ಊಟಿಸುತ್ತಿದೆ

ಅನುವಾದಗಳು [34]

ಚೂಳಮಾಲುಕ್ಯ ಸುತ್ತ

ಚೂಳಮಾಲುಕ್ಯ ಸುತ್ತ

1. ಮಾಲುಕ್ಯಪುತ್ರನಿಗೆ ವಿವರಿಸಿದಂತಹ ಪ್ರಶ್ನೆಗಳು

ಹೀಗೆ ನಾನು ಕೇಳಿದ್ದೇನೆ. ಒಂದು ಸಮಯದಲ್ಲಿ ಭಗವಾನರು ಶ್ರಾವಸ್ತಿಯಲ್ಲಿನ ಅನಾಥಪಿಂಡಿಕನ ಜೇತವನದಲ್ಲಿ ತಂಗಿದ್ದರು. ಆಗ ಆಯುಷ್ಮಂತ ಮಾಲುಕ್ಯಪುತ್ರನಿಗೆ, ಏಕಾಂತವಾಸದಲ್ಲಿ ಧ್ಯಾನ ಮಾಡುತ್ತಿರುವಾಗ ಮನಸ್ಸಿನಲ್ಲಿ ಈ ರೀತಿಯಾದ ತರ್ಕ ವಿಚಾರವು ಹುಟ್ಟಿಬಂತು- ಅದೇನೆಂದರೆ, ಈ ಬಗೆಯ ದೃಷ್ಟಿಯನ್ನು, ನೆಲೆನಿಂತ ವಿಷಯವನ್ನು, ಬದಿಗೆ ಸರಿಸಿದಂತಹವುಗಳನ್ನು ಭಗವಾನರು ವಿವರಿಸಿ ತಿಳಿಸಿಲ್ಲ- ಲೋಕವು ಶಾಶ್ವತವಾದದ್ದು ಎನ್ನುವುದು, ಲೋಕವು ಶಾಶ್ವತವಲ್ಲದ್ದು ಎನ್ನುವುದು, ಲೋಕವು ಅಂತ್ಯವುಳ್ಳದ್ದು ಎನ್ನುವುದು, ಲೋಕವು ಅಂತ್ಯವಿರದು ಎನ್ನುವುದು. ಜೀವವು ಅದೇ ಮತ್ತು ಶರೀರವು ಅದೇ ಎನ್ನುವುದು. ಜೀವ ಬೇರೆ ಮತ್ತು ಶರೀರ ಬೇರೆ ಎನ್ನುವುದು. ಮರಣದ ನಂತರ ತಥಾಗತರು ಇರುವರು ಎನ್ನುವುದು, ಮರಣದ ನಂತರ ತಥಾಗತರು ಇರುವುದಿಲ್ಲ ಎನ್ನುವುದು, ಮರಣದ ನಂತರ ತಥಾಗತರು ಇದ್ದರೂ ಇರಬಹುದು ಅಥವಾ ಇಲ್ಲದಿರಲೂಬಹುದು ಎನ್ನುವುದು. ಮರಣದ ನಂತರ ತಥಾಗತರು ಇರುವುದೂ ಇಲ್ಲ ಅಥವಾ ಇಲ್ಲದಿರುವುದೂ ಇಲ್ಲ ಎನ್ನುವುದು. ಈ ಬಗೆಯ ವಿಷಯಗಳನ್ನು ನನಗೆ ಭಗವಾನರು ವಿವರಿಸಿ ತಿಳಿಸಿಲ್ಲ. ಭಗವಾನರು ನನಗೆ ಈ ವಿಷಯಗಳ ಬಗ್ಗೆ ವಿವರವಾಗಿ ತಿಳಿಸಿ ಹೇಳುವುದಿಲ್ಲ ಹಾಗೂ ಆ ಬಗ್ಗೆ ನನಗೆ ಸಂತೋಷವಿಲ್ಲ, ಆ ಬಗ್ಗೆ ನನಗೆ ಸಂತೃಪ್ತಿಯಿಲ್ಲ. ಆದ್ದರಿಂದ ನಾನು ಭಗವಾನರಲ್ಲಿಗೆ ಹೋಗಿ ಈ ರೀತಿಯಾಗಿ ಪ್ರಶ್ನೆಗಳನ್ನು ಕೇಳುತ್ತೇನೆ. ಆಗ ಭಗವಾನರು ಈ ಬಗ್ಗೆ ನನಗೆ ವಿವರವಾಗಿ ತಿಳಿಸಿಹೇಳುತ್ತಾರೆ - ಲೋಕವು ಶಾಶ್ವತವಾದದ್ದು ಎಂದು ಅಥವಾ ಲೋಕವು ಶಾಶ್ವತವಲ್ಲದ್ದು ಎಂದು ಅಥವಾ... ಪುನರುಚ್ಚರಿಸಿ... ಮರಣದ ನಂತರ ತಥಾಗತರು ಇರುವುದೂ ಇಲ್ಲ ಅಥವಾ ಇಲ್ಲದಿರುವುದೂ ಇಲ್ಲ ಎಂದು. ಆಗ ಮಾತ್ರ ನಾನು ಭಗವಾನರು ಹೇಳಿದಂತೆ ಬ್ರಹ್ಮಚಯರ್ೆ ಜೀವನವನ್ನು ನಡೆಸುತ್ತೇನೆ, ಭಗವಾನರು ನನಗೆ ಈ ಬಗ್ಗೆ ವಿವರವಾಗಿ ತಿಳಿಸಿ ಹೇಳದಿದ್ದರೆ- ಲೋಕವು ಶಾಶ್ವತವಾದದ್ದು ಎಂದು ಅಥವಾ ಲೋಕವು ಶಾಶ್ವತವಲ್ಲದ್ದು ಎಂದು ಅಥವಾ ಪುನರುಚ್ಚರಿಸಿ... ಮರಣದ ನಂತರ ತಥಾಗತರು ಇರುವುದೂ ಇಲ್ಲ ಅಥವಾ ಇಲ್ಲದಿರುವುದೂ ಇಲ್ಲ ಎಂದು. ಆಗ ನಾನು ಈ (ಭಿಕ್ಷು) ಶಿಕ್ಷಣವನ್ನು ಬೇಡವೆಂದು ತೊರೆದು, ಮತ್ತೆ ಹಿಂದಿನ ಜೀವನಕ್ಕೆ ಮರಳಿ ಹೋಗುತ್ತೇನೆ; ಎಂದು.

2. ಆಗ ಆಯುಷ್ಮಂತ ಮಾಲುಕ್ಯಪುತ್ರನು ಸಾಯಂಕಾಲದ ಸಮಯದಲ್ಲಿ, ಏಕಾಂತವಾಸ ಧ್ಯಾನದಿಂದ ಎದ್ದು, ಎಲ್ಲಿ ಭಗವಾನರಿದ್ದರೊ ಅಲ್ಲಿಗೆ ಬಂದನು; ಸನಿಹಕ್ಕೆ ಬಂದನಂತರ ಭಗವಾನರಿಗೆ ನಮಿಸಿ ಒಂದೆಡೆ ಕುಳಿತನು. ಒಂದೆಡೆ ಕುಳಿತ ಆ ಆಯುಷ್ಮಂತ ಮಾಲುಕ್ಯಪುತ್ರನು ಭಗವಾನರಿಗೆ ಹೀಗೆ ಹೇಳಿದನು-

3. ಇಲ್ಲಿ ಭಂತೇ, ನನ್ನಲ್ಲಿ ಏಕಾಂತವಾಸದ ಧ್ಯಾನದಲ್ಲಿ ನಿರತನಾಗಿದ್ದಾಗ, ಮನಸ್ಸಿನಲ್ಲಿ ಈ ರೀತಿಯಾದ ತರ್ಕವಿಚಾರವು ಹುಟ್ಟಿಬಂತು- ಅದೇನೆಂದರೆ ಈ ಬಗೆಯ ದೃಷ್ಟಿಯನ್ನು, ನೆಲೆನಿಂತ ವಿಷಯವನ್ನು, ಬದಿಗೆ ಸರಿಸಿದಂತಹವುಗಳನ್ನು ಭಗವಾನರು ವಿವರಿಸಿ ತಿಳಿಸಿಲ್ಲ- ಲೋಕವು ಶಾಶ್ವತವಾದದ್ದು ಎನ್ನುವುದು, ಲೋಕವು ಶಾಶ್ವತವಲ್ಲದ್ದು ಎನ್ನುವುದು... ಪುನರುಚ್ಚರಿಸಿ... ಮರಣದ ನಂತರ ತಥಾಗತರು ಇರುವುದೂ ಇಲ್ಲ ಅಥವಾ ಇಲ್ಲದಿರುವುದೂ ಇಲ್ಲ ಎನ್ನುವುದು. ನನಗೆ ಭಗವಾನರು ಈ ವಿಷಯಗಳ ಬಗ್ಗೆ ವಿವರಿಸಿ ತಿಳಿಸಿಲ್ಲ. ಭಗವಾನರು ನನಗೆ ಈ ವಿಷಯಗಳ ಬಗ್ಗೆ ವಿವರಿಸಿ ತಿಳಿಸಿಲ್ಲ. ಹಾಗಾಗಿ ಆ ಬಗ್ಗೆ ನನಗೆ ಸಂತೋಷವಿಲ್ಲ, ಆ ಬಗ್ಗೆ ನನಗೆ ಸಂತೃಪ್ತಿಯಿಲ್ಲ. ಆದ್ದರಿಂದ ನಾನು ಭಗವಾನರಲ್ಲಿಗೆ ಬಂದಿದ್ದೇನೆ. ಈ ರೀತಿಯಾಗಿ ಪ್ರಶ್ನೆ ಕೇಳುತ್ತಿದ್ದೇನೆ- ಆಗ ಭಗವಾನರು ಈ ಬಗ್ಗೆ ನನಗೆ ವಿವರವಾಗಿ ತಿಳಿಸಿ ಹೇಳುತ್ತಾರೆ- ಲೋಕವು ಶಾಶ್ವತವಾದದ್ದು ಎಂದು ಅಥವಾ ಲೋಕವು ಶಾಶ್ವತವಲ್ಲದ್ದು ಎಂದು. ಅಥವಾ... ಪುನರುಚ್ಚರಿಸಿ... ಮರಣದ ನಂತರ ತಥಾಗತರು ಇರುವುದೂ ಇಲ್ಲ ಅಥವಾ ಇಲ್ಲದಿರುವುದೂ ಇಲ್ಲ ಎಂದು. ಆಗ ಮಾತ್ರ ನಾನು ಭಗವಾನರು ಹೇಳಿದಂತೆ ಬ್ರಹ್ಮಚರ್ಯ ಜೀವನವನ್ನು ನಡೆಸುತ್ತೇನೆ. ಭಗವಾನರು ಈ ಬಗ್ಗೆ ನನಗೆ ವಿವರವಾಗಿ ತಿಳಿಸಿ ಹೇಳದಿದ್ದರೆ ಲೋಕವು ಶಾಶ್ವತವಾದದ್ದು ಎಂದು ಅಥವಾ ಲೋಕವು ಶಾಶ್ವತವಲ್ಲದ್ದು ಎಂದು ಅಥವಾ ಪುನರುಚ್ಚರಿಸಿ... ಮರಣದ ನಂತರ ತಥಾಗತರು ಇರುವುದೂ ಇಲ್ಲ ಅಥವಾ ಇಲ್ಲದಿರುವುದೂ ಇಲ್ಲ ಎಂದು. ಆಗ ನಾನು ಈ (ಭಿಕ್ಷು) ಶಿಕ್ಷಣವನ್ನು ಬೇಡವೆಂದು ತೊರೆದು ಮತ್ತೆ ಹಿಂದಿನ ಜೀವನಕ್ಕೆ ಮರಳಿ ಹೋಗುತ್ತೇನೆ ಎಂದು. ಒಂದುವೇಳೆ ಭಗವಾನರಿಗೆ ತಿಳಿದಿದ್ದೇ ಆದರೆ ಲೋಕವು ಶಾಶ್ವತವಾದದ್ದು ಎಂದು ಆಗ ಲೋಕವು ಶಾಶ್ವತವಾದದ್ದು ಎಂದು ಭಗವಾನರು ವಿವರಿಸಿ ತಿಳಿಸಿಲಿ. ಒಂದುವೇಳೆ ಭಗವಾನರಿಗೆ ತಿಳಿದಿದ್ದೇ ಆದರೆ ಲೋಕವು ಶಾಶ್ವತವಲ್ಲದ್ದು ಎಂದು ಆಗ ಲೋಕವು ಶಾಶ್ವತವಲ್ಲದ್ದು ಎಂದು ಭಗವಾನರು ನನಗೆ ವಿವರಿಸಿ ತಿಳಿಸಲಿ. ಹಾಗೊಂದು ವೇಳೆ ಭಗವಾನರಿಗೆ ತಿಳಿದಿರದಿದ್ದರೆ- ಲೋಕವು ಶಾಶ್ವತವಾದದ್ದು ಅಥವಾ ಲೋಕವು ಶಾಶ್ವತವಲ್ಲದ್ದು ಎಂದು. ತಿಳಿಯದೇ ಇರುವಾಗ ಮತ್ತು ಅರಿಯದೇ ಇರುವಾಗ, ಅಂತಹ ವೇಳೆಯಲ್ಲಿ ನೇರ ನುಡಿಯುವುದು ಒಳ್ಳೆಯದು. ಅದೆಂದರೆ- ನಾನು ತಿಳಿದಿಲ್ಲ, ನಾನು ಅರಿತಿಲ್ಲ ಎಂದು. ಒಂದುವೇಳೆ ಭಗವಾನರಿಗೆ ತಿಳಿದಿದ್ದೇ ಆದರೆ ಲೋಕವು ಅಂತ್ಯವುಳ್ಳದ್ದು ಎಂದು, ಆಗ ಲೋಕವು ಅಂತ್ಯವುಳ್ಳದ್ದು ಎಂದು ನನಗೆ ಭಗವಾನರು ವಿವರಿಸಿ ತಿಳಿಸಲಿ; ಒಂದುವೇಳೆ ಭಗವಾನರಿಗೆ ತಿಳಿದಿದ್ದೇ ಆದರೆ ಲೋಕವು ಅಂತ್ಯವಿಲ್ಲದ್ದು ಎಂದು. ಆಗ ಲೋಕವು ಅಂತ್ಯವಿಲ್ಲದ್ದು ಎಂದು ನನಗೆ ಭಗವಾನರು ವಿವರಿಸಿ ತಿಳಿಸಲಿ. ಹಾಗೊಂದು ವೇಳೆ ಭಗವಾನರಿಗೆ ತಿಳಿದಿರದಿದ್ದರೆ- ಲೋಕವು ಅಂತ್ಯವುಳ್ಳದ್ದು ಅಥವಾ ಲೋಕವು ಅಂತ್ಯವಿಲ್ಲದ್ದು ಎಂದು. ತಿಳಿಯದೆ ಇರುವಾಗ ಮತ್ತು ಅರಿಯದೇ ಇರುವಾಗ, ಅಂತಹ ವೇಳೆಯಲ್ಲಿ ನೇರ ನುಡಿಯುವುದು ಒಳ್ಳೆಯದು. ಅದೆಂದರೆ- ನಾನು ತಿಳಿದಿಲ್ಲ, ನಾನು ಅರಿತಿಲ್ಲ ಎಂದು ಒಂದುವೇಳೆ ಭಗವಾನರಿಗೆ ತಿಳಿದಿದ್ದೇ ಆದರೆ- ಜೀವವು ಅದೇ ಮತ್ತು ಶರೀರವೂ ಅದೇ ಎಂದು ಆಗ ಜೀವವು ಅದೇ ಮತ್ತು ಶರೀರವೂ ಅದೇ ಎಂದು ನನಗೆ ಭಗವಾನರು ವಿವರಿಸಿ ತಿಳಿಸಲಿ. ಒಂದುವೇಳೆ ಭಗವಾನರಿಗೆ ತಿಳಿದಿದ್ದೇ ಆದರೆ- ಜೀವವು ಬೇರೆ ಮತ್ತು ಶರೀರವು ಬೇರೆ ಎಂದು, ಆಗ ಜೀವವು ಬೇರೆ ಮತ್ತು ಶರೀರವು ಬೇರೆ ಎಂದು ನನಗೆ ಭಗವಾನರು ವಿವರಿಸಿ ತಿಳಿಸಲಿ. ಹಾಗೊಂದುವೇಳೆ ಭಗವಾನರಿಗೆ ತಿಳಿದಿರದಿದ್ದರೆ- ಜೀವವು ಅದೇ, ಶರೀರವು ಅದೇ ಎಂದು ಅಥವಾ ಜೀವವು ಬೇರೆ ಶರೀರವು ಬೇರೆ ಎಂದು. ತಿಳಿಯದೇ ಇರುವಾಗ ಮತ್ತು ಅರಿಯದೇ ಇರುವಾಗ ಅಂತಹ ವೇಳೆಯಲ್ಲಿ ನೇರ ನುಡಿಯುವುದು ಒಳ್ಳೆಯದು. ಅದೆಂದರೆ- ನಾನು ತಿಳಿದಿಲ್ಲ, ನಾನು ಅರಿತಿಲ್ಲ ಎಂದು. ಒಂದುವೇಳೆ ಭಗವಾನರಿಗೆ ತಿಳಿದಿದ್ದೇ ಆದರೆ ಮರಣದ ನಂತರ ಭಗವಾನರು ಇರುವರು ಎಂದು. ಮರಣದ ನಂತರ ತಥಾಗತರು ಇರುವರು ಎಂದು ನನಗೆ ಭಗವಾನರು ವಿವರಿಸಿ ತಿಳಿಸಲಿ; ಒಂದುವೇಳೆ ಭಗವಾನರಿಗೆ ತಿಳಿದಿದ್ದೇ ಆದರೆ- ಮರಣದ ನಂತರ ತಥಾಗತರು ಇರುವುದಿಲ್ಲ ಎಂದು ನನಗೆ ಭಗವಾನರು ವಿವರಿಸಿ ತಿಳಿಸಲಿ. ಹಾಗೊಂದುವೇಳೆ ಭಗವಾನರಿಗೆ ತಿಳಿದಿರದಿದ್ದರೆ ಮರಣದ ನಂತರ ತಥಾಗತರು ಇರುವರೋ ಅಥವಾ ಮರಣದ ನಂತರ ತಥಾಗತರು ಇರುವುದಿಲ್ಲವೋ ಎಂದು ತಿಳಿಯದೇ ಇರುವಾಗ ಮತ್ತು ಅರಿಯದೇ ಇರುವಾಗ, ಅಂತಹ ವೇಳೆಯಲ್ಲಿ ನೇರ ನುಡಿಯುವುದು ಒಳ್ಳೆಯದು. ಅದೆಂದರೆ- ನಾನು ತಿಳಿದಿಲ್ಲ, ನಾನು ಅರಿತಿಲ್ಲ ಎಂದು. ಒಂದುವೇಳೆ ಭಗವಾನರಿಗೆ ತಿಳಿದಿದ್ದರೆ- ಮರಣದ ನಂತರ ತಥಾಗತರು ಇದ್ದರೂ ಇರಬಹುದು ಅಥವಾ ಇಲ್ಲದಿರಲೂಬಹುದು ಎಂದು. ಮರಣದ ನಂತರ ತಥಾಗತರು ಇದ್ದರೂ ಇರಬಹುದು ಅಥವಾ ಇಲ್ಲದಿರಲೂಬಹುದು ಎಂದು ನನಗೆ ಭಗವಾನರು ವಿವರಿಸಿ ತಿಳಿಸಲಿ. ಒಂದುವೇಳೆ ಭಗವಾನರಿಗೆ ತಿಳಿದಿದ್ದೇ ಆದರೆ- ಮರಣದ ನಂತರ ತಥಾಗತರು ಇರುವುದೂ ಇಲ್ಲ ಅಥವಾ ಇಲ್ಲದಿರುವುದೂ ಇಲ್ಲ ಎಂದು ಮರಣದ ನಂತರ ತಥಾಗತರು ಇರುವುದೂ ಇಲ್ಲ ಅಥವಾ ಇಲ್ಲದಿರುವುದೂ ಇಲ್ಲ ಎಂದು ನನಗೆ ಭಗವಾನರು ವಿವರಿಸಿ ತಿಳಿಸಲಿ. ಹಾಗೊಂದುವೇಳೆ ಭಗವಾನರಿಗೆ ತಿಳಿದಿರದಿದ್ದರೆ- ಮರಣದ ನಂತರ ತಥಾಗತರು ಇದ್ದರೂ ಇರಬಹುದು ಅಥವಾ ಇಲ್ಲದಿರಲೂಬಹುದು ಎಂದು, ಮರಣದ ನಂತರ ತಥಾಗತರು ಇರುವುದೂ ಇಲ್ಲ ಮತ್ತು ಇಲ್ಲದಿರುವುದೂ ಇಲ್ಲ ಎಂದು, ತಿಳಿಯದೇ ಇರುವಾಗ ಮತ್ತು ಅರಿಯದೇ ಇರುವಾಗ ಅಂತಹ ವೇಳೆಯಲ್ಲಿ ನೇರ ನುಡಿಯುವುದು ಒಳ್ಳೆಯದು. ಅದೆಂದರೆ- ನಾನು ತಿಳಿದಿಲ್ಲ, ನಾನು ಅರಿತಿಲ್ಲ ಎಂದು.

4. ಆದರೆ ನಾನು, ನಿನಗೆ ಮಾಲುಕ್ಯಪುತ್ರ ಯಾವಾಗಲಾದರೂ ಈ ಮಾತನ್ನು ಹೇಳಿರುವೆನೇನು- ಮಾಲುಕ್ಯಪುತ್ರ, ನೀನು ಬಾ, ನಾನು ಹೇಳಿರುವಂತೆ ಬ್ರಹ್ಮಚರ್ಯ (ಭಿಕ್ಷು) ಜೀವನವನ್ನು ನಡೆಸು, ನಾನು ನಿನಗೆ ವಿವರಿಸಿ ತಿಳಿಸುತ್ತೇನೆ- ಲೋಕವು ಶಾಶ್ವತವಾದದ್ದು ಎಂದು ಅಥವಾ ಲೋಕವು ಶಾಶ್ವತವಲ್ಲದ್ದು ಎಂದು. ಅಥವಾ ಲೋಕವು ಅಂತ್ಯವುಳ್ಳದ್ದು ಎಂದು ಅಥವಾ ಲೋಕವು ಅಂತ್ಯವಿಲ್ಲದ್ದು ಎಂದು. ಅಥವಾ ಜೀವವು ಅದೇ ಶರೀರವೂ ಅದೇ ಎಂದು ಅಥವಾ ಜೀವವು ಬೇರೆ ಶರೀರವು ಬೇರೆ ಎಂದು. ಅಥವಾ ಮರಣದ ನಂತರ ತಥಾಗತರು ಇರುವರು ಎಂದು ಅಥವಾ ಮರಣದ ನಂತರ ತಥಾಗತರು ಇರುವುದಿಲ್ಲ ಎಂದ. ಅಥವಾ ಮರಣದ ನಂತರ ತಥಾಗತರು ಇದ್ದರೂ ಇರಬಹುದು ಅಥವಾ ಇಲ್ಲದಿರಲೂಬಹುದು ಎಂದು. ಅಥವಾ ಮರಣದ ನಂತರ ತಥಾಗತರು ಇರುವುದೂ ಇಲ್ಲ ಅಥವಾ ಇಲ್ಲದಿರುವುದೂ ಇಲ್ಲ ಎಂದು.

ಹಾಗೇನೂ ಇಲ್ಲ ಭಂತೆ.

ಅಥವಾ ನೀನು ನನಗೆ ಹೀಗೆ ಇಂತಹ ಮಾತುಗಳನ್ನು ಹೇಳಿದ್ದೆಯೇನು- ನಾನು ಭಂತೇ ಭಗವಾನರು ಹೇಳಿದಂತೆ ಬ್ರಹ್ಮಚರ್ಯ (ಭಿಕ್ಷು) ಜೀವನವನ್ನು ನಡೆಸುವೆನು. ಭಗವಾನರು ನನಗೆ ಹೀಗೆ ವಿವರಿಸಿ ತಿಳಿಸದಾಗ ಮಾತ್ರ- ಲೋಕವು ಶಾಶ್ವತವಾದದ್ದು ಎಂದು ಅಥವಾ ಲೋಕವು ಶಾಶ್ವತವಲ್ಲದ್ದು ಎಂದು. ಲೋಕವು ಅಂತ್ಯವುಳ್ಳದ್ದು ಎಂದು ಅಥವಾ ಲೋಕವು ಅಂತ್ಯವಿಲ್ಲದ್ದು ಎಂದು. ಅಥವಾ ಜೀವವು ಅದೇ ಶರೀರವೂ ಅದೇ ಎಂದು. ಅಥವಾ ಜೀವವು ಬೇರೆ, ಶರೀರವು ಬೇರೆ ಎಂದು. ಅಥವಾ ಮರಣದ ನಂತರ ತಥಾಗತರು ಇರುವುದಿಲ್ಲ ಎಂದು ಅಥವಾ ಮರಣದ ನಂತರ ತಥಾಗತರು ಇದ್ದರೂ ಇರಬಹುದು ಅಥವಾ ಇಲ್ಲದಿರಲೂಬಹುದು ಎಂದು. ಅಥವಾ ಮರಣದ ನಂತರ ತಥಾಗತರು ಇರುವುದೂ ಇಲ್ಲ ಅಥವಾ ಇಲ್ಲದಿರುವುದೂ ಇಲ್ಲ ಎಂದು.

ಹಾಗೇನೂ ಇಲ್ಲ ಭಂತೆ.

ಹಾಗಿರುವಾಗ ಮಾಲುಕ್ಯಪುತ್ರ, ನಾನು ನಿನಗೆ ಹೀಗೆಯೂ ಹೇಳಿಲ್ಲ- ಮಾಲುಕ್ಯಪುತ್ರ ನೀನು ಬಾ, ನಾನು ಹೇಳಿರುವಂತೆ ಬ್ರಹ್ಮಚರ್ಯ (ಭಿಕ್ಷು) ಜೀವನವನ್ನು ನಡೆಸು, ನಾನು ನಿನಗೆ ವಿವರಿಸಿ ತಿಳಿಸುತ್ತೇನೆ. ಲೋಕವು ಶಾಶ್ವತವಾದದ್ದು ಎಂದು ಅಥವಾ ಲೋಕವು ಶಾಶ್ವತವಲ್ಲದ್ದು ಎಂದು. ಅಥವಾ... ಪುನರುಚ್ಚರಿಸಿ... ಮರಣದ ನಂತರ ತಥಾಗತರು ಇರುವುದೂ ಇಲ್ಲ ಅಥವಾ ಇಲ್ಲದಿರುವುದೂ ಇಲ್ಲ ಎಂದು. ಅಥವಾ ನೀನು ನನಗೆ ಹೀಗೆಯೂ ಹೇಳಿಲ್ಲ- ನಾನು ಭಂತೆ ಭಗವಾನರು ಹೇಳಿದಂತೆ ಬ್ರಹ್ಮಚರ್ಯ (ಭಿಕ್ಷು) ಜೀವನವನ್ನು ನಡೆಸುವೆನು, ಭಗವಾನರು ನನಗೆ ಹೀಗೆ ವಿವರಿಸಿ ತಿಳಿಸಿದಾಗ ಮಾತ್ರ ಲೋಕವು ಶಾಶ್ವತವಾದದ್ದು ಎಂದು. ಅಥವಾ ಲೋಕವು ಶಾಶ್ವತವಲ್ಲದ್ದು ಎಂದು. ಅಥವಾ... ಪುನರುಚ್ಚರಿಸಿ... ಮರಣದ ನಂತರ ತಥಾಗತರು ಇರುವುದೂ ಇಲ್ಲ ಅಥವಾ ಇಲ್ಲದಿರುವುದೂ ಇಲ್ಲ ಎಂದು. ಹಾಗಿರುವಾಗ ಮೂರ್ಖ ಮನುಷ್ಯನೆ, ನೀನು ಯಾರನ್ನು ಬೇಡವೆಂದು ತೊರೆದು ಹೋಗುತ್ತೀಯೇ?

2. ಬಾಣದಿಂದ ಗಾಯಗೊಂಡ ಮನುಷ್ಯನ ಉದಾಹರಣೆ

5. ಮಾಲುಕ್ಯಪುತ್ರ ಯಾರಾದರೂ ಹೀಗೆ ಹೇಳಬಹುದು- ನಾನು ಭಗವಾನರು ಹೇಳಿದಂತೆ ಬ್ರಹ್ಮಚರ್ಯ (ಭಿಕ್ಷು) ಜೀವನವನ್ನು ಅಲ್ಲಿಯವರೆಗೂ ನಡೆಸುವುದಿಲ್ಲ, ಎಲ್ಲಿಯವರೆಗೆ ನನಗೆ ಭಗವಾನರು ಹೀಗೆ ವಿವರಿಸಿ ತಿಳಿಸುವುದಿಲ್ಲ- ಲೋಕವು ಶಾಶ್ವತವಾದದ್ದು ಎಂದು ಅಥವಾ ಲೋಕವು ಶಾಶ್ವತವಲ್ಲದ್ದು ಎಂದು ಅಥವಾ... ಪುನರುಚ್ಚರಿಸಿ... ಮರಣದ ನಂತರ ತಥಾಗತರು ಇರುವುದೂ ಇಲ್ಲ ಅಥವಾ ಇಲ್ಲದಿರುವುದೂ ಇಲ್ಲ ಎಂದು. ಮಾಲುಕ್ಯಪುತ್ರ ಆತನು ತಥಾಗತರಿಂದ ವಿವರಿಸಿ ತಿಳಿಸುವ ಮುನ್ನವೇ ಆ ಮನುಷ್ಯನು ಸತ್ತುಹೋಗಿಬಿಡಬಹುದು. ಅದು ಹೇಗೆಂದರೆ, ಮಾಲುಕ್ಯಪುತ್ರ, ಒಬ್ಬ ಮನುಷ್ಯನು, ದಪ್ಪನಾಗಿ ಹಚ್ಚಲ್ಪಟ್ಟಂತಹ ವಿಷದಿಂದ ಕೂಡಿದ ಬಾಣದಿಂದ ಹೊಡೆಯಲ್ಪಟ್ಟು ಗಾಯಗೊಂಡಿದ್ದಾನೆ. ಆತನ ಮಿತ್ರರು, ಸಂಬಂಧಿಗಳು, ಬಂಧು-ಬಾಂಧವರು ಒಬ್ಬ ವೈದ್ಯನನ್ನೂ ಶಸ್ತ್ರವೈದ್ಯನನ್ನೂ ಕರೆತರಬಹುದು. ಆಗ ಅವನು ಹೀಗೆ ಹೇಳಬಹುದು- ನಾನು ಈ ಬಾಣವನ್ನು ಅಲ್ಲಿಯವರೆಗೂ ತೆಗೆಯಲು ಬಿಡುವುದಿಲ್ಲ, ಎಲ್ಲಿಯವರೆಗೆ ನನಗೆ ಈ ಬಾಣವನ್ನು ಹೊಡೆದ ಮನುಷ್ಯನು ಕ್ಷತ್ರಿಯನೋ ಅಥವಾ ಬ್ರಾಹ್ಮಣನೋ ಅಥವಾ ವೈಶ್ಯನೋ ಅಥವಾ ಶೂದ್ರನೋ ಎಂಬುದಾಗಿ ತಿಳಿದುಬರುವವರೆಗೂ ಎಂದು. ಅವನು ಹೀಗೆ ಹೇಳಬಹುದು ನಾನು ಈ ಬಾಣವನ್ನು ಅಲ್ಲಿಯವರೆಗೂ ತೆಗೆಯಲು ಬಿಡುವುದಿಲ್ಲ, ಎಲ್ಲಿಯವರೆಗೆ ನನಗೆ ಈ ಬಾಣವನ್ನು ಬಿಟ್ಟ ಮನುಷ್ಯನು ಈ ಹೆಸರಿನವನು ಮತ್ತು ಈ ಕುಲಕ್ಕೆ ಸೇರಿದವನು ಎಂಬುದಾಗಿ ತಿಳಿದುಬರುವವರೆಗೂ ಎಂದು. ಅವನು ಹೀಗೆ ಹೇಳಬಹುದು- ನಾನು ಈ ಬಾಣವನ್ನು ಅಲ್ಲಿಯವರೆಗೂ ತೆಗೆಯಲು ಬಿಡುವುದಿಲ್ಲ, ಎಲ್ಲಿಯವರೆಗೆ ನನಗೆ ಈ ಬಾಣವನ್ನು ಬಿಟ್ಟ ಮನುಷ್ಯನು ಎತ್ತರವಾಗಿದ್ದವನು ಅಥವಾ ಕುಳ್ಳಗಿದ್ದವನು ಅಥವಾ ಮಧ್ಯಮನಾಗಿದ್ದವನು ಎಂಬುದಾಗಿ ತಿಳಿದುಬರುವವರೆಗೂ ಎಂದು. ಅವನು ಹೀಗೆ ಹೇಳಬಹುದು- ನಾನು ಈ ಬಾಣವನ್ನು ಅಲ್ಲಿಯವರೆಗೂ ತೆಗೆಯಲು ಬಿಡುವುದಿಲ್ಲ, ಎಲ್ಲಿಯವರೆಗೆ ನನಗೆ ಈ ಬಾಣವನ್ನು ಬಿಟ್ಟ ಮನುಷ್ಯನು ಕಪ್ಪು ಬಣ್ಣದ ಅಥವಾ ಕಂದು ಬಣ್ಣದ ಅಥವಾ ಚಿನ್ನದ ಬಣ್ಣದ ಚರ್ಮದವನು ಎಂಬುದಾಗಿ ತಿಳಿದುಬರುವವರೆಗೂ ಎಂದು. ಅವನು ಹೀಗೆ ಹೇಳಬಹುದು- ನಾನು ಈ ಬಾಣವನ್ನು ಅಲ್ಲಿಯವರೆಗೂ ತೆಗೆಯಲು ಬಿಡುವುದಿಲ್ಲ, ಎಲ್ಲಿಯವರೆಗೆ ನನಗೆ ಈ ಬಾಣವನ್ನು ಬಿಟ್ಟ ಮನುಷ್ಯನು ಈ ಹೆಸರಿನ ಹಳ್ಳಿಗೆ ಅಥವಾ ಪಟ್ಟಣಕ್ಕೆ ಅಥವಾ ನಗರಕ್ಕೆ ಸೇರಿದವನೆಂದು ತಿಳಿದುಬರುವವರೆಗೂ ಎಂದು; ಅವನು ಹೀಗೆ ಹೇಳಬಹುದು- ನಾನು ಈ ಬಾಣವನ್ನು ಅಲ್ಲಿಯವರೆಗೂ ತೆಗೆಯಲು ಬಿಡುವುದಿಲ್ಲ, ಎಲ್ಲಿಯವರೆಗೆ ನನಗೆ ಈ ಬಾಣವನ್ನು ಬಿಟ್ಟ ಬಿಲ್ಲು ಅದು ಚಾಪ ಎನ್ನುವ ಬಿಲ್ಲಿನಿಂದ ಬಿಟ್ಟಿದ್ದೋ ಅಥವಾ ಕೋದಂಡ ಬಿಲ್ಲಿನಿಂದ ಬಿಟ್ಟಿದ್ದೋ ಎಂಬುದಾಗಿ ತಿಳಿದುಬರುವವರೆಗೂ ಎಂದು; ಅವನು ಹೀಗೆ ಹೇಳಬಹದು- ನಾನು ಈ ಬಾಣವನ್ನು ಅಲ್ಲಿಯವರೆಗೂ ತೆಗೆಯಲು ಬಿಡುವುದಿಲ್ಲ, ಎಲ್ಲಿಯವರೆಗೆ ನನಗೆ ಈ ಬಾಣವನ್ನು ಬಿಟ್ಟ ಹುರಿಯು ಕರುಳಿನಂತಹುದರಿಂದ ಅಥವಾ ಮೇಣದಿಂದ ಕೂಡಿದೆಯೋ, ಅಥವಾ ನರದಿಂದ ಆಗಿರುವಂತಹುದೇ, ನಾರಿನಿಂದ ಆಗಿರುವಂತಹುದೇ ಅಥವಾ ಮರದ ಹಾಲಿನಿಂದ ಆದಂತಹುದೇ ಎಂಬುದಾಗಿ ತಿಳಿದುಬರುವವರೆಗೂ ಎಂದು; ಅವನು ಹೀಗೆ ಹೇಳಬಹುದು- ನಾನು ಈ ಬಾಣವನ್ನು ಅಲ್ಲಿಯವರೆಗೂ ತೆಗೆಯಲು ಬಿಡುವುದಿಲ್ಲ, ಎಲ್ಲಿಯವರೆಗೆ ನನಗೆ ಈ ಬಾಣವನ್ನು ಬಿಟ್ಟ ಈ ಬಾಣದ ಅಂಬು ಈ ರೀತಿಯ ಗಚ್ಛಂನಿಂದ ಆಗಿದೆಯೋ ಅಥವಾ ರೋಸಿಮದಿಂದ ಆಗಿದೆಯೋ ಎಂಬುದಾಗಿ ತಿಳಿದುಬರುವವರೆವಿಗೂ ಎಂದು; ಅವನು ಹೀಗೆ ಹೇಳಬಹುದು-ನಾನು ಈ ಬಾಣವನ್ನು ಅಲ್ಲಿಯವರೆಗೂ ತೆಗೆಯಲು ಬಿಡುವುದಿಲ್ಲ, ಎಲ್ಲಿಯವರೆಗೆ ನನಗೆ ಈ ಬಾಣವನ್ನು ಬಿಟ್ಟ ಈ ಬಾಣದ ಅಂಬಿಗೆ ಜೋಡಿಸಿದ್ದಂತಹ ಗರಿಯು ಅದು ಗಿಡುಗನದೋ ಅಥವಾ ಬಕಪಕ್ಷಿಯದೋ ಅಥವಾ ಹದ್ದಿನದೋ ಅಥವಾ ನವಿಲಿನದೋ ಅಥವಾ ಬೇರೆ ಯಾವುದೋ ಹಕ್ಕಿಯದೋ ಎಂಬುದಾಗಿ ತಿಳಿದುಬರುವವರೆಗೂ ಎಂದು. ಅವನು ಹೀಗೆ ಹೇಳಬಹುದು- ನಾನು ಈ ಬಾಣವನ್ನು ಅಲ್ಲಿಯವರೆಗೂ ತೆಗೆಯಲು ಬಿಡುವುದಿಲ್ಲ, ಎಲ್ಲಿಯವರೆಗೆ ನನಗೆ ಈ ಬಾಣವನ್ನು ಬಿಟ್ಟ ಈ ಬಾಣದ ಅಂಬನ್ನು ಯಾವ ನರದಿಂದ ಬಿಗಿಯಲ್ಪಟ್ಟಿತ್ತು, ಅದು ಹಸುವಿನದೋ ಅಥವಾ ಎಮ್ಮೆಯದೋ ಅಥವಾ ಅದು ಜಿಂಕೆಯದೋ ಅಥವಾ ಅದು ಮಂಗನದೋ ಎಂಬುದಾಗಿ ತಿಳಿದುಬರುವವರೆಗೂ ಎಂದು; ಅವನು ಹೀಗೆ ಹೇಳಬಹುದು- ನಾನು ಈ ಬಾಣವನ್ನು ಅಲ್ಲಿಯವರೆಗೂ ತೆಗೆಯಲು ಬಿಡುವುದಿಲ್ಲ, ಎಲ್ಲಿಯವರೆಗೆ ನನಗೆ ಈ ಬಾಣವನ್ನು ಬಿಟ್ಟ ಈ ಬಾಣವು, ಅದು ಕೇವಲ ಸಾಮಾನ್ಯವಾದ ಬಾಣವೇ ಅಥವಾ ಅದು (ಖರಪ್ಪಂ) ಕ್ರೂರವಾದದ್ದೆ, ಅಥವಾ ಅದು (ವೆಕಂಡ) ಎಂಬ ರೀತಿಯ ಬಾಣವೇ ಅಥವಾ ಅದು (ನಾರಾಂಚ) ಎಂಬ ರೀತಿಯ ಬಾಣವೇ ಅಥವಾ ಅದು (ವಚ್ಛದಂತಂ) ಎಂಬ ರೀತಿಯ ಬಾಣವೇ ಅಥವಾ ಅದು (ಕರವೀರಪತ್ತಂ) ಎಂಬ ರೀತಿಯ ಬಾಣವೇ ಎಂದು. ಮಾಲುಕ್ಯಪುತ್ರ, ಹೇಗಿದ್ದರೂ ಸಹ, ಆತನು ಅದನ್ನು ತಿಳಿದಿದ್ದರೂ ಸಹ ಅಥವಾ ತಿಳಿಯದಿದ್ದರೂ ಆ ಮನುಷ್ಯನು ಸತ್ತು ಹೋಗಬಹುದು. ಅದೇರೀತಿಯಲ್ಲಿ ಮಾಲುಕ್ಯಪುತ್ರ, ಯಾರು ಹೀಗೆ ಹೇಳುವರೋ- ನಾನು ಭಗವಾನರು ಹೇಳಿದಮತೆ ಬ್ರಹ್ಮಚರ್ಯ (ಭಿಕ್ಷು) ಜೀವನವನ್ನು ಅಲ್ಲಿಯವರೆಗೂ ನಡೆಸುವುದಿಲ್ಲ, ಎಲ್ಲಿಯವರೆಗೆ ಭಗವಾನರು ಹೀಗೆ ನನಗೆ ವಿವರಿಸಿ ತಿಳಿಸುವುದಿಲ್ಲ- ಲೋಕವು ಶಾಶ್ವತವಾದದ್ದು ಎಂದು ಅಥವಾ ಲೋಕವು ಶಾಶ್ವತವಲ್ಲದ್ದು ಎಂದು ಅಥವಾ... ಪುನರುಚ್ಚರಿಸಿ... ಮರಣದ ನಂತರ ತಥಾಗತರು ಇರುವುದೂ ಇಲ್ಲ ಅಥವಾ ಇಲ್ಲದಿರುವುದೂ ಇಲ್ಲ ಎಂದು. ಮಾಲುಕ್ಯಪುತ್ರ, ಆತನು ತಥಾಗತರಿಂದ ವಿವರಿಸಿ ತಿಳಿಸುವ ಮುನ್ನವೇ ಆ ಮನುಷ್ಯನು ಸತ್ತುಹೋಗಿಬಿಡಬಹುದು.

3. ವಿವರಿಸಿ ತಿಳಿಸಿಲ್ಲ ಏಕೆ?

6. ಮಾಲುಕ್ಯಪುತ್ರ ಲೋಕವು ಶಾಶ್ವತವಾದದ್ದು ಎನ್ನುವ ದೃಷ್ಟಿಯನ್ನು ಆಧಾರವಾಗಿಟ್ಟುಕೊಂಡೇ ಬ್ರಹ್ಮಚರ್ಯ (ಭಿಕ್ಷು) ಜೀವನ ಇದೇ ಎಂದು ಹೇಳಲಾಗುತ್ತದೆ. ಹಾಗೆಯೇ ಮಾಲುಕ್ಯಪುತ್ರ, ಲೋಕವು ಶಾಶ್ವತವಲ್ಲದ್ದು ಎನ್ನುವಂತಹ ದೃಷ್ಟಿಯನ್ನು ಆಧಾರವಾಗಿಟ್ಟುಕೊಂಡೇ ಬ್ರಹ್ಮಚರ್ಯ (ಭಿಕ್ಷು) ಜೀವನ ಇದೇ ಎಂದು ಹೇಳಲಾಗುವುದೇ. ಹಾಗೆಯೇ ಮಾಲುಕ್ಯಪುತ್ರ ಲೋಕವು ಶಾಶ್ವತವಾದದ್ದು ಎನ್ನುವ ದೃಷ್ಟಿಯನ್ನು ಹೊಂದಿದ್ದರೂ ಸಹ ಮತ್ತು ಲೋಕವು ಶಾಶ್ವತವಲ್ಲದ್ದು ಎನ್ನುವ ದೃಷ್ಟಿಯನ್ನು ಹೊಂದಿದ್ದರೂ ಕೂಡ. ಹುಟ್ಟು ಇದೆ, ಮುಪ್ಪು ಇದೆ, ಮರಣ ಇದೆ, ಅದರೊಂದಿಗೆ ಶೋಕ, ಆಕ್ರಂದನ, ದುಃಖ, ದುಗುಡ ಮತ್ತು ದುಮ್ಮಾನಗಳಿವೆ; ಇಂತಹ ಇಲ್ಲಿಯೇ ಮತ್ತು ಈಗಲೇ ನಾಶಮಾಡುವಂತಹ ಧಮ್ಮವಿಷಯದ ಬಗ್ಗೆ ನಾನು ತಿಳಿಸಿಹೇಳುತ್ತೇನೆ. ಮಾಲುಕ್ಯಪುತ್ರ, ಲೋಕವು ಅಂತ್ಯವುಳ್ಳದ್ದು ಎನ್ನುವ ದೃಷ್ಟಿಯನ್ನು ಆಧಾರವಾಗಿಟ್ಟುಕೊಂಡೇ ಬ್ರಹ್ಮಚರ್ಯ (ಭಿಕ್ಷು) ಜೀವನ ಇದೆ ಎಂದು ಹೇಳಲಾಗುವುದೇ, ಹಾಗೆಯೇ ಲೋಕವು ಅಂತ್ಯವಿಲ್ಲದ್ದು ಎನ್ನುವ ದೃಷ್ಟಿಯನ್ನು ಆಧಾರವಾಗಿಟ್ಟುಕೊಂಡೇ ಬ್ರಹ್ಮಚರ್ಯ (ಭಿಕ್ಷು) ಜೀವನ ಇದೇ ಎಂದು ಹೇಳಲಾಗುವುದೇ. ಹಾಗೆಯೇ ಮಾಲುಕ್ಯಪುತ್ರ, ಲೋಕವು ಅಂತ್ಯವುಳ್ಳದ್ದು ಎನ್ನುವ ದೃಷ್ಟಿಯನ್ನು ಹೊಂದಿದ್ದರೂ ಸಹ. ಮತ್ತು ಲೋಕವು ಅಂತ್ಯವಿಲ್ಲದ್ದು ಎನ್ನುವ ದೃಷ್ಟಿಯನ್ನು ಹೊಂದಿದ್ದರೂ ಕೂಡ, ಹುಟ್ಟು ಇದೆ, ಮುಪ್ಪು ಇದೆ, ಮರಣ ಇದೆ. ಅದರೊಂದಿಗೆ ಶೋಕ, ಕ್ರಂದನ, ದುಃಖ, ದುಗುಡ ಮತ್ತು ದುಮ್ಮಾನಗಳಿವೆ. ಇಂತಹ ಇಲ್ಲಿಯೇ ಮತ್ತು ಈಗಲೇ ನಾಶಮಾಡುವಂತಹ ಧಮ್ಮ ವಿಷಯಗಳ ಬಗ್ಗೆ ನಾನು ತಿಳಿಸಿಹೇಳುತ್ತೇನೆ. ಮಾಲುಕ್ಯಪುತ್ರ, ಜೀವವು ಅದೇ ಶರೀರವೂ ಅದೆ ಎನ್ನು ದೃಷ್ಟಿಯನ್ನು ಆಧಾರವಾಗಿಟ್ಟುಕೊಂಡೇ ಬ್ರಹ್ಮಚರ್ಯ (ಭಿಕ್ಷು) ಜೀವನ ಇದೆ ಎಂದು ಹೇಳಲಾಗುವುದೇ. ಹಾಗೆಯೇ ಮಾಲುಕ್ಯಪುತ್ರ, ಜೀವವು ಬೇರೆ ಶರೀರವು ಬೇರೆ ಎನ್ನುವ ದೃಷ್ಟಿಯನ್ನು ಆಧಾರವಾಗಿಟ್ಟುಕೊಂಡೇ ಬ್ರಹ್ಮಚರ್ಯ (ಭಿಕ್ಷು) ಜೀವನ ಇದೆ ಎಂದು ಹೇಳಲಾಗುವುದೇ, ಹಾಗೆಯೇ ಮಾಲುಕ್ಯಪುತ್ರ, ಜೀವವು ಅದೇ ಶರೀರವೂ ಅದೇ ಎನ್ನುವ ದೃಷ್ಟಿಯನ್ನು ಹೊಂದಿದ್ದರೂ ಸಹ ಮತ್ತು ಜೀವವು ಬೇರೆ ಶರೀರವು ಬೇರೆ ಎನ್ನುವ ದೃಷ್ಟಿಯನ್ನು ಹೊಂದಿದ್ದರೂ ಕೂಡ, ಹುಟ್ಟು ಇದೆ... ಪುನರುಚ್ಚರಿಸಿ... ನಾಶಮಾಡುವುದರ ಬಗ್ಗೆ ನಾನು ತಿಳಿಸಿ ಹೇಳುತ್ತೇನೆ. ಮಾಲುಕ್ಯಪುತ್ರ, ಮರಣದ ನಂತರ ತಥಾಗತರು ಇರುತ್ತಾರೆ ಎನ್ನುವ ದೃಷ್ಟಿಯನ್ನು ಆಧಾರವಾಗಿಟ್ಟುಕೊಂಡೇ ಬ್ರಹ್ಮಚರ್ಯ (ಭಿಕ್ಷು) ಜೀವನ ಇದೆ ಎಂದು ಹೇಳಲಾಗುವುದೇ. ಹಾಗೆಯೇ ಮಾಲುಕ್ಯಪುತ್ರ, ಮರಣದ ನಂತರ ತಥಾಗತರು ಇರುವುದಿಲ್ಲ ಎನ್ನುವ ದೃಷ್ಟಿಯನ್ನು ಆಧಾರವಾಗಿಟ್ಟುಕೊಂಡೇ ಬ್ರಹ್ಮಚರ್ಯ (ಭಿಕ್ಷು) ಜೀವನ ಇದೆ ಎಂದು ಹೇಳಲಾಗುವುದೇ. ಹಾಗೆಯೇ ಮಾಲುಕ್ಯಪುತ್ರ, ಮರಣದ ನಂತರ ತಥಾಗತರು ಇರುತ್ತಾರೆ ಎನ್ನುವ ದೃಷ್ಟಿಯನ್ನು ಹೊಂದಿದ್ದರೂ ಸಹ, ಮತ್ತು ಮರಣದ ನಂತರ ತಥಾಗತರು ಇರುವುದಿಲ್ಲ ಎನ್ನುವ ದೃಷ್ಟಿಯನ್ನು ಹೊಂದಿದ್ದರೂ ಕೂಡ, ಹುಟ್ಟು ಇದೆ... ಪುನರುಚ್ಚರಿಸಿ... ಇಂತಹ ಇಲ್ಲಿಯೇ ಮತ್ತು ಈಗಲೆ ನಾಶಮಾಡುವಂತಹ ಧಮ್ಮ ವಿಷಯಗಳ ಬಗ್ಗೆ ನಾನು ತಿಳಿಸಿ ಹೇಳುತ್ತೇನೆ. ಮಾಲುಕ್ಯಪುತ್ರ, ಮರಣದ ನಂತರ ತಥಾಗತರು ಇದ್ದರೂ ಇರಬಹುದು ಮತ್ತು ಇಲ್ಲದಿರಲೂಬಹುದು ಎನ್ನುವ ದೃಷ್ಟಿಯನ್ನು ಆಧಾರವಾಗಿಟ್ಟುಕೊಂಡೇ ಬ್ರಹ್ಮಚರ್ಯ (ಭಿಕ್ಷು) ಜೀವನ ಇದೆ ಎಂದು ಹೇಳಲಾಗುವುದೇ. ಮಾಲುಕ್ಯಪುತ್ರ, ಮರಣದ ನಂತರ ತಥಾಗತರು ಇದ್ದರೂ ಇಲ್ಲದಿರಬಹುದು ಮತ್ತು ಇಲ್ಲದಿರಲೂಬಹುದು ಎನ್ನುವ ದೃಷ್ಟಿಯನ್ನು ಆಧಾರವಾಗಿಟ್ಟುಕೊಂಡೇ ಬ್ರಹ್ಮಚರ್ಯ (ಭಿಕ್ಷು) ಜೀವನ ಇದೆ ಎಂದು ಹೇಳಲಾಗುವುದೇ. ಹಾಗೆಯೇ ಮಾಲುಕ್ಯಪುತ್ರ, ಮರಣದ ನಂತರ ತಥಾಗತರು ಇದ್ದರೂ ಇರಬಹುದು ಮತ್ತು ಇಲ್ಲದಿರಲೂಬಹುದು ಎನ್ನುವ ದೃಷ್ಟಿಯನ್ನು ಹೊಂದಿದ್ದರೂ ಸಹ, ಮರಣದ ನಂತರ ತಥಾಗತರು ಇದ್ದರೂ ಇಲ್ಲದಿರಬಹುದು ಮತ್ತು ಇಲ್ಲದಿರಲೂಬಹುದು ಎನ್ನುವ ದೃಷ್ಟಿಯನ್ನು ಹೊಂದಿದ್ದರೂ ಕೂಡ, ಹುಟ್ಟು ಇದೆ... ಪುನರುಚ್ಚರಿಸಿ... ಇಂತಹ, ಇಲ್ಲಿಯೇ ಮತ್ತು ಈಗಲೇ ನಾಶಮಾಡುವಂತಹ ಧಮ್ಮ ವಿಷಯಗಳ ಬಗ್ಗೆ ನಾನು ತಿಳಿಸಿ ಹೇಳುತ್ತೇನೆ.

7. ಮಾಲುಕ್ಯಪುತ್ರ, ನನ್ನಿಂದ ಯಾವುದು ವಿವರಿಸಿ ತಿಳಿಸಿಲ್ಲವೋ ಅದನ್ನು ವಿವರಿಸಿ ತಿಳಿಸಲ್ಪಟ್ಟಿಲ್ಲ ಎಂದೇ ಅರ್ಥಮಾಡಿಕೊಳ್ಳಬೇಕು. ಯಾವುದು ವಿವರಿಸಿ ತಿಳಿಸಿದೆಯೋ, ಅದನ್ನು ವಿವರಿಸಿ ತಿಳಿಸಲ್ಪಟ್ಟಿದೇ ಎಂದು ಅರ್ಥಮಾಡಿಕೊಳ್ಳಬೇಕು. ಮಾಲುಕ್ಯಪುತ್ರ, ಯಾವುದನ್ನು ನನ್ನಿಂದ ವಿವರಿಸಿ ತಿಳಿಸಲ್ಪಟ್ಟಿಲ್ಲ? ಮಾಲುಕ್ಯಪುತ್ರ, ಲೋಕವು ಶಾಶ್ವತವಾದದ್ದು ಎಂಬುದರ ಬಗ್ಗೆ ನನ್ನಿಂದ ವಿವರಿಸಿ ತಿಳಿಸಲ್ಪಟ್ಟಿಲ್ಲ, ಲೋಕವು ಶಾಶ್ವತವಲ್ಲದ್ದು ಎಂಬುದರ ಬಗ್ಗೆ ನನ್ನಿಂದ ವಿವರಿಸಿ ತಿಳಿಸಲ್ಪಟ್ಟಿಲ್ಲ, ಲೋಕವು ಅಂತ್ಯವುಳ್ಳದ್ದು ಎಂಬುದರ ಬಗ್ಗೆ ನನ್ನಿಂದ ವಿವರಿಸಿ ತಿಳಿಸಲ್ಪಟ್ಟಿಲ್ಲ, ಲೋಕವು ಅಂತ್ಯವಿಲ್ಲದ್ದು ಎಂಬುದರ ಬಗ್ಗೆ ನನ್ನಿಂದ ವಿವರಿಸಿ ತಿಳಿಸಲ್ಪಟ್ಟಿಲ್ಲ, ಜೀವವು ಅದೇ ಶರೀರವೂ ಅದೇ, ಎಂಬುದರ ಬಗ್ಗೆ ನನ್ನಿಂದ ವಿವರಿಸಿ ತಿಳಿಸಲ್ಪಟ್ಟಿಲ್ಲ, ಜೀವವು ಬೇರೆ ಶರೀರವೂ ಬೇರೆ ಎಂಬುದರ ಬಗ್ಗೆ ನನ್ನಿಂದ ವಿವರಿಸಿಲ್ಪಟ್ಟಿಲ್ಲ, ಮರಣದ ನಂತರ ತಥಾಗತರು ಇರುತ್ತಾರೆ ಎಂಬುದರ ಬಗ್ಗೆ ನನ್ನಿಂದ ವಿವರಿಸಿ ತಿಳಿಸಲ್ಪಟ್ಟಿಲ್ಲ. ಮರಣದ ನಂತರ ತಥಾಗತರು ಇರುವುದಿಲ್ಲ ಎಂಬುದರ ಬಗ್ಗೆ ನನ್ನಿಂದ ವಿವರಿಸಿ ತಿಳಿಸಲ್ಪಟ್ಟಿಲ್ಲ. ಮರಣದ ನಂತರ ತಥಾಗತರು ಇದ್ದರೂ ಇರಬಹುದು ಅಥವಾ ಇಲ್ಲದಿರಲೂಬಹುದು ಎಂಬುದರ ಬಗ್ಗೆ ನನ್ನಿಂದ ವಿವರಿಸಲ್ಪಟ್ಟಿಲ್ಲ, ಮರಣದ ನಂತರ ತಥಾಗತರು ಇದ್ದರೂ ಇಲ್ಲದಿರಬಹುದು ಮತ್ತು ಇಲ್ಲದಿರಲೂಬಹುದು ಎಂಬುದರ ಬಗ್ಗೆ ನನ್ನಿಂದ ವಿವಿರಿಸಿ ತಿಳಿಸಲ್ಪಟ್ಟಿಲ್ಲ. ಮಾಲುಕ್ಯಪುತ್ರ, ಯಾತಕ್ಕಾಗಿ ಇವುಗಳು ನನ್ನಿಂದ ವಿವರಿಸಲ್ಪಟ್ಟಿಲ್ಲ? ಯಾಕೆಂದರೆ, ಮಾಲುಕ್ಯಪುತ್ರ, ಇವುಗಳು ಗುರಿಸಾಧನೆಗೆ ಒದಗಿಬರುವಂತಹವು ಅಲ್ಲ, ಬ್ರಹ್ಮಚರ್ಯ (ಭಿಕ್ಷು) ಜೀವನದ ಮೂಲವಾಗಿ, ತ್ಯಜಿಸುವಿಕೆ, ರಾಗದಿಂದ ಬಿಡುಗಡೆ ಪಡೆಯಲೂ, ನಿರೋಧಿಸಲೂ, ಉಪಶಾಂತ ಮಾಡಲೂ ಉತ್ಕೃಷ್ಟವಾದ ಪ್ರಜ್ಞೆಯನ್ನು ಪಡೆಯಲೂ, ಪರಿಪೂರ್ಣ ಜ್ಞಾನೋದಯಕ್ಕೂ, ನಿಬ್ಬಾನವನ್ನು ಪಡೆಯಲೂ, ಒದಗಿಕೊಂಡೊಯ್ಯುವಂತಹುದಲ್ಲ. ಆದ್ದರಿಂದಾಗಿ ಅವುಗಳು ನನ್ನಿಂದ ವಿವರಿಸಿ ತಿಳಿಸಲ್ಪಟ್ಟಿಲ್ಲ.

ಮಾಲುಕ್ಯಪುತ್ರ, ಹಾಗಾದರೆ ಯಾವುದು ನನ್ನಿಂದ ವಿವರಿಸಿಲ್ಪಟ್ಟಿದೆ? ಮಾಲುಕ್ಯಪುತ್ರ, ಇದೇ ದುಃಖ ಎಂಬುದು ನನ್ನಿಂದ ವಿವರಿಸಿ ತಿಳಿಸಲ್ಪಟ್ಟಿದೆ, ಇದು ದುಃಖದ ಹುಟ್ಟು ಎಂಬುದು ನನ್ನಿಂದ ವಿವರಿಸಿ ತಿಳಿಸಲ್ಪಟ್ಟಿದೆ, ಇದು ದುಃಖದ ನಿರೋಧ ಎಂಬುದು ನನ್ನಿಂದಿ ವಿವರಿಸಿ ತಿಳಿಸಲ್ಪಟ್ಟಿದೆ. ಇದು ದುಃಖ ನಿರೋಧ ಮಾಡಲು ಸಾಗುವ ದಾರಿ ಎಂಬುದು ನನ್ನಿಂದ ವಿವರಿಸಿಲ್ಪಟ್ಟಿದೆ. ಮಾಲುಕ್ಯಪುತ್ರ, ಯಾಕಾಗಿ ಇವುಗಳು ನನ್ನಿಂದ ವಿವರಿಸಲ್ಪಟ್ಟಿವೆ. ಏಕೆಂದರೆ ಮಾಲುಕ್ಯಪುತ್ರ, ಇವುಗಳು ಗುರಿಸಾಧನೆಗೆ ಒದಗಿಬರುವಂತಹವು. ಬ್ರಹ್ಮಚರ್ಯ (ಭಿಕ್ಷು) ಜೀವನದ ಮೂಲವಾಗಿರುವಂತಹವು. ತ್ಯಜಿಸುವಿಕೆಗೆ, ರಾಗದಿಂದ ಬಿಡುಗಡೆ ನಿರೋಧಕ್ಕೆ ಉಪಶಾಂತ ಮಾಡಲಿಕ್ಕೆ, ಉತ್ಕೃಷ್ಟವಾದ ಪ್ರಜ್ಞೆಯನ್ನು ಪಡೆಯಲಿಕ್ಕೆ ಪರಿಪೂರ್ಣ ಜ್ಞಾನೋದಯಕ್ಕೂ, ನಿಬ್ಬಾನವನ್ನು ಪಡೆಯಲೂ ಕೊಂಡೊಯ್ಯುವಂತಹುದು. ಆದ್ದರಿಂದಾಗಿ ಅವುಗಳು ನನ್ನಿಂದ ವಿವರಿಸಿ ತಿಳಿಸಲ್ಪಟ್ಟಿವೆ. ಹಾಗಿರುವುದರಿಂದಾಗಿ, ಮಾಲುಕ್ಯಪುತ್ರ, ನಾನು ವಿವರಿಸಿ ತಿಳಿಸಿಲ್ಲದವುಗಳನ್ನು ವಿವರಿಸಿ ತಿಳಿಸಲ್ಪಟ್ಟಿಲ್ಲ ಎಂದು ಅರ್ಥಮಾಡಿಕೊಳ್ಳಬೇಕು. ನಾನು ವಿವರಿಸಿ ತಿಳಿಸಿರುವುದನ್ನು, ವಿವರಿಸಿ ತಿಳಿಸಲ್ಪಟ್ಟಿದೆ ಎಂದು ಅರ್ಥಮಾಡಿಕೊಳ್ಳಬೇಕು ಎಂದು.

ಹೀಗೆ ಭಗವಾನರು ನುಡಿದರು. ಆಯುಷ್ಮಂತ ಮಾಲುಕ್ಯಪುತ್ರ ಭಗವಾನರ ನುಡಿಗಳಿಂದ ತೃಪ್ತಿಗೊಂಡು, ಅಭಿನಂದನೆ ಸಲ್ಲಿಸಿದನು.85

ಇಲ್ಲಿಗೆ ಚೂಳಮಾಲುಕ್ಯ ಸುತ್ತ ಮುಗಿಯಿತು

ಟಿಪ್ಪಣಿಗಳು [4]