ಊಟಿಸುತ್ತಿದೆ

ಅನುವಾದಗಳು [22]

ದಸುತ್ತರ ಸುತ್ತ

ಹೀಗೇ ಕೇಳಿದ್ದೇನೆ;56 ಒಮ್ಮೆ ಭಗವಾನರು ಐನೂರು ಭಿಕ್ಷುಗಳ ದೊಡ್ಡ ಸಮೂಹದೊಂದಿಗೆ ಚಂಪಾನಗರದ ಹತ್ತಿರದಲ್ಲಿದ್ದ ಗಗ್ಗರ ಪುಷ್ಕರಣಿಯ ತೀರದಲ್ಲಿ ತಂಗಿದ್ದರು. ಅಲ್ಲಿ ಆಯುಷ್ಮಂತ ಸಾರಿಪುತ್ತನು ಭಿಕ್ಷುಗಳನ್ನು- “ಗೆಳೆಯ ಭಿಕ್ಷುಗಳೇ” ಎಂದು ಕರೆದನು. ಅವರು ಆಯುಷ್ಮಂತ ಸಾರಿಪುತ್ತನಿಗೆ “ಗೆಳೆಯ” ಎಂದು ಪ್ರತ್ಯುತ್ತರವಿತ್ತರು. ಆಗ ಆಯುಷ್ಮಂತ ಸಾರಿಪುತ್ತನು “ನಿಬ್ಬಾನವನ್ನು ಸಾಧಿಸಲು ಸಹಾಯವಾಗುವ ಹತ್ತರ ಗುಂಪುಗಳ ಧರ್ಮವನ್ನು ವಿವರಿಸುತ್ತೇನೆ. ಅದು ಎಲ್ಲ ಗಂಟುಗಳಿಂದ ನಿಮ್ಮನ್ನು ಬಿಡುಗಡೆ ಮಾಡುತ್ತದೆ, ದುಃಖವನ್ನು ಕೊನೆಗೊಳ್ಳಿಸುತ್ತದೆ” ಎಂದನು.

ಒಂದರ ಧರ್ಮ

“ಒಂದರ ಸಹಾಯವನ್ನು ಪಡೆಯಬೇಕು, ಒಂದನ್ನು ಬೆಳೆಸಿಕೊಳ್ಳಬೇಕು, ಒಂದನ್ನು ತಿಳಿದುಕೊಳ್ಳಬೇಕು, ಒಂದನ್ನು ಬಿಡಬೇಕು. ಹಾನಿಯನ್ನುಂಟುಮಾಡುವುದು ಒಂದಿದೆ, ವಿಶೇಷತೆಯನ್ನು ತರುವುದು ಒಂದಿದೆ, ಒಳಾರ್ಥವನ್ನು ತಿಳಿಯಲು ಕಠಿಣವಾದುದು ಒಂದಿದೆ, ಮೇಲಕ್ಕೆ ತರಬೇಕಾದುದು ಒಂದಿದೆ, ಸಂಪೂರ್ಣವಾಗಿ ಅರಿಯಬೇಕಾದುದು ಒಂದಿದೆ, ಸಾಕ್ಷಾತ್ಕರಿಸಿಕೊಳ್ಳಬೇಕಾದುದು ಒಂದಿದೆ. ಇದು ಒಂದೆನ್ನಿಸಿಕೊಳ್ಳುವ ಧರ್ಮ.

“ಸಹಾಯ ಪಡೆಯಬೇಕಾದ ಒಂದರ ಧರ್ಮ ಯಾವುದು? ಕುಶಲವಾದ ಭಾವನೆಗಳ ಬಗೆಗೆ ಎಚ್ಚರಿಕೆಯಿರಬೇಕು.”

“ಬೆಳೆಸಿಕೊಳ್ಳಬೇಕಾದ ಒಂದರ ಧರ್ಮ ಯಾವುದು? ಸಂತೋಷದ ಭಾವನೆಯಿಂದ ಕೂಡಿರುವ ಕಾಯಗತಾಸತಿ ಬೆಳೆಸಿಕೊಳ್ಳಬೇಕಾದ ಒಂದರ ಧರ್ಮ ಇದು. “ತಿಳಿದುಕೊಳ್ಳಬೇಕಾದ ಒಂದರ ಧರ್ಮ ಯಾವುದು? ಆಸವಗಳಿಗೂ ಉಪಾದಾನಕ್ಕೂ ಫಸ್ಸವೇ ಕಾರಣ. ಇದು ತಿಳಿದುಕೊಳ್ಳಬೇಕಾದ ಒಂದರ ಧರ್ಮ.

“ಬಿಡಬೇಕಾದ ಒಂದರ ಧರ್ಮ ಯಾವುದು? ದುರಭಿಮಾನ.

“ಹಾನಿಯನ್ನುಂಟುಮಾಡುವ ಒಂದರ ಧರ್ಮ ಯಾವುದು? ಮನಸ್ಸು ಬೆರೆಲ್ಲಿಯೋ ಚದುರಿ ಹೋಗಿದ್ದಾಗ ಮನನ ಮಾಡಲೆತ್ನಿಸುವುದು.

“ವಿಶೇಷತೆಯನ್ನು ತರುವ ಒಂದರ ಧರ್ಮ ಯಾವುದು? ದೃಢ ಮನಸ್ಸಿನಿಂದ ಮನನ ಮಾಡುವುದು.

“ತಿಳಿಯಲು ಕಠಿಣವಾದ ಒಳಾರ್ಥವನ್ನುಳ್ಳ ಒಂದರ ಧರ್ಮ ಯಾವುದು? ಚೇತೋ ಸಮಾಧಿಯ ಜೊತೆಗಿರುವ ಆನಂತರಿಕ ಸ್ಥಿತಿ.

“ಮೇಲಕ್ಕೆ ತರಬೇಕಾದ ಒಂದರ ಧರ್ಮ ಯಾವುದು? “ಅಕುಪ್ಪಞ್ಞಾಣ (ವಿಚಲಿತವಾಗದ ಸ್ಥಿತಿ).

“ಸಂಪೂರ್ಣವಾಗಿ ಅರಿಯಬೇಕಾದ ಒಂದರ ಧರ್ಮ ಯಾವುದು? ಎಲ್ಲ ಜೀವಿಗಳೂ ಆಹಾರವನ್ನೇ ಅವಲಂಬಿಸಿದೆ ಎನ್ನುವುದು.

“ಸಾಕ್ಷಾತ್ಕರಿಸಿಕೊಳ್ಳಬೇಕಾದ ಒಂದರ ಧರ್ಮ ಯಾವುದು? ಅಕುಪ್ಪ ಚೇತೋವಿಮುತ್ತಿ. (ವಿಚಲಿತವಾಗದ ಉತ್ಕೃಷ್ಟವಾದ ಚೇತೋವಿಮುಕ್ತಿ) ಇದು ಸಾಕ್ಷಾತ್ಕರಿಸಿಕೊಳ್ಳಬೇಕಾದ ಒಂದರ ಧರ್ಮ.

ಈ ಹತ್ತು ಧರ್ಮಗಳು ವಾಸ್ತವವಾಗಿರುವಂಥವು, ಸತ್ಯವಾಗಿರುವಂಥವು. ಇವು ಬೇರೆ ರೀತಿಯಲ್ಲಿ ಸಾಧ್ಯವಿಲ್ಲ. ತಥಾಗತನಾದ ಸಮ್ಮಾಸಂಬುದ್ಧನಿಂದ ಸ್ಪಷ್ಟವಾಗಿ ಅರಿತಿರುವಂಥವು.

ಎರಡರ ಧರ್ಮಗಳು

“ಸಹಾಯ ಪಡೆಯಬೇಕಾದ ಎರಡರ ಧರ್ಮಗಳಿವೆ. ಬೆಳೆಸಿಕೊಳ್ಳಬೇಕಾದ ಎರಡರ ಧರ್ಮಗಳಿವೆ. ತಿಳಿದುಕೊಳ್ಳಬೇಕಾದ ಎರಡರ ಧರ್ಮವಿದೆ. ಬಿಡಬೇಕಾದ ಎರಡರ ಧರ್ಮವಿದೆ. ಹಾನಿಯನ್ನುಂಟುಮಾಡುವ ಎರಡರ ಧರ್ಮವಿದೆ, ವಿಶೇಷತೆಯನ್ನು ಕೊಡುವ ಎರಡರ ಧರ್ಮವಿದೆ, ಒಳಾರ್ಥವನ್ನು ತಿಳಿಯಲು ಕಠಿಣವಾದ ಎರಡರ ಧರ್ಮವಿದೆ, ಮೇಲಕ್ಕೆ ತರಬೇಕಾದ ಎರಡರ ಧರ್ಮವಿದೆ, ಸಂಪೂರ್ಣವಾಗಿ ಅರಿಯಬೇಕಾದ ಎರಡರ ಧರ್ಮವಿದೆ, ಸಾಕ್ಷಾತ್ಕರಿಸಿಕೊಳ್ಳಬೇಕಾದ ಎರಡರ ಧರ್ಮವಿದೆ.

“ಸಹಾಯ ಪಡೆಯಬೇಕಾದ ಎರಡರ ಧರ್ಮ ಯಾವುದು? ಸ್ಮೃತಿ ಮತ್ತು ಅದರೊಟ್ಟಿಗಿರುವ ಎಚ್ಚರಿಕೆ.

“ಬೆಳೆಸಿಕೊಳ್ಳಬೇಕಾದ ಎರಡರ ಧರ್ಮ ಯಾವುದು? ಸಮಸ್ಥಿತಿಯಲ್ಲಿರುವ ಚಿತ್ತ ಮತ್ತು ವಿಪಸ್ಸನ.

“ತಿಳಿಯಬೇಕಾದ ಎರಡರ ಧರ್ಮ ಯಾವುದು ? ನಾಮ ಮತ್ತು ರೂಪ.

“ಬಿಡಬೇಕಾದ ಎರಡರ ಧರ್ಮ ಯಾವುದು? ಅವಿಜ್ಜಾ ಮತ್ತು ಭವತಣ್ಹಾ.

“ಹಾನಿಯನ್ನುಂಟುಮಾಡುವ ಎರಡರ ಧರ್ಮ ಯಾವುದು? ಕೆಟ್ಟ ಮಾತು ಮತ್ತು ಕೆಟ್ಟವರ ಸಂಗ.

“ವಿಶೇಷತೆಯನ್ನು ಕೊಡುವ ಎರಡರ ಧರ್ಮವು ಯಾವುದು? ಒಳ್ಳೆಯ ಮಾತು ಮತ್ತು ಸಜ್ಜನರ ಸಂಗ.

“ತಿಳಿಯಲು ಕಠಿಣವಾದ ಒಳಾರ್ಥವನ್ನುಳ್ಳ ಎರಡರ ಧರ್ಮ ಯಾವುದು? ಜೀವಿಗಳಿಗೆ ಮಲಿನವನ್ನುಂಟುಮಾಡುವುದಕ್ಕಿರುವ ಕಾರಣ, ಜೀವಿಗಳನ್ನು ಶುದ್ಧಿಗೊಳಿಸುವುದಕ್ಕಿರುವ ಕಾರಣ.

“ಮೇಲಕ್ಕೆ ತರಬೇಕಾದ ಎರಡರ ಧರ್ಮ ಯಾವುದು? ಎರಡರ ಜ್ಞಾನಗಳು, ಕ್ಷಯದ ಜ್ಞಾನ ಮತ್ತು ಇನ್ನೊಮ್ಮೆ ಹುಟ್ಟದಿರಲು ಬೇಕಾದ ಜ್ಞಾನ.

“ಸಂಪೂರ್ಣವಾಗಿ ಅರಿಯಬೇಕಾದ ಎರಡರ ಧರ್ಮ ಯಾವುದು? ಎರಡು ಧಾತುಗಳು. ಹೊರ ಪ್ರಪಂಚಕ್ಕೆ ಸಂಬಂಧಿಸಿದ ಧಾತು ಮತ್ತು ಹೊರ ಪ್ರಪಂಚದ ಬಿಡುಗಡೆಗೆ ಸಂಬಂಧಿಸಿದ ಧಾತು.

“ಸಾಕ್ಷಾತ್ಕರಿಸಿಕೊಳ್ಳಬೇಕಾದ ಎರಡರ ಧರ್ಮ ಯಾವುದು? ವಿಜ್ಜಾ ಮತ್ತು ವಿಮುಕ್ತಿ.

“ಈ ಇಪ್ಪತ್ತು ಧರ್ಮಗಳು ವಾಸ್ತವವಾಗಿರುವಂಥವು. ಸತ್ಯವಾಗಿರುವಂಥವು. ಬೇರೆ ರೀತಿಯಲ್ಲಿ ಇವಿರಲು ಸಾಧ್ಯವಿಲ್ಲ. ಭಿನ್ನವಾಗಿರಲು ಸಾಧ್ಯವಿಲ್ಲ. ಇವು ತಥಾಗತನಾದ ಸಮ್ಮಾಸಂಬುದ್ಧರು ಸ್ಪಷ್ಟವಾಗಿ ಅರಿತಿರುವಂಥವು.

ಮೂರರ ಧರ್ಮ

“ಸಹಾಯ ಪಡೆಯಬೇಕಾದ ಮೂರರ ಧರ್ಮಗಳಿವೆ. ಬೆಳೆಸಿಕೊಳ್ಳಬೇಕಾದ... ಸಾಕ್ಷಾತ್ಕರಿಸಿಕೊಳ್ಳಬೇಕಾದ ಮೂರರ ಧರ್ಮಗಳಿವೆ.

“ಸಹಾಯ ಪಡೆಯಬೇಕಾದ ಮೂರರ ಧರ್ಮಗಳು ಯಾವುವು? ಸತ್ಪುರುಷರ ಸಂಗ, ಸದ್ಧರ್ಮ ಶ್ರವಣ, ಧರ್ಮ ಮತ್ತು ಅನುಧರ್ಮಗಳ ಪಾಲನೆ. ಇವು ಸಹಾಯ ಪಡೆಯಬೇಕಾದ ಮೂರರ ಧರ್ಮಗಳು.

“ಬೆಳೆಸಿಕೊಳ್ಳಬೇಕಾದ ಮೂರರ ಧರ್ಮಗಳಾವುವು? ಮೂರು ಸಮಾಧಿಗಳು - ತರ್ಕ ಮತ್ತು ವಿಚಾರಗಳಿಂದ ಕೂಡಿದ ಸಮಾಧಿ, ತರ್ಕವನ್ನು ಮೀರಿದ ಮತ್ತು ವಿಚಾರದಿಂದ ಕೂಡಿದ ಸಮಾಧಿ, ತರ್ಕ ಮತ್ತು ವಿಚಾರಗಳನ್ನು ಮೀರಿದ ಸಮಾಧಿ.

“ತಿಳಿಯಬೇಕಾದ ಮೂರರ ಧರ್ಮಗಳು ಯಾವುವು? ಮೂರು ವೇದನೆಗಳು. ಸುಖ ವೇದನ, ದುಃಖ ವೇದನ, ದುಃಖವೂ ಇಲ್ಲದ ಸುಖವೂ ಇಲ್ಲದ ವೇದನೆ.

“ಬಿಡಬೇಕಾದ ಮೂರರ ಧರ್ಮಗಳು ಯಾವುವು? ಕಾಮ ತಣ್ಹಾ, ಭವ ತಣ್ಹಾ, ವಿಭವ ತಣ್ಹಾ.

“ಹಾನಿಯನ್ನುಂಟುಮಾಡುವ ಮೂರರ ಧರ್ಮಗಳು ಯಾವುವು? ಮೂರು ಅಕುಶಲ ಮೂಲಗಳು- ಲೋಭ, ದ್ವೇಷ, ಮೋಹ.

“ವಿಶೇಷತೆಯನ್ನು ಕೊಡುವ ಮೂರರ ಧರ್ಮಗಳಿವೆ- ಅಲೋಭ, ಅದ್ವೇಷ, ಅಮೋಹ.

“ತಿಳಿಯಲು ಕಠಿಣವಾದ ಒಳಾರ್ಥವಿರುವ ಮೂರರ ಧರ್ಮಗಳು ಯಾವುವು? ಬಂಧನಗಳಿಂದ ಬಿಡುಗಡೆ ಮಾಡುವ ಮೂರು ಧಾತುಗಳು- ಕಾಮಗಳಿಂದ ಬಿಡುಗಡೆ ಮಾಡುವ ನೇಕ್ಖಮ್ಮ ರೂಪದ ಬಂಧನದಿಂದ ಬಿಡುಗಡೆ ಮಾಡುವ ಅರೂಪದ ಅನುಭವ, ಈಗಾಗಲೇ ಇರುವ ನಿಯಮಕ್ಕೆ ಒಳಗಾಗಿರುವ ಮತ್ತೊಂದನ್ನು ಅವಲಂಬಿಸಿರುವ ಸ್ಥಿತಿಗಳನ್ನು ನಿಲ್ಲಿಸುವ ಬಿಡುಗಡೆ.

“ಮೇಲಕ್ಕೆ ತರಬೇಕಾದ ಮೂರರ ಧರ್ಮಗಳು ಯಾವುವು? ಮೂರು ಜ್ಞಾನಗಳು... ಹಿಂದೆ ಆಗಿ ಹೋದುದರ ಜ್ಞಾನ, ಮುಂದೆ ಆಗುವುದರ ಜ್ಞಾನ, ಇಂದಿನದರ ಜ್ಞಾನ.

“ಸಂಪೂರ್ಣವಾಗಿ ಅರಿಯಬೇಕಾದ ಮೂರರ ಧರ್ಮಗಳು ಯಾವುವು? ಮೂರು ಧಾತುಗಳು- ಕಾಮಧಾತು, ರೂಪಧಾತು, ಅರೂಪಧಾತು.

“ಸಾಕ್ಷಾತ್ಕರಿಸಿಕೊಳ್ಳಬೇಕಾದ ಮೂರರ ಧರ್ಮಗಳು ಯಾವುವು? ಮೂರು ವಿದ್ಯೆಗಳು - ಹಿಂದಿನ ಜನ್ಮಗಳನ್ನು ನೆನಪಿಗೆ ತಂದುಕೊಳ್ಳಬಲ್ಲ ವಿದ್ಯೆ, ಜೀವಿಗಳ ಚ್ಯುತಿ ಮತ್ತು ಜನ್ಮಗಳನ್ನು ತಿಳಿಯಬಲ್ಲ ವಿದ್ಯೆ, ಆಸವಕ್ಷಯಗಳನ್ನು ಮಾಡಿಕೊಳ್ಳಬಲ್ಲ ವಿದ್ಯೆ.

ಈ ಮೂವತ್ತು ಧರ್ಮಗಳು ವಾಸ್ತವವಾಗಿರುವಂಥವು, ಸತ್ಯವಾಗಿರುವಂಥವು. ಇವು ಬೇರೆ ರೀತಿಯಲ್ಲಿರಲು ಸಾಧ್ಯವಿಲ್ಲ. ತಥಾಗತರು ಇವೆಲ್ಲವನ್ನೂ ಸ್ಪಷ್ಟವಾಗಿ ಅರಿತಿದ್ದಾರೆ.

ನಾಲ್ಕರ ಧರ್ಮ

“ಸಹಾಯ ಪಡೆಯಬೇಕಾದ ನಾಲ್ಕರ ಧರ್ಮಗಳಿವೆ. ಬೆಳೆಸಿಕೊಳ್ಳಬೇಕಾದ ಸಾಕ್ಷಾತ್ಕರಿಸಿಕೊಳ್ಳಬೇಕಾದ ನಾಲ್ಕರ ಧರ್ಮಗಳಿವೆ.

“ಸಹಾಯ ಪಡೆಯಬೇಕಾದ ನಾಲ್ಕರ ಧರ್ಮಗಳು ಯಾವುವು? ನಾಲ್ಕು ಚಕ್ರಗಳು;57 ವಾಸಿಸಲು ಅನುಕೂಲವಾದ ಸ್ಥಳಗಳು ಸತ್ಪುರುಷರ ಸಂಗ ದೊರೆಯುವ ಕ್ಷೇತ್ರಗಳು; ವ್ಯಕ್ತಿಯಾದವನು ಹೊಂದಿಕೊಳ್ಳಬೇಕಾದ ಪರಿಸ್ಥಿತಿಗಳು; ಹಿಂದೆ ಮಾಡಿದ ಪುಣ್ಯಗಳು.

“ಬೆಳೆಸಿಕೊಳ್ಳಬೇಕಾದ ನಾಲ್ಕರ ಧರ್ಮಗಳಿವೆ- ನಾಲ್ಕು ಸತಿಪಟ್ಠಾನಗಳು. ಭಿಕ್ಷುವಾದವನು ಲೋಕದ ಮೇಲಿನ ವ್ಯಾಮೋಹ ಮತ್ತು ಅದಕ್ಕಂಟಿರುವ ದೋಮನಸ್ಸನ್ನು ವರ್ಜಿಸಿ ಸದಾ ಎಚ್ಚರದಿಂದಿದ್ದು ಶ್ರದ್ಧಾಪೂರಿತವಾಗಿ ಕಾಯವನ್ನು ಅದರ ನಿಜಸ್ವರೂಪದಲ್ಲಿಯೇ ಅರಿಯಬಲ್ಲ ಸ್ಮೃತಿ... ವೇದನೆಗಳನ್ನು ಅವುಗಳ ನಿಜಸ್ವರೂಪದಲ್ಲಿ... ಚಿತ್ತವನ್ನು ನಿಜಸ್ವರೂಪದಲ್ಲಿ... ಲೋಕದ ಮೇಲಿನ ವ್ಯಾಮೋಹ ಮತ್ತು ಅದಕ್ಕಂಟಿರುವ ದೋಮನಸ್ಸನ್ನು ವರ್ಜಿಸಿ ಸದಾ ಎಚ್ಚರದಿಂದಿದ್ದು ಶ್ರದ್ಧಾಪೂರಿತನಾಗಿ ಧರ್ಮಗಳನ್ನು ಅವುಗಳ ನಿಜ ಸ್ವರೂಪದಲ್ಲಿಯೇ ನೋಡಬಲ್ಲ ಧಮ್ಮಾನುಪಸ್ಸಿ. ಇವು ಬೆಳೆಸಿಕೊಳ್ಳಬೇಕಾದ ನಾಲ್ಕರ ಧರ್ಮಗಳು.

“ತಿಳಿದುಕೊಳ್ಳಬೇಕಾದ ನಾಲ್ಕರ ಧರ್ಮಗಳು ಯಾವುವು? ನಾಲ್ಕು ಬಗೆಯ ಆಹಾರಗಳು. ಒರಟಾಗಿಯೋ ಸೂಕ್ಷ್ಮವಾಗಿಯೋ ಇರುವ ಘನರೂಪದ ಆಹಾರ. ಇದು ಮೊದಲನೆಯದು, ಫಸ್ಸವು ಎರಡನೆಯದು. ಮನಸ್ಸಿನಲ್ಲಿರುವ ಭಾವನೆಗಳು ಮೂರನೆಯದು. ವಿಞ್ಞಾಣವು ನಾಲ್ಕನೆಯದು.

“ಬಿಡಬೇಕಾದ ನಾಲ್ಕರ ಧರ್ಮಗಳು ಯಾವುವು? ನಾಲ್ಕು ಪ್ರವಾಹಗಳು. ಕಾಮ, ಭವ, ದಿಟ್ಠಿ, ಅವಿಜ್ಜಾ.

“ಹಾನಿಯನ್ನುಂಟುಮಾಡುವ ನಾಲ್ಕರ ಧರ್ಮಗಳು ಯಾವುವು? ನಾಲ್ಕು ಯೋಗಗಳು (ಕೂಡಿರುವುದು) ಕಾಮ, ಭವ, ದಿಟ್ಠಿ, ಅವಿಜ್ಜಾ. ಇವು ನಾಲ್ಕೂ ಯೋಗಗಳನ್ನೆನ್ನಿಸಿಕೊಳ್ಳುತ್ತವೆ.

“ವಿಶೇಷತೆಯನ್ನು ಕೊಡುವ ನಾಲ್ಕರ ಧರ್ಮಗಳು ಯಾವುವು? ನಾಲ್ಕು ಯೋಗಗಳಿಂದ ಬಿಡುಗಡೆಯಾಗಿರುವುದು. ಕಾಮ ಯೋಗ, ಭವ ಯೋಗ, ದಿಟ್ಠಿ ಯೋಗ, ಅವಿಜ್ಜಾ ಯೋಗ- ಈ ನಾಲ್ಕು ಯೋಗಗಳಿಂದ ಬಿಡುಗಡೆಯಾಗುವುದು.

“ತಿಳಿಯಲು ಕಠಿಣವಾದ ಒಳಾರ್ಥವನ್ನುಳ್ಳ ನಾಲ್ಕರ ಧರ್ಮಗಳು ಯಾವುವು? ನಾಲ್ಕು ಸಮಾಧಿಗಳು. ಹಾನಿಯನ್ನುಂಟು ಮಾಡುವಂಥ ಸಮಾಧಿ. ಇದ್ದ ಸ್ಥಿತಿಯಲ್ಲಿಯೇ ಉಳಿಸುವ ಸಮಾಧಿ, ವಿಶಿಷ್ಟತೆಯನ್ನು ನೀಡಬಲ್ಲ ಸಮಾಧಿ, ನಿಬ್ಬಾಣಕ್ಕೆ ಕೊಂಡೊಯ್ಯುವ ಸಮಾಧಿ.

“ಮೇಲಕ್ಕೆ ತರಬೇಕಾದ ನಾಲ್ಕರ ಧರ್ಮಗಳು ಯಾವುವು? ನಾಲ್ಕು ಜ್ಞಾನಗಳು, ಧರ್ಮದ ತಿಳಿವಳಿಕೆ, ಅನುಧಮ್ಮಗಳ ತಿಳಿವಳಿಕೆ, ಪರರ ಮನಸ್ಸಿನಲ್ಲಿರುವುದರ ತಿಳಿವಳಿಕೆ, ಸಾಮಾನ್ಯ ಜನರಿಗಿರುವ ತಿಳಿವಳಿಕೆ.

“ಸಂಪೂರ್ಣವಾಗಿ ಅರಿಯಬೇಕಾದ ನಾಲ್ಕರ ಧರ್ಮಗಳು ಯಾವುವು? ನಾಲ್ಕು ಆರ್ಯ ಸತ್ಯಗಳು- ದುಃಖ, ದುಃಖ ಸಮುದಯ, ದುಃಖ ನಿರೋಧ, ದುಃಖ ನಿರೋಧ ಮಾರ್ಗ.

“ಸಾಕ್ಷಾತ್ಕರಿಸಿಕೊಳ್ಳಬೇಕಾದ ನಾಲ್ಕರ ಧರ್ಮಗಳು ಯಾವುವು? ನಾಲ್ಕು ಶ್ರಾಮಣ್ಯ ಫಲಗಳು. ಸೋತಾಪತ್ತಿ, ಸಕದಾಗಾಮಿ, ಅನಾಗಾಮಿ, ಅರ್ಹತ.

ಈ ನಲವತ್ತು ಧರ್ಮಗಳು ವಾಸ್ವವಾದವಂಥವು. ಸತ್ಯವಾಗಿರುವಂಥವು. ಇವು ಬೇರೆ ರೀತಿಯಲ್ಲಿರಲು ಸಾಧ್ಯವಿಲ್ಲ. ತಥಾಗತರು ಇದನ್ನು ಸ್ಪಷ್ಟವಾಗಿ ಅರಿತಿದ್ದಾರೆ.

ಐದರ ಧರ್ಮ

“ಸಹಾಯ ಪಡೆಯಬೇಕಾದ ಐದರ ಧರ್ಮಗಳಿವೆ. ಬೆಳೆಸಿಕೊಳ್ಳಬೇಕಾದ ಸಾಕ್ಷಾತ್ಕರಿಸಿಕೊಳ್ಳಬೇಕಾದ ಐದರ ಧರ್ಮಗಳಿವೆ.

