ಪೊಟ್ಠಪಾದನು ಪರಿವ್ರಾಜಕನಾಗುವ ವಿಷಯ
ಹೀಗೆ ಕೇಳಿದ್ದೇನೆ: ಒಮ್ಮೆ ಭಗವಾನರು ಸಾವತ್ಥಿಯ ಜೇತವನದಲ್ಲಿನ ಅನಾಥಪಿಂಡಿಕನ ಆರಾಮದಲ್ಲಿ ತಂಗಿದ್ದರು. ಆ ಸಮಯದಲ್ಲಿ ಪೊಟ್ಠಪಾದನೆಂಬ ಪರಿಬ್ಬಾಜಕನು ಮುನ್ನೂರು ಪರಿಬ್ಬಾಜಕರ ದೊಡ್ಡ ಸಮೂಹದೊಂದಿಗೆ ಮಲ್ಲಿಕಳು ವಿವಿಧ ವಾದಗಳ ಚರ್ಚೆಗಾಗಿ ಕಟ್ಟಿಸಿದ್ದ ಏಕಸಾಲ ಆರಾಮದಲ್ಲಿ ತಂಗಿದ್ದನು. ಆ ಆರಾಮವು ತಿಂದುಕ ವೃಕ್ಷಗಳ ಸಾಲುಗಳ ಮಧ್ಯದಲ್ಲಿತ್ತು. ಭಗವಾನರು ಆ ಒಂದು ಪೂರ್ವಾಹ್ನ ಸಮಯದಲ್ಲಿ ಚೀವರ ಪಿಂಡಪಾತ್ರೆಯೊಂದಿಗೆ ಸಾವತ್ಥಿಯೊಳಕ್ಕೆ ಭಿಕ್ಷೆಗಾಗಿ ಹೋದರು.
ಆಗ ಭಗವಾನರು ಹೀಗೆಂದುಕೊಂಡರು: ‘ಭಿಕ್ಷೆಗಾಗಿ ಸಾವತ್ಥಿಗೆ ಹೋಗುವುದಕ್ಕೆ ಇನ್ನೂ ಸಾಕಷ್ಟು ಕಾಲವಿದೆ. ತಿಂದುಕ ವೃಕ್ಷಗಳ ಸಾಲುಗಳ ನಡುವೆ ಮಲ್ಲಿಕಳು ವಿವಿಧ ವಾದಗಳ ಚರ್ಚೆಗಾಗಿ ಕಟ್ಟಿಸಿರುವ ಆರಾಮದಲ್ಲಿರುವ ಪೊಟ್ಠಪಾದನಲ್ಲಿಗೆ ಹೋಗುವುದು ಸರಿ’. ಅದರಂತೆ ಭಗವಾನರು ಮಲ್ಲಿಕಳ ಏಕಸಾಲ ಆರಾಮಕ್ಕೆ ಹೋದರು.
ಆ ಸಮಯದಲ್ಲಿ ಪರಿಬ್ಬಾಜಕ ಪೊಟ್ಠಪಾದನು ದೊಡ್ಡ ಪರಿಬ್ಬಾಜಕ ಸಮೂಹದೊಂದಿಗೆ ಕುಳಿತಿದ್ದನು. ಅವರು ಗಟ್ಟಿಯಾಗಿ ಮಾತನಾಡುತ್ತಾ ಕೂಗಾಡುತ್ತಾ ಬಗೆಬಗೆಯ ನೀಚ ಕಥೆಗಳನ್ನು ಹೇಳಿ ಕೇಳುವುದರಲ್ಲಿ ತೊಡಗಿದ್ದರು. ಆ ಕಥೆಗಳು ಯಾವುವೆಂದರೆ-ರಾಜಕಥೆ, ಚೋರಕಥೆ, ಮಹಾಮಂತ್ರಿಗಳ ಕಥೆ, ಸೇನೆಗಳ ಕಥೆ, ಭಯ ಹುಟ್ಟಿಸುವ ಕಥೆ, ಯುದ್ಧ ಕಥೆ, ಅನ್ನಕಥೆ, ಪಾನಕಥೆ, ವಸ್ತ್ರಕಥೆ, ಶಯನಕಥೆ, ಮಾಲೆಗಳ ಕಥೆ, ಗಂಧಗಳ ಕಥೆ, ಜ್ಞಾತಿಗಳ ಕಥೆ, ಯಾನಕಥೆ, ಗ್ರಾಮಕಥೆ, ಪಟ್ಠಣಗಳ ಕಥೆ, ನಗರ ಕಥೆ, ಜನಪದ ಕಥೆ, ಸ್ತ್ರೀಯರ ಕಥೆ, ಪುರುಷರ ಕಥೆ, ಶೂರರ ಕಥೆ, ಬೀದಿಯ ಮೂಲೆಗಳ ಕಥೆ ಭಾವಿಕಟ್ಟಿಯಲ್ಲಿ ನಡೆಯುವ ಮಾತುಗಳು ಪೂರ್ವಪ್ರೇತಗಳ ಕಥೆ, ಅಸಂಬದ್ಧ ವಿಷಯಗಳ ಕಥೆ, ಲೋಕ ಮತ್ತು ಸಮುದ್ರಗಳ ಸೃಷ್ಟಿಯ ಕಥೆ ಭವಾಭವಗಳ ಕಥೆ.
ಪೊಟ್ಠಪಾದನು ದೂರದಿಂದ ಬರುತ್ತಿದ್ದ ಭಗವಾನರನ್ನು ನೋಡಿದನು. ನೋಡಿದ ಅವನು ಅಲ್ಲಿ ನೆರೆದಿದ್ದವರವನ್ನು ಸರಿಯಾಗಿರುವಂತೆ ಆಜ್ಞೆ ಮಾಡಿದನು- “ಶಾಂತರಾಗಿರಿ, ನೀವು ಸದ್ದು ಮಾಡಬೇಡಿ. ಸಮಣ ಗೋತಮನು ಬರುತ್ತಿದ್ದಾನೆ. ಎಂದೂ ಗದ್ದಲ ಮಾಡದ ಆ ಆಯುಷ್ಮಂತನು ಶಾಂತವಾಗಿರುವವರನ್ನು ಪ್ರಶಂಸಿಸುತ್ತಾನೆ. ಶಬ್ದ ಮಾಡದಿರುವ ನಮ್ಮನ್ನು ನೋಡಿದ ಅವನು ನಮ್ಮ ಜೊತೆಗೆ ಸೇರಿಕೊಳ್ಳುವುದು ದಿಟ”. ಇದನ್ನು ಕೇಳಿದ ಪರಿಬ್ಬಾಜಕರು ಮೌನದಿಂದ ಕುಳಿತರು.
ಭಗವಾನರು ಪರಿಬ್ಬಾಜಕ ಪೊಟ್ಠಪಾದನ ಹತ್ತಿರ ಬಂದರು. ಆಗ ಪರಿಬ್ಬಾಜಕ ಪೊಟ್ಠಪಾದನು ಭಗವಾನರನ್ನು ಕುರಿತು ಹೀಗೆಂದನು: “ಪೂಜ್ಯ ಭಗವಾನರೆ, ಇಲ್ಲಿಗೆ ದಯಮಾಡಿಸಬೇಕು. ಪೂಜ್ಯರಾದ ಭಗವಾನರಿಗೆ ಸ್ವಾಗತ. ಭಗವಾನರು ಈ ಕಡೆ ದಯಮಾಡಿಸಿ ಸಾಕಷ್ಟು ಕಾಲವಾಯಿತು, ಭಗವಾನರು ಕುಳಿತುಕೊಳ್ಳಬೇಕು. ಇಲ್ಲಿ ಆಸನವನ್ನು ಸಿದ್ಧಗೊಳಿಸಲಾಗಿದೆ.” ಭಗವಾನರು ಆಸನದಲ್ಲಿ ಕುಳಿತರು. ಪೊಟ್ಠಪಾದ ಪರಿಬ್ಬಾಜಕನು ಬೇರೊಂದು ಎತ್ತರವಿಲ್ಲದ ಆಸನವನ್ನು ತೆಗೆದುಕೊಂಡು ಹೋಗಿ ಒಂದುಕಡೆ ಕುಳಿತುಕೊಂಡನು. ಹೀಗೆ ಕುಳಿತುಕೊಂಡ ಪೊಟ್ಠಪಾದನನ್ನು ಕುರಿತು ಭಗವಾನರು “ಪೊಟ್ಠಪಾದ, ಇಲ್ಲಿ ಕುಳಿತಿರುವ ನೀವು ಈಗ ಏನನ್ನು ಚರ್ಚಿಸುತ್ತಿದ್ದೀರಿ? ಯಾವ ಚರ್ಚೆಗೆ ನನ್ನಿಂದ ಅಡ್ಡಿಯಾಯಿತು?”
ಗ್ರಹಿಕೆ ಇಲ್ಲದಿರುವ ಮನೋಸ್ಥಿತಿಯ ವಿಷಯ
ಹೀಗೆ ಹೇಳಿದ ಭಗವಾನರನ್ನು ಕುರಿತು ಪೊಟ್ಠಪಾದ ಪರಿಬ್ಬಾಜಕನು ಇಂತೆಂದನು- “ಭಂತೆ, ನಾವು ಇಲ್ಲಿ ಕುಳಿತು ಚರ್ಚಿಸುತ್ತಿದ್ದ ವಿಷಯ ಒತ್ತಟ್ಟಿಗಿರಲಿ. ಭಗವಾನರು ಅದನ್ನು ಅನಂತರ ಕೇಳಿ ತಿಳಿಯುವುದು ಕಷ್ಟವಾಗಲಾರದು. ಭಂತೆ, ಹಿಂದಿನ ದಿನಗಳಲ್ಲಿ ಬೇರೆ ಪಂಥಗಳಿಗೆ ಸೇರಿದ ಸಮಣ ಬ್ರಾಹ್ಮಣರು ಸಭಾಂಗಣದಲ್ಲಿ ಕುಳಿತು ಚರ್ಚಿಸುವಾಗ ಅನೇಕ ಸಂದರ್ಭಗಳಲ್ಲಿ ‘ಅಭಿಸಞ್ಞಾ ನಿರೋಧ’ದ ವಿಷಯ ಬರುತ್ತಿತ್ತು. ‘ಅಭಿಸಞ್ಞಾ ನಿರೋಧವು ಹೇಗೆ ಆಗುತ್ತದೆ’ ಎಂಬುದು ಚರ್ಚೆಯಾಗುತ್ತಿತ್ತು. ಆಗ ಕೆಲವರು ಹೀಗೆ ಹೇಳುತ್ತಿದ್ದರು: ‘ಮನುಷ್ಯರ ಗ್ರಹಿಕೆ (ಸಞ್ಞÁ) ಯಾವ ಕಾರಣವೂ ಇಲ್ಲದೆ ಯಾವುದರ ಅವಲಂಬನೆಯೂ ಇಲ್ಲದೆ ಮೂಡುತ್ತದೆ, ಅಳಿಯುತ್ತದೆ. ಯಾವ ಸಮಯದಲ್ಲಿ ಉದಯಿಸುತ್ತದೆಯೋ, ಯಾವನಲ್ಲಿ ಅದು ಉದಯಿಸುತ್ತದೋ ಅವನು ಆ ಸಮಯದಲ್ಲಿ ಅರಿವನ್ನು ಹೊಂದಿರುವ ಯಾವ ಸಮಯದಲ್ಲಿ ಅದು ನಶಿಸುತ್ತದೆಯೋ, ಯಾವನಲ್ಲಿ ಅದು ನಾಶವಾಯಿತೋ ಅವನು ಆ ಸಮಯದಲ್ಲಿ ಅರಿವನ್ನು ಕಳೆದುಕೊಂಡ ಗ್ರಹಿಕೆ ಇಲ್ಲದವನಾಗುತ್ತಾನೆ. ಹೀಗೆ ‘ಅಭಿಸಞ್ಞಾ ನಿರೋಧ’15 ವನ್ನು ವಿವರಿಸುತ್ತಿದ್ದರು.”
ಆಗ ಇನ್ನೊಬ್ಬನು ಹೇಳುತ್ತಿದ್ದುದು ಹೀಗಿತ್ತು: “ಗೆಳೆಯ, ನೀನು ಹೇಳಿದಂತೆ ಆಗುವುದಿಲ್ಲ. ಗ್ರಹಿಕೆಯು ಮನುಷ್ಯರ ಆತ್ಮವಾಗಿರುತ್ತದೆ. ಅದು ಬರುತ್ತದೆ, ಹೋಗುತ್ತದೆ, ಯಾವ ಸಮಯದಲ್ಲಿ ಆತ್ಮವು ಬರುತ್ತದೋ ಆಗ ಪುರುಷನು ಗ್ರಹಿಕೆವುಳ್ಳವನಾಗುತ್ತಾನೆ. ಯಾವ ಸಮಯದಲ್ಲಿ ಅದು ಹೋಗುತ್ತದೋ, ಆಗ ಪುರುಷನು ಅರಿವನ್ನು ಕಳೆದುಕೊಂಡು ಗ್ರಹಿಕೆ ಇಲ್ಲದವನಾಗುತ್ತಾನೆ”. ಹೀಗೆ ಕೆಲವರು ಅಭಿಸಞ್ಞಾನಿರೋಧವನ್ನು ವಿವರಿಸುತ್ತಿದ್ದರು.
ಮತ್ತೊಬ್ಬನು ಹೀಗೆ ಹೇಳುತ್ತಿದ್ದನು- “ಗೆಳೆಯ, ನೀನು ಹೇಳುವುದು ಸರಿಯಲ್ಲ. ಮಹಾಶಕ್ತರೂ ಮಹಾನುಭಾವರೂ ಆದ ಸಮಣ ಬ್ರಾಹ್ಮಣರಿದ್ದಾರೆ. ಅವರು ಇಲ್ಲಿಯ ಪುರುಷನಲ್ಲಿ ಅರಿವನ್ನು ಮೂಡಿಸುತ್ತಾರೆ, ಅಳಿಸುತ್ತಾರೆ. ಯಾವ ಸಮಯದಲ್ಲಿ ಅರಿವನ್ನು ಮೂಡಿಸುತ್ತಾರೋ ಆ ಸಮಯದಲ್ಲಿ ಪುರುಷನು ಗ್ರಹಿಕೆ ಉಳ್ಳವನಾಗುತ್ತಾನೆ. ಯಾವ ಸಮಯದಲ್ಲಿ ಅರಿವನ್ನು ನಶಿಸುತ್ತಾರೋ ಆ ಸಮಯದಲ್ಲಿ ಪುರುಷನು ಗ್ರಹಿಕೆ ಇಲ್ಲದವನಾಗುತ್ತಾನೆ”. ಹೀಗೆ ಕೆಲವರು ಅಭಿಸಞ್ಞಾನಿರೋಧವನ್ನು ವಿವರಿಸುತ್ತಿದ್ದರು.
ಮಗದೊಬ್ಬನು ಹೀಗೆ ಹೇಳುತ್ತಿದ್ದನು- “ಗೆಳೆಯ, ನೀನು ಹೇಳುವುದು ಸರಿಯಲ್ಲ. ಮಹಾಶಕ್ತರೂ ಮಹಾನುಭಾವರೂ ಆದ ದೇವತೆಗಳಿದ್ದಾರೆ. ಅವರು ಇಲ್ಲಿಯ ಪುರುಷನಲ್ಲಿ ಅರಿವನ್ನು ಮೂಡಿಸುತ್ತಾರೆ, ಅಳಿಸುತ್ತಾರೆ. ಯಾವ ಸಮಯದಲ್ಲಿ ಅವರು ಪುರುಷನಲ್ಲಿ ಅರಿವನ್ನು ಮೂಡಿಸುತ್ತಾರೋ ಆ ಸಮಯದಲ್ಲಿ ಅವನು ಗ್ರಹಿಕೆ ಉಳ್ಳವನಾಗುತ್ತಾನೆ. ಯಾವ ಸಮಯದಲ್ಲಿ ಅರಿವನ್ನು ಅಳಿಸುತ್ತಾರೋ ಆ ಸಮಯದಲ್ಲಿ ಪುರುಷನು ಗ್ರಹಿಕೆ ಇಲ್ಲದವಗುತ್ತಾನೆ”. ಹೀಗೆ ಕೆಲವರು ಅಭಿಸಞ್ಞಾನಿರೋಧವನ್ನು ವಿವರಿಸುತ್ತಿದ್ದರು.
“ಭಂತೆ, ಆಗ ನನಗೆ ಭಗವಾನರ ನೆನಪು ಬಂದಿತು. ‘ಭಗವಾನರು ಇಲ್ಲಿರಬೇಕಿತ್ತು, ಸುಗತರು ಇಲ್ಲಿರಬೇಕಿತ್ತು. ಅವರು ಧಮ್ಮಗಳಲ್ಲಿ ಕುಶಲರಾದವರು!’. ಭಂತೆ, ಭಗವಾನರಾದ ನೀವು ಅಭಿಸಞ್ಞಾ ನಿರೋಧವನ್ನು ತಿಳಿದ ಕುಶಲರಾಗಿದ್ದೀರಿ. ಭಂತೆ, ಅಭಿಸಞ್ಞಾನಿರೋಧವು ಹೇಗಾಗುತ್ತದೆ?”
ಮೂಲ ಕಾರಣಗಳಿಂದ ಉದಯಿಸುವ ಮತ್ತು ಅಳಿಯುವ ಗ್ರಹಿಕೆಗಳ ಬಗ್ಗೆ
“ಪೊಟ್ಠಪಾದ, ಕೆಲವು ಸಮಣ ಬ್ರಾಹ್ಮಣರು, ‘ಗ್ರಹಿಕೆಗಳು ಯಾವ ಕಾರಣವೂ ಇಲ್ಲದೆ ಉದಯಿಸುತ್ತವೆ ಮತ್ತು ಅಳಿಯುತ್ತವೆ’ ಎಂದು ಹೇಳುತ್ತಾರೆ, ಇದು ತಪ್ಪು. ಶಿಕ್ಷಣದಿಂದ ಗ್ರಹಿಕೆಗಳು ಉದಯಿಸುತ್ತವೆ ಮತ್ತು ಅಳಿಯುತ್ತವೆ.
