ಊಟಿಸುತ್ತಿದೆ

ಅನುವಾದಗಳು [25]

ಕೂಟದಂತ ಸುತ್ತ

ಖಾಣುಮತ ಗ್ರಾಮದ ಗೃಹಸ್ಥ ಬ್ರಾಹ್ಮಣ

ಹೀಗೆ ಕೇಳಿದ್ದೇನೆ: ಒಮ್ಮೆ ಭಗವಾನರು ಮಗಧದಲ್ಲಿ ಸಂಚರಿಸುತ್ತಿದ್ದಾಗ ಬ್ರಾಹ್ಮಣರು ವಾಸಿಸುತ್ತಿದ್ದ ಖಾಣುಮತ ಎಂಬ ಗ್ರಾಮಕ್ಕೆ ಐನೂರು ಭಿಕ್ಷುಗಳ ದೊಡ್ಡ ಭಿಕ್ಷು ಸಮೂಹದೊಂದಿಗೆ ಬಂದರು. ಆ ಗ್ರಾಮದಲ್ಲಿನ ಅಂಬಲಟ್ಠಿಕ ವನದಲ್ಲಿ ತಂಗಿದರು. ಆ ಸಮಯದಲ್ಲಿ ಕೂಟದಂತ ಎಂಬ ಬ್ರಾಹ್ಮಣನು ಜನರಿಂದಲೂ, ಹುಲ್ಲುಗಾವಲುಗಳಿಂದಲೂ ವನಗಳಿಂದಲೂ ಜಲ ಧಾನ್ಯ ಗಳಿಂದಲೂ ಸಮೃದ್ಧವಾಗಿದ್ದ ಆ ಖಾಣುಮತ ಗ್ರಾಮದಲ್ಲಿ ವಾಸಿಸುತ್ತಿದ್ದನು. ರಾಜನ ವೆಚ್ಚಕ್ಕೋಸ್ಕರ ಇದ್ದ ಆ ಗ್ರಾಮವು ಮಗಧದ ರಾಜ ಸೇನಿಯ ಬಿಂಬಸಾರನಿಂದ ದಾನವಾಗಿ ಕೊಡಲ್ಪಟ್ಟಿತ್ತು. ಕೂಟದಂತನು ಆ ಗ್ರಾಮದ ಮೇಲೆ ರಾಜನ ಎಲ್ಲಾ ಅಧಿಕಾರವನ್ನೂ ಹೊಂದಿದ್ದನು. ಆಗ ಕೂಟದಂತ ಬ್ರಾಹ್ಮಣನಿಗಾಗಿ ಒಂದು ಮಹಾಯಜ್ಞವು ಸಿದ್ಧವಾಗುತ್ತಿತ್ತು. ಆ ಯಜ್ಞಕ್ಕಾಗಿ ನೂರು ಹೋರಿಗಳನ್ನೂ, ನೂರು ಎತ್ತುಗಳನ್ನೂ, ನೂರು ಕಡಸುಗಳನ್ನೂ ನೂರು ಆಡುಗಳನ್ನೂ ನೂರು ಟಗರುಗಳನ್ನೂ ಯೂಪದ (ಬಲಿಪೀಠದ ಸ್ತಂಭ) ಹತ್ತಿರಕ್ಕೆ ತರಲಾಗಿತ್ತು.

ಖಾಣುಮತದಲ್ಲಿನ ಬ್ರಾಹ್ಮಣರ ಗ್ರಹಪತಿಗಳು ಈ ಸುದ್ದಿಯನ್ನು ಕೇಳಿದರು-“ಶಾಕ್ಯಕುಲವನ್ನು ತೊರೆದಿರುವ ಶಾಕ್ಯಪುತ್ರರಾದ ಸಮಣ ಗೋತಮರು ಮಗಧ ದೇಶದಲ್ಲಿ ಸಂಚರಿಸುತ್ತಾ ಐನೂರು ಭಿಕ್ಷುಗಳ ಒಂದು ದೊಡ್ಡ ಭಿಕ್ಷು ಸಂಘದೊಂದಿಗೆ ಖಾಣುಮತ ಎಂಬ ಗ್ರಾಮಕ್ಕೆ ಬಂದು ಅಂಬಲಟ್ಠಿಕ ವನದಲ್ಲಿ ತಂಗಿದ್ದಾರೆ. ಭಗವಂತರಾದ ಅವರು ಅರಹಂತರು, ಸಮ್ಮಾ ಸಂಬುದ್ಧರು ವಿಜ್ಜಾಚರಣ ಸಂಪನ್ನರು, ಸುಗತರು, ಲೋಕಗಳನ್ನೆಲ್ಲಾ ತಿಳಿದವರು, ಜನರಿಗೆ ದಾರಿ ತೋರಿಸುವವರಲ್ಲಿ ಅದ್ವಿತೀಯವರು, ದೇವ ಮಾನವರಲ್ಲಿ ಶ್ರೇಷ್ಠರು, ಬುದ್ಧ ಭಗವಾನರು, ದೇವತೆಗಳು, ಮಾರರೊ ಬ್ರಾಹ್ಮಣರು, ಸಮಣ ಬ್ರಾಹ್ಮಣರು, ಪ್ರಜೆಗಳು, ದೇವಮನುಷ್ಯರು ಇರುವ ಲೋಕವನ್ನು ಸ್ಪಷ್ಟವಾಗಿ ಅರಿತು ಪರರಿಗೂ ತಿಳಿಸಬಲ್ಲರಾಗಿದ್ದಾರೆ. ಆಧಿಯಲ್ಲೂ, ಮಧ್ಯದಲ್ಲೂ, ಕೊನೆಯಲ್ಲೂ ಕಲ್ಯಾಣವನ್ನುಂಟು ಮಾಡುವಂಥದೂ, ಪರಿಪೂರ್ಣವಾದದೂ, ಪರಿಶುದ್ದವಾದ ಬ್ರಹ್ಮಚರ್ಯವನ್ನು ಪ್ರಕಾಶಪಡಿಸುವಂಥದೂ ಆದ ಧಮ್ಮವನ್ನು ಭೋದಿಸುತ್ತಾರೆ. ಅರಹಂತರಾದ ಅವರನ್ನು ದರ್ಶನ ಮಾಡುವುದು”

ಖಾಣುಮತದ ಆ ಬ್ರಾಹ್ಮಣ ಗೃಹಪತಿಗಳು ತಮ್ಮ ಗ್ರಾಮದಿಂದ ಗುಂಪು ಗುಂಪಾಗಿ ಅಂಬಲಟ್ಠಿಕ ವನಕ್ಕೆ ಹೊರಟರು.

ಮಧ್ಯಾಹ್ನದ ಊಟವಾದ ಮೇಲೆ ಕೂಟದಂತ ಬ್ರಾಹ್ಮಣನು ತನ್ನ ಉಪ್ಪರಿಗೆಯಲ್ಲಿ ವಿಶ್ರಮಿಸಿಕೊಳ್ಳುತ್ತಿದ್ದನು. ಖಾಣುಮತದ ಬ್ರಾಹ್ಮಣ ಗೃಹಸ್ಥರು ಗುಂಪು ಗುಂಪಾಗಿ ಊರಿನಿಂದ ಅಂಬಲಟ್ಠಿಕದ ಕಡೆ ಹೊರಟಿರುವುದನ್ನು ನೋಡಿದನು. ತನ್ನ ಸೇವಕನನ್ನು ಕರೆದು, “ಖಾಣುಮತದ ಬ್ರಾಹ್ಮಣ ಗೃಹಸ್ಥರು ಗುಂಪು ಗುಂಪಾಗಿ ಊರಿನಿಂದ ಅಂಬಲಟ್ಠಿಕದ ಕಡೆ ಹೊರಟಿರುವುದೇತಕ್ಕೆ ಕೇಳಿ ತಿಳಿದುಕೋ” ಎಂದು ಹೇಳಿದನು.

“ಶಾಕ್ಯಕುಲವನ್ನು ತೊರೆದಿರುವ ಶಾಕ್ಯ ಪುತ್ರರಾದ ಸಮಣ ಗೌತಮರು ಮಗಧದ ದೇಶದಲ್ಲಿ ಸಂಚರಿಸುತ್ತಾ ಐನೂರು ಭಿಕ್ಷುಗಳನ್ನೊಳಗೊಂಡ ಒಂದು ದೊಡ್ಡ ಭಿಕ್ಷು ಸಂಘದೊಂದಿಗೆ ಖಾಣುಮತ ಗ್ರಾಮಕ್ಕೆ ಬಂದು ಅಲ್ಲಿನ ಅಂಬಲಟ್ಠಿ ವನದಲ್ಲಿ ತಂಗಿದ್ದಾರೆ. ಭಗವಂತರಾದ ಗೋತಮರು ಎಲ್ಲೆಲ್ಲೂ ಹೀಗೆ ಒಳ್ಳೆಯ ಕೀರ್ತಿಯನ್ನು ಪಡೆದಿದ್ದಾರೆ. ‘ಭಗವಂತರಾದ ಅವರು ಅರಹಂತರು, ಸಮ್ಮಾ ಸಂಬುದ್ಧರು, ವಿಜ್ಞಾ ಚರಣ ಸಂಪನ್ನರು, ಸುಗತರು ಲೋಕಗಳನ್ನೆಲಾ ತಿಳಿದವರು, ಜನರಿಗೆ ದಾರಿ ತೋರಿಸುವವರಲ್ಲಿ ಅದ್ವಿತೀಯರಾದವರು, ದೇವಮಾನವರಲ್ಲಿ ಶ್ರೇಷ್ಠರು, ಬುದ್ದರು, ಭಗವಾನರು’ ಇಂಥ ಭಗವಂತ ಗೋತಮರ ದರ್ಶನಕ್ಕಾಗಿ ಹೋಗುತ್ತಿದ್ದಾರೆ.

ಆಗ ಕೂಟದಂತ ಬ್ರಾಹ್ಮಣನು ಹೀಗೆಂದುಕೊಂಡನು-‘ಸಮಣ ಗೋತಮರಿಗೆ ಯಜ್ಞದ ಮೂರು ವಿಧಗಳು ಅದಕ್ಕೆ ಬೇಕಾದ ಹದಿನಾರು ಪರಿಕರಿಗಳು ಗೊತ್ತು ಎಂದು ಕೇಳಿದ್ದೇನೆ. ಆದರೆ ನನಗೆ ಯಜ್ಞ ಮಾಡುವುದರ ಮೂರು ವಿಧಗಳು, ಅದರ ಹದಿನಾರು ಪರಿಕರಿಗಳು ತಿಳಿಯದು. ಆದರೂ ಮಹಾ ಯಜ್ಞವೊಂದನ್ನು ನಡೆಸಬೇಕೆಂದು ಅಂದುಕೊಂಡಿದ್ದೇನೆ. ಸಮಣ ಗೋತಮರಲ್ಲಿಗೆ ಹೋಗಿ ಯಜ್ಞ ಮಾಡುವುದರ ಮೂರು ವಿಧಾನಗಳನ್ನು ಅದಕ್ಕೆ ಬೇಕಾದ ಹದಿನಾರು ಪರಿಕರಿಗಳನ್ನು ಕೇಳುವುದು ಸರಿ.’

ತನ್ನ ಸೇವಕನನ್ನು ಕರೆದು ಅವನಿಗೆ ಕೂಟದಂತ ಬ್ರಾಹ್ಮಣನು ‘ನೋಡು, ಖಾಣುಮತ ಬ್ರಾಹ್ಮಣ ಗೃಹಸ್ಥರಲ್ಲಿಗೆ ಹೋಗು. ಹೋಗಿ ಅವರಿಗೆ ‘ಪೂಜ್ಯರು ಸ್ವಲ್ಪ ಕಾಯಬೇಕು, ಕೂಟದಂತ ಬ್ರಾಹ್ಮಣನ ಸಮಣ ಗೋತಮರ ದರ್ಶನಕ್ಕೆ ಬರುತ್ತಾನೆ.’ ಎಂದು ಕೂಟದಂತನು ಹೇಳಿ ಕಳುಹಿಸಿದ್ದಾನೆ ಎಂಬುದಾಗಿ ಅಪ್ಪಣೆ ಮಾಡಿದನು. “ಹಾಗೇಯೆ ಆಗಲಿ” ಎಂದು ಕೂಟದಂತಹ ಬ್ರಾಹ್ಮಣನಿಗೆ ಹೇಳಿ ಆ ಸೇವಕನು ಬ್ರಾಹ್ಮಣ ಗೃಹಸ್ಥರಲ್ಲಿಗೆ ಹೋದನು. ಹೋಗಿ ‘ಖಾಣುಮತದ ಬ್ರಾಹ್ಮಣರಿಗೆ ಕೂಟದಂತ ಬ್ರಾಹ್ಮಣನು ನಿಮಗೆ ಹೀಗೆ ಹೇಳಿ ಕಳುಹಿಸಿದ್ದಾನೆ- ಪೂಜ್ಯರು ಸ್ವಲ್ಪ ಕಾಯಬೇಕು, ಕೂಟದಂತ ಬ್ರಾಹ್ಮಣನು ಸಮಣ ಗೋತಮರ ದರ್ಶನಕ್ಕೆ ಬರುತ್ತಾನೆ!’ ಎಂದು ಹೇಳಿದನು.

ಕೂಟದಂತನ ಗುಣಗಳ ಬಗ್ಗೆ

ಆಗ ಕೂಟದಂತನ ಮಹಾ ಯಜ್ಞದಲ್ಲಿ ಭಾಗವಹಿಸಲು ನೂರಾರು ಬ್ರಾಹ್ಮಣರು ಹೊರಗಿನಿಂದ ಬಂದು ಖಾನುಮತದಲ್ಲಿ ಉಳಿದುಕೊಂಡಿದ್ದರು-ಕೂಟದಂತ ಬ್ರಾಹ್ಮಣನು ಗೋತಮರನ್ನು ನೋಡಲು ಹೋಗುವುದನ್ನು ಅವರು ಕೇಳಿದರು. ಅವರು ಅವನಲ್ಲಿಗೆ ಹೋಗಿ ಪೂಜ್ಯನಾದ ಕೂಟದಂತನು ಗೋತಮನ ದರ್ಶನಾರ್ಥವಾಗಿ ಹೋಗಬೇಕೆಂದಿರುವುದು ನಿಜವೇ?’ ಎಂದು ಕೇಳಿದರು.

“ಹೌದು, ಸಮಣ ಗೋತಮರ ದರ್ಶನಕ್ಕಾಗಿ ನಾನು ಹೋಗುತ್ತಿದ್ದೇನೆ”.

“ಕೂಟದಂತನು ಸಮಣ ಗೋತಮರ ದರ್ಶನಕ್ಕೆ ಹೋಗಬಾರದು ಹಾಗೇ ಮಾಡುವುದು ಕೂಟದಂತ ಬ್ರಾಹ್ಮಣನಿಗೆ ತಕ್ಕುದಲ್ಲ. ಅವನು ಸಮಣ ಗೋತಮನ ದರ್ಶನಕ್ಕೆ ಹೋದರೆ ಕೂಟದಂತನ ಯಶಸ್ಸು ಹಾಳಾಗುತ್ತದೆ. ಸಮಣ ಗೋತಮನ ಯಶಸ್ಸು ಬಹುವಾಗಿ ಬೆಳೆಯುತ್ತದೆ. ಕೂಟದಂತನ ಯಶಸ್ಸು ಹಾಳಾಗಿ ಸಮಣ ಗೋತಮನ ಯಶಸ್ಸು ಬಹುವಾಗಿ ಬೆಳೆಯುವುದರಿಂದ ಕೂಟದಂತನು ಸಮಣ ಗೋತಮನನ್ನು ನೋಡಲು ಹೋಗುವುದು ತಕ್ಕುದಲ್ಲ ಎಂದು ನಾವು ಹೇಳುವುದಕ್ಕೆ ಕಾರಣ. ಸಮಣ ಗೋತಮನೇ ಕೂಟದಂತನ ದರ್ಶನಕ್ಕೆ ಬರುವುದು ಸರಿಯಾದುದು.

“ಕೂಟದಂತನು ತಂದೆ ತಾಯಿಗಳೆರಡೂ ಕಡೆಗಳಿಂದಲೂ ಒಳ್ಳೆಯ ವಂಶದವನಾಗಿದ್ದಾನೆ. ಏಳು ತಲೆಮಾರುಗಳಿಂದಲೂ ಶುದ್ಧವಾದ ಯಾವ ಕಳಂಕವೂ ಇಲ್ಲದ ಕೆಟ್ಟ ಹೆಸರೂ ಇಲ್ಲದ ವಂಶದಲ್ಲಿ ಹುಟ್ಟಿದ್ದಾನೆ. ತಂದೆ ತಾಯಿಗಳೆರಡು ಕಡೆಗಳಿಂದಲೂ ಒಳ್ಳೆಯದಾಗಿರುವ ಏಳು ತಲೆಮಾರುಗಳಿಂದಲೂ ಶುದ್ಧವಾದ ಕಳಂಕರಹಿತವಾದ ಕೆಟ್ಟ ಹೆಸರಿಲ್ಲದ ವಂಶದಲ್ಲಿ ಹುಟ್ಟಿರುವ ಕೂಟದಂತನು ಸಮಣ ಗೋತಮನ ದರ್ಶನಕ್ಕೆ ಹೋಗುವುದು ತಕ್ಕುದಲ್ಲ. ಸಮಣ ಗೋತಮನು ಕೂಟದಂತನ ದರ್ಶನಕ್ಕೆ ಬರುವುದು ಸರಿಯಾದುದು.

