ಊಟಿಸುತ್ತಿದೆ

ಅನುವಾದಗಳು [22]

ಮಹಾಸೀಹನಾದ ಸುತ್ತ

ದಿಗಂಬರ ಕಸ್ಸಪನ ವಿಷಯ

ಹೀಗೆ ಕೇಳಿದ್ದೇನೆ: ಒಮ್ಮೆ ಭಗವಾನರು ಮಿಗದಾಯದ ಕಣ್ಣ ಕಥಲದಲ್ಲಿನ ಉರುಞ್ಞದಲ್ಲಿ ತಂಗಿದ್ದರು. ಆಗ ಭಗವಾನರ ಸಮೀಪಕ್ಕೆ ಅಚೇಲ ಕಸ್ಸಪನು ಬಂದನು. ಭಗವಾನರಿಗೆ ಶುಭ ಕೋರಿದನು. ಶುಭ ಕೋರಿ ನಮಸ್ಕರಿಸಿ ಗೌರವ ತೋರಿ ಒಂದು ಕಡೆ ನಿಂತುಕೊಂಡನು. ಆಮೇಲೆ ಅಚೇಲ ಕಸ್ಸಪನು ಭಗವಾನರನ್ನು ಕುರಿತು ಹೀಗೆಂದನು-“ಗೆಳೆಯ ಗೋತಮ, ‘ ಸಮಣ ಗೋತಮನು ಎಲ್ಲ ತಪಸ್ಸನ್ನು ಹಳಿಯುತ್ತಾನೆ. ಎಲ್ಲ ತಾಪಸರನ್ನೂ ಅಲ್ಲಗೆಳೆಯುತ್ತಾನೆ. ಎಲ್ಲ ತಾಪಸರಲ್ಲಿಯೂ ತಮ್ಮ ದೇಹವನ್ನು ಹಿಂಸಿಸಿಕೊಳ್ಳುವವರಲ್ಲಿಯೂ ತಪ್ಪು ಹುಡುಕುತ್ತಾನೆ.’ ಎಂದು ಕೇಳಿದ್ದೇನೆ.

“ಗೋತಮನು ಹೇಳಿದಂತೆಯೆ ಅವರು ಹೇಳಿದರೇ? ಇಲ್ಲವೆ ಭಗವಂತ ಗೋತಮನು ಹೇಳಿದುದನ್ನು ಹೇಳಿದರೇ? ಮುಖ್ಯವಲ್ಲದ ಒಂದು ಅಂಶವನ್ನೇ ಧಮ್ಮವೆಂದು ವಿವರಿಸುತ್ತಿದ್ದಾರೆಯೇ? ಇಲ್ಲವೆ ಧಮ್ಮಕ್ಕೆ ಅನುಗುಣವಾಗಿ ಅದರಿಂದಲೇ ಹೊಮ್ಮಿಬರುವ ಅಂಶವನ್ನು ಹೇಳುತ್ತಿದ್ದಾರೆಯೇ? .ತಿಳಿಸು. ಭಗವಂತ ಗೋತಮನನ್ನು ನಾನು ಹಳಿಯಬಾರದು.”

“ಕಸ್ಸಪ್ಪ, ‘ಸಮಣ ಗೋತಮನು ಎಲ್ಲ ತಾಪಸರನ್ನೂ ಅಲ್ಲಗಳೆಯುತ್ತಾನೆ. ಎಲ್ಲ ತಾಪಸರಲ್ಲಿಯೂ ಮತ್ತು ಶರೀರವನ್ನು ಹಿಂಸಿಸಿ ಕೊಳ್ಳುವ ಎಲ್ಲರಲ್ಲಿಯೂ ತಪ್ಪು ಹುಡುಕುತ್ತಾನೆ’ ಎಂದು ಹೇಳುವರಾರೂ ನಾನು ಹೇಳಿದುದನ್ನು ಸರಿಯಾಗಿ ತಿಳಿದುಕೊಂಡಿಲ್ಲ, ಪ್ರತಿಯಾಗಿ ನಾನು ಹೇಳದುದನ್ನು ಹೇಳಿ ಸುಳ್ಳನ್ನಾಡುತ್ತಿದ್ದಾರೆ. ಮರಣಾನಂತರ ಕಾಯವು ಬೇರೆಯಾದ ಮೇಲೆ ಅಪಾಯಕರವಾದ ದುರ್ಗತಿಹೊಂದಿ ನಿರಯದಲ್ಲಿ ಹುಟ್ಟುವ ತಾಪಸರನ್ನು ಮತ್ತು ದೇಹವನ್ನು ದಂಡಿಸಿಕೊಳ್ಳುವವರನ್ನೂ ನಾನು ಪರಿಶುದ್ಧವಾದ ದಿವ್ಯ ದೃಷ್ಟಿಯಿಂದ ನೋಡಬಲ್ಲವನಾಗಿದ್ದೇನೆ ಸಾಧಾರಣ ಮನುಷ್ಯರು ಇದನ್ನು ನೋಡಲಾರರು. ಹಾಗೆಯೇ, ಕಸ್ಸಪ, ಮರಣಾನಂತರ ಕಾಯವು ಬೇರೆಯಾದ ಮೇಲೆ ಸುಗತಿ ಹೊಂದಿ ಸ್ವರ್ಗಲೋದಲ್ಲಿ ಹುಟ್ಟುವ ತಾಪಸರನ್ನೂ ದೇಹ ಹಿಂಸಕರನ್ನೂ ಸಾಮಾನ್ಯರಿಗಿಲ್ಲದ ದಿವ್ಯ ದೃಷ್ಟಿಯಿಂದ ನೋಡಬಲ್ಲವನಾಗಿದ್ದೇನೆ.

“ಕಸ್ಸಪ, ಮರಣಾನಂತರ ಕಾಯವು ಬೇರೆಯಾದ ಮೇಲೆ ಅಪಾಯವಾದ ದುರ್ಗತಿಯನ್ನು ಹೊಂದಿ ನಿರಯದಲ್ಲಿ ಹುಟ್ಟುವ ತಾಪಸರನ್ನೂ ಅಲ್ಪವಾದ ದು:ಖ ಅನುಭವಿಸಿದವರನ್ನೂ ಸಾಧರಣ ಮನುಷ್ಯರಿಗೆ ಸಾಧ್ಯವಾಗದ ಪರಿಶುದ್ಧವಾದ ದಿವ್ಯ ದೃಷ್ಟಿಯಿಂದ ನೋಡಬಲ್ಲವನಾಗಿದ್ದೇನೆ. ಕಸ್ಸಪ, ಮರಣಾನಂತರ ಕಾಯವು ಬೇರೆಯಾದ ಮೇಲೆ ಸುಗತಿಪಡೆದು ಸ್ವರ್ಗ ಲೋಕದಲ್ಲಿ ಹುಟ್ಟುವ ಕೆಲವು ತಾಪಸರನ್ನೂ ಅಲ್ಪ ದು:ಖ ಅನುಭವಿಸು ವವರನ್ನೂ ಸಾಧಾರಣ ಮನುಷ್ಯರಿಗಿಲ್ಲದ ಪರಿಶುದ್ಧವಾದ ದಿವ್ಯ ದೃಷ್ಟಿಯಿಂದ ನೋಡಬಲ್ಲವನಾಗಿದ್ದೇನೆ. ಕಸ್ಸಪ, ಹೀಗೆ ತಾಪಸರು ಎಲ್ಲಿಂದ ಬಂದರು ಎಲ್ಲಿಗೆ ಹೋಗುತ್ತಾರೆ, ಹೇಗೆ ಚ್ಯುತರಾದರು, ಹೇಗೆ ಹುಟ್ಟಿದರು ಎಂಬುದನ್ನು ಅವರು ಇರುವ ಸ್ಥಿಯಲ್ಲಿಯೇ ನೋಡಬಲ್ಲ ನಾನು ಹೇಗೆ ಎಲ್ಲ ತಾಪಸರನ್ನೂ, ಎಲ್ಲ ದೇಹಹಿಂಸಕರನ್ನೂ ಅಲ್ಲಗೆಳೆಯಬಲ್ಲೆ, ಅವರಲ್ಲಿ ತಪ್ಪು ಹುಡುಕಬಲ್ಲೆ?

“ಕಸ್ಸಪ, ಪಂಡಿತರು, ನಿಪುಣರೂ, ವಾದದಲ್ಲಿ ಗಟ್ಟಿಗರಾದವರೂ ಸೂಕ್ಷ್ಮ ಚತುರತೆಯಿಂದ ವಾದ ಮಾಡುವವರೂ ಆದ ಸಮಣ ಬ್ರಾಹ್ಮಣರಿದ್ದಾರೆ. ಅವರು ಅತಿ ಜಾಣತನದಿಂದ ಪ್ರಜ್ಞೆಯನ್ನು ಪಡೆಯುವ ಬಗೆ ಹೇಗೆ ಮಿಥ್ಯಾದೃಷ್ಟಿಯು ಹೇಗೆ ಉಂಟಾಗುತ್ತದೆ ಎಂಬ ವಾದಗಳನ್ನು ಛಿದ್ರ ಛಿದ್ರ ಮಾಡುತ್ತಾ ಹೋಗುತ್ತಾರೆ. ಅವರು ನನ್ನನ್ನೂ ಕೆಲವು ಸಲ ಒಪ್ಪುತ್ತಾರೆ ಕೆಲವು ಸಲ ನನ್ನನ್ನು ಒಪ್ಪುವುದಿಲ್ಲ,’ ಯಾವುದನ್ನು ಅವರು ಕೆಲವೊಮ್ಮೆ ಸಾಧು ಎಂದು ಹೇಳುತ್ತಾರೋ ಅದನ್ನು ನಾವು ಸಾಧು ಎಂದು ಹೇಳುತ್ತೇವೆ. ಯಾವುದನ್ನು ಅವರು ಕೆಲವೊಮ್ಮೆ ಸಾಧುವಲ್ಲ ಎಂದು ಹೇಳುತ್ತಾರೋ ಅದನ್ನು ಸಾಧುವಲ್ಲ ಎಂದು ನಾವೂ ಹೇಳುತ್ತೇವೆ. ಯಾವುದನ್ನು ಅವರು ಕೆಲವೊಮ್ಮೆ ಸಾಧು ಎಂದು ಹೇಳುತ್ತಾರೋ ಅದನ್ನು ಆಗ ನಾವು ಸಾಧುವಲ್ಲ ಎಂದು ಹೇಳಬಹುದು. ಯಾವುದನ್ನು ಅವರು ಕೆಲವು ಸಲ ಸಾದುವಲ್ಲ ಎಂದು ಹೇಳುತ್ತಾರೋ ಆಗ ನಾವು ಅದು ಸಾಧುವಾಗಿದೆ ಎಂದು ಹೇಳಬಹುದು.

ಯಾವುದನ್ನು ನಾವು ಸಾಧುವೆಂದು ಹೇಳುತ್ತೇವೆಯೋ ಅದನ್ನು ಕೆಲವೊಮ್ಮೆ ಅವರು ಸಾಧುವೆಂದು ಹೇಳುತ್ತಾರೆ. ಯಾವುದನ್ನು ನಾವು ಸಾಧುವಲ್ಲ ಎಂದು ಹೇಳುತ್ತೇವೆಯೋ ಕೆಲವೊಮ್ಮೆ ಅವರೂ ಸಾಧುವಲ್ಲ ಎಂದು ಹೇಳುತ್ತಾರೆ. ಯಾವುದನ್ನು ನಾವು ಸಾಧುವಲ್ಲ ಎಂದು ಹೇಳುತ್ತೇವೆಯೋ ಅದನ್ನು ಅವರು ಕೆಲವೊಮ್ಮೆ ಸಾಧು ಎಂದು ಹೇಳುತ್ತಾರೆ. ಯಾವುದನ್ನು ಸಾಧು ಎಂದು ನಾವು ಹೇಳುತ್ತೇವೆಯೋ ಅವರು ಅದನ್ನು ಕೆಲವು ಸಾರಿ ಸಾಧುವಲ್ಲ ಎಂದು ಹೇಳಿಬಿಡುತ್ತಾರೆ.

ಪರಸ್ಪರ ಚರ್ಚಿಸುವುದರ ಬಗ್ಗೆ

ಅವರ ಹತ್ತಿರ ನಾನು ಹೋಗಿ ಹೇಳಿದೆ: “ನಾವು ಯಾವುದನ್ನು ಪರಸ್ಪರ ಒಪ್ಪುವುದಿಲ್ಲವೋ ಅದನ್ನು ಬಿಡೋಣ. ನಾವು ಯಾವುದನ್ನು ಒಪ್ಪುತ್ತೇವೆಯೋ ಅದನ್ನು ಕುರಿತು ತಿಳಿದವರು ಅವರ ಆಚಾರ್ಯರನ್ನು ಪ್ರಶ್ನಿಸಲಿ, ಅವುಗಳ ಕಾರಣವನ್ನು ಕೇಳಲಿ, ಚರ್ಚಿಸಲಿ ಅಥವಾ ಗೆಳೆಯರನ್ನು ಪ್ರಶ್ನಿಸಲಿ, ಕಾರಣವನ್ನು ಕೇಳಲಿ, ಚರ್ಚಿಸಲಿ. ಅಕುಶಲವಾಗಿರುವ ವರ್ಜನೀಯವಾದ ಕಳಂಕಪೂರಿತವಾದ ಅಶುದ್ಧವಾದ ಧರ್ಮಗಳು ಯಾವುವು? ಯಾವ ಧರ್ಮಗಳನ್ನು ನೀವು ಅಕುಶಲವಾಗಿವೆ, ವರ್ಜನೀಯ, ಶುದ್ಧವಾಗಿಲ್ಲ, ಕಲ್ಮಶ ಪೂರಿತವಾಗಿವೆ ಎಂದು ಹೇಳುತ್ತೀರಿ. ಇವುಗಳನ್ನು ಸಂಪೂರ್ಣವಾಗಿ ತೊರೆದಿರುವವರು ಯಾರು? ಸಮಣ ಗೋತಮನೋ ಅಥವಾ ಇತರೆ ಗಣಾಚಾರ್ಯರೋ?”