“ಪೊಟ್ಠಪಾದ, ‘ಯಾವ ಕಾರಣವೂ ಇಲ್ಲದೆ ಯಾವುದರ ಅವಲಂಬನವೂ ಇಲ್ಲದೆ ಅರಿವು ಮೂಡುತ್ತದೆ ಮತ್ತು ಅಳಿಯುತ್ತದೆ’ ಎಂದು ಹೇಳುವ ಸಮಣ ಬ್ರಾಹ್ಮಣರು ಆದಿಯಲ್ಲೇ ತಪ್ಪಿದ್ದಾರೆ. ಕಾರಣವೇನು? ಮನುಷ್ಯರಲ್ಲಿ ಅರಿವು ಉದಯಿಸುವುದಕ್ಕೆ ಮತ್ತು ನಶಿಸುವುದಕ್ಕೆ ಕಾರಣವೂ ಉಂಟು. ಅದು ಒಂದು ಆಧಾರವನ್ನು ಅವಲಂಬಿಸಿರುವುದೂ ಉಂಟು. ಶಿಕ್ಷಣದಿಂದ ಕೆಲವು ಭಾವನೆಗಳು ಮೂಡುತ್ತವೆ. ಶಿಕ್ಷಣದಿಂದ ಕೆಲವು ಭಾವನೆಗಳು ನಶಿಸುತ್ತವೆ.”
ಆ ಶಿಕ್ಷಣವನ್ನು ಕುರಿತು ಭಗವಾನರು ಹೇಳಿದುದು ಹೀಗಿದೆ :
“ಪೊಟ್ಠಪಾದ, ಅರಹಂತರೂ ಸಮ್ಮಾಸಂಬುದ್ಧರೂ ಆದ ತಥಾಗತರು ಈ ಲೋಕದಲ್ಲಿ ಉದಯಿಸುತ್ತಾರೆ... ಹೀಗೆ ಭಿಕ್ಷುವು ಶೀಲಸಂಪನ್ನನಾಗುತ್ತಾನೆ.
(ಸಾಮಞ್ಞಫಲ ಸುತ್ತದ 41ನೆಯ ಪ್ಯಾರಾದಿಂದ 76ನೆಯ ಪ್ಯಾರದವರೆಗಿರುವಂತೆ ಓದಿಕೊಳ್ಳಬೇಕು).
ಆತನು ಕಾಮಗಳಿಂದ ಅಕುಶಲ ಭಾವನೆಗಳಿಂದ ದೂರನಾಗಿ ತರ್ಕ ಮತ್ತು ವಿಚಾರಗಳಿಂದ ಏಕಾಂತದಿಂದ ಹುಟ್ಟಿದ ಪ್ರೀತಿಸುಖಗಳನ್ನು ಪಡೆದು ಪ್ರಥಮ ಧ್ಯಾನದಲ್ಲಿರುತ್ತಾನೆ. ಹಿಂದಿನ ಕಾಮದ ಭಾವನೆ ಅವನಲ್ಲಿ ಅಳಿಸಿಹೋಗುತ್ತದೆ. ಏಕಾಂತದಿಂದ ಹುಟ್ಟಿದ ಸೂಕ್ಷ್ಮವಾದ ಪ್ರೀತಿಸುಖ ಭಾವನೆಯು ಅವನಲ್ಲಿ ವಾಸ್ತವವಾಗಿ ಉದಯಿಸಿದಾಗ ಅವನು ಅದರ ಇರುವಿನ ಅರಿವನ್ನು ಹೊಂದಿದವನಾಗುತ್ತಾನೆ. ಹೀಗೆ ಶಿಕ್ಷಣದಿಂದ ಒಂದು ಬಗೆಯ ಭಾವನೆ ಉದಯಿಸುತ್ತದೆ. ಒಂದು ಬಗೆಯ ಭಾವನೆ ನಶಿಸುತ್ತದೆ. ಈ ಶಿಕ್ಷಣವನ್ನು ಭಗವಾನರು ಹೇಳಿದರು-
“ಪೊಟ್ಠಪಾದ, ಭಿಕ್ಷುವು ತರ್ಕ ಮತ್ತು ವಿಚಾರಗಳನ್ನು ಉಪಶಮನ ಮಾಡಿಕೊಂಡು ಅವುಗಳನ್ನು ಮೀರಿ ಚಿತ್ತೈಕಾಗ್ರತೆಯನ್ನು ಪಡೆದು ಸಮಾಧಿಯಿಂದ ಹುಟ್ಟುವ ಪ್ರೀತಿಸುಖವನ್ನು ಪಡೆದು ದ್ವಿತೀಯ ಧ್ಯಾನದಲ್ಲಿರುತ್ತಾನೆ. ಆಗ ಅವನ ಚಿತ್ತವು ಉನ್ನತ ಸ್ಥಿತಿಯಲ್ಲಿರುತ್ತದೆ. ಹಿಂದಿದ್ದ ಏಕಾಂತದಿಂದ ಹುಟ್ಟಿದ ಸೂಕ್ಷ್ಮವಾದ ವಾಸ್ತವವಾಗಿದ್ದ ಪ್ರೀತಿಸುಖದ ಭಾವನೆಯು ಅಳಿಸಿಹೋಗುತ್ತದೆ. ಸಮಾಧಿಯಿಂದ ಹುಟ್ಟುವ ಸೂಕ್ಷ್ಮವಾದ ವಾಸ್ತವವಾದ ಪ್ರೀತಿ ಸುಖದ ಭಾವನೆಯು ಉದಯಿಸಿದಾಗ ಅದರ ಅರಿವನ್ನು ಹೊಂದಿದವನಾಗಿರುತ್ತಾನೆ. ಹೀಗೆ ಶಿಕ್ಷಣದಿಂದ ಒಂದು ಬಗೆಯ ಭಾವನೆ ಹುಟ್ಟುತ್ತದೆ, ಒಂದು ಬಗೆಯ ಭಾವನೆಯು ನಶಿಸುತ್ತದೆ”. ಭಗವಾನರು ಹೇಳಿದ ಶಿಕ್ಷಣವು ಇದು.
“ಪೊಟ್ಠಪಾದ, ಪ್ರೀತಿ ವಿರಾಗಗಳಿಂದ ದೂರವಾಗಿ ಸಮಚಿತ್ತತೆಯನ್ನು ಹೊಂದಿರುತ್ತಾನೆ. ಸ್ಮೃತಿವಂತನಾಗಿ ಕಾಯದಲ್ಲಿ ಸುಖವನ್ನು ಅನುಭವಿಸುವವನಾಗಿ ಆರ‍್ಯರಾದವರು ಯಾವುದನ್ನು ಸಮಚಿತ್ತತೆಯಿಂದ ಕೂಡಿದ ಸ್ಮೃತಿಯನ್ನು ಪಡೆದ ಸುಖವಿಹಾರ ಎನ್ನುತ್ತಾರೋ ಆ ತೃತೀಯ ಧ್ಯಾನದಲ್ಲಿರುತ್ತಾನೆ. ಹಿಂದಿನ ಸಮಾಧಿಯಿಂದ ಹುಟ್ಟಿದ ಸೂಕ್ಷ್ಮವಾದ ವಾಸ್ತವವಾದ ಪ್ರೀತಿಸುಖದ ಗ್ರಹಿಕೆಯು ಅಳಿಸಿಹೋಗುತ್ತದೆ. ಸಮಚಿತ್ತತೆಯಿಂದ ಬರುವ ವಾಸ್ತವವಾದ ಗ್ರಹಿಕೆಯುಂಟಾಗಿ ಅದರ ಅರಿವನ್ನು ಪಡೆದವನಾಗುತ್ತಾನೆ. ಹೀಗೆ ಶಿಕ್ಷಣದಿಂದ ಕೆಲವು ಗ್ರಹಿಕೆಗಳು ಉದಯಿಸುತ್ತವೆ. ಕೆಲವು ಗ್ರಹಿಕೆಗಳು ನಶಿಸುತ್ತವೆ”. ಭಗವಾನರು ಹೇಳಿದ ಶಿಕ್ಷಣವು ಇದು.
“ಪೊಟ್ಠಪಾದ, ಸುಖದುಃಖಗಳಿಲ್ಲದ ಹಿಂದಿದ್ದ ಸುಮನಸ್ಸು ದುರ್ಮನಸ್ಸುಗಳನ್ನು ನಾಶವಾದ ಪರಿಶುದ್ಧವಾದ ಸಮಚಿತ್ತತೆ ಸ್ಮೃತಿಯನ್ನು ಹೊಂದಿ ಚತುರ್ಥ ಧ್ಯಾನದಲ್ಲಿರುತ್ತಾನೆ. ಹಿಂದಿದ್ದ ಸೂಕ್ಷ್ಮವಾದ ವಾಸ್ತವವಾದ ಸಮಚಿತ್ತತೆ ಗ್ರಹಿಕೆಯು ಅಳಿಸಿಹೋಗುತ್ತದೆ. ಸೂಕ್ಷ್ಮವಾದ ವಾಸ್ತವವಾದ ಅದುಃಖ ಅಸುಖ ಗ್ರಹಿಕೆಯುಂಟಾಗಿ ಅದರ ಅರಿವನ್ನು ಪಡೆದಿರುವವನಾಗುತ್ತಾನೆ. ಹೀಗೆ ಶಿಕ್ಷಣದಿಂದ ಕೆಲವು ಗ್ರಹಿಕೆಗಳು ಉದಯಿಸುತ್ತವೆ, ಕೆಲವು ಗ್ರಹಿಕೆಗಳು ನಶಿಸುತ್ತವೆ.
“ಪೊಟ್ಠಪಾದ, ಭಿಕ್ಷುವು ರೂಪವಿರುವುದೆಂಬ ಅರಿವೆಲ್ಲವನ್ನೂ ದಾಟಿ ರೋಷ ಗ್ರಹಕೆಯನ್ನು ನಾಶಮಾಡಿಕೊಂಡು ನಾನತ್ವದ ಗ್ರಹಿಕೆಯನ್ನು ಮನಸ್ಸಿನಿಂದ ದೂರಮಾಡಿ ‘ಆಕಾಶವು ಅನಂತವಾಗಿದೆ’ ಎಂಬ ಅನಂತ ಆಕಾಶದ ಆಯತನದಲ್ಲಿ ವಿಹರಿಸುತ್ತಾನೆ. ಹಿಂದಿನ ರೂಪವಿರುವುದೆಂಬ ಅರಿವು ಅಳಿಸಿಹೋಗುತ್ತದೆ. ಸೂಕ್ಷ್ಮವಾದ ವಾಸ್ತವವಾದ ಅನಂತ ಆಕಾಶದ ಅಯತನದ ಗ್ರಹಿಕೆಯುಂಟಾಗಿ ಅದರ ಅರಿವನ್ನು ಪಡೆದಿರುವವನಾಗುತ್ತಾನೆ. ಹೀಗೆ ಶಿಕ್ಷಣದಿಂದ ಕೆಲವು ಗ್ರಹಿಕೆಗಳು ಉದಯಿಸುತ್ತವೆ, ಕೆಲವು ಗ್ರಹಕೆಗಳು ನಶಿಸುತ್ತವೆ” ಭಗವಾನರು ಶಿಕ್ಷಣವನ್ನು ಕುರಿತು ಹೇಳಿದುದು ಹೀಗೆ.
“ಪೊಟ್ಠಪಾದ, ಭಿಕ್ಷುವು ಅನಂತ ಆಕಾಶ ಆಯತನದ ಗ್ರಹಿಕೆಯನ್ನು ದಾಟಿ ‘ವಿಞ್ಞಾನವು (ಅರಿವು) ಅನಂತವಾಗಿದೆ’ ಎಂಬ ಅನಂತ ವಿಞ್ಞಾನಾಯತನದಲ್ಲಿ ವಿಹರಿಸುತ್ತಾನೆ. ಹಿಂದಿನ ಸೂಕ್ಷ್ಮವೂ ವಾಸ್ತವವೂ ಆದ ಅನಂತ ಆಕಾಶದ ಆಯತನ ಅಳಿಸಿಹೋಗುತ್ತದೆ. ಸೂಕ್ಷ್ಮವಾದ ಸತ್ಯವಾದ ಅನಂತ ವಿಞ್ಞಾನದ ಆಯತನ ಗ್ರಹಿಕೆಯುಂಟಾಗಿ ಅದರ ಅರಿವನ್ನು ಪಡೆದಿರುವವನಾಗಿರುತ್ತಾನೆ. ಹೀಗೆ ಶಿಕ್ಷಣದಿಂದ ಕೆಲವು ಗ್ರಹಿಕೆಗಳು ಉದಯಿಸುತ್ತವೆ, ಕೆಲವು ಗ್ರಹಿಕೆಗಳು ನಶಿಸುತ್ತವೆ” ಭಗವಾನರು ಹೇಳಿದ ಶಿಕ್ಷಣ ಇದು.
“ಪೊಟ್ಠಪಾದ, ಭಿಕ್ಷುವು ಅನಂತ ವಿಞ್ಞಾಣಾಯತನದ ಗ್ರಹಿಕೆಯನ್ನು ದಾಟಿ ‘ಯಾವುದೂ ಇಲ್ಲ’ ಎಂಬ ಅಕಿಂಚಞ್ಞಾಯತನದಲ್ಲಿ ವಿಹರಿಸುತ್ತಾನೆ. ಸೂಕ್ಷ್ಮವೂ ವಾಸ್ತವವೂ ಆದ ಹಿಂದಿನ ವಿಞ್ಞಾಣಾಯತನ ಗ್ರಹಿಕೆಯು ಅಳಿಸಿಹೋಗುತ್ತದೆ. ಸೂಕ್ಷ್ಮವೂ ವಾಸ್ತವವೂ ಆದ ಅಕಿಂಚಞ್ಞಯತನದ ಗ್ರಹಿಕೆಯುಂಟಾಗಿ ಅದನ್ನು ಪಡೆದಿರುವವನಾಗುತ್ತಾನೆ, ಹೀಗೆ ಶಿಕ್ಷಣದಿಂದ ಕೆಲವು ಗ್ರಹಿಕೆಗಳು ಉದಯಿಸುತ್ತವೆ, ಕೆಲವು ಗ್ರಹಿಕೆಗಳು ನಶಿಸುತ್ತವೆ. ಭಗವಾನರು ಹೇಳಿದ ಶಿಕ್ಷಣ ಇದು.
“ಪೊಟ್ಠಪಾದ, ಭಿಕ್ಷುವು ತಾನೇ ಅರಿವನ್ನು ಗಳಿಸುತ್ತಾನೆ. ಈ ರೀತಿಯಲ್ಲಿ ಸಞ್ಞದ (ಗ್ರಹಿಸುವುದು ಅಥವಾ ಗ್ರಹಣ) ಹಂತ ಹಂತಗಳನ್ನು ಕುರಿತು ಚಿಂತಿಸುತ್ತಾ ಆಮೇಲೆ ಸಞ್ಞದ ಅಗ್ರಸ್ಥಿತಿಯನ್ನು ಕುರಿತು ಊಹಿಸುತ್ತಾನೆ. ಸಞ್ಞದ ಅಗ್ರಸ್ಥಿತಿಯಲ್ಲಿಯೇ ತನ್ನ ಮನಸ್ಸನ್ನು ನಿಲ್ಲಿಸಿಕೊಂಡು ‘ಆಲೋಚನೆಯಲ್ಲಿ ತೊಡಗುವ ನನ್ನ ಮನಸ್ಸು ಪಾಪದಿಂದ ಕೂಡಿರುತ್ತದೆ. ಆಲೋಚನೆಯನ್ನು ಬಿಟ್ಟ ನನ್ನ ಮನಸ್ಸು ಶ್ರೇಯಸ್ಸನ್ನುಂಟುಮಾಡುತ್ತದೆ. ನಾನು ಆಲೋಚನೆಯಲ್ಲಿಯೇ ತೊಡಗಿ ಊಹಾಪೋಹಗಳಲ್ಲಿಯೇ ನಿರತನಾದರೆ ನನ್ನ ಇಂದಿನ ಭಾವನೆಗಳು ನಶಿಸುತ್ತವೆ. ಒರಟಾದ ಬೇರೊಂದು ಭಾವನೆಯೊಂದು ಉದಯಿಸುತ್ತದೆ. ಆದುದರಿಂದ ಆಲೋಚನೆಯಲ್ಲಿ ತೊಡಗುವುದಿಲ್ಲ, ಊಹೆಯಲ್ಲಿ ನಿರತನಾಗುವುದಿಲ್ಲ’ ಎಂದು ಅಂದುಕೊಳ್ಳುತ್ತಾನೆ. ಅವನು ಆಲೋಚನೆ ಮಾಡುವುದನ್ನು ಬಿಡುತ್ತಾನೆ. ಊಹಿಸುವುದನ್ನು ನಿಲ್ಲಿಸುತ್ತಾನೆ. ಆಲೋಚನೆ ಊಹೆಗಳನ್ನು ಬಿಟ್ಟಿರುವ ಅವನಲ್ಲಿ ಭಾವನೆಯು (ಅಗ್ರಸ್ಥಿತಿಯ ಭಾವನೆ) ಅಳಿಯುವುದಿಲ್ಲ. ಬೇರೆ ಒರಟಾದ ಭಾವನೆಗಳು ಹುಟ್ಟುವುದಿಲ್ಲ. ಅವನು ಅಭಿಞ್ಞಾ ನಿರೋಧವನ್ನು ಸಾಧಿಸುತ್ತಾನೆ. ಹಿಗೆ, ಪೊಟ್ಠಪಾದ, ಅಭಿಞ್ಞ ನಿರೋಧವು ಹಂತಹಂತವಾಗಿ ಗಳಿಸುವಂಥದ್ದಾಗಿರುತ್ತದೆ.
“ಪೊಟ್ಠಪಾದ, ಪೂರ್ವದಲ್ಲಿ ನೀನು ಹಂತ ಹಂತವಾಗಿ ಗಳಿಸಬೇಕಾದ ಅಭಿನ್ನಾ ನಿರೋಧದ ಬಗೆಗೆ ಕೇಳಿದ್ದೀಯಾ?”
“ಇಲ್ಲ ಭಂತೆ, ಭಗವಾನರ ಬೋಧನೆಯನ್ನು ತಿಳಿದುಕೊಂಡಿದ್ದೇನೆ.”