“ತುಂಬ ಉಚ್ಚ್ರಾಯ ಹೊಂದುತ್ತಿರುವ ಮಹಾಧನಿಕನೂ ಮಹಾ ಭೋಗಿಯೂ ಆಗಿರುವ ಕೂಟದಂತನು... ಮಂತ್ರಗಳನ್ನು ಪಠಿಸುವವನೂ, ಮಂತ್ರಗಳನ್ನು ತಿಳಿದವನೂ, ಮೂರು ವೇದಗಳಲ್ಲಿ ಅಕ್ಷರಗಳಲ್ಲಿ ಅಲ್ಪವಾದ ಭೇದವಾದರೂ ಅದನ್ನು ತಿಳಿಯಬಲ್ಲವನೂ, ಐದನೆಯ ಇತಿಹಾಸವನ್ನೂ ತಿಳಿದವನೂ, ಪದಗಳನ್ನು ಸರಿಯಾಗಿ ಬಳಸಬಲ್ಲವನೂ ವೆಯ್ಯಾಕರಣಿಯೂ, ಲೋಕಾಯತ ಮಹಾಪುರುಷರ ಲಕ್ಷಣಗಳನ್ನು ತಿಳಿದಿರುವವನೂ ಆಗಿರುವ ಕೂಟದಂತನು.. ರೂಪವಂತನೂ ನೋಡಿದಾಗ ಸಂತೋಷವನ್ನುಂಟುಮಾಡುವವನೂ, ವಿಶ್ವಾಸವನ್ನುಂಟುಮಾಡುವವನೂ ಉತ್ಕೃಷ್ಠವಾದ ಬಣ್ಣವನ್ನು ಹೊಂದಿರುವವನೂ ಬ್ರಹ್ಮವರ್ಣವನ್ನು ಪಡೆದಿರುವವನೂ, ಬ್ರಹ್ಮವರ್ಚಸ್ಸನ್ನು ಹೊಂದಿರುವವನೂ ನೋಡಲು ಗಂಭೀರವಂತನೂ ಆಗಿರುವ ಕೂಟದಂತನೂ.. ಶೀಲವಂತನೂ ಶೀಲವನ್ನು ವೃದ್ಧಿಸಿಕೊಳ್ಳುತ್ತಿರುವವನೂ ಶೀಲವನ್ನು ವೃದ್ಧಿಸಿ ಕೊಳ್ಳುವ ಜ್ಞಾನವನ್ನು ಪಡೆದಿರುವವನೂ ಆಗಿರುವ ಕೂಟದಂತನೂ.. ಕಲ್ಯಾಣವಾದುದನ್ನು ಹೇಳುವವನೂ ಕಲ್ಯಾಣವಾದ ಮಾತುಗಳನ್ನು ಹಿತವಾಗುವಂತೆ ಹೇಳುವವನೂ ಹೇಳಬೇಕಾದುದನ್ನು ಸ್ಪಷ್ಟವಾಗಿ ಹೇಳಬಲ್ಲವನೂ , ತೊದಲು ಮಾತನಾಡದವನೂ, ಹೇಳ ಬೇಕಾದ ವಿಷಯದ ಅರ್ಥವನ್ನು ಸ್ಪಷ್ಟಪಡಿಸಬಲ್ಲವನೂ, ಆಗಿರುವ ಕೂಟದಂತನು.. ಬಹು ಜನರಿಗೆ ಆಚಾರ್ಯ ಪ್ರಾಚಾರ್ಯನಾಗಿರುವವನೂ ಮುನ್ನೂರು ಯುವಕರಿಗೆ ಮಂತ್ರಗಳನ್ನು ಹೇಳುವುದನ್ನು ಬೋಧಿಸಿದವನೂ ಮಂತ್ರಗಳನ್ನು ಅವುಗಳ ಅರ್ಥವನ್ನೂ ತಿಳಿಯಲು ನಾನಾ ಕಡೆಗಳಿಂದ ನಾನಾ ಜನಪದಗಳಿಂದ ಬ್ರಾಹಣರು ಹುಡುಕಿಕೊಂಡು ಬರುವಷ್ಟು ಪ್ರಸಿದ್ಧನಾದವನೂ ಆದ ಕೂಟದಂತನು.. ವಯಸ್ಸಾದವನೂ, ವೃದ್ಧನೂ ಬಹಳ ವರ್ಷಗಳನ್ನು ಕಳೆದವನೂ ತುಂಬ ಕಾಲದಿಂದ ಇರುವವನೂ, ಬಹಳ ದಿನಗಳನ್ನು ನೋಡಿದವನೂ ಆಗಿರುವ ಕೂಟದಂತನು ತರುಣನೂ ತರುಣ ಪಬ್ಬಜಿತನೂ ಆಗಿರುವ ಸಮಣನ ದರ್ಶನಕ್ಕಾಗಿ ಹೋಗುವುದು ತಕ್ಕದಲ್ಲ. ಸಮಣ ಗೋತಮನು ಕೂಟದಂತನ ದರ್ಶನಕ್ಕೆ ಹೋಗುವುದು ಸರಿಯಾದುದು. ಮಗಧದ ರಾಜ ಬಿಂಬಸಾರನಿಂದ ಸತ್ಕಾರವನ್ನು ಗೌರವವನ್ನು ಮಾನ್ಯತೆಯನ್ನು ಪಡೆದಿರುವವನೂ ಅವನಿಂದ ಪೂಜಿಸಿಕೊಳ್ಳುವವನೂ, ಅವನಿಂದ ನಮಸ್ಕಾರ ಮಾಡಿಸಿಕೊಳ್ಳುವವನೂ ಆದ ಕೂಟದಂತನು.. ಬ್ರಾಹ್ಮಣ ಪೋಕ್ಖರಸಾತಿಯಿಂದ ಗೌರವವನ್ನು ಮಾನ್ಯತೆಯನ್ನು ಪಡೆದಿರುವ, ಅವನಿಂದ ಪೂಜಿಸಿಕೊಳ್ಳುತ್ತಿರುವ ಅವನಿಂದ ನಮಸ್ಕಾರ ಮಾಡಿಸಿಕೊಳ್ಳುತ್ತಿರುವ ಕೂಟದಂತನು.. ಜನ ಜಲ ಧ್ಯಾನ್ಯಗಳಿಂದಲೂ, ಹುಲ್ಲುಗಾವಲುಗಳಿಂದಲೂ, ಮರಗಿಡಗಳಿಂದಲೂ ತುಂಬಿರುವ ರಾಜನ ವೆಚ್ಚಕೋಸ್ಕರವೇ ಇರುವ ಖಾಣುಮತ ಗ್ರಾಮವನ್ನು ಮಗಧದ ರಾಜ ಸೆನಿಯ ಬಿಂಬಸಾರನಿಂದ ದಾನವಾಗಿ ಪಡೆದು ಅಲ್ಲಿಯೇ ವಾಸವಾಗಿದ್ದು ಅದರ ಮೇಲೆ ರಾಜನಷ್ಟೇ ಅದಿಕಾರವುಳ್ಳವನಾಗಿರುವ ಕೂಟದಂತನು ಗೋತಮನ ದರ್ಶನಕ್ಕೆ ಹೋಗುವುದು ಸರಿಯಲ್ಲ. ಸಮಣನಾದ ಗೋತಮನು ಕೂಟದಂತನ ದರ್ಶನಕ್ಕೆ ಬರುವುದು ಸರಿಯಾದುದು.”

ಬುದ್ಧರ ಗುಣಗಳ ಬಗ್ಗೆ

ಹೀಗೆ ಹೇಳಿದ ಬ್ರಾಹ್ಮಣರಿಗೆ ಕೂಟದಂತನು ಕೊಟ್ಟ ಉತ್ತರವು ಹೀಗಿದ್ದಿತು: “ನಾನು ಹೇಳುವುದನ್ನು ಕೇಳಿ ಸಮಣ ಗೋತಮರ ದರ್ಶನಕ್ಕೆ ನಾನೇ ಹೋಗುವುದೇ ಉಚಿತವಾದುದು; ಗೋತಮರು ನಮ್ಮ ದರ್ಶನಕ್ಕೆ ನಮ್ಮ ಹತ್ತಿರಕ್ಕೆ ಬರುವುದು ಸರಿಯಲ್ಲ. ಸಮಣ ಗೋತಮರು ತಂದೆ ತಾಯಿಗಳೆರಡು ಕಡೆಗಳಿಂದಲೂ ಒಳ್ಳೆಯ ವಂಶಕ್ಕೆ ಸೇರಿದವರು. ಏಳು ತಲೆಮಾರುಗಳಿಂದಲೂ ಶುದ್ಧರಾಗಿರುವ ಕಳಂಕರಿಹಿತವಾದ ಯಾವ ಕೆಟ್ಟ ಹೆಸರೂ ಇಲ್ಲದ ವಂಶದಲ್ಲಿಯೇ ಹುಟ್ಟಿದ್ದಾರೆ. ತಂದೆ ತಾಯಿಗಳೆರಡು ಕಡೆಗಳಿಂದಲೂ ಒಳ್ಳೆಯ ವಂಶಕ್ಕೆ ಸೇರಿದ, ಏಳು ತಲೆಮಾರುಗಳಿಂದಲೂ ಶುದ್ಧವಾದ ಕಳಂಕರಹಿತವಾದ, ಯಾವ ಕೆಟ್ಟ ಹೆಸರು ಇಲ್ಲದವರ ಉದರಲ್ಲಿ ಹುಟ್ಟಿರುವ ಸಮಣ ಗೋತಮರು ನಮ್ಮ ದರ್ಶನಕ್ಕೆ ಬರುವುದು ಸರಿಯಲ್ಲ; ನಾನೇ ಭಗವಂತ ಗೋತಮರ ದರ್ಶನಕ್ಕೆ ಹೋಗುವುದು ಸರಿಯಾದುದು.”

“ದೊಡ್ಡದಾದ ಬಂಧು ವರ್ಗವನ್ನು ತೊರೆದು ಪಬ್ಬಜಿತರಾದ ಸಮಣ ಗೋತಮರು.... ಭೂಮಿಯಲ್ಲಿ ಮತ್ತು ಭಂಡಾರದಲ್ಲಿ ಇರುವ ಚಿನ್ನವನ್ನು ಹಣವನ್ನು ತೊರೆದು ಪಬ್ಬಜಿತರಾದ ಸಮಣ ಗೋತಮರು.... ತಂದೆ ತಾಯಿಗಳು ಅಶ್ರುಮುಖರಾಗಿ ಅಳುತ್ತಿರುವಾಗ ಕೂದಲು ಗಡ್ಡಗಳನ್ನು ತೆಗೆದು, ಕಾಷಾಯ ವಸ್ತ್ರವನ್ನು ಧರಿಸಿಕೊಂಡು ಮನೆಯನ್ನು ತೊರೆದು ಪಬ್ಬಜಿತರಾದ ಸಮಣ ಗೋತಮರು.... ರೂಪವಂತರೂ, ನೋಡುವಾಗ ಸಂತೋಷವನ್ನುಂಟು ಮಾಡುವವರೂ, ಉತ್ಕೃಷ್ಠವಾದ ಬಣ್ಣವನ್ನು ಹೊಂದಿರುವವನೂ, ಬ್ರಹ್ಮನ ವರ್ಣವನ್ನು ಪಡೆದಿರುವವರೂ, ಬ್ರಹ್ಮನವರ್ಚಸ್ಸುಳ್ಳವರೂ, ನೋಡಲು ಗಂಭೀರವಂತರೂ ಆಗಿರುವ ಸಮಣ ಗೋತಮರು.... ಶೀಲವಂತರೂ ಶೀಲವನ್ನು ವೃದ್ಧಿಸಿಕೊಳ್ಳುತ್ತಿರುವವರೂ ಶೀಲವನ್ನು ವೃದ್ಧಿಸುವ ಜ್ಞಾನವನ್ನು ಪಡೆದಿರುವವರೂ ಆಗಿರುವ ಸಮಣ ಗೋತಮರು.... ಕಲ್ಯಾಣವಾದುದನ್ನು ಹೇಳುವವರೂ ಕಲ್ಯಾಣವಾದ ಮಾತುಗಳನ್ನು ಹಿತವಾಗುವಂತೆ ಹೇಳುವವರೂ ಹೇಳಬೇಕಾದುದನ್ನು ಸ್ಪಷ್ಟವಾಗಿ ಹೇಳವವರೂ, ತೊದಲು ಮಾತನಾಡದವರೂ, ಹೇಳಬೇಕಾದ ವಿಷಯದ ಅರ್ಥವನ್ನು ಸ್ಪಷ್ಟಪಡಿಸಬಲ್ಲವರೂ, ಆಗಿರುವ ಸಮಣ ಗೋತಮರು.... ಬಹು ಜನರಿಗೆ ಆಚಾರ್ಯ ಪ್ರಾಚಾರ್ಯ ಆಗಿರುವ ಸಮಣ ಗೋತಮರು.... ಕರ್ಮವಾದಿಗಳೂ, ಕ್ರಿಯಾವಾದಿಗಳೂ, ಬ್ರಾಹ್ಮಣರಿಗೆ ಮತ್ತು ಪ್ರಜೆಗಳಿಗೆ ನಿಷ್ಪಾಪವಾಗಿರುವುದನ್ನು ಹೇಳುವವರೂ ಆಗಿರುವ ಸಮಣ ಗೋತಮರು.... ಉಚ್ಚಕುಲದ ಪ್ರಾಚೀನ ಕ್ಷತ್ರಿಯ ಕುಲವನ್ನು ತೊರೆದಿರುವ ಸಮಣ ಗೋತಮರು.... ಏಳ್ಗೆ ಹೊಂದುತ್ತಿರುವುದೂ, ಮಹಾಧನವುಳ್ಳದ್ದೂ ಮಹಾ ಭೋಗವನ್ನು ಅನುಭಿಸುತ್ತಿರುವುದೂ ಆದ ಕುಲವನ್ನೇ ತೊರೆದಿರುವ ಸಮಣ ಗೋತಮರು.... ಸಂದೇಹಗಳನ್ನು ಪರಿಹರಿಸಿಕೊಳ್ಳಲು ಮೂಲೆ ಮೂಲೆಗಳಲ್ಲಿರುವ ರಾಷ್ಟ್ರಗಳಿಂದಲೂ ಜನಪದಗಳಿಂದಲೂ ಜನರು ಹುಡುಕಿಕೊಂಡು ಬರುವಷ್ಟು ಪ್ರಖ್ಯಾತರೂ ಆಗಿರುವ ಸಮಣ ಗೋತಮರು.... ಅನೇಕ ದೇವತೆಗಳೂ, ಸಹಸ್ರಾರು ಜೀವಿಗಳೂ, ಯಾರನ್ನು ಶರಣು ಹೋಗುತ್ತಾರೋ ಆ ಸಮಣ ಗೋತಮರು.... ಎಲ್ಲೆಲ್ಲಿಯೂ ಅರಹಂತರು, ಸಮ್ಮಾಸಂಬುದ್ಧರು, ವಿಜ್ಜಾಚರಣ ಸಂಪನ್ನರು, ಸುಗತರು, ಲೋಕಗಳನ್ನೆಲ್ಲಾ ತಿಳಿದವರು, ಜನರಿಗೆ ದಾರಿ ತೋರಿಸುವವರಲ್ಲಿ ಅದ್ವೀತಿಯರು, ದೇವ ಮಾನವರಲ್ಲಿ ಶ್ರೇಷ್ಠರು, ಬುದ್ಧರು ಭಗವಾನರು ಎಂಬ ಒಳ್ಳೆಯ ಕೀರ್ತಿಯನ್ನು ಪಡೆದಿರುವ ಸಮಣ ಗೋತಮರು.... ಮೂವತ್ತೆರಡು ಮಹಾ ಪುರಷ ಲಕ್ಷಣಗಳನ್ನು ಹೊಂದಿರುವ ಸಮಣ ಗೋತಮರು.... ಎಲ್ಲರನ್ನು ಸ್ವಾಗತಿಸುವವರೂ, ಎಲ್ಲರಿಗೂ ಹೊಂದಿಕೊಳ್ಳು ವಂಥವರೂ, ಎಲ್ಲರನ್ನೂ ಸಮಾಧಾನಗೊಳಿಸಬಲ್ಲವರೂ, ಪ್ರತಿಷ್ಠೆಯನ್ನು ಬಿಟ್ಟವರೂ ಉದಾತ್ತವಾದುದರ ಕಡೆ ಗಮನವಿಡುವವರೂ, ನೇರವಾಗಿ ಹೇಳುವವರೂ ಆಗಿರುವ ಸಮಣ ಗೋತಮರು.... ನಾಲ್ಕು ಬಗೆಯ ಜನರಿಂದ ಗೌರವವನ್ನೂ, ಮಾನತ್ಯತೆಯನ್ನು ಪಡೆದವರೂ, ನಾಲ್ಕು ಬಗೆಯ ಜನರಿಂದಲೂ ಪೂಜೆಗೊಳ್ಳುವವರೂ ಆಗಿರುವ ಸಮಣ ಗೋತಮರು.. ಬಹುದೇವತೆಗಳಿಗೂ, ಮನುಷ್ಯರಿಗೂ ವಿಶ್ವಾಸನೀಯರಾಗಿರುವ ಸಮಣ ಗೋತಮರು.... ಯಾರು ವಾಸಿಸುವ ಗ್ರಾಮ ಪಟ್ಟಣಗಳಲ್ಲಿ ಮನುಷ್ಯರಿಂದ ಮನುಷ್ಯರಿಗೆ ಬಾಧೆಯಾಗುವುದಿಲ್ಲವೋ ಅಂಥ ಸಮಣ ಗೋತಮರು.... (ಅನೇಕ) ಸಂಘಗಳಿಗೂ, ಗಣಗಳಿಗೂ ಗಣಾಚಾರ್ಯರಿಗೂ ಬೇರೆ ಬೇರೆ ವಾದಗಳಿಗೆ ಪ್ರಥಮರಾದವರಲ್ಲಿ ಅಗ್ರಗಣ್ಯರೂ ಆಗಿರುವ ಸಮಣ ಗೋತಮರು.... ಹೇಗೆ ಹೇಗೋ ಯಶಸ್ಸನ್ನು ಗಳಿಸಿಕೊಂಡ ಸಮಣ ಬ್ರಾಹ್ಮಣರಂತಲ್ಲದೆ ಅನುತ್ತರವಾದ ವಿಜ್ಜಾ ಚರಣಸಂಪನ್ನತೆಯಿಂದ ಯಶಸ್ಸನ್ನು ಗಳಿಸಿರುವ ಸಮಣಗೋತಮರು.... ಹೆಂಡತಿಯರು ಮಕ್ಕಳು ಪ್ರಜೆಗಳು ಮಂತ್ರಿಗಳೊಂದಿಗೆ ಸೇನೆಯ ಬಿಂಬಸಾರನು ಯಾರನ್ನು ಶರಣು ಹೋಗುವನೋ ಆ ಸಮಣ ಗೋತಮರು.... ಪತ್ನಿಯರು, ಪುತ್ರರು, ಪ್ರಜೆಗಳು ಮತ್ತು ಮಂತ್ರಿಗಳಿಂದ ಕೂಡಿದ ಕೋಸಲದ ರಾಜ ಪಸೇನದಿಯು ಯಾರನ್ನು ಶರಣು ಹೋಗುವನೋ ಆ ಸಮಣ ಗೋತಮರು ಪತ್ನಿಯರು ಪುತ್ರರು ಪರಿವಾರದವರು ಮತ್ತು ಗೆಳೆಯರೊಂದಿಗೆ ಪೋಕ್ಖರಸಾತಿ ಬ್ರಾಹ್ಮಣನು ಯಾರನ್ನು ಶರಣು ಹೋಗುವನೋ ಆ ಸಮಣ ಗೋತಮರು.... ಮಗಧದ ರಾಜ ಸೇನಿಯ ಬಿಂಬಸಾರನ ಸತ್ಕಾರವನ್ನೂ, ಗೌರವವನ್ನೂ, ಮಾನ್ಯತೆಯನ್ನೂ ಪಡೆದು ಅವನಿಂದ ಪೂಜಿಸಿಕೊಂಡು ನಮಸ್ಕಾರ ಮಾಡಿಸಿಕೊಳ್ಳುವ ಸಮಣ ಗೋತಮರು.. ಕೋಸಲದ ರಾಜ ಪಸೇನದಿಯಿಂದ ಗೌರವವನ್ನು, ಸತ್ಕಾರವನ್ನೂ ಮಾನ್ಯತೆಯನ್ನು ಪಡೆದು ಅವನಿಂದ ಪೂಜಿಸಿಕೊಂಡು, ನಮಸ್ಕಾರ ಮಾಡಿಸಿಕೊಳ್ಳುವ ಸಮಣಗೋತಮರು ಬ್ರಾಹ್ಮಣನಾದ ಪೋಕ್ಖರಸಾತಿಯಿಂದ ಗೌರವವನ್ನೂ ಮಾನ್ಯತೆಯನ್ನೂ ಪಡೆದು ಅವನಿಂದ ಪೂಜಿಸಿಕೊಂಡು, ನಮಸ್ಕಾರ ಮಾಡಿಸಿಕೊಳ್ಳುವ ಸಮಣ ಗೋತಮರು... ಇಂತ ಸಮಣ ಗೋತಮರು ಅಂಬಲಟ್ಟಿಕ ವನದಲ್ಲಿ ತಂಗಿದ್ದಾರೆ. ಯಾವ ಸಮಣ ಬ್ರಾಹ್ಮಣರೇ ನಮ್ಮ ಗ್ರಾಮ ಕ್ಷೇತ್ರಕ್ಕೆ ಬರಲಿ, ಅವರು ನಮ್ಮ ಅತಿಥಿಗಳು; ಅತಿಥಿಗಳನ್ನು ನಾವು ಸತ್ಕರಿಸಬೇಕು ಮತ್ತು ಗೌರವಿಸಬೇಕು; ಅವರಿಗೆ ಮಾನ್ಯತೆ ಮಾಡಬೇಕು, ಪೂಜಿಸಬೇಕು, ಮತ್ತು ನಮಸ್ಕರಿಸಬೇಕು. ಸಮಣ ಗೋತಮರು ಖಾಣುಮತ ಗ್ರಾಮಕ್ಕೆ ಬಂದು ಅದರಲ್ಲಿನ ಅಂಬಲಟ್ಠಿಕ ವನದಲ್ಲಿ ವಿಹರಿಸುತ್ತಿರುವುದರಿಂದ ಅವರು ನಮ್ಮ ಅತಿಥಿಗಳೇ ಆಗಿದ್ದಾರೆ; ಇಂಥ ಅತಿಥಿಗಳನ್ನು ನಾವು ಸತ್ಕರಿಸಿ, ಗೌರವಿಸಿ ಮಾನ್ಯತೆ ಮಾಡಿ, ಪೂಜಿಸಿ ಗೌರವಿಸಬೇಕು. ಈ ಕಾರಣಗಳಿಂದ ಗೋತಮರು ನಮ್ಮನ್ನು ನೋಡುವುದಕ್ಕೆ ಬರುವುದು ಸರಿಯಲ್ಲ. ನಾವೇ ಅವರ ದರ್ಶನಕ್ಕೆ ಹೋಗುವುದು ಸರಿಯಾದುದು. ಇಲ್ಲಿಯವರೆಗೆ ಹೇಳಲಾಗಿರುವುದು ಅವರ ಕೆಲವು ಸದ್ಗುಣಗಳನ್ನು ಮಾತ್ರ. ಗೋತಮರ ಸದ್ಗುಣಗಳು ಅಷ್ಟು ಮಾತ್ರವೇ ಅಲ್ಲ, ಅವರ ಸದ್ಗುಣಗಳು ಅಳತೆಗೆ ಮೀರಿದವು.