“ಕಸ್ಸಪ, ಪರಸ್ಪರ ಪ್ರಶ್ನಿಸಿಕೊಂಡು ಪ್ರತಿ ಪ್ರಶ್ನೆಗಳನ್ನು ಕೇಳಿಕೊಂಡು (ತಾವು ಕೇಳುವುದಕ್ಕೆ) ಕಾರಣಗಳನ್ನು ಕೇಳಿಕೊಂಡು ಚರ್ಚಿಸುವ ಜಾಣರನ್ನು ಹೀಗೆ ಹೇಳಬಹುದು: ಯಾವ ಧರ್ಮಗಳು ಅಕುಶಲವಾದ ವರ್ಜನೀಯವಾಗಿವೆ ಕಳಂಕಪೂರಿತ ಅಶುದ್ಧವಾಗಿವೆ ಅಥವಾ ಯಾವ ಧರ್ಮಗಳನ್ನು ಅಕುಶಲವಾಗಿವೆ ವರ್ಜನೀಯವಾಗಿವೆ. ಅಶುದ್ಧವಾಗಿವೆ ಕಲ್ಮಶಪೂರಿತವಾಗಿವೆ ಎಂದು ಹೇಳುತ್ತಾರೆ- ಆ ಧರ್ಮಗಳನ್ನು ಸಂಪೂರ್ಣವಾಗಿ ತೊರೆದಿರುವವನು ಗೌತಮನಷ್ಟೇ ಇತರ ಗಣಾಚಾರ್ಯರು ಪೂರ್ಣವಾಗಿ ತೊರೆದಿರುವರೇ?’ ಕಸ್ಸಪ, ಪರಸ್ಪರ ಪ್ರಶ್ನಿಸಿಕೊಂಡು ಪ್ರತಿ ಪ್ರಶ್ನೆಗಳನ್ನು ಹಾಕಿಕೊಂಡು (ತಾವು ಕೇಳಿದುದಕ್ಕೆ) ಕಾರಣಗಳನ್ನು ಕೇಳಿಕೊಂಡು ಚರ್ಚಿಸುವ ಜಾಣರು ನಮ್ಮನ್ನು ಹೀಗೆ ಬಹುಹೊತ್ತು ಪ್ರಶಂಸಿಸುತ್ತಾರೆ.

“ಮತ್ತೆ ಕಸ್ಸಪ, ತಿಳಿದವರು ಅವರ ಆಚಾರ್ಯರನ್ನು ಪ್ರಶ್ನಿಸಲಿ, ಕಾರಣಗಳನ್ನು ಕೇಳಲಿ, ಚರ್ಚಿಸಲಿ ಅಥವಾ ಅವರ ಗೆಳೆಯರನ್ನು ಪ್ರಶ್ನಿಸಲಿ, ಕಾರಣಗಳನ್ನು ಕೇಳಲಿ, ಚರ್ಚಿಸಲಿ.

“ಕುಶಲವಾಗಿರುವ ವರ್ಜನೀಯವಲ್ಲದ ಕಳಂಕರಹಿತವಾದ ಶುದ್ಧವಾಗಿ ರುವ ಧರ್ಮಗಳು ಯಾವುವು, ಯಾವ ಧರ್ಮಗಳನ್ನು ಕುಶಲವಾಗಿವೆ, ವರ್ಜನೀಯವಲ್ಲ, ಕಳಂಕರಹಿತವಾಗಿದೆ, ಶುದ್ಧವಾಗಿವೆ ಎಂದು ನೀವು ಹೇಳುತ್ತೀರಿ ಇವುಗಳನ್ನು ತಪ್ಪದೆ ಪಾಲಿಸುತ್ತಿರುವವರು ಯಾರು, ಸಮಣ ಗೋತಮನೋ ಅಥವಾ ಇತರ ಗಣಾಚಾರ್ಯರೋ?’

“ಕಸ್ಸಪ; ಪರಸ್ಪರ ಪ್ರಶ್ನಿಸಿಕೊಂಡು ಪ್ರತಿ ಪ್ರಶ್ನೆಗಳನ್ನು ಕೇಳಿಕೊಂಡು ಕಾರಣಗಳನ್ನು ವಿವರಿಸುವಂತೆ ಕೇಳಿಕೊಂಡು ಚರ್ಚೆ ಮಾಡುವ ಜಾಣರು ಹೀಗೆ ಹೇಳಬಹುದು: ‘ ಕುಶಲವಾಗಿರುವ ವರ್ಜನೀಯವಲ್ಲದ ಕಳಂಕ ರಹಿತವಾದ ಶುದ್ದವಾದ ಧರ್ಮಗಳು ಯಾವುವು, ಯಾವ ಧರ್ಮಗಳನ್ನು ನೀವು ಕುಶಲವಾಗಿವೆ, ವರ್ಜನೀಯವಲ್ಲ, ಕಳಂಕರಹಿತವಾಗಿವೆ ಶುದ್ಧವಾಗಿವೆ ಎಂದು ನೀವು ಹೇಳುತ್ತೀರಿ ಅದನ್ನು ತಪ್ಪದೆ ಪಾಲಿಸುತ್ತಿರುವವನು ಸಮಣ ಗೋತಮನಷ್ಟೆ. ಇತರೆ ಗಣಾಚಾರ್ಯರು ತಪ್ಪದೆ ಪಾಲಿಸುತ್ತಿರುವರೆ?’ ಕಸ್ಸಪ, ಪರಸ್ಪರ ಪ್ರಶ್ನಿಸಿಕೊಂಡು ಪ್ರತಿ ಪ್ರಶ್ನೆಗಳನ್ನು ಕೇಳಿಕೊಂಡು ತಾವು ಕೇಳಿದುದಕ್ಕೆ ಕಾರಣಗಳನ್ನು ಹೇಳಿಕೊಂಡು ಚರ್ಚೆ ಮಾಡುವ ಜಾಣರು ನಮ್ಮನ್ನು ಹೀಗೆ ಬಹುಹೊತ್ತು ಪ್ರಶಂಸಿಸುತ್ತಾರೆ.

“ಕಸ್ಸಪ, ಪರಸ್ಪರ ಪ್ರಶ್ನಿಸಿಕೊಂಡು, ಪ್ರತಿ ಪ್ರಶ್ನೆಗಳನ್ನು ಹಾಕಿಕೊಂಡು (ತಾವು ಕೇಳುವುದಕ್ಕೆ) ಕಾರಣಗಳನ್ನು ಕೇಳಿಕೊಂಡು ಚರ್ಚಿಸುವ ಜಾಣರು ತಮ್ಮ ಆಚಾರ್ಯರನ್ನೋ, ಗೆಳೆಯರನ್ನೋ ಹೀಗೆ ಕೇಳಬಹುದು; ಅಥವಾ ಅವರೊಂದಿಗೆ ಹೀಗೆ ಚರ್ಚಿಸಬಹುದು: “ಯಾವ ಧರ್ಮಗಳು ಅಕುಶಲವಾಗಿ ವೆಯೋ ವರ್ಜನೀಯವೋ ಕಳಂಕಪೂರಿತವೋ ಅಶುದ್ಧವಾದುವೋ ಅಥವ ಯಾವ ಧರ್ಮಗಳು ಅಕುಶಲವಾಗಿವೆ. ವರ್ಜನೀಯ ಕಳಂಕ ಪೂರಿತ ಅಶುದ್ಧ ಎಂದು ಹೇಳುತ್ತಾರೋ ಅವುಗಳನ್ನು ಸಂಪೂರ್ಣವಾಗಿ ತೊರೆದಿರುವುದು ಗೋತಮನ ಶಿಷ್ಯ ಸಂಘವೋ ಅಥವಾ ಇತರೆ ಗಣಾಚಾರ್ಯರ ಸಂಘಗಳೋ?

“ಕಸ್ಸಪ, ಪರಸ್ಪರ ಪ್ರಶ್ನಿಸಿಕೊಂಡು ಪ್ರತಿ ಪ್ರಶ್ನೆಗಳನ್ನು ಹಾಕಿಕೊಂಡು (ತಾವು ಕೇಳಿದುದಕ್ಕೆ) ಕಾರಣಗಳನ್ನು ಕೇಳಿಕೊಂಡು ಚರ್ಚಿಸುವ ಜಾಣರು ಹೀಗೆ ಹೇಳಬಹುದು; “ಯಾವ ಧರ್ಮಗಳು ಅಕುಶಲವಾಗಿವೆಯೋ ವರ್ಜನೀಯವೋ ಕಳಂಕಪೂರಿತವೋ ಅಶುದ್ಧವಾದುವೋ ಅಥವ ಯಾವ ಧರ್ಮಗಳನ್ನು ಅಕುಶಲ ವರ್ಜನೀಯ ಕಳಂಕ ಪೂರಿತ ಅಶುದ್ಧವೆಂದು ಹೇಳುತ್ತಾರೋ ಅವುಗಳನ್ನು ತೊರೆದಿರುವುದು ಗೋತಮನ ಶಿಷ್ಯ ಸಂಘವಷ್ಟೆ. ಬೇರೆ ಗಣಚಾರ್ಯರ ಶಿಷ್ಯ ಸಂಘಗಳು ತೊರೆದಿವೆಯೇ?’ ಕಸ್ಸಪ, ಪರಸ್ಪರ ಪ್ರಶ್ನಿಸಿಕೊಂಡು ಪ್ರತಿ ಪ್ರಶ್ನೆಗಳನ್ನು ಹಾಕಿಕೊಂಡು (ತಾವು ಕೇಳಿದುದಕ್ಕೆ) ಕಾರಣಗಳನ್ನು ಕೇಳಿಕೊಂಡು ಚರ್ಚಿಸುವ ಜಾಣರು ನಮ್ಮನ್ನು ಬಹುಹೊತ್ತು ಹೀಗೆ ಪ್ರಶಂಸಿಸುತ್ತಾರೆ.

“ಮತ್ತೆ ಕಸ್ಸಪ, ಪರಸ್ಪರ ಪ್ರಶ್ನಿಸಿಕೊಂಡು ಪ್ರತಿ ಪ್ರಶ್ನೆಗಳನ್ನು ಹಾಕಿಕೊಂಡು ತಾವು ಕೇಳಿದುದಕ್ಕೆ) ಕಾರಣಗಳನ್ನು ಕೇಳಿಕೊಂಡು ಚರ್ಚಿಸುವ ಜಾಣರು ತಮ್ಮ ಆಚಾರ್ಯರನ್ನೂ, ಗೆಳೆಯರನ್ನೊ ಹೀಗೆ ಕೇಳಬಹುದು; ಅಥವಾ ಅವರೊಂದಿಗೆ ಹೀಗೆ ಚರ್ಚಿಸಬಹುದು: “ಯಾವ ಧರ್ಮಗಳು ಕುಶಲವಾಗಿವೆಯೋ, ವರ್ಜನೀಯವಲ್ಲವೋ, ಕಳಂಕರಹಿತವಾದವೋ, ಶುದ್ಧವಾಗಿವೆಯೋ ಅಥವಾ ಯಾವ ಧರ್ಮಗಳನ್ನು ಕುಶಲವಾಗಿವೆ, ವರ್ಜನೀಯವಲ್ಲ, ಕಳಂಕರಹಿತ ಮತ್ತು ಶುದ್ಧ ಎಂದು ಹೇಳುತ್ತಾರೋ ಆ ಧರ್ಮಗಳನ್ನು ತಪ್ಪದೆ ಪಾಲಿಸುತ್ತಿರುವವರು ಯಾರು? ಗೋತಮನ ಶಿಷ್ಯ ಸಂಘವೋ ಅಥವಾ ಬೇರೆ ಗಣಾಚಾರ್ಯರ ಶಿಷ್ಯ ಸಂಘಗಳೋ?