“ಪೊಟ್ಠಪಾದ, ಭಿಕ್ಷುವು ತಾನೇ ಅರಿವನ್ನು ಗಳಿಸಿ ಈ ರೀತಿಯಲ್ಲಿ ಹಂತ ಹಂತವಾಗಿ ಸಞ್ಞದ ಅಗ್ರಸ್ಥಿತಿಯನ್ನು ಕುರಿತು ಊಹಿಸುತ್ತಾನೆ. ಸಞ್ಞದ ಅಗ್ರಸ್ಥಿತಿಯಲ್ಲೇ ತನ್ನ ಮನಸ್ಸನ್ನು ನಿಲ್ಲಿಸಿಕೊಂಡು ಆಲೋಚಿಸುವ ‘ನನ್ನ ಮನಸ್ಸು ಪಾಪಿ, ಆಲೋಚನೆಯನ್ನು ಬಿಟ್ಟ ನನ್ನ ಮನಸ್ಸು ಶ್ರೇಯಸ್ಸನ್ನುಂಟುಮಾಡುವಂಥದು. ನಾನು ಆಲೋಚನೆಯಲ್ಲಿಯೇ ತೊಡಗಿ ಊಹೆಯಲ್ಲಿ ನಿರತನಾದರೆ ನನ್ನ ಇಂದಿನ ಭಾವನೆಗಳು ನಶಿಸುತ್ತದೆ. ಒರಟಾದ ಬೇರೆ ಭಾವನೆಗಳು ಹುಟ್ಟುತ್ತವೆ. ಆದುದರಿಂದ ನಾನು ಆಲೋಚನೆಯಲ್ಲಿ ತೊಡಗುವುದಿಲ್ಲ. ಊಹೆಯಲ್ಲಿ ನಿರತರನಾಗುವುದಿಲ್ಲ’ ಎಂದು ಅಂದುಕೊಳ್ಳುತ್ತಾನೆ. ಅವನು ಆಲೋಚನೆಯನ್ನು ಬಿಡುತ್ತಾನೆ. ಊಹಿಸುವುದನ್ನು ನಿಲ್ಲಿಸುತ್ತಾನೆ. ಆಲೋಚನೆ ಊಹೆಗಳನ್ನು ಬಿಟ್ಟಿರುವ ಅವನ ಮನಸ್ಸಿನಲ್ಲಿ ಅಂಥ ಭಾವನೆಗಳು ಅಳಿಯುವುದಿಲ್ಲ. ಒರಟಾದ ಭಾವನೆಗಳು ಹುಟ್ಟುವುದಿಲ್ಲ. ಅವನು ಅಭಿಸಞ್ಞಾ ನಿರೋಧವನ್ನು ಸಾಧಿಸುತ್ತಾನೆ. ಹೀಗೆ, ಪೊಟ್ಠಪಾದ, ಅಭಿಸಞ್ಞಾನಿರೋಧವು ಹಂತಹಂತವಾಗಿ ಗಳಿಸುವಂಥದ್ದಾಗಿರುತ್ತದೆ’ ಎಂದು ಹೇಳಿದಿರಿ.”
“ಸರಿ, ಪೊಟ್ಠಪಾದ.”
“ಭಂತೆ, ಭಗವಾನರು ಸಞ್ಞದ ಅಗ್ರಸ್ಥಿತಿಯನ್ನು ವಿವರಿಸುತ್ತಾರೋ ಅಥವಾ ಸಞ್ಞದ ಅಗ್ರಸ್ಥಿತಿಗಳನ್ನು ವಿವರಿಸುತ್ತಾರೋ?”
“ಪೊಟ್ಠಪಾದ, ನಾನು ಸಞ್ಞದ ಅಗ್ರಸ್ಥಿತಿ ಒಂದೇ ಎಂದು ಹೇಳುತ್ತೇನೆ, ಸಞ್ಞದ ಅಗ್ರಸ್ಥಿತಿಗಳು ಅನೇಕ ಎಂದು ಹೇಳುತ್ತೇನೆ.”
“ಭಂತೆ, ಭಗವಾನರು ಸಞ್ಞದ ಅಗ್ರಸ್ಥಿತಿ ಒಂದೇ ಎಂದೂ ಸಞ್ಞದ ಅಗ್ರಸ್ಥಿತಿ ಅನೇಕ ಎಂದೂ ಹೇಗೆ ಹೇಳುತ್ತಾರೆ?”
“ಪೊಟ್ಠಪಾದ, ಹೇಗೆ ಹೇಗೆ ನಿರೋಧವನ್ನು ಗಳಿಸುತ್ತಾನೋ ಹಾಗೆ ಹಾಗೆ ಸಞ್ಞದ ಅಗ್ರಸ್ಥಿತಿ ಇರುತ್ತದೆ (ಅಂದರೆ ಭಾವನೆಗಳು ಅಳಿದು ಉದಯಿಸಿದಂತೆ) ಎಂದು ಹೇಳುತ್ತೇನೆ. ಹೀಗೆ ಸಞ್ಞದ ಅಗ್ರಸ್ಥಿತಿಯೂ ಒಂದೇ ಆಗಿರುವುದುಂಟು, ಅನೇಕವಿರುವುದುಂಟು.”
“ಭಂತೆ, ಸಞ್ಞವು ಮೊದಲು ಉದಯಿಸುತ್ತದೋ ಪಞ್ಞವು ಮೊದಲು ಉದಯಿಸುತ್ತದೋ? ಅಥವಾ ಪಞ್ಞ ಮೊದಲು ಆಮೇಲೆ ಸಞ್ಞವು ಉದಯಿಸುತ್ತದೋ? ಸಞ್ಞ ಮತ್ತು ಪಞ್ಞಗಳು ಒಮ್ಮೆಗೇ ಹುಟ್ಟುತ್ತವೆಯೋ?”
“ಪೊಟ್ಠಪಾದ, ಮೊದಲು ಸಞ್ಞ ಉದಯಿಸುತ್ತದೆ; ಪಞ್ಞವು ಆಮೇಲೆ ಹುಟ್ಟುತ್ತದೆ. ಸಞ್ಞ ಉದಯಿಸಿದರೆ (ಮಾತ್ರ) ಪಞ್ಞ ಉದಯಿಸುತ್ತದೆ” ನನ್ನ ಜ್ಞಾನವು ಇಂಥದನ್ನು ಅವಲಂಬಿಸಿದೆ’ ಎಂಬ ಅರಿವಿನಿಂದ ಇದು ಗೊತ್ತಾಗುತ್ತದೆ. ಪೊಟ್ಠಪಾದ, ಈ ರೀತಿಯಲ್ಲಿ ಮೊದಲು ಸಞ್ಞವೂ ಆಮೇಲೆ ಪಞ್ಞವು ಉದಯಿಸುತ್ತವೆಂದೂ, ಸಞ್ಞ ಉದಯಿಸಿದರೆ ಮಾತ್ರ ಪಞ್ಞ ಉದಯಿಸುತ್ತದೆ ಎಂದು ಹೇಳುತ್ತೇನೆ.
ಗ್ರಹಿಕೆ ಮತ್ತು ಆತ್ಮದ ಬಗ್ಗೆ
“ಭಂತೆ, ಸಞ್ಞವೂ ಪುರುಷನ ಆತ್ಮವೂ ಆಗಿವೆಯೋ ಅಥವಾ ಸಞ್ಞವೇ ಬೇರೆ ಆತ್ಮವೇ ಬೇರೆ ಆಗಿವೆಯೋ?”
“ಪೊಟ್ಠಪಾದ, ಮತ್ತೆ ಆತ್ಮವನ್ನೇ ಅವಲಂಬಿಸಿದ್ದೀಯಲ್ಲಾ?”
“ಭಂತೆ, ಒರಟಾದ ಆತ್ಮವು ಚತುರ್ಮಹಾಭೂತಗಳಿಂದ ಕೂಡಿದೆ, ಗಟ್ಟಿಯಾದ ಆಹಾರವನ್ನೇ ಅವಲಂಬಿಸಿದೆ ಎಂದು ನಾನು ಅರಿತುಕೊಂಡಿದ್ದೇನೆ.”
“ಪೊಟ್ಠಪಾದ, ಚತುರ್ಮಹಾಭೂತಗಳಿಂದ ಕೂಡಿದ ಗಟ್ಟಿಯಾದ ಆಹಾರವನ್ನೇ ಅವಲಂಬಿಸಿರುವ ಒರಟಾದ ಆತ್ಮವಿರುವುದಾದರೆ. ನಿನ್ನ ಸಞ್ಞವೇ ಬೇರೆ ಆತ್ಮವೇ ಬೇರೆ ಆಗಿರುತ್ತದೆ. ಪೊಟ್ಠಪಾದ, ಸಞ್ಞವು ಬೇರೆ ಆತ್ಮವೂ ಬೇರೆ ಎಂಬುದನ್ನು ಈ ರೀತಿಯಲ್ಲಿಯೂ ತಿಳಿಯಬಹುದು. ಪೊಟ್ಠಪಾದ, ಆತ್ಮವೂ ಸ್ಥೂಲರೂಪಿಯಾಗಿದ್ದು ಚತುರ್ಮಹಾಭೂತಗಳಿಂದ ಕೂಡಿದ್ದು ಗಟ್ಟಿಯಾದ ಆಹಾರವನ್ನು ಅವಲಂಬಿಸಿರುವುದಾಗಿದ್ದರೂ, ಬೇರೆಯೇ ಆದ ಭಾವನೆಗಳು ಉದಯಿಸುತ್ತದೆ. ಬೇರೆಯೇ ಆದ ಭಾವನೆಗಳು ಅಳಿಯುತ್ತವೆ. ಈ ಕಾರಣದಿಂದ ಸಞ್ಞವೇ ಬೇರೆ, ಆತ್ಮವೇ ಬೇರೆ ಆಗಿವೆ ಎಂಬುದನ್ನು ತಿಳಿಸಬಹುದು.”
ಭಂತೆ, ಪ್ರಧಾನ ಮತ್ತು ಅಪ್ರಧಾನ ಇಂದ್ರಿಯಗಳನ್ನೂ ಹೊಂದಿ ಸರ್ವಾಂಗ ಪೂರ್ಣವಾಗಿರುವ ಆತ್ಮವು ಮನೋಮಯ ಎಂದುಕೊಂಡಿದ್ದೇನೆ.”
“ಪೊಟ್ಠಪಾದ, ಆತ್ಮವು ಪ್ರಧಾನ ಅಪ್ರಧಾನ ಇಂದ್ರಿಯ ಹೊಂದಿ ಸರ್ವಾಂಗಪೂರ್ಣವಾಗಿರುವ ಆತ್ಮವು ಮನೋಮಯ ವಾಗಿದ್ದರೆ ನಿನ್ನ ಸಞ್ಞಾವು ಬೇರೆ ಆತ್ಮವೇ ಬೇರೆ ಆಗಿರುತ್ತದೆ. ಪೊಟ್ಠಪಾದ, ಸಞ್ಞಾವೇ ಬೇರೆ ಆತ್ಮವೇ ಬೇರೆ ಎಂಬುದನ್ನು ಈ ರೀತಿಯಲ್ಲಿ ತಿಳಿಯಬಹುದು. ಆತ್ಮವು ಪ್ರಧಾನ ಅಪ್ರಧಾನ ಇಂದ್ರಿಯಗಳೆಲ್ಲವನ್ನೂ ಹೊಂದಿ ಸರ್ವಾಂಗಪೂರ್ಣವಾಗಿದ್ದು ಮನೋಮಯವಾಗಿದ್ದರೂ ಅದರಿಂದ ಬೇರೆಯೇ ಆದ ಭಾವನೆಗಳು ಉದಯಿಸುತ್ತವೆ. ಬೇರೆಯೇ ಆದ ಭಾವನೆಗಳು ಅಳಿಯುತ್ತವೆ. ಈ ಕಾರಣದಿಂದ ಸಞ್ಞಾವೇ ಬೇರೆ. ಆತ್ಮವೇ ಬೇರೆ ಎಂದು ತಿಳಿಯಬಹುದು.”
“ಭಂತೆ, ಆತ್ಮವೂ ಅರೂಪಿಯಾಗಿದ್ದು ಅರಿವನ್ನು ಹೊಂದಿದೆ ಎಂದುಕೊಂಡಿದ್ದೇನೆ.”
“ಪೊಟ್ಠಪಾದ, ಆತ್ಮ ನೀನು ಹೇಳಿದಂತೆ ಅರೂಪಿಯಾಗಿದ್ದು, ಅರಿವನ್ನು ಹೊಂದಿರುವಂಥದಾಗಿದ್ದರೆ ನಿನ್ನ ಸಞ್ಞವೇ ಬೇರೆ, ಆತ್ಮವೇ ಬೇರೆ ಆಗಿರುತ್ತದೆ. ಪೊಟ್ಠಪಾದ, ಸಞ್ಞವೇ ಬೇರೆ ಆತ್ಮವೇ ಬೇರೆ ಎಂಬುದನ್ನು ಈ ರೀತಿಯಲ್ಲಿ ತಿಳಿಯಬಹುದು. ಆತ್ಮವು ಅರೋಪಿಯೂ ಸಞ್ಞಮಯವೂ ಆಗಿದ್ದರೆ ಅದರಿಂದ ಬೇರೆಯೇ ಆದ ಭಾವನೆಗಳು ಉದಿಸುತ್ತವೆ. ಬೇರೆಯೇ ಆದ ಭಾವನೆಗಳು ಅಳಿಯುತ್ತವೆ. ಈ ಕಾರಣದಿಂದ ಆತ್ಮವೇ ಬೇರೆ ಸಞ್ಞವೇ ಬೇರೆಯಾಗಿದೆ ಎಂದು ತಿಳಿಯಬಹುದು.
“ಭಂತೆ, ಪುರುಷನ ಆ ಸಞ್ಞವೇ ಬೇರೆ, ಆತ್ಮವೇ ಬೇರೆ ಎಂಬುದನ್ನು ನಾನು ತಿಳಿಯಲು ಸಾಧ್ಯವೇ?”
“ಪೊಟ್ಠಪಾದ, ಬೇರೆ ದೃಷ್ಟಿಗಳನ್ನೇ (ನಂಬಿಕೆಗಳನ್ನೇ) ಹೊಂದಿರುವ, ಇತರ ಮತಗಳನ್ನು ಒಪ್ಪಿಕೊಂಡಿರುವ, ಬೇರೆ ಗುರಿಗಳನ್ನೇ ಹೊಂದಿರುವ, ಬೇರೆ ಯೋಗಗಳನ್ನು ಅಭ್ಯಾಸ ಮಾಡುತ್ತಿರುವ, ಬೇರೆಯದಾದ ಕ್ರಮದಲ್ಲಿಯೇ ಜೀವನ ನಡೆಸುತ್ತಿರುವ ನೀನು ಪುರುಷನ ಆತ್ಮವೇ ಬೇರೆ ಸಞ್ಞವೇ ಬೇರೆ ಎಂದು ತಿಳಿಯುವುದು ಕಷ್ಟವಾಗುತ್ತದೆ.”
“ಭಂತೆ, ಬೇರೆ ದೃಷ್ಟಿಗಳನ್ನೇ ಹೊಂದಿರುವ, ಇತರ ಮತಗಳನ್ನೇ ಒಪ್ಪಿಕೊಂಡಿರುವ ಬೇರೆ ಗುರಿಗಳನ್ನೇ ಹೊಂದಿರುವ, ಬೇರೆ ಯೋಗಗಳನ್ನು ಅಭ್ಯಾಸ ಮಾಡುತ್ತಿರುವ ಬೇರೆಯದಾದ ಕ್ರಮದಲ್ಲಿಯೇ ಜೀವನ ನಡೆಸುತ್ತಿರುವ ನಾನು ಪುರುಷನ ಆತ್ಮವೇ ಬೇರೆ, ಲೋಕವೇ ಬೇರೆ ಎಂಬುದನ್ನು ಅರಿಯುವುದು ಕಷ್ಟವಾದರೆ ‘ಲೋಕವು ಶಾಶ್ವತ’ ಎಂಬುದೊಂದೇ ಸತ್ಯವೇ? ಮತ್ತು ಬೇರೆಯದೆಲ್ಲಾ ಮೌಢ್ಯವೇ?”
“ಪೊಟ್ಠಪಾದ, ‘ಲೋಕವು ಶಾಶ್ವತ’ವೆಂಬುದೊಂದೇ ಸತ್ಯ, ಮಿಕ್ಕವೆಲ್ಲಾ ಮೌಢ್ಯ ಎಂದು ನಾನು ಹೇಳಿಲ್ಲ.”
“ಭಂತೆ, ‘ಲೋಕವು ಅಶಾಶ್ವತ’ವೆಂಬುದೊಂದೇ ಸತ್ಯ, ಮಿಕ್ಕದ್ದೆಲ್ಲಾ ಮೌಢ್ಯವೇ?”
“ಪೊಟ್ಠಪಾದ, ಹಾಗೆಂದು ನಾನು ಹೇಳಲಿಲ್ಲ.”
“ಭಂತೆ, ಲೋಕಕ್ಕೆ ಅಂತ್ಯವಿದೆಯೇ? ಲೋಕವು ಅನಂತವಾಗಿದೆಯೇ...? ಜೀವವೂ ಶರೀರವೂ ಒಂದೇ ಆಗಿವೆಯೇ...? ಜೀವ ಶರೀರಗಳು ಬೇರೆ ಬೇರೆಯಾಗಿವೆಯೇ...? ಮರಣವಾದ ಮೇಲೆ ತಥಾಗತನು ಇರುತ್ತಾನೆಯೇ...? ಮರಣವಾದ ಮೇಲೆ ಅವನು ಇಲ್ಲವಾಗುತ್ತಾನೆಯೇ...? ಮರಣವಾದ ಮೇಲೆ ತಥಾಗತನು ಇರುವುದಿಲ್ಲವೇ ಅವನು ಇದ್ದೂ ಇಲ್ಲದಂತೆಯೂ ಇಲ್ಲದೆ ಇದ್ದಂತೆಯೂ ಇರುತ್ತಾನೆಯೇ...? ಇದೊಂದೇ ಸತ್ಯವೇ ಮಿಕ್ಕವೆಲ್ಲಾ ಮೌಢ್ಯವೇ?”
“ಪೊಟ್ಠಪಾದ, ಮರಣವಾದ ಮೇಲೆ ‘ತಥಾಗತನು ಇರುವುದಿಲ್ಲ, ಇಲ್ಲದೆಯೂ ಇಲ್ಲದ ಸ್ಥಿತಿಯಲ್ಲಿರುತ್ತಾನೆ ಎಂಬುದೊಂದೇ ಸತ್ಯ, ಮಿಕ್ಕದ್ದೆಲ್ಲವೂ ಮೌಢ್ಯ’ ಎಂದು ನಾನು ಹೇಳಲಿಲ್ಲ.”
“ಭಂತೆ, ಹಾಗಾದರೆ ಏಕೆ ನೀವು ಏನನ್ನೂ ಹೇಳುವುದಿಲ್ಲ ?”