“ಸಹಾಯ ಪಡೆಯಬೇಕಾದ ಐದರ ಧರ್ಮಗಳು ಯಾವುವು? ಐದು ಸಾಧನೆಯ ಅಂಗಗಳು.58 ಶ್ರದ್ಧಾವಂತನಾದ ಭಿಕ್ಷುವೊಬ್ಬನು ತಥಾಗತರ ಬೋಧಿಯಲ್ಲಿ ವಿಶ್ವಾಸವುಳ್ಳವನಾಗಿರುತ್ತಾನೆ. ‘ಭಗವಾನರು ಅರಹಂತರೂ, ಸಮ್ಮಾಸಂಬುದ್ಧರೂ, ವಿಜ್ಜಾಚರಣಸಂಪನ್ನರೂ, ಸುಗತರೂ, ಲೋಕಗಳನ್ನು ತಿಳಿದವರೂ, ಜನರು ದಮಿಸಿಕೊಳ್ಳಬೇಕಾದುದರ ಕಡೆಗೆ ಕೊಂಡೊಯ್ಯಬಲ್ಲ ಅತ್ಯುತ್ತಮ ಸಾರಥಿಯೂ, ದೇವತೆಗಳ ಮತ್ತು ಮನುಷ್ಯರ ಗುರುವೂ, ಭಗವಾನರೂ, ಬುದ್ಧರೂ ಆಗಿದ್ದಾರೆ. ಬಾಧೆಗಳಿಲ್ಲದೆ ಆರೋಗ್ಯವಂತರಾಗಿರುತ್ತಾರೆ. ಅತಿಯಾದ ಜೀರ್ಣಶಕ್ತಿಯಾಗಲೀ, ಅಜೀರ್ಣವಾಗಲೀ ಇರದೆ ಸಾಧನೆಗೆ ಅನುಕೂಲವಾದ ಮಧ್ಯಮ ಪ್ರಮಾಣದ ಜೀರ್ಣಶಕ್ತಿಯನ್ನು ಹೊಂದಿರುತ್ತಾರೆ. ಕಪಟವಿಲ್ಲದವರೂ ಮಾಯಾವಿಯಲ್ಲದವರೂ ಇದ್ದದನ್ನು ಇದ್ದಂತೆಯೇ ಹೇಳುವ ಮತ್ತು ಸೋಗನ್ನು ಹಾಕಿಕೊಳ್ಳದೆ ಗುರುವಿನ ಮತ್ತು ಜೊತೆಯ ಬ್ರಹ್ಮಚಾರಿಗಳ ಹತ್ತಿರ ನಡೆದುಕೊಳ್ಳುವವರೂ ಅಕುಶಲ ಭಾವನೆಗಳನ್ನು ವರ್ಜಿಸಿ ಕುಶಲ ಭಾವನೆಗಳನ್ನು ಬೆಳೆಸಿಕೊಂಡು ಯತ್ನಶೀಲರಾಗಿ ತಾವು ಮಾಡಬೇಕಾದುದು ಎಷ್ಟೇ ಕಷ್ಟವಾಗಿದ್ದರೂ ತಮ್ಮ ಪ್ರಯತ್ನದಿಂದ ಅದನ್ನು ಸಾಧಿಸುವವರೂ ಆಗಿದ್ದಾರೆ. ಪಞ್ಞಾವನ್ನು ಪಡೆದವರೂ ಹುಟ್ಟು ಸಾವುಗಳ ಸತ್ಯವನ್ನು ತಿಳಿದವರೂ ದುಃಖ ಕ್ಷಯದ ಶ್ರೇಷ್ಠ ಮಾರ್ಗವನ್ನು ಅರಿತವರೂ ಆಗಿದ್ದಾರೆ.

“ಬೆಳೆಸಿಕೊಳ್ಳಬೇಕಾದ ಐದರ ಧರ್ಮಗಳು ಯಾವುವು? ಐದು ಅಂಗಗಳನ್ನುಳ್ಳ ಸಮ್ಯಕ್ ಸಮಾಧಿಗಳು. ಪ್ರೀತಿ, ಸುಖ, ಚೇತಸ್ಸು ಜ್ಯೋತಿ - ಇವುಗಳಿಂದ ಕೂಡಿರುವ ಸಮಾಧಿಗಳು ನಾಲ್ಕು. ಹಿಂದಿನದನ್ನು ನೆನಪಿಗೆ ತಂದುಕೊಳ್ಳಲು ಬೇಕಾದ ಪ್ರತಿಮೆಗಳು - ಐದನೆಯದು.

“ತಿಳಿಯಬೇಕಾದ ಐದರ ಧರ್ಮಗಳು ಯಾವುವು? ಐದು ಉಪಾದಾನ ಖಂಧಗಳು.

“ಬಿಡಬೇಕಾದ ಐದರ ಧರ್ಮಗಳು ಯಾವುವು? ಐದು ನೀವರಣಗಳು. ಕಾಮಗಳಿಂದ ಕೂಡಿರುವುದು, ಹಿಂಸಾ ಭಾವನೆಯಿಂದ ಕೂಡಿರುವುದು, ಆಲಸ್ಯ ಜಡತೆಗಳಿಂದ ಕೂಡಿರುವುದು, ಚಿಂತೆ ಕಳವಳಗಳಿಂದ ಕೂಡಿರುವುದು, ಸಂಶಯದಿಂದ ಕೂಡಿರುವುದು.

“ಹಾನಿಯನ್ನುಂಟುಮಾಡುವ ಐದರ ಧರ್ಮಗಳು ಯಾವುವು? ಐದು ಫಲ ಕೊಡದ ಸಾಧನೆಗಳು. ಭಿಕ್ಷುವು ತನ್ನ ಗುರುವಿನ ಬಗೆಗೆ ಸಂಶಯಪಡುತ್ತಾನೆ, ಸಂದೇಹಪಡುತ್ತಾನೆ, ಅವನಿಂದ ತೃಪ್ತಿಪಡುವುದಿಲ್ಲ. ಇಂಥ ಭಿಕ್ಷುವು ತನ್ನ ಚಿತ್ತವನ್ನು ಯತ್ನದ ಕಡೆಗಾಗಲೀ ಅರಿವಿನ ಕಡೆಗಾಗಲೀ ಯೋಗದ ಕಡೆಗಾಗಲೀ ನಿರಂತರ ಶ್ರದ್ಧೆಯ ಕಡೆಗಾಗಲೀ ತಿರುಗಿಸುವುದಿಲ್ಲ. ಧರ್ಮದ ಬಗೆಗೆ... ಸಂಘದ ಬಗೆಗೆ... ಶಿಕ್ಷಣದ ಬಗೆಗೆ... ಕಡೆಗಾಗಲೀ ತಿರುಗಿಸುವುದಿಲ್ಲ. ತನ್ನ ಜೊತೆಯ ಸಾಧಕರ ಬಗೆಗೆ ಕೋಪಗೊಂಡು ಕ್ಷುದ್ರಗೊಂಡು ಮಲಿನವಾದ ಭಾವನೆಗಳನ್ನು ಹೊಂದಿ ತನ್ನ ಚಿತ್ತವನ್ನು ಯತ್ನದ ಕಡೆಗಾಗಲೀ ಅರಿವಿನ ಕಡೆಗಾಗಲೀ ಯೋಗದ ಕಡೆಗಾಗಲೀ ನಿರಂತರ ಶ್ರದ್ಧೆಯ ಕಡೆಗಾಗಲೀ ತಿರುಗಿಸುವುದಿಲ್ಲ.

“ವಿಶೇಷತೆಯನ್ನು ಕೊಡುವ ಐದರ ಧರ್ಮಗಳು ಯಾವುವು? ಪಂಚೇಂದ್ರಿಯಗಳು- ಶ್ರದ್ಧೆ, ವೀರ್ಯ, ಸ್ಮೃತಿ, ಸಮಾಧಿ, ಪಞ್ಞಾ.

“ತಿಳಿಯಲು ಕಷ್ಟವಾದ ಒಳಾರ್ಥವನ್ನುಳ್ಳ ಐದರ ಧರ್ಮ ಯಾವುದು? ನಿಬ್ಬಾಣಕ್ಕೆ ಅನುಕೂಲವಾಗಿರುವ ಐದು ಧಾತುಗಳು. ಭಿಕ್ಷವು ಮನಸ್ಸಿನಲ್ಲಿ ಕಾಮಗಳನ್ನು ಕುರಿತು ಚಿಂತಿಸಿದಾಗ ಅವನ ಚಿತ್ತವು ಅವುಗಳ ಕಡೆಗೆ ಹರಿಯುವುದಿಲ್ಲ. ಚಿತ್ತವು ಅದರಲ್ಲಿ ನಿಲ್ಲಲು ಯತ್ನಿಸುವುದಿಲ್ಲ. ಅವುಗಳನ್ನು ಆರಿಸುವುದಿಲ್ಲ. ನೇಕ್ಖಮ್ಮವನ್ನು ಮನಸ್ಸಿನಲ್ಲಿ ಬೆಳೆಸಿಕೊಂಡು ನೇಕ್ಖಮ್ಮದ ಕಡೆಗೆ ತನ್ನ ಚಿತ್ತವನ್ನು ಹರಿಸಿದಾಗ ಚಿತ್ತವು ಅದರಲ್ಲಿ ನಿಲ್ಲುತ್ತದೆ, ಅದನ್ನು ಆರಿಸಿಕೊಳ್ಳುತ್ತದೆ. ಅಂಥಹ ಚಿತ್ತವು ಒಳ್ಳೆಯ ಮಾರ್ಗದಲ್ಲಿ ಹೋಗುತ್ತದೆ, ಚೆನ್ನಾಗಿ ಬೆಳೆಯುತ್ತದೆ. ಕಾಮಗಳಿಂದ ಬಿಡುಗಡೆಯನ್ನು ಹೊಂದುತ್ತದೆ. ಕಾಮಗಳನ್ನು ಅವಲಂಬಿಸಿರುವ ಅವುಗಳಿಮದ ಹುಟ್ಟುವ ಆಸವಗಳು ನೋವುಗಳೂ ರೋಗಗಳೂ ಅವನನ್ನು ಬಾಧಿಸುವುದಿಲ್ಲ. ಅವುಗಳ ವೇದನೆಯನ್ನು ಅನುಭವಿಸುವುದಿಲ್ಲ. ಇದನ್ನು ಕಾಮಗಳಿಂದ ಬಿಡುಗಡೆ ಎಂದು ಹೇಳುತ್ತಾರೆ.

“ಭಿಕ್ಷುವು ಮನಸ್ಸಿನಲ್ಲಿ ವೈರವನ್ನು- ಕುರಿತು ಚಿಂತಿಸುವಾಗ ವೈರ ಭಾವನೆಯ ಕಡೆಗೆ ಚಿತ್ತವು ಹರಿಯುವುದಿಲ್ಲ. ಅದರಲ್ಲಿ ನಿಲ್ಲುವುದಿಲ್ಲ. ಅದನ್ನು ಅರಿಸಿಕೊಳ್ಳುವುದಿಲ್ಲ. ಅವೈರವನ್ನು ಕುರಿತು ಚಿಂತಿಸಿದಾಗ ಚಿತ್ತವು ಅದರ ಕಡೆಗೆ ಹರಿಯುತ್ತದೆ. ಅದರಲ್ಲಿ ನಿಲ್ಲುತ್ತದೆ. ಅದನ್ನು ಆರಿಸಿಕೊಳ್ಳುತ್ತದೆ. ಅವನ ಚಿತ್ತವು ಒಳ್ಳೆಯ ಮಾರ್ಗದಲ್ಲಿ ಹೋಗುತ್ತದೆ. ಅವೈರವನ್ನು ಬೆಳೆಸಿಕೊಳ್ಳುತ್ತದೆ. ವೈರಭಾವನೆಯಿಂದ ಅದು ಬಿಡುಗಡೆಯಾಗುತ್ತದೆ. ವೈರಭಾವನೆಯನ್ನು ಅವಲಂಬಿಸಿರುವ ಅವುಗಳಿಂದ ಹುಟ್ಟುವ ಆಸವಗಳೂ, ನೋವುಗಳೂ, ರೋಗಗಳೂ ಅವನನ್ನು ಬಾದಿಸುವುದಿಲ್ಲ. ಅವುಗಳ ವೇದನೆಯನ್ನು ಅನುಭವಿಸುವುದಿಲ್ಲ. ಇದು ವೈರ ಭಾವನೆಯಿಂದ ಬಿಡುಗಡೆ ಎನ್ನಿಸಿಕೊಳ್ಳುತ್ತದೆ.

“ಹಿಂಸಾಭಾವನೆಯನ್ನು ಕುರಿತು ಚಿಂತಿಸುವಾಗ ಅವನ ಚಿತ್ತವು ಅದರ ಕಡೆಗೆ ಹರಿಯುವುದಿಲ್ಲ, ಅದರಲ್ಲಿ ನಿಲ್ಲುವುದಿಲ್ಲ, ಅದನ್ನು ಆರಿಸಿಕೊಳ್ಳುವುದಿಲ್ಲ. ಅಹಿಂಸೆಯನ್ನು ಕುರಿತು ಚಿಂತಿಸುವಾಗ ಚಿತ್ತವು ಅದರ ಕಡೆಗೆ ಹರಿಯುತ್ತದೆ, ಅದರಲ್ಲಿ ನಿಲ್ಲುತ್ತದೆ, ಅದನ್ನು ಆರಿಸಿಕೊಳ್ಳುತ್ತದೆ. ಅವನ ಚಿತ್ತವು ಒಳ್ಳೆಯ ಮಾರ್ಗದಲ್ಲಿ ಹೋಗುತ್ತದೆ. ಚೆನ್ನಾಗಿ ಬೆಳೆಯುತ್ತದೆ. ಹಿಂಸಾಭಾವನೆಯಿಂದ ಬಿಡುಗಡೆಯಾಗುತ್ತದೆ. ಹಿಂಸಾಭಾವನೆ ಅವಲಂಬಿಸಿರುವ ಅದರಿಂದ ಹುಟ್ಟುವ ಆಸವಗಳೂ ನೋವುಗಳೂ ರೋಗಗಳೂ ಅವನನ್ನು ಬಾಧಿಸುವುದಿಲ್ಲ. ಅವುಗಳ ವೇದನೆಯನ್ನು ಅನುಭವಿಸುವುದಿಲ್ಲ. ಇಂದು ಹಿಂಸಾಭಾವನೆಯಿಂದ ಬಿಡುಗಡೆ.

“ಭಿಕ್ಷುವು ರೂಪವನ್ನು ಕುರಿತು ಚಿಂತಿಸುವಾಗ ರೂಪಗಳ ಕಡೆಗೆ ಅವನ ಚಿತ್ತವು ಹರಿಯುವುದಿಲ್ಲ, ಅವುಗಳಲ್ಲಿ ನಿಲ್ಲುವುದಿಲ್ಲ, ಅವನ್ನು ಆರಿಸಿಕೊಳ್ಳುವುದಿಲ್ಲ. ಆದರೆ ಅರೂಪವನ್ನು ಕುರಿತು ಚಿಂತಿಸುವಾಗ ಅರೂಪಗಳ ಕಡೆಗೆ ಅವನ ಮನಸ್ಸು ಹರಿಯುತ್ತದೆ. ಅವುಗಳಲ್ಲಿ ನಿಲ್ಲುತ್ತದೆ, ಅವನ್ನು ಆರಿಸಿಕೊಳ್ಳುತ್ತದೆ. ಅವನ ಚಿತ್ತವು ಒಳ್ಳೆಯ ಮಾರ್ಗದಲ್ಲಿ ಹೋಗುತ್ತದೆ, ಚೆನ್ನಾಗಿ ಬೆಳೆಯುತ್ತದೆ. ರೂಪವನ್ನವಲಂಬಿಸಿರುವ ಮತ್ತು ಅವುಗಳಿಂದ ಹುಟ್ಟುವ ಆಸವಗಳೂ ರೋಗಗಳೂ ನೋವುಗಳೂ ಅವನನ್ನು ಬಾಧಿಸುವುದಿಲ್ಲ. ಅವುಗಳ ವೇದನೆಯನ್ನು ಅನುಭವಿಸುವುದಿಲ್ಲ, ಇದು ರೂಪ ಭಾವನೆಯಿಂದ ಬಿಡುಗಡೆ.

“ಭಿಕ್ಷುವು ಕಾಯವನ್ನು ಚಿಂತಿಸಿದಾಗ ಚಿತ್ತವು ಅದರ ವ್ಯಾಮೋಹದ ಕಡೆಗೆ ಹರಿಯುವುದಿಲ್ಲ, ಅದರಲ್ಲಿ ನಿಲ್ಲುವುದಿಲ್ಲ. ಅದನ್ನು ಆರಿಸಿಕೊಳ್ಳುವುದಿಲ್ಲ. ಕಾಯ ನಿರೋಧವನ್ನು ಕುರಿತು ಚಿಂತಿಸಿದಾಗ ಕಾಯ ನಿರೋಧದ ಕಡೆಗೆ ಅವನ ಮನಸ್ಸು ಹರಿಯುತ್ತದೆ. ಅದರಲ್ಲಿ ನಿಲ್ಲುತ್ತದೆ. ಅದನ್ನು ಆರಿಸಿಕೊಳ್ಳುತ್ತದೆ. ಅವನ ಚಿತ್ತವು ಒಳ್ಳೆಯ ಮಾರ್ಗದಲ್ಲಿ ಹೋಗುತ್ತದೆ, ಚೆನ್ನಾಗಿ ಬೆಳೆಯುತ್ತದೆ, ಕಾಯದ ವ್ಯಾಮೋಹದಿಂದ ಬಿಡುಗಡೆಯಾಗುತ್ತದೆ. ಕಾಯವನ್ನು ಅವಲಂಬಿಸಿಕೊಂಡು ಅದರಿಂದ ಹುಟ್ಟುವ ಆಸವಗಳೂ ರೋಗಗಳೂ ನೋವುಗಳೂ ಅವನನ್ನು ಬಾಧಿಸುವುದಿಲ್ಲ. ಅವುಗಳ ವೇದನೆಯನ್ನು ಅವನು ಅನುಭವಿಸುವುದಿಲ್ಲ. ಇದು ಕಾಯ ವ್ಯಾಮೋಹದಿಂದ ಬಿಡುಗಡೆ.

“ಮೇಲಕ್ಕೆ ತರಬೇಕಾದ ಐದರ ಧರ್ಮಗಳು ಯಾವುವು? ಸಮ್ಯಕ್ ಸಮಾಧಿಯಿಂದ ಬರುವ ಐದು ಜ್ಞಾನಗಳು. ‘ಈ ಸಮಾದಿ ಸುಖವು ಇಂದು ಇದೆ, ಸುಖದ ವಿಪಾಕದಿಂದ ಮುಂದೆಯೂ ಬರುತ್ತದೆ’ ಎಂಬ ಪ್ರತ್ಯಕ್ಷ ಜ್ಞಾನ ಉದಿಸುತ್ತದೆ. ‘ಈ ಸಮಾಧಿಯು ಶ್ರೇಷ್ಠವಾದದ್ದು, ಲೋಕದಲ್ಲಿ ದೊರೆಯುವಂಥದಲ್ಲ’ ಎಂಬ ಪ್ರತ್ಯಕ್ಷ ಜ್ಞಾನ ಉದಿಸುತ್ತದೆ. ‘ಈ ಸಮಾಧಿಯು ಅತ್ಯಂತ ಶ್ರೇಷ್ಠ ಪುರುಷರು ಅನುಭವಿಸುವಂಥದು’ ಎಂಬ ಪ್ರತ್ಯಕ್ಷ ಜ್ಞಾನ ಉದಿಸುತ್ತದೆ. ‘ಈ ಸಮಾಧಿಯು ಶಾಂತಿಯನ್ನು ಕೊಡುತ್ತದೆ, ಶ್ರೇಷ್ಠವಾದದ್ದು, ಮನಸ್ಸನ್ನು ಉನ್ನತ ಮಟ್ಟಕ್ಕೆ ಏರಿಸುವಂಥದು, ಏಕಾಗ್ರತೆಯ ಫಲವಾಗಿರುವಂಥದು, ಸಂಖಾರಗಳಿಂದಾಗಲೀ, ನಿಗ್ರಹದಿಂದಾಗಲೀ, ಸೋಲಿನಿಂದಾಗಲೀ ಬಂದದ್ದಲ್ಲ’ ಎಂಬ ಪ್ರತ್ಯಕ್ಷ ಜ್ಞಾನ ಉದಿಸುತ್ತದೆ. ‘ಈ ಸಮಾಧಿಯನ್ನು ಸ್ಮೃತಿಯಿಂದ ನಾನೇ ಗಳಿಸಿದ್ದೇನೆ. ಇದರಿಂದ ಮತ್ತಷ್ಟು ಸ್ಮೃತಿವಂತನಾಗುತ್ತೇನೆ’ ಎಂಬ ಪ್ರತ್ಯಕ್ಷ ಜ್ಞಾನ ಹುಟ್ಟುತ್ತದೆ. ಮೇಲಕ್ಕೆ ತರಬೇಕಾದ ಐದು ಧರ್ಮಗಳು ಇವು.

“ಸಂಪೂರ್ಣವಾಗಿ ತಿಳಿಯಬೇಕಾದ ಐದರ ಧರ್ಮಗಳು ಯಾವುವು? ಅದು ವಿಮುಕ್ತಿಯ ಅವಕಾಶಗಳು. ಗುರುವೋ ಅಥವಾ ಗೌರವಕ್ಕೆ ಪಾತ್ರನಾದ ಇನ್ನೊಬ್ಬ ಗಣ್ಯ ಸಾಧಕನೋ ಭಿಕ್ಷುಗಳಿಗೆ ಧಮ್ಮವನ್ನು ಬೋಧಿಸುತ್ತಾನೆ. ಗುರು ಅಥವಾ ಗೌರವಾರ್ಹ ಸಾಧಕನು ಭಿಕ್ಷುಗಳಿಗೆ ಧಮ್ಮವನ್ನು ಬೋಧಿಸುತ್ತಿದ್ದಂತೆ ಅವರು ಧಮ್ಮವನ್ನು ಅದರ ಅರ್ಥ ವ್ಯಾಖ್ಯಾನಗಳನ್ನೂ ತಿಳಿದುಕೊಳ್ಳುತ್ತಾನೆ. ಹೀಗೆ ತಿಳಿದಾಗ ಪ್ರಮೋದವು ಹುಟ್ಟುತ್ತದೆ, ಪ್ರಮೋದದಿಂದ ಪ್ರೀತಿಯು ಹುಟ್ಟುತ್ತದೆ. ಪ್ರೀತಿ ಮನಸ್ಸಿನಿಂದ ನಾಮರೂಪವು ಶಾಂತವಾಗುತ್ತದೆ. ಇದರಿಂದ ಸುಖದ ಅನುಭವವಾಗುತ್ತದೆ. ಸುಖ ಚಿತ್ತದಿಂದ ಸಮಾಧಿಯು ಲಭಿಸುತ್ತದೆ. ಇದು ವಿಮುಕ್ತಿಯ ಅವಕಾಶಗಳಲ್ಲಿ ಮೊದಲನೆಯದು.

“ಗುರುವು ಅಥವಾ ಮತ್ತೊಬ್ಬ ಗಣ್ಯ ಸಾಧಕನು ಭಿಕ್ಷುಗಳಿಗೆ ಧಮ್ಮವನ್ನು ಬೋಧಿಸಿದ್ದರೂ ಆತನೇ ತಾನು ಹಿಂದೆ ಕಲಿತಂತೆ ಮತ್ತು ಅರ್ಥ ಮಾಡಿಕೊಂಡಂತೆ ಬೇರೆಯವರಿಗೆ ಧರ್ಮವನ್ನು ವಿಸ್ತಾರವಾಗಿ ವಿವರಿಸುತ್ತಾನೆ. ಭಿಕ್ಷುವು ಹಾಗೆ ಮಾಡುತ್ತಿದ್ದಂತೆ ಧರ್ಮವನ್ನೂ, ಅದರ ಅರ್ಥ ವ್ಯಾಖ್ಯಾನಗಳನ್ನೂ ತಿಳಿದುಕೊಳ್ಳುತ್ತಾನೆ. ಹೀಗೆ ತಿಳಿದಾಗ ಪ್ರಮೋದವು ಹುಟ್ಟುತ್ತದೆ, ಪ್ರಮೋದದಿಂದ ಪ್ರೀತಿಯು ಹುಟ್ಟುತ್ತದೆ, ಪ್ರೀತಿ ಮನಸ್ಸಿನಿಂದ ನಾಮರೂಪವು ಶಾಂತವಾಗುತ್ತದೆ, ಇದರಿಂದ ಸುಖದ ಅನುಭವವಾಗುತ್ತದೆ. ಸುಖ ಚಿತ್ತದಿಂದ ಸಮಾಧಿಯು ಲಭಿಸುತ್ತದೆ. ಇದು ವಿಮುಕ್ತಿಯ ಅವಕಾಶಗಳಲ್ಲಿ ಎರಡನೆಯದು.

“ಗುರುವಾಗಲೀ ಬೇರೆ ಗಣ್ಯ ಸಹಸಾಧಕನಾಗಲೀ ಧಮ್ಮವನ್ನು ಭಿಕ್ಷುಗಳಿಗೆ ಬೋಧಿಸುವುದಿಲ್ಲ ಅಥವಾ ಭಿಕ್ಷುವಾದವನು ಬೇರೆಯವರಿಗೂ ತಾನು ಹಿಂದೆ ಕಲಿತಂತೆ ಮತ್ತು ಅರ್ಥಮಾಡಿಕೊಂಡಂತೆ ಧಮ್ಮವನ್ನು ವಿಸ್ತಾರವಾಗಿ ವಿವರಿಸುವುದಿಲ್ಲ. ಭಿಕ್ಷುವು ತಾನು ಹಿಂದೆ ಕಲಿತಂತೆ ಅರ್ಥಮಾಡಿಕೊಂಡಂತೆ ತಾನು ಕಂಠಪಾಠ ಮಾಡಿದುದನ್ನು ವಿವರವಾಗಿ ಪಠಿಸುತ್ತಾನೆ. ಹಾಗೆ ಮಾಡುತ್ತಿದ್ದಂತೆ ಭಿಕ್ಷುವು ಧರ್ಮವನ್ನೂ ಅದರ ಅರ್ಥ ವ್ಯಾಖ್ಯಾನಗಳನ್ನೂ ತಿಳಿದುಕೊಳ್ಳುತ್ತಾನೆ. ಇದರಿಂದ ಪ್ರಮೋದವು ಹುಟ್ಟುತ್ತದೆ, ಪ್ರಮೋದದಿಂದ ಪ್ರೀತಿಯು ಹುಟ್ಟುತ್ತದೆ, ಪ್ರೀತಿ ಮನಸ್ಸಿನಿಂದ ನಾಮರೂಪವು ಶಾಂತವಾಗುತ್ತದೆ. ಇದರಿಂದ ಸುಖದ ಅನುಭವವಾಗುತ್ತದೆ. ಸುಖ ಚಿತ್ತದಿಂದ ಸಮಾಧಿಯು ಲಭಿಸುತ್ತದೆ. ಇದು ಮೂರನೆಯ ಅವಕಾಶ.

“ಗುರುವಾಗಲೀ ಅಥವಾ ಬೇರೆ ಸಹ ಸಾಧಕನಾಗಲೀ ಧಮ್ಮವನ್ನು ಭಿಕ್ಷುಗಳಿಗೆ ಬೋಧಿಸುವುದಿಲ್ಲ ಅಥವಾ ಭಿಕ್ಷುವಾದವನು ತಾನು ಹಿಂದೆ ಕಲಿತಂತೆ ಮತ್ತು ಅರ್ಥಮಾಡಿಕೊಂಡಂತೆ ಇತರರಿಗೆ ಧರ್ಮವನ್ನು ವಿವರಿಸುವುದಿಲ್ಲ. ಅಥವಾ ತಾನು ಹಿಂದೆ ಕಲಿತಂತೆ ಮತ್ತು ಅರ್ಥ ಮಾಡಿಕೊಂಡಂತೆ ಕಂಠಪಾಠ ಮಾಡಿದುದನ್ನು ಪಠಿಸುವುದೂ ಇಲ್ಲ. ಆದರೆ ತಾನು ಕಲಿತಂತೆ ಅರ್ಥ ಮಾಡಿಕೊಂಡಂತೆ ಚಿತ್ತದಲ್ಲಿ ಅದನ್ನು ಮನನ ಮಾಡುತ್ತಾನೆ. ಅದನ್ನು ಕುರಿತು ತರ್ಕ ಮತ್ತು ವಿಚಾರಗಳನ್ನು ಮೀರಿದ ಮಟ್ಟದಲ್ಲಿ ಅದನ್ನು ಮನನ ಮಾಡುತ್ತಾನೆ. ಹೀಗೆ ಮಾಡುತ್ತಿದ್ದಂತೆ ಧಮ್ಮವನ್ನೂ ಅದರ ಅರ್ಥ ವ್ಯಾಖ್ಯಾನಗಳನ್ನೂ ತಿಳಿದುಕೊಳ್ಳುತ್ತಾನೆ. ಇದರಿಂದ ಪ್ರಮೋದವು ಹುಟ್ಟುತ್ತದೆ. ಪ್ರಮೋದದಿಂದ ಪ್ರೀತಿಯು ಹುಟ್ಟುತ್ತದೆ ಪ್ರೀತಿ ಮನಸ್ಸಿನಿಂದ ನಾಮರೂಪವು ಶಾಂತವಾಗುತ್ತದೆ. ಇದರಿಂದ ಸುಖದ ಅನುಭವವಾಗುತ್ತದೆ. ಸುಖಚಿತ್ತದಿಂದ ಸಮಾಧಿಯು ಲಭಿಸುತ್ತದೆ. ಇದು ನಾಲ್ಕನೆಯ ಅವಕಾಶ.

