದರು, ಬಹುಬೇಗನೆ ಸುಗತರು ನಿಧನ ಹೊಂದಿದರು, ಬಹುಬೇಗ ಲೋಕದ ಕಣ್ಣು ಅಂತರ್ಧಾನವಾಯಿತು” ಎಂದು ರೋಧಿಸಿದರು. ವೀತರಾಗರಾದ ಭಿಕ್ಷುಗಳು ಮಾತ್ರ “ಸಂಖಾರಗಳೆಲ್ಲ ಅನಿತ್ಯ, ಈ ನಿಯಮಕ್ಕೆ ಯಾವುದೂ ಹೊರತಲ್ಲ” ಎಂಬುದನ್ನು ಅರಿತು ಲೋಕವನ್ನು ತಾಳಿಕೊಂಡರು.
ಆಗ ಆಯುಷ್ಮಂತನಾದ ಅನುರುದ್ಧನು ಭಿಕ್ಷುಗಳಿಗೆ ಹೀಗೆ ಹೇಳಿದನು- “ಗೆಳೆಯರೆ, ಅಳಬೇಡಿ, ಅಳುವನ್ನು ನಿಲ್ಲಿಸಿ. ಶೋಕಪಡಬೇಡಿ. ಯಾವುದು ನಮಗೆ ಪ್ರಿಯವಾಗಿದೆಯೋ, ಯಾವುದು ನಮಗೆ ಸಮೀಪವಾಗಿರುವುದೋ ಅದು ನಮ್ಮಿಂದ ದೂರವಾಗಬೇಕು. ಬೇರೆಯಾಗಬೇಕು, ವಿಯೋಗವಾಗಬೇಕು ಎಂದು ಭಗವಾನರೇ ಹೇಳಿರುವರಲ್ಲವೆ? ಯಾವುದು ಹುಟ್ಟಿವೆಯೋ ವ್ಯವಸ್ಥೆಗೆ ಒಳಪಟ್ಟಿದೆಯೋ ಅದು ನಶಿಸಲೇ ಬೇಕಲ್ಲವೇ? ಅದು ನಶಿಸದಿರಲು ಸಾಧ್ಯವೆ? ನಶಿಸದಿರುವಂಥ ಸ್ಥಿತಿ ಇರುವುದೇ ಇಲ್ಲ, ದೇವತೆಗಳು ನಮ್ಮನ್ನು ಖಂಡಿಸುತ್ತಾರೆ.”
“ಭಂತೆ, ಆಯುಷ್ಮಂತನಾದ ಅನುರುದ್ಧನ ಮನಸ್ಸಿನಲ್ಲಿರುವ ದೇವತೆಗಳು ಯಾವುವು?”
“ಆನಂದ, ಪೃಥ್ವಿಯನ್ನು ಅರಿಯಬಲ್ಲಂಥ ಮನಸ್ಸನ್ನು ಹೊಂದಿರುವ ದೇವತೆಗಳು ಕೆಲವು ಆಕಾಶದಲ್ಲಿದ್ದಾರೆ. ಅವರು ಕೂದಲನ್ನು ಕಿತ್ತುಕೊಂಡು ಭೂಮಿಯ ಮೇಲೆ ಬಿದ್ದು ಒದ್ದಾಡಿಕೊಂಡು ಅಳುತ್ತಾರೆ- ‘ಭಗವಾನರು ಬಹುಬೇಗನೆ ಪರಿನಿಬ್ಬಾನವನ್ನು ಪಡೆದರು, ಸುಗತರು ಬಹುಬೇಗನೆ ಪರಿನಿಬ್ಬಾನವನ್ನು ಪಡೆದರು. ಲೋಕದ ಕಣ್ಣು ಅಂತರ್ಧಾನವಾಯಿತು’ ಎಂದು ಅಳುತ್ತಾರೆ. ಅನಂದ, ಪೃಥ್ವಿಯನ್ನು ಅರಿಯಬಲ್ಲಂಥ ದೇವತೆಗಳು ಭೂಮಿಯಲ್ಲಿದ್ದಾರೆ. ಅವರು ಕೂದಲನ್ನು ಕಿತ್ತುಕೊಂಡು ತೋಳುಗಳನ್ನು ಚಾಚಿಕೊಂಡು ಭೂಮಿಯ ಮೇಲೆ ಬಿದ್ದು ಒದ್ದಾಡಿಕೊಂಡು ಅಳುತ್ತಾರೆ. ‘ಭಗವಾನರು ಬಹುಬೇಗನೆ ಪರಿನಿಬ್ಬಾನವನ್ನು ಪಡೆದರು. ಸುಗತರು ಬಹುಬೇಗನೆ ಪರಿನಿಬ್ಬಾನವನ್ನು ಪಡೆದರು. ಲೋಕದ ಕಣ್ಣು ಅಂತರ್ಧಾನವಾಯಿತು’ ಎಂದು ಅಳುತ್ತಾರೆ. ಆದರೆ ವೀತರಾಗದೇವತೆಗಳು ‘ಸಂಖಾರಗಳು ಅನಿತ್ಯ, ಅವು ನಶಿಸದಿರುವುದು ಸಾಧ್ಯವೇ ಇಲ್ಲ’ ಎಂಬುದನ್ನು ಮರೆಯದೆ ಅದನ್ನು ಅರ್ಥಮಾಡಿಕೊಂಡು ಸಮಾಧಾನಪಟ್ಟುಕೊಳ್ಳುತ್ತಾರೆ. “ಆಮೇಲೆ ಆಯುಷ್ಮಂತನಾದ ಅನುರುದ್ಧನೂ ಆಯುಷ್ಮಂತನಾದ ಆನಂದನೂ ಉಳಿದುಕೊಂಡಿದ್ದ ರಾತ್ರಿಯ ಭಾಗದಲ್ಲಿ ಧಮ್ಮವನ್ನು ಕುರಿತು ವಿಚಾರ ಮಾಡಿದರು.
