ಊಟಿಸುತ್ತಿದೆ

ಅನುವಾದಗಳು [43]

ಸತಿಪಟ್ಠಾನ ಸುತ್ತ

1. ನಾಲ್ಕು ಎಚ್ಚರದ ನೆಲೆಗಳು (ಅಡಿಪಾಯಗಳು)

ಹೀಗೆ ನಾನು ಕೇಳಿದ್ದೇನೆ.133 ಒಮ್ಮೆ ಭಗವಾನರು ಕುರುಗಳ ಜೊತೆ ಕುರುಗಳ ಪಟ್ಟಣವಾದ ಕಮ್ಮಾಸಧಮ್ಮ134 ಎಂಬಲ್ಲಿ ತಂಗಿದ್ದರು. ಅಲ್ಲಿ ಭಗವಾನರು ಭಿಕ್ಷುಗಳನ್ನು ಕರೆದರು- “ಭಿಕ್ಷುಗಳೇ” ಎಂದು. “ಭದನ್ತರೇ” ಎಂದು ಆ ಭಿಕ್ಷುಗಳು ಭಗವಾನರಿಗೆ ಉತ್ತರಿಸಿದರು. ಭಗವಾನರು ಹೀಗೆ ಹೇಳಿದರು-

2. “ಭಿಕ್ಷುಗಳೇ, ಜೀವಿಗಳನ್ನು ವಿಶುದ್ಧಿಗೊಳಿಸಲು, ಶೋಕ-ಅಳಲುಗಳನ್ನು ಮೀರಲು, ದುಃಖ ದುಮ್ಮಾನಗಳನ್ನು ಅಸ್ತಮಾನಗೊಳಿಸಲು, ನ್ಯಾಯಮಾರ್ಗವನ್ನು ಸೇರಲು, ನಿರ್ವಾಣವನ್ನು ಸಾಕ್ಷಾತ್ಕರಿಸಿಕೊಳ್ಳು ಇದು ಏಕಮೇವ ಮಾರ್ಗ.135 ಅದೆಂದರೆ ನಾಲ್ಕು ಎಚ್ಚರದ ನೆಲೆಗಳು.136

“ಯಾವು ಆ ನಾಲ್ಕು? ಭಿಕ್ಷುಗಳೇ, ಇಲ್ಲಿ ಭಿಕ್ಷುವು137 ಕಾಯದಲ್ಲಿ ಕಾಯಾನುಪಸ್ಸಿ (ಕಾಯದ ಎಚ್ಚರಿಕೆಯನ್ನು ಧ್ಯಾನಿಸುವುದು) ಆಗಿ ಉತ್ಸಾಹದಿಂದ ಹೊತ್ತಿ ಉರಿಯುತ್ತಾ ಪ್ರಜ್ಞಾಪೂರ್ವಕವಾಗಿ ಅರಿತವನಾಗಿ, ಎಚ್ಚರಗೊಂಡವನಾಗಿ ಲೋಕದಲ್ಲಿ ದುರಾಶೆ-ದುಮ್ಮಾನಗಳನ್ನು ತೊಲಗಿಸಿ ತಂಗಿರುತ್ತಾನೆ. ವೇದನೆ (ಅನುಭವ)ಗಳಲ್ಲಿ ವೇದನಾನುಪಸ್ಸಿಯಾಗಿ (ಸುಖವಿಲ್ಲದ ದುಃಖವಿಲ್ಲದ ಎಚ್ಚರಗಳನ್ನು ಧ್ಯಾನಿಸುವುದು). ಉತ್ಸಾಹದಿಂದ ಹೊತ್ತಿ ಉರಿಯುತ್ತಾ ದುರಾಶೆ-ದುಮ್ಮಾನಗಳನ್ನು ತೊಲಗಿಸಿ ತಂಗಿರುತ್ತಾನೆ; ಚಿತ್ತದಲ್ಲಿ (ಮನಸ್ಸಿನಲ್ಲಿ) ಚಿತ್ತಾನುಪಸ್ಸಿಯಾಗಿ (ಮನಸ್ಸಿನ ಸ್ಥಿತಿಗಳ ಎಚ್ಚರವನ್ನು ಧ್ಯಾನಿಸುವುದು) ದುರಾಶೆ-ದುಮ್ಮಾನಗಳನ್ನು ತೊಲಗಿಸಿ ತಂಗಿರುತ್ತಾನೆ. ಧರ್ಮಗಳಲ್ಲಿ (ಮಾನಸಿಕ ವಿಷಯಗಳಲ್ಲಿ, ಧಮ್ಮಾನುಪಸ್ಸಿ (ಸ್ಮೃತಿ, ಕಲ್ಪನೆ, ಪ್ರಜ್ಞಪ್ತಿ, ಹೊಳಪು ಮುಂತಾದ ಮಾನಸಿಕ ವಿಷಯಗಳ ಎಚ್ಚರಗಳನ್ನು ಧ್ಯಾನಿಸುವುದು) ಯಾಗಿ ಉತ್ಪಾಹದಿಂದ ಹೊತ್ತಿ ಉರಿಯುತ್ತಾ ಪ್ರಜ್ಞಾಪೂರ್ವಕವಾಗಿ ಅರಿತವರಾಗಿ, ಎಚ್ಚರಗೊಂಡವರಾಗಿ ಲೋಕದಲ್ಲಿ ದುರಾಶೆ-ದುಮ್ಮಾನಗಳನ್ನು ತೊಲಗಿಸಿ ತಂಗಿರುತ್ತಾನೆ.139

2. ಕಾಯಾನುಪಸ್ಸನ

(1) ಆನಾಪಾನ ಸತಿ

3. “ಭಿಕ್ಷುಗಳೇ, ಭಿಕ್ಷುವು ಹೇಗೆ ಕಾಯದಲ್ಲಿ ಕಾಯಾನುಪಸ್ಸಿಯಾಗಿ ತಂಗಿರುತ್ತಾನೆ? ಭಿಕ್ಷುಗಳೇ, ಇಲ್ಲಿ ಭಿಕ್ಷುವು ಅರಣ್ಯಕ್ಕೆ ಹೋಗಿ ಅಥವಾ ಮರದ ಬುಡಕ್ಕೆ ಹೋಗಿ ಅಥವಾ ಶೂನ್ಯಗಾರಕ್ಕೆ ಹೋಗಿ ಪರ್ಯಂಕಾಸನ (ಮೊಣಕಾಲುಗಳನ್ನು ಮಡಚಿ ಪದ್ಮಾಸನ, ಸ್ವಸ್ತಿಕಾಸನ, ಸಹಜಾಸನ ಮುಂತಾದವುಗಳಲ್ಲಿ ಕೂರುವುದು) ವನ್ನು ತಳೆದು ಕಾಯವನ್ನು ನೇರವಾಗಿಟ್ಟು ಎಚ್ಚರಿಕೆಯನ್ನು ತನ್ನ ಮುಂದೆ ನೆಲೆಗೊಳಿಸಿ, ಕುಳಿತುಕೊಳ್ಳುತ್ತಾನೆ. ಎಚ್ಚರಿಕೆಯಿಂದಲೇ ಉಸಿರನ್ನು ಒಳಕ್ಕೆ ತೆಗೆದುಕೊಳ್ಳುತ್ತಾನೆ. ಎಚ್ಚರಿಕೆಯಿಂದಲೇ ಉಸಿರನ್ನು ಹೊರಕ್ಕೆ ಬಿಡುತ್ತಾನೆ. ನೀಳವಾಗಿ ಉಸಿರನ್ನು ಒಳಕ್ಕೆ ತೆಗೆದುಕೊಳ್ಳುವಾಗ ‘ನೀಳವಾಗಿ ಉಸಿರನ್ನು ಒಳಕ್ಕೆ ತೆಗೆದುಕೊಳ್ಳುತ್ತಿದ್ದೇನೆ’ ಎಂದು ಅರಿಯುತ್ತಾನೆ. ನೀಳವಾಗಿ ಉಸಿರನ್ನು ಹೊರಕ್ಕೆ ಬಿಡುವಾಗ ‘ನೀಳವಾಗಿ ಉಸಿರನ್ನು ಹೊರಕ್ಕೆ ಬಿಡುತ್ತಿದ್ದೇನೆ’ ಎಂದು ಅರಿಯುತ್ತಾನೆ. ಕಿರಿದಾಗಿ ಉಸಿರನ್ನು ಒಳಕ್ಕೆ ತೆಗೆದುಕೊಳ್ಳುವಾಗ ‘ಕಿರಿದಾಗಿ ಉಸಿರನ್ನು ಒಳಕ್ಕೆ ತೆಗೆದುಕೊಳ್ಳುತ್ತಿದ್ದೇನೆ’ ಎಂದು ಅರಿಯುತ್ತಾನೆ. ಕಿರಿದಾಗಿ ಉಸಿರನ್ನು ಹೊರಕ್ಕೆ ಬಿಡುವಾಗ ‘ಕಿರಿದಾಗಿ ಉಸಿರನ್ನು ಹೊರಕ್ಕೆ ಬಿಡುತ್ತಿದ್ದೇನೆ’ ಎಂದು ಅರಿಯುತ್ತಾನೆ.140

“ಇಡೀ ಉಸಿರು ಕಾಯ*ವನ್ನು ಅನುಭವಿಸಿದವನಾಗಿ ‘ಇಡೀ ಉಸಿರ ಕಾಯ141 ಅನುಭವಿಸುತ್ತಿದ್ದೇನೆ, ಉಛ್ವಾಸ ಮಾಡುತ್ತೇನೆ’ ಎಂದು ಅಭ್ಯಾಸ ಮಾಡುತ್ತಾನೆ, ‘ಉಸಿರು ಕಾಯದ ಚಟುವಟಿಕೆಯನ್ನು ಶಮನಗೊಳಿಸಿ ಉಸಿರನ್ನು ಒಳಕ್ಕೆ ತೆಗೆದುಕೊಳ್ಳುತ್ತೇನೆ’ ಎಂದು ಅಭ್ಯಾಸ ಮಾಡುತ್ತಾನೆ, ‘ಉಸಿರು ಕಾಯದ ಚಟುವಟಿಕೆಯನ್ನು ಶಮನಗೊಳಿಸಿ ಉಸಿರನ್ನು ಹೊರಕ್ಕೆ ಬಿಡುತ್ತೇನೆ’ ಎಂದು ಅಭ್ಯಾಸ ಮಾಡುತ್ತಾನೆ.142

“ಉದಾಹರಣೆಗೆ ಭಿಕ್ಷುಗಳೇ, ಒಬ್ಬ ಬಡಗಿಯಾಗಲಿ ಅಥವಾ ಆತನ ಶಿಷ್ಯನಾಗಲಿ ಚರತಿಯನ್ನು ನೀಳವಾಗ ಎಳೆಯುವಾಗ ‘ನೀಳವಾಗಿ ಎಳೆಯುತ್ತಿದ್ದೇನೆ’ ಎಂದು ಅರಿಯುತ್ತಾನೆ. ಕಿರಿದಾಗಿ ಎಳೆಯುವಾಗ ‘ಕಿರಿದಾಗಿ ಎಳೆಯುತ್ತಿದ್ದೇನೆ’ ಎಂದು ಅರಿಯುತ್ತಾನೆ; ಇದೇ ರೀತಿಯಲ್ಲಿ ಭಿಕ್ಷುಗಳೇ, ಭಿಕ್ಷುವು ನೀಳವಾಗಿ ಉಸಿರನ್ನು ಒಳಕ್ಕೆ ತೆಗೆದುಕೊಳ್ಳುವಾಗ ‘ನೀಳವಾಗಿ ಉಸಿರನ್ನು ಒಳಕ್ಕೆ ತೆಗೆದುಕೊಳ್ಳುತ್ತಿದ್ದೇನೆ’ ಎಂದು ಅರಿಯುತ್ತಾನೆ. ನೀಳವಾಗಿ ಉಸಿರನ್ನು ಹೊರಕ್ಕೆ ಬಿಡುವಾಗ ‘ನೀಳವಾಗಿ ಉಸಿರನ್ನು ಹೊರಕ್ಕೆ ಬಿಡುತ್ತಿದ್ದೇನೆ’ ಎಂದು ಅರಿಯುತ್ತಾನೆ. ಕಿರಿದಾಗಿ ಉಸಿರನ್ನು ಒಳಕ್ಕೆ ತೆಗೆದುಕೊಳ್ಳುವಾಗ ‘ಕಿರಿದಾಗಿ ಉಸಿರನ್ನು ಒಳಕ್ಕೆ ತೆಗೆದುಕೊಳ್ಳುತ್ತಿದ್ದೇನೆ’ ಎಂದು ಅರಿಯುತ್ತಾನೆ. ಕಿರಿದಾಗಿ ಉಸಿರನ್ನು ಹೊರಕ್ಕೆ ಬಿಡುವಾಗ ‘ಕಿರಿದಾಗಿ ಉಸಿರನ್ನು ಹೊರಕ್ಕೆ ಬಿಡುತ್ತಿದ್ದೇನೆ’ ಎಂದು ಅರಿಯುತ್ತಾನೆ. ‘ಇಡೀ ಉಸಿರು ಕಾಯವನ್ನು ಅನುಭವಿಸಿದವನಾಗಿ ಉಸಿರನ್ನು ಒಳಕ್ಕೆ ತೆಗೆದುಕೊಳ್ಳುತ್ತಿದ್ದೇನೆ’ ಎಂದು ಅಭ್ಯಾಸ ಮಾಡುತ್ತಾನೆ. ಇಡೀ ‘ಉಸಿರು ಕಾಯವನ್ನು ಅನುಭವಿಸಿದವನಾಗಿ ಉಸಿರನ್ನು ಹೊರಕ್ಕೆ ಬಿಡುತ್ತೇನೆ’ ಎಂದು ಅಭ್ಯಾಸ ಮಾಡುತ್ತಾನೆ, ‘ಉಸಿರು ಕಾಯದ ಚಟುವಟಿಕೆಯನ್ನು ಶಮನಗೊಳಿಸಿ ಉಸಿರನ್ನು ಒಳಕ್ಕೆ ತೆಗೆದುಕೊಳ್ಳುತ್ತೇನೆ’ ಎಂದು ಅಭ್ಯಾಸ ಮಾಡುತ್ತಾನೆ. ‘ಉಸಿರು ಕಾಯದ ಚಟುವಟಿಕೆಯನ್ನು ಶಮನಗೊಳಿಸಿ ಉಸಿರನ್ನು ಹೊರಕ್ಕೆ ಬಿಡುತ್ತೇನೆ’ ಎಂದು ಅಭ್ಯಾಸ ಮಾಡುತ್ತಾನೆ.

“ಹೀಗೆ ಆತನು ತನ್ನ ಕಾಯದಲ್ಲಿ ಕಾಯಾನುಪಸ್ಸಿಯಾಗಿ ತಂಗುತ್ತಾನೆ ಅಥವಾ ಪರರ ಕಾಯದಲ್ಲಿ ಕಾಯಾನುಪಸ್ಸಿಯಾಗಿ ತಂಗುತ್ತಾನೆ ಅಥವಾ ತನ್ನ ಮತ್ತು ಪರರ ಕಾಯದಲ್ಲಿ ಕಾಯಾನುಪಸ್ಸಿಯಾಗಿ ತಂಗುತ್ತಾನೆ143 ಅಥವಾ ಕಾಯದಲ್ಲಿ ಉತ್ಪತ್ತಿಯ ಧರ್ಮಗಳನ್ನು (ವಿಪಸ್ಸನಾ ಮೂಲಕವಾಗಿ ಎಂದರೆ ಲೋಕೋತ್ತರ ಜ್ಞಾನಕ್ಕಾಗಿ ಇರುವ ಪ್ರಜ್ಞಾಪೂರ್ವಕವಾದ ಜ್ಞಾನದ ರೀತಿಯಲ್ಲಿ) ಧ್ಯಾನಿಸುವವನಾಗಿ ತಂಗುತ್ತಾನೆ ಅಥವಾ ಕಾಯದಲ್ಲಿರುವ ನಾಶಧರ್ಮವನ್ನು (ವಿಪಸ್ಸನಾ ಮೂಲಕವಾಗಿ) ಧ್ಯಾನಿಸುವವನಾಗಿ ತಂಗುತ್ತಾನೆ, ಅಥವಾ ಕಾಯದಲ್ಲಿರುವ ನಾಶಧರ್ಮವನ್ನು (ವಿಪಸ್ಸನಾ ಮೂಲಕವಾಗಿ) ಧ್ಯಾನಿಸುವವನಾಗಿ ತಂಗುತ್ತಾನೆ, ಅಥವಾ ಕಾಯದಲ್ಲಿರುವ ಉತ್ಪತ್ತಿ ಮತ್ತು ನಾಶ ಧರ್ಮವನ್ನು (ವಿಪಸ್ಸನಾ ಮೂಲಕವಾಗಿ) ಧ್ಯಾನಿಸುವವನಾಗಿ ತಂಗುತ್ತಾನೆ.144 ಆಮೇಲೆ ‘ಕಾಯವಷ್ಟೇ ಇದೆ’ ಎಂಬ ಎಚ್ಚರದ ಬರಿಯ ವಿಪಸ್ಸನಾ ಜ್ಞಾನಕ್ಕಾಗಿ ಮಾತ್ರವೇ ದೃಢವಾದ ಎಚ್ಚರಕ್ಕಾಗಿ ಮಾತ್ರವೇ145 ಎಂದು ನೆಲೆಯೂರುತ್ತದೆ. ಮತ್ತು ಆತನು ಯಾವುದೇ ಹಂಗಿಲ್ಲದೇ ತಂಗುತ್ತಾನೆ, ಲೋಕದಲ್ಲಿ ಯಾವುದಕ್ಕೂ ಅಂಟಿಕೊಳ್ಳುವುದಿಲ್ಲ. ಭಿಕ್ಷುಗಳೇ, ಈ ರೀತಿಯಾಗಿ ಭಿಕ್ಷುವು ಕಾಯದಲ್ಲಿ ಕಾಯಾನುಪಸ್ಸಿಯಾಗಿ ತಂಗಿರುತ್ತಾನೆ.

(2) ಕಾಯಸ್ಥಿತಿಗಳಲ್ಲಿ ಎಚ್ಚರಿಕೆ

4. “ಅಲ್ಲದೆ ಮತ್ತೆ, ಭಿಕ್ಷುಗಳೇ, ಭಿಕ್ಷುವು ನಡೆಯುತ್ತಿರವಾಗ ‘ನಡೆಯುತ್ತಿದ್ದೇನೆ’ ಎಂದು ಅರಿಯುತ್ತಾನೆ ಅಥವಾ ನಿಂತಿರುವಾಗ ‘ನಿಂತಿದ್ದೇನೆ’ ಎಂದು ಅರಿಯುತ್ತಾನೆ, ಅಥವಾ ಕುಳಿತಿರುವಾಗ ‘ಕುಳಿತಿದ್ದೇನೆ’ ಎಂದು ಅರಿಯುತ್ತಾನೆ, ಅಥವಾ ಮಲಗಿರುವಾಗ ‘ಮಲಗಿದ್ದೇನೆ’ ಎಂದು ಅರಿಯುತ್ತಾನೆ, ಅಥವಾ ಆತನ ಕಾಯವು ಯಾವ ಯಾವ ಸ್ಥಿತಿಯನ್ನು ತಳೆದಿರುತ್ತದೋ ಆಯಾ ಸ್ಥಿತಿಯಲ್ಲಿರುವುದನ್ನು ಅರಿಯುತ್ತಾನೆ.146 ಹೀಗೆ ಆತನು ತನ್ನ ಕಾಯದಲ್ಲಿ ಕಾಯಾನುಪಸ್ಸಿಯಾಗಿ ತಂಗಿರುತ್ತಾನೆ, ಅಥವಾ ಪರರ ಕಾಯದಲ್ಲಿ ಕಾಯಾನುಪಸ್ಸಿಯಾಗಿ ತಂಗುತ್ತಾನೆ; ಅಥವಾ ಕಾಯದಲ್ಲಿ ಉತ್ಪತ್ತಿಯ ಧರ್ಮಗಳನ್ನು ವಿಪಸ್ಸನಾ ಮೂಲಕವಾಗಿ ಧ್ಯಾನಿಸುವವನಾಗಿ ತಂಗುತ್ತಾನೆ, ಅಥವಾ ಕಾಯದಲ್ಲಿರುವ ನಾಶಧರ್ಮವನ್ನು (ವಿಪಸ್ಸನಾ ಮೂಲಕವಾಗಿ) ಧ್ಯಾನಿಸುವವನಾಗಿ ತಂಗುತ್ತಾನೆ, ಅಥವಾ ಕಾಯದಲ್ಲಿರುವ ಉತ್ಪತ್ತಿ ಮತ್ತು ನಾಶ ಧರ್ಮವನ್ನು (ವಿಪಸ್ಸನಾ ಮೂಲಕವಾಗಿ) ಧ್ಯಾನಿಸುವವನಾಗಿ ತಂಗುತ್ತಾನೆ. ಆಮೇಲೆ ‘ಕಾಯವಷ್ಟೇ ಇದೆ’ ಎಂಬ ಎಚ್ಚರ ಬರಿಯ ವಿಪಸ್ಸನಾ ಜ್ಞಾನಕ್ಕಾಗಿ ಮಾತ್ರವೇ, ದೃಢವಾದ ಎಚ್ಚರಕ್ಕಾಗಿ ಮಾತ್ರವೇ ಎಂದು ನೆಲೆಯೂರುತ್ತದೆ. ಮತ್ತು ಆತನು ಯಾವುದೇ ಹಂಗಿಲ್ಲದೆ ತಂಗುತ್ತಾನೆ, ಲೋಕದಲ್ಲಿ ಯಾವುದಕ್ಕೂ ಅಂಟಿಕೊಳ್ಳುವುದಿಲ್ಲ. ಭಿಕ್ಷುಗಳೇ, ಈ ರೀತಿಯಾಗಿ ಭಿಕ್ಷುವು ಕಾಯದಲ್ಲಿ ಕಾಯಾನುಪಸ್ಸಿಯಾಗಿ ತಂಗುತ್ತಾನೆ.

ಹೀಗೆ ಕಾಯಸ್ಥಿತಿ ಹೇಳಿದೆ.

(3) ಪ್ರಜ್ಞಾಪೂರ್ವಕವಾಗಿ ಕಾಯವನ್ನು ಅರಿಯುವುದು

5. “ಅಲ್ಲದೆ ಮತ್ತೆ ಭಿಕ್ಷುಗಳೇ, ಭಿಕ್ಷುವು ಹೋಗುವುದರಲ್ಲಿ ಬರುವುದರಲ್ಲಿ (ಪ್ರಜ್ಞಾಪೂರ್ವಕವಾಗಿ) ಅರಿವನ್ನು ಅಭ್ಯಾಸ ಮಾಡುವವನಾಗುತ್ತಾನೆ147, ಮುಂದೆ ನೋಡುವುದರಲ್ಲಿ ಬೇರೆಡೆ ನೋಡುವುದರಲ್ಲಿ (ಪ್ರಜ್ಞಾಪೂರ್ವಕವಾಗಿ) ಅರಿವನ್ನು ಅಭ್ಯಾಸ ಮಾಡುವವನಾಗುತ್ತಾನೆ (ಅಂಗಾಂಗಗಳನ್ನು) ಚಾಚುವುದರಲ್ಲಿ, ಬಾಗಿಸುವುದರಲ್ಲಿ (ಪ್ರಜ್ಞಾಪೂರ್ವಕ ವಾಗಿ) ಅರಿವನ್ನು ಅಭ್ಯಾಸ ಮಾಡುವವನಾಗುತ್ತಾನೆ, ಶಾಟಿ (=ಮೇಲು ವಸ್ತ್ರ), ಭಿಕ್ಷಾಪಾತ್ರೆ, ಕಾಷಾಯ ವಸ್ತ್ರಗಳನ್ನು ಧರಿಸುವುದರಲ್ಲಿ (ಪ್ರಜ್ಞಾಪೂರ್ವಕವಾಗಿ) ಅರಿವನ್ನು ಅಭ್ಯಾಸ ಮಾಡುವವನಾಗುತ್ತಾನೆ; ತಿನ್ನುವುದರಲ್ಲಿ, ಕುಡಿಯುವದರಲ್ಲಿ, ಅಗಿಯುವುದರಲ್ಲಿ, ಚಪ್ಪರಿಸುವುದರಲ್ಲಿ (ಪ್ರಜ್ಞಾಪೂರ್ವಕವಾಗಿ) ಅರಿವನ್ನು ಅಭ್ಯಾಸ ಮಾಡುವವನಾಗುತ್ತಾನೆ; ಮಲ ಮೂತ್ರ ವಿಸರ್ಜನೆಯಲ್ಲಿ, ನಡೆಯುವುದರಲ್ಲಿ, ನಿಲ್ಲುವುದರಲ್ಲಿ, ಕುಳಿತಿರುವುದರಲ್ಲಿ, ನಿದ್ದೆ ಮಾಡುವುದರಲ್ಲಿ, ಎದ್ದೇಳುವುದರಲ್ಲಿ, ಮಾತನಾಡುವುದರಲ್ಲಿ, ಸುಮ್ಮನಿರುವುದರಲ್ಲಿ - ಹೀಗೆ ಆತನು ಕಾಯದಲ್ಲಿ ಕಾಯಾನುಪಸ್ಸಿಯಾಗಿ ತಂಗುತ್ತಾನೆ... ಈ ರೀತಿಯಲ್ಲಿ ಭಿಕ್ಷುಗಳೇ, ಭಿಕ್ಷುವು ಕಾಯದಲ್ಲಿ ಕಾಯಾನುಪಸ್ಸಿಯಾಗಿ ತಂಗುತ್ತಾನೆ.

ಹೀಗೆ ಅರಿವನ್ನು ಹೇಳಿದೆ.

(4) ಜಿಗುಪ್ಸೆಯ ಮನನ

6. “ಅಲ್ಲದೇ ಮತ್ತೆ ಭಿಕ್ಷುಗಳೇ, ಭಿಕ್ಷುವು ಇದೇ ಕಾಯವನ್ನು ಅಡಿಯಿಂದ ಮೇಲೆ, ಮುಡಿಯಿಂದ ಕೆಳಗೆ, ಚರ್ಮದಿಂದ ಸುತ್ತುವರೆದ ನಾನಾ ಪ್ರಕಾರದ ಹೇಸಿಗೆಯಿಂದ ತುಂಬಿರುವುದನ್ನು ಅವಲೋಕಿಸುತ್ತಾನೆ- ‘ಈ ಕಾಯದಲ್ಲಿ ತಲೆಗೂದಲು, ಮೈಗೂದಲು, ಉಗುರುಗಳು, ಹಲ್ಲುಗಳು, ತೊಗಲು, ಮಾಂಸ, ಸ್ನಾಯುಗಳು, ಮೂಳೆ, ನೆಣ, ಮೂತ್ರಪಿಂಡ, ಗುಂಡಿಗೆ (= ಹೃದಯ), ಯಕೃತ್, ಶ್ವಾಸದ ಪೊರೆ, ಪುಪ್ಫಸಗಳು, ಕರುಳು, ವಪೆ, ಉದರ, ಮಲ (ಇಲ್ಲಿನವರೆಗಿನವು ಘನ ಪದಾರ್ಥಗಳು, ಮುಂದಿನವು ದ್ರವ ಪದಾರ್ಥಗಳು) ಪಿತ್ತ, ಶ್ಲೇಷ್ಮ, ಕೀವು, ಬೆವರು, ಕೊಬ್ಬು, ಕಣ್ಣೀರು, ಜಿಡ್ಡಾದ ಕೊಬ್ಬು, ಎಂಜಲು, ಸಿಂಬಳ, ಕೀಲುದ್ರವ, ಮೂತ್ರ ಇವುಗಳಿವೆ’ ಎಂದು.

“ಅದು ಹೇಗೆಂದರೆ, ಭಿಕ್ಷುಗಳೇ, ಎರಡು ಬಾಯಿ ಇರುವ ಚೀಲದಲ್ಲಿ ನಾನಾ ವಿಧವಾದ ಧಾನ್ಯಗಳನ್ನು ತುಂಬಿದ್ದರೆ- ಹೇಗೆಂದರೆ ಶಾಲಿಯನ್ನು, ಭತ್ತವನ್ನು, ಹೆಸರುಕಾಳನ್ನು, ಉದ್ದಿನಕಾಳನ್ನು, ಎಳ್ಳನ್ನು, ಅಕ್ಕಿಯನ್ನು, ಅದನ್ನು ಈ ರೀತಿಯಾಗಿ ಒಬ್ಬ ಮನುಷ್ಯ- ‘ಇದು ಶಾಲಿ, ಇದು ಭತ್ತ, ಇದು ಹೆಸರುಕಾಳು, ಇದು ಉದ್ದಿನಕಾಳು, ಇದು ಎಳ್ಳು, ಇದು ಅಕ್ಕಿ’ ಎಂದು ನೋಡಿಯಾನು. ಇದೇ ಪ್ರಕಾರ ಭಿಕ್ಷುಗಳೇ, ಭಿಕ್ಷುವು ಇದೇ ಕಾಯವು, ಅಡಿಯಿಂದ ಮೇಲೆ, ಮುಡಿಯಿಂದ ಕೆಳಗೆ, ಚರ್ಮದಿಂದ ಸುತ್ತುವರೆದು, ನಾನಾ ಪ್ರಕಾರದ ಹೇಸಿಗೆಯಿಂದ ತುಂಬಿರುವುದನ್ನು ಅವಲೋಕಿಸುತ್ತಾನೆ. ‘ಈ ಕಾಯದಲ್ಲಿ- ತಲೆಗೂದಲು, ಮೈಗೂದಲು... ಮೂತ್ರ ಇವುಗಳಿವೆ ಎಂದು. ಹೀಗೆ ಆತನು ಕಾಯದಲ್ಲಿ ಕಾಯಾನುಪಸ್ಸಿಯಾಗಿ ತಂಗುತ್ತಾನೆ....

ಹೀಗೆ ಜಿಗುಪ್ಸೆಯನ್ನು ಹೇಳಿದೆ.

(5) ಧಾತುಗಳ ಮನನ

7. “ಅಲ್ಲದೇ ಮತ್ತೆ ಭಿಕ್ಷುಗಳೇ, ಭಿಕ್ಷುವು ಇದೇ ಕಾಯವನ್ನು ಯಾವ ಸ್ಥಿತಿಯಲ್ಲಿ, ಅವಸ್ಥೆಯಲ್ಲಿದೆಯೋ (ಅದನ್ನು) ಧಾತು ಮೂಲಕ ಅವಲೋಕಿಸುತ್ತಾನೆ.- ‘ಈ ಕಾಯಕದಲ್ಲಿ ಇವುಗಳಿವೆ; ಪೃಥ್ವಿಧಾತು, ಆಪೋಧಾತು, ತೇಜೋಧಾತು, ವಾಯುಧಾತು149 ಎಂದು.

“ಅದು ಹೇಗೆಂದರೆ ಭಿಕ್ಷುಗಳೇ, ಹಸುವನ್ನು ಕೊಲ್ಲುವವನು ಅಥವಾ ಹಸುವನ್ನು ಕೊಲ್ಲುವವನ ಶಿಷ್ಯ, ಹಸುವನ್ನು ಕೊಂದು ದೊಡ್ಡ ಚೌಕದಲ್ಲಿ ಬಿಡಿಬಿಡಿಯಾಗಿ ಬೇರ್ಪಡಿಸಿ ಕುಳಿತಿರುತ್ತಾನೆ; ಇದೇ ರೀತಿಯಲ್ಲಿ ಭಿಕ್ಷುಗಳೇ, ಭಿಕ್ಷುವು ಇದೇ ಕಾಯವು ಯಾವ ಸ್ಥಿತಿಯನ್ನು ಮತ್ತು ಅವಸ್ಥೆಯನ್ನು ತಳೆದಿರುತ್ತದೋ ಅದನ್ನು ಅವಲೋಕಿಸುತ್ತಾನೆ. ಇದೇ ಕಾಯದಲ್ಲಿ ಇವುಗಳಿವೆ- ‘ಪೃಥ್ವೀಧಾತು, ಆಪೋಧಾತು, ತೇಜೋಧಾತು, ವಾಯುಧಾತು’ ಎಂದು. ಹೀಗೆ ಆತನು ತನ್ನ ಕಾಯದಲ್ಲಿ ಕಾಯಾನುಪಸ್ಸಿಯಾಗಿ ತಂಗುತ್ತಾನೆ...

ಹೀಗೆ ಧಾತುಗಳ ಮನನ ಹೇಳಿದೆ.

(6) ಅಶುಭಗಳ ಬಗ್ಗೆ ಎಚ್ಚರ

8. “ಅಲ್ಲದೆ ಮತ್ತೆ ಭಿಕ್ಷುಗಳೇ, ಭಿಕ್ಷುವು ಯಾವ ರೀತಿ ಸುಡುಗಾಡಿನಲ್ಲಿ ಬಿಸಾಡಿದ ಒಂದು ದಿವಸದ ಅಥವಾ ಎರಡು ದಿವಸಗಳ ಅಥವಾ ಮೂರು ದಿವಸಗಳ ಹಿಂದೆ ಸತ್ತು ಬಿದ್ದಿರುವ ಊದಿಕೊಂಡಿರುವ ನೀಲಿಗಟ್ಟಿರುವ ಕೊಳೆತಿರುವ ಶರೀರವನ್ನು ನೋಡುತ್ತಾನೋ, ಅದೇರೀತಿಯಲ್ಲಿ ಅವನು (ತನ್ನ) ಕಾಯದ ಜೊತೆಗೆ ಅದನ್ನು ಹೀಗೆ ಹೋಲಿಸಿ ನೋಡುತ್ತಾನೆ- ‘ಈ ಕಾಯವು ಕೂಡ ಇದೇ ಸ್ವಭಾವದ್ದಾಗಿದೆ, ಅದರ ಹಾಗೆಯೇ ಆಗುತ್ತದೆ. ಹೀಗಾಗುವುದನ್ನು (ಮತ್ತು ಹೀಗಿರುವುದನ್ನು) ಅದು ಮೀರಲಾಗುವುದಿಲ್ಲ’150 ಎಂದು. ಹೀಗೆ ಆತನು ತನ್ನ ಕಾಯದಲ್ಲಿ ಕಾಯಾನುಪಸ್ಸಿಯಾಗಿ ತಂಗುತ್ತಾನೆ...

“ಅಲ್ಲದೇ ಮತ್ತೆ ಭಿಕ್ಷುಗಳೇ, ಭಿಕ್ಷುವು ಯಾವರೀತಿ ಸುಡುಗಾಡಿನಲ್ಲಿ ಬಿಸಾಡಿದ, ಕಾಗೆಗಳು ಕಿತ್ತು ತಿನ್ನುತ್ತಿರುವ, ಅಥವಾ ಹದ್ದುಗಳು ಕಿತ್ತು ತಿನ್ನುತ್ತಿರುವ, ಅಥವಾ ಗಿಡುಗಗಳು ಕಿತ್ತು ತಿನ್ನುತ್ತಿರುವ, ಅಥವಾ ನೀರು ಹಕ್ಕಿಗಳು ಕಿತ್ತು ತಿನ್ನುತ್ತಿರುವ, ಅಥವಾ ನಾಯಿಗಳು ಕಿತ್ತು ತಿನ್ನುತ್ತಿರುವ, ಅಥವಾ ಹುಲಿಗಳು ಕಿತ್ತು ತಿನ್ನುತ್ತಿರುವ, ಅಥವಾ ಚಿರತೆಗಳು ಕಿತ್ತು ತಿನ್ನುತ್ತಿರುವ, ಅಥವಾ ನರಿಗಳು ಕಿತ್ತು ತಿನ್ನುತ್ತಿರುವ, ಅಥವಾ ಎಲ್ಲಾ ರೀತಿಯ ಹುಳ-ಹುಪ್ಪಟೆಗಳು ಕಿತ್ತು ತಿನ್ನುತ್ತಿರುವ, ಶರೀರವನ್ನು ನೋಡುತ್ತಾನೋ, ಅದೇರೀತಿಯಲ್ಲಿ ಅವನು ತನ್ನ ಕಾಯದ ಜೊತೆಯಲ್ಲಿ ಅದನ್ನು ಹೀಗೆ ಹೋಲಿಸಿ ನೋಡುತ್ತಾನೆ- ‘ಈ ಕಾಯವೂ ಕೂಡ ಇದೇ ಸ್ವಭಾವದ್ದಾಗಿದೆ, ಅದರ ಹಾಗೆಯೇ ಆಗುತ್ತದೆ, ಹೀಗಾಗುವುದನ್ನು (ಮತ್ತು ಹೀಗಿರುವುದನ್ನು) ಅದು ಮೀರಲಾಗುವುದಿಲ್ಲ’ ಎಂದು. ಹೀಗೆ ಆತನು ಕಾಯದಲ್ಲಿ ಕಾಯಾನುಪಸ್ಸಿಯಾಗಿ ತಂಗುತ್ತಾನೆ...

“ಅಲ್ಲದೆ ಮತ್ತೆ ಭಿಕ್ಷುಗಳೇ, ಭಿಕ್ಷುವು ಯಾವರೀತಿ ಸುಡುಗಾಡಿನಲ್ಲಿ ಬಿಸಾಡಿದ ಅಸ್ಥಿಪಂಜರವಾಗಿರುವ ರಕ್ತಮಾಂಸ ಸಹಿತವಾಗಿರುವ ಸ್ನಾಯುಗಳೊಟ್ಟಿಗೆ ಅಂಟಿಕೊಂಡಿರುವ ಶರೀರವನ್ನು ನೋಡುತ್ತಾನೊ, ಅಸ್ಥಿಪಂಜರವಾಗಿರುವ ಮಾಂಸರಹಿತವಾದ ರಕ್ತದ ಕಲೆಗಳಿರುವ, ಸ್ನಾಯುಗಳಿಂದ ಒಟ್ಟಿಗೆ ಅಂಟಿಕೊಂಡಿರುವ ಅಥವಾ ಎಲ್ಲಾ ದಿಕ್ಕುಗಳಿಗೂ ಬೇರೆ ಬೇರೆಯಾಗಿ ಚೆಲ್ಲಿಹೋಗಿರುವ ಮೂಳೆಗಳನ್ನು - ಇಗೋ ಇಲ್ಲಿ ಕೈಗಳ ಮೂಳೆ, ಅಗೋ ಅಲ್ಲಿ ಪಾದದ ಮೂಳೆ, ಅಲ್ಲಿ ಮೊಣಕಾಲಿನ ಮೂಳೆ, ಅಲ್ಲಿ ಕಾಲಿನ ಮೂಳೆ, ಅಲ್ಲಿ ತೊಡೆಯ ಮೂಳೆ, ಅಲ್ಲಿ ಸೊಂಟದ ಮೂಳೆ, ಪಕ್ಕೆಲಬು, ಬೆನ್ನುಮೂಳೆ, ಹೆಗಲಿನ ಮೂಳೆ, ಕತ್ತಿನ ಮೂಳೆ, ದವಡೆಗಳ ಮೂಳೆ, ಹಲ್ಲಿನ ಮೂಳೆ, ಬುರುಡೆಯ ಮೂಳೆ ಎಂದು ನೋಡುತ್ತಾನೋ, ಅದೇರೀತಿಯಲ್ಲಿ (ಅದನ್ನು) ತನ್ನ ಕಾಯದ ಜೊತೆಯಲ್ಲಿ ಹೀಗೆ ಹೋಲಿಸಿ ನೋಡುತ್ತಾನೆ- ‘ಈ ಕಾಯವು ಕೂಡ ಇದೇ ಸ್ವಭಾವವನ್ನು ಹೊಂದಿದೆ, ಅದರ ಹಾಗೆಯೇ ಆಗುತ್ತದೆ, ಹೀಗಾಗುವುದನ್ನೂ (ಮತ್ತು ಹೀಗಿರುವುದನ್ನೂ) ಅದು ಮೀರಲಾಗುವುದಿಲ್ಲ’ ಎಂದು. ಹೀಗೆ ಅತನು ಕಾಯದಲ್ಲಿ ಕಾಯಾನುಪಸ್ಸಿಯಾಗಿ ತಂಗುತ್ತಾನೆ.

“ಅಲ್ಲದೇ ಮತ್ತೆ ಭಿಕ್ಷುಗಳೇ, ಭಿಕ್ಷುವು ಯಾವರೀತಿ ಸುಡುಗಾಡಿನಲ್ಲಿ ಬಿಸಾಡಿದ, ಶಂಖದ ಹಾಗೆ ಬಿಳಿಚಿದ ಮೂಳೆಗಳಾಗಿರುವ... ವರ್ಷಕ್ಕಿಂತ ಹಳೆಯದಾದ, ಗುಡ್ಡೆ ಗುಡ್ಡೆಯಾಗಿ ಮೂಳೆಗಳಾಗಿರುವ... ಕೊಳೆತು ಪುಡಿಪುಡಿಯಾಗಿ ಬಿದ್ದಿರುವ ಮೂಳೆಗಳಾಗಿರುವ ಶರೀರವನ್ನು ನೋಡುತ್ತಾನೆ; ಅದೇರೀತಿಯಲ್ಲಿ ಅದನ್ನು ತನ್ನ ಕಾಯದ ಜೊತೆಯಲ್ಲಿ ಹೀಗೆ ಹೋಲಿಸಿ ನೋಡುತ್ತಾನೆ - ‘ಈ ಕಾಯವೂ ಕೂಡ ಇದೇ ಸ್ವಭಾವವನ್ನು ಹೊಂದಿದೆ151 ಅದರ ಹಾಗೆಯೇ ಆಗುತ್ತದೆ, ಹೀಗಾಗುವುದನ್ನು (ಮತ್ತು ಹೀಗಿರುವುದನ್ನೂ) ಅದು ಮೀರಲಾಗುವುದಿಲ್ಲ’ ಎಂದು. ಹೀಗೆ ಆತನು ಕಾಯದಲ್ಲಿ ಕಾಯಾನುಪಸ್ಸಿಯಾಗಿ ತಂಗುತ್ತಾನೆ ಅಥವಾ ಪರರ ಕಾಯದಲ್ಲಿ ಕಾಯಾನುಪಸ್ಸಿಯಾಗಿ ತಂಗುತ್ತಾನೆ; ಅಥವಾ ಕಾಯದಲ್ಲಿ ಉತ್ಪತ್ತಿಯ ಧರ್ಮಗಳನ್ನು (ವಿಪಸ್ಸನಾ ಮೂಲಕವಾಗಿ) ಧ್ಯಾನಿಸುವವನಾಗಿ ತಂಗುತ್ತಾನೆ ಅಥವಾ ಕಾಯದಲ್ಲಿರುವ ನಾಶಧರ್ಮವನ್ನು (ವಿಪಸ್ಸನಾ ಮೂಲಕವಾಗಿ) ಧ್ಯಾನಿಸುವವನಾಗಿ ತಂಗುತ್ತಾನೆ. ಆಮೇಲೆ ‘ಕಾಯವಷ್ಟೇ ಇದೆ’ ಎಂಬ ಎಚ್ಚರ ಬರಿಯ ವಿಪಸ್ಸನಾ ಜ್ಞಾನಕ್ಕಾಗಿ ಮಾತ್ರವೇ, ದೃಢವಾದ ಎಚ್ಚರಕ್ಕಾಗಿ ಮಾತ್ರವೇ ಎಂಬುದು ನೆಲೆಯೂರುತ್ತದೆ. ಹೀಗೆ ಆತನು ಯಾವುದೇ ಹಂಗಿಲ್ಲದೇ ತಂಗುತ್ತಾನೆ; ಲೋಕದಲ್ಲಿ ಯಾವುದಕ್ಕೂ ಅಂಟಿಕೊಳ್ಳುವುದಿಲ್ಲ. ಭಿಕ್ಷುಗಳೇ, ಈ ರೀತಿಯಾಗಿ ಭಿಕ್ಷುವು ಕಾಯದಲ್ಲಿ ಕಾಯಾನುಪಸ್ಸಿಯಾಗಿ ತಂಗುತ್ತಾನೆ.

ಜೋಗೆ ಅಶುಭಗಳನ್ನು ಹೇಳಿದೆ.

ಕಾಯಾನುಪಸ್ಸನವನ್ನು ತಿಳಿದೆ.

3. ವೇದನಾನುಪಸ್ಸನ

9. “ಭಿಕ್ಷುಗಳೇ, ಮತ್ತೆ ಹೇಗೆ, ಭಿಕ್ಷುವು ವೇದನಾಗಳಲ್ಲಿ ವೇದನಾನುಪಸ್ಸಿಯಾಗಿ152 ತಂಗುತ್ತಾನೆ? ಇಲ್ಲಿ ಭಿಕ್ಷುಗಳೇ, ಭಿಕ್ಷುವು ಸುಖದ ವೇದನೆಯನ್ನು ಅನುಭವಿಸುವಾಗ ‘ಸುಖ ವೇದನೆಯನ್ನು ಅನುಭವಿಸುತ್ತಿದ್ದೇನೆ’ ಎಂದು ಅರಿಯುತ್ತಾನೆ, ಅಥವಾ ದುಃಖದ ವೇದನೆಯನ್ನು ಅನುಭವಿಸುವಾಗ ‘ದುಃಖದ ವೇದನೆಯನ್ನು ಅನುಭವಿಸುತ್ತಿದ್ದೇನೆ’ ಎಂದು ಅರಿಯುತ್ತಾನೆ, ದುಃಖವೂ ಅಲ್ಲದ ಸುಖವೂ ಅಲ್ಲದ ವೇದನೆಯನ್ನು ಅನುಭವಿಸುವಾಗ ‘ದುಃಖವಲ್ಲದ ಸುಖವಲ್ಲದ ವೇದನೆಯನ್ನು ಅನುಭವಿಸುತ್ತಿದ್ದೇನೆ’ ಎಂದು ಅರಿಯುತ್ತಾನೆ; ಆಮಿಷ (ಪ್ರಲೋಭನೆ) ದಿಂದ ಕೂಡಿದ ಸುಖದ ವೇದನೆಯನ್ನು ಅನುಭವಿಸುವಾಗ ‘ಆಮಿಷದಿಂದ ಕೂಡಿದ ಸುಖದ ವೇದನೆಯನ್ನು ಅನುಭವಿಸುತ್ತಿದ್ದೇನೆ’ ಎಂದು ಅರಿಯುತ್ತಾನೆ; ಆಮಿಷವಲ್ಲದ (ಅಲೌಕಿಕ-ಆಧ್ಯಾತ್ಮಿಕ) ಸುಖದ ವೇದನೆಯನ್ನು ಅನುಭವಿಸುವಾಗ ‘ಆಮಿಷವಿಲ್ಲದ ಸುಖ ವೇದನೆಯನ್ನು ಅನುಭವಿಸುತ್ತಿದ್ದೇನೆ’ ಎಂದು ಅರಿಯುತ್ತಾನೆ, ಆಮಿಷದಿಂದ ಕೂಡಿದ ದುಃಖದ ವೇದನೆಯನ್ನು ಅನುಭವಿಸುವಾಗ ‘ಆಮಿಷದಿಂದ ಕೂಡಿದ ದುಃಖ ವೇದನೆಯನ್ನು ಅನುಭವಿಸುತ್ತಿದ್ದೇನೆ’ ಎಂದು ಅರಿಯುತ್ತಾನೆ, ಆಮಿಷವಿಲ್ಲದ ದುಃಖ ವೇದನೆಯನ್ನು ಅನುಭವಿಸುವಾಗ ‘ಆಮಿಷವಿಲ್ಲದ ದುಃಖ ವೇದನೆಯನ್ನು ಅನುಭವಿಸುತ್ತಿದ್ದೇನೆ’ ಎಂದು ಅರಿಯುತ್ತಾನೆ; ಆಮಿಷದಿಂದ ಕೂಡಿದ ದುಃಖವೂ ಅಲ್ಲದ ಸುಖವೂ ಅಲ್ಲದ ವೇದನೆಯನ್ನು ಅನುಭವಿಸುವಾಗ ‘ಆಮಿಷದಿಂದ ಕೂಡಿದ ದುಃಖವಲ್ಲದ ಸುಖವಲ್ಲದ ವೇದನೆಯನ್ನು ಅನುಭವಿಸುತ್ತಿದ್ದೇನೆ’ ಎಂದು ಅರಿಯುತ್ತಾನೆ. ಆಮಿಷವಿಲ್ಲದ, ದುಃಖವೂ ಅಲ್ಲದ, ಸುಖವೂ ಅಲ್ಲದ ವೇದನೆಯನ್ನು ಅನುಭವಿಸುವಾಗ ‘ಆಮಿಷವಿಲ್ಲದ ಸುಖವಲ್ಲದ ದುಃಖವಲ್ಲದ ವೇದನೆಯನ್ನು ಅನುಭವಿಸುತ್ತಿದ್ದೇನೆ’ ಎಂದು ಅರಿಯುತ್ತಾನೆ.

ಹೀಗೆ ಆತನು ವೇದನೆಗಳಲ್ಲಿ ವೇದನಾನುಪಸ್ಸಿಯಾಗಿ ತಂಗುತ್ತಾನೆ, ಆಥವಾ ಪರರ ವೇದನೆಗಳಲ್ಲಿ ವೇದನಾನುಪಸ್ಸಿಯಾಗಿ ತಂಗುತ್ತಾನೆ, ಅಥವಾ ತನ್ನ ಮತ್ತು ಪರರ ವೇದನೆಗಳಲ್ಲಿ ವೇದನಾನುಪಸ್ಸಿಯಾಗಿ ತಂಗುತ್ತಾನೆ; ಅಥವಾ ವೇದನೆಗಳಲ್ಲಿ ಉತ್ಪತ್ತಿಯ ಧರ್ಮಗಳನ್ನು (ವಿಪಸ್ಸನಾ ಮೂಲಕವಾಗಿ) ಧ್ಯಾನಿಸುವವನಾಗಿ ತಂಗುತ್ತಾನೆ ಅಥವಾ ವೇದನಾಗಳಲ್ಲಿರುವ ನಾಶಧರ್ಮವನ್ನು (ವಿಪಸ್ಸನಾ ಮೂಲಕವಾಗಿ) ಧ್ಯಾನಿಸುವವನಾಗಿ ತಂಗುತ್ತಾನೆ, ಅಥವಾ ವೇದನಾಗಳಲ್ಲಿ ಉತ್ಪತ್ತಿ ಮತ್ತು ನಾಶ ಧರ್ಮಗಳನ್ನು (ವಿಪಸ್ಸನಾ ಮೂಲಕವಾಗಿ) ಧ್ಯಾನಿಸುವವನಾಗಿ ತಂಗುತ್ತಾನೆ.153 ಆಮೇಲೆ ‘ವೇದನೆಯಷ್ಟೇ ಇದೆ’ ಎಂಬ ಎಚ್ಚರ ಬರಿಯ ವಿಪಸ್ಸನಾ ಜ್ಞಾನಕ್ಕಾಗಿ ಮಾತ್ರವೇ, ದೃಢವಾದ ಎಚ್ಚರಕ್ಕಾಗಿ ಮಾತ್ರವೇ ಎಂದು ನೆಲೆಯೂರುತ್ತದೆ ಮತ್ತು ಆತನು ಯಾವುದೇ ಹಂಗಿಲ್ಲದೆ ತಂಗುತ್ತಾನೆ, ಲೋಕದಲ್ಲಿ ಯಾವುದಕ್ಕೂ ಅಂಟಿಕೊಳ್ಳುವುದಿಲ್ಲ. ಭಿಕ್ಷುಗಳೇ, ಈ ರೀತಿಯಾಗಿ ಭಿಕ್ಷುವು ವೇದನಾಗಳಲ್ಲಿ ವೇದನಾನುಪಸ್ಸಿಯಾಗಿ ತಂಗುತ್ತಾನೆ.

ಹೀಗೆ ವೇದನಾನುಪಸ್ಸನ ತಿಳಿದೆ.

4. ಚಿತ್ತಾನುಪಸ್ಸನಾ

10. “ಭಿಕ್ಷುಗಳೇ, ಮತ್ತೆ ಹೇಗೆ ಭಿಕ್ಷುವು, ಚಿತ್ತದಲ್ಲಿ (ಮನಸ್ಸಿನಲ್ಲಿ) ಚಿತ್ತಾನುಪಸ್ಸಿಯಾಗಿ154 ತಂಗುತ್ತಾನೆ? ಇಲ್ಲಿ ಭಿಕ್ಷುಗಳೇ, ಭಿಕ್ಷುವು ರಾಗವಿರುವ ಚಿತ್ತವನ್ನು ‘ರಾಗವಿರುವ ಚಿತ್ತ’ ಎಂದು ಅರಿಯುತ್ತಾನೆ, ರಾಗವಿಲ್ಲದ ಚಿತ್ತವನ್ನು ‘ರಾಗವಿಲ್ಲದ ಚಿತ್ತ’ ಎಂದು ಅರಿಯುತ್ತಾನೆ; ಅಥವಾ ದ್ವೇಷವಿರುವ ಚಿತ್ತವನ್ನು ‘ದ್ವೇಷವಿರುವ ಚಿತ್ತ’ ಎಂದು ಅರಿಯುತ್ತಾನೆ; ಅಥವಾ ದ್ವೇಷವಿಲ್ಲದ ಚಿತ್ತವನ್ನು ‘ದ್ವೇಷವಿಲ್ಲದ ಚಿತ್ತ’ ಎಂದು ಅರಿಯುತ್ತಾನೆ; ಅಥವಾ ಮೋಹವಿರುವ ಚಿತ್ತವನ್ನು ‘ಮೋಹವಿರುವ ಚಿತ್ತ’ ಎಂದು ಅರಿಯುತ್ತಾನೆ, ಅಥವಾ ಮೋಹವಿಲ್ಲದ ಚಿತ್ತವನ್ನು ‘ಮೋಹವಿಲ್ಲದ ಚಿತ್ತ’ ಎಂದು ಅರಿಯುತ್ತಾನೆ; ಅಥವಾ ಕುಗ್ಗಿದ ಚಿತ್ತವನ್ನು ‘ಕುಗ್ಗಿದ ಚಿತ್ತ’ ಎಂದು ಅರಿಯುತ್ತಾನೆ; ಅಥವಾ ಚದುರಿದ ಚಿತ್ತವನ್ನು ‘ಚದುರಿದ ಚಿತ್ತ’ ಎಂದು ಅರಿಯುತ್ತಾನೆ; ಅಥವಾ (ಧ್ಯಾನದಿಂದ) ಹಿಗ್ಗಿದ ಚಿತ್ತವನ್ನು (ಧ್ಯಾನದಿಂದ) ‘ಹಿಗ್ಗಿದ ಚಿತ್ತ’ ಎಂದು ಅರಿಯುತ್ತಾನೆ; ಅಥವಾ (ಧ್ಯಾನದಿಂದ) ಹಿಗ್ಗದ ಚಿತ್ತವನ್ನು ‘ಹಿಗ್ಗದ ಚಿತ್ತ’ ಎಂದು ಅರಿಯುತ್ತಾನೆ, ಅಥವಾ ಮೀರಬಹುದಾದ ಚಿತ್ತವನ್ನು ‘ಮೀರಬಹುದಾದ ಚಿತ್ತ’ ಎಂದು ಅರಿಯುತ್ತಾನೆ, ಅಥವಾ ಮೀರಲಾದ (ಎಣೆಯಿಲ್ಲದ) ಚಿತ್ತವನ್ನು ‘ಮೀರಲಾಗದ ಚಿತ್ತ’ ಎಂದು ಅರಿಯುತ್ತಾನೆ; ಅಥವಾ ಸಮಾಹಿತ (ಸಮಾಧಿಯನ್ನು ಹೊಂದಿರುವ) ಚಿತ್ತವನ್ನು ‘ಸಮಾಹಿತ ಚಿತ್ತ’ ಎಂದು ಅರಿಯುತ್ತಾನೆ; ಅಥವಾ ಸಮಾಹಿತವಲ್ಲದ (ಸಮಾಧಿ ಹೊಂದದ) ಚಿತ್ತವನ್ನು ಸಮಾಹಿತವಲ್ಲದ ಚಿತ್ತ’ ಎಂದು ಅರಿಯುತ್ತಾನೆ; ಅಥವಾ ವಿಮುಕ್ತವಾದ ಚಿತ್ತವನ್ನು ‘ವಿಮುಕ್ತ ಚಿತ್ತ’ ಎಂದು ಅರಿಯುತ್ತಾನೆ; ಅಥವಾ ವಿಮುಕ್ತವಾಗದ ಚಿತ್ತವನ್ನು ‘ವಿಮುಕ್ತವಾಗದ ಚಿತ್ತ’ ಎಂದು ಅರಿಯುತ್ತಾನೆ.155

ಹೀಗೆ ಆತನು ತನ್ನ ಚಿತ್ತದಲ್ಲಿ ಚಿತ್ತಾನುಪಸ್ಸಿಯಾಗಿ ತಂಗುತ್ತಾನೆ, ಅಥವಾ ಪರರ ಚಿತ್ತದಲ್ಲಿ ಚಿತ್ತಾನುಪಸ್ಸಿಯಾಗಿ ತಂಗುತ್ತಾನೆ, ಅಥವಾ ತನ್ನ ಮತ್ತು ಪರರ ಚಿತ್ತದಲ್ಲಿ ಚಿತ್ತಾನುಪಸ್ಸಿಯಾಗಿ ತಂಗುತ್ತಾನೆ; ಅಥವಾ ಚಿತ್ತದಲ್ಲಿ ಉತ್ಪತ್ತಿಯ ಧರ್ಮಗಳನ್ನು (ವಿಪಸ್ಸನಾ ಮೂಲಕವಾಗಿ) ಧ್ಯಾನಿಸುವವನಾಗಿ ತಂಗುತ್ತಾನೆ, ಅಥವಾ ಚಿತ್ತದಲ್ಲಿ ನಾಶಧರ್ಮವನ್ನು (ವಿಪಸ್ಸನಾ ಮೂಲಕವಾಗಿ) ಧ್ಯಾನಿಸುವವನಾಗಿ ತಂಗುತ್ತಾನೆ, ಅಥವಾ ಚಿತ್ತದಲ್ಲಿ ಉತ್ಪತ್ತಿ ಮತ್ತು ನಾಶಧರ್ಮವನ್ನು (ವಿಪಸ್ಸನಾ ಮೂಲಕವಾಗಿ) ಧ್ಯಾನಿಸುವವನಾಗಿ ತಂಗುತ್ತಾನೆ.156 ಆಮೇಲೆ ‘ಚಿತ್ತವಷ್ಟೇ ಇದೆ’ ಎಂಬ ಎಚ್ಚರ, ಬರಿಯ ವಿಪಸ್ಸನಾ ಜ್ಞಾನಕ್ಕಾಗಿ ಮಾತ್ರವೇ, ದೃಢವಾದ ಎಚ್ಚರಕ್ಕಾಗಿ ಮಾತ್ರವೇ ಎಂದು ನೆಲೆಯೂರುತ್ತದೆ ಮತ್ತು ಆತನು ಯಾವುದೇ ಹಂಗಿಲ್ಲದೇ ತಂಗುತ್ತಾನೆ. ಲೋಕದಲ್ಲಿ ಯಾವುದಕ್ಕೂ ಅಂಟಿಕೊಳ್ಳುವುದಿಲ್ಲ. ಭಿಕ್ಷುಗಳೇ, ಈ ರೀತಿಯಾಗಿ ಭಿಕ್ಷುವು ಚಿತ್ತದಲ್ಲಿ ಚಿತ್ತಾನುಪಸ್ಸಿಯಾಗಿ ತಂಗುತ್ತಾನೆ.

ಹೀಗೆ ಚಿತ್ತಾನುಪಸ್ಸನ ತಿಳಿದೆ.

5. ಧಮ್ಮಾನುಪಸ್ಸನಾ [ಮಾನಸಿಕ ವಿಷಯಗಳಲ್ಲಿ ಎಚ್ಚರ]

(1) ಐದು ತಡೆಗಳಲ್ಲಿ

11. “ಮತ್ತೆ ಭಿಕ್ಷುಗಳೇ, ಭಿಕ್ಷುವು ಹೇಗೆ ಧಮ್ಮದಲ್ಲಿ ಧಮ್ಮಾನುಪಸ್ಸಿಯಾಗಿ157 ತಂಗುತ್ತಾನೆ? ಭಿಕ್ಷುಗಳೇ, ಇಲ್ಲಿ ಭಿಕ್ಷುವು ಐದು ತಡೆಗಳೆಂಬ ಧರ್ಮಗಳಲ್ಲಿ ಧಮ್ಮಾನುಪಸ್ಸಿಯಾಗಿ ತಂಗುತ್ತಾನೆ. ಆದರೆ ಭಿಕ್ಷುಗಳೇ, ಭಿಕ್ಷುವು ಹೇಗೆ ಐದು ತಡೆಗಳೆಂಬ ಧರ್ಮಗಳಲ್ಲಿ158 ಧಮ್ಮಾನುಪಸ್ಸಿಯಾಗಿ ತಂಗುತ್ತಾನೆ?

“ಇಲ್ಲಿ ಭಿಕ್ಷುಗಳೇ, ಭಿಕ್ಷುವು ತನ್ನಲ್ಲಿ ಕಾಮ (ಭೋಗ)ದ ಆಸೆ ಇರುವಾಗ ‘ನನ್ನೊಳಗೆ ಕಾಮ (ಭೋಗ)ದ ಆಸೆಯಿದೆ’ ಎಂದು ಅರಿಯುತ್ತಾನೆ ಅಥವಾ ‘ತನ್ನೊಳಗೆ ಕಾಮ (ಭೋಗ)ದ ಆಸೆ ಇಲ್ಲದಿದ್ದಾಗ ‘ನನ್ನೊಳಗೆ ಕಾಮ (ಭೋಗ)ದ ಆಸೆಯಿಲ್ಲ’ ಎಂದು ಅರಿಯುತ್ತಾನೆ; ಮತ್ತು ಉತ್ಪನ್ನವಾಗದ ಕಾಮ (ಭೋಗ)ದ ಆಸೆ ಹೇಗೆ ಉತ್ಪನ್ನವಾಗುತ್ತದೆಯೋ ಅದನ್ನು ಅರಿಯುತ್ತಾನೆ ಮತ್ತು ಉತ್ಪನ್ನವಾದ ಕಾಮ (ಭೋಗ)ದ ಆಸೆ ಹೇಗೆ ನಾಶವಾಗುತ್ತದೋ ಅದನ್ನು ಅರಿಯುತ್ತಾನೆ ಮತ್ತು ನಾಶವಾದ ಕಾಮ (ಭೋಗ)ದ ಆಸೆಯು ಮುಂದೆ ಹೇಗೆ ಉತ್ಪನ್ನವಾಗುವುದಿಲ್ಲವೋ ಅದನ್ನು ಅರಿಯುತ್ತಾನೆ.

“ಅಥವಾ ತನ್ನಲ್ಲಿ ಹಗೆತನ ಇರುವಾಗ ‘ನನ್ನೊಳಗೆ ಹಗೆತನವಿದೆ’ ಎಂದು ಅರಿಯುತ್ತಾನೆ; ಅಥವಾ ತನ್ನೊಳಗೆ ಹಗೆತನ ಇಲ್ಲದಿದ್ದಾಗ ‘ನನ್ನೊಳಗೆ ಹಗೆತನವಿಲ್ಲ’ ಎಂದು ಅರಿಯುತ್ತಾನೆ; ಮತ್ತು ಉತ್ಪನ್ನವಾಗದ ಹಗೆತನ ಹೇಗೆ ಉತ್ಪನ್ನವಾಗುತ್ತದೆಯೋ ಅದನ್ನು ಅರಿಯುತ್ತಾನೆ ಮತ್ತು ಉತ್ಪನ್ನವಾದ ಹಗೆತನ ಹೇಗೆ ನಾಶವಾಗುತ್ತದೆಯೋ ಅದನ್ನು ಅರಿಯುತ್ತಾನೆ ಮತ್ತು ನಾಶವಾದ ಹಗೆತನ ಮುಂದೆ ಹೇಗೆ ಉತ್ಪನ್ನವಾಗುವುದಿಲ್ಲವೋ ಅದನ್ನೂ ಅರಿಯುತ್ತಾನೆ.

“ಅಥವಾ ತನ್ನಲ್ಲಿ ಆಲಸ್ಯ ಜಡತೆಗಳಿರುವಾಗ ‘ನನ್ನೊಳಗೆ ಆಲಸ್ಯ ಜಡತೆಗಳಿವೆ’ ಎಂದು ಅರಿಯುತ್ತಾನೆ; ಅಥವಾ ತನ್ನೊಳಗೆ ಆಲಸ್ಯ ಜಡತೆಗಳಿಲ್ಲದಿದ್ದಾಗ ‘ನನ್ನೊಳಗೆ ಆಲಸ್ಯ ಜಡತೆಗಳಿಲ್ಲ’ ಎಂದು ಅರಿಯುತ್ತಾನೆ; ಮತ್ತು ಉತ್ಪನ್ನವಾಗದ ಆಲಸ್ಯ ಜಡತೆಗಳು ಹೇಗೆ ಉತ್ಪನ್ನವಾಗುತ್ತವೆಯೋ ಅದನ್ನು ಅರಿಯುತ್ತಾನೆ ಮತ್ತು ಉತ್ಪನ್ನವಾದ ಆಲಸ್ಯ ಜಡತೆಗಳು ಹೇಗೆ ನಾಶವಾಗುತ್ತವೆಯೋ ಅದನ್ನು ಅರಿಯುತ್ತಾನೆ. ಮತ್ತು ನಾಶವಾದ ಆಲಸ್ಯ ಜಡತೆಗಳು ಮುಂದೆ ಹೇಗೆ ಉತ್ಪನ್ನವಾಗುವುದಿಲ್ಲವೋ ಅದನ್ನು ಅರಿಯುತ್ತಾನೆ.

“ಅಥವಾ ತನ್ನಲ್ಲಿ ಚಂಚಲತೆ ಅಳುಕುಗಳಿರುವಾಗ ‘ನನ್ನೊಳಗೆ ಚಂಚಲತೆ ಅಳುಕುಗಳಿವೆ’ ಎಂದು ಅರಿಯುತ್ತಾನೆ, ಅಥವಾ ತನ್ನೊಳಗೆ ಚಂಚಲತೆ ಅಳುಕುಗಳಿಲ್ಲದಿದ್ದಾಗ ‘ನನ್ನೊಳಗೆ ಚಂಚಲತೆ ಅಳುಕುಗಳಿಲ್ಲ’ ಎಂದು ಅರಿಯುತ್ತಾನೆ ಮತ್ತು ಉತ್ಪನ್ನವಾಗದ ಚಂಚಲತೆ ಅಳುಕುಗಳು ಹೇಗೆ ಉತ್ಪನ್ನವಾಗುತ್ತವೆಯೋ ಅದನ್ನು ಅರಿಯುತ್ತಾನೆ ಮತ್ತು ಉತ್ಪನ್ನವಾದ ಚಂಚಲತೆ ಅಳುಕುಗಳು ಹೇಗೆ ನಾಶವಾಗುತ್ತವೆಯೋ ಅದನ್ನು ಅರಿಯುತ್ತಾನೆ, ಮತ್ತು ನಾಶವಾದ ಚಂಚಲತೆ ಅಳುಕುಗಳು ಮುಂದೆ ಹೇಗೆ ಉತ್ಪನ್ನವಾಗುವುದಿಲ್ಲವೋ ಅದನ್ನು ಅರಿಯುತ್ತಾನೆ.

“ಅಥವಾ ತನ್ನಲ್ಲಿ ಸಂಶಯ ಇರುವಾಗ ‘ನನ್ನೊಳಗೆ ಸಂಶಯವಿದೆ’ ಎಂದು ಅರಿಯುತ್ತಾನೆ, ಅಥವಾ ತನ್ನೊಳಗೆ ಸಂಶಯ ಇಲ್ಲದಿದ್ದಾಗ ‘ನನ್ನೊಳಗೆ ಸಂಶಯವಿಲ್ಲ’ ಎಂದು ಅರಿಯುತ್ತಾನೆ; ಮತ್ತು ಉತ್ಪನ್ನವಾಗದ ಸಂಶಯ ಹೇಗೆ ಉತ್ಪನ್ನವಾಗುತ್ತದೆಯೋ ಅದನ್ನು ಅರಿಯುತ್ತಾನೆ ಮತ್ತು ಉತ್ಪನ್ನವಾದ ಸಂಶಯ ಹೇಗೆ ನಾಶವಾಗುತ್ತದೋ ಅದನ್ನು ಅರಿಯುತ್ತಾನೆ ಮತ್ತು ನಾಶವಾದ ಸಂಶಯ ಮುಂದೆ ಹೇಗೆ ಉತ್ಪನ್ನವಾಗುವುದಿಲ್ಲವೋ ಅದನ್ನು ಅರಿಯುತ್ತಾನೆ.

“ಹೀಗೆ ಆತನು ತನ್ನ ಧರ್ಮ (ಮನೋಧರ್ಮ)ಗಳಲ್ಲಿ ಧಮ್ಮಾನುಪಸ್ಸಿಯಾಗಿ ತಂಗುತ್ತಾನೆ, ಅಥವಾ ಪರರ ಧರ್ಮಗಳಲ್ಲಿ ಧಮ್ಮಾನುಪಸ್ಸಿಯಾಗಿ ತಂಗುತ್ತಾನೆ, ಅಥವಾ ತನ್ನ ಮತ್ತು ಪರರ ಧರ್ಮಗಳಲ್ಲಿ ಧಮ್ಮಾನುಪಸ್ಸಿಯಾಗಿ ತಂಗುತ್ತಾನೆ ಅಥವಾ ಧರ್ಮಗಳಲ್ಲಿ ಉತ್ಪತ್ತಿ ಧರ್ಮವನ್ನು (ವಿಪಸ್ಸನಾ ಮೂಲಕವಾಗಿ) ಧ್ಯಾನಿಸುವವನಾಗಿ ತಂಗುತ್ತಾನೆ, ಅಥವಾ ಧರ್ಮಗಳಲ್ಲಿ ನಾಶಧರ್ಮವನ್ನು (ವಿಪಸ್ಸನಾ ಮೂಲಕವಾಗಿ) ಧ್ಯಾನಿಸುವವನಾಗಿ ತಂಗುತ್ತಾನೆ ಅಥವಾ ‘ಧರ್ಮವಷ್ಟೇ ಇದೆ’ ಎಂಬ ಎಚ್ಚರ ಬರಿಯ ವಿಪಸ್ಸನಾ ಜ್ಞಾನಕ್ಕಾಗಿ ಮಾತ್ರವೇ, ದೃಢವಾದ ಎಚ್ಚರಕ್ಕಾಗಿ ಮಾತ್ರವೇ ಎಂದು ನೆಲೆಯೂರುತ್ತದೆ ಮತ್ತು ಆತನು ಯಾವುದೇ ಹಂಗಿಲ್ಲದೇ ತಂಗುತ್ತಾನೆ. ಲೋಕದಲ್ಲಿ ಯಾವುದಕ್ಕೂ ಅಂಟಿಕೊಳ್ಳುವುದಿಲ್ಲ. ಭಿಕ್ಷುಗಳೇ, ಈ ರೀತಿಯಾಗಿ ಭಿಕ್ಷುವು ಐದು ತಡೆಗಳೆಂಬ ಧರ್ಮಗಳಲ್ಲಿ ಧಮ್ಮಾನುಪಸ್ಸಿಯಾಗಿ ತಂಗುತ್ತಾನೆ.

ಹೀಗೆ ನೀವರಣಪರ್ವವನ್ನು ತಿಳಿಸಿದೆ.

(2) ಐದು ಉಪದಾನ ಸ್ಕಂದಗಳಲ್ಲಿ*

12. “ಅಲ್ಲದೆ ಮತ್ತೆ ಭಿಕ್ಷುಗಳೇ, ಭಿಕ್ಷುವು ಐದು ಉಪಾದಾನ ಸ್ಕಂದಗಳೆಂಬ ಧರ್ಮಗಳಲ್ಲಿ ಧಮ್ಮಾನುಪಸ್ಸಿಯಾಗಿ ತಂಗುತ್ತಾನೆ.159 ಮತ್ತು ಭಿಕ್ಷುಗಳೇ, ಭಿಕ್ಷುವು ಹೇಗೆ ಐದು ಉಪಾದಾನ ಸ್ಕಂದಗಳೆಂಬ ಧರ್ಮಗಳಲ್ಲಿ ಧಮ್ಮಾನುಪಸ್ಸಿಯಾಗಿ ತಂಗುತ್ತಾನೆ” ಇಲ್ಲಿ ಭಿಕ್ಷುಗಳೇ, ಭಿಕ್ಷುವು- ‘ಇದು ರೂಪ, ಇದು ರೂಪದ ಉತ್ಪತ್ತಿ, ಇದು ರೂಪದ ಅಸ್ತಮಾನ (ನಾಶ); ಇದು ವೇದನಾ, ಇದು ವೇದನಾದ ಉತ್ಪತ್ತಿ, ಇದು ವೇದನಾದ ಅಸ್ತಮಾನ; ಇದು ಸಂಜ್ಞಾ (ಗುರುತಿಸುವಿಕೆ), ಇದು ಸಂಜ್ಞಾದ ಕಾರಣ, ಇದು ಸಂಜ್ಞಾದ ಅಸ್ತಮಾನ; ಇದು ಸಂಸ್ಕಾರ, ಇದು ಸಂಸ್ಕಾರದ ಕಾರಣ, ಇದು ಸಂಸ್ಕಾರದ ಅಸ್ತಮಾನ; ಇದು ವಿಜ್ಞಾಣ, ಇದು ವಿಜ್ಞಾಣದ ಕಾರಣ, ಇದು ವಿಜ್ಞಾಣದ ಅಸ್ತಮಾನ’ ಎಂದು. ಹೀಗೆ ತನ್ನೊಳಗೆ ಧರ್ಮಗಳಲ್ಲಿ ಧಮ್ಮಾನುಪಸ್ಸಿಯಾಗಿ ತಂಗುತ್ತಾನೆ, ಅಥವಾ ಪರರ ಧರ್ಮಗಳಲ್ಲಿ ಧಮ್ಮಾನುಪಸ್ಸಿಯಾಗಿ ತಂಗುತ್ತಾನೆ, ಅಥವಾ ತನ್ನ ಮತ್ತು ಪರರ ಧರ್ಮಗಳಲ್ಲಿ ಧಮ್ಮಾನುಪಸ್ಸಿಯಾಗಿ ತಂಗುತ್ತಾನೆ; ಅಥವಾ ಧರ್ಮಗಳಲ್ಲಿ ಉತ್ಪತ್ತಿ ಧರ್ಮವನ್ನು (ವಿಪಸ್ಸನಾ ಮೂಲಕವಾಗಿ) ಧ್ಯಾನಿಸುವವನಾಗಿ ತಂಗುತ್ತಾನೆ, ಅಥವಾ ಧರ್ಮಗಳಲ್ಲಿ ಉತ್ಪತ್ತಿ ಮತ್ತು ನಾಶಧರ್ಮಗಳನ್ನು (ವಿಪಸ್ಸನಾ ಮೂಲಕವಾಗಿ) ಧ್ಯಾನಿಸುವವನಾಗಿ ತಂಗುತ್ತಾನೆ, ಅಥವಾ ಧರ್ಮಗಳಲ್ಲಿ ಉತ್ಪತ್ತಿ ಮತ್ತು ನಾಶಧರ್ಮಗಳನ್ನು (ವಿಪಸ್ಸನಾ ಮೂಲಕವಾಗಿ) ಧ್ಯಾನಿಸುವವನಾಗಿ ತಂಗುತ್ತಾನೆ ಅಥವಾ ‘ಧರ್ಮವಷ್ಟೇ ಇದೆ’ ಎಂಬ ಎಚ್ಚರ ಬರಿಯ ವಿಪಸ್ಸನಾ ಜ್ಞಾನಕ್ಕಾಗಿ ಮಾತ್ರವೇ; ದೃಢವಾದ ಎಚ್ಚರಕ್ಕಾಗಿ ಮಾತ್ರವೇ; ಎಂದು ನೆಲೆಯೂರುತ್ತದೆ; ಮತ್ತು ಆತನು ಯಾವುದೇ ಹಂಗಿಲ್ಲದೇ ತಂಗುತ್ತಾನೆ, ಲೋಕದಲ್ಲಿ ಯಾವುದಕ್ಕೂ ಅಂಟಿಕೊಳ್ಳುವುದಿಲ್ಲ. ಭಿಕ್ಷುಗಳೇ, ಈ ರೀತಿಯಾಗಿ ಭಿಕ್ಷುವು ಐದು ಉಪಾದಾನ ಸ್ಕಂದಗಳೆಂಬ ಧರ್ಮಗಳಲ್ಲಿ ಧಮ್ಮಾನುಪಸ್ಸಿಯಾಗಿ ತಂಗುತ್ತಾನೆ.

ಹೀಗೆ ಸ್ಕಂದಪರ್ವ ಹೇಳಿದೆ

(3) ತನ್ನಲ್ಲಿನ ಆರು ಒಳಗಿನ - ಹೊರಗಿನ ಆಯತನಗಳಲ್ಲಿ

13. “ಅಲ್ಲದೇ ಮತ್ತೆ ಭಿಕ್ಷುಗಳೇ, ಭಿಕ್ಷುವು, ಆರು ಒಳಗಿನ-ಹೊರಗಿನ ಆಯತನಗಳೆಂಬ ಧರ್ಮಗಳಲ್ಲಿ ಧಮ್ಮಾನುಪಸ್ಸಿಯಾಗಿ ತಂಗುತ್ತಾನೆ.160 ಆದರೆ ಭಿಕ್ಷುಗಳೇ, ಭಿಕ್ಷುವು, ಆರು ಒಳಗಿನ-ಹೊರಗಿನ ಆಯತನಗಳೆಂಬ ಧರ್ಮಗಳಲ್ಲಿ ಹೇಗೆ ಧಮ್ಮಾನುಪಸ್ಸಿಯಾಗಿ ತಂಗುತ್ತಾನೆ?

“ಇಲ್ಲಿ ಭಿಕ್ಷುಗಳೇ, ಭಿಕ್ಷುವು ಕಣ್ಣನ್ನು ಅರಿಯುತ್ತಾನೆ ಮತ್ತು ರೂಪವನ್ನು ಅರಿಯುತ್ತಾನೆ ಮತ್ತು ಈ ಎರಡರ ಪರಸ್ಪರ ಅವಲಂಬನೆಯಿಂದ ಯಾವ ಸಂಕೋಲೆಯು ಉಂಟಾಗುತ್ತದೋ ಅದನ್ನು ಅರಿಯುತ್ತಾನೆ; ಮತ್ತು ಉತ್ಪನ್ನವಾಗದ ಸಂಕೋಲೆಯ ಉತ್ಪತ್ತಿ ಹೇಗೆ ಆಗುತ್ತದೋ ಅದನ್ನು ಅರಿಯುತ್ತಾನೆ ಮತ್ತು ಉತ್ಪನ್ನವಾಗದ ಸಂಕೋಲೆಯು ಹೇಗೆ ನಾಶ ಹೊಂದುತ್ತದೋ, ಅದನ್ನು ಅರಿಯುತ್ತಾನೆ. ಮತ್ತು ನಾಶವಾದ ಸಂಕೋಲೆಯು ಮುಂದೆ ಹೇಗೆ ಉತ್ಪನ್ನವಾಗುವುದಿಲ್ಲವೋ, ಅದನ್ನೂ ಅರಿಯುತ್ತಾನೆ.

“ಮತ್ತೆ ಕಿವಿಯನ್ನು ಅರಿಯುತ್ತಾನೆ ಮತ್ತು ಸದ್ದನ್ನು ಅರಿಯುತ್ತಾನೆ, ಮತ್ತು ಈ ಎರಡರ ಪರಸ್ಪರ ಅವಲಂಬನೆಯಿಂದ ಯಾವ ಸಂಕೋಲೆಯು ಉಂಟಾಗುತ್ತದೋ ಅದನ್ನು ಅರಿಯುತ್ತಾನೆ; ಮತ್ತು... ನಾಶವಾದ ಸಂಕೋಲೆಯು ಮುಂದೆ ಹೇಗೆ ಉತ್ಪನ್ನವಾಗುವುದಿಲ್ಲವೋ ಅದನ್ನು ಅರಿಯುತ್ತಾನೆ.

“ಮತ್ತೆ ಘ್ರಾಣವನ್ನು (ಮೂಸುವುದನ್ನು) ಅರಿಯುತ್ತಾನೆ ಮತ್ತು ಗಂಧ (ವಾಸನೆ)ವನ್ನು ಅರಿಯುತ್ತಾನೆ, ಮತ್ತು ಈ ಎರಡರ ಪರಸ್ಪರ ಅವಲಂಬನೆಯಿಂದ ಯಾವ ಸಂಕೋಲೆಯು ಉಂಟಾಗುತ್ತದೋ ಅದನ್ನು ಅರಿಯುತ್ತಾನೆ; ಮತ್ತು... ಸಂಕೋಲೆಯು ಮುಂದೆ ಹೇಗೆ ಉತ್ಪನ್ನವಾಗುವುದಿಲ್ಲವೋ ಅದನ್ನು ಅರಿಯುತ್ತಾನೆ.

“ಮತ್ತೆ ನಾಲಿಗೆಯನ್ನು ಅರಿಯುತ್ತಾನೆ ಮತ್ತು ರುಚಿಯನ್ನು ಅರಿಯುತ್ತಾನೆ, ಮತ್ತು ಈ ಎರಡರ ಪರಸ್ಪರ ಅವಲಂಬನೆಯಿಂದ ಯಾವ ಸಂಕೋಲೆಯು ಉಂಟಾಗುತ್ತದೋ ಅದನ್ನು ಅರಿಯುತ್ತಾನೆ... ನಾಶವಾದ ಸಂಕೋಲೆಯು ಮುಂದೆ ಹೇಗೆ ಉತ್ಪನ್ನವಾಗುವುದಿಲ್ಲವೋ ಅದನ್ನು ಅರಿಯುತ್ತಾನೆ.

“ಮತ್ತೆ ಕಾಯವನ್ನು ಅರಿಯುತ್ತಾನೆ ಮತ್ತು ಸ್ಪರ್ಶ*ವನ್ನು ಅರಿಯುತ್ತಾನೆ, ಮತ್ತು ಈ ಎರಡರ ಪರಸ್ಪರ ಅವಲಂಬನೆಯಿಂದ ಯಾವ ಸಂಕೋಲೆಯು ಉಂಟಾಗುತ್ತದೋ ಅದನ್ನು ಅರಿಯುತ್ತಾನೆ; ಮತ್ತು... ನಾಶವಾದ ಸಂಕೋಲೆಯು ಮುಂದೆ ಹೇಗೆ ಉತ್ಪನ್ನವಾಗುವುದಿಲ್ಲವೋ ಅದನ್ನು ಅರಿಯುತ್ತಾನೆ.

“ಮತ್ತೆ ಮನಸ್ಸನ್ನು ಅರಿಯುತ್ತಾನೆ ಮತ್ತು ಧರ್ಮಗಳನ್ನು (ಮನೋವಿಷಯಗಳನ್ನು) ಅರಿಯುತ್ತಾನೆ, ಮತ್ತು ಈ ಎರಡರ ಪರಸ್ಪರ ಅವಲಂಬನೆಯಿಂದ ಯಾವ ಸಂಕೋಲೆಯು ಉಂಟಾಗುತ್ತದೋ ಅದನ್ನು ಅರಿಯುತ್ತಾನೆ... ಮತ್ತು ನಾಶವಾದ ಸಂಕೋಲೆಯು ಮುಂದೆ ಹೇಗೆ ಉತ್ಪನ್ನವಾಗುವುದಿಲ್ಲವೋ ಅದನ್ನು ಅರಿಯುತ್ತಾನೆ.

“ಹೀಗೆ ತನ್ನೊಳಗೆ ಧರ್ಮಗಳಲ್ಲಿ ಧಮ್ಮಾನುಪಸ್ಸಿಯಾಗಿ ತಂಗುತ್ತಾನೆ, ಅಥವಾ ಪರರ ಧರ್ಮಗಳಲ್ಲಿ ಧಮ್ಮಾನುಪಸ್ಸಿಯಾಗಿ ತಂಗುತ್ತಾನೆ, ಅಥವಾ ತನ್ನ ಮತ್ತು ಪರರ ಧರ್ಮಗಳಲ್ಲಿ ಧಮ್ಮಾನುಪಸ್ಸಿಯಾಗಿ ತಂಗುತ್ತಾನೆ; ಅಥವಾ ಧರ್ಮಗಳಲ್ಲಿ ಉತ್ಪತ್ತಿ ಧರ್ಮವನ್ನು (ವಿಪಸ್ಸನಾ ಮೂಲಕವಾಗಿ) ಧ್ಯಾನಿಸುವವನಾಗಿ ತಂಗುತ್ತಾನೆ, ಅಥವಾ ಧರ್ಮಗಳಲ್ಲಿ ನಾಶಧರ್ಮವನ್ನು (ವಿಪಸ್ಸನಾ ಮೂಲಕವಾಗಿ) ಧ್ಯಾನಿಸುವವನಾಗಿ ತಂಗುತ್ತಾನೆ, ಅಥವಾ ಧರ್ಮಗಳಲ್ಲಿ ಉತ್ಪತ್ತಿ ಮತ್ತು ನಾಶಧರ್ಮಗಳನ್ನು (ವಿಪಸ್ಸನಾ ಮೂಲಕವಾಗಿ) ಧ್ಯಾನಿಸುವವನಾಗಿ ತಂಗುತ್ತಾನೆ, ಅಥವಾ ‘ಧರ್ಮವಷ್ಟೇ ಇದೆ’ ಎಂಬ ಎಚ್ಚರ ಬರಿಯ ವಿಪಸ್ಸಾನ ಜ್ಞಾನಕ್ಕಾಗಿ ಮಾತ್ರವೇ, ದೃಢವಾದ ಎಚ್ಚರಕ್ಕಾಗಿ ಮಾತ್ರವೇ ಎಂದು ನೆಲೆಯೂರುತ್ತದೆ, ಮತ್ತು ಆತನು ಯಾವುದೇ ಹಂಗಿಲ್ಲದೆ ತಂಗುತ್ತಾನೆ, ಲೋಕದಲ್ಲಿ ಯಾವುದಕ್ಕೂ ಅಂಟಿಕೊಳ್ಳುವುದಿಲ್ಲ. ಭಿಕ್ಷುಗಳೇ, ಈ ರೀತಿಯಾಗಿಯೇ ಭಿಕ್ಷುವು ಆರು ಒಳಗಿನ-ಹೊರಗಿನ ಆಯತನಗಳೆಂಬ ಧರ್ಮಗಳಲ್ಲಿ ಧಮ್ಮಾನುಪಸ್ಸಿಯಾಗಿ ತಂಗುತ್ತಾನೆ.

ಹೀಗೆ ಆಯತನ ಪರ್ವ ಹೇಳಿದೆ.

(4) ಏಳು ಜೋಜ್ಝಙ್ಗಗಳಲ್ಲಿ (ಬೋಧ್ಯಂಗಗಳಲ್ಲಿ)

14. “ಅಲ್ಲದೇ ಮತ್ತೆ ಭಿಕ್ಷುಗಳೇ, ಭಿಕ್ಷುವು ಏಳು ಭೋಜ್ಝಙ್ಗಗಳೆಂಬ ಧರ್ಮಗಳಲ್ಲಿ ಧಮ್ಮಾನುಪಸ್ಸಿಯಾಗಿ ತಂಗುತ್ತಾನೆ ಮತ್ತು ಭಿಕ್ಷುಗಳೇ, ಭಿಕ್ಷುವು ಏಳು ಬೋಜ್ಝಙ್ಗಗಳೆಂಬ ಧರ್ಮಗಳಲ್ಲಿ161 ಧಮ್ಮಾನುಪಸ್ಸಿಯಾಗಿ ಹೇಗೆ ತಂಗುತ್ತಾನೆ? ಇಲ್ಲಿ ಭಿಕ್ಷುಗಳೇ, ಭಿಕ್ಷುವು ತನ್ನಲ್ಲಿ ಸತಿ ಸಮ್ಬೋಜ್ಝಙ್ಗವಿದ್ದಾಗ ‘ನನ್ನಲ್ಲಿ ಸತಿ ಸಮ್ಬೋಜ್ಝಙ್ಗವಿದೆ’ ಎಂದು ಅರಿಯುತ್ತಾನೆ, ಅಥವಾ ತನ್ನಲ್ಲಿ ಸತಿ ಸಮ್ಬೋಜ್ಝಙ್ಗವಿಲ್ಲದಿದ್ದಾಗ ‘ನನ್ನಲ್ಲಿ ಸತಿ ಸಮ್ಬೋಜ್ಝಙ್ಗವಿಲ್ಲ’ ಎಂದು ಅರಿಯುತ್ತಾನೆ, ಮತ್ತು ಉತ್ಪನ್ನವಾಗದ ಸತಿ ಸಮ್ಬೋಜ್ಝಙ್ಗದ ಉತ್ಪತ್ತಿ ಹೇಗೆ ಆಗುತ್ತದೋ ಅದನ್ನು ಅರಿಯುತ್ತಾನೆ ಮತ್ತು ಉತ್ಪನ್ನವಾದ ಸತಿ ಸಮ್ಬೋಜ್ಝಙ್ಗದ ಬೆಳವಣಿಗೆಯಲ್ಲಿ ಹೇಗೆ ಪರಿಪೂರ್ಣತೆ ಉಂಟಾಗುತ್ತದೋ ಅದನ್ನೂ ಅರಿಯುತ್ತಾನೆ.

“ಅಥವಾ ತನ್ನಲ್ಲಿ ಧಮ್ಮವಿಚಯ (ಪರಮಾರ್ಥ ಧರ್ಮದ ಪರೀಕ್ಷಿಸುವಿಕೆ’ ಎಂಬ)162 ಬೋಜ್ಝಙ್ಗವಿದ್ದಾಗ ‘ನನ್ನಲ್ಲಿ ಧಮ್ಮವಿಚಯ ಬೋಜ್ಝಙ್ಗವಿದೆ’ ಎಂದು ಅರಿಯುತ್ತಾನೆ, ಅಥವಾ ತನ್ನಲ್ಲಿ ಧಮ್ಮವಿಚಯ ಬೋಜ್ಝಙ್ಗವಿಲ್ಲದಿದ್ದಾಗ ‘ನನ್ನಲ್ಲಿ ಧಮ್ಮವಿಚಯ ಬೋಜ್ಝಙ್ಗವಿಲ್ಲ’ ಎಂದು ಅರಿಯುತ್ತಾನೆ ಮತ್ತು ಉತ್ಪನ್ನವಾಗದ ಧಮ್ಮವಿಚಯ ಬೋಜ್ಝಙ್ಗದ ಉತ್ಪತ್ತಿ ಹೇಗೆ ಆಗುತ್ತದೋ ಅದನ್ನೂ ಅರಿಯುತ್ತಾನೆ ಮತ್ತು ಉತ್ಪನ್ನವಾದ ಧಮ್ಮವಿಚಯ ಬೋಜ್ಝಙ್ಗದ ಬೆಳವಣಿಗೆಯಲ್ಲಿ ಹೇಗೆ ಪರಿಪೂರ್ಣತೆ ಉಂಟಾಗುತ್ತದೋ ಅದನ್ನೂ ಅರಿಯುತ್ತಾನೆ.

“ಅಥವಾ ತನ್ನಲ್ಲಿ (ವಿರಿಯ) ಪ್ರಯತ್ನಶೀಲ ಬೋಜ್ಝಙ್ಗವಿದ್ದಾಗ ‘ನನ್ನಲ್ಲಿ ವಿರಿಯ ಬೋಜ್ಝಙ್ಗವಿದೆ’ ಎಂದು ಅರಿಯುತ್ತಾನೆ, ಅಥವಾ ತನ್ನಲ್ಲಿ ಪ್ರಯತ್ನಶೀಲ ಬೋಜ್ಝಙ್ಗವಿಲ್ಲದಿದ್ದಾಗ ‘ನನ್ನಲ್ಲಿ ವಿರಿಯ ಬೋಜ್ಝಙ್ಗವಿಲ್ಲ’ ಎಂದು ಅರಿಯುತ್ತಾನೆ, ಮತ್ತು ಉತ್ಪನ್ನವಾಗದ ವಿರಿಯ ಬೋಜ್ಝಙ್ಗದ ಉತ್ಪತ್ತಿ ಹೇಗೆ ಆಗುತ್ತದೋ ಅದನ್ನೂ ಅರಿಯುತ್ತಾನೆ, ಮತ್ತು ಉತ್ಪನ್ನವಾದ ವಿರಿಯ ಬೋಜ್ಝಙ್ಗದ ಬೆಳವಣಿಗೆಯಲ್ಲಿ ಹೇಗೆ ಪರಿಪೂರ್ಣತೆ ಉಂಟಾಗುತ್ತದೋ163 ಅದನ್ನೂ ಅರಿಯುತ್ತಾನೆ.

“ಅಥವಾ ತನ್ನಲ್ಲಿ ಪೀತಿ (ಆನಂದ) ಬೋಜ್ಝಙ್ಗವಿದ್ದಾಗ ‘ನನ್ನಲ್ಲಿ ಪೀತಿ ಬೋಜ್ಝಙ್ಗವಿದೆ’ ಎಂದು ಅರಿಯುತ್ತಾನೆ, ಅಥವಾ ತನ್ನಲ್ಲಿ ಪೀತಿ ಬೋಜ್ಝಙ್ಗವಿಲ್ಲದಿದ್ದಾಗ ‘ನನ್ನಲ್ಲಿ ಪೀತಿ ಬೋಜ್ಝಙ್ಗವಿಲ್ಲ’ ಎಂದು ಅರಿಯುತ್ತಾನೆ, ಮತ್ತು ಉತ್ಪನ್ನವಾಗದ ಪೀತಿ ಬೋಜ್ಝಙ್ಗದ ಉತ್ಪತಿ ಹೇಗೆ ಆಗುತ್ತದೋ ಅದನ್ನು ಅರಿಯುತ್ತಾನೆ ಮತ್ತು ಉತ್ಪನ್ನವಾದ ಪೀತಿ ಬೋಜ್ಝಙ್ಗದ ಬೆಳವಣಿಗೆಯಲ್ಲಿ ಹೇಗೆ ಪರಿಪೂರ್ಣತೆ ಉಂಟಾಗುತ್ತದೋ ಅದನ್ನೂ ಅರಿಯುತ್ತಾನೆ.

“ಅಥವಾ ತನ್ನಲ್ಲಿ ಪ್ರಶಾಂತ ಬೋಜ್ಝಙ್ಗವಿದ್ದಾಗ ‘ನನ್ನಲ್ಲಿ ಪ್ರಶಾಂತ ಬೋಜ್ಝಙ್ಗವಿದೆ’ ಎಂದು ಅರಿಯುತ್ತಾನೆ, ಅಥವಾ ತನ್ನಲ್ಲಿ ಪ್ರಶಾಂತ ಬೋಜ್ಝಙ್ಗವಿಲ್ಲದಿದ್ದಾಗ ‘ನನ್ನಲ್ಲಿ ಪ್ರಶಾಂತ ಬೋಜ್ಝಙ್ಗವಿಲ್ಲ’ ಎಂದು ಅರಿಯುತ್ತಾನೆ ಮತ್ತು ಉತ್ಪನ್ನವಾಗದ ಪ್ರಶಾಂತ ಬೋಜ್ಝಙ್ಗದ ಉತ್ಪತಿ ಹೇಗೆ ಆಗುತ್ತದೋ ಅದನ್ನು ಅರಿಯುತ್ತಾನೆ ಮತ್ತು ಉತ್ಪನ್ನವಾದ ಪ್ರಶಾಂತ ಬೋಜ್ಝಙ್ಗದ ಬೆಳವಣಿಗೆಯಲ್ಲಿ ಹೇಗೆ ಪರಿಪೂರ್ಣತೆ ಉಂಟಾಗುತ್ತದೋ ಅದನ್ನೂ ಅರಿಯುತ್ತಾನೆ.

“ಅಥವಾ ತನ್ನಲ್ಲಿ ಸಮಾಧಿ ಬೋಜ್ಝಙ್ಗವಿದ್ದಾಗ ‘ನನ್ನಲ್ಲಿ ಸಮಾಧಿ ಬೋಜ್ಝಙ್ಗವಿದೆ’ ಎಂದು ಅರಿಯುತ್ತಾನೆ, ಅಥವಾ ತನ್ನಲ್ಲಿ ಸಮಾಧಿ ಬೋಜ್ಝಙ್ಗವಿಲ್ಲದಿದ್ದಾಗ ‘ನನ್ನಲ್ಲಿ ಸಮಾಧಿ ಬೋಜ್ಝಙ್ಗವಿಲ್ಲ’ ಎಂದು ಅರಿಯುತ್ತಾನೆ ಮತ್ತು ಉತ್ಪನ್ನವಾಗದ ಸಮಾಧಿ ಬೋಜ್ಝಙ್ಗದ ಉತ್ಪತಿ ಹೇಗೆ ಆಗುತ್ತದೋ ಅದನ್ನು ಅರಿಯುತ್ತಾನೆ ಮತ್ತು ಉತ್ಪನ್ನವಾದ ಸಮಾಧಿ ಬೋಜ್ಝಙ್ಗದ ಬೆಳವಣಿಗೆಯಲ್ಲಿ ಹೇಗೆ ಪರಿಪೂರ್ಣತೆ ಉಂಟಾಗುತ್ತದೋ ಅದನ್ನೂ ಅರಿಯುತ್ತಾನೆ.

“ಅಥವಾ ತನ್ನಲ್ಲಿ ಉಪೇಕ್ಖಾ (ಸಮಚಿತ್ತತೆ) ಬೋಜ್ಝಙ್ಗವಿದ್ದಾಗ ‘ನನ್ನಲ್ಲಿ ಉಪೇಕ್ಖಾ ಬೋಜ್ಝಙ್ಗವಿದೆ’ ಎಂದು ಅರಿಯುತ್ತಾನೆ, ಅಥವಾ ತನ್ನಲ್ಲಿ ಉಪೇಕ್ಖಾ ಬೋಜ್ಝಙ್ಗವಿಲ್ಲದಿದ್ದಾಗ ‘ನನ್ನಲ್ಲಿ ಉಪೇಕ್ಖಾ ಬೋಜ್ಝಙ್ಗವಿಲ್ಲ’ ಎಂದು ಅರಿಯುತ್ತಾನೆ, ಮತ್ತು ಉತ್ಪನ್ನವಾಗದ ಉಪೇಕ್ಖಾ ಬೋಜ್ಝಙ್ಗದ ಉತ್ಪತಿ ಹೇಗೆ ಆಗುತ್ತದೋ ಅದನ್ನು ಅರಿಯುತ್ತಾನೆ ಮತ್ತು ಉತ್ಪನ್ನವಾದ ಉಪೇಕ್ಖಾ ಬೋಜ್ಝಙ್ಗದ ಬೆಳವಣಿಗೆಯಲ್ಲಿ ಹೇಗೆ ಪರಿಪೂರ್ಣತೆ ಉಂಟಾಗುತ್ತದೋ ಅದನ್ನೂ ಅರಿಯುತ್ತಾನೆ.

“ಹೀಗೆ ತನ್ನೊಳಗೆ ಧರ್ಮಗಳಲ್ಲಿ ಧಮ್ಮಾನುಪಸ್ಸಿಯಾಗಿ ತಂಗುತ್ತಾನೆ, ಅಥವಾ ಪರರ ಧರ್ಮಗಳಲ್ಲಿ ಧಮ್ಮಾನುಪಸ್ಸಿಯಾಗಿ ತಂಗುತ್ತಾನೆ, ಅಥವಾ ತನ್ನ ಮತ್ತು ಪರರ ಧರ್ಮಗಳಲ್ಲಿ ಧಮ್ಮಾನುಪಸ್ಸಿಯಾಗಿ ತಂಗುತ್ತಾನೆ; ಅಥವಾ ಧರ್ಮಗಳಲ್ಲಿ ಉತ್ಪತ್ತಿ ಧರ್ಮವನ್ನು (ವಿಪಸ್ಸನಾ ಮೂಲಕವಾಗಿ) ಧ್ಯಾನಿಸುವವನಾಗಿ ತಂಗುತ್ತಾನೆ, ಅಥವಾ ಧರ್ಮಗಳಲ್ಲಿ ನಾಶಧರ್ಮವನ್ನು (ವಿಪಸ್ಸನಾ ಮೂಲಕವಾಗಿ) ಧ್ಯಾನಿಸುವವನಾಗಿ ತಂಗುತ್ತಾನೆ, ಅಥವಾ ಉತ್ಪತ್ತಿ ಮತ್ತು ನಾಶಧರ್ಮಗಳನ್ನು (ವಿಪಸ್ಸನಾ ಮೂಲಕವಾಗಿ) ಧ್ಯಾನಿಸುವವನಾಗಿ ತಂಗುತ್ತಾನೆ, ಅಥವಾ ಉತ್ಪತ್ತಿ ಮತ್ತು ನಾಶಧರ್ಮಗಳನ್ನು (ವಿಪಸ್ಸನಾ ಮೂಲಕವಾಗಿ) ಧ್ಯಾನಿಸುವವನಗಿ ತಂಗುತ್ತಾನೆ, ಅಥವಾ ‘ಧರ್ಮವಷ್ಟೇ ಇದೆ’ ಎಂಬ ಎಚ್ಚರ ಬರಿಯ ವಿಪಸ್ಸಾನ ಜ್ಞಾನಕ್ಕಾಗಿ ಮಾತ್ರವೇ ದೃಢವಾದ ಎಚ್ಚರಕ್ಕಾಗಿ ಮಾತ್ರವೇ ಎಂದು ನೆಲೆಯೂರುತ್ತದೆ; ಮತ್ತು ಆತನು ಯಾವುದೇ ಹಂಗಿಲ್ಲದೇ ತಂಗುತ್ತಾನೆ, ಲೋಕದಲ್ಲಿ ಯಾವುದಕ್ಕೂ ಅಂಟಿಕೊಳ್ಳುವುದಿಲ್ಲ. ಭಿಕ್ಷುಗಳೇ, ಈ ರೀತಿಯಾಗಿಯೇ ಭಿಕ್ಷುವು ಏಳು ಬೋಜ್ಝಙ್ಗಗಳೆಂಬ ಧರ್ಮಗಳಲ್ಲಿ ಧಮ್ಮಾನುಪಸ್ಸಿಯಾಗ ತಂಗುತ್ತಾನೆ.

ಹೀಗೆ ಬೋಧ್ಯಂಗ ಪರ್ವ ಹೇಳಿದೆ.

(5) ನಾಲ್ಕು ಆರ್ಯಸತ್ಯಗಳಲ್ಲಿ

15. “ಅಲ್ಲದೇ ಮತ್ತೆ ಭಿಕ್ಷುಗಳೇ, ಭಿಕ್ಷುವು ನಾಲ್ಕು ಆರ್ಯಸತ್ಯಗಳೆಂಬ ಧಮ್ಮಗಳಲ್ಲಿ ಧಮ್ಮಾನುಪಸ್ಸಿಯಾಗಿ164 ತಂಗುತ್ತಾನೆ? ಇಲ್ಲಿ ಭಿಕ್ಷುಗಳೇ, ಭಿಕ್ಷುವು ‘ಇದು ದುಃಖ’ ಎಂದು (ವಿಪಸ್ಸನಾ ಮೂಲಕ) ಯಥಾರ್ಥವಾಗಿ ಅರಿಯುತ್ತಾನೆ, ‘ಇದು ದುಃಖದ ಕಾರಣ’ ಎಂದು (ವಿಪಸ್ಸನಾ ಮೂಲಕ) ಯಥಾರ್ಥವಾಗಿ ಅರಿಯುತ್ತಾನೆ, ‘ಇದು ದುಃಖದ ನಿರೋಧ’ ಎಂದು ಯಥಾರ್ಥವಾಗಿ ಅರಿಯುತ್ತಾನೆ, ‘ಇದು ದುಃಖ ನಿರೋಧಕ್ಕೆ ಒಯ್ಯುವ ಮಾರ್ಗ’ ಎಂದು ಯಥಾರ್ಥವಾಗಿ ಅರಿಯುತ್ತಾನೆ.

ಹೀಗೆ ಮೊದಲ ಭಾಣವಾರ ಹೇಳಿದೆ.

ದುಃಖ ಸತ್ಯದ ನಿರ್ದೇಶ

16. “ಭಿಕ್ಷುಗಳೇ! ದುಃಖವೆಂಬ ಆರ್ಯಸತ್ಯ ಯಾವುದು? ಹುಟ್ಟು ದುಃಖ, ಮುದಿತನ ದುಃಖ, ಸಾವು ದುಃಖ, ಶೋಕ, ಅಳು (ಗೋಳಾಟ) ದುಃಖ ದುಮ್ಮಾನ, ಬೇಸರಗಳನ್ನು ದುಃಖ, ಅಪ್ರಿಯರಲ್ಲದವರ ಜತೆ ಸೇರುವುದು, ಪ್ರಿಯರಿಂದ ದೂರವಾಗುವುದು, ದುಃಖ ಬಯಸಿದ್ದನ್ನು ಪಡೆಯದಿರುವುದು ದುಃಖ, ಸಂಕ್ಲೇಷದಿಂದ ಐದು ಉಪಾದಾನ ಸ್ಕಂಧಗಳನ್ನು ಹೊಂದಿರುವುದು ದುಃಖ.

17. “ಭಿಕ್ಷುಗಳೇ, ಹುಟ್ಟು ಎನ್ನುವುದು ಯಾವುದು? ಆಯಾ ನಷ್ಟಗಳಿಗೆ (ಜೀವಿಗಳ) ತಮ್ಮ ತಮ್ಮ ಜೀವಿಕೆಯ ಹಂತದಲ್ಲಿ ಬರುವುದು, ಹುಟ್ಟುವಿಕೆ, ಗರ್ಭಗ್ರಹಣ, ಗರ್ಭಧಾರಣ, ಸ್ಕಂಧಗಳ ಪ್ರಾದುರ್ಭಾವ (ಕಣ್ಣು ಮುಂತಾದ) ಆಯತನಗಳನ್ನು ಪಡೆದುಕೊಳ್ಳುವಿಕೆ, ಉಂಟಾಗುವುದೋ ಅದಕ್ಕೆ ಭಿಕ್ಷುಗಳೇ ‘ಹುಟ್ಟು’ ಎನ್ನುತ್ತಾರೆ.

18. “ಭಿಕ್ಷುಗಳೇ, ಮುಪ್ಪು* ಎನ್ನುವುದು ಯಾವುದು? ಆಯಾ ಜೀವಿಗಳ ಜೀವಿತ ಕಾಲದಲ್ಲಿ ಮುಪ್ಪು (ಎಂದರೆ) ಮುದಿತನ, ಬೊಚ್ಚುಬಾಯಿ, ನೆರೆಗೂದಲು, ಸುಕ್ಕು, ಆಯಸ್ಸಿನ ಕ್ಷೀಣತೆ, ಇಂದ್ರಿಯಗಳ ದುರ್ಬಲತೆ ಏನಿದೆಯೋ ಇದನ್ನು ಭಿಕ್ಷುಗಳೇ! ಜರಾ = ಮುಪ್ಪು ಎನ್ನುತ್ತಾರೆ.

19. “ಭಿಕ್ಷುಗಳೇ, ಮರಣವೆನ್ನುವುದು ಯಾವುದು? ಯಾವುದನ್ನು ಆಯಾ ಜೀವಿಗಳ (ಆಯಸ್ಸಿನ) ಚ್ಯುತಿ, ಮುಗಿತಾಯ, (ದೇಹದಿಂದ) ಬೇರ್ಪಡೆ, ಅಂತರ್ದಾನ ಕಾಲವಾಗುವುದು. (ನಾಮರೂಪ) ಸ್ಕಂಧಗಳು ಬೇರೆಯಾಗುವುದು, ದೇಹವಿಡುವುದು, ಜೀವಿತೇಂದ್ರಿಯಗಳು ಛೇದವಾಗುವುದು ಎನ್ನುತ್ತಾರೋ ಇದನ್ನೇ ಭಿಕ್ಖುಗಳೇ ಮರಣವೆನ್ನುತ್ತಾರೆ.

20. ಭಿಕ್ಖುಗಳೇ, ಯಾವುದು ಶೋಕ? ಭಿಕ್ಖುಗಳೇ ಯಾವುದು ಬೇರೆ ಬೇರೆ ವ್ಯಸನಗಳಿಂದ ಬಂದಿರುವ ವಿವಿಧರೀತಿಯ ದುಃಖ ಧರ್ಮದಿಂದ ತಾಕಿ, ಶೋಕ, ಶೋಕಿಸುವುದು, ಶೋಕಚಿತ್ತ, ಕೊನೆಗೊಳಿಸುವ ಶೋಕ, ಗೋಳಾಟ ಏನಿದೆ, ಇದನ್ನು ಭಿಕ್ಖುಗಳೇ ಶೋಕವೆನ್ನುತ್ತಾರೆ.

21. ಭಿಕ್ಖುಗಳೇ, ಪರದೇವನ (ಗೋಳಾಟ) ಯಾವುದು? ಭಿಕ್ಖುಗಳೇ! ಬೇರೆ ಬೇರೆ ವ್ಯಸನಗಳಿಗೆ ಒಳಗಾಗಿ, ಬೇರೆ ಬೇರೆ ದುಃಖ ಧರ್ಮ ತಾಗಿ ಅರಚುವುವು, ಅಳುವುದು, ಒದ್ದಲಾಡುವುದು, ಗೋಳಾಡುವುದು, ಗೋಳಾಡುವಿಕೆ, ಒದ್ದಲಾಡುವಿಕೆ ಏನಿದೆಯೋ ಅದನ್ನು ಭಿಕ್ಖುಗಳೇ ಪರಿದೇವನ ಎನ್ನುತ್ತಾರೆ.

22. ಭಿಕ್ಖುಗಳೇ, ದುಃಖ ಯಾವುದು? ಭಿಕ್ಖುಗಳೇ ದೇಹದ ನೋವು, ದೇಹದ ಸುಸ್ತು, ದೇಹದಿಂದ ಹುಟ್ಟಿದ, ತಡೆಯಲಾಗದ ನೋವು ಏನಿದೆ ಅದನ್ನು ಭಿಕ್ಖುಗಳೇ ದುಃಖವೆನ್ನುತ್ತಾರೆ.

23. ಭಿಕ್ಖುಗಳೇ, ದೋಮನಸ್ಸ (ದುಗುಡ) ಎಂದರೆ ಯಾವುದು? ಯಾವುವು ಚೇತ (ಮನಸ್ಸಿನ) ದುಃಖವಿದೆಯೋ, ಮನಸ್ಸಿನ ಅಶಾಂತತೆ, ಮನಸ್ಸಿನಿಂದ ಬಂದ ತಡೆಯಲಾರದ ದುಃಖವೇನಿದೆ ಇದನ್ನು ಭಿಕ್ಕುಗಳೇ ದೋಮನ (ದುಮ್ಮಾನ) ಎನ್ನುತ್ತಾರೆ.

24. ಭಿಕ್ಖುಗಳೇ, ಬೇಸರ (ಹತಾಶೆ) ಯಾವುದು? ಭಿಕ್ಖುಗಳೇ, ಬೇರೆ ಬೇರೆ ವ್ಯಸನಗಳಿಗೆ ಪಕ್ಕಾಗಿ, ಬೇರೆ ಬೇರೆ ದುಃಖ ಧರ್ಮಗಳಿಗೆ ಒಳಗಾಗಿ ಸುಸ್ತಾಗುವುದು, ಸಾಕೆನಿಸುವುದು, ಆಯಾಸಗೊಳ್ಳುವುದು, ಇನ್ನು ಸಾಕೆನಿಸಿಕೊಳ್ಳುವುದು ಏನಿದೆ? ಭಿಕ್ಖುಗಳೇ, ಇದನ್ನು ಉಪಾಯಾಸ ಬೇಸರ ಎನ್ನುತ್ತಾರೆ.

25. “ಭಿಕ್ಖುಗಳೇ, ಅಪ್ರಿಯವಾದದ್ದರ ಜತೆ ಸೇರುವ ದುಃಖ ಯಾವುದು? ಇಲ್ಲಿ ಯರಿಗೆ ಅನಿಷ್ಟವಾದ, ಬೇಡದ, ಮನಸ್ಸಿಗೆ ಬಾರದ, ರೂಪ, ಶಬ್ದ, ವಾಸನೆ, ರಸ, ಸ್ಪರ್ಶಗುಣಗಳು, ಕೆಟ್ಟ ಧರ್ಮಗಳು ಉಂಟಾಗುತ್ತವೋ ಅಥವಾ ಅವರಿಗೆ ಅನರ್ಥ ಬಯಸುವ, ಅಹಿತ ಬಯಸುವ, ಆಘಾತ ಬಯಸುವ, ಯೋಗಕ್ಷೇಮಕ್ಕೆ ವಿರುದ್ಧವಾಗಿ ಬಯಸುವ, ಅದರಲ್ಲೇ ಮನಸ್ಸಿಡುವವರ ಜತೆ ಸೇರುವುದು ಸಮಾಧಾನ (ನಿಜವಾಗಿ) ತರದ ಭಾವವೇನಿದೆ, ಅದು ಅಪ್ರಿಯದ ಜತೆ ಸೇರಿದ ದುಃಖ.

26. “ಭಿಕ್ಖುಗಳೇ, ಪ್ರಿಯವಾದ್ದರಿಂದ ಬೇರ್ಪಡುವ ದುಃಖ ಯಾವುದು? ಇಲ್ಲಿ ಏನು ಇಷ್ಟವಾದ, ಕಾಂತವಾದ, ಮನೋಜ್ಞವಾದ ರೂಪ, ಶಬ್ದ, ಗಂಧ, ರಸ, ಸ್ಪರ್ಶ ಗುಣಗಳು (ಒಳ್ಳೆಯ ಧರ್ಮಗಳು) ಇವೆ. ಅಥವಾ ಏನು ನಮಗೆ ಬೇಕಾದ, ಹಿತವಾದ, ಅನುಕೂಲವಾದ, ಯೋಗಕ್ಷೇಮಕ್ಕೆ ಬೇಕಾದ (ಜನ) ಅವರು ಯಾರಿದ್ದಾರೆ. ತಂದೆ, ತಾಯಿ, ಸೋದರ, ಸೋದರಿ, ಗೆಳೆಯರು, ಮತ್ಸರವಿಲ್ಲದವರು, ನೆಂಟರು ಯಾರಿದ್ದಾರೆ ಅವರು ಅಸ್ತಂಗತರಾದಾಗ, ಅವರ ಸಂಪರ್ಕ ಬಾರದಾಗ, (ಅವರ) ಸಂತೈಕೆ ಇಲ್ಲದಾಗ, ದೂರವಾದಾಗ ಅದಕ್ಕೆ ಭಿಕ್ಖುಗಳೇ ಪ್ರಿಯರಿಂದ ಬೇರ್ಪಟ್ಟ ದುಃಖ ಎನ್ನುತ್ತಾರೆ.

27. “ಭಿಕ್ಖುಗಳೇ, ಬಯಸಿದ್ದನ್ನು ಪಡೆಯದಿರುವ ದುಃಖ ಯಾವುದು? ಭಿಕ್ಷುಗಳೇ! ಹುಟ್ಟು ಇರುವ ಜೀವಿಗಳಿಗೆ ಇಂಥ ಬಯಕೆ ಹುಟ್ಟುತ್ತದೆ- ‘ಅಹೋ! ನಮಗೆ ಹುಟ್ಟು ಇಲ್ಲದೆ ಹೋಗಲಿ ! ಇನ್ನೊಮ್ಮೆ ನಮಗೆ ಹುಟ್ಟು ಬಾರದಿರಲಿ’ ಎಂದು. ಆದರೆ ಈ ಇಚ್ಛೆ ಪೂರೈಸದು. ಹೀಗೆ ಬಯಸಿದ್ದು ಸಿಗದಿದ್ದರೆ ಅದೂ ದುಃಖ. ಮುಪ್ಪಿರುವ ಜೀವಕ್ಕೆ ಈ ಬಯಕೆ ಉಂಟಾಗುವುದು- ‘ಅಹೋ ನನಗೆ ಮುದಿತನ ಬಾರದಿರಲಿ, ನಮಗೆ ಮುಪ್ಪು ಬಾರದಿರಲಿ’ ಎಂದು. ಆದರೆ ಈ ಬಯಕೆ ಈಡೇರದು. ಇದೂ ಕೂಡ ಬಯಸಿದ್ದನ್ನು ಪಡೆಯದಿರುವುದು ದುಃಖ. ಭಿಕ್ಷುಗಳೇ! ವ್ಯಾಧಿ (ಧರ್ಮ) ಇರುವ ಜೀವಿಗಳಿಗೆ ಇಂತಹ ಇಚ್ಛೆ ಉಂಟಾಗುತ್ತದೆ- ‘ಓ ನಾವು ರೋಗಗ್ರಸ್ತರಾಗುವುದು ಬೇಡ, ನಮಗೆ ವ್ಯಾಧಿಗಳು ಬಾರದೆ ಇರಲಿ’. ಆದರೆ ಈ ಇಚ್ಛೆ ಪೂರೈಸುವುದಿಲ್ಲ. ಇದೇನು ಬಯಸಿದ್ದನ್ನು ಪಡೆಯುವುದಿಲ್ಲ ಅದೂ ದುಃಖ. ಭಿಕ್ಖುಗಳೇ ಮರಣ ಧರ್ಮವಿರುವ ಜೀವಿಗಳಿಗೆ ಇಂತಹ ಇಚ್ಛೆ ಉಂಟಾಗುತ್ತದೆ. ‘ಅಯ್ಯೋ ನಾವು ಸಾಯುವವರಾಗಬಾರದು, ನಮಗೆ ಸಾವು ಬಾರದಿರಲಿ’ ಎಂದು. ಆದರೆ ಈ ಇಚ್ಛೆ ಪೂರೈಸುವುದಿಲ್ಲ. ಇದೇನು ಬಯಕೆ ಪಡೆಯುವುದಿಲ್ಲ ಅದೂ ದುಃಖ. ಶೋಕ, ಅಳಲು, ನೋವು, ದುಮ್ಮಾನ, ದುಗುಡ ಗುಣಗಳಿರುವ ಜೀವಿಗಳಿಗೆ ಭಿಕ್ಷುಗಳೇ, ಇಂಥ ಇಚ್ಛೆ ಉಂಟಾಗುತ್ತದೆ- ‘ಅಹೋ ನಾವು ಶೋಕ, ಅಳಲು, ನೋವು, ದುಮ್ಮಾನ, ದುಗುಡದ ಗುಣಗಳನ್ನು ಹೊಂದಿರಬಾರದು. ಶೋಕ... ದುಗುಡಗಳು ನಮಗೆ ಬಾರದಿರಲಿ’ ಎಂದು. ಆದರೆ ಈ ಬಯಕೆ ಈಡೇರದು. ಹೀಗೆ ಬಯಸಿದ್ದನ್ನು ಪಡೆಯದಿರುವುದು ದುಃಖ.

28. “ಭಿಕ್ಖುಗಳೇ! ಒಟ್ಟಾರೆಯಾಗಿ ಇದು ಉಪಾದಾನ ಖಂಧಗಳು ಹೇಗೆ ದುಃಖ? ಅದು ಹೇಗೆಂದರೆ: ರೂಪ ಉಪಾದಾನ ಸ್ಕಂದ, ವೇದನಾ... ಸಂಜ್ಞಾ... ಸಂಖಾರ... ವಿಞ್ಞಾಣ... ಇವನ್ನೇ ಭಿಕ್ಖುಗಳೇ ಐದು ಉಪಾದಾನ ಸ್ಕಂಧಗಳಲ್ಲಿ ದುಃಖ ಎನ್ನುತ್ತಾರೆ. ಇದಕ್ಕೆ ಭಿಕ್ಷುಗಳೇ ಹೇಳುತ್ತಾರೆ ‘ದುಃಖವೆಂಬ ಆರ್ಯಸತ್ಯ’ ಎಂದು.

ದುಃಖ ಸಮುದಯದ ಆರ್ಯಸತ್ಯದ ನಿರ್ದೇಶ

29. “ಭಿಕ್ಖುಗಳೇ, ದುಃಖದ ಉದಯವೆಂಬ ಆರ್ಯಸತ್ಯ ಯಾವುದು? ಈ ಯುವ ತೃಷ್ಣೆ (ತಣ್ಹಾ) ಇದೆ ಮತ್ತೆ ಮತ್ತೆ ಬರುವುದು, ಸಂತೋಷ ಮತ್ತು ರಾಗದ ಜತೆಗೆ ಬರುವುದು, ಆಗಾಗ ಅಲ್ಲಲ್ಲಿ ಖುಷಿ ಪಡುವುದು (ಅದೇ ದುಃಖ ಉದಯ) ಅದು ಹೇಗೆಂದರೆ ಕಾಮ ತಣ್ಹಾ, ಭವ ತಣ್ಹಾ, ವಿಭವ ತಣ್ಹಾ.

“ಭಿಕ್ಖುಗಳೇ, ಆದರೆ ಆ ತಣ್ಹಾ ಯಾವುದು ಹುಟ್ಟಿದ್ದರಿಮದ ತಾನು ಹುಟ್ಟುತ್ತದೆ; ಯಾವುದು ನಾಶವಾದಾಗ ತಾನು ನಾಶವಾಗುತ್ತದೆ. ಲೋಕದಲ್ಲಿ ಯಾವುವು ಪ್ರಿಯರೂಪವೋ ಅದು ಉಂಟಾದಾಗ ಈ ತಣ್ಹಾ ಉಂಟಾಗುತ್ತದೆ. ಅದು ಅಡಗಿದಾಗ ಇದೂ ಅಡಗುತ್ತದೆ. ಲೋಕದಲ್ಲಿ ಪ್ರಿಯರೂಪವಾದದ್ದು ಯಾವುದು? ಕಣ್ಣು ಲೋಕದಲ್ಲಿ ಪ್ರಿಯರೂಪ... ಶ್ರವಣ (ಕಿವಿ)... ಮೂಗು... ನಾಲಿಗೆ... ಕಾಯ... ಮನಸ್ಸು ಲೋಕದಲ್ಲಿ ಪ್ರಿಯರೂಪ. ಇದು ಮೇಲೆ ಬಂದಾಗ ತಣ್ಹಾ ಉಂಟಾಗುತ್ತದೆ. ಇವು ಅಡಗಿದಾಗ ತಣ್ಹಾ ಅಡಗುತ್ತದೆ. ಲೋಕದಲ್ಲಿ ರೂಪ... ಶಬ್ದ... ಗಂಧ... ರಸ... ಸ್ಪರ್ಶ... ಪ್ರಿಯರೂಪವಾದವು... ಚಕ್ಷುವಿಞ್ಞಾಣ (ನೋಡಿದ್ದರ ಬುದ್ಧಿ)... ಕೇಳಿದ್ದು... ಮೂಸಿದ್ದು... ನಾಲಿಗೆಯದು... ಕಾಯದ್ದು... ಮನೋವಿಞ್ಞಾಣ ಲೋಕದಲ್ಲಿ ಪ್ರಿಯರೂಪದ್ದು ಇವುಗಳಿದ್ದಾಗ ಉದಯಿಸುವ ತಣ್ಹಾ ಉದಯಿಸುತ್ತದೆ, ಇವು ಅಡಗಿದಾಗ ಅದೂ ಅಡಗುತ್ತದೆ.

ಲೋಕದಲ್ಲಿ ಕಣ್ಣಿನ ಸಂಬಂಧದಿಂದ... ಕಿವಿಯ... ಮೂಗಿನ... ನಾಲಿಗೆಯ... ಕಾಯದ... ಮನಸ್ಸಿನ ಸಂಬಂಧದಿಂದ ಪ್ರಿಯರೂಪಗಳಾಗುತ್ತವೆ. ಇವು ಉಂಟಾದಾಗ ತಣ್ಹಾ ಉಂಟಾಗುತ್ತದೆ, ಇವು ಅಡಗಿದಾಗ ಅದೂ ಅಡಗುತ್ತದೆ.

ಲೋಕದಲ್ಲಿ ಕಣ್ಣಿನಿಂದ ಹುಟ್ಟಿದ (ಸಂ)ವೇದನೆ... ಕಿವಿಯಿಂದ... ಮೂಗಿನಿಂದ... ನಾಲಿಗೆಯಿಂದ... ಕಾಯದಿಂದ... ಮನಸ್ಸಿನಿಂದ ಹುಟ್ಟಿದ (ಸಂ)ವೇದನೆ ಪ್ರಿಯರೂಪದ್ದು, ಇವು ಉಂಟಾದಾಗ ತಣ್ಹಾ ಉಂಟಾಗುತ್ತದೆ. ಇವು ಅಡಗಿದಾಗ ಅದೂ ಅಡಗುತ್ತದೆ.

ರೂಪಸಂಜ್ಞೆ... ಲೋಕದಲ್ಲಿ ಪ್ರಿಯರೂಪವಾದವು... ಇವು ಉಂಟಾದಾಗ ತಣ್ಹಾ, ಇವು ಅಡಗಿದಾಗ...

ರೂಪ ಸಂಚೇತನಾ (ಮನಸ್ಸು ಆವರಿಸಿರುವುದು)... ಶಬ್ದ... ಗಂಧ... ರಸ... ಸ್ಪರ್ಶ... ಧರ್ಮ ಸಂಚೇತನಾ ಲೋಕದಲ್ಲಿ ಪ್ರಿಯರೂಪವಾದವು... ಇವು ಉಂಟಾದಾಗ ತಣ್ಹಾ, ಇವು ಅಡಗಿದಾಗ ಅವು ...

ರೂಪದ ತಣ್ಹಾ (ಬಯಕೆ) ಶಬ್ದ... ಗಂಧ... ರಸ... ಸ್ಪರ್ಶ... ಧಮ್ಮ ತಣ್ಹಾ ಲೋಕದಲ್ಲಿ ಪ್ರಿಯರೂಪವಾದವು. ಇವು ಉಂಟಾದಾಗ ತಣ್ಹಾ ಉಂಟಾಗುವುದು ಇದು ಅಡಗಿದಾಗ ಅವು ಅಡಗುವುವು.

ರೂಪವಿತರ್ಕ... ಶಬ್ದ... ಗಂಧ... ರಸ... ಸ್ಪರ್ಶ... ಧಮ್ಮ ವಿತರ್ಕಗಳು ಲೋಕದಲ್ಲಿ ಪ್ರಿಯರೂಪವಾದವು. ಇವು ಉಂಟಾದಾಗ ತಣ್ಹಾ... ಅವು ಅಡಗುತ್ತದೆ.

ರೂಪವಿಚಾರ... ಶಬ್ದ... ಗಂಧ... ರಸ... ಸ್ಪರ್ಶ... ಧಮ್ಮ ವಿಚಾರಗಳು ಲೋಕದಲ್ಲಿ ಪ್ರಿಯರೂಪವಾದವು. ಇವು ಉಂಟಾದಾಗ ತಣ್ಹಾ... ಇವು ಅಡಗಿದಾಗ ಅವೂ ಅಡಗುತ್ತವೆ.

ನಿರೋಧ ಸತ್ಯದ ನಿರ್ದೇಶ

30. “ಭಿಕ್ಖುಗಳೇ! ದುಃಖ ನಿರೋಧ ಎಂಬ ಆರ್ಯ ಸತ್ಯ ಯಾವುದು? ಯಾವುದು ಆ ತಣ್ಹಾದ ಬಗ್ಗೆ ಅಶೇಷ (ಏನೂ ಉಳಿಯದಂತೆ) ವಿರಾಗ, ಅದನ್ನು ಪೂರ್ತಿ ತಡೆಗಟ್ಟುವುದು, ತ್ಯಾಗ, ಬಿಟ್ಟುಬಿಡುವುದು ಮುಕ್ತಿ, ಬಯಲುಗೊಳಿಸುವುದು.

“ಭಿಕ್ಖುಗಳೇ, ಆದರೆ ಯಾವುದು ಕಳೆದಾಗ ತಣ್ಹಾ ಕಳೆಯುತ್ತದೆ? ಯಾವುದನ್ನು ತೊಡೆದಾಗ ಅದನ್ನು ತೊಡೆಯಲಾಗುತ್ತದೆ? ಲೋಕದಲ್ಲಿ ಪ್ರಿಯರೂಪವಾದದ್ದು ಏನಿದೆ, ಅದನ್ನು ಕಳೆದಾಗ ತಣ್ಹಾ ಕಳೆಯುತ್ತದೆ. ಅದನ್ನು ತೊಡೆದಾಗ ಇದು ತೊಡೆಯಲ್ಪಡುತ್ತದೆ.

ಮತ್ತೆ ಲೋಕದಲ್ಲಿ ಪ್ರಿಯರೂಪವಾದದ್ದು ಯಾವುದು? ಕಣ್ಣು... ಕಿವಿ... ಮೂಗು... ನಾಲಿಗೆ... ಕಾಯ... ಮನಸ್ಸು ಲೋಕದಲ್ಲಿ ಪ್ರಿಯರೂಪವಾದದ್ದು. ಇದು ಕಳೆದರೆ... ತೊಡೆದರೆ ತಣ್ಹಾ ತೊಡೆದು ಹೋಗುವುದು.

ರೂಪ... ಶಬ್ದ... ಗಂಧ... ರಸ... ಸ್ಪರ್ಶ... ಧಮ್ಮ ಲೋಕದಲ್ಲಿ ಪ್ರಿಯವಾದವು. ಇವು ಉಂಟಾದಾಗ ತಣ್ಹಾ... ಇವು ಅಡಗಿದಾಗ ಅವೂ ಅಡಗುತ್ತವೆ.

ಚಕ್ಷು ವಿಞ್ಞಾಣ... ಶ್ರೋತೃ... ಘ್ರಾಣ... ಜಿಹ್ವಾ... ಕಾಯ... ಮನೋ ವಿಞ್ಞಾಣ ಲೋಕದಲ್ಲಿ ಪ್ರಿಯವಾದವು ಇವನ್ನು ಕಳೆದರೆ... ತೊಡೆದರೆ ತಣ್ಹಾ ತೊಡೆದು ಹೋಗುವುದು.

ಕಣ್ಣಿನ ಸಂಬಂಧ... ಕಿವಿ... ಮೂಗು... ನಾಲಿಗೆ... ಕಾಯ... ಮನಸ್ಸು... ಸಂಬಂಧ ಲೋಕದಲ್ಲಿ ಪ್ರಿಯವಾದವು. ಇವನ್ನು ಕಳೆದರೆ ತಣ್ಹಾ ಕಳೆಯುತ್ತದೆ, ಇವನ್ನು ತೊಡೆದರೆ ಅದೂ ತೊಡೆದುಹೋಗುವುದು. ಕಣ್ಣಿನ ಸಂಬಂಧದಿಂದ ಬಂದ (ಸಂವೇದನೆ)... ಕಿವಿ... ಮೂಗು... ನಾಲಿಗೆ... ಕಾಯ... ಮನಸ್ಸು ಸಂಬಂಧದಿಂದ ಬಂದ (ಸಂವೇದನೆ)... ಕಿವಿ... ಮೂಗು... ನಾಲಿಗೆ... ಕಾಯ... ಮನಸ್ಸು... ಸಂಬಂಧದಿಂದ ಬಂದ (ಸಂ)ವೇದನೆ ಲೋಕದಲ್ಲಿ ಪ್ರಿಯವಾದವು. ಇವನ್ನು ಕಳೆದರೆ ತಣ್ಹಾ ಕಳೆಯುತ್ತದೆ, ಇವನ್ನು ತೊಡೆದರೆ ಅದೂ ತೊಡೆದುಹೋಗುವುದು.

ರೂಪಸಂಜ್ಞೆ... ಶಬ್ದ... ಗಂಧ... ರಸ... ಸ್ಪರ್ಶ... ಧರ್ಮ ಸಂಜ್ಞೆ ಲೋಕದಲ್ಲಿ ಪ್ರಿಯರೂಪವಾದವು. ಇವನ್ನು ಕಳೆದರೆ ತಣ್ಹಾ ತಣ್ಹಾ ಕಳೆಯುತ್ತದೆ, ಇವನ್ನು ತೊಡೆದರೆ ಅವೂ ತೊಡೆದುಹೋಗುವುದು.

ರೂಪಸಂಚೇತನ... ಶಬ್ದ... ಗಂಧ... ರಸ... ಸ್ಪರ್ಶ... ಧಮ್ಮ ಸಂಚೇತನ ಲೋಕದಲ್ಲಿ ಪ್ರಿಯರೂಪವಾದವು. ಇವನ್ನು ಕಳೆದರೆ ತಣ್ಹಾ ಕಳೆಯುತ್ತದೆ, ಇವನ್ನು ತೊಡೆದರೆ ಅದೂ ತೊಡೆದುಹೋಗುವುದು.

ರೂಪತಣ್ಹಾ... ಶಬ್ದ... ಗಂಧ... ರಸ... ಸ್ಪರ್ಶ... ಧಮ್ಮ ತಣ್ಹಾ ಲೋಕದಲ್ಲಿ ಪ್ರಿಯವಾದವು. ಇವು ಕಳೆದರೆ ತಣ್ಹಾ ಕಳೆಯುತ್ತದೆ, ಇವನ್ನು ತೊಡೆದರೆ ಅದೂ ತೊಡೆದುಹೋಗುತ್ತದೆ.

ರೂಪವಿತರ್ಕ... ಶಬ್ದ... ಗಂಧ... ರಸ... ಸ್ಪರ್ಶ... ಧರ್ಮ ವಿತರ್ಕ ಲೋಕದಲ್ಲಿ ಪ್ರಿಯರೂಪವಾದವು... ಇವು ಕಳೆದರೆ ತಣ್ಹಾ ಕಳೆಯುತ್ತದೆ, ಇವನ್ನು ತೊಡೆದರೆ ಅದೂ ತೊಡೆದುಹೋಗುವುದು.

ರೂಪ ವಿಚಾರ... ಶಬ್ದ... ಗಂಧ... ರಸ... ಸ್ಪರ್ಶ... ಧರ್ಮ ವಿಚಾರ ಲೋಕದಲ್ಲಿ ಪ್ರಿಯರೂಪವಾದವು. ಇವು ಕಳೆದರೆ ತಣ್ಹಾ ಕಳೆಯುತ್ತದೆ, ಇವನ್ನು ತೊಡೆದರೆ ಅದೂ ತೊಡೆದುಹೋಗುವುದು.

ಮಾರ್ಗ ಸತ್ಯದ ನಿರ್ದೇಶ

31. “ಭಿಕ್ಖುಗಳೇ! ದುಃಖ ನಿರೋಧಕ್ಕೆ ಒಯ್ಯುವ ದಾರಿ ಎಂಬ ಆರ್ಯಸತ್ಯ ಯಾವುದು? ಇದೇ ಆ ಆರ್ಯ ಅಷ್ಟಾಂಗಿಕ (ಎಂಟು ಭಾಗಗಳಿಂದ ಕೂಡಿದ) ಮಾರ್ಗ- ಸಮ್ಯಕ್ ದೃಷ್ಟಿ, ಸಮ್ಯಕ್ ಸಂಕಲ್ಪ, ಸಮ್ಯಕ್ ವಾಚ, ಸಮ್ಯಕ್ ಕರ್ಮಾಂತ, ಸಮ್ಯಕ್ ಆಜೀವ, ಸಮ್ಯಕ್ ವ್ಯಾಯಾಮ, ಸಮ್ಯಕ್ ಎಚ್ಚರ, ಸಮ್ಯಕ್ ಸಮಾಧಿ.

“ಭಿಕ್ಖುಗಳೇ! ಸಮ್ಮಾದಿಟ್ಠಿ (ಸಮ್ಯಕ್ ದೃಷ್ಟಿ) ಯಾವುದು? ಭಿಕ್ಷುಗಳೇ, ಯಾವುದು ದುಃಖದ ಜ್ಞಾನ, ದುಃಖ ಉಂಟಾಗುವುದರ ಜ್ಞಾನ, ದುಃಖ ತಡೆಯುವುದರ ಜ್ಞಾನ, ದುಃಖ ತಡೆಯುವುದಕ್ಕೆ ಒಯ್ಯುವ ದಾರಿಯ ಜ್ಞಾನ ಏನಿದೆ ಅದನ್ನೇ ಭಿಕ್ಖುಗಳೇ ಸಮ್ಮಾದಿಟ್ಠಿ ಎನ್ನುತ್ತಾರೆ.

“ಭಿಕ್ಖುಗಳೇ! ಸಮ್ಮಾ ಸಂಕಪ್ಪ (ಸಮ್ಯಕ್ ಸಂಕಲ್ಪ) ಯಾವುದು? ನೈಷ್ಕರ್ಮ್ಯದ ಸಂಕಲ್ಪ, ಕೊಲ್ಲಬಾರದೆಂಬ ಸಂಕಲ್ಪ, ಅವಿಹಿಂಸೆಯ ಸಂಕಲ್ಪ, ಇದನ್ನು ಭಿಕ್ಖುಗಳೇ ಸಮ್ಮಾ ಸಂಕಪ್ಪ ಎನ್ನುತ್ತಾರೆ.

“ಭಿಕ್ಖುಗಳೇ, ಸಮ್ಮಾ ವಾಚಾ (ಸರಿಯಾದ ಮಾತು) ಯಾವುದು? ಸುಳ್ಳು (ಮೋಸದ) ಮಾತಿನಿಂದ ವಿರಮಣ (ಹಿಂದೆ ಸರಿಯುವುದು) ಚಾಡಿ ಮಾತಿನಿಂದ ಹಿಂತೆಗೆಯುವುದು (ಹರಟೆ ಕೊಚ್ಚುವುದರಿಂದ ಹಿಂತೆಗೆಯುವುದು) ಕಡೆನುಡಿಯಿಂದ ಹಿಂತೆಗೆಯುವುದು. ಇದಕ್ಕೆನ್ನುತ್ತಾರೆ ಸಮ್ಮಾವಾಚ ಎಂದು.

“ಭಿಕ್ಖುಗಳೇ, ಸಮ್ಮಾ ಕಮ್ಮಾಂತ (ಸರಿಯಾದ ಕೆಲಸ) ಯಾವುದು? ಪ್ರಾಣಾತಿಪಾತ (ಪ್ರಾಣಿ ಹಿಂಸೆ) ದಿಂದ ವಿರಮಿಸುವುದು, ಕೊಡದ್ದನ್ನು ಕಸಿಯುವುದರಿಂದ ವಿರಮಿಸುವುದು. ಕಾಮದಲ್ಲಿ ಮಿಥ್ಯಾಚಾರದಿಂದ (ಅಯೋಗ್ಯ ಸಂಬಂಧಗಳಿಂದ) ವಿರಮಿಸುವುದು. ಇದಕ್ಕೆನ್ನುತ್ತಾರೆ. ಭಿಕ್ಖುಗಳೇ ಸಮ್ಮಾಕಮ್ಯಾಂತ, ಸರಿಯಾದ ಕೆಲಸ ಎಂದು.

“ಭಿಕ್ಖುಗಳೇ, ಯಾವುದು ಸಮ್ಮಾ ಆಜೀವ (ಸರಿಯಾದ ಬದುಕು)? ಇಲ್ಲಿ ಭಿಕ್ಖುಗಳೇ, ಆರ್ಯಶ್ರಾವಕರು ತಮಗೆ ಸುಳ್ಳಾದ (ಮಿಥ್ಯಾ) ಬದುಕಿನ ರೀತಿ ಬಿಟ್ಟು (ತಮಗೆ) ಸರಿಯಾದ ಬದುಕಿನಿಂದ ಬಾಳುತ್ತಾರೆ. ಇದಕ್ಕೆನ್ನುತ್ತಾರೆ, ಭಿಕ್ಖುಗಳೇ, ಸಮ್ಮಾ ಆಜೀವ ಎಂದು.

“ಭಿಕ್ಖುಗಳೇ, ಸಮ್ಮಾ ವಾಯಾಮ (ಸರಿಯಾದ ಪ್ರಯತ್ನಪೂರ್ವಕ ಕೆಲಸ) ಯಾವುದು? ಇಲ್ಲಿ ಭಿಕ್ಷುಗಳೇ! ಭಿಕ್ಷುವು ಹುಟ್ಟದ ಪಾಪಗಳನ್ನು, ಅಕುಶಲ (ಮನೋ) ಧರ್ಮಗಳನ್ನು ಹುಟ್ಟದೇ ಇರುವಂತೆ ಉದ್ದೇಶಪಡುತ್ತಾನೆ, ಅದು ಪ್ರಯತ್ನ. ಅದಕ್ಕೆ (ತನ್ನ) ಬಲ ಹಾಕಲು (ವಿರಿಯ) ಆರಂಭಿಸುತ್ತಾನೆ. ಚಿತ್ತವನ್ನು ಹಿಡಿದು ಸುಡುತ್ತಾನೆ. ಉತ್ಪನ್ನವಾಗಿರುವ ಪಾಪಗಳನ್ನು, ಅಕುಶಲ (ಮನೋ) ಧರ್ಮಗಳನ್ನು ಹಾಳುಮಾಡಲು ಉದ್ದೇಶಪಡುತ್ತಾನೆ, ಪ್ರಯತ್ನಿಸುತ್ತಾನೆ, ಬಲ ಹಾಕಲಾರಂಭಿಸುತ್ತಾನೆ. ಚಿತ್ತವನ್ನು ಹಿಡಿದು ಸುಡುತ್ತಾನೆ. ಹುಟ್ಟದ ಕುಸಲ ಧಮ್ಮಗಳನ್ನು ಉತ್ಪಾದಿಸಲು ಉದ್ದೇಶಪಡುತ್ತಾನೆ, ಪ್ರಯತ್ನಿಸುತ್ತಾನೆ. ಬಲ ಹಾಕಲು ಆರಂಭಿಸುತ್ತಾನೆ, ಚಿತ್ತವನ್ನು ಹಿಡಿದು ಸುಡುತ್ತಾನೆ; ಉತ್ಪನ್ನವಾದ ಕುಶಲ ಧರ್ಮಗಳನ್ನು ಉಳಿಸಲು, ಅವು ಸುಳ್ಳಾಗದಿರಲು, ಮತ್ತೆ ಮತ್ತೆ ಬರಲು ವಿಪುಲವಾದ (ಮೆತ್ತಾದಿ) ಭಾವನೆಗಳನ್ನು ಪೂರೈಸಲು ಉದ್ದೇಶಪಡುತ್ತಾನೆ, ಪ್ರಯತ್ನಿಸುತ್ತಾನೆ. ಬಲ ಹಾಕಲು ಆರಂಭಿಸುತ್ತಾನೆ, ಚಿತ್ತವನ್ನು ಹಿಡಿದು ಸುಡುತ್ತಾನೆ. ಇದಕ್ಕೆ ಹೇಳುತ್ತಾರೆ ಭಿಕ್ಖುಗಳೇ ಸಮ್ಮಾ ವಾಯಾಮ ಎಂದು.

“ಯಾವುದು ಭಿಕ್ಖುಗಳೇ ಸಮ್ಮಾಸತಿ (ಸರಿಯಾದ ಎಚ್ಚರ). ಇಲ್ಲಿ ಭಿಕ್ಖುಗಳೇ, ಭಿಕ್ಷುವು ಕಾಯದಲ್ಲಿ ಕಾಯಾನುಪಸ್ಸಿಯಾಗಿ ವಿಹರಿಸುತ್ತಾನೆ ಮತ್ತು ಸರಿಯಾಗಿ ತಿಳಿದು ಎಚ್ಚರವನ್ನು ಬಳಸಿ ಲೋಕದಲ್ಲಿ ಲೋಭದ ದುರ್ಮನಸ್ಕತೆಯನ್ನು ಸುಡುತ್ತಾನೆ. (ಸಂ)ವೇದನೆಗಳಲ್ಲಿ ವೇದನಾನುಪಸ್ಸಿಯಾಗಿ ವಿಹರಿಸುತ್ತಾನೆ. ಧಮ್ಮದಲ್ಲಿ ಧಮ್ಮಾನುಪಸ್ಸಿಯಾಗಿ ವಿಹರಿಸುತ್ತಾನೆ. ಮತ್ತು ಸರಿಯಾಗಿ ತಿಳಿದು, ಎಚ್ಚರವನ್ನು ಬಳಸಿ ಲೋಕದಲ್ಲಿ ಲೋಭದ ದುರ್ಮನಷ್ಕತೆಯನ್ನು ಸುಡುತ್ತಾನೆ. ಇದಕ್ಕೆ ಭಿಕ್ಖುಗಳೇ ಎನ್ನುತ್ತಾರೆ ಸಮ್ಮಾಸತಿ ಎಂದು.

“ಯಾವುದು ಭಿಕ್ಖುಗಳೇ, ಸಮ್ಮಾ ಸಮಾಧಿ (ಸರಿಯಾದ ಸಮಾಧಿ ಧ್ಯಾನ) ಇಲ್ಲಿ ಭಿಕ್ಖುಗಳೇ, ಭಿಕ್ಷುವು ಕಾಮಗಳನ್ನು ವಿಂಗಡಿಸಿ, ಅಕುಶಲ ಧರ್ಮಗಳನ್ನು ವಿಂಗಡಿಸಿ, ವಿತರ್ಕ ಸಹಿತ, ವಿಚಾರ ಸಹಿತವಾಗಿ ವಿವೇಕದಿಂದ ಹುಟ್ಟಿದ ಪೀತಿ (ಪ್ರೀತಿ) ಸುಖದ ಮೊದಲ ಧ್ಯಾನ (ಸ್ಥಿತಿ) ಸಂಪಾದಿಸಿ ವಿಹರಿಸುತ್ತಾನೆ. ವಿತರ್ಕ ವಿಚಾರಗಳು ಅಡಗಿದ ಚೇತಸ್ಸಿನ ಸಮಾಧಾನವಾದ ಏಕೋಭಾವವನ್ನು ವಿತರ್ಕ ವಿಚಾರಗಳಿಲ್ಲದ ಸಮಾಧಿಯಿಂದ ಹುಟ್ಟಿದ ಪೀತಿ ಸುಖದ ಎರಡನೆಯ ಧ್ಯಾನ (ಸ್ಥಿತಿ) ಪಡೆದು ವಿಹರಿಸುತ್ತಾನೆ. ಪೀತಿಯಿಂದ ವಿರಾಗ ಮತ್ತು ಉಪೇಕ್ಷೆ (ಸಮಚಿತ್ತತೆ) ಗಳಲ್ಲಿ ವಿಹರಿಸುತ್ತಾನೆ. ಇರವನ್ನು ತಿಳಿದು ಸುಖವನ್ನು ಕಾಯದಲ್ಲಿ ಅನುಭವಿಸುತ್ತಾನೆ. ಯಾವುದನ್ನು ಆರ್ಯರು ‘ಉಪೇಕ್ಷೆಯ ಎಚ್ಚರದಿಂದ ಸುಖವಾಗಿ ವಿಹರಿಸುತ್ತಾನೆ’ ಎನ್ನುವರೋ ಆ ಮೂರನೆಯ ಧ್ಯಾನ ಸ್ಥಿತಿ ಪಡೆದು ವಿಹರಿಸುತ್ತಾನೆ. ಸುಖವನ್ನು ತೊರೆದು, ದುಃಖವನ್ನು ತೊರೆದು, ಹಿಂದಿನಂತೆ ಒಳ್ಳೆ ಮನಸ್ಸು, ಕೆಟ್ಟ ಮನಸ್ಸುಗಳನ್ನು ಮುಳುಗಿಸಿ, ಸುಖವೂ ಅಲ್ಲದ, ದುಃಖವೂ ಅಲ್ಲದ, ಉಪೇಕ್ಷೆಯ ಅರಿವಿನಿಂದ ಪರಿಶುದ್ಧವಾದ ನಾಲ್ಕನೆಯ ಧ್ಯಾನ ಸ್ಥಿತಿಯನ್ನು ಪಡೆದು ವಿಹರಿಸುತ್ತಾನೆ. ಇದಕ್ಕೆನ್ನುತ್ತಾರೆ ಭಿಕ್ಖುಗಳೇ, ‘ಸಮ್ಮಾ ಸಮಾಧಿ’ ಎಂದು. ಇದಕ್ಕೆನ್ನುತ್ತಾರೆ ಭಿಕ್ಖುಗಳೇ ‘ದುಃಖ (ತಲ್ಲಣ)ಗಳ ತಡೆಗಟ್ಟುವಿಕೆಗೆ ಒಯ್ಯುವ ದಾರಿ’ ಎಂಬ ಆರ್ಯಸತ್ಯ ಎಂದು.

32. “ಹೀಗೆ ತನ್ನೊಳಗೆ ಧರ್ಮಗಳಲ್ಲಿ ಧಮ್ಮಾನುಪಸ್ಸಿಯಾಗಿ ತಂಗುತ್ತಾನೆ, ಅಥವಾ ಪರರ ಧರ್ಮಗಳಲ್ಲಿ ಧಮ್ಮಾನುಪಸ್ಸಿಯಾಗಿ ತಂಗುತ್ತಾನೆ, ಅಥವಾ ತನ್ನ ಮತ್ತು ಪರರ ಧರ್ಮಗಳಲ್ಲಿ ಧಮ್ಮಾನುಪಸ್ಸಿಯಾಗಿ ತಂಗುತ್ತಾನೆ; ಅಥವಾ ಧರ್ಮಗಳಲ್ಲಿ ಉತ್ಪತ್ತಿ ಧರ್ಮವನ್ನು (ವಿಪಸ್ಸನಾ ಮೂಲಕವಾಗಿ) ಧ್ಯಾನಿಸುವವನಾಗಿ ತಂಗುತ್ತಾನೆ, ಅಥವಾ ಧರ್ಮಗಳಲ್ಲಿ ನಾಶಧರ್ಮವನ್ನು (ವಿಪಸ್ಸನಾ ಮೂಲಕವಾಗಿ) ಧ್ಯಾನಿಸುವವನಾಗಿ ತಂಗುತ್ತಾನೆ, ಅಥವಾ ಉತ್ಪತ್ತಿ ಮತ್ತು ನಾಶಧರ್ಮಗಳನ್ನು (ವಿಪಸ್ಸನಾ ಮೂಲಕವಾಗಿ) ಧ್ಯಾನಿಸುವವನಾಗಿ ತಂಗುತ್ತಾನೆ, ಅಥವಾ ‘ಧರ್ಮವಷ್ಟೇ ಇದೆ’ ಎಂಬ ಎಚ್ಚರ ಬರಿಯ ವಿಪಸ್ಸಾನ ಜ್ಞಾನಕ್ಕಾಗಿ ಮಾತ್ರವೇ; ದೃಢವಾದ ಎಚ್ಚರಕ್ಕಾಗಿ ಮಾತ್ರವೇ ಎಂದು ನೆಲೆಯೂರುತ್ತದೆ; ಮತ್ತು ಆತನು ಯಾವುದೇ ಹಂಗಿಲ್ಲದೇ ತಂಗುತ್ತಾನೆ, ಲೋಕದಲ್ಲಿ ಯಾವುದಕ್ಕೂ ಅಂಟಿಕೊಳ್ಳುವುದಿಲ್ಲ. ಭಿಕ್ಷುಗಳೇ, ಈ ರೀತಿಯಾಗಿಯೇ ಭಿಕ್ಷುವು ನಾಲ್ಕು ಆರ್ಯಸತ್ಯಗಳೆಂಬ ಧರ್ಮಗಳಲ್ಲಿ ಧಮ್ಮಾನುಪಸ್ಸಿಯಾಗಿ ತಂಗುತ್ತಾನೆ.

ಹೀಗೆ ಸತ್ಯಪರ್ವ ಹೇಳಿದೆ.

ಧಮ್ಮಾನುಪ್ಪಸನ ತಿಳಿಸಿದೆ.

33. “ನಿಜವಾಗಿಯು ಭಿಕ್ಷುಗಳೇ, ಯಾರು ಈ ನಾಲ್ಕು ಎಚ್ಚರದ ನೆಲೆಗಳನ್ನು ಹೀಗೆ ಏಳು ವರ್ಷಗಳ ಕಾಲ ಅಭ್ಯಾಸ ಮಾಡುತ್ತಾರೋ ಅವರು ಎರಡು ಫಲಗಳಲ್ಲಿ ಯಾವುದಾದರೊಂದು ಫಲವನ್ನು ಆಕಾಂಕ್ಷಿಸಬಹುದು. - ಇಲ್ಲೇ ಈಗಲೇ ಲೋಕೋತ್ತರ ಜ್ಞಾನಲಾಭ ಅಥವಾ ಉಪಾದಿ (ವಾಸನೆ) ಶೇಷ (ಅವಶೇಷ) ಇದ್ದರೆ ಅನಾಗಾ ಮಿತ್ವಲಾಭ.165

“ಭಿಕ್ಷುಗಳೇ, ಏಳು ವರ್ಷಗಳಿರಲಿ ಬಿಡಿ. ಭಿಕ್ಷುಗಳೇ, ಯಾರಾದರೂ ಆಗಲಿ ಈ ನಾಲ್ಕು ಎಚ್ಚರದ ನೆಲೆಗಳನ್ನು ಹೀಗೆ ಆರು ವರ್ಷಗಳ ಕಾಲ... ಐದು ವರ್ಷಗಳ ಕಾಲ... ನಾಲ್ಕು ವರ್ಷಗಳ ಕಾಲ... ಮೂರು ವರ್ಷಗಳ ಕಾಲ... ಎರಡು ವರ್ಷಗಳ ಕಾಲ... ಒಂದು ವರ್ಷದ ಕಾಲ... ಭಿಕ್ಷುಗಳೇ, ಒಂದು ವರ್ಷವಿರಲಿ ಬಿಡಿ. ಯಾರು ಈ ನಾಲ್ಕು ಎಚ್ಚರದ ನೆಲೆಗಳನ್ನು ಹೀಗೆ ಏಳು ತಿಂಗಳು ಅಭ್ಯಾಸ ಮಾಡುತ್ತಾರೋ ಅವರು ಎರಡು ಫಲಗಳಲ್ಲಿ ಯಾವುದಾದರೊಂದು ಫಲವನ್ನು ಆಕಾಂಕ್ಷಿಸಬಹುದು. ಇಲ್ಲೇ ಈಗಲೇ ಲೋಕೋತ್ತರ ಜ್ಞಾನಲಾಭ ಅಥವಾ ಉಪಾದಿ (ವಾಸನೆ) ಶೇಷ (ಅವಶೇಷ) ಇದ್ದರೆ ಅನಾಗಾಮಿತ್ವ ಲಾಭ.

“ಭಿಕ್ಷುಗಳೇ, ಏಳು ತಿಂಗಳನ್ನು ಬಿಡಿ, ಭಿಕ್ಷುಗಳೇ, ಯಾರಾದರೂ ಆಗಲಿ ಈ ನಾಲ್ಕು ಎಚ್ಚರದ ನೆಲೆಗಳನ್ನು ಹೀಗೆ ಆರು ತಿಂಗಳ ಕಾಲ ಅಭ್ಯಾಸ ಮಾಡಿದರೂ... ಐದು ತಿಂಗಳು... ನಾಲ್ಕು ತಿಂಗಳು... ಮೂರು ತಿಂಗಳು... ಒಂದು ತಿಂಗಳು... ಅರ್ಧ ತಿಂಗಳು ಅಭ್ಯಾಸ ಮಾಡಿದರೂ ಭಿಕ್ಷುಗಳೇ, ಅರ್ಧ ತಿಂಗಳನ್ನು ಬಿಡಿ, ಭಿಕ್ಷುಗಳೇ, ಯಾರಾದರೂ ಆಗಲಿ, ಈ ನಾಲ್ಕು ಎಚ್ಚರದ ನೆಲೆಗಳನ್ನು ಹೀಗೆ ಒಂದು ವಾರ ಅಭ್ಯಾಸ ಮಾಡುತ್ತಾರೋ ಅವರು ಎರಡು ಫಲಗಳಲ್ಲಿ ಯಾವುದಾದರೊಂದು ಫಲವನ್ನು ಆಕಾಂಕ್ಷಿಸಬಹುದು. - ಇಲ್ಲೇ ಈಗಲೇ ಲೋಕೋತ್ತರ ಜ್ಞಾನಲಾಭ ಅಥವಾ ಉಪಾದಿ ಶೇಷ ಇದ್ದರೆ ಅನಾಗಾಮಿತ್ವ ಲಾಭ.

34. ಭಿಕ್ಷುಗಳೇ, ಜೀವಿಗಳನ್ನು ವಿಶುದ್ಧಿಗೊಳಿಸಲು, ಶೋಕ, ಅಳಲುಗಳನ್ನು ಮೀರಲು ದುಃಖ-ದುಮ್ಮಾನಗಳನ್ನು ಅಸ್ತಮಾನಗೊಳಿಸಲು ನ್ಯಾಯ ಮಾರ್ಗವನ್ನು ಸೇರಲು, ನಿರ್ವಾಣವನ್ನು ಸಾಕ್ಷಾತ್ಕರಿಸಿಕೊಳ್ಳಲು ಇದು ಏಕಮೇವ ಮಾರ್ಗ. ಅದೆಂದರೆ ನಾಲ್ಕು ಎಚ್ಚರದ ನೆಲೆಗಳು. (ಈವರೆಗೆ) ಅದೇನು ಹೇಳಿತ್ತೋ ಅದು ಇದನ್ನೇ ಕುರಿತು ಹೇಳಿದ್ದು” ಎಂದು.

ಭಗವಾನರು ಹೀಗೆ ನುಡಿದರು. ಸ್ಪೂರ್ತಿ ಪಡೆದ ಆ ಭಿಕ್ಷುಗಳು ಭಗವಾನರ ಉಪದೇಶವನ್ನು ಆನಂದಿಸಿದರು.

ಇಲ್ಲಿಗೆ ಸತಿಪಟ್ಠಾನ ಎಂಬ ಹತ್ತನೇ ಸುತ್ತ ಮುಗಿಯಿತು.

ಟಿಪ್ಪಣಿಗಳು [4]