“ಗುರುವಾಗಲೀ ಅಥವಾ ಬೇರೊಬ್ಬ ಗಣ್ಯ ಸಹಸಾಧಕನಾಗಲೀ ಭಿಕ್ಷುಗಳಿಗೆ ಧರ್ಮವನ್ನು ಬೋಧಿಸುವುದಿಲ್ಲ. ಅಥವಾ ಭಿಕ್ಷುವಾದವನು ತಾನು ಹಿಂದೆ ಕಲಿತಂತೆ ಇತರರಿಗೆ ಧರ್ಮವನ್ನು ವಿವರಿಸುವುದಿಲ್ಲ. ಅಥವಾ ತಾನು ಹಿಂದೆ ಕಲಿತಂತೆ ಮತ್ತು ಅರ್ಥಮಾಡಿಕೊಂಡಂತೆ ತಾನು ಕಂಠಪಾಠ ಮಾಡಿದುದನ್ನು ಪಠಿಸುವುದಿಲ್ಲ ಮತ್ತು ತಾನು ಕಲಿತಂತೆ ಅರ್ಥಮಾಡಿಕೊಂಡಂತೆ ಅದನ್ನು ಮನನ ಮಾಡುವುದಿಲ್ಲ. ಅದನ್ನು ಕುರಿತು ದೀರ್ಘವಾಗಿ ವಿಚಾರ ಮಾಡುವುದಿಲ್ಲ, ಎಡಬಿಡದೆ ಮನಸ್ಸಿನಲ್ಲಿರುವುದು ಕುರಿತು ಚಿಂತನ ಮಾಡುವುದೂ ಇಲ್ಲ. ಆದರೆ ಸಮಾಧಿಯ ಬಗೆಗೆ ಬಂದ ಒಂದು ಸಲಹೆಯನ್ನು ಚೆನ್ನಾಗಿ ಗ್ರಹಿಸುತ್ತಾನೆ. ತಾನು ಗ್ರಹಿಸಿದುದನ್ನು ಮನಸ್ಸಿನಲ್ಲಿ ಭದ್ರವಾಗಿ ನಿಲ್ಲುವಂತೆ ಮಾಡುತ್ತಾನೆ. ಸಞ್ಞಾದ ಮೂಲಕ ಅದನ್ನು ಅರಿಯುತ್ತಾನೆ. ಹೀಗೆ ಪಞ್ಞಾದ ಮೂಲಕ ಅದರ ಅರಿವನ್ನು ಪಡೆಯುತ್ತಿದ್ದಂತೆ ಧಮ್ಮ*ವನ್ನು ಅದರ ಅರ್ಥ ವ್ಯಾಖ್ಯಾನಗಳನ್ನು ತಿಳಿದುಕೊಳ್ಳುತ್ತಾನೆ. ಇದರಿಂದ ಪ್ರಮೋದವು ಹುಟ್ಟುತ್ತದೆ. ಪ್ರಮೋದದಿಂದ ಪ್ರೀತಿಯು ಹುಟ್ಟುತ್ತದೆ. ಪ್ರೀತಿ ಮನಸ್ಸಿನಿಂದ ನಾಮರೂಪವು ಶಾಂತವಾಗುತ್ತದೆ. ಇದರಿಂದ ಸುಖದ ಅನುಭವವಾಗುತ್ತದೆ. ಸುಖ ಚಿತ್ತದಿಂದ ಸಮಾಧಿಯು ಲಭಿಸುತ್ತದೆ. ಇದು ಐದನೆಯ ಅವಕಾಶ. ಸಂಪೂರ್ಣವಾಗಿ ತಿಳಿಯಬೇಕಾದ, ಐದರ ಧರ್ಮಗಳು ಇವು.

ಸಾಕ್ಷಾತ್ಕರಿಸಿಕೊಳ್ಳಬೇಕಾದ ಐದರ ಧರ್ಮಗಳು ಯಾವುವು? ಐದು ಧಮ್ಮಕ್ಖಂಧಗಳು. ಶೀಲಕ್ಖಂಧ, ಸಮಾಧಿಕ್ಖಂದ, ಪಞ್ಞಾಕ್ಖಂಧ, ವಿಮುಕ್ತಿಕ್ಖಂಧ, ವಿಮುಕ್ತಿಞಾಣದಸ್ಸನಕ್ಖಂಧ.

ಈ ಐವತ್ತು ಧರ್ಮಗಳು ವಾಸ್ತವವಾದಂಥವು, ಸತ್ಯವಾಗಿರುವಂಥವು. ಇವು ಬೇರೆ ರೀತಿಯಲ್ಲಿರುವುದು ಸಾಧ್ಯವಿಲ್ಲ. ತಥಾಗತರು ಇದನ್ನು ಸ್ಪಷ್ಟಪಡಿಸಿದ್ದಾರೆ.

ಆರರ ಧರ್ಮ

“ಸಹಾಯ ಪಡೆಯಬೇಕಾದ ಆರರ ಧರ್ಮಗಳಿವೆ... ಸಾಕ್ಷಾತ್ಕರಿಸಿಕೊಳ್ಳಬೇಕಾದ ಆರರ ಧರ್ಮಗಳಿವೆ.

“ಸಹಾಯ ಪಡೆಯಬೇಕಾದ ಆರರ ಧರ್ಮಗಳು ಯಾವುವು? ಸೋದರ ಭಾವನೆಯಿಂದ ಜೀವಿಸಬಲ್ಲ ಅವಕಾಶಗಳು ಆರು. ಭಿಕ್ಷುಗಳು ತಮ್ಮ ಸಹಸಾಧಕರಿಗೆ ಎಲ್ಲರಿಗೂ ಗೊತ್ತಾಗುವಂತೆಯೋ ರಹಸ್ಯವಾಗಿಯೋ ಒಂದು ಒಳ್ಳೆಯ ಕಾರ್ಯವನ್ನು ಮಾಡುತ್ತಾರೆ. ಈ ಒಂದು ಸಹಾಯವನ್ನು ಇತರರಿಗೆ ತಿಳಿಸುವುದು ಸೋದರ ಭಾವನೆಯಿಂದ ಜೀವಿಸಲು ಒದಗುವ ಒಂದು ಅವಕಾಶ. ಅಂಥ ಸಂತೋಷವನ್ನು ಕೊಡುವ, ಉತ್ತಮವಾದ ಸಹಾಯವು, ಸಂಘವನ್ನು ಒಟ್ಟುಗೂಡಿಸುತ್ತದೆ. ವಿವಾದವನ್ನು ತಪ್ಪಿಸುತ್ತದೆ. ಐಕ್ಯಭಾವನೆಯನ್ನುಂಟುಮಾಡುತ್ತದೆ. ಸಾಮರಸ್ಯವನ್ನುಂಟುಮಾಡುತ್ತದೆ.

“ಭಿಕ್ಷುಗಳು... ಮಾತಿನ ಮೂಲಕ ನೆರವಾಗುತ್ತಾರೆ... ಐಕ್ಯ ಭಾವನೆಯನ್ನುಂಟುಮಾಡುತ್ತದೆ, ಸಾಮರಸ್ಯವನ್ನುಂಟುಮಾಡುತ್ತದೆ.

“ಭಿಕ್ಷುಗಳು... ತಮ್ಮ ಸದ್ಭಾವನೆಯಿಂದ ಒಳ್ಳೆಯದನ್ನು ಮಾಡುತ್ತಾರೆ... ಐಕ್ಯಥಾ ಭಾವನೆಯನ್ನುಂಟುಮಾಡುತ್ತದೆ. ಸಾಮರಸ್ಯವನ್ನುಂಟುಮಾಡುತ್ತದೆ.

“ಭಿಕ್ಷುವು ಧಮ್ಮಕ್ಕನುಗುಣವಾದ ದಾನವನ್ನು ಪಡೆದಾಗ ಪಿಂಡಪಾತ್ರೆಯನ್ನು ಕೂಡ ಜೊತೆಯ ಶೀಲವಂತರಾದ ಸಾಧಕರೊಂದಿಗೆ ಹಂಚಿಕೊಂಡು ತನ್ನಲ್ಲಿರುವುದೆಲ್ಲವೂ ಎಲ್ಲರಿಗೂ ಸೇರಿದುದೆಂದು ಅರಿತುಕೊಂಡಾಗ ಸೋದರ ಭಾವನೆಯಿಂದ ಜೀವಿಸುವ ಅವಕಾಶವುಂಟಾಗುತ್ತದೆ. ಇದು ಸೋದರತೆಯಿಂದ ಬದುಕುವ ಅವಕಾಶಗಳಲ್ಲಿ ಒಂದು ಐಕ್ಯಭಾವನೆಯನ್ನುಂಟುಮಾಡುತ್ತದೆ, ಸಾಮರಸ್ಯವನ್ನುಂಟುಮಾಡುತ್ತದೆ.

“ಭಿಕ್ಷುವಾದವನು ಅಖಂಡವಾದ ಅಚ್ಛಿದ್ರವಾದ ಯಾವ ಕುಂದೂ ಇಲ್ಲದ ಕಶ್ಮಲವಿಲ್ಲದ ಪರಿಶುದ್ಧವಾದ ಶೀಲಗಳನ್ನು ತಿಳಿದವರು ಪ್ರಶಂಸಿಸುವ ರೀತಿಯಲ್ಲಿ ಸಮಾಧಿಯನ್ನು ಪಡೆಯಲು ಅನುಕೂಲವಾಗುವಂತೆ ಸಹ ಸಾಧಕರ ಜೊತೆಗೆ ಎಲ್ಲರಿಗೂ ಗೊತ್ತಾಗುವಂತೆಯೋ ಅಥವಾ ರಹಸ್ಯವಾಗಿಯೋ ಸಾಧನೆ ಮಾಡುತ್ತಾನೆ. ಇದು ಸೋದರತೆಯಿಂದ ಬದುಕುವ ಅವಕಾಶಗಳಲ್ಲಿ ಒಂದು.... ಇದು ಐಕ್ಯಮತ್ಯವನ್ನುಂಟುಮಾಡುತ್ತದೆ, ಸಾಮರಸ್ಯವನ್ನು ಉಂಟುಮಾಡುತ್ತದೆ.

“ಭಿಕ್ಷುವಾದವನು ಶ್ರೇಷ್ಠವಾದ ಗುರಿಯ ಕಡೆಗೆ ಕೊಂಡೊಯ್ಯುವ ದುಃಖವನ್ನು ಕ್ಷಯಗೊಳಿಸುವ ಸಮ್ಯಕ್ ದೃಷ್ಟಿಯನ್ನು ಹೊಂದಿ ಸಹಸಾಧಕರ ಜೊತೆಗೆ ಎಲ್ಲರಿಗೂ ಗೊತ್ತಾಗುವಂತೆಯೋ ಅಥವಾ ಯಾರಿಗೂ ಗೊತ್ತಾಗದಂತೆಯೋ ಸಾಧನೆ ಮಾಡುತ್ತಾನೆ. ಇದು ಸೋದರತೆಯಿಂದ ಬದುಕುವ ಅವಕಾಶಗಳಲ್ಲಿ ಒಂದು. ಇದು ಸಂತೋಷವನ್ನುಂಟುಮಾಡುತ್ತದೆ, ಒಟ್ಟುಗೂಡಿಸುತ್ತದೆ, ವಿವಾದವನ್ನು ತಪ್ಪಿಸುತ್ತದೆ, ಐಕ್ಯಭಾವನೆಯನ್ನುಂಟು ಮಾಡುತ್ತದೆ, ಸಾಮರಸ್ಯವನ್ನುಂಟುಮಾಡುತ್ತದೆ.

“ಬೆಳೆಸಿಕೊಳ್ಳಬೇಕಾದ ಆರರ ಧರ್ಮಗಳು ಯಾವುವು? ಮತ್ತೆ ಮತ್ತೆ ನೆನಪಿಗೆ ತಂದುಕೊಳ್ಳಬೇಕಾದ ವಿಷಯಗಳು ಯಾವುವು? ಬುದ್ಧಾನುಸ್ಸತಿ, ಧಮ್ಮಾನುಸ್ಸತಿ, ಸಂಘಾನುಸ್ಸತಿ, ಶೀಲಾನುಸ್ಸತಿ, ತ್ಯಾಗಾನುಸ್ಸತಿ, ದೇವತಾನುಸ್ಸತಿ.*

“ತಿಳಿದುಕೊಳ್ಳಬೇಕಾದ ಆರರ ಧರ್ಮಗಳು ಯಾವುವು? ತನ್ನೊಳಗಿನ ಆಯತನಗಳು - ಚಕ್ಷು ಶ್ರೋತ್ರ, ಘ್ರಾಣ, ಜಿಹ್ವ, ಕಾಯ, ಮನಸ್.

“ಬಿಡಬೇಕಾದ ಆರರ ಧರ್ಮಗಳು ಯಾವುವು? ಆರು ತಣ್ಹಾಗಳು, ರೂಪ ತಣ್ಹಾ, ಶಬ್ದ ತಣ್ಹಾ, ಗಂಧ ತಣ್ಹಾ, ರಸ ತಣ್ಹಾ, ಸ್ಪರ್ಶ ತಣ್ಹಾ, ಧರ್ಮ ತಣ್ಹಾ (ಅಂದರೆ ರೂಪ, ಶಬ್ದ, ಗಂಧ ರಸ, ಸ್ಪರ್ಶ ಮತ್ತು ಭಾವನೆಗಳ ಸುಖವನ್ನು ಅನುಭವಿಸಬೇಕೆಂಬ ಬಯಕೆ.)

“ಹಾನಿಯನ್ನುಂಟುಮಾಡುವ ಆರರ ಧರ್ಮಗಳು ಯಾವುವು? ಆರು ಬಗೆಯ ಅಗೌರವಗಳು. ಭಿಕ್ಷುವಾದವನು ತನ್ನ ಗುರುವಿನಲ್ಲಿ ಅಗೌರವದಿಂದಿರುವುದು, ಅವನನ್ನು ಧಿಕ್ಕರಿಸುವುದು, ಧಮ್ಮ... ಸಂಘ... ಶಿಕ್ಷಣ... ಎಚ್ಚರಿಕೆಯನ್ನು ಪಾಲಿಸದಿರುವುದು, ತನ್ನ ಕರ್ತವ್ಯಗಳನ್ನು ನಿರ್ಲಕ್ಷಿಸುವುದು. ಇವು ಹಾನಿಯನ್ನುಂಟುಮಾಡುವ ಆರರ ಧರ್ಮಗಳು.

“ವಿಶೇಷತೆಯನ್ನು ಕೊಡುವ ಆರರ ಧರ್ಮಗಳು ಯಾವುವು? ಆರು ಗೌರವಗಳು. ಭಿಕ್ಷುವು ತನ್ನ ಗುರುವಿಗೆ ಗೌರವವನ್ನು ತೋರಿಸುತ್ತಾನೆ, ವಿಧೇಯತೆಯಿಂದಿರುತ್ತಾನೆ. ಧಮ್ಮಕ್ಕೆ... ಸಂಘಕ್ಕೆ... ಶಿಕ್ಷಣಕ್ಕೆ... ಎಚ್ಚರಿಕೆಯಿಂದಿರುತ್ತಾನೆ. ತಾನು ಮಾಡಬೇಕಾದ ಕರ್ತವ್ಯಗಳನ್ನು ಸರಿಯಾಗಿ ಮಾಡುತ್ತಾನೆ. ಇವು ವಿಶೇಷತೆಯನ್ನು ಕೊಡುವ ಆರರ ಧರ್ಮಗಳು.

“ಅರಿಯಲು ಕಷ್ಟವಾದ ಆರು ಧರ್ಮಗಳು ಯಾವುವು? ಬಿಡುಗಡೆಯ ಕಡೆಗೆ ಒಯ್ಯುವ ಆರು ಧಾತುಗಳು. ಭಿಕ್ಷುವೊಬ್ಬನು ಹೀಗೆ ಹೇಳುತ್ತಾನೆ. ‘ಗೆಳೆಯ, ನಾನು ಮೈತ್ರಿ ಭಾವನೆಯನ್ನು ಬೆಳೆಸಿಕೊಂಡಿದ್ದೇನೆ, ಚೇತೋವಿಮುಕ್ತಿಯನ್ನು ಪಡೆದುಕೊಂಡಿದ್ದೇನೆ. ಮೈತ್ರಿ ಭಾವನೆಯನ್ನು ಬಹು ಹೆಚ್ಚು ಮಾಡಿದ್ದೇನೆ, ಯಾನವನ್ನಾಗಿ ಮಾಡಿಕೊಂಡಿದ್ದೇನೆ, ಆಧಾರವನ್ನಾಗಿ ಮಾಡಿಕೊಂಡಿದ್ದೇನೆ, ಅದನ್ನು ಅಭಿವ್ಯಕ್ತಿಗೊಳಿಸಿದ್ದೇನೆ. ಸಮರ್ಥವನ್ನಾಗಿ ಮಾಡಿದ್ದೇನೆ. ಅದು ಪರಿಣಾಮಕಾರಿಯಾಗಿರುವಂತೆ ಮಾಡಿದ್ದೇನೆ. ಆದರೂ ನನ್ನ ಚಿತ್ತದಲ್ಲಿ ವೈರಭಾವನೆಯು ಉಳಿದುಕೊಂಡಿದೆ. ಅವನಿಗೆ ‘ಹಾಗಲ್ಲ, ಹಾಗೆ ಹೇಳುವುದು ತಪ್ಪು. ಭಗವಾನರನ್ನು ತಪ್ಪಾಗಿ ಅರ್ಥಮಾಡಿಕೊಳ್ಳಬೇಡ. ಅದು ಸಾದುವಾದುದಲ್ಲ. ಭಗವಾನರು ಹಾಗೆ ಹೇಳಿಲ್ಲ. ಗೆಳೆಯ, ಮೈತ್ರಿ ಭಾವನೆಯನ್ನು ಬೆಳೆಸಿಕೊಳ್ಳುವುದರ ಮೂಲಕ ಅದನ್ನು ಅಗಣಿತವಾಗಿ ಮಾಡಿಕೊಳ್ಳುವುದರ ಮೂಲಕ, ಯಾನ ಆಧಾರಗಳನ್ನಾಗಿ ಮಾಡಿಕೊಳ್ಳುವುದರ ಮೂಲಕ ಚೇತೋವಿಮುಕ್ತಿಯನ್ನು ಪಡೆಯಬಹುದು. ಮೈತ್ರಿ ಭಾವನೆಯನ್ನು ಸಮರ್ಥವನ್ನಾಗಿ ಮಾಡಿದಾಗ ಚಿತ್ತದಲ್ಲಿ ವೈರಭಾವನೆ ಇರಲು ಸಾಧ್ಯವಿಲ್ಲ. ವೈರಭಾವನೆಯಿಂದ ಬಿಡುಗಡೆಯಾಗುವುದು ಹೀಗೆ. ಮೈತ್ರಿಯ ಮೂಲಕ ಚೇತೋವಿಮುಕ್ತಿಯನ್ನು ಪಡೆದಾಗ ವೈರಭಾವನೆ ಇರುವುದಿಲ್ಲ’ ಎಂದು ಹೇಳಬೇಕು.

“ಭಿಕ್ಷುವು ಹೀಗೆ ಹೇಳುತ್ತಾನೆ- ‘ಗೆಳೆಯ, ನಾನು ಕರುಣೆಯನ್ನು ಬೆಳೆಸಿಕೊಂಡಿದ್ದೇನೆ. ಚೇತೋವಿಮುಕ್ತಿಯನ್ನು ಪಡೆದಿದ್ದೇನೆ. ಕರುಣಾ ಭಾವನೆಯನ್ನು ಅಗಣಿತವನ್ನಾಗಿ ಮಾಡಿದ್ದೇನೆ. ಯಾನವನ್ನಾಗಿ ಮಾಡಿಕೊಂಡಿದ್ದೇನೆ, ಆಧಾರವನ್ನಾಗಿ ಮಾಡಿಕೊಂಡಿದ್ದೇನೆ. ಅದು ಪ್ರಕಟವಾಗುವಂತೆ ಸಾಧನೆಯನ್ನು ಮಾಡಿ ಸಮರ್ಥವನ್ನಾಗಿ ಮಾಡಿದ್ದೇನೆ. ಆದರೂ ಚಿತ್ತದಲ್ಲಿ ಹಿಂಸಾಭಾವನೆಯು ಉಳಿದುಕೊಂಡಿದೆ.’ ಅವನಿಗೆ ‘ಹಾಗಲ್ಲ, ಹಾಗೆ ಹೇಳಬೇಡ, ಭಗವಾನರನ್ನು ತಪ್ಪಾಗಿ ಅರ್ಥ ಮಾಡಿಕೊಳ್ಳುವುದು ಬೇಡ... ಕರುಣಾಚಿತ್ತದ ಮೂಲಕ ಚೇತೋವಿಮುಕ್ತಿಯನ್ನು ಪಡೆದಾಗ ಹಿಂಸಾಭಾವನೆಯು ಇರುವುದಿಲ್ಲ’ ಎಂದು ಹೇಳಬೇಕು.

“ಭಿಕ್ಷುವು ಹೀಗೆ ಹೇಳುತ್ತಾನೆ- ‘ಗಳೆಯ, ಮುದಿತಾ ಭಾವನೆಯನ್ನು ಬೆಳೆಸಿಕೊಂಡು ಚೇತೋವಿಮುಕ್ತಿಯನ್ನು ಪಡೆದಿದ್ದೇನೆ. ಆದರೂ ಚಿತ್ತದಲ್ಲಿ ಜುಗುಪ್ಸೆಯು ಉಳಿದುಕೊಂಡಿದೆ’. ಅವನಿಗೆ ‘ಹಾಗಲ್ಲ, ಹಾಗೆ ಹೇಳಬೇಡ, ಮುದಿತಾ ಚಿತ್ತದ ಮೂಲಕ ಚೇತೋವಿಮುಕ್ತಿಯನ್ನು ಪಡೆದಾಗ ಜುಗುಪ್ಸೆ ಇರಲು ಸಾಧ್ಯವಿಲ್ಲ’ ಎಂದು ಹೇಳಬೇಕು.

“ಒಬ್ಬ ಭಿಕ್ಷುವು ಹೀಗೆ ಹೇಳುತ್ತಾನೆ, ‘ಉಪೇಕ್ಖಾ ಭಾವನೆಯನ್ನು ಬೆಳೆಸಿಕೊಂಡು ಚೇತೋವಿಮುಕ್ತಿಯನ್ನು ಪಡೆದಿದ್ದೇನೆ. ಆದರೂ ಚಿತ್ತದಲ್ಲಿ ರಾಗವು ಉಳಿದುಕೊಂಡಿದೆ’. ಅವನಿಗೆ ‘ಹಾಗಲ್ಲ, ಹಾಗೆ ಹೇಳಬೇಡ... ಉಪೇಕ್ಖಾದ ಮೂಲಕ ಚೇತೋವಿಮುಕ್ತಿಯನ್ನು ಪಡೆದಾಗ ರಾಗವಿರಲು ಸಾಧ್ಯವಿಲ್ಲ’ ಎಂದು ಹೇಳಬೇಕು.

“ಭಿಕ್ಷುವು ಹೀಗೆ ಹೇಳುತ್ತಾನೆ- ‘ಅನಿಮಿತ್ತಾ ಭಾವನೆಯನ್ನು ಬೆಳೆಸಿಕೊಂಡಿದ್ದೇನೆ. ಚೇತೋವಿಮುಕ್ತಿಯನ್ನು ಪಡೆದಿದ್ದೇನೆ. ಆದರೂ ನಿಮಿತ್ತಗಳನ್ನು ಅನುಸರಿಸುವ ವಿಞ್ಞಾಣವು ಇದ್ದೇ ಇದೆ’. ಅವನಿಗೆ ‘ಹಾಗಲ್ಲ, ಹಾಗೆ ಹೇಳಬೇಡ. ಅನಿಮಿತ್ತಾ ಭಾವನೆಯ ಮೂಲಕ ಚೇತೋವಿಮುಕ್ತಿಯನ್ನು ಪಡೆದಾಗ ಎಲ್ಲ ನಿಮಿತ್ತಗಳೂ ಇಲ್ಲವಾಗುತ್ತವೆ ಎಂದು ಹೇಳಬೇಕು.

“ಭಿಕ್ಷುವು ಹೀಗೆ ಹೇಳುತ್ತಾನೆ. ನಾನು ಇದ್ದೇನೆ ಎಂಬ ಭಾವನೆಯು ನನ್ನಿಂದ ಹೊರಟು ಹೋಗಿದೆ. ನಾನು ಇದ್ದೇನೆ ಎಂಬ ಭಾವನೆಯನ್ನು ನಾನು ಗಣಿಸುವುದೇ ಇಲ್ಲ. ಆದರೂ ನನ್ನಲ್ಲಿ ಸಂಶಯಗಳೂ ಯಾವುದು ಸರಿ ಯಾವುದು ಸರಿಯಲ್ಲ ಎಂಬ ವಿಚಾರವೂ ಉಳಿದುಕೊಂಡಿದೆ’. ಆತನಿಗೆ ‘ಹಾಗಿಲ್ಲ, ಹಾಗೆ ಹೇಳಬಾರದು, ಭಗವಾನರು ಹೇಳಿದುದನ್ನು ತಪ್ಪರ್ಥ ಮಾಡಿಕೊಳ್ಳಬಾರದು, ಹಾಗೆ ಮಾಡುವುದು ಒಳ್ಳೆಯದಲ್ಲ, ಭಗವಾನರು ಹಾಗೆ ಹೇಳಿಲ್ಲ. ನಾನು ಇದ್ದೇನೆ ಎಂಬ ಭಾವನೆ ನಮ್ಮಿಂದ ಹೊರಟು ಹೋದಾಗ ಇದ್ದೇನೆ ಎಂಬುದು ಗಣನೆಗೇ ಬರುವುದಿಲ್ಲ. ಆಗ ಸಂಶಯಗಳಾಗಲೀ ಯಾವುದು ಸರಿ, ಯಾವುದು ಸರಿಯಲ್ಲ ಎಂಬ ವಿಚಾರವಾಗಲೀ ಉಳಿಯುವುದಿಲ್ಲ. ಅಂಥ ಸ್ಥಿತಿ ಇರುವುದು ಸಾಧ್ಯವೇ ಇಲ್ಲ. ಸಂಶಯಗಳೂ ಯಾವುದು ಸರಿ, ಯಾವುದು ಸರಿಯಲ್ಲ ಎಂಬ ವಿಚಾರವೂ ಚಿತ್ತದಲ್ಲಿಲ್ಲದಾಗ ಇದ್ದೇನೆ ಎಂಬ ಭಾವನೆಯಿಂದ ಬಿಡುಗಡೆಯಾಗುತ್ತೀಯೆ’ ಎಂದು ಹೇಳಬೇಕು.

“ಮೇಲಕ್ಕೆ ತರಬೇಕಾದ ಆರರ ಧರ್ಮಗಳು ಯಾವುವು? ಸತತವಾಗಿ ಇರಬೇಕಾದ ಆರು ಸ್ಥಿತಿಗಳು. ಭಿಕ್ಷವು ಕಣ್ಣಿನಿಂದ ರೂಪವನ್ನು ನೋಡಿ, ಸಂತೋಷವನ್ನೂ ಪಡದೆ ಅಸಂತೋಷವನ್ನೂ ಪಡದೆ ಉಪೇಕ್ಷಾಭಾವದಿಂದ ಇರುತ್ತಾನೆ, ಸ್ಮೃತಿವಂತನಾಗಿರುತ್ತಾನೆ. ಕಿವಿಯಿಂದ ಶಬ್ದವನ್ನು ಕೇಳಿ... ಮೂಗಿನಿಂದ ವಾಸನೆಯನ್ನು ತಿಳಿದು... ನಾಲಿಗೆಯಿಂದ ರುಚಿಯನ್ನು ನೋಡಿ... ಕಾಯದಿಂದ ಸ್ಪರ್ಶವನ್ನು ಅನುಭವಿಸಿ... ಮನಸ್ಸಿನಿಂದ ಧರ್ಮವನ್ನು ತಿಳಿದು ಸಂತೋಷವನ್ನೂ ಪಡದೆ ಅಸಂತೋಷವನ್ನೂ ಪಡದೆ ಉಪೇಕ್ಷಾ ಭಾವನೆಯಿಂದಿರುತ್ತಾನೆ, ಸ್ಮೃತಿವಂತನಾಗಿರುತ್ತಾನೆ.