ಆ ಬ್ರಾಹ್ಮಣರು ಕೂಟದಂತನ ಉತ್ತರವನ್ನು ಕೇಳಿದೆ ಮೇಲೆ “ಕೂಟದಂತ ಬ್ರಾಹ್ಮಣನು ಸಮಣ ಗೋತಮರನ್ನು ಇಷ್ಟು ಬಗೆಯಲ್ಲಿ ವರ್ಣಿಸಿದ್ದಾನೆ. ಇಂಥ ಗೋತಮರು ನೂರು ಯೋಜನದಷ್ಟು ದೂರದಲ್ಲಿ ವಾಸಿಸುತ್ತಿದ್ದರೂ ಶ್ರದ್ಧೆಯುಳ್ಳವರು ಅವರ ದರ್ಶನಕ್ಕೆ ಬುತ್ತಿಯನ್ನು ಕಟ್ಟಿಕೊಂಡಾದರೊ ಹೋಗಬೇಕು.

“ಹಾಗಾದರೆ, ಎಲ್ಲರೂ ಸಮಣಗೋತಮರ ದರ್ಶನಕ್ಕೆ ಹೋಗೋಣ.”

ರಾಜ ಮಹಾವಿಜೇತನ ಯಜ್ಞದ ಬಗ್ಗೆ

ಆಮೇಲೆ ಕೂಟದಂತನು ದೊಡ್ಡ ಬ್ರಾಹ್ಮಣ ಸಮೂಹದೊಂದಿಗೆ ಅಂಬಲಟ್ಠಕಕ್ಕೆ ಹೋದನು. ಭಗವಾನರಲ್ಲಿಗೆ ಬಂದನು. ಅವರ ಸನಿಹಕ್ಕೆ ಬಂದು ಉಚಿತವಾದ ರೀತಿಯಲ್ಲಿ ಅವರಿಗೆ ಗೌರವ ತೋರಿಸಿ ಒಂದುಕಡೆ ಕುಳಿತನು. ಹಾಗೆಯೇ ಖಾಣುಮತದ ಬ್ರಾಹ್ಮಣ ಗೃಹಸ್ಥರಲ್ಲಿ ಕೆಲವರು ಭಗವಾನರಿಗೆ ಅಭಿವಂದಿಸಿ ಒಂದು ಕಡೆ ಕುಳಿತುಕೊಂಡರು; ಮತ್ತೆ ಕೆಲವರು ಭಗವಾನರಿಗೆ ಯಾವ ರೀತಿ ಮರ್ಯಾದೆ ತೋರಿಸಬೇಕೋ ಹಾಗೇ ಮರ್ಯಾದೆಯನ್ನು ಮಾಡಿ ಒಂದು ಕಡೆ ಕುಳಿತುಕೊಂಡರು; ಇನ್ನೂ ಕೆಲವರು ಭವವಂತರಿಗೆ ಅಂಜಲೀಬದ್ದರಾಗಿ ಪ್ರಣಾಮ ಮಾಡಿ ಮತ್ತೊಂದು ಕಡೆ ಕುಳಿತುಕೊಂಡರು. ಮತ್ತೆ ಕೆಲವರು ತಮ್ಮ ಗೋತ್ರದ ಹೆಸರನ್ನೂ ತಮ್ಮ ಹೆಸರನ್ನೂ ಹೇಳಿ ಒಂದು ಕಡೆ ಕುಳಿತುಕೊಂಡರು. ಉಳಿದವರು ಮೌನವಾಗಿ ಕುಳಿತುಕೊಂಡರು.

ಆಗ ಕೂಟದಂತನು ಭಗವಾನರನ್ನು ಕುರಿತು “ಸಮಣ ಗೋತಮರಿಗೆ ಯಜ್ಞದ ಮೂರು ವಿಧಗಳೂ ಅದಕ್ಕೆ ಬೇಕಾದ ಹದಿನಾರು ಪರಿಕರಗಳೂ ಗೊತ್ತು, ಎಂದು ಕೇಳಿದ್ದೇನೆ. ನನಗೆ ಅವಾವುದೂ ತಿಳಿಯದು. ಆದರೂ ಮಹಾಯಜ್ಞವೊಂದನ್ನು ಮಾಡಬೇಕೆಂದು ಇಚ್ಚಿಸಿದ್ದೇನೆ. ಗೋತಮರು ಅವುಗಳನ್ನು ತಿಳಿಸಬೇಕು” ಎಂದು ಕೇಳಿಕೊಂಡನು.

“ಆಗಲಿ, ಬ್ರಾಹ್ಮಣ ನಾನು ವಿರಿಸುತ್ತೇನೆ. ಮನಸ್ಟಿಟ್ಟು ಕೇಳು”

“ಆಗಬಹುದು” ಎಂದು ಕೂಟದಂತನು ಉತ್ತರವಿತ್ತನು.

ಆಗ ಭಗವಾನರು ಹೀಗೆ ಹೇಳಿದರು: “ಬ್ರಾಹ್ಮಣ, ಹಿಂದೆ ಮಹಾವಿಜೇತ ಎಂಬ ರಾಜನಿದ್ದನು. ಅವನು ಶೂರನೂ, ಮಹಾಧನವುಳ್ಳವನೂ, ಅಪಾರವಾದ ಸಂಪತ್ತುಳ್ಳವನೂ, ಬೇಕಾದಷ್ಟು ಚಿನ್ನ ಬೆಳ್ಳಿಗಳನ್ನೂ, ಸಾಕಷ್ಟು ಒಡವೆ ವಸ್ತುಗಳನ್ನೂ ಹೊಂದಿದ್ದವನು ಆಗಿದ್ದನು. ಧನ ಧಾನ್ಯಗಳಿಂದ ಅವನ ಭಂಡಾರವೂ ಕಣಜಗಳು ತುಂಬಿದ್ದುವು. ರಾಜ ಮಹಾ ವಿಜೇತನು ಒಮ್ಮೆ ತಾನೊಬ್ಬನೇ ಕುಳಿತು ವಿಚಾರ ಮಾಡುತ್ತಿದ್ದಾಗ ಅವನ ಚಿತ್ತದಲ್ಲಿ ಒಂದು ಭಾವನೆ ಉದಯಿಸಿತು: ‘ಮನುಷ್ಯ ಬಯಸಬಹುದಾದ ಸಂಪತ್ತು ನನಗೆ ವಿಫುಲವಾಗಿದೆ. ಪೃಥ್ವೀ ಮಂಡಲದ ಬಹುಭಾಗವನ್ನು ಜಯಿಸಿ ನನ್ನದನ್ನಾಗಿ ಮಾಡಿಕೊಂಡಿದ್ದೇನೆ. ಒಂದು ಮಹಾಯಜ್ಞವನ್ನು ಮಾಡುವುದರಿಂದ ನನಗೆ ಬಹುಕಾಲ ಸುಖ ಮತ್ತು ಹಿತ ದೊರಕುತ್ತವೆ!’

“ಬ್ರಾಹ್ಮಣ ಆಗ ರಾಜ ಮಹಾ ವಿಜೇತನು ತನ್ನ ಪುರೋಹಿತನಾದ ಬ್ರಾಹ್ಮಣವನನ್ನು ಕರೆಸಿ ‘ ನಾನು ಒಬ್ಬನೇ ಕುಳಿತು ವಿಚಾರ ಮಾಡುತ್ತಿದ್ದಾಗ ಮನುಷ್ಯರು ಬಯಸುವ ಸಂಪತ್ತನ್ನು ವಿಫುಲವಾಗಿ ಹೊಂದಿರುವ, ಪೃಥ್ವೀಮಂಡಲದ ಬಹುಭಾಗವನ್ನು ಜಯಿಸಿ ವಶಪಡಿಸಿಕೊಂಡಿರುವ ನಾನು ಮಹಾ ಯಜ್ಞವನ್ನು ಮಾಡಿ ಬಹುಕಾಲ ಹಿತ ಮತ್ತು ಸುಖವನ್ನು ಪಡೆಯಬೇಕೆಂಬ ಭಾವನೆ ನನ್ನ ಚಿತ್ತದಲ್ಲಿ ಉದಯಿಸಿತು ಮತ್ತು ಮಹಾ ಯಜ್ಞವನ್ನು ಮಾಡಬೇಕೆಂದಿದ್ದೇನೆ. ದೀರ್ಘಕಾಲ ನನಗೆ ಹಿತ ಮತ್ತು ಸುಖಗಳನ್ನುಂಟುಮಾಡಬಹುದಾದ ಮಹಾಯಜ್ಞವನ್ನು ಮಾಡುವ ಬಗೆಯನ್ನು ತಿಳಿಸಿ.’ ಎಂದು ಕೇಳಿಕೊಂಡನು.

“ ಹೀಗೆ ಕೇಳಿಕೊಂಡ ರಾಜ ವಹಾವಿಜೇತನಿಗೆ ಪುರೋಹಿತ ಬ್ರಾಹ್ಮಣನು ‘ರಾಜನ ಜನಪದದಲ್ಲಿ ಸುಲಿಗೆ ಪೀಡನೆಗಳಾಗುತ್ತಿವೆ. ಗ್ರಾಮದಲ್ಲಿಯೂ, ಪಟ್ಟಣಗಳಲ್ಲಿಯೂ, ನಗರಗಳಲ್ಲಿಯೂ, ಹೆದ್ದಾರಿಗಳಲ್ಲಿಯೂ ಕೊಳ್ಳೆ ಹೊಡೆಯುವವರೂ ಸೇರಿಕೊಂಡಿದ್ದಾರೆ. ಹೀಗಿರುವಾಗ ರಾಜನು ಸುಲಿಗೆ ಪೀಡನೆಗಳಿಗೆ ಗುರಿಯಾದ ಜನರ ಮೇಲೆ ಕರವನ್ನು ಹಾಕಿದರೆ ಅಂಥ ರಾಜನು ಅಕೃತ್ಯವನ್ನು ಮಾಡಿದಂತಾಗುತ್ತದೆ. ಹಾಗಲ್ಲದೆ ರಾಜನಾದವನು, ‘ಕೊಳ್ಳೆಗಾರರ ಕೂಟವನ್ನು ವಧಿಸಿ, ಬಂಧಿಸಿ, ಅಥವಾ ಅವರನ್ನು ಜನರಿಂದ ಮನೆಗಳಿಂದ ಜನ ಸಮೂಹದಿಂದ ದೂರ ಮಾಡಿ ಅವರನ್ನು ಮುಗಿಸಿ ಬಿಡುತ್ತೇನೆ’ ಎಂದುಕೊಂಡರೆ ಅದು ಸಾಧ್ಯವಾಗದು. ಆ ಕಳ್ಳರಲ್ಲಿ ಹತರಾಗದೆ ಉಳಿದುಕೊಂಡವರು ರಾಜ್ಯದ ಬೇರೆ ಜನಪದಗಳನ್ನು ಪೀಡಿಸುತ್ತಾರೆ. ಪಶುಪಾಲನೆ ಮಾಡುವ ಜನರಿಗೆ ಕಾಳುಕಡ್ಡಿಗಳನ್ನು ಒದಗಿಸುವ, ವ್ಯಾಪಾರ ಮಾಡುವ ಜನರಿಗೆ ಬಂಡವಾಳವನ್ನು ಒದಗಿಸುವ, ರಾಜನ ಮತ್ತು ರಾಜ್ಯದ ಸೇವೆಯಲ್ಲಿ ತೊಡಗಬೇಕೆನ್ನುವವರಿಗೆ ಭತ್ಯೆ ವೇತನಗಳನ್ನೊದಗಿಸುವ, ಮಾರ್ಗದಿಂದ ಮಾತ್ರ ಕಳ್ಳರುಗಳ ಹಾವಳಿಯನ್ನು ತಪ್ಪಿಸಬಹುದು. ಆಗ ಆ ಜನರು ತಮ್ಮ ತಮ್ಮ ವೃತ್ತಿಗಳಲ್ಲಿ ನಿರತರಾಗಿ ರಾಜ್ಯದ ಜನರನ್ನು ಪೀಡಿಸುವುದಿಲ್ಲ. ಅದರಿಂದ ರಾಜನ ಆದಾಯವು ಹೆಚ್ಚುತ್ತದೆ. ಜನಪದವು ಸುಲಿಗೆ, ಪೀಡನೆಗಳಿಂದ ದೂರವಾಗಿ ಕ್ಷೇಮದಿಂದಿರುತ್ತಾರೆ. ಮನುಷ್ಯರು ಮುದದಿಂದ ತಮ್ಮ ಮಕ್ಕಳನ್ನು ಎತ್ತಿಕೊಂಡು ಆಡಿಸುವಂತಾಗುತ್ತದೆ. ಬಾಗಿಲನ್ನು ಹಾಕದೆಯೇ ಜನರು ಮನೆಯಲ್ಲಿ ವಾಸಿಸುವಷ್ಟು ಭದ್ರತೆ ಬರುತ್ತದೆ” ಎಂದನು. ‘ಹಾಗೆಯೇ ಆಗಲಿ’ ಎಂದು ರಾಜ ಮಹಾವಿಜೇತನು ಬ್ರಾಹ್ಮಣನಿಗೆ ಹೇಳಿದನು. ಪುರೋಹಿತ ಬ್ರಾಹ್ಮಣನ ಮಾತಿನಂತೆ ಆ ರಾಜನು ಪಶುಪಾಲನೆ ಮಾಡುವ ಜನರಿಗೆ ಕಾಳು ಕಡ್ಡಿಗಳನ್ನು ಒದಗಿಸಿದನು. ವ್ಯಾಪಾರ ಮಾಡುವ ಜನರಿಗೆ ಬಂಡವಾಳವನ್ನು ಒದಗಿಸಿದನು. ರಾಜನ ಮತ್ತು ರಾಜ್ಯದ ಸೇವೆಗಳಲ್ಲಿ ತೊಡಗುವವರಿಗೆ ಭತ್ಯೆ-ವೇತನಗಳು ದೊರೆಯುವಂತೆ ಮಾಡಿದನು. ಆಗ ಪ್ರಜೆಗಳು ತಮ್ಮ ತಮ್ಮ ವೃತ್ತಿಗಳಲ್ಲಿ ನಿರತರಾಗಿ ಬೇರೆ ಯಾರನ್ನು ಪೀಡಿಸುತ್ತಿರಲಿಲ್ಲ. ರಾಜನ ಆದಾಯವು ಹೆಚ್ಚಿತು. ಜನರು ಸುಲಿಗೆ ಪೀಡನೆಗಳಿಂದ ದೂರವಾಗಿ ಕ್ಷೇಮದಿಂದಿದ್ದರು. ಮನುಷ್ಯರು ಮುದದಿಂದ ಮಕ್ಕಳನ್ನು ಎತ್ತಿಕೊಂಡು ಆಡಿಸುವಂತಾಯಿತು. ಬಾಗಿಲನ್ನು ಹಾಕದೆ ಮನೆಯಲ್ಲಿರುವಂತಾಯಿತು. ಆಗ ಮಹಾವಿಜೇತನು ತನ್ನ ಪುರೋಹಿತ ಬ್ರಾಹ್ಮಣನನ್ನು ಕರೆಸಿ “ಕಳ್ಳರುಗಳ ಪೀಡನೆ ನಿಂತುಹೋಗಿದೆ. ಆದಾಯವು ಹೆಚ್ಚಿದೆ. ಜನರು ಕೊಳ್ಳೆ ಪೀಡನೆಗಳಿಂದ ದೂರವಾಗಿ ಕ್ಷೇಮದಿಂದಿದ್ದಾರೆ. ಪ್ರಜೆಗಳು ಸಂತೋಷದಿಂದ ತಮ್ಮ ಮಕ್ಕಳನ್ನು ಎತ್ತಿಕೊಂಡು ಆಡಿಸುವಂತಾಗಿದೆ. ಜನರು ಬಾಗಿಲನ್ನು ಹಾಕದೆಯೇ ಮನೆಯಲ್ಲಿರುವಂತಾಗಿದೆ. ಮಹಾಯಜ್ಞ ವನ್ನು ಮಾಡಬೇಕು ಎನಿಸುತ್ತಿದೆ. ನನಗೆ ದೀರ್ಘಕಾಲ ಹಿತ ಮತ್ತು ಸುಖಗಳು ದೊರೆಯುವಂಥ ಯಜ್ಞ ಮಾಡುವುದನ್ನು ತಿಳಿಸಿ’ ಎಂದು ಕೇಳಿಕೊಂಡನು.