ಆಗ ಆಯುಷ್ಮಂತನಾದ ಅನುರುದ್ಧ ಆನಂದನಿಗೆ- “ಗೆಳೆಯ, ಆನಂದ, ಕುಸಿನಾರಕ್ಕೆ ಹೋಗಿ ಅಲ್ಲಿಯ ಮಲ್ಲಿರಿಗೆ ‘ವಾಸೆಟ್ಠರೇ, ಭಗವಾನರು ಪರಿನಿಬ್ಬಾನವಾದರು’ ಎಂದು ತಿಳಿಸು” ಎಂದು ಹೇಳಿದನು. “ಹಾಗೆಯೇ ಆಗಲಿ ಭಂತೆ” ಎಂದು ಆನಂದನು ಆಯುಷ್ಮಂತನಾದ ಅನುರುದ್ಧನಿಗೆ ತಿಳಿಸಿ ಆ ಪೂರ್ವಾಹ್ನದಲ್ಲಿ ಚೀವರವನ್ನು ಹಾಕಿಕೊಂಡು ಪಿಂಡಪಾತ್ರೆಯ ಸಮೇತ ಮತ್ತೊಬ್ಬನೊಂದಿಗೆ ಕುಸಿನಾರಕ್ಕೆ ಹೋದನು. ಆ ಸಮಯದಲ್ಲಿ ಕುಸಿನಾರದ ಮಲ್ಲರು ಹತ್ತೂ ಜನದ ಕಟ್ಟಡದಲ್ಲಿ ಸೇರಿದ್ದರು. ಆಯುಷ್ಮಂತನಾದ ಆನಂದನು ಕುಸಿನಾರದಲ್ಲಿನ ಮಲ್ಲರ ಹತ್ತು ಜನರ ಕಟ್ಟಡದ ಹತ್ತಿರಕ್ಕೆ ಬಂದನು. ಅಲ್ಲಿನ ಮಲ್ಲರಿಗೆ- “ಭಗವಾನರು ಪರಿನಿಬ್ಬಾನವಾದರು, ವಾಸೆಟ್ಠರೇ, ಇನ್ನು ನಿಮಗೆ ಉಚಿತ ಕಂಡಂತೆ ಮಾಡಿ” ಎಂದು ಹೇಳಿದನು. ಆಯುಷ್ಮಂತನಾದ ಆನಂದನ ಈ ಮಾತುಗಳನ್ನು ಕೇಳಿದ ಮಲ್ಲರು, ಮಲ್ಲಪುತ್ರರು, ಅವರ ಪತ್ನಿಯರು, ಮಲ್ಲ ಗೃಹಿಣಿಯರು ದುಃಖ ತುಂಬಿದವರಾಗಿ ಭಾರವಾದ ಮನಸ್ಸಿನಿಂದ ಧಾವಿಸಿದರು. ಕೂದಲನ್ನು ಕಿತ್ತುಕೊಂಡು ತೋಳನ್ನು ಚಾಚಿಕೊಂಡು ಅಳುತ್ತಾ ಕೆಳಗೆ ಬಿದ್ದು ಒದ್ದಾಡಿದರು. ‘ಭಗವಾನರು ಬಹುಬೇಗನೆ ಪರಿನಿಬ್ಬಾನವನ್ನು ಪಡೆದರು. ಸುಗತರು ಬಹುಬೇಗನೆ ಪರಿನಿಬ್ಬಾನವಾದರು. ಲೋಕದ ಕಣ್ಣು ಮಾಯವಾಯಿತು’ ಎಂದುಕೊಂಡು ಅತ್ತರು.
ಬುದ್ಧ ಶರೀರ ಪೂಜೆ
ಆಗ ಕುಸಿನಾರದ ಮಲ್ಲರು “ಸೇವಕರೇ, ಕುಸಿನಾರದಲ್ಲಿರುವ ಎಲ್ಲ ಹೂವು, ಗಂಧ ತಾಳವಾದ್ಯಗಳನ್ನು ಶೇಖರಿಸಿ” ಎಂದು ತಮ್ಮ ಆಳುಗಳಿಗೆ ಅಣತಿ ಮಾಡಿದರು. ಆನಂತರ ಆ ಮಲ್ಲರು ಗಂಧಮಾಲೆ, ತಾಳವಾದ್ಯಗಳು ಮತ್ತು ಐನೂರು ಜೊತೆ ಬಟ್ಟೆಗಳನ್ನು ತೆಗೆದುಕೊಂಡು ಭಗವಾನರ ಶರೀರವಿದ್ದ ಉಪವತ್ತನದ ಹತ್ತಿರದ ಮಲ್ಲರಿಗೆ ಸೇರಿದ ಶಾಲವನಕ್ಕೆ ಬಂದರು. ಭಗವಂತನ ಶರೀರವನ್ನು ನೃತ್ಯದಿಂದ, ಸಂಗೀತದಿಂದ, ವಾದ್ಯಗಳಿಂದ, ಗಂಧಮಾಲೆಗಳಿಂದ ಸತ್ಕರಿಸಿದರು, ಸನ್ಮಾನಿಸಿದರು, ಗೌರವಿಸಿದರು, ಪೂಜಿಸಿದರು. ತಮ್ಮ ವಸ್ತ್ರಗಳಿಂದಲೇ ಮಂಟಪವನ್ನು ಮಾಡಿದರು. ಹೀಗೆ ಒಂದು ದಿವಸ ಹೋಯಿತು.
ಆ ಮಲ್ಲರು ಹೀಗೆಂದುಕೊಂಡರು- “ಭಗವಾನರ ದೇಹವನ್ನು ಸುಡುವುದಕ್ಕೆ ಇದು ಸಕಾಲವಲ್ಲ. ನಾಳೆ ಭಗವಾನರ ಶರೀರವನ್ನು ದಹನ ಮಾಡೋಣ.” ಆಮೇಲೆ ಅವರು ಭಗವಾನರ ಶರೀರವನ್ನು ನೃತ್ಯಗೀತವಾದನಗಳಿಂದ, ಮಾಲೆಗಂಧಗಳಿಂದ ಸತ್ಕರಿಸಿದರು, ಗೌರವಿಸಿದರು, ಪೂಜಿಸಿದರು, ವಸ್ತ್ರಗಳನ್ನು ಅರ್ಪಿಸಿದರು. ಎರಡನೆಯ ದಿವಸವನ್ನೂ, ಮೂರನೆಯ ದಿವಸವನ್ನೂ, ನಾಲ್ಕು ಐದು ಮತ್ತು ಆರನೆಯ ದಿವಸವನ್ನೂ ಹಾಗೆಯೇ ಕಳೆದರು.
ಆನಂತರ ಏಳನೆಯ ದಿವಸ ಮಲ್ಲರು ಹೀಗೆಂದುಕೊಂಡರು- “ಭಗವಾನರ ಶರೀರವನ್ನು ನೃತ್ಯ-ಗೀತೆಗಳಿಂದ, ವಾಹನದಿಂದ ಮಾಲೆ, ಗಂಧಗಳಿಂದ ಸತ್ಕರಿಸಿ, ಗೌರವಿಸಿ, ಸನ್ಮಾನಿಸಿ, ಪೂಜಿಸಿ ನಗರದ ದಕ್ಷಿಣಕ್ಕೆ ಹೊತ್ತುಕೊಂಡು ಹೋಗಿ ಹೊರಗಡೆ ಅದನ್ನು ದಹನ ಮಾಡೋಣ.”
ಆ ಸಮಯದಲ್ಲಿ ಮಲ್ಲರಲ್ಲಿ ಪ್ರಮುಖರಾದ ಎಂಟು ಜನರು ತಲೆಗೆ ಸ್ನಾನ ಮಾಡಿ ಹೊಸ ವಸ್ತ್ರಗಳನ್ನುಟ್ಟುಕೊಂಡು “ಭಗವಾನರ ಶರೀರವನ್ನು ಹೊತ್ತುಕೊಂಡು ಹೋಗೋಣ” ಎಂದು ಅದನ್ನು ಎತ್ತಲು ಯತ್ನಿಸಿದರು. ಆದರೆ ಎತ್ತುವುದಕ್ಕೆ ಸಾಧ್ಯವಾಗಲಿಲ್ಲ. ಆಗ ಕುಸಿನಾರದ ಮಲ್ಲರು ಆಯುಷ್ಮಂತನಾದ ಅನುರುದ್ಧನಿಗೆ ಹೀಗೆಂದರು- “ಭಂತೆ, ಅನುರುದ್ಧ, ಭಗವಾನರ ಶರೀರವನ್ನು ಹೊತ್ತುಕೊಂಡು ಹೋಗೋಣ ಎಂದು ತಲೆಗೆ ಸ್ನಾನ ಮಾಡಿ ಹೊಸ ಬಟ್ಟೆಯನ್ನುಟ್ಟುಕೊಂಡರೆ ಅದನ್ನು ನಾವು ಎಂಟುಜನ ಪ್ರಮುಖರಿದ್ದರೂ ಎತ್ತುವುದಕ್ಕೆ ಸಾಧ್ಯವಾಗಲೇ ಇಲ್ಲ. ಇದಕ್ಕೆ ಕಾರಣವೇನು?” “ನಿಮ್ಮ ಇಚ್ಛೆಯೇ ಒಂದಾಗಿದ್ದರೆ, ದೇವತೆಗಳ ಇಚ್ಛೆಯೇ ಬೇರೆಯಾಗಿದೆ.”