“ಸ್ಪಷ್ಟವಾಗಿ ತಿಳಿಯಬೇಕಾದ ಆರರ ಧರ್ಮಗಳು ಯಾವುವು? ಆರು ಅನುತ್ತರವಾದ ಅಶುಭಗಳು. ಅನುತ್ತರವಾದ ದರ್ಶನ, ಅನುತ್ತರವಾದ ಶ್ರವಣ, ಅನುತ್ತರವಾದ ಲಾಭ, ಅನುತ್ತರವಾದ ಶಿಕ್ಷಣ, ಅನುತ್ತರವಾದ ಪರಿವಾರ, ಅನುತ್ತರವಾದ ನೆನಪುಗಳು.

“ಸಾಕ್ಷಾತ್ಕರಿಸಿಕೊಳ್ಳಬೇಕಾದ ಆರರ ಧರ್ಮಗಳು ಯಾವುವು? ಆರು ಉತ್ಕೃಷ್ಟ ಜ್ಞಾನಗಳು. ಭಿಕ್ಷುವು ಋದ್ಧಿಶಕ್ತಿಯನ್ನು ಅನೇಕ ರೀತಿಯಲ್ಲಿ ಅನುಭವಿಸುತ್ತಾನೆ. ಒಬ್ಬನೇ ಆದವನು ಅನೇಕವಾಗುತ್ತಾನೆ, ಬಹುವಾಗಿದ್ದವನು ಒಬ್ಬನೇ ಆಗುತ್ತಾನೆ, ಕಾಣಿಸಿಕೊಳ್ಳುತ್ತಾನೆ, ಅದೃಶ್ಯನಾಗುತ್ತಾನೆ. ಗೋಡೆಯನ್ನೂ, ಪ್ರಾಕಾರವನ್ನೂ, ಪರ್ವತವನ್ನೂ ಆಕಾಶದಲ್ಲಿ ಹೋಗುವಂತೆ ತೂರಿಕೊಂಡು ಹೋಗುತ್ತಾನೆ. ನೀರಿನಲ್ಲಿ ಮುಳುಗುವಂತೆ ಪೃಥ್ವಿಯೊಳಗೆ ಮುಳುಗುತ್ತಾನೆ. ನೆಲದಮೇಲೆ ನಡೆಯುವಂತೆ ನೀರಿನ ಮೇಲೆ ನಡೆಯುತ್ತಾನೆ. ಪದ್ಮಾಸನ ಹಾಕಿಕೊಂಡು ಆಕಾಶದಲ್ಲಿ ಪಕ್ಷಿಯು ಚಲಿಸುವಂತೆ ಚಲಿಸುತ್ತಾನೆ. ಮಹಾಶಕ್ತರೂ ಮಹಾ ಸಮರ್ಥರೂ ಆದ ಚಂದ್ರ ಸೂರ್ಯರನ್ನೂ ಕೈಯಿಂದಲೇ ಮುಟ್ಟುತ್ತಾನೆ. ಸಕಾಯನಾಗಿ ಬ್ರಹ್ಮಲೋಕಕ್ಕೆ ಹೋಗುತ್ತಾನೆ.

“ದಿವ್ಯವಾದ ಕರ್ಣದಿಂದ ಮನುಷ್ಯರಿಗೆ ಸಾಧ್ಯವಾಗದ ದೂರದ ಮತ್ತು ಹತ್ತಿರದ ಪರಿಶುದ್ಧವಾದ ಶಬ್ದಗಳನ್ನು ಕೇಳಬಲ್ಲವನಾಗಿರುತ್ತಾನೆ. ದೇವಲೋಕದ ಮತ್ತು ಮನುಷ್ಯ ಲೋಕದ ಶಬ್ದಗಳೆರಡನ್ನೂ ಕೇಳಬಲ್ಲವನಾಗಿರುತ್ತಾನೆ.

“ಬೇರೆ ಜೀವಿಗಳ ಚಿತ್ತಗಳಲ್ಲಿರುವುದನ್ನು ಅರಿಯಬಲ್ಲವನಾಗಿರುತ್ತಾನೆ. ರಾಗದಿಂದ ಕೂಡಿರುವ ರಾಗಪೂರಿತ ಚಿತ್ತವೆಂದೂ... ಅವಿಮುಕ್ತ ಚಿತ್ತವನ್ನು ಅವಿಮುಕ್ತ ಚಿತ್ತವೆಂದೂ ಅರಿಯಬಲ್ಲವನಾಗಿರುತ್ತಾನೆ.

“ಅವನು ತನ್ನ ಹಿಂದಿನ ಅನೇಕ ಜನ್ಮಗಳನ್ನು ನೆನಪಿಗೆ ತಂದುಕೊಳ್ಳಬಲ್ಲವನಾಗಿರುತ್ತಾನೆ. ಒಂದು ಜನ್ಮವನ್ನು, ಅನೇಕ ಹಿಂದಿನ ಜನ್ಮಗಳನ್ನು ಎಲ್ಲ ವಿವರಗಳೊಂದಿಗೆ ಸ್ಮರಿಸಿಕೊಳ್ಳಬಲ್ಲವನಾಗಿರುತ್ತಾನೆ.

“ಆತನು ತನ್ನ ಶುದ್ಧವಾದ ದಿವ್ಯಚಕ್ಷುವಿನಿಂದ ಸಾಧಾರಣ ಮನುಷ್ಯರಿಗೆ ಸಾಧ್ಯವಿಲ್ಲದ ಅವನತಿಯನ್ನು ಹೊಂದಬಲ್ಲ ಅಥವಾ ಉನ್ನತಿಯನ್ನು ಪಡೆಯಬಲ್ಲ, ಹೀನವಾದ ಮತ್ತು ಶ್ರೇಷ್ಠವಾದ, ಸುರ್ವರ್ಣವನ್ನು ಹೊಂದಿರುವ ಅಥವಾ ದುರ್ವರ್ಣದಿಂದ ಕೂಡಿರುವ ಸುಗತಿಯನ್ನು ಹೊಂದುವ ಅಥವಾ ದುರ್ಗತಿಯನ್ನು ಪಡೆಯುವ ಜೀವಿಗಳನ್ನು ನೋಡಬಲ್ಲವನಾಗಿರುತ್ತಾನೆ. ಜೀವಿಗಳು ತಮ್ಮ ತಮ್ಮ ಕರ್ಮಗಳಿಗೆ ತಕ್ಕಂತೆ ಜನ್ಮ ಪಡೆಯುವುದನ್ನು ನೋಡಬಲ್ಲವನಾಗಿರುತ್ತಾನೆ.

“ಆಸವಗಳನ್ನು ನಾಶ ಮಾಡಿಕೊಂಡ ಅನಾಸವನಾಗಿ ಚೇತೋವಿಮುಕ್ತಿ ಪಞ್ಞಾ ವಿಮುಕ್ತಿಗಳನ್ನು ಸಾಧಿಸಿದವನಾಗಿ ಧಮ್ಮವನ್ನು ತಾನೇ ಅರಿಯಬಲ್ಲ ದೃಷ್ಟಿಯನ್ನು ಸಾಕ್ಷಾತ್ಕರಿಸಿಕೊಳ್ಳುತ್ತಾನೆ.

“ಈ ಅರವತ್ತು ಧರ್ಮಗಳು ವಾಸ್ತವವಾಗಿರುವಂಥವು, ಸತ್ಯವಾಗಿರುವಂಥವು. ಇವು ಬೇರೆ ರೀತಿಯಲ್ಲಿರಲು ಸಾಧ್ಯವಿಲ್ಲ. ತಥಾಗತರು ಇದನ್ನು ಸ್ಪಷ್ಟವಾಗಿ ಅರಿತಿದ್ದಾರೆ.

ಏಳರ ಧರ್ಮಗಳು

“ಸಹಾಯವು ಪಡೆಯಬೇಕಾದ ಏಳರ ಧರ್ಮಗಳಿವೆ... ಸಾಕ್ಷಾತ್ಕರಿಸಿಕೊಳ್ಳಬೇಕಾದ ಏಳರ ಧರ್ಮಗಳಿವೆ.

“ಸಹಾಯ ಪಡೆಯಬೇಕಾದ ಏಳರ ಧರ್ಮಗಳು ಯಾವುವು? ಏಳು ಶ್ರೇಷ್ಠವಾದ ಸಂಪತ್ತುಗಳು. ಶ್ರದ್ಧೆ, ಶೀಲ, ನೈತಿಕ ನಾಚಿಕೆ ಮತ್ತು ಭಯ, ವಿದ್ವತ್ತು, ತ್ಯಾಗ, ಪಞ್ಞಾ.

“ಬೆಳೆಸಿಕೊಳ್ಳಬೇಕಾದ ಏಳರ ಧರ್ಮಗಳು ಯಾವುವು? ಏಳು ಬೋಜ್ಝಂಗಗಳು : ಸ್ಮೃತಿ ಧಮ್ಮದ ಅರಿವು, ಯತ್ನಶೀಲತೆ (ವೀರ್ಯ), ಪ್ರೀತಿ, ಶಾಂತಿ, ಸಮಾಧಿ, ಉಪೇಕ್ಷ ಭಾವನೆ.

“ತಿಳಿದುಕೊಳ್ಳಬೇಕಾದ ಏಳರ ಧರ್ಮಗಳು ಯಾವುವು? ಏಳು ವಿಞ್ಞಾಣದ ಸ್ಥಿತಿಗಳು. ನಾನಾ ಕಾಯಗಳನ್ನು ನಾನಾ ಬಗೆಯ ಅರಿವುಗಳನ್ನು ಹೊಂದಿರುವ ದೇವತೆಗಳಂತೆ ಅಥವಾ ನಿಪಾತಕ್ಕೆ ಹೋಗುವವರಂತೆ ಕೆಲವು ಜೀವಿಗಳಿದ್ದಾರೆ. ಇವುಗಳ ವಿಞ್ಞಾಣವು ಮೊದಲನೆಯ ಸ್ಥಿತಿಯಲ್ಲಿರುವ ವಿಞ್ಞಾಣ.

“ಬ್ರಹ್ಮಕಾಯಕ ದೇವತೆಗಳಂತೆ ಅಥವಾ ಪ್ರಥಮ ಧ್ಯಾನದ ಫಲವಾಗಿ ಬ್ರಹ್ಮಲೋಕದಲ್ಲಿ ಹುಟ್ಟುವವರಂತೆ ನಾನಾಬಗೆಯ ಕಾಯಗಳನ್ನೂ ಒಂದೇಬಗೆಯ ಅರಿವನ್ನೂ ಹೊಂದಿರುವ ಜೀವಿಗಳಿದ್ದಾರೆ. ಇವರ ವಿಞ್ಞಾಣವು ಎರಡನೆಯ ಸ್ಥಿತಿಯಲ್ಲಿರುವ ವಿಞ್ಞಾಣ.

“ಅಭಸ್ಸರಾ ದೇವತೆಗಳಂತೆ ಒಂದೇ ಬಗೆಯ ಕಾಯವನ್ನೂ ನಾನಾರೀತಿಯ ಅರಿವನ್ನೂ ಹೊಂದಿರುವ ಜೀವಿಗಳಿದ್ದಾರೆ. ಇವರ ವಿಞ್ಞಾಣವು ಮೂರನೆಯ ಸ್ಥಿತಿಯಲ್ಲಿರುವ ವಿಞ್ಞಾಣ.

“ಸುಭಕಿಣ್ಹ ದೇವತೆಗಳಂತೆ ಒಂದೇಬಗೆಯ ಕಾಯವನ್ನೂ ಒಂದೇಬಗೆಯ ಅರಿವನ್ನೂ ಹೊಂದಿರುವ ಜೀವಿಗಳಿದ್ದಾರೆ. ಇವರ ವಿಞ್ಞಾಣವು ನಾಲ್ಕನೆಯ ಸ್ಥಿತಿಯಲ್ಲಿರುವ ವಿಞ್ಞಾಣ.

“ಎಲ್ಲ ರೂಪಗಳ ಅರಿವನ್ನೂ ಮೀರಿ ‘ಆಕಾಶವು ಅನಂತವಾಗಿದೆ’ ಎಂಬುದರ ಅರಿವಿರುವ ಆಕಾಸಾನಂಚಾಯ ತನವನ್ನು ಅನುಭವಿಸುವ ಜೀವಿಗಳಿದ್ದಾರೆ. ಇವರ ವಿಞ್ಞಾಣವು ಐದನೆಯ ಸ್ಥಿತಿಯಲ್ಲಿರುವ ವಿಞ್ಞಾಣ.

“ಆಕಾಸಾನಂಚಾಯತನವನ್ನೂ ದಾಟಿ ವಿಞ್ಞಾಣವು ಅನಂತವಾಗಿದೆ ಎಂಬ ಅರಿವಿರುವ ವಿಞ್ಞಾಣಂಚಾಯತನ ದಲ್ಲಿರುವ ಜೀವಿಗಳಿದ್ದಾರೆ. ಇವರ ವಿಞ್ಞಾಣವು ಆರನೆಯ ಸ್ಥಿತಿಯಲ್ಲಿರುವ ವಿಞ್ಞಾಣ.

“ವಿಞ್ಞಾಣಂಚಾಯತನ್ನೂ ದಾಟಿ ‘ಏನೂ ಇಲ್ಲ’ ಎಂಬ ಅರಿವಿರುವ ಅಕಿಂಚಿಞ್ಞಾಯತನದಲ್ಲಿರುವ ಜೀವಿಗಳಿದ್ದಾರೆ. ಇವರ ವಿಞ್ಞಾಣವು ಏಳನೆಯ ಸ್ಥಿತಿಯಲ್ಲಿರುವ ವಿಞ್ಞಾಣ. ಇವು ಅರಿಯಬೇಕಾದ ಏಳರ ಧರ್ಮಗಳು.

“ಬಿಡಬೇಕಾದ ಏಳರ ಧರ್ಮಗಳು ಯಾವುವು? ಏಳು ಅನುಸಯಗಳು - ಕಾಮಗಳನ್ನು ಹೊಂದಿರುವುದು, ವೈರಭಾವನೆ, ಮಿಥ್ಯಾದೃಷ್ಟಿ, ಸಂಶಯಗಳಿಂದ ಕೂಡಿರುವುದು, ದುರಭಿಮಾನ, ಮುಂದೆ ಜನ್ಮ ಪಡೆಯುವ ಆಸೆ, ಅವಿಜ್ಜಾ.

“ಹಾನಿಯನ್ನುಂಟುಮಾಡುವ ಏಳರ ಧರ್ಮಗಳು ಯಾವುವು? ಏಳು ಅಧರ್ಮಗಳು- ಅಶ್ರದ್ಧೆ, ಲಜ್ಜೆಯಿಲ್ಲದಿರುವುದು, ವಿವೇಚನೆ ಇಲ್ಲದಿರುವುದು, ಧಮ್ಮದ ತಿಳಿವಳಿಕೆ ಇಲ್ಲದಿರುವುದು, ಆಲಸ್ಯದಿಂದಿರುವುದು, ಸ್ಪಷ್ಟವಾದ ತಿಳಿವಳಿಕೆ ಇಲ್ಲದಿರುವುದು, ದುರ್ಪ್ರಜ್ಞೆ (ದುಪ್ಪಞ್ಞಾ) ಇರುವುದು.

“ವಿಶೇಷತೆಯನ್ನು ಕೊಡುವ ಏಳರ ಧರ್ಮಗಳು ಯಾವುವು? ಶ್ರದ್ಧೆಯಿಂದಿರುವುದು, ಹ್ರೀಯನ್ನು ಹೊಂದಿರುವುದು, ವಿವೇಚನೆಯಿಂದಿರುವುದು, ಬಹುಶ್ರುತನಾಗಿರುವುದು, ಯತ್ನಶೀಲನಾಗಿರುವುದು, ಸ್ಪಷ್ಟವಾದ ತಿಳಿವಳಿಕೆಯಿಂದಿರುವುದು, ಪಞ್ಞಾವನ್ನು ಹೊಂದಿರುವುದು.

“ಅರಿಯಲು ಕಷ್ಟವಾದ ಏಳರ ಧರ್ಮಗಳು ಯಾವುವು? ಸತ್ಪುರುಷರ ಏಳು ಗುಣಗಳು- ಭಿಕ್ಷುವು ಧಮ್ಮವನ್ನು ತಿಳಿದವನಾಗಿರುತ್ತಾನೆ. ಧಮ್ಮದ ಅರ್ಥವನ್ನು ತಿಳಿದವನಾಗಿರುತ್ತಾನೆ, ತನ್ನನ್ನು ತಿಳಿದವನಾಗಿರುತ್ತಾನೆ. ಹೇಗೆ ನಡೆದುಕೊಳ್ಳಬೇಕೆಂಬುದನ್ನು ತಿಳಿದವನಾಗಿರುತ್ತಾನೆ. ಕಾಲೋಚಿತವಾದುದನ್ನು ಅರಿತಿರುತ್ತಾನೆ, ಜನಸಮೂಹದ ಸ್ವಭಾವವನ್ನು ತಿಳಿದವನಾಗಿರುತ್ತಾನೆ, ವ್ಯಕ್ತಿಯ ಸ್ವಭಾವವನ್ನು ಅರಿತವನಾಗಿರುತ್ತಾನೆ.

“ಮೇಲಕ್ಕೆ ತರಬೇಕಾದ ಏಳರ ಧರ್ಮಗಳು ಯಾವುವು? ಏಳು ಅರಿವುಗಳು. ಅನಿಚ್ಚದ ಅರಿವು, ಅನತ್ತದ ಅರಿವು, ಅಶುಭದ ಅರಿವು, ಅಪಾಯಗಳ ಅರಿವು, ವರ್ಜಿಸಬೇಕಾದವುಗಳ ಅರಿವು, ವೈರಾಗ್ಯದ ಅರಿವು, ಬಿಡುಗಡೆಯ ಅರಿವು.

“ಸ್ಪಷ್ಟವಾಗಿ ಅರಿಯಬೇಕಾದ ಏಳರ ಧರ್ಮಗಳು ಯಾವುವು? ನಿರ್ದೇಶನದ ಏಳು ಆಧಾರಗಳು. ಭಿಕ್ಷುವು ಶಿಕ್ಷಣವನ್ನು ಪಡೆಯಲು ಆತುರನಾಗಿರುತ್ತಾನೆ ಮತ್ತು ಅದನ್ನು ಪೂರ್ಣಗೊಳಿಸುವವರೆಗೆ ಉತ್ಸಾಹಶಾಲಿಯಾಗಿರುತ್ತಾನೆ. ಧಮ್ಮವನ್ನು ಅರಿಯಲು ಆತುರನಾಗಿರುತ್ತಾನೆ ಮತ್ತು ಅದನ್ನು ಸಂಪೂರ್ಣವಾಗಿ ಅರಿಯುವವರೆಗೆ ಉತ್ಸಾಹಶೀಲನಾಗಿರುತ್ತಾನೆ. ವಿನಯದ ನಿಯಮಗಳನ್ನು ತಿಳಿಯಲು ಆತುರನಾಗಿರುತ್ತಾನೆ ಮತ್ತು ಅದನ್ನು ಪಾಲಿಸಲು ಉತ್ಸಾಹಶೀಲನಾಗಿರುತ್ತಾನೆ; ಏಕಾಂತದಿಂದಿರಲು ಆತುರನಾಗಿರುತ್ತಾನೆ ಮತ್ತು ಏಕಾಂತವಾಸ ಮಾಡಲು ಆರಂಭಿಸಿದ ಮೇಲೆ ಅದೇರೀತಿಯಲ್ಲಿರಲು ಉತ್ಸಾಹಶೀಲನಾಗಿರುತ್ತಾನೆ. ಯತ್ನಶೀಲನಾಗಲು ಇಚ್ಛಿಸುತ್ತಾನೆ ಮತ್ತು ಯತ್ನಶೀಲನಾಗಿಯೇ ಮುಂದುವರಿಯುತ್ತಾನೆ. ಸ್ಮೃತಿವಂತನಾಗಿರಲು ಇಷ್ಪಡುತ್ತಾನೆ ಮತ್ತು ಸ್ಮೃತಿವಂತನಾಗಲು ಸದಾ ಯತ್ನಿಸುತ್ತಿರುತ್ತಾನೆ. ಸಮ್ಯಕ್ ದೃಷ್ಟಿಯನ್ನು ಪಡೆಯಲು ಇಚ್ಛಿಸುತ್ತಾನೆ ಮತ್ತು ಅದನ್ನು ಪಡೆಯಲು ಯತ್ನಿಸುತ್ತಿರುತ್ತಾನೆ.

“ಸಾಕ್ಷಾತ್ಕರಿಸಿಕೊಳ್ಳಬೇಕಾದ ಏಳರ ಧರ್ಮಗಳು ಯಾವುವು? ಆಸವಗಳನ್ನು ನಾಶಮಾಡಬಲ್ಲ ಏಳು ಬಲಗಳು.59 ಆಸವಗಳನ್ನು ನಾಶಮಾಡಿಕೊಂಡ ಖೀಣಾಸವನಾದ ಭಿಕ್ಷುವು ಎಲ್ಲ ಸಂಖಾರಗಳೂ ಅನಿತ್ಯ ಎಂಬ ಸತ್ಯವನ್ನು ಅದರ ಯಥಾರ್ಥ ಸ್ಥಿತಿಯಲ್ಲಿ ನೋಡಬಲ್ಲ ಪಞ್ಞಾವನ್ನು ಪಡೆದಿರುತ್ತಾನೆ. ಇದು ಖೀಣಾಸವನಾದವನ ಬಲ ಎಂಬುದನ್ನೂ ಮತ್ತು ಈ ಬಲದಿಂದ ಆಸವಗಳು ನಾಶವಾಗಿವೆ ಎಂಬ ಜ್ಞಾನ ಬಂದಿದೆ ಎಂಬುದನ್ನೂ ಆತನು ಅರಿತಿರುತ್ತಾನೆ.

“ಖೀಣಾಸವನಾದ ಭಿಕ್ಷುವು ಕಾಮಗಳು ಕೆಂಡದಂತಿವೆ ಎಂಬ ಸತ್ಯವನ್ನು ಅದರ ಯಥಾರ್ಥ ಸ್ಥಿತಿಯಲ್ಲಿ ನೋಡಬಲ್ಲ ಪಞ್ಞಾವನ್ನು ಪಡೆದಿರುತ್ತಾನೆ. ಇದು ಖೀಣಾಸವನಾದವನ ಬಲ... ಎಂಬುದನ್ನು ಅರಿತಿರುತ್ತಾನೆ.

“ಖೀಣಾಸವನಾದ ಭಿಕ್ಷುವಿನ ಚಿತ್ತವು ವಿವೇಕದಿಂದ ಕೂಡಿರುತ್ತದೆ, ವಿವೇಕಪೂರ್ಣವಾಗಿರುತ್ತದೆ, ವಿವೇಕದ ಕಡೆಗೆ ಹರಿಯುತ್ತದೆ. ವಿವೇಕವು ಅದರಲ್ಲಿ ಸ್ಥಿರವಾಗಿರುತ್ತದೆ. ನೇಕ್ಖಮ್ಮದಲ್ಲಿ ಅವನ ಚಿತ್ತವು ಆನಂದಪಡುತ್ತದೆ, ಆಸವಗಳನ್ನೊಳಗೊಂಡ ಭಾವನೆಗಳು ಅವನ ಚಿತ್ತದಲ್ಲಿ ಹೋಗಲಾರವು. ಇದು ಖೀಣಾಸವನಾದವನ ಬಲವಾಗಿದೆ... ಎಂಬುದನ್ನು ಅರಿತಿರುತ್ತಾನೆ.

“ಖೀಣಾಸವನಾದ ಭಿಕ್ಷುವು ನಾಲ್ಕು ಸತಿಪಟ್ಠಾನಗಳನ್ನು ಚೆನ್ನಾಗಿ ಬೆಳೆಸಿಕೊಂಡಿರುತ್ತಾನೆ. ಇದು ಖೀಣಾಸವನಾದವನ ಬಲ... ಎಂಬುದನ್ನು ಅರಿತಿರುತ್ತಾನೆ.

“ಖೀಣಾಸವನಾದವನು ಸಾಧನೆಗೆ ಅನುಕೂಲವಾದ ಐದು ಇಂದ್ರಿಯಗಳನ್ನು ಚೆನ್ನಾಗಿ ಬೆಳೆಸಿಕೊಂಡಿರುತ್ತಾನೆ. ಇದು ಖೀಣಾಸವನಾದವನ ಬಲ... ಎಂಬುದನ್ನು ಅರಿತಿರುತ್ತಾನೆ.

“ಖೀಣಾಸವನಾದವನು ಏಳು ಬೋಜ್ಝಂಗಗಳನ್ನು ಬೆಳೆಸಿಕೊಂಡಿರುತ್ತಾನೆ. ಇದು ಖೀಣಾಸವನಾದ ಬಲ... ಎಂಬುದನ್ನು ಅರಿತಿರುತ್ತಾನೆ.

“ಖೀಣಾಸವನಾದವನು ಶ್ರೇಷ್ಠವಾದ ಅಟ್ಠಂಗಮಗ್ಗವನ್ನು ಅರಿತಿರುತ್ತಾನೆ, ಆ ಮಾರ್ಗದಲ್ಲಿಯೇ ಹೋಗುವವನಾಗಿರುತ್ತಾನೆ. ಅವನ ಇಂಥ ಸಾಧನೆಯು ಖೀಣಾಸವನಾದ ಭಿಕ್ಷುವಿನ ಬಲವಾಗಿರುತ್ತದೆ. ಈ ಬಲದಿಂದಲೇ ನನ್ನ ಆಸವಗಳೆಲ್ಲ ಕ್ಷೀಣವಾಗಿದೆ’ ಎಂಬ ಆಸಯ ಕ್ಷಯ ಜ್ಞಾನವು ಅವನಿಗೆ ಬಂದಿರುತ್ತದೆ. ಸಾಕ್ಷಾತ್ಕರಿಸಿಕೊಳ್ಳಬೇಕಾದ ಏಳರ ಧರ್ಮಗಳು ಇವು.

ಈ ಎಪ್ಪತ್ತು ಧರ್ಮಗಳು ವಾಸ್ತವವಾಗಿರುವಂಥವು. ಸತ್ಯವಾಗಿರುವಂಥವು. ಇವು ಬೇರೆ ರೀತಿಯಲ್ಲಿರಲು ಸಾಧ್ಯವಿಲ್ಲ. ತಥಾಗತರು ಇದನ್ನು ಸ್ಪಷ್ಟವಾಗಿ ಅರಿತಿದ್ದಾರೆ.

ಪ್ರಥಮ ಭಾಗ ಮುಗಿಯಿತು

ಎಂಟರ ಧರ್ಮಗಳು

“ಸಹಾಯ ಪಡೆಯಬೇಕಾದ ಎಂಟರ ಧರ್ಮಗಳಿವೆ... ಸಾಕ್ಷಾತ್ಕರಿಸಿಕೊಳ್ಳಬೇಕಾದ ಎಂಟರ ಧರ್ಮಗಳಿವೆ.