ನಾಲ್ಕು ಪರಿಕರಗಳು

“ಹಾಗಾದರೆ; ರಾಜನು ಜನಪದಗಳಲ್ಲಿನ ಮತ್ತು ಪಟ್ಟಣಗಳಲ್ಲಿನ ಕ್ಷತ್ರಿಯರಿಗೂ ಸಾಮಂತರನ್ನು ದೀರ್ಘಕಾಲ ನನ್ನ ಹಿತ ಮತ್ತು ಸುಖ ದೊರಕಿಸುವ ಮಹಾಯಜ್ಞವನ್ನು ಮಾಡುತ್ತಿದ್ದೇನೆ. ಅನುಜ್ಞೆಯಾಗಬೇಕು ಎಂದು ಅಮಂತ್ರಿಸಲಿ. ರಾಜ್ಯದಲ್ಲಿನ ಪಟ್ಟಣಗಳ ಮತ್ತು ಗ್ರಾಮಗಳಲ್ಲಿನ ಅಮಾತ್ಯರನ್ನೂ ರಾಜ ಸೇವಕರನ್ನೂ.. ಆಮಂತ್ರಿಸಲಿ.. ಪಟ್ಟಣಗಳಲ್ಲಿನ ಮತ್ತು ಗ್ರಾಮಗಳಲ್ಲಿನ ಪಂಡಿತರಾದ ಬ್ರಾಹ್ಮಣರನ್ನೂ.. ಪಟ್ಟಣಗಳಲ್ಲಿನ ಮತ್ತು ಜನಪದಗಳಲ್ಲಿನ ಗೃಹಪತಿಗಳನ್ನೂ ದೀರ್ಘಕಾಲ ನನಗೆ ಹಿತ ಮತ್ತು ಸುಖ ದೊರಕಿಸುವ ಮಹಾಯಜ್ಞವನ್ನು ಮಾಡುತ್ತಿದ್ದೇನೆ, ಅನುಜ್ಞೆಯಾಗಬೇಕು ಎಂದು ಆಮಂತ್ರಿಸಲಿ.’ ‘ಹಾಗೆಯೇ ಆಗಲಿ ಎಂದು ರಾಜ ಮಹಾವಿಜೇತನು ಆ ಪುರೋಹಿತ ಬ್ರಾಹ್ಮಣನಿಗೆ ತಿಳಿಸಿದನು ಮತ್ತು ಪಟ್ಟಣಗಳಲ್ಲಿನ ಜನಪದಗಳನ್ನೂ ಕ್ಷತ್ರಿಯರನ್ನೂ ಮತ್ತು ಅನುಚರರನ್ನೂ ಪುರೋಹಿತ ಬ್ರಾಹ್ಮಣನು ಹೇಳಿದ ಪ್ರಕಾರವೇ ಆಮಂತ್ರಿಸಿದನು.‘ರಾಜನು ಯಜ್ಞವನ್ನು ಮಾಡಲಿ, ಕಾಲವು ಸರಿಯಾಗಿದೆ’ ಎಂದು ಕ್ಷತ್ರಿಯರೂ ಅನುಚರರೂ ಹೇಳಿದರು.. ಪಟ್ಟಣಗಳಲ್ಲಿನ ಜನಪದಗಳಲ್ಲಿನ ಅಮಾತ್ಯರನ್ನೂ ರಾಜ ಸೇವಕರನ್ನೂ.. ಜನಪದಗಳಲ್ಲಿನ ಪಂಡಿತರಾದ ಬ್ರಾಹ್ಮಣರನ್ನೂ .. ಪಟ್ಟಣಗಳಲ್ಲಿನ ಮತ್ತು ಜನಪದಗಳಲ್ಲಿನ ಗೃಹಪತಿಗಳನ್ನೂ ರಾಜ ಮಹಾವಿಜೇತನು ‘ದೀರ್ಘ ಕಾಲ ನನಗೆ ಹಿತ ಮತ್ತು ಸುಖವನ್ನು ದೊರಕಿಸುವ ಯಜ್ಞವನ್ನು ಮಾಡುತ್ತಿದ್ದೇನೆ, ಅನುಜ್ಞೆಯಾಗಬೇಕು’ ಎಂದು ಆಮಂತ್ರಿಸಿದನು. ಅವರು ‘ರಾಜನು ಯಜ್ಞವನ್ನು ಮಾಡಲು ಕಾಲವು ಸರಿಯಾಗಿದೆ’ ಎಂದು ಹೇಳಿದರು. ಈ ರೀತಿಯ ನಾಲ್ಕು ಬಗೆಯ ಜನಗಳ ಅನುಮತಿಯು ಯಜ್ಞದ ನಾಲ್ಕು ಪರಿಕರಗಳಾದವು.

ಎಂಟು ಪರಿಕರಗಳು

“ರಾಜ ಮಹಾವಿಜೇತನು ಎಂಟು ಉತ್ತಮ ಅಂಶಗಳನ್ನು ಪಡೆದಿದ್ದನು. ತಂದೆ ಮತ್ತು ತಾಯಿಗಳೆರಡು ಕಡೆಗಳಿಂದಲೂ ಪರಿಶುದ್ಧವಾದ ಯಾವ ಕಳಂಕವೂ ಇಲ್ಲದ ಯಾವ ಅಪವಾದವೂ ಇಲ್ಲದ ವಂಶದಲ್ಲಿ ಜನಿಸಿದ್ದನು ಮತ್ತು ಏಳು ತಲೆಗಳಿಂದ ಆ ಎರಡು ವಂಶಗಳೂ ಹಾಗೆಯೇ ಇದ್ದುವು. ನೋಡಲು ಸಂತೋಷವಾಗುತ್ತಿದ್ದ ಒಳ್ಳೆಯ ರೂಪವನ್ನೂ, ಉತ್ತಮವಾದ ಬ್ರಹ್ಮವರ್ಣವನ್ನೂ, ಬ್ರಹ್ಮವರ್ಚಸ್ಸನ್ನೂ, ಗಂಭೀರವಾದ ವ್ಯಕ್ತಿತ್ವವನ್ನೂ ಪಡೆದಿದ್ದನು. ಐಶ್ವರ್ಯವಂತನೂ, ಮಹಾಧನಿಕನೂ, ವಿಶೇಷವಾದ ಸಂಪತ್ತುಳ್ಳವನೂ, ಅತುಳವಾದ ಚಿನ್ನ ಬೆಳ್ಳಿಗಳನ್ನು ಹೊಂದಿದ್ದವನೂ, ಅಪಾರವಾದ ವಿತ್ತವಿರುವವನೂ, ಧ್ಯಾನದಿಂದ ತುಂಬಿದ ಕಣಜಗಳನ್ನು ತುಂಬಿದ ಕೋಶಗಾರಗಳನ್ನು ಹೊಂದಿದ್ದವನೂ ಆಗಿದ್ದನು. ಬಲಶಾಲಿಯೂ, ಚತುರಂಗ ಸೇನೆಗಳನ್ನು ಪಡೆದಿದ್ದವನೂ, ತನ್ನ ಯಶಸ್ಸಿನಿಂದಲೇ ತನಗಾಗದವವರನ್ನು ತತ್ತರಗೊಳಿಸಬಲ್ಲವನೂ ಆಗಿದ್ದನು. ಶ್ರದ್ಧಾವಂತನೂ, ದಾನಿಯೂ ದಾನಪತಿಯೂ ಕಷ್ಟದಲ್ಲಿರುವವರಿಗೆ ಮನೆಯ ಬಾಗಿಲನ್ನು ತೆರೆದವನೂ, ಸಮಣ ಬ್ರಾಹ್ಮಣರಿಗೂ ಬಡವರಿಗೂ ದಾರಿಹೋಕರಿಗೂ ತಿರುಪೆಯವರಿಗೂ ಅಗತ್ಯವಾದುದನ್ನು ಕೊಡಬಲ್ಲ ಬುಗ್ಗೆಯಂತಿದ್ದವನೂ, ಪುಣ್ಯಗಳನ್ನು ಮಾಡುವವನೂ ಆಗಿದ್ದನು. ಬಹುಶ್ರುತನಾಗಿದ್ದನು. ಯಾವ ಯಾವುದಕ್ಕೆ ಯಾವ ಅರ್ಥವನ್ನು ಹೇಳಬೇಕೆಂಬುದನ್ನು ತಿಳಿದವನೂ, ಹೀಗೆ ಹೇಳಿದರೆ ಹೀಗೆ ಅರ್ಥವಾಗುತ್ತದೆ ಎಂದು ಹೇಳಬಲ್ಲವನೂ ಆಗಿದ್ದನು. ಪಂಡಿತನೂ, ತಜ್ಞನೂ, ಮೇಧಾವಿಯೂ, ಮಹಾ ಬುದ್ಧಿ ಶಾಲಿಯೂ, ಭೂತ ವರ್ತಮಾನ ಭವಿಷ್ಯಗಳನ್ನು ತಿಳಿದವನೂ ಆಗಿದ್ದನು. ರಾಜ ಮಹಾವಿಜೇತನು ಈ ಎಂಟು ಅಂಶಗಳನ್ನು ಹೊಂದಿದ್ದನು. ಈ ಎಂಟು ಅಂಶಗಳು ಆ ಯಜ್ಞದ ಮತ್ತೆ ಎಂಟು ಪರಿಕರಗಳಾಗಿದ್ದುವು.

ನಾಲ್ಕು ಪರಿಕರಗಳು

“ಪುರೋಹಿತ ಬ್ರಾಹ್ಮಣನೂ ನಾಲ್ಕು ಉತ್ತಮ ಅಂಶಗಳನ್ನು ಪಡೆದಿದ್ದನು. ತಂದೆ ತಾಯಿಗಳಿಬ್ಬರೂ ಕಡೆಗಳಿಂದಲೂ ಏಳು ತಲೆಮಾರುಗಳಿಂದ ಪರಿಶುದ್ಧವಾದ ಯಾವ ಕಳಂಕವೂ ಇಲ್ಲದ ಯಾವ ಅಪವಾದವೂ ಇಲ್ಲದ ವಂಶದಲ್ಲಿ ಹುಟ್ಟಿದವನಾಗಿದ್ದನು. ಮಂತ್ರಗಳನ್ನು ಪಠಿಸುವವನೂ, ಮಂತ್ರಗಳ ಅರ್ಥವನ್ನು ತಿಳಿದವನೂ, ಮೂರು ವೇದಗಳನ್ನು ಅರಿತವನೂ, ಅಕ್ಷರಗಳಲ್ಲಿ ಸ್ವಲ್ಪ ಭೇದವಾದರೂ ಅದನ್ನು ತಿಳಿಯಬಲ್ಲವನೂ, ಐದನೆಯದಾದ ಇತಿಹಾಸಗಳನ್ನು ತಿಳಿದವನೂ, ವೆಯ್ಯಾಕರಣಿಯೂ, ಲೋಕಯುತ ಶಾಸ್ತ್ರವನ್ನು ಅರಿತವನೂ, ಮಹಾಪುರಷ ಲಕ್ಷಣಗಳನ್ನು ತಿಳಿದಿದ್ದವನೂ ಆಗಿದ್ದನು. ಶೀಲವಂತನೂ, ಶೀಲವನ್ನು ಬೆಳಸಿಕೊಳ್ಳುತ್ತಿದ್ದವನೂ, ಶೀಲವನ್ನು ವೃದ್ಧಿಗೊಳಿಸುವ ಜ್ಞಾನವನ್ನು ಪಡೆದಿದ್ದವನೂ ಆಗಿದ್ದನು. ಪಂಡಿತನೂ, ತಜ್ಞನೂ, ಮೇಧಾವಿಯೂ ಯಜ್ಞ ಕಾಲದಲ್ಲಿ ದರ್ವಿಯನ್ನು ಹಿಡಿಯುವವರಲ್ಲಿ ಪ್ರಥಮನೋ ಅಥವಾ ದ್ವಿತೀಯನೋ ಆಗಿದ್ದನು. ಪುರೋಹಿತ ಬ್ರಾಹ್ಮಣನು ಈ ನಾಲ್ಕು ಅಂಶಗಳನ್ನು ಪಡೆದಿದ್ದನು. ಈ ನಾಲ್ಕು ಅಂಶಗಳು ಆ ಯಜ್ಞದ ಇನ್ನು ನಾಲ್ಕು ಪರಿಕರಿಗಳಾಗಿದ್ದುವು.

ಮೂರು ವಿಧಗಳು

“ಬ್ರಾಹ್ಮಣ, ಆಗ ಆ ಪುರೋಹಿತ ರಾಜ ಮಹಾವಿಜೇತನಿಗೆ ಮಹಾಯಜ್ಞ ನಡೆಯುವುದಕ್ಕೆ ಮುಂಚೆ ಮೂರು ವಿಧಗಳನ್ನು ವಿವರಿಸಿದನು: ಯಜ್ಞ ಆರಂಭಿಸುವುದಕ್ಕೆ ಮೊದಲು ರಾಜನಿಗೆ ಯಜ್ಞದಿಂದ ತನ್ನ ಸಂಪತ್ತು ಹಾಳಾಗುತ್ತದೆಂಬ ಭಾವನೆ ಬಂದರೆ ರಾಜನು ಅಂಥ ಭಾವನೆಯನ್ನು ಪಡೆಯಬಾರದು. ಮಹಾಯಜ್ಞವು ನಡೆಯುತ್ತಿದ್ದಾಗ ರಾಜನಿಗೆ ಯಜ್ಞದಿಂದ ತನ್ನ ಸಂಪತ್ತು ಹಾಳಾಗುತ್ತದೆಂಬ ಭಾವನೆ ಬಂದರೆ ಅವನು ಅಂಥ ಭಾವನೆಯನ್ನು ಬಾರಗೊಡಬಾರದು. ಮಹಾಯಜ್ಞವು ಮುಗಿದ ಮೇಲೆ ರಾಜನಿಗೆ ಯಜ್ಞದಿಂದ ತನ್ನ ಸಂಪತ್ತು ಹಾಳಾಯಿತೆಂಬ ಭಾವನೆ ಬಂದರೆ ಅವನು ಅಂಥ ಭಾವನೆಯನ್ನು ಪಡೆಯಲೇ ಬಾರದು. ಪುರೋಹಿತ ಬ್ರಾಹ್ಮಣನು ರಾಜ ಮಹಾವಿಜೇತನಿಗೆ ಯಜ್ಞಕ್ಕೆ ಮುಂಚೆ ಈ ಮೂರು ವಿಧಗಳನ್ನು ತಿಳಿಸಿದನು.