“ಭಂತೆ, ದೇವತೆಗಳ ಇಚ್ಛೆಯಾದರೂ ಏನು?”
“ಭಗವಾನರ ಶರೀರವನ್ನು ನೃತ್ಯಗೀತೆಗಳಿಂದ, ವಾದನದಿಂದ, ಗಂಧಮಾಲೆಗಳಿಂದ ಸತ್ಕರಿಸಿ, ಗೌರವಿಸಿ, ಸನ್ಮಾನಿಸಿ, ಪೂಜಿಸಿ, ನಗರದ ದಕ್ಷಿಣಕ್ಕೆ ಹೊತ್ತುಕೊಂಡು ನಗರದ ದಕ್ಷಿಣ ಭಾಗದಲ್ಲಿ ಬಯಲಿನಲ್ಲಿ ದಹನ ಮಾಡೋಣ ಎಂದು ನೀವೆಂದುಕೊಂಡಿದ್ದೀರಿ. ದೇವತೆಗಳ ಇಚ್ಛೆಯಾದರೋ ಬೇರೆಯಾಗಿದೆ. ಭಗವಾನರ ಶರೀರವನ್ನು ದಿವ್ಯನೃತ್ಯಗೀತಗಳಿಂದ, ವಾದನದಿಂದ, ಗಂಧದಿಂದ ಸತ್ಕರಿಸಿ, ಗೌರವಿಸಿ, ಸನ್ಮಾನಿಸಿ ಉತ್ತರಕ್ಕೆ ಹೊತ್ತುಕೊಂಡು ಹೋಗಿ ಉತ್ತರ ಬಾಗಿಲಿನ ಮೂಲಕ ನಗರವನ್ನು ಪ್ರವೇಶಿಸಿ ನಗರದ ಮಧ್ಯಭಾಗಕ್ಕೆ ತರೋಣ. ಪೂರ್ವದ ಬಾಗಿಲಿನಿಂದ ನಿಷ್ಕ್ರಮಿಸಿ ಪೂರ್ವದಲ್ಲಿರುವ ಮಕುಟಬಂಧನ ಎಂಬ ಮಲ್ಲರ ಚೈತ್ಯಕ್ಕೆ ತೆಗೆದುಕೊಂಡು ಹೋಗೋಣ, ಭಗವಂತನ ಶರೀರವನ್ನು ಅಲ್ಲಿ ದಹಿಸೋಣ’ ಎಂದುಕೊಂಡಿದ್ದಾರೆ.
“ಭಂತೆ, ದೇವತೆಗಳ ಇಚ್ಛೆಯಂತೇ ಆಗಲಿ”. ಆ ಸಮಯದಲ್ಲಿ ಕುಸಿನಾರದ ಬೀದಿಯ ತೊಟ್ಟಿಗಳು ತುಂಬುವಂತೆ ಇಡೀ ಪಟ್ಟಣವು ಮಂದಾ ಪುಷ್ಪದಿಂದ ತುಂಬಿಹೋಯಿತು. ಆಗ ದೇವತೆಗಳೂ ಕುಸಿನಾರದ ಮಲ್ಲರೂ ಭಗವಾನರ ಶರೀರವನ್ನು ದಿವ್ಯವಾದ ನೃತ್ಯಗೀತೆಗಳಿಂದ, ವಾದನದಿಂದ, ಮಾಲೆ-ಗಂಧಗಳಿಂದ ಸತ್ಕರಿಸಿ, ಗೌರವಿಸಿ, ಸನ್ಮಾನಿಸಿ, ಪೂಜಿಸಿ, ನಗರದ ಉತ್ತರ ಬಾಗಿಲಿಗೆ ಹೊತ್ತುಕೊಂಡು ಹೋಗಿ ಉತ್ತರದ ಬಾಗಿಲಿನಿಂದ ನಗರವನ್ನು ಪುನಃ ಪ್ರವೇಶಿಸಿ ನಗರದ ಮಧ್ಯಕ್ಕೆ ಕೊಂಡುಹೋಗಿ ಪೂರ್ವದ ಬಾಗಿಲಿನಿಂದ ನಿಷ್ಕ್ರಮಿಸಿ ನಗರದ ಪೂರ್ವದಲ್ಲಿರುವ ಮಲ್ಲರ ಮಕುಟ ಬಂಧನ ಎಂಬ ಚೈತ್ಯಕ್ಕೆ ತೆಗೆದುಕೊಂಡು ಹೋಗಿ ಅಲ್ಲಿ ಭಗವಾನರ ಶರೀರವನ್ನಿಟ್ಟರು.
ಆಮೇಲೆ ಕುಸಿನಾರದ ಮಲ್ಲರು ಆಯುಷ್ಮಂತನಾದ ಆನಂದನನ್ನು- “ತಥಾಗತರ ಶರೀರವನ್ನು ಏನು ಮಾಡೋಣ?” ಎಂದು ಕೇಳಿರು.
“ಚಕ್ರವರ್ತಿಯಾದವನ ಶರೀರವನ್ನು ಹೇಗೆ ಮಾಡುತ್ತಾರೋ ತಥಾಗತನ ಶರೀರವನ್ನು ಹಾಗೆಯೇ ಮಾಡಬೇಕು.”
“ಭಂತೆ, ಆನಂದ, ಚಕ್ರವರ್ತಿ ರಾಜನ ಶರೀರವನ್ನು ಹೇಗೆ ಸಂಸ್ಕಾರ ಮಾಡುತ್ತಾರೆ?”
“ವಾಸೆಟ್ಠರೆ, ಚಕ್ರವರ್ತಿ ರಾಜನ ಶರೀರವನ್ನು ಹೊಸ ಬಟ್ಟೆಯಿಂದ ಮುಚ್ಚುತ್ತಾರೆ. ಆಮೇಲೆ ಅರಳೆಯಿಂದ ಮುಚ್ಚುತ್ತಾರೆ. ಆಮೇಲೆ ಮತ್ತೊಂದು ಬಟ್ಟೆಯಿಂದ ಮುಚ್ಚುತ್ತಾರೆ. ಈ ಪ್ರಕಾರವಾಗಿ ಐನೂರುಸಾರಿ ಒಂದಾದ ಮೇಲೊಂದರಂತೆ ಚಕ್ರವರ್ತಿಯ ಶರೀರವನ್ನು ಮುಚ್ಚುತ್ತಾರೆ. ಆಮೇಲೆ ಎಳ್ಳೆಣ್ಣೆಯಿರುವ ಚಿನ್ನದ ಕೊಪ್ಪರಿಗೆಯಲ್ಲಿ ಶರೀರವನ್ನಿಡುತ್ತಾರೆ. ಅದನ್ನು ಅಂಥದೇ ಮತ್ತೊಂದು ಕೊಪ್ಪರಿಗೆಯಲ್ಲಿಡುತ್ತಾರೆ. ಆಮೇಲೆ ಶರೀರವನ್ನು ಪೂರ್ಣವಾಗಿ ಗಂಧದ ಮರದಿಂದಲೇ ಆದ ಚಿತೆಯ ಮೇಲಿಟ್ಟು ದಹನ ಮಾಡುತ್ತಾರೆ. ನಾಲ್ಕು ಮಾರ್ಗಗಳು ಸಂಧಿಸುವ ಕಡೆ ಚಕ್ರವರ್ತಿಯ ನೆನಪಿಗಾಗಿ ಸ್ತೂಪವನ್ನು ಕಟ್ಟಿಸುತ್ತಾರೆ. ರಾಜರ ರಾಜನಾದ ಚಕ್ರವರ್ತಿಯ ಶರೀರವನ್ನು ಈ ರೀತಿ ಸಂಸ್ಕಾರ ಮಾಡುತ್ತಾರೆ. ವಾಸೆಟ್ಠರೇ, ಚಕ್ರವರ್ತಿಯ ಶರೀರವನ್ನು ಹೇಗೆ ಸಂಸ್ಕಾರ ಮಾಡುತ್ತಾರೋ ತಥಾಗತನ ಶರೀರವನ್ನು ಹಾಗೆಯೇ ಮಾಡಬೇಕು. ನಾಲ್ಕು ಮಾರ್ಗಗಳು ಸಂಧಿಸುವ ಕಡೆಯಲ್ಲಿ ಸ್ತೂಪವನ್ನು ನಿರ್ಮಿಸಬೇಕು. ಅಲ್ಲಿ ಅದನ್ನು ಯಾರು ಹೂವು ಗಂಧ ಚೂರ್ಣಗಳಿಂದ ಪೂಜಿಸುತ್ತಾರೋ, ಗೌರವಿಸುತ್ತಾರೋ ಯಾರ ಚಿತ್ತವು ಅಲ್ಲಿ ಪ್ರಸನ್ನತೆಯಿಂದ ಕೂಡಿರುತ್ತವೋ ಅವರು ಬಹುಕಾಲ ಸುಖದಿಂದ ಖೇಮದಿಂದ ಇರುತ್ತಾರೆ.”