“ಸಹಾಯ ಪಡೆಯಬೇಕಾದ ಎಂಟರ ಧರ್ಮಗಳು ಯಾವುವು? ಶ್ರೇಷ್ಠವಾದ ಜೀವನಕ್ಕೆ ಅನುಕೂಲವಾಗಿರುವ ಪಞ್ಞಾವನ್ನು ಪಡೆಯಲು ಅನುಕೂಲವಾದ ಶ್ರೇಷ್ಠವಾದ ಭಾವನೆಗಳನ್ನು ವಿಪುಲವಾಗಿ ಪಡೆಯಲು ಅನುಕೂಲವಾದ, ಶ್ರೇಷ್ಠವಾದ ಭಾವನೆಗಳನ್ನು ವಿಪುಲವಾಗಿ ಪಡೆಯಲು ಅನುಕೂಲವಾದ, ಪರಿಪೂರ್ಣವಾದುದನ್ನು ಗಳಿಸಲು ಅನುಕೂಲವಾದ ಎಂಟು ಕಾರಣಗಳಿವೆ. ಆ ಎಂಟು ಯಾವುವು? ಭಿಕ್ಷುವು ಗುರುವಿನ ಹತ್ತಿರವೋ ಅಥವಾ ಬೇರೊಬ್ಬ ಗುರು ಸಮಾನನಾದ ಬ್ರಹ್ಮಚಾರಿಯ ಹತ್ತಿರವೋ ವಾಸಿಸುತ್ತಾನೆ. ಹ್ರೀ ವಿವೇಚನೆ ಪ್ರೇಮ ಗೌರವಗಳಿಂದ ಅವನ ಮನಸ್ಸು ಕೂಡಿರುತ್ತದೆ. ಶ್ರೇಷ್ಠವಾದ ಜೀವನಕ್ಕೆ ಇದು ಮೊದಲನೆಯ ಕಾರಣವಾಗುತ್ತದೆ.

ಹೀಗೆ ಗುರುವಿನ ಹತ್ತಿರವೋ, ಗುರು ಸಮಾನನಾದ ಬ್ರಹ್ಮಚಾರಿಯ ಹತ್ತಿರವೋ ವಾಸಿಸುವ ಆತನು ಕಾಲಕಾಲಕ್ಕೆ ಅವರ ಬಳಿಗೆ ಹೋಗಿ ಅವರನ್ನು ಹೀಗೆ ಪ್ರಶ್ನಿಸುತ್ತಾನೆ. ‘ಭಂತೆ, ಇದು ಹೇಗಾಯಿತು? ಇದರ ಅರ್ಥವೇನು?’ ಇಂಥ ಆಯುಷ್ಮಂತನಿಗೆ ಅಂತರಾರ್ಥವನ್ನು ಆ ಹಿರಿಯರು ವಿವರಿಸುತ್ತಾರೆ, ಅಸ್ಪಷ್ಟವಾದುದನ್ನು ಸ್ಪಷ್ಟಗೊಳಿಸುತ್ತಾರೆ, ಅನೇಕರೀತಿಯಲ್ಲಿ ಸಂದೇಹಗಳನ್ನು ಪರಿಹರಿಸುತ್ತಾರೆ. ಇದು ಶ್ರೇಷ್ಠವಾದ ಜೀವನಕ್ಕೆ ಎರಡನೆಯ ಕಾರಣವಾಗುತ್ತದೆ.

“ಇಂಥ ಬೋಧನೆಯನ್ನು ಕೇಳಿ ಕಾಯ ಮತ್ತು ಚಿತ್ತಗಳೆರಡರ ಶಾಂತಿಯನ್ನು ಸಂಪಾದಿಸುತ್ತಾನೆ. ಇದು ಶ್ರೇಷ್ಠವಾದ ಜೀವನಕ್ಕೆ ಮೂರನೆಯ ಕಾರಣವಾಗುತ್ತದೆ.

“ಶೀಲವಂತನೂ ಪಾತಿಮೋಕ್ಖದಂತೆ ಸಂಯಮವನ್ನು ಸಾಧಿಸಿರುವವನೂ ಆದ ಭಿಕ್ಷುವು ಒಳ್ಳೆಯ ನಡತೆಯನ್ನುಳ್ಳವನಾಗಿ ಯಾವ ಮಿತಿಯಲ್ಲಿ ನಡೆಯಬೇಕೋ ಆ ಮಿತಿಯಲ್ಲಿ ನಡೆಯುವವನಾಗಿ. ಯಾವುದನ್ನು ವರ್ಜಿಸಬೇಕೋ ಅದರ ಅಣುವಿನಷ್ಟಕ್ಕೂ ಭಯಪಡುವವನಾಗಿ ನಿಯಮಗಳನ್ನು ಪಾಲಿಸುವ ಶಿಕ್ಷಣವನ್ನು ಪಡೆಯುತ್ತಾನೆ. ಇದು ಶ್ರೇಷ್ಠವಾದ ಜೀವನಕ್ಕೆ ನಾಲ್ಕನೆಯ ಕಾರಣವಾಗುತ್ತದೆ.

‘ಭಿಕ್ಷುವು ಬಹುಶ್ರುತನಾಗಿ ತಾನು ಕಲಿತದ್ದು ಮನಸ್ಸಿನಲ್ಲಿ ಬೇರೂರುವಂತೆ ಮಾಡುತ್ತಾನೆ. ಯಾವ ಬೋಧನೆಯು ಆದಿಯಲ್ಲೂ ಮಧ್ಯದಲ್ಲೂ ಕೊನೆಯಲ್ಲೂ ಕಲ್ಯಾಣಕಾರಿಯಾಗಿದೆಯೋ, ಪರಿಪೂರ್ಣವಾದ ಪರಿಶುದ್ಧವಾದ ಶ್ರೇಷ್ಠ ಜೀವನಕ್ಕೆ ಅನುಕೂಲವಾಗಿದೆಯೋ, ಅದನ್ನು ಅರ್ಥ ವ್ಯಾಖ್ಯಾನ ಸಹಿತ ತಾನು ಕೇಳಿದಂತೆಯೇ ಮನಸ್ಸಿನಲ್ಲಿಯೇ ಉಳಿಸಿಕೊಳ್ಳುತ್ತಾನೆ. ಮತ್ತೆ ಮತ್ತೆ ವಾಚನ ಮಾಡಿ ನೆನಪಿನಲ್ಲಿಟ್ಟುಕೊಳ್ಳುತ್ತಾನೆ. ಬೋಧನೆಯ ಸತ್ವವನ್ನು ಪಞ್ಞಾದ ಮೂಲಕ ಅರಿಯುತ್ತಾನೆ. ಇದು ಶ್ರೇಷ್ಠವಾದ ಜೀವನಕ್ಕೆ ಐದನೆಯ ಕಾರಣವಾಗುತ್ತದೆ.

“ಭಿಕ್ಷುವು ಅಕುಶಲವಾದ ಭಾವನೆಗಳನ್ನು ತೊರೆಯುವುದಕ್ಕೆ ಮತ್ತು ಕುಶಲವಾದ ಭಾವನೆಗಳನ್ನು ಬೆಳೆಸಿಕೊಳ್ಳುವುದಕ್ಕೆ ಯತ್ನಿಸುತ್ತಲೇ ಇರುತ್ತಾನೆ. ಎಂದೆಂದೂ ಹಿಮ್ಮೆಟ್ಟಿದೆ. ಅತಿ ಪ್ರಯಾಸದಿಂದ ಕುಶಲ ಭಾವನೆಗಳನ್ನು ಶಕ್ತಿಯುತವನ್ನಾಗಿ ಮಾಡುತ್ತಾನೆ. ಇದು ಶ್ರೇಷ್ಠವಾದ ಜೀವನಕ್ಕೆ ಆರನೆಯ ಕಾರಣವಾಗುತ್ತದೆ.

“ಭಿಕ್ಷುವು ಸ್ಮೃತಿವಂತನಾಗಿ ಅತ್ಯಂತ ಎಚ್ಚರಿಕೆಯುಳ್ಳವನಾಗಿ ಹಿಂದೆ ಏನನ್ನು ಮಾಡಿದನೋ ಏನನ್ನು ನುಡಿದನೋ ಅದನ್ನು ಮತ್ತೆ ಮತ್ತೆ ನೆನಪಿಗೆ ತಂದುಕೊಳ್ಳುತ್ತಾನೆ. ಇದು ಶ್ರೇಷ್ಠವಾದ ಜೀವನಕ್ಕೆ ಏಳನೆಯ ಕಾರಣವಾಗುತ್ತದೆ.

“ಭಿಕ್ಷುವು ಪಂಚಕ್ಖಂಧಗಳ ಉದಯ ಕ್ಷಯಗಳನ್ನು ನೋಡಬಲ್ಲವನಾಗುತ್ತಾನೆ- ‘ಇದು ರೂಪ, ಇದು ರೂಪದ ಉದಯ, ಇದು ರೂಪದ ಕ್ಷಯ. ಇದು ವೇದನೆ, ಇದು ವೇದನೆಯ ಉದಯ, ಇದು ವೇದನೆಯ ಕ್ಷಯ. ಇದು ಸಞ್ಞಾ, ಇದು ಸಞ್ಞಾದ ಉದಯ, ಇದು ಸಞ್ಞಾದ ಕ್ಷಯ, ಇದು ಸಂಖಾರ, ಇದು ಸಂಖಾರದ ಉದಯ, ಇದು ಸಂಖಾರದ ಕ್ಷಯ, ಇದು ವಿಞ್ಞಾಣದ ಉದಯ, ಇದು ವಿಞ್ಞಾಣದ ಕ್ಷಯ. ಇದು ಶ್ರೇಷ್ಠವಾದ ಜೀವನಕ್ಕೆ ಎಂಟನೆಯ ಕಾರಣವಾಗುತ್ತದೆ.

“ಬೆಳೆಸಿಕೊಳ್ಳಬೇಕಾದ ಎಂಟರ ಧರ್ಮಗಳು ಯಾವುವು? ಶ್ರೇಷ್ಠವಾದ ಅಟ್ಠಂಗ ಮಗ್ಗ - ಸಮ್ಮಾದಿಟ್ಠಿ, ಸಮ್ಮಾಸಂಕಪ್ಪ, ಸಮ್ಮಾವಾಚಾ, ಸಮ್ಮಾಕಮ್ಮಾಂತ, ಸಮ್ಮಾಜೀವ, ಸಮ್ಮಾವಾಯಾಮ, ಸಮ್ಮಾಸತಿ, ಸಮ್ಮಾಸಮಾಧಿ.

“ತಿಳಿದುಕೊಳ್ಳಬೇಕಾದ ಎಂಟರ ಧರ್ಮಗಳು ಯಾವುವು? ಎಂಟು ಲೋಕ ಧರ್ಮಗಳು- ಲಾಭ ಮತ್ತು ನಷ್ಟ; ಯಶಸ್ಸು ಮತ್ತು ಅಪಯಶಸ್ಸು, ನಿಂದೆ ಮತ್ತು ಪ್ರಶಂಸೆ, ಸುಖ ಮತ್ತು ದುಃಖ.

“ಬಿಡಬೇಕಾದ ಎಂಟರ ಧರ್ಮಗಳು ಯಾವುವು? ಎಂಟು ಮಿಥ್ಯೆಗಳು- ಮಿಥ್ಯಾದೃಷ್ಟಿ, ಮಿಥ್ಯಾಸಂಕಲ್ಪ, ಮಿತ್ಯಾವಚನ, ಮಿಥ್ಯಾಕರ್ಮಗಳು, ಮಿಥ್ಯಾಜೀವನ (ಸಮ್ಮಾ ಜೀವನವಲ್ಲದುದು) ಮಿಥ್ಯಾವಾಯಾಮ, ಮಿಥ್ಯಾಸ್ಮೃತಿ, ಮಿಥ್ಯಾ ಸಮಾಧಿ.

“ಹಾನಿಯನ್ನುಂಟುಮಾಡುವ ಎಂಟರ ಧರ್ಮಗಳು ಯಾವುವು? ಆಲಸ್ಯದ ಎಂಟು ಆಧಾರಗಳು- ಭಿಕ್ಷುಗಳು ಕರ್ತವ್ಯವನ್ನು ಮಾಡಬೇಕಾದಾಗ ‘ನಾನೇನೋ ನನ್ನ ಕರ್ತವ್ಯವನ್ನು ಮಾಡಬೇಕು, ಆದರೆ ಕೆಲಸ ಮಾಡುವುದರಿಂದ ನನಗೆ ದಣಿವಾಗುತ್ತದೆ, ಆದುದರಿಂದ ಮಲಗಿಬಿಡುತ್ತೇನೆ’ ಎಂದುಕೊಳ್ಳುತ್ತಾನೆ. ಹಾಗೆ ಮಲಗಿದವ ತನ್ನ ಕೆಲಸವನ್ನು ಆರಂಭಿಸುವುದಿಲ್ಲ. ಮುಟ್ಟಬೇಕಾದ ಗುರಿಯನ್ನು ಮುಟ್ಟುವುದಿಲ್ಲ, ಹೋಗಬೇಕಾದ ದಿಕ್ಕಿನಲ್ಲಿ ಹೋಗುವುದಿಲ್ಲ, ಸಾಕ್ಷಾತ್ಕರಿಸಿಕೊಳ್ಳಬೇಕಾದುದನ್ನು ಸಾಕ್ಷಾತ್ಕರಿಸಿಕೊಳ್ಳುವುದಿಲ್ಲ, ಇದು ಆಲಸ್ಯದ ಮೊದಲನೆಯ ಆಧಾರ.

“ಭಿಕ್ಷುವಿನಿಂದ ಮಾಡಬೇಕಾದ ಕರ್ತವ್ಯವಿರುತ್ತದೆ. ಆಗ ಒಬ್ಬನು ಹೀಗೆಂದುಕೊಳ್ಳುತ್ತಾನೆ- ‘ನಾನು ಮಾಡಬೇಕಾದುದನ್ನು ಮಾಡುತ್ತಿದ್ದೇನೆ. ಆದರೆ ಕೆಲಸವನ್ನು ಮಾಡುತ್ತಿರುವುದರಿಂದ ಶರೀರವು ದಣಿದುಬಿಟ್ಟಿದೆ, ಆದುದರಿಂದ ಮಲಗಿಬಿಡುತ್ತೇನೆ’. ಹಾಗೆ ಮಲಗಿದವನು ಬಿಟ್ಟ ಕೆಲಸವನ್ನು ಮತ್ತೆ ಆರಂಭಿಸುವುದಿಲ್ಲ... ಇದು ಆಲಸ್ಯದ ಎರಡನೆಯ ಆಧಾರ.

“ಭಿಕ್ಷುವು ನಡೆಯಬೇಕಾದ ಮಾರ್ಗವು ಅನೇಕ ಅಡ್ಡಿಗಳಿಂದ ಕೂಡಿರುತ್ತದೆ. ಆಗ ಅವನು ಹೀಗೆಂದುಕೊಳ್ಳುತ್ತಾನೆ. ‘ಮಾರ್ಗವು ಮುಳ್ಳು ಕಲ್ಲುಗಳಿಂದ ಕೂಡಿದೆ. ಈ ಮಾರ್ಗದಲ್ಲಿ ಹೋದರೆ ನನ್ನ ಶರೀರವು ದಣಿದು ಹೋಗುತ್ತದೆ. ಆದುದರಿಂದ ಮಲಗಿಬಿಡುತ್ತೇನೆ. ಹೀಗೆಂದು ಮಲಗಿಕೊಂಡವನು ತಾನು ಆ ಮಾರ್ಗದಲ್ಲಿ ಹೋಗಲು ಆರಂಭಿಸುವುದಿಲ್ಲ... ಇದು ಆಲಸ್ಯದ ಮೂರನೆಯ ಆಧಾರ. ಭಿಕ್ಷುವು ನಡೆಯಬೇಕಾದ ಮಾರ್ಗದಲ್ಲಿ ಹೋಗುತ್ತಾನೆ. ಆಗ ಅವನು ಹೀಗೆಂದುಕೊಳ್ಳುತ್ತಾನೆ- ‘ಈ ಮಾರ್ಗದಲ್ಲೇನೋ ಹೋಗುತ್ತಿದ್ದೇನೆ. ಹೀಗೆ ಹೋಗುತ್ತಿರುವುದರಿಂದ ನನಗೆ ದಣಿವಾಗುತ್ತದೆ. ಆದುದರಿಂದ ಮಲಗಿಬಿಡುತ್ತೇನೆ’. ಹೀಗೆ ಮಲಗಿಕೊಂಡವನು ತಾನು ನಿಂತ ಸ್ಥಳದಿಂದ ಮುಂದೆ ಹೋಗುವುದಿಲ್ಲ... ಇದು ನಾಲ್ಕನೆಯ ಆಧಾರ.

‘ಭಿಕ್ಷುವು ತನ್ನ ಆಹಾರಕ್ಕಾಗಿ ಗ್ರಾಮದಲ್ಲಿಯೋ ಪಟ್ಟಣದಲ್ಲಿಯೋ ಸುತ್ತುತ್ತಾನೆ. ಆದರೂ ಅವನಿಗೆ ಸಾಧಾರಣವಾದ ಅಥವಾ ಉತ್ತಮವಾದ ಆಹಾರ ಸಿಗುವುದಿಲ್ಲ. ಆಗ ಅವನು ಹೀಗೆಂದುಕೊಳ್ಳುತ್ತಾನೆ. ‘ನಾನು ಗ್ರಾಮ ಪಟ್ಟಣಗಳಲ್ಲಿ ಸುತ್ತಿದರೂ ಸಾಧಾರಣವಾದ ಅಥವಾ ಉತ್ತಮವಾದ ಆಹಾರವು ಲಭಿಸಿಲ್ಲ. ಆದುದರಿಂದ ನನ್ನ ದೇಹವು ದಣಿದುಹೋಗಿದೆ, ಆದುದರಿಂದ ಮಲಗಿಬಿಡುತ್ತೇನೆ’ ಎಂದುಕೊಂಡು ಮಲಗಿಬಿಡುತ್ತಾನೆ... ಇದು ಆಲಸ್ಯದ ಐದನೆಯ ಆಧಾರ.

“ಭಿಕ್ಷುವು ಗ್ರಾಮ ಅಥವಾ ಪಟ್ಟಣದಲ್ಲಿ ಅನ್ನಕ್ಕಾಗಿ ಸುತ್ತುತ್ತಾನೆ. ಅವನಿಗೆ ಸಾಧಾರಣವಾದುದೋ ಅಥವಾ ಉತ್ತಮವಾದುದೋ ಆಹಾರವು ಲಭಿಸುತ್ತದೆ. ಆಗ ಅವನು ಹೀಗೆಂದುಕೊಳ್ಳುತ್ತಾನೆ. ‘ನಾನು ಅನ್ನಕ್ಕಾಗಿ ಗ್ರಾಮ ಮತ್ತು ಪಟ್ಟಣಗಳಲ್ಲಿ ಸುತ್ತಿದೆ. ನನಗೆ ಉತ್ತಮವಾದುದೋ ಅಥವಾ ಸಾಧಾರಣವಾದುದೋ ಆಹಾರವು ಲಭಿಸಿದೆ. ಇದನ್ನುಂಡು ಶರೀರವು ಭಾರವಾಗಿದೆ. ಕೆಲಸ ಮಾಡಲು ಮನಸ್ಸಿಲ್ಲ. ಆದುದರಿಂದ ಮಲಗಿಬಿಡುತ್ತೇನೆ’. ಹೀಗೆಂದುಕೊಂಡು ಮಲಗಿಬಿಡುತ್ತಾನೆ... ಇದು ಆಲಸ್ಯದ ಆರನೆಯ ಆಧಾರ.

“ಭಿಕ್ಷುವಿಗೆ ಒಂದು ಸಣ್ಣ ಕಾಯಿಲೆ ಬರುತ್ತದೆ. ಆಗ ಅವನು ಹೀಗೆಂದುಕೊಳ್ಳುತ್ತಾನೆ. ‘ನನಗೀಗ ಕಾಯಿಲೆ ಬಂದಿದೆ. ಅದು ಸಣ್ಣದಾದರು ಮಲಗಿಬಿಡುವುದು ಲೇಸು’. ಹೀಗೆಂದು ಮಲಗಿಕೊಂಡುಬಿಡುತ್ತಾನೆ. ಇದು ಆಲಸ್ಯದ ಏಳನೆಯ ಆಧಾರ.

“ಭಿಕ್ಷುವು ಆಗತಾನೇ ಕಾಯಿಲೆಯಿಂದ ಎದ್ದಿದ್ದಾನೆ. ಆಗ ಅವನು ಹೀಗೆಂದುಕೊಳ್ಳುತ್ತಾನೆ- ‘ಈಗ ಕಾಯಿಲೆಯಿಂದ ಎದ್ದಿದ್ದೇನೆ, ಮತ್ತೊಮ್ಮೆ ಕಾಯಿಲೆ ಬರಬಹುದು, ಇದು ನನಗೆ ಗೊತ್ತು. ಆದುದರಿಂದ ಮಲಗಿಬಿಡುತ್ತೇನೆ’ ಹೀಗೆಂದುಕೊಂಡು ಮಲಗಿಬಿಡುತ್ತಾನೆ. ಇದು ಆಲಸ್ಯದ ಎಂಟನೆಯ ಆಧಾರ.

“ವಿಶೇಷತೆಯನ್ನು ಕೊಡುವ ಎಂಟರ ಧರ್ಮಗಳು ಯಾವುವು? ಆರಂಭಿಸುವುದಕ್ಕಿರಬೇಕಾದ ಎಂಟು ಆಧಾರಗಳು- ಭಿಕ್ಷುವು ಮಾಡಬೇಕಾದ ಕೆಲಸವಿರುತ್ತದೆ. ಆಗ ಅವನು ಹೀಗೆಂದುಕೊಳ್ಳುತ್ತಾನೆ- ‘ನಾನು ಮಾಡಬೇಕಾದ ಕೆಲಸವಿದೆ. ನಾನು ಈ ಕೆಲಸದಲ್ಲಿ ತೊಡಗಿದರೆ ಬುದ್ಧ ಶಾಸನವನ್ನು ಅರಿಯುವುದು ಸುಲಭವಾಗುವುದಿಲ್ಲ. ಆದರೂ ಮಾಡಬೇಕಾದ ಕೆಲಸವನ್ನು ಆರಂಭಿಸುತ್ತೇನೆ. ಮುಟ್ಟುಬೇಕಾದ ಗುರಿಯನ್ನು ಮುಟ್ಟುತ್ತೇನೆ. ಹೋಗಬೇಕಾದ ದಿಕ್ಕಿನಲ್ಲಿ ಹೋಗುತ್ತೇನೆ. ಸಾಕ್ಷಾತ್ಕರಿಸಿಕೊಳ್ಳಬೇಕಾದುದನ್ನು ಸಾಕ್ಷಾತ್ಕರಿಸಿಕೊಳ್ಳುತ್ತೇನೆ’. ಇದು ಆರಂಭಿಸಬೇಕಾದುದರ ಮೊದಲನೆಯ ಆಧಾರ.

“ಭಿಕ್ಷುವು ಮಾಡಬೇಕಾದ ಕೆಲಸವನ್ನು ಮಾಡಿದ್ದಾನೆ. ಆಗ ಅವನು ಹೀಗೆಂದುಕೊಳ್ಳುತ್ತಾನೆ. ‘ನಾನು ಕೆಲಸವನ್ನು ಮಾಡಿದ್ದೇನೆ. ಕೆಲಸವನ್ನು ಮಾಡಬೇಕಾದುದರಿಂದ ಬುದ್ಧ ಶಾಸನವನ್ನು ತಿಳಿದುಕೊಳ್ಳಲಾಗಲಿಲ್ಲ. ಆದರೂ (ಬುದ್ಧ ಶಾಸನವನ್ನು) ಅರಿಯಲು ಆರಂಭಿಸುತ್ತೇನೆ... ಇದು ಆರಂಭಿಸಬೇಕಾದುದರ ಎರಡನೆಯ ಆಧಾರ.

“ಭಿಕ್ಷುವು ಹೋಗಬೇಕಾದ ಮಾರ್ಗವು ಕಲ್ಲು-ಮುಳ್ಳುಗಳಿಂದ ಕೂಡಿದೆ. ಆಗ ಅವನು ಹೀಗೆಂದುಕೊಳ್ಳುತ್ತಾನೆ. ‘ನಾನು ನಡೆಯಬೇಕಾದ ಮಾರ್ಗವು ಮುಳ್ಳು-ಕಲ್ಲುಗಳಿಂದ ತುಂಬಿದೆ. ಈ ಮಾರ್ಗದಲ್ಲಿ ಹೋಗಬೇಕಾದುದರಿಮದ ಬುದ್ಧಶಾಸನವನ್ನು ತಿಳಿದುಕೊಳ್ಳಲು ಕಷ್ಟವಾಗುತ್ತದೆ. ಆದರೂ ಅದನ್ನರಿಯಲು ಆರಂಭಿಸುತ್ತೇನೆ’. ಇದು ಆರಂಭಿಸಬೇಕಾದುದರ ಮೂರನೆಯ ಆಧಾರ.

“ಭಿಕ್ಷುವು ಹೋಗಬೇಕಾದ ಮಾರ್ಗದಲ್ಲಿ ಹೋಗುತ್ತಾನೆ. ಆಗ ಅವನು ಹೀಗೆಂದುಕೊಳ್ಳುತ್ತಾನೆ. ‘ನಾನು ಈ ಮಾರ್ಗದಲ್ಲಿ ಹೋಗುತ್ತಿದ್ದೇನೆ. ನಾನು ಈ ಮಾರ್ಗದಲ್ಲಿ ಹೋಗಬೇಕಾಗಿರುವುದರಿಂದ ಬುದ್ಧ ಶಾಸನವನ್ನು ಅರಿಯಲು ಆಗುತ್ತಿಲ್ಲ. ಆದರೂ ಯತ್ನವನ್ನು ಮಾಡುತ್ತೇನೆ’... ಇದು ನಾಲ್ಕನೆಯ ಆಧಾರ.

“ಭಿಕ್ಷುವು ಆಹಾರಕ್ಕಾಗಿ ಗ್ರಾಮ ಅಥವಾ ಪಟ್ಟಣಗಳಲ್ಲಿ ಸುತ್ತುತ್ತಾನೆ. ಆದರೆ ಅವನಿಗೆ ಸಾಧಾರಣವಾದ ಆಹಾರವಾಗಲೀ, ಉತ್ತಮವಾದ ಆಹಾರವಾಗಲೀ ಲಭಿಸುವುದಿಲ್ಲ. ಆಗ ಅವನು ಹೀಗೆಂದುಕೊಳ್ಳುತ್ತಾನೆ. ‘ನಾನು ಆಹಾರಕ್ಕಾಗಿ ಗ್ರಾಮ ಪಟ್ಟಣಗಳಲ್ಲಿ ಸುತ್ತಿದರೂ ಸಾಧಾರಣವಾದ ಆಹಾರವಾಗಲೀ ಅಥವಾ ಉತ್ತಮವಾದ ಆಹಾರವಾಗಲೀ ಸಿಕ್ಕಿಲ್ಲ. ಇದರಿಂದ ನನ್ನ ದೇಹವು ಹಗುರವಾಗಿದೆ. ಆದುದರಿಂದ ಬುದ್ಧ ಶಾಸನವನ್ನು ಅರಿಯಲು ಆರಂಭಿಸುತ್ತೇನೆ’. ಇದು ಆರಂಭಿಸಬೇಕಾದುದರ ಐದನೆಯ ಆಧಾರ.

“ಭಿಕ್ಷುವು ಆಹಾರಕ್ಕಾಗಿ ಗ್ರಾಮ ಮತ್ತು ಪಟ್ಟಣಗಳಲ್ಲಿ ಸುತ್ತುತ್ತಾನೆ. ಉತ್ತಮವಾದ ಅಥವಾ ಸಾಧಾರಣವಾದ ಆಹಾರವು ಅವನಿಗೆ ಲಭಿಸುತ್ತದೆ. ಆಗ ಅವನು ಹೀಗೆಂದುಕೊಳ್ಳುತ್ತಾನೆ- ‘ಆಹಾರಕ್ಕಾಗಿ ಗ್ರಾಮ ಪಟ್ಟಣಗಳನ್ನು ಸುತ್ತಿದೆ. ಸಾಧಾರಣವಾದ ಮತ್ತು ಉತ್ತಮವಾದ ಆಹಾರವು ಲಭಿಸಿದೆ. ಇದರಿಂದ ನನ್ನ ಶರೀರವು ಬಲವನ್ನು ಪಡೆದಿದೆ. ಬುದ್ಧಶಾಸನವನ್ನು ಅರಿಯಲು ಆರಂಭಿಸುತ್ತೇನೆ’... ಇದು ಆರಂಭಿಸಬೇಕಾದುದರ ಆರನೆಯ ಆಧಾರ.