ಹತ್ತು ಪ್ರಕಾರಗಳು

“ಬ್ರಾಹ್ಮಣ, ಆ ಪುರೋಹಿತನು ರಾಜ ಮಹಾವಿಜೇತನ ಯಜ್ಞವು ಆರಂಭವಾಗುವುದಕ್ಕೆ ಮುಂಚೆ ಯಜ್ಞಕ್ಕೆ ಸೇರಿದ್ದ ಜನರಿಂದ ಆಗಬಹುದಾದ ಹತ್ತು ಬಗೆಯ ಅಡಚಣೆಗಳನ್ನು ತಪ್ಪಿಸಲು ಹೀಗೆ ಹೇಳಿದನು- ‘ಯಜ್ಞಕ್ಕೆ ಪ್ರಾಣಿ ಹಿಂಸೆ ಮಾಡುವವರೂ ಪ್ರಾಣಿಹಿಂಸೆಯನ್ನು ತ್ಯಜಿಸಿದವರೂ ಬರುತ್ತಾರೆ. ಪ್ರಾಣಿಹಿಂಸೆ ಮಾಡುವವರು ಅವರ ಪಾಡಿಗೆ ಇರಲಿ.ಯಾರು ಪ್ರಾಣಿಹಿಂಸೆಯನ್ನು ತ್ಯಜಿಸಿರುವವರೋ ಅವರು ಯಜ್ಞವನ್ನು ಆರಂಭಿಸಲಿ, ಮಾಡಿಸಲಿ, ಅವರು ಸಂತೋಷಪಡುವಂತಾಗಲಿ, ಅವರ ಚಿತ್ತದಲ್ಲಿ ಪ್ರಸನ್ನತೆ ತುಂಬಿರಲಿ; ತನಗೆ ಕೊಡದಿದ್ದುನ್ನು ತೆಗೆದುಕೊಳ್ಳುವವರು, ತನಗೆ ಸೇರದುದನ್ನು ತೆಗೆದು ಕೊಳ್ಳದವರೂ ಯಜ್ಞಕ್ಕೆ ಬರುತ್ತಾರೆ... ನೀತಿ ಬಾಹಿರವಾದ ಕಾಮಗಳಲ್ಲಿ ತೊಡಗುವವರೂ, ಅಂಧ ಕಾಮಗಳನ್ನು ತ್ಯಜಿಸಿದವರೂ ಯಜ್ಞಕ್ಕೆ ಬರುತ್ತಾರೆ... ಸುಳ್ಳು ಹೇಳುವವರೂ, ಸುಳ್ಳಾಡದವರೂ ಯಜ್ಞಕ್ಕೆ ಬರುತ್ತಾರೆ... ಚಾಡಿ ಹೇಳುವವರೂ, ಚಾಡಿ ಹೇಳುವುದನ್ನು ತ್ಯಜಿಸಿದವರೂ ಯಜ್ಞಕ್ಕೆ ಬರುತ್ತಾರೆ... ಕಠಿಣವಾದ ಮಾತುಗಳನ್ನಾಡುವವರೂ, ಕಠಿಣವಾದ ಮಾತುಗಳನ್ನಾಡುವುದನ್ನು ತ್ಯಜಿಸಿರುವವರೂ ಯಜ್ಞಕ್ಕೆ ಬರುತ್ತಾರೆ... ಕಾಡು ಹರಟೆಯಲ್ಲಿ ತೊಡಗುವವರೂ, ಕಾಡು ಹರಟೆಯನ್ನು ವರ್ಜಿಸಿದವರೂ ಯಜ್ಞಕ್ಕೆ ಬರುತ್ತಾರೆ... ಆಸೆಬುರುಕರೂ, ಎಲ್ಲಾ ಆಸೆಗಳನ್ನು ವರ್ಜಿಸಿದವರೂ ಯಜ್ಞಕ್ಕೆ ಬರುತ್ತಾರೆ... ದ್ವೇಷದಿಂದ ತುಂಬಿರುವವರೂ, ದ್ವೇಷವನ್ನು ಸಂಪೂರ್ಣವಾಗಿ ವರ್ಜಿಸಿರುವವರೂ ಯಜ್ಞಕ್ಕೆ ಬರುತ್ತಾರೆ... ಮಿಥ್ಯಾ ದೃಷ್ಟಿಯಿಂದರುವರೂ ಸರಿಯಾದ ದೃಷ್ಟಿಯನ್ನು ಪಡೆದವರೂ ಯಜ್ಞಕ್ಕೆ ಬರುತ್ತಾರೆ... ಮಿಥ್ಯಾದೃಷ್ಟಿಯುಳ್ಳವರು ಅವರ ಪಾಡಿಗಿರಲಿ, ಸರಿಯಾದ ದೃಷ್ಟಿಯುಳ್ಳವರು ಯಜ್ಞವನ್ನು ಆರಂಭಿಸಲಿ, ಮಾಡಿಸಲಿ, ಅವರು ಸಂತೋಷಪಡುವಂತಾಗಲಿ, ಅವರ ಚಿತ್ತದಲ್ಲಿ ಪ್ರಸನ್ನತೆ ತುಂಬಿರಲಿ.’ ಹೀಗೆ, ಪುರೋಹಿತ ಬ್ರಾಹ್ಮಣನು ರಾಜ ಮಹಾ ವಿಜೇತನ ಯಜ್ಞದ ಆರಂಭಕ್ಕೆ ಸೇರಿದ್ದವರಲ್ಲಿರಬಹುದಾದ ಹತ್ತು ಬಗೆಯ ಜನರಿಂದ ಯಜ್ಞಕ್ಕೆ ಆಗಬಹುದಾದ ಅಡಚಣೆಗಳನ್ನು ತಪ್ಪಿಸಿದನು.

ಹದಿನಾರು ಪ್ರಕಾರಗಳು

“ಆಮೇಲೆ, ಬ್ರಾಹ್ಮಣ, ಆ ಪುರೋಹಿತನು ಮಹಾಯಜ್ಞದ ಯಜಮಾನನಾದ ಮಹಾವಿಜೇತನ ಚಿತ್ತವನ್ನು ಹದಿನಾರು ಪ್ರಕಾರಗಳಿಂದ ಎಚ್ಚರಗೊಳಿಸಿ, ಬೆಳಗಿಸಿದನು; ಆನಂದಪಡಿಸಿದನು; ಸಂತೋಷಪಡಿಸಿದನು-‘ ಯಜ್ಞದ ಯಜಮಾನನಾದ ರಾಜ ಮಹಾವಿಜೇತನು ಪಟ್ಟಣಗಳಲ್ಲಿನ ಮತ್ತು ಗ್ರಾಮಗಳಲ್ಲಿನ ಕ್ಷತ್ರಿಯರನ್ನು ಸಾಮಂತರನ್ನೂ ಯಜ್ಞಕ್ಕೆ ಮುಂಚೆ ಆಮಂತ್ರಿಸಲಿಲ್ಲ, ಈ ರೀತಿಯಲ್ಲಿ ಯಜ್ಞ ಮಾಡುವುದರಿಂದ ಧರ್ಮವನ್ನು ಪಾಲಿಸಿದಂತಾಗಲಿಲ್ಲ’ ಎಂದು ಕೆಲವರು ಹೇಳಬಹುದು. ಆದರೆ ರಾಜನು ಪಟ್ಟಣಗಳಲ್ಲಿನ ಮತ್ತು ಗ್ರಾಮಗಳಲ್ಲಿರುವವರನ್ನು ಆಮಂತ್ರಿಸಿದ್ದಾನೆ. ಆದುದರಿಂದ ಅವನು ಯಜ್ಞವನ್ನು ಮಾಡಬಹುದು, ಸಂತೋಷಪಡಿಸಬಹುದು ಅವನ ಚಿತ್ತವು ಪ್ರಸನ್ನತೆಯಿಂದಿರಬಹುದು.

ಯಜ್ಞದ ಯಜಮಾನನಾದ ರಾಜ ಮಹಾವಿಜೇತನು ಪಟ್ಟಣಗಳಲ್ಲಿನ ಮತ್ತು ಗ್ರಾಮಗಳಲ್ಲಿನ ಅಮಾತ್ಯರನ್ನು ರಾಜಸೇವಕರನ್ನು ಯಜ್ಞಕ್ಕೆ ಮುಂಚೆ ಆಮಂತ್ರಿಸಲಿಲ್ಲ.. ಪಟ್ಟಣಗಳಲ್ಲಿನ ಮತ್ತು ಗ್ರಾಮಗಳಲ್ಲಿನ ಪಂಡಿತರಾದ ಬ್ರಾಹ್ಮಣರನ್ನು ಯಜ್ಞಕ್ಕೆ ಮುಂಚೆ ಆಮಂತ್ರಿಸಲಿಲ್ಲ. ಪಟ್ಟಣಗಳಲ್ಲಿನ ಮತ್ತು ಗ್ರಾಮಗಳಲ್ಲಿನ ಗೃಪತಿಗಳನ್ನು ಯಜ್ಞಕ್ಕೆ ಆಮಂತ್ರಿಸಲಿಲ್ಲ. ಈ ರೀತಿ ಯಜ್ಞ ಮಾಡುವುದರಿಂದ ಧರ್ಮವನ್ನು ಪಾಲಿಸಿದಂತಾಗಲಿಲ್ಲ ಎಂದು ಕೆಲವರು ಹೇಳಬಹುದು. ಆದರೆ ರಾಜನು ಪಟ್ಟಣಗಳಲ್ಲಿನ ಗೃಹಪತಿಗಳನ್ನು ಆಮಂತ್ರಿಸಿದ್ದಾನೆ. ಆದುದರಿಂದ ಅವನು ಯಜ್ಞವನ್ನು ಮಾಡಬಹುದು, ಸಂತೋಷ ಪಡಬಹುದು, ಅವನ ಚಿತ್ತವು ಪ್ರಸನ್ನತೆಯಿಂದಿರಬಹದು.

‘ಯಜ್ಞ ಮಾಡುವ ಮಹಾ ವಿಜೇತನು ತಂದೆ ತಾಯಿಗಳೆರಡು ಕಡೆಗಳಿಂದಲೂ ಏಳು ತಲೆಮಾರುಗಳಿಂದ ಪರಿಶುದ್ದವಾದ, ಯಾವ ಕಳಂಕವೂ ಇಲ್ಲದ ಯಾವ ಅಪವಾದವೂ ಇಲ್ಲದ ವಂಶದಲ್ಲಿ ಹುಟ್ಟಿಲ್ಲ. ಇಂಥವನ್ನು ಯಜ್ಞವನ್ನು ಮಾಡುವುದರಿಂದ ಅದು ಧರ್ಮಕ್ಕೆ ಅನುಗುಣವಾಗಿಲ್ಲ, ಎಂದು ಕೆಲವರು ಹೇಳಬಹುದು. ಆದರೆ ರಾಜನು ತಂದೆ ತಾಯಿಗಳೆರಡು ಕಡೆಗಳಿಂದಲೂ ಏಳು ತಲೆಮಾರುಗಳಿಂದ ಪರಿಶುದ್ದವಾದ ಯಾವ ಕಳಂಕವು ಇಲ್ಲದ ಯಾವ ಅಪವಾವೂ ಇಲ್ಲದ ವಂಶದಲ್ಲಿ ಹುಟ್ಟಿದ್ದಾನೆ. ಇದನ್ನು ತಿಳಿದಿರುವ ರಾಜನು ಯಜ್ಞವನ್ನು ಮಾಡಬಹುದು, ಸಂತೋಷಪಡಬಹುದು ಅವನ ಚಿತ್ತವು ಪ್ರಸನ್ನತೆಯಿಂದಿರಬಹುದು.

‘ಮಹಾ ಯಜ್ಞವನ್ನು ಮಾಡುವ ಮಹಾವಿಜೇತನು ನೋಡಲು ಸಂತೋಷವನ್ನುಂಟುಮಾಡುವ ರೂಪವನ್ನು ಉತ್ತಮವಾದ ಶರೀರವನ್ನು ಬ್ರಹ್ಮವರ್ಣವನ್ನು ಬ್ರಹ್ಮವರ್ಚಸ್ಸನೂ ಪಡೆದಿಲ್ಲ... ಐಶ್ವರ್ಯವಂತನೂ, ಮಹಾಧನಿಕನೂ, ಅತುಳವಾದ ಚಿನ್ನ ಬೆಳ್ಳಿಗಳನ್ನು ಹೊಂದಿರುವವನೂ ಅಪಾರವಾದ ವಿತ್ತವಿರುವವನೂ ಧಾನ್ಯದಿಂದ ತುಂಬಿದ ಕಣಜಗಳನ್ನು ತುಂಬಿದ ಕೋಶಾಗಾರಗಳನ್ನು ಹೊಂದಿರುವವನೂ ಆಗಿಲ್ಲ... ಬಲಶಾಲಿಯೂ ಚತುರಂಗ ಸೇನೆಗಳನ್ನು ಹೊಂದಿರುವವನೂ ಆಗಿಲ್ಲ... ಬಲಶಾಲಿಯೂ ಚತುರಂಗ ಸೇನೆಗಳನ್ನು ಹೊಂದಿರುವವನೂ, ತನ್ನ ಯಶಸ್ಸಿನಿಂದ ತನಗಾಗದವದವರನ್ನು ಕತ್ತರಿಸಿಕೊಳ್ಳಬಲ್ಲವನೂ ಆಗಿಲ್ಲ... ಶ್ರದ್ಧಾವಂತನೂ ದಾನಿಯೂ, ದಾನಪತಿಯೂ ಕಷ್ಟದಲ್ಲಿರುವವರೆಗೆ ತನ್ನ ಮನೆಯ ಬಾಗಿಲನ್ನು ತೆರೆದವನೂ, ಸಮಣ ಬ್ರಾಹ್ಮಣರಿಗೂ ಬಡವರಿಗೂ ದಾರಿ ಹೋಕರಿಗೂ ತಿರುಪೆಯವರೆಗೂ ಅಗತ್ಯವಾದುದನ್ನು ಕೊಡಬಲ್ಲ ಬಗ್ಗೆಯೂ ಪುಣ್ಯಗಳನ್ನು ಮಾಡುವವನೂ ಆಗಿಲ್ಲ... ಬಹುಶೃತನಾಗಿಲ್ಲ, ಯಾವುದಾವುದಕ್ಕೆ ಯಾವುದು ಅರ್ಥವೆಂಬುದು ತಿಳಿಸಬಲ್ಲವನೂ, ಹೀಗೆ ಹೇಳಿದರೆ ಹೀಗೆ ಅರ್ಥವಾಗುತ್ತದೆ ಎಂಬುದನ್ನು ಹೇಳಬಲ್ಲವನು ಆಗಿಲ್ಲ... ಪಂಡಿತನೂ, ತಜ್ಞನೂ, ಮೇಧಾವಿಯೂ, ಮಹಾ ಬುದ್ದಿಶಾಲಿಯೂ, ಭೂತ, ವರ್ತಮಾನ ಭವಿಷ್ಯತ್ತುಗಳನ್ನು ತಿಳಿದಿರುವವನೂ ಆಗಿಲ್ಲ. ಇಂಥವನು ಮಹಾಯಜ್ಞವನ್ನು ಮಾಡುತ್ತಾನೆ, ಇದು ಧರ್ಮಕ್ಕೆ ಅನುಗುಣವಾಗಿಲ್ಲ ಎಂದು ಕೆಲವರು ಹೇಳಬಹುದು. ಆದರೆ ರಾಜನು ಪಂಡಿತನು, ತಜ್ಞನು, ಮೇಧಾವಿಯು, ಮಹಾಬುದ್ಧಿಶಾಲಿಯೂ, ಭೂತ ವರ್ತಮಾನ ಭವಿಷ್ಯತ್ತುಗಳನ್ನು ತಿಳಿದಿರುವವನೂ ಆಗಿದ್ದಾನೆ ಇದನ್ನು ತಿಳಿದಿರುವ ರಾಜನು ಯಜ್ಞವನ್ನು ಮಾಡಬಹುದು, ಸಂತೋಷಪಡಬಹುದು, ಅವನ ಚಿತ್ತವು ಪ್ರಸನ್ನತೆಯಿಂದಿರಬಹುದು.

‘ರಾಜ ಮಹಾವಿಜೇತನು ಯಜ್ಞವನ್ನು ಮಾಡಬಹುದು. ಆದರೆ ಮಾಡಿಸುವ ಪುರೋಹಿತ ಬ್ರಾಹ್ಮಣನು ತಂದೆ ತಾಯಿಗಳೆರಡು ಕಡೆಗಳಿಂದಲೂ ಏಳು ತಲೆಮಾರುಗಳಿಂದ ಪರಿಶುದ್ದವಾದ ಯಾವ ಕಳಂಕವು ಇಲ್ಲದ ಯಾವ ಅಪವಾದವೂ ಇಲ್ಲದ ವಂಶದಲ್ಲಿ ಹುಟ್ಟಿಲ್ಲ. ಆದರೂ ರಾಜನು ಮಹಾಯಜ್ಞವನ್ನು ಮಾಡುತ್ತಾನೆ. ಇದು ರಾಜನ ಧರ್ಮಕ್ಕೆ ಅನುಗುಣವಾಗಿಲ್ಲ ಎಂದು ಕೆಲವರು ಹೇಳಬಹುದು. ಆದರೆ ರಾಜನ ಪುರೋಹಿತ ಬ್ರಾಹ್ಮಣನು ತಂದೆ ತಾಯಿಗಳಿಬ್ಬರ ಕಡೆಗಳಿಂದಲೂ ಏಳು ತಲೆಮಾರುಗಳಿಂದ ಪರಿಶುದ್ದವಾದ ಯಾವ ಕಳಂಕವು ಇಲ್ಲದ, ಯಾವ ಅಪವಾದವೂ ಇಲ್ಲದ ವಂಶದಲ್ಲಿ ಹುಟ್ಟಿದ್ದಾನೆ. ರಾಜನು ಇವನ್ನು ತಿಳಿದಿದ್ದಾನೆ. ಆದುದರಿಂದ ಯಜ್ಞವನ್ನು ಮಾಡಬಹುದು, ಸಂತೋಷ ಪಡಬಹುದು ಅವನ ಚಿತ್ತವು ಪ್ರಸನ್ನತೆಯನ್ನು ಪಡೆಯಬಹುದು.