ಆಗ ಕುಸಿನಾರದ ಮಲ್ಲರು “ಮಲ್ಲರೆಲ್ಲರ ಬಳಿಯಿರುವ ಅರಳೆಯನ್ನು ಸಂಗ್ರಹಿಸಿ” ಎಂದು ಅವರ ಭೃತ್ಯರಿಗೆ ಆಜ್ಞೆ ಮಾಡಿದರು. ಆನಂತರ ಕುಸಿನಾರದ ಮಲ್ಲರು ಭಗವಾನರ ಶರೀರದ ಮೇಲೆ ಹೊಸ ಬಟ್ಟೆಯನ್ನು ಹೊದಿಸಿ ಅದರ ಮೇಲೆ ಅರಳೆಯನ್ನು ಸುತ್ತಿ ಆಮೇಲೆ ಮತ್ತೊಂದು ಹೊಸ ಬಟ್ಟೆಯನ್ನು ಹೊದಿಸಿದರು. ಈ ರೀತಿಯಲ್ಲಿ ಐನೂರುಸಾರಿ ಮಾಡಿದರು. ಆಮೇಲೆ ಅದನ್ನು ಎಳ್ಳೆಣ್ಣೆಯ ಚಿನ್ನದ ಕೊಪ್ಪರಿಗೆಯಲ್ಲಿಟ್ಟರು. ಅಂಥದೇ ಮತ್ತೊಂದು ಚಿನ್ನದ ಕೊಪ್ಪರಿಗೆಯಲ್ಲಿಟ್ಟರು. ಆಮೇಲೆ ಗಂಧದ ಮರದ ಚಿತೆಯ ಮೇಲಿಟ್ಟು ಭಗವಾನರ ಶರೀರವನ್ನು ದಹಿಸಿದರು.
ಮಹಾಕಸ್ಸಪ ಥೇರರ ಬಗ್ಗೆ
ಆ ಸಮಯದಲ್ಲಿ ಆಯುಷ್ಮಂತನಾದ ಮಹಾಕಸ್ಸಪನು ಪಾವಾದಿಂದ ಕುಸಿನಾರದ ಮಾರ್ಗದಲ್ಲಿ ಐನೂರು ಭಿಕ್ಷುಗಳ ದೊಡ್ಡ ಸಮೂಹದೊಂದಿಗೆ ಪ್ರಯಾಣ ಮಾಡುತ್ತಿದ್ದನು. ಆಗ ಮಹಾಕಸ್ಸಪನು ಮಾರ್ಗದ ಪಕ್ಕದಲ್ಲಿದ್ದ ಮರದ ಬುಡದಲ್ಲಿ ಕುಳಿತುಕೊಂಡನು. ಅದೇ ಸಮಯದಲ್ಲಿಯೇ ಮಂದಾರ ಪುಷ್ಪವನ್ನು ಹಿಡಿದುಕೊಂಡು ಒಬ್ಬ ಆಜೀವಕನು ಕುಸಿನಾರದಿಂದ ಪಾವಾಕ್ಕೆ ಬರುತ್ತಿದ್ದನು. ಆಯುಷ್ಮಂತನಾದ ಮಹಾಕಸ್ಸಪನು ಆತನನ್ನು ಕುರಿತು “ಗೆಳೆಯ, ನಮ್ಮ ಗುರುವು ನಿನಗೆ ಗೊತ್ತೇ?” ಎಂದು ಕೇಳಿದನು. “ಗೊತ್ತು ಗೆಳೆಯ, ಸಮಣ ಗೋತಮನು ಈ ಒಂದು ವರದ ಹಿಂದೆ ಪರಿನಿಬ್ಬಾನವನ್ನು ಹೊಂದಿದನು. ಆದುದರಿಂದಲೇ ನನಗೆ ಈ ಮಂದಾರ ಪುಷ್ಪವನ್ನು ತರಲು ಸಾಧ್ಯವಾಯಿತು. ಆಗಿನ್ನೂ ಎಲ್ಲ ಭಿಕ್ಷುಗಳು ರಾಗವನ್ನು ಗೆದ್ದಿರಲಿಲ್ಲ. ಅವರಲ್ಲಿ ಕೆಲವರು ತೋಳನ್ನು ಚಾಚಿ ಅತ್ತರು. ಕೆಲವರು ಕೆಳಗೆ ಬಿದ್ದು ಒದ್ದಾಡುತ್ತಾ- “ಭಗವಾನರು ಬಹುಬೇಗನೆ ಪರಿನಿಬ್ಬಾನವಾದರು. ಬಹುಬೇಗನೆ ಸುಗತರು ಪರಿನಿಬ್ಬಾನವಾದರು. ಲೋಕದ ಕಣ್ಣು ಬಹುಬೇಗನೆ ಮಾಯವಾಯಿತು” ಎಂದುಕೊಳ್ಳುತ್ತಿದ್ದರು. ಯಾವ ಭಿಕ್ಷುಗಳು ರಾಗವನ್ನು ಗೆದ್ದ ಸ್ಮೃತಿಯುಲ್ಳವರಾಗಿ ಅರಿತವರಾಗಿದ್ದರೋ ಅವರು ‘ಸಂಖಾರಗಳೆಲ್ಲಾ ಅನಿತ್ಯವಾದವುಗಳು, ಅನಿತ್ಯವಾಗಿಲ್ಲದಿರುವುದು ಸಾಧ್ಯವೇ ಇಲ್ಲ’ ಎಂಬುದನ್ನು ತಿಳಿದುಕೊಂಡಿದ್ದರು.
ಆ ಸಮಯದಲ್ಲಿ ಸುಭದ್ದ*ನೆಂಬ ವೃದ್ಧ ಪಬ್ಬಜಿತನು ಆ ಗುಂಪಿನಲ್ಲಿದ್ದನು. ಆತನು ಭಿಕ್ಷುಗಳಿಗೆ ಹೀಗೆ ಹೇಳಿದನು- “ಗೆಳೆಯರೆ, ಸಾಕು, ಅಳು ನಿಲ್ಲಿಸಿ. ಶೋಕಪಡಬೇಡಿ, ಸಂಕಟಪಡಬೇಡಿ. ಆ ಮಹಾಸಮಣನ ಹಿಡಿತದಿಂದ ಮುಕ್ತರಾಗಿದ್ದೇವೆ, ‘ಇದು ಸರಿಯಾದುದು, ಇದು ಉಚಿವಾದುದಲ್ಲ’ ಎಂದು ಅವನು ಉಪದ್ರವವನ್ನು ಕೊಡುತ್ತಿದ್ದನು. ಇನ್ನುಮುಂದೆ ನಮಗೆ ಇಚ್ಛೆಯಾದುದನ್ನು ಮಾಡಬಹುದು. ನಮಗೆ ಇಷ್ಟವಿಲ್ಲದುದನ್ನು ಬಿಡಬಹುದು”. ಇದನ್ನು ಕೇಳಿದ ಆಯುಷ್ಮಂತನಾದ ಮಹಾಕಸ್ಸಪನು ಭಿಕ್ಷುಗಳನ್ನು ಕರೆದನು. ಅವರನ್ನು ಕುರಿತು- “ಗೆಳೆಯರೆ, ಅಳಬೇಡಿ, ಸಂಕಟಪಡಬೇಡಿ. ‘ಪ್ರಿಯವಾಗಿರುವುದರಿಂದ ನಾವು ಬೇರೆಯಾಗಿ ದೂರವಾಗಿ ಸಂಬಂಧವಿಲ್ಲದಂತಾಗುತ್ತೇನೆ’ ಎಂದು ಭಗವಾನರಿಂದಲೇ ಕೇಳಿಲ್ಲವೇ? ಗೆಳೆಯರೆ, ಬೇರೆಯಾಗದೆ, ದೂರವಾಗದೆ, ಪರಸ್ಪರ ಸಂಬಂಧವಿಲ್ಲದಂಥ ಸ್ಥಿತಿ ಇರುವುದು ಸಾಧ್ಯವೇ ಇಲ್ಲ.”
ಆ ಸಮಯದಲ್ಲಿ ನಾಲ್ಕ ಮಲ್ಲ ಪ್ರಮುಖರು ತಲೆಗೆ ಸ್ನಾನ ಮಾಡಿ ಹೊಸ ಬಟ್ಟೆಯನ್ನು ಹಾಕಿಕೊಂಡಿದ್ದರು- ‘ನಾವು ಭಗವಾನರ ಚಿತೆಯನ್ನು ದಹನ ಮಾಡುತ್ತೇವೆ’ ಎಂದು ಅಂದುಕೊಂಡಿದ್ದರು. ಆದರೆ ಅವರು ದಹನ ಮಾಡಲು ಆಗಲೇ ಇಲ್ಲ. ಆಗ ಕುಸಿನಾರದ ಮಲ್ಲರು ಅನುರುದ್ಧನನ್ನು ಕುರಿತು ಇಂತೆಂದರು- “ಭಂತೆ, ಅನುರುದ್ಧ, ಸ್ನಾನ ಮಾಡಿ, ಹೊಸ ಬಟ್ಟೆಯನ್ನುಟ್ಟುಕೊಂಡು- ‘ನಾವು ಭಗವಾನರ ಚಿತೆಯನ್ನು ದಹನ ಮಾಡುತ್ತೇವೆ’ ಎಂದುಕೊಂಡಿದ್ದ ಮಲ್ಲ ಪ್ರಮುಖರು ದಹನ ಮಾಡಲು ಆಗದಿರಲು ಕಾರಣವೇನು?” ಎಂದರು.
“ದೇವತೆಗಳ ಉದ್ದೇಶವೇ ಬೇರೆಯಾಗಿದೆ, ವಾಸೆಟ್ಠರೇ.”
“ದೇವತೆಗಳ ಉದ್ದೇಶವೇನು, ಭಂತೆ ?”
“ದೇವತೆಗಳ ಉದ್ದೇಶವು ಆಯುಷ್ಮಂತನಾದ ಮಹಾಕಸ್ಸಪನು ಪಾವಾದಿಂದ ಕುಸಿನಾರದ ಹಾದಿಯಲ್ಲಿ ಐನೂರು ಭಿಕ್ಷುಗಳ ಒಂದು ದೊಡ್ಡ ಸಮೂಹದೊಂದಿಗೆ ಬರುತ್ತಿದ್ದಾನೆ. ಆತನು ಭಗವಾನರ ಪಾದಕ್ಕೆ ನಮಸ್ಕರಿಸುವವರೆಗೆ ಅವರ ಚಿತೆಗೆ ಬೆಂಕಿ ಹತ್ತಬಾರದು ಎಂಬುದಾಗಿದೆ.”
“ದೇವತೆಗಳ ಉದ್ದೇಶವಿದ್ದಂತೆಯೇ ಆಗಲಿ ಭಂತೆ.”
ಆಗ ಆಯುಷ್ಮಂತನಾದ ಮಹಾಕಸ್ಸಪನು ಕುಸಿನಾರದ ಮಕುಟಬಂಧನ ಎಂಬ ಹೆಸರಿನ ಮಲ್ಲರ ಚೈತ್ಯದ ಸಮೀಪದಲ್ಲಿದ್ದ ಭಗವಾನರ ಚಿತೆಯ ಹತ್ತಿರಕ್ಕೆ ಬಂದನು. ತನ್ನ ಚೀವರವನ್ನು ಒಂದು ಮಗ್ಗುಲಿಗೆ ಸವರಿಸಿಕೊಂಡು ಅಂಜಲೀಬದ್ಧನಾಗಿ ಪ್ರಣಾಮವನ್ನು ಮಾಡಿ ಚಿತೆಯನ್ನು ಪ್ರದಕ್ಷಿಣೆ ಮಾಡಿ ಭಗವಾನರ ಪಾದಗಳಿಗೆ ತಲೆಬಾಗಿ ವಂದಿಸಿದನು. ಅವನ ಜೊತೆಗಿದ್ದ ಐನೂರು ಭಿಕ್ಷುಗಳೂ ತಮ್ಮ ತಮ್ಮ ಚೀವರಗಳನ್ನು ಒಂದುಕಡೆ ಮಾಡಿಕೊಂರು ಅಂಜಲೀಬದ್ಧರಾಗಿ ಪ್ರಣಾಮವನ್ನು ಮಾಡಿ ಭಗವಾನರ ಪಾದಗಳಿಗೆ ತಲೆಬಾಗಿ ನಮಸ್ಕರಿಸಿದರು. ಹೀಗೆ ಐನೂರು ಭಿಕ್ಷುಗಳು ಅವನಂತೆಯೇ ಭಗವಾನರಿಗೆ ವಂದಿಸಿದ ಮೇಲೆ ಮಹಾಕಸ್ಸಪನು ತಾನೇ ಚಿತೆಗೆ ಅಗ್ನಿಸ್ಪರ್ಶ ಮಾಡಿಸಿದನು.