“ಭಿಕ್ಷುವಿಗೆ ಸಣ್ಣ ಕಾಯಿಲೆಯೊಂದು ಬರುತ್ತದೆ. ಆಗ ಅವನು ಹೀಗೆಂದುಕೊಳ್ಳುತ್ತಾನೆ. ‘ನನಗೆ ಸಣ್ಣ ಕಾಯಿಲೆ ಬಂದಿದೆ. ಆದರೆ ಇದು ಬೆಳೆಯಬಹುದು. ಇದು ನನಗೆ ಗೊತ್ತಿರುವ ವಿಷಯ. ಆದದುರಿಂದ ಕೆಲಸವನ್ನು ಆರಂಭಿಸುತ್ತೇನೆ’. ಇದು ಆರಂಭಿಸಬೇಕಾದುದರ ಏಳನೆಯ ಆಧಾರ.

“ಭಿಕ್ಷುವು ಕಾಯಿಲೆಯಿಂದ ಆಗತಾನೇ ಎದ್ದಿದ್ದಾನೆ. ಆಗ ಅವನು ಹೀಗೆಂದುಕೊಳ್ಳುತ್ತಾನೆ- ‘ಈಗತಾನೇ ಕಾಯಿಲೆಯಿಂದ ಎದ್ದಿದ್ದೇನೆ, ಮತ್ತೊಮ್ಮೆ ಕಾಯಿಲೆ ಬರಬಹುದು. ಇದು ನನಗೆ ಗೊತ್ತು. ಆದುದರಿಂದ ಮಾಡಬೇಕಾದುದನ್ನು ಆರಂಭಿಸುತ್ತೇನೆ. ಹೋಗಬೇಕಾದ ದಿಕ್ಕಿನಲ್ಲಿ ಹೋಗುತ್ತೇನೆ. ಪಡೆಯಬೇಕಾದುದನ್ನು ಪಡೆಯುತ್ತೇನೆ. ಸಾಕ್ಷಾತ್ಕರಿಸಿಕೊಳ್ಳಬೇಕಾದುದನ್ನು ಸಾಕ್ಷಾತ್ಕರಿಸಿಕೊಳ್ಳುತ್ತೇನೆ’. ಇದು ಆರಂಭಿಸಬೇಕಾದುದರ ಎಂಟನೆಯ ಆಧಾರ.

“ಅರಿಯಲು ಕಷ್ಟವಾದ ಎಂಟರ ಧರ್ಮಗಳು ಯಾವುವು? ಸಾಧನೆಯ ಕಾಲದಲ್ಲಿ ಬರುವ ಅನನುಕೂಲ ಸಮಯಗಳು... ಅರಹಂತರೂ ಸಮ್ಮಾಸಂಬುದ್ಧರೂ ಆದ ತಥಾಗತರು ಲೋಕದಲ್ಲಿ ಹುಟ್ಟುತ್ತಾರೆ. ಧಮ್ಮವನ್ನು ಬೋಧಿಸುತ್ತಾರೆ. ದುಃಖವನ್ನು ಉಪಶಮನಮಾಡುವ ಪರಿನಿಬ್ಬಾನ ಮತ್ತು ಬೋಧಿಗಳ ಕಡೆಗೆ ಕೊಂಡೊಯ್ಯುವ ಧಮ್ಮವನ್ನು ಆ ಸುಗತರು ತಿಳಿಸುತ್ತಾರೆ. ಆದರೂ ಕೆಲವರು ನಿರಯದಲ್ಲಿಯೇ ಹುಟ್ಟುತ್ತಾರೆ. ಸಾಧನೆಯ ಕಾಲದಲ್ಲಿ ಬರುವ ಮೊದಲನೆಯ ಅನನುಕೂಲ ಸಮಯ ಇದು.

“ಅರಹಂತರೂ ಸಮ್ಮಾಸಂಬುದ್ಧರೂ ಆದ ತಥಾಗತರು ಲೋಕದಲ್ಲಿ ಹುಟ್ಟುತ್ತಾರೆ. ದುಃಖವನ್ನು ಉಪಶಮನ ಮಾಡುವ ಪರಿನಿಬ್ಬಾನ ಮತ್ತು ಬೋಧಿಗಳ ಕಡೆಗೆ ಕೊಂಡೊಯ್ಯುವ ಧಮ್ಮವನ್ನು ಆ ಸುಗತರು ಬೋಧಿಸುತ್ತಾರೆ. ಆದರೂ ಕೆಲವರು ತಿರ್ಯಕ್ ಯೋನಿಯಲ್ಲಿ ಹುಟ್ಟುತ್ತಾರೆ. ಇದು ಸಾಧನೆಯ ಕಾಲದ ನಡುವೆ ಬರುವ ಎರಡನೆಯ ಅನಾನುಕೂಲ ಸಮಯ.

“ಮತ್ತೆ ಅರಹಂತರೂ ಪ್ರೇತಗಳಾಗಿ ಹುಟ್ಟುತ್ತಾರೆ. ಇದು ಸಾಧನೆಯ ಕಾಲದ ನಡುವೆ ಬರುವ ಮೂರನೆಯ ಅನನುಕೂಲ ಸಮಯ. ‘ಅರಹಂತರೂ... ಕೆಲವರು ಬೇರೊಂದು ಲೋಕದಲ್ಲಿ ದೀರ್ಘಾಯುಷ್ಯರಾದ’ ದೇವಕಾಯರಾಗಿ ಹುಟ್ಟುತ್ತಾರೆ. ಇದು ಸಾಧನೆಯ ನಡುವೆ ಬರುವ ನಾಲ್ಕನೆಯ ಅನನುಕೂಲ ಸಮಯ.

‘ಅರಹಂತರೂ... ಜನಪದಗಳ ಅಂಚಿನಲ್ಲಿ ಮೂಢರೂ ತಿಳಿವಳಿಕೆಯಿಲ್ಲದವರೂ ಇರುವ, ಭಿಕ್ಷುಗಳೂ ಭಿಕ್ಷುಣಿಯರೂ ಉಪಾಸಕರೂ ಉಪಾಸಿಕೆಯರೂ ಹೋಗದ ಕಡೆಗಳಲ್ಲಿ ಕೆಲವರು ಹುಟ್ಟುತ್ತಾರೆ. ಇದು ಸಾಧನೆಯ ನಡುವೆ ಬರುವ ಐದನೆಯ ಅನನುಕೂಲ ಸಮಯ.

“ಅರಹಂತರೂ... ಮಿಥ್ಯಾದೃಷ್ಟಿಯುಳ್ಳವರೂ ದರ್ಶನಗಳನ್ನು ಅಪಾರ್ಥ ಮಾಡಿಕೊಳ್ಳುವವರೂ ಇರುವ ಮಧ್ಯಮ ಜನಪದಗಳಲ್ಲಿ ಕೆಲವರು ಹುಟ್ಟುತ್ತಾರೆ. ‘ದಾನವೆನ್ನುವುದು ಇಲ್ಲ, ನಿಯಮಗಳೆಂಬುವು ಇಲ್ಲ, ಪೂಜೆಗೆ ಅರ್ಹವಾದವುಗಳು ಇಲ್ಲ. ಕರ್ಮಗಳ ಫಲ ವಿಪಾಕದಿಂದಾಗುವ ಸುಖದುಃಖ ಸ್ಥಿತಿಗಳೂ ಇಲ್ಲ. ಈ ಲೋಕವು ಇಲ್ಲ, ಪರಲೋಕವೂ ಇಲ್ಲ. ತಾಯಿಯೆನ್ನುವವಳೂ ಇಲ್ಲ, ತಂದೆ ಎನ್ನಿಸಿಕೊಳ್ಳುವವನೂ ಇಲ್ಲ, ತಂದೆತಾಯಿಗಳಿಂದ ಹುಟ್ಟದ ಅಯೋನಿಜರೂ ಇಲ್ಲ. ಲೋಕದಲ್ಲಿ ಸಮಣ ಬ್ರಾಹ್ಮಣರೂ ಇಲ್ಲ, ಈ ಲೋಕವನ್ನು ಪರಲೋಕವನ್ನು ತಮ್ಮ ಪ್ರಯತ್ನದಿಂದಲೇ ಅರಿತುಕೊಂಡಿರುವಂಥವರೂ ಇಲ್ಲ. ಇದು ಸಾಧನೆಯ ನಡುವೆ ಬರುವ ಆರನೆಯ ಅನನುಕೂಲ ಸಮಯ.

“ಅರಹಂತರೂ... ಪಞ್ಞಾ ಇಲ್ಲದವರೂ, ಮೂಢರೂ, ಕಿವುಡು ಮೂಗರೂ, ಯಾವುದು ಕೆಟ್ಟ ಮಾತು ಯಾವುದು ಒಳ್ಳೆಯ ಮಾತು ಎಂಬುದನ್ನು ತಿಳಿಯದ ದಡ್ಡರು ಆಗಿ ಕೆಲವರು ಮಧ್ಯಮ ದೇಶಗಳಲ್ಲಿ ಹುಟ್ಟುತ್ತಾರೆ. ಇದು ಸಾಧನೆಯ ನಡುವೆ ಬರುವ ಏಳನೆಯ ಅನನುಕೂಲ ಸಮಯ.

“ಅರಹಂತರೂ... ಪಞ್ಞಾವನ್ನು ಪಡೆದಿರುವವರೂ, ಒಳ್ಳೆಯ ಮಾತು ಯಾವುದು, ಕೆಟ್ಟ ಮಾತು ಯಾವುದು ಎಂಬುದನ್ನು ಅರಿಯಬಲ್ಲವರೂ ಇರುತ್ತಾರೆ. ಅವರು ದಡ್ಡರಲ್ಲ, ಕಿವುಡ ಮೂಗರಲ್ಲ. ಆದರೂ ಮಧ್ಯಮ ಮಟ್ಟದ (ಅಂದರೆ ಶ್ರೇಷ್ಠ ಮಟ್ಟವನ್ನು ಮುಟ್ಟಿರುವ ಅರಹಂತರಿಲ್ಲದ) ಜನರಿರುವ ಕಡೆಯೇ ಹುಟ್ಟುತ್ತಾರೆ. ಇದು ಸಾಧನೆಯ ನಡುವೆ ಬರುವ ಎಂಟನೆಯ ಅನನುಕೂಲ ಸಮಯ. ಅರಿಯಲು ಕಷ್ಟವಾದ ಎಂಟರ ಧರ್ಮಗಳು ಇವೇ.

“ಮೇಲಕ್ಕೆ ತರಬೇಕಾದ ಎಂಟರ ಧರ್ಮಗಳು ಯಾವುವು? ಎಂಟು ಬಗೆಯ ಮಹಾಪುರುಷರ ಮನಸ್ಸಿನ ವಿಚಾರಗಳು- ಈ ಧಮ್ಮವು ಆಸೆಯೆಲ್ಲವನ್ನು ಬಿಟ್ಟಿರುವವನದು. ಅತಿ ಆಸೆಯುಳ್ಳವನದಲ್ಲ. ಈ ಧಮ್ಮವು ಸಂತುಷ್ಟಿ ಪಡೆದವನದು, ಅಸಂತುಷ್ಟಿಯಿಂದಿರುವವನದಲ್ಲ. ಈ ಧಮ್ಮವು ಜನರಿಂದ ದೂರವಾಗಿರುವವನದು, ಜನಜಂಗುಳಿಯ ಬಂಧನಕ್ಕೆ ಸಿಲುಕಿದವನದಲ್ಲ. ಈ ಧಮ್ಮವು ಯತ್ನಶೀಲವಾದುದು, ಆಲಸ್ಯದಿಂದಿರುವವನದಲ್ಲ. ಈ ಧಮ್ಮವು ದುಗುಡವಿಲ್ಲದ ಚಿತ್ತದಿಂದ ಬಂದದ್ದು, ಕುದಿಯುತ್ತಿರುವ ಚಿತ್ತದಿಂದ ಬಂದದ್ದಲ್ಲ. ಈ ಧಮ್ಮವು ಪಞ್ಞಾದಿಂದ ಬಂದದ್ದು, ಪಞ್ಞ ಇಲ್ಲದವನಿಂದಲ್ಲ. ಪ್ರಪಂಚಕ್ಕೆ ಸುತ್ತಿಕೊಂಡಿರುವವನ ಧಮ್ಮ ಇದಲ್ಲ. ಇದು ಪ್ರಪಂಚದಿಂದ ವಿಮುಖನಾದವನ ಧಮ್ಮ. ಮೇಲಕ್ಕೆ ತರಬಹುದಾದ ಎಂಟರ ಧರ್ಮಗಳು ಇವು.

“ಸ್ಪಷ್ಟವಾಗಿ ಅರಿಯಬೇಕಾದ ಎಂಟರ ಧರ್ಮಗಳು ಯಾವುವು? ಎಂಟು ಅಭಿಭಾಯತನಗಳು ಅಥವಾ ಉತ್ಕೃಷ್ಟ ಸ್ಥಾನಗಳು ರೂಪಗಳನ್ನು ನೋಡಬಲ್ಲ ರೂಪಸಞ್ಞಿಯು ತನ್ನ ಮತ್ತು ಹೊರಗಿನ ಒಳ್ಳೆಯ ಬಣ್ಣವಿರುವ ಅಥವಾ ಕೆಟ್ಟ ಬಣ್ಣವಿರುವ ಮತ್ತು ಚಿಕ್ಕದಾದ ರೂಪಗಳನ್ನು ನೋಡಬಲ್ಲವನಾಗುತ್ತಾನೆ. ‘ಇದನ್ನು ಚೆನ್ನಾಗಿ ಅರಿತುಕೊಂಡಿದ್ದೇನೆ, ನೋಡುತ್ತಿದ್ದೇನೆ, ತಿಳಿದಿದ್ದೇನೆ’ ಎಂಬ ಅರಿವನ್ನು ಪಡೆಯುತ್ತಾನೆ. ಇದು ಮೊದಲನೆಯ ಉತ್ಕೃಷ್ಟ ಸ್ಥಾನ.

“ರೂಪಗಳನ್ನು ತಿಳಿಯಬಲ್ಲ ರೂಪಸಞ್ಞಿಯು ತನ್ನ ಮತ್ತು ಹೊರಗಿರುವ ಬಹು ದೊಡ್ಡದಾದ ಮತ್ತು ಒಳ್ಳೆಯ ಅಥವಾ ಕೆಟ್ಟ ಬಣ್ಣವಿರುವ ರೂಪಗಳನ್ನು ನೋಡಬಲ್ಲವನಾಗಿರುತ್ತಾನೆ. ‘ಇದನ್ನು ಚೆನ್ನಾಗಿ ಅರಿತುಕೊಂಡಿದ್ದೇನೆ, ನೋಡುತ್ತಿದ್ದೇನೆ, ತಿಳಿದಿದ್ದೇನೆ’ ಎಂಬ ಅರಿವನ್ನು ಪಡೆಯುತ್ತಾನೆ. ಇದು ಎರಡನೆಯ ಉತ್ಕೃಷ್ಟ ಸ್ಥಾನ.

“ತನ್ನನ್ನು ನೋಡಲಾರದ ಅರೂಪಸಞ್ಞಿಯು ಒಳ್ಳೆಯ ಅಥವಾ ಕೆಟ್ಟ ಬಣ್ಣವಿರುವ ಮತ್ತು ಅತಿ ಚಿಕ್ಕದಾಗಿರುವ ಹೊರಗಿನ ರೂಪಗಳನ್ನು ನೋಡಬಲ್ಲವನಾಗಿರುತ್ತಾನೆ. ‘ಇದನ್ನು ಚೆನ್ನಾಗಿ ಅರಿತುಕೊಂಡಿದ್ದೇನೆ, ನೋಡುತ್ತಿದ್ದೇನೆ, ತಿಳಿದಿದ್ದೇನೆ’ ಎಂಬ ಅರಿವನ್ನು ಪಡೆಯುತ್ತಾನೆ. ಇದು ಮೂರನೆಯ ಉತ್ಕೃಷ್ಟ ಸ್ಥಾನ.

“ತನ್ನನ್ನು ನೋಡಲಾರದ ಅರೂಪಸಞ್ಞಿಯು ಒಳ್ಳೆಯ ಅಥವಾ ಕೆಟ್ಟ ಬಣ್ಣವಿರುವ ಮತ್ತು ಅತಿ ಗಾತ್ರದ ಹೊರಗಿನ ರೂಪಗಳನ್ನು ನೋಡಬಲ್ಲವನಾಗಿರುತ್ತಾನೆ. ‘ಇದನ್ನು ಚೆನ್ನಾಗಿ ಅರಿತುಕೊಂಡಿದ್ದೇನೆ, ನೋಡುತ್ತಿದ್ದೇನೆ, ತಿಳಿದಿದ್ದೇನೆ’ ಎಂಬ ಅರಿವನ್ನು ಪಡೆಯುತ್ತಾನೆ. ಇದು ನಾಲ್ಕನೆಯ ಉತ್ಕೃಷ್ಟ ಸ್ಥಾನ.

“ತನ್ನನ್ನು ನೋಡಲಾರದ ಅರೂಪಸಞ್ಞಿಯು ನೀಲಿಯ, ನೀಲಿಯ ಬಣ್ಣವಿರುವ, ನೀಲಿಯಾಗಿ ಕಾಣುವ, ನೀಲಿಯಿಂದ ಪ್ರಕಾಶಿಸುವವ ಹೊರಗಿನ ರೂಪಗಳನ್ನು ನೋಡುತ್ತಾನೆ. ನೀಲಿಯ, ನೀಲಿಯ ಬಣ್ಣವಿರುವ ನೀಲಿಯಾಗಿ ಕಾಣುವ, ನೀಲಿಯಿಂದ ಪ್ರಕಾಶಿಸುವ ಉಮಾ ಪುಷ್ಪದಂತೆ ಅಥವಾ ನೀಲಿಯ ನೀಲಿಯ ಬಣ್ಣವಾಗಿರುವ ನೀಲಿಯಾಗಿ ಕಾಣುವ, ನೀಲಿಯಿಂದ ಪ್ರಕಾಶಿಸುವ, ಎರಡೂ ಕಡೆಗಳಲ್ಲಿ ಅಂದವಾಗಿ ಕೆಲಸ ಮಾಡಿರುವ ವಾರಣಾಸಿಯ ನೀಲಿ ವಸ್ತ್ರದಂತೆ ನೀಲಿಯ ನೀಲಿಯ ಬಣ್ಣವಿರುವ ನೀಲಿಯಾಗಿ ಕಾಣುವ ನೀಲಿಯಿಂದ ಪ್ರಕಾಶಿಸುವ ಹೊರಗಿನ ರೂಪಗಳನ್ನು ನೋಡುತ್ತಾನೆ. ‘ಇದನ್ನು ಚೆನ್ನಾಗಿ ಅರಿತಿದ್ದೇನೆ, ನೋಡುತ್ತಿದ್ದೇನೆ, ತಿಳಿದಿದ್ದೇನೆ’ ಎಂಬ ಅರಿವನ್ನು ಪಡೆಯುತ್ತಾನೆ. ಇದು ಐದನೆಯ ಉತ್ಕೃಷ್ಟ ಸ್ಥಾನ.

“ತನ್ನನ್ನು ನೋಡಲಾರದ ಅರೂಪಸಞ್ಞಿಯು ಹಳದಿ ಬಣ್ಣವಿರುವ ಹಳದಿ ಬಣ್ಣವಾಗಿ ಕಾಣುವ ಹಳದಿಯಿಂದ ಪ್ರಕಾಶಿಸುವ ಹೊರಗಿನ ಹಳದಿ ರೂಪಗಳನ್ನು ನೋಡುತ್ತಾನೆ. ಹಳದಿ ಬಣ್ಣವಿರುವ ಹಳದಿಯಾಗಿ ಕಾಣುವ ಹಳದಿಯಿಂದ ಪ್ರಕಾಶಿಸುವ ಕಣಿಕಾರ ಪುಷ್ಪದಂತೆ ಅಥವಾ ಹಳದಿ ಬಣ್ಣವಿರುವ ಹಳದಿಯಾಗಿ ಕಾಣುವ ಹಳದಿಯಿಂದ ಪ್ರಕಾಶಿಸುವ ಎರಡೂ ಕಡೆಗಳಲ್ಲಿ ಅಂದವಾಗಿ ಕೆಲಸ ಮಾಡಿರುವ ವಾರಣಾಸಿಯ ಹಳದಿ ವಸ್ತ್ರದಂತೆ ಹಳದಿಯಾಗಿರುವ ಹಳದಿ ಬಣ್ಣವಿರುವ ಹಳದಿಯಾಗ ಕಾಣುವ ಹಳದಿಯಿಂದ ಪ್ರಕಾಶಿಸುವ ಹೊರಗಿನ ರೂಪಗಳನ್ನು ನೋಡುತ್ತಾನೆ. ‘ಇದನ್ನು ಚೆನ್ನಾಗಿ ಅರಿತಿದ್ದೇನೆ, ನೋಡುತ್ತಿದ್ದೇನೆ, ತಿಳಿದಿದ್ದೇನೆ’ ಎಂಬ ಅರಿವನ್ನು ಪಡೆಯುತ್ತಾನೆ. ಇದು ಆರನೆಯ ಉತ್ಕೃಷ್ಟ ಸ್ಥಾನ.

“ತನ್ನನ್ನು ನೋಡಲಾರದ ಅರೂಪಸಞ್ಞಿಯು ಕೆಂಪು ಬಣ್ಣವಾಗಿ ಕಾಣುವ ಕೆಂಪು ಬಣ್ಣದಿಂದ ಪ್ರಕಾಶಿಸುವ ಬಂಧುಜೀವಕ ಪುಷ್ಪದಂತೆ ಅಥವಾ ಕೆಂಪು ಬಣ್ಣವಿರುವ ಕೆಂಪಾಗಿ ಕಾಣುವ ಕೆಂಪಿನಿಂದ ಪ್ರಕಾಶಿಸುವ ಎರಡೂ ಕಡೆಗಳಲ್ಲಿ ಅಂದವಗಿ ಕೆಲಸ ಮಾಡಿರುವ ವಾರಣಸಿಯ ಕೆಂಪು ವಸ್ತ್ರದಂತೆ ಕೆಂಪು ಬಣ್ಣವಿರುವ ಕೆಂಪಾಗಿ ಕಾಣುವ ಕೆಂಪನಿಂದ ಪ್ರಕಾಶಿಸುವ ಹೊರರೂಪಗಳನ್ನು ನೋಡುತ್ತಾನೆ. ‘ಇದನ್ನು ಚೆನ್ನಾಗಿ ಅರಿತಿದ್ದೇನೆ, ನೋಡುತ್ತಿದ್ದೇನೆ, ತಿಳಿದಿದ್ದೇನೆ’ ಎಂಬ ಅರಿವನ್ನು ಪಡೆಯುತ್ತಾನೆ. ಇದು ಏಳನೆಯ ಉತ್ಕೃಷ್ಟ ಸ್ಥಾನ.

“ತನ್ನನ್ನು ನೋಡಲಾರದ ಅರೂಪಸಞ್ಞಿಯು ಬಿಳಿ ಬಣ್ಣದ ಬೆಳ್ಳಗೆ ಕಾಣುವ ಬಿಳಿಯ ಬಣ್ಣದಿಂದ ಪ್ರಕಾಶಿಸುವ ಹೊರಗಿನ ಬಿಳಿ ರೂಪಗಳನ್ನು ನೋಡುತ್ತಾನೆ. ಬಿಳಿ ಬಣ್ಣವಿರುವ ಬಿಳಿಯಾಗಿ ಕಾಣುವ ಬಿಳಿಯ ವರ್ಣದಿಂದ ಪ್ರಕಾಶಿಸುವ ಬಿಳಿಯ ನಕ್ಷತ್ರದಂತೆ ಅಥವಾ ಬಿಳಿಯದಾದ ಬೆಳ್ಳಗೆ ಕಾಣುವ ಬಿಳಿಯ ಬಣ್ಣದಿಂದ ಪ್ರಕಾಶಿಸುವ ಎರಡೂ ಕಡೆಗಳಲ್ಲಿ ಅಂದವಾಗಿ ಕೆಲಸ ಮಾಡಿರುವ ವಾರಣಾಸಿಯ ಬಿಳಿಯ ವಸ್ತ್ರದಂತೆ ಬಿಳಿ ಬಣ್ಣವಿರುವ ಬೆಳ್ಳಗೆ ಕಾಣುವ ಬೆಳ್ಳಗೆ ಪ್ರಕಾಶಿಸುವ ಹೊರಗಿನ ಬಿಳಿಯ ರೂಪಗಳನ್ನು ನೋಡುತ್ತಾನೆ. ‘ಇದನ್ನು ಚೆನ್ನಾಗಿ ಅರಿತಿದ್ದೇನೆ, ನೋಡುತ್ತಿದ್ದೇನೆ, ತಿಳಿದಿದ್ದೇನೆ’ ಎಂಬ ಅರಿವನ್ನು ಪಡೆಯುತ್ತಾನೆ. ಇದು ಎಂಟನೆಯ ಉತ್ಕೃಷ್ಟ ಸ್ಥಾನ.

“ಸಾಕ್ಷಾತ್ಕರಿಸಿಕೊಳ್ಳಬೇಕಾದ ಎಂಟರ ಧರ್ಮಗಳು ಯಾವುವು? ಎಂಟು ವಿಮೋಕ್ಖಗಳು.

“ಸೂಕ್ಷ್ಮವಾದ ರೂಪ ಲೋಕದಲ್ಲಿರುವ ರೂಪವನ್ನು ಹೊಂದಿರುವವನು ರೂಪಗಳನ್ನು ನೋಡಬಲ್ಲವ ನಾಗಿರುತ್ತಾನೆ. ಇದು ಮೊದಲನೆಯ ವಿಮೋಕ್ಖ.

“ತನ್ನನ್ನು ನೋಡಲಾರದ ಅರೂಪಸಞ್ಞಿಯು ಹೊರಗಿನ ರೂಪಗಳನ್ನು ನೋಡಬಲ್ಲವನಾಗಿರುತ್ತಾನೆ. ಇದು ಎರಡನೆಯ ವಿಮೋಕ್ಖ.

“ಶುಭವಾದುದನ್ನು ಕುರಿತು ಧ್ಯಾನ ಮಾಡುತ್ತಾ ಅದರಲ್ಲಿಯೇ ತಲ್ಲೀನನಾಗುತ್ತಾನೆ. ಇದು ಮೂರನೆಯ ವಿಮೋಕ್ಖ.

“ರೂಪಗಳಷ್ಟನ್ನೇ ನೋಡಬಲ್ಲ ಸಾಮರ್ಥ್ಯವನ್ನು ಮೀರಿ ಅರಿವಿನಲ್ಲಿರಬಹುದಾದ ದೋಷಗಳನ್ನು ನಾಶಮಾಡಿಕೊಂಡು ನಾನಾರೀತಿಯ ಅಪೂರ್ಣ ಅರಿವನ್ನು ದೂರಮಾಡಿ ‘ಆಕಾಶವು ಅನಂತವಾಗಿದೆ’ ಎಂಬ ಅರಿವಿರುವ ಆಕಾಸಾನಂಚಾಯತನದಲ್ಲಿರುತ್ತಾನೆ. ಇದು ನಾಲ್ಕನೆಯ ವಿಮೋಕ್ಖ.

“ಆಕಾಸಾನಂಚಾಯತನವೆಲ್ಲವನ್ನೂ ದಾಟಿ ‘ವಿಞ್ಞಾಣವು ಅನಂತವಾಗಿದೆ’ ಎಂಬ ಅರಿವಿರುವ ‘ವಿಞ್ಞಾಣಂಚಾಯತನ’ದಲ್ಲಿರುತ್ತಾನೆ. ಇದು ಐದನೆಯ ವಿಮೋಕ್ಖ.

“ವಿಞ್ಞಾಣಂಚಾಯತನಗಳೆಲ್ಲವನ್ನೂ ದಾಟಿ ‘ಏನೂ ಇಲ್ಲ’ ಎಂಬ ಅರಿವಿನಿಂದ ಅಕಿಂಚಞ್ಞಾಯತನ’ದಲ್ಲಿರುತ್ತಾನೆ. ಇದು ಆರನೆಯ ವಿಮೋಕ್ಖ.

“ಅಕಿಂಚಞ್ಞಾಯತನಗಳೆಲ್ಲವನ್ನು ದಾಟಿ ‘ನೇವಸಞ್ಞಾನಾಞ್ಞಾಯತನ’ದಲ್ಲಿರುತ್ತಾನೆ. ಆಗ ಅರಿವಿರುವುದಿಲ್ಲ, ಅರಿವಿಲ್ಲದಿರುವುದೂ ಇಲ್ಲ. ಅಂಥ ಸ್ಥಿತಿ ಅದು. ಇದು ಏಳನೆಯ ವಿಮೋಕ್ಖ.