‘ರಾಜ ಮಹಾವಿಜೇತನು ಮಹಾ ಯಜ್ಞವನ್ನು ಮಾಡಬಹುದು. ಆದರೆ ಅದನ್ನು ಮಾಡಿಸುವ ಪುರೋಹಿತನು ಮಂತ್ರಗಳನ್ನು ಪಠಿಸುವವನೂ, ಮಂತ್ರಗಳ ಅರ್ಥವನ್ನು ತಿಳಿದವನೂ, ಮೂರು ವೇದಗಳನ್ನು ಅರಿತವನೂ, ಅಕ್ಷರಗಳಲ್ಲಿ ಸ್ವಲ್ಪ ಭೇದವಾದರೂ ಅದನ್ನು ತಿಳಿಯಬಲ್ಲವನೂ, ಐದನೆಯದಾದ ಇತಿಹಾಸಗಳನ್ನು ತಿಳಿದವನೂ, ವೆಯ್ಯಾಕರಣಿಯೂ ಲೋಕಯುತ ಶಾಸ್ತ್ರವನ್ನು ತಿಳಿದವನೂ, ಮಹಾಪುರಷ ಲಕ್ಷಣಗಳನ್ನು ತಿಳಿದವನೂ ಆಗಿಲ್ಲ.... ಅದನ್ನು ಮಾಡಿಸುವ ಪುರೋಹಿತ ಬ್ರಾಹ್ಮಣನು ಶೀಲವಂತನೂ, ಶೀಲವನ್ನು ಬೆಳಸಿಕೊಳ್ಳುತ್ತಿದ್ದವನೂ, ಶೀಲವನ್ನು ವೃದ್ಧಿಗೊಳಿಸುವ ಜ್ಞಾನವನ್ನು ಪಡೆದವನೂ ಆಗಿಲ್ಲ. ಅದನ್ನು ಮಾಡಿಸುವ ಪುರೋಹಿತನು ಪಂಡಿತನೂ, ತಜ್ಞನೂ, ಮೇಧಾವಿಯೂ ಯಜ್ಞ ಕಾಲದಲ್ಲಿ ದರ್ಬೆಯನ್ನು ಹಿಡಿಯುವವರಲ್ಲಿಪ್ರಥಮನೋ ಅಥವಾ ದ್ವಿತೀಯನೋ ಆಗಿಲ್ಲ. ಆದರೂ ರಾಜನು ಮಹಾಯಜ್ಞವನ್ನು ಮಾಡುತ್ತಾನೆ. ಇದು ರಾಜನ ದರ್ಮಕ್ಕೆ ಅನುಗುಣವಾಗಿಲ್ಲ. ಆದರೆ ರಾಜನ ಪುರೋಹಿತನು ಪಂಡಿತನೂ ತಜ್ಞನೂ ಮೇಧಾವಿಯೂ ಯಜ್ಞ ಕಾಲದಲ್ಲಿ ದರ್ವಿಯನ್ನು ಹಿಡಿಯುವವರಲ್ಲಿ ಪ್ರಥಮನೋ ಅಥವಾ ದ್ವಿತೀಯನೋ ಆಗಿದ್ದಾನೆ. ರಾಜನು ಇದನ್ನು ತಿಳಿದಿದ್ದಾನೆ. ಆದುದರಿಂದ ರಾಜನು ಯಜ್ಞವನ್ನು ಮಾಡಬಹುದು. ಸಂತೋಷಪಡಬಹುದು. ಅವನ ಚಿತ್ತವು ಪ್ರಸನ್ನತೆಯನ್ನು ಪಡೆಯಬಹುದು! ಬ್ರಾಹ್ಮಣ, ಪುರೋಹಿತ ಬ್ರಾಹ್ಮಣನು ಹೀಗೆ ಮಹಾಯಜ್ಞದ ಯಜಮಾನನಾದ ರಾಜ ಮಹಾವಿಜೇತನನ್ನು ಹದಿನಾರು ಪ್ರಕಾರಗಳಿಂದ ಎಚ್ಚರಗೊಳಿಸಿ ಬೆಳಗಿಸಿದನು. ಆನಂದಪಡಿಸಿದನು, ಸಂತೋಷಪಡಿಸಿದನು.

“ಬ್ರಾಹ್ಮಣ, ಆ ಯಜ್ಞದಲ್ಲಿ ಯಾವ ಹಸುವನ್ನೂ ಕೊಲ್ಲಲಿಲ್ಲ. ಆಡುಗಳನ್ನೂ ಕೊಲ್ಲಲಿಲ್ಲ. ಕೋಳಿ, ಹಂದಿ ಮುಂತಾದ ಪ್ರಾಣಿಗಳಾವುವನ್ನೂ ಘಾಸಿಗೊಳಿಸಿ ಅವುಗಳನ್ನು ಕೊಲ್ಲಲಿಲ್ಲ. ಯೂಪಕ್ಕೋಸ್ಕರ (ಬಲಿಪೀಠ ಸ್ತಂಭ) ಯಾವ ಮರವನ್ನೂ ಕಡಿಯಲಿಲ್ಲ. ಯಜ್ಞದ ಸ್ಥಳದಲ್ಲಿ ಹರಡುವುದಕ್ಕೋಸ್ಕರ ದರ್ಭೆಯನ್ನು ನಾಶಮಾಡಲಿಲ್ಲ. ದಾಸರಾದವರೂ ಕಂಚುಕಿಗಳೂ ಕರ್ಮಕಾರಿಗಳೂ ಕೆಲಸಕ್ಕೆ ಅಲ್ಲಿ ನೇಮಕವಾಗಿದ್ದರೂ ದಂಡನೆಗೆ ಒಳಗಾಗುವರೆಂಬ ಭಯದಿಂದ ನಡುಗಿಕೊಂಡು ಕಣ್ಣೀರನ್ನು ಸುರಿಸಿಕೊಂಡು, ಅಳುತ್ತಾ ಅವರಾರೂ ಕೆಲಸ ಮಾಡಬೇಕಾಗಿರಲಿಲ್ಲ. ಇಷ್ಟಪಟ್ಟವರು ಕೆಲಸ ಮಾಡಬಹುದಾಗಿತ್ತು. ಯಾರಿಗೆ ಇಷ್ಟವಿಲ್ಲವೋ ಅವರು ಕೆಲಸ ಮಾಡಬೇಕಾಗಿರಲಿಲ್ಲ. ತುಪ್ಪ, ಎಣ್ಣೆ ಬೆಣ್ಣೆ, ಮೊಸರು, ಜೇನುತುಪ್ಪ ಸಕ್ಕರೆಗಳಿಂದಲೇ ಆ ಯಜ್ಞವನ್ನು ಪೂರ್ಣಗೊಳಿಸಲಾಯಿತು.

“ಆಗ, ಬ್ರಾಹ್ಮಣ, ಪಟ್ಟಣಗಳಿಂದಲೂ ಗ್ರಾಮಗಳಿಂದಲೂ ಬಂದಿದ್ದ ಕ್ಷತ್ರಿಯರೂ ಸಾಮಂತರೂ, ಅಮಾತ್ಯರೂ ರಾಜ ಸೇವಕರೂ, ಪಂಡಿತರಾದ ಬ್ರಾಹ್ಮಣರೂ, ಗೃಹಪತಿಗಳೂ ತಾವು ತಂದಿದ್ದ ಸಂಪತ್ತನ್ನು ತೆಗೆದುಕೊಂಡು ರಾಜ ಮಹಾವಿಜೇತನ ಹತ್ತಿರಕ್ಕೆ ಹೋಗಿ ಹೀಗೆಂದರು: ‘ದೇವ, ತಮಗೋಸ್ಕರ ನಾವು ತಂದಿರುವ ಸಂಪತ್ತು ಇಲ್ಲಿದೆ. ಪರಿಹರಿಸಬೇಕು.’ “ ನನ್ನಲ್ಲಿಯೂ ಸಾಕಷ್ಟು ಸಂಪತ್ತಿದೆ. ಧರ್ಮಕ್ಕೆ ಅನುಗುಣವಾಗಿ ಸಂಗ್ರಹಿಸಿದ ಕರುವು ಹೇರಳವಾಗಿದೆ. ನಿಮ್ಮದು ನಿಮ್ಮಲ್ಲಿಯೇ ಇರಲಿ. ನಿಮಗೆ ಬೇಕಾದಷ್ಷನ್ನು ಇಲ್ಲಿರುವುದರಿಂದಲೇ ಹೊತ್ತುಕೊಂಡು ಹೋಗಿ!’ ಎಂದನು. ರಾಜನಿಂದ ನಿರಾಕರಿಸಲ್ಪಟ್ಟ ಅವರು ಒಂದು ಕಡೆ ಸೇರಿ ಹೀಗೆ ಸಮಾಲೋಚನೆ ಮಾಡಿದರು: ‘ ನಾವು ಆ ಸಂಪತ್ತಿನೊಂದಿಗೆ ನಮ್ಮ ಊರಿಗೆ ಹಿಂದಿರುಗುವುದು ಬೇಡ, ರಾಜ ಮಹಾವಿಜೇತನು ಮಹಾ ಯಜ್ಞವನ್ನು ಮಾಡುತ್ತಿದ್ದಾನೆ. ನಾವು ಯಾಗವನ್ನನುಸರಿಸಿ ಹೋಮವನ್ನೂ ಮಾಡಿ ಬಿಡೋಣ!’

“ಆಗ, ಬ್ರಾಹ್ಮಣ, ಪಟ್ಟಣಗಳ ಮತ್ತು ಗ್ರಾಮಗಳಲ್ಲಿನ ಕ್ಷತ್ರಿಯರೂ ಸಾಮಂತರೂ, ಯಜ್ಞ ಶಾಲೆಯ ಪೂರ್ವಕ್ಕಿದ್ದ ಸ್ಥಳವನ್ನಾರಿಸಿದರು; ಪಟ್ಟಣಗಳ ಮತ್ತು ಗ್ರಾಮಗಳ ಅಮಾತ್ರರೂ ಮತ್ತು ರಾಜ ಸೇವಕರೂ ಯಜ್ಞ ಶಾಲೆಯ ದಕ್ಷಿಣಕ್ಕಿದ್ದ ಒಂದು ಸ್ಥಳವನ್ನಾರಿಸಿದರು; ಪಟ್ಟಣಗಳ ಮತ್ತು ಗ್ರಾಮಗಳ ಮಹಾ ಪಂಡಿತರಾದ ಬ್ರಾಹ್ಮಣರು ಯಜ್ಞ ಶಾಲೆಯ ಪಶ್ಚಿಮಕ್ಕಿದ್ದ ಒಂದು ಸ್ಥಳವನ್ನಾರಿಸಿದರು; ಪಟ್ಟಣಗಳ ಮತ್ತು ಗ್ರಾಮಗಳ ಗೃಹಪತಿಗಳು ಯಜ್ಞ ಶಾಲೆಯ ಉತ್ತರಕ್ಕೆ ಒಂದು ಸ್ಥಳವನ್ನಾರಿಸಿದರು. ಆ ಸ್ಥಳಗಳಲ್ಲಿ ತಾವು ತಂದಿದ್ದ ದಾನಗಳನ್ನಿಟ್ಟರು.

“ಆ ಯಜ್ಞಗಳಲ್ಲಿ ಯಾವ ಹಸುವನ್ನೂ ಕೊಲ್ಲಲಿಲ್ಲ. ಆಡುಗಳನ್ನೂ ಕೊಲ್ಲಲಿಲ್ಲ. ಕೋಳಿ, ಹಂದಿ ಮುಂತಾದ ಪ್ರಾಣಿಗಳಾವುವನ್ನೂ ಘಾಸಿಗೊಳಿಸಿ ಕೊಲ್ಲಲಿಲ್ಲ. ಯೂಪಕ್ಕಾಗಿ ಯಾವ ಮರವನ್ನೂ ಕಡಿಯಲಿಲ್ಲ. ಯಜ್ಞ ಮಾಡುವ ಸ್ಥಳದಲ್ಲಿ ಹರಡುವುದಕ್ಕೋಸ್ಕರ ದರ್ಭೆಯನ್ನು ನಾಶಮಾಡಲಿಲ್ಲ. ದಾಸರನ್ನಾಗಲೀ ಕಂಚುಕಿಗಳನ್ನಾಗಲಿ, ಕರ್ಮಕಾರಿಗಳನ್ನಾಗಲೀ ದಂಡಿಸಲಿಲ್ಲ. ಭಯಪಡಿಸಲಿಲ್ಲ. ಕಣ್ಣೀರನ್ನು ಸುರಿಸಿಕೊಂಡು ಅಳುತ್ತಾ ಅವರು ಕೆಲಸ ಮಾಡಬೇಕಾಗಿರಲಿಲ್ಲ. ಇಚ್ಛೆಯಿದ್ದವರು ಕೆಲಸ ಮಾಡಬಹುದಾಗಿತ್ತು. ಇಚ್ಛೆಯಿಲ್ಲದವರು ಕೆಲಸ ಮಾಡಬೇಕಾಗಿರಲಿಲ್ಲ. ತುಪ್ಪ ಎಣ್ಣೆ, ಬೆಣ್ಣೆ, ಮೊಸರು, ಜೇನುತುಪ್ಪ, ಸಕ್ಕರೆಗಳಿಂದಲೇ ಯಜ್ಞಗಳನ್ನು ಪೂರ್ಣಗೊಳಿಸಲಾಯಿತು.

“ಈ ನಾಲ್ಕು ರೀತಿಯ ಅನುಮತಿಗಳು, ರಾಜ ಮಹಾವಿಜೇತನ ಎಂಟು ಅಂಶಗಳು, ಪುರೋಹಿತ ಬ್ರಾಹ್ಮಣನ ನಾಲ್ಕು ಅಂಶಗಳು; ಮೂರು ವಿಧಗಳು ಯಜ್ಞದ ಮೂರು ವಿಧಗಳು ಮತ್ತು ಹದಿನಾರು ಪರಿಕರಗಳು ಎಂದು ನಾನು ಹೇಳುತ್ತೇನೆ, ಬ್ರಾಹ್ಮಣ.”

ಇದನ್ನು ಕೇಳಿದ ಆ ಬ್ರಾಹ್ಮಣರು ದೊಡ್ಡದನಿಯಿಂದ ಹೀಗೆ ಹೇಳಿದರು- “ಎಂಥ ಯಜ್ಞ, ಎಂಥ ಯಜ್ಞಸಂಪದ!” ಕೂಟದಂತ ಬ್ರಾಹ್ಮಣನಾದರೋ ಮೌನವಾಗಿ ಕುಳಿತಿದ್ದನು. ಆಗ ಆ ಬ್ರಾಹ್ಮಣರು ಕೂಟದಂತನನ್ನು ಕುರಿತು “ಕೂಟದಂತ, ಸಮಣ ಗೋತಮರು ಹೇಳಿದ ಒಳ್ಳೆಯ ಮಾತುಗಳನ್ನು ನೀನು ಏತಕ್ಕೆ ಅನುಮೋದಿಸುತ್ತಿಲ್ಲ?” ಎಂದು ಕೇಳಿದರು. ಬ್ರಾಹ್ಮಣರೆ, ಸಮಣ ಗೋತಮರು ಒಳ್ಳಯದನ್ನು ಹೇಳುತ್ತಿಲ್ಲ, ಒಳ್ಳೆಯ ರೀತಿಯಲ್ಲಿ ಹೇಳುತ್ತಿಲ್ಲ ಎಂದು ನಾನು ಹೇಳುವುದಿಲ್ಲ. ಸಮಣ ಗೋತಮರು ಒಳ್ಳೆ ರೀತಿಯಲ್ಲಿ ಹೇಳುತ್ತಿರುವ ಒಳ್ಳೆಯ ಮಾತುಗಳನ್ನು ಅನುಮೋದಿಸದವರ ತಲೆಯು ಸೀಳಿ ಹೋಗುತ್ತದೆ. ನಾನು ಆಲೋಚನೆ ಮಾಡತ್ತಿದ್ದುದೇ ಬೇರೆ. ಸಮಣ ಗೋತಮರು ‘ ನಾನು ಹೀಗೇ ಕೇಳಿದ್ದೇನೆ’ ಅರಹಂತನಲ್ಲಿ ಈ ಗುಣಗಳಿರುತ್ತವೆ’ ಎಂದು ಹೇಳುತ್ತಿಲ್ಲ. ಸಮಣ ಗೋತಮರು “ ಆಗ ಹೀಗಿತ್ತು, ಆಗ ಇದ್ದುದೇ ಹೀಗೆ’ ಎಂದು ಹೇಳುತ್ತಾರೆ. ಆದುದರಿಂದ ನನಗೆ ಸಮಣಗೋತಮರು ಆ ಸಮಯದಲ್ಲಿ ರಾಜ ಮಹಾವಿಜೇತನಾಗಿ ಯಜ್ಞದ ಸ್ವಾಮಿಯಾಗಿರಬೇಕು. ಅಥವಾ ಯಜ್ಞವನ್ನು ಮಾಡಿಸಿದ ಪುರೋಹಿತ ಬ್ರಾಹ್ಮಣನಾಗಿರಬೇಕು!’ ಎನ್ನಿಸಿತು. ಈ ರೀತಿಯ ಯಜ್ಞವನ್ನು ಮಾಡುವವರು ಅಥವಾ ಮಾಡಿಸುವವರು ಮರಣವಾದ ಮೇಲೆ ಕಾಯವನ್ನು ತೊರೆದು ಸುಗತಿಯನ್ನು ಪಡೆದು ಸ್ವರ್ಗಲೋಕದಲ್ಲಿ ಉದಯಿಸುತ್ತಾನೆಂದು ಗೋತಮರು ತಿಳಿದಿದ್ದಾರೆಯೇ?” “ಬ್ರಾಹ್ಮಣ ನಾನು ಅದನ್ನು ತಿಳಿದಿದ್ದೇನೆ. ಈ ಬಗೆಯ ಯಜ್ಞವನ್ನು ಮಾಡುವವನು ಅಥವಾ ಮಾಡಿಸುವವನು ಮರಣವಾದ ಮೇಲೆ ಕಾಯವನ್ನು ತೊರೆದು ಸುಗತಿಯನ್ನು ಪಡೆದು ಸ್ವರ್ಗ ಲೋಕದಲ್ಲಿ ಉದಯಿಸುತ್ತಾನೆ. ಆ ಸಮಯದಲ್ಲಿ ನಾನು ಪುರೋಹಿತನಾಗಿದ್ದೆ, ಯಜ್ಞವನ್ನು ಮಾಡಿಸಿದೆ.