ಭಗವಾನರ ಶರೀರದಲ್ಲಿನ ಚರ್ಮ, ಮಾಂಸ, ನರಕೀಲುಗಳ ನಡುವಿರುವ ರಸಗಳು ಉರಿಯುತ್ತಿದ್ದಾಗ ಹೊಗೆ ಬರಲಿಲ್ಲ. ಎಲ್ಲ ಮುಗಿದುಹೋದಾಗ ಭಸ್ಮವೂ ಉಳಿಯಲಿಲ್ಲ. ಅಸ್ತಿಯೊಂದು ಮಾತ್ರ ಉಳಿಯಿತು. ಎಣ್ಣೆ ಅಥವಾ ತುಪ್ಪವು ಉರಿದು ಹೋದಾಗ ಯಾವ ಮಸಿಯಾಗಲೀ, ಬೂದಿಯಾಗಲೀ ಉಳಿಯದಂತೆ ಚರ್ಮ, ಮಾಂಸ, ಕೀಲುಗಳ ನಡುವಿನ ರಸ ಯಾವುದೂ ಉಳಿಯದಂತೆ ಭಗವಾನರ ಶರೀರವು ಉರಿದುಹೋಯಿತು. ಐನೂರು ವಸ್ತ್ರಗಳಲ್ಲಿ ಅತಿ ಹೊರಗಿನ ಮತ್ತು ಅತ್ಯಂತ ಒಳಗಿನ ಭಾಗಗಳು ಮಾತ್ರ ದಹಿಸಿಹೋದುವು, ಮತ್ತಾವುವೂ ದಹಿಸಲಿಲ್ಲ. ಭಗವಾನರ ಶರೀರವು ದಹಿಸಿ ಹೋದಮೇಲೆ ಅಂತರಿಕ್ಷದಿಂದ ಧಾರಾಕಾರವಾಗಿ ಮಳೆಯು ಸುರಿದು ಭಗವಾನರ ಚಿತೆಯನ್ನು ನಂದಿಸಿತು. ಭೂಮಿಯ ಒಳಗಿನಿಂದಲೂ ಬುಗ್ಗೆಗಳು ಎದ್ದು ಭಗವಾನರ ಚಿತೆಯನ್ನು ನಂದಿಸಿದುವು. ಕುಸಿನಾರದ ಮಲ್ಲರೂ ಗಂಧೋದಕದಿಂದ ಭಗವಾನರ ಚಿತೆಯನ್ನು ನಂದಿಸಿದರು. ಆ ಮಲ್ಲರು ತಮ್ಮ ಹತ್ತುಜನರ ಕಟ್ಟಡದಲ್ಲಿ ಶಸ್ತ್ರಗಳ ಪಂಜರವನ್ನು ಮಾಡಿ ಬಿಲ್ಲುಗಳಿಂದಲೇ ಪ್ರಾಕಾರವನ್ನು ಕಟ್ಟಿ, ಭಗವಾನರ ಶರಿರಶೇಷವನ್ನು ನೃತ್ಯಗೀತ ವಾದ್ಯಗಳಿಂದ ಹೂಗಂಧಗಳಿಂದ ಒಂದುವಾರ ಸತ್ಕರಿಸಿದರು, ಗೌರವ ತೋರಿಸಿದರು, ಸನ್ಮಾನ ಮಾಡಿದರು, ಪೂಜಿಸಿದರು.
ಶರೀರಧಾತುವಿನ ವಿಭಜನೆ
ಮಗಧದ ರಾಜ ವೇದೇಹಿಪುತ್ತ ಅಜಾತಸತ್ತುವು ‘ಭಗವಾನರು ಕುಸಿನಾರದಲ್ಲಿ ಪರಿನಿಬ್ಬಾನವನ್ನು ಪಡೆದರು’ ಎಂಬುದನ್ನು ಕೇಳಿದನು. ಕುಸಿನಾರದ ಮಲ್ಲರ ಹತ್ತಿರಕ್ಕೆ ದೂತನನ್ನು ಕಳುಹಿಸಿದನು. “ಭಗವಾನರು ಕ್ಷತ್ರಿಯರು, ನಾವೂ ಕ್ಷತ್ರಿಯರು. ನಾವು ಭಗವಾನರ ಶರೀರದಲ್ಲಿನ ಒಂದು ಭಾಗವನ್ನು ಪಡೆಯಲು ಅರ್ಹರಿದ್ದೇವೆ. ಭಗವಾನರ ಶರೀರದ ಭಾಗದ ಮೇಲೆ ಒಂದು ಸ್ತೂಪವನ್ನು ಕಟ್ಟಿಸುತ್ತೇವೆ, ಹಬ್ಬವನ್ನು ಮಾಡುತ್ತೇವೆ” ಎಂದು ತಿಳಿಸುವಂತೆ ಹೇಳಿ ಕಳುಹಿಸಿದನು.
ವೇಸಾಲಿಯ ಲಿಚ್ಛವಿಗಳು ‘ಭಗವಾನರು ಕುಸಿನಾರದಲ್ಲಿ ಪರಿನಿಬ್ಬಾನವನ್ನು ಪಡೆದರು’ ಎಂಬುದನ್ನು ಕೇಳಿದರು. ಅವರೂ ಕುಸಿನಾರದ ಮಲ್ಲರ ಹತ್ತಿರಕ್ಕೆ ದೂತನನ್ನು ಕಳಿಸಿದರು. “ಭಗವಾನರು ಕ್ಷತ್ರಿಯರು, ನಾವೂ ಕ್ಷತ್ರಿಯರು. ನಾವು ಭಗವಾನರ ಶರೀರದಲ್ಲಿನ ಒಂದು ಭಾಗವನ್ನು ಪಡೆಯಲು ಅರ್ಹರಿದ್ದೇವೆ. ಭಗವಾನರ ಶರೀರದ ಭಾಗದ ಮೇಲೆ ಒಂದು ಸ್ತೂಪವನ್ನು ಕಟ್ಟಿಸುತ್ತೇವೆ, ಹಬ್ಬವನ್ನು ಮಾಡುತ್ತೇವೆ” ಎಂದು ತಿಳಿಸುವಂತೆ ಹೇಳಿ ಕಳುಹಿಸಿದರು. ಕಪಿಲವತ್ಥುವಿನ ಶಾಕ್ಯರು ‘ಭಗವಾನರು ಕುಸಿನಾರದಲ್ಲಿ ಪರಿನಿಬ್ಬಾನವನ್ನು ಪಡೆದರು’ ಎಂಬುದನ್ನು ಕೇಳಿದರು. ಅವರು ಕುಸಿನಾರದ ಮಲ್ಲರ ಹತ್ತಿರಕ್ಕೆ ದೂತನನ್ನು ಕಳಿಸಿದರು. “ಭಗವಾನರು ನಮ್ಮ ಜಾತಿ ಶ್ರೇಷ್ಠರು, ಭಗವಾನರ ಶರೀರದ ಒಂದು ಭಾಗವನ್ನು ಪಡೆಯಲು ನಾವು ಅರ್ಹರಾಗಿದ್ದೇವೆ. ಭಗವಾನರ ಶರೀರದ ಭಾಗದ ಮೇಲೆ ಒಂದು ಸ್ತೂಪವನ್ನು ಕಟ್ಟಿಸುತ್ತೇವೆ, ಹಬ್ಬವನ್ನು ಮಾಡುತ್ತೇವೆ” ಎಂದು ಹೇಳಿ ಕಳುಹಿಸಿದರು.
ಅಲ್ಲಕಪ್ಪಕದ ಬುಲಿಯರು ‘ಭಗವಾನರು ಕುಸಿನಾರದಲ್ಲಿ ಪರಿನಿಬ್ಬಾನವನ್ನು ಪಡೆದರು’ ಎಂಬುದನ್ನು ಕೇಳಿದರು. ಅವರೂ ಕುಸಿನಾರದ ಮಲ್ಲರ ಹತ್ತಿರಕ್ಕೆ ದೂತನನ್ನು ಕಳಿಸಿದರು. “ಭಗವಾನರು ಕ್ಷತ್ರಿಯರು, ನಾವೂ ಕ್ಷತ್ರಿಯರು. ನಾವು ಭಗವಾನರ ಶರೀರದಲ್ಲಿನ ಒಂದು ಭಾಗವನ್ನು ಪಡೆಯಲು ಅರ್ಹರಿದ್ದೇವೆ. ಭಗವಾನರ ಶರೀರದ ಭಾಗದ ಮೇಲೆ ಒಂದು ಸ್ತೂಪವನ್ನು ಕಟ್ಟಿಸುತ್ತೇವೆ, ಹಬ್ಬವನ್ನು ಮಾಡುತ್ತೇವೆ” ಎಂದು ತಿಳಿಸುವಂತೆ ಆ ದೂತನಿಗೆ ಹೇಳಿ ಕಳಿಸಿದರು.