“ನೇವಸಞ್ಞಾನಾಸಞ್ಞಾಯತನಗಳೆಲ್ಲವನ್ನೂ ದಾಟಿ ಅರಿವು ವೇದನೆಗಳಾವುವೂ ಇಲ್ಲದ ಸ್ಥಿತಿಯನ್ನು ಮುಟ್ಟುತ್ತಾನೆ. ಇದು ಎಂಟನೆಯ ವಿಮೋಕ್ಖ. ಸಾಕ್ಷಾತ್ಕರಿಸಿಕೊಳ್ಳಬೇಕಾದ ಎಂಟರ ಧರ್ಮಗಳು ಇವು.

“ವಾಸ್ತವವಾಗಿರುವಂಥವು ಈ ಎಂಬತ್ತು ಧರ್ಮಗಳು. ಸತ್ಯವಾಗಿರುವಂಥವು. ಇವು ಬೇರೆ ರೀತಿಯಲ್ಲಿರಲು ಸಾಧ್ಯವಿಲ್ಲ. ತಥಾಗತರು ಇದನ್ನು ಸ್ಪಷ್ಟವಾಗಿ ಅರಿತಿದ್ದಾರೆ.

ಒಂಭತ್ತರ ಧರ್ಮಗಳು

“ಸಹಾಯ ಪಡೆಯಬೇಕಾದ ಒಂಬತ್ತರ ಧರ್ಮಗಳಿವೆ... ಸಾಕ್ಷಾತ್ಕರಿಸಿಕೊಳ್ಳಬೇಕಾದ ಒಂಬತ್ತರ ಧರ್ಮಗಳಿವೆ.

“ಸಹಾಯ ಪಡೆಯಬೇಕಾದ ಒಂಬತ್ತರ ಧರ್ಮಗಳು ಯಾವುವು? ಚಿಂತನದಲ್ಲಿ ಬೇರುಬಿಟ್ಟಿರುವ ಮನಸ್ಸಿನ ಸ್ಥಿತಿಗಳು. ಚಿಂತನ ಮಾಡುವವನ ಮನಸ್ಸಿನಲ್ಲಿ ಪ್ರಮೋದವು ಹುಟ್ಟುತ್ತದೆ. ಪ್ರಮೋದದಿಂದ ಪ್ರೀತಿಯು ಹುಟ್ಟುತ್ತದೆ. ಪ್ರೀತಿಯ ಮನಸ್ಸಿನಿಂದ ಕಾಯವು ಶಾಂತವಾಗುತ್ತದೆ. ಶಾಂತವಾದ ಕಾಯದಿಂದ ಸುಖದ ಅನುಭವವಾಗುತ್ತದೆ. ಸುಖದಿಂದಿರುವ ಚಿತ್ತವು ಸಮಾಧಿಯನ್ನು ಅನುಭವಿಸುತ್ತದೆ. ಇಂಥ ಶಾಂತವಾಗಿರುವ ಚಿತ್ತದಿಂದ ಇದ್ದುದನ್ನು ಇದ್ದಂತೆಯೇ ನೋಡಬಲ್ಲವನಾಗುತ್ತಾನೆ, ತಿಳಿಯಬಲ್ಲವನಾಗುತ್ತಾನೆ. ಇದ್ದುದನ್ನು ಇದ್ದಂತೆಯೇ ತಿಳಿಯಬಲ್ಲ ನೋಡಬಲ್ಲ ಅವನಿಗೆ (ಪ್ರಪಂಚದಲ್ಲಿ) ಜುಗುಪ್ಸೆ ಬೆಳೆಯುತ್ತದೆ. ಇದರಿಂದ ವೈರಾಗ್ಯ ಹುಟ್ಟುತ್ತದೆ. ವೈರಾಗ್ಯದ ದೆಸೆಯಿಂದ ಮುಕ್ತನಾಗುತ್ತಾನೆ. ಇವು ಸಹಾಯಪಡೆಯಬೇಕಾದ ಒಂಬತ್ತರ ಧರ್ಮಗಳು.

“ಬೆಳೆಸಿಕೊಳ್ಳಬೇಕಾದ ಒಂಬತ್ತರ ಧರ್ಮಗಳು ಯಾವುವು? ಪರಿಶುದ್ಧವಾಗಿರಲು ಅಗತ್ಯವಾಗಿ ಮಾಡಬೇಕಾದ ಪ್ರಯತ್ನದ ಒಂಬತ್ತು ಅಂಶಗಳು ಶೀಲವಿಶುದ್ಧಿ, ಚಿತ್ತವಿಶುದ್ಧಿ, ದೃಷ್ಟಿವಿಶುದ್ಧಿ (ದಿಟ್ಠಿ ವಿಸುದ್ಧಿ), ಸಂಶಯಗಳಿಂದ ದೂರವಾಗುವ ವಿಶುದ್ಧಿ, ಞಾಣದಸ್ಸನ ವಿಶುದ್ಧಿ, ಪಞ್ಞಾವಿಶುದ್ಧಿ, ವಿಮುಕ್ತಿ ವಿಶುದ್ಧಿ, ಇವು ಬೆಳೆಸಿಕೊಳ್ಳಬೇಕಾದ ಒಂಬತ್ತು ವಿಶುದ್ಧಿಗಳು.

ತಿಳಿದುಕೊಳ್ಳಬೇಕಾದ ಒಂಬತ್ತರ ಧರ್ಮಗಳು ಯಾವುವು? ಜೀವಿಗಳಿರುವ ಒಂಬತ್ತು ನಿವಾಸಗಳು.

“ನಾನಾರೀತಿಯ ಅರಿವುಗಳನ್ನೂ ನಾನಾ ಕಾಯಗಳನ್ನು ಹೊಂದಿರುವ ಜೀವಿಗಳಿದ್ದಾರೆ. ಮನುಷ್ಯರೂ, ಕೆಲವು ದೇವತೆಗಳೂ, ನಿಪಾತಕ್ಕೆ ಹೋಗುವವರೂ ಈ ಗುಂಪಿಗೆ ಸೇರಿದವರು, ಅವರು ಇರುವ ನಿವಾಸವು ಮೊದಲನೆಯದರಲ್ಲಿ.

“ಬ್ರಹ್ಮಕಾಯಿಕ ದೇವತೆಗಳಂತೆ ಅಥವಾ ಪ್ರಥಮ ಜ್ಞಾನದ ಫಲವಾಗಿ ಬ್ರಹ್ಮಲೋಕದಲ್ಲಿ ಹುಟ್ಟುವವರಂತೆ ನಾನಾಬಗೆಯ ಕಾಯಗಳನ್ನೂ ಒಂದೇಬಗೆಯ ಅರಿವನ್ನೂ ಹೊಂದಿರುವ ಜೀವಿಗಳಿದ್ದಾರೆ. ಇವರು ವಾಸಿಸುವುದು ಎರಡನೆಯದರಲ್ಲಿ.

“ಅಭಸ್ಸರ ದೇವತೆಗಳಂತೆ ಒಂದೇಬಗೆಯ ಕಾಯವನ್ನೂ ನಾನಾರೀತಿಯ ಅರಿವನ್ನೂ ಹೊಂದಿರುವ ಜೀವಿಗಳಿದ್ದಾರೆ. ಇವರು ವಾಸಿಸುವುದು ಮೂರನೆಯ ನಿವಾಸದಲ್ಲಿ.

“ಸುಭಕಿಣ್ಹ ದೇವತೆಗಳಂತೆ ಒಂದೇಬಗೆಯ ಕಾಯವನ್ನೂ, ಒಂದೇಬಗೆಯ ಅರಿವನ್ನೂ ಹೊಂದಿರುವ ಜೀವಿಗಳಿದ್ದಾರೆ. ಇವರದು ನಾಲ್ಕನೆಯ ನಿವಾಸ.

“ಅರಿವಾಗಲೀ, ವೇದನೆಯ ಅನುಭವವಾಗಲೀ ಇದರ ಅಸಞ್ಞಾ ದೇವತೆಗಳಂತೆ ಕೆಲವು ಜೀವಿಗಳಿದ್ದಾರೆ. ಇವರದು ಐದನೆಯ ನಿವಾಸ.

“ಎಲ್ಲ ರೂಪಗಳನ್ನೂ ಮೀರಿ ಅರಿವಿನ ಕೊರತೆಯನ್ನು ನಾಶಮಾಡಿಕೊಂಡು ‘ಆಕಾಶವು ಅನಂತವಾಗಿದೆ’ ಎಂಬ ಅರಿವಿರುವ ಆಕಾಸಾನಂಚಾಯತನದ ಜೀವಿಗಳಿದ್ದಾರೆ. ಇವರದು ಆರನೆಯ ನಿವಾಸ.

“ಆಕಾಸಾನಂಚಾಯತನವನ್ನು ಮೀರಿ ‘ವಿಞ್ಞಾಣವು ಅನಂತವಾಗಿದೆ’ ಎಂಬ ಅರಿವಿರುವ ವಿಞ್ಞಾಣಂಚಾಯತನದ ಜೀವಿಗಳಿದ್ದಾರೆ, ಇವರದು ಏಳನೆಯ ನಿವಾಸ.

“ವಿಞ್ಞಾಣಂಚಾಯತನವನ್ನು ದಾಟಿ ‘ಏನೂ ಇಲ್ಲ’ ಎಂಬ ಅರಿವಿರುವ ‘ಅಕಿಂಚಾಯತನ’ದ ಜೀವಿಗಳಿದ್ದಾರೆ. ಇವರದು ಎಂಟನೆಯ ನಿವಾಸ.

“ಅಕಿಂಚಾಯತನವನ್ನು ದಾಟಿ ಅರಿವೂ ಇಲ್ಲ, ಅರಿವಿಲ್ಲದೆಯೂ ಇಲ್ಲ ಎಂಬ ಜ್ಞಾನವನ್ನು ಹೊಂದಿರುವ ಜೀವಿಗಳಿದ್ದಾರೆ. ಇವರಿರುವುದು ನೇವಸಞ್ಞಾನಾಸಞ್ಞಾಯತನ. ಇದು ಒಂಬತ್ತನೆಯ ನಿವಾಸ.

“ಬಿಡಬೇಕಾದ ಒಂಬತ್ತರ ಧರ್ಮಗಳು ಯಾವುವು? ತಣ್ಹಾದಿಂದ ಹುಟ್ಟುವ ಒಂಬತ್ತು ಧರ್ಮಗಳು. ತಣ್ಹಾವನ್ನು ಅವಲಂಬಿಸಿರುವ ವೃತ್ತಿಯಲ್ಲಿ ತೊಡಗುವ ಪ್ರವೃತ್ತಿ. ಈ ಪ್ರವೃತ್ತಿಯನ್ನು ಅವಲಂಬಿಸಿರುವ ಲಾಭ, ಲಾಭವನ್ನು ಅವಲಂಬಿಸಿರುವ ಮಾಡಲೇಬೇಕೆಂಬ ಪ್ರವೃತ್ತಿ. ಈ ಪ್ರವೃತ್ತಿಯನ್ನು ಅವಲಂಬಿಸಿರುವ ಛಂದರಾಗ, ಛಂದರಾಗವನ್ನು ಅವಲಂಬಿಸಿರುವ ಅಂಟಿಕೊಳ್ಳುವ, ಪ್ರವೃತ್ತಿ, ಈ ಪ್ರವೃತ್ತಿಯನ್ನವಲಂಬಿಸಿರುವ ಮತ್ತಷ್ಟು ಬೇಕೆಂಬ ಆಸೆ, ಈ ಆಸೆಯನ್ನವಲಂಬಿಸಿರುವ ಮಾತ್ಸರ್ಯ, ಮಾತ್ಸರ್ಯವನ್ನವಲಂಬಿಸಿರುವ ರಕ್ಷಿಸಿಕೊಳ್ಳಬೇಕೆಂಬ ಆಸೆ, ರಕ್ಷಿಸಿಕೊಳ್ಳಬೇಕೆಂಬ ಆಸೆಯಿಂದ ಆಗುವ ದಂಡ ಶಸ್ತ್ರಗಳ ಪ್ರಯೋಗ, ಕಲಹ ಮಿತ್ರ ಭೇದ. ವಿವಾದ ಜಗಳ ಕಠಿಣವಾದ ಮಾತುಗಳು ಸುಳ್ಳು. ಇವುಗಳಿಂದ ಕೂಡಿರುವ ಪಾಪಗಳು. ಅಕುಶಲ ಭಾವನೆಗಳಿಗೂ ಕರ್ಮಗಳಿಗೂ ಅನುಕೂಲವಾದ ಪರಿಸ್ಥಿತಿ. ಇವು ಬಿಡಬೇಕಾದ ಒಂಬತ್ತರ ಧರ್ಮಗಳು.

“ಹಾನಿಯನ್ನುಂಟುಮಾಡುವ ಒಂಬತ್ತರ ಧರ್ಮಗಳು ಯಾವುವು? ಕಲಹದ ಒಂಬತ್ತು ಕಾರಣಗಳು- ‘ನನಗೆ ಅನರ್ಥವಾಗಿ ಹೋಗಿದೆ’ ಎಂಬ ಭಾವನೆಯು ಕಲಹವನ್ನು ಹುಟ್ಟಿಸುತ್ತದೆ. ‘ನನಗೆ ಅನರ್ಥವಾಗುತ್ತಿದೆ’ ಎಂಬ ಭಾವನೆಯು ಕಲಹವನ್ನು ಹುಟ್ಟಿಸುತ್ತದೆ. ‘ನನಗೆ ಮುಂದೆ ಅನರ್ಥವಾಗುತ್ತದೆ’ ಎಂಬ ಭಾವನೆಯು ಕಲಹವನ್ನು ಹುಟ್ಟಿಸುತ್ತದೆ. ‘ನನಗೆ ಪ್ರಿಯನಾದವನಿಗೆ ಅನರ್ಥವಾಗಿದೆ’ ಎಂಬ ಭಾವನೆಯು ಕಲಹವನ್ನು ಹುಟ್ಟಿಸುತ್ತದೆ. ‘ನನಗೆ ಪ್ರಿಯನಾದವನಿಗೆ ಅನರ್ಥವಾಗುತ್ತಿದೆ’... ‘ನನಗೆ ಪ್ರಿಯನಾದವನಿಗೆ ಮುಂದೆ ಅನರ್ಥವಾಗುತ್ತದೆ’... ‘ನನಗಾಗದವನಿಗೆ ಒಳ್ಳೆಯದಾಗಿದೆ’ ಎಂಬ ಭಾವನೆಯು... ‘ನನಗಾಗದವನಿಗೆ ಒಳ್ಳೆಯದಾಗುತ್ತದೆ’ ಎಂಬ ಭಾವನೆಯು ಕಲಹವನ್ನು ಹುಟ್ಟಿಸುತ್ತದೆ, ಹಾನಿಯನ್ನುಂಟುಮಾಡುವ ಒಂಬತ್ತು ಧರ್ಮಗಳು ಇವು.

“ವಿಶೇಷತೆಯನ್ನು ಕೊಡುವ ಒಂಬತ್ತು ಧರ್ಮಗಳು ಯಾವುವು? ಕಲಹವನ್ನು ತಪ್ಪಿಸುವ ಒಂಬತ್ತು ಸಂದರ್ಭಗಳು. ‘ನನಗೇನೋ ಅನರ್ಥವಾಗಿ ಹೋಗಿದೆ. ಆದರೆ ಕಲಹ ಮಾಡುವುದರಿಂದ ಏನು ಲಾಭ?’ ಎಂಬ ಭಾವನೆಯು ಕಲಹವನ್ನು ತಪ್ಪಿಸುತ್ತದೆ. ‘ನನಗೆ ಅನರ್ಥವಾಗುತ್ತಿದೆ, ಆದರೆ ಕಲಹ ಮಾಡುವುದರಿಂದ ಬರುವ ಲಾಭವೇನು?’ ಎಂಬ ಭಾವನೆಯು ಕಲಹವನ್ನು ತಪ್ಪಿಸುತ್ತದೆ. ‘ಮುಂದೆ ನನಗೆ ಅನರ್ಥವಾಗುತ್ತದೆ, ಆದರೆ ಕಲಹ ಮಾಡುವುದರಿಂದ ಆಗುವ ಲಾಭವೇನು?’ ಎಂಬ ಭಾವನೆಯು ಕಲಹವನ್ನು ತಪ್ಪಿಸುತ್ತದೆ. ‘ಪ್ರಿಯನಾದವನಿಗೆ ಅನರ್ಥವಾಗಿದೆ’... ‘ನನಗೆ ಪ್ರಿಯನಾದವನಿಗೆ ಅನರ್ಥವಾಗುತ್ತಿದೆ... ‘ನನಗೆ ಪ್ರಿಯನಾದವನಿಗೆ ಮುಂದೆ ನನಗೆ ಅನರ್ಥವಾಗುತ್ತದೆ... ‘ನನಗಾಗದವನಿಗೆ ಒಳ್ಳೆಯದಾಗಿದೆ... ಒಳ್ಳೆಯದಾಗುತ್ತಿದೆ, ‘ನನಗಾಗದವನಿಗೆ ಮುಂದೆ ಒಳ್ಳೆಯದಾಗುತ್ತದೆ, ಆದರೆ ಕಲಹ ಮಾಡುವುದರಿಂದ ಆಗುವ ಲಾಭವೇನು?’ ಎಂಬ ಭಾವನೆಯು ಕಲಹವನ್ನು ತಪ್ಪಿಸುತ್ತದೆ. ವಿಶೇಷತೆಯನ್ನು ಕೊಡುವ ಒಂಬತ್ತು ಧರ್ಮಗಳು ಇವು.

“ಅರಿಯಲು ಕಷ್ಟವಾದ ಒಂಬತ್ತರ ಧರ್ಮಗಳು ಯಾವುವು? ಒಂಬತ್ತು ವ್ಯತ್ಯಾಸಗಳು ನಾನಾ ವಿಧವಾದ (ಇಂದ್ರಿಯ) ಧಾತುಗಳನ್ನು ಅವಲಂಬಿಸಿಕೊಂಡು ನಾನಾ ಫಸ್ಸಗಳಿರುತ್ತವೆ. ಬಹುರೀತಿಯ ಫಸ್ಸಗಳನ್ನು ಅವಲಂಬಿಸಿ ಬೇರೆ ಬೇರೆ ವೇದನೆಗಳು ಹುಟ್ಟುತ್ತವೆ. ನಾನಾ ವೇದನೆಗಳನ್ನು ಅವಲಂಬಿಸಿ ಬೇರೆ ಬೇರೆ ಇಂದ್ರಿಯ ಜ್ಞಾನಗಳು (ಸಞ್ಞಾ) ಹುಟ್ಟುತ್ತವೆ. ನಾನಾ ಸಞ್ಞಾಗಳನ್ನು ಅವಲಂಬಿಸಿ ನಾನಾ ಸಂಖಾರಗಳು ಹುಟ್ಟುತ್ತವೆ. ನಾನಾ ಸಂಖಾರಗಳನ್ನು ಅವಲಂಬಿಸಿ ಬೇರೆ ಬೇರೆ ಛಂದಗಳು ಹುಟ್ಟುತ್ತವೆ. ನಾನಾ ಛಂದಗಳನ್ನು ಅವಲಂಬಿಸಿ ಬೇರೆ ಬೇರೆ ಲೋಭಗಳು ಹುಟ್ಟುತ್ತವೆ. ನಾನಾ ಲೋಭಗಳನ್ನು ಅವಲಂಬಿಸಿ ಹುಡುಕಿಕೊಂಡು ಹೋಗುವ ಪ್ರವೃತ್ತಿಯು ಹುಟ್ಟುತ್ತದೆ ಮತ್ತು ಅದು ವಿವಿಧವಾಗಿರುತ್ತದೆ. ಹುಡುಕಿಕೊಂಡು ಹೋಗುವುದಕ್ಕೆ ಅನುಗುಣವಾಗಿ ವಿವಧ ರೀತಿಯ ಫಲಗಳು ದೊರೆಯುತ್ತವೆ.

“ಮೇಲಕ್ಕೆ ತರಬೇಕಾದ ಒಂಬತ್ತು ಧರ್ಮಗಳು ಯಾವುವು? ಒಂಬತ್ತು ಸಞ್ಞಾಗಳು ಅಥವಾ ಒಂಬತ್ತು ಅರಿವುಗಳು. ಅಶುಭದ ಅರಿವು, ಮರಣದ ಅರಿವು (ಇಂದ್ರಿಯಗಳು ಮತ್ತು ಮನಸ್ಸು ಬಯಸುವ) ಆಹಾರದ ಅರಿವು, ಲೋಕ ವಿಷಯಗಳಲ್ಲಿ ಜುಗುಪ್ಸೆ, ಅನಿಚ್ಛದ ಅರಿವು, ಅನಿಚ್ಚನವನ್ನವಲಂಬಿಸಿರುವ ಅನತ್ತದ ಅರಿವು, ಅನತ್ತವನ್ನು ಅವಲಂಬಿಸಿರುವ ದುಃಖದ ಅರಿವು, ಬಿಡಬೇಕಾದವುಗಳ ಅರಿವು, ವೈರಾಗ್ಯದ ಅರಿವು.

ಸ್ಪಷ್ಟವಾಗಿ ಅರಿಯಬೇಕಾದ ಒಂಬತ್ತರ ಧರ್ಮಗಳು ಯಾವುವು? ಒಂದಾದಮೇಲೆ ಒಂದಾಗಿ ಬರುವ ಧ್ಯಾನದ ಒಂಬತ್ತು ಮಜಲುಗಳು- ಅಕುಶಲವಾದ ಕಾಮ ಭಾವನೆಗಳಿಂದ ದೂರವಾಗಿ ವಿತಕ್ಕ ವಿಚಾರಗಳಿಂದ ಕೂಡಿದ ವಿವೇಕದಿಂದ* ಹುಟ್ಟುವ ಪ್ರೀತಿ ಸುಖವಿರುವ ಪ್ರಥಮ ಧ್ಯಾನದಲ್ಲಿ ಭಿಕ್ಷುವಿರುತ್ತಾನೆ. ತರ್ಕ ವಿಚಾರಗಳನ್ನು ಉಪಶಮನ ಮಾಡಿಕೊಂಡು... ದ್ವೀತೀಯ ಧ್ಯಾನದಲ್ಲಿರುತ್ತಾನೆ. ಪ್ರೀತಿ ವೈರಾಗ್ಯಗಳಿಂದ ಕೂಡಿರುವ... ತೃತೀಯ ಧ್ಯಾನದಲ್ಲಿರುತ್ತಾನೆ... ಸುಖವನ್ನು ವರ್ಜಿಸಿ... ಚುತುರ್ಥ ಧ್ಯಾನದಲ್ಲಿರುತ್ತಾನೆ. ರೂಪಗಳನ್ನಷ್ಟೇ ನೋಡುವ ಸಾಮರ್ಥ್ಯವನ್ನು ಮೀರಿ ಆಕಾಸಾನಂಚಾಯತನದಲ್ಲಿರುತ್ತಾನೆ. ಅಕಾಸಾನಂಚಾಯತನವೆಲ್ಲವನ್ನೂ ದಾಟಿ ‘ವಿಞ್ಞಾಣವು ಅನಂತವಾಗಿದೆ’ ಎಂಬ ಅರಿವಿರುವ ವಿಞ್ಞಾಣಂಚಾಯತನದಲ್ಲಿರುತ್ತಾನೆ. ವಿಞ್ಞಾಣಂಚಾಯತನಗಳೆಲ್ಲನ್ನೂ ದಾಟಿ ‘ಏನೂ ಇಲ್ಲ’ ಎಂಬ ಅರಿವಿನಿಂದ ಅಕಿಂಚಾಯತನದಲ್ಲಿರುತ್ತಾನೆ. ಅಕಿಂಚಾಯತನಗಳೆಲ್ಲವನ್ನು ದಾಟಿ ನೇವಸಞ್ಞಾನಾಸಞ್ಞಾಯತನದಲ್ಲಿರುತ್ತಾನೆ. ನೇವಸಞ್ಞಾನಾಸಞ್ಞಾಯತನಗಳೆಲ್ಲನ್ನೂ ದಾಟಿ ಅರಿವು ವೇದನೆಗಳಿಲ್ಲದ ಸ್ಥಿತಿಯನ್ನು ಮುಟ್ಟುತ್ತಾನೆ. ಸ್ಪಷ್ಟವಾಗಿ ಅರಿಯಬೇಕಾದ ಒಂಬತ್ತರ ಧರ್ಮಗಳು ಇವು.

“ಸಾಕ್ಷಾತ್ಕರಿಸಿಕೊಳ್ಳಬೇಕಾದ ಒಂಬತ್ತರ ಧರ್ಮಗಳು ಯಾವುವು? ಒಂದಾದ ಮೇಲೊಂದು ಬರುವ ಮನಸ್ಸಿನ ಭಾವನೆಗಳು ಸಂಪೂರ್ಣವಾಗಿ ನಿಂತಿರುವ ಸ್ಥಿತಿಗಳು ಪ್ರಥಮ ಧ್ಯಾನದಲ್ಲಿರುವಾಗ ಕಾಮದ ಭಾವನೆಗಳೆಲ್ಲವೂ ಇಂಗಿಹೋಗುತ್ತವೆ. ದ್ವಿತೀಯ ಧ್ಯಾನದಲ್ಲಿರುವಾಗ ತರ್ಕ ವಿಚಾರಗಳೆಲ್ಲವೂ ಇಂಗಿ ಹೋಗುತ್ತವೆ. ತೃತೀಯ ಧ್ಯಾನದಲ್ಲಿರುವಾಗ ಪ್ರೀತಿಯು ಇಂಗಿಹೋಗುತ್ತದೆ. ಚತುರ್ಥ ಧ್ಯಾನದಲ್ಲಿರುವುದರಿಂದ ಉಚ್ವಾಸ ನಿಶ್ವಾಸಗಳು ನಿಂತು ಹೋಗುತ್ತವೆ. ಆಕಾಸಾನಂಚಾಯತನದಲ್ಲಿರುವಾಗ ರೂಪಗಳ ಅರಿವು ಇಂಗಿಹೋಗುತ್ತದೆ. ವಿಞ್ಞಾಣಂಚಾಯತನದಲ್ಲಿರುವಾಗ ಆಕಾಸಾನಂಚಾಯತನದ ಅರಿವು ಇಲ್ಲವಾಗುತ್ತದೆ. ಅಕಿಂಚಾಯತನದಲ್ಲಿರುವಾಗ ವಿಞ್ಞಾಣಂಚಾಯತನದ ಅರಿವು ಇಲ್ಲವಾಗುತ್ತದೆ. ನೇವಸಞ್ಞಾನಾಸಞ್ಞಾಯತನದಲ್ಲಿರುವಾಗ ಅಕಿಂಚಾಯತನದ ಅರಿವು ಇಲ್ಲವಾಗುತ್ತದೆ. ಇದನ್ನು ಮೀರಿದ ಸ್ಥಿತಿಯನ್ನು ಮುಟ್ಟಿದಾಗ ಅರಿವು ವೇದನೆಗಳೆಲ್ಲವೂ ಇಲ್ಲವಾಗುತ್ತವೆ.

“ಈ ತೊಂಬತ್ತು ಧರ್ಮಗಳು ವಾಸ್ತವವಾಗಿರುವಂಥವು, ಸತ್ಯವಾಗಿರುವಂಥವು. ಇವು ಬೇರೆ ರೀತಿಯಲ್ಲಿರಲು ಸಾಧ್ಯವಿಲ್ಲ. ಇದನ್ನು ತಥಾಗತರು ಸ್ಪಷ್ಟವಾಗಿ ಅರಿತಿದ್ದಾರೆ.

ಹತ್ತರ ಧರ್ಮಗಳು

“ಸಹಾಯ ಪಡೆಯಬೇಕಾದ ಸಾಕ್ಷಾತ್ಕರಿಸಿಕೊಳ್ಳಬೇಕಾದ ಹತ್ತರ ಧರ್ಮಗಳಿವೆ.

“ಸಹಾಯ ಪಡೆಯಬೇಕಾದ ಹತ್ತರ ಧರ್ಮಗಳು ಯಾವುವು? ಹತ್ತು ರಕ್ಷಿಸಬಲ್ಲ ಧರ್ಮಗಳು. ಭಿಕ್ಷುವು ಶೀಲವಂತನಾಗಿ ಪಾಲಿಸಬೇಕಾದ ನಿಯಮಗಳನ್ನು ಸಂಯಮದಿಂದ ಪಾಲಿಸುತ್ತಾ ತಾನೇ ಹಾಕಿಕೊಂಡಿರುವ ಮಿತಿಯನ್ನು ಮೀರದೆ ಆ ಮಿತಿಯೊಳಗೇ ನಡೆಯುತ್ತಾ ವರ್ಜಿಸಬೇಕಾದವುಗಳಲ್ಲಿ ಅಣು ಮಾತ್ರದಷ್ಟಕ್ಕೂ ಭಯಪಡುತ್ತಾ ಶೀಲಗಳನ್ನು ಪಾಲಿಸುತ್ತಿರುತ್ತಾನೆ.