ನಿತ್ಯದಾನದ ಅನುಕೂಲ ಯಜ್ಞಗಳು

“ಗೋತಮರೆ, ಈ ಬಗೆಯ ಮೂರು ವಿಧಗಳನ್ನೊಳಗೊಂಡ ಹದಿನಾರು ಪರಿಕರಗಳಿರುವ ಇಂಥ ಯಜ್ಞಕ್ಕಿಂತ ಸುಲಭವಾಗಿರುವ ಮತ್ತು ಗೊಂದಲ ವಿಲ್ಲದಿರುವ ಆದರೆ ಮಹಾಫಲವನ್ನು ಕೊಡುವ ಮಹಾಭಾಗ್ಯಗಳನ್ನು ತರುವ ಮತ್ತಾವುದಾದರೂ ಯಜ್ಞವಿದೆಯೇ?”

“ಬ್ರಾಹ್ಮಣ, ಇದೆ. ಈ ರೀತಿಯ ಮೂರು ವಿಧಗಳನ್ನೊಳಗೊಂಡ ಹದಿನಾರು ಪರಿಕರಗಳಿರುವ ಇಂಥ ಯಜ್ಞಕ್ಕಿಂತ ಸುಲಭವಾಗಿರುವ ಮತ್ತು ಗೊಂದಲವಿಲ್ಲದಿರುವ ಆದರೆ ಮಹಾಫಲವನ್ನು ಕೊಡುವ ಮತ್ತು ಮಹಾ ಭಾಗ್ಯಗಳನ್ನು ಕೊಡುವ ಬೇರೆ ಯಜ್ಞಗಳಿವೆ.”

“ಗೋತಮರೆ, ಈ ಬಗೆಯ ಮೂರು ವಿಧಗಳನ್ನೊಳಗೊಂಡ ಮತ್ತು ಹದಿನಾರು ಪರಿಕರಗಳಿರುವ ಇಂಥ ಯಜ್ಞಕ್ಕಿಂತ ಸುಲಭವಾದ ಮತ್ತು ಗೊಂದಲವಿಲ್ಲದಿರುವ ಆದರೆ ಮಹಾಫಲವನ್ನು ಕೊಡುವ ಮಹಾಭಾಗ್ಯಗಳನ್ನು ತರುವ ಯಜ್ಞವು ಯಾವುದು?”

“ಬ್ರಾಹ್ಮಣ, ಶೀಲವಂತರಾದ ಪಬ್ಬಜಿತರಾದವರಿಗೆ ನಿತ್ಯದಾನದ ಅನುಕೂಲ ಯಜ್ಞಗಳು ಯಾವುದಿವೆಯೋ ಅವು ಈ ರೀತಿಯ ಮೂರು ವಿಧಗಳನ್ನೊಳಗೊಂಡಿರುವ ಮತ್ತು ಹದಿನಾರು ಪರಿಕರೆಗಳಿರುವ ಯಜ್ಞಕ್ಕಿಂತ ಸುಲಭವಾದ ಗೊಂದಲವಿಲ್ಲದ ಆದರೆ ಮಹಾಫಲವನ್ನು ಕೊಡುವ ಮತ್ತು ಮಹಾ ಸೌಭಾಗ್ಯಗಳನ್ನು ಕೊಡುವ ಯಜ್ಞವಾಗಿದೆ.”

“ಹಾಗಾದರೆ ಮೂರು ವಿಧಗಳನ್ನೊಳಗೊಂಡಿರುವ ಮತ್ತು ಹದಿನಾರು ಪರಿಕರಗಳಿರುವ ಯಜ್ಞಕ್ಕಿಂತ ನಿತ್ಯದಾನದ ಅನುಕೂಲ ಯಜ್ಞವು ಯಾವ ಕಾರಣವಿಲ್ಲದೆ ಸುಲಭವಾಗಿಸಿ, ಗೊಂದಲವಿಲ್ಲದಿದೆ. ಅದು ಕೊಡುವ ಮಹಾಫಲ ಅಥವಾ ಮಹಾಭಾಗ್ಯವು ಯಾವುದನ್ನು ಅವಲಂಬಿಸಿದೆ?”

“ಮೊದಲು ವಿವರಿಸಿರುವ ಯಜ್ಞಕ್ಕೆ ಅರಹಂತರಾಗಲೀ, ಅರಹಂತ ಮಾರ್ಗದಲ್ಲಿರುವವರಾಗಲೀ ಹೋಗುವುದಿಲ್ಲ. ಇದಕ್ಕೆ ಕಾರಣವೇನು? ಅಲ್ಲಿ ಜನರನ್ನು ದೊಣ್ಣೆಯಿಂದ ಹೊಡೆಯುವುದನ್ನು ಕತ್ತು ಹಿಡಿದು ನೂಕುವುದನ್ನು ನೋಡಬೇಕಾಗುತ್ತದೆ. ಆದುದರಿಂದ ಅರಹಂತರೂ, ಅರಹಂತ ಮಾರ್ಗದಲ್ಲಿರು ವವರೂ ಅಲ್ಲಿಗೆ ಹೋಗುವುದಿಲ್ಲ. ಪಬ್ಬಜಿತರಾದ ಶೀಲವಂತರಿಗೆ ಉದ್ದೇಶ ಪೂರ್ವಕವಾದ ನಿತ್ಯದಾನವಾಗುವ ಯಜ್ಞಕ್ಕೆ ಅರಹಂತರೂ ಅರಹಂತ ಮಾರ್ಗದಲ್ಲಿರುವವರೂ ಹೋಗುತ್ತಾರೆ. ಇದಕ್ಕೇನು ಕಾರಣ? ಜನರನ್ನು ದೊಣ್ಣೆಯಿಂದ ಬಡಿಯುವುದನ್ನಾಗಲೀ, ಅವರನ್ನು ಕತ್ತು ಹಿಡಿದು ನೂಕುವುದನ್ನಾಗಲೀ ಅವರು ಅಲ್ಲಿ ನೋಡುವುದಿಲ್ಲ. ಅದುದರಿಂದ ಅಂಥ ಯಜ್ಞಕ್ಕೆ ಅರಹಂತರೂ, ಅರಹಂತ ಮಾರ್ಗದಲ್ಲಿರುವವರೂ ಹೋಗುತ್ತಾರೆ. ಮೇಲೆ ಹೇಳಿದ ಮೂರು ವಿಧಗಳನ್ನೊಳಗೊಂಡಿರುವ ಮತ್ತು ಹದಿನಾರು ಪರಿಕರಗಳಿರುವ ಯಜ್ಞಕ್ಕಿಂತ ನಿತ್ಯದಾನದ ಈ ಅನುಕೂಲ ಯಜ್ಞವು ಸುಲಭವಾಗಿದೆ ಮತ್ತು ಗೊಂದಲವಿಲ್ಲದಿದೆ. ಮಹಾ ಫಲವನ್ನು ಕೊಡುತ್ತದೆ, ಮಹಾ ಭಾಗ್ಯವನ್ನು ತರುತ್ತದೆ.

“ಈ ರೀತಿಯ ಮೂರು ವಿಧಗಳನ್ನೊಳಗೊಂಡಿರುವ ಹದಿನಾರು ಪರಿಕರಗಳುಳ್ಳ ಯಜ್ಞಕ್ಕಿಂತ ನಿತ್ಯದಾನದ ಅನುಕೂಲ ಯಜ್ಞಕ್ಕಿಂತ ಸುಲಭವಾದ ಗೊಂದಲವಿಲ್ಲದ ಅದರೆ ಮಹಾಫಲವನ್ನು ಕೊಡುವ ಮತ್ತು ಮಹಾ ಭಾಗ್ಯವನ್ನು ತರುವ ಮತ್ತಾವುದಾದರೂ ಯಜ್ಞವಿದೆಯೇ?”

“ಬ್ರಾಹ್ಮಣ, ಇದೆ. ಮೂರು ವಿಧಗಳನ್ನೊಳಗೊಂಡಿರುವ ಹದಿನಾರು ಪರಿಕರಗಳುಳ್ಳ ಯಜ್ಞಕ್ಕಿಂತಲೂ ನಿತ್ಯದಾನದ ಅನುಕೂಲ ಯಜ್ಞಕ್ಕಿಂತ ಸುಲಭವಾದ ಗೊಂದಲವಿಲ್ಲದ ಅದರೆ ಮಹಾಫಲವನ್ನು ಕೊಡುವ ಮತ್ತು ಮಹಾ ಭಾಗ್ಯವನ್ನು ತರುವ ಬೇರೊಂದು ಯಜ್ಞವು ಇದೆ.”

“ಗೋತಮರೆ, ಮೂರು ವಿಧಗಳನ್ನೊಳಗೊಂಡ ಹದಿನಾರು ಪರಿಕರಗಳುಳ್ಳ ಯಜ್ಞಕ್ಕಿಂತಲೂ ನಿತ್ಯದಾನದ ಅನುಕೂಲ ಯಜ್ಞಕ್ಕಿಂತಲೂ ಸುಲಭವಾದ ಗೊಂದಲವಿಲ್ಲದ ಅದರೆ ಮಹಾಫಲವನ್ನು ಕೊಡುವ ಮತ್ತು ಮಹಾ ಭಾಗ್ಯವನ್ನು ತರುವ ಯಜ್ಞ ಯಾವುದು?”

“ಬ್ರಾಹ್ಮಣ, ಸಂಘಕ್ಕಾಗಿ ನಾಲ್ಕು ದಿಕ್ಕುಗಳಲ್ಲಿಯೂ ವಿಹಾರ ವಸತಿ ಕಟ್ಟಿಸುವುದು, ಮೂರು ವಿಧಗಳನ್ನೊಳಗೊಂಡ ಹದಿನಾರು ಪರಿಕರಗಳುಳ್ಳ ಯಜ್ಞಕ್ಕಿಂತಲೂ ನಿತ್ಯದಾನದ ಅನುಕೂಲ ಯಜ್ಞಕ್ಕಿಂತಲೂ ಸುಲಭವಾಗಿದೆ, ಗೊಂದಲವಿಲ್ಲದಿದೆ, ಅದರೆ ಮಹಾಫಲವನ್ನು ಕೊಡುತ್ತದೆ. ಮಹಾ ಭಾಗ್ಯವನ್ನು ತರುತ್ತದೆ.

“ಮೂರು ವಿಧಗಳನ್ನೊಳಗೊಂಡಿರುವ ಹದಿನಾರು ಪರಿಕರಗಳುಳ್ಳ ಯಜ್ಞಕ್ಕಿಂತಲೂ ನಿತ್ಯದಾನದ ಅನುಕೂಲ ಯಜ್ಞಕ್ಕಿಂತಲೂ ವಿಹಾರ ದಾನಕ್ಕಿಂತಲೂ ಸುಲಭವಾದ ಗೊಂದಲವಿಲ್ಲದ ಅದರೆ ಮಹಾಫಲವನ್ನು ಕೊಡುವ ಮತ್ತು ಮಹಾ ಭಾಗ್ಯವನ್ನು ತರುವ ಯಜ್ಞವಿದೆಯೇ?”

“ಬ್ರಾಹ್ಮಣ, ಇದೆ ಮೂರು ವಿಧಗಳನ್ನೊಳಗೊಂಡ ಹದಿನಾರು ಪರಿಕರಗಳುಳ್ಳ ಯಜ್ಞಕ್ಕಿಂತಲೂ ನಿತ್ಯದಾನದ ಅನುಕೂಲ ಯಜ್ಞಕ್ಕಿಂತಲೂ ವಿಹಾರದಾನಕ್ಕಿಂತಲೂ ಸುಲಭವಾದ ಗೊಂದಲವಿಲ್ಲದ ಅದರೆ ಮಹಾಫಲವನ್ನು ಕೊಡುವ ಮತ್ತು ಮಹಾಭಾಗ್ಯವನ್ನು ತರುವ ಯಜ್ಞವು ಇದೆ.”

ಗೋತಮರೆ, ಮೂರು ವಿಧಗಳನ್ನೊಳಗೊಂಡ ಹದಿನಾರು ಪರಿಕರಗಳುಳ್ಳ ಯಜ್ಞಕ್ಕಿಂತಲೂ, ನಿತ್ಯದಾನದ ಅನುಕೂಲ ಯಜ್ಞಕ್ಕಿಂತಲೂ ವಿಹಾರ ದಾನಕ್ಕಿಂತಲೂ ಸುಲಭವಾದ, ಗೊಂದಲವಿಲ್ಲದ ಅದರೆ ಮಹಾಫಲವನ್ನು ಕೊಡುವ ಮತ್ತು ಮಹಾ ಭಾಗ್ಯವನ್ನು ತರುವ ಆ ಯಜ್ಞವು ಯಾವುದು?”

“ಪ್ರಸನ್ನ ಚಿತ್ತದಿಂದ ಬುದ್ಧರನ್ನು ಶರಣು ಹೋಗುವುದು, ಧರ್ಮವನ್ನು ಶರಣು ಹೋಗುವುದು, ಸಂಘವನ್ನು ಶರಣು ಹೋಗುವುದು ಮೂರು ವಿಧಗಳನ್ನೊಳಗೊಂಡ ಹದಿನಾರುಪರಿಕರಗಳುಳ್ಳ ಯಜ್ಞಕ್ಕಿಂತಲೂ ನಿತ್ಯದಾನದ ಅನುಕೂಲಯಜ್ಞಕ್ಕಿಂತಲೂ ವಿಹಾರದಾನಕ್ಕಿಂತಲು ಸುಲಭವಾಗಿದೆ, ಗೊಂದಲವಿಲ್ಲದಿದೆ. ಅದರೆ ಮಹಾಫಲವನ್ನು ಕೊಡುತ್ತದೆ, ಮಹಾ ಭಾಗ್ಯವನ್ನು ತರುತ್ತದೆ.

“ಗೋತಮರೆ, ಮೂರು ವಿಧಗಳನ್ನೊಳಗೊಂಡ ಹದಿನಾರು ಪರಿಕರಗಳುಳ್ಳ ಯಜ್ಞಕ್ಕಿಂತಲೂ, ನಿತ್ಯದಾನದ ಅನುಕೂಲ ಯಜ್ಞಕ್ಕಿಂತಲೂ ವಿಹಾರ ದಾನಕ್ಕಿಂತಲೂ ಶರಣಗಮನಕ್ಕಿಂತಲೂ ಸುಲಭವಾದ, ಗೊಂದಲ ವಿಲ್ಲದ ಅದರೆ ಮಹಾಫಲವನ್ನು ಕೊಡುವ ಮತ್ತು ಮಹಾ ಭಾಗ್ಯವನ್ನು ತರುವ ಬೇರೆ ಯಜ್ಞವಿದೆಯೇ?”

“ಬ್ರಾಹ್ಮಣ, ಇದೆ ಮೂರು ವಿಧಗಳನ್ನೊಳಗೊಂಡ ಹದಿನಾರು ಪರಿಕರಗಳುಳ್ಳ ಯಜ್ಞಕ್ಕಿಂತಲೂ ನಿತ್ಯದಾನದ ಅನುಕೂಲ ಯಜ್ಞಕ್ಕಿಂತಲೂ ವಿಹಾರದಾನಕ್ಕಿಂತಲೂ ಶರಣಗಮನಕ್ಕಿಂತಲೂ ಸುಲಭವಾದ ಗೊಂದಲವಿಲ್ಲದ ಅದರೆ ಮಹಾಫಲವನ್ನು ಕೊಡುವ ಮತ್ತು ಮಹಾಭಾಗ್ಯವನ್ನು ತರುವ ಯಜ್ಞವು ಇದೆ.”

“ಗೋತಮರೆ, ಮೂರು ವಿಧಗಳನ್ನೊಳಗೊಂಡ ಹದಿನಾರು ಪರಿಕರಗಳುಳ್ಳ ಯಜ್ಞಕ್ಕಿಂತಲೂ, ನಿತ್ಯದಾನದ ಅನುಕೂಲ ಯಜ್ಞಕ್ಕಿಂತಲೂ ವಿಹಾರ ದಾನಕ್ಕಿಂತಲೂ ಶರಣಗಮನಕ್ಕಿಂತಲೂ ಸುಲಭವಾದ, ಗೊಂದಲ ವಿಲ್ಲದ ಅದರೆ ಮಹಾಫಲವನ್ನು ಕೊಡುವ ಮತ್ತು ಮಹಾ ಭಾಗ್ಯವನ್ನು ತರುವ ಆ ಯಜ್ಞವು ಯಾವುದು?”

“ಪ್ರಸನ್ನ ಚಿತ್ತದಿಂದ ಐದು ನಿಯಮಗಳನ್ನು ಸ್ವಸಂತೋಷದಿಂದ ಪಾಲಿಸುವುದು- ಅಂದರೆ ಪ್ರಾಣಿಗಳಾವುವನ್ನೂ ಕೊಲ್ಲದಿರುವುದು, ತನಗೆ ಸೇರಬಾರದ್ದನ್ನು ತೆಗೆದುಕೊಳ್ಳದಿರುವುದು, ಅನೈತಿಕ ಲೈಂಗಿಕ ಸಂಬಂಧವನ್ನು ಹೊಂದದಿರುವುದು, ಬುದ್ದಿಗೆಡಿಸುವ ಸುರಾಪಾನ, ಮದ್ಯಪಾನಗಳನ್ನು ಮಾಡದಿರುವುದು- ಬುದ್ದಿಗೆಡಿಸುವ ಸುರಾಪಾನ, ಮಧ್ಯಪಾನಗಳನ್ನು ಮಾಡದಿರುವುದು-ಮೂರು ವಿಧಗಳನ್ನೊಳಗೊಂಡ ಹದಿನಾರು ಪರಿಕರಗಳುಳ್ಳ ಯಜ್ಞಕ್ಕಿಂತಲೂ ನಿತ್ಯದಾನದ ಅನುಕೂಲ ಯಜ್ಞಕ್ಕಿಂತಲೂ, ವಿಹಾರ ದಾನಕ್ಕಿಂತಲೂ, ಶರಣಗಮನಕ್ಕಿಂತಲೂ ಸುಲಭವಾದ ಗೊಂದಲವಿಲ್ಲದ ಆದರೆ ಮಹಾಫಲವನ್ನು ಕೊಡುವ ಮಹಾಭಾಗ್ಯವನ್ನು ತರುವ ಯಜ್ಞವಾಗಿದೆ.”