‘ಕಸ್ಸಪ, ಪರಸ್ಪರ ಪ್ರಶ್ನಿಸಿಕೊಂಡು ಪ್ರತಿ ಪ್ರಶ್ನೆಗಳನ್ನು ಕೇಳಿಕೊಂಡು ಕಾರಣಗಳನ್ನು ವಿವರಿಸುವಂತೆ ಕೇಳಿಕೊಂಡು ಚರ್ಚೆ ಮಾಡುವ ಜಾಣರು ಹೀಗೆ ಹೇಳಬಹುದು: ‘ಯಾವ ಧರ್ಮಗಳು ಕುಶಲವಾಗಿವೆಯೋ ವರ್ಜನೀಯ ವಲ್ಲವೋ ಕಳಂಕರಹಿತವೋ ಶುದ್ಧವೋ ಅಥವಾ ಯಾವ ಧರ್ಮಗಳನ್ನು ಕುಶಲ ವರ್ಜನೀಯವಲ್ಲ ಕಳಂಕರಹಿತ ಶುದ್ಧ ಎಂದು ಹೇಳುತ್ತಾರೋ ಆ ಧರ್ಮಗಳನ್ನು ತಪ್ಪದೆ ಪಾಲಿಸುತ್ತಿರುವುದು ಗೋತಮನ ಶಿಷ್ಯ ಸಂಘವಷ್ಟೆ. ಬೇರೆ ಗಣಾಚಾರ್ಯರ ಶಿಷ್ಯ ಸಂಘಗಳು ಪಾಲಿಸುತ್ತಿವೆಯೇ?- ಕಸ್ಸಪ, ಪರಸ್ಪರ ಪ್ರಶ್ನಿಸಿಕೊಂಡು ಪ್ರತಿ ಪ್ರಶ್ನೆಗಳನ್ನು ಹಾಕಿಕೊಂಡು (ತಾವು ಕೇಳಿದುದಕ್ಕೆ) ಕಾರಣಗಳನ್ನು ಕೇಳಿಕೊಂಡು ಚರ್ಚಿಸುವ ಜಾಣರು ನಮ್ಮನ್ನು ಬಹುಹೊತ್ತು ಹೀಗೆ

ಪ್ರಶಂಸಿಸುತ್ತಾರೆ.

ಆರ್ಯ ಅಷ್ಠಾಂಗಿಕ ಮಾರ್ಗ

“ಕಸ್ಸಪ, ಒಂದು ಮಾರ್ಗವಿದೆ, ಒಂದು ಕ್ರಮವಿದೆ. ಆ ಮಾರ್ಗದಲ್ಲಿ ನಡೆದವನು ಆ ಕ್ರಮವನ್ನು ಅನುಸರಿಸುವವನು/ ಸಮಣಗೋತಮನು ಉಚಿತ ಕಾಲದಲ್ಲಿ ಮಾತನಾಡುವವನೂ ಸತ್ಯವನ್ನು ಕಂಡು ಹೇಳುವವನೂ ಆಗಿದ್ದಾನೆ. ಅರ್ಥವತ್ತಾದುದನ್ನು, ಧಮ್ಮ ವಿನಯಗಳನ್ನು ವಿವರಿಸುವವನೂ ಆಗಿದ್ದಾನೆ’ ಎಂಬುದನ್ನು ನೋಡಬಲ್ಲವನಾಗುತ್ತಾನೆ, ತಿಳಿಯಬಲ್ಲವನಾಗುತ್ತಾನೆ.

“ಕಸ್ಸಪ, ಆ ಮಾರ್ಗ ಯಾವುದು? ಆ ಕ್ರಮ ಯಾವುದು? ಯಾವ ಮಾರ್ಗದಲ್ಲಿ ನಡೆಯುವವನು ಸಮಣ ಗೋತಮನು ಉಚಿತಕಾಲದಲ್ಲಿ ಮಾತನಾಡುವವನೂ ಸತ್ಯವನ್ನು ಹೇಳುವವನೂ ಅರ್ಥವತ್ತಾದುದನ್ನೂ ಧರ್ಮ ವಿನಯಗಳನ್ನೂ ವಿವರಿಸುವವನೂ ಆಗಿದ್ದಾನೆ ಎಂಬುದನ್ನು ನೋಡಬಲ್ಲ, ತಿಳಿಯಬಲ್ಲ? ಅದೇ ಅರಿಯ ಅಟ್ಟಂಗಮಗ್ಗ . ಅಂದರೆ-ಸಮ್ಮಾದಿಟ್ಠಿ, ಸಮ್ಮಾ ಸಂಕಪ್ಪ, ಸಮ್ಮಾ ವಾಚಾ, ಸಮ್ಮಾ ಕಮ್ಮಾಂತ, ಸಮ್ಮಾ ಜೀವ, ಸಮ್ಮಾ ವಾಯಾಮ, ಸಮ್ಮಾಸತಿ ಮತ್ತು ಸಮ್ಮಾ ಸಮಾಧಿ. ಈ ಮಾರ್ಗದಲ್ಲಿ ನಡೆಯುವವನೇ ಸಮಣಗೋತಮನು ಉಚಿತಕಾಲದಲ್ಲಿ ಮಾತನಾಡುವವನೂ ಸತ್ಯವನ್ನು ಕಂಡು ಹೇಳುವವನೂ ಅರ್ಥವತ್ತಾದುದನ್ನೂ ಧಮ್ಮ ವಿನಯ ಗಳನ್ನು ವಿವರಿಸುವವನೂ ಆಗಿದ್ದಾನೆ ಎಂಬುದನ್ನು ನೋಡುತ್ತಾರೆ ತಿಳಿಯುತ್ತಾರೆ.”

ತಪಸ್ಸಿನ ಪರಿಕ್ರಮಗಳ ಬಗ್ಗೆ

“ಹೀಗೆ ಹೇಳಿದ ಭಗವಾನರನ್ನು ಕುರಿತು ಅಚೇಲ ಕಸ್ಸಪನು ಹೀಗೆಂದನು: “ಗೆಳೆಯ ಗೋತಮ, ಸಮಣ ಬ್ರಾಹ್ಮಣರು ಸಮಣನಾಗಲು ಮತ್ತು ಬ್ರಾಹ್ಮಣನಾಗಲು ಮಾಡಬೇಕಾದ ತಪಸ್ಸಿನ ಕ್ರಮಗಳು ಇವು ಎಂದು ಹೇಳುತ್ತಾರೆ: ಬಟ್ಟೆಯನ್ನು ಹಾಕಿಕೊಳ್ಳದಿರುವುದು, ಎಲ್ಲ ಆಚಾರಗಳನ್ನೂ ಬಿಡುವುದು(ಅಂದರೆ ನಾಗರಿಕರಾದವರು ಮಾಡುವಂತೆ ಕುಳಿತುಕೊಂಡಾಗಲೀ, ಬಗ್ಗಿಕೊಂಡಾಗಲೀ ಊಟ ಮಾಡದೆ ಇತರ ಕರ್ಮಗಳನ್ನು ಮಾಡದೆ ಅವೆಲ್ಲವನೂ ನಿಂತುಕೊಂಡೇ ಮಾಡುವುದು). ಕೈಯನ್ನು ಚೆನ್ನಾಗಿ ಕೊಳೆಯಿಲ್ಲದಂತೆ ನೆಕ್ಕಿಬಿಡುವುದು (ಅಂದರೆ ಊಟವಾದ ಮೇಲೆ ತೊಳೆದು ಕೊಳ್ಳುವುದಕ್ಕೆ ಪ್ರತಿಯಾಗಿ) ಭಿಕ್ಷೆಗಾಗಿ ಹೋದಾಗ, ಹತ್ತಿರಕ್ಕೆ ಬನ್ನಿ ಅಥವಾ ಸ್ವಲ್ಪ ಹೊತ್ತು ಕಾದಿರಿ ಎಂದು ಹೇಳಿದಾಗ (ಬೇರೆಯವರ ಮಾತನ್ನು ಕೇಳಿ ತಬ್ಬಿಬ್ಬಾಗಿ ತಪ್ಪು ಮಾಡುವುದನ್ನು ತಪ್ಪಿಸಿಕೊಳ್ಳಲು) ಮುಂದೆ ಸಾಗುವುದು. ಭಿಕ್ಷೆಗೆ ಹೋಗುವ ಮೊದಲು ತಂದ ಆಹಾರವನ್ನು ನಿರಾಕರಿಸುವುದು, ತನಗಾಗಿಯೇ ಮಾಡಿದ ಆಹಾರವನ್ನು ನಿರಾಕರಿಸುವುದು ಯಾವ ಆಮಂತ್ರಣವನ್ನೂ ಸ್ವೀಕರಿಸದಿರುವುದು.

“ಅಂಥವನು ಅಡಿಗೆ ಮಾಡಿದ ಪಾತ್ರ್ರೆಯಿಂದಲೇ ಭಿಕ್ಷೆಯನ್ನು ಸ್ವೀಕರಿಸುವುದಿಲ್ಲ. ಕಲೋಪಿ13 ಯಿಂದ ಭಿಕ್ಷೆಯನ್ನು ಸ್ವೀಕರಿಸುವುದಿಲ್ಲ. ಹೊಸಲಿನೊಳಗೆ ನಿಂತು ನೀಡಿದ ಭಿಕ್ಷೆಯನ್ನು ಸ್ವೀಕರಿಸುವುದಿಲ್ಲ. ದಂಡಗಳ ನಡುವೆ ಇಟ್ಟ ಭಿಕ್ಷವನ್ನು ಸ್ವೀಕರಿಸುವುದಿಲ್ಲ. ಒನಕೆ (ಮುಸಲ)ಗಳ ನಡುವೆ ಇಟ್ಟ ಭಿಕ್ಷವನ್ನು ಸ್ವೀಕರಿಸುವುದಿಲ್ಲ; ಊಟ ಮಾಡುತ್ತಿದ್ದಾಗ (ಅವರು) ನೀಡಿದ ಭಿಕ್ಷವನ್ನು ಸ್ವೀಕರಿಸುವುದಿಲ್ಲ, ಗರ್ಭಿಣಿಯರಿಂದ ಭಿಕ್ಷವನ್ನು ಸ್ವೀಕರಿಸುವುದಿಲ್ಲ. ಮೊಲೆಯುಣಿಸುತ್ತಿರುವ ಹೆಂಗಸಿನಿಂದ ಭಿಕ್ಷೆಯನ್ನು ಸ್ವೀಕರಿಸುವುದಿಲ್ಲ, ಗಂಡಸನ್ನು ಕೂಡಿಕೊಂಡಿದ್ದಾಗ ಅಂಥ ಹೆಂಗಸಿನಿಂದ ಭಿಕ್ಷೆ ಸ್ವೀಕರಿಸುವುದಿಲ್ಲ ಬರಗಾಲದಲ್ಲಿಯಾಗಲೀ ನಾಯಿಯ ಸಮೀಪದಲ್ಲಾಗಲೀ ನೊಣ ತುಂಬಿದ ಕಡೆಗಳಲ್ಲಾಗಲೀ ಭಿಕ್ಷೆ ಸ್ವೀಕರಿಸುವುದಿಲ್ಲ. ಮೀನು ಮಾಂಸಗಳನ್ನು ಸುರೆ ಮತ್ತು ಇತರೆ ಮತ್ತೇರಿಸುವ ಪಾನೀಯಗಳನ್ನಾಗಲೀ ಹುಳಿ ಹಿಡಿದ ಗಂಜಿಯನ್ನಾಗಲೀ ಸ್ವೀಕರಿಸುವುದಿಲ್ಲ. ಒಂದು ಮನೆಯಲ್ಲಿ ಮಾತ್ರ ಭಿಕ್ಷೆಯನ್ನು ಸ್ವೀಕರಿಸುವವನನ್ನು ಏಕಾಲೋಪಿಕನೆಂದೂ, ಎರಡು ಮನೆಗಳಲ್ಲಿ ಭಿಕ್ಷೆ ಸ್ವೀಕರಿಸುವವನನ್ನು ದೂಲೋಪಿಕನೆಂದೂ, ಏಳು ಮನೆಗಳಲ್ಲಿ ಮಾತ್ರ ಭಿಕ್ಷೆ ಮಾಡುವವನನ್ನು ಸತ್ತಾಲೋಪಿಕನೆಂದೂ ಕರೆಯುತ್ತಾರೆ, ಒಂದು ಸಾರಿ, ಅಥವಾ ಎರಡು ಸಾರಿ, ಇಲ್ಲವೇ ಇದರಂತೆಯೇ ಏಳು ಸಾರಿ ಮಾತ್ರ (ಒಂದು ದಿನದಲ್ಲಿ) ಭಿಕ್ಷೆ ಕೇಳುತ್ತಾನೆ. ಒಂದೇ ಹೊತ್ತು ಊಟ ಮಾಡಿಕೊಂಡೇ, ಎರಡು ದಿನಕ್ಕೊಮ್ಮೆ ಊಟ ಮಾಡಿಕೊಂಡೋ ಇದರಂತೆಯೇ ಮೂರು, ನಾಲ್ಕು, ಐದು, ಆರು ಅಥವಾ ಏಳು ದಿನಗಳಿಗೊಂದುಸಾರಿ ಊಟ ಮಾಡಿಕೊಂಡೋ ಬರುತ್ತಾನೆ. ಹೀಗೆಯೇ ಅರ್ಧ ತಿಂಗಳಿಗೊಂದು ಸಾರಿ ಮಾತ್ರ ಊಟ ಮಾಡಿಕೊಂಡಿರುತ್ತಾನೆ.

“ಗೆಳೆಯ ಗೋತಮ. ಸಮಣ ಬ್ರಾಹ್ಮಣರು ಶ್ರಾಮಣ್ಯ ಅಥವಾ ಬ್ರಾಹ್ಮಣ್ಯತ್ವವನ್ನು ಪಡೆಯಬೇಕೆನ್ನುವವನು ಮಾಡಬೇಕದ ತಪಸ್ಸಿನ ಕ್ರಮ ಗಳನ್ನು ಇವು ಎಂದು ವಿವರಿಸುತ್ತಾರೆ; ಅವನು ಶಾಖಾಹಾರಿಯಾಗಿಯೇ ಇರಬೇಕು. ಸಾಮಕದ ಅನ್ನವನ್ನೊ ನಿವಾರವನ್ನೋ ದದ್ದುಲವನ್ನೋ, ಹಟ(?) ವನ್ನೋ, ನುಚ್ಚನ್ನೋ ನಿವಾರವನ್ನೋ ಆಚಾಮ (ಪ್ರಾಯಶ: ಕುಸಬಲಕ್ಕಿಯ ನುಚ್ಚು)ನ್ನೋ ಪಿಣ್ಣಕ(?) ವನ್ನೋ ಹುಲ್ಲನ್ನೋ, ಗೋಮಯವನ್ನೋ, ಕಾಡಿನ ಗೆಡ್ಡೆ ಗೆಣಸು ಹಣ್ಣುಗಳನ್ನೋ ಕೆಳಕ್ಕೆ ಬಿದ್ದ ಹಣ್ಣನ್ನು ತಿಂದುಕೊಂಡೇ ಇರಬೇಕು.

“ಗೆಳೆಯ ಗೋತಮ ಸಮಣ ಬ್ರಾಹಣರು ಸಮಣತ್ವ ಅಥವಾ ಬ್ರಾಹ್ಮಣ್ಯವನ್ನು ಪಡೆಯಬೇಕೆನ್ನುವವನು ಮಾಡಬೇಕಾದ ತಪಸ್ಸಿನ ಕ್ರಮಗಳು ಇವು ಎಂದು ವಿವರಿಸುತ್ತಾರೆ. ನಾರಿನ ಬಟ್ಟೆಯನ್ನೋ. ನಾರಿನೊಂದಿಗೆ ಇತರ ವಸ್ತ್ರಗಳನ್ನು ಸೇರಿಸಿ ಮಾಡಿದ ಬಟ್ಟೆಯನ್ನೋ (ಮಸಾಣ) ಶವಕ್ಕೆ ಹೊದಿಸಿ ಬಿಸಾಡಿದ ಬಟ್ಟೆಯನ್ನೋ ಬಿಸಾಡಿದ ಚಿಂದಿಗಳನ್ನು ಸೇರಿಸಿ ಹೊಲೆದ ಬಟ್ಟೆ (ಪಂಸಕೂಲ)ಗಳನ್ನೋ ತಿರೀತಿಕದ ತೊಗಟೆಗಳನ್ನೋ ಕಪ್ಪು ಜಿಂಕೆಯ ಚರ್ಮವನ್ನೋ ಅಥವಾ ಅಂಥ ಚರ್ಮದ ತುಂಡುಗಳಿಂದ ಮಾಡಿದುದನ್ನೋ, ಕುಶದ ಹುಲ್ಲಿನಿಂದ ಮಾಡಿದ ಉಡುಗೆಯನ್ನೋ, ತೊಗಡಟೆಯನ್ನೋ ಹಲಗೆಯ(ಫಲಿಕಬೇರಂ) ಚೂರುಗಳನ್ನು ಸೇರಿಸಿ ಮಾಡಿದ ಉಡುಗೆಯನ್ನೋ ಕೂದಲಿನ ಕಂಬಳಿಯನ್ನೋ, ಗೂಬೆಗಳ ಗರಿಯಿಂದ ಮಾಡಿದ ಕಂಬಳಿಯನ್ನೋ ಉಟ್ಟುಕೊಂಡೇ ಜೀವಿಸಬೇಕು. ಗಡ್ಡ ಕೂದಲಗಳನ್ನು ತನ್ನ ಕೈಯಿಂದ ಕಿಳುವಂತನಾಗಿರಬೇಕು (ಕ್ಷೌರ ಮಾಡಿಸಿಕೊಳ್ಳಬಾರದು, ಮಾಡಿಕೊಳ್ಳ ಬಾರದು), ಕೊಟ್ಟ ಆಸನವನ್ನು ನಿರಾಕರಿಸಿ ನಿಂತು ಕೊಳ್ಳುವವನಾಗಿರಬೇಕು, ಕಾಲು ಮಡಿಚಿಕೊಂಡೆ ಕೂರುವವನಾಗಿರಬೇಕು, ಮುಳ್ಳಿನ ಮೇಲೆ ನಡೆಯುವವನು ನಿಲ್ಲುವವನು ಮಲಗುವವನು ಆಗಿರಬೇಕು. ಹಲಗೆಯಮೇಲೆ ಮಲಗಬಲ್ಲವವ ನಾಗಿರಬೇಕು. ನೆಲದ ಮೇಲೆ ಮಲಗಬಲ್ಲವನಾಗಿರಬೇಕು. ಧೂಳನ್ನು ಧರಿಸಕೊಂಡು ಒಂದು ಮಗ್ಗುಲಲ್ಲಿ ಮಲಗುವವನಾಗಿರಬೇಕು. ಬಯಲಿನಲ್ಲಿ ಮಲಗುವನಾಗಿರಬೇಕು. ಕೊಟ್ಟ ಆಸನವು ಎಂಥದೇ ಇರಲಿ ಅದನ್ನು ಹಂಕಾರದಿಂದ ತಿರಸ್ಕರಿಸದವನಾಗಿರಬೇಕು. ವಿಕಟ ಭೋಜನವನ್ನು ಮಾಡುವವನಾಗಿರಬೇಕು14 ಯಾವುದನ್ನು ಕುಡಿಯುವ ಅಭ್ಯಾಸವನ್ನಿಟ್ಟುಕೊಳ್ಳದ ಅಪಾನಿಕನಾಗಿರಬೆಕು.ಸಾಯಂಕಾಲ ತಣ್ಣೀರಿನಲ್ಲಿ ಸ್ನಾನ ಮಾಡುವವನೂ ದಿನಕ್ಕೆ ಮೂರುಸಾರಿ ತಣ್ಣೀರಿನಲ್ಲಿ ಮೀಯುವವನೂ ಆಗಿರಬೇಕು.

ತಪಸ್ಸಿನ ಪರಿಕ್ರಮಗಳಲ್ಲಿ ನಿರತರಾಗುವ ವಿಷಯ

“ಅಚೇಲ ಕಸ್ಸಪ, ದಿಗಂಬರನಾಗಿರುವುದು ಎಲ್ಲ ಆಚಾರಗಳನ್ನೂ ಬಿಟ್ಟಿರುವುದು..ಅರ್ಧ ತಿಂಗಳಿಗೊಮ್ಮೆ ಊಟ ಮಾಡಿಕೊಂಡಿರುವುದು ಇವುಗಳಷ್ಟನ್ನೇ ಅನುಸರಿಸುವವನು ಶೀಲಸಂಪನ್ನನಾಗಲೀ, ಚಿತ್ತ ಸಂಪನ್ನ ನಾಗಲೀ ಪಞ್ಞಾಸಂಪನ್ನನಾಗಲೀ ಅಗುವುದಿಲ್ಲ, ಶೀಲ ಚಿತ್ತ ಪಞ್ಞಾಸಂಪತ್ತುಗಳನ್ನು ಗಳಿಸುವುದಿಲ್ಲ. ಅವನು ಶ್ರಾಮಣ್ಯವನ್ನಾಗಲೀ ಬ್ರಹ್ಮಣ್ಯವನ್ನಾಗಲೀ ಪಡೆಯಲಾರ. ಕಸ್ಸಪ, ವೈರ ದ್ವೇಷಗಳಿಂದ ದೂರವಾದ ಮೈತ್ರಿ ಚಿತ್ತವನ್ನು ಪಡೆದುಕೊಂಡು ದೃಷ್ಠಿಗೋಚರವಾದ ಈ ಲೋಕದಲ್ಲಿದ್ದರೂ ಉತ್ಕೃಷ್ಟವಾದ ಜ್ಞಾವನ್ನು ಗಳಿಸಿ ಆಸವಗಳ ನಾಶದಿಂದ ಪರಿಶುದ್ಧವಾದ ಚಿತ್ತ ಪಞ್ಞಾಗಳಲ್ಲಿ ಯಾವ ಭಿಕ್ಷುವು ವಿಹರಿಸುತ್ತಿರುವನ್ನೋ ಅವನನ್ನು ಸಮಣನೆಂದು ಕರೆಯುತ್ತೇನೆ, ಬ್ರಾಹ್ಮಣನೆಂದು ಕರೆಯುತ್ತೇನೆ.

“ಕಸ್ಸಪ, ಶಾಖಾಹಾರಿಯಾಗಿಯೋ, ಸಾಮಕದ ಅನ್ನವನ್ನೋ, ಗೆಡ್ಡೆ ಗೆಣಸು ಹಣ್ಣುಗಳನ್ನೊ ತಿಂದುಕೊಂಡು ಕೆಳಗೆ ಬಿದ್ದ ಹಣ್ಣುಗಳನ್ನು ಮಾತ್ರ ತಿಂದುಕೊಂಡಿರುವವನು ಶೀಲಸಂಪನ್ನನಾಗಲೀ ಚಿತ್ತ ಸಂಪನ್ನನಾಗಲೀ ಪಞ್ಞಾ ಸಂಪನ್ನನಾಗಲೀ ಅಗುವುದಿಲ್ಲ. ಶೀಲ ಚಿತ್ತ ಪಞ್ಞಾಸಂಪತ್ತುಗಳನ್ನು ಗಳಿಸು ವುದಿಲ್ಲ. ಅವನು ಶ್ರಾಮಣ್ಯವನ್ನಾಗಲೀ ಬ್ರಾಹ್ಮಣ್ಯವನ್ನಾಗಲೀ ಪಡೆಯಲಾರ. ಕಸ್ಸಪ, ವೈರ ದ್ವೇಷಗಳಿಂದ ದೂರವಾದ ಮೈತ್ರಿ ಚಿತ್ತವನ್ನು ಪಡೆದುಕೊಂಡು ದೃಷ್ಠಿಗೋಚರವಾದ ಈ ಲೋಕದಲ್ಲಿದ್ದರೂ ಉತ್ಕೃಷ್ಟವಾದ ಜ್ಞಾನವನ್ನು ಗಳಿಸಿ ಆಸವಗಳ ನಾಶದಿಂದ ಪರಿಶುದ್ಧವಾದ ಚಿತ್ತ ಪಞ್ಞಾಗಳಲ್ಲಿ ಯಾವ ಭಿಕ್ಷುವು ವಿವಹರಿಸುತ್ತಿರುವವನೋ ಅವನನ್ನು ಸಮಣನೆಂದು ಕರೆಯುತ್ತೇನೆ, ಬ್ರಾಹ್ಮಣನೆಂದು ಕರೆಯುತ್ತೇನೆ.

“ಕಸ್ಸಪ್ಪ, ನಾರಿನ ಬಟ್ಟೆಯನ್ನೋ, ನಾರಿನೊಂದಿಗೆ ಇತರ ವಸ್ತುಗಳನ್ನು ಸೇರಿಸಿ ಮಾಡಿದ ಬಟ್ಟೆಯನ್ನೋ.. ದಿನಕ್ಕೆ ಮೂರು ಸಾರಿ ತಣ್ಣಿರಿನಲ್ಲಿ ಮೀಯುವವನೂ ಶೀಲಸಂಪನ್ನನಾಗಲೀ ಚಿತ್ತ ಸಂಪನ್ನನಾಗಲೀ ಪಞ್ಞಾ ಸಂಪನ್ನನಾಗಲೀ ಆಗುವುದಿಲ್ಲ. ಅಂಥವನು ಶ್ರಾಮಣ್ಯವನ್ನಾಗಲೀ ಬ್ರಾಹ್ಮಣ್ಯವನ್ನಾಗಲೀ ಪಡೆಯಲಾರ. ಕಸ್ಸಪ, ವೈರ ದ್ವೇಷಗಳಿಲ್ಲದ ಮೈತ್ರಿ ಚಿತ್ತವನ್ನು ಪಡೆದುಕೊಂಡು ದೃಷ್ಟಿಗೋಚರವಾದ ಈ ಲೋಕದಲ್ಲಿದ್ದರೂ ಉತ್ಕೃಷ್ಟವಾದ ಜ್ಞಾವನ್ನು ಗಳಿಸಿ ಆಸವಗಳ ನಾಶದಿಂದ ಪರಿಶುದ್ಧವಾದ ಚಿತ್ತಪಞ್ಞಾಗಳಲ್ಲಿ ಯಾವ ಭಿಕ್ಷುವು ವಿಹರಿಸುತ್ತಿರುವನೋ ಅವನನ್ನು ಸಮಣನೆಂದು ಕರೆಯುತ್ತೇನೆ, ಬ್ರಾಹ್ಮಣನೆಂದು ಕರೆಯುತ್ತೇನೆ.

ಹೀಗೆ ಹೇಳಿದುದನ್ನು ಕೇಳೆ ಅಚೇಲ ಕಸ್ಸಪನು ಭಗವಾನರನ್ನು ಕುರಿತು ಇಂತೆಂದನು “ಗೋತಮ, ಶ್ರಾಮಣ್ಯವನ್ನು ಪಡೆಯುವುದು ದುಷ್ಕರ, ಬ್ರಾಹ್ಮಣ್ಯವನ್ನು ಪಡೆಯುವುದು ದುಷ್ಕರ.

“ಕಸ್ಸಪ, ಲೋಕದಲ್ಲಿ ಶ್ರಾವಣ್ಯವು ದುಷ್ಕರ, ಬ್ರಾಹ್ಮಣ್ಯವು ದುಷ್ಕರ ಎಂದು ಇರುತ್ತದೆ. ಬೆತ್ತಲೆಯಿರುವುದು ಆಚಾರಗಳನ್ನು ಬಿಡುವುದು. ಅರ್ಧ ಮಾಸಕ್ಕೊಮ್ಮೆ ಊಟ ಮಾಡಿಕೊಂಡಿರುವುದೂ ಮುಂತಾದ ತಪಸ್ಸಿನ ಕ್ರಮ ಗಳಿಂದ ಮಾತ್ರ ಶ್ರಾಮಣ್ಯವನ್ನಾಗಲೀ ಬ್ರಾಹ್ಮಣ್ಯವನ್ನಾಗಲೀ ಪಡೆಯಬಹುದು ಮತ್ತು ಅದು ದುಷ್ಕರ ಬಹು ದುಷ್ಕರ, ಎಂದು ಹೇಳುವುದಾದರೆ ಅದು ಸರಿಯಲ್ಲ ಒಬ್ಬ ಗೃಹಪತಿಯೋ ಗೃಹಪತಿ ಪುತ್ರನೋ ಕೊನೆಗೆ ಅವನ ಮನೆಗೆ ನೀರನ್ನ ಹೊತ್ತು ತರುವ ದಾಸಿಯೋ, ‘ದಿಗಂಬರನಾಗುತ್ತೇನೆ. ಆಚಾರಗಳನ್ನು ಬಿಡುತ್ತೇನೆ, ಅರ್ಧಮಾಸಕ್ಕೊಮ್ಮೆ ಊಟ ಮಾಡಿಕೊಂಡೆ ಇರುತ್ತೇನೆ’ ಎಂದು ಅದನ್ನು ಪಾಲಿಸಬಹುದು. ಆದರೆ ಈ ತಪಸ್ಸಿನ ಕ್ರಮಗಳನ್ನು ಬಿಟ್ಟು ಶ್ರಾಮಣ್ಯ ಅಥವಾ ಬ್ರಾಹ್ಮಣ್ಯವನ್ನು ಸಾಧಿಸಬೇಕು. ಆದುದರಿಂದ ಶ್ರಾಮಣ್ಯವು ದುಷ್ಕರ ಬ್ರಾಹ್ಮಣ್ಯವು ದುಷ್ಕರ ಎಂದು ಹೇಳುವುದು ಸರಿಯಾಗುತ್ತದೆ. ಕಸ್ಸಪ, ವೈರ ದ್ವೇಷಗಳಿಲ್ಲದ ಮೈತ್ರಿ ಚಿತ್ತವನ್ನು ಪಡೆದುಕೊಂಡು ದೃಷ್ಟಗೋಚರವಾದ ಈ ಲೋಕದಲ್ಲಿದ್ದರೂ ಉತ್ಕೃಷ್ಟವಾದ ಜ್ಞಾನವನ್ನು ಗಳಿಸಿ ಅಸವಗಳ ನಾಶದಿಂದ ಪರಿಶುದ್ಧವಾದ ಚಿತ್ತ ಪುಞ್ಞಗಳಲ್ಲಿ ಯಾವ ಭಿಕ್ಷುವು ವಿಹರಿಸುತ್ತಾನೋ ಅವನು ಸಮಣನಾಗುತ್ತಾನೆ, ಬ್ರಾಹ್ಮಣನಾಗುತ್ತಾನೆ.

“ಶಾಕಾಹಾರಿಯಾಗಿರುವುದು ಸಾಮಕದ ಅನ್ನವನ್ನೇ ತಿಂದುಕೊಂಡಿರು ವುದು..ಕಾಡಿನಲ್ಲಿನ ಗೆಡ್ಡೆಗೆಣಸು ಹಣ್ಣುಗಳನ್ನು ತಿಂದುಕೊಂಡಿರುವುದು ಅಥವಾ ಕೆಳಗೆ ಬಿದ್ದ ಹಣ್ಣುಗಳನ್ನು ಮಾತ್ರ ತಿಂದುಕೊಂಡಿರುವುದು- ಈ ತಪಸ್ಸಿನ ಕ್ರಮಗಳಿಂದಲೇ ಮಾತ್ರ ಶ್ರಾಮಣ್ಯವನ್ನಾಗಲೀ ಬ್ರಾಹ್ಮಣ್ಯವನ್ನಾಗಲೀ ಪಡೆಯಬಹುದು ಮತ್ತು ಅದು ದುಷ್ಕರ ಬಹುದುಷ್ಕರ ಎಂದು ಹೇಳುವುದಾದರೆ ಹಾಗೆ ಹೇಳುವುದು ಸರಿಯಲ್ಲ.

“ಒಬ್ಬ ಗೃಹಪತಿಯೋ ಒಬ್ಬ ಗೃಹಪತಿಪುತ್ರನೋ ಕೊನೆಗೆ ಅವನ ಮನೆಗೆ ನೀರನ್ನು ಹೊತ್ತು ತರುವ ದಾಸಿಯೋ ‘ಶಾಖಾಹಾರಿಯಾಗುತ್ತೇನೆ, ಸಾಮಕದ ಅನ್ನವನ್ನೇ ತಿಂದುಕೊಂಡಿರುತ್ತೇನೆ… ಕಾಡಿನಲ್ಲಿನ ಗೆಡ್ಡೆ ಗೆಣಸು ಹಣ್ಣುಗಳನ್ನು ಮಾತ್ರ ತಿಂದು ಕೊಂಡಿರುತ್ತೇನೆ ಕೆಳಗೆ ಬಿದ್ದ ಹಣ್ಣುಗಳನ್ನು ಮಾತ್ರ ತಿಂದು ಕೊಂಡಿರುತ್ತೇನೆ’ ಎಂದು ಹೇಳಿ ಅದರಂತೆ ನಡೆದುಕೊಳ್ಳಬಹುದು.

“ ಈ ತಪಸ್ಸಿನ ಕ್ರಮಗಳೆಲ್ಲವನ್ನೂ (ಅವು ಅನಾವಶ್ಯಕವಾದದ್ದರಿಂದ) ಬಿಟ್ಟೇ ಶ್ರಾಮಣ್ಯವನ್ನಾಗಲೀ ಅಥವಾ ಬ್ರಾಹ್ಮಣ್ಯವನ್ನು ಸಾಧಿಸಬೇಕು. ಆದುದರಿಂದ ‘ಶ್ರಾಮಣ್ಯವು ದುಷ್ಕರ ಬ್ರಾಹ್ಮಣ್ಯವು ದುಷ್ಕರ’ ಎಂದು ಹೇಳುವುದು ಸರಿಯಾಗುತ್ತದೆ. ಕಸ್ಸಪ, ವೈರ ದ್ವೇಷಗಳಿಲ್ಲದ ಮೈತ್ರಿ ಚಿತ್ತವನ್ನು ಪಡೆದು ಕೊಂಡು ದೃಷ್ಟಿಗೋಚರವಾದ ಈ ಲೋಕದಲ್ಲಿದ್ದರೂ ಉತ್ಕೃಷ್ಟವಾದ ಜ್ಞಾನವನ್ನು ಗಳಿಸಿ ಅಸವಗಳ ನಾಶದಿಂದ ಪರಿಶುದ್ಧವಾದ ಚಿತ್ತಪಞ್ಞಾಗಳಲ್ಲಿ ಯಾವ ಭಿಕ್ಷುವು ವಿಹರಿಸುತ್ತಾನೋ ಅವನು ಸಮಣನಾಗುತ್ತಾನೆ ಅವನು ಬ್ರಾಹ್ಮಣನಾಗುತ್ತಾನೆ.

“ಕಸ್ಸಪ, ನಾರಿನ ಬಟ್ಟೆಯನ್ನೋ ಅಥವಾ ನಾರಿನೊಂದಿಗೆ ಇತರೆ ವಸ್ತುಗಳನ್ನು ಸೇರಿಸಿ ಮಾಡಿದ ಬಟ್ಟೆಯನ್ನು ಮಾತ್ರ ಉಡುವುದು ದಿನಕ್ಕೆ ಮೂರು ಸಾರಿ ತಣ್ಣಿರಿನಲ್ಲಿ ಸ್ನಾನ ಮಾಡುವುದು- ಈ ಕ್ರಮಗಳಿಂದ ಮಾತ್ರ ಶ್ರಾಮಣ್ಯವನ್ನಾಗಲಿ ಬ್ರಾಹ್ಮಣ್ಯವನ್ನಾಗಲೀ ಪಡೆಯಬಹುದು ಮತ್ತು ‘ಅದು ದುಷ್ಕರ, ಬಹುದುಷ್ಕರ’ ಎಂದು ಹೇಳುವುದಾದರೆ ಹಾಗೆ ಹೇಳುವುದು ಸರಿಯಲ್ಲ.

“ಒಬ್ಬ ಗೃಹಪತಿಯೋ, ಗೃಹಪತಿಪುತ್ರನೋ ಕೊನೆಗೆ ಅವನ ಮನೆಗೆ ನೀರನ್ನು ಹೊತ್ತು ತರುವ ದಾಸಿಯೋ ‘ ನಾರಿನ ಬಟ್ಟೆಯನ್ನೇ ಉಡುತ್ತೇನೆ ನಾರಿನೊಂದಿಗೆ ಇತರ ವಸ್ತುಗಳನ್ನು ಸೇರಿಸಿ ಮಾಡಿದ ಬಟ್ಟೆಯನ್ನೇ ಉಡುತ್ತೇನೆ.. ದಿನಕ್ಕೆ ಮೂರು ಸಾರಿ ತಣ್ಣೀರಿನಲ್ಲಿ ಮೀಯುತ್ತೇನೆ’ ಎಂದು ಹೇಳಿ ಅದನ್ನು ಪಾಲಿಸಬಹುದು.

“ಈ ತಪಸ್ಸಿನ ಕ್ರಮಗಳೆಲ್ಲವನ್ನೂ ಬಿಟ್ಟೇ ಶ್ರಾಮಣ್ಯವನ್ನೋ ಅಥವ ಬ್ರಾಹ್ಮಣ್ಯವನ್ನೋ ಸಾಧಿಸಬೇಕು. ಆದುದರಿಂದ ‘ಶ್ರಾಮಣ್ಯವು ದುಷ್ಕರ ಬ್ರಾಹ್ಮಣ್ಯವು ದುಷ್ಕರ’ ಎಂದು ಹೇಳುವುದು ಸರಿಯಾಗುತ್ತದೆ. ಕಸ್ಸಪ, ವೈರ ದ್ವೇಷಗಳಿಲ್ಲದ ಮೈತ್ರಿ ಚಿತ್ತವನ್ನು ಪಡೆದುಕೊಂಡು ದೃಷ್ಟಿಗೋಚರವಾದ ಈ ಲೋಕದಲ್ಲಿದ್ದರೂ ಉತ್ಕೃಷ್ಟವಾದ ಜ್ಞಾನವನ್ನು ಗಳಿಸಿ ಅಸವಗಳ ನಾಶದಿಂದ ಪರಿಶುದ್ದವಾದ ಚಿತ್ತ ಪಞ್ಞಾಗಳಲ್ಲಿ ಯಾವ ಭಿಕ್ಷುವು ವಿಹರಿಸುತ್ತಾನೋ ಅವನು ಸಮಣನಾಗುತ್ತಾನೆ, ಅವನು ಬ್ರಾಹ್ಮಣನಾಗುತ್ತಾನೆ.

ಆಗ ಅಚೇಲ ಕಸ್ಸಪನು ಬಗವಾನರಿಗೆ ಹೀಗೆ ಹೇಳಿದನು- “ಶ್ರಾಮಣ್ಯವನ್ನೂ ಬ್ರಾಹ್ಮಣ್ಯವನೂ ಅರಿಯುವುದು ಕಷ್ಟ, ಬಹು ಕಷ್ಟ.”

“ಕಸ್ಸಪ, ಸಮಣನನ್ನಾಗಲೀ, ಬ್ರಾಹ್ಮಣನನ್ನಾಗಲೀ, ಅರಿಯುವುದು ಕಷ್ಟ ಎಂದು ಲೋಕದಲ್ಲಿ ಹೇಳುತ್ತಾರೆ. ಬೆತ್ತಲೆಯಿಂದಿರುವುದು, ಆಚಾರಗಳನ್ನು ಬಿಡುವುದು, ಅರ್ಧಮಾಸಕ್ಕೊಮ್ಮೆ ಮಾತ್ರ ಊಟಮಾಡುವುದು. ಈ ತಪಸ್ಸಿನ ಕ್ರಮಗಳಿಂದ ಮಾತ್ರ ಶ್ರಾವಣ್ಯವನ್ನಾಗಲೀ ಬ್ರಾಹ್ಮಣ್ಯವನ್ನಾಗಲೀ ತಿಳಿಯಬಹುದಾದ್ದರಿಂದ ‘ಅದನ್ನು ಅರಿಯುವುದು ಕಷ್ಟ ಅದನ್ನರಿಯುವುದು ಅತಿ ಕಷ್ಟ’ ಎಂದು ಹೇಳುವುದಾದರೆ ಅದು ಸರಿಯಲ್ಲ.

“ಒಬ್ಬ ಗೃಹಪತಿಯೋ, ಗೃಹಪತಿಪುತ್ರನೋ ಕೊನೆಗೆ ಅವನ ಮನೆಗೆ ನೀರನ್ನು ಹೊತ್ತು ತರುವ ದಾಸಿಯೋ ‘ನಾನು ಬೆತ್ತಲೆಯಾಗಿಯೇ ಇರುತ್ತೇನೆ, ನಾನು ಆಚಾರಗಳನ್ನು ಬಿಡುತ್ತೇನೆ... ನಾನೂ ಅರ್ಧ ಮಾಸಕ್ಕೊಮ್ಮೆ ಊಟಮಾಡುತ್ತೆನೆ’ ಎಂದುಕೊಂಡು ಅದನ್ನು ಪಾಲಿಸಿ ಅದರ ಕಷ್ಟವನ್ನು ತಿಳಿಯಬಹುದು.

“ಈ ತಪಸ್ಸಿನ ಕ್ರಮಗಳನ್ನು ಬಿಟ್ಟೇ ಶ್ರಾಮಣ್ಯವನ್ನು ಅಥವಾ ಬ್ರಾಹ್ಮಣ್ಯವವನ್ನು ತಿಳಿಯಬೇಕು. ಆದುದರಿಂದ ‘ಶ್ರಾಮಣ್ಯವು ಅರಿಯಲು ಕಷ್ಟವಾದುದೂ, ಬ್ರಾಹ್ಮಣ್ಯವು ಅರಿಯಲು ಕಷ್ಟವಾದುದು’ ಎಂದು ಹೇಳುವುದು ಸರಿಯಾಗುತ್ತದೆ.ಕಸ್ಸಪ ವೈರ ದ್ವೇಷಗಳಿಲ್ಲದ ಮೈತ್ರಿ ಚಿತ್ತವನ್ನು ಪಡೆದುಕೊಂಡು ದೃಷ್ಠಿಗೆ ಗೋಚರವಾದ ಈ ಲೋಕದಲ್ಲಿದ್ದೂರೂ ಉತ್ಕೃಷ್ಟವಾದ ಜ್ಞಾನವನ್ನು ಗಳಿಸಿ ಆಸವಗಳ ನಾಶದಿಂದ ಪರಿಸುದ್ದವಾದ ಚಿತ್ತ ಪಞ್ಞಾಗಳಲ್ಲಿ ಯಾವ ಭಿಕ್ಷುವು ವಿಹರಿಸುತ್ತಾನೋ ಅವನು ಸಮಣನಾಗುತ್ತಾನೆ, ಅವನು ಬ್ರಾಹ್ಮಣನಾಗುತ್ತಾನೆ.

“ಶಾಖಾಹಾರಿಯಾಗಿರುವುದು, ಸಾಮಕದ ಅನ್ನವನ್ನೇ ತಿಂದುಕೊಂಡಿರುವುದು... ಕಾಡುಗಳಲ್ಲಿನ ಗೆಡ್ಡೆಗೆಣಸು ಹಣ್ಣುಗಳನ್ನು ಮಾತ್ರ ತಿಂದುಕೊಂಡಿರುವುದು ಅಥವಾ ಕೆಳಗೆ ಬಿದ್ದ ಹಣ್ಣುಗಳನ್ನು ಮಾತ್ರ ತಿಂದುಕೊಂಡಿರುವುದು- ಈ ಕ್ರಮಗಳಿಂದ ಮಾತ್ರ ಶ್ರಾಮಣ್ಯವನ್ನಾಗಲೀ, ಬ್ರಾಹ್ಮಣ್ಯವನ್ನಾಗಲೀ ತಿಳಿಯಬಹುದಾದ್ದರಿಂದ ‘ಅದನ್ನು ಅರಿಯುವುದು ಕಷ್ಟ, ಅದನ್ನು ಅರಿಯುವುದು ಅತಿಕಷ್ಟ’ ಎಂದು ಹೇಳುವುದಾದರೆ ಅದು ಸರಿಯಲ್ಲ.

“ಒಬ್ಬ ಗೃಹಪತಿಯೋ, ಗೃಹಪತಿ ಪುತ್ರನೋ ಕೊನೆಗೆ ಅವನ ಮನೆಗೆ ನೀರನ್ನು ತರುವ ಒಬ್ಬ ದಾಸಿಯೋ ‘ನಾನು ಶಾಖಾಹಾರಿಯಾಗಿಯೇ ಇರುತ್ತೇನೆ. ನಾನು ಸಾಮಕದ ಅನ್ನವನ್ನು ತಿಂದುಕೊಂಡೇ ಇರುತ್ತೇನೆ... ಗೆಡ್ಡೆ-ಗೆಣಸು ಹಣ್ಣುಗಳನ್ನು ತಿಂದುಕೊಂಡೇ ಇರುತ್ತೇನೆ. ಕೆಳಗೆ ಬಿದ್ದ ಹಣ್ಣುಗಳನ್ನು ಮಾತ್ರ ತಿಂದುಕೊಂಡಿರುತ್ತೇನೆ’ ಎಂದುಕೊಂಡು ಅದನ್ನು ಪಾಲಿಸಿ ಅದರ ಕಷ್ಟವನ್ನು ಅರಿಯಬಹುದು.”

“ಈ ತಪಸ್ಸಿನ ಕ್ರಮಗಳನ್ನು ಬಿಟ್ಟೇ ಶ್ರಾಮಣ್ಯವನ್ನು ಅಥವಾ ಬ್ರಾಹ್ಮಣ್ಯವನ್ನು ತಿಳಿಯಬೇಕು. ಆದುದರಿಂದ ‘ಶ್ರಾಮಣ್ಯವು ಅರಿಯಲು ಕಷ್ಟವಾದುದು, ಬ್ರಾಹ್ಮಣ್ಯವು ಅರಿಯಲು ಕಷ್ಟವಾದುದು’ ಎಂದು ಹೇಳುವುದಾದರೆ ಅದು ಸರಿಯಾಗುತ್ತದೆ. ಕಸ್ಸಪ, ವೈರ-ದ್ವೇಷಗಳಿಲ್ಲದ ಮೈತ್ತಿ ಚಿತ್ತವನ್ನು ಪಡೆದುಕೊಂಡು ದೃಷ್ಟಿಗೆ ಗೋಚರವಾದ ಈ ಲೋಕದಲ್ಲಿದ್ದರೂ ಉತ್ಕೃಷ್ಟವಾದ ಜ್ಞಾನವನ್ನು ಗಳಿಸಿ ಆಸವಗಳ ನಾಶದಿಂದ ಪರಿಶುದ್ಧವಾದ ಚಿತ್ತ ಪಞ್ಞಾಗಳಲ್ಲಿ ಯಾವ ಭಿಕ್ಷುವು ವಿಹರಿಸುತ್ತಾನೋ ಅವನು ಸಮಣನಾಗುತ್ತಾನೆ, ಅವನು ಬ್ರಾಹ್ಮಣನಾಗುತ್ತಾನೆ.

“ಕಸ್ಸಪ, ನಾರಿನ ಬಟ್ಟೆಯನ್ನು ಮಾತ್ರ ಉಡುವುದು ಅಥವಾ ನಾರಿನೊಂದಿಗೆ ಇತರ ವಸ್ತುಗಳನ್ನು ಸೇರಿಸಿ ಮಾಡಿದ ಬಟ್ಟೆಯನ್ನು ಮಾತ್ರ ಉಡುವುದು... ದಿನಕ್ಕೆ ಮೂರುಸಾರಿ ಸ್ನಾನ ಮಾಡುವುದು... ಈ ಕ್ರಮಗಳಿಂದ ಮಾತ್ರ ಶ್ರಾಮಣ್ಯವನ್ನಾಗಲೀ ಬ್ರಾಹ್ಮಣ್ಯವನ್ನಾಗಲೀ ಪಡೆಯಬಹುದಾದ್ದರಿಂದ ‘ಅದು ಅರಿಯುವುದು ಕಷ್ಟ, ಅದನ್ನರಿಯುವುದು ಅತಿಕಷ್ಟ’ ಎಂದು ಹೇಳುವುದಾದರೆ ಹಾಗೆ ಹೇಳುವುದು ಸರಿಯಲ್ಲ.

“ಒಬ್ಬ ಗೃಹಪತಿಯೋ, ಗೃಹಪತಿಪುತ್ರನೋ ಕೊನೆಗೆ ಅವನ ಮನೆಗೆ ನೀರನ್ನು ಹೊತ್ತು ತರುವ ಅವನ ದಾಸಿಯೋ ‘ನಾನೂ ನಾರಿನ ಬಟ್ಟೆಯನ್ನೇ ಉಡುತ್ತೇನೆ, ನಾರಿನೊಂದಿಗೆ ಇತರ ವಸ್ತುಗಳನ್ನು ಸೇರಿಸಿ ಮಾಡಿದ ಬಟ್ಟೆಯನ್ನೇ ಉಡುತ್ತೇನೆ, ದಿನಕ್ಕೆ ಮೂರುಸಾರಿ ಸ್ನಾನ ಮಾಡುತ್ತೇನೆ’ ಎಂದುಕೊಂಡು ಅದನ್ನು ಪಾಲಿಸಿ ಅದರ ಕಷ್ಟವನ್ನು ಅರಿಯಬಹುದು.

“ಕಸ್ಸಪ, ಈ ತಪಸ್ಸಿನ ಕ್ರಮಗಳನ್ನು ಬಿಟ್ಟೇ ಶ್ರಾಮಣ್ಯವನ್ನು ಅಥವಾ ಬ್ರಾಹ್ಮಣ್ಯವನ್ನು ಅರಿಯಬೇಕು. ಆದುದರಿಂದ ‘ಶ್ರಾಮಣ್ಯವು ಅರಿಯಲು ಕಷ್ಟವಾದುದು, ಬ್ರಾಹ್ಮಣ್ಯವು ಅರಿಯಲು ಕಷ್ಟವಾದುದು’ ಎಂದು ಹೇಳಿದರೆ ಅದು ಸರಿಯಾಗುತ್ತದೆ. ಕಸ್ಸಪ, ವೈರ-ದ್ವೇಷಗಳಿಲ್ಲದೆ ಮೈತ್ರಿ ಚಿತ್ತವನ್ನು ಪಡೆದುಕೊಂಡು ದೃಷ್ಟಿಗೆ ಗೋಚರವಾದ ಈ ಲೋಕದಲ್ಲಿದ್ದರೂ ಉತ್ಕೃಷ್ಟವಾದ ಜ್ಞಾನವನ್ನು ಗಳಿಸಿ, ಆಸವಗಳ ನಾಶದಿಂದ ಪರಿಶುದ್ಧವಾದ ಚಿತ್ತ ಪಞ್ಞಾಗಳಲ್ಲಿ ಯಾವ ಭಿಕ್ಷುವು ವಿಹರಿಸುತ್ತಾನೋ ಅವನು ಸಮಣನಾಗುತ್ತಾನೆ, ಬ್ರಾಹ್ಮಣನಾಗುತ್ತಾನೆ.

ಶೀಲ, ಸಮಾಧಿ ಮತ್ತು ಅನುಭವ ಜ್ಞಾನಗಳ ಪಡೆಯುವಿಕೆ

ಹೀಗೆ ಹೇಳಿದ ಭಗವಾನರನ್ನು ಕುರಿತು ಅಚೇಲ ಕಸ್ಸಪನು ಇಂತೆಂದನು: “ಹಾಗಾದರೆ, ಗೋತಮ, ಶೀಲಸಂಪದ, ಚಿತ್ತಸಂಪದ ಪಞ್ಞಾಸಂಪದ ಎಂದರೆ ಏನು?”

“ಕಸ್ಸಪ, ಲೋಕದಲ್ಲಿ ಅರಹಂತನು ಸಮ್ಮಾ ಸಂಬುದ್ದನು ಉದಯಿಸುತ್ತಾನೆ... (ಸಾಮಞ್ಞಫಲ ಸುತ್ತದಲ್ಲಿನ 41, 42, 43, ಮತ್ತು 44ನೆಯ ಪ್ಯಾರಾಗಳಲ್ಲಿರುವಂತೆ ವಿಸ್ತರಿಸತಕ್ಕದ್ದು.)

“ಕಸ್ಸಪ, ಭಿಕ್ಷುವಾದವನು ಶೀಲಸಂಪನ್ನನಾಗುವುದು ಹೇಗೆ?ಭಿಕ್ಷುವು ಪ್ರಾಣಿಹತ್ಯೆ ಮಾಡುವ ಮನೋಧರ್ಮವನ್ನು ತೊರೆದು ಪ್ರಾಣಿ ಹಿಂಸೆಯನ್ನು ಮಾಡುವುದೇ ಇಲ್ಲ. ದಂಡ ಶಸ್ತ್ರಗಳಾವುವನ್ನೂ ಹಿಡಿಯುವುದಿಲ್ಲ. ದಯಾಪರನಾಗಿ ಸರ್ವಪ್ರಾಣಿಗಳಲ್ಲಿ ಭೂತಗಳಲ್ಲಿ ಅನುಕಂಪವುಳ್ಳವನಾಗಿ ಸದಾ ಎಚ್ಚರವುಳ್ಳವನಾಗಿ ಇರುತ್ತಾನೆ.

ಅವನ ಶೀಲ ಸಂಪತ್ತಿನ ಒಂದು ಭಾಗ ಇದು....

ಗೃಹಸ್ಥರು ಶ್ರದ್ಧೆಯಿಂದ ನೀಡಿದ ಅನ್ನವನ್ನುಂಡು ಬದುಕುವ ಸಮಣ ಬ್ರಾಹ್ಮಣರಲ್ಲಿ ಕೆಲವರು... (ಸಾಮಞ್ಞಫಲ ಸುತ್ತದ 45ನೆಯ ಪ್ಯಾರಾದಿಂದ 62ನೆಯ ಪ್ಯಾರಾದವರೆಗಿರುವಂತೆ ವಿಸ್ತರಿಸತಕ್ಕದ್ದು).

“ಮಹಾರಾಜ, ಶೀಲಗಳನ್ನು ಹೀಗೆ ರಕ್ಷಿಸಿಕೊಂಡ ಭಿಕ್ಷುವು (ಸಾಮಞ್ಞಫಲ ಸುತ್ತದ 63ನೆಯ ಪ್ಯಾರಾದಿಂದ 83ನೆಯ ಪ್ಯಾರಾದವರೆಗಿರುವಂತೆ ವಿಸ್ತರಿಸತಕ್ಕದ್ದು). ಕಸ್ಸಪ, ಇದೇ ಚಿತ್ತ ಸಂಪದ. ಶಾಂತವಾದ ಪರಿಶುದ್ಧವಾದ ತಿಳಿಯಾದ ಸಂಸ್ಕಾರಗೊಳಿಸಿದ ಕ್ಲೇಶಗಳಿಂದ ದೂರವಾದ ಮೃದುವಾದ ಕಾರ್ಯನಿರತವಾಗಬಲ್ಲ ದೃಢವಾದ ಚಂಚಲಗೊಳ್ಳದ ಚಿತ್ತವನ್ನು ಪಡೆದಿರುವ ಅವನು ತನ್ನ ಚಿತ್ತವನ್ನು ಜ್ಞಾನದರ್ಶನದ ಕಡೆ ತಿರುಗಿಸುತ್ತಾನೆ... (85ನೆಯ ಪ್ಯಾರಾದಿಂದ 100ನೆಯ ಪ್ಯಾರಾವರೆಗಿರುವಂತೆ ವಿಸ್ತರಿಸತಕ್ಕದ್ದು.)

ಇದೇ ಕಸ್ಸಪ, ಪಞ್ಞಾ ಸಂಪದ.

[ಹೀಗೆ ಸಾಮಞ್ಞಫಲ ಸುತ್ತದ ಭಾಗಗಳನ್ನು ವಿಸ್ತರಿಸುವಾಗ ‘ಮಹಾರಾಜ, ಸಮಣನಾಗುವುದರಿಂದ ಈ ಲೋಕದಲ್ಲಿಯೇ... ಉನ್ನತಕರವಾದದ್ದು ರುಚಿಕರವಾದದ್ದು’ ಎಂಬುದನ್ನು ಬಿಡಬೇಕು. ‘ಮಹಾರಾಜ’ ಎಂಬ ಪದಕ್ಕೆ ಪರ್ಯಾಯವಾಗಿ ‘ಕಸ್ಸಪ’ ಎಂದು ಓದಿಕೊಳ್ಳಬೇಕು].

“ಕಸ್ಸಪ, ಶೀಲಸಂಪದ, ಚಿತ್ತಸಂಪದ, ಪಞ್ಞಾಸಂಪದ ಎಂದರೆ ಇವುಗಳೇ ಇವುಗಳಿಗಿಂತ ಉನ್ನತವಾದ ಶ್ರೇಷ್ಠವಾದ ಶೀಲಸಂಪದ ಚಿತ್ತಸಂಪದ ಪಞ್ಞಾಸಂಪದಗಳು, ಬೇರಾವುವೂ ಇಲ್ಲ.

ಸಿಂಹನಾದ ವಿಷಯ

“ಕಸ್ಸಪ, ಶೀಲವಾದಿಗಳಾದ ಕೆಲವು ಸಮಣ ಬ್ರಾಹ್ಮಣರುಂಟು. ಅವರು ಅನೇಕ ರೀತಿಯಲ್ಲಿ ಶೀಲವನ್ನು ಸ್ತುತಿಸುತ್ತಾರೆ. ಕಸ್ಸಪ, ಪರಮ ಶ್ರೇಷ್ಠವಾದ ಶೀಲವನ್ನು ಪಾಲಿಸುತ್ತಿರುವವರಲ್ಲಿ ನನಗಿಂತ ಉನ್ನತರಾದವರಿರಲಿ- ನನಗೆ ಸಮಾನರಾದವರನ್ನೇ ನಾನು ಕಾಣೆ. ಶೀಲದ ಉತ್ತುಂಗ ಶೃಂಗವನ್ನು- ಅಂದರೆ ಅಧಿಶೀಲವನ್ನು... ಏರಿರುವವನು ನಾನೊಬ್ಬನೇ.

“ಕಸ್ಸಪ, ‘ತಪೋಚಿಗುಚ್ಛವಾದಿ’ (ತಪಸ್ಸಿನಿಂದ ವಿರಕ್ತಿಪಡೆದವರು) ಗಳಾದ ಕೆಲವು ಸಮಣಬ್ರಾಹ್ಮಣರುಂಟು. ಅವರು ಅನೇಕ ಪರಿಯಲ್ಲಿ ತಪಸ್ಸನ್ನೂ ಇತರರಲ್ಲಿ ತೋರಬೇಕಾದ ಅತೀವ ಗೌರವವನ್ನೂ ಶ್ಲಾಘಿಸುತ್ತಾರೆ. ಪರಮಶ್ರೇಷ್ಠವಾದ ತಪಸ್ಸನ್ನು ಆಚರಿಸುವವರಲ್ಲಿ, ಇತರರಿಗೆ ಅತೀವವಾದ ಗೌರವವನ್ನು ತೋರಿಸುತ್ತಿರುವವರಲ್ಲಿ ನನಗಿಂತ ಉನ್ನತರಾದವರಿಲ್ಲ. ನನಗೆ ಸಮಾನರಾದವರನ್ನೇ ನಾನು ಕಾಣೆ. ಇತರರಲ್ಲಿ ಅತೀವ ಗೌರವವನ್ನು ತೋರಿಸುವುದರಲ್ಲಿ - ಅಂದರೆ ಅಧಿಜೇಗುಚ್ಛದಲ್ಲಿ ಔನತ್ಯವನ್ನು ಪಡೆದಿರುವವನು ನಾನು ಮಾತ್ರ.

“ಕಸ್ಸಪ, ಪಞ್ಞಾವಾದಿಗಳಾದ ಕೆಲವು ಸಮಣ ಬ್ರಾಹ್ಮಣರುಂಟು. ಅವರು ಅನೇಕ ಪರಿಯಲ್ಲಿ ಪಞ್ಞಾವನ್ನು ಶ್ಲಾಘಿಸುತ್ತಾರೆ. ಪರಮಶ್ರೇಷ್ಠವಾದ ಪಞ್ಞಾವನ್ನು ಪಡೆದಿರುವವರಲ್ಲಿ ನನಗಿಂತ ಉನ್ನತರಾದವರಿರಲಿ, ನನ್ನ ಸಮಾನರಾದವರನ್ನೇ ನಾನು ಕಾಣೆ. ಪಡೆಯಲು ದುಸ್ಸಾಧ್ಯವಾದ, ಪಞ್ಞಾವನ್ನು ಅಂದರೆ ಅಧಿಪಞ್ಞಾವನ್ನು ಪಡೆದಿರುವವನು ನಾನು ಮಾತ್ರ.

“ಕಸ್ಸಪ, ವಿಮುತ್ತಿವಾದಿಗಳಾದ ಕೆಲವು ಸಮಣ ಬ್ರಾಹ್ಮಣರುಂಟು. ಅವರು ಅನೇಕ ಪರಿಯಲ್ಲಿ ವಿಮುತ್ತಿ (ವಿಮುಕ್ತಿ) ಯನ್ನು ಶ್ಲಾಘಿಸುತ್ತಾರೆ. ಪರಮಶ್ರೇಷ್ಠವಾದ ವಿಮುತ್ತಿಯನ್ನು ಹೊಂದಿರುವವರಲ್ಲಿ ನನ್ನನ್ನು ಮೀರಿಸಿದವರಿರಲಿ, ನನಗೆ ಸಮಾನರಾದವರನ್ನೇ ನಾನು ಕಾಣೆ. ಅತ್ಯುತ್ಕೃಷ್ಟವಾದ ವಿಮುತ್ತಿಯನ್ನು - ಅಂದರೆ ಅಧಿವಿಮುತ್ತಿಯನ್ನು ಹೊಂದಿರುವವನು ನಾನು ಮಾತ್ರ.

ಕಸ್ಸಪ, ಒಂದು ಸಂದರ್ಭ ಬರುವುದುಂಟು. ನನ್ನನ್ನೊಪ್ಪದ ಪರಿಬ್ಬಾಜಕರು ಹೀಗೆ ಹೇಳಬಹುದು: ‘ಸಮಣ ಗೋತಮನು ಸಿಂಹನಾದವನ್ನೇನೋ ಮಾಡುತ್ತಾನೆ, ಆದರೆ ಅವನು ಹಾಗೆ ಮಾಡುವುದು ಯಾರೂ ಇಲ್ಲದ ಕಡೆಯಲ್ಲಿ ಮಾತ್ರ’. ಆಗ ಅವರಿಗೆ ಹಾಗೆ ಹೇಳಬಾರದು, ‘ಸಮಣ ಗೋತಮನು ಜನರು ಸೇರುವ ಕಡೆಯಲ್ಲಿಯೇ ಸಿಂಹನಾದ ಮಾಡುತ್ತಾನೆ’ ಎಂದು ತಿಳಿಸಬೇಕು ಕಸ್ಸಪ.

“ಕಸ್ಸಪ, ನನ್ನನ್ನೊಪ್ಪದ ಪರಿಬ್ಬಾಜಕರು ಹೀಗೆ ಹೇಳಬಹುದು: ‘ಸಮಣ ಗೋತಮನು ಸಿಂಹನಾದವನ್ನೇನೋ ಮಾಡುತ್ತಾನೆ, ಜನರ ನಡುವೆಯೇ ಘೋಷಿಸುತ್ತಾನೆ, ಆದರೆ ಸ್ವ-ವಿಶ್ವಾಸವುಳ್ಳ ವಿಶಾರದನಂತೆ ಸಿಂಹನಾದ ಮಾಡುವುದಿಲ್ಲ!’ ಆಗ ಅವರಿಗೆ ಹಾಗೆ ಹೇಳಬಾರದು. ‘ಸಮಣ ಗೋತಮನು ಜನರು ಇರುವ ಕಡೆಯಲ್ಲಿಯೇ ಪೂರ್ಣ ವಿಶ್ವಾಸದಿಂದ ಸಿಂಹನಾದವನ್ನು ಮಾಡುತ್ತಾನೆ’ ಎಂದು ತಿಳಿಸಬೇಕು ಕಸ್ಸಪ.

“ಒಂದು ಸಂದರ್ಭ ಬರುವುದುಂಟು ಕಸ್ಸಪ, ನನ್ನನ್ನೊಪ್ಪದ ಪರಿಬ್ಬಾಜಕರು ಹೀಗೆ ಹೇಳಬಹುದು: ಸಮಣಗೋತಮನು ‘ಸಿಂಹನಾದವನ್ನು ಮಾಡುತ್ತಾನೆ; ಎಲ್ಲ ಜನರು ಸೇರುವ ಕಡೆಯಲ್ಲಿಯೇ ಪೂರ್ಣವಿಶ್ವಾಸದಿಂದ ಮಾಡುತ್ತಾನೆ. ಆದರೆ ಇತರರು ಪ್ರಶ್ನೆಗಳನ್ನು ಕೇಳುವುದಿಲ್ಲ... ಪ್ರಶ್ನೆಗಳನ್ನು ಕೇಳುತ್ತಾರೆ, ಆದರೆ ಪ್ರಶ್ನೆಗಳಿಗೆ ಅವರು ಉತ್ತರಗಳನ್ನು ಹೇಳುವುದಿಲ್ಲ... ಪ್ರಶ್ನೆಗಳಿಗೆ ಉತ್ತರಗಳನ್ನು ಹೇಳುತ್ತಾನೆ. ಆದರೆ ಹಾಕಿದ ಪ್ರಶ್ನೆಗಳಿಗೆ ಉತ್ತರಗಳನ್ನು ಹೇಳುತ್ತಾನೆ. ಆದರೆ ಹಾಕಿದ ಪ್ರಶ್ನೆಗಳಿಗೆ ಮನಸ್ಸೊಪ್ಪುವ ಉತ್ತರಗಳನ್ನೂ ಕೊಡುವುದಿಲ್ಲ... ಮನಸ್ಸೊಪ್ಪುವ ಉತ್ತರಗಳನ್ನೂ ಕೊಡುತ್ತಾನೆ. ಆದರೆ ಅವುಗಳನ್ನಾರೂ ಸಮರ್ಪಕವಾದುದೆಂದು ಗಣಿಸುವುದಿಲ್ಲ... ಸಮರ್ಪಕವಾದುದೆಂದು ಒಪ್ಪಿಕೊಂಡಾರು; ಆದರೆ ಅವುಗಳನ್ನೂ ಕೇಳಿ ಪ್ರಸನ್ನರಾಗುವುದಿಲ್ಲ... ಕೇಳಿ ಪ್ರಸನ್ನಗೊಂಡಾರು; ಆದರೆ ಪ್ರಸನ್ನರಾಗಿರುವಂತೆ ವರ್ತಿಸುವುದೇ ಇಲ್ಲ... ಪ್ರಸನ್ನರಾದಂತೆ ವರ್ತಿಸಲೂಬಹುದು; ಆದರೆ ಸತ್ಯವನ್ನು ತಿಳಿದಿರುವುದಿಲ್ಲ... ಸತ್ಯವನ್ನು ತಿಳಿದಿರಬಹುದು; ಆದರೆ ಅದಕ್ಕನುಗುಣವಾಗಿ ನಡೆಯುವುದಿಲ್ಲ.’ ಆಗ ಅವರಿಗೆ ಹಾಗೆ ಹೇಳಬಾರದು, ‘ಸಮಣ ಗೋತಮ ಸಿಂಹನಾದವನ್ನು ಮಾಡುತ್ತಾರೆ, ಎಲ್ಲರೂ ಸೇರಿರುವಾಗಲೇ ಮಾಡುತ್ತಾರೆ. ಪೂರ್ಣ ವಿಶ್ವಾಸದಿಂದಲೇ ಮಾಡುತ್ತಾರೆ. ಇತರರು ಅವರನ್ನು ಪ್ರಶ್ನಿಸುತ್ತಾರೆ, ಆ ಪ್ರಶ್ನೆಗಳಿಗೆ ತಕ್ಕುದಾದ ಉತ್ತರಗಳನ್ನು ಹೇಳುತ್ತಾರೆ. ಪ್ರಶ್ನೆಗಳಿಗೆ ಕೊಟ್ಟ ಉತ್ತರಗಳನ್ನು ಕೇಳಿ ಚಿತ್ತವು ಸಂತೋಷಪಡುತ್ತದೆ, ಪ್ರಶ್ನೆಗಳಿಗೆ ತಕ್ಕ ವಿವರಣೆಗಳನ್ನು ಕೇಳಿದವರು ಅವುಗಳನ್ನು ಗೌರವ ಪೂರ್ವಕವಾಗಿ ಒಪ್ಪಿಕೊಳ್ಳುತ್ತಾರೆ, ವಿವರಣೆಗಳನ್ನು ಕೇಳಿದ ಮೇಲೆ ಪ್ರಸನ್ನಗೊಳ್ಳುತ್ತಾರೆ, ಪ್ರಸನ್ನತೆಯನ್ನು ತೋರಿಸಿಕೊಳ್ಳುತ್ತಾರೆ, ಸತ್ಯವನ್ನು ತಿಳಿಯುತ್ತಾರೆ, ತಿಳಿದು ಅದರಂತೆ ನಡೆಯುತ್ತಾರೆ’ ಎಂದು ತಿಳಿಸಬೇಕು, ಕಸ್ಸಪ.

ಧಾರ್ಮಿಕ ಪಂಥೀಯನು ಪರಿವ್ರಾಜಕನಾಗುವ ಬಗ್ಗೆ

“ಕಸ್ಸಪ, ಒಮ್ಮೆ ರಾಜಗಹದಲ್ಲಿನ ಗಿಜ್ಝಕೂಟ (ಗೃದ್ಧಕೂಟ)ದಲ್ಲಿ ತಂಗಿದ್ದೆ. ಆಗ ನಿಗ್ರೋಧನೆಂಬ ತಪೋಬ್ರಹ್ಮಚಾರಿಯೊಬ್ಬನು ‘ಅಧಿಜೆ ಗುಚ್ಛ’ (ಇತರರಲ್ಲಿ ತೋರಿಸಬೇಕಾದ ಅತಿ ಶ್ರೇಷ್ಠವಾದ ಗೌರವ)ದ ಮೇಲೆ ಪ್ರಶ್ನೆಗಳನ್ನು ಹಾಕಿದ. ಆಗ ಅಧಿಜೆಗುಚ್ಛದ ಮೇಲಿನ ಪ್ರಶ್ನೆಗಳಿಗೆ ತಕ್ಕುದಾದ ಉತ್ತರಗಳನ್ನು ಹೇಳಿದೆ, ವಿವರಿಸಿದೆ. ನನ್ನ ವಿವರಣೆಯನ್ನು ಕೇಳಿದ ಅವನು ತುಂಬ ಸಂತೋಷಗೊಂಡ.”

“ಭಂತೆ ಭಗವಾನರ ಧಮ್ಮವನ್ನು ಕೇಳಿದವನು ಯಾರು ಪರಮ ಸಂತಸವನ್ನು ಹೊಂದುವುದಿಲ್ಲ? ಭಂತೆ, ನಾನಾದರೋ ಭಗವಾನರ ಧಮ್ಮವನ್ನು ಕೇಳಿ ತುಂಬ ಸಂತೋಷಗೊಂಡಿದ್ದೇನೆ. ಎಷ್ಟು ಉತ್ಕೃಷ್ಟವಾಗಿದೆ. ಭಂತೆ, ನಿಮ್ಮ ಮಾತು ಎಷ್ಟು ಉತ್ಕೃಷ್ಟ ! ಭಂತೆ, ತಲೆಕೆಳಗಾಗಿರುವುದನ್ನು ನೆಟ್ಟನೆ ನಿಲ್ಲಿಸಿದಂತೆ, ಅಡಗಿಕೊಂಡಿರುವುದನ್ನು ಹೊರಕ್ಕೆ ತೆಗೆದು ತೋರಿಸುವಂತೆ ದಾರಿತಪ್ಪಿದವನಿಗೆ ಸರಿಯಾದ ದಾರಿಯನ್ನು ತೋರಿಸುವಂತೆ, ಕತ್ತಲಲ್ಲಿರುವವನು ತನ್ನ ಕಣ್ಣಿನಿಂದ ರೂಪಗಳನ್ನು ನೋಡಲು ದೀಪ ಹೊತ್ತಿಸುವವನಂತೆ ಭಗವಾನರು ಅನೇಕ ರೀತಿಯಲ್ಲಿ ಧಮ್ಮವನ್ನು ಪ್ರಕಾಶನಗೊಳಿಸಿದ್ದಾರೆ. ನಾನೂ ಭಗವಾನರಿಗೆ ಶರಣು ಹೋಗುತ್ತೇನೆ, ಧಮ್ಮಕ್ಕೆ ಶರಣು ಹೋಗುತ್ತೇನೆ, ಸಂಘಕ್ಕೆ ಶರಣು ಹೋಗುತ್ತೇನೆ. ಭಗವಾನರ ಆಶ್ರಯದಲ್ಲಿ ನಾನು ಪಬ್ಬಜಿತನಾಗುತ್ತೇನೆ. ನನಗೆ ಭಗವಾನರ ಬೋಧನೆಯ ಸಂಪತ್ತು ಲಭಿಸಲಿ.”

“ಕಸ್ಸಪ, ಹಿಂದೆ ಇತರ ಪಂಥಗಳನ್ನನುಸರಿಸುತ್ತಿದ್ದು ಅದನ್ನು ತೊರೆದು ಧಮ್ಮವಿನಯಗಳನ್ನು ತಿಳಿದು ಭಿಕ್ಷುವಾಗಬೇಕೆನ್ನುವವನು ನಾಲ್ಕು ತಿಂಗಳು ಸಂಘದಲ್ಲಿ ವಾಸಿಸಿ ಶಿಕ್ಷಣವನ್ನು ಪಡೆಯಬೇಕು. ನಾಲ್ಕು ತಿಂಗಳ ನಂತರ ಪರಿಶುದ್ಧವಾದ ಚಿತ್ತವನ್ನುಳ್ಳ ಭಿಕ್ಷುಗಳು ಅವನನ್ನು ಪಬ್ಬಜಿತನನ್ನಾಗಿ ಒಪ್ಪಿಕೊಂಡು ಭಿಕ್ಷುವನ್ನಾಗಿ ಮಾಡುತ್ತಾರೆ. ಮನುಷ್ಯ ಮನುಷ್ಯರಾಗಿರುವ ವ್ಯತ್ಯಾಸವನ್ನು ಆಗಲೂ ನಾನು ಒಪ್ಪುತ್ತೇನೆ.”

“ಭಂತೆ, ಇತರ ಪಂಥಗಳಲ್ಲಿರುವವರು ಅದನ್ನು ತೊರೆದು ಧಮ್ಮವಿನಯಗಳನ್ನು ತಿಳಿಯಲು ಭಿಕ್ಷುವಾಗಲು ನಾಲ್ಕು ತಿಂಗಳು ಸಂಘದಲ್ಲಿ ವಾಸಿಸಬೇಕಾದರೆ, ಆಮೇಲೆ ಪರಿಶುದ್ಧವಾದ ಚಿತ್ತವನ್ನುಳ್ಳ ಭಿಕ್ಷುಗಳು ಅವನನ್ನು ಪಬ್ಬಜಿತನನ್ನಾಗಿ ಒಪ್ಪಿಕೊಂಡು ಭಿಕ್ಷುವನ್ನಾಗಿ ಮಾಡಿದರೆ, ನಾನೂ ನಾಲ್ಕು ವರ್ಷಗಳು ಸಂಘದಲ್ಲಿ ವಾಸಿಸುತ್ತೇನೆ, ನಾಲ್ಕು ವರ್ಷಗಳ ನಂತರ ಪರಿಶುದ್ಧವಾದ ಚಿತ್ತವನ್ನುಳ್ಳ ಭಿಕ್ಷುಗಳು ನನ್ನನ್ನು ಪಬ್ಬಜಿತನನ್ನಾಗಿ ಒಪ್ಪಿಕೊಳ್ಳಲಿ, ಭಿಕ್ಷುವನ್ನಾಗಿ ಮಾಡಲಿ.”

ಆಮೇಲೆ ಅಚೇಲ ಕಸ್ಸಪನು ಭಗವಾನರಿಂದಲೇ ಪಬ್ಬಜಿತನಾಗಲು ಅನುಮತಿ ಪಡೆದನು. ಅವರೇ ಅವನನ್ನು ಭಿಕ್ಷುವನ್ನಾಗಿ ಮಾಡಿದರು. ಆ ಕೂಡಲೇ ಕಸ್ಸಪನು ಬೇರೆಯವರಾರೊಂದಿಗೂ ಸೇರದೆ ಒಬ್ಬನೆ ವಾಸಿಸಲು ಆರಂಭಿಸಿದನು. ಎಚ್ಚರಿಕೆಯಿಂದಲೂ ಉತ್ಸಾಹದಿಂದಲೂ ಸಾಧನೆಯನ್ನು ಮಾಡಿದನು, ಸ್ವಾವಲಂಬಿಯಾದನು. ಚಿಕ್ಕವಯಸ್ಸಿನಲ್ಲಿಯೇ ಕುಲಪುತ್ರರಾದವರು ಯಾವುದಕ್ಕಾಗಿ ಮನೆಯನ್ನು ತೊರೆದು ಪಬ್ಬಜಿತರಾಗಿ ಅನಗಾರಿಕರಾಗುತ್ತಾರೋ ಆ ಬ್ರಹ್ಮಚರ್ಯವನ್ನೂ ದೃಷ್ಟಿಗೆ ಗೋಚರವಾದ ಲೋಕದಲ್ಲಿಯೇ ಉತ್ಕೃಷ್ಟವಾದ ಜ್ಞಾನವನ್ನು ಆತನು ಪಡೆದನು. “ಜನನವು ಕೊನೆಯಾಯಿತು, ಬ್ರಹ್ಮಚರ್ಯವನ್ನು ಪಾಲಿಸಿಯಾಯಿತು, ಮಾಡಬೇಕಾದದ್ದನ್ನು ಮಾಡಿಯಾಯಿತು, ಇನ್ನುಮುಂದೆ ಯಾವ ಜನ್ಮವೂ ಇಲ್ಲ” ಎಂಬ ಸ್ಪಷ್ಟ ಜ್ಞಾನವನ್ನು ಪಡೆದನು. ಅರ್ಹತನಾಗಿ ಬೇರೆ ಅರ್ಹತರ ಗುಂಪಿಗೆ ಸೇರಿಕೊಂಡನು.

ಇಲ್ಲಿಗೆ ಮಹಾಸೀಹನಾದ ಸುತ್ತ ಮುಗಿಯಿತು.

ಟಿಪ್ಪಣಿಗಳು [3]