“ಬಹು ಶ್ರುತನಾಗಿ... ಪರಿಶುದ್ಧವಾದ ಶ್ರೇಷ್ಠ ಜೀವನಕ್ಕೆ ಅನುಕೂಲವಾದ... ಇದು ರಕ್ಷಿಸುವ ಧರ್ಮವಾಗಿದೆ.

“ಒಳ್ಳೆಯ ಜನರ ಮಿತ್ರನಾಗಿ ಒಳ್ಳೆಯ ಭಿಕ್ಷುಗಳ ಸಹಾಯಕನಾಗಿ ಒಳ್ಳೆಯವರ ಜೊತೆಗಾರನಾಗಿರುತ್ತಾನೆ... ಇದು ರಕ್ಷಿಸುವ ಧರ್ಮವಾಗಿದೆ.

“ಭಿಕ್ಷುವು ಒಳ್ಳೆಯ ಮಾತುಗಳನ್ನೇ ಆಡುವವನಾಗಿ ಮೃದು ಸ್ವಭಾವದವನಾಗಿ ತಾಳ್ಮೆಯುಳ್ಳವನಾಗಿ ತನಗೆ ಹೇಳಿದ ಬುದ್ಧಿವಾದ ಮತ್ತು ಎಚ್ಚರಿಕೆಯ ಮಾತುಗಳನ್ನು ಗೌರವದಿಂದ ಸ್ವೀಕರಿಸುತ್ತಾನೆ. ಇದು ರಕ್ಷಿಸುವ ಧರ್ಮವಾಗಿದೆ.

“ಭಿಕ್ಷುವು ಜೊತೆಯ ಬ್ರಹ್ಮಚಾರಿ ಮಾಡಬೇಕಾದ ಸೇವೆಯನ್ನು ದಕ್ಷತೆಯಿಂದ ಮಾಡುತ್ತಾನೆ. ಆಲಸಿಕೆಯಿಲ್ಲದವನಾಗಿ ಚತುರತೆಯಿಂದ ಕೂಡಿದವನಾಗಿ ಮಾಡುವುದೆಲ್ಲವನ್ನೂ ವಿಚಾರ ಮಾಡಿಕೊಂಡು ಮಾಡುತ್ತಾ ಕಾರ್ಯದಲ್ಲಿ ಸಮರ್ಥನಾಗಿರುತ್ತಾನೆ. ಇದು ರಕ್ಷಿಸುವ ಧರ್ಮವಾಗಿದೆ.

“ಭಿಕ್ಷುವು ಧಮ್ಮದಲ್ಲಿ ವಿಶ್ವಾಸವುಳ್ಳವನಾಗಿ ಧಮ್ಮದ ಮತ್ತು ವಿನಯದ ವಿವರಗಳನ್ನು ತಿಳಿದವರು ಹೇಳುವುದನ್ನು ಗಮನವಿಟ್ಟು ಕೇಳುವವನಾಗಿ ಅದರಿಂದ ಆನಂದಪಡುತ್ತಾನೆ. ಇದು ರಕ್ಷಿಸುವ ಧರ್ಮವಾಗಿದೆ.

“ಭಿಕ್ಷುವು ತನಗಿರುವ ಚೀವರ ಪಿಂಡಪಾತ್ರೆ ನಿವಾಸ ಮತ್ತು ಮದ್ದುಗಳಿಂದಲೇ ಸಂತುಷ್ಟನಾಗಿರುತ್ತಾನೆ. ಇದು ರಕ್ಷಿಸುವ ಧರ್ಮವಾಗಿದೆ.

“ಭಿಕ್ಷುವು ಕುಶಲವಾದ ಭಾವನೆಗಳನ್ನು ಬೆಳೆಸಿಕೊಳ್ಳುವುದರಲ್ಲಿ ಸದಾ ಯತ್ನಶೀಲನಾಗಿ ಇರುತ್ತಾನೆ... ಇದು ರಕ್ಷಿಸುವ ಧರ್ಮವಾಗಿದೆ.

“ಭಿಕ್ಷುವು ಸ್ಮೃತಿವಂತನಾಗಿ ಉಪೇಕ್ಷಾ ಭಾವನೆಯನ್ನು ಹಿಂದೆ ಮಾಡಿದುದನ್ನು ಮಾತನಾಡಿದುದನ್ನು ವಿವರವಾಗಿ ನೆನಪು ಮಾಡಿಕೊಳ್ಳುತ್ತಾ ಸಾಧನೆ ಮಾಡುತ್ತಾನೆ. ಇದು ರಕ್ಷಿಸುವ ಧರ್ಮವಾಗಿದೆ.

“ಭಿಕ್ಷುವು ಉದಯ ನಾಶಗಳನ್ನು ತನ್ನ ಪಞ್ಞಾದಿಂದ ತಿಳಿಯಬಲ್ಲವನಾಗಿರುತ್ತಾನೆ. ದುಃಖ ಕ್ಷಯದ ಶ್ರೇಷ್ಠ ಮಾರ್ಗವಾದ ಬೋಧಿಯನ್ನು ಪಞ್ಞಾದಿಂದ ಅರಿತಿರುವವನೂ ಆಗಿರುತ್ತಾನೆ. ಇದು ರಕ್ಷಿಸುವ ಧರ್ಮವಾಗಿದೆ.

“ಬೆಳೆಸಿಕೊಳ್ಳಬೇಕಾದ ಹತ್ತರ ಧರ್ಮಗಳು ಯಾವುವು? ಹತ್ತು ಕಸಿಣಾಯತನಗಳು. ಪೃಥ್ವಿಯ ಒಂದು ಕಸಿಣಾಯತನ ಇದರ ಊರ್ಧ್ವ ಅಧೋ ತಿರ್ಯಕ್ ದಿಕ್ಕುಗಳನ್ನು ಅರಿಯುತ್ತಾನೆ. ಇದು ಎರಡಾಗಿಲ್ಲದೆ ಒಂದೇ ಆಗಿರುವುದೂ ಅಳತೆಗೆ ಮೀರಿರುವುದೂ ಅವನಿಗೆ ಚೆನ್ನಾಗಿ ಗೊತ್ತಾಗುತ್ತದೆ. ಆಪಸ್ ಒಂದು ಕಸಿಣಾಯತನ... ತೇಜಸ್ ಒಂದು ಕಸಿಣಾಯತನ... ವಾಯು ಒಂದು ಕಸಿಣಾಯತನ... ನೀಲಿ ಒಂದು ಕಸಿಣಾಯತನ... ಹಳದಿ ಒಂದು ಕಸಿಣಾಯತನ... ಕೆಂಪು ಒಂದು ಕಸಿಣಾಯತನ... ಬಿಳಿ ಒಂದು ಕಸಿಣಾಯತನ... ಅದರ ಊರ್ಧ್ವ ಅಧೋ ತಿರ್ಯಕ್ ಲಕ್ಷಣಗಳನ್ನು ಅರಿಯುತ್ತಾನೆ. ಅದು ಎರಡಾಗಿಲ್ಲದೆ ಒಂದೇ ಆಗಿರುವುದೂ ಅಳತೆಗೆ ಮೀರಿರುವುದೂ ಅವನಿಗೆ ಚೆನ್ನಾಗಿ ಗೊತ್ತಿರುತ್ತದೆ. ಬೆಳೆಸಿಕೊಳ್ಳಬೇಕಾದ ಹತ್ತರ ಧರ್ಮಗಳು ಇವೇ.60

“ತಿಳಿಯಬೇಕಾದ ಹತ್ತರ ಧರ್ಮಗಳು ಯಾವುವು? ಹತ್ತು ಆಯತನಗಳು ಚಕ್ಷು-ರೂಪ, ಶ್ರೋತ್ರ-ಶಬ್ಧ, ಘ್ರಾಣೀಂದ್ರಿಯ-ಗಂಧ, ಜಿಹ್ವೆ-ರಸ, ಕಾಯ-ಸ್ಪರ್ಶ. ತಿಳಿಯಬೇಕಾದ ಹತ್ತು ಧರ್ಮಗಳು ಇವೇ.

“ಮಾಡಬೇಕಾದ ಹತ್ತರ ಧರ್ಮಗಳು ಯಾವುವು? ಮಿಥ್ಯಾದೃಷ್ಟಿ, ಮಿಥ್ಯಾಸಂಕಲ್ಪ, ಮಿಥ್ಯಾವಾಚಾ, ಮಿಥ್ಯಾಕರ್ಮಗಳು, ಮಿಥ್ಯಾಜೀವನ, ಮಿಥ್ಯಾವಾಯಾಮ, ಮಿಥ್ಯಾಸ್ಮೃತಿ, ಮಿಥ್ಯಾಸಮಾಧಿ, ಮಿಥ್ಯಾಜ್ಞಾನ, ಮಿಥ್ಯಾವಿಮುಕ್ತಿ.

“ಹಾನಿಯನ್ನುಂಟುಮಾಡುವ ಹತ್ತರ ಧರ್ಮಗಳು ಯಾವುವು? ಹತ್ತು ಅಕುಶಲ ಕರ್ಮ ಪಥಗಳು. ಪ್ರಾಣಿಹಿಂಸೆ ಮಾಡುವುದು, ತನಗೆ ಸೇರದುದನ್ನು ತೆಗೆದುಕೊಳ್ಳುವುದು. ನಿಂದನೀಯವಾದ ಲೈಂಗಿಕ ಸಂಬಂಧವನ್ನಿಟ್ಟು ಕೊಂಡಿರುವುದು, ಸುಳ್ಳು ಹೇಳುವುದು, ಚಾಡಿ ಹೇಳುವುದು; ಕಠಿಣ ಮಾತುಗಳನ್ನು ಆಡುವುದು, ಕಾಡುಹರಟೆಯಲ್ಲಿ ತೊಡಗುವುದು, ಕಾಮಗಳಿಂದ ಕೂಡಿರುವುದು, ವೈರಭಾವನೆಯಿಂದ ಕೂಡಿರುವುದು, ಮಿಥ್ಯಾದೃಷ್ಟಿ - ಇವು ಹತ್ತು ಅಕುಶಲ ಕರ್ಮ ಪಥಗಳು.

“ವಿಶೇಷತೆಯನ್ನು ಕೊಡುವ ಧರ್ಮಗಳು ಯಾವುವು? ಹತ್ತು ಕುಶಲ ಪಥಗಳು- ಪ್ರಾಣಿಹಿಂಸೆಯನ್ನು ತೊರೆದಿರುವುದು, ನೀಡದುದನ್ನು ತೆಗೆದುಕೊಳ್ಳದಿರುವುದು, ನಿಂದ್ಯವಾದ ಲೈಂಗಿಕ ಸಂಬಂಧವನ್ನು ಇಟ್ಟುಕೊಳ್ಳದಿರುವುದು, ಸುಳ್ಳು ಹೇಳದಿರುವುದು, ಚಾಡಿ ಹೇಳದಿರುವುದು, ಕಠಿಣವಾದ ಮಾತನ್ನಾಡದಿರುವುದು, ಕಾಡುಹರಟೆಯಲ್ಲಿ ತೊಡಗದಿರುವುದು, ಕಾಮಗಳನ್ನು ತೊರೆದಿರುವುದು, ವೈರಭಾವನೆ ಇಲ್ಲದಿರುವುದು, ಸಮ್ಯಕ್ ದೃಷ್ಟಿಯಿರುವುದು. ಇವು ವಿಶೇಷತೆಯನ್ನು ಕೊಡುವ ಹತ್ತು ಧರ್ಮಗಳು.

“ಆರಿಯಲು ಕಷ್ಟವಾದ ಹತ್ತರ ದರ್ಮಗಳು ಯಾವುವು? ಹತ್ತು ಆರ್ಯ ನಿವಾಸಗಳು. ಭಿಕ್ಷುವು ಐದನ್ನು ತೊರೆದಿರುತ್ತಾನೆ. ಆರನ್ನು ಪಡೆದಿರುತ್ತಾನೆ. ಒಂದನ್ನು ರಕ್ಷಣೆಯನ್ನಾಗಿ ಮಾಡಿಕೊಳ್ಳುತ್ತಾನೆ, ನಾಲ್ಕನ್ನು ನೋಡುತ್ತಿರುತ್ತಾನೆ. ಕೆಲವರು ಮಾತ್ರ ಒಪ್ಪುವ ನಂಬಿಕೆಗಳನ್ನು ಬಿಟ್ಟಿರುತ್ತಾನೆ. ಹಂಬಲಗಳನ್ನು ಬಿಟ್ಟಿರುತ್ತಾನೆ. ಅವನ ಸಂಕಲ್ಪಗಳು ಶುದ್ಧವಾಗಿರುತ್ತದೆ. ಅವನ ಕಾಯವು ಶಾಂತವಾಗಿರುತ್ತದೆ. ಅವನು ಚೇತೋವಿಮುಕ್ತನೂ ಪಞ್ಞಾ ವಿಮುಕ್ತನೂ ಆಗಿರುತ್ತಾನೆ.

“ಭಿಕ್ಷುವು ತೊರೆಯುವ ಐದು ಯಾವುದು? ಕಾಮಗಳನ್ನು ತೊರೆದಿರುತ್ತಾನೆ, ವೈರಭಾವನೆಯನ್ನು ತೊರೆದಿರುತ್ತಾನೆ, ಆಲಸಿಕೆ ಜಡತೆಗಳನ್ನು ತೊರೆದಿರುತ್ತಾನೆ, ಚಿಂತೆ ಕಳವಳಗಳನ್ನು ತೊರೆದಿರುತ್ತಾನೆ, ಸಂದೇಹಗಳನ್ನು ತೊರೆದಿರುತ್ತಾನೆ, ಭಿಕ್ಷುವು ತೊರೆದಿರುವ ಐದು ಇವು.

“ಭಿಕ್ಷುವು ಪಡೆದಿರುವ ಆರು ಯಾವುವು? ಭಿಕ್ಷುವು ಕಣ್ಣಿನಿಂದ ರೂಪವನ್ನು ನೋಡಿ ಸಂತೋಷವನ್ನಾಗಲೀ ನಿರಾಶೆಯನ್ನಾಗಲೀ ಹೊಂದದೆ ಉಪೇಕ್ಷಾ ಭಾವನೆಯಿಂದ ಕೂಡಿದ್ದು, ಸ್ಮೃತಿವಂತನಾಗಿರುತ್ತಾನೆ. ಕಿವಿಯಿಂದ ಶಬ್ದವನ್ನು ಕೇಳಿ... ಮೂಗಿನಿಂದ ವಾಸನೆಯನ್ನು ತಿಳಿದು... ನಾಲಿಗೆಯಿಂದ ರಸವನ್ನು ತಿಳಿದು... ಕಾಯದಿಂದ ಸ್ಪರ್ಶವನ್ನು ಅನುಭವಿಸಿ... ಮನಸ್ಸಿನಿಂದ ಧರ್ಮವನ್ನು ತಿಳಿದು ಸಂತೋಷವನ್ನಾಗಲೀ, ನಿರಶೆಯನ್ನಾಗಲೀ ಪಡೆಯದೆ, ಉಪೇಕ್ಷಾ ಭಾವನೆಯಿಂದ ಕೂಡಿದ್ದು, ಸ್ಮೃತಿವಂತನಾಗಿರುತ್ತಾನೆ. ಇವು ಭಿಕ್ಷುವು ಪಡೆದಿರುವ ಆರು.

“ಭಿಕ್ಷುವು ರಕ್ಷಣೆಯನ್ನಾಗಿ ಮಾಡಿಕೊಳ್ಳುವ ಒಂದು ಯಾವುದು? ಮನಸ್ಸನ್ನು ರಕ್ಷಿಸುವ ಸ್ಮೃತಿ.

“ಭಿಕ್ಷು ನೋಡುತ್ತಿರುವ ನಾಲ್ಕು ಯಾವುವು? ನಿರಂತರವಾಗಿ ಅರಸಬೇಕಾಗಿರುವಂಥದು, ನಿರಂತರವಾಗಿ ಸಹಿಸಿಕೊಳ್ಳಬೇಕಾದುದು, ಯಾವಾಗಲೂ ವರ್ಜಿಸುತ್ತಿರಬೇಕಾದುದು, ಸದಾ ದಮಿಸುತ್ತಿರಬೇಕಾದುದು.

“ಭಿಕ್ಷುವು ನೋಡುತ್ತಿರುವ ನಾಲ್ಕು ಯಾವುವು? ನಿರಂತರವಾಗಿ ಅರಸಬೇಕಾಗಿರುವಂಥದು, ನಿರಂತರವಾಗಿ ಸಹಿಸಿಕೊಳ್ಳಬೇಕಾದುದು, ಯಾವಾಗಲೂ ವರ್ಜಿಸುತ್ತಿರಬೇಕಾದುದು, ಸದಾ ದಮಿಸುತ್ತಿರಬೇಕಾದುದು.

“ಭಿಕ್ಷುವು ಬಿಡಬೇಕಾದ ನಂಬಿಕೆಗಳು ಯಾವುವು? ಸಾಮಾನ್ಯರಾದ ಸಮಣ ಬ್ರಾಹ್ಮಣರಲ್ಲಿರುವ ಎಲ್ಲ ವೈಯಕ್ತಿಕ ನಂಬಿಕೆಗಳು. ಅವನ್ನು ಭಿಕ್ಷುವು ತೊರೆದಿರುತ್ತಾನೆ, ದೂರ ಮಾಡಿರುತ್ತಾನೆ. ಅವುಗಳಿಂದ ಮುಕ್ತನಾಗಿರುತ್ತಾನೆ, ಅವನ್ನು ವರ್ಜಿಸಿರುತ್ತಾನೆ, ಬಿಟ್ಟಿರುತ್ತಾನೆ.

“ಭಿಕ್ಷುವು ಬಿಟ್ಟಿರುವ ಹಂಬಲಗಳು ಯಾವುವು? ಕಾಮಗಳ ಹಂಬಲವನ್ನು ಬಿಟ್ಟಿರುತ್ತಾನೆ, ವೈರಗಳಲ್ಲಿ ತೊಡಗುವ, ಹಿಂಸೆಯಲ್ಲಿ ತೊಡಗುವ ಹಂಬಲವನ್ನು ತೊರೆದಿರುತ್ತಾನೆ.

“ಭಿಕ್ಷುವಿನ ಶುದ್ಧವಾದ ಸಂಕಲ್ಪಗಳು ಯಾವುವು? ಕಾಮಸಂಕಲ್ಪವನ್ನೂ, ವೈರವನ್ನು ಸಾಧಿಸಬೇಕೆಂಬ ಸಂಕಲ್ಪವನ್ನೂ, ಹಿಂಸಿಸಬೇಕೆಂಬ ಸಂಕಲ್ಪವನ್ನೂ ಅವನು ತೊರೆದಿರುತ್ತಾನೆ. ಹೀಗೆ ತೊರೆದಾಗ ಅವನಲ್ಲಿರುವ ಸಂಕಲ್ಪಗಳು ಶುದ್ಧವಗಿರುತ್ತವೆ.

“ಭಿಕ್ಷುವಿನ ಕಾಯವು ಶಾಂತವಾಗುವುದು ಹೇಗೆ? ಭಿಕ್ಷುವು ಸುಖ ದುಃಖಗಳೆರಡನ್ನೂ ತೊರೆದು ಹಿಂದಿದ್ದ ಸೋಮನಸ್ಸಿನ ಮತ್ತು ದೋಮನಸ್ಸಿನ ಭಾವನೆಗಳನ್ನು ನಾಶ ಮಾಡಿಕೊಂಡು ಅದುಃಖ ಅಸುಖ ಸ್ಥಿತಿಯಲ್ಲಿರುವ ಉಪೇಕ್ಷಾ ಭಾವನೆಯಿಂದ ಕೂಡಿದ್ದ ಪರಿಶುದ್ಧವಾದ ಮನಸ್ಸನ್ನು ಪಡೆದು ಚತುರ್ಥ ಧ್ಯಾನದಲ್ಲಿ ತೊಡಗುತ್ತಾನೆ.

“ಭಿಕ್ಷುವು ಚೇತೋ ವಿಮುಕ್ತನಾಗುವುದು ಹೇಗೆ? ರಾಗದಿಂದ ಮುಕ್ತನಾಗಿರುತ್ತಾನೆ, ದ್ವೇಷದಿಂದ ಮುಕ್ತನಾಗಿರುತ್ತಾನೆ, ಮೋಹದಿಂದ ಮುಕ್ತನಾಗಿರುತ್ತಾನೆ.

“ಭಿಕ್ಷುವು ಪಞ್ಞಾ ವಿಮುಕ್ತನಾಗುವುದು ಹೇಗೆ? ಭಿಕ್ಷುವು ‘ನನ್ನ ರಾಗವನ್ನು ನಿರ್ಮೂಲ ಮಾಡಿದ್ದೇನೆ. ಅದು ತಾಲವೃಕ್ಷದ ಮೇಟಿನಂತೆ ಆಗಿದೆ. ಅದು ಅಸ್ತಿತ್ವದಲ್ಲಿಯೇ ಇಲ್ಲ. ಅದು ಮುಂದೆ ಬೆಳೆಯಲಾರದು’ ಎಂಬುದನ್ನು ತಿಳಿದಿರುತ್ತಾನೆ. ‘ದ್ವೇಷವನ್ನು ನಿರ್ಮೂಲ ಮಾಡಿದ್ದೇನೆ... ಮೋಹನ್ನು ನಿರ್ಮೂಲ ಮಾಡಿದ್ದೇನೆ... ಅದು ಮುಂದೆ ಬೆಳೆಯಲಾರದು’ ಎಂಬುದನ್ನು ತಿಳಿದಿರುತ್ತಾನೆ. ಹೀಗೆ ಅವನು ಪಞ್ಞಾ ವಿಮುಕ್ತನಾಗಿರುತ್ತಾನೆ. ಇವು ಅರಿಯಲು ಕಷ್ಟವಾದ ಹತ್ತು ಧರ್ಮಗಳು.

“ಮೇಲಕ್ಕೆ ತರಬೇಕಾದ ಹತ್ತರ ಧರ್ಮಗಳು ಯಾವುವು? ಅಶುಭದ ಅರಿವು, ಮರಣದ ಅರಿವು (ಇಂದ್ರಿಯಗಳು ಮತ್ತು ಮನಸ್ಸು ಬಯಸುವ) ಅಹಾರದ ಅರಿವು. ವಿವಿಧ ಲೋಕಗಳಲ್ಲಿರುವ ವಿಷಯಗಳ ಬಗೆಗೆ ಜುಗುಪ್ಸೆ, ಅನಿಚ್ಚದ ಅರಿವು, ಅನಿಚ್ಚವನ್ನು ಅವಲಂಬಿಸಿರುವ ದುಃಖದ ಅರಿವು, ಅನತ್ತದಿಂದಿರುವ ದುಃಖದ ಅರಿವು, ವರ್ಜಿಸಬೇಕಾದುದರ ಅರಿವು, ವೈರಾಗ್ಯದ ಅರಿವು ಮತ್ತು ನಿರೋಧದ ಅರಿವು.

“ಸ್ಪಷ್ಟವಾಗಿ ಅರಿಯಬೇಕಾದ ಹತ್ತರ ಧರ್ಮಗಳು ಯಾವುವು? ಕ್ಷಯಕ್ಕಿರುವ ಮತ್ತು ಹತ್ತು ಕಾರಣಗಳು; ಸಮ್ಯಕ್‍ದೃಷ್ಟಿ ಮಿಥ್ಯಾದೃಷ್ಟಿಗಳೆರಡೂ ಜೀರ್ಣವಾಗುತ್ತವೆ ಎಂಬುದು, ಮಿಥ್ಯಾದೃಷ್ಟಿಯಿಂದ ಅನೇಕ ಅಕುಶಲ ಪಾಪ ಭಾವನೆಗಳು ಹುಟ್ಟಿ ಜೀರ್ಣವಾಗುತ್ತವೆ ಎಂಬುದು ಸಮ್ಯಕ್ ಸಂಕಲ್ಪ, ಮಿಥ್ಯಾ ಸಂಕಲ್ಪ... ಸಮ್ಯಕ್ ವಾಚ ಮತ್ತು ಮಿಥ್ಯಾವಚನ... ಸಮ್ಯಕ್ ಕರ್ಮ ಮತ್ತು ಮಿಥ್ಯಾ ಕರ್ಮಗಳು... ಸಮ್ಯಕ್ ಜೀವನ ಮತ್ತು ಮಿಥ್ಯಾ ಜೀವನ... ಸಮ್ಯಕ್ ವಾಯಾಮ ಮತ್ತು ಮಿಥ್ಯಾ ವಾಯಾಯ, ಸಮ್ಯಕ್ ಸ್ಮೃತಿ ಮತ್ತು ಮಿಥ್ಯಾ ಸ್ಮೃತಿ... ಸಮ್ಯಕ್ ಜ್ಞಾನ... ಸಮ್ಯಕ್ ವಿಮುಕ್ತಿ ಮತ್ತು ಮಿಥ್ಯಾ ವಿಮುಕ್ತಿಗಳೆರಡು ಜೀರ್ಣವಾಗುತ್ತವೆ. ಮಿಥ್ಯಾ ವಿಮುಕ್ತಿಯಿಂದ ಅನೇಕ ಅಕುಶಲ ಭಾವನೆಗಳು ಹುಟ್ಟುತ್ತವೆ, ಜೀರ್ಣವಾಗುತ್ತವೆ.

“ಸಾಕ್ಷಾತ್ಕರಿಸಿಕೊಳ್ಳಬೇಕಾದ ಹತ್ತರ ಧರ್ಮಗಳು ಯಾವುವು? ಅಸೇಕ್ಖನಾದವನ ಹತ್ತು ಧರ್ಮಗಳು- ಅಸೇಕ್ಖನ ಸಮ್ಯಕ್ ದೃಷ್ಟಿ, ಅಸೇಕ್ಖನ ಸಮ್ಯಕ್ ಸಂಕಲ್ಪ, ಅವನ ಸಮ್ಯಕ್ ವಚನ, ಅವನ ಸಮ್ಯಕ್ ಕರ್ಮ, ಅವನ ಸಮ್ಯಕ್ ಜೀವನ, ಅವನ ಸಮ್ಯಕ್ ವ್ಯಾಯಾಮ, ಅಸೇಕ್ಖನ ಸಮ್ಯಕ್ ಸ್ಮೃತಿ, ಅಸೇಕ್ಖನ ಸಮ್ಯಕ್ ಸಮಧಿ, ಅಸೇಕ್ಖನ ಸಮ್ಯಕ್ ಜ್ಞಾನ, ಅಸೇಕ್ಖನ ಸಮ್ಯಕ್ ವಿಮುಕ್ತಿ. ಸಾಕ್ಷಾತ್ಕರಿಸಿಕೊಳ್ಳಬೇಕಾದ ಹತ್ತು ಧರ್ಮಗಳು ಇವು.

“ಈ ನೂರು ಧರ್ಮಗಳು ವಾಸ್ತವವಾಗಿರುವಂಥವು, ಸತ್ಯವಾಗಿರುವಂಥವು. ಇವು ಬೇರೆ ರೀತಿಯಲ್ಲಿರಲು ಸಾಧ್ಯವಿಲ್ಲ. ಇದನ್ನು ತಥಾಗತರು ಸ್ಪಷ್ಟವಾಗಿ ಅರಿತಿದ್ದಾರೆ.”

ಆಯುಷ್ಮಂತನಾದ ಸಾರಿಪುತ್ತನು ಇದನ್ನು ಹೇಳಿದನು. ಅವನು ಹೇಳಿದ ಮಾತುಗಳಿಂದ ಆ ಭಿಕ್ಷುಗಳು ಸಂತೋಷಗೊಂಡರು, ಆನಂದಗೊಂಡರು.

ಇಲ್ಲಿಗೆ ದಸುತ್ತರ ಸುತ್ತ ಮುಗಿಯಿತು.

ಪಾಥಿಕ ವರ್ಗ ಮುಗಿಯಿತು.

ಟಿಪ್ಪಣಿಗಳು [2]