ಪಾಥಿಕ ಸುತ್ತ
ಸುನಕ್ಖತ್ತ
ಹೀಗೇ ಕೇಳಿದ್ದೇನೆ; ಒಮ್ಮೆ ಭಗವಾನರು ಮಲ್ಲರಿಗೆ ಸೇರಿದ ಅನುಪಿಯ ಎಂಬ ಹೆಸರಿನ ಪಟ್ಟಣದ ಹತ್ತಿರ ತಂಗಿದ್ದರು. ಒಂದುದಿನ ಪೂರ್ವಾಹ್ನದಲ್ಲಿ ಭಗವಾನರು ಚೀವರವನ್ನು ಧರಿಸಿಕೊಂಡು ಪಿಂಡಪಾತ್ರೆಯೊಡನೆ ಭಿಕ್ಷೆಗಾಗಿ ಅನುಪಿಯನ್ನು ಪ್ರವೇಶಿಸಿದರು. ಆಗ ಭಗವಾನರಿಗೆ ಹೀಗೆನ್ನಿಸಿತು. ‘ಭಿಕ್ಷೆಗಾಗಿ ಅನುಪಿಯದೊಳಕ್ಕೆ ಹೋಗುವುದಕ್ಕೆ ಇದು ಸರಿಯಾದ ಕಾಲವಲ್ಲ. ಬಹು ಮೊದಲೇ ಹೋದಂತಾಗುತ್ತದೆ. ಭಗ್ಗವ ಗೋತ್ರದ ಭಗ್ಗವಗೊತ್ತ ಎಂಬ ಪರಿಬ್ಬಾಜಕನ ಬಳಿಗೆ ಹೋಗುವುದು ಸೂಕ್ತವಾದುದು.’
ಆಮೇಲೆ ಭಗವಾನರು ಭಗ್ಗವಗೊತ್ತನು ಇದ್ದ ಕಡೆಗೆ ಹೋದರು. ಪರಿಬ್ಬಾಜಕ ಭಗ್ಗವಗೊತ್ತನು ಭಗವಾನರನ್ನು ಕುರಿತು ಇಂತೆಂದನು- “ಭಗವಾನರಿಗೆ ಸ್ವಾಗತ, ಪೂಜ್ಯರಿಗೆ ಸ್ವಾಗತ. ಭಗವಾನರು ಇಲ್ಲಿಗೆ ಬಂದು ಬಹುಕಾಲವಾಯಿತು. ಭಗವಾನರು ಕುಳಿತುಕೊಳ್ಳುವವರಾಗಬೇಕು. ಸಿದ್ಧವಾದ ಆಸನ ಇಲ್ಲಿಯೇ ಇದೆ.” ಭಗವಾನರು ಸಿದ್ಧವಾದ ಆಸನದ ಮೇಲೆ ಕುಳಿತುಕೊಂಡರು. ಪರಿಬ್ಬಾಜಕನಾದ ಭಗ್ಗವಗೊತ್ತನು ಬೇರೊಂದು ತಗ್ಗಾದ ಆಸನದ ಮೇಲೆ ಒಂದುಕಡೆ ಕುಳಿತುಕೊಂಡನು. ಆಮೇಲೆ ಭಗವಾನರನ್ನು ಕುರಿತು ಇಂತೆಂದನು- “ಭಂತೆ, ಹಿಂದೊಮ್ಮೆ ಬಹುದಿನಗಳ ಹಿಂದೊಮ್ಮೆ ಲಿಚ್ಛವಿ ಕುಲಕ್ಕೆ ಸೇರಿದ ಸುನಕ್ಖತ್ತನು1 ನನ್ನ ಬಳಿಗೆ ಬಂದನು, ಆಮೇಲೆ ನನಗೆ ಹೀಗೆ ಹೇಳಿದನು- ‘ಭಗ್ಗವ, ಭಗವಾನರಿಂದ ನಾನು ದೂರವಾಗಿದ್ದೇನೆ, ನಾನು ಅವರ ಹತ್ತಿರ ಇಲ್ಲ!’ ಲಿಚ್ಛವಿ ಕುಲದವನಾದ ಸುನಕ್ಖತ್ತನು ಹೇಳುವುದು ಸರಿಯಾದುದೇ?”
“ಭಗ್ಗವ, ಸುನಕ್ಖತ್ತನು ಹೇಳಿದುದು ಸರಿಯಾಗಿಯೇ ಇದೆ. ಬಹುದಿವಸಗಳ ಹಿಂದೆ ಸುನಕ್ಖತ್ತನು ನನ್ನ ಬಳಿಗೆ ಬಂದಿದ್ದನು. ನನ್ನನ್ನು ಅಭಿವಂದಿಸಿ ಒಂದುಕಡೆ ಕುಳಿತುಕೊಂಡನು. ಆಮೇಲೆ ನನ್ನನ್ನು ಕುರಿತು ಇಂತೆಂದನು- ‘ಭಂತೆ, ಭಗವಾನರಿಂದ ದೂರನಾಗುತ್ತೇನೆ, ನಾನು ಇನ್ನುಮುಂದೆ ಭಗವಾನರ ಹತ್ತಿರವಿರುವುದಿಲ್ಲ’. ಹೀಗೆ ಹೇಳಿದ ಸುನಕ್ಖತ್ತನಿಗೆ ನಾನು ಹೀಗೆಂದು ಉತ್ತರ ಕೊಟ್ಟೆನು- ‘ಸುನಕ್ಖತ್ತ,2 ನಾನು ಎಂದಾದರೂ ನನ್ನ ಹತ್ತಿರವಿರಬೇಕೆಂದು ಕೇಳಿಕೊಂಡಿದ್ದೇನೆಯೆ?’ ‘ಇಲ್ಲ ಭಂತೆ.’
‘ನೀನು ಎಂದಾದರೂ ಭಗವಾನರ ಹತ್ತಿರ ಇರುತ್ತೇನೆ ಎಂದು ಹೇಳಿದ್ದುಂಟೇ?’ ‘ಇಲ್ಲ ಭಂತೆ.’
‘ಸುನಕ್ಖತ್ತ, ಸುನಕ್ಖತ್ತನು ನನ್ನ ಬಳಿ ಇರುವಂತೆ ನಾನೂ ಕೇಳದಿದ್ದಮೇಲೆ, ಸುನಕ್ಕತ್ತನು ನನ್ನ ಬಳಿ ಇರುತ್ತೇನೆಂದು ಅವನೂ ಹೇಳದಿದ್ದ ಮೇಲೆ ಅವನು ನನ್ನಿಂದ ದೂರವಾಗುತ್ತೇನೆ ಎಂದು ಹೇಳುವುದು ಮೂರ್ಖತನವಲ್ಲವೇ? ಮೂರ್ಖ, ತಪ್ಪು ನಿನ್ನದಲ್ಲವೇ?’
‘ಭಂತೆ, ಮನುಷ್ಯರಿಗೆ ಸಾಧ್ಯವಲ್ಲದ ಕಾರ್ಯಗಳನ್ನು ನೀವು ನನ್ನ ಎದುರಿಗೆ ಮಾಡಿಲ್ಲ.3’
‘ಸುನಕ್ಖತ್ತ, ನೀನು ನನ್ನ ಹತ್ತಿರ ಇರು, ನಾನು ಮನುಷ್ಯರಿಗೆ ಸಾಧ್ಯವಲ್ಲದ ಕಾರ್ಯಗಳನ್ನು ಮಾಡಿ ತೋರಿಸುತ್ತೇನೆ ಎಂದು ನಿನಗೆ ಎಂದಾದರೂ ಹೇಳಿದ್ದೇನೆಯೇ?’ ‘ಇಲ್ಲ ಭಂತೆ.’
‘ನಾನು ಭಗವಾನರ ಹತ್ತಿರವೇ ಉಳಿಯುತ್ತೇನೆ, ಅವರು ಮನುಷ್ಯರಿಗೆ ಸಾಧ್ಯವಲ್ಲದ ಕೆಲಸಗಳನ್ನು ಮಾಡಿ ತೋರಿಸಬೇಕು ಎಂದು ಹೇಳಿದ್ದಿಯೋ?’ ‘ಇಲ್ಲ ಭಂತೆ.’
‘ಸುನಕ್ಖತ್ತ, ಮನುಷ್ಯರಿಗೆ ಸಾಧ್ಯವಲ್ಲದ ಕಾರ್ಯಗಳನ್ನು ಮಾಡಿ ತೋರಿಸುತ್ತೇನೆ, ನೀನು ನನ್ನ ಬಳಿ ಇರು ಎಂದು ನಿನಗೆ ನಾನು ಎಂದೂ ಹೇಳಲಿಲ್ಲ. ನನ್ನನ್ನು ಹಾಗೆ ಎಂದು ನೀನೂ ಕೇಳಲಿಲ್ಲ. ಹಾಗಿದ್ದ ಮೇಲೆ ನನ್ನಿಂದ ದೂರವಾಗುತ್ತೇನೆಂದು ನೀನು ಹೇಳುವುದು ದಡ್ಡತನವಲ್ಲವೇ? ನಿನಗೆ ಏನನ್ನಿಸುತ್ತದೆ, ಸುನಕ್ಖತ್ತ? ನಾನು ಬೋಧಿಸುವ ಧಮ್ಮವು ಮನುಷ್ಯರಿಗೆ ಸಾಧ್ಯವಲ್ಲದ ಕಾರ್ಯಗಳನ್ನು ಮಾಡುವವರನ್ನು ದುಃಖಕ್ಷಯದೆಡೆಗೆ ಕೊಂಡೊಯ್ಯುತ್ತದೆ ಅಥವಾ ಅಂಥ ಕಾರ್ಯಗಳನ್ನು ಮಾಡದವನನ್ನು ದುಃಖಕ್ಷಯದೆಡೆಗೆ ಕೊಂಡೊಯ್ಯುತ್ತದೆ ಎಂದು ತಿಳಿಸುತ್ತದೆಯೇ?’
‘ಮನುಷ್ಯರಿಗೆ ಸಾಧ್ಯವಲ್ಲದ ಕಾರ್ಯಗಳನ್ನು ಮಾಡುವವನೇ ಆಗಲಿ, ಅಂಥ ಕಾರ್ಯಗಳನ್ನು ಮಾಡದವನೇ ಆಗಲೀ, ದುಃಖ ಕ್ಷಯವನ್ನು ಸಾಧಿಸುತ್ತಾನೆ ಎಂಬುದಾವುದನ್ನೂ ಭಗವಾನರು ಬೋಧಿಸಿರುವ ಧಮ್ಮವು ತಿಳಿಸುವುದಿಲ್ಲ!’
‘ಹಾಗಾದರೆ ಸುನಕ್ಕತ್ತ, ಮನುಷ್ಯರಿಗೆ ಸಾಧ್ಯವಲ್ಲದ ಕಾರ್ಯಗಳನ್ನು ಮಾಡುವುದಾದರೂ ಏಕೆ? ಓ ಮೂರ್ಖ, ನೋಡು, ನಿನ್ನದು ತಪ್ಪು.’
‘ಭಂತೆ, ನನಗೆ ಆದಿ ಕಾರಣವನ್ನು ನೀವು ವಿವರಿಸಿಲ್ಲವಲ್ಲವೆ?’
‘ಸುನಕ್ಖತ್ತ, ನೀನು ನನ್ನ ಹತ್ತಿರ ಇರು, ನಿನಗೆ ಆದಿಕಾರಣವನ್ನು ವಿವರಿಸುತ್ತೇನೆ ಎಂದು ಎಂದಾದರೂ ಹೇಳಿದ್ದೆನೇ?’ ‘ಇಲ್ಲ ಭಂತೆ.’
‘ನಾನು ಭಗವಾನರ ಹತ್ತಿರವಿರುತ್ತೇನೆ, ಅವರು ನನಗೆ ಆದಿಕಾರಣವನ್ನು ತಿಳಿಸುತ್ತಾರೆ’ ಎಂದು ಎಂದಾದರೂ ನನಗೆ ಹೇಳಿದ್ದೆಯಾ?’ ‘ಇಲ್ಲ ಭಂತೆ.’
‘ನೀನು ನನ್ನ ಹತ್ತಿರ ಇರು, ನಿನಗೆ ನಾನು ಆದಿಕಾರಣವನ್ನು ತಿಳಿಸುತ್ತೇನೆ ಎಂದು ನಾನು ಎಂದೂ ಹೇಳಲಿಲ್ಲ. ನಾನು ಭಗವಾನರ ಹತ್ತಿರ ಇರುತ್ತೇನೆ, ಅವರು ನನಗೆ ಆದಿಕಾರಣವನ್ನು ವಿವರಿಸಬೇಕು ಎಂದು ನೀನು ಎಂದೂ ನನ್ನನ್ನು ಕೇಳಲಿಲ್ಲ. ಸುನಕ್ಖತ್ತ, ಆದಿಕಾರಣವನ್ನು ವಿವರಿಸುವ ಅಥವಾ ವಿವರಿಸದೆ ಹೋಗುವುದೇ ನನ್ನಿಂದ ಬೋಧಿತವಾಗಿರುವ ಧಮ್ಮದ ಗುರಿಯೆ? ಅಂಥ ವಿವರಣೆ ಒಬ್ಬನನ್ನು ದುಃಖಕ್ಷಯದೆಡೆಗೆ ಕೊಂಡೊಯ್ಯುತ್ತದೆಯೆ?’
‘ಆದಿಕಾರಣವನ್ನು ವಿವರಿಸುವುದಾಗಲೀ, ಅದನ್ನು ವಿವರಿಸದಿರುವುದಾಗಲೀ ಧಮ್ಮದ ಗುರಿಯಲ್ಲ. ಭಗವಾನರಿಂದ ಬೋಧಿಸಲ್ಪಟ್ಟಿರುವ ಧಮ್ಮವು ದುಃಖಕ್ಷಯದ ಕಡೆಗೆ ಕೊಂಡೊಯ್ಯುತ್ತದೆ.’
‘ಸುನಕ್ಖತ್ತ, ಆದಿಕಾರಣವನ್ನು ವಿವರಿಸುವುದಾಗಲೀ, ವಿವರಿಸದಿರುವುದಾಗಲೀ ನನ್ನ ಧಮ್ಮದ ಗುರಿಯಲ್ಲ. ಆ ಧಮ್ಮವು ದುಃಖಕ್ಷಯದ ಕಡೆಗೆ ಕೊಂಡೊಯ್ಯುತ್ತದೆ. ಆದಿಕಾರಣವನ್ನು ತಿಳಿಯುವುದರಿಂದ ನಿನಗಾಗುವ ಉಪಯೋಗವಾದರೂ ಏನು? ನೋಡು, ದಡ್ಡ, ನಿನ್ನದೇ ಅಪರಾಧವಾಗುತ್ತದೆ.
ಸುನಕ್ಖತ್ತ, ನನ್ನನ್ನು ಅನೇಕರೀತಿಯಲ್ಲಿ ವಜ್ಜಿಗಳಿರುವ ಕಡೆ ಪ್ರಶಂಸಿಸಿರುವೆ. ಭಗವಾ, ಅರಹ, ಸಮ್ಮಾಸಂಬುದ್ಧ, ವಿಜ್ಜಾಚರಣಸಂಪನ್ನ, ಸುಗತ, ಲೋಕವಿದೂ, ಅನುತ್ತರಪುರಿಸ ಧಮ್ಮಸಾರಥಿ, ಸತ್ಥಾದೇವಮನುಸ್ಸಾನಂ* ಬುದ್ಧ ಎಂದು ಸ್ತುತಿಸಿರುವೆ. ಇದು ನೀನು ವಜ್ಜಿಗಳಿರುವೆಡೆಯಲ್ಲಿ ಮಾಡಿರುವ ಪ್ರಶಂಸೆ.
‘ವಜ್ಜಿಗಳಿರುವೆಡೆಯಲ್ಲಿ ಸುನಕ್ಖತ್ತ, ಧಮ್ಮವನ್ನು ಪ್ರಶಂಸೆ ಮಾಡಿರುವೆ- ಭಗವಾನರಿಂದ ಸ್ಪಷ್ಟವಾಗಿ ಬೋಧಿತವಾಗಿರುವ ಧಮ್ಮ, ಒಳ್ಳೆಯ ದೃಷ್ಟಿಯನ್ನು ಕೊಡುವ ಧಮ್ಮ, ಸರ್ವಕಾಲಕ್ಕೂ ಒಳ್ಳೆಯದನ್ನು ಮಾಡಬಲ್ಲ ಮತ್ತು ಇಲ್ಲಿಯೇ ಫಲ ಕೊಡುವ ಧಮ್ಮ. ಪರೀಕ್ಷಿಸಬಹುದಾದ ಒಳ್ಳೆಯ ಮಾರ್ಗದಲ್ಲಿ ಕೊಂಡೊಯ್ಯಬಲ್ಲ ಧಮ್ಮ, ಜಾಣರಾದವರು ತಾವೇ ಅರಿತುಕೊಳ್ಳಬೇಕಾದ ಧಮ್ಮ ಎಂದು ವಜ್ಜಿಗಳಿರುವೆಡೆಯಲ್ಲಿ ಧಮ್ಮವನ್ನು ಪ್ರಶಂಸಿಸಿರುವೆ.
‘ಸುನಕ್ಖತ್ತ, ಅನೇಕ ರೀತಿಯಲ್ಲಿ ಸಂಘವನ್ನು ವಜ್ಜಿಗಳಿರುವೆಡೆಯಲ್ಲಿ ಪ್ರಶಂಸಿಸಿರುವೆ- ಭಗವಾನರ ಶಿಷ್ಯರ ಸಂಘವು ಸನ್ಮಾರ್ಗದಲ್ಲಿ ಹೋಗುತ್ತಿದೆ. ಋಜುಮಾರ್ಗದಲ್ಲಿ ಭಗವಾನರ ಶಿಷ್ಯ ಸಂಘವು ಹೋಗುತ್ತಿದೆ. ಭಗವಾನರ ಶಿಷ್ಯ ಸಂಘವು ನ್ಯಾಯವಾದ ಮಾರ್ಗದಲ್ಲಿ ಹೋಗುತ್ತಿದೆ. ಭಗವಾನರ ಶಿಷ್ಯ ಸಂಘವು ಸರಿಯಾದ ಮಾರ್ಗದಲ್ಲಿ ಹೋಗುತ್ತಿದೆ. ಭಗವಾನರ ಶಿಷ್ಯ ಸಂಘವು ಎಂಟು ಬಗೆಯ ಶ್ರೇಷ್ಠರಿರುವ ನಾಲ್ಕು ಯಮಳ ಶ್ರೇಷ್ಠರನ್ನು ಒಳಗೊಂಡಿದೆ. ಭಗವಾನರ ಶಿಷ್ಯ ಸಂಘವು ಗೌರವಕ್ಕೂ, ಪೂಜ್ಯತೆಗೂ, ದಕ್ಷಿಣೆ (ದಾನ) ತೆಗೆದುಕೊಳ್ಳುವುದಕ್ಕೂ ನಮಸ್ಕಾರಗಳನ್ನು ಪಡೆಯುವುದಕ್ಕೂ ಅರ್ಹವಾಗಿದೆ. ಲೋಕಕ್ಕೆ ಬಹು ಪವಿತ್ರವಾದ ಪುಣ್ಯ ಕ್ಷೇತ್ರವಾಗಿದೆ ಎಂದು ವಜ್ಜಿಗಳಿರುವೆಡೆಯಲ್ಲಿ ಸಂಘವನ್ನು ಪ್ರಶಂಸಿಸಿರುವೆ. ಸುನಕ್ಖತ್ತ, ನಿನಗೆ ಹೇಳುತ್ತೇನೆ, ಸ್ಪಷ್ಟಪಡಿಸುತ್ತೇನೆ- ಲಿಚ್ಛವಿ ಕುಲಕ್ಕೆ ಸೇರಿದ ನೀನು ಶ್ರಮಣನಾದ ಗೋತಮನಲ್ಲಿಗೆ ಬ್ರಹ್ಮಚರ್ಯವನ್ನು ಪಾಲಿಸಲು ಹೋಗಿ ಅಲ್ಲಿ ಸರಿಯಾದುದನ್ನು ಕಲಿಯದೆ ಕೆಟ್ಟುಹೋದ ಎಂದು ನಿನ್ನನ್ನು ಜನರು ಹಳಿಯುತ್ತಾರೆ. ಹಾಗೆ ಹೇಳುವವರ ಬಾಯಿಯಲ್ಲಿ ನೀನು ಸಿಕ್ಕಿಬಿಡುತ್ತೀಯೆ.’
“ಹೀಗೆ ಭಗ್ಗವ, ಲಿಚ್ಛವಿ ಕುಲದ ಸುನಕ್ಖತ್ತನು ನಾನು ಹೇಳಿದುದನ್ನು ಕೇಳಿದರೂ ಧಮ್ಮ ವಿನಯಗಳಿಂದ ಹೊರತಾದವನಾಗಿ ಅಪಾಯ ಮತ್ತು ನಿರಯ ಮುಂತಾದ ದುಃಸ್ಥಿತಿಗಳತ್ತ ಹೊರಟಿದ್ದಾನೆ.
ಕೋರಕ್ಖತ್ತಿಯ
“ಒಮ್ಮೆ ಭಗ್ಗವ, ಉತ್ತರಕಾ ಎಂಬ ಧೂಲರಿಗೆ ಸೇರಿದ ಪಟ್ಟಣದಲ್ಲಿ ತಂಗಿದ್ದೆ. ಆಗೊಂದುದಿನ ಪೂರ್ವಾಹ್ನ ಸಮಯದಲ್ಲಿ ಚೀವರವನ್ನು ಹಾಕಿಕೊಂಡು ಪಿಂಡಪಾತ್ರೆಯನ್ನು ತೆಗೆದುಕೊಂಡು ಸುನಕ್ಖತ್ತನ ಜೊತೆಯಲ್ಲಿ ಭಿಕ್ಷೆಗಾಗಿ ಉತ್ತರಕದ ಬೀದಿಗಳಿಗೆ ಹೋದೆ. ಆಗ ಅವನು ಕಿರಿಯ ಸಮಣನಾಗಿದ್ದ. ಆ ಸಮಯದಲ್ಲಿ ಕ್ಷತ್ರಿಯ ಕುಲಕ್ಕೆ ಸೇರಿದ ಕುಕ್ಕರವತಿಕ4 ಎಂಬುವವನು ದಿಗಂಬರನಾಗಿ ಕೈಗಳನ್ನು ನೆಲಕ್ಕೂರಿಕೊಂಡು ಅಂಬೆಗಾಲಿಡುತ್ತಾ (ಒಂದು ಪ್ರಾಣಿಯಂತೆ) ಹಾಕಿದ ಭಿಕ್ಷವನ್ನು ತನ್ನ ಬಾಯಿಯಿಂದಲೇ ತಿನ್ನುತ್ತಿದ್ದ. ಸುನಕ್ಖತ್ತನು ಪ್ರಾಣಿಯಂತೆ ಅಂಬೆಗಾಲಿಡುತ್ತಾ ಮುಂದೆ ಹೋಗುವ, ಬಾಯಿಯಿಂದಲೇ ಕೊಟ್ಟಿದ್ದನ್ನು ತಿನ್ನುವ ಆ ದಿಗಂಬರ ಕೋರಕ್ಖತ್ತಿಯನನ್ನು ನೋಡಿದ. ನೋಡಿದಮೇಲೆ ಹೀಗೆಂದುಕೊಂಡ- ‘ಪ್ರಾಣಿಯಂತೆ ಕೈಕಾಲುಗಳೆಲ್ಲದರ ಮೇಲೆ ನಡೆಯುವ, ಹಾಕಿದ್ದನ್ನು ಕೈಯಿಂದ ಮುಟ್ಟದೆ ಬಾಯಿಯಿಂದಲೇ ತಿನ್ನುವ ಈ ಸಮಣನು ಎಷ್ಟು ಚೆನ್ನಾಗಿ ಕಾಣುತ್ತಾನೆ?’
“ಆಗ ಭಗ್ಗವ, ಲಿಚ್ಛವಿ ಕುಮಾರ ಸುನಕ್ಖತ್ತನ ಮನಸ್ಸಿನಲ್ಲಿರುವುದನ್ನು ನಾನು ತಿಳಿದು ‘ಓ ಮೂರ್ಖ, ಶಾಕ್ಯ ಕುಲಕ್ಕೆ ಸೇರಿದ ಸಮಣನನ್ನು ಅನುಸರಿಸುತ್ತಿರುವುದನ್ನು ಮರೆತಿಲ್ಲವಷ್ಟೇ?’
‘ಭಂತೆ, ಶಾಕ್ಯ ಕುಲಕ್ಕೆ ಸೇರಿದ ಸಮಣನನ್ನು ಅನುಸರಿಸುತ್ತಿರುವವನು, ಆದರೆ ಮೂರ್ಖ, ಎಂದು ನನ್ನನ್ನೇಕೆ ಕರೆಯುತ್ತೀರಿ?’
‘ಅಂಬೆಗಾಲಿಡುತ್ತಾ ಹೋಗುವ ಮತ್ತು ಹಾಕಿದ್ದನ್ನು ಪ್ರಾಣಿಗಳಂತೆ ಬಾಯಿಯಿಂದಲೇ ತೆಗೆದು ತಿನ್ನುವ ಈ ದಿಗಂಬರ ಕೋರಕ್ಖತ್ತಿಯನನ್ನು ನೋಡಿ ನೀನು ಅವನು ಚೆನ್ನಾಗಿ ಕಾಣುತ್ತಾನೆ ಎಂದು ಅಂದುಕೊಂಡಿದ್ದೀಯಲ್ಲವೇ?’
‘ಭಂತೆ ನಿಜ, ಅರಹಂತರಾದ ಇತರರಲ್ಲಿ ಭಗವಾನರಿಗೆ ಮಾತ್ಸರ್ಯವೇ?’
‘ಮೂರ್ಖ, ನಾನು ಅರಹಂತರಲ್ಲಿ ಮಾತ್ಸರ್ಯಪಡುವುದಿಲ್ಲ. ಅಂಥ ಪಾಪದೃಷ್ಟಿಯು ನಿನ್ನೊಳಗೇ ಇದೆ. ಅದನ್ನು ತೊರೆ. ನೀನು ಬಹುಕಾಲ ಅಹಿತ ಮತ್ತು ದುಃಖಪಡುವುದು ಬೇಡ; ನಿನಗೆ ಅಹಿತವಾಗುವುದು ಬೇಡ. ಸುನಕ್ಖತ್ತ, ಸಾಧುರೂಪಿ ಎನಿಸಿಕೊಂಡಿರುವ ಈ ಸಮಣನು ಏಳು ದಿವಸದಲ್ಲಿ ಮೂರ್ಛೆ ರೋಗದಿಂದ ಸಾಯುತ್ತಾನೆ. ಆಮೇಲೆ ಕಾಲಕಂಚಕರೆಂಬ ಅಸುರರ ಲೋಕದಲ್ಲಿ ಹುಟ್ಟುತ್ತಾನೆ. ಅಸುರ ಲೋಕಗಳಲ್ಲೆಲ್ಲಾ ಅದು ಅತ್ಯಂತ ಹೀನವಾದುದು. ಆಮೇಲೆ ಆತನನ್ನು ಸ್ಮಶಾನದಲ್ಲಿ ಬೀರಣ ಹುಲ್ಲಿನ ಮೇಲೆ ಬಿಸಾಡುತ್ತಾರೆ. ಇಚ್ಛೆಯಿದ್ದರೆ ನೀನು ಕೋರಕ್ಕತ್ತಿಯ ದಿಗಂಬರನಲ್ಲಿಗೆ ಹೋಗಿ ‘ಗೆಳೆಯ, ಕಾಲವಾದಮೇಲೆ ನೀನು ಮುಂದೆ ಎಲ್ಲಿ ಹುಟ್ಟಿತ್ತೀಯೆ?’ ಎಂದು ಕೇಳು. ಸುನಕ್ಕತ್ತ, ಕೋರಕತ್ತಿಯ ‘ಗೊತ್ತು ಗೆಳೆಯ, ಅಸುರ ಲೋಕದಲ್ಲಿ ಅತ್ಯಂತ ಹೀನವಾದ ಕಾಲಕಂಚಕ ಲೋಕದಲ್ಲಿ ನಾನು ಹುಟ್ಟುತ್ತೇನೆ’ ಎಂದು ಹೇಳಬಹುದು.’
“ಆಮೇಲೆ ಭಗ್ಗವ, ಲಿಚ್ಛವಿಕುಲದ ಸುನಕ್ಖತ್ತನು ಕೋರಕ್ಖತ್ತಿಯ ದಿಗಂಬರನಲ್ಲಿಗೆ ಹೋದನು. ಹೋಗಿ ಆತನನ್ನು ‘ಗೆಳೆಯ ಕೋರಕ್ಖತ್ತಿಯ, ಸಮಣಗೋತಮನಿಂದ ನೀನು ಏಳು ದಿವಸಗಳಲ್ಲಿ ಕಾಲವಾಗುತ್ತೀಯೆ ಎಂಬುದನ್ನು ತಿಳಿದೆ. ಮತ್ತು ಕಾಲವಾದ ಮೇಲೆ ನಿನ್ನನ್ನು ಸ್ಮಶಾನದಲ್ಲಿನ ಬೀರಣ ಹುಲ್ಲಿನ ಗುಪ್ಪೆಯ ಮೇಲೆ ಬಿಸಾಡುತ್ತಾರೆಂಬುದನ್ನೂ ನೀನು ಈ ಅಸುರ ಲೋಕಗಳಲ್ಲಿ ಅತ್ಯಂತ ಹೀನವಾದ ಕಾಲಕಂಚಿಕ ಲೋಕದಲ್ಲಿ ಹುಟ್ಟುತ್ತೀಯೆಂಬುದನ್ನೂ ತಿಳಿದೆ. ಆದುದರಿಂದ ಗೆಳೆಯ ಕೋರಕ್ಖತ್ತಿಯ, ಸ್ವಲ್ಪ ಮಾತ್ರ ತಿನ್ನು, ಸ್ವಲ್ಪ ಮಾತ್ರ ಕುಡಿ. ಸಮಣ ಗೋತಮನ ಮಾತು ಸುಳ್ಳಾಗಲಿ!’
“ಆಮೇಲೆ ಭಗ್ಗವ, ಸುನಕ್ಖತ್ತನು ಏಳು ರಾತ್ರಿಗಳನ್ನು ಎಣಿಸುತ್ತಾ ಹೋದನು. ಆತನು ತಥಾಗತನನ್ನು ನಂಬಲಿಲ್ಲ. ಆದರೆ ಭಗ್ಗವ, ದಿಗಂಬರ ಕೋರಕ್ಖತ್ತಿಯನು ಏಳನೆಯ ದಿನ ಮೂರ್ಛೆ ರೋಗದಿಂದ ಕಾಲವಾದನು. ಕಾಲವಾದ ಮೇಲೆ ಆತನು ಅಸುರ ಲೋಕಗಳಲ್ಲಿ ಅತ್ಯಂತ ಹೀನವಾದ ಕಾಲಕಂಚಿಕ ಲೋಕದಲ್ಲಿ ಹುಟ್ಟಿದನು. ಕಾಲವಾದ ಮೇಲೆ ಅವನನ್ನು ಬೀರಣ ಹುಲ್ಲಿನ ಗುಡ್ಡೆಯ ಮೇಲೆ ಬಿಸಾಡಿದರು.
‘ಸುನಕ್ಖತ್ತ ಲಿಚ್ಛವಿಯು ಕೋರಕ್ಖತ್ತಿಯನು ಮೂರ್ಛೆ ರೋಗದಿಂದ ಕಾಲವಾದದ್ದನ್ನೂ ಆಮೇಲೆ ಆತನನ್ನು ಸ್ಮಶಾನದಲ್ಲಿ ಬೀರಣ ಹುಲ್ಲಿನ ಗುಡ್ಡೆಯ ಮೇಲೆ ಬಿಸಾಡಿದುದನ್ನೂ ಕೇಳಿದನು. ಆಮೇಲೆ ಆ ಸುನಕ್ಖತ್ತನು ಬೀರಣ ಹುಲ್ಲಿನ ಗುಡ್ಡೆಯ ಮೇಲೆ ಬಿದ್ದಿದ್ದ ದಿಗಂಬರ ಕೋರಕ್ಖತ್ತಿಯನ ಬಳಿಗೆ ಹೋದನು. ಹೋದಮೇಲೆ ಅಚೇಲ ಕೋರಕ್ಖತ್ತಿಯನನ್ನು ಮೂರುಸಾರಿ ಕೈಯಿಂದ ಹೊಡೆದು ‘ಗೆಳೆಯ ಕೋರಕ್ಖತ್ತಿಯ, ನಿನ್ನ ಗತಿ ಏನಾಗಿದೆ ಎಂಬುದು ನಿನಗೆ ಗೊತ್ತಿದೆಯೆ?’ ಎಂದು ಕೇಳಿದನು. ಆಗ ಭಗ್ಗವ, ಕೋರಕ್ಖತ್ತಿಯನು ತನ್ನ ಬೆನ್ನನ್ನು ಕೈಯಿಂದ ಉಜ್ಜಿಕೊಂಡು ಮೇಲೆದ್ದನು. ‘ಸುನಕ್ಖತ್ತ, ನನ್ನ ಗತಿ ಏನಾಗಿದೆ ಎಂಬುದು ಗೊತ್ತಿದೆ. ಅಸುರ ಲೋಕಗಳಲ್ಲಿ ಅತ್ಯಂತ ಹೀನವಾದ ಕಾಲಕಂಚಿಕ ಲೋಕದಲ್ಲಿ ಹುಟ್ಟಿದ್ದೇನೆ’ ಎಂದು ಹೇಳಿ ಮತ್ತು ಅಂಗತ್ತನಾಗಿ ಬಿದ್ದುಕೊಂಡನು.
‘ಆಮೇಲೆ, ಲಿಚ್ಛವಿಕುಲದ ಸುನಕ್ಖತ್ತನು ನನ್ನಲ್ಲಿಗೆ ಬಂದನು. ನನಗೆ ಅಭಿವಂದಿಸಿ ಒಂದುಕಡೆ ಕುಳಿತುಕೊಂಡನು. ಆನಂತರ ಅವನನ್ನು ಕುರಿತು ‘ಸುನಕ್ಖತ್ತ, ದಿಗಂಬರ ಕೋರಕ್ಖತ್ತಿಯನ ಬಗೆಗೆ ನಾನು ಮೊದಲು ಏನನ್ನು ಹೇಳಿದ್ದೆನೋ ಅದರಂತೆಯೇ ಆಯಿತು ಎಂಬುದು ತಿಳಿಯಿತೇ?’ ಎಂದು ಕೇಳಿದೆನು.
‘ಭಂತೆ, ದಿಗಂಬರ ಕೋರಕ್ಖತ್ತಿಯನಿಗೆ ತಾವು ಹೇಳಿದಂತೆಯೇ ಆಯಿತು’.
‘ಸುನಕ್ಖತ್ತ, ಸಾಧಾರಣ ಮನುಷ್ಯರಿಗೆ ಸಾಧ್ಯವಲ್ಲದ ಕಾರ್ಯವಾಗಿದೆ ಎಂಬುದು ಗೊತ್ತಾಯಿತೆ?’
‘ಭಂತೆ ಮನುಷ್ಯರಿಗೆ ಸಾಧ್ಯವಲ್ಲದ ಕೆಲಸವಾಗಿದೆ.’
‘ಮೂರ್ಖ, ಸಾಧಾರಣ ಮನುಷ್ಯರಿಗೆ ಸಾಧ್ಯವಲ್ಲದ ಕಾರ್ಯಗಳನ್ನು ಮಾಡಬಲ್ಲ ನನಗೆ - ‘ಭಗವಾನರು ಅಂಥ ಕಾರ್ಯಗಳನ್ನು ಮಾಡಲಾರರು’ ಎಂದು ಹೇಳಿಬಿಟ್ಟೆ.. ಮೂರ್ಖ, ನೋಡು ನಿನ್ನ ಈ ಅಪರಾಧವನ್ನು.’
“ಹೀಗೆ ಭಗ್ಗವ, ಲಿಚ್ಛವಿಕುಲದ ಸುನಕ್ಖತ್ತನು ನಾನು ಹೇಳಿದುದನ್ನು ಕೇಳದೆ ಧಮ್ಮ ವಿನಯಗಳಿಂದ ದೂರನಾಗಿ ಅಪಾಯ ಮತ್ತು ನಿರಯದೆಡೆಗೆ ಹೋಗುವವನಾದನು.
ದಿಗಂಬರ ಕಳಾರಮಟ್ಟಕ
“ಭಗ್ಗವ, ಒಮ್ಮೆ ವೇಸಾಲಿಯ ಹತ್ತಿರವಿದ್ದ ಮಹಾವನದ ಕೂಟಗಾರ ಸಾಲೆಯಲ್ಲಿ ತಂಗಿದ್ದೆ. ಆಗ ದಿಗಂಬರ ಕಳಾರಮಟ್ಟಕನು5 ವೇಸಾಲಿಯಲ್ಲಿಯೇ ತಂಗಿದ್ದನು. ವಜ್ಜಿಗಳಿಗೆ ಆತನಲ್ಲಿ ಹೆಚ್ಚಿನ ಗೌರವವಿತ್ತು. ಅವನು ಬಹುಕೀರ್ತಿವಂತನೂ ಆಗಿದ್ದನು. ಆತನು ಏಳು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದಾಗಿ ನಿಶ್ಚೈಸಿಕೊಂಡಿದ್ದನು. ‘ಎಂದೂ ಬಟ್ಟೆಯನ್ನು ಹಾಕಿಕೊಳ್ಳದೆ ದಿಗಂಬರನಾಗಿಯೇ ಉಳಿಯುತ್ತೇನೆಂದೂ, ಮೈಥುನಕ್ಕೆ ಒಳಗಾಗದೆ ಬ್ರಹ್ಮಚರ್ಯವನ್ನು ಪಾಲಿಸುತ್ತೇನೆಂದೂ, ಎಂದೂ ಅನ್ನ ಗಂಜಿಗಳನ್ನು ಮುಟ್ಟದೆ, ಸುರಾಮಾಂಸಗಳನ್ನು ಭುಂಜಿಸಿಯೇ ಬದುಕುತ್ತೇನೆಂದೂ, ವೇಸಾಲಿಯ ಪೂರ್ವದಲ್ಲಿರುವ ಉದೇನ ಚೈತ್ಯವನ್ನೆಂದೂ ದಾಟಿ ಹೋಗುವುದಿಲ್ಲವೆಂದೂ ವೇಸಾಲಿಯ ದಕ್ಷಿಣದಲ್ಲಿರುವ ಗೋತಮಕ ಚೈತ್ಯವನ್ನೆಂದೂ ದಾಟಿ ಹೋಗುವುದಿಲ್ಲವೆಂದೂ, ವೇಸಾಲಿಯ ಪಶ್ಚಿಮಕ್ಕಿರುವ ಸತ್ತಂಬ ಚೈತ್ಯವನ್ನು ಎಂದೂ ದಾಟಿ ಹೋಗುವುದಿಲ್ಲವೆಂದೂ, ವೇಸಾಲಿಯ ಉತ್ತರಕ್ಕಿರುವ ಬಹುಪುತ್ತ ಚೈತ್ಯವನ್ನು ಎಂದೂ ದಾಟಿ ಹೋಗುವುದಿಲ್ಲವೆಂದೂ, ಆತನು ಏಳು ನಿಯಮಗಳನ್ನು ಮಾಡಿಕೊಂಡಿದ್ದನು. ಇಂಥ ಅವನು ಹಾಕಿಕೊಂಡ ನಿಯಮಗಳನ್ನು ಅವನು ಪಾಲಿಸುತ್ತಿದ್ದುದರಿಂದ ಅವನ ಗೌರವವೂ ಕೀರ್ತಿಯೂ ಹೆಚ್ಚಾಗಿದ್ದುವು.
“ಭಗ್ಗವ, ಆಗೊಮ್ಮೆ ಲಿಚ್ಛವಿಕುಲದ ಸುನಕ್ಖತ್ತನು ದಿಗಂಬರ ಅಚೇಲ ಕಳಾರಮಟ್ಟಕನ ಬಳಿಗೆ ಹೋದನು. ಆಮೇಲೆ ಅವನನ್ನು ಪ್ರಶ್ನಿಸಿದನು. ದಿಗಂಬರ ಕಳಾರಮಟ್ಟಕನು ಪ್ರಶ್ನೆಯನ್ನು ಅರ್ಥ ಮಾಡಿಕೊಳ್ಳಲಿಲ್ಲ. ತಿಳಿದುಕೊಳ್ಳದುದರಿಂದ ಆತನು ಕೋಪಗೊಂಡನು. ದ್ವೇಷ ಅಸಮಾಧಾನಗಳು ಅವನಲ್ಲಿ ಉಂಟಾದವು. ಆಗ ಭಗ್ಗವ, ಲಿಚ್ಛವಿಕುಲದ ಸುನಕ್ಖತ್ತನಿಗೆ ಹೀಗೆನ್ನಿಸಿತು- ಅರಹಂತ ಸಮಣನು ಪೂಜಾರ್ಹನಾಗಿದ್ದಾನೆ. ಅವನೊಂದಿಗೆ ವಾದ ಮಾಡಿ ಅವನಿಗೆ ಖೇದವನ್ನುಂಟುಮಾಡಿ ಬಹುಕಾಲ ಮತ್ತೆ ದುಃಖಪಡುವುದು ಬೇಡ: (ನನಗೆ) ಅಹಿತವಾಗುವುದು ಬೇಡ.
“ಆಮೇಲೆ ಲಿಚ್ಛವಿಕುಲದ ಸುನಕ್ಖತ್ತನು ನನ್ನ ಬಳಿಗೆ ಬಂದನು. ನನ್ನನ್ನು ಅಭಿವಂದಿಸಿ ಒಂದುಕಡೆ ಕುಳಿತುಕೊಂಡನು. ಆಮೇಲೆ ಅವನನ್ನು ಕುರಿತು ‘ಮೂರ್ಖ, ಈಗಲೂ ಶಾಕ್ಯ ಕುಲಕ್ಕೆ ಸೇರಿದ ಸಮಣನನ್ನೇ ಅನುಸರಿಸುತ್ತಿದ್ದೇನೆಂದು ತಿಳಿದುಕೊಂಡಿರುವೆಯಾ?!’
‘ಮೂರ್ಖ ಮತ್ತು ಶಾಕ್ಯಕುಲದ ಸಮಣನನ್ನನುಸರಿಸುವವನೆಂದು ನನ್ನನ್ನೇಕೆ ಕರೆಯುತ್ತೀರಿ ಭಂತೆ?’
‘ಸುನಕ್ಖತ್ತ, ದಿಗಂಬರ ಕಳಾರಮಟ್ಟಕನ ಬಳಿಗೆ ಹೋಗಿ, ಆತನನ್ನು ಪ್ರಶ್ನಿಸಿರುವೆಯಷ್ಟೆ. ಆದರೆ ಆ ದಿಗಂಬರನಿಗೆ ನೀನು ಕೇಳಿದ ಪ್ರಶ್ನೆಯು ಅರ್ಥವಾಗಲಿಲ್ಲ. ಅರ್ಥಮಾಡಿಕೊಳ್ಳದ ಅವನು ನಿನ್ನಲ್ಲಿ ಕೋಪಗೊಂಡು ದ್ವೇಷ ಅಸಮಾಧಾನಗಳನ್ನು ಬೆಳೆಸಿಕೊಂಡ. ಆಗ ನೀನು ‘ಸಾಧುರೂಪಿಯಾದ ಅರಹಂತ ಸಮಣನನ್ನು ಅಸಮಾಧಾನಗೊಳಿಸುವುದು ಬೇಡ, ಬಹುಕಾಲ ದುಃಖಪಡುವುದು ಬೇಡ, ನನಗೆ ಅಹಿತವಾಗುವುದು ಬೇಡ’ ಎಂದುಕೊಂಡೆಯಲ್ಲವೆ ?’
‘ನಿಜ ಭಂತೆ, ಆದರೆ ಭಗವಾನನಾದವನು ಬೇರೆ ಅರಹಂತರಲ್ಲಿ ಮಾತ್ಸರ್ಯಗೊಳ್ಳುವುದೇಕೆ?’
‘ಓ ಮೂರ್ಖ, ನಾನು ಯಾವ ಅರಹಂತನಲ್ಲಿಯೂ ಅಸೂಯೆಗೊಳ್ಳುವುದಿಲ್ಲ. ನಿನ್ನಲ್ಲಿಯೇ ಈ ಪಾಪದೃಷ್ಟಿ ಹುಟ್ಟಿಕೊಂಡಿದೆ. ಅದನ್ನು ತೊರೆ. ನೀನು ಬಹುಕಾಲ ಮತ್ತೆ ದುಃಖಕ್ಕೆ ಒಳಗಾಗುವುದು ಬೇಡ. ನಿನಗೆ ಅಹಿತವಾಗುವುದು ಬೇಡ. ಸುನಕ್ಖತ್ತ, ಅಚೇಲ ಕಳಾರಮಟ್ಟಕನು ನೋಡತಕ್ಕವನಾಗಿದ್ದಾನೆ ಎಂದುಕೊಂಡಿದ್ದೀಯಲ್ಲವೆ? ಆದರೆ ಆತನು ಕೆಲವೇ ದಿನಗಳಲ್ಲಿಯೇ ಬ್ರಹ್ಮಚರ್ಯವನ್ನು ತ್ಯಜಿಸಿ ಹೆಂಗಸಿನ ಜೊತೆಗೆ ವಾಸಿಸುವವನಾಗುತ್ತಾನೆ. ಅನ್ನ ಗಂಜಿಗಳನ್ನು ತಿನ್ನುವವನಾಗುತ್ತಾನೆ. ವೇಸಾಲಿಯ ಚೈತ್ಯಗಳೆಲ್ಲವನ್ನೂ ದಾಟಿ ಆಚೆ ಹೋಗುವವನಾಗುತ್ತಾನೆ. ಎಲ್ಲ ಯಶಸ್ಸನ್ನೂ ಕಳೆದುಕೊಂಡು ಕಾಲವಾಗುತ್ತಾನೆ.’
“ಆನಂತರ ಸ್ವಲ್ಪ ದಿನದೊಳಗಾಗಿಯೇ, ದಿಗಂಬರ ಕಳಾರಮಟ್ಟಕನು ಬ್ರಹ್ಮಚರ್ಯವನ್ನು ತ್ಯಜಿಸಿ ಹೆಂಗಸಿನ ಜೊತೆಗೆ ವಾಸಿಸುತ್ತಾ ಅನ್ನ ಗಂಜಿಗಳನ್ನು ಭುಂಜಿಸುತ್ತಾ ವೇಸಾಲಿಯ ಎಲ್ಲ ಚೈತ್ಯಗಳನ್ನು ದಾಟಿ ಆಚೆ ಹೋಗುವವನಾದನು, ಆಮೇಲೆ ಕಾಲವಾದನು. ಲಿಚ್ಛವಿಕುಮಾರ ಸುನಕ್ಖತ್ತನು ಕಳಾರಮಟ್ಟಕನು ಬ್ರಹ್ಮಚರ್ಯವನ್ನು ತ್ಯಜಿಸಿ ಅನ್ನ ಗಂಜಿಗಳನ್ನು ಭುಂಜಿಸುವವನಾಗಿ ತನ್ನ ಕೀರ್ತಿಯನ್ನು ಕಳೆದುಕೊಂಡು ಕಾಲವಾದುದನ್ನು ಕೇಳಿದನು. ಭಗ್ಗವ, ಸುನಕ್ಖತ್ತನು ನನ್ನ ಬಳಿಗೆ ಬಂದು ನನಗೆ ಅಭಿವಂದಿಸಿ ಒಂದುಕಡೆ ಕುಳಿತುಕೊಂಡನು. ಆಗ ನಾನು ಅವನನ್ನು ಕುರಿತು ‘ಕಳಾರಮಟ್ಟಕನು ನಾನು ಹೇಳಿದಂತಲ್ಲದೆ ಬೇರೆ ಏನೂ ಆಗಲಿಲ್ಲ ಎಂಬುದನ್ನು ತಿಳಿದಿರುವೆಯಷ್ಟೆ?’ ಎಂದು ಕೇಳಿದೆನು.
‘ಭಂತೆ, ಅಚೇಲ ಕಳಾರಮಟ್ಟಕನಿಗೆ ತಾವು ಹೇಳಿದಂತೆಯೇ ಆಯಿತು.’
‘ಸುನಕ್ಖತ್ತ, ಮನುಷ್ಯರಿಗೆ ಸಾಧ್ಯವಾಗದ ಕಾರ್ಯಗಳನ್ನು ಋದ್ಧಿ ಶಕ್ತಿಯಿಂದ ಮಾಡಿರುವುದು ನಿನಗೆ ಅರ್ಥವಾಯಿತಷ್ಟೆ.’
‘ಭಂತೆ, ಋದ್ಧಿ ಶಕ್ತಿಯಿಂದ ಕಾರ್ಯವು ಆಗಿದೆ ಎಂದು ನನಗೆ ಅರ್ಥವಾಗಿದೆ’!
‘ಆದರೂ ಮೂರ್ಖ, ಭಗವಾನರು ಮನುಷ್ಯರಿಗೆ ಸಾಧ್ಯವಲ್ಲದ ಕಾರ್ಯಗಳನ್ನು ಮಾಡಲಾರರು ಎಂದು ಹೇಳುತ್ತೀಯೆ. ಮೂರ್ಖ, ನೋಡು ತಪ್ಪು ನಿನ್ನದೇ ಆಗಿದೆ.’
‘ಹೀಗೆ ಲಿಚ್ಛವಿಕುಮಾರ ಸುನಕ್ಖತ್ತನು ನಾನು ಹೇಳಿದುದನ್ನು ಕೇಳಿದನು. ಧಮ್ಮ ವಿನಯಗಳಿಂದ ದೂರನಾಗಿ ಅಪಾಯ ಮತ್ತು ನಿರಯಗಳ ಕಡೆಗೆ ಹೋಗುವವನಾದನು.”
ದಿಗಂಬರ ಪಾಥಿಕಪುತ್ತ
“ಭಗ್ಗವ, ಒಮ್ಮೆ ವೇಸಾಲಿಯ ಮಹಾವನದಲ್ಲಿನ ಕೂಟಗಾರಸಾಲೆಯಲ್ಲಿ ತಂಗಿದ್ದೆ. ಆ ಸಮಯದಲ್ಲಿ ದಿಗಂಬರನಾದ ಪಾಥಿಕಪುತ್ತನು ವೇಸಾಲಿಯಲ್ಲಿ ವಾಸಿಸುತ್ತಿದ್ದನು. ವಜ್ಜಿಗಳಲ್ಲಿ ಅವನ ಗೌರವವೂ ಯಶಸ್ಸು ಅಧಿಕವಾಗಿದ್ದುವು. ಅವನು ವೇಸಾಲಿಯ ಸಭೆಗಳಲ್ಲಿ ಹೀಗೆ ಹೇಳುತ್ತಿದ್ದನು- ‘ಸಮಣ ಗೋತಮನು ಒಳ್ಳೆಯ ಜ್ಞಾನವನ್ನು ಹೊಂದಿದ್ದಾನೆ, ನಾನೂ ಒಳ್ಳೆಯ ಜ್ಞಾನವನ್ನು ಹೊಂದಿದ್ದೇನೆ. ಮನುಷ್ಯರಿಗೆ ಸಾಧ್ಯವಲ್ಲದ ಪವಾಡಗಳನ್ನು ಪರಸ್ಪರ ಮಾಡಿ ತೋರಿಸಲು ಜ್ಞಾನಿಗಳಾದ ನಾವಿಬ್ಬರೂ ಸಮರ್ಥರಾಗಿದ್ದೇವೆ. ಸಮಣಗೋತಮರು ಅರ್ಧ ದೂರ ಬಂದರೆ ನಾನು ಅರ್ಧ ದೂರ ಹೋಗುತ್ತೇನೆ. ಆಮೇಲೆ ನಾವಿಬ್ಬರೂ ಮನುಷ್ಯರಿಗೆ ಸಾಧ್ಯವಲ್ಲದ ಪವಾಡಗಳನ್ನು ಮಾಡಬಹುದು. ಸಮಣಗೋತಮನು ಒಂದು ಪವಾಡವನ್ನು ಮಾಡಿದರೆ, ನಾನು ಎರಡು ಪವಾಡಗಳನ್ನು ಮಾಡುತ್ತೇನೆ. ಸಮಣ ಗೋತಮನು ಎರಡು ಪವಾಡಗಳನ್ನು ಮಾಡಿದರೆ ನಾನು ನಾಲ್ಕು ಪವಾಡಗಳನ್ನು ಮಾಡುತ್ತೇನೆ. ಅವನು ನಾಲ್ಕು ಮಾಡಿದರೆ ನಾನು ಎಂಟು ಮಾಡುತ್ತೇನೆ. ಹೀಗೆ ಸಮಣಗೋತಮನು ಎಷ್ಟು ಪವಾಡಗಳನ್ನು ಮಾಡುತ್ತಾನೋ ಅವುಗಳ ಎರಡು ಪಟ್ಟು ನಾನು ಮಾಡುತ್ತೇನೆ.’
“ಆನಂತರ ಭಗ್ಗವ, ಲಿಚ್ಛವಿಕುಮಾರ ಸುನಕ್ಖತ್ತನು ನನ್ನ ಬಳಿಗೆ ಬಂದನು. ನನ್ನನ್ನು ಅಭಿವಂದಿಸಿ ಒಂದುಕಡೆ ಕುಳಿತುಕೊಂಡನು. ಆಮೇಲೆ ನನ್ನನ್ನು ಕುರಿತು- ‘ಭಂತೆ, ಅಚೇಲ ಪಾಥಿಕಪುತ್ತನು ವೇಸಾಲಿಯಲ್ಲಿ ವಾಸಿಸುತ್ತಿದ್ದಾನೆ. ವಜ್ಜಿಗಳಲ್ಲಿ ಅವನ ಯಶಸ್ಸೂ ಗೌರವವೂ ಅಧಿಕವಾಗಿವೆ. ಅವನು ವೇಸಾಲಿಯ ಸಭೆಗಳಲ್ಲಿ ‘ಸಮಣ ಗೋತಮನೂ ತಾನೂ ಜ್ಞಾನವನ್ನು ಹೊಂದಿದ್ದೇವೆ, ನಾವಿಬ್ಬರೂ ಪವಾಡಗಳನ್ನು ಮಾಡಬಲ್ಲೆವು. ಆದರೆ ಸಮಣ ಗೋತಮನು ಒಂದು ಅಥವಾ ಎರಡು ಅಥವಾ ನಾಲ್ಕು ಪವಾಡಗಳನ್ನು ಮಾಡಿದರೆ ಎರಡು ಅಥವಾ ನಾಲ್ಕು ಅಥವಾ ಎಂಟು ಪವಾಡಗಳನ್ನು ಮಾಡಿ ತೋರಿಸಬಲ್ಲೆ, ಅವನು ಮಾಡುವ ಪವಾಡಗಳ ಎರಡರಷ್ಟನ್ನು ನಾನು ಮಾಡಬಲ್ಲೆ’ ಎಂದು ಹೇಳುತ್ತಿದ್ದಾನೆ.’
“ಹೀಗೆ ಹೇಳಿದ ಲಿಚ್ಛವಿಕುಮಾರ ಸುನಕ್ಖತ್ತನಿಗೆ ನಾನು- ‘ಸುನಕ್ಖತ್ತ, ಅಚೇಲ ಪಾಥಿಕನು ತಾನು ಹೇಳಿದುದನ್ನು ಹಿಂತೆಗೆದುಕೊಳ್ಳಬೇಕು, ತನ್ನ ಮನಸ್ಸಿನಲ್ಲಿರುವುದನ್ನು ಬಿಡಬೇಕು, ಅವನ ದೃಷ್ಟಿಯನ್ನು ತೊರೆಯಬೇಕು (ಹಾಗಾದರೆ ಮಾತ್ರ) ನನ್ನನ್ನು ಮುಖತಃ ಸಂಧಿಸಬಲ್ಲ. ನನ್ನ ಮಾತುಗಳನ್ನು ಹಿಂತೆಗೆದುಕೊಳ್ಳುವುದಿಲ್ಲ, ನನ್ನ ಮನಸ್ಸಿನಲ್ಲಿರುವುದನ್ನು ಬಿಡುವುದಿಲ್ಲ, ನನ್ನ ದೃಷ್ಟಿಯನ್ನು ತೊರೆಯುವುದಿಲ್ಲ ಎಂದುಕೊಂಡು ನನ್ನನ್ನು ಸಂಧಿಸಲು ಬಂದರೆ, ಅವನ ತಲೆಯು ಸಿಡಿದು ಹೋಗುತ್ತದೆ’ ಎಂದು ಹೇಳಿದೆ.
‘ಭಂತೆ, ಭಗವಾನರು ಹೇಳಿದುದನ್ನು ನೆನಪಿನಲ್ಲಿಟ್ಟುಕೊಳ್ಳಲಿ, ಸುಗತರು ಹೇಳಿದುದು ಅವರ ನೆನಪಿನಲ್ಲಿರಲಿ.’
‘ಸುನಕ್ಖತ್ತ, ನನಗೇಕೆ ಹಾಗೆ ಹೇಳುತ್ತೀಯೆ?’
‘ಭಗವಾನರ ಮಾತುಗಳು ಒಂದು ಅರ್ಥದಲ್ಲಿ ನಿಜವಾಗಬಹುದು. ಅಚೇಲ ಪಾಥಿಕನು ತಾನು ಹೇಳಿದುದನ್ನು ಹಿಂತೆಗೆದುಕೊಳ್ಳದೆ, ತನ್ನ ಮನಸ್ಸಿನಲ್ಲಿರುವುದನ್ನು ಬಿಡದೆ ತನ್ನ ದೃಷ್ಟಿಯನ್ನು ತೊರೆಯದೆ ಭಗವಾನರನ್ನು ಸಂಧಿಸಿದರೆ ಅವನ ತಲೆ ಸಿಡಿದುಹೋಗಬಹುದು. ಆದರೆ ಭಂತೆ, ಅಚೇಲ ಪಾಥಿಕಪುತ್ತನು ಮಾಯಾವಿಯಾಗಿ ಬಂದರೆ- ಅಂದರೆ ಅದೃಶ್ಯನಾಗಿಯೇ ಭಗವಾನರಲ್ಲಿಗೆ ಬಂದರೆ ಭಗವಾನರು ಹೇಳಿದುದು ಸುಳ್ಳಾಗುತ್ತದೆ.’
‘ಸುನಕ್ಖತ್ತ, ತಥಾಗತನು ನುಡಿದುದು ಸುಳ್ಳಾಗುವುದುಂಟೇ?’
‘ಭಂತೆ, ಅಚೇಲ ಪಾಥಿಕಪುತ್ತನು ತಾನು ಹೇಳಿದುದನ್ನು ಹಿಂತೆಗೆದುಕೊಳ್ಳಬೇಕು. ತನ್ನ ಚಿತ್ತದಲ್ಲಿರುವುದನ್ನು ಬಿಡಬೇಕು. ತನ್ನ ದೃಷ್ಟಿಯನ್ನು ತೊರೆಯಬೇಕು. (ಹಾಗಾದರೆ ಮಾತ್ರ) ನನ್ನನ್ನು ಮುಖತಃ ಸಂಧಿಸಬಹುದು (ಹಾಗಲ್ಲದೆ) ಅವನ ಮಾತುಗಳನ್ನು ಹಿಂತೆಗೆದುಕೊಳ್ಳದೆ ಚಿತ್ತದಲ್ಲಿರುವುದನ್ನು ಬಿಡದೆ ತನ್ನ ದೃಷ್ಟಿಯನ್ನು ತೊರೆಯದೆ ನನ್ನನ್ನು ಮುಖತಃ ಸಂಧಿಸಿದರೆ ಅವನ ತಲೆಯು ಸಿಡಿದುಹೋಗುತ್ತದೆ ಎಂಬುದನ್ನು ತಮ್ಮ ಚಿತ್ತ ಶಕ್ತಿಯಿಂದಲೇ ತಿಳಿದಿರೋ ಅಥವಾ ಯಾವುದಾದರೂ ದೇವತೆಯಿಂದ ತಿಳಿದಿರೋ?’
‘ಸುನಕ್ಖತ್ತ, ಪಾಥಿಕಪುತ್ತನು ತಾನು ಹೇಳಿದುದನ್ನು ಹಿಂತೆಗೆದುಕೊಳ್ಳಬೇಕು, ತನ್ನ ಮನಸ್ಸಿನಲ್ಲಿರುವುದನ್ನು ಬಿಡಬೇಕು. ತನ್ನ ದೃಷ್ಟಿಯನ್ನು ತೊರೆಯಬೇಕು. (ಹಾಗಾದರೆ ಮಾತ್ರ) ನನ್ನನ್ನು ಸಂಧಿಸಬಹುದು. (ಹಾಗಲ್ಲದೆ) ಸಮಣ ಗೋತಮನನ್ನು ಮುಖತಃ ಭೇಟಿಯಾದರೆ, ಅವನ ತಲೆಯು ಸಿಡಿದು ಹೋಗುತ್ತದೆ ಎಂಬುದನ್ನು ನನ್ನ ಚಿತ್ತಶಕ್ತಿಯಿಂದಲೇ ತಿಳಿದೆ. ದೇವತೆಯೂ ಅದನ್ನೇ ಹೇಳಿತು.
‘ಅಜಿತ ಎಂಬ ಲಿಚ್ಛವಿಗಳ ಸೇನಾಪತಿಯು ಕಾಲವಾದ ಮೇಲೆ ತಾವತಿಂಸನಾಗಿ ಹುಟ್ಟಿ ನನ್ನಲ್ಲಿಗೆ ಬಂದು ಹೀಗೆ ಹೇಳಿದ- ‘ಅಚೇಲ ಪಾಥಿಕಪುತ್ತನು ಲಜ್ಜೆಯಿಲ್ಲದವನಾಗಿದ್ದಾನೆ, ಅವನು ಸುಳ್ಳು ಹೇಳುವವನಾಗಿದ್ದಾನೆ, ಅವನು ವಜ್ಜಿಗಳೆಡೆಯಲ್ಲಿದ್ದಾಗ ನಾನು (ಅಜಿತ) ಮಹಾ ನಿರಯದಲ್ಲಿ ಹುಟ್ಟುವುದಾಗಿ ತಿಳಿಸಿದ. ಆದರೆ ನಾನು ಮಹಾನಿರಯದಲ್ಲಿ ಹುಟ್ಟಲಿಲ್ಲ, ತಾವತಿಂಸನಾಗಿ ಹುಟ್ಟಿದ್ದೇನೆ. ಹೀಗೆ ಅಚೇಲ ಪಾಥಿಕಪುತ್ತನು ನಾಚಿಕೆಗೆಟ್ಟವನೂ, ಸುಳ್ಳು ಹೇಳುವವನೂ ಆಗಿದ್ದಾನೆ. ಅಚೇಲ ಪಾಥಿಕಪುತ್ತನು ತನ್ನ ಮಾತುಗಳನ್ನು ಹಿಂತೆಗೆದುಕೊಳ್ಳದೆ ತನ್ನ ಚಿತ್ತದಲ್ಲಿರುವುದನ್ನು ಬಿಡದೆ ತನ್ನ ದೃಷ್ಟಿಯನ್ನು ತೊರೆಯದೆ ನಿಮ್ಮ ಸಮ್ಮುಖಕ್ಕೆ ಬಂದರೆ ಅವನ ತಲೆಯು ಸಿಡಿದುಹೋಗುತ್ತದೆ.
‘ಹೀಗೆ ಸುನಕ್ಕತ್ತ, ಅಚೇಲ ಪಾಥಿಕಪುತ್ತನಿಗಾಗಬಹುದಾದುದನ್ನು ನಾನು ಚಿತ್ತ ಶಕ್ತಿಯಿಂದಲೂ ತಿಳಿದೆ, ದೇವತೆಯಿಂದಲೂ ತಿಳಿದೆ.
‘ಸುನಕ್ಖತ್ತ, ಒಮ್ಮೆ ವೇಸಾಲಿಯಲ್ಲಿ ಭಿಕ್ಷೆ ಮಾಡಿ ಅದನ್ನು ತಿಂದು ಪಿಂಡಪಾತ್ರೆಯನ್ನು ತೊಳೆದ ಮೇಲೆ ಅಚೇಲ ಪಾಥಿಕಪುತ್ತನು ಉಳಿದುಕೊಂಡಿರುವ ಸ್ಥಳಕ್ಕೆ ವಿಶ್ರಾಂತಿಗಾಗಿ ಹೋಗುತ್ತೇನೆ. ನಿನಗೆ ಏನನ್ನಿಸುತ್ತದೆಯೋ ಅದನ್ನು ಅವನಿಗೆ ಹೇಳು.’
ಋದ್ಧಿಶಕ್ತಿ ಪ್ರದರ್ಶನ
“ಆಮೇಲೆ ಭಗ್ಗವ, ಒಂದುದಿನ ಪೂರ್ವಾಹ್ನ ಸಮಯದಲ್ಲಿ ಚೀವರವನ್ನು ಧರಿಸಿಕೊಂಡು ಪಿಂಡಪಾತ್ರೆಯನ್ನು ತೆಗೆದುಕೊಂಡು ವೇಸಾಲಿಯೊಳಕ್ಕೆ ಹೋದೆ. ಭಿಕ್ಷೆ ಮಾಡಿ ಅದನ್ನು ತಿಂದಮೇಲೆ ಪಿಂಡಪಾತ್ರೆಯನ್ನು ತೊಳೆದು ಹಗಲು ವಿಶ್ರಾಂತಿಗಾಗಿ ಪಾಥಿಕಪುತ್ತನು ಇರುವ ಕಡೆಗೆ ಹೋದೆ. ಆಗ ಲಿಚ್ಛವಿಕುಮಾರ ಸುನಕ್ಖತ್ತನು ಆತುರಾತುರದಿಂದ ವೇಸಾಲಿಯೊಳಕ್ಕೆ ಹೋಗಿ ಹೆಸರಾಂತ ಲಿಚ್ಛವಿಗಳ ಬಳಿಗೆ ಹೋದ. ಅನಂತರ ಅವರನ್ನು ಕುರಿತು- ‘ಗೆಳೆಯರೆ, ಭಗವಾನರು ಭಿಕ್ಷೆಗಾಗಿ ವೇಸಾಲಿಯೊಳಕ್ಕೆ ಹೋಗಿ ಭಿಕ್ಷೆಯನ್ನುಂಡಮೇಲೆ ಅಚೇಲ ಪಾಥಿಕಪುತ್ತನಿರುವ ಕಡೆಗೆ ಹಗಲು ವಿಶ್ರಾಂತಿಗಾಗಿ ಹೋಗುತ್ತಾರೆ. ಆಯುಷ್ಮಂತರೇ, ಬೇಗ ಬೇಗ ಬನ್ನಿ. ಸಮಣರು ಮನುಷ್ಯರಿಗೆ ಸಾಧ್ಯವಾಗದ ಪವಾಡಗಳನ್ನು ಮಾಡುತ್ತಾರೆ!’ ಆಗ ಭಗ್ಗವ ಆ ಹೆಸರಾಂತ ಲಿಚ್ಛವಿಗಳು ಹೀಗೆಂದುಕೊಂಡರು- ‘ಸಮಣರು ತಮ್ಮ ಋದ್ಧಿ ಶಕ್ತಿಗಳಿಂದ ಮನುಷ್ಯರಿಗೆ ಸಾಧ್ಯವಾಗದುದನ್ನು ಮಾಡುತ್ತಾರೆ, ನೋಡೋಣ ಬನ್ನಿ!’ ಭಗ್ಗವ, ಆಗ ಬೇರೆ ಬೇರೆ ಸಂಪ್ರದಾಯಗಳಿಗೆ ಪ್ರಸಿದ್ಧರಾದ ಸಮಣ ಬ್ರಾಹ್ಮಣರು ‘ಮನುಷ್ಯರಿಗೆ ಸಾಧ್ಯವಲ್ಲದ ಪವಾಡಗಳನ್ನು ಸಮಣರು ಮಾಡುವುದನ್ನು ನೋಡೋಣ ಬನ್ನಿ’ ಎಂದುಕೊಂಡರು.
“ಭಗ್ಗವ, ಹೆಸರಾಂತ ಲಿಚ್ಛವಿಗಳೂ, ಪ್ರಸಿದ್ಧರಾದ ಬ್ರಾಹ್ಮಣರೂ, ಶ್ರೀಮಂತ ಗೃಹಸ್ಥರೂ ಬೇರೆ ಬೇರೆ ಸಂಪ್ರದಾಯಗಳಿಗೆ ಸೇರಿದ ಸಮಣ ಬ್ರಾಹ್ಮಣರೂ ಅಚೇಲ ಪಾಥಿಕಪುತ್ತಕನು ಉಳಿದುಕೊಂಡಿದ್ದ ಕಡೆ ಸೇರಿದರು. ನೂರಾರು, ಸಾವಿರಾರು ಜನರ ದೊಡ್ಡ ಸಮೂಹ ಅಲ್ಲಿ ಸೇರಿತು.
“ಭಗ್ಗವ, ಅಚೇಲ ಪಾಥಿಕಪುತ್ತನು ಪ್ರಸಿದ್ಧರಾದ ಲಿಚ್ಛವಿಗಳೂ ಹೆಸರಾಂತ ಸಮಣ ಬ್ರಾಹ್ಮಣರ ಗಡಣಗಳೂ ಶ್ರೀಮಂತರಾದ ಗೃಹಪತಿಗಳೂ ನಾನಾ ಪಂಗಡಗಳ ಸಮಣ ಬ್ರಾಹ್ಮಣರೂ ಹಗಲು ವಿಶ್ರಾಂತಿಗಾಗಿ ತನ್ನ ನಿವಾಸದಲ್ಲಿ ಇದ್ದ ಸಮಣ ಗೋತಮರ ಬಳಿಗೆ ಹೋಗಿರುವುದನ್ನು ಕೇಳಿದನು. ಇದನ್ನು ಕೇಳಿದ ಅವನು ಭಯಗೊಂಡನು; ಅದರಿಂದ ಅವನ ಮೈಕೂದಲು ನಿಮಿರಿ ನಿಂತಿತು. ಭೀತಿಗೊಂಡ ಅಚೇಲ ಪಾಥಿಕಪುತ್ತನು ಪರಿಬ್ಬಾಜಕರ ನಿವಾಸವಾದ ತಿಂದುಕಖಾಣುಪದ6 ನಿವಾಸದ ಕಡೆಗೆ ತೆರಳಿದನು. ಆಗ ಆ ಸಮೂಹವು ಅದರಲ್ಲಿದ್ದ ಒಬ್ಬನಿಗೆ ಹೀಗೆಂದು ಹೇಳಿದನು- ‘ಅಚೇಲ ಪಾಥಿಕಪುತ್ತನು ಪರಿಬ್ಬಾಜಕರ ತಿಂದುಕಖಾಣುಕಕ್ಕೆ ಹೋಗಿದ್ದಾನೆ, ಅಲ್ಲಿಗೆ ಹೋಗಿ ಅವನಿಗೆ ಪ್ರಸಿದ್ಧರಾದ ಲಿಚ್ಛವಿಗಳೂ, ಹೆಸರಾಂತ ಬ್ರಾಹ್ಮಣರೂ, ಶ್ರೀಮಂತರಾದ ಗೃಹಸ್ಥರೂ, ನಾನಾ ಪಂಗಡಗಳಿಗೆ ಸೇರಿದ ಸಮಣ ಬ್ರಾಹ್ಮಣರೂ ಆಯುಷ್ಮಂತನಾದ ನಿನ್ನ ನಿವಾಸದಲ್ಲಿ ಹಗಲು ವಿಶ್ರಾಂತಿಗಾಗಿ ಬಂದಿರುವ ಸಮಣ ಗೋತಮರ ಬಳಿ ಸೇರಿದ್ದಾರೆ.’ ಗೆಳೆಯ ಪಾಥಿಕಪುತ್ತನು ತಾನೂ ಜ್ಞಾನವಾದಿ, ಸಮಣ ಗೋತಮನೂ ಜ್ಞಾನವಾದಿ (ಆದುದರಿಂದ) ಜ್ಞಾನವಾದಿಗಳಾದ ನಾವು ನಮ್ಮ ಋದ್ಧಿಶಕ್ತಿಗಳಿಂದ ಪವಾಡಗಳನ್ನು ತೋರಿಸಬಹುದು; ಸಮಣ ಗೊತಮನು ಅರ್ಧ ದಾರಿ ಬರಲಿ, ನಾನೂ ಅರ್ಧ ದಾರಿ ಹೋಗುತ್ತೇನೆ; ನಾವಿಬ್ಬರೂ ಪವಾಡಗಳನ್ನು ಮಾಡಿ ತೋರಿಸುತ್ತೇವೆ. ಸಮಣಗೋತಮನು ಒಂದು ಪವಾಡವನ್ನು ಮಾಡಿದರೆ ನಾನು ಎರಡನ್ನು ಮಾಡಿ ತೋರಿಸುತ್ತೇನೆ. ಸಮಣ ಗೋತಮನು ಎರಡು ಪವಾಡಗಳನ್ನು ಮಾಡಿದರೆ ನಾನು ನಾಲ್ಕು ಪವಾಡಗಳನ್ನು ಮಾಡುತ್ತೇನೆ. ಸಮಣ ಗೋತಮನು ನಾಲ್ಕು ಪವಾಡಗಳನ್ನು ಮಾಡಿದರೆ ನಾನು ಎಂಟನ್ನು ಮಾಡುತ್ತೇನೆ. ಹೀಗೆ ಅವನು ಎಷ್ಟು ಪವಾಡಗಳನ್ನು ಮಾಡುತ್ತಾನೋ ಅದರ ಎರಡರಷ್ಟನ್ನು ಮಾಡುತ್ತೇನೆ ಎಂದು ವೇಸಾಲಿಯ ಜನರಿಗೆ ಹೇಳಿರುವುದನ್ನು ನೆನಪು ಮಾಡು. ಸಮಣ ಗೋತಮನು ಆಯುಷ್ಮಂತನ ನಿವಾಸದಲ್ಲಿ ಹಗಲು ವಿಶ್ರಾಂತಿಗಾಗಿ, ಮೊದಲು ಬಂದಿರುವುದರಿಂದ ನೀನು ಅರ್ಧ ದಾರಿ ಬಾ ಎಂದು ತಿಳಿಸು.’
“ಭಗ್ಗವ, ‘ಹಾಗೆಯೇ ಆಗಲಿ ಗೆಳೆಯರೆ’ ಎಂದು ಆ ಮನುಷ್ಯನು ಆ ಸಮೂಹಕ್ಕೆ ಹೇಳಿ ಪಾರಿಬ್ಬಾಜಕ ತಿಂದುಕಖಾಣುಕ ನಿವಾಸದಲ್ಲಿದ್ದ ಪಾಥಿಕಪುತ್ತನ ಬಳಿ ಹೋದನು. ಅವನಿಗೆ ಆ ಸಮೂಹವು ಹೇಳಿದ್ದೆಲ್ಲವನ್ನೂ ತಿಳಿಸಿದನು.
“ಇದನ್ನು ಕೇಳಿದ ಅಚೇಲ ಪಾಥಿಕಪುತ್ತನು ‘ಗೆಳೆಯ ಬರುತ್ತೇನೆ, ಬರುತ್ತೇನೆ ಗೆಳೆಯ’ ಎಂದು ಹೇಳಿ ಆ ಕೂಡಲೇ ಆಸನದಿಂದ ಎದ್ದು ಹೊರಡಲು ಯತ್ನಿಸಿದನು. ಆದರೆ ಅದು ಸಾಧ್ಯವಾಗಲಿಲ್ಲ. ಆಗ ಅವನನ್ನು ಕರೆಯಲು ಬಂದಿದ್ದವನು ‘ಪಾಥಿಕಪುತ್ತ ನಿನಗೆ ಏನಾಯಿತು? ನೀನು ಕುಳಿತಿರುವ ಪೀಠಕ್ಕೆ ಅಂಟಿಕೊಂಡಿದ್ದೀಯೋ ಅಥವಾ ಪೀಠವು ನಿನಗೆ ಅಂಟಿಕೊಂಡಿದೆಯೋ? ಬರುತ್ತೇನೆ ಗೆಳೆಯ, ಬರುತ್ತೇನೆ ಗೆಳೆಯ ಎಂದು ಹೇಳಿದ ನೀನು ಆಸನದಿಂದ ಏಳಲಾರದೆ ಹೋಗಿದ್ದೀಯೆ’ ಎಂದು ಹೇಳಿದನು. ಆಗ ಮತ್ತೊಮ್ಮೆ ಪಾಥಿಕಪುತ್ತನು ‘‘ಗೆಳೆಯ ಬರುತ್ತೇನೆ, ಬರುತ್ತೇನೆ ಗೆಳೆಯ’ ಎಂದುಕೊಂಡೇ ಆಸನದಿಂದ ಎದ್ದು ಹೊರಡಲು ಯತ್ನಿಸಿದನು, ಆದರೆ ಸಾಧ್ಯವಾಗಲಿಲ್ಲ.
“ಆಗ ಆತನು ‘ಈ ಅಚೇಲ ಪಾಥಿಕಪುತ್ತನು ಸೋತು ಹೋಗಿದ್ದಾನೆ. ‘ಗೆಳೆಯ ಬರುತ್ತೇನೆ, ಬರುತ್ತೇನೆ ಗೆಳೆಯ’ ಎಂದು ಹೇಳಿದ ಈತನಿಗೆ ಆಸನದಿಂದ ಏಳಲೂ ಸಾಧ್ಯವಾಗಲಿಲ್ಲ’ ಎಂದು ತಿಳಿದುಕೊಂಡನು. ಆ ಸಮೂಹಕ್ಕೆ ಬಂದು ‘ಅಚೇಲ ಪಾಥಿಕಪುತ್ತನು ಸೋತುಹೋಗಿದ್ದಾನೆ, ಗೆಳೆಯ ಬರುತ್ತೇನೆ, ಬರುತ್ತೇನೆ ಗೆಳೆಯ ಎಂದು ಹೇಳಿದ ಆತನು ಆಸನದಿಂದ ಎದ್ದು ಬರಲಾರ’ ಎಂದು ಹೇಳಿದನು. ಇದನ್ನು ಕೇಳಿದಮೇಲೆ ನಾನು ಆ ಸಮೂಹವನ್ನು ಕುರಿತು ಇಂತೆಂದೆನು- ‘ಅಚೇಲ ಪಾಥಿಕಪುತ್ತನು ತಾನು ಆಡಿದುದನ್ನು ಹಿಂತೆಗೆದುಕೊಳ್ಳದೆ ತನ್ನ ಚಿತ್ತದಲ್ಲಿರುವುದನ್ನು ಬಿಡದೆ ತನ್ನ ದೃಷ್ಟಿಯನ್ನು ತೊರೆಯದೆ ನನ್ನ ಹತ್ತಿರಕ್ಕೆ ಬರುವುದಕ್ಕೆ ಸಾಧ್ಯವಾಗುವುದಿಲ್ಲ. ಅವನೇನಾದರೂ ನಾನು ಹೇಳಿದುದನ್ನು ಹಿಂತೆಗೆದುಕೊಳ್ಳದೆ ‘ನನ್ನ ಮನಸ್ಸಿನಲ್ಲಿರುವುದನ್ನು ತೊರೆಯದೆ ನನ್ನ ದೃಷ್ಟಿಯನ್ನು ಬಿಡದೆ ಸಮಣ ಗೋತಮನ ಬಳಿಗೆ ಹೋಗುತ್ತೇನೆ’ ಎಂದುಕೊಂಡರೆ ಅವನ ತಲೆ ಸೀಳಾಗಿ ಹೋಗುತ್ತದೆ’.
“ಆಮೇಲೆ ಭಗ್ಗವ, ಒಬ್ಬ ಲಿಚ್ಛವಿ ಮಹಾಮಾತ್ಯನು ತನ್ನ ಆಸನದಿಂದ ಎದ್ದು ಆ ಸಮೂಹಕ್ಕೆ ಹೀಗೆಂದನು- ‘ನಾನು ಅಚೇಲ ಪಾಥಿಕಪುತ್ತನನ್ನು ಇಲ್ಲಿಗೆ ಕರೆತರಲು ಯತ್ನಿಸುತ್ತೇನೆ, ನಾನು ಬರುವವರೆಗೂ ಕಾದಿರಬೇಕು.’
“ಆಮೇಲೆ ಲಿಚ್ಛವಿ ಮಹಾಮಾತ್ಯನು ಅಚೇಲ ಪಾಥಿಕಪುತ್ತನಿದ್ದ ತಿಂದುಕಖಾಣಿಕ ನಿವಾಸಕ್ಕೆ ತೆರಳಿದನು. ಅವನಿಗೆ ಇಂತೆಂದನು- ‘ಗೆಳೆಯ ಪಾಥಕಪುತ್ತ, ನಿನ್ನ ನಿವಾಸಕ್ಕೆ ಬಾ. ಬಂದರೆ ನಿನಗೆ ಶ್ರೇಯಸ್ಸಾಗುತ್ತದೆ. ಪ್ರಸಿದ್ಧರಾದ ಲಿಚ್ಛವಿಗಳೂ ಹೆಸರಾಂತ ಬ್ರಾಹ್ಮಣರೂ ಶ್ರೀಮಂತರಾದ ಗೃಹಸ್ಥರೂ ನಾನಾ ಪಂಗಡಗಳಿಗೆ ಸೇರಿದ ಸಮಣ ಬ್ರಾಹ್ಮಣರೂ ಸೇರಿದ್ದಾರೆ. ಸಮಣ ಗೋತಮನೂ ಅಲ್ಲಿಯೇ ಇದ್ದಾನೆ. ಗೆಳೆಯ, ವೇಸಾಲಿಯ ಜನರಿಗೆ ‘ನಾನೂ ಜ್ಞಾನವಾದಿ, ಸಮಣ ಗೋತಮನೂ ಜ್ಞಾನವಾದಿ (ಆದುದರಿಂದ) ಜ್ಞಾನವಾದಿಗಳಾದ ನಾವು ನಮ್ಮ ಋದ್ಧಿಶಕ್ತಿಗಳಿಂದ ಪವಾಡಗಳನ್ನು ತೋರಿಸಬಹುದು; ಸಮಣ ಗೊತಮನು ಅರ್ಧ ದಾರಿ ಬರಲಿ, ನಾನೂ ಅರ್ಧ ದಾರಿ ಹೋಗುತ್ತೇನೆ; ನಾವಿಬ್ಬರೂ ಪವಾಡಗಳನ್ನು ಮಾಡಿ ತೋರಿಸುತ್ತೇವೆ. ಸಮಣಗೋತಮನು ಒಂದು ಪವಾಡವನ್ನು ಮಾಡಿದರೆ ನಾನು ಎರಡನ್ನು ಮಾಡಿ ತೋರಿಸುತ್ತೇನೆ. ಸಮಣ ಗೋತಮನು ಎರಡು ಪವಾಡಗಳನ್ನು ಮಾಡಿದರೆ ನಾನು ನಾಲ್ಕು ಪವಾಡಗಳನ್ನು ಮಾಡುತ್ತೇನೆ. ಸಮಣ ಗೋತಮನು ನಾಲ್ಕು ಪವಾಡಗಳನ್ನು ಮಾಡಿದರೆ ನಾನು ಎಂಟನ್ನು ಮಾಡುತ್ತೇನೆ’ ಮುಂತಾದುದಾಗಿ ಹೇಳಿರುವೆಯಷ್ಟೆ. ನೀನು ಅರ್ಧ ದೂರ ಬಾ. ಆಯುಷ್ಮಂತನಾದ ಸಮಣ ಗೊತಮನು ಹಗಲು ವಿಶ್ರಾಂತಿಗಾಗಿ ನಿನ್ನ ನಿವಾಸಕ್ಕೆ ಮೊದಲೇ ಬಂದಿದ್ದಾನೆ. ನೀನು ಹೇಳಿದುದನ್ನು ಹಿಂತೆಗೆದುಕೊಳ್ಳದೆ, ನಿನ್ನ ಚಿತ್ತದಲ್ಲಿರುವುದನ್ನು ಬಿಡದೆ ನಿನ್ನ ದೃಷ್ಟಿಯನ್ನು ತೊರೆಯದೆ ನೀನು ಅವನಲ್ಲಿಗೆ ಹೋಗಲಾರೆ. ಹಾಗೇನಾದರೂ ನಿನ್ನ ಮಾತನ್ನು ಹಿಂತೆಗೆದುಕೊಳ್ಳದೆ ನಿನ್ನ ಮನಸ್ಸಿನಲ್ಲಿರುವುದನ್ನು ಬಿಡದೆ ನಿನ್ನ ದೃಷ್ಟಿಯನ್ನು ತೊರೆಯದೆ ನಿನ್ನ ತಲೆಯು ಹೋಳಾಗಿ ಹೋಗುತ್ತದೆ ಎಂದು ಸಮಣ ಗೋತಮನು ಹೇಳಿರುವನಷ್ಟೆ. ನೀನು ಬಂದರೆ, ನೀನು ಜಯಪಡೆಯುವಂತೆ ಸಮಣ ಪರಾಜಯಗೊಳ್ಳುವಂತೆ ಮಾಡುತ್ತೇನೆ.’
“ಭಗ್ಗವ, ಹೀಗೆ ಹೇಳಿದುದನ್ನು ಕೇಳದ ಅಚೇಲ ಪಾಥಿಕ ಪುತ್ತನು ‘ಬರುತ್ತೇನೆ ಗೆಳೆಯ, ಗೆಳೆಯ ಬರುತ್ತೇನೆ’ ಎಂದು ಹೇಳಿ ಆಸನದಿಂದೆದ್ದು ಹೊರಡಲು ಯತ್ನಿಸಿದನು. ಆದರೆ ಅದು ಸಾಧ್ಯವಾಗಲಿಲ್ಲ. ಆಗ ಲಿಚ್ಛವಿ ಮಹಾಮಾತ್ಯನು ಅಚೇಲ ಪಾಥಿಕಪುತ್ತನನ್ನು ಕುರಿತು ಇಂತೆಂದನು- ‘ಗೆಳೆಯ ಪಾಥಿಕಪುತ್ತ ಏನಾಯಿತು, ಪೀಠಕ್ಕೆ ನೀನು ಅಂಟುಕೊಂಡಿದ್ದೀಯೋ? ಅಥವಾ ಪೀಠವು ನಿನಗೆ ಅಂಟಿಕೊಂಡಿದೆಯೋ? ಬರುತ್ತೇನೆ ಗೆಳೆಯ, ಗೆಳೆಯ ಬರುತ್ತೇನೆ ಎಂದು ಹೇಳುತ್ತೀಯೆ, ಆದರೆ ಆಸನದಿಂದ ಏಳಲೇ ಸಾಧ್ಯವಾಗುತ್ತಿಲ್ಲ.’ ಅಚೇಲ ಪಾಥಿಕಪುತ್ತನು ಮತ್ತೆ ‘ಬರುತ್ತೇನೆ, ಬರುತ್ತೇನೆ ಗೆಳೆಯ’ ಎಂದು ಹೇಳುತ್ತಾ ಆಸನದಿಂದೇಳಲು ಯತ್ನಿಸಿದನು, ಆದರೆ ಸಾಧ್ಯವಾಗಲಿಲ್ಲ.
“ಆಗ ಲಿಚ್ಛವಿ ಮಹಾಮಾತ್ಯನು ‘ಈ ಅಚೇಲ ಪಾಥಿಕಪುತ್ತನು ಸೋತು ಹೋಗಿದ್ದಾನೆ. ಬರುತ್ತೇನೆ, ಬರುತ್ತೇನೆ ಗೆಳೆಯ ಎಂದು ಹೇಳಿದರೂ ಅವನಿಗೆ ಆಸನದಿಂದ ಏಳುವುದಕ್ಕೂ ಆಗುವುದಿಲ್ಲ’ ಎಂಬುದನ್ನು ತಿಳಿದುಕೊಂಡನು. ಆಮೇಲೆ ಸಮೂಹವಿದ್ದೆಡೆಗೆ ಬಂದು ‘ಬರುತ್ತೇನೆ ಬರುತ್ತೇನೆ ಗೆಳೆಯ’ ಎಂದು ಹೇಳಿದ ಅಚೇಲ ಪಾಥಿಕಪುತ್ತನ ಪಾಡನ್ನು ವಿವರಿಸಿದನು. ಇದನ್ನು ಕೇಳಿದ ನಾನು ಆ ಸಮೂಹಕ್ಕೆ ‘ಗೆಳೆಯರೆ, ಅಚೇಲ ಪಾಥಿಕಪುತ್ತನು ತಾನು ಹೇಳಿದುದನ್ನು ಹಿಂತೆಗೆದುಕೊಳ್ಳದೆ ತನ್ನ ಮನಸ್ಸಿನಲ್ಲಿರುವುದನ್ನು ಬಿಡದೆ ತನ್ನ ದೃಷ್ಟಿಯನ್ನು ತೊರೆಯದೆ ನನ್ನಲ್ಲಿಗೆ ಬರಲಾರ. ಹಾಗೇನಾದರೂ ಆತನು ತನ್ನ ಮಾತನ್ನು ಹಿಂತೆಗೆದುಕೊಳ್ಳುವುದಿಲ್ಲ, ತನ್ನ ಚಿತ್ತದಲ್ಲಿರುವುದನ್ನು ಬಿಡುವುದಿಲ್ಲ, ತನ್ನ ದೃಷ್ಟಿಯನ್ನು ತೊರೆಯುವುದಿಲ್ಲ ಎಂದು ಅಂದುಕೊಂಡು ನನ್ನಲ್ಲಿಗೆ ಬಂದರೆ ಅವನ ತಲೆ ಹೋಳಾಗಿ ಹೋಗುತ್ತದೆ. ಆಯುಷ್ಮಂತರಾದ ಲಿಚ್ಛವಿಗಳೇನಾದರೂ ಅಚೇಲ ಪಾಥಿಕಪುತ್ತನನ್ನು ಜೋಡಿ ಎತ್ತುಗಳಿಗೆ ಕಟ್ಟಿ ಎಳೆದುಕೊಂಡು ಬರೋಣ ಎಂದುಕೊಂಡರೆ ಪಾಥಿಕಪುತ್ತನು ಹಗ್ಗವನ್ನೇ ಕತ್ತರಿಸಿ ಹಾಕಿಬಿಡುತ್ತಾನೆ. ಅವನು ತನ್ನ ಮಾತುಗಳನ್ನು ಹಿಂತೆಗೆದುಕೊಳ್ಳದೆ ತನ್ನ ಮನಸ್ಸಿನಲ್ಲಿರುವುದನ್ನು ಬಿಡದೆ ತನ್ನ ದೃಷ್ಟಿಯನ್ನು ತೊರೆಯದೆ ನನ್ನನ್ನು ನೋಡಲಾರ. ಹಾಗೇನಾದರೂ ತನ್ನ ಮಾತನ್ನು ಹಿಂತೆಗೆದುಕೊಳ್ಳದೆ ತನ್ನ ಮನಸ್ಸಿನಲ್ಲಿರುವುದನ್ನು ಬಿಡದೆ ತನ್ನ ದೃಷ್ಟಿಯನ್ನು ತೊರೆಯದೆ ಸಮಣ ಗೋತಮನನ್ನು ಸಂಧಿಸುತ್ತೇನೆ ಎಂದು ಅವನು ಅಂದುಕೊಂಡರೆ ಅವನ ತಲೆಯು ಹೋಳಾಗಿ ಹೋಗುತ್ತದೆ.’
‘ಆನಂತರ ಭಗ್ಗವ, ದಾರುಕಪತ್ತಿಕ ಎಂಬುವನ ಆತ್ಮೀಯ ಶಿಷ್ಯನಾದ ಜಾಲಿಯ ಎಂಬಾತನು ಆ ಸಮೂಹವನ್ನು ಕುರಿತು ಇಂತೆಂದನು- ‘ಅಚೇಲ ಪಾಥಿಕಪುತ್ತನನ್ನು ಕರೆತರಲು ಸಾಧ್ಯವಾಗುತ್ತದೆಯೇ ನೋಡುತ್ತೇನೆ. ನಾನು ಅಲ್ಲಿಗೆ ಹೋಗಿ ಬರುವವರೆಗೂ ಕಾಯಬೇಕು.
ಆಮೇಲೆ ಆ ಜಾಲಿಯನು ತಿಂದುಕಖಾಣುಕ ಪರಿಬ್ಬಾಜಕ ನಿವಾಸಕ್ಕೆ ತೆರಳಿ ಅಚೇಲ ಪಾಥಿಕಪುತ್ತನನ್ನು ಕುರಿತು ‘ಗೆಳೆಯ ಪಾಥಿಕಪುತ್ತ, ನೀನು ಸಮಣ ಗೋತಮನಲ್ಲಿರುವಲ್ಲಿಗೆ ಬಾ. ಬಂದರೆ ನಿನಗೆ ಶ್ರೇಯಸ್ಸಾಗುತ್ತದೆ. ಪ್ರಸಿದ್ಧರಾದ ಲಿಚ್ಛವಿಗಳೂ ಹೆಸರಾಂತ ಬ್ರಾಹ್ಮಣರೂ ಶ್ರೀಮಂತರಾದ ಗೃಹಸ್ಥರೂ ನಾನಾ ಪಂಗಡಗಳಿಗೆ ಸೇರಿದ ಸಮಣ ಬ್ರಾಹ್ಮಣರೂ ಸೇರಿದ್ದಾರೆ. ಸಮಣ ಗೋತಮನು ಹಗಲು ವಿಶ್ರಾಂತಿಗಾಗಿ ಆಯುಷ್ಮಂತನ ನಿವಾಸಕ್ಕೆ ಬಂದಿದ್ದಾನೆ. ವೇಸಾಲಿಯ ಜನರಿಗೆ ‘ನಾನೂ ಜ್ಞಾನವಾದಿ, ಸಮಣ ಗೋತಮನೂ ಜ್ಞಾನವಾದಿ (ಆದುದರಿಂದ) ಜ್ಞಾನವಾದಿಗಳಾದ ನಾವು ನಮ್ಮ ಋದ್ಧಿಶಕ್ತಿಗಳಿಂದ ಪವಾಡಗಳನ್ನು ತೋರಿಸಬಹುದು; ಸಮಣ ಗೊತಮನು ಅರ್ಧ ದಾರಿ ಬರಲಿ, ನಾನೂ ಅರ್ಧ ದಾರಿ ಹೋಗುತ್ತೇನೆ; ನಾವಿಬ್ಬರೂ ಪವಾಡಗಳನ್ನು ಮಾಡಿ ತೋರಿಸುತ್ತೇವೆ. ಸಮಣಗೋತಮನು ಒಂದು ಪವಾಡವನ್ನು ಮಾಡಿದರೆ ನಾನು ಎರಡನ್ನು ಮಾಡಿ ತೋರಿಸುತ್ತೇನೆ. ಸಮಣ ಗೋತಮನು ಎರಡು ಪವಾಡಗಳನ್ನು ಮಾಡಿದರೆ ನಾನು ನಾಲ್ಕು ಪವಾಡಗಳನ್ನು ಮಾಡುತ್ತೇನೆ. ಸಮಣ ಗೋತಮನು ನಾಲ್ಕು ಪವಾಡಗಳನ್ನು ಮಾಡಿದರೆ ನಾನು ಎಂಟನ್ನು ಮಾಡುತ್ತೇನೆ’ ಮುಂತಾದುದಾಗಿ ಹೇಳಿರುವೆಯಷ್ಟೆ. ನೀನು ಅರ್ಧ ದೂರ ಬಾ. ಆಯುಷ್ಮಂತನಾದ ಸಮಣ ಗೊತಮನು ಹಗಲು ವಿಶ್ರಾಂತಿಗಾಗಿ ನಿನ್ನ ನಿವಾಸಕ್ಕೆ ಮೊದಲೇ ಬಂದಿದ್ದಾನೆ. ನೀನು ಹೇಳಿದುದನ್ನು ಹಿಂತೆಗೆದುಕೊಳ್ಳದೆ, ನಿನ್ನ ಚಿತ್ತದಲ್ಲಿರುವುದನ್ನು ಬಿಡದೆ ನಿನ್ನ ದೃಷ್ಟಿಯನ್ನು ತೊರೆಯದೆ ನೀನು ತನ್ನಲ್ಲಿಗೆ ಬರಲಾರೆ. ಹಾಗೇನಾದರೂ ನಿನ್ನ ಮಾತನ್ನು ಹಿಂತೆಗೆದುಕೊಳ್ಳದೆ ನಿನ್ನ ಮನಸ್ಸಿನಲ್ಲಿರುವುದನ್ನು ಬಿಡದೆ ನಿನ್ನ ದೃಷ್ಟಿಯನ್ನು ತೊರೆಯದೆ ನಿನ್ನ ತಲೆಯು ಹೋಳಾಗಿ ಹೋಗುತ್ತದೆ ಎಂದು ಸಮಣ ಗೋತಮನು ಹೇಳಿರುವನಷ್ಟೆ. ಆಯುಷ್ಮಂತರಾದ ಲಿಚ್ಛವಿಗಳೇನಾದರೂ ಅಚೇಲಪಾಥಿಕಪುತ್ತನನ್ನು ಜೋಡೆತ್ತುಗಳಿಗೆ ಕಟ್ಟಿ ಎಳೆದುಕೊಂಡು ಬರೋಣ ಎಂದರೆ ಪಾಥಿಕಪುತ್ತನು ಹಗ್ಗವನ್ನೇ ಕತ್ತರಿಸಿಹಾಕಿಬಿಡುತ್ತಾನೆ ಎಂದು ಹೇಳುತ್ತಿದ್ದಾರೆ. ನೀನು ಬಂದರೆ ನೀನು ಜಯ ಪಡೆಯುವಂತೆ ಸಮಣ ಗೋತಮನು ಪರಾಜಯಗೊಳ್ಳುವಂತೆ ಮಾಡುತ್ತೇವೆ.’
“ಇದನ್ನು ಕೇಳಿದ ಅಚೇಲ ಪಾಥಿಕಪುತ್ತನು ‘ಬರುತ್ತೇನೆ ಗೆಳೆಯ, ಗೆಳೆಯ ಬರುತ್ತೇನೆ’ ಎಂದು ಹೇಳಿ ಆಸನದಿಂದೆದ್ದು ಹೊರಡಲು ಯತ್ನಿಸಿದನು. ಆದರೆ ಅದು ಸಾಧ್ಯವಾಗಲಿಲ್ಲ. ಆಗ ಭಗ್ಗವ, ದಾರುಕಪತ್ತಿಕನ ಶಿಷ್ಯನಾದ ಜಾಲಿಯನು ಪಾಥಿಕಪುತ್ತನನ್ನು ಕುರಿತು ಇಂತೆಂದನು- ‘ಗೆಳೆಯ ಪಾಥಿಕಪುತ್ತ, ಏನಾಯಿತು, ಪೀಠಕ್ಕೆ ನೀನು ಅಂಟಿಕೊಂಡಿದ್ದೀಯೋ ಅಥವಾ ಪೀಠವು ನಿನಗೆ ಅಂಟಿಕೊಂಡಿದೆಯೋ? ಗೆಳೆಯ ಬರುತ್ತೇನೆ, ಬರುತ್ತೇನೆ ಎಂದು ಹೇಳುತ್ತೀಯೆ. ಆದರೆ ಆಸನದಿಂದ ಏಳಲೇ ಸಾಧ್ಯವಾಗುತ್ತಿಲ್ಲ.’ ಅಚೇಲ ಪಾಥಿಕಪುತ್ತನು ಮತ್ತೆ ‘ಬರುತ್ತೇನೆ, ಬರುತ್ತೇನೆ ಗೆಳೆಯ’ ಎಂದು ಹೇಳುತ್ತಾ ಆಸನದಿಂದೇಳಲು ಯತ್ನಿಸಿದನು, ಆದರೆ ಸಾಧ್ಯವಾಗಲಿಲ್ಲ.
“ಆಗ ಭಗ್ಗವ, ದಾರುಕಪತ್ತಿಯ ಶಿಷ್ಯನಾದ ಜಾಲಿಯನು ‘ಈ ಅಚೇಲ ಪಾಥಿಕಪುತ್ತನು ಸೋತುಹೋಗಿದ್ದಾನೆ. ‘ಬರುತ್ತೇನೆ, ಬರುತ್ತೇನೆ ಗೆಳೆಯ’ ಎಂದು ಹೇಳಿದರೂ ಅವನಿಗೆ ಆಸನದಿಂದ ಏಳುವುದಕ್ಕೂ ಆಗುವುದಿಲ್ಲ’ ಎಂಬುದನ್ನು ತಿಳಿದುಕೊಂಡನು. ಆಗ ಪಾಥಿಕಪುತ್ತನಿಗೆ ಹೀಗೆಂದನು-
‘ಹಿಂದೆ ಒಮ್ಮೆ ಮೃಗರಾಜನಾದ ಒಂದು ಸಿಂಹವು ಹೀಗೆಂದುಕೊಂಡಿತು. ‘ಗೆಳೆಯ ಪಾಥಿಕಪುತ್ತ, ಕಗ್ಗಾಡಿನಲ್ಲಿ ಒಂದುಕಡೆ ನಿವಾಸವನ್ನು ಮಾಡಿಕೊಳ್ಳಬಹುದಲ್ಲವೇ? ಹಾಗೆ ನಿವಾಸವನ್ನು ಮಾಡಿಕೊಂಡ ಮೇಲೆ ಸಾಯಂಕಾಲದ ಸಮಯದಲ್ಲಿ ಅಲ್ಲಿಂದ ನಿಷ್ಕ್ರಮಿಸಿ ಅಡ್ಡಾಡಿ ನಾಲ್ಕು ದಿಕ್ಕುಗಳಲ್ಲಿರುವುದೆಲ್ಲವನ್ನು ಚೆನ್ನಾಗಿ ನೋಡಿ ಮೂರುಸಾರಿ ಸಿಂಹನಾದವನ್ನು ಮಾಡಿ ಹಸುಗಳು ಮೇಯುವ ಕಡೆಗೆ ಹೋಗುತ್ತೇನೆ. ಅಲ್ಲಿರುವ ಉತ್ತಮವಾದ ಮೃಗ ಸಮೂಹವನ್ನು ಕೊಂದು ಮೃದು ಮೃದುವಾಗಿರುವ ಮಾಂಸವನ್ನು ಭಕ್ಷಿಸಿ ನನ್ನ ನಿವಾಸಕ್ಕೆ ಹಿಂತಿರುಗುತ್ತೇನೆ. ಆಮೇಲೆ ಗೆಳೆಯ, ಮೃಗರಾಜನಾದ ಆ ಸಿಂಹವು ಕಗ್ಗಾಡಿನ ಒಂದುಕಡೆ ತನ್ನ ನಿವಾಸವನ್ನು ಮಾಡಿಕೊಂಡಿತು. ನಿವಾಸವನ್ನು ಮಾಡಿಕೊಂಡಮೇಲೆ ಸಾಯಂಕಾಲದ ಸಮಯದಲ್ಲಿ ಅಲ್ಲಿಂದ ನಿಷ್ಕ್ರಮಿಸಿತು. ಆಮೇಲೆ ಗಂಭೀರವಾಗಿ ಓಡಾಡಿತು. ನಾಲ್ಕು ದಿಕ್ಕುಗಳಲ್ಲಿರುವುದೆಲ್ಲವನ್ನು ಚೆನ್ನಾಗಿ ನೋಡಿ ಮೂರುಸಾರಿ ಸಿಂಹನಾದವನ್ನು ಮಾಡಿತು. ಆಮೇಲೆ ಹಸುಗಳು ಮೇಯುವ ಕಡೆಗೆ ಹೋಯಿತು. ಅಲ್ಲಿದ್ದ ಉತ್ತಮವಾದ ಮೃಗ ಸಮೂಹವನ್ನು ಕೊಂದು ಮೃದು ಮೃದುವಾದ ಮಾಂಸವನ್ನು ಭಕ್ಷಿಸಿ ತನ್ನ ನಿವಾಸಕ್ಕೆ ಹಿಂತಿರುಗಿತು.
‘ಗೆಳೆಯ ಪಾಥಿಕಪುತ್ತ, ಮೃಗರಾಜನಾದ ಸಿಂಹವು ಬಿಟ್ಟ ಕೂಳನ್ನು ತಿಂದು ಕೊಬ್ಬಿ ಬೆಳೆಯುತ್ತಿದ್ದ ಒಂದು ನರಿಯಿತ್ತು. ಅದು ಬಲಶಾಲಿಯಾಗಿತ್ತು. ಪುಷ್ಟಿಶಾಲಿಯಾಗಿತ್ತು. ಆ ನರಿಯು ಹೀಗೆಂದುಕೊಂಡಿತು. ‘ನನಗೂ ಆ ಮೃಗರಾಜ ಸಿಂಹಕ್ಕೂ ಏನು ವ್ಯತ್ಯಾಸ! ನಾನೂ ಕಗ್ಗಾಡಿನ ಒಂದುಕಡೆ ನಿವಾಸವನ್ನು ಮಾಡಿಕೊಳ್ಳುತ್ತೇನೆ, ಆಮೇಲೆ ಸಾಯಂಕಾಲದ ಸಮಯದಲ್ಲಿ ಆ ನಿವಾಸವನ್ನು ಬಿಡುತ್ತೇನೆ. ಬಿಟ್ಟಮೇಲೆ ಗಂಭೀರವಾಗಿ ಅಡ್ಡಾಡಿ ನಾಲ್ಕು ದಿಕ್ಕುಗಳಲ್ಲಿರುವವೆಲ್ಲವನ್ನೂ ಚೆನ್ನಾಗಿ ನೋಡಿ ಮೂರುಸಾರಿ ಸಿಂಹನಾದವನ್ನು ಮಾಡುತ್ತೇನೆ. ಆನಂತರ ಹಸುಗಳು ಮೇಯುವ ಹುಲ್ಲುಗಾವಲಿಗೆ ಹೋಗುತ್ತೇನೆ. ಶ್ರೇಷ್ಠವಾದ ಮೃಗ ಸಮೂಹವನ್ನು ಕೊಂದು ಮೃದು ಮೃದುವಾದ ಮಾಂಸವನ್ನು ಭಕ್ಷಿಸಿ ನನ್ನ ನಿವಾಸಕ್ಕೆ ಹಿಂತಿರುಗುತ್ತೇನೆ’. ಅದರಂತೆ, ಗೆಳೆಯ, ಆ ನರಿಯು ಕಗ್ಗಾಡಿನ ಒಂದುಕಡೆ ನಿವಾಸವನ್ನು ಮಾಡಿಕೊಂಡು ಸಾಯಂಕಾಲದಲ್ಲಿ ಅಲ್ಲಿಂದ ಹೊರಟು ಗಂಭೀರವಾಗಿ ಅಲ್ಲಲ್ಲಿ ಅಡ್ಡಾಡಿ ನಾಲ್ಕು ದಿಕ್ಕುಗಳಲ್ಲಿರುವವುಗಳನ್ನೆಲ್ಲಾ ಚೆನ್ನಾಗಿ ನೋಡಿತು. ಹೀಗೆ ನಾಲ್ಕುಕಡೆ ಚೆನ್ನಾಗಿ ನೋಡಿದ ಮೇಲೆ ಮೂರುಸಾರಿ ಸಿಂಹನಾದವನ್ನೇ ಮಾಡಬೇಕೆಂದು ಅರಚಿತು. ಆದರೆ ಮಾಡಿದ್ದು ನರಿಯ ಕೂಗನ್ನು. ಕರ್ಕಶವಾಗಿರುವ ನರಿಯ ಕೂಗು ಎಲ್ಲಿಯದು, ಸಿಂಹನಾದ ಎಲ್ಲಿಯದು?
‘ಗೆಳೆಯ ಪಾಥಿಕಪುತ್ತ, ಹಾಗೆಯೇ ಸುಗತನು ಮಾಡಿ ಗಳಿಸಿದುದನ್ನು ಅವಲಂಬಿಸಿಕೊಂಡು ಅವನಿಗೆ ಬಂದದ್ದನ್ನು ತಿಂದುಕೊಂಡಿರುವ ನೀನು ತಥಾಗತ ಅರಹಂತ ಸಂಬುದ್ಧರ ಎತ್ತರಕ್ಕೆ ಏರಬಲ್ಲೆಯಾ?’
“ಭಗ್ಗವ, ದಾರುಕಪುತ್ತಕನ ಶಿಷ್ಯ ಜಾಲಿಯು ಹೇಳಿದ ಈ ಉಪಮಾನವೂ ಅಚೇಲ ಪಾಥಿಕಪುತ್ತನು ಆಸನದಿಂದೇಳುವಂತೆ ಮಾಡಲಿಲ್ಲ. ಆಮೇಲೆ ಆತನಿಗೆ ಹೀಗೆ ಹೇಳಿದನು-
‘ನಾನು ಮೃಗರಾಜ, ನಾನು ಸಿಂಹ ಎಂದು ಅಂದುಕೊಂಡ ನೀನು ಅರಚಿದೆ. ನರಿಯ ಕೂಗೆತ್ತಣದು, ಸಿಂಹನಾದವೆತ್ತಣದು!’
‘ಹೀಗೆಯೇ ಗೆಳೆಯ, ಪಾಥಿಕಪುತ್ತ ಸುಗತನು ಗಳಿಸಿದುದನ್ನು ಅವಲಂಬಿಸಿಕೊಂಡು ಸುಗತನ ಹೆಸರಿನಲ್ಲಿ ಬಂದದ್ದನ್ನು ತಿಂದುಕೊಂಡು ಇರುವ ನೀನು ತಥಾಗತ ಅರಹಂತ ಸಮ್ಮಾಸಂಬುದ್ಧರ ಎತ್ತರಕ್ಕೆ ಏರಬಲ್ಲೆಯಾ?’
“ದಾರುಕಪತ್ತಿಯನ ಶಿಷ್ಯ ಜಾಲಿಯನು ಹೇಳಿದ ಈ ಉಪಮಾನವೂ ಅಚೇಲ ಪಾಥಿಕಪುತ್ತನು ತನ್ನ ಪೀಠದಿಂದ ಏಳುವಂತೆ ಮಾಡಲಾಗಲಿಲ್ಲ. ಆಗ ಆತನಿಗೆ ಹೀಗೆ ಹೇಳಿದ-
‘ಕಾಡಿನೊಳು ಚಲಿಸುತ್ತಾ ಬಿಸಾಡಿದುದನ್ನು ತಿಂದು ಕೊಬ್ಬುತ್ತಾ ನರಿಯೊಂದು ತಾನಾರೆಂದು ತಿಳಿಯದೆ ತಾನೇ ಹೆಬ್ಬುಲಿ ಎಂದುಕೊಂಡು ಅರಚಿದರೆ ಅದರ ಕೂಗು ಘರ್ಜನೆಯಾದೀತೆ?
‘ಹೀಗೆಯೇ ಪಾಥಿಕಪುತ್ತ, ಸುಗತನನ್ನು ಅವಲಂಬಿಸಿಕೊಂಡು ಸುಗತನ ಹೆಸರಿನಲ್ಲಿ ಬಂದದ್ದನ್ನು ತಿಂದುಕೊಂಡು ಇರುವ ನೀನು ಅರಹಂತ ಸಮ್ಮಾಸಂಬುದ್ಧರ ಎತ್ತರಕ್ಕೆ ಏರಬಲ್ಲೆಯಾ?
“ದಾರುಕಪತ್ತಿಯನ ಶಿಷ್ಯ ಜಾಲಿಯನು ಹೇಳಿದ ಈ ಉಪಮಾನವೂ ಅಚೇಲ ಪಾಥಿಕಪುತ್ತನು ಆಸನದಿಂದೇಳುವಂತೆ ಮಾಡುವುದಕ್ಕಾಗಲಿಲ್ಲ.
“ದಾರುಕಪತ್ತಿಯನ ಶಿಷ್ಯ ಜಾಲಿಯು ಹೇಳಿದ ಈ ಉಪಮಾನವೂ ಅಚೇಲ ಪಾಥಿಕಪುತ್ತನು ಆಸನದಿಂದ ಏಳುವಂತೆ ಮಾಡಲಾಗಲಿಲ್ಲ. ಆಗ ಅವನು ಆ ಸಮೂಹದ ಬಳಿಗೆ ಬಂದು ಇಂತೆಂದನು- ‘ಅಚೇಲ ಪಾಥಿಕಪುತ್ತನು ಸೋತುಹೋಗಿದ್ದಾನೆ. ಗೆಳೆಯ ಬರುತ್ತೇನೆ, ಗೆಳೆಯ ಬರುತ್ತೇನೆ ಎಂದು ಹೇಳುತ್ತಾನೆ. ಆದರೆ ಅವನಿಗೆ ತನ್ನ ಆಸನದಿಂದ ಏಳುವುದಕ್ಕೂ ಸಾಧ್ಯವಾಗುತ್ತಿಲ್ಲ.’
“ಭಗ್ಗವ, ಇದನ್ನು ಕೇಳಿದ ನಾನು ಆ ಸಮೂಹಕ್ಕೆ ಹೀಗೆ ಹೇಳಿದೆ- ‘ಅಚೇಲ ಪಾಥಿಕಪುತ್ತನು ತನ್ನ ಮಾತನ್ನು ಹಿಂತೆಗೆದುಕೊಳ್ಳದೆ, ತನ್ನ ಮನಸ್ಸಿನಲ್ಲಿರುವುದನ್ನು ಬಿಡದೆ, ತನ್ನ ದೃಷ್ಟಿಯನ್ನು ತೊರೆಯದೆ ನನ್ನ ಹತ್ತಿರಕ್ಕೆ ಬರಲಾರ. ಹಾಗೇನಾದರೂ ಅವನು ತಾನು ತನ್ನ ಮಾತನ್ನು ಹಿಂತೆಗೆದುಕೊಳ್ಳದೆ, ತನ್ನ ಮನಸ್ಸಿನಲ್ಲಿರುವುದನ್ನು ಬಿಡದೆ ತನ್ನ ದೃಷ್ಟಿಯನ್ನು ತೊರೆಯದೆ ಸಮಣ ಗೋತಮನ ಹತ್ತಿರಕ್ಕೆ ಹೋಗುತ್ತೇನೆ ಎಂದುಕೊಂಡು ನನ್ನಲ್ಲಿಗೆ ಬಂದರೆ ಅವನ ತಲೆ ಹೋಳಾಗಿ ಹೋಗುತ್ತದೆ. ಲಿಚ್ಛವಿಗಳು ಅವನನ್ನು ಜೋಡಿ ಎತ್ತುಗಳಿಗೆ ಕಟ್ಟಿ ಎಳೆದುಕೊಂಡು ಬರುತ್ತೇನೆ ಎಂದುಕೊಂಡು ಕರೆದುಕೊಂಡು ಬರಲು ಯತ್ನಿಸಿದರೆ ಅವನು ಹಗ್ಗವನ್ನೇ ಕತ್ತರಿಸಿಹಾಕಿಬಿಡುತ್ತಾನೆ. ಅಚೇಲ ಪಾಥಿಕಪುತ್ತನು ತನ್ನ ಮಾತನ್ನು ಹಿಂತೆಗೆದುಕೊಳ್ಳದೆ ತನ್ನ ಮನಸ್ಸಿನಲ್ಲಿರುವುದನ್ನು ಬಿಡದೆ ತನ್ನ ದೃಷ್ಟಿಯನ್ನು ತೊರೆಯದೆ ನನ್ನಲ್ಲಿಗೆ ಬರಲಾರ. ಹಾಗೇನಾದರೂ ಬಂದರೆ ಅವನ ತಲೆಯು ಹೋಳಾಗಿ ಹೋಗುತ್ತದೆ.’
“ಆಮೇಲೆ ಭಗ್ಗವ, ಆ ಸಮೂಹಕ್ಕೆ ಧಮ್ಮವನ್ನು ವಿವರಿಸಿದೆ. ಅವರನ್ನು ಸ್ಫೂರ್ತಿಗೊಳಿಸಿ ಉತ್ತೇಜನಗೊಳಿಸಿ ಸಂತೋಷಪಡಿಸಿದೆ. ಹೀಗೆ ಆ ಸಮೂಹವನ್ನು ಸ್ಫೂರ್ತಿಗೊಳಿಸಿ, ಉತ್ತೇಜನಗೊಳಿಸಿ ಸಂತೋಷಪಡಿಸಿದ ಮೇಲೆ ಅವರನ್ನು ಮಹಾಬಂಧನದಿಂದ ಬಿಡಿಸಿದೆ.7 ಮಹಾ ದುರ್ಗದಲ್ಲಿದ್ದ ಎಂಬತ್ತು ನಾಲ್ಕು ಸಾವಿರ ಪ್ರಾಣಿಗಳನ್ನು ಉದ್ಧರಿಸಿದೆ. ತೇಜೋಧಾತುವಾಗಿ ಏಳು ತಾಳೆ ಮರಗಳಷ್ಟು ಎತ್ತರದ ಜ್ವಾಲೆಯಾಗಿ ಬೆಳೆದು ಮತ್ತೆ ಏಳು ತಾಳೆ ಮರಗಳಷ್ಟು ಎತ್ತರಕ್ಕೆ ಆ ಜ್ವಾಲೆಯು8 ಪ್ರಜ್ವಲಿಸುವಂತೆ ಮಾಡಿ ಹೊಗೆಯ ರೂಪದಲ್ಲಿ ಮಹಾವನದ ಕೂಟಗಾರಸಾಲೆಯನ್ನು ಪ್ರವೇಶಿಸಿ ಕಾಣಿಸಿಕೊಂಡೆ.9
“ಆಮೇಲೆ ಭಗ್ಗವ, ಲಿಚ್ಛವಿಪುತ್ತ ಸುನಕ್ಖತ್ತನು ನನ್ನ ಬಳಿಗೆ ಬಂದನು. ಅಭಿವಂದಿಸಿ ಒಂದುಕಡೆ ಕುಳಿತುಕೊಂಡನು. ಆಗ ನಾನು ಅವನನ್ನು ಕುರಿತು- ‘ಸುನಕ್ಖತ್ತ ನಿನಗೆ ಹೇಗನ್ನಿಸುತ್ತದೆ, ನಾನು ಅಚೇಲ ಪಾಥಿಕಪುತ್ತನ ಬಗೆಗೆ ಏನನ್ನು ಹೇಳಿದೆನೋ ಅದೇ ಆಯಿತಲ್ಲವೇ?’
‘ಭಂತೆ, ಅಚೇಲ ಪಾಥಿಕಪುತ್ತನನ್ನು ಕುರಿತು ಏನು ಹೇಳಿದಿರೋ ಅದೇ ಆಯಿತು.’
‘ಸುನಕ್ಖತ್ತ, ಹಾಗಾದರೆ ಮನುಷ್ಯರಿಗೆ ಸಾಧ್ಯವಾಗದ ಋದ್ಧಿಶಕ್ತಿಯಿಂದ ಮಾತ್ರ ಸಾಧ್ಯವಾದ ಪವಾಡ (ನನ್ನಿಂದ) ಆಗಿದೆಯೇ, ಇಲ್ಲವೋ?’
‘ಭಂತೆ ಋದ್ಧಿ ಶಕ್ತಿಯಿಂದ ಮಾತ್ರ ಆಗುವ, ಮನುಷ್ಯರಿಗೆ ಸಾಧ್ಯವಾಗದ ಪವಾಡ ಆಗಿದೆ ಎಂದು ಗೊತ್ತಾಯಿತು.’
‘ಮೂರ್ಖ, ಋದ್ಧಿ ಶಕ್ತಿಯಿಂದ ಪವಾಡಗಳನ್ನು ಮಾಡಬಲ್ಲ ನನ್ನನ್ನು ಕುರಿತು- ಭಗವಾನರು ಪವಾಡವನ್ನು ಮಾಡಲಾರರು ಎಂದು ಹೇಳಿದೆಯಷ್ಟೆ. ನೋಡು ಮೂರ್ಖ, ನಿನ್ನ ಅಪರಾಧವನ್ನು.’
“ಹೀಗೆ ಭಗ್ಗವ, ಲಿಚ್ಛವಿಪುತ್ರ ಸುನಕ್ಖತ್ತನು ನಾನು ಹೇಳಿದುದನ್ನು ಕೇಳಿದರೂ ಧಮ್ಮವಿನಯದಿಂದ ದೂರನಾಗಿ ಅಪಾಯ ನಿರಯಗಳ ಕಡೆಗೆ ಹೊರಟುಹೋದನು.
ಆದಿಕಾರಣ ವಿಚಾರ
“ಭಗ್ಗವ, ಲೋಕದ ಆದಿಯು ಏನೆಂಬುದು ನನಗೆ ಗೊತ್ತು.10 ಅದರ ಸತ್ಯಗಳೂ ನನಗೆ ಗೊತ್ತು. ಆದರೆ ಅದನ್ನು ವಿವರಿಸ ಹೋಗುವುದಿಲ್ಲ. ಹಾಗೆ ವಿವರಿಸದಿದ್ದರೂ ಅದರಿಂದ (ಲೋಕದಿಂದ) ಮುಕ್ತನಾಗುವುದನ್ನು ನಾನು ತಿಳಿದುಕೊಂಡಿದ್ದೇನೆ. ತಿಳಿದ ತಥಾಗತನು ಎಂದೂ ತಪ್ಪು ಮಾಡುವುದಿಲ್ಲ.
‘ಭಗ್ಗವ, ಲೋಕಕ್ಕೆ ಆದಿಕಾರಣನಾದವನು ಈಶ್ವರ, ಬ್ರಹ್ಮ ಎಂದು ಆಚಾರ್ಯರಿಂದಲೇ ಬೋಧಿತವಾಗಿದೆ ಎಂದು ಆದಿಕಾರಣವನ್ನು ತಿಳಿದ ಸಮಣ ಬ್ರಾಹ್ಮಣರಿದ್ದಾರೆ. ಅವರ ಬಳಿಗೆ ಹೋಗಿ ನಾನು ಹೀಗೆ ಕೇಳಿದೆ- ‘ಆಯುಷ್ಮಂತರೇ ಬ್ರಹ್ಮನೇ ಕರ್ತೃ, ಈಶ್ವರನೇ ಕರ್ತ ಎಂದು ಆದಿಕಾರಣವನ್ನು ನಿಮ್ಮ ಆಚಾರ್ಯರೇ ವಿವರಿಸಿದ್ದಾರೆ ಎಂದು ನೀವು ಹೇಳುವುದು ಸತ್ಯವೇ?’ ಹೀಗೆ ಪ್ರಶ್ನಿಸುದುದಕ್ಕೆ ಅವರು ‘ಹೌದು’ ಎಂದುತ್ತರವಿತ್ತರು. ಅವರಿಗೆ ಮತ್ತೆ ನಾನು ಹೀಗೆ ಕೇಳಿದೆ- ‘ಆಯುಷ್ಮಂತರೆ, ಈಶ್ವರನೇ ಬ್ರಹ್ಮನೇ ಕರ್ತೃ ಎಂದು ಆಚಾರ್ಯರೇ ಹೇಳಿದ್ದಾರೆ ಎನ್ನುವುದಕ್ಕೆ ಆಧಾರ ಯಾವುದು? ನನ್ನ ಪ್ರಶ್ನೆಗೆ ಅವರು ಸರಿಯಾದ ಉತ್ತರ ಕೊಡಲಾರದವರಾದರು. ವಿವರಿಸಲಾಗದೆ ನನ್ನನ್ನೇ ಪ್ರತಿ ಪ್ರಶ್ನೆ ಕೇಳಿದರು. ಅವರಿಗೆ ನಾನು ಹೀಗೆ ವಿವರಿಸಿದೆ.
‘ಗೆಳೆಯ, ಈ ಲೋಕವು ನಾಶವಾಗುವ ಕಾಲವು ಬೇಗಲೋ, ಆಮೇಲೋ ಬರುತ್ತದೆ. ಲೋಕವು ನಾಶವಾಗುವಾಗ ಜೀವಿಗಳು ಅಭಸ್ಸರ ಲೋಕದಲ್ಲಿ ಹುಟ್ಟುತ್ತವೆ, ಅವು ಪ್ರೀತಿಯನ್ನೇ ಉಂಡು ಸ್ವಯಂ ಪ್ರಭೆಯುಳ್ಳವುಗಳಾಗಿ ತನ್ನದೇ ಆದ ಸೌಂದರ್ಯದಿಂದ ಅಂತರಿಕ್ಷದಲ್ಲಿಯೇ ಚಲಿಸುತ್ತಾ ದೀರ್ಘಕಾಲ ಇರುತ್ತವೆ. ಗೆಳೆಯ, ಈ ಲೋಕವು ಸೃಷ್ಟಿಯಾಗುವ ಸಮಯದಲ್ಲಿ ಶೂನ್ಯರೂಪದಲ್ಲಿರುವ ಬ್ರಹ್ಮವಿಮಾನವು ಪ್ರಾತುರ್ಭವಿಸುತ್ತದೆ. ಆಗ ಒಂದು ಜೀವಿಯ ಆಯುಸ್ಸು ಅಥವಾ ಪುಣ್ಯ ಕ್ಷಯವಾಗಿ ಅದು ಅಭಸ್ಸರ ಲೋಕದಿಂದ ಚ್ಯುತಿ ಹೊಂದುತ್ತದೆ. ಶೂನ್ಯ ರೂಪದಲ್ಲಿರುವ ಬ್ರಹ್ಮವಿಮಾನದಲ್ಲಿ ಅದು ಹುಟ್ಟುತ್ತದೆ. ಅದು ಮನೋಮಯವಾಗಿರುತ್ತದೆ. ಪ್ರೀತಿಯನ್ನೇ ಭಕ್ಷಿಸಿಕೊಂಡು ಸ್ವಯಂಪ್ರಭೆಯುಳ್ಳದ್ದಾಗಿ ತನ್ನದೇ ಆದ ಸೌಂದರ್ಯದಿಂದ ಅಂತರಿಕ್ಷದಲ್ಲಿ ಚಲಿಸುತ್ತಾ ಬಹುಕಾಲ ಅಲ್ಲಿರುತ್ತದೆ. ಬಹುಕಾಲ ಏಕಾಕಿಯಾಗಿಯೇ ಉಳಿದದ್ದರಿಂದ ಅವಕ್ಕೆ ಒಂದು ಅತೃಪ್ತಿಯು ಹುಟ್ಟುತ್ತದೆ. ಬೇರೆ ಜೀವಿಗಳು ಇಲ್ಲಿಗೆ ಬರುವಂತಾಗಲಿ ಎಂದು ಇಚ್ಛಿಸುತ್ತದೆ. ಆಗ ಅಭಸ್ಸರ ಲೋಕದ ಕೆಲವು ಜೀವಿಗಳಿಗೆ ಆಯಸ್ಸು ಮುಗಿದೋ ಅಥವಾ ಪುಣ್ಯವು ಕ್ಷಯವಾಗಿಯೋ ಆ ಲೋಕದಿಂದ ಚ್ಯುತಿಯಾಗುತ್ತದೆ. ಶೂನ್ಯ ರೂಪದಲ್ಲಿರುವ ಬ್ರಹ್ಮವಿಮಾನದಲ್ಲಿ ಹುಟ್ಟಿ ಮೊದಲಿದ್ದ ಜೀವಿಯೊಂದಿಗೇ ಇರುತ್ತವೆ. ಅವು ಮನೋಮಯವಾಗಿದ್ದು ಪ್ರೀತಿಯನ್ನೇ ಭಕ್ಷಿಸಿಕೊಂಡು ಸ್ವಯಂ ಪ್ರಭೆಯುಳ್ಳವುಗಳಾಗಿ ಅಂತರಿಕ್ಷದಲ್ಲಿಯೇ ಚಲಿಸುತ್ತ ಬಹುಕಾಲ ಇರುತ್ತವೆ.
‘ಗೆಳೆಯ ಮೊದಲು ಅಲ್ಲಿ ಹುಟ್ಟಿದ ಜೀವಿಯು ಹೀಗೆಂದುಕೊಳ್ಳುತ್ತದೆ- ‘ನಾನೇ ಬ್ರಹ್ಮ, ನಾನೇ ಮಹಾಬ್ರಹ್ಮ, ಸರ್ವದಮನ ಪರಾಧೀನನಾಗದವನು. ಎಲ್ಲವನ್ನೂ ನೋಡಬಲ್ಲವನು, ಎಲ್ಲವನ್ನೂ ವಶಪಡಿಸಿಕೊಳ್ಳಬಲ್ಲವನು. ಈಶ್ವರ ತರ್ಕ ನಿರ್ಮಾತ ಶ್ರೇಷ್ಠ ಎಲ್ಲವನ್ನೂ ಗೆದ್ದವನು, ಎಲ್ಲಕ್ಕೂ ಆಜ್ಞೆ ಮಾಡಬಲ್ಲವನು, ಎಲ್ಲ ಜೀವಿಗಳಿಗೂ ತಂದೆಯಾಗಿರುವವನು. ಈ ಎಲ್ಲ ಭೂತಗಳಿಗೂ ನಾನೇ ನಿರ್ಮಾತ. ಹೀಗೆ ಅಂದುಕೊಳ್ಳಲು ಏನು ಕಾರಣ? ಹಿಂದೆ ನನಗೆ ಹೀಗೆನ್ನಿಸಿತು- ಬೇರೆ ಜೀವಿಗಳೂ ಇಲ್ಲಿಗೆ ಬರಲಿ, ನಾನು ಇಂಥ ಯೋಚನೆಯನ್ನು ಮಾಡಿದಾಗ ಈ ಸತ್ವಗಳು ಇಲ್ಲಿಗೆ ಬಂದುವು.’
‘ಆನಂತರ ಹುಟ್ಟಿದ ಜೀವಿಗಳೂ ಹೀಗೆಂದುಕೊಳ್ಳುತ್ತವೆ. ಇಲ್ಲಿರುವ ಈತನೇ ಬ್ರಹ್ಮ, ಮಹಾಬ್ರಹ್ಮ, ಸರ್ವದಮನ ಪರಾಧೀನನಾಗದವನು, ಎಲ್ಲವನ್ನು ನೋಡಬಲ್ಲವನು, ಎಲ್ಲವನ್ನೂ ವಶಪಡಿಸಿಕೊಳ್ಳಬಲ್ಲವನು, ಈಶ್ವರ, ಕರ್ತ, ನಿರ್ಮಾತ, ಶ್ರೇಷ್ಠ ಎಲ್ಲವನ್ನೂ ಗೆದ್ದವನು, ಎಲ್ಲಕ್ಕೂ ಆಜ್ಞೆ ಮಾಡಬಲ್ಲವನು, ಎಲ್ಲ ಜೀವಿಗಳಿಗೂ ತಂದೆಯಾಗಿರುವವನು. ಇಲ್ಲಿರುವ ನಾವೆಲ್ಲರೂ ಬ್ರಹ್ಮನಿಂದಲೇ ನಿರ್ಮಾಣಗೊಂಡಿದ್ದೇವೆ. ಇದಕ್ಕೇನು ಕಾರಣ? ಇಲ್ಲಿರುವ ಎಲ್ಲಕ್ಕೂ ನಮಗೂ ಮೊದಲೇ ಇದ್ದವನು ಇವನು. ನಾವೆಲ್ಲರೂ ಹುಟ್ಟಿದ್ದು ಆಮೇಲೆ.
‘ಗೆಳೆಯರೆ, ಮೊದಲು ಹುಟ್ಟಿದುದು ದೀರ್ಘಾಯುಸ್ಸುಳ್ಳದ್ದಾಗಿಯೂ, ಒಳ್ಳೆಯ ವರ್ಣವುಳ್ಳದ್ದಾಗಿಯೂ, ಮಹಾಶಕ್ತಿಯುಳ್ಳದ್ದಾಗಿಯು ಇರುತ್ತದೆ. ಆನಂತರ ಹುಟ್ಟಿದವೆಲ್ಲವೂ ಅಲ್ಪಾಯುಗಳಾಗಿಯೂ, ದುರ್ವರ್ಣಗಳುಳ್ಳ ವಾಗಿಯೂ, ಅಲ್ಪಶಕ್ತಿಯುಳ್ಳವುಗಳಾಗಿಯೂ ಇರುತ್ತವೆ.
ತನ್ನ ಲೋಕದಿಂದ ಚ್ಯುತಿ ಹೊಂದಿ ಇಲ್ಲಿ ಬಂದಿರುವ ಜೀವಿಯು ಇಲ್ಲಿಯ ಜೀವಿಯೇ ಆಗುತ್ತದೆ. ಇಲ್ಲಿಗೆ ಬಂದಮೇಲೆ ಆತ ಮನೆಯನ್ನು ತೊರೆದು ಅನಗಾರಿಕನಾಗಿ ಪಬ್ಬಜಿತನಾಗಬಹುದು. ಪಬ್ಬಜಿತನಾದ ಮೇಲೆ ಅತಿ ಶ್ರಮದಿಂದ ನಿರಂತರ ಯತ್ನದಿಂದ ಸದಾ ಎಚ್ಚರಿಕೆಯನ್ನು ಹೊಂದಿ ಸತ್‍ಚಿಂತನಶೀಲನಾಗಿ, ಸ್ಥಿರಚಿತ್ತವುಳ್ಳವನಾಗಿ, ಚಿತ್ತ ಸಮಾಧಿಯನ್ನು ಪಡೆದು ತನ್ನ ಹಿಂದಿನ ಒಂದು ಜನ್ಮವನ್ನು ಜ್ಞಾಪಿಸಿಕೊಳ್ಳಬಲ್ಲವನಾಗುತ್ತಾನೆ. ಆದರೆ ಅದಕ್ಕೆ ಹಿಂದಿನದನ್ನು ಜ್ಞಾಪಿಸಿಕೊಳ್ಳಲಾರ.
“ಅವನು ಹೀಗೆಂದುಕೊಳ್ಳುತ್ತಾನೆ- ಬ್ರಹ್ಮ ಅಥವಾ ಮಹಾಬ್ರಹ್ಮನಾದವನು ಸರ್ವ ದಮನ ಪರಾಧೀನನಾಗದವನು ಎಲ್ಲವನ್ನೂ ನೋಡಬಲ್ಲವನು ಎಲ್ಲವನ್ನೂ ವಶಪಡಿಸಿಕೊಳ್ಳಬಲ್ಲವನು. ಈಶ್ವರ ಕರ್ತ ನಿರ್ಮಾತ ಶ್ರೇಷ್ಠ ಎಲ್ಲವನ್ನೂ ಗೆದ್ದವನು, ಎಲ್ಲಕ್ಕೂ ಆಜ್ಞೆ ಮಾಡಬಲ್ಲವನು. ಎಲ್ಲ ಜೀವಿಗಳಿಗೂ ತಂದೆಯಾದವನು. ನಾವೆಲ್ಲರೂ ಅವನಿಂದಲೇ ಸೃಷ್ಟಿಯಾದವರು. ಅವನು ನಿತ್ಯ ಧೃವ ಶಾಶ್ವತನಾದವನು ಪರಿಣಾಮ ಹೊಂದದವನು. ಯಾವಾಗಲೂ ಒಂದೇ ರೀತಿಯಲ್ಲಿರುವವನು. ಬ್ರಹ್ಮನಿಂದ ಸೃಷ್ಟಿಸಲ್ಪಟ್ಟ ನಾವೆಲ್ಲರೂ ಅನಿತ್ಯರು, ಅಧೃವರು, ಅಲ್ಪಾಯುಗಳು, ಚ್ಯುತಿ ಹೊಂದುವಂಥವರು, ಗತಿಸುವವರು. ಹೀಗಿರುವಾಗ ಆಯುಷ್ಮಂತರೇ, ಲೋಕಕ್ಕೆ ಈಶ್ವರ, ಕರ್ತೃ ಬ್ರಹ್ಮಕರ್ತೃ ಎಂದು ಆಚಾರ್ಯರು ವಿವರಿಸಿದ್ದಾರಲ್ಲವೇ?
‘ಆಯುಷ್ಮಂತ ಗೋತಮನು ಹೇಳುವುದನ್ನೇ ನಾವೂ ಕೇಳಿದ್ದೇವೆ’ ಎಂದು ಹೇಳುತ್ತಾರೆ.
“ಭಗ್ಗವ, ಲೋಕದ ಆದಿಕಾರಣವು ನನಗೆ ಗೊತ್ತಿದೆ, ಚೆನ್ನಾಗಿ ಗೊತ್ತಿದೆ. ಇದಕ್ಕಿಂತಲೂ ಉತ್ತಮವಾದುದೂ ನನಗೆ ಗೊತ್ತಿದೆ. ಆದರೆ ಅದನ್ನು ವಿವರಿಸಲು ಹೋಗುವುದಿಲ್ಲ. ಹಾಗೆ ವಿವರಿಸದಿದ್ದರೂ ಅದರಿಂದ ಮುಕ್ತನಾಗುವುದನ್ನು ತಿಳಿದಿದ್ದೇನೆ. ತಿಳಿದ ತಥಾಗತನು ಎಂದೂ ತಪ್ಪು ಮಾಡುವುದಿಲ್ಲ.
ಭಗ್ಗವ, ಎಲ್ಲಕ್ಕೂ ಆದಿಕಾರಣವು ಖಿಡ್ಡಾಪದೋಸಿಕ ದೇವತೆಗಳೆಂದು ತಮ್ಮ ಆಚಾರ್ಯರು ಹೇಳಿದ್ದಾರೆಂದು ಕೆಲವು ಸಮಣ ಬ್ರಾಹ್ಮಣರು ವಿವರಿಸುತ್ತಾರೆ. ಅವರ ಬಳಿಗೆ ನಾನು ಹೋಗಿ ಈ ರೀತಿಯಲ್ಲಿ ಕೇಳುತ್ತೇನೆ- ‘ಆಯುಷ್ಮಂತರೇ, ಖಿಡ್ಡಾಪದೋಸಿಕ ದೇವತೆಗಳೇ ಆದಿಕಾರಣವೆಂದು ನೀವು ಹೇಳುವುದು ನಿಜವೇ?’ ಈ ಪ್ರಶ್ನೆಗೆ ಅವರು ‘ಹೌದು’ ಎಂದು ಉತ್ತರಿಸುತ್ತಾರೆ. ಅವರಿಗೆ ನಾನು ಮತ್ತೆ ಹೀಗೆ ಕೇಳುತ್ತೇನೆ- ‘ಖಿಡ್ಡಾಪದೋಸಿಕರು ಆದಿಕಾರಣವೆಂದು ನಿಮ್ಮ ಆಚಾರ್ಯರು ಹೇಳಿದುದನ್ನು ತಿಳಿಸುವ ನೀವು ಅದು ಹೇಗೆ ಎಂದು ವಿವರಿಸುತ್ತೀರಾ?’ ಆದರೆ ಅವರು ತಮ್ಮ ವಾದವನ್ನು ಮುಂದುವರಿಸಲಾರದವರಾದರು. ಅವರು ನನ್ನನ್ನೇ ಪ್ರತಿ ಪ್ರಶ್ನೆ ಕೇಳಿದರು. ಅವರಿಗೆ ನಾನೇ ಹೀಗೆ ಹೇಳಿದೆ.
‘ಗೆಳೆಯರೆ, ಖಿಡ್ಡಾಪದೋಸಿಕರೆಂಬ ದೇವತೆಗಳಿದ್ದಾರೆ. ಅವರು ಬಹುಕಾಲ ಹರ್ಷ, ಭೋಗ, ರತಿಗಳಲ್ಲಿ ನಿರತರಾಗಿರುತ್ತಾರೆ. ಆ ದೇವತೆಗಳು ತಮ್ಮ ಸ್ಮೃತಿಯನ್ನು (ಎಚ್ಚರಿಕೆಯನ್ನು) ಕಳೆದುಕೊಳ್ಳುತ್ತಾರೆ. ತಮ್ಮ ಲೋಕದಿಂದ ಚ್ಯುತರಾಗುತ್ತಾರೆ. ಗೆಳೆಯರೆ, ಹೀಗೆ ಚ್ಯುತವಾದ ಒಂದು ಜೀವಿಯು ಇಲ್ಲಿಗೆ ಬರುತ್ತದೆ. ಇಲ್ಲಿಗೆ ಬಂದಮೇಲೆ ಮನೆಯನ್ನು ತೊರೆದು ಅತಿ ಉತ್ಸಾಹದಿಂದ, ಅತಿ ಶ್ರಮದಿಂದ ನಿರಂತರ ಯತ್ನದಿಂದ ಸದಾ ಅತಿ ಎಚ್ಚರಿಕೆಯಿಂದಿರುವವನೂ, ಚಿಂತನಶೀಲನಾಗಿ ಸ್ಥಿರ ಚಿತ್ತವುಳ್ಳವನಾಗಿ ಚಿತ್ತ ಸಮಾಧಿಯನ್ನು ಪಡೆದು, ತನ್ನ ಹಿಂದಿನ ಒಂದು ಜನ್ಮವನ್ನು ಜ್ಞಾಪಿಸಿಕೊಳ್ಳುತ್ತದೆ. ಆದರೆ ಅದಕ್ಕೂ ಹಿಂದಿನದನ್ನು ಜ್ಞಾಪಿಸಿಕೊಳ್ಳಲಾರ. ಆಗ ಹೀಗೆಂದುಕೊಳ್ಳುತ್ತದೆ- ‘ಯಾವ ಖಿಡ್ಡಾಪದೋಸಿಕ ದೇವತೆಗಳು ಅತಿಕಾಲ ಹರ್ಷ ಭೋಗ ರತಿಗಳಲ್ಲಿ ನಿರತರಾಗುವುದಿಲ್ಲವೋ ಅವರು ಎಚ್ಚರಿಕೆಯನ್ನು ಕಳೆದುಕೊಳ್ಳುವುದಿಲ್ಲ. ಹೀಗೆ ಎಚ್ಚರಿಕೆಯನ್ನು ಕಳೆದುಕೊಳ್ಳದ ಅವರು ತಮ್ಮ ಸ್ಥಾನದಿಂದ ಚ್ಯುತರಾಗುವುದಿಲ್ಲ. ಅವರು ನಿತ್ಯರೂ, ಧೃವರೂ, ಶಾಶ್ವತರೂ, ಪರಿಣಾಮಹೊಂದದವರೂ ಎಂದೆಂದೂ ಹಾಗೆಯೇ ಇರುವವರು ಆಗಿರುತ್ತಾರೆ. ನಾವಾದರೋ ಖಿಡ್ಡಾಪದೋಸಿಕರಾಗಿದ್ದು, ಬಹುಕಾಲ ಹರ್ಷಭೋಗರತಿಗಳಲ್ಲಿಯೇ ನಿರತರಾಗಿದ್ದೆವು. ಹಾಗೆ ಬಹುಕಾಲ ಹರ್ಷಭೋಗರತಿಗಳಲ್ಲಿಯೇ ನಿರತರಾಗಿದ್ದುದರಿಂದ ಸ್ಮೃತಿಯನ್ನು ಕಳೆದುಕೊಂಡವರಾಗಿ ನಾವು ಆ ಲೋಕದಿಂದ ಚ್ಯುತರಾಗಿ ಅನಿತ್ಯರೂ ಅಧೃವರೂ ಅಲ್ಪಾಯುಗಳೂ ಚ್ಯುತಿಹೊಂದಬಲ್ಲವರೂ ಆಗಿ ಇಲ್ಲಿಗೆ ಬಂದಿದ್ದೇವೆ. ಆಯುಷ್ಮಂತರೇ, (ಈ ಕಾರಣದಿಂದ) ನಿಮ್ಮ ಆಚಾರ್ಯರಾದವರು ಖಿಡ್ಡಾಪದೋಸಿಕರು ಆದಿಕಾರಣರಾಗಿದ್ದಾರೆ ಎಂದು ಹೇಳುತ್ತಾರೆಂದು ವಿವರಿಸುತ್ತೀರಿ. ಅವರು ಹೀಗೆಂದರು- ‘ಹೌದು, ಗೋತಮ, ನೀನು ಹೇಳಿದುದನ್ನೇ ನಾವೂ ಕೇಳಿದ್ದೇವೆ.’ “ಭಗ್ಗವ, ನನಗೆ ಆದಿಕಾರಣವು ಗೊತ್ತಿದೆ, ಚೆನ್ನಾಗಿ ಗೊತ್ತಿದೆ.... ಗೊತ್ತಿರುವ ತಥಾಗತನು ಎಂದೂ ತಪ್ಪು ಮಾಡುವುದಿಲ್ಲ.
“ಭಗ್ಗವ, ಆದಿಕಾರಣವೆಂದರೆ ಮನೋಪದೋಸಿಕರೆಂದು ಆಚಾರ್ಯರಿಂದ ಗೊತ್ತಾಯಿತೆಂದು ವಿವರಿಸುವ ಕೆಲವು ಸಮಣ ಬ್ರಾಹ್ಮಣರು ಇದ್ದಾರೆ. ಅವರ ಬಳಿಗೆ ನಾನು ಹೋಗಿ ‘ಆಯುಷ್ಮಂತರೇ, ಆದಿಕಾರಣವೆಂದರೆ ಮನೋಪದೋಸಿಕರೆಂದು ಆಚಾರ್ಯರಿಂದ ಗೊತ್ತಾಯಿತೆಂದು ನೀವು ವಿವರಿಸುವುದು ನಿಜವೇ?’ ಎಂದು ಕೇಳಿದೆ. ಅವರು ‘ಹೌದು’ ಎಂದು ಪ್ರತ್ಯುತ್ತರವಿತ್ತರು. ಅವರನ್ನು ನಾನು ಹೀಗೆ ಕೇಳಿದೆ- ‘ಮನೋಪದೋಸಿಕರು ಆದಿಕಾರಣವೆಂದು ಹೇಳುವುದಕ್ಕೆ ಆಧಾರವೇನು?’ ಅವರು ನನ್ನ ಪ್ರಶ್ನೆಗೆ ಉತ್ತರ ಹೇಳದವರಾದರು. ಅವರು ನನಗೇ ಪ್ರತಿ ಪ್ರಶ್ನೆಗಳನ್ನು ಹಾಕಿದರು. ಅದಕ್ಕೆ ನಾನು ಹೀಗೆ ಉತ್ತರವಿತ್ತೆ-
‘ಗೆಳೆಯರೆ, ಮನೋಪದೋಸಿಕರೆಂಬ ದೇವತೆಗಳಿದ್ದಾರೆ. ಅವರು ಬಹುಕಾಲ ಪರಸ್ಪರ ಅಸೂಯೆಯನ್ನು ಬೆಳೆಸಿಕೊಂಡಿರುತ್ತಾರೆ. ಹೀಗೆ ಬಹುಕಾಲ ಪರಸ್ಪರ ಅಸೂಯೆಯಲ್ಲಿ ತೊಡಗಿರುವ ಅವರು ಚಿತ್ತವನ್ನು ಮಲಿನ ಮಾಡಿಕೊಂಡಿರುತ್ತಾರೆ. ಅವರ ದೇಹವು ದಣಿದಿರುತ್ತದೆ. ಚಿತ್ತವು ದುರ್ಬಲವಾಗಿರುತ್ತದೆ. ಅವರು ತಮ್ಮ ಲೋಕದಿಂದ ಚ್ಯುತರಾಗುತ್ತಾರೆ.
‘ಗೆಳೆಯರೆ, ಅವರಲ್ಲಿ ಒಂದು ಜೀವಿಯು ಆ ಲೋಕದಿಂದ ಚ್ಯುತನಾಗಿ ಇಲ್ಲಿಗೆ ಬರುತ್ತಾನೆ. ಬಂದಮೇಲೆ ಮನೆಯನ್ನು ತೊರೆದು ಅನಗರಿಕವಾಗಿ ಪಬ್ಬಜ್ಜನಾಗುತ್ತಾನೆ. ಪಬ್ಬಜ್ಜನಾದಮೇಲೆ ಉತ್ಸಾಹದಿಂದ, ಅತಿ ಶ್ರದ್ಧೆಯಿಂದ ನಿರಂತರ ಯತ್ನದಿಂದ ಸದಾ ಎಚ್ಚರಿಕೆಯಿಂದಿರುವವನಗಿ ಚಿಂತನಶೀಲನಾಗಿ ಸ್ಥಿರಚಿತ್ತವುಳ್ಳವನಾಗಿ ಚಿತ್ತಸಮಾಧಿಯನ್ನು ಪಡೆದು ಉತ್ಕೃಷ್ಟವಾದ ಚಿತ್ತಸ್ವಾಸ್ಥ್ಯವನ್ನು ಹೊಂದಿ ತನ್ನ ಹಿಂದಿನ ಜನ್ಮವನ್ನು ಜ್ಞಾಪಿಸಿಕೊಳ್ಳಬಲ್ಲವನಾಗುತ್ತಾನೆ. ಅದಕ್ಕೂ ಹಿಂದಿನ ಜನ್ಮವನ್ನು ಜ್ಞಾಪಿಸಿಕೊಳ್ಳಲಾರ.
‘ಆಗ ಆ ಜೀವಿಯು ಹೀಗೆಂದುಕೊಳ್ಳುತ್ತಾನೆ- ಯಾವ ಮನೋಪದೋಸಿಕ ದೇವತೆಗಳಲ್ಲದವರು ಪರಸ್ಪರ ಅಸೂಯೆಯಲ್ಲಿ ಬಹುಕಾಲ ತೊಡಗುವುದಿಲ್ಲವೋ ಅವರ ಚಿತ್ತವು ಮಲಿನವಾಗಿರುವುದಿಲ್ಲ, ಪ್ರದುಷ್ಟವಾಗಿರುವುದಿಲ್ಲ, ಅವರ ದೇಹವು ದಣಿದಿರುವುದಿಲ್ಲ, ಚಿತ್ತವು ದುರ್ಬಲವಾಗಿರುವುದಿಲ್ಲ. ಅವರು ತಮ್ಮ ಸ್ಥಾನದಿಂದ ಚ್ಯುತರಾಗುವುದಿಲ್ಲ. ಅವರು ನಿತ್ಯರೂ, ಧೃವರೂ, ಶಾಶ್ವತರೂ, ಪರಿಣಾಮ ಹೊಂದದವರೂ, ಎಂದೆಂದೂ ಹಾಗೆಯೇ ಇರುವವರೂ ಆಗಿರುತ್ತಾರೆ. ಮನೋಪದೋಸಿಕರಾದ ನಾವಾದರೋ ಬಹುಕಾಲ ಪರಸ್ಪರ ಅಸೂಯೆಯಲ್ಲಿ ತೊಡಗಿರುವವರಾಗಿ ಪರಸ್ಪರ ಅಸೂಯೆಯಿಂದ ನಮ್ಮ ಚಿತ್ತವನ್ನು ಮಲಿನಮಾಡಿಕೊಂಡುಬಿಟ್ಟೆವು. ನಮ್ಮ ಚಿತ್ತವು ಪ್ರದುಷ್ಟ ಚಿತ್ತವಾಯಿತು. ದಣಿದ ದೇಹವೂ ದುರ್ಬಲ ಚಿತ್ತವೂ ನಮ್ಮದಾದುವು. ನಾವು ಆ ಸ್ಥಾನದಿಂದ ಚ್ಯುತರಾಗಿ ಅನಿತ್ಯರೂ ಅಧೃವರೂ ಅಲ್ಪಾಯುಗಳೂ ಪತನಹೊಂದುವವರೂ ಆಗಿ ಇಲ್ಲಿಗೆ ಬಂದೆವು. (ಈ ಕಾರಣದಿಂದ) ಮನೋಪದೋಸಿಕರೇ ಆದಿಕಾರಣವೆಂದು ನಿಮ್ಮ ಆಚಾರ್ಯರು ಹೇಳಿದ್ದಾರೆಂದು ವಿವರಿಸುತ್ತೀರಿ.’
‘ಅವರು ಹೀಗೆಂದು ಹೇಳಿದರು- ನಾವು ಕೇಳಿರುವುದೂ ಗೆಳೆಯ ಗೋತಮನು ಹೇಳಿದುದನ್ನೇ.’
“ಭಗ್ಗವ, ನನಗೆ ಆದಿಕಾರಣವು ಗೊತ್ತಿದೆ, ಚೆನ್ನಾಗಿ ಗೊತ್ತಿದೆ.... ಗೊತ್ತಿರುವ ತಥಾಗತನು ಎಂದೂ ತಪ್ಪು ಮಾಡುವುದಿಲ್ಲ.
‘ಭಗ್ಗವ, ಸೃಷ್ಟಿಯು ಇದ್ದಕ್ಕಿದ್ದಂತೆಯೇ ಆಯಿತು ಎಂಬುದನ್ನು ನಮ್ಮ ಆಚಾರ್ಯರಿಂದ ತಿಳಿದಿದ್ದೇವೆ ಎಂದು ವಿವರಿಸುವ ಸಮಣ ಬ್ರಾಹ್ಮಣರಿದ್ದಾರೆ. ಅಂಥವರ ಬಳಿ ನಾನು ಹೋಗಿ ‘ಆಯುಷ್ಮಂತರೇ, ಸೃಷ್ಟಿಯು ಇದ್ದಕ್ಕಿದ್ದಂತೆಯೇ ಆಯಿತು ಎಂಬುದನ್ನು ನಿಮ್ಮ ಆಚಾರ್ಯರು ಬೋಧಿಸಿದ್ದಾರೆಂದು ನೀವು ಹೇಳುವುದು ನಿಜವೇ?’ ಎಂದು ಕೇಳಿದೆ. ನಾನು ಕೇಳಿದುದಕ್ಕೆ ಅವರು ‘ಹೌದು’ ಎಂದುತ್ತರವಿತ್ತರು. ಅದಕ್ಕೆ ನಾನು ಹೀಗೆ ಕೇಳಿದೆ- ‘ನೀವು ಹೀಗೆ ಹೇಳಲು ಏನು ಆಧಾರ, ಆಯುಷ್ಮಂತರೆ?’ ಅವರು ನನಗೆ ಉತ್ತರ ಹೇಳದವರಾದರು. ಅವರು ನನಗೇ ಪ್ರತಿಪ್ರಶ್ನೆಗಳನ್ನು ಹಾಕಿದರು. ಆಗ ನಾನು ಅವರಿಗೆ ವಿವರಿಸಿದು ಹೀಗೆ-
‘ಗೆಳೆಯರೆ, ಅಸಞ್ಞಸತ್ತ ಎಂಬ ದೇವತೆಗಳಿದ್ದಾರೆ. ಅವರಲ್ಲಿ ಒಂದು ಭಾವನೆ ಹುಟ್ಟಿಕೊಂಡ ಕೂಡಲೇ ಅವರ ಲೋಕದಿಂದ ಚ್ಯುತರಾಗುತ್ತಾರೆ. ಅವರಲ್ಲಿ ಒಂದು ಜೀವಿಯು ಆ ಲೋಕದಿಂದ ಇಲ್ಲಿಗೆ ಬರುತ್ತಾನೆ. ಬಂದಮೇಲೆ ಮನೆಯನ್ನು ತೊರೆದು ಅನಗಾರಿಕನಾಗಿ ಪಬ್ಬಜಿತನಾಗುತ್ತಾನೆ. ಆಮೇಲೆ ಅತಿ ಉತ್ಸಾಹದಿಂದ ಅತಿ ಶ್ರದ್ಧೆಯಿಂದ ನಿರಂತರ ಯತ್ನದಿಂದ ಸದಾ ಎಚ್ಚರಿಕೆಯಿಂದಿರುವವನಾಗಿ ಚಿಂತನಶೀಲನಾಗಿ ಸ್ಥಿರಚಿತ್ತವುಳ್ಳವನಾಗಿ ಚಿತ್ತಸಮಾಧಿಯನ್ನು ಪಡೆದು ಉತ್ಕೃಷ್ಟವಾದ ಚಿತ್ತಸ್ವಾಸ್ಥ್ಯವನ್ನು ಹೊಂದಿ ತಾನು ಹಿಂದೆ ಹುಟ್ಟಿದ ರೀತಿಯನ್ನು ಜ್ಞಾಪಿಸಿಕೊಳ್ಳಲಾರ. ಅವನು ಹೀಗೆಂದುಕೊಳ್ಳುತ್ತಾನೆ- ತನ್ನ ಹುಟ್ಟಿಗೆ ಯಾವ ಕಾರಣವೂ ಇಲ್ಲ. ನಾನು ಹುಟ್ಟಿದುದು ಇದ್ದಕ್ಕಿದ್ದಂತೆಯೇ. ಹೀಗೆ ಹೇಳಲು ಏನು ಆಧಾರ? ಏನೂ ಆಗದಿದ್ದ ನಾನು ಇದ್ದಕ್ಕಿದ್ದಂತೆಯೇ ಈಗ ಒಂದು ಜೀವಿಯಾಗಿ ಪರಿಣಾಮ ಹೊಂದಿದ್ದೇನೆ. ಆಯುಷ್ಮಂತರೇ, ನೀವು ಸೃಷ್ಟಿಯು ಇದ್ದಕ್ಕಿದ್ದಂತೆಯೇ ಆಯಿತು ಎಂದು ನಿಮ್ಮ ಆಚಾರ್ಯರ ಬೋಧನೆಯಾಗಿದೆ ಎಂದು ಹೇಳುವುದು ಈ ಕಾರಣದಿಂದಲಲ್ಲವೇ?’
ಅವರು ‘ಗೆಳೆಯ ಗೋತಮ ಹೇಳಿದುದನ್ನೇ ನಾವೂ ಕೇಳಿದ್ದೇವೆ’ ಎಂದು ಹೇಳಿದರು.
“ಭಗ್ಗವ, ಲೋಕದ ಆದಿಕಾರಣವು ನನಗೆ ಗೊತ್ತಿದೆ, ಚೆನ್ನಾಗಿ ಗೊತ್ತಿದೆ. ಇದಕ್ಕಿಂತಲೂ ಉತ್ತಮವಾದುದೂ ನನಗೆ ಗೊತ್ತಿದೆ. ಆದರೆ ಅದನ್ನು ವಿವರಿಸಲು ಹೋಗುವುದಿಲ್ಲ. ಹಾಗೆ ವಿವರಿಸದಿದ್ದರೂ ಅದರಿಂದ ಮುಕ್ತನಾಗುವುದನ್ನು ತಿಳಿದಿದ್ದೇನೆ. ತಿಳಿದ ತಥಾಗತನು ಎಂದೂ ತಪ್ಪು ಮಾಡುವುದಿಲ್ಲ.
“ಭಗ್ಗವ, ಹೀಗೆ ಆದಿಕಾರಣದ ಬಗೆಗೆ ಹೇಳುವ ನನ್ನನ್ನು ಕೆಲವು ಸಮಣ ಬ್ರಾಹ್ಮಣರು ತುಚ್ಛವಾದ ಭಾಷೆಯಲ್ಲಿ ನಿಂದಿಸುತ್ತಾರೆ, ಸುಳ್ಳನ್ನು ನುಡಿಯುತ್ತಾರೆ, ಇಲ್ಲದೆ ಇರುವುದನ್ನು ಆರೋಪಿಸುತ್ತಾರೆ. ‘ಸಮಣ ಗೊತಮನು ಹೇಳುವುದು ಸರಿಯಲ್ಲ, ಅವನ ಭಿಕ್ಷುಗಳು ಅವನಂತೆಯೇ ಸರಿಯಾದುದನ್ನು ಹೇಳುವುದಿಲ್ಲ. ಯಾವ ಸಮಯದಲ್ಲಿ ಶುಭವಾದ ವಿಮೋಕ್ಖವು ಹುಟ್ಟುತ್ತದೋ ಅದೇ ಸಮಯದಲ್ಲಿಯೇ ಎಲ್ಲವೂ ಅಶುಭವೆಂದು (ಸಾಧಕನು) ತಿಳಿಯುತ್ತಾನೆ ಎಂದು ಸಮಣ ಗೋತಮನು ಹೇಳುತ್ತಾನೆ.’
“ಆದರೆ ಭಗ್ಗವ, ನಾನು ಹಾಗೆ ಹೇಳುವುದಿಲ್ಲ. ನಾನು ‘ಯಾವ ಸಮಯದಲ್ಲಿ ಶುಭವು ಹುಟ್ಟಿಕೊಳ್ಳುತ್ತದೋ ಅದು ಶುಭವೆಂದೇ (ಸಾಧಕನು) ತಿಳಿಯುತ್ತಾನೆ’ ಎಂದು ಹೇಳುತ್ತೇನೆ.”
“ಭಂತೆ, ಯಾರು ಭಗವಂತನು ಹೇಳುವುದು ಸರಿಯಲ್ಲ, ಅವನಂತೆಯೇ ನುಡಿಯುವ ಭಿಕ್ಷುಗಳೂ ಸರಿಯಾದುದನ್ನು ಹೇಳುವುದಿಲ್ಲ ಎಂದು ಹೇಳುತ್ತಾರೋ ಅವರೇ ಸುಳ್ಳಾಡುತ್ತಾರೆ.
“ಭಗವಂತನಿಂದ ನಾನು ಸಂತೋಷಗೊಂಡಿದ್ದೇನೆ. ಶುಭವಾದ ವಿಮೋಕ್ಖವನ್ನು ನಾನು ಪಡೆಯುವಂಥ ಧಮ್ಮವನ್ನು ಬೋಧಿಸಲು ಭಗವಾನರು ಸಮರ್ಥರಾಗಿದ್ದಾರೆ. ಅಂಥ ಸ್ಥಿತಿಯನ್ನು ನಾನು ಪಡೆಯುವಂತಾಗಲಿ.”
“ಭಗ್ಗವ, ಅನ್ಯದೃಷ್ಟಿಯನ್ನು ಹೊಂದಿರುವವರು ಬೇರೆ ನಂಬಿಕೆಯುಳ್ಳವರು ಬೇರೆ ರುಚಿಯುಳ್ಳವರು ಅನ್ಯ ಯೋಗದಲ್ಲಿ (ಬೇರೆ ಕ್ರಮದ ಸಾಧನೆ) ನಿರತರಾದವರು ಬೇರೆ ಕ್ರಮದಲ್ಲಿ ನಡೆಯುವವರು ಶುಭವಾದ ವಿಮೋಕ್ಖವನ್ನು ಪಡೆಯುವುದು ದುಷ್ಕರ. ಭಗ್ಗವ, ನನ್ನಲ್ಲಿ ಶ್ರದ್ಧೆಯನ್ನು ಬೆಳೆಸಿಕೋ.”
“ಅನ್ಯದೃಷ್ಟಿಯಿರುವ ಬೇರೆ ನಂಬಿಕೆಯನ್ನು ಹೊಂದಿರುವ ಬೇರೆ ರುಚಿಯುಳ್ಳ ಅನ್ಯಯೋಗದಲ್ಲಿ ನಿರತನಾದ ಬೇರೆ ಕ್ರಮದಲ್ಲಿ ನಡೆಯುತ್ತಿರುವ ನನಗೆ ಶುಭವಾದ ವಿಮೋಕ್ಖವನ್ನು ಪಡೆಯುವುದು ದುಷ್ಕರವಾದರೆ, ಭಂತೆ, ನಾನು ಭಗವಂತನಲ್ಲಿ ಶ್ರದ್ಧೆಯನ್ನು ಬಳಸಿಕೊಳ್ಳುತ್ತೇನೆ.11”
ಭಗವಾನರು ಹೀಗೆ ಹೇಳಿದರು. ಭಗವಾನರು ಹೇಳಿದುದನ್ನು ಕೇಳಿದ ಪರಿಬ್ಬಾಜಕ ಭಗ್ಗವಗೊತ್ತನು ಆನಂದಗೊಂಡನು.
ಇಲ್ಲಿಗೆ ಪಾಥಿಕ ಸುತ್ತ ಮುಗಿಯಿತು.
ಪಾಥಿಕ ಸುತ್ತ