“ಪೊಟ್ಠಪಾದ, ಈ ಸಮಸ್ಯೆಗಳನ್ನು ಪರಿಶೀಲಿಸಿ, ಪ್ರಯೋಜನಕಾರಿಯಲ್ಲ, ಧಮ್ಮಕ್ಕೆ ಸಂಬಂಧಿಸಿಲ್ಲ, ಸರಿಯಾದ ರೀತಿಯಲ್ಲಿ ನಡೆದುಕೊಳ್ಳಲು ಸಹಾಯಕವಲ್ಲ, ಅನಾಸಕ್ತಿಯನ್ನಾಗಲೀ ರಾಗರಹಿತ ಸ್ಥಿತಿಯನ್ನಾಗಲೀ, ತೃಷ್ಣೆಗಳೆಲ್ಲಾ ಅಳಿದ ಸ್ಥಿತಿಯನ್ನಾಗಲೀ, ಶಾಂತಿಯನ್ನಾಗಲೀ, ಅಭಿಞ್ಞಾವನ್ನಾಗಲೀ, ಸಂಬೋಧಿಯನ್ನಾಗಲೀ, ನಿಬ್ಬಾಣವನ್ನಾಗಲೀ, ಸಾಧಿಸಲು ಸಹಾಯಕವಾಗಿಲ್ಲ. ಆದುದರಿಂದ ನಾನು ಇವಾವುದನ್ನು ವಿವರಿಸುವುದಕ್ಕೆ ಹೋಗುವುದಿಲ್ಲ.”
“ಹಾಗಾದರೆ ಭಂತೆ, ಭಗವಾನರು ಮತ್ತೆ ಯಾವುದನ್ನು ವಿವರಿಸಿದ್ದಾರೆ ?”
“ದುಃಖ ಎಂಬುದನ್ನು ವಿವರಿಸಿದ್ದೇನೆ. ದುಃಖ ಸಮುದಯ ಯಾವುದು ಎಂಬುದನ್ನು ವಿವರಿಸಿದ್ದೇನೆ. ದುಃಖ ನಿರೋಧ ಯಾವುದು ಎಂಬುದನ್ನು ವಿವರಿಸಿದ್ದೇನೆ. ದುಃಖ ನಿರೋಧಕ್ಕೆ ಕೊಂಡೊಯ್ಯುವ ಮಾರ್ಗ ಯಾವುದು ಎಂಬುದನ್ನು ವಿವರಿಸಿದ್ದೇನೆ, ಪೊಟ್ಠಪಾದ.”
“ಇವುಗಳನ್ನು ಯಾತಕ್ಕೆ ವಿವರಿಸಿದ್ದೀರಿ, ಭಂತೆ?”
“ಪೊಟ್ಠಪಾದ (ನನ್ನ ವಿವರಣೆ) ಪ್ರಯೋಜನಕಾರಿಯಾಗಿದೆ, ಧಮ್ಮಕ್ಕೆ ಸಂಬಂಧಿಸಿದೆ, ಸರಿಯಾದ ರೀತಿಯಲ್ಲಿ ನಡೆದುಕೊಳ್ಳಲು ಸಹಾಯಕವಾಗಿದೆ. ಅನಾಸಕ್ತಿಯನ್ನೂ, ರಾಗರಹಿತ ಸ್ಥಿತಿಯನ್ನೂ ತೃಷ್ಣೆಗಳೆಲ್ಲಾ ಅಳಿವ ಸ್ಥಿತಿಯನ್ನೂ, ಶಾಂತಿಯನ್ನೂ, ಅಭಿಞ್ಞಾವನ್ನೂ ಸಂಬೋಧಿಯನ್ನೂ ನಿಬ್ಬಾಣವನ್ನು ಸಾಧಿಸಲು ಸಹಾಯಕವಾಗಿದೆ. ಆದುದರಿಂದ ವಿವರಿಸಿದ್ದೇನೆ.”
“ಭಗವಾ, ತಾವು ಹೇಳುವುದು ಸರಿ ಸುಗತ, ತಾವು ಹೇಳುವುದು ಸರಿ. ಭಂತೆ, ಕಾಲವಾಯಿತು, ತಮ್ಮ ಕೆಲಸವನ್ನು ಮಾಡಬಹುದು” ಭಗವಾನರು ಆಸನದಿಂದೆದ್ದು ಹೋದರು.
ಆ ಸಮಯದಲ್ಲಿ ಭಗವಾನರು ಹೋದಮೇಲೆ ಪರಿಬ್ಬಾಜಕರು ಪೊಟ್ಠಪಾದನನ್ನು ರಭಸದಿಂದ ಸುತ್ತುವರಿದು ಹಾಸ್ಯ ಮಾಡುತ್ತಾ ಕಟುವಾದ ಮಾತಿನ ಮಳೆಯನ್ನೇ ಸುರಿಸಿದರು- “ಈ ಪೊಟ್ಠಪಾದನು ಸಮಣ ಗೋತಮನು ಹೇಳಿದ್ದನ್ನೆಲ್ಲಾ ‘ಭಗವಾನ್ ತಾವು ಹೇಳುವುದು ಸರಿ, ತಾವು ಹೇಳುವುದು ಸರಿ’ ಎಂದು ಅನುಮೋದಿಸಿಯೇ ಬಿಟ್ಟಿದ್ದಾನೆ. ನಾವು ಸಮಣ ಗೋತಮನು ವಿವರಿಸಿದ ಧಮ್ಮವನ್ನು ತಿಳಿಯದಾಗಿದ್ದೇವೆ- ‘ಲೋಕವು ಶಾಶ್ವತವೋ ಅಶಾಶ್ವತವೋ, ಲೋಕಕ್ಕೆ ಅಂತ್ಯವಿದೆಯೋ ಅದು ಅನಂತವಾಗಿದೆಯೋ, ಜೀವವೂ ಶರೀರವೂ ಒಂದೇ ಆಗಿದೆಯೇ ಅಥವಾ ಅವು ಬೇರೆ ಬೇರೆಯಾಗಿದೆಯೋ, ಮರಣಾನಂತರ ತಥಾಗತನು ಇರುತ್ತಾನೆಯೋ ಅಥವಾ ಇರುವುದಿಲ್ಲವೋ, ಮರಣಾನಂತರ ತಥಾಗತನು ಇದ್ದೂ ಇಲ್ಲದಂತೆ ಇಲ್ಲದೆಯೂ ಇರುವಂಥ ಸ್ಥಿತಿಯಲ್ಲಿರುತ್ತಾನೆಯೋ’ ಎಂಬುವುಗಳಿಗೆ ಬೇರೆಯದಾದ ಮತ್ತೊಂದು ಅಂಶವನ್ನು ಅವನು ಸಂದೇಹಾತೀತವಾಗಿ ವಿವರಿಸಿಲ್ಲ.”
ಹೀಗೆ ಹೇಳಿದ ಪರಿಬ್ಬಾಜಕರಿಗೆ ಪೊಟ್ಠಪಾದ ಪರಿಬ್ಬಾಜಕನು ಇಂತೆಂದನು. “ನಾನೂ ಸಮಣಗೋತಮನು ಬೋಧಿಸಿದ ಧಮ್ಮವನ್ನು ತಿಳಿದಿಲ್ಲ. ‘ಲೋಕವು ಶಾಶ್ವತವೋ, ಅಶಾಶ್ವತವೋ... ಮರಣಾನಂತರ ತಥಾಗತರು ಇರುವುದಿಲ್ಲವೋ ಅಥವಾ ಇಲ್ಲದಿರುವುದೂ ಇಲ್ಲದಂತ ಸ್ಥಿತಿಯಲ್ಲಿರುತ್ತಾನೋ’ ಎಂಬುದಾವುದನ್ನೂ ವಿವರಿಸಿಲ್ಲ. ಸಮಣ ಗೋತಮರು ಧರ್ಮ ನಿಯಮಗಳನ್ನೂ, ಧಮ್ಮ ಸ್ಥಿತಿಗಳನ್ನೂ ಅವುಗಳಿರುವಂತೆಯೇ ವಿವರಿಸಿದರು. ಧರ್ಮ ಸ್ಥಿತಿಗಳನ್ನು ಧರ್ಮ ನಿಯಮಗಳನ್ನು ವಿವರಿಸಿರುವ ಜ್ಞಾನಿಯಾದ ಇದ್ದುದನ್ನು ಇದ್ದಂತೆಯೇ ಒಳ್ಳೇ ರೀತಿಯಲ್ಲಿ ಒಳ್ಳೆಯ ಮಾತುಗಳಲ್ಲಿ ಹೇಳುವ ಸಮಣ ಗೋತಮನನ್ನು ಅನುಮೋದಿಸದಿರಲು ಹೇಗೆ ಸಾಧ್ಯ?”
ಮಾವಟಿಗನ ಮಗ ಚಿತ್ತ ಮತ್ತು ಪೊಟ್ಠಪಾದನ ವಿಷಯ
ಎರಡು ಮೂರು ದಿನಗಳಾದ ಮೇಲೆ ಮಾವಟಿಗನೊಬ್ಬನ ಮಗನಾದ ಚಿತ್ತ ಎಂಬುವನೂ, ಪರಿಬ್ಬಾಜಕ ಪೊಟ್ಠಪಾದನೂ ಭಗವಾನರ ಹತ್ತಿರಕ್ಕೆ ಬಂದರು. ಬಂದಮೇಲೆ ಮಾವಟಿಗನ ಮಗ ಚಿತ್ತನು ಭಗವಾನರಿಗೆ ಅಭಿವಂದಿಸಿ ಒಂದುಕಡೆ ಕುಳಿತನು. ಪರಿಬ್ಬಾಜಕ ಪೊಟ್ಠಪಾದನು ಭಗವಾನರಿಗೆ ಕುಶಲಪ್ರಶ್ನೆ ಮಾಡಿ ಶುಭಾಶಯಗಳನ್ನು ತಿಳಿಸಿ ಒಂದುಕಡೆ ಕುಳಿತನು. ಹೀಗೆ ಕುಳಿತುಕೊಂಡ ಮೇಲೆ ಅವನು ಭಗವನರನ್ನು ಕುರಿತು ಹೀಗೆ ಹೇಳಿದನು: “ಭಂತೆ, ಭಗವಾನರು ಹೊರಟುಹೋದ ಮೇಲೆ ಆ ಪರಿಬ್ಬಾಜಕರು ನನ್ನನ್ನು ರಭಸದಿಂದ ಸುತ್ತುವರೆದು ಹಾಸ್ಯಮಾಡುತ್ತಾ ಕಟುವಾದ ಮಾತುಗಳ ಮಳೆಯನ್ನೇ ಸುರಿಸಿದರು. ‘ಈ ಪೊಟ್ಠಪಾದನು ಸಮಣ ಗೋತಮನು ಹೇಳಿದುದನ್ನೆಲ್ಲಾ ಭಗವಾ ತಾವು ಹೇಳುವುದು ಸರಿ, ಸುಗತ ತಾವು ಹೇಳುವುದು ಸರಿ ಎಂದು ಅನುಮೋದಿಸಿಬಿಟ್ಟಿದ್ದಾನೆ, ನಾವು ಸಮಣ ಗೋತಮನು ವಿವರಿಸಿದ ಧಮ್ಮವನ್ನು ತಿಳಿಯದಾಗಿದ್ದೇವೆ. ಲೋಕವು ಶಾಶ್ವತವೋ ಅಶಾಶ್ವತವೋ, ಲೋಕಕ್ಕೆ ಅಂತ್ಯವಿದೆಯೇ ಅದು ಅನಂತವಾಗಿದೆಯೇ, ಜೀವವೂ ಶರೀರವೂ ಒಂದೆಯೇ ಅವು ಬೇರೆ ಬೇರೆಯೇ, ಮರಣಾನಂತರ ತಥಾಗತನು ಇರುತ್ತಾನೆಯೇ ಇರುವುದಿಲ್ಲವೇ, ಮರಣವಾದಮೇಲೆ ತಥಾಗತನು ಇದ್ದೂ ಇಲ್ಲದಂತೆಯೂ, ಇಲ್ಲದೆಯೂ ಇರುವಂತೆ ಇರುತ್ತಾನೆಯೇ ಎಂಬವುಗಳಿಗೆ ಬೇರೆಯಾದುದನ್ನು ಯಾವುದೂ ಸಂದೇಹಾತೀತವಾಗಿ ವಿವರಿಸಿಲ್ಲ. ಅವನು ವಿವರಿಸಿದ ಧಮ್ಮವನ್ನು ತಿಳಿಸಿಲ್ಲ’ ಎಂದು ಹೇಳಿದರು. ಹೀಗೆ ಹೇಳಿದ ಆ ಪರಿಬ್ಬಾಜಕರಿಗೆ ನಾನು ಈ ರೀತಿಯಲ್ಲಿ ಉತ್ತರಕೊಟ್ಟೆ: ‘ನಾನು ಸಮಣ ಗೋತಮರು ವಿವರಿಸಿದ ಧಮ್ಮವನ್ನು ತಿಳಿದಿಲ್ಲ. ಲೋಕವು ಶಾಶ್ವತವೇ... ಮರಣಾನಂತರ ಗೋತಮನು ಇಲ್ಲದೆಯೂ ಇದ್ದಂತೆ ಇರುತ್ತಾನೆಯೇ ಎಂಬುದಾವುದನ್ನೂ ವಿವರಿಸಿಲ್ಲ. ಸಮಣ ಗೋತಮರು ಧರ್ಮ ಸ್ಥಿತಿಗಳನ್ನೂ, ಧರ್ಮ ನಿಯಮಗಳನ್ನೂ ಅವು ಇದ್ದಂತೆಯೇ ವಿವರಿಸಿದರು. ಇದ್ದುದನ್ನು ಇದ್ದಂತೆಯೇ ಒಳ್ಳೆಯ ರೀತಿಯಲ್ಲಿ ಒಳ್ಳೆಯ ಮಾತುಗಳಲ್ಲಿ ವಿವರಿಸುವ ಸಮಣ ಗೋತಮರನ್ನು ಅನುಮೋದಿಸದಿರಲು ಹೇಗೆ ಸಾಧ್ಯ?”
“ಪೊಟ್ಠಪಾದ, ಆ ಪರಿಬ್ಬಾಜಕರೆಲ್ಲಾ ಕಣ್ಣಿಲ್ಲದ ಕುರುಡರಾಗಿದ್ದಾರೆ. ಅವರಲ್ಲಿ ನೀನೊಬ್ಬನು ಮಾತ್ರ ಕಣ್ಣುಳ್ಳವನಾಗಿದ್ದೀಯೆ. ಪೊಟ್ಠಪಾದ, ನಾನು ಕೆಲವು ಧರ್ಮಗಳನ್ನು ಸಂದೇಹಾತೀತವಾದುವೆಂದು ಬೋಧಿಸಿದ್ದೇನೆ. ಕೆಲವು ಧರ್ಮಗಳು ಸಂದೇಹಪೂರಿತವಾಗಿವೆ ಎಂದು ಹೇಳಿದ್ದೇನೆ. ಪೊಟ್ಠಪಾದ, ಸಂದೇಹಪೂರಿತವಾದುದೆಂದು ನಾನು ಹೇಳಿರುವ ಧರ್ಮಗಳು ಯಾವುವು? ಲೋಕವು ಶಾಶ್ವತವೋ ಎಂಬುದು. ಪೊಟ್ಠಪಾದ, ನನ್ನಿಂದ ಸಂದೇಹಪೂರಿತವಾದುದೆಂದು ಹೇಳಲ್ಪಟ್ಟಿರುವ ಧರ್ಮ- ಲೋಕವು ಅಶಾಶ್ವತವೋ ಎಂಬುದು. ಪೊಟ್ಠಪಾದ, ನನ್ನಿಂದ ಹೇಳಲ್ಪಟ್ಟಿರುವ ಸಂದೇಹಪೂರಿತವಾದ ಧರ್ಮ... ಲೋಕಕ್ಕೆ ಅಂತ್ಯವಿದೆಯೇ... ಲೋಕವು ಅನಂತವಾಗಿದೆಯೇ... ಜೀವವೂ ಶರೀರವೂ ಒಂದೆಯೇ... ಜೀವವೂ ಶರೀರವೂ ಬೇರೆ ಬೇರೆಯಾಗಿವೆಯೇ... ಮರಣವಾದಮೇಲೆ ತಥಾಗತನು ಇರುತ್ತಾನೆಯೋ... ಮರಣವಾದ ಮೇಲೆ ಇರುವುದಿಲ್ಲವೋ... ಮರಣವಾದ ಮೇಲೆ ತಥಾಗತನು ಇದ್ದೂ ಇಲ್ಲದಂತಿರುತ್ತಾನೆಯೇ... ಮರಣವಾದ ಮೇಲೆ ತಥಾಗತನು ಇಲ್ಲದೆಯೂ ಇದ್ದಂತಿರುತ್ತಾನೆಯೇ ಎಂಬುವುದು. ಪೊಟ್ಠಪಾದ, ನನ್ನಿಂದ ಸಂದೇಹಪೂರಿತವಾದುವೆಂದು ಹೇಳಲ್ಪಟ್ಟ ಧರ್ಮವಾಗಿದೆ.
“ಪೊಟ್ಠಪಾದ, ನನ್ನಿಂದ ವಿವರಿಸಲ್ಪಟ್ಟ ಈ ಧರ್ಮಗಳು ಏಕೆ ಸಂದೇಹಪೂರಿತವಾದುದಾಗಿವೆ? ಇವುಗಳ ಪರಿಶೀಲನೆಯು ಪ್ರಯೋಜನಕಾರಿಯಲ್ಲ. ನಿಜವಾದ ಧರ್ಮಕ್ಕೆ ಸಂಬಂಧಿಸಿಲ್ಲ. ಸರಿಯಾದ ರೀತಿಯಲ್ಲಿ ನಡೆದುಕೊಳ್ಳಲು ಸಹಾಯಕವಾಗಿಲ್ಲ. ಅನಾಸಕ್ತಿಯನ್ನಾಗಲೀ, ರಾಗರಹಿತ ಸ್ಥಿತಿಯನ್ನಾಗಲೀ ತೃಷ್ಣೆಗಳೆಲ್ಲಾ ಅಳಿದ ಸ್ಥಿತಿಯನ್ನಾಗಲೀ, ಶಾಂತಿಯನ್ನಾಗಲೀ ಅಭಿಞ್ಞವನ್ನಾಗಲೀ ಸಂಬೋಧಿಯನ್ನಾಗಲೀ ನಿಬ್ಬಾಣವನ್ನಾಗಲೀ ಸಾಧಿಸಲು ಸಹಾಯಕವಾಗಿಲ್ಲ. ಆದುದರಿಂದ ನಾನು ಹೇಳುವ ಈ ಧರ್ಮಗಳು ಸಂದೇಹಪೂರಿತವಾಗಿವೆ.