ರಾಮಗಾಮದ ಕೋಲಿಯರು ‘ಭಗವಾನರು ಕುಸಿನಾರದಲ್ಲಿ ಪರಿನಿಬ್ಬಾನವನ್ನು ಪಡೆದರು’ ಎಂಬುದನ್ನು ಕೇಳಿದರು. ಅವರೂ ಕುಸಿನಾರದ ಮಲ್ಲರ ಹತ್ತಿರಕ್ಕೆ ದೂತನನ್ನು ಕಳಿಸಿದರು. “ಭಗವಾನರು ಕ್ಷತ್ರಿಯರು, ನಾವೂ ಕ್ಷತ್ರಿಯರು. ನಾವು ಭಗವಾನರ ಶರೀರದಲ್ಲಿನ ಒಂದು ಭಾಗವನ್ನು ಪಡೆಯಲು ಅರ್ಹರಿದ್ದೇವೆ. ಭಗವಾನರ ಶರೀರದ ಭಾಗದ ಮೇಲೆ ಒಂದು ಸ್ತೂಪವನ್ನು ಕಟ್ಟಿಸುತ್ತೇವೆ, ಹಬ್ಬವನ್ನು ಮಾಡುತ್ತೇವೆ” ಎಂದು ತಿಳಿಸುವಂತೆ ಆ ದೂತನಿಗೆ ಹೇಳಿ ಕಳಿಸಿದರು.
ವಟ್ಠದೀಪದ ಬ್ರಾಹ್ಮಣನೊಬ್ಬನು ‘ಭಗವನರು ಕುಸಿನಾರದಲ್ಲಿ ಪರಿನಿಬ್ಬಾನ ಹೊಂದಿದರು’ ಎಂಬುದನ್ನು ಕೇಳಿದನು. ಅವನೂ ಕುಸಿನಾರದ ಮಲ್ಲರ ಹತ್ತಿರಕ್ಕೆ ದೂತನನ್ನು ಕಳಿಸಿದನು. “ಭಗವಾನರು ಕ್ಷತ್ರಿಯರು, ನಾನು ಬ್ರಾಹ್ಮಣ. ಭಗವಾನರ ಶರೀರದ ಒಂದು ಭಾಗದ ಮೇಲೆ ನನಗೂ ಹಕ್ಕಿದೆ. ಅದರ ಮೇಲೆ ಸ್ತೂಪವನ್ನು ಕಟ್ಟಿಸುತ್ತೇನೆ, ಹಬ್ಬವನ್ನು ಮಾಡುತ್ತೇನೆ” ಎಂದು ತಿಳಿಸುವಂತೆ ದೂತನಿಗೆ ಹೇಳಿ ಕಳಿಸಿದನು.
ಪಾವೆಯದ ಮಲ್ಲರು “ಭಗವಾನರು ಕುಸಿನಾರದಲ್ಲಿ ಪರಿನಿಬ್ಬಾನವನ್ನು ಪಡೆದರು” ಎಂಬುದನ್ನು ಕೇಳಿದರು. ಅವರು ಕುಸಿನಾರದ ಮಲ್ಲರ ಹತ್ತಿರಕ್ಕೆ ದೂತನನ್ನು ಕಳಿಸಿದರು. “ಭಗವಾನರು ಕ್ಷತ್ರಿಯರು, ನಾವೂ ಕ್ಷತ್ರಿಯರು. ಭಗವಾನರ ಶರೀರದ ಒಂದು ಭಾಗದ ಮೇಲೆ ನಮಗೆ ಹಕ್ಕಿದೆ. ಅದರ ಮೇಲೆ ಒಂದು ಸ್ತೂಪವನ್ನು ಕಟ್ಟಿಸುತ್ತೇವೆ” ಎಂದು ತಿಳಿಸುವಂತೆ ಆ ದೂತನಿಗೆ ಹೇಳಿ ಕಳಿಸಿದರು.
ಇದನ್ನೆಲ್ಲಾ ಕೇಳಿದ ಕುಸಿನಾರದ ಮಲ್ಲರು ಸಂಘಕ್ಕೂ, ಗಣಕ್ಕೂ ಹೀಗೆ ಹೇಳಿದರು- ಭಗವಾನರು ನಮ್ಮ ಕ್ಷೇತ್ರದಲ್ಲಿಯೇ ಪರಿನಿಬ್ಬಾನವನ್ನು ಪಡೆದಿದ್ದಾರೆ. ನಾವು ಭಗವಾನರ ಶರೀರದ ಭಾಗಗಳನ್ನು ಯಾರಿಗೂ ಕೊಡುವುದಿಲ್ಲ.”
ಹೀಗೆ ಹೇಳಿದುದನ್ನು ಕೇಳಿದ ದೋಣ ಬ್ರಾಹ್ಮಣನು ಆ ಸಂಘಕ್ಕೂ ಗಣಕ್ಕೂ-
“ಪೂಜ್ಯರಾದವರು ಕೇಳಿದರೆನ್ನದೊಂದು ಮಾತು
ನಮ್ಮ ಬುದ್ಧರು ಕಾಂತಿಯನೆ ರಕ್ಷಿಪರು.
ಶರೀರ ಭಾಗಗಳಿಗೋಸುಗವೆ ಕಲವಾಡುವುದು ತರವಲ್ಲ, ಸರಿಯಲ್ಲ.
ಪೂಜ್ಯರೆಲ್ಲರು ಕಲೆತು ಸಂತಸವ ಹೊಂದುವುದು
ಶರೀರ ಭಾಗಗಳನೆಂಟು ಭಾಗವ ಮಾಡಿ;
ದಿಕ್ಕು ದಿಕ್ಕುಗಳಲ್ಲಿ ಸ್ತೂಪಗಳನೆ ಕಟ್ಟಿ
ಬಹುಜನರು ನಲಿಯುವುದು ಶ್ರೇಷ್ಠವಹ ಅರಿವಿನಾ ಪ್ರಭೆಯಲ್ಲಿ.”
“ಬ್ರಾಹ್ಮಣ, ನೀವೇ ಭಗವಾನರ ಶರೀರವನ್ನು ಎಂಟು ಸಮಭಾಗಗಳನ್ನಾಗಿ ಮಾಡಿ.” “ಹಾಗೆಯೇ ಆಗಲಿ ಗೆಳೆಯರೆ” ಎಂದು ಆ ದೋಣ ಬ್ರಾಹ್ಮಣನು ಅದರಂತೆ ಭಗವಾನರ ಶರೀರವನ್ನು ಎಂಟು ಸಮಭಾಗಗಳನ್ನಾಗಿ ಮಾಡಿ ಆ ಸಂಘಗಣಗಳಿಗೆ ಹೀಗೆ ಹೇಳಿದನು: “ಒಂದು ಪಾತ್ರೆಯನ್ನು ಕೊಡಿ. ನಾನು ಆ ಪಾತ್ರೆಯಲ್ಲಿ ಭಗವಾನರ ಶರೀರದ ಭಾಗಗಳನ್ನು ತುಂಬಿ ಪಾತ್ರೆಯ ಮೇಲೆ ಸ್ತೂಪವನ್ನು ಕಟ್ಟಿಸುತ್ತೇನೆ” ಎಂದನು. ದೋಣ ಬ್ರಾಹ್ಮಣನಿಗೆ ಅವರು ಪಾತ್ರೆಯನ್ನು ಕೊಟ್ಟರು.
ಪಿಪ್ಪಲಿ ವನದ ಮೋರಿಯರು ‘ಭಗವಾನರು ಕುಸಿನಾರದಲ್ಲಿ ಪರಿನಿಬ್ಬಾನವನ್ನು ಪಡೆದರು’ ಎಂಬುದನ್ನು ಕೇಳಿದರು. ಅವರು ಕುಸಿನಾರದ ಮಲ್ಲರ ಹತ್ತಿರಕ್ಕೆ ದೂತನನ್ನು ಕಳಿಸಿದರು: “ಭಗವಾನರು ಕ್ಷತ್ರಿಯರು, ನಾವೂ ಕ್ಷತ್ರಿಯರು. ಭಗವಾನರ ಶರೀರದ ಭಾಗದ ಮೇಲೆ ನಮಗೂ ಹಕ್ಕಿದೆ. ನಾವೂ ಅದರ ಮೇಲೆ ಸ್ತೂಪವನ್ನು ಕಟ್ಟಿಸುತ್ತೇವೆ ಹಬ್ಬವನ್ನು ಮಾಡುತ್ತೇವೆ” ಎಂದು ತಿಳಿಸುವಂತೆ ಅವನಿಗೆ ಹೇಳಿ ಕಳಿಸಿದರು.
“ಶರೀರದ ಭಾಗವಾವುದೂ ಇಲ್ಲ. ಎಲ್ಲ ಭಾಗಗಳು ಹಂಚಿಕೆಯಾಗಿ ಹೋಗಿವೆ. ಇಲ್ಲಿಂದ ಕೆಂಡಗಳನ್ನು ತೆಗೆದುಕೊಂಡು ಹೋಗಬಹುದು” ಎಂಬುದನ್ನು ಮೋರಿಯರು ಕೇಳಿದರು. ಅದರಂತೆ ಅವುಗಳನ್ನು ತೆಗೆದುಕೊಂಡು ಹೋದರು.
ಧಾತು ಸ್ತೂಪ ಪೂಜೆ
ಆನಂತರ ಮಗಧದ ರಾಜನಾದ ವೇದೇಹಿಪುತ್ತ ಅಜಾತಸತ್ತುವು ರಾಜಗಹದಲ್ಲಿ ಭಗವಾನರ ಶರೀರದ ಭಾಗದ ಮೇಲೆ ಸ್ತೂಪವನ್ನು ಕಟ್ಟಿಸಿ ಹಬ್ಬವನ್ನು ಮಾಡಿದನು. ವೇಸಾಲಿಯ ಲಿಚ್ಛವಿಗಳು ವೇಸಾಲಿಯಲ್ಲೂ, ಕಪಿಲವತ್ಥು ವಾಸಿಗಳಾದ ಶಾಕ್ಯರು ಕಪಿಲವತ್ಥುವಿನಲ್ಲೂ, ಅಲ್ಲಕಪ್ಪಿಯ ಬುಲಿಯರು ಅಲ್ಲಕಪ್ಪಿಯಲ್ಲೂ, ರಾಮಗಾಮದ ಕೋಲಿಯರು ರಾಮಗಾಮದಲ್ಲೂ, ವೆಟ್ಠದೀಪದ ಬ್ರಾಹ್ಮಣನು ವೆಟ್ಠದೀಪದಲ್ಲೂ, ಪಾವದ ಮಲ್ಲರು ಪಾವದಲ್ಲೂ, ಕುಸಿನಾರದ ಮಲ್ಲರು ಕುಸಿನಾರದಲ್ಲೂ, ಭಗವಾನರ ಶರೀರದ ಭಾಗಗಳ ಮೇಲೆ ಸ್ತೂಪವನ್ನು ಕಟ್ಟಿಸಿ ಹಬ್ಬವನ್ನು ಮಾಡಿದರು. ದೋಣ ಬ್ರಾಹ್ಮಣನು ಪಾತ್ರೆಯ ಮೇಲೆ ಸ್ತೂಪವನ್ನು ಕಟ್ಟಿಸಿ, ಹಬ್ಬವನ್ನು ಮಾಡಿದನು. ಪಿಪ್ಪಿಲಿವನದ ಮೋರಿಯರು ತಾವು ತೆಗೆದುಕೊಂಡು ಬಂದ ಆರಿಸಿದ ಕೆಂಡದ ಮೇಲೆ ಸ್ತೂಪವನ್ನು ಕಟ್ಟಿಸಿ ಹಬ್ಬವನ್ನು ಮಾಡಿದರು. ಹೀಗೆ ಎಂಟು ಶರೀರ ಸ್ತೂಪಗಳು ಒಂಭತ್ತನೆಯ ಪಾತ್ರೆಯ ಸ್ತೂಪವೂ ಹತ್ತನೆಯದಾಗಿ ಕೆಂಡದ ಸ್ತೂಪವೂ ನಿರ್ಮಾಣವಾದವು. ಹಿಂದೆ ಇದ್ದುದು ಹೀಗೆ:
ಚಕ್ಷುಮಂತನ ಶರೀರದೆಂಟು ದೊನ್ನೆಗಳುಂಟು
ಜಂಬುದ್ವೀಪದ ಜನರು ಪೂಜಿಪರು ಏಳು ಚೈತ್ಯಗಳ
ಪುರುಷೋತ್ತಮನ ಮತ್ತೊಂದು ದೊನ್ನೆಯನು
ಪೂಜಿಪನು ರಾಜಗಾಮದ ದೊರೆಯು ನಾಗರಾಜ ಮಹಿಪ
ದಿವ್ಯಲೋಕದೊಳುಂಟು ದಂತವೊಂದರ ಪೂಜೆ
ಗಾಂಧಾರ ಪುರದೊಳುಂಟು ಮತ್ತೊಂದರ ಪೂಜೆ
ಕಳಿಂಗರಾಜರು ಪೂಜಿಪರು ಇನ್ನೊಂದು ದಂತವನು
ನಾಗರಾಜನ ಪೂಜೆಗಿಹುದು ಮತ್ತೊಂದು ದಂತ
ವಸುಂಧರಕಾಯ್ತು ಅನರೂಪ ಕಾಂತಿ
ಗುರುವರನ ಶರೀರ ಫಜೆಯದರಿಂದ
ಚಕ್ಷುಮಂತನ ಶರೀರ ಪೂಜೆಯಿಂದಾಯ್ತು ಇಳೆಗೆ ಬಹುವಿಧದ ತೇಜ
ದೇವೇಂದ್ರ ನಾಗೇಂದ್ರ ನರೇಂದ್ರ ಪೂಜಿತಗೆ
ಮನುಜ ಶ್ರೇಷ್ಠರು ನಮಿಪೆ ಬುದ್ಧಭಗವಾನರಿಗೆ
ವಂದಿಸಿರೋ ನಮಿಸಿರೋ ಹಸ್ತಯುಗದಿಂ ನೀವು
ಶತಕಲ್ಪದೊಳು ಸಿಗದ ಬುದ್ಧ ಅರಹಂತರಿಗೆ
ದಂತಗಳು ನಲವತ್ತು ಕೇಶ ಲೋಮ ಲಸಿಕೆ ನರಮಂಡಲವು,
ದೇವಪೂಜೆಗೆ ಲಭಿಸಿ ಇಳೆಗೆ ಮಂಗಳವಾಯ್ತು.
ಇಲ್ಲಿಗೆ ಮಹಾಪರಿನಿಬ್ಬಾನ ಮೂರನೇ ಸುತ್ತ ಮುಗಿಯಿತು.
ಟಿಪ್ಪಣಿಗಳು [2]
English
Việt Ngữ