“ಗೋತಮರೆ, ಮೂರು ವಿಧಗಳನ್ನೊಳಗೊಂಡ ಹದಿನಾರು ಪರಿಕರಗಳುಳ್ಳ ಯಜ್ಞಕ್ಕಿಂತಲೂ, ನಿತ್ಯದಾನದ ಅನುಕೂಲ ಯಜ್ಞಕ್ಕಿಂತಲೂ ವಿಹಾರದಾನಕ್ಕಿಂತಲೂ ಶರಣಗಮನಕ್ಕಿಂತಲೂ ಪಂಚಶೀಲ ಪಾಲನೆಗಿಂತಲೂ ಸುಲಭವಾದ, ಗೊಂದಲ ವಿಲ್ಲದ ಅದರೆ ಮಹಾಫಲವನ್ನು ಕೊಡುವ ಮತ್ತು ಮಹಾ ಭಾಗ್ಯವನ್ನು ತರುವ ಬೇರೆ ಯಜ್ಞವಿದೆಯೇ?”

“ಬ್ರಾಹ್ಮಣರೇ, ಇದೆ. ಮೂರು ವಿಧಗಳನ್ನೊಳಗೊಂಡ ಹದಿನಾರು ಪರಿಕರಗಳುಳ್ಳ ಯಜ್ಞಕ್ಕಿಂತಲೂ, ನಿತ್ಯದಾನದ ಅನುಕೂಲ ಯಜ್ಞಕ್ಕಿಂತಲೂ ವಿಹಾರದಾನಕ್ಕಿಂತಲೂ ಶರಣಗಮನಕ್ಕಿಂತಲೂ, ಪಂಚಶೀಲ ಪಾಲನೆಗಿಂತಲೂ ಸುಲಭವಾದ, ಗೊಂದಲವಿಲ್ಲದ ಅದರೆ ಮಹಾಫಲವನ್ನು ಕೊಡುವ ಮತ್ತು ಮಹಾ ಭಾಗ್ಯವನ್ನು ತರುವ ಬೇರೆ ಯಜ್ಞ ಇದೆ.”

“ಗೋತಮರೆ, ಮೂರು ವಿಧಗಳನ್ನೊಳಗೊಂಡ ಹದಿನಾರು ಪರಿಕರಗಳುಳ್ಳ ಯಜ್ಞಕ್ಕಿಂತಲೂ, ನಿತ್ಯದಾನದ ಅನುಕೂಲ ಯಜ್ಞಕ್ಕಿಂತಲೂ ವಿಹಾರ ದಾನಕ್ಕಿಂತಲೂ ಶರಣಗಮನಕ್ಕಿಂತಲೂ ಪಂಚಶೀಲ ಪಾಲನೆಗಿಂತಲೂ ಸುಲಭವಾದ, ಗೊಂದಲವಿಲ್ಲದ ಅದರೆ ಮಹಾಫಲವನ್ನು ಕೊಡುವ ಮತ್ತು ಮಹಾ ಭಾಗ್ಯವನ್ನು ತರುವ ಆ ಯಜ್ಞವು ಯಾವುದು?”

“ಬ್ರಾಹ್ಮಣ, ಅರಹಂತನೂ, ಸಮ್ಮಾಸಂಬುದ್ಧನೂ ಆದ ತಥಾಗತನು ಈ ಲೋಕದಲ್ಲಿ ಹುಟ್ಟುತ್ತಾನೆ. (ಸಾಮಞ್ಞಫಲದ ಸೂತ್ರದಲ್ಲಿರುವಂತೆ ವಿಸ್ತರಿಸಬೇಕೆಂದು 43 ನೆಯ ಪ್ಯಾರದಿಂದ 63 ನೆಯ ಪ್ಯಾರದವರೆಗೆ) ಹೀಗೆ ಭಿಕ್ಷುವು ಶೀಲ ಸಂಪನ್ನನಾಗುತ್ತಾನೆ... (64 ನೆಯ ಪ್ಯಾರಾದಿಂದ 77 ನೆಯ ಪ್ಯಾರದ ಮೊದಲವರೆಗೆ)... ಪ್ರಥಮ ಧ್ಯಾನದಲ್ಲಿ ಪ್ರವೇಶಿಸಿ ವಿಹರಿಸುತ್ತಾನೆ: ಬ್ರಾಹ್ಮಣ, ಇದು ಹಿಂದೆ ಹೇಳಿದ ಯಜ್ಞಗಳಿಗಿಂತಲೂ ಸುಲಭವಾದುದು, ಗೊಂದಲವಿಲ್ಲದ್ದು, ಮಹಾಫಲವನ್ನು ಕೊಡುವಂಥದು ಮಹಾಭಾಗ್ಯವನ್ನು ತರುವಂಥದು... (ಹಾಗೆಯೇ) ದ್ವಿತೀಯ ಧ್ಯಾನದಲ್ಲಿ.. ತೃತೀಯ ಧ್ಯಾನದಲ್ಲಿ.. ಚತುರ್ಥ ಧ್ಯಾನದಲ್ಲಿ ಪ್ರವೇಶಿಸಿ ವಿಹರಿಸುತ್ತಾನೆ; ಬ್ರಾಹ್ಮಣ, ಇದು ಹಿಂದೆ ಹೇಳಿದ ಯಜ್ಞಗಳಿಗಿಂತಲೂ ಸುಲಭವಾದದ್ದು ಗೊಂದಲವಿಲ್ಲದ್ದು ಮಹಾಫಲವನ್ನು ಕೊಡುವಂಥದು ಮಹಾಭಾಗ್ಯವನ್ನು ತರುವಂಥದು.. (75 ನೆಯ ಪ್ಯಾರಾದಿಂದ 99 ನೆಯ ಪ್ಯಾರದ ಮೊದಲವರೆಗೆ) ವಿಪಸ್ಸನ ಜ್ಞಾನದ ಕಡೆಗೆ ಮನಸ್ಸನ್ನು ಅಣಿಗೊಳಿಸಿ ತಿರುಗಿಸುತ್ತಾರೆ... ಇನ್ನು ಪುನರ್ಜನ್ಮವಿಲ್ಲ ಎಂಬುದನ್ನು ತಿಳಿದಿರುತ್ತಾನೆ. ; ಬ್ರಾಹ್ಮಣ, ಈ ಯಜ್ಞವು ಹಿಂದೆ ಹೇಳಿದ ಯಜ್ಞಗಳಿಗಿಂತಲೂ ಸುಲಭವಾದುದು ಗೊಂದಲವಿಲ್ಲದ್ದು ಮಹಾಫಲವನ್ನು ಕೊಡುವಂಥದು ಮತ್ತು ಮಹಾಭಾಗ್ಯವನ್ನು ತರುವಂಥದು. ಈ ಯಜ್ಞಕ್ಕಿಂತಲೂ ಬ್ರಾಹ್ಮಣ, ಉತ್ತಮವಾದ ಶ್ರೇಷ್ಠವಾದ ಬೇರೆ ಯಾವ ಯಜ್ಞವೂ ಇಲ್ಲ.”

ಕೂಟದಂತನು ಧರ್ಮವನ್ನು ಅರಿತು ಉಪಾಸಕನಾಗುವುದು

ಹೀಗೆ ಹೇಳಿದ ಭಗವಾನರನ್ನು ಕೂಟದಂತ ಬ್ರಾಹ್ಮಣನು “ ಗೋತಮರೆ, ಎಷ್ಟು ಗಹನವಾಗಿದೆ! ಗೋತಮರೆ, ಎಷ್ಟು ಗಹನವಾಗಿದೆ! ತಲೆಕೆಳಗಾಗಿ ಬಿದ್ದಿರುವುದನ್ನು ಸರಿಯಾಗಿ ನಿಲ್ಲಿಸುವವನಂತೆ, ಮುಚ್ಚಿರುವುದನ್ನು ತೆಗೆದು ತೋರಿಸುವಂತೆ, ದಾರಿ ತಪ್ಪಿರುವವನಿಗೆ ಸರಿಯಾದ ಮಾರ್ಗವನ್ನು ತೋರಿಸುವವನಂತೆ, ಕತ್ತಲೆಯಲ್ಲಿರುವವನಿಗೆ ಪಂಜನ್ನು ಹಿಡಿಯುವವನಂತೆ, ಕಣ್ಣಿರುವವನು ರೂಪವನ್ನು ನೋಡುವಂತೆ ಗೋತಮರು ಧಮ್ಮವನ್ನು ಅನೇಕ ಪರಿಯಲ್ಲಿ ಪ್ರಕಾಶಗೊಳಿಸುತ್ತಿದ್ದಾರೆ. ನಾನು ಗೋತಮರಿಗೂ , ಧಮ್ಮಕ್ಕೂ, ಭಿಕ್ಖು ಸಂಘಕ್ಕೂ ಶರಣು ಹೋಗುತ್ತೇನೆ ಶರಣಾಗತನಾದ ನನ್ನನ್ನು ಇಂದಿನಿಂದಲೇ ನನ್ನ ಪ್ರಾಣವಿರುವವರೆಗೂ ಗೋತಮರು ಉಪಾಸಕನನ್ನಾಗಿ ಸ್ವೀಕರಿಸಲಿ ಗೋತಮರೆ ಏಳು ನೂರು ಹೋರಿಗಳನ್ನು, ಏಳುನೂರು ಎತ್ತುಗಳನ್ನೂ ಏಳುನೂರು ಕಡಸುಗಳನ್ನೂ ಏಳುನೂರು ಆಡುಗಳನ್ನೂ ಟಗರುಗಳನ್ನೂ ಜೀವದಿಂದ ಬಿಟ್ಟುಬಿಡುತ್ತೇನೆ. ಅವು ಹಸುರು ಹುಲ್ಲನ್ನು ಮೇಯಲಿ, ತಂಪಾದ ನೀರನ್ನು ಕುಡಿಯಲಿ, ತಂಪಾದ ಗಾಳಿಯು ಅವುಗಳಿರುವಲ್ಲಿ ಬೀಸಲಿ” ಎಂದು ಹೇಳಿದನು.

ಸೋತಾಪತ್ತಿ ಫಲವನ್ನು ಹೊಂದುವುದು

ಆಗ ಭಗವಾನರು ಕೂಟದಂತ ಬ್ರಾಹ್ಮಣನಿಗೆ ಅನುಕ್ರಮವಾಗಿ ಧರ್ಮವನ್ನು ವಿವರಿಸಿದರು - ದಾನಕಥೆ, ಶೀಲ ಕಥೆ, ಸ್ವರ್ಗ ಕಥೆ; ಕಾಮಗಳ ಅಪಾಯ, ಅಹಂಕಾರ, ಕ್ಲೇಶಗಳು ಇವುಗಳನ್ನೆಲ್ಲಾ ಪ್ರಕಾಶಪಡಿಸಿದರು. ಕೂಟದಂತ ಬ್ರಾಹ್ಮಣನ ಚಿತ್ತವು ಕೇಳಲು ಸಿದ್ದರಾಗಿರುವುದನ್ನು, ಮೃದವಾಗಿರುವುದನ್ನು, ಪೂರ್ವ ವಿಶ್ವಾಸರಹಿತವಾಗಿರುವುದನ್ನು, ಉತ್ಸಾಹಭರಿತರಾಗಿರುವುದನ್ನು, ಪ್ರಸನ್ನವಾಗಿರುವುದನ್ನು ತಿಳಿದ ಭಗವಾನರು ಬುದ್ಧರಿಂದ ಮಾತ್ರವೇ ಸಾಧಿತವಾಗಿರುವ - ದುಃಖ ಸಮುದಯ ನಿರೋಧ ಮಗ್ಗವನ್ನು ಪ್ರಕಾಶಪಡಿಸಿದರು. ಶುದ್ಧವಾದ ವಸ್ತ್ರವು ಎಲ್ಲ ಕೊಳೆಯೂ ಹೋದಮೇಲೆ ಯಾವ ಬಣ್ಣವನ್ನಾದರೂ ಹೀರಿಕೊಳ್ಳುವಂತೆ ಕೂಟದಂತನಿಗೆ ಕುಳಿತಿರುವಾಗಲೇ ಧರ್ಮಚಕ್ಷು ಉದಿಸಿತು ‘ಯಾವುದು ಉದಯಿಸುತ್ತಿದೆಯೋ ಅದೆಲ್ಲಾ ಅಳಿಯಲೇಬೇಕು’ ಎಂಬುದನ್ನು ಅರಿತನು.

ಆಗ ಕೂಟದಂತ ಬ್ರಾಹ್ಮಣನು ‘ದೃಷ್ಟಿ’ (ಅರಿಯುವ) ಧರ್ಮವನ್ನೂ ‘ಪತ್ರ’ (ಸಾಧಿಸುವ) ಧರ್ಮವನ್ನೂ ‘ವಿಧಿತ’ (ಅನುಭವಿಸುವ) ಧರ್ಮವನ್ನೂ ‘ಪರಿಯೋಗಲ್ಹ’ (ಭೇಧಿಸುವ) ಧರ್ಮವನ್ನೂ ಪಡೆದವನಾಗಿ ಸಂದೇಹ ಭ್ರಮೆಗಳಿಂದ ದೂರನಾಗಿ ಪೂರ್ಣ ವಿಶ್ವಾಸವನ್ನು ಬೆಳಿಸಿಕೊಂಡವನಾಗಿ ಬುದ್ಧ ಶಾಸನವನ್ನೇ ಅವಲಂಬಿಸಿದವನಾಗಿ ಭಗವಾನರನ್ನು ಕುರಿತು “ಗೋತಮರೇ, ಭಿಕ್ಷು ಸಂಘದೊಂದಿಗೆ ನನ್ನ ಮನೆಗೆ ಊಟಕ್ಕೆ ದಯಮಾಡಿಸಬೇಕು ” ಎಂದು ಕೇಳಿಕೊಂಡನು. ಭಗವಾನರು ಮೌನದಿಂದ ತಮ್ಮ ಒಪ್ಪಿಗೆಯನ್ನು ಸೂಚಿಸಿದರು.

ಕೂಟದಂತ ಬ್ರಾಹ್ಮಣನು ಭಗವಾನರು ಒಪ್ಪಿಗೆಯನ್ನು ಸೂಚಿಸಿರುವರೆಂದು ತಿಳಿದ ಮೇಲೆ ಆಸನದಿಂದ ಎದ್ದು ಭಗವಾನರಿಗೆ ಅಭಿವಂದಿಸಿ ಪ್ರದಕ್ಷಿಣೆ ಮಾಡಿ ಅಲ್ಲಿಂದ ಹೊರಟನು. ಆ ರಾತ್ರಿಯು ಕಳೆದ ಮೇಲೆ ಯಜ್ಞಕ್ಕೆ ಸಿದ್ಧಪಡಿಸಿದ ಸ್ಥಳದಲ್ಲಿಯೇ ಶ್ರೇಷ್ಟವಾದ ಖಾದ್ಯ ಪದಾರ್ಥಗಳನ್ನು ಊಟಕ್ಕೆ ಬೇಕಾದ ಇತರ ಪದಾರ್ಥಗಳನ್ನೂ ಮಾಡಿಸಿ ಸಕಾಲದಲ್ಲಿ ಭಗವಾನರಲ್ಲಿಗೆ ಬಂದನು. “ಸಕಾಲವಾಗಿದೆ, ಗೋತಮರೆ, ಊಟವು ಸಿದ್ದವಾಗಿದೆ.”

ಪೂರ್ವಾಹ್ನ ಸಮಯದಲ್ಲಿ ಭಗವಾನರು ಭಿಕ್ಷು ಸಂಘದ ಜೊತೆಯಲ್ಲಿ ಪಾತ್ರೆ ಚೀವರಗಳನ್ನು ತೆಗೆದುಕೊಂಡು ಕೂಟದಂತ ಬ್ರಾಹ್ಮಣನು ಯಜ್ಞಕ್ಕಾಗಿ ಸಿದ್ದಪಡಿಸಿದ ಸ್ಥಳಕ್ಕೆ ಬಂದರು. ಪ್ರತ್ಯೇಕವಾಗಿ ಸಿದ್ಧಪಡಿಸಿದ್ದ ಆಸನದ ಮೇಲೆ ಕುಳಿತರು.

ಆಗ ಕೂಟದಂತನು ಬುದ್ಧರನ್ನೂ ಭಿಕ್ಷುಸಂಘವನ್ನೂ ಶ್ರೇಷ್ಠವಾದ ಖಾದ್ಯ ಪದಾರ್ಥಗಳಿಂದಲೂ ಊಟದ ಇತರ ಪದಾರ್ಥಗಳಿಂದಲೂ ಸಂತೃಪ್ತಿ ಪಡಿಸಿದನು.

ಊಟದ ನಂತರ ಭಗವಾನರು ಪಾತ್ರೆಯನ್ನೂ ಕೈಗಳನ್ನೂ ತೊಳೆದುಕೊಂಡರು. ಆಗ ಕೂಟದಂತನು ಭಗವಾನರ ಪಕ್ಕದಲ್ಲಿ ಬೇರೆ ತಗ್ಗಾದ ಪೀಠದ ಮೇಲೆ ಕುಳಿತನು. ಹೀಗೆ ಕುಳಿತಿದ್ದ ಕೂಟದಂತನಿಗೆ ಭಗವಾನರು ಧರ್ಮ ಬೋಧನೆಯನ್ನು ಮಾಡಿದರು. ಅವನನ್ನು ತೃಪ್ತಿಗೊಳಿಸಿ ಸಂತೋಷಪಡಿಸಿದರು; ಆಮೇಲೆ ಆಸನದಿಂದ ಎದ್ದು ಹೋದರು.

ಇಲ್ಲಿಗೆ ಕೂಟದಂತ ಸುತ್ತ ಮುಗಿಯಿತು.

ಟಿಪ್ಪಣಿಗಳು [3]