ಸಂದೇಹಾತೀತವಾದ ಧರ್ಮ
“ಪೊಟ್ಠಪಾದ, ಸಂದೇಹಾತೀತವೆಂದು ನನ್ನಿಂದ ಹೇಳಲ್ಪಟ್ಟಿರುವ ಧರ್ಮಗಳು ಯಾವುವು? ಪೊಟ್ಠಪಾದ, ದುಃಖ ಧಮ್ಮವು ನನ್ನಿಂದ ಹೇಳಲ್ಪಟ್ಟಿರುವ ಸಂದೇಹಾತೀತವಾದುದು. ದುಃಖ ಸಮುದಯವು ನನ್ನಿಂದ ಹೇಳಲ್ಪಟ್ಟ ಸಂದೇಹಾತೀತವಾದ ಧರ್ಮ. ದುಃಖನಿರೋಧವು ನನ್ನಿಂದ ಹೇಳಲ್ಪಟ್ಟ ಸಂದೇಹಾತೀತವಾದ ಧರ್ಮ. ದುಃಖನಿರೋಧದ ಕಡೆಗೆ ಕೊಂಡೊಯ್ಯುವ ಮಾರ್ಗವು ನನ್ನಿಂದ ಹೇಳಲ್ಪಟ್ಟ ಸಂದೇಹಾತೀತವಾದ ಧರ್ಮ.
“ಪೊಟ್ಠಪಾದ, ನಾನು ಹೇಳಿರುವ ಈ ಧರ್ಮಗಳು ಏಕೆ ಸಂದೇಹಾತೀತವಾಗಿವೆ? ಪೊಟ್ಠಪಾದ, ನನ್ನ ವಿವರಣೆಗಳು ಪ್ರಯೋಜನಕಾರಿಯಾಗಿವೆ. ಧರ್ಮಕ್ಕೆ ಸಂಬಂಧಿಸಿವೆ. ಸರಿಯಾಗಿ ನಡೆಯಲು ಸಹಾಯಕವಾಗುತ್ತವೆ. ಅನಾಸಕ್ತಿಯನ್ನೂ ರಾಗರಹಿತಸ್ಥಿತಿಯನ್ನೂ ತೃಷ್ಣೆಗಳೆಲ್ಲಾ ಅಳಿದ ಸ್ಥಿತಿಯನ್ನೂ, ಶಾಂತಿಯನ್ನೂ, ಅಭಿಞ್ಞಾವನ್ನೂ, ಸಂಬೋಧಿಯನ್ನೂ, ನಿಬ್ಬಾಣವನ್ನೂ ಪಡೆಯಲು ಸಹಾಯಕವಾಗಿವೆ. ಆದುದರಿಂದ ನಾನು ವಿವರಿಸುವ ಈ ಧರ್ಮಗಳು ಸಂದೇಹಾತೀತವಾಗಿವೆ.
“ಪೊಟ್ಠಪಾದ, ‘ಮರಣ ಹೊಂದಿದಮೇಲೆ ಆತ್ಮವು ಅತಿಸುಖದಿಂದಲೂ ಆರೋಗ್ಯದಿಂದಲೂ ಇರುತ್ತದೆ’ ಎಂದು ಹೇಳುವ ಮತ್ತು ಆ ದೃಷ್ಟಿಯನ್ನು ಹೊಂದಿರುವ ಕೆಲವು ಸಮಣ ಬ್ರಾಹ್ಮಣರು ಇದ್ದಾರೆ. ಅವರಲ್ಲಿಗೆ ನಾನು ಹೋಗಿ- ‘ಮರಣ ಹೊಂದಿದಮೇಲೆ ಆತ್ಮವು ಅತಿ ಸುಖದಿಂದಲೂ ಆರೋಗ್ಯದಿಂದಲೂ ಇರುತ್ತದೆ ಎಂದು ನೀವು ಹೇಳುವುದು ನಿಜವೇ ಆಯುಷ್ಮಂತರೇ?’ ಎಂದು ಕೇಳಿದೆ. ಅವರು ನಾನು ಕೇಳಿದುದಕ್ಕೆ ‘ಹೌದು’ ಎಂದು ತಿಳಿಸಿದರು. ಆಗ ನಾನು ‘ಆಯುಷ್ಮಂತರೇ, ಹಾಗಾದರೆ, ಲೋಕವೂ ಜನರೂ ಅತಿಸುಖಿಗಳಾಗಿಯೇ ಇದ್ದಾರೇನು?’ ಎಂದು ಕೇಳಿದೆ ಇದಕ್ಕೆ ಅವರು ‘ಇಲ್ಲ’ ಎಂದರು.
“ಆಮೇಲೆ ಅವರನ್ನು ಕುರಿತು ಹೀಗೆ ಕೇಳಿದೆ: ‘ಆಯುಷ್ಮಂತರೇ, ನೀವು ಒಂದು ದಿವಸವಾಗಲೀ ಒಂದು ರಾತ್ರಿಯಾಗಲೀ ಅರ್ಧ ದಿವಸವಾಗಲೀ ಅರ್ಧ ರಾತ್ರಿಯಾಗಲೀ ಅತಿಸುಖದಿಂದಿರುವುದು ತಿಳಿದಿದೆಯೇ?’ ಅವರು ‘ಇಲ್ಲ’ ಎಂದು ಹೇಳಿದರು.
“ಆನಂತರ ನಾನು ಅವರನ್ನು ‘ಆಯುಷ್ಮಂತರೇ, ಅತಿಸುಖದ ಸ್ಥಿತಿಯನ್ನು ಸಾಕ್ಷಾತ್ಕಾರ ಮಾಡಿಕೊಳ್ಳಬಲ್ಲ ರೀತಿಯಾಗಲೀ, ಮಾರ್ಗವಾಗಲೀ ನಿಮಗೆ ತಿಳಿದಿದೆಯೇ?’ ಎಂದು ಕೇಳಿದೆ. ಅವರು ‘ಇಲ್ಲ’ ಎಂದರು.
“ಆಮೇಲೆ ‘ಆಯುಷ್ಮಂತರೆ, ಅತಿಸುಖವಿರುವ ಲೋಕದಲ್ಲಿ ಹುಟ್ಟಿರುವ ದೇವತೆಗಳು, ‘ಮಾನವರೇ, ಅತಿಸುಖವಿರುವ ಲೋಕವನ್ನು ಪಡೆಯಲು ಒಳ್ಳೆಯ ದಾರಿಯಲ್ಲಿ ಹೋಗಿ, ಮಾನವರೇ, ಋಜುಮಾರ್ಗದಲ್ಲಿ ನಡೆಯಿರಿ, ನಾವಾದರೋ ಆ ದಾರಿಯಲ್ಲಿ ನಡೆದು ಅತಿಸುಖವಿರುವ ಲೋಕದಲ್ಲಿ ಹುಟ್ಟಿದ್ದೇವೆ’ ಎಂದು ಹೇಳಿರುವುದನ್ನು ಕೇಳಿರುವಿರಾ?’ ಎಂದು ಪ್ರಶ್ನಿಸಿದೆ. ಅದಕ್ಕೂ ‘ಇಲ್ಲ’ ಎಂದುತ್ತರವಿತ್ತರು.
“ಪೊಟ್ಠಪಾದ, ನಿನಗೆ ಏನನ್ನಿಸುತ್ತದೆ, ಹಾಗೆ ಹೇಳುವ ಬ್ರಾಹ್ಮಣರ ಮಾತುಗಳು ಆಧಾರರಹಿತವಲ್ಲವೇ.”
“ಭಂತೆ, ಹಾಗೆ ಹೇಳುವ ಬ್ರಾಹ್ಮಣರ ಮಾತುಗಳು ಆಧಾರರಹಿತವಾದವುಗಳು.”
“ಪೊಟ್ಠಪಾದ, ‘ಜನಪದದಲ್ಲಿರುವ ಅತ್ಯಂತ ಸುಂದರವಾದ ಹೆಣ್ಣನ್ನು ನಾನು ಕಾಮಿಸಬಯಸುತ್ತೇನೆ’ ಎಂದು ಒಬ್ಬನು ಹೇಳುತ್ತಾನೆನ್ನು. ಆಗ ಅವನನ್ನು ಇತರರು ಹೀಗೆ ಕೇಳಬಹುದು, ‘ನೀನು ಕಾಮಿಸಿ ಬಯಸುತ್ತಿರುವ ಸುಂದರಿಯು ಬ್ರಹ್ಮಣಿಯೋ, ಕ್ಷತ್ರಿಯಳೋ, ವೈಶ್ಯಳೋ, ಶೂದ್ರಳೋ ಎಂಬುದು ನಿನಗೆ ತಿಳಿದಿದೆಯೇ?’ ಹಾಗೆ ಕೇಳಿದಾಗ ಅವನು ‘ನನಗೆ ಗೊತ್ತಿಲ್ಲ’ ಎಂದು ಹೇಳುತ್ತಾನೆನ್ನು. ಆಗ ಅವರು ‘ಹೋಗಲಿ ಗೆಳೆಯ, ನೀನು ಕಾಮಿಸಿ ಬಯಸುವ ಸುಂದರಿಯು ಯಾವ ಹೆಸರಿನವಳು, ಯಾವ ಗೋತ್ರದವಳು, ಎತ್ತರವಾಗಿದ್ದಾಳೆಯೇ, ಕುಳ್ಳಾಗಿದ್ದಾಳೆಯೇ ಅಷ್ಟು ಎತ್ತರವೂ ಅಷ್ಟೂ ಕುಳ್ಳಿ ಅಲ್ಲದಂಥವಳೇ, ಕಪ್ಪಗಿದ್ದಾಳೆಯೇ, ಗೌರವರ್ಣದವಳೇ, ಎಣ್ಣೆಗೆಂಪಿನವಳೇ, ಗ್ರಾಮದಲ್ಲಿದ್ದಾಳೋ, ನಿಮಗದಲ್ಲಿದ್ದಾಳೋ, ನಗರದಲ್ಲಿದ್ದಾಳೋ ಅದಾದರೂ ನಿನಗೆ ತಿಳಿದಿದೆಯೇ?’ ಇದಕ್ಕೂ ಅವನು ‘ಇಲ್ಲ’ ಎಂದು ಹೇಳುತ್ತಾನೆನ್ನು. ಆಗ ಅವರು ‘ಹಾಗಾದರೆ ಗೆಳೆಯ, ನೀನು ಕಾಮಿಸಿ ಬಯಸುವ ಹೆಣ್ಣು ನಿನಗೆ ಗೊತ್ತಿಲ್ಲ. ಅವಳನ್ನು ನೀನು ನೋಡಿಲ್ಲ ಅಲ್ಲವೇ?’ ಆಗ ಅವನು ‘ಹೌದು’ ಎನ್ನುತ್ತಾನೆನ್ನು.
“ಪೊಟ್ಠಪಾದ, ಅಂಥವನ ಮಾತು ಆಧಾರವಿಲ್ಲದ್ದು ಎಂದು ನಿನಗೆ ಅನ್ನಿಸುತ್ತದಲ್ಲವೇ?”
“ಹೌದು ಭಂತೆ, ಆ ಮನುಷ್ಯನ ಮಾತು ಅವಾಸ್ತವಿಕವೆಂದೇ ತಿಳಿಯುತ್ತೇನೆ.”
“ಪೊಟ್ಠಪಾದ, ‘ಮರಣ ಹೊಂದಿದಮೇಲೆ ಆತ್ಮವು ಅತಿಸುಖದಿಂದಲೂ ಆರೋಗ್ಯದಿಂದಲೂ ಇರುತ್ತದೆ’ ಎಂದು ಹೇಳುವ ಮತ್ತು ಅದನ್ನು ನಂಬಿರುವ ಸಮಣ ಬ್ರಾಹ್ಮಣರನ್ನು ‘ಮರಣ ಹೊಂದಿದಮೇಲೆ ಆತ್ಮವು ಅತಿ ಸುಖದಿಂದಲೂ ಆರೋಗ್ಯದಿಂದಲೂ ಇರುತ್ತದೆ ಎಂದು ನೀವು ಹೇಳುವುದು, ನಂಬಿರುವುದು ನಿಜವೇ?’ ಎಂದು ಕೇಳಿದೆ. ಅವರು ನಾನು ಕೇಳಿದುದಕ್ಕೆ ‘ಹೌದು’ ಎಂದು ಉತ್ತರ ಕೊಟ್ಟರು. ‘ಹಾಗಾದರೆ, ಆಯುಷ್ಮಂತರೇ, ಲೋಕವೂ ಜನರೂ ಅತಿಸುಖದಿಂದಿದ್ದಾರೆಯೇ?’ ಎಂದು ಕೇಳಿದೆ. ಅದಕ್ಕೆ ಅವರು ‘ಇಲ್ಲ’ ಎಂದು ತಿಳಿಸಿದರು.
“ಆಮೇಲೆ ಅವರನ್ನು ಕುರಿತು, ‘ಆಯುಷ್ಮಂತರೇ, ಒಂದು ದಿವಸವಾದರೂ, ಒಂದು ರಾತ್ರಿಯಾದರೂ ಅರ್ಧ ದಿವಸವಾದರೂ ಅರ್ಧ ರಾತ್ರಿಯಾದರೂ ನಿಮ್ಮ ಆತ್ಮವು ಸುಖದಿಂದಿರುವುದನ್ನು ಅರಿತಿರುವಿರಾ?’ ಎಂದು ಕೇಳಿದೆ. ಅವರು ಅದಕ್ಕೆ ‘ಇಲ್ಲ’ ಎಂದು ಉತ್ತರವಿತ್ತರು. ಅನಂತರ ಅವರನ್ನು ‘ಅತಿಸುಖ ದೊರೆಯುವ ಲೋಕವನ್ನು ಪಡೆದು ಕೊಳ್ಳುವ ರೀತಿಯಾಗಲೀ, ಮಾರ್ಗವಾಗಲೀ ನಿಮಗೆ ತಿಳಿದಿದೆಯೇ?’ ಎಂದು ಕೇಳಿದೆ. ಅವರು ‘ಇಲ್ಲ’ ಎಂದರು.
“ಆಮೇಲೆ ಅವರನ್ನು ‘ಆಯುಷ್ಮಂತರೇ, ಅತಿಸುಖವಿರುವ ಲೋಕದಲ್ಲಿ ಹುಟ್ಟಿರುವ ದೇವತೆಗಳು, ಮಾನವರೇ, ಅತಿಸುಖವಿರುವ ಲೋಕವನ್ನು ಪಡೆಯಲು ಒಳ್ಳೆಯ ದಾರಿಯಲ್ಲಿ ಹೋಗಿ, ಋಜುಮಾರ್ಗದಲ್ಲಿ ನಡೆಯಿರಿ, ನಾವಾದರೋ ಆ ದಾರಿಯಲ್ಲಿ ನಡೆದು ಅತಿ ಸುಖವಿರುವ ಲೋಕದಲ್ಲಿ ಹುಟ್ಟಿದ್ದೇವೆ ಎಂದು ಹೇಳಿರುವುದನ್ನು ಕೇಳಿರುವಿರಾ?’ ಎಂದು ಪ್ರಶ್ನಿಸಿದೆ ಅದಕ್ಕೂ ‘ಇಲ್ಲ’ ಎಂದು ಉತ್ತರವಿತ್ತರು.
“ಪೊಟ್ಠಪಾದ, ನಿನಗೆ ಏನನ್ನಿಸುತ್ತದೆ? ಹಾಗೆ ಹೇಳುವ ಸಮಣ ಬ್ರಾಹ್ಮಣರ ಮಾತುಗಳು ಆಧಾರರಹಿತವಲ್ಲವೇ?”
“ಭಂತೆ, ಹಾಗೆ ಹೇಳುವ ಸಮಣ ಬ್ರಾಹ್ಮಣರ ಮಾತುಗಳು ಆಧಾರರಹಿತವಾದವುಗಳು.”
“ಪೊಟ್ಠಪಾದ, ನಾಲ್ಕು ದಾರಿಗಳು ಸೇರುವ ಕಡೆ ಒಬ್ಬನು ಒಂದು ಪ್ರಾಸಾದವನ್ನು ಹತ್ತಲು ಮೆಟ್ಟಲುಗಳನ್ನು ಕಟ್ಟಿಸುತ್ತಾನೆನ್ನು. ಆಗ ಅವನನ್ನು ಇತರರು ಹೀಗೆ ಕೇಳಬಹುದು: ‘ಯಾವ ಪ್ರಾಸಾದಕ್ಕೆ ನೀನು ಮೆಟ್ಟಿಲುಗಳನ್ನು ಕಟ್ಟಿಸುತ್ತಿದ್ದೀಯೇ? ಅದನ್ನು ನೋಡಿದ್ದೀಯಾ? ಅದು ಪೂರ್ವ ದಿಕ್ಕಿನಲ್ಲಿದೆಯೋ, ದಕ್ಷಿಣ ದಿಕ್ಕಿನಲ್ಲಿದೆಯೋ, ಪಶ್ಚಿಮ ದಿಕ್ಕಿನಲ್ಲಿದೆಯೋ, ಉತ್ತರದಿಕ್ಕಿನಲ್ಲಿದೆಯೋ, ಅದು ಎತ್ತರವಾಗಿದೆಯೋ, ಮಧ್ಯಮವಾಗಿದೆಯೋ ಅಥವಾ ತಗ್ಗಿನಲ್ಲಿದೆಯೋ ನಿನಗೆ ಗೊತ್ತಿದೆಯೇ?’ ಹಾಗೆ ಕೇಳಿದಾಗ ಅವನು ‘ಇಲ್ಲ’ ಎಂದು ಹೇಳುತ್ತಾನೆನ್ನು. ಆಗ ಅವರು ಅವನನ್ನು ಹೀಗೆ ಕೇಳಬಹುದು- ‘ನೀನು ಯಾರ ಪ್ರಾಸಾದಕ್ಕೆ ಮೆಟ್ಟಲು ಕಟ್ಟಿಸುತ್ತಿದ್ದೀಯೋ ಅದನ್ನು ನೋಡಿಯೂ ಇಲ್ಲ, ಅದು ನಿನಗೆ ಗೊತ್ತೂ ಇಲ್ಲ, ಅಲ್ಲವೇ?’ ಹೀಗೆ ಕೇಳಿದುದಕ್ಕೆ ಅವನು ‘ಇಲ್ಲ’ ಎಂದು ಹೇಳುತ್ತಾನೆನ್ನು.
“ಪೊಟ್ಠಪಾದ, ಅಂಥವನ ಮಾತು ಆಧಾರರಹಿತ ಮಾತು ಎಂದು ನಿನಗೆ ಅನ್ನಿಸುವುದಿಲ್ಲವೇ?”
“ಹೌದು ಭಂತೆ, ಅಂಥವನ ಮಾತು ಆಧಾರರಹಿತವಾದುದೆಂದೇ ತಿಳಿಯುತ್ತೇನೆ.”
“ಪೊಟ್ಠಪಾದ, ‘ಮರಣ ಹೊಂದಿದಮೇಲೆ ಆತ್ಮವು ಅತಿಸುಖದಿಂದಲೂ ಆರೋಗ್ಯದಿಂದಲೂ ಇರುತ್ತದೆ’ ಎಂದು ಹೇಳುವ ಮತ್ತು ಅದನ್ನು ನಂಬಿರುವ ಸಮಣ ಬ್ರಾಹ್ಮಣರಲ್ಲಿಗೆ ಹೋಗಿ ‘ಆಯುಷ್ಮಂತರೇ, ಮರಣ ಹೊಂದಿದಮೇಲೆ ಆತ್ಮವು ಅತಿ ಸುಖದಿಂದಲೂ ಆರೋಗ್ಯದಿಂದಲೂ ಇರುತ್ತದೆ ಎಂದು ನೀವು ನಂಬಿರುವುದು, ಹೇಳುವುದು ನಿಜವೇ?’ ಎಂದು ಕೇಳಿದೆ. ನಾನು ಕೇಳಿದುದಕ್ಕೆ ಅವರು ‘ಹೌದು’ ಎಂದು ಉತ್ತರ ಕೊಟ್ಟರು. ‘ಹಾಗಾದರೆ ಲೋಕವೂ ಜನರೂ ಅತಿಸುಖದಿಂದಿದ್ದಾರೆಯೇ ಆಯುಷ್ಮಂತರೇ?’ ಎಂದು ಕೇಳಿದೆ. ಅವರು ‘ಇಲ್ಲ’ ಎಂದು ಉತ್ತರವಿತ್ತರು.
“ಆಮೇಲೆ ಅವರನ್ನು ಕುರಿತು, ‘ಆಯುಷ್ಮಂತರೇ, ಒಂದು ದಿವಸವಾದರೂ, ಒಂದು ರಾತ್ರಿಯಾದರೂ ಅರ್ಧ ದಿವಸವಾದರೂ ಅರ್ಧ ರಾತ್ರಿಯಾದರೂ ನಿಮ್ಮ ಆತ್ಮವು ಸುಖದಿಂದಿರುವುದನ್ನು ಅರಿತಿರುವಿರಾ?’ ಎಂದು ಕೇಳಿದೆ. ಅವರು ಅದಕ್ಕೆ ‘ಇಲ್ಲ’ ಎಂದರು. ಅನಂತರ ಅವರನ್ನು ‘ಆಯುಷ್ಮಂತರೇ, ಅತಿಸುಖ ದೊರೆಯುವ ಲೋಕವನ್ನು ಪಡೆದುಕೊಳ್ಳುವ ರೀತಿಯಾಗಲೀ, ಮಾರ್ಗವಾಗಲೀ ನಿಮಗೆ ತಿಳಿದಿದೆಯೇ?’ ಎಂದು ಕೇಳಿದೆ. ಅವರು ‘ಇಲ್ಲ’ ಎಂದರು.
“ಆಮೇಲೆ ಅವರನ್ನು ‘ಆಯುಷ್ಮಂತರೇ, ಅತಿಸುಖವಿರುವ ಲೋಕದಲ್ಲಿ ಹುಟ್ಟಿರುವ ದೇವತೆಗಳು, ಮಾನವರೇ, ಅತಿಸುಖವಿರುವ ಲೋಕವನ್ನು ಪಡೆಯಲು ಒಳ್ಳೆಯ ದಾರಿಯಲ್ಲಿ ಹೋಗಿ, ಋಜುಮಾರ್ಗದಲ್ಲಿ ನಡೆಯಿರಿ, ನಾವಾದರೋ ಆ ದಾರಿಯಲ್ಲಿ ನಡೆದು ಅತಿ ಸುಖವಿರುವ ಲೋಕದಲ್ಲಿ ಹುಟ್ಟಿದ್ದೇವೆ ಎಂದು ಹೇಳಿರುವುದನ್ನು ಕೇಳಿರುವಿರಾ?’ ಎಂದು ಪ್ರಶ್ನಿಸಿದೆ ಅದಕ್ಕೂ ‘ಇಲ್ಲ’ ಎಂದು ಉತ್ತರವಿತ್ತರು.
“ಪೊಟ್ಠಪಾದ, ನಿನಗೆ ಏನನ್ನಿಸುತ್ತದೆ? ಹಾಗೆ ಹೇಳುವ ಸಮಣ ಬ್ರಾಹ್ಮಣರ ಮಾತುಗಳು ಆಧಾರರಹಿತವಲ್ಲವೇ?”
“ಭಂತೆ, ಹಾಗೆ ಹೇಳುವ ಸಮಣ ಬ್ರಾಹ್ಮಣರ ಮಾತುಗಳು ಆಧಾರರಹಿತವಾದವುಗಳು.”
ಮೂರು ರೀತಿಯ ಆತ್ಮದ ತಪ್ಪು ಗ್ರಹಿಕೆಗಳು
ಪೊಟ್ಠಪಾದ, ಆತ್ಮವು ಇಂದ್ರಿಯಗ್ರಾಹ್ಯವಾದ ಭೌತಿಕ ಸ್ವರೂಪದ್ದೆಂದೂ, ಆತ್ಮವು ಮನೋಮಯವೆಂದೂ, ಆತ್ಮವು ಅರೂಪಿಯೆಂದೂ ಹೇಳುತ್ತಾರೆ. ಪೊಟ್ಠಪಾದ, ಆತ್ಮವು ಇಂದ್ರಿಯಗ್ರಾಹ್ಯವಾದ ಭೌತಿಕ ಸ್ವರೂಪದ್ದೆಂದು ಹೇಗೆ ಹೇಳುತ್ತಾರೆ? ರೂಪಿಯಾದ ಆತ್ಮವು ಚತುರ್ಮಹಾಭೂತಗಳಿಂದ ಆದ ಮತ್ತು ಗಟ್ಟಿಯಾದ ಆಹಾರವನ್ನು ತಿನ್ನುವ ಕಾರಣದಿಂದ ಇಂದ್ರಿಯಗ್ರಾಹ್ಯವಾದುದು, ಭೌತಿಕ ಸ್ವರೂಪದ್ದು ಎಂದು ಹೇಳುತ್ತಾರೆ. ಆತ್ಮವು ಮನೋಮಯವೆಂದು ಹೇಗೆ ಹೇಳುತ್ತಾರೆ? ರೂಪಿಯಾದ ಆತ್ಮವು ಮನೋಮಯವಾದ ಸರ್ವಾಂಗಪೂರ್ಣವಾಗಿ ಪ್ರಧಾನ ಅಪ್ರಧಾನ ಅಂಗಗಳೆಲ್ಲವನ್ನೂ ಹೊಂದಿದೆ. ಆದುದರಿಂದ ಅದು ಮನೋಮಯ ಎಂದು ಹೇಳುತ್ತಾರೆ. ಆತ್ಮವು ಅರೂಪಿ ಎಂದು ಹೇಗೆ ಹೇಳುತ್ತಾರೆ? ಆತ್ಮವು ಸಞ್ಞಾಮಯ... ಆದುದರಿಂದ ಅರೂಪಿ ಎಂದು ಹೇಳುತ್ತಾರೆ.
“ಪೊಟ್ಠಪಾದ, ಇಂದ್ರಿಯಗ್ರಾಹ್ಯವಾದ ಮತ್ತು ಭೌತಿಕ ಸ್ವರೂಪವನ್ನು ಹೊಂದಿರುವ ಆತ್ಮವಿದೆ ಎಂಬ ಭಾವನೆಯನ್ನು ದೂರಮಾಡಬಲ್ಲ ಧರ್ಮವನ್ನು ನಿನಗೆ ವಿವರಿಸುತ್ತೇನೆ. ಆ ದಾರಿಯಲ್ಲಿ ನಡೆದರೆ ಅಕುಶಲವಾದ ಧರ್ಮಗಳು ತೊಲಗುತ್ತವೆ. ಆಗ ತಿಳಿಯಬೇಕಾದ ಕುಶಲಧರ್ಮಗಳು ಅಭಿವೃದ್ಧಿಗೊಳ್ಳುತ್ತವೆ. ಅವು ಪ್ರಜ್ಞೆಯನ್ನು ಪರಿಪೂರ್ಣಗೊಳಿಸುತ್ತವೆ... ಆ ಧರ್ಮಗಳನ್ನು ಒಬ್ಬನು ತಾನೇ ಸಾಕ್ಷಾತ್ಕಾರ ಮಾಡಿಕೊಂಡು ಉತ್ಕೃಷ್ಟ ಜ್ಞಾನವನ್ನು ಪಡೆದು ಅವನ್ನು ಅತಿಸ್ಪಷ್ಟವಾಗಿ ಅರಿಯಬಹುದು. ಆದರೆ ಪೊಟ್ಠಪಾದ, ನಿನಗೆ ಹೀಗೆನ್ನಿಸಬಹುದು: ‘ಒಬ್ಬನ ಅಕುಶಲವಾದ ಧರ್ಮಗಳು ವರ್ಜ್ಯವಾಗಿವೆ. ಕುಶಲ ಧರ್ಮಗಳು ಅಭಿವೃದ್ಧಿಯಾಗಿವೆ. ಪ್ರಜ್ಞೆಯು ಪರಿಪೂರ್ಣಗೊಂಡಿದೆ. ಉತ್ಕೃಷ್ಟಜ್ಞಾನವನ್ನು ಪಡೆಯಬಲ್ಲ ಧರ್ಮಗಳನ್ನು ತಾನೇ ಸಾಕ್ಷಾತ್ಕರಿಸಿಕೊಂಡು ಅವುಗಳನ್ನು ಅತಿ ಸ್ಪಷ್ಟವಾಗಿ ಅರಿತಿದ್ದಾನೆ. (ಆದರೂ) ದುಃಖದಲ್ಲಿಯೇ ಇದ್ದಾನೆ’. ಪೊಟ್ಠಪಾದ, ಆ ದೃಷ್ಟಿಯಿಂದ ನೋಡಬಾರದು. ಅಕುಶಲ ಧರ್ಮಗಳು ದೂರವಾದಾಗ ಕುಶಲವಾದ ಧರ್ಮಗಳು ಅಭಿವೃದ್ಧಿಗೊಂಡಾಗ, ಪ್ರಜ್ಞೆಯು ಪರಿಪೂರ್ಣಗೊಂಡಾಗ ಉತ್ಕೃಷ್ಟ ಜ್ಞಾನವನ್ನು ಸಾಕ್ಷಾತ್ಕರಿಸಿಕೊಂಡು ಅದನ್ನು ಸ್ಪಷ್ಟವಾಗಿ ತಿಳಿದಾಗ ಆನಂದ ಉಂಟಾಗುತ್ತದೆ, ಪ್ರೀತಿಯು ಸಿಗುತ್ತದೆ, ಸ್ಮೃತಿಯು ದೊರೆಯುತ್ತದೆ, ಸುಖವು ಪ್ರಾಪ್ತವಾಗುತ್ತದೆ.
“ಪೊಟ್ಠಪಾದ, ಆತ್ಮವು ಮನೋಮಯವೆಂಬ ಭಾವನೆಯನ್ನು ದೂರಮಾಡಬಲ್ಲ ಧರ್ಮವನ್ನು ನಿನಗೆ ವಿವರಿಸುತ್ತೇನೆ. ಆ ದಾರಿಯಲ್ಲಿ ನಡೆದರೆ ಅಕುಶಲ ಧರ್ಮಗಳನ್ನು ತ್ಯಜಿಸಬಹುದು. ಆಗ ಕುಶಲ ಧರ್ಮಗಳು ಅಭಿವೃದ್ಧಿಗೊಳ್ಳುತ್ತವೆ. ಅವು ಪ್ರಜ್ಞೆಯನ್ನು ಪರಿಪೂರ್ಣಗೊಳಿಸುತ್ತವೆ. ಆ ಧರ್ಮಗಳನ್ನು ಒಬ್ಬನು ತಾನೇ ಸಾಕ್ಷಾತ್ಕಾರ ಮಾಡಿಕೊಂಡು ಉತ್ಕೃಷ್ಟ ಜ್ಞಾನವನ್ನು ಪಡೆದು ಅದನ್ನೂ ಅತಿ ಸ್ಪಷ್ಟವಾಗಿ ಅರಿಯಬಹುದು. ಆದರೆ ಪೊಟ್ಠಪಾದ, ನಿನಗೆ ಹೀಗೆನ್ನಿಸಬಹುದು ‘ಒಬ್ಬನ ಅಕುಶಲವಾದ ಧರ್ಮಗಳು ದೂರವಾಗಿವೆ. ಕುಶಲವಾದ ಧರ್ಮಗಳು ಅಭಿವೃದ್ಧಿಯಾಗಿವೆ. ಪ್ರಜ್ಞೆಯು ಪರಿಪೂರ್ಣಗೊಂಡಿದೆ. ಅವನು ಉತ್ಕೃಷ್ಟ ಜ್ಞಾನವನ್ನು ತಾನೇ ಸಾಕ್ಷಾತ್ಕರಿಸಿಕೊಂಡು ಅವುಗಳನ್ನು ಅತಿ ಸ್ಪಷ್ಟವಾಗಿ ಅರಿತಿದ್ದಾನೆ. ಆದರೂ ದುಃಖದಲ್ಲಿಯೇ ಇದ್ದಾನೆ’. ಪೊಟ್ಠಪಾದ, ಆ ದೃಷ್ಟಿಯಿಂದ ನೋಡಬಾರದು. ಅಕುಶಲವಾದ ಧರ್ಮಗಳು ದೂರವಾದಾಗ, ಕುಶಲವಾದ ಧರ್ಮಗಳು ಅಭಿವೃದ್ಧಿಗೊಂಡಾಗ ಪ್ರಜ್ಞೆಯು ಪರಿಪೂರ್ಣವಾದಾಗ ಉತ್ಕೃಷ್ಟ ಜ್ಞಾನವನ್ನು ಸಾಕ್ಷಾತ್ಕರಿಸಿಕೊಂಡು ಅದನ್ನು ಸ್ಪಷ್ಟವಾಗಿ ತಿಳಿದಾಗ ಆನಂದ ಉಂಟಾಗುತ್ತದೆ, ಪ್ರೀತಿಯು ಸಿಗುತ್ತದೆ, ಸ್ಮೃತಿಯು ದೊರೆಯುತ್ತದೆ, ಸುಖವು ಪ್ರಾಪ್ತವಾಗುತ್ತದೆ.
“ಪೊಟ್ಠಪಾದ, ಆತ್ಮವು ಅರೂಪಿ ಎಂಬ ಭಾವನೆಯನ್ನು ದೂರಮಾಡಬಲ್ಲ ಧರ್ಮವನ್ನು ನಿನಗೆ ವಿವರಿಸುತ್ತೇನೆ. ಆ ದಾರಿಯಲ್ಲಿ ನಡೆದರೆ ಅಕುಶಲ ಧರ್ಮಗಳನ್ನು ತ್ಯಜಿಸಬಹುದು. ಆಗ ಕುಶಲಧರ್ಮಗಳು ಅಭಿವೃದ್ಧಿಗೊಳ್ಳುತ್ತವೆ. ಅವು ಪ್ರಜ್ಞೆಯನ್ನು ಪರಿಪೂರ್ಣಗೊಳಿಸುತ್ತವೆ. ಆ ಧರ್ಮಗಳನ್ನು ಅಂಥವರು ಸಾಕ್ಷಾತ್ಕಾರ ಮಾಡಿಕೊಂಡು ಉತ್ಕೃಷ್ಟವಾದ ಜ್ಞಾನವನ್ನು ಪಡೆದು ಅದನ್ನು ಅತಿಸ್ಪಷ್ಟವಾಗಿ ಅರಿಯಬಹುದು. ಆದರೆ ಪೊಟ್ಠಪಾದ, ನಿನಗೆ ಹೀಗನ್ನಿಸಬಹುದು. ಒಬ್ಬನ ಅಕುಶಲವಾದ ಧರ್ಮಗಳು ದೂರವಾಗಿವೆ. ಕುಶಲವಾದ ಧರ್ಮಗಳು ಅಭಿವೃದ್ಧಿಯಾಗಿವೆ. ಪ್ರಜ್ಞೆಯು ಪರಿಪೂರ್ಣಗೊಂಡಿದೆ. ಅವನು ಉತ್ಕೃಷ್ಟ ಜ್ಞಾನವನ್ನು ತಾನೇ ಸಾಕ್ಷಾತ್ಕರಿಸಿಕೊಂಡು ಅದನ್ನು ಅತಿ ಸ್ಪಷ್ಟವಾಗಿ ಅರಿತಿದ್ದಾನೆ. ಆದರೂ ದುಃಖದಲ್ಲಿಯೇ ಇದ್ದಾನೆ’. ಪೊಟ್ಠಪಾದ, ಆ ದೃಷ್ಟಿಯಿಂದ ನೋಡಬಾರದು. ಅಕುಶಲವಾದ ಧರ್ಮಗಳು ದೂರವಾದಾಗ ಕುಶಲವಾದ ಧರ್ಮಗಳು ಅಭಿವೃದ್ಧಿಗೊಂಡಾಗ, ಪ್ರಜ್ಞೆಯು ಪರಿಪೂರ್ಣವಾದಾಗ ಉತ್ಕೃಷ್ಟ ಜ್ಞಾನವನ್ನು ಸಾಕ್ಷಾತ್ಕರಿಸಿಕೊಂಡು ಅದನ್ನು ಸ್ಪಷ್ಟವಾಗಿ ತಿಳಿದಾಗ ಆನಂದ ಉಂಟಾಗುತ್ತದೆ, ಪ್ರೀತಿಯು ಸಿಗುತ್ತದೆ, ಸ್ಮೃತಿಯು ದೊರೆಯುತ್ತದೆ, ಸುಖವು ಪ್ರಾಪ್ತವಾಗುತ್ತದೆ.
“ಪೊಟ್ಠಪಾದ, ನಮ್ಮನ್ನು ಇತರರು ಹೀಗೆ ಕೇಳಬಹುದು- ‘ಗೆಳೆಯ, ಆತ್ಮವು ಇಂದ್ರಿಯಗ್ರಾಹ್ಯವಾದ ಭೌತಸ್ವರೂಪದ್ದಾಗಿದೆ ಎಂಬ ಭಾವನೆಯನ್ನು ತೊರೆಯುವ ಧರ್ಮವನ್ನು ನೀವು ವಿವರಿಸುತ್ತೀರಷ್ಟೆ. ಆ ದಾರಿಯಲ್ಲಿ ನಡೆದಾಗ ಅಕುಶಲವಾದ ಧರ್ಮಗಳು ದೂರವಾಗುತ್ತವೆ, ಕುಶಲ ಧರ್ಮಗಳು ಅಭಿವೃದ್ಧಿಯಾಗುತ್ತವೆ, ಪ್ರಜ್ಞೆಯು ಪರಿಪೂರ್ಣವಾಗುತ್ತದೆ. ಅಂಥವರು ಉತ್ಕೃಷ್ಟವಾದ ಜ್ಞಾನವನ್ನು ತಾವೇ ಸಾಕ್ಷಾತ್ಕರಿಸಿಕೊಂಡು ಅದನ್ನು ಅತಿ ಸ್ಪಷ್ಟವಾಗಿ ಅರಿಯುತ್ತಾರೆ ಎಂದು ವಿವರಿಸುವ ಆ ಧರ್ಮವು ಹೇಗಿರುತ್ತದೆ?’ ಹೀಗೆ ಕೇಳಿದುದಕ್ಕೆ ನಾವು ‘ಗೆಳೆಯ, ಆತ್ಮವು ಇಂದ್ರಿಯಗ್ರಾಹ್ಯವಾದ ಭೌತ ಸ್ವರೂಪದ್ದಾಗಿದೆ ಎಂಬ ಭಾವನೆಯನ್ನು ದೂರೀಕರಿಸುವ ಯಾವ ಧರ್ಮವನ್ನು ನಾವು ವಿವರಿಸುತ್ತೇವೆಯೋ ಅದರ ದಾರಿಯಲ್ಲಿ ನಡೆದರೆ ಅಕುಶಲಧರ್ಮಗಳು ತೊಲಗುತ್ತವೆ, ಕುಶಲಧರ್ಮಗಳು ಅಭಿವೃದ್ಧಿಯಾಗುತ್ತವೆ, ಪ್ರಜ್ಞೆಯು ಪರಿಪೂರ್ಣವಾಗುತ್ತದೆ. ಆ ದಾರಿಯಲ್ಲಿ ನಡೆಯುವವರು ಉತ್ಕೃಷ್ಟವಾದ ಜ್ಞಾನವನ್ನು ತಾವೇ ಅರಿತುಕೊಂಡು ಅದನ್ನು ಸ್ಪಷ್ಟವಾಗಿ ಅರಿಯುತ್ತಾರೆ’ ಎಂದು ಹೇಳುತ್ತೇವೆಯೋ ಆ ಧರ್ಮವು ನಮ್ಮಲ್ಲಿಯೇ ಇರುವುದನ್ನು ನೀನು ನೋಡುತ್ತೀಯೆ’ ಎಂದು ಉತ್ತರ ಕೊಡುತ್ತೇವೆ.
“ಪೊಟ್ಠಪಾದ, ನಮ್ಮನ್ನು ಇತರರು ಹೀಗೆ ಕೇಳಬಹುದು- ‘ಗೆಳೆಯ, ಆತ್ಮವು ಮನೋಮಯವಾಗಿದೆ ಎಂಬ ಭಾವನೆಯನ್ನು ದೂರೀಕರಿಸುವ ಧರ್ಮವನ್ನು ನೀನು ವಿವರಿಸುತ್ತೀಯಷ್ಟೆ. ಆ ದಾರಿಯಲ್ಲಿ ನಡೆದಾಗ ಅಕುಶಲವಾದ ಧರ್ಮಗಳು ದೂರವಾಗುತ್ತವೆ, ಕುಶಲ ಧರ್ಮಗಳು ಅಭಿವೃದ್ಧಿಯಾಗುತ್ತವೆ, ಪ್ರಜ್ಞೆಯು ಪರಿಪೂರ್ಣವಾಗುತ್ತದೆ. ಅಂಥವನು ಉತ್ಕೃಷ್ಟವಾದ ಜ್ಞಾನವನ್ನು ತಾನೇ ಸಾಕ್ಷಾತ್ಕರಿಸಿಕೊಂಡು ಅದನ್ನು ಸ್ಪಷ್ಟವಾಗಿ ಅರಿಯುತ್ತಾರೆ ಎಂದು ವಿವರಿಸುವ ಆ ಧರ್ಮವು ಹೇಗಿರುತ್ತದೆ?’ ಹೀಗೆ ಕೇಳಿದುದಕ್ಕೆ ನಾವು ‘ಗೆಳೆಯ, ಆತ್ಮವು ಮನೋಮಯವಾಗಿದೆ ಎಂಬ ಭಾವನೆಯನ್ನು ದೂರೀಕರಿಸುವ ಯಾವ ಧರ್ಮವನ್ನು ನಾವು ವಿವರಿಸುತ್ತೇವೆಯೋ ಅದರ ದಾರಿಯಲ್ಲಿ ನಡೆದರೆ ಅಕುಶಲಧರ್ಮಗಳು ತೊಲಗುತ್ತವೆ, ಕುಶಲಧರ್ಮಗಳು ಅಭಿವೃದ್ಧಿಯಾಗುತ್ತವೆ, ಪ್ರಜ್ಞೆಯು ಪರಿಪೂರ್ಣವಾಗುತ್ತದೆ. ಆ ದಾರಿಯಲ್ಲಿ ನಡೆಯುವವರು ಉತ್ಕೃಷ್ಟವಾದ ಜ್ಞಾನವನ್ನು ತಾವೇ ಅರಿತುಕೊಂಡು ಅದನ್ನು ಸ್ಪಷ್ಟವಾಗಿ ಅರಿಯುತ್ತಾರೆ’ ಎಂದು ಹೇಳುತ್ತೇವೆಯೋ ‘ಆ ಧರ್ಮವು ನಮ್ಮಲ್ಲಿಯೇ ಇರುವುದನ್ನು ನೀವು ನೋಡುತ್ತೀರಿ’ ಎಂದು ಉತ್ತರಿಸುತ್ತೇವೆ.
“ಪೊಟ್ಠಪಾದ, ಬೇರೆಯವರು ನಮ್ಮನ್ನು ಹೀಗೆ ಕೇಳಬಹುದು- ‘ಗೆಳೆಯ, ಆತ್ಮವು ಅರೂಪಿಯೆಂಬ ಭಾವನೆಯನ್ನು ದೂರೀಕರಿಸುವ ಧರ್ಮವನ್ನು ನೀನು ವಿವರಿಸುತ್ತೀಯಷ್ಟೆ. ಆ ದಾರಿಯಲ್ಲಿ ನಡೆದಾಗ ಅಕುಶಲವಾದ ಧರ್ಮಗಳು ದೂರವಾಗುತ್ತವೆ, ಕುಶಲ ಧರ್ಮಗಳು ಅಭಿವೃದ್ಧಿಯಾಗುತ್ತವೆ, ಪ್ರಜ್ಞೆಯು ಪರಿಪೂರ್ಣವಾಗುತ್ತದೆ. ಅಂಥವರು ಉತ್ಕೃಷ್ಟವಾದ ಜ್ಞಾನವನ್ನು ತಾವೇ ಸಾಕ್ಷಾತ್ಕರಿಸಿಕೊಂಡು ಅದನ್ನು ಸ್ಪಷ್ಟವಾಗಿ ಅರಿಯುತ್ತಾರೆ ಎಂದು ವಿವರಿಸುವ ಧರ್ಮವು ಹೇಗಿರುತ್ತದೆ?’ ಹೀಗೆ ಕೇಳಿದುದಕ್ಕೆ ನಾವು ‘ಗೆಳೆಯ, ಆತ್ಮವು ಅರೂಪಿಯಾಗಿದೆ ಎಂಬ ಭಾವನೆಯನ್ನು ದೂರೀಕರಿಸುವ ಯಾವ ಧರ್ಮವನ್ನು ನಾವು ವಿವರಿಸುತ್ತೇವೆಯೋ ಅದರ ದಾರಿಯಲ್ಲಿ ನಡೆದರೆ ಅಕುಶಲಧರ್ಮಗಳು ತೊಲಗುತ್ತವೆ, ಕುಶಲಧರ್ಮಗಳು ಅಭಿವೃದ್ಧಿಯಾಗುತ್ತವೆ, ಪ್ರಜ್ಞೆಯು ಪರಿಪೂರ್ಣವಾಗುತ್ತದೆ. ಯಾವ ದಾರಿಯಲ್ಲಿ ನಡೆಯುವವರು ಉತ್ಕೃಷ್ಟವಾದ ಜ್ಞಾನವನ್ನು ತಾವೇ ಅರಿತುಕೊಂಡು ಅದನ್ನು ಸ್ಪಷ್ಟವಾಗಿ ಅರಿಯುತ್ತಾರೆ’ ಎಂದು ಹೇಳುತ್ತೇವೆಯೋ ‘ಆ ಧರ್ಮವು ನಮ್ಮಲ್ಲಿಯೇ ಇರುವುದನ್ನು ನೋಡುತ್ತೀಯೆ’ ಎಂದು ಉತ್ತರಿಸುತ್ತೇವೆ.
“ಪೊಟ್ಠಪಾದ, ನಿನಗೆ ಏನನ್ನಿಸುತ್ತದೆ. ಹಾಗೆ ಹೇಳುವವರ ಮಾತು ಆಧಾರಪೂರಿತವಾಗಿರುತ್ತವಲ್ಲವೇ?”
“ಭಂತೆ, ಹಾಗೆ ಹೇಳುವವರ ಮಾತು ಆಧಾರಪೂರಿತವಾಗಿರುತ್ತವೆ.”
ಪೊಟ್ಠಪಾದ, ಒಂದು ಪ್ರಾಸಾದದ ಕೆಳಗೆ ಒಬ್ಬನು ಆ ಪ್ರಾಸಾದವನ್ನು ಹತ್ತಲು ಮೆಟ್ಟಲುಗಳನ್ನು ಕಟ್ಟಿಸುತ್ತಾನೆನ್ನು. ಆಗ ಅವನನ್ನು ಇತರರು ಹೀಗೆ ಕೇಳಬಹುದು; ‘ಯಾವ ಪ್ರಾಸಾದಕ್ಕೆ ನೀನು ಮೆಟ್ಟಿಲುಗಳನ್ನು ಕಟ್ಟಿಸುತ್ತಿದ್ದೀಯೋ ಅದನ್ನು ನೋಡಿದ್ದೀಯಾ? ಅದು ಪೂರ್ವ ದಿಕ್ಕಿನಲ್ಲಿದೆಯೋ, ದಕ್ಷಿಣ ದಿಕ್ಕಿನಲ್ಲಿದೆಯೋ, ಪಶ್ಚಿಮ ದಿಕ್ಕಿನಲ್ಲಿದೆಯೋ, ಉತ್ತರ ದಿಕ್ಕಿನಲ್ಲಿದೆಯೋ, ಎತ್ತರವಾಗಿದೆಯೋ, ಮಧ್ಯಮವಾಗಿದೆಯೋ ಅಥವಾ ತಗ್ಗಿನಲ್ಲಿದೆಯೋ ನಿನಗೆ ಗೊತ್ತಿದೆಯೇ?’ ಅದಕ್ಕೆ ಅವನು ಹೀಗೆ ಹೇಳುತ್ತಾನಷ್ಟೆ. ‘ಗೆಳೆಯ, ಪ್ರಸಾದ ಎಲ್ಲಿದೆಯೋ ಅಲ್ಲಿಯೇ ಮೆಟ್ಟಿಲುಗಳನ್ನು ಕಟ್ಟಿಸಿದ್ದೇನೆ. ಅದರ ಕೆಳಗೆ ಮೆಟ್ಟಿಲುಗಳನ್ನು ಕಟ್ಟಿಸುತ್ತಿದ್ದೇನೆ.’
“ಪೊಟ್ಠಪಾದ, ಹಾಗೆ ಹೇಳುವವನ ಮಾತುಗಳು ಆಧಾರಸಹಿತವಾಗಿರುತ್ತಲ್ಲವೇ?”
“ಭಂತೆ, ಹಾಗೆ ಹೇಳುವವನ ಮಾತುಗಳು ಆಧಾರಸಹಿತವಾದವುಗಳು.”
ಪೊಟ್ಠಪಾದ, ಇದರಂತೆಯೇ ‘ಗೆಳೆಯ, ಆತ್ಮವು ಇಂದ್ರಿಯಗ್ರಾಹ್ಯವಾದ ಭೌತಿಕ ಸ್ವರೂಪದ್ದೆಂದು ಹೇಗೆ ಹೇಳುತ್ತೀಯಾ?... ಆತ್ಮವು ಮನೋಮಯ ಎಂದು ಹೇಗೆ ಹೇಳುತ್ತೀಯಾ?... ಗೆಳೆಯ, ಆತ್ಮವು ಅರೂಪಿ ಎಂಬ ಭಾವನೆಯನ್ನು ದೂರೀಕರಿಸುವ ಧರ್ಮವನ್ನು ನೀನು ವಿವರಿಸುತ್ತೀಯಷ್ಟೆ. ಆ ದಾರಿಯಲ್ಲಿ ನಡೆದಾಗ ಅಕುಶಲ ಧರ್ಮಗಳು ದೂರವಾಗುತ್ತವೆ, ಕುಶಲ ಧರ್ಮಗಳು ಅಭಿವೃದ್ಧಿಯಾಗುತ್ತವೆ, ಪ್ರಜ್ಞೆಯು ಪರಿಪೂರ್ಣವಾಗುತ್ತದೆ, ಆ ದಾರಿಯಲ್ಲಿ ಹೋಗುವವರು ಉತ್ಕೃಷ್ಟ ಜ್ಞಾನವನ್ನು ತಾವೇ ಸಾಕ್ಷಾತ್ಕರಿಸಿಕೊಂಡು ಅದನ್ನು ಸ್ಪಷ್ಟವಾಗಿ ಅರಿಯುತ್ತಾರೆ ಎಂದು ವಿವರಿಸುವ ಧರ್ಮವು ಹೇಗಿರುತ್ತದೆ?’ ಎಂದು ಇತರರು ಕೇಳಿದಾಗ ನಾವು ‘ಗೆಳೆಯ, ಆತ್ಮವು ಅರೂಪಿ ಎಂಬ ಭಾವನೆಯನ್ನು ದೂರೀಕರಿಸುವ ಯಾವ ಧರ್ಮವನ್ನು ವಿವರಿಸುತ್ತೇವೆಯೋ ಅದರ ದಾರಿಯಲ್ಲಿ ನಡೆದರೆ, ಅಕುಶಲ ಧರ್ಮಗಳು ತೊಲಗುತ್ತವೆ, ಕುಶಲ ಧರ್ಮಗಳು ಅಭಿವೃದ್ಧಿಯಾಗುತ್ತವೆ, ಪ್ರಜ್ಞೆಯು ಪರಿಪೂರ್ಣವಾಗುತ್ತದೆ, ಯಾವ ದಾರಿಯಲ್ಲಿ ನಡೆಯುವವರು ಉತ್ಕೃಷ್ಟವಾದ ಜ್ಞಾನವನ್ನು ತಾವೇ ಅರಿತುಕೊಂಡು ಅದನ್ನು ಸ್ಪಷ್ಟವಾಗಿ ಅರಿಯುತ್ತಾರೆ ಎಂದು ಹೇಳುತ್ತೇವೆಯೋ ಆ ಧರ್ಮವು ನಮ್ಮಲ್ಲಿರುವುದನ್ನು ನೀನು ನೋಡುತ್ತೀಯೆ’ ಎಂದು ವಿವರಿಸುತ್ತೇವೆ.
“ಪೊಟ್ಠಪಾದ, ಹೀಗೆ ಹೇಳುವವನ ಮಾತುಗಳು ಆಧಾರಸಹಿತವಾಗಿರುತ್ತವಲ್ಲವೇ?”
“ಭಂತೆ, ಹಾಗೆ ಹೇಳುವವನ ಮಾತುಗಳು ಆಧಾರಸಹಿತವಾಗಿರುತ್ತವೆ.”
ಆಗ ಮಾವಟಿಗನ ಮಗ ಚಿತ್ತನು ಭಗವಾನರನ್ನು ಕುರಿತು ಹೀಗೆಂದನು- “ಹಾಗಾದರೆ, ಭಂತೆ, ಆತ್ಮವು ಇಂದ್ರಿಯಗ್ರಾಹ್ಯವಾದ ಭೌತಿಕ ಸ್ವರೂಪದಾಗಿದ್ದರೆ, ಆ ಸಮಯದಲ್ಲಿಯೇ ಆತ್ಮವು ಮನೋಮಯವಾಗಿರಲಾರದು, ಆತ್ಮವು ಅರೂಪಿಯಾಗಿರಲಾರದು, ಆ ಸಮಯದಲ್ಲಿ ಅದು ಇಂದ್ರಿಯಗ್ರಾಹ್ಯವಾದ ಭೌತಿಕ ಸ್ವರೂಪದ್ದಾಗಿರುವುದೇ ನಿಜ. ಯಾವ ಸಮಯದಲ್ಲಿ, ಭಂತೆ, ಆತ್ಮವು ಮನೋಮಯವಾಗಿರುತ್ತದೋ ಅದೇ ಸಮಯದಲ್ಲಿ ಆತ್ಮವು ಇಂದ್ರಿಯಗ್ರಾಹ್ಯವಾದ ಭೌತಿಕ ಸ್ವರೂಪದ್ದಾಗಿರಲಾರದು, ಅದು ಅರೂಪಿಯಾಗಿರಬಾರದು. ಆ ಸಮಯದಲ್ಲಿ ಆತ್ಮವು ಮನೋಮಯವಾಗಿರುವುದೇ ನಿಜ. ಯಾವ ಸಮಯದಲ್ಲಿ, ಭಂತೆ, ಅತ್ಮವು ಅರೂಪಿಯಾಗಿರುತ್ತದೋ ಆ ಸಮಯದಲ್ಲಿ ಆತ್ಮವು ಇಂದ್ರಿಯಗ್ರಾಹ್ಯವಾದ ಭೌತಿಕ ಸ್ವರೂಪವಾದದ್ದಾಗಿರಬಾರದು, ಮನೋಮಯವಾಗಿರಲಾರದು. ಆ ಸಮಯದಲ್ಲಿ ಆತ್ಮವು ಅರೂಪಿಯಾಗಿರುವುದೇ ನಿಜ.”
“ಚಿತ್ತ, ಆತ್ಮವು ಇಂದ್ರಿಯಗ್ರಾಹ್ಯವಾದ ಭೌತಿಕ ಸ್ವರೂಪದ್ದಾಗಿದ್ದಾಗ ಅದು ಮನೋಮಯದ ಸ್ವರೂಪವನ್ನು ಹೊಂದಿರಲಾರದು. ಅರೂಪ ಸ್ಥಿತಿಯನ್ನೂ ಪಡೆಯಲಾರದು. ಆ ಸಮಯದಲ್ಲಿ ಅದು ಇಂದ್ರಿಯಗ್ರಾಹ್ಯವಾದ ಭೌತಿಕ ಸ್ಥಿತಿಯಲ್ಲಿಯೇ ಇರುತ್ತದೆ. ಆತ್ಮವು ಮನೋಮಯ ಸ್ಥಿತಿಯಲ್ಲಿದ್ದಾಗ ಅದು ಇಂದ್ರಿಯಗ್ರಾಹ್ಯವಾದ ಭೌತಿಕ ಸ್ಥಿತಿಯಲ್ಲಿರಲಾರದು, ಅರೂಪಸ್ಥಿತಿಯನ್ನೂ ಪಡೆಯಲಾರದು. ಆ ಸಮಯದಲ್ಲಿ ಅದು ಮನೋಮಯಸ್ಥಿತಿಯಲ್ಲಿಯೇ ಇರುತ್ತದೆ. ಚಿತ್ತ, ಆತ್ಮವು ಅರೂಪಸ್ಥಿತಿಯಲ್ಲಿದ್ದಾಗ ಅದು ಇಂದ್ರಿಯಗ್ರಾಹ್ಯವಾದ ಭೌತಿಕ ಸ್ಥಿತಿಯಲ್ಲಿರಲಾರದು, ಮನೋಮಯಸ್ಥಿತಿಯಲ್ಲಿಯೂ ಇರಲಾರದು; ಆ ಸಮಯದಲ್ಲಿ ಆತ್ಮವು ಅರೂಪ ಸ್ಥಿತಿಯಲ್ಲಿಯೇ ಇರುತ್ತದೆ.
“ಚಿತ್ತ, ಯಾರಾದರೂ ನಿನ್ನನ್ನು ‘ನೀನು ಹಿಂದೆ ಇದ್ದೆಯೋ ಇರಲಿಲ್ಲವೋ, ಮುಂದೆ ಇರುವೆಯೋ ಇರುವುದಿಲ್ಲವೋ, ಈಗ ಇದ್ದೀಯೋ ಇಲ್ಲದಿರುವಿಯೋ ಎಂದು ಕೇಳಿದರೆ ಅದನ್ನು ಹೇಗೆ ವಿವರಿಸುತ್ತೀಯೇ?”
“ಭಂತೆ, ಯಾರಾದರೂ ನನ್ನನ್ನು ಹಾಗೆ ಕೇಳಿದರೆ ‘ನಿಜ, ಹಿಂದೆ ಇದ್ದೆ, ಇಲ್ಲದಿರಲಿಲ್ಲ, ಮುಂದೆ ಇರುತ್ತೇನೆ, ಇಲ್ಲದೆ ಇರುವುದಿಲ್ಲ, ಈಗ ಇದ್ದೇನೆ, ಇಲ್ಲವಾಗಿಲ್ಲ’ ಎಂದು ವಿವರಿಸುತ್ತೇನೆ.”
“ಮತ್ತೆ ಚಿತ್ತ, ಅವರು ‘ಹಾಗಾದರೆ ಹಿಂದೆ ನೀನು ಇದ್ದುದರಿಂದ ಆ ಹಿಂದಿನ ಆತ್ಮವೇ ಸತ್ಯವೇ, ಮುಂದೆ ಇರುವುದೂ ಅಸತ್ಯವೇ? ಮುಂದೆ ನೀನು ಇರುವುದರಿಂದ ಮುಂದಿನ ಆತ್ಮವು ಸತ್ಯವೇ, ಹಿಂದಿದ್ದ ಆತ್ಮವೂ ಈಗಿರುವ ಆತ್ಮವೂ ಅಸತ್ಯವೇ, ಈಗ ನೀನು ಇರುವುದರಿಂದ ಹಿಂದಿದ್ದ ಆತ್ಮವೂ ಮುಂದೆ ಇರುವ ಆತ್ಮವೂ ಅಸತ್ಯವೇ’ ಎಂದು ಕೇಳಿದರೆ ಅದನ್ನು ಹೇಗೆ ವಿವರಿಸುತ್ತೀಯೇ?”
“ಭಂತೆ, ಯಾರಾದರೂ ನನ್ನನ್ನು ಕೇಳಿದರೆ ‘ನಾನು ಹಿಂದೆ ಇದ್ದುದರಿಂದ ಆ ಸಮಯದಲ್ಲಿದ್ದ ನನ್ನ ಆತ್ಮವು ಸತ್ಯವಾಗಿತ್ತು. ಮುಂದಿನ ಆತ್ಮವೂ ಈಗಿರುವ ಆತ್ಮವೂ ಮುಂದೆ ಬರುವ ಆತ್ಮವೂ ಅಸತ್ಯವಾಗಿದ್ದವು. ನಾನು ಮುಂದೆ ಇರುವುದರಿಂದ ಆ ನನ್ನ ಆತ್ಮವು ಸತ್ಯವಾಗಿರುತ್ತದೆ. ಹಿಂದಿನ ಆತ್ಮವೂ ಈಗಿರುವ ಆತ್ಮವೂ ಅಸತ್ಯವಾಗುತ್ತವೆ. ಯಾವ ನನ್ನ ಆತ್ಮವು ಈಗಿದೆಯೋ ಅದು ಸತ್ಯವಾಗಿದೆ; ಹಿಂದೆ ಇದ್ದದ್ದೂ ಮುಂದೆ ಬರುವುದೂ ಅಸತ್ಯವಾಗಿವೆ.”
“ಚಿತ್ತ, ಇದರಂತೆಯೇ ಆತ್ಮವು ಯಾವ ಸಮಯದಲ್ಲಿ ಇಂದ್ರಿಯ ಗ್ರಾಹ್ಯವಾದ ಭೌತಿಕ ಸ್ವರೂಪದಲ್ಲಿರುವುದೋ ಆ ಸಮಯದಲ್ಲಿ ಅದು ಮನೋಮಯ ಸ್ವರೂಪವನ್ನು ಹೊಂದಿರುವುದಿಲ್ಲ. ಅರೂಪಸ್ಥಿತಿಯನ್ನೂ ಪಡೆದಿರುವುದಿಲ್ಲ. ಆ ಸಮಯದಲ್ಲಿ ಅದು ಇಂದ್ರಿಯಗ್ರಾಹ್ಯವಾದ ಭೌತಿಕ ಸ್ವರೂಪವನ್ನು ಪಡೆದಿರುತ್ತದೆ... ಯಾವ ಸಮಯದಲ್ಲಿ ಆತ್ಮವು ಮನೋಮಯ ಸ್ವರೂಪವಾಗಿರುತ್ತದೋ... ಯಾವ ಸಮಯದಲ್ಲಿ ಆತ್ಮವು ಅರೂಪ ಸ್ಥಿತಿಯನ್ನು ಪಡೆದಿರುವುದೋ ಆ ಸಮಯದಲ್ಲಿ ಅದು ಇಂದ್ರಿಯಗ್ರಾಹ್ಯವಾದ ಭೌತ ಸ್ವರೂಪವನ್ನು ಹೊಂದಿರುವುದಿಲ್ಲ ಮತ್ತು ಮನೋಮಯ ಸ್ವರೂಪವನ್ನು ಹೊಂದಿರುವುದಿಲ್ಲ.
“ಚಿತ್ತ, ಹಸುವಿನಿಂದ ಹಾಲೂ, ಹಾಲಿನಿಂದ ಮೊಸರೂ, ಮೊಸರಿನಿಂದ ಬೆಣ್ಣೆಯೂ, ಬೆಣ್ಣೆಯಿಂದ ತುಪ್ಪವೂ, ತುಪ್ಪದಿಂದ ತುಪ್ಪದ ಭಕ್ಷ್ಯಗಳೂ ಆಗುವುದಷ್ಟೆ. ಯಾವ ಸಮಯದಲ್ಲಿ ಅದು ಹಾಲಾಗಿರುತ್ತದೆಯೋ ಆಗ ಅದು ಮೊಸರಾಗಲೀ, ಬೆಣ್ಣೆಯಗಲೀ, ತುಪ್ಪವಾಗಲೀ, ತುಪ್ಪದ ಭಕ್ಷ್ಯವಾಗಲೀ ಆಗಿರುವುದಿಲ್ಲ. ಆ ಸಮಯದಲ್ಲಿ ಹಾಲಿನ ಸ್ಥಿತಿಯನ್ನೇ ಪಡೆದಿರುತ್ತದೆ. ಯಾವ ಸಮಯದಲ್ಲಿ ಮೊಸರಾಗಿರುತ್ತದೋ... ಬೆಣ್ಣೆಯಾಗಿರುತ್ತದೋ... ತುಪ್ಪವಾಗಿರುತ್ತದೋ... ತುಪ್ಪದ ಭಕ್ಷ್ಯವಾಗಿರುತ್ತದೋ... ಆ ಸಮಯದಲ್ಲಿ ಅದು ಹಾಲಾಗಿರುವುದಿಲ್ಲ, ಬೆಣ್ಣೆಯಾಗಿರುವುದಿಲ್ಲ, ತುಪ್ಪವಾಗಿರುವುದಿಲ್ಲ. ಆ ಸಮಯದಲ್ಲಿ ಅದು ಭಕ್ಷ್ಯದ ಸ್ಥಿತಿಯನ್ನೇ ಹೊಂದಿರುತ್ತದೆ. ಅದರಂತೆಯೇ, ಚಿತ್ತ, ಯಾವ ಸಮಯದಲ್ಲಿ ಆತ್ಮವು ಇಂದ್ರಿಯಗ್ರಾಹ್ಯವಾದ ಭೌತಿಕ ಸ್ವರೂಪದಲ್ಲಿರುತ್ತದೆಯೋ... ಯಾವ ಸಮಯದಲ್ಲಿ ಮನೋಮಯ ಸ್ವರೂಪದ್ದಾಗಿರುತ್ತದೋ... ಯಾವ ಸಮಯದಲ್ಲಿ ಚಿತ್ತ, ಅರೂಪ ಸ್ಥಿತಿಯನ್ನು ಪಡೆದಿರುತ್ತದೋ ಆ ಸಮಯದಲ್ಲಿ ಅದು ಇಂದ್ರಿಯಗ್ರಾಹ್ಯವಾದ ಭೌತಿಕ ಸ್ವರೂಪವನ್ನು ಹೊಂದಿರುವುದಿಲ್ಲ. ಮನೋಮಯ ಸ್ವರೂಪವನ್ನೂ ಹೊಂದಿರುವುದಿಲ್ಲ. ಆ ಸಮಯದಲ್ಲಿ ಅದು ಅರೂಪ ಸ್ಥಿತಿಯನ್ನು ಪಡೆದಿರುತ್ತದೆ. ಇವೆಲ್ಲವೂ ಲೋಕ ಕೊಟ್ಟಿರುವ ಹೆಸರುಗಳು, ಲೋಕವು ವಿವರಿಸುವ ರೀತಿಗಳು ಮಾತ್ರ. ಲೋಕದಿಂದ ಬಂದಿರುವ ಪದಗಳು ಲೋಕವು ಅರ್ಥಮಾಡಿಕೊಳ್ಳುವ ರೀತಿಗಳು. ತಥಾಗತನಾದರೋ ಇವುಗಳಿಂದ ದಾರಿ ತಪ್ಪುವುದಿಲ್ಲ.”
ಹೀಗೆ ಹೇಳಿದ ಭಗವಾನರನ್ನು ಕುರಿತು ಪೊಟ್ಠಪಾದ ಪರಿಬ್ಬಾಜಕನು “ಭಂತೆ, ಎಷ್ಟು ಉತ್ಕೃಷ್ಟ ಭಂತೆ, ಎಷ್ಟು ಉತ್ಕೃಷ್ಟ, ತಲೆಕೆಳಗಾಗಿ ಬಿದ್ದಿರುವುದನ್ನು ಸರಿಯಾಗಿ ನಿಲ್ಲಿಸುವಂತೆ, ಮುಚ್ಚುಹೋಗಿರುವುದನ್ನು ತೆಗೆದು ತೋರಿಸುವಂತೆ, ದಾರಿತಪ್ಪಿದವನಿಗೆ ಸರಿಯಾದ ದಾರಿ ತೋರಿಸುವಂತೆ, ಕತ್ತಲಲ್ಲಿರುವವರು ತಮ್ಮ ಕಣ್ಣಿನಿಂದ ರೂಪಗಳನ್ನು ನೋಡಲು ಅನುಕೂಲವಾಗಲು ದೀಪ ಹಿಡಿದಂತೆ, ಭಗವಾನರಿಂದ ಧಮ್ಮವು ಅನೇಕ ರೀತಿಯಲ್ಲಿ ಪ್ರಕಾಶಗೊಂಡಿದೆ. ಭಂತೆ, ಭಗವಾನರಿಗೆ ಶರಣು ಹೋಗುತ್ತೇನೆ, ಧಮ್ಮಕ್ಕೆ ಶರಣು ಹೋಗುತ್ತೇನೆ, ಭಿಕ್ಷು ಸಂಘಕ್ಕೆ ಶರಣು ಹೋಗುತ್ತೇನೆ. ಶರಣಾಗತನಾದ ನನ್ನನ್ನು ಭಗವಾನರು ನನ್ನ ಜೀವನವಿರುವವರೆಗೂ ಉಪಾಸಕನನ್ನಾಗಿ ಸ್ವೀಕರಿಸಲಿ.”
ಮಾವಟಿಗನ ಮಗ ಚಿತ್ತನು ಪರಿವ್ರಾಜಕನಾಗುವುದು
ಮಾವಟಿಗನ ಮಗನಾದ ಚಿತ್ತನು ಭಗವಾನರಿಗೆ ಹೀಗೆ ಭಿನ್ನವಿಸಿಕೊಂಡನು. “ಭಂತೆ, ಎಷ್ಟು ಉತ್ಕೃಷ್ಟ ತಮ್ಮ ಮಾತುಗಳು ಎಷ್ಟು ಉತ್ಕೃಷ್ಟ ! ತಲೆಕೆಳಗಾಗಿ ಬಿದ್ದಿರುವುದನ್ನು ಸರಿಯಾಗಿ ನಿಲ್ಲಿಸುವಂತೆ, ಮುಚ್ಚುಹೋಗಿರುವುದನ್ನು ತೆಗೆದು ತೋರಿಸುವಂತೆ, ದಾರಿತಪ್ಪಿದವನಿಗೆ ಸರಿಯಾದ ದಾರಿ ತೋರಿಸುವಂತೆ, ಕತ್ತಲಲ್ಲಿರುವವರು ತಮ್ಮ ಕಣ್ಣುಗಳಿಂದ ರೂಪಗಳನ್ನು ನೋಡಲು ದೀಪ ಹಿಡಿದಂತೆ, ಭಗವಾನರು ಅನೇಕ ಪರಿಯಲ್ಲಿ ಧಮ್ಮವನ್ನು ಪ್ರಕಾಶಪಡಿಸಿದ್ದಾರೆ. ಭಂತೆ, ಭಗವಾನರಿಗೆ ಶರಣು ಹೋಗುತ್ತೇನೆ, ಧಮ್ಮಕ್ಕೆ ಶರಣು ಹೋಗುತ್ತೇನೆ, ಭಿಕ್ಷು ಸಂಘಕ್ಕೆ ಶರಣು ಹೋಗುತ್ತೇನೆ. ಭಗವಾನರು ನನ್ನನ್ನು ಪಬ್ಬಜ್ಜನನ್ನಾಗಿ ಮಾಡಿ ಸಂಘಕ್ಕೆ ಸೇರಿಸಿಕೊಳ್ಳಲಿ.”
ಮಾವಟಿಗನ ಮಗನಾದ ಚಿತ್ತನು ಪಬ್ಬಜ್ಜವನ್ನು ಪಡೆದನು. ಸಂಘಕ್ಕೆ ಸೇರಿಕೊಂಡನು. ಮಾವಟಿಗನ ಮಗ ಚಿತ್ತನು ಆ ಕೂಡಲೇ ಬೇರೆಯವರಿಂದ ದೂರನಾಗಿ ಏಕಾಂತವಾಸಿಯಾಗಿ ಸದಾ ಎಚ್ಚರಿಕೆಯುಳ್ಳವನಾಗಿ ಶ್ರದ್ಧಾವಂತನಾಗಿ ಸಾಧನೆ ಮಾಡುವವನಾದನು. ಕುಲಪುತ್ರರಾದವರು ಯಾವುದಕ್ಕಾಗಿ ಮನೆಯನ್ನು ತೊರೆದು ಶ್ರೇಷ್ಠರಾದ ಪಬ್ಬಜಿತರಾಗುತ್ತಾರೋ ಆ ಧಮ್ಮವನ್ನು ತಾನೇ ಅರಿತು ಸಾಕ್ಷಾತ್ಕರಿಸಿಕೊಳ್ಳುವ ಸ್ಥಿತಿಯನ್ನು ಪಡೆದನು. ಬ್ರಹ್ಮಚರ್ಯೆಯನ್ನು ಪಾಲಿಸುವವನಾದನು. ‘ಜೀವನವು ಕ್ಷೀಣಹೊಂದಿತು, ಬ್ರಹ್ಮಚರ್ಯವನ್ನು ಪಾಲಿಸಿಯಾಯಿತು, ಮಾಡಬೇಕಾದ್ದನ್ನು ಮಾಡಿಯಾಯಿತು, ಇನ್ನುಮುಂದೆ ಪುನರ್ಜನ್ಮವೆಂಬುದಿಲ್ಲ’ ಎಂಬ ಜ್ಞಾನವನ್ನು ಪಡೆದನು. ಮಾವಟಿಗನ ಮಗನಾದ ಚಿತ್ತನು ಮತ್ತೊಬ್ಬ ಅರಹಂತನಾದನು.
ಇಲ್ಲಿಗೆ ಪೊಟ್ಠಪಾದ ಸುತ್ತ ಮುಗಿಯಿತು.
ಟಿಪ್ಪಣಿಗಳು [3]
English
Deutsch
Việt